ನನ್ನ ಪುಟಗಳು

13 ಅಕ್ಟೋಬರ್ 2015

೨೬) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಛ-ಜ-ಝ)

೨೬) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಛ)
೧೧೫೫. ಛೀ ಅನ್ನಿಸಿಕೊಳ್ಳು = ಉಗಿಸಿಕೊಳ್ಳು, ತೆಗಳಿಸಿಕೊಳ್ಳು
ಪ್ರ : ಅಪ್ಪನ ಮನೇಲಿ ಸೈ ಅನ್ನಿಸಿಕೊಂಡೋಳು ಗಂಡನ ಮನೇಲೂ ಸೈ ಅನ್ನಿಸಿಕೊಳ್ತಾಳೆ. ಅಪ್ಪನ ಮನೇಲಿ ಛಿ ಅನ್ನಿಸಿಕೊಂಡೋಳು ಗಂಡನ ಮನೇಲೂ ಛಿ ಅನ್ನಿಸಿಕೊಳ್ತಾಳೆ.
೧೧೫೬. ಛೀಕುನ್ನಿ ಬುದ್ಧಿ ತೋರಿಸು = ನಾಯಿಬುದ್ಧಿ ತೋರಿಸು
(ಕುನ್ನಿ = ನಾಯಿ, ನಾಯಿಮರಿ)
ಪ್ರ :ನಸುಗುನ್ನಿ ಕಾಯಂಥೋನು ತನ್ನ ಛೀಕುನ್ನಿ ಬುದ್ಧಿ ತೋರಿಸಿದ ಅಷ್ಟೆ.
೧೧೫೭. ಛೀಮಾರಿ ಮಾಡು = ತೇಜೋವಧೆ ಮಾಡು
ಪ್ರ : ಯಾಮಾರಿ ನಡೆಯೋರಿಗೆ ಭೀಮಾರಿ ಮಾಡೇನು ಫಲ?
೧೧೫೮. ಛೂ ಬಿಡು = ಚಿಮ್ಮಿಕ್ಕು, ಪ್ರಚೋದಿಸು
ಬೇಟೆಯಲ್ಲಿ ಮೊಲ ಎದ್ದಾಗ, ಬೇಟೆನಾಯಿಗೆ ಅದನ್ನು ತೋರಿಸಿ ಛೂ ಎಂದಾಗ, ಅದು ಮೊಲದ ಬೆನ್ನಾಡಿ ಓಡುತ್ತದೆ. ಅಥವಾ ಕಳ್ಳಕಾಕರು ಏನಾದರೂ ಕದ್ದು ಓಡುತ್ತಿದ್ದರೆ ಆ ಕಡೆ ಕೈತೋರಿಸಿ ಛೂ ಎಂದರೆ ಅವರ ಮೇಲೆ ಬೀಳುತ್ತದೆ. ಆ ಒಂದು ಹಿನ್ನೆಲೆ ಈ ನುಡಿಗಟ್ಟಿಗೆ ಮೂಲ.
ಪ್ರ : ಹಾಳು ನೆನಪು ಛೂ ಬಿಟ್ಟ ನಾಯಂತೆ ಬೆನ್ನು ಹತ್ತುತ್ತದೆ.

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಜ)
೧೧೫೯. ಜಗ್ಗಾಡು = ಎಳೆದಾಡು, ಖಚಿತ ನಿಲುವಿಲ್ಲದಿರು
ಪ್ರ : ಜಗ್ಗಾಡೋ ಜನರಿಂದ ಆಗೋ ಕೆಲಸಕ್ಕೂ ಕಲ್ಲು ಬೀಳ್ತದೆ
೧೧೬೦. ಜಗ್ಗಿ ಬೀಳು = ಮೆಟ್ಟಿ ಬೀಳು, ದಿಗಿಲು ಬೀಳು
ಪ್ರ : ನೀನು ಕತ್ಲೇಲಿ ‘ಹಾ’ ಅಂತ ಆಕರಿಸಿದೇಟಿಗೇ ನಾನು ಜಗ್ಗಿ ಬಿದ್ದು ಬಿಟ್ಟೆ.
೧೧೬೧. ಜಗ್ಗಿಸಿ ಕೇಳು = ಗದರಿಸಿ ಬೆದರಿಸಿ ಕೇಳು, ಜಬರ್‌ದಸ್ತಿನಿಂದ ಕೇಳು
(ಜಗ್ಗಿಸು < ಜಂಗಿಸು < ಜಂಕಿಸು = ಬೆದರಿಸು)
ಪ್ರ :ಜಗ್ಗಿಸಿ ಕೇಳದಿದ್ರೆ ಅವನು ಬಗ್ಗುತ್ತಿರಲಿಲ್ಲ, ಬಾಯಿ ಬಿಡುತ್ತಿರಲಿಲ್ಲ
೧೧೬೨. ಜಗ್ಗಿ ಹೋಗು = ಕೃಶವಾಗು, ವಯಸ್ಸಿನಿಂದ ಹಣ್ಣಾಗು
ಪ್ರ : ಜಟ್ಟಿ ಥರ ಇದ್ದೋನು ಈಗ ತೀರ ಜಗ್ಗಿ ಹೋಗಿದ್ದಾನೆ
೧೧೬೩. ಜಗ್ಗಿಸಿ ಜಗಿ = ಬಲವಾಗಿ ಅಗಿ, ಹಲ್ಲಿನಿಂದ ಲಲುವು
ಪ್ರ : ಗಾದೆ – ತೆಗಿ ಅಂದ್ರೆ ಜಗೀತಾನೆ
ಬಿಡು ಅಂದ್ರೆ ಜಡೀತಾನೆ
೧೧೬೪. ಜಗ್ಗು ಹಾಕು = ಹಿಂದೆ ಮುಂದೆ ತಿರುಗು, ನಾಲಗೆಯಲ್ಲಿ ನೀರು ಸುರಿಸುತ್ತಾ ಕಾಯು
ಪ್ರ : ಬೆಳಗ್ಗೆಯಿಂದ ಜಗ್ಗು ಹಾಕ್ತಾ ಇದ್ದಾಗಲೇ ತಿಳಕೊಂಡೆ, ಅವನ ಒಳಗುಟ್ನ!
೧೧೬೫. ಜಜ್ಜಿ ಬಜ್ಜಿ ಕಾಯಿಸು = ನಜ್ಜು ಗುಜ್ಜು ಮಾಡು ಹಣ್ಗಾಯಿ ನೀರ್ಗಾಯಿ ಮಾಡು
ಪ್ರ : ಗಾದೆ – ಉಜ್ಜೋದು ಹೆಂಡ್ರ ಕೆಲಸ
ಬಜ್ಜೋದು ಗಂಡನ ಕೆಲಸ
೧೧೬೬. ಜಜ್ಜು ಮೂಲಂಗಿ ಮಾಡು = ಅಪ್ಪಚ್ಚಿ ಮಾಡು, ಹೊಟ್ಟೆ ಪಟ್ ಅನ್ನಿಸು
ಹಳ್ಳಿಗಳಲ್ಲಿ ಹಸೆಕಲ್ಲಿನ ಮೇಲೆ ಕಾರ ಅರೆದು, ಮೂಲಂಗಿಯನ್ನು ಇಟ್ಟು ಮೇಲಿನಿಂದ ಗುಂಡುಕಲ್ಲಿನಿಂದ ಜಜ್ಜಿ, ಕಾರದಲ್ಲಿ ಅಜ್ಜಿ (< ಅದ್ದಿ) ಆಮೇಲೆ ಊಟಕ್ಕೆ ನಂಜಿಕೊಳ್ಳಲು ಬಳಸುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಅವನ ಜರ್ಬು ಇಳಿಯೋದು ಜಜ್ಜು ಮೂಲಂಗಿ ಮಾಡಿದಾಗಲೇ
೧೧೬೭. ಜಡಿದು ಬರು = ಸಂಭೋಗಿಸಿ ಬರು
ಪ್ರ : ಜಡಿದು ಬರೋಕೆ ಹೋದೋನ್ಗೆ ಅವಳೆ ಹಿಡಕೊಂಡು ಚೆನ್ನಾಗಿ ಜಡಿದು ಕಳಿಸಿದ್ಲು.
೧೧೬೮. ಜಡ್ಡುಗಟ್ಟು = ಮರಗಟ್ಟು, ಕಾಯಿಗಟ್ಟು
ಪ್ರ : ಏಟು ತಿಂದು ತಿಂದೂ ಮೈ ಜಡ್ಡು ಗಟ್ಟಿದೆ
೧೧೬೯. ಜಡೆಗಟ್ಟು = ಸಿಕ್ಕುಗಟ್ಟು
ತಲೆಯ ಕೂದಲನ್ನು ಬಾಚದಿದ್ದರೆ ಸಿಕ್ಕುಗಟ್ಟುತ್ತದೆ, ಜಡೆಯಾಕಾರ ತಾಳುತ್ತದೆ. ಕಿತ್ತು ತಿನ್ನುವ ಬಡತನದಿಂದ ಸ್ನಾನ ಮಾಡುವುದು ತಲೆ ಬಾಚುವುದು – ಇವುಗಳತ್ತ ಗಮನವೇ ಇರುವುದಿಲ್ಲ. ನೆತ್ತಿಗೆ ಎಣ್ಣೆ, ಹೊಟ್ಟೆಗೆ ಬೆಣ್ಣೆ ಕಾಣದ ನಿರ್ಗತಿಕ ಸ್ಥಿತಿಯನ್ನು ಇದು ಸೂಚಿಸುತ್ತದೆ.
ಪ್ರ : ಹೊಟ್ಟೆ ಬೆಣ್ಣೆ ಕಾಣದೆ ನೆತ್ತಿ ಎಣ್ಣೆ ಕಾಣದೆ ಕೂದಲು ಜಡೆಗಟ್ಟಿ ನಿಂತಿದೆ.
೧೧೭೦. ಜನ್ಮ ಜಾಲಾಡು = ಹಿಂದಿನದನ್ನೆಲ್ಲ ಎತ್ತಿ ಕುಕ್ಕು, ಧೂಳು ಕೊಡಹು
(ಜಾಲಾಡು = ಬಟ್ಟೆಯನ್ನು ಒಗೆದ ಮೇಲ ಕೊಳೆಯೆಲ್ಲ ಹೋಗಲಿ ಎಂದು ನೀರಿನಲ್ಲಿ ಜಾಲಿಸುವುದು)
ಪ್ರ : ಅವನ ಜನ್ಮ ಜಾಲಾಡಿದ ಮೇಲೆ, ಈಗ ಸ್ವಲ್ಪ ವಾಲಾಡೋದು ತಪ್ಪಿದೆ.
೧೧೭೧. ಜಪ ಮಾಡು = ಯಾವ ಕೆಲಸವನ್ನೂ ಮಾಡದೆ ಕುಂತ ಕಡೆಯೇ ಕುಂತಿರು.
ಪ್ರ : ಹಿಂಗೆ ಜಪ ಮಾಡ್ತಾ ಕುಂತರೆ, ವಪನ ಹೊಂದಿ ಹೋಗ್ತೀಯ
೧೧೭೨. ಜಬ್ಬರಿ = ಪೀಡಿಸು, ಒತ್ತಾಯಿಸು
(ಜಬ್ಬರಿ < ಜಬ್ಬು + ಹರಿ = ಜೋಲುಬಿದ್ದ ಜೋಲು ಹೊಟ್ಟೆಯನ್ನು ಹಿಡಿದು ಎಳೆದಾಡು)
ಪ್ರ : ಹಣ ಕೊಡು, ಇಲ್ಲ ಜಮೀನು ನನ್ನ ಹೆಸರಿಗೆ ಬರಿ ಅಂತ ಜಬ್ಬರಿದು ಬಂದಿದ್ದೀನಿ
೧೧೭೩. ಜಬ್ಬಲು ಆತುಕೊಳ್ಳು = ತೊಸಗಲು ಮೈ ಬರು, ಹೊಟ್ಟೆ ಜೋಲು ಬೀಳು
(ಜಬ್ಬಲು = ನಿಸ್ಸಾರ, ಜೊಳ್ಳು; ಆತುಕೊಳ್ಳು < ಅಂತುಕೊಳ್ಳು = ಹೊಂದು)
ಪ್ರ : ಕೆಲಸ ಕಾರ್ಯ ಮಾಡಿ ಮೈಕರಗಿಸದೆ, ಜಬ್ಬಲು ಆತುಕೊಂಡು ಕುಂತವನೆ.
೧೧೭೪. ಜಬ್ಬಲು ನೆಲದಲ್ಲಿ ನಡೆದಂತಾಗು = ಕೆಸರಿನಲ್ಲಿ ಕಾಲು ಹೂತುಕೊಳ್ಳು
ಪ್ರ : ಹಡ್ಲಿನಲ್ಲಿ ಹಸು ಬಿಡು ಹುಲ್ಲು ಮೇಯಲಿ, ಜಬ್ಬಲು ನೆಲದತ್ತ ಹೋದಗೀದಾತು ಕಾಲು ಹೂತುಕೊಳ್ತದೆ.
೧೧೭೫. ಜಮಾಖರ್ಚಿನಲ್ಲಿ ಇಲ್ಲದಿರು = ಲಕ್ಷ್ಯದಲ್ಲಿ ಇಲ್ಲದಿರು.
ಪ್ರ : ಅಪ್ಪ ಜಮಾ ಖರ್ಚಿನಲ್ಲೇ ಇಲ್ಲ, ಎಲ್ಲ ಮಗಂದೆ ಕಾರಭಾರ !
೧೧೭೬. ಜಯಿಸಿಕೊಳ್ಳು = ದಕ್ಕಿಸಿಕೊಳ್ಳು, ಅರಗಿಸಿಕೊಳ್ಳು
ಪ್ರ : ನಿಮ್ಮಪ್ಪನಿಗೆ ನೀನು ಹುಟ್ಟಿದ್ರೆ, ಜಯಿಸಿಕೊ ಇದನ್ನ
೧೧೭೭. ಜರಡಿಯಲ್ಲಿ ನೀರು ತಂದಂತಾಗು = ವ್ಯರ್ಥಪ್ರಯತ್ನವಾಗು
(ಜರಡಿ = ವಂದರಿ; ಧಾನ್ಯದಲ್ಲಿ ಉಬ್ಬಲು ಕಸಕಡ್ಡಿಯನ್ನು ಬೇರ್ಪಡಿಸಲು ಬಳಸುವ ರಂಧ್ರಗಳನ್ನುಳ್ಳ ಚಕ್ರಾಕಾರದ ಸಾಧನ)
ಪ್ರ : ನಾನು ಪಟ್ಟ ಶ್ರಮವೆಲ್ಲ ಜರಡಿಯಲ್ಲಿ ನೀರು ತಂದಂತಾಯ್ತು.
೧೧೭೮. ಜರಡಿ ಹಿಡಿ = ಶೋಧಿಸು, ಚೊಳ್ಳು ಗಟ್ಟಿಯನ್ನು ಬೇರೆ ಬೇರೆ ಮಾಡು,
ಪ್ರ : ಸಂಶೋಧಕನದು ಮೊರ ತುಂಬಿಕೊಳ್ಳುವ ಕೆಸಲವಲ್ಲ, ಜರಡಿ ಹಿಡಿಯುವ ಕೆಲಸ
೧೧೭೯. ಜರಿದುಕೊಳ್ಳು = ಒಬ್ಬರ ಮೇಲಿನ ಗೀಳಿನಿಂದ ಕೃಶವಾಗು, ನವೆದು ನೂಲಾಗು
ಪ್ರ : ನಿನ್ನ ಮೇಲಿನ ಗೀಳಿನಲ್ಲಿ ಅವನು ತುಂಬಾ ಜರಿದುಕೊಂಡಿದ್ದಾನೆ.
೧೧೮೦. ಜರುಗಿಕೊಳ್ಳು = ಪಕ್ಕಕ್ಕೆ ಸರಿದುಕೊಳ್ಳು
ಪ್ರ : ಅತ್ತತ್ತ ಜರುಗಿಕೊಂಡು ಕೂತುಕೋ, ಉಳಿದೋರಿಗೂ ಜಾಗ ಆಗಲಿ
೧೧೮೧. ಜರುಬು ಇಳಿಸು =ಅಹಂಕಾರ ತಗ್ಗಿಸು
(ಜರುಬು < ಜರ್ಬು = ಜೋರು ಜಬರದಸ್ತು)
ಪ್ರ : ಜರುಬು ಇಳಿಸಿದ ಮೇಲೆ, ದಾರಿಗೆ ಬಂದ.
೧೧೮೨. ಜಲದ ಕಣ್ಣಾಗು = ಸ್ಫೂರ್ತಿಯ ಸೆಲೆಯಾಗು
(ಜಲದ ಕಣ್ಣು = ನೀರಿನ ಸರುವು, ನೀರಿನ ಸಲೆ)
ಪ್ರ : ನನ್ನ ಸ್ಫೂರ್ತಿಯ ಜಲದಕಣ್ಣಾಗಿರುವವಳು ನನ್ನ ಪ್ರೇಯಸಿಯೇ
೧೧೮೩. ಜಲಬಾಧೆಗೆ ಹೋಗು = ಮೂತ್ರ ವಿಸರ್ಜನೆಗೆ ಹೋಗು
ಪ್ರ : ಬನ್ನಿ ಕೂತ್ಗೊಳ್ಳಿ, ಜಲಬಾಧೆಗೆ ಹೋಗಿದ್ದಾರೆ, ಬರ್ತಾರೆ
೧೧೮೪. ಜಾಗರಣೆ ಮಾಡು = ನಿದ್ದೆಗೆಡು, ನಿದ್ದೆ ಮಾಡದೆ ದೈವದ ಭಜನೆ ಮಾಡು
ಪ್ರ : ಪ್ರಸ್ತದ ದಿನ ಹೆಣ್ಣುಗಂಡುಗಳು ರಾತ್ರಿಯೆಲ್ಲ ಜಾಗರಣೆ ಮಾಡಿದರು
೧೧೮೫. ಜಾಗೀರು ಹಾಕಿ ಕೊಡು = ಉಂಬಳಿಕೊಡು,
(ಜಾಗೀರು <ಜಹಗೀರು = ಉಂಬಳಿ ಜಮೀನು)
ಪ್ರ : ಇಲ್ಲಿ ಬರಬೇಡ ಅಂತ ಹೇಳೋಕೆ, ಇದನ್ನು ನಿನಗೆ ಜಾಗೀರು ಹಾಕಿ ಕೊಟ್ಟಿಲ್ಲ, ಇದು ಬಟಾಯದ ಜಮೀನು
೧೧೮೬. ಜಾಡು ಬಿಡು = ನಡತೆಗೆಡು, ಅಡ್ಡ ದಾರಿಗಿಳಿ
(ಜಾಡು = ರಸ್ತೆ, ದಾರಿ)
ಪ್ರ : ಜಾಡು ಬಿಟ್ಟೋರು ಪಾಡು ಅನುಭವಿಸ್ತಾರೆ.
೧೧೮೭. ಜಾಡು ಹಿಡಿ = ಮರ್ಮ ತಿಳಿ, ರಹಸ್ಯ ಅರ್ಥ ಮಾಡಿಕೊಳ್ಳು
ಪ್ರ : ಜಾಡು ಹಿಡಿದು ಮಾತಾಡಿದ್ರೆ ನಾಡು ಮೆಚ್ತದೆ.
೧೧೮೮. ಜಾನ್ ನಿಕಲ್‌ಗಯಾ ಮಾಡು = ಹೊಡೆದು ಸುಸ್ತು ಮಾಡು, ದುಡಿಸಿ ಸುಸ್ತಾಗಿಸು
(ಜಾನ್ = ಪ್ರಾಣ : ನಿಕಲ್‌ಗಯಾ = ಹೊರಟು ಹೋಗು)
ಪ್ರ : ಬೆಳಗ್ಗೆಯಿಂದ ಸಂಜೆವರೆಗೂ ಇವತ್ತು ಅವನಿಗೆ ಜಾನ್ ನಿಕಲ್‌ಗಯಾ ಮಾಡಿದ್ದೀನಿ
೧೧೮೯. ಜಾಪಾಳ ಮಾತ್ರೆ ಕೊಡು = ಭಯದಿಂದ ಭೇದಿ ಕಿತ್ತುಕೊಳ್ಳುವಂತೆ ಮಾಡು,
ಪ್ರ : ಅವನು ಲಂಗೋಟಿ ಕಟ್ಕೊಳ್ಳೋಕೂ ಆಗದಂಥ ಜಾಪಾಳ ಮಾತ್ರೆ ಕೊಟ್ಟಿದ್ದೀನಿ.
೧೧೯೦. ಜಾಯಮಾನ ಜಾಲಿಸು = ಸ್ವಭಾವವನ್ನು ಪರೀಕ್ಷಿಸಿ ನೋಡು, ಸೋಸು.
ಅಕ್ಕಿಯಲ್ಲಿ ಕಲ್ಲುಗಳಿದ್ದರೆ ಅನ್ನ ಮಾಡುವ ಮೊದಲು ಒಂದು ಪಾತ್ರೆಗೆ ಹಾಕಿ, ನೀರು ಹುಯ್ದು ಪಾತ್ರೆಯನ್ನು ಅತ್ತ ಇತ್ತ ಅಲುಗಾಡಿಸುತ್ತಾ ಮೇಲೆ ಬರುವ ಅಕ್ಕಿಯನ್ನು ಸ್ಯಾರೆಯಿಂದ ಮೇಲೆತ್ತಿ ಬೇರೆ ಪಾ‌ತ್ರೆಗೆ ಹಾಕಿಕೊಂಡು, ಪಾತ್ರೆಯ ತಳದಲ್ಲಿ ಕಲ್ಲು ಉಳಿಯುವ ಹಾಗೆ ಮಾಡುವುದಕ್ಕೆ ಜಾಲಿಸು ಎಂದು ಹೇಳುತ್ತಾರೆ.
ಪ್ರ : ಅವನ ಜಾಯಮಾನ ಜಾಲಿಸಿ ನೋಡದೆ, ದುಡುಕಿ ಹೆಣ್ಣು ಕೊಡೋದು ತಪ್ಪು
೧೧೯೧. ಜಾಲಿ ಹಾಕಿ ಕಾಲಿಗೆ ಮೂಲ ಮಾಡಿಕೊಳ್ಳು = ಕೆಟ್ಟದ್ದನ್ನು ಬೆಳಸಿ ಅಪಾಯಕ್ಕೆ ಗುರಿಯಾಗು.
ಜಾಲಿ = ಗೊಬ್ಬಳಿ ಮರ, ಮೈಯೆಲ್ಲ ಮುಳ್ಳಿರುವಂಥದು. ಅದಕ್ಕೇ ‘ಜಾಲಿಯ ಮರವು ನೆರಳಲ್ಲ’ ಎಂಬ ಮಾತು ಚಾಲ್ತಿಗೆ ಬಂದಿರುವುದು. ಏಕೆಂದರೆ ಕೆಳಗೆಲ್ಲ ಮುಳ್ಳು ಉದುರಿರುವುದರಿಂದ ಕುಳಿತುಕೊಳ್ಳಲು ಸಾಧ್ಯವಿಲ್ಲ, ಕುಂಡಿಗೆ ಚುಚ್ಚಿಕೊಳ್ಳುತ್ತವೆ.
ಪ್ರ : ಭಾಮೈದ ಅಂತ ಜಮೀನಿನ ಮಧ್ಯೆ ಜಾಗ ಕೊಟ್ಟರೆ ಈಗ ನನಗೇ ಬೆಣೆ ಹೊಡೆದ; ಜಾಲಿ ಹಾಕಿ ಕಾಲಿಗೆ ಮೂಲ ಮಾಡಿಕೊಂಡಂತಾಯ್ತು
೧೧೯೨. ಜಾಳು ಜಾಳಾಗಿರು = ತುಂಬ ತೆಳುವಾಗಿರು, ಬಲೆಯ ಕಣ್ಣಿನಂತಿರು
ಪ್ರ : ಬಟ್ಟೆ ತುಂಬ ಜಾಳುಜಾಳಾಗಿದೆ, ತಡೆತ ಬರಲ್ಲ
೧೧೯೩. ಜಿಗಣೆ ಹಿಡಿದಂತೆ ಹಿಡಿ = ಭದ್ರವಾಗಿ ಹಿಡಿ, ಉಡದ ಹಿಡಿತದಂತಿರು
ನೇಗಿಲಿನ ಮಧ್ಯ ಭಾಗದಲ್ಲಿ ತಲೆಕೆಳಗಾದ ಇಂಗ್ಲಿಷಿನ (U) ಆಕಾರದಲ್ಲಿ ಹೊಡೆದಿರುವ ಕಬ್ಬಿಣದ ಕೊಂಡಿಗೆ ಜಿಗಣೆ ಎಂದು ಹೆಸರು. ಗುಳದ ತೊಟ್ಟನ್ನು ಜಿಗಣೆಯ ರಂದ್ರಕ್ಕೆ ಇಟ್ಟು ಮುಂಭಾಗದಿಂದ ಹೊಡೆಯುತ್ತಾರೆ. ಅಲುಗಾಡದೆ ಬಿಗಿಯಾಗಿ ಕುಳಿತುಕೊಳ್ಳುವಂತೆ ಜಿಗಣೆ ಮೇಲಕ್ಕೆ ಬರುವುದಿಲ್ಲ ಗುಳ ಅಲುಗಾಡಲು ಬಿಡುವುದಿಲ್ಲ.
ಪ್ರ : ಕುಂಡರಿಸ, ಮಲಗಿಸ, ಕೆಲಸ ಆಗೋವರೆಗೂ ಜಿಗಣೆ ಹಿಡಿದಂಗೆ ಹಿಡಿದು ಬಿಟ್ಟ.
೧೧೯೪. ಜಿಬಜಿಬ ಎನ್ನು = ಸಿಂಬಳದಂತೆ ಜಾರು ಜಾರಾಗಿರು
ಪ್ರ : ಹಳಸಿದ ಹಿಟ್ಟಿನಂತೆ ಅವನ ತಲೆ ಜಿಬಜಿಬ ಅಂತದೆ
೧೧೯೫. ಜೀಜಿ ಕುಡಿಸು = ನೀರು ಕುಡಿಸು
(ಜೀಜಿ < ಜೀವನ = ನೀರು ; ಜೀಯ ಎಂಬುದು ಬಾಲಭಾಷೆ)
ಪ್ರ : ಮೊದಲು ಜೀಜಿ ಕುಡಿಸ್ತೀನಿ ಇರು, ಆಮೇಲೆ ಬಟ್ಟೆ ಹಾಕ್ತೀನಿ
೧೧೯೬. ಜೀವ ಅಳೀರ್ ಎನ್ನು = ಭಯವಾಗು, ಜಗ್ಗಿ ಬೀಳು
(ಅಳೀರ್ < ಅಳಿರ್ < ಅಳರ್ = ಅಂಜು)
ಪ್ರ : ಸರ್ ಸರ್ ಅಂತ ಸದ್ದಾದಾಗ ಹಾವು ಅಂತ ಜೀವ ಅಳೀರ್ ಅಂತು
೧೧೯೭. ಜೀವ ಒಂದು ಹಿಡಿ ಮಾಡಿಕೊಳ್ಳು = ಅವಮಾನದಿಂದ ಕುಗ್ಗು
ಪ್ರ : ಆ ಸುದ್ಧಿ ಕೇಳಿ ಜೀವ ಒಂದು ಹಿಡಿ ಮಾಡ್ಕೊಂಡ
೧೧೯೮. ಜೀವ ಕಳ್ಳಿ ಹೋದಂತಾಗು = ಸೊರಗಿ ಹೋದಂತಾಗು, ಬವಳಿ ಬಂದಂತಾಗು
(ಕಳ್ಳಿ < ಕಳಲಿ = ಸೊರಗಿ)
ಪ್ರ : ಮೂರು ದಿನದಿಂದ ಅನ್ನರಸ ಕಾಣದೆ ಜೀವ ಕಳ್ಳಿ ಹೋದಂತಾಯ್ತು
೧೧೯೯. ಜೀವಕ್ಕೆ ಜೀವ ಕೊಡು = ಪ್ರಾಣಕ್ಕೆ ಪ್ರಾಣ ಕೊಡು
ಪ್ರ : ಆ ನಮ್ಮಪ್ಪ ಜೀವಕ್ಕೆ ಜೀವ ಕೊಟ್ಟು ನನ್ನ ಕಾಪಾಡಿದ.
೧೨೦೦. ಜೀವಕ್ಕೆ ಜೀರಿಗೆ ಅರೆ = ಪೀಡಿಸು, ಹಿಂಸಿಸು
ಪ್ರ : ಇಲ್ಲಿ ಮಡಗಿ ಮಾತಾಡು ಅಂತ ಒಂದೇ ಸಮ ನನ್ನ ಜೀವಕ್ಕೆ ಜೀರಿಗೆ ಅರೀತಾ ಅವನೆ
೧೨೦೧. ಜೀವಕ್ಕೆ ಜೀರುಗುಣಿಕೆ ಹಾಕಿ ಜೀರು = ತಗಾದೆ ಮಾಡು, ಒತ್ತಾಯ ಮಾಡು
(ಜೀರು ಗುಣಿಕೆ < ಜೀರುವ + ಕುಣಿಕೆ = ಜೀರುವ ಮಲುಕು; ಕುಣಿಕೆ < ಕುಳಿಕೆ = ಚಿಮರ, ಮಲುಕು) ಬಾವಿಯಿಂದ ನೀರು ಸೇದಬೇಕಾದರೆ ಬಿಂದಿಗೆಯ ಕೊರಳಿಗೆ ಸೇದೋ ಹಗ್ಗದಲ್ಲಿ ಕುಣಿಕೆ (ಮಲಕು) ಹಾಕಿ ಜೀರುತ್ತಾರೆ. ಅದಕ್ಕೆ ಜೀರುಗುಣಿಕೆ ಎಂದು ಹೇಳುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ನೆಲ ಉರುವಿ ಇಕ್ಕು ಅಂತ ನನ್ನ ಜೀವಕ್ಕೆ ಜೀರುಗುಣಿಕೆ ಹಾಕಿ ಜೀರ್ತಾನೆ
೧೨೦೨. ಜೀವ ಜುಂ ಎನ್ನು = ಮೈನವಿರೇಳು, ರೋಮಾಂಚನವಾಗು
ಪ್ರ : ಬೆನ್ನು ಮೇಲೆ ಕೈಹಾಕಿದಾಗ ಜೀವ ಜುಂ ಅಂತು.
೧೨೦೩. ಜೀವ ಝಕ್ ಅನ್ನು = ಮೆಟ್ಟಿ ಬೀಳು, ಹೆದರಿ ಹೆಪ್ಪಾಗು
ಪ್ರ : ಪಟಾಕಿ ಡಬ್ ಅಂದಾಗ ಜೀವ ಝಕ್ ಅಂತು
೧೨೦೪. ಜೀವ ಝಲ್ ಅನ್ನು = ನಡುಕ ಉಂಟಾಗು
ಪ್ರ : ಇದ್ದಕ್ಕಿದ್ದಂತೆ ‘ಹಾ’ ಅಂತ ಆಕರಿಸಿದಾಗ ನನ್ನ ಜೀವ ಝಲ್ ಅಂತು
೧೨೦೫. ಜೀವ ತೆಗಿ = ಪ್ರಾಣ ಹಿಂಡು
ಪ್ರ : ಹೊತ್ತು ಹುಟ್ಟಂಗಿಲ್ಲ, ಹೊತ್ತು ಮುಳುಗೋ ಹಂಗಿಲ್ಲ, ಬಂದು ಕೊಡು ಕೊಡು ಅಂತ ಜೀವ ತೆಗೀತಾನೆ
೧೨೦೬. ಜೀವ ತೇಯು = ಅವಿಶ್ರಾಂತವಾಗಿ ದುಡಿ, ನಿರಂತರವಾಗಿ ಶ್ರಮಿಸು.
ಸಾಣೆಯ ಕಲ್ಲಿನ ಮೇಲೆ ಗಂಧದ ಕೊರಡನ್ನಿಟ್ಟು ತೇದರೆ ಗಂಧ ಬರುತ್ತದೆ. ಸಾಣೆ ಕಲ್ಲು ಸವೆಯದಿದ್ದರೂ ಗಂಧದ ಕೊರಡು ಸವೆಯುತ್ತಾ ಬರುತ್ತದೆ. ಶ್ರಮ ಜೀವಿ ಜೀವ ತೇದು ಸವೆಯುವುದನ್ನು ಸೂಚಿಸುತ್ತದೆ.
ಪ್ರ : ಈ ಮನೇನ ಈ ಸ್ಥಿತೀಗೆ ತರೋದಕ್ಕೆ ನನ್ನ ಜೀವಾನೇ ತೇದಿದ್ದೇನೆ.
೧೨೦೭. ಜೀವದಲ್ಲಿ ಜೀವ ಇರದಿರು = ಭಯ ಸಂಶಯ ಆತಂಕದಲ್ಲಿ ಕ್ಷಣಕ್ಷಣವನ್ನೂ ಎಣಿಸುತ್ತಿರು
ಪ್ರ : ಏನಗ್ತದೋ ಎತ್ತಾಗ್ತದೋ ಅಂತ ನನ್ನ ಜೀವದಾಗೆ ಜೀವ ಇರಲಿಲ್ಲ
೧೨೦೮. ಜೀವ ದಿಳ್ಳಿಸಿದಂತಾಗು = ಬಳವಿಬಂದಂತಾಗು, ಕಳ್ಳಿ ಹೋದಂತಾಗು
(ದಿಳ್ಳಿಸು = ಬವಳಿ ಬರು)
ಪ್ರ : ಇದ್ದಕ್ಕಿದ್ದಂತೆ ಜೀವ ದಿಳ್ಳಿಸಿದಂತಾಗಿ ಬಿದ್ದು ಬಿಟ್ಟೆ.
೧೨೦೯. ಜೀವದೊಳಗೊಂದು ಜೀವವಿರು = ಬಸುರಿಯಾಗಿರು, ಬಿಮ್ಮನಸೆಯಾಗಿರು
ಪ್ರ : ಜೀವದೊಳಗೊಂದು ಜೀವ ಇದ್ದರೂ ಕಾರ್ಕೋಟಕ ಗಂಡ ಹೆಂಡ್ರನ್ನು ದನ ಚಚ್ಚಿದಂಗೆ ಚಚ್ತಾನೆ.
೧೨೧೦. ಜೀವ ನಿಲ್ಲದಿರು = ಸುಮ್ಮನಿರಲು ಆಗದಿರು, ಆತಂಕದಿಂದ ಚಡಪಡಿಸು
ಪ್ರ : ಅವನ ಮುಖದರ್ಶನ ಮಾಡಬಾರ್ದು ಅಂತ ಇದ್ರೂ, ಜೀವ ನಿಲ್ಲದೆ ಹೋಗಿ ಅವನ ಬಾಯ್ಗೆ ನೀರು ಬಿಟ್ಟು ಬಂದೆ
೧೨೧೧. ಜೀವ ಬಿಡು = ಅತಿಯಾಗಿ ಪ್ರೀತಿಸು
ಪ್ರ : ನೀನೂ ಅಂದ್ರೆ ಜೀವ ಬಿಡ್ತಾನೆ, ನಿನಗೆ ಗೊತ್ತಿಲ್ಲ ಅಷ್ಟೆ
೧೨೧೨. ಜೀವಬೆರಸೆ ಬಿಡದಿರು = ಜೀವಸಹಿತ ಇರಿಸದಿರು
(ಬೆರಸೆ < ವೆರಸೆ = ಸಹಿತ, ಜೊತೆ)
ಪ್ರ : ನಿನ್ನ ಜೀವ ಬೆರಸೆ ಬಟ್ರೆ, ನಾನು ನಮ್ಮಪ್ಪನಿಗೆ ಹುಟ್ಟಿದೋನೇ ಅಲ್ಲ
೧೨೧೩. ಜೀವ ಹಿಡಕೊಂಡಿರು = ಸಾಯದೆ ಬದುಕದೆ ಜೀವಿಸಿರು, ಛಲಕ್ಕಾಗಿ ಬದುಕಿರು’
ಪ್ರ : ಅದೊಂದು ತಬ್ಬಲಿ ಹುಡುಗಿ ಮದುವೆಯಾಗ್ಲಿ ಅಂತ ಜೀವ ಹಿಡಕೊಂಡಿದ್ದೀನಿ ಅಷ್ಟೆ
೧೨೧೪. ಜೀವ ಹಿಂಡು = ಹಿಂಸಿಸು, ಒತ್ತಾಯಿಸು
ಪ್ರ : ಕೊಡು ಕೊಡು ಅಂತ ಒಂದೇ ಸಮ ಜೀವ ಹಿಂಡಿಬಿಟ್ಟ
೧೨೧೫. ಜೀವಾಳವೇ ಇಲ್ಲದಿರು = ಬಂಡವಾಳವೇ ಇರದಿರು, ಸತ್ವವೇ ಇಲ್ಲದಿರು
(ಜೀವಾಳ = ತಿರುಳು, ಬಂಡವಾಳ)
ಪ್ರ : ಜೀವಾಳವೇ ಇಲ್ಲದ್ದಕ್ಕೆ ನೀವು ಹೇಳಿದ ಧಾರಾಳ ಬೆಲೆ ಕೊಡೋಕಾಗ್ತದ?
೧೨೧೬. ಜುಟ್ಟು ಹಿಡಿ = ಹತೋಟಿಯಲ್ಲಿಡು, ಹಿಡಿತದಲ್ಲಿಡು
ಪ್ರ : ಜುಟ್ಟು ಹಿಡಿದಿರೋದರಿಂದ ಅವನು ನಿನ್ನ ಕಾಲು ಹಿಡೀತಿದ್ದಾನೆ ಅಷ್ಟೆ
೧೨೧೭. ಜುಟ್ಟು ಹಿಡಿದು ರಾಗಿ ಬೀಸು = ತಲೆಗೂದಲು ಹಿಡಿದು ಗರಗರನೆ ತಿರುಗಿಸು,
ತಕ್ಕಶಾಸ್ತಿ ಮಾಡು ರಾಗಿ ಬೀಸುವಾಗ ರಾಗಿ ಕಲ್ಲು ಅಥವಾ ಬೀಸುವ ಕಲ್ಲು ಸುತ್ತಲೂ ಗರಗರನೆ ತಿರುಗಿದಂತೆ ವ್ಯಕ್ತಿಯನ್ನೂ ಗರಗರನೆ ತಿರುಗಿಸಿದ ಎಂಬುದು ‘ರಾಗಿಬೀಸು’ ಎಂಬುದರಿಂದ ವ್ಯಕ್ತವಾಗುತ್ತದೆ.
ಪ್ರ : ಜುಟ್ಟು ಹಿಡಿದು ರಾಗಿ ಬೀಸಿ, ಕುಂಬಳಕಾಯಿ ಕುಕ್ಕಿದಂಗೆ ಕುಕ್ಕುದೇಟಿಗೇ ಕಾಲು ಕಟ್ಕೊಂಡು ಬಿಟ್ಟು, ನೀನು ಹೇಳಿದಂಗೇ ಕೇಳ್ತೀನಿ ಅಂತ.
೧೨೧೮. ಜುಬ್ಬರ ಕಿತ್ತುಕೊಳ್ಳು = ಏಣೂ ಮಾಡಲು ಆಗದಿರು
(ಜುಬ್ಬರ = ಸೊಂಟದ ಕೆಳಗಿನ ಕೂದಲು, ತೆಂಗಿನಕಾಯಿ ನಾರು)
ಪ್ರ : ಏನು ನನ್ನ ಜುಬ್ಬರ ಕುತ್ತಿಕೊಳ್ತೀಯ, ಹೋಗೋ ಕಂಡಿದ್ದೀನಿ
೧೨೧೯. ಜುಮ ಜುಮ ಎನ್ನು = ತಟತಟಗುಟ್ಟು, ತಂತಿ ಮಿಡಿದಂತಾಗು
ಪ್ರ : ಕೀತುಕೊಂಡ ಗಾಯ ಜುಮಜುಮ ಅಂತಾ ಇದೆ.
೧೨೨೦. ಜುಲಾಬು ಕೊಡು = ಭೀತಿಯುಂಟು ಮಾಡು, ಭೇದಿಕೊಡು
(ಜುಲಾಬು < ಜುಲಾಪು = ಭೇದಿ ಮದ್ದು)
ಪ್ರ : ಆ ಜುಗ್ಗನಿಗೆ ಕಚ್ಚೇರವೆ ಕಟ್ಟಿಸಿಕೊಡದಂಥ ಜುಲಾಬು ಕೊಟ್ಟಿದ್ದೀನಿ – ಒಂದ್ಕಡೆ ನಿಲ್ಲದಂಗೆ ಕುಂಡ್ರದಂಗೆ ಓಡಾಡ್ತಿರಬೇಕು
೧೨೨೧. ಜುಲ್ಮುಕು ರಾಮ್ ರಾಮ್ ಎನ್ನು = ಬಲಾತ್ಕಾರಕ್ಕೊಳಗಾಗಿ ಹ್ಞುಂ ಎನ್ನು
ಮುಸಲ್ಮಾನನ ಬಾಯಲ್ಲಿ ರಾಮ ರಾಮ ಎಂದು ಹೇಳಿಸಲು ಹಿಂದುಗಳು ಅವನಿಗೆ ಒಂದೇ ಸಮನೆ ಹೊಡೆದಾಗ, ಏಟನ್ನು ತಾಳಲಾರದೆ ಬಲವಂತಕ್ಕೊಳಗಾಗಿ ಒಲ್ಲದ ಮನಸ್ಸಿನಿಂದ ಕಾಟಾಚಾರಕ್ಕೆ ರಾಮ ರಾಮ ಎನ್ನುತ್ತಾನೆಯೇ ಹೊರತು ಹೃತ್ಪೂರ್ವಕವಾಗಿ ಭಕ್ತಿಯಿಂದ ಅವನು ರಾಮ ರಾಮ ಎನ್ನುವುದಿಲ್ಲ. ಅಂತಹ ಘಟನೆಯಿಂದ ಒಡಮೂಡಿದ್ದು ಈ ನುಡಿಗಟ್ಟು.
ಪ್ರ : ಜುಲ್ಮುಕು ರಾಮ್ ರಾಮ್ ಅಂದ್ರೇನು ? ಅನ್ನದಿದ್ರೇನು? – ಎರಡೂ ಒಂದೆ,. ‘ಜುಲುಮುಕು ರಾಮ್ ರಾಮ್, ಇಸ್ ಸೆ ಕ್ಯಾ ಫಾಯದ ಹೈ ಸಾಬ್’ ಎಂಬ ಗಾದೆಯಂತೆ.
೧೨೨೨. ಜುಲ್ಮೆ ಮಾಡು = ಬಲಾತ್ಕಾರ ಮಾಡು, ಹಿಂಸೆ ಕೊಡು
(ಜುಲ್ಮೆ = ಬಲಾತ್ಕಾರ)
ಪ್ರ : ಜುಲ್ಮೆ ಮಾಡಿ ನಲ್ಮೆ ಸಂಪಾದಿಸೋಕಾಗಲ್ಲ
೧೨೨೩. ಜೂಟಾಟವಾಡು = ಜವಾಬ್ದಾರಿಯನ್ನು ಹಸ್ತಾಂತರಿಸು,
ಸಮಾನ ಅಂತರದಲ್ಲಿ ಸಾಲಾಗಿ ಕುಳಿತಿರುವ ಆಟಗಾರನ ಬೆನ್ನ ಹಿಂದೆ ಹೋಗಿ ಜೂಟ್ ಎಂದರೆ ಅವನು ಎದ್ದು ಎದುರುಗುಂಪಿನ ಆಟಗಾರನನ್ನು ಹಿಡಿಯಲು ನುಗ್ಗುತ್ತಾನೆ. ಅವನಿಗೆ ಸಾಕಾದಾಗ ಮತ್ತೊಬ್ಬನಿಗೆ ಜೂಟ್ ಎಂದು ಎಬ್ಬಿಸಿ ತಾನವನ ಜಾಗದಲ್ಲಿ ಕುಳಿತುಕೊಳ್ಳುತ್ತಾನೆ. ಅಂದರೆ ಜವಾಬ್ದಾರಿಯನ್ನು ಹಲವರ ಹೆಗಲಿಗೆ ಕುಳಿತುಕೊಳ್ಳುತ್ತಾನೆ. ಅಂದರೆ ಜವಾಬ್ದಾರಿಯನ್ನು ಹಲವರ ಹೆಗಲಿಗೆ ಹಸ್ತಾಂತರಿಸುವ ಮುಟ್ಟಾಟ ಇದು. ಇತ್ತೀಚೆಗೆ ಜೂಟ್ ಎಂದು ಹೇಳದೆ ಕೊಕ್ ಎಂದು ಹೇಳುವ ಸುಧಾರಿತ ರೂಪದ ಕೊಕ್ಕೋ ಆಟ ಚಾಲ್ತಿಯಲ್ಲಿದೆ.
ಪ್ರ : ನಿನ್ನ ಜೂಜಾಟ ನೋಡಿ ನನಗೆ ಸಾಕಾಗಿದೆ, ನಾನು ನಿನ್ನ ಜುಟ್ಟಾಟಕ್ಕಿಳಿತೀನಿ
೧೨೨೪. ಜೂಲು ಜೂಲಾಗಿರು = ಹರಿದು ಹಂಚಾಗಿರು, ಹರಿದು ಪಲ್ಲಂಡೆಯಾಗಿರು
(ಜೂಲು = ಕುದುರೆಯ ಕೇಸರ)
ಪ್ರ : ಜೂಲು ಜೂಲಾಗಿರೋ ಪಂಚೇನ ಉಟ್ಕೊಂಡು ಹೋಗೋದು ಹೆಂಗೆ?
೧೨೨೫. ಜೊನ್ನೆ ಕವಳ ಎತ್ತು = ಕೆಲಸ ಕಾರ್ಯ ಮಾಡದೆ ಊರೂರು ತಿರುಗು, ತಿರುಪೆ ಬೇಡು
(ಜೊನ್ನೆ < ದೊನ್ನೆ < ತೊನ್ನೈ (ತ) = ಊಟಕ್ಕೆ ಸಾರು ಬಡಿಸಿಕೊಳ್ಳಲು ಎಲೆಯಿಂದ ಕಟ್ಟಿದ ಬಟ್ಟಲು)
ಪ್ರ : ಜೊನ್ನೆ ಕವಳ ಎತ್ತುಕೊಂಡು ತಿರುಗೋನು ಹೆಂಡ್ರುಮಕ್ಕಳ್ನ ಸಾಕ್ತಾನ?
೧೨೨೬. ಜೊಪ್ಪೆ ಹಿಡಕೊಂಡು ಹೋಗು = ಭಿಕ್ಷೆಗೆ ಹೋಗು
(ಜೊಪ್ಪೆ < ದೊಪ್ಪೆ = ಸುಲಿಪಟ್ಟೆ (ಒಡಾಳೆ ಪಟ್ಟೆ) ಎಲೆಯಿಂದ ಕಟ್ಟಿದ ದೊನ್ನೆಗಿಂತ ದೊಡ್ಡದಾದ ಆಕೃತಿ)
ಪ್ರ : ಸಗಣಿ ತೊಪ್ಪೆಯಂಥ ತೊಸಗಲ, ದೊಪ್ಪೆ ಹಿಡ್ಕೊಂಡು ಹೋಗೋ ಗತಿಯನ್ನು ತಾನಾಗಿಯೇ ತಂದ್ಕೊಂಡ.
೧೨೨೭. ಜೊಲ್ಲು ಸುರಿಸು = ಆಸೆಪಡು.
ಊಟ ಮಾಡುವಾಗ ನಾಯಿ ನನ್ನ ಬಾಯಿಂದ ಜೊಲ್ಲು ಸುರಿಸುತ್ತಾ ನೋಡುತ್ತಿರುತ್ತದೆ, ತನಗೊಂದು ತುತ್ತು ಎಸೆಯುತ್ತಾರೋ ಇಲ್ಲವೋ ಎಂದು. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಬೇರೆಯವರ ಹತ್ರ ಹೋಗಿ ಜೊಲ್ಲು ಸುರಿಸೋ ಬದಲು, ಮೈಬಗ್ಗಿಸಿ ಬೆವರು ಸುರಿಸು – ಬೇಕಾದ್ದು ತನಗೆ ತಾನೇ ಬರ್ತದೆ.
೧೨೨೮. ಜೋಕರ್ ಆಗು = ಯಾವುದಕ್ಕಾಗದರೂ ಬಳಸಿಕೊಳ್ಳುವ ವಸ್ತುವಾಗು
‘ರಮ್ಮಿ’ ಎಂಬ ಇಸ್ಪೀಟಾಟದಲ್ಲಿ ಯಾವುದೇ ಎಲೆಯ ಸ್ಥಾನದಲ್ಲಿ ನಿಲ್ಲುವ ಆ ಪಿಗ್ಗಿಯನ್ನು ತುಂಬುವ ಸ್ವಾತಂತ್ಯ್ರವುಳ್ಳ ಎಲೆಯೆಂದರೆ ಜೋಕರ್. ಆ ಹಿನ್ನೆಲೆಯಲ್ಲಿ ಮೂಡಿರುವ ನುಡಿಗಟ್ಟಿದು.
ಪ್ರ : ಇವನು ಜೋಕರ್ ಅಪ್ಪ ಆಗಿರೋದರಿಂದ, ಇಲ್ಲೂ ಸಲ್ತಾನೆ, ಅಲ್ಲೂ ಸಲ್ತಾನೆ – ಎಲ್ಲೂ ಸಲ್ತಾನೆ.
೧೨೨೯. ಜೋಡಿ ಕಳಸಕ್ಕೆ ಕೈ ಹಾಕು = ಸ್ತನದ್ವಯಕ್ಕೆ ಕೈ ಹಾಕು
ಪ್ರ : ತಾನು ಜೋಡಿದಾರ ಅನ್ನೋ ಧಿಮಾಕಿನಲ್ಲಿ, ಹೆಂಡ್ರ ಜೋಡಿ ಕಳಸಕ್ಕೆ ಕೈ ತಾಕಿಸಿದರೆ ಹೇಡಿಗಂಡ ನೋಡ್ಕೊಂಡು ನಿಂತವನೆ, ಜೋಡಿನಲ್ಲಿ ಹೊಡೆಯೋದು ಬಿಟ್ಟು.
೧೨೩೦. ಜೋತು ಬೀಳು = ನೇತು ಬೀಳು, ಗಂಟು ಬೀಳು
ಪ್ರ: ಇದ್ದೂ ಇದ್ದೂ ಈ ಪೆದ ಹೋಗಿ ಆ ಜೋಭದ್ರ ಹೆಣ್ಣಿಗೆ ಜೋತುಬಿದ್ದ.
೧೨೩೧. ಜೋಲಾಡು = ತೂಗಾಡು
ಪ್ರ : ಮರದ ಬಿಳಲು ಹಿಡ್ಕೊಂಡು ಜೋಲಾಡ್ತಿದ್ದೋನು, ಕೈಜಾರಿ ತುಪ್ಪನೆ ಬಿದ್ದ
೧೨೩೨. ಜೋಲಿ ಹೊಡಿ = ತೂಕ ತಪ್ಪಿ ಬೀಳು, ಆಯ ತಪ್ಪಿ ಬಿಸುರು
ಪ್ರ : ಬದುವಿನ ಮೇಲೆ ಹೋಗುವಾಗ ಜೋಲಿ ಹೊಡೆದು ಬಿದ್ದು ಕಾಲು ಮುರ್ಕೊಂಡೆ
೧೨೩೩. ಜೋಳಿಗೆ ಹಿಡ್ಕೊಂಡು ಹೋಗು = ಭಿಕ್ಷೆ ಎತ್ತಲು ಹೋಗು
(ಜೋಳಿಗೆ = ಹೆಗಲ ಮೇಲಿಂದ ಬಗಲಲ್ಲಿ ಇಳೇ ಬಿದ್ದ ಬಟ್ಟೆ ಚೀಲ)
ಪ್ರ : ಎಲ್ಲ ಕಳಕೊಂಡು, ಈಗ ಜೋಳಿಗೆ ಹಿಡಕೊಂಡು ಹೋಗೋದೊಂದು ಬಾಕಿ ಉಳಿದಿದೆ.
೧೨೩೪. ಜಂಗಲಿ ಬೀಳು = ಪೋಲಿ ಬೀಳು
(ಜಂಗಲಿ < ಜಂಗಲ್ (ಹಿಂ) = ಕಾಡು)
ಪ್ರ : ಅವನು ಜಂಗಲಿ ಬಿದ್ದು ಕೂತವನೆ, ಅವನಿಗೆ ಹೆಣ್ಣು ಕೊಟ್ರೆ ಅಂಗೈಲಿ ಉಣ್ಣಬೇಕು
೧೨೩೫. ಜಂಗು ಕಟ್ಟು = ಕಣಕಾಲಿಗೆ ಅಥವಾ ಮೊಣಕಾಲಿಗೆ ದಪ್ಪ ಗಗ್ಗರದಂಥ ಗೆಜ್ಜೆ ಕಟ್ಟಿಕೊಳ್ಳು
ವೀರಶೈವ ಧರ್ಮವನ್ನು ಸ್ವೀಕರಿಸಿದ ಹಾಲುಮತದ ಒಡೇರಯ್ಯ (< ಒಡೆಯರು) ನೋರು ಕಾಲಿಗೆ ಜಂಗು ಕಟ್ಟಿಕೊಂಡು ಮನೆಮನೆಗೆ ಹೋಗಿ ‘ಕ್ವಾರಣ್ಯ ಭಿಕ್ಷಾ’ ಎಂದು ಕೇಳಿ ಜೋಳಿಗೆ ಒಡ್ಡುವ ಪರಿಪಾಠ ಉಂಟು. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಜಂಗು ಕಟ್ಕೊಂಡು ‘ಕ್ವಾರಣ್ಯ ಭಿಕ್ಷಾ’ ಅಂತ ಮನೆ ಮನೆ ಮುಂದೆ ನಿಂತು ಕೇಳು ಹೋಗು ನಿನಗ್ಯಾಕೆ ಬದುಕು ಬಾಳು ? ಮೊದಲೇ ಗಾದೆ ಇಲ್ವ ‘ಒಡೇರಯ್ಯ ಒಕ್ಕಲಲ್ಲ, ಒಳಗೆರೆ ಗದ್ದೆ ಗದ್ದೆ ಅಲ್ಲ’ ಅಂತ?
೧೨೩೬. ಜಂಟಿ ಮಾಡು = ಕೂಡಿಸು, ಒಂದು ಮಾಡು
(ಜಂಟಿ <Joint = ಜೊತೆ)
ಪ್ರ : ಒಂಟಿ ಇರೋದು ಬೇಡ ಅಂತ ಇಬ್ಬರಿಗೂ ಬುದ್ಧಿ ಕೇಳಿ ಜಂಟಿ ಮಾಡಿದೆವು.
೧೨೩೭. ಜಂತೆ ಎಣಿಸು = ದ್ರೋಹ ಬಗೆ
ಪ್ರ : ಗಾದೆ – ಉಂಡ ಮನೆ ಜಂತೆ ಎಣಿಸಬಾರ್ದು
೧೨೩೮. ಜಂಬ ಜಗತ್ತಿಗಾಗಿ ಮಿಗು = ಧಿಮಾಕಿನ ಮೊಟ್ಟೆಯಾಗಿರು
ಪ್ರ : ಅವನಿಗಿರೋ ಜಂಬ, ಈ ಜಗತ್ತಿಗಾಗಿ ಮಿಗ್ತದೆ.
೧೨೩೯. ಜುಂ ಅನ್ನದಿರು ಜಪ್ಪಯ್ಯ ಅನ್ನದಿರು = ಅಲುಗಾಡದಿರು, ಯಾವುದಕ್ಕೂ ಜಗ್ಗದಿರು, ಬಗ್ಗದಿರು, ಒಗ್ಗದಿರು
ಪ್ರ : ಊರೆಲ್ಲ ಹೇಳಿದರೂ ಮಾರಾಯ ಜುಂ ಅನ್ನಲಿಲ್ಲ ಜಪ್ಪಯ್ಯ ಅನ್ನಲಿಲ್ಲ.
೧೨೪೦. ಜುಂಜು ಕಿತ್ತುಕೊಳ್ಳು = ಏನೂ ಕಿತ್ತುಕೊಳ್ಳಲಾಗದಿರು
(ಜುಂಜು = ಶ್ಯಪ್ಪ, ಕೂದಲು)
ಪ್ರ : ನನ್ನ ಹತ್ರ ನೀನು ಏನೂ ಕಿತ್ಕೊಳ್ಳೋಕೆ ಆಗಲ್ಲ, ಜುಂಜು ಕಿತ್ಕೊಳ್ಳಬೇಕು ಅಷ್ಟೆ.
೧೨೪೧. ಜುಂಜಪ್ಪನಾಗಿ ಹಾರಿ ನಿಲ್ಲು = ತಲೆ ಕೆದರಿ ಕಣ್ಣು ಮೆಡ್ಡರಿಸಿ ರೌದ್ರಾವತಾರ ತಾಳು
(ಜುಂಜಪ್ಪ = ವೀರಭದ್ರ, ವೀರೇಶ್ವರ > ಬೀರೇಶ್ವರ) ಜುಂಜು (< ಜುಂಜುರು = ಗುಂಗುರು ಕೂದಲು) ಎಂದರೆ ಕೂದಲು. ಅದನ್ನುಳ್ಳವನು ಜುಂಜಪ್ಪ, ಕರಡಿಯಂತೆ ಕೂದಲು (< ಕೂಂದಲು) ಉಳ್ಳ ಜನರೇ ಕೂಂದಲನ್ನು, ಕುಂತಲರು, ಅವರಿರುವ ನಾಡೇ ಕುಂತಲ ನಾಡು. ಈಗಲೂ ಹಾಲುಮತ ಕುರುಬರಲ್ಲಿ ಕೂರಲಯ್ಯ ಎಂದು ಹೆಸರಿಟ್ಟುಕೊಳ್ಳುವುದುಂಟು. ಕೂರಲು ಎಂದರೆ ಕೂದಲು. ಹಳ್ಳಿಗಳಲ್ಲಿ ಈಗಲೂ ಕೂರಲು ಬಾಚ್ತೀನಿ ಬಾ ಎಂದೇ ಹೇಳುತ್ತಾರೆ.
ಪ್ರ : ಜುಂಜಪ್ಪನಾಗಿ ಹಾರಿ ನಿಂತಾಗ ಸಾಲ ಕೊಟ್ಟವನು ಕಾಲಿಗೆ ಬುದ್ದಿ ಹೇಳಿದ.
೧೨೪೨. ಜೋಂಪು ಹತ್ತು = ತೂಗಡಿಕೆ ಬರು, ಮಂಪರು ಬರು
ಪ್ರ : ಉಂಡಿದ್ದೇ ತಡ, ಜೋಂಪು ಹತ್ತಿ ಮಲಗಿಬಿಟ್ಟೆ

 ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಝ)
೧೨೪೩. ಝಾಂಡ ಹೂಡು = ತಳವೂರು, ಬಾವುಟ ನೆಡು
(ಝಾಂಡ = ಬಾವುಟ)
ಪ್ರ : ಝಂಡೇ ಕುರುಬರು ಝಾಂಡ ಹೂಡಿದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ