ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಬ೧)
೨೦೭೭. ಬಕ್ಕಬರಲು ಬೀಳು = ಭಂಗಬೀಳು, ತಲೆಕೆಳಗೆ ಮಾಡಿ ಓಲೈಸು(ಬಕ್ಕಬರಲು < ಬಕ್ಕಬೋರಲು = ತಲೆಕೆಳಗು)
ಪ್ರ : ಆ ಹುಡುಗಿ ಮದುವೆ ಮಾಡೋಕೆ ಎಷ್ಟು ಬಕ್ಕಬರಲು ಬೀಳಬೇಕೊ?
೨೦೭೮. ಬಗನಿಗೂಟ ಜಡಿ = ಪ್ರತಿಕೂಲ ಮಾಡು, ಎರಡು ಬಗೆ
(ಬಗ-ನಿ= ವೃ-ಕ್ಷ ವಿಶೇ-ಷ)
ಮೈಲಾರ ಲಿಂಗನ ಭಕ್ತರು ಕಣಕಾಲ ಮೀನಖಂಡದ ಮೂಲಕ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೂರಿ ಬರುವಂತೆ ಹೊಡೆದುಕೊಳ್ಳುತ್ತಾರೆ. ಈ ನುಡಿಗಟ್ಟಿಗೆ ಆ ಹಿನ್ನೆಲೆ ಇದೆ.
ಪ್ರ : ಇಬ್ಬರೂ ಒಂದಗಲಿನಲ್ಲಿ ಉಂಡು ಬೆಳೆದಿದ್ರೂ, ಅವನು ನನಗೇ ಬಗನಿಗೂಟ ಜಡಿದುಬಿಟ್ಟ.
೨೦೭೯. ಬಗ್ಗರಿ ಮುರಿ = ಮೂಳೆ ತುಂಡರಿಸು
(ಬಗ್ಗರಿ < ಬವ್ವರಿ < ಬರಿ + ಬರಿ = ಎದೆಗೂಡಿನ ಪಕ್ಕೆ ಮೂಳೆ; ಬರಿ = ಮೂಳೆ)
ಪ್ರ : ಬಗ್ಗರಿ ಮುರಿದ ಹೊರತೂ ಅವನು ಬಗ್ಗಲ್ಲ
೨೦೮೦. ಬಗ್ಗರಿ ಮೂಳೆ ಬಿಟ್ಟುಕೊಳ್ಳು = ಬಡವಾಗು, ಅಸ್ಥಿಪಂಜರವಾಗು
ಪ್ರ : ಕೊನೆಗಾಲದಲ್ಲಿ ನೊಡ್ಕೊಳ್ಳೋರು ಯಾರು ಇಲ್ಲದೆ ಬಗ್ಗರಿ ಮೂಳೆಯೆಲ್ಲ ಬಿಟ್ಕೊಂಡು ಅಸ್ಥಿಪಂಜರ ಆದಂಗೆ ಆಗ್ಯವನೆ.
೨೦೮೧. ಬಗ್ಗಿಸಿ ಬೊಗಸೆ ನೀರು ಕುಡಿಸು = ಶರಣಾಗಿಸು, ಹೇಳಿದ್ದನ್ನು ಕೇಳುವಂತೆ ಮಾಡು
ಪ್ರ : ಅವನ್ನ ಬಗ್ಗಿಸಿ, ಬೊಗಸೆ ನೀರು ಕುಡಿಸದಿದ್ರೆ ನಾನು ನಮ್ಮಪ್ಪನಿಗೆ ಹುಟ್ಟಿದೋನೇ ಅಲ್ಲ.
೨೦೮೨. ಬಗ್ಗುಬಡಿ = ತಲೆ ಎತ್ತದಂತೆ ಮಾಡು, ನೆಲಕಚ್ಚುವಂತೆ ಮಾಡು
ಪ್ರ : ಚುನಾವಣೆಯಲ್ಲಿ ಆ ಪಕ್ಷದವರನ್ನು ಬಗ್ಗುಬಡೀದಿದ್ರೆ ಕೇಳು.
೨೦೮೩. ಬಗೆ ಮಾಡು = ಸೀಳು, ವಿಭಾಗಿಸು
(ಬಗೆ = ಸೀಳು, ಹೊಳೆಹೊಡಿ)
ಪ್ರ : ತಲೆಗೂದಲನ್ನು ಬಗೆ ಮಾಡಿ, ಎಣ್ಣೆ ಹಚ್ಚು
೨೦೮೪. ಬಗೆ ಹರಿ = ತೀರ್ಮಾನವಾಗು
(ಬಗೆ < ವಗೈ(ತ) = ದಾರಿ)
ಪ್ರ : ಮದುವೆ ವಿಷಯ ಬಗೆ ಹರೀತಲ್ಲ, ಅಷ್ಟೆ ಸಾಕು
೨೦೮೫. ಬಟವಾಡೆ ಮಾಡು = ವಿಲೇವಾರಿ ಮಾಡು, ಹಂಚು
ಪ್ರ : ಹಣ ಇಲ್ಲ ಅಂತ ಬಟವಾಡೆ ಮಾಡದಿದ್ರೆ, ಆಳುಗಳು ಸುಮ್ನೆ ಬಿಡ್ತಾರ?
೨೦೮೬. ಬಟಾಬಯಲಾಗು = ಶೂನ್ಯವಾಗು
(ಬಟಾ < ಬಟ್ಟ = ಗುಂಡಗೆ ಇರುವಂಥದು, ವೃತ್ತಾಕಾರ)
ಪ್ರ : ಕಣ್ಮುಂದೆ ಇದ್ದದ್ದು ಇಷ್ಟು ಬೇಗ ಮಟಾಮಾಯ ಬಟಾಬಯಲಾಗಿಬಿಡ್ತಲ್ಲ!
೨೦೮೭. ಬಟ್ಟಿ ಬೀಳು = ಹೊಟ್ಟೆ ಕುಗ್ಗು ಹಿಡಿದುಕೊಳ್ಳು, ನರಸೇದಿದಂತಾಗಿ ಉಸಿರಾಡಲು ಕಷ್ಟವಾಗು
(ಬಟ್ಟಿ < ವಟ್ಟಿ (ತ) = ಕಿಬ್ಬೊಟ್ಟೆಯೊಳಗಿನ ಒಂದು ಭಾಗ)
ಪ್ರ : ಎತ್ತಲಾಗದ ಭಾರದ ವಸ್ತುವನ್ನು ಎತ್ತಿದರೆ ಬಟ್ಟಿ ಬೀಳದೆ ಇರ್ತದ?
೨೦೮೮. ಬಟುವಾಗಿರು = ಅಂದವಾಗಿರು, ದುಂಡುದುಂಡಗಿರು
(ಬಟು < ಬಟ್ಟ < ವೃತ್ತ = ಗುಂಡಗಿರು)
ಪ್ರ : ಬಣ್ಣ ಕಪ್ಪಾದರೂ ಹೆಣ್ಣು ಬಟುವಾಗಿ ಬಂಧುರವಾಗಿದೆ.
೨೦೮೯. ಬಟುವು ಮಾಡು = ‘ಬಂಧ’ ಮಾಡು
ಪ್ರ :ಚಿಲ್ಲರೇನೆಲ್ಲ ಕೂಡಿಸಿ ಬಟುವು ಮಾಡೋದ್ರಲ್ಲಿ ನಿನ್ನ ಬಿಟ್ರೆ ಇನ್ನಿಲ್ಲ.
೨೦೯೦. ಬಟುವು ಮುರಿಸು ‘ಬಂಧ’ ವನ್ನು ಚಿಲ್ಲರೆ ಮಾಡಿಸು
(ಬಟುವು = ಬಂಧ ; ಮುರಿಸು = ಚಿಲ್ಲರೆ ಮಾಡಿಸು)
ಪ್ರ: ಗಾದೆ – ಬಟುವು ಮುರಿಸೋದು ಸುಲಭ ಬಟುವು ಮಾಡೋದು ಕಷ್ಟ
೨೦೯೧. ಬಟ್ಟು ಇಟ್ಟುಕೊಳ್ಳು = ಕುಂಕುಮ ಇಟ್ಟುಕೊಳ್ಳು
(ಬಟ್ಟು < ಬೊಟ್ಟು = ತಿಲಕ, ಕುಂಕುಮ)
ಪ್ರ : ಬಟ್ಟು ಇಟ್ಟುಕೊಳ್ಳದಿದ್ರೆ ಹೆಣ್ಣಿನ ಮುಖ ಹಾಳು ಸುರಿದಂಗೆ ಕಾಣ್ತದೆ
೨೦೯೨. ಬಟ್ಟು ಬಿಡು = ಒಂದು ಬೊಟ್ಟು ಬಿಡು, ಹನಿಯಷ್ಟು ಬಿಡು
(ಬಟ್ಟು < ಬೊಟ್ಟು = ತೊಟ್ಟು, ಹನಿ)
ಪ್ರ : ಒಂದು ಬಟ್ಟು ಸಾರು ಬಿಟ್ರೆ ಒಂದು ಮುದ್ದೆ ಇಟ್ಟು ಉಣ್ಣೋದು ಹೆಂಗೆ?
೨೦೯೩. ಬಟ್ಟೆ ಕಾಣದಿರು = ದಾರಿ ಕಾಣದಿರು
(ಬಟ್ಟೆ = ದಾರಿ)
ಪ್ರ : ದಾರಿ ಕಾಣೆ ಬಟ್ಟೆ ಕಾಣೆ, ಹೋಗು ಅಂದ್ರೆ ಎಲ್ಲಿಗೆ ಹೋಗಲಿ?
೨೦೯೪. ಬಟ್ಟೆ ಹೋಗು = ರಕ್ತ ಹೋಗು
(ಬಟ್ಟೆ = ಯೋನಿ-ಯ ರಕ್ತ, ಹಾಟು)
ಪ್ರ : ಯಾಕೋ ಮೂರು ದಿನದಿಂದ ಒಂದೇ ಸಮ ಬಟ್ಟೆ ಹೋಗ್ತದೆ.
೨೦೯೫. ಬಟ್ಟೆ-ಗ-ಳ್ಳ-ನಾ-ಗಿ-ರು = ಅರಿ-ವೆ-ಗ-ಳ್ಳ, ದಾರಿ-ಗ-ಳ್ಳ, ಹಾಟು-ಗ-ಳ್ಳ-ನಾ-ಗಿ-ರು
(ಬಟ್ಟೆ = ಅರಿ-ವೆ, ದಾರಿ, ಹಾಟು = ಯೋನಿ-ಯಿಂ-ದ ಸ್ರವಿ-ಸು-ವ ರಕ್ತ)
ಪ್ರ : ನ-ನ್ನ ಬಟ್ಟೆ-ಗ-ಳ್ಳ ಎಲ್ಲಿ ಹೋಗ್ತಾ-ನೆ, ನೆ-ಕ್ಕೋಕೆ ಬಂದೇ ಬತ್ತಾ-ನೆ
೨೦೯೬. ಬಡಪೆಟ್ಟಿಗೆ ಬಗ್ಗದಿರು = ಸುಲಭವಾಗಿ ವಶವಾಗದಿರು
ಪ್ರ : ಬಡಪೆಟ್ಟಿಗೆ ಬಗ್ಗೋ ಪಿಂಡ ಅಲ್ಲ ಅದು
೨೦೯೭. ಬಡಾಯ ಕೊಚ್ಚು = ಜಂಭ ಕೊಚ್ಚು
ಪ್ರ: ಬಡಾಯಿ ಕೊಚ್ಚೋರೆಲ್ಲ ಲಡಾಯಿ ಅಂದ್ರೆ ಹೇತ್ಕೋತಾರೆ.
೨೦೯೮. ಬಡಿಗೆ ಅಲ್ಲಾಡಿಸಿಕೊಂಡು ಬರು = ಸಂಭೋಗಕ್ಕೆ ಬರು
(ಬಡಿಗೆ = ದೊಣ್ಣೆ, ಶಿಷ್ನ)
ಪ್ರ : ಗಾದೆ – ಅಲ್ಲಿ ಬಾ ಇಲ್ಲಿ ಬಾ ಅಂದ್ರೆ ಬಡಿಗೆ ಅಲ್ಲಾಡಿಸಿಕೊಂಡು ಬಂದ ಬುಲ್ಲಿ ಹತ್ರಕೆ.
೨೦೯೯. ಬಡ್ಡಿ ಸಮೇತ ಹಿಂದಿರುಗಿಸು = ಪೆಟ್ಟಿಗೆ ಇಮ್ಮಡಿ ಪೆಟ್ಟು ಕೊಡು
ಪ್ರ : ಅಸಲನ್ನು ಬಡ್ಡಿ ಸಮೇತ ಹಿಂದಿರುಗಿಸಿದ್ದಕ್ಕೇ ಕೊರಗ್ತಾ ಬಿದ್ದಿರೋದು.
೨೧೦೦. ಬಡ್ಡೆಯಂತಿರು = ಗಟ್ಟಿಮುಟ್ಟಾಗಿರು
(ಬಡ್ಡೆ < ಬೊಡ್ಡೆ = ಮರದ ಬುಡ, ಕಾಂಡ)
ಪ್ರ : ಗಾದೆ – ಮರದ ಬಡ್ಡೆಯಂಥ ಹೆಣ್ಣು
ಬಿದಿರ ಸೆಡ್ಡೆಯಂಥ ಗಂಡು
೨೧೦೧. ಬಣ್ಣ ಕಳೆ = ಮಾನ ಕಳೆ
(ಬಣ್ಣ = ಮಾಮ, ಗೌರವ)
ಪ್ರ : ಈಕಡೆ ಮತ್ತೆ ತಲೆ ಇಕ್ಕಬಾರ್ದು, ಹಂಗೆ ಬಣ್ಣ ಕಳೆದು ಕಳಿಸಿದ್ದೀನಿ.
೨೧೦೨. ಬಣ್ಣ ತಿರುಗು = ಚೆನ್ನಾಗಿರು, ಕಾಂತಿ ಮೂಡು
ಪ್ರ : ಪರವಾ ಇಲ್ಲ, ಇತ್ತೀಚೆಗೆ ಬಣ್ಣ ತಿರುಗಿದ್ದೀಯ!
೨೧೦೩. ಬಣ್ಣ ಬದಲಾಯಿಸು = ಬೇರೆ ನಿಲುವು ತಾಳು, ಊಸರವಳ್ಳಿಯಂತಾಗು
ಪ್ರ : ಬಣ್ಣ ಬದಲಾಯಿಸೋ ಜನರಿಂದ ಪಕ್ಷಕ್ಕೆ ಹಾನಿ.
೨೧೦೪. ಬಣ್ಣ ಬಯಲಾಗು = ಗುಟ್ಟು ರಟ್ಟಾಗು, ನಿಜ ಸ್ವಭಾವ ಗೊತ್ತಾಗು
ಪ್ರ : ನಿಜಬಣ್ಣ ಬಯಲಾದ ಮೇಲೆ ಈಗ ತಣ್ಣಗಾಗ್ಯವನೆ
೨೧೦೫. ಬತಗೆಟ್ಟೋನಂಗೆ ತಿನ್ನು = ಗಬಗಬನೆ ತಿನ್ನು, ಅನ್ನರಸ ಕಾಣದವನಂತೆ ಮುಕ್ಕು
(ಬತ <ವ್ರತ = ನೇಮ) ಉಪವಾಸ ವ್ರತ ಇದ್ದವರು ಆಮೇಲೆ ಅನ್ನದ ಮುಖ ಕಾಣದಂತೆ ಗಬಗಬನೆ ಮುಕ್ಕುವ ಹಿನ್ನೆಲೆ ಈ ನುಡಿಗಟ್ಟಿಗಿದೆ.
ಪ್ರ : ಮುನಿಸ್ಕೊಂಡು ಮೂರು ಹೊತ್ತು ಊಟ ಬಿಟ್ಟಿದ್ದೋನು ಇವತ್ತು ಬತಗೆಟ್ಟೋನಂಗೆ ತಿಂದ.
೨೧೦೬. ಬತಗೆಡು = ವ್ರತ ಕೆಡು
ಪ್ರ : ಗಾದೆ – ಬತಗೆಟ್ಟೆನಲ್ಲೊ ಭಾವ ಅಂದ್ರೆ ತಿಗನೆಕ್ಕೆ ನಾದಿನಿ ಅಂದ.
೨೧೦೭. ಬದುಕು ನಾಯಿನರಿ ಪಾಲಾಗು = ಸಿಕ್ಕಿದೋರಿಗೆ ಸೀರುಂಡೆಯಾಗು
ಪ್ರ : ಗಾದೆ – ನಂದರಾಜನ ಬದುಕು ನಾಯಿನರಿ ಪಾಲಾಯಿತು
೨೧೦೮. ಬದ್ದು ಸೇರು = ಮರಣ ಹೊಂದು, ಸಮಾಧಿ ಸೇರು
(ಬದ್ದು = ಗುಳಿ, ಗುಂಡಿ, ಸಮಾಧಿ)
ಪ್ರ : ಗಾದೆ – ಬದ್ದವರ ಮಕ್ಕಳು ಇದ್ದವರ ಕೈಯಲ್ಲಿ
೨೧೦೯. ಬನಿಯಾಗು = ಶಕ್ತಿ ಹೊಂದು
(ಬನಿ = ಸತ್ತ್ವ, ಶಕ್ತಿ)
ಪ್ರ : ಬನಿಯಾದ ಮೇಲೆ ನಿನ್ನ ದನಿ ಜೋರಾ-ಯಿತು.
೨೧೧೦. ಬಯಲ ಕಡೆಗೆ ಹೋಗು = ಮಲವಿಸರ್ಜನೆಗೆ ಹೋಗು
ಪ್ರ : ಯಜಮಾನರು ಬಯಲ ಕಡೆ ಹೋಗಿದ್ದಾರೆ, ಕೂತ್ಗೊಳ್ಳಿ, ಬರ್ತಾರೆ.
೨೧೧೧. ಬಯಲು ಮಾಡು = ಗುಟ್ಟು ರಟ್ಟಾಗಿಸು, ಪ್ರಕಟಿಸು
ಪ್ರ : ಕೊಲೆಯ ಹಿಂದಿನ ಒಳಸಂಚನ್ನು ಪತ್ರಿಕೆಗಳು ವಿವರವಾಗಿ ಬಯಲು ಮಾಡಿದವು.
೨೧೧೨. ಬರಗೆಟ್ಟವನಂತೆ ಬುಕ್ಕು = ಅನ್ನದ ಮುಖ ಕಾಣದವನಂತೆ ಮುಕ್ಕು
(ಬರ = ಕ್ಷಾಮ ; ಬುಕ್ಕು < ಭುಕ್ (ಸಂ) = ಮುಕ್ಕು, ಗಬಗಬನೆ ತಿನ್ನು)
ಪ್ರ : ಬರಗೆಟ್ಟೋನಂತೆ ಬುಕ್ಕಿದ, ಒಂದೇ ಸಮ ಕಕ್ಕಿದ
೨೧೧೩. ಬರಡು ಬೀಳು = ಗೊಡ್ಡು ಬೀಳು, ಸೂಲು ತಪ್ಪು
ಪ್ರ : ಹಸು ಬರಡು ಬಿದ್ದ ಮೇಲೆ ನೇಗಿಲಿಗೆ ಕಟ್ಟಿ ಉಳತೊಡಗಿದೆ.
೨೧೧೪. ಬರಪನಂತಾಡು = ಹೆಣ್ಣಿಗನಂತಾಡು
(ಬರಪ = ನಾಮರ್ಧ, ಷಂಡ)
ಪ್ರ : ಗಾದೆ – ಸರ್ಪನ ಸಂಗಡ ಸರಸ ಸಲ್ಲ
ಬರ್ಪನ ಸಂಗಡ ಸಂಸಾರ ಇಲ್ಲ
೨೧೧೫. ಬರಲು ಚುಕ್ಕೆ ಮೂಡು = ಅಶುಭ ಕಾದಿರು
(ಬರಲು ಚುಕ್ಕೆ = ಧೂಮಕೇತು. ಬರಲು = ಪೊರಕೆ.) ಧೂಮಕೇತು ಚಿಕ್ಕೆಗೆ ಬರಲು ಚುಕ್ಕೆ ಎಂದು ಕರೆದಿರುವುದನ್ನು ನಮ್ಮ ಜನಪದರ ಅಭಿವ್ಯಕ್ತಿ ಸ್ವೋಪಜ್ಞತೆಯನ್ನು ಸಾಬೀತು ಪಡಿಸುತ್ತದೆ. ಬರಲಿನಂತೆ ಬಾಲ ಕೆದರಿಕೊಂಡಿರುವ ಚುಕ್ಕೆಗೆ ಬರಲು ಚುಕ್ಕೆ ಎಂದು ನೀರು ಕುಡಿದಷ್ಟು ಸುಲಭವಾಗಿ ಹೆಸರಿಟ್ಟಿರುವುದು ಸೋಜಿಗಗೊಳಿಸುತ್ತದೆ.
ಪ್ರ : ದೇಶಕ್ಕೆ ಇನ್ನೂ ಏನೇನು ಕಾದು ಕೂತಿದೆಯೋ, ಬರಲು ಚುಕ್ಕೆ ಬೇರೆ ಮೂಡಿದೆ.
೨೧೧೬. ಬರಲು ಪೂಜೆ ಮಾಡು = ಪೊರಕೆಯಿಂದ ಹೊಡಿ, ಅವಮಾನ ಮಾಡು
ಪ್ರ : ಒಂದೇ ಸಮ ಯಾಕೆ ಒರಲ್ತೀ ಅಂತ ಬಾಯ್ಮುಚ್ಕೊಳ್ಳೋ ಹಂಗೆ ಬರಲು ಪೂಜೆ ಮಾಡಿದೆ.
೨೧೧೭. ಬರಸಿಡಿಲು ಬಡಿ = ಮರಣ ಹೊಂದು
(ಬರಸಿಡಿಲು = ಮಳೆಯಿಲ್ಲದೆ ಬಡಿವ ಸಿಡಿಲು)
ಪ್ರ : ನಮ್ಮ ಮೇಲೆ ಹಿಡಿಗಲ್ಲು ಹಿಡಿದು ನಿಂತವನೆ, ಇವನಿಗೆ ಬರಸಿಡಿಲು ಬಡಿದು ಒರಗಿ ಹೋಗ
೨೧೧೮. ಬರಾಬರಿಯಾಗು = ಸರಿಯಾಗು
(ಬರಾಬರಿ < ಬರೋಬರಿ = ಸರಿ)
ಪ್ರ : ಮದುವೆ ಊಟದಲ್ಲಿ ಯಾವುದೇ ಅರೆಕೊರೆಯಾಗಿದೆ ಎಲ್ಲ ಬರಾಬರಿಯಾಯ್ತು.
೨೧೧೯. ಬರಿಗೈಯಲ್ಲಿ ಮೊಳ ಹಾಕು = ಕಲ್ಪನೆಯಲ್ಲಿ ವಿಹರಿಸು, ವ್ಯರ್ಥ ಕೆಲಸದಲ್ಲಿ ಕಾಲ ಕಳೆ.
ಪ್ರ : ಬರಿಗೈಯಲ್ಲಿ ಮೊಳ ಹಾಕೋನ ಮಾತ್ನ ನಂಬಬ್ಯಾಡ.
೨೧೨೦. ಬಲಕಾಯಿಸು = ವೃದ್ಧಿಯಾಗು, ಗಟ್ಟಿಮುಟ್ಟಾಗು
ಪ್ರ : ಬರಿಗೈಯಾಗಿದ್ದೋನು ಇತ್ತೀಚೆಗೆ ಬಲಕಾಯಿಸಿಕೊಂಡ
೨೧೨೧. ಬಲಗಣ್ಣದುರು = ಶುಭ ಕಾದಿರು
(ಅದುರು = ನಡುಗು, ಮಿಡಿ) ಹೆಣ್ಣಿಗೆ ಎಡಗಣ್ಣು, ಗಂಡಿಗೆ ಬಲಗಣ್ಣು ಅದುರಿದರೆ ಒಳ್ಳೆಯದು ಎಂಬುದು ಜನಪದ ನಂಬಿಕೆ, ಇದರ ಸತ್ಯಾಸತ್ಯ ವ್ಯಕ್ತಿಗತ.
ಪ್ರ : ಯೋಚನೆ ಮಾಡಬೇಡ, ನಿನಗೆ ಬಲಗಣ್ಣು ಅದುರಿದೆ, ಒಳ್ಳೇದಾಗ್ತದೆ.
೨೧೨೨. ಬಲಗೈಲಿ ದಾನ ಮಾಡಿದ್ದು ಎಡಗೈಗೆ ತಿಳಿಯದಂತೆ ಮಾಡು = ಪ್ರದರ್ಶನಕ್ಕಾಗಿ ಮಾಡದಿರು,
ಪ್ರ : ನೋಡೋರಿಲ್ಲದ ಮೇಲೆ ಪೂಜೆ ಯಾಕೆ ಮಾಡಬೇಕು ? ಎಂಬ ಪ್ರದರ್ಶನ ಪ್ರಿಯರಂತೆ ದಾನ ಮಾಡಬೇಡ. ಬಲಗೈಲಿ ಮಾಡಿದ್ದು ಎಡಗೈಗ ತಿಳಿಯದಂತೆ ಮಾಡು.
೨೧೨೩. ಬಲಗೈಯಾಗಿರು = ಬೆಂಬಲಿಗನಾಗಿರು, ಪ್ರಮುಖ ಕುಮ್ಮಕ್ಕುಗಾರನಾಗಿರು
ಪ್ರ : ಮುಖ್ಯಮಂತ್ರಿಯ ಬಲಗೈಯಾಗಿರೋನು ಈ ಗುಳ್ಳೆನರಿಯೇ.
೨೧೨೪. ಬಲಗೈ ಎಡಗೈ ಕೂಡದಿರು = ಹೊಲೆಯರು ಮಾದಿಗರು ಒಂದಾಗದಿರು, ಸಂಘಟಿತ ಚಪ್ಪಾಳೆ ಸದ್ದು ಕೇಳಿಸದಿರು.
ಹೊಲೆಯರಿಗೆ ಬಲಗೈನೋರು ಎಂದೂ, ಮಾದಿಗರಿಗೆ ಎಡಗೈನೋರು ಎಂದೂ ಕರೆಯುವ ವಾಡಿಕೆಯುಂಟು. ಮೇಲ್ವರ್ಗ ಅಸ್ಪೃಶ್ಯರೆಂದು ಇಬ್ಬರನ್ನೂ ತುಳಿಯುತ್ತಿದ್ದರೂ ಅವರು ಒಟ್ಟಾಗಿ ಸಂಘಟಿತರಾಗದೆ ತಮ್ಮತಮ್ಮಲ್ಲೆ ವೈಷಮ್ಯದಿಂದ ನರಳುತ್ತಿದ್ದಾರೆ – ನಾವು ಹೆಚ್ಚು ತಾವು ಹೆಚ್ಚು ಎಂದು. ಒಂದು ರೀತಿಯಲ್ಲಿ ಸ್ಥಾನಮಾನ ವೃತ್ತಿ ಒಂದೇ ಆದರೂ ಮುಖ್ಯಮಂತ್ರಿಯ ಜವಾನ ಉಳಿದ ಮಂತ್ರಿಗಳ ಜವಾನರಿಗಿಂತ ಹೆಚ್ಚು ಎಂದು ಭಾವಿಸುವ ಆಭಾಸದಂತೆ ಇದೂ ಕೂಡ. ಎರಡೂ ಕೈ ಕೂಡಿದರೆ ಮೇಲೇಳುವ ಚಪ್ಪಾಳೆಯ ಸದ್ದು ಮೇಲ್ವರ್ಗದವರ ಕಿವಿಗೆ ಅಪ್ಪಳಿಸುತ್ತದೆ, ಅದುರುವಂತೆ ಮಾಡುತ್ತದೆ ಎಂಬುದನ್ನು ಮರೆತಿದ್ದಾರೆ.
ಪ್ರ : ಬಲಗೈ ಎಡಗೈ ಕೂಡಿದ ಚಪ್ಪಾಳೆ ಮೇಲ್ವರ್ಗದವರ ಕಿವಿಗೆ ಅಪ್ಪಳಿಸದೆ ಇರೋದ್ರಿಂದಲೇ ಅವರು, ಇವರ ಮೇಲೆ ದಬ್ಬಾಳಿಕೆ ಮಾಡ್ತಿರೋದು.
೨೧೨೫. ಬಲಗೋಲು ಎಡಗೋಲು ಅದಲು ಬದಲು ಮಾಡದಿರು = ಒಗ್ಗಿದವರನ್ನು ಹೊರಚ್ಚಿಗಿಡದಿರು, ನುರಿತವರನ್ನು ಅದಲು ಬದಲು ಮಾಡದಿರು.
ಗಾಡಿಯ ಅಥವಾ ನೇಗಿಲಿನ ನೊಗಕ್ಕೆ ಬಲಭಾಗದಲ್ಲಿ ಹೂಡುವ ಎತ್ತಿಗೆ ಬಲಗೋಲು ಎಂದೂ, ಎಡಭಾಗದಲ್ಲಿ ಹೂಡುವ ಎತ್ತಿಗೆ ಎಡಗೋಲು ಎಂದೂ ಕರೆಯಲಾಗುತ್ತದೆ. ಅವುಗಳನ್ನು ಅದಲು ಬದಲು ಮಾಡಿದರೆ ಸುಭಗತೆಗೆ ಧಕ್ಕೆಯಾಗುತ್ತದೆ ಎಂಬುದು ರೈತನ ಸ್ವಾನುಭವ.
ಪ್ರ : ಬಲಗೋಲು ಎಡಗೋಲು ಅದಲು ಬದಲು ಮಾಡಿದರೆ, ಮನುಷ್ಯನ ಎಡಗಾಲು ಬಲಗಾಲು ಅದಲು ಬದಲು ಮಾಡಿದಷ್ಟೇ ಅಧ್ವಾನವಾಗುತ್ತದೆ.
೨೧೨೬. ಬಲ ಮಗ್ಗುಲಲ್ಲೇಳು = ಒಳ್ಳೆಯದಾಗು, ಶುಭವಾಗು
(ಮಗ್ಗುಲು = ಪಕ್ಕ) ಮಲಗಿದ್ದವರು ಬೆಳಗ್ಗೆ ಏಳುವಾಗ ಎಡಮಗ್ಗುಲಲ್ಲಿ ಎದ್ದರೆ ಕೆಟ್ಟದ್ದಾಗುವುದೆಂದೂ, ಬಲ ಮಗ್ಗುಲಲ್ಲಿ ಎದ್ದರೆ ಒಳ್ಳೆಯದಾಗುವುದೆಂದೂ ಜನಪದರ ನಂಬಿಕೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ನೀನು ಇವತ್ತು ಬಲ ಮಗ್ಗುಲಲ್ಲಿ ಎದ್ದದ್ದೆ, ಅದ್ಕೇ ಅಪಾಯದಿಂದ ಪಾರಾದೆ, ಹೋಗು
೨೧೭೭. ಬಲಿತುಕೊಳ್ಳು = ಅನುಕೂಲಸ್ಥನಾಗು, ಗಟ್ಟಿಮುಟ್ಟಾಗು
ಪ್ರ : ಇತ್ತೀಚೆಗೆ ಚೆನ್ನಾಗಿ ಬಲಿತುಕೊಂಡಿರೋದ್ರಿಂದಲೇ ಯಾರಿಗೂ ಬಗ್ತಾ ಇಲ್ಲ.
೨೧೨೮. -ಬ-ಲಿ-ತು ತಳ್ಳಾ-ಗು = ಹೆಚ್ಚು ವಯ-ಸ್ಸಾ-ಗು, ಪ್ರಾಯ-ದ ಉಕ್ಕಂ-ದ ಬತ್ತಿ ಹೋಗು
(ತಳ್ಳು < ತ-ಳಲ್ = ವಯ-ಸ್ಸಾ-ಗಿ ಒಣ-ಗಿ ಹೋದ ಕಾಯಿ)
ಪ್ರ : ಬಲಿತು ತಳ್ಳಾಗಿರೋ ಆ ಹುಡುಗನಿಗೆ ಈ ಎಳೆಹುಡುಗಿ ಕೊಟ್ಟು ಮದುವೆ ಮಾಡೋದು ಬೇಡ.
೨೧೨೯. ಬಲು ಪಾಸಾಲೆಯಾಗಿರು = ಬಹಳ ಚೆನ್ನಾಗಿರು (ನಿಷೇದಾರ್ಥದಲ್ಲಿ)
ಪಾಸಾಲೆ ಎಂಬುದು ಅಗಲ ಬಾಯುಳ್ಳ ಒಂದು ಮಣ್ಣಿನ ಪಾತ್ರೆ. ಹಿಂದೆ ಹಳ್ಳಿಗಳಲ್ಲಿ ಅಡುಗೆಗೆ ಮಣ್ಣಿನ ಪಾತ್ರೆಗಳನ್ನೇ ಬಳಸುತ್ತಿದ್ದರು. ಆದರೆ ಈ ನುಡಿಗಟ್ಟಿನಲ್ಲಿ ಬಳಕೆಯಾಗಿರುವ ಪಾಸಾಲೆ ಅದಲ್ಲ ಎನ್ನಿಸುತ್ತದೆ. ಅದರ ಧ್ವನಿಯನ್ನು ಗಮನಿಸಿದರೆ ಹಿಂದಿಯ ಪಸಂದ್ (ಚೆನ್ನ) ಎಂಬುದು ಆ ರೂಪದಲ್ಲಿ ಬಳಕೆಯಾಗಿದೆ ಎನ್ನಿಸುತ್ತದೆ.
ಪ್ರ : ನೀನು ಮಾಡಿದ ಅಡುಗೆ ಬಲು ಪಾಸಾಲೆಯಾಗಿತ್ತು ! ಸುಮ್ನೆ ಕೂತ್ಕೊ, ಕೊಚ್ಕೋಬೇಡ
೨೧೩೦. ಬಲೆ ಬೀಸು = ಹೊಂಚು ಹಾಕು, ಸಂಚು ಮಾಡು
ಪ್ರ : ಬಲೆ ಬೀಸಿದ್ದೇನೆ, ಮಿಗ ಬಿದ್ದೇ ಬೀಳ್ತದೆ.
೨೧೩೧. ಬವಕೆ ತಿನ್ನು = ಗರ್ಭಿಣಿಯಾಗಿ ತನಗೆ ಇಷ್ಟವಾದದ್ದನ್ನು ಉಣ್ಣುವ, ಉಡುವ, ತೊಡುವ ಆಸೆಯನ್ನು ಪೂರೈಸಿಕೊಳ್ಳುತ್ತಿರು
(ಬವಕೆ < ಬಯಕೆ = ಆಸೆ)
ಪ್ರ : ಆಗಲೇ ಬವಕೆ ತಿಂತಾ ಅವಳೆ, ಬಸರಿಗಿಸರಿ ಆಗಿದ್ದಾಳ ಅಂತ ಕೇಳ್ತಿಯಲ್ಲ?
೨೧೩೨. ಬವಕೆಗೊಂದು ತೆವಕೆಗೊಂದು ಸಿಕ್ಕು = ಮನಸ್ಸಿನ ಬಯಕೆಗೊಂದು ದೇಹದ
ತೆವಲಿಗೊಂದು ದೊರಕು
ಪ್ರ : ಗಾದೆ – ಬವಕೆಗೆ ಪುಣ್ಯಾಂಗನೆ ತೆವಕೆಗೆ ಪಣ್ಯಾಂಗನೆ
೨೧೩೩. ಬವನಾಸಿ ತುಂಬು = ಹೊಟ್ಟೆಗೆ ತುಂಬು, ಉಣ್ಣು
(ಬವನಾಸಿ < ಭವನಾಶಿ = ದಾಸಯ್ಯಗಳು ಕಂಕುಳಿಗೆ ನೇತು ಹಾಕಿಕೊಳ್ಳುವ ಭಿಕ್ಷಾಪಾತ್ರೆ) ಸಾಮಾನ್ಯವಾಗಿ ಹರಿದಾಸರು ಅಥವಾ ವಿಷ್ಣುವಿನ ಆರಾಧಕರಾದ ದಾಸಯ್ಯಗಳು ತಮ್ಮ ಎಡ ಹೆಗಲ ಮೇಲಿನಿಂದ ಕಂಕುಳಲ್ಲಿ ಜೋತಾಡುವಂತೆ ಬವನಾಸಿಯನ್ನು ಧರಿಸಿರುತ್ತಾರೆ. ಇದು ಸಾಮಾನ್ಯವಾಗಿ ತಾಮ್ರದ್ದು. ಪ್ರಾರಂಭದಲ್ಲಿ ಹರಿದಾಸರು ಗೋಪಾಳಬುಟ್ಟಿ ಎಂದು ಕರೆಯುತ್ತಿದ್ದರು. ಬಹುಶಃ ಅದು ಲೋಹದ್ದಾಗಿರದೆ ಬಿದಿರ ದೆಬ್ಬೆಯಿಂದ ಹೆಣೆದ ಬುಟ್ಟಿಯಾಗಿರಬೇಕು. ಉದಾಹರಣೆಗೆ ಕನಕದಾಸರು ತಮ್ಮ ಒಂದು ಕೀರ್ತನೆಯಲ್ಲಿ “ಗೋಪಾಲ ಬುಟ್ಟಿ ಹಿಡಿಯುವುದಕ್ಕೆ ಭೂಪಾಲನೆಂದು ನಾಚುತಲಿದ್ದೆ ಪತ್ನೀಕುಲ ‘ಪತ್ನೀಕುಲ ಸಾಸಿರವಾಗಲಿ’ ಗೋಪಾಲಬುಟ್ಟಿ ಹಿಡಿಸಿದಳಯ್ಯ ಎಂದು ಹೇಳುವಲ್ಲಿ ಅದರ ಪ್ರಸ್ತಾಪ ಬರುತ್ತದೆ. ಕಾಲಕ್ರಮೇಣ ಬಂದ ತಾಮ್ರದ ಆ ಪಾತ್ರೆಗೆ ಬವನಾಸಿ (<ಭವನಾಶಿ) ಎಂಬ ಹೆಸರು ಬಂದಿತೆಂದು ತೋರುತ್ತದೆ. ಈ ನುಡಿಗಟ್ಟಿನಲ್ಲಿ ಬವನಾಸಿ ಎಂಬುದಕ್ಕೆ ಹೊಟ್ಟೆ ಎಂಬ ಅರ್ಥ ಆವಾಹನೆಗೊಂಡಿದೆ.
ಪ್ರ : ನಿನ್ನೊಬ್ಬನ ಬವನಾಸಿ ತುಂಬಿಬಿಟ್ರೆ ಸಾಕು, ಉಳಿದೋರ್ದು ನಿನಗೆ ಚಿಂತೆ ಇಲ್ಲ.
೨೧೩೪. ಬಳವಿ ಬರು = ತಲೆ ಸುತ್ತು ಬರು, ಕಣ್ಣು ಮಂಜಾಗು
(ಬವಳಿ < ಬವರಿ = ಸುತ್ತು, ತಿರುಗು)
ಪ್ರ : ಬವಳಿ ಬಂದು ದೊಪ್ ಅಂತ ಬಿದ್ದದ್ದೊಂದೇ ನನಗೆ ನೆನಪು
೨೧೩೫ ಬಸಗೆಡು = ಹತೋಟಿ ತಪ್ಪು
(ಬಸ < ವಶ = ಹಿಡಿತ, ತೂಕ)
ಪ್ರ : ಗಾದೆ – ಬಸಗೆಡದೆ ಹಸಗೆಡಲ್ಲ
೨೧೩೬. ಬಸಿದು ಹೋಗು = ಬತ್ತಿ ಹೋಗು, ಕೃಶವಾಗು
(ಬಸಿ = ಸುರಿ, ಸೋರು, ಜಿನುಗು)
ಪ್ರ : ಹಿಸಿದರೆ ಎರಡಾಳು ಆಗೋ ಹಂಗಿದ್ದೋನು ತುಂಬಾ ಬಸಿದು ಹೋಗಿದ್ದಾನೆ.
೨೧೩೭. ಬಸಗುತ್ತ ಬಂದು ಬುಸುಗರಿ = ಹೊಟ್ಟೆ ಕಿಚ್ಚಿನಿಂದ ಬುಸುಗುಡು, ಕರುಬಿನಿಂದ ಕರಿತುಕೊಂಡು ಹೊಗೆಯಾಡು
(ಬಸಗುತ್ತ < ಬಸುರುಗುತ್ತ < ಬಸುರು + ಕುತ್ತ = ಹೊಟ್ಟೆ ನೋವು, ಬೇನೆ; ಕುತ್ತ < ಕುತ್ತು = ಬೇನೆ, ಗಂಡಾಂತರ; ಬುಸುಗರಿ = ಬುಸುಗುಟ್ಟು)
ಪ್ರ : ನಿನಗೆ ದೊಡ್ಡ ಮನಸ್ಸಿದ್ರೆ ಹಿಂಗೆ ಬಸುಗುತ್ತ ಬಂದೋನಂಗೆ ಬುಸುಗರೀತಿದ್ದ?
೨೧೩೮. ಬಸುರಿಳಿಸಿಕೊಳ್ಳು = ಅಪವಾದದಿಂದ ಪಾರಾಗು, ಕಷ್ಟದಿಂದ ಬಚಾವಾಗು
(ಬಸುರು = ಗರ್ಭ)
ಪ್ರ : ಈಗ ಬಂದಿರೋ ಬಸುರಿಳಿಸಿಕೊಂಡ್ರೆ ಸಾಕಾಗಿದೆ, ಇನ್ಮೇಲೆ ಯಾರ ಉಸಾಬರೀನೂ ಬೇಡ.
೨೧೩೯. ಬಹಿಷ್ಠೆಯಾಗು = ಮುಟ್ಟಾಗು, ರಜಸ್ವಲೆಯಾಗು, ತಿಂಗತಿಂಗಳಿನ ರಜೆ ಹಾಕು
ಪ್ರ : ಬಹಿಷ್ಠೆಯಾಗುವುದು ಎಂದರೆ ಒಂದರ್ಥದಲ್ಲಿ ಮೂರು ದಿವಸಗಳ ಕಾಲ ಮನೆಯ ಒಳಗಿನಿಂದ ಹೊರಕ್ಕೆ ಬಹಿಷ್ಕೃತಳಾದಂತೆಯೇ ಲೆಕ್ಕ.
೨೧೪೦. ಬಹಿರ್ದೆಸೆಗೆ ಹೋಗು = ಬಯಲ ಕಡೆಗೆ ಹೋಗು, ಮಲವಿಸರ್ಜನೆಗೆ ಹೋಗು
ಪ್ರ : ಬಹಿರ್ದೆಸೆಗೆ ಹೋಗಿದ್ದಾರೆ, ಬನ್ನಿ ಕೂತ್ಗೊಳ್ಳಿ, ಇನ್ನೇನು ಬಂದುಬಿಡ್ತಾರೆ.
೨೧೪೧. ಬಳಸು ಮಾತಾಡು = ನೇರ ಮಾತಾಡದಿರು, ಮರೆ ಮಾಚುವ ಹುನ್ನಾರವಿರು
ಪ್ರ : ಅವಳಾಡುವ ಬಳಸು ಮಾತಿನಿಂದಲೇ ಅವಳ ಹುಳುಕು ಗೊತ್ತಾಯಿತು
೨೧೪೨. ಬಳ್ಳ ಸುಳ್ಳು ಹೇಳು = ಹೆಚ್ಚು ಬೂಸಿ ಬಿಡು, ಸುಳ್ಳಿನ ಸರಮಾಲೆಯನ್ನೇ ಹೇಳು
(ಬಳ್ಳ = ನಾಲ್ಕು ಸೇರು)
ಪ್ರ : ಬಳ್ಳ ಸುಳ್ಳನ ಮುಂದೆ ಸೇರು ಸುಳ್ಳನ ಬೇಳೆ ಬೇಯ್ತದ?
೨೧೪೩. ಬಳ್ಳಿ ಮಡಿಲಿಗಿಡು = ಸಂಭೋಗಿಸು
(ಬಳ್ಳಿ = ಶಿಷ್ನ, ಮಡಿಲು = ಯೋನಿ) ಹೋರಿಯ ಶಿಷ್ನಕ್ಕೆ ಬಳ್ಳಿ ಎಂದೂ, ಹಸುವಿನ ಯೋನಿಗೆ ಮಡಿಲು ಎಂದೂ ಹಳ್ಳಿಗಳಲ್ಲಿ ಹೇಳುತ್ತಾರೆ. ಮದುವೆಗಳಲ್ಲಿ ಮದುವಣಗಿತ್ತಿಗೆ ‘ಮಡಿಲುದುಂಬುವ ಶಾಸ್ತ್ರ’ ಎಂಬ ಆಚರಣೆಯಲ್ಲೂ ಮಡಿಲು ಎಂಬುದಕ್ಕೆ ಕಿಬ್ಬೊಟ್ಟೆ, ಸೊಂಟದ ಕೆಳಗಿನ ಭಾಗ ಎಂಬ ಅರ್ಥವೇ ಇದೆ. ಆ ಆಚರಣೆಯಲ್ಲಿ ಬೇಗ ಗರ್ಭ ತುಂಬಲಿ ಎಂಬ ಆಶಯವಿದೆ.
ಪ್ರ : ಬಳ್ಳಿಯನ್ನು ಮಡಿಲಿಗಿಟ್ಟ ತಕ್ಷಣ ಹೋರಿ ಬಲವಾಗಿ ಗುಮ್ಮಿತು. ಆ ರಭಸಕ್ಕೆ ಹಸು ಅಂಬಾ ಎಂದು ಸುಖದಿಂದ ತತ್ತರಿಸತೊಡಗಿತು.
೨೧೪೪. ಬಳ್ಳಿ ಮುಟ್ಟು = ಹಾವು ಕಚ್ಚು
(ಬಳ್ಳಿ = ಹಾವು, ಮುಟ್ಟು = ಕಚ್ಚು) ಅಶುಭ ಪರಿಹಾರಕ ದೃಷ್ಟಿಯಿಂದ ಹಾವು ಎಂದು ಹೇಳದೆ ಬಳ್ಳಿ ಎಂದೂ, ಕಚ್ಚಿತು ಎಂದು ಹೇಳದೆ ಮುಟ್ಟಿತು (ತಾಕಿತು) ಎಂದೂ ಹೇಳುವ ಪರಿಪಾಠ ಹಳ್ಳಿಗಾಡಿನಲ್ಲಿದೆ. ಕಲ್ಯಾಣ ದೃಷ್ಟಿಯ ನಂಬಿಕೆ ಮೂಲ ನುಡಿಗಟ್ಟಿದು.
ಪ್ರ : ಬಳ್ಳಿ ಮುಟ್ಟಿದ್ಕೆ ಮಂತ್ರ ಹಾಕಿ, ಮುಟ್ಟಿದ ಜಾಗದಲ್ಲಿ ಮದ್ದನ್ನೂ ಕಟ್ಟಿದೆ.
೨೧೪೫. ಬಳ್ಳಿ ಹೋಗು = ದಣಿದು ಹೋಗು, ಕಳಲಿ ಹೋಗು
(ಬಳ್ಳು < ಬಳಲು = ದಣಿ, ಕಳಲು)
ಪ್ರ : ಬಿಸಿಲ ಝಳಕ್ಕೆ ಬಳ್ಳಿ ಹೋಗಿ ನೆಳ್ಳಾಗೆ ಕೂತ್ಕೊಂಡೆ
೨೧೪೬. ಬಳುಕಾಡು = ಒನೆದಾಡು, ತೊನೆದಾಡು
(ಬಳುಕು < ಬಳಕು < ಬಳಂಕು = ಒನೆತ, ತೊನೆತ)
ಪ್ರ : ಹಿಂಗೆ ಬಳುಕಾಡೋಳು ಈ ಮನೆಗೆ ಬೆಳಕಾದಾಳ?
೨೧೪೭. ಬಳ್ಳು ಊಳಿಡು = ನರಿಗಳು ಗಳ್ಳು ಹಾಕು, ಸಾಮೂಹಿಕ ರಾಗಾಲಾಪ ಮಾಡು
(ಬಳ್ಳು = ನರಿ; ಊಳಿಡು = ಒಂದೇ ಸಮನೆ ಕೂಗಿಕೊಳ್ಳು)
ಪ್ರ : ಬಳ್ಳು ಊಳಿಟ್ರೆ ಇಳ್ಳಿನ ವೌನವನ್ನು ರೊಂಪದಿಂದ ಕುಯ್ದಂಗಾಗ್ತದೆ.
೨೧೪೮. ಬ್ರಹ್ಮಗಂಟು ಬೀಳು = ಮದುವೆಯಾಗು
ಮದುವೆಯಲ್ಲಿ ಹೆಣ್ಣು ಗಂಡಿನ ಸೆರಗನ್ನು ಗಂಟು ಹಾಕುವುದಕ್ಕೆ ಬ್ರಹ್ಮಗಂಟು ಎನ್ನುತ್ತಾರೆ.
ಪ್ರ : ಬ್ರಹ್ಮ ಗಂಟು ಬಿದ್ದಾಯ್ತು, ನಮ್ಮ ಕಳ್ಳಿನ ಕುಡಿಯನ್ನು ಬಾಡಿಸದಂತೆ ಎನ್ನುತ್ತಾರೆ.
ಪ್ರ : ಬ್ರಹ್ಮ ಗಂಟು ಬಿದ್ದಾಯ್ತು, ನಮ್ಮ ಕಳ್ಳಿನ ಕುಡಿಯನ್ನು ಬಾಡಿಸದಂತೆ ನೋಡ್ಕೊಳ್ಳಿ
೨೧೪೯. ಬ್ರಹ್ಮ ರಂದ್ರಕ್ಕೇರು = ನೆತ್ತಿಸುಳಿಗೇರು
(ಬ್ರಹ್ಮರಂದ್ರ = ಯೋಗದಲ್ಲಿ ಇದನ್ನು ಸಹಸ್ರಾರ ಚಕ್ರ ಎನ್ನುತ್ತಾರೆ)
ಪ್ರ : ಅವನ ಮುಖ ನೋಡಿದರೆ ಅಷ್ಟೇ ಅಲ್ಲ, ಅವನ ಹೆಸರು ಕೇಳಿದರೂ ನನ್ನ ಸಿಟ್ಟು ಬ್ರಹ್ಮರಂದ್ರಕ್ಕೇರಿಬಿಡ್ತದೆ.
೨೧೫೦. ಬಾಗಿಲು ಹಿಡಿಸದಿರು = ಧಡೂತಿಯಾಗಿರು
ಪ್ರ : ಬಾಗಿಲು ಹಿಡಿಸದಂಥ ಹೆಬ್ಬಾರುವರು ಭೋಜನ ಮುಗಿಸಿಕೊಂಡು ಗುಜ್ಜಾನೆಗಳಂತೆ ಹೆಜ್ಜೆ ಹಾಕುತ್ತಾ ಹೊರಬಂದರು.
೨೧೫೧. ಬಾಚಿಕೊಳ್ಳು = ದೋಚಿಕೊಳ್ಳು
ಪ್ರ : ಗಾದೆ – ಬಾಚ್ಕೊಂಡೋನು ಬಲಾಢ್ಯನಾದ
ನೀಚ್ಕೊಂಡೋನು ನಿರ್ಗತಿಕನಾದ
೨೧೫೨. ಬಾಜಲು ಬಾಜಲಾಗಿರು = ಜಾಳು ಜಾಳಾಗಿರು, ಮುಟ್ಟಿದರೆ ಜಿಬಜಿಬ ಎನ್ನು
(ಬಾಜಲು < ಜಾಬಲು < ಜಬ್ಬಲು = ನಿಸ್ಸಾರ ತೊಸಗಲು ನೆಲ, ಗಟ್ಟಿಯಿಲ್ಲದೆ ಮುಟ್ಟಿದರೆ ಸಿಂಬಳದಂತೆ ಕೈಗೆ ಮೆತ್ತಿಕೊಳ್ಳುವ ಪದಾರ್ಥ)
ಪ್ರ : ಬಡಗುರಿ ಬಾಡು ಬಾಜಲು ಬಾಜಲಾಗಿರ್ತದೆ, ಅದನ್ನು ತರೋದು ಬೇಡ.
೨೧೫೩. ಬಾಜಿ ಕಟ್ಟು = ಪಂಥ ಕಟ್ಟು, ಪಂದ್ಯಕ್ಕೆ ಹಣ ಕಟ್ಟು
ಪ್ರ : ಮೊದಲು ಬಾಜಿ ಕಟ್ಟಿ, ಆಮೇಲೆ ಎಲೆಗೆ ಕೈ ಹಾಕು
೨೧೫೪. ಬಾಡಿಸಿಕೊಳ್ಳು = ರುಚಿ ಬದಲಾವಣೆಗೆ ನಂಚಿಕೊಳ್ಳು
ಪ್ರ : ಕೈಮಾ ಉಂಡೆ ಬಾಡಿಸಿಕೊಂಡು ಮದ್ಯಪಾನ ಮಾಡತೊಡಗಿದರು.
೨೧೫೫. ಬಾಣಲಿಯಿಂದ ಬೆಂಕಿಗೆ ಬೀಳು = ಸಣ್ಣ ತೊಂದರೆಯಿಂದ ಪಾರಾಗಲು ಹೋಗಿ ದೊಡ್ಡ ತೊಂದರೆಗೆ ಒಳಗಾಗು.
ಬಾಣಲಿಯಲ್ಲಿ ಹುರಿಯುವ ಕಾಳು, ಕಾವನ್ನು ಸಹಿಸಿಕೊಳ್ಳಲಾಗದೆ ಬಾಯ್ಬಿಟ್ಟು ಅವಲಾಗಿ ಸಿಡಿದು ಒಲೆಯ ಬೆಂಕಿಗೆ ಬಿದ್ದರೆ ಸೀದು ಕರಕಲಾಗುತ್ತದೆ, ಬೂದಿಯಾಗುತ್ತದೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಯೋಚನೆ ಮಾಡಿ ಮುಂದಕ್ಕೆ ಹೆಜ್ಜೆ ಇಡು, ಬಾಣಲಿಯಿಂದ ಬೆಂಕಿಗೆ ಬೀಳಬೇಡ.
೨೧೫೬. ಬಾತುಕೊಳ್ಳು = ಊದಿಕೊಳ್ಳು, ಕೀವು ತುಂಬಿ ಬಾಧೆ ಕೊಡು
ಪ್ರ : ಮುಳ್ಳು ಚುಚ್ಚಿಕೊಂಡಿತ್ತಲ್ಲ, ಅಲ್ಲಿ ಬಾತುಕೊಂಡು ತಟತಟ ಅಂತಾ ಇದೆ.
೨೧೫೭. ಬಾನ ಇಕ್ಕಿ ಬಣ್ಣ ಕಳಿ = ಊಟಕ್ಕಿಟ್ಟು ಮಾನ ಕಳಿ
(ಬಾನ < ಬೋನ < ಭೋಜನ = ಅನ್ನ, ಊಟ; ಬಣ್ಣ ಗೌರವ)
ಪ್ರ : ಬಾನ ಇಕ್ಕಿ ಬಣ್ಣ ಕಳಿಯಾಕೆ ಪಳಾನು ಮಾಡ್ಯವರೆ, ಅವರ ಮನೆಗೆ ಹೋದುಗೀದಿಯ.
೨೧೫೮. ಬಾನಿ ತುಂಬು = ಹೊಟ್ಟೆಗೆ ತುಂಬು, ಉಣ್ಣು
(ಬಾನಿ = ದೊಡ್ಡ ಮಣ್ಣಿನ ಪಾತ್ರೆ ; ಇಲ್ಲಿ ಹೊಟ್ಟೆ ಎಂಬ ಅರ್ಥದಲ್ಲಿ ಬಳಕೆಯಾಗಿದೆ) ಮಣ್ಣಿನ ಪಾತ್ರೆಗಳ ಏರಿಕೆ ಕ್ರಮವನ್ನು ಗಮನಿಸಿದರೆ ‘ಬಾನಿ’ ಯಾವ ಪ್ರಮಾಣದ್ದು ಅಥವಾ ಗಾತ್ರದ್ದು ಎಂಬುದು ಅರ್ಥವಾಗುತ್ತದೆ : ಮೊಗೆ, ಕರಗಡಿಗೆ, ಗಡಿಗೆ, ಹರವಿ, ಬಾನಿ, ಕೂನಿ, ಗುಡಾಣ, ವಾಡೆ.
ಪ್ರ : ನಿನ್ನ ಬಾನಿ ತುಂಬಿಬಿಟ್ರೆ ಸಾಕು, ಉಳಿದೋರ ಪಾಡು ಏನಾದ್ರೂ ನಿನಗೆ ಚಿಂತೆ ಇಲ್ಲ.
೨೧೫೯. ಬಾಯಾಡಿಸು = ತಿನ್ನು, ಕುರುಕುತೀನಿ ಕುರುಕು
ಪ್ರ : ನನಗೆ ಕೊಡದೆ, ನೀನೊಬ್ಬನೇ ಬಾಯಾಡಿಸ್ತಿದ್ದೀಯಲ್ಲ
೨೧೬೦. ಬಾಯಿ ಕಿಸಿ = ನಗು
(ಕಿಸಿ = ಅಗಲಿಸು)
ಪ್ರ : ಮನಸ್ಸನ್ನೆಲ್ಲ ಕಸಿವಿಸಿ ಮಾಡಿ, ಕೊನೆಗೀಗ ಬಾಯಿ ಕಿಸೀತಾಳೆ, ಸಾಬಸ್ತೆ ಅನ್ನೋ ಹಂಗೆ.
೨೧೬೧. ಬಾಯಿ ಕಿಸಿದು ಉಗಿ = ಬಾಯಿ ಹಿಸಿ-ದು ಗಂಟಲಿಗೆ ಉಗಿ, ಛೀಮಾರಿ ಮಾಡು
ಪ್ರ : ಅವನ ಛೀಕುನ್ನಿ ಬುದ್ಧಿ ಕಂಡು, ಬಾಯಿ ಕಿಸಿದು ಉಗಿದು ಬಂದಿದ್ದೀನಿ.
೨೧೬೨. ಬಾಯಿಗಿಕ್ಕು = ಅನ್ಯಾಯವಾಗಿ ತೆರು, ದಂಡವಾಗಿ ಕೊಡು
ಸತ್ತ ಹೆಣದ ಬಾಯಿಗೆ ಅಕ್ಕಿ ತುಂಬುತ್ತಾರೆ ಅಥವಾ ಬಾಯತಂಬುಲವನ್ನು ಇಕ್ಕುತ್ತಾರೆ – ಉಸಿರು ಹೋಗುವಾಗ ಬಾಯಿ ವಿಕೃತಗೊಂಡಿರಬಹುದು, ಅದನ್ನು ನೋಡಿ ಮಕ್ಕಳು ಹೆದರಿ ಚೀರಿಕೊಳ್ಳಬಹುದು ಎಂದು. ಆ ಆಚರಣೆ ಈ ನುಡಿಗಟ್ಟಿಗೆ ಮೂಲ.
ಪ್ರ : ಅವೊತ್ತಿನಿಂದ ಹೊಟ್ಟೆ ಬಟ್ಟೆ ಕಟ್ಟಿ ಕೂಡಿಟ್ಟಿದ್ದನ್ನೆಲ್ಲ ತಗೊಂಡು ಹೋಗಿ ಅವನ ಬಾಯಿಗೆ ಇಕ್ಕಿದೆನಲ್ಲ!
೨೧೬೩. ಬಾಯಿಗೆ ಗಿಡಿಯದಿರು = ಬಾಯಿಗೆ ತುರುಕದಿರು
(ಗಿಡಿ = ತುರುಕು)
ಪ್ರ : ತಾವಾಗಿಯೇ ತಿನ್ನಬೇಕು, ಬಲವಂತವಾಗಿ ಬಾಯಿಗೆ ಗಿಡಿಯಬಾರದು, ಹಾಗೆ ಗಿಡಿದದ್ದು ರಕ್ತಗತವಾಗುವುದಿಲ್ಲ.
೨೧೬೪. ಬಾಯಿಗೂಡು = ವಯಸ್ಸಾಗು, ಮುದಿಯಾಗು
(ಬಾಯಿಗೂಡು < ಬಾಯಿ + ಕೂಡು = ಹಲ್ಲು ಹಾಕುವುದು ನಿಲ್ಲು ) ಜಾನುವಾರುಗಳ ವಯಸ್ಸನ್ನು ಹಲ್ಲುಗಳ ಮುಖಾಂತರ ರೈತಾಪಿ ಜನರು ಪರಿಗಣಿಸುತ್ತಾರೆ. ಎರಡು ಹಲ್ಲು, ನಾಲ್ಕು ಹಲ್ಲು ಕೌಮಾರ್ಯ ತಾರುಣ್ಯವನ್ನು ಸೂಚಿಸಿದರೆ ಆರು ಹಲ್ಲು ವೃದ್ದಾಪ್ಯಕ್ಕೆ ಅಡಿಯಿಡುವುದನ್ನು ಸೂಚಿಸುತ್ತದೆ. ಜಾನುವಾರು ಆರು ಹಲ್ಲು ಹಾಕಿದಾಗ ‘ಬಾಯಿಗೂಡಿದೆ’ ಎನ್ನುತ್ತಾರೆ.
ಪ್ರ : ಬಾಯಿಗೂಡಿದ ಎತ್ತುಗಳಿಗೆ ನೀನು ಈಪಾಟಿ ಬೆಲೆ ಹೇಳಿದರೆ ಹೆಂಗೆ?
೨೧೬೫. ಬಾಯಿ ಜೋರು ಮಾಡು = ದಬಾವಣೆ ಮಾಡು
ಪ್ರ : ಬಾಯಿಜೋರು ಮಾಡಿದ್ರೆ, ಕೈಗೆ ಜೋಡು ತಗೊಳ್ತೀನಿ, ತಿಳ್ಕೋ.
೨೧೬೬. ಬಾಯಿ ತಂಬುಲ ಹುಡಿಯಾಗು = ಬಿಸಿಲ ಝಳ ಅಧಿಕವಾಗು, ಬಾಯಿ ಒಣಗಿ ಹೋಗು
(ತಂಬುಲ < ತಾಂಬೂಲ = ಎಲೆ ಅಡಿಕೆ ಜಗಿತ)
ಪ್ರ : ಎಷ್ಟು ಬಿಸಿಲು ಅಂದ್ರೆ ಬಾಯ ತಂಬುಲ ಹುಡಿಯಾಯ್ತು, ಅಂಗಾಲು ಹೊಪ್ಪಳೆ ಹೊಡೆದವು.
೨೧೬೭. ಬಾಯಿಗೆ ಅಕ್ಕಿ ಕಾಳು ಹಾಕು = ಮರಣ ಹೊಂದು
ಉಸಿರು ಹೋಗುವಾಗ ಬಾಯಿ ವಿಕಾರಗೊಂಡಿರಬಹುದು. ಅದನ್ನು ನೋಡಿ ಮಕ್ಕಳು ಹೆದರಿಕೊಳ್ಳಬಹುದೆಂದು ಬಾಯಿಗೆ ಅಕ್ಕಿಕಾಳು ತುಂಬುತ್ತಾರೆ ಅಥವಾ ಅಗಿದ ಬಾಯ ತಂಬುಲವನ್ನು ಹೆಣದ ಬಾಯಿಗೆ ಇಕ್ಕುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಮಗನ ತಲೆ ಮೇಲೆ ಅಕ್ಕಿ ಕಾಳು ಹಾಕಿ ಸಾಯಬೇಕು ಅಂತ ಪರದಾಡ್ತಿದ್ದ ತಾಯಿಯ ಬಾಯಿಗೆ ಮಗನೇ ಅಕ್ಕಿ ಕಾಳು ಹಾಕುವಂಥ ದುರಾದೃಷ್ಟ ವಕ್ಕರಿಸಿತು.
೨೧೬೮. ಬಾಯಿಗೆ ಕುಕ್ಕೆ ಇಕ್ಕು = ತಿನ್ನಲು ಆಗದಂತೆ ಮಾಡು, ಬಾಯಾಡಿಸದಂತೆ ಬಂಧಿಸು
(ಕುಕ್ಕೆ = ಬೆಳೆಯನ್ನು ಹರಗುವಾಗ ಎತ್ತುಗಳು ಪೈರನ್ನು ಮೇಯದಂತೆ ಅವುಗಳ ಬಾಯಿಗೆ ಇಕ್ಕುವ ಬಿದಿರ ದೆಬ್ಬೆಯಿಂದ ಹೆಣೆದ ಬುಟ್ಟಿಯಂಥ ಸಾಧನ)
ಪ್ರ : ನನ್ನ ಬಾಯಿಗೆ ಕುಕ್ಕೆ ಇಕ್ಕಿರೋರು, ಒಂದಲ್ಲ ಒಂದು ದಿವಸ ಇನ್ನೊಬ್ಬರು ಹಾಕಿದ ಗಾಳದ ಕೊಕ್ಕೆಗೆ ಸಿಕ್ಕಿಬಿದ್ದು ಸಾಯ್ತಾರೆ.
೨೧೬೯. ಬಾಯಿಕೆ ಕೊಡು = ತಾಂಬೂಲಕೊಡು.
ಪ್ರ : ಊಟವಾದ ಮೇಲೆ ಆಳುಗಳಿಗೂ ಬಾಯಿಗೆ ಕೊಡೋದು ಹಳ್ಳಿಗಾಡಿನಲ್ಲಿ ನಡೆದುಕೊಂಡು ಬಂದ ಪದ್ಧತಿ.
೨೧೭೦. ಬಾಯಿಗೆ ತಂಬುಲ ಹಾಕು = ಮರಣ ಹೊಂದು
ಪ್ರ : ಯಾವಾಗ ಅವನ ಬಾಯಿಗೆ ತಂಬುಲ ಹಾಕ್ತೀನೋ ಅಂತ ಕಕ್ಕರ ಕಾದಂಗೆ ಕಾದಿದ್ದೀನಿ.
೨೧೭೧. ಬಾಯಿಗೆ ನೀರು ಬಿಡು = ಮರಣ ಹೊಂದು
ಮನುಷ್ಯನಾಗಲಿ ಪ್ರಾಣಿ ಪಕ್ಷಿಗಳಾಗಲೀ ಸಾಯುವಾಗ ಬಾಯಿಬಾಯಿ ಬಿಡುತ್ತವೆ. ಆಗ ಹಾಲನ್ನೋ ನೀರನ್ನೋ ಬಾಯಿಗೆ ಬಿಡುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ನಿನ್ನ ಬಾಯಿಗೆ ನೀರು ಯಾವಾಗ ಬಿಟ್ಟೇನೋ, ನನ್ನ ಹಾಟುಗಾಳ
೨೧೭೨. ಬಾಯಿಗೆ ನೀರು ಹುಯ್ಯದಿರು = ಏನನ್ನೂ ತಿನ್ನದಿರು, ಊಟ ಮಾಡಿದರು.
ಊಟ ಮಾಡುವ ಮುನ್ನ ಕೈಕಾಲು ಮುಖ ತೊಳೆದುಕೊಳ್ಳುವುದು, ಬಾಯಿಗೆ ನೀರು ಹುಯ್ದುಕೊಂಡು ಮುಕ್ಕಳಿಸಿ ಉಗಿಯುವುದು ಪದ್ಧತಿ. ಆ ಹಿನ್ನೆಲೆಯಲ್ಲಿ ಮೂಡಿರುವ ನುಡಿಗಟ್ಟು ಇದು.
ಪ್ರ : ಹೊತ್ತಾರೆ ಎದ್ದೋನು ಬೈಸಾರೆ ಆದ್ರೂ ಬಾಯಿಗೆ ನೀರು ಹುಯ್ದಿಲ್ಲ, ಹಾಳು ರೇಡಿನಲ್ಲಿ.
೨೧೭೩. ಬಾಯಿ ನೀರು ಬಕಬಕನೆ ಬರು = ಹೊಟ್ಟೆ ತೊಳಸಿದಂತಾಗು, ವಮನವಾಗು
ಪ್ರ : ಬಾಯಿ ನೀರು ಬಕಬಕನೆ ಬಂದು, ತಿಂದದ್ದನ್ನೆಲ್ಲ ವಮನ ಮಾಡಿಬಿಟ್ಟೆ.
೨೧೭೪. ಬಾಯಿಪಾಟವಾಗು = ಕಂಠಪಾಠವಾಗು
(ಪಾಟ < ಪಾಠ)
ಪ್ರ : ಪುಟ್ಟು ಭಟ್ಟರಿಗೆ ಇಡೀ ಜೈಮಿನಿ ಭಾರತ ಬಾಯಿಪಾಟವಾಗಿದೆ. ಇಷ್ಟನೇ ಸಂಧಿಯ ಇಷ್ಟನೇ ಪದ್ಯ, ಹೇಳಿ ಅಂದರೆ ಅಲಕ್ಕನೆ ಅದನ್ನು ಹೇಳಬಲ್ಲರು.
೨೧೭೫. ಬಾಯಿಗೆ ಬಿರಿ ಹಾಕು = ನಾಲಗೆ ನಿಗ್ರಹಿಸು, ನಾಲಗೆ ಹಿಡಿದು ಮಾತಾಡು
(ಬಿರಿ = ರಥದ ವೇಗವನ್ನು ಕಡಮೆ ಮಾಡಲು ಚಕ್ರಕ್ಕೆ ಹಾಕುವ ಅಡ್ಡ ಮರ)
ಪ್ರ : ಬಾಯಿ ಹೋದ ಹಂಗೇ ಮಾತಾಡಬೇಡ, ಕೊಂಚ ಬಾಯಿಗೆ ಬಿರಿ ಹಾಕು.
೨೧೭೬. ಬಾಯಿಗೆ ಬೀಗ ಹಾಕಿಕೊಳ್ಳು = ಮೌನ ವಹಿಸು, ದೇವರಂತೆ ಕೂತುಕೊಳ್ಳು
ಪ್ರ : ಮಕ್ಕಳು ಜಟಾಪಟಿಗೆ ಬಿದ್ದಾಗ, ನಾನು ಬಾಯಿಗೆ ಬೀಗ ಹಾಕ್ಕೊಂಡು ಕೂತುಕೊಳ್ಳಬೇಕಾಯ್ತು.
೨೧೭೭. ಬಾಯಿಗೆ ಬೀಳು = ಟೀಕೆ ಟಿಪ್ಪಣಿಗೆ ಗುರಿಯಾಗು
ಪ್ರ : ಗಾದೆ – ೧. ಹಾಳು ಬಾವಿಗೆ ಬಿದ್ದರೂ ಆಳಬಾಯಿಗೆ ಬೀಳಬಾರದು
೨. ಊರು ಬಾವಿಗೆ ಬಿದ್ದರೂ ಊರಬಾಯಿಗೆ ಬೀಳಬಾರದು
೨೧೭೮. ಬಾಯಿಬಿಡು = ಗುಟ್ಟನ್ನು ಹೇಳು
ಪ್ರ : ಸಾಯಿಬೀಳ ಹೊಡೆದಾಗ ಬಾಯಿಬಿಟ್ಟ
೨೧೭೯. ಬಾಯಾ-ಗೆ ಬಿದ್ದಂ-ಗಿ-ರು = ತದ್ರೂ-ಪ-ವಾ-ಗಿ-ರು, ಸದೃ-ಶ-ವಾ-ಗಿ-ರುಮ ಪಡಿ-ಯ-ಚ್ಚಾ-ಗಿ-ರು
ಪ್ರ : ನಿನ್ನ ಮಗ-ಳು ಥೇಟ್ ನಿನ್ನ ಬಾಯಾ-ಗೆ ಬಿದ್ದಂ-ಗಿ-ದ್ದಾ-ಳೆ.
ಸಾಮಾ-ನ್ಯ-ವಾ-ಗಿ ಮಕ್ಕ-ಳು ತಾಯಿ-ಯ ಯೋನಿ-ಯಿಂ-ದ ನೆಲ-ಕ್ಕೆ ಬೀಳು-ತ್ತವೆ. ಇಲ್ಲಿ ಅಪ್ಪ-ನಂ-ತೆ-ಯೇ ಇರು-ವ ಮಗ-ಳ-ನ್ನು ಕಂಡು, ತಾಯಿ-ಯ ಯೋನಿ-ಯ ಮೂಲ-ಕ ಬಿದ್ದಿ-ರ-ದೆ ಅಪ್ಪ-ನ ಬಾಯಿ-ಯ ಮೂಲ-ಕ ಬಿದ್ದಂ-ತಿ-ದೆ ಎಂಬ ಭಾವ-ಕ್ಕೆ ಒತ್ತು ಕೊಟ್ಟಂ-ತಿ-ದೆ.
೨೧೮೦. ಬಾಯ್ಮಾಡು = ಜೋರು ಮಾಡು
ಪ್ರ : ಬಾಯ್ಮಾಡೋಳು ಬಗ್ಗೋದು ಕೈ ಮಾಡಿದಾಗಲೇ
೨೧೮೧. ಬಾಯಿಗೆ ಬೆಳ್ಳಿಕ್ಕಿದ್ರೆ ಕಚ್ಚೋಕೆ ಬರದಿರು = ಅತಿ ಮುಗ್ಧತೆ ಇರು
ಪ್ರ : ಬಾಯಿಗೆ ಬೆಳ್ಳಿಕ್ಕಿದರೂ ಕಚ್ಚೋಕೆ ಬರದಂಥವನನ್ನು ತಂದು ಬಲಿಪಶು ಮಾಡಿದರು.
೨೧೮೨. ಬಾಯಿಗೆ ಮಣ್ಣು ಬೀಳು = ಅನ್ನಕ್ಕೆ ಕಲ್ಲು ಬೀಳು, ಅನ್ನದಮಾರ್ಗ ತಪ್ಪಿ ಹೋಗು
ಪ್ರ : ಆಸ್ತಿ ಕಳಕೊಂಡ್ರೆ ಮಕ್ಕಳ ಬಾಯಿಗೆ ಮಣ್ಣು ಬೀಳ್ತದಲ್ಲ.
೨೧೮೩. ಬಾಯಿಗೆ ಮಣ್ಣು ಹಾಕು = ಉತ್ತರ ಕ್ರಿಯೆ ಮಾಡು
ಸತ್ತ ಹೆಣವನ್ನು ಕೆಲವರು ಸುಡುವುದುಂಟು, ಕೆಲವರು ಹೂಳುವುದುಂಟು. ಹಾಗೆ ಸಮಾಧಿಯಲ್ಲಿ ಮಲಗಿಸಿದಾಗ, ಮಣ್ಣಿಗೆ ಬಂದ ನೆಂಟರಿಷ್ಟರೆಲ್ಲ ಒಂದೊಂದು ಹಿಡಿ ಮಣ್ಣನ್ನು ಹೆಣದ ಮೇಲೆ ಹಾಕುವುದುಂಟು. ಆ ಹಿನ್ನೆಲೆಯಲ್ಲಿ ಮೂಡಿದ ನುಡಿಗಟ್ಟಿದು.
ಪ್ರ : ನಿನ್ನ ಬಾಯಿಗೆ ಮಣ್ಣು ಹಾಕಿದ ದಿನವೇ ನಾನು ನಿರುಂಬಳವಾಗಿರೋದು
೨೧೮೪. ಬಾಯಿಗೆ ಹಾಲು ಬಿಡು = ಸಾಯುವ ಜೀವಕ್ಕೆ ಕೊನೆಯ ಗುಟುಕು ನೀಡು
ಪ್ರ : ಬಾಯಿಗೆ ಹಾಲುಬಿಡೋಕೂ ಪುಣ್ಯ ಇರಬೇಕು. ಸ್ವಂತ ಮಗನೇ ಸಾಯೋ ಕಾಲದಲ್ಲಿ ಹತ್ತಿರ ಇರದಂತೆ ವಿಧಿ ಸಂಚು ಮಾಡಿರ್ತದೆ.
೨೧೮೫. ಬಾಯ್ತುಂಬ ಮಾತಾಡಿಸು = ಪ್ರೀತಿಯಿಂದ ನಡೆದುಕೊಳ್ಳು, ಆದರದಿಂದ ಉಪಚರಿಸು
ಪ್ರ : ಬಾಯ್ತುಂಬ ಮಾತಾಡಿಸೋರ ಹತ್ರ ನಾವೂ ಪ್ರೀತಿಯಿಂದ ನಡ್ಕೋಬೇಕು.
೨೧೮೬. ಬಾಯಿತೂಪರ ತೀರಿಸಿಕೊಳ್ಳು = ಕೃತಕ ಸಹಾನುಭೂತಿ ತೋರು
(ತೂಪರ = ತುಂತುರು ಮಳೆ)
ಪ್ರ : ಅವರು ಬಾಯಿತೂಪರ ತೀರಿಸಿಕೊಳ್ಳೋ ಜನರೇ ಹೊರ್ತು ಪ್ರಾಣಕ್ಕೆ ಪ್ರಾಣ ಕೊಡೋರಲ್ಲ.
೨೧೮೭. ಬಾಯಿ ಬಡಿದುಕೊಳ್ಳು = ಹೊಟ್ಟೆ ಉರಿದುಕೊಳ್ಳು, ಸಹಿಸದಿರು
ಪ್ರ : ಗಾದೆ – ಬದುಕಿದರೆ ಬಾಯಿ ಬಡ್ಕೊಳ್ತಾರೆ
ಕೆಟ್ಟರೆ ತಿಕ ಬಡ್ಕೊಳ್ತಾರೆ.
೨೧೮೮. ಬಾಯಿ ಬರದಿರು = ಮಾತು ಹೊರಡದಿರು
ಪ್ರ : ಅವನ ಸ್ಥಿತಿ ನೋಡಿದ ಮೇಲೆ, ಏನು ಹೇಳೋಕೂ ನನಗೆ ಬಾಯಿ ಬರಲಿಲ್ಲ.
೨೧೮೯. ಬಾಯಿಬಾಯಿ ಬಿಡು = ಆಸೆ ಪಡು
ಪ್ರ : ಅವಳ್ನ ಕಂಡ್ರೆ ಇವನು ಬಾಯಿ ಬಾಯಿ ಬಿಡ್ತಾನೆ, ಅವಳು ಇವನ್ನ ಕಂಡ್ರೆ ಮೂತಿ ತಿರುವುತಾಳೆ.
೨೧೯೦. ಬಾಯಿ ಬಿದ್ದು ಹೋಗು = ಮಾತು ನಿಂತು ಹೋಗು, ನಾಲಗೆ ಸೇದಿ ಹೋಗು
ಪ್ರ : ನಾಯಿಗೆ ಒದ್ದ ಹಂಗೆ ಒದ್ದನಲ್ಲೇ, ಇವನ ಬಾಯಿ ಬಿದ್ದು ಹೋಗ!
೨೧೯೧. ಬಾಯಿಬಿಡಿಸು = ಮಾತಾಡುವಂತೆ ಮಾಡು
ಪ್ರ : ಸೇದುಕುಟ್ಟು ರೋಗದೋಳ್ನ ನೀನು ಬಾಯಿಬಿಡಿಸಿದರೆ ಗಂಡೇ ಸರಿ
೨೧೯೨. ಬಾಯಿ ಬೀಗ ಚುಚ್ಚಿಸಿಕೊಳ್ಳು = ದೇವರ ಹರಕೆ ಸಲ್ಲಿಸು
ಗ್ರಾಮದೇವತೆಯ ಜಾತ್ರೆಯಲ್ಲಿ ಬಾಯಿ ಬೀಗ ಚುಚ್ಚಿಸಿಕೊಂಡು ಕೊಂಡ ಹಾಯುವ ಭಕ್ತಾದಿಗಳುಂಟು. ದವಡೆಯ ಒಂದು ಕಡೆಯಿಂದ ದಬ್ಬಳ ಗಾತ್ರದ ತಂತಿಯಿಂದ ಚುಚ್ಚಿ, ದವಡೆಯ ಇನ್ನೊಂದು ಕಡೆಯಿಂದ ಹೊರಕ್ಕೆ ಎಳೆದು, ಎರಡು ತುದಿಗಳನ್ನು ಗಂಟು ಹಾಕಿದಂತೆ ಮಡಿಚುತ್ತಾರೆ. ಚುಚ್ಚುವ ಕಡೆ ದೇವರ ಭಂಡಾರವನ್ನು ಹಚ್ಚಿ ಚುಚ್ಚುತ್ತಾರೆ. ಕೊಂಡ ಹಾದ ಮೇಲೆ ದೇವಸ್ಥಾನಕ್ಕೆ ಬಂದು ಪೂಜಾರಿ ಅವರ ಬಾಯಿಬೀಗಗಳನ್ನು ತೆಗೆಯುತ್ತಾನೆ. ಚುಚ್ಚಿದ ಕಡೆ ರಕ್ತವಾಗಲೀ ಗಾಯವಾಗಲೀ ಆಗಿರುವುದಿಲ್ಲ. ಚುಚ್ಚಿದ್ದ ಕಡೆ ಭಂಡಾರ ಹಚ್ಚುತ್ತಾರೆ. ಅಲ್ಲಿ ತೂತೇ ಇಲ್ಲದಂತೆ ಮಾದುಕೊಳ್ಳುತ್ತದೆ.
ಪ್ರ : ಬಾಯಿ ಬೀಗ ಚುಚ್ಚಿಸಿಕೊಂಡವರ ಮಾತುಕತೆಯೆಲ್ಲ ಕೈಸನ್ನೆ ಮೂಲಕವೇ.
೨೧೯೩. ಬಾಯಿ ಹಾಕು = ಮಧ್ಯೆ ಪ್ರವೇಶಿಸು
ಪ್ರ : ಗಂಡ ಹೆಂಡಿರ ಜಗಳದಲ್ಲಿ ನಡುವೆ ಬಾಯಿ ಹಾಕೋಕೆ ನೀನು ಯಾರು?
೨೧೯೪. ಬಾಯಿ ಮೇಲೆ ಕೈ ಇಡು = ಸೋಜಿಗಗೊಳ್ಳು
ಪ್ರ : ಆ ಮಗುವಿನ ವಯಸ್ಸಿಗೆ ಮೀರಿದ ಮಾತು ಕೇಳಿ ಬಾಯಿ ಮೇಲೆ ಕೈಯಿಟ್ಕೊಂಡೆ.
೨೧೯೫. ಬಾಯಲ್ಲಿ ನೀರೂರು = ಆಸೆಯುಂಟಾಗು
ಪ್ರ : ಪಕಾತಿ ಹಣ್ಣಿನಂಥ ಹೆಣ್ಣು ಕಂಡಾಗ ಬಾಯಲ್ಲಿ ನೀರೂರುವುದು ಸಹಜ
೨೧೯೬. ಬಾಯಿಗೆ ಬಟ್ಟೆ ತುರುಕಿಕೊಳ್ಳು = ಅಳುವನ್ನು ತಡೆಯಲು ಯತ್ನಿಸು
ಪ್ರ : ಅತ್ತೆ ನಾದಿನಿಯರ ಕಿರುಕುಳವನ್ನು ಹೇಳ್ತಾ ಹೇಳ್ತಾ ಅಳು ತಡೆಯಲಾರದೆ ಬಾಯಿಗೆ ಬಟ್ಟೆ ತುರುಕಿಕೊಂಡಳು.
೨೧೯೭. ಬಾಯಿ ಮೇಲೆ ಸೆರಗು = ಮುಚ್ಚಿಕೊಳ್ಳು = ನಗುವನ್ನು ಮರೆಮಾಜು, ತಡೆಹಿಡಿ.
ಪ್ರ : ಉಕ್ಕಿ ಬರುವ ನಗುವನ್ನು ತಡೆಯಲಾಗದೆ, ಬಾಯಿ ಮೇಲೆ ಸೆರಗು ಮುಚ್ಚಿಕೊಂಡಳು.
೨೧೯೮. ಬಾಯಿ ಹಸನಾಗಿ ಬರು = ಕೆಟ್ಟ ಮಾತು ಬರು
(ಹಸನು = ಚೆನ್ನ, ಸುಂದರ, ಶುದ್ಧ) ಈ ನುಡಿಗಟ್ಟಿನಲ್ಲಿ ಹಸನು ಎಂಬುದು ನಿಷೇದಾರ್ಥದಲ್ಲಿ ಅಂದರೆ ಕೆಟ್ಟ ಎಂಬ ಅರ್ಥದಲ್ಲಿ ಬಳಕೆಯಾಗಿದೆ.
ಪ್ರ : ಅವನ ಹೆಸರೆತ್ತ ಬೇಡ, ಎತ್ತಿದರೆ ನನ್ನ ಬಾಯಿ ಹಸನಾಗಿ ಬರ್ತದೆ.
೨೧೯೯. ಬಾಯಿ ಹೋದಂಗೆ ಮಾತಾಡು = ನಾಲಗೆ ನಿಗ್ರಹ ಇಲ್ಲದಿರು, ಹದ್ದುಮೀರಿ ಮಾತಾಡು.
ಪ್ರ : ಗಾದೆ – ಬಾಯಿ ಹೋದಂಗೆ ಮಾತು
ತಿಗ ಹೋದಂಗೆ ಹೂಸು
೨೨೦೦. ಬಾರಾ ಬಂಗಾಳಿ ಬೀಳು = ತುಂಬ ತೊಂದರೆ ಅನುಭವಿಸು
(ಬಾರಾ < ಬಾರಹ್ (ಹಿಂ) = ಹನ್ನೆಡು ; ಬಂಗಾಳಿ < ಭಂಗ + ಆಳಿ = ಕಷ್ಟ ಸಮೂಹ)
ಪ್ರ : ಈ ಮನೆ ಯಜಮಾನಿಕೆ ಯಾರಾದರೂ ವಹಿಸಿಕೊಳ್ಳಿ, ನನಗೆ ಬಾರಾ ಬಂಗಾಳಿ ಬಿದ್ದು ಸಾಕಾಗಿದೆ, ಜನ್ಮ ರೋಸಿ ಹೋಗಿದೆ.
೨೨೦೧. ಬಾರಾ ಬಂಗಾಳಿ ಮಾಡು = ಮೋಸ ಮಾಡು, ವಂಚನೆ ಮಾಡು
ಬಹುಶಃ ‘ಕುಂಬಕೋಣಂ ಮಾಡು’ ಎಂಬುದಕ್ಕೆ ಕಿತಾಪತಿ ಮಾಡು ಎಂಬ ಅರ್ಥವಿರುವಂತೆ ‘ಬಂಗಾಳಿ ಮಾಡು’ ಎಂಬುದಕ್ಕೆ ಮೋಸ ಮಾಡು ಎಂಬ ಅರ್ಥ ಇದ್ದಿರಬೇಕು. ಮೋಸ ಮಾಡುವ ಬಂಗಾಳದ ಹನ್ನೆರಡು (ಬಾರಾ < ಬಾರಹ್) ಮಂದಿಯ ತಂಡವಿದ್ದಿತೋ ಏನೋ, ಖಚಿತವಾಗಿ ಏನು ಹೇಳಲೂ ಸಾಧ್ಯವಿಲ್ಲ. ಬಹುಶಃ ನಾಥಪಂಥದ ಮೂಲದಿಂದ ಈ ನುಡಿಗಟ್ಟು ಮೂಡಿರಬೇಕು ಎನ್ನಿಸುತ್ತದೆ.
ಪ್ರ : ಬಾರಾ ಬಂಗಾಳಿ ಮಾಡಿ ಅತ್ಯುನ್ನತ ಸ್ಥಾನಕ್ಕೇರಿದ; ಏರುಬಂಡೆಯ ಮತ್ತೊಂದು ಮುಖ ಜಾರುಬಂಡೆಯಾಗಿರಬಹುದು, ಯಾರಿಗೆ ಗೊತ್ತು
೨೨೦೨. ಬಾರಿಗೆ ಬರು = ಬೆದೆಗೆ ಬರು
(ಬಾರಿ = ಸೂಳ್, ಸರದಿ; ಗರ್ಭತಾಳುವ ಸೂಳ್)
ಪ್ರ : ಹಸು ಬಾರಿಗೆ ಬಂದಿದೆ, ಹೋರಿ ಕೊಡಿಸಿಕೊಂಡು ಬಾ.
೨೨೦೩. ಬಾರೀಕು ಇಲ್ಲದಿರು = ಘನತೆ ಗಾಂಭೀರ್ಯ ಇಲ್ಲದಿರು
(ಬಾರೀಕು = ಬುದ್ಧಿ)
ಪ್ರ : ಬಾರೀಕು ಇಲ್ಲದೋರ್ನ ಯಾರೂ ತಾರೀಪು ಮಾಡೋದಿಲ್ಲ
೨೨೦೪. ಬಾರುದೆಗೆ = ಚೆನ್ನಾಗಿ ಹೊಡಿ, ಚರ್ಮ ಸುಲಿ
(ಬಾರು = ಚರ್ಮ)
ಪ್ರ : ಜೋರು ಎಲ್ಲ ಸೋರಿ ಹೋಗೋ ಹಂಗೆ ಬಾರುದೆಗಿದಿದ್ದೀನಿ
೨೨೦೫. ಬಾರು ಮಾಡಿಕೊಂಡಿರು = ಸನ್ನದ್ಧವಾಗಿರು, ಬಂದೂಕಿಗೆ ಮದ್ದುಗುಂಡು ತುಂಬಿ ಕಾಯುತ್ತಿರು.
ಪ್ರ : ಯಾರು ಬರ್ತಾರೋ ಬರಲಿ, ನಾನು ಬಾರು ಮಾಡಿಕೊಂಡು ಕುಂತಿದ್ದೀನಿ.
೨೨೦೬. ಬಾಲಂಗಚ್ಚೆಯಾಗು = ಬಾಲಬಡುಕನಾಗು, ಇನ್ನೊಬ್ಬರ ಬಾಲ ಹಿಡಿದುಕೊಂಡು ಸಾಗು
ಗಾಳಿಪಟ ಆಡಿಸುವುದಕ್ಕೆ ಸೂತ್ರದಂತೆಯೇ ಬಾಲಂಗಚ್ಚೆಯಾಗೋದಕ್ಕೆ ಇಚ್ಛೆ ಪಡೋದಿಲ್ಲ.
೨೨೦೭. ಬಾಲ ನುಲುಚು = ವೇಗಗೊಳಿಸು, ಪ್ರಚೋದಿಸು
(ನುಲುಚು = ಮುರಿ, ಹುರಿ ಮಾಡು) ಗಾಡಿಗೆ ಕಟ್ಟಿದ ಎತ್ತುಗಳನ್ನು ವೇಗವಾಗು ಸಾಗುವಂತೆ ಮಾಡಲು ಮೂಕಿ ಮರದ ಮೇಲೆ ಕೂತು ಗಾಡಿ ಹೊಡೆಯುವವನು ಎತ್ತುಗಳನ್ನು ಚಾವುಟಿಯಿಂದ ಹೊಡೆಯುತ್ತಾನೆ ಅಥವಾ ಅವುಗಳ್ ಬಾಲವನ್ನು ನುಲುಚುತ್ತಾನೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಬಾಲ ನುಲುಚೋದ್ರಲ್ಲಿ ಭಾರಿ ಗಟ್ಟಿಗ.
೨೨೦೮. ಬಾಲ ಬಿಚ್ಚು = ಪ್ರತಿಷ್ಠೆ ತೋರಿಸು, ಎಲ್ಲದರಲ್ಲೂ ಮೂಗು ತೂರಿಸಿ ಎಗರಾಡು
ಪ್ರ : ನೀನು ಹಿಂಗೆ ಬಾಲ ಬಿಚ್ಚಿದರೆ, ಮುಚ್ಚಿಸೋದು ಹೆಂಗೆ ಅಂತ ನನಗೆ ಗೊತ್ತು.
೨೨೦೯. ಬಾಲ ಮುದುರಿಕೊಳ್ಳು = ಹೆದರಿಕೊಳ್ಳು
ನಾಯಿ ಇನ್ನೊಂದು ನಾಯಿಯೊಡನೆ ಜಗಳಕ್ಕೆ ಬಿದ್ದಾಗ ತನ್ನ ಬಾಲವನ್ನು ಎತ್ತಿಕೊಂಡಿರುತ್ತದೆ. ಆದರೆ ಎದುರಾಳಿ ನಾಯಿ ಧಡೂತಿಯಾಗಿದ್ದು ತನಗೆ ಎದುರಿಸಲು ಸಾಧ್ಯವಾಗದಿದ್ದರೆ ತನ್ನ ಬಾಲವನ್ನು ಕಾಲುಗಳ ಸಂಧಿ ಮುದುರಿಕೊಂಡು ಸುಮ್ಮನಾಗುತ್ತದೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ನಾನು ಯಾವುದಕ್ಕೂ ಬಗ್ಗಲ್ಲ ಅನ್ನೋದು ತಿಳ್ಕೊಂಡ ಮೇಲೆ ಬಾಲ ಮುದುರಿಕೊಂಡ
೨೨೧೦. ಬಾವಿಗೆ ಬಿದ್ದಂತಾಡು = ಎದೆ ಬಾಯಿ ಗುದ್ದಿಕೊಳ್ಳು, ಗಾಬರಿಕೊಳ್ಳು
ಪ್ರ : ಏನೂ ಆಗದೆ ಇರುವಾಗ ಯಾಕೆ ಹಿಂಗೆ ಬಾವಿಗೆ ಬಿದ್ದಂತಾಡ್ತೀಯ?
೨೨೧೧. ಬಾವುಣಿಸು = ಆದರಿಸು, ಪ್ರೀತಿಯಿಂದ ಉಪಚರಿಸು
(ಬಾವುಣಿಸು < ಭಾವನಿಸು < ಭಾವನೆ + ಇಸು = ಆದರಿಸು) ಭಾವನೆಗೆ ‘ಇಸು’ ಪ್ರತ್ಯಯ ಸೇರಿಸಿ ಬಾವುಣಿಸು (= ಪ್ರೀತ್ಯಾದರಗಳಿಂದ ಉಪಚರಿಸು) ಎಂಬ ಕ್ರಿಯಾಪದವನ್ನು ರಚಿಸಿದಂತೆಯೇ ‘ಇಕೆ’ ಪ್ರತ್ಯಯ ಸೇರಿಸಿ ಬಾವುಣಿಕೆ (=ಪ್ರೀತ್ಯಾದರದ ಸತ್ಕಾರ) ಎಂಬ ನಾಮಪದವನ್ನೂ ಸೃಷ್ಟಿಸಿರುವುದು ಅಭಿವ್ಯಕ್ತಿ ವೈವಿಧ್ಯಕ್ಕೆ ಸಾಕ್ಷಿ.
ಪ್ರ : ಬಡವರಾದರೂ ಬಂದವರನ್ನು ಚೆನ್ನಾಗಿ ಬಾವುಣಿಸ್ತಾರೆ
೨೨೧೨. ಬಾಸಿಂಗ ಕಟ್ಟು = ಮದುವೆ ಮಾಡು
(ಬಾಸಿಂಗ = ಮದುಮಕ್ಕಳ ಹಣೆಗೆ ಕಟ್ಟುವ ಬೆಂಡಿನಿಂದ ಮಾಡಿದ ಒಂದು ತೊಡಿಗೆ)
ಪ್ರ : ಬಾಸಿಂಗ ಕಟ್ಟಿಸಿಕೊಂಡ ಮದುಮಕ್ಕಳು ಕೈನೀರು ಎರೆಸಿಕೊಂಡರು.
೨೨೧೩. ಬಾಸುಂಡೆ ಬರಿಸು = ಚೆನ್ನಾಗಿ ಹೊಡಿ
(ಬಾಸುಂಡೆ < ಬಾಸುಳು = ಮೈಮೇಲೆ ಮೂಡುವ ಹೊಡೆತಗಳ ಬರೆ)
ಪ್ರ : ಹೇಳಿಕೆ ಮಾತು ಕೇಳ್ಕೊಂಡು, ಮೂಸಂಡಿಯಂಥ ಗಂಡ ಹೆಂಡ್ರ ಮೈಮೇಲೆ ಬಾಸುಂಡೆ ಬರಿಸಿದ.
೨೨೧೪. ಬಾಳ ರಾಗಿ ಬೀಸು = ಹೆಚ್ಚು ಶ್ರಮ ಪಡು, ಸಾಧನೆ ಮಾಡು
(ಬಾಳ < ಬಹಳ = ಹೆಚ್ಚು)
ಪ್ರ : ಅವನಿಗೆ ಬುದ್ಧಿ ಬರಬೇಕಾದರೆ ಇನ್ನೂ ಬಾಳ ರಾಗಿ ಬಿಸಬೇಕು.
೨೨೧೫. ಬಾಳಿಕೆ ಬರು = ಹೆಚ್ಚು ಕಾಲ ಇರು, ತಡೆತ ಬರು.
ಪ್ರ : ಈ ನೇತ್ರದಂಥ ಬಟ್ಟೆ ಹೆಚ್ಚು ಕಾಲ ಬಾಳಿಕೆ ಬರಲ್ಲ.
೨೨೧೬. ಬಾಳಿ ಬಕರೆ ಹೋಗು = ಭಿಕ್ಷೆಗೆ ಹೋಗು
(ಬಕರೆ < ಬಕ್ಕರೆ < ಪಕ್ಕರೆ = ಮಡಕೆಯ ಹೋಳು, ಭಿಕ್ಷಾಪಾತ್ರೆ)
ಪ್ರ : ನೀವು ಬಾಳಿ ಬಕರೆ ಹೋಗೋದ್ನ ನಾನು ಕಾಣ್ನ?
೨೨೧೭. ಬಾಳುಗೆಡು = ಹಾಳಾಗು, ಕೆಟ್ಟು ಹೋಗು
ಪ್ರ : ಬಾಳುಗೆಟ್ಟೋರಿಗೆ ಮಾನವೂ ಒಂದೆ ಅವಮಾನವೂ ಒಂದೆ.
೨೨೧೮. ಬಾಳೆ ಎಲೆಯಂತೆ ಬಳುಕಾಡು = ಅಂದವಾಗಿರು, ಅಬಳುತ್ತಿರು, ತೆಳ್ಳಗಿರು
ಪ್ರ : ಬಾಳೆ ಎಲೆಯಂತೆ ಬಳುಕಾಡೋ ಅಂದವಾದ ಹೆಣ್ಣು ಸೊಸೆಯಾಗಿ ಬಂದದ್ದು ಪುಣ್ಯ.
೨೨೧೯. ಬಾಳೆ ಎಲೆ ಮೇಲೆ ಬೆಣ್ಣೆ ಹಾಕಿ ನೂಲೆಳೇಲಿ ಕೊಳ್ಳು ಕುಯ್ಯಿ = ಉಪಚಾರದ ನೆವದಲ್ಲಿ
ಅಪಚಾರ ಮಾಡು, ಲೇಸು ಮಾಡುವ ನೆಪದಲ್ಲಿ ಕೇಡೆಸಗು
(ಕೊಳ್ಳು < ಕೊರಳು = ಕುತ್ತಿಗೆ)
ಪ್ರ : ಬಾಳೆ ಎಲೆ ಮೇಲೆ ಬೆಣ್ಣೆ ಹಾಕಿ ನೂಲೆಳೇಲಿ ಕೊಳ್ಳು ಕುಯ್ಯೋ ಮೇಲ್ವರ್ಗದ ಜನರ ಬಗೆಗೆ ಕೆಳವರ್ಗದವರು ಮೈಯೆಲ್ಲ ಕಣ್ಣಾಗಿರಬೇಕು.
೨೨೨೦. ಬಾಳೆಕಾಯಿಗೆ ಕೈ ಹಾಕು = ಶೀಲ ಹರಣಕ್ಕೆ ಪ್ರಯತ್ನಿಸು, ಸೀರೆ ಸೆಳೆಯಲು ಯತ್ನಿಸು.
(ಬಾಳೆಕಾಯಿ = ಸೀರೆಯ ನೆರಿಗೆ ಜಾರದಂತೆ ಸೊಂಟದ ಬಳಿ ಮಡಿಸಿ ಸಿಗಿಸಿದ ಬಾಳೆಕಾಯಿ ಆಕಾರದ ನೆರಿಗೆಯ ದಿಂಡು)
ಪ್ರ : ಬಾಳೆ ಕಾಯಿಗೆ ಕೈ ಹಾಕೋಕೆ ಬಂದಾಗ, ಅವನ ಗೋಮಾಳೆಗೆ ಕೈ ಹಾಕಿ, ಕೆಳಗೆ ನೇತಾಡೊ ಎರಡು ಕರ-ಡಿ-ಗೆ- ಕಿತ್ತು ನಿನ್ನ ಕೈಗೆ ಕೊಡ್ತೀನಿ ಅಂದೆ ನೋಡು, ಅಲ್ಲಿಂದ ಕಂಬಿ ಕಿತ್ತ.
೨೨೨೧. ಬಾಳೆ ಹಣ್ಣಿನ ಗುಡಾಣದಲ್ಲಿ ಬೆಳೆದಿಲ್ಲದಿರು = ವಿಶೇಷ ಇಲ್ಲದಿರು, ಎಲ್ಲರಂತೆ ಬೆಳೆದಿರು.
(ಗುಡಾನ = ಮಣ್ಣಿನ ದೊಡ್ಡ ಬಾನಿ, ಬಾಳೆಕಾಯಿಯನ್ನು ಹಣ್ಣು ಮಾಡಲು ಅದರಲ್ಲಿಟ್ಟು ಮೆತ್ತೆ ಹಾಕುತ್ತಾರೆ)
ಪ್ರ: ನೀನೇನು ಬಾಳೆ ಹಣ್ಣಿನ ಗುಡಾನದಲ್ಲಿ ಬೆಳೆದಿದ್ದೀಯ? ಎಲ್ಲರಂತೆ ಬಿದ್ದಿರು.
೨೨೨೨. ಬ್ಯಾನೆ ಬೀಳು = ಅಸೂಯೆ ಪಡು, ಅಸಹನೆಯಿಂದ ಕುದಿ
(ಬ್ಯಾನೆ < ಬೇನೆ = ಅಸೂಯೆ, ಸಂಕಟ)
ಪ್ರ : ಗಾದೆ – ಬ್ಯಾನೆ ಗಂಡನಿಗೆ ಗೋಣಿ ಕಚ್ಚೇರವೆ.
(ಮೊದಲೇ ಗಂಡ ಬ್ಯಾನೆ ಬೀಳುವ ಸ್ವಭಾವದವನು. ಅಂಥವನಿಗೆ ಬಟ್ಟೆ ಕಚ್ಚೇರಿವೆಗೆ (ಲಂಗೋಟಿಗೆ) ಬದಲಾಗಿ ಗೋಣಿ ಕಚ್ಚೇರಿವೆ ಇದ್ದರೆ, ಸೆಕೆಗೆ ಕಡಿತ ಬಂದು ಪರಪರನೆ ಕೆರೆದುಕೊಳ್ಳುತ್ತಾನೆ, ಪರಚಿಕೊಳ್ಳುತ್ತಾನೆ. ಅವನ ಬ್ಯಾನೆ, ಅಸಹನೆ ಇನ್ನೂ ಮುಗಿಲು ಮುಟ್ಟುತ್ತದೆ ಎಂಬ ಭಾವ ಗಾದೆಯಲ್ಲಿದೆ)
೨೨೨೩. ಬ್ಯಾನೆಯಾಗ = ಹೆರಿಗೆಯ ನೋವು ಕಾನಿಸಿಕೊಳ್ಳು
(ಬ್ಯಾನೆ < ಬೇನೆ = ನೋವು)
ಪ್ರ : ಬಸುರಿಗೆ ಬ್ಯಾನೆಯಾದಾಗ, ಬಂಜೆಗೆ ಅದರ ಅರಿವಾಗುವುದಿಲ್ಲ.
೨೨೨೪. ಬಿಕನಾಸಿಯಂತಾಡು = ತಿರುಕನಂತಾಡು, ಕಯ್ಯಕಯ್ಯ ಎನ್ನು
(ಬಿಕನಾಸಿ = ಭಿಕ್ಷುಕ, ಕ್ಷುದ್ರ ಜೀವಿ)
ಪ್ರ : ಬಿಕನಾಸಿಯಂತಾಡೋಳು ದಸಯ್ಯನ ಬವನಾಸಿಗೆ ಅಕ್ಕಿಕಾಳು ಹಾಕ್ತಾಳ?
೨೨೨೫. ಬಿಕ್ಕಲ ಪದ ಹೇಳಿದಂತಾಗು = ನಗೆ ಪಾಟಲಾಗು, ಅಧ್ವಾನವಾಗು
(ಬಿಕ್ಕಲ = ತೊದಲ, ಪದ = ಹಾಡು)
ಪ್ರ : ಗಾದೆ – ಬಿಕ್ಕಲನ ಯಾಲಪದಕ್ಕೂ ತಿಕ್ಕಲನ ಲೋಲುಪದಕ್ಕೂ ಸರಿಹೋಯ್ತು.
೨೨೨೬. ಬಿಕೋ ಎನ್ನು = ಹಾಳು ಸುರಿ, ಅಬೋ ಎನ್ನು
ಪ್ರ : ಯಾವಾಗಲೂ ಗಿಜುಗುಡುತ್ತಿದ್ದ ತುಂಬಿದ ಮನೆ ಈಗ ಬಿಕೋ ಅಂತಾ ಇದೆ.
೨೨೨೭. ಬಿಗಿತ ಬಿಗಿ = ಹೊಡೆತ ಹೊಡಿ
(ಬಿಗಿತ = ಹೊಡೆತ, ಏಟು)
ಪ್ರ : ನಾಲ್ಕು ಬಿಗಿತ ಬಿಗಿದರೆ, ಉಗಿತ ಊಗಿದರೆ, ತಾನೇ ಸರಿ ಹೋಗ್ತಾನೆ.
೨೨೨೮. ಬಿಗಿದುಕೊಳ್ಳು = ಮುನಿಸಿಕೊಳ್ಳು, ಊದಿಕೊಳ್ಳು
ಪ್ರ : ಹೊತಾರೆಯಿಂದ ಸೇದುಕೊಟ್ಟು ರೋಗ ಬಂದೋಳಂಗೆ ಬಿಕ್ಕೊಂಡು ಕೂತವಳೆ.
೨೨೨೯. ಬಿಚ್ಚೋಲೆ ಗೌರಮ್ಮನಂತಿರು = ಬೆಡಗು ಬಿನ್ನಾಣ ಇಲ್ಲದಿರು, ಮುಗ್ಧೆಯಾಗಿರು
(ಬಿಚ್ಚೋಲೆ = ತಾಳೆಗರಿಯ ಓಲೆ) ತಾಳೆಗರಿಯನ್ನುಸುರುಳಿ ಸುತ್ತಿ ಕಿವಿಯಹಾಲೆಗೆ ಓಲೆಯಂತೆ ಇಟ್ಟುಕೊಳ್ಳುವುದು. ಮತ್ತೆ ತೆಗೆದು ಸುರುಳಿ ಬಿಚ್ಚಬಹುದು. ಆದ್ದರಿಂದಲೇ ಅದಕ್ಕೆ ಬಿಚ್ಚೋಲೆ ಎಂಬ ಹೆಸರು ಬಂದಿರುವುದು. ಹಿಂದೆ ಗ್ರಾಮೀಣರ ಅರ್ಥಿಕ ಸ್ಥಿತಿಗತಿಯ ಮೇಲೆ ಈ ಒಡವೆಗಳು ಬೆಳಕು ಚಿಲ್ಲುತ್ತವೆ. ಚಿನ್ನದ ಓಲೆ ಪಚ್ಚೆಯೋಲೆಗೆ ಅವರು ಬದುಕಿಲ್ಲ ಎಂಬುದು ಬಿಚ್ಚೋಲೆ ಬಿಚ್ಚಿ ಹೇಳುತ್ತದೆ. ಹಾಗೆಯೇ ‘ಅವರವರ ತಲೆಗೆ ಅವರವರದೇ ಕೈ’ ಎಂಬ ಗಾದೆಯೂ ದಿಂಬಿಗೆ ಗತಿಯಿಲ್ಲದ ಗ್ರಾಮೀಣರ ಆರ್ಥಿಕ ದುಸ್ಥಿತಿಗೆ ದುರ್ಬೀನು ಹಿಡಿಯುವಂತಿದೆ.
ಪ್ರ : ಬಿಚ್ಚೋಲೆ ಗೌರಮ್ಮನಂಥವರು ಇಂದು ವಿರಳ, ಕಣ್ಣುಮುಚ್ಚಾಲೆ ಆಡುವವರು ಹೇರಳ.
೨೨೩೦. ಬಿಡಾಲಿ ಕಟ್ಕೊಂಡು ಬೇಡೋಲಾಗು = ಕದ್ದು ಮುಚ್ಚಿ ವ್ಯವಹರಿಸುವ, ಹತ್ತಾರು ಮನೆ
ಹೊಕ್ಕು ಹೊರಬರುವ ಹೆಣ್ಣನ್ನು ಕಟ್ಟಿಕೊಂಡು ಮನೆ ಬಿಕೋ ಎನ್ನು, ಹಾಳು ಸುರಿ.
(ಬಿಡಾಲ = ಬೆಕ್ಕು; ಬೇಡೋಲು < ಬೇಡೌಲ್ = ಕಾಂತಿವೈಭವವಿರದ ಹಾಳು ಸುರಿಯುವಿಕೆ)
ಪ್ರ : ಬಿಡಾಲಿ ಕಟ್ಕೊಂಡು ನಾನು ಬೇಡೋಲಾದೆ, ನಗಾಡೋರ ಮುಂದೆ ಎಡವಿಬಿದ್ದೆ.
೨೨೩೧. ಬಿಡುಗೆಟ್ಟ ಮಾತಾಡು = ಅಂಕೆದಪ್ಪಿದ ಮಾತಾಡು
(ಬಿಡುಗೆಟ್ಟ < ಬಿಟ್ಟುಕೆಟ್ಟ = ಕಟ್ಟದೆ ಕೆಟ್ಟ)
ಪ್ರ : ಬಿಡುಗೆಟ್ಟೋಳ ಮಾತಿಗೆ ನುಡಿಗೊಟ್ಟೋನು ಕೆಟ್ಟ.
೨೨೩೨. ಬಿಡುಗೆಟ್ಟು ಬಂದಿಲ್ಲದಿರು = ಗಂಡ ಬಿಟ್ಟು ಕೆಟ್ಟು ಬಂದಿಲ್ಲದಿರು
ಪ್ರ : ನಾನು ಗಂಡುಳ್ಳ ಗರತಿ, ಬಿಡುಗೆಟ್ಟು ಬಂದಿಲ್ಲ, ನಾಲಗೆ ಹಿಡಿದು ಮಾತಾಡು. ಇನ್ನೊಂ-ದ್ಸಾ-ರಿ ಬಿಡು-ಗೆ-ಟ್ಟೋ-ಳು ಅಂದ್ರೆ-ಗಿಂ-ದ್ರೆ ನಿನ್ನ ಜೋಡಿ ಕರಡಿಗೆ ಕಿತ್ತು ಕೈಗೆ ಕೊಡ್ತೀನಿ.
೨೨೩೩. ಬಿಡ್ತು ಅನ್ನು = ಅಶುಭ ಪರಿಹಾರವಾಯಿತು ಎನ್ನು, ಶಾಂತಂ ಪಾಪಂ ಎನ್ನು
(ಬಿಡ್ತು < ಬಿಟ್ಟಿತು)
ಪ್ರ : ಹಂಗೆ ಹೇಳ್ತಾರ ? ಬಿಡ್ತು ಅನ್ನು.
೨೨೩೪. ಬಿಡಿಬೀಸಾಗಿ ಬರು = ಪುರಸೊತ್ತು ಮಾಡಿಕೊಂಡು ಬರು
(ಬಿಡುಬೀಸು < ಬಿಡುವು + ಬೀಸು = ಹೆಚ್ಚು ಪುರಸೊತ್ತು)
ಪ್ರ : ಎಂದಾದರೂ ಬಿಡುಬೀಸಾಗಿ ಬಾ, ಕುಂತು ಮಾತಾಡೋಣ
೨೨೩೫. ಬಿದ್ದಗೋಡೆ ಹಾಕದಿರು = ಬದುಕು ಬಾಳಿನ ಬಗ್ಗೆ ಆಸ್ಥೆ ಇಲ್ಲದಿರು, ಮನೆಮಠದ
ಬಗ್ಗೆ ಕಾಳಜಿ ಇಲ್ಲದಿರು
ಪ್ರ : ಗಾದೆ – ಇದ್ದ ಕಡೆ ಇರೋದೂ ಇಲ್ಲ
ಬಿದ್ದ ಗೋಡೆ ಹಾಕೋದೂ ಇಲ್ಲ.
೨೨೩೬. ಬಿದ್ದಂಬೀಳಾ ಓಡು = ಬಿದ್ದು ಎದ್ದು ಓಡು, ಬೀಳುವುದನ್ನೂ ಲೆಕ್ಕಿಸದೆ ಓಡು
ಪ್ರ : ಕರಡಿ ಅಟ್ಟಿಸಿಕೊಂಡು ಬರ್ತಾ ಇದೆ ಅಂತ ಬಿದ್ದಂಬೀಳಾ ಓಡಿದ.
೨೨೩೭. ಬಿದಿರ ಬೊಡ್ಡೆಯಂತಿರು = ಗಟ್ಟಿಮುಟ್ಟಾಗಿರು
(ಬೊಡ್ಡೆ = ಬುಡ, ತೆಂಡೆ)
ಪ್ರ : ಹುಡುಗ ಒಳ್ಳೆ ಬಿದಿರ ಬೊಡ್ಡೆಯಂತೆ ಇದ್ದಾನೆ, ಇರಿಸಿಕೊಳ್ಳಬಹುದು ಧಾರಾಳವಾಗಿ.
೨೨೩೮. ಬಿದ್ದು ಸಾಯು = ಹೆಚ್ಚು ಆಸೆ ಪಡು
ಪ್ರ : ಹಣ ಅಂದ್ರೆ ಸಾಕು, ಬಿದ್ದು ಸಾಯ್ತಾನೆ.
೨೨೩೯. ಬಿನ್ನಕ್ಕೆ ಹೋಗು = ಇನ್ನೊಬ್ಬರ ಕರೆಯನ್ನು ಪೂರೈಸಲು ಹೋಗು
(ಬಿನ್ನ < ಬಿನ್ನಹ < ಬಿನ್ನಪ = ವಿಜ್ಞಾಪನೆ)
ಪ್ರ : ಸ್ವಾಮಿಗಳು ಭಕ್ತರ ಮನೆಗೆ ಬಿನ್ನಕ್ಕೆ ಹೊರಟಿದ್ದಾರೆ, ಸಂಜೆ ಮೇಲೆ ಬನ್ನಿ
೨೨೪೦. ಬಿನ್ನವಾಗು = ಒಡೆದು ಹೋಗು, ಮುಕ್ಕಾಗು
(ಬಿನ್ನ < ಭಿನ್ನ = ಒಡಕು, ಬಿರುಕು)
ಪ್ರ : ವಿಗ್ರಹ ಬಿನ್ನವಾದ್ದರಿಂದ ಹೊಸದನ್ನು ಪ್ರತಿಷ್ಠಾಪಿಸಬೇಕು.
೨೨೪೧. ಬಿನ್ನಾಣದ ಮಾತಾಡದಿರು = ಮರುಳು ಮಾಡುವ ಬಣ್ಣದ ಮಾತಾಡದಿರು, ವೈಯಾರದ ನಯ ವಂಚನೆಯ ಮಾತಾಡದಿರು.
(ಬಿನ್ನಾಣ < ಬಿನ್ನಣ < ವಿಜ್ಞಾನ = ವಿಶೇಷವಾದ ಜ್ಞಾನ, ಯುಕ್ತಿ)
ಪ್ರ : ಚಿನಾಲಿಯ ಬಿನ್ನಾಣದ ಮಾತಿಗೆ ನನ್ನಾಣೆ ಕಿವಿಗೊಡಬೇಡ.
೨೨೪೨. ಬಿಮ್ಮಗಿರು = ಕಟ್ಟುಮಸ್ತಾಗಿರು, ಗಟ್ಟಿಮುಟ್ಟಾಗಿರು
ಪ್ರ : ಗಾದೆ – ಬಿಮ್ಮಗಿದ್ದಾಗ ಹಮ್ಮು
ಬಿಮ್ಮು ತಪ್ಪಿದಾಗ ದಮ್ಮು
೨೨೪೩. ಬಿಮ್ಮನಸೆಯಾಗಿರು = ತುಂಬು ಗರ್ಭಿಣಿಯಾಗಿರು
(ಬಿಮ್ಮನಸೆ < ಬಿಣ್ಪು + ಮನುಷ್ಯೆ; ಬಿಣ್ಪು = ದಪ್ಪ, ಸ್ಥೂಲ)
ಪ್ರ : ಬಿಮ್ಮನಸೆಗೆ ಮನೆಯವರ ಒಮ್ಮನಸ್ಸಿನ ಆದರ ಆರೋಗ್ಯದಾಯಕ
೨೨೪೪. ಬಿರುಕು ಹುಟ್ಟಿಸು = ವಿರಸ ಮೂಡಿಸು
ಪ್ರ : ಅಣ್ಣತಮ್ಮಂದಿರಿಗೆ ಚಾಡಿ ಹೇಳಿ ಬಿರುಕು ಹುಟ್ಟಿಸುವ ಬಾಯಿಹರುಕರಿಗೆ ಬರವಿಲ್ಲ,.
೨೨೪೫. ಬಿರುಸಾಗು = ಒರಟಾಗು, ವೇಗ ಜಾಸ್ತಿಯಾಗು
ಪ್ರ : ಗಾದೆ – ಕನ್ನಡ ಸರಸು
ಮರಾಠಿ ಬಿರುಸು
೨೨೪೬. ಬಿಸಾಡಿದಂಗೆ ಮಾತಾಡು = ಪೆಗ್ಗೆಯಿಂದ ಮಾತಾಡು, ಕತ್ತೆ ಒದ್ದಂತೆ ಮಾತಾಡು
(ಬಿಸಾಡು < ಬಿಸುಡು = ಎಸೆ, ಒಗೆ)
ಪ್ರ : ದೊಡ್ಡೋರು ಚಿಕ್ಕೋರು ಅನ್ನೋ ಗಣನೆಯೇ ಇಲ್ಲದೆ ಬಿಸಾಡಿದಂಗೆ ಮಾತಾಡ್ತಾನೆ.
೨೨೪೭. ಬಿಸಿ ತಾಕು = ಚುರುಕು ಮುಟ್ಟು, ಆಗಾಮಿ ಅನಾಹುತದ ಅರಿವಾಗು
ಪ್ರ : ಈಗಾಗಲೇ ಅಣ್ಣನಿಗೆ ಬಿಸಿ ತಾಕಿದೆ, ಮತ್ತೆ ಕೈ ಹಾಕೋಕೆ ಹೋಗಲ್ಲ.
೨೨೪೮. ಬಿಳೀ ಕಾಜಗದ ಮೇಲೆ ಕರೀ ಗೀಟು ಹಾಕು = ವಿದ್ಯಾವಂತನಾಗಿ ಅಧಿಕಾರ ನಿರ್ವಹಿಸು.
(ಕಾಜಗ < ಕಾದಗ < ಕಾಗದ; ಕರಿಗೀಟು = ಶಾಹಿಯಿಂದ ಬರೆದ ಬರಹ)
ಪ್ರ : ನಾವು ಮಳೆಬಿಸಿಲು ಅನ್ನದೆ ದುಡಿದ್ರೂ ಹೊಟ್ಟೆಗಿದ್ರೆ ಬಟ್ಟೆಗಿಲ್ಲ ಬಟ್ಟೆಗಿದ್ರೆ ಹೊಟ್ಟೆಗಿಲ್ಲ. ಆದರೆ ನೀವು ಬಿಳೀ ಕಾಜಗದ ಮೇಲೆ ಕರೀ ಗೀಟು ಹಾಕಿ, ತಿಂಗಳಾಯ್ತು ಅನ್ನೋದೇ ತಡ ಝಣ್ ಝಣ್ ಅಂತ ಎಣಿಸ್ಕೊಂಡು ಕಾಲಮೇಲೆ ಕಾಲು ಹಾಕ್ಕೊಂಡು ಹಾಯ್ವಾಗಿರ್ತೀರಿ.
೨೨೪೯. ಬಿಳೀ ಹೋರಿ ಕಣ್ಣಿ ಹಾಕಿಕೊಂಡಿರು = ಅನ್ನ ಇಲ್ಲದಿರು
(ಬಿಳೀ ಹೋರಿ = ಅಕ್ಕಿ, ಅನ್ನ; ಕರಿ ಹೋರಿ = ರಾಗಿ ಮುದ್ದೆ; ಕಣ್ಣಿ ಹಾಕಿಕೊಳ್ಳು = ಎಳೆಯಲಾರೆನೆಂದು ನೊಗ ಕೆಳಕ್ಕೆ ಹಾಕಿ ನಿಂತು ಬಿಡು)
ಪ್ರ : ಈ ಸಾರಿ ಬಿಳೀ ಹೋರಿ ಕಣ್ಣಿ ಹಾಕ್ಕೊಂಡಿದೆ, ಆದ್ದರಿಂದ ಕರಿ ಹೋರಿ ಕಡೆಗಣಿಸಬೇಡಿ ಒಂದು ಪಂಕ್ತಿಯ ಮೇಲೆ ಹೇಳಿಕೊಂಡು ಹೋದ ಯಜಮಾನ.
೨೨೫೦. ಬೀಗದೆಸಲು ಕೈಯಲ್ಲಿರು = ಜುಟ್ಟು ವಶದಲ್ಲಿರು
(ಬೀಗದೆಸಲು = ಬೀಗದ ಕೈ)
ಪ್ರ : ಬೀಗದೆಸಲು ನನ್ನ ಕೈಯಲ್ಲಿರುವಾಗ, ಅವನಾಟ ಏನೇನೂ ನಡೆಯಲ್ಲ.
೨೨೫೧. ಬೀಜ ಬಿತ್ತು = ತಂದು ಹಾಕು, ನಾರದನ ಕೆಲಸ ಮಾಡು, ವೈಮನಸ್ಯ ಮೂಡಿಸು
ಪ್ರ : ಬೀಜ ಬಿತ್ತಿಬಿಟ್ಟು, ಏನೂ ಕಾಣದ ಮಳ್ಳಿ ಹಂಗೆ ತಿರುಗಾಡ್ತಾನೆ.
೨೨೫೨. ಬೀಜ ಹೊಡೆಸು = ಹಿಡ ಮಾಡಿಸು, ನಿರ್ವೀರ್ಯಗೊಳಿಸು
ಪ್ರ : ಬೇರೆಯವರ ಕುರಿ ಮಂದೆಗೆ ನುಗ್ಗಿ ದಾಂಧಲೆ ಮಾಡ್ತದೆ ಅಂತ ಟಗರಿನ ಬೀಜ ಹೊಡಿಸಿದೆ.
೨೨೫೩. ಬೀಟೆ ಹೊಡಿ = ಸೀಳು ಬಿಡು
(ಬೀಟೆ = ಬಿರುಕು)
ಪ್ರ : ಭತ್ತದ ಗದ್ದೆ ನೀರಿಲ್ಲದೆ ಬೀಟೆ ಹೊಡಿದಿರೋದು ಕಾಣಲ್ವ?
೨೨೫೪. ಬೀಯಾ ಉಣ್ಣಿಸು = ಅನ್ನ ಉಣ್ಣಿಸು
(ಬೀಯಾ < ಬೀಯ = ಅಕ್ಕಿ, ಅದರಿಂದ ಮಾಡಿದ ಅನ್ನ) ಸಾಮಾನ್ಯವಾಗಿ ತಾಯಂದಿರು ಮಕ್ಕಳಿಗೆ ‘ಬೀಯಾ ಉಣ್ಣಿಸ್ತೀನಿ ಬಾ’ ಎಂದೇ ಕರೆಯುವುದು. ಬಿಯ, ಬುಯ, ಬುವ ಎಂಬ ರೂಪಗಳೂ ಉಂಟು. ಮದುವೆಗಳಲ್ಲಿ ಮದುಮಕ್ಕಳಿಗೆ ಬುವ ಇಕ್ಕುವ ಶಾಸ್ತ್ರವೂ ಉಂಟು.
ಪ್ರ : ಬೀಯಾ ಉಣಿಸ್ತೀನಿ ಬಾ ಅಂತ ಕರೆದೇಟಿಗೇ ಮಗು ಓಡಿತು, ತಾಯಿ ಬಂದು ಹಿಡಿಯಲಿ ಎಂದು.
೨೨೫೫. ಬೀಲು ಬಿಡು = ಸೀಳು ಬಿಡು
(ಬೀಲು = ಬಿರುಕು)
ಪ್ರ : ಕದಕ್ಕೆ ಆಗ್ತದೆ ಅಂತ ಮಡಗಿದ್ದ ಹಲಸಿನ ಹಲಗೆ ಬೀಲು ಬಿಟ್ಟುಬಿಟ್ಟಿದೆ.
೨೨೫೬. ಬೀಳಾಗು = ಕೀಳಾಗು, ನಿಷ್ಪ್ರಯೋಜಕವಾಗು
(ಬೀಳು = ಬಂಜರು, ಪಾಳು)
ಪ್ರ : ಬೀಳಾದ್ರೂ ಗೋಡು ಗೊಬ್ಬರ ಹೊಡೆದು ಫಲವತ್ತಾಗಿಸಬಹುದು.
೨೨೫೭. ಬೀಳುಕೊಡು = ಕಳಿಸು, ಕಳಿಸಿಕೊಡು
ಪ್ರ : ಬೀಳುಕೊಡೋಕೆ ಊರ ಜನ ಎಲ್ಲ ಬಂದಿದ್ರು.
೨೨೫೮. ಬೀಳುಗಳೆ = ಕೀಳಾಗಿ ಕಾಣು, ಕಳಪೆ ಮಾಡು
ಪ್ರ : ಕೆಳವರ್ಗದವರನ್ನು ಬೀಳುಗಳೆಯೋದು ಮೇಲ್ವರ್ಗದವರ ಪರಂಪರಾಗತ ಚಾಳಿ
೨೨೫೯. ಬುಕ್ಕಲು ಆತುಕೊಳ್ಳು = ಮೈಕೈ ಮುಖ ಊದಿಕೊಳ್ಳು
(ಬುಕ್ಕಲು = ಕಾಮಾಲೆ ರೋಗ)
ಪ್ರ : ಬುಕ್ಕಲು ಆತ್ಕೊಂಡ ಬುರ್ರೀನ ಸೊಸೆಯಾಗಿ ತರ್ತೀರಾ?
೨೨೬೦. ಬುಗರಿ ಆಡಿಸು = ತನ್ನ ಇಷ್ಟದಂತೆ ಕುಣಿಸು
ಪ್ರ : ಹೆಂಡ್ರು ಗಂಡನ್ನ ಬುಗುರಿ ಮಾಡ್ಕೊಂಡು ಆಡಿಸ್ತಾಳೆ.
೨೨೬೧. ಬುಟ್ಟಿಗೆ ಹಾಕಿಕೊಳ್ಳು = ತನ್ನ ವಶವರ್ತಿ ಮಾಡಿಕೊಳ್ಳು
ಪ್ರ : ಹೊಟ್ಟೆ ಮುಂದಕ್ಕೆ ಬಂದಿತ್ತು, ಬೆಪ್ಪು ನನ್ಮಗನ್ನ ಬುಟ್ಟಿಗೆ ಹಾಕ್ಕೊಂಡ್ಲು.
೨೨೬೨. ಬುಡಕ್ಕೆ ನೀರಿಕ್ಕು = ದ್ರೋಹ ಬಗೆ, ಬುಡ ಮೇಲಾಗುವಂತೆ ಮಾಡು
ಪ್ರ : ಬಡಪಾಯಿ ಬೆಳೀಲಿ ಅಂತ ಸಹಾಯ ಮಾಡಿದ್ದಕ್ಕೆ, ನನ್ನ ಬುಡಕ್ಕೆ ನೀರಿಕ್ಕಿದ.
೨೨೬೩. ಬುಡುಬುಡಿಕೆ ಅಲ್ಲಾಡಿಸು = ಬೂಸಿ ಹೇಳು, ಸುಳ್ಳು ಹೇಳು
(ಬುಡುಬುಡಿಕೆ = ಸಣ್ಣ ಡಮರುಗದ ಆಕಾರದಲ್ಲಿರುವ ಶಕುನ ಹೇಳುವ ಸಾಧನ) ಬುಡುಬುಡಕರು ಎಂಬ ಜನಾಂಗ ಶಕುನ ಹೇಳುತ್ತಾ ಬದುಕು ಸಾಗಿಸುವ ನಿರ್ಗತಿಕ-ರು. ಬುಡುಬುಡಿಕೆಯನ್ನು ಕೈಯಲ್ಲಿ ಹಿಡಿದು ‘ಬುಡಬುಡ’ ಎಂದು ಅಲ್ಲಾಡಿಸುತ್ತಾ ಶಕುನ ಹೇಳುವುದರಿಂದ ಅವರಿಗೆ ಬುಡುಬುಡಿಕೆಯವರು ಎಂದೇ ಹೆಸರು ಬಂದಿದೆ. ಬೆಳಗಿನ ಜಾವ ಹಾಲಕ್ಕಿಯ ಸದ್ದು ಕೇಳಿ ಅದರ ಆಧಾರದ ಮೇಲೆ ಶಕುನ ಹೇಳುತ್ತಾರೆ. ಹಕ್ಕಿಯ ಸದ್ದನ್ನು ಅರ್ಥ ಮಾಡಿಕೊಳ್ಳುವ, ಅದರ ಭಾಷೆಯನ್ನು ಗ್ರಹಿಸುವ ಶಕ್ತಿ ಈ ಅಲೆಮಾರಿ ಜನಾಂಗಕ್ಕಿದೆ ಎಂದು ಹೇಳಲಾಗುತ್ತದೆ. ಒಬ್ಬ ಪೋಲಿಸ್ ವರಿಷ್ಠಾಧಿಕಾರಿಯ ಮನೆಯ ಮುಂದೆ ಮಸುವಿಗೇ ನಿಂತು ಬುಡುಬುಡಿಕೆ ಅಲ್ಲಾಡಿಸುತ್ತಾ ‘ಸಾಹೇಬರೇ ನಿಮಗೆ ಜೈಲುವಾಸ ಕಾದೈತಿ’ ಎಂದು ಶಕುನ ಹೇಳಿದಾಗ, ಆ ಅಧಿಕಾರಿ ಅವನನ್ನು ಅಟ್ಟಿಸಿಕೊಂಡು ಹೋದದ್ದು, ಅವನು ಬಿದ್ದಂಬೀಳಾ ಓಡಿ ಬಚಾವಾದದ್ದು, ಬುಡುಬುಡುಕೆಯವನ ಶಕುನದಂತೆ ಆ ಅಧಿಕಾರಿ ಕೆಲವೇ ದಿನಗಳಲ್ಲಿ ಜೈಲು ಸೇರಿದ್ದು ಇತ್ತೀಚಿನ ಸತ್ಯಘಟನೆ. ಆದದ್ದರಿಂದ, ಹಾಲಕ್ಕಿಯ ಸದ್ದು (ಭಾಷೆ) ಕೇಳಿ ಶಕುನ ಹೇಳುವ ಆ ಜನರಲ್ಲಿ ಒಂದು ಅತೀಂದ್ರಿಯ ಶಕ್ತಿ ಅಡಗಿದೆ ಎನ್ನಿಸುತ್ತದೆ. ಆದರೆ ಆ ವೃತ್ತಿಯವರು ಇತ್ತೀಚೆಗೆ ಕಡಮೆಯಾಗುತ್ತಿದ್ದಾರೆ, ಆ ಅಂತಃಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ.
ಪ್ರ : ಬುಡುಬುಡಿಕೆ ಅಲ್ಲಾಡಿಸಿ ಹೇಳಿಬಿಟ್ರೆ ಎಲ್ಲ ನಿಜವಾಗುತ್ತ ? ಸುಳ್ಳು ಬೂಸಿ ಇರಲ್ವ?
೨೨೬೪. ಬುತ್ತಿ ಬಿಚ್ಚು = ಊಟ ಮಾಡಲು ಅಣಿಯಾಗು
(ಬುತ್ತಿ = ಕಟ್ಟಿಕೊಂಡು ಬಂದ ಆಹಾರ)
ಪ್ರ : ಗಾದೆ – ಬೀಗರ ಮುಂದೆ ಬುತ್ತಿ ಬಿಚ್ಚೊಂದೂ ಒಂದೆ
ಸಂತೇಲಿ ಸೀರೆ ಬಿಚ್ಚೊದೂ ಒಂದೆ
೨೨೬೫. ಬುಯ ಇಕ್ಕುವ ಸ್ಯಾಸ್ತ್ರ ಮಾಡು = ಮದುಮಕ್ಕಳಿಗೆ ಅನ್ನ ಉಣ್ಣಿಸುವ ಆಚರಣೆ ಮಾಡು.
(ಬುಯ < ಬಿಯಾ < ಬೀಯ = ಅಕ್ಕಿ ಅನ್ನ ; ಸ್ಯಾಸ್ತ್ರ < ಶಾಸ್ತ್ರ = ಆಚರಣೆ)
ಪ್ರ : ಹೆಣ್ಣುಗಂಡಿಗೆ ಬುಯ ಇಕ್ಕುವ ಸ್ಯಾಸ್ತ್ರ ಮಾಡಿ, ಹೊತ್ತಾಗಿ ಹೋಯ್ತು.
೨೨೬೬. ಬುರುಡೆ ಹೊಡಿ = ಬಡಾಯಿ ಕೊಚ್ಚು
ಪ್ರ : ಅವನ ಬಾಯಿಗೆ ಬಿರಡೆ ಹಾಕಿದರೂ, ಬುರುಡೆ ಹೊಡೆಯೋದು ಬಿಡಲ್ಲ.
೨೨೬೭. ಬುರುಡೇಲಿ ಬಿಸಿನೀರು ಕಾಯಿಸು = ಸಾಯಿಸು, ತಲೆತೆಗಿ
(ಬುರುಡೆ = ತಲೆಯ ಚಿಪ್ಪು) ಸ್ನಾನ ಮಾಡಲು ಹಂಡೆಯಲ್ಲಿ ನೀರು ಕಾಯಿಸಿದಂತೆ ಮನುಷ್ಯನ ಬುರುಡೆಯಲ್ಲಿ ನೀರು ಕಾಯಿಸುತ್ತೇನೆ ಎಂಬಲ್ಲಿರುವ ದ್ವೇಷ ರೋಷ ಆತ್ಯಂತಿಕ ಅವಸ್ಥೆಯಲ್ಲಿ ಅಭಿವ್ಯಕ್ತಗೊಂಡಿದೆ.
ಪ್ರ : ಇಷ್ಟರಲ್ಲೇ ಅವನ ಬುರುಡೇಲಿ ಬಿಸಿನೀರು ಕಾಯಿಸದಿದ್ರೆ, ನನ್ನ ಹೆಸರು ಹಿಡಿದು ಕರೀಬೇಡಿ, ಕುರೋ ಕುರೋ ಅಂತ ಕರೀರಿ.
೨೨೬೮. ಬುಲ್ಲಿ ಮೇಲೆ ಕೈ ಹಾಕು = ಸ್ತ್ರೀ ಜನನೇಂದ್ರಿಯ ಮುಟ್ಟು
(ಬುಲ್ಲಿ = ಯೋನಿ; ಕೆಲವು ಸಾರಿ ಶಿಷ್ನಕ್ಕೂ ಬುಲ್ಲಿ ಎನ್ನಲಾಗುತ್ತದೆ)
ಪ್ರ : ಗಾದೆ – ಬೂವಮ್ಮ ಸೈ
ಬುಲ್ಲಿ ಮೇಲೆ ಕೈ
೨೨೬೯. ಬುಲ್ಲಿ ಹತ್ರಕೆ ಬರು = ಸಂಭೋಗಕ್ಕೆ ತವಕಿಸಿ ಬರು
(ಬುಲ್ಲಿ = ಗೊಲ್ಲಿ, ಯೋನಿ)
ಪ್ರ : ಗಾದೆ – ಅಲ್ಲಿ ಬಾ ಇಲ್ಲಿ ಬಾ ಅಂದದ್ಕೆ ಬುಲ್ಲಿ ಹತ್ರಕ್ಕೆ ಬಂದ, ಗುಲ್ಲಿಸಿಕೊಂಡು.
೨೨೭೦. ಬುಳ್ಳಗೆ ಇರು = ಬೆತ್ತಲೆಯಿರು
(ಬುಳ್ಳಗೆ = ಬೆತ್ತಲೆ, ನಗ್ನ)
ಪ್ರ : ಬುಳ್ಳಗಿರೋ ಹೆಂಗ್ಸನ್ನು ಕಂಡು ಹುಡುಗ ಹುಳ್ಳಗೆ ಆಗಿಬಿಟ್ಟ.
೨೨೭೧. ಬುಳ್ಳಿ ಕೈಯಲ್ಲಿ ಹಳ್ಳು ಮಾಡಿಸಿದಂತಾಗು = ಬೇಗ ಆಗುವುದು ನಿಧಾನವಾಗು
(ಬುಳ್ಳಿ = ಕುಳ್ಳಿ, ಬುಡ್ಡಿ, ಗಿಡ್ಡಿ; ಹಳ್ಳು = ಹರಳು; ಮಾಡಿಸು = ಮೊರದಲ್ಲಿ ಕೇರಿ ಶುದ್ಧಗೊಳಿಸು) ಹರಳನ್ನು ಮೊರದಲ್ಲಿ ಹಾಕಿಕೊಂಡು ‘ಮಾಡಿ’, ‘ಕೇರಿ’ ಕೆಳಕ್ಕೆ ‘ಕೊಚ್ಚಿ’ ದಾಗ ಹರಳುಗಳು ಚೆಲ್ಲಾಪಿಲ್ಲಿಯಾಗಿ ದೂರದೂರಕ್ಕೆ ಉರುಳಿಕೊಂಡು ಹೋಗುತ್ತವೆ. ಬುಳ್ಳಿಯ ಕೈಗಳು ಕುಳ್ಳಗಿರುವುದರಿಂದ ಆ ಹರಳುಗಳನ್ನು ಕೂತಕಡೆಯಿಂದಲೇ ಬಳಿದು ಬಾಚಿ ಮೊರಕ್ಕೆ ಹಾಕಿಕೊಂಡು ಮತ್ತೆ ಒನೆಯಲು, ಕೊಚ್ಚಲು ಆಗುವುದಿಲ್ಲ. ಅವಳು ಮೇಲೆದ್ದೇ ಚೆಲ್ಲಾಡಿರುವ ಹರಳುಗಳನ್ನು ಹೆಕ್ಕಿಕೊಂಡು ತರಬೇಕು. ಹೀಗಾಗಿ ಕೆಲಸ ಬೇಗ ಆಗುವುದು ವಿಳಂಬವಾಗುತ್ತದೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಸುದ್ದಿ ಮುಟ್ಟಿಸೋದಕ್ಕೆ ಕುಂಟನ್ನ ನೆಂಟರ ಮನೆಗೆ ಕಳಿಸಿದ್ದು, ಬುಳ್ಳಿ ಕೈಲಿ ಹಳ್ಳು ಮಾಡಿಸಿದಂತಾಗ್ತದೆ, ಗ್ಯಾರಂಟಿ.
೨೨೭೨. ಬೂದಿ ಗಂಡೀಲಿ ಹೇಲೋ ಕೆಲಸ ಮಾಡು = ಹೆಡ್ಡ ಕೆಲಸ ಮಾಡು
ಬೂದಿಗುಂಡಿಯ ಅಂಚಿನಲ್ಲಿ ಕುಳಿತು ಹೇಲತೊಡಗಿದರೆ ಹೇಲಿನ ತುಂಡು ಬೂದಿಗುಂಡಿಯೊಳಕ್ಕೆ ಬಿದ್ದ ತಕ್ಷಣ ಬೂದಿ ಹಾರಿ ಬಂದು ಅವನ ಮೈಕೈ ತಲೆಗೆ ತುಂಬಿಕೊಳ್ಳುತ್ತದೆ.
ಪ್ರ : ಬೂದಿ ಗುಂಡೀಲಿ ಹೇಲೋ ಕೆಲಸ ಮಾಡೋದು ಕೋಣಗೆಲಸವೇ ವಿನಾ ಜಾಣಗೆಲಸವಲ್ಲ.
೨೨೭೩. ಬೂದಿ ಬಡುಕನಾಗು = ಮೈಕೈ ಎಲ್ಲ ಧೂಳು ಮಾಡಿಕೊಳ್ಳು
ಪ್ರ : ಈ ಬೂದಿಬಡುಕ ಬೂದೂರ (< ಬಹದ್ದೂರ) ನನ್ನು ಕಂಡು ಆ ಬೂದಿಬಡುಕ (ಶಿವ) ನಗಬಹುದು !
೨೨೭೪. ಬೂಪ ಕೆಲಸ ಮಾಡು = ನಿರ್ವೀರ್ಯ ಕೆಲಸ ಮಾಡು
(ಬೂಪ < ಭೂಪ = ರಾಜ; ಭೂಪ > ಹೂಪ = ಷಂಡ, ಹೆಳವ)
ಪ್ರ : ನೀನು ಮಾಡಿದ ಬೂಪ ಕೆಲಸಕ್ಕೆ ಹೂಪಮರಿ ಬೋಮಾನವಾಗಿ ಕೊಡ್ತೀನಿ.
೨೨೭೫. ಬೂರುಗದ ಸೌದೆ ಒಲೆಗಿಕ್ಕಿದಂತಾಗು = ತನ್ನ ಮೇಲೇ ಕಿಡಿ ಸಿಡಿಸು, ಅವಾಂತರ ಎಬ್ಬಿಸು.
ಬೂರುಗದ ಮರದ ಸೌದೆಯನ್ನು ಮರೆತುಗಿರಿತು ಒಲೆಗಿಟ್ಟರೆ ಚಿಟಿಲ್ ಚಿಟಿಲ್ ಎಂದು ಪಟಾಕಿಗಳು ಸಿಡಿಯತೊಡಗುತ್ತವೆ. ಒಲೆ ಉರಿಸುವ ಹೆಂಗಸರ ಬಟ್ಟೆಗಳನ್ನು ತತಾತೂತು ಮಾಡುತ್ತವೆ. ಆದ್ದರಿಂದಲೇ ಆ ಮರದ ಸೌದೆಯನ್ನು ಒಲೆಗಿಕ್ಕುವುದಿಲ್ಲ. ಅಪ್ಪಿತಪ್ಪಿ ಒಂದು ಸೀಳೇನಾದರೂ ಉಳಿದ ಸೌದೆಗಳ ಜೊತೆ ಸೇರಿಕೊಂಡಿದ್ದರೆ ತತಾತೂತೇ ಗತಿ!
ಪ್ರ : ಗಾದೆ – ಕೂರಗದ ಮನೆಗೆ ಹೋದ್ರೆ ಮೂರು ಮಾತು
ಬೂರುಗದ ಸೌದೆ ಒಲೆಗಿಕ್ಕಿದ್ರೆ ನೂರು ತೂತು
೨೨೭೬. ಬೂಸಿ ಬಿಡು = ಸುಳ್ಳು ಹೇಳು
(ಬೂಸಿ < ಪೂಸಿ < ಪುಸಿ = ಸುಳ್ಳು)
ಪ್ರ : ಅವನು ಬೂಸಿ ಬಿಡೋದ್ರಿಂದ್ಲೇ ಅವನಿಗೆ ‘ಬೂಸಿಚಿಕ್ಕ’ ಅಂತ ಹೆಸರು ಬಂದಿರೋದು
೨೨೭೭. ಬೂಸ್ಟು ಹಿಡಿ = ಮುಗ್ಗಲು ಹಿಡಿ, ಹಾವಸೆ ಹಿಡಿ
ಪ್ರ : ಬೂಸ್ಟು ಹಿಡಿದ ಹಣ್ಣನ್ನಾಗಲೀ ಆಹಾರವನ್ನಾಗಲೀ ತಿನ್ನಬಾರ್ದು, ಆರೋಗ್ಯಕ್ಕೆ ಹಾನಿ.
೨೨೭೮. ಬೆಕ್ಕಿಗೆ ಜ್ವರ ಬರೋ ಮಾತಾಡು = ಅಸಂಭಾವ್ಯವನ್ನು ಸಂಭಾವ್ಯ ಎನ್ನುವಂತೆ ಹೇಳು.
ಬೆಕ್ಕಿನ ಮೈ ಯಾವಾಗಲೂ ಬೆಚ್ಚಗೆ ಇರಬೇಕು. ಅದನ್ನು ಜ್ವರ ಎಂದು ಭಾವಿಸಿದರೆ ತಪ್ಪಾಗುತ್ತದೆ ಎನ್ನುವ ಆಶಯವಿದೆ.
ಪ್ರ : ಬೆಕ್ಕಿನ ಜ್ವರ ಬರೋ ಮಾತಾಡಬೇಡ, ಕೇಳಿ ಕೇಳಿ ಸಾಕಾಗಿದೆ.
೨೨೭೯. ಬೆಕ್ಕಿನ ಹೆಜ್ಜೆಯಲ್ಲಿ ಬರು = ಸದ್ದು ಮಾಡದಂತೆ ಮೆಟ್ಟುಗಾಲಲ್ಲಿ ಬರು
ಬೆಕ್ಕಿನ ಅಂಗಾಲುಗಳಲ್ಲಿ ಮೆತ್ತನೆಯ ಮಾಂಸಲ ಭಾಗ ಇರುವುದರಿಂದ ಸದ್ದಾಗುವುದಿಲ್ಲ. ಮನುಷ್ಯರು ಸದ್ದು ಮಾಡದಂತೆ ಹೋಗಬೇಕಾದರೆ ಹಿಮ್ಮಡಿಯನ್ನು ಮೇಲೆತ್ತಿ ಮುಂದಿನ ಕಾಲುಬೆರಳುಗಳ ಮೇಲೆ ಭಾರ ಬಿಟ್ಟು ಮೆಟ್ಟುಗಾಲಲ್ಲಿ ಹೋಗಬೇಕು.
ಪ್ರ : ಏನೋ ಗುಟ್ಟು ಮಾತಾಡ್ತಾರೆ ಅಂತ ಬೆಕ್ಕಿನ ಹೆಜ್ಜೇಲಿ ಬಂದವಳೆ ಬೇತೂರಿ (< ಬಿತ್ತಾರಿ)!
೨೨೮೦. ಬೆಕ್ಕು ಅಡ್ಡ ಬರು = ಅಪಶಕುನವಾಗು
ಬೆಕ್ಕು ಅಡ್ಡ ಬಂದರೆ ಹೊರಟ ಕೆಲಸ ಆಗುವುದಿಲ್ಲ ಎಂಬುದು ಜನಪದ ನಂಬಿಕೆ
ಪ್ರ : ಬೆಕ್ಕು ಅಡ್ಡ ಬಂತು, ಪಯಣ ಮಾಡೋದು ಬೇಡ.
೨೨೮೧. ಬೆಟ್ಟ ಒರಗು = ಅಲುಗಾಡದಂಥ ಭದ್ರವಾದ ಆಧಾರ ಹೊಂದು, ರಕ್ಷಕರು ಬೆನ್ನಿಗಿರು.
ಪ್ರ : ಮೈಮೇಲೆ ಬೀಳೋ ಗೋಡೆ ಒರಗಬಾರ್ದು, ಬೆಟ್ಟ ಒರಗಬೇಕು.
೨೨೮೨. ಬೆಟ್ಟಕ್ಕೆ ಬಟ್ಟೆ ಹೊಚ್ಚಲು ಹೋಗು = ವ್ಯರ್ಥ ಪ್ರಯತ್ನದಲ್ಲಿ ತೊಡಗು
ಪ್ರ : ಗಾದೆ – ಬೆಟ್ಟಕ್ಕೆ ಬಟ್ಟೆ ಹೊಚ್ಚೋದು, ಮುಗಿಲಿಗೆ ಇಚ್ಚಣಿಗೆ ಹಾಕೋದು – ಎರಡೂ ಒಂದು.
೨೨೮೩. ಬೆಣಚುಕಲ್ಲಿನಂತಿರು = ಬೆಳ್ಳಗೆ ಗಟ್ಟಿಗೆ ಇರು.
ಪ್ರ : ನಾನು ಅಣಚಿ (ಮಾಂಗಲ್ಯ) ಕಟ್ಟಿದ ಹೆಣ್ಣು ಬೆಣಚುಕಲ್ಲಿನಂತೆ ಬೆಳ್ಳಗೂ ಇದ್ದಾಳೆ ಗಟ್ಟಿಗೂ ಇದ್ದಾಳೆ.
೨೨೮೪. ಬೆಣ್ಣಿ ತಟ್ಟು = ಸಗಣಿಯನ್ನು ಸದುಪಯೋಗ ಪಡಿಸಿಕೊಳ್ಳಿ
(ಬೆಣ್ಣಿ < ಬೆರಣಿ = ಒಣಗಿದ ಮೇಲೆ ಒಲೆಗೆ ಉರುವಲು ಮಾಡಿಕೊಳ್ಳುವಂಥದು)
ಪ್ರ : ಬೆಣ್ಣಿ ತಟ್ಟೋದು ನೋಡಿ ನಗೋರು ನಗಲಿ, ನಾವು ಕಸದಿಂದ ರಸ ತೆಗೆಯೋ ಜನ
೨೨೮೫. ಬೆಣೆ ಹೊಡಿ = ತೊಂದರೆ ಮಾಡು, ಪ್ರತಿಕೂಲ ಮಾಡು
(ಬೆಣೆ = ಆಪು, ಗೂಟ, ಬಿರಿ)
ಪ್ರ : ಏನೋ ಬಡವ ಬದುಕಿಕೊಳ್ಳಲಿ ಅಂದ್ರೆ, ನನ್ನ ತಿಕ್ಕೆ ಬೆಣೆ ಹೊಡೆಯೋಕೆ ಬಂದನಲ್ಲ.
೨೨೮೬. ಬೆಣ್ಣೇಲಿ ಕೂದಲು ತೆಗೆದಂತೆ ಮಾತಾಡು = ನಯವಾಗಿ ನವುರಾಗಿ ಮಾತಾಡು
(ಬೆಣ್ಣೆ < ವೆಣ್ಣೈ (ತ) = ನವನೀತ)
ಪ್ರ : ಗಾದೆ – ಬೆಣ್ಣೆಯಂಥ ಮಾತು
ತುಣ್ಣೆಯಂಥ ಕೆಲಸ
೨೨೮೭. ಬೆಣ್ಣೆ ಹಚ್ಚು = ಪೂಸಿ ಹೊಡಿ, ತಾಜಾ ಮಾಡು
ಪ್ರ : ಕೆಲಸ ಆಗಲಿ ಅಂತ ಅವನಿಗೆ ಬೆಣ್ಣೆ ಹಚ್ತಾ ಅವನೆ, ಆಮೇಲೆ ತುಣ್ಣೆ ತೋರಿಸ್ತಾನೆ.
೨೨೮೮. ಬೆತ್ತ ಹಿಡಿ = ಓಚಯ್ಯನ ಕೆಲಸ ಮಾಡು
ಪ್ರ : ಗಾದೆ – ಲಾಠಿ ಹಿಡಿಯೋ ಕೆಲಸಕ್ಕೆ ಹೋಗೋ ಅಂದ್ರೆ,
ಬೆತ್ತ ಹಿಡಿಯೋ ಕೆಲಸಕ್ಕೆ ಬಂದ.
೨೨೮೯. ಬೆನ್ನ ಮೇಲೆ ನೆಲ್ಲು ಕಟ್ಟು = ಗುದ್ದು, ಹೊಡಿ
ಪ್ರ : ಅವಳ ಜುಟ್ಟು ಹಿಡಿದು ರಾಗಿ ಬೀಸಿ, ಬೆನ್ನ ಮೇಲೆ ನೆಲ್ಲು ಕುಟ್ಟಿ ತವರಿಗೆ ಕಳಿಸ್ಯವನೆ, ಕಚ್ಚೆ ಹರುಕ
೨೨೯೦. ಬೆನ್ನ ಹಿಂದೆ ಬಿದ್ದವರನ್ನು ಬಿಡದಿರು = ಒಡಹುಟ್ಟಿದವರನ್ನು ದೂರ ಮಾಡದಿರು.
(ಬಿದ್ದವರು = ಹುಟ್ಟಿದವರು (ಗರ್ಭದಿಂದ ಕೆಳಕ್ಕೆ ಬಿದ್ದವರು) )
ಪ್ರ : ಬೆನ್ನ ಹಿಂದೆ ಬಿದ್ದೋರ್ನ ಬಿಟ್ಟೋರುಂಟ ? ದೇವರು ಮೆಚ್ತಾನ?
೨೨೯೧. ಬೆನ್ನಾಡಿ ಹೋಗು = ಅಟ್ಟಿಸಿಕೊಂಡು ಹೋಗು
(ಬೆನ್ನಾಡು = ಹಿಂಬಾಲಿಸು)
ಪ್ರ : ಕಳ್ಳನ ಬೆನ್ನಾಡಿ ಹೋದ್ರೂ ಬರಿಗೈಲಿ ಹಿನ್ನಡೆದು ಬರಬೇಕಾಯ್ತು.
೨೨೯೨. ಬೆನ್ನಿಗಿರು = ಸಹಾಯಕವಾಗಿರು, ಕುಮ್ಮಕ್ಕಾಗಿರು.
ಪ್ರ : ಗಾದೆ – ಬೆನ್ನಿಗಿರಬೇಕೋ
ಬೆನ್ನಿಗಿರೀಬೇಕೋ?
೨೨೯೩. ಬೆನ್ನಿಗೆ ಹಾಳೆ ಕಟ್ಕೊಳ್ಳು = ಶಿಕ್ಷೆ ಅನುಭವಿಸಲು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳು.
(ಹಾಳೆ = ಒಡಾಳೆ ಪಟ್ಟೆ, ಸುಲಿಪಟ್ಟೆ ಎಲೆ, ಅಡಿಕೆಯ ಹೊಂಬಾಳೆಗೆ ಮುಸುಕಾಗಿದ್ದ ತಿಗುಡು) ಮಲೆನಾಡು ಸಾಗರ ಹಾಗೂ ಕರಾವಳಿ ಪ್ರದೇಶದಲ್ಲಿ ತೆಂಗು, ಅಡಕೆ ತೋಟ ಅಧಿಕ. ನೀರಾವರಿ ಸೌಲಭ್ಯ ಆ ಬೆಳೆಗೆ ಸಹಕಾರಿಯಾಗಿದೆ. ಆದ್ದರಿಂದ ಆ ಪ್ರದೇಶದಲ್ಲಿ ಹಾಳೆ (ಒಡಾಳೆ ಪಟ್ಟೆ)ಯನ್ನು ತಲೆಗೆ ಟೋಪಿಯಾಗಿ, ಕೊಡೆಯಾಗಿ ಬಳಸುವಂತೆಯೇ ಬೆನ್ನಿಗೆ ರಕ್ಷಾಕವಚವಾಗಿಯೂ ಬಳಸುತ್ತಾರೆ. ಬಾಸುಂಡೆ ಬರುವ ಹಾಗೆ ಏಟು ಬೀಳುತ್ತವೆ ಎಂಬುದನ್ನು ಬೆನ್ನಿಗೆ ಹಾಳೆ ಕಟ್ಕೊಂಡು ಬಾ ಎಂಬ ನುಡಿಗಟ್ಟು ಸೂಚಿಸುತ್ತದೆ – ಬಯಲು ಸೀಮೆಯ ಕಡೆ ‘ಮೈಗೆ ಎಣ್ಣೆ ಸವರಿಕೊಂಡು ಬಾ’ ಎಂಬ ನುಡಿಗಟ್ಟು ಸೂಚಿಸುವಂತೆ. ಈ ಎರಡು ನುಡಿಗಟ್ಟುಗಳ ಮುಖೇನ ಪ್ರಾದೇಶಿಕ ಭಿನ್ನತೆಯನ್ನು, ಭೌಗೋಳಿಕ ಸೌಲಭ್ಯ ಸಮೃದ್ಧಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಬಯಲು ನಾಡಿನಲ್ಲಿ ಸಾಕಷ್ಟು ಮಳೆಯಾಗಿದಿರುವುದರಿಂದ ಅಡಿಕೆ ತೋಟ ಮಾಡಲು ಅನಾನುಕೂಲ. ಆದರೆ ಅಲ್ಪ ಸ್ವಲ್ಪ ಮಳೆಯಲ್ಲೆ ಹರಳು ಗಿಡಗಳು ಬೆಳೆಯುತ್ತವೆ. ಹರಳು ಕಾಯನ್ನು ಬಿಡಿಸಿ, ಹರಳು ಬೀಜವನ್ನು ಬೇಯಿಸಿ ಹರಳೆಣ್ಣೆಯನ್ನು ತೆಗೆದು ತಲೆಗೆ ಹಚ್ಚಿಕೊಳ್ಳುತ್ತಾರೆ ಗುಂಪು ಎಂದು. ನಿರ್ಗತಿಕರ ಮನೆಯಲ್ಲೂ ಹರಳೆಣ್ಣೆಗೆ ಅಭಾವ ಇಲ್ಲದ್ದರಿಂದ ಸಹಜವಾಗಿಯೇ ‘ಬಾಸುಂಡೆ ಉರಿ ತಾಳಲಾರದೆ ಹರಳೆಣ್ಣೆ ಹಚ್ಚಿಕೊಳ್ಳುವ ಅಪರ ಸಿದ್ಧತೆಗೆ ಬದಲಾಗಿ, ಏಟು ತಿನ್ನುವ ಮೊದಲೇ ಮೈಗೆ ಎಣ್ಣೆ ಹಚ್ಚಿಕೊಂಡು ಪೂರ್ವಸಿದ್ಧತೆ ಮಾಡಿಕೊಂಡು ಬಾ’ ಎಂಬ ನುಡಿಗಟ್ಟು ಬಯಲುನಾಡಿನಲ್ಲಿ ಚಾಲ್ತಿಗೆ ಬಂದಿದೆ. ಆದ್ದರಿಂದ ಇಂಥ ನುಡಿಗಟ್ಟುಗಳು ಪ್ರಾದೇಶಿಕ ಭಿನ್ನ ಪರಿಸರ, ಮಳೆಬೆಳೆಗೆ ಜಾಡು ತೋರಿಸುವ ಕೈಮರಗಳು ಎನ್ನಬಹುದು; ಆಯಾ ಪ್ರದೇಶದ ಮಿಡಿತ – ತುಡಿತವನ್ನು ತಿಳಿಸುವ ನಾಡಿಗಳು ಎನ್ನಬಹುದು.
ಪ್ರ : ನಾಳೆ ಬೆನ್ನಿಗೆ ಹಾಳೆ ಕಟ್ಕೊಂಡು ಬಾ ಎಂದು ಆಳಿಗೆ ಬೆದರಿಕೆ ಹಾಕಿದರು, ಗೌಡರು.
೨೨೯೪. ಬೆನ್ನಿಗೆ ಹೊಟ್ಟೆ ಅಂಟು ಹಾಕು = ಜಿಪುಣತನದಿಂದ ತಿನ್ನದೆ ಉಣ್ಣದೆ ಒಣಗಿ ಬತ್ತಿ ಹೋಗು.
ಪ್ರ : ಗಾದೆ – ಕಾಸಿಗೆ ಕಾಸು ಗಂಟು ಹಾಕಿದೋ?
ಬೆನ್ನಿಗೆ ಹೊಟ್ಟೆ ಅಂಟು ಹಾಕಿದೋ?
೨೨೯೫. ಬೆನ್ನು ಚಪ್ಪರಿಸು = ಹುರಿದುಂಬಿಸು, ಪ್ರಚೋದಿಸು
ಎತ್ತುಗಳ ಬೆನ್ನ ಮೇಲೆ ಕೈಯಾಡಿಸಿ, ಅಂಗೈಯಿಂದ ತೀಡಿ ವೇಗವಾಗಿ ಹೆಜ್ಜೆ ಹಾಕುವಂತೆ ಹುರಿದುಂಬಿಸುವ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಹಗ್ಗ ಆತು ಹಿಡಿದು ಮಪ್ಪರಿಯೋರೇ ಜಾಸ್ತಿ, ಬೆನ್ನು ಚಪ್ಪರಿಸಿ ಚುರುಕುಗೊಳಿಸೋರು ಕಡಮೆ.
೨೨೯೬. ಬೆನ್ನು ತಟ್ಟು = ಭೇಷ್ ಎಂದು ಹೊಗಳು, ಸಂತೋಷ ವ್ಯಕ್ತ ಪಡಿಸು.
ಪ್ರ : ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದದ್ದಕ್ಕೆ ಮೇಷ್ಟ್ರು ಬೆನ್ನು ತಟ್ಟಿದರು.
೨೨೯೭. ಬೆನ್ನ ಮೇಲೆ ಬಳ್ಳ ರಾಗಿ ಹರಡುವಂತಿರು = ಅಡ್ಡಗಲ ವಿಶಾಲವಾಗಿರು.
ಪ್ರ : ಎಂಥ ಮೈಕಟ್ಟು ಗಂಡಿಂದು, ಅವನ ಬೆನ್ನ ಮೇಲೆ ಒಂದು ಬಳ್ಳ ರಾಗಿ ಸಲೀಸಾಗಿ ಹರಡಬಹುದು.
೨೨೯೮. ಬೆನ್ನು ಬೀಳು = ಆಶ್ರಯ ಬಯಸಿ ಬರು, ಹಿಂಬಾಲಿಸಿ ಬರು
ಪ್ರ : ಬೆನ್ನು ಬಿದ್ದವರ ಕೈ ಬಿಡಬಾರದು
೨೨೯೯. ಬೆನ್ನು ಸವರು = ಸಾಂತ್ವನ ಮಾಡು, ಸಮಾಧಾನ ಮಾಡು
ಪ್ರ : ಬದುಕು ಹಸನಾಗಬೇಕಾದ್ರೆ, ಬೆನ್ನು ಸವರಿ ಬುದ್ಧಿ ಹೇಳೋರು ಬೇಕು.
೨೩೦೦. ಬೆನ್ನು ಹತ್ತಿದ ಚರ್ಮವಾಗು = ಜೊತೆ ಬಿಟ್ಟಿರದಿರು, ನೆರಳಿನಂತಿರು
ಪ್ರ : ಎಲ್ಲಿಗೆ ಹೊರಟರೂ ನನ್ನ ಹೆಂಡ್ತಿ ಬೆನ್ನು ಹತ್ತಿದ ಚರ್ಮವಾಗ್ತಾಳೆ.
೨೩೦೧. ಬೆಪ್ಪುತಕ್ಕಡಿ ಅಪ್ಪುಗೈಯಾಗಿ ನಿಲ್ಲು = ದೈನ್ಯದಿಂದ ಕೈಕಟ್ಟಿ ನಿಲ್ಲು
(ಬೆಪ್ಪು < ಬೆಳ್ಪು = ದಡ್ಡ; ಅಪ್ಪುಗೈ = ಎದೆಯ ಮೇಲೆ ಕಟ್ಟಿಕೊಂಡ ಕೈ)
ಪ್ರ : ತಪ್ಪು ಮಾಡದಿದ್ರೂ, ಬೆಪ್ಪು ತಕ್ಕಡಿ ಅವನ ಮುಂದೆ ಅಪ್ಪುಗೈಯಾಗಿ ನಿಂತ್ಕೊಂಡ್ನಲ್ಲ?
೨೩೦೨. ಬೆಪ್ಪು ಬೆರಗಾಗು = ಮೂಕವಿಸ್ಮಿತನಾಗು
(ಬೆರಗು = ವಿಸ್ಮಯ, ಸೋಜಿಗ)
ಪ್ರ : ಆ ಸೌಂದರ್ಯ ರಾಶಿಯನ್ನು ಕಂಡು ಬೆಪ್ಪುಬೆರಗಾಗಿ ನಿಂತ
೨೩೦೩. ಬೆಬ್ಬಳಿಸತೊಡಗು = ಹೆದರಿಕೆಯಿಂದ ತೊದಲತೊಡಗು, ತಡವರಿಸತೊಡಗು
(ಬೆಬ್ಬಳಿಸು < ಪೆಪ್ಪಳಿಸು < ಪೆಳ್ಪಳಿಸು = ಭಯಪಡು)
ಪ್ರ : ಅನ್ನ ತಿನ್ನೋಕೆ ಅಬ್ಬಳಿಸೋ ಮಗೀಗೂ, ಮಾತಾಡೋಕೆ ಬೆಬ್ಬಳಿಸೋ ಇವನಿಗೂ ಏನೂ ವ್ಯತ್ಯಾಸವಿಲ್ಲ.
೨೩೦೪. ಬೆರಕೆ ಬೀಳು = ಹಾದರಕ್ಕೆ ಹುಟ್ಟು
ಪ್ರ : ಗಾದೆ – ಬೆರಕೆ ಸೊಪ್ಪಿನೆರಸು ಚೆಂದ
ಬೆರಕೆ ಬಿದ್ದ ಮಕ್ಕಳು ಚೆಂದ
೨೩೦೫. ಬೆರಸಿಕೊಳ್ಳು = ಮಿಶ್ರಣಗೊಳ್ಳು, ರೇತಸ್ಸು ರಜಸ್ಸು ಒಂದಾಗು
ಪ್ರ : ಗಾದೆ – ಸರಸ ಬೆರಸ್ಕೊಂಡು
ಹೊಟ್ಟೆ ಮುಂದಕ್ಕೆ ಬಂತು
೨೩೦೬. ಬೆರಳಲ್ಲಿ ಎಣಿಸುವಷ್ಟಿರು = ಕೊಂಚ ಜನರು ಹಾಜರಿರು
ಪ್ರ : ಸಭೇಲಿ ಬೆರಳಲ್ಲಿ ಎಣಿಸೋವಷ್ಟು ಜನರಿದ್ದರು ಅಷ್ಟೆ.
೨೩೦೭. ಬೆರಳು ತೋರಿಸದಂತೆ ಬದುಕು = ಇನ್ನೊಬ್ಬರು ತಪ್ಪು ಎತ್ತಿ ಆಡದಂತೆ ಬಾಳು
ಪ್ರ : ಯಾರೂ ಬೆರಳು ತೋರಿಸದಂತೆ ನೇರವಾಗಿ ಬದುಕಿದ್ದೀನಿ, ನಿರುಂಬಳವಾಗಿ ಸಾಯ್ತೀನಿ.
೨೩೦೮. ಬೆರಳು ಮಡಿಸು = ತಪ್ಪಿದ್ದರೆ, ದೋಷವಿದ್ದರೆ ಲೆಕ್ಕ ಹಾಕಿ ಹೇಳು.
ಪ್ರ : ಅವನಲ್ಲಿ ಒಂದು ದೋಷ ಇದ್ರೆ, ಬೆರಳು ಮಡಿಸು, ಒಪ್ಕೋತೀನಿ.
೨೩೦೯. ಬೆಲ್ಲದ ಅಚ್ಚಿನಂತಿರು = ಸುಂದರವಾಗಿರು, ಸಮಪ್ರಮಾಣಬದ್ಧ ಮೈಕಟ್ಟಿರು.
ಪ್ರ : ಬೆಲ್ಲದ ಅಚ್ಚಿನಂತಿರೋ ಹೆಣ್ಣನ್ನು ಬೇಡ ಅಂದ್ರೆ ನಿನ್ನಂಥ ದಡ್ಡ ಬೇರೊಬ್ಬ ಇಲ್ಲ
೨೩೧೦. ಬೆಲೆ ಹೋಗು = ಮಾನ ಹೋಗು
ಪ್ರ : ಬೆಲೆ ಹೋದ ಊರ-ಲ್ಲಿ ನೆಲೆ ನಿಲ್ಲಬಾ-ರ-ದು.
೨೩೧೧. ಬೆವರು ಸುರಿಸು = ಶ್ರಮಿಸು, ದುಡಿ
ಪ್ರ : ಪ್ರತಿಯೊಬ್ಬರೂ ಬೆವರು ಸುರಿಸಿ ಉಣ್ಣುವ ಸಮಾಜ ಸೃಷ್ಟಿಯಾಗಬೇಕು.
೨೩೧೨. ಬೆವರಿಳಿಸು = ಅವಮಾನ ಮಾಡು, ತೇಜೋವಧೆ ಮಾಡು.
ಪ್ರ : ಇವತ್ತು ಅವನ ಮುಖದಲ್ಲಿ ಬೆವರಿಳಿಸಿ ಕಳಿಸಿದ್ದೀನಿ.
೨೩೧೩. ಬೆಸಲಾಗು = ಹೆರಿಗೆಯಾಗು
ಪ್ರ :ಬೆಸಲಾಗುವಾಗಲೇ ಜನ್ಮ ಕೊಟ್ಟ ತಾಯಿ ಪೈಸಲ್ಲಾದಳು
೨೩೧೪. ಬೆಸುಗೆ ಬಿಡು = ಒಡುಕುಂಟಾಗು.
ಪ್ರ : ಅಣ್ಣತಮ್ಮಂದಿರ ಮಧ್ಯೆ ಬೆಸುಗೆ ಬಿಟ್ಕೊಂಡಿದೆ.
೨೩೧೫. ಬೆಳಗೂ ಬೈಗೂ ದುಡಿ = ಅವಿಶ್ರಾಂತವಾಗಿ ಶ್ರಮಿಸು.
ಪ್ರ : ಬೆಳಗೂ ಬೈಗೂ ದುಡಿದರೂ ಕೆಳಗೂ ಮೇಗೂ ಏನೂ ಇಲ್ಲ – ಕ್ಯಾಬಿನೈ ಬರೀ ಬೆತ್ತಲೆ!
೨೩೧೬. ಬೆಳ್ಳಂದು ಹೆಚ್ಚಾಗು = ಅಹಂಕಾರ ಅಧಿಕವಾಗು
(ಬೆಳ್ಳಂದು = ಕೊಬ್ಬು, ನೆಣ, ಚರ್ಬಿ)
ಪ್ರ : ಬೆಳ್ಳಂದು ಹೆಚ್ಚಾದರೆ ಕಣ್ಣೇ ಕಾಣಲ್ಲ, ಆದ್ದರಿಂದ ಒದ್ಕೊಂಡು ಹೋಗ್ತಾರೆ.
೨೩೧೭. ಬೆಳ್ಳು ತೋರಿಸಿದರೆ ಅಂಗೈ ನುಂಗು = ತುಂಬ ಚೂಟಿಯಾಗಿರು, ಖದೀಮನಾಗಿರು
(ಬೆಳ್ಳು = ಬೆರಳು, ಅಂಗೈ = ಹಸ್ತ)
ಪ್ರ : ಆಸಾಮಿ ಬೆಳ್ಳು ತೋರಿಸಿದರೆ ಅಂಗಯ ನುಂಗ್ತಾನೆ, ಹುಷಾರಾಗಿರು.
೨೩೧೮. ಬೇಗೇಲಿ ಬೆಂದು ಒಣಗಿದ ಸೀಗೆಕಾಯಾಗು = ಕಷ್ಟದಲ್ಲಿ ಬೆಂದು ಕರುಕಲಾಗು
(ಬೇಗೆ = ಬೆಂಕಿ)
ಪ್ರ : ಬೇಗೇಲಿ ಬೆಂದು ಒಣಗಿದ ಸೀಗೆಕಾಯಾಗಿರೋದನ್ನು ನೋಡಿ ಕರುಳು ಚುರಕ್ಕಂತು.
೨೩೧೯. ಬೇರಿಂಗಡ ಮಾಡು = ಪಕ್ಷಪಾತ ಮಾಡು, ಭೇದ ಭಾವ ಮಾಡು
(ಬೇರಿಂಗಡ < ಬೇರೆ + ಇಂಗಡ < ಬೇರೆ + ವಿಂಗಡ = ಬೇರೆ ಎಂದು ವಿಂಗಡಿಸುವುದು)
ಪ್ರ : ಬೇರಿಂಗಡ ಮಾಡೋರು ತಾವೂ ಸುಖವಾಗಿರಲ್ಲ, ಬೇರೆಯವರನ್ನೂ ಸುಖವಾಗಿರಲು ಬಿಡಲ್ಲ.
೨೩೨೦. ಬೇರು ಬಿಡು = ನೆಲೆಯೂರು, ಸುಸ್ಥಿರಗೊಳ್ಳು
ಪ್ರ : ಇಲ್ಲಿಗೆ ಬಂದ ಮೇಲೆ ಚೆನ್ನಾಗಿ ಬೇರು ಬಿಟ್ಕೊಂಡ
೨೩೨೧. ಬೇರೆಯಾಗು = ಪಾಲಾಗು, ಭಾಗವಾಗು
ಪ್ರ : ಗಾದೆ – ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ
ಹುಟ್ಟಿದ ಮನೆಗೆ ‘ಬೇರೆ’ ತಪ್ಪಲ್ಲ
೨೩೨೨. ಬೇಲಿ ಹಾಕು = ಬಹಿಷ್ಕಾರ ಹಾಕು, ಒಳಗೆ ಬರದಂತೆ ಕಟ್ಟು ಪಾಡು ಮಾಡು.
ಬಿಜ್ಜಳನ ಕಾಲದಲ್ಲಿ, ಕುರುಬರು ಹಾಲು ಹರವಿಗಳ ಮೇಲೆ ಮಾಂಸ ತಂದು ಮಾರುತ್ತಾರೆಂಬ ನೆಪ ಒಡ್ಡಿ, ಕಲ್ಯಾಣಪಟ್ಟಣಕ್ಕೆ ಪ್ರವೇಶಿಸಕೂಡದೆಂದು ಕುರುಬರಿಗೆ ಬಹಿಷ್ಕಾರ ಹಾಕಿದ್ದರೆಂದೂ, ಆಗ ಕುರುಬರ ಕುಲಗುರು ರೇವಣಸಿದ್ಧೇಶ್ವರ ಹಾಗೂ ಯೋಗಿವರೇಣ್ಯ ಸಿದ್ಧರಾಮೇಶ್ವರರ ನೇತೃತ್ವದಲ್ಲಿ ಕುರುಬ ಜನಾಂಗ ಬಹಿಷ್ಕಾರವನ್ನು ತಿರಸ್ಕರಿಸಿ ಕಲ್ಯಾಣ ಪಟ್ಟಣಕ್ಕೆ ನುಗ್ಗಿದ ವಿಷಯವನ್ನು “ಸತ್ತ ಟಗರನ್ನು ಬದುಕಿಸಿ ಕಲ್ಯಾಣ ಪಟ್ಟಣಕ್ಕೆ ನುಗ್ಗಿಸಿದರು” ಎಂಬ ಪ್ರತಿಮೆಯ ಮೂಲಕ ದಾಖಲಾಗಿರುವುದನ್ನು ‘ಹಾಲು ಮತ ಪುರಾಣ’ ಹಾಗೂ ‘ಸಿದ್ಧರಾಮ ಸಾಂಗತ್ಯ’ ಎಂಬ ಕೃತಿಗಳಲ್ಲಿ ಕಾಣಬಹುದು. ಕಲ್ಯಾಣ ಪಟ್ಟಣದ ಸುತ್ತಲೂ ಬೇಲಿ ಹಾಕಿ, ಬೇಲಿಯಾಚೆಯೇ ಇರಬೇಕೆಂದು ಕಟ್ಟುಪಾಡು ಮಾಡಿದ್ದರೆಂದು ಆ ಗ್ರಂಥಗಳಿಂದ ತಿಳಿದು ಬರುತ್ತದೆ. ಆದ್ದರಿಂದ ‘ಬೇಲಿ ಹಾಕು’ ಎಂಬ ನುಡಿಗಟ್ಟಿಗೆ ಬಹಿಷ್ಕಾರ ಹಾಕು ಎಂಬ ಅರ್ಥ ಅಂದೇ ಚಾಲ್ತಿಯಲ್ಲಿತ್ತು ಎಂಬುದನ್ನು ಕಾಣುತ್ತೇವೆ. ಆದರೆ ಕಾಲಾನುಕ್ರಮದಲ್ಲಿ ತಪ್ಪು ಮಾಡಿದವರನ್ನು ಕುಲದಿಂದ ಹೊರಗೆ ಹಾಕುವ ಪದ್ಧತಿ ಎಲ್ಲ ಜನಾಂಗಗಳಲ್ಲಿ ಬಂದಂತೆ ಕುರುಬ ಜನಾಂಗದಲ್ಲೂ ಬಂತು. ಯಾರು ಶತಮಾನಗಳ ಹಿಂದೆ ‘ಬೇಲಿ ಹಾಕಿಸಿ’ ಕೊಂಡಿದ್ದರೋ ಅವರೇ ತಪ್ಪು ಮಾಡಿದವರನ್ನು ಕುಲದಿಂದ ‘ಬೇಲಿ ಹಾಕಿ’ ಹೊರಗಿಟ್ಟದ್ದು ಇತಿಹಾಸದ ವ್ಯಂಗ್ಯ. ಅಂಥವರನ್ನು ‘ಬೇಲಿ ಸಾಲಿನವರು’ (ಬಹಿಷ್ಕೃತ ವಂಶದವರು) ಎಂದು ಕಡೆಗಣ್ಣಿನಿಂದ ನೋಡುತ್ತಿದ್ದ ಸಂಪ್ರದಾಯಸ್ಥರ ವರ್ತನೆ ಅಮಾನವೀಯ. ವಿದ್ಯೆ ಬುದ್ಧಿ ಬೆಳೆದಂತೆ ಆ ಕೀಳು ಅಭಿರುಚಿ ಮಾಯವಾಗುತ್ತಿರುವುದು ಸಂತೋಷದ ಸಂಗತಿ.
ಪ್ರ : ತಪ್ಪು ಮಾಡಿದವರಿಗೆ ಕುಲದಿಂದ ಬೇಲಿ ಹಾಕುವ ಪದ್ಧತಿ ಈಗ ಉಳಿದಿಲ್ಲ.
೨೩೨೩. ಬೇಸ್ತು ಬೀಳು = ಮೋಸ ಹೋಗು, ಸೋಲುಂಟಾಗು
ಇಪ್ಪತ್ತೆಂಟು ಎಂಬ ಇಸ್ಪೀಟಾಟದಲ್ಲಿ ಬಾಜಿ ಕಟ್ಟಿದವರು ಅಷ್ಟು ಅಂಶಗಳನ್ನು (points) ಗಳಿಸದಿದ್ದರೆ, ಅದನ್ನು ಬೇಸ್ತು ಎಂದು ಹೇಳುತ್ತಾರೆ. ಆ ಬೇಸ್ತಿನ ಬಾಬ್ತು ಮರು ಹಣ ಕಟ್ಟಿ ಮುಂದಿನ ಆಟ ಗೆದ್ದರೆ ಆ ಹಣವೆಲ್ಲ ಬಾಜಿದಾರನಿಗೆ ದಕ್ಕುತ್ತದೆ; ಇಲ್ಲದಿದ್ದರೆ ಇನ್ನೊಬ್ಬರ ಪಾಲಾಗುತ್ತದೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ನಾನು ಯಾಮಾರಿದ್ದರಿಂದ ಬೇಸ್ತು ಬಿದ್ದೆ.
೨೩೨೪. ಬೇಳೆ ಬೇಯದಿರು = ಪ್ರಯತ್ನ ಸಫಲವಾಗದಿರು, ಆಟ ನಡೆಯದಿರು.
ಪ್ರ : ಅಲ್ಲಿ ಅವನ ಬೇಳೆ ಬೇಯಲಿಲ್ಲ, ಹಳೇ ಹೆಂಡ್ರು ಪಾದವೇ ಗತಿ ಅಂತ ವಾಪಸ್ಸು ಬಂದ.
೨೩೨೫. ಬೇಳ್ಯದ ಮಾತಾಡು = ಬಣ್ಣದ ಮಾತಾಡು, ಮರುಳು ಮಾಡು
(ಬೇಳ್ಯ < ಬೇಳುವೆ = ಮರುಳು, ಮಾಯೆ)
ಪ್ರ : ಬೇಳ್ಯದ ಮಾತಾಡಿ ಇಡೀ ಪಾಳ್ಯವನ್ನೇ ಹಾಳು ಮಾಡಿದಳು.
೨೩೨೬. ಬೈರಿಗೆ ಹಿಡಿ = ಕೊರಿ, ಮಾತಾಡಿ ತಲೆಚಿಟ್ಟು ಬರಿಸು
(ಬೈರಿಗೆ = ಮರಕ್ಕೆ ಹುಗಲು ಕೊರೆಯುವ ಉಪಕರಣ)
ಪ್ರ : ಅವನು ಒಂದೇ ಸಮ ಬೈರಿಗೆ ಹಿಡಿಯೋಕೆ ಸುರು ಮಾಡಿದಾಗ ಜನ ಎಲ್ಲ ಎದ್ದು ಹೋದರು.
೨೩೨೭. ಬೈಸಿಕೆ ಹೊಡಿ = ಎದ್ದು ಕೂಡುವ ಅಂಗಸಾಧನೆ ಮಾಡು
(ಬೈಸಿಕೆ = ಪಸ್ಕೆ, ಉಟ್‌ಬೈಟ್ (ಹಿಂ) )
ಪ್ರ : ಯಜಮಾನರ ಮನಸ್ಸನ್ನು ರಮಿಸಲು ಎಷ್ಟು ಬೈಸಿಕೆ ಹೊಡೆದರೂ ಪ್ರಯೋಜನವಾಗಲಿಲ್ಲ.
೨೩೨೮. ಬೊಕ್ಕಣಕ್ಕೆ ಸೇರಿಸು = ಹೊಟ್ಟೆಗೆ ತುಂಬು
(ಬೊಕ್ಕಣ < ಪೊಕ್ಕಣ (ತ) = ಚೀಲ)
ಪ್ರ : ಎಷ್ಟು ಸೇರಿಸಿದರೂ ಅವನ ಬೊಕ್ಕಣ ತುಂಬಲ್ಲ.
೨೩೨೯. ಬೊಕ್ಕೆ ಬೀಳು = ಗುಂಡಿಬೀಳು, ತೂತಾಗು
(ಬೊಕ್ಕೆ = ರಂದ್ರ, ಗುಂಡಿ)
ಪ್ರ : ಪಕ್ಕೆ ಒಳಗೆ ಬೊಕ್ಕೆ ಬಿದ್ದಿದೆ.
೨೩೩೦. ಬೊಮ್ಮಡಿ ಬಾರಿಸು = ಬೊಬ್ಬೆ ಹಾಕು
(ಬೊಮ್ಮಡಿ < ದಮ್ಮಡಿ = ಒಂದು ವಾದ್ಯ ವಿಶೇಷ)
ಪ್ರ : ಎಷ್ಟೇ ಬೊಮ್ಮಡಿ ಬಾರಿಸಿದರೂ ಅವರ ಕೈಗೆ ಒಂದು ದಮ್ಮಡಿ (ಬಿಡಿಗಾಸು) ಸಿಕ್ಕಲಿಲ್ಲ.
೨೩೩೧. ಬೋಕಿ ಹುಟ್ಟು = ಹೆಣ್ಣು ಮಗು ಜನನವಾಗು
(ಬೋಕಿ = ಒಡೆದ ಮಡಕೆಯ ಚೂರು, ಮಣ್ಣಿನ ಪಾತ್ರೆ) ಹೆಣ್ಣಿನ ಬಗ್ಗೆ ಸಮಾಜದಲ್ಲಿದ್ದ ಕೆಟ್ಟ ಧೋರಣೆ ಇದರಲ್ಲಿ ಪಡಿಮೂಡಿದೆ. ಹೆಣ್ಣು ಎಂದು ತಕ್ಷಣ ಕೋಣೆಯಲ್ಲಿ ಅಡುಗೆ ಮಾಡುವ ಸೀಮಿತ ಸ್ವಾತಂತ್ಯ್ರಕ್ಕೆ ದೂಡಿರುವುದು ಕಂಡು ಬರುತ್ತದೆ. ಗಂಡು ಹೊರಗೆ ವ್ಯವಹರಿಸಬಹುದು. ಆದರೆ ಕಂಡು ಬರುತ್ತದೆ. ಗಂಡು ಹೊರಗೆ ವ್ಯವಹರಿಸಬಹುದು. ಆದರೆ ಹೆಣ್ಣಿಗೆ ಆ ಸ್ವಾತಂತ್ಯ್ರವಿಲ್ಲ. ಅವಳದೇನಿದ್ದರೂ ಅಡುಗೆ ಮನೆಯ ಬೋಕಿ (ಮಣ್ಣಿನ ಪಾತ್ರೆ) ತೊಳೆದು, ಅಡುಗೆ ಮಾಡುವ, ಅವುಗಳೊಡನೆ ಒಡನಾಡುವ ಕೆಲಸ ಅಷ್ಟೆ ಎಂಬುದರ ಪಡಿಯಚ್ಚು ಈ ನುಡಿಗಟ್ಟು. ಆದರೆ ಕಾಲ ಬದಲಾದಂತೆ ಹೆಣ್ಣಿನ ಬಗೆಗಿನ ಧೋರಣೆ ಕೂಡ ಬದಲಾಗಿರುವುದು ಸಂತೋಷದ ವಿಷಯ.
ಪ್ರ : ಎಂಥ ಮಗು ಹುಟ್ಟಿತು ಎಂದದ್ದಕ್ಕೆ ಅಪ್ಪ ಎನ್ನಿಸಿಕೊಂಡವನು ‘ಬೋಕಿ’ ಎಂದ.
೨೩೩೨. ಬೋಚಿ ಕುಡಿಸು = ಮೊಲೆಯುಣ್ಣಿಸು
(ಬೋಚಿ < ಬಾಚಿ < ಬಾಚು = ರವಕೆ, ಕುಪ್ಪುಸ; ಅದರೊಳಗಿನ ಸ್ತನ)
ಪ್ರ : ಮಗು ಒಂದು ಬೋಚಿಗೆ ಬಾಯಿ ಹಾಕಿ ಚೂಪುತ್ತಾ ಇನ್ನೊಂದು ಬೋಚಿಯ ಮೇಲೆ ಕೈಯಾಡಿಸುತ್ತಿರುತ್ತದೆ.
೨೩೩೩. ಬೋಟಿ ಕಿತ್ತು ಕೈಗೆ ಕೊಡು = ತಕ್ಕ ಮೋಕ್ಷ ಮಾಡು, ಶಿಕ್ಷಿಸು
(ಬೋಟಿ = ಜಠರ ಕರುಳು ಇತ್ಯಾದಿ)
ಪ್ರ : ಜೋರು ಮಾಡಿದರೆ ಬೋಟಿ ಕಿತ್ತು ಕೈಗೆ ಕೊಡ್ತೀನಿ, ಹುಷಾರ್.
೨೩೩೪. ಬೋಡಿ ಎದುರಾಗು = ಅಪಶಕುನವಾಗು
(ಬೋಡಿ = ಬೋಳಿ, ಬ್ರಾಹ್ಮಣ ವಿಧವೆ) ವೇದೋಪನಿಷತ್ತುಗಳನ್ನು ಓದಿದ ಜನ ಗಂಡ ತೀರಿಕೊಂಡ ತಕ್ಷಣ ಕಿರಿಯ ವಯಸ್ಸಿನ ಹೆಂಡತಿಯ ತಲೆ ಬೋಳಿಸುವ ಪದ್ಧತಿ ಅಮಾನವೀಯ. ಗಂಡ ಸತ್ತ ಹೆಣ್ಣಿಗೆ ಮರುಮದುವೆಯಾಗುವ ಸ್ವಾತಂತ್ಯ್ರವಿಲ್ಲ ಎಂಬುದನ್ನು ಸಾದರಪಡಿಸಲು ಇಂಥ ಅಮಾನುಷ ಕ್ರಮವನ್ನು ಜಾರಿಗೆ ತಂದರು. ಆದರೆ ಓದು ಬರಹ ಬಾರದ ಹಿಂದುಳಿದ ವರ್ಗ ಹೆಣ್ಣಿಗೆ ಮರುಮದುವೆಯಾಗುವ ಅವಕಾಶ ನೀಡಿದ್ದು ಅವರ ಮಾನವೀಯತೆಯನ್ನು ಸಾರುತ್ತದೆ. ಬ್ರಾಹ್ಮಣರಲ್ಲೂ ಕರ್ಮಠರಿಗೆ ಸೊಪ್ಪು ಹಾಕದೆ, ತಲೆ ಬೋಳಿಸುವ ಅಮಾನವೀಯ ಕೃತ್ಯವನ್ನು ನಿಲ್ಲಿಸಿರುವುದು ಆರೋಗ್ಯಕರ ಬೆಳವಣಿಗೆ. ಸಾಮಾನ್ಯವಾಗಿ ಬ್ರಾಹ್ಮಣ ವಿಧವೆಯನ್ನು ಬೋಳಿ, ಬೋಡಿ ಎಂದು ಕರೆಯುವ ವಾಡಿಕೆ ಇತ್ತು. ಬೋಡಿ ಎದುರು ಬಂದರೆ ಹೊರಟ ಕೆಲಸ ಆಗುವುದಿಲ್ಲ ಎಂಬ ನಂಬಿಕೆ ಸಮಾಜದಲ್ಲಿದೆ.
ಪ್ರ : ಬೋಡಿ ಎದುರು ಬಂದ್ಲು, ಹೋಗೋದು ಬ್ಯಾಡ, ಹಿಂದಿರುಗಿ.
೨೩೩೫. ಬೋಣಿ ಮಾಡು = ಮೊದಲ ವ್ಯಾಪಾರಕ್ಕೆ ನಗದು ಹಣ ಕೊಡು
(ಬೋಣಿ < ಬೋಹಣಿ (ಹಿಂ) = ನಗದು ಹಣ)
ಪ್ರ : ಕುರುಬರು ಮೊದಲು ಬೋಣಿ ಮಾಡಿದರೆ ವ್ಯಾಪಾರ ಚೆನ್ನಾಗಾಗ್ತದೆ ಎಂಬ ನಂಬಿಕೆ ಇದೆ.
೨೩೩೬. ಬೋದನೆ ತುಂಬು = ಚಾಡಿ ಹೇಳು
(ಬೋದನೆ < ಬೋಧನೆ = ಉಪದೇಶ)
ಪ್ರ : ಅವರು ಇವರ ಮಗನಿಗೆ ಬೋಧನೆ ತುಂಬಿ, ಈ ಮನೆ ಒಡೆಯೋ ಹಂಗೆ ಮಾಡಿದರು.
೨೩೩೭. ಬೋನಿಗೆ ಬೀಳು = ಒಳಸಂಚಿಗೆ ಸಿಕ್ಕಿ ಬೀಳು
(ಬೋನು = ಪ್ರಾಣಿಗಳನ್ನು ಸೆರೆಗೊಳಿಸುವ ಉಪಕರಣ, ಸಿಡಿ)
ಪ್ರ : ಅವರು ಒಡ್ಡಿದ ಬೋನಿಗೆ ಹೆಡ್ಡನಂತೆ ಬಿದ್ದೆ.
೨೩೩೮. ಬೋಮಾನಕ್ಕೆ ಬಳಿದಿಕ್ಕು = ದೊಡ್ಡತನ ತೋರಿಸೋದಕ್ಕೆ ಎಲ್ಲವನ್ನೂ ಗೋರಿ ಬಡಿಸು
(ಬೋಮಾನ < ಬಹುಮಾನ = ಹೆಚ್ಚಗಾರಿಕೆ)
ಪ್ರ : ಅವರ ಜಾಯಮಾನ ನನಗೆ ಗೊತ್ತಿಲ್ವ, ಬರೀ ಬೋಮಾನಕ್ಕೆ ಬಳಿದಿಕ್ತಾರೆ ಅಷ್ಟೆ.
೨೩೩೯. ಬೋರಲು ಹಾಕು = ದಬ್ಬಾಕು, ತಲೆ ಕೆಳಗು ಮಾಡಿ ಹಾಕು
(ಬೋರಲು = ತಲೆಕೆಳಗು, ತಿರುಗ ಮುರುಗ)
ಪ್ರ : ಬೋರಲು ಹಾಕಿದರೆ ಬೇಗ ನೀರು ಸೋರಿಕೊಳ್ತದೆ.
೨೩೪೦. ಬೋಳು ಹಣೆಯಾಗು = ವಿಧವೆಯಾಗು
ಬ್ರಾಹ್ಮಣರು ವಿಧವೆಯ ತಲೆ ಬೋಳಿಸುವ ಪದ್ಧತಿಯನ್ನು ಜಾರಿಗೆ ತಂದಂತೆ ಶೂದ್ರರು ವಿಧವೆಯ ಕೈಬಳೆಗಳನ್ನು ಹೆಣದ ಎದೆಯ ಮೇಲೆ ನಗ್ಗುವ, ಕುಂಕುಮವನ್ನು ಅಳಿಸುವ ಪದ್ಧತಿಯನ್ನು ಜಾರಿಗೆ ತಂದರು. ಆದರೆ ಇತ್ತೀಚೆಗೆ ಗಂಡನ ಎದೆಯ ಮೇಲೆ ಕೈ ಬಳೆಗಳನ್ನು ನೆಗ್ಗುವುದಾಗಲೀ, ಹಣೆಯ ಕುಂಕುಮವನ್ನು ಅಳಿಸುವುದಾಗಲೀ ಮಾಡದ ಉದಾರ ದೃಷ್ಟಿ ಸಮಾಜದಲ್ಲಿ ವಿರಳವಾಗಿ ಕಂಡು ಬರುತ್ತಿರುವುದು ಹರ್ಷದ ವಿಷಯ. ಉದಾಹರಣೆಗೆ ಗೊಲ್ಲ ಕುರುಬರಲ್ಲಿ ಕುಂಕುಮ ಅಳಿಸುವ, ಬಳೆ ಕುಕ್ಕುವ ಆಚರಣೆ ಇಲ್ಲ. ಏಕೆಂದರೆ ಕೃಷ್ಣನೇ ನಿಜವಾದ ಪತಿ ಎಂದು ಭಾವಿಸಿರುವುದರಿಂದ ಹಾಗೆ ಮಾಡುವುದಿಲ್ಲ ಎಂಬುದು ಅವರ ಅಂಬೋಣ.
ಪ್ರ : ಬೋಳು ಹಣೆಯಿಂದಾಗಿ ಮುಖ ಬಿಕೋ ಎನ್ನಿಸುತ್ತದೆ.
೨೩೪೧. ಬಂಗಾರವಾಗು = ದುರ್ಲಭವಾಗು, ದುಬಾರಿಯಾಗು
(ಬಂಗಾರ = ಚಿನ್ನ)
ಪ್ರ : ಈಗ ತಿನ್ನೋ ಅನ್ನ, ನಿಲ್ಲೋ ನೆಲ ಬಂಗಾರವಾಗಿ ಕೂತದೆ.
೨೩೪೧. ಬಂಗು ಬಂದು ಭಂಗ ತರು = ಬಡತನದ ಕಷ್ಟದ ಕಾಲ ಬರು
(ಬಂಗು = ಮುಖದ ಚರ್ಮದ ಮೇಲೆ ಮೂಡುವ ಕಪ್ಪು ಕಲೆ, ಮಚ್ಚೆ)
ಪ್ರ : ಗಾದೆ – ಬಂಗು, ಭಂಗ
ಅಗರು ಹಗರಣ
೨೩೪೨. ಬಂಜೆ ಬೇನೆಗೆ ಕೊನೆಯಿಲ್ಲದಿರು = ಮಕ್ಕಳಿಲ್ಲದವಳ ನೋವು ಅನಂತವಾಗಿರು
ಪ್ರ : ಗಾದೆ – ಹೆರಿಗೆ ಬೇನೆ ಕೆಲಗಂಟೆಗಂಟ
ಬಂಜೆ ಬೇನೆ ಬದುಕಿನಗಂಟ.
೨೩೪೩. ಬಂಡ ಒಡಚು = ಕುರಿ ತುಪ್ಪಟದ ಗಂಟನ್ನು ಒಡೆದು ಬಿಡಿಬಿಡಿಯಾಗಿಸು
(ಬಂಡ = ಕುರಿತುಪ್ಪಟ, ಉಣ್ಣೆ; ಒಡಚು = ಬಿಡಿಬಿಡಿಯಾಗಿ ಬಿಡಿಸು) ಕುರಿ ತುಪ್ಪಟವನ್ನು ಗುಡ್ಡೆ ಹಾಕಿಕೊಂಡು, ಒಡಚುವುದಕ್ಕೆಂದೇ ಇರುವ ದೊಡ್ಡ ಬಿಲ್ಲಿನ ದಾರವನ್ನು ಎಳೆದೆಳೆದು ಗುಡ್ಡೆಯೊಳಕ್ಕೆ ಬಿಟ್ಟಾಗ ಅದು ಎಳೆಳೆಯಾಗುತ್ತದೆ. ಹೀಗೆ ಮಾಡುವುದಕ್ಕೆ ಬಂಡ ಒಡಚುವುದು ಎನ್ನುತ್ತಾರೆ.
ಪ್ರ : ಬಂಡ ಒಡಚಿದ ಮೇಲೇ ಹಂಜಿ ಮಾಡೋದು, ಹಂಜಿಯಾದ ಮೇಲೇ ನೂತು ಕುಕ್ಕಡಿ ಮಾಡುವುದು
೨೩೪೪. ಬಂಡೇಳು = ದಂಗೆ ಏಳು, ರೊಚ್ಚಿಗೇಳು
ಪ್ರ : ಅನ್ಯಾಯದ ವಿರುದ್ಧ ಜನ ಬಂಡೆದ್ದರು
೨೩೪೫. ಬಂದು ಹಿಂದುಮುಂದಾಗದಿರು = ಆಗತಾನೇ ಬಂದಿರು
ಪ್ರ : ಬಂದು ಹಿಂದು ಮುಂದಾಗಿಲ್ಲ, ಆಗಲೇ ಹೊರಡ್ತೀನಿ, ಅಂತೀಯಲ್ಲ.
೨೩೪೬. ಬಂಧಾನ ಮಾಡು = ಒತ್ತಾಯ ಮಾಡು
(ಬಂಧಾನ < ಬಂಧನ = ಒತ್ತಾಯ)
ಪ್ರ : ತುಂಬ ಬಂಧಾನ ಮಾಡಿದ್ದರಿಂದ ಬಂದೆ, ಇಲ್ಲದಿದ್ರೆ ಬರ್ತಾನೇ ಇರಲಿಲ್ಲ.
೨೩೪೭. ಬಂಬಡ ಬಜಾಯಿಸು = ಚೀರಿಕೊಳ್ಳು, ಕಿರುಚಿಕೊಳ್ಳು
(ಬಂಡಡ < ಬೊಮ್ಮಡಿ < ದಮ್ಮಡಿ = ವಾದ್ಯ ವಿಶೇಷ; ಬಜಾಯಿಸು = ಬಾರಿಸು, ನುಡಿಸು)
ಪ್ರ : ಜನ ಬಂಬಡ ಬಜಾಯಿಸಿದ್ದರಿಂದ, ಆ ಲಂಗಡ ಏನು ಮಾತಾಡಿದನೋ ದೇವರಿಗೇ ಗೊತ್ತು.
೨೩೪೮. ಬಂಬಲಾಗು = ಹೆಚ್ಚು ತೆಳುವಾಗು, ಪಾಯಸದಂತಾಗು
ಪ್ರ :ಬಂಬಲಾದರೆ ಬನಿ ಬರಲ್ಲ, ಗಟ್ಟಿಯಾಗಿ ಕಲಸು
೨೩೪೯. ಬಿಂಗಿಯಂತಾಡು = ರೇಗಾಡು, ಮುಂಗೋಪಿಯಾಗಿ ವರ್ತಿಸು
(ಬಿಂಗಿ < ಭೃಂಗಿ)
ಪ್ರ : ಹಿಂಗೆ ಬಿಂಗಿಯಂತಾಡಿದರೆ ಸಂಸಾರ ಮಾಡೋದು ಹೆಂಗೆ?
೨೩೫೦. ಬಿಂದಿಗೆ ತಂಬಿಗೆ ಅತ್ತಿಕ್ಕು = ತಿಥಿ ಮಾರ ನಕ್ಷತ್ರಗಳ ಕಗ್ಗ ಕಟ್ಟಿಡು
(ಬಿಂದಿಗೆ ತಂಬಿಗೆ < ಬಿದಿಗೆ ತದಿಗೆ = ಪಕ್ಷದ ದ್ವಿತೀಯೆ ತೃತೀಯೆ ದಿನಗಳು ಅಥವಾ ತಿಥಿಗಳು)
ಪ್ರ : ನಿನ್ನ ಬಿಂದಿಗೆ ತಂಬಿಗೆ ಅತ್ತಿಕ್ಕು, ಎದ್ದು ನಮ್ಮೊಂದಿಗೆ ಬಾ
೨೩೫೧. ಬುಂಡೆ ಮತ್ತು = ಹೆಂಡ ಕುಡಿ
(ಬುಂಡೆ = ಹೆಂಡ ತುಂಬಿದ ಸೋರೆ ಬುರುಡೆ)
ಪ್ರ : ಬುಂಡೆ ಎತ್ತಿದ, ಮಂಡೆ ನೆಲಕ್ಕೆ ಹಾಕಿ ಮಲಗಿದ.
೨೩೫೨. ಬುಂಡೆ ಬಿಡು = ಬೂಸಿ ಬಿಡು, ಸುಳ್ಳು ಹೇಳು
(ಬುಂಡೆ < ಬುರುಡೆ = ಒಣಗಿದ ನಿಸ್ಸಾರ ಕರಟ)
ಪ್ರ : ನನ್ನ ಮುಂದೆ ನೀನು ಬುಂಡೆ ಬಿಡಬೇಡ, ಚೆಂಡಾಡಿಬಿಟ್ಟೇನು ಎದ್ದು ಹೋಗು.
೨೩೫೩. ಬೆಂಕಿ ಇಕ್ಕು = ವಿರಸ ಮೂಡಿಸು, ಇಬ್ಬರ ಮಧ್ಯೆ ತಂದು ಹಾಕು
ಪ್ರ : ಬೆಂಕಿ ಇಕ್ಕಿದೋನೇ ಬೆಂಕಿ ಆರಿಸೋ ನಾಟಕ ಆಡ್ತಿದ್ದಾನೆ.
೨೩೫೪. ಬೆಂಕಿ ಬಿಸಿನೀರು ಕೊಡದಿರು = ಬಹಿಷ್ಕರಿಸು, ಹತ್ತಿರಕ್ಕೆ ಸೇರಿಸದಿರು.
(ಬೆಂಕಿ < ವೆಕ್ಕೈ -(ತ) = ಅಗ್ನಿ)
ಹಳ್ಳಿ-ಗಾ-ಡಿ-ನ-ಲ್ಲಿ ಬಡ-ಜ-ನ-ರು ಅಧಿ-ಕ. ಒಲೆ ಹಚ್ಚ-ಲು ಒಂದು ಬೆಂಕಿ ಪೊಟ್ಟ-ಣ ತರ-ಲೂ ತಾಕ-ತ್ತಿ-ಲ್ಲ-ದ-ವ-ರು ಅಕ್ಕ-ಪ-ಕ್ಕ-ದ ಶ್ರೀಮಂ-ತ-ರ ಮನೆ-ಗೆ ಹೋಗಿ, ತಮ್ಮ ಕೈಲಿ-ರು-ವ ಒಣ-ಗಿ-ದ ಹುಲ್ಲಿ-ನೊ-ಳ-ಕ್ಕೆ ಒಂದು ಬೆಂಕಿ ಕೆಂಡ ಹಾಕಿ-ಸಿ-ಕೊಂ-ಡು ಬಂದು, ತಮ್ಮ ಒಲೆ-ಯ-ಲ್ಲಿ-ಟ್ಟು ಊದಿ, ಹೊತ್ತಿ-ಕೊಂ-ಡ ಮೇಲೆ ಪುಳ್ಳೆ ಇಕ್ಕಿ ಬೆಂಕಿ ವೃದ್ಧಿ-ಸು-ವಂ-ತೆ ಮಾಡಿ-ಕೊ-ಳ್ಳು-ತ್ತಿ-ದ್ದ-ರು. ಈಗ ಒಲೆ ಹೊತ್ತಿ-ಸಿ-ಕೊ-ಳ್ಳ-ಲು ನಿರ್ಗ-ತಿ-ಕ-ರಿ-ಗೆ ಬೆಂಕಿ ಕೊಡ-ದಂ-ತೆ ನಿರ್ಬಂ-ಧ ಹೇರಿ-ಕೆ.
ಪ್ರ : ಅವರಿಗೆ ಬೆಂಕಿ ಬಿಸಿನೀರು ಕೊಡಬಾರದು ಅಂತ ಬಹಿಷ್ಕಾರ ಹಾಕಿದ್ದಾರೆ ಊರಜನ.
೨೩೫೫. ಬೆಂಡಾಗು = ಒಣಗಿ ಹಗುರವಾಗು
(ಬೆಂಡು < ವೆಂಡು(ತ) = ನಿಸ್ಸಾರ)
ಪ್ರ : ಬಿದಿರ ಬೊಡ್ಡೆ ಹಂಗಿದ್ದೋನು ಹೆಂಡ್ರು ಸತ್ತ ಮೇಲೆ ಒಣಗಿ ಬೆಂಡಾಗಿದ್ದಾನೆ.
೨೩೫೬. ಬೊಂತೆ ಬಿಸಾಡು = ಪ್ರಾಣ ಬಿಡು, ದೇಹ ತ್ಯಾಗ ಮಾಡು
(ಬೊಂತೆ = ಚಿಂದಿ ಬಟ್ಟೆಯಿಂದ ಮಾಡಿದ ಕೌದಿ, ಚಿಂದಿ ಬಟ್ಟೆಯ ಗಂಟು)
ಪ್ರ : ಸಂತೆ ಯಾಪಾರ ಮುಗಿದ ಮೇಲೆ ಬೊಂತೆ ಬಿಸಾಡಲೇಬೇಕು
೨೩೫೭. ಬೊಂಬಾಟಾಗಿರು = ಅದ್ಧೂರಿಯಾಗಿರು, ವೈಭವದಿಂದ ಕೂಡಿರು
(ಬೊಂಬಾಟ.<Bombast =ಅದ್ಧೂರಿ)
ಪ್ರ : ಆರತಕ್ಷತೆಯ ಸಮಾರಂಭ ತುಂಬಾ ಬೊಂಬಾಟಾಗಿತ್ತು.
೨೩೫೮. ಬೊಂಬೂ ಸವಾರಿ ಹೋಗು = ಚಟ್ಟದ ಮೇಲೆ ಹೋಗು, ಮರಣ ಹೊಂದು
(ಬೊಂಬು = ಬಿದಿರು, ಬಿದಿರಿನಿಂದ ಕಟ್ಟಿದ ಚಟ್ಟ) ನವರಾತ್ರಿಯಲ್ಲಿ ಬನ್ನಿಮರದ ಪೂಜೆಗೆ ಸಾಗುವ ಮೆರವಣಿಗೆಗೆ ‘ಜಂಬೂ ಸವಾರಿ’ ಎನ್ನುತ್ತಾರೆ. ಜಂಬು ಎಂದರೆ ನೇರಿಲೆ ಮರ ಎಂಬ ಅರ್ಥವುಂಟು. ಬನ್ನಿಮರಕ್ಕೆ ಸಂಸ್ಕೃತದಲ್ಲಿ ಶಮೀ ವೃಕ್ಷ ಎನ್ನುತ್ತಾರೆ. ಆ ಶಮೀ ಶಬ್ದವೇ ಜಂಬಿ ಆಗಿ ಜಂಬೂ ಆಗಿರಬಹುದು. ಜಂಬೂ ಸವಾರಿ ಆಧಾರದ ಮೇಲೆ ಬೊಂಬು ಸವಾರಿ ನುಡಿಗಟ್ಟು ಮೂಡಿದೆ.
ಪ್ರ : ಜಂಬೂ ಸವಾರಿ ಮಾಡಿದೋರು ಒಂದಲ್ಲ ಒಂದು ದಿವಸ ಬೊಂಬೂಸವಾರೀನೂ ಮಾಡಬೇಕಾಗ್ತದೆ.
ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಭ)
೨೩೫೯. ಭಣಗುಡು = ಬಿಕೋ ಎನ್ನು, ಶೂನ್ಯ ತಾಂಡವವಾಡುಪ್ರ : ಗೀಜಗನ ಗೂಡಿನಂತಿದ್ದ ಮನೆ ಭಣಗುಡ್ತಾ ಇದೆ.
೨೩೬೦. ಭದ್ರ ಮಾಡಿಕೊಳ್ಳು = ಗಟ್ಟಿ ಮಾಡಿಕೊಳ್ಳು, ಗ್ಯಾರಂಟಿ ಮಾಡಿಕೊಳ್ಳು
ಪ್ರ : ಎಲ್ಲ ಭದ್ರ ಮಾಡಿಕೊಳ್ಳದೆ ಮುಂದಕ್ಕೆ ಹೆಜ್ಜೆ ಇಡಬೇಡ.
೨೩೬೧. ಭಾರ ಹೊರಿಸು = ಜವಾಬ್ದಾರಿ ವಹಿಸು, ಹೊಣೆಗಾರಿಕೆ ವಹಿಸು
ಪ್ರ : ಹಲವು ಭಾರಗಳ ಜೊತೆಗೆ ಇದರ ಭಾರವನ್ನೂ ಹೊರಿಸಿದರೆ, ನಾನು ನಿಭಾಯಿಸೋದು ಹೇಗೆ?
೨೩೬೨. ಭಾಷೆ ಕೊಡು = ಮಾತು ಕೊಡು, ಕೈ ಮೇಲೆ ಕೈ ಹಾಕಿ ಆಣೆ ಮಾಡಿ ಹೇಳು
ಪ್ರ : ಭಾಷೆ ಕೊಟ್ಟ ಮೇಲೆ ತಪ್ಪದೆ ನಡೆಸಬೇಕು.
೨೩೬೩. ಭಾಷೆಗೆ ತಪ್ಪು = ಮಾತಿಗೆ ತಪ್ಪು, ವಚನಭ್ರಷ್ಟನಾಗು
ಪ್ರ : ಭಾಷೆಗೆ ತಪ್ಪಿದೋನಿಗೆ ಕಿಲುಬುಕಾಸಿನ ಕಿಮ್ಮತ್ತು ಸಿಗೋದಿಲ್ಲ.
೨೩೬೪. ಭುಗ್ ಎನ್ನು = ಉರಿ ಏಳು, ಬೆಂಕಿ ಹೊತ್ತಿಕೊಳ್ಳು
ಪ್ರ : ಭುಗ್ ಎಂದಾಗ ಎದೆ ಧಗ್ ಅಂತು
೨೩೬೫. ಭೂಗತ ಮಾಡು = ನಾಶ ಮಾಡು, ನೆಲಸಮ ಮಾಡು
ಪ್ರ : ಸ್ವಾಗತ ಮಾಡೋಕೆ ಬಂದೋನ್ನ ಭೂಗತ ಮಾಡಿದ ಬದ್ಮಾಷ್
೨೩೬೬. ಭೂತ ಬಿಡಿಸು = ದೆವ್ವ ಬಿಡಿಸು, ಚೆನ್ನಾಗಿ ಹೊಡಿ
(ಭೂತ = ದೆವ್ವ) ದೆವ್ವ ಹಿಡಿದವರಿಗೆ ಹುಣಿಸೆ ಬರಚಲಿನಿಂದ ಚೆನ್ನಾಗಿ ಹೊಡೆಯುವ ಪದ್ಧತಿ ಇದೆ. ಹಾಗೆ ಹೊಡೆದರೆ ದೆವ್ವ ಬಿಡುತ್ತದೆ ಎಂಬ ಕುರುಡು ನಂಬಿಕೆ ಈ ನುಡಿಗಟ್ಟಿಗೆ ಮೂಲ.
ಪ್ರ : ನನ್ನ ವಿರುದ್ಧ ಸಾಕ್ಷಿ ಹೇಳಿದರೆ, ಅವನಿಗೆ ಭೂತ ಬಿಡಿಸ್ತೀನಿ.
೨೩೬೭. ಭೂಮಿಗೆ ಇಳಿದು ಹೋಗು = ಅವಮಾನದಿಂದ ಕುಗ್ಗಿ ಹೋಗು, ಮಾರುದ್ದ ದೇಹ ಗೇಣುದ್ದವಾಗು.
ರಾಮನಿಂದ ವರ್ಜಿತಳಾದ ಸೀತೆಗೆ ಕೊನೆಯಲ್ಲಿ ಭೂಮಿ ಬಾಯಿ ತೆರೆಯಿತೆಂದೂ, ಸೀತೆ ಅದರಲ್ಲಿ ಐಕ್ಯಳಾದಳೆಂದೂ ಕತೆ. ಬಹುಶಃ ಈ ನುಡಿಗಟ್ಟಿಗೆ ಅದು ಮೂಲ.
ಪ್ರ : ನನ್ನ ತಲೆ ಮೇಲೆ ಇಲ್ಲಸಲ್ಲದ ಗೂಬೆ ಕೂರಿಸಿದಾಗ, ಭೂಮಿಗೆ ಇಳಿದು ಹೋದೆ.
೨೩೬೮. ಭೂಮಿ ತೂಕದ ಮನುಷ್ಯವಾಗಿರು = ಗಂಭೀರ ವ್ಯಕ್ತಿಯಾಗಿರು, ಸಹನಶೀಲನಾಗಿರು
(ತೂಕ = ಗೌರವ, ಗುರುತ್ವಶಕ್ತಿ) ಭೂಮಿ ಒಳಿತನ್ನು ಕೆಡುಕನ್ನು ಸಮಾನವಾಗಿ ಹೊತ್ತು ತುಂಬಿದ ತೊರೆಯಂತೆ ಸಾಗುತ್ತದೆ. ಅದರ ಧಾರಣಾಶಕ್ತಿ, ಸಹನಾ ಶಕ್ತಿ ಅಪ್ರತಿಮ.
ಪ್ರ : ಈ ಗೊಂಜಾಯಿ, ಆ ಭೂಮಿತೂಕದ ಮನುಷ್ಯನ ಗುಂಜಿಗೂ ಸಮನಲ್ಲ.
೨೯೬೯. ಭೂಮಿಗೆ ಭಾರವಾಗಿ ಕೂಳಿಗೆ ದಂಡವಾಗಿ ಬದುಕು = ವ್ಯರ್ಥವಾಗಿ ಜೀವಿಸು
ಪ್ರ : ಭೂಮಿಗೆ ಭಾರವಾಗಿ ಕೂಳಿಗೆ ದಂಡವಾಗಿ ಬದುಕೋದ್ಕಿಂತ ಸಾಯೋದು ಲೇಸು
೨೩೭೦. ಭೋಗಾದಿ ಹಾಕು = ಒತ್ತೆ ಇಡು, ಇನ್ನೊಬ್ಬರಿಗೆ ಭೋಗ್ಯ ಮಾಡು
(ಭೋಗಾದಿ = ಒತ್ತೆ, ಅಡವು)
ಪ್ರ : ಮನೆ ಕಟ್ಟಿಸೋದಕ್ಕೆ ಊರಿನ ಜಮೀನು ಭೋಗಾದಿ ಹಾಕಿ ಸಾಲ ತಗೊಂಡಿದ್ದೇನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ