ನನ್ನ ಪುಟಗಳು

13 ಅಕ್ಟೋಬರ್ 2015

೨೫) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಚ)

೨೫) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಚ)
೧೦೭೦. ಚಕಚಕ ಮಾಡು = ಬೇಗ ಬೇಗ ಮಾಡು
(ಚಕಚಕ < ಚಕ್‌ಚಕ್ (ನೆಗೆತ) ಕುರಿಮರಿಗಳು ಚಕ್‌ಚಕ್ ಎಂದು ನೆಗೆಯುವ ಕ್ರಿಯೆಯಿಂದ ಮೂಡಿದ್ದು ಈ ನುಡಿಗಟ್ಟು. ಉಳಿದ ಪ್ರಾಣಿಗಳು ಮುಂಗಾಲುಗಳನ್ನು ಮುಂದಕ್ಕೆಸೆದು ಆಮೇಲೆ ಹಿಂಗಾಲುಗಳನ್ನು ಎತ್ತಿ ಓಡುವುದನ್ನು ಕಾಣುತ್ತೇವೆ. ಆದರೆ ಕುರಿಮರಿಗಳು ಅಥವಾ ಮೇಕೆ ಮರಿಗಳು ಹಿಂಗಾಲು ಮುಂಗಾಲುಗಳನ್ನು ಏಕಕಾಲದಲ್ಲಿ ಮೇಲೆತ್ತಿ ಟಣ್ಣಟಣ್ಣನೆ ಪುಟ ಹಾರುವಂತೆ ಕುಪ್ಪಳಿಸುವ ನೋಟ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಇಡೀ ಕುರಿಮರಿಯ ಸಮತೂಕ ಇನಿತೂ ವ್ಯತ್ಯಾಸವಾಗದ ಹಾಗೆ ಚಕ್‌ಚಕ್ ಎಂದು ಮೇಲಕ್ಕೆ ಎಗರುತ್ತಾ ವೇಗವಾಗಿ ದಾರಿ ಕ್ರಮಿಸುವ ಹಿನ್ನೆಲೆ ಈ ನುಡಿಗಟ್ಟಿಗೆ ಮೂಲವಾಗಿದೆ.
ಪ್ರ : ಹೇಳಿದ ಕೆಲಸಾನ ಅರಗಳಿಗೆಯಲ್ಲಿ ಚಕಚಕ ಅಂತ ಮಾಡಿಬಿಡ್ತಾನೆ.
೧೦೭೧. ಚಕಮಕಿ ಜರುಗು = ಬಿಸಿ ಬಿಸಿ ಮಾತುಕತೆಯಾರು, ಮಾತಿಗೆ ಮಾತು ಹೊತ್ತಿಕೊಳ್ಳು
(ಚಕಮಕಿ = ಬೆಂಕಿ ಹೊತ್ತಿಸಲು ಬೇಕಾದ ಬೆಣಚುಕಲ್ಲು, ದೂದಿ, ಹಾಗೂ ಚಾಣ) ಬೆಂಕಿಪೊಟ್ಟಣ ಬಳಕೆಗೆ ಬರುವುದಕ್ಕೆ ಮುನ್ನ ಬೀಡಿ ಸೇದುವವರು ಬೆಣಚುಕಲ್ಲು, ದೂದಿ, ಚಾಣವನ್ನು ತಮ್ಮ ಜೇಬುಗಳಲ್ಲಿ ಇಟ್ಟುಕೊಂಡಿರುತ್ತಿದ್ದರು. ಬೆಣಚು ಕಲ್ಲಿನ ಮೇಲೆ ದೂದಿ (ಅರಳೆ) ಯನ್ನಿಟ್ಟು ಚಾಣದಿಂದ ನಾಲ್ಕೈದು ಬಾರಿ ಕುಟ್ಟಿದಾಗ ಘರ್ಷಣೆಯಿಂದ ಕಿಡಿ ಮೂಡಿ ದೂದಿ ಹತ್ತಿಕೊಳ್ಳುತ್ತಿತ್ತು. ಅದರಿಂದ ಬೀಡಿ ಹಚ್ಚಿಕೊಂಡು ಸೇದುತ್ತಿದ್ದರು. ಬೆಣಚುಕಲ್ಲು ದೂದಿ ಚಾಣಗಳ ಸಂಘಟ್ಟಣೆಯಿಂದ ಸಿಡಿಯುವ ಕಿಡಿ ಇಬ್ಬರ ಮಧ್ಯೆ ಜರುಗುವ ಮಾತುಮಾತುಗಳ ಸಂಘಟ್ಟನೆಯಿಂದ ಸಿಡಿಯುವ ಕಿಡಿಯತ್ತ ಬೆರಳುದೋರುತ್ತದೆ ಈ ನುಡಿಗಟ್ಟು
ಪ್ರ : ಇಬ್ಬರ ಮಧ್ಯೆ ಬಹಳ ಹೊತ್ತು ಮಾತಿನ ಚಕಮಕಿ ನಡೆದು, ಹತ್ಕೊಂಡು ಹೈರಾಣವಾಯ್ತು
೧೦೭೨. ಚಕ್ಕಂಬಾಕಲು ಹಾಕು = ಪದ್ಮಾಸನ ಭಂಗಿಯಲ್ಲಿ ಕೂಡು. ಕಾಲುಗಳನ್ನು ನಾಲ್ಕು ಭಾಗವಾಗುವಂತೆ ಮಡಿಸಿಕೊಂಡು ಕೂರು
(ಚಕ್ಕಂಬಾಕಲು < ಚಕ್ಕಂಬೋ ಕಾಲು = ನಾಲ್ಕು ಭಾಗವಾಗಿ ಕಾಣುವ ಕಾಲು ? ಚಕ್ಕ < ಚೌಕ = ನಾಲ್ಕು; ಇದಕ್ಕೆ ತಮಿಳಿನಲ್ಲಿ ಚಮ್ಮಣ ಎಂದು ಹೇಳುತ್ತಾರೆ ಎಂದು ತಿಳಿದು ಬರುತ್ತದೆ)
ಪ್ರ : ಕುಕ್ಕುರುಗಾಲಿನಲ್ಲಿ ಯಾಕೆ ಕೂತಿದ್ದೀಯ? ಚಕ್ಕಂಬಾಕಲು ಹಾಕ್ಕೊಂಡು ಕೂತ್ಗೊ
೧೦೭೩. ಚಕ್ಕರ್ ಹಾಕು = ಗೈರು ಹಾಜರಾಗು, ತಪ್ಪಿಸಿಕೊಳ್ಳು
(ಚಕ್ಕರ್ < ಚಕ್ರ = ಸೊನ್ನೆ)
ಪ್ರ : ಕೆಲಸಕ್ಕೆ ಚಕ್ಕರ್ ಹಾಕ್ತಾನೆ, ಊಟಕ್ಕೆ ಹಾಜರಾಗ್ತಾನೆ
೧೦೭೪. ಚಕ್ಕಳಗುಳಿ ಇಕ್ಕು = ನಗಿಸು, ಮೈಜುಂ ಎನ್ನಿಸು
(ಚಕ್ಕಳ = ಚರ್ಮ; ಗುಳಿ < ಕುಳಿ = ತಗ್ಗು, ಗುಣಿ) ಪಕ್ಕೆಯ ಎರಡು ಭಾಗಗಳಲ್ಲಿ ಬೆರಳನ್ನಿಟ್ಟು ಗುಣಿ ಬೀಳುವಂತೆ ಒತ್ತಿ ಮಿಣುಗು (ಮೀಟು)ವುದಕ್ಕೆ ಹೀಗೆಂದು ಹೇಳಲಾಗುತ್ತದೆ
ಪ್ರ : ಚಕ್ಕಳಗುಳಿ ನನಗಾಗಲ್ಲ, ಇಕ್ಕಿ ನನಗೆ ಹೊಟ್ಟೆಕಳ್ಳು ಬಾಯಿಗೆ ಬರೋಂಗೆ ಮಾಡಿಬಿಟ್ಟ
೧೦೭೫. ಚಕ್ಕಳ ಸುಲಿ = ಚೆನ್ನಾಗಿ ಹೊಡಿ, ಚರ್ಮ ಕಿತ್ತು ಹೋಗುವಂತೆ ಚಚ್ಚು
(ಚಕ್ಕಳ = ಚರ್ಮ; ಸುಲಿ = ಎಬ್ಬು)
ಪ್ರ : ಈ ನನ್ಮಕ್ಕಳು ಬಗ್ಗೋದು ಚಕ್ಕಳ ಸುಲಿದಾಗಲೇ
೧೦೭೬. ಚಕ್ಕಳದ ಯಾಪಾರ ಮಾಡು = ತಲೆ ಹಿಡುಕ ಕೆಲಸ ಮಾಡು
(ಯಾಪಾರ < ವ್ಯಾಪಾರ)
ಪ್ರ : ಚಕ್ಕಳದ ಯಾಪಾರ ಮಾಡೋರಿಗೆ ತಮ್ಮ ಹೆಣ್ಮಕ್ಕಳಾದ್ರೇನು ?ಪರರ ಹೆಣ್ಮಕ್ಕಳಾದ್ರೇನು?
೧೦೭೭. ಚಕ್ಕಳಿ ಒತ್ತು = ಮಲ ವಿಸರ್ಜಿಸು
(ಚಕ್ಕಳಿ < ಚಕ್ಕುಲಿ < ಶಷ್ಕುಲಿ (ಸಂ) = ಎಣ್ಣೆಯಲ್ಲಿ ಕರಿದ ಚಕ್ರಾಕಾರದ ಕುರುಕುತೀನಿ) ಚಕ್ಕುಲಿ ಹಿಟ್ಟನ್ನು ಚಕ್ಕುಳಿ ಒತ್ತುವ ಹೋಳಿಗಿಟ್ಟು ಮೇಲಿನಿಂದ ಒತ್ತಿದರೆ ಬೆರಳುಗಾತ್ರ ಹುರಿಯಂತೆ ಇಳಿಯುವ ಆ ಹಿಟ್ಟನ್ನು ಚಕ್ರಕಾರವಾಗಿ ಸುರುಳಿಸುತ್ತಿಕೊಳ್ಳುವಂತೆ ಕೈಯನ್ನು ದುಂಡಗೆ ಸುತ್ತು ತಿರುಗಿಸುತ್ತಾರೆ. ಈ ರೂಪಕದಲ್ಲಿ ಬೇರೊಂದನ್ನು ಧ್ವನಿಸಲಾಗಿದೆ ಈ ನುಡಿಗಟ್ಟಿನಲ್ಲಿ
ಪ್ರ : ಮಕ್ಕಳು ಎದ್ದ ತಕ್ಷಣ ಚಕ್ಕಳಿ ಒತ್ತೋಕೆ ಓಡಿದವು, ಬೀದಿ ಬದಿಗೆ.
೧೦೭೮. ಚಕ್ಕು ಕಂಡು ಇಕ್ಕು = ಅಹಂಕಾರ ಕಂಡು ಚಚ್ಚು
(ಚಕ್ಕು < ಸೊಕ್ಕು = ಅಹಂಕಾರ, ಮದ, ಇಕ್ಕು = ಹೊಡಿ)
ಪ್ರ : ಅವನ ಚಕ್ಕು ಕಂಡು ಇಕ್ಕಿದೆ, ಇಲ್ಲ ಇಲ್ಲ ಅನ್ನೋವರೆಗೂ
೧೦೭೯. ಚಕ್ಕೆ ಎಬ್ಬಿಸದಿರು = ಸಿಬರೆಬ್ಬಿಸದಿರು, ಗಾರು ಮಾಡದಿರು, ಸಂಬಂಧವನ್ನು ಹದಗೆಡಿಸದಿರು
(ಚಕ್ಕೆ < ಸಕ್ಕೆ< ಶಲ್ಕ (ಸಂ) < ಚಕ್ಕೈ (ತ) = ಮರದ ಅಥವಾ ಕಲ್ಲಿನ ಸಿಬರು, ತುಂಡು, ಸೀಬು)
ಪ್ರ : ಚಕ್ಕೆ ಕಚ್ಚಿಸೋ ಕೆಲಸ ಮಾಡಬೇಕೇ ಹೊರತು ಚಕ್ಕೆ ಎಬ್ಬಿಸುವ ಕೆಲಸ ಮಾಡಬಾರ್ದು.
೧೦೮೦. ಚಟ್ಟ ಕಟ್ಟು = ಸಾಯಿಸು, ಮಣ್ಣು ಮಾಡಲು ಸಿದಿಗೆ ಸಿದ್ಧ ಮಾಡು
(ಚಟ್ಟ = ಹೆಣ ಹೊತ್ತುಕೊಂಡು ಹೋಗಲು ಬಿದಿರ ಬೊಂಬಿನಿಂದ ಕಟ್ಟಿದ ಸಿದಿಗೆ)
ಪ್ರ : ಇವತ್ತು ನಿನಗೆ ಚಟ್ಟ ಕಟ್ಟದಿದ್ರೆ ಕೇಳು
೧೦೮೧. ಚಟಾಕಿ ಹಾರಿಸು = ಹಾಸ್ಯ ಮಾಡು, ತಮಾಷೆ ಮಾಡು
(ಚಟಾಕಿ < ಪಟಾಕಿ? = ಹಾರುವ, ಶಬ್ದ ಮಾಡುವ ಸಿಡಿಮದ್ದಿನ ವಸ್ತುಗಳು)
ಪ್ರ : ಒಂದು ಚಟಾಕಿನುದ್ದ ಇದ್ರೂ ಚಟಾಕಿ ಹಾರಿಸೋದ್ರಲ್ಲಿ ಗಟ್ಟಿಗ
೧೦೮೨. ಚಟ್ಟಾಗು = ಮರಣ ಹೊಂದು, ನಾಶವಾಗು
ಚಟ್ ಎಂದು ಮುರಿದು ಬೀಳುವ ಅನುಕರಣ ಶಬ್ದವೇ ಇಲ್ಲಿ ಚಟ್ಟು ಆಗಿದೆ. ಮುರಿದು ಬೀಳುವ ಕ್ರಿಯೆ ನಾಶವನ್ನು ಸೂಚಿಸುತ್ತದೆ.
ಪ್ರ: ಲಾರಿ ಬಂದು ಗುದ್ದಿದ ತಕ್ಷಣ ಗಾಡಿಲಿದ್ದೋರೆಲ್ಲ ಸ್ಥಳದಲ್ಲೇ ಚಟ್ಟಾದರು.
೧೦೮೩. ಚಟ್ಟು ಕಲ್ಲಿನಂತಿರು = ಗಟ್ಟಿಯಾಗಿರು
(ಚಟ್ಟುಗಲ್ಲು = ಕಟ್ಗಲ್ಲು)
ಪ್ರ : ಚಟ್ಟುಗಲ್ಲಂಥ ಮಕ್ಕಳಿದ್ರೂ ಅನ್ನಕ್ಕೆ ಚಡಪಡಿಸೋದು ತಪ್ಪಲಿಲ್ಲ
೧೦೮೪. ಚಡತ ಮಾಡು = ಕಚ್ಚು ಮಾಡು, ತಗ್ಗು ಮಾಡು
ಪ್ರ : ಚಡತ ಮಾಡದಿದ್ರೆ ಕಟ್ಟಿದ ಹಗ್ಗ ಕೆಳಕ್ಕೆ ಜಾರಿಕೊಳ್ತದೆ
೧೦೮೫. ಚತುರ್ಭುಜನಾಗು = ಮದುವೆಯಾಗು
ಸಾಮಾನ್ಯವಾಗಿ ದೇವರಿಗೆ ನಾಲ್ಕು ಕೈಗಳು (ಉದಾ : ವಿಷ್ಣು) ಇರುವುದನ್ನು ಕಾಣುತ್ತೇವೆ. ಆ ಕಲ್ಪನೆಯ ಹಿನ್ನೆಲೆಯಲ್ಲಿ ಇಬ್ಬರೂ ಒಟ್ಟುಗೂಡುವುದನ್ನೂ ನಾಲ್ಕು ಕೈಗಳಾಗುವುದನ್ನೂ ಪಡಿ ಮೂಡಿಸಲಾಗಿದೆ.
ಪ್ರ : ನಾನು ಇಷ್ಟರಲ್ಲೇ ಚತುರ್ಭುಜನಾಗುತ್ತೇನೆ ಎಂದ ನಮ್ಮೂರ ಹಾರುವಯ್ಯನ ಮಗ
೧೦೮೬. ಚಪ್ಪರಿಸಿ ಕಳಿಸು = ಹೊಡೆದು ಕಳಿಸು
(ಚಪ್ಪರಿಸು < ತಪ್ಪರಿಸು = ಹೊಡಿ, ಅಪ್ಪಳಿಸು)
ಪ್ರ : ಕೆನ್ನೆ ಚುರುಗುಟ್ಟೋ ಹಂಗೆ ನಾಲ್ಕು ಚಪ್ಪರಿಸಿ ಕಳಿಸಬೇಕಾಗಿತ್ತು
೧೦೮೭. ಚಪ್ಪಾಳೆ ತಟ್ಟು = ಸಂತೋಷ ಸೂಚಿಸು
ಪ್ರ : ಭಾಷಣದ ವೈಖರಿಗೆ ತಲೆದೂಗಿದ ಜನ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು
೧೦೮೮. ಚಪ್ಪಾಳೇಲಿ ಅಪ್ಪಳಿಸು = ಅತೃಪ್ತಿ ಸೂಚಿಸು, ಮಂಗಳಾರತಿ ಎತ್ತು
ಪ್ರ : ಕೆಟ್ಟ ಭಾಷಣವನ್ನು ಕೇಳಲಾರದೆ ಜನ ನಿರಂತರ ಚಪ್ಪಾಳೇಲಿ ಅಪ್ಪಳಿಸಿದರು
೧೦೮೯. ಚಪ್ಪೋಡು ಹಾಕಿ ಕೊಡು = ಶಾಸನ ಹಾಕಿ ಕೊಡು
(ಚಪ್ಪೋಡು = ತಾಮ್ರಶಾಸನ)
ಪ್ರ : ಈ ಜಮೀನನ್ನು ನಿಮ್ಮಪ್ಪನಿಗೆ ಚಪ್ಪೋಡು ಹಾಕಿ ಕೊಟ್ಟಿಲ್ಲ.
೧೦೯೦. ಚಮಡ ತೆಗಿ = ಸಾಕು ಸಾಕು ಮಾಡು, ಚನ್ನಾಗಿ ಬಾರಿಸು, ಹೆಚ್ಚು ಶ್ರಮ ಕೊಡು
(ಚಮಡ < ಚಮಡಿ (ಹಿಂ) = ಚರ್ಮ)
ಪ್ರ : ಇವತ್ತು ಅವನಿಗೆ ಚೆನ್ನಾಗಿ ಚಮಡ ತೆಗಿದಿದ್ದೀನಿ
೧೦೯೧. ಚರುಪು ಮಾಡು = ಚೂರು ಚೂರು ಮಾಡು, ಪಚಡಿ ಮಾಡು
(ಚರುಪು < ಸಿರ್ಪು = ಪಚಡಿ) ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿ ತೆಂಗಿನಕಾಯಿ ಚೂರು, ಬೆಲ್ಲದ ಚೂರು, ಪುರಿ ಇತ್ಯಾದಿಗಳನ್ನು ಕಲಸಿ ಭಕ್ತಾದಿಗಳಿಗೆ ವಿತರಣೆ ಮಾಡುವುದಕ್ಕೆ ಚರುಪು ಹಂಚುವುದು ಎನ್ನುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ನನ್ನ ಮುಂದೆ ಜರ್ಬು ತೋರಿಸಿದರೆ, ನಿನ್ನ ಚರುಪು ಮಾಡಿಬಿಡ್ತೀನಿ, ತಿಳಿಕೊಂಡಿರು.
೧೦೯೨. ಚರ್ಬಿ ಕರಗಿಸು = ಅಹಂಕಾರ ಇಳಿಸು
(ಚರ್ಬಿ = ಕೊಬ್ಬು, ನೆಣ)
ಪ್ರ : ಚರ್ಬಿ ಕರಗಿಸದಿದ್ರೆ ಅವನು ಬಗ್ಗಲ್ಲ, ಪೆಗ್ಗೆತನ ನಿಲ್ಲಿಸಲ್ಲ
೧೦೯೩. ಚರ್ಮ ನಿರಿಗೆಗಟ್ಟು = ಮುದಿತನ ಆವರಿಸು
(ನಿರಿಗೆ < ನೆರಿಗೆ = ಮಡಿಕೆ)
ಪ್ರ : ಚರ್ಮ ನಿರಿಗೆಗಟ್ಟಿದ ಮುದುಕನಿಗೆ ಕಿರಿಗೆ (ಸಣ್ಣಸೀರೆ) ಉಡೋ ಹುಡುಗೀನ ಕೊಟ್ಟು ಮದುವೆ ಮಾಡ್ತಾರಂತೆ, ಆಸ್ತಿ ಸಿಗ್ತದೇ ಅಂತ.
೧೦೯೪. ಚಲ್ಲು ಬೀಳು = ಪೋಲಿ ಬೀಳು
(ಚಲ್ಲು < ಚೆಲ್ಲು = ಪೋಲಿತನ)
ಪ್ರ : ಚಲ್ಲು ಬಿದ್ದೋಳ್ನ ಯಾರು ಮದುವೆಯಾದಾರು?
೧೦೯೫. ಚಳುಕಾಗು = ನೋವಾಗು, ಹೊಟ್ಟೆ ನುಲಿತ ಬರು
(ಚಳುಕು = ನುಲಿತ, ಸೆಳೆತ, ನೋವು)
ಪ್ರ: ಹೊಟ್ಟೆ ಚಳುಕು ಬಂದು ಸತ್ತು ಹೋಗೋ ಹಂಗಾಗ್ತದೆ.
೧೦೯೬. ಚಳೇವು ಕೊಡು = ಚಿಮುಕಿಸು, ಸಿಂಪಡಿಸು
(ಚಳೇವು < ಚಳೆ, ಚಳೆಯ = ಚಿಮುಕಿಸುವಿಕೆ, ಸಿಂಪರಣೆ)
ಪ್ರ : ಜಾತ್ರೆ ಕಾಲದಲ್ಲಿ ಬೀದಿ ಧೂಳು ಅಡಗೋ ಹಂಗೆ ಮಳೆರಾಯ ಬಂದು ಚಳೇವು ಕೊಟ್ಟ.
೧೦೯೭. ಚಳ್ಳೆ ಹಣ್ಣು ತಿನ್ನಿಸು = ಮೋಸ ಮಾಡು
(ಚಳ್ಳೆ ಹಣ್ಣು = ಫಲ ವಿಶೇಷ)
ಪ್ರ : ಈ ಫಟಿಂಗನಿಗೆ ಚಳ್ಳೆ ಹಣ್ಣು ತಿನ್ನಿಸಿದೋನು ಇನ್ನೆಂಥ ಫಟಿಂಗ ಇರಬೇಕು?
೧೦೯೮. ಚಾಕಣ ಮಾಡು = ತುಂಡು ತುಂಡು ಮಾಡು, ಕೊತ್ತಿ ಕೈಮಾ ಮಾಡು
(ಚಾಕಣ < ಚಕ್ಕಣ = ಹೆಂಡದಂಗಡಿಗಳಲ್ಲಿ ಮದ್ಯಪಾನ ಮಾಡುವವರು ನಡುನಡುವೆ ನಂಜಿಕೊಳ್ಳಲು ಬಳಸುವ ಕರಿದ ಕಾಳು ಕಡಿ, ಚೂರು ಚೂರಾದ ಚೀಟಿ ಅಥವಾ ಚಿಂದಿಚಿಂದಿಯಾಗಿ ಕತ್ತರಿಸಿ ಮಾಡಿದ ಕೈಮಾ; ಪಂಪ ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಬಳಸಿರುವ ಚಕ್ಕಣ ಎಂಬ ಶಬ್ದ ಇಂದಿಗೂ ಚಾಕಣ ಎಂಬ ರೂಪದಲ್ಲಿ ಗ್ರಾಮೀಣರ ನಾಲಗೆಯ ಮೇಲೆ ನಲಿಯುತ್ತದೆ)
ಪ್ರ : ಅವರ ಕೈಗೆ ನೀನೇನಾದರೂ ಸಿಕ್ಕಿದರೆ, ಕೊಚ್ಚಿ ಚಾಕಣ ಮಾಡಿಬಿಡ್ತಾರೆ, ಹುಷಾರ್ !
೧೦೯೯. ಚಾಚಿ ಕುಡಿಸು = ಮೊಲೆ ಕುಡಿಸು, ಹಾಲು ಕುಡಿಸು
(ಚಾಚಿ < ಚೂಚಕ = ಮೊಲೆ ತೊಟ್ಟು)
ಪ್ರ : ಅಳುವ ಮಗುವನ್ನು ಬಾ, ಚಾಚಿ ಕುಡಿಸ್ತೀನಿ ಅಂತ, ಬಾಚಿ-ತೊಡೆ ಮೇಲೆ ಹಾಕ್ಕೊಂಡ್ಲು
೧೧೦೦. ಚಾಟಿ ಹಿಡಿ = ಅಧಿಕಾರದ ಚುಕ್ಕಾಣಿ ಹಿಡಿ
(ಚಾಟಿ < ಚಾವುಟಿ < ಚಮ್ಮಟಿ < ಚರ್ಮ ಪಟ್ಟಿಕಾ = ಚರ್ಮದ ಹುರಿ ಇರುವಂಥ ಬಾರುಗೋಲು) ಗಾಡಿಗೆ ಕಟ್ಟಿದ ಎತ್ತುಗಳನ್ನು ಮುನ್ನಡೆಸಲು ರೈತ ಚಾಟಿ ಹಿಡಿದಿರುತ್ತಾನೆ. ಅದೇ ರೀತಿ ಆಡಳಿತ ನಡೆಸುವ ವ್ಯಕ್ತಿ ಅಧಿಕಾರದ ಚಾವುಟಿ ಹಿಡಿದು ಮುನ್ನಡೆಸುವುದನ್ನು ಬೇಸಾಯದ ಈ ನುಡಿಗಟ್ಟು ಧ್ವನಿಸುತ್ತದೆ.
ಪ್ರ : ಚಾಟಿ ಹಿಡಿದು ಚಕ್ಕಡಿ ಓಡಿಸುವ ಜವಾಬ್ದಾರಿ ಈಗ ನನ್ನದು.
೧೧೦೧. ಚಾಟಿ ಯಾಪಾರ ಮಾಡು = ವಿನಿಮಯ ವ್ಯಾಪಾರ ಮಾಡು
(ಚಾಟಿ < ಸಾಟಿ(ತೆ)< ಸಾಟ್ಟೆ (ಮರಾಠಿ) = ವಿನಿಮಯ, ಅದಲುಬದಲು, Barter)
ಪ್ರ : ಚಾಟಿ ಯಾಪಾರದಲ್ಲಿ ಚೆನ್ನಾಗಿ ಕಮಾಯಿಸಿದ ಖದೀಮ
೧೧೦೨. ಚಾಣದಂತಿರು = ಗಟ್ಟಿಯಾಗಿರು, ಬಾಗದಿರು
(ಚಾಣ = ಬಂಡೆಯನ್ನು ಪಾಳಿಸುವ ಸಣ್ಣ ಉಳಿ)
ಪ್ರ : ಗಾದೆ – ಚಾಣ ಸಣ್ಣದಾದರೂ ಚಪ್ಪಡಿ ಪಾಳಿಸ್ತದೆ
೧೧೦೩. ಚಾಪೆ ಕೆಳಗೆ ತೂರು = ಕುಯಕ್ತಿ ಮಾಡು, ನರಿಬುದ್ಧಿ ತೋರಿಸು
ಪ್ರ : ಇವನು ಚಾಪೆ ಕೆಳಗೆ ತೂರಿದರೆ, ಇವನ ಬೀಗರು ರಂಗೋಲಿ ಕೆಳಗೆ ತೂರ್ತಾರೆ
೧೧೦೪. ಚಾಲು ಮಾಡು = ಪ್ರಾರಂಭಿಸು, ನಡೆಸು
(ಚಾಲು < ಚಲ್(ಹಿಂ, ಉ) = ಹೊರಡು, ನಡೆ)
ಪ್ರ : ಕೆಲಸ ಮಾಡು ಮಾಡಿದ್ರೆ ಉಳಿದದ್ದು ನಾನು ನೋಡಿಕೊಳ್ತೀನಿ
೧೧೦೫. ಚಿಕ್ಕನಾಯ್ಕನ ಹಳ್ಳಿ ಚಿಪ್ಪು ಕೊಡು = ಕೈಗೆ ಭಿಕ್ಷಾಪಾತ್ರೆ ಕೊಡು
(ಚಿಪ್ಪು = ತೆಂಗಿನಕಾಯಿ ಕರಟ) ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತೆಂಗಿನ ಬೆಳೆಗೆ ಪ್ರಸಿದ್ಧಿ. ಚಿಕ್ಕನಾಯಕನ ಹಳ್ಳಿ ಚಿಪ್ಪು ಎಂದರೆ ತೆಂಗಿನಕಾಯಿ ಚಿಪ್ಪು ಅಥವಾ ಭಿಕ್ಷಾಪಾತ್ರೆ ಎಂದು ಅರ್ಥ – ಪ್ರಾದೇಶಿಕ ಬೆಳೆಯ ಹಿನ್ನೆಲೆಯಿಂದ ಈ ನುಡಿಗಟ್ಟು ಮೂಡಿದೆ.
ಪ್ರ : ನಿಮ್ಮತ್ತೆ ಇರೋದು ಬರೋದನ್ನೆಲ್ಲ ತೌರು ಮನೆಗೆ ಸಾಗಿಸಿ, ಕೊನೆಗೆ ಮನೆ ಅಳಿಯನಿಗೆ ಚಿಕ್ಕನಾಯ್ಕನ ಹಳ್ಳಿ ಚಿಪ್ಪು ಕೊಡೋದು ಗ್ಯಾರಂಟಿ.
೧೧೦೬. ಚಿಗಳು ಕೊಡು = ಹೋಳು ಕೊಡು, ಅರ್ಧ ಭಾಗ ಕೊಡು
(ಚಿಗಳು < ಸಿಗಳು = ಸೀಳಿದ ಭಾಗ)
ಪ್ರ : ಇಳ್ಳೇದೆಲೆ (< ವೀಳ್ಯದೆಲೆ) ಒಂದೇ ಇರೋದರಿಂದ ಇಬ್ಬರೂ ಒಂದೊಂದು ಚಿಗಳು ಹಾಕ್ಕೊಂಡರಾಯ್ತು ಬಿಡು.
೧೧೦೭. ಚಿಗುರಿಕೊಳ್ಳು = ಹೆಚ್ಚಿಕೊಳ್ಳು, ಏಳ್ಗೆ ಹೊಂದು
ಪ್ರ : ಇತ್ತೀಚೆಗೆ ಅವನು ಚೆನ್ನಾಗಿ ಚಿಗುರಿಕೊಂಡ, ಹಗೆಗಳೂ ಅಸೂಯೆ ಪಡೋ ಹಾಗೆ
೧೧೦೮. ಚಿಗುಳೆಲೆ ಒಪ್ಪಡಕೆ ಕೊಡದಿರು = ಮಹಾಜಿಪುಣನಾಗಿರು
(ಚಿಗುಳು < ಸಿಗುಳು = ಅರ್ಧ ಸೀಳು; ಒಪ್ಪು < ಅಪ್ಪು = ಅರ್ಧ ಹೋಳು)
ಪ್ರ : ಚಿಗುಳೆಲೆ ಒಪ್ಪಡಿಕೆ ಕೊಡದಿರೋನ ಹತ್ರ, ಗುಂಡೆಲೆ ಉಂಡಡಕೆ ಕೇಳ್ತೀಯಲ್ಲ!
೧೧೦೯. ಚಿಟಕು ಮುಳ್ಳಾಡಿಸು = ಹಿಂಸಿಸು, ಇದ್ದಕಡೆ ಇರಗೊಡಿಸದಿರು.
ಗ್ರಾಮೀಣ ಪ್ರದೇಶದಲ್ಲಿ ಬರಿಗಾಲಲಲಿ ದನಕುರಿ ಮೇಕೆ ಮೇಯಿಸುವ ಜನ ಮುಳ್ಳು ತುಳಿದು ಮುರಿದುಕೊಂಡಾಗ ಅದನ್ನು ತೆಗೆಯಲು ಚಿಮಟ ಇಲ್ಲದಿದ್ದರೆ ಮತ್ತೊಂದು ಮುಳ್ಳನ್ನೇ ಕಿತ್ತುಕೊಂಡು, ಮುರಿದ ಮುಳ್ಳನ್ನು ಆ ಕಡೆಯಿಂದ ಈಕಡೆಗೆ ಈಕಡೆಯಿಂದ ಆ ಕಡೆಗೆ ಮಿಣುಗಿ ಅಲ್ಲಾಡಿಸುತ್ತಾ ಹೋಗುತ್ತಾರೆ. ಆಗ ಮುಳ್ಳು ಸಡಿಲಗೊಂಡು ಮೇಲಕ್ಕೆ ಬರುತ್ತದೆ. ಉಗುರಿಗೆ ಸಿಕ್ಕುವಷ್ಟು ಮೇಲಕ್ಕೆ ಬಂದಾಗ ಕಿತ್ತೆಸೆಯುತ್ತಿದ್ದರು. ಮುಳ್ಳನ್ನು ಮುಳ್ಳಿನಿಂದ ತೆಗೆಯುವ ವಿಧಾನಕ್ಕೆ ಚಿಟಕು ಮುಳ್ಳಾಡಿಸುವುದು ಎನ್ನುತ್ತಾರೆ.
ಪ್ರ : ಆ ಕೆಲಸದ ಹುಡುಗೀನ ಕುಂತ ಕಡೆ ಕುಂಡ್ರಿಸಲ್ಲ, ನಿಂತಕಡೆ ನಿಲ್ಲಿಸಲ್ಲ, ಒಂದೇ ಸಮನೆ ಚಿಟಕು ಮುಳ್ಳಾಡಿಸ್ತಾರೆ.
೧೧೧೦. ಚಿಟಕೆ ಚಪ್ಪರ ಮಾತಿನ ಮದುವೆ ಮಾಡು = ರೈಲು ಬಿಡು, ಉಡಾಫೆ ಹೊಡಿ
ಪ್ರ : ಚಿಟಕೆ ಚಪ್ಪರ ಮಾತಿನ ಮದುವೆ ಮಾಡೋಕೆ ಕಾಸುಕರಿಮಣಿ ಯಾಕೆ ?
೧೧೧೧. ಚಿಟಕೆ ಹೊಡೆಯೋದರೊಳಗೆ ಬರು = ಕ್ಷಣಾರ್ಧದಲ್ಲಿ ಬರು
(ಚಿಟಿಕೆ = ಹೆಬ್ಬೆರಳು ಮತ್ತು ನಡುಬೆರಳ ತಾಡನದ ಸದ್ದು)
ಪ್ರ : ಚಿಗರೆಯಂಗೆ ಚಿಟಿಕೆ ಹೊಡೆಯೋದರೊಳಗೆ ಬಂದುಬಿಟ್ಟ
೧೧೧೨. ಚಿಟಕೆ ಹಾಕು = ಕಾದ ಬಳೆ ಓಡಿನಿಂದ ಸುಡು, ಚುರುಕು ಮುಟ್ಟಿಸು
(ಚಿಟಕೆ < ಸುಟಿಗೆ < ಸುಡಿಗೆ = ಸುಡುವಿಕೆ) ಮಕ್ಕಳಿಗೆ ಮಂದವಾಗಿ ಕಿವಿಗಳೆಲ್ಲ ತಣ್ಣಗಾದಾಗ ಹಳ್ಳಿಯ ಹೆಂಗಸರು ಬಳೆಯ ಓಡನ್ನು ಕಾಸಿ, ಮಗುವಿನ ಕಳಗುಣಿಗೆ (ಹಿಂದಲೆಯ ಕೆಳಭಾಗದಲ್ಲಿರುವ ಕೆಳಗುಣಿಗೆ) ಸುಡಿಗೆ ಹಾಕುವ ಪದ್ಧತಿಯನ್ನು ಅನುಸರಿಸುತ್ತಿದ್ದರು. ಆ ಮೌಢ್ಯ ಇಂದು ಹಳ್ಳಿಗಾಡಿನಿಂದ ಗೈರು ಹಾಜರಾಗುತ್ತಿರುವುದು ಸಂತೋಷದ ವಿಷಯ.
ಪ್ರ : ಅವನಿಗೆ ಸರಿಯಾಗಿ ಚಿಟಕೆ ಹಾಕದಿದ್ರೆ ಎಲ್ಲರಿಗೂ ಲೊಟಗಾಯಿ ತೋರಿಸ್ತಾನೆ.
೧೧೧೩. ಚಿಟಕೆಯಷ್ಟು ಕೊಡು = ಕೊಂಚ ಕೊಡು
(ಚಿಟಕೆ = ಹೆಬ್ಬೆರಳು ಮತ್ತು ತೋರ್ಬೆರಳಲ್ಲಿ ಹಿಡಿದುಕೊಳ್ಳುವಷ್ಟು ಪುಡಿ)
ಪ್ರ : ಒಂದು ಚಿಟಿಕೆಯಷ್ಟು ನಶ್ಯ ಕೊಡು ಅಂದ್ರೆ, ಉಹುಂ ಅಂದುಬಿಟ್ಟ ಅಂಟುನನ್ಮಗ.
೧೧೧೪. ಚಿಣ್ಣಿ ಕೋಲಾಡಿಸು = ಓಡಾಡಿಸು, ಸುಸ್ತು ಮಾಡಿಸು
(ಚಿಣ್ಣಿ < ಚಿಳ್ಳೆ < ಸಿಳ್ಳೆ = ಸಣ್ಣದು, ಚಿಕ್ಕದು) ಚಿಣ್ಣಿ ಕೋಲಾಟ ಒಂದು ಜನಪದ ಕ್ರೀಡೆ. ನಡುದಪ್ಪನಾಗಿದ್ದು, ಎರಡು ತುದಿಗಳನ್ನು ಚೂಪಾಗಿಸಿದ ಚೋಟುದ್ದದ ಚಿಳ್ಳೆಯನ್ನು ಬದ್ದು (ಕುಳಿ) ವಿನಲ್ಲಿ ಇಟ್ಟು, ಮೇಲೆದ್ದ ತುದಿಗೆ ಕೈಲಿರುವ ಮೊಳದುದ್ದದ ಕೋಲಿನಿಂದ ಹೊಡೆದು, ಅದು ಮೇಲಕ್ಕೆ ಚಿಮ್ಮಿದಾಗ, ಮತ್ತೆ ಕೋಲಿನಿಂದ ದೂರಕ್ಕೆ ಹೊಡೆದು ಆಡುವಂಥ ಆಟ.
ಪ್ರ : ಹೊತ್ತಾರೆಯಿಂದ ಬೈಸಾರೆವರೆಗೆ ಅವನಿಗೆ ಚಿಣ್ಣಿ ಕೋಲಾಡಿಸಿದ್ದೆ. ಅದ್ಕೇ ಸುಸ್ತಾಗಿ ಬಿದ್ದು ಕೊಂಡವನೆ.
೧೧೧೫. ಚಿತ್ ಮಾಡು = ಸೋಲಿಸು
ಕುಸ್ತಿಯಲ್ಲಿ ಎದುರಾಳಿಯನ್ನು ಅಂಗಾತ ಮಾಡಿದರೆ ಅವನು ಸೋತಂತೆ, ತಾನು ಗೆದ್ದಂತೆ ಲೆಕ್ಕ. ಹಾಗೆ ಅಂಗಾತ ಮಾಡುವುದಕ್ಕೆ ಚಿತ್ ಮಾಡಿದ ಎನ್ನುತ್ತಾರೆ. ಕುಸ್ತಿಯಾಟದ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಈಟಿದ್ರೂ ನನ್ನೇಟೇ ಬೇರೆ ಅಂತ, ಈ ಕಡ್ಡಿ ಪೈಲ್ವಾನ್ ಆ ದಾಂಡಿಗದಡಿಗನನ್ನು ಅರೇಕ್ಷಣದಲ್ಲಿ ಚಿತ್ ಮಾಡಿಬಿಟ್ಟನಲ್ಲ.
೧೧೧೬. ಚಿದರು ಚಿದರಾಗು = ಪಲ್ಲಂಡೆಯಾಗು, ಸೀಳೆ ಸೀಳಾಗು
(ಚಿದರು < ಛಿದ್ರ (ಸಂ) = ಸೀಳು, ಬಿರುಕು)
ಪ್ರ : ಆನೆ ಪಟಾಕಿ ಹೊಡೆಯೋಕೆ ಹೋಗಿ ಬೆರಳೆಲ್ಲ ಚಿದರು ಚಿದರಾಗಿ ಹೋಯ್ತು.
೧೧೧೭. ಚಿನಕಡಿ ಮಾಡು = ಸಣ್ಣ ಚೂರು ಚೂರು ಮಾಡು, ಚಾಕಣ ಮಾಡು
(ಚಿನ < ಚಿನ್ನ < ಸಿನ್ನ (ತೆ) = ಚಿಕ್ಕದು ; ಕಡಿ = ತುಂಡು, ತುಣುಕು)
ಪ್ರ : ಚಿನಾಲೀನ ಚಿನಕಡಿ ಮಾಡಿ ತಿಪ್ಪೆಗೆ ಸುರಿದುಬಿಡ್ತೀನಿ.
೧೧೧೮. ಚಿನಾಲಿ ಕೆಲಸ ಮಾಡು = ಹಾದರ ಮಾಡು
(ಚಿನಾಲಿ < ಛಿನಾಲಿ (ಹಿಂ) = ಸೂಳೆ, ಹಾದರಗಿತ್ತಿ)
ಪ್ರ : ಚಿನಾಲಿ ಕೆಲಸ ಮಾಡೋರು ಗರತಿಯಂತೆ ನಟಿಸೋದು ಜಾಸ್ತಿ
೧೧೧೯. ಚಿಪ್ಪು ಹಿಡಕೊಂಡು ಹೋಗು = ತಿರುಪೆಗೆ ಹೋಗು, ಏನೂ ಇಲ್ಲದಂತಾಗು
(ಚಿಪ್ಪು = ತೆಂಗಿನಕಾಯಿ ಕರಟ)
ಪ್ರ : ನೀನು ಇದರೊಳಗೆ ಯಾಮಾರಿದರೆ, ಚಿಪ್ಪು ಹಿಡ್ಕೊಂಡು ಹೋಗಬೇಕಾಗ್ತದೆ.
೧೧೨೦. ಚಿಬ್ಬಲೊಳಗೆ ಬಸಿ = ಬಿದಿರ ಮುಚ್ಚಳದಲ್ಲಿ ಸುರಿ
(ಚಿಬ್ಬಲು = ಬಿದಿರಿನ ತಟ್ಟೆ, ಮುಚ್ಚಳ)
ಪ್ರ : ಸಾರಿಗೆ ಮಳ್ಳೆ ಮೀನು ಹಾಕಿ, ಒಂದುಕ್ಕಲು ಬಂದ ತಕ್ಷಣ ಚಿಬ್ಬಲೊಳಕ್ಕೆ ಬಸಿದು ಬಿಡು, ತಡ ಮಾಡಿದ್ರೆ ಮಳ್ಳೆ ಮೀನೆಲ್ಲ ಅನ್ನ ಆಗಿ ಕದಡಿ ಹೋಗ್ತವೆ.
೧೧೨೧. ಚಿಮಟ ಹಾಕಿ ಕೀಳು = ಹಿಂಸೆ ಕೊಡು
(ಚಿಮಟ < ಚಿಮ್ಮಟ = ಕಾಲಿಗೆ ಚುಚ್ಚಿ ಮುರುದುಕೊಂಡ ಮುಳ್ಳನ್ನು ಕೀಳುವ ಇಕ್ಕುಳದಾಕಾರದ ಸಾಧನ)
ಪ್ರ : ನನ್ನ ದುಡ್ಡನ್ನು ನೆಲ ಉರುವಿ ಮಡಗು ಅಂತ ಚಿಮಟ ಹಾಕಿ ಕೀಳ್ತಾನೆ ಒಂದೇ ಸಮ
೧೧೨೨. ಚಿಮ್ಮಿಕ್ಕು = ಪ್ರಚೋದಿಸು
(ಚಿಮ್ಮು = ಮೀಟು, ವಸ್ತುವನ್ನು ಮುಂದಕ್ಕೆ ಎಗರುವಂತೆ ಮಾಡು)
ಪ್ರ : ಅವರು ಚಿಮ್ಮಿಕ್ಕಿರೋದರಿಂದ್ಲೇ, ಇವನು ನಮ್ಮೇಲೆ ದುಮ್ಮಿಕ್ಕಿರೋದು
೧೧೨೩. ಚಿಲ್ಲರೆ ಮಾತಾಡು = ಹಗುರವಾಗಿ ಮಾತಾಡು, ಘನತೆ ಇಲ್ಲದ ಮಾತಾಡು
(ಚಿಲ್ಲರೆ = ಬಟುವನ್ನು ಮುರಿಸಿದ ಬಿಡಿ ನಾಣ್ಯಗಳು)
ಪ್ರ : ಚಿಲ್ಲರೆ ಮಾತಾಡದಿದ್ರೆ, ಚೆಲ್ಲುಮುಂಡೆ ಮಕ್ಕಳ ಗಂಟ್ಲಲ್ಲಿ ಅನ್ನ ಇಳಿಯಲ್ಲ
೧೧೨೪. ಚೀಕಾಗು = ಕಾಯಿಲೆಯಾಗು
(ಚೀಕು <ಸೀಕು < Sick = ಕಾಯಿಲೆ)
ಪ್ರ :ತಿಂಗಳಿಂದ್ಲೂ ಚೀಕಾಗಿ ಹಾಸಿಗೆ ಹಿಡಿದಿದ್ದಾಳೆ
೧೧೨೫. ಚೀಚಿ ಕೊಡು = ಒಳ ಸುಂಟಿ ಕೊಡು, ಒಳದೊಡೆಯ ಮೆದುಮಾಂಸವನ್ನು ಹಿಡಿದು ಹಿಂಡು (ಚೀಚಿ = ಮಾಂಸ; ಇರುಳಿಗರ > ಇಲ್ಲಿಗರ ಭಾಷೆಯಲ್ಲಿ ಚೀಚಿ ಎಂಬುದೇ ಬಳಕೆಯಲ್ಲಿದೆ)
ಪ್ರ : ಇನ್ನೊಂದು ಸಾರಿ ಮಾಡದ್ಹಂಗೆ, ಚೆನ್ನಾಗಿ ಚೀಚಿ ಕೊಟ್ಟು ಕಳಿಸಿದ್ದೀನಿ
೧೧೨೬. ಚೀಚಿ ತಿನ್ನು = ಮಾಂಸ ತಿನ್ನು,
(ಚೀಚಿ = ಮಾಂಸ, ಬಾಡು) ಸಾಮಾನ್ಯವಾಗಿ ಮಕ್ಕಳಿಗೆ ಹೇಳುವಾಗ ಚೀಚಿ ಶಬ್ದಗಳನ್ನು ಬಳಸುತ್ತಾರೆ, ಉಳಿದಂತೆ ಬಾಡು ಅಥವಾ ಮಾಂಸ ಶಬ್ದವನ್ನು ಬಳಸುತ್ತಾರೆ. ಆದರೆ ‘ಇಲ್ಲಿಗರು’ (<ಇರುಳಿಗರು = ತಮಿಳುನಾಡು ಮೂಲದ ಕುರುಬ ಜನಾಂಗದ ಒಂದು ಬೆಡಗು) ತಮ್ಮ ದಿನನಿತ್ಯದ ಭಾಷೆಯಲ್ಲಿ ಚೀಚಿ ಶಬ್ದವನ್ನೇ ಬಳಸುತ್ತಾರೆ. ಈ ಜನ ಮಾಗಡಿ, ಸಾವಂದುರ್ಗ, ರಾಮನಗರ, ಚೆನ್ನಪಟ್ಟಣ ಪ್ರದೇಶದಲ್ಲಿದ್ದಾರೆ.
ಪ್ರ : ಮೊದಲು ಚೀಚಿ ತಿಂದು ಬಿಡು, ಆಮೇಲೆ ಚಾಚಿ ಕುಡಿಸ್ತೀನಿ.
೧೧೨೭. ಚೀಲಿ ಪರೀತಿ ಸಾಕು = ಬೆಕ್ಕಿನ ಪ್ರೀತಿ ಸಾಕಾಗು, ಬೇಸರವಾಗು
(ಚೀಲಿ.< ಸೀಲಿ < ಸೀಬಿ = ಬೆಕ್ಕು; ಪರೀತಿ.< ಪ್ರೀತಿ = ಒಲವು) ಬೆಕ್ಕು ತನ್ನ ಮರಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಬಾಯಿಂದ ಕಚ್ಚಿಕೊಂಡು ಹೋಗಿ ಎಚ್ಚರಿಕೆಯಿಂದ ಸಾಕುವಂತೆ ತಾಯಂದಿರು ಅತಿಪ್ರೀತಿಯಿಂದ ಮಕ್ಕಳನ್ನು ಸಾಕಿ ಸಾಹಸಪ್ರವೃತ್ತಿ ಬೆಳೆಯದಂತೆ ಮಾಡುವುದು ಬೇಡ ಎಂಬ ಧ್ವನಿ ಈ ನುಡಿಗಟ್ಟಿನಲ್ಲಿ ಇದೆ.
ಪ್ರ : ಗಾದೆ – ಚೀಲಿ ಮಕ್ಕಳು ಒಲೆ ಮುಂದೆ
ಚಿನಾಲಿ ಮಕ್ಕಳು ಊರ ಮುಂದೆ
೧೧೨೮. ಚುಕ್ತಾ ಮಾಡು = ಮುಗಿಸು, ಬಾಕಿ ಉಳಿಯದಂತೆ ತೀರಿಸು
ಪ್ರ : ಅವನಿಗೆ ಕೊಡಬೇಕಾದ್ದನ್ನೆಲ್ಲ ಚುಕ್ತಾ ಮಾಡಿದ್ದೇನೆ, ಹೋಗು
೧೧೨೯. ಚುಚ್ಚಿಕೊಡು = ಎತ್ತಿ ಕಟ್ಟು, ಪ್ರಚೋದಿಸು, ಚಾಡಿ ಹೇಳು
ಪ್ರ : ಅವರು ಚುಚ್ಚಿಕೊಟ್ಟಿರೋದ್ಕೆ ಇವನು ಹೆಚ್ಕೊಂಡಿರೋದು
೧೧೩೦. ಚುಚ್ಚು ಮದ್ದು ಕೊಡು = ಸಂಭೋಗಿಸು
(ಚುಚ್ಚು ಮದ್ದು.< ಸೂಜಿ ಮದ್ದು = ಸೂಜಿಯ ಮೂಲಕ ದೇಹಕ್ಕೆ ಕೊಡುವ ಔಷಧ)
ಪ್ರ : ಚುಚ್ಚು ಮದ್ದು ಕೊಟ್ಟ ಮೇಲೆ, ಮೈಮರೆತು ನಿದ್ದೆ ಮಾಡ್ತಾ ಅವಳೆ.
೧೧೩೧. ಚುಪ್ಪಾನುಚೂರಾಗು = ನುಚ್ಚುನೂರಾಗು
ಪ್ರ : ಕುಂಬಳಕಾಯಿ ಕೈತಪ್ಪಿ ಬಿದ್ದು ಚುಪ್ಪಾನುಚೂರಾಯ್ತು
೧೧೩೨. ಚುಬುಕ ಚಿಬಕು = ಗಲ್ಲಕ್ಕೆ ಬಾಯಿ ಹಾಕಿ ಚೀಪು
(ಚುಬುಕ = ಗದ್ದ, ಗದ್ದದ ತುದಿ ; ಚಿಬಕು = ಚೀಪು, ಸೀಪು)
ಪ್ರ : ಚಿಬುಕಬೇಕಾದ್ದು ಚುಬುಕ ಅಲ್ಲ ಅಂತ ಚಾಚಿಯನ್ನು ಬಾಯಿಗಿಟ್ಟಳು.
೧೧೩೩. ಚುರುಕಾಗು = ಉಷ್ಣವಾಗು, ಎಟ್ಟೆಯಾಗು
(ಚುರುಕು = ಉಷ್ಣ, ಎಟ್ಟೆ)
ಪ್ರ : ಚುರುಕು ಆಗಿರೋದ್ರಿಂದ್ಲೋ ಏನೋ ಕಣ್ಣು ಅಂಗಲುಭಗ ಭಗ ಅಂತ ಉರೀತಿವೆ.
೧೧೩೪. ಚುರುಕು ಮುಟ್ಟಿಸು = ಚೆನ್ನಾಗಿ ಥಳಿಸು
ಪ್ರ : ಅವನಿಗೆ ಚೆನ್ನಾಗಿ ಚುರುಕು ಮುಟ್ಟಿಸಿದ್ದೀನಿ, ಮತ್ತೆ ಕಿರಕ್ ಮಾಡದ ಹಂಗೆ
೧೧೩೫. ಚುರು ಚುರು ಎನ್ನು = ಉರಿಯತೊಡಗು
ಪ್ರ : ಕೆನ್ನೆ ಇನ್ನೀ ಚುರುಚುರು ಅಂತಾ ಅದೆ, ಹಂಗೆ ಹೊಡೆದು ಹೋದ್ನಲ್ಲೆ, ಅವನ ಕೈಗೆ ಕರಿನಾಗರ ಹಾವು ಕಡಿಯಾ !
೧೧೩೬. ಚೂಜಗಿರು = ಚೂಪಾಗಿರು, ಸೂಜಿಯ ಮೊನೆಯಂತಿರು
ಪ್ರ : ಇದು ಮೊಂಡು, ಇನ್ನು ಚೂಜಗಿರೋದನ್ನ ತಗೊಂಡು ಬಾ
೧೧೩೭. ಚೂಜಿ ಕಣ್ಣಾಗೆ ಬಂದದ್ದು ಬಚ್ಚಲ ಕಂಡಿಯಾಗಿ ಹೋಗು = ಮಿತ ಪ್ರಮಾಣದಲ್ಲಿ ಖೂಡಿ ಬಂದದ್ದು ಅಮಿತ ಪ್ರಮಾಣದಲ್ಲಿ ಕೋಡಿ ಬಿದ್ದು ಹೋಗು.
(ಚೂಜಿ < ಸೂಜಿ; ಕಣ್ಣು = ಮೊನೆ, ಕಂಡಿ = ರಂದ್ರ)
ಪ್ರ: ಐಶ್ವರ್ಯ ಬರೋದು ಚೂಜಿ ಕಣ್ಣಾಗೆ, ಹೋಗೋದು ಬಚ್ಚಲ ಕಂಡಿಯಾಗೆ.
೧೧೩೮. ಚೂಜಿ ಚುಚ್ಚೋಕೆ ಜಾಗ ಇಲ್ಲದಿರು = ನಿಬಿಡವಾಗಿರು, ದಟ್ಟವಾಗಿರು
ಪ್ರ : ಮದುವೆ ಮನೇಲಿ ಚೂಜಿ ಚುಚ್ಚೋಕೆ ಜಾಗ ಇರಲಿಲ್ಲ, ಹಂಗೆ ಜನ ತುಂಬಿದ್ದರು.
೧೧೩೯. ಚೆನ್ನಾಗಿ ಚಾಚು = ಸಕತ್ತಾಗಿ ಹೊಡಿ
(ಚಾಚು < ಚಚ್ಚು = ಬಡಿ)
ಪ್ರ : ಆ ಲೋಫರ್ ಗೆ ಮಕದ ಮೇಲೆ ಚೆನ್ನಾಗಿ ಚಾಚಿ ಕಳಿಸಿದ್ದೀನಿ
೧೧೪೦. ಚೇಗು ಹೆಚ್ಚಾಗು = ಅಹಂಕಾರ ಜಾಸ್ತಿಯಾಗು
(ಚೇಗು < ಸೇಗು = ಮರ ಚೆನ್ನಾಗಿ ಬಲಿತು ಅಡ್ಡ ಎಳೆ ಉದ್ದ ಎಳೆಗಳ ಬೆಸುಗೆಯಿಂದ ಗಟ್ಟಿಯಾಗಿರುವಿಕೆ)
ಪ್ರ : ಅವನಿಗೆ ಚೇಗು ಹೆಚ್ಚಾಗಿದೆ, ಮೇಗೇ ನೋಡ್ತಾನೆ, ಕೆಳಗೆ ನೊಡಲ್ಲ.
೧೧೪೧. ಚೊಗಟ ಮಾಡು = ಗಳಿಸದ್ದನ್ನೆಲ್ಲ ಕರಗಿಸು, ಏನೂ ಇಲ್ಲದಂತೆ ಮಾಡು
(ಚೊಗಟ < ಚೊಕ್ಕಟ = ಅಚ್ಚುಕಟ್ಟು, ನಿರ್ಮಲ)
ಪ್ರ : ಅಪ್ಪ ಗಳಿಸಿಟ್ಟದ್ದನ್ನೆಲ್ಲ ಮಗ ಚೊಗಟ ಮಾಡಿಬಿಟ್ಟ, ಚೋಪಾರಲು ಹತ್ತಿ
೧೧೪೨. ಚೋಜಿಗ ಹೇಳು = ವಿಸ್ಮಯದ ಸುದ್ದಿ ಹೇಳು
(ಚೋಜಿಗ < ಸೋಜಿಗ = ಆಶ್ಚರ್ಯ)
ಪ್ರ : ಚೋಜಿಗ ಹೇಳೋಕೆ ಮೋಜುಗಾತಿ ಕರೆಸಿ
೧೧೪೩. ಚೋಟುದ್ದವಿರು = ಕುಳ್ಳಗಿರು
(ಚೋಟು = ಗೇಣು. ವಿರುದ್ಧ ದಿಕ್ಕಿನಲ್ಲಿ ಹೆಬ್ಬೆರಳು ಮತ್ತು ನಡುಬೆರಳನ್ನು ಚಾಚಿದರೆ ಎಷ್ಟು ಉದ್ದವಿರುತ್ತದೋ ಅದಕ್ಕೆ ಗೇಣುದ್ದ, ಚೋಟುದ್ದ ಎಂದು ಹೇಳಲಾಗುತ್ತದೆ)
ಪ್ರ : ಚೋಟುದ್ದ ಇದ್ದರೂ ಏಟುದ್ದ ನಿಗುರ್ತಾನೆ ನೋಡು.
೧೧೪೪. ಚೋಪಾರಲು ಹತ್ತು = ಚೆಲ್ಲು ಬೀಳು, ಪೋಲಿಬೀಳು, ಅಲ್ಲಿ ಇಲ್ಲಿ ಎಂಜಲೆತ್ತು
ಪ್ರ : ಚೋಪಾರಲು ಹತ್ತಿ ಬಂದೋಳ್ನ ಜೋಪಾನವಾಗಿ ಕಾದರೂ ಫಲವಿಲ್ಲ
೧೧೪೫. ಚೌರ ಮಾಡು = ನುಣ್ಣಗೆ ಮಾಡು, ಬರಿದು ಮಾಡು
(ಚೌರ < ಕ್ಷೌರ  = ಕೂದಲು ಕತ್ತಿರುಸವ, ಅಥವಾ ಬೋಳಿಸುವ ಕೆಲಸ)
ಪ್ರ : ಮನೆ ಉದ್ಧಾರ ಮಾಡ್ತೀನಿ ಅಂತ ಹೋಗಿ, ನುಣ್ಣಗೆ ಚೌರ ಮಾಡಿ ಬಂದುಬಿಟ್ಟ
೧೧೪೬. ಚಂಗೋಬಂಗು ಮಾಡು = ಮಾನ ಕಳೆ, ಗೌರವ ಹರಾಜು ಹಾಕು
(ಚಂಗು < ಚಂಗು = ಹರಿದ ಬಟ್ಟೆ, ಜೂಲು; ಬಂಗು ಭಂಗ)
ಪ್ರ : ನಡುಬೀದೀಲಿ ನಮ್ಮ ಮಾನಮರ್ಯಾದೆಯನ್ನೆಲ್ಲ ಚಂಗೋಬಂಗು ಮಾಡಿಬಿಟ್ಟ.
೧೧೪೭. ಚಂಚಕರಿಸು = ಉತ್ತರಕ್ರಿಯೆ ಮಾಡು, ಸಂಸ್ಕಾರ ಮಾಡು
(ಚಂಚಕರಿಸು < ಸಂಚಕರಿಸು < ಸಂಸ್ಕರಿಸು = ಸಂಸ್ಕಾರ ಕ್ರಿಯೆ ಜರುಗಿಸು)
ಪ್ರ : ನಾನೊಬ್ಬ ಎಷ್ಟೂ ಅಂತ ಚಂಚಕರಿಸಲಿ?
೧೧೪೮. ಚಂಚಕಾರ ಕೊಡು = ಮುಂಗಡ ಹಣ ಕೊಡು
(ಚಂಚಕಾರ < ಸಂಚಕಾರ = ಮುಂಗಡ ಹಣ)
ಪ್ರ : ನನಗೇ ಕೊಡಬೇಕು, ಬೇರೆಯವರಿಗೆ ಕೊಡಬಾರ್ದು ಅಂತ ಚಂಚಕಾರ ಕೊಟ್ಟು ಬಂದಿದ್ದೀನಿ
೧೧೪೯. ಚಂಚಿ ತುಂಬು = ಮಡಿಲು ದುಂಬು
(ಚಂಚಿ < ಸಂಚಿ = ಎಲೆ ಅಡಕೆ ಚೀಲ) ಮದುವೆಯಾದಾಗ ಹೆಣ್ಣಿಗೆ ಕೊಬರಿ ಬೆಲ್ಲ ಅಕ್ಕಿ ರವಕೆ ಎಲೆಅಡಕೆ ಇಟ್ಟು ಮಡಿಲುದುಂಬುವ ಶಾಸ್ತ್ರ ಮಾಡುತ್ತಾರೆ. ಆ ಹಿನ್ನೆಲೆಯಲ್ಲಿ ಈ ನುಡಿಗಟ್ಟು ಮೂಡಿದೆ. ಇಲ್ಲಿ ಬರುವ ಚಂಚಿ(ಚೀಲ) ಗರ್ಭಕೋಶಕ್ಕೆ ಸಂಕೇತವಾಗಿ ನಿಂತು ಅನತಿಕಾಲದಲ್ಲಿಯೇ ಅವಳು ಗರ್ಭವತಿಯಾಗಲೆಂದು ಆಶಯ, ಆಶೀರ್ವಾದ ಈ ಆಚರಣೆಯ ಹಿನ್ನೆಲೆಗಿದೆ ಎಂಬುದನ್ನು ಮರೆಯುವಂತಿಲ್ಲ.
ಪ್ರ : ಚಂಚಿ ತುಂಬಿದ್ದನ್ನ ಇಲ್ಲೇ ಬಿಡಬಾರ್ದು, ಜೊತೇಲೆ ಗಂಡನ ಮನೆಗೆ ತಗೊಂಡು ಹೋಗ್ಬೇಕು.
೧೧೫೦. ಚಂಡು ಎಗರಿಸು = ತಲೆ ಕತ್ತರಿಸು
(ಚಂಡು = ತಲೆ)
ಪ್ರ : ಅವನ ದುಂಡಾವರ್ತಿ ನಿಲ್ಲಬೇಕೂ ಅಂದ್ರೆ, ಅವನ ಚೆಂಡು ಎಗರಿಸೋದೊಂದೇ ದಾರಿ
೧೧೫೧. ಚಿಂದಿ ಎಬ್ಬಿಸು = ಧ್ವಂಸ ಮಾಡು, ಕೊಳ್ಳೆ ಹೊಡಿ
(ಚಿಂದಿ = ಛಿದ್ರ ಛಿದ್ರ, ಪಲ್ಲಂಡೆ)
ಪ್ರ : ಒಂದೇ ವರ್ಷದಲ್ಲಿ ಅಪ್ಪನ ಆಸ್ತೀನೆಲ್ಲ ಚಿಂದಿ ಎಬ್ಬಿಸಿಬಿ‌ಟ್ಟ.
೧೧೫೨. ಚುಂಗು ಹೊಡಿ = ಗೊಚ್ಚುವಾಸನೆ ಹೊಡಿ
ಪ್ರ : ಕುರಿಮೇಕೆ ಗಂಜಳದ್ದೋ ಏನೋ ಚುಂಗು ವಾಸನೆ ಹೊಡೀತಾ ಅದೆ
೧೧೫೩. ಚೆಂಗಲು ಬೀಳು = ಪೋಲಿ ಬೀಳು
(ಚೆಂಗಲು < ಚೆಂಗೂಲಿ = ದಿನಗೂಲಿ)
ಪ್ರ : ಚೆಂಗಲು ಬಿದ್ದು ಚೋಪಾರ್ಲು ಹತ್ತಿ ಈಗ ಹಳೇ ಹೆಂಡತಿ ಪಾದವೇ ಗತಿ ಅಂತ ಊರಿಗೆ ಬಂದಿದ್ದಾನೆ.
೧೧೫೪. ಚೆಂಡಾಡು = ಕಷ್ಟ ಕೊಡು, ಕಿರುಕುಳ ಕೊಡು
ಪ್ರ : ತಮ್ಮವರನ್ನು ಕೊಂಡಾಡೋದು ಅನ್ಯರನ್ನು ಚೆಂಡಾಡೋದು ಮೇಲ್ವರ್ಗದ ಜಾಯಮಾನ ಅನ್ನಿಸಲ್ವೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ