ನನ್ನ ಪುಟಗಳು

ಸಂಪನ್ಮೂಲ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಂಪನ್ಮೂಲ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

22 ಜುಲೈ 2022

10ನೇ ತರಗತಿ ಕನ್ನಡ ಪದ್ಯ-06 ಛಲಮನೆ ಮೆಱೆವೆಂ - ಸಾರಾಂಶ (10th-Kan-Poem-6-chalamanemerevem-Saramsha)

'ಛಲಮೆನೆ ಮೆಱೆವೆಂ' ಪದ್ಯಭಾಗದ ಸಾರಾಂಶ
ಪೀಠಿಕೆಮಹಾಭರತ ಯುದ್ದದಲ್ಲಿ ತನ್ನೆಲ್ಲ ಸಹೋದರರನ್ನೂ ಆಪ್ತಮಿತ್ರನಾದ ಕರ್ಣನನ್ನೂ ಕಳೆದುಕೊಂಡ ದುರ್ಯೋಧನನು ತನ್ನ ತಂದೆ ತಾಯಿಯರ ಅಪೇಕ್ಷೆಯಂತೆ ರಣರಂಗದಲ್ಲಿ ಶರಶಯ್ಯೆಯಲ್ಲಿ ಮಲಗಿದ್ದ ತಾತ ಭೀಷ್ಮರ ಸಲಹೆಯನ್ನು ಪಡೆಯಲು ಬರುತ್ತಾನೆಭೀಷ್ಮರು ಯುದ್ಧವನ್ನು ನಿಲ್ಲಿಸಿ ಪಾಂಡವರೊಡನೆ ಸಂಧಿ ಮಾಡಿಕಒಳ್ಳುವುದು ಸೂಕ್ತವೆಂದು ದುರ್ಯೋಧನನಿಗೆ ಸಲಹೆ ನೀಡುತಾರೆಆದರೆ ಸಂಧಿಮಾಡಿಕೊಳ್ಳು ಒಪ್ಪದ ದುರ್ಯೋಧನನು ತಾನು ಯುದ್ಧಮಾಡುವುದಾಗಿ ಹೇಳುತ್ತಾನೆ.
        ಸಂದರ್ಭದಲ್ಲಿ ದುರ್ಯೋಧನನು ಭೀಷ್ಮರೊಂದಿಗೆ ಮಾತನಾಡುವಾಗ ಆತನಲ್ಲಿ ಛಲಅವನ ದೃಢನಿರ್ಧಾರ ಮತ್ತು ಅವನ ಅಭಿಮಾನದ ಮಾತುಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ.
********
ವಚನ : ಇಂಬುಕೆಯ್ವೆಯಪ್ಪೊಡೆ ಪಾಂಡವರನೊಡಂಬಡಿಸಿ ಸಂಧಿಯಂ ಮಾಡಿ ಪೂರ್ವಕ್ರಮದೊಳ್ ನಡೆವಂತು ಮಾೞ್ಪೆಂ ಇನ್ನುಮವರೆಮ್ಮಂದುದಂ ಇಂಬುಕೆಯ್ಯದವರ್ ಮೀಱವರಲ್ಲ ನೀನುಮೆಮ್ಮ ಪೇೞ್ದುದಂ ಮೀಱದೆ ನೆಗೞಲ್ವೇೞ್ಕುಮೆನೆ ಸುಯೋಧನಂ ಮುಗುಳ್ನಗೆ ನಕ್ಕು-
ಸಾರಾಂಶ: ನೀನು ಒಪ್ಪುವೆಯಾದರೆ ಪಾಂಡವರನ್ನು ಒಪ್ಪಿಸಿ ಒಪ್ಪಂದ ಮಾಡಿ ಹಿಂದಿನಂತೆ ನಡೆಯುವ ಹಾಗೆ ಮಾಡುವೆನುಈಗಲೂ ಕೂಡ ಅವರು ನಮ್ಮ ಮಾತನ್ನು ಮೀರದೆ ಪಾಲಿಸುತ್ತಾರೆನೀನೂ ಕೂಡ ನಮ್ಮ ಮಾತನ್ನು ಮೀರದೆ ನಡೆದುಕೊಳ್ಳಬೇಕುಎಂದು ಭೀಷ್ಮರು ಹೇಳಿದಾಗ ದುರ್ಯೋಧನನು ಮುಗುಳು ನಗೆ ನಕ್ಕು-

ಕಂ|| ನಿಮಗೆ ಪೊಡೆಮಟ್ಟು ಪೋಪೀ|
ಸಮಕಟ್ಟಿಂ ಬಂದೆನಹಿತರೊಳ್ ಸಂಧಿಯನೇಂ||
ಸಮಕೊಳಿಸಲೆಂದು ಬಂದೆನೆ|
ಸಮರದೊಳೆನಗಜ್ಜ ಪೇೞಮಾವುದು ಕಜ್ಜಂ||  ||||
ಸಾರಾಂಶನಿಮಗೆ  ನಮಸ್ಕರಿಸಿ ಹೋಗಲೆಂದು ಬಂದೆನೇ ಹೊರತು ಶತ್ರುಗಳೊಡನೆ ಒಪ್ಪಂದವನ್ನು ಏರ್ಪಡಿಸುವುದಕ್ಕೆಂದು ಬಂದೆನೆಅಜ್ಜಾಯುದ್ಧದಲ್ಲಿ ಇನ್ನು ನನ್ನ ಕಾರ್ಯವೇನೆಂಬುದನ್ನು ಹೇಳಿರಿ.

ಕಂ|| ನೆಲಕಿಱವೆನೆಂದು ಬಗೆದಿರೆ|
ಚಲಕಿಱವೆಂ ಪಾಂಡುಸುತರೊಳೀನೆಲನಿದು ಪಾ||
ೞ್ನೆಲನೆನಗೆ ದಿನಪಸುತನಂ|
ಕೊಲಿಸಿದ ನೆಲನೊಡನೆ ಮತ್ತೆ ಪುದುವಾೞ್ದಪೆನೇ||     ||||
ಸಾರಾಂಶನಾನು ಭೂಮಿಗಾಗಿ ಹೋರಾಡುವೆನೆಂದು ಭಾವಿಸಿದಿರಾಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು ಭೂಮಿ ನನಗೆ ಪಾಳು ಭೂಮಿದಿನಪಸುತನಾದ ಕರ್ಣನನ್ನು ಕೊಲ್ಲಿಸಿದ  ಭೂಮಿಯೊಡನೆ ನಾನು ಮತ್ತೆ ಬಾಳುವೆನೆ?

|| ಎನ್ನಣುಗಾಳನೆನ್ನಣುಗದಮ್ಮನನಿಕ್ಕಿದ ಪಾರ್ಥಭೀಮರು|
ಳ್ಳನ್ನೆಗಮೊಲ್ಲೆನೆನ್ನೊಡಲೊಳೆನ್ನಸುವುಳ್ಳಿನಮಜ್ಜ ಸಂಧಿಯಂ||
ಮುನ್ನಮವಂದಿರಿರ್ಬರುಮನಿಕ್ಕುವೆನಿಕ್ಕಿ ಬೞಕ್ಕೆ ಸಂಧಿಗೆ|
ಯ್ವೊನ್ನೆಗೞ್ದಂತಕಾತ್ಮಜನೊಳೆನ್ನೞಲಾಱದೊಡಾಗದೆಂಬೆನೇ||   ||||
ಸಾರಾಂಶ: ನನ್ನ ಪ್ರೀತಿಯ ಗೆಳೆಯನನ್ನು(ಕರ್ಣನನ್ನುನನ್ನ ಪ್ರೀತಿಯ ತಮ್ಮನನ್ನು(ದುಶ್ಯಾಸನಕೊಂದ ಅರ್ಜುನ-ಭೀಮರು ಬದುಕಿರುವವರೆಗೆ ನನ್ನ ದೇಹದಲ್ಲಿ ಪ್ರಾಣ ಇರುವವರೆಗೂ ಅಜ್ಜಾನಾನು ಸಂಧಿಯನ್ನು ಒಪ್ಪುವುದಿಲ್ಲಮೊದಲು  ಇಬ್ಬರನ್ನೂ ಕೊಲ್ಲುವೆನುಅವರನ್ನು ಕೊಂದ ಬಳಿಕ ಧರ್ಮರಾಜನೊಡನೆ ಸಂಧಿಮಾಡಿಕೊಳ್ಳುತ್ತೇನೆನನ್ನ ದುಃಖ ಆರಿದ ನಂತರ ಸಂಧಿ ಆಗುವುದಿಲ್ಲ ಎನ್ನುವೆನೇ?

ಕಂ|| ಪುಟ್ಟಿದ ನೂರ್ವರುಮೆನ್ನೊಡ|
ವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ||
ಪುಟ್ಟಿ ಪೊದೞ್ದುದು ಸತ್ತರ್
ಪುಟ್ಟರೆ ಪಾಂಡವರೊಳಿಱದು ಛಲಮನೆ ಮೆಱೆವೆಂ ||   ||||
ಸಾರಾಂಶ: ಹುಟ್ಟಿದ ನೂರು ಜನರೂನನ್ನ ಒಡ ಹುಟ್ಟಿದ ನೂರುಮಂದಿ ಸಹೋದರರು (ಯುದ್ಧದಲ್ಲಿಹೋರಾಡಿ ಸತ್ತರುಆದ್ದರಿಂದ ನನ್ನಲ್ಲಿ ಕೋಪ ಹುಟ್ಟಿ ಬೆಳೆಯಿತು(ಪೊದೞ್ದುದು). ಸತ್ತವರೇನು ಮತ್ತೆ ಹುಟ್ಟುವುದಿಲ್ಲವೇಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮೆರೆಯುತ್ತೇನೆ.

ಕಂ|| ಕಾದದಿರೆನಜ್ಜ ಪಾಂಡವ|
ರಾದರ್ ಮೇಣಿಂದಿನೊಂದೆ ಸಮರದೊಳಾಂ ಮೇ||
ಣಾದೆನದಱಂದೆ ಪಾಂಡವ
ರ್ಗಾದುದು ಮೇಣಾಯ್ತು ಕೌರವಂಗವನಿತಳಂ||       ||||
ಸಾರಾಂಶ: ಅಜ್ಜನಾನು ಹೋರಾಡದೆ ಬಿಡುವುದಿಲ್ಲಇಂದಿನ ಯುದ್ಧದಲ್ಲಿ ಪಾಂಡವರು ಉಳಿಯಬೇಕು ಇಲ್ಲವೆ ನಾನು ಉಳಿಯಬೇಕುಆದ್ದರಿಂದ  ಭೂಮಿ ಪಾಂಡವರದಾಗಬೇಕು ಇಲ್ಲವೇ ಕೌರವನದಾಗಬೇಕು ಎಂದು ದುರ್ಯೋಧನನು ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರಿಗೆ ಹೇಳಿದನು.


**************



10ನೇ ತರಗತಿ ಕನ್ನಡ ಪದ್ಯ-06 ಛಲಮನೆ ಮೆಱೆವೆಂ - ರನ್ನ ಕವಿಯ ಪರಿಚಯ (Kavi Ranna)

ಮಹಾಕವಿ ರನ್ನ

“ಕವಿಜನರಲ್ಲಿ ‘ರತ್ನತ್ರಯ’ (ಎಂದರೆ ಮೂರು ರತ್ನಗಳು) ಎಂದು ಹೆಸರಾದ ಪಂಪ, ಪೊನ್ನಿಗ, ಕವಿರತ್ನ  ಈ ಮೂವರು ಕವಿಗಳು ಜಿನಧರ್ಮವನ್ನು ಬೆಳಗಿದವರು. ಇಂಥವರು ಬೇರೆ ಯಾರಾದರೂ ಇದ್ದಾರೆಯೆ?” ಎಂದು ಹೆಮ್ಮೆಯಿಂದ ಹೇಳಿಕೊಂಡಿರುವವನು ಕವಿರತ್ನ. ಅವನ ದರ್ಪದ ಮಾತನ್ನು ಕೇಳಿ:

“ರತ್ನ ಪರೀಕ್ಷಕನ್ ಆಂ, ಕೃತಿ-
ರತ್ನ ಪರೀಕ್ಷಕನೆನ್, ಎಂದು ಫಣಿಪತಿಯ ಫಣಾ-
ರತ್ನಮುಮಂ ರನ್ನನ ಕೃತಿ-,
ರತ್ನಮುಮಂ ಪೇಳ್ ಪರೀಕ್ಷಿಪಂಗೆ
ಎಂಟೆರ್ದೆಯೇ?
“ನಾನು ರತ್ನಪರೀಕ್ಷಕ ಎಂದು ಹಾವಿನ ಹೆಡೆಯ ರತ್ನವನ್ನು ಪರೀಕ್ಷೆಮಾಡಲು ಕೈಹಾಕುವವನಿಗೂ ರನ್ನನ ಕೃತಿರತ್ನವನ್ನು ಪರೀಕ್ಷೆ ಮಾಡುತ್ತೇನೆ ಎನ್ನುವವನಿಗೂ ಎಂಟು ಎದೆಗಳಿವೆಯೆ? ಎಂಟುಪಟ್ಟು ಎದೆಗಾರಿಕೆಯಿದ್ದರೆ ಮಾತ್ರ ಆ ಸಾಹಸಗಳಿಗೆ ನುಗ್ಗಲಿ,”
ರನ್ನನು ಶಕ್ತಿವಂತನಾದ ಕವಿ. ಅವನ ಕವಿತಾ ಶಕ್ತಿ ಅವನ ’ಅಜಿತಪುರಾಣಿ ಎಂಬ ಜೈನ ಪುರಾಣದಲ್ಲಿ ಬೆಳಕಿಗೆ ಬರಲು ಹೆಚ್ಚು ಅವಕಾಶವಿಲ್ಲ. ಅದು ಮೇರೆ ಮೀರಿ ಉಕ್ಕಿ ಹರಿದಿರುವುದು ಅವನ ’ಗದಾಯುದ್ಧ’ದಲ್ಲಿ. ಇದು ನಿಜವಾಗಿಯೂ ’ಕೃತಿರತ್ನ’. ಕವಿರತ್ನ ಎಂಬ ಅವನ ಬಿರುದು ಸಾರ್ಥಕವಾಗಿರುವುದು ಈ ಕಾವ್ಯದಿಂದ.

ಕವಿ ಚಕ್ರವರ್ತಿ
            ‘ಅಜಿತ ಪುರಾಣ’ವೂ ಕಳಪೆಯಾದ ಕೃತಿಯಲ್ಲ. ರನ್ನನಿಗಿಂತ ಮೊದಲು ’ಆದಿಕವಿ’ ಎಂದು ಪ್ರಸಿದ್ಧನಾದ ಪಂಪನು ಆದಿತೀರ್ಥಂಕರನನ್ನು ಕುರಿತು ಕ್ರಿ.ಶ.೯೪೧ರಲ್ಲಿ ’ಆದಿಪುರಾಣ’ವನ್ನು ರಚಿಸಿದರು. ಪೊನ್ನನು ಶಾಂತಿನಾಥ ಎಂಬ ತೀರ್ಥಂಕರನನ್ನು ಕುರಿತು ’ಶಾಂತಿ ಪುರಾಣ’ವನ್ನು ಬರೆದನು. ಇವರಿಬ್ಬರ ಮೇಲು ಪಂಕ್ತಿಯನ್ನು ಅನುಸರಿಸಿ ರನ್ನನು ಅಜಿತಪುರಾಣವನ್ನು ಬರೆದನು. ಹೀಗೆ, ಈ ಮೂವರೂ ತಮ್ಮ ಪುರಾಣ ಕಾವ್ಯಗಳಲ್ಲಿ ಜೈನಧರ್ಮದ ತಿರುಳನ್ನು ತೀರ್ಥಂಕರರನ್ನು ಕುರಿತು ಸ್ವಾರಸ್ಸ ಕಥೆಗಳ ಹುರುಳಿನೊಂದಿಗೆ ಬೆರೆಸಿ, ಜೈನಧರ್ಮವನ್ನು ಬೆಳಗಿದರು. ’ಜಿನಸಮಯ ದೀಪಕರು’ ಎಂದು ಪ್ರಸಿದ್ಧರಾದರು.
ಇವರ ತರುವಾಯ ನಾಗವರ್ಮ, ನಾಗಚಂದ್ರ, ಜನ್ನ, ಆಚಣ್ಣ ಮುಂತಾದ ಜೈನಕವಿಗಳು ಜೈನಪುರಾಣಗಳನ್ನು ಬರೆದರು. ಆದರೆ, ಅವು ಯಾವುವೂ ಈ ಮೂವರ ಕೃತಿಗಳ ಸಮಕ್ಕೆ ಬರಲಾರವು. ಈ ಸಂಗತಿಯನ್ನು ಮೊದಲೇ ಕಂಡುಕೊಂಡವನಂತೆ ರನ್ನ ಹೇಳಿದ್ದಾನೆ, ಹೀಗೆ: “ಜಗತ್ತಿನಲ್ಲಿ ಆದಿಪುರಾಣ ಪಂಪನಿಂದ ಪ್ರಸಿದ್ಧವಾಯಿತು; ಪೊನ್ನನಿಂದ ಶಾಂತಿಪುರಾಣ; ಕವಿ ರನ್ನನಿಂದ ಅಜಿತಪುರಾಣ. ಎಣೆಯಿಲ್ಲದ ಈ ಪುರಾಣಗಳ ’ರೇಖೆ’ಗೂ (ಎಂದರೆ, ಹತ್ತಿರಕ್ಕೂ) ಬರಲು ಸಮರ್ಥವಾಗಲಾರವು ಇತರ ಪುರಾಣದ ಕೃತಿಗಳು.” ಇನ್ನು ಅವನ್ನು ಮೀರಿಸುವ ಮಾತೆಲ್ಲಿ ಬಂತು?
ಪಂಪನು ರಾಷ್ಟ್ರಕೂಟ ಚಕ್ರವರ್ತಿ ಮೂರನೆಯ ಕೃಷ್ಣನ ಸಾಮಂತನಾಗಿದ್ದ ಎರಡನೆಯ ಅರಕೇಸರಿಯಿಂದ ಬೇಕಾದಷ್ಟು ಮನ್ನಣೆ ಪಡೆದ. ಕನ್ನಡದಲ್ಲಿ ಪಂಪನೇ ನಿಜವಾದ ’ಕವಿಚಕ್ರವರ್ತಿ’. ಆದರೆ ಸಾಮಂತರಾಜನನ್ನು ಆಶ್ರಯಿಸಿದ ಪಂಪನಿಗೆ ಕವಿಚಕ್ರವರ್ತಿ ಎಂಬ ಬಿರುದು ಬರಲು ಸಾಧ್ಯವೇ ಇರಲಿಲ್ಲ. ಕೃಷ್ಣ ಆಸ್ಥಾನ ಕವಿಯಾದ ಪೊನ್ನನಿಗೆ ಆ ಬಿರುದು ಲಭಿಸಿತು. ’ಕವಿ ಚಕ್ರವರ್ತಿ’ ಎನ್ನಿಸಿಕೊಂಡ ಎರಡನೆಯ ಕವಿಯೆ ರನ್ನ.
ರನ್ನನು ’ಗದಾಯುದ್ಧ’ ಕಾವ್ಯ ಬರೆಯುವ ಕಾಲಕ್ಕೆ ಕನ್ನಡ ನಾಡಿನಲ್ಲಿ ರಾಷ್ಟ್ರಕೂಟರೂ, ರನ್ನನಿಗೆ ಮೊದಲು ಆಶ್ರಯಕೊಟ್ಟಿದ್ದ ತಲಕಾಡಿನ ಗಂಗವಂಶದ ರಾಜರೂ ತಮ್ಮ ಪದವಿಗಳನ್ನು ಕಳೆದುಕೊಂಡಿದ್ದರು. ಚಾಲುಕ್ಯ ವಂಶದ ಎರಡನೆಯ ತೈಲಪನು ರಾಷ್ಟ್ರಕೂಟರ ಸ್ಥಾನಕ್ಕೆ ಬಂದು ಚಕ್ರವರ್ತಿ ಎನ್ನಿಸಿಕೊಂಡಿದ್ದನು. ರನ್ನನು ತೈಲಪನ ಆಸ್ಥಾನವನ್ನು ಸೇರಿ, ’ಸಾಹಸಭೀಮ ವಿಜಯ’ ಅಥವಾ ’ಗದಾಯುದ್ಧ’ ಎಂಬ ಕಾವ್ಯವನ್ನು ಬರೆದನು. ಇದು ತೈಲಪನ ಮೆಚ್ಚುಗೆಗೆ ಪಾತ್ರವಾಯಿತು. ಚಕ್ರವರ್ತಿ ತೈಲಪನು ರನ್ನನಿಗೆ ’ಕವಿಚಕ್ರವರ್ತಿ’ ಎಂಬ ಬಿರುದನ್ನು ಕೊಟ್ಟನು. “ರನ್ನನು ತನ್ನ ಅತಿಶಯವಾದ ಮಹಿಮೆಯನ್ನೂ ಕವಿಚಕ್ರವರ್ತಿ ಎಂಬ ಹೆಸರನ್ನು ಕಡುಬಡವರಿಂದ ಪಡೆದನೇನು? ಇಲ್ಲ. ಚಕ್ರವರ್ತಿಯಾದ ತೈಲಪನಿಂದ ಪಡೆದನು” ಎಂದು ರನ್ನ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ರನ್ನನು ಮಾತು ಸುಳ್ಳಲ್ಲ ಎನ್ನುವುದಕ್ಕೆ ಜನ್ನನ ಮಾತು ಸಾಕ್ಷಿ. ಜನ್ನನು ತನ್ನ ’ಅನಂತನಾಥ ಪುರಾಣ ’ ದಲ್ಲಿ ಪೊನ್ನನು ಕೃಷ್ಣನಿಂದಲೂ, ರನ್ನನು ತೈಲಪನಿಂದಲೂ ’ ಕವಿಚಕ್ರವರ್ತಿ’ ಎಂಬ ಬಿರುದನ್ನು ಪಡೆದ ಸಂಗತಿಯನ್ನು ಸ್ವಷ್ಟವಾಗಿ ತಿಳಿಸಿದ್ದಾನೆ.
ಹೀಗೆ, ಕನ್ನಡದಲ್ಲಿ ಮೂವರು ಕವಿರತ್ನರು. ಮೂವರು ಕವಿಚಕ್ರವರ್ತಿಗಳು. ಕವಿರತ್ನ ಮತ್ತು ಕವಿಚಕ್ರವರ್ತಿ ಎಂದು ಪ್ರಸಿದ್ಧರಾಗಿರುವವರು ಇಬ್ಬರೇ, ಪೊನ್ನ ಮತ್ತು ರನ್ನ. ಚಕ್ರವರ್ತಿ ಎನ್ನುವುದು ಹೇಳಿ ಕೇಳಿ ಬಿರುದಿನ ಮಾತು ಇಬ್ಬರಲ್ಲಿ ನಿಜವಾದ ಕವಿರತ್ನ ಯಾರು ಎಂದು ಕೇಳಿದರೆ, ರನ್ನ ಎನ್ನಬೇಕಾಗುತ್ತದೆ.’ ರನ್ನ’ ಮನೆಯವರು ಇಟ್ಟ ಹೆಸರು; ‘ರತ್ನ’ ಎಂಬ ಸಂಸ್ಕ್ರತ ಹೆಸರಾದರೂ, ಅದು ಅವನ ಪ್ರತಿಭೆಯ ಹಾಗೂ ಸಾಧನೆಯ ಫಲ.

ಮನೆತನ
            ಪೂರ್ವದ ಕನ್ನಡ ಕವಿಗಳು ತಮ್ಮ ವಿಷಯವಾಗಿ ಹೇಳಿಕೊಳ್ಳುವ ಪದ್ಧತಿ ಇಲ್ಲ. ಆದರೆ ಪಂಪ ರನ್ನರಂಥ ಕೆಲವರು ತಮ್ಮ ಬಗೆಗೆ ಕೆಲವು ಮುಖ್ಯ ಸಂಗತಿಗಳನ್ನು ತಿಳಿಸಿ ಉಪಕಾರ ಮಾಡಿದ್ದಾರೆ.
ಬೆಳುಗಲಿ ಅಯ್ನೂರು, ಎಂದರೆ ಅಯ್ನೂರು ಗ್ರಾಮಗಳುಳ್ಳ ಪ್ರಸಿದ್ಧವಾದ  ಪ್ರಾಂತ ಅದರಲ್ಲಿ ಜಂಬುಖಂಡಿ (ಈಗಿನ ಜಮಖಂಡಿ) ಎಪ್ಪತ್ತು ಗ್ರಾಮಗಳನ್ನು ಒಳಗೊಂಡ ಪ್ರದೇಶ. ಇದಕ್ಕೆ ತಿಲಕದಂತಿದ್ದ, ಪ್ರಸಿದ್ದವಾದ ಮುದುವೊಳಲಿನಲ್ಲಿ (ಈಗಿನ ಮುಧೋಳ) ಹುಟ್ಟಿ ಕವಿರತ್ನನು ಸುಪುತ್ರನೆನಿಸಿಕೊಂಡನು. ಈ ಬೆಳುಗಲಿ ದೇಶವು ಪ್ರಸಿದ್ಧ ವಾದ ಗಟ್ಟಿಗೆ (ಘಟಪ್ರಭಾ) ನದಿಯೂ ಪೆರ್ದೊರೆ (ಎಂದರೆ, ಕೃಷ್ಣಾ) ನದಿಯೂ ಹರಿಯುತ್ತಿದ್ದ ಎಡೆಯಲ್ಲಿ ತದ್ದವಾಡಿಗೆ ತೆಂಕಲಿಗೂ (ದಕ್ಷಿಣಕ್ಕೂ) ತೊರಗಲಿಗೆ ಬಡಗಲಿಗೂ (ಉತ್ತರಕ್ಕೂ) ಎದ್ದಿತು. ಅದು ನೆಮ್ಮದಿಯ ನಾಡು. ಬೆಳುಗರೆ ನಾಡಿನಲ್ಲಿ ಹುಟ್ಟಿದ ಬಳೆಗಾರರ ಕುಲಕ್ಕೆ ಸೇರಿದವನು ಕವಿರತ್ನ; ಕುಲಧರ್ಮವಾದ  ಜೈನಧರ್ಮ ವನ್ನು ಬೆಳಗಿದವನು. ಅದನ್ನು ಹಾಗೆ ಬೆಳಗಲು ಹುರುಪುಗೊಳಿಸಿದವನು ತೈಲಪಚಕ್ರೇಶ್ವರನಿಗೆ ಮಂಡಲಾಧಿಪತಿಯಾಗಿದ್ದ ಚಾವುಂಡರಾಯ. ಮೊತ್ತ ಮೊದಲು ರತ್ನನು ಸಾಮಂತರಾಜರ ಪ್ರೋತ್ಸಾಹದಿಂದ ತುಸತುಸ ಮುಂದಕ್ಕೆ ಬಂದನು.ಮಂಡಲೇಶ್ವರನಾದ ಚಾವುಂಡರಾಯನಿಂದ ಹೆಚ್ಚಿನ ಏಳಿಗೆ ಹೊಂದಿದನು. ಚಕ್ರವರ್ತಿ ತೈಲಪನಿಂದ ಇನ್ನೂ ಅತಿಶಯವಾದ ಮೇಲ್ಮೆ ಪಡೆದನು.

ವಿದ್ಯಾಭ್ಯಾಸ
       ಸೌಮ್ಯ ಮುಖದ ಕವಿರತ್ನ ಸೌಮ್ಯನಾಮ ಸಂವತ್ಸರದಲ್ಲಿ (ಎಂದರೆ ಕ್ರಿಸ್ತ ಶಕ ೯೪೯ರಲ್ಲಿ) ಹುಟ್ಟಿದನು. ಅವನ ತಂದೆ ಜಿನವಲ್ಲಭ, ತಾಯಿ ಅಬ್ಬ ಲಬ್ಬೆ. ರನ್ನ ಬಾಲ್ಯದಲ್ಲಿ ನೆರೆಹೊರೆಯ ಮುದ್ದಿನ ಹುಡುಗ. ಚಿಕ್ಕಂದಿನಿಂದ ಪದ್ಯ, ಹಾಡು, ಶ್ಲೋಕಗಳನ್ನು ಕಲಿತು, ಕಟ್ಟಿ, ಹೇಳುವುದರಲ್ಲಿ ಅಪಾರ ಅಕ್ಕರೆ. ಗಟ್ಟಿಮುಟ್ಟಾದ  ಮೈಕಟ್ಟು. ಬಳೆಬಳೆದಂತೆ ಕುಲಕಸುಬಾದ ಬಳೆಗಾರ ವೃತ್ತಿ ಬೇಡವೆನಿಸಿತು. ಕುಲಧರ್ಮವಾದ ಜೆನಧರ್ಮವನ್ನು ಅರಿಯುವ ಆಸೆ ಒಂದು ಕಡೆ ; ಕಾವ್ಯ ಕಲೆಯನ್ನು ಕೈವಶಮಾಡಿಕೊಳ್ಳಬೇಕೆಂಬ ಬಯಕೆ ಮತ್ತೊಂದೆಡೆ. ಮುದುವೊಳಲಿನಲ್ಲಿ ಇದಕ್ಕೆ ಅವಕಾಶವಿರಲಿಲ್ಲ. 

ವಿದ್ಯಾಭ್ಯಾಸದ ಹಂಬಲದಿಂದ ಹಲವು ಗುರುಗಳನ್ನು ಹುಡುಕುತ್ತಾ ವಿದ್ಯಾ ಭಿಕ್ಷೆಯನ್ನು ಬೇಡಿದನು. ಆದರೆ ಪ್ರತಿಯೊಬ್ಬರೂ ಅವನ ಮನೆತನದ ಬಗ್ಗೆ, ಅವನ ವೃತ್ತಿಯ ಬಗ್ಗೆ ಕೇಳಿ ಆತನಿಗೆ ವಿದ್ಯಾದಾನ ಮಾಡಲು ನಿರಾಕರಿಸಿದರು. ಅಂದಿನ ದಿನಗಳಲ್ಲಿ ರಾಜ ಮನೆತನಕ್ಕೆ, ಬ್ರಾಹ್ಮಣರಿಗೆ ಮಾತ್ರ ಶಿಕ್ಷಣ ಸೀಮಿತವಾಗಿದ್ದುದೇ ಅದಕ್ಕೆ ಪ್ರಮುಖ ಕಾರಣ.
ಒಮ್ಮೆ ಒಬ್ಬ ಗುರುಗಳು ಆತನ ಹೃದಯದಲ್ಲಿ ಕಿಚ್ಚು ಹೊತ್ತಿಸುವಂತೆ ಹೀಗೆ ಹಂಗಿಸಿದರು:
"ಕೊಂಡು ತಂದು, ಹೊತ್ತು ಮಾರಿ, ಲಾಭಗಳಿಸಲು ವಿದ್ಯೆ ಏನು ಬಳೆಯ ಮಲಾರವೇ" ಎಂದು ಜರಿದರು. ಆಗ ರನ್ನನು ಎದೆಗುಂದದೆ ವಿದ್ಯೆಕಲಿಯುವ ಹಟ ತೊಟ್ಟು, ಆಗಿನ ದಿನಗಳಲ್ಲಿ ಜೈನ ಧರ್ಮಕ್ಕೂ ವಿದ್ಯೆಗೂ ನೆಲೆವೀಡು ಎನಿಸಿದ್ದ, ದೂರದ ಗಂಗರಾಜ್ಯಕ್ಕೆ ಪ್ರಯಾಣ ಮಾಡಿದನು. ಆಗ ರಕ್ಕ ರಾಚಮಲ್ಲನು ಗಂಗಮಂಡಲದ ಅಧಿಪತಿಯಾಗಿದ್ದನು (ಕ್ರಿ.ಶ.೯೭೩-೯೮೬). ಅಲ್ಲಿ ಗಂಗ ದೊರೆಯ ಮಂತ್ರಿ ಯಾಗಿದ್ದವನು ಚಾವುಂಡರಾಯ. ಇವನು ಸ್ವತ: ವಿದ್ಯಾವಂತ, ವಿದ್ಯಾಪಕ್ಷಪಾತಿ ; ಕವಿ ರನ್ನ ಈತನ ಬಳಿಗೆ ಹೋಗಿ ಕಂಡನು, ಪರಿಚಯ ಮಾಡಿಕೊಂಡನು, ವಿದ್ಯೆಯಲ್ಲಿ ಆಸಕ್ತಿ ಹೊಂದಿದ್ದ ಚಾವುಂಡರಾಯನಿಂದ ಸಹಾಯ ಪಡೆಯುವುದು ರನ್ನನಿಗೆ ಕಷ್ಟವಾಗಲಿಲ್ಲ. ಹೀಗೆ ದೊರೆ ಸಹಾಯದಿಂದ ರನ್ನನು ಅಜಿತ ಸೇನಾಚಾರ್ಯರಂತಹ ಸದ್ಗುರುಗಳ ಬಳಿ ನೆಲಿಸಿ, ಭಾಷೆ  ಸಾಹಿತ್ಯಗಳಲ್ಲಿ ಪಾಂಡಿತ್ಯವನ್ನು ಪಡೆದನು ; ಕನ್ನಡ, ಸಂಸ್ಕ್ರತ, ಪ್ರಾಕೃತ ಭಾಷೆಗಳಲ್ಲಿ ನಿಪುಣನಾದನು. ಸಂಸ್ಕೃತದಲ್ಲಿ ರಾಮಾಯಣ ಮಹಾಭಾರತಗಳನ್ನೂ, ಭಾಸ, ಕಾಳಿದಾಸ, ಭಟ್ಟನಾರಾಯಣ, ಬಾಣ ಮುಂತಾದ ಕವಿಗಳ ಗದ್ಯ ಪದ್ಯ ನಾಟಕ ಗ್ರಂಥಗಳನ್ನೂ ಚೆನ್ನಾಗಿ ಓದಿಕೊಂಡನು.
ವಾಲ್ಮೀಕಿ, ವ್ಯಾಸ, ಕಾಳಿದಾಸ, ಬಾಣ – ಈ ಕವಿಗಳು ರನ್ನನ ಮೆಚ್ಚಿನ ಕವಿಗಳು. ಅಲಂಕಾರಶಾಸ್ತ್ರ, ನಾಟ್ಯಶಾಸ್ತ್ರ ಮುಂತಾದ ಶಾಸ್ತ್ರಗಳನ್ನು ಅಭ್ಯಾಸಮಾಡಿದನು. ’ಗದಾಯದ್ದ’ದಲ್ಲಿ ಭೀಮ ದುರ್ಯೋಧನರ ಗದಾಯುದ್ಧ ಭಾಗವನ್ನು ರನ್ನ ವರ್ಣಿಸಿರುವ ರೀತಿಯನ್ನು ನೋಡಿದರೆ, ಗದಾಯದ್ಧವನ್ನು ಅಭ್ಯಾಸ ಮಾಡಿ ಅದನ್ನು ತಿಳಿದುಕೊಂಡಿದ್ದನೇನೋ ಎನ್ನಿಸುತ್ತದೆ. ವ್ಯಾಕರಣ ಶಾಸ್ತ್ರದಲ್ಲಿ ಅವನಿಗೆ ವಿಶೇಷ ಪಾಂಡಿತ್ಯ. ಸಂಸ್ಕೃದಲ್ಲಿ ಜೈನೇಂದ್ರ ಮತ್ತು ಪಾಣಿನಿ ಎಂಬವರ ವ್ಯಾಕರಣಗಳಲ್ಲಿ ತಾನು ಪಂಡಿತ ಎಂದು ರನ್ನನೇ ಹೇಳೀಕೊಂಡಿದ್ದಾನೆ. ಪಂಪಪೊನ್ನರ ಕಾವ್ಯಗಳನ್ನು ಆಳವಾಗಿ ಅಭ್ಯಾಸ ಮಾಡಿ, ಕಾವ್ಯ ವಿದ್ಯೆಯ ಪರಿಚಯ ಮಾಡಿಕೊಂಡನು. ಪಟ್ಟು ಹಿಡಿದು ಮಾಡಿದ ಈವಿದ್ವತ್ತಿನ ಸಾಧನೆ ಕಾವ್ಯಕಲೆಯಲ್ಲಿ ಅವನಿಗೆ ಸಿದ್ಧಿಯನ್ನು ದೊರಕಿಸಿಕೊಟ್ಟಿತು.ಯಾವ ಕಾಲದಲ್ಲಿಯೇ ಆಗಲಿ, ಪಾಂಡಿತ್ಯದ ಬೆಂಬಲವಿಲ್ಲದೆ ಕೇವಲ ಪ್ರತಿಭೆಯ ಬಲದಿಂದ ದೀರ್ಘವಾದ ಪ್ರೌಢ ಕಾವ್ಯಗಳನ್ನು ಬರೆಯಲು ಸಾದ್ಯವಿಲ್ಲ. ಸಹಜವಾದ ಕವಿತಾ ಶಕ್ತಿಯ ಜೊತೆಗೆ ಪಾಂಡಿತ್ಯದ ಬೀಗದ ಕೈಯನ್ನ ಪಡೆದುಕೊಂಡಿದ್ದರಿಂದ, ವಾಗ್ದೇವಿಯ ಭಂಡಾರದ ಮದ್ರೆಯನ್ನು ಒಡೆಯಲು ಅವನು ಸಮರ್ಥನಾದನು. ಎರಡು ಕೃತಿರತ್ನಗಳು ಹೊರಬಂದವು -’ ಅಜಿತ ಪುರಾಣ ’ ಮತ್ತು ’ಸಾಹಸಭೀಮ ವಿಜಯ.’
ಜೈನ ಧರ್ಮವನ್ನು ಚೆನ್ನಾಗಿ ತಿಳಿದುಕೊಳ್ಳಬೇಕೆಂಬ ಆಸೆ ರನ್ನನಿಗೆ ಮೊದಲನಿಂದಲೂ ಇದ್ದಿತು. ಚಾವುಂಡರಾಯನ ಹಾಗೂ ಗಂಗರಸನ ಗುರುಗಳಾಗಿದ್ದ ಅಜಿತಸೇನಾಚಾರ್ಯರನ್ನು ಆಶ್ರಯಿಸಿ, ಜೈನ ಮತವನ್ನು ಆಳವಾಗಿ ಅಭ್ಯಾಸ ಮಾಡಿದನು. ಇದರಿಂದ ಜೈನ ಪುರಾಣವನ್ನು ಬರೆಯುವುದು ಸಾಧ್ಯವಾಯಿತು.
ಚಾವುಂಡರಾಯನ ಸಹಾಯದಿಂದ ರನ್ನನು ಅನೇಕ ಸಾಮಂತರ ರಾಜ್ಯಸಭೆಗಳಿಗೆ ಹೋಗಿದ್ದು, ಪಂಡಿತ ರಾಜ್ಯಸಭೆಗಳಿಗೆ ಹೋಗಿದ್ದು,ಪಂಡಿತ ಮಂಡಲಿಗಳಲ್ಲಿಯೂ ಕವಿಗೋಷ್ಠಿಗಳಲ್ಲಿಯೂ ತನ್ನ ಪಾಂಡಿತ್ಯವನ್ನೂ ಕವಿತಾ ಶಕ್ತಿಯನ್ನೂ ಮೆರೆದು ಪ್ರಸಿದ್ದನಾದನು. ಅನೇಕ ತೀರ್ಥಕ್ಷೇತ್ರಗಳನ್ನೂ ನೋಡಿ ಬಂದನು. ವಿದ್ಯಾಭ್ಯಾಸ, ದೇಶಸಂಚಾರ- ಇವೆರಡೂ ಮುಗಿದ ಮೇಲೆ ಹುಟ್ಟಿದೂರಿಗೆ ಹಿಂದಿರುಗುವ ಮನಸ್ಸಾಯಿತು. ಗುರುಗಳನ್ನೂ ಪೋಷಕನಾಗಿದ್ದ ಚಾವುಂಡರಯನನ್ನೂ ಬೀಳ್ಕೊಂಡು ತನ್ನ ಊರಿಗೆ ಹಿಂದಿರುಗಿದನು. 


ರನ್ನನ ರುಜು
          ಶ್ರವಣಬೆಳಗೊಳದ ಚಿಕ್ಕಬೆಟ್ಟದ ಒಂದು ಬಂಡೆಯ ಮೇಲೆ ’ ಶ್ರೀ ಕವಿರತ್ನ’ ಎಂದು ಕೊರೆದಿದೆ. ಈ ಹೆಸರಿನ ಅಕ್ಷರಗಳು ೯-೧೦ನೆಯ ಶತಮಾನದ ಆದಿಯಲ್ಲಿ ಇರುವುದರಿಂದ ಈಚೆಗೆ ಯಾರೋ ಬರೆದದ್ದಲ್ಲ. ರನ್ನನ ಕೈಬರಹ ಇದ್ದರೂ ಇರಬಹದು ; ಆದರೆ ಹಾಗೆಂದು ಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಅಂತೂ, ರನ್ನನು ಶ್ರವಣಬೆಳಗೊಳಕ್ಕೆ ಹೋಗಿದ್ದನೆಂದು ಇದರಿಂದ ಗೊತ್ತಾಗುತ್ತದೆ. ರನ್ನನು ಅಜಿತಪುರಣವನ್ನು ಕ್ರಿ.ಶ. ೯೯೩ ರಲ್ಲಿ ಬರೆದು ಮುಗಿಸಿದನು.ಅದನ್ನು ಬರೆಯಿಸಿದವಳು ಅತ್ತಿ ಮಬ್ಬೆ ಎಂಬ ಜಿನಭಕ್ತೆ. ಅತ್ತಿಮಬ್ಬೆ, ಶ್ರವಣಬೆಳಗೊಳದಲ್ಲಿ ಚಾವುಂಡರಯನು ಮಹೋತ್ಸವಕ್ಕೆ ಹೋಗಿದ್ದ ಸಂಗತಿಯನ್ನು ಅಜಿತಪುರಾಣದಲ್ಲಿ ರನ್ನ ಕಣ್ಣಿಗೆ ಕಟ್ಟಿದಂತೆ ವರ್ಣಿ ಸಿದ್ದಾನೆ. ಈ ಉತ್ಸವ ನೆಡೆದದ್ದು ಕ್ರಿ.ಶ.೯೮೩ರಲ್ಲಿ. ಎಂದ ಮೇಲೆ, ಇದಕ್ಕಿಂತ ಮುಂಚೆಯೇ ರನ್ನ ಗಂಗರಾಜ್ಯದಿಂದ ತನ್ನ ನಾಡಿಗೆ ಹಿಂದಿರುಗಿದ್ದನೆಂದು ಹೇಳಬಹುದು. ವಿಗ್ರಹವನ್ನು ಮಾಡಿಸಿ, ಪ್ರತಿಷ್ಠೆ ಮಾಡಿಸಿದವನು ತನ್ನ ಪೋಷಕ ಚಾವುಂಡರಾಯ, ಮಹೋತ್ಸವವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದವರು ಪೂಜ್ಯ ಗುರುಗಳಾದ ಅಜಿತಸೇನಾಚಾರ್ಯರು; ರನ್ನನು ಈ ಉತ್ಸವಕ್ಕೆ ಹೋಗಿದ್ದುದರಲ್ಲಿ ಆಶ್ವರ್ಯವೇನು? ಈ ವೇಳೆಗೆ ರನ್ನನು ಅತ್ತಮಬ್ಬೆಯ ಆಶ್ರಯವನ್ನು ಪಡೆದಿದ್ದನೆಂದು ಕಾಣುತ್ತದೆ. ರನ್ನನು ಆಕೆಯೊಂದಿಗೆಯೇ ಶ್ರವಣಬೆಳಗೊಳಕ್ಕೆ ಪ್ರಯಾಣ ಮಾಡಿರಬೇಕು. ಅತ್ತಿಮಬ್ಬೆ “ಅನ್ನಮಂ ಬಿಸುಟು ಪರ್ವತಂ ಪರಿದೇರಿ” ಜಿನನ ಬಳಿ ನಿಂತಾಗ ಈ ಜಿನಭಕ್ತೆಗಾಗಿ ಹೂಮಳೆಗರೆಯಿತೋ ಎನ್ನುವಂತೆ ಆಕಾಲದಲ್ಲಿ ಮಳೆಗರೆಯಿತಂತೆ!

ರನ್ನನ ಮಡದಿ ಮಕ್ಕಳು
         ರನ್ನನು ತನ್ನ ಹಿಂದಿರುಗಿದ ಮೇಲೆ, ತೈಲಪನ ಆಸ್ಥಾನದಲ್ಲಿ ವಿದ್ವಾಂಸನೆನಿಸಿಕೊಂಡು ಅವನ ಆಶ್ರಿತನಾದನು. ಈ ವೇಳೆಗೆ ಅವನು ಮದುವೆ ಮಾಡಿಕೊಂಡಿದ್ದನೆಂದು ಕಾಣುತ್ತದೆ. ಅವನಿಗೆ ಜಕ್ಕಿ ಮತ್ತು ಶಾಂತಿ ಎಂಬ ಇಬ್ಬರು ಹೆಂಡತಿಯರು. ಇವರ ಸದ್ಗುಣಗಳನ್ನು ರನ್ನ ಮೆಚ್ಚಿಕೊಂಡು ಕೊಂಡಾಡಿದ್ದಾನೆ. ಬಹುಕಾಲದವರೆಗೆ ಅವನಿಗೆ ಮಕ್ಕಳಾಗಿರಲಿಲ್ಲ. ಕಾಲಾನಂತರದಲ್ಲಿ ೪೦ ವಯಸ್ಸು ದಾಟಿದ ಮೇಲೆ, ಇಬ್ಬರು ಮಕ್ಕಳಾದರು – ಒಬ್ಬ ಮಗ, ಒಬ್ಬಳು ಮಗಳು. ಗಂಗರಾಜ್ಯದಲ್ಲಿದ್ದಾಗ ತನಗೆ ಬಹು ವಿಧಗಳಲ್ಲಿ ಉಪಕಾರ ಮಾಡಿದ ಚಾವುಂಡರಾಯನ ’ರಾಯ’ ಎಂಬ ಹೆಸರನ್ನು ಮಗನಿಗೆ ಇಟ್ಟನು; ತನ್ನ ದೇಶಕ್ಕೆ ಹಿಂದಿರುಗಿದ ಮೇಲೆ, ಜೈನ ಭಕ್ತಿಯೂ ಕಾವ್ಯಪ್ರೇಮಿಯೂ ಆದ, ತನಗೆ ಆಶ್ರಯಕೊಟ್ಟು ತನ್ನಿಂದ ಕಾವ್ಯ ಬರೆಯಿಸಿದ ಅತ್ತಿಮಬ್ಬೆಯ ಹೆಸರನ್ನು ಮಗಳಿಗೆ ಇಟ್ಟನು. ಅಜ್ಜ ಅಜ್ಜಿಯರ, ಹತ್ತಿರದ ಬಂಧುಗಳ ಹೆಸರನ್ನು ಮಕ್ಕಳಿಗೆ ಇಡುವುದು ಅಪೂರ್ವ. ಅವರ ವಿಷಯದಲ್ಲಿ ರನ್ನ ಎಷ್ಟು ಕೃತಜ್ಞನಾಗಿದ್ದನೆಂಬುದನ್ನು ಈ ಸಂಗತಿ ಎತ್ತಿ ತೋರಿಸುತ್ತದೆ. ಉಪಕಾರ ಸ್ಮರಣೆ ಒಂದು ದೊಡ್ಡ ಗುಣ.

ರನ್ನನ ಕೃತಿಗಳು
         ರನ್ನನ ಅಜಿತಪುರಾಣದ ಒಂದು ಪದ್ಯದಿಂದ ಅವನು ’ಪರಶುರಾಮ ಚರಿತ,’ ’ಚಕ್ರೇಶ್ವರ ಚರಿತ,’ ಅಜಿತ ತೀರ್ಥೇಶ್ವರ ಚರಿತ’ (ಅಜಿತ ಪುರಾಣ) ಎಂಬ ಮೂರು ಕಾವ್ಯದಲ್ಲಿ ’ಗದಾಯುದ್ಧ’ದ ಹೆಸರನ್ನು ಹೇಳಿಲ್ಲ. ಈ ಕಾರಣದಿಂದಲೂ, ಬೇರೆಯ ಶಾಸನಾಧಾರ ಮುಂತಾದ ಇತರ ಆಧಾರಗಳಿಂದಲೂ ಅಜಿತ ಪುರಾಣವನ್ನು ರಚಿಸಿದ ಹತ್ತಾರು ವರ್ಷಗಳಾದ ಮೇಲೆ ’ಗದಾಯುದ್ಧ’ವನ್ನು ರಚಿಸಿರಬೇಕೆಂದು ಕೆಲವರ ಹೇಳಿಕೆ. ಅಜಿತ ಪುರಾಣದ ಕಾಲಕ್ಕೆ (ಎಂದರೆ ೯೯೩ಕ್ಕೆ) ಮೊದಲೇ, ಸುಮಾರು ೯೮೨ರಲ್ಲಿ ಗದಾಯುದ್ಧ ಬರೆದಿರುಬಹುದು ಎಂದು ಇನ್ನು ಕೆಲವರ ಅಭಿಪ್ರಾಯ. ಅವು ಹೇಗೇ ಇದ್ದರೂ, ಈ ನಾಲ್ಕು ಕಾವ್ಯಗಳು ರನ್ನ ಬರೆದವು. ಇದರಲ್ಲಿ ಸಂದೇಹವೇನಿಲ್ಲ. ಪರಶುರಾಮಚರಿತ. ಚಕ್ರೇಶ್ವರ ಚರಿತಗಳು ಇನ್ನೂ ಸಿಕ್ಕಿಲ್ಲ. ಇವುಗಳ ಕಥಾವಸ್ತು ಏನಿರಬಹುದು ಎಂದು ವಿದ್ವಾಂಸರು ಅನೇಕ ರೀತಿಯಲ್ಲಿ ಊಹೆ ಮಾಡಿದ್ದಾರೆ. ರನ್ನನು ತಾನು ಉಭಯಕವಿ ಎಂದರೆ ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಕಾವ್ಯ ಬರೆದಿರುವವನು – ಎಂದು ಹೇಳಿಕೊಂಡಿದ್ದಾನೆ. ಆದರೆ ಅವನು ಬರೆದಿರಬಹುದಾದ ಸಂಸ್ಕೃತ ಗ್ರಂಥಗಳು ಯಾವುವೂ ಸಿಕ್ಕಿಲ್ಲ. ೧೨ ಕಂದ ಪದ್ಯಗಳುಳ್ಳ ಒಂದು ಚಿಕ್ಕ ಗ್ರಂಥಭಾಗವೊಂದು ಸಿಕ್ಕಿದೆ. ಪ್ರತಿ ಪದ್ಯದಲ್ಲಿಯೂ ಕಠಿಣವಾದ ಕನ್ನಡ ಶಬ್ದಗಳಿಗೆ ಅರ್ಥವನ್ನು ಹೇಳಿದೆ. ಉದಾಹರಣೆಗೆ, ಸಣ್ಣದು ಎಂದರೆ ಮಾಡು, ಬಳಿ ಎಂದರೆ ವಂಶ, ಹೀಗೆ ಆರ್ಥ ಹೇಳಿಕೊಂಡು ಹೋಗಿದೆ. ಪ್ರತಿಪದ್ಯವೂ ’ಕವಿರತ್ನ’ ಎಂದು ಮುಗಿಯುವುದರಿಂದ ಈ ನಿಘಂಟು ರನ್ನ ಬರೆದದ್ದು ಎಂದು ಊಹಿಸಿದೆ.

ಅತ್ತಿಮಬ್ಬೆ
       ಅಜಿತಪುರಾಣವನ್ನು  ರನ್ನನಿಂದ ಬರೆಯಿಸಿದವಳು ಅತ್ತಿಮಬ್ಬೆ ಎಂದು ಹಿಂದೆಯೇ ಹೇಳಿದೆ. ಅತ್ತಿಮಬ್ಬೆಯಲ್ಲಿ ರನ್ನನಿಗೆ ಅಪರ ಗೌರವ. ಅವಳ ಮನೆತನ ಜೈನಧರ್ಮ ಶ್ರದ್ಧೆಗೂ ಕಾವ್ಯಪ್ರೇಮಕ್ಕೂ ಸ್ವಾಮಿ ಭಕ್ತಿಗೂ ಹೆಸರಾದದ್ದು. ತಂದೆ ಮಲ್ಲಪ, ಚಿಕ್ಕಪ್ಪ ಪೊನ್ನಮಯ್ಯ-ಇಬ್ಬರೂ ಆಹವಮಲ್ಲ ಚಾಲುಕ್ಯ ಚಕ್ರವರ್ತಿ ತೈಲಪನ ಸೇವೆಗಾಗಿ ದೇಹವನ್ನು ಮುಡುಪಾಗಿಟ್ಟಿದ್ದವರು. ಪೊನ್ನನಿಂದ ಶಾಂತಿಪುರಾಣವನ್ನು ಬರೆಯಿಸಿದವರು ಇವರು. ಹಿರಿಯನಾದ ಮಲ್ಲಪ ವಿದ್ಯಾನಿಧಿ; ಕಿರಿಯ ಪೊನ್ನಮಯ್ಯ ಚಾವುಂಡರಾಯನ ಭಕ್ತ, ಹೀಗಿದ್ದುದರಿಂದ, ರನ್ನನಿಗೆ ಈ ಮನೆತನದವರ ಪರಿಚಯ ಲಾಭವಾದದ್ದರಲ್ಲಿ ಆಶ್ಚರ್ಯವಿಲ್ಲ.
ಈ ಮನೆತನದ ಮೂಲಕವಾಗಿಯೇ ರನ್ನನಿಗೆ ತೈಲಪ ಚಕ್ರವರ್ತಿ ಆಸ್ಥಾನಕ್ಕೆ ಪ್ರವೇಶ ದೊರಕಿರಬೇಕು. ಈ ಸನ್ನಿವೇಶದಲ್ಲಿ, ಅತ್ತಿಮಬ್ಬೆಯ ಸದ್ಗುಣಗಳೂ ದಾನ ಕಾರ್ಯಗಳೂ ರನ್ನನ ಗಮನಕ್ಕೆ ಬಂದುವು. ರನ್ನನ ಪ್ರತಿಭೆಯನ್ನು ಆಕೆಯೂ ಗುರುತಿಸಿದಳು. ತನ್ನ ಹಿರಿಯರು ಪೊನ್ನನಿಂದ ಪುರಾಣ ಕಾವ್ಯವನ್ನು ಬರೆಯಿಸಿದಂತೆ, ಅವಳೂ ರನ್ನನಿಂದ ಅಜಿತ ಪುರಾಣವನ್ನು ಬರೆಯಿಸಿದಳು. ಅತ್ತಿಮಬ್ಬೆಯ ವ್ಯಕ್ತಿತ್ವವು ರನ್ನನ ಮನಸ್ಸನ್ನು ಸೂರೆಗೊಂಡಿತು. ಅವನು ಅವಳ ಭಕ್ತನೇ ಆಗಿಬಿಟ್ಟ. ಅವಳು ಅವನಿಗೆ ಒಬ್ಬ ತಪಸ್ವಿನಿಯಂತೆ ಕಂಡಳು. ಭಕ್ತಿಯಿಂದ, ಕೃತಜ್ಞತೆಯಿಂದ, ತನ್ನ ಕಾವ್ಯದಲ್ಲಿ ಅವಳಿಗೆ ಸ್ತೋತ್ರಮಾಲಿಕೆಯನ್ನು ಅರ್ಪಿಸಿದನು, ಜಿನ ಧರ್ಮಪತಾಕೆಯನ್ನು ಎತ್ತಿ ಹಿಡಿದ ಮಹಾಸತಿ ಅತ್ತಿಮಬ್ಬೆಯನ್ನು ಬಣ್ಣಿಸುವುದು ಪುಣ್ಯವೆಂದು ಭಾವಿಸಿದನು. ಕಸವರಗಲಿ (ಎಂದರೆ ಚಿನ್ನವನ್ನು ದಾನ ಮಾಡುವುದರಲ್ಲಿ ಶೂರಳು), ಶೀಲಾಲಂಕೃತೆ, ಗುಣಮಾಲಾಲಂಕೃತೆ ಎಂದು ಮುಂತಾಗಿ ರನ್ನ ಮನಃಪೂರ್ವಕವಾಗಿ ಆಕೆಯನ್ನುಕೊಂಡಾಡಿದ್ದಾನೆ. ಅವಳ ಶುಭ್ರವಾದ ಶೀಲ  ಬಿಳಿಯ ಅರಳೆಯಂತೆ ಅಚ್ಚ ಬಿಳುಪು; ಗಂಗಾಜಲದಂತೆ ನಿರ್ಮಲ; ಗುರು ಅಜಿತ ಸೇನರ ಗುಣಗಳಂತೆ ಪವಿತ್ರ, ಅತ್ತಿಮಬ್ಬೆಯ ದಾನ ಗುಣವನ್ನು ಎಷ್ಟು ವರ್ಣಿಸಿದರೂ ರನ್ನನಿಗೆ ತೃಪ್ತಿಯಿಲ್ಲ.
ಅತ್ತಿಮಬ್ಬೆಯನ್ನು ’ಕವಿವರರ ಕಾಮಧೇನು’, ’ದಾನ ಚಿಂತಾಮಣಿ’ ಎಂದು ರನ್ನ ಹೊಗಳಿರುವುದು ಹೆಚ್ಚಿನ ಮಾತಲ್ಲ. ಅತ್ತಿಮಬ್ಬೆ ಹೊಸಕಾವ್ಯದ ರಚನೆಗೆ ಉತ್ತೇಜನ ಕೊಟ್ಟಿದ್ದು ಮಾತ್ರವಲ್ಲ; ಹಿಂದಿನ ಕಾವ್ಯಗಳ ರಕ್ಷಣೆಗೂ ಗಮನಹರಿಸಿದಳು. ಪೊನ್ನನ ಶಾಂತಿಪುರಾಣ ಹೂತು. ಕೆಟ್ಟುಹೋಗುತ್ತದೆ ಎಂದು ಅದರ ಒಂದು ಸಾವಿರ ಪ್ರತಿಗಳನ್ನು ಮಾಡಿಸಿ ಹಂಚಿಸಿದಳು. ಅಚ್ಚಿನ ಅನುಕೂಲ ಇಲ್ಲದಿದ್ದ ಆ ಕಾಲದಲ್ಲಿ, ಸಂಪ್ರತಿಕಾರರಿಂದ ಪ್ರತಿ ಮಾಡಿಸಲು ಅಂಥವರು ಎಷ್ಟು ಜನಬೇಕು, ಅಷ್ಟು ಜನಕ್ಕೂ ಎಷ್ಟು ಹಣ ವೆಚ್ಚಮಾಡಬೇಕು ಎಂಬುದನ್ನು ಊಹಿಸಿಕೊಳ್ಳಬಹುದು. ಈ ಸಂಗತಿಯನ್ನು ರನ್ನ ಹೇಳಿರದಿದ್ದರೂ, ಅವನಿಗೆ ಅದು ಗೊತ್ತಿದ್ದಿರಬೇಕು; ಶಾಂತಿಪುರಾಣದ ಕೊನೆಯ ಹೆಚ್ಚಿನ ಪದ್ಯಗಳಲ್ಲಿ ಇದನ್ನು ವರ್ಣಿಸಿದೆ. ಅತ್ತಿಮಬ್ಬೆ ಒಂದು ಸಾವಿರದ ಐದನೂರು ರತ್ನಖಚಿತವಾದ ಚಿನ್ನದ ಜಿನ ಪ್ರತಿಮೆಗಳನ್ನು ಮಾಡಿಸಿ ದಾನ ಮಾಡಿದ್ದನ್ನು ರನ್ನ ವರ್ಣಿಸಿದ್ದಾನೆ. ಅತ್ತಿಮಬ್ಬೆ ಒಂದು ಜಿನೇಂದ್ರ ಗೃಹವನ್ನು ಕಟ್ಟಿಸಿದ ಸಂಗತಿಯೂ ಒಂದು ಶಾಸನದಿಂದ ತಿಳಿದುಬರುತ್ತದೆ. ಅತ್ತಿಮಬ್ಬೆಯ ವ್ರತನಿಷ್ಠೆಯನ್ನೂ ದಾನಗುಣವನ್ನೂ ಕೆಲವೇ ಮಾತುಗಳಲ್ಲಿ ಹಿಡಿದಿಟ್ಟಿರುವ ರನ್ನನ ಒಂದು ಪದ್ಯವನ್ನು ಎತ್ತಿ ಬರೆದು ಈ ಪ್ರಕರಣವನ್ನು ಮುಗಿಸಬಹುದು.: 


ಚಕ್ರವರ್ತಿ ತೈಲಪನು ರನ್ನನಿಗೆ ಚಕ್ರವರ್ತಿ ಎಂಬ ಬಿರುದನ್ನು ಕೊಟ್ಟನು
“ಒಡಲನ್ ಉಪವಾದಿಂ ತ-
ನ್ನೊಡಮೆಯನ್ ಅನವರತದಾನದಿಂ ತವಿಸಿ, ಜಸಂ-
ಬಡೆದಳ್; ನೂರ್ಮಡಿ ತೈಲನ
ಪಡೆವಳ ತೈಲನ ಜನನಿಗೆ ಎಣೆ ಪೆರರ್ ಒಳರೇ?”
“ಅತ್ತಮಬ್ಬೆ ತನ್ನ ದೇಹವನ್ನು ಉಪವಾಸದಿಂದ ಬಡವಾಗಿಸಿದಳು. ತನ್ನ ಸಂತ್ತನ್ನು ನಿತ್ಯ ದಾನದಿಂದ ಬರಿದು ಮಾಡಿಕೊಂಡಳು; ಹೀಗೆ  ಮಾಡಿ, ಯಶಸ್ಸನ್ನು ಪಡೆದಳು. ತೈಲಪನ ಸೇನಾಪತಿಯಾದ ತೈಲನ ತಾಯಿಗೆ ಸಮಾನರು ಬೇರೆ ಯಾರಾದರೂ ಇದ್ದಾರೆಯೇ?”

ಅಜಿತ ಪುರಾಣ
ಎರಡನೆಯ ತೀರ್ಥಂಕರನಾದ ಅಜಿತನಾಥನನ್ನು ಕುರಿತ ಪುರಾಣಕಾವ್ಯ  ಈ ಕೃತಿ. ಪಂಪನ ಆದಿಪುರಾಣಕ್ಕೂ ಪೊನ್ನನ ಶಾಂತಿಪುರಾಣಕ್ಕೂ ಇದು ಸರಿಸಮಾನ ಎಂದು ರನ್ನ ಹೊಗಳಿಗೊಂಡಿದ್ದಾನೆ.
ತೀರ್ಥಂಕರ ಎಂದರೆ – ’ಹುಟ್ಟು ಸಾವುಗಳಿಂದ ಕೂಡಿದ ಸಂಸಾರ ಸಾಗರವನ್ನು ದಾಟಿಸಿ, ಮೋಕ್ಷವನ್ನು ಕೊಡತಕ್ಕವನು,’ಅಥವಾ ’ಜಗತ್ತನ್ನು ಉದ್ಧಾರ ಮಾಡುವ ಧರ್ಮವೆಂಬ ತೀರ್ಥವನ್ನು ಉತ್ಪತ್ತಿ ಮಾಡತಕ್ಕವನು’ ಎಂದು ಅರ್ಥ. ತೀರ್ಥಂಕರರೂ ನಮ್ಮಂತೆಯೇ ಮನುಷ್ಯರು. ಪಾಪ ಕರ್ಮದಿಂದ ಪ್ರಾಣಿ ಜನ್ಮ,, ನರಕವಾಸ, ಮುಂತಾದ ಕೀಳುಗತಿಯೂ, ಪುಣ್ಯಕರ್ಮದಿಂದ ಸ್ವರ್ಗಸುಖವನ್ನು ಅನುಭವಿಸುವ ದೇವಜನ್ಮವೂ ದೊರಕುವುವು. ಇದು ಜೈನಧರ್ಮದ ನಂಬಿಕೆ-ಹಿಂದೂ  ಧರ್ಮದಲ್ಲಿ ಇರುವಂತೆ. ಪ್ರತಿ ಜನ್ಮದಲ್ಲಿಯೂ ಪುಣ್ಯ ಪಾಪ ಕಾರ್ಯಗಳನ್ನು ಮಾಡುತ್ತಲೇ ಇರುವುದರಿಂದ, ಜನ್ಮಾಂತರ ಅಥವಾ ಭವಾಂತರಗಳಿಗೆ ಕೊನೆ ಮೊದಲೇ ಇಲ್ಲ. ಪಾಪಕರ್ಮದ ಕಡೆಗೆ ಮನಸ್ಸು ಹೋಗದಂತಹ ಉತ್ತಮವಾದ ಮಟ್ಟದಲ್ಲಿ ಇರುತ್ತದೆ ತೀರ್ಥಂಕರನಾಗುವ ಜೀವಿಯ ಬದುಕು. ಹೀಗೆ, ತೀರ್ಥಂಕರರ ಕಥೆಗಳಲ್ಲಿ ಮಾನವಜನ್ಮ – ದೇವಜನ್ಮ, ಈ ಎರಡರ ನಡುವೆ ಜೀವನು ತೊಳಲಾಡುತ್ತಿರುತ್ತಾನೆ. ತೀರ್ಥಂಕರನಾಗುವ ಜೀವನು ಜನ್ಮ ಜನ್ಮಾಂತರಗಳಲ್ಲಿ ತೊಳಲಿ, ಕಡೆಗೆ ಒಂದು ಜನ್ಮದಲ್ಲಿ ಅತ್ಯಂತ ವೈರಾಗ್ಯಹೊಂದಿ, ತಪಸ್ಸುಮಾಡಿ ಕರ್ಮದ ಕಟ್ಟಿನಿಂದ ಬಿಡುಗಡೆ ಹೊಂದಿ, ತಪಸ್ಸು ಮಾಡಿ ಕರ್ಮದ ಕಟ್ಟಿನಿಂದ ಬಿಡುಗಡೆ ಹೊಂದಿ, ಶಾಶ್ವತವಾದ ಮೋಕ್ಷವನ್ನು ಪಡೆಯುತ್ತಾನೆ. ಜನ್ಮಾಂತರಗಳ ಕಥೆಯನ್ನು ’ಭವಾವಳಿ’ ಎಂದು ಕರೆದಿದೆ. ಸಾಧಾರಣವಾಗಿ ಪ್ರತಿ ತೀರ್ಥಂಕರನ ಕಥೆಯಲ್ಲಿಯೂ ಈ ಭವಾವಳಿಯ ಕಥೆ ಉಂಟು.ತೀರ್ಥಂಕರನೆನಿಸುವವನು ಕಡೆಯಲ್ಲಿ ಹುಟ್ಟು ಸಾವುಗಳನ್ನು ಗೆಲ್ಲುವುದರಿಂದ ’ಜಿನ’ ಎನ್ನಿಸಿ ಕೊಳ್ಳುತ್ತಾನೆ. ಜಿನ ಎಂದರೆ ಗೆದ್ದವನು ಎಂದು ಅರ್ಥ. ತೀರ್ಥಂಕರರು ಇತರರಿಗೆ ಮೋಕ್ಷ ಕೊಡಬಲ್ಲ ಜಿನ ಧರ್ಮವನ್ನು ಬೋಧೆ ಮಾಡಿ, ಕೈವಲ್ಯ ಪದವಿಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ. ಕೈವಲ್ಲಯ ಎಂದರೆ ಮೋಕ್ಷ. ಆದ್ದರಿಂದ ಜಿನರು ’ಕೇವಲಿ’ ಗಳು ಎನ್ನಿಸಿಕೊಳ್ಳುತ್ತಾರೆ. ಇವರು ಪಡೆಯುವ ಜ್ಞಾನವೇ ಕೇವಲಜ್ಞಾನ. ಜೈನ ಧರ್ಮದಲ್ಲಿ ಇಂಥ ೨೪ ಮಂದಿ ತೀರ್ಥಂಕರರು ಆಗಿ ಹೋಗಿದ್ದಾರೆ. ಅಜಿತನಾಥನು ಎರಡನೆಯ ತೀರ್ಥಂಕರ.
ಪಂಪನು ಬರೆದಿರುವ ಆದಿಪುರಾಣದಲ್ಲಿ, ಮೊದಲನೆಯ ತೀರ್ಥಂಕರನಾದ ವೃಷಭಸ್ವಾಮಿಯ ’ಭವಾವಳಿ’ಯ ಕಥೆ ಅವನ ಹತ್ತು ಜನ್ಮಗಳನ್ನು ಒಳಗೊಂಡಿದೆ. ಅಜಿತನಾದರೂ ಎರಡೇ ಜನ್ಮಗಳಲ್ಲಿ ಮೋಕ್ಷಕ್ಕೆ ಅರ್ಹನಾದನು.
ಅಜಿತನು ಅದಕ್ಕೆ ಹಿಂದಿನ ಜನ್ಮದಲ್ಲಿ ವತ್ಸಕಾವತೀ ದೇಶದಲ್ಲಿ ಸುಸೀಮಾ ನಗರದಲ್ಲಿ ವಿಮಲವಾಹನನೆಂಬ ರಾಜನಾಗಿದ್ದನು. ಅವನು ಒಂದು ದಿನ ಕನ್ನಡಿಯಲ್ಲಿ ಕೆನ್ನೆಯ ಮೇಲೆ ನರೆತ ಕೂದಲನ್ನು ಕಂಡನು. ದೇಹ ದುಃಖಕ್ಕೆ ಕಾರಣ ಎಂದು ತೋರಿತು. ವೈರಾಗ್ಯ ಹುಟ್ಟಿತು. ಸಂಸಾರ ನಿಸ್ಸಾರವೆಂದು ಕಂಡಿತು : ’ ಕಡೆಯಿಲ್ಲದ ಸಂಸಾರದ ಕಡೆಯನ್ನು ಕಾಣಬೇಕೆಂಬ ಇಷ್ಟ ನಿನಗಿದ್ದರೆ ಮೋಕ್ಷದ ಕಡೆಗೆ ಮನಸ್ಸು ಕೊಡು.ಎಲೆ ಜೀವ,ನಿನ್ನ ಕಾಲುಹಿಡಿದು ಕೇಳಿಕೊಳ್ಳತ್ತೇನೆ.ನನ್ನ ಮಾತು ಕೇಳು : ಧರ್ಮವನ್ನು ಬಿಗಿಯಾಗಿ ಹಿಡಿದುಕೋ” ಎಂದು ಬದುಕನ್ನು ಮೋಕ್ಷದ ಕಡೆಗೆ ತಿರುಸಿದನು. ವೈರಾಗ್ಯ ಹೊಂದಿದ ವಿಮಲವಾಹನನು ತನ್ನಮಗನಿಗೆ ಪಟ್ಟಕಟ್ಟ ತಪಸ್ಸಿಗಾಗಿ ಕಾಡಿಗಡ ತೆರಳಿದನು. ಜ್ಯೆನದೀಕ್ಷೆಯನ್ನು ಪಡೆದು, ತಪಸ್ಸು ಮಾಡಿ, ಧ್ಯಾನ ಮಾಡುತ್ತ ಮರಣ ಹೊಂದಿದನು. ಮರುಜನ್ಮದಲ್ಲಿ, ಸ್ವರ್ಗದಲ್ಲಿ ಅಹಮಿಂದ್ರನೆಂಬ ದೇವನಾಗಿ ಹಿಟ್ಟಿದನು ಬೇಕಾದಷ್ಟು ಸ್ವರ್ಗಸುಖವನ್ನು ಅನುಭವಿಸಿದನು. ಬಹುದೀರ್ಘಕಾಲದ ಸ್ವರ್ಗವಸದ ಆಯುಷ್ಯ ಕೊಡ ತೀರಿಹೋಗುವ ಸಮಯ ಬಂತು.ತನು ತೀರ್ಥಂಕರನಾಗಿ ಹುಟ್ಟವ ಸೂಚನೆಗಳು ಕಂಡು ಬಂದು, ಅಜನ್ಮವೆತ್ತಲು ಸಿದ್ದನಾದನು.
ಎಲ್ಲ ತೀರ್ಥಂಕರ ಪುರಾಣಗಳಲ್ಲಿರುವಂತೆ ಇಲ್ಲಿಯೂ ಪಂಚಕಲ್ಯಾಣಗಳ ವರ್ಣನೆ ಬರುತ್ತದೆ. ಪಂಚಕಲ್ಯಾಣ ಎಂದರೆ, ತೀರ್ಥಂಕರನ ಜೀವನದ ಐದು ಮುಖ್ಯ ಮಂಗಳಕರವಾದ ಸಂಗತಿಗಳು.ಇವು ಹೀಗಿವೆ : ಪ್ರತಿಯೆಬ್ಬ ತೀರ್ಥಂಕರನೂ ಭೂಲೋಕದಲ್ಲಿ ಅವತರಿಸುವುದಕ್ಕೆ ಮುಂಚೆ ದೇವತೆಯಾಗಿರುತ್ತಾನೆ. ಅವನು ಸ್ವರ್ಗವನ್ನು ಬಿಟ್ಟು, ತಾನು ಹುಟ್ಟಲಿರುವ ತಾಯಿಯ ಬಸಿರನ್ನು ಪ್ರವೇಶಿಸುವುದು ಮೊದಲನೆಯ (೧) ಗರ್ಭಾವತರಣ ಕಲ್ಯಾಣ. ಜಿನಶಿಶು ಹಿಟ್ಟಿದ ಮೇಲೆ, ಇಂದ್ರನು ತಾಯಿಗೆ ಗೊತ್ತಾಗದಂತೆ ಜಿನಶಿಶುವನ್ನು ತರಿಸಿಕೊಂಡು ಶಿಶುವಿಗೆ ಹಾಲಿನ ಅಭಿಷೇಕ ಮಾಡಿ, ನಾಮಕರಣ ಮಾಡುವನು. ಇದು (೨)ಜನ್ಮಾಭಿಷೇಕ ಕಲ್ಯಾಣ.ತೀರ್ಥಂಕರನಾಗುವವನು ಸಂಸಾರ ಸುಖವನ್ನು ಅನುಭವಿಸಿದ ಮೇಲೆ ವೈರಾಗ್ಯ ಹೊಂದಿ ತಪಸ್ಸು ಮಾಡಲು ವನಕ್ಕೆ ತೆರಿಳುವುದು, (೩) ಪರಿನಿಷ್ಕ್ರಮಣ ಕಲ್ಯಾಣ (ನಿಷ್ಕ್ರಮಣ ಎಂದರೆ ಮನೆ ಬಿಟ್ಟು ಹೊರಟು ಹೋಗುವುದು). ಅನಂತರ ಅವನು ಕಾಡಿನಲ್ಲಿ ಉಗ್ರವಾದ ತಪಸ್ಸು ಮಾಡಿ, ಹಿಂದಿನ ಜನ್ಮದ ಕರ್ಮಗಳನ್ನು ನಾಶಮಾಡಿಕೊಳ್ಳುವನು. ಅನಂತರ, ಭಿಕ್ಷೆಯೆತ್ತುತ್ತಾ ಊರೂರು ಅಲೆಯುವನು.ಶುಭಘಳಿಗೆಯಲ್ಲಿ ಅವನಿಗೆ ’ಕೇವಲ  ಜ್ಞಾನ’ ಹುಟ್ಟವುದು. ಇದು (೪) ಕೇವಲ ಜ್ಞಾನೋತ್ಪತ್ತಿ ಕಲ್ಯಾಣ. ಕೇಲಜ್ಞಾನವನ್ನು ಪಡೆದ ತೀರ್ಥಂಕರನಾಗುವನು. ಪಡೆದ ತೀಥಂಕರನಾಗುವನು. ಇವನ ಧರ್ಮೋಪದೇಶ ಮಾಡಲು ದೇವೇಂದ್ರನು ಒಂದು ಭವ್ಯವಾದ ಮಂಟಪವನ್ನು ನಿರ್ಮಿಸಿಕೊಡುವನು. ಇದಕ್ಕೆ ಸಮವಸರಣ ಮಂಟಪ ಎಂದು ಹೆಸರು.ಇಲ್ಲಿ ತೀರ್ಥಂಕರನ ಉಪದೇಶವನ್ನು ದೇವತೆ, ಮನುಷ್ಯರು, ಸಕಲ ಪ್ರಾಣಿಗಳೆಲ್ಲರೂ ಕೇಳುವರು.ಅಜಿತ ತೀರ್ಥಂಕರನು ಬಹು ದೀರ್ಘಕಾಲ ಈ ರೀತಿ ಉಪದೇಶಮಾಡಿ,ತನ್ನ ಆಯುಷ್ಯದಲ್ಲಿ ಒಂದು ತಿಂಗಳು ಉಳಿದಿರುವಾಗ, ’ಶುಕ್ಲಧ್ಯಾನ ’ ಎಂಬ ಶ್ರೇಷ್ಠ ರೀತಿಯ ಧ್ಯಾನದಿಂದ ಅತ್ಯಂತ ಸೂಕ್ಷ್ಮವಾದ ಕರ್ಮಗಳನ್ನು ನಾಶಮಾಡಿಕೊಂಡು ಮುಕ್ತಿಯನ್ನು ಪಡೆಯುವನು. ಇದೇ ಕಡೆಯ (೫) ಪರಿನಿರ್ವಾಣ ಕಲ್ಯಾಣ. ರನ್ನನು ಈ ಪಂಚಕಲ್ಯಾಣಗಳನ್ನು ತನ್ನದೇ ಆದ ಘನವಾದ ಶೈಲಿಯಲ್ಲಿ ಹೇಳಿಕೊಂಡು ಹೋಗಿದ್ದಾನೆ. ಇದು ಪುರಾಣವಾದ್ದರಿಂದ, ಶಾಸ್ತ್ರ ವಿಚಾರ ತುಂಬಿಹೋಗಿದೆ; ಸಾಲದುದಕ್ಕೆ, ಅಜಿತನ ಕಥೆಯಲ್ಲಿ ಜನ್ಮಾಂತರಗಳ ಸಂಖ್ಯೆ ಕಡಿಮೆ; ಸ್ವಾರಸ್ಯವಾದ ಸನ್ನಿವೇಶಗಳೂ ಕಡಿಮೆ. ಆದ್ದರಿಂದ ರನ್ನನ ಕವಿತಾಶಕ್ತಿ ಒಂದೇ ಸಮನಾಗಿ ಇಲ್ಲಿ ಕಾಣಿಸಿಕೊಳ್ಳಲು ಅವಕಾಶವಿಲ್ಲ. ಆದರೂ, ಇಲ್ಲಿ ಕನ್ನಡ ಭಾಷೆ ತಿಳಿಯಾಗದೆ. ಹೇಳಿದ ಅರ್ಥವನ್ನು ಒತ್ತಿ ಒತ್ತಿ ಮನಸ್ಸಗೆ ಹಿಡಿಸುವಂತೆ ಮಾಡುತ್ತಾನೆ.
ಅಜಿತನು ತಪಸ್ಸಿಗೆ ಕುಳಿತಾಗ ಅವನ ಶಾಂತ ಮೂರ್ತಿಯನ್ನು ರನ್ನ ಹೀಗೆ ಕಡೆದಿಟ್ಟದ್ದಾನೆ ;
ವದನಂ ಸ್ತಿಮಿತಾಕ್ಷಂ, ಶ್ಲಿ –
ಷ್ಟದಂತಂ, ಅಷ್ಟಾಂಗಪಾತಂ, ಅಭ್ರೂಭಂಗಾ –
ಸ್ವದಂ,ಎಸೆದುದು ಯೋಗ ನಿಯೋ –
ಗದೊಳಜಿತ ಮಹಾಮುನಿಂದ್ರ ವೃಂದಾರಕನಾ.
ಅಜಿತ ಮಹಾಮುನಿ ಯೋಗದಲ್ಲಿ ಕುಳಿತಿದ್ದಾಗ ಅವನ ಮುಖದಲ್ಲಿ ಕಣ್ಣು ಏನನ್ನೂ ನೋಡದೆ ಇದ್ದವು; ಹಲ್ಲು ಕೂಡಿಕೊಂಡಿದ್ದುವು; ಹುಬ್ಬು ಅಲುಗಡುತ್ತಿರ ಲಿಲ್ಲ ; ಮುಖ ಎಂಟು ಬಗೆಯ ಧ್ಯಾನದಲ್ಲಿ ನೆಲೆಸಿತ್ತು.
ಆದಿ ಪುರಾಣದಲ್ಲಿ ವೃಷಭನ ಕಥೆಯೊಂದಿಗೆ ಆಕಾಲದ ಚಕ್ರವರ್ತಿಯಾಗಿದ್ದ ಭರತನ ಕಥೆ ಬರುವಂತೆ, ಅಜಿತನ ಕಥೆಯಲ್ಲಿ ಸಗರಚಕ್ರವರ್ತಿಯ ಕಥೆ ಬರುತ್ತದೆ.
ಸಗರನಿಗೆ ಅರವತ್ತು ಸಾವಿರ ಮಂದಿ ಪುತ್ರರು ! ಇವರಲ್ಲರೂ ಸಾಯುವಂತೆ ಒಂದು ಸನ್ನಿವೇಶ ಸೃಷ್ಟಿಯಾಗಿದೆ. ಅವರು ನಿಜವಾಗಿ ಸತ್ತಿರುವುದಿಲ್ಲ. ಯಾರಿಗೂ ಸಾವು ತಪ್ಪಿದ್ದಲ್ಲ. ಚಕ್ರವರ್ತಿಯಾದರೂ ಭೂಮಂಡಲವನ್ನು ಗೆಲ್ಲಬಹುದು, ಸಾವನ್ನು ಗೆದ್ದು ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸತ್ಯ ಸಗರನಿಗೆ ಮನದಟ್ಟಾಗುತ್ತದೆ. ಅವನು ವೈರಾಗ್ಯ ಹೊಂದಿ, ಮಕ್ಕಳೊಂದಿಗೆ ಅಜಿತನಿಂದ ಧರ್ಮೋಪದೇಶವನ್ನು ಕೇಳುತ್ತಾನೆ. ಇವರೆಲ್ಲರೂ ತಪಸ್ಸುಮಾಡಿ ಮೋಕ್ಷವನ್ನು ಪಡೆಯುತ್ತಾರೆ.

‘ಸಾಹಸಭೀಮ ವಿಜಯ’ ಅಥವಾ ‘ಗದಾಯುದ್ಧ’
       ಜೈನನಾದ ರನ್ನ ವೈದಿಕಮತದ ಚಾಳುಕ್ಯ ದೊರೆಗಳ ಆಶ್ರಯವನ್ನು ಪಡೆದಮೇಲೆ  ಕಾವ್ಯ ರಚಿತವಾಯಿತು. ಎರಡನೆಯ ತೈಲಪ ಚಕ್ರವರ್ತಿಯಾಗಿದ್ದಾಗ ಯುವರಾಜ ಸತ್ಯಾಶ್ರಯ ಇರಿವಬೆಡಂಗನು ಅನೇಕ ಯುದ್ಧಗಳಲ್ಲಿ ಭಾಗವಹಿಸಿ, ಕನ್ನಡ ರಾಜ್ಯವನ್ನು ಶತ್ರುಗಳ ಆಕ್ರಮಣದಿಂದ ಉಳಿಸಿದನು. ಇದರಿಂದ, ಕನ್ನಡ ಸಾಹಿತ್ಯದ ಉಳಿವಿಗೂ ಏಳಿಗೆಗೂ ಸಹಾಯವಾಯಿತು. ರನ್ನನು ಸತ್ಯಾಶ್ರಯನ ಸಾಹಸಕಾರ್ಯಗಳಲ್ಲಿ ಮಹಾಭಾರತದ ಭೀಮನ ಸಾಹಸ ಪರಂಪರೆಯನ್ನು ಗುರುತಿಸಿದನು.ಸತ್ಯಾಶ್ರಯನು ಸಾಹಸರ್ಯಗಳಲ್ಲಿ ಮಹಾಭಾರತ ಭೀಮನ ಸಾಹಸ ಪರಂಪರೆಯನ್ನು ಗುರುತಿಸಿದನು. ಸತ್ಯಾಶ್ರಯನು ಸಾಹಸಭೀಮನಾಗಿ ವಂಶಾವಳಿಯನ್ನೂ ಸಾಹಸ ವಿಜಯಗಳನ್ನೂ ವರ್ಣಿಸಿ, ಕಾವ್ಯ ಬರೆಯುವುದರಲ್ಲಿ ತನ್ನ ಗುರಿ ಏನು ಎನ್ನುವುದನ್ನು ತಿಳಿಸಿದ್ದಾನೆ:
“ಪೃಥ್ವೀವಲ್ಲಭನಾದ ಸತ್ಯಾಶ್ರಯದೇವನೆ ಕಥಾ ನಾಯಕ. ಅವನನ್ನು ಭೀಮನೊಂದಿಗೆ ಹೋಲಿಸಿ ಮಹಾಕವಿ ರನ್ನನು ಈ ಗಧಾಯುದ್ಧವನ್ನು ಹೇಳಿದನು. ಚಕ್ರವರ್ತಿ ಸಾಹಸಭೀಮನೇ ಕಾವ್ಯಕ್ಕೆ ಒಡೆಯ.”
“ಕೌರವರ ಮೇಲೆ ಬದ್ಧವೈರವನ್ನು ಹೊಂದಿದ ಪ್ರಸಿದ್ಧರಾದ ಕುಂತೀಪುತ್ರರಲ್ಲಿ. ಹಗೆ ತೀರಿಸಿಕೊಳ್ಳವ ವಿಷಯದಲ್ಲಿ, ಭೀಮ ಮೊದಲು ಬರತಕ್ಕವನು. ಪಾಂಡವರ ಮೇಲೆ ಬದ್ಧ ವೈರ ಸಾಧಿಸುವ ವಿಷಯದಲ್ಲಿ ದುರ್ಯೋಧನ ಮೊದಲಿಗೆ. ಧರ್ಮಯುದ್ಧದಲ್ಲಿ ಭೀಮನು ಅವನನ್ನು ಕೊಂದನು.ಆದರಿಂದ ಭೀಮ ಜಯೋದ್ಧಾಮ. ಅವರಿಬ್ಬರ ಗದಾಯುದ್ಧವನ್ನು ರನ್ನ ಹೇಳಿದ್ದಾನೆ”.
“ಒಳಹೊಕ್ಕು ನೋಡಿದರೆ ಭಾರತದೊಳಗಣ ಕಥೆಯೆಲ್ಲವೂ ಗದಾಯುದ್ಧದಲ್ಲಿ ಒಳಗೊಂಡಿದೆ” ಎಂದು ಹೇಳಲು ಸಾಧ್ಯವಾಗುವಂತೆ ಸಿಂಹಾವಲೋಕನಕ್ರಮದಿಂದ ರನ್ನ ಕಥೆ ಹೇಳಿದ್ದಾನೆ ಕಾಡಿನಲ್ಲಿ ಸುತ್ತ ಮುತ್ತ  ತನ್ನ ಆಹಾರದ ಪ್ರಾಣಿಗಳು ಎಲ್ಲಿವೆ ಎಂದು ಸಿಂಹ ಈ ಕೊನೆಯಿಂದ ಆ ಕೊನೆಯವರೆಗೆ ಮುಖ ಹೊರಳಿಸಿ, ಹುಡುಕುನೋಟವನ್ನು ಬೀರುವುದಂತೆ, ಆ ರೀತಿಯಲ್ಲಿ ಭಾರತದ ಆದಿಯಿಂದ ಅಂತ್ಯದವರೆಗೆ ರನ್ನನು ತನ್ನ ದೃಷ್ಟಿಯನ್ನು ಹಾಯಿಸಿ, ಭಾರತದ ಮುಖ್ಯ ಕಥಾಪ್ರಸಂಗಗಳೆಲ್ಲವೂ ಓದುಗರ ನೆನಪಿಗೆ ಬರುವಂತೆ ಅವುಗಳನ್ನು ಬಲು ಚಮತ್ಕಾರದಿಂದ ಪಾತ್ರಗಳ ಬಾಯಿಂದ ಹೇಳಿಸಿದ್ದಾನೆ.
ಗದಾಯುದ್ಧದಲ್ಲಿ  ಅಜಿತಪುರಾಣದಲ್ಲಿರುವಂತೆ ಕಥೆಗೆ ಬೇಕಿಲ್ಲದ ವರ್ಣನೆಗಳ ಹಾವಳಿಯಿಲ್ಲ. ಓದುಗರು ಮತ ವಿಚಾರಶಾಸ್ತ್ರದ ಮರುಭೂಮಿಯಲ್ಲಿ ಪ್ರಯಾಣ ಮಾಡಿ ಬಳಲಬೇಕಾಗಿಲ್ಲ. ಮೊದಲಿಂದ ಕಡೆಯವರೆಗೆ ವೀರ, ಕರುಣ, ರೌದ್ರ, ಅದ್ಭುತ ರಸಗಳ ಪ್ರವಾಹದಲ್ಲಿ ರನ್ನ ನಮ್ಮನ್ನು ತೇಲಿಸಿಕೊಂಡು ಹೋಗುತ್ತಾನೆ. ’ರಸಘಟ್ಟ’ ಎಂಬ ಮಾತು ಅಜಿತಪುರಾಣಕ್ಕಿಂತ ಹೆಚ್ಚಾಗಿ ಈ ಕಾವ್ಯಕ್ಕೆ ಸಲ್ಲುತ್ತದೆ.
ಗದಾಯುದ್ಧವನ್ನು ಓದುತ್ತಿದ್ದರೆ ಕಾವ್ಯವನ್ನು ಓದಿದಂತೆ ನಮಗೆ ಅನ್ನಿಸುವುದೇ ಇಲ್ಲ. ನಾಟಕವನ್ನು ನೋಡಿದಂತೆ ಭಾಸವಾಗುತ್ತದೆ. ಕವಿ ಹಿಂದೆ ನಿಂತು, ಪಾತ್ರಗಳ ಸಂಭಾಷಣೆಗಳ ಮೂಲಕ ಕಥೆ ಹೇಳುತ್ತಾನೆ.
ಈಗ ’ಗದಾಯುದ್ಧ ನಾಟಕ ’ ದ ಕೆಲವು ದೃಶ್ಯಗಳನ್ನು ನೋಡೋಣ.
ಗದಾಯುದ್ಧದ ಕಥೆ ಭೀಮ ದ್ರೌಪದಿಯರ ಸಂಭಾಷಣೆಯಿಂದ ಮೊದಲಾಗುತ್ತದೆ ಒಬ್ಬ ವೃದ್ಧ ಕಂಚುಕಿ ಮತ್ತು ಕೆಳದಿಯೊಂದಿಗೆ ದ್ರೌಪದಿ ಭೀಮನಲ್ಲಿಗೆ ಬಂದು ದು:ಖವನ್ನು ತೋಡಿಕೊಳ್ಳುತ್ತಾಳೆ.
ದ್ರೌಪದಿ -ಕೃಷ್ಣನು ಸಂಧಿ ಮಾಡುವುದಕ್ಕೆ ಯತ್ನಿಸಿದ. ನನ್ನ ನಿನ್ನ ಪುಣ್ಯದಿಂದ ಅದು ಕೈಗೂಡಲೊಲ್ಲ. ಸುಯೋಧನ (ದುರ್ಯೋಧನ)ನೊಬ್ಬನು ಉಳಿದುಕೊಂಡು ಶತ್ರು ಸೈನ್ಯವೆಲ್ಲ ನಾಶವಾಗಿದೆ. ಭೀಷ್ಮ ಧೃತರಾಷ್ಟ್ರರು ಇದ್ದಾರೆ. ಅವರು ಹೇಳಿದರೆ, ನಮ್ಮ ರಸನು ಅವರ ಮಾತು ಕೇಳಿ ಎಲ್ಲಿ ಸುಯೋಧನನೊಂದಿಗೆ ಸಂಧಿಮಾಡಿಕೊಂಡು ಬಿಡುತ್ತಾನೋ ಎಂದು ನನಗೆ ವ್ಯಥೆಯಾಗಿದೆ. ಕೌರವರಿಗೆ ಯಮನಂತಿರುವ ನೀನೆ ನನ್ನ ಸಂಶಯವನ್ನು ಕಳೆಯಬೇಕು. ಧರ್ಮಸುತನಿಂದ ಸಂಧಿಯಾದರೆ, ನಿಮಗೆ ಮತ್ತೆ ವನವಾಸವೇ ಗತಿ ನಾನು ಅಗ್ನಿಯಲ್ಲಿ ಹುಟ್ಟಿದೆ; ಅಗ್ನಿಗೆ ಬಿದ್ದು ಸಾಯುತ್ತೇನೆ. ದುಶ್ಯಾಸನನ ರಕ್ತವನ್ನು ಕುಡಿದಾಗ, ಆ ರಕ್ತ ನಿನ್ನ ಕೋಪವನ್ನು ತಣ್ಣಗೆ ಮಾಡಿತೇನು?
(ದ್ರೌಪದಿ ಅಗ್ನಿಯಲ್ಲಿ ಹುಟ್ಟಿದವಳು  ಎಂದು ನಂಬಿಕೆ  ತಮಗೆ ಎಲ್ಲ ಬಗೆಗಳಲ್ಲಿ ಅನ್ಯಾಯ ಮಾಡಿದ ದುರ್ಯೋಧನನಿಗೆ ಶಿಕ್ಷೆಯಾಗಿದೆ ಹೋದರೆ ತಾನು ಬೆಂಕಿಯಲ್ಲಿ ಬಿದ್ದು ಪ್ರಾಣಬಿಡುತ್ತೇನೆಂದು ದ್ರೌಪದಿಯ ಸೂಚನೆ).
ಕ್ಷತ್ರಿಯನಿಗೆ ಕೋಪ ಬರದಿದ್ದರೆ, ಉತ್ಸಾಹ ಹುಟ್ಟುವುದಿಲ್ಲ; ಉತ್ಸಾಹ ಹುಟ್ಟಿದೆ ವೀರ ಉಕ್ಕುವುದಿಲ್ಲ. ಕೌರವರಿಂದ ಮಾನಭಂಗ ಹೊಂದಿದ್ದ ದ್ರೌಪದಿಯ ಮನಸ್ಸು ಭೀಮನಿಗೆ ಅರ್ಥವಾಯಿತು. ಹಿಂದೆ ಅಣ್ಣನ ಸತ್ಯವಚನಕ್ಕೆ ಕಟ್ಟುಬಿದ್ದು ತಾನೂ ಅರ್ಜುನನೂ ಸುಮ್ಮನಿದ್ದುದಾಯಿತು. ಇನ್ನು ಸುಮ್ಮನಿರಲು ಸಾಧ್ಯವಿಲ್ಲ. ಪಶ್ಚಾತ್ತಾಪಪಟ್ಟು ನುಡಿದ.
’ದುಶ್ಯಾಸನನು ಎಳೆದಾಡಿದ ನಿನ್ನ ಕೂದಲರಾಶಿ ಇಳಿದುಬಿದ್ದಿರುವಾಗ, ನಿನ್ನ ಮುಖದಲ್ಲಿ ಕಣ್ಣೀರು ಇಳಿಯುತ್ತಿರುವಾಗ, ಈ ಭೀಮನ ಕೋಪ ಇಳಿದು ಹೋಗುತ್ತದೆಯೇನು? ನೀನು ಅಗ್ನಿಪುತ್ರಿ; ನಾನು ವಾಯುಪುತ್ರ, ನಾನಿರುವವರೆಗೆ ಸಂಧಿಯ ಮಾತೆಲ್ಲಿ? ಕಿಚ್ಚೂ ಗಾಳಿಯೂ ಜೊಗೆಗೂಡಿದರೆ ಹಗೆಯನ್ನು ಸುಟ್ಟು ಹಾಕದೇ ಇದ್ದೀತೆ? ಕೌರವರ ಮಕ್ಕಳನ್ನು ಕೊಂದಿದ್ದೇನೆ. ಕೌರವನ ತಮ್ಮನ (ದುಶ್ಯಾಸನ) ರಕ್ತವನ್ನು ಕುಡಿದಿದ್ದೇನೆ. ಎರಡು ಪ್ರತಿಜ್ಞೆಗಳನ್ನು ತೀರಿಸಿ ಆಯ್ತು. ಹಗೆಯನ್ನು ತೀರಿಸದೆ ಇರುವೆನೆ?
ಕೌರವನ ತೊಡೆಗಳನ್ನು ಮುರಿದು ಹಾಕುತ್ತೇನೆ. ಅವನ ಕಿರೀಟವನ್ನು ಒದೆಯುತ್ತೇನೆ. ಬಿಚ್ಚಿ ಕೆದರಿದ ನಿನ್ನ ಮುಡಿಯನ್ನು ಕಟ್ಟುತ್ತೇನೆ. ಅಣ್ಣನ ಮಾತನ್ನೂ ಭೀಷ್ಮರ ಮಾತನ್ನೂ ತಳ್ಳಿಹಾಕುತ್ತೇನೆ. ಸಂಧಿಗೆ ಅವಕಾಶ ಕೊಡುವುದಿಲ್ಲ.”
ರನ್ನ ಗದಾಯುದ್ಧವನ್ನು ಮೊದಲು ನಾಟಕವಾಗಿ ಬರೆದು, ಆಮೇಲೆ ಅದನ್ನು ಕಾವ್ಯವಾಗಿ ತಿರುಗಿಸಿದನೆಂದು ಕಾಣುತ್ತದೆ. ಈ ಸಂಭಾಷಣೆ ಮುಗಿದ ಮೇಲೆ ವಿದೂಷಕನ ಮಾತೂ ಬರುತ್ತದೆ. ಕಂಚುಕಿಯಂತೆ, ವಿದುಷಕ ನಾಟಕಗಳಲ್ಲಿ ಮಾತ್ರ ಬರುವ ಪಾತ್ರ, ಹಾಸ್ಯದ ಪಾತ್ರ ಅವನು ಹೇಳಿದ.
“ಇನ್ನೆಲ್ಲಿಯ ಧೃತರಾಷ್ಟ್ರ! ಎಲ್ಲಿಯ ಭೀಷ್ಮ! ಎಲ್ಲಿಯ ಸಂಧಿಕಾರ್ಯ! ನಮ್ಮ ಭೀಮ ನೂರುಮಂದಿ ಕೌರವರನ್ನು ಕೊಂದಿಕ್ಕಿದ. ಉಳಿದಿರುವ ದುರ್ಯೋಧನನೊಬ್ಬನನ್ನು ಕೊಲ್ಲುವುದೂ ಗೆಲ್ಲುವುದೂ ನಮ್ಮ ಅರಸಂಗೆ ಅದೇನು ಮಹಾ!” (ಎಂದು ದ್ರೌಪದಿಯ ಮುಖವನ್ನು ನೋಡಿ) “ಅದಕ್ಕೆ ಯೋಚಿಸಬೇಡಮ್ಮಾ! ನೀನು ಸಾಮಾನ್ಯಳೆ? ಕುರುಕುಲವನ್ನು ನುಂಗಿನೀರು ಕುಡಿದೆ!’ ಕುರುಪತಿಯನ್ನೂ ನುಂಗಲಿದ್ದೀಯೆ. ನಮ್ಮ ಅರಸ ಎರಡನೆ (ಯ) ಹಿಡಿಂಬೆಯಾದ ನಿನ್ನನ್ನು ಎಲ್ಲಿ ತಂದನೋ ಕಾಣೆ!”
ಹೀಗೆ, ಅಳುತ್ತ ಬಂದ ತನ್ನನ್ನು ನಗುವಂತೆ ಮಾಡಿದ ವಿದೂಷಕನ ಪರಿಹಾಸದಿಂದ ದ್ರೌಪದಿ ಸಂತೋಷಗೊಂಡು ಹಿಂದಿರುಗುತ್ತಾಳೆ.
ಮುಂದಿನ ದೃಶ್ಯ ರಣರಂಗದಲ್ಲಿ, ಭೀಷ್ಮರು ಬಾಣಗಳ ಹಾಸಿನಮೇಲೆ ಮಲಗಿದ್ದಾರೆ. ಗುರುದೋಣ, ಮಯ್ದುನ ಜಯದ್ರಥ, ಪ್ರೀತಿಯ ತಮ್ಮ ದುಶ್ಯಾಸನ, ನಚ್ಚಿನ ಬಂಟ ಕರ್ಣ, (ಪಾಂಡವರ) ಸೋದರಮಾವ ಶಲ್ಯ ಇವರೆಲ್ಲರ ಮರಣದಿಂದ ದುಃಖಿತನಾದ ದುರ್ಯೋಧನ, ಅಭಿಮಾನಧನನಾದ ಮಹಾಶೂರ, ಗದೆಯನ್ನು ಹೆಗಲಿಗೇರಿಸಿಕೊಂಡು, ಸಂಜಯನೊಂದಿಗೆ ನಡೆದು ಬರುತ್ತಿದ್ದಾನೆ. ಅಶ್ವತ್ಥಾಮ ದೋಣರು ತಮ್ಮ ಅನ್ನದ ಋಣವನ್ನು ಸರಿಯಾಗಿ ಯುದ್ಧಮಾಡಿ ತೀರಿಸಲಿಲ್ಲ. ಎಂದು ಅವರ ಮೇಲೆ ದುರ್ಯೋಧನನಿಗೆ ಅಪಾರ ಕೋಪ.ಸಂಜಯನು ಅವರ ಪರವಾಗಿ ನುಡಿಯುತ್ತಾನೆ; ಶೂರರಾದ ಪಾಂಡವರ ಮುಂದೆ ಅವರ ಕೈ ನಡೆಯಲಿಲ್ಲ ಎಂದು ಅವನವಾದ. ಸಂಜಯನ ಮಾತು ದುರ್ಯೋಧನನನ್ನು ಇನ್ನಷ್ಟು ಕೆರಳಿಸುತ್ತದೆ. ಪಾಂಡವರನ್ನೂ, “ಅರ್ಜುನನಿಗೆ ಸಾರಿಥಿಯಾಗಿ ಹೊನ್ನೊಂದನೆಯ ’ಸೂತಾವತಾರ’ ಎತ್ತಿದ.” ಎಂದು ಕೃಷ್ಣನನ್ನೂ ತೆಗಳಿ ಮಾತನಾಡುತ್ತಾನೆ. “ನಿನಗೆ ದೈವ ಅನುಕೂಲವಾಗಿಲ್ಲ, ಪಾಂಡವರಿಗೆ ದೈವ ಸಹಾಯವಿದೆ, ಹೆಚ್ಚು ವಿವರಿಸಿ ಪ್ರಯೋಜನವಿಲ್ಲ?” ಎಂದ ಸಂಜಯನ ನುಡಿಗೆ ದುರ್ಯೋಧನ ಬೇಸರಗೊಳ್ಳುತ್ತಾನೆ; ಪಾಂಡವರೊಂದಿಗೆ ಒಬ್ಬೊಂಟಿಗನಾಗಿ ಕಾದಿ ಪೌರಷವನ್ನು ಮೆರೆಯುತ್ತೇನೆ ಎಂದು ತನ್ನ ಹಟವನ್ನೇ ಮುಂದೆ ಮಾಡುತ್ತಾನೆ.
ಸಂಜಯ ಸ್ವಾಮಿಭಕ್ತ; ಈ ಹಟಮಾರಿಯನ್ನು ತಿದ್ದುವುದಾಗದು ಎಂದು ಯೋಚಿಸಿ. “ಬಲರಾಮ, ಅಶ್ವತ್ಥಾಮ, ಕೃಪ, ಕೃತವರ್ಮ, ಇವರಲ್ಲಿ ಒಬ್ಬರಿಗೆ  ಸೇನಾಪತಿ ಪಟ್ಟವನ್ನು ಕಟ್ಟು, ಹಗೆ ತೀರಿಸಿಕೋ” ಎಂದು ಸಲಹೆ ಮಾಡುತ್ತಾನೆ. ಬಲರಾಮ ತೀರ್ಥಯಾತ್ರೆಯಲ್ಲಿದ್ದಾನೆ. ಉಳಿದ ಮೂವರನ್ನು ದುರ್ಯೋಧನ ನಂಬಲಾರ, ಹಗೆ ತೀರುವುದಿದ್ದರೆ ಕರ್ಣನಿಂದ, ದುಶ್ಯಾಸನನಿಮದ ತೀರಬೇಕಿತ್ತು. ತನ್ನಿಂದ ತೀರಿತು. ಬೇರೆಯವರಿಂದ ಸಾಧ್ಯವಿಲ್ಲ. ಇದು ಅವನ ದೃಢವಾದ ಅಭಿಪ್ರಾಯ;
ಈ ವೇಳೆಗೆ, ಮಗನ ಸ್ಥಿತಿಯನ್ನು ಚಾರರಿಂದ ತಿಳಿದ ಧೃತರಾಷ್ಟ್ರ ಗಾಂಧಾರಿಯರು ಮಗನನ್ನು ಸಮಾಧಾನ ಪಡಿಸುವುದಕ್ಕಾಗಿ ರಣರಂಗಕ್ಕೆ ಬರುತ್ತಾರೆ. ಮಡಿದು ಮಲಗಿದ್ದ ದುಶ್ಯಾಸನನನ್ನು ಕಂಡು ಅವರಿಗಾದ ದುಃಖ ಅಷ್ಟಿಷ್ಟಲ್ಲ. ದುರ್ಯೋಧನನೊಬ್ಬನಾದರೂ ಉಳಿದಿರುವನಲ್ಲಾ ಎಂಬುದೇ ಅವರ ಸಮಾಧಾನ. “ಸಂಧಿಗಾಗಿ ಸಂಜಯನನ್ನುಅಟ್ಟುತ್ತೇನೆ, ಸಂಧಿ ಮಾಡಿಕೋ” ಎಂದು ಕರುಡರಾಜ ಧೃತರಾಷ್ಟ್ರನು ಮಗನ ಕಾಲು ಹಿಡಿದು ಬೇಡಿಕೊಂಡರೂ ದುರ್ಯೋಧನನ ಹಟ ಸಡಿಲವಾಗಲಿಲ್ಲ.
“ಅರ್ಜುನನನ್ನೂ ಭೀಮನನ್ನೂ ಕೊಂದು, ಕರ್ಣ ದುಶ್ಯಾಸನರ ಸಾವಿಗೆ ಸೇಡು ತೀರಿಸಿಕೊಂಡು, ಬಳಿಕ ಸಂಧಿ ಮಾಡಿಕೊಳ್ಳುತ್ತೇನೆ, ಧರ್ಮಪುತ್ರನೊಂದಿಗೆ ನಿಮ್ಮ ಸೇವೆ ಮಾಡುತ್ತೇನೆ” ಎಂದು ದುರ್ಯೋಧನ ತಂದೆಗೆ ಉತ್ತರಕೊಡುತ್ತಾನೆ. ’ಹೋಗಲಿ, ಭೀಷ್ಮರ ಸಲಹೆ ಕೇಳಿ ಮುಂದಿನ ಕಾರ್ಯಮಾಡು”, ಎಂದ ತಂದೆಯ ಮಾತಿಗೆ ಒಪ್ಪಿ, ಗದೆಯನ್ನು ಹೊತ್ತು ಭೀಷ್ಮರನ್ನು ಕಾಣುವುದಕ್ಕಾಗಿ ಯುದ್ಧಭೂಮಿಯಲ್ಲಿ ನಡೆದು ಹೋಗುತ್ತಾನೆ.
ಯುದ್ಧ ಭೂಮಿಯಲ್ಲಿ ಭಾರಿ ಹೆಣಗಳ ರಾಶಿ, ಮುರಿದು ಬಿದ್ದ ಆಯುಧಗಳು ಇವನ್ನೆಲ್ಲಾ ಮೆಟ್ಟಿ ಮೆಲ್ಲನೆ ನಡೆದು ಹೋಗುತ್ತಿದ್ದಾನೆ ಕುರುಪತಿ. ಚಕ್ರವರ್ತಿಯಾಗಿದ್ದವನು ಬರಿಗಾಲಿನಲ್ಲಿ ನಡೆಯುವುದನ್ನು ಕಂಡು ಸಂಜಯನಿಗೆ ದುಃಖ. ಕೌರವ ಅವನನ್ನು ಸಂತೈಸಿ, ಧೀರನಾಗಿ ನಡೆದು ಬರುತ್ತಿರುವಾಗ ಹೆಣಗಳನ್ನು ತಿನ್ನುತ್ತಿರುವ ಮರುಳುಗಳು ಕಾಣಿಸುತ್ತವೆ. (ಮರುಳುಗಲು ಯುದ್ಧ ಭೂಮಿಯಲ್ಲಿ ವಾಸಿಸುವ ಪಿಶಾಚಗಳು.) ಒಂದು ಹುಲುಮರುಳು ದುರ್ಯೋಧನನನ್ನು ಹಂಗಿಸುತ್ತದೆ.
“ಗುರು ದ್ರೋಣರ ರಕ್ತ ಕುಡಿಯೋಣವೆಂದರೆ, ಅವನು ಬ್ರಾಹ್ಮಣ. ನಿನ್ನ ತಮ್ಮ ದುಶ್ಯಾಸನನ ನೆತ್ತರು ಕುಡಿಯೋಣವೆಂದರೆ, ಭೀಮನೇ ಹೀರಿಬಿಟ್ಟಿದ್ದಾನೆ; ಭೀಷ್ಮನ ನೆತ್ತರು ಕುಡಿಯೋಣವೆಂದರೆ, ಅವನು ಇನ್ನೂ ಬದುಕಿದ್ದಾನೆ. ಕುರುರಾಜ, ನಿನ್ನ ನೆತ್ತರನ್ನು ಸವಿನೋಡಲು ಬಯಸಿ ಉಬ್ಬಿಹೋಗಿದ್ದೇನೆ.”
ಮರುಳು ಹೀಗೆ ಎನ್ನುತ್ತಿರುವಾಗಲೇ, ಕೌರವ ಕಾಲು ಜಾರಿ ಬೀಳುತ್ತಾನೆ. ಸಂಜಯ ಅವನನ್ನು  ಎತ್ತಿಹಿಡಿದು, “ತೊಡೆ ಮರಿಯಲಿಲ್ಲ ತಾನೆ” ಎಂದು ಕೇಳುತ್ತಾನೆ. ಆಗ ಆ ಹುಲುಮರುಳು, “ಭೀಮಕೋಪದಿಂದ ನಿನ್ನ ತೊಡೆ ಮುರಿಯದೆ ಇರುತ್ತದೆಯೆ? ಮುರಿದೇ ಮುರಿಯುತ್ತದೆ” ಎಂದು ಲೇವಡಿಮಾಡುತ್ತದೆ. ಆಗ, ಧುರ್ಯೋಧನನಿಗೆ ಹಿಂದೆ ತನ್ನಿಂದ ಅಪಮಾನಿತರಾಗಿದ್ದ ಮೈತ್ರೇಯರು ಕೊಟ್ಟ ಶಾಪದ ನೆನಪಾಗುತ್ತದೆ. ’ಮರುಳಿನ ಮಾತಿನಲ್ಲಿ ಹುರುಳೇನು?’ ಎಂದು ಕೌರವ ಉದಾಸೀನತೆಯಿಂದ ಮುನ್ನಡೆಯುತ್ತಾನೆ.
ರನ್ನ ಈ ಮರುಳಿನ ಪ್ರಸಂಗವನ್ನು ತಂದೊಡ್ಡಿ, ಬಹು ಚಮತ್ಕಾರದಿಂದ ಮುಂದಾಗುವುದನ್ನು ಸೂಚಿಸಿದ್ದಾನೆ. ಧುರ್ಯೋಧನನ ಕೋಪ ಹೆಚ್ಚುವಂತೆ ಮಾಡಿದ್ದಾನೆ. ಗದಾಯುದ್ಧ ನಡೆದೇ ತೀರುತ್ತದೆ.
ಯುದ್ಧಭೂಮಿಯಲ್ಲಿ ಕೌರವನು ತನ್ನ ಕಡೆಯವರು ಮಡಿದು ಬಿದ್ದಿರುವುದನ್ನು ನೋಡುತ್ತಾ, ಪ್ರತಿಯೊಬ್ಬ ವೀರನಿಗೂ ತನ್ನ ಕಣ್ಣೀರಿನ ಕಾಣಿಕೆಯನ್ನು ಸಲ್ಲಿಸುತ್ತಾ ಕರ್ಣನ ಬಳಿ ಬಂದಾಗ ಅವನ ಧೈರ್ಯದ ಕಟ್ಟೆ ಒಡೆದು ದುಃಖದ ಕೋಡಿ ಹರಿಯುತ್ತದೆ. ಈ ಸನ್ನಿವೇಶದಲ್ಲಿ ಕೌರವನ ಬಾಯಿಂದ ರನ್ನ ಹೇಳಿಸಿರುವ ಪದಗಳು ಕರ್ಣ ದುರ್ಯೋಧನರ ದಿವ್ಯ ಸ್ನೇಹದ ಚಿತ್ರವನ್ನು ನಮ್ಮ ಕಣ್ಣ ಮುಂದೆ ತರುತ್ತವೆ; ದುರ್ಯೋಧನನಲ್ಲಿ ನಮಗೆ ಮರುಕವುಂಟಾಗುತ್ತದೆ; ಗೌರವ ಹುಟ್ಟುತ್ತದೆ. ಕವಿ ರತ್ನನ ಆ ಪದ್ಯರತ್ನಗಳಲ್ಲಿ ಯಾವುದನ್ನು ಎತ್ತಿ ಬರೆಯುವುದು, ಯಾವುದನ್ನು ಬಿಡುವುದು? ಒಂದು ಪದ್ಯ ಸಾಲದೆ, ರನ್ನನ ಕವಿತಾ ಶಕ್ತಿಯನ್ನು – ಪರೀಕ್ಷಿಸುವುದಕ್ಕಲ್ಲ, ಅರಿಯುವುದಕ್ಕೆ?
ನೀನುಳ್ಳೊಡೆ ಉಂಟು ರಾಜ್ಯಂ,
ನೀನುಳ್ಳೊಡೆ ಪಟ್ಟುಮುಂಟು,
ಬೆಳ್ಗೊಡೆಯುಂಟಯ್;
ನೀನುಳ್ಳೊಡೆ ಉಂಟು ಪೀಳಿಗೆ;
ನೀನಿಲ್ಲದೆ ಇವೆಲ್ಲಂ ಒಳವೆ, ಅಂಗಾಧಿಪತೀ?
ನೀನು ಇದ್ದರೆ ಮಾತ್ರ ರಾಜ್ಯ, ಪಟ್ಟ, ಬಿಳಿಯ ಕೊಡೆ ಎಲ್ಲ. ನೀನಿಲ್ಲದ ಮೇಲೆ, ಇವೆಲ್ಲ ಇದ್ದರೇನು ಇಲ್ಲದಿದ್ದರೇನು? ಎಂದು ಅಂಗರಾಜ್ಯದ ರಾಜನಾಗಿದ್ದ ಕರ್ಣನ ಶವವನ್ನು ನೋಡುತ್ತಾ ಹೇಳುತ್ತಾನೆ. ನೆಲಕ್ಕಾಗಿ ಅಲ್ಲ, ಛಲಕ್ಕಾಗಿ ಯುದ್ಧಮಾಡಲು ನಿಶ್ಚಯಿಸುವನು. 


ನೀನಿಲ್ಲದೆ ಇವೆಲ್ಲಂ ಒಳವೆ, ಅಂಗಾಧಿಪತೀ?
ಬಲರಾಮ ಬರುವವರೆಗೆ ನೀನು ಕೊಳದಲ್ಲಿ ಅಡಗಿಕೊಂಡಿರು ಎಂದು ಭೀಷ್ಮರು ಧುರ್ಯೋಧನನಿಗೆ ಜನ ಮಂತ್ರವನ್ನು ಉಪದೇಶಿಸಿಸುವರು. ಕೌರವ ಹಾಗೆಯೇ ಮಾಡುವನು. ಪಾಂಡವರು ಕೌರವನನ್ನು ಹುಡುಕಿಕೊಂಡು ಬರುವರು. ಅವನು ಕೊಳದಲ್ಲಿರುವುದು ಗೊತ್ತಾಗುವುದು. ಭೀಮನ ಮೂದಲಿಕೆಯ ನುಡಿಗಳನ್ನು ಕೇಳಿ ನೀರೊಳಗಿದ್ದರೂ ಕೌರವ ಬೆವತನಂತೆ! ಅಷ್ಟು ಕೋಪ ಉಕ್ಕಿತು! ಇನ್ನು ಕೇಳಬೇಕೆ? ಅವನು ಗದಾಸಹಿತನಾಗಿ ಹೊರಕ್ಕೆ ನೆಗೆದುಬಂದ.
ಭೀಮ ದುರ್ಯೋಧನರಿಗೆ ಗದಾಯುದ್ಧ ನಡಿಯಿತು. ಗದಾಯುದ್ಧದಲ್ಲಿ ತೊಡೆಗೆ ಹೊಡೆಯಬಾರದು. ಆದರೂ, ಕೃಷ್ಣ ತೊಡೆ ತಟ್ಟಿ ಸನ್ನೆಮಾಡಿದ; ಭೀಮ ಕೌರವನ ತೊಡೆಗೇ ಹೊಡೆದ! ಕೌರವ ನೆಲಕ್ಕುರುಳಿಬಿದ್ದ. ಭೀಮ ಅವನ ಕಿರೀಟವನ್ನು ಒದೆದು. ದೌಪ್ರದಿಯ ಮುಡಿಯನ್ನು ಕಟ್ಟಿ, ತನ್ನ ಪ್ರತಿಜ್ಞೆಗಳನ್ನು ತೀರಿಸಿಕೊಂಡ. ಸಾಹಸಭೀಮ ವಿಜಯ! ಸಾಹಸಭೀಮನಿಗೆ ಪಟ್ಟಾಭಿಷೇಕ!
ಕಥಾನಾಯಕನೇನೋ ಸಾಹಸಭೀಮನೆ. ಆದರೆ, ಈ ಕೃತಿ ರತ್ನದಲ್ಲಿ ನಮ್ಮ ಮೆಚ್ಚುಗೆಯನ್ನೂ ಮರುಕವನ್ನೂ ಸೆಳೆದುಕೊಂಡು ನಾಯಕರತ್ನವಾಗಿ ಮೆರೆಯುವವನು ದುರ್ಯೋಧನ.

ಕವಿತಾ ಸಾಮ್ರಾಜ್ಯಂ ತಾಳ್ದಿದುನ್ನತಿಯಿಂದಂ-
         ಚಾಲುಕ್ಯ ಚಕ್ರವರ್ತಿ ತೈಲಪ ರನ್ನನಿಗೆ ಕವಿ ಚಕ್ರವರ್ತಿ ಪದವಿ ತನಗೆ ಹೇಗೆ ಒಪ್ಪುತ್ತದೆ ಎಂಬುದನ್ನು ’ಅಜಿತಪುರಾಣ’ದಲ್ಲಿ ರನ್ನ ಹೀಗೆ ವರ್ಣಿಸಿದ್ದಾನೆ; ’ಬುದ್ಧಿಯೆ (ಹಣಕಾಸಿನ) ಭಂಡಾರ; ಪದವಿದ್ಯೆ (ವ್ಯಾಕರಣ ಶಾಸ್ತ್ರದ  ಜ್ಞಾನ) ಕತ್ತಿನ ಹಾರ; ಯಶಸ್ಸು ಬಿಳಿಯ ಛತ್ರಿ; ಸರಸ್ವತಿಯೇ ಮಹಾರಾಣಿ; ಪದ್ಯ ರಚನೆಯ ಶೈಲಿ ಭೇರೀನಾದ; ಪಾಂಡಿತ್ಯವೇ ಸಿಂಹಾಸನ; ಕಾವ್ಯದ ಅಲಂಕಾರವೇ ಬೀಸುವ ಚಾಮರ; (ಈ ಚಕ್ರವರ್ತಿ ಪದವಿಯ ಚಿಹ್ನೆಗಳಿಂದ ಕೂಡಿದ) ಕವಿತಾ ಸಾಮ್ರಾಜ್ಯವನ್ನು ಹೊಂದಿರುವ ಮೇಲ್ಮೆಯಿಂದ ರನ್ನನಿಗೆ ಕವಿಚಕ್ರವರ್ತಿ ಎಂಬ ಹೆಸರು ಚೆನ್ನಾಗಿ ಒಪ್ಪಿದೆ’.
                  ರನ್ನನ ಈ ಮಾತಿನಿಂದ ಅವನು ತನ್ನ ಕವಿತಾಶಕ್ತಿಯಲ್ಲಿ ಹೊಂದಿದ್ದ ನಂಬಿಕೆ ಎಷ್ಟು ಎಂಬುದು ಗೊತ್ತಾಗುತ್ತದೆ. ಕವಿಚಕ್ರವರ್ತಿ ಎಂಬ ಬಿರುದನ್ನು ಕೊಟ್ಟು ಗೌರವಿಸದ್ದಕ್ಕಾಗಿ ರನ್ನ ತೈಲಪನ ಚಕ್ರವರ್ತಿಗೆ ಕೃತಜ್ಞನಾಗಿದ್ದನೆ. ಒಂದು ವೇಳೆ ಬಿರುದನ್ನು ಕೊಡದಿದ್ದರೂ ಕವಿತಾ ಸಾಮ್ರಾಜ್ಯಕ್ಕೆ ತಾನು ಚಕ್ರವರ್ತಿ ಎಂಬ ಆತ್ಮವಿಶ್ವಾಸ ರನ್ನನಿಗಿದ್ದಿತು. ಆತ್ಮ ವಿಶ್ವಾಸವಿಲ್ಲದ ಕವಿ ಶ್ರೇಷ್ಠವಾದ ಕಾವ್ಯವನ್ನು ರಚಿಸಲಾರನು.


**************






10ನೇ ತರಗತಿ-ಕನ್ನಡ-ಪದ್ಯ-06-ಛಲಮನೆ ಮೆಱೆವೆಂ- ಪ್ರಶ್ನೋತ್ತರ (Chalamane merevem Notes) ವೀಕ್ಷಣೆ & ಡೌನ್‌ಲೋಡ್

******


10ನೆಯ ತರಗತಿ ಪದ್ಯ-6 ಛಲಮನೆ ಮೆಱೆವೆಂ(10th-Poem-6-Chalamane_merevem-Resource)

ಪದ್ಯ-6 ಛಲಮನೆ ಮೆಱೆವೆಂ
ಮಹಾಕವಿ ರನ್ನ
(ಈ ಕೆಳಗಿನ ವಿಷಯಗಳಲ್ಲಿ ನಿಮಗೆ ಬೇಕಾದ ವಿಷಯದ ಮೇಲೆ ಕ್ಲಿಕ್‌ಮಾಡಿ)
************************




*************



******** ಕನ್ನಡ ದೀವಿಗೆ *******

02 ಸೆಪ್ಟೆಂಬರ್ 2021

10ನೇ ತರಗತಿ ಹಸುರು ಪದ್ಯದ ಸಾರಾಂಶ

 `ಹಸುರು’ ಕವನವು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ ಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ. ಇದು ಕುವೆಂಪು ಅವರ ಸ್ಥಳವಾದ ಮಲೆನಾಡಿನ ಕುಪ್ಪಳ್ಳಿಯ ‘ಕವಿಶೈಲ’ದಲ್ಲಿ ಅವರಿಗುಂಟಾದ ಸೌಂದರ್ಯಾನುಭವ. ಪ್ರಕೃತಿ, ಅಲ್ಲಿಯ ಹಸುರುಗಳೊಂದಿಗೆ ಕುವೆಂಪು ಹೊಂದಿದ್ದ ಸಮೀಪ ಸಂಬಂಧವನ್ನು ತೋರಿಸುತ್ತದೆ.  

           ಹಸುರು ಪದ್ಯಭಾಗದ ಸಾರಾಂಶ 
ನವರಾತ್ರಿಯ ನವಧಾತ್ರಿಯ
ಈ ಶ್ಯಾಮಲ ವನಧಿಯಲಿ
ಹಸುರಾದುದೊ ಕವಿಯಾತ್ಮಂ
ರಸಪಾನ ಸ್ನಾನದಲಿ!
   
ಹಸುರಾಗಸ; ಹಸುರು ಮುಗಿಲು;
ಹಸುರು ಗದ್ದೆಯಾ ಬಯಲು;
ಹಸುರಿನ ಮಲೆ; ಹಸುರು ಕಣಿವೆ;
ಹಸುರು ಸಂಜೆಯೀ ಬಿಸಿಲೂ!


ಕವಿಯಾತ್ಮವು ಹಸುರುಗಟ್ಟಲು ಆಶ್ವಯುಜ ಮಾಸದ ನವರಾತ್ರಿಯ ದಿನದಲ್ಲ್ಲಿ ಹೊಸ ಚಿಗುರಿನಿಂದ ಕೂಡಿದ ಭೂಮಿಯಲ್ಲಿ ವಿಶಾಲವಾದ ಶಾಮಲ ಕಡಲು ಹಸುರಾಗಿರುವುದನ್ನು ನೋಡಿ ಕವಿಯ ಆತ್ಮವನ್ನು ರಸಪಾನದಲ್ಲಿ ಮಿಂದಿತು. ಆಗಸದಲ್ಲಿ; ಮುಗಿಲಿನಲ್ಲಿ; ಗದ್ದೆಯ ಬಯಲಿನಲ್ಲಿ; ಬೆಟ್ಟಗುಡ್ಡಗಳಲ್ಲಿ; ಕಣಿವೆಯಲ್ಲಿ; ಸಂಜೆಯ ಬಿಸಿಲಿನಲ್ಲಿ ಎಲ್ಲೆಲ್ಲೂ ಹಸುರು ಹರಡಿತ್ತು.

ಅಶ್ವೀಜದ ಶಾಲಿವನದ
ಗಿಳಿಯೆದೆ ಬಣ್ಣದ ನೋಟ;
ಅದರೆಡೆಯಲಿ ಬನದಂಚಲಿ
ಕೊನೆವೆತ್ತಡಕೆಯ ತೋಟ!

ಅದೊ ಹುಲ್ಲಿನ ಮಕಮಲ್ಲಿನ
ಪೊಸಪಚ್ಚೆಯ ಜಮಖಾನೆ
ಪಸರಿಸಿ ತಿರೆ ಮೈ ಮುಚ್ಚಿರೆ
ಬೇರೆ ಬಣ್ಣವನೆ ಕಾಣೆ!


ಅಶ್ವೀಜ ಮಾಸದಲ್ಲಿ ಬತ್ತದ ಗದ್ದೆಗೆ ಮುತ್ತುವ ಗಿಳಿಗಳ ಹಸುರು ಬಣ್ಣದ ನೋಟ; ಅದರ ಪಕ್ಕದಲ್ಲೇ ಕಾಡಂಚಿನಲ್ಲಿ ಫಲಭರಿತ ಅಡಕೆಯ ತೋಟ; ಹುಲ್ಲಿನ ಮಕಮಲ್ಲಿನ ಹೊಸಪಚ್ಚೆಯ ಜಮಖಾನೆ ಹರಡಿದಂತೆ ಭೂಮಿಯು ಹಸುರಿನಿಂದ ಮೈ ಮುಚ್ಚಿರಲು ಕವಿಗೆ ಬೇರೆ ಬಣ್ಣಗಳೇ ಕಾಣದಾದವು.

ಹೊಸ ಹೂವಿನ ಕಂಪು ಹಸುರು,
ಎಲರಿನ ತಂಪೂ ಹಸುರು!
ಹಕ್ಕಿಯ ಕೊರಲಿಂಪು ಹಸುರು!
ಹಸುರು ಹಸುರಿಳೆಯುಸಿರೂ!

ಹಸುರತ್ತಲ್! ಹಸುರಿತ್ತಲ್!
ಹಸುರೆತ್ತಲ್ ಕಡಲಿನಲಿ
ಹಸುರ‍್ಗಟ್ಟಿತೊ ಕವಿಯಾತ್ಮಂ
ಹಸುರ್‌ನೆತ್ತರ್ ಒಡಲಿನಲಿ!


ಹೊಸ ಹೂವಿನ ಕಂಪು; ತಂಗಾಳಿಯ ತಂಪು; ಹಕ್ಕಿಯ ಇಂಪಾದ ಗಾನ; ಕಡಲು; ಅತ್ತ-ಇತ್ತ-ಎತ್ತ ನೋಡಿದರೂ ಹಸುರು.. ಹಸುರು.. ಹಸರು.. ಇದನ್ನು ನೋಡಿದ ಕವಿಯಾತ್ಮವು ಹಸುರುಗಟ್ಟಿತು. ಕವಿಯ ದೇಹದಲ್ಲೂ ಹಸುರು ರಕ್ತವೇ ಹರಿದಾಡಿತು. ಎಂದು ಹಸುರು ವ್ಯಾಪಿಸಿದ ಬಗೆಯನ್ನು ಕವಿ ಕುವೆಂಪು ಅವರು ವರ್ಣಿಸಿದ್ದಾರೆ.








*********

18 ಜನವರಿ 2018

9ನೆಯ ತರಗತಿ, ಪದ್ಯ-8, ಕನ್ನಡ ನಾಡು ನುಡಿ

ಶ್ರೀವಿಜಯ:
  • ಶ್ರೀವಿಜಯನ ಕಾಲ: ಕ್ರಿ.ಶ. ಸುಮಾರು ೯ನೆಯ ಶತಮಾನ
  • ಆಶ್ರಯದಾತ: ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗ
  • ಈತನ ಕೃತಿ ಕವಿರಾಜಮಾರ್ಗ ಎಂಬ ಲಕ್ಷಣ ಗ್ರಂಥ ಇದು ಕನ್ನಡ ಭಾಷೆಯಲ್ಲಿ ಉಪಲಬ್ಧವಾಗಿರುವ ಮೊಟ್ಟ ಮೊದಲ ಕೃತಿಯಾಗಿದೆ.
ನಯಸೇನ :
  • ನಯಸೇನನ ಕಾಲ: ಕ್ರಿ.ಶ. ಸುಮಾರು ೧೨ನೆಯ ಶತಮಾನ  ಸ್ಥಳ: ಧಾರವಾಡ ಜಿಲ್ಲೆಯ ಮುಳುಗುಂದ.
  • ಈತನ ಪ್ರಮುಖ ಕೃತಿ:  ಧರ್ಮಾಮೃತ ಎಂಬ ಚಂಪೂ ಕಾವ್ಯ.
  • ಕನ್ನಡದಲ್ಲಿ ಕಾವ್ಯ ರಚನೆಯ ಸಮಯದಲ್ಲಿ ಸಂಸ್ಕೃತ ಶಬ್ದಗಳನ್ನು ಸೇರಿಸುವ ಬಗ್ಗೆ ನಯಸೇನನು ವಿರೋಧ ವ್ಯಕ್ತಪಡಿಸುತ್ತಾನೆ.
[ಕಾವ್ಯ ರಚಿಸುವುದಾದರೆ ಕನ್ನಡದಲ್ಲಿ ರಚಿಸಬೇಕು ಇಲ್ಲವೇ ಸಂಸ್ಕೃತದಲ್ಲಿ ರಚಿಸಬೇಕು. ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ-ತುಪ್ಪಗಳ ಮಿಶ್ರಣದಂತೆ ಅಸ್ವಾದ ಆಗುತ್ತದೆ ಎಂಬುದು ಆತನ ಅಭಿಪ್ರಾಯ.]

ನೇಮಿಚಂದ್ರ :
  • ನೇಮಿಚಂದ್ರನ ಕಾಲ: ಕ್ರಿ.ಶ. ಸುಮಾರು ೧೨ನೆಯ ಶತಮಾನ.
  • ಈತನ ಕೃತಿಗಳು: ಲೀಲಾವತೀ ಪ್ರಬಂಧ ಹಾಗೂ ಅರ್ಧನೇಮಿ ಪುರಾಣ
  • ಈತನು ಕವಿಗಳ ಕಾವ್ಯಶಕ್ತಿಯ ಹೆಗ್ಗಳಿಕೆಯನ್ನು ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾನೆ.
ಮಹಲಿಂಗರಂಗ :
  • ಮಹಲಿಂಗರಂಗನ ಕಾಲ: ಕ್ರಿ.ಶ. ಸುಮಾರು ೧೭ ನೆಯ ಶತಮಾನ.
  • ಇವನ ನಿಜನಾಮ: ಶ್ರೀರಂಗ. ತನ್ನ ಹೆಸರಿನೊಂದಿಗೆ ತಂದೆಯ ಹೆಸರನ್ನು ಸೇರಿಸಿ ಮಹಲಿಂಗರಂಗ ಎಂದು ಕರೆದುಕೊಂಡಿದ್ದಾನೆ.
  • ಈತನ ಆರಾಧ್ಯ ದೈವ: ಶ್ರೀಶೈಲ ಮಲ್ಲಿಕಾರ್ಜುನ.
  • ಈತನ ಪ್ರಮುಖ ಕೃತಿ: ಅನುಭವಾಮೃತ. ಇದು ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗೊಂಡ ಕೃತಿಯೆಂಬುದು ಇನ್ನೊಂದು ವಿಶೇಷ.
ಆಂಡಯ್ಯ :
  • ಆಂಡಯ್ಯನ ಕಾಲ: ಕ್ರಿ.ಶ. ಸುಮಾರು ೧೩ನೇ ಶತಮಾನ.
  • ಆಶ್ರಯದಾತ: ಕದಂಬರ ದೊರೆ ಕಾಮದೇವ.
  • ಇವನ ಪ್ರಮುಖ ಕೃತಿ: ಕಬ್ಬಿಗರ ಕಾವ ಅಥವಾ ಕಬ್ಬಿಗರ ಕಾವಂ ಎಂಬ ಚಂಪೂ ಕಾವ್ಯ
  • ಕನ್ನಡ ಸಾಹಿತ್ಯದಲ್ಲಿ ಕಬ್ಬಿಗರ ಕಾವಂ ಒಂದು ವಿಶಿಷ್ಟ ಕೃತಿ. ಸಂಸ್ಕೃತದ ಸಹಾಯವನ್ನು ಪಡೆಯದೆ ಕೇವಲ ತದ್ಭವ ಪದಗಳನ್ನೂ ದೇಸೀ ನುಡಿಗಳನ್ನು ಬಳಸಿಕೊಂಡು ಈ ಕೃತಿಯನ್ನು ಕಟ್ಟಲಾಗಿದೆ.
[ಕನ್ನಡ ನಾಡು-ನುಡಿ ಪದ್ಯದಲ್ಲಿ ಇರುವ ಪದ್ಯಗಳನ್ನು ಬಿ.ಎಂ.ಶ್ರೀ. ಅವರು ಸಂಪಾದಿಸಿರುವ ಕನ್ನಡ ಬಾವುಟ ಕೃತಿಯಿಂದ ಆರಿಸಿಕೊಳ್ಳಲಾಗಿದೆ.]
*********
ಕನ್ನಡ ನಾಡು ನುಡಿ ಪದ್ಯಭಾಗದ ಪದವಿಭಾಗ ಕ್ರಮ ಮತ್ತು ಸಾರಾಂಶ
 ಪದನಱಿದು ನುಡಿಯಲುಂ ನುಡಿ 
ದುದನಱಿದಾರಯಲುಮಾರ್ಪರಾ ನಾಡವರ್ಗಳ್| 
ಚದುರರ್ ನಿಜದಿಂ ಕುಱತೋ
ದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್||೧||            - ಶ್ರೀವಿಜಯ

ಪದವಿಭಾಗ ಕ್ರಮ: ಪದನರಿದು (ಪದವನ್ನು ಅರಿತು) ನುಡಿಯಲುಂ (ನುಡಿಯಲು) ನುಡಿದುದನ್ (ನುಡಿದುದನ್ನು) + ಅರಿದು (ತಿಳಿದು) + ಆರಯಲುಮ್ (ಪಾಲಿಸಲು) + ಆರ್ಪರ್ (ಸಾಮರ್ಥ್ಯವುಳ್ಳವರು) + ಆ ನಾಡವರ್ಗಳ್ (ಆ ಜನಸಾಮಾನ್ಯರು/ನಾಡಜನರು) ಚದುರರ್ (ಚತುರರು) ನಿಜದಿಂ(ನಿಜವಾಗಿ) ಕುರಿತು (ಉದ್ದೇಶವಿಟ್ಟು) + ಓದದೆಯಂ (ಓದದಿದ್ದರೂ/ವಿದ್ಯಾಭ್ಯಾಸ ಮಾಡದಿದ್ದರೂ) ಕಾವ್ಯ (ಕವಿತೆ) ಪ್ರಯೋಗ (ಸೃಷ್ಟಿಸುವ/ರಚಿಸುವ) ಪರಿಣತ (ಪರಿಣತಿ ಹೊಂದಿರುವ) ಮತಿಗಳ್ (ಬುದ್ಧಿವುಳ್ಳವರು).

ಸಾರಾಂಶ: ಶ್ರೀವಿಜಯನು ಕನ್ನಡನಾಡಿನ ಜನರು ಪದದ ಅರ್ಥವನ್ನು ಅರಿತು ಮಾತನಾಡುವ ಸಾಮರ್ಥ್ಯವುಳ್ಳವರು. ತಾವು ಆಡುವ ಮಾತನ್ನು ಅರ್ಥಮಾಡಿಕೊಂಡು ನಡೆಯುವವರಾಗಿದ್ದರು. ಆ ಸಾಮಾನ್ಯ ಜನರು ನಿಜವಾಗಿಯು ಚತುರರು, ಅವರು ಶಿಕ್ಷಣವನ್ನು ಪಡೆಯದಿದ್ದರು ಕಾವ್ಯವನ್ನು ರಚಿಸುವಷ್ಟು ಪರಿಣತಿ ಹೊಂದಿದ ಬುದ್ಧಿಯುಳ್ಳವರು ಎಂದು ಕನ್ನಡಿಗರ ಗುಣ ವಿಶೇಷತೆ ಹಾಗೂ ಕಾವ್ಯ ಶಕ್ತಿಯನ್ನು ವರ್ಣಿಸಿದ್ದಾನೆ.
 *****
ಸಕ್ಕದಮಂ ಪೇೞ್ವೊಡೆ ನೆಱೆ
ಸಕ್ಕದಮಂ ಪೇೞ್ಗೆ ಶುದ್ಧ ಕನ್ನಡದೊಳ್ ತಂ|
ದಿಕ್ಕುವುದೇ ಸಕ್ಕದಮಂ
ತಕ್ಕುದೆ ಬೆರೆಸಲ್ಕೆ ಘೃತಮುಮಂ ತೈಲಮುಮಂ||೨
||             -  ನಯಸೇನ
ಪದವಿಭಾಗ ಕ್ರಮ: ಸಕ್ಕದಮಂ (ಸಂಸ್ಕೃತವನ್ನು) ಪೇೞ್ವೊಡೆ (ಹೇಳುವುದಾದರೆ) ನೆರೆ (ಪೂರ್ಣ) ಸಕ್ಕದಮಂ (ಸಂಸ್ಕೃತವನ್ನು) ಪೇೞ್ಗೆ (ಹೇಳಿ) ಸುದ್ದ (ಶುದ್ಧ) ಕನ್ನಡದೊಳ್ (ಕನ್ನಡದಲ್ಲಿ) ತಂದು + ಇಕ್ಕುವುದೇ (ಹಾಕುವುದೇ) ಸಕ್ಕದಮಂ (ಸಂಸ್ಕೃತವನ್ನು) ತಕ್ಕುದೆ (ಸರಿಯೇ / ಉಚಿತವೇ) ಬೆರಸಲ್ಕೆ (ಬೆರೆಸಲು) ಘೃತಮುಮಂ (ತುಪ್ಪವನ್ನೂ) ತೈಲಮುಮಂ (ಎಣ್ಣೆಯನ್ನೂ)
ಸಾರಾಂಶ: ನಯಸೇನನು, ಕವಿಗಳು ಕನ್ನಡದಲ್ಲಿ ಕಾವ್ಯವನ್ನು ರಚಿಸುವಾಗ ಕನ್ನಡದೊಂದಿಗೆ ಸಂಸ್ಕೃತ ಶಬ್ದಗಳನ್ನು ಹೆಚ್ಚಾಗಿ ಬಳಸುತ್ತಿದ್ದುದನ್ನು ನೋಡಿ ಅದನ್ನು ಆಕ್ಷೇಪಿಸುತ್ತಾನೆ. ಅವನು, ಕಾವ್ಯ ರಚಿಸುವುದಾದರೆ ಶುದ್ಧ ಕನ್ನಡದಲ್ಲಿ ರಚಿಸಬೇಕು; ಇಲ್ಲವೇ ಪೂರ್ಣವಾಗಿ ಸಂಸ್ಕೃತದಲ್ಲಿ ರಚಿಸಬೇಕು; ಶುದ್ಧವಾದ ಕನ್ನಡದಲ್ಲಿ ಸಂಸ್ಕೃತವನ್ನು ತಂದು ತುರುಕುವುದು ಸರಿಯೇ? ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ-ತುಪ್ಪಗಳ ಅಸ್ವಾದ ಮಿಶ್ರಣವಾಗುತ್ತದೆ ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ.
 ******
ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ವಾಮನಕ್ರಮಂ|
ಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ ಹರನಂ ನರನೊತ್ತಿ ಗಂಟಲಂ|
ಮೆಟ್ಟುಗೆ ಮೆಟ್ಟದಿರ್ಕೆ ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್|
ಮುಟ್ಟಿದರೊತ್ತಿ ಮೆಟ್ಟಿದರದೇನಳವಗ್ಗಳಮೋಕವೀಂದ್ರರಾ|| ೩ ||               - ನೇಮಿಚಂದ್ರ

ಪದವಿಭಾಗ ಕ್ರಮ: ಕಟ್ಟುಗೆ (ಕಟ್ಟಲಿ) ಕಟ್ಟದಿರ್ಕೆ (ಕಟ್ಟದಿರಲಿ) ಕಡಲಂ (ಸಮುದ್ರವನ್ನು) ಕಪಿಸಂತತಿ (ವಾನರ ಸೈನ್ಯವು), ವಾಮನಕ್ರಮಂ (ವಾಮನಾವತಾರದಲ್ಲಿ) ಮುಟ್ಟುಗೆ ಮುಟ್ಟಲಿ) ಮುಟ್ಟದಿರ್ಕೆ (ಮುಟ್ಟದಿರಲಿ) ಮುಗಿಲಂ (ಆಕಾಶವನ್ನು), ಹರನಂ (ಹರನನ್ನು) ನರನೊತ್ತಿ (ಅರ್ಜುನನು ಒತ್ತಿ) ಗಂಟಲಂ (ಗಂಟಲನ್ನು) ಮೆಟ್ಟುಗೆ (ಮೆಟ್ಟಲಿ) ಮೆಟ್ಟುದಿರ್ಕೆ (ಮೆಟ್ಟದಿರಲಿ) ಕವಿಗಳ್ (ಕವಿಗಳು) ಕೃತಿಬಂಧದೊಳ್ (ಕಾವ್ಯದಲ್ಲಿ) + ಅಲ್ತೆ (ಅಲ್ಲವೇ) ಕಟ್ಟಿದರ್ (ಕಟ್ಟಿದರು) ಮುಟ್ಟಿದರ್ (ಮುಟ್ಟಿದರು) ಒತ್ತಿ ಮೆಟ್ಟಿದರ್ (ಒತ್ತಿ ಮೆಟ್ಟಿದರು) + ಅದೇನು + ಅವರ + ಅಗ್ಗಳಮೋ (ಸಾಮರ್ಥ್ಯವೋ / ಹಿರಿಮೆಯೋ) ಕವೀಂದ್ರರಾ (ಕವೀಂದ್ರರು).

ಸಾರಾಂಶ: ನೇಮಿಚಂದ್ರನು ಕವಿಗಳ ಕಾವ್ಯ ಶಕ್ತಿಯನ್ನು ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಾ ರಾಮಾಯಣದಲ್ಲಿ ವಾನರ ಸೈನ್ಯವು ಸಮುದ್ರಕ್ಕೆ ಸೇತುವೆಯನ್ನು ಕಟ್ಟಲಿ ಕಟ್ಟದಿರಲಿ. ವಾಮನಾವತಾರದಲ್ಲಿ ವಾಮನನು ಆಕಾಶವನ್ನು ತನ್ನ ಕಾಲಿನಿಂದ ಮುಟ್ಟಲಿ ಮುಟ್ಟದಿರಲಿ. ಮಹಾಭಾರತದಲ್ಲಿ ಅರ್ಜುನನು ಶಿವನ ಗಂಟಲನ್ನು ಒತ್ತಿ ಮೆಟ್ಟಲಿ ಮೆಟ್ಟದಿರಲಿ. ಆದರೆ ಕವಿಗಳು ತಮ್ಮ ಕೃತಿಗಳಲ್ಲಿ ವಾನರ ಸೈನ್ಯದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದರು; ವಾಮನನ ಕಾಲಿನಿಂದ ಆಕಾಶವನ್ನು ಮುಟ್ಟಿದರು; ಅರ್ಜುನನ ಕಾಲಿನಿಂದ ಶಿವನ ಗಂಟಲನ್ನು ಒತ್ತಿ ಮೆಟ್ಟಿದರು; ಇದು ಕವಿಗಳ ಸಾಮರ್ಥ್ಯ/ಅಗ್ಗಳಿಕೆ ಎಂದು ಹೇಳಿದ್ದಾನೆ.
******
ಸುಲಿದ ಬಾಳೆಯ ಹಣ್ಣಿನಂದದಿ ಕಳಿದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡೊರೆ ಸಾಲದೇ ಸಂಸ್ಕೃತದಲಿನ್ನೇನು?  ||೪||                           - ಮಹಲಿಂಗರಂಗ

ಪದವಿಭಾಗ ಕ್ರಮ: ಸುಲಿದ ಬಾಳೆಯ ಹಣ್ಣಿನಂದದಿ (ಹಣ್ಣಿನಂತೆ) ಕಳಿದ ಸಿಗುರಿನ ಕಬ್ಬಿನಂದದಿ (ಸಿಗುರು ತೆಗೆದ ಕಬ್ಬಿನಂತೆ) ಅಳಿದ ಉಷ್ಣದ ಹಾಲಿನಂದದಿ (ಶಾಖ ಆರಿದ ಹಾಲಿನಂತೆ) ಸುಲಭವಾಗಿ + ಇರ್ಪ (ಇರುವ) ಲಲಿತವಹ (ಲಲಿತವಾದ) ಕನ್ನಡದ ನುಡಿಯಲಿ (ಕನ್ನಡ ಭಾಷೆಯಲ್ಲಿ) ತಿಳಿದು (ಅರ್ಥಮಾಡಿಕೊಂಡು) ತನ್ನೊಳು (ತನ್ನಲ್ಲಿ) ಮೋಕ್ಷವ (ಮೋಕ್ಷವನ್ನು) ಗಳಿಸಿಕೊಂಡಡೆ (ಗಳಿಸಿಕೊಂಡರೆ) ಸಾಲದೇ(ಸಾಲುವುದಿಲ್ಲವೇ) ಸಂಸ್ಕೃತದೊಳ್ (ಸಂಸ್ಕೃತದಲ್ಲಿ) ಇನ್ನೇನು(ಇನ್ನೇನಿದೆ).

ಸಾರಾಂಶ: ಮಹಲಿಂಗರಂಗನು ಕನ್ನಡ ಭಾಷೆಯ ಸರಳತೆ, ಮಧುರತೆ, ಶಕ್ತಿಯ ಬಗ್ಗೆ ವರ್ಣಿಸುತ್ತಾ ಸುಲಿದ ಬಾಳೆಯ ಹಣ್ಣಿನಂತೆ; ಸಿಗುರು ತೆಗೆದ ಕಬ್ಬಿನಂತೆ; ಶಾಖ ಆರಿಹೋಗಿ ತಣ್ಣಗಾದ ಹಾಲಿನಂತೆ ಸುಲಭವಾಗಿರುವ, ಸುಲಲಿತವಾಗಿರುವ ಕನ್ನಡ ಭಾಷೆಯನ್ನು ಅರಿತು, ಮೋಕ್ಷವನ್ನು ಗಳಿಸಿಕೊಂಡರೆ ಸಾಲದೇ? ಸಂಸ್ಕೃತ ಭಾಷೆಯಲ್ಲಿ ಅಂತಹುದು ಏನಿದೆ? ಎಂದು ಪ್ರಶ್ನಿಸುತ್ತಾನೆ. ಮುಕ್ತಿ ಪಡೆಯಲು ಕನ್ನಡದಲ್ಲೇ ದೇವರನ್ನು ಸ್ತುತಿಸಿ ಮುಕ್ತಿ ಪಡೆಯಬಹುದಲ್ಲವೇ? ಅದಕ್ಕೆ ಸಂಸ್ಕೃತದಲ್ಲೇ ಶ್ಲೋಕ ಹೇಳಬೇಕೆಂದೇನಿಲ್ಲ. ಸಂಸ್ಕೃತ ಭಾಷೆಯಷ್ಟೇ ಶಕ್ತಿ ಕನ್ನಡ ಭಾಷೆಗೂ ಇದೆ ಎಂದು ಕವಿ ಅಭಿಪ್ರಾಯಪಟ್ಟಿದ್ದಾನೆ.
******

ಮಲ್ಲಿಗೆಯಲ್ಲದೆ ಸಂಪಗೆ|
ಯಲ್ಲದೆ ದಾಳಿಂಬಮಲ್ಲದೊಪ್ಪುವ ಚೆಂದೆಂ|| 
ಗಲ್ಲದೆ ಮಾವಲ್ಲದೆ ಕೌಂ|
ಗಲ್ಲದೆ ಗಿಡುಮರಗಳೆಂಬುವಿಲ್ಲಾ ನಾಡೊಳ್||೫||                   -ಆಂಡಯ್ಯ

ಪದವಿಭಾಗ ಕ್ರಮ: ಮಲ್ಲಿಗೆ + ಅಲ್ಲದೆ ಸಂಪಗೆ + ಅಲ್ಲದೆ ದಾಳಿಂಬಮ್(ದಾಳಿಂಬೆ) + ಅಲ್ಲದೆ + ಒಪ್ಪುವ (ಸುಂದರವಾದ) ಚೆಂದೆಂಗು (ಕೆಂದಂಗಿ/ಕೆಂಪಾದ ತೆಂಗು) + ಅಲ್ಲದೆ ಮಾವು + ಅಲ್ಲದೆ ಕೌಂಗು (ಅಡಿಕೆ) + ಅಲ್ಲದೆ ಗಿಡಮರಗಳ್(ಗಿಡಮರಗಳು) + ಎಂಬುವು + ಇಲ್ಲ + ಆ ನಾಡೊಳ್ (ಆ ನಾಡಿನಲ್ಲಿ)

ಸಾರಾಂಶ: ಆಂಡಯ್ಯ ಕನ್ನಡ ನಾಡಿನ ಸಸ್ಯ ಸಂಪತ್ತನ್ನು ಕುರಿತು ಕನ್ನಡನಾಡಿನಲ್ಲಿ ಮಲ್ಲಿಗೆ ಅಲ್ಲದೆ; ಸಂಪಗೆ ಅಲ್ಲದೆ; ಕೆಂಪಾದ ತೆಂಗು ಅಲ್ಲದೆ; ಮಾವು ಅಲ್ಲದೆ ಅಡಿಕೆ ಅಲ್ಲದೆ; ಗಿಡಮರಗಳೇ ಇಲ್ಲ ಎಂದು ವರ್ಣಿಸುತ್ತಾನೆ. ಕನ್ನಡ ನಾಡಿನಲ್ಲಿ ಉತ್ತಮ ಫಲ ನೀಡುವಂತಹ ಸಸ್ಯಗಳು ಸಮೃದ್ಧವಾಗಿವೆ ಎಂಬುದು ಆಂಡಯ್ಯನಿಗೆ ಕನ್ನಡ ನಾಡಿನ ಬಗ್ಗೆ ಇದ್ದ ಅಭಿಮಾನವನ್ನೂ ಅಂದಿನ ಸಮೃದ್ಧಿಯನ್ನೂ ಸೂಚಿಸುತ್ತದೆ.

********




05 ಜನವರಿ 2018

9ನೆಯ ತರಗತಿ- ಪದ್ಯ-7-ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು

ರಾಘವಾಂಕನ ಪರಿಚಯ

      
ರಾಘವಾಂಕ ಕವಿಯು ಕ್ರಿ.ಶ.೧೨ನೆಯ ಶತಮಾನದ ಉತ್ತರಾರ್ಧದಲ್ಲಿ ಹಾಗೂ ೧೩ನೆಯ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದ ಕವಿ.
ಈತನು ಹರಿಹರನ ಸೋದರಳಿಯ.ಹರಿಹರನೂ,ರಾಘವಾಂಕನೂ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ನೂತನ ಯುಗಪ್ರವರ್ತಕರೆಂದು ಹೆಸರಾಗಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಷಟ್ಪದೀ ಪ್ರಕಾರವನ್ನು ಪ್ರವರ್ತನಗೊಳಿಸಿದ ಕೀರ್ತಿ ರಾಘವಾಂಕನಿಗೆ ಸಲ್ಲುತ್ತದೆ.
 ಕನ್ನಡದ ಅತ್ಯಂತ ಸ್ವತಂತ್ರ ಮನೋಧರ್ಮದ ಪ್ರಯೋಗಶೀಲನಾದ ವೀರಶೈವ ಕವಿ. ಹರಿಶ್ಚಂದ್ರಕಾವ್ಯ ಎಂಬ ಕಾವ್ಯದ ಕರ್ತೃ. ಈತನ ಜೀವನ ಹಾಗೂ ಕೃತಿಗಳು ಇವನ ಅನಂತರದ ಕೆಲವು ಕವಿಗಳಿಗೆ ಕುತೂಹಲದ, ಗೌರವದ ವಿಷಯಗಳಾಗಿದ್ದವು.ಇವನ ಜೀವನ ಸಂಗತಿಗಳು ತಕ್ಕಮಟ್ಟಿಗೆ ಚೆನ್ನಬಸವಪುರಾಣದಲ್ಲಿ, ಗುರುರಾಜ ಚಾರಿತ್ರದಲ್ಲಿ, ಭೈರವೇಶ್ವರಕಾವ್ಯ ಕಥಾಮಣಿ ಸೂತ್ರರತ್ನಾಕರದಲ್ಲಿ, ಪದ್ಮರಾಜ ಪುರಾಣದಲ್ಲಿ , ಹರಡಿಕೊಂಡಿವೆ.
ಎಲ್ಲಕ್ಕೂ ಮಿಗಿಲಾಗಿ ರಾಘವಾಂಕನ ಕವಿಕಾವ್ಯ ಜೀವನವನ್ನೇ ವಸ್ತುವಾಗಿ ಮಾಡಿಕೊಂಡ ಸಿದ್ದನಂಜೇಶನ ರಾಘವಾಂಕ ಚಾರಿತ್ರ ಒಂದು ವೆಶೇಷ ರೀತಿಯ ಕೃತಿಯಾಗಿದೆ.

ಜೀವನ
           
ರಾಘವಾಂಕ ಹಂಪೆಯಲ್ಲಿ ಹುಟ್ಟಿ ಬೆಳೆದವ. ಇವನ ತಂದೆ ಮಹಾದೇವಭಟ್ಟ ,ತಾಯಿ ರುದ್ರಾಣಿ. ಹರಿಹರ ಇವನ ಸೋದರ ಮಾವ ಮತ್ತು ಗುರು. ಆತ ದೀಕ್ಷಾಗುರು, ಕಾವ್ಯಗುರುವೂ ಹೌದು. ಹರಿಹರನಂತೆ ರಾಘವಾಂಕನೂ ಪಂಪಾ ವಿರೂಪಾಕ್ಷನ ಪರಮಭಕ್ತ. ಹಂಪೆಯ ಶಂಕರಪ್ರಭು , ಹಂಪೆಯ ಮಾದಿರಾಜ, ಹಂಪೆಯ ಹರೀಶ್ವರ ಇದು ರಾಘವಾಂಕನ ಗುರುಪರಂಪರೆ.ತಾನು ಹರಿಹರನ ವರಸುತ ಎಂದು ಈತ ಹೇಳಿಕೊಂಡಿದ್ದಾನೆ.ಈತ ಸಂಸ್ಕೃತ ಭಾಷೆಗಳಲ್ಲಿಯೂ ಸಮಸ್ತ ಲೌಕಿಕ ವೈದಿಕ ವಿದ್ಯೆಗಳಲ್ಲಿಯೂ ಪರಿಣಿತನಾಗಿದ್ದ . 'ಉಭಯಕವಿ ಕಮಲರವಿ'ಯಾದ ಈತ ಹರಿಶ್ಚಂದ್ರಕಾವ್ಯವನ್ನು ರಚಿಸಿ ಪಂಪಾಪುರದ ದೇವರಾಜನ ಸಭೆಯಲ್ಲಿ ಓದಿ ವಿದ್ವಾಂಸರನ್ನೊ ರಾಜನನ್ನೂ ಮೆಚ್ಚಿಸಿದ್ದ್ದ.. ರಾಜ ಇವನಿಗೆ 'ಕವಿಶರಭಭೇರುಂಡ' ಎಂಬ ವಾದದ ಪೆಂಡೆಯವನ್ನು ಕೊಟ್ಟು ಸನ್ಮಾನಿಸಿದ. ರಾಜಸಭೆಯಲ್ಲಿ ಹೀಗೆ ಮೆಚ್ಚುಗೊಂಡ ಹರಿಶ್ಚಂದ್ರಕಾವ್ಯವನ್ನು ರಾಘವಾಂಕ ಹೊನ್ನ ಹರಿವಾಣದಲ್ಲಿರಿಸಿ ತಂದು ತನ್ನ ಗುರುವು ಮಾವನೂ ಆದ ಹರಿಹರನ ಮುಂದಿರಿಸಿ ಅವನ ಆಶೀರ್ವಾದಗಳನ್ನು ಬೇಡಿದಾಗ , ಆತ ಮೆಚ್ಚಲೊಲ್ಲದೆ , ನರಸ್ತುತಿ ಮಾಡಿದ ತಪ್ಪಿಗಾಗಿ ರಾಘವಾಂಕನ ಹಲ್ಲುಗಳನ್ನು ಮುರಿದ. ಅನಂತರ ಶೈವಕೃತಿಪಂಚಕಗಳನ್ನು ರಚಿಸಿ ಮರಳಿ ತನ್ನ ಹಲ್ಲುಗಳನ್ನು ಪಡೆದ. ಒಮ್ಮೆ ಓರಂಗಲ್ಲಿನ ಪ್ರತಾಪರುದ್ರದೇವನ ಸಭೆಯಲ್ಲಿ ಏಕದ್ವಿತ್ರಿಸಂಧಿಗ್ರಾಹಿಗಳೆಂಬ ಕುಕವಿಗಳನ್ನು ತನ್ನ ಮೀಸಲು ಕವಿತೆಯಾದ ವೀರೇಶ ಚರಿತ್ರೆಯನ್ನು ಓದುವುದರ ಮೂಲಕ ಭಂಗಿಸಿ ಪ್ರತಾಪರುದ್ರನಿಂದ ಉಭಯಕವಿ ಶರಭಭೇರುಂಡ ಎಂಬ ಹೆಸರು ಪಡೆದ.ಅನಂತರ ಹಂಪೆಗೆ ಬಂದು ಹರಿಹರನ ಆಜ್ಞಾನುಸಾರವಾಗಿ ಬೇಲೂರಿಗೆ ಹೋಗಿ ಅಲ್ಲಿ ಬಯಲಾದ.
ಇದರಲ್ಲಿ ಐತಿಹಾಸಿಕತೆ ಹಾಗು ಸಾಂಕೇತಿಕತೆಗಳೆರಡೂ ಬೆರೆತಿವೆ. ರಾಘವಾಂಕ ಹರಿಹರನ ವರಸುತನೆಂಬ ಹೆಮ್ಮೆಯ ಶಿಷ್ಯ . ಉಭಯ ಭಾಷಾಪಂಡಿತ ತನ್ನ ಪ್ರತಿವಾದಿಗಳೊಂದಿಗೆ ಸೆಣಸಿ ಬದುಕುವ ಛಲ ಉಳ್ಳವ ಎನ್ನುವ ಅಂಶಗಳು ಹೆಚ್ಚು ವಾಸ್ತವಸಮೀಪವಾದವು. ರಾಘವಾಂಕನ ಹಲ್ಲುಗಳನ್ನು ಹರಿಹರ ಮುರಿದದ್ದು ಅನಂತರ ರಾಘವಾಂಕನು ಶೈವಕೃತಿ ಪಂಚಕಗಳನ್ನು ಬರೆದು ಹಲ್ಲುಗಳನ್ನು ಪಡೆದದ್ದು ಈ ದಂತಕತೆ ವಸ್ತು ರೀತಿಗಳೆರಡರಲ್ಲೂ ಹರಿಹರನ ಪರಂಪರೆಗೆ ವಿರೋಧವಾಗಿ ನಡೆದುಕೊಂಡ ರಾಘವಾಂಕನ ಬಗೆಗೆ ಹರಿಹರ ಪರಂಪರೆ ತೋರಿಸಿದ ಪ್ರತಿಕ್ರಿಯೆಯನ್ನೂ ಅನಂತರ ರಾಘವಾಂಕ ಹರಿಹರ ಪರಂಪರೆಯೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಸಾಂಕೇತಿಸುತ್ತದೆ ಎನ್ನಬಹುದು.

ಕೃತಿಗಳು
ರಾಘವಾಂಕನ ಕಾವ್ಯಗಳು ಆರು.
೧.ಹರಿಶ್ಚಂದ್ರ ಕಾವ್ಯ.
೨.ಸಿದ್ಧರಾಮ ಪುರಾಣ
೩.ಸೋಮನಾಥ ಚರಿತೆ
೪. ವೀರೇಶ ಚರಿತೆ
೫.ಶರಭ ಚಾರಿತ್ರ
೬.ಹರಿಹರ ಮಹತ್ವ - ಈ ಕೃತಿ ಇನ್ನೂ ಸಿಕ್ಕಿಲ್ಲ.
            ಇವಗಳಲ್ಲಿ ಮೊದಲ ನಾಲ್ಕು ದೊರೆತು ಪ್ರಕಟವಾಗಿದೆ.ಶರಭ ಚಾರಿತ್ರ ಹಾಗೂ ಹರಿಹರ ಮಹತ್ವ ಇನ್ನೂ ದೊರೆತಿಲ್ಲ.ಇದೂ ಅಲ್ಲದೆ "ದೇವಾಂಗ ದಾರಿಮಯ್ಯನ ಪುರಾಣ"ಎಂಬ ಸಾಂಗತ್ಯ ಗ್ರಂಥವೊಂದು ದೊರಕಿದ್ದು , ರಾಘವಾಂಕನ ಅಂಕಿತದಲ್ಲಿದೆ. ಇದನ್ನು ರಾಘವಾಂಕ ಬರೆದನೇ ಇಲ್ಲವೆ ಎನ್ನುವ ಬಗ್ಗೆ ಖಚಿತವಾಗಿ ತಿಳಿಯಬೇಕಾಗಿದೆ.

ವಿಮರ್ಶೆ:
ಕನ್ನಡ ಸಾಹಿತ್ಯದಲ್ಲಿ ರಾಘವಾಂಕ ಪ್ರಧಾನವಾಗಿ ಪ್ರಯೋಗಶೀಲನಾದ ಸ್ವತಂತ್ರ ಮನೋಧರ್ಮದ ಕವಿ.' ಜನ ಬದುಕಬೇಕೆಂದು ಕಾವ್ಯಮುಖದಿಂಪೇಳ್ದನನಪೇಕ್ಶೆಯಿಂದ' ಎಂಬುದು ಇವನ ಕಾವ್ಯೋದ್ದೇಶವಾಗಿತ್ತು. ಮಹಾಕವಿ ಹರಿಹರನ ಸಮಕಾಲೀನನೂ , ವರಸುತನೂ ಆದ ಈತ ಹರಿಹರನ ಪ್ರಭಾವದ ಸೆಳೆತಕ್ಕೆ ಪ್ರತಿಯಾಗಿ ನಿಂತು ತನ್ನದೇ ಆದೊಂದು ಪರಂಪರೆಯನ್ನು ನಿರ್ಮಿಸಿಕೊಂಡವ.ತನಗೆ ಹಿನ್ನೆಲೆಯಲ್ಲಿದ್ದ ಹರಿಹರನ ರಗಳೆಯ ರೀತಿಯನ್ನು ಅನುಸರಿಸದೆ ಮೊತ್ತಮೊದಲಿಗೆ ಷಟ್ಪದಿ ರೂಪವನ್ನು ಪಳಗಿಸಿ ದೀರ್ಘ ಕಥಾನಿರೂಪಣೆಗೆ ಸೊಗಸಾಗಿ ಅಳವಡಿಸಿಕೊಂಡದ್ದು ಇವನ ಮಹತ್ವದ ಸಾಧನೆ.ಕನ್ನಡ ಸಾಹಿತ್ಯದಲ್ಲಿ ಕವಿ ರನ್ನನನ್ನು ಬಿಟ್ಟರೆ ಅಷ್ಟೇ ನಾಟ್ಯ ಪ್ರತಿಭೆಯನ್ನು ಪ್ರಕಟಿಸಿದ ಮತೊಬ್ಬ ಕವಿ ರಾಘವಾಂಕ.

ಹರಿಶ್ಚಂದ್ರಕಾವ್ಯ
ಹರಿಶ್ಚಂದ್ರಕಾವ್ಯ ರಾಘವಾಂಕನ ಕೃತಿಗಳಲ್ಲಿಯೇ ಶ್ರೇಷ್ಥವಾದುದು ಮಾತ್ರವಲ್ಲ . ಕನ್ನಡ ಸಾಹಿತ್ಯದಲ್ಲಿಯೇ ಅಪೂರ್ವವಾದ ಕೃತಿ.ರಾಘವಾಂಕನಿಗಿಂತ ಹಿಂದಿನ ಎಲ್ಲ ಆಕಾರಗಳೊಡನೆ ಇದರ ಸಂವಿಧಾನವನ್ನು ಹೋಲಿಸಿದರೆ ಭಾರತೀಯ ಸಾಹಿತ್ಯದಲ್ಲಿಯೇ ಕಾಣದೊರೆಯುವ ನೂತನ ಸನ್ನಿವೇಶಸೃಷ್ಟಿ , ಕೃತಿಬಂಧೆ ಇಲ್ಲಿದೆ ಎಂಬುದು ಹೆಮ್ಮೆಯ ಸಂಗತಿ ಎಂದು ವಿದ್ವಾಂಸರು ಈ ಕಾವ್ಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಹರನೆಂಬುದೇ ಸತ್ಯ ಸತ್ಯವೆಂಬುದೇ ಹರನು' ಎನ್ನುವ ತತ್ವವನ್ನು ಜೀವನಕ್ಕೆ ಅಳವಡಿಸಿ ಬದುಕಿದ ಸತ್ಯಸಾಧಕ ಹರಿಶ್ಚಂದ್ರನ ಕರುಣಾದ್ಭುತವಾದ ಕಥೆಯೇ ಹರಿಶ್ಚಂದ್ರಕಾವ್ಯ.. ಇದರಲ್ಲಿ ಹದಿನಾಲ್ಕು ಸ್ಥಳಗಳಿದ್ದು ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿದೆ.ಹರಿಶ್ಚಂದ್ರನ ಪಾತ್ರ ಸತ್ಯ ಸಾಕ್ಷಾತ್ಕಾರಕ್ಕಾಗಿ ನಿರಂತರವೂ ಹೂರಾಡುವ ಆದರ್ಶಾಭೀಪ್ಸೆಯ ಪ್ರತಿಮೆಯಾಗಿದೆ. ಈ ಕೃತಿಯಲ್ಲಿ ಕಂಡುಬರುವ ಶೈಲಿಹದ , ನಾಟ್ಯಮಯವಾದ ಸನ್ನಿವೇಶಗಳು , ಪಾತ್ರಗಳಲ್ಲಿ ಕಂಡುಬರುವ ವೈವಿಧ್ಯ , ಇವೆಲ್ಲವನ್ನೂ ವ್ಯಾಪಿಸಿರುವ ದರ್ಶನ ಇವುಗಳಿಂದ ಈ ಕೃತಿಯನ್ನು ರಾಘವಾಂಕನ ಮಹಾಕಾವ್ಯವೆಂದು ಹೇಳಬಹುದು.
 
ಸಿದ್ಧರಾಮ ಪುರಾಣ
'ಕಾಯಕವೇ ಕೈಲಾಸ' ಎಂಬ ಶರಣರ ವಚನಕ್ಕೆ ಜೀವಂತ ವ್ಯಾಖ್ಯಾನದಂತೆ ಬಾಳಿದ ಸಿದ್ಧರಾಮನ ಜೀವನವನ್ನು ಕುರಿತ ಕೃತಿ . ' ಸಾಕಾರ ನಿಷ್ಠೆ ಭೂತಂಗಳೊಳಗನುಗುಕಂಪತಾನೆ ಪರಬೊಮ್ಮ' ಎಂಬ ಸೂತ್ರವೆ ಸಿದ್ಧರಾಮ ಚರಿತ್ರೆಯಲ್ಲಿ ಅಡಕವಾಗಿರುವ ತತ್ವ. ಇದು ರಾಘವಾಂಕನ ಧರ್ಮ ಶ್ರದ್ಧೆಯ ಸಾತ್ವಿಕ ಪ್ರತಿನಿಧಿಯಾಗಿದೆ.

ಸೋಮನಾಥ ಚರಿತೆ
ಸೌರಾಶ್ಟ್ರದ ಶಿವಭಕ್ತನಾದ ಆದಯ್ಯ ಪುಲಿಗೆರೆಗೆ ಬಂದು ಸೌರಾಶ್ಟ್ರದ ಸೋಮನಾಥನನ್ನು ಅಲ್ಲಿಯ ಜೈನ ಬಸದಿಯಲ್ಲಿ ಪ್ರತಿಷ್ಠಾಪಿಸಿದ ವೀರಮಾಹೆಶ್ವರ ಮನೋಧರ್ಮವನ್ನು ವ್ಯಗ್ರವಾಗಿ ನಿರೂಪಿಸುವ ಕೃತಿ.

ವೀರೇಶ ಚರಿತೆ ಹಾಗೂ ಶರಭ ಚಾರಿತ್ರ ಶಿವಪುರಾಣದ ಕಥೆಗಳು. ವೀರೇಶ ಚರಿತೆಯನ್ನು ಕವಿ ಮೀಸಲುಗವಿತೆ ಎಂದು ಕರೆದಿದ್ದಾನೆ.ಈ ಕೃತಿಯಲ್ಲಿ ರಾಘವಾಂಕ ಪ್ರಯೋಗಿಸಿ ನೋಡಿರುವ ಉದ್ದಂಡ ಷಟ್ಪದಿ ರೌದ್ರರಸವನ್ನು ಅಲೆಅಲೆಯಾಗಿ ಅಭಿವ್ಯಕ್ತಪಡಿಸುವ ಪ್ರಯತ್ನವನ್ನು ತೋರಿಸುತ್ತದೆ.ಶಿವನ ಅವತಾರದ ವೀರಭದ್ರನಿಂದ ದಕ್ಷಯಜ್ಞ ದ್ವಂಸವಾದ ಕಥೆಯೇ ಇದರ ವಸ್ತು. ಇತರೆ ದೇವತೆಗಳಿಗಿಂತ ಶಿವನೇ ಶ್ರೇಶ್ಠ ಎಂಬುದನ್ನು ಸಾರುವ ಉದ್ದೇಶ ಇಲ್ಲಿದೆ.ಶರಭ ಚಾರಿತ್ರ ಹೆಸರೇ ಸೂಚಿಸುವಂತೆ ಮಹಾವಿಷ್ಣುವಿನ ಅವತಾರವನ್ನು ಇಕ್ಕಿಮೆಟ್ಟಿದ ಶಿವನ ಶರಭಾವತಾರದ ಮಹಿಮೆಯನ್ನು ಕುರಿತದ್ದೆಂದು ತೋರುತ್ತದೆ.
(ಮಾಹಿತಿ ಕೃಪೆ: ಕಣಜ) 



ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಪದ್ಯದ ಸಾರಾಂಶ


ಸಂದ ಕಾರಿರುಳು ಕನ್ನೆಯರು ಹಗಲಂ ನೋಡ
ಲೆಂದು ಬಂದರೊ ಸುರಾಸುರರಬುಧಿಯಂ ಮಥಿಸು
ವಂದು ಹೊಸ ವಿಷದ ಹೊಗೆ ಹೊಯ್ದು ಕಗ್ಗನೆ ಕಂದಿ ಜಲದೇವಿಯರು ಮನದಲಿ
ನೊಂದು ಮಾನಿಸರಾದರೋ ಕಮಲಜಂ ನೀಲ   
ದಿಂದ ಮಾಡಿದ ಸಾಲಭಂಜಿಕೆಗಳೊದವಿ ಜೀ       
ವಂದಳೆದವೋ ಎನಿಪ್ಪಂದದಿಂ ಬಂದರಂಗನೆಯರವನೀಶನೆಡೆಗೆ     || || 
ಸಂದ (ಬಂದ) ಕಾರಿರುಳು (ಗಾಢಕತ್ತಲೆಯ ರಾತ್ರಿ) ಕನ್ನೆಯರು (ಕುಮಾರಿಯರು) ಹಗಲಂ (ಹಗಲನ್ನು) ನೋಡಲೆಂದು (ನೋಡುವುದಕ್ಕೆಂದು) ಬಂದರೊ. ಸುರಾಸುರರು (ದೇವತೆಗಳು ಮತ್ತು ರಾಕ್ಷಸರು) + ಅಂಬುಧಿಯಂ (ಸಮುದ್ರವನ್ನು) ಮಥಿಸುವಂದು (ಮಂಥನ ಮಾಡುವಾಗ) ಹೊಸ ವಿಷದ ಹೊಗೆ ಹೊಯ್ದು (ಸುರಿದು) ಕಗ್ಗನೆ (ಕಪ್ಪಗೆ) ಕಂದಿ (ಕಂದುಹೋಗಿ) ಜಲದೇವಿಯರು ಮನದಲಿ (ಮನದಲ್ಲಿ) ನೊಂದು ಮಾನಿಸರ್ (ಮನುಷ್ಯರು) + ಆದರೋ, ಕಮಲಜಂ (ಬ್ರಹ್ಮನು) ನೀಲದಿಂದ (ನೀಲಿ ಬಣ್ಣದಿಂದ) ಮಾಡಿದ ಸಾಲಭಂಜಿಕೆಗಳ್ (ಗೊಂಬೆಗಳು/ವಿಗ್ರಹಗಳು) + ಒದವಿ (ಹುಟ್ಟಿ) ಜೀವಂ (ಜೀವ) + ತಳೆದವೋ(ಪಡೆದವೋ) ಎನಿಪ್ಪಂದದಿಂ (ಎನ್ನಿಸುವಂತೆ) ಬಂದರ್ + ಅಂಗನೆಯರ್ (ಅಂಗನೆಯರು / ಗಾನರಾಣಿಯರು) + ಅವನೀಶನ (ರಾಜನ) + ಎಡೆಗೆ (ಕಡೆಗೆ)
ಕಾಳರಾತ್ರಿಯ ಕನ್ಯೆಯರು ಹಗಲನ್ನು ನೋಡುವುದಕ್ಕೆಂದು ಬಂದರೋ! ದೇವತೆಗಳು ಮತ್ತು ರಾಕ್ಷಸರು ಸಮುದ್ರವನ್ನು ಮಂಥನ ಮಾಡುವ ಸಮಯದಲ್ಲಿ ಹೊರಹೊಮ್ಮಿದ ಹೊಸ ವಿಷದ ಹೊಗೆ ಸುರಿದು, ಕಪ್ಪಾಗಿ ಘನೀಕೃತವಾದಂತೆ ಜಲದೇವಿಯರು ಮನದಲ್ಲಿ ನೊಂದು, ಮನುಷ್ಯರಾದರೋ! ಬ್ರಹ್ಮನು ನೀಲಿ ಬಣ್ಣದಿಂದ ಮಾಡಿದ ಗೊಂಬೆಗಳು ಜೀವವನ್ನು ಪಡೆದವೋ! ಎನ್ನುವಂತೆ ಗಾನರಾಣಿಯರು ಮಹಾರಾಜ ಹರಿಶ್ಚಂದ್ರ ಇರುವಲ್ಲಿಗೆ ಬಂದರು.

ಮಾಯದಬಲೆಯರು ಕಾಣುತ್ತ ಮಝ ಭಾಪದಟ
ರಾಯ ಮಝರೇ ರಾಯ ರಾಯದಳವುಳಕಾಱ
ರಾಯಕಂಟಕ ರಾಯಜಗಜಟ್ಟಿ ರಾಯದಲ್ಲಣ ರಾಯಕೋಳಾಹಳ
ರಾಯಭುಜಬಲಭೀಮ ರಾಯಮರ್ಧನ ರಾಯ
ಜೀಯ ಸ್ಥಿರಂಜೀವಯೆಂದು ಕೀರ್ತಿಸಿ ಗಾಣ
ನಾಯಕಿಯರೊಲಿದು ದಂಡಿಗೆವಿಡಿದು ಪೊಡಮಟ್ಟು ಹಾಡಲುದ್ಯೋಗಿಸಿದರು  || ||
      
ಮಾಯದ + ಅಬಲೆಯರು (ಹೆಣ್ಣುಮಕ್ಕಳು) ಕಾಣುತ್ತ ಮಝ (ಇದು ಹೊಗಳಿಕೆಯ ಒಂದು ಮಾತು/ ಒಂದು ಉದ್ಗಾರವಾಚಕ) ಭಾಪು (ಇದು ಹೊಗಳಿಕೆಯ ಒಂದು ಮಾತು/ ಒಂದು ಉದ್ಗಾರವಾಚಕ) + ಅದಟ (ಶೂರ / ಪರಾಕ್ರಮಿ) ರಾಯ (ರಾಜ) ಮಝರೇ ರಾಯ ರಾಯದಳವುಳಕಾರ (ಶತ್ರು ರಾಜರನ್ನು ಸೂರೆ ಮಾಡುವವನು) ರಾಯಕಂಟಕ (ಶತ್ರುರಾಜರಿಗೆ ಕಂಟಕಪ್ರಾಯ ನಾದವನು) ರಾಯಜಗಜೆಟ್ಟಿ (ರಾಜರಲ್ಲಿ ಜಗಜಟ್ಟಿ) ರಾಯದಲ್ಲಣ (ಶತ್ರುರಾಜರನ್ನು ತಲ್ಲಣಗೊಳಿಸುವವನು) ರಾಯಕೋಳಾಹಳ (ಶತ್ರುರಾಜರಲ್ಲಿ ಕೋಲಾಹಲವನ್ನು ಉಂಟು ಮಾಡುವವನು) ರಾಯಭುಜಬಲಭೀಮ(ಭೀಮನಂತೆ ಬಲಶಾಲಿ) ರಾಯಮರ್ದನ (ಶತ್ರುರಾಜರನ್ನು ನಾಶಮಾಡುವವನು) ರಾಯಜೀಯ (ರಾಜ ಒಡೆಯ) ಸ್ಥಿರಂಜೀವ (ಚಿರಂಜೀವಿಯಾಗು) + ಎಂದು ಕೀರ್ತಿಸಿ ಗಾಣನಾಯಕಿಯರು (ಗಾನನಾಯಕಿಯರು) + ಒಲಿದು (ಪ್ರೀತಿಯಿಂದ) ದಂಡಿಗೆ (ಒಂದು ತಂತಿವಾದ್ಯ) + ಹಿಡಿದು ಪೊಡಮಟ್ಟು (ನಮಸ್ಕರಿಸಿ) ಹಾಡಲು + ಉದ್ಯೋಗಿಸಿದರು (ಪ್ರಾರಂಭಿಸಿದರು)
ಆ ಮಾಯದ ಹೆಣ್ಣುಮಕ್ಕಳಿಬ್ಬರು ಮಹಾರಾಜ ಹರಿಶ್ಚಂದ್ರನನ್ನು ಕಂಡು; ಮಝ, ಭಾಪು, ಅದಟರಾಯ, ಮಝರೇ ರಾಯ, ರಾಯದಳವುಳಕಾರ, ರಾಯಕಂಟಕ, ರಾಯಜಗಜೆಟ್ಟಿ, ರಾಯದಲ್ಲಣ, ರಾಯಕೋಳಾಹಳ, ರಾಯಭುಜಬಲಭೀಮ, ರಾಯಮರ್ದನ ಎಂದು ಗುಣಗಾನ ಮಾಡುತ್ತಾ ಒಡೆಯನೇ ಚಿರಂಜೀವಿಯಾಗು ಎಂದು ಕೀರ್ತಿಸಿದರು. ಆನಂತರ ಆ ಗಾನನಾಯಕಿಯರು ಪ್ರೀತಿಯಿಂದ ನಮಸ್ಕರಿಸಿ ದಂಡಿಗೆ ಹಿಡಿದು ಹಾಡಲು ಪ್ರಾರಂಭಿಸಿದರು.
      
ಎಕ್ಕಲವ ಬಳಿಬಿಡಿದು ಸುತ್ತಿದಾಸಱನು ಮುನಿ
ರಕ್ಕಸನ ಬನಕೆ ಬಂದಂಜಿಕೆಯನೆರಡನೆಯ
ಮುಕ್ಕಣ್ಣನೆನಿಪ ಗುರುವಾಜ್ಞೆಗೆಟ್ಟಳಲನಲ್ಲದೆ ಕನಸ ಕಂಡ ಭಯವ
ಮಿಕ್ಕು ಮಱವಂತಡಸಿ ಕವಿವ ಗತಿಗಳ ಸೊಗಸ
ನಕ್ಕಿಸದೆ ಸಮಯೋಚಿತದ ಪಸಾಯಕ್ಕೆ ಮನ
ವುಕ್ಕಿ ಸರ್ವಾಭರಣಮಂ ಗಾಣರಾಣಿಯರಿಗಿತ್ತನು ಹರಿಶ್ಚಂದ್ರನು        || ||
ಎಕ್ಕಲವ (ಕಾಡುಹಂದಿಯ) ಬಳಿ (ದಾರಿ) + ಹಿಡಿದು ಸುತ್ತಿದ + ಆಸರನು (ದಣಿವನ್ನು / ಬಳಲಿಕೆಯನ್ನು) ಮುನಿ ರಕ್ಕಸನ ಬನಕೆ ಬಂದು + ಅಂಜಿಕೆಯನು (ಅಂಜಿಕೆಯನ್ನು) + ಎರಡನೆಯ ಮುಕ್ಕಣ್ಣನ್ (ಶಿವ) + ಎನಿಪ ಗುರುವಾಜ್ಞೆ + ಕೆಟ್ಟು ಅಳಲನ್ (ದುಃಖವನ್ನು) + ಅಲ್ಲದೆ ಕನಸ ಕಂಡ ಭಯವ (ಭಯವನ್ನು) ಮಿಕ್ಕು (ಅತಿಶಯವಾಗಿ) ಮರೆವಂತೆ ಅಡಸಿ (ಪ್ರಾಪ್ತವಾಗಿ) ಕವಿದ (ಆವರಿಸಿದ) ಗತಿಗಳ (ಸಂಗೀತದ ಗತಿಗಳ) ಸೊಗಸನ್ (ಸೊಗಸನ್ನು) + ಅಕ್ಕಿಸದೆ (ಅಡಗಿಸಿಕೊಳ್ಳದೆ) ಸಮಯೋಚಿತದ ಪಸಾಯಕ್ಕೆ (ಬಹುಮಾನಕ್ಕೆ / ಉಡುಗೊರೆಗೆ) ಮನ + ಉಕ್ಕಿ ಸರ್ವಾಭರಣಮಂ ಗಾಣರಾಣಿಯರಿಗೆ + ಇತ್ತನು (ಕೊಟ್ಟನು)
       ಹರಿಶ್ಚಂದ್ರನು ಕಾಡುಹಂದಿಯನ್ನು ಹಿಂಬಾಲಿಸಿ ಬಂದ ಬಳಲಿಕೆಯನ್ನು, ವಿಶ್ವಾಮಿತ್ರನ ಬನಕ್ಕೆ ಬಂದ ಅಂಜಿಕೆಯನ್ನು, ಎರಡನೆಯ ಶಿವನೆನಿಸಿದ ಗುರು ವಾಲ್ಮೀಕಿಯ ಆಜ್ಞೆಯನ್ನು ಮೀರಿದ ದುಃಖವನ್ನು ಹಾಗೂ ಕಾಡಿನಲ್ಲಿ ಕನಸು ಕಂಡ ಭಯವನ್ನು ಅತಿಶಯವಾಗಿ ಮರೆಯುವಂತೆ ಆವರಿಸಿದ ಸಂಗೀತದ ತಾಳಲಯಗತಿಗಳ ಸೊಗಸನ್ನು ಅಡಗಿಸಿಕೊಳ್ಳದೆ ಹರಿಶ್ಚಂದ್ರನು ಮನದಲ್ಲಿ ಸಂತಸಮೂಡಿಸಿದ ಗಾನರಾಣಿಯರಿಗೆ ಸಮಯೋಚಿತವಾದ ಸರ್ವಾಭರಣವನ್ನು ಬಹುಮಾನವಾಗಿ ಕೊಟ್ಟನು.

ಬಡತನದ ಹೊತ್ತಾನೆ ದೊರಕಿ ಫಲವೇನು ನೀ
ರಡಸಿರ್ದ ಹೊತ್ತಾಜ್ಯ ದೊರಕಿ ಫಲವೇನು ರುಜೆ
ಯಡಸಿ ಕೆಡೆದಿಹ ಹೊತ್ತು ರಂಭೆ ದೊರೆಕೊಂಡಲ್ಲಿ ಫಲವೇನು ಸಾವ ಹೊತ್ತು
ಪೊಡವಿಯೊಡೆತನ ದೊರಕಿ ಫಲವೇನು ಕಡುವಿಸಿಲು
ಹೊಡೆದು ಬೆಂಡಾಗಿ ಬೀಳ್ವೆಮಗೆ ನೀನೊಲಿದು ಮಣಿ
ದೊಡಿಗೆಗಳನಿತ್ತು ಫಲವೇನು ಭೂಪಾಲ ಹೇಳೆನುತ ಮತ್ತಿಂತೆಂದರು || ||
ಬಡತನದ ಹೊತ್ತು (ಸಮಯದಲ್ಲಿ) + ಆನೆ ದೊರಕಿ ಫಲವೇನು ನೀರಡಸಿರ್ದ (ಬಾಯಾರಿಕೆಯಾದ) ಹೊತ್ತು (ಸಮಯದಲ್ಲಿ) + ಆಜ್ಯ (ತುಪ್ಪವು) ದೊರಕಿ ಫಲವೇನು ರುಜೆಯಡಸಿ (ರೋಗಬಂದು) ಕೆಡೆದಿಹ (ಬಿದ್ದಿರುವ) ಹೊತ್ತು (ಸಮಯದಲ್ಲಿ) ರಂಭೆ ದೊರೆಕೊಂಡಲ್ಲಿ (ದೊರೆತರೆ) ಫಲವೇನು ಸಾವ (ಸಾಯುವ) ಹೊತ್ತು (ಸಮಯದಲ್ಲಿ) ಪೊಡವಿಯ (ಭೂಮಿಯ / ರಾಜ್ಯದ) + ಒಡೆತನ (ದೊರೆತನ) ದೊರಕಿ ಫಲವೇನು ಕಡು + ಬಿಸಿಲು ಹೊಡೆದು ಬೆಂಡಾಗಿ ಬೀಳ್ವ (ಬೀಳುವ) + ಎಮಗೆ (ನಮಗೆ) ನೀನು + ಒಲಿದು ಮಣಿ + ತೊಡಿಗೆಗಳನು (ಆಭರಣಗಳನ್ನು) + ಇತ್ತು (ಕೊಟ್ಟು) ಫಲವೇನು ಭೂಪಾಲ (ಹರಿಶ್ಚಂದ್ರ) ಹೇಳು + ಎನುತ (ಎನ್ನುತ್ತಾ) ಮತ್ತೆ + ಇಂತೆಂದರು (ಹೀಗೆ ಹೇಳಿದರು).
ಬಡತನದ ಸಮಯದಲ್ಲಿ ಆನೆಯು ದೊರೆತು ಫಲವೇನು? ಬಾಯಾರಿಕೆಯ ಸಮಯದಲ್ಲಿ ತುಪ್ಪವು ದೊರಕಿ ಫಲವೇನು? ರೋಗಬಂದು ಬಿದ್ದಿರುವಾಗ ರಂಭೆಯು ದೊರಕಿ ಫಲವೇನು? ಸಾಯುವ ಸಮಯದಲ್ಲಿ ರಾಜ್ಯದ ದೊರೆತನ ದೊರಕಿ ಫಲವೇನು? ಕಡುಬಿಸಿಲಿನಿಂದ ಬಳಲಿ ಬೆಂಡಾಗಿರುವ ಸಮಯದಲ್ಲಿ ನಮಗೆ ನೀನು ಪ್ರೀತಿಯಿಂದ ಆಭರಣಗಳನ್ನು ಕೊಟ್ಟು ಫವೇನು?? ಎಂದು ಹೇಳುತ್ತಾ ಗಾನರಾಣಿಯರು ಮತ್ತೆ ಹೀಗೆ ಹೇಳಿದರು.

ಕಡಲೊಳಾಳ್ವಂಗೆ ತೆಪ್ಪವನು ದಾರಿದ್ರಂಗೆ
ಕಡವರವನತಿರೋಗಿಗಮೃತಮಂ ಕೊಟ್ಟಡವ
ರಡಿಗಡಿಗದಾವ ಹರುಷವನೆಯ್ದು ತಿಪ್ಪರವರಂ ಪೋಲ್ವರೀ ಪೊತ್ತಿನ
ಸುಡುಸುಡುನೆ ಸುಡುವ ಬಿಱುಬಿಸಿಲ ಸೆಕೆಯುಸುರ ಬಿಸಿ
ಹೊಡೆದುದುರಿಹತ್ತಿ ಬಾಯ್ ಬತ್ತಿ ಡಗೆ ಸುತ್ತಿ ಸಾ  
ವಡಸುತಿದೆ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಭೂಭುಜಯೆಂದರು          || ||
ಕಡಲೊಳ್ (ಸಮುದ್ರದಲ್ಲಿ) ಆಳ್ವಂಗೆ (ಮುಳುಗುವವನಿಗೆ) ತೆಪ್ಪವನು (ತೆಪ್ಪವನ್ನು) ದರಿದ್ರಂಗೆ (ಬಡವನಿಗೆ) ಕಡವರವನು (ಚಿನ್ನವನ್ನು / ಸಂಪತ್ತನ್ನು) + ಅತಿರೋಗಿಗೆ + ಅಮೃತಮಂ (ಅಮೃತವನ್ನು) ಕೊಟ್ಟಡೆ (ಕೊಟ್ಟರೆ) ಅವರ್ (ಅವರು) + ಅಡಿಗಡಿಗೆ (ಮತ್ತೆಮತ್ತೆ) ಅದಾವ (ಅದೆಂತಹ) ಹರುಷವನು (ಸಂತೋಷವನ್ನು) + ಎಯ್ದುತಿಪ್ಪರ್ (ಹೊಂದುವರು) + ಅವರಂ (ಅವರನ್ನು) ಪೋಲ್ವರ್ (ಹೋಲುವವರು) + ಈ ಪೊತ್ತಿನ (ಈ ಸಮಯದ) ಸುಡುಸುಡುನೆ ಸುಡುವ ಬಿರುಬಿಸಿಲ ಸೆಕೆಯುಸುರ (ಬಿಸಿ ಉಸಿರು) ಬಿಸಿ ಹೊಡೆದುದು + ಉರಿಹತ್ತಿ ಬಾಯ್ ಬತ್ತಿ ಡಗೆ (ಸೆಕೆ) ಸುತ್ತಿ ಸಾವು + ಅಡಸುತಿದೆ (ಆವರಿಸುತ್ತಿದೆ) ನಿನ್ನ ಮುತ್ತಿನ ಸತ್ತಿಗೆಯನು (ರಾಜ ಲಾಂಛನವಾದ ಶ್ವೇತ ಛತ್ರವನ್ನು) + ಇತ್ತು (ಕೊಟ್ಟು) ಸಲಹು (ಕಾಪಾಡು) ಭೂಭುಜ (ರಾಜ) + ಎಂದರು.
ಆ ಗಾನರಾಣಿಯರು ರಾಜ ಹರಿಶ್ಚಂದ್ರನನ್ನು ಕುರಿತು ಸಮುದ್ರದಲ್ಲಿ ಮುಳುಗುವವನಿಗೆ ತೆಪ್ಪವನ್ನು, ಬಡವನಿಗೆ ಚಿನ್ನವನ್ನು, ಅತಿರೋಗಿಗೆ ಅಮೃತವನ್ನು ಕೊಟ್ಟರೆ ಅವರು ಸಂತೋಷವನ್ನು ಹೊಂದುವರು. ಅವರನ್ನು ಹೋಲುವ ನಮಗೆ ಸುಡುಸುಡನೆ ಸುಡುವ ಈ ಬಿರುಬಿಸಿಲ ಸೆಕೆಯಲ್ಲಿ ಉಸಿರಿನ ಬಿಸಿ ಹೆಚ್ಚಾಗಿ ಉರಿಯಹತ್ತಿದೆ, ನಮ್ಮ ಬಾಯಿ ಬತ್ತಿಹೋಗಿದೆ, ಬಿಸಿಲ ಝಳದಿಂದ ಸಾವು ಆವರಿಸುತ್ತಿದೆ, ಆದ್ದರಿಂದ ನಮಗೆ ನಿನ್ನ ಮುತ್ತಿನ ಸತ್ತಿಗೆಯನ್ನು(ಮುತ್ತಿನಿಂದ ಮಾಡಿದ ಬಿಳಿಯ ಛತ್ರಿ. ಇದು ಪವಿತ್ರವಾದ ರಾಜಲಾಂಛನಗಳಲ್ಲಿ ಒಂದಾಗಿದೆ) ಕೊಟ್ಟು ನಮ್ಮನ್ನು ಕಾಪಾಡು ಎಂದರು.

ರವಿಕುಲದ ಪೀಳಿಗೆಯೊಳೊಗೆದ ರಾಯರ್ಗೆ ಪ
ಟ್ಟವ ಕಟ್ಟುವಂದಿದಿಲ್ಲದಡರಸುತನ ಸಲ್ಲ
ದವನಿಯೊಳು ಯುದ್ಧರಂಗದೊಳಿದಂ ಕಂಡ ಹಗೆಗಳು ನಿಲ್ಲರಿದಱ ಕೆಳಗೆ
ಕವಿವ ನೆಳಲೊಳಗಾವನಿರ್ದನಾತಂಗೆ ತಾಂ       
ತವಿಲೆಡರು ಬಡತನಂ ರೋಗವಪಕೀರ್ತಿ ಪರಿ
ಭವ ಭಯಂ ಹರೆವುದಿದನಱದಱದು ಸತ್ತಿಗೆಯ ಕೊಡಬಹುದೆ ಹೇಳೆಂದನು      || ||
ರವಿಕುಲದ ಪೀಳಿಗೆಯೊಳು (ಪರಂಪರೆಯಲ್ಲಿ) + ಒಗೆದ (ಹುಟ್ಟಿದ) ರಾಯರ್ಗೆ (ರಾಜರಿಗೆ) ಪಟ್ಟವ (ಪಟ್ಟವನ್ನು) ಕಟ್ಟುವಂದು (ಕಟ್ಟುವ ಸಮಯದಲ್ಲಿ) + ಇದು + ಇಲ್ಲದಡೆ (ಇಲ್ಲದಿದ್ದರೆ) + ಅರಸುತನ ಸಲ್ಲದು (ಸಲ್ಲುವುದಿಲ್ಲ) + ಅವನಿಯೊಳು (ಭೂಮಿಯಲ್ಲಿ) ಯುದ್ಧರಂಗದೊಳು (ಯುದ್ಧರಂಗದಲ್ಲಿ) + ಇದಂ (ಇದನ್ನು) ಕಂಡ (ನೋಡಿದ) ಹಗೆಗಳು (ಶತ್ರುಗಳು) ನಿಲ್ಲರು (ನಿಲ್ಲುವುದಿಲ್ಲ) + ಇದರ ಕೆಳಗೆ ಕವಿವ (ಆವರಿಸುವ) ನೆಳಲೊಳಗೆ (ನೆರಳಿನಲ್ಲಿ) + ಆವನ್ (ಯಾವನು) + ಇರ್ದನ್ (ಇರುವನೋ) + ಆತಂಗೆ (ಆತನಿಗೆ) ತಾಂ (ಅದು) ತವಿಲ್ (ತೊಂದರೆ) + ಎಡರು (ಅಡಚಣೆಗಳು / ಅಡ್ಡಿಗಳು) ಬಡತನಂ (ಬಡತನ) ರೋಗ + ಅಪಕೀರ್ತಿ (ಕೆಟ್ಟಹೆಸರು) ಪರಿಭವ (ಸೋಲು) ಭಯಂ (ಭಯವು) ಹರೆಯುವುದು (ಇಲ್ಲದಂತಾಗುವುದು) ಇದನ್ (ಇದನ್ನು) + ಅರಿದು (ತಿಳಿದು) ಸತ್ತಿಗೆಯ (ರಾಜ ಲಾಂಛನವಾದ ಛತ್ರಿಯನ್ನು) ಕೊಡಬಹುದೆ ಹೇಳು + ಎಂದನು.
ಹರಿಶ್ಚಂದ್ರನು ಗಾನರಾಣಿಯರನ್ನು ಕುರಿತು ಸೂರ್ಯವಂಶದ ಪರಂಪರೆಯಲ್ಲಿ ಹುಟ್ಟಿದ ರಾಜರಿಗೆ ಪಟ್ಟವನ್ನು ಕಟ್ಟುವ ಸಮಯದಲ್ಲಿ ಈ ರಾಜಲಾಂಛನವಾದ ಸತ್ತಿಗೆಯು ಇಲ್ಲದಿದ್ದರೆ ರಾಜತನವು ದೊರೆಯುವುದಿಲ್ಲ್ಲ. ಈ ಭೂಮಿಯ ಮೇಲೆ, ಯುದ್ಧರಂಗದಲ್ಲಿ ಸತ್ತಿಗೆಯನ್ನು ನೋಡಿದ ಶತ್ರುಗಳು ನಿಲ್ಲುವುದಿಲ್ಲ. ಈ ಸತ್ತಿಗೆಯ ನೆರಳಿನಲ್ಲಿ ಯಾವನು ಇರುವನೋ ಅತನಿಗೆ ವಿಪತ್ತು, ಅಡಚಣೆಗಳು, ಬಡತನ, ರೋಗ, ಅಪಕೀರ್ತಿ, ಸೋಲು, ಭಯ ಕಳೆದುಹೋಗುವುದು. ಇದನ್ನು ತಿಳಿದು ತಿಳಿದು ಸತ್ತಿಗೆಯನ್ನು ಕೊಡಬಹುದೇ ಹೇಳಿ ಎಂದನು.

ಅನುನಯದೊಳೆಲ್ಲವಂ ಕೊಡಬಹುದು ಬಿಡಬಹುದು
ಜನನಿಯಂ ಜನಕನಂ ನಲ್ಲಳಂ ದೈವವಂ
ಮನವಾರೆ ನಂಬಿ ನಚ್ಚಿರ್ದ ಪರಿವಾರಮಂ ಕೊಡುವ ಬಿಡುವತಿಕಲಿಗಳು
ಜನರೊಳಗೆ ಜನಿಸರೆಂದೆನಲು ನೀನೀಗ ಪೇ
ಳ್ದನಿತಱೊಳು ಬೇಡಿದಡೆ ಕೊಡಬೇಡ ಕೊಡೆಯನೀ
ಯೆನೆ ಲೋಭವೇಕರಸ ಎನಲಿದಲ್ಲದೆ ಬೇಱೆ ಮಾತೆಪಿತರಿಲ್ಲೆಂದನು  || ||
ಅನುನಯದೊಳು (ಬಹಳ ಪ್ರೀತಿಯಿಂದ) + ಎಲ್ಲವಂ (ಎಲ್ಲವನ್ನು) ಕೊಡಬಹುದು ಬಿಡಬಹುದು. ಜನನಿಯಂ (ತಾಯಿಯನ್ನು) ಜನಕನಂ (ತಂದೆಯನ್ನು) ನಲ್ಲಳಂ (ಸತಿಯನ್ನು) ದೈವವಂ (ದೇವರನ್ನು) ಮನವಾರೆ (ಮನಸಾರೆ) ನಂಬಿ ನಚ್ಚಿರ್ದ (ವಿಶ್ವಾಸವಿಟ್ಟಿರುವ) ಪರಿವಾರಮಂ (ಪರಿವಾರವನ್ನು) ಕೊಡುವ ಬಿಡುವ + ಅತಿಕಲಿಗಳು ಜನರೊಳಗೆ (ಈ ಲೋಕದೊಳಗೆ) ಜನಿಸರ್ (ಹುಟ್ಟರು) + ಎಂದು + ಎನಲು(ಹೇಳಲು) ನೀನು + ಈಗ ಪೇಳ್ವ (ಹೇಳುವ) + ಅನಿತರೊಳು (ಅಷ್ಟರಲ್ಲಿ) ಬೇಡಿದಡೆ (ಬೇಡಿದರೆ) ಕೊಡಬೇಡ ಕೊಡೆಯನ್ (ಸತ್ತಿಗೆಯನ್ನು) ಈಯ್ (ಕೊಡು) + ಎನೆ (ಎನಲು) ಲೋಭವು (ದುರಾಸೆ) + ಏಕೆ + ಅರಸ + ಎನಲು + ಇದಲ್ಲದೆ ಬೇರೆ ಮಾತೆಪಿತರು (ತಾಯಿತಂದೆಯರು) + ಇಲ್ಲ + ಎಂದನು
ಹರಿಶ್ಚಂದ್ರನು ಗಾನರಾಣಿಯರನ್ನು ಕುರಿತು ಪ್ರೀತಿಯಿಂದ ಎಲ್ಲವನ್ನು ಕೊಡಬಹುದು, ಬಿಡಬಹುದು. ತಾಯಿಯನ್ನು, ತಂದೆಯನ್ನು, ಸತಿಯನ್ನು, ದೇವರನ್ನು, ಮನಸಾರೆ ನಂಬಿ ವಿಶ್ವಾಸವಿಟ್ಟ ಪರಿವಾರವನ್ನು ಕೊಡುವ ಅತಿಶೂರರು ಜನರಲ್ಲಿ (ಲೋಕದ) ಜನಿಸರು ಎಂದನು. ಆಗ ಗಾನರಾಣಿಯರು ಹರಿಶ್ಚಂದ್ರನನ್ನು ಕುರಿತು ಮಹಾರಾಜ ನೀನು ಈಗ ಹೇಳಿದ ಅವರಲ್ಲ್ಲಿ ಯಾರನ್ನಾದರೂ ಬೇಡಿದರೆ ಕೊಡಬೇಡ. ನಿನ್ನ ಬಳಿ ಇರುವ ಮುತ್ತನ ಸತ್ತಿಗೆಯನ್ನು ಕೊಡು ಎಂದರೆ ಲಭವೇಕೆ?’ ಎಂದರು. ಆಗ ಹರಿಶ್ಚಂದ್ರನು ಇದಲ್ಲದೆ ಬೇರೆ ತಾಯಿತಂದೆಯರು ಇಲ್ಲಎಂದನು.

ಲೋಗರಿಗೆ ಕೊಡಬಾರದಾಗಿ ಸತಿ ವಂಶಗತ
ವಾಗಿ ಬಂದುದಱಂದ ತಂದೆ ಪಟ್ಟವ ಕಟ್ಟು
ವಾಗಲರ್ಚಿಸಿಕೊಂಬುದಾಗಿ ದೈವಂ ನೆಳಲ ತಂಪನೊಸೆದೀವುದಾಗಿ
ಸಾಗಿಸುವ ತಾಯ್ ಧುರದೊಳರಿಗಳಂ ನಡುಗಿಸುವು
ದಾಗಿ ಚತುರಂಗಬಲವೆನಿಸಿತೀ ಛತ್ರವೆಂ
ಬಾಗಳಿದನಱದಱದು ಬೇಡುವರನತಿಮರುಳರೆನ್ನರೇ ಮೂಜಗದೊಳು           || ||
       ಲೋಗರಿಗೆ (ಜನರಿಗೆ) ಕೊಡಬಾರದಾಗಿ ಸತಿ ವಂಶಗತವಾಗಿ (ವಂಶಪಾರಂಪರ್ಯವಾಗಿ) ಬಂದಿದ್ದರಿಂದ, ತಂದೆ ಪಟ್ಟವ (ಪಟ್ಟವನ್ನು) ಕಟ್ಟುವಾಗಲ್ (ಕಟ್ಟುವ ಸಮಯದಲ್ಲಿ) + ಅರ್ಚಿಸಿ (ಪೂಜಿಸಿ) ಕೊಂಬುದಾಗಿ (ಕೊಳ್ಳುವುದಾಗಿ) ದೈವಂ (ದೇವರು) ನೆಳಲ (ನೆರಳಿನ) ತಂಪನು + ಒಸೆದು (ಸೊಗಸಾಗಿ) + ಈವುದಾಗಿ (ಕೊಡುವುದಾಗಿ) ಸಾಗಿಸುವ (ಪೋಷಿಸುವ) ತಾಯ್ (ತಾಯಿ) ಧುರದೊಳ್ (ಯುದ್ಧದಲ್ಲಿ) + ಅರಿಗಳಂ (ಶತ್ರುಗಳನ್ನು) ನಡುಗಿಸುವುದಾಗಿ ಚತುರಂಗಬಲವು + ಎನಿಸಿತು + ಈ ಛತ್ರವು (ಸತ್ತಿಗೆಯು) ಎಂಬಾಗಳ್ (ಎಂದು ಹೇಳುವಾಗ) + ಇದನ್ (ಇದನ್ನು) + ಅರಿದರಿದು (ತಿಳಿದು ತಿಳಿದು) ಬೇಡುವರನು (ಬೇಡುವವರನ್ನು) ಅತಿಮರುಳರು (ಬಹಳ ದಡ್ಡರು) + ಎನ್ನರೇ (ಎನ್ನುವುದಿಲ್ಲವೇ?) ಮೂಜಗದೊಳು (ಮೂರುಲೋಕದಲ್ಲಿ).
ಹರಿಶ್ಚಂದ್ರನು ಗಾನರಾಣಿಯರನ್ನು ಕುರಿತು: ಈ ಸತ್ತಿಗೆಯು ಜನರಿಗೆ ಕೊಡಬಾರದು. ವಂಶಪರಂಪರೆಯಿಂದ ಬಂದಿದ್ದರಿಂದ ತಂದೆಯು, ಪಟ್ಟವನ್ನು ಕಟ್ಟುವ ಸಮಯದಲ್ಲಿ ಇದನ್ನು ಪೂಜಿಸಿ ಕೊಳ್ಳುವುದರಿಂದ; ದೇವರು, ನೆರಳಿನ ತಂಪನ್ನು ಸೊಗಸಾಗಿ ಕೊಡುವುದರಿಂದ; ಪೋಷಿಸುವ ತಾಯಿ, ಯುದ್ಧದಲ್ಲಿ ಶತ್ರುಗಳನ್ನು ನಡುಗಿಸುವುದರಿಂದ ಚತುರಂಗ ಬಲ ಎನಿಸಿಕೊಂಡಿದೆ. ಇದನ್ನು ತಿಳಿದುತಿಳಿದು ಬೇಡುವವರನ್ನು ಮೂರುಲೋಕದಲ್ಲಿಯೂ ಅತಿದಡ್ಡರು(ಅತಿ ಮೂರ್ಖರು) ಎನ್ನುವುದಿಲ್ಲ್ಲವೇ? ಎಂದನು.
 

 **************************************
ರಾಘವಾಂಕನ ಹರಿಶ್ಚಂದ್ರ ಕಾವ್ಯ: ಓಂದು ಚಿಂತನೆ
ಹರಿಹರ ರಘವಾಂಕರ ಬಗ್ಗೆ ಪ್ರಸಿದ್ಧವಾದ ದಂತಕಥೆಯೊಂದಿದೆ. ಹೇಳಿಕೇಳಿ ದಂತಕಥೆಯಾದ ಅದನ್ನು ಗಂಭೀರವಾಗಿ ಪರಿಗಣಿಸುವುದೂ ಕಷ್ಟವೆನಿಸೀತು. ಆದರೆ ಈ ಕಥೆ ಅವರಿಬ್ಬರ ಕಾವ್ಯದ ಬಗ್ಗೆ ಬಹಳ ಮಹತ್ವದ ಮಾತುಗಳನ್ನು ಹೇಳುತ್ತದೆಯೆಂದು ಅನಿಸುತ್ತದೆ. ಆ ಕಥೆ ಹೀಗಿದೆ:
‘ರಾಘವಾಂಕ ವಿರಚಿತ ಹರಿಶ್ಚಂದ್ರ ಕಾವ್ಯ ಅರಸನಿಗೆ ಬಹಳ ಮೆಚ್ಚಿಗೆಯಾಗಿ ಆ ಕಾವ್ಯವನ್ನು ಬಂಗಾರದ ಹರಿವಾಣದಲ್ಲಿಟ್ಟು, ಪಲ್ಲಕ್ಕಿಯಲ್ಲಿ ಮಡಗಿ, ರಾಘವೇಶ್ವರನನ್ನು ಗಜಮಸ್ತಕದ ಮೇಲೆ ಕುಳ್ಳಿರಿಸಿ ಆ ಊರಿನಲ್ಲೆಲ್ಲಾ ಮೆರೆಯಿಸಿದರು. ರಾಘವಾಂಕ ತನ್ನ ಹರಿಶ್ಚಂದ್ರ ಕಾವ್ಯವನ್ನು ಪೊನ್ನ ಹರಿವಾಣದಲ್ಲಿ ಕೊಂಡೊಯ್ದು ಹರೀಶ್ವರನ ಮುಂದಿರಿಸಿ ‘ನಾನು ಬರೆದ ಹರಿಶ್ಚಂದ್ರ ಕೃತಿ’ ಎಂದು ಹೇಳಲು, ಆತನು ಅದನ್ನು ನೋಡದೆ ತನ್ನೊಡನೆ ಮಾತಾಡದೇ ಇರಲು ಅಡಿಗೆರಗಿ ‘ದೇವ ನಿಮ್ಮಿಂದಲೇ ಕಾವ್ಯ ಜಸವೆಡೆಯಲೀ ಜಗದೊಳು’ ಎಂದು ಪ್ರಾರ್ಥಿಸಲು, ಅದಕ್ಕೆ ಹರೀಶ್ವರನು ‘ಮೃಡ ಕಥ ಕಥನಕ್ಕಲ್ಲದೆ ರಾಜಕಥೆಗೊಡಂಬಡದೆಮ್ಮ ಮನ. ಇಲ್ಲಿಗೇಕೆ ತಂದೆ? ಕುಜನರೆಡೆಗೊಯ್ದು ಕೇಳಿಸಿದೊಡೆ ಅವರು ನಿನ್ನ ಮನಕೆ ಮುದವನಿತ್ತಪರು’ ಎಂದು ಹೇಳಿದನು. ಅದನ್ನು ಕೇಳಿ ಮನನೊಂದು ರಾಘವಾಂಕ ‘ರಾಜ್ಯವನಾಳಿಯನೃತದಿಂದ ನರಕಕ್ಕೆ ಸಂದವರ ಕಥೆಯೋ? ಸತ್ಯಕ್ಕಾಗಿ ಸತಿ ಸುತರಂ, ರಾಜ್ಯಮಂ, ತನ್ನಮುಂ, ಕುಂದದಿತ್ತು ಈಶನನೊಲಿಸಿದವನ ಕಥೆಯನೇನೆಂದು ಜರೆವಿರಿ? ಗುರುವಲಾ! ವಾದಿಸಲ್ ಬಾರದೆಂದು ಆಡಿ ತೋರುವೆನು ಚೋಳಾದಿಗಳ ಕಥೆಯನೇಕೆ ಪೇಳ್ದಿರಿ?’ ಎಂದು ಪ್ರಶ್ನಿಸಿದನು. ಅದಕ್ಕೆ ಹರಿಹರ ‘ತರಳ, ನೀನರಿಯೆ ಶಿವನೊಲಿದಾಗ ಕೈವಲ್ಯದಿರವಿಂಗೆ ಮನವೀಯದಿರಲವರ ಪೊಗಳ್ದಪೆವು. ನರಪತಿ ಹರಿಶ್ಚಂದ್ರ ಶಂಭುವನೊಲಿಸಿ ಪಾಪಕ್ಕೊಳಗಪ್ಪ ರಾಜ್ಯದ ಸಿರಿಯ ಪಡೆದನು. ಅವನು ಭಕ್ತರೊಳಗಲ್ಲ,’ ಎಂದು ಉತ್ತರ ಕೊಟ್ಟನು. ರಾಘವಾಂಕ ‘ಗುರುವೆ ಕಿರಿಯರು ಹರಿಶ್ಚಂದ್ರಗಿಂದವರು’ ಎಂದು ನುಡಿಯಲು, ಹರಿಹರದೇವನು ತರಹರಿಸದೇ ಎಡದ ಪಾದುಕೆಯೊಳಿಡಲು, ರಾಘವನು ಮುಂಬಲ್ ಕಳಚಿ ಧರೆಗುರುಳ್ದವು. ಶರಣ ನಿಂದಕನ ಮೋಗ ನೋಡಬಾರದೆಂದು ಹರಿಯರಸನು ಎದ್ದು ಹೋಗುವನು. ರಾಘವನು ಪಶ್ಚಾತಾಪದಿಂದ ಗುರುವನ್ನೂ ಹರನನ್ನೂ ಒಲಿಸಿ ಗುರುವಿನಪ್ಪಣಿಯ ಮೇರೆಗೆ ಹರಿಶ್ಚಂದ್ರ ಕಾವ್ಯದ ಮುರಿದು, ಶೈವಕೃತಿ ಪಂಚಕವನೊರೆದು ಕಳೆದ ಹಲ್ಲುಗಳನ್ನು ಮರಳಿ ಪಡೆದನು. (ಈ ದಂತಕಥೆ ಗುರುರಾಜ ಚಾರಿತ್ರ ಪದ್ಮರಾಜ ಪುರಾಣ, ಭೈರವೇಶ್ವರನ ಕಾವ್ಯದ ಕಥಾಸೂತ್ರ ರತ್ನಾಕರಗಳಲ್ಲಿಯೂ ಬಂದಿದೆ)
ತಿರುಗಿ ಹಲ್ಲು ಪಡೆದ ಸಂಗತಿಯಂಥ ದಂತಕಥೆಯ ಅಂಶಗಳೊಂದಿಗೆ ಇದರಲ್ಲಿ ಕೆಲವು ಸತ್ಯ ಸಂಗತಿಗಳೂ ಅಡಕವಾಗಿವೆ. ರಾಘವಾಂಕ ಮುಂದೆ ವೀರೇಶ ಚರಿತೆ, ಸಿದ್ಧರಾಮ ಪುರಾಣ, ಸೋಮನಾಥ ಚರಿತ್ರೆ, ಶರಭ ಚಾರಿತ್ರ್ಯ, ಹರಿಹರ ಮಹತ್ವ- ಎಂಬುವುದಾಗಿ ಶೈವಕೃತಿ ಪಂಚಕನ್ನೊರೆದುದು ನಿಜ. ಇವುಗಳಲ್ಲಿ ಮೊದಲಿನ ಮೂರು ಮಾತ್ರ ಲಭ್ಯವಾಗಿದ್ದು, ಕೊನೆಯವೆರಡು ಸಿಕ್ಕಿಲ್ಲ. ಹರಿಶ್ಚಂದ್ರ ಕಾವ್ಯವ ಮುರಿದು ಈ ಕೃತಿಪಂಚಕ ಬರೆದನೆಂಬುವುದರಲ್ಲಿಯೂ ಅರ್ಥವಿದೆ. ಯಾಕೆಂದರೆ ಹರಿಶ್ಚಂದ್ರ ಕಾವ್ಯದಿಂದ ಹರಿಹರ-ರಾಘವಾಂಕರ ಮಧ್ಯೆ ಜಗಳ ಬಂದುದಂತೂ ನಿಜ: ಯಾಕೆಂದರೆ ಇಬ್ಬರ ಜೀವನ ದೃಷ್ಟಿಗಳೂ ಭಿನ್ನವಾದವು. ಪರಸ್ಪರ ವಿರೋಧವಾದುವು ಕೂಡ. ಹರಿಹರನ ನಾಯಕರೆಲ್ಲ ಕೈಲಾಸದಲ್ಲಿ ಮಾಡಿದ ಒಂದು ತಪ್ಪಿನಿಂದ ಭೂಮಿಗೆ ಬರುತ್ತಾರೆ. ಇಲ್ಲಿ ಆ ಕಾಳಿಕೆಯನ್ನು ಕಳೆದುಕೊಂಡು ಮತ್ತೆ ಕೈಲಾಸಕ್ಕೆ ಹೋಗುತ್ತಾರೆ. ಅವರ ನಿಜವಾದ ನೆಲೆ ಕೈಲಾಸವೇ. ಲೌಕಿಕದಲ್ಲಿ ಬಹುಕುವಾಗೆಲ್ಲ ಪರಕೀಯತೆಯನ್ನು ಅನುಭವಿಸುತ್ತ ಹಣ್ಣಾಗುತ್ತಾರೆ. ಹಣ್ಣಾಗಿ ಕೈಲಾಸಕ್ಕೆ ಹೋಗುತ್ತಾರೆ.
ರಾಘವಾಂಕನ ನಾಯಕರು ಹೀಗೆ ಶಪಿತರಾಗಿ ಭೂಮಿಗೆ ಬಂದವರಲ್ಲ. ಇವನ ಕಾವ್ಯಗಳು ಕೈಲಾಸದಿಂದ ಸುರುವಾಗುವುದಿಲ್ಲ. ಇವನಿಗೆ ಲೌಕಿಕವೆಂದರೆ ಒಂದು ಪ್ರಕ್ರಿಯೆ, ಹರಿಹರನ ನಾಯಕರಿಗೆ ಭೂಲೋಕದ ಬಗ್ಗೆ ಭಯವಿದೆ. ಅವರೆಲ್ಲ ಇಲ್ಲಿಗೆ ಬರುವುದಕ್ಕೆ ಹೆದರುತ್ತಾರೆ. ಶಿವ ಸಂತೈಸಿ ಕಳಿಸುತ್ತಾನೆ. ಬಂದ ಮೇಲೆ ಅವರೆಲ್ಲ ಕೈಲಾಸದ ಹಂಬಲದಲ್ಲೇ ಕಾಲ ಕಳೆಯುತ್ತಾರೆ. ಶಿವನ ಸಾಕ್ಷಾತ್ಕಾರವಾದೊಡನೆ ಭಕ್ತರಿಗೆ ಸಂಸಾರ ಬಂಧನದಿಂದ ಪಾರಾಗಿ ದಿನನಿತ್ಯ ಶಿವನ ಸಾನಿಧ್ಯದಲ್ಲಿರುವ ಅವಕಾಶ ಸಿಕ್ಕುತ್ತದೆ. ಅದೇ ಕೊನೆ. ರಾಘವಾಂಕನ ನಾಯಕರಾರಿಗೂ ಈ ಭಯವಿಲ್ಲ. ಇದನ್ನು ಇನ್ನೂ ಸ್ಪಷ್ಟವಾಗಿ ಇಬ್ಬರೂ ಬರೆದ ಅಧ್ಯಯನ ಚರಿತ್ರೆಯಲ್ಲಿ ಕಾಣಬಹುದು.
ಹರಿಹರನ ಪ್ರಕಾರ ಆದಯ್ಯ ಹುಟ್ಟಿದ್ದು ಶಿವಪುರದ ಶಿವಭಕ್ತಿ ಮತ್ತು ಶಿವಭಕ್ತರಿಗೆ. ಅವನ ಮಾವ ಪಾರಿಷ ಪಂಡಿತ, ಆದಯ್ಯ ಪುಲಿಗೆರೆಗೆ ಹೋದಾಗ ಆತನು ಸುರುಹೊನ್ನೆಯ ಬಸದಿಯಲ್ಲಿ ಪೂಜಾರಿಯಾಗಿದ್ದು ಸೋಮನಾಥನನ್ನು ತಂದಿರಿಸಿದ ಮೇಲೆ ಆದಯ್ಯ ಪುಷ್ಪಕ ವಿಮಾನದಲ್ಲಿ ಕೈಲಾಸಕ್ಕೆ ಹೋಗುತ್ತಾನೆ. ರಾಘವಾಂಕನ ಸೋಮನಾಥ ಚರಿತೆಯ ವಿವರಗಳು ಭಿನ್ನವಾಗಿರುವ ವಿಚಾರ ಹಾಗಿರಲಿ. ಕೊನೆಗೆ ಆತ ಸೌರಾಷ್ಟ್ರದ ಸೋಮನಾಥನನ್ನು ಪುಲಿಗೆರೆಯ ಸುರಹೊನ್ನೆ ಬಸದಿಯಲ್ಲಿ ಪ್ರತಿಷ್ಠಾಪಿಸಿ ಜೈನರನ್ನು ಸೋಲಿಸಿ ಕೊನೆಗೆ ಪದ್ಮಾವತಿಯೊಂದಿಗೆ ಸೋಮನಾಥ ದೇವಾಲಯದ ಬಲದ ಕಂಬದಲ್ಲಿ ಐಕ್ಯವಾಗುತ್ತಾನೆ. ಕೈಲಾಸಕ್ಕೆ ಹೋಗುವುದಿಲ್ಲ. ಹರಿಹರ ರಾಘವಾಂಕರ ಜೀವನ ದೃಷ್ಟಿಗಳು ಭಿನ್ನವಾಗಿದ್ದುದನ್ನು ಸೂಚಿಸಲು ಇದಕ್ಕಿಂತ ಹೆಚ್ಚಿನ ಉದಾಹರಣೆಗಳು ಬೇಕಿಲ್ಲ.
ಹರಿಹರನಿಗೆ ಲೌಕಿಕವೆಂದರೆ ಒಂದು ಸಾಧನೆಯ ಭೂಮಿ. ಈ ಸಾಧನೆಯ ಕೊನೆಯ ಅಲೌಕಿಕ ಅರ್ಥಾತ್ ಕೈಲಾಸ. ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುತ್ತಾರೆ. ಅಲ್ಲಿ ಸಲ್ಲುವವಗೆ ಇಲ್ಲಿಯ ಬದುಕನ್ನು ಹಸನಾಗಿ ಬದುಕಬೇಕು. ಹರಿಹರನಲ್ಲಿ ಶಿವ ಬರುವುದು ನಾಯಕನನ್ನು ಕೈಲಾಕ್ಕೆ ಕರೆದೊಯ್ಯಲಿಕ್ಕೆ. ಅದು ಅವರು ಲೌಕಿಕವನ್ನು ಯಶಸ್ವಿಯಾಗಿ ಬದುಕಿದ್ದಕ್ಕೆ. ಕೈಲಾಸದಲ್ಲಿದ್ದ ತಮ್ಮ ಕಾಳಿಕೆಯನ್ನು ಕಳೆದುಕೊಂಡದಕ್ಕೆ ಗುರುತು. ಇದನ್ನೇ ಬೇರೆ ಶಬ್ದಗಳಲ್ಲಿ ಹೇಳುವುದಾದರೆ- ಹರಿಹರನಿಗೆ ಈ ಲೌಕಿಕ ಸಂಸಾರ ಹೇಯಸ್ಥಳ. ತಪ್ಪು ಮಾಡಿದವರು ಶಿಕ್ಷೆಯನುಭವಿಸಲಿಕ್ಕೆ, ಅದರಿಂದ ಪರಿಶುದ್ಧಿಗೊಳ್ಳಲಿಕ್ಕೆ ಬರುವ ಸ್ಥಳ. ಪರಿಶುದ್ಧಿಗೊಂಡ ಭಕ್ತ ಜೀವವಾಗಲಿ, ಶಿವನಾಗಲಿ ಇರುವುದಕ್ಕೆ ಯೋಗ್ಯವಾದ ಸ್ಥಳವಲ್ಲ. ಆದ್ದರಿಂದ ಮಿಕ್ಕೆಲ್ಲರಲ್ಲಿನಂತೆಯೇ ಹರಿಹರನ ಶಿವ ಅಣುರೇಣು ತೃಣ ಕಾಷ್ಠಗಳಲ್ಲಿ ತುಂಬಿಕೊಂಡವನಲ್ಲಿ. ಇದನ್ನು ಮೀರಿದ ಕೈಲಾಸದಲ್ಲಿ ಅವನ ವಾಸ. ಉದ್ಧಾರಕ್ಕೆ ಆಗಾಗ ಭೂಮಿಗೆ ಬರುತ್ತಾನಷ್ಟೆ.
ಈ ಕಾರಣದಿಂದಾಗಿ ಹರಿಹರ ತನ್ನ ದೃಷ್ಟಿಯನ್ನು ಅತಿಯಾಗಿ ಮಿತಿಗೊಳಪಡಿಸಬೇಕಾಯ್ತು. ತಾನಾಯ್ತು. ತನ್ನ ಶಿವ, ಭಕ್ತ ಪರಿವಾರವಾಯಿತು. ಅದನ್ನು ದಾಟಿ ಒಂದಿಂಚು ಜೀವನವನ್ನೂ ನೋಡುವುದಕ್ಕೆ ಆತ ನಿರಾಕರಿಸುತ್ತಾನೆ. ಅವನ ಪ್ರಪಂಚವೆಲ್ಲ ಬರೀ ಶಿವ ಮತ್ತು ಭಕ್ತರಿಂದ ತುಂಬಿದ ನಾಗರಿಕ ವ್ಯವಸ್ಥೆಯೇ ಇಲ್ಲದ ಪ್ರಪಂಚ. ಭಕ್ತರ ಜೀವನದಲ್ಲಿ ಬರುವ ಘರ್ಷಣೆಗಳೆಲ್ಲ ಶಿವನೊಂದಿಗೆ ಮಾತ್ರ ಬರುವಂಥವು. ಅವನ ಕಾವ್ಯಗಳಲ್ಲಿ ಪ್ರತಿನಾಯಕರೇ ಇಲ್ಲ. ಬಸವರಾಜ ದೇವರ ರಗಳೆಯಲ್ಲಿ ಬಿಜ್ಜಳನಿಗೂ ಬಸವಣ್ಣನಿಗೂ ಉಂಟಾಗುವ ಘರ್ಷಣೆ ಎರಡೇ ಸಾಲುಗಳಲ್ಲಿ, ಒಂದು ಸಣ್ಣ ಪವಾಡದಿಂದ ಬಗೆಹರಿಯುತ್ತದೆ! ಇನ್ನು ಕಳ್ಳಸುಳ್ಳರನ್ನು ಅವನು ಸಹಿಸುವುದಂತೂ ದೂರವುಳಿಯಿತು. ಅರ್ಥಾತ್ ಕೆಡುಕನ್ನು ಆತ ಪ್ರತ್ಯೇಕವಾಗಿ ಗುರುತಿಸುವುದೇ ಇಲ್ಲ.
ಇದಕ್ಕೆ ಪ್ರತಿಯಾಗಿ ರಾಘವಾಂಕನಿಗೆ ಲೌಕಿಕವೆಂದರೆ ಒಂದು ಜೀವಂತ ಪ್ರಕ್ರಿಯೆಯೆಂಬುದಾಗಿ ಆಗಲೇ ಹೇಳಿದ್ದೇನೆ. ಈ ಪ್ರಕ್ರಿಯೆಗೆ ತನ್ನ ಹೊರತಾದ ಒಂದು ಕೊನೆಯಿಲ್ಲ. ತುದಿಗೆ ಕೈಲಾಸವಿಲ್ಲ. ಈ ಪ್ರಕ್ರಿಯೆ ಹಣ್ಣಾಗುತ್ತಾ ಹಣ್ಣಾಗುತ್ತಾ ತಂತಾನೆ ಕೈಲಾಸವಾಗುತ್ತದೆ. ಆದ್ದರಿಂದ ಕೈಲಾಸವೆಂದರೆ ಲೌಕಿಕವನ್ನು ಮೀರಿ ಇರುವ ಅದರಾಚೆಯ ಸ್ಥಿತಿಯಲ್ಲ. ಲೌಕಿಕವೇ ಹಣ್ಣಾದ ಸ್ಥಿತಿ. ಶಿವ ಬರುವುದು ಕೂಡ ನಾಯಕನ ಜೀವನ ಇದೀಗ ಹಣ್ಣಾಗಿ ಕೈಲಾಸವಾಯಿತೆಂಬುವುದನ್ನು ಖಾತ್ರಿ ಮಾಡಿಕೊಡಲಿಕ್ಕೆ, ಅಷ್ಟೇ. ರಾಘವಾಂಕನ ಶಿವನಾದರೆ ದೇವಾಲಯಗಳ ಮೂರ್ತಿಗಳಲ್ಲಿ ವಾಸಿಸಬಲ್ಲ, ಭಕ್ತರೊಂದಿಗೆ ಸತ್ಯದಂಥ ಮೌಲ್ಯಗಳಿದ್ದೂ ಆಚರಣೆಯಾಗಿ ಹೊರ ಬರಬಲ್ಲ, ಸಾಕಾರನಿಷ್ಠೆ, ಭೂತಂಗಳೊಳಗನುಕಂಪೆಯಲ್ಲಿ ತಾನೇ ಪರಬೊಮ್ಮನಾಗಿಯೂ ಇರಬಲ್ಲ ಅಮೂರ್ತವಾಗಿ.
‘ರಾಘವಾಂಕನ ಹರಿಶ್ಚಂದ್ರನು ನೇರವಾಗಿ ಕೈಲಾಸದಿಂದ, ಅಲ್ಲಿ ಮಾಡಿದ ಯಾವುದೋ ತಪ್ಪನ್ನು ಇಲ್ಲಿ ತಿದ್ದಿಕೊಳ್ಳಲೆಂದು ಶಾಪದಿಂದಲೋ ಅನುಗ್ರಹದಿಂದಲೋ ಮರ್ತ್ಯಕ್ಕೆ ಇಳಿದು ಬಂದವನಲ್ಲ. ಹರಿಹರನ ಶಿವಶರಣರಂತೆ ಶಿವ ಭಕ್ತಿಯ ಪ್ರಸಾರಕ್ಕೋ ಶಿವ ಸಮಯದ ಉದ್ದಾರಕ್ಕೋ ಪರಸಮಯದ ದಮನಕ್ಕೋ ಉದ್ಯುಕ್ತನಾದವನಲ್ಲ’ ಶಿವನನ್ನು ಧ್ಯಾನಿಸುತ್ತ ಒಲಿಸಿಕೊಳ್ಳುವುದು ಅವನ ಉದ್ದೇಶವಲ್ಲ. ‘ಹರಿಶ್ಚಂದ್ರನ ಪಾಲಿಗೆ ಸತ್ಯ ಎಂದರೆ ಶಿವ; ಶಿವ ಎಂದರೆ ಸತ್ಯ. ಹರಿಹರನಲ್ಲಾದರೋ ಅವನ ಪಾತ್ರಗಳ ಕಣ್ಣಿಗೆ ‘ಶಿವ’ ಎಂದರೆ ಅವರಿಗೆ ಪ್ರಿಯವಾದ ಸಾಕಾರಮೂರ್ತಿ: ಆದರೆ ಹರಿಶ್ಚಂದ್ರನ ಪಾಲಿಗೆ ಅದು ಬದುಕುವ ಒಂದು ಮೌಲ್ಯ’ ಈ ಸತ್ಯದ ಪ್ರಾಮಾಣಿಕ ಆಚರಣೆಯಲ್ಲಿ ಶಿವನಿರುವುದು ನಿರುತ. ಹೀಗೆ ಶಿವನನ್ನು ಆಚರಿಸುತ್ತ ತನ್ನ ಬದುಕನ್ನು ಶಿವಮಯವಾಗಿಸಿಕೊಳ್ಳುವುದೇ ಹರಿಶ್ಚಂದ್ರನ ಉದ್ದೇಶ. ಕಾವ್ಯದ ಅಂತ್ಯದಲ್ಲಿ ಶಿವ ಬಂದು ದರ್ಶನವೀಯುವುದು ಸತ್ಯದ ಒಂದು ಸಣ್ಣ ಭಂಗಿ (gesture) ಮಾತ್ರ. ಕಾವ್ಯನಾಯಕನ ಸತ್ಯವನ್ನು ಒರೆಹಚ್ಚಿ ನೋಡಲು ಹರಿಹರನ ಕಾವ್ಯಳಲ್ಲಿನಂತೆ ಶಿವನೇ ಬೇರೆ ರೂಪ ಧರಿಸಿ ಬರುವುದಿಲ್ಲ: ಉತ್ಕೃಷ್ಟವಾದ ಮೌಲ್ಯಗಳಲ್ಲಿ ಶಿವನಿರಬಲ್ಲನಾದರೆ ಅದಕ್ಕೆ ವಿರುದ್ಧ ಸೆಳೆತದ ಬಲವಂತಗಳೂ ಇರುವುದು ಸಾಧ್ಯ. ಇಂಥ ವಿರುದ್ಧ ಸೆಳೆತದ ಬಲವಂತಗಳೇ ರಾಘವಾಂಕನಲ್ಲಿ ಪ್ರತಿನಾಯಕನ ರೂಪದಲ್ಲಿ ಎದುರಾಗುತ್ತವೆ. ಮತ್ತು ರಾಘವಾಂಕ ಯಾಕೆ ಪ್ರತಿ ನಾಯಕರನ್ನು ಗುರುತಿಸಬೇಕಾಯಿತೆಂದು ತಿಳಿಯುತ್ತದೆ.
ಹರಿಶ್ಚಂದ್ರ ಹೆಂಡತಿ ಚಂದ್ರಮತಿ ಮತ್ತು ಮಗ ರೋಹಿತಾಶ್ವರೊಡನೆ ಅಯೋಧ್ಯೆಯಲ್ಲಿ ರಾಜ್ಯವಾಳಿಕೊಂಡಿದ್ದವನು. ಇತ್ತ ದೇವೇಂದ್ರನ ಸಭೆಯಲ್ಲಿ, ಭೂಲೋಕದಲ್ಲಿ ಸತ್ಯವಂತರಾದ ರಾಜರು ಯಾರೆಂದು ಪ್ರಶ್ನೆ ಹುಟ್ಟಿ ಹರಿಶ್ಚಂದ್ರನೆಂದು ವಸಿಷ್ಠ ಹೇಳಿದರೆ ವಿಶ್ವಾಮಿತ್ರ ವಿರೋಧಿಸುತ್ತಾನೆ. ಇಬ್ಬರಿಗೂ ಜಗಳವಾಗಿ ಕೊನೆಗೆ ವಿಶ್ವಾಮಿತ್ರ ಪಂಥ ಕಟ್ಟಿಕೊಳ್ಳುವುದರಲ್ಲಿ ಈ ದೃಶ್ಯ ಮುಗಿಯುತ್ತದೆ. ಮುಂದೆ ವಿಶ್ವಾಮಿತ್ರನ ಕಾಟ ಸುರುವಾಯಿತು. ಕಾಡಿದಷ್ಟೂ ಸೋಲಾಯಿತು, ಸೋತಷ್ಟು ಅವನ ಸಿಟ್ಟು ಜಾಸ್ತಿಯಾಯಿತು. ಹರಿಶ್ಚಂದ್ರ ಸತ್ವವೂ ಗಟ್ಟಿಗೊಳ್ಳುತ್ತಾ ಹೋಯಿತು. ಹರಿಶ್ಚಂದ್ರನ ಸತ್ಯ ಪ್ರಯತ್ನಿಸಿ ಗಳಿಸಿದ್ದಲ್ಲ. ಸಹಜವಾಗಿ ಬಂದದ್ದು. ತರಣಿಯ ತೇಜದಂತೆ, ಅಗ್ನಿಯ ಬಿಸುಪಿನಂತೆ, ಚಂದ್ರನ ತಂಪಿನಂತೆ, ಮಂದಾರದ ಸ್ಥಿರತೆಯಂತೆ ಸಹಜವಾದದ್ದೆಂದು ವಸಿಷ್ಠನೇ ಹೇಳುತ್ತಾನೆ. ಕಥೆಯ ಪ್ರಾರಂಭದಲ್ಲಿ ಹರಿಶ್ಚಂದ್ರನ ಬಗ್ಗೆ ಪರಸ್ಪರ ವಿರುದ್ಧವಾದ ಕೆಲವು ಮಾತುಗಳಿದ್ದುದು ನಿಜ. ಮಕ್ಕಳಿಲ್ಲವೆಂದು ವರುಣನಿಂದ ವರ ಪಡೆದು ಮಗನಾದ ಮೇಲೆ ಅವನಿಗೆ ಮೋಸ ಮಾಡಿದ್ದು, ವ್ಯಾಮೋಹದಿಂದ ತನ್ನ ಮಗನಿಗೆ ಬದಲಾಗಿ ಇನ್ನೊಬ್ಬರ ಮಗನನ್ನು ಬಲಿಗೊಡಲು ಯೋಜಿಸಿದ್ದು, ಇವೆಲ್ಲ ಹರಿಶ್ಚಂದ್ರನಿಗೂ ಅವನ ಸತ್ಯಕ್ಕೂ ಶೋಭೆ ತರುವ ಮಾತಲ್ಲ, ನಿಜ. ವಿಶ್ವಾಮಿತ್ರ ಈ ಸಂಗತಿ ಹೇಳಿದಾಗ ಇವುಗಳನ್ನು ಅಲ್ಲಗಳೆಯುವ ಉತ್ತರ ವಸಿಷ್ಠನಲ್ಲಿಯೂ ಇಲ್ಲ, ಹಲವು ಮಾತೇಕೆ ಆ ಹರಿಶ್ಚಂದ್ರ ಭೂನಾಥನೊಳಗೆ ಅಸತ್ಯವನು ಕಾಣಿಸಲುಬಲ್ಲರು. ಧಾತ್ರಿಯೊಳು ಮುನ್ನ ಹುಟ್ಟಿದವರಿಲ್ಲ. ಇನ್ನು ಹುಟ್ಟುವರ ಕಾಣೆ ನಾನಿದ ಬಲ್ಲೆ’ನೆಂದು ವಸಿಷ್ಠ ಹೇಳುತ್ತಾನೆ. ಇದು ಹಾರಿಕೆಯ ಮಾತಾದೀತೆ ಹೊರತು ವಾದಕ್ಕೆ ತಕ್ಕ ಪ್ರತಿವಾದವಲ್ಲ ಎನ್ನುವುದು ಮೇಲುನೋಟಕ್ಕೆ ಗೊತ್ತಾಗುತ್ತದೆ. ಹಾಗೆಂದರೆ ವಸಿಷ್ಠ ಇಂಥ ಮಾತನ್ನು ಬರೀ ಶಿಷ್ಯವ್ಯಾಮೋಹದಿಂದಲೇ ಹೇಳಿದವನಲ್ಲ.
ಶ್ರುತಿ ಮತ ಕುಲಾಚಾರ ಧರ್ಮಮಾರ್ಗಂ ಮಹಾ
ವ್ರತವನುಷ್ಠಾನ ಗುರುವಾಜ್ಞೆ ಲಿಂಗಾರ್ಚನೋ
ನ್ನತ ತಪಂ ಬ್ರಹ್ಮ ಕರ್ಮಂ ಬೆಳೆದ ಪುಣ್ಯವೊಳ ಗಾದವಂ ತೊರೆದು ಕಳೆದು
ಸತಿಯನುಳಿದತಿದಿಗಂಬರನಾಗಿ ಮುಕ್ತ ಕೇ
ಶಿತನಾಗಿ ನರಕಪಾಲದೊಳು ಸುರೆಯೆರೆದು ಕುಡಿ
ಯುತ ತೆಂಕಮುಖನಾಗಿ ಹೋಹೆಂ ಹರಿಶ್ಚಂದ್ರ
ಮರೆದ ಹುಸಿಯಂ ನುಡಿದಡೆ
ಎಂಬಂಥ ಘೋರ ಪ್ರತಿಜ್ಞೆಕೈಕೊಳ್ಳುವಷ್ಟು ಹರಿಶ್ಚಂದ್ರನ ಸತ್ಯದ ಬಗ್ಗೆ ಅವನಲ್ಲಿ ವಿಶ್ವಾಸವಿದೆ. ಇದಕ್ಕೆ ಹೋಲಿಸಿದರೆ ವಿಶ್ವಾಮಿತ್ರನ ಮರುಪ್ರತಿಜ್ಞೆ ಬಹಳ ಹಗುರಾದದ್ದೆಂದೇ ಹೇಳಬೇಕು. ವರುಣನಿಂದ ಹರಿಶ್ಚಂದ್ರ ವರಪಡೆದ ಸಂಗತಿ ವಿಶ್ವಾಮಿತ್ರನ ಬಾಯಲ್ಲಿದೆಯೇ ಹೊರತು ಕಥೆಯಲ್ಲಿಲ್ಲ. ಹಿಂದಿನ ಕಥೆಯನ್ನು ರಾಘವಾಂಕ ಹೇಳಿಯೂ ಇಲ್ಲ. ಅಥವಾ ಕಥೆ ಸುರುವಾಗುವ ಮುನ್ನಿನ ಹರಿಶ್ಚಂದ್ರನ ಕಥೆಯನ್ನು ರಾಘವಾಂಕ ಉದ್ದೇಶಪೂರ್ವಕ ಕೈಬಿಟ್ಟಿದ್ದಾನೆ. ಅಲ್ಲದೆ ಮೇಲೆ ಬರುವ ಸಂಗತಿ ವಾದಕ್ಕಾಗಿ ಬರುವಂಥದು. ವಸಿಷ್ಠ ಉತ್ತರಿಸಲಿಲ್ಲವೆಂದ ಮಾತ್ರಕ್ಕೆ ಹರಿಶ್ಚಂದ್ರನನ್ನು ಹುಸಿಮಾಡುವಷ್ಟು ಅದು ಗಟ್ಟಿಯಾದದಲ್ಲ. ವಾದದಲ್ಲಿ ಬಂತೆಂದು ಕೈಯಲ್ಲಿಯ ಕಾವ್ಯ ಬಿಟ್ಟು ಪ್ರಾಚೀನ ಪುರಾಣಗಳನ್ನು ಯಾರೂ ಗಮನಿಸಬೇಕಾದ್ದೂ ಇಲ್ಲ. ಯಾವುದು ಗಟ್ಟಿ ಯಾವುದು ಸೊಟ್ಟೆಂದು ಕ್ರಿಯೆಗಳಿಂದ ತಿಳಿದೇ ತಿಳಿಯುತ್ತದೆ. ಇಷ್ಟಂತೂ ನಿಜ-ಹರಿಶ್ಚಂದ್ರ ಕಾವ್ಯದಲ್ಲಿ ಎಲ್ಲಿಯೂ ಇಂಥ ವಿಸಂಗತಿಗಳಿಲ್ಲ. ಹಾಗಿದ್ದಾಗ ವಿಶ್ವಾಮಿತ್ರನಂಥವನು ಹೇಳಿದ ಮಾತ್ರಕ್ಕೆ ಹರಿಶ್ಚಂದ್ರ ಯಾಕೆ ಹುಸಿಕನಾಗಬೇಕು? ಅಥವಾ ವಿಶ್ವಾಮಿತ್ರನಂಥ ಅತಿ ಹುಸಿವ ಯತಿ ಹೇಳಿದ್ದಾನೆಂದರೆ ಆ ಯತಿಯಲ್ಲಿ ಏನೋ ಐಬಿರಬೇಕು. ರಾಘವಾಂಕ ಹೀಗೆ ಭಾವಿಸಿಯೇ ಆ ಮಾತುಗಳನ್ನು ವಾದದಲ್ಲಿ ಬಳಸಿದ್ದಾನೆಂದು ತೋರುತ್ತದೆ. ಇಲ್ಲದಿದ್ದರೆ ಎಷ್ಟೆಲ್ಲಾ ವಾದ ಮಾಡಿಸುವವನು ಇದೊಂದು ಉತ್ತರ ಗೊತ್ತಿಲ್ಲದೆ ಇಡೀ ಪಾತ್ರವನ್ನೇ ಸಂಶಯದಲ್ಲಿ ಕೈಬಿಟ್ಟನೆಂದರೆ ಏನರ್ಥ?
ಇನ್ನು ವಿಶ್ವಾಸಮಿತ್ರನ ಕಾಟ ಸುರುವಾಯ್ತಲ್ಲ. ಬೇಟೆಗೆ ಬಂದಾಗ ಹರಿಶ್ಚಂದ್ರ ಹಂಪೆಯಲ್ಲಿದ್ದ ವಸಿಷ್ಠನ ಆಶ್ರಮಕ್ಕೆ ಬರುತ್ತಾನೆ. ತನಗೂ ವಿಶ್ವಾಮಿತ್ರನಿಗೂ ನಡೆದ ಪಂಥದ ವಿಷಯ ರಾಜನಿಗೆ ಗೊತ್ತಿಲ್ಲ. ಹಾಗೆಂದು ಹೇಳಬಾರದು, ಹೇಳದಿರಬಾರದು. ಹೇಳದ ಹಾಗೆ ಹೇಳುವೆನೆಂದು
ಎನ್ನನೊಲುವೊಡೆ ಕುಲಾಚಾರಮಂ ಬಿಡದಿರ್ಪ
ಡುನ್ನತ್ತಿಕೆ ಬೇಹಡುತ್ತಮ ಕೀರ್ತಿ ಕೆಡದಿಹಡೆ
ನನ್ನಿಯುಳಿವಡೆ ಮಗನೆ ಹೋಗದಿರು ಮರೆದು
ವಿಶ್ವಾಮಿತ್ರನಾಶ್ರಮಕ್ಕೆ
ಎಂದು ಹೇಳುತ್ತಾನೆ. ಸುದೈವದ ಸಂಗತಿಯೆಂದರೆ ಈ ಘಟನೆ ಇಡೀ ಕಾವ್ಯಕ್ಕೆ ಒಂದು ನಿರುದ್ದಿಶ್ಯ ಅಲಂಕರಣವಾಗುತ್ತದೆಯೇ ಹೊರತು ಪರಿಣಾಮ ಮಾಡುವುದಿಲ್ಲ. ಬಹಳವಾದರೆ ಇದರಿಂದ ವಸಿಷ್ಠನ ಶಿಷ್ಯಮೋಹ ಕಂಡೀತು. ರಾಜನ ಗುರುಭಕ್ತಿ ಕಂಡೀತು. ಇನ್ನೂ ಬಹಳವಾದರೆ ರಾಘವಾಂಕನ ಹಂಪೆಯ ಅಭಿಮಾನ ಕಂಡೀತು. ಹರಿಶ್ಚಂದ್ರನ ಸತ್ಯಕ್ಕೆ ಮಾತ್ರ ಒಂದಿಷ್ಟೂ ಹೆಚ್ಚು ಕಮ್ಮಿ ಮಾಡುವುದಿಲ್ಲ.
ಗುರು ಹೋಗಬೇಡವೆಂದು ಹೇಳಿದರೂ ವಿಧಿ ರಾಜನನ್ನು ವಿಶ್ವಾಮಿತ್ರನ ಆಶ್ರಮಕ್ಕೇ ಕೊಂಡೊಯ್ದಿತು. ಬೇಟೆಯ ದಣಿವು, ವಿಶ್ವಾಮಿತ್ರನ ಆಶ್ರಮಕ್ಕೆ ಬಂದು ಗುರುವಾಜ್ಞೆಗೆಟ್ಟದ್ದು, ದುಃಸ್ವಪ್ನ ಕಂಡದ್ದು- ಈ ಎಲ್ಲಾ ಕಳವಳದಲ್ಲಿದ್ದಾಗ ಮುನಿಯ ಹೊಲೆಯಿಂದ ಹುದುಟ್ಟಿದ್ದ ಗಾನ ರಾಣಿಯರು ಬಂದು ರಾಗರಸಲಹರಿಯಿಂದ ಆತನ ದುಗುಡ ಕಳೆದರು. ಬಹುಮಾನವಾಗಿ ಸರ್ವಾಭರಣ ಕೊಟ್ಟರೆ ತೃಪ್ತಿರಾಗಲಿಲ್ಲ. ಕೊನೆಗೆ ಮದುವೆಯಾಗೆಂದು ಗಂಟು ಬಿದ್ದರು. ಹೆಂಗಸರೆನ್ನದೆ ಅವರನ್ನು ಚಮ್ಮಟಿಗೆಯಿಂದ ಹೊಡೆದೋಡಿಸುತ್ತಾನೆ. ವಿಶ್ವಾಮಿತ್ರನಿಗಿದು ಗೊತ್ತಾಗಿ ಬಂದು ತನ್ನ ತಪೋವನಕ್ಕೆ ಬಂದುದರಿಂದ ಹಿಡಿದು ತನ್ನ ಮಕ್ಕಳನ್ನು ಹೊಡೆದೋಡಿಸಿದವರೆಗಿನ ರಾಜನ ತಪ್ಪುಗಳನ್ನು ಪಟ್ಟಿಮಾಡಿ ಕೊನೆಗೆ ಅವರನ್ನು ಮದುವೆಯಾದರೆ ಬಿಡುವುದಾಗಿ ಹೇಳುತ್ತಾನೆ. ಅದಕ್ಕೆ ಹರಿಶ್ಚಂದ್ರ ‘ಎಡೆಬಿಡದೆ ಬೇಡಿ ಕಾಡುವಿರಾದರೆ ಸರ್ವರಾಜ್ಯವನ್ನಾದರೂ ಕೊಟ್ಟೇನು. ಇದಕ್ಕೆ ಒಪ್ಪಲಾರೆ’ ಎನ್ನುತ್ತಾನೆ. ಇದು ವಾದದಲ್ಲಿ ಹೇಳಿದ ಮಾತೆಂದು ಯಾರಿಗಾದರೂ ತಿಳಿಯುತ್ತದೆ. ಆದರೆ ಮುನಿ ಸಿಕ್ಕುದರಿಂದಲೇ ಸೀಳಿ ಹಾಕುವ ಹೊಂಚಿನಲ್ಲಿದ್ದವನು, ‘ತಥಾಸ್ತು ಹಡೆದೆಂ ಹಡೆದೆನೆಂದು ಹೇಳಿ ‘ಸತ್ಯಾವತಂಸ’ ಎಂದು ರಾಜನನ್ನು ಹೊಗಳುತ್ತಾನೆ. ಇದು ಬಲಾತ್ಕಾರದ ದಾನವೆಂದು ರಾಜನಿಗೂ ಗೊತ್ತು. ಮಾತ್ರವಲ್ಲ ವಿಶ್ವಾಮಿತ್ರನ ಈ ವಿಗಡವಾದಕ್ಕೆ ಕ್ರಿಯೆಯಲ್ಲೇ ಉತ್ತರಿಸಬೇಕಾದ ಅಗತ್ಯವಿಲ್ಲ ವ್ಯಾಕರಣದ ಸಹಾಯದಿಂದ ಪ್ರತಿವಾದ ಹೂಡಬಹುದು. ವಾಕ್ಯಾರ್ಥಗಳನ್ನು ಗೆದ್ದ ರಾಘವಾಂಕ ಪಂಡಿತನಿಗೆ ವ್ಯಾಕರಣ ಕಲಿಸಿಕೊಡಬೇಕಾಗಿಲ್ಲ. ಆದರೂ ಹರಿಶ್ಚಂದ್ರನಿಗೆ ಈ ಬಗ್ಗೆ ಒಮ್ಮೆಯೂ ಕೆಡುಕೆನಿಸಲಿಲ್ಲ. ತಿಳಿದಾಡಿರಲಿ, ತಿಳಿಯದೇ ಆಡಿರಲಿ, ನಿಶ್ಚಿತಾರ್ಥ ಇರಲಿ, ಬಿಡಲಿ ಮಾತು ಮಾತೇ. ಆ ಮಾತಿಗೆ ಕಟ್ಟುಬಿದ್ದು, ಹರಿಶ್ಚಂದ್ರ ನೀರು ತರಿಸಿ ರಾಜ್ಯವನ್ನೇ ಧಾರೆಯರೆದು ಕೊಟ್ಟು ಬಿಡುತ್ತಾನೆ. ಹೀಗೆ ರಾಜ್ಯ ತಕ್ಕೊಳ್ಳಲಿಕ್ಕೆವಿಶ್ವಾಮಿತ್ರನಿಗೆ ಭಾಷೆಯ ಮಟ್ಟದಲ್ಲಿ ಕೂಡ ಸಮರ್ಥನೆ ಇಲ್ಲ ಎನ್ನುವುದನ್ನು ಮರೆಯಬಾರದು.
ಮುಂದೆ ಇಂಥ ಭಾಷೆಯ ಐಬನ್ನೇ ಮುಂದೆ ಮಾಡಿ ವಿಶ್ವಾಮಿತ್ರ ಹಿಂದೆ ತಾನು ತಕ್ಕೊಳ್ಳದಿದ್ದ ದಕ್ಷಿಣೆ ಕೇಳುತ್ತಾನೆ. ದಾನ ಮಾಡಿದ ಭಂಡಾರದಲ್ಲೇ ಬಂತಲ್ಲ ಎಂದು ರಾಜ ಹೇಳಿದರೆ ‘ದಾನ ಕೊಡುವಾಗ ದಕ್ಷಿಣೆಯ ಹಣವೂ ಅದರಲ್ಲಿದೆಯೆಂದು ಹೇಳಿದೆಯಾ?’ ಎನ್ನುತ್ತಾನೆ. ಅಂದರೇನು? ಆ ಮಾತು ಆಡಿದ್ದರೆ ಉಂಟು, ಆಡದ್ದರಿಂದ ಇಲ್ಲ- ಎಂಬಂಥ ಕುತರ್ಕವಿದು. ಆಗಲೇ ಕೊಡಹೋದಾಗ ನಿನ್ನಲ್ಲಿಯೇ ಇರಲಿ ಎಂದವನೂ ಇವನೇ. ಅದೇ ಹಣ ಭಂಡಾರದಲ್ಲಿದೆಯಲ್ಲವೇ? ರಾಜ ಈಗಲೂ ಮಾತಿನ ಐಬಿಗೆ ಕಟ್ಟು ಬಿದ್ದು ಅವಧಿಕೊಂಡು ಬರುತ್ತಾನೆ. ರಾಜ್ಯ ಬಿಟ್ಟು ಕಾಶಿ ರಾಜ್ಯ ಸೇರಿ ಹೆಂಡತಿ ಮಕ್ಕಳನ್ನು ಕೊನೆಗೂ ತನ್ನನ್ನೂ ಮಾರಿ ಕೊಟ್ಟ ಅವಧಿಗಿನ್ನೂ ಎರಡು ಗಳಿಗೆ ಇರುವಾಗಲೇ ದಕ್ಷಿಣೆಯ ಹಣ ಸಲ್ಲಿಸುತ್ತಾನೆ. ಇಲ್ಲಿಗೆ ಈ ಕಾವ್ಯ ಮುಗಿಯಬೇಕಿತ್ತು ಒಂದು ಲೆಕ್ಕಾಚಾರದ ಪ್ರಕಾರ. ಈವರೆಗೆ ನುಡಿಗೆ ಸುಳ್ಳುಬೀಳದವನು, ನುಡಿಯ ನಿಜಕ್ಕೆ ಕಟ್ಟುಬಿದ್ದವನು ಇನ್ನುಮೇಲೆ ನಡೆಯ ನಿಜ್ಕೆ ಕಟ್ಟುಬೀಳುತ್ತಾನೆ; ನಡೆಗೂ ಸುಳ್ಳು ಬೀಳದೆ ಗೆಲ್ಲುತ್ತಾನೆ. ಹೇಳಿದ್ದನ್ನು ಮಾಡುತ್ತೇನೆಂದು ಒಪ್ಪಕೊಂಡು ವೀರಬಾಹುವಿನ ಸೇವಕನಾಗಿ ಸುಡುಗಾಡ ಕಾಯುವ ಕರ್ತವ್ಯಕ್ಕೆ ಬದ್ಧನಾಗುತ್ತಾನೆ. ಇನ್ನೊಬ್ಬರ ಮನೆಯಲ್ಲಿದ್ದ ಮಗ ಸತ್ತು, ಸುಡಬೇಕೆಂದು ಚಂದ್ರಮತಿ ಹೆಣದೊಂದಿಗೆ ಬಂದರೆ ಕರ್ತವ್ಯದ ಮುಂದೆ ಹೆಂಡತಿ ಮಕ್ಕಳನ್ನು ನೋಡಲಾರದವನಾಗುತ್ತಾನೆ. ಹೆಣನ ತಲೆಯಕ್ಕಿ ನೆಲದೆದೆಯ ಹಾಗ, ಶವದುಡಿಗೆ ಕೊಡದಿದ್ದರೆ ಸುಡಬೇಡವೆಂದು ಹೆಂಡತಿಗೆ ಖಂಡಿತವಾಗಿ ಹೇಳಿಬಿಡುತ್ತಾನೆ. ಕೊನೆಗೆ ತನ್ನ ಹೆಂಡತಿಯನ್ನು ತಾನೇ ಕೊಲ್ಲಬೇಕಾಗಿ ಬಂದಾಗಲೂ ಹಿಂದೆಗೆಯದೆ ಪತಿಯಾಜ್ಞೆ ಉಳಿದರೆ ಸಾಕೆಂದು ಸತಿಯ ಮೇಲೆ ಕತ್ತಿಯಿಳಿಸುತ್ತಾನೆ. ಇಲ್ಲಿಗೆ ವಿಶ್ವಾಮಿತ್ರನ ಸೋಲು, ಹರಿಶ್ಚಂದ್ರನ ಗೆಲುವು ಪರಿಪೂಣ್ಣವಾಯಿತು. ಶಿವನ ಸಾಕ್ಷಾತ್ಕಾರವಾಗುತ್ತದೆ. ಇಷ್ಟೆಲ್ಲ ಕಾಡಿದರೂ ಹರಿಶ್ಚಂದ್ರ ವಿಶ್ವಾಮಿತ್ರನ ಬಗೆಗಿನ ಗೌರವ ಕಳೆದುಕೊಳ್ಳಲಿಲ್ಲ. ಅವನ ಬಗೆಗೆ ಹಗುರಾಗಿ ಎಂದೂ ಆಡಲಿಲ್ಲ. ಆಡಿಕೊಳ್ಳಲಿಲ್ಲ. ಎಂಥ ಕಷ್ಟದ ಕಾಲದಲ್ಲೂ ತನ್ನ ರಾಜಗಾಂಭೀರ್ಯ ಕಳೆದುಕೊಳ್ಳಲಿಲ್ಲ.
ಹೀಗೆಯೇ ವಿಶ್ವಾಮಿತ್ರನ ಪಾತ್ರ ಸೃಷ್ಟಿಯಲ್ಲೂ ಒಂದು ವಿಶೇಷವಿದೆ. ಈತ ಹರಿಶ್ಚಂದ್ರನಿಗೆ ಸರಿ ದೊರೆಯಾದ ಪ್ರತಿನಾಯಕ. ಅವನ ಮೌಲ್ಯಗಳನ್ನು ಎದುರು ನಿಂತು ಪ್ರಶ್ನಿಸುವವ; ಪರಿಕ್ಷಿಸುವವ. ಆತ ಹಾಗೆಯೇ ಮಾಡುವುದಕ್ಕೆ ಉದ್ದೇಶವೇನಿರಬಹುದೆಂಬ ಬಗ್ಗೆ ಅನೇಕರು ತರ್ಕಿಸಿದ್ದಾರೆ. “ಇದರಲ್ಲಿ ಅವನ ಉದ್ದೇಶವೂ ಒಳ್ಳೆಯದಾಗಿತ್ತೆಂದೂ ಅವನು ಲೋಕದ ಕಣ್ಣಿಗೆ ಕಡುಮುಳಿದರಂತೆ ತೋರಿಸಿ ಸತ್ಯಶುದ್ಧವಪ್ಪನ್ನೆಗಂ ಕಾಡಿ ನೋಡಿ ಕಡೆಯೊಳು ಹರಿಶ್ಚಂದ್ರರಾಯಂಗೆ ಗಣವೆರಸಿ ಮೃಡನನೆಳೆತಂದಿತ್ತು ಕೀರ್ತಿಯಂ ಮೂಜಗದ ಕಡೆಗೆ ಹರಹಿದನೆಂದೂ ಹೇಳಿರುವುದೇನೋ ನಿಜ. ಆದರೆ ಹರಿಶ್ಚಂದ್ರನ ಸತ್ಯ ಸೌಜನ್ಯಗಳನ್ನು ಮೆಚ್ಚಿ, ಅವನಿಗೂ ಅವನ ಮೂಲಕ ಲೋಕಕ್ಕೂ ಉಪಕಾರ ಮಾಡಬೇಕೆನ್ನುವ ಶುಭೋದ್ದೇಶ ಕೊನೆಯವರೆಗೂ ಎಲ್ಲಿಯೂ ಸೂಚಿತವಾಗುವುದಿಲ್ಲ; ಈ ಉದ್ದೇಶವೇ ಮೊದಲಿನಿಂದಲೂ ಇರುವ ಪಕ್ಷಕ್ಕೆ ವಸಿಷ್ಠರೊಡನೆ ಇದಕ್ಕಾಗಿ ಹೂಡಿದ ವ್ಯಾಜ್ಯವು ಬರಿಯ ನಟನೆಯಾಗಿ, ಪಾಠಕರ ದೃಷ್ಟಿಯಿಂದಲಾದರೂ ಹರಿಶ್ಚಂದ್ರನ ಪಕ್ಷದ ತೀಕ್ಷ್ಣತೆಯು ಕಡಮೆಯಾಗಿ, ಈ ಕಥೆಯ ಕರುಣ ರಸದ ಬಣ್ಣವು ಕುಂದುತ್ತದೆ. ಗ್ರಂಥದ ಆಧಾರದ ಮೇಲೆ ಹೇಳುವುದಾದರೆ ವಿಶ್ವಾಮಿತ್ರನ ಕ್ಷಾತ್ರಗುಣ, ವಸಿಷ್ಠನ ಮೇಲಣ ವೈರ, ಹಠ ಇವೇ ಆತನು ಹರಿಶ್ಚಂದ್ರನಿಗೆ ಕೊಟ್ಟ ಕಾಟಕ್ಕೆ ಕಾರಣವೆಂದು ತೋರುತ್ತದೆ. ‘ತೀದೊಡ್ಡೋಲಗದ ನಡುವೆ ತನ್ನಂ ಮೊದಲೊಳೋವಿ ನುಡಿಸದು ಕೋಪ ಒಂದು. ಆ ವಸಿಷ್ಠ ಮುನಿ ಯಾವುದಂ ಪೇಳ್ದಡದನಲ್ಲೆಂಬ ಭಾಷೆ ಎರಡು. ಅಖಿಲ ಜೀವಾವಳಿಯಲಿ ಭಾವಿಪಡೆ ಕುಂದನಲ್ಲದೇ ಲೇಸ ಕಾಣದಿಹ’ ಭಾವ ಮೂರು, ಇವಿಷ್ಟೂ ವಿಶ್ವಾಮಿತ್ರನಲ್ಲಿ ಮುಪ್ಪರಿಗೊಂಡು ಕುಡಿವರಿದು ಕಡುಕೋಪವರಿಸಿ, ವ್ಯಾಜ್ಯಕ್ಕೆ ಆರಂಭವಾಗಿ ವಸಿಷ್ಟನು ತನ್ನನ್ನು ‘ರಾಜಋಷಿಯೆಂದು ಕೆಟ್ಟಾಡಿತಕ್ಕಾ ಹರಿಶ್ಚಂದ್ರನನಸತ್ಯನಂ ಮಾಡಿಸುವೆ’ನೆಂದು ವಿಶ್ವಾಮಿತ್ರ ಪ್ರತಿಜ್ಞೆ ಮಾಡಿದನು.[4] ಈ ವಾದಕ್ಕೆ ಸಮರ್ಥನೆಯನ್ನು ಚರಿತ್ರೆಯಲ್ಲಿ ಹುಡುಕುತ್ತ ವಸಿಷ್ಠ ವಿಶ್ವಾಮಿತ್ರರಿಬ್ಬರೂ ರಾಜ ನಿರ್ಮಾಣಕರಾಗಿದ್ದು ಶಿಷ್ಯರಾಜರ ಮೂಲಕ ಇಬ್ಬರೂ ಒಮ್ಮೊಮ್ಮೆ ಪ್ರಬಲರಾಗಿದ್ದು, ಪರಸ್ಪರ ದ್ವೇಷಿಸುತ್ತಿದ್ದರೆಂದು ಆದ್ದರಿಂದಲೇ ಹುಟ್ಟು ಬ್ರಾಹ್ಮಣನಲ್ಲದ ರಾಜಸೂಯಯಾಗದಲ್ಲಿ ದಕ್ಷಿಣೆ ಸಿಗದೆ ತೇಜೋವಧೆಯಾದ ವಿಶ್ವಾಮಿತ್ರ, ವಸಿಷ್ಠನ ಶಿಷ್ಯ ಹರಿಶ್ಚಂದ್ರನಿಂದ ಸುಳ್ಳು ಹೇಳಿಸಬೇಕೆಂದು ಹಟತೊಟ್ಟಿದ್ದು ನೈಸರ್ಗಿಕವಾಗಿ ಕಾಣುತ್ತದೆ ಎಂದೂ ಹೇಳಿದ್ದಾರೆ. ಈ ಮಾತಿಗೆ ಹರಿಶ್ಚಂದ್ರ ಕಾವ್ಯದ ಮಟ್ಟಿಗೆ ಆಧಾರಗಳಿಲ್ಲ. ‘ಅನಿಮಿತ್ತವೈರ’ವೇ ಕಾರಣವಾಗಿ ವಿಶ್ವಾಮಿತ್ರ ಪ್ರತಿನಾಯಕನಾದನೆಂದು ತೋರುತ್ತದೆ. ಭಕ್ತಿ ಬಹಳ ವೈಯಕ್ತಿಕ ಮತ್ತು ಅತ್ಯಂತ ಖಾಸಗಿ ಭಾವವಾದ್ದರಿಂದ ಅಲ್ಲಿ ಬರುವ ಘರ್ಷಣೆ ತನ್ನೊಂದಿಗೆ, ಇಲ್ಲ ತನ್ನದೈವದೊಂದಿಗೆ ಉಂಟಾಗುತ್ತದೆ. ಹರಿಹರನಲ್ಲಿ ಪ್ರತಿ ನಾಯಕರಿಲ್ಲದ್ದಕ್ಕೆ ಇದು ಕಾರಣವಾಗಿದೆ. ಮೌಲ್ಯ ಸಾಮಾಜಿಕವಾದದ್ದು. ಸಮಾಜದಲ್ಲಿ ಆಚರಿಸುವಂಥಾದ್ದು. ಆದ್ದರಿಂದ ಅದನ್ನು ವಿರೋಧಿಸುವ, ಪ್ರಶ್ನಿಸುವ ಒತ್ತಾಯಗಳು ಅನಿವಾರ್ಯವಾಗುತ್ತವೆ. ಮತ್ತು ಹಾಗೇ ಪ್ರಶ್ನಿಸಲು ಸಾಮಾಜಿಕನಲ್ಲದ ಶಿವ ಬಂದು ಎದುರು ನಿಲ್ಲಲಾರ. ಸತ್ಯದಂಥ ಮೌಲ್ಯಕ್ಕೆ ಹುಸಿ ಎದುರಾಗಬೇಕು. ಅತಿ ಹುಸಿವ ಯತಿ ಹೊಲೆಯ ಎಂದು ವಿಶ್ವಾಮಿತ್ರನ ಬಗ್ಗೆ ರಾಘವಾಂಕ ಹೇಳುತ್ತಾನೆ. ಸತ್ಯದೆದುರು ನಿಲ್ಲಲಿಕ್ಕೆ ಹುಸಿಗೆ ಕಾರಣಗಳ ಅಗತ್ಯವೇ ಇಲ್ಲ; ತನ್ನಸಹಜ ಸ್ವಭಾವದಿಂದಲೇ ಎದುರಾಗುತ್ತದೆ. “ಅನಿಮಿತ್ತವೈರ” ಎಂದು ರಾಘವಾಂಕ ಹೇಳಿದ್ದು ಈ ಕಾರಣದಿಂದಾಗಿದೆ.
ವಿಶ್ವಾಮಿತ್ರನ ಕಾಟಕ್ಕೆ ಮೊದಲಿನಿಂದ ಕೊನೆಯ ತನಕೊಂದು ತರ್ಕವಿಲ್ಲ. ಹರಿಶ್ಚಂದ್ರನಲ್ಲಿ ದೌರ್ಬಲ್ಯಗಳು ಸಿಕ್ಕರೆ ಸರಿ, ಸಿಕ್ಕದಿದ್ದರೆ ಅದೇ ಒಂದು ನೆಪವಾಗುತ್ತದೆ. ಅದಕ್ಕಾಗಿ ಹೆಣ್ಣು, ರಾಜ್ಯ ಧನಕನಕ ಕೀರ್ತಿ- ಮುಂತಾದ ಎಲ್ಲಾ ಅಮಿಷಗಳನ್ನು ಒಡ್ಡುತ್ತಾನೆ. ಹರಿಶ್ಚಂದ್ರ ಈ ಯಾವುದರಿಂದಲೂ ವಿಚಲಿತನಾಗದಿದ್ದಾಗ ಅವನ ಮಾತಿನ ಒಂದು ಸಣ್ಣ ದೋಷವನ್ನೇ ಎತ್ತಿ ತನಗೆ ಬೇಕಾದಂತೆ ಅರ್ಥೈಸಿಕೊಂಡು ಉಪಯೋಗಿಸುತ್ತಾನೆ. ಇದು ದೋಷವಲ್ಲವೆಂಬುವುದು ವಿಶ್ವಾಮಿತ್ರನಿಗೆ ತಿಳಿಯದ ಸಂಗತಿಯೇನಲ್ಲ. ಕಾಡುವುದಕ್ಕೆ ನಿಶ್ಚಯಿಸಿದ ಮೇಲೆ ದೋಷವೇನು, ಈಷದ್ದೋಷವೇನು, ಕೊನೆಗೆ ಅದೋಷವೇನು? ಕೊನೆಗೆ ತಾನು ಸೋತಾಗ ಮೃಡನನೆಳ ತಂದಿತ್ತನೆಂಬ ಮಾತಿದೆ. ಅದು ಸಾಂಕೇತಿಕ ಅರ್ಥವಷ್ಟೇ. ಒಂದು ಮೌಲ್ಯ ತನ್ನೆದುರಿನ ಹುಸಿಗಳೊಂದಿಗೆ ಘರ್ಷಿಸಿ ಪರಿಶುದ್ಧಿಗೊಳ್ಳುತ್ತದೆ. ತನ್ನ ತಾನು ಸಂಸ್ಕರಿಸಿಕೊಳ್ಳುತ್ತದೆ. ಮತ್ತು ಅದರ ಪರಿಶುದ್ಧಿಗೆ ಹುಸಿಯೊಂದಿಗಿದ್ದ ಈ ಘರ್ಷಣೆ ಸಹಕಾರಿಯಾಗಿದೆಯೆಂಬುದಷ್ಟೇ ಅರ್ಥ. ಯಾಕೆಂದರೆ ಶಿವನ ಸಾಕ್ಷಾತ್ಕಾರ ಮಾಡಿಕೊಳ್ಳಬೇಕೆಂದು ಹರಿಶ್ಚಂದ್ರ ಕನಸು ಮನಸಿನಲ್ಲಿಯೂ ಧೇನಿಸಿದವನಲ್ಲ. ಆದರೂ ಅವನಿಗೆ ಲಭ್ಯವಾಯಿತಲ್ಲ. ಯಾಕೆ? ಸತ್ಯದಂಥ ಒಂದು ಮೌಲ್ಯ ಹರಿಶ್ಚಂದ್ರನ ಮೂಲಕ ತನ್ನ ಸಿದ್ಧಿಯನ್ನು ಪಡೆಯಿತು, ಧನ್ಯವಾಯಿತು. ತನಗೆ ತಕ್ಕುದಾದ ಬಹುಮಾನ ಪಡೆಯಿತು ಎಂಬುವುದಷ್ಟೇ ಅಲ್ಲಿಯ ಶಿವ ಸಾಕ್ಷಾತ್ಕಾರದಿಂದ ಸೂಚಿತವಾಗುವ ಅರ್ಥವಾಗಿದೆ. ಅಲ್ಲದೇ ರಾಘವಾಂಕ ಕೆಡುಕಿನ (Evil) ಬಗ್ಗೆ ಸಹಾನುಭೂತಿಯಿದ್ದವನು. ಬಿಲ್ಲೇಶ ಬೊಮ್ಮಯ್ಯನಂತ ಸುಳ್ಳಿನ ಬಗೆಗೂ (ಸಿದ್ಧರಾಮ ಚಾರಿತ್ರದಲ್ಲಿ) ಸಹಾನುಭೂತಿ ತೋರಿಸುತ್ತಾನೆ ವಿಶ್ವಾಮಿತ್ರನ ಬಗೆಗೂ ಅದೇ ಧೋರಣೆ ಇದ್ದರೆ ಆಶ್ಚರ್ಯವಿಲ್ಲ.
ಮೇಲಿನ ಎಲ್ಲ ಮಾತುಗಳನ್ನು ಗಮನಿಸಿದರೆ ನಾವು ಪ್ರಾರಂಭದಲ್ಲಿ ನೋಡಿದ ದಂಥಕಥೆ ‘ಅಂದಿನ ಯುಗಧರ್ಮದಲ್ಲಿ ಇಬ್ಬರು ಭಿನ್ನದೃಷ್ಟಿಯ ಮಹತ್ವದ ಕವಿಗಳ ಮನೋಧರ್ಮ ಹಾಗೂ ಕಾವ್ಯ ಧೋರಣೆಗಳ ಸಂಘರ್ಷಕ್ಕೆ ಒಂದು ಸಂಕೇತವಾಗಿದೆ’ ಎಂಬ ಮಾತು ನಿಜವೆನಿಸುತ್ತದೆ. ಕಥೆಯ ಉತ್ತರಾರ್ಧವಂತೂ ಕಥೆ ಕಟ್ಟಿದವರ ಕೇವಲ ಸದಿಚ್ಛೆಯಾಗಿದೆಯೆಷ್ಟೆ. ಗುರುಶಿಷ್ಯರ ಅದರಲ್ಲೂ ಮಾವ ಅಳಿಯಂದಿರ ಜಗಳ, ಇಬ್ಬರೂ ಘಟಾನುಘಟಿಗಳೇ ಆಗಿದ್ದಾಗ ಕೊನೆಬಾಳಿತೆಂದು ಊಹಿಸುವುದೂ ಕಷ್ಟವಾಗಿರಬೇಕು. ಅದಕ್ಕೇ ಆ ಕಥೆಗೊಂದು ಸುಖಾಂತ ರೂಪ ಅಂಟಿಸಿದ್ದಾರೆ. ಆದರೆ ನಿಜಸ್ಥಿತಿ ಮಾತ್ರ ಹಾಗಾಗಲಿಲ್ಲ. ರಾಘವಾಂಕ ತನ್ನ ಹಲ್ಲುಗಳನ್ನು ಮರಳಿ ಪಡೆದಿದ್ದೇ ನಿಜವಾಗಿದ್ದರೆ ನಂತರದ ಕಾವ್ಯಗಳನ್ನು ಹರಿಹರನ ಧೋರಣೆಯಲ್ಲಿ ಬರೆಯಬೇಕಿತ್ತು. ಆದರೆ ಹಾಗಾಗಲಿಲ್ಲ. ಕಾವ್ಯದ ಕೊನೆಗೆ ಇವನ ನಾಯಕರಾರೂ ಕೈಲಾಸಕ್ಕೆ ಹೋಗುವುದಿಲ್ಲ. ಆದಯ್ಯ ಪುಲಿಗೆರೆಯ ಸೋಮನಾಥನ ಬಲದ ಕಂಬದಲ್ಲಿ ಐಕ್ಯವಾಗುತ್ತಾನೆ. ಅಕ್ಕಪಕ್ಕದ ಮನೆಗಳಿಗೆ ಹೋಗುವಷ್ಟು ಸುಲಭವಾಗಿ ಕೈಲಾಸಕ್ಕೆ ಹೋಗಿ ಬರುತ್ತಿದ್ದ ಸಿದ್ಧರಾಮನಿಗೆ ಅಂತ್ಯಕಾಲಕ್ಕೆ ಕೈಲಾಸಕ್ಕೆ ಹೋಗಿ ವಾಸಿಸುವುದು ಕಷ್ಟದ ಕೆಲಸವೇನಲ್ಲ. ಆದರೆ ಆತ ತಾನು ಕಟ್ಟಿಸಿದ ಕೆರೆಯ ಮಧ್ಯದ ಮಂದಿರದಲ್ಲಿ ಸಮಾಧಿಸ್ಥನಾದನು. ಹರಿಶ್ಚಂದ್ರ ಸತಿಸುತರನ್ನು ಕೂಡಿಕೊಂಡು ಅಯೋಧ್ಯೆಯ ರಾಜ್ಯವನ್ನು ಮರಳಿ ಪಡೆದು ಸುಖವಾಗಿದ್ದನು. ರಾಘವಾಂಕನ ನಾಯಕರೆದುರಿಗೆ ಪ್ರತಿನಾಯಕರಿದ್ದಾರೆ. ಅದಯ್ಯನಿಗೆ ಪಾರಿಸಶೆಟ್ಟಿ, ಹರಿಶ್ಚಂದ್ರನಿಗೆ ವಿಶ್ವಾಮಿತ್ರ, ಬಿಲ್ಲೇಶ ಬೊಮ್ಮಯ್ಯನಂಥ ಕಳ್ಳಸುಳ್ಳನೂ ಇವನ ಕಾವ್ಯ ಪ್ರಪಂಚದಲ್ಲಿ ಸುಳಿದಾಡಿ ಸಹಾನುಭೂತಿ ಗಳಿಸುತ್ತಾರೆ. ಅಥವಾ ಈ ಇಬ್ಬರೂ ಕವಿಗಳ ಬಗ್ಗೆ ಹೀಗೆ ಹೇಳಬಹುದು; ಪಂಪನೊಬ್ಬನೇ ಲೌಕಿಕ ಮತ್ತು ಅಲೌಕಿಕಗಳನ್ನು ಬೆಳಗುವ ಎರಡು ಪ್ರತ್ಯೇಕ ಕಾವ್ಯ ಬರೆದರೆ- ಇಲ್ಲಿ ಗುರು ಹರಿಹರ ಅಲೌಕಿಕದ ಬಗೆಗೂ ರಾಘವಾಂಕ ಲೌಕಿಕದ ಬಗೆಗೆ ಕಾವ್ಯ ಬರೆದು ಬೆಳಗಿದರೆಂದು ಭಾವಿಸಬಹುದು.

(ಲೇಖಕರು: ಚಂದ್ರಶೇಖರ ಕಂಬಾರ, ಕೃತಿ: ದೇಶೀಯ ಚಿಂತನ) (ಕೃಪೆ: ಕಣಜ)


* * *