ನನ್ನ ಪುಟಗಳು

ಭಾಷಾ ಚಟುವಟಿಕೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಭಾಷಾ ಚಟುವಟಿಕೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

06 ಡಿಸೆಂಬರ್ 2020

10ನೇ ತರಗತಿ-ಕನ್ನಡ-ಪದ್ಯ-02-ಹಕ್ಕಿ ಹಾರುತಿದೆ ನೋಡಿದಿರಾ - ಭಾಷಾ ಚಟುವಟಿಕೆ

ಭಾಷಾ ಚಟುವಟಿಕೆ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
೧. ಕೊಟ್ಟಿರುವ ಪದಗಳ ಸಮಾನಾರ್ಥಕ ಪದ ಬರೆಯಿರಿ.
    ಸೂರ್ಯ = ರವಿ, ಭಾನು, ಭಾಸ್ಕರ, ಅರ್ಕ 
    ಎದೆ = ಹೃದಯ, ಗುಂಡಿಗೆ, ಉರ 
    ಮೇಘ = ಮೋಡ, ಮುಗಿಲು 
    ಗಡ = ಸಣ್ಣ ಕೋಟೆ     
    ಹರಸು = ಶುಭಕೋರು, ಹಾರೈಸು
    ಒಕ್ಕಿ = ಒಕ್ಕಣೆ ಮಾಡಿ, ತೆನೆಯಿಂದ ಕಾಳನ್ನು ಬೇರ್ಪಡಿಸಿ ಕೆನ್ನ = ಕೆಂಪು

೨. ಕೊಟ್ಟಿರುವ ಪದಗಳಿಗೆ ತತ್ಸಮ-ತದ್ಭವ ಬರೆಯಿರಿ.
    ಬಣ್ಣ - ವರ್ಣ, 
    ಬ್ರಹ್ಮ - ಬೊಮ್ಮ, 
    ಚಂದ್ರ - ಚಂದಿರ, 
    ಯುಗ - ಜುಗ, 
    ಅಂಗಳ - ಅಂಕಣ

೩. ಕೊಟ್ಟಿರುವ ಪದಗಳನ್ನು ಸಂಧಿ ಬಿಡಿಸಿ, ಹೆಸರಿಸಿ.
    
    ಇರುಳಳಿದು = ಇರುಳು + ಅಳಿದು - ಲೋಪಸಂಧಿ 
    ತೆರೆದಿಕ್ಕುವ = ತೆರೆದು + ಇಕ್ಕುವ - ಲೋಪಸಂಧಿ
    ಹೊಸಗಾಲ = ಹೊಸ + ಕಾಲ - ಆದೇಶ ಸಂಧಿ (ಗದಬಾದೇಶ) 
    ದಿಗ್ಮಂಡಲ = ದಿಕ್ + ಮಂಡಲ - ಜಶ್ತ್ವ ಸಂಧಿ 
        (ದಿಗ್ಮಂಡಲ ಪದವು ತಪ್ಪಾಗಿದೆ. ಸರಿಯಾದ ಪದ 'ದಿಙ್ಮಂಡಲ' = ದಿಕ್ + ಮಂಡಲ - ಅನುನಾಸಿಕ ಸಂಧಿ ಆಗುತ್ತದೆ)
    ತಿಂಗಳಿನೂರು = ತಿಂಗಳಿನ + ಊರು - ಲೋಪಸಂಧಿ

ಆ) ಕೊಟ್ಟಿರುವ ಅವ್ಯಯ ಪದಗಳು ಯಾವ ಯಾವ ಅವ್ಯಯಕ್ಕೆ ಸೇರಿವೆ ಎಂಬುದನ್ನು ಗುರುತಿಸಿ.

    ಸಾಮಾನ್ಯಾರ್ಥಕಾವ್ಯಯ: ಬೇಗನೆ, ಮೆಲ್ಲಗೆ,
    ಅನುಕರಣಾವ್ಯಯ: ಧಗಧಗ, ರೊಯ್ಯನೆ,
    ಭಾವಸೂಚಕಾವ್ಯಯ: ಅಯ್ಯೋ, ಓಹೋ
    ಕ್ರಿಯಾರ್ಥಕಾವ್ಯಯ: ಸಾಕು, ಹೌದು,
    ಸಂಬಂಧಾರ್ಥಕಾವ್ಯಯ: ಆದ್ದರಿಂದ, ಅಲ್ಲದೆ.
    ಅವಧಾರಣಾರ್ಥಕಾವ್ಯಯ: ಅದುವೇ, ನೀನೇ
********



02 ಡಿಸೆಂಬರ್ 2020

10ನೇ ತರಗತಿ-ಕನ್ನಡ-ಪದ್ಯ-01-ಸಂಕಲ್ಪಗೀತೆ - ಭಾಷಾ ಚಟುವಟಿಕೆ

ಭಾಷಾಚಟುವಟಿಕೆ

೧) ನೀಡಿರುವ ಪದಗಳ ಧಾತುಗಳನ್ನು ಗುರುತಿಸಿ ಬರೆಯಿರಿ.

ನಿಲ್ಲಿಸು-ನಿಲ್ಲು; ನಡೆಸು-ನಡೆ;  ಹಚ್ಚುವುದು-ಹಚ್ಚು; ಮುಟ್ಟೋಣ-ಮುಟ್ಟು; ಕಟ್ಟುವುದು-ಕಟ್ಟು; ಆಗೋಣ-ಆಗು


೨) ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಬರೆಯಿರಿ.

ಪ್ರೀತಿಯ - ಪ್ರೀತಿ + ಅ

ಬಿರುಗಾಳಿಗೆ - ಬಿರುಗಾಳಿ + ಗೆ

ಜಲಕ್ಕೆ - ಜಲ _ ಕ್ಕೆ

ಬಿದ್ದುದನ್ನು - ಬಿದ್ದುದು + ಅನ್ನು


೩. ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿಯನ್ನು ಹೆಸರಿಸಿ.

ಸಂಶಯದೊಳ್ - ಒಳ್ - ಸಪ್ತಮೀ ವಿಭಕ್ತಿ ಪ್ರತ್ಯಯ,  

ಜಲದಿಂ - ಇಂ - ತೃತೀಯ ವಿಭಕ್ತಿ ಪ್ರತ್ಯಯ

ಮರದತ್ತಣಿಂ - ಅತ್ತಣಿಂ - ಪಂಚಮೀ ವಿಭಕ್ತಿ ಪ್ರತ್ಯಯ

ರಾಯಂಗೆ - ಗೆ - ಚತುರ್ಥಿ ವಿಭಕ್ತಿ ಪ್ರತ್ಯಯ


೪. ಕೊಟ್ಟಿರುವ ಧಾತುಗಳಿಗೆ ವಿಧ್ಯರ್ಥಕ, ನಿಷೇಧಾರ್ಥಕ ಮತ್ತು ಸಂಭಾವನಾರ್ಥಕ ರೂಪಗಳನ್ನು ಬರೆಯಿರಿ.

ಧಾತು

ವಿಧ್ಯರ್ಥಕ

ನಿಷೇಧಾರ್ಥಕ

ಸಂಭಾವನಾರ್ಥಕ

ಹಾಡು

ಹಾಡಲಿ

ಹಾಡನು

ಹಾಡಿಯಾನು

ನೋಡು

ನೋಡಲಿ

ನೋಡಳು

ನೋಡಿಯಾಳು

ಕಟ್ಟು

ಕಟ್ಟಲಿ

ಕಟ್ಟರು

ಕಟ್ಟಿಯಾರು

ಕೇಳು

ಕೇಳಲಿ

ಕೇಳಿಯಾನು

ಕೇಳನು

ಓಡು

ಓಡಲಿ

ಓಡಳು

ಓಡಿಯಾಳು

ಓದು

ಓದಲಿ

ಓದರು

ಓದಿಯಾರು

ಬರೆ

ಬರೆಯಲಿ

ಬರೆಯನು

ಬರೆದಾನು



*********

23 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-06-ವೃಕ್ಷಸಾಕ್ಷಿ - ವ್ಯಾಕರಣ

೧] ಮೊದಲೆರಡು ಪದಗಳಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.

  ೧) ವಡ್ಡಾರಾಧನೆ : ಶಿವಕೋಟ್ಯಾಚಾರ್ಯ  : : ಪಂಚತಂತ್ರ : ದುರ್ಗಸಿಂಹ

  ೨) ಕಬ್ಬ  : ಕಾವ್ಯ  : : ಬೇಹಾರಿ  : ವ್ಯಾಪಾರಿ

  ೩) ಅನೃತ  : ಸುಳ್ಳು  : : ಕೃತ್ರಿಮ : ಮೋಸ

  ೪) ಬಂದಲ್ಲದೆ : ಲೋಪ : : ಧೃತಿಗೆಟ್ಟು  : ಆದೇಶ

  ೫) ದೈವಭಕ್ತಿ  : ತತ್ಪುರುಷ : : ಅಬ್ಜೋದರ : ಬಹುವ್ರೀಹಿ


೨] ಈ ಪದಗಳನ್ನು ವಿಂಗಡಿಸಿ, ಸಂಧಿಯ ಹೆಸರನ್ನು ತಿಳಿಸಿ.

  ೧) ಪೋಗಲ್‌ವೇೞ್ಕುಂ = ಪೋಗಲ್ + ಬೇೞ್ಕುಂ - ವಕಾರಾದೇಶ ಸಂಧಿ

  ೨) ತಕ್ಕನಿತು = ತಕ್ಕ + ಅನಿತು - ಲೋಪಸಂಧಿ

  ೩) ಪೂೞ್ದೆಡೆ = ಪೂೞ್ದ + ಎಡೆ - ಲೋಪಸಂಧಿ


ಋ] ನೀಡಿರುವ ಪದಗಳನ್ನು ವಿಗ್ರಹಿಸಿ, ಸಮಾಸವನ್ನು ಹೆಸರಿಸಿ.

   ೧) ಅತಿಕುಟಿಲ = ಅತಿಯಾದ + ಕುಟಿಲ - ಕರ್ಮಧಾರಯ ಸಮಾಸ

   ೨) ಕೈಕೊಳ್ವುದು = ಕೈಯನ್ನು + ಕೊಳ್ವುದು (ಕೈಯಂ + ಕೊಳ್ವುದು) - ಕ್ರಿಯಾಸಮಾಸ

   ೩) ಕಟ್ಟೇಕಾಂತ = ಕಡಿದಾದ + ಏಕಾಂತ - ಕರ್ಮಧಾರಯ ಸಮಾಸ

   ೪) ಸ್ವಾಮಿದ್ರೋಹ = ಸ್ವಾಮಿಗೆ + ದ್ರೋಹ - ತತ್ಪುರುಷ ಸಮಾಸ

   ೫) ಪರಧನ = ಪರರ + ಧನ - ತತ್ಪುರುಷ ಸಮಾಸ

   ೬) ಧನಹರಣ = ಧನದ + ಹರಣ - ತತ್ಪುರುಷ ಸಮಾಸ

   ೭) ಸಾಕ್ಷಿಮಾಡಿ = ಸಾಕ್ಷಿಯನ್ನು + ಮಾಡಿ - ಕ್ರಿಯಾಸಮಾಸ

   ೮) ಬಲವಂದು = ಬಲಮಂ + ಬಂದು - ಕ್ರಿಯಾಸಮಾಸ


ಎ] ಕೊಟ್ಟಿರುವ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ, ಗಣವಿಂಗಡಿಸಿ, ಛಂದಸ್ಸಿನ ಹೆಸರು ಮತ್ತು ಲಕ್ಷಣ ಬರೆಯಿರಿ.

        UU UU    U U  _     UU _
 ಅ) ಅತಿಕುಟಿ | ಲಮನಂ | ಧನಲು |
U U _ _ _ U _ U U U _ U U _
        ಬ್ಧತೆಯಿಂ | ದಂದು | ಷ್ಟಬುದ್ಧಿ  | ನುಡಿದಂ  | ಪುಸಿಯಂ |
-ಇದು ಕಂದ ಪದ್ಯ 
ಲಕ್ಷಣ: ೪|೪|೪| = ೧೨ 
        ೪|೪|೪|೪|೪ = ೨೦


   ಭ                ನ                ಭ     ರ          ಲಗ
       _ U U _ U U U U U _ U U _ UU _ U _ U _
 ಆ) ಮೇದಿನಿ | ಯಂಕ್ರಮ | ಕ್ರಮದೆ | ಪುರ್ವಿದು  | ದಾತ್ತನ | ಭೋವಿ ಭಾ | ಗಮಾ

-ಇದು ಉತ್ಪಲಮಾಲಾವೃತ್ತ

ಲಕ್ಷಣ:- ಭರನಭಭರಲಗ

************




12 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-02-ಲಂಡನ್ ನಗರ- ಭಾಷಾ ಚಟುವಟಿಕೆ

1. ಕೊಟ್ಟಿರುವ ಸೂಚನೆಯಂತೆ ಉತ್ತರಿಸಿ. 
    ೧. ವೆಸ್ಟ್‌ಮಿನ್‌ಸ್ಟರ್ ಅಬೆ ನೋಡಿಕೊಂಡು ಬಂದೆವು. (ಭವಿಷ್ಯತ್‌ಕಾಲಕ್ಕೆ ಪರಿವರ್ತಿಸಿ) 
    ಉತ್ತರ: ವೆಸ್ಟ್‌ಮಿನ್‌ಸ್ಟರ್ ಅಬೆ ನೋಡಿಕೊಂಡು ಬರುವೆವು.
   
 ೨. ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುವರು. (ವರ್ತಮಾನಕಾಲಕ್ಕೆ ಪರಿವರ್ತಿಸಿ) 
    ಉತ್ತರ: ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುತ್ತಾರೆ.
    
೩. ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆಯುತ್ತವೆ. (ಭೂತಕಾಲಕ್ಕೆ ಪರಿವರ್ತಿಸಿ)
    ಉತ್ತರ: ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆತವು.
 
2. ಈ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ. 
    ೧. ಕುಳಿತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು / ಕೈ ಕೆಸರಾದರೆ ಬಾಯಿ ಮೊಸರು / ದುಡಿಮೆಯೇ ದುಡ್ಡಿನ ತಾಯಿ

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ದುಡಿಮೆ ಅಥವಾ ದೈಹಿಕ ಶ್ರಮ ಹಾಗೂ ಅದರ ಮಹತ್ವವೇನು ಎಂಬುದನ್ನು ತಿಳಿಸುತ್ತದೆ.

* ಹನ್ನೆರಡನೆಯ ಶತಮಾನದಲ್ಲೇ ಶಿವಶರಣರು ’ಕಾಯಕವೇ ಕೈಲಾಸ’, ಎಂದು ದುಡಿಮೆಯ ಮಹತ್ವವನ್ನು ಸಾರಿದರು. ಕಾಯಕ ಎಂದರೆ ’ಪ್ರತಿಯೊಬ್ಬ ವ್ಯಕ್ತಿಯು ಏನಾದರೊಂದು ದೈಹಿಕ ಶ್ರಮದ ಮೂಲಕ ಸಂಪಾದನೆ ಮಾಡಿ ಜೀವನ ನಡೆಸಬೇಕು’ ಸೋಮಾರಿಯಾಗಿ ಕಾಲಕಳೆಯದೆ ಕಷ್ಟಪಟ್ಟು ದುಡಿದು ಬದುಕುವುದರಿಂದ ಹಣ ಸಂಪಾದನೆ ಸಾಧ್ಯ. ಕೂತು ಉಣ್ಣುವವನಿಗೆ ಕುಡುಕೆ ಹೊನ್ನೂ ಸಾಲದು ಎಂಬಂತೆ ಇರುವ ಆಸ್ತಿ ಕರಗಿದ ಮೇಲೆ ಕಷ್ಟ ಪಡಬೇಕಾಗುತ್ತದೆ. ಆದ್ದರಿಂದ ಕಷ್ಟಪಟ್ಟರೆ ಸುಖವಿದೆ ಎಂಬುದು ಈ ಗಾದೆಯ ಆಶಯವಾಗಿದೆ.

’ದುಡಿಮೆಯೇ ದುಡ್ಡಿನ ತಾಯಿ’, ’ಕಾಯಕವೇ ಕೈಲಾಸ’, ’ಆಳಾಗಬಲ್ಲವನು ಆಳುವನು ಅರಸಾಗಿ’ ಮುಂತಾದವು ಇದೇ ಅರ್ಥ ಕೊಡುವ ಗಾದೆ ಮಾತುಗಳಾಗಿವೆ.

    ೨. ಕಟ್ಟುವುದು ಕಠಿಣ; ಕೆಡಹುವುದು ಸುಲಭ / ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ’ಯಾವುದೇ ಕೆಲಸದಲ್ಲಾದರೂ ಯಶಸ್ಸು ಗಳಿಸಬೇಕಾದರೆ ಕಷ್ಟಪಡಬೇಕು. ಆದರೆ ಹಾಳು ಮಾಡಲು ಕಷ್ಟ ಪಡಬೇಕಾಗಿಲ್ಲ’ ಎಂಬುದನ್ನು ತಿಳಿಸುತ್ತದೆ. 

ಒಬ್ಬ ಕುಂಬಾರ ಮಡಕೆಗಳನ್ನು ಮಾಡಲು ಕೆರೆಯಿಂದ ಮಣ್ಣು ಹೊತ್ತು ತಂದು, ಅದರಲ್ಲಿರುವ ಕಲ್ಲು, ಕಸ-ಕಡ್ಡಿಗಳನ್ನು ತೆಗೆದು, ಮಣ್ಣನ್ನು ತುಳಿದು ಹದಮಾಡಿ; ತಿಗರಿಗೆ ಹಾಕಿ ತಿರುಗಿಸಿ, ಮಡಿಕೆಯ ಆಕಾರವನ್ನು ನೀಡಿ, ಅದನ್ನು ತಟ್ಟಿ ಸರಿಪಡಿಸಿ, ಬೇಯಿಸಿ ಹೀಗೆ ಬಹಳ ಕಷ್ಟಪಟ್ಟು ಮಡಿಕೆಯನ್ನು ಮಾಡುತ್ತಾನೆ. ಆದರೆ ಆ ಮಡಿಕೆಯನ್ನು ಒಡೆಯಲು ಒಂದು ದೊಣ್ಣೆ ಪೆಟ್ಟು ಸಾಕು. 

ಯಾವುದೇ ಕಟ್ಟಡ ನಿರ್ಮಾಣ ಮಾಡಲು, ಒಂದು ಒಳ್ಳೆಯ ಸಂಸ್ಥೆಯನ್ನು ಸ್ಥಾಪಿಸಲು ಬಹಳ ಶ್ರಮಬೇಕು. ಆದರೆ ಹಾಳುಮಾಡುವುದಕ್ಕೆ ಕಷ್ಟಪಡಬೇಕಿಲ್ಲ. ಹಾಗೆಯೇ ನಾವು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು, ಒಳ್ಳೆಯ ಹೆಸರು ಸಂಪಾದಿಸಲು ಬಹಳ ಶ್ರಮಿಸಬೇಕು. ಆದರೆ ಅದನ್ನು ಹಾಳುಮಾಡಿಕೊಳ್ಳಲು ಕ್ಷಣಕಾಲ ಸಾಕು. ಆದ್ದರಿಂದ, ನಾವು ಏನನ್ನಾದರೂ ಹಾಳುಮಾಡುವ ಮೊದಲು ಅದರ ಹಿಂದಿರುವ ಪರಿಶ್ರಮವನ್ನು ಅರ್ಥಮಾಡಿಕೊಳ್ಳಬೇಕು. ಎಂಬುದು ಈ ಗಾದೆಯ ಆಶಯವಾಗಿದೆ.

(ಹೆಚ್ಚಿನ ಗಾದೆ ವಿಸ್ತರಣೆಗಳನ್ನು ಓದಲು "ಇಲ್ಲಿ ಕ್ಲಿಕ್‌ಮಾಡಿ")

 
3. ಈ ವಿಷಯಗಳಿಗೆ ಪ್ರಬಂಧ ಬರೆಯಿರಿ.
೧. ಸ್ವಚ್ಛಭಾರತ ಅಭಿಯಾನ
೨. ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ
೩. ರಾಷ್ಟ್ರೀಯ ಭಾವೈಕ್ಯ
(ಶೀಘ್ರದಲ್ಲೇ ಪ್ರಕಟಿಸಲಾಗುವುದು)

*************
***********