ನನ್ನ ಪುಟಗಳು

13 ಅಕ್ಟೋಬರ್ 2015

೩೫) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಲ-ವ)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಲ)
೨೭೬೯. ಲಕಲಕಿಸು = ಹೊಳೆ, ಪ್ರಕಾಶಿಸು
ಪ್ರ : ಲಕಲಕಿಸುವ ಎಳೆ ಹೆಂಡ್ರಿಗೆ ಲಟಕಾಪಟಕಾ ಜಟಕಾ ಬಂಡಿಯ ಮುದಿಗಂಡ
೨೭೭೦. ಲಗತ್ತಾಗು = ಹೊಂದಿಕೆಯಾಗು, ಸರಿಜೋಡಿಯಾಗು
ಪ್ರ : ಅದಕ್ಕೂ ಇದಕ್ಕೂ ಲಗತ್ತಾಗಲ್ಲ
೨೭೭೧. ಲಗಡದಂತೆರಗು = ಮಾಯದಲ್ಲಿ ಮೇಲೆ ಬೀಳು
(ಲಗೆಡ = ಗಿಡುಗ, ಮೊಲದ ಮೇಲೆ ಎರಗಿ ಸಾಯಿಸುವುದುಂಟು)
ಪ್ರ : ಗಾದೆ – ಊರಿಗಾಗದ ಗೌಡ
ಮೇಲೆರಗುವ ಲಗಡ
೨೭೭೨. ಲಗಾಮು ಹಾಕು = ಹತೋಟಿಯಲ್ಲಿಡು
ಪ್ರ : ಗಾದೆ – ಅಂಕೆಯಿಲ್ಲದ ಚದುರೆ
ಲಗಾಮು ಇಲ್ಲದ ಕುದುರೆ
೨೭೭೩. ಲಗು ಲಗು ಮಾಡು = ಬೇಗ ಬೇಗ ಮಾಡು
ಪ್ರ : ಉಣ್ಣೋಕೆ ಮಾತ್ರ ಲಾವ್ ಲಾವ್ ಅಂತೀರಿ, ಲಗು ಲಗು ಕೆಲಸ ಮಾಡಿದಿದ್ರೆ ಹೆಂಗೆ?
೨೭೭೪. ಲಗ್ಗೆ ಹಾಕು = ಮುತ್ತಿಗೆ ಹಾಕು
ಪ್ರ : ಪೆಗ್ಗೆ ಹುಡುಗರೆಲ್ಲಾ ಸೇರಿಕೊಂಡು ಕಛೇರಿಗೆ ಲಗ್ಗೆ ಹಾಕಿದರು.
೨೭೭೫. ಲಜ್ಜೆ ಎಬ್ಬಿಸು = ಅಸ್ತವ್ಯಸ್ತಗೊಳಿಸು, ಅಧ್ವಾನ ಮಾಡು
(ಲಜ್ಜೆ < ರೊಜ್ಜೆ < ರೊಚ್ಚೆ = ಕೆಸರು, ರಾಡಿ)
ಪ್ರ : ಮಕ್ಕಳು ಮನೇನ ಲಜ್ಜೆ ಎಬ್ಬಿಸಿಬಿಟ್ಟವು.
೨೭೭೬. ಲಜ್ಜೆಗೆಡು = ನಾಚಿಕೆ ಸಂಕೋಚ ಬಿಟ್ಟು ಸ್ವೇಚ್ಛಾಚಾರಿಯಾಗು
ಪ್ರ : ಲಜ್ಜೆಗೆಟ್ಟೋಳ ಜೊತೆ ಗೆಜ್ಜೆ ಕಟ್ಕೊಂಡು ಹೆಜ್ಜೆ ಹಾಕೋಕೆ ಮನಸ್ಸು ಹೆಂಗೆ ಬಂತು?
೨೭೭೭. ಲಟ್ಟಣಿಗೇಲಿ ಗಟ್ಟಿಸು = ಸಂಭೋಗಿಸು
(ಲಟ್ಟಣಿಗೆ = ಹಪ್ಪಳ ಅರೆಯುವ ರತ್ತೋಡು; ಗಟ್ಟಿಸು = ತಾಡಿಸು, ಜಡಿ)
ಪ್ರ : ಜರಿಯುವ ಹಾಡು –
(ಗಂಡಿನ ಕಡೆಯವರ ಸೊಲ್ಲು) ‘ಅತ್ತೆಮ್ಮ ಅಳಿಯನಿಗೆ ಮೊಳದುದ್ದ ಲಟ್ಟಣಿಗೆ’ (ಹೆಣ್ಣಿನ ಕಡೆಯವರ ಸೊಲ್ಲು) ‘ಅಷ್ಟೆ ಸಾಕಮ್ಮ ಮಗಳೀಗೆ’
೨೭೭೮. ಲಡ್ಡು ಬೀಳು = ಟೊಳ್ಳಾಗು, ಕೆಲಸಕ್ಕೆ ಬಾರದಿರು
(ಲಡ್ಡು = ಜೊಳ್ಳು, ಟೊಳ್ಳು)
ಪ್ರ : ಗಾದೆ – ಲಡ್ಡು ಬಿದ್ದ ಮರ ತೊಲೆಗಾಗಲ್ಲ
ಗೊಡ್ಡು ಬಿದ್ದ ದನ ಕರಾವಿಗಾಗಲ್ಲ
೨೭೭೯. ಲತ್ತೆ ಹೊಡಿ = ನಷ್ಟವಾಗು, ಏಟು ಬೀಳು
ಪ್ರ : ಬೆಲ್ಲದ ವ್ಯಾಪಾರದಲ್ಲಿ ಲತ್ತೆ ಹೊಡೆದು ಮೆತ್ತಗಾಗಿ ಕುಂತವನೆ.
೨೭೮೦. ಲವಾಜಮೆ ಸರಿದೂಗಿಸು = ಖರ್ಚುವೆಚ್ಚ ಹೊಂದಿಸು
ಪ್ರ : ಸಂಸಾರದ ಲವಾಜಮೆ ಲಾಜಾದಲ್ಲಿ ಸರಿದೂಗಿಸೋಕಾಗಲ್ಲ.
೨೭೮೧. ಲಲ್ಲೆ ಬಾರಿಸು = ಗುಲ್ಲೆಬ್ಬಿಸು, ಗಲಾಟೆ ಮಾಡು
ಪ್ರ : ಇದೇನು ಮನೇನೋ ಹೆಂಡದಂಗಡೀನೋ ? ಲಜ್ಜೆಗೆಟ್ಟೋರಂಗೆ ಲಲ್ಲೆ ಬಾರಿಸ್ತಾ ಇದ್ದೀರಿ.
೨೭೮೨. ಲಲ್ಲೆ ಹೊಡಿ = ಚಕ್ಕಂದವಾಡು
(ಲಲ್ಲೆ = ವಿನೋದ, ಸರಸ)
ಪ್ರ : ಇಬ್ಬರೂ ಕುಂತಗೊಂಡು ಲಲ್ಲೆ ಹೊಡೆದದ್ದು ಮುಗೀತಾ ಎಂದು ಗಂಡ ಕಣ್ಣು ಮೆಡ್ಡರಿಸಿದ.
೨೭೮೩. ಲಾಗ ಹಾಕು = ಕಸರತ್ತು ಮಾಡು
(ಲಾಗ = ಪಲ್ಟಿ)
ಪ್ರ : ಅವನು ತಿಪ್ಪರಲಾಗ ಹಾಕಿದ್ರೂ ನಾನು ಕೊಡಲ್ಲ ಅಂದ್ಮೇಲೆ ಕೊಡಲ್ಲ.
೨೭೮೪. ಲಾಗೋಡು ಬೀಳು = ಖರ್ಚು ಬೀಳು
ಪ್ರ : ಮದುವೆ ಲಾಗೋಡು ಕಟ್ಟಿಕೊಡೋರು ಯಾರು ?
೨೭೮೫. ಲಾಚಾರಾಗು = ಬಡವಾಗು, ಕೃಶವಾಗು
ಪ್ರ : ಅವನು ಲಾಚಾರಾಗಿರೋದ್ನ ನೋಡಿ ಹೊಟ್ಟೆ ಉರಿದು ಗುಡ್ಡೆ ಬಿದ್ದು ಹೋಯ್ತು.
೨೭೮೬. ಲಾಜಾದಲ್ಲಿ ಬರು = ಅರಕ್ಷಣದಲ್ಲಿ ಬರು
(ಲಾಜಾ < ಲಹಜ್ (ಉ) = ಕಣ್ಣುಮಿಟುಕು)
ಪ್ರ : ಕಳಿಸಿದ್ದೇ ತಡ, ಒಂದು ಲಾಜಾದಲ್ಲಿ ಬಂದುಬಿಟ್ಟ.
೨೭೮೭. ಲಾಟಿ ಹೊಡಿ = ದಿವಾಳಿಯಾಗು, ತಿರುಪೆ ಎತ್ತು.
(ಲಾಟರಿ < Loiter = ಅಲೆದಾಡು)
ಪ್ರ : ಅಪ್ಪ ಸಂಪಾದಿಸಿದ್ದನ್ನೆಲ್ಲ ಕಳೆದು ಈಗ ಲಾಟರಿ ಹೊಡಿತಾ ಇದ್ದಾನೆ.
೨೭೮೮. ಲಾಟು ಹಾಕು = ಗುಡ್ಡೆ ಹಾಕು
(ಲಾಟು < Lot = ರಾಶಿ)
ಪ್ರ : ದುಡ್ಡು ಅನ್ನೋದನ್ನ ಮೂಟೆ ಕಟ್ಟಿ ಲಾಟು ಹಾಕಿಬಿಟ್ಟವನೆ.
೨೭೮೯. ಲಾಡಿ = ಬಿಚ್ಚು = ಸಂಭೋಗಕ್ಕಿಳಿ
(ಲಾಡಿ = ಸೊಂಟಕ್ಕೆ ಕಟ್ಟಿಕೊಳ್ಳಲು ಚಡ್ಡಿ ಪೈಜಾಮ ಲಂಗಗಳಿಗೆ ಹಾಕಿರುವ ದಾರ, ಸಣ್ಣ ಹುರಿ)
ಪ್ರ : ಹೆತ್ತ ತಾಯಿಗೆ ಲಾಡಿ ಬಿಚ್ಚೋ ಹಲಾಲಕೋರನ್ನ ಎಂದಾದರೂ ನಂಬಿಗಿಂಬೀಯ
೨೭೯೦. ಲಾತ ಬೀಳು = ಏಟು ಬೀಳು
(ಲಾತ < ಲತ್ತೆ < ಲತ್ತ < ಲಠ್ಠ = ದೊಣ್ಣೆ ಏಟು)
ಪ್ರ : ಲಾತ ಬಿದ್ದು ಹೇತ್ಕೊಂಡರೂ ಕ್ಯಾತೆ ತೆಗೆಯೋದ್ನ ಬಿಡೋದಿಲ್ಲ.
೨೭೯೧. ಲಾಯಕ್ಕಾಗಿರು = ಯೋಗ್ಯವಾಗಿರು
ಪ್ರ : ಲಾಯಕ್ಕಾಗಿರೋ ಸಂಬಂಧ ಸಿಕ್ಕಿದರೆ ಈ ಸಾರಿ ಮಗಳ ಮದುವೆ ಮಾಡಿಬಿಡ್ತೀನಿ.
೨೭೯೨. ಲಾವ್ ಲಾವ್ ಎನ್ನು = ಹೊಟ್ಟೆ ಹಸಿವಿನಿಂದ ಕೊಡುಕೊಡು ಎಂದು ಆಲ್ವರಿ
(ಲಾವ್ = ತೆಗೆದುಕೊಂಡು ಬರು, ಕೊಡು)
ಪ್ರ : ಹೊಟ್ಟೆಗಿಲ್ಲದೆ ಮಕ್ಕಳು ಲಾವ್ ಲಾವ್ ಅಂತವೆ.
೨೭೯೩. ಲೆಕ್ಕ ಚುಕ್ತ ಮಾಡು = ಮರಣ ಹೊಂದು
ಪ್ರ : ಅವನು ಈ ಲೋಕದ ಲೆಕ್ಕ ಚುಕ್ತಾ ಮಾಡಿ ಹೊರಟ.
೨೭೯೪. ಲೆಕ್ಕಾಚಾರವಾಗಿರು = ನೇರವಾಗಿರು, ಸರಿಯಾಗಿರು
ಪ್ರ : ಲೆಕ್ಕಾಚಾರವಾಗಿ ಬಾಳದಿದ್ರೆ ಜನ ಲೆಕ್ಕಕ್ಕೇ ಇಟ್ಕೊಳ್ಳಲ್ಲ.
೨೭೯೫. ಲೆಕ್ಕಾಚಾರ ತಲೆಕೆಳಗಾಗು = ನಿರೀಕ್ಷೆ ಸುಳ್ಳಾಗು, ಎಣಿಕೆ ತಪ್ಪಾಗು
ಪ್ರ : ನಮ್ಮ ಲೆಕ್ಕಾಚಾರ ತಲೆಕೆಳಗಾಯ್ತು, ನಾವು ಅಂದ್ಕೊಂಡಿದ್ದೇ ಒಂದು, ಆದದ್ದೇ ಒಂದು.
೨೭೯೬. ಲೆತ್ತ ಆಡು = ಪಗಡೆಯಾಡು, ಜೂಜಾಡು
(ಲೆತ್ತ = ಜೂಜು, ಪಗಡೆ)
ಪ್ರ : ಲೆತ್ತ ಆಡೋರಿಗೆ ಲತ್ತೆ ಗ್ಯಾರಂಟಿ.
೨೭೯೭. ಲೇಣೆ ದೇಣೆ ಮಾಡು = ಲೇವಾದೇವಿ ಮಾಡು
(ಲೇಣೆ ದೇಣೆ < ಲೇನಾ + ದೇನಾ = ಬಡ್ಡಿ ತೆಗೆದುಕೊಂಡು ಸಾಲ ಕೊಡು)
ಪ್ರ : ಗಾದೆ – ಲೇಣೆ ದೇಣೆ ಗಂಡಂದು
ಮಜ ಉಡಾಣೆ ಹೆಂಡ್ರದ್ದು
೨೭೯೮. ಲೇವಾದೇವಿ ಮಾಡು = ಬಡ್ಡಿಗೆ ಸಾಲ ಕೊಡುವ ಹಾಗೂ ವಸೂಲ್ ಮಾಡುವ ದಂಧೆ ಮಾಡು
(ಲೇವಾದೇವಿ < ಲೇವ್ + ದೇವ್ = ಬಡ್ಡಿ ತೆಗೆದುಕೊಂಡು ಸಾಲ ಕೊಡುವುದು)
ಪ್ರ : ಲೇವಾದೇವಿ ಮಾಡಿ ಲಕ್ಷಾದೀಶ ಆಗಿದ್ದಾನೆ.
೨೭೯೯. ಲೊಕ್ಕರಿ = ಅಲ್ಲಗಳೆ, ಅಸಮಾಧಾನ ಸೂಚಿಸು
(ಲೊಕ್ಕರಿ = ನಾಲಗೆ ತುದಿಯನ್ನು ಅಂಗಳಕ್ಕೆ ಒತ್ತರಿಸಿ ಒಂದು ಬಗೆಯ ಸದ್ದು ಮಾಡುವುದು)
ಪ್ರ : ಹೇಳಿದ್ದಕ್ಕೆ ಲೊಕ್ಕರಿದು ಮುಸುಡಿ ತಿರುವಿದಳು.
೨೮೦೦. ಲೊಚ್ಗರಿ = ಲೊಚ ಲೊಚ ಎಂದು ತಿನ್ನುವಾಗ ಉಣ್ಣುವಾಗ ಸದ್ದು ಮಾಡು
ಪ್ರ : ಲೊಚ ಲೊಚ ಅಂತ ನಾಯಿ ನೀರು ಕುಡೀತದಲ್ಲ, ಹಂಗೆ ಆಗ್ಲಿಂದ ಲೊಚಗುಟ್ತಾ ಇದ್ದೀಯ, ಲೊಚ್ಗರಿಯದಂಗೆ ಉಣ್ಣೋಕಾಗಲ್ವೇನು?
೨೮೦೧. ಲೊಟಕೆ ಹೊಡಿ = ಬಾಯಿ ಚಪ್ಪರಿಸು, ಇನ್ನಷ್ಟು ಬೇಕು ಎನ್ನುವ ಸೂಚನೆ ನೀಡು
ಪ್ರ : ಯಾರು ಲೊಟಕೆ ಹೊಡೆದರೂ, ಪಾತ್ರೇಲಿ ಪಾಯಸ ಒಂದು ತೊಟ್ಟೂ ಇಲ್ಲ.
೨೮೦೨. ಲೊಟ್ಟಗಾಯಿ ತೋರಿಸು = ತುಣ್ಣೆ ತೋರಿಸು, ಮೊಸ ಮಾಡು
(ಲೊಟ್ಟ < ಲಠ್ಠ = ದೊಣ್ಣೆ ; ಲೊಟ್ಟಗಾಯಿ = ಶಿಷ್ನ)
ಪ್ರ : ಕೊಟ್ಟ ಸಾಲ ಕೇಳಿದ್ದಕ್ಕೆ ಲೊಟ್ಟಗಾಯಿ ತೋರಿಸಿದ
೨೮೦೩. ಲೊದಲೆ ಕಿತ್ತುಕೊಳ್ಳು = ಜೊಲ್ಲು ಸುರಿಯತೊಡಗು, ಹೆಚ್ಚು ಸುಸ್ತಾಗು
(ಲೊದಲೆ = ಜೊಲ್ಲು)
ಪ್ರ : ಓಡಿ ಓಡಿ ಬಾಯಲ್ಲಿ ಲೊದಲೆ ಕಿತ್ತುಕೊಳ್ಳು
೨೮೦೪. ಲೋಟೀಸ್ ಕೊಡು = ತಿಳುವಳಿಕೆ ಪತ್ರ ನೀಡು, ಎಚ್ಚರಿಕೆ ನೀಡು
(ಲೋಟೀಸ್ < Notice = ತಿಳುವಳಿಕೆ ಪತ್ರ)
ಪ್ರ : ಲೋಟೀಸ್ ಕೊಟ್ಟ ಮೇಲೆ ನೇಟಾಗಿ ಏನಾದರೂ ಹೇಳಬಹುದು.
೨೮೦೫. ಲೋವೆ ಕಲ್ಲಿನ ಸೇವೆ ಮಾಡು = ಕುಂತ ಕಡೆಯೇ ಕೈಲಾದ ಸಹಾಯ ಮಾಡು
(ಲೋವೆ = ಮಾಳಿಗೆ ಮನೆಯ ಗೋಡೆಯ ಮೇಲೆ ನೀರು ಸುರಿಯದಂತೆ ಜಂತೆಯ ಮಟ್ಟದಲ್ಲಿ ಸುತ್ತಲೂ ಗೋಡೆಗೆ ಹಾಕುವ ಚಾಚು ಚಪ್ಪಡಿಗಲ್ಲು)
ಪ್ರ : ಗಾದೆ – ಕೋವೆ ಇಲ್ಲದ ಕೆರೆಯಿಲ್ಲ
ಲೋವೆ ಇಲ್ಲದ ಮನೆಯಿಲ್ಲ
೨೮೦೬. ಲೋಲಾಯಿ ಬೀಳಿಸು = ತೊಂದರೆ ಪಡಿಸು
(ಲೋಲಾಯಿ (< ಲುಲಾ-ಯಿ = ಎಮ್ಮೆ) = ಹಲ್ಲಂಡೆ, ಕಷ್ಟ)
ಪ್ರ : ಬಾ ಬಾ ಅಂತ ಬಲವಂತ ಮಾಡಿ ಕರ್ಕೋಂಡು ಹೋಗಿ ಇಲ್ಲದ ಲೋಲಾಯಿ ಬೀಳಿಸಿಬಿಟ್ಟ.
೨೮೦೭. ಲಂಗು ಲಗಾಮಿಲ್ಲದಿರು = ಅಂಕೆ ಇಲ್ಲದಿರು, ಹಗ್ಗ ಮೂಗುದಾರ ಇಲ್ಲದಿರು
ಪ್ರ : ಲಂಗುಲಗಾಮಿರದ ಕುದುರೇನೂ ಒಂದೆ, ಚದುರೇನೂ ಒಂದೆ.

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ವ)
೨೮೦೮. ವಟವಟಗುಟ್ಟು = ಒಂದೇ ಸಮ ಮಾತಾಡು
(ವಟವಟ = ಕಪ್ಪೆಗಳ ಸದ್ದು)
ಪ್ರ : ರಾತ್ರೆಲ್ಲಾ ವಟವಟಗುಟ್ಟಿದ್ದೇ, ಅದೇನು ಮಾತಾಡಿದರೋ ದೇವರಿಗೇ ಗೊತ್ತು.
೨೮೦೯. ವಟ್ಟವಾಗು = ಮೂಲವಾಗು, ದಂಡ ತೆರು
(ವಟ್ಟ = ದಳ್ಳಾಳಿಗಳು ಮುರಿದುಕೊಳ್ಲುವ ಹಣ)
ಪ್ರ : ನಾನು ಅಲ್ಲಿ ಹೋಗಿದ್ದು ನನಗೇ ವಟ್ಟವಾಯ್ತು, ಇಲ್ಲೇ ಇದ್ದಿದ್ರೆ ಚೆನ್ನಾಗಿತ್ತು.
೨೮೧೦. ವಟಾವಡೆ = ದೌಡೋಡು
(ವಟಾವಡೆ < ಓಡ ಓಡು = ಕಂಬಿ ಕೀಳು)
ಪ್ರ : ಪೋಲಿಸ್ ಪೇದೆ ಕಂಡದ್ದೇ ತಡ ಅಲ್ಲಿಂದ ವಟಾವಡೆದ.
೨೮೧೧. ವನವಾಸ ಬೀಳು = ಕಷ್ಟ ಬೀಳು, ತೊಂದರೆ ಅನುಭವಿಸು.
(ವನವಾಸ = ಕಾಡಿನ ವಾಸ, ಕಷ್ಟಪರಂಪರೆ) ನಳಚಕ್ರವರ್ತಿ, ರಾಮ, ಪಾಂಡವರು ಅನುಭವಿಸಿದ ವನವಾಸದ ಕಥ ಈ ನುಡಿಗಟ್ಟಿಗೆ ಮೂಲ. ಏಕೆಂದರೆ ನಳಚರಿತ್ರೆ, ರಾಮಾಯಣ, ಮಹಾಭಾರತ ಕಥೆಗಳು ಜನಪದರಲ್ಲಿ ರಕ್ತಗತವಾಗಿ ಅಸ್ಥಿಗತವಾಗಿವೆ ಎನ್ನುವುದಕ್ಕೆ ಈ ನುಡಿಗಟ್ಟೇ ಸಾಕ್ಷಿ.
ಪ್ರ : ನಾನು ಬಿದ್ದಿರೋ ವನವಾಸ ಆ ಶ್ರೀನಿವಾಸನಿಗೇ ಗೊತ್ತು
೨೮೧೨. ವಪನ ಮಾಡು = ನಿರ್ಮೂಲನ ಮಾಡು, ಬೋಳಿಸು
(ವಪನ = ಕ್ಷೌರ)
ಪ್ರ : ಈ ಮನೆಹಾಳ ಆ ಮನೆಯನ್ನು ವಪನ ಮಾಡಿಬಿಟ್ಟ.
೨೮೧೩. ವಯಕ್ ಅನ್ನಿಸು = ತಿಂದದ್ದನ್ನೆಲ್ಲ ಕಕ್ಕಿಸು, ಚೆನ್ನಾಗಿ ಥಳಿಸು
(ವಯಕ್ = ವಾಂತಿ ಮಾಡುವಾಗಿನ ಶಬ್ದ)
ಪ್ರ : ಒದ್ದು ತಿಂದದ್ನೆಲ್ಲ ವಯಕ್ ಅನ್ನಿಸಿಬಿಟ್ಟ.
೨೮೧೪. ವಯಿನವಾಗು = ಹಾಯಾಗು, ಅನುಕೂಲವಾಗು
(ವಯಿನ > ವೈನ = ಅನುಕೂಲ)
ಪ್ರ :ಅವನು ನಮ್ಮ ಕಡೆ ಬಂದದ್ದು, ಗೆಲ್ಲೋಕೆ ಇನ್ನು ವೈನ ಆಯ್ತು
೨೮೧೫. ವರ್ಚಸ್ಸು ಹೆಚ್ಚಾಗು = ಕಾಂತಿ ಹೆಚ್ಚಾಗು, ಗುಣವಿಶೇಷ ಅಧಿಕವಾಗು
(ವರ್ಚಸ್ಸು.< Virtues? = ಗುಣವಿಶೇಷ)
ಪ್ರ : ಅವರ ಆಗಮನದಿಂದ ಪಕ್ಷಕ್ಕೆ ವರ್ಚಸ್ಸು ಹೆಚ್ಚಾಯಿತು.
೨೮೧೬. ವಜನ್ನಾಗು = ಭಾರವಾಗು
(ವಜನು = ಭಾರ, ತೂಕ)
ಪ್ರ : ನರಪೇತಲನ ತಲೆ ಮೇಲೆ ವಜನ್ನಾದ ಹೊರೆ ಹೊರಿಸಿದರೆ ಅವನು ಹೊರ್ತಾನ?
೨೮೧೭. ವರ್ತನೆ ಮಾಡಿಕೊಳ್ಳು = ಪದಾರ್ಥವನ್ನು ಮನೆಗೆ ತಂದುಕೊಟ್ಟು ತಿಂಗಳ ಕೊನೆಯಲ್ಲಿ ಒಟ್ಟಿಗೆ ದುಡ್ಡು ಈಸಿಕೊಳ್ಳುವ ಕರಾರು ಮಾಡಿಕೊಳ್ಳು.
ಪ್ರ : ವರ್ತನೆ ಮಾಡಿಕೊಂಡಿರೋದ್ರಿಂದ ನಿತ್ಯ ವೀಳ್ಯದೆಲೆ ಮನೆಗೇ ತಂದುಕೊಡ್ತಾಳೆ.
೨೮೧೮. ವರಸೆ ಇರು = ಮದುವೆಯಾಗಲು ಹೆಣ್ಣುಗಂಡಿಗೆ ಯಾವುದೇ ರೀತಿ ರಿವಾಜಿನ ಅಡ್ಡಿ ಇಲ್ಲದಿರು
(ವರಸೆ < ವರಿಜೈ (ತ) = ಸಾಲು, ಕಟ್ಟಳೆ, ರಿವಾಜು)
ಪ್ರ : ವರಸೆ ಇಲ್ಲದ ಹೆಣ್ಣು ಗಂಡಿಗೆ ಮದುವೆ ಮಾಡೋಕಾಗ್ತದ?
೨೮೧೯. ವರಸೆ ತೆಗೆ = ನಿಜಸ್ವಭಾವ ತೋರಿಸು, ಚಿರಪರಿಚಿತ ಪಟ್ಟು ಹಾಕು
(ವರಸೆ = ಕುಸ್ತಿಪಟ್ಟು)
ಪ್ರ : ನೀನು ಎಂದಿನ ವರಸೆ ತೆಗೆದರೆ ನಿನ್ನ ಜೀವ ಬೆರಸೆ ಬಿಡೋದಿಲ್ಲ.
೨೮೨೦. ವರಾತ್ ಮಾಡು = ಒತ್ತಾಯ ಮಾಡು
(ವರಾತ್ = ಡಿಮ್ಯಾಂಡ್)
ಪ್ರ : ಅವನೊಂದು ಕಡೆ ಕೊಡು ಕೊಡು ಅಂತ ವರಾತ್ ಮಾಡ್ತಾನೆ, ಇವನೊಂದು ಕಡೆ ಬೇಡ ಬೇಡ ಅಂತ ಅಡ್ಡಿ ಪಡಿಸ್ತಾನೆ.
೨೮೨೧. ವಾಟ ಮಾಡು = ಇಳಿಜಾರು ಮಾಡು
(ವಾಟ < ವಾಟ್ಟ(ತ) = ತಗ್ಗು, ಇಳಿಜಾರು)
ಪ್ರ : ವಾಟ ಮಾಡಿದರೆ ನೀರು ಮೇಲ್ನಿಂದ ಓಟ ಓಡ್ತಾ ಬರ್ತದೆ.
೨೮೨೨. ವಾಣಿಗೆಡು = ರೀತಿಗೆಡು, ನಡತೆಗೆಡು
(ವಾಣಿ = ನಡೆನುಡಿ, ವರ್ತನೆ)
ಪ್ರ : ಗಾದೆ – ವಾಣಿಗಟ್ಟೋರಿಗೆ ಓಣೀಲಿ ಸೋಬನ.
೨೮೨೩. ವಾಯಿದೆ ತೀರು = ಗಡುವು ಮುಗಿ
(ವಾಯಿದೆ = ಅವಧಿ)
ಪ್ರ : ವಾಯಿದೆ ತೀರಿದ ಮ್ಯಾಲೆ ಕಾಯೋದೇಕೆ, ಕಾರ್ಯ ಜರುಗಿಸಿ.
೨೮೨೪. ವಾರದ ಹೊಲಕ್ಕೆ ಗೊಬ್ಬರ ಹೊಡಿ = ಕಟ್ಟಿಕೊಂಡವಳನ್ನು ಬಿಟ್ಟು ಇಟ್ಟುಕೊಂಡವಳಿಗೆ ಹಣಶಕ್ತಿ ವ್ಯಯಿಸು.
(ವಾರ = ಅನ್ಯರ ಹೊಲದಲ್ಲಿ ಬೆಳೆದ ಬೆಲೆಯ ಅರ್ಧ ಭಾಗ ಇಬ್ಬರಿಗೂ ಎಂದು ಕರಾರು ಮಾಡಿಕೊಂಡು ವ್ಯವಸಾಯ ಮಾಡುವ ಪದ್ಧತಿ)
ಪ್ರ : ಗಾದೆ – ವಾರದ ಹೊಲಕ್ಕೆ ಗೊಬ್ಬರ ಹೊಡೆದೂ ಹೊಡೆದೂ ಸ್ವಂತ ಹೊಲ ಹಾಳುಗೆಡವಿದ.
೨೮೨೫. ವಾರಾಸರದಿ ಮಾಡು = ಪೈಪೋಟಿ ಮಾಡು
ಪ್ರ : ಇಬ್ಬರು ವಾರಗಿತ್ತಿಯರೂ ಇವಳು ಮಾಡಲಿ ಅಂತ ಅವಳು, ಅವಳು ಮಾಡಲಿ ಅಂತ ಇವಳು ವಾರಾಸರದಿ ಮಾಡ್ತಾರೆ.
೨೮೨೬. ವಾರೆಗೆ ಹೋಗು = ಹೊರಚ್ಚಿಗೆ ಹೋಗು
(ವಾರೆ < ಓರೆ = ಪಕ್ಕ, ಕೋಚೆ)
ಪ್ರ : ಒಬ್ಬರ್ನ ಕಂಡ್ರೆ ಒಬ್ಬರಿಗಾಗಲ್ಲ, ವಾರೆಗೆ ಹೋಗ್ತಾರೆ.
೨೮೨೭. ವಾಲಗದೋರ ಮುಂದೆ ಹುಣಿಸೆ ಹಣ್ಣು ಚೀಪು = ಆಗೋ ಕೆಲಸಕ್ಕೆ ಹರಕತ್ ಮಾಡು.
ಹುಳಿಗೆ ಮುಖವೆನ್ನಲ್ಲ ಕಿವುಚಿಕೊಂಡು ಓಲಗದವರ ಮುಂದೆ ಹುಣಿಸೆ ಹಣ್ಣು ಚೀಪುತ್ತಾ ನಿಂತರೆ, ಅದನ್ನು ನೋಡಿದ ಓಲಗದವರ ಬಾಯಲ್ಲೂ ಉಗುಳು ತುಂಬಿಕೊಂಡು ಓಲಗದಲ್ಲಿ ಸದ್ದೇ ಹೊರಡದಂತಾಗುತ್ತದೆ. ಹುನ್ನಾರವಾಗಿ ಹರಕತ್ ಮಾಡುವ ಕುತಂತ್ರ ಜನರ ವರ್ತನೆಯನ್ನು ಈ ನುಡಿಗಟ್ಟು ವಿಡಂಬಿಸಿದೆ.
ಪ್ರ : ವಾಲಗದೋರ ಮುಂದೆ ಹುಣಿಸೆ ಹಣ್ಣು ತಿನ್ನೋ ಕುತಂತ್ರ ಪುರೋಹಿತಶಾಹಿಯ ಜಾಯಮಾನ.
೨೮೨೮. ವಾಲಾಡಿ ವಾಲೆ ಪಾಲಾಗು = ಮೆರೆದು ನಾಶವಾಗು
(ವಾಲಾಡಿ = ಓಲಾಡಿ, ವಾಲೆ = ಒಲೆ)
ಪ್ರ : ಅವಳೊಬ್ಬಳು ವಾಲಾಡಿ ವಾಲಾಡಿ ವಾಲೆ ಪಾಲಾದ್ಲು, ಇವಳೊಬ್ಬಳು ತೇಲಾಡಿ ತೇಲಾಡಿ ತೊರೆಪಾಲಾಗ್ತಾಳೇನೊ?
೨೮೨೯. ವಾಲಾಡು = ಬಳುಕಾಡು
(ವಾಲಾಡು < ಒಲೆದಾಡು < ಒನೆದಾಡು < ಉಲೈ(ತ) = ಅಲ್ಲಾಡು)
ಪ್ರ : ಎಷ್ಟು ದಿನ ವಾಲಾಡ್ತಳೋ ವಾಲಾಡಲಿ, ಆಮೇಲೆ ಮೂಲೆ ಹಿಡೀತಾಳೆ.
೨೮೩೦. ವಾಸನೆ ಹಿಡಿ = ಸುಳಿವನ್ನು ಗ್ರಹಿಸು, ಒಳಸಂಚನ್ನು ತಿಳಿ
ಪ್ರ : ನೀನು ನಾಯಿಜಾತಿಗೆ ಸೇರಿದೋನು, ಇಷ್ಟು ಬೇಗ ವಾಸನೆ ಹಿಡಿದುಬಿಟ್ಟಿದ್ದೀಯಲ್ಲ?
೨೮೩೧. ವಾಸರ ತಾಳು = ವಜೆಯನ್ನು ಸಹಿಸು, ಭಾರ ಹೊರು
(ವಾಸರ < ಓಸರ = ಪಕ್ಕಕ್ಕೆ ಬಾಗುವಿಕೆ)
ಪ್ರ : ಸಂಸಾರದಲ್ಲಿ ಎಲ್ಲರ ವಾಸರ ತಾಳೋದು ಬಹಳ ಕಷ್ಟ.
೨೮೩೨. ವಿಲೆವಾರಿ ಮಾಡು = ಬಿಕರಿ ಮಾಡು, ವಿತರಣೆ ಮಾಡು
ಪ್ರ : ಎಲ್ಲ ವಸ್ತುಗಳನ್ನು ಅವರವರಿಗೆ ವಿಲೇವಾರಿ ಮಾಡುವುದು ಸುಲಭದ ಕೆಲಸ ಅಲ್ಲ.
೨೮೩೩. ವಿಷ ಕಾರು = ಮತ್ಸರಿಸು, ದ್ವೇಷಿಸು
(ಕಾರು = ಕಕ್ಕು, ವಮನ ಮಾಡು)
ಪ್ರ : ನನ್ನ ಕಂಡ್ರೆ ವಿಷ ಕಾರ್ತಾರೆ.
೨೮೩೪. ವಿಷ ತಗೊಳ್ಳೋಕೆ ಕಾಸಿಲ್ಲದರಿಉ = ಬರಿಗೈಯಲ್ಲಿರು, ಬಡತನದ ಪರಾಕಾಷ್ಠೆಯಲ್ಲಿರು
ಪ್ರ : ವಿಷ ತಗೊಳ್ಳೋಕೂ ಕಾಸಿಲ್ಲ ಅಂದ್ಮೇಲೆ ನನ್ನ ಪರಿಸ್ಥಿತಿ ಅರ್ಥ ಮಾಡಿಕೋ.
೨೮೩೫. ವೀಳ್ಯ ತಿದ್ದು = ವೀಳ್ಯವನ್ನು ವಿತರಣೆ ಮಾಡು
(ತಿದ್ದು = ಹಂಚು) ಮದುವೆಗಳಲ್ಲಿ ಬಂದ ಜನರಿಗೆಲ್ಲ ಎಲೆ ಅಡಿಕೆಯನ್ನು ಹಂಚುವುದು ಒಂದು ಸಂಪ್ರದಾಯವಾಗಿತ್ತು. ಮೊದಲು ದೇವರ ವೀಳ್ಯ, ಕಟ್ಟೆಮನೆ ವಿಳ್ಯ, ಗಡಿ ವೀಳ್ಯ ಇತ್ಯಾದಿಗಳನ್ನು ವಿಲೇವಾರಿ ಮಾಡಿ, ಆ ಮೇಲೆ ನೆರೆದ ಜನಕ್ಕೆಲ್ಲ ವೀಳ್ಯವನ್ನು ಕೊಡುವ ವಾಡಿಕೆ ಇತ್ತು. ಇತ್ತೀಚೆಗೆ ಅದು ಇಲ್ಲವಾಗುತ್ತಿದೆ.
ಪ್ರ : ಬಂದವರಿಗೆಲ್ಲ ಊಟಕ್ಕೆ ಬಡಿಸಿದ ಹಾಗೇ ಬಂದವರಿಗೆಲ್ಲ ವೀಳ್ಯ ತಿದ್ದಬೇಕು.
೨೮೩೬. ವೀಳ್ಯ ಕೊಡು = ಸಮ್ಮತಿ ಸೂಚಿಸು, ಉಭಯ ಪಕ್ಷಗಳೂ ಒಪ್ಪು
ಪ್ರ : ವೀಳ್ಯ ಕೊಟ್ಟ ಮೇಲೆ, ಮಾತಿಗೆ ತಪ್ಪೋ ಪ್ರಸಂಗವೇ ಬರಲ್ಲ.
೨೮೩೭. ವೈನವಾಗು = ಲೇಸಾಗು, ಪಸಂದಾಗು
(ವೈನ < ವಯಿನ < ವಯನ (ತ) = ಲೇಸು)
ಪ್ರ : ಅವರು ಇದರಲ್ಲಿ ಪಾಲ್ಗೊಳ್ಳದ್ದು ನಮಗಿನ್ನೂ ವೈನವಾಯ್ತು.
೨೮೩೮. ವೈನ ಮಾಡು = ಉಪಾಯ ಮಾಡು, ತಂತ್ರ ಮಾಡು
ಪ್ರ : ಏನೇನೋ ವೈನ ಮಾಡಿ ಕೊನೆಗೆ ಇವಳ ಕೈ ಹಿಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ