ನನ್ನ ಪುಟಗಳು

11 ನವೆಂಬರ್ 2020

10ನೇ ತರಗತಿ ಕನ್ನಡ ಗದ್ಯ-01-ಶಬರಿ-ಟಿಪ್ಪಣಿಗಳು

ಶಬರಿ ನಾಟಕದಲ್ಲಿರುವ ಹೆಚ್ಚುವರಿ ಟಿಪ್ಪಣಿಗಳು

ಶಬರಿ : ಶಬರನ ಮಗಳು, ಶಬರನ ಮಗಳಾದ್ದರಿಂದ 'ಶಬರಿ' ಎಂಬ ಹೆಸರಾಯಿತು. ಮತಂಗ ಋಷಿಯ ಶಿಷ್ಯೆ.


************

ಮತಂಗ : ಒಬ್ಬ ಬ್ರಹ್ಮರ್ಷಿ. ಋಷ್ಯಮೂಕ ಪರ್ವತದ ಬಳಿ ತಪಸ್ಸು ಮಾಡಿಕೊಂಡಿದ್ದ. ವಾಲಿಯು ದುಂದುಭಿಯೆಂಬ ರಕ್ಕಸನನ್ನು ಕೊಂದು ಮದೋನ್ಮತ್ತನಾಗಿ ಕಳೇಬರವನ್ನು ಆಶ್ರಮಕ್ಕೆ ಎಸೆದಾಗ ಋಷ್ಯಾಶ್ರಮವು ಕಲುಷಿತಗೊಂಡಿತು. ಇದರಿಂದ ಕ್ರುದ್ಧನಾದ ಮತಂಗಮುನಿಯು "ವಾಲಿಯು ಈ ಆಶ್ರಮವನ್ನು ಪ್ರವೇಶ ಮಾಡಿದರೆ ಸಾವು ಸಂಭವಿಸಲಿ” ಎಂದು ಶಪಿಸಿದನು. ವಾಲಿಯಿಂದ ಭಯಗ್ರಸ್ತನಾಗಿದ್ದ ಸುಗ್ರೀವನು ಇಲ್ಲಿ ನೆಲೆಸಿದ್ದನು. ಶಬರಿಯು ಮತಂಗರ ಆಶ್ರಮದಲ್ಲಿದ್ದಳು. 


*******

ಭೂಮಿಜಾತೆ : ಸೀತೆ, ಭೂಮಿಯ ಮಗಳು. ಜನಕ ಮಹಾರಾಜನು ಸಂತಾನ ಫಲಕ್ಕಾಗಿ ಪುತ್ರಕಾಮೇಷ್ಠಿ ಮಾಡಿ ಮಿಥಿಲೆಯಲ್ಲಿ ಭೂಮಿಯನ್ನು ಉಳುಮೆ ಮಾಡುತ್ತಿದ್ದಾಗ ದೊರೆತ ಶಿಶುವೇ ಸೀತೆ. ಹೀಗಾಗಿ ಸೀತೆಗೆ 'ಭೂಮಿಜಾತೆ’ಯೆಂದು ಮತ್ತೊಂದು ಹೆಸರು. 


*********
ಚಿತ್ರಕೂಟ : ಒಂದು ಪರ್ವತ. ಉತ್ತರ ಭಾರತದ ಪಯೋಷ್ಣಿ ನದಿಯ ಪಕ್ಕದಲ್ಲಿದೆ. ಶ್ರೀರಾಮನು ಸೀತಾಲಕ್ಷ್ಮಣರೊಂದಿಗೆ ಅರಣ್ಯವಾಸಕ್ಕೆ ಹೊರಟಾಗ ಮೊತ್ತಮೊದಲು ಇಲ್ಲಿ ಆಶ್ರಮವನ್ನು ಕಟ್ಟಿಕೊಂಡನು. ಭರತನು ಶ್ರೀರಾಮನನ್ನು ಭೇಟಿಯಾಗಿ ಆತನ ಪಾದುಕೆಗಳನ್ನು ಇಲ್ಲಿ ಪಡೆದನು.
ಭರತನು ಪಾದುಕೆಗಳನ್ನು ಸ್ವೀಕರಿಸುತ್ತಿರುವುದು.
********

ದಶರಥ : ಅಯೋಧ್ಯೆಯ ಅರಸು. ರಾಮ, ಲಕ್ಷ್ಮಣ, ಭರತ, ಶತ್ರುಘ್ನ ಈತನ ಮಕ್ಕಳು. ಕೌಸಲ್ಯೆ, ಸುಮಿತ್ರೆ, ಕೈಕೆ ಈತನ ಮಡದಿಯರು.

ರಾಮನು ಕಾಡಿಗೆ ತೆರಳಿದ ನಂತರ ದುಃಖಿತನಾಗಿರುವ ದಶರಥ
*********

ಸೌಮಿತ್ರಿ : ಲಕ್ಷ್ಮಣ, ದಶರಥನ ಎರಡನೆಯ ಮಡದಿಯಾದ ಸುಮಿತ್ರೆಯ ಮಗ ಲಕ್ಷ್ಮಣ. ಸುಮಿತ್ರೆಯ ಮಗನಾದುದರಿಂದ 'ಸೌಮಿತ್ರಿ' ಎಂದು ಈತನನ್ನು ಕರೆಯುತ್ತಾರೆ. 



****************

ದನು : ದಂಡಕಾರಣ್ಯದಲ್ಲಿ ವಾಸಮಾಡುತ್ತಿದ್ದ ಕಬಂಧ ಎಂಬ ಹೆಸರಿನ ರಾಕ್ಷಸ. ಹಿಂದಣ ಜನ್ಮದಲ್ಲಿ ವಿಶ್ವಾವಸು ಎಂಬ ಗಂಧರ್ವನಾಗಿದ್ದ. ಈತ ಸ್ಥೂಲಶಿರನೆಂಬ ಮುನಿಯನ್ನು ಅಪಮಾನಿಸಿದ್ದರಿಂದ ರಾಕ್ಷಸನಾಗಿ ಜನಿಸಿದ. ಒಮ್ಮೆ ಇಂದ್ರನ ವಜ್ರಾಯುಧದ ಪ್ರಹಾರದಿಂದ ಇವನ ಮುಖಕುಸಿದು ಹೊಟ್ಟೆಯೊಳಗೆ ಸೇರಿಕೊಂಡಿತು. ಹಾಗಾಗಿ ಈತನಿಗೆ ಉದರಮುಖ ಎಂಬ ಹೆಸರುಬಂತು. ರಾಮಲಕ್ಷ್ಮಣರಿಂದ ಈತನಿಗೆ ಶಾಪವಿಮೋಚನೆಯಾಯ್ತು. ಶಬರಿಯ ವೃತ್ತಾಂತವನ್ನು ರಾಮನಿಗೆ ತಿಳಿಸಿದ ಈತ ಸುಗ್ರೀವನಲ್ಲಿ ಸಖ್ಯಮಾಡಿ ಸೀತೆಯನ್ನು ಮರಳಿ ಪಡೆಯಬಹುದು ಎಂಬ ಸಲಹೆಯನ್ನು ನೀಡುತ್ತಾನೆ. 

ಕಬಂಧ ಅಥವಾ ಉದರಮುಖನೊಡನೆ ಯುದ್ಧ ಮಾಡುತ್ತಿರುವ ರಾಮ-ಲಕ್ಷ್ಮಣರು
*************
 ಜಟಿಲಕಬರಿ : ಜಟಿಲ-ಜಡೆಯಾಕಾರದ, ಕಬರಿ - ತುರುಬು = ಜಡೆಯಾಕಾರದ ತುರುಬುಳ್ಳವಳು - ಶಬರಿ. 

*****************************

ಮೇಳ : ನಾಟಕಗಳಲ್ಲಿ ಹಾಡುವುದಕ್ಕಾಗಿ ಇರುವ ಒಂದು ವರ್ಗ ಇವರು ರಂಗದಲ್ಲಿ ಕಾಣಿಸಿಕೊಂಡು ನಾಟಕದ ಸನ್ನಿವೇಶಕ್ಕೆ ತಕ್ಕಂತೆ ಹಾಡುತ್ತಾರೆ.

*******

ಬಲವಂದು : ಪ್ರದಕ್ಷಿಣಾಕಾರವಾಗಿ (ಎಡದಿಂದ ಬಲಕ್ಕೆ) ಸುತ್ತುಬಂದು ಎಂದರ್ಥ. ದೇವರಿಗೆ, ತುಳಸಿಕಟ್ಟೆಗೆ, ಕಾಮಧೇನು, ಕಲ್ಪವೃಕ್ಷಗಳಿಗೆ, ಹೋಮಕುಂಡ ಮುಂತಾದವುಗಳಿಗೆ ಸುತ್ತುವರಿಯುವಾಗ ಅವು ನಮ್ಮ ಬಲಭಾಗದಲ್ಲಿರುವಂತೆ ಸುತ್ತುವರಿಯುತ್ತಾರೆ. ಆಗ ಅದು ಪ್ರದಕ್ಷಿಣೆಯಾಗುತ್ತದೆ. ಸುತ್ತುವರಿಯಬೇಕಾದ ವಸ್ತುವನ್ನು ಎಡಭಾಗದಲ್ಲಿರುವಂತೆ ಸುತ್ತುವರಿದರೆ (ಎಡಬಂದು) ಅದು ಅಪ್ರದಕ್ಷಿಣೆಯಾಗುತ್ತದೆ. 


*************

ಪರ್ಣಶಾಲೆ : ಎಲೆಗಳಿಂದ ಮೇಲ್ಚಾವಣಿ ನಿರ್ಮಿಸಿರುವ ಕುಟೀರ. 


******************




ಚಿತ್ರ ಕೃಪೆ: ಗೂಗಲ್ ಚಿತ್ರಗಳು

*******ಕನ್ನಡ ದೀವಿಗೆ******

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ