ನನ್ನ ಪುಟಗಳು

Shabari ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Shabari ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

11 ನವೆಂಬರ್ 2020

10ನೇ ತರಗತಿ ಕನ್ನಡ ಗದ್ಯ-01-ಶಬರಿ-ವ್ಯಾಕರಣಾಂಶಗಳು

ದ್ವಿರುಕ್ತಿ 

ಈ ವಾಕ್ಯಗಳನ್ನು ಗಮನಿಸಿ : 
- ಮಕ್ಕಳು ಓಡಿಓಡಿ ದಣಿದರು. 
- ಈಗೀಗ ಅವಳು ಚೆನ್ನಾಗಿ ಓದುತ್ತಾಳೆ. 
- ದೊಡ್ಡ ದೊಡ್ಡ ಮರಗಳು ಬಿದ್ದವು. 

ಈ ವಾಕ್ಯಗಳಲ್ಲಿ ಓಡಿ, ಈಗ, ದೊಡ್ಡ ಎಂಬ ಪದಗಳು ಎರಡೆರಡು ಬಾರಿ ಪ್ರಯೋಗವಾಗಿರುವುದನ್ನು ಗಮನಿಸಬಹುದು; 

ಸೂತ್ರ :- "ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನೋ, ಒಂದು ವಾಕ್ಯವನ್ನೋ, ಎರಡೆರಡು ಬಾರಿ ಪ್ರಯೋಗ ಮಾಡುವುದಕ್ಕೆ 'ದ್ವಿರುಕ್ತಿ' ಎನ್ನುತ್ತಾರೆ. 

ಇಂತಹ ಪದಗಳು ಬೇರೆ ಬೇರೆ ಅರ್ಥಗಳಲ್ಲಿ ಪ್ರಯೋಗಿಸಲ್ಪಡುತ್ತವೆ. 
ಉದಾ: 
ಉತ್ಸಾಹದಲ್ಲಿ - ಹೌದು ಹೌದು, ನಿಲ್ಲುನಿಲ್ಲು, ಬಂದೆಬಂದೆ. 
ಆಧಿಕ್ಯದಲ್ಲಿ - ದೊಡ್ಡದೊಡ್ಡ, ಹೆಚ್ಚುಹೆಚ್ಚು. 
ಪ್ರತಿಯೊಂದು - ಮನೆಮನೆಗಳಲ್ಲಿ, ಕೇರಿಕೇರಿಗಳನ್ನು. 
ಸಂಭ್ರಮದಲ್ಲಿ - ಅಗೋಅಗೋ, ಬನ್ನಿಬನ್ನಿ. 
ಆಶ್ಚರ್ಯದಲ್ಲಿ - ಅಬ್ಬಬ್ಬಾ, ಅಹಹಾ. 
ಆಕ್ಷೇಪದಲ್ಲಿ - ಬೇಡಬೇಡ, ನಡೆನಡೆ. 
ನಿ?ಧದಲ್ಲಿ - ಸಾಕುಸಾಕು 
ಒಪ್ಪಿಗೆಯಲ್ಲಿ - ಹೌದ್ಹೌದು, ಆಗಲಿ ಆಗಲಿ, ಇರಲಿ ಇರಲಿ. 
ಅವಸರದಲ್ಲಿ - ಓಡುಓಡು, ನಡೆನಡೆ. 
ಇವುಗಳಲ್ಲದೆ ಇನ್ನೂ ಕೆಲವು ವಿಶೇಷ ರೂಪಗಳು ಇವೆ. 
ಮೊದಲುಮೊದಲು - ಮೊತ್ತಮೊದಲು / ಮೊಟ್ಟಮೊದಲು 
ಕಡೆಗೆಕಡೆಗೆ - ಕಟ್ಟಕಡೆಗೆ / ಕಡೆಕಡೆಗೆ 
ನಡುವೆನಡುವೆ - ನಟ್ಟನಡುವೆ / ನಡುನಡುವೆ 
ಬಯಲುಬಯಲು - ಬಟ್ಟಬಯಲು 
ತುದಿತುದಿ - ತುತ್ತತುದಿ 
ಕೊನೆಗೆಕೊನೆಗೆ - ಕೊನೆಕೊನೆಗೆ 
ಮೆಲ್ಲನೆಮೆಲ್ಲನೆ - ಮೆಲ್ಲಮೆಲ್ಲನೆ 


ಜೋಡುನುಡಿ
ಮೇಲ್ನೋಟಕ್ಕೆ ದ್ವಿರುಕ್ತಿಗಳ ಹಾಗೆ ಕಂಡುಬರುವ ಕೆಲವು ಪದಗಳಿವೆ. ಆದರೆ ಅವುಗಳನ್ನು ದ್ವಿರುಕ್ತಿಗಳೆಂದು ಹೇಳುವ ವಾಡಿಕೆಯಿಲ್ಲ. ಅವುಗಳನ್ನು ಜೋಡುನುಡಿಗಳೆಂದು ಕರೆಯಲಾಗುತ್ತದೆ. ದ್ವಿರುಕ್ತಿಯಲ್ಲಿ ಒಂದೇ ಪದ ಎರಡು ಬಾರಿ ಬಂದರೆ, ಇಲ್ಲಿ ಬೇರೆ ಬೇರೆ ಪದಗಳು ಜೊತೆಯಾಗಿರುತ್ತವೆ. ಹೀಗೆ ಜೊತೆಯಾಗಿ ಬರುವ ಪದಗಳಲ್ಲಿ ಎರಡು ವಿಧದ ಪದಗಳಿರುತ್ತವೆ.

    ೧. ಎರಡೂ ಪದಗಳಿಗೆ ಬೇರೆ ಬೇರೆ ಅರ್ಥವಿರುತ್ತದೆ. 
    ೨. ಎರಡು ಪದಗಳಲ್ಲಿ ಮೊದಲ ಪದಕ್ಕೆ ನಿರ್ದಿಷ್ಟ ಅರ್ಥವಿದ್ದು, ಎರಡನೆಯ ಪದಕ್ಕೆ ಅರ್ಥವಿರುವುದಿಲ್ಲ.

* ಎರಡೂ ಪದಗಳಿಗೆ ಅರ್ಥವಿರುವಂತಹವು: ಸತಿಪತಿ, ಕೆನೆಮೊಸರು, ಹಾಲ್ಜೇನು, ಮಕ್ಕಳುಮರಿ ಇತ್ಯಾದಿ ಪದಗಳು. 
* ಮೊದಲ ಪದಕ್ಕೆ ಮಾತ್ರ ಅರ್ಥವಿರುವಂತಹವು : (ಪ್ರತಿಧ್ವನಿ ಶಬ್ದಗಳು/ಮಾತಿಗೊಂದು ಗೀತು) ಕಾಫಿಗೀಫಿ, ಹುಳಹುಪ್ಪಡಿ, ದೇವರುಗೀವರು, ಹಣಗಿಣ, ಪುಸ್ತಕಗಿಸ್ತಕ ಇತ್ಯಾದಿ.
*********







 

10ನೇ ತರಗತಿ ಕನ್ನಡ ಗದ್ಯ-01-ಶಬರಿ-ಭಾಷಾಭ್ಯಾಸ

 ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. 
೧. ಕನ್ನಡ ಸಂಧಿಗಳನ್ನು ಹೆಸರಿಸಿ, ಎರಡೆರಡು ಉದಾಹರಣೆಗಳನ್ನು ಬರೆಯಿರಿ.
   ಕನ್ನಡ ಸಂಧಿಗಳು:  ಲೋಪಸಂಧಿ, ಆಗಮ ಸಂಧಿ, ಆದೇಶಸಂಧಿ
ಉದಾಹರಣೆಗಳು: -
   ಲೋಪ - ಊರೂರು, ಬಲ್ಲೆನೆಂದು, ಮಾತಂತು, ಸಂಪನ್ನರಾದ. 
   ಆಗಮ - ಕೈಯನ್ನು, ಮಳೆಯಿಂದ, ಶಾಲೆಯಲ್ಲಿ, ಮರವನ್ನು, ಮಗುವಿಗೆ. 
   ಆದೇಶ - ಮಳೆಗಾಲ, ಮೈದೋರು, ಬೆಂಬತ್ತು, ಕಡುವೆಳ್ಪು, ಮೆಲ್ವಾತು. 

೨. ಸಂಸ್ಕೃತ ಸಂಧಿಗಳ ಹೆಸರುಗಳನ್ನು ಸ್ವರ ಮತ್ತು ವ್ಯಂಜನ ಸಂಧಿಗಳಿಗಾಗಿ ವಿಂಗಡಿಸಿ ಬರೆಯಿರಿ. 
    ಸಂಸ್ಕೃತ ಸ್ವರ ಸಂಧಿಗಳು : ಸವರ್ಣದೀರ್ಘ ಸಂಧಿ, ಗುಣಸಂಧಿ, ವೃದ್ಧಿಸಂಧಿ, ಯಣ್‌ಸಂಧಿ
    ಸಂಸ್ಕೃತ ವ್ಯಂಜನ ಸಂಧಿಗಳು : ಜಶ್ತ್ವಸಂಧಿ, ಶ್ಚುತ್ವಸಂಧಿ, ಅನುನಾಸಿಕ ಸಂಧಿ

೩. ಕೊಟ್ಟಿರುವ ಪದಗಳನ್ನು ಬಿಡಿಸಿ, ಸಂಧಿ ಹೆಸರಿಸಿ. 
ಸುರಾಸುರ = ಸುರ + ಅಸುರ - ಸವರ್ಣಧೀರ್ಘಸಂಧಿ
ಬಲ್ಲೆನೆಂದು = ಬಲ್ಲೆನು + ಎಂದು - ಲೋಪಸಂಧಿ 
ಸೂರ್ಯೋದಯ = ಸೂರ್ಯ + ಉದಯ - ಗುಣಸಂಧಿ
ಮಳೆಗಾಲ = ಮಳೆ + ಕಾಲ - ಆದೇಶಸಂಧಿ
ಅಷ್ಟೈಶ್ವರ್ಯ = ಅಷ್ಟ + ಐಶ್ವರ್ಯ = ವೃದ್ಧಿಸಂಧಿ
ವೇದಿಯಲ್ಲಿ = ವೇದಿ + ಅಲ್ಲಿ - ಆಗಮಸಂಧಿ

ಆ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಯಾದ ನಾಲ್ಕನೆಯ ಪದ ಬರೆಯಿರಿ. 
೧. ನಮೋ ನಮೋ : ದ್ವಿರುಕ್ತಿ : : ಧೀರ ಶೂರ : ಜೋಡುನುಡಿ 
೨. ಲೋಪ ಸಂಧಿ : ಸ್ವರ ಸಂಧಿ : : ಆದೇಶ ಸಂಧಿ : ವ್ಯಂಜನಸಂಧಿ
೩. ಕಟ್ಟಕಡೆಗೆ : ಕಡೆಗೆ ಕಡೆಗೆ : : ಮೊತ್ತಮೊದಲು : ದ್ವಿರುಕ್ತಿ 
೪. ಶರಚ್ಚಂದ್ರ : ಶ್ಚುತ್ವ ಸಂಧಿ : : ದಿಗಂತ : ಜಶ್ತ್ವಸಂಧಿ
 
ಇ) ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ. 
೧. ತಾಳಿದವನು ಬಾಳಿಯಾನು / ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೆ?
* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.
* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ಅತಿಯಾಗಿ ಕೋಪಮಾಡಿಕೊಳ್ಳದೆ ಸಮಾಧಾನದಿಂದ ಇರಬೇಕು. ಕೋಪ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿಸುತ್ತದೆ.
* ಕೋಪಂ ಅನರ್ಥ ಸಾಧನಂ ಎಂಬ ಮಾತಿನಂತೆ ಕೋಪವು ಕೆಡುಕನ್ನು ಉಂಟುಮಾಡುತ್ತದೆ. ಕ್ಷಣಕಾಲ ಕೋಪದ ಕೈಗೆ ಬುದ್ಧಿ ಕೊಟ್ಟರೆ ಅದು ನಮ್ಮನ್ನು ಮಾತ್ರವಲ್ಲದೆ ಅದಕ್ಕೆ ಗುರಿಯಾದವರನ್ನೂ ಅಪಾಯಕ್ಕೆ ನೂಕುತ್ತದೆ. ’ಒಬ್ಬ ವ್ಯಕ್ತಿಯನ್ನು ನಾಶ ಪಡಸಬೇಕೆಂದರೆ ಆತನು ಕೋಪಗೊಳ್ಳಿವಂತೆ ಮಾಡಬೇಕು’ ಎಂಬ ಮಾತಿದೆ. ಕುಂಬಾರನು ಹಲವು ದಿನಗಳು ಶ್ರಮ ಪಟ್ಟು ತಯಾರಿಸಿದ ಮಡಕೆಯನ್ನು ಒಂದು ದೊಣ್ಣೆಯಿಂದ ನಾಶ ಮಾಡಿದಂತೆ, ಕ್ಷಣಿಕ ಕೋಪವು ಅನಾಹುತವನ್ನು ಉಂಟುಮಾಡುತ್ತದೆ. ಆದರೆ ಅದನ್ನು ಸರಿಪಡಿಸಲಾಗುತ್ತದೆಯೇ? ಕೋಪದಲ್ಲಿ ಕುಯ್ದುಕೊಂಡ ಮೂಗು ಶಾಂತವಾದ ನಂತರ ಚಿಂತಿಸಿದರೆ ಮತ್ತೆ ಸರರಿಂiಗುತ್ತದೆಯೇ? ಆದ್ದರಿಂದ ’ತಾಳ್ಮೆಯಿಂದ ಆಲೋಚಿಸಿ, ಕೋಪವನ್ನು ಹಿಂದಿಕ್ಕಿ ಮುನ್ನಡೆದವರೇ ಜೀವನದಲ್ಲಿ ವಿಜಯಶಾಲಿಗಳಾಗಲು ಸಾಧ್ಯ.’ ಎಂಬುದು ಈ ಗಾದೆಯ ಆಶಯವಾಗಿದೆ.
 
೨. ಮನಸಿದ್ದರೆ ಮಾರ್ಗ. 
    ಯಾವುದೇ ಕೆಲಸ ಮಾಡುವಾಗ ಅದರ ಸಾಧನೆಗೆ ಎರಡು ಅ೦ಶಗಳು ಮುಖ್ಯ - ಒ೦ದು, ಕೆಲಸವನ್ನು ಮಾಡುವ ಸಾಮರ್ಥ್ಯ, ಇನ್ನೊಂದು ಮನಸ್ಸಿಟ್ಟು ಆ ಕೆಲಸ ಮಾಡಿ ಮುಗಿಸುವ ಪ್ರಯತ್ನ, ಸಾಮರ್ಥ್ಯ-ಪ್ರಯತ್ನಗಳು ಒಟ್ಟು ಸೇರಿದಾಗ ಕಾರ್ಯಸಾಧನೆ ಕಟ್ಟಿಟ್ಟ ಬುತ್ತಿ. ಸಾಮರ್ಥ್ಯಕ್ಷಮತೆಗಳಿದ್ದರೂ ಮನಸ್ಸು-ಪ್ರಯತ್ನಗಳಿರದಿದ್ದರೆ ಕೆಲಸ ಹೇಗೆ ಸಾಧ್ಯ ವಾದೀತು? ಒ೦ದು ಕೆಲಸ ಆಗದೇ ಇರುವುದಕ್ಕೆ ಸಾಮರ್ಥ್ಯ ಅಥವಾ, ಪ್ರಯತ್ನದ ಕೊರತೆಯೇ ಕಾರಣ. ಆದರೆ ಹೆಚ್ಚಾಗಿ ನೋಡಿದರೆ ಪ್ರಯತ್ನದ ಅಭಾವವೇ ಕಂಡುಬರುತ್ತದೆ. ನಮ್ಮ ಅನೇಕ ವಿದ್ಯಾರ್ಥಿಗಳು ಬುದ್ಧಿವ೦ತರಾಗಿದ್ದರೂ, ಮಸಸ್ಸಿಟ್ಟು ಪ್ರಯತ್ನಿಸದೇ ಇರುವುದರಿ೦ದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಿಗುವುದಿಲ್ಲ. ಓದಬೇಕೆಂಬ ಹಠವಿದ್ದರೆ ಪುಸ್ತಕಗಳನ್ನು ಎಲ್ಲೆಲ್ಲಿಂದಲೋ ಒದಗಿಸಿಕೊ೦ಡು, ಓದಿ ಪಾಸಾಗಬಹುದು. ಹಲವು ವೇಳೆ ಎಲ್ಲ ಪುಸ್ತಕಗಳನ್ನು ಹೊಂದಿದ್ದರೂ, ಓದಲು ಮನಸ್ಸಿಲ್ಲದೇ ಅನುತ್ತೀರ್ಣಪಾಗುವವರೂ ಇದ್ದಾರೆ. 

    ಒ೦ದು ಸೂಕ್ತಿ ಇದೆ - 'ಹೊರಟರೆ ಇರುವೆಯೂ ನೂರು ಯೋಜನೆ ಹೋಗುತ್ತದೆ, ಹೊರಡದಿದ್ದರೆ ಗರುಡನೂ ಒ೦ದು ಹೆಜ್ಜೆ ಮು೦ದೆ ಹೋಗುವುದಿಲ್ಲ, ಇದ್ದಲ್ಲಿಯೇ ಇರುತ್ತಾನೆ. ಈ ಸೂಕ್ತಿಯು ಕಲಸ ಮಾಡುವುದರಲ್ಲಿ ಮನಸ್ಸಿನ ಪಾತ್ರವೇನು ಎ೦ಬುದನ್ನು ಹೇಳುತ್ತದೆ. 'ಮನಸ್ಸಿದ್ದರೆ ಮಹಾದೇವ' ಎನ್ನುವ ಗಾದೆಯೂ, ಇಂಗ್ಲಿಷಿನಲ್ಲಿ "Where there is a will there is a way" ಎಂಬ ಮಾತೂ ಇದೇ ಅರ್ಥವನ್ನು ನೀಡುತ್ತವೆ.
**********











10ನೇ ತರಗತಿ ಕನ್ನಡ ಗದ್ಯ-01-ಶಬರಿ-ಚಿತ್ರಗಳ ಸಂಗ್ರಹ

 ಶಬರಿ ಪಾಠಕ್ಕೆ ಪೂರಕವಾದ ಚಿತ್ರಗಳ ಸಂಗ್ರಹ













***********















10ನೇ ತರಗತಿ ಕನ್ನಡ ಗದ್ಯ-01-ಶಬರಿ-ಟಿಪ್ಪಣಿಗಳು

ಶಬರಿ ನಾಟಕದಲ್ಲಿರುವ ಹೆಚ್ಚುವರಿ ಟಿಪ್ಪಣಿಗಳು

ಶಬರಿ : ಶಬರನ ಮಗಳು, ಶಬರನ ಮಗಳಾದ್ದರಿಂದ 'ಶಬರಿ' ಎಂಬ ಹೆಸರಾಯಿತು. ಮತಂಗ ಋಷಿಯ ಶಿಷ್ಯೆ.


************

ಮತಂಗ : ಒಬ್ಬ ಬ್ರಹ್ಮರ್ಷಿ. ಋಷ್ಯಮೂಕ ಪರ್ವತದ ಬಳಿ ತಪಸ್ಸು ಮಾಡಿಕೊಂಡಿದ್ದ. ವಾಲಿಯು ದುಂದುಭಿಯೆಂಬ ರಕ್ಕಸನನ್ನು ಕೊಂದು ಮದೋನ್ಮತ್ತನಾಗಿ ಕಳೇಬರವನ್ನು ಆಶ್ರಮಕ್ಕೆ ಎಸೆದಾಗ ಋಷ್ಯಾಶ್ರಮವು ಕಲುಷಿತಗೊಂಡಿತು. ಇದರಿಂದ ಕ್ರುದ್ಧನಾದ ಮತಂಗಮುನಿಯು "ವಾಲಿಯು ಈ ಆಶ್ರಮವನ್ನು ಪ್ರವೇಶ ಮಾಡಿದರೆ ಸಾವು ಸಂಭವಿಸಲಿ” ಎಂದು ಶಪಿಸಿದನು. ವಾಲಿಯಿಂದ ಭಯಗ್ರಸ್ತನಾಗಿದ್ದ ಸುಗ್ರೀವನು ಇಲ್ಲಿ ನೆಲೆಸಿದ್ದನು. ಶಬರಿಯು ಮತಂಗರ ಆಶ್ರಮದಲ್ಲಿದ್ದಳು. 


*******

ಭೂಮಿಜಾತೆ : ಸೀತೆ, ಭೂಮಿಯ ಮಗಳು. ಜನಕ ಮಹಾರಾಜನು ಸಂತಾನ ಫಲಕ್ಕಾಗಿ ಪುತ್ರಕಾಮೇಷ್ಠಿ ಮಾಡಿ ಮಿಥಿಲೆಯಲ್ಲಿ ಭೂಮಿಯನ್ನು ಉಳುಮೆ ಮಾಡುತ್ತಿದ್ದಾಗ ದೊರೆತ ಶಿಶುವೇ ಸೀತೆ. ಹೀಗಾಗಿ ಸೀತೆಗೆ 'ಭೂಮಿಜಾತೆ’ಯೆಂದು ಮತ್ತೊಂದು ಹೆಸರು. 


*********
ಚಿತ್ರಕೂಟ : ಒಂದು ಪರ್ವತ. ಉತ್ತರ ಭಾರತದ ಪಯೋಷ್ಣಿ ನದಿಯ ಪಕ್ಕದಲ್ಲಿದೆ. ಶ್ರೀರಾಮನು ಸೀತಾಲಕ್ಷ್ಮಣರೊಂದಿಗೆ ಅರಣ್ಯವಾಸಕ್ಕೆ ಹೊರಟಾಗ ಮೊತ್ತಮೊದಲು ಇಲ್ಲಿ ಆಶ್ರಮವನ್ನು ಕಟ್ಟಿಕೊಂಡನು. ಭರತನು ಶ್ರೀರಾಮನನ್ನು ಭೇಟಿಯಾಗಿ ಆತನ ಪಾದುಕೆಗಳನ್ನು ಇಲ್ಲಿ ಪಡೆದನು.
ಭರತನು ಪಾದುಕೆಗಳನ್ನು ಸ್ವೀಕರಿಸುತ್ತಿರುವುದು.
********

ದಶರಥ : ಅಯೋಧ್ಯೆಯ ಅರಸು. ರಾಮ, ಲಕ್ಷ್ಮಣ, ಭರತ, ಶತ್ರುಘ್ನ ಈತನ ಮಕ್ಕಳು. ಕೌಸಲ್ಯೆ, ಸುಮಿತ್ರೆ, ಕೈಕೆ ಈತನ ಮಡದಿಯರು.

ರಾಮನು ಕಾಡಿಗೆ ತೆರಳಿದ ನಂತರ ದುಃಖಿತನಾಗಿರುವ ದಶರಥ
*********

ಸೌಮಿತ್ರಿ : ಲಕ್ಷ್ಮಣ, ದಶರಥನ ಎರಡನೆಯ ಮಡದಿಯಾದ ಸುಮಿತ್ರೆಯ ಮಗ ಲಕ್ಷ್ಮಣ. ಸುಮಿತ್ರೆಯ ಮಗನಾದುದರಿಂದ 'ಸೌಮಿತ್ರಿ' ಎಂದು ಈತನನ್ನು ಕರೆಯುತ್ತಾರೆ. 



****************

ದನು : ದಂಡಕಾರಣ್ಯದಲ್ಲಿ ವಾಸಮಾಡುತ್ತಿದ್ದ ಕಬಂಧ ಎಂಬ ಹೆಸರಿನ ರಾಕ್ಷಸ. ಹಿಂದಣ ಜನ್ಮದಲ್ಲಿ ವಿಶ್ವಾವಸು ಎಂಬ ಗಂಧರ್ವನಾಗಿದ್ದ. ಈತ ಸ್ಥೂಲಶಿರನೆಂಬ ಮುನಿಯನ್ನು ಅಪಮಾನಿಸಿದ್ದರಿಂದ ರಾಕ್ಷಸನಾಗಿ ಜನಿಸಿದ. ಒಮ್ಮೆ ಇಂದ್ರನ ವಜ್ರಾಯುಧದ ಪ್ರಹಾರದಿಂದ ಇವನ ಮುಖಕುಸಿದು ಹೊಟ್ಟೆಯೊಳಗೆ ಸೇರಿಕೊಂಡಿತು. ಹಾಗಾಗಿ ಈತನಿಗೆ ಉದರಮುಖ ಎಂಬ ಹೆಸರುಬಂತು. ರಾಮಲಕ್ಷ್ಮಣರಿಂದ ಈತನಿಗೆ ಶಾಪವಿಮೋಚನೆಯಾಯ್ತು. ಶಬರಿಯ ವೃತ್ತಾಂತವನ್ನು ರಾಮನಿಗೆ ತಿಳಿಸಿದ ಈತ ಸುಗ್ರೀವನಲ್ಲಿ ಸಖ್ಯಮಾಡಿ ಸೀತೆಯನ್ನು ಮರಳಿ ಪಡೆಯಬಹುದು ಎಂಬ ಸಲಹೆಯನ್ನು ನೀಡುತ್ತಾನೆ. 

ಕಬಂಧ ಅಥವಾ ಉದರಮುಖನೊಡನೆ ಯುದ್ಧ ಮಾಡುತ್ತಿರುವ ರಾಮ-ಲಕ್ಷ್ಮಣರು
*************
 ಜಟಿಲಕಬರಿ : ಜಟಿಲ-ಜಡೆಯಾಕಾರದ, ಕಬರಿ - ತುರುಬು = ಜಡೆಯಾಕಾರದ ತುರುಬುಳ್ಳವಳು - ಶಬರಿ. 

*****************************

ಮೇಳ : ನಾಟಕಗಳಲ್ಲಿ ಹಾಡುವುದಕ್ಕಾಗಿ ಇರುವ ಒಂದು ವರ್ಗ ಇವರು ರಂಗದಲ್ಲಿ ಕಾಣಿಸಿಕೊಂಡು ನಾಟಕದ ಸನ್ನಿವೇಶಕ್ಕೆ ತಕ್ಕಂತೆ ಹಾಡುತ್ತಾರೆ.

*******

ಬಲವಂದು : ಪ್ರದಕ್ಷಿಣಾಕಾರವಾಗಿ (ಎಡದಿಂದ ಬಲಕ್ಕೆ) ಸುತ್ತುಬಂದು ಎಂದರ್ಥ. ದೇವರಿಗೆ, ತುಳಸಿಕಟ್ಟೆಗೆ, ಕಾಮಧೇನು, ಕಲ್ಪವೃಕ್ಷಗಳಿಗೆ, ಹೋಮಕುಂಡ ಮುಂತಾದವುಗಳಿಗೆ ಸುತ್ತುವರಿಯುವಾಗ ಅವು ನಮ್ಮ ಬಲಭಾಗದಲ್ಲಿರುವಂತೆ ಸುತ್ತುವರಿಯುತ್ತಾರೆ. ಆಗ ಅದು ಪ್ರದಕ್ಷಿಣೆಯಾಗುತ್ತದೆ. ಸುತ್ತುವರಿಯಬೇಕಾದ ವಸ್ತುವನ್ನು ಎಡಭಾಗದಲ್ಲಿರುವಂತೆ ಸುತ್ತುವರಿದರೆ (ಎಡಬಂದು) ಅದು ಅಪ್ರದಕ್ಷಿಣೆಯಾಗುತ್ತದೆ. 


*************

ಪರ್ಣಶಾಲೆ : ಎಲೆಗಳಿಂದ ಮೇಲ್ಚಾವಣಿ ನಿರ್ಮಿಸಿರುವ ಕುಟೀರ. 


******************




ಚಿತ್ರ ಕೃಪೆ: ಗೂಗಲ್ ಚಿತ್ರಗಳು

*******ಕನ್ನಡ ದೀವಿಗೆ******

10ನೇ ತರಗತಿ ಕನ್ನಡ ಗದ್ಯ-01-ಶಬರಿ-ಸಾರಾಂಶ

ಶಬರಿ ಗೀತ ನಾಟಕದ ಸಾರಾಂಶ
'ಜನಪ್ರಿಯ ವಾಲ್ಮೀಕಿ ರಾಮಾಯಣ'ದ ಅರಣ್ಯಕಾಂಡದಲ್ಲಿರುವ 'ಶಬರಿಯ ಸಿದ್ಧಿ' ಭಾಗದಲ್ಲಿ ಶಬರಿಯ ಕಥೆ ಹೀಗಿದೆ....


        ಕಬಂಧನು ಸ್ವರ್ಗವನ್ನು ಸೇರಿದಮೇಲೆ ರಾಮಲಕ್ಷ್ಮಣರು ಪಶ್ಚಿಮ ದಿಕ್ಕನ್ನು ಹಿಡಿದು ಅವನು ತೋರಿಸಿದ ಮಾರ್ಗವನ್ನು ಅನುಸರಿಸಿ ನಡೆದರು. ನಾನಾ ಬಗೆಯ ಗಿಡಮರಗಳನ್ನು ನೋಡುತ್ತ, ಜೇನಿಗೆ ಸಮನಾದ ಹಣ್ಣುಗಳನ್ನು ಸವಿಯುತ್ತ, ಸುಗ್ರೀವನನ್ನು ನೋಡುವ ತವಕದಿಂದ ಪಂಪಾ ಸರೋವರ ಪಶ್ಚಿಮ ದಡವನ್ನು ಸೇರಿ ಅಲ್ಲಿದ್ದ ಶಬರಿಯ ಆಶ್ರಮವನ್ನು ಕಂಡರು. ಆಶ್ರಮವನ್ನು ಸೇರಿ ತನ್ನ ಸಮೀಪಕ್ಕೆ ಬಂದ ರಾಮಲಕ್ಷ್ಮಣರನ್ನು ನೋಡಿ ಶಬರಿ ಎದ್ದು ಕೈಮುಗಿದು ಅವರನ್ನು ಅರ್ಘ್ಯಪಾದ್ಯಗಳಿಂದ ಉಪಚರಿಸಿದಳು. ಆ ಬಳಿಕ ಶ್ರೀರಾಮನು ಆಕೆಯನ್ನು ಕುರಿತು “ಅಮ್ಮ ಶಬರಿ, ನಿನ್ನ ತಪ್ಪಸ್ಸು ಯಾವ ತಡೆಯೂ ಇಲ್ಲದೆ ನೆರವೇರುತ್ತಿದೆಯ? ಗುರು ಶುಶ್ರೂಷೆಯ ಫಲ ಸಫಲ ಹೊಂದತೆ?” ಎಂದು ಕೇಳಿದನು. 

    ಶಬರಿ ಎದ್ದು ನಿಂತು “ರಾಮಚಂದ್ರ, ನಿನ್ನ ದರ್ಶನದಿಂದ ನನ್ನ ತಪಸ್ಸು ಫಲಿಸಿತು. ದೇವೋತ್ತಮನಾದ ನಿನ್ನನ್ನು ಪೂಜಿಸಿ ನನ್ನ ಬಾಳು ಸಾರ್ಥಕವಾಯಿತು. ನಿನ್ನ ಅನುಗ್ರಹಕ್ಕೆ ಪಾತ್ರಳಾದ ನನಗೆ ಅಕ್ಷಯ ಲೋಕಗಳು ದೊರಕುವುವು. ನೀನು ಚಿತ್ರಕೂಟದಲ್ಲಿದ್ದಾಗಲೆ ಇಲ್ಲಿದ್ದ ಋಷಿಗಳು ಸ್ವರ್ಗಕ್ಕೆ ತೆರಳಿದರು. ನಿನ್ನ ಬರುವಿಕೆಗಾಗಿಯೆ ನಾನು ಕಾದಿದ್ದೆ. ಪಂಪಾಸರೋವರದ ತೀರದಲ್ಲಿ ಬೆಳೆದ ಹಣ್ಣುಗಳನ್ನು ನಿನಗಾಗಿಯೇ ಸಂಗ್ರಹಿಸಿ ಇಟ್ಟಿದ್ದೇನೆ. ಅದನ್ನು ಸ್ವೀಕರಿಸಿ ನನ್ನನ್ನು ಅನುಗ್ರಹಿಸಿ” ಎಂದಳು.
ಆಗ ರಾಮಲಕ್ಷ್ಮಣರು ಆ ಆಶ್ರಮದಲ್ಲಿ ಮತಂಗಋಷಿಗಳು ಪ್ರಭಾವವನ್ನು ನೋಡಬಯಸಿದರು. ಶಬರಿ ಅವರನ್ನು ಅಲ್ಲಿಗೆ ಕರೆದೊಯ್ದು ಋಷಿಗಳ ಮಹಿಮೆಯನ್ನು ಅವರಿಗೆ ತೋರಿಸಿದಳು. “ರಘುನಂದನ, ಜಿಂಕೆಗಳಿಂದಲೂ ಪಕ್ಷಿಗಳಿಂದಲೂ ಕೂಡಿದ ಈ ಮತಂಗವನವನ್ನು ನೋಡು. ಭಾವಿತಾತ್ಮರಾದ ನಮ್ಮ ಗುರುಗಳು ಯಜ್ಞಮಾಡುತ್ತಿದ್ದ ಈ ಸ್ಥಳವನ್ನೂ ನೋಡು. ಅವರ ತಪಃಪ್ರಭಾವದಿಂದ ಯಜ್ಞವೇದಿಗಳು ಇನ್ನೂ ಹೊಳೆಯುತ್ತಿವೆ. ಅವರು ಮರಗಳಲ್ಲಿ ಆರಹಾಕಿದ ನಾರುಮುಡಿಗಳು ಇನ್ನೂ ಹಸಿ ಹಸಿಯಾಗಿವೆ. ಅವರು ಪೂಜೆಮಾಡಿದ ಹೂಮಾಲೆ ಇನ್ನೂ ಬಾಡದಾಗಿದೆ. ಈ ವನವನ್ನೆಲ್ಲ ನೋಡಿದೆಯಲ್ಲವೆ ನೀನು? ಇನ್ನು ಅಪ್ಪಣೆಯಾದರೆ ಈ ಕಳೇಬರವನ್ನು ವಿಸರ್ಜಿಸಿ ನಾನು ಸೇವಿಸುತ್ತಿದ್ದ ಋಷಿಗಳ ಬಳಿಗೆ ಹೋಗುತ್ತೇನೆ. ”
ಶಬರಿಯ ಮಾತನ್ನು ಕೇಳಿ ರಾಮನಿಗೆ ಸಂತೋಷವಾಯಿತು. ಅಂತೆಯೆ ಆಕೆ ಮಾಡಿದ ಉಪಚಾರದಿಂದ ತೃಪ್ತಿಯೂ ಉಂಟಾಯಿತು. ಆ ಬಳಿಕ ಶಬರಿಯ ದೇಹತ್ಯಾಗಕ್ಕೆ ರಾಮನು ಅಪ್ಪಣೆ ಕೊಡಲು, ಆಕೆ ತನ್ನ ದೇಹವನ್ನೂ ಯಜ್ಞೇಶರನಿಗೆ ಅರ್ಪಿಸಿದಳು. ತತ್‌ಕ್ಷಣವೆ ಅಗ್ನಿಗೆ ಸಮಾನವಾದ ದಿವ್ಯದೇಹವನ್ನೂ ವಸ್ತ್ರಾಲಂಕಾರಗಳನ್ನೂ ಧರಿಸಿ ಶೋಭಿಸುತ್ತ ಪುಣ್ಯಾತ್ಮರಿರುವ ಲೋಕವನ್ನು ಕುರಿತು ತೆರಳಿದಳು.
    ಶಬರಿ ಹೊರಟು ಹೋದಮೇಲೆ, ರಾಮನು ಲಕ್ಷ್ಮನನ್ನು ಕುರಿತು, “ವತ್ಸ, ಸೋಜಿಗವನ್ನುಂಟುಮಾಡುವ ಈ ಆಶ್ರಮವನ್ನು ನೋಡಿ, ಹಾಗೂ ಇಲ್ಲಿಯ ತೀರ್ಥಗಳಲ್ಲಿ ಮಿಂದು, ಪಿತೃಗಳನ್ನು ತೃಪ್ತಿಪಡಿಸಿದುದಾಯಿತು. ಇಲ್ಲಿಗೆ ನಮ್ಮ ಅಶುಭ ಕೊನೆಗೊಂಡಿತು; ನಮಗೆ ಕಲ್ಯಾಣವಾಗುವ ಕಾಲ ಹತ್ತಿರವಾಯಿತು. ಆದಕಾರಣ ಋಷ್ಯಮೂಕಪರ್ವತಕ್ಕೆ ಹೋಗಿ ಸುಗ್ರೀವನನ್ನು ನೋಡಲು ಕಾತರನಾಗಿದ್ದೇನೆ. ಅವನಿಂದ ನಮಗೆ ಸೀತೆ ದೊರಕಬೇಕಾಗಿದೆ” ಎಂದು ಹೇಳಿ ಅವನನ್ನು ತ್ವರೆಗೊಳಿಸಿದನು. ಅಲ್ಲಿಂದ ಆ ರಾಜಕುಮಾರರಿಬ್ಬರೂ ಹೊರಟು, ಅನೇಕ ಗಿಡಮರಗಳಿಂದಲೂ ಬಳ್ಳಿಗಳಿಂದಲೂ ಸುತ್ತುವರಿದು, ಕಮಲಗಳಿಂದ ಕೂಡಿದ ಸ್ವಚ್ಚವಾದ ಪಂಪಾಸರೋವರವನ್ನು ನೋಡಿದರು. ಆ ಸರೋವರದ ಚೆಲುವು ಶ್ರೀರಾಮನ ಮನಸ್ಸನ್ನು ಸೆಳೆಯಿತು. ವಿರಹಯಾತನೆಯಿಂದ ಪೀಡಿತನಾದ ಶ್ರೀರಾಮನು ಸೀತೆಯನ್ನು ನೆನೆನೆನೆದು ಲಕ್ಷ್ಮಣನೊಡನೆ ಬಹಳ ಹೊತ್ತು ಆ ಸರೋವರದ ಚೆಲುವನ್ನೂ ಸುತ್ತಣ ವನದ ಸೌಂದರ್ಯವನ್ನೂ ಬಣ್ಣಿಸಿ. ನೋಡಿ ಆಸ್ವಾದಿಸುತ್ತಿದ್ದನು.










10ನೇ ತರಗತಿ ಕನ್ನಡ ಗದ್ಯ-01-ಶಬರಿ-ಕವಿಪರಿಚಯ

ಗದ್ಯ-೨ ಶಬರಿ

ಪುತಿನ
ಪು.ತಿ.ನರಸಿಂಹಾಚಾರ್ ಅವರ ಕಿರು ಪರಿಚಯ (ಪರೀಕ್ಷಾ ದೃಷ್ಟಿಯಿಂದ)

    ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ಯ ಅವರುಕ್ರಿ. ಶ. ೧೯೦೫ ರಲ್ಲಿ ಮಂಡ್ಯಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದರು. 
    ಇರ ಅಹಲ್ಯೆ, ಗೋಕುಲ ನಿರ್ಗಮನ, ಶಬರಿ, ವಿಕಟಕವಿವಿಜಯ, ಹಂಸದಮಯಂತಿ ಮತ್ತು ಇತರ ರೂಪಕಗಳು, ಹಣತೆ, ರಸಸರಸ್ವತಿ, ಗಣೇಶದರ್ಶನ, ಶಾರದಯಾಮಿನಿ, ಶ್ರೀಹರಿಚರಿತೆ, ರಥಸಪ್ತಮಿ  ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. 
    ಶ್ರೀಯುತರ ’ಶ್ರೀ ಹರಿಚರಿತೆ’ ಕೃತಿಗೆ ಕರ್ನಾಟಕ ಸರ್ಕಾರದಿಂದ ’ಪಂಪ ಪ್ರಶಸ್ತಿ’ ನೀಡಿಗೌರವಿಸಲಾಗಿದೆ. ಶ್ರೀಯುತರಿಗೆ ’ಪಂಪ ಪ್ರಶಸಿ’ ಮತ್ತುಕೇಂದ್ರ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

************
ಪು.ತಿ.ನರಸಿಂಹಾಚಾರ್ ಅವರ ಬಗ್ಗೆ ಹೆಚ್ಚುವರಿ ಮಾಹಿತಿ
    ಪು.ತಿ. ನರಸಿಂಹಾಚಾರ್ - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ.
    ಪು.ತಿ.ನರಸಿಂಹಾಚಾರ್ ಅವರದು ಕನ್ನಡ ಸಾಹಿತ್ಯದಲ್ಲಿ ಬಲು ದೊಡ್ಡ ಹೆಸರು. ಜೀವನ ಹಾಗೂ ಸಾಹಿತ್ಯದಲ್ಲಿ ತುಂಬೊಲವನ್ನು ಹರಿಸಿದ, ಬದುಕು ಭಗವಂತನ ಕೃಪೆಯಿಂದ ಆದುದು ಎಂದು ಭಾವಿಸಿದ ಕವಿ. ನವೋದಯ ಸಾಹಿತ್ಯದ ಮೊದಲ ತಲೆಮಾರು ಕಂಡ ಹಲವು ಹಿರಿಯ ಕವಿಗಳ ಸಾಲಿಗೆ ಸೇರಿದ ಹಿರಿದಾದ ಚೇತನ. ಬಿ.ಎಂ.ಶ್ರೀ, ಬೇಂದ್ರೆ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿಯಂತಹ ಹಿರಿಯ ಕವಿಗಳ ಗುಂಪಿನಲ್ಲಿ ಇದ್ದವರು.               
ಪುತಿನ

      ಜೀವನ 
    ಪು.ತಿ.ನ. ಎಂಬುದು ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಎಂಬ ಹೆಸರಿನ ಸಂಕ್ಷಿಪ್ತ ರೂಪ (ಹೆಸರು). ಇವರ ತಂದೆ ವೃತ್ತಿಯಿಂದ ವೈದಿಕರಾಗಿದ್ದವರು. ಮೇಲುಕೋಟೆಯಲ್ಲಿ ೧೯೦೫ ಮಾರ್ಚ್ ೧೭ರಂದು ಜನಿಸಿದ ಇವರ ಮೇಲೆ ಅಲ್ಲಿನ ಆಧ್ಯಾತ್ಮಿಕ ಪರಿಸರ ವೈಯಕ್ತಿಕವಾಗಿ ಹಾಗೂ ಸಾಹಿತ್ಯ ಬದುಕಿನಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ಪ್ರಕೃತಿ ಮತ್ತು ಪ್ರಕೃತಿಯಲ್ಲಿ ದೈವತ್ವದ ಹುಡುಕಾಟ ಅವರ ಕಾವ್ಯದ ಮೂಲಭೂತ ಅಂಶವಾಗಿದೆ. ಪು.ತಿ.ನ. ಅವರ ಬಾಲ್ಯ ಅರಳಿದ್ದು ತಂದೆಯ ಊರಾದ ಮೇಲುಕೋಟೆ ಹಾಗೂ ತಾಯಿಯ ಊರಾದ ಗೊರೂರು ನಡುವೆ. ಮುಂದೆ ವಯಸ್ಕರಾದಾಗ ಹೆಂಡತಿಯ ಊರಾದ ಹೆಮ್ಮಿಗೆ, ಓದಿನ ಊರಾದ ಮೈಸೂರು, ವೃತ್ತಿನಗರವಾದ ಬೆಂಗಳೂರು, ಮಲ್ಲೇಶ್ವರಗಳ ನಡುವೆ ಅವರ ಮನಸ್ಸು ಸುಳಿದಾಡಿದೆ. 
          ತಂದೆಯವರು ವೃತ್ತಿಯಿಂದ ವೈದಿಕರಾದರೂ ಜೀವನ ನಿರ್ವಹಣೆ ದುರ್ಬರವೆನಿಸಿದ ಕಾರಣ ಹಾಗೂ ಪು.ತಿ.ನ. ಅವರ ಪ್ರಕೃತಿಗೆ ಒಗ್ಗದಿದ್ದ ಕಾರಣದಿಂದ ಮೈಸೂರನ್ನು ಸೇರಿ ವಿದ್ಯಾಭ್ಯಾಸಕ್ಕೆ ತೊಡಗಿದರು. ಮೂಲತಃ ಗ್ರಾಮ್ಯ ತಮಿಳನ್ನು ಆಡುತ್ತಿದ್ದು ಮೈಸೂರಲ್ಲಿ ಆಂಗ್ಲಭಾಷೆ ಮತ್ತು ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದರು. ಅಲ್ಲಿ ಗುರು ಹಿರಿಯಣ್ಣ, ಆತ್ಮೀಯ ಮಿತ್ರರಾದ ಶಿವರಾಮ ಶಾಸ್ತ್ರಿ, ಹಾಗೂ ತೀ.ನಂ. ಶ್ರೀಕಂಠಯ್ಯನವರ ಸಂಪರ್ಕ ಒದಗಿ ಬಂತು. 
         ನಂತರ ಬೆಂಗಳೂರಿನಲ್ಲಿ ಸೈನ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಫಿರಂಗಿಯವರ (ಇಂಗ್ಲೀಷರ) ನೇರ ಕೈಕೆಳಗೆ ಕೆಲಸ ಮಾಡುವ ಸಂದರ್ಭ ಒದಗಿತು. ಸೈನ್ಯದ ಮುಖಂಡರು ಚೆನ್ನಾಗಿ ನಡೆಸಿಕೊಂಡ ಕಾರಣ ಪು.ತಿ.ನ.ರವರ ರೀತಿನೀತಿಗಳು ಬದಲಾಗದೆ ನೆಮ್ಮದಿಯಾಗಿ ಕೃತಿರಚನೆ ಮಾಡಲು ಸಾಧ್ಯವಾಯಿತು. 
 
                         ಕೃತಿಗಳು 
    ಪು.ತಿ.ನ. ಅವರು ಒಟ್ಟು ಹನ್ನೊಂದು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವುಗಳು ಕ್ರಮವಾಗಿ ಹಣತೆ, ಮಾಂದಳಿರು, ಶಾರದ ಯಾಮಿನಿ, ಗಣೇಶ ದರ್ಶನ, ರಸ ಸರಸ್ವತಿ, ಮಲೆ ದೇಗುಲ, ಹೃದಯ ವಿಹಾರಿ, ಇರುಳು ಮೆರುಗು, ಹಳೆಯ ಬೇರು ಹೊಸ ಚಿಗುರು, ಎಂಬತ್ತರ ನಲುಗು. ಹನ್ನೊಂದನೆಯದು ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್ ಪ್ರಕಟಿಸಿದ `ಹಣತೆಯ ಹಾಡು' ಆಗಿದೆ. `ಹಣತೆ'ಯಿಂದ ಆರಂಭವಾದ ಅವರ ಕಾವ್ಯ ಜೀವನ `ಹಣತೆಯ ಹಾಡು' ಕವನ ಸಂಕಲನದೊಂದಿಗೇ ಕೊನೆಗೊಂಡಿದ್ದು ವಿಪರ್ಯಾಸದ ಸಂಗತಿಯಾಗಿದೆ. 
      ಪು.ತಿ.ನ. ಅವರು ಕವಿ ಮಾತ್ರವಲ್ಲದೆ ಉತ್ತಮ ಗೀತನಾಟಕಕಾರರೂ ಆಗಿದ್ದಾರೆ. ಅವರ ಒಂಬತ್ತು ಗೀತನಾಟಕಗಳಲ್ಲಿ ಗೀತರೂಪಕಗಳೂ ಸೇರಿವೆ. ಅವುಗಳು ಕ್ರಮವಾಗಿ ಗೋಕುಲ ನಿರ್ಗಮನ, ಶ್ರೀಹರಿಚರಿತೆ, ಅಹಲ್ಯೆ, ಸತ್ಯಾಯನ ಹರಿಶ್ಚಂದ್ರ, ವಿಕಟಕವಿ ವಿಜಯ, ಶಬರಿ, ಹಂಸದಮಯಂತಿ, ಹರಿಣಾಭಿಸರಣ, ದೀಪಲಕ್ಷ್ಮಿ ಆಗಿವೆ. 
        ಈ ನಾಟಕಗಳಲ್ಲಿ ಗೋಕುಲ ನಿರ್ಗಮನ, ಅಹಲ್ಯೆ, ಬಿ.ವಿ. ಕಾರಂತರ ಪ್ರಯತ್ನದಿಂದ ರಂಗಪ್ರಯೋಗ ಕಂಡಿವೆ. ಉದ್ಯಾವರ ಮಾಧವ ಆಚಾರ್ಯ ಹೇಳುವಂತೆ ಹರಿಣಾಭಿಸರಣ ಹಾಗೂ ಸತ್ಯಾಯನ ಹರಿಶ್ಚಂದ್ರ ನಾಟಕಗಳು ರಂಗ ಪ್ರಯೋಗ ಕಂಡಿವೆ. ಗೋಕುಲ ನಿರ್ಗಮನ ಅವರ ಹೆಸರಾಂತ ನಾಟಕವಾಗಿದ್ದು ಪ್ರಣಯಿಯೂ, ಸಂಗೀತಗಾರನೂ ಆಗಿರುವ ಕೃಷ್ಣ ಮುಂದೆ ಕೊಳಲನ್ನು ಬಿಸುಟು ಬೇರೆಯದೇ ಹಾದಿ ಹಿಡಿಯುವ ಸೂಚನೆ ಸಿಗುತ್ತದೆ. ಮುಂದೆ ಮಹಾಭಾರತ, ಮಧುರೆ, ದ್ವಾರಕೆಯಲ್ಲೆಲ್ಲೂ ಕೃಷ್ಣ ಕೊಳಲನ್ನು ಹಿಡಿಯುವುದಿಲ್ಲ. ಶ್ರೀಹರಿಚರಿತೆ ಆಧುನಿಕ ಯುಗದಲ್ಲಿ ಕೃಷ್ಣನ ಕಲ್ಪನೆಯನ್ನು ಸಾಕ್ಷಾತ್ಕರಿಸುವ ಪ್ರಯತ್ನವಾಗಿದೆ. 
       ಇಂತಹ ಪೌರಾಣಿಕ ಸಂಗೀತಮಯ ನಾಟಕಗಳ ರಚನೆಗೆ ಪ್ರೇರಣೆ ಸಿಕ್ಕಿದ್ದು ಹರಿಕಥೆಗಳು, ಅರಮನೆ ನಾಟಕ ಕಂಪೆನಿಗಳಲ್ಲಿದ್ದ ಒಳ್ಳೆಯ ಸಂಗೀತಗಾರರು ಮತ್ತು ಅವರ ಪಾತ್ರ ನಿರ್ವಹಣೆ, ಮಾರ್ಷ್ ಶಿವಿಲಿಯರ್‌ನ `Spring time in Paris' ಎಂಬ ಆಧುನಿಕ ಅಪೆರಾ, ತಮಿಳಿನಲ್ಲಿ `ವಲ್ಲಿ ಪರಿಣಯ' ಎನ್ನುವ ಹಾಡುಗಳಿಂದಲೇ ನಿರ್ವಹಿಸಲ್ಪಟ್ಟ ನಾಟಕ ಹಾಗೂ ಕಂಪೆನಿ ನಾಟಕಗಳಿಂದ. ಅವರೊಬ್ಬ ಗೀತರೂಪಕ ನಾಟಕಕಾರರಾಗುವುದಕ್ಕೆ ಕಾರಣ ಕಾವ್ಯ ಮತ್ತು ಸಂಗೀತ ಮೇಳೈಸಿಕೊಂಡ ಕನ್ನಡದ ಏಕೈಕ ರಚನಕಾರರಾಗಿದ್ದುದು. ಸಂಗೀತಕ್ಕೆ ಪು.ತಿ.ನ.ರವರು ಹಲವು ಹೊಸ ರಾಗಗಳನ್ನು ಕಂಡುಹಿಡಿಯುವುದರ ಮೂಲಕ ಕೊಡುಗೆ ಸಲ್ಲಿಸಿದ್ದಾರೆ ಎಂದು ಡಾ| ದೊರೆಸ್ವಾಮಿ ಅಯ್ಯಂಗಾರರು ಮೆಚ್ಚಿಗೆ ಮಾತನ್ನಾಡಿದ್ದಾರೆ. ಅವುಗಳಲ್ಲಿ ಮುಖ್ಯವಾದವು ವಾಸಂತಿ, ಸಂಜೀವಿನಿ, ಹರಿಣಿ, ಋತುವಿಲಾಸ, ಗಾಂಧಾರದೋಲ, ಋಷಭ ವಿಲಾಸ ಮತ್ತು ಇನ್ನೂ ನಾಮಕರಣವಾಗದ ಹಲವಾರು ರಾಗಗಳು ಸಾಕಷ್ಟಿವೆ. 
    ಪು.ತಿ.ನ.ರವರು ಒಳ್ಳೆಯ ಗದ್ಯ ಬರಹಗಾರರೂ ಆಗಿದ್ದರು ಎಂಬುದಕ್ಕೆ ಅವರ ಐದು ಪ್ರಬಂಧ ಸಂಕಲನಗಳು ಸಾಕ್ಷಿಯಾಗಿವೆ. ಈಚಲು ಮರದ ಕೆಳಗೆ, ಗೋಕುಲಾಷ್ಟಮಿ, ಭೀತಿ ಮೀಮಾಂಸೆ, ಧೇನುಕೋಪಾಖ್ಯಾನ, ಮಸಾಲೆದೋಸೆ ಯಂತಹ ಪ್ರಬಂಧಗಳು ಅವರ ಹಾಸ್ಯ ಪ್ರಸನ್ನತೆ, ಮಾತುಗಾರಿಕೆಯಿಂದ ಕೂಡಿವೆ. 
ಪ್ರಶಸ್ತಿ ಮತ್ತು ಪುರಸ್ಕಾರಗಳು 
         ಕವಿತೆಯ ಹಾಗೆ ಸರಳ, ಪ್ರಾಮಾಣಿಕ ಮನಸ್ಥಿತಿಯುಳ್ಳ ಹಿರಿಯ ಕವಿ ಪು.ತಿ.ನ.ರವರಿಗೆ ಸಂದ ಪ್ರಶಸ್ತಿಗಳು ಹಲವಾರು. ಇವರ "ಹಂಸ ದಮಯಂತಿ ಮತ್ತು ಇತರ ರೂಪಕಗಳು" ಎಂಬ ಕೃತಿಗೆ ೧೯೬೬ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಹಾಗೆಯೇ ಇವರ "ಗೋಕುಲ ನಿರ್ಗಮನ" ಎಂಬ ಸಂಗೀತ ಪ್ರಧಾನ ನಾಟಕ ಕನ್ನಡದ ಮೇರು ಕೃತಿಗಳ ಸಾಲಿಗೆ ಸೇರುತ್ತದೆ. ಈ ಕಾವ್ಯಮಯ ನಾಟಕದಲ್ಲಿ, ಕೃಷ್ಣನಿಗೆ ಕಂಸನಿಂದ ಆಹ್ವಾನ ಬಂದು ಗೋಕುಲದಿಂದ ದ್ವಾರಕೆಗೆ ಹೋಗಬೇಕಾಗಿ ಬಂದಾಗ, ಗೋಕುಲದ ಜನರ ಅನುರಾಗ, ರಾಧೆಯ ವ್ಯಾಕುಲತೆ ಮುಂತಾದವುಗಳನ್ನು ದಿವ್ಯವಾಗಿ ನಿರೂಪಿಸಿದ್ದಾರೆ. ಪದ್ಮಶ್ರೀ, ಪಂಪಪ್ರಶಸ್ತಿ, ನಾಡೋಜ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಡಿ.ಲಿಟ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜೊತೆಗೆ ಚಿಕ್ಕಮಗಳೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಅವರಿಗೆ ದೊರೆಯದಿದ್ದ ಪ್ರಶಸ್ತಿ ಎಂದರೆ "ಭಾರತೀಯ ಜ್ಞಾನಪೀಠ ಪ್ರಶಸ್ತಿ" ಮಾತ್ರ! ಇದಕ್ಕಿಂತ ಮಿಗಿಲಾಗಿ ಒಳ್ಳೆಯ ಹಿರಿಯ ಸ್ನೇಹಿತರೂ, ಅಭಿಮಾನಿ ಕಿರಿಯ ಸ್ನೇಹಿತರನ್ನೂ ಹಾಗೂ ಸಹೃದಯಿಗಳ ಮೆಚ್ಚಿಗೆಯನ್ನು ಪಡೆದವರಾಗಿದ್ದಾರೆ. ಅವರು ಗತಿಸಿದಾಗ ಅವರಿಗೆ ತೊಂಬತ್ಮೂರರ ವಯಸ್ಸು. 

ಕವಿ ಪುತಿನ ಅವರ ಶತಮಾನದ ಮನೆ 

 
                        ಪುತಿನ ಮನೆ, ಮೇಲುಕೋಟೆ
         
        ಪುತಿನ ಮನೆ ಸ್ಮಾರಕವಾಗಿದ್ದು ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಅಂದರೆ, ಪುತಿನ ಬದುಕಿದ್ದ ಕಾಲದಲ್ಲೇ. ಕವಿಯ ಆಶಯವೂ ಅದೇ ಆಗಿತ್ತು; 'ನಾನು ಬದುಕಿರುವಾಗಲೇ ಬಾಳಿ, ಬದುಕಿದ ನನ್ನ ಮನೆ ಸ್ಮಾರಕವಾಗಬೇಕು. ನಾನು ಬರೆದ ಸಾಹಿತ್ಯ ನಿಂತ ನೀರಾಗದೆ, ನನ್ನ ಸಾವಿನಾಚೆಯೂ ಮುಂದಿನ ಪೀಳಿಗೆಯನ್ನು ತಲುಪುವಂತಾಗಬೇಕು'. 1996ರಲ್ಲಿ ಈ ಮನೆ ಸ್ಮಾರಕವಾಗಿ, ಸರ್ಕಾರದ ತೆಕ್ಕೆ ಸೇರಿತು. 1998ರಲ್ಲಿ ಕವಿ ವಿಧಿವಶರಾದ ನಂತರ ಟ್ರಸ್ಟ್‌ನವರು ಕವಿಯ ಬಯಕೆಯಂತೆ ಮನೆಯ ಮೂಲ ರೂಪವನ್ನು ಬದಲಿಸದೇ 2000ನೇ ಇಸ್ವಿಯಲ್ಲಿ ಪ್ರಾಚ್ಯವಸ್ತು ಇಲಾಖೆಗೆ ಗುತ್ತಿಗೆ ನೀಡಿ (10 ಲಕ್ಷ ರು.), ಹೊಸ ರೂಪ ಕೊಡಲು ಮುಂದಾದರು. ಶತಮಾನದ ಅಂಚಿನಲ್ಲಿದ್ದ ಮನೆಯ ಹಳೇ ಕಂಬಗಳು, ಮಹಡಿಯ ಮೆಟ್ಟಿಲುಗಳು, ಹೆಂಚುಗಳನ್ನು ಬಳಸಿಕೊಂಡೇ ಮೂಲ ಮನೆಯ ಅಂದ, ಚಂದಕ್ಕೆ ಯಾವುದೇ ಧಕ್ಕೆ ಬಾರದಂತೆ ಕವಿ ಮನೆಯನ್ನು ಸುಂದರ ಸ್ಮಾರಕವಾಗಿಸಲಾಯಿತು. ಈ ಮನೆಯಲ್ಲಿ ಕವಿ ಪುತಿನ ಅವರ ಊರುಗೋಲು, ಬರೆಯಲು ಬಳಸುತ್ತಿದ್ದ ಮಣೆ, ಟೋಪಿ ಸೇರಿದಂತೆ ಮಹಡಿಯಲ್ಲಿ ಕುಳಿತು ಬರೆಯುತ್ತಿದ್ದ ಜಾಗವನ್ನೂ ಸಂರಕ್ಷಿಸಲಾಗಿದೆ. ಅಲ್ಲದೆ, ಕವಿಯ 'ಮನೆ ದೇಗುಲ', 'ರಥ ಸಪ್ತಮಿ', 'ಹರಿ ಚರಿತೆ', 'ಮಾಂದಳಿರು', 'ಜಾನ್ಹವಿಗೆ ಜೋಡಿ ದೀವಿಗೆ', 'ಗೋಕುಲ ನಿರ್ಗಮನ' ಸೇರಿದಂತೆ ಅನೇಕ ಕೃತಿಗಳ ಪ್ರಥಮ ಮುದ್ರಣವೂ ಇಲ್ಲಿ ನೋಡಲು ಸಿಗುತ್ತದೆ. 

ಪುತಿನ ಮನೆ 
  ಪುತಿನ ಮನೆ  
                                                                                           
ಮಾಹಿತಿ ಕೃಪೆ-ವಿಕಿಪೀಡಿಯ




ಶಬರಿ - 10ನೇ ತರಗತಿ ಗದ್ಯಪಾಠ-1(10th Kannada Lesson_'Shabari')

ಗದ್ಯ-6 ಶಬರಿ (ಗೀತನಾಟಕ)
(ಈ ಕೆಳಗಿನ ವಿಷಯಗಳಲ್ಲಿ ನಿಮಗೆ ಬೇಕಾದ ವಿಷಯದ ಮೇಲೆ ಕ್ಲಿಕ್‌ಮಾಡಿ)
************************




*************



******** ಕನ್ನಡ ದೀವಿಗೆ *******