ನನ್ನ ಪುಟಗಳು

ಟಿಪ್ಪಣಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಟಿಪ್ಪಣಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

06 ಫೆಬ್ರವರಿ 2021

10ನೇ ತರಗತಿ-ಕನ್ನಡ-ಪದ್ಯ-04-ಕೌರವೇಂದ್ರನ ಕೊಂದೆ ನೀನು-ಟಿಪ್ಪಣಿಗಳು

 ವೇದವ್ಯಾಸರು :    ಹಿಂದೂಗಳು ನಂಬುವ ಪ್ರಕಾರ ಇವರು ಪ್ರಾಚೀನ ಕಾಲದ ಒಂದು ವೇದವನ್ನು ನಾಲ್ಕು ವೇದಗಳನ್ನಾಗಿ ವಿಂಗಡಿಸಿದ ಕಾರಣ ವೇದವ್ಯಾಸ ಎಂಬ ಹೆಸರು ಬಂತು. ಈ ಹೆಸರಿನಲ್ಲಿಯೇ ಇವರು ಬಹಳ ಪರಿಚಿತರು. ವ್ಯಾಸರು ಒಬ್ಬ ವ್ಯಕ್ತಿಯೇ ಅಥವಾ ಮೇಧಾವಿಗಳ ಗುಂಪೇ ಎಂದು ತರ್ಕಿಸಲಾಗಿದೆ. ವಿಷ್ಣು ಪುರಾಣದಲ್ಲಿ ಇದರ ಬಗ್ಗೆ ಒಂದು ಕುತೂಹಲಕಾರೀ ವಿವರಣೆಯಿದೆ. 
            ಇದರ ಪ್ರಕಾರ: ಪ್ರತಿ ಮೂರನೇ (ದ್ವಾಪರ)ಯುಗದಲ್ಲಿ ವಿಷ್ಣು ವ್ಯಾಸರ ರೂಪದಲ್ಲಿ ಬಂದು ಮಾನವ ಕುಲದ ಉದ್ಧಾರಕಾಗಿ ವೇದವನ್ನು ವಿಂಗಡಿಸುತ್ತಾನೆ.
ವೇದವ್ಯಾಸರು
            ವೇದವನ್ನು ಇಪ್ಪತ್ತೆಂಟು ಬಾರಿ ವೈವಸ್ವತ ಮನ್ವಂತರದ ಮಹರ್ಷಿಗಳಿಂದ ವಿಂಗಡಿಸಲಾಗಿದೆ. ಆದ್ದರಿಂದ ಇಪ್ಪತ್ತೆಂಟು ವ್ಯಾಸರು ಬಂದು ಹೋಗಿದ್ದಾರೆ. ಇದರಲ್ಲಿ ಪ್ರಥಮವಾಗಿ ವೇದವನ್ನು ವಿಂಗಡಿಸಿದ ಸ್ವಯಂಭೂ (ಬ್ರಹ್ಮ); ಅದರ ನಂತರ ವೇದವನ್ನು ವಿಂಗಡಿಸಿದ್ದು ಪ್ರಜಾಪತಿ... (ಹೀಗೇ ಇಪ್ಪತ್ತೆಂಟು ಬಾರಿ).
*****
ಕರ್ಣ: 
        ಕರ್ಣ ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಬ್ಬ. ಈತ ಕುಂತಿಯ ಮೊದಲ ಪುತ್ರ ಮತ್ತು ದುರ್ಯೋಧನನ ಆಪ್ತ ಮಿತ್ರ. ಇವನ ತಂದೆ ಸೂರ್ಯದೇವ. ಇವನನ್ನು ರಾಧೇಯನೆಂದೂ ಕರೆಯುತ್ತಿದ್ದರು. ಇವನು ಅಂಗ ದೇಶದ ಅಧಿಪತಿಯಾಗಿದ್ದನು. ಕರ್ಣನನ್ನು ದಾನ ವೀರ ಶೂರ ಕರ್ಣ ಎಂದು ಕರೆಯುತ್ತಾರೆ.
ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ (ತೈಲವರ್ಣಚಿತ್ರ) ಕೃಪೆ : ವಿಕಿಪೀಡಿಯ

ಕರ್ಣನ ಅವಸಾನ (ಮರಣ) ಸನ್ನಿವೇಶ ಕೃಪೆ : ವಿಕಿಪೀಡಿಯ
******
ಇನ : ಸೂರ್ಯ, ರವಿ, ಅರ್ಕ, ನೇಸರ, ಭಾಸ್ಕರ, ದಿನಮಣಿ, ದಿನಪ
******
ತನುಜ (ತನೂಜ) : ಮಗ, ಪುತ್ರ.
******
ಕೃಷ್ಣ : (ಪಾಠದಲ್ಲಿ ಬಂದಿರುವ ಹೆಸರುಗಳು)  ದನುಜರಿಪು, ಮುರಾರಿ, ಶೌರಿ, ದಾನವ ಸೂದನ, ಮಾಧವ, 
ದನುಜರಿಪು : ದನುಜರನ್ನು ಸಂಹರಿಸಿದವನಾದ್ದರಿಂದ ಕೃಷ್ಣನಿಗೆ ದನುಜರಿಪು ಎಂಬ ಹೆಸರಿದೆ. (ರಾಕ್ಷಸರ ಶತ್ರು (ದನುಜ= ರಾಕ್ಷಸ, ರಿಪು=ಶತ್ರು))
ಮುರಾರಿ : ಮುರ+ಅರಿ; ಮುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ್ದರಿಂದ ಕೃಷ್ಣನಿಗೆ 'ಮುರಾರಿ' ಎಂಬ ಹೆಸರು ಬಂತು.
ಶೌರಿ : ಕೃಷ್ಣನು ಶೂರಸೇನನ ವಂಶದವನಾದ್ದರಿಂದ ಅವನನ್ನು 'ಶೌರಿ' ಎಂದು ಕರೆಯುವರು.
ದಾನವಸೂದನ : ದಾನವರನ್ನು ಸಂಹರಿಸಿದವನಾದ್ದರಿಂದ ಕೃಷ್ಣನಿಗೆ 'ದಾನವಸೂದನ' ಎಂಬ ಹೆಸರಿದೆ. (ರಾಕ್ಷಸರ ಶತ್ರು (ದಾನವ= ರಾಕ್ಷಸ, ಸೂದನ=ಸಂಹಾರ))
******
ಇನ : ಸೂರ್ಯ, 
ಯಾದವರು - ಯದುವಿನ ವಂಶಸ್ಥರು. ಶ್ರೀಕೃಷ್ಣನು ಯದುವಂಶಕ್ಕೆ ಸೇರಿದವನು. ಶ್ರೀಕೃಷ್ಣನ ನಿರ್ಣಯಾನುಸಾರ ಯಾದವರು ಕುರುಕ್ಷೇತ್ರ ಯುದ್ಧದಲ್ಲಿ ದುರ‍್ಯೋಧನನ ಪರವಾಗಿ ಹೋರಾಡಿದರು.
ಮಾದ್ರಿ - ಪಾಂಡುರಾಜನ ಎರಡನೆಯ ಹೆಂಡತಿ. ಮದ್ರದೇಶದ ರಾಜಕುಮಾರಿ. ಕುಂತಿಯಿಂದ ಪಡೆದ ಮಂತ್ರದ ಬಲದಿಂದ ಅಶ್ವಿನಿ ದೇವತೆಗಳನ್ನು ಪ್ರಾರ್ಥಿಸಿ ನಕುಲ ಸಹದೇವರೆಂಬ ಅವಳಿ ಮಕ್ಕಳನ್ನು ಪಡೆದವಳು.
ಚತುರಂಗಬಲ - ಆನೆ, ಕುದುರೆ, ರಥ, ಕಾಲಾಳುಗಳನ್ನೊಳಗೊಂಡ ಸೈನ್ಯ ಸಮೂಹ.
ರಾಜೀವ ಸಖ - ರಾಜೀವ-ಕಮಲ (ತಾವರೆ); ಸಖ-ಗೆಳೆಯ - ತಾವರೆಯ ಗೆಳೆಯ - ಸೂರ‍್ಯ
ಮಾಧವ - ಮಾ-ಲಕ್ಷ್ಮೀ, ಧವ-ಪತಿ, ಒಡೆಯ, ಧರಿಸಿದವ, ಲಕ್ಷ್ಮೀಯನ್ನು ಎದೆಯಲ್ಲಿ ಧರಿಸಿದವ-ವಿಷ್ಣು-ಇಲ್ಲಿ ಕೃಷ್ಣ (ಕೃಷ್ಣನು ವಿಷ್ಣುವಿನ ಅವತಾರ)  
 
************

*************
 
 

07 ಜನವರಿ 2021

10ನೇ ತರಗತಿ-ಕನ್ನಡ-ಪದ್ಯ-03-ಹಲಗಲಿ ಬೇಡರು-ಟಿಪ್ಪಣಿಗಳು/ಸಮಾನಾರ್ಥಕಗಳು

ವಿಲಾತಿ - ವಿಲಾಯಿತಿ (ವಿದೇಶ)
ಹುಕುಂ - ಆದೇಶ
ಕಾರಕೂನ - ಗುಮಾಸ್ತ
ಕುಮಕಿ - ಸಹಾಯ
ಅಗಸಿ - ಹೆಬ್ಬಾಗಿಲು
ದಂಡು - ಸೈನ್ಯ
ಚರಿಗೆ - ತಂಬಿಗೆ
ಮಸಲತ್ತು - ಪಿತೂರಿ
ಹತಾರ - ಆಯುಧ
ಕಬುಲ - ಒಪ್ಪಿಗೆ, ಅನುಮತಿ.
ಚಟೆಕಾರರು - ಆಂಗ್ಲೋ ಇಂಡಿಯನ್
ಹೆಬಲಕ ಸಾಬ್ - ಹೆನ್ರಿ ಹ್ಯಾವ್‌ಲಾಕ್ ಎಂಬ ಬ್ರಿಟಿಷ್ ಅಧಿಕಾರಿ.
ಕಾರಸಾಹೇಬ - ಅಲೆಗ್ಜಾಂಡರ್ ವಿಲಿಯಂ ಕೆರ್ರೆ ಎಂಬ ಬ್ರಿಟಿಷ್ ಅಧಿಕಾರಿ.
ಕುಂಪಣಿ; ಕಂಪನಿ - ಈಸ್ಟ್ ಇಂಡಿಯಾ ಕಂಪನಿ ಎಂಬ ಬ್ರಿಟೀಷ್ ಸರ್ಕಾರ ರಚಿಸಿದ್ದ ಆಡಳಿತಾತ್ಮಕ ಸಂಸ್ಥೆ. 


******
************


06 ಡಿಸೆಂಬರ್ 2020

10ನೇ ತರಗತಿ-ಕನ್ನಡ-ಪದ್ಯ-02-ಹಕ್ಕಿ ಹಾರುತಿದೆ ನೋಡಿದಿರಾ - ಟಿಪ್ಪಣಿ ಹಾಗೂ ಸಮಾನಾರ್ಥಕ ಪದಗಳು.

ಇರುಳಿರುಳು = ಇರುಳು + ಇರುಳು (ದ್ವಿರುಕ್ತಿ)

ಸುತ್ತಮುತ್ತಲು ಮೇಲಕೆ ಕೆಳಗೆ = ದಶ ದಿಕ್ಕುಗಳು

ಗಾವುದ = ನಾಲ್ಕು ಹರಿದಾರಿ, ೧೨ ಮೈಲುಗಳ ದೂರ. ಅಂದರೆ ಸರಿ ಸುಮಾರು ೧೯ ಕಿಲೋ ಮೀಟರ್ ಗಿಂತ ಹೆಚ್ಚು (ಸುಮಾರು 19.3 ಕಿ.ಮೀ.) ಹಿಂದಿನ ಕಾಲದಲ್ಲಿ ದೂರವನ್ನು ಅಳೆಯಲು ಬಳಸುತ್ತಿದ್ದ ಪ್ರಮಾಣ. (ಈಗ ಮೀಟರ್, ಕಿಲೋ ಮೀಟರ್ ಇತ್ಯಾದಿ ಬಳಸುವಂತೆ)

ಎವೆ = ಕಣ್ಣಿನ ರೆಪ್ಪೆ

ಎವೆತೆರೆದಿಕ್ಕು = ಕಣ್ಣುರೆಪ್ಪೆ ಮುಚ್ಚಿ ಬಿಡುವುದು

ಕರಿನರೆ = ಕರಿ ಎಂದರೆ ಕಪ್ಪು, ನರೆ ಎಂದರೆ ಬಿಳಿ ಬಣ್ಣ. ಆದರೆ ಇಲ್ಲಿ ಕವಿ ಸಾಂಕೇತಿಕವಾಗಿ ಕರಿ ಎಂದರೆ "ರಾತ್ರಿ" ಎಂದೂ ಬಿಳಿ ಎಂದರೆ "ಬೆಳಗು/ದಿನ" ಎಂದೂ ತಿಳಿಸಿದ್ಧಾರೆ.

ಪುಚ್ಚ = ಹಕ್ಕಿಯ ಹಿಂಭಾಗದಲ್ಲಿ ಬಾಲದಂತಿರುವ ಗರಿಗಳ ಗುಂಪು.

ಬಿಳಿ-ಹೊಳೆ = ಕವಿಯ ಸಾಂಕೇತಿಕ ಅರ್ಥದಲ್ಲಿ "ವರ್ತಮಾನ"

ಕೆನ್ನನ ಹೊನ್ನನ = ಕೆನ್ನ ಎಂದರೆ "ಸೂರ್ಯಾಸ್ತ" ಸೂರ್ಯಾಸ್ತದ ಸಮಯದಲ್ಲಿ ಪಶ್ಚಿಮ ದಿಕ್ಕು ಕೆಂಪೇರುತ್ತದೆ. ಹಾಗೆಯೇ ಹೊನ್ನ ಅಥವಾ ಹೊನ್ನು ಬಣ್ಣ ಎಂದರೆ ಸೂರ್ಯೋದಯ. (ಸೂರ್ಯೋದಯದ ಸಂದರ್ಭದಲ್ಲಿ ಪೂರ್ವ ಹೊನ್ನಿನ ಬಣ್ಣದಿಂದ ಕಂಗೊಳಿಸುವುದನ್ನು ಕಾಣಬಹುದು)

ನೀಲಮೇಘಮಂಡಲಸಮ ಬಣ್ಣ = ಆಕಾಶದ ಮೇಘ ಮಂಡಲದ ನೀಲಿ ಬಣ್ಣಕ್ಕೆ ಸಮಾನವಾದ ಬಣ್ಣ

ಚಿಕ್ಕೆಯ ಮಾಲೆ = ನಕ್ಷತ್ರಗಳ ಮಾಲೆ

ಒಕ್ಕು (ಒಕ್ಕಿ) = ತೆನೆಯಿಂದ ಕಾಳನ್ನು ಬೇರ್ಪಡಿಸುವಿಕೆ. ಇದನ್ನು ಒಕ್ಕಣೆ ಎಂದೂ ಕರೆಯಲಾಗುವುದು.

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ = ರಾಜ್ಯ-ಸಾಮ್ರಾಜ್ಯಗಳನ್ನು ಧಾನ್ಯಗಳನ್ನು ಬೇರ್ಪಡಿಸುವಾಗ ಗಾಳಿಗೆ ತೂರಿ ಗಟ್ಟಿಕಾಳು ಮತ್ತು ಜೊಳ್ಳನ್ನು ಬೇರ್ಪಡಿಸುವಂತೆ ರಾಜ್ಯಸಾಮ್ರಾಜ್ಯಗಳನ್ನು ಕಾಲವು ಒಕ್ಕಣೆ ಮಾಡುತ್ತದೆ. ಅಂದರೆ ಬಲಶಾಲಿಯಾದ ರಾಜ್ಯ ಉಳಿದು ದುರ್ಬಲವಾದ ರಾಜ್ಯ ಅಳಿದು ಹೋಗುತ್ತದೆ. ಈ ಬದಲಾವಣೆಯ ಕ್ರಿಯೆ ಇತಿಹಾಸದುದ್ದಕ್ಕೂ ನಿರಂತರವಾಗಿ ನಡೆತುತ್ತಾ ಬಂದಿರುವುದನನ್ನು ಕಾಣಬಹುದು.

ಗಡ = ಸಣ್ಣ ಕೋಟೆ, ಕೊತ್ತಲು

ಮನ್ವಂತರ = ಪರಿವರ್ತನೆಯ ಕಾಲ, (ಪುರಾಣದಲ್ಲಿ ಹದಿನಾಲ್ಕು ಮಂದಿ ಮನುಗಳನ್ನು ಉಲ್ಲೇಖಿಸಲಾಗಿದ್ದು ಪ್ರತಿಯೊಬ್ಬ ಮನುವಿನ ಅವಧಿಯನ್ನು ಒಂದು ಮನ್ವಂತರ ಎಂದು ಹೇಳಲಾಗುತ್ತದೆ.

ಹೊಸಗಾಲದ ಹಸುಮಕ್ಕಳ ಹರಸಿ = ಮುಂದಿನ ಹೊಸ ಪೀಳಿಗೆಯ ಜನರನ್ನು ಹರಸಿ ಅಂದರೆ ಹೊಸ ಪೀಳಿಗೆಯ ಜನರ ಅಭಿವೃದ್ಧಿಗೆ ಅವಕಾಶ ನೀಡಿ.

ಬೆಳ್ಳಿಯ ಹಳ್ಳಿಯ ಮೇರೆ = ಬೆಳ್ಳಿ ಎಂದರೆ "ಶುಕ್ರ ಗ್ರಹ", ಮಾನವನು ಚಂದ್ರ ಹಾಗೂ  ಮಂಗಳ ಗ್ರಹದ ಬಗ್ಗೆ ಅನ್ವೇಷಿಸುತ್ತಿದ್ದಾನೆ ಮಾತ್ರವಲ್ಲ ಶುಕ್ರ ಗ್ರಹದ ಬಗ್ಗೆಯೂ ಅನ್ವೇಷಣೆ ಮಾಡುತ್ತಿದ್ದಾನೆ. ಅದರಾಚೆಗೂ ಮಾನವನ ಅನ್ವೇಷಣೆಯ ಪ್ರಯತ್ನ ನಡೆಯುತ್ತಿದೆ.

ತಿಂಗಳಿನೂರು = ತಿಂಗಳು ಎಂದರೆ ಅಚ್ಚಗನ್ನಡದಲ್ಲಿ "ಚಂದ್ರ" ಎಂದರ್ಥ.  ಮೂವತ್ತು ದಿನಗಳ ಅವಧಿಯನ್ನು ಕೂಡ ಮಾಸ ಅಥವಾ ತಿಂಗಳು ಎಂದು ಕರೆಯಲಾಗುತ್ತದೆ.

ದಿಗ್ಮಂಡಲ = ದಶ ದಿಕ್ಕುಗಳಿಂದ ಆವರಿಸಿದ ಭಾಗ, ದಿಕ್ಕುಗಳ ನಡುವಿನ ಪ್ರದೇಶ ಎಂದೂ ಹೇಳಬಹುದು. [ಇಲ್ಲಿ ಪದದಲ್ಲಿ ಕಾಗುಣಿತ ದೋಷ ಇದೆ. ಈ ಪದದ ಸರಿಯಾದ ರೂಪ "ದಿಙ್ಮಂಡಲ", ದಿಕ್ + ಮಂಡಲ - ಅನುನಾಸಿಕ ಸಂಧಿ]

ಚುಂಚ = ಕೊಕ್ಕು (ಇಲ್ಲಿ ವ್ಯಾಪ್ತಿ ವಿಸ್ತಾರ ಎಂಬ ಅರ್ಥವಿದೆ)

ಬ್ರಹ್ಮಾಂಡ = ಬ್ರಹ್ಮ + ಅಂಡ (ಬ್ರಹ್ಮನು ಸೃಷ್ಟಿಸಿದ ಮೊಟ್ಟೆಯಾಕಾರದ ವಿಶ್ವ) ಬ್ರಹ್ಮಾಂಡದಲ್ಲಿ ಹಲವಾರು ಬಿಲಿಯನ್ ನಕ್ಷತ್ರಪುಂಜಗಳಿವೆ. ಅವುಗಳನ್ನು ಗ್ಯಾಲಾಕ್ಸಿ ಎಂದು ಕರೆಯಲಾಗುತ್ತದೆ. ಇದನ್ನು ಪ್ರಾಚೀನ ಭಾರತದ ಜೋತಿರ್‌ವಿಜ್ಞಾನಿಗಳು ಬರೆದಿಟ್ಟಿದ್ದಾರೆ. ಇದು ಬಹಳ ವಿಸ್ಮಯದ ಸಂಗತಿ. ಅವರ ಪ್ರಕಾರ ಇಡೀ ಬ್ರಹ್ಮಾಂಡದಲ್ಲಿ ಸುಮಾರು 41,011 ನಕ್ಷತ್ರಗಳಿವೆ. ಹಾಲುಪಥ ಅಥವಾ ಕ್ಷೀರಪಥ ನಾವು ವಾಸಿಸುವ ನಕ್ಷತ್ರ ಪುಂಜ (ಗ್ಯಾಲಾಕ್ಸಿ) ಆಗಿದೆ. ಅದರಲ್ಲಿರುವ ಸಾವಿರಾರು ನಕ್ಷತ್ರಗಳಲ್ಲಿ ಒಂದು ಸೂರ್ಯನ ವ್ಯಾಪ್ತಿಯಲ್ಲಿ ನಮ್ಮ ಸೌರಮಂಡಲವಿದೆ.)

**************

02 ಡಿಸೆಂಬರ್ 2020

10ನೇ ತರಗತಿ-ಕನ್ನಡ-ಪದ್ಯ-01-ಸಂಕಲ್ಪಗೀತೆ - ಟಿಪ್ಪಣಿಗಳು

ಹಣತೆ = ದೀಪ, ಮಣ್ಣಿನ ದೀಪ

ಪ್ರೀತಿಯ ಹಣತೆ = ಪ್ರೀತಿ ಎಂಬ ದೀಪ (ದ್ವೇಷ ಎಂಬ ಕತ್ತಲೆಯನ್ನು ಹೋಗಲಾಡಿಸುವ ಪ್ರೀತಿ ಎಂಬ ದೀಪ)

ಬಿರುಗಾಳಿಗೆ ಹೊಯ್ದಾಡುವ ಹಡಗು = ಇಡೀ ಪ್ರಪಂಚವೇ ಒಂದು ದೊಡ್ಡ ಸಮುದ್ರ; ಅದರಲ್ಲಿ ನಮ್ಮ ಜೀವನವೇ ಹಡಗು. ಜೀವನದಲ್ಲಿ ಎದುರಾಗುವ ನೋವು-ಕಷ್ಟ-ಕಾರ್ಪಣ್ಯಗಳೇ ಬಿರುಗಾಳಿ; ಆದ್ದರಿಂದ ಹಲವಾರು ಕಷ್ಟ-ನಷ್ಟಗಳಿಂದ ನಲುಗುವ ಜೀವನವೆಂಬ ಹಡಗು ಎಂದು ಅರ್ಥೈಸಿಕೊಳ್ಳಬೇಕು.

ಮುಂಗಾರಿನ ಮಳೆ = ಚೈತ್ರ ಮಾಸದ ಆರಂಭದಲ್ಲಿ ಮೇ/ಜೂನ್ ತಿಂಗಳಿನಲ್ಲಿ ಆರಂಭವಾಗುವ ಮಳೆ, 

ಬರಡಾದ ಕಾಡುಮೇಡುಗಳು = ಮಾನವನ ದುರಾಸೆಗೆ ಒಳಗಾಗಿ ನಾಶವಾದ ಹಾಗೂ ಮಳೆ ಇಲ್ಲದೆ ಒಣಗಿ ಖಾಲಿಖಾಲಿ ಕಾಣುವ ಕಾಡುಮೇಡುಗಳು

ವಸಂತ = ಋತುಗಳು ಆರು, ಅವುಗಳಲ್ಲಿ ವಸಂತ ಋತುವೂ ಒಂದಾಗಿದೆ. ಈ ಕೆಳಗಿನ ಕೋಷ್ಟಕದಲ್ಲಿ ನೋಡಿ.

ಋತು

ಮಾಸಗಳು

ಗ್ರೆಗೊರಿಯನ್ ತಿಂಗಳುಗಳ ಅವಧಿ

ವಸಂತ

ಚೈತ್ರ, ವೈಶಾಖ

ಮಾರ್ಚ್-ಮೇ

ಗ್ರೀಷ್ಮ

ಜ್ಯೇಷ್ಠ, ಆಷಾಢ

ಮೇ-ಜುಲೈ

ವರ್ಷ

ಶ್ರಾವಣ, ಭಾದ್ರಪದ

ಜುಲೈ-ಸೆಪ್ಟೆಂಬರ್

ಶರತ್

ಆಶ್ವಯುಜ, ಕಾರ್ತಿಕ

ಸೆಪ್ಟೆಂಬರ್-ನವಂಬರ್

ಹೇಮಂತ

ಮಾರ್ಗಶಿರ, ಪುಷ್ಯ

ನವಂಬರ್-ಜನವರಿ

ಶಿಶಿರ

ಮಾಘ, ಫಾಲ್ಗುಣ

ಜನವರಿ-ಮಾರ್ಚ್

ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸುವುದು = ಬೀಳುವುದು ಎಂದರೆ ಅವನತಿ, ಹಿನ್ನಡೆ, ಸೋಲು ಎಂದರ್ಥ. ಆದ್ದರಿಂದ ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸುವುದೆಂದರೆ ಸೋಲು, ಹಿನ್ನಡೆಗಳಿಂದ ಕಂಗಾಲಾದವರಿಗೆ ಹೊಸ ಆಶಾಭಾವನೆಯನ್ನು ತುಂಬಿ ಚೈತನ್ಯಗೊಳಿಸುವುದು. ನಿರಾಶೆಯನ್ನು ದೂರಮಾಡಿ ಆಶಾಭಾವನೆಯನ್ನು ಮೂಡಿಸುವುದು ಎಂದರ್ಥ

ಮನುಜರ ನಡುವಣ ಅಡ್ಡಗೋಡೆಗಳ ಕೆಡವುತ ಸೇತುವೆಯಾಗೋಣ = ಮಾನವನ ನಡುವೆ ಜಾತಿ-ಧರ್ಮ, ಮೇಲು-ಕೀಳು, ಬಡವ-ಶ್ರೀಮಂತ, ಅಕ್ಷರಸ್ಥ-ಅನಕ್ಷರಸ್ಥ, ಸುಂದರ-ಕುರೂಪ ಹೀಗೆ ಇನ್ನೂ ಹಲವಾರು ರೀತಿಯ ಭೇದ-ಭಾವಗಳಿವೆ ಇವೆಲ್ಲ ವ್ಯಕ್ತಿ ಹಾಗೂ ಸಮುದಾಯಗಳ ನಡುವೆ ಅಡ್ಡಗೋಡೆಗಳಾಗಿವೆ. ಇವುಗಳನ್ನು ದೂರಮಾಡಿ ಮನುಜ ಮನುಜರ ನಡುವೆ ಸಂಬಂಧ, ಸೌಹಾರ್ದತೆ, ಸಹಕಾರ ಮನೋಭಾವನೆಯನ್ನು ಬೆಳೆಸುವುದು ಎಂದರ್ಥ.

ಮತಗಳೆಲ್ಲವೂ ಪಥಗಳು = ಇಲ್ಲಿ ಮತ ಎಂದರೆ ವಿಶಾಲ ಅರ್ಥದಲ್ಲಿ ಧರ್ಮ ಹಾಗೂ ಸಿದ್ಧಾಂತಗಳೆನ್ನಬಹುದು. ವಿಚಾರ ಮಾಡಿ ನೋಡಿದರೆ ಎಲ್ಲಾ ಧರ್ಮಗಳು ಹೇಳುವುದು ಒಂದೇ ಅದು ಮಾನವೀಯತೆಯನ್ನು ಬೆಳೆಸಿಕೋ ಎಂದು. ಅಂದರೆ ಮನುಷ್ಯ ತನ್ನ ದ್ವೇಷ-ಅಸೂಯೆ-ದುರಾಸೆ-ಪಕ್ಷಪಾತಗಳನ್ನು ತೊರೆದು ಎಲ್ಲರೊಡನೊಂದಾಗಿ ಮಾನವೀಯತೆಯಿಂದ ಬಾಳುವುದು. ಇದನ್ನೇ ಬಸವಣ್ಣನವರು "ದಯವಿಲ್ಲದ ಧರ್ಮವದಾವುದಯ್ಯಾ?" ಎಂದಿದ್ದಾರೆ. ಎಲ್ಲ ಮತಗಳ ಪ್ರಮುಖ ಉದ್ದೇಶ ಮಾನವನ ವ್ಯಕ್ತಿತ್ವವನ್ನು ಉತ್ತಮವಾಗಿ ರೂಪಿಸುವುದು ಹಾಗು ಅಹಿಂಸೆಯನ್ನು ತೊರೆದು ಶಾಂತಿ-ಪ್ರೀತಿಯನ್ನು ಪಸರಿಸುವುದೇ ಆಗಿದೆ. ಆದ್ದರಿಂದ ಎಲ್ಲ ಮತಗಳು ಮಾನವನ ಸನ್ನಡತೆಗೆ ಸತ್ಪಥ (ಒಳ್ಳೆಯ ಮಾರ್ಗ)  ಆಗಿದೆ.

ಭಯ-ಸಂಶಯದೊಳು ಕಂದಿದ ಕಣ್ಣೊಳು ನಾಳಿನ ಕನಸನ್ನು ಬಿತ್ತುವುದು = ಸಮಾಜದಲ್ಲಿ ಕೊಲೆ-ಸುಲಿಗೆ-ದರೋಡೆಯಂತಹ ಅಮಾನವೀಯ ಕೃತ್ಯಗಳು ದಿನೇದಿನೇ ಹೆಚ್ಚಾಗುತ್ತಿವೆ. ಹಲವರು ಜನ ಶೋಷಣೆಗೆ ಒಳಗಾಗಿ ಭಯದಿಂದ ಬದುಕುತ್ತಿದ್ದಾರೆ. ಹಾಗೆಯೇ ವರ್ತಮಾನದಲ್ಲಿ ಜನರ ನಡೆವಳಿಗೆಗಳ ಬಗ್ಗೆ ಹಾಗೂ ತಮ್ಮ ಉತ್ತಮ ಭವಿಷ್ಯದ ಬಗ್ಗೆ ಅನುಮಾನ ಹೊಂದಿದ್ದಾರೆ. ಅಂತಹವರ ಭಯಭೀತ ಹಾಗೂ ಸಂಶಯದಿಂದ ಕೂಡಿದ ಕಣ್ಣುಗಳಲ್ಲಿ ನಾಳಿನ ಉತ್ತಮ ಭವಿಷ್ಯದ ಬಗ್ಗೆ ಮತ್ತು ಮುಂದೆ ಆಗಲಿರುವ ಒಳ್ಳೆಯದರ ಬಗ್ಗೆ ಆಶಾವಾದವನ್ನು ಬೆಳೆಸಿ ಧೈರ್ಯ ತುಂಬುವುದಾಗಿದೆ.


**************



01 ಡಿಸೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-06-ಸುಕುಮಾರಸ್ವಾಮಿಯ ಕಥೆ - ಟಿಪ್ಪಣಿಗಳು

ಭರತ ಕ್ಷೇತ್ರ : ಭಾರತ, ಭರತ ವರ್ಷ

ಪೊೞಲ್ = ಪಟ್ಟಣ

ಪರದ = ವ್ಯಾಪಾರಿ

ಕಸವರ = ಚಿನ್ನ, ಆಭರಣ

ಸೆಟ್ಟಿ = ಶ್ರೇಷ್ಠಿ, ವ್ಯಾಪಾರಿ

ಭಾರ್ಯೆ = ಹೆಂಡತಿ

ನಿದಾನಂ = ಸಂಪತ್ತು

ತಪಂಬಟ್ಟಂ = ತಪಂ + ಪಟ್ಟಂ, ವಕಾರಾದೇಶ;   ತಪಸ್ಸನ್ನು ಹೊಂದಿದನು.

ಬಳ್ಳಿ ಮಾಡ = ಸುಂದರವಾದ ಬಳ್ಳಿಗಳನ್ನು ಹಬ್ಬಿಸಿ ಬೆಳೆಸಿದ ದೊಡ್ಡ ಬಂಗಲೆ / ಮನೆ

ವಿಭ್ರಮ = ಬೆಡಗು, ಅಂದ, ಸೌಂದರ್ಯ

ದೇವಗಣಿಕೆ = ದೇವತಾ ಸ್ತ್ರೀ

ಪಂಚರತ್ನಗಳು = ನೀಲ, ವಜ್ರ, ಪದ್ಮರಾಗ, ಮುತ್ತು, ಹವಳ ಎಂಬ ಐದು ಬಗೆಯ ರತ್ನಗಳು. 

ನೈಮಿತ್ತಿಕ = ಜೋಯಿಸ, ಜ್ಯೋತಿಷಿ, ಭವಿಷ್ಯ ಹೇಳುವವನು

ಪುಗಲೀಯದಂತು = ಪ್ರವೇಶಿಸದಂತೆ

ಕಾಪಿನವರು = ಕಾವಲುಗಾರರು

ದೀನಾರ = ೧೦ನೆಯ ಶತಮಾನದಲ್ಲಿ ಚಲಾವಣೆಯಲ್ಲಿದ್ದ ಹಣ, ಮಹಮದೀಯರ ಆಳ್ವಿಕೆಯಲ್ಲಿ ಭಾರತಕ್ಕೆ ಬಂದಿತು.

ಮಹಾದೇವಿ = ರಾಣಿ, ಹೆಂಡತಿ

ಬೆಸಗೊಳು = ತಿಳಿಸು, ಹೇಳು

ಓರೊಂದರೊಳಂ = ಒಂದರೊಳಗೊಂದು

ನಾಲ್ಕು ಖಂಡ = ತುಂಡು, ಚೂರು

ಪಚ್ಚುಗೊಡು = ಹಂಚಿಕೊಡು

ಕೆರ್ಪು = ಪಾದರಕ್ಷೆ, ಚಪ್ಪಲಿ

ತಗುಳ್ಚು = ಸಿಕ್ಕಿಸು, ಸೇರಿಸು

ಚೋದ್ಯ = ಆಶ್ಚರ್ಯ

ವಿಭೂತಿ = ಐಶ್ವರ್ಯ, ವೈಭವ

ಬರ್ಪ = ಬರುವ

ಬಟ್ಟೆ = ದಾರಿ, ಮಾರ್ಗ

ನೇತ್ರವಟ್ಟು = ರೇಷ್ಮೆ ಬಟ್ಟೆ (ನೇತ್ರ ದುಕೂಲ)

ಪಾಸಿ = ಹಾಸಿ

ಹೇಮಮುಕ್ತಾಹಾರ = ರತ್ನಖಚಿತವಾದ ಚಿನ್ನದ ಹಾರ

ಬರವಂ = ಬರುವಿಕೆಯನ್ನು

ಪಾರುತ್ತಿರೆ = ನೋಡುತ್ತಿರೆ

ಸುರೇಂದ್ರ ಭವನ = ಇಂದ್ರನ ಅರಮನೆ

ಪ್ರಾಸಾದ = ಮನೆ

ಶಯ್ಯಾತಳ = ಹಾಸಿಗೆ

ಕರಂ ಸಾದು = ಬಹಳ ಸಾದು / ಬಹಳ ಮೃದು ಸ್ವಭಾವದ

ಬೞಿಯನಟ್ಟಿ = ಹತ್ತಿರಕ್ಕೆ / ಪಕ್ಕಕ್ಕೆ ಕರೆಸಿ

ನಮ್ಮನಾಳ್ವರುಮೊಳರೆ = ನಮ್ಮನಾಳುವವರೂ ಇರುವರೆ?

ಮಾರ್ಕೊಳಲಾರದೆ = ಮೀರಲಾರದೆ

ಕಣ್ಪೆತ್ತ = ಕಣ್ಣು ಪಡೆದ

ಸಿದ್ಧಾರ್ಥ = ಬಿಳಿಸಾಸುವೆ

ಸೇಸೆ = ಅಕ್ಷತೆ

ಕಟಿ = ಸೊಂಟ

ಸೊಡರ್ = ದೀಪ

ಬ್ಯಾದಿ = ವ್ಯಾದಿ, ರೋಗ

ಮಜ್ಜನ = ಸ್ನಾನ

ಸನ್ನಿಭ = ಸಮಾನವಾದ

ಮಣಿಕುಟ್ಟಿಮ = ಮಣಿಗಳಿಂದ ನಿರ್ಮಿತವಾದ

ಮಾಣಿಕದುಂಗುರ = ಮಾಣಿಕ್ಯದ ಉಂಗುರ

ಛಿದ್ರಕದ್ವಾರ = ತೂಬು, ನೀರನ್ನು ಹೊಗೆ ಬಿಡುವ ರಂದ್ರ

ಆರೋಗಣೆ = ಊಟ

ಪರಿಯಣ = ಹರಿವಾಣ, ಊಟದ ಬಟ್ಟಲು/ ತಟ್ಟೆ

ಇನಿಯವಪ್ಪುಣಿಸುಗಳು = ರುಚಿಯಾದ ತಿನಿಸುಗಳು

ಕುತ್ತಂ = ತೊಂದರೆ

ಸಮೆದ ಬೞಿಕ್ಕೆ = ಮುಗಿದ ನಂತರ

ಮಾಲ್ಯ = ಹೂವಿನ ಹಾರ

ಪಸದನ = ಅಲಂಕಾರ

ಅರುಚಿ = ರುಚಿ ಇಲ್ಲದಿರುವಿಕೆ

ಮರ್ದು = ಔಷಧ

ಕಮಳನೀಳೋತ್ಪಲ = ನೈದಿಲೆಯ ಪನ್ನೀರು

ವಾಸಿಸಿದ = ನೆನೆಸಿದ

ಪೆಱವಕ್ಕಿ = ಬೇರೆ ಅಕ್ಕಿ

ಕೂೞು = ಅನ್ನ



23 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-06-ವೃಕ್ಷಸಾಕ್ಷಿ - ಟಿಪ್ಪಣಿಗಳು

* ನಿಜ ಜನ್ಮಭೂಮಿ : ಹುಟ್ಟೂರು, ಸ್ವಂತ ಊರು

* ಬಹಿರುದ್ಯಾನ : ಬಹಿರ್ ಎಂದರೆ ಹೊರಗೆ, ಬಹಿರುದ್ಯಾನ ಎಂದರೆ ಊರಿನ ಹೊರಗಿರುವ ಉದ್ಯಾನವನ

* ತನ್ನ ಮನದನ್ನ : ತನ್ನ ಮನಸ್ಸಿನಂತೆಯೇ ಯೋಚಿಸುವನು, ಹಿತೈಷಿ

* ಅತಿಕುಟಿಲ ಮನಂ : ಬಹಳ ಮೋಸದ ಮನಸ್ಸು

* ಧನಲುಬ್ಧತೆ : ಹಣದ ದುರಾಸೆ, ಹಣದ ಲೋಭತನ

* ತಸ್ಕರಸ್ಯಾನೃತಂಬಲಂ : ತಸ್ಕರಸ್ಯ + ಅನೃತಂ + ಬಲಂ, ಅಂದರೆ "ಕಳ್ಳನಿಗೆ ಸುಳ್ಳೇ ಬಲ" ಎಂದರ್ಥ

* ತತ್ಕೂರ್ಮೆಗಿಡಲ್ನುಡಿದು  : ತತ್ + ಕೂರ್ಮೆ+ಕಿಡಲ್ + ನುಡಿದು, ತತ್ = ಆ, ಕೂರ್ಮೆ = ಪ್ರೀತಿ, ಕಿಡಲ್= ಕೆಡಲು,      ಅಂದರೆ ಅವರಿಬ್ಬರ ಸ್ನೇಹ ಕೆಡುವಂತೆ ಮಾತನಾಡಿ ಎಂದರ್ಥ.

* ಧರ್ಮಾಧಿಕರಣರು : ಧರ್ಮವನ್ನು ಹೇಳುವವರು ಅಂದರೆ ನ್ಯಾಯ ತೀರ್ಮಾನ ಮಾಡುವವರು

* ತತ್ಪ್ರಪಂಚ / ತದ್ವೃತ್ತಾಂತ  : ತತ್ + ಪ್ರಪಂಚ, ತತ್ = ಆ/ಅಲ್ಲಿನ, ಪ್ರಪಂಚ = ಸಂಗತಿ, ವಿಚಾರ, ವೃತ್ತಾಂತ ; ಆದ್ದರಿಂದ 'ಅತ್ತಿ ನಡೆದ ಸಂಗತಿ'

* ಸುಕೃತದುಷ್ಕೃತಗಳು : ಸುಕೃತ = ಒಳ್ಳೆಯ ಕೆಲಸ, ದುಷ್ಕೃತ = ಕೆಟ್ಟ ಕೆಲಸ

* ಪರಮಗಹನ : ಬಹಳ ಗಂಭೀರವಾದ, ಬಹಳ ಕಷ್ಟಕರವಾದ, ತಿಳಿಯಲು ಬಹಳ ಕಷ್ಟಕರವಾದ

* ಕಟ್ಟೇಕಾಂತ : ಬಹಳ ಏಕಾಂತ, ಬಹಳ ಗುಟ್ಟಾದ ಮತ್ತು ಯಾರೂ ಇಲ್ಲದ ಸ್ಥಳ

* ವಚನ : ಮಾತು 

* ಪರಧನಹರಣ : ಪರ = ಬೇರೆಯವರ,   ಧನ = ಹಣ, ಸಂಪತ್ತು,   ಹರಣ = ಕಳ್ಳತನ, ಅಂದರೆ "ಬೇರೆಯವರ ಹಣ ಅಥವಾ ಸಂಪತ್ತನ್ನು ಕದಿಯುವುದು.

* ವಿಶ್ವಾಸಘಾತುಕ : ನಂಬಿಕೆ ದ್ರೋಹ

* ಸ್ವಾಮಿದ್ರೋಹ :  ಸ್ವಾಮಿ ಎಂದರೆ ಒಡೆಯ; ಆದ್ದರಿಂದ ಡೆಯನಿಗೆ ಮಾಡುವ ದ್ರೋಹ

* ನಿನ್ನ ಪೞುವಗೆ ನಮ್ಮ ಕುಲಮನೆಲ್ಲಮನೞಿವ ಬಗೆ :  ಪೞು = ಕೆಟ್ಟ, ಮೋಸದ, ಬಗೆ= ಮನಸ್ಸು, ಆಲೋಚನೆ, ಅೞಿ = ನಾಶಮಾಡು. ಆದ್ದರಿಂದ - ನಿನ್ನ ಕೆಟ್ಟ ಆಲೋಚನೆಗಳು ನಮ್ಮ ಕುಲವನ್ನೆಲ್ಲ ನಾಶ ಮಾಡುವ ಯೋಚನೆಯಾಗಿದೆ.

* ಅಪರಗಿರಿ : ಅಪರ = ಪಶ್ಚಿಮ, ಗಿರಿ = ಬೆಟ್ಟ; ಆಂದರೆ  ಪಶ್ಚಿಮ ಬೆಟ್ಟ

* ಉದಾತ್ತನಭೋವಿಭಾಗ : ಉದಾತ್ತ = ಉನ್ನತ, ವಿಶಾಲ;  ನಭ = ಆಕಾಶ;   ಆದ್ದರಿಂದ - "ವಿಶಾಲವಾದ ಆಕಾಶದ ವಿಭಾಗ

* ದಿಙ್ಮುಖ :  ದಿಕ್ಕಿನ ಮುಂಭಾಗ, ದಿಗಂತ

* ಅಖಿಲ ದೃಷ್ಟಿಪಥ : ಅಖಿಲ = ಸಮಗ್ರ, ವಿಶಾಲ;  ದೃಷ್ಟಿಪಥ = ನೋಟ,  ಅಂದರೆ ವಿಶಾಲವಾದ ನೋಟ, ನೋಡುವವರೆಗೂ

* ಭೃಂಗೋದರ : ಭೃಂಗ = ದುಂಬಿ,  ಉದರ = ಹೊಟ್ಟೆ, ದುಂಬಿಯ ಹೊಟ್ಟೆ

* ಪ್ರಕರಾಂಜನ ಪುಂಜ : ಪ್ರಕರ = ಗಾಢವಾದ;  ಅಂಜನ= ಕಪ್ಪು;  ಪುಂಜ = ಗೊಂಚಲು, ರಾಶಿ; ಅಂದರೆ - ಬಹಳ ಗಾಢವಾದ ಕಪ್ಪಿನ ರಾಶಿ (ಕಡುಗಪ್ಪು)

* ಅಷ್ಟವಿಧಾರ್ಚನೆ : ಅಕ್ಷತೆ, ಜಲ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲಗಳಿಂದ ಕೂಡಿದ ಎಂಟು ಬಗೆಯ ಅರ್ಚನೆ 

* ಯಕ್ಷಾದಿ ದಿವ್ಯ ದೇವತೆಗಳು : ಯಕ್ಷ, ಕಿನ್ನರ, ಕಿಂಪುರುಷ, ಗಂಧರ್ವ, ಅಪ್ಸರ, ಖೇಚರ ಮಂತಾದ ಶ್ರೇಷ್ಠವಾದ ದೇವತೆಗಳು

* ಧರ್ಮಶ್ರವಣ : ಧಾರ್ಮಿಕ ಪ್ರವಚನ, ಧರ್ಮದ ಮಾತುಗಳು

* ಬಲವಂದು : ದೇವಾಲಯವೇ ಮೊದಲಾದ ಪವಿತ್ರ ಸ್ಥಳಗಳಲ್ಲಿ ಬಲಭಾಗದಿಂದ ಪ್ರದಕ್ಷಿಣೆ ಹಾಕುವುದು.

* ಹುಸಿಯದ ಬೇಹಾರಿಯೇ ಇಲ್ಲ :  ಸುಳ್ಳು ಹೇಳದಿರುವ ವ್ಯಾಪಾರಿಯೇ ಇಲ್ಲ.

* ಕಂಠಗತಪ್ರಾಣ ಉಸಿರುಗಟ್ಟಿದ ಸ್ಥಿತಿ, ಮೂರ್ಛಾಸ್ಥಿತಿ, 


********





20 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-02-ವ್ಯಾಘ್ರಗೀತೆ - ಟಿಪ್ಪಣಿಗಳು

೧) "ಎಲೆ ಬೆಕ್ಕೆ ರೂಪಿನಿಂದಲೆ ಹುಲಿಯ ಜಾತಿಗೆ ಸೇರ್ದೆನೆಂದು ಗರ್ವಿಸಬೇಡ"

        ಎಲೆ ಬೆಕ್ಕೆ ರೂಪಿನಿಂದಲೇ
        ಹುಲಿಯ ಜಾತಿಗೆ ಸೇರಿದೆನೆಂದು ಗರ್ವಿಸಬೇಡ |
        ಬಲುಮೆಯು ನಿನ್ನೊಳಿಹುದೇಂ?
        ಇಲಿಗಳ ಹಿಡಿವುದರೊಳಾಯ್ತು ನಿನ್ನಯ ಶೌರ್ಯಂ ||
                                                      - ಜಯರಾಯಾಚಾರ್ಯ
        (ನೋಡಿ:- 'ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ' ಪುಟ-೫೫)

********

೨) ಹಿಂಸ್ರಪಶು : ಕ್ರೂರ ಮೃಗ (ಹುಲಿ, ಸಿಂಹ, ಚಿರತೆ ಮುಂತಾದ ಮಾಂಸಾಹಾರಿ ಕ್ರೂರಮೃಗಗಳು)

********

೩) ಶಾಕಾಹಾರ : ಸಸ್ಯಾಹಾರ

೪) ಭಗವದ್ಗೀತೆ : ಶ್ರೀ ಭಗವದ್ಗೀತೆಯು ಮಹಾಭಾರತದಲ್ಲಿನ ಕುರುಕ್ಷೇತ್ರ ಯುಧ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಕೃಷ್ಣನಿಂದ ಅರ್ಜುನನಿಗೆ ಮಾಡಲ್ಪಟ್ಟ ಉಪದೇಶ. ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು.

        ಗೀತೆಯನ್ನು ಪಾಂಡವ ರಾಜಕುಮಾರ ಅರ್ಜುನ ಮತ್ತು ಅವರ ಮಾರ್ಗದರ್ಶಿ ಮತ್ತು ರಥ ಸಾರಥಿ ಶ್ರೀ ಕೃಷ್ಣನ ನಡುವಿನ ಸಂಭಾಷಣೆಯ ನಿರೂಪಣಾ ಚೌಕಟ್ಟಿನಲ್ಲಿ ಹೊಂದಿಸಲಾಗಿದೆ. ಪಾಂಡವರು ಮತ್ತು ಕೌರವರ ನಡುವಿನ ಧರ್ಮ ಯುದ್ಧ (ನೀತಿವಂತ ಯುದ್ಧ) ದ ಆರಂಭದಲ್ಲಿ, ಅರ್ಜುನನು ತನ್ನ ಸ್ವಂತ ರಕ್ತಸಂಬಂಧಿಗಳ ವಿರುದ್ಧದ ಯುದ್ಧ ಮಾಡಲು ಹಿಂಜರಿಯುತ್ತಾನೆ. ಅವನು ಯುದ್ಧವು ಉಂಟುಮಾಡುವ ಹಿಂಸೆ ಮತ್ತು ಸಾವಿನ ಬಗ್ಗೆ ಸಂದಿಗ್ಧತೆ ಮತ್ತು ಹತಾಶೆಯಿಂದ ಕೂಡಿರುತ್ತಾನೆ. ಅರ್ಜುನನ ಪ್ರಶ್ನೆಗಳು / ಸಂದೇಹಗಳಿಗೆ ಕೃಷ್ಣ ನೀಡುವ ಉತ್ತರಗಳು ಮತ್ತು ಪ್ರವಚನವನ್ನು ಭಗವದ್ಗೀತೆಯನ್ನು ಒಳಗೊಂಡಿದೆ. "ನಿಸ್ವಾರ್ಥ ಕ್ರಿಯೆಯ" ಮೂಲಕ "ಧರ್ಮವನ್ನು ಎತ್ತಿಹಿಡಿಯುವ ತನ್ನ ಕ್ಷತ್ರಿಯ (ಯೋಧ) ಕರ್ತವ್ಯವನ್ನು ಪೂರೈಸಲು" ಕೃಷ್ಣನು ಅರ್ಜುನನಿಗೆ ಸಲಹೆ ನೀಡುತ್ತಾನೆ. ಅರ್ಜುನನು ಎದುರಿಸುತ್ತಿರುವ ಯುದ್ಧವನ್ನು ಮೀರಿದ ಸಂದಿಗ್ಧತೆಗಳು ಮತ್ತು ತಾತ್ವಿಕ ಸಮಸ್ಯೆಗಳು ಮತ್ತು ಅವುಗಳಿಗೆ ತಾತ್ವಿಕ ಪರಿಹಾರಗಳನ್ನು ಇಲ್ಲಿ ಕಾಣಬಹುದು. ಇದು ಅರ್ಜುನನಿಗೆ ಮಾತ್ರವಲ್ಲದೆ ಇಡೀ ಮಾನವ ಕುಲಕ್ಕೆ ಹೇಳಿದ ಆಧ್ಯಾತ್ಮಿಕ ಪಾಠದಂತಿದೆ.

೫) ವ್ಯಾಘ್ರ = ಹುಲಿ, ತರಕ್ಷು;     ವ್ಯಾಘ್ರ ಪದದ ತದ್ಭವ ರೂಪ - ಬಗ್ಗ,


೬) ಶಾನುಭೋಗಿಕೆ / ಶಾನುಭೋಗರು :  ಶಾನುಭೋಗಿಕೆ ಎಂಬುದು ಒಂದು ವೃತ್ತಿ. ಇದಕ್ಕೆ ಸೇನಬೋಯಿಕೆ, ಶ್ಯಾನುಭೋಗಿಕೆ, ಶಾನುಬೋಗಿಕೆ, ಶೇನಭಾವಿಕೆ, ಸೇನಬೋಕೆ ಎಂಬ ರೂಪಾಂತರಗಳೂ ಇವೆ. 
    ಶಾನುಭೋಗಿಕೆ ಹುದ್ದೆಯನ್ನು ಹೊಂದಿದವರನ್ನು ಶಾನುಭೋಗರೆಂದು ಕರೆಯುತ್ತಿದ್ದರು.
    ಹಿಂದೆ ರಾಜರ ಕಾಲದಲ್ಲಿ ಗ್ರಾಮೀಣ ಜನರ ಆಸ್ತಿ, ಮನೆ, ಹೊಲಗಳ ಕಂದಾಯ ವಸೂಲು ಮಾಡುವುದು, ಅಲ್ಲದೆ ಇತರೆ ವ್ಯವಹಾರಗಳಿಗೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ಬರೆಯುವ ವೃತ್ತಿಯಾಗಿತ್ತು, ಶ್ಯಾನುಭೋಗಪದವಿ ಎಂದೂ ಕರೆಯುತ್ತಿದ್ದರು.

೭) ಖಿರ್ದಿ ಪುಸ್ತಕ : ಇದು ಫಾರ್ಸಿ ಭಾಷೆಯಿಂದ ಕನ್ನಡಕ್ಕೆ ಬಂದಿದೆ. ಗ್ರಾಮದ ಜನರ ಮನೆ, ಜಮೀನಿನ ದಾಖಲೆ ಹಾಗೂ ಕಂದಾಯದ ವಿವರಗಳನ್ನು ಹೊಂದಿರುವ ಪುಸ್ತಕ. ಈ ಪುಸ್ತಕ ಆಯಾ ಗ್ರಾಮದ ಪರಿಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾನುಭೋಗರ ಬಳಿ ಇರುತ್ತಿತ್ತು. ಸಾಮಾನ್ಯವಾಗಿ  ಈ ಪುಸ್ತಕ ವಂಶಪಾರಂಪರ್ಯವಾಗಿ ಅವರ ಮನೆತನದವರಿಂದಲೇ ನಿರ್ವಹಿಸಲ್ಪಡುತ್ತಿತ್ತು.
    ಪ್ರತಿ ದಿನದ ವಹಿವಾಟಿನ ದಾಖಲೆ. ತೆರಿಗೆ ವಿಧಿಸುವ ಉದ್ದೇಶಕ್ಕಾಗಿ ಭೂಮಿಯ ವ್ಯಾಪ್ತಿ, ಮೌಲ್ಯ ಮತ್ತು ಮಾಲೀಕತ್ವದ ಮಾಹಿತಿಯನ್ನು ಹೊಂದಿದ್ದ  ಸಾರ್ವಜನಿಕ ದಾಖಲೆಯಾಗಿತ್ತು.

೮) ಮಸಿಯ ಕಾಣಿಕೆ : ಮಸಿ ಎಂದರೆ ಕಪ್ಪು, ಕಾಡಿಗೆ.  ಇಲ್ಲಿ ಇಂಗ್ಲಿಷ್‌ನ 'ಇಂಕ್' (ink) ಎಂಬ ಅರ್ಥದಲ್ಲಿ ಬಳಕೆಯಾಗಿದೆ. ಆದ್ದರಿಂದ ಮಸಿಯ ಕಾಣಿಕೆ ಎಂದರೆ ಅರ್ಜಿ ಅಥವಾ ಲೆಕ್ಕ-ಪತ್ರಗಳನ್ನು ಬರೆದು ಕೊಟ್ಟವರಿಗೆ, ಬರೆಸಿಕೊಂಡವರು ನೀಡುತ್ತಿದ್ದ ಹಣ ಅಥವಾ ವಸ್ತುವಿನ ರೂಪದ ಸಂಭಾವನೆ ಅಥವಾ ಕಾಣಿಕೆಯಾಗಿದೆ.

೯) ಲಾಂಛನ : ಗುರುತು, ಚಿಹ್ನೆ

೧೦) ಇರಸಾಲು : ಸಾರ್ವಜನಿಕರಿಂದ ಸಂಗ್ರಹಿಸಿದ ಮತ್ತು ಸರ್ಕಾರಕ್ಕೆ ಸಲ್ಲಿಸಬೇಕಾದ ಕಂದಾಯದ ಹಣವನ್ನು ಖಜಾನೆಗೆ ಸಲ್ಲಿಸುವುದು/ಕಟ್ಟುವುದು

೧೧) ಖಜಾನೆ : ತಿಜೋರಿ, ಬೊಕ್ಕಸ, ಅಂದರೆ ಹಣಕಾಸನ್ನು ಇಡುವ ಸ್ಥಳ ಎಂದರ್ಥ, ಆದರೆ ವಿಶಾಲಾರ್ಥದಲ್ಲಿ ಸರಕಾರದ ಹಣಕಾಸು ವ್ಯವಹಾರವನ್ನು ನಡೆಸುವ ತಾಲೂಕು ಮಟ್ಟದ ಕಛೇರಿಯೇ ಖಜಾನೆ. ಈ ಕಛೇರಿಯಲ್ಲಿ ಜನರಿಂದ ಸಂಗ್ರಹಿಸಿದ ಕಂದಾಯವನ್ನು ಸ್ವಿಕರಿಸಲಾಗುತ್ತದೆ ಹಾಗೂ ಸಂಬಂಧಿಸಿದ ತಾಲೂಕಿನಲ್ಲಿ ಕಾರ್ಯನಿರ್ವಹಿಸುವ ಸರಕಾರಿ ನೌಕರರ ಸಂಬಳ ಭತ್ಯೆಗಳನ್ನು ವಿತರಿಸಲಾಗುತ್ತದೆ.

೧೨) ಮದಲಿಂಗನ ಕಣಿವೆ; ಮದಲಿಂಗನ ಕಣಿವೆ ಇದು ಮಾಸ್ತಿಯವರ ಕಥಾ ಕವನ. ಚಿಕ್ಕನಾಯಕನಹಳ್ಳಿಯ ಹತ್ತಿರ ಇರುವ ಒಂದು ಕಣಿವೆ. ಇದಕ್ಕೆ ಮದಲಿಂಗನ ಕಣಿವೆ ಎಂದು ಹೆಸರು ಬರುವುದಕ್ಕೆ ಒಂದು ಜನಪದೀಯ ಕಥೆ ಇದೆ. ಮದಲಿಂಗ ಎನ್ನುವ ಒಬ್ಬ ವ್ಯಕ್ತಿಯ ಕತೆ. ಮದಲಿಂಗನಿಗೆ ಆತನ ಅತ್ತೆಯ ಹಿರಿಯ ಮಗಳೊಟ್ಟಿಗೆ ಮದುವೆಯಾಗುತ್ತದೆ.

ಮದುವೆಯ ಬಳಿಕ ಹೆಂಡತಿ, ಅತ್ತೆ, ನಾದಿನಿ ಜಾಣೆಯೊಂದಿಗೆ ಚಿಕ್ಕನಾಯಕನಹಳ್ಳಿಗೆ ಬರುತ್ತಾನೆ. ಬರುವಾಗ ಒಂದು ಗುಡ್ಡ ಅಲ್ಲೊಂದು ಕಣಿವೆ ಸಿಗುತ್ತದೆ. ಅತ್ತೆ ಮತ್ತು ನಾದಿನಿಯರು ಸರಸದಿಂದ ಮದಲಿಂಗನೊಟ್ಟಿಗೆ ಮಾತನಾಡುವಾಗ ನಾದಿನಿಯು ಅಕ್ಕನನ್ನು  ಬಿಟ್ಟಿರಲು ನನಗೆ ಕಷ್ಟ ಎನ್ನುತ್ತಾಳೆ. ಆಗ ತಾಯಿಯು ನಿನಗೂ ಮದುವೆ ಆದ ಮೇಲೆ ನೀನು ಹೀಗೆ ಗಂಡನ ಮನೆಗೆ ಹೋಗುತ್ತೀಯಂತೆ ಬಾ ಎನ್ನುತ್ತಾಳೆ. ಆಗ ತಂಗಿ ನನಗಾವ ಗಂಡನೂ ಬೇಡವೆಂದು ಹೇಳುತ್ತಾಳೆ. ಆಗ ಮದಲಿಂಗ "ಎಲ್ಲರೂ ಹೀಗೆ ಹೇಳುತ್ತಾರೆ. ಯಾವನೋ ಬಂದು ಕರೆದರೆ ಓಡಿಹೋಗುತ್ತಾರೆ" ಎಂದು ವ್ಯಂಗ್ಯವಾಗಿ ಹೇಳುತ್ತಾನೆ. ನಾದಿನಿ ತಕ್ಷಣ ಭಾವನಿಗೆ ಮದುವೆಯಾಗಿ ಮೂರು ದಿನ ಆಗಿದೆ ಆಗಲೇ ಎಲ್ಲ ತಿಳಿದಿರುವನಂತೆ ಮಾತನಾಡುತ್ತಾರೆ ಎನ್ನುತ್ತಾಳೆ. ಮದಲಿಂಗ ನಾದಿನಿಗೆ "ನಿನ್ನ ಅಕ್ಕನನ್ನು ಬಿಟ್ಟಿರಲು ಆಗದಿದ್ದರೆ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಬಾ" ಎಂದು ರೇಗಿಸುತ್ತಾನೆ. ಆಗ ಅತ್ತೆ  ಒಂದು ಪಂಥ ಒಡ್ಡುತ್ತಾಳೆ. ಈ ಗುಡ್ಡವನ್ನು ಹಿಂದು ಹಿಂದಾಗಿ ಹತ್ತಿ, ಹಿಂದು ಹಿಂದಾಗಿ ಇಳಿದು ಬಂದರೆ ಇವಳನ್ನ ಕೊಡುತ್ತೇನೆ ಎಂದಳು. ಮದಲಿಂಗ ಹುಮ್ಮಸ್ಸಿನಿಂದ ಪಂಥವನ್ನು ಒಪ್ಪಿಕೊಂಡು ನೀವು ಆ ಕಡೆ ಕಣಿವೆಯಲ್ಲಿ ಚೊಂಬಿನಲ್ಲಿ ನೀರನ್ನು ಹಿಡಿದುಕಂಡು ಬನ್ನಿ; ಇವಳೇ ನನ್ನ ಕೈಗೆ ಕುಡಿಯಲು ನೀರನ್ನು ಕೊಡಬೇಕು ಎಂದನು. ಮದಲಿಂಗ ಗುಡ್ಡವನ್ನು ಹಿಂದು ಹಿಂದಾಗಿ ಹತ್ತಿ, ಹಿಂದು ಹಿಂದಾಗಿ ಇಳಿದು ಇವರಿರುವಲ್ಲಿಗೆ ಬರುತ್ತಾನೆ. ಆಗ ನಾದಿನಿ ಒಂದೇ ಉಸಿರಿಗೆ ನೀರನ್ನು ಕೊಡುವಾಗ ಚೊಂಬು ಕೈಯಿಂದ ಬಿದ್ದು ನೀರೆಲ್ಲ ಚೆಲ್ಲಿ ಕುಡಿಯಲು ನೀರಿಲ್ಲದ ಹಾಗೆ ಆಗುತ್ತದೆ. ಬೆಟ್ಟ ಹತ್ತಿ ಬಾಯಾರಿದ್ದ ಮದಲಿಂಗ ಸುಸ್ತಾಗಿ, ಗಂಟಲು ಒಣಗಿ, ಹತ್ತಿರದಲ್ಲಿ ಎಲ್ಲಿಯೂ ನೀರಿಲ್ಲದೆ ಒದ್ದಾಡಿ ಸಾಯುತ್ತಾನೆ. ಹೀಗೆ ಮದಲಿಂಗನು ಆ ಕಣಿವೆಯಲ್ಲಿ ಅಸುನೀಗಿದ್ದರಿಂದ ಮದಲಿಂಗನ ಕಣಿವೆ ಎಂಬ ಹೆಸರು ಬಂದಿದೆ.

ಮದಲಿಂಗನ ಕಣಿವೆ

  ಮದಲಿಂಗನಿಗೆ ನೀರು ತರಲು ಹೋದ ಹೆಂಡತಿ ಮಡುವಿಗೆ ಬಿದ್ದು ಸಾಯುತ್ತಾಳೆ. ಇದು ಮದನಮಡು ಆಗಿದೆ. ಮದಲಿಂಗನಿಗೆ ತಮ್ಮ ಜೊಲ್ಲು ನೀಡಿ ಬದುಕಿಸುವ ಪ್ರಯತ್ನ ಮಾಡಿ ಸಾಧ್ಯವಾಗದೇ ಜಾಣೆ ಕೂಡ ಸಾಯುತ್ತಾಳೆ. ಜಾಣೆ ಸಾವಿಗೀಡಾದ ಸ್ಥಳ ಜಾಣೆಹಾರ್ ಆಗಿದೆ. ಅಳಿಯ, ಇಬ್ಬರು ಹೆಣ್ಣು ಮಕ್ಕಳ ಸಾವಿನಿಂದ ಕಂಗಾಲಾಗಿ ಅಲ್ಲಿಂದ ಓಡುತ್ತಾ ಸ್ವಲ್ಪ ದೂರದಲ್ಲಿ ಅತ್ತೆಯೂ ಸಾಯುತ್ತಾಳೆ. ಅತ್ತೆ ಸತ್ತ ಜಾಗ ಈಗ ಹತ್ಯಾಳು ಆಗಿದೆ. ಅತ್ತೆ ಸಮಾಧಿ ಮಾಡಿದ ಜಾಗ ಎನ್ನಲಾದ ಜಾಗವನ್ನು ಈಗಲೂ ಅಜ್ಜಿಗುಡ್ಡೆ ಎಂದು ಕರೆಯಲಾಗುತ್ತದೆ.

೧೩) ಭರತಖಂಡ : 'ಭಾರತ ದೇಶ'ವನ್ನು ಇತಿಹಾಸ ಕಾಲದಲ್ಲಿ ಹಾಗೂ ಪುರಾಣಗಳಲ್ಲಿ 'ಭರತಖಂಡ ಎಂದು ಉಲ್ಲೇಖಿಸಲಾಗಿದೆ.

೧೪) ಹುಲಿಯ ಬಡಬಂಧುವಾದ ಬೆಕ್ಕು : ಬೆಕ್ಕು ಮತ್ತು ಹುಲಿ ಮಾರ್ಜಾಲ ವರ್ಗಕ್ಕೆ ಸೇರಿವೆ. ಆದರೆ ಹುಲಿಯಷ್ಟು ಶಕ್ತಿ ಹಾಗೂ ಗಾತ್ರ ಹೊಂದಿಲ್ಲದಿರುವ ಬೆಕ್ಕನ್ನು ಬಡಬಂಧುವೆಂದು ಕರೆಯಲಾಗಿದೆ.

೧೫) ಪುಣ್ಯಕೋಟಿ : ಜನಪದ ಕಥನ ಕಾವ್ಯದಲ್ಲಿ ಬರುವ ಸತ್ಯವಂತೆಯಾದ ಹಸು. ಪುಣ್ಯಕೋಟಿಯ ಕಥೆ "ಗೋವಿನ ಹಾಡು" ಎಂದು ಪ್ರಸಿದ್ಧಿಯಾಗಿದೆ.

  

                                                ********
೧೪) ಸ್ವಧರ್ಮೇ ನಿಧನಂ ಶ್ರೇಯಃ : ಭಗವದ್ಗೀತೆಯ 3 ನೇ ಅಧ್ಯಾಯದ 35 ಶ್ಲೋಕದಲ್ಲಿ ಈ ವಾಕ್ಯ ಬರುತ್ತದೆ. 
ಪೂರ್ಣ ಶ್ಲೋಕ ಹೀಗಿದೆ :
        ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ ।
        ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ ॥೩೫॥

        ಶ್ಲೋದ ಅರ್ಥ:  ತನ್ನ ಸ್ವಭಾವಕ್ಕೆ ವಿರುದ್ಧವಾದ ಧರ್ಮವನ್ನು ಚೆನ್ನಾಗಿ ಆಚರಿಸುವುದಕ್ಕಿಂತಲೂ, ಅರೆಬರೆಯಾಗಿಯಾದರೂ ಸಹಜ ಧರ್ಮವನ್ನು / ಸ್ವಂತ ಧರ್ಮವನ್ನು ಆಚರಿಸುವುದು ಮಿಗಿಲು.

    ಮೇಲೆ ಹೇಳಿದಂತೆ ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಸ್ವಭಾವವಿರುತ್ತದೆ ಹಾಗು ಅದನ್ನು ಬದಲಿಸಲು ಬರುವುದಿಲ್ಲ. ಜೀವ ಸ್ವಭಾವಕ್ಕನುಗುಣವಾಗಿ ನಮ್ಮ ಧರ್ಮ, ಅದು ಸ್ವಧರ್ಮ. ಇದು ಸಹಜ ಕ್ರಿಯೆ. ನಮ್ಮ ಸಹಜ ಸ್ವಭಾವ ಯಾವುದೋ ಅದನ್ನು ನಾವು ಮಾಡಬೇಕೇ ವಿನಃ ಅನ್ಯವನ್ನಲ್ಲ. ಈ ಕಾರಣಕ್ಕಾಗಿ ತಂದೆ-ತಾಯಿ ತಮ್ಮ ಅಭಿರುಚಿಯನ್ನು ಮಕ್ಕಳ ಮೇಲೆ ಹೇರದೆ, ಮಕ್ಕಳ ನಿಜ ಸ್ವಭಾವವನ್ನು ಗುರುತಿಸಿ ಅದಕ್ಕನುಗುಣವಾಗಿ ಅವರ ಭವಿಷ್ಯವನ್ನು ರೂಪಿಸಬೇಕು. ಇಲ್ಲದಿದ್ದರೆ ಅವರ ಭವಿಷ್ಯವನ್ನು ಹಾಳು ಮಾಡಿದಂತಾಗುತ್ತದೆ. ಮಕ್ಕಳ ಪ್ರತಿಭೆ ಅವರ ಸಹಜವಾದ ಸ್ವಭಾವದಲ್ಲಿದೆ. ಪ್ರತಿಯೊಬ್ಬನೂ ತನ್ನ ಜೀವ ಸ್ವಭಾವಕ್ಕನುಗುಣವಾಗಿ ಕಾರ್ಯ ನಿರ್ವಹಿಸಬೇಕೇ ಹೊರತು ಇನ್ಯಾರದ್ದೋ ಧರ್ಮವನ್ನು ಅನುಸರಿಸಿ ಅಲ್ಲ. ಇಲ್ಲಿ ಕೃಷ್ಣ ಹೇಳುತ್ತಾನೆ “ನಿನ್ನ ಸ್ವಧರ್ಮ ಆಚರಣೆಯಲ್ಲಿ ನ್ಯೂನತೆ ಇದ್ದರೂ, ಅದು ಪರಕೀಯ ಧರ್ಮವನ್ನು ಆಚರಿಸುವುದಕ್ಕಿಂತ ಶ್ರೇಷ್ಠ” ಎಂದು. ಪರ ಧರ್ಮವನ್ನು ಎಷ್ಟು ಪರಿಪೂರ್ಣವಾಗಿ ಆಚರಿಸಿದರೂ ಅದರಿಂದ ಒಳಿತಿಲ್ಲ, ಅದು ಅಸಹ್ಯ ಅಥವಾ ಭಯಂಕರ.

    ಇಲ್ಲಿ ಯುದ್ಧ ಮಾಡುವುದು ಅರ್ಜುನನ ಸ್ವಭಾವ ಧರ್ಮ. ಅದನ್ನು ಬಿಟ್ಟು ಆತ ತಪಸ್ಸು ಮಾಡುವುದಕ್ಕೆ ಕಾಡಿಗೆ ಹೋಗುವುದು ಆತನ ಸ್ವಧರ್ಮಕ್ಕೆ ವಿರುದ್ಧ. ಆದುದರಿಂದ ಸ್ವಧರ್ಮ ಪಾಲನೆ ಮಾಡು, ರಾಗ ದ್ವೇಷವನ್ನು ಬಿಟ್ಟು ಹೋರಾಡು ಎನ್ನುತ್ತಿದ್ದಾನೆ ಕೃಷ್ಣ.

೧೫) ಬೈಬಲ್ : ಕ್ರೈಸ್ತ ಧರ್ಮೀಯರ ಪವಿತ್ರವಾದ ಗ್ರಂಥ ಬೈಬಲ್. ಇದರಲ್ಲಿ ಕ್ರೈಸ್ತ ಧರ್ಮದ ನಂಬಿಕೆಯಂತೆ ಏಳು ದಿನಗಳಲ್ಲಿ ದೇವರು ಪ್ರಪಂಚವನ್ನು ನಿರ್ಮಿಸಿದ್ದು; ಮೊದಲ ಮಾನವರ ಜನನ (ಆದಂ ಮತ್ತು ಈವ್) , ಅವರನ್ನು ಪಾಪದ ಕೆಲಸಕ್ಕೆ ಪ್ರೇರಿಪಿಸುವ ಸೈತಾನ (ದುಷ್ಟಶಕ್ತಿ), ಕೊನೆಗೂ ಅದರ ಪ್ರೇರೇಪಣೆಯಿಂದ ಪಾಪ ಮಾಡುವ ಆದಂ ಮತ್ತು ಈವರ ಕಥೆಯಿದೆ. ಅಲ್ಲದೆ ಏಸು ಮತ್ತು ಆತನ ಅನುಯಾಯಿಗಳ ಬೋಧನೆಗಳನ್ನು ಬೈಬಲ್ ನಲ್ಲಿ ಕಾಣಬಹುದು.

೧೬) ಸೈತಾನ ಹಿಂದಿರುಗು : ಬೈಬಲ್ ಗ್ರಂಥದಲ್ಲಿರುವಂತೆ ಸೈತಾನ ಎಂದರೆ "ವಿರೋಧಿಸುವವನು" ಅಥವಾ "ದುಷ್ಟಶಕ್ತಿ" ಎಂದರ್ಥ. ದೇವರು ತನ್ನಂತೆಯೇ ಇರುವ ಮಾನವರನ್ನು ಸೃಷ್ಟಸಿ ತೋಟದಲ್ಲಿರುವ ಹಣ್ಣುಗಳಲ್ಲಿ "ಒಳಿತು - ಕೆಡುಕುಗಳನ್ನು ತಿಳಿಯುವ" ಹಣ್ಣುಗಳನ್ನು ತಿನ್ನಬಾರದೆಂದು ಆದಂ-ಈವ್ ದಂಪತಿಗಳಿಗೆ ಆಜ್ಞೆ ಮಾಡಿದನು. ಇದನ್ನು ತಿಳಿದ ಸೈತಾನನು "ಈ ಮರದ ಹಣ್ಣುಗಳನ್ನು ತಿನ್ನಿರಿ. ತಿಂದರೆ ನೀವು ದೇವರಂತೆಯೇ ಒಳ್ಳೆಯದು ಮತ್ತು ಕೆಟ್ಟದ್ದರ ತಿಳಿವಳಿಕೆ ಪಡೆಯುವಿರಿ ಎಂದು ಪೀಡಿಸತೊಡಗಿದನು. ಆಗ ತಂದೆಯ ಮಾತಿಗೆ ಮೀರಬಾರದೆಂದು ಅವರಿಬ್ಬರೂ ಅದಕ್ಕೆ ಒಪ್ಪದೆ, "ಸೈತಾನ ಹಿಂದಿರುಗು" ಎಂದು ಆತನನ್ನು ದೂರ ಹೋಗುವಂತೆ, ತಮ್ಮನ್ನು ಪಾಪದ ಕೆಲಸ ಮಾಡಲು ಪ್ರೇರೇಪಿಸದಂತೆ ತಿರಸ್ಕರಿಸಿದರು.

೧೭) ಕುಲಾಲ ಚಕ್ರ : ಮಡಿಕೆ ಮಾಡಲು ಬಳಸುವ ಚಕ್ರಾಕೃತಿಯ ಸಾಧನ, ಇದನ್ನು 'ತಿಗರಿ' ಎಂದೂ ಕರೆಯುವರು.

ಕುಲಾಲ ಚಕ್ರ / ತಿಗರಿ ಬಳಸಿ ಮಡಿಕೆ ತಯಾರಿ
************
೧೮) ದೊಂಬರಾಟ : 'ದೊಂಬ' ಎಂಬ ಅಲೆಮಾರಿ ಜನಾಂಗದವರ ಆಟವೇ "ದೊಂಬರಾಟ". ದೊಂಬರು ಕರ್ನಾಟಕದ ಪ್ರಮುಖ ಅಲೆಮಾರಿ ಸಮುದಾಯ. ಉತ್ತರ ಕರ್ನಾಟಕದಲ್ಲಿ ಕೊಲ್ಲಟಿಗರೆಂದೂ ಕರೆಯುತ್ತಾರೆ. ಅವರ ಪ್ರದರ್ಶನವನ್ನು ದೊಂಬರಾಟ, ಕೊಲ್ಲಟಿಗರ ಆಟ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.
   
        ದೊಂಬರು ಆಂಧ್ರಪ್ರದೇಶದ ಕಡಪಾ, ನೆಲ್ಲೂರು, ಚಿತ್ತೂರು ಮತ್ತು ವಿಶಾಖಪಟ್ಟಣ ಜಿಲ್ಲೆಗಳಿಂದ ವಲಸೆ ಬಂದರೆಂದು ಹೇಳಲಾಗಿದೆ. ಅವರು ತೆಲುಗು ಮತ್ತು ಪ್ರಾದೇಶಿಕ ಭಾಷೆಯಾದ ಕನ್ನಡ ಮಾತನಾಡುತ್ತಾರೆ. ದೊಂಬರ ಸಮುದಾಯವು ಭಾರತದ ಉದ್ದಗಲಕ್ಕೂ ಹರಡಿಕೊಂಡಿದ್ದು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.
        ದೊಂಬರಾಟ ಪ್ರದರ್ಶನ: ಪ್ರದರ್ಶನದ ಪ್ರಾರಂಭದಲ್ಲಿ ಸಗಣಿಯಿಂದ ಮಾಡಿದ ಗಣಪತಿಯನ್ನು ಪೂಜಿಸಿ, ರಂಗಸ್ಥಳದ ನಡುವೆ ಒಂದು ಬೊಂಬನ್ನು ಹೂಳಿ ನಿಲ್ಲಿಸುತ್ತಾರೆ.
  • ಬಿದಿರುಗಳವನ್ನು ಹತ್ತುವುದು ಮತ್ತು ದಿಢೀರನೆ ಅದರಿಂದ ಜಾರಿಕೊಂಡು ಕೆಳಗೆ ಇಳಿಯುವುದು.
  • ಆ ಬೊಂಬನ್ನು ಹಿಡಿದಿಕೊಂಡೇ ಬಗೆಬಗೆಯ ಲಾಗಗಳನ್ನು ಹಾಕುವುದು.
  • ಎತ್ತಿನ ಬಂಡಿಯನ್ನು ತನ್ನ ಕೂದಲಿಗೆ ಕಟ್ಟಿಕೊಂಡು ಎಳೆಯುವುದು.
  • ನೆಲದ ಮೇಲೆ ಅಂಗಾತ್ತಾಗಿ ಮಲಗಿಕೊಂಡು, ಎದೆಯ ಮೇಲೆ ದೊಡ್ಡ ಬಂಡೆಯನ್ನು ಇಟ್ಟುಕೊಳ್ಳುವುದು.
  • ಹಗ್ಗದ ಮೇಲಿನ ನಡಿಗೆ.
  • ನೀರುತುಂಬಿದ ಕೊಡವನ್ನು ಹಲ್ಲುಗಳಿಂದಲೇ ಎತ್ತುವುದು.
  • ಮರಗಾಲುಗಳನ್ನು ಕಟ್ಟಿಕೊಂಡು ನಡೆಯುವುದು.
  • ಚಿಕ್ಕ ಮಕ್ಕಳು ಕಬ್ಬಿಣದ ಹೂಪುಗಳಲ್ಲಿ (Hoop) ಒಳಗೆ ಮೈಮಣಿಸಿಕೊಂಡು ಹೋಗಿ ಹೊರಬರುವುದು. ಇತ್ಯಾದಿ
*********
೧೯) ಹುಲಿಯ ಪಂಜಾ : ಹುಲಿಯ ಕಾಲಿನಲ್ಲಿರುವ ಚೂಪಾದ ಉಗುರುಗಳನ್ನು ಪಂಜಾ ಎನ್ನಲಾಗುತ್ತದೆ. ಈ ಸ್ವಾಭಾವಿಕ ಉಗುರುಗಳು ಹಲವಾರು ಮಾಂಸಾಹಾರಿ ಪ್ರಾಣಿಗಳಲ್ಲಿ ಸ್ವಾಭಾವಿಕವಾಗಿ ಕಂಡುಬರುತ್ತವೆ.
   
ಹುಲಿಯ ಚೂಪಾದ ಪಂಜಾ (ಉಗುರುಗಳು)

*********

೨೦) ಬ್ರಹ್ಮಾಸ್ತ್ರ : ಬ್ರಹ್ಮಾಸ್ತ್ರವು ಭಾರತೀಯ ಪುರಾಣಗಳಲ್ಲಿ ಪದೇ ಪದೇ ಕೇಳಿಬರುವ ಅಸ್ತ್ರದ ಹೆಸರಾಗಿದೆ. ಸೃಷ್ಟಿಕರ್ತನಾದ ಬ್ರಹ್ಮನಿಂದ ಆವಿಷ್ಕರಿಸಲ್ಪಟ್ಟ ಬ್ರಹ್ಮಾಸ್ತ್ರವು ಅಸ್ತ್ರಸಂಕುಲದಲ್ಲಿಯೇ ಅತ್ಯಂತ ಬಲಿಷ್ಟ ಮತ್ತು ಕೊನೆಯ ಅಸ್ತ್ರವಾಗಿದೆಯೆಂದು ಭಾವಿಸಲಾಗುತ್ತದೆ. ಆದರೆ ಕೇವಲ ಧರ್ಮ ಮತ್ತು ಸತ್ಯವನ್ನು ಹಿಡಿದೆತ್ತುವದಕ್ಕಾಗಿ ಮತ್ತು ಅತ್ಯಂತ ಕ್ಲಿಷ್ಟ ಸಂದರ್ಭಗಳಲ್ಲಿ ಮಾತ್ರ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಬೇಕೆಂಬ ನೀತಿಸಂಹಿತೆಯಿದೆ. ರಾಮಾಯಣದಲ್ಲಿ ರಾಮ ರಾಕ್ಷಸನಾದ ರಾವಣನ ಮೇಲೆ ಮತ್ತು ಮಹಾಭಾರತದಲ್ಲಿ ಅರ್ಜುನ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದನ್ನು ಓದಬಹುದಾಗಿದೆ.

*********
೨೧) ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ! : ಭಗವದ್ಗೀತೆಯ ೨ನೇ ಅಧ್ಯಾಯದ ೪೭ ನೇ ಶ್ಲೋಕದಲ್ಲಿ ಈ ವಾಕ್ಯವಿದೆ.
        ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ।
        ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋSಸ್ತ್ವಕರ್ಮಣಿ ॥೪೭॥

ಭಾವಾರ್ಥ:  ಕರ್ಮದಲ್ಲಿ ಮಾತ್ರ ನಿನಗೆ ಹಕ್ಕು, ಫಲಗಳಲ್ಲಿ ಎಂದೂ ಇಲ್ಲ. ಫಲವನ್ನೇ ನಂಬಿ ಕರ್ಮ ಮಾಡಬೇಡ (ಕರ್ಮಕ್ಕೆ ಫಲ ನೀಡುವ ಶಕ್ತಿ ತಾನೆಂದು ಭ್ರಮಿಸಬೇಡ). ಅಂತೆಯೇ ನಿಷ್ಕ್ರಿಯತೆ ನಿನಗಂಟದಿರಲಿ.

        ಈ ಶ್ಲೋಕವನ್ನು ಅಪಾರ್ಥ ಮಾಡಿಕೊಳ್ಳುವವರೆ ಹೆಚ್ಚು. ಕರ್ಮ ಮಾಡಬೇಕು ಆದರೆ ಫಲವನ್ನು ಬಯಸಬಾರದು ಅಂದರೆ ಏನು? ಇದು ಮನುಷ್ಯನನ್ನು ನಿಷ್ಕ್ರಿಯಗೊಳಿಸುತ್ತದೆ, ಎಂಬಿತ್ಯಾದಿ ವಾದಗಳನ್ನು ಈ ಶ್ಲೋಕದ ಮೇಲೆ ಅನೇಕ ಮಂದಿ ಮಂಡಿಸಿದ್ದಾರೆ. ಆದರೆ ಅವರ್ಯಾರೂ ಶ್ಲೋಕದ ನಿಜವಾದ ಅರ್ಥವನ್ನು ತಿಳಿಯಲು ಪ್ರಯತ್ನಿಸಿಲ್ಲ. ಇಲ್ಲಿ ಫಲವನ್ನು ಬಯಸಬೇಡ ಎಂದು ಎಲ್ಲಿಯೂ ಹೇಳಿಲ್ಲ. ಅದಕ್ಕೆ ಬದಲಾಗಿ ಫಲದಲ್ಲಿ ಅಧಿಕಾರ ಸಾಧಿಸಬೇಡ ಎಂದಿದ್ದಾನೆ ಕೃಷ್ಣ.
        ಕರ್ಮ ನಿನ್ನ ಕೈಯಲ್ಲಿದೆ- ಆದರೆ ಕರ್ಮಫಲ ಭಗವಂತನ ಕೈಯಲ್ಲಿದೆ. ನೀನು ನಾನೇ ಕರ್ಮಫಲದ ಹೇತು ಎಂದು ತಿಳಿಯಬೇಡ. ಕರ್ಮಫಲದ ಹೇತು ಭಗವಂತ ಎನ್ನುವ ಎಚ್ಚರ ನಿನಗಿರಲಿ ಎನ್ನುತ್ತಾನೆ ಕೃಷ್ಣ. ಇಲ್ಲಿ ಕೃಷ್ಣ ಬಯಕೆಯನ್ನು ನಿರಾಕರಣೆ ಮಾಡಿಲ್ಲ, ಆದರೆ 'ಹೀಗೇ ಆಗಬೇಕು' ಇಲ್ಲದಿದ್ದರೆ ನಾನು ಈ ಕರ್ಮವನ್ನು ಮಾಡಲಾರೆ ಎನ್ನುವ ಅಭಿಪ್ರಾಯ ಸರಿಯಲ್ಲ ಎಂದಿದ್ದಾನೆ. ಬಯಸುವ ಅಧಿಕಾರ ನಮಗಿದೆ ಆದರೆ ಫಲವನ್ನು ಕೊಡುವವ ಭಗವಂತ ಎನ್ನುವ ಪರಿಜ್ಞಾನ ಬೇಕು. ಎಷ್ಟೋ ಸಲ ನಾವು ಅರಿವಿಲ್ಲದೆ ತಪ್ಪನ್ನು ಬಯಸುತ್ತೇವೆ. ಆಗ ಭಗವಂತ ಅದನ್ನು ಕೊಡಲಾರ. ಏಕೆಂದರೆ ಯಾವುದು ಸರಿ, ಯಾವುದು ತಪ್ಪು ಎನ್ನುವ ಪರಿಜ್ಞಾನ ನಮಗಿಲ್ಲ. ಈ ಎಚ್ಚರ ಇದ್ದರೆ ನಮಗೆ ಫಲ ಸಿಗದಿದ್ದಾಗ ದುಃಖವಾಗುವುದಿಲ್ಲ. ನಾವು ಮಾಡುವ ಕರ್ಮವನ್ನು ನಿಷ್ಠೆಯಿಂದ ಭಗವದರ್ಪಣೆಯಾಗಿ ಮಾಡಿ, ಅದರಿಂದ ಏನು ಫಲ ಬಂತೋ ಅದನ್ನು ಹಾಗೇ ಸ್ವೀಕರಿಸುವ ಮನೋವೃತ್ತಿಯನ್ನು ಬೆಳೆಸಿಕೊಂಡರೆ ದುಃಖವಿರುವುದಿಲ್ಲ.
        ಯಾವ ಕಾಲಕ್ಕೂ ನಿಷ್ಕ್ರೀಯನಾಗಿ ಕುಳಿತುಕೊಳ್ಳದೆ ಸದಾ ಕರ್ತವ್ಯ ಶೀಲನಾಗು ಎನ್ನುತ್ತಾನೆ ಕೃಷ್ಣ. ‘ಹೀಗೇ ಆಗಬೇಕು’, ‘ಇಂಥಹ ಫಲವೇ ಬರಬೇಕು’ ಎನ್ನುವ ವಿಚಾರವನ್ನು ಬಿಟ್ಟು, ಕರ್ತವ್ಯ ನಿರ್ವಹಿಸಿದಾಗ ಯಾವ ದುಃಖವೂ ಇಲ್ಲ. ಅದನ್ನು ಬಿಟ್ಟು ಫಲದಲ್ಲಿ ಅಧಿಕಾರ ಸಾಧಿಸಿದರೆ ಆ ಫಲ ದಕ್ಕದೇ ಇದ್ದಾಗ ಆಗುವ ಆಘಾತ, ವ್ಯಾಕುಲತೆ(Mental depression) ಭಯಾನಕ. ಸೋಲನ್ನಾಗಲಿ ಗೆಲುವನ್ನಾಗಲಿ ಸಮನಾಗಿ ಕಾಣುವ ಮನಃಸ್ಥಿತಿ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಈ ಹಿಂದೆ ಹೇಳಿದಂತೆ ನಾವು ಸೋಲಿನಲ್ಲಿ ಕಲಿತಷ್ಟು ಗೆಲುವಿನಲ್ಲಿ ಕಲಿಯಲಾಗದು. ಭಗವಂತ ನಮಗೆ ಫಲವನ್ನು ಕೊಡುವಾಗ ನಮ್ಮ ಒಳಿತನ್ನು ಗಮನದಲ್ಲಿಟ್ಟುಕೊಂಡು ಕೊಡುತ್ತಾನೆಯೇ ಹೊರತು , ನಾವು ಅಂದುಕೊಂಡಂತೆ ಅಲ್ಲ. ಬಂದದ್ದನ್ನು ಬಂದಂತೆ ಸ್ವೀಕರಿಸಿ, ಎಂದೂ ನಿಷ್ಕ್ರೀಯನಾಗದೆ, ಫಲದಲ್ಲಿ ಅಧಿಕಾರವನ್ನು ಸಾಧಿಸದೆ ಮುನ್ನೆಡೆಯಬೇಕು ಎನ್ನುವುದು ಕೃಷ್ಣನ ಕರ್ಮ ಸಿದ್ಧಾಂತ. ಇಲ್ಲಿ ಅರ್ಜುನ ತಾನು ಧರ್ಮ ರಕ್ಷಣೆ ಮಾಡಲು, ಧರ್ಮದ ವಿಜಯಕ್ಕಾಗಿ ಯುದ್ಧ ಮಾಡುತ್ತೇನೆ ಅಂದುಕೊಳ್ಳುವುದು ತಪ್ಪಲ್ಲ. ಈ ಹಂತದಲ್ಲಿ ಸೋಲು-ಗೆಲುವಿನ ಬಗ್ಗೆ ಯೋಚಿಸದೆ, ಅದನ್ನು ಪೂರ್ಣ ಭಗವಂತನಲ್ಲಿ ಅರ್ಪಿಸಿ, ತನ್ನ ಪಾಲಿಗೆ ಬಂದ ಕರ್ತವ್ಯವನ್ನು ನಿಷ್ಟೆಯಿಂದ ತನ್ನ ಶಕ್ತಿ ಮೀರಿ ನಿಭಾಯಿಸುವುದು ಆತನ ಧರ್ಮ. ಹೀಗೆ ಮಾಡಿದಾಗ ಯುದ್ಧದ ಪ್ರತಿಯೊಂದು ಹಂತದಲ್ಲಿ ಬರುವ ಫಲಿತಾಂಶ ಆತನನ್ನು ಕಂಗೆಡಿಸಲಾರವು. ಏನೇ ಫಲಿತಾಂಶ ಬಂದರೂ ಅದು ಭಗವಂತನ ಪ್ರಸಾದ ಎಂದು ಸ್ವೀಕರಿಸುತ್ತಾ ಮುಂದೆ ಸಾಗಬೇಕು ಅಷ್ಟೆ.
***********

೨೨) ಹರಿದಾರಿ : ದೂರವನ್ನು ಅಳೆಯುವ ಮಾಪನ, ಮೂರು ಮೈಲಿಗೆ ಒಂದು ಹರದಾರಿ ಎನ್ನುವರು.

***********
೨೩) ಕಣಿಹಾಕಿಕೊಳ್ಳುವುದು : ಉಳುವ ನೇಗಿಲಿಗೆ ಎತ್ತುಗಳು ಅಥವಾ ಎಮ್ಮೆಗಳ ಕುತ್ತಿಗೆ ಮೇಲೆ ನೊಗ ಹಾಕಿ, ಕುತ್ತಿಗೆ ಮತ್ತು ನೊಗ ಸೇರಿಸಿ ಒಂದು ಹಗ್ಗದಿಂದ ಕಟ್ಟಿರುತ್ತಾರೆ. ಆ ಹಗ್ಗವನ್ನು ಮಿಳಿ ಅಥವಾ ಮಿಣಿ ಎನ್ನುತ್ತಾರೆ. ಕೆಲವೊಮ್ಮೆ ಎತ್ತುಗಳು / ಎಮ್ಮೆಗಳು ಮಿಣಿ ಮತ್ತು ನೊಗದಿಂದ ಬಿಡಿಸಿಕೊಳ್ಳು ಪ್ರಯತ್ನಿಸಿ ಹೆಗಲ ಮೇಲಿನ ನೊಗವನ್ನು ಕೆಳಭಾಗಕ್ಕೆ ಜಾರಿಸಿಬಿಡುತ್ತವೆ. ಹೀಗೆ ಎತ್ತುಗಳು ಹೆಗಲ ಮೇಲಿನ ನೊವನ್ನು ಕೆಳಕ್ಕೆ ಜಾರಿಸುವುದನ್ನು ರೈತರು "ಕಣಿಹಾಕಿಕೊಳ್ಳುವುದು" ಎನ್ನುತ್ತಾರೆ.
***********
೨೪) ಕೋವಿ : ಬಂದೂಕು, ತುಪಾಕಿ,
ಕೋವಿ
*************

೨೫) ಕುಡಿದ ನೀರು ಅಲುಗದ ಹಾಗೆ : ಯಾವುದೇ ತೊಂದರೆ ಇಲ್ಲದ ಹಾಗೆ.

೨೬) ಜೀರ್ಣವಸ್ತ್ರ : ಹಳೆಯದಾದ ಹಾಗೂ ಹರಿದು ಚೂರಾದ ಬಟ್ಟೆ.

೩೬) ತೊಲೆ: ದೂಲ, ಜಂತಿ;  ಮನೆಯ ಛಾವಣಿಗೆ ಆಧಾರವಾಗಿ ಗೋಡೆಗಳ ಮೇಲೆ ಅಡ್ಡಲಾಗಿ ಹಾಕುವಮರದ ದಿಮ್ಮಿ/ದೂಲ


*************

೩೭) ದೇವರ ಮಂದಾಸನ : ದೇವರ ಪೀಠ

*************








19 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-06-ಎದೆಗೆ ಬಿದ್ದ ಅಕ್ಷರ-ಟಿಪ್ಪಣಿಗಳು

ಎದೆಗೆ ಬಿದ್ದ ಅಕ್ಷರ ಗದ್ಯಕ್ಕೆ ಪೂರಕವಾದ ಟಿಪ್ಪಣಿಗಳು

೧)    ಭೂಮಿಗೆ ಬಿದ್ದ ಬೀಜ 
        ಎದೆಗೆ ಬಿದ್ದ ಅಕ್ಷರ 
        ಇಂದಲ್ಲ ನಾಳೆ ಫಲ ಕೊಡುವುದು 
    ಭೂಮಿಗೆ ಬಿದ್ದ ಬೀಜ ಹೇಗಾದರೂ ಎಂದಾದರೂ ಮೊಳಕೆಯೊಡೆದು ಗಿಡವಾಗಿ ಮರವಾಗಿ ಫಲ ನೀಡುತ್ತದೆ. ಹಾಗೆಯೇ ನಮ್ಮ ಎದೆಗೆ ಬಿದ್ದ ಅಕ್ಷರ ಅಂದರೆ ನಾವು ಕಲಿತ ವಿದ್ಯೆ / ಶಿಕ್ಷಣ ಇಂದಲ್ಲ ನಾಳೆ ಯಾವ ರೀತಿಯಲ್ಲಾದರೂ ಫಲ ಕೊಟ್ಟೇ ಕೊಡುತ್ತದೆ. ಏಕೆಂದರೆ ಶಿಕ್ಷಣವೇ ಉತ್ತಮ ಜೀವನದ ಸಂಜೀವಿನಿ.
******
೨) ಕವಿ ಸಿದ್ಧಲಿಂಗಯ್ಯ 
      

        ಕವಿ ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ 'ಮಾಗಡಿ' ತಾಲ್ಲೋಕಿನ 'ಮಂಚನಬೆಲೆ' ಗ್ರಾಮದಲ್ಲಿ ೧೯೫೪ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.
        ಶ್ರೀಯುತರು ಹೊಲೆ ಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಆಯ್ದಕವಿತೆಗಳು, ಅಲ್ಲೆಕುಂತವರೆ ನನ್ನ ಜನಗಳು ಮತ್ತು ಇತರ ಕವಿತೆಗಳು ಮುಂತಾದ ಕವನ ಸಂಕಲನಗಳನ್ನು ರಚಿಸಿದ್ದಾರೆ. ಊರು-ಕೇರಿ ಎಂಬುದು ಇವರ ಆತ್ಮಕಥೆ.
        ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ ಇನ್ನೂ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಇವರು ಶ್ರವಣಬೆಳಗೊಳದಲ್ಲಿ ನಡೆದ ೮೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
******
೩) ಗುಡಿಮನೆ : ದೇವರ ಗುಡಿ, ಚಿಕ್ಕದಾದ ದೇವಸ್ಥಾನ, ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಣ್ಣ ದೇವಾಲಯಗಳನ್ನು ಗುಡಿ ಎಂದು ಕರೆಯುವುದು ವಾಡಿಕೆ.
******
೪) ಕಾರುಣ್ಯ ಸಮತೆಯ ಬುದ್ಧ : 
ಗೌತಮ ಬುದ್ಧ
    ಗೌತಮ ಬುದ್ಧನು ಕರುಣೆಯ ಪ್ರತೀಕವಾಗಿದ್ದನು. ಎಲ್ಲರನ್ನೂ ಯಾವುದೇ ಭೇದವಿಲ್ಲದೆ ಪ್ರೀತಿಯಿಂದ ಕಾಣಬೇಕೆಂದು ಬೋಧಿಸಿದ ಬುದ್ಧನು ಸ್ವತಃ ಅದೇ ರೀತಿ ಬದುಕಿದನು. ಎಲ್ಲರಲ್ಲಿ ಕರುಣೆ ಮತ್ತು ಸಮಾನತೆಯನ್ನು ತೋರಬೇಕು ಎಂಬುದು ಆತನ ಬೋಧನೆಯ ಪ್ರಮುಖ ಅಂಶಗಳಲ್ಲಿ ಒಂದು. ಆದ್ದರಿಂದ ಆತನ್ನು "ಕಾರುಣ್ಯ ಸಮತೆಯ ಬುದ್ಧ" ಎನ್ನಲಾಗಿದೆ.
******
೫) ಶಿವಾನುಭವ ಶಬ್ದಕೋಶ : ಇದು 'ವಚನ ಪಿತಾಮಹ' ಎಂದು ಹೆಸರಾದ ಫ.ಗು.ಹಳಕಟ್ಟಿಯವರ ಕೃತಿ. ಇದರಲ್ಲಿ ವೀರಶೈವ ಧರ್ಮಕ್ಕೆ ಸಂಬಂಧಿಸಿದ ಪಾರಿಭಾಷಿಕ ಪದಗಳ ಅರ್ಥವಿವರಣೆ ಮಾಡಲಾಗಿದೆ. 
ಫಕೀರಪ್ಪ ಗುರುಬಸಪ್ಪ ಹಳಕಟ್ಟಿ
    ಪ್ರಮುಖವಾಗಿ ಶರಣರ ವಿಚಾರಧಾರೆಗಳು, ಅವರ ವಚನಗಳ ಆಶಯ ಮುಂತಾದ ಅಂಶಗಳ ಹಿನ್ನೆಲೆಯಲ್ಲಿ ವೀರಶೈವ ಧರ್ಮ ಹಾಗೂ ವಚನ ಸಾಹಿತ್ಯದಲ್ಲಿ ಕಂಡುಬರುವ ಹಲವಾರು ಪದಗಳಿಗೆ ಅರ್ಥ ಹಾಗೂ ವಿವರಣೆಯನ್ನು ಈ ಕೃತಿಯಲ್ಲಿ ಕಾಣಬಹುದು.
***********
೬) ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು:  "ನುಡಿದಂತೆ ನಡೆಯಬೇಕು" ಎಂಬುದು ಶರಣರ ವಾಣಿ, ಅಂತೆಯೇ ನಡವಳಿಕೆಯಿಂದ ಒಳ್ಳೆಯ ನುಡಿ ಅಂದರೆ ಉತ್ತಮ ಮಾತು / ವಿಚಾರ ಹುಟ್ಟಬೇಕು. ಆಗ ಮಾತ್ರ ಅದನ್ನು ನಿಜವಾದ ಅರಿವು ಅಥವಾ ತಿಳಿವಳಿಕೆ ಎನ್ನಬಹುದು. ಎಂಬುದು ದೇವನೂರರ ಅಭಿಪ್ರಾಯ.
***********
೭) ಇಷ್ಟದೈವ : ಪ್ರತಿಯೊಬ್ಬರೂ ತಮ್ಮದೇ ಆದ ದೇವರನ್ನು ಆರಾಧಿಸುತ್ತಾರೆ. ಕುಲದೇವತೆ, ಮನೆದೇವತೆ, ಗ್ರಾಮದೇವತೆ ಎನ್ನುವಂತೆ ವ್ಯಕ್ತಿಗೆ ವೈಯಕ್ತಿಕವಾಗಿ ಇಷ್ಟವಾದ ದೇವರು ಅಥವಾ ಆರಾಧ್ಯ ದೇವರನ್ನು ಇಷ್ಟದೈವ ಎನ್ನಲಾಗಿದೆ.
    ಬಸವಣ್ಣನವರ ಇಷ್ಟದೈವ ' ಕೂಡಲ ಸಂಗಮ ದೇವ', ಅಕ್ಕಮಹಾದೇವಿಯ ಅಂಕಿತನಾಮ 'ಚೆನ್ನಮಲ್ಲಿಕಾರ್ಜುನ' ಕನಕದಾಸರ ಆರಾಧ್ಯದೇವರು ಕಾಗಿನೆಲೆ ಆದಿಕೇಶವ, ಪುರಂದರ ದಾಸರ ಆರಾಧ್ಯದೇವರು 'ಪುರಂದರ ವಿಠಲ'.... ಹೀಗೆ ಅವರವರದೇ ಆದ ಇಷ್ಟದೈವ ಹೊಂದಿದ್ದುದನ್ನು ಕಾಣಬಹುದು. ಸಾಮಾನ್ಯವಾಗಿ ಅವರ ಇಷ್ಟದೈವವೇ ಅವರ ವಚನಗಳ / ಕೀರ್ತನೆಗಳ ಅಂಕಿತನಾಮವಾಗಿರುತ್ತಿತ್ತು.
*********
೮) ಮನೋವೈದ್ಯರು : ಮಾನಸಿಕ ರೋಗಿಗಳಿಗೆ ಸಂಬಂಧಿಸಿದ ತಜ್ಞವೈದ್ಯರನ್ನು ಮನೋವೈದ್ಯರು ಎನ್ನುವರು. ಇವರು ವ್ಯಕ್ತಿಯ ಮಾನಸಿಕ ಕಾಯಿಲೆಗೆ ಚಿಕಿತ್ಸೆ ನೀಡುತ್ತಾರೆ. ಇವರನ್ನು "ಮಾನಸಿಕ ತಜ್ಞ" ಎಂದೂ ಕರೆಯುವರು. ಆಂಗ್ಲ ಭಾಷೆಯಲ್ಲಿ "Psychiatrist" (ಸೈಕಿಯಾಟ್ರಿಸ್ಟ್) ಎಂದು ಕರೆಯುವರು.
*********
೯) ಸಮಷ್ಟಿ ಮನಸ್ಸು : ಸಮಷ್ಟಿ ಎಂದರೆ ಸಮಗ್ರ, ವಿಶಾಲ ಎಂಬ ಅರ್ಥವಿದೆ. ಇಲ್ಲಿ ಸಮಷ್ಟಿ ಮನಸ್ಸು ಎಂದರೆ ಇಡೀ ಸಮಾಜದ / ಸಮುದಾಯದ / ಇಡೀ ವಿಶ್ವದ ಜನರ ಮನಸ್ಸು ಎಂದರ್ಥ.
*********
೧೦) ಮೂರ್ಛಾವಸ್ಥೆ : ಪ್ರತಿಯೊಬ್ಬ ವ್ಯಕ್ತಿಯ ದೈನಂದಿನ ಜೀವನದಲ್ಲಿ ಪ್ರಮುಖವಾಗಿ ಮೂರು ಅವಸ್ಥೆಗಳನ್ನು ಕಾಣಬಹುದು. ೧. ಜಾಗೃತಾವಸ್ಥೆ (ಸಂಪೂರ್ಣ ಎಚ್ಚರದ ಸ್ಥಿತಿ), ೨. ಅರೆ ಸುಪ್ತಾವಸ್ಥೆ (ಅರೆಬರೆ ಎಚ್ಚರದ ಅವಸ್ಥೆ) 
    ಮತ್ತು ೩. ಮೂರ್ಛಾವಸ್ಥೆ (ನಾವು ಎಚ್ಚರವಾಗಿದ್ಧಾಗಲೂ ನಮ್ಮ ಅರಿವಿಗೆ ಬಾರದೆ ನಮ್ಮೊಳಗೆ ಅಡಗಿರುವ ತಿಳಿವಳಿಕೆ ಅಥವಾ ಜ್ಞಾನ)
*********




13 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-04-ಭಾಗ್ಯಶಿಲ್ಪಿಗಳು-ಟಿಪ್ಪಣಿಗಳು

ಮಹಾರಾಣಿ ವಾಣಿ ವಿಲಾಸ : ಇವರು ಮಹಾರಾಜ ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರ ಮಹಾರಾಣಿ.  ನಾಲ್ವಡಿ ಕೃಷ್ಣರಾಜ ಒಡೆಯರ ತಾಯಿ. ಇವರ ನಿಜವಾದ ಹೆಸರು ಕೆಂಪನಂಜಮ್ಮಣ್ಣಿ, ನಂತರ ವಾಣಿವಿಲಾಸ ಸನ್ನಿಧಾನ ಎಂದು ಹೆಸರಾಗಿದ್ದರು.

*****

ರೀಜೆಂಟ್ : ಇದು ಆಂಗ್ಲ ಭಾಷೆಯ ಪದ, ರೀಜೆಂಟ್ ಎಂದರೆ ರಾಜಪ್ರತಿನಿಧಿ. ಪಟ್ಟಾಭಿಷಿಕ್ತರಾದ ರಾಜರು ಅಪ್ರಾಪ್ತ ವಯಸ್ಕರಾಗಿದ್ದಾಗ, ರಾಜಕಾರ್ಯ ನಿಮಿತ್ತ ವಿದೇಶ / ಬೇರೆ ರಾಜ್ಯ ಪ್ರವಾಸದಲ್ಲಿದ್ದಾಗ ಅಥವಾ ತೀವ್ರತರವಾದ ಕಾಯಿಲೆಯಿಂದ ಕೂಡಿದ್ದಾಗ ರಾಜಕಾರ್ಯಗಳನ್ನು ನೋಡಿಕೊಳ್ಳಲು ನೇಮಿಸಲ್ಪಡುತ್ತಾರೆ. ರಾಜರು ಅಧಿಕಾರ ವಹಿಸಿಕೊಳ್ಳುವವರೆಗೆ ರಾಜ್ಯದ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ.
*****
ಸರ್.ಕೆ. ಶೇಷಾದ್ರಿ ಅಯ್ಯರ್ : 
ಕೆ. ಶೇಷಾದ್ರಿ ಅಯ್ಯರ್
ಇವರ ಮೂಲ ಕೇರಳ. ಇವರು ಮೈಸೂರು ಅರಸರ ಬಳಿ ದಿವಾನರಾಗಿ ೧೮೮೩ ರಿಂದ ೧೯೦೧ ರ ವರೆಗೆ ಸೇವೆಸಲ್ಲಿಸಿದರು. ಅವರೊಬ್ಬ ಸಮರ್ಥ ವಕೀಲರು. 'ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿ ಸರಕಾರ' ಒಡೆಯರ್ ರಾಜಪರಿವಾರಕ್ಕೆ ತಾನು ಹಿಂದೆ ಕಸಿದುಕೊಂಡಿದ್ದ ರಾಜ್ಯದ ಎಲ್ಲಾ ಅಧಿಕಾರವನ್ನು ಮತ್ತೆ ಒಪ್ಪಿಸಿ ಆಗಿನ ರಾಜರನ್ನು ಸಿಂಹಾಸನವನ್ನೇರಲು ಆದೇಶ ನೀಡಿದ್ದು, ೧೮೮೧ ರಲ್ಲೇ. ಆಸಮಯದಲ್ಲಿ ನೇಮಿಸಲ್ಪಟ್ಟ (ಮುಖ್ಯ ಮಂತ್ರಿ)(ಅಮಾತ್ಯ) ಅಥವಾ ದಿವಾನರಲ್ಲಿ 'ಶೇಷಾದ್ರಿ ಅಯ್ಯರ್' ಎರಡನೆಯವರು. ಮೈಸೂರು ರಾಜ್ಯದಲ್ಲಿ ಅತಿಹೆಚ್ಚು ಸಮಯ ಅಧಿಕಾರದಲ್ಲಿದ್ದ ದಿವಾನರೆಂಬ ಹೆಸರಿಗೆ ಪಾತ್ರರಾಗಿದ್ದರು. ಬೆಂಗಳೂರನ್ನು ಆಧುನಿಕರಣಮಾಡಲು ಪ್ರಯತ್ನಿಸಿ ಸಫಲರಾದರು.
*****

ವರ್ಧಂತಿ : ಜಯಂತಿ, ಹುಟ್ಟುಹಬ್ಬ
*****

ಆಯವ್ಯಯ : ಬಜೆಟ್, ಪ್ರತಿ ಆರ್ಥಿಕ ವರ್ಷದ ಆರಂಭದಲ್ಲಿ ಆ ವರ್ಷದ ಖರ್ಚು ವೆಚ್ಚಗಳ ಅಂದಾಜನ್ನು ಯೋಜನಾಬದ್ಧವಾಗಿ ಹಾಗೂ ವಿವರವಾಗಿ ಸಿದ್ಧಪಡಿಸುವುದು ಹಾಗೂ ಅದನ್ನು ಸರ್ಕಾರದ ಎಲ್ಲಾ ಜನಪ್ರತಿನಿಧಿಗಳ ಎದುರು ಮಂಡಿಸಲಾಗುವುದು.
*****
ಠರಾವು : ನಿರ್ಣಯ, ತೀರ್ಮಾನ
*****
ಮೇಲ್ಮನೆ : ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದಂತೆ - ವಿಧಾನ ಪರಿಷತ್ತು;   ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ - ರಾಜ್ಯಸಭೆ
*****
ಆಡಳಿತ ವಿಕೇಂದ್ರೀಕರಣ : ಮೇಲ್ಮಟ್ಟದಲ್ಲಿ ಹಲವು ಅಧಿಕಾರಗಳು ಕೆಲವೇ ಅಧಿಕಾರಿಗಳ ಕೈಯಲ್ಲಿದ್ದಾಗ ಆಡಳಿತ ಹಾಗೂ ಅದರ ಅನುಷ್ಠಾನ ಕ್ಲಿಷ್ಟವಾಗುವುದಲ್ಲದೆ ಅಭಿವೃದ್ಧಿ ಕಾರ್ಯಗಳು ನಿಧಾನವಾಗುತ್ತದೆ. ಆದ್ದರಿಂದ ಅಧಿಕಾರವನ್ನು ಹಲವು ವಿಭಾಗಗಳಾಗಿ - ಉಪವಿಭಾಗಗಳಾಗಿ ವಿಂಗಡಿಸುವುದು. 
        ಉದಾಹರಣೆಗೆ : ಇಡೀ ಜಿಲ್ಲೆಗೆ ಜಿಲ್ಲಾ ಪಂಚಾಯತಿ ಇದ್ದರೂ ಅದರ ಅಧಿಕಾರವನ್ನು ತಾಲೂಕುವಾರು ವಿಂಗಡಿಸಿ ಆಡಳಿತವನ್ನು ಸುಗಮಗೊಳಿಸಲು ಪ್ರತಿ ತಾಲೂಕಿಗೂ ತಾಲೂಕು ಪಂಚಾಯಿತಿಯನ್ನು ಸ್ಥಾಪಿಸಲಾಗಿದೆ ಹಾಗೆಯೇ ಅದನ್ನು ಮತ್ತೆ ವಿಭಾಗಿಸಿ ಗ್ರಾಮ ಪಂಚಾಯಿತಿಗಳನ್ನು ಸ್ಥಾಪಿಸಲಾಗಿದೆ - ಇದೇ ಆಡಳಿತ ವಿಕೇಂದ್ರೀಕರಣ.
*****
ದೇವದಾಸಿ ಪದ್ಧತಿ / ಬಸವಿ ಪದ್ಧತಿ / ಗೆಜ್ಜೆ ಪೂಜೆ
        ದೇವಾಲಯಗಳಲ್ಲಿ ದೇವರುಗಳಿಗೆ ವಿಭಿನ್ನ ರೀತಿಯ ಸೇವೆಯನ್ನು ಮಾಡಲು ಅರ್ಪಿಸಲಾಗಿರುವ ಯುವತಿಯರನ್ನು ದೇವದಾಸಿಯರೆಂದು ಕರೆಯಲಾಗುತ್ತಿತ್ತು. ಈ ಯುವತಿಯರು ಭಗವಂತನ ದಾಸಿಯರಾದ್ದರಿಂದ ಮಂದಿರವನ್ನು ಶುದ್ಧಗೋಳಿಸುವುದು, ದೀಪ ಬೆಳಗಿಸುವುದು ಹಾಗೂ ದೇವರ ಪ್ರತಿಮೆಯ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ಗಾಯನ ನರ್ತನ ಮೊದಲಾದ ನಿಶ್ಚಿತ ಕಾರ್ಯಗಳನ್ನು ಮಾಡುವುದು-ಇವುಗಳ ಮೂಲಕ ದೇವರ ಸೇವೆಯನ್ನು ನೆರವೇರಿಸುತ್ತಿದ್ದರು. ಈ ಪದ್ಧತಿ ತೀರ ಪ್ರಾಚೀನವಾದುದೆಂದು ತಿಳಿದು ಬರುತ್ತದೆ. ಪ್ರಾಚೀನ ಬ್ಯಾಬಿಲೋನಿಯ, ಸೈಪ್ರೆಸ್, ಫಿನಿಷಿಯ, ಗ್ರೀಸ್, ಮೆಸಪೊಟೇಮಿಯ, ಈಜಿಪ್ಟ್, ಸಿರಿಯ ಅರೇಬಿಯ, ಮುಂತಾದ ಮಧ್ಯಪ್ರಾಚ್ಯಗಳಲ್ಲಿ ಹಾಗೂ ಆಗ್ನೇಯ ಏಷ್ಯದಲ್ಲಿ ಈ ಪದ್ಧತಿ ರೂಡಿಯಲ್ಲಿತ್ತು. ಒಂದು ಕಾಲಕ್ಕೆ ಸಮಗ್ರ ಭಾರತದಲ್ಲೆಲ್ಲ ಈ ಪದ್ಧತಿ ಪ್ರಚಾರದಲ್ಲಿದ್ದಿರಬೇಕೆಂದು ಕಾಣುತ್ತದೆ. ಉತ್ತರ ಭಾರತದಲ್ಲಿ ಇದರ ಪ್ರಚಾರ ವಿಶೇಷವಾಗಿತ್ತೆಂದು ಹೇಳಲು ಸಮರ್ಥನೀಯ ದಾಖಲೆಗಳು ಇಲ್ಲವಾಗಿವೆ.
        ಕರ್ನಾಟಕದ ಶಾಸನಗಳಲ್ಲಿ ಅಂಗಭೋಗ ಮತ್ತು ರಂಗಭೋಗ ಎಂಬ ಮಾತುಗಳು ಬರುತ್ತವೆ. ವಿಗ್ರಹದ ದೇಹಕ್ಕೆ ಸಲ್ಲುವ ಭೋಗ, ಎಂದರೆ ಸ್ನಾನ, ಗಂಧಲೇಪನ, ಧೂಪ, ದೀಪ, ಪುಷ್ಪ ಇತ್ಯಾದಿಗಳು ಅಂಗಭೋಗಗಳು. ಗರ್ಭಗುಡಿಯ ಮುಂದಿನ ರಂಗದ ಮೇಲೆ ಎಂದರೆ ದೇವತಾ ಮೂರ್ತಿಯ ಮುಂದೆ ಸುಂದರಿಯರಿಂದ ನಡೆಯುವ ಗೀತ, ನೃತ್ಯಗಳೇ ರಂಗ ಭೋಗಗಳು. ದೇವದಾಸಿಯರು ರಂಗಭೋಗದ ಉಪಕರಣಗಳು ಎಂಬುದಾಗಿ ಎಂ. ಚಿದಾನಂದಮೂರ್ತಿಯವರು ಅಭಿಪ್ರಾಯಪಡುತ್ತಾರೆ. ಈ ಸಂಪ್ರದಾಯವನ್ನು ಮೊದಮೊದಲು ಬ್ರಾಹ್ಮಣರು ವಿರೋಧಿಸಿದರೂ ರಾಜರು ಒತ್ತಾಯ ಪೂರ್ವಕವಾಗಿ ಇದನ್ನು ಜಾರಿಗೆ ತಂದಿದ್ದರ ಫಲವಾಗಿ ಅವರ ಪ್ರತಿಭಟನೆಯಿಂದ ಯಾವ ಪ್ರಯೋಜನವೂ ಆಗಲಿಲ್ಲವೆಂದು ಆಳ್ತೇಕರ್ ಅವರ ಅಭಿಪ್ರಾಯ.
        ದೇವದಾಸಿ ಪದ್ಧತಿ ಯಾವ ಮಹತ್ತ್ವದ ಉದ್ದೇಶಗಳನ್ನಿಟ್ಟುಕೊಂಡು ಹುಟ್ಟಿತೋ ಆ ಉದ್ದೇಶಗಳೆಲ್ಲ ಈಗ ನಿರ್ನಾಮವಾಗಿ ಹೋಗಿವೆ. ಈಗ ಈ ವೃತ್ತಿ ತನ್ನ ಗೌರವವನ್ನು ಕಳೆದುಕೊಂಡು ವೇಶ್ಯಾವೃತ್ತಿ ಎನ್ನುವಷ್ಟರ ಮಟ್ಟಿಗೆ ಹದಗೆಟ್ಟಿದೆ. ಕಲೆ ಹಾಗೂ ದೇವರ ಹೆಸರಿನಲ್ಲಿ ವಿಷಯಸುಖವನ್ನು ಪ್ರಧಾನ ಮಾಡಿಕೊಂಡು ಬೆಳೆದು ನಿಂತ ಈ ಪದ್ಧತಿಯನ್ನು ಜನತೆಯೇ ಮೂಲೋಚ್ಚಾಟನೆಗೊಳಿಸಲು ಸಿದ್ಧವಾಯಿತು. 1934 ರಲ್ಲಿ ಭಾರತೀಯ ದಂಡವಿಧಾನದ 373 ಮತ್ತು 375 ರ ವಿಧಿಗಳನ್ನು ದೇವದಾಸಿ ಪದ್ಧತಿಯ ಮೇಲು ಅನ್ವಯಿಸುವ ದಿಶೆಯಲ್ಲಿ ಸಂಶೋಧನೆ ನಡೆಸಿತು. 1937 ರಲ್ಲಿ ಮದ್ರಾಸ್ ವಿಧಾನ ಪರಿಷತ್ತು ದೇವದಾಸಿ ಪದ್ಧತಿಯನ್ನು ನಿರ್ಮೂಲನ ಮಾಡಲು ಸರ್ವಾನುಮತದಿಂದ ವಿಧೇಯಕವೊಂದನ್ನು ಅಂಗೀಕರಿಸಿತು. ಅದರಲ್ಲಿ ಗೌರವಾನ್ವಿತ ಸೇವದಾಸಿಯರನ್ನು ದಾಸ್ಯದಿಂದ ಮುಕ್ತಗೊಳಿಸಡುವ ಸಲಹೆ ನೀಡಲಾಯಿತು. ಆ ಬಳಿಕ ಹಿಂದೂ ದೇವಾಲಯಗಳಲ್ಲಿ ಸ್ತ್ರೀಯರನ್ನು ಸೇವೆಗಾಗಿ ಅರ್ಪಿಸುವ ಪದ್ಧತಿಯನ್ನು ಕಾನೂನಿನಿಂದ ಕೊನೆಗೊಳಿಸುವ ಕ್ರಮವನ್ನು ಕೈಗೊಳ್ಳಲಾಯಿತು. ಅಲ್ಲದೆ ದೇವದಾಸಿಯರಾಗಿ ಕೆಲಸ ಮಾಡುತ್ತಿದ್ದ ಸ್ತ್ರೀಯರಿಗೆ ವಿಧಿಸಮ್ಮತ ವಿವಾಹಕ್ಕೆ ವ್ಯವಸ್ಥೆಗಳನ್ನು ಏರ್ಪಡಿಸಿತು. ಭಾರತದ ಇತರ ಸಂಸ್ಥಾನಗಳು ಈ ಕ್ರಮವನ್ನು ಜರೂರಾಗಿ ಅನುಸರಿಸಲು ಮುಂದೆ ಬಂದವು. ಹೀಗಿದ್ದರೂ ದೇವದಾಸಿ ಪದ್ಧತಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ. ಇದರ ಚಿಹ್ನೆಗಳು ಈಗಲೂ ಉಳಿದಿವೆ. ಏಕೆಂದರೆ ಈ ಪದ್ಧತಿಗಿರುವ ಧಾರ್ಮಿಕ ಪರಿವೇಷ ಇದನ್ನು ತೊಡೆದುಹಾಕಲು ಕಷ್ಟಸಾಧ್ಯವನ್ನಾಗಿಸಿದೆ.

*****
ಜನ್ಮ ಶತಮಾನೋತ್ಸವ : ವಯಸ್ಸು ನೂರು ವರ್ಷ ಪೂರ್ಣಗೊಂಡಾಗ ಮಾಡುವ ಉತ್ಸವ ಅಥವಾ ಹುಟ್ಟುಹಬ್ಬ
*****
ಇಂಟರ್ ಮೀಡಿಯಟ್ : ಎಸ್.ಎಸ್.ಎಲ್.ಸಿ. ನಂತರದ ಎರಡು ವರ್ಷಗಳ ಪದವಿ ಪೂರ್ವ ಶಿಕ್ಷಣ (ಪಿ.ಯು.ಸಿ)
*****
ಮುಕ್ತಕಂಠ : ತೆರೆದ ಮನಸ್ಸು, ಮನಸ್ಸಿನಲ್ಲಿ ಒಂದು ಬಾಯಿಯಲ್ಲಿ ಇನ್ನೊಂದನ್ನು ಹೇಳದೆ ಹೃದಯ ಪೂರ್ವಕವಾಗಿ ಹೇಳುವ ಮಾತು, ಸ್ವಾಭಾವಿಕವಾದ ಮೆಚ್ಚುಗೆಯ ಮಾತು. ಎಂಬ ಅರ್ಥಗಳಲ್ಲಿ ಬಳಸಲಾಗುತ್ತದೆ.
*****
ಮಾರಿಕಣಿವೆ ಜಲಾಶಯ : ಇದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಸಮೀಪದಲ್ಲಿದೆ. ಈ ಜಲಾಶಯದ ಹೆಸರು "ವಾಣಿವಿಲಾಸ ಸಾಗರ",  ಜಲಾಶಯದ ಮೇಲೆ ಒಂದು ಕೋನದಲ್ಲಿ ನಿಂತು ನೋಡಿದರೆ ನಿಂತಿರುವ ನೀರು ಭಾರತದ ನಕ್ಷೆಯಂತೆ ಕಾಣುತ್ತದೆ.


************
ಸಂಜೀವಿನಿ :  ಅಂದು. ಲಕ್ಷ್ಮಣನು ಯುದ್ದದಲ್ಲಿ ಅಸುನೀಗಿದಾಗ ಆತನನ್ನು ಮರುಜೀವಗೊಳಿಸಲು ರಾಮನ ಭಂಟನಾದ ಕೇಸರಿತನಯ, ಮಹಾಜ್ಞಾನಿ, ಮಹಾಬುದ್ದಿವಂತನೆಂದು ಕರೆಸಿಕೊಳ್ಳುವ ಹನುಮಂತನು ಹೊತ್ತು ತಂದ ಸಂಜೀವಿನಿ ಪರ್ವತದಲ್ಲಿದ್ದ ಸಸ್ಯದಿಂದಾಗಿ ಪ್ರಾಣ ಉಳಿಯಿತು. ಎನ್ನುವ ವಿಚಾರ ತಿಳಿದೇ ಇದೆ!! ಕೇವಲ 5 ಬಗೆಯ ಔಷಧೀಯ ಸಸ್ಯವನ್ನು ತರುವ ಬದಲು ಈಡೀ ಸಂಜೀವಿನಿ ಪರ್ವತವನ್ನೇ ಹೊತ್ತು ತಂದ ಹನುಮಂತನು ಆ ಪರ್ವತವನ್ನು ಏಕೆ ತಂದನು ತಿಳಿದಿದೆಯೇ? 


    ಸಂಜೀವಿನಿ ಸಸ್ಯವನ್ನು ತರಲು ಹೊರಟ ಹನುಮಂತನಿಗೆ, ಹಿಮಾಲಯದಲ್ಲಿರುವ ಸಂಜೀವಿನಿ ಪರ್ವತ ತಲುಪಿದಾಗ ಆತನಿಗೆ ಅಲ್ಲಿರುವ ಎಲ್ಲ ಸಸ್ಯಗಳು ಕೂಡ ಸಂಜೀವಿನಿಯಂತೆಯೇ ಗೋಚರಿಸಿದವು. ಭಾರತದಲ್ಲಿರುವ ಸುಮಾರು 18,000 ಪುಷ್ಪಸಸ್ಯಗಳ ರಾಶಿಯಿಂದ 'ಸಂಜೀವಿನಿ' ಎಂಬ ಏಕೈಕ ಪ್ರಭೇದವನ್ನು ಹುಡುಕುವುದು ಸರಳವಾದ ವಿಚಾರವೇನಲ್ಲ. ಹಾಗಾಗಿ ಈಡೀ ಷರ್ವತವನ್ನೇ ಹೊತ್ತು ತಂದ ಹನುಮಂತನು ಲಕ್ಷ್ಮಣನನ್ನು ಮಾತ್ರ ಅಲ್ಲದೇ ತಮ್ಮ ಸೈನ್ಯದಲ್ಲಿ ಅಸುನೀಗಿದ ಅದೆಷ್ಟೋ ಸೈನಿಕರ ಪ್ರಾಣವನ್ನು ಉಳಿಸುವಲ್ಲಿ ಸಹಕಾರಿಯಾಗುವಂತೆ ಮಾಡಿದೆ!!

*****ಪೂರಕ ಮಾಹಿತಿ ಕೃಪೆ: ಕಹಳೆ ನ್ಯೂಸ್****

ಆಡು ಮುಟ್ಟದ ಸೊಪ್ಪಿಲ್ಲ : ಇದು ಒಂದು ಗಾದೆಮಾತು, ಹಸು, ಎಮ್ಮೆ, ಕುರಿ, ಕುದುರೆ ಮುಂತಾದ ಸಸ್ಯಾಹಾರಿ ಪ್ರಾಣಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ವಿಧದ ಹುಲ್ಲು, ಸೊಪ್ಪುಗಳನ್ನು ಮೇಯುವ ಪ್ರಾಣಿ ಆಡು ಅಥವಾ ಮೇಕೆ. ಆದ್ದರಿಂದ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಬಗ್ಗೆ ಮಾತನಾಡುವಾಗ ಈ ಗಾದೆ ಮಾತನ್ನು ಬಳಸುತ್ತಾರೆ. ಹೇಗೆ ಆಡು ಮುಟ್ಟದ ಸೊಪ್ಪಿಲ್ಲವೋ ಹಾಗೆಯೇ ವಿಶ್ವೇಶ್ವರಯ್ಯನವರು ಬಹುಮುಖ ವ್ಯಕ್ತಿತ್ವ ಎಂದು ತಿಳಿಸುವಾಗ ಈ ಗಾದೆಯನ್ನು ಉಲ್ಲೇಖಿಸಲಾಗಿದೆ.
 ********

ಭಾರತ ರತ್ನ : ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುನ್ನತ ಪ್ರಶಸ್ತಿ. ಈ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೫೪ ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರಧಾನ ಮಾಡುವ ಉದ್ದೇಶವಿರಲಿಲ್ಲ. ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇರಬಹುದು. ೧೯೬೬ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದುವರೆಗೆ ಒಟ್ಟು ಹದಿನಾಲ್ಕು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ). ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ (೧೯೯೦ ರಲ್ಲಿ) ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ (೧೯೮೭ ರಲ್ಲಿ). ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ", ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು "ಸತ್ಯಮೇವ ಜಯತೇ" ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು.
ಹೆಚ್ಚಿನ ಮಾಹಿತಿಗಾಗಿ ಈ ಚಿತ್ರವನ್ನು ಕ್ಲಿಕ್ ಮಾಡಿ
ಭಾರತ ರತ್ನ ಪದಕ

************
ಗೌರವ ಡಾಕ್ಟರೇಟ್ :  ಸಾಮಾನ್ಯವಾಗಿ ಡಾಕ್ಟರೇಟ್ ಪಡೆಯಬೇಕಾದರೆ ಪಿ.ಎಚ್.ಡಿ. ಅಧ್ಯಯನ ಮಾಡಿ ಮಹಾ ಪ್ರಬಂಧ ಮಂಡಿಸಬೇಕು. ಆದರೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಸಾಧಕರಿಗೆ ವಿಶ್ವವಿದ್ಯಾನಿಲಯಗಳು ಈ ಪದವಿಯನ್ನು ನೀಡುತ್ತವೆ. ಹೀಗೆ ಸಾಧಕರಿಗೆ ಗೌರವ ಡಾಕ್ಟರೇಟ್ ನೀಡುವ ಮೂಲಕ ವಿಶ್ವವಿದ್ಯಾನಿಲಯಗಳು ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಂತಾಗುತ್ತದೆ.
************

ಮೆಮೋರೀಸ್ (memories) ಆಫ್ ಮೈ ವರ್ಕಿಂಗ್ ಲೈಫ್ : ಇದು ವಿಶ್ವೇಶ್ವರಯ್ಯನವರ ಆತ್ಮಕಥೆ. ಈ ಕೃತಿಯಲ್ಲಿ ಸರ್.ಎಂ.ವಿ. ಅವರು ತಮ್ಮ ಸೇವಾವಧಿಯಲ್ಲಿನ ವಿಸ್ತಾರವಾದ ಅನುಭವ ಹಾಗೂ ಘಟನಾವಳಿಗಳನ್ನು ವಿವರಿಸಿದ್ದಾರೆ. ಇದು ಆಂಗ್ಲಭಾಷೆಯಲ್ಲಿದೆ.
************










11 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-02-ಲಂಡನ್ ನಗರ- ಟಿಪ್ಪಣಿಗಳು

ಟಿಪ್ಪಣಿಗಳು

ಪೆನ್ನಿ - ಇಂಗ್ಲೆಂಡಿನ ನಾಣ್ಯ 

***

ಕಬ್ಬಿಗ - ಕವಿ ಪದದ ತದ್ಭವ ರೂಪ
 ***
ಕೂಟ - ಅನೇಕ ರಸ್ತೆಗಳು ಸೇರುವ ಜಾಗ 

***

ಟೈಪಿಸ್ಟ್ - ಬೆರಳಚ್ಚುಗಾರ 

***
ಟ್ರಾಮ್ - ವಿದ್ಯುತ್ತಿನಿಂದ ಓಡಾಡುವ ಸ್ಥಳೀಯ ರೈಲುಗಾಡಿ

***
ಕಾರಕೂನ - ಗುಮಾಸ್ತ , ಲೆಕ್ಕ ಪತ್ರ ಬರೆಯುವವನು, ಕಛೇರಿ ಸಹಾಯಕ

****
ಪುಚ್ಚ - ಗರಿ 


*****
ಫೂಟು - ಅಡಿ, 12  ಇಂಚುಗಳಷ್ಟು ಉದ್ದ

*******
ಶೀಲಿಂಗ್ - ಇಂಗ್ಲೆಂಡಿನ ಒಂದು ಬೆಳ್ಳಿಯ ನಾಣ್ಯ 

****
50 ಶೀಲಿಂಗ್ ಸಿಂಪಿ : ಫಿಫ್ಟಿ ಶಿಲ್ಲಿಂಗ್ ಟೈಲರ್ಸ್ ಪುರುಷರ ಬಟ್ಟೆಗಳನ್ನು ಮಾರಾಟ ಮಾಡುವ ಅಂಗಡಿಗಳ ಬ್ರಿಟಿಷ್ ಸರಪಳಿಯಾಗಿತ್ತು. 1905 ರಲ್ಲಿ ಹೆನ್ರಿ ಪ್ರೈಸ್ ಅವರು ಲೀಡ್ಸ್ನಲ್ಲಿ ಸ್ಥಾಪಿಸಿದರು, ಈ ಸರಪಳಿಯು ದೇಶಾದ್ಯಂತ 399 ಕ್ಕೂ ಹೆಚ್ಚು ಮಳಿಗೆಗಳಿಗೆ ವಿಸ್ತರಿಸಿತು. 1936 ರಲ್ಲಿ, ಫಿಫ್ಟಿ ಶಿಲ್ಲಿಂಗ್ ಟೈಲರ್ಸ್ ವೆಸ್ಟ್ ಗೇಟ್‌ನಲ್ಲಿ ರಸ್ತೆಗೆ ಅಡ್ಡಲಾಗಿ ಹೊಸ ಮಳಿಗೆಯನ್ನು ತೆರೆದರು ಮತ್ತು ಡ್ಯೂಸ್‌ಬರಿಯ ಚಿಲ್ಲರೆ ವ್ಯಾಪಾರವು ಪ್ರವರ್ಧಮಾನಕ್ಕೆ ಬರುತ್ತಿತ್ತು. 1958 ರಲ್ಲಿ ಕಂಪನಿಯು ಯುಡಿಎಸ್‌ಗೆ ಮಾರಾಟವಾಯಿತು, ಅದನ್ನು ಜಾನ್ ಕೊಲಿಯರ್ ಎಂದು ಮರುನಾಮಕರಣ ಮಾಡಲಾಯಿತು . ಇದು ಯುಡಿಎಸ್ ಸಾಮ್ರಾಜ್ಯದೊಳಗೆ 1983 ರವರೆಗೆ ಯುಡಿಎಸ್ ಅನ್ನು ಹ್ಯಾನ್ಸನ್ ಪಿಎಲ್ಸಿಗೆ ಮಾರಾಟ ಮಾಡುವವರೆಗೂ ಮುಂದುವರೆಯಿತು . ಖರೀದಿಯ ವೆಚ್ಚವನ್ನು ಮರುಪಡೆಯಲು ಹ್ಯಾನ್ಸನ್ ಹಲವಾರು ಯುಡಿಎಸ್ ಸ್ವತ್ತುಗಳಲ್ಲಿ ಮಾರಾಟ ಮಾಡಿದರು, ಇದರಲ್ಲಿ ಜಾನ್ ಕೊಲಿಯರ್ ಸೇರಿದಂತೆ ನಿರ್ವಹಣಾ ಖರೀದಿ ತಂಡಕ್ಕೆ. 1985 ರಲ್ಲಿ ಕಂಪನಿಯನ್ನು ಬರ್ಟನ್ ಗ್ರೂಪ್‌ಗೆ ಮಾರಾಟ ಮಾಡಲಾಯಿತು, ಆದರೆ ಬ್ರಾಂಡ್ ಅನ್ನು ನಿಲ್ಲಿಸಲಾಯಿತು ಆದರೆ ಇಂದು ಅಸ್ತಿತ್ವದಲ್ಲಿಲ್ಲ.

*******
ಸಿಂಪಿ - ದರ್ಜಿಯವನು, ಟೈಲರ್


*******
ಗೋಲ್ಡ್‌ಸ್ಮಿತ್ : ಕ್ರಿ.ಶ. ೧೭೨೮ರಲ್ಲಿ ಐರ‍್ಲೆಂಡಿನಲ್ಲಿ ಜನಿಸಿದ ಪ್ರಸಿದ್ಧ ಇಂಗ್ಲಿಷ್ ಲೇಖಕ.


******* 
ಗ್ಲ್ಯಾಡ್‌ಸ್ಟನ್ : ೧೮೦೯ರಲ್ಲಿ ಲಿವರ್‌ಪೂಲಿನಲ್ಲಿ ಜನಿಸಿದ ೧೯ನೆಯ ಶತಮಾನದ ಪ್ರಸಿದ್ಧ ಬ್ರಿಟಿಷ್ ರಾಜತಂತ್ರಜ್ಞ, ನಾಲ್ಕುಸಾರಿ ಇಂಗ್ಲೆಡಿನ ಪ್ರಧಾನಿಯಾಗಿದ್ದ. 


****
ಡಿಸ್ರೇಲಿ : ೧೮೦೪ರಲ್ಲಿ ಲಂಡನ್‌ನಲ್ಲಿ ಜನಿಸಿದ ಈತ ಬ್ರಿಟಿಷ್ ರಾಜಕಾರಣಿ ಮತ್ತು ಲೇಖಕ. 


*****
ಕಿಪ್ಲಿಂಗ್ : ೧೮೬೫ರಲ್ಲಿ ಸ್ಟಾಫರ್ಡ್‌ಷೈರಿನಲ್ಲಿ ಜನಿಸಿದ ಈತ ಇಂಗ್ಲೆಂಡಿನ ಪ್ರಸಿದ್ಧ ಲೇಖಕ. 


****
ಜಾನ್‌ಸನ್ : ೧೭೦೯ರಲ್ಲಿ ಸ್ಟಾಫರ್ಡ್‌ಷೈರಿನಲ್ಲಿ ಜನಿಸಿದ ಈತ ಇಂಗ್ಲೆಂಡಿನ ಪ್ರಸಿದ್ಧ ಲೇಖಕ. 


****

ಡ್ರಯ್ಡನ್ : ೧೬೩೧ರಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದ ಪ್ರಸಿದ್ಧ ವಿಮರ್ಶಕ ಮತ್ತು ಭಾಷಾಂತರಕಾರ. 


****

ವರ್ಡ್ಸ್‌ವರ್ತ್ : ೧೮ನೆಯ ಶತಮಾನದ ಮಹೋನ್ನತ ಆಂಗ್ಲಕವಿ, ಬ್ರಿಟನ್ನಿನ ’ರಾಷ್ಟ್ರಕವಿ’. 


*****

ನ್ಯೂಟನ್ : ೧೬೪೨ರಲ್ಲಿ ಲಂಡನ್ನಿನಲ್ಲಿ ಜನಿಸಿದ ಈತ ಬ್ರಿಟನ್ನಿನ ಪ್ರಸಿದ್ಧ ವಿಜ್ಞಾನಿ. ಚಲನ ನಿಯಮವನ್ನು ಕಂಡುಹಿಡಿದುದಲ್ಲದೆ, ಬೆಳಕು ಏಳು ವರ್ಣಗಳಿಂದ ಕೂಡಿದೆ ಎಂಬುದನ್ನು ಸಿದ್ಧಪಡಿಸಿದ. 


*****
ಡಾರ್ವಿನ್ : ೧೮೦೯ರಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದ ವಿಜ್ಞಾನಿ. ವಿಕಾಸವಾದದ ಮೂಲಪುರುಷ. 

******

ಹರ್ಷಲ್ : ೧೭೩೮ರಲ್ಲಿ ಜನಿಸಿದ ಈತ ಜರ್ಮನಿಯ ಖಗೋಳ ವಿಜ್ಞಾನಿ. ಸೂರ್ಯ-ನಕ್ಷತ್ರ- ನಕ್ಷತ್ರಗಳಿಗಿರುವ ದೂರವನ್ನು ಕಂಡುಹಿಡಿದನು. 


******
ರಿಚರ್ಡ್ : ೧೫೨೨ರಲ್ಲಿ ಜನಿಸಿದ. ಈತ ಇಂಗ್ಲೆಂಡಿನ ನಾಟಕಕಾರ ಮತ್ತು ಸಂಗೀತ ವಿದ್ವಾಂಸ. ಇವನು ರಾಜ. 

****
ಮೂರನೇ ಎಡ್ವರ್ಡ್ : ೧೩೨೭ರಲ್ಲಿ ಇಂಗ್ಲೆಂಡಿನ ಡ್ಯೂಕ್ ಆದನು. ಈತನ ಕಾಲದಲ್ಲಿ ಇಂಗ್ಲೆಂಡ್ ಮತ್ತು ಪ್ರಾನ್ಸ್ ನಡುವೆ ದೀರ್ಘಕಾಲದ ಯುದ್ಧ ಆರಂಭವಾಯಿತು. 


******
ರಾಣಿ ಎಲಿಜಬೆತ್ : ಈಕೆ ಇಂಗ್ಲೆಂಡಿನ ರಾಣಿಯಾಗಿದ್ದಳು. ೧೬೦೦ರ ಡಿಸೆಂಬರ್ ೩೧ರಂದು ಇಂಡಿಯಾದಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಸ್ಥಾಪಿಸಿದಳು. 


****
ಒಂದನೇ ಜೇಮ್ಸ್ : ೧೫೬೬-೧೬೨೫ರವರೆಗೆ ಗ್ರೇಟ್‌ಬ್ರಿಟನ್ ಮತ್ತು ಐರ‍್ಲೆಂಡಿನ ದೊರೆಯಾಗಿದ್ದನು. ಇವನ ಕಾಲದಲ್ಲಿ ಮತೀಯ ಮತ್ತು ರಾಜಕೀಯ ಸಮಸ್ಯೆಗಳು ಉಲ್ಬಣಗೊಂಡವು.

****
ಷೇಕ್ಸ್‌ಪಿಯರ್ : ೧೫೬೪ರಲ್ಲಿ ಬ್ರಿಟನ್‌ನಲ್ಲಿ ಜನಿಸಿದ ಸುಪ್ರಸಿದ್ಧ ಇಂಗ್ಲಿಷ್ ನಾಟಕಕಾರ. 

*****
ನೆಲ್ಸನ್ : ಈತನು ಓರ್ವ ಯೋಧ. ಇವನ ಪೂರ್ಣ ಹೆಸರು ಹೊರ‍್ಯಾಷಿಯೋ ನೆಲ್ಸನ್. ಈತನು ಕ್ರಿ.ಶ.೧೮೦೫ರ ವೆಲ್ಲಿಂಗ್‌ಟನ್; ಟ್ರಾಫಲ್ಗರ್ ಯುದ್ಧದಲ್ಲಿ ಹೋರಾಡಿ ಮಡಿದನು. 

********