ನನ್ನ ಪುಟಗಳು

18 ಅಕ್ಟೋಬರ್ 2014

ಪದಚರಿತೆ-1

ಪದಚರಿತೆ-1
ಪದಚರಿತೆ : ಒಂದಷ್ಟು ಪದಗಳ ಮೂಲಚೂಲಗಳ ಕೆದಕಾಟ -1    ಕೃಪೆ-ಪಿ.ವಿ.ನಾರಾಯಣ್
-----------------------------------------------------------------------------------------------
       ಭಾಷೆ ಎಂಬುದು ಒಂದು ವಿಸ್ಮಯ, ನಾಗರಿಕ ಮಾನವನ ಮಹಾ ಅನ್ವೇಷಣೆ. ಜಗತ್ತಿನಲ್ಲಿ ಸಾವಿರಾರು ಭಾಷೆಗಳಿವೆಯಂತೆ. ಅವುಗಳಲ್ಲಿ ಕನ್ನಡದ್ದು ವಿಶಿಷ್ಟ ಸ್ಥಾನ. ಎರಡು ಸಾವಿರ ವರ್ಷಗಳಿಂದ ಜನಭಾಷೆಯಾಗಿದ್ದು ಇಂದಿಗೂ ಜೀವಂತವಾಗಿರುವ ನುಡಿ ಇದು. ಇಂಥ ಅನನ್ಯತೆ ಇರುವುದು ಪ್ರಪಂಚದ ನಾಲ್ಕೈದು ಭಾಷೆಗಳಿಗೆ ಮಾತ್ರ. ಅಸಂಖ್ಯಾತ ಜನ ಕನ್ನಡವನ್ನು ಬಳಸುತ್ತ ಬಳಸುತ್ತ ಆ ನುಡಿಯಲ್ಲಿನ ಶಬ್ದಗಳಿಗೂ ಅವುಗಳ ಆಳದ ಅರ್ಥಗಳಿಗೂ ಅನನ್ಯ ಸಂಬಂಧ ಉಂಟಾಗಿದೆ. ಮಾತಿಗೂ ಅರ್ಥಕ್ಕೂ ಇರುವ ನಂಟನ್ನು ಕಾಳಿದಾಸ ಶಿವಪಾರ್ವತಿಯರಿಗೆ ಹೋಲಿಸಿದ್ದಾನೆ. ಆದರೆ ಶಬ್ದ-ಅರ್ಥಗಳಲ್ಲಿ ಮೂಲಭೂತವಾದ ನಂಟೇನೂ ಇಲ್ಲ, ರೂಢಿಯಿಂದ ಬಂದದ್ದು. ಅಷ್ಟೆ.
             "ಪದನರಿದು ನುಡಿಯಲುಂ ನುಡಿದುದಂ ಅರಿದು ಆರಯಲುಂ ಆರ್ಪರ್ ಆ ನಾಡವರ್ಗಳ್" ಎಂದು ಕನ್ನಡದ ಅತ್ಯಂತ ಪ್ರಾಚೀನ ಉಪಲಬ್ಧ ಕೃತಿ 'ಕವಿರಾಜಮಾರ್ಗಕ' ಹೇಳುತ್ತದೆ. ಭಾಷೆಯ ಹದವನ್ನು ತಿಳಿದು ಮಾತನಾಡುವುದನ್ನೂ, ಇತರರು ಹೇಳಿದ್ದನ್ನು ಸರಿಯಾಗಿ ಅರ್ಥಮಾಡಿಕೊಂಡು ಯೋಚಿಸುವುದನ್ನೂ ಕನ್ನಡಿಗರು ಬಲ್ಲರು ಎಂಬುದು ಈ ಮಾತಿನ ಅರ್ಥ. ಇದು ಅವರಿಗೆ ಸಹಜವೆಂಬಂತೆ ಅದು ವರ್ಣಿಸುತ್ತದೆ. ಆದರೆ ಇದು ಅಭಿಮಾನದ ಮಾತು. ಮಾತು ಮತ್ತು ಅರ್ಥ - ಇವೆರಡರ ಸಂಬಂಧವನ್ನು ಅರಿತಾಗ ಮಾತ್ರ ಮಾತಿನ 'ಹದಕ' ಉಂಟಾಗುತ್ತದೆ. ಮಾತಿನ ಹೊರಮೈ, ಅದರಲ್ಲಿ ಅರ್ಥ ಬಂದು ಸೇರುವ ಬಗೆ - ಇವುಗಳ ಮರ್ಮ ತಿಳಿದರೆ ಭಾಷೆಯ ಬಗೆಗಿನ ಹಿಡಿತ ಕೈಗೂಡೀತು. ಇದು ಸಾಧ್ಯವಾಗುವುದು ಅಭ್ಯಾಸದಿಂದ, ಎರಡೂ ರೀತಿಯಲ್ಲಿ: ಓದುವುದರಿಂದ ಹಾಗೂ ಬಳಸುವುದರಿಂದ. ಈ ಎರಡು ಸಾವಿರ ವರ್ಷಗಳಲ್ಲಿ ಅಸಂಖ್ಯಾತ ಕನ್ನಡಿಗರ ಬಳಕೆ ಎಂಬ ಪಾತ್ರದಲ್ಲಿ ಕನ್ನಡ ಶಬ್ದವಾಹಿನಿಯು ನಿರಂತರವಾಗಿ ಹರಿದು ಬಂದಿದೆ; ಆ ಹರಿವಿನಲ್ಲಿ ಕೆಲವು ಶಬ್ದಗಳು ಹಿಂದಿನಂತೆಯೇ ಉಳಿದು ಬಂದಿವೆ, ಕೆಲವು ಮಾರ್ಪಾಟು ಹೊಂದಿವೆ, ಮತ್ತೆ ಕೆಲವು ಮರಳಲ್ಲಿ ಇಂಗಿಹೋಗಿವೆ, ಎಷ್ಟೋ ಪದಗಳು ಹೊಸತಾಗಿ ಬಂದು ಸೇರಿಕೊಂಡಿವೆ - ಹೀಗೇ ಈ ನದಿ ಹರಿಯುತ್ತಿದೆ. "ಶಬ್ದಪಾರಂ ಆರ್ಗಂ ಅಶಕ್ಯಂ" ಎಂಬ ಮಾತಿದ್ದರೂ, ನಾವು ಬಳಸುವ ಶಬ್ದಗಳ ಸ್ವರೂಪ - ಅಂದರೆ ಅವುಗಳ ಹುಟ್ಟು, ಬೆಳವಣಿಗೆಗಳನ್ನು ಕೆದಕುವ ಹಾಗೂ ಶಬ್ದ-ಅರ್ಥಗಳ ದಾಂಪತ್ಯದ ಮರ್ಮವನ್ನು ಬೆದಕುವ, ಅದರ ಫಲವಾದ ಕುಡಿಗಳನ್ನು ಹುಡುಕುವ - ಆ ಮೂಲಕ ಪದಗಳ ಹದವನ್ನು ಅರಿಯುವ ಪ್ರಯತ್ನ - ಈ ಬರಹ.
******
ಅಕ್ಕಿ: ಬತ್ತದ ಹೊಟ್ಟು ತೆಗೆದಾಗ ಒಳಗಿರುವ ಧಾನ್ಯವೇ ಅಕ್ಕಿ. ಇದು ದ್ರಾವಿಡ ಶಬ್ದ: ಇದು ತಮಿಳಿನಲ್ಲಿ ಅರಿ, ಅರಿಚು, ಅರಿಶಿ ಎಂದೂ, ಮಲಯಾಳಂನಲ್ಲಿ ಅರಿ ಎಂದೂ, ತುಳುವಿನಲ್ಲಿ ಅರಿ, ಅಕ್ಕಿ ಎಂದೂ ರೂಪ ತಾಳುತ್ತದೆ. ತೆಲುಗಿನಲ್ಲಿ ಅಕ್ಕಳ್ಲು ಎಂಬ ಶಬ್ದವಿದ್ದರೂ ಸಾಮಾನ್ಯವಾಗಿ ಬಿಯ್ಯಮು ಎನ್ನುತ್ತಾರೆ. ಅಕ್ಕಿಯ ಪ್ರಸ್ತಾಪ 'ವಡ್ಡಾರಾಧನೆ' ("ಕಳಶಮುಂ ಕನ್ನಡಿಯುಂ ಪೂವುಮಕ್ಕಿಯುಂ") ಮತ್ತು ಪಂಪನ 'ಆದಿಪುರಾಣ' ("ನಮಗಕ್ಕಿಗೊಟ್ಟು ಮಡಗೂಳುಣ್ಬಂದಮಂ ಪೋಲದೇ" ಅಂತಹ ಪ್ರಾಚೀನ ಕಾವ್ಯಗಳಲ್ಲಿದೆ. ಬತ್ತದಿಂದ ಹೊಟ್ಟು ತೆಗೆದು ಅಕ್ಕಿ ಪಡೆಯುವುದೇ 'ಅಕ್ಕಿಗುಟ್ಟು' ("ಸಾರಿಸುವೆಡೆಯೊಳ್ ಅಕ್ಕಿಗುಟ್ಟುವೆಡೆಯೊಳ್" - ಬ್ರಹ್ಮಶಿವನ 'ಸಮಯ ಪರೀಕ್ಷೆ'). ಅಕ್ಕಿ ಶಬ್ದವನ್ನು ಮಂತ್ರಾಕ್ಷತೆ ಎಂಬರ್ಥದಲ್ಲಿ ನೇಮಿಚಂದ್ರನ 'ಲೀಲಾವತಿ' ಬಳಸುತ್ತದೆ ("ಜಿನನಂ ಪೂಜಿಸಿದಕ್ಕಿ ಮಾಮೆ ಸೊಡರ್ಗಳ್"). ಅಕ್ಕಿಯನ್ನು ಮೂರು ಬಾರಿ ತೊಳೆದರೆ ಅನ್ನ ಹದವಾಗುವುದೆಂದು 'ಲೋಕೋಪಕಾರ' ಹೇಳುತ್ತದೆ ("ಕ್ರಮಮದು ಅಕ್ಕಿಯಂ ಇಂಬಾಗಿ ಮೂರುಸೂಳ್ ಕರ್ಚಿ ಪೊಯ್ದೊಡೆ ಕುದಿವೆಸಳು ಉತ್ತಮಮಕ್ಕುಂ ಪದದಿ"). ಅಕ್ಕಿಯನ್ನು ತೊಳೆದ ನೀರೇ 'ಅಕ್ಕಚ್ಚು' ಆಥವಾ ಈಗಿನ ಕಲಗಚ್ಚು (ಕರ್ಚು>ಕಚ್ಚು=ತೋಳೆಯುವುದು).
ಅಕ್ಕಿಯ ಕಾಳು ಇಡಿಯಾಗಿರದೆ ಒಡೆದಿದ್ದರೆ ಅದನ್ನು ಅಕ್ಕಿನುಚ್ಚು ಎಂದೂ, ಒರಟಾದ ಪುಡಿಯನ್ನು ಅಕ್ಕಿತರಿ ಎಂದೂ, ತುಂಬ ನವಿರಾದ ಪುಡಿಯನ್ನು ಅಕ್ಕಿಹಿಟ್ಟು ಎಂದೂ ಕರೆಯುವುದು ವಾಡಿಕೆ. ಇವೆಲ್ಲದರಿಂದಲೂ ವಿವಿಧ ತಿಂಡಿಗಳನ್ನು ಮಾಡುತ್ತಾರೆ: ಅಕ್ಕಿತರಿ ಉಪ್ಪಿಟ್ಟು, ಅಕ್ಕಿ ಸಜ್ಜಿಗೆ, ಅಕ್ಕಿರೊಟ್ಟಿ ಇತ್ಯಾದಿ. ಅಕ್ಕಿಯ ಹಿಟ್ಟಿನಿಂದ ಮಾಡುವ ಅಂಟು 'ಅಕ್ಕಿಸರಿ'. ಕನಕದಾಸರು ತಮ್ಮ 'ರಾಮಧಾನ್ಯಚರಿತೆ'ಯಲ್ಲಿ ಅಕ್ಕಿ-ರಾಗಿಗಳ ರೂಪಕದ ಮೂಲಕ ವರ್ಗಸಂರ್ಷವನ್ನು ಚಿತ್ರಿಸುತ್ತಾರೆ.
'ತಲೆಗೆ ಅಕ್ಕಿಕಾಳು ಹಾಕು' ಎಂದರೆ ಮದುವೆ ಮಾಡುವುದು ಎಂದರ್ಥ; 'ಬಾಯಿಗೆ ಅಕ್ಕಿಕಾಳು ಹಾಕಿಕೊಂಡಿರು' ಎಂದರೆ ಕಾಯುವುದು ಎಂದರ್ಥ. ಹೆಣದ ಬಾಯಿಗೆ ಅಕ್ಕಿಕಾಳು ಹಾಕುವ ಪರಿಪಾಟವಿದೆ.
ಸಣ್ಣ ಧಾನ್ಯಗಳ ಹೆಸರಿಗೆ ಅಕ್ಕಿ ಎಂಬ ಉತ್ತರಪದವನ್ನು ಸೇರಿಸುವ ಪರಿಪಾಟವೂ ಇದೆ: ನವಣಕ್ಕಿ, ಬಿದಿರಕ್ಕಿ ಇತ್ಯಾದಿ. ಅಕ್ಕಿಯಿಂದ ಮಾಡಿದ ಒಂದು ಬಗೆಯ ಮದ್ಯವನ್ನು 'ಅಕ್ಕಿಬೋಜ' ಎನ್ನುತ್ತಾರೆ; ಇದರ ಉಲ್ಲೇಖವನ್ನು ಕುವೆಂಪು ಅವರ 'ಕಾನೂರು ಹೆಗ್ಗಡಿತಿ' ಕಾದಂಬರಿಯಲ್ಲಿ ಕಾಣಬಹುದು.
=====
ಅಗ್ಗ: ಈ ಶಬ್ದವು ಮೂರು ನೆಲೆಗಳಲ್ಲಿ ಬಳಕೆಯಾಗುತ್ತದೆ. "ಅಗ್ಗದ ಶೆಟ್ಟಿ ಮುಗ್ಗಿದ ಜೋಳ" ಎಂಬ ಗಾದೆಮಾತನ್ನು ಕೇಳಿರಬಹುದು. ಎಂದರೆ ಕಡಿಮೆ ಬೆಲೆಗೆ ಮಾರುವ ಎಂಬರ್ಥ ಇಲ್ಲಿದೆ. ಇದು ಮಾತು ವ್ಯಕ್ತಿತ್ವ ಮುಂತಾದವುಗಳ ಅಲ್ಪತೆಯನ್ನು ಸೂಚಿಸುವಾಗಲೂ ಬಳಸುತ್ತಾರೆ. ಇದೇ ಅರ್ಥದಲ್ಲಿ ಈ ಶಬ್ದವನ್ನು ತುಳುವಿನಲ್ಲಿಯೂ ಬಳಸುತ್ತಾರೆ. ತೆಲುಗಿನಲ್ಲಿ ಇದು ಅಗ್ಗಮು ಎಂದಾಗುತ್ತದೆ. ಈ ಅರ್ಥದಲ್ಲಿನ ಶಬ್ದ ದ್ರಾವಿಡ ಮೂಲದ್ದಿರಬಹುದೆ ಎಂಬ ಅನುಮಾನ ಮೂಡುತ್ತದೆ. ಆದರೆ ಸಂಸ್ಕೃತದ ಎರಡು ಪದಗಳು ಕನ್ನಡದಲ್ಲಿ 'ಅಗ್ಗ' ಎಂಬ ಒಂದೇ ರೂಪದಿಂದ ತದ್ಭವವಾಗಿದೆ. ಮೊದಲನೆಯದು 'ಅರ್ಘ' ಎಂಬುದು; ಇದಕ್ಕೆ ಸಂಸ್ಕೃತದಲ್ಲಿ ಬೆಲೆ ಎಂಬರ್ಥವಿದೆ. ಈ ಅರ್ಥವು ಹೀನಾರ್ಥಗೊಂಡು ಬೆಲೆಯಿಲ್ಲದ ಎಂಬ ಅರ್ಥವನ್ನು ಪಡೆದಿರಬಹುದು ಎಂಬ ಅನುಮಾನವೂ ಉಂಟಾಗುತ್ತದೆ. ಹೀನಾರ್ಥ ಎಂಬುದು ಶಬ್ದವೊಂದರ ಮೂಲಾರ್ಥ ಬದಲಾಗುವ ಒಂದು ಬಗೆಯ ಪ್ರಕ್ರಿಯೆ 'ಮಹಾ ದೊಡ್ಡ ಮನುಷ್ಯ' ಎನ್ನುವಾಗ ದೊಡ್ಡ ಎಂಬುದಕ್ಕೆ ಚಿಕ್ಕ ಎಂಬ ಅರ್ಥ ಪ್ರಾಪ್ತವಾಗುವಂತೆ ಇಲ್ಲಿಯೂ ಆಗುತ್ತದೆ. ಇದನ್ನು ಭಾಷಾವಿಜ್ಞಾನದಲ್ಲಿ (ಪೆಜೋರೆಟಿವ್ ಚೇಂಜ್) ಎನ್ನುತ್ತಾರೆ ಇದಕ್ಕೆ ವಿರುದ್ಧವಾದ ಪ್ರಕ್ರಿಯೆ 'ಅಮೆಲಿಯೋರೇಟಿವ್ ಚೇಂಜ್.' ಅಗ್ಗ ಎಂಬುದಕ್ಕೆ ಶ್ರೇಷ್ಠವಾದ ಎಂಬ ಅರ್ಥವೂ ಇದೆ.
ಅಗ್ಗ ಎಂಬುದು ಸಂಸ್ಕೃತದ ಮತ್ತೊಂದು ಪದ 'ಅಗ್ರ'ದ ತದ್ಭವವೂ ಹೌದು. ಅಗ್ರ ಎಂದರೆ ತುದಿ ಎಂದರ್ಥ. ಬಾಳೆಯೆಲೆಯ ತುದಿಯ ಬಾಗಿದ ಆಕಾರದ ಭಾಗವನ್ನು 'ಅಗ್ರ' ಎನ್ನುವುದು ಇದಕ್ಕೇ. ಹೀಗಾಗಿ ಎಲ್ಲಕ್ಕಿಂತ ತುದಿಯಲ್ಲಿರುವ ಅಥವಾ ಮೇಲಿರುವ ಎಂಬಂತೆ ಅರ್ಥವಿಸ್ತಾರಗೊಳುತ್ತದೆ. 'ಅಗ್ರಜ' (ಮುಂದು, ಮೊದಲು ಹುಟ್ಟಿದವನು, ಎಂದರೆ ಅಣ್ಣ) ಎಂಬ ಪದ ರೂಪುಗೊಂಡಿದೆ. ಅಗ್ಗದಿಂದ ಅಗ್ಗಳ ಎಂಬ ಪದವೂ ಉಂಟಾಗುತ್ತದೆ; ಈ ಪದಕ್ಕೆ ಅತಿಶಯವಾದ ಎಂಬರ್ಥವಿದೆ. "ಅಗ್ಗಳಮೆಂಬುದೆ ಅಧಿಕಂ" ಎಂದು ಒಂದು ನಿಘಂಟು ಅರ್ಥ ಕೊಡುತ್ತದೆ. ಪ್ರಾಯಶಃ ಈ ಅರ್ಥದ ಕಾರಣದಿಂದ ಅಗ್ಗಳ, (ಈ ಹೆಸರಿನ ಹನ್ನೆರಡನೆಯ ಶತಮಾನದ ಹಳಗನ್ನಡ ಕವಿಯೊಬ್ಬನಿದ್ದಾನೇ; ಅವನ ಕೃತಿ 'ಚಂದ್ರಪ್ರಭಪುರಾಣ'). ಅಗ್ಗಪ್ಪ, ಅಗ್ಗಪ್ಪಸೆಟ್ಟಿ ಎಂಬ ಅಂಕಿತನಾಮಗಳೂ ಸಿಗುತ್ತವೆ. (ಅಂಕಿತನಾಮವೆಂದರೆ ನಿರ್ದಿಷ್ಟ ವ್ಯಕ್ತಿ ಅಥವಾ ವಸ್ತುವಿನ ಹೆಸರು). ಅಗ್ಗಪ್ಪ ಎಂಬ ರೂಪದ ಕೊನೆಯ ದ್ವಿತ್ವವು (ವ್ಯಂಜನದ ಪುನರುಕ್ತಿ) ಸರಳವಾಗಿ ಅಗ್ಗಪ ಎಂಬ ರೂಪವನ್ನು ಪಡೆಯುತ್ತದೆ. ಅಗ್ಗಪವೆಗ್ಗಡೆ ಎಂಬ ಹೆಸರು ಹದಿಮೂರನೆಯ ಶತಮಾನದ ಶಾಸನವೊಂದರಲ್ಲಿ ಉಕ್ತವಾಗಿದೆ. ಅಗ್ಗಳ ಎಂಬ ವಿಶೇಷಣಕ್ಕೆ 'ಇಕೆ' ಎಂಬ ಪ್ರತ್ಯಯ ಸೇರಿ ಅಗ್ಗಳಿಕೆ (ಹಿರಿಮೆ, ಹೆಗ್ಗಳಿಕೆ) ಎಂಬ ಭಾವನಾಮ ಸಿದ್ಧಗೊಳ್ಳುತ್ತದೆ. ಆದರೆ 'ಅಗ್ಗ' ಎಂಬ ಈ ಶಬ್ದ ಶ್ರೇಷ್ಠವಾದದ್ದು ಎಂಬರ್ಥದಲ್ಲಿ ಬಳಕೆಗೊಂಡಿರುವುದು ಕಾಣಲಿಲ್ಲ; ಸಾಧಿತಪದಗಳಲ್ಲಿ ಮಾತ್ರ ಈ ಅರ್ಥದಲ್ಲಿ ಈ ರೂಪ ಸಿಗುತ್ತದೆ.
====
ಅಚ್ಚು: ಇದು ಸಂಸ್ಕೃತದ 'ಅಕ್ಷ' ಎಂಬ ಶಬ್ದದ ತದ್ಭವ. ಇಂಗ್ಲಿಷ್ನಲ್ಲಿ ಆಕ್ಸೆಲ್ ಎಂಬ ಶಬ್ದವಿದೆ. ಇಂಗ್ಲಿಷ್ ಮತ್ತು ಸಂಸ್ಕೃತ ಶಬ್ದಗಳಲ್ಲಿ ಹೋಲಿಕೆಯಿರುವುದನ್ನು ಗಮನಿಸಿ (ಎರಡರಲ್ಲೂ ಅ ಎಂಬ ಸ್ವರದ ನಂತರ ಕಕಾರ ಸಕಾರಗಳಿವೆ). ಈ ಎರಡು ಭಾಷೆಗಳು ಭಾಷಾವಿಜ್ಞಾನಿಗಳ ಪ್ರಕಾರ ಒಂದೇ ಭಾಷಾಕುಟುಂಬದವು, ಅಂದರೆ ಇಂಡೋಯರೋಪಿಯನ್ ವರ್ಗಕ್ಕೆ ಸೇರಿದವು; ಈ ಎರಡೂ ಪದಗಳ ಮೂಲ ಒಂದೇ ಆಗಿರುತ್ತದೆ.
ಅಚ್ಚು ಎಂದರೆ ಬಂಡಿಯ ಚಕ್ರದ ಮಧ್ಯಭಾಗ ಎಂದೂ, ಪಗಡೆಯ ದಾಳ ಎಂದೂ, ತಾರೆಯ ಮರ ಎಂದೂ ಅರ್ಥಗಳಿವೆಯೆಂದು ಹದಿನಾಲ್ಕನೆಯ ಶತಮಾನದ 'ಅಭಿನವಾಭಿಧಾನಂ' ಎಂಬ ಕನ್ನಡ ನಿಂಟುವಿನಲ್ಲಿ ಹೇಳಿದೆ. ಈ ಪದಕ್ಕೆ ಇನ್ನೂ ಅನೇಕ ಅರ್ಥಗಳಿವೆ. ಅಚ್ಚು ಎಂದರೆ ಎರಕ ಎನ್ನುವ ಅರ್ಥವಲ್ಲದೆ, ಮಗ್ಗದಲ್ಲಿ 'ಹಾಸುಗಳನ್ನು ಪ್ರತ್ಯೇಕಿಸಿ ಹೊಕ್ಕುಗಳನ್ನು ಅದುಮಲು ಬಳಸುವ ಸಲಕರಣೆ' ಎಂದೂ, ಹೊಲದಲ್ಲಿ ಕಟ್ಟುವ ಬದು ಎಂದೂ ಅರ್ಥಗಳಿವೆ.     'ಅಚ್ಚುಕಟ್ಟು' ಎಂಬ ಶಬ್ದವನ್ನು ನೆನಪಿಸಿಕೊಳ್ಳಿ. ಕನ್ನಡದ ಈ ಪದ ಇತರ ದ್ರಾವಿಡ ಭಾಷೆಗಳಲ್ಲೂ ದೊರೆಯುತ್ತದೆ: ತೆಲುಗು, ತಮಿಳು, ಮಲಯಾಳಂಗಳಲ್ಲಿ ಇದು ಅಚ್ಚು ರೂಪದಲ್ಲಿಯೇ ಇದ್ದರೆ, ತುಳುವಿನಲ್ಲಿ ಅಚ್ಚಿ ಎಂದಾಗುತ್ತೆ. ಆದ್ದರಿಂದ ಇದು ದ್ರಾವಿಡ ಪದವೂ ಆಗಿರಬಹುದು; ಅಂದರೆ ಅಚ್ಚು ಎಂಬ ಶಬ್ದ ಸ್ವತಂತ್ರ ದ್ರಾವಿಡ ಪದವೂ ಆಗಿ, ಅಕ್ಷ ಎಂಬ ಸಂಸ್ಕೃತದ ಪದ ತದ್ಭವವಾದಾಗಲೂ ಅದೇ ರೂಪವನ್ನು ಪಡೆದಿರಬಹುದು. ಸಕ್ಕರೆ ಅಚ್ಚು, ಬೆಲ್ಲದ ಅಚ್ಚು ಎಂಬ ಪದಗಳು ಸಾಮಾನ್ಯ. ಸಂಪೂರ್ಣ ಹೋಲಿಕೆಯನ್ನು ಸೂಚಿಸುವಾಗಲೂ ಈ ಶಬ್ದವನ್ನು ಬಳಸುತ್ತೇವೆ: 'ತಂದೆಯ ಅಚ್ಚು' ಎಂದೋ 'ತಾಯಿಯ ಪಡಿಯಚ್ಚು' ಎಂದೋ ಬಳಸುವಾಗ ಇದು ಸೂಚಿತವಾಗಿದೆ. 'ಪಡಿಯಚ್ಚು'ವಿನಲ್ಲಿರುವ ಪಡಿ ಎಂಬುದು 'ಪ್ರತಿ' ಎಂಬುದರ ತದ್ಭವ; ಅಂದರೆ ಹಾಗೇ ಇರುವ ಎಂದು ಆಶಯ. ಈ ಕಾರಣದಿಂದ ಅಚ್ಚು ಎಂಬುದಕ್ಕೆ ವಿಗ್ರಹ, ಬೊಂಬೆ ಎಂಬರ್ಥಗಳು ಪ್ರಾಪ್ತವಾಗುತ್ತವೆ. ಹಳಗನ್ನಡದಲ್ಲಿ 'ಅಚ್ಚಿಱಿ' (ಮುದ್ರೆಯೊತ್ತು) 'ಅಚ್ಚುಡಿ' (ಎರಕ ಹೊಯ್ದಂತೆ ಒಂದಾಗು) ಎಂಬ ಸಮಾಸರೂಪಗಳೂ ದೊರೆಯುತ್ತವೆ. ಮುದ್ರಣವನ್ನು ಅಚ್ಚುಮಾಡು ಎಂದೂ, ಮುದ್ರಣಾಲಯವನ್ನು ಅಚ್ಚುಕೂಟ ಎಂದೂ, ಮುದ್ರಣಾಕ್ಷರವನ್ನು ಕೆತ್ತಿರುವ ಮೊಳೆಯನ್ನು ಅಚ್ಚುಮೊಳೆ ಎಂದೂ, ಎರಕಹೊಯ್ಯಿ ಎಂಬರ್ಥದಲ್ಲಿ ಅಚ್ಚೊತ್ತು ಎಂದೂ ಅನೇಕ ರೂಪಗಳನ್ನು ಸಾಧಿಸಿಕೊಂಡಿದ್ದೇವೆ. ಅಚ್ಚಳಿ ಎಂಬುದು ಒತ್ತಿರುವ ಮುದ್ರೆ ನಾಶವಾಗದ ಎಂದರ್ಥದಲ್ಲಿ ಉಪಯೋಗದಲ್ಲಿದೆ. ಅಚ್ಚುಮೆಚ್ಚು ಎಂಬುದು ತನ್ನ ಇನ್ನೊಂದು ರೂಪವೋ ಎಂಬಂತೆ ತೋರುವ ಪ್ರೀತಿಯನ್ನು ಸೂಚಿಸುವ ಪದವಾಗಿ ಬಳಕೆಯಲ್ಲಿದೆ.
=====
ಅಡಕೆ: ತೆಂಗಿನ ಜಾತಿಗೆ ಸೇರಿದ ಮರ ಮತ್ತದರ ಕಾಯಿಯ ಹೆಸರಿದು. ಅಡಿಕೆ ಎಂಬ ರೂಪವೂ ಬಳಕೆಯಲ್ಲಿದೆ. ಕ್ರಿಸ್ತಶಕದ ಆರಂಭದ ಹೊತ್ತಿಗೇ ಮಲೇಷಿಯ ಕಡೆಯಿಂದ ಈ ಸಸ್ಯ ನಮ್ಮ ದೇಶಕ್ಕೆ ಬಂತು; ಅಲ್ಲಿನ ಭಾಷೆಯಲ್ಲಿ ಇದನ್ನು 'ಅಹ್ಡಕ' ಎನ್ನುತ್ತಿದ್ದರು - ಇದು ಬಿಜಿಎಲ್ ಸ್ವಾಮಿಯವರ ಹೇಳಿಕೆ. ಇದೇ ಕನ್ನಡದಲ್ಲಿ ಅಡಕೆಯಾಯಿತು. ಕ್ರಿಶ. 800 ರ ಕನ್ನಡ ಶಾಸನವೊಂದರಲ್ಲಿ "ಅಡಕೆಯ ಪೇಱಿಂಗೆ ಮೂನೂರು" ಎಂಬ ಪ್ರಯೋಗವಿದೆ. ಇಕ್ಕಟ್ಟಿನ ಸ್ಥಿತಿಯನ್ನು 'ಧರ್ಮಾಮೃತ'ದಲ್ಲಿ "ಪಲ್ ಸಂದಿಯಡಕೆಯಂತೆ" ಎಂದು ವರ್ಣಿಸಲಾಗಿದೆ. ಅಡಕೆಯನ್ನು ವ್ಯಾಪಕವಾಗಿ ಬೆಳೆಸುತ್ತಿದ್ದರು, ಬಳಸುತ್ತಿದ್ದರು. 'ಅಡಕೆದೋಂಟ'ದ ಪ್ರಸ್ತಾಪ ಹನ್ನೊಂದನೆಯ ಶತಮಾನದ ಶಾಸನದಲ್ಲಿ ಬಂದಿದೆ ("ಆ ಕೆಯ ಕೆಳಗಣದಡಕೆದೋಂಟ ಮತ್ತರೆರಡು"). ತಾನಾಗಿ ಉದುರಿದ ಅಡಕೆ ಕಾಯಿಗಳನ್ನು 'ಕದರಡಕೆ' ಎಂಬ ಮಾತಿನಲ್ಲಿ ಸೂಚಿಸಲಾಗುತ್ತದೆ. ಕುವೆಂಪು ಅವರ ಈ ಹೆಸರಿನ ಕವನ ಸಂಕಲನವೊಂದಿದೆ.
ಎಲೆಯಡಿಕೆ ಸಾಮಾನ್ಯವಾದ ಜೋಡಿ ಪದ. "ಅವರ ಮೇಲಿರ್ದೆಲೆಯಡಕೆಯುಮಂ ... ಕೊಳಲಿಂಬಪ್ಪಂತಿರೆ ಮಾಡಿ" ಎಂಬುದು 'ಪಂಪಭಾರತ'ದ ಮಾತು. ಅಡಕೆಗೆಣಿಸು (ಅಡಕೆಗೆ+ಎಣಿಸು) ಎಂಬ ಅಭಿವ್ಯಕ್ತಿಯು ಕ್ಷುಲ್ಲಕವಾಗಿ ಕಾಣು ಎಂಬರ್ಥವನ್ನು ಪಡೆಯುತ್ತದೆ ("ಆ ಭಾರತಿಯ ವಿದ್ಯಾಗುಣಕ್ಕಂ ಒಂದಡೆಕೆಗೆಣಿಸಳ್" - ಕರ್ಣಪಾರ್ಯನ 'ನೇಮಿನಾಥಪುರಾಣ'). ಬೆಲೆಯಿಲ್ಲದ್ದು ಅಥವಾ ಅತ್ಯಲ್ಪ ಬೆಲೆಬಾಳುವಂಥದು ಎಂಬರ್ಥದಲ್ಲಿಯೂ ಅಡಕೆ ಶಬ್ದವನ್ನು ಬಳಸುತ್ತಿದ್ದರು: "ನೆಲನಾಳ್ದನ ಹೆಣನೆಂದರೆ ಒಂದಡಿಕೆಗೆ ಕೊಂಬುವರಿಲ್ಲ" ಎಂಬುದು ಬಸವಣ್ಣನ ವಚನದಲ್ಲಿ ಬರುತ್ತದೆ. ಜೇಡರ ದಾಸಿಮಯ್ಯ "ಒಂದು ಗೋಟಡಿಕೆಯ ಸೋಲೆ" ಎಂಬ ಮಾತನ್ನು ಬಳಸುತ್ತಾನೆ. "ಗೋಟಡಿಕೆ ಚೀಟೆಲೆ" ಅಲ್ಪವನ್ನು ಸೂಚಿಸುತ್ತದೆ. "ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು" ಎಂಬ ಗಾದೆ ಇಂದಿಗೂ ಬಳಕೆಯಲ್ಲಿದೆ.
ಅಡಕೆಯ ಕಾಯನ್ನು ಕತ್ತರಿಸುವ ಸಾಧನವೇ 'ಅಡಕತ್ತಿ' ಅಥವಾ 'ಅಡಕೊತ್ತು". "ಅಡಕೆಗತ್ತಿಯ ಹಡಪ ಸಂಬಳಿಗೆ" ಎಂಬ ಮಾತು 'ಬಸವ ಪುರಾಣ'ದ್ದಾದರೆ, "ಅಡಕೊತ್ತು ಮರಸಿ ತರಹೋಗಿ ಪಾಪವನು ನಡೆಸಿದುದ ಕಂಡ" ಎಂಬುದು ಸರ್ವಜ್ಞನ ಮಾತು. ಇಕ್ಕಟ್ಟಿನ ಪರಿಸ್ಥಿತಿಯನ್ನೂ 'ಅಡಕೊತ್ತು' ಎಂಬ ಮಾತು ಸೂಚಿಸುತ್ತದೆ.
=====
ಅತ್ತಿಗೆ: ಇದೊಂದು ಸಂಬಂಧಸೂಚಕ ಪದ; ಇದರ ಅರ್ಥ ಅಣ್ಣನ ಹೆಂಡತಿ ಅಥವಾ ಗಂಡನ ಸೋದರಿ ಎಂದು. ಈ ಶಬ್ದವು ಸಂಸ್ಕೃತದ 'ಅತ್ತಿಕಾ' ಎಂಬ ಶಬ್ದದಿಂದ ಬಂದುದೆಂದು ನಿಘಂಟುಗಳು ಹೇಳುತ್ತವೆ. ಸಂಸ್ಕೃತದಲ್ಲಿ ಆ ಶಬ್ದದ ಅರ್ಥ ತಾಯಿ ಅಥವಾ ಅಕ್ಕ ಎಂದು. ತಮಿಳಿನಲ್ಲಿ ಅತ್ತಾಚ್ಚಿ ಎಂಬುದು ಅತ್ತಿಗೆಯ ಸಮಾನಾರ್ಥಕ ಪದ; ತುಳುವಿನಲ್ಲಿ ಅತ್ತಿಗೆ ಎಂದೇ ಇದೆ. ಆದರೆ ಉತ್ತರ ಕರ್ಣಾಟಕದಲ್ಲಿ ವೈನಿ ಎಂಬ, ತೆಲುಗಿನಲ್ಲಿ ವದಿನೆ ಎಂಬ ತೀರ ಬೇರೆಯ ರೂಪದ ಪದಗಳು ದೊರಕುತ್ತದೆ. (ಈ ರೂಪ ಪ್ರಾಯಶಃ 'ವಹಿನಿ' ಎಂಬುದರ ವ್ಯತ್ಯಸ್ತ ರೂಪವಿರಬಹುದು; ವಹಿನಿ ಎಂದರೆ ಸಾಗಿಸುವುದು ಎಂದು; ಹಿರಿಯಣ್ಣನ ಹೆಂಡತಿ ಮಗನನ್ನು ಹೆತ್ತು ವಂಶವನ್ನು ಮುಂದೆ ಸಾಗಿಸುವವಳು ಎಂಬ ಅರ್ಥ ಇರಬಹುದು) ಅತ್ತಿಗೆ ಎಂಬುದು ಕನ್ನಡದಲ್ಲಿ ತೀರ ಹಿಂದಿನಿಂದ ಅಣ್ಣನ ಹೆಂಡತಿ ಎಂಬರ್ಥವನ್ನು ಸೂಚಿಸುವ ಪದವಾಗಿ ಬಳಕೆಯಲ್ಲಿದೆ: "ಮುನ್ನಿನ ಜನ್ಮಾಂತರದತ್ತಿಗೆಯಪ್ಪ ಪೆಣ್ಣರಿ" ಎಂಬ ವಾಕ್ಯ ವಡ್ಡಾರಾಧನೆಯಲ್ಲಿದೆ.
ಅಚ್ಚಗನ್ನಡ ಪದವಾದ 'ಅೞ್ತಿ' ಎಂಬುದಕ್ಕೆ ಪ್ರೀತಿ ಎಂಬರ್ಥವಿದೆ. ಇದರ ಜ್ಞಾತಿ ಪದವಾಗಿ ಮಲಯಾಳಂನಲ್ಲಿ 'ಅೞಿವು', ತುಳುವಿನಲ್ಲಿ ಅರ್ಕಮೆ, ತೆಲುಗಿನಲ್ಲಿ ಕಅಕ್ಕರಕಿ ಎಂಬ ರೂಪಗಳು ದೊರೆಯುತ್ತವೆ (ಕನ್ನಡದಲ್ಲ್ಲಿಯೂ ಅಕ್ಕರೆ (<ಅೞ್ಕರೆ) ಎಂಬ ಶಬ್ದವೂ ಇದೆ). ಹೀಗಾಗಿ ಅ್ತಗೆ ಎಂಬುದು ಪ್ರೀತಿಯುಳ್ಳವಳು ಎಂಬ ಅರ್ಥವನ್ನು ಪಡೆಯುತ್ತದೆ. "ಮುನೀಶ್ವರನ ಪರಿಚರ್ಯೆಯೊಳ್ ಪಿರಿದುಂ ಅೞ್ತಿಗೆಯಾಗು" ಎಂಬ ಮಾತು ನಾಗವರ್ಮನ 'ಕರ್ಣಾಟಕ ಕಾದಂಬರಿ' (ಕಿಶ 990) ಕಾವ್ಯದಲ್ಲಿ ದೊರೆಯುತ್ತದೆ. ಆದರೆ ಇದಕ್ಕೂ ಮುಂಚಿನ 'ಪಂಪಭಾರತ'ದಲ್ಲಿಯೇ ಈ ಶಬ್ದವು ನಲ್ಲೆ ಎಂಬರ್ಥದಲ್ಲಿ ದೊರೆಯುತ್ತದೆ: "ಪುರುಷವ್ರತಮೀಗಳಬ್ಬೆಯೆಂದು ಅತ್ತಿಗೆಯೆಂಬ ಮಾತನೆನಗೇನೆನಲಕ್ಕುಮೊ" (ನನ್ನ ಬ್ರಹ್ಮಚರ್ಯದಿಂದಾಗಿ ಈಗ ನಿನ್ನನ್ನು ತಾಯಿ ಎಂದು ಕರೆದು ಆನಂತರ ನಲ್ಲೆ ಎನ್ನಲು ಆಗಲಾರದು) ಎಂದು ಭೀಷ್ಮನು ಅಂಬೆಗೆ ಹೇಳುತ್ತಾನಂತೆ. 'ಅೞ್ತಿಗೆ'ಯೇ ಅತ್ತಿಗೆಯಾಗಿರಬಹುದೇ ಎಂಬ ಅನುಮಾನ ಉಂಟಾಗುವುದು ಸಹಜವೇ. ಆದರೆ ಅದಕ್ಕೆ ನಲ್ಲೆ ಎಂಬ ಅರ್ಥ ಅಲ್ಲಿ ದೂರಾನ್ವಯವಾಗಿ ಬರುತ್ತದೆ; ಹಾಗೆಯೇ ಆದರೆ 'ಅೞ್ತಿಗ' 'ಅೞ್ತಿಕಾರ' ಎಂಬ ಶಬ್ದಗಳು ಪ್ರೀತಿಯುಳ್ಳವನು ಎಂಬರ್ಥದಲ್ಲಿ 'ಸಮಯಪರೀಕ್ಷೆ'ಯಲ್ಲಿ ದೊರಕುತ್ತದೆ. ಆದುದರಿಂದ ಅತ್ತಿಗೆಯ ಮೂಲ ಶಬ್ದ ಸಂಸ್ಕೃತದ 'ಅತ್ತಿಕಾ' ಎಂದು ತೀರ್ಮಾನಿಸಬಹುದು.
=====
ಅಧಿಕಾರ: ಇದೊಂದು ಸಂಸ್ಕೃತ ಶಬ್ದ. ಇದಕ್ಕೆ ಮೇಲ್ವಿಚಾರಣೆ, ಕಾರ್ಯ, ಆಧಿಪತ್ಯ, ಒಡೆತನ ಮುಂತಾದ ಅನೇಕ ಅರ್ಥಗಳಿವೆ. 'ವೇದಾಧ್ಯಯನದ ಅಧಿಕಾರ' ಎಂಬಂತಹ ಕಡೆಗಳಲ್ಲಿ ಈ ಶಬ್ದಕ್ಕೆ ಅರ್ಹತೆ, ಯೋಗ್ಯತೆ ಎಂಬ ಅರ್ಥಗಳು ಬರುತ್ತವೆ. ಗ್ರಂಥದ ಅಧ್ಯಾಯವನ್ನೂ ಇದೇ ಶಬ್ದದಿಂದ ಸೂಚಿಸುತ್ತಿದ್ದರು ("ಆಪ್ತಸ್ವರೂಪನಿರೂಪಣಂ ಪ್ರಥಮಾಧಿಕರಂ" - ಬ್ರಹ್ಮಶಿವನ 'ಸಮಯಪರೀಕ್ಷೆ'). ವ್ಯಾಕರಣ ಸೂತ್ರಕ್ಕೂ ಅಧಿಕಾರ ಎಂಬ ಹೆಸರಿದೆ. ಒಂದು ವಿಷಯದ ಬಗೆಗಿನ ನೈಪುಣ್ಯವನ್ನೂ 'ಅಧಿಕಾರ' ಎನ್ನುತ್ತಿದ್ದರು.
ಇಂಗ್ಲಿಷ್‍ನ 'ಪವರ್' ಎಂಬುದಕ್ಕೆ ಸಂವಾದಿಯಾಗಿ ಅಧಿಕಾರ ಬಳಕೆಯಲ್ಲಿದೆ. ಹಿಂದೆ ರಾಜನಿಗಿರಬೇಕಾಗಿದ್ದುದು ಇತರ ವಸ್ತುಗಳ ಜೊತೆಗೆ ಅಧಿಕಾರವೂ ಒಂದಾಗಿತ್ತು. ಅಧಿಕಾರವು ನೃಪಲಕ್ಷಣವೆಂದು 'ಅಮರಕೋಶ'ದಲ್ಲಿ ಹೇಳಿದೆ. ಇದೇ ರಾಜ್ಯಾಧಿಕಾರ. ರಾಜನು ತನ್ನ ಅಧಿಕಾರವನ್ನು ಈಗಿನ ಸರ್ಕಾರದಂತೆಯೇ ಅಧಿಕಾರಿಗಳ ಮೂಲಕ ಚಲಾಯಿಸುತ್ತಿದ್ದ. "ಅಧಿಕಾರಿಗಳೆನೆ ಸೈರಿಸೆವು ಅಧಿಕಾರಿಗಳಾಗಿ ಬಾೞ್ಗೆ" ಎಂದು 'ಗದಾಯುದ್ಧ'ದಲ್ಲಿ ಸಹಜಾರ್ಥದ ಜೊತೆ 'ಅಧಿಕ+ಅರಿ' ಎಂಬ ಸಮಾಸಪದವಾಗಿಸಿ ಶ್ಲೇಷೆ ಮಾಡಲಾಗಿದೆ. ಹಿಂದೆ ರಾಜನ ಅಧಿಕಾರವರ್ಗವನ್ನು ನಿಯೋಗವೆಂದು ಕರೆಯುತ್ತಿದ್ದರು. ರಾಜನ ಅಧಿಕಾರವರ್ಗವು ಎಪ್ಪತ್ತೆರಡು ಎಂದು ಒಂದು ಹಂತದಲ್ಲಿ ಭಾವಿಸಿ ಒಟ್ಟಾರೆ ಅದನ್ನು 'ಬಾಹತ್ತರ ನಿಯೋಗ' ಎಂಬ ಹೆಸರಿನಿಂದ ಕಾವ್ಯಗಳು ಕರೆಯುತ್ತವೆ. ಅಧಿಕಾರದ ಹೊಣೆಯನ್ನು 'ಅಧಿಕಾರಸೂತ್ರ' ಎಂದು ಕರೆಯುವ ವಾಡಿಕೆಯಿದೆ.
ಇಂಗ್ಲಿಷಿನ ಪ್ರಭಾವದಿಂದ ಅಧಿಕಾರ ಎಂಬ ಶಬ್ವನ್ನೊಳಗೊಂಡ ಅನೇಕ ಹೊಸ ಪದಗಳು ಹುಟ್ಟಿಕೊಂಡಿವೆ. ಉದಾಹರಣೆಗೆ 'ಪ್ರಾಧಿಕಾರ'. ಒಂದು ವಿಷಯದ ಬಗ್ಗೆ ಪರಮಾಧಿಕಾರ ಹೊಂದಿರುವ ಸಂಸ್ಥೆಯೇ 'ಪ್ರಾಧಿಕಾರ'; 'ಕನ್ನಡ ಅಭಿವೃದ್ಧಿ ಪ್ರಾಧಿಕಾರ', 'ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ' 'ಕನ್ನಡ ಪುಸ್ತಕ ಪ್ರಾಧಿಕಾರ' - ಇಂತಹವು. ಹಾಗೆಯೇ ಇಂಗ್ಲಿಷಿನ ಎಕ್ಸ್-ಅಫಿಷಿಯೊ ಎಂಬ ಮಾತಿಗೆ ಸಂವಾದಿಯಾಗಿ ಕನ್ನಡದಲ್ಲಿ 'ಅಧಿಕಾರನಿಮಿತ್ತ' ಎಂದೋ, 'ಪದನಿಮಿತ್ತ' ಎಂದೋ ಬಳಸುವ ರೂಢಿ ಬಂದಿದೆ. ಬ್ಯೂರೋಕ್ರಸಿ ಎಂಬುದಕ್ಕೆ 'ಅಧಿಕಾರಶಾಹಿ' ಎಂಬ ಪದ ಬಂದಿದೆ. ಅಧಿಕಾರ ಇರುವವನೇ 'ಅಧಿಕಾರಿ'.
=====
ಅನ್ನ: ಈ ಶಬ್ದವು ಸಂಸ್ಕೃತಮೂಲದ್ದು, ಆಹಾರ ಎಂಬ ಅರ್ಥವುಳ್ಳದ್ದು. "ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾತ್ ಅನ್ನಸಂಭವಃ" ಎಂಬ ಭಗವದ್ಗೀತೆಯ ಮಾತು ಸುಪ್ರಸಿದ್ಧವಾದುದು. ರನ್ನನ 'ಅಜಿತಪುರಾಣ'ದಲ್ಲಿ ಈ ಅರ್ಥದ ಪ್ರಯೋಗವಿದೆ ("ಉನ್ನತಕುಕ್ಕುಟೇಶ್ವರ ಜಿನೇಶ್ವರನಂ ಜಿನಭಕ್ತೆ ಪೋಗಿ ಕಾಣ್ಬನ್ನೆಗಂ ಅನ್ನಮಂ ಬಿಸುಟು"). ಊಟದ ಮನೆಯನ್ನು ಕಾವ್ಯಗಳು 'ಅನ್ನವಾಸ' ಎನ್ನುತ್ತವೆ ("ಅನ್ನವಾಸದ ಓಲಗದೊಳಿರ್ದನಾ ಹರಿಗಂ" - 'ಪಂಪಭಾರತ'). ಇದಕ್ಕೆ 'ಅನ್ನವಾಸಕ' ಎಂಬ ಹೆಸರೂ ಇದೆ. "ಅನ್ನದಾನಕ್ಕಿಂತ ಇನ್ನು ದಾನವು" ಇಲ್ಲ ಎಂಬ ಸರ್ವಜ್ಞನ ಮಾತಿನಂತೆ ಆಹಾರದಾನವು ಅತ್ಯಂತ ಶ್ರೇಷ್ಠ ಕಾರ್ಯ ಎನ್ನಿಸಿಕೊಂಡಿದೆ. ಇದನ್ನೇ 'ಅನ್ನದಾಸೋಹ' ಎಂದು ವಚನಕಾರರು ಕರೆಯುವುದು. ಅನ್ನದಾನ ಮಾಡುವವನೇ 'ಅನ್ನದಾನಿ'. ಉಚಿತ ಆಹಾರ ನೀಡುವ ತಾಣಗಳನ್ನು 'ಅನ್ನಸತ್ರ' 'ಅನ್ನಛತ್ರ' ಮುಂತಾದ ಮಾತುಗಳಿಂದ ಕರೆಯುತ್ತಿದ್ದರು. ಮಗುವಿಗೆ ಗಟ್ಟಿ ಆಹಾರ ನೀಡುವ 'ಅನ್ನಪ್ರಾಶನ' ಅಥವಾ 'ಅನ್ನಮುಹೂರ್ತ' ಹದಿನಾರು ಸಂಸ್ಕಾರಗಳಲ್ಲಿ ಒಂದು. "ನಾವಾ ಸುತಂಗೆ ಜಾತಕರ್ಮ ನಾಮಕರಣ ಅನ್ನಪ್ರಾಶನ ಚೌಲ ಉಪನಯನಾದಿ ಕ್ರಿಯೆಗಳಂ ಮಾಡಿ" ಎಂಬುದು ದುರ್ಗಸಿಂಹನ 'ಪಂಚತಂತ್ರ'ದ ಸಾಲು.
ಅನ್ನ ಎಂಬುದರ ಅರ್ಥ ಸಂಕುಚಿತಗೊಂಡು ಬೇಯಿಸಿದ ಅಕ್ಕಿ ಎಂಬರ್ಥವನ್ನೂ ಪಡೆಯುತ್ತದೆ. ತುಳಸಿ ಮತ್ತು ಮಾದಲದ ಎಲೆಗಳ ಕಷಾಯ ಅಥವಾ ಗೋವಿನ ತಿಗುಡಿನ ಬೂದಿಕದಡಿದ ನೀರಿನ ತಿಳಿಯ ಎಸರಿನಲ್ಲಿ ಮಾಡಿದ ಅನ್ನವು ಹಲವು ದಿನ ಕೆಡದೆ ಇರುತ್ತ ಎಂದು ಕ್ರಿಶ. 1025 ರ ಚಾವುಂಡರಾಯನ 'ಲೋಕೋಪಕಾರಂ' ಹೇಳುತ್ತದೆ.
ತನಗೆ ತಿನ್ನಲು ಬೇಕಾದಷ್ಟಿದೆ ಎಂಬ ಅಹಂಕಾರವೇ 'ಅನ್ನಮದ';  "ಅನ್ನಮದ ಅರ್ಥಮದ ಅಖಿಲ ವೈಭವದ ಮದ" ಮುಂತಾದವುಗಳ ಪ್ರಸ್ತಾಪ ಪುರಂದರದಾಸರ ಒಂದು ಹಾಡಿನಲ್ಲಿದೆ. ಹೊಟ್ಟೆಬಿರಿಯ ಉಂಡಮೇಲೆ ಉಂಟಾಗುವ ಆಲಸ್ಯವನ್ನೂ ಈ ಪದದಿಂದಲೇ ಸೂಚಿಸುತ್ತಾರೆ. ತನ್ನನ್ನು ಸಲಹಿದವನ ಬಗ್ಗೆ ಇರಿಸಿಕೊಳ್ಳುವ ಉಪಕಾರದ ಭಾವವೇ 'ಅನ್ನದ ಋಣ'. 'ಅನ್ನಮಯ' ಎಂಬುದು ಪಂಚಕೋಶಗಳಲ್ಲಿ ಒಂದು, ಸ್ಥೂಲ ದೇಹವನ್ನು ಸಂಕೇತಿಸುವಂಥದು.
=====
ಅಮ್ಮ: ಕನ್ನಡದ ಮಕ್ಕಳೆಲ್ಲ ತಮ್ಮ ಮಾತನ್ನು ಪ್ರಾಯಶಃ ಶುರು ಮಾಡುವುದೇ ಅಮ್ಮ ಎನ್ನುವುದರ ಮೂಲಕ. ಅಮ್ಮ ಎಂದರೆ ತಾಯಿ ಎಂದು ಅರ್ಥ ಎಂಬುದು ಎಲ್ಲರಿಗೂ ತಿಳಿದಿದೆ. ಅಮ್ಮನಷ್ಟು ಹತ್ತಿರವಾದವರು ಜಗತ್ತಿನಲ್ಲಿ ಯಾರಿಗಾದರೂ ಯಾರಿದ್ದಾರು? ಎಷ್ಟು ಕವಿತೆಗಳು, ಹಾಡುಗಳು ಅಮ್ಮನನ್ನು ಕುರಿತು ಹಾಡಿಲ್ಲ, ಹೊಗಳಿಲ್ಲ! ಆದರೆ ಅಮ್ಮ ಎಂಬ ಶಬ್ದಕ್ಕೂ ತಾಯಿ ಎಂಬ ಅರ್ಥಕ್ಕೂ ಇರುವ ಸಂಬಂಧವೇನೂ ಅನನ್ಯವಾದುದೂ ಅಲ್ಲ, ಮೊದಲಿಂದ ಇರುವಂಥದೂ ಅಲ್ಲ. ಕನ್ನಡದ ಆದಿಕವಿ ಪಂಪನ 'ವಿಕ್ರಮಾರ್ಜುನ ವಿಜಯ'ದಲ್ಲಿ ಅಮ್ಮ ಎಂಬ ಶಬ್ದ ಬಳಕೆಯಾಗಿರುವುದು ತಂದೆ ಎಂಬರ್ಥದಲ್ಲಿ! ದೌತ್ಯಕ್ಕೆ ಬಂದ ಕೃಷ್ಣ ಕರ್ಣನನ್ನು ಏಕಾಂತದಲ್ಲಿ ಭೇಟಿಯಾಗಿ ಅವನ ಹುಟ್ಟಿನ ರಹಸ್ಯವನ್ನು ತಿಳಿಸಲು ತೊಡಗುವಾಗ ಹೇಳುವ ಮಾತಿದು: "ಒಯ್ಯನೆ ಕೇಳ ಕರ್ಣ, ನಿನ್ನಾದಿಯೊಳ್ ಅಬ್ಬೆ ಕೊಂತಿ, ನಿನಗಮ್ಮನ್ ಅಹರ್ಪತಿ" ಎಂದರೆ ನಿನ್ನ ತಾಯಿ ಕುಂತಿ, ತಂದೆ ಸೂರ್ಯ ಎಂದು. ಇದೇ ವಾಕ್ಯದಲ್ಲಿದೆಯಲ್ಲ - ತಾಯಿ ಎಂಬುದಕ್ಕೆ ಇದ್ದ ಪದ ಅಬ್ಬೆ; ಇದು ಅವ್ವೆ, ಅವ್ವ ಎಂದೂ ಆಗುತ್ತದೆ. ಚಂದಿಯಮ್ಮ, ಕೊತ್ತಮ್ಮ ಮುಂತಾದ 'ಅಮ್ಮ'ದಿಂದ ಕೊನೆಯಾಗುವ ಗಂಡುಸರ ಹೆಸರುಗಳು ಹಳೆಯ ಶಾಸನಗಳಲ್ಲಿಯೇ ಸಿಕ್ಕುತ್ತವೆ. ಕನ್ನಡದ ಕೆಲವು ಪ್ರಸಿದ್ಧ ಹೆಸರುಗಳನ್ನು ನೋಡಿ: ಅಲ್ಲಮ, ಎಚ್ಚಮ ಇತ್ಯಾದಿ. ಅವುಗಳ ಕೊನೆಯಲ್ಲಿರುವ 'ಅಮ' ಎಂಬುದು 'ಅಮ್ಮ' ಎಂಬುದರ ಸವಕಳಿ ರೂಪ ಎಂದು ಪಂಡಿತರು ಹೇಳುತ್ತಾರೆ. 'ಅಮ್ಮ' ಎಂಬ ಶಬ್ದವನ್ನು ತಾಯಿ ಎಂಬರ್ಥದಲ್ಲಿ ಪ್ರಾಯಶಃ ಮೊದಲು ಬಳಕೆಯಾಗಿರುವುದು ಭೀಮಕವಿಯ 'ಬಸವಪುರಾಣ'ದಲ್ಲಿ. ಇವನು ಹದಿನಾಲ್ಕನೆಯ ಶತಮಾನದ ಕವಿ. ಇದಕ್ಕಿಂತ ಮುಂಚೆಯೇ ಯಾವಾಗಲೋ ಆಡುಮಾತಿನಲ್ಲಿ ಅರ್ಥ ಬದಲಾಗಿರಬೇಕು. ಹೀಗೆ ತೀರ ಬದಲಾದ ಅರ್ಥ ಏಕೆ ಆಯಿತು ಎಂಬುದು ನಿಗೂಢವೇ ಸರಿ.
ತಾಯಿ ಎಂಬ ಅರ್ಥವಿದ್ದರೂ, ಸ್ತ್ರೀಲಿಂಗ ರೂಪವಾದರೂ, ತಾಯಂದಿರು ಗಂಡು ಮಕ್ಕಳನ್ನು ಲಲ್ಲೈಸುವಾಗಲೋ, ಗೆಳೆಯನನ್ನು ಕುರಿತ ಸಲುಗೆಯ ಸಂಬೋಧನೆಯಲ್ಲೋ ಈಗಲೂ 'ಅಮ್ಮ' ಎಂದು ಕರೆಯುವುದುಂಟಲ್ಲ, ಹಾಗೆಯೇ ಹೆಣ್ಣುಮಕ್ಕಳನ್ನು ಕೆಲವು ಸಂದರ್ಭಗಳಲ್ಲಿ 'ಅಪ್ಪ' ಎಂದು ಸಂಬೋಧಿಸುವುದೂ ಉಂಟು. 'ಅಮ್ಮ' ಎಂಬ ಶಬ್ದವು ಆಶ್ಚರ್ಯ, ಆಯಾಸ, ದುಃಖಸೂಚಕ ಅವ್ಯಯವಾಗಿಯೂ ಬಳಕೆಯಲ್ಲಿದೆ. 'ಅಮ್ಮಮ್ಮ' ಎಂಬ ದ್ವಿರುಕ್ತಿಯನ್ನೂ ಬಳಸುವ ರೂಢಿಯಿದೆ.
*****
ಅರಸ: ಅರಸ ಅಥವಾ ಅರಸು ರಾಜನ್ ಎಂಬ ಸಂಸ್ಕೃತ ಮೂಲದ್ದೆಂದು ಹೇಳಲಾಗುವ ಶಬ್ದ. ತಮಿಳಿನಲ್ಲಿ ಇದು ಅರಶನ್, ಅರೈಶನ್, ಅರಯನ್ ಎಂದೂ, ಮಲಯಾಳಂನಲ್ಲಿ ಅರಶನ್ ಎಂದೂ, ತೆಲುಗಿನಲ್ಲಿ ಅರಸು ಎಂದೂ ತುಳುವಿನಲ್ಲಿ ಅರಸು, ಅರಸ ಎಂದೂ ಆಗುತ್ತದೆ. ಖಅವನಿಪತಿ ರಾಜಂ ಪಾವಂ ನೃಪಂ ಕ್ಷತ್ರಿಯಂ ಜನಾಧಿಪಂ ಅರಸಂಖ ಎಂದು 'ಅಭಿಧಾನ ವಸ್ತುಕೋಶ' ಹೇಳುತ್ತದೆ. ಆಳುವವನು ಎಂಬರ್ಥದಲ್ಲಿ ಈ ಶಬ್ದವು ಸುಮಾರು ಕ್ರಿಶ. 500 ರ ಶಾಸನವೊಂದರಲ್ಲಿ ಉಕ್ತವಾಗಿದೆ ("ಶ್ರೀ ಚನ್ದಿಯಮ್ಮರಸರ್"). "ಪರದರ್ಗೆ ಆ ಪಾರ್ವಗ್ರ್ಗೆ ಆಯ್ತು ಅರಸರ್ಗೆ" ಎಂಬುದು 'ಕವಿರಾಜಮಾರ್ಗ'ದ ಪ್ರಯೋಗ. "ಅರಸಂ ಭೀತನಾದುದನೇತೆರದಿಂದದೆ" ಎಂಬುದು 'ಧರ್ಮಾಮೃತ'ದ ಮಾತು.  ಅರಸರ್ ಎಂಬುದು ಇದರ ಬಹುವಚನ ರೂಪ ("ಅರಸರ್ ಬೆಸವೇಳ್ದರ್" - 'ಧರ್ಮಾಮೃತ'). ಅರಸು ಎಂಬ ರೂಪವೂ ವ್ಯಾಪಕ ಬಳಕೆಯಲ್ಲಿದೆ. "ಅರಸುಗಳೆಲ್ಲಂ ಬಾಯ್ಕೇಳ್ದರೆಂದುಂ ಆಶಾಂತರಂಗಳಳ್ಕಿದುವೆಂದುಂ ಕೀರ್ತಿಸೆ" (ಪಂಪನ 'ಆದಿಪುರಾಣ'). "ಅರಸುಗಳಿಗಿದು ವೀರ ದ್ವಿಜರಿಗೆ ಪರಮವೇದದ ಸಾರ" ಎಂಬ ಸುಪ್ರಸಿದ್ಧ ಮಾತು ಕುಮಾರವ್ಯಾನಸದು. ವಚನಗಳಲ್ಲಿ ಮಂಡಲಾಧಿಪತಿಯನ್ನು 'ಮಂಡಲದ ಅರಸು' ಎಂದೂ ಕರೆಯಲಾಗಿದೆ. ಅರಸ ಶಬ್ದದ ಸ್ತ್ರೀಲಿಂಗ ರೂಪ ಅರಸಿ ("ಅರಸರೊಳೆ ನೀಂ ಸರಸಮಂ ಅರಸಿಯವೊಲಾಡುತಿರ್ಪೆ" - 'ಕವಿರಾಜಮಾರ್ಗ'). ರಾಣಿಯ ಪದವಿ ಎಂಬರ್ಥದಲ್ಲಿ 'ಅರಸಿವಟ್ಟ' ಪ್ರಯೋಗವಿದೆ ("ಲಂಕೆಯನಾಳ್ದು ತಾಳ್ದರಸಿವಟ್ಟಮಂ" 'ಪಂಪರಾಮಾಯಣ').
ಸಮಾಸಗಳಲ್ಲಿ ಅರಸು ಎಂಬ ಪ್ರಯೋಗವೇ ಕಂಡುಬರುತ್ತದೆ. 'ಅರಸುಕುಮಾರ' ("ಅರಸುಕುಮಾರಂ ಅನಯತರ ಕಡೆಗಣ್ಣಂದೆ ನೋಡಿ" - 'ಕವಿರಾಜಮಾರ್ಗ'); 'ಅರಸುಮಗ' ("ಒಡನೆ ನೆರೆದರಸುಮಕ್ಕಳ" - 'ಪಂಪಭಾರತ'); 'ಅರಸುಗುಣ' ("ಅರಸುಗುಣಂ ಪಯನಣಂ ಬರಲಿತ್ತುದೆ" - 'ಕಾವ್ಯಾವಲೋಕನ'); 'ಅರಸುಗಾದೆ' ("ಅರಸುಗಾದೆಗಳನುವಂ ನೀನದು" - 'ಕಬ್ಬಿಗರ ಕಾವ') ಇತ್ಯಾದಿ (ಇಲ್ಲಿನ ಅರಸು ಪ್ರಮುಖ, ಮುಖ್ಯ ಎಂಬರ್ಥ ಸೂಚಿಸುತ್ತಿದೆ).
ಅರಸು ಎಂಬುದು ಅನೇಕ ಕ್ರಿಯಾಸಮಾಸಗಳ ಪೂರ್ವಪದವೂ ಹೌದು: 'ಅರಸುಗೆಯ್' ಅಥವಾ 'ಅರಸುತನಂಗೆಯ್' ಎಂದರೆ ಆಳ್ವಿಕೆ ಮಾಡು ("ದ್ರುಪದಂ ಛತ್ರಾವತಿಯೊಳ್ ಅರಸುಗೆಯ್ದಪನೆಂದು" - 'ಪಂಪಭಾರತ') ("ಅರಸುತನಂಗೆಯ್ವಪಿಂ" 'ಪಂಪರಾಮಾಯಣ'); 'ಅರಸುಗಾಣ್' ಎಂದರೆ ರಾಜಪದವಿಯನ್ನು ಪಡೆ ("ಕುರುಂಬಂ ಅರಸುಗಂಡಂತೆ"- 'ಧರ್ಮಾಮೃತ') ಇತ್ಯಾದಿ.
ಶ್ರೇಷ್ಠ ಎಂಬರ್ಥದಲ್ಲಿ ಅರಸು ಪೂರ್ವಪದದಲ್ಲಿ ಅರ ಎಂದಾಗುತ್ತದೆ: ಅರಗಿಳಿ, ಅರಮನೆ, ಅರಗಲ್ಲು, ಅರಗೆರೆ ಇತ್ಯಾದಿ.
=====
ಆತ್ಮ1: 'ಅಮರಕೋಶ'ದಲ್ಲಿ "ಕ್ಷೇತ್ರಜ್ಞ ಆತ್ಮಾ ಪುರುಷಃ" ಎಂದಿದೆ; ಎಂದರೆ ಜೀವ ಎಂದು. "ಚೇತನಂ ಆತ್ಮಂ" ಎಂದು 'ಅಭಿಧಾನ ವಸ್ತುಕೋಶ'ದಲ್ಲಿ ಒಂದೆಡೆ, ಮತ್ತೊಂದೆಡೆ "ಮನದಿಡುವಯೊಳೆ ವರ್ತಿಕುಮನಿತಿಂದ್ರಿಯ ಗಣಮದಳಧಿಕೃತನಾತ್ಮಂ" (ಮನಸ್ಸಿಗನುಗುಣವಾಗಿ ವರ್ತಿಸುವ ಇಂದ್ರಿಯಗಳ ನಡುವೆ ಆತ್ಮವು ನೆಲಸಿದೆ). "ಏದೊರೆಯನಾತ್ಮನೆಂದೊಡೆ ಅನಾದಿ ಅನಂತಂ ನಿರತ್ಯಯಂ ಚಿನ್ಮಯ ನಿಃಪ್ರಾದೇಶಿಕಂ" ಎಂದು ಜನ್ನನ 'ಯಶೋಧರಚರಿತೆ'ಯು ಆತ್ಮದ ಸ್ವರೂಪವನ್ನು ವಿವರಿಸುತ್ತದೆ. ಜೇಡರ ದಾಸಿಮಯ್ಯನ ವಚನದಲ್ಲಿನ "ಶರೀರದೊಳಗಾತ್ಮನ ನರರು ಕಾಣದಂತಿರಿಸಿದೆ" ಎಂಬಲ್ಲಿ ಸೃಷ್ಟಿಯ ಬಗೆಗಿನ ವಿಸ್ಮಯಭಾವವಿದೆ. "ಆತ್ಮವೆ ಲಿಂಗವೆಂಬರು, ಆತ್ಮನ ದೇಹರಹಿತವಾಗಿ ಕಾಬವರುಂಟೆ" ಎಂಬ ಬಸವಣ್ಣನ ಮಾತಿನಲ್ಲಿ ಪ್ರತಿ ವ್ಯಕ್ತಿಯಲ್ಲಿಯೂ ಇರುವ ಚೈತನ್ಯವನ್ನು 'ಆತ್ಮ' ಎಂದು ಕರೆಯುವಂತಿದೆ. ಜನ್ನನ 'ಯಶೋಧರ ಚರಿತೆ'ಯ "ಭೂತಚತುಷ್ಟಾವಯವದಿಂ ಅನನ್ಯಂ ಆತ್ಮನತಿಚೈತನ್ಯಂ" ಎಂಬಲ್ಲಿ ದೇಹವನ್ನೆಲ್ಲ ಆತ್ಮವು ವ್ಯಾಪಿಸಿರುತ್ತದೆ ಎಂಬರ್ಥವಿದೆ. ಆತ್ಮ-ದೇಹಗಳ ಸಂಬಂಧವನ್ನು ಬಿಬ್ಬಿ ಬಾಚಯ್ಯನೆಂಬ ವಚನಕಾರನು "ಆತ್ಮ ಘಟದಲ್ಲಿ ನಿಂದಿಹ ಭೇದ: ನೀರು ಮಣ್ಣಿನಂತೆ, ಬೇರು ಸಾರದಂತೆ, ಗಂಧ ತರುವಿನಂತೆ" ಎಂದು ವರ್ಣಿಸುತ್ತಾನೆ.
ಆತ್ಮ ಎಂಬ ಪದಕ್ಕೆ ಪರಮಾತ್ಮ ಎಂಬ ಅರ್ಥವೂ ಇದೆ: "ಇಂತು ಷಟ್ಸ್ಥಲವಾಗಿ ವಾಙ್ಮನಕ್ಕೆ ಅಗೋಚರವಾದ ಬ್ರಹ್ಮವೆ ಆತ್ಮನು" - ಅಲ್ಲಮಪ್ರಭು. ಆತನದೇ ಮತ್ತೊಂದು ವಚನದಲ್ಲಿ "ಆತ್ಮಸಂಗವಾದವರ್ಗೆ ಬಹಿರ್ಭಾವವಿಲ್ಲ" ಎನ್ನುತ್ತಾನೆ. ಆತ್ಮಸ್ವರೂಪದ ತಿಳಿವಳಿಕೆಯೇ 'ಆತ್ಮತತ್ವ': "ಆತ್ಮತತ್ತ್ವದೊಳ್ ಬಗೆ ಗಡಂ" - 'ಆದಿಪುರಾಣ'. ಆತ್ಮ-ಪರಮಾತ್ಮಗಳ ಸಂಬಂಧದ ಅರಿವೇ ಪ್ರಾಯಶಃ 'ಆತ್ಮವಿದ್ಯೆ'. "ಅನುಭಾವವೆಂಬುದು ಆತ್ಮವಿದ್ಯೆ" ಎಂದು ಸ್ವತಂತ್ರ ಸಿದ್ಧಲಿಂಗೇಶ್ವರನೆಂಬ ವಚನಕಾರನ ಹೇಳಿಕೆ ("ಕರಣಮಥನದಿಚ್ಛೆದೋರದಿಹುದೇ ಅನುಭಾವ" - ಚೆನ್ನಬಸವಣ್ಣ). ಆತ್ಮವನ್ನು ಆದಯ್ಯನೆಂಬೊಬ್ಬ ವಚನಕಾರನು ಸಮುದ್ರಕ್ಕೆ ಹೋಲಿಸುತ್ತಾನೆ: "ಆತ್ಮನೆಂಬ ಅಂಬುಧಿಯಲ್ಲಿ ನೊರೆ ತೆರೆ ತುಂತುರು ಸಾರ ಬುದ್ಬುದಂಗಳೆಂಬ, ತನು ಮನ ಶಬ್ದ ಸ್ಪರ್ಶ ರೂಪು ರಸ ಗಂಧ ಅಹಂಕಾರ ಮಮಕಾರಂಗಳಾದವಯ್ಯಾ." ತನಗೆ ಆತ್ಮದ ಸ್ವರೂಪ ತಿಳಿದಿದೆ ಎಂಬುವವರನ್ನು ಕುರಿತು ಉರಿಲಿಂಗಪೆದ್ದಿಯೆಂಬ ವಚನಕಾರನು "'ಆತ್ಮಾಹಂ' ಎಂಬರು ತಾವು ಆತ್ಮವಿತ್ತುಗಳಲ್ಲ; ಆತ್ಮನಂಥವನಿಂಥವನೆಂದು ಕಂಡವರುಂಟೆ ಅಯ್ಯ?" ಎಂದು ಪ್ರಶ್ನಿಸುತ್ತಾನೆ. ಆತ್ಮಜ್ಞಾನಿಯನ್ನು ಡಿವಿಜಿ 'ಆತ್ಮದರ್ಶನಿ' ಎನ್ನುತ್ತಾರೆ: "ದ್ವೈತವೇನದ್ವೈತವೇನಾತ್ಮದರ್ಶನಿಗೆ?" ಹೀಗೆ ಆತ್ಮನ ಬಗೆಗಿನ ಚರ್ಚೆಗೆ ಕೊನೆಯೇ ಇಲ್ಲ.
=====
ಆತ್ಮ2: ಆತ್ಮ ಎಂಬ ಪದಕ್ಕೆ ತಾನು ಎಂಬರ್ಥವು ವ್ಯಾಪಕವಾಗಿದ್ದು, ಅನೇಕ ಶಬ್ದಗಳಿಗೂ ಪರಿಕಲ್ಪನೆಗಳಿಗೂ ಎಡೆ ಮಾಡಿಕೊಟ್ಟಿದೆ. ಈ ಶಬ್ದಕ್ಕೆ ಈ ಅರ್ಥವು ಪ್ರಾಪ್ತವಾಗುವುದು ಇದು ಪೂರ್ವಪದವಾಗಿ ಸೇರುವ ಸಮಾಸಗಳಲ್ಲಿ. ಆತ್ಮಕೃತ್ಯ ಎಂದರೆ ತನ್ನ ಕೆಲಸ ಎಂದರ್ಥ: "ಆತ್ಮಕೃತ್ಯಪರಿಪಾಲನರಾ ದಮಿತಾರಿಯನ್ನರಾರ್" ಎಂಬುದು ಪೊನ್ನನ 'ಶಾಂತಿಪುರಾಣ'ದ ಮಾತು. ತನ್ನನ್ನು ತಾನು ಕಾಪಾಡಿಕೊಳ್ಳುವುದು 'ಆತ್ಮರಕ್ಷಣ': "ಆತ್ಮರಕ್ಷಣಮೇ ಪರಮರುಷಾರ್ಥಮೆಂಬ ಸರ್ವಜನಸಮ್ಮತಮಂ" ಎಂಬುದು 'ಪಂಚತಂತ್ರ'ದ ಮಾತು. 'ಆತ್ಮಗತ' ಎಂದರೆ ತನಗೆ ತಾನೇ ಹೇಳಿಕೊಳ್ಳುವುದು (ಸ್ವಗತ): "ತಜ್ಜರದ್ವಾನರಂ ಹರ್ಷೋತ್ಕರ್ಷಚಿತ್ತನಾಗಿ ಆತ್ಮಗತದೊಳಿಂತೆಂದಂ" - 'ಪಂಚತಂತ್ರ'. 'ಆತ್ಮಾತ' ಎಂದರೆ ತನ್ನನ್ನು ತಾನು ಕೊಂದುಕೊಳ್ಳುವುದು (ಆತ್ಮಹತ್ಯೆ): "ಮೇಲೆ ಕೂಡುವರ್ ಒಡಸತ್ತವರ್ ಎಂಬೊಡೆ ಅದು ಕೂಡದು ಕೇವಲಂ ಆತ್ಮಾತದೋಷವೆ ಪೆರತಲ್ಲ" - 'ಕರ್ಣಾಟಕ ಕಾದಂಬರಿ'. ಆತ್ಮದ ತೇಜಸ್ಸನ್ನು ಕುವೆಂಪು 'ಆತ್ಮಜ್ವಾಲೆ' ಎನ್ನುತ್ತಾರೆ: "ಆತ್ಮಜ್ವಾಲೆಯ ದಳ್ಳುರಿ ಹೊತ್ತಿ .. .. ಮಿಥ್ಯೆಯ ದಹಿಸುತ ಮುಕ್ಕುತಿದೆ". ಹೀಗೆಯೇ ಆತ್ಮಗೌರವ, ಆತ್ಮಾಭಿಮಾನ, ಆತ್ಮದಂಡನೆ, ಆತ್ಮಸಾಕ್ಷಾತ್ಕಾರ, ಆತ್ಮಜ್ಞಾನ, ಆತ್ಮಚರಿತ್ರೆ ಮುಂತಾದ ಅಸಂಖ್ಯ ಸಮಾಸಗಳು ಸೃಷ್ಟಿಯಾಗಿವೆ.
ಈ ಶಬ್ದದಿಂದ ಇತರ ಕೆಲವು ಶಬ್ದಗಳೂ ಸಾಧಿತವಾಗಿವೆ. ಆತ್ಮಜ ಎಂದರೆ ಮಗ (ತನ್ನಿಂದ ಹುಟ್ಟಿದವನು): "ಮನದೊಳ್ ಪಿರಿದುಮುತ್ಸಾಹಮಂ ಪಡೆದಳಾತ್ಮಜರ ಬರವಿಂದೆ" 'ಸುಕುಮಾರ ಚರಿತೆ'. ಆತ್ಮಜನ್ಮ ("ಗಂಗಾತ್ಮಜನ್ಮಂ ಜಯಶ್ರೀಲೋಲಂ" - 'ಪಂಪಭಾರತ') ಮತ್ತು 'ಆತ್ಮಜಾತಕ' ("ಜಯಶ್ಯಾಮೆಗೆ ಇನ್ನು ಆತ್ಮೋದ್ಭವಮೆಂದಕ್ಕುಂ" 'ಅನಂತನಾಥ ಪರಾಣ') ಎಂದರೂ ಮಗನೇ. ಹಾಗೆಯೇ ಆತ್ಮಜೆ, ಆತ್ಮಜಾತೆ ಎಂದರೆ ಮಗಳು. ಮಗ ಹುಟ್ಟುವ ಸಂತೋಷವನ್ನು 'ಆದಿಪುರಾಣ'ವು 'ಆತ್ಮಜನೊಸಗೆ' ಎನ್ನುತ್ತದೆ: "ಮಾದೇವಿಗಾದ ಆತ್ಮಜನೊಸಗೆಯನಾ .. .. ಬಿನ್ನಪಂಗೆಯ್ದಿರೆ". 'ಆತ್ಮೀಯ' ಎಂದರೆ ತನ್ನ ಅಥವಾ ತನಗೆ ಪ್ರಿಯವಾದವನು ಎಂದರ್ಥ: "ಅವರ ವಚನದಿಂ ಆತ್ಮೀಯ ಪಿತೃಮರಣಮುಮಂ ಆತನ ನರಕಗತಿಗಮನಮುಂ ಅದು" - 'ಆದಿಪುರಾಣ'. ಈ ಶಬ್ದಕ್ಕೆ 'ಅಭಿಧಾನ ವಸ್ತುಕೋಶ'ವು ಹತ್ತಿರದ ಬಂಧು ಎಂಬರ್ಥವನ್ನೂ ಕೊಡುತ್ತದೆ: "ಸನಾಭಿ ಸಗೋತ್ರಂ ಬಂಧು ಆತ್ಮೀಯನೆನಿಕುಂ". 'ಸುಕುಮಾರ ಚರಿತೆ'ಯು ಸ್ವಂತದ ವಿಷಯವನ್ನೆಲ್ಲ 'ಆತ್ಮೀಯಪ್ರಪಂಚ' ಎನ್ನುತ್ತದೆ: "ಭವದಂಘ್ರಿಸ್ಮರಣ ಪರಿಣತಾಂತಃಕರಣರಾಗಿ ಬಂದೆವೆಂದು ಆತ್ಮೀಯಪ್ರಪಂಚಮನಱಿಪಿ". 'ಪಂಚತಂತ್ರ'ದಲ್ಲಿ ಉಕ್ತವಾದ ಹದಿನಾರು ಬಗೆಯ ಸಂಧಿಗಳಲ್ಲಿ ಒಂದು 'ಆತ್ಮಾಮಿಷಸಂಧಿ': "ಶತ್ರು ಸಮಸ್ತಬಲಂ ಬೆರಸು ವಿಜಿಗೀಷುವಂ ಕಾಣ್ಬುದುಂ ಆತ್ಮಾಮಿಷಸಂಧಿಯೆಂಬುದಕ್ಕುಂ".
=====
ಈರುಳ್ಳಿ: ಇದನ್ನು ನೀರುಳ್ಳಿ ಎಂದೂ ಕರೆಯುತ್ತಾರೆ. ಇದರ ಮೂಲ ಉಳ್ಳಿ; ಇದು ದ್ರಾವಿಡಪದವಿದ್ದಂತೆ ತೋರುತ್ತದೆ. ತೆಲುಗಿನಲ್ಲಿ ಉಲ್ಲಿ ಎಂದೂ, ತಮಿಳು ಮಲಯಾಳಂ, ತುಳುಗಳಲ್ಲಿ ಉಳ್ಳಿ ಎಂದೂ ದೊರೆಯುತ್ತದೆ. ಇದೇ ಜಾತಿಯ ಮತ್ತೊಂದು ಗಡ್ಡೆಯನ್ನು ನಾವೀಗ ಬೆಳ್ಳುಳ್ಳಿ ಎನ್ನುತ್ತೇವೆ. ಅದು ಮೂಲತಃ ಉಳ್ಳಿಯನ್ನೇ ಸೂಚಿಸುವಂಥದು. ಈರುಳ್ಳಿಯು ಬಂದುದು ಅನ್ಯದೇಶದಿಂದ ಹಾಗೂ ಈಚೆಗೆ ಎಂದು ವಾದಿಸಿದ್ದ ಪ್ರಖ್ಯಾತ ಚಾರಿತ್ರಿಕ ಸಸ್ಯವಿಜ್ಞಾನಿ ಬಿ.ಜಿ.ಎಲ್. ಸ್ವಾಮಿ ಅವರು, ಉಳ್ಳಿ ಎಂದರೆ ಈರುಳ್ಳಿ ಎಂದು ಭಾವಿಸಿ ಆ ಶಬ್ದ ಬರುವ ಹರಿಹರನ 'ಬಸವರಾಜದೇವರ ರಗಳೆ'ಯಂತಹ ಕೃತಿಯ ಕಾಲದ ಬಗ್ಗೆ ಸಂಶಯ ತಾಳಿದರು. ಈರುಳ್ಳಿ ಬೇರೆ ದೇಶದಿಂದ ಬಂದರೂ ಉಳ್ಳಿ ಅಥವಾ ಬೆಳ್ಳುಳ್ಳಿ ಸ್ಥಳೀಯವಾದುದು ಎಂದು ಅನೇಕರು ವಾದಿಸುತ್ತಾರೆ. ಅದಕ್ಕನುಗುಣವಾಗಿ ಹನ್ನೊಂದನೇ ಶತಮಾನದ ಚಾವುಂಡರಾಯನ 'ಲೋಕೋಪಕಾರ'ವೆಂಬ ವಿಷಯಕೋಶದಲ್ಲಿ ಅಡುಗೆಯ ಇಂಗನ್ನು ತಯಾರಿಸುವಾಗ ಉಳ್ಳಿಯನ್ನು ಬಳಸಿಕೊಳ್ಳುವುದನ್ನು ಉಲ್ಲೇಖಿಸುತ್ತಾನೆ. ಇದೇ ಕಾಲದ ಬ್ರಹ್ಮಶಿವನ 'ಸಮಯ ಪರೀಕ್ಷೆ'ಯಲ್ಲಿ "ಉಳ್ಳಿಯನಾಸ್ವಾದಿಸಿದೊಡೆ ಪಾತಕನಕ್ಕುಂ ಆತಂ ಎಂಬರ್" ಎಂಬ ಮಾತಿರುವುದರಿಂದ ಅದು (ಕೆಲವರಿಗಾದರೂ) ನಿಷಿದ್ಧವಾಗಿದ್ದಂತೆ ತೋರುತ್ತದೆ. ಅಕ್ಕಮ್ಮನೆಂಬ ವಚನಕಾರ್ತಿಯು "ಬಳ್ಳೆ ಭಂಗಿ ನುಗ್ಗಿ ಉಳ್ಳೆ ಮೊದಲಾದವನೆಲ್ಲವ ಬಿಡಬೇಕು" ಎನ್ನುತ್ತಾಳೆ. ಹದಿಮೂರನೆಯ ಶತಮಾನದ ಹರಿಹರನ 'ಬಸವರಾಜದೇವರ ರಗಳೆ'ಯಲ್ಲಿ ಬಸವಣ್ಣ ಇದನ್ನು 'ಅಭೋಜ್ಯ' ಎಂದುದರಿಂದಾಗಿ ಅವನು ಕಿನ್ನರ ಬೊಮ್ಮಯ್ಯನೆಂಬ ಶರಣನ ಕೋಪಕ್ಕೆ ಈಡಾಗಬೇಕಾಯಿತು ಎಂಬ ಸನ್ನಿವೇಶವಿದೆ.
ಹದಿನಾಲ್ಕನೆಯ ಶತಮಾನದ ಮಧ್ಯಭಾಗದಲ್ಲಿ ರಚಿತವಾದ ಮಂಗರಾಜನ 'ಖಗೇಂದ್ರಮಣಿದರ್ಪಣ'ವೆಂಬ ವಿಷವೈದ್ಯಗ್ರಂಥದಲ್ಲಿ ಒಂದೆಡೆ ಮುಳ್ಳುಹಂದಿಯ ವಿಷವನ್ನು ಇಳಿಸಲು ಉಳ್ಳಿಯನ್ನು ಬಳಸುವ ಬಗ್ಗೆ ಹೇಳಿದ್ದರೂ, ಮತ್ತೊಂದೆಡೆ 'ಲಶುನಯುಗ' ಎಂಬ ಮಾತನ್ನು ಬಳಸುತ್ತಾನೆ, ಅಂದರೆ ಎರಡು ಉಳ್ಳಿಗಳು (ಸಂಸ್ಕೃತದಲ್ಲಿ ಬೆಳ್ಳುಳ್ಳಿಗೆ ಲಶುನ ಎಂಬ ಹೆಸರಿದೆ). ಇದೇನಾದರೂ ಉಳ್ಳಿಯ ಎರಡು ಪ್ರಭೇದಗಳನ್ನು ಸೂಚಿಸುತ್ತಿರಬಹುದೇ?
=====
ಉರಿ: ಇದೊಂದು ದ್ರಾವಿಡ ಪದ; ತಮಿಳಿನಲ್ಲಿ ಉರು, ಮಲಯಾಳಂನಲ್ಲಿ ಉರುಪ್ಪಂ, ತೆಲುಗಿನಲ್ಲಿ ಉರಿಯು ಅಥವಾ ಉರಲು ಮತ್ತು ತುಳುವಿನಲ್ಲಿ ಉರಿ ಎಂದಾಗುತ್ತದೆ. ಸುಟ್ಟುಹೋಗು ಎಂಬ ಕ್ರಿಯಾಪದವಾಗಿಯೂ, ಬೆಂಕಿಯ ನಾಲಗೆ ಎಂಬ ನಾಮಪದವಾಗಿಯೂ ಬಳಕೆಯಾಗುತ್ತದೆ.  'ಶಬ್ದಮಣಿದರ್ಪಣ'ವು "ಉರಿ-ದಹನೇ" ಎಂದು ಅರ್ಥ ನೀಡುತ್ತದೆ (ಇದು ಒಂದು ಮರದ ಹೆಸರೆಂದೂ ಅಲ್ಲಿದೆ). "ಉರಿ ಮುಟ್ಟಿದರಳೆಯಂತೆ ಅಂತಂಬರಂ ಉರಿದಿತ್ತು" ಎಂಬ 'ಪಂಪಭಾರತ'ದ ಪ್ರಯೋಗದಲ್ಲಿ ಎರಡೂ ಕ್ರಿಯಾರ್ಥಗಳ ಬಳಕೆಯಾಗಿವೆ. 'ಉರಿಗಣ್' ಎಂದರೆ ಕೋಪದಿಂದ ಕೂಡಿದ ಕಣ್ಣೂ ಎಂದೂ ಶಿವನ ಬೆಂಕಿಯ ಕಣ್ಣು ಎಂದೂ ಅರ್ಥವಾಗುತ್ತದೆ. "ಉರಿಗಣ್ ಕೆತ್ತುವ ಮೀಸೆ ಪೆರ್ಚಿದ ಕೊರಲ್" ಎಂಬ ಚೌಂಡರಸನ 'ನಳಚಂಪು'ವಿನ ಮಾತಲ್ಲಿ ಮೊದಲನೆಯ ಅರ್ಥವೂ, "ಕೊರಲ ಕಱೆ ಶಿರದ ಪೆಱೆ ನೊಸಲ ಉರಿಗಣ್" ಎಂಬ ರನ್ನನ 'ಗದಾಯುದ್ಧ'ದ ಪ್ರಯೋಗದಲ್ಲಿ ಎರಡನೆಯ ಅರ್ಥವೂ ಸ್ಪಷ್ಟವಾಗಿದೆ. 'ಉರಿದೇಳ್' ಎಂದರೆ ಕೋಪದಿಂದ ಕೆರಳು ಎಂದರ್ಥ: "ಚರನ ನುಡಿಗೇಳ್ದು ಕೋಪದಿಂದುರಿದೇಳ್ದಂ" - ಆಚಣ್ಣನ 'ವರ್ಧಮಾನಪುರಾಣ'. 'ಉರಿಗಣೆ' ಎಂಬುದು ಉರಿಯುವ ಕಣೆ (ಬಾಣ) - ಎಂದರೆ ಆಗ್ನೇಯಾಸ್ತ್ರ: "ಕೃತಾಂತನೆಚ್ಚ ಉರುಗಣೆಯಂತೆ ಬಂದುದು ಲಯಾನಿಳಕಲ್ಪನಿದಾಜಾಳಂ" ಎಂಬುದು ನೇಮಿನಾಥ ಕವಿಯ 'ಅರ್ಧನೇಮಿ ಪುರಾಣ'ದ ಪ್ರಯೋಗ. ಇದನ್ನು 'ಕಾದಂಬರಿ'ಯು 'ಉರಿಯಂಬು' ಎನ್ನುತ್ತದೆ, ("ಉರಿಯಂಬಿನ ಪೊಗೆ ಮೊಗಸಿದಂತೆ"). ಉರಿಯಂತೆ ಕೆಂಪಾದ ಎಂಬರ್ಥದಲ್ಲಿಯೂ ಸಮಾಸದ ಪೂರ್ವಪದದಲ್ಲಿ ಉರಿ ಬಳಕೆಯಾಗುತ್ತದೆ: "ತೊಳಪ ದಾಡೆ ಮಿಳಿರ್ವ ಉರಿಗೇಸಂ ಪೇರೊಡಲ್" ('ಪಂಪಭಾರತ'). ಉರಿಮಂಜು (ಉರಿಮಣ್ಣು) ಕೆಂಪಾದ ಮಣ್ಣನ್ನು ಸೂಚಿಸುತ್ತದೆ.  ಅಧಿಕ ತಾಪವುಳ್ಳುದೆಲ್ಲವನ್ನೂ ಉರಿ ಎಂಬ ಪೂರ್ವಪದದಲ್ಲಿ ಸೂಚಿಸುವ ಅನೇಕ ಸಮಾಸಪದಗಳುಂಟು: ಉರಿಬಿಸಲು, ಉರಿನಾಲಗೆ, ಉರಿಜ್ವರ, ಉರಿಯೂತ ಇತ್ಯಾದಿ.
ಉರಿ ಎಂಬುದು ಉತ್ತರಪದವಾಗುಳ್ಳ ಅನೇಕ ಸಮಾಸಗಳೂ ಇವೆ: ಹೊಟ್ಟೆಉರಿ (ಅಸೂಯೆ), ಕಣ್ಣುರಿ (ಕೋಪ), ಮೈಯುರಿ ಇತ್ಯಾದಿ.
=====
ಎಕ್ಕ: ಇದೊಂದು ಸಂಖ್ಯಾವಾಚಕ, ಒಂದನ್ನು ಸೂಚಿಸುವುದು. 'ಕರ್ನಾಟಕ ಶಬ್ದಸಾರ'ವೆಂಬ ಸು. ಕ್ರಿಶ. 1400 ನಿಘಂಟುವಿನಲ್ಲಿ "ಎಕ್ಕಮೆಂದುಂ ಓರೆಂದುಂ ಒಂದು" ಎಂದು ಹೇಳಿದೆ. ಇದು ಸಂಸ್ಕೃತದ ಏಕ ಎಂಬ ಶಬ್ದದ ತದ್ಭವ ಎಂಬುದು ಸ್ಪಷ್ಟವಾಗಿಯೇ ಇದೆ. ಬರಿಯ ಸಂಖ್ಯೆಯನ್ನಲ್ಲದೆ ಒಂದನ್ನು ಹೊಂದಿರುವುದನ್ನು 'ಎಕ್ಕ' ಎಂದು ಕರೆಯುವುದೂ ರೂಢಿಯಾಯಿತು. ಒಂಟಿ ಪ್ರಾಣಿಯನ್ನು ಕಟ್ಟಿದ ಗಾಡಿಯನ್ನೂ 'ಎಕ್ಕ' ಎಂದು ಕರೆಯುತ್ತಿದ್ದರು. ಈಚೆಗೆ ಇಸ್ಪೀಟು ಆಟದಲ್ಲಿ, ಯಾವುದೇ ಚಿತ್ರವಿರುವ ಎಲೆಯಾಗಲೀ ಒಂದು ಇದ್ದರೆ ಅದನ್ನು 'ಎಕ್ಕ' ಎಂದು ಕರೆಯುವುದನ್ನು ನಾವೆಲ್ಲ ಬಲ್ಲೆವು.
ಈ ಶಬ್ದದಿಂದ ಒಂದನ್ನು ಸೂಚಿಸುವ ಸಮಾಸಶಬ್ದಗಳನ್ನೂ ನಿರ್ಮಿಸಿಕೊಳ್ಳುವ ಪರಿಪಾಟ ಹಿಂದಿನಿಂದಲೂ ಬಂದಿದೆ. ಹಳಗನ್ನಡ ಕಾವ್ಯಗಳಲ್ಲಿ ಒಂದೆಳೆ ಸರ ಎಂಬರ್ಥದಲ್ಲಿ 'ಎಕ್ಕಸರ' ಎಂದೂ, 'ಏಕಾವಳಿ' ಎಂಬುದರ ತದ್ಭವವಾಗಿ 'ಎಕ್ಕಾವಳೀ' ಎಂದೂ ಬಳಸಲಾಗಿದೆ. 'ಎಕ್ಕಸರ'ವನ್ನು ಒಂದೇ ಸಮನೆ ಅಥವಾ ನಿರಂತರವಾಗಿ ಎಂಬರ್ಥದಲ್ಲಿ 'ಏಕಸ್ವರ' ಎಂಬುದರ ತದ್ಭವವಾಗಿಯೂ, ಒಂದೇ ಬಾಣ ಎಂಬ ಅರ್ಥ ನೀಡುವ 'ಏಕಶರ' ಎಂಬುದರ ತದ್ಭವರೂಪದಲ್ಲಿಯೂ ಬಳಸಿರುವುದು ಕಂಡುಬರುತ್ತದೆ.
'ಎಕ್ಕ' ಶಬ್ದದಿಂದ 'ಎಕ್ಕಟಿ' ಎಂಬುದು ಬಂದಿದೆ. ಇದರ ಅರ್ಥ ಒಬ್ಬನೇ ಅಥವಾ ಒಂಟಿ ಎಂದು. 'ಎಕ್ಕಟಿಗಾಳೆಗ' ಎಂದರೆ ಒಬ್ಬ ಒಬ್ಬನೊಡನೆ ಮಾಡುವ ಯುದ್ಧ ಅಥವಾ ದ್ವಂದ್ವಯುದ್ಧ ಎಂಬರ್ಥವಿದೆ. ಇನ್ನೂ ಮುಂದುವರಿದು 'ಎಕ್ಕಟಿ' ಶಬ್ದವನ್ನು ಏಕಾಂತ ಎಂಬ ಅರ್ಥದಲ್ಲೂ ಬಳಸುವ ರೂಢಿಯಿತ್ತು. ಏಕಾಂತದ ಜಾಗಕ್ಕೆ ಕರೆ ಎಂಬರ್ಥದಲ್ಲಿ 'ಎಕ್ಕಟಿಕರೆ' ಅಥವಾ 'ಎಕ್ಕಟಿಗರೆ' ಎಂಬ ರೂಪದ ಬಳಕೆಯೂ ಇದೆ. ಒಬ್ಬನೊಂದಿಗಿನ ಸಮಾನ ಯೋಗ್ಯತೆ ಎಂಬರ್ಥದಲ್ಲಿ 'ಎಕ್ಕತಕ್ಕು' ಎಂಬ ಶಬ್ದ ಸಿಕ್ಕುತ್ತದೆ. ಚಪ್ಪಲಿ ಎಂಬರ್ಥದಲ್ಲಿ ಎಕ್ಕಡ ಎಂಬ ಶಬ್ದವನ್ನು ನಾವೀಗ ಬಳಸುತ್ತೇವಲ್ಲ, ಅದು ಹಳಗನ್ನಡದಲ್ಲಿ 'ಎಕ್ಕವಡ' ಎಂಬ ರೂಪದಲ್ಲಿತ್ತು. ಇದು ಒಂದೇ ಹಾಳೆ ಎಂಬರ್ಥದ  'ಏಕಪಟ' ಎಂಬುದರ ತದ್ಭವವಾಗಿರಬಹುದೇ? ಒಂದೇ ಬಟ್ಟೆ ಎಂಬರ್ಥದಲ್ಲಿಯೂ ಈ ಶಬ್ದ ಬಳಕೆಯಾಗಿದೆ. 'ಎಕ್ಕ'ದಿಂದಲೇ 'ಎಕ್ಕಲ' ಎಂಬ ಶಬ್ದವೂ ರೂಪಿತವಾಗಿದೆ. ಎಕ್ಕಲ ಎಂಬುದನ್ನು ಹಳಗನ್ನಡದಲ್ಲಿ ಮುಳ್ಳುಹಂದಿ ಎಂಬರ್ಥದಲ್ಲಿ ಬಳಸಲಾಗಿದೆ. 'ಒಂಟಿ'ಯಾಗಿ ಸುಳಿಯುವ ಪ್ರಾಣಿ (ಸಲಗ ಅಥವಾ ಹಂದಿ) ಎಂಬರ್ಥದಲ್ಲಿ ಈ ಪದವನ್ನು ಬಳಸಿರಬಹುದು. 'ಎಕ್ಕಲಗಾಣ' ಎಂಬುದು ಒಂಟಿ ಹಾಡುಗಾರನನ್ನು ಸೂಚಿಸಲು, 'ಎಕ್ಕಲವೀರ' ಎಂಬುದು ಏಕಾಂಗವೀರ ಎಂಬರ್ಥದಲ್ಲಿ ಬಳಕೆಗೊಂಡಿದೆ.
=====
ಎಕ್ಕುಟ್ಟೋಗು: "ನಿನ್ನ ಮನೆ ಎಕ್ಕುಟ್ಟೋಯ್ತದೆ" ಎಂದೋ "ನಿನ್ನ ಮನೆ ಎಕ್ಕುಟ್ಟೋಗ" ಎಂದೋ ಹಿಡಿಶಾಪ ಹಾಕುವುದನ್ನು ನಾವೆಲ್ಲ ಕೇಳಿದ್ದೇವೆ. ಈ ಶಬ್ದದಲ್ಲಿ ಮೂರು ಪದಗಳು ಅಡಗಿವೆ: ಎಕ್ಕೆ+ಹುಟ್ಟಿ+ಹೋಗು. ಎಕ್ಕೆ ಎಂಬುದು ಒಂದು ಗಿಡ, ಎಕ್ಕದ ಗಿಡ. ಇದು ಹಳಗನ್ನಡದಲ್ಲಿ 'ಎರ್ಕೆ' ಎಂಬ ರೂಪದಲ್ಲಿಯೂ ದೊರೆಯುತ್ತದೆ. ತಮಿಳಿನಲ್ಲಿ 'ಎರುಕ್ಕು' ಎಂದೂ, ತುಳುವಿನಲ್ಲಿ 'ಎಕ್ಕಮಲೆ' 'ಎಕ್ಕಮಾಲೆ' 'ಎಕ್ಕಮೆ' ಎಂಬ ರೂಪಗಳಲ್ಲಿಯೂ, ಮಲಯಾಳಂನಲ್ಲಿ 'ಎರಿಕ್ಕು' ಎಂಬ ರೂಪದಲ್ಲಿಯೂ ಈ ಶಬ್ದ ದೊರೆಯುತ್ತದೆ. ಉತ್ತರಣಿ ಬನ್ನಿಮರ ಮುತ್ತುಗ ಮುಂತಾದವುಗಳಂತೆ ಎಕ್ಕೆಯ ಗಿಡವನ್ನೂ ಪೂಜಿಸುತ್ತಿದ್ದ ಪದ್ಧತಿಯಿತ್ತು. ಇದನ್ನು ಕ್ರಿಶ 1150 ರ ಹೊತ್ತಿನ ಬ್ರಹ್ಮಶಿವ ಎಂಬ ಕವಿ ತನ್ನ 'ಸಮಯ ಪರೀಕ್ಷೆ'ಯಲ್ಲಿ ಗೇಲಿಮಾಡುತ್ತಾನೆ.
ಸಂಸ್ಕೃತದಲ್ಲಿ  ಈ ಗಿಡವನ್ನು 'ಅರ್ಕ' ಎಂದು ಕರೆಯುತ್ತಾರೆ. ಅರ್ಕ ಎಂದರೆ 'ಸೂರ್ಯ' ಎಂದೂ 'ಪೂಜಿಸಲು ಅರ್ಹವಾದ' ಎಂದೂ, ಇತರ ಅನೇಕ ಅರ್ಥಗಳೂ ಸಂಸ್ಕೃತದಲ್ಲಿದೆ. ಮೂರನೆಯ ಮದುವೆ ಮಾಡಿಕೊಳ್ಳುವಾಗ (ಗಂಡಸು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಲ್ಲ!) ಮುಂಚೆ ಎಕ್ಕದ ಗಿಡವನ್ನು ಹೆಣ್ಣೆಂದು ಭಾವಿಸಿ ಅದರೊಡನೆ ಮದುವೆ ಮಾಡಿಕೊಳ್ಳುವ ಪರಿಪಾಟವಿತ್ತು; ಇದನ್ನು 'ಅರ್ಕವಿವಾಹ' ಎಂದೇ ಕರೆಯುತ್ತಿದ್ದರು. ಈ ಗಿಡದ ಎಲೆಗಳ ಅಂಗೈಯಗಲವಾಗಿರುತ್ತದೆ; ರಥಸಪ್ತಮಿಯಂದು (ಮಾಘ ಶುದ್ಧಸಪ್ತಮಿ) ಕೆಲವರು ಎಕ್ಕದೆಲೆಗಳನ್ನು ಭುಜದ ಮೇಲಿರಿಸಿಕೊಂಡು ಸ್ನಾನ ಮಾಡುವ ಪದ್ಧತಿಯಿದೆ. ಇದನ್ನು ಅರ್ಕವ್ರತ (ಸೂರ್ಯನ ವ್ರತ) ಎಂದೇ ಕರೆಯುತ್ತಾರೆ. ಅಂದರೆ ಎಕ್ಕದ ಗಿಡಕ್ಕೂ ಸೂರ್ಯನಿಗೂ ಸಂಬಂಧವನ್ನು ಕಲ್ಪಿಸಿಕೊಳ್ಳಲಾಗಿತ್ತೆಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಇಂಥ ಎಕ್ಕದ ಗಿಡವನ್ನು ಯಾರೂ ಬೆಳೆಸುವುದಿಲ್ಲ. ಇದೊಂದು ಕಾಡುಗಿಡವಾಗಿ ಎಲ್ಲೆಂದರಲ್ಲಿ ಬೆಳೆಯುತ್ತದೆ, ವಿಶೇಷವಾಗಿ ಪಾಳುಗಳಲ್ಲಿ. ಹೀಗಾಗಿ ಮನೆ ಎಕ್ಕೆ ಹುಟ್ಟಿ ಹೋಗು ಎಂಬ ಬೈಗುಳದ ಹಿಂದೆ ಹೀಗೆ ಬೆಳೆಯುವುದು ಸೂಚಿತವಾಗಿದೆ. ಪಾಳಿನಲ್ಲಿ ಈ ಗಿಡ ಬೆಳೆಯುವುದರಿಂದ ಮನೆ ಸಂಪೂರ್ಣ ಹಾಳಾಗಿ ಆ ಜಾಗದಲ್ಲಿ ಎಕ್ಕೆ ಬೆಳೆಯುವ ಹಾಗಾಗಲಿ ಎಂಬ ಶಾಪ 'ಎಕ್ಕುಟ್ಟೋಗು' ಎಂಬ ಮಾತಿನಲ್ಲಿದೆ. ಇದೊಂದು ಭಯಾನಕ ಪ್ರತಿಮೆ. ಮನೆಯಿದ್ದ ಕುರುಹೇ ನಾಶವಾಗಿಬಿಡಲಿ ಎಂಬ ತೀವ್ರ ಆಕ್ರೋಶ ಇದರಿಂದ ವ್ಯಕ್ತವಾಗುತ್ತದೆ.
====
ಎಣ್ಣೆ: ಬಹಳ ಪರಿಚಿತವಾದ ಈ ಪದಕ್ಕೆ ಕಾಳುಗಳಿಂದ ತೆಗೆದ ಜಿಡ್ಡಿನ ವಸ್ತು ಎಂಬುದು ಅರ್ಥ. ಇದು ದ್ರಾವಿಡ ಪದ; ಹಾಗಾಗಿ ಕೆಲವು ಇತರ ದ್ರಾವಿಡ ಭಾಷೆಗೆಳಲ್ಲಿಯೂ ಇದರ ಜ್ಞಾತಿ ಪದಗಳಿವೆ: ತಮಿಳಿನಲ್ಲಿ ಏಣ್ಣೈ ಎಂದೂ, ಮಲಯಾಳಂನಲ್ಲಿ ಎಣ್ಣ ಎಂದೂ ತುಳುವಿನಲ್ಲಿ ಎಣ್ಣೆ ಎಂದೂ ಆಗುತ್ತದೆ. ಈ ಶಬ್ದದಲ್ಲಿ ಎರಡು ಭಾಗಗಳಿವೆ: ಎಳ್+ನೆಯ್, ಎಂದರೆ ಎಳ್ಳಿನ ಜಿಡ್ಡು ಎಂದು. ಎಳ್ಳು ಎಲ್ಲರಿಗೂ ಗೊತ್ತಿರುವ ಎಣ್ಣೆ ತೆಗೆಯುವ ಕಾಳು. ಸಂಸ್ಕೃತದಲ್ಲಿ ಎಣ್ಣೆ ಎಂಬುದಕ್ಕೆ ತೈಲ ಎಂಬುದು ಸಂವಾದಿಯಾದುದು; ಅಲ್ಲಿಯೂ ತಿಲಕ್ಕೆ (ಎಳ್ಳು) ಸಂಬಂಧಿಸಿದ ಎಂಬರ್ಥವೇ ಇದೆ. ಇದು ಮುಂದೆ ಎಲ್ಲ ಕಾಳುಗಳ ಜಿಡ್ಡಿಗೂ ಅನ್ವಯಿಸಿತು; ಕಡಲೆಕಾಯಿ ಎಣ್ಣೆ (ಒಳ್ಳೆಣ್ಣೆ), ಹರಳೆಣ್ಣೆ (ಔಡಲೆಣ್ಣೆ), ಸಾಸಿವೆಯೆಣ್ಣೆ ಮುಂತಾದುವು. ಎಂದರೆ ಅದರ ಅರ್ಥ ವಿಸ್ತಾರಗೊಂಡಿದೆ (ಭಾಷಾವಿಜ್ಞಾನದಲ್ಲಿ ಈ ಪ್ರಕ್ರಿಯೆಯನ್ನು ಎಕ್ಸ್‍ಪಾನ್ಶನ್ ಎಂದೇ ಕರೆಯುತ್ತಾರೆ). ತುಂಬ ಹಳೆಯ ಕನ್ನಡ ಕಾವ್ಯ ಹಾಗೂ ಶಾಸನಗಳಲ್ಲಿ ಎಣ್ಣೆ ಎಂಬ ಪ್ರಯೋಗವನ್ನು ಕಾಣಬಹುದು. "ಸೊಡರೊಳ್ ಬತ್ತಿಯುಂ ಎಣ್ಣೆಯುಂ ಒಡನೞಿದವೊಲ್" ಎಂಬ ಸುಂದರವಾದ ಮಾತು ಒಂದು ಕಾವ್ಯದಲ್ಲಿದೆ. "ಎಣ್ಣೆ ತೀರುತ್ತಲಿರೆ ಒಡಕು ಹಣತೆಯ ಮುಂದೆ ಬತ್ತಿ ಹೊಸೆತ" ಎಂಬ ಪ್ರತಿಮೆ ಗೋಪಾಲಕೃಷ್ಣ ಅಡಿಗರ ಕವನದ್ದು.
ಮೈಗೆಲ್ಲ ಹಚ್ಚಿಕೊಂಡು (ಸಾಮಾನ್ಯವಾಗಿ ಹರಳೆಣ್ಣೆಯನ್ನು) ಮಾಡುವ ಸ್ನಾನವನ್ನು 'ಎಣ್ಣೆ ಸ್ನಾನ' ಎಂದೇ ಕರೆಯುತ್ತಾರೆ. ಹಬ್ಬದ ದಿನ ಎಣ್ಣೆಸ್ನಾನ ಒಂದು ವಿಶೇಷ ಎಂಬುದು ಕನ್ನಡಿಗರಿಗೆಲ್ಲ ಗೊತ್ತು. ಯಾವುದಾದರೂ ಅವಕಾಶ ಉಂಟಾದಾಗ ನಿರ್ಲಕ್ಷ್ಯ ತೋರುವುದನ್ನು 'ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊ' ಎಂಬ ನುಡಿಗಟ್ಟಿನಿಂದ ಸೂಚಿಸುತ್ತಾರೆ. ಎಣ್ಣೆಯು ಉರಿಯುವುದನ್ನು ಹೆಚ್ಚಿಸುತ್ತದೆ (ಎಂದರೆ ಇಂಧನ). ಅದಕ್ಕೇ ಪೆಟ್ರೋಲ್, ಡೀಸಲ್ನಂತಹ ಕಾಳಿನಿಂದ ತೆಗೆಯದ ಇಂಧನಗಳನ್ನೂ ಎಣ್ಣೆ ಎಂದೇ ಕರೆಯುವ ರೂಢಿಯಿದೆ.  'ಎಣ್ಣೆ ಸುರಿದ ಹಾಗೆ' ಎಂಬ ಮಾತು ಉದ್ರೇಕಗೊಳಿಸು ಎಂಬರ್ಥದಲ್ಲಿ ಬಳಕೆಯಾಗುವ ನುಡಿಗಟ್ಟು. ಎಣ್ಣೆಯು ಜಿಡ್ಡುಪದಾರ್ಥವಾದುದರಿಂದ ಜಾರುತ್ತದೆ; ಅದಕ್ಕೇ ನುಣುಚಿಕೊಳ್ಳುವುದನ್ನು 'ಮೈಗೆ ಎಣ್ಣೆ ಸವರಿಕೊಂಡು' ಮಾಡುವ ಕುಸ್ತಿಗೆ ಹೋಲಿಸುವ ವಾಡಿಕೆಯಿದೆ. ಬಂಡಿಗಳ ಚಕ್ಕರವು ಸರಾಗವಾಗಿ ಉರುಳುವಂತೆ ಮಾಡುವ ಜಿಡ್ಡಿಗೆ 'ಕೀಲೆಣ್ಣೆ' ಅಥವಾ ಕಂಜಣಿ ಎಣ್ಣೆ ಎನ್ನುತ್ತಾರೆ. ಅಲ್ಲದೆ, ಕೀಲುನೋವಿಗೆ ಉಡದ ಕೊಬ್ಬಿನಿಂದ ಮಾಡಿದ ಉಡದೆಣ್ಣೆಯನ್ನು ಬಳಸುವ ರೂಢಿಯೂ ಇದೆ.
ಕೆಲವರು ಹೆಂಡವನ್ನು ಎಣ್ಣೆ ಎನ್ನುತ್ತಾರೆ; 'ಎಣ್ಣೆ ಹೊಡಿ' ಎಂಬುದು ಹೆಂಡ ಕುಡಿಯುವುದನ್ನು ಸೂಚಿಸುತ್ತದೆ. ಒಂದೇ ಅರ್ಥದ 'ಹೆಂಡ ಕುಡಿ', 'ಗುಂಡು ಹಾಕು', 'ಎಣ್ಣೆ ಹೊಡಿ - ಈ ನುಡಿಗಟ್ಟುಗಳು ಬೇರೆ ಬೇರೆ ಸಾಮಾಜಿಕ ಸ್ತರಗಳ ಜನಗಳು ಬಳಸುವ ಭಾಷೆಯಲ್ಲಿ ಕಾಣಿಸುತ್ತವೆ.
=====
ಎದೆ: ಇದು ಹಳಗನ್ನಡದಲ್ಲಿ ಮೊದಲು 'ಎೞ್ದೆ' ಎಂದಿದ್ದು ("ಎಲೆ ಚೋಳಕ್ಷಿತಿಪಾಳ ಸನ್ತವೆರ್ೞ್ದೆಯಂ ನೀಂ ನೀವಿಕೊಳ್" - ಕ್ರಿಶ. 560 ರ ಒಂದು ಶಾಸನ) ಆನಂತರ 'ಎರ್ದೆ' ಎಂದಾಯಿತು. ಇದು ಸಂಸ್ಕೃತದ ಹೃದಯ ಶಬ್ದದ ತದ್ಭವವೆಂದು ಭಾವಿಸಲಾಗಿದೆ. ಇದಕ್ಕೆ ಹೃದಯ ("ಮಲಯಾನಿಲನುಂ .. .. ಶಶಿಕಿರಣಮುಂ ವಿಯೋಗಿಗಳೆರ್ದೆಯೊಳ್ ನೆಲಸಿರ್ದುವು" - 'ಕವಿರಾಜಮಾರ್ಗ') ಹಾಗೂ ಮೊಲೆ ("ನಿನ್ನಾಗಮನಕ್ಕಾಗಿ ನೋಂತಿಹರ್ ಶಿಶುವಜ್ರಾರಿಗೆರ್ದೆಗೊಡದೆ" 'ಶ್ರೀ ರಾಮಾಯಣ ದರ್ಶನಂ') ಎಂಬ ಅರ್ಥಗಳಿವೆ. 'ಎರ್ದೆಗೊಳ್' ಎಂಬ ರೂಪವು ಆಕರ್ಷಕವಾಗು ಎಂಬರ್ಥದಲ್ಲಿ 'ಪಂಪಭಾರತ'ದಲ್ಲಿ ಉಕ್ತಗೊಂಡಿದೆ ("ಏನೆರ್ದೆಗೊಂಡು ಬೇಟದತ್ತಳಗಮಂ ಉಂಟುಮಾಡಿದುದೋ"). ಕಎರ್ದೆಗಿಡುಕಿ ಎಂಬುದು ಧೈರ್ಯಗುಂದು ಎಂಬರ್ಥದಲ್ಲಿ 'ಆದಿಪುರಾಣ'ದಲ್ಲಿ "ಪಡೆಗುಳ್ಕಂ ಪಡೆವಹೀಂದ್ರರ್ ಎರ್ದೆಗಿಡುವಿನೆಗಂ" ಎಂಬಲ್ಲಿ ಪ್ರಯೋಗಗೊಂಡಿದೆ. 'ಎರ್ದೆಯೊಡೆ' ಎಂದರೂ  ಇದೇ ಅರ್ಥ ("ಮರಣದಿನಾದ ಖೇದದಿಂದ ಎರ್ದೆಯೊಡೆದಂತಿರೆ" 'ಪಂಪರಾಮಾಯಣ'). 'ಎರ್ದೆದೋರು' ಎಂದರೆ ಧೈರ್ಯತೋರಿಸು ಎಂದು ("ಬಲ್ಪುದೋರುವ ಎರ್ದೆದೋರುವ ಕಯ್ಪೆಸರಂಗಳ" - 'ಪಂಪಭಾರತ'); 'ಎರ್ದೆಮುಟ್ಟು'ವಿನ ಅರ್ಥ ಎದೆಯಾಳದಿಂದ ಎಂದರ್ಥ ("ಎರ್ದೆಮುಟ್ಟಿ ಕೂರ್ತನೊಳನೇ ಕರ್ಣಂಗೆ ದುರ್ಯೋಧನಂ" - ಅದೇ). ಇದೇ ಅರ್ಥ 'ಎರ್ದೆವುಗು' ಎಂಬ ಮಾತಿಗೂ ಇದೆ ("ತಳ್ತೆಸೆವ ರನ್ನದಂತೆ ಎರ್ದೆವುಗದೇ" 'ಕಬ್ಬಗರ ಕಾವ'). ಕಎರ್ದೆಯಾರು' ಎಂದರೆ ಹೃದಯಕ್ಕೆ ತೃಪ್ತಿಯಾಗುವಂತೆ ("ಭೂಪ ಕುಸುಮಾಯುಧಂ ಇಂತೆರ್ದೆಯಾರೆ ನೋಡಿದಂ" 'ಕುಸುಮಾವಳಿ ಕಾವ್ಯ'). 'ಎರ್ದೆಯಾಣ್ಮ' ಎಂದರೆ ಪ್ರಿಯಕರ ("ಇಚ್ಚೆಯಾಣ್ಮನೆಲ್ಲಿದಂ ಎರ್ದೆಯಾಣ್ಮನೆನ್ನರಸಂ" - 'ಆದಿಪುರಾಣ'). 'ಎಂಟೆರ್ದೆ' ಎಂದರೆ ಧೈರ್ಯ ("ಉರ್ಬಿನೊಳಾಂತು ಸೆಣಸಿ ಕಾದುವ ಜನಪಂಗೆ ಎಂಟೆರ್ದೆಯೇ" - 'ಧರ್ಮಾಮೃತ'). 'ಎರ್ದೆಯೆರಕ' ಎಂದರೆ ಪ್ರೀತಿ ("ಎರ್ದೆಯೆರಕದೆ ಪೊಗಳ್ದಖಿಳ ಭುವನಜನನಿಯನಾಗಳ್"-ಗ 'ಆದಿಪುರಾಣ'); 'ಎರ್ದೆವಳಲ್" ಎಂದರೆ ದುಃಖ ("ಉಪದೇಶಂಗೆಯ್ದು ಕಳೆದಂ ಅವರೆರ್ದೆವಳಲಂ" 'ಪಂಪರಾಮಾಯಣ'). 'ಎದೆಗುದಿಪ' ಎಂದರೆ ಹೃದಯವೇದನೆ ("ಎದೆಗುದಿಪಮಂ ಒದವಿಸುವೊಡೆ ಆರೊ ಬಾರಿಪರ್" 'ಲೀಲಾವತಿಕ'). ಹೀಗೆ ಅಸಂಖ್ಯಾತ ನುಡುಟ್ಟುಗಳು 'ಎದೆ'ಯಿಂದ ಸೃಷ್ಟಿತವಾಗಿವೆ. 'ಎದೆ' ರೂಪದೊಡನೆ ಇವೆಲ್ಲ ಇವತ್ತಿಗೂ ಬಳಕೆಯಲ್ಲಿವೆ.
=====
ಒಲವು: 'ಒಲ್' ಧಾತುವಿನಿಂದಲೇ ರೂಪತವಾಗಿರುವ ಮತ್ತೊಂದು ರೂಪ 'ಒಲವು' (ಒಲ್+ವು). "ಪಲವುಂ ದಿವಸಕ್ಕೆ ಕಂಡು ಒಗದ ಒಲವಿಂ ಬಿಗಿಯಪ್ಪಿದಳ್ ಮಹಾಶ್ವೇತೆಯಂ" ಎಂಬ ಮಾತು 'ಕರ್ಣಾಟಕ ಕಾದಂಬರಿ'ಯದು. ಇಲ್ಲಿ ಸ್ನೇಹ ಎಂಬರ್ಥವಿದ್ದರೆ 'ಅರಿಸಿನವನೆ ಮಿಂದು ಹೊಂದೊಡಿಗೆಯನೆ ತೊಟ್ಟು ಪುರುಷನ ಒಲವಿಲ್ಲದ ಲಲನೆಯಂತಾದೆನಯ್ಯಾ" ಎಂಬ ಮಾತಿನಲ್ಲಿ ಗಂಡು-ಹೆಣ್ಣುಗಳ ನಡುವಣ ಅನುರಾಗ ಎಂದಾಗುತ್ತದೆ. ಅದೇ 'ಒಲವಿಲ್ಲದ ಪೂಜೆ ನೇಹವಿಲ್ಲದ ಮಾಟ" ಎಂಬ ಬಸವಣ್ಣನದೇ ಮತ್ತೊಂದು ವಚನದ ಮಾತಿನಲ್ಲಿ ಈ ಶಬ್ದಕ್ಕೆ ಭಕ್ತಿ ಎಂಬರ್ಥ ಹೊಮ್ಮುತ್ತದೆ. ಒಲವು ಎಂದರೆ ಸಂತಸ ಎಂದೂ ಆಗಬಹುದು: "ಆತ್ಮಜೆಯನೊಲವಿಂದಿತ್ತು ಸಾಕ್ಷ್ಯಕ್ಕೆ ಕೈನೀರೆಱೆದಂ ಗಂಧರ್ವರಾಜಂ" - 'ಕರ್ಣಾಟಕ ಕಾದಂಬರಿ'. ಆಧುನಿಕ ಕವಿಗಳು ಸಾಮಾನ್ಯವಾಗಿ ಈ ಶಬ್ದವನ್ನು ಪ್ರಣಯಕ್ಕೆ ಅನ್ವಯಿಸಿ ಬಳಸುವುದುಂಟು. "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು" ಎಂಬುದು ಬೇಂದ್ರೆಯವರ ಪ್ರಖ್ಯಾತ ಸಾಲು ('ಒಲವೆ ನಮ್ಮ ಬದುಕು' ಅವರ ಪ್ರೇಮಕವನಗಳ ಸಂಕಲನದ ಹೆಸರೂ ಹೌದು). "ನಾನು ಒಲವಿನ ಭಕ್ತ" ಎಂದು ಹೇಳಿಕೊಂಡವರು ಕೆಎಸ್ನ.
'ಒಲವರ' ಎಂಬ ಇನ್ನೊಂದು ರೂಪವೂ ಇದೆ. ಅದಕ್ಕೂ ಇವೇ ಅರ್ಥಗಳು. "ಮನದೊಲವರಮುಳ್ಳೊಡೆ ಕುಡು ಮನೆಯೊಳ್ ಹರಿಗಗ್ರಪೂಜೆಯಂ" ಎಂಬ 'ಪಂಪಭಾರತ'ದ ಮಾತಿನಲ್ಲಿ ಈ ಶಬ್ದಕ್ಕೆ ಭಕ್ತಿ, ಗೌರವ ಎಂಬರ್ಥವಿದ್ದರೆ, "ಏಕಿಕ್ಕಿದೆ ಬಲೆಯಂ ಪೇಳಣ್ಣ ನಿನಗೆ ಮಾಂಸದೊಳಾದೊಂದು ಒಲವರಮೆ" ಎಂಬ 'ಕರ್ಣಾಟಕ ಕಾದಂಬರಿ'ಯ ಮಾತಿನಲ್ಲಿ ಮೋಹ, ಆಸೆ ಎಂಬರ್ಥವಿದೆ. "ಒಲವರವಿಲ್ಲದ ಭಕ್ತಿ, ಲವಲವಿಕೆಯಿಲ್ಲದ ಪೂಜೆ" ಎಂಬ ಜೇಡರ ದಾಸಿಮಯ್ಯನ ವಚನವು ಈ ಶಬ್ದವನ್ನು ಪ್ರೀತಿ ಎಂಬರ್ಥದಲ್ಲಿ ಬಳಸುತ್ತದೆ. ಮನೋಧರ್ಮ ಎಂಬರ್ಥವೂ ಈ ಶಬ್ದಕ್ಕೆ ಬರುತ್ತದೆ: "ಮೃಗದೊಲವರಮುಮಂ ಅರಸನ ಬಗೆಯುಮಂ ಅದೋಲಗಿಸಲ್" 'ಪಂಪಭಾರತ.' "ಒಲವರವಲಾ ಮುರಹರಂಗೀ ಬಲದೊಳಗೆ" ಎಂಬ 'ಕುಮಾರವ್ಯಾಸಭಾರತ'ದ ಮಾತಿನಲ್ಲಿ ಈ ಶಬ್ದಕ್ಕೆ ಪಕ್ಷಪಾತ ಎಂಬರ್ಥ ಹೊಮ್ಮುತ್ತದೆ. 'ಒಲವರಂಗೊಳ್' ಎಂದರೆ ಪಕ್ಷಪಾತ ("ಒಲವರಂಗೊಳ್-ಪಕ್ಷಸ್ವೀಕಾರೇ" - 'ಶಬ್ದಮಣಿದರ್ಪಣ'). 'ಒಲವರಂಬಡು' ಎಂದರೆ ಮೆಚ್ಚುಗೆಹೊಂದು ಎಂದರ್ಥ: "ತನ್ನ ನರುಜವ್ವನದ ಪರಿಯ ಮುಂಗಾಣ್ಕೆಗುಡಲ್ ಬಿನ್ನಣದೊಳೊಲವರಂಬಡದೆ" ಎಂಬುದು ಸೋಮದೇವನ 'ಉದ್ಭಟಕಾವ್ಯ'ದ ಸಾಲು. 'ಒಲವರವಾನ್' ಎಂದರೂ ಇದೇ ಅರ್ಥ: "ಮಿಂದೊಲವಾಂತು ದಣಿಬವನುಟ್ಟು ಭಸಿತವನಿಟ್ಟು ಭಾಳದಲಿ" ಎಂಬುದು 'ಬಸವಪುರಾಣ'ದ ಮಾತು.
=====
ಒಲುಮೆ: ಇದು ಒಲ್ ಎಂಬ ಧಾತುವಿನಿಂದ ಬಂದಿದೆ. ಒಲ್ ಎಂದರೆ ಪ್ರೀತಿಸು, ಮೋಹಗೊಳ್ಳು ಎಂದರ್ಥ: "ಸುಯೋಧನನ ರಾಜ್ಯಮಂ ಒಲ್ವೊಡಂ ಶಲ್ಯನನೆ ಸಾರಥಿಮಾಡಿ ಕಾದುವುದು" ಎಂಬುದು 'ಪಂಪಭಾರತ'ದ ಪ್ರಯೋಗ. ಇದಕ್ಕೆ 'ಮೆ' ಎಂಬ ಪ್ರತ್ಯಯ ಸೇರಿ 'ಪ್ರೀತಿ' ಎಂಬರ್ಥದ ನಾಮಪದವಾಗಿದೆ. "ಸೊಬಗಂ ಒಲ್ಮೆಯಂ ಧೈರ್ಯಮಂ" ಎಂಬುದು 'ವಡ್ಡಾರಾಧನೆ'ಯಲ್ಲಿನ ಮಾತು. ಪ್ರೀತಿಸುವವನು ಎಂಬರ್ಥದಲ್ಲಿ ಇದು 'ಒಲ್ಮೆಗ' ಎಂದೂ ಆಗುತ್ತದೆ: "ನನ್ನಿಗರ್ ಇಂಪುಗಾರರ್ ಇನಿವಾತುಗರ್ ಇಚ್ಚೆಗಾರರಾರ್ಪರ್ ಒಲ್ಮೆಗರ್ ಚೆನ್ನಿಗರ್" ಎಂಬ ಮಾತು ತಿರುಮಲಾರ್ಯನ 'ಚಿಕದೇವರಾಜವಿಜಯ'ದ್ದು. ಒಲ್ ಎಂಬ ಧಾತುವು 'ಒಲಿ' ಎಂಬ ರೂಪದಲ್ಲಿಯೂ ಇದೆ: "ಕುಲನಿಂತು ಪಿಕ್ಕದಿರಿಂ ನೀಂ ಒಲಿದಲ್ಲಿ ಪುಟ್ಟಿ ಬಳೆದಿರೋ ಕುಲಮಿರ್ದುದೆ ಕೊಡದೊಳಂ ಶರಸ್ತಂಬದೊಳಂ" ಎಂಬ ಹರಿತವಾದ ಕರ್ಣನ ಮಾತು 'ಪಂಪಭಾರತ'ದ್ದು. 'ಒಲ್ಮೆ' ಎಂದರೆ ಅನುಗ್ರಹ ಅಥವಾ ಕೃಪೆ ಎಂಬರ್ಥವೂ ಆಗುತ್ತದೆ: "ದೈವದೊಲ್ಮೆಯಿರಲಾ ಕಾಲಾನುಕಾಲಕ್ಕೆ ಬಡವಂ ಬಲ್ಲಿದನಾಗನೇ" ಎಂಬುದು 'ಸೋಮೇಶ್ವರಶತಕ'ದಲ್ಲಿ ಬರುವ ನುಡಿ. "ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ" ಎಂಬುದು ಅಲ್ಲಮ ವಚನದ ಸಾಲು. ಒಲುಮೆ ಎಂದೂ ಪ್ರೀತಿ. "ಒಲುಮೆ ಒಲಿದೇ ಒಲಿವುದು" ಎಂಬುದು ಕೆಎಸ್ನ ಅವರ ಒಂದು ಕವನದ ಶೀರ್ಷಿಕೆ. ಈ ವಾಕ್ಯದಲ್ಲಿಯೇ 'ಒಲುಮೆ' ಇದೆ. ಇದು ವ್ಯಾಪಕವಾಗಿ ಬಳಕೆಯಾಗುವ ಪದ. "ಅಂಗಮಾಸಿದಲ್ಲಿ ಜಲದೊಲುಮೆ; ಮನ ಮರೆದಲ್ಲಿ ಅರಿವಿನೊಲುಮೆ" ಎಂಬುದು ಕೋಲಶಾಂತಯ್ಯನೆಂಬ ವಚನಕಾರನ ಸೂತ್ರವಾಕ್ಯ. ಹರಿಹರನ 'ಬಸವರಾಜದೇವರರಗಳೆ'ಯಲ್ಲಿ "ಶರಣರೊಡನೊಲುಮೆಯಿಂ ಲಿಂಗಾರ್ಚನಂಗೆಯ್ದು" ಎಂಬ ಮಾತಿದೆ. ತೀನಂಶ್ರೀ ಅವರ 'ಒಲುಮೆ' ಎಂಬ ಹೆಸರಿನ ಪ್ರೇಮಕವನ ಸಂಕಲನವೇ ಇದೆ (ಇದು ಮೊಟ್ಟ ಮೊದಲ ಆಧುನಿಕ ಪ್ರೇಮಕವನ ಸಂಕಲನ).
ಒಲ್ಮೆ ಹಾಗೂ ಒಲುಮೆಗಳಿಂದ ಅನೇಕ ಸಮಾಸಗಳು ಸೃಷ್ಟಿಯಾಗುತ್ತವೆ. 'ಒಲ್ಮೆವೆರು' ಎಂದರೆ ಪ್ರೀತಿ ಹೊಂದು ಎಂದರ್ಥ: "ಶಿವಾಕ್ಷಿಮಣಿಪ್ರತಾನಮಂ ಧರಿಸುತ್ತಂಗದೊಳೊಲ್ಮೆವೆತ್ತು ಶಿವಮಂತ್ರಧ್ಯಾನಯಕ್ತನಾದಂ" ಎಂಬ ವಾಕ್ಯ 'ವೃಷಭೇದ್ರವಿಜಯ'ದ್ದು. 'ಒಲುಮೆದೋರು' ಎಂದರೆ ಪ್ರೀತಿ ತೋರಿಸು: "ಹುಸಿಯೊಲುಮೆದೋರುವರಾ ಪರಿಯಲಿ ಹೃದಯಗೊಡರನೃತವನಾಡುವರು" - ಚೌಂಡರಸನ 'ನಳಚಂಪು'. ಮೂರನೆಯ ಮಂಗರಸನ 'ನೇಮಿಜಿನೇಶ ಸಂಗತಿ'ಯಲ್ಲಿ 'ಒಲುಮೆಮದ್ದು' ಎಂದರೆ 'ವಶೀಕರಣದ ಮದ್ದು': "ಓಪನವಳ ಕೈವಶವಾಗಲದಕೆ ಅವಳಾತಗೊಲುಮೆಮದ್ದನು ತಿನಿಸಿದಳೆಂದು ತಮತಮಗೆಲ್ಲರಾಡವರು." ಕೆಎಸ್ನ "ನಿನ್ನೊಲುಮೆ ತಾರೆಗಳ ಹರಡಿರುವ ಬಾನು" ಎಂಬ ಸಾಲಿನಲ್ಲಿ 'ಒಲುಮೆತಾರೆ' ಪದವನ್ನು ಸೃಷ್ಟಿಸಿಕೊಳ್ಳುತ್ತಾರೆ.
=====
ಕಡಲೆ: ಇದು ತಮಿಳಿನಲ್ಲಿ ಕಡಲೈ ಎಂದೂ, ತುಳುವಿನಲ್ಲಿ ಕಡಲೆ ಎಂದೂ, ಮಲಯಾಳಂನಲ್ಲಿ ಕಡಲ ಎಂದು ಬಳಕೆಯಲ್ಲಿರುವ ಪದ. ಕನ್ನಡ ನಾಡಿನಲ್ಲಿ ಮೊದಲಿದ್ದದ್ದು ಕಡಲೆ ಎಂಬ ದ್ವಿದಳ ಧಾನ್ಯ. ಇದರ ಉಲ್ಲೇಖ 'ಪಂಪಭಾರತ'ದಲ್ಲಿಯೇ ಇದೆ: ("ಮೆಳಸುಗಡಲೆಯ ಪುಡಿಯೊಳಡಸಿದಲ್ಲವಲ್ಲಣಿಗೆಯ ಚಕ್ಕಣಂಗಳಂ ಸವಿಸವಿದು"). ಇಲ್ಲಿ ಹೇಳಿರುವುದು ಹೆಂಡಕುಡುಕರು ನಂಜಿಕೊಳ್ಳುತ್ತಿದ್ದ ಕಾರ ಹಚ್ಚಿದ ಕಡಲೆಯನ್ನು ಕುರಿತು. ಪೊನ್ನನ 'ಶಾಂತಿಪುರಾಣ'ದಲ್ಲಿ ಹುರಿಗಡಲೆಯ ಪ್ರಸ್ತಾಪವಿದೆ. ಹಾಗೆಯೇ ನಯಸೇನನ 'ಧರ್ಮಾಮೃತ'ದಲ್ಲಿ "ಕಡಲೆಗಳಂ ತಿಂಬ ಮೊಗ್ಗು ಕಲ್ಗಳೊಳುಂಟೇ" ಎಂಬ ಗಾದೆ ಮಾತು ಕಾಣಸಿಗುತ್ತದೆ. ಅಂದರೆ ಬಾಯಿರುಚಿಗಾಗಿ ಕಡಲೆಯನ್ನು ವ್ಯಾಪಕವಾಗಿ ಬಳಸುತ್ತಿದ್ದರೆಂಬುದು ಈ ಉಲ್ಲೇಖಗಳಿಂದ ತಿಳಿಯಬಹುದು. ಇದನ್ನು ಈಗ ಸೊಪ್ಪಿನ ಕಡಲೆ ಎಂದೂ  ಕರೆಯುವ ರೂಢಿ ಇದೆ.
ಸೊಪ್ಪಿನ ಕಡಲೆಯು ಗಿಡದಲ್ಲಿ ಎಲೆಗಳ ನಡುವೆ ಬಿಡುವಂಥದು, ಎಣ್ಣೆಯ ಅಂಶ ಇಲ್ಲದಂಥದ್ದು, ಹಾಗೂ ಮೃದುವಾದ ಸಿಪ್ಪೆಯಲ್ಲಿ ಅಡಗಿರುವಂಥದು. ಈಚೆಗೆ, ಅಂದರೆ ಹದಿನಾರನೆಯ ಶತಮಾನದ ಎರಡನೆಯ ಅರ್ಧದ ಬಳಿಕ ನಮ್ಮಲ್ಲಿ ಮತ್ತೊಂದು ಬಗೆಯ ಕಡಲೆ ಬಳಕೆಯಲ್ಲಿ ಬಂದಿದೆ. ಅದು ನೆಲದೊಳಗೆ ಬೇರಿನಲ್ಲಿ ಬಿಡುವಂಥದು, ಎಣ್ಣೆಯ ಅಂಶ ಹೆಚ್ಚು ಇರುವಂಥದು ಹಾಗೂ ಸ್ವಲ್ಪ ಗಟ್ಟಿ ಸಿಪ್ಪೆಯನ್ನು ಹೊಂದಿರುವಂಥದು.  ಈ ಸಸ್ಯವನ್ನು ಕಡಲೆಯ ಮತ್ತೊಂದು ರೀತಿ ಎಂದು ಭಾವಿಸಿ ಇದನ್ನು ನೆಲಗಡಲೆ ಎನ್ನುವ ವಾಡಿಕೆ ಬಂತು; ತಮಿಳಿನಲ್ಲಿ ಇದನ್ನು ನೆಲಕಡಲೈ ಎಂದೂ, ತೆಲುಗಿನಲ್ಲಿ ನೆಲಶನಿಗ ಅಥವಾ ವೇರುಶನಿಗ (ವೇರು=ಬೇರು) ಎಂದೂ ಕರೆಯುವ ರೂಢಿಯಿದೆ. ಇದು 7600 ವರ್ಷಗಳಷ್ಟು ಹಿಂದೆಯೇ ಬೆಳೆಯುತ್ತಿತ್ತು ಎಂದು ಪ್ರಾಚ್ಯಶಾಸ್ತ್ರಜ್ಞರು ಹೇಳುತ್ತಾರೆ. ಈ ಸಸ್ಯದ ಮೂಲಸ್ಥಾನದ ಬಗ್ಗೆ ಭಿನ್ನಾಭಿಪ್ರಾಯಗಳಿವೆ: ಪೆರು, ಅಥವಾ ಘಾನಾ, ಕ್ಯೂಬ ಎಂಬುದು ವಿವಿಧ ವಿದ್ವಾಂಸರ ಅಭಿಪ್ರಾಯ. ತೆಲುಗಿನಲ್ಲಿ ಇದನ್ನು ಶನಿಗಕಾಯ ಅಥವಾ ಶನಿಕ್ಕಾಯ ಎನ್ನುತ್ತಾರೆ. ಇದಕ್ಕೆ ಸಮೀಪವಾಗಿರುವ ಸೇಂಗ(ಗಾ) ಅಥವಾ ಶೇಂಗ(ಗಾ) ಎಂಬ ಶಬ್ದವು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿಗೆ ಬಳಕೆಯಲ್ಲಿದೆ. ದಕ್ಷಿಣ ಕರ್ಣಾಟಕದಲ್ಲಿ ಇದನ್ನು ಕಡಲೆಕಾಯಿ, ಕಳ್ಳೇಕಾಯಿ ಎನ್ನುತ್ತಾರೆ.
=====
ಕಣ್ಣಾಮುಚ್ಚಾಲೆ:  ಇದು ಅನೇಕ ಶಬ್ದಗಳ ಕೂಡುಪದ. ಕಣ್ಣು ಮತ್ತು ಮುಚ್ಚು ಎಂಬಿವು ಸ್ಪಷ್ಟವಾಗಿವೆ. ಇದು ಮಕ್ಕಳ ಒಂದು ಆಟದ ಹೆಸರು. ಒಬ್ಬರ ಕಣ್ಣು ಮುಚ್ಚಿ ಮಿಕ್ಕವರೆಲ್ಲ ಬಚ್ಚಿಟ್ಟುಕೊಂಡ ಮೇಲೆ ಕಣ್ಣು ಬಿಡಿಸಿಕೊಂಡ ಮಗು ಬಚ್ಚಿಟ್ಟುಕೊಂಡವರನ್ನು ಹುಡುಕುವ ಆಟ. "ಕಿವಿಗೆ ಹಿತವಾಗಿ ಸಂತಸ ಹುಟ್ಟಿಸುವ ಲಯಬದ್ಧ ನಾದಪ್ರವಾಹ ಮುಖ್ಯ .. .. ಆದಿಪ್ರಾಸವೋ, ಅಂತ್ಯಪ್ರಾಸವೋ, ಅಡಿಗಡಿಗೆ ಮರುಕಳಿಸುವ ಪ್ರಾಸವೋ ಅಲ್ಲಿ ಮುಖ್ಯವಿನಿಸೀತು. ಉದ್ದೇಶ ಅರ್ಥವನ್ನು ಕೊಡಲೇಬೇಕಾಗಿಲ್ಲ ಹಾಡು" ಎಂದು ಶಿವರಾಮ ಕಾರಂತರು ಮಕ್ಕಳಹಾಡಿನ ಸ್ವರೂಪವನ್ನು ವಿವರಿಸುತ್ತಾರೆ. ಆದರೆ ಕಣ್ಣಾಮುಚ್ಚಾಲೆ ಒಂದು ಆಟವಾದರೂ ಕಣ್ಮುಚ್ಚಿದಾಗ ಹೇಳುವ "ಕಣ್ಣಾ ಮುಚ್ಚೆ ಕಾಡೇಗೂಡೇ ಉದ್ದಿನ ಮೂಟೆ ಉರುಳೇ ಹೊಯ್ತು, ನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೇ ಬಿಟ್ಟೇ, ಬಚ್ಚಿಟ್ಟುಕೊಳ್ಳಿ" ಎಂಬ ಹಾಡಿನಂತಹ ರಚನೆ ಏನೋ ನಿಗೂಢವನ್ನೇ ಸೂಚಿಸುತ್ತಿರುವಂತಿದೆ. ಕಣ್ಮುಚ್ಚು ಎಂಬುದಕ್ಕೆ 'ಸಾವು' ಎಂಬರ್ಥವೂ ಇದ್ದು, ಕಾಡಿನ ಗೂಡು, ಉರುಳಿ ಹೋಗು, ಬಚ್ಚಿಟ್ಟುಕೊ ಮುಂತಾದವು ಸಾವಿನ ಪರಿಯನ್ನು ಹೇಳುತ್ತಿವೆಯೇನೋ ಎಂಬಂತಿದೆ. ಮೂಲದಲ್ಲಿ ಮಕ್ಕಳು ಈ ಮಾತುಗಳನ್ನು ಸೃಷ್ಟಿಸದೆ ಹಿರಿಯರು ಇವುಗಳನ್ನು ಹೇಳಿಕೊಟ್ಟಿರಬಹುದು. ಈಶ್ವರ ಕಮ್ಮಾರರ ಒಂದು ಮಕ್ಕಳ ಪದ್ಯದ ಮೊದಲ ಸಾಲುಗಳಿವು: "ಕೊಕ್ಕ ಬತ್ತಿ ಕ್ವಾಡಾ ಬತ್ತಿ ಊರಿಗೆಲ್ಲ ಒಂದೇ ಬತ್ತಿ ಓಡಲೆ ಬತ್ತಿ.. .. " ಇದೂ ಕಣ್ಣಾಣಾಮುಚ್ಚಾಲೆಯ ಪದ್ಯವನ್ನೇ ಹೋಲುವಂತಿದೆ.
ಈ ಶಬ್ದವು ಕಣ್ಮುಚ್ಚಲೆ, ಕಣ್ಣಾಮುಚ್ಚಿ, ಕಣ್ಣಾಮುಚ್ಚೆ, ಕಣ್ಣುಮುಚ್ಚಲೆ, ಕಣ್ಣುಮುಚ್ಚಳಿಕೆ, ಕಣ್ಣುಮುಚ್ಚಣಿಕೆ ಮುಂತಾಗಿ ಅನೇಕ ವಿಧಗಳಲ್ಲಿ ಬಳಕೆಯಲ್ಲಿದೆ. ಇದೊಂದು ನುಡಿಗಟ್ಟಾಗಿಯೂ ಬಳಕೆಯಲ್ಲಿದೆ. ಕಾಣಿಸಿಕೊಂಡು ಇಲ್ಲವಾಗುವ ಪರಿಯನ್ನು ಈ ನುಡಿಗಟ್ಟು ಸೂಚಿಸುತ್ತದೆ: 'ವಿದ್ಯುತ್ ಕಣ್ಣಾಮುಚ್ಚಾಲೆ' ಎಂಬುದು ದಿನಪತ್ರಿಕೆಯ ಸಾಮಾನ್ಯ ಶೀರ್ಷಿಕೆ. 'ನನ್ನ ನಿನ್ನೆಗಳೊಡನೆ ಕಣ್ಣುಮುಚ್ಚಾಲೆ' ಎಂಬುದು ಸಿದ್ಧಯ್ಯ ಪುರಾಣಿಕರ ಆತ್ಮಚರಿತ್ರೆಯ ಶೀರ್ಷಿಕೆ. ಮರೆಯಲ್ಲಿ ಅಥವಾ ತಿಳಿಯದಂತೆ ನಡೆಯುವುದು ಎಂಬರ್ಥವೂ ಈ ನುಡಿಗಟ್ಟಿಗಿದೆ: 'ಈ ದೊಡ್ಡಸ್ತನವನ್ನು ತೋರಿಸುವುದರಲ್ಲೇ ಏನೋ ಕಣ್ಣಾಮುಚ್ಚಾಲೆಯಾಟವಿದೆ'. ಎಂದರೆ ಹುನ್ನಾರ ಎಂರ್ಥವೂ ಇದಕ್ಕೆ ಪ್ರಾಪ್ತವಾಗುತ್ತದೆ.
=====
ಕತ್ತಲೆ: ಇದರ ಮೂಲ ಹಳಗನ್ನಡದಲ್ಲಿ ಬಳಕೆಯಲ್ಲಿದ್ದ 'ಕೞ್ತಲೆ' ಎಂಬ ಶಬ್ದ. ಕತ್ತಲು ಎಂಬುದು ಮತ್ತೊಂದು ರೂಪ. ತುಳುವಿನಲ್ಲೂ 'ಕತ್ತಲೆ' ಬಳಕೆಯಲ್ಲಿದೆ. "ಕೞ್ತಲೆ-ಮರ್ವು" ಎಂದು 'ಶಬ್ದಮಣಿದರ್ಪಣ'ವು ಅರ್ಥ (ಮರ್ವು=ಮಬ್ಬು) ನೀಡುತ್ತದೆ. "ನಿನಗೆ ಪಗಲೊಳೇಂ ಕೞ್ತಲೆಯೆ" ಎಂಬುದು 'ಪಂಪಭಾರತ'ದ ಮಾತು. 'ಕಳ್ತಲಿಸು' ಎಂಬುದು ಕತ್ತಲೆಯಾಗು ಎಂಬರ್ಥದಲ್ಲಿ 'ಆದಿಪುರಾಣ'ದಲ್ಲಿ ಬಳಕೆಗೊಂಡಿದೆ ("ಇಮ್ಮಾವು ಕಳ್ತಲಿಸಿರ್ದತ್ತು ಎಲೆವಳ್ಳಿ ಕಾಯ್ತು ಕರೆವಂತಿರ್ದತ್ತು"). ಕತ್ತಲೆಯುಂಟುಮಾಡು ಎಂಬರ್ಥದಲ್ಲಿ 'ಕರ್ಣಾಟಕ ಕಾದಂಬರಿ'ಯು 'ಕೞ್ತಲೆವಿಡು' ಎಂಬ ಶಬ್ದವನ್ನು ಬಳಸುತ್ತದೆ ("ಕೞ್ತಲೆವಿಡುವ ತಮಾಲಂಗಳೊಳ್"). ಗೂಬೆಯನ್ನು 'ಲೀಲಾವತಿ'ಯಲ್ಲಿ 'ಕೞ್ತಲೆವಕ್ಕಿ' ಎಂದು ಕರೆದಿದೆ ("ಇಕ್ಕಿದ ತತ್ತಿಗೆ ಕೞ್ತಲೆವಕ್ಕಿ ಭಯಂಬಿಟ್ಟು"). ಸೋಮದೇವನ 'ಉದ್ಭಟಕಾವ್ಯ'ವು ಕತ್ತಲೆಯ ಸಂತಾನವೆಂಬರ್ಥದಲ್ಲಿ 'ಕೞ್ತಲೆವ' ಶಬ್ದಪ್ರಯೋಗಿಸುತ್ತಾನೆ ("ಮಿಸುಗುವ ಕಳ್ತಲೆವಱೆಗಳೊಳ್ ಅಸವಸದಿಂ ಶಶಿಮರೀಚಿಗಳ್ ಪೊಣರ್ವವೊಲ್").
'ಕರ್ತಲೆ' ಎಂಬ ಅಪರೂಪದ ರೂಪವು ಒಂದು ಶಾಸನದಲ್ಲಿ ದೊರೆಯುತ್ತದೆ ("ಭಾನೂದಯದೊಳ್ ಕರ್ತಲೆಯನ್ತಿರೆ"). ಹಳಗನ್ನಡ ಬರವಣಿಗೆಯಲ್ಲಿಯೇ ಕೆಲವೆಡೆ ಕತ್ತಲೆ ಎಂಬ ರೂಪವು ಸಿಕ್ಕುತ್ತದೆ: "ಹೃದಯದೊಳೊದವಿದ ಕತ್ತಲೆ ಚೆದರುವಿನಂ" - 'ಕರ್ಣಾಟಕ ಕಾದಂಬರಿ'). ನಡುಗನ್ನಡದಲ್ಲಿ ಈ ಶಬ್ದವು 'ಕತ್ತಲೆ' ಎಂದು ವ್ಯಾಪಕವಾಗಿ ಬಳಕೆಗೆ ಬಂತು. "ಕತ್ತಲೆಯೆಂಬುದು ಇತ್ತಲೆಯಯ್ಯಾ, ಗುಹೇಶ್ವರನೆಂಬುದು ಅತ್ತಲೆಯ್ಯಾ" ಎಂಬುದು ಅಲ್ಲಮಪ್ರಭುವಿನ ಪ್ರಸಿದ್ಧವಾದ ಮಾತು. "ಕತ್ತಲೆಯಲ್ಲಿ ಕನ್ನಡಿಯ ನೋಡಿ ಕಳವಳಗೊಂಡೆನಯ್ಯಾ" ಎಂಬುದು ಅಕ್ಕನ ವಚನದ ಸಾಲು. "ಮಿಂಚುಬುಳುವಿಗೆ ಸೋಲುವುದೆ ಕತ್ತಲೆಯ ಕಟಕವು" ಎಂಬುದು ಕುಮಾರವ್ಯಾಸನ ರೂಪಕ. "ಎತ್ತೆತ್ತಲುಂ ಕತ್ತಲೆಗಳಿಟ್ಟಣಿಸಿವೆ" ಎಂಬಲ್ಲಿ ಲಕ್ಷ್ಮೀಶನು ಈ ಶಬ್ದದ ಬಹುವಚನ ಬಳಸಿದ್ದಾನೆ. ಕನಕದಾಸರ 'ಮೋಹನ ತರಂಗಿಣಿ'ಯಲ್ಲಿ ಕತ್ತಲೆಯುಂಟುಮಾಡು ಎಂಬರ್ಥದಲ್ಲಿ 'ಕತ್ತಲೆಗೆಯ್' ಶಬ್ದ ಬಳಕೆಯಾಗಿದೆ ("ಕಳಿವಣ್ಣುಗಳ್ ತರುಲತೆ ಕತ್ತಲೆಗೆಯ್ದುವಾ ಬನದಿ"). "ಕತ್ತಲೆಯಲಿ ಬತ್ತಲೆಯಲಿ ತಲೆಗೆದರಿದೆ ಬದುಕು" ಎಂಬುದು ಕೆ.ಎಸ್.ನ. ಅವರ 'ಅನ್ನಪೂರ್ಣೆಗೆ' ಕವನದ ಒಂದು ಸಾಲು. ಇಲ್ಲಿ ಕತ್ತಲೆ ಎಂಬ ಪದಕ್ಕೆ ಅಜ್ಞಾನ ಎಂಬರ್ಥವೂ ಹೊಂದುತ್ತದೆ. ದಟ್ಟ ಕತ್ತಲೆ ಎಂಬರ್ಥ 'ಕಗ್ಗತ್ತಲೆ' ಶಬ್ದ ಕುಮಾರವ್ಯಾಸ ಭಾರತಕಿದಲ್ಲಿಯೇ ಬಂದಿದೆ ("ಕಗ್ಗತ್ತಲೆಯ ಬಲುಗಂಡಿಯಲಿ ಸಿಲುಕಿತು ಕಂಗಳಂಗವಣೆ").
ಕತ್ತಲು ಎಂಬ ರೂಪವೂ ಈಗ ವ್ಯಾಪಕವಾಗಿ ಬಳಕೆಯಲ್ಲಿದೆ. "ಹಬ್ಬಿತು ಕತ್ತಲು ಎದೆಎದೆಯೊಳಗೆ" ಎಂಬ ಸಾಲು ಪು.ತಿ.ನ. ಅವರ 'ವಿಕಟಕವಿ ವಿಜಯ' ನಾಟಕದ್ದು. 'ಕಗ್ಗತ್ತಲು' ರೂಪವೂ ಇದೆ. "ಕದ್ದಿಂಗಳು ಕಗ್ಗತ್ತಲು" ಕುವೆಂಪು ಪ್ರಯೋಗ.
=====
ಕನ್ನಡ: ಕನ್ನಡ ಎಂಬ ಪದವು ಅತ್ಯಂತ ಪ್ರಾಚೀನ ಉಪಲಬ್ಧ ಕನ್ನಡ ಕೃತಿಯಾದ ಕ್ರಿಶ ಒಂಬತ್ತನೇ ಶತಮಾನದ 'ಕವಿರಾಜಮಾರ್ಗ'ದಲ್ಲಿ ಸ್ಪಷ್ಟವಾಗಿ ಎರಡು ಅರ್ಥಗಳಲ್ಲಿ ಬಳಕೆಯಾಗಿದೆ: ಒಂದು ಕನ್ನಡ ನಾಡು, ಇನ್ನೊಂದು ಕನ್ನಡ ನುಡಿ. ಬಹಳ ಪ್ರಸಿದ್ಧವಾದ ಅದರ ಪದ್ಯವೊಂದು "ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್: ಎನ್ನುತ್ತದೆ. ಅಂದರೆ ಕನ್ನಡ ಎಂಬುದು ಈ ನಾಡಿನ ಹೆಸರು; ಕನ್ನಡವನ್ನು ಮಾತನಾಡುವವರು ವಾಸಿಸುತ್ತಿದ್ದ ಪ್ರದೇಶ. ಆ ಗ್ರಂಥದಲ್ಲಿಯೇ ಇರುವ "ಪರಮಾಚಾರ್ಯರವೋಲ್ ಸೈತಿರಲಯರ್ ಕನ್ನಡಕ್ಕೆ ನಾಡವರೋಜರ್" ಎಂಬ ಪದ್ಯದಲ್ಲಿ ಕನ್ನಡ ಎಂಬುದನ್ನು ನುಡಿಯ ಹೆಸರಾಗಿ ಬಳಸಲಾಗಿದೆ. ಅಷ್ಟೇ ಅಲ್ಲ, ಕನ್ನಡದ ಪ್ರಾದೇಶಿಕ ಪ್ರಭೇದಗಳನ್ನೂ (ಆಧುನಿಕ ಪರಿಭಾಷೆಯಲ್ಲಿ ಹೇಳುವುದಾದರೆ, 'ಉಪಭಾಷೆ') ಕನ್ನಡಂಗಳ್ ಎಂಬ ಪದದಿಂದ ಸೂಚಿಸಲಾಗಿದೆ. ಆದರೆ ಕನ್ನಡ ಎಂಬ ಶಬ್ದದ ಹುಟ್ಟು ಹೇಗಾಯಿತೋ ತಿಳಿಯದು.
ಕ್ರಿಶ ಹನ್ನೊಂದನೆಯ ಶತಮಾನದ ಶಾಸನವೊಂದರಲ್ಲಿ 'ಕನ್ನಡ ಸಂಧಿವಿಗ್ರಹಿ' (ಸಂಧಿವಿಗ್ರಹಿ ಎಂದರೆ ಸಂಧಾನ ಮತ್ತು ಯುದ್ಧಗಳ ಹೊಣೆ ಹೊತ್ತ ಮಂತ್ರಿ) ಎಂಬ ಮಾತು ದೊರೆಯುತ್ತದೆ. ಅದರರ್ಥ ಕನ್ನಡ ದೇಶದ ಸಂಧಿವಿಗ್ರಹಿ ಎಂದು ನನಿಘಂಟುಗಳೇನೋ ಅರ್ಥವನ್ನು ಕೊಡುತ್ತವೆ. ಆದರೆ ಆ ಕಾಲದಲ್ಲಿ ಕನ್ನಡ ಮಾತಾಡುವ ಪ್ರದೇಶವೆಲ್ಲ ಒಂದಾಗಿದ್ದ ನಾಡೆಲ್ಲಿತ್ತು? ವಿವಿಧ ರಾಜರ ಆಳ್ವಿಕೆಯಲ್ಲಿ ಕನ್ನಡ ಜನ ವಾಸಿಸುತ್ತಿದ್ದರು. ಹೀಗಾಗಿ ನಿಘಂಟಿನ ಈ ಅರ್ಥ ಸರಿಹೊಂದುವಂತೆ ಕಾಣದು. ಕನ್ನಡಗಬ್ಬ, ಕನ್ನಡಕವಿತೆ ಎಂಬ ಶಬ್ದಗಳೂ ತುಂಬ ಹಿಂದಿನಿಂದಲೇ ದೊರೆಯುತ್ತವೆ.
ಆನಂತರದ ಕನ್ನಡ ಕಾವ್ಯಗಳಲ್ಲಿ 'ಕನ್ನಡವಕ್ಕಿ' ಎಂಬುದನ್ನು ಗಿಳಿ ಎಂಬಂರ್ಥದಲ್ಲಿ ಬಳಸಲಾಗಿದೆ. ಕನ್ನಡಗೌಳ, ಕನ್ನಡವೀಣೆ, ಕನ್ನಡವರಾಳಿ ಎಂಬ ಮಾತುಗಳು ಸಂಗೀತಕ್ಕೆ ಸಂಬಂಧಿಸಿದಂತೆ ಬಳಕೆಯಾಗಿವೆ. ಇವಕ್ಕೂ ಕನ್ನಡ ನುಡಿ ಅಥವಾ ನಾಡಿಗೆ ಯಾವ ರೀತಿ ಸಂಬಂಧವಿದೆಯೋ ಸ್ಪಷ್ಟವಾಗುವುದಿಲ್ಲ. ಕನ್ನಡಗಿತಿ (ಕನ್ನಡ ನಾಡಿನ ಹೆಣ್ಣು) ಎಂಬ ಮಾತು ಹದಿಮೂರನೆಯ ಶತಮಾನದ 'ಶಬ್ದಮಣಿದರ್ಪಣ'ವೆಂಬ ವ್ಯಾಕರಣ ಗ್ರಂಥದಲ್ಲಿ ದೊರಕುತ್ತದೆ. ಆದರೆ ಕನ್ನಡಿಗ ಎಂಬ ಶಬ್ದವು ಮೊದಲು ಸಿಕ್ಕುವುದು ಹದಿನಾಲ್ಕನೆಯ ಶತಮಾನದ ನಾಗರಾಜ ಕವಿಯ 'ಪುಣ್ಯಾಸ್ರವ' ಎಂಬ ಕಾವ್ಯದಲ್ಲಿ. ಹದಿನೇಳನೇ ಶತಮಾನದ ಸಂಸ್ಕೃತ ಭಾಷೆಯಲ್ಲಿರುವ 'ಶಬ್ದಾನುಶಾಸನ' ಎಂಬ ಕನ್ನಡ ವ್ಯಾಕರಣದಲ್ಲಿ ಕನ್ನಡ ನಾಡಿನವನು ಎಂಬರ್ಥದಲ್ಲಿ ಕನ್ನಡಿಚ ಎಂಬ ಶಬ್ದವನ್ನು ಬಳಸಲಾಗಿದೆ.
ಕನ್ನಡಿಸು ಎಂಬ ಮಾತೊಂದಿದೆ: ಇದನ್ನು ಕನ್ನಡ ಭಾಷೆಯಲ್ಲಿ ಹೇಳು ಎಂಬರ್ಥದಲ್ಲಿ ಬಳಸಲಾಗುತ್ತಿದೆ, ಪ್ರಾಯಶಃ ಇದು ಈಚಿನ ಪ್ರಯೋಗ. ಈ ಶಬ್ದವನ್ನು ಕನ್ನಡಿ+ಇಸು ಎಂದು ಒಡೆಯಬೇಕು: ಕನ್ನಡಿಯ ಪ್ರತಿಬಿಂಬದಂತೆ ಮಾಡು, ಅನುವಾದಿಸು ಎಂಬರ್ಥದಲ್ಲಿ ಈ ಶಬ್ದವನ್ನು ಬಳಸಿದಂತೆ ತೋರುತ್ತದೆ.
=====
ಕಬ್ಬ: ಈ ಶಬ್ದವು ಸಂಸ್ಕೃತದ ಕಾವ್ಯ ಎಂಬುದರ ತದ್ಭವ (ಕಾವ್ಯ ಎಂಬುದೇ ಕವಿ ಎಂಬುದರಿಂದ ಬಂದು, ಕವಿಯ ಕೃತಿ ಎಂಬ ಅರ್ಥವನ್ನು ಹೊಂದಿದೆ; ಪ್ರಾಕೃತದಲ್ಲಿದು ಕವ್ವ ಎಂಬ ರೂಪವನ್ನು ಪಡೆಯುತ್ತದೆ). ಈಗ ಕವಿ ಎಂಬ ಶಬ್ದವೇ ಹೆಚ್ಚು ಬಳಕೆಯಲ್ಲಿದ್ದರೂ ಹಿಂದೆ ಕಬ್ಬ ಎಂಬ ಶಬ್ದವೂ ವ್ಯಾಪಕವಾಗಿ ಬಳಕೆಯಲ್ಲಿತ್ತು. ಈ ಶಬ್ದವು ಕನ್ನಡದ ಅತ್ಯಂತ ಪ್ರಾಚೀನ ಉಪಲಬ್ಧ ಕೃತಿಯಾದ 'ಕವಿರಾಜಮಾರ್ಗ'ದಲ್ಲಿಯೇ ಬಂದಿದೆ: "ಮಿಗೆ ಕನ್ನಡಗಬ್ಬಂಗಳೊಳ್ ಅಗಣಿತಗುಣ ಗದ್ಯಪದ್ಯ ಸಮ್ಮಿಶ್ರಿತಮಂ ನಿಗದಿಸುವರ್ ಗದ್ಯಕಥಾಪ್ರಗೀತಿಯಿಂ ತಚ್ಚಿರಂತನಾಚಾರ್ಯರ್ಕಳ್" ಎಂಬುದು ಅಲ್ಲಿಯ ಪ್ರಯೋಗ. ಅಲ್ಲದೆ 'ಬೆದಂಡೆಗಬ್ಬ' ಎಂಬ ವಿಶಿಷ್ಟ ಪ್ರಭೇದವನ್ನೂ ಅಲ್ಲಿ ಹೇಳಿದೆ; ಇದು ಕನ್ನಡದ ಸ್ವಂತ ಕಾವ್ಯ ಪ್ರಕಾರ, ಇನ್ನೊಂದು ಚತ್ತಾಣ.  ಕಬ್ಬವನ್ನು ರಚಿಸುವವನು ಅಥವಾ ಕವಿಯೇ ಕಬ್ಬಿಗ. "ಸೊಗಯಿಸುವ ಕಬ್ಬಮಂ ಕಬ್ಬಿಗರಲ್ಲದೆ ಮೆಚ್ಚರ್" ಎಂಬುದು ಆಂಡಯ್ಯನ 'ಕಬ್ಬಿಗರ ಕಾವ'ದ ಮಾತು. ಕವಿಸಮುದಾಯವನ್ನು ಪೊನ್ನನ 'ಶಾಂತಿಪುರಾಣ'ದಲ್ಲಿ 'ಕಬ್ಬಿಗವಂದಿ'  {ಕಬ್ಬಿಗ+ಮಂದಿ) ಎಂದು ಕರೆದಿದೆ. ಅಲ್ಲಿಯೇ ಬೇರೆಯವರ ಕೃತಿಯಿಂದ ಹಾರಿಸಿಕೊಂಡು ಬರೆಯುವವನನ್ನು 'ಕಬ್ಬಿಗಗಳ್ಳ' ಎಂದು ಕರೆದಿದೆ.
ಹಳಗನ್ನಡದಲ್ಲಿ ಸಂಸ್ಕೃತ ಮಾದರಿಯ ಕಾವ್ಯಪರಂಪರೆಯನ್ನು 'ಮಾರ್ಗ' ಎಂದೂ ಕನ್ನಡ ನಾಡಿನ ಸತ್ವವನ್ನೊಳಗೊಂಡುದನ್ನು 'ದೇಸಿ' ಎಂದೂ ಕರೆಯುತ್ತಿದ್ದರು. ಮಾರ್ಗವು ಕಾವ್ಯವಸ್ತುವಿಗೆ ಹೆಚ್ಚು ಪ್ರಾಧಾನ್ಯವಿತ್ತರೆ, ದೇಸಿಯು ಭಾವನೆಗೆ ಒತ್ತು ನೀಡುವಂತೆ ತೋರುತ್ತದೆ. ಇದು ಕ್ರಮವಾಗಿ ವಸ್ತುಕ ವರ್ಣಕ ಎಂಬ ಶಬ್ದಗಳಿಂದಲೂ ಸೂಚಿತವಾಗುತ್ತಿತ್ತು. ಹಾಗೆಯೇ ಇವುಗಳನ್ನು ಓದುಗಬ್ಬ ಪಾಡುಗಬ್ಬ (ಹಾಡುಗಬ್ಬ) ಎಂಬ ಶಬ್ದಗಳಿಂದಲೂ ಕರೆಯುತ್ತಿದ್ದರು. "ಕಬ್ಬಿಗರೋದುಗಬ್ಬವ ಹಾಡುಗಬ್ಬವ ಕಬ್ಬದೊಳೊರೆವರವೆರಡು ಕಬ್ಬಿನಂತಿರಬೇಕು ಬಿದಿರಂತೆ ರಚಿಸಲೇಕಬ್ಬೆ ಸರಸತಿಯೇ" ಎಂಬುದು ರತ್ನಾಕರವರ್ಣಿಯ 'ಭರತೇಶ್ವರ ವೈಭವ'ದ ಪದ್ಯ. ಪಾಡುಗಬ್ಬವನ್ನು ಸಾಳ್ವನೆಂಬ ಕವಿಯು 'ಪಾಡುಗವಿತೆ' ಎಂಬ ಶಬ್ದದಿಂದಲೂ ಕರೆಯುತ್ತಾನೆ.
=====
ಕರ್ನಾಟಕ: ಕರ್ನಾಟಕ ಎಂಬುದು ಕನ್ನಡ ನಾಡಿನ ಹೆಸರಾಗಿ ಇಂದು ಬಳಕೆಯಲ್ಲಿದೆ. ಇದು ಮಹಾಭಾರತದಂತಹ ತುಂಬ ಪ್ರಾಚೀನವಾದ ಸಂಸ್ಕೃತ ಕಾವ್ಯಗಳಲ್ಲಿಯೇ ಉಲ್ಲೇಖಗೊಂಡಿದೆಯೆಂದು ವಿದ್ವಾಂಸರು ಹೇಳುತ್ತಾರೆ. ಕರ್ನಾಟಕ ಎಂಬುದು ಕನ್ನಡ ಎಂಬುದರ ಸಂಸ್ಕೃತೀಕರಣಗೊಂಡ ರೂಪ ಎಂದೂ ವಿದ್ವಾಂಸರು ಹೇಳುತ್ತಾರೆ. ಹಾಗಾದರೆ ಮಹಾಭಾರತದ ರಚನಾಕಾಲದಲ್ಲಿ ಕನ್ನಡ ಭಾಷೆಯಿತ್ತೆ? ಅಲ್ಲದೆ, ಮಹಾಭಾರತದ ಕಾಲವೇ ಗೊತ್ತಿಲ್ಲ. ಜೊತೆಗೆ, ಈ ಶಬ್ದವನ್ನು ಇತರ ಕನ್ನಡ ಪ್ರದೇಶಗಳ ಜೊತೆಗೆ ಹೇಳಲಾಗಿದೆಯೆಂದು ಭೀಷ್ಮಪರ್ವದ ಶ್ಲೋಕವೊಂದನ್ನು ಉದ್ಧರಿಸಲಾಗುತ್ತದೆ: "ಅಥಾಪರೇ ಜನಪದಾಃ ದಕ್ಷಿಣಾ ಭರತರ್ಷಭ| ದ್ರಾವಿಡಾಕೇರಲಾಪ್ರಾಚ್ಯಾ ಮೂಷಿಕಾ ವನವಾಸಿಕಾ|| ಕರ್ನಾಟಕಾ ಮಹಿಷಕಾ ವಿಕಲ್ಪಾ  ಮೂಷಕಾಸ್ತಥಾ| ಝಿಲ್ಲಿಕಾ ಕುಂತಲಾಶ್ಚೈವ ಸೌಹೃದಾ ನಭಕಾನನಾ||" ಹಾಗೆಯೇ ಛಪ್ಪನ್ನ ದೇಶಗಳಲ್ಲಿ ಕರ್ನಾಟಕವನ್ನೂ ಸೇರಿಸಿ ಹೇಳುವ ರೂಢಿಯಿದೆ. ಆದರೆ ಆ ಕರ್ನಾಟಕ ಯಾವುದು? 'ಕರ್ನಾಟಕ ಸಿಂಹಾಸನಾಧೀಶ್ವರ' ಎಂದು ಹಲವಾರು ದೊರೆಗಳು ತಮ್ಮನ್ನು ಕರೆದುಕೊಳ್ಳುತ್ತಾರೆ. ಅವರ ಕರ್ಣಾಟಕ ಯಾವುದು? ಕರ್ನಾಟಕ ಎಂಬುದು ಅಷ್ಟೊಂದು ಪ್ರಾಚೀನವಾದರೆ ಕನ್ನಡ ನಾಡು ನುಡಿ ನಾಡವರ ಬಗ್ಗೆ ಅಪಾರ ಪ್ರೇಮವನ್ನು ಹೊಂದಿದ 'ಕವಿರಾಜಮಾರ್ಗ'ದ ಕರ್ತೃ ಈ ಹೆಸರನ್ನು ಬಳಸದೆ ಈ ನಾಡನ್ನು ಕನ್ನಡ ಎಂದು ಕರೆಯುವುದೇಕೆ? ಪ್ರಾಯಶಃ ಕರ್ನಾಟಕ ಎಂಬ ಶಬ್ದವು ಈ ಕೃತಿಯ ಕಾಲದ ನಂತರ ಸೃಷ್ಟಿಯಾಗಿರಬೇಕು.
ಕರ್ನಾಟಕ ಎಂಬುದರ ಮೂಲರೂಪ 'ಕರ್ಣಾಟ'; ದೇಶವನ್ನು 'ಕರ್ಣಾಟ' ಎಂದೂ ಭಾಷೆಯನ್ನು 'ಕರ್ಣಾಟ ಭಾಷೆ'ಯೆಂದೂ ಸಂಸ್ಕೃತಪ್ರಿಯರು ಹೇಳುತ್ತಿದ್ದರು. ವಿಜಯನಗರದ ಅರಸನನ್ನು ಭೇಟಿಮಾಡಲು ಬಂದ ತೆಲುಗಿನ ದೊಡ್ಡ ಕವಿ ಶ್ರೀನಾಥನು ಹೇಳಿದನೆನ್ನಲಾದ ಚಾಟುಪದ್ಯವೊಂದರಲ್ಲಿ "ಎವ್ವರೇಮನುಚುನ್ರು ನಾಕೇಮಿ ಕೊರತ ನಾ ಕವಿತ್ವಂಬು ನಿಜಮು ಕರ್ಣಾಟ ಭಾಷಾ" ಎಂಬ ಸಾಲಿದೆ. ಕರ್ಣಾಟಕ ವಿಷಯ ಎಂಬುದು ಕನ್ನಡ ನಾಡನ್ನು ಸೂಚಿಸುತ್ತಿತ್ತು. ಕರ್ನಾಟಕ ಸಂಗೀತ ಎಂಬ ಮಾತಿದೆ; ಹಾಗೆಯೇ ಕರ್ಣಾಟಗೌಳ ಎಂಬ ರಾಗದ ಹೆಸರಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಹೆಸರು 'ಕರ್ಣಾಟಕ ಸಾಹಿತ್ಯ ಪರಿಷತ್ತು' ಎಂದು, ಅದನ್ನು ಕರ್ನಾಟಕ ಸಾಹಿತ್ಯ ಪರಿಷತ್ತು ಎಂದು ಬದಲಿಸಲು ಪ್ರಯತ್ನಗಳಾದವು. ಕರ್ಣಾಟಕ ಎಂಬುದು ಸಂಸ್ಕೃತ ವ್ಯಾಕರಣಕ್ಕನುಗುಣವಾದುದು, ಹಾಗಾಗಿ ಅದನ್ನೇ ಉಳಿಸಿಕೊಳ್ಳಬೇಕೆಂದು ಒಂದು ಪಕ್ಷದವರು ಪಟ್ಟುಹಿಡಿದರು. ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ನಡೆದ ನ ಅಥವಾ ಣ ಯಾವುದಿರಬೇಕು ಎಂಬ ಈ ವಿವಾದವನ್ನು 'ನೊಣ ಜಗಳ' ಎಂದೇ ಕರೆಯುತ್ತಿದ್ದರು! ಜಾಣರು ಎರಡನ್ನೂ ಬಿಟ್ಟು ಕನ್ನಡ ಎಂಬುದನ್ನು ಅಳವಡಿಸಿದರು. ಕರ್ಣಾಟ ಎಂಬುದು ಕನ್ನಡವನ್ನು (ಶ್ರೀನಾಥನ ಪದ್ಯ ಅಥವಾ ಕರ್ಣಾಟಕ ಸಂಗೀತದಲ್ಲಿ) ಸೂಚಿಸದೆ ಕರ್ಣ+ಅಟ ಅಂದರೆ ಕಿವಿಗೆ ಹಿತಕರವಾದ ಎಂಬ ಅರ್ಥವೇ ವಿಹಿತ ಎಂಬುದೂ ಕೆಲವರ ವಾದವಾಗಿದೆ.
=====
ಕವಡೆ: ಇದು ಸಂಸ್ಕೃತದ 'ಕಪರ್ದ' ಶಬ್ದದ ತದ್ಭವ. ಕವಡೆ ಎಂಬುದು ಒಂದು ಸಣ್ಣ ಸಮುದ್ರಪ್ರಾಣಿಯ ಚಿಪ್ಪು. ಇಂಡಿಯಾದಲ್ಲಿ ಹಿಂದೆ ಕವಡೆ ಒಂದು ನಾಣ್ಯವಾಗಿ ಚಲಾವಣೆಯಲ್ಲಿದ್ದುದನ್ನು ಸುಲೇಮಾನ್ ಎಂಬ ಪರ್ಷಿಯನ್ ಪ್ರವಾಸಿ ಬರೆಯುತ್ತಾನೆ. ಈಗಲೂ 'ಕವಡೆಯ ಕಿಮ್ಮತ್ತಿಲ್ಲ' ಎಂಬ ಮಾತನ್ನು ಬಳಸುವುದು ರೂಢಿಯಲ್ಲಿದೆ. ಮಾಯಿದೇವಿ ಅಥವಾ ಮಾಳಚಿ (ಮಹಾಲಕ್ಷ್ಮಿ) ಎಂಬ ದೇವತೆಯ ಭಕ್ತರು ಕೊರಳಲ್ಲಿ ಕವಡೆಯ ಮಾಲೆ ಧರಿಸುತ್ತಿದ್ದರು: ಉರಿಲಿಂಗಪೆದ್ದಿ ಎಂಬ ವಚನಕಾರನ ವಚನವೊಂದರಲ್ಲಿ "ಮಾಯಿರಾಣಿಯೇ ದೈವವೆಂದಾರಾಧಿಸಿದಾತನು ಕೊರಳಿಗೆ ಕವಡೆಯ ಕಟ್ಟಿ ತಲೆಯಲ್ಲಿ ಕೆರಹ ಹೊತ್ತು ಬೇವಿನ ಸೊಪ್ಪನುಟ್ಟು ಲಜ್ಜೆಯ ನೀಗಿದ" ಎಂಬ ಮಾತಿದೆ. ಈ ಸಂಪ್ರದಾಯ ಈಗಲೂ ಕೊಲ್ಲಾಪುರ ಲಕ್ಷ್ಮೀ ದೇವತೆಯ ಭಕ್ತರಲ್ಲಿದೆಯೆಂಬುದಕ್ಕೆ ಬೇಂದ್ರೆಯವರ 'ಕುರುಡು ಕಾಂಚಾಣ' ಕವನದಲ್ಲಿನ ಚಿತ್ರದ ಭಾಗವಾಗಿ ಬರುವ "ಸಣ್ಣ ಕಂದಮ್ಮಗಳ ಕಣ್ಣಿನ ಕವಡಿಯ ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ" ಎಂಬ ವರ್ಣನೆಯನ್ನು ನೋಡಬಹುದು. ಅಳಗುಳಿಮನೆ, ಚೌಕಾಬಾರದಂತಹ ಆಟಗಳಲ್ಲಿ ಕವಡೆಯನ್ನು ಗರ ಹಾಕಲು ಬಳಸುತ್ತಾರೆ. ಜ್ಯೋತಿಷಿಗಳು ಭವಿಷ್ಯದ ಆಗುಹೋಗುಗಳನ್ನು ಲೆಕ್ಕಹಾಕಲು ಈಗಲೂ 'ಕವಡೆ ಹಾಕು'ತ್ತಾರೆ.
'ಕವಡಿಕೆ' ಎಂದರೂ ಕವಡೆಯೇ. ಇದು ಸಂಸ್ಕೃತದ ಕಪರ್ದಿಕಾ (=ಸಣ್ಣ ಕವಡೆ) ಎಂಬ ಶಬ್ದದ ತದ್ಭವರೂಪ. ಈಗ ಕವಡೆ ಎಂಬ ರೂಪ ಹೆಚ್ಚು ಬಳಕೆಯಲ್ಲಿದ್ದರೂ ಹಿಂದಿನ ಕನ್ನಡ ಕಾವ್ಯಗಳಲ್ಲಿ ಕವಡಿಕೆ ಎಂಬ ರೂಪವೇ ಹೆಚ್ಚು ಪ್ರಚಲಿತವಾಗಿತ್ತು. "ಬಾಯೊಳ್ ಕವಡಿಕೆಗಳಂ ಪಲ್ಗಳಂತೆ ಮಾಡಿ" ಎಂದು 'ವಡ್ಡಾರಾಧನೆ'ಯಲ್ಲಿ ಬರುತ್ತದೆ. ಇದೇ ರೀತಿಯ ವರ್ಣನೆ ಕವಡೆ ರೂಪದೊಡನೆ 'ಭರತೇಶವೈಭವ'ದಲ್ಲಿ ಬರುತ್ತದೆ: "ಹಲ್ಲೆಲ್ಲ ಕವಡೆಯ ಚೀಲವಂ ಕೊಡಹಿದಂತುದಿರ್ದುವು ಧರೆಗೆ." ಶಾಂತಿನಾಥನ 'ಸುಕುಮಾರ ಚರಿತೆ' ಯಲ್ಲಿ "ಇಂತೊಂದು ಕೋಟಿ ಪೊನ್ನನೊಂದು ಕವಡಿಕೆಯಂ ಕುಡುವಂತೇನುಂ ಅಪೋಹಮಿಲ್ಲದೆ ಕೊಟ್ಟು" ಎಂಬ ವಾಕ್ಯದಲ್ಲಿ 'ಕವಡಿಕೆ' ಒಂದು ನಾಣ್ಯದ ರೂಪದಲ್ಲಿ ಬಳಕೆಯಲ್ಲಿತ್ತು ಎಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ ಬ್ರಹ್ಮಶಿವನ 'ಸಮಯ ಪರೀಕ್ಷೆ'ಯಲ್ಲಿ ಬರುವ "ಕವಡಿಕೆಯುಂ ಕಾಚುಂ ಸಲ್ಗುಮೆ ಹೊನ್ನವೊಲೆಲ್ಲಿಯಾದೊಡಂ" ಎಂಬ ಮಾತಿನಲ್ಲಿ ಅದಕ್ಕಿದ್ದ ಅಲ್ಪಮೌಲ್ಯ ವ್ಯಕ್ತವಾಗುತ್ತದೆ. "ಕವಡಿಕೆ ನೆತ್ತ ಮೊದಲಾದ ನಾಟಕದ ಮೊಗರಂಗವೆನಿಪ ಕವಾಟ ತೆಯದು" ಎಂಬ ಕುಮಾರವ್ಯಾಸನ ಮಾತಿನಿಂದ ಅದೊಂದು ಬಗೆಯ ಆಟವೆಂಬುದೂ ತಿಳಿಯುತ್ತದೆ. ಕವಡೆಯ ಬೆನ್ನ ಬಣ್ಣದಿಂದ ಅವುಗಳನ್ನು ಐದು ರೀತಿಯಲ್ಲಿ ವಿಂಗಡಿಸುತ್ತಿದ್ದರಂತೆ: ಸುವರ್ಣಛಾಯೆ-ಸಿಂಹಿ, ಧೂಮ್ರವರ್ಣ-ವ್ಯಾಘ್ರಿ, ಹಳದಿ-ಮೃಗಿ, ಬಿಳಿಪು-ಹಂಸಿ ಹಾಗೂ ಉದ್ದವಾದುದು ವಿದಂತ.
=====
ಕಳ್ಳ: ಇದು ದ್ರಾವಿಡ ಪದ; ಕಳ್ ಎಂಬ ಧಾತುವಿಗೆ 'ಅ' ಎಂಬ ಪ್ರತ್ಯಯ ಹತ್ತಿ ರೂಪಿತವಾದುದು. ಕಳ್ ಎಂಬ ಧಾತುವಿಗೆ ಅಪಹರಿಸು ಎಂಬ ಅರ್ಥವಿದೆ. ತಮಿಳು ಮತ್ತು ಮಲಯಾಲಂಗಳಲ್ಲಿ ಕಳ್ಳ ಎಂಬ ರೂಪಲ್ಲಿಯೂ, ತುಳುವಿನಲ್ಲಿ ಕಳುವೆ ಎಂಬ ರೂಪದಲ್ಲಿಯೂ ಈ ಶಬ್ದ ಬಳಕೆಯಲ್ಲಿದೆ. ಕಳ್ಳತನ ಮಾಡುವವನು ಎಂಬುದನ್ನು ಸೂಚಿಸುವ ಈ ಶಬ್ದ ಹಳೆಯದು: ”ಎಲ್ಲಮಂ ಕಳ್ಳರ್ ಕೊಂಡುಪೋದರ್" ಎಂಬ ಪ್ರಯೋಗ 'ವಡ್ಡಾರಾಧನೆ'ಯದು. ಇದು ಕಳ ಎಂಬ ರೂಪದಲ್ಲಿಯೂ ಪ್ರಾಚೀನ ಕಾವ್ಯ-ಶಾಸನಗಳಲ್ಲಿ ದೊರೆಯುತ್ತದೆ. ಇದರ ಭಾವನಾಮರೂಪವೇ ಕಳವು ಅಥವಾ ಕಳ್ಳತನ. ನಿಷೇಧಾರ್ಥದಲ್ಲಿ ಕಳ್ಳದ ಎಂಬ ರೂಪವೂ ದೊರೆಯುತ್ತದೆ: ಪಂಚಾಣುವ್ರತಗಳಲ್ಲಿ ಒಂದಾದ ಅಸ್ತೇಯವನ್ನು 'ವಡ್ಡಾರಾಧನೆ'ಯು 'ಕಳ್ಳದ ವ್ರತ' ಎನ್ನುತ್ತದೆ. ಕಳ್ಳಕಾಕ ಎಂಬ ಶಬ್ದವೂ ಇದೆ, 'ಕಳ್ಳನ ಮಗ' ಅಥವಾ 'ಕಳ್ಳ ನನ್ನ ಮಗ' ಎಂಬುದು ಒಂದು ಸಾಮಾನ್ಯ ಬೈಗುಳ.
ಕಳ್ಳ ಎಂಬ ವಿಶೇಷಣವು ಮೋಸದ ಎಂಬರ್ಥದಲ್ಲಿ ಬಳಕೆಯಾಗುತ್ತದೆ. ಕಳ್ಳಗಂಡಿ ಎಂದರೆ ಗೊತ್ತಾಗದಂತೆ ಹೋಗಬಹುದಾದ ಕಳ್ಳಬಾಗಿಲು. ಹಾಗೆಯೇ ಕಳ್ಳಜ್ವರ ಎಂಬುದು ನಟನೆಯ ಜ್ವರ ಎಂಬರ್ಥವನ್ನು ಸೂಚಿಸುತ್ತದೆ. ಕಳ್ಳಕಿಂಡಿ ಎಂದರೆ ಕಳ್ಳರು ಹಾಕಿದ ಕನ್ನ ಎಂದು. ಕನ್ನ ಹಾಕಿ ಕದಿಯುವವನನ್ನು "ಸುಕುಮಾರಚರಿತೆ'ಯಲ್ಲಿ ಕನ್ನಗಳ್ಳ ಎಂದು ಕರೆದಿದೆ. ಕದ್ದಿರುವ ವಸ್ತುವನ್ನು ಕಳ್ಳಮಾಲು ಎನ್ನುವುದು ಸಾಮಾನ್ಯ. ಅನಧಿಕೃತ ಮಾರಾಟ ಮಾಡುವ ಜಾಗವೇ ಕಳ್ಳಪೇಟೆ ಅಥವಾ ಕಳ್ಳಸಂತೆ. ಕೆಲವೆಡೆ ಕಳ್ಳಕುಪ್ಪಸ ಎಂಬ ಮಾತನ್ನು ಬಳಸುತ್ತಾರೆ: ಮೊದಲ ಸಲ ಬಸಿರಿಯಾದ ಮಗಳಿಗೆ ತವರಿವನರು ಗುಟ್ಟಾಗಿ ಕುಪ್ಪಸ ಕೊಡುವ ಶಾಸ್ತ್ರವನ್ನಿದು ಸೂಚಿಸುತ್ತದೆ.
ಅಧಿಕೃತವಲ್ಲದ ನಾಣ್ಯಗಳನ್ನು ಹಿಂದಿನ ಕಾವ್ಯಗಳು ಕಳ್ಳವಣ ಎಂದು ಕರೆಯುತ್ತವೆ. ಬಸವಣ್ಣನ ಒಂದು ವಚನದಲ್ಲಿ "ಕಳ್ಳನಾಣ್ಯ ಸಲುಗೆಗೆ ಸಲ್ಲದು" ಎಂಬ ವಾಕ್ಯವಿದೆ. ದ್ರಮ್ಮ ಎಂಬುದು ಹಿಂದೆ ಪ್ರಚಲಿತವಿದ್ದ ಒಂದು ನಾಣ್ಯ. ಒಂದು ವಚನದಲ್ಲಿ "ಹಾದರಕ್ಕೆ ಹೋದರೆ ಕಳ್ಳದ್ರಮ್ಮವಾಯಿತ್ತು" ಎಂಬ ಮಾತಿದೆ. ದ್ರಮ್ಮ ಎಂಬ ನಿರ್ದಿಷ್ಟ ನಾಣ್ಯದ ಅನಧಿಕೃತ ರೂಪವನ್ನಿದು ಸೂಚಿಸುತ್ತದೆ.
=====
ಕಳ್ಳು: ಕಳ್ ಎಂಬುದು ಇದರ ಮೂಲ ರೂಪ; ಇದೊಂದು ನಾಮಪದ. ಹೆಂಡ ಎಂಬುದು ಇದರರ್ಥ. ಈ ಶಬ್ದ ತಮಿಳಿನಲ್ಲಿ ಕಳ್ ಎಂದೂ, ತೆಲುಗಿನಲ್ಲಿ ಕಲ್ಲು ಎಂದೂ, ಮಲಯಾಳಂನಲ್ಲಿ ಕಳ್, ಕಳ್ಳು ಎಂದೂ, ತುಳುವಿನಲ್ಲಿ ಕಲಿ ಎಂದೂ ಬಳಕೆಯಲ್ಲಿದೆ. ನಾಗವರ್ಮನ 'ಆಭಿಧಾನ ವಸ್ತುಕೋಶ'ವೆಂಬ ನಿಘಂಟಿನಲ್ಲಿ "ಮದಿರೆ ಸುರೆ ಕಳ್ಳುಂ" ಎಂಬ ಸಮಾನಾರ್ಥಕಗಳನ್ನು ಕೊಡಲಾಗಿದೆ. ಕಳ್ಗುಡಿ ಎಂದರೆ ಹೆಂಡ ಕುಡಿ ಎಂದು. "ಕಳ್ಗುಡಿದವರಂದಂ ಇಂತು ಸಿರಿ ಸಾರ್ತರೆ ಸಾರ್ವುದು" ಎಂಬುದು 'ಪಂಪಭಾರತ'ದ ಪ್ರಯೋಗ. ಹೆಂಡ ಕುಡಿಯುವವನು 'ಕಳ್ಕುಣಿ' ("ಖಳನುಂ ಕಳ್ಕುಣಿಯುಂ ಘುಳುಮ್ಮನಿೞಿಗುಂ ಶ್ವಭ್ರಾಂತಮಂ ತಾಪಿನಂಕ" - ಪಂಪನ 'ಆದಿಪುರಾಣ'), ಕಳ್ಗುಡಿಹ ("ಶುಂಡಾಪನಂ ಕಳ್ಗುಡಿಹಕ" 'ಆಭಿಧಾನ ವಸ್ತುಕೋಶ') ಅಥವಾ 'ಕಳ್ಗುಡುಕಿ' ("ಕಳ್ಗುಡಿಕಿಗಳುಂ ನಿರ್ದಯರುಂ ಮಾಡದ ಪಾಪಮಿಲ್ಲ_ - ನಯಸೇನನ 'ಧರ್ಮಾಮೃತ'). ಹೆಂಡ ಕುಡಿಯುವ ಹವ್ಯಾಸವನ್ನು ಕೆಲವೆಡೆ 'ಕಳ್ಗುಡುಹಿತನ' ಎಂದು ಕರೆಯಲಾಗಿದೆ. ಕಳ್ಳನ್ನು ಮಾಡಿ ಮಾರುವವನನನ್ನು 'ಕಳ್ಳವಳ' ಎನ್ನುತ್ತಿದ್ದರು ("ಆ ಪೊಳಲ ಕಳ್ಳವಳನೊರ್ವಂಕ" - ಕರ್ಣಪಾರ್ಯನ 'ನೇಮಿನಾಥ ಪುರಾಣ'). ಮತ್ತೊಂದು ಕಾವ್ಯದಲ್ಲಿ (ನೇಮಿನಾಥನ 'ಅರ್ಧನೇಮಿ ಪುರಾಣ') 'ಕಳ್ಳಸಿಗ' ಎಂದು ಕರೆಯಲಾಗಿದೆ. ಅಂಥ ಹೆಂಗಸನ್ನು 'ಕಳ್ಳವತಿ' ಎಂದು ಅದೇ ಕಾವ್ಯದಲ್ಲಿ ಕರೆದಿದೆ ("ಕೌಶಂಬಿಯ ಕಳ್ಳವತಿ ಮಂಡೋದರಿಯ ಮಗ"). ಹೆಂಡ ಮಾರುವವರ ಕೇರಿಯನ್ನು 'ಕಳ್ಳಸಿಗಗೇರಿ' ಎಂದು ಕರೆಯುತ್ತಿದ್ದರು ("ಕಳ್ಳಸಿಗಗೇರಿಯೊಳಗಣ ಕಳ್ಳೆಲ್ಲಮಮಂ ಎಱೆದು ತರಿಸಿ"  - ನಯಸೇನನ 'ಧರ್ಮಾಮೃತ').
ಪಂಪ ತನ್ನ 'ಪಂಪಭಾರತ'ದಲ್ಲಿ "ಮುನೂಱಱುವತ್ತು ಜಾತಿ ಕಳ್ಗಳಂ" ಎನ್ನುತ್ತಾನೆ. ಬಾಹುಬಲಿ ಎಂಬ ಕವಿಯು ತನ್ನ 'ಧರ್ಮನಾಥಪುರಾಣ'ದಲ್ಲಿ "ಸಿರಿ ಸಿಂಬಿ ತಂಪುಗಂ ಬಬ್ಬರಿ ಗಂಗಾಸಾಗರಂ ಸುರಾಳಂ ಸೋಮಂ ವರವಾಣಿ ಮಾಳವೋದರಿ ಮರವಟ್ಟಿಗೆಯೆಂಬ ಕೆಲವು ಪೆಸರಿನ ಕಳ್ಳಂ" ಉಲ್ಲೇಖಿಸುತ್ತಾನೆ. ಹೆಂಡದ ಮಾರಯ್ಯನೆಂಬೊಬ್ಬ ವಚನಕಾರನು ಹೆಂಡವಿಳಿಸುವ ರೂಪಕದ ಮೂಲಕವಾಗಿಯೇ ತನ್ನ ಆಧ್ಯಾತ್ಮಿಕ ಸಾಧನೆಯನ್ನು ವರ್ಣಿಸುತ್ಥಾನೆ.
=====
ಕಾಂಚಾಣ: ಈ ಶಬ್ದ ಕಾಂಚನ ಎಂಬ ಸಂಸ್ಕೃತ ಶಬ್ದದ ಕನ್ನಡೀಕರಣಗೊಂಡ ರೂಪ ಅಥವಾ ತದ್ಭವ. ಚಿನ್ನ ಎಂಬುದು ಮೂಲಾರ್ಥ; ಆದರೆ ಹಳದಿ ಬಣ್ಣದ ಬಹು ವಸ್ತುಗಳಿಗೆ ಅನ್ವಯಿಸುವಂತೆ ಇದರ ಅರ್ಥ ವಿಸ್ತಾರಗೊಂಡಿದೆ: ಸಂಸ್ಕೃತದಲ್ಲಿಯೇ ಕಾಂಚನ ಎಂಬುದಕ್ಕೆ ಸಂಪಿಗೆ, ದತ್ತೂರಿ, ನಾಗಕೇಸರ, ಪುನ್ನಾಗ ಮುಂತಾದ ವಿವಿಧ ಮರಗಳು ಮತ್ತು ಹೂವು ಎಂಬರ್ಥ ಪ್ರಾಪ್ತವಾಗಿದೆ. ಚಿನ್ನದ ಡಾಬನ್ನು ಕಾಂಚೀ ಕಾಂಚೀಲತೆ, ಕಾಂಚೀಪಟ್ಟಿಕೆ, ಕಾಂಚೀದಾಮ ಮುಂತಾದ ಹೆಸರುಗಳಿಂದ ಕನ್ನಡ ಕಾವ್ಯಗಳೂ ಕರೆಯುತ್ತವೆ. ಸೀತಾರಾಮರನ್ನು ಆಕರ್ಷಿಸಲು ಮಾರೀಚನು ಬಂದುದು 'ಕಾಂಚನಮೃಗ'ದ ರೂಪದಲ್ಲಿ. ಕಾಂಚನವರ್ಣ ಎಂದರೆ ಚಿನ್ನದ ಬಣ್ಣ ಅಂದರೆ ಹಳದಿ. ಆ ಲೋಹದ ಆಕರ್ಷಣೆಯೇ ಅದರ ಬಣ್ಣವಾದ್ದರಿಂದ ಚಿನ್ನವನ್ನು 'ಸುವರ್ಣ' ಅಥವಾ ಸ್ವರ್ಣ ಎಂದು ಕರೆದರು. ಅತ್ಯಂತ ಶ್ರೇಷ್ಠವಾದ ಚಿನ್ನದ ಪರ್ವತವೆಂದು ಹೇಳಲಾದ ಮೇರುವನ್ನು ಕಾಂಚನಾದ್ರಿ ಎಂದೇ ಕಾವ್ಯಗಳು ಕರೆಯುತ್ತವೆ. ಹೊನ್ನಿನ ಬಣ್ಣದ ಬಾಳೆಯನ್ನು 'ಮಲ್ಲಿನಾಥ ಪುರಾಣ'ವೆಂಬ ನಾಗಚಂದ್ರನ ಕಾವ್ಯದಲ್ಲಿ 'ಕಾಂಚನಕದಳೀ' ಎಂದು ಕರೆಯಲಾಗಿದೆ.
ಕಾಂಚಾಣ ಎಂಬುದು ಕನ್ನಡದಲ್ಲಿ ದುಡ್ಡು ಎಂಬರ್ಥದಲ್ಲಿ ಬಳಕೆಯಾಗಿದೆ. ಕನ್ನಡ ನಾಡಿನಲ್ಲಿ ಹಿಂದೆ ಚಿನ್ನದ ನಾಣ್ಯಗಳು ಚಲಾವಣೆಯಲ್ಲಿದ್ದುವು; ಗದ್ಯಾಣ, ಪೊನ್, ವರಹ ಮುಂತಾದ ಹೆಸರಿನಲ್ಲಿ ಬಕೆಯಲ್ಲಿದ್ದುವು; ಹೀಗಾಗಿ ಆ ಶಬ್ದಕ್ಕೆ ದುಡ್ಡು ಎಂಬ ಅರ್ಥ ಬಂದಿದೆ. ಇದು ತದ್ಭವ ಶಬ್ದವಾದರೂ ಅದನ್ನು ಸಂಸ್ಕೃತ ಶಬ್ದವೆಂಬಂತೆ "ಕಾಂಚಾಣಂ ಕಾರ್ಯಸಿದ್ಧಿಃ" ಎಂಬ ವಾಕ್ಯವನ್ನು ಮಾಡಿಕೊಂಡು, ದುಡ್ಡು ಕೊಟ್ಟರೆ (ಲಂಚವಿತ್ತರೆ) ಏನು ಬೇಕಾದರೂ ಆಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಮಾಡಲು ಕೆಲವರು ತಮಾಷೆಯಾಗಿ ಹೇಳುತ್ತಾರೆ. ಹಣಕ್ಕೆ ಅರ್ಥಾತ್ ಹಣವಂತರಿಗೆ ಭಾವನೆಗಳಿಲ್ಲ ಎಂದು ಸೂಚಿಸಲು 'ಕುರುಡು ಕಾಂಚಾಣ' ಎಂಬ 'ನುಡಿಗಟ್ಟು' ಬಂದಿದೆ. ಬೇಂದ್ರೆಯವರ ತುಂಬ ಪ್ರಸಿದ್ಧವಾದ ಪದ್ಯದ ಹೆಸರೇ 'ಕುರುಡು ಕಾಂಚಾಣ'. ನಾನಾ ನೆಲೆಗಳಲ್ಲಿ ವ್ಯಕ್ತವಾಗುವ ಹಣವಂತರ ಸೊಕ್ಕನ್ನು ಕಂಡು ಕೆರಳುವ ಕವಿಯು "ಹ್ಯಾಂಗಾರ ಕುಣಿಕುಣಿದು ಮಂಗಾಟ ನಡೆದಾಗ ಅಂಗಾತ ಬಿತ್ತೋ ಹೆಗಲೊಳಗೆತ್ತೋ" ಎಂದು ಕರೆ ಕೊಡುತ್ತಾರೆ. ಕಾಂಚಾಣ ಪದದಲ್ಲಿನ ಣ ಮತ್ತು ಲೋಹದ ನಾಣ್ಯಗಳು ಬಿದ್ದಾಗ ಟಣ್ ಎಂದು ಸದ್ದುಮಾಡುವುದರಿಂದ ಝಣಝಣ ಎಂಬ ಅನುಕರಣಪದವೂ ಹಣವನ್ನು ಸೂಚಿಸುತ್ತದೆ.
=====
ಕಾಕತಾಳೀಯ: ತರ್ಕಶಾಸ್ತ್ರದಲ್ಲಿ ಹೇಳುವ ಅನೇಕ ಲೌಕಿಕ 'ನ್ಯಾಯ'ಗಳಲ್ಲಿ ಇದೂ ಒಂದು. ನ್ಯಾಯ ಎಂದರೆ ಎರಡು ವಸ್ತುಗಳ ನಡುವಣ ವಿಶಿಷ್ಟ ಸಂಬಂಧವೆಂದು ಸ್ಥೂಲವಾಗಿ ಹೇಳಬಹುದು. ಕಾಕತಾಳೀಯ ಎಂದರೆ ಆಕಸ್ಮಿಕ ಘಟನೆ ಎಂದರ್ಥ. ಇದರಲ್ಲಿ ಒಂದು ಪುಟ್ಟ ಕತೆಯೇ ಅಡಕವಾಗಿದೆ. ತಾಳವೃಕ್ಷದಿಂದ ಒಂದು ಹಣ್ಣು ಕೆಳಗೆ ಬೀಳುವ ಹೊತ್ತಿಗೆ ಸರಿಯಾಗಿ ಕಾಗೆಯೊಂದು ಅಲ್ಲಿಗೆ ಹಾರಿ ಬಂದಿತು, ಆ ಹಣ್ಣನ್ನು ಕಾಗೆಯು ತಿಂದಿತು. ಕಾಗೆ ಬರುವುದಾಗಲೀ ಹಣ್ಣು ಬೀಳುವುದಾಗಲೀ ಪೂರ್ವನಿಶ್ಚಿತ ಘಟನೆಗಳಲ್ಲ. ಆದರೆ ಎರಡೂ ಒಂದೇ ಹೊತ್ತಿಗೆ ಸಂಭವಿಸಿದವು. ಇದೇ ಕಾಕತಾಳೀಯ. ಇದನ್ನು ಕಾಕತಾಳನ್ಯಾಯ ಎಂಬ ಶಬ್ದದಿಂದಲೂ ಸೂಚಿಸಲಾಗುತ್ತದೆ.
ಕಾಕತಾಳೀಯ ಅಥವಾ ಕಾಕತಾಳನ್ಯಾಯ ಎಂಬ ಶಬ್ದಗಳು ಸಂಸ್ಕೃತ ಮೂಲದಿಂದ ಬಂದವು. ಆ ಭಾಷೆಯಲ್ಲಿ ಅವುಗಳ ರೂಪವು ಕ್ರಮವಾಗಿ ಕಾಕತಾಲೀಯ ಮತ್ತು ಕಾಕತಾಲನ್ಯಾಯ ಎಂದು. ಸಂಸ್ಕೃತ ಶಬ್ದಗಳು ಹೇರಳ ಸಂಖ್ಯೆಯಲ್ಲಿ ಕನ್ನಡ ಶಬ್ದಕೋಶದಲ್ಲಿ ಬಂದು ಸೇರಿಕೊಂಡಿವೆ. ಹಾಗೆ ಸೇರುವಾಗ ಸಂಸ್ಕೃತ ಶಬ್ದಗಳಲ್ಲಿ ಬರುವ 'ಲ' ಕಾರಕ್ಕೆ ಕನ್ನಡದಲ್ಲಿ 'ಳ'ಕಾರ ಬರುತ್ತದೆ. ಮಂಗಲ > ಮಂಗಳ, ಬಲ > ಬಳ, ಕಲಭ > ಕಳಭ ಇತ್ಯಾದಿ. ಹೀಗೆ ಸಂಸ್ಕೃತ ಶಬ್ದಗಳಲ್ಲಿನ ಲಕಾರಕ್ಕೆ ಕನ್ನಡದಲ್ಲಿ ಬರುವ ಳ ಕಾರವನ್ನು 'ಕ್ಷಳ' ಎಂದು ಹಳಗನ್ನಡ ವ್ಯಾಕರಣಕಾರರು ಕರೆಯುತ್ತಾರೆ. ಳ ವರ್ಣಕ್ಕೆ ಹತ್ತಿರವಾಗಿ ಉಚ್ಚಾರಗೊಳ್ಳುವ ಎರಡು ಬಗೆಯ ವರ್ಣಗಳು ಮೂಲತಃ ಕನ್ನಡದಲ್ಲಿಯೇ ಇವೆ: ಳ (ಇದನ್ನು ಱಳ ಎನ್ನುತ್ತಾರೆ) ಮತ್ತು ಳ (ಇದನ್ನು ಕುಳ ಎನ್ನುತ್ತಾರೆ). 'ೞ' ವರ್ಣದ ಉಚ್ಚಾರ ಹೇಗಿತ್ತೋ ನಮಗೆ ತಿಳಿಯದು. ಆದರೆ ಬರಬರುತ್ತ ಇವೆರಡೂ ಳ ಎಂಬಂತೆಯೇ ಉಚ್ಚಾರವಾಗತೊಡಗಿ ಈಗ ಒಂದೇ ಎನ್ನಿಸಿಬಿಟ್ಟಿತು. ೞ ಮತ್ತು ಳ ವರ್ಣಗಳ ಉಚ್ಚಾರ ಒಂದೇ ಎಂದು ಕ್ರಿಸ್ತಶಕ ಹದಿಮೂರನೆಯ ಶತಮಾನದ ಹರಿಹರಕವಿಯೇ ಹೇಳುತ್ತಾನೆ. ಆ ಕಾರಣದಿಂದ ಹಳಗನ್ನಡದಲ್ಲಿನ ೞ ಅಕ್ಷರ ಈಗ ಬಳಕೆಯಲ್ಲಿಲ್ಲ. ಬಾಳೆ, ಬಾೞೆ - ಇಂಬಿವುಗಳು ಹಳಗನ್ನಡದಲ್ಲಿ ಬೇರೆ ಬೇರೆ ಅರ್ಥಗಳನ್ನು ಹೊಂದಿದ್ದ ಬೇರೆ ಬೇರೆ ಪದಗಳು: ಮೊದಲನೆಯದು ಮೀನು ಎಂಬುದನ್ನೂ, ಎರಡನೆಯದು ಬಾಳೆಯ ಗಿಡ ಅಥವಾ ಹಣ್ಣು ಎಂಬುದನ್ನೂ ಸೂಚಿಸುತ್ತಿದ್ದವು. ಈಗಾದರೆ ಕನ್ನಡ ನಿಘಂಟುಗಳಲ್ಲಿ ಬಾಳೆ ಎಂಬ ಶಬ್ದಕ್ಕೆ ಈ ಎರಡು ಅರ್ಥಗಳೂ ಇವೆ ಎಂದು ಹೇಳುತ್ತವೆ.
*****
ಕಾಡು1: ಮುಖ್ಯ ದ್ರಾವಿಡ ಭಾಷೆಗಳಲ್ಲೆಲ್ಲ ಈ ರೂಪವೇ ಇರುವ ಈ ಶಬ್ದಕ್ಕೆ ಅಡವಿ ಎಂಬುದು ಅರ್ಥ. 'ಶಬ್ದಮಣಿ ದರ್ಪಣ'ವು ಕ್ರಿಯಾರ್ಥವನ್ನು ಕೊಡುವುದರ ಜೊತೆಗೆ "ಕಾಡು- .. .. ಅರಣ್ಯೇಚ" ಎಂದು ಹೇಳುತ್ತದೆ. "ವಿಯೋಗಿ ಜನಕ್ಕೆ ಬೇಟಮಂ ಬಳೆವುದು ನಾಡ ಕಾಡ ಬೆಳಸಿಂ ಬೆಳಸಾ ವಿಷಯಾಂತರಾಳದೊಳ್" ಎಂಬುದು 'ಪಂಪಭಾರತ'ದ ಮಾತು. "ಕೆಲವು ವಾಯಸಂಗಳ್ ಬಿಱಿತೋಡಿ ಕಾಡೊಳ್ಕೂಡಿರ್ದುವೆಲ್ಲಂ ಬಂದು" ಎಂಬುದು 'ಪಂಚತಂತ್ರ'ದಲ್ಲಿನ ಮಾತು. "ಕರುಬರಿದ್ದೂಂದೆ ಕಾಡೊಳ್ಳಿತು" ಎಂಬುದು 'ಜೈಮಿನಿ ಭಾರತ'ದಲ್ಲಿನ ವಾಕ್ಯ.
ಕಾಡಿನಲ್ಲಿನ ಪ್ರಾಣಿಗಳು ಕಾಡುಮೃಗಗಳು. "ಅರಸಂ ಕಾಡಾನೆಯಂ ಪಿಡಿಯಲೈದಿ" ಎಂಬ ಮಾತು 'ವಡ್ಡಾರಾಧನೆ'ಯಲ್ಲಿ ಬರುತ್ತದೆ. "ಬಾಯ ಚೆಲ್ವನಪ್ಪ ಬನಮಂ ಕಾಡಾನೆ ಪೊಕ್ಕಂತೆ" ಎಂಬುದು 'ಪಂಪಭಾರತ'ದಲ್ಲಿನ ಗಾದೆ. ಕೃಷಿ ಮಾಡದೆ ತಾವಾಗಿ ತಾನಾಗಿ ಬೆಳೆದ ಸಸ್ಯಗಳು ಕಾಡುಸಸ್ಯಗಳು. ಕಾಡರಳೆ, ಕಾಡಮಾದಲ, ಕಾಡಮಲ್ಲಿಗೆ, ಕಾಡವರೆ ಇತ್ಯಾದಿ. "ವನಪೂರ ಬೀಜಕಃ-ಕಾಡಮಾದಲ" ಎನ್ನುತ್ತದೆ 'ಓಷಧಿಕೋಶ'. "ಕಾಡವರೆ ಮಣಲು ಸುಣ್ಣಮೀ ವೀಡಿತ ವಜ್ರೋಪಮಾನ ತಿವುರೆನಿಸಿರ್ಕುಂ" ಎಂದು 'ಖಗೇಂದ್ರಮಣಿದರ್ಪಣ'ವು ವಿಷಚಿಕಿತ್ಸೆಯ ಸಂದರ್ಭದಲ್ಲಿ ಹೇಳುತ್ತದೆ. "ಹಿತ್ತಿಲಲ್ಲಿ ಬೆಳೆದಿದ್ದಾವೆ ಕಾಡು ಗಿಡಗಂಟಿ ಮೆಳೇ" ಎಂಬುದು ಗಂಗಾಧರ ಚಿತ್ತಾಲರ ಕವನವೊಂದರ ಸಾಲು.
ಕಾಡು-ನಾಡು ಒಂದು ಬಗೆಯ ವಿರುದ್ಧಾರ್ಥದ ಜೋಡಿಶಬ್ದ. ಕಾಡು ಎಂಬುದು ಒರಟು, ಅನಾಗರಿಕ ಎಂಬ ಅರ್ಥವನ್ನು ಹೊಂದುತ್ತದೆ. ಅನಾಗರಿಕ ಪರಾಕ್ರಮವನ್ನು 'ಶ್ರೀ ರಾಮಾಯಣ ದರ್ಶನಂ'ನಲ್ಲಿ 'ಕಾಡದಟು' ಎನ್ನಲಾಗಿದೆ ("ನಮಗೀಗಳೇಕೀ ಕಪಿಧ್ವಜರ ಕಾಡದಟಿನೊಂದು ಹಂಗು?"). ಕಾಡುಮನುಷ್ಯನನ್ನು ಮುದ್ದಣನ 'ರಾಮಾಶ್ವಮೇಧ'ವು ಕಾಡಾಡಿ ಎನ್ನುತ್ತದೆ: "ಕಾಡಾಡಿರಾಯನೊಂದು ಗೆಯ್ಮೆಯಂ."
ಭೂಮಿ ಎಂಬ ಅರ್ಥವೂ ಈ ಶಬ್ದಕ್ಕಿದೆ. "ಐವತ್ತು ಮತ್ತರ್ ಕೆಸುಕಾಡುಂ ಕೀೞ್ಕೆಱೆ ಮೂವತ್ತಿರ್ಮಡಿ ಕಾಡುಂ" ಎಂಬ ಮಾತು ಒಂಬತ್ತನೆಯ ಶತಮಾನದ ಶಾಸನವೊಂದರಲ್ಲಿ ಬಂದಿದೆ. ಇಲ್ಲಿನ ಕೆಸುಕಾಡು ಎಂಬುದಕ್ಕೆ ಕಿಸುಕಾಡು ಅಥವಾ ಕಿಸುಗಾಡು (ಕೆಚ್ಚನೆಯ ಕಾಡು) ಎಂಬ ಪರ್ಯಾಯ ರೂಪವೂ ಇದೆ: "ಕಿಸುಗಾಡ ನೆಲಂಗಳ್ ಎಳದಳಿರ ಬಣ್ಣಮಂ ಕೆಯ್ಕೊಂಡು" ('ಪಂಪಭಾರತ'). 'ಕಾಡಾರಂಬ' ಅಥವಾ 'ಕಾಡಾರಂಭ' ಎಂಬುದು ಕುಷ್ಕಿ ಜಮೀನಿಗೆ ಅನ್ವಯಿಸುತ್ತಿದ್ದ ಹೆಸರು: "ಚತುಸ್ಸೀಮೆವೊಳಗಾದ .. .. ಕಾಡಾರಂಭ ನೀರಾರಂಭ"ಗಳ ಪ್ರಸ್ತಾಪ ಶಾಸನವೊಂದರಲ್ಲಿದೆ. (ನೀರಾರಂಭ ಎಂದರೆ ನೀರಾವರಿ). ಇವುಗಳ ಮೇಲಿನ ತೆರಿಗೆಯನ್ನೂ ಈ ಹೆಸರುಗಳಿಂದಲೇ ಕರೆಯುತ್ತಿದ್ದರೆಂಬುದಕ್ಕೂ ಶಾಸನಾಧಾರಗಳಿವೆ: "ಬಾಲಗೆರೆ ಮಗ್ಗದೆರೆ ಕಾಡಾರಂಬ ನೀರಾರಂಬ" ಎಂಬುದು ಹದಿನೈದನೆಯ ಶತಮಾನದ ಶಾಸನವೊಂದರ ಪ್ರಯೋಗ.
=====
ಕಾಡು2: ಕಾಡು ಎಂಬ ಧಾತುವಿಗೆ ಪೀಡಿಸು ಎಂಬ ಅರ್ಥವಿದೆ. 'ಶಬ್ದಮಣಿದರ್ಪಣ'ವು "ಕಾಡು-ಅವಹೇಳನೇ" ಎನ್ನುತ್ತದೆ. "ಪೆಂಡತಿಯಾಗೆಂದು ಕೈಯಂ ಪಿಡಿದು ಕಾಡುತ್ತಿರ್ಪನ್ನೆಗಂ" ಎಂಬುದು 'ವಡ್ಡಾರಾಧನೆ'ಯ ಮಾತು. "ಕೋಡಗಂ ಱೋಡಾಡಿ ಕಾಡುರ್ತಿರ್ಪುದುಂ" ಎಂಬುದು ದುರ್ಗಸಿಂಹನ 'ಪಂಚತಂತ್ರ'ದ ಮಾತು. "ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು, ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು" ಎಂಬುದು ಬಸವಣ್ಣನ ಮಾತು. ಇನ್ನೊಂದು ಕಡೆ "ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ ಏಡಿಸಿ ಕಾಡಿತ್ತು ಶಿವನ ಡಂಗುರ" ಎಂಬ ಅವನದೇ ಮಾತಿದೆ. "ಕಾಡಿ ಬೇಡಿ ಉಂಬವರೆಲ್ಲರು ಬ್ರಹ್ಮನ ಸಂಪ್ರದಾಯ" ಎಂದು ಅಲ್ಲಮ ಹೇಳುತ್ತಾನೆ. "ಗೋಪಿಕೆಯರ ಸೆರಗ ಹಿಡಿದು ಕಾಡುತ್ತಿದ್ದೆ ನಿತ್ಯವೂ" ಗೋಪಾಲಕೃಷ್ಣ ಅಡಿಗರ 'ನನ್ನ ಅವತಾರ' ಕವನದ ಸಾಲು.
'ಕಾಡು' ಶಬ್ದದ ನಾಮರೂಪವೇ ಕಾಟ. ತೊಂದರೆ ಅಥವಾ ಪೀಡೆ ಎಂಬುದು ಈ ಶಬ್ದದ ಅರ್ಥ. "ಗಣಿಕೆಯರ ಕಡೆಗಣ್ಣ ನೋಟಕ್ಕಂ ಕಾಟಕ್ಕಂ ಅಳ್ಕದ" ಎಂದು 'ಪಂಪಭಾರತ'ದಲ್ಲಿದೆ.  "ನರಿಯ ಕಾಟಕ್ಕೆ ಬೇಸತ್ತುವೊಂದು ದಿವಸಮಾ ನರಿಯಂ ಕೊಲಲುಪಾಯಮಂ ಕಂಡು" ಎಂಬ ಮಾತು 'ಪಂಚತಂತ್ರ'ದ್ದು.
ಕಾಟ ಎಂಬುದು ಒಂದು ಕ್ಷುದ್ರದೈವದ ಹೆಸರು. "ವರಮೀಗುಮೆ ಮೈಲಾರಂ ಕೇತಂ ಕಾಟಂ ಮಾರಿಗೆ ಮಸಣಿಗೆಯೆನಿಪ್ಪ ಕೊೞೆದೆಯ್ವಂಗಳ್" ಎಂಬುದು ಬ್ರಹ್ಮಶಿವನ 'ಸಮಯ ಪರೀಕ್ಷೆ'ಯ ಪ್ರಶ್ನೆ. ಇದನ್ನು ವ್ಯಕ್ತಿನಾಮವಾಗಿಯೂ ಬಳಸುತ್ತಿದ್ದರು. 'ಶಬ್ದಮಣಿದರ್ಪಣ'ದಲ್ಲಿ "ಅಂಕಿತನಾಮಕ್ಕೆ-ಕಾಟಂ, ಕಸವಂ, ದೂಡಿಗಂ" ಎಂದು ಉದಾಹರಣೆಗಳನ್ನು ಕೊಟ್ಟಿದೆ. ಪ್ರಾಯಶಃ ಇದರ ಮತ್ತೊಂದು ರೂಪ 'ಕಾಟುಗ'. "ಕಾಟುಗ ಕೆತ್ತುಗ ಪೋಲುಗ ಎಂಬುದು ಎನ್ನ ಹೆಸರು" - ಈ ಸಾಲು ಬಸವಣ್ಣನ ಒಂದು ವಚನದ್ದು. 'ಕಾಟಿ' ಎಂಬುದು ಸ್ತ್ರೀ ಕ್ಷುದ್ರದೇವತೆ: "ಹೂಂಕೃತಿಗೈವ ಭೈರವಂ ನೊಸಲುಗಣ್ಣನಾಳ್ವ ಚೌಡೇಶ್ವರಿ ಕೂಂಕಿಱಿದಾರ್ವ ಕಾಟಿಯುಂ" ('ಪಾರ್ಶ್ವನಾಥಪುರಾಣ').
ಕಾಟಕ ಎಂದರೆ ಕಾಟ ಕೊಡುವವನು: "ಕೌರವರ್ ಕಾಟಕರ ಸೊಲ್ಲುಗಳ್ಕೇಳ್ದು" ಎಂಬ ಮಾತು 'ತುರಂಗಭಾರತ'ದಲ್ಲಿದೆ. ಕಾಟಕ ಎಂದರೆ ಬೇಟೆಗಾರ ಎಂಬರ್ಥವೂ ಇದೆ; ಕಾಟನಾಯಕ ಎಂಬ ಹೆಸರು ಸಾಮಾನ್ಯ; ಹಾಗೆಯೇ 'ಕಾಟಣ್ಣ' ಬೇಡರ ದೇವತೆ. ಕಾಟಕೊಡುವ ಸ್ವಭಾವವೇ 'ಕಾಟಕತನ'. 'ಕಾಟಕಾಯಿ' ಎಂದರೆ ಕೊಳ್ಳೆ ಅಥವಾ 'ದರೋಡೆ': "ಆ ತುದಿಯಿನೀ ತುದಿವರಂ ಕಾಟಕಾಯಿಗಳನೆಬ್ಬಿಸದೆ ಬಿಡುವನೇನು" ಎಂಬುದು ಗೋವಿಂದ ಪೈ ಅವರ 'ಗೊಲ್ಗೊಥ'ದ ಸಾಲು. 'ಕಾಟಾಚಾರ' ಎಂಬುದು ಕಾಟ ತಪ್ಪಿಸಿಕೊಳ್ಳಲು ಮಾಡುವ ಕೆಲಸ. ಕಾಟ ಶಬ್ದವನ್ನೊಳಗೊಂಡ ಇಂತಹ ಇನ್ನೂ ಅನೇಕ ಶಬ್ದಗಳಿವೆ.
=====
ಕಾಲು: ಇದೊಂದು ದ್ರಾವಿಡ ಪದವಾಗಿದ್ದು, ಕನ್ನಡ ತಮಿಳು ಮಲಯಾಳಂಗಳಲ್ಲಿ ಮೂಲರೂಪ ಕಾಲ್ ಎಂದೂ, ತೆಲುಗಿನಲ್ಲಿ ಕಾಲು ಎಂದೂ ತುಳುವಿನಲ್ಲಿ ಕಾರ್ ಎಂದೂ ಇದೆ. ಸಾಮಾನ್ಯವಾಗಿ, ಪ್ರಾಣಿಗಳ ಮೊಳಕಾಲಿನಿಂದ ಕೆಳಗಿನ ಭಾಗ ಎಂಬರ್ಥ ಈ ಶಬ್ದಕ್ಕಿದೆ. "ಕೈಕಾಲ್ ನಡೆನುಡಿಯುಳ್ಳ ಮನುಷ್ಯನಿಂದೆಂತುಂ ಕಾರ್ಯಮುಂಟು" (ದುರ್ಗಸಿಂಹನ 'ಪಂಚತಂತ್ರ') ಎಂಬುದರಲ್ಲಿ ಇದು ಸ್ಪಷ್ಟವಾಗಿದೆ. ನಡೆಯಲು ತೊಡಗುವ ಮಗುವಿಗೆ 'ಕಾಲು ಬಂತು' ಎನ್ನುವುದು ವಾಡಿಕೆ. ಮಂಚ, ಸ್ಟೂಲು, ಮೇಜು ಮುಂತಾದವುಗಳನ್ನು ಹೊತ್ತ ಮರದ ತುಂಡುಗಳನ್ನೂ ಕಾಲ್ ಎನ್ನುತ್ತಾರೆ ("ಪಗೆವರಂ ಎನ್ನ ಮಂಚದ ಕಾಲೊಳ್ ಕಟ್ಟಿದೆಂ" 'ಪಂಪಭಾರತ'). ಆದರೆ "ನಿಮ್ಮ ಕಾಲಂ ತೊಳವೆ" ಎಂಬ 'ವಡ್ಡಾರಾಧನೆ'ಯ ಪ್ರಯೋಗದಲ್ಲಿ ಇದಕ್ಕೆ ಪಾದವೆಂಬ ಅರ್ಥವಿದೆ. 'ಕಾಲೂರು' ಎಂದರೆ ನೆಲೆನಿಲ್ಲು ಎಂದರ್ಥ ("ಕಾರಮುಗಿಲೊಡ್ಡು ಕಾಲೂಱಿದಂತಿರ್ಪುದು" - ಜನ್ನನ 'ಅನಂತನಾಥ ಪುರಾಣ'). ಕಾಲನ್ನು ಪ್ರಾಣಿಗಳು ಮುಂದೆ ಹೋಗಲು ಬಳಸುವುದರಿಂದಾಗಿಯೋ ಏನೋ ಹರಿಯುವ ನದಿ ಹಳ್ಳ ಕಾಲುವೆಗಳಿಗೂ ಕಾಲ್ ಎಂಬರ್ಥ ಬಂತು ("ತೊಱೆ ಪೊರ್ದಿದ ಕಾಲ್ ತಾಂ ಕುಲ್ಯಾಹ್ವಂ" - 'ಅಭಿಧಾನ ವಸ್ತುಕೋಶ'). ಕಾಲ್ ಈಗಿನ ಕಾಲುವೆ.
ಕಾಲ್ಗಾಪು (ಕಾಲ್+ಕಾಪು) ಎಂದರೆ ಪದಾತಿ (ನಡೆಯುವ ಸೈನ್ಯ ಅಥವಾ ಸೈನಿಕ) ಎಂದರ್ಥ. ಕಾಲಾಳ್ ಎಂಬುದೂ ಇದೇ. ಹಳಗನ್ನಡದಲ್ಲಿ 'ಕಾಲ್ವಟ್ಟೆ' ಎಂದರೆ ಕಾಲು ದಾರಿ ("ಕಾಡೊಳಿರ್ದ ಕಾಲ್ವಟ್ಟೆಗಳೆಲ್ಲಂ ಎಯ್ದುವುವು ನೀರ್ನೆಲೆಯಂ" - 'ಸೂಕ್ತಿಸುಧಾರ್ಣವ'). ಇಂಗ್ಲಿಷಿನ ಫುಟ್‍ಪಾತ್ ಎಂಬುದಕ್ಕೆ ಈಗ ಸಂವಾದಿ. 'ಕಾಲಿಗೆ ಬೀಳು' ಎಂದರೆ ನಮಸ್ಕರಿಸು ಎಂದೂ, 'ಕಾಲುಹಿಡಿ' ಎಂದರೆ ಬೇಡಿಕೊ ಎಂದೂ ಅರ್ಥ. ಕಾಲಕಸ ಎಂದರೆ ಕೆಲಸಕ್ಕೆ ಬಾರದ್ದು ಎಂದರ್ಥ. 'ಕಾಲಿಗೆ ಬುದ್ಧಿ ಹೇಳು' ಎಂದರೆ ಪಲಾಯನ ಮಾಡು ಎಂದರ್ಥ.
ಪ್ರಾಣಿಗಳು ನಿಲ್ಲುವುದು ನಾಲ್ಕು ಕಾಲುಗಳ ಮೇಲೆ; ಹೀಗಾಗಿಯೋ ಏನೋ ಕಾಲು ಎಂಬುದಕ್ಕೆ ನಾಲ್ಕನೇ ಒಂದು ಭಾಗ ಎಂದೂ ಅರ್ಥ ಬಂದಿದೆ. "ಓದು ಕಾಲು ಬುದ್ಧಿ ಮುಕ್ಕಾಲು" ಎಂಬುದೊಂದು ಗಾದೆ. ಕಾಲ್ ಎಂದರೆ ಚಿಕ್ಕ ಎಂಬ ಅರ್ಥವೂ ಇದೆ; ಕಾಲೂರ್ ಎಂದರೆ ಸಣ್ಣ ಹಳ್ಳಿ: "ಕನ್ನಡಮೆನಿಪ್ಪಾ ನಾಡು ಚೆಲ್ವಾಯ್ತು.. .. ಕಾಲೂರ್ಗಳಿಂ ಕೆಯ್ಗಳಿಂ" (ಆಂಡಯ್ಯನ 'ಕಬ್ಬಿಗರ ಕಾವ').
=====
ಕುದುರು: ಕನ್ನಡದ ಈ ಶಬ್ದವು ಕಣಜ ಎಂಬರ್ಥದ ಸಂಸ್ಕೃತದ 'ಕೃದರ'ದ ತದ್ಭವ. ಕುದಿರ್, ಕುದಿರು ಕುದುರು ಮುಂತಾದ ರೂಪಗಳಲ್ಲಿ ಬಳಕೆಯಾಗಿರುವ ಇದರ ಅರ್ಥವು ಭಿನ್ನವಾಗಿದೆ. "ಕುಶೂಳಂ ಕುದಿರ್ ಅಱಿಗೆ" ಎನ್ನುತ್ತದೆ 'ಅಭಿಧಾನ ವಸ್ತುಕೋಶ'. ಬಿದಿರಿನ ತಟ್ಟಿಯನ್ನು ಗುಂಡಗೆ ಕಟ್ಟಿ ಮಣ್ಣು ಲೇಪಿಸಿದ ಕಣಜವೇ ಕುದುರು. "ಕುದುರನೇಸು ತೊಳೆದಡೆಯೂ ಕೆಸರು ಮಾಬುದೆ?" ಎಂಬ ಬಸವಣ್ಣನ ಪ್ರಶ್ನೆ ಇದನ್ನು ಸೂಚಿಸುತ್ತದೆ. ಕುದಿರ್ ಎಂಬುದಕ್ಕೆ ಗೋಡೆ ಎಂಬರ್ಥವೂ ಇದೆ: "ಕುದಿರೊಳ್ ಕಳ್ಳವನಿಕ್ಕಿಸಿ"  'ಯಶೋಧರ ಚರಿತೆ'). ದವಸವನ್ನು ಕುಟ್ಟುವಾಗ ಒರಳಿನಿಂದ ಹೊರಚೆಲ್ಲದಂತೆ ಇಡುತ್ತಿದ್ದ ಬಿದಿರು ಅಥವಾ ಮರದ ಸುತ್ತು ಕುದುರು. ಹಗ್ಗದ ಸಿಂಬೆಯನ್ನೂ ಕುದಿರು ಎಂಬ ಶಬ್ದ ಸೂಚಿಸುತ್ತದೆ. ಕಣ್ಣ ಕುದುರು ಎಂಬ ಸಮಾಸದಲ್ಲಿನ ಕುದುರು ಶಬ್ದಕ್ಕೆ ಕುಳಿ ಎಂಬ ಅರ್ಥವಿದೆ. ಕುದುರು ಎಂಬುದನ್ನು ನದಿಯ ಪಾತ್ರ ಎಂಬರ್ಥದಲ್ಲಿ ಕುವೆಂಪು 'ಶ್ರೀ ರಾಮಾಯಣ ದರ್ಶನಂ'ನಲ್ಲಿ ಬಳಸುತ್ತಾರೆ ("ಕೋಟಿ ಕಣ್ಣುಗಳೊಡ್ಡಿದೊಂದು ಕುದುರಿಗೆ ಕೆಡೆದು"). ತುಳುವಿನಲ್ಲಿ ಈ ಶಬ್ದಕ್ಕೆ ಸಣ್ಣದ್ವೀಪ ಎಂಬರ್ಥವಿದೆಯಂತೆ. ಕನ್ನಡದಲ್ಲೂ ಇದರ ಬಳಕೆಯಿದೆ. ಒರಳಿನ ಸುತ್ತ ಇರುವ ಕುದುರು ಎಂಬುದು ಇದರಿಂದ ಪ್ರೇರಿತವಾಗಿರಬಹುದೇ?
ನೆಲೆಯಾಗು ಎಂಬ ಕ್ರಿಯಾರ್ಥದಲ್ಲಿ ಕುದುರು ಎಂಬ ಶಬ್ದ ಬಳಕೆಯಾಗುತ್ತದೆ. ತಮಿಳಿನಲ್ಲಿದು ಕುದಿರ್ ಆದರೆ ತೆಲುಗಿನಲ್ಲಿ ಕುದುರು ಎಂದೂ ತುಳುವಿನಲ್ಲಿ ಕುದುರುಣಿ ಎಂದೂ ಆಗುತ್ತದೆ. ಸ್ತಿಮಿತಕ್ಕೆ ಬರು ಎಂಬರ್ಥವೂ ಇದಕ್ಕಿದೆ. "ವ್ಯಾಪಾರ ಕುದುರಿತು" ಎಂಬಂತಹ ಕಡೆ ಇದನ್ನು ಕಾಣಬಹುದು. ಒಪ್ಪಿಗೆಯಾಗು ಎಂಬರ್ಥವು "ಮದುವೆ ಕುದುರಿತು" ಎಂಬಂತಹ ಕಡೆಗಳಲ್ಲಿ ಕಾಣಬಹುದು.
ಕುದುರಿಸು ಎಂಬ ಪ್ರೇರಣಾರ್ಥದಲ್ಲಿಯೂ ಈ ಶಬ್ದದ ಬಳಕೆಯಿದೆ. ಏಳಿಗೆ ಹೊಂದು ಎಂಬರ್ಥ ಇದರದ್ದು. 'ವಿದ್ಯಾಗಳಲ್ಲಿ ಆಸಕ್ತಿ ಕುದುರಿಸುವುದು' ಎಂಬಂತಹ ಪ್ರಯೋಗವಿದೆ. 'ಕುದುರುಗೊಳಿಸು' ಎಂಬುದನ್ನು ಸರಿಹೊಂದಿಸು ಎಂಬರ್ಥದಲ್ಲಿ ಬಳಸುವುದುಂಟು. ಸರಿಹೊಂದುವ ಕ್ರಮವೇ 'ಕುದುರುಗೊಳ್ಳು'. ವ್ಯವಸ್ಥೆಗೊಳಿಸು ಎಂಬರ್ಥದಲ್ಲಿ 'ಕುದುರುಪಾಟು' ಎಂಬ ಸಮಾಸದ ಬಳಕೆಯಿದೆ.
=====
ಕುದುರೆ: ಈ ಶಬ್ದವು ತಮಿಳಿನಲ್ಲಿ ಕುದಿರೈ ಎಂದೂ, ಮಲಯಾಳಂನಲ್ಲಿ ಕುದಿರ ಎಂದೂ ತುಳುವಿನಲ್ಲಿ ಕುದುರೆ ಎಂದೂ ತೆಲುಗಿನಲ್ಲಿ ಕುದಿರ, ಗುಱ್ಱ ಎಂದೂ ಬಳಕೆಯಲ್ಲಿದೆ. ಕನ್ನಡದಲ್ಲಿಯೂ ಕುದಿರೆ ಎಂಬ ರೂಪವೂ ಬಳಕೆಯಲ್ಲಿತ್ತು. ಸಮಾನಾರ್ಥಗಳನ್ನು ಕೊಡುವ 'ಅಭಿಧಾನ ವಸ್ತುಕೋಶ'ವು "ತುರಗಂ ಯಯು ಸಪ್ತಿ ಹಯಂ ತುರಂಗಮಂ ವಾಜಿ ವಾಹಂ ಅಶ್ವಂ ತಾಕ್ಷ್ರ್ಯಂ ಹರಿ ಘೋಟಕ ಮರ್ವಾಖ್ಯಂ ತುರಂಗಮೆನೆ ಕುದಿರೆ" ಎಂದು ಹೇಳುತ್ತದೆ. "ಬಿಲ್ವಿಲ್ಲಳ್ಕುದುರೆ ಕುದುರೆಯೊಳ್ಕಿಟ್ಟ  ಅತಿತುಮುಲ ಕಾಳಗ ಪೆೞ್ಚಿ" ಎಂದು ಕ್ರಿಶ 800 ರ ಶಾಸನವೊಂದರಲ್ಲಿ ಬರುವ ಇದರ ಉಲ್ಲೇಖವೇ ಪ್ರಾಯಶಃ ಕನ್ನಡದಲ್ಲಿ ಅತ್ಯಂತ ಪ್ರಾಚೀನವಾದುದು. "ಕುದುರೆ ನಾಯ್ ಒಟ್ಟೆ ಉಡುವುಂ" ಎಂಬುದು 'ವಡ್ಡಾರಾಧನೆಯ' ಉಲ್ಲೇಖ. "ಕುದುರೆಯ ಪಂದಿಯ ವಿಷ್ಠೆ"ಯನ್ನು ಬಾಳೆಗೊನೆಯು ದೊಡ್ಡದಾಗಿ ಬೆಳೆಯಲು ಬಳಸಿಕೊಳ್ಳುವ ವಿಧಾನವನ್ನು 'ಲೋಕೋಪಕಾರ' ವಿವರಿಸುತ್ತದೆ.
ಈ ಶಬ್ದಕ್ಕೆ ಈ ಪ್ರಾಣಿಯಲ್ಲದೆ ಬೇರೆ ಬೇರೆ ಅರ್ಥಗಳೂ ಇವೆ. ಹಿಂದಿನ ಕಾಲದ ಚತುರಂಗ ಸೈನ್ಯದಲ್ಲಿ ಕುದುರೆಯೂ ಒಂದಾದುದರಿಂದ ಅದನ್ನನುಕರಿಸಿ ಆಡುವ ಆಟವಾದ ಚತುರಂಗ ಅಥವಾ ಚದುರಂಗದಲ್ಲಿ ಒಂದು ಕಾಯಿಯ ಹೆಸರು ಕುದುರೆ. ಬಂದೂಕಿನ ಕೀಲನ್ನೂ (ಟ್ರಿಗರ್) ಕುದುರೆ ಎನ್ನುತ್ತಾರೆ. ಹಸಿರು ಬಣ್ಣದ ಮಿಡಿತೆಯ ಪ್ರಭೇದವೊಂದನ್ನೂ ಕುದುರೆ ಎನ್ನುತ್ತಾರೆ. ಕುದುರೆಯಾಕಾರದ ರಚನೆಯನ್ನು ಸೊಂಟದಲ್ಲಿ ಧರಿಸಿ ನಡೆದಾಡುವುದೇ ಕೀಲುಕುದುರೆಯಾಟ.
ಕುದುರೆ ಶಬ್ದವನ್ನೊಳಗೊಂಡ ಅನೇಕ ನುಡಿಗಟ್ಟುಗಳಿವೆ. "ಕುದುರೆ ಸತ್ತಿಗೆಯವರ ಕಂಡಡೆ ಹೊರಳಿಬಿದ್ದು ಕಾಲಹಿಡಿವರು" ಎಂಬ ಬಸವಣ್ಣನ ಮಾತಿನಲ್ಲಿ ಇದು ಅಧಿಕಾರಸ್ತರು ಎಂಬ ಅರ್ಥ ಹೊಮ್ಮುತ್ತದೆ. ಕೋಟೆಯಲ್ಲಿ ಕುದುರೆ ನುಗ್ಗುವಷ್ಟು ಜಾಗವನ್ನು 'ಕುದುರೆಗಂಡಿ' ಎನ್ನುತ್ತಿದ್ದರು ("ನೀರಕಂಡಿಯ ಕುದುರೆಗಂಡಿಯ ತೆರಪುಗಳುಮಂ ವಸುಷೇಣಂ ಬಳಸಿ ನೋಡುತ್ತುಂ" - 'ಅನಂತನಾಥ ಪುರಾಣ'). ಕುದುರೆಗಳನ್ನು ಬೆಳೆಸುತ್ತಿದ್ದ ಜಾಗ ಕುದುರೆಗಾವಲ್ ("ಕುದುರೆಗಾವಲ ಸುಭಟರನಿತರೊಳೊದಗಿ ಬಂದು" 'ಜೈಮಿನಿ ಭಾರತ'). ಕುದುರೆಯಂತೆ ಹೆಜ್ಜೆಯಿಡುವುದನ್ನು 'ಧರ್ಮಾಮೃತ'ವು 'ಕುದುರೆಗಾಲಿಕ್ಕು' ಎನ್ನುತ್ತದೆ ("ಮೂರುಂ ದೇವರಂ ಬಂದಿಸುತ್ತುಂ ಮತ್ತಂ ಕುದುರೆಗಾಲಿಕ್ಕುತ್ತುಂ"). ಕುದುರೆಯ ಮೇಲೆ ಹಾಕುತ್ತಿದ್ದ ಸುಂಕವನ್ನು ಶಾಸನಗಳು 'ಕುದುರೆಯ ಸೇಸೆ' ಎನ್ನುತ್ತವೆ ("ಕುದುರೆಯ ಸೇಸೆ ಗ 5 ಪ 9 ಹಾ 3ಖ) (ಗ=ಗದ್ಯಾಣ, ಪ=ಪಣ, ಹಾ=ಹಾಗ ಎಂಬ ನಾಣ್ಯಗಳು). "ಏರಿದೇರಿದನೇರಿ ಗಾಳಿಗುದುರೆ ಸವಾರಿ ಸೂರ್ಯ ಸೇರಿ" ಎಂದು ಬೇಂದ್ರೆಯವರು ಬುದ್ಧನ ಆಧ್ಯಾತ್ಮಿಕ ಸಾಧನೆಯನ್ನು ವರ್ಣಿಸುವಾಗ ಬಳಸುವ 'ಗಾಳಿಗುದುರೆ' ಅತೀವ ವೇಗವನ್ನು ಸೂಚಿಸುತ್ತದೆ. 'ಸಾವಿರ ಕುದುರೆ ಸರದಾರ, ಮನೆ ಹೆಂಡ್ತಿ ಕಾಸ್ದಾರ' ಎಂಬುದು ಜನಜನಿತವಾದ ಗಾದೆ.
=====
ಕುಪ್ಪೆ: ರಾಶಿ ಎಂಬರ್ಥದ ಈ ದ್ರಾವಿಡ ಶಬ್ದವು ತಮಿಳಿನಲ್ಲಿ ಕುಪ್ಪಂ, ಕುಪ್ಪೈ ಎಬ ರೂಪಗಳಲ್ಲಿಯೂ, ತೆಲುಗು ಮಲಯಾಳಂನಲ್ಲಿ ಕುಪ್ಪ ಎಂಬರೂಪದಲ್ಲಿಯೂ, ತುಳುವಿನಲ್ಲಿ ಕುಪ್ಪೆ, ಗುಪ್ಪೆ ರೂಪಗಳಲ್ಲಿಯೂ ಬಳಕೆಯಲ್ಲಿದೆ. "ಕಸಕುಪ್ಪೆಯೊಳ್ ತಾಮರೆ ಮೂಡಿದುದಂ ಸಮುದ್ರಂ ಮೇಱೆದಪ್ಪಿದುದುಮಂ" ಎಂಬ ಪ್ರಯೋಗ 'ವಡ್ಡಾರಾಧನೆ'ಯದು. ಕುಪ್ಪೆ ಎಂದರೇ ಕಸ ಎಂಬರ್ಥವೂ ಇತ್ತು: "ನೊಳವಿಂಗೆ ಕುಪ್ಪೆವರಮೇಂ ತ್ರಿಳೋಕಮೊಂದಾಗಿ ಬಂದು ತಾಗುವೊಡಕ್ಕುಂ" - ಜನ್ನನ 'ಅನಂತನಾಥ ಪುರಾಣ'. 'ಕುಪ್ಪೆಗೊಳ್' ಎಂದರೆ ರಾಶಿಯಾಗು ಎಂದರ್ಥ ನೇಮಿನಾಥನ 'ನೇಮಿನಾಥ ಪುರಾಣ'ದಲ್ಲಿನ "ಕೆಲದೊಳ್ ಕುಪ್ಪೆಗೊಂಡ ಮಾಣಿಕಂಗಳ ಬೆಳಗಿನೊಡನೆ ಬಾಳಕನ ಮೆಯ್ವೆಳಗು ದಳವೇಱಿ" ಎಂಬಲ್ಲಿ ಕಾಣಿಸುತ್ತದೆ. ಹಾಗೆಯೇ 'ಕುಪ್ಪು' ಎಂದರೆ ರಾಶಿಮಾಡು ಎಂದರ್ಥ: "ಕುಪ್ಪು-ಪಂಜೀಕರಣೇ" - 'ಶಬ್ದಮಣಿದರ್ಪಣ'. 'ಕುಪ್ಪಿಸು' ಎಂದರೆ ಒಟ್ಟುಗೂಡಿಸು, ರಾಶಿಮಾಡು ಎಂದರ್ಥ: "ಮುಂದೆ ಕುಪ್ಪಿಸಿ ಕುಪ್ಪೆಯಾಗಿ ಮಾನಸರಂ ತೆಗಿಸಿ ರಕ್ಕಸರ ಮುಂದೆ ರಾಸಿಗೆಯ್ದಂತೆ" 'ಲೀಲಾವತಿ'. 'ಕುಪ್ಪೆಗೆಯ್' ಎಂದರೂ ರಾಶಿಮಾಡು ಎಂದರ್ಥ: "ಪೊಮ್ಮಗದಪ್ಪುದು ಗುಡಿಸಿ ಕುಪ್ಪೆಗೆಯ್ವಂ ಬರ್ಪುದು" - ತಿರುಮಲಾರ್ಯನ 'ಚಿಕದೇವರಾಜವಿಜಯ'.
ಈ ಶಬ್ದವು 'ಗುಪ್ಪೆ' ಎಂಬ ರೂಪದಲ್ಲಿಯೂ ಬಳಕೆಯಲ್ಲಿದೆ. "ಅಡಕೆಯ ಗುಪ್ಪೆಯಷ್ಟಾಭರಣಂಗಳುಂಟು" ಎಂಬುದು 'ಭರತೇಶವೈಭವ'ದ ಮಾತು. "ಬೆಚ್ಚಗಿನ ನೆಲಕೆ ಕುಸಿದ ಮಣ್ಣಿನ ಗುಪ್ಪೆ ಹಳೆ ನೆಹುಗಳನೆಲ್ಲ ಹುಗಿದಿಟ್ಟುಕೊಂಡು ಬಿದ್ದಿತ್ತು ತಬ್ಬಲಿಯಾಗಿ" ಎಂಬಿವು ಗಂಗಾಧರ ಚಿತ್ತಾಲರ 'ಘಾಟಿ' ಕವನದ ಸಾಲುಗಳು. ರಾಶಿಯಾಗು ಎಂಬರ್ಥದಲ್ಲಿ 'ಗುಪ್ಪೆಗೊಳ್' ಎಂಬ ರೂಪ ಪ್ರಯೋಗವಾಗುತ್ತದೆ: "ಮಡುಗಟ್ಟಿದ ನೆತ್ತರ ಪೆರ್ವೊನಲಿಂ ಕುಪ್ಪಳಿಸಿ ಗುಪ್ಪೆಗೊಂಡ ದೊಂಡೆಗರುಳ್ಗಳಿಂ" ಎಂಬುದು ಷಡಕ್ಷರನ 'ರಾಜಶೇಖರ ವಿಳಾಸ'ದ ಮಾತು. ಗುಪ್ಪೆ ಎಂದರೆ ದಿಣ್ಣೆ ಎಂದರ್ಥವಿದೆ: ಮಕ್ಕಳು ಮರಳನ್ನು 'ಗುಪ್ಪೆಮಾಡಿ' ಆಡುವುದನ್ನು ನೋಡಬಹುದು. 'ಜಾರುಗುಪ್ಪೆ' (ಜಾರೋಬಂಡೆ) ಎಂಬ ಪದವನ್ನು ನೋಡಬಹುದು: "ಕಾಮನ ಬಿಲ್ಲಿನ ಜಾರುಗುಪ್ಪೆಯೊಳು ಜಾರುತ ಬಂದಳು ಮುಗಿಲಿಂದ" ಎಂಬುದು ಪುತಿನ ಅವರ 'ಅಹಲ್ಯೆ' ಗೀತನಾಟಕದ ಸಾಲು. ಕುಪ್ಪೆ ಅಥವಾ ಗುಪ್ಪೆ ಎಂಬುದು ಊರಿನ ಹೆಸರಿನ ಕೊನೆಯಲ್ಲಿ ಬರುವ ಅನೇಕ ನಿದರ್ಶನಗಳಿವೆ: ಬೆಂಗಳೂರಿನಲ್ಲಿ ಸೇರಿಹೋಗಿರುವ ಅತ್ತಿಗುಪ್ಪೆ, ಕತ್ತರಿಗುಪ್ಪೆ, ತಟ್ಟುಗುಪ್ಪೆ ಮುಂತಾದುವನ್ನು ನೋಡಬಹುದು. ಈ ಊರುಗಳು ತಮ್ಮ ಸುತ್ತಮುತ್ತಲಲ್ಲಿ ಎತ್ತರವಾದ ಜಾಗದಲ್ಲಿರುವುದನ್ನು ಗಮನಿಸಬಹುದು.
=====
ಕೂಡಲಸಂಗಮದೇವ: ಎಲ್ಲರಿಗೂ ಪರಿಚಿತವಾದ ಶಬ್ದವಿದು. ಬಸವಣ್ಣನ ವಚನಗಳ ಅಂಕಿತ ಅಥವಾ ಮುದ್ರಿಕೆ. ಇದರಲ್ಲಿ ಮೂರು ಭಾಗಗಳಿವೆ: ಕೂಡಲ್, ಸಂಗಮ ಹಾಗೂ ದೇವ. ಕೂಡಲ್ ಅಥವಾ ಕೂಡಲು ಎಂಬುದು ಕನ್ನಡ ಶಬ್ದ; ಉಳಿದೆರಡು ಸಂಸ್ಕೃತ ಶಬ್ದಗಳು. ಕೂಡಲ್ ಎಂಬುದಕ್ಕೆ ಷಷ್ಠೀವಿಭಕ್ತಿ ಪ್ರತ್ಯಯ ಸೇರಿಸಿದಾಗ ಆಗುವ ಕೂಡಲ ಅಥವಾ ಕೂಡಲಿನ ಸಂಗಮದೇವ ಎಂದೂ ಅರ್ಥವಾಗವಾಗಬಹುದು, ಕೂಡಲಸಂಗಮದ ಅಧಿವ ಎಂದೂ ಅರ್ಥವಾಗಬಹುದು. ಕೂಡು ಎಂದರೆ ಎಂದರೆ ಸೇರುವಿಕೆ, ಸಂಗಮ ಎಂದರೂ ಸೇರುವಿಕೆ; ಸಾಮಾನ್ಯವಾಗಿ ಎರಡು ಅಥವಾ ಹೆಚ್ಚಿನ ನದಿಗಳ ಸೇರುವಿಕೆಯನ್ನು ಕೂಡಲು ಎನ್ನುತ್ತಾರೆ. ಕೂಡಲಿ, ಕೂಡಲು ಕೂಡಲೂರ್ ಎಂಬ ಊರುಗಳಿವೆ. ಕೂಡುವುದರ ಭಾವವೇ ಕೂಟ. ಅನೇಕರು ಸೇರುವ ಸಂಸ್ಥೆ ಎಂಬ ಹೆಸರಿನಲ್ಲಿಯೂ ಈ ಶಬ್ದದ ಬಳಕೆಯಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣ ಮತ್ತು ಮಲಪ್ರಭಾ ನದಿಗಳು ಸೇರುವ ಬಹು ಪ್ರಸಿದ್ಧ ಕ್ಷೇತ್ರವನ್ನು ಕೂಡಲಸಂಗಮ ಎಂದು ಕರೆಯುತ್ತಾರೆ. ಬಸವಣ್ಣನ ಆರಾಧ್ಯವ ಅಲ್ಲಿಯ ಕೂಡಲಸಂಗಮೇಶ್ವರ, ಹಾಗಾಗಿ ತನ್ನ ವಚನಗಳ ಮುದ್ರಿಕೆಯನ್ನಾಗಿ ಆ ಶಬ್ದವನ್ನೇ ಬಳಸುತ್ತಾನೆ. ಈ ಕ್ಷೇತ್ರಕ್ಕೆ ಕಪ್ಪಡಿ ಸಂಗಮ ಎಂದೂ ಕರೆಯುತ್ತಿದ್ದರು. ತನ್ನ ಹುಟ್ಟೂರಾದ ಇಂಗುಳೇಶ್ವರ ಬಾಗೇವಾಡಿಯಿಂದ ಬಂದ ಬಸವಣ್ಣನ ಪ್ರಸಂಗವನ್ನು ಹೇಳುವಾಗ ಹರಿಹರಕವಿಯು ತನ್ನ 'ಬಸವರಾಜದೇವರ ರಗಳೆ'ಯಲ್ಲಿ "ಮಲಪ್ರಹರಿ ಕೃಷ್ಣವೇಣಿಗಳ ಸಂಗಸುಖಮಂ ಪಿಂಗದ ಕೂಡಲಸಂಗಮೇಶ್ವರನಿಪ್ಪ ಕಪ್ಪಡಿಯ ಸಂಗಮಮಂ ಪೊಕ್ಕು" ಎಂದು ವರ್ಣಿಸುತ್ತಾನೆ. ಕಪ್ಪಡಿ ಎನ್ನುವುದು ಸಂಸ್ಕೃತದ 'ಕರ್ಪಟಿನ್' ಎಂಬ ಶಬ್ದದ ತದ್ಭವ (ತದ್ಭವವೆಂದರೆ ಕನ್ನಡೀಕರಣಗೊಂಡ ಸಂಸ್ಕೃತ ಶಬ್ದ ಎಂದರ್ಥ); ಕರ್ಪಟ ಅಥವಾ ಹರಕಲು ಬಟ್ಟೆ ತೊಟ್ಟವನು ಕರ್ಪಟಿನ್; ಹಾಗಿರುವವನು ಸಾಧಕ.  ಕೂಡಲ ಸಂಗಮವು ಹಿಂದಿನಿಂದಲೂ ಸಾಧಕರ ಕ್ಷೇತ್ರವಾಗಿತ್ತು; ಸಾಧಕರು ದೂರದೆಡೆಗಳಿಂದ ಇಲ್ಲಿಗೆ ಬಂದು ತಮ್ಮ ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿರುತ್ತಿದ್ದರು. ಅದಕ್ಕೇ ಈ ಜಾಗಕ್ಕೆ ಈ ಹೆಸರಾಯಿತು.
ಮೈಸೂರು ಜಿಲ್ಲೆಯಲ್ಲಿ ತಿರುಮಕೂಡಲು ನರಸೀಪುರ ಎಂಬ ಊರಿದೆ. ಈ ಎರಡು ಹೆಸರುಗಳಲ್ಲಿ ಮೊದಲನೆಯದು ತಿರು+ಮುಕ್ಕೂಡಲು ಸೇರಿ ಆದುದು. ತಿರು ಎಂಬುದು ಶ್ರೀ ಎಂಬುದರ ತದ್ಭವರೂಪ, ಶ್ರೇಷ್ಠವಾದ, ಪವಿತ್ರವಾದ ಎಂಬ ಅರ್ಥ ಹೊಂದಿದೆ. ಅಂತಹ ಮುಕ್ಕೂಡಲು ಅದು; ಅಲ್ಲಿ ಸೇರುವುದು ಕಾವೇರಿ ಮತ್ತು ಕಪಿಲಾ ನದಿಗಳೂ, ಜೊತೆಗೆ ಅಂತರ್ವಾಹಿನಿಯೊಂದೂ ಹರಿಯುತ್ತದೆ (ಪ್ರಯಾಗದಲ್ಲಿ ಗಂಗಾ ಯಮುನೆಯರ ಜೊತೆ ಸರಸ್ವತಿ ಅಂತರ್ಗಾಮಿಯಾಗಿ ಹರಿಯುತ್ತದೆ ಎಂಬಂತೆ) ಎಂದು ನಂಬಿಕೆ. ಹೀಗಾಗಿ ಅದು ಮೂರು ನದಿಗಳ ಸಂಗಮ; ಇದೇ ಮುಕ್ಕೂಡಲ್ (ಮೂರ್+ಕೂಡಲ್).
=====
ಕೂದಲು: ಕೇಶ ಎಂಬರ್ಥದ ಈ ಶಬ್ದದ ಹಳಗನ್ನಡ ರೂಪ ಕಕೂಂದಲ್ಕಿ ಎಂದು. ತಮಿಳು ಮಲಯಾಳಂಗಳಲ್ಲಿದು 'ಕೂಂತಲ್' ಎಂಬ ರೂಪದಲ್ಲಿಯೂ ತುಳುವಿನಲ್ಲಿ ಕುಜಲ್' ಎಂಬ ರೂಪದಲ್ಲಿಯೂ ಸಿಕ್ಕುತ್ತದೆ. (ತೆಲುಗಿನಲ್ಲಿ ವೆಂಡ್ರುಕ ಎಂಬುದು ಗ್ರಾಂಥಿಕ ರೂಪವಾಗಿದ್ದರೂ ಆಡುಮಾತಿನಲ್ಲದು 'ಎಂಟಿಕಲು' ಎಂದಾಗುತ್ತದೆ). ಇದು ಸಂಸ್ಕೃತದ 'ಕುಂತಲ' ಶಬ್ದದ ರೂಪಾಂತರವೆಂದು ಹೇಳುವುದುಂಟು. (ಕುಂತಲ ಶಬ್ದವೂ ಹಳಗನ್ನಡದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿತ್ತು). ಹಳಗನ್ನಡದಲ್ಲಿ 'ಕೂಂದಲ್' ಮತ್ತು 'ಕೂದಲು' ಎರಡು ರೂಪಗಳೂ ದೊರೆಯುತ್ತವೆ. "ಸೋಗೆ ಕೂಂದಲ್ವೊಯಂ ಕಾಳೋರಗಂಗೆತ್ತು ಎಳಸಿದಪುದು" ಎಂಬುದು ನೇಮಿಚಂದ್ರನ 'ಲೀಲಾವತಿ'ಯ ವರ್ಣನೆ. ಹನ್ನೊಂದನೆಯ ಶತಮಾನದ ಚಾವುಂಡರಾಯನ 'ಲೋಕೋಪಕಾರ'ದಲ್ಲಿ "ಬೆಲ್ಲದ ನೀರಾದೊಡಂ ಬೆಲ್ಲವತ್ತದ ಕಾಯ ತಿರುಳಾದೊಡಂ ತಲೆಯಂ ಪೂಸಲ್ ಜಡೆಗೊಂಡ ಕೂಂದಲ್ ಮಾಣ್ದು ಚೆನ್ನಪ್ಪುದು" ಎಂದು ಒಂದು ಪದ್ಯಕ್ಕೆ ಟೀಕೆಯಿದೆ (ಈ ಟೀಕೆಯನ್ನು ಕೃತಿಕಾರನೇ ಬರೆದನೋ, ಅಥವಾ ಬೇರೆ ಯಾರು, ಯಾವಾಗ ಬರೆದರೋ ತಿಳಿಯದು). "ತಲೆಯಲಿ ಕರಿದು ಕೂಂದಲುಗಳೌಷಧಿಗಿಲ್ಲ" ಎಂಬುದು ಕನಕದಾಸನ 'ಮೋಹನತರಂಗಿಣಿ' ಕಾವ್ಯದ ಮಾತು. "ಮೂದಲೆಯ ಮಾತು ಕೂದಲ ಕೀಲಿನಂತಲ್ಲದರಿಯಬಾರದು" ಎಂಬುದು ಚಂದಿಮರಸ ಎಂಬೊಬ್ಬ ವಚನಕಾರನ ಮಾತು. ಇಲ್ಲಿನ 'ಕೂದಲ ಕೀಲು' ಪ್ರಾಯಶಃ ಕೂದಲಿನ ಬುಡವನ್ನು ಸೂಚಿಸುತ್ತದೆ. "ನವಿರೆಂದು ಕೂದಲು" ಎಂದು 'ಶಬ್ದಮಣಿದರ್ಪಣ'ದಲ್ಲಿ ಅರ್ಥ ಹೇಳಿದೆ. "ತುಱುಕಱು ಕೂದಲು ತುಱುಬಿಗೆ ಸುತ್ತಿದರೆ ಎಣಿಕೆಯಿಲ್ಲದ ಮುತ್ತೈದೆಯರಣ್ಣ" ಎಂಬುದು ಪುರಂದರದಾಸನ ಮಾತು.
ಕುಮಾರವ್ಯಾಸ 'ಕೂದಲು ಹಱಿ' ಎಂಬುದನ್ನು ಒಂದು ನುಡಿಗಟ್ಟಾಗಿ ಬಳಸುತ್ತಾನೆ: "ಬಿಸುಡು ಚಕ್ರವನೆನ್ನ ಕಾಯದಲಿ ಅಳುಕಿ ಕೂದಲು ಹಱಿದುದಾದರೆ ಬಳಿಕ ನಾ ಡಿಂಗರಿಗನಲ್ಲ" ಎಂಬಲ್ಲಿ ಈ ನುಡಿಗಟ್ಟಿಗೆ ಈಗಿನ 'ಕೂದಲೂ ಕೊಂಕಲಾರದು' ಎಂಬರ್ಥವಿದೆ. ನಾವೀಗ ಕೂದಲು ಶಬ್ದವನ್ನೊಳಗೊಂಡ ಇನ್ನೂ ಅನೇಕ ನುಡಿಗಟ್ಟುಗಳನ್ನು ಬಳಸುತ್ತೇವೆ. 'ಕೂದಲೆಳೆಯಷ್ಟು' ಎಂದರೆ ತೀರ ಕಡಿಮೆ ಅಂತರ ಎಂಬರ್ಥವಿದ್ದರೆ, ಕೃತ್ರಿಮ ನಯಗಾರಿಕೆಯಿಂದ ಮಾತನಾಡುವುದನ್ನು 'ಬೆಣ್ಣೆಯೊಳಗೆ ಕೂದಲು ತೆಗೆದಂತೆ' ಎಂದು ಹೇಳುವುದು ವಾಡಿಕೆ.
======
ಕೃಷಿ: ಕೃಷಿ ಎಂಬ ಸಂಸ್ಕೃತ ಪದಕ್ಕೆ ಬೇಸಾಯ ಎಂಬ ಅರ್ಥವಿದೆ. ಕೃಷಿಕ ಎಂಬುದು ರೈತ ಮತ್ತು ನೇಗಿಲ ಗುಳ ಎರಡನ್ನೂ ಸೂಚಿಸುತ. ಕೃಷೀವಲ ಎಂದರೂ ರೈತನೇ. ಪಂಪನ 'ಆದಿಪುರಾಣ'ದಲ್ಲಿ ಈ ಕೃಷಿ, ಕೃಷೀವಲ ಎರಡೂ ಒಂದೆಡೆಯೇ ಸಿಕ್ಕುತ್ತವೆ: "ಕೃಷೀವಲ ಕುಲೋಚಿತಮಪ್ಪ ಕೃಷಿಯುಮಂ". ನಾಗವರ್ಮನ 'ಅಭಿಧಾನ ವಸ್ತುಕೋಶ'ವೆಂಬ ನಿಘಂಟಿನಲ್ಲಿ "ಕೃಷಿಕಂ ಕ್ಷೇತ್ರಾಜೀವಂ, ಕೃಷೀವಳಂ ಕರ್ಷಕಂ, ಕುಟುಂಬಿನಿಯೆನಿಕ್ಕುಂ, ಕೃಷಿ ತತ್ಕರ್ಮಮದಕ್ಕುಂ" ಎಂಬ ವಿವರಣೆಯಿದೆ. ಕೃಷಿಯಲ್ಲಿ ತೊಡಗಿದವನೇ 'ಕೃಷಿನಿರತ' ("ಕೃಷಿನಿರತನಂತೆ ರಾಸಿಯಂ ನಿಲಿಸಿ" - ಶಾಂತಿನಾಥನ 'ಸುಕುಮಾರಚರಿತೆ'). ಅದರಲ್ಲಿ ಆಸಕ್ತಿ ತಾಳಿದವನೇ 'ಕೃಷಿಕುತೂಹಳ' ("ಕೃಷೀಕುತೂಹಳಜನಂ ಮರವಟ್ಟಿರುತಿರ್ದುದು" - ಕಮಲಭವನ 'ಶಾಂತೀಶ್ವರಪುರಾಣ'). ಕೃಷಿ ಶಬ್ದಕ್ಕಿರುವ ಬೇಸಾಯ ಎಂಬ ಅರ್ಥವು ವಿಸ್ತಾರಗೊಂಡು ಈಗ ಯಾವುದೇ ರಂಗದಲ್ಲಿಮಾಡುವ ಸಾಧನೆ ಎಂಬುದನ್ನು ಸೂಚಿಸುವ ಪದವಾಗಿದೆ; ಸಾಹಿತ್ಯಕೃಷಿ ಎಂಬಂತೆ. ಮೋಳಿಗೆ ಮಾರಯ್ಯನ ವಚನದವೊಂದರಲ್ಲಿ "ವಾಣಿಜ್ಯ ಮುಂತಾದ ಕೃಷಿಯ ಮಾಡುವಾಗ" ಎಂಬ ಮಾತಿದೆ.
ಬೇಸಾಯದ ಆರಂಭದ ಬಗ್ಗೆ ಪಂಪನ 'ಆದಿಪುರಾಣ'ವು ಕೆಲವು ಕುತೂಹಲಕರ ವಿವರಗಳನ್ನು ಒಳಗೊಂಡಿದೆ. ಅದು ಆದಿ ತೀರ್ಥಂಕರನ ತಂದೆಯಾದ ನಾಭಿರಾಜನ ಆಳ್ವಿಕೆಯ ಕಾಲ. ಪ್ರಕೃತಿಯಲ್ಲಿ ಸಿಕ್ಕುವುದನ್ನೇ  ಅವಲಂಬಿಸಿದ್ದ ಜನರಿಗೆ ಬರಬರುತ್ತ ಬೇಕಾದಷ್ಟು ಆಹಾರ ಸಿಗುತ್ತಿರಲಿಲ್ಲ. ಅಕೃಷ್ಟಪಚ್ಯ(ಬೇಸಾಯವಿಲ್ಲದೆ ತಾವಾಗಿ ಬೆಳೆದ ಆಹಾರಧಾನ್ಯ)ಗಳನ್ನು ಅವರು ಹುಲ್ಲುಗಳೆಂದು ತಿಳಿದಿದ್ದರು. ಜನ ನಾಭಿಯಲ್ಲಿಗೆ ಬಂದಾಗ, ಅಕೃಷ್ಟಪಚ್ಯಗಳ ಧಾನ್ಯವನ್ನು ಪಡೆದು, ಸಂಸ್ಕಾರ ಮಾಡಿ ಸೇವಿಸುವ ಬಗೆಯನ್ನು ಆತ ಜನರಿಗೆ ತಿಳಿಸಿಕೊಟ್ಟನಂತೆ. ಮುಂದೆ ಅವನ ಮಗ ಆದಿದೇವನ ಕಾಲದ ಹೊತ್ತಿಗೆ ಅದೂ ಸಾಲದೆ ಹೋಯಿತು. ಆಗ ಆದಿದೇವನು ಪ್ರಜೆಗಗಳಿಗೆ ಬೇಸಾಯ ಮಾಡುವ ಕ್ರಮವನ್ನು ತಿಳಿಸಿಕೊಟ್ಟು, ಜನರನ್ನು ವರ್ಣಗಳಾಗಿ ವಿಂಗಡಿಸಿ, ವೈಶ್ಯವರ್ಗಕ್ಕೆ "ಪಾಶುಪಾಲ್ಯ ಕೃಷೀ ಪಣ್ಯಕರ್ಮ"ಗಳನ್ನು ನಿಯೋಜಿಸಿದನಂತೆ. ಆಗಿನಿಂದ ಭೋಗಭೂಮಿಯಾಗಿದ್ದುದು ಕರ್ಮಭೂಮಿಯಾಯಿತಂತೆ; ಕೃತಯುಗ ಆರಂಭಗೊಂಡಿತಂತೆ.
=====
ಕಳೆ: ಈ ಪದವು ಕ್ರಿಯಾರ್ಥ ಹಾಗೂ ನಾಮಾರ್ಥಗಳಲ್ಲಿ ಬಳಕೆಯಾಗುತ್ತದೆ. ಈ ಶಬ್ದವು ತಮಿಳಿನಲ್ಲಿ 'ಕಳೈ' ಎಂದೂ ಮಲಯಾಳಂನಲಲ್ಲಿ 'ಕಳ' ಎಂದೂ ತುಳುವಿನಲ್ಲಿ 'ಕಳೆ' 'ಕಳ' ಎಂದೂ ಬಳಕೆಯಲ್ಲಿವೆ. ಕಳೆ ಎಂದರೆ ಬೇಕಾದ ಬೆಳೆಯ ನಡುವೆ ಬೆಳೆಯುವ ಅಪ್ರಯೋಜಕ ಸಸ್ಯ ಎಂಬರ್ಥವಿದೆ. "ಬೆಳೆಯ ಭೂಮಿಯಲೊಂದು ಪ್ರಳಯದ ಕಳೆ ಹುಟ್ಟಿ" ಎಂಬ ಬಸವಣ್ಣನ ವಚನದಲ್ಲಿ ಬೆಳೆ ಕಳೆಗಳ ಸಂಬಂಧ ಸ್ಪಷ್ಟವಾಗಿದೆ. ವಿಪುಲವಾಗಿ ಬೆಳೆದ ಕಳೆಯನ್ನು ಮೋಳಿಗೆ ಮಾರಯ್ಯನೆಂಬ ವಚನಕಾರ 'ಕಳೆಮೆಳೆ' ಎಂಬ ಶಬ್ದದಿಂದ ಸೂಚಿಸುತ್ತಾನೆ (ಮೆಳೆ=ದಟ್ಟವಾದ ಪೊದೆ): "ಕಳೆಮೆಳೆಯ ಕಿತ್ತಲ್ಲದೆ ಹೊಲ ಶುದ್ಧವಲ್ಲ," ಬೇಸಾಯಕ್ರಮದಲ್ಲಿ 'ಕಳೆ ಕೀಳು'ವುದು ಸಾಮಾನ್ಯ ಕ್ರಿಯೆ. ಇದನ್ನು ಬಸವಣ್ಣ 'ಕಸವ ಕೀಳು' ಎನ್ನುತ್ತಾನೆ ("ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ"). ಇದಕ್ಕನುಗುಣವಾಗಿಯೇ ಇಂದು ನಾವು ನಿಷ್ಪ್ರಯೋಜಕವಾದುದನ್ನು ಕಕಳೆಕಿ ಎಂಬ ಮಾತಿನಿಂದ ಸೂಚಿಸುತ್ತೇವೆ.
'ಕಳೆ' ಎಂಬ ಶಬ್ದಕ್ಕೆ ತೀರ ಬೇರೆಯೇ ಆದ ಅರ್ಥವೊಂದೂ ಇದೆ; ಇದು ಒಂದು ಕಾಲ ಪರಿಮಾಣವನ್ನು ಸೂಚಿಸುವ ಶಬ್ದವೆಂದು 'ಅಭಿಧಾನ ವಸ್ತುಕೋಶ' ಹೇಳುತ್ತದೆ: "ಹದಿನೆಂಟು ನಿಮೇಷದಿನಂತದೊಂದು ತಾಂ ಕಾಷ್ಠೆ ಕಾಷ್ಠೆ ಮೂವತ್ತಾದಂದದು ಕಳೆ ಕಳೆಗಳ್ ಮೂವತ್ತದು ಕ್ಷಣಂ".
ಸಂಸ್ಕೃತದ 'ಕಲಾ' ಕನ್ನಡದಲ್ಲಿ 'ಕಲೆ' ಎಂದಾಗಿ ಅದರಲ್ಲಿನ ಲಕಾರ ಳಕಾರವಾಗುತ್ತದೆ (ಇಂತಹ ಳಕಾರವನ್ನು ಕ್ಷಳ ಎನ್ನುತ್ತಾರೆ).  ಅರ್ಥ ಅದೇ. ಹೀಗಾಗಿ ಆ ಶಬ್ದಕ್ಕಿರುವ ಕಾಂತಿ ಎಂಬ ಅರ್ಥವೇ ಕನ್ನಡದಲ್ಲಿಯೂ ಇದೆ: "ಕಳೆ ಪೊಳೆಪು" ಎಂದು ಒಂದು ನನಿಘಂಟು ಅರ್ಥ ನೀಡುತ್ತದೆ. ಚಂದ್ರನ ಹದಿನಾರನೇ ಒಂದು ಭಾಗ ಕಳೆ ("ಚಂದ್ರನಂಶಂ ಕಳೆ" - 'ಅಭಿಧಾನ ವಸ್ತುಕೋಶ').
ಕಳೆ ಕ್ರಿಯಾರೂಪದಲ್ಲಿ ಅನೇಕ ಅರ್ಥಚ್ಛಾಯೆಗಳನ್ನು ಪಡೆದಿದೆ. ಬಿಟ್ಟುಬಿಡು ಎಂಬುದು ಇದರ ಒಂದು ಅರ್ಥ "ಕಳೇ-ವಿಸರ್ಜನೇ" - 'ಶಬ್ದಮಣಿದರ್ಪಣ'). ನಿವಾರಿಸು, ಕಳಿಸು ಎಂಬರ್ಥದಲ್ಲಿ ಈ ಶಬ್ದ 'ಪಂಪಭಾರತ'ದಲ್ಲಿ ಬಳಕೆಗೊಂಡಿದೆ ("ಕುಂಚದ ಅಡಪದ ಡವಕೆಯ ಪರಿಚಾರಿಕೆಯರೆಲ್ಲರುಮಂ ಕಣ್ಗೆತ್ತಿ ಕಳೆದು"). ಹಾಗೆಯೇ ಹೋಗಲಾಡಿಸಿ, ಅಳಿಸಿಹಾಕು ಎಂಬರ್ಥದಲ್ಲಿ 'ಆದಿಪುರಾಣ'ವು ಈ ಶಬ್ದವನ್ನು ಬಳಸುತ್ತದೆ: "ಬರೆಯಿಸಿದಂ ಪೂರ್ವಮಹೀಶ್ವರರನಾಮಮಂ ಎಯ್ದೆ ಕಳೆದು ವೃಷಭಾಚಲದೊಳ್ ಭರತಂ ನಿಜನಾಮಮಂ". 'ಪಂಚತಂತ್ರ'ದಲ್ಲಿ ತೆಗೆದುಹಾಕು ಎಂಬರ್ಥದಲ್ಲಿ ಈ ಶಬ್ದದ ಪ್ರಯೋಗವಿದೆ: "ಕೃತಕ ಪುರುಷಾಕಾರಚಿಹ್ನಂಗಳಂ ಕಳೆಯಲ್ ಮಱೆದು". ಕಳೆ ಶಬ್ದದಿಂದ 'ಕಳೆದಿಡು' (ನೀಗಿಕೊ) ("ಕಳೆದಿಡುವುದೆ ಕಷ್ಟಂ ಭೂತಳರಾಜ್ಯವಿಮೋಹಂ" - 'ಆದಿಪುರಾಣ'); 'ಕಳೆದುಕೊ' (ತೆಗೆದುಕೊ) ("ಆ ಲೇಖನಮಂ ಕಳೆದುಕೊಂಡು ನಿಮಿರ್ಚಿ ನೋಳ್ಪನ್ನೆಗಂ" - 'ಕರ್ಣಾಟಕ ಕಾದಂಬರಿ') ಮುಂತಾದ ಕ್ರಿಯಾಸಮಾಸಗಳನ್ನೂ ಸೃಷ್ಟಿಸಿಕೊಳ್ಳಲಾಗಿದೆ. 
======
ಕೆತ್ತು: ಈ ಶಬ್ದವು ಮಿಡುಕು ಎಂಬರ್ಥದಲ್ಲಿ ಬಳಕೆಯಾಗುವ ಕ್ರಿಯಾಪದ. ತಮಿಳಿನಲ್ಲಿದು 'ಕೆತ್ತು' ಎಂದೂ, ತುಳುವಿನಲ್ಲಿ 'ಕಿತ್ತುನಿ' ಎಂದೂ ಬಳಕೆಯಲ್ಲಿದೆ. "ಕೆತ್ತು-ಸ್ಪಂದನೇ" ಎಂದು ಕೇಶಿರಾಜನ 'ಶಬ್ದಮಣಿದರ್ಪಣ'ದಲ್ಲಿ ಅರ್ಥ ಹೇಳಿದೆ. ಕಣ್ಣಮಿಡುಕು, ತೋಳಿನ ಮಾಂಸಖಂಡದ ಮಿಡುಕು ಎಂಬರ್ಥಗಳಲ್ಲಿ ಈ ಶಬ್ದವು 'ಪಂಪಭಾರತ'ದಲ್ಲಿದೆ ("ಕೆತ್ತಿತ್ತು ದಲ್ ಬಲಗಣ್ಣುಂ ಬಲದೋಳುಂ ಆ ಬಲಿಬಲಪ್ರಧ್ವಂಸಿಗೆ"). ಈ ಕ್ರಿಯೆಗಳು ಶುಭಶಕುನದ ಸಂಕೇತ ಎಂಬ ಇಂದಿನ ನಂಬಿಕೆಯು ಅಂದೂ ಇದ್ದುದನ್ನು ಈ ವಾಕ್ಯ ದೃಢಪಡಿಸುತ್ತದೆ. "ಅಂಗೈ ತಿಂದುದೆನ್ನ ಕಂಗಳು ಕೆತ್ತುತ್ತಿಹವಯ್ಯಾ, ಬಂದಹರಯ್ಯಾ ಪುರಾತನರೆನ್ನ ಮನೆಗೆ" ಎಂಬ ಇದೇ ಅರ್ಥದ ಮಾತು ಬಸವಣ್ಣನ ವಚನವೊಂದರಲ್ಲಿದೆ. ಪಂಪ ಈ ಶಬ್ದವನ್ನು ಸನ್ನೆ ಎಂಬರ್ಥದಲ್ಲಿಯೂ ಬಳಸಿದ್ದಾನೆ: "ಕುಂಚದಡಪದ ಡವಕೆಯ ಪರಿಚಾರಕರೆಲ್ಲರುಮಂ ಕಣ್ಗೆತ್ತಿ ಕಳೆದು ಏಕಾಂತದೊಳ್ ಕನ್ನೆಯನಿಂತೆಂದರ್" (ಕಣ್ಗೆತ್ತು=ಕಣ್ಸನ್ನೆ ಮಾಡು). 'ಕೆತ್ತುಗುಂದು' ಎಂಬುದು ಹೃದಯದ ಮಿಡಿತ ನಿಂತುಹೋಗು ಎಂಬರ್ಥದಲ್ಲಿ ಬಳಕೆಯಾಗುತ್ತದೆ: "ಇಂಗದ ಬೆಮರ್ ಮಿಡುಕೋಡದ ಪುರ್ವು ಬೀಗಿ ಬೀಯದ ತುಟಿ ಕೆತ್ತುಗುಂದದ ಕುಚಂ ನಡುಕಂಗಿಡದೂರುಕ" (ನೇಮಿಚಂದ್ರನ 'ಲೀಲಾವತಿ'). ಹಲವು ವೇಳೆ ಅಲುಗಾಡು, ನಡುಗು ಎಂಬರ್ಥವೂ ಇದಕ್ಕೆ ಪ್ರಾಪ್ತವಾಗುತ್ತದೆ: "ಕೆತ್ತುವ ತೋಳ್ ಕಂಪಿಸುವ ಹಸ್ತಂ" ಎಂಬುದು ಹರಿಹರನ 'ಗಿರಿಜಾ ಕಲ್ಯಾಣ'ದ ವಾಕ್ಯ. ಇದಕ್ಕೆ ಉದಾಹರಣೆ. "ಕೆತ್ತಿದವು ಮೀಸೆಗಳು" ಕೋಪವನ್ನು ಹೇಳಲು ಕುಮಾರವ್ಯಾಸನು ಬಳಸುವ ನುಡಿಗಟ್ಟು.
'ಕೆತ್ತು' ಎಂದರೆ ಮೇಲ್ಪದರವನ್ನು ಕತ್ತರಿಸು ಎಂಬರ್ಥವೂ ಇದೆ. ಈ ಅರ್ಥದಲ್ಲಿ ಈ ಶಬ್ದವು ತಮಿಳಿನಲ್ಲಿ 'ಚೆಟ್ಟು' ಎಂದೂ, ಮಲಯಾಳಂನಲ್ಲಿ 'ಚೆಟ್ಟುಕ' ಎಂದೂ, ತುಳುವಿನಲ್ಲಿ 'ಕೆತ್ತುಣಿ' ಎಂದೂ ಬಳಕೆಯಲ್ಲಿದೆಯೆಂದು ಹೇಳುತ್ತಾರೆ. ಮಿಡುಕು ಎಂಬರ್ಥದೊಡನೆ 'ಶಬ್ದಮಣಿದರ್ಪಣ'ವು "ಕೆತ್ತು-ತನೂಕರಣೇ" ಎಂದೂ ಅರ್ಥವನ್ನು ನೀಡುತ್ತದೆ. "ಕೆತ್ತಿದ ತಿಗುಡು ಹತ್ತುವುದೆ ಮುನ್ನಿನಂತೆ" ಎಂಬ ವಾಕ್ಯವು ಅಕ್ಕಮಹಾದೇವಿಯ ಒಂದು ವಚನದ್ದು (ತಿಗುಡು=ತೊಗಟೆ). "ಕುಪ್ಪಸದಂತೆ ಬೆನ್ನಂ ಪತ್ತಿ ಕೆತ್ತುವರ್" ಎಂಬುದು 'ಧರ್ಮಾಮೃತ'ದ ಪ್ರಯೋಗ. "ಭಕ್ತರ ಕಂಡು ಬಂಧಿಪಳ ನಡುನೆತ್ತಿಯ ಕೆತ್ತಬೇಕು" ಎಂಬುದು ಪುರಂದರದಾಸರ ಹಾಡಿನ ಮಾತು. ಈ ಶಬ್ದವನ್ನು ಮುಚ್ಚು ಎಂಬರ್ಥದಲ್ಲಿಯೂ ಬಳಸುತ್ತಿದ್ದರು: "ಪಡಿಯಂ ಕೆತ್ತಿ ಅಗುಳಿಯನಿಕ್ಕಿ .. .. ಪಂಜರದ ಪಡಿಕೆಯೊಳಿರ್ದ ಎನ್ನೊಳಿಂತೆಂದಂ" ಎಂಬುದು 'ಕರ್ಣಾಟಕ ಕಾದಂಬರಿ' ಕಾವ್ಯದ ಮಾತು.
ವಿಗ್ರಹವನ್ನು ಕಂಡರಿಸು ಎಂಬರ್ಥವೂ ಈ ಶಬ್ದಕ್ಕಿದೆ. "ಗರ್ಭಗೃಹಸ್ತಿತ ಮಂಟಪ ಶಿಖರ ಶಿಷ್ಟಿ ಸಹವಾಗಿ ಕೆತ್ತು ಜಲ್ಲಾಂದರವ ಮಾಡಿಸಿ" ಎಂಬ ವಾಕ್ಯಖಂಡ ಶಾಸನವೊದರಲ್ಲಿದೆ. "ಹುತ್ತುಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ" ಎಂಬ ಸಾಲುಗಳು ಗೋಪಾಲಕೃಷ್ಣ ಅಡಿಗರ 'ಶ್ರೀರಾಮನವಮಿಯ ದಿವಸ' ಕವನದ ಕೊನೆಯ ಸಾಲುಗಳು.
=====
ಕೈ1: ಇದನ್ನು ಕೆಯ್ ಕಯ್ ಎಂತಲೂ ಬರೆಯುತ್ತಿದ್ದರು. ಕನ್ನಡದಲ್ಲಿ ಇದಕ್ಕೆ ಕ್ರಿಯಾಪದವಾಗಿ ಮಾಡು ಎಂದೂ ನಾಮವಾಚಕವಾಗಿ ಹಸ್ತ ಎಂದೂ ಅರ್ಥವಿದೆ. ದ್ರಾವಿಡ ಪದವಾದ ಇದು ಕ್ರಿಯೆಯ ಅರ್ಥದಲ್ಲಿ ತಮಿಳು ಮಲಯಾಳಂಗಳಲ್ಲಿ ಚೆಯ್ ಎಂದೂ, ತೆಲುಗಿನಲ್ಲಿ ಚೇಯು ಎಂದೂ ಆಗುತ್ತದೆ. ಪ್ರಾಯಶಃ ಮಾಡುವುದು ಕೈಗಳಿಂದಾದ್ದರಿಂದ ಕ್ರಿಯಾರ್ಥವಿದ್ದುದು ನಾಮಪದವಾಗಿಯೂ ಬಳಕೆಗೊಂಡಿರಬಹುದು. ಈ ಅರ್ಥದಲ್ಲಿ ಈ ಪದವು ತಮಿಳು ತುಳುಗಳಲ್ಲಿ ಕೈ ಎಂದೂ ಮಲಯಾಳಂನಲ್ಲಿ ಕಯ್ಯಿ ಎಂದೂ ತೆಲುಗಿನಲ್ಲಿ ಚೇಯಿ ಎಂದೂ ಆಗುತ್ತದೆ.  ಕ್ರಿಶ. ಏಳನೆಯ ಶತಮಾನದ ಬಾದಾಮಿಯ ಕಪ್ಪೆಯ ಅರಭಟ್ಟನ ಶಾಸನದಲ್ಲಿ "ಒಳ್ಳಿತ್ತ ಕೆಯ್ವೊರಾರ್" ಎಂಬ ಪ್ರಯೋಗವಿದೆ. "ವಾದಂಗೆಯ್ದು ಗೆಲ್ದು" ಎಂಬ ಪ್ರಯೋಗ 'ವಡ್ಡಾರಾಧನೆ'ಯಲ್ಲದೆ. ಈ ಶಬ್ದಕ್ಕೆ ಈಗಲೂ ಸಂಭೋಗಿಸು ಎಂಬ ಅರ್ಥವಿದೆ. ರಾಜ್ಯ ಎಂಬ ಶಬ್ದದೊಡನೆ ಸೇರಿ 'ರಾಜ್ಯಂಕೆಯ್' ಎಂಬ ಸಮಾಸಪದಕ್ಕೆ ರಾಜ್ಯವನ್ನಾಳು ಎಂಬ ಅರ್ಥ ಉಂಟಾಗುತ್ತದೆ ("ಸ್ವಸ್ತಿಶ್ರೀಪುರುಷ ರಾಜ್ಯಂಕೆಯೆ.. .." - ಎಂಟನೆಯ ಶತಮಾನದ ಶಾಸನ). ಇದು ರಾಜ್ಯಂಗೆಯ್ ಎಂಬ ರೂಪದಲ್ಲಿಯೂ ವ್ಯಾಪಕವಾಗಿ ಬಳಕೆಯಲ್ಲಿದೆ ("ಸಿಂಹವರ್ಮನೆಂಬರಸಾಗಿ ರಾಜ್ಯಂಗೈಯ್ಯುತ್ತುಂ" - ದುರ್ಗಸಿಂಹನ 'ಪಂಚತಂತ್ರ'). ಕೆಯ್ ಎಂಬುದಕ್ಕೆ ಪ್ರತ್ಯಯ ಸೇರಿ ಕೈತ ಅಥವಾ ಕೈಮೆ ಎಂಬ ರೂಪವನ್ನು ಪಡೆದು ಕೆಲಸ ಎಂಬರ್ಥವನ್ನು ಸೂಚಿಸುತ್ತದೆ.   ಕೈತ ಎಂದರೆ ಮಾಡಿದ ಎಂಬರ್ಥವೂ ಇದೆ ("ಒಂದಿದಳಂಕೃತಿ ಕೈತ ದೇಸಿ"  - 'ಪಂಪಭಾರತ').
ಮಾಡು ಎಂಬರ್ಥದಲ್ಲಿ ಗೆಯ್ ಎಂಬ ರೂಪವೂ ವ್ಯಾಪಕವಾಗಿ ಬಳಕೆಯಲ್ಲಿದೆ. "ಗೆಯ್ (ಕೆಯ್) ಶಿಲ್ಪೇ" ಎಂದು 'ಶಬ್ದಮಣಿದರ್ಪಣ' ಹೇಳುತ್ತದೆ. ಗೆಯ್ ಅನ್ನು ಗೈ ಎಂದೂ ಬರೆಯುವುದು ರೂಢಿ. ಇದು ಗೇ ಎಂದೂ ಬಳಕೆಯಲ್ಲಿದೆ. 'ಗೇದೂ ಗೇದೂ ಸಾಕಾಗದೆ' ಎಂಬಂತಹ ಮಾತು ಸಾಮಾನ್ಯ. ಇದರ ನಾಮರೂಪಗಳಾದ ಗೆಯ್ತ ("ಈ ಮನುಜರ ಗೆಯ್ತಮಂ ಬಿಸುಟು" - 'ಕರ್ಣಾಟಕ ಕಾದಂಬರಿ') ಅಥವಾ ಗೆಯ್ಮೆ ಅಥವಾ ಗೇಮೆ ಕೆಲಸ ಎಂಬರ್ಥವನ್ನು ಪಡೆಯುತ್ತವೆ. ಗೆಯ್ವೊಗ ಎಂಬ ರೂಪವು ಕಾರ್ಯವೈಖರಿ ಎಂಬರ್ಥದಲ್ಲಿ ಪೊನ್ನನ 'ಶಾಂತಿಪುರಾಣ'ದಲ್ಲಿ ಬಳಕೆಯಾಗಿದೆ ("ಬಗೆ ಮತ್ತೊಂದೆನೆಯುಂ ಗೆಯ್ವೊಗಂ ಇತ್ತೊಂದೆನೆಯುಂ").
=====
ಕೈ2:  ಕೈ ಎಂಬ ನಾಮರೂಪವನ್ನೀಗ ಪರಿಶೀಲಿಸೋಣ. ಇದಕ್ಕೆ ಹಸ್ತ ಎಂಬ ಆರ್ಥವಿದೆ ("ಮುಂದು ನಿಂದು ಕೈಗಳಂ ಮುಗಿದು" - 'ವಡ್ಡಾರಾಧನೆ'). ಆನೆಯ ಸೊಂಡಿಲು ಎಂಬರ್ಥವೂ ಇದಕ್ಕಿದೆ; "ಕೈಗಳ್ ಆನೆಯ ಕೈಯಂ ನಖಂ ಇಂದುವಂ ನಗುಗುಂ" ಎಂಬುದು 'ಪಂಪಭಾರತ'ದ ಪ್ರಯೋಗ. ಹಾಗೆಯೇ ಮರದ ಕೊಂಬೆಯನ್ನೂ ಕೈ ಎಂದು ಕವಿಗಳು ಕರೆಯುತ್ತಾರೆ ("ಮಾವಿನ ಕೆಯ್ಯಂ ಪಿಡಿದಲ್ಲಿ ಮೆಲ್ಲಮೆಲ್ಲನೆ ನಡೆವುದು .. .. ಉಪವನಪವನಂ" - ಮಧುರಕವಿಯ 'ಧರ್ಮನಾಥಪುರಾಣ'). ಅಲಂಕರಿಸಿಕೋ (ಮೇಕಪ್) ಎಂಬರ್ಥವೂ ಸಾಧಿತವಾಗುತ್ತದೆ ("ಮುತ್ತಿನ ಕೈಯಿಂದಡಿಕಿಲ್ವೆತ್ತ ಉರುಶೃಂಗಾರ" - ಸೋಮದೇವನ 'ಉದ್ಭಟಕಾವ್ಯ').
ಈ ಅರ್ಥಗಳನ್ನು ಹಿಂಬಾಲಿಸಿ ಅನೇಕ ಸಮಾಸಪದಗಳು ಸೃಷ್ಟಿಗೊಂಡಿವೆ. ಕೈಕೊಳ್ ("ಈಕೆಯಂ ಕೆಯ್ಕೊಳ್ವುದೆ ಕಜ್ಜಂ" - 'ಪಂಪಭಾರತ') ಅಥವಾ ಕೈಗೊಳ್ ಎಂದರೆ ಕೈಹಿಡಿ, ಸ್ವೀಕರಿಸು ಎಂದರ್ಥ. ಇದಕ್ಕೆ ತಾಳು, ಧರಿಸು ಎಂಬರ್ಥವೂ ಇದೆ ("ತಪಮಂ ಕೈಕೊಳ್ವುದು" - ಶಾಂತಿನಾಥನ 'ಸುಕುಮಾರ ಚರಿತೆ' ). ಆರಂಭಮಾಡು ("ಸಂಸರಾಣಾಂಭೋರಾಶಿಯಂ ದಾಂಟುವ ಬಗೆಯನೆ ಕಯ್ಕೊಂಡಂ" - ಪಂಪನ 'ಆದಿಪುರಾಣ'). ಈ ರೂಪಕ್ಕೆ ಆಕ್ರಮಿಸು, ಸಮ್ಮತಿನೀಡು, ಗಮನಿಸು ಮುಂತಾದ ಅರ್ಥಗಳು ಸಂದರ್ಭಕ್ಕನುಗುಣವಾಗಿ ಸ್ಫುರಿಸುತ್ತವೆ. 'ಕೈಗಣ್ಮು' ಎಂದರೆ ಪ್ರಕಟಗೊಳ್ಳು ("ನಿರ್ಭರ ಭಕ್ತಿ ತಮ್ಮ ಮನದೊಳ್ ಕೈಗಣ್ಮೆ" - 'ಆದಿಪುರಾಣ'), ವಶವಾಗು ("ಶಕ್ತಿಸ್ಫುರಣಂ ಕೈಗಣ್ಮೆ" - ಷಡಕ್ಷರನ 'ರಾಜಶೇಖರ ವಿಳಾಸ') ಎಂದರ್ಥವಾದರೆ, ಕೈಗುಡು ಎಂದರೆ ನೆರವಾಗು ಎಂದು ("ಅವರ್ಗಳ ಸನ್ಮತಿ ಕೈಗುಡುಗೆ ಎಮಗೆ ಸರಸಪದಪದ್ಧತಿಯೊಳ್" - ಜನ್ನನ 'ಯಶೋಧರ ಚರಿತೆಕ'). ಕೈಗಟ್ಟಿ ಎಂದರೆ ಕೈಗೆ ಸವರಿಕೊಳ್ಳುವ ಸುಗಂಧ ("ಆರೋಗಣೆಯ ಕಡೆಯೊಳಮರ ವಟುಗಳಟವಯ್ಸಿದ ಕೆಯ್ಗಟ್ಟಿಯೊಳ್" - ಅಗ್ಗಳನ 'ಚಂದ್ರಪ್ರಭಪುರಾಣ'), 'ಕೈಗವು' ಎಂದರೆ ಮಿತಿಮೀರುವಿಕೆ ("ನಿನ್ನ ಒರಂಟುತನಂ ಕೈಗವಾಯ್ತು" - 'ಪಂಪಭಾರತ'). ಕೈಪಱೆ ಎಂಬುದನ್ನು ಎಂದರೆ ಚಪ್ಪಾಳೆ ಎಂದೂ ಕೈಯಿಂದ ಕುಟ್ಟುವ ತಮಟೆ ಎಂದೂ ರುದ್ರಭಟ್ಟನ 'ಜಗನ್ನಾಥವಿಜಯ' ಬಳಸುತ್ತದೆ ("ಕೈಪಱೆಯೊಳಾಡುವ ರಕ್ಕಸಿಯರೊಪ್ಪಿದರ್"). ಕೈನೀರ್ ಎಂದರೆ ಧಾರೆ, ಕೈಪಿಡಿ ಎಂದರೆ ಕನ್ನಡಿ, ಕೈದು ಎಂದರೆ ಆಯುಧ, ಕೈದಳ ಎಂದರೆ ಬೆರಳು, ಕೈಯಾಣೆಯಿಡು, ಎಂದರೆ ಕೈ ಮೇಲೆ ಕೈಯಿಟ್ಟು ಮಾತುಕೊಡು, ಕೈಸಾಲ, ಕೈಗಾರಿಕೆ - ಹೀಗೆ ಕೈ ಶಬ್ದದಿಂದ ರೂಪಿತಗೊಳ್ಳುವ ಅಸಂಖ್ಯಾತ ಶಬ್ದಗಳಿವೆ.
=====
ಕೈ3: ಕೈ, ಕೆಯ್, ಕಯಿ, ಕೆಯ್ಯಿ ಮುಂತಾದ ರೂಪಗಳಲ್ಲಿ ದೊರೆಯುವ ಶಬ್ದವು ಹೊಲ ಅಥವಾ ಸಾಗುವಳಿಯ ಭೂಮಿ ಎಂಬ ಅರ್ಥವನ್ನು ಹೊಂದಿದೆ. ಇದು ಇತರ ದ್ರಾವಿಡ ಭಾಷೆಗಳಲ್ಲಿಯೂ ಈ ಅರ್ಥವನ್ನು ಪಡೆಯುತ್ತದೆ: ತಮಿಳಿನಲ್ಲಿ ಚೆಯ್, ಮಲಯಾಳಂನಲ್ಲಿ ಚೆಯ್ಯಿ, ತೆಲುಗಿನಲ್ಲಿ ಚೇನು ಹಾಗೂ ತುಳುವಿನಲ್ಲಿ ಕೆಯಿ ಎಂಬ ರೂಪಗಳನ್ನು ತಾಳುತ್ತದೆ. "ತನ್ನ ಕೆಯ್ಯನುಳಲೆಂದು ಪೋಗಿ"  ಎಂಬುದು 'ವಡ್ಡಾರಾಧನೆ'ಯ ಮಾತು. ಹೊಲದಲ್ಲಿ ಬೆಳೆದು ನಿಂತ ಪೈರು ಎಂಬರ್ಥದಲ್ಲಿಯೂ ಕೆಯ್ ಬಳಕೆಗೊಂಡಿದೆ ("ಪಂದಿ ಕೆಯ್ಯಂ ತಿಂದೊಡೆ ಕತ್ತೆಯ ಕಿವಿಯಂ ಕೊಂದರೆಂಬತೆ" - ನಯಸೇನನ 'ಧರ್ಮಾಮೃತ'). ಗದ್ದೆ ಎಂಬರ್ಥದಲ್ಲಿ ಆಂಡಯ್ಯನ 'ಕಬ್ಬಿಗರ ಕಾವ'ದಲ್ಲಿ "ಕನ್ನಡಮೆನಿಪ್ಪಾ ನಾಡು ಚೆಲ್ವಾಯ್ತು.. .. ಕಾಲೂರ್ಗಳಿಂ ಕೆಯ್ಗಳಿಂ" ಎಂಬಲ್ಲಿ ಈ ಪದ ಬಳಕೆಗೊಂಡಿದೆ. ತನ್ನ 'ಪಂಚತಂತ್ರ'ದಲ್ಲಿ ದುರ್ಗಸಿಂಹನು ಗದ್ದೆ ಎಂಬರ್ಥದಲ್ಲಿ ಕಯ್ ಎಂಬ ರೂಪವನ್ನು ಬಳಸುತ್ತಾನೆ: "ಬೆಳದೊರಗಿದ ಕಳವೆಯ ಕಯ್ಗಳಿನೊಪ್ಪುವ ತಿಳಿಗೊಳಂಗಳಿಂ ರಮ್ಯವನಾವಳಿಯಿಂ ಸೊಗಯಿಸುವುದು".
ಕೆಇ ಎಂಬ ರೂಪವು ಹಲವು ಶಾಸನಗಳಲ್ಲಿದೆ ಹನ್ನೆರಡನೆಯ ಶತಮಾನದ ಶಾಸನವೊಂದರಲ್ಲಿ "ಬೊಂಬಸಮುದ್ರದ ಹಿಂದಣ ಕೆಇ" ಎಂಬ ಬರಹವಿದೆ. (ಹಲವು ವೇಳೆ ಶಾಸನಗಳನ್ನು ಬರೆಯುತ್ತಿದ್ದವರು ಹಾಗೂ ಓಲೆಗರಿಯ ಮೇಲೆ ಬರೆದುಕೊಡುತ್ತಿದ್ದವರು ಚೆನ್ನಾಗಿ ಓದಿಕೊಂಡವರಾಗೇನೂ ಇರುತ್ತಿರಲಿಲ್ಲ. ಹೀಗಾಗಿ ಪ್ರಮಾಣಭಾಷೆಯಲ್ಲಿ ಕಾಣದ ಕಾಗುಣಿತ ರೂಪಗಳನ್ನವರು ಬಳಸಿರುವ ಸಾಧ್ಯತೆಗಳೂ ಇವೆ. ಇಂಥ ಬರವಣಿಗೆಯನ್ನು ಕಾಗುಣಿತದ ತಪ್ಪು ಎನ್ನಬೇಕೋ, ಶಬ್ದದ ಮತ್ತೊಂದು ರೂಪವೆಂದು ಪರಿಗಣಿಸಬೇಕೋ ತೀರ್ಮಾನಿಸುವುದು ಕಷ್ಟ). ಇದು ಮತ್ತೆ ಕೆಲವು ಕಾವ್ಯ ಶಾಸನಗಳಲ್ಲಿ ಕೆಯಿ ಎಂಬ ರೂಪದಲ್ಲಿ ಬಳಕೆಗೊಂಡಿದೆ: "ರಸವುಗುವ ಕಬ್ಬಿನ ಕೆಯಿಗಳಿಂ ಸೊಗಯಿಸುವುದಾ ವಿಷಯಂ" ಎಂಬುದು 'ಸಾಳ್ವಭಾರತ'ದ ಮಾತು. "ಮಣ್ಣ ಬಿಟ್ಟ ಬಳಿಕ ಆ ಕೆಯ್ಯನಾರುತ್ತರೇನು?" ಎಂಬುದು ಮಹಾದೇವಿಯಕ್ಕನ ವಚನದ ಭಾಗ. "ಏರಿ ನೀರುಂಬಡೆ ಬೇಲಿ ಕೆಯ್ಯ ಮೇವಡೆ" ಎಂಬುದು ಬಸವಣ್ಣನ ವಚನದ ಮಾತು.  ಹೀಗೆಯೇ ಕೈ, ಗಯ್ ಎಂಬ ರೂಪಗಳು ಹಳಗನ್ನಡದ ಬರವಣಿಗೆಯಲ್ಲಿ ದೊರಕುತ್ತವೆ.
ಗದ್ದೆಯ ಮೇಲೆ ಹಾಕುತ್ತಿದ್ದ ಸುಂಕವನ್ನು ಶಾಸನಗಳು 'ಕೆಯಿಸುಂಕ' ಎಂದು ಕರೆಯುತ್ತವೆ.
======
ಗಂಡಸು: ಈ ಶಬ್ದವು ಹೆಂಗಸು ಎಂಬಂತೆಯೇ ರೂಪಿತವಾಗಿರುವ ಶಬ್ದವೆಂಬುದು ಸ್ಪಷ್ಟವಾಗಿದೆ: ಗಂಡು+ಕೂಸು=ಗಂಡುಸು<ಗಂಡಸು. ಗಂಡು ಎಂಬುದರ ರೂಪವು ತಮಿಳಿನಲ್ಲಿ ಗಿಂಡ ಎಂದಿದ್ದರೆ, ತುಳು ತೆಲುಗುಗಳಲ್ಲಿ ಗಂಡು ಎಂಬ ರೂಪದಲ್ಲಿದೆ. ಗಂಡು ಎಂಬುದಕ್ಕೆ ಶೌರ್ಯ ಎಂಬುದು ಮೂಲಾರ್ಥ, "ಗಂಡಿನೊಳ್ ಭೀಮಸೇನಂ" ಎಂಬ ಪಂಪನ ಮಾತಿನಲ್ಲಿ ಈ ಅರ್ಥವಿದೆ. ಶೌರ್ಯವು ಗಂಡಿಗೆ ಸಹಜ ಎಂಬ ಭಾವನೆಯಿಂದ  ಗಂಡು ಅಥವಾ ಗಂಡಸು ಎಂಬ ಶಬ್ದ ಈ ಅರ್ಥವನ್ನು ಪಡೆದಂತಿದೆ. ಬರಬರುತ್ತ ಗಂಡು ಎಂಬುದಕ್ಕೂ ಗಂಡಸು ಎಂಬುದಕ್ಕೂ ಅರ್ಥವ್ಯತ್ಯಾಸವಾದಂತೆ ಕಾಣುತ್ತದೆ: ಗಂಡಸು ಎಂಬುದು ಸಾಮಾನ್ಯಾರ್ಥವನ್ನು ಹೊಂದಿದ್ದರೆ, ಗಂಡ ಎಂಬುದು ಹೆಣ್ಣೊಬ್ಬಳ ಪತಿ ಎಂಬರ್ಥವನ್ನು ಪಡೆದಿದೆ. ಪಂಪನ 'ಆದಿಪುರಾಣ'ದಲ್ಲಿ "ಕುಲಮುಂ ಚಲಮುಂ ದೊರೆಯುಂ ಕಿಡೆ ಬಾಳ್ವಂ ಗಂಡರೂಪಿನೊಳ್ ಗಂಡನಲ್ತು ಪೆಂಡತಿಯೆ ವಲಂ" ಎಂಬ ಮಾತಿದೆ. ಇದರಲ್ಲಿನ 'ಗಂಡರೂಪು' ಎಂಬುದಕ್ಕೆ ಗಂಡಸಿನ ಆಕೃತಿ ಎಂದು ಅರ್ಥ.
ಹೆಣ್ಣಿಗೆ ಲಾವಣ್ಯದಂತೆ ಗಂಡಸಿಗೆ ಶೌರ್ಯವೇ ಸೌಂದರ್ಯದ ನೆಲೆ ಎಂಬ ಭಾವನೆಯಿಂದಾಗಿ 'ಗಂಡಗಾಡಿ' ಎಂಬ ಪದ ರೂಪುಗೊಂಡಿತು. ಹಾಗೆಯೇ ಪೌರುಷದಿಂದ ಉಂಟಾಗುವ ಹೆಮ್ಮೆಯನ್ನು 'ಗಂಡಗರ್ವ' ಎಂದು ರನ್ನ ಕರೆಯುತ್ತಾನೆ ("ಈ ಗಂಡಗರ್ವಮುಂ ಅದೆಲ್ಲಿಗೆ ಪೋಯ್ತು"). ಕೆಟ್ಟುದಕ್ಕೆ ಶೌರ್ಯವನ್ನು ಬಳಸಿಕೊಳ್ಳುವುದನ್ನು ಜನ್ನನ 'ಯಶೋಧರ ಚರಿತೆ'ಯಲ್ಲಿ 'ಗಂಡಗಾಳಿಕೆ' - ಗಂಡ+ಕಾಳಿಕೆ - ಎಂದಿರುವಂತೆ ತೋರುತ್ತದೆ ("ಪರನೃಪರ ಗಂಡಗಾಳಿಕೆಯನದೇಂ ಕಳೆದನೋ ನೃಪತಿ"). ಶೌರ್ಯಸೂಚಕವಾಗಿ ಕೊಡುವ ಬಿರುದು ಅಥವಾ ಆಭರಣವನ್ನು ಗಂಡಪೆಂಡೇರ ಎಂದು ಕರೆಯುತ್ತಿದ್ದ ಉಲ್ಲೇಖಗಳು ಶಾಸನಗಳಲ್ಲಿವೆ. ಶೌರ್ಯದ ಮಾತು 'ಗಂಡವಾತು' ಎನಿಸಿಕೊಳ್ಳುತ್ತದೆ.
ಗಂಡು ಎಂಬುದಕ್ಕೆ ಶೌರ್ಯ ಎಂಬುದರ ಜೊತೆಯಲ್ಲೇ ಧೈರ್ಯ ಎಂಬರ್ಥವೂ ಇದೆ. ಹೀಗಾಗಿ ಧೈರ್ಯಕೆಡುವುದನ್ನು 'ಗಂಡುಗೆಡು' ಎಂದು 'ಪಂಪಭಾರತ'ದಲ್ಲಿ ಕರೆಯಲಾಗಿದೆ. ಹೆಣ್ಣಿಗೆ ಸಹಜವಲ್ಲವೆಂದು ಭಾವಿಸಲಾದ ಶೌರ್ಯ-ಧೈರ್ಯಗಳನ್ನು ಪಡೆದ ಹೆಣ್ಣನ್ನು 'ಗಂಡುಬೀರಿ' ಎನ್ನುವುದು ಸಾಮಾನ್ಯ.  ಈ ಆರ್ಥದಲ್ಲೇ 'ಗಂಡವೞ‍್ತಿ' ಎಂಬ ಮಾತು 'ಪಂಪಭಾರತ'ದಲ್ಲಿ ಬಳಕೆಗೊಂಡಿದೆ.
=====
ಗಾಳಿ: ಇದು ದೇಶೀ ಪದ; ಪಂಚಭೂತಗಳಲ್ಲಿ ಒಂದಾದ ವಾಯುವನ್ನು ಸೂಚಿಸುತ್ತದೆ. ತೆಲುಗಿನಲ್ಲಿ ಗಾಲಿ, ಮಲಯಾಳಂನಲ್ಲಿ ಕಾಳುಕ, ತುಳುವಿನಲ್ಲಿ ಗಾಲಿ ಅಥವಾ ಗಾಳಿ ಎಂಬ ರೂಪಗಳನ್ನು ಪಡೆಯುತ್ತದೆ. "ಗಾಳಿಗೆ ಮಾತನಾಡುವರು .. .. ಕಾೞ್ಕೋೞಿಗಳಾಗಿ ಕೂಗುವರದೇಂ ಮಧುಪಾನದ ಸೊರ್ಕು ಸಾಲದೇ" ಎಂಬ ಹೆಂಡಕುಡುಕರನ್ನು ವರ್ಣಿಸುವ ಪದ್ಯವೊಂದು ಹದಿಮೂರನೆಯ ಶತಮಾನದ 'ಸೂಕ್ತಿಸುಧಾರ್ಣವ'ವೆಂಬ ಸಂಕಲನಗ್ರಂಥದಲ್ಲಿದೆ.  ಚೆನ್ನಬಸವಣ್ಣನ ವಚನವೊಂದರಲ್ಲಿ ಗಾಳಿ ಬೀಸುವಾಗಿನ ಸದ್ದನ್ನು 'ಗಾಳಿಯ ಸರ' ಎಂದು ವರ್ಣಿಸುತ್ತದೆ (ಸರ=ಧ್ವನಿ, ಕಂಠ). ಇಂಥ ಗಾಳಿ ಸದ್ದನ್ನು "ಗಾಳಿ ಗಿರುಕೆನ್ನು" ಎಂದು 'ಹರಿಶ್ಚಂದ್ರ ಕಾವ್ಯ' ವರ್ಣಿಸುತ್ತದೆ. "ದೀಪವೂ ನಿನ್ನದೆ, ಗಾಳಿಯೂ ನಿನ್ನದೆ - ಆರದಿರಲಿ ಬೆಳಕು" ಎಂಬ ಸಾಲುಗಳು ಕೆ.ಎಸ್. ನರಸಿಂಹಸ್ವಾಮಿಯವರ 'ಪ್ರಥಮ ರಾಜನಿಗೆ' ಎಂಬ ಕವನದವು.
'ಕಬ್ಬಿಗರ ಕಾವ'ವು ಆಕಾಶವನ್ನು 'ಗಾಳಿವಟ್ಟೆಕ' (ಗಾಳಿ ಬೀಸುವ ಮಾರ್ಗ) ಎನ್ನುತ್ತದೆ: "ಗಾಳಿವಟ್ಟೆಯೊಳ್ ನಡೆವನ ಕಾಯ್ಪು ತಣ್ಣಗಿರೆ". ಈ ಮಾತನ್ನು ಕುವೆಂಪು ತಮ್ಮ 'ಯಮನ ಸೋಲು' ನಾಟಕದಲ್ಲಿ ಬಳಸುತ್ತಾರೆ. ಗಾಳಿ ಬೀಸುವ ಜಾಗವೆಂಬ ಅರ್ಥದಲ್ಲಿ 'ಪುಷ್ಪದಂತಪುರಾಣ'ವು 'ಗಾಳಿವೆಱಗು' ಎಂಬ ಮಾತನ್ನು ಬಳಸುತ್ತದೆ ("ಕಿಱಿದು ಬೇಗಂ ಆ ಗಾಳಿವೆಱಗಿನೊಳು ರಥಮಂ ನಿಲಿಸಿ"). ಗಾಳಿಯ ಮೂಲಕ ವಾಸನೆ ತಿಳಿಯುವುದೇ 'ಗಾಳಿಗೊಳ್' ("ಅದು ಗಾಳಿಗೊಂಡು ಒಂದು ದೆಸೆಗೆ ತಗುಳ್ದೊಡೆ" ಎಂಬುದು 'ವಡ್ಡಾರಾಧನೆ'ಯ ಮಾತು). 'ಗಾಳಿವಾತು' ಎಂದರೆ ಬೈಗುಳ ("ಗಾಳಿವಾತೆಂದು ಬೈಗುಳ್" - 'ಶಬ್ದಮಣಿದರ್ಪಣ'). ಈಗ 'ಗಾಳಿ ಮಾತು' ಎಂಬುದಕ್ಕೆ ವದಂತಿ (hearsay) ಎಂಬ ಅರ್ಥವಿದೆ. "ಸಂಸಾರವೆಂಬುದು ಗಾಳಿಯ ಸೊಡರು" ಎಂಬ ಬಸವಣ್ಣನು 'ಗಾಳಿಯ ಸೊಡರ'ನ್ನು ಅಸ್ಥಿರತೆಯ ಸಂಕೇತವಾಗಿಸಿದ್ದಾನೆ. ಬೇಟೆಯಲ್ಲಿ 'ಮೇಗಾಳಿ' (ಬೇಟೆಯ ಪ್ರಾಣಿಯ ಮೇಲೆ ಹಾದು ಬೇಟೆಯ ಮೃಗದ ಕಡೆಗೆ ಬೀಸುವ ಗಾಳಿ) 'ಕಿಗ್ಗಾಳಿ' (ಬೇಟೆಯ ಮೃಗದ ಮೇಲಿಂದ ಹಾದು ಬೇಟೆಯಾಡುವ ಪ್ರಾಣಿಯ ಕಡೆಗೆ ಬೀಸುವ ಗಾಳಿ) ಎಂಬ ಮಾತುಗಳ ಬಳಕೆಯಿದೆ. 'ಹರಿಶ್ಚಂದ್ರ ಕಾವ್ಯ'ದಲ್ಲಿ "ಮೇಗಾಳಿಯಿಂ ದೂರದಿಂ ತೋಱೆತ್ತನೊಡ್ಡಿ ಕಿಗ್ಗಾಳಿಯಿಂ .. .. ಹುಲಿಯ ಹಾರಯಿಸಿ" ಎಂದು ಮುಂತಾದ ವರ್ಣನೆಯಿದೆ.
'ಗಾಳಿ' ಎಂದರೆ ದೆವ್ವ ಎಂಬರ್ಥವೂ ಇದೆ. "ಗಾಳಿ ಸೋಂಕಿದತ್ತು ಪಿಶಾಚಂ ತೊಡರ್ದುದು ಭೂತಂ ಬನ್ನಂಬಡಿಸಿದುದು" ('ಕರ್ಣಾಟಕ ಕಾದಂಬರಿ'). ಇದು ಹೂಬಿಟ್ಟ ಹುಣಿಸೆ ಮರದಲ್ಲಿರುತ್ತದೆಂಬ ನಂಬಿಕೆಯಿತ್ತು ("ಪೂತ ಪುಣಿಸೆಯಂ ಗಾಳಿ ಪೊಕ್ಕಂತೆ"  - 'ಧರ್ಮಾಮೃತ'). 'ಗಾಳಿಗೆ ತೂರು' ಎಂದರೆ ಉದಾಸೀನ ಮಾಡು; 'ಗಾಳಿ ಬಂದಾಗ ತೂರಿಕೊ' ಎಂದರೆ ಅವಕಾಶವಾದಿಯಾಗು ಮುಂತಾದ ಅನೇಕ ನುಡಿಗಟ್ಟುಗಳಲ್ಲದೆ, 'ಗಾಳಿ' ಪೂರ್ವಪದವಾಗುಳ್ಳ 'ಗಾಳಿಗುದುರೆ' 'ಗಾಳಿಗಿರಣಿ' 'ಗಾಳಿಕೋಳಿ' ಎಂಬ ಸಮಾಸಪದಗಳೂ ಬಳಕೆಯಲ್ಲಿವೆ.
=====
ಗೌಡ: ಈ ಶಬ್ದ ಕನ್ನಡದಲ್ಲಿ ಸುಪರಿಚಿತವಾದುದು. ಆದರೆ ಇದು ಅಚ್ಚ ಕನ್ನಡ ಪದವೇನಲ್ಲ; ಸಂಸ್ಕೃತದ ಎರಡು ಪದಗಳು ಸೇರಿ ಬರಬರುತ್ತ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತ ಈಗ ಈ ರೂಪದಲ್ಲಿದೆ: ಹಳ್ಳಿಯ ಹಿರಿಯ ಎಂಬರ್ಥದಲ್ಲಿ ಗ್ರಾಮ+ವೃದ್ಧ ಪದಗಳು ಸೇರಿ ಪ್ರಾಕೃತದಲ್ಲಿ ಗಾಮಉಡ>ಗವುಂಡ>ಗೌಂಡ>ಗೌಡ ಎಂಬ ಕ್ರಮದಲ್ಲಿ ಬದಲಾಗಿದೆಯೆಂಬುದು ಕೆಲವು ಭಾಷಾವಿಜ್ಞಾನಿಗಳ ಊಹೆ; 'ಗ್ರಾಮಕೂಟ' ಎಂಬ ಶಬ್ದದಿಂದ ಗೌಡ ಬಂದಿದೆಯೆಂಬುದು ಮತ್ತೂ ಕೆಲವರ ವಾದ.  'ಗಾಮುಣ್ಡ' ಎಂಬ ರೂಪವು ಆರನೆಯ ಶತಮಾನದ್ದೆಂದು ಬಗೆಯಲಾದ ಶಾಸನವೊಂದರಲ್ಲಿ ಕಾಣಿಸುತ್ತದೆ; 'ಗಾಮುಂಡಂ' ಎಂಬ ರೂಪವು 'ವಡ್ಡಾರಾಧನೆ'ಯಲ್ಲಿಯೂ ದೊರೆಯುತ್ತದೆ. 'ಧರ್ಮಾಮೃತ'ವೆಂಬ ನಯಸೇನನ ಹನ್ನೆರಡನೆಯ ಶತಮಾನದ ಕಾವ್ಯದಲ್ಲಿಯೂ, ಶಾಸನದಲ್ಲಿಯೂ 'ಗೌಂಡ' ಎಂಬ ರೂಪವು ದೊರೆಯುತ್ತದೆ. 'ಗೌಡ' ಎಂಬ ಶಬ್ದದ ಅತ್ಯಂತ ಪ್ರಾಚೀನ ಬಳಕೆ ಹದಿಮೂರನೆಯ ಶತಮಾನದ ಕವಿ ರಾಘವಾಂಕನ 'ಸಿದ್ಧರಾಮ ಚಾರಿತ್ರ'ದಲ್ಲಿದೆ. ತಮಿಳಿನಲ್ಲಿ ಗೌಂಡರ್ ಎಂಬ ರೂಪವೂ ತೆಲುಗಿನಲ್ಲಿ ಗೌಡು ಎಂಬ ರೂಪವೂ ಬಳಕೆಯಲ್ಲಿದೆ.
ಇದಕ್ಕೆ ವಿವಿಧ ಪ್ರತ್ಯಯಗಳನ್ನು ಸೇರಿಸಿ ಅನೇಕ ಶಬ್ದಗಳನ್ನು ಮಾಡಿಕೊಳ್ಳಲಾಗಿದೆ. ಗೌಡನ ಕೆಲಸ ಎಂಬರ್ಥದಲ್ಲಿ ಗಾವುಂಡಿಕೆ ಎಂಬ ರೂಪವು ಹನ್ನೆರಡನೆಯ ಶತಮಾನದ ನವಲಗುಂದದ ಶಾಸನವೊಂದರಲ್ಲಿ ಸಿಕ್ಕುತ್ತದೆ; ಇದೇ ಮುಂದೆ ಗೌಡಿಕೆ ಎಂದಾಯಿತು. ಇದೇ ಅರ್ಥದಲ್ಲಿ ಗಾವುಂಡತನ ಎಂಬ ರೂಪವೂ ಶಾಸನಗಳಲ್ಲಿ ದೊರೆಯುತ್ತದೆ. ಗೌಡನ ಹೆಂಡತಿ ಎಂಬರ್ಥದಲ್ಲಿ ಗಾವುಂಡಿ ಎಂಬ ರೂಪವುಂಟಾಗಿ ಮುಂದೆ ಅದೇ ಗಾವುಂಡಿತಿ ಎಂದಾಗಿ ಆನಂತರ ಗೌಡಿತಿ ಎಂದಾಗಿದೆ. ಈ ಕೆಲಸವನ್ನು ನಿರ್ವಹಿಸು ಎಂಬರ್ಥದಲ್ಲಿ ಶಾಸನಗಳು 'ಗಾಮುಂಡುಗೆಯ್' ಎಂಬ ರೂಪವನ್ನು ಬಳಸುತ್ತವೆ. ಇದಕ್ಕೆ ಸಂಬಂಧಸೂಚಕ ಪದಗಳು ಸೇರಿ ಗಾಮುಂಡಬ್ಬೆ, ಗಾಮುಂಡಸ್ವಾಮಿ ಎಂಬ ವ್ಯಕ್ತಿನಾಮಗಳಾಗಿಯೂ ಶಾಸನಗಳಲ್ಲಿ ಬಳಕೆಗೊಂಡಿವೆ. ಕೆಲವರು ಗೌಡ ಶಬ್ದವನ್ನು ಜಾತಿಸೂಚಕವಾಗಿಯೂ ಬಳಸುತ್ತಾರೆ.
ಗೌಡ ಎಂಬ ಸ್ವತಂತ್ರ ಸಂಸ್ಕೃತ ಶಬ್ದವೂ ಇದೆ. ಇದು ಉತ್ತರ ಭಾರತದ ಪ್ರದೇಶವೊಂದಕ್ಕೆ ಇದ್ದ ಹೆಸರು. ದಂಡಿ ಎಂಬ ಆಲಂಕಾರಕನ 'ಕಾವ್ಯಾದರ್ಶ' ಎಂಬ ಕೃತಿಯಲ್ಲಿ ಈ ಪ್ರದೇಶದಲ್ಲಿ ಸಂಸ್ಕೃತವನ್ನು ಬರೆಯುತ್ತಿದ್ದ ಬಗೆಯನ್ನು 'ಗೌಡೀ' ರೀತಿ ಎಂದು ಕರೆಯುತ್ತಾನೆ. ಗೌಡರೀತಿ ಎಂದೂ ಇದನ್ನು ಕರೆಯಲಾಗುತ್ತಿತ್ತು. ಸಂಸ್ಕೃತದಲ್ಲಿ ಈ ಪದಕ್ಕೆ ಕಾಕಂಬಿಯ ಮದ್ಯವೆಂಬ ಅರ್ಥವೂ ಇದೆ.
======
ಚಾಟಿ: ಇದು ಸಂಸ್ಕೃತದ ಚರ್ಮಪಟ್ಟಿಕಾ ಎಂಬುದರ ತದ್ಭವ. ಈ ಶಬ್ದವು ಚಮ್ಮಟಿಗೆ ಎಂದಾಗಿ ಆ ಬಳಿಕ ಚಾವಟಿಯಾಗಿ, ನಂತರ ಚಾಟಿಯಾಗಿದೆ. ಎಮೆನೋ ಮತ್ತು ಬರೋ ತಮ್ಮ 'ಎ ದ್ರವಿಡಿಯನ್ ಎಟಿಮೊಲಾಜಿಕಲ್ ಡಿಕ್ಷನರಿ'ಯಲ್ಲಿ ಇತರ ದ್ರಾವಿಡ ಭಾಷೆಗಳ ಅದರ ಜ್ಞಾತಿ ಪದಗಳನ್ನು ನೀಡುತ್ತಾರೆ: ತಮಿಳಿನಲ್ಲಿ ಚಾಟ್ಟಿ, ಚಾಟ್ಟೈ ಎಂದೂ, ತೆಲುಗಿನಲ್ಲಿ ಜಾಟಿ ಎಂದೂ, ಮಲಯಾಳಂನಲ್ಲಿ ಚಾಟ್ಟ ಎಂದೂ ಆಗುತ್ತದಂತೆ. ಅಲ್ಲದೆ ಚಮ್ಮಟಿಗೆ ಎಂಬ ರೂಪವು ತಮಿಳಿನಲ್ಲಿ ಚಮ್ಮಟ್ಟಿ ಎಂದೂ, ತೆಲುಗಿನಲ್ಲಿ ಸಮ್ಮೆಟ ಎಂದೂ, ಮಲಯಾಳಂನಲ್ಲಿ ಚಮ್ಮಟ್ಟಿಕೂಟಂ ಎಂದೂ, ತುಳುವಿನಲ್ಲಿ ಚಮಟಿಗೆ ಎಂದೂ ಆಗುತ್ತದೆಂದು ಅಲ್ಲಿಯೇ ಹೇಳಿ, ಅದಕ್ಕೆ ಕಮ್ಮಾರನ ಸುತ್ತಿಗೆ ಎಂಬ ಅರ್ಥವನ್ನು ನೀಡಿದೆ.
ಚರ್ಮಪಟ್ಟಿಕಾ ಎಂಬುದು ಮೂಲತಃ ಪಗಡೆಯ ಹಾಸು ಎಂಬರ್ಥವನ್ನು ಹೊಂದಿದ್ದರೂ ಕನ್ನಡದಲ್ಲಿ ಚಮ್ಮಟಿಗೆ ಎಂಬುದಕ್ಕೆ ಹಳೆಯ ನಿಘಂಟುಗಳು ಚರ್ಮದಂಡ (ಬಾರುಕೋಲು) ಎಂಬ ಅರ್ಥವನ್ನು ನೀಡುತ್ತವೆ. 'ಶಬ್ದಮಣಿದರ್ಪಣ'ದಲ್ಲಿ "ಚರ್ಮಪಟ್ಟಿಕಾ - ಚಮ್ಮಟ್ಟಿಗೆಯುಂ ಸಮಟಿಗೆಯೆನಲುಮಕ್ಕುಂ" ಎಂದು ಹೇಳಲಾಗಿದೆ. 'ಪಂಪಭಾರತ'ದಲ್ಲಿ ಈ ಅರ್ಥದಲ್ಲಿಯೇ ಈ ಪದ ಬಳಕೆಯಾಗಿದೆ ("ಅನ್ನೆಗಂ ನಕುಳನುಂ ಅಂಕವಣೆಯುಂ ಬಾಳುಂ ಬಾರುಂ ಚಮ್ಮಟಿಗೆಯುಮಂ ಒರ್ವ ಕೀೞಾಳಿಂ ಪಿಡಿಯಿಸಿಕೊಂಡು ಬಂದು"). ರಾಘವಾಂಕನು ತನ್ನ 'ಹರಿಶ್ಚಂದ್ರ ಕಾವ್ಯ'ದಲ್ಲಿ ಹರಿಶ್ಚಂದ್ರನು "ತುಡುಕಿ ಚಮ್ಮಟಿಗೆಯಂ ಸೆಳೆದು" ಗಾನರಾಣಿಯರಿಗೆ ಹೊಡೆದ ಪ್ರಸಂಗವಿದೆ.
ರೈತರು ಎತ್ತುಗಳನ್ನು ಹೊಡೆಯಲು ಬಳಸುವ ಬಾರುಕೋಲು ದಪ್ಪ ಹುರಿಯಿಂದ ಮಾಡಿದುದಾದರೂ ತುದಿಗೆ ಚರ್ಮದ ಪಟ್ಟಿ ಕಟ್ಟಿರುತ್ತಾರೆ. ಹೀಗಾಗಿ ಬುಗುರಿಯನ್ನು ಆಡಿಸುವ ದಾರಕ್ಕೂ ಚಾವಟಿ ಅಥವಾ ಚಾಟಿ ಎನ್ನುವುದು ರೂಢಿಯಲ್ಲಿದೆ. 'ಚಾಟಿಯಿಲ್ಲದೆ ಬುಗುರಿ ಆಡಿಸು' ಎಂಬ ಗಾದೆಯು ಕಾರ್ಯವನ್ನು ಹೇಗೋ ಸಾಧಿಸುವ ಚಾಲಾಕಿತನವನ್ನು ಸೂಚಿಸುತ್ತದೆ. ಹೀಗೆ ಚಮ್ಮಟಿಗೆ ಎಂಬ ಶಬ್ದವು ಒಂದೆಡೆ ದ್ರಾವಿಡಪದವಾಗಿ ಮತ್ತೊಂದೆಡೆ ಸಂಸ್ಕೃತ ಶಬ್ದವೊಂದರ ತದ್ಭವವಾಗಿ ಬೇರೆ ಬೇರೆ ಅರ್ಥಗಳನ್ನು ಪಡೆಯುತ್ತದೆ.
=====
ಚಿಪ್ಪಿಗ: ಇದು ಈಗಿನ ದರ್ಜಿಯನ್ನು ಸೂಚಿಸುವ ಶಬ್ದ. ಇದರ ಮೂಲ ಶಬ್ದ ಸಂಸ್ಕೃತದ 'ಶಿಲ್ಪಿಕ'. ಇದು ಪ್ರಾಕೃತದಲ್ಲಿ ಸಿಪ್ಪಿಅ ಎಂದಾಗಿ ಕನ್ನಡದಲ್ಲಿ ಸಿಂಪಿಗ, ಸಿಂಪಿ, ಚಿಂಪಿಗ, ಚಿಪ್ಪಿಗ ಎಂಬ ರೂಪಗಳನ್ನು ಪಡೆಯುತ್ತದೆ. ಹಾಗೆಯೇ ಇದು ತಮಿಳಿನಲ್ಲಿ ಚಿಪ್ಪಿ, ಚಿಪ್ಪಯನ್ ಎಂದೂ, ತೆಲುಗಿನಲ್ಲಿ ಚಿಪ್ಪೆವಾಡು ಎಂದೂ, ತುಳುವಿನಲ್ಲಿ ಚಿಪ್ಪಿಗ ಎಂದೂ ಆಗುತ್ತದೆ. ನಯಸೇನನ 'ಧರ್ಮಾಮೃತ'ದಲ್ಲಿನ ನರಕದ ವರ್ಣನೆಯಲ್ಲಿ ಪಾಪಿಯನ್ನು ಕತ್ತರಿಸಿ "ಸಿಪ್ಪಿಗನಂತೆ ಪೊಲಿವರ್" ಎಂಬ ವರ್ಣನೆ ಬರುತ್ತದೆ. ಸೂಜಿಯನ್ನು ಹಿಡಿದು ಕೈಯಿಂದ ಬಟ್ಟೆ ಹೊಲಿಯಬೇಕಾದ್ದರಿಂದ ಹೊಲಿಯುವ ಕೆಲಸವನ್ನು ಸೂಜಿಕಾಯಕ ಎಂದೂ ಕರೆಯುತ್ತಿದ್ದರು. ಸೂಜಿಕಾಯಕದ ರಾಮಿತಂದೆ ಎಂಬೊಬ್ಬ ವಚನಕಾರ ತನ್ನ ಕಾಯಕವಿವರದ ರೂಪಕದಲ್ಲಿ ಸಾಧನೆಯ ಸ್ವರೂಪವನ್ನು ವರ್ಣಿಸುತ್ತಾನೆ; "ತಲೆಗೆ ಮೂರು ಚಿಪ್ಪು, ಅಂಗಕ್ಕಾರು ಚಿಪ್ಪು, ಮಿಕ್ಕಾಗ ಸರ್ವಾಂಗವೆಲ್ಲಕ್ಕೂ ಒಂದೇ ಚಿಪ್ಪಿನ ಕುಪ್ಪಸ". ಇಲ್ಲಿ ಹೇಳಿರುವ ಚಿಪ್ಪು ಪ್ರಾಯಶಃ ಕತ್ತರಿಸಿದ ಬಟ್ಟೆಯ ತುಂಡಿಗೆ ಅನ್ವಯಿಸುತ್ತದೆ. (ಆದ್ದರಿಂದಲೇ ಈ ಕಾಯಕ ಮಾಡುವವನು ಚಿಪ್ಪಿಗ ಎನ್ನಿಸಿಕೊಂಡನೇ?). ನೆವ ಹೇಳುತ್ತಿದ್ದ ಸಿಂಪಿಗನನ್ನು ಕುರಿತು ಸರ್ವಜ್ಞನು "ಎಳ್ಳು ಗಾಣಿಗ ಬಲ್ಲ; ಸುಳ್ಳು ಸಿಂಪಿಗ ಬಲ್ಲ" ಎನ್ನುತ್ತಾನೆ!
ಹಿಂದೆಯೂ ಬೇರೆ ಬೇರೆ ವೃತ್ತಿಗಳವರ ಸಂಘಗಳಿರುತ್ತಿದ್ದವು. ಕೊತ್ತೞಿ ಎಂದರೆ ಕಾಗೆಗಳ ಗುಂಪು ಮತ್ತು ಜನರ ನೆರವಿ ಎಂಬ ಅರ್ಥಗಳನ್ನು 'ಶಬ್ದಮಣಿದರ್ಪಣ'ವು ಕೊಡುತ್ತದೆ. ಹೀಗಾಗಿ ವೃತ್ತಿಸಂಘಗಳನ್ನು ಆಯಾ ವೃತ್ತಿಗಳವರ 'ಕೊತ್ತೞಿ'ಗಳೆಂದು ಕರೆಯುತ್ತಿದ್ದರು. ಹನ್ನೊಂದನೆಯ ಶತಮಾನದ ಶಾಸನವೊಂದರಲ್ಲಿ ಗಾಣದ ಕೊತ್ತಳೞಿಗಳು ದೇವರ ಉಪಯೋಗದ ಎಣ್ಣೆಗಾಗಿ ದತ್ತಿ ಬಿಟ್ಟ ಉಲ್ಲೇಖವಿದೆ. ಹಾಗೆಯೇ ದರ್ಜಿಗಳ ವೃತ್ತಿಸಂಘವನ್ನು 'ಸಿಪ್ಪಿಗಗೊತ್ತಳಿಕ' (ಸಿಪ್ಪಿಗ+ಕೊತ್ತಳಿ) ಎನ್ನುತ್ತಿದ್ದರು. ಹನ್ನೆರಡನೆಯ ಶತಮಾನದ ಶಿಕಾರಿಪುರದ ಶಾಸನವೊಂದರಲ್ಲಿ "ಸಮಸ್ತ ಸಿಪ್ಪಿಗಗೊತ್ತಳಿಯೆಲ್ಲಂ ದೇವರ ಚೈತ್ರಪವಿತ್ರದ ಪರ್ವಕ್ಕೆ" ಒಂದು ಪಣ (ಚಿನ್ನದ ನಾಣ್ಯ)ವನ್ನು  ದತ್ತಿಯಾಗಿ ನೀಡಿದ ವಿವರವಿದೆ. ಸಿಂಪಿ ಲಿಂಗಣ್ಣ ಆಧುನಿಕ ಕನ್ನಡದ ಪ್ರಸಿದ್ಧ ಗದ್ಯಲೇಖಕರು.
=====
ಚಿಪ್ಪು: ಇದು ಶುಕ್ತಿ ಎಂಬ ಸಂಸ್ಕೃತ ಪದದ ತದ್ಭವವೆಂದು ಹೇಳುತ್ತಾರೆ; ಪ್ರಾಕೃತದಲ್ಲಿ ಸಿಪ್ಪಿ ಎಂದಾಗುತ್ತದೆ. ಕನ್ನಡದಲ್ಲಿಯೇ ಚಿಂಪಿ, ಚಿಂಪೆ, ಸಿಂಪಿ, ಸಿಂಪೆ, ಸಿರ್ಪು ಮುಂತಾದ ರೂಪಗಳನ್ನು ತಾಳುತ್ತದೆ. ತಮಿಳು, ಮಲಯಾಳಂಗಳಲ್ಲಿ ಚಿಪ್ಪಿ, ಚಿಂಪು ಎಂಬ, ತೆಲುಗಿನಲ್ಲಿ ಚಿಪ್ಪ ಎಂಬ, ತುಳುವಿನಲ್ಲಿ ಚಿಪ್ಪಿ, ತಿಪ್ಪಿ ಎಂಬ ರೂಪಗಳಲ್ಲಿ ಬಳಕೆಯಲ್ಲಿದೆ. ಮೂಲದಲ್ಲಿ ಇದರ ಅರ್ಥ ಸಮುದ್ರದಲ್ಲಿ ದೊರಕುವ ಗಟ್ಟಿ ಕವಚದ ಪದಾರ್ಥ ಎಂದು; ಮುತ್ತಿನ ಚಿಪ್ಪು, ಕಪ್ಪೆ ಚಿಪ್ಪು ಎಂಬಿವು ಸಾಮಾನ್ಯವಾದ ಶಬ್ದಗಳು. ಹೀಗಾಗಿ ಮುಂದೆ ಗಟ್ಟಿಯಾದ ಮೇಲುಕವಚ ಎಂಬ ಅರ್ಥವನ್ನು ಪಡೆಯಿತು; ಜೊತೆಗೆ ಬಟ್ಟಲು ಎಂಬರ್ಥವನ್ನೂ ಪಡೆಯಿತು.
ಸಿಪ್ಪು ಎಂಬ ರೂಪದಲ್ಲಿ ಬಟ್ಟಲು ಎಂಬರ್ಥದಲ್ಲಿ ಈ ಶಬ್ದ 'ಪಂಪಭಾರತ'ದಲ್ಲಿ ಬಳಕೆಯಾಗಿದೆ ("ಪೊನ್ನ ಬೆಳ್ಳಿಯ .. .. ಸಿಪ್ಪುಗಳೊಳ್"). ಸಿಂಪು ಎಂಬ ರೂಪದಲ್ಲಿದು ಮುತ್ತಿನ ಚಿಪ್ಪು ಎಂಬರ್ಥದಲ್ಲಿ ಹನ್ನೊಂದನೆಯ ಶತಮಾನದ 'ಕರ್ಣಾಟಕ ಕಾದಂಬರಿ'ಯಲ್ಲಿ ದೊರೆಯುತ್ತದೆ. ("ನಸುದೆಱೆಯುತ್ತುಮಿರ್ದ ಪೊಸಮುತ್ತಿನ ಸಂಪುಟಂಗಳಿಂ"). ತಲೆಬುರುಡೆಯನ್ನೂ ಈ ಶಬ್ದವು ಸೂಚಿಸುತ್ತದೆ: ರನ್ನಕವಿಯ 'ಅಜಿತಪುರಾಣ'ದಲ್ಲಿ "ಪಳವದ ತಿವಳಯ ಜುಂಕದ ಮೊಳಸಿನ ಜೇಕಿರದ ಸಿವಿಱ ಸಿಪ್ಪಿನ ಲಯದಿಂದ ಎಳಲದೆ ಕುಣಿದರ್" ಎಂಬ ಪ್ರಯೋಗವಿದೆ. ಈ ಶಬ್ದವು ಚಿಪ್ಪು ಎಂಬ ರೂಪದಲ್ಲಿ ತೆಂಗಿನ ಕಾಯಿ ಮುಂತಾದವುಗಳ ಕವಚ ಎಂಬರ್ಥವನ್ನು ಪಡೆಯಿತು. ತೆಂಗಿನ ಚಿಪ್ಪು ಎಂಬುದು ಸಾಮಾನ್ಯ ಬಳಕೆಯಲ್ಲಿನ ಪ್ರಯೋಗ. "ಕೈಗೆ ಚಿಪ್ಪು ಕೊಡು" ಎಂಬುದು ನಿರ್ಗತಿಕನನ್ನಾಗಿಸು ಎಂಬರ್ಥದ ನಾಣ್ಣುಡಿ. ಸಿಂಪಿ ಎಂಬ ರೂಪದಲ್ಲಿದು ಒಳಲೆಯನ್ನೂ ಸೂಚಿಸುತ್ತದೆ. ಬಾಳೆಯ ಹಣ್ಣುಗಳಿರುವ ಬೇರ್ಪಡಿಸಬಹುದಾದ ಗುಂಪಿಗೆ ಚಿಪ್ಪು ಎಂಬುದು ಸಾಮಾನ್ಯವಾಗಿ ಬಳಸುವ ಪದ. ಮುಂದೆ ಸಿಪ್ಪೆ ಎಂಬ ರೂಪದಲ್ಲಿ ಈ ಶಬ್ದಕ್ಕೆ ಹೊರಮೈ ಎಂಬ ಅರ್ಥ ಪ್ರಾಪ್ತವಾಯಿತು. ಹಣ್ಣಿನ ಸಿಪ್ಪೆ ಸಾಮಾನ್ಯ ಬಳಕೆಯ ಶಬ್ದ. 'ಹಣ್ಣು ತಿಂದವನು ತಪ್ಪಿಸಿಕೊಂಡ, ಸಿಪ್ಪೆ ತಿಂದವನು ಸಿಕ್ಕಿಹಾಕಿಕೊಂಡ' ಎಂಬುದು ಜನಬಳಕೆಯಲ್ಲಿರುವ ಒಂದು ಗಾದೆ. 'ಸಿಪ್ಪೆಗಟ್ಟು' ಎಂಬ ರೂಪವು ಹೆಕ್ಕಳಿಕೆಯುಂಟಾಗು ಎಂಬರ್ಥದಲ್ಲಿ ಬಳಕೆಯಾಗುತ್ತದೆ.
=====
ಚೊಂಬು: ತಂಬಿಗೆ ಎಂಬರ್ಥದ ಈ ಪದದ ಇನ್ನೊಂದು ರೂಪ ಚೆಂಬು ಅಥವಾ ಚಂಬು. ತಮಿಳು, ತೆಲುಗು, ಮಲಯಾಳಂ ಮತ್ತು ತುಳು ಭಾಷೆಗಳಲ್ಲೂ ಈ ಶಬ್ದ ಬಳಕೆಯಲ್ಲಿದೆ. ಇದು ಚೆಂಬೊನ್ ಎಂಬ ರೂಪದಿಂದ ಬಂದುದು, ಅಥವಾ ಅದರ ಸವಕಳಿ ರೂಪ. ಚೆಂಬೊನ್ ಎಂದರೆ ತಾಮ್ರ ಎಂಬ ಅರ್ಥವಿತ್ತು, ಕೆಚ್ಚನೆಯ ಅಥವಾ ಕೆಂಪಾದ ಎಂಬರ್ಥದ ಚೆಂ ಪೂರ್ವಪದವಾಗಿ ಬಂದ ಅನೇಕ ಶಬ್ದಗಳಿವೆ: ಚೆಂಬುಗೆಂಪು ಎಂದರೆ ತಾಮ್ರದಂತಹ ಕೆಂಪು, ಚೆಂಬೆರಲ್ ಎಂದರೆ ಕೆಂಪು ಬೆರಳು, ಚೆಂಬೆಳಗು ಎಂದರೆ ಬೆಳಗಿನ ಕೆಂಪಾದ ಕಾಂತಿ ಇತ್ಯಾದಿ. ಚೆಂಬೋತ ಎಂಬುದು ಒಂದು ಬಗೆಯ ಕೆಂಪು ಬಣ್ಣದ ಪಕ್ಷಿಯ ಹೆಸರು; ಅದೇ ಕೆಂಬೋತ ಅಥವಾ ಕೆಂಬೂತ ಎಂದಾಗಿದೆ. ಸಮಾಸವಾಗುವಾಗ ಕೆಂಪು ಎಂಬರ್ಥದ ಪೂರ್ವಪದ ಕೆಂ ಎಂಬುದು ಚೆಂ ಎಂಬುದಾಗಿ ಬದಲಾಗುತ್ತದೆ (ಇದನ್ನು ಭಾಷಾವಿಜ್ಷಾನದಲ್ಲಿ ತಾಲವ್ಯೀಕರಣ ಎನ್ನುತ್ತಾರೆ; ಚ ಎಂಬ ವರ್ಣವು ತಾಲುವಿನಲ್ಲಿ - ಅಂದರೆ ಬಾಯ ಅಂಗುಳು -  ಹುಟ್ಟುವುದರಿಂದ ಈ ಪ್ರಕ್ರಿಯೆಗೆ ಈ ಹೆಸರು ಬಂದಿದೆ). ಕೆಂ ಎಂಬುದಕ್ಕೆ ಪೊನ್ ಎಂಬುದು ಸೇರಿ ಚೆಂಬೊನ್ ಆಗಿದೆ. ಹಳಗನ್ನಡದಲ್ಲಿ ಪೊನ್ ಎಂದರೆ ಲೋಹ ಎಂದಷ್ಟೇ ಅರ್ಥವಿದ್ದುದು; ಹೀಗಾಗಿ ಚೆಂಬೊನ್ ಎಂದರೆ ಕೆಂಪು ಲೋಹ ಎಂಬ ಅರ್ಥವಿತ್ತು. "ಚೆಂಬೊನ್ನ ಘಟ" (ತಾಮ್ರದ ಕೊಡ)ಎಂಬ ಪ್ರಯೋಗವು ಹದಿಮೂರನೆಯ ಶತಮಾನದ ಕವಿ ಎರಡನೆಯ ಗುಣವರ್ಮನ 'ಪಾರ್ಶ್ವನಾಥಪುರಾಣ'ದಲ್ಲಿದೆ. ಚೆಂಬು ಎಂದರೂ ತಾಮ್ರ ಎಂದೇ ಅರ್ಥವಿತ್ತು. ಚೆಂಬುಕುಟಿಗ ಅಥವಾ ಚೆಂಬುಕುಟ್ಟಿಗ ಎಂದರೆ ತಾಮ್ರದ ಕೆಲಸ ಮಾಡುವವನು.
ಕೆಲವು ಕಾವ್ಯಗಳಲ್ಲಿ ಚೆಂಬೊನ್ ಎಂಬ ಪದವನ್ನು ಚಿನ್ನದ ನಾಣ್ಯ ಎಂಬರ್ಥದಲ್ಲಿಯೂ ಬಳಸಿರುವುದು ಕಾಣುತ್ತದೆ. "ಚೆಂಬೊಂಗಳಂ ಓರಂತಿರೆ ಬೇಡಿಕೊಳ್ವೆಂ ಎನ್ನಾರ್ಪನಿತಂ" ಎಂಬ ಮಾತು ಕ್ರಿಶ ಹನ್ನೆರಡನೆಯ ಶತಮಾನದ ಕವಿ ನಯಸೇನನ 'ಧರ್ಮಾಮೃತ'ದಲ್ಲಿದೆ. ಚೆಂಬು ಎಂಬುದು ಮುಂದೆ ಗೋಪುರದ ಕಳಶ ಎಂಬರ್ಥದಲ್ಲಿಯೂ ಬಳಕೆಯಾಗಿದೆ.
'ಕೈಗೆ ಚೆಂಬು ಕೊಟ್ಟ' 'ಚೆಂಬೇ ಗತಿ' ಇತ್ಯಾದಿ ಮಾತುಗಳನ್ನು ಹೊಸಗನ್ನಡದಲ್ಲಿ ನಾವು ಬಳಸುತ್ತೇನೆ. ದಾಸಯ್ಯಗಳು ಚೆಂಬುಹಿಡಿದು ಭಿಕ್ಷೆಗೆ ಬರುವುದು ಹೀಗಾಗಿ ಚೆಂಬು ಹಿಡಿಯುವುದು ಎಂದರೆ ಭಿಕ್ಷೆ ಬೇಡು ಎಂಬರ್ಥ ಬಂದು, ಚೆಂಬು ಕೊಡು ಎಂದರೆ ಭಿಕ್ಷೆ ಬೇಡುವ ಸ್ಥಿತಿಯುಂಟುಮಾಡು ಎಂಬ ವ್ಯಂಗ್ಯದ ಅರ್ಥ ಬಂದಿದೆ. 'ನಮ್ಮಪ್ಪ ದೊಡ್ಡ ಚೆಂಬು ಕೊಟ್ಟ' ಎಂದರೆ ಏನೇನೂ ಕೊಡಲಿಲ್ಲ ಎಂಬುದೇ ಅರ್ಥ.
=====
ತಂಬಾಕು: ತಂಬಾಕ ಎಂಬದು ಇದರ ಮತ್ತೊಂದು ರೂಪ. ಎಲೆಯಡಿಕೆಯ ಜೊತೆ ಅಗಿಯುವ, ಒಣಗಿದೆಲೆಗಳಿಂದ ಮಾಡಿದ ಪುಡಿಯನ್ನು ಮೂಗಿಗೇರಿಸುವ, ಹಾಗೂ ಅದರ ಹೊಗೆಯನ್ನು ಸೇವಿಸುವ ರೂಢಿಯಿದೆ. ಈ ಕೊನೆಯ ರೀತಿಯಿಂದಾಗಿ ಈ ಸಸ್ಯವನ್ನು ಹೊಗೆಸೊಪ್ಪು ಎಂಬ ಹೆಸರಿನಿಂದಲೂ ಕರೆಯುತ್ತಾರೆ.  ತಂಬಾಕು ಎಂಬ ಶಬ್ದವು ಇಂಗ್ಲಿಷ್ನ 'ಟೊಬಾಕೊ'ದಿಂದ ಬಂದುದೆಂದು ಹೇಳುತ್ತಾರೆ.
ಧೂಮವರ್ತಿಯ ಉಲ್ಲೇಖ ಬಾಣ, ಸುಶ್ರುತ, ವಾಗ್ಭಟ, ಮತ್ತು ಚರಕರ ಪ್ರಾಚೀನ ಸಂಸ್ಕೃತ ಕೃತಿಗಳಲ್ಲಿ ಸಿಕ್ಕುತ್ತದೆ; 'ಸ್ಕಾಂದಪುರಾಣ'ದಲ್ಲಿ "ಧೂಮಪಾನೇನ ಭೋ ಪ್ರೇತಾ ಪ್ರೇತತ್ವಂ ಚೈವ ಜಾಯತೇ| ಕಲೌತು ಕಾಲರೂಪಂ ಹಿ ತಮಾಲಮೇವ ಜಾಯತೇ||" ಎಂಬ ಶ್ಲೋಕವಿದೆ. (ಧೂಮಪಾನ ಮಾಡುವವರು ಮರಣಾನಂತರ ಪ್ರೇತಗಳಾಗುತ್ತಾರೆ; ಕಲಿಯುಗದಲ್ಲಿ ಕಲಿಯೇ ತಮಾಲಪತ್ರದ ರೂಪದಲ್ಲಿ ಅವತರಿಸುತ್ತಾನೆ - ಎಂಬುದು ಇದರ ಅರ್ಥ). ಹೀಗಾಗಿ ಧೂಮಪಾನವು ನಮ್ಮಲ್ಲಿನ ಹಳೆಯ ಪದ್ಧತಿ ಎಂಬುದು ಕೆಲವರ ವಾದ. ಕನ್ನಡದಲ್ಲಿ 'ನಾಶಿ ತಂಬಾಕ'ದ ಪ್ರಸ್ತಾಪ ಅಂಬಿಗರ ಚೌಡಯ್ಯ ಮತ್ತು ಬಹುರೂಪಿ ಚೌಡಯ್ಯ ಎಂಬ ಇಬ್ಬರು ವಚನಕಾರರ ವಚನಗಳಲ್ಲಿದೆ. ನಮ್ಮಲ್ಲಿನ ಧೂಮಪಾನವು ತಮಾಲ ಅಥವಾ ತಮಾಲಪಾಕ ಎಂಬ ಸಸ್ಯದ ಹೊಗೆಯ ಸೇವನೆ. ತಮಾಲಪಾಕ ಎಂಬ ಶಬ್ದವೇ ತಂಬಾಕ ಏಕಾಗಿರಬಾರದು ಎಂಬುದು ಕೆಲವರ ವಾದ.
ಆದರೆ ಚರಿತ್ರೆ ಬೇರೆ ಕತೆಯನ್ನೇ ಹೇಳುತ್ತದೆ. ಕೊಲಂಬಸ್ನ ತಂಡ ಇಂಡಿಯವನ್ನು ಕಾಣಲೆಂದು ಸಮುದ್ರಯಾನ ಕೈಗೊಂಡದ್ದು ಮೊದಲು ಕ್ರಿಶ 1492 ರಲ್ಲಿ; ಅದು ತಲುಪಿದ್ದು ಲ್ಯಾಟಿನ್ ಅಮೆರಿಕವನ್ನು. ಅಲ್ಲಿನ ಜನ ಕೈಯಲ್ಲಿ ಸಣ್ಣ ಕೊಳವೆ ಹಿಡಿದು, ಅದರಲ್ಲಿ ಸಸ್ಯವೊಂದರ ಒಣಗಿದ ಎಲೆಯ ಪುಡಿಯನ್ನು ತುಂಬಿ ಒಂದು ತುದಿಗೆ ಬೆಂಕಿ ತಾಕಿಸಿ ಮತ್ತೊಂದು ತುದಿಯಿಂದ ಅದರ ಹೋಗೆಯನ್ನು ಸೇವಿಸುತ್ತಿದ್ದರು; ಆ ಕೊಳವೆಗೆ ಟೊಬಾಕೊ ಎಂದವರು ಕರೆಯುತ್ತಿದ್ದರು. ಅದು ಪೋರ್ಚುಗೀಸರ ಮೂಲಕ ಇಂಡಿಯ ಪ್ರವೇಶಿಸಿದ್ದು ಕ್ರಿಶ. 1556 ರ ನಂತರ. ಹೀಗಾಗಿ ಇಲ್ಲಿನ ತಮಾಲಪಾಕ ತಂಬಾಕಕ್ಕಿಂತ ಭಿನ್ನ ಸಸ್ಯವಾಗಿರಬೇಕು; ಆದ್ದರಿಂದ ಮೇಲೆ ಹೇಳಿದವರ ವಚನಗಳು ಪ್ರಾಯಶಃ ಪ್ರಕ್ಷಿಪ್ತವಾದವು.
=====
ತಲೆ: ಇದೊಂದು ದ್ರಾವಿಡ ಪದ; ಶಿರಸ್ಸು ಎಂಬ ಅರ್ಥವನ್ನು ಪಡೆದ ಈ ಶಬವು ತಮಿಳಿನಲ್ಲಿ ತಲೈ ಎಂದೂ ಮಲಯಾಳಂ ಮತ್ತು ತೆಲುಗಿನಲ್ಲಿ ತಲ ಎಂದೂ ತುಳುವಿನಲ್ಲಿ ತರೆ ಎಂದೂ ಆಗುತ್ತದೆ. ಮುಖ್ಯವಾದುದು ಎಂಬರ್ಥದಲ್ಲಿ ತಲೆ ಅನೇಕ ಸಮಾಸಪದಗಳಲ್ಲಿ ಬಳಕೆಯಲ್ಲಿದೆ; ತಲೆಬಾಗಿಲು, ತಲೆಮಣಿ ಇತ್ಯಾದಿ. ಹೆಡೆ ಎಂಬರ್ಥವೂ ಈ ಶಬ್ದಕ್ಕಿದೆ: 'ವಡ್ಡಾರಾಧನೆ'ಯಲ್ಲಿ "ಪನ್ನೆರಡು ತಲೆಯ ಪಾವುಮಂ" ಎಂಬ ಪ್ರಯೋಗವಿದೆ. ತಲೆಮಾರು ಎಂಬರ್ಥದಲ್ಲಿ ತಲೆ 'ಪಂಪಭಾರತ'ದಲ್ಲಿ ಬಂದಿದೆ ("ಸಲೆ ಸಂದಿರ್ಪತ್ತೊಂದು ತಲೆವರೆಗಂ"). ತಲೆ ಎಂದರೆ ಶ್ರೇಷ್ಠ ಎಂಬರ್ಥವೂ ಇದೆ: "ಅಂತು ಅರಿಸೇನೆಯಂ ಇದಿರ್ಚಿ ತಲೆವಿಲ್ ಎನೆ ಎಱೆದು ತವಿಸುವ ತೆಱದಿಂ" ಎಂಬುದು ಪೊನ್ನನ 'ಶಾಂತಿಪುರಾಣ'ದ ಮಾತು.
'ತಲೆಯಿಕ್ಕು' ಎಂಬ ರೂಪವು ಮಲಗು ಎಂಬರ್ಥವನ್ನು ಪಡೆಯುತ್ತದೆ ("ಅಂತದರ ಮೊದಲೊಳ್ ಕೆಲವು ದಿವಸಂ ತಲೆಯಿಕ್ಕಿ ಪಟ್ಟಿರ್ದುದಂ" - ದುರ್ಗಸಿಂಹನ 'ಪಂಚತಂತ್ರ'). ತಲೆದೋರು ಎಂಬುದು ಕಾಣಿಸಿಕೊ ಎಂಬರ್ಥವನ್ನು ಪಡೆಯುತ್ತದೆ ("ತದ್ಭೋಗಿಫಣಾದ್ಯುತಿಯೆ ಕೞ್ತಲೆಯಂ ತಲೆದೋರಲೀಯದು" - 'ಪಂಪಭಾರತ'). ತಲೆಗಾಯ್ ಎಂದರೆ ರಕ್ಷಿಸು ಎಂದು: "ಧರ್ಮಮೆ ತಲೆಗಾಯ್ಗುಂ" ಎಂಬುದು ರನ್ನನ 'ಅಜಿತಪುರಾಣ'ದ ಮಾತು. ರಕ್ಷಣೆಗಿರುವ ಮೈಗಾವಲ ಭಟನೇ 'ತಲೆಗಾಪಿನಾಳ್'; "ತಲೆಗಾಪಿನಾಳ್ ಉಕ್ಕಡದಾಳ ಮೇಲಿಕ್ಕಿ ಉಕ್ಕಡದಾಳ್ ರವಟ್ಟಿಗೆಯಾಳ ಮೇಲಿಕ್ಕಿ" (ರನ್ನನ 'ಗದಾಯುದ್ಧ'). ತಲೆಗರೆ ಎಂದರೆ ತಲೆಮರೆಸಿಕೊಳ್ಳುವುದು: "ಮಂತ್ರಪದಕ್ಕೆ ಉರಗಂ ಸುಗಿವಂತೆವೊಲ್ ಅಗಿದು ಸುಗಿದು ತಲೆಗರೆದಿರ್ಪಂ" - 'ಪಂಪಭಾರತ'.
ಕನ್ನಡದ ಕೆಲವು ವ್ಯಂಜನಾಕ್ಷರಗಳನ್ನು ಬರೆಯುವಾಗಿನ ಮೇಲುಗಡೆಯ ಗೆರೆಯೇ 'ತಲೆಕಟ್ಟು'. "ಬಿಂದುವಿನೊಂದು ಶೋಭೆ ತಲೆಕಟ್ಟಿನ ಪೊರ್ಕುಳ ಚೆಲ್ವು" ಇವುಗಳ ಬಗ್ಗೆ ಎರಡನೆಯ ಗುಣವರ್ಮನ 'ಪುಷ್ಪದಂತಪುರಾಣ'ದಲ್ಲಿ ಹೆಮ್ಮೆಯ ವರ್ಣನೆಯಿದೆ. ತಲೆವೊಯ್ಕ ಅಥವಾ ತಲೆಹೊಯ್ಕ ಎಂದರೆ ಕೊಲೆಗಾರ ಎಂದಿದ್ದುದು ಈಗಿನ 'ತಲೆಹೋಕ' ಎಂದರೆ ಮೂರ್ಖ ಎಂದಾಗಿದೆ. ಅತಿ ಮಾತು 'ತಲೆಹರಟೆ'. ಹೀಗೆ ತಲೆಯನ್ನು ಒಳಗೊಂಡ ಶಬ್ದಗಳು ಅಸಂಖ್ಯವಾಗಿವೆ.
=====
ತಾಯಿಗ್ಗಂಡ: ಹೀಗೆಂದು ಬಯ್ಯವುದನ್ನು ಕೇಳಿರಬಹುದು. ಸರಳವಲ್ಲದ ಹಾಗೂ ವಿದ್ರೋಹಕಾರಿಯಾದ ಕೃತ್ಯಗಳಲ್ಲಿ ತೊಡಗಿದವನನ್ನು 'ತಾಯಿಗ್ಗಂಡ' ಅಥವಾ 'ತಾಯಿಗಂಡ' ಎಂಬ ಶಬ್ದದಿಂದ ತಿರಸ್ಕಾರಪೂರ್ವಕವಾಗಿ  ಕರೆಯುತ್ತಾರೆ. ಪ್ರಾಯಶಃ ಈ ಶಬ್ದವು ತಾಯಿಗೆ+ಗಂಡ ಎಂಬುದರಿಂದ ಆಗಿರಬಹುದು. ತಾಯಿಯನ್ನೂ ಒಂದು ಹೆಣ್ಣೆಂದೇ ಭಾವಿಸಿ ನೆರೆಯುವ ಮನೋಭಾವವನ್ನು ಈ ಸಮಾಸಪದ ಸೂಚಿಸುತ್ತದೆ. (ಇಲ್ಲಿ ಸಾಫೋಕ್ಲೀಸ್ ಕವಿಯ ನಾಟಕದ ಪಾತ್ರವಾದ ಈಡಿಪಸ್ ದೊರೆಯ ನೆನಪಾಗುವುದು ಸಹಜ, ಆದರೆ ಅಲ್ಲಿನ ಸಂದರ್ಭ ಬೇರೆ). ಬೇಂದ್ರೆಯವರು ತಮ್ಮೊಂದು ಕವನದಲ್ಲಿ ಈ ಪದವನ್ನು ಬಳಸಿದ್ದಾರೆ. ಅವರ 'ಮೊದಲಗಿತ್ತಿ'ಯಲ್ಲಿ ಈ ಸಾಲುಗಳಿವೆ: "ಹಿಂಡಾಗಿ ಪುಂಡಾಗಿ ಅಂಡಲೆಯಲು ನಿನ್ನ ನೆತ್ತರು ಒರೆಹಚ್ಚಿ ನೋಡಿರುವೆ; ಪಾತಾಳ ಕಂಡರು ಕೆಲ ತಾಯಿಗ್ಗಂಡರು ಅವರನ್ನು ಮಡಿಲಾಗ ಮಡಗಿಸಿಹೆ; ಹದಿನಾರು ರಾಜರು ತಲೆಕೆಳಕಾದರು, ಆದರೂ ತಲೆಯೆತ್ತಿ ನಿಂತಿರುವೆ, ನಿನ್ನ ತೇಜದ ಮುಂದೆ ರಾಜತೇಜವು ಕೂಸು, ಮೊದಲಗಿತ್ತಿಯು ನೀನು ಮೆರೆಯುತಿಹೆ!". ಭೂಮಿಯನ್ನು ಮೊದಲಗಿತ್ತಿ ಎಂದು ಕರೆಯುವ ಕವಿಯು ಎಲ್ಲರಿಗೂ ಅವಳು ತಾಯಿಸ್ವರೂಪಳು; ಆದರೆ ರಾಜರುಗಳು (ರಾಜಕಾರಣಿಗಳು?) ಮಾತ್ರ ಅವಳನ್ನು ಕೇವಲ ಹೆಣ್ಣಿನಂತೆಯೇ ಕಂಡು ನಡೆಸಿಕೊಂಡಿದ್ದಾರೆ ಎಂಬುದು ಕವಿಯ ಆಕ್ರೋಶ; ಆದರೆ ಅಂಥವರನ್ನೂ ಸಹಿಸಿಕೊಂಡು ಮಡಿಲಲ್ಲಿ ಹಾಕಿಕೊಳ್ಳುವ ಕರುಣಾಮಯಿ ಈ ತಾಯಿ ಎಂಬುದು ಕವಿಯ ಆಶಯ. "ವೀರಭೋಜ್ಯಾ ವಸುಂಧರಾ'" ಎಂಬುದು ಒಂದು ಸಂಸ್ಕೃತದ ಮಾತು; ವೀರರು ಮಾತ್ರವೇ ವಸುಂಧರೆ(ಭೂಮಿ)ಯನ್ನು ಭೋಗಿಸುವವರು ಎಂಬುದು ಅದರರ್ಥ. ಎಂದರೆ ಹೆಣ್ಣನ್ನು ಪರಾಕ್ರಮದಿಂದ ಗೆಲ್ಲಬೇಕು ಎಂಬ ಅಭಿಪ್ರಾಯ. 'ಭೂಪತಿ' 'ಭೂಪ' 'ಭುವನಪತಿ' ಎಂಬಂತಹ ಸಂಸ್ಕೃತ ಶಬ್ದಗಳು ರಾಜನನ್ನು ಸೂಚಿಸುವ ಪದಗಳು; ಅವುಗಳ ಅರ್ಥವೇ ಭೂಮಿಯ ಒಡೆಯ, ಯಜಮಾನ, ಗಂಡ ಎಂದು. ಪಂಪನ 'ಆದಿಪುರಾಣ'ದಲ್ಲಿ ಅಣ್ಣನಾದ ಭರತನನ್ನು ಕುರಿತು ಬಾಹುಬಲಿಯು "ನೀನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗೞ್ತೆ ಮಾಸದೇ" ಎಂದು ಕೇಳುವ ಮಾತಿನಲ್ಲಿ ಹೆಣ್ಣು ಮತ್ತು ಭೂಮಿ ಎರಡನ್ನೂ ಸಮಾನವೆಂದು ಪರಿಗಣಿಸುವ ರೂಢಿಯು ವ್ಯಕ್ತವಾಗಿದೆ. ರನ್ನನ 'ಗದಾಯುದ್ಧ'ದಲ್ಲಿ ಅಶ್ವತ್ಥಾಮನು ರಾಜ್ಯಲಕ್ಷ್ಮಿಯ ಕೂದಲು ಹಿಡಿದು ಎಳೆದೊಯ್ಯುವ ಪ್ರಸಂಗವಿದೆ!
======
      
ತಾಳಿ: ತಾಲಿ ಅಥವಾ ತಾಳಿ ಎಂಬ ರೂಪಗಳು ತೆಲುಗು, ತಮಿಳು, ಮಲಯಾಳಂ ಮತ್ತು ತುಳುಭಾಷೆಗಳಲ್ಲಿಯೂ ದೊರೆಯುತ್ತದೆ. ಮದುವೆಯಲ್ಲಿ ಗಂಡು ಹೆಣ್ಣಿನ ಕೊರಳಿಗೆ ಕಟ್ಟುವ ಮಾಂಗಲ್ಯ ಅಥವಾ ಮಂಗಳಸೂತ್ರದ ಮಧ್ಯದ ಚಿನ್ನದ ಬಟ್ಟನ್ನು ತಾಲಿ ಎಂದು ಕರೆಯುತ್ತಾರೆಂಬುದು ಸರ್ವವಿದಿತ. 'ಪಂಪಭಾರತ'ದಲ್ಲಿ ತಾಳಿ ಎಂಬುದಕ್ಕೆ ಸಂವಾದಿಯಾಗಿ 'ಅಯ್ದೆಮಿನುಗು' ಎಂಬ ಶಬ್ದವಿದೆ ("ವರುಣಾನಿಯ ಕೊರಲೊಳ್ ಅಯ್ದೆಮಿನುಗುಮುೞಿಯೆ") ಅಯ್ದೆ ಎಂದರೆ ಸುಮಂಗಲಿ; ಅವಳ ಕೊರಳಿನ ಮಿನುಗುವ ವಸ್ತು, ಪ್ರಾಯಶಃ ಚಿನ್ನದ ತಾಳಿ. ಹರಿಹರನ 'ಗಿರಿಜಾ ಕಲ್ಯಾಣ'ದಲ್ಲಿ 'ತಾಳಿಗಟ್ಟು' ಎಂಬ ಪ್ರಯೋಗವಿದೆ ("ಚಂದ್ರಾಭರಣಂ ಮನಮೊಸೆದು ತಾಳಿಗಟ್ಟಿದನೆನೆ"). ರಾಘವಾಂಕನ 'ಹರಿಶ್ಚಂದ್ರ ಕಾವ್ಯ'ದಲ್ಲಿ, ಚಂದ್ರಮತಿಯು ಮಗ ರೋಹಿತಾಶ್ವ ಸತ್ತಾಗ ಅವನ ದೇಹವನ್ನು ಸುಡಲು ಶ್ಮಶಾನಕ್ಕೆ ಬರುತ್ತಾಳೆ. ಕೊಡಬೇಕಾದ ಮಸಣವಾಡಗೆಯ ಹಣ ತನ್ನಲ್ಲಿಲ್ಲವೆಂದಾಗ ಹರಿಶ್ಚಂದ್ರನು "ನಿನ್ನ ಕೊರಳಿನೊಳಿರ್ದ ಕಡುಚೆಲುವ ತಾಳಿಯನದನು ಅಡವನಿರಿಸಿ ನೀ ಬಿಡಿಸಿಕೊ ಬಳಿಕ" ಎನ್ನುತ್ತಾನಂತೆ. ತಾಳಿಯು ಚಿನ್ನದ್ದಾಗಿರುತ್ತಿತ್ತೆಂಬುದು ಇಲ್ಲಿ ಹೆಚ್ಚು ಸ್ಪಷ್ಟವಾಗಿದೆ.
ತಾಲ ಎಂಬುದು ಸಂಸ್ಕೃತದಲ್ಲಿ ಪನೆಮರಕ್ಕಿರುವ ಹೆಸರು. ತಾಲಿ ಅಥವಾ ತಾಳಿ ಎಂದರೂ ತಾಳೆಯ ಮರ ಎಂಬ ಅರ್ಥವಿದೆ. 'ಪಂಪಭಾರತ'ದಲ್ಲಿ "ಲವಂಗ ಲುಂಗ ಹಿಂತಾಳ ತಾಳೀ ತಮಾಳತಾಲ ಸುಂದರ ನಂದನ" ಎಂಬಲ್ಲಿ ಅನೇಕ ಮರಗಳ ಜೊತೆಗೆ ತಾಳಿಯ ಪ್ರಸ್ತಾಪವಿದೆ. ಚಿನ್ನದ ತಾಳಿಯು ಬಳಕೆಗೆ ಬರುವುದಕ್ಕೆ ಮುಂಚೆ ಪ್ರಾಯಶಃ ತಾಳೆಯ ಗರಿಯನ್ನು ಒಣಗಿಸಿ ನಂತರ ನೆನೆಸಿ ಮೆತ್ತಗೆ ಮಾಡಿ ಸುರುಳಿ ಸುತ್ತಿ ಕಟ್ಟಿಕೊಳ್ಳುವ ಪದ್ಧತಿಯಿತ್ತೆಂದು ವಿದ್ವಾಂಸರು ಊಹಿಸುತ್ತಾರೆ. ಅದಕ್ಕೇ ಅದು ತಾಳಿ ಎನ್ನಿಸಿಕೊಳ್ಳುತ್ತದೆ. ಸಂಸ್ಕೃತದಲ್ಲಿ ತಾಲಂಕ ಅಥವಾ ತಾಲಕ ಎಂದರೆ ಕಿವಿಯ ಓಲೆ. ಅದೂ ತಾಳೆಗರಿಯ ಸುರುಳಿ; ಅದಕ್ಕೆ ಕರ್ಣಪತ್ರ ಎಂಬ ಹೆಸರೂ ಇದೆ. ಪ್ರಾಯಶಃ ತಾಳಿಯೂ ಮೊದಲು ಅದೇ ರೂಪದಲ್ಲಿತ್ತು. ಗೌರಿಯ ಹಬ್ಬದ ದಿನ ಕೊಡುವ ಮೊರದ ಬಾಗಿನದಲ್ಲಿ ಇತರ ವಸ್ತುಗಳ ಜೊತೆ ತಾಳೆಗರಿಯ ಬಿಚ್ಚೋಲೆಯನ್ನು ಕೊಡುವುದು ರೂಢಿ.
=====
ತಿಂಗಳು1: ಇದೊಂದು ದ್ರಾವಿಡ ಪದ: ಹಳಗನ್ನಡದಲ್ಲಿ ತಿಂಗಳ್ ಎಂಬ ರೂಪದಲ್ಲಿದ್ದು, ತಮಿಳು, ಮಲಯಾಳಂಗಳಲ್ಲಿ ತಿಙ್ಕಳ್ ಎಂದೂ ತುಳುವಿನಲ್ಲಿ ತಿಂಗೊಳು ಎಂದೂ ಬಳಕೆಯಲ್ಲಿದೆ. ಇದರ ಒಂದು ಅರ್ಥ ಚಂದ್ರ ಎಂದು. "ನಗೆಯೆಂಬ ನೆವದೆ ಬೆಳೆಗೀ ಮೊಗಮೆಂಬೀ ನೆವದೆ ತಿಂಗಳೊಳಗೆಸೆದಾದಂ ಸೊಗಯಿಸಿ ತೋರ್ಕುಂ ಲೋಚನಯುಗಂ" ಎಂಬುದು 'ಕವಿರಾಜಮಾರ್ಗ'ದ ವರ್ಣನೆ. "ತಿಂಗಳ ತಣ್ಣನಪ್ಪ ಕದಿರ್ದೊಂಗಲೊಳಭ್ಯಸಿಸಿತ್ತೋ" ಎಂದು ತನ್ನ ಮಾತಿನ ಬಂದ ಬಗ್ಗೆ ಅಗ್ಗಳ ತನ್ನ 'ಚಂದ್ರಪ್ರಭಪುರಾಣ'ದಲ್ಲಿ ಹೇಳಿಕೊಳ್ಳುತ್ತಾನೆ. "ತಿಂಗಳ ಸಿರಿಯಂತೆ ಸೋಲಿಸದೆ ಕಾವನ ಕಬ್ಬಮನದಾರನಾದೊಡಂ" ಎಂಬ ಹೆಮ್ಮೆಯ ಮಾತು 'ಕಬ್ಬಿಗರ ಕಾವ'ದ ಕವಿ ಆಂಡಯ್ಯನದ್ದು. "ಇಂಗಡಲ ಒಡನಾಡಿಯೋ ನೆಱೆ ತಿಂಗಳ ಸೋದರಮೋ" ಎಂಬ ಉದ್ಗಾರ ಷಡಕ್ಷರದೇವನ 'ರಾಜಶೇಖರ ವಿಳಾಸ'ದ್ದು. "ತಿಂಗಳಿಗೆ ತಂಪಿಹುದೆ ಸಾಗರಕೆ ಪೆಂಪಿಹುದೆ" ಎಂಬುದು ಗೋವಿಂದ ಪೈ ಅವರ 'ಗಿಳಿವಿಂಡು' ಕವನದ ಸಾಲು. ಚಂದ್ರಕಾಂತ ಶಿಲೆ ಎಂಬರ್ಥದಲ್ಲಿ 'ನೇಮಿನಾಥಪುರಾಣ'ದಲ್ಲಿ 'ತಿಂಗಳ್ಗಲ್' ಎಂಬ ಪ್ರಯೋಗವಿದೆ. ಶಿವನು ಚಂದ್ರಧರ; ಹೀಗಾಗಿ ಕನ್ನಡ ಕವಿಗಳನೇಕರು ಅಚ್ಚಗನ್ನಡದಲ್ಲಿ ಹೇಳುತ್ತಾರೆ: ಸಿದ್ಧರಾಮನು ತನ್ನ ವಚನಗಳಲ್ಲಿ 'ತಿಂಗಳಧರ', 'ತಿಂಗಳಸೂಡ' ಎಂದು ಕರೆದಿದ್ದರೆ ಭೀಮಕವಿಯು ತನ್ನ 'ಬಸವಪುರಾಣ'ದಲ್ಲಿ 'ತಿಂಗಳ ಸೂಡಿದವ' ಎನ್ನುತ್ತಾನೆ.
ತಿಂಗಳು ಎಂದರೆ ಚಂದ್ರನ ಬೆಳಕು. "ತಂಗಾಳಿಯುಂ ತಿಂಗಳುಂ ಬನಮುಂ ಬೆಂಬಲಮಾಗಿ ತೀರ್ಚವೆ ಗಡಂ ಕೊಂಡುಗ್ಗಿಯಂ ಸುಗ್ಗಿಯೊಳ್" ಎಂಬ ಮಾತು ರನ್ನನ 'ಅಜಿತಪುರಾಣ'ದ್ದು. "ತಿಂಗಳ ಸೊಂಪು ಪುಷ್ಪಬಾಣದ ಪೊದೆ" ಎಂಬುದು ಮಧುರಕವಿಯ 'ಧರ್ಮನಾಥಪುರಾಣ'ದ್ದು. ಚಂದ್ರನ ಬೆಳಕು ಬೆಳ್ಳಗಿರುವುದರಿಂದಾಗಿ ಅದು ಬೆಳುದಿಂಗಳು, ಬೆಳ್ದಿಂಗಳು ಎಂದೂ ಕರೆಯುವುದು ವಾಡಿ. "ಬೆಳ್ದಿಂಗಳೆಂಬೊಂದು ಪಂಬಲ ಬಂಬಲ್ಗೆಡೆಯಾಗೆ" ಎಂಬುದು 'ಪಂಪಭಾರತ'ದ ವರ್ಣನೆ. ನೇಮಿಚಂದ್ರನ 'ಲೀಲಾವತಿ'ಯಲ್ಲಿ "ಬೆಳ್ದಿಂಗಳ ಬೆಳತಿಗೆಯಂ ಪಂಸೆ ಪಾಲ್ಗೆತ್ತು ಸಾರ್ದಪ್ಪುದೋ" ಎಂಬ ವರ್ಣನೆಯಿದೆ. "ಸುಳಿದು ಬೀಸುವ ಗಾಳಿ ಉರಿಯಾಯಿತ್ತವ್ವ, ಬೆಳುದಿಂಗಳು ಬಿಸಿಲಾಯಿತ್ತು ಕೆಳದಿ" ಎಂಬ ಮಾತು ಚೆನ್ನಮಲ್ಲಿಕಾರ್ಜುನನ ವಿರಹದಲ್ಲಿ ಬೆಂದ ಮಹಾದೇವಿಯಕ್ಕನ ಚೀತ್ಕಾರ. "ಮೇಘವೇ ಜಡೆ ಬೆಳುದಿಂಗಳೇ ವಿಭೂತಿ ಪರ್ವತಂಗಳೇ ರುದ್ರಾಕ್ಷಿ" ಎಂಬ ಅದ್ಭುತ ಚಿತ್ರ ಆದಯ್ಯನ ವಚನವೊಂದರಲ್ಲಿದೆ. 'ಬೆಳುದಿಂಗಳ ನೋಡಾ' ಎಂಬ ಬೇಂದ್ರೆಯವರ ಒಂದು  ಪ್ರಸಿದ್ಧ ಕವನವಿದೆ. 'ಬೆಳ್ದಿಂಗಪ್ಪನ ಪೂಜೆ' ಎಂಬ ಜಾನಪದ ಗೀತೆ ಪ್ರಸಿದ್ಧವಾಗಿದೆ. ಚಕೋರವನ್ನು 'ಬೆಳದಿಂಗಳ ಹಕ್ಕಿ' ಎನ್ನುವುದುಂಟು. 'ಬೆಳುದುಂಗಳೂಟ' ಹಿಂದೆಲ್ಲ ಜನಪ್ರಿಯವಾಗಿತ್ತು. 'ಬೆಳುದಿಂಗಳು' ಎಂಬ ಶಬ್ದಕ್ಕೆ ವಿರುದ್ಧವಾಗಿ ಕುವೆಂಪು 'ಕದ್ದಿಂಗಳು' ಶಬ್ದವನ್ನು ಸೃಷ್ಟಿಸಿಕೊಳ್ಳುತ್ತಾರೆ: "ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ" ಎಂಬುದು ಅವರ ಸಾಲು.
=====
ತಿಂಗಳು2: ಈಗ ತಿಂಗಳು ಶಬ್ದದ ಮತ್ತೊಂದು ಅರ್ಥದ ಬಗ್ಗೆ ಗಮನ ಹರಿಸೋಣ. ಚಂದ್ರನು ಕಾಣಿಸಿಕೊಂಡು ಬೆಳೆಯುತ್ತ ಪೂರ್ಣಗೊಂಡು ಮತ್ತೆ ಇಳಿಯುತ್ತ ಕಣ್ಮರೆಯಾಗುವ ಅವಧಿಯನ್ನು ಕನ್ನಡದಲ್ಲಿ ತಿಂಗಳು ಎನ್ನುತ್ತೇವೆ. ಇದು ರೂಢಿಗೆ ಬಂದಿರುವುದು ಪ್ರಾಯಶಃ ನಾವು ಚಾಂದ್ರಮಾನವನ್ನು ಅನುಸರಿಸಿ ಕಾಲಗಣನೆ ಮಾಡುವುದರಿಂದಾಗಿ. ಕ್ರಿಶ 800 ರ ಶಾಸನವೊಂದರಲ್ಲಿಯೇ ಈ ಅರ್ಥದಲ್ಲಿ ಈ ಶಬ್ದವನ್ನು ಬಳಸಲಾಗಿದೆ: "ಉಗ್ರಸೇನ ಗುರುವಡಿಗಳ್ ಒನ್ದು ತಿಙ್ಗಳ್ ಸನ್ಯಾಸನಂ ನೋನ್ತು". ಹಾಗೆಯೇ 'ವಡ್ಡಾರಾಧನೆ'ಯಲ್ಲಿ "ಇಂತು ವರ್ಷಾಕಾಲದ ನಾಲ್ಕು ತಿಂಗಳೊಳು ಮರ್ದನೂಡಿ" ಎಂಬ ಪ್ರಯೋಗವಿದೆ. "ಒಂದು ತಿಂಗಳು ಪಲವು ಮನ್ನಣೆಯಿಂದ ಮನ್ನಿಸಿ ತನ್ನ ಸೇನಾವೃಂದವನು" ಎಂಬುದು ಕುಮಾರವ್ಯಾಸನ ಮಾತು.  "ಹಿಂದಿರುಗಿ ಬಂದೆನ್ನನೊಂದೆ ಮಾತಿನಲಿ 'ತಿಂಗಳಾಯಿತೆ?' ಎಂದಳೆನ್ನ ಹೊಸಹುಡುಗಿ" ಎಂಬ ಸಾಲುಗಳು ಕೆಎಸ್ನ ಅವರ 'ತಿಂಗಳಾಯಿತೆ' ಕವನದ್ದು. ತಿಂಗಳು ಎಂಬುದನ್ನು ಮೂವತ್ತು ದಿವಸಗಳ ಅವಧಿ ಎಂಬುದರ ಜೊತೆಗೆ ಚೈತ್ರ ವೈಶಾಖ ಮುಂತಾದ ನಮ್ಮ ಮಾಸಗಳನ್ನು ಸೂಚಿಸುವಂತೆಯೇ ಜನವರಿ ಫೆಬ್ರವರಿ ಮುಂತಾದ ಇಂಗ್ಲಿಷ್ ಮಾಸಗಳನ್ನು ಸೂಚಿಸಲೂ ಬಳಸುತ್ತೇವೆ.
ಈ ಎರಡೂ ಅರ್ಥಗಳ ಶ್ಲೇಷೆಯನ್ನು ಅನೇಕ ಕಡೆಗಳಲ್ಲಿ ಕಾಣಬಹುದು. ಬ್ರಹ್ಮಶಿವನ 'ಸಮಯ ಪರೀಕ್ಷೆ'ಯಲ್ಲಿ ಇಂತಹ ಪ್ರಯೋಗವಿದೆ. "ತಿಂಗಳ್ವರಂ ಅಮೃತಮಂ ಆ ತಿಂಗಳ್ ಸುರಿದಪುದೆ ಬಯಸಿ ನೋಡುವರೆಲ್ಲಂ ತಿಂಗಳೊಳ್ ಒಂದು ದಿನಂ ಚೌತಿಯೊಳೆ ವಿಷಮನುಗುಳೞ್ವುದೆ ನೋಡಲ್". ಹಾಗೆಯೇ "ತಿಂಗಳ ಸಿರಿಯಿದು ಮುನ್ನಮೆ ತಿಂಗಳ ಸಿರಿಯಲ್ತು ಪಕ್ಷಮೆಂಬಾ ಪಕ್ಷಂ ಸಂಗತಿವಡೆಯದು ಪಗಲೀ ಭಂಗಿ ದಲದಱದವಾರೋ ನೆರೆಸಿರಿಯೆಱೆಯರ್" ಎಂಬುದು 'ಚಂದ್ರಪ್ರಭ ಪುರಾಣ'ದ ಅಗ್ಗಳನ ಚಮತ್ಕಾರದ ಮಾತು. ಬೇಂದ್ರೆಯವರಂತೂ ಇಂತಹುದಕ್ಕೆ ಖ್ಯಾತರಾದವರು. ಅವರ 'ಅನಂತ ಪ್ರಣಯ' ಎಂಬ ಗೀತೆಯಲ್ಲಿ "ಭೂರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ನವೆಯುತಿದೆ" ಎಂಬ ಸಾಲು ಇಂತಹ ಶ್ಲೇಷೆಯುಳ್ಳದ್ದು.
ನಿರಂತರತೆಯನ್ನು ಸೂಚಿಸಲು ಈ ಶಬ್ದದ ದ್ವಿರುಕ್ತಿಯನ್ನು ಬಳಸುವುದು ರೂಢಿ: "ಸ್ಥಳದ ಹೆಜ್ಜುಂಕದಲ್ಲಿ ತಿಂಗಳ್ ತಿಂಗಳ್ಗೆ ಕೊಟ್ಟ ಗದ್ಯಾಣ 1" ಎಂಬ ಮಾತು ಹನ್ನೆರಡನೆಯ ಶತಮಾನದ ಶಾಸನವೊಂದರಲ್ಲಿ ಬಂದಿರುವ ಸಾಲು. ತಿಂಗಳ ಲೇಖೆ ಎಂದರೆ ಚಂದ್ರನ ಕಲೆ: "ತಿಂಗಳ ಲೇಖೆಯಂ ಬಿಡದೆ ಗೂಡಿವಂಗೆ ಮಹೇಶ್ವರಂಗೆ" (ಸೋಮದೇವನ 'ಉದ್ಭಟಕಾವ್ಯ'). 'ತಿಂಗಳುಗಟ್ಟಲೆ' 'ತಿಂಗಳುವಾರು' 'ತಿಂಗಳೊಪ್ಪತ್ತು' ಮುಂತಾದ ಮಾತುಗಳೂ ದಿನನಿತ್ಯದ ಪ್ರಯೋಗದಲ್ಲಿ ಹೇರಳವಾಗಿವೆ.
=====
ತಿಪ್ಪೆ: ಈ ದ್ರಾವಿಡ ಶಬ್ದವು ತಮಿಳಿನಲ್ಲಿ 'ತಿಪ್ಪೈ' ಎಂದೂ, ತೆಲುಗಿನಲ್ಲಿ 'ತಿಪ್ಪ' ಎಂದೂ, ತುಳುವಿನಲ್ಲಿ 'ತಿಪ್ಪೆ' ಎಂದೂ ಬಳಕೆಯಲ್ಲಿದೆ. ಇದರ ಅರ್ಥ ರಾಶಿ, ಗುಡ್ಡ ಎಂದರ್ಥ ('ದಿಬ್ಬ' ಎಂಬುದು ಇದಕ್ಕೆ ಸಂಬಂಧಿಸಿದ ಶಬ್ದ). ಆದರೆ ಈಗ ಈ ಶಬ್ದಕ್ಕಿರುವ ಅರ್ಥ ಕಸದ ರಾಶಿ ಅಥವಾ ಸಗಣಿ ರಾಶಿ ಎಂದು. ತಿಪ್ಪೆಗುಂಡಿ ಎಂದರೆ ಕಸ ಅಥವಾ ಸಗಣಿ ಹಾಕುವ ಗುಂಡಿ ಎಂದರ್ಥ. ಕಸದ ರಾಶಿ ಎಂಬರ್ಥದಲ್ಲಿ ನಯಸೇನನ 'ಧರ್ಮಾಮೃತ'ದಲ್ಲಿ ಈ ಶಬ್ದ ಬಳಕೆಯಾಗಿದೆ: "ವಾರಿಜಷಂಡಮಂ ಪದೆದು ಪೊರ್ದುವವೋಲ್ ಕಳಹಂಸೆ ತಿಪ್ಪೆಯಂ".
ಹಲವು ಮಕ್ಕಳು ಹುಟ್ಟಿ ಬಹುಬೇಗ ತೀರಿಕೊಂಡರೆ, ಮುಂದೆ ಆಗುವ ಮಗುವಿಗೆ, ತಿಪ್ಪೆಯ ಮೇಲೆ ಗಿಡವು ದೈವಕೃಪೆಯಿಂದ ಯಾರ ಹಂಗಿಗೂ ಒಳಗಾಗದೆ ಬೆಳೆಯುವ ರೀತಿಯಲ್ಲಿ ಈ ಮಗುವಾದರೂ ಬದುಕಿಕೊಳ್ಳಲಿ ಎಂಬ ಆಶಯದಿಂದ, ತಿಪ್ಪೆ ಹೆಸರನ್ನಿಡುವ ರೂಢಿಯಿದೆ. ಪ್ರಾಯಶಃ ಈ ರೂಢಿ ತುಂಬ ಹಳೆಯದೆಂದು ಕಾಣುತ್ತದೆ. ಏಕೆಂದರೆ ತಿಪ್ಪಣ್ಣ, ತಿಪ್ಪಯ್ಯ ಎಂಬ ಹೆಸರುಗಳು ಒಂಬತ್ತನೆಯ ಶತಮಾನದಿಂದಲೇ ಶಾಸನಗಳಲ್ಲಿ ದೊರೆಯುತ್ತವೆ. ಅಥವಾ ತಿಪ್ಪೆ ಎಂದರೆ ಬೂದಿಯ ರಾಶಿ ಎಂದು ಅರ್ಥೈಸಿ, ತಿಪ್ಪ ಎಂದರೆ ಅದರ ಮೇಲಿರುವವನು, ಶಿವ ಎಂಬ ಎಂದಾಗಿದೆಯೇ ಅಥವಾ ತಿರಿಪೆಯೇ ತಿಪ್ಪೆ ಎಂದಾಗಿ, ಶಿವ ಭಿಕ್ಷುಕನಾದ್ದರಿಂದ ಅವನಿಗೆ ಈ ಹೆಸರು ಬಂತೋ! ಇದಕ್ಕೆ ಸಮರ್ಥನೆಯಾಗಿ ತಿಪ್ಪೆ ಎಂಬುದು ಕೆಲವೆಡೆ 'ತಿರ್ಪೆ' ಎಂಬ ರೂಪದಲ್ಲಿಯೂ ದೊರೆಯುತ್ತದೆ: 'ತಿರ್ಪೆಸುಂಕ' (ಗೊಬ್ಬರದ ಗುಂಡಿಯ ಮೇಲೆ ಹಾಕುವ ಸುಂಕ)ದ ಪ್ರಸ್ತಾಪ  ಹದಿಮೂರನೆಯ ಶತಮಾನದ ಶಾಸನದಲ್ಲಿ ಉಲ್ಲೇಖವಾಗಿದೆ. ಹೀಗಾಗಿದ್ದರೆ ಮೊದಲು ತಿರ್ಪೆ ಎಂಬ ರೂಪ ದೊರೆತು, ಆ ಬಳಿಕ ತಿಪ್ಪೆ ರೂಪ ದೊರೆಯಬೇಕಾಗಿತ್ತು. ಅಲ್ಲದೆ, ಇತರ ದ್ರಾವಿಡ ಭಾಷೆಗಳಲ್ಲಿ ರೇಫವಿಲ್ಲ. ಆದ್ದರಿಂದ ಇದು ಹಿಂರಚನೆ (ಬ್ಯಾಕ್ ಫಾರ್ಮೇಷನ್) ಆಗಿರಬಹುದು. ಈಗಲೂ ಈ ಮೇಲೆ ಹೇಳಿದ ಹೆಸರುಗಳ ಜೊತೆಗೆ ತಿಪ್ಪೇಸ್ವಾಮಿ, ತಿಪ್ಪೇರುದ್ರಸ್ವಾಮಿ ಮುಂತಾದವು ಜನಜನಿತ ಹೆಸರುಗಳಾಗಿವೆ. ಚಿತ್ರದುರ್ಗ ಜಿಲ್ಲೆಯ ನಾಯಕನ ಹಟ್ಟಿಯ ತಿಪ್ಪೇಸ್ವಾಮಿ ಎಂಬ ದೈವ ಹಲವರ ಆರಾಧ್ಯ ದೈವ. ಊರುಗಳ ಹೆಸರಲ್ಲೂ ಈ ಶಬ್ದ ಬಳಕೆಯಾಗುತ್ತದೆ: ತಿಪ್ಪೆಯೂರ್ ಎಂಬ ಹೆಸರು ಹತ್ತನೆಯ ಶತಮಾನದ ಶಾಸನದಲ್ಲಿಯೇ ಸಿಕ್ಕುತ್ತದೆ. ತಿಪ್ಪೆಗೊಂಡನಹಳ್ಳಿ ಈಗಲೂ ಇದೆ.
'ತಿಪ್ಪೆ ಕೆದಕು' ಎಂಬ ನುಡಿಗಟ್ಟಿಗೆ ಹಳೆಯದನ್ನು ಹೊರತೆಗೆ ಎಂದರ್ಥವಿದೆ. 'ತಿಪ್ಪೆ ಸಾರಿಸು' ಎಂದರೆ ಸರಿಯಾದ ಉತ್ತರವೀಯದೆ ವಿಷಯವನ್ನು ಮರೆಮಾಚುವುದು ಎಂಬರ್ಥದಲ್ಲಿ ಬಳಕೆಯಾಗುತ್ತದೆ.
=====
ತೊಗರಿ ನಮ್ಮದೇ ಅಥವಾ ಎರವಲು ತಂದದ್ದೆ?
ಪ್ರತಿನಿತ್ಯ ನಮ್ಮ ಮನೆಗಳಲ್ಲಿ ತೊಗರಿಯಿಲ್ಲದೆ ಅಡುಗೆಯೇ ಇಲ್ಲ; ಸಾರು, ಹುಳಿ, ತೊವ್ವೆ ಅಥವಾ ಹಬ್ಬದ ದಿನ ಒಬ್ಬಟ್ಟಿನ ಹೂರಣ ಇವೆಲ್ಲಕ್ಕೂ ನಾವು ಬಳಸುವುದು ತೊಗರಿ ಬೇಳೆಯನ್ನು, ಕೆಲವು ವೇಳೆ ಹಸಿ ತೊಗರಿ ಕಾಯನ್ನೂ ಹುಳಿ ಮಾಡಲು ಬಳಸುತ್ತೇವೆ. ಇದರಲ್ಲಿ ಹೆಚ್ಚು ಪ್ರೊಟೀನ್ ಇದೆ. ತೊಗರಿಗೆ ಸಸ್ಯವಿಜ್ಞಾನದಲ್ಲಿ ಲ್ಯಾಟಿನ್ನ Cajanus cajan ಎಂದು ಹೆಸರು. ಹಿಂದೆ ಇದನ್ನು ಆ ವಿಜ್ಞಾನದಲ್ಲಿ cajanus indicus ಅಥವಾ Cajanus indica ಎನ್ನುತ್ತಿದ್ದರು. ಇಂಗ್ಲಿಷಿನಲ್ಲಿ ಈ ಸಸ್ಯವನ್ನು pigeon pea ಎನ್ನುತ್ತಾರೆ. ಆದರೆ ಖ್ಯಾತ ಸಸ್ಯವಿಜ್ಞಾನಿಗಳಾಗಿದ್ದ ಬಿ.ಜಿ.ಎಲ್. ಸ್ವಾಮಿ ಅವರು ಇದು ನಮ್ಮ ದೇಶದ್ದಲ್ಲವೇ ಅಲ್ಲ ಎಂದು ವಾದಿಸಿದರು: ಮೂವತ್ತಮೂರು ವರ್ಷಗಳ ಹಿಂದೆ ಪ್ರಕಟವಾದ ತಮ್ಮ 'ತಮಿಳು ತಲೆಗಳ ನಡುವೆ' ಎಂಬ ಪುಸ್ತಕದಲ್ಲಿ, ಬೇರಾವುದೋ ಒಂದು ವಿಷಯದ ಬಗ್ಗೆ ಬರೆಯುತ್ತ ಅವರು ಇದು "ಆಫ್ರಿಕ ಖಂಡದಿಂದ ಪೂರ್ಚುಗೀಸರು ಕ್ರಿ.ಶ. ಹದಿನಾರನೆಯ ಶತಮಾನದಿಂದೀಚೆಗೆ ತಂದದ್ದು. ಅದು ಹೇಗೋ ನಮ್ಮ ನಾಲಗೆ ತೊಗರಿ ಬೇಳೆಯ ರುಚಿಗೆ ಒಗ್ಗಿಬಿಟ್ಟಿತು" ಎನ್ನುತ್ತಾರೆ. ಆದರೆ ಈ ಶಬ್ದದ ಬೆನ್ನು ಹತ್ತಿ ಹೋದಾಗ ಅದು ನಮ್ಮ ಪ್ರಾಚೀನ ಕನ್ನಡ ಗ್ರಂಥಗಳಲ್ಲಿಯೂ ಸಾಕಷ್ಟು ಬಳಕೆಯಲ್ಲಿದ್ದ ಶಬ್ದವೆಂದು ಗೊತ್ತಾಗುತ್ತದೆ.
ಈ ಶಬ್ದ ಕನ್ನಡದಲ್ಲಿ ತೊವರಿ, ತುವರಿ, ತೊಗರಿ ಎಂಬ ರೂಪಗಳಲ್ಲಿ ಬಳಕೆಯಾಗಿದೆ; ಈಗ ತೊಗರಿ ಎಂಬ ರೂಪ ಸಾರ್ವತ್ರಿಕವಾಗಿದೆ. ತಮಿಳಿನಲ್ಲಿ ತುವರೈ, ತುಳುವಿನಲ್ಲಿ ತೊಗರಿ ಅಥವಾ ತೊಗರೆ, ಮಲಯಾಳಂನಲ್ಲಿ ತೋರಿ ಹಾಗೂ ತೆಲುಗಿನಲ್ಲಿ ತೊಗರಿ, ತೊಗರು, ತೊಗರಿ ಎಂಬ ರೂಪಗಳಲ್ಲಿ ಬಳಕೆಯಲ್ಲಿದೆ (ಈ ಬೇಳೆಗೆ ತೆಲುಗಿನಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವುದು ಕಂದುಲು ಎಂದು). "ಈ ಪಯಿರು ನಮ್ಮಲ್ಲಿದ್ದುದಾಗಿ ಸಾಹಿತ್ಯದಲ್ಲಾಗಲೀ ಶಾಸನದಲ್ಲಾಗಲೀ ದಾಖಲೆಯಲ್ಲಿಲ್ಲ" ಎಂದಿದ್ದಾರೆ ಸ್ವಾಮಿ ಅವರು. ಆದರೆ ಕ್ರಿ.ಶ. 1025 ರಲ್ಲಿ ರಚಿತವಾದ ಚಾವುಂಡರಾಯನ 'ಲೋಕೋಪಕಾರಂ' ಗ್ರಂಥದಲ್ಲಿನ 'ಸೂಪಶಾಸ್ತ್ರಂ' ಎಂಬ ಅಧ್ಯಾಯಲಿಲ್ಲಲ್ಲದಿದ್ದರೂ 'ನರಾದಿವೈದ್ಯಪ್ರಕರಣಂ' ಎಂಬ ಅಧ್ಯಾಯದಲ್ಲಿ "ತೊವರಿ ಗೋದುವೆ ಜೋಳಮುರ್ದ್ದು ಪೆಸರ್ ಮಸೂರಿಗೆ ಗುಂಜಿಯೆಂಬಿವಱೊಂದಱೊಳಾದ ತೈಲ"ವನ್ನು ವಿಶಿಷ್ಟ ರೀತಿಯಲ್ಲಿ ಮಾಡಿ ಹಚ್ಚಿದರೆ ತುರಿ ವಾಸಿಯಾಗುತ್ತದೆ ಎಂದಿದ್ದಾನೆ. ಇಲ್ಲಿ ತೊವರಿ ಧಾನ್ಯ ಎಂಬುದು ಸ್ಪಷ್ಟವಾಗಿದೆ. ಸ್ವಾಮಿಯವರು "ಸೂಪಶಾಸ್ತ್ರಗಳಲ್ಲೂ ಇದರ ಉಲ್ಲೇಖವಿಲ್ಲ" ಎಂದಿದ್ದಾರೆ. ಆದರೆ ಎರಡನೇ ನಾಗವರ್ಮನು (ಇವನ ಕಾಲವೂ ಹನ್ನೊಂದನೇ ಶತಮಾನ) 'ಕಾವ್ಯಾವಲೋಕನ' ಎಂಬ ತನ್ನ ಗ್ರಂಥದಲ್ಲಿನ 'ಶಬ್ದಸ್ಮೃತಿ' ಎಂಬ ಭಾಗದ ವ್ಯಾಕರಣ ಸೂತ್ರವೊಂದಕ್ಕೆ ಉದಾಹರಣೆಯಾಗಿ ನೀಡಿರುವ (ತನಗಿಂತ ಹಿಂದೆ ಇದ್ದ ಗ್ರಂಥವೊಂದರಿಂದ ಆಯ್ದ) ಪದ್ಯ ಹೀಗಿದೆ: "ತುೞಿಕಲಡುಗೆಗಳೊಳೇಂ ಪೞಗೞವೆಯ ಕೂಳ್ ತಿವುಡುಗೞಿದ ತೊವರಿಯ ತೊವೆ ಕಾಯ್ದಿೞಿಪಿದ ತುಪ್ಪಂ ಕೋಡುವ ಕೞಲಲ್ಲದೆ ದಿವ್ಯಭೋಜನಂ ಪೆಱತುಂಟೇ" (ರುಚಿಯಿಲ್ಲದ ಅಡುಗೆಯಿಂದೇನು, ಹಳೆಯ ಅಕ್ಕಿಯಿಂದ ಮಾಡಿದ ಅನ್ನ, ಹೊಟ್ಟು ತೆಗೆದ ತೊಗರಿ (ಬೇಳೆಯ) ತೊವ್ವೆ, ಕಾಸಿದ ತುಪ್ಪ ಹಾಗೂ ತಂಪಾದ ಮೊಸರಲ್ಲದೆ ಬೇರೆ ಒಳ್ಳೆಯ ಊಟವಿದೆಯೇ!) ಎಂದು ಬಾಯಿ ಚಪ್ಪರಿಸುತ್ತ ಕೇಳುತ್ತಾನೆ. (ಈ ಪದ್ಯ ಹದಿಮೂರನೇ ಶತಮಾನದ 'ಸೂಕ್ತಿಸುಧಾರ್ಣವ' ಎಂಬ ಗ್ರಂಥದಲ್ಲೂ ಇದೆ). ಇದೇ ನಾಗವರ್ಮನ ಇನ್ನೊಂದು ಕೃತಿ 'ಅಭಿಧಾನ ವಸ್ತುಕೋಶ' ಎಂಬ ನಿಘಂಟುವಿನಲ್ಲಿ "ತುವರ್ಯಾಢಕಿ" (ತುವರಿ=ಆಢಕಿ) ಎಂದು ಸಮಾನಾರ್ಥಕಗಳಾಗಿ ಕೊಡುತ್ತಾನೆ. ಅಂದರೆ ಒಬ್ಬನೇ ತೊವರಿ, ತುವರಿ ಎರಡೂ ರೂಪಗಳನ್ನು ಬಳಸುತ್ತಾನೆ.
ತೊಗರಿ ಎಂಬ ರೂಪವೂ ಹಿಂದಿನ ಕಾಲದಿಂದಲೇ ಬಳಕೆಯಲ್ಲಿದೆ; ಕ್ರಿ.ಶ. 1159 ರ ಒಂದು ಶಾಸನದಲ್ಲಿ "ದೇವರ್ಗ್ಗೆ .. .. ಕಡಲೆ ತೊಗರಿಯಾದಿಯಾಗಿ ಸಲುವುದು" ಎಂದಿದೆ. ಹದಿಮೂರನೆಯ ಶತಮಾನದ ಪ್ರಸಿದ್ಧ ಕವಿ ಹರಿಹರನ 'ಬಸವರಾಜದೇವರರಗಳೆ'ಯಲ್ಲಿ ರಾಶಿಗಟ್ಟಲೆ ಕನಕರತ್ನಗಳನ್ನು ಬೇಡಿ ಬಸವಣ್ಣನನ್ನು ಪರೀಕ್ಷಿಸಲು ಬಂದ ಮಹದೇವಿಸೆಟ್ಟಿ ಎಂಬುವವನು ಅವನನ್ನು ಕಂಡೊಡನೆ ತಾನೇ ಬೆದರಿ "ಮೂವತ್ತೆತ್ತಿನೊಳ್ ಜೋಳದಕ್ಕಿ ಕಡಲೆ ತೊಗರಿಗಳಂ ತೀವೆ ಕೊಡುವುದು" ಎಂದು ಕೇಳುತ್ತಾನೆಂಬ ಪ್ರಸಂಗವಿದೆ. ಕ್ರಿ. ಶ. ಹದಿನೈದನೆಯ ಶತಮಾನದ ಮೂರನೆಯ ಮಂಗರಾಜನೆಂಬ ಕವಿ ಮಿಕ್ಕ ಗ್ರಂಥಗಳ ಜೊತೆಗೆ  'ಸೂಪಶಾಸ್ತ್ರ'ವೊಂದನ್ನೂ (ಅಡುಗೆ ಕಲೆ) ಬರೆದಿದ್ದಾನೆ. ಆದರೆ ತನ್ನ ಬೇರೊಂದು ಕಾವ್ಯವಾದ 'ನೇಮಿಜಿನೇಶ ಸಂಗತಿ'ಯಲ್ಲಿ "ಸಣ್ಣಗಳ ಮೇಲೋಗರ ತೊಗರಿಯ ತೋಯೆ ಬೆಣ್ಣೆಗಾಸಿದ ತುಪ್ಪವೆಱೆದು ಅಣ್ಣಂದಿರಂ ಬನ್ನಿ" ಎಂದು ಕರೆಯುವ ಉಲ್ಲೇಖವಿದೆ. ಹೀಗೆಯೇ ಆನಂತರದ ಗ್ರಂಥಗಳಲ್ಲಿಯೂ ಈ ಬೇಳೆಯ ಉಲ್ಲೇಖ ಸ್ಪಷ್ಟವಾಗಿದೆ; ಅದು ವ್ಯಾಪಕವಾಗಿ ಬಳಕೆಯಲ್ಲಿತ್ತೆಂಬುದಕ್ಕೆ ಸಾಕ್ಷಿಯಾಗಿದೆ.
ಸ್ವಾಮಿಯವರು ತಮ್ಮ ಲೇಖನದಲ್ಲಿ "ಸಂಸ್ಕೃತದ ತುಬರಿಕಾ ಎಂಬ ಸಮಾನಾರ್ಥದ ಪದ ಈಚೀಚೆಗೆ ಹುಟ್ಟಿಕೊಂಡದ್ದು" ಎನ್ನುತ್ತಾರೆ. ಆದರೆ ತುವರೀ ಮತ್ತು ತುವರಿಕಾ ಎಂಬ ಶಬ್ದಗಳು 'ಅಮರಕೋಶ'ದಲ್ಲಿ ಸಿಕ್ಕುತ್ತವೆ. ಹಿಂದೆ ಅದಕ್ಕೆ 'ಆಢಕಿ' ಎಂಬ ಹೆಸರೂ ಇತ್ತು. ನಾಗವರ್ಮ ತುವರಿಗೆ ಆಢಕಿಯನ್ನು ಸಮಾನಾರ್ಥಕವಾಗಿ ಹೇಳಿರುವುದನ್ನು ಈ ಹಿಂದೆಯೇ ಗಮನಿಸಿದ್ದೇವೆ. ಸರ್ ಮೊನಿಯೇರ್ ವಿಲಿಯಮ್ಸ್ ಅವರು ತಮ್ಮ ಸಂಸ್ಕೃತ-ಇಂಗ್ಲಿಷ್ ನಿಂಟುವಿನಲ್ಲಿ ಆಢಕ ಶಬ್ದವನ್ನು ಕೊಟ್ಟು ಅದಕ್ಕೆ the pulse Cajanus Indicus Spreng ಎಂಬ ಅರ್ಥವನ್ನಿತ್ತು, ಈ ಶಬ್ದದ ಆಕರವೆಂದು ಸುಶ್ರುತ ಸಂಹಿತೆಯನ್ನು ಉಲ್ಲೇಖಿಸುತ್ತಾರೆ. ಭಾರತ ಸರ್ಕಾರದ 'ಆಯುರ್ವೇದಿಕ್ ಫಾರ್ಮಕೋಪಿಯ ಆಫ್ ಇಂಡಿಯ'ದಲ್ಲಿ ಆಢಕಿಯಿಂದ ಕಿಂಕಾಯಣ ಘುಟಿಕಾ ಎಂಬ ಔಷಧಿಯನ್ನು ತಯಾರಿಸುವ ಬಗ್ಗೆ ವಿವರವಿದೆ.
ತೊಗರಿಯಲ್ಲಿ ಎರಡು ಪ್ರಭೇದಗಳ ಉಲ್ಲೇಖವೂ ನಮ್ಮ ಬರವಣಿಗೆ ಮತ್ತು ಆಡುಮಾತುಗಳಲ್ಲಿ ರೂಢಿಯಲ್ಲಿದೆ. ಅವೆಂದರೆ ಅಚ್ಛತೊಗರಿ ಮತ್ತು ಕಾಡು ತೊಗರಿ. ವಿಶೇಷಣಗಳೇ ಸೂಚಿಸುವಂತೆ ಇವು ಹೊಲದಲ್ಲಿ ಬೆಳೆದ ಹಾಗೂ ಕಾಡಿನಲ್ಲಿ ಬೇಸಾಯವಿಲ್ಲದೆ ಬೆಳೆದ ಪ್ರಭೇದಗಳನ್ನು ಸೂಚಿಸುತ್ತವೆ. (ಕಾಡುತೊಗರಿ ಎಂಬುಕ್ಕೆ ಕಿಟೆಲ್ Atylosia candollei ಎಂಬ ಲ್ಯಾಟಿನ್ ಸಸ್ಯವೈಜ್ಞಾನಿಕ ಹೆಸರು ನೀಡುತ್ತಾರೆ). ತೆಲುಗಿನಲ್ಲಿ ಇವನ್ನು ಕೊಂಡಕಂದುಲು ಮತ್ತು ಪೊಟ್ಟಿಕಂದುಲು ಎನ್ನುತ್ತಾರೆ. ದ್ರಾವಿಡ ಭಾಷೆಗಳಲ್ಲಿ ಒಂದಾದ ತೊದವ (ತೋಡ)ದಲ್ಲಿ ತಿಫಿನಿ ಎಂಬುದು ಕಾಡು ತೊಗರಿಗಿರುವ ಹೆಸರೆಂದು (Atylosia candollei) ಟಿ. ಬರೋ ಮತ್ತು ಎಂ. ಬಿ ಎಮೆನೂ ತಮ್ಮ 'ಎ ದ್ರವಿಡಿಯನ್ ಎಟಿಮೊಲಾಜಿಕಲ್ ಡಿಕ್ಷನರಿ'ಯಲ್ಲಿ ಹೇಳುತ್ತಾರೆ. ಅಲ್ಲದೆ ತೊಗರಿಯ ಗಿಡವು ಹೊಲಗಳಲ್ಲಿ ಚಿಕ್ಕ ಪೊದೆಯಂತೆ ಬೆಳೆಯುವುದನ್ನೂ, ಮರದ ಹಾಗೆ ಬೆಳೆಯುವ ಪ್ರಭೇದವನ್ನೂ ನಾವು ನೋಡಿದ್ದೇವೆ.
ಸಸ್ಯವಿಜ್ಞಾನದಲ್ಲಿ ಇದರ ಬಗ್ಗೆ ಏನಿದೆಯೆಂದು ಪುಟಗಳನ್ನು ತಿರುವಿ ಹಾಕಿದಾಗ ಅನೇಕ ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದವು. ಇದರಲ್ಲಿ ಬೇಸಾಯ ಮಾಡುವ ಮತ್ತು ತಾನಾಗಿ ಬೆಳೆಯುವ Cajanus ಜಾತಿಯ ಮೂವತ್ತೆರಡು ಬಗೆಗಳನ್ನು ಸಸ್ಯಶಾಸ್ತ್ರಜ್ಞರು ಗುರುತಿಸುತ್ತಾರೆ. ಭಾರತ ಆಫ್ರಿಕದಂತಹ ಉಷ್ಣವಲಯವು ಇದರ ತವರು ತಾಣ. ಬರ್ಕ್ಹಿಲ್ ಎಂಬುವವರು ಭಾರತದ ಈ ಸಸ್ಯ ಕ್ರಿ.ಪೂ. ಮೂರನೆಯ ಶತಮಾನದ ಹೊತ್ತಿಗೆ ಮಲಯಕ್ಕೆ ಹೋಯಿತು, ಆನಂತರ ಇತರೆಡೆಗಳಿಗೆ ಹಬ್ಬಿತು ಎನ್ನುತ್ತಾರೆ. ಮೊದಲು ಇದು ಪ್ರಾಯಶಃ ಹೆಚ್ಚು ಬೆಳೆಯುತ್ತಿದ್ದುದು ದಕ್ಷಿಣ ಭಾರತದಲ್ಲೇ ಇರಬಹುದು. ಹಲವಾರು ಸ್ವತಂತ್ರ ಭಾಷೆಗಳಗಿ ಬೇರ್ಪಡುವ ಮುನ್ನ ಕ್ರಿ.ಪೂ. ಆರನೆಯ ಶತಮಾನದ ಹೊತ್ತಿಗಿದ್ದ ದ್ರಾವಿಡ ಭಾಷಾ ಸ್ವರೂಪವನ್ನು ಮೂಲದ್ರಾವಿಡ (Proto-Dravidian) ಎಂದು ಭಾಷಾವಿಜ್ಞಾನಿಗಳು ಕರೆಯುವುದು ರೂಢಿ. ಸುಪ್ರಸಿದ್ಧ ದ್ರಾವಿಡ ಭಾಷಾವಿಜ್ಞಾನಿಗಳಾಗಿದ್ದ ಭದ್ರಮರಾಜು ಕೃಷ್ಣಮೂರ್ತಿ ಅವರು ಮೂಲ ದ್ರಾವಿಡದಲ್ಲ್ಲಿ ತೊಗರಿಗೆ 'ತುವರ್' ಎಂಬ ರೂಪವಿದ್ದಿರಬೇಕೆಂದು ಅದನ್ನು ಪುನಾರಚಿಸಿರುವುದಾಗಿ 'Proto-Dravidian Agriculture' ಎಂಬ ತಮ್ಮ ಸಂಶೋಧನ ಲೇಖನದಲ್ಲಿ ಎಫ್.ಸಿ. ಸೌತ್‍ವರ್ತ್ ಎಂಬುವವರು ಉಲ್ಲೇಖಿಸುತ್ತಾರೆ.
ಸ್ವಾಮಿಯವರು ಹೇಳುವಂತೆ ತೊಗರಿ ಕೆಲವರಲ್ಲಿ ಶ್ರಾದ್ಧಕರ್ಮಗಳಲ್ಲಿ ನಿಷಿದ್ಧವಿರಬಹುದು. (ಹೀಗೆ ನಿಷಿದ್ಧಗೊಳ್ಳುವ ಧಾನ್ಯ ತರಕಾರಿಗಳನ್ನು 'ವಿಶ್ವಾಮಿತ್ರ ಸೃಷ್ಟಿ' ಎಂದು ಹೇಳುವುದನ್ನು ಕೇಳಿದ್ದೇವೆ, ಅಂದರೆ ಅವು 'ಬ್ರಹ್ಮಸೃಷ್ಟಿ'ಯಲ್ಲ, ಅರ್ಥಾತ್ ಸ್ಥಳೀಯವಾದದ್ದಲ್ಲ ಎಂಬುದು). ಆದರೆ ಅದಕ್ಕೆ ಕಾರಣ ಏನೋ ತಿಳಿಯದು. ಇಷ್ಟನ್ನು ಬಿಟ್ಟರೆ ತೊಗರಿ ನಮ್ಮದೇ, ಎರವಲು ತಂದದ್ದಲ್ಲ ಎಂಬುದು ರುಜುವಾತಾಗುತ್ತದೆ.
=====
ತೊತ್ತು: ಇದೊಂದು ದ್ರಾವಿಡ ಪದ; ಇದರ ಹಳಗನ್ನಡ ರೂಪ 'ತೊೞ್ತು' ಎಂದು. ತಮಿಳಿನಲ್ಲಿದು ತೊಳುತ್ತೈ, ತೊತ್ತು ಎಂಬ ರೂಪಗಳಲ್ಲಿಯೂ, ತೆಲುಗಿನಲ್ಲಿ ತೊತ್ತು ಎಂಬುದಾಗಿಯೂ ಸಿಕ್ಕುತ್ತದೆ. ಇದರ ಮೂಲ 'ತೊೞಿಲ್' ಎಂದರೆ ಕೆಲಸ (ಮಲಯಾಳಂ ಮತ್ತು ತುಳುಗಳಲ್ಲಿ ಕೆಲಸ ಎಂಬರ್ಥದಲ್ಲಿ ಈ ಶಬ್ದದ ಬಳಕೆಯಿದೆ). 'ತೊೞಿಲ್' ಅನ್ನು ಮಾಡುವವನೇ 'ತೊೞ್ತು'. ಈ ಶಬ್ದವು ಪುಲ್ಲಿಂಗ ಸ್ತೀಲಿಂಗಗಳೆರಡರಲ್ಲೂ ಒಂದೇ ಆಗಿದೆ: "ತೊೞ್ತೆಂದು ದಾಸನುಂ ದಾಸಿಯುಮಕ್ಕುಂ" ('ಶಬ್ದಮಣಿದರ್ಪಣ'). ತೊೞ್ತು ಮಾಡುವ ಕೆಲಸವೇ 'ತೊೞ್ತುವೆಸ' ("ಎನಗೆಡೆಮಡಗದೆ ಬೆಸಪ ತೊೞ್ತುವೆಸನಂ ಬೆಸಸಿಂ" - 'ಪಂಪಭಾರತ') ಅಥವಾ ತೊೞ್ತುಗೆಲಸ ("ತೊೞ್ತುಗೆಲಸಕ್ಕರಮನೆಯಂ ಪುಗುವ ಪೊಱಮಡುವ" - ದುರ್ಗಸಿಂಹನ 'ಪಂಚತಂತ್ರ').
ಆರ್ಥಿಕ ಅಥವಾ ಇತರ ಕಾರಣಗಳಿಗಾಗಿ ತನ್ನನ್ನು ಒಬ್ಬರಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವುದೇ ತೊತ್ತಿನ ಲಕ್ಷಣ. "ತೊತ್ತಿಂಗೆ ಲಕ್ಷಣವೇಕಯ್ಯ? ಅವರೊಕ್ಕುದನುಂಡು ಮಿಕ್ಕುದ ಕಾಯ್ದುಕೊಂಡಿಪ್ಪುದು" ಎಂಬುದು ಬಸವಣ್ಣನ ವಚನದ ಮಾತು. ಹಲವು ವೇಳೆ ಮಕ್ಕಳನ್ನು ತೊತ್ತುಗಳಾಗಿ ಬಿಡುತ್ತಿದ್ದರು. ಇಂತಹವರನ್ನು 'ಬೞಿದೊತ್ತುಕ' (ಬೞಿ=ವಂಶ) ಎನ್ನುತ್ತಿದ್ದರು. ಹರಿಹರನ 'ನಂಬಿಯಣ್ಣನ ರಗಳೆ'ಯಲ್ಲಿ "ತಾವಿವರ್ಗೆ ವಂಶಾವಳಿಯಲಿ ಬಂದ ಬಳಿದೊತ್ತಿರ ಮಕ್ಕಳಾದ ಕಾರಣ" ಎಂಬ ಮಾತಿದೆ.
ತೊತ್ತುಗಳ ಮೇಲೆ ಸಂಪೂರ್ಣ ಹಕ್ಕಿರುತ್ತಿದ್ದುದರಿಂದ ಒಡೆಯರು ಹೆಣ್ಣುದೊತ್ತುಗಳನ್ನು  ಲೈಂಗಿಕವಾಗಿಯೂ ಬಳಸಿಕೊಳ್ಳುತ್ತಿದ್ದುದರಿಂದ ಅಂತಹವರ ಮಕ್ಕಳನ್ನು 'ತೊೞ್ಪುಟ್ಟಿ' ಎನ್ನುತ್ತಿದ್ದರು ("ವಿದುರನೆಂಬೀ ತೊೞ್ಪುಟ್ಟಿಯ ಮನೆಯ ಕೂೞೆ ನುಡಿಯಿಸೆ" - 'ಪಂಪಭಾರತ'). ತೊತ್ತುಗಳನ್ನು ಕಾಣಿಕೆಯಾಗಿ ಕೊಡುವ ಪದ್ಧತಿ ತೀರ ಹಳೆಯದು. ರೆಬ್ಬಕಬ್ಬೆ ಎನ್ನುವವಳು ತನ್ನ ತೊತ್ತು ಮಾಚಬ್ಬೆಯನ್ನು ಸಕಳೇಶ್ವರ ದೇವರಿಗೆ (ದೇವಸ್ಥಾನದ ಕೆಲಸಗಳನ್ನು ಮಾಡಲು) ಕಾಣಿಕೆ ಕೊಟ್ಟ ಉಲ್ಲೇಖ 11ನೆಯ ಶತಮಾನದ ಶಾಸನವೊಂದರಲ್ಲಿದೆ.
"ಕೂರ್ಪ ತಾಯಂ ಮಾ ತೊತ್ತ ಕೊಂಬಂತೆಕ" ಎಂಬ ಗಾದೆಯ ಉಲ್ಲೇಖ ರಾಘವಾಂಕನ 'ಹರಿಶ್ಚಂದ್ರ ಕಾವ್ಯ'ದಲ್ಲಿದೆ. ತೊತ್ತುಗಳನ್ನು ಸಂತೆಯಲ್ಲಿ ಮಾರುತ್ತಿದ್ದ ಅಂಶ ಶಾಸನೋಕ್ತವಾಗಿದೆ. ಹರಿಶ್ಚಂದ್ರನು ತನ್ನ ಹೆಂಡತಿಯನ್ನು ಕಾಶಿಯ ಬ್ರಾಹ್ಮಣನೊಬ್ಬನಿಗೆ ಮಾರಿದ ಪ್ರಸಂಗವೂ ಅದೇ ಕಾವ್ಯದಲ್ಲಿದೆ.
=====
ದಂಡ: ಇದು ಸಂಸ್ಕೃತ ಶಬ್ದ. ದಂಡ ಎಂದರೆ ಕೋಲು. 'ಪಂಪಭಾರತ'ದಲ್ಲಿ ಉದ್ದವಾದ ಕೋಲನ್ನು 'ದಂಡಕಾಷ್ಠ' ಎಂದಿದ್ದರೆ ("ದಂಡಕಾಷ್ಠದ ತುದಿಯೊಳ್ ಪಳಂಚಲೆಯೆ ಕೋವಣಮಂ ಕಟ್ಟಿ"), ಚಿಕ್ಕ ಕೋಲನ್ನು 'ಸುಕುಮಾರ ಚರಿತೆ' ಯು 'ದಂಡಖಂಡ' ಎನ್ನುತ್ತದೆ. ("ದಂಡಖಂಡಾಘಾತದೊಳು"). ಬಂಧುವರ್ಮನ 'ಜೀವಸಂಬೋಧನೆ'ಯಲ್ಲಿ "ಊಱುವ ದಂಡವೆರಸು" ಎಂಬಲ್ಲಿ ಊರೆಗೋಲು ಸೂಚಿತವಾಗಿದೆ.
ತಕ್ಕಡಿಯ ಕೋಲನ್ನು 'ತುಲಾದಂಡ'ವೆನ್ನುತ್ತಿದ್ದರು. "ಧರೆಯಱಿಯಲೊಡಂ ತೂಗಲ್ ಧರೆಗೆ ತುಲಾದಂಡಮಲ್ತೆ ಮದ್ಭುಜದಂಡಂ" ಎಂಬ ಮಾತು 'ಆದಿಪುರಾಣ'ದಲ್ಲಿದೆ. ನಾಲ್ಕು ಮೊಳದ ಅಳತೆಯನ್ನು 'ವ್ಯವಹಾರ ಗಣಿತ'ವು ದಂಡ ಎಂಬ ಹೆಸರಿನಿಂದ ಕರೆಯುತ್ತದೆ. ಸನ್ಯಾಸಿಗಳು ಹಿಡಿದುಕೊಳ್ಳುವ ಕೋಲನ್ನೂ 'ದಂಡ' ಎಂಬ ಶಬ್ದವು ಸೂಚಿಸುತ್ತದೆ. ಹಾಗೆಯೇ ಅಧಿಕಾರದ ಸೂಚಕವಾಗಿ 'ದಂಡ' ಬಳಕೆಯಲ್ಲಿದೆ. ಸೈನ್ಯವನ್ನೂ 'ದಂಡ' ಎನ್ನುತ್ತಿದ್ದರು ("ನೃಪಸೇನೆಯೊಳಂ ದಂಡಂ" - 'ಅಭಿಧಾನ ವಸ್ತುಕೋಶ'). ಅದಕ್ಕೇ ಸೇನೆಯ ನಾಯಕನನ್ನು 'ದಂಡನಾಯಕ' ಅಥವಾ 'ದಂಡನಾಥ' ಎನ್ನುತ್ತಿದ್ದುದು.
ಪ್ರಾಯಶಃ ಕೋಲಿಗೂ ಹೊಡೆಯುವಿಕೆಗೂ ಇರುವ ಸಂಬಂಧದಿಂದಾಗಿ ದಂಡ ಎಂದರೆ ಶಿಕ್ಷೆ ಎಂಬರ್ಥ ಪ್ರಾಪ್ತವಾಗುತ್ತದೆ. ಮರಣದಂಡನೆಯನ್ನು ವಚನಗಳು 'ತಲೆದಂಡ' ಎನ್ನುತ್ತವೆ.  ಹೀಗೆ ಶಿಕ್ಷೆ ಕೊಡಬಲ್ಲ ಅಧಿಕಾರಿಯೇ ದಂಡಧರ ("ಮತ್ತಂ ದಂಡಧರರಿಲ್ಲದಂದು ತಂತಮ್ಮ ವೃತ್ತಿಗಳಂ ಪ್ರಜೆಗಳತಿಕ್ರಮಿಸಿ ನಡೆಗುಮೆಂದು" ಎಂಬುದು ಪಂಪನ 'ಆದಿಪುರಾಣ'ದ ಮಾತು. ಅತ್ಯಂತ ದೊಡ್ಡ ಶಿಕ್ಷೆಗಾರ ಯಮನಾದ್ದರಿಂದ ಅವನನ್ನು 'ದಂಡಪಾಣಿ' ಎನ್ನುತ್ತವೆ ಕಾವ್ಯಗಳು ("ಕೋದಂಡಪಾಣಿಗಳ್ ದಂಡಪಾಣಿಗೆಣೆಯೆನೆ ತಳರ್ದರ್" 'ಪಂಪರಾಮಾಯಣ'). ಶಿಕ್ಷಿಸುವ ಅಧಿಕಾರವೇ 'ದಂಡನೀತಿ' ಅಥವಾ ರಾಜನೀತಿ. "ನಿನ್ನ ದಂಡನೀತಿಯ ಪುದುವೆ ವಲಂ ದಂಡರತ್ನಮೆಂಬುದು ಪೆಱತೇ" ಎಂದೂ ಅಲ್ಲಿಯೇ ಬಳಕೆಯಾಗಿದೆ. ದಂಡನೆಗೊಳಗಾಗುವುದು 'ದಂಡಂಗೊಳ್ಳು'ವುದು ("ಲೆಂಕರ್ ದಂಡಗೊಂಡರಂತೆ ಶಂಕಿಸುತ್ತುಂ" - 'ಧರ್ಮಾಮೃತ'). ಜುಲ್ಮಾನೆಯನ್ನೂ ದಂಡ ಎಂಬ ಶಬ್ದವೇ ಸೂಚಿಸುತ್ತದೆ.
======
ದಿವ್ಯ: ಈ ಶಬ್ದವು ದೈವಕ್ಕೆ ಅಥವಾ ಸ್ವರ್ಗಕ್ಕೆ ಸಂಬಂಧಿಸಿದುದು ಎಂಬರ್ಥದ ಸಂಸ್ಕೃತ ವಿಶೇಷಣ. ಆದರೆ ಇದನ್ನು ಒಂದು ನಾಮಪದವಾಗಿ ಹಾಗೂ ಪರಿಭಾಷೆಯಾಗಿ ಬಳಸುವ ರೂಢಿಯು ಕನ್ನಡ ನಾಡಿನಲ್ಲಿ ಹಿಂದಿನಿಂದಲೂ ಇದೆ. ಅಪರಾಧವೊಂದು ನಡೆದರೆ ಅದನ್ನು ಸಾಬೀತುಪಡಿಸಲು ಸಾಕ್ಷ್ಯ ಬೇಕು. ಸಾಕ್ಷ್ಯಗಳು ಎರಡು ಬಗೆ: ಮಾನುಷ ಹಾಗೂ ದೈವ. ಅಪರಾಧವನ್ನು ಕಣ್ಣಾರೆ ಕಂಡವನು ಇಲ್ಲದಿದ್ದಾಗ ಹಿಂದಿನವರು ಮೊರೆಹೊಗುತ್ತಿದ್ದುದು ದಿವ್ಯಸಾಕ್ಷ್ಯವನ್ನು. ಇದನ್ನೇ 'ದಿವ್ಯ' ಅಥವಾ 'ದಿಬ್ಯ' ಎಂದು ಕರೆಯುವುದು (ಇಂಗ್ಲಿಷಿನಲ್ಲಿ ಆರ್ಡಿಯಲ್ ಎನ್ನುತ್ತಾರೆ). ರಾಜದ್ರೋಹ, ದೊಡ್ಡ ಪಾತಕಗಳು ಅಥವಾ ಭಾರಿ ಮೊತ್ತದ ಹಣ ವ್ಯವಹಾರದ ಮೋಸ ಇಂಥವುಗಳ ತೀರ್ಮಾನ ಮಾಡಲು ಮಾತ್ರವೇ 'ದಿವ್ಯ'ವನ್ನು ಆಧರಿಸಬೇಕು ಎಂದು 'ಅಗ್ನಿಪುರಾಣ'ವು ಹೇಳುತ್ತದೆ. ಕನ್ನಡದ ಕಾವ್ಯ ಶಾಸನಗಳಲ್ಲಿ ದಿವ್ಯದ ಉಲ್ಲೇಖಗಳನ್ನು ಹೇರಳವಾಗಿ ಕಾಣಬಹುದು.
ದಿವ್ಯಗಳಲ್ಲಿ ಎಷ್ಟು ವಿಧ ಹಾಗೂ ಅವುಗಳ ಸ್ವರೂಪದ ಬಗ್ಗೆ ಏಕಾಭಿಪ್ರಾಯವಿಲ್ಲ. ಐದರಿಂದ ಒಂಬತ್ತು ವಿಧಧ ದಿವ್ಯಗಳನ್ನು ವಿವಿಧ ಸ್ಮೃತಿಗಳು ಉಲ್ಲೇಖಿಸುತ್ತವೆ. ವಿಷ್ಣುಸ್ಮೃತಿಯು ದಿವ್ಯಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತದೆ: ಸಾಧಾರಣ ಮತ್ತು ಮುಖ್ಯ. ಮೊದಲನೆಯವು ಕೆಲವು ವಸ್ತುಗಳನ್ನು ಹಿಡಿದು ಪ್ರಮಾಣ ಮಾಡುವುದನ್ನು ಒಳಗೊಂಡರೆ, ಎರಡನೆಯದು ಕಷ್ಟಕರವಾದ ನಾನಾ ಬಗೆಯ ಪರೀಕ್ಷೆಗಳನ್ನು ಒಳಗೊಳ್ಳುವಂಥದು.
ಕನ್ನಡ ನಾಡಿನಲ್ಲಿ ಪ್ರಚಲಿತವಿದ್ದುದು ಮುಖ್ಯವಾಗಿ ಏಳು ಬಗೆಯ ದಿವ್ಯಗಳು ಎನ್ನಲಾಗಿದೆ. ಅವುಗಳೆಂದರೆ ಕೋಶ, ರವಿ, ತಂಡುಲ, ಅಗ್ನಿ, ತಪ್ತಮಾಷ, ಜಲ ಮತ್ತು ವಿಷ. ಹಲ್ಲು ಕೀಳದ ಸರ್ಪವನ್ನು ಹಿಡಿದುಕೊಂಡರೂ ಅದು ಕಚ್ಚದಿದ್ದರೆ ಅಂಥವನು ನಿರಪರಾಧಿ; ಈ 'ಸರ್ಪದಿವ್ಯ'ದ ಉಲ್ಲೇಖ ಬಸವಣ್ಣನ ವಚನವೊಂದರಲ್ಲಿದೆ. ಅಂತೆಯೇ ಕೆಂಪಗೆ ಕಾದ ಪಂಚಲೋಹದ ಗುಂಡು ಅಥವಾ ಕಬ್ಬಿಣದ ಗುಳವನ್ನು ಹಿಡಿದುಕೊಳ್ಳುವ ಅಗ್ನಿದಿವ್ಯದ ಪ್ರಸ್ತಾಪ ರಾಘವಾಂಕನ 'ಸಿದ್ಧರಾಮ ಚಾರಿತ್ರ'ದಲ್ಲಿದೆ. ಹೀಗೆ ದಿವ್ಯಕ್ಕೊಳಗಾಗಿ ನಿರಪರಾಧಿಯೆಂದು ಪರಿಗಣಿತನಾದವನಿಗೆ 'ಜಯಪತ್ರ'ವನ್ನು ಕೊಡುತ್ತಿದ್ದರಂತೆ.
=====
ದೇಸಿ: ಇದು ದೇಶ ಎಂಬುದರಿಂದಾದ ದೇಶಿ ಎಂಬ ಸಂಸ್ಕೃತ ಶಬ್ದದ ಮತ್ತೊಂದು ರೂಪ. ಈ ಶಬ್ದವು ಅನೇಕ ಅರ್ಥಗಳನ್ನೊಳಗೊಂಡು ಬಳಕೆಯಾಗಿದೆ. ಸ್ಥಳೀಯ ಸಂಸ್ಕೃತಿಗೆ ಈ ಹೆಸರೀಗ ಸಲ್ಲುತ್ತಿದೆ. ಕವಿರಾಜಮಾರ್ಗದಲ್ಲಿಯೇ ದೇಶಿ ದೇಸಿ ಎಂಬೆರಡು ರೂಪಗಳೂ ಸಿಕ್ಕುತ್ತವೆ. ದೇಶಿ ಎಂಬುದು (ಕನ್ನಡದ) ಉಪಭಾಷೆ ("ದೇಶಿ ಬೇಱೆವೇಱಪ್ಪುದಱಿಂ") ಎಂಬರ್ಥದಲ್ಲಿದ್ದರೆ, ದೇಸಿ ಎಂಬುದು ಬಳಕೆಯ ನುಡಿ ("ದೇಸಿಯಲ್ಲವೆಂದದನಱಿದಿರ್ದುಂ") ಎಂಬರ್ಥದಲ್ಲಿಯೂ, ಅಚ್ಚಗನ್ನಡದ (ದೇಶಿಯನೆ ನಿಱಿಸಿ) ಎಂಬರ್ಥದಲ್ಲಿಯೂ ಬಳಕೆಯಾಗಿದೆ. 'ಪಂಪಭಾರತ'ದ "ಬಗೆ ಪೊಸತಪ್ಪುದಾಗೆ ದೇಸಿಯೊಳ್ ಪುಗುವುದು ಪೊಕ್ಕ ಮಾರ್ಗದೊಳೆ ತಳ್ವುದು" ಎಂಬ ಪ್ರಸಿದ್ಧವಾಕ್ಯದಲ್ಲಿ ಈ ಶಬ್ದವು ಜನಪದದ ಸ್ವಂತಿಕೆ ಎಂಬರ್ಥದಲ್ಲಿ ಬಳಕೆಯಾಗಿದೆ.
ಬಹು ಹಿಂದಿನಿಂದಲೇ ಕನ್ನಡದಲ್ಲಿ ಮಾರ್ಗ-ದೇಶಿ ಎಂಬ ಶಬ್ದಗಳು ಕಾವ್ಯರೂಪಕ್ಕೆ ಅನ್ವಯಿಸುವಂತೆ ಬಳಕೆಯಾಗಿವೆ. ಮಾರ್ಗವು ಸಂಸ್ಕೃತ ಪರಂಪರೆಯನ್ನು ಮಾದರಿಯಾಗಿರಿಸಿಕೊಂಡಂಥದಕ್ಕೂ, ದೇಸಿ ಕನ್ನಡಕ್ಕೆ ವಿಶಿಷ್ಟವಾದ ಸ್ವಂತದ್ದಕ್ಕೂ ಅನ್ವಯಿಸುತ್ತದೆಂದು ಸ್ಥೂಲವಾಗಿ ಹೇಳಬಹುದು. ಇದು ಪಂಪನ ಮಾತಿನಲ್ಲಿಯೇ ವ್ಯಕ್ತವಾಗಿದೆ. ಜಾನಪದ ಎಂಬ ಅರ್ಥವೂ ಇದಕ್ಕೆ ಹೊಂದುವಂತಿದೆ.
ಸ್ವಂತದ್ದೇ ಸುಂದರವಾದುದು ಎಂಬ ಭಾವನೆಯಿಂದಾಗಿಯೋ ಏನೋ ಮುಂದೆ ಈ ಪದಕ್ಕೆ ಸುಂದರವಾದುದು ಎಂಬ ಅರ್ಥವೇ ಪ್ರಾಪ್ತವಾಗಿದೆ. "ಚರಣಂ ನವಕೇಸರದೊಂದು ದೇಸಿಯಂ ಪ್ರಕಟಿಸೆ" ಎಂಬ ಮಾತು 'ಕರ್ಣಾಟಕ ಕಾದಂಬರಿ'ಯಲ್ಲಿದ್ದರೆ, "ಪೊಸದೇಸಿವೆತ್ತು ಎಸೆದುದಲ್ಲಿ ನರೇಂದ್ರಕುಮಾರಸಂಕುಳಂ" ಎಂಬ 'ರಾಜಶೇಖರವಿಳಾಸ'ವೆಂಬ ಕಾವ್ಯದ ಮಾತಿನಲ್ಲಿ ಬೆಡಗು ಎಂಬರ್ಥವನ್ನು ತಾಳಿದೆ. ದೇಸಿ ಎಂಬುದು ದೇಸೆ ಎಂಬ ರೂಪವನ್ನೂ ಪಡೆಯುತ್ತದೆ. ದೇಸಿಯಿಂದ ರೂಪಿತವಾದ ದೇಸಿಗ, ದೇಸಿಗಿತಿ ಎಂಬ ಶಬ್ದಗಳು ನಿರ್ಗತಿಕ(ಳು) ಎಂಬರ್ಥದಲ್ಲಿ ಬಳಕೆಯಾಗಿವೆ. "ಲಲ್ಲೆಯ ಸಗ್ಗದ ದೇಸೆಕಾರ್ತಿಯರ್" ಎಂಬ 'ಆದಿಪುರಾಣ'ದ ಮಾತಿನಲ್ಲಿ ದೇಸೆಕಾರ್ತಿ ಎಂಬುದು ಸುಂದರಿ ಎಂಬರ್ಥದಲ್ಲಿ ಬಳಕೆಯಾಗಿದೆ.
=====
ದೋಣಿ: ಸಂಸ್ಕೃತ 'ದ್ರೋಣೀ' ಶಬ್ದದ ತದ್ಭವ. ಇದು ನೀರಿನಲ್ಲಿ ತೇಲಲು ಬಳಸುವ ಮರದ ಸಾಧನ. "ದ್ರೋಣೀ ಕಾಷ್ಠಾಂಬುವಾಹಿನೀ" ಎಂದು 'ಅಮರಕೋಶ'ವು ಹೇಳುತ್ತದೆ. ಈ ಅರ್ಥದಲ್ಲಿ ಶಾಂತಿನಾಥನ 'ಸುಕುಮಾರಚರಿತೆ'ಯಲ್ಲಿ ಈ ಶಬ್ದ ಬಳಕೆಯಾಗಿದೆ ("ತುಳುಕು ನೀರಾಡಿದಂ ದೋಣಿಯಿಂದೇಱಿದನೆಂಬಂತೆ"). "ದೋಣಿಯೆಂದೆನಲ್ ನಾವೆಯಕ್ಕುಂಕ" ಎಂದು ಮಂಗರಾಜ ನಿಘಂಟುವಿನಲ್ಲಿ ಅರ್ಥ ಹೇಳಿದೆ. ನೀರು ತುಂಬಿಡುವ ತೊಟ್ಟಿಗೂ ದ್ರೋಣಿ ಎಂದು ಸಂಸ್ಕೃತದಲ್ಲಿ ಹೇಳುತ್ತಾರೆ. ಕನ್ನಡದಲ್ಲಿ ಈ ಅರ್ಥವೂ ಇದೆ. "ಕಲ್ಲ ದೋಣಿಯಲೆಱೆದ ನೀರಂತೆ" ಎಂಬುದು ನಯಸೇನನ 'ಧರ್ಮಾಮೃತ'ದ ಮಾತು.  ಆಕಾರವನ್ನು ಹೋಲುವ ಮತ್ತು ನೀರಿನೊಡನೆ ಸಂಬಂಧ ಹೊಂದಿರುವ ಕಾರಣ ಇನ್ನೂ ಹಲವಾರು ವಸ್ತುಗಳನ್ನು ಸೂಚಿಸಲು ಈ ಈ ಶಬ್ದವು ಕನ್ನಡದಲ್ಲಿ ಬಳಕೆಯಲ್ಲಿದೆ. ಮನೆಯ ಸೂರಿನ ಮೇಲೆ ಬಿದ್ದ ಮಳೆ ನೀರು ಕೆಳಗೆ ಹರಿದು ಹೋಗಲು ಬಿಟ್ಟಿರುವ ಕಂಡಿಯನ್ನೂ ದೋಣಿ ಎನ್ನುತ್ತಾರೆ.
ದೋಣಿ ಎಂಬ ಶಬ್ದವನ್ನು ತಟ್ಟೆ ಎಂಬರ್ಥದಲ್ಲಿಯೂ ಬಳಸುತ್ತಾರೆ. "ನಾಯುಣ್ಣದ ದೋಣಿಯೊಳ್ ಊಡಿದಂಗೆ ಪದಯಿದನೆ ಕರಂ" ಎಂಬುದು 'ಸುಕುಮಾರ ಚರಿತೆ' ಯ ಮಾತು. ತಟ್ಟೆಯಂತೆ ಅಗಲವಾಗಿದ್ದು ಅದಕ್ಕಿಂತ ಆಳವಾದ ಬಾನಿಯನ್ನೂ ಈ ಶಬ್ದದಿಂದಲೇ ಕರೆಯುವ ರೂಢಿಯಿತ್ತು. ತಗ್ಗು ಬೀಳು ಎಂಬರ್ಥದಲ್ಲಿ 'ದೋಣಿವೋಗು' ಎಂಬ ಪ್ರಯೋಗವಿತ್ತು. ("ಇರ್ಬಗಿಯಾಗಿ ಪೋಳ್ದು ನೀರೇಱೆದ ನಾಳಿಪುಣ್ಣೊಡೆದು ಸೌಳೆನೆ ಸೀಳ್ದುದು ದೋಣಿವೋಪಿನಂ" ಗ 'ಸುಕುಮಾರಚರಿತೆ'). ದೋಣಿಯಾಕಾರದ ಹರವಿಯನ್ನು 'ದೋಣಿಕೊಂಡ' ಎಂದು 'ವಡ್ಡಾರಾಧನೆ'ಯಲ್ಲಿ ಕರೆದಿದೆ ("ಒಂದು ದೋಣಿಕೊಂಡಮಂ ತಱಿಸಿ") ಇದು 'ದ್ರೋಣಿಕುಂಡ'ದ ತದ್ಭವರೂಪ.
ಡೋಣಿ ಎಂಬ ರೂಪದಲ್ಲಿಯೂ ಈ ಶಬ್ದದ ಬಳಕೆಯಿದೆ. "ಜಾಲಗಾರನ ಡೋಣಿಯಂತೆ, ಬಳಸುವ ಹುಟ್ಟಿನಂತೆ, ಬೈಚಿಟ್ಟ ನೆಲೆಯಿರ್ದಡೇನು ಭೋಗಿಸಲರಿಯನಾಗಿ. ಲಿಂಗವಂಗದ ಮೇಲಿದ್ದಡೆ ಮನ ಸಂಗವ ಮಾಡಬಲ್ಲುದೆ?" ಎಂಬುದು ಮೋಳಿಗೆ ಮಾರಯ್ಯನೆಂಬ ವಚನಕಾರನ ಮಾತು. ಈ ರೂಪವು ದೋಣಿ ಶಬ್ದಕ್ಕಿರುವ ಬಹುತೇಕ ಎಲ್ಲ ಅರ್ಥಗಳಲ್ಲಿಯೂ ಬಳಕೆಯಾಗಿದೆ.
=====
ನಂಜು: ಇದೊಂದು ಕನ್ನಡ ಪದ, ವಿಷ ಎಂಬುದು ಅದರ ಅರ್ಥ. ಈ ಶಬ್ದವು ಇತರ ದ್ರಾವಿಡ ಭಾಷೆಗಳಲ್ಲೂ ದೊರೆಯುತ್ತದೆ: ತಮಿಳು ಮಲಯಾಳಂಗಳಲ್ಲಿ ನಂಚು, ತುಳುವಿನಲ್ಲಿ ನಂಜು, ನಂಜಿ ಎಂಬ ರೂಪಗಳಿವೆ. ರಕ್ತದ ವಿಷಪೂರಿತವಾಗುವಿಕೆಯನ್ನು ನಂಜು ಎನ್ನುತ್ತಾರೆ. ವಿಷಯುಕ್ತ ನೀರನ್ನು ಪಂಪ 'ನಂಜುನೀರ್' ಎನ್ನುತ್ತಾನೆ. 'ನಂಜುರುಳಿ' ಎಂದರೆ ವಿಷದ ಉಂಡೆ; ಈ ಶಬ್ದ ಬಳಕೆಯಾಗಿರುವುದು ಅಗ್ಗಳನ 'ಚಂದ್ರಪ್ರಭಪುರಾಣ'ದಲ್ಲಿ; ಇದೇ ಅರ್ಥದಲ್ಲಿ 'ಧರ್ಮಾಮೃತ'ದಲ್ಲಿ 'ನಂಜಿನುರುಳಿ' ಎನ್ನಲಾಗಿದೆ. ವಿಷವನ್ನುಳ್ಳುದರಿಂದ ಕುಮಾರವ್ಯಾಸ ಹಾವನ್ನೂ ನಂಜು ಎನ್ನುತ್ತಾನೆ; ಕೃಷ್ಣನನ್ನು  "ನಂಜಿನಲಿ ಪವಡಿಸುವ"(ವನು) ಎಂದು ವರ್ಣಿಸುತ್ತಾನೆ. ಪುರಂದರದಾಸ ಆದಿಶೇಷನನ್ನು 'ನಂಜಿನೊಡೆಯ' (ಹಾವುಗಳ ಒಡೆಯ) ಎನ್ನುತ್ತಾನೆ. ಮಾತಿನಲ್ಲಿ ತುಂಬಿರುವ ಕೆಟ್ಟ ಭಾವನೆಯನ್ನೂ ನಂಜು ಎನ್ನುತ್ತಾರೆ.
ಈ ನಾಮಪದಕ್ಕೆ ಆಗು ಎಂದು ಸೇರಿ ಮಾಡಿಕೊಳ್ಳುವ ಕ್ರಿಯಾಪದ ನಂಜಾಗು ಎಂಬುದು ವಿಷಪೂರಿತವಾಗುವುದನ್ನು ಸೂಚಿಸುತ್ತದೆ. "ಮೊಲೆವಾಲು ನಂಜಾಗಿ ಕೊಲುವೊಡೆ ಇನ್ನಾಗೆ ದೂರುವೆನಯ್ಯಾ" ಎಂಬ ಸಾಲು ಬಸವಣ್ಣನ ವಚನವೊಂದರಲ್ಲಿದೆ.  ಹಾಗೆಯೇ ವಿಷ ಹಾಕುವುದನ್ನು 'ನಂಜೂಡು' ಎನ್ನುತ್ತಾರೆ; ವಿಷಜಂತು ಕಚ್ಚಿದಾಗ ಮೈಯಲ್ಲಿ 'ನಂಜೂರು'ತ್ತದೆ.
ಸಮುದ್ರಮಥನ ಕಾಲದಲ್ಲಿ ಮೊದಲು ಬಂದ ವಿಷವನ್ನು ಲೋಕಕಲ್ಯಾಣಾರ್ಥವಾಗಿ ಶಿವ ಕುಡಿಯುತ್ತಾನೆ; ಅದು ಹೊಟ್ಟೆ ಸೇರದ ಹಾಗೆ ಪಾರ್ವತಿ ಆತನ ಕತ್ತನ್ನು ಅದುಮಿ ಹಿಡಿದುದರಿಂದ ವಿಷವು ಕೊರಳಲ್ಲೇ ಉಳಿದುಬಿಡುತ್ತದೆ. ಆದ್ದರಿಂದಲೇ ಅವನಿಗೆ ವಿಷಕಂಠ ಎಂದು ಹೆಸರಾಯಿತು; ಇದರ ನೇರ ಅನುವಾದವೇ 'ನಂಜುಗೊರಲ' ಎಂಬುದು. ಆಂಡಯ್ಯ ಶಿವನನ್ನು ಈ ಮಾತಿನಿಂದ ಸಂಬೋಧಿಸುತ್ತಾನೆ. ನಂಜುಂಡ ಎಂದರೂ ಇದೇ ಅರ್ಥ: ನಂಜು+ಉಂಡ(ವನು). ಇದಕ್ಕೆ ಮುಂದೆ ಒಡೆಯ ಎಂಬರ್ಥದ ಈಈ್ವರ ಎಂಬ ಸಂಸ್ಕೃತ ಶಬ್ದ ಸೇರಿ ನಂಜುಂಡೇಶ್ವರ ಎಂದಾಯಿತು (ಈ ರೂಪವು ಹದಿನಾಲ್ಕನೆಯ ಶತಮಾನದ ಶಾಸನದಲ್ಲಿ ದೊರೆಯುತ್ತದೆ). (ಇದು ಅಚ್ಚಗನ್ನಡ ಮತ್ತು ಸಂಸ್ಕೃತ ಶಬ್ದಗಳು ಸೇರಿ ಆಗಿರುವ ಸಮಾಸಪದ). ಹಾಗೆಯೇ ನಂಜಾಂಬಾ ಎಂಬುದು; ಪಾರದವತಿಯನ್ನು ಸೂಚಿಸುವ ಹೆಸರು. ಕಪಿಲಾ ನದಿಯ ದಂಡೆಯಲ್ಲಿರುವ ನಂಜನಗೂಡು ನಂಜುಂಡನ ಆವಾಸ. ಆ ಊರಿನ ಈ ದೈವವನ್ನು ಟಿಪ್ಪು 'ಹಕೀಂ ನಂಜುಂಡ' ಎಂದು ಕರೆಯುತ್ತಿದ್ದನಂತೆ. ಸಂಬಂಧಸೂಚಕ ಪದವು ಸೇರಿ ಅಂಕಿನಾಮವಾಗುವುದು ಕನ್ನಡದಲ್ಲಿ ಸಾಮಾನ್ಯ. ಈ ರೀತಿ ಆಗಿರುವ ಶಬ್ದಗಳೇ ನಂಜಯ್ಯ, ನಂಜಪ್ಪ, ನಂಜಣ್ಣ, ನಂಜಪ್ಪಯ್ಯ, ನಂಜಪ್ಪಣ್ಣಯ್ಯ ಮುಂತಾದುವು.
=====
ನಮ್ಮಭಿಮಾನ: ಈಚೆಗೆ ಶಿವಮೊಗ್ಗದಲ್ಲಿ ಒಂದು ಸಮಾವೇಶ ನಡೆಯಿತು, ಅದನ್ನು ಸಂಘಟಕರು 'ನಮ್ಮಭಿಮಾನ' ಎಂದು ಕರೆದುಕೊಂಡರು. ಅದು ಯಾತಕ್ಕಾಯಿತು, ಯಾರಿಗಾಗಿ ಆಯಿತು ಎಂಬುದು ನಮಗೆ ಪ್ರಸ್ತುತವಲ್ಲ. ಬೇಕಾಗಿರುವುದು ಆ ಶಬ್ದದ ಸ್ವರೂಪ ಚರ್ಚೆ, ಅದರ ಅರ್ಥ ಏನಿರಬಹುದು ಎಂಬುದು.  ಈ ಶಬ್ದವು 'ನಮ್ಮ' ಹಾಗೂ 'ಅಭಿಮಾನ' ಎಂಬ ಎರಡು ಪದಗಳಿಂದ ಕೂಡಿದೆ. ನಮ್ಮ ಎಂಬುದು ನಮಗೆ ಸೇರಿದ ಅಥವಾ ನಮಗೆ ಸಂಬಧಿಸಿದ ಅಥವಾ ನಾವು ಹೊಂದಿರುವ ಎಂಬ ಅರ್ಥವನ್ನು ಹೊಂದಿರುವುದರಿಂದ ಈ ಶಬ್ದಕ್ಕೆ ಒಟ್ಟಾಗಿ 'ನಾವು (ಇಂಥವರ ಬಗ್ಗೆ) ಹೊಂದಿರುವ ಅಭಿಮಾನ' ಎಂಬ ಅರ್ಥ ಹೊರಡಬಹುದು. ಹೊರನೋಟಕ್ಕೆ ಅಭಿಮಾನ ಎಂಬ ಪದಕ್ಕೆ ಪ್ರೀತಿ ಎಂಬ ಅರ್ಥವಿರುವುದು ಸ್ಪಷ್ಟ. ಯಾರಿಗಾಗಿ ಸಮಾವೇಶವನ್ನು ಮಾಡುತ್ತಿರುವರೋ ಅವರ ಬಗ್ಗೆ ಸಂಘಟಕರು ಹೊಂದಿರುವ ಅಭಿಮಾನ ಇದು ಎಂಬುದು ಅಭಿಪ್ರಾಯ.
ನಮ್ಮ ಎಂಬುದು ನಾವು ಎಂಬುದರ ಷಷ್ಠೀವಿಭಕ್ತಿಯ ರೂಪ, ಕನ್ನಡದ್ದೇ ಪದ; ಅಭಿಮಾನ ಸಂಸ್ಕೃತ ಮೂಲದ್ದು. ಸಂಪ್ರದಾಯನಿಷ್ಠ ವೈಯಾಕರಣಿಗಳ ದೃಷ್ಟಿಯಲ್ಲಿ ಇದೊಂದು ಅರಿಸಮಾಸ. ಅಭಿಮಾನ ಎಂಬುದಕ್ಕೆ ಸಂಸ್ಕೃತದಲ್ಲಿ ಅಹಂಕಾರ, ಆತ್ಮಗೌರವ ಎಂಬ ಅರ್ಥಗಳಿವೆ. ನಮ್ಮ ಪ್ರಾಚೀನ ಕಾವ್ಯಗಳಲ್ಲಿಯೂ ಸುಮಾರು ಇದೇ ಅರ್ಥವಿದೆ, ಆದರೆ ಅರ್ಥಚ್ಛಾಯೆ ಕೊಂಚ ಭಿನ್ನ. 'ಪಂಪಭಾರತ'ದಲ್ಲಿ "ಅಭಿಮಾನಮೊಂದೆ ಕುಲಂ" ಎಂಬ ಮಾತಿದೆ. ವ್ಯಕ್ತಿಯು ಹೊಂದಿರಬೇಕಾದ ಅಪೇಕ್ಷಣೀಯ ಗುಣವಾದ ಆತ್ಮಗೌರವ ಎಂಬ ಅರ್ಥವಿದೆ ಅಲ್ಲಿ. "ಅಭಿಮಾನಧನ" - ಯಾರಿಗೆ ಅಭಿಮಾನವೇ ಸಂಪತ್ತೋ ಅಂಥವನು - ಎಂಬ ಮಾತು 'ಕವಿರಾಜಮಾರ್ಗ'ದಲ್ಲಿಯೇ ಪ್ರಯೋಗಗೊಂಡಿದೆ. ಹಾಗಾಗಿಯೇ ರನ್ನಕವಿಯು ದುರ್ಯೋಧನನನ್ನು "ಅಭಿಮಾನಧನ" ಎನ್ನುತ್ತಾನೆ. ತನ್ನ ಬಗೆಗಿನ ಗೌರವ ಎಂಬುದು ಸಡಿಲಗೊಂಡು ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಬಗ್ಗೆ ಇಟ್ಟ ಗೌರವವೂ ಅಭಿಮಾನ ಎನಿಸಿಕೊಂಡು, ಅದೇ ಮುಂದೆ ಪ್ರೀತಿ ಎಂಬ ಅರ್ಥವನ್ನು ಪಡದಿದೆ. ತನ್ನ ಬಗೆಗಿನ ಗೌರವವನ್ನು ಸೂಚಿಸಲು 'ಸ್ವಾಭಿಮಾನ' ಹಾಗೂ 'ಆತ್ಮಾಭಿಮಾನ' ಎಂಬ ಶಬ್ದಗಳು ಈಗ ಹೆಚ್ಚು ರೂಢಿಯಲ್ಲಿವೆ. ಶಬ್ದಗಳಿಗೆ ಕಾಲಕಾಲಕ್ಕೆ ಬದಲಾಗುವ ಅರ್ಥಚ್ಛಾಯೆಗೆ ಇದೊಂದು ಒಳ್ಳೆಯ ಉದಾಹರಣೆ.
*****
ನಿಲ್ಲು: ಇದೊಂದು ಕ್ರಿಯಾಪದ; ಹಳಗನ್ನಡದಲ್ಲಿದು 'ನಿಲ್' ಎಂಬ ರೂಪದಲ್ಲಿತ್ತು. ತಮಿಳು, ಮಲಯಾಳಂಗಳಲ್ಲಿ ನಿಲ್ ಎಂಬ ರೂಪದಲ್ಲಿಯೂ, ತೆಲುಗಿನಲ್ಲಿ ನಿಲುಚು ಎಂಬುದಾಗಿಯೂ, ತುಳುನಲ್ಲ್ಲಿ ನಿಲ್, ನಿಲಿ ಎಂಬ ರೂಪಗಳಲ್ಲಿಯೂ ದೊರೆಯುತ್ತದೆ. ನಿಲ್ ಎಂಬುದಕ್ಕೆ ಕೇಶಿರಾಜನ 'ಶಬ್ದಮಣಿದರ್ಪಣ'ವು ಎರಡು ಅರ್ಥಗಳನ್ನು ನೀಡುತ್ತದೆ: "ನಿಲ್ - ಗತಿಮುಕ್ತೌ ಸ್ಥಾಪನೇಚ"; ಅಂದರೆ ಚಲನೆಯಿಲ್ಲದ್ದು ಮತ್ತು ಸ್ಥಾಪನೆಗೊಂಡದ್ದು ಎಂದು. ತಂಗುವುದು ಎಂಬರ್ಥವೂ ಇದಕ್ಕಿದೆ ("ತಡೆದಿಲ್ಲಿ ನಿಂದೆನಪ್ಪೊಡೆ ಮಡಿವಾದಪುದು" - ನಯಸೇನನನ 'ಧರ್ಮಾಮೃತ'). ಸ್ಥಿರವಾಗಿರು ಎಂಬರ್ಥದಲ್ಲಿಯೂ ಇದು ಬಳಕೆಯಲ್ಲಿದೆ ("ಶ್ರೀರೂಪಲೀಲಾಧನವಿಭವಮಹಾರಾಶಿಗಳ್ ನಿಲ್ಲವಾರ್ಗಂ" - ಎಂಟನೆಯ ಶತಮಾನದ ಒಂದು ಶಾಸನ). ನಿಲ್ ಎಂಬುದಕ್ಕೆ ಎ ಎಂಬ ಪ್ರತ್ಯಯ ಸೇರಿಸಿ ಅವಧಾರಣೆಯಾಗಿ ನಿಲೆ, 'ನಿಲೆ ನುಡಿ' ಎಂಬ ರೂಪಗಳಲ್ಲಿಯೂ ಈ ಶಬ್ದವು ಬಳಕೆಗೊಂಡಿದೆ. ಕಾಯುವುದು ಎಂಬರ್ಥವೂ ಇದಕ್ಕಿದೆ: "ಬೇಡಲ್ಕೆ ಬಂದು ನಿಂದಿರ್ಪಂ" ಎಂಬ ಪ್ರಯೋಗ 'ಕರ್ಣಾಟಕ ಕಾದಂಬರಿ'ಯದು. ನೆಲೆ ಎಂಬರ್ಥವೂ ಈ ಶಬ್ದಕ್ಕಿದೆ ("ಆನತನಲ್ಲದಂಗೆ ಪದುಳಂ ನಿಲವಿಲ್ಲ" - ನಾಗಚಂದ್ರನ 'ಪಂಪರಾಮಾಯಣ").
ನಿಂತ ವ್ಯಕ್ತಿಯ ಸ್ವರೂಪವೇ ನಿಲವು ಅಥವಾ ನಿಲುವು. "ನಿಲವು ಮೋಹನಂ" ಎಂಬುದು 'ಹರಿಚಂದ್ರಕಾವ್ಯ'ದ ಪ್ರಯೋಗ. ಇದು ರೂಪಕವಾಗಿ ವ್ಯಕ್ತಿಯ ಧೋರಣೆ ಅಥವಾ ಸ್ವಭಾವ ಎಂಬರ್ಥಕ್ಕೆ ವಿಸ್ತಾರಗೊಳ್ಳುತ್ತದೆ. "ಮಹಾದೇವಿಯಕ್ಕಗಳ ನಿಲವ ಬಸವಣ್ಣನ ಕೃಪೆಯಿಂದಲರಿದೆನಯ್ಯಾ" ಎಂಬುದು ಮಡಿವಾಳ ಮಾಚಿದೇವನ ಮಾತು. ನಿಂತು ಎಟುಕಿಸಿಕೊಳ್ಳುವುದು 'ನಿಲ್ಕಿಸು' ಅಥವಾ 'ನಿಲುಕಿಸು'. ಹಾಗೆ ನಿಂತು ಎಟುಕಿಸಿಕೊಳ್ಳಬಹುದಾದ, ಹಾಲು ಮೊಸರುಗಳ ಗಡಿಗೆಗಳನ್ನಿಡುವ ಹಗ್ಗದ ಜೋತಾಡುವ ಸಾಧನವೇ 'ನಿಲವು' ಅಥವಾ 'ನೆಲವು'.
ವಾಹನಗಳು ಹೊರಡುವ ಹಾಗೂ ಬಂದು ನಿಲ್ಲುವ ಜಾಗಗಳನ್ನು ನಿಲ್ದಾಣ ಎಂದೂ, ಮಧ್ಯೆ ಜನರನ್ನು ಹತ್ತಿಸಿಕೊಳ್ಳುವ ಜಾಗವನ್ನು ನಿಲುಗಡೆ ಎಂದೂ ಕರೆಯುತ್ತೇವೆ. ವಾಹನಗಳನ್ನು ನಿಲ್ಲಿಸುವ ಜಾಗವೂ (ಪಾರ್ಕಿಂಗ್) ನಿಲುಗಡೆಯೇ. ಬಹು ತುರ್ತಾಗಿ ಚರ್ಚಿಸಬೇಕಾದ ವಿಷಯ ಬಂದಾಗ ಸಾಗುತ್ತಿರುವ ವಿಷಯದ ಚರ್ಚೆಯನ್ನು ನಿಲ್ಲಿಸಲು ಮಾಡುವ ಕೋರಿಕೆಯೇ ಶಾಸನಸಭೆಗಳಲ್ಲಿನ 'ನಿಲುವಳಿ ಸೂಚನೆ'.
======
ನಿವೃತ್ತಿ: ಈಗ ಸಾಮಾನ್ಯವಾಗಿ ನಿವೃತ್ತಿ ಎಂಬ ಶಬ್ದವು ನೌಕರಿಯಲ್ಲಿದ್ದು ನಿಯಮಾನುಸಾರ ಅವಧಿ ಮುಗಿದ ಬಳಿಕ ನೌಕರನೊಬ್ಬ ಅದರಿಂದ ಬಿಡುಗಡೆಗೊಳ್ಳುವುದನ್ನು ಸೂಚಿಸುತ್ತದೆ. ಸಹಜವಾಗಿಯೇ ಈ ಪರಿಕಲ್ಪನೆ ಹಿಂದೆ ಇರಲಿಲ್ಲ: ಏಕೆಂದರೆ ಆಗ ನೌಕರಿಯಾಗಲೀ, ನಿವೃತ್ತಿಯಾಗಲೀ ರೂಢಿಯಲ್ಲಿರಲಿಲ್ಲ. ಇದೆಲ್ಲ ಕಚೇರಿ, ನೌಕರಿ, ಸಂಬಳ ಮುಂತಾದ ಪದ್ಧತಿಗಳು ಬಂದ ಆಧುನಿಕ ಕಾಲದವು. ಹೊಸ ಪದ್ಧತಿಗಳನ್ನು ಸೂಚಿಸಲು ಹೊಸ ಶಬ್ದಗಳು ಸೃಷ್ಟಿಗೊಳ್ಳಬೇಕು.
ಮೂಲತಃ ನಿವೃತ್ತಿ ಎಂಬುದು ಸಂಸ್ಕೃತ ಪದ. ಹಿಂದಿರುಗುವುದು, ಹಿಂದಕ್ಕೆ ನಡೆಯುವುದು ಎಂಬುದು ಇದಕ್ಕಿದ್ದ ಅರ್ಥ. ಕೊನೆಯಾಗುವುದೂ ಎಂಬ ಅರ್ಥವೂ ಇದಕ್ಕಿದೆ. ಪ್ರಾಪಂಚಿಕ ವ್ಯವಹಾರದಿಂದ ದೂರ ಸರಿಯುವುದೂ ಎಂಬ ಅರ್ಥವೂ ಬಳಕೆಯಲ್ಲಿತ್ತು. ಇದಕ್ಕೆ ಹತ್ತಿರವಾದ ಮತ್ತೊಂದು ಶಬ್ದವೂ ಸಂಸ್ಕೃತದಲ್ಲಿದೆ, ಅದೇ ನಿರ್ವೃತಿ. ಇದಕ್ಕೂ ಬಿಡುಗಡೆ ಎಂಬ ಅರ್ಥವಿದೆ, ಜೊತೆಗೆ ಸಂತೋಷ ಎಂಬ ಅರ್ಥವೂ ಇದೆ. ಕಾವ್ಯದ ಪ್ರಯೋಜನಗಳನ್ನು ಹೇಳುವಾಗ ಕೆಲವರು 'ಸದ್ಯಃಪರನಿರ್ವೃತಯೇ' ಎಂದೂ ಹೇಳುತ್ತಾರೆ ಅಂದರೆ ತನ್ಮಯವಾಗಿ ಓದುತ್ತಿರುವಷ್ಟು ಕಾಲ ಕಾವ್ಯವು ನಮ್ಮ ಮನಸ್ಸನ್ನು ಇಲ್ಲಿಂದ ಬಿಡುಗಡೆಗೊಳಿಸಿ ಸಂತೋಷ ನೀಡುವಂಥದು ಎಂಬುದು ಅಭಿಪ್ರಾಯ.
ಈಗ ನಿವೃತ್ತಿವೇತನ ಎಂಬ ಶಬ್ದವೂ ಬಳಕೆಯಲ್ಲಿದೆ. ನೌಕರಿಯಲ್ಲಿ ದೀರ್ಘ ಕಾಲ ದುಡಿದ ವ್ಯಕ್ತಿಯು ಅದರಿಂದ ಬಿಡುಗಡೆಗೊಂಡ ಮೇಲೆ ಪಡೆಯುವ ಸಂಭಾವನೆ ಎಂಬರ್ಥ ಅದಕ್ಕಿದೆ. ಹಿಂದೆಯೇ ಬಳಕೆಯಲ್ಲಿದ್ದ ಎರಡು ಶಬ್ದಗಳನ್ನು ಸೇರಿಸಿ ಹೊಸ ಪರಿಕಲ್ಪನೆಯೊಂದನ್ನು ಸೂಚಿಸಲು ಸಿದ್ಧಗೊಂಡ ಶಬ್ದ ಇದು. ಭಾಷೆಯು ಹೊಸ ಪರಿಕಲ್ಪನೆಗಳನ್ನು ಹಳೆಯ ಶಬ್ದಗಳ ಸಂಯೋಜನೆಗೊಳಿಸುವ ಮೂಲಕವೂ ಹೇಳುವ ಪರಿ ಇದು. ನಿವೃತ್ತಿವೇತನ ಎಂಬ ಶಬ್ದಕ್ಕೆ ಈಗ 'ಪಿಂಚಣಿ' ಎಂಬ ಇನ್ನೊಂದು ಶಬ್ದವೂ ರೂಢಿಯಲ್ಲಿದೆ; ಅದು ಇಂಗ್ಲಿಷ್ನ 'ಪೆನ್ಶನ್' ಎಂಬುದರ ಕನ್ನಡೀಕರಣಗೊಂಡ ರೂಪ. ಒಂದು ಶಬ್ದ ಸಂಸ್ಕೃತದ ಈ ಕಡೆಯಿಂದ ಬಂದುದಾದರೆ, ಮತ್ತೊಂದು ಇಂಗ್ಲಿಷ್ನ ಆ ಕಡೆಯಿಂದ ಬಂದುದು. ಈ ಎರಡೂ ಭಾಷೆಗಳು ಕನ್ನಡ ಶಬ್ದಭಂಡಾರದ ಹೊಲಕ್ಕೆ ಹೊಸ ಮೆಕ್ಕಲನ್ನು ತಂದು ಫಲವತ್ತಾಗಿಸುವ ಎರಡು ದೊಡ್ಡ ನದಿಗಳು. ನದಿಗಳಿರುವುದೇ ಸಮೃದ್ಧವಾಗಿ ನೀರು ಮೆಕ್ಕಲುಗಳನ್ನು ಒದಗಿಸುವುದಕ್ಕಲ್ಲವೇ?
******
ನೆರಳು: ಈ ದ್ರಾವಿಡ ಪದವು ಹಳಗನ್ನಡದಲ್ಲಿ 'ನೆೞಲ್' ಎಂಬ ರೂಪದಲ್ಲಿ ದೊರೆತರೆ ತಮಿಳಿನಲ್ಲಿ ನಿೞಲ್, ನೀೞಲ್ ಎಂದೂ, ಮಲಯಾಳಂನಲ್ಲಿ ನಿೞಲ್ ಎಂದೂ, ತೆಲುಗಿನಲ್ಲಿ ನೀಡ ಎಂದೂ, ತುಳುವಿನಲ್ಲಿ ನೆರಳ್, ನಿರಲ್ ಎಂದೂ ದೊರೆಯುತ್ತದೆ. ಛಾಯೆ ಎಂಬುದು ಇದರ ಮೂಲಾರ್ಥ. "ನೆೞಲ್=ಆತಪತ್ರಾದಿ ಛಾಯೆ" ಎಂದು 'ಶಬ್ದಮಣಿದರ್ಪಣ' ಅರ್ಥ ಕೊಡುತ್ತದೆ. "ಜಲದದ ನೆೞಲುಂ .. .. ನೆಲಸವು" ಎಂಬುದು 'ಕವಿರಾಜಮಾರ್ಗ'ದ ಮಾತು. ಪಂಪನ 'ಆದಿಪುರಾಣ'ದ ಒಂದು ಸುಂದರ ಪದ್ಯದಲ್ಲಿ "ತನು ರೂಪ ವಿಭವ ಯೌವನಧನ ಸೌಭಾಗ್ಯಾಯುರಾದಿಗಳ"ನ್ನು "ಕುಡುಮಿಂಚಿನ ಪೊಳಪು ಮುಗಿಲ ನೆೞಲ್" ಮುಂತಾದುವಕ್ಕೆ ಹೋಲಿಸಲಾಗಿದೆ. "ನೆೞಲಂಚೆಯಂತೆ ನೆೞಲನೆ ತೋರ್ಪ ನೆೞಲ ಮರಂಗಳುಮಂ" ಎಂಬುದು ಬಂಧುವರ್ಮನ 'ಹರಿವಂಶಾಭ್ಯುದಯ' ಕಾವ್ಯದ ಸಾಲು (ನೆೞಲ್ ಎಂಬುದು ಒಂದು ಮರದ ಹೆಸರೂ ಹೌದು). "ನೀರೊಳಗಿರ್ದ ತನ್ನ ನಲ್ಲಳ ನೆೞಲಂ ಕಂಡು ನಲ್ಲಳೆಂದು ಮತಿಗೆಟ್ಟು" ಎಂಬ 'ಧರ್ಮಾಮೃತ'ದ ಮಾತಿನಲ್ಲಿ ಈ ಶಬ್ದಕ್ಕೆ ಪ್ರತಿಬಿಂಬ ಎಂಬರ್ಥ ಹೊರಡುತ್ತದೆ. ಆಧುನಿಕ ಬರಹಗಾರರಾದರೂ ತಮ್ಮ ನಾಟಕಗಳಲ್ಲಿ ಹಳಗನ್ನಡ ಬಳಸಿದ ಬಿಎಂಶ್ರೀ ಅವರು 'ಅಶ್ವತ್ಥಾಮನ್' ನಾಟಕದಲ್ಲಿ "ಇಂದವನ್, ನಾಳೆ ನಾನ್, ಏನ್ ಪಾಡೊ ಆಳ ಬಾಳ್! ಬೀಸುವ ಬಯಲ್ಗಾಳಿ, ಪರಿದಡಂಗುವ ನೆಳಲ್" ಎಂದು ಬರೆಯುತ್ತಾರೆ.
ನಡುಗನ್ನಡದಲ್ಲಿ ಈ ಶಬ್ದದಲ್ಲಿನ ಳಕಾರ(ಅಂದರೆ ಱಳ)ದ ಸ್ಥಳದಲ್ಲಿ ಳಕಾರ(ಅಂದರೆ ಕುಳ) ಬಳಕೆಗೆ ಬಂತು. "ನೆಳಲ ಹೂಳಿಹೆನೆಂದು ಬಳಲುತ್ತಿದೆ ಜಗವೆಲ್ಲ" ಎಂಬ ಅದ್ಭುತ ರೂಪಕ ಅಲ್ಲಮನದು. ಪ್ರತಿಬಿಂಬ ಎಂಬರ್ಥದಲ್ಲಿ ಕುಮಾರವ್ಯಾಸನು "ನೆಳಲು ಜಲದಲಿ ನಡುಗಲಿನ ಮಂಡಲಕೆ ಕಂಪವೆ" ಎಂಬ ಸಾಲನ್ನು ಬರೆಯುತ್ತಾನೆ. ನೆಳಲು ಎಂಬುದಕ್ಕೆ ಕೃಪೆ ಎಂಬರ್ಥದಲ್ಲಿ ಕುಮಾರವ್ಯಾಸನು "ಕೃಷ್ಣನ ನೆಳಲು ದಿಟವುಂಟಾದೊಡೊಳಗಾಗರು ವಿರೋಧಿಗಳು" ಎಂಬಲ್ಲಿ ಬಳಸುತ್ತಾನೆ.
ಪುರಂದರದಾಸರ ಕೀರ್ತನೆಯೊಂದರಲ್ಲಿಯೇ ನೆರಳು ಎಂಬ ರೂಪ ಬಳಕೆಯಾಗಿದೆ: "ನೆರಳಿಲ್ಲದೆ ನೀರಿಲ್ಲದೆ ಬೇರಿಲ್ಲದೆ ಸಸಿ ಹುಟ್ಟಿ" ಇತ್ಯಾದಿ. ಹೊಸಗನ್ನಡದಲ್ಲಿ ಈ ರೂಪವೇ ಹೆಚ್ಚು ಬಳಕೆಯಲ್ಲಿರುವುದು. ಪುತಿನ ಗಾಂಧಿಜಿಯನ್ನು ಗರುಡನ ನೆರಳಿಗೆ ಹೋಲಿಸುತ್ತಾರೆ: "ಮೇಲೊಂದು ಗರುಡ ಹಾರುತಿಹುದು, ಕೆಳಗದರ ನೆರಳು ಓಡುತಿಹುದು" ಎಂಬುದು 'ಗಾಂಧಿ' ಎಂಬ ಕವನದ ಸಾಲು. 'ನನ್ನ ನೆರಳು' ಎಂಬ ತಮ್ಮೊಂದು ಕವನದಲ್ಲಿ ಚಂದ್ರಶೇಖರ ಪಾಟೀಲರು "ಸುಳಿದು ಸುಳಿಹಿಡಿವ ಆ ತುಂಟ ನೆರಳನು ಕಂಡು ಒದೆಯಬೇಕೆನಿಸಿತ್ತು" ಎನ್ನುತ್ತಾರೆ. ಹಿಂಬಾಲಕ, ಆಶ್ರಯ, ಕೃಪೆ ಎಂಬ ಅರ್ಥಗಳಲ್ಲಿಯೂ ಈ ಪದದ ಬಳಕೆಯಿದೆ.
=====
ನೇಗಿಲಯೋಗಿ: ತನ್ನಲ್ಲಿರುವ ಭಾವನೆಯನ್ನು ಸಮರ್ಪಕವಾಗಿ ತೋಡಿಕೊಳ್ಳಲು ಕವಿಗಳು ಅನೇಕ ಸಂದರ್ಭಗಳಲ್ಲಿ ಹೊಸ ಶಬ್ದಗಳನ್ನೇ ಸೃಷ್ಟಿಸಿಕೊಳ್ಳುತ್ತಾರೆ. ಅದು ಇದುವರೆಗೆ ಇಲ್ಲದಿರುವ ಶಬ್ದವಾಗಿರಬಹುದು, ಅಥವಾ ಹಳೆಯ ಶಬ್ದವನ್ನೇ ಹೊಸ ಅರ್ಥದಿಂದ ಬಳಸಿದುದಾಗಿರಬಹುದು, ಅಥವಾ ಇರುವ ಶಬ್ದಗಳ ಮರುಜೋಡಣೆಯಿಂದ ಮತ್ತೊಂದನ್ನು ರೂಪಿಸಿಕೊಂಡಿರುವುದಾಗಿರಬಹುದು. ಇಂಥ ಕವಿಗಳನ್ನು ಅಥವಾ ಹೊಸ ಶಬ್ದವನ್ನು ರೂಪಿಸುವವರನ್ನು 'ಶಬ್ದಬ್ರಹ್ಮ' ಎಂದು ಕರೆಯಬಹುದು. 'ನೇಗಿಲಯೋಗಿ' ಎಂಬ ಶಬ್ದವು ರೈತನನ್ನು ಸೂಚಿಸಲು ಸೃಷ್ಟಿಸಿಕೊಂಡಿರುವ ಹೊಸ ಶಬ್ದ. ಇದನ್ನು ಸೃಷ್ಟಿಸಿದವರು ಕುವೆಂಪು. ಆ ಹೆಸರಿನ ತಮ್ಮ ಕವನವೊಂದರಲ್ಲಿ ರೈತನನ್ನು ಹೀಗೆ ಕರೆದಿದ್ದಾರೆ. ನಿಸ್ವಾರ್ಥಿಯಾಗಿ ಹೊಲದಲ್ಲಿ ದುಡಿದು ಮಿಕ್ಕವರಿಗೆಲ್ಲ ಅನ್ನ ಬೆಳೆದು ಕೊಡುವ ರೈತನ ಕಾಯಕ ಕವಿಗೆ ಯೋಗದ ಹಾಗೆ ಕಾಣುತ್ತದೆ.
ಈ ಪದದಲ್ಲಿ ಎರಡು ಶಬ್ದಗಳು ಸೇರಿವೆ: ನೇಗಿಲು ಮತ್ತು ಯೋಗಿ. ಇವೆರಡೂ ಕೂಡಿ ಆದ ರೂಪವನ್ನು ಸಮಾಸ ಎನ್ನುತ್ತಾರೆ. ಇಲ್ಲಿ ಮೊದಲ ಪದ ಅಚ್ಚಗನ್ನಡದ್ದಾದರೆ, ಎರಡನೆಯದು ಸಂಸ್ಕೃತದ್ದು. ಇಂಥ ಶಬ್ದಸೃಷ್ಟಿಯನ್ನು ಹಿಂದಿನ ವ್ಯಾಕರಣಶಾಸ್ತ್ರಜ್ಞರು ತಪ್ಪು ಎನ್ನುತ್ತಿದ್ದರು. ಕನ್ನಡ ಶಬ್ದಕ್ಕೆ ಕನ್ನಡ ಪದ ಸೇರಬೇಕು, ಸಂಸ್ಕೃತದ್ದಾದರೆ ಸಂಸ್ಕೃತ ಪದವನ್ನು ಸೇರಿಸಿ ಸಮಾಸ ಮಾಡಬೇಕು ಎಂಬುದು ಅವರ ವಾದ. ಕನ್ನಡ-ಸಂಸ್ಕೃತ ಶಬ್ದಗಳು ಸೇರಿ ಆದುದು 'ಅರಿಸಮಾಸ'ವಂತೆ. ಕನ್ನಡ ಸಂಸ್ಕೃತಗಳು ಶತ್ರು(ಅರಿ)ಗಳು! ಆದರೆ ಶಬ್ದಬ್ರಹ್ಮರಾದ ಕವಿಗಳು, ತಮ್ಮ ಭಾವನೆಯನ್ನು ಸಮರ್ಪಕವಾಗಿ ಹೇಳಲು ತವಕಿಸುವ ಸಾಮಾನ್ಯ ಜನರು ಕೂಡ ಇಂಥ ಶಾಸ್ತ್ರಜ್ಞರ ಅಪ್ಪಣೆಯನ್ನೆಲ್ಲಿ ಪಾಲಿಸುತ್ತಾರೆ! ವ್ಯಾಕರಣ ನಿಯಮವನ್ನು ಮೀರುವುದರಿಂದಲೇ ಭಾಷೆಗೆ ಎಷ್ಟೋ ವೇಳೆ ಒಳ್ಳೆಯದಾಗುವುದು!
ಅಂದ ಹಾಗೆ, ಇನ್ನೊಂದು ಮಾತು. ರೈತನನ್ನು ಬೇಂದ್ರೆಯವರು 'ಭೂಮಿತಾಯಿಯ ಚೊಚ್ಚಿಲಮಗ' ಎಂದು ಕರೆಯುತ್ತಾರೆ. ಯಾಕಂದರೆ ಅವನು ತಾನೇ ಸದಾ ಭೂಮಿಯನ್ನು ಅವಲಂಬಿಸಿರುವುದು. ಆದರೂ ಅವನಿಗೆ ಕಡುಕಷ್ಟ ತಪ್ಪದಲ್ಲ ಎಂಬ ವಿಷಾದ ಬೇಂದ್ರೆಯವರ ಅದೇ ಹೆಸರಿನ ಕವಿತೆಯೊಂದರಲ್ಲಿ ಸೂಚಿತವಾಗಿದೆ. ಒಬ್ಬನನ್ನೇ ಕುರಿತು ಇಬ್ಬರು ಕವಿಗಳು ಬೇರೆ ಬೇರೆ ಶಬ್ದಗಳನ್ನು ರೂಪಿಸಿರುವುದರ ಹಿಂದೆ ಆಯಾ ಕವಿಗಳ ಮನೋಭಾವವವೇ ಅಡಕವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ