ನನ್ನ ಪುಟಗಳು

13 ಅಕ್ಟೋಬರ್ 2015

೨೭) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಟ-ಠ-ಡ)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಟ)
೧೨೪೪. ಟಗರು ಪಟ್ಟು ಹಾಕು = ಜೋರಾದ ಪೆಟ್ಟ ಕೊಡಲು ಹಿಮ್ಮೆಟ್ಟಿ ಹೋಗು
(ಪಟ್ಟು = ವರಸೆ)
ಪ್ರ : ಟಗರು ಪಟ್ಟು ಹಾಕೋದು, ಕೈಲಾಗಲಾರದೆ ಅಲ್ಲ, ವೇಗವಾಗಿ ಬಂದು ಗುದ್ದೋಕೆ.
೧೨೪೫. ಟಪಾಲು ಹೋಗು = ದೌಡು ಹೋಗು, ವೇಗವಾಗಿ ಹೋಗು
(ಟಪಾಲು = ಅಂಚೆ)
ಪ್ರ : ಹೇಳಿದ್ದೇ ತಡ, ಟಪಾಲು ಹೋಗಿಬಿಟ್ಟ
೧೨೪೬. ಟಾಕಣದ ಕುದುರೆಯಂತಿರು = ಪೊಗದಸ್ತಾಗಿರು, ಬೆಲ್ಲದ ಅಚ್ಚಿನಂತೆ ಬಂಧುರವಾಗಿರು, ಪುಟ ಎಗರುವ ಚೆಂಡಿನಂತಿರು.
(ಟಾಕಣ = ಅರಬ್ಬೀ ದೇಶದ ಹೆಣ್ಣು ಕುದುರೆ)
ಪ್ರ : ಟಾಕಣದ ಕುದುರೆಯಂತಿರುವ ಅವಳು ಬಂದಳು ಅಂದ್ರೆ, ಗಂಡು ಹೈಕಳೆಲ್ಲ ಚಾಕಣ
೧೨೪೭. ಟಾಕು ಟೀಕಾಗಿ ಬರು = ಅಲಂಕೃತವಾಗಿ ಬರು, ಶಿಸ್ತಾಗಿ ಬರು
(ಟಾಕು ಟೀಕು < ಠಾಕ್ ಠೀಕ್ (ಮರಾಠಿ) = ಶಿಸ್ತು)
ಪ್ರ : ಟಾಕಣದ ಕುದುರೆಯಂಥೋಳು ಟಾಕುಟೀಕಾಗಿ ಬಂದಳು ಅಂದ್ರೆ ಗಂಡು ಹೈಕಳು ಕಣ್ಣುರೆಪ್ಪೆ ಹುಯ್ಯಲ್ಲ.
೧೨೪೮. ಟುಮುಕಿ ಹೊಡೆಸು = ಡಂಗುರ ಹೊಡೆಸು, ಪ್ರಚುರ ಪಡಿಸು
(ಟುಮುಕಿ = ಡಂಗುರ)
ಪ್ರ : ಇವತ್ತಿಗೆ ಎಂಟುದಿವಸಕ್ಕೆ ಗ್ರಾಮದೇವತೆ ಹಬ್ಬ ಅಂತ ಊರೊಳಗೆಲ್ಲ ಟುಮುಕಿ ಹೊಡೆಸಿದರು.
೧೨೪೯. ಟೂಬಳೆ ಹಾಕು = ಸ್ನೇಹ ಬಿಡು, ಜೊತೆ ಬಿಡು
(ಟೂಬಳೆ < ಥೂಬಲಿ?)
ಪ್ರ : ನಿನ್ನೊಂದಿಗೆ ನಾನು ಬರಲ್ಲ, ಟೂಬಳೆ ಹಾಕ್ತೀನಿ.
೧೨೫೦. ಟೇಸನ್‌ಗೆ ಹಾಕು = ಪೋಲಿಸ್ ಕಸ್ಟಡಿಗೆ ಹಾಕು
(ಟೇಸನ್ = (ಪೋಲಿಸ್) ಸ್ಟೇಷನ್ = ಠಾಣೆ)
ಪ್ರ : ನನಗೆ ಗೊತ್ತಾಯ್ತು, ಅವನ್ನ ಹಿಡಕೊಂಡು ಹೋಗಿ ಟೇಸನ್‌ಗೆ ಹಾಕಿದ್ದಾರೆ ಅಂತ.
೧೨೫೧. ಟೇಸನ್ ಬಿಡು = ಮರಣ ಹೊಂದು ಜಾಗಬಿಡು
(ಟೇಸನ್ = (ರೈಲ್ವೆ) ಸ್ಟೇಷನ್ = ರೈಲು ನಿಲ್ದಾಣ)
ಪ್ರ : ಗಾಡಿ ಟೇಸನ್ ಬಿಟ್ಟಾಯ್ತು, ನಡೀರಿ ಮುಂದಿನ ಕೆಲಸಕ್ಕೆ ಅದ್ದುಕೊಳ್ಳಿ
೧೨೫೨. ಟೋಪಿ ಎಗರಿಸು = ಮಾನ ಕಳೆ, ಅವಮರ್ಯಾದೆ ಮಾಡು.
ತಲೆಗೆ ಪೇಟವನ್ನೋ, ವಲ್ಲಿ (ಟವೆಲ್) ಯನ್ನೋ ಸುತ್ತಿಕೊಳ್ಳುವುದು ಅಥವಾ ಟೋಪಿಯನ್ನು ಧರಿಸುವುದು ಮರ್ಯಾದೆ ಎಂದು ಜನ ಭಾವಿಸಿದ್ದರು. ಬರೀ ತಲೆಯಲ್ಲಿರಬಾರದು ಎಂಬುದು ಅನೂಚಾನವಾಗಿ ಬಂದದ್ದು. ‘ತಲೆಗೆ ಬಟ್ಟೆ ಇಲ್ಲದೋನು ಅಂತ ತಿಳ್ಕೋಬೇಡ’ ಎಂಬ ಮಾತು ಇಂದಿಗೂ ಹಳ್ಳಿಗಾಡಿನಲ್ಲಿ ಚಾಲ್ತಿಯಲ್ಲಿದೆ. ಅಷ್ಟೇ ಅಲ್ಲ ಇಂದಿಗೂ ಹಳ್ಳಿಗಳಲ್ಲಿ ಹೆಂಗಸರು ತಲೆಯ ಮೇಲೆ ಸೆರಗು ಹಾಕಿಕೊಳ್ಳುವ ಪರಿಪಾಠ ಉಂಟು. ನಾಗರಿಕತೆಯ ದೆಸೆಯಿಂದಾಗಿ ಅದು ನಶಿಸುತ್ತಿದೆ. ತಲೆಯ ಮೇಲಿನ ಬಟ್ಟೆಯನ್ನು (ಅದು ಪೇಟ, ಟವೆಲ್ ಅಥವಾ ಟೋಪಿ ಆಗಿರಬಹುದು) ಯಾರಾದರೂ ಕಿತ್ತೆಸೆದರೆ ಅದು ಅವಮಾನವೆಂದೇ ಜನರ ನಂಬಿಕೆ.
ಪ್ರ : ನೀನು ಹೆಚ್ಚು ಕಮ್ಮಿ ಮಾತಾಡಿದ್ರೆ, ಟೋಪಿ ಎಗರಿಸಿ ಬಿಡ್ತೀನಿ.
೧೨೫೩. ಟೋಪಿ ಬೀಳು = ಮೋಸ ಹೋಗು
ಪ್ರ : ಅವನ ಬ್ಯಾಳ್ಯದ (< ಬೇಳುವೆ = ಬಣ್ಣದ) ಮಾತಿಗೆ ಮರುಳಾಗಿ ಟೋಪಿ ಬಿದ್ದೆ
೧೨೫೪. ಟೋಪಿ ಹಾಕು = ಮೋಸ ಮಾಡು.
ವ್ಯಾಪಾರಿಗಳು ಒಳಗೆ ರಟ್ಟು, ಮೇಲೆ ಬಟ್ಟೆಯುಳ್ಳ ಕರಿಯ ಟೋಪಿಗಳನ್ನು ಹಾಕಿಕೊಂಡು ಹಾಗೂ ಕಾಂಗ್ರೆಸ್‌ನವರು ಬಿಳೀ ಟೋಪಿಗಳನ್ನು ಹಾಕಿಕೊಂಡು ಜನರಿಗೆ ಒಂದಲ್ಲ ಒಂದು ಮೋಸ ಮಾಡತೊಡಿಗಿದ ಮೇಲೆ ಮೋಸ ಮಾಡು ಎನ್ನುವ ಅರ್ಥದಲ್ಲಿ ಈ ನುಡಿಗಟ್ಟು ಚಾಲ್ತಿಗೆ ಬಂತೆಂದು ಕಾಣುತ್ತದೆ.
ಪ್ರ : ಧಾರವಾಡಿ ಮಾರವಾಡಿಗೇ ಟೋಪಿ ಹಾಕಿಬಿಟ್ಟ, ಅದ್ಕೇ ‘ದಸ್ ಮಾರವಾಡಿ ಏಕ್ ಧಾರವಾಡಿ’ ಅನ್ನೋ ಗಾದೆ ಚಾಲ್ತಿಗೆ ಬಂದಿರೋದು
೧೨೫೫. ಟಾಂ ಟಾಂ ಹೊಡಿ = ಪ್ರಚುರ ಪಡಿಸು, ಡಂಗುರ ಹೊಡಿ
ಪ್ರ : ಊರು ಕೇರಿಯೊಳಗೆಲ್ಲ ಆ ವಿಷಯವನ್ನು ಟಾಂ ಟಾಂ ಹೊಡೆದು ಹೇಳಿದ್ದಾರೆ.
೧೨೫೬. ಟೊಂಕ ಕಟ್ಟಿ ನಿಲ್ಲು = ತಯಾರಾಗಿ ನಿಲ್ಲು, ಸನ್ನದ್ಧವಾಗಿರು
(ಟೊಂಕ = ಸೊಂಟ) ವೈಷ್ಣವರು ದೇವರ ಕಾರ್ಯ ಮಾಡಲು ಸೊಂಟಕ್ಕೆ ಸೆಲ್ಯವನ್ನು ಬಿಗಿಸು ಸಿದ್ಧವಾಗಿರುತ್ತಾರೆ. ಆ ಮೂಲದಿಂದ ಈ ನುಡಿಗಟ್ಟು ಮೂಡಿರಬಹುದು.
ಪ್ರ :ದಣಿ ಸೇವೆಗೆ ಸೇವಕರು ಟೊಂಕ ಕಟ್ಟಿ ನಿಂತಿದ್ದಾರೆ.
 

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಠ)
೧೨೫೭. ಠಕ್ಕು ಬೀಳು = ಮೋಸ ಹೋಗು
(ಠಕ್ಕು = ಮೋಸ, ಠಕ್ಕರು = ಮೋಸಗಾರರು)
ಪ್ರ : ಠಕ್ಕು ಬೀಳಿಸೋದೇ ಠಕ್ಕದ ವೃತ್ತಿ
೧೨೫೮. ಠಸ್ಸೆ ಒತ್ತು = ಸಮ್ಮತಿ ನೀಡು
(ಠಸ್ಸೆ = ಮುದ್ರೆ)
ಪ್ರ : ವಿವೇಚನೆ ಇಲ್ಲದೆ ಎಲ್ಲಕ್ಕೂ ಠಸ್ಸೆ ಒತ್ತೋನು, ನ್ಯಾಯಧರ್ಮಗಳನ್ನು ಠಿಸ್ ಎನ್ನಿಸಿಬಿಡ್ತಾನೆ
೧೨೫೯. ಠಿಕಾಣಿ ಹಾಕು = ನೆಲೆಯೂರು
(ಠಿಕಾಣಿ < ಠಿಕಾನ (ಹಿಂ) = ನೆಲೆಗೊಳ್ಳುವಿಕೆ)
ಪ್ರ : ಬಂದು ಬಂದೋರೆಲ್ಲ ಅಲ್ಲೆ ಠಿಕಾಣಿ ಹಾಕಿದ್ರೆ, ಆ ಮನೆಯವರ ಗತಿ ಏನು?

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಡ)
೧೨೬೦. ಡಬ್ಬಿಲ್ಲದಿದ್ರೂ ಡಂಬವಿರು = ಹಣವಿಲ್ಲದಿದ್ದರೂ ನೆಣವಿರು, ಒಣ ಹೆಮ್ಮೆ ಇರು
(ಡಬ್ಬು (ತೆ) = ಹಣ; ಡಂಬ, ಡಂಬು = ಡಂಭಾಚಾರ, ಬೂಟಾಟಿಕೆ)
ಪ್ರ : ಗಾದೆ – ಡಂಬು ನನ್ನ ಕೇಳು
ಡಬ್ಬು ನನ್ನ ಹೆಂಡ್ರನ್ನ ಕೇಳು
೧೨೬೧. ಡರ್ರೆ‍ನ್ನು = ಜೋರಾಗಿ ಹೂಸು
ಪ್ರ : ತುಂಬಿದ ಸಭೇಲಿ ಡರ್ರೆ‍ಂದವನಿಗೆ ಛೀಮಾರಿ ಮಾಡಿದಾಗ, ಅವನು ಹೇಳಿದ: “ಡರ್ರ‍ಂಬರ್ರ‍ಂ ಭಯಂ ನಾಸ್ತಿ, ಕೊಯ್ಯಂ ಪಿಯ್ಯಂ ಮಧ್ಯಮಂ, ಡಿಸ್ಸೇಣ ಪ್ರಾಣಸಂಕಟಂ” ಆಗ ಛೀಮಾರಿ ಮಾಡಿದ ಜನ ಬಿದ್ದು ಬಿದ್ದು ನಕ್ಕರು; ಹೂಸು ವಾಸನೆ ಮರೆತು ನಗೆ ಹೂ ಸುವಾಸನೆ ಅನುಭವಿಸಿದರು.
೧೨೬೨. ಡಲ್ಲಾಗು = ಇಳಿದು ಹೋಗು, ಖದರ್ ಇಲ್ಲದಂತಾಗು
(ಡಲ್ಲು < Dull = ಇಳಿಮುಖ, ಸಪ್ಪೆ)
ಪ್ರ : ಈರುಳ್ಳಿ ಬೆಲೆ ಇದ್ದಕ್ಕಿದ್ದಂತೆ ಡಲ್ಲಾಗಿ ಹೋಯ್ತು
೧೨೬೩. ಡವಾಲಿ ಸೇವೆಯಾಗು = ಹೊಡೆತ ಬೀಳು
(ಡವಾಲಿ = ಪೇದೆಗಳು ಸೊಂಟಕ್ಕೆ ಹಾಕಿಕೊಳ್ಳುವ ಅಗಲವಾದ ಸೊಂಟಪಟ್ಟಿ ಅಥವಾ ಸೇವಕರು ಹೆಗಲ ಮೇಲಿಂದ ಎದೆಯ ಮೇಲೆ ಇಳೇ ಬೀಳುವಂತೆ ಹಾಕಿಕೊಳ್ಳುವ ಅಗಲವಾದ ದಪ್ಪ ಬಟ್ಟೆಯ ಪಟ್ಟಿ)
ಪ್ರ :ಡವಾಲಿ ಸೇವೆಗಿಂತ ಉರುಳುಸೇವೆ ಮೇಲು
೧೨೬೪. ಡಾಣಾಡಂಗುರವಾಗು = ಗುಲ್ಲೋಗುಲ್ಲಾಗು, ಹಾದಿಬೀದಿಯ ಮಾತಾಗು
(ಡಾಣಾಡಂಗುರ < ಢಣ್ + ಡಂಗುರ = ಢಣ್ ಎಂದು ಸದ್ದು ಮಾಡುವ ಡಂಗುರ)
ಪ್ರ : ಹೆಂಡ್ರು ಓಡಿ ಹೋದ ಸುದ್ದಿ ಊರೊಳಗೆಲ್ಲ ಆಗಲೆ ಡಾಣಾಡಂಗುರವಾಗಿದೆ.
೧೨೬೫. ಡಾವರವಾಗು = ಬಾಯಾರಿಕೆಯಾಗು
(ಡಾವರ = ಧಗೆ, ಝಳ)
ಪ್ರ : ಡಾವರವಾಗಿ ಎಳನೀರು ಕಿತ್ಕೊಂಡು ಕುಡಿದೆ.
೧೨೬೬. ಡಿಕಾವಾಗಿ ಕಾಣು = ಅಂದವಾಗಿ ಕಾಣು, ಎದ್ದು ಕಾಣು
(ಡಿಕಾವು < Decorative)
ಪ್ರ : ಮನೆ ಒಳ್ಳೆ ಡಿಕಾವಾಗಿ ಕಾಣ್ತದೆ.
೧೨೬೭. ಡೀಲ ಮಾಡು = ತಡ ಮಾಡು, ನಿಧಾನ ಮಾಡು
(ಡೀಲ < Delay = ನಿಧಾನ)
ಪ್ರ : ಯಾವುದೇ ಯವಾರದಲ್ಲಿ ಡೀಲ ಮಾಡೋದು ಒಳ್ಳೇದಲ್ಲ.
೧೨೬೮. ಡೇರೆ ಕೀಳು = ಜಾಗಬಿಡು, ಹೊರಡು
(ಡೇರೆ = ಗುಡಾರ, ಟೆಂಟು)
ಪ್ರ : ಈಗಿಂದೀಗಲೇ ಡೇರೆ ಕಿತ್ಕೊಂಡು ಹೋಗದಿದ್ರೆ, ನಿನ್ನ ಮೀಸೆ ಕಿತ್ತು ಕೈಗೆ ಕೊಡ್ತೀನಿ
೧೨೬೯. ಡೈನಮೆಂಟಿಕ್ಕು = ಬತ್ತಿ ಇಕ್ಕು
(ಡೈನಮೆಂಟ್ .< Dynamite = ಬಂಡೆ ಸಿಡಿಸುವ ಮದ್ದು)
ಪ್ರ : ಆ ಮನೆಗೇ ಡೈನಮೆಂಟಿಕ್ಕಿಬಿಟ್ಟ, ಮನೆಹಾಳ.
೧೨೭೦. ಡೌಲು ತೋರಿಸು = ಬಡಿದಾರ ದೊಡ್ಡಸ್ತಿಕೆ ತೋರಿಸು
(ಡೌಲು < ಡವಲು = ಒಣ ಶ್ರೀಮಂತಿಕೆ)
ಪ್ರ : ಇವನ ಡೌಲು ತೋರಿಸಿದಾಕ್ಷಣ ಜನ ಮರುಳಾಗಿಬಿಡ್ತಾರ?
೧೨೭೧. ಡಂಗಾಗು = ಸೋಜಿಗಗೊಳ್ಳು, ಸ್ತಂಭೀಭೂತನಾಗು
ಪ್ರ : ಅವನ ಉತ್ತರ ಕೇಳಿ ಡಂಗಾಗಿ ಹೋದೆ
೧೨೭೨. ಡೋಂಗಿ ಬಿಡು = ಬೂಸಿ ಬಿಡು, ಸುಳ್ಳು ಹೇಳು
ಪ್ರ : ಇವನು ಡೋಂಗಿ ಬಿಡ್ತಾನೆ ಅಂತ ಊರ್ಗೇ ಗೊತ್ತು

ಕಾಮೆಂಟ್‌‌ ಪೋಸ್ಟ್‌ ಮಾಡಿ