ನನ್ನ ಪುಟಗಳು

18 ಅಕ್ಟೋಬರ್ 2014

ಪದಚರಿತೆ-4ಪದಚರಿತೆ: ಒಂದಷ್ಟು ಪದಗಳ ಮೂಲಚೂಲಗಳ ಕೆದಕಾಟ - 4

ಕೆತ್ತು: ಈ ಶಬ್ದವು ಮಿಡುಕು ಎಂಬರ್ಥದಲ್ಲಿ ಬಳಕೆಯಾಗುವ ಕ್ರಿಯಾಪದ. ತಮಿಳಿನಲ್ಲಿದು 'ಕೆತ್ತು' ಎಂದೂ, ತುಳುವಿನಲ್ಲಿ 'ಕಿತ್ತುನಿ' ಎಂದೂ ಬಳಕೆಯಲ್ಲಿದೆ. "ಕೆತ್ತು-ಸ್ಪಂದನೇ" ಎಂದು ಕೇಶಿರಾಜನ 'ಶಬ್ದಮಣಿದರ್ಪಣ'ದಲ್ಲಿ ಅರ್ಥ ಹೇಳಿದೆ. ಕಣ್ಣಮಿಡುಕು, ತೋಳಿನ ಮಾಂಸಖಂಡದ ಮಿಡುಕು ಎಂಬರ್ಥಗಳಲ್ಲಿ ಈ ಶಬ್ದವು 'ಪಂಪಭಾರತ'ದಲ್ಲಿದೆ ("ಕೆತ್ತಿತ್ತು ದಲ್ ಬಲಗಣ್ಣುಂ ಬಲದೋಳುಂ ಆ ಬಲಿಬಲಪ್ರಧ್ವಂಸಿಗೆ"). ಈ ಕ್ರಿಯೆಗಳು ಶುಭಶಕುನದ ಸಂಕೇತ ಎಂಬ ಇಂದಿನ ನಂಬಿಕೆಯು ಅಂದೂ ಇದ್ದುದನ್ನು ಈ ವಾಕ್ಯ ದೃಢಪಡಿಸುತ್ತದೆ. "ಅಂಗೈ ತಿಂದುದೆನ್ನ ಕಂಗಳು ಕೆತ್ತುತ್ತಿಹವಯ್ಯಾ, ಬಂದಹರಯ್ಯಾ ಪುರಾತನರೆನ್ನ ಮನೆಗೆ" ಎಂಬ ಇದೇ ಅರ್ಥದ ಮಾತು ಬಸವಣ್ಣನ ವಚನವೊಂದರಲ್ಲಿದೆ. ಪಂಪ ಈ ಶಬ್ದವನ್ನು ಸನ್ನೆ ಎಂಬರ್ಥದಲ್ಲಿಯೂ ಬಳಸಿದ್ದಾನೆ: "ಕುಂಚದಡಪದ ಡವಕೆಯ ಪರಿಚಾರಕರೆಲ್ಲರುಮಂ ಕಣ್ಗೆತ್ತಿ ಕಳೆದು ಏಕಾಂತದೊಳ್ ಕನ್ನೆಯನಿಂತೆಂದರ್" (ಕಣ್ಗೆತ್ತು=ಕಣ್ಸನ್ನೆ ಮಾಡು). 'ಕೆತ್ತುಗುಂದು' ಎಂಬುದು ಹೃದಯದ ಮಿಡಿತ ನಿಂತುಹೋಗು ಎಂಬರ್ಥದಲ್ಲಿ ಬಳಕೆಯಾಗುತ್ತದೆ: "ಇಂಗದ ಬೆಮರ್ ಮಿಡುಕೋಡದ ಪುರ್ವು ಬೀಗಿ ಬೀಯದ ತುಟಿ ಕೆತ್ತುಗುಂದದ ಕುಚಂ ನಡುಕಂಗಿಡದೂರುಕ" (ನೇಮಿಚಂದ್ರನ 'ಲೀಲಾವತಿ'). ಹಲವು ವೇಳೆ ಅಲುಗಾಡು, ನಡುಗು ಎಂಬರ್ಥವೂ ಇದಕ್ಕೆ ಪ್ರಾಪ್ತವಾಗುತ್ತದೆ: "ಕೆತ್ತುವ ತೋಳ್ ಕಂಪಿಸುವ ಹಸ್ತಂ" ಎಂಬುದು ಹರಿಹರನ 'ಗಿರಿಜಾ ಕಲ್ಯಾಣ'ದ ವಾಕ್ಯ. ಇದಕ್ಕೆ ಉದಾಹರಣೆ. "ಕೆತ್ತಿದವು ಮೀಸೆಗಳು" ಕೋಪವನ್ನು ಹೇಳಲು ಕುಮಾರವ್ಯಾಸನು ಬಳಸುವ ನುಡಿಗಟ್ಟು.
'ಕೆತ್ತು' ಎಂದರೆ ಮೇಲ್ಪದರವನ್ನು ಕತ್ತರಿಸು ಎಂಬರ್ಥವೂ ಇದೆ. ಈ ಅರ್ಥದಲ್ಲಿ ಈ ಶಬ್ದವು ತಮಿಳಿನಲ್ಲಿ 'ಚೆಟ್ಟು' ಎಂದೂ, ಮಲಯಾಳಂನಲ್ಲಿ 'ಚೆಟ್ಟುಕ' ಎಂದೂ, ತುಳುವಿನಲ್ಲಿ 'ಕೆತ್ತುಣಿ' ಎಂದೂ ಬಳಕೆಯಲ್ಲಿದೆಯೆಂದು ಹೇಳುತ್ತಾರೆ. ಮಿಡುಕು ಎಂಬರ್ಥದೊಡನೆ 'ಶಬ್ದಮಣಿದರ್ಪಣ'ವು "ಕೆತ್ತು-ತನೂಕರಣೇ" ಎಂದೂ ಅರ್ಥವನ್ನು ನೀಡುತ್ತದೆ. "ಕೆತ್ತಿದ ತಿಗುಡು ಹತ್ತುವುದೆ ಮುನ್ನಿನಂತೆ" ಎಂಬ ವಾಕ್ಯವು ಅಕ್ಕಮಹಾದೇವಿಯ ಒಂದು ವಚನದ್ದು (ತಿಗುಡು=ತೊಗಟೆ). "ಕುಪ್ಪಸದಂತೆ ಬೆನ್ನಂ ಪತ್ತಿ ಕೆತ್ತುವರ್" ಎಂಬುದು 'ಧರ್ಮಾಮೃತ'ದ ಪ್ರಯೋಗ. "ಭಕ್ತರ ಕಂಡು ಬಂಧಿಪಳ ನಡುನೆತ್ತಿಯ ಕೆತ್ತಬೇಕು" ಎಂಬುದು ಪುರಂದರದಾಸರ ಹಾಡಿನ ಮಾತು. ಈ ಶಬ್ದವನ್ನು ಮುಚ್ಚು ಎಂಬರ್ಥದಲ್ಲಿಯೂ ಬಳಸುತ್ತಿದ್ದರು: "ಪಡಿಯಂ ಕೆತ್ತಿ ಅಗುಳಿಯನಿಕ್ಕಿ .. .. ಪಂಜರದ ಪಡಿಕೆಯೊಳಿರ್ದ ಎನ್ನೊಳಿಂತೆಂದಂ" ಎಂಬುದು 'ಕರ್ಣಾಟಕ ಕಾದಂಬರಿ' ಕಾವ್ಯದ ಮಾತು.
ವಿಗ್ರಹವನ್ನು ಕಂಡರಿಸು ಎಂಬರ್ಥವೂ ಈ ಶಬ್ದಕ್ಕಿದೆ. "ಗರ್ಭಗೃಹಸ್ತಿತ ಮಂಟಪ ಶಿಖರ ಶಿಷ್ಟಿ ಸಹವಾಗಿ ಕೆತ್ತು ಜಲ್ಲಾಂದರವ ಮಾಡಿಸಿ" ಎಂಬ ವಾಕ್ಯಖಂಡ ಶಾಸನವೊದರಲ್ಲಿದೆ. "ಹುತ್ತುಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ" ಎಂಬ ಸಾಲುಗಳು ಗೋಪಾಲಕೃಷ್ಣ ಅಡಿಗರ 'ಶ್ರೀರಾಮನವಮಿಯ ದಿವಸ' ಕವನದ ಕೊನೆಯ ಸಾಲುಗಳು.
=====
ಕೈ1: ಇದನ್ನು ಕೆಯ್ ಕಯ್ ಎಂತಲೂ ಬರೆಯುತ್ತಿದ್ದರು. ಕನ್ನಡದಲ್ಲಿ ಇದಕ್ಕೆ ಕ್ರಿಯಾಪದವಾಗಿ ಮಾಡು ಎಂದೂ ನಾಮವಾಚಕವಾಗಿ ಹಸ್ತ ಎಂದೂ ಅರ್ಥವಿದೆ. ದ್ರಾವಿಡ ಪದವಾದ ಇದು ಕ್ರಿಯೆಯ ಅರ್ಥದಲ್ಲಿ ತಮಿಳು ಮಲಯಾಳಂಗಳಲ್ಲಿ ಚೆಯ್ ಎಂದೂ, ತೆಲುಗಿನಲ್ಲಿ ಚೇಯು ಎಂದೂ ಆಗುತ್ತದೆ. ಪ್ರಾಯಶಃ ಮಾಡುವುದು ಕೈಗಳಿಂದಾದ್ದರಿಂದ ಕ್ರಿಯಾರ್ಥವಿದ್ದುದು ನಾಮಪದವಾಗಿಯೂ ಬಳಕೆಗೊಂಡಿರಬಹುದು. ಈ ಅರ್ಥದಲ್ಲಿ ಈ ಪದವು ತಮಿಳು ತುಳುಗಳಲ್ಲಿ ಕೈ ಎಂದೂ ಮಲಯಾಳಂನಲ್ಲಿ ಕಯ್ಯಿ ಎಂದೂ ತೆಲುಗಿನಲ್ಲಿ ಚೇಯಿ ಎಂದೂ ಆಗುತ್ತದೆ.  ಕ್ರಿಶ. ಏಳನೆಯ ಶತಮಾನದ ಬಾದಾಮಿಯ ಕಪ್ಪೆಯ ಅರಭಟ್ಟನ ಶಾಸನದಲ್ಲಿ "ಒಳ್ಳಿತ್ತ ಕೆಯ್ವೊರಾರ್" ಎಂಬ ಪ್ರಯೋಗವಿದೆ. "ವಾದಂಗೆಯ್ದು ಗೆಲ್ದು" ಎಂಬ ಪ್ರಯೋಗ 'ವಡ್ಡಾರಾಧನೆ'ಯಲ್ಲದೆ. ಈ ಶಬ್ದಕ್ಕೆ ಈಗಲೂ ಸಂಭೋಗಿಸು ಎಂಬ ಅರ್ಥವಿದೆ. ರಾಜ್ಯ ಎಂಬ ಶಬ್ದದೊಡನೆ ಸೇರಿ 'ರಾಜ್ಯಂಕೆಯ್' ಎಂಬ ಸಮಾಸಪದಕ್ಕೆ ರಾಜ್ಯವನ್ನಾಳು ಎಂಬ ಅರ್ಥ ಉಂಟಾಗುತ್ತದೆ ("ಸ್ವಸ್ತಿಶ್ರೀಪುರುಷ ರಾಜ್ಯಂಕೆಯೆ.. .." - ಎಂಟನೆಯ ಶತಮಾನದ ಶಾಸನ). ಇದು ರಾಜ್ಯಂಗೆಯ್ ಎಂಬ ರೂಪದಲ್ಲಿಯೂ ವ್ಯಾಪಕವಾಗಿ ಬಳಕೆಯಲ್ಲಿದೆ ("ಸಿಂಹವರ್ಮನೆಂಬರಸಾಗಿ ರಾಜ್ಯಂಗೈಯ್ಯುತ್ತುಂ" - ದುರ್ಗಸಿಂಹನ 'ಪಂಚತಂತ್ರ'). ಕೆಯ್ ಎಂಬುದಕ್ಕೆ ಪ್ರತ್ಯಯ ಸೇರಿ ಕೈತ ಅಥವಾ ಕೈಮೆ ಎಂಬ ರೂಪವನ್ನು ಪಡೆದು ಕೆಲಸ ಎಂಬರ್ಥವನ್ನು ಸೂಚಿಸುತ್ತದೆ.   ಕೈತ ಎಂದರೆ ಮಾಡಿದ ಎಂಬರ್ಥವೂ ಇದೆ ("ಒಂದಿದಳಂಕೃತಿ ಕೈತ ದೇಸಿ"  - 'ಪಂಪಭಾರತ').
ಮಾಡು ಎಂಬರ್ಥದಲ್ಲಿ ಗೆಯ್ ಎಂಬ ರೂಪವೂ ವ್ಯಾಪಕವಾಗಿ ಬಳಕೆಯಲ್ಲಿದೆ. "ಗೆಯ್ (ಕೆಯ್) ಶಿಲ್ಪೇ" ಎಂದು 'ಶಬ್ದಮಣಿದರ್ಪಣ' ಹೇಳುತ್ತದೆ. ಗೆಯ್ ಅನ್ನು ಗೈ ಎಂದೂ ಬರೆಯುವುದು ರೂಢಿ. ಇದು ಗೇ ಎಂದೂ ಬಳಕೆಯಲ್ಲಿದೆ. 'ಗೇದೂ ಗೇದೂ ಸಾಕಾಗದೆ' ಎಂಬಂತಹ ಮಾತು ಸಾಮಾನ್ಯ. ಇದರ ನಾಮರೂಪಗಳಾದ ಗೆಯ್ತ ("ಈ ಮನುಜರ ಗೆಯ್ತಮಂ ಬಿಸುಟು" - 'ಕರ್ಣಾಟಕ ಕಾದಂಬರಿ') ಅಥವಾ ಗೆಯ್ಮೆ ಅಥವಾ ಗೇಮೆ ಕೆಲಸ ಎಂಬರ್ಥವನ್ನು ಪಡೆಯುತ್ತವೆ. ಗೆಯ್ವೊಗ ಎಂಬ ರೂಪವು ಕಾರ್ಯವೈಖರಿ ಎಂಬರ್ಥದಲ್ಲಿ ಪೊನ್ನನ 'ಶಾಂತಿಪುರಾಣ'ದಲ್ಲಿ ಬಳಕೆಯಾಗಿದೆ ("ಬಗೆ ಮತ್ತೊಂದೆನೆಯುಂ ಗೆಯ್ವೊಗಂ ಇತ್ತೊಂದೆನೆಯುಂ").
=====
ಕೈ2:  ಕೈ ಎಂಬ ನಾಮರೂಪವನ್ನೀಗ ಪರಿಶೀಲಿಸೋಣ. ಇದಕ್ಕೆ ಹಸ್ತ ಎಂಬ ಆರ್ಥವಿದೆ ("ಮುಂದು ನಿಂದು ಕೈಗಳಂ ಮುಗಿದು" - 'ವಡ್ಡಾರಾಧನೆ'). ಆನೆಯ ಸೊಂಡಿಲು ಎಂಬರ್ಥವೂ ಇದಕ್ಕಿದೆ; "ಕೈಗಳ್ ಆನೆಯ ಕೈಯಂ ನಖಂ ಇಂದುವಂ ನಗುಗುಂ" ಎಂಬುದು 'ಪಂಪಭಾರತ'ದ ಪ್ರಯೋಗ. ಹಾಗೆಯೇ ಮರದ ಕೊಂಬೆಯನ್ನೂ ಕೈ ಎಂದು ಕವಿಗಳು ಕರೆಯುತ್ತಾರೆ ("ಮಾವಿನ ಕೆಯ್ಯಂ ಪಿಡಿದಲ್ಲಿ ಮೆಲ್ಲಮೆಲ್ಲನೆ ನಡೆವುದು .. .. ಉಪವನಪವನಂ" - ಮಧುರಕವಿಯ 'ಧರ್ಮನಾಥಪುರಾಣ'). ಅಲಂಕರಿಸಿಕೋ (ಮೇಕಪ್) ಎಂಬರ್ಥವೂ ಸಾಧಿತವಾಗುತ್ತದೆ ("ಮುತ್ತಿನ ಕೈಯಿಂದಡಿಕಿಲ್ವೆತ್ತ ಉರುಶೃಂಗಾರ" - ಸೋಮದೇವನ 'ಉದ್ಭಟಕಾವ್ಯ').
ಈ ಅರ್ಥಗಳನ್ನು ಹಿಂಬಾಲಿಸಿ ಅನೇಕ ಸಮಾಸಪದಗಳು ಸೃಷ್ಟಿಗೊಂಡಿವೆ. ಕೈಕೊಳ್ ("ಈಕೆಯಂ ಕೆಯ್ಕೊಳ್ವುದೆ ಕಜ್ಜಂ" - 'ಪಂಪಭಾರತ') ಅಥವಾ ಕೈಗೊಳ್ ಎಂದರೆ ಕೈಹಿಡಿ, ಸ್ವೀಕರಿಸು ಎಂದರ್ಥ. ಇದಕ್ಕೆ ತಾಳು, ಧರಿಸು ಎಂಬರ್ಥವೂ ಇದೆ ("ತಪಮಂ ಕೈಕೊಳ್ವುದು" - ಶಾಂತಿನಾಥನ 'ಸುಕುಮಾರ ಚರಿತೆ' ). ಆರಂಭಮಾಡು ("ಸಂಸರಾಣಾಂಭೋರಾಶಿಯಂ ದಾಂಟುವ ಬಗೆಯನೆ ಕಯ್ಕೊಂಡಂ" - ಪಂಪನ 'ಆದಿಪುರಾಣ'). ಈ ರೂಪಕ್ಕೆ ಆಕ್ರಮಿಸು, ಸಮ್ಮತಿನೀಡು, ಗಮನಿಸು ಮುಂತಾದ ಅರ್ಥಗಳು ಸಂದರ್ಭಕ್ಕನುಗುಣವಾಗಿ ಸ್ಫುರಿಸುತ್ತವೆ. 'ಕೈಗಣ್ಮು' ಎಂದರೆ ಪ್ರಕಟಗೊಳ್ಳು ("ನಿರ್ಭರ ಭಕ್ತಿ ತಮ್ಮ ಮನದೊಳ್ ಕೈಗಣ್ಮೆ" - 'ಆದಿಪುರಾಣ'), ವಶವಾಗು ("ಶಕ್ತಿಸ್ಫುರಣಂ ಕೈಗಣ್ಮೆ" - ಷಡಕ್ಷರನ 'ರಾಜಶೇಖರ ವಿಳಾಸ') ಎಂದರ್ಥವಾದರೆ, ಕೈಗುಡು ಎಂದರೆ ನೆರವಾಗು ಎಂದು ("ಅವರ್ಗಳ ಸನ್ಮತಿ ಕೈಗುಡುಗೆ ಎಮಗೆ ಸರಸಪದಪದ್ಧತಿಯೊಳ್" - ಜನ್ನನ 'ಯಶೋಧರ ಚರಿತೆಕ'). ಕೈಗಟ್ಟಿ ಎಂದರೆ ಕೈಗೆ ಸವರಿಕೊಳ್ಳುವ ಸುಗಂಧ ("ಆರೋಗಣೆಯ ಕಡೆಯೊಳಮರ ವಟುಗಳಟವಯ್ಸಿದ ಕೆಯ್ಗಟ್ಟಿಯೊಳ್" - ಅಗ್ಗಳನ 'ಚಂದ್ರಪ್ರಭಪುರಾಣ'), 'ಕೈಗವು' ಎಂದರೆ ಮಿತಿಮೀರುವಿಕೆ ("ನಿನ್ನ ಒರಂಟುತನಂ ಕೈಗವಾಯ್ತು" - 'ಪಂಪಭಾರತ'). ಕೈಪಱೆ ಎಂಬುದನ್ನು ಎಂದರೆ ಚಪ್ಪಾಳೆ ಎಂದೂ ಕೈಯಿಂದ ಕುಟ್ಟುವ ತಮಟೆ ಎಂದೂ ರುದ್ರಭಟ್ಟನ 'ಜಗನ್ನಾಥವಿಜಯ' ಬಳಸುತ್ತದೆ ("ಕೈಪಱೆಯೊಳಾಡುವ ರಕ್ಕಸಿಯರೊಪ್ಪಿದರ್"). ಕೈನೀರ್ ಎಂದರೆ ಧಾರೆ, ಕೈಪಿಡಿ ಎಂದರೆ ಕನ್ನಡಿ, ಕೈದು ಎಂದರೆ ಆಯುಧ, ಕೈದಳ ಎಂದರೆ ಬೆರಳು, ಕೈಯಾಣೆಯಿಡು, ಎಂದರೆ ಕೈ ಮೇಲೆ ಕೈಯಿಟ್ಟು ಮಾತುಕೊಡು, ಕೈಸಾಲ, ಕೈಗಾರಿಕೆ - ಹೀಗೆ ಕೈ ಶಬ್ದದಿಂದ ರೂಪಿತಗೊಳ್ಳುವ ಅಸಂಖ್ಯಾತ ಶಬ್ದಗಳಿವೆ.
=====
ಕೈ3: ಕೈ, ಕೆಯ್, ಕಯಿ, ಕೆಯ್ಯಿ ಮುಂತಾದ ರೂಪಗಳಲ್ಲಿ ದೊರೆಯುವ ಶಬ್ದವು ಹೊಲ ಅಥವಾ ಸಾಗುವಳಿಯ ಭೂಮಿ ಎಂಬ ಅರ್ಥವನ್ನು ಹೊಂದಿದೆ. ಇದು ಇತರ ದ್ರಾವಿಡ ಭಾಷೆಗಳಲ್ಲಿಯೂ ಈ ಅರ್ಥವನ್ನು ಪಡೆಯುತ್ತದೆ: ತಮಿಳಿನಲ್ಲಿ ಚೆಯ್, ಮಲಯಾಳಂನಲ್ಲಿ ಚೆಯ್ಯಿ, ತೆಲುಗಿನಲ್ಲಿ ಚೇನು ಹಾಗೂ ತುಳುವಿನಲ್ಲಿ ಕೆಯಿ ಎಂಬ ರೂಪಗಳನ್ನು ತಾಳುತ್ತದೆ. "ತನ್ನ ಕೆಯ್ಯನುಳಲೆಂದು ಪೋಗಿ"  ಎಂಬುದು 'ವಡ್ಡಾರಾಧನೆ'ಯ ಮಾತು. ಹೊಲದಲ್ಲಿ ಬೆಳೆದು ನಿಂತ ಪೈರು ಎಂಬರ್ಥದಲ್ಲಿಯೂ ಕೆಯ್ ಬಳಕೆಗೊಂಡಿದೆ ("ಪಂದಿ ಕೆಯ್ಯಂ ತಿಂದೊಡೆ ಕತ್ತೆಯ ಕಿವಿಯಂ ಕೊಂದರೆಂಬತೆ" - ನಯಸೇನನ 'ಧರ್ಮಾಮೃತ'). ಗದ್ದೆ ಎಂಬರ್ಥದಲ್ಲಿ ಆಂಡಯ್ಯನ 'ಕಬ್ಬಿಗರ ಕಾವ'ದಲ್ಲಿ "ಕನ್ನಡಮೆನಿಪ್ಪಾ ನಾಡು ಚೆಲ್ವಾಯ್ತು.. .. ಕಾಲೂರ್ಗಳಿಂ ಕೆಯ್ಗಳಿಂ" ಎಂಬಲ್ಲಿ ಈ ಪದ ಬಳಕೆಗೊಂಡಿದೆ. ತನ್ನ 'ಪಂಚತಂತ್ರ'ದಲ್ಲಿ ದುರ್ಗಸಿಂಹನು ಗದ್ದೆ ಎಂಬರ್ಥದಲ್ಲಿ ಕಯ್ ಎಂಬ ರೂಪವನ್ನು ಬಳಸುತ್ತಾನೆ: "ಬೆಳದೊರಗಿದ ಕಳವೆಯ ಕಯ್ಗಳಿನೊಪ್ಪುವ ತಿಳಿಗೊಳಂಗಳಿಂ ರಮ್ಯವನಾವಳಿಯಿಂ ಸೊಗಯಿಸುವುದು".
ಕೆಇ ಎಂಬ ರೂಪವು ಹಲವು ಶಾಸನಗಳಲ್ಲಿದೆ ಹನ್ನೆರಡನೆಯ ಶತಮಾನದ ಶಾಸನವೊಂದರಲ್ಲಿ "ಬೊಂಬಸಮುದ್ರದ ಹಿಂದಣ ಕೆಇ" ಎಂಬ ಬರಹವಿದೆ. (ಹಲವು ವೇಳೆ ಶಾಸನಗಳನ್ನು ಬರೆಯುತ್ತಿದ್ದವರು ಹಾಗೂ ಓಲೆಗರಿಯ ಮೇಲೆ ಬರೆದುಕೊಡುತ್ತಿದ್ದವರು ಚೆನ್ನಾಗಿ ಓದಿಕೊಂಡವರಾಗೇನೂ ಇರುತ್ತಿರಲಿಲ್ಲ. ಹೀಗಾಗಿ ಪ್ರಮಾಣಭಾಷೆಯಲ್ಲಿ ಕಾಣದ ಕಾಗುಣಿತ ರೂಪಗಳನ್ನವರು ಬಳಸಿರುವ ಸಾಧ್ಯತೆಗಳೂ ಇವೆ. ಇಂಥ ಬರವಣಿಗೆಯನ್ನು ಕಾಗುಣಿತದ ತಪ್ಪು ಎನ್ನಬೇಕೋ, ಶಬ್ದದ ಮತ್ತೊಂದು ರೂಪವೆಂದು ಪರಿಗಣಿಸಬೇಕೋ ತೀರ್ಮಾನಿಸುವುದು ಕಷ್ಟ). ಇದು ಮತ್ತೆ ಕೆಲವು ಕಾವ್ಯ ಶಾಸನಗಳಲ್ಲಿ ಕೆಯಿ ಎಂಬ ರೂಪದಲ್ಲಿ ಬಳಕೆಗೊಂಡಿದೆ: "ರಸವುಗುವ ಕಬ್ಬಿನ ಕೆಯಿಗಳಿಂ ಸೊಗಯಿಸುವುದಾ ವಿಷಯಂ" ಎಂಬುದು 'ಸಾಳ್ವಭಾರತ'ದ ಮಾತು. "ಮಣ್ಣ ಬಿಟ್ಟ ಬಳಿಕ ಆ ಕೆಯ್ಯನಾರುತ್ತರೇನು?" ಎಂಬುದು ಮಹಾದೇವಿಯಕ್ಕನ ವಚನದ ಭಾಗ. "ಏರಿ ನೀರುಂಬಡೆ ಬೇಲಿ ಕೆಯ್ಯ ಮೇವಡೆ" ಎಂಬುದು ಬಸವಣ್ಣನ ವಚನದ ಮಾತು.  ಹೀಗೆಯೇ ಕೈ, ಗಯ್ ಎಂಬ ರೂಪಗಳು ಹಳಗನ್ನಡದ ಬರವಣಿಗೆಯಲ್ಲಿ ದೊರಕುತ್ತವೆ.
ಗದ್ದೆಯ ಮೇಲೆ ಹಾಕುತ್ತಿದ್ದ ಸುಂಕವನ್ನು ಶಾಸನಗಳು 'ಕೆಯಿಸುಂಕ' ಎಂದು ಕರೆಯುತ್ತವೆ.
======
ಗಂಡಸು: ಈ ಶಬ್ದವು ಹೆಂಗಸು ಎಂಬಂತೆಯೇ ರೂಪಿತವಾಗಿರುವ ಶಬ್ದವೆಂಬುದು ಸ್ಪಷ್ಟವಾಗಿದೆ: ಗಂಡು+ಕೂಸು=ಗಂಡುಸು<ಗಂಡಸು. ಗಂಡು ಎಂಬುದರ ರೂಪವು ತಮಿಳಿನಲ್ಲಿ ಗಿಂಡ ಎಂದಿದ್ದರೆ, ತುಳು ತೆಲುಗುಗಳಲ್ಲಿ ಗಂಡು ಎಂಬ ರೂಪದಲ್ಲಿದೆ. ಗಂಡು ಎಂಬುದಕ್ಕೆ ಶೌರ್ಯ ಎಂಬುದು ಮೂಲಾರ್ಥ, "ಗಂಡಿನೊಳ್ ಭೀಮಸೇನಂ" ಎಂಬ ಪಂಪನ ಮಾತಿನಲ್ಲಿ ಈ ಅರ್ಥವಿದೆ. ಶೌರ್ಯವು ಗಂಡಿಗೆ ಸಹಜ ಎಂಬ ಭಾವನೆಯಿಂದ  ಗಂಡು ಅಥವಾ ಗಂಡಸು ಎಂಬ ಶಬ್ದ ಈ ಅರ್ಥವನ್ನು ಪಡೆದಂತಿದೆ. ಬರಬರುತ್ತ ಗಂಡು ಎಂಬುದಕ್ಕೂ ಗಂಡಸು ಎಂಬುದಕ್ಕೂ ಅರ್ಥವ್ಯತ್ಯಾಸವಾದಂತೆ ಕಾಣುತ್ತದೆ: ಗಂಡಸು ಎಂಬುದು ಸಾಮಾನ್ಯಾರ್ಥವನ್ನು ಹೊಂದಿದ್ದರೆ, ಗಂಡ ಎಂಬುದು ಹೆಣ್ಣೊಬ್ಬಳ ಪತಿ ಎಂಬರ್ಥವನ್ನು ಪಡೆದಿದೆ. ಪಂಪನ 'ಆದಿಪುರಾಣ'ದಲ್ಲಿ "ಕುಲಮುಂ ಚಲಮುಂ ದೊರೆಯುಂ ಕಿಡೆ ಬಾಳ್ವಂ ಗಂಡರೂಪಿನೊಳ್ ಗಂಡನಲ್ತು ಪೆಂಡತಿಯೆ ವಲಂ" ಎಂಬ ಮಾತಿದೆ. ಇದರಲ್ಲಿನ 'ಗಂಡರೂಪು' ಎಂಬುದಕ್ಕೆ ಗಂಡಸಿನ ಆಕೃತಿ ಎಂದು ಅರ್ಥ.
ಹೆಣ್ಣಿಗೆ ಲಾವಣ್ಯದಂತೆ ಗಂಡಸಿಗೆ ಶೌರ್ಯವೇ ಸೌಂದರ್ಯದ ನೆಲೆ ಎಂಬ ಭಾವನೆಯಿಂದಾಗಿ 'ಗಂಡಗಾಡಿ' ಎಂಬ ಪದ ರೂಪುಗೊಂಡಿತು. ಹಾಗೆಯೇ ಪೌರುಷದಿಂದ ಉಂಟಾಗುವ ಹೆಮ್ಮೆಯನ್ನು 'ಗಂಡಗರ್ವ' ಎಂದು ರನ್ನ ಕರೆಯುತ್ತಾನೆ ("ಈ ಗಂಡಗರ್ವಮುಂ ಅದೆಲ್ಲಿಗೆ ಪೋಯ್ತು"). ಕೆಟ್ಟುದಕ್ಕೆ ಶೌರ್ಯವನ್ನು ಬಳಸಿಕೊಳ್ಳುವುದನ್ನು ಜನ್ನನ 'ಯಶೋಧರ ಚರಿತೆ'ಯಲ್ಲಿ 'ಗಂಡಗಾಳಿಕೆ' - ಗಂಡ+ಕಾಳಿಕೆ - ಎಂದಿರುವಂತೆ ತೋರುತ್ತದೆ ("ಪರನೃಪರ ಗಂಡಗಾಳಿಕೆಯನದೇಂ ಕಳೆದನೋ ನೃಪತಿ"). ಶೌರ್ಯಸೂಚಕವಾಗಿ ಕೊಡುವ ಬಿರುದು ಅಥವಾ ಆಭರಣವನ್ನು ಗಂಡಪೆಂಡೇರ ಎಂದು ಕರೆಯುತ್ತಿದ್ದ ಉಲ್ಲೇಖಗಳು ಶಾಸನಗಳಲ್ಲಿವೆ. ಶೌರ್ಯದ ಮಾತು 'ಗಂಡವಾತು' ಎನಿಸಿಕೊಳ್ಳುತ್ತದೆ.
ಗಂಡು ಎಂಬುದಕ್ಕೆ ಶೌರ್ಯ ಎಂಬುದರ ಜೊತೆಯಲ್ಲೇ ಧೈರ್ಯ ಎಂಬರ್ಥವೂ ಇದೆ. ಹೀಗಾಗಿ ಧೈರ್ಯಕೆಡುವುದನ್ನು 'ಗಂಡುಗೆಡು' ಎಂದು 'ಪಂಪಭಾರತ'ದಲ್ಲಿ ಕರೆಯಲಾಗಿದೆ. ಹೆಣ್ಣಿಗೆ ಸಹಜವಲ್ಲವೆಂದು ಭಾವಿಸಲಾದ ಶೌರ್ಯ-ಧೈರ್ಯಗಳನ್ನು ಪಡೆದ ಹೆಣ್ಣನ್ನು 'ಗಂಡುಬೀರಿ' ಎನ್ನುವುದು ಸಾಮಾನ್ಯ.  ಈ ಆರ್ಥದಲ್ಲೇ 'ಗಂಡವೞ‍್ತಿ' ಎಂಬ ಮಾತು 'ಪಂಪಭಾರತ'ದಲ್ಲಿ ಬಳಕೆಗೊಂಡಿದೆ.
=====
ಗಾಳಿ: ಇದು ದೇಶೀ ಪದ; ಪಂಚಭೂತಗಳಲ್ಲಿ ಒಂದಾದ ವಾಯುವನ್ನು ಸೂಚಿಸುತ್ತದೆ. ತೆಲುಗಿನಲ್ಲಿ ಗಾಲಿ, ಮಲಯಾಳಂನಲ್ಲಿ ಕಾಳುಕ, ತುಳುವಿನಲ್ಲಿ ಗಾಲಿ ಅಥವಾ ಗಾಳಿ ಎಂಬ ರೂಪಗಳನ್ನು ಪಡೆಯುತ್ತದೆ. "ಗಾಳಿಗೆ ಮಾತನಾಡುವರು .. .. ಕಾೞ್ಕೋೞಿಗಳಾಗಿ ಕೂಗುವರದೇಂ ಮಧುಪಾನದ ಸೊರ್ಕು ಸಾಲದೇ" ಎಂಬ ಹೆಂಡಕುಡುಕರನ್ನು ವರ್ಣಿಸುವ ಪದ್ಯವೊಂದು ಹದಿಮೂರನೆಯ ಶತಮಾನದ 'ಸೂಕ್ತಿಸುಧಾರ್ಣವ'ವೆಂಬ ಸಂಕಲನಗ್ರಂಥದಲ್ಲಿದೆ.  ಚೆನ್ನಬಸವಣ್ಣನ ವಚನವೊಂದರಲ್ಲಿ ಗಾಳಿ ಬೀಸುವಾಗಿನ ಸದ್ದನ್ನು 'ಗಾಳಿಯ ಸರ' ಎಂದು ವರ್ಣಿಸುತ್ತದೆ (ಸರ=ಧ್ವನಿ, ಕಂಠ). ಇಂಥ ಗಾಳಿ ಸದ್ದನ್ನು "ಗಾಳಿ ಗಿರುಕೆನ್ನು" ಎಂದು 'ಹರಿಶ್ಚಂದ್ರ ಕಾವ್ಯ' ವರ್ಣಿಸುತ್ತದೆ. "ದೀಪವೂ ನಿನ್ನದೆ, ಗಾಳಿಯೂ ನಿನ್ನದೆ - ಆರದಿರಲಿ ಬೆಳಕು" ಎಂಬ ಸಾಲುಗಳು ಕೆ.ಎಸ್. ನರಸಿಂಹಸ್ವಾಮಿಯವರ 'ಪ್ರಥಮ ರಾಜನಿಗೆ' ಎಂಬ ಕವನದವು.
'ಕಬ್ಬಿಗರ ಕಾವ'ವು ಆಕಾಶವನ್ನು 'ಗಾಳಿವಟ್ಟೆಕ' (ಗಾಳಿ ಬೀಸುವ ಮಾರ್ಗ) ಎನ್ನುತ್ತದೆ: "ಗಾಳಿವಟ್ಟೆಯೊಳ್ ನಡೆವನ ಕಾಯ್ಪು ತಣ್ಣಗಿರೆ". ಈ ಮಾತನ್ನು ಕುವೆಂಪು ತಮ್ಮ 'ಯಮನ ಸೋಲು' ನಾಟಕದಲ್ಲಿ ಬಳಸುತ್ತಾರೆ. ಗಾಳಿ ಬೀಸುವ ಜಾಗವೆಂಬ ಅರ್ಥದಲ್ಲಿ 'ಪುಷ್ಪದಂತಪುರಾಣ'ವು 'ಗಾಳಿವೆಱಗು' ಎಂಬ ಮಾತನ್ನು ಬಳಸುತ್ತದೆ ("ಕಿಱಿದು ಬೇಗಂ ಆ ಗಾಳಿವೆಱಗಿನೊಳು ರಥಮಂ ನಿಲಿಸಿ"). ಗಾಳಿಯ ಮೂಲಕ ವಾಸನೆ ತಿಳಿಯುವುದೇ 'ಗಾಳಿಗೊಳ್' ("ಅದು ಗಾಳಿಗೊಂಡು ಒಂದು ದೆಸೆಗೆ ತಗುಳ್ದೊಡೆ" ಎಂಬುದು 'ವಡ್ಡಾರಾಧನೆ'ಯ ಮಾತು). 'ಗಾಳಿವಾತು' ಎಂದರೆ ಬೈಗುಳ ("ಗಾಳಿವಾತೆಂದು ಬೈಗುಳ್" - 'ಶಬ್ದಮಣಿದರ್ಪಣ'). ಈಗ 'ಗಾಳಿ ಮಾತು' ಎಂಬುದಕ್ಕೆ ವದಂತಿ (hearsay) ಎಂಬ ಅರ್ಥವಿದೆ. "ಸಂಸಾರವೆಂಬುದು ಗಾಳಿಯ ಸೊಡರು" ಎಂಬ ಬಸವಣ್ಣನು 'ಗಾಳಿಯ ಸೊಡರ'ನ್ನು ಅಸ್ಥಿರತೆಯ ಸಂಕೇತವಾಗಿಸಿದ್ದಾನೆ. ಬೇಟೆಯಲ್ಲಿ 'ಮೇಗಾಳಿ' (ಬೇಟೆಯ ಪ್ರಾಣಿಯ ಮೇಲೆ ಹಾದು ಬೇಟೆಯ ಮೃಗದ ಕಡೆಗೆ ಬೀಸುವ ಗಾಳಿ) 'ಕಿಗ್ಗಾಳಿ' (ಬೇಟೆಯ ಮೃಗದ ಮೇಲಿಂದ ಹಾದು ಬೇಟೆಯಾಡುವ ಪ್ರಾಣಿಯ ಕಡೆಗೆ ಬೀಸುವ ಗಾಳಿ) ಎಂಬ ಮಾತುಗಳ ಬಳಕೆಯಿದೆ. 'ಹರಿಶ್ಚಂದ್ರ ಕಾವ್ಯ'ದಲ್ಲಿ "ಮೇಗಾಳಿಯಿಂ ದೂರದಿಂ ತೋಱೆತ್ತನೊಡ್ಡಿ ಕಿಗ್ಗಾಳಿಯಿಂ .. .. ಹುಲಿಯ ಹಾರಯಿಸಿ" ಎಂದು ಮುಂತಾದ ವರ್ಣನೆಯಿದೆ.
'ಗಾಳಿ' ಎಂದರೆ ದೆವ್ವ ಎಂಬರ್ಥವೂ ಇದೆ. "ಗಾಳಿ ಸೋಂಕಿದತ್ತು ಪಿಶಾಚಂ ತೊಡರ್ದುದು ಭೂತಂ ಬನ್ನಂಬಡಿಸಿದುದು" ('ಕರ್ಣಾಟಕ ಕಾದಂಬರಿ'). ಇದು ಹೂಬಿಟ್ಟ ಹುಣಿಸೆ ಮರದಲ್ಲಿರುತ್ತದೆಂಬ ನಂಬಿಕೆಯಿತ್ತು ("ಪೂತ ಪುಣಿಸೆಯಂ ಗಾಳಿ ಪೊಕ್ಕಂತೆ"  - 'ಧರ್ಮಾಮೃತ'). 'ಗಾಳಿಗೆ ತೂರು' ಎಂದರೆ ಉದಾಸೀನ ಮಾಡು; 'ಗಾಳಿ ಬಂದಾಗ ತೂರಿಕೊ' ಎಂದರೆ ಅವಕಾಶವಾದಿಯಾಗು ಮುಂತಾದ ಅನೇಕ ನುಡಿಗಟ್ಟುಗಳಲ್ಲದೆ, 'ಗಾಳಿ' ಪೂರ್ವಪದವಾಗುಳ್ಳ 'ಗಾಳಿಗುದುರೆ' 'ಗಾಳಿಗಿರಣಿ' 'ಗಾಳಿಕೋಳಿ' ಎಂಬ ಸಮಾಸಪದಗಳೂ ಬಳಕೆಯಲ್ಲಿವೆ.
=====
ಗೌಡ: ಈ ಶಬ್ದ ಕನ್ನಡದಲ್ಲಿ ಸುಪರಿಚಿತವಾದುದು. ಆದರೆ ಇದು ಅಚ್ಚ ಕನ್ನಡ ಪದವೇನಲ್ಲ; ಸಂಸ್ಕೃತದ ಎರಡು ಪದಗಳು ಸೇರಿ ಬರಬರುತ್ತ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತ ಈಗ ಈ ರೂಪದಲ್ಲಿದೆ: ಹಳ್ಳಿಯ ಹಿರಿಯ ಎಂಬರ್ಥದಲ್ಲಿ ಗ್ರಾಮ+ವೃದ್ಧ ಪದಗಳು ಸೇರಿ ಪ್ರಾಕೃತದಲ್ಲಿ ಗಾಮಉಡ>ಗವುಂಡ>ಗೌಂಡ>ಗೌಡ ಎಂಬ ಕ್ರಮದಲ್ಲಿ ಬದಲಾಗಿದೆಯೆಂಬುದು ಕೆಲವು ಭಾಷಾವಿಜ್ಞಾನಿಗಳ ಊಹೆ; 'ಗ್ರಾಮಕೂಟ' ಎಂಬ ಶಬ್ದದಿಂದ ಗೌಡ ಬಂದಿದೆಯೆಂಬುದು ಮತ್ತೂ ಕೆಲವರ ವಾದ.  'ಗಾಮುಣ್ಡ' ಎಂಬ ರೂಪವು ಆರನೆಯ ಶತಮಾನದ್ದೆಂದು ಬಗೆಯಲಾದ ಶಾಸನವೊಂದರಲ್ಲಿ ಕಾಣಿಸುತ್ತದೆ; 'ಗಾಮುಂಡಂ' ಎಂಬ ರೂಪವು 'ವಡ್ಡಾರಾಧನೆ'ಯಲ್ಲಿಯೂ ದೊರೆಯುತ್ತದೆ. 'ಧರ್ಮಾಮೃತ'ವೆಂಬ ನಯಸೇನನ ಹನ್ನೆರಡನೆಯ ಶತಮಾನದ ಕಾವ್ಯದಲ್ಲಿಯೂ, ಶಾಸನದಲ್ಲಿಯೂ 'ಗೌಂಡ' ಎಂಬ ರೂಪವು ದೊರೆಯುತ್ತದೆ. 'ಗೌಡ' ಎಂಬ ಶಬ್ದದ ಅತ್ಯಂತ ಪ್ರಾಚೀನ ಬಳಕೆ ಹದಿಮೂರನೆಯ ಶತಮಾನದ ಕವಿ ರಾಘವಾಂಕನ 'ಸಿದ್ಧರಾಮ ಚಾರಿತ್ರ'ದಲ್ಲಿದೆ. ತಮಿಳಿನಲ್ಲಿ ಗೌಂಡರ್ ಎಂಬ ರೂಪವೂ ತೆಲುಗಿನಲ್ಲಿ ಗೌಡು ಎಂಬ ರೂಪವೂ ಬಳಕೆಯಲ್ಲಿದೆ.
ಇದಕ್ಕೆ ವಿವಿಧ ಪ್ರತ್ಯಯಗಳನ್ನು ಸೇರಿಸಿ ಅನೇಕ ಶಬ್ದಗಳನ್ನು ಮಾಡಿಕೊಳ್ಳಲಾಗಿದೆ. ಗೌಡನ ಕೆಲಸ ಎಂಬರ್ಥದಲ್ಲಿ ಗಾವುಂಡಿಕೆ ಎಂಬ ರೂಪವು ಹನ್ನೆರಡನೆಯ ಶತಮಾನದ ನವಲಗುಂದದ ಶಾಸನವೊಂದರಲ್ಲಿ ಸಿಕ್ಕುತ್ತದೆ; ಇದೇ ಮುಂದೆ ಗೌಡಿಕೆ ಎಂದಾಯಿತು. ಇದೇ ಅರ್ಥದಲ್ಲಿ ಗಾವುಂಡತನ ಎಂಬ ರೂಪವೂ ಶಾಸನಗಳಲ್ಲಿ ದೊರೆಯುತ್ತದೆ. ಗೌಡನ ಹೆಂಡತಿ ಎಂಬರ್ಥದಲ್ಲಿ ಗಾವುಂಡಿ ಎಂಬ ರೂಪವುಂಟಾಗಿ ಮುಂದೆ ಅದೇ ಗಾವುಂಡಿತಿ ಎಂದಾಗಿ ಆನಂತರ ಗೌಡಿತಿ ಎಂದಾಗಿದೆ. ಈ ಕೆಲಸವನ್ನು ನಿರ್ವಹಿಸು ಎಂಬರ್ಥದಲ್ಲಿ ಶಾಸನಗಳು 'ಗಾಮುಂಡುಗೆಯ್' ಎಂಬ ರೂಪವನ್ನು ಬಳಸುತ್ತವೆ. ಇದಕ್ಕೆ ಸಂಬಂಧಸೂಚಕ ಪದಗಳು ಸೇರಿ ಗಾಮುಂಡಬ್ಬೆ, ಗಾಮುಂಡಸ್ವಾಮಿ ಎಂಬ ವ್ಯಕ್ತಿನಾಮಗಳಾಗಿಯೂ ಶಾಸನಗಳಲ್ಲಿ ಬಳಕೆಗೊಂಡಿವೆ. ಕೆಲವರು ಗೌಡ ಶಬ್ದವನ್ನು ಜಾತಿಸೂಚಕವಾಗಿಯೂ ಬಳಸುತ್ತಾರೆ.
ಗೌಡ ಎಂಬ ಸ್ವತಂತ್ರ ಸಂಸ್ಕೃತ ಶಬ್ದವೂ ಇದೆ. ಇದು ಉತ್ತರ ಭಾರತದ ಪ್ರದೇಶವೊಂದಕ್ಕೆ ಇದ್ದ ಹೆಸರು. ದಂಡಿ ಎಂಬ ಆಲಂಕಾರಕನ 'ಕಾವ್ಯಾದರ್ಶ' ಎಂಬ ಕೃತಿಯಲ್ಲಿ ಈ ಪ್ರದೇಶದಲ್ಲಿ ಸಂಸ್ಕೃತವನ್ನು ಬರೆಯುತ್ತಿದ್ದ ಬಗೆಯನ್ನು 'ಗೌಡೀ' ರೀತಿ ಎಂದು ಕರೆಯುತ್ತಾನೆ. ಗೌಡರೀತಿ ಎಂದೂ ಇದನ್ನು ಕರೆಯಲಾಗುತ್ತಿತ್ತು. ಸಂಸ್ಕೃತದಲ್ಲಿ ಈ ಪದಕ್ಕೆ ಕಾಕಂಬಿಯ ಮದ್ಯವೆಂಬ ಅರ್ಥವೂ ಇದೆ.
======
ಚಾಟಿ: ಇದು ಸಂಸ್ಕೃತದ ಚರ್ಮಪಟ್ಟಿಕಾ ಎಂಬುದರ ತದ್ಭವ. ಈ ಶಬ್ದವು ಚಮ್ಮಟಿಗೆ ಎಂದಾಗಿ ಆ ಬಳಿಕ ಚಾವಟಿಯಾಗಿ, ನಂತರ ಚಾಟಿಯಾಗಿದೆ. ಎಮೆನೋ ಮತ್ತು ಬರೋ ತಮ್ಮ 'ಎ ದ್ರವಿಡಿಯನ್ ಎಟಿಮೊಲಾಜಿಕಲ್ ಡಿಕ್ಷನರಿ'ಯಲ್ಲಿ ಇತರ ದ್ರಾವಿಡ ಭಾಷೆಗಳ ಅದರ ಜ್ಞಾತಿ ಪದಗಳನ್ನು ನೀಡುತ್ತಾರೆ: ತಮಿಳಿನಲ್ಲಿ ಚಾಟ್ಟಿ, ಚಾಟ್ಟೈ ಎಂದೂ, ತೆಲುಗಿನಲ್ಲಿ ಜಾಟಿ ಎಂದೂ, ಮಲಯಾಳಂನಲ್ಲಿ ಚಾಟ್ಟ ಎಂದೂ ಆಗುತ್ತದಂತೆ. ಅಲ್ಲದೆ ಚಮ್ಮಟಿಗೆ ಎಂಬ ರೂಪವು ತಮಿಳಿನಲ್ಲಿ ಚಮ್ಮಟ್ಟಿ ಎಂದೂ, ತೆಲುಗಿನಲ್ಲಿ ಸಮ್ಮೆಟ ಎಂದೂ, ಮಲಯಾಳಂನಲ್ಲಿ ಚಮ್ಮಟ್ಟಿಕೂಟಂ ಎಂದೂ, ತುಳುವಿನಲ್ಲಿ ಚಮಟಿಗೆ ಎಂದೂ ಆಗುತ್ತದೆಂದು ಅಲ್ಲಿಯೇ ಹೇಳಿ, ಅದಕ್ಕೆ ಕಮ್ಮಾರನ ಸುತ್ತಿಗೆ ಎಂಬ ಅರ್ಥವನ್ನು ನೀಡಿದೆ.
ಚರ್ಮಪಟ್ಟಿಕಾ ಎಂಬುದು ಮೂಲತಃ ಪಗಡೆಯ ಹಾಸು ಎಂಬರ್ಥವನ್ನು ಹೊಂದಿದ್ದರೂ ಕನ್ನಡದಲ್ಲಿ ಚಮ್ಮಟಿಗೆ ಎಂಬುದಕ್ಕೆ ಹಳೆಯ ನಿಘಂಟುಗಳು ಚರ್ಮದಂಡ (ಬಾರುಕೋಲು) ಎಂಬ ಅರ್ಥವನ್ನು ನೀಡುತ್ತವೆ. 'ಶಬ್ದಮಣಿದರ್ಪಣ'ದಲ್ಲಿ "ಚರ್ಮಪಟ್ಟಿಕಾ - ಚಮ್ಮಟ್ಟಿಗೆಯುಂ ಸಮಟಿಗೆಯೆನಲುಮಕ್ಕುಂ" ಎಂದು ಹೇಳಲಾಗಿದೆ. 'ಪಂಪಭಾರತ'ದಲ್ಲಿ ಈ ಅರ್ಥದಲ್ಲಿಯೇ ಈ ಪದ ಬಳಕೆಯಾಗಿದೆ ("ಅನ್ನೆಗಂ ನಕುಳನುಂ ಅಂಕವಣೆಯುಂ ಬಾಳುಂ ಬಾರುಂ ಚಮ್ಮಟಿಗೆಯುಮಂ ಒರ್ವ ಕೀೞಾಳಿಂ ಪಿಡಿಯಿಸಿಕೊಂಡು ಬಂದು"). ರಾಘವಾಂಕನು ತನ್ನ 'ಹರಿಶ್ಚಂದ್ರ ಕಾವ್ಯ'ದಲ್ಲಿ ಹರಿಶ್ಚಂದ್ರನು "ತುಡುಕಿ ಚಮ್ಮಟಿಗೆಯಂ ಸೆಳೆದು" ಗಾನರಾಣಿಯರಿಗೆ ಹೊಡೆದ ಪ್ರಸಂಗವಿದೆ.
ರೈತರು ಎತ್ತುಗಳನ್ನು ಹೊಡೆಯಲು ಬಳಸುವ ಬಾರುಕೋಲು ದಪ್ಪ ಹುರಿಯಿಂದ ಮಾಡಿದುದಾದರೂ ತುದಿಗೆ ಚರ್ಮದ ಪಟ್ಟಿ ಕಟ್ಟಿರುತ್ತಾರೆ. ಹೀಗಾಗಿ ಬುಗುರಿಯನ್ನು ಆಡಿಸುವ ದಾರಕ್ಕೂ ಚಾವಟಿ ಅಥವಾ ಚಾಟಿ ಎನ್ನುವುದು ರೂಢಿಯಲ್ಲಿದೆ. 'ಚಾಟಿಯಿಲ್ಲದೆ ಬುಗುರಿ ಆಡಿಸು' ಎಂಬ ಗಾದೆಯು ಕಾರ್ಯವನ್ನು ಹೇಗೋ ಸಾಧಿಸುವ ಚಾಲಾಕಿತನವನ್ನು ಸೂಚಿಸುತ್ತದೆ. ಹೀಗೆ ಚಮ್ಮಟಿಗೆ ಎಂಬ ಶಬ್ದವು ಒಂದೆಡೆ ದ್ರಾವಿಡಪದವಾಗಿ ಮತ್ತೊಂದೆಡೆ ಸಂಸ್ಕೃತ ಶಬ್ದವೊಂದರ ತದ್ಭವವಾಗಿ ಬೇರೆ ಬೇರೆ ಅರ್ಥಗಳನ್ನು ಪಡೆಯುತ್ತದೆ.
=====
ಚಿಪ್ಪಿಗ: ಇದು ಈಗಿನ ದರ್ಜಿಯನ್ನು ಸೂಚಿಸುವ ಶಬ್ದ. ಇದರ ಮೂಲ ಶಬ್ದ ಸಂಸ್ಕೃತದ 'ಶಿಲ್ಪಿಕ'. ಇದು ಪ್ರಾಕೃತದಲ್ಲಿ ಸಿಪ್ಪಿಅ ಎಂದಾಗಿ ಕನ್ನಡದಲ್ಲಿ ಸಿಂಪಿಗ, ಸಿಂಪಿ, ಚಿಂಪಿಗ, ಚಿಪ್ಪಿಗ ಎಂಬ ರೂಪಗಳನ್ನು ಪಡೆಯುತ್ತದೆ. ಹಾಗೆಯೇ ಇದು ತಮಿಳಿನಲ್ಲಿ ಚಿಪ್ಪಿ, ಚಿಪ್ಪಯನ್ ಎಂದೂ, ತೆಲುಗಿನಲ್ಲಿ ಚಿಪ್ಪೆವಾಡು ಎಂದೂ, ತುಳುವಿನಲ್ಲಿ ಚಿಪ್ಪಿಗ ಎಂದೂ ಆಗುತ್ತದೆ. ನಯಸೇನನ 'ಧರ್ಮಾಮೃತ'ದಲ್ಲಿನ ನರಕದ ವರ್ಣನೆಯಲ್ಲಿ ಪಾಪಿಯನ್ನು ಕತ್ತರಿಸಿ "ಸಿಪ್ಪಿಗನಂತೆ ಪೊಲಿವರ್" ಎಂಬ ವರ್ಣನೆ ಬರುತ್ತದೆ. ಸೂಜಿಯನ್ನು ಹಿಡಿದು ಕೈಯಿಂದ ಬಟ್ಟೆ ಹೊಲಿಯಬೇಕಾದ್ದರಿಂದ ಹೊಲಿಯುವ ಕೆಲಸವನ್ನು ಸೂಜಿಕಾಯಕ ಎಂದೂ ಕರೆಯುತ್ತಿದ್ದರು. ಸೂಜಿಕಾಯಕದ ರಾಮಿತಂದೆ ಎಂಬೊಬ್ಬ ವಚನಕಾರ ತನ್ನ ಕಾಯಕವಿವರದ ರೂಪಕದಲ್ಲಿ ಸಾಧನೆಯ ಸ್ವರೂಪವನ್ನು ವರ್ಣಿಸುತ್ತಾನೆ; "ತಲೆಗೆ ಮೂರು ಚಿಪ್ಪು, ಅಂಗಕ್ಕಾರು ಚಿಪ್ಪು, ಮಿಕ್ಕಾಗ ಸರ್ವಾಂಗವೆಲ್ಲಕ್ಕೂ ಒಂದೇ ಚಿಪ್ಪಿನ ಕುಪ್ಪಸ". ಇಲ್ಲಿ ಹೇಳಿರುವ ಚಿಪ್ಪು ಪ್ರಾಯಶಃ ಕತ್ತರಿಸಿದ ಬಟ್ಟೆಯ ತುಂಡಿಗೆ ಅನ್ವಯಿಸುತ್ತದೆ. (ಆದ್ದರಿಂದಲೇ ಈ ಕಾಯಕ ಮಾಡುವವನು ಚಿಪ್ಪಿಗ ಎನ್ನಿಸಿಕೊಂಡನೇ?). ನೆವ ಹೇಳುತ್ತಿದ್ದ ಸಿಂಪಿಗನನ್ನು ಕುರಿತು ಸರ್ವಜ್ಞನು "ಎಳ್ಳು ಗಾಣಿಗ ಬಲ್ಲ; ಸುಳ್ಳು ಸಿಂಪಿಗ ಬಲ್ಲ" ಎನ್ನುತ್ತಾನೆ!
ಹಿಂದೆಯೂ ಬೇರೆ ಬೇರೆ ವೃತ್ತಿಗಳವರ ಸಂಘಗಳಿರುತ್ತಿದ್ದವು. ಕೊತ್ತೞಿ ಎಂದರೆ ಕಾಗೆಗಳ ಗುಂಪು ಮತ್ತು ಜನರ ನೆರವಿ ಎಂಬ ಅರ್ಥಗಳನ್ನು 'ಶಬ್ದಮಣಿದರ್ಪಣ'ವು ಕೊಡುತ್ತದೆ. ಹೀಗಾಗಿ ವೃತ್ತಿಸಂಘಗಳನ್ನು ಆಯಾ ವೃತ್ತಿಗಳವರ 'ಕೊತ್ತೞಿ'ಗಳೆಂದು ಕರೆಯುತ್ತಿದ್ದರು. ಹನ್ನೊಂದನೆಯ ಶತಮಾನದ ಶಾಸನವೊಂದರಲ್ಲಿ ಗಾಣದ ಕೊತ್ತಳೞಿಗಳು ದೇವರ ಉಪಯೋಗದ ಎಣ್ಣೆಗಾಗಿ ದತ್ತಿ ಬಿಟ್ಟ ಉಲ್ಲೇಖವಿದೆ. ಹಾಗೆಯೇ ದರ್ಜಿಗಳ ವೃತ್ತಿಸಂಘವನ್ನು 'ಸಿಪ್ಪಿಗಗೊತ್ತಳಿಕ' (ಸಿಪ್ಪಿಗ+ಕೊತ್ತಳಿ) ಎನ್ನುತ್ತಿದ್ದರು. ಹನ್ನೆರಡನೆಯ ಶತಮಾನದ ಶಿಕಾರಿಪುರದ ಶಾಸನವೊಂದರಲ್ಲಿ "ಸಮಸ್ತ ಸಿಪ್ಪಿಗಗೊತ್ತಳಿಯೆಲ್ಲಂ ದೇವರ ಚೈತ್ರಪವಿತ್ರದ ಪರ್ವಕ್ಕೆ" ಒಂದು ಪಣ (ಚಿನ್ನದ ನಾಣ್ಯ)ವನ್ನು  ದತ್ತಿಯಾಗಿ ನೀಡಿದ ವಿವರವಿದೆ. ಸಿಂಪಿ ಲಿಂಗಣ್ಣ ಆಧುನಿಕ ಕನ್ನಡದ ಪ್ರಸಿದ್ಧ ಗದ್ಯಲೇಖಕರು.
=====
ಚಿಪ್ಪು: ಇದು ಶುಕ್ತಿ ಎಂಬ ಸಂಸ್ಕೃತ ಪದದ ತದ್ಭವವೆಂದು ಹೇಳುತ್ತಾರೆ; ಪ್ರಾಕೃತದಲ್ಲಿ ಸಿಪ್ಪಿ ಎಂದಾಗುತ್ತದೆ. ಕನ್ನಡದಲ್ಲಿಯೇ ಚಿಂಪಿ, ಚಿಂಪೆ, ಸಿಂಪಿ, ಸಿಂಪೆ, ಸಿರ್ಪು ಮುಂತಾದ ರೂಪಗಳನ್ನು ತಾಳುತ್ತದೆ. ತಮಿಳು, ಮಲಯಾಳಂಗಳಲ್ಲಿ ಚಿಪ್ಪಿ, ಚಿಂಪು ಎಂಬ, ತೆಲುಗಿನಲ್ಲಿ ಚಿಪ್ಪ ಎಂಬ, ತುಳುವಿನಲ್ಲಿ ಚಿಪ್ಪಿ, ತಿಪ್ಪಿ ಎಂಬ ರೂಪಗಳಲ್ಲಿ ಬಳಕೆಯಲ್ಲಿದೆ. ಮೂಲದಲ್ಲಿ ಇದರ ಅರ್ಥ ಸಮುದ್ರದಲ್ಲಿ ದೊರಕುವ ಗಟ್ಟಿ ಕವಚದ ಪದಾರ್ಥ ಎಂದು; ಮುತ್ತಿನ ಚಿಪ್ಪು, ಕಪ್ಪೆ ಚಿಪ್ಪು ಎಂಬಿವು ಸಾಮಾನ್ಯವಾದ ಶಬ್ದಗಳು. ಹೀಗಾಗಿ ಮುಂದೆ ಗಟ್ಟಿಯಾದ ಮೇಲುಕವಚ ಎಂಬ ಅರ್ಥವನ್ನು ಪಡೆಯಿತು; ಜೊತೆಗೆ ಬಟ್ಟಲು ಎಂಬರ್ಥವನ್ನೂ ಪಡೆಯಿತು.
ಸಿಪ್ಪು ಎಂಬ ರೂಪದಲ್ಲಿ ಬಟ್ಟಲು ಎಂಬರ್ಥದಲ್ಲಿ ಈ ಶಬ್ದ 'ಪಂಪಭಾರತ'ದಲ್ಲಿ ಬಳಕೆಯಾಗಿದೆ ("ಪೊನ್ನ ಬೆಳ್ಳಿಯ .. .. ಸಿಪ್ಪುಗಳೊಳ್"). ಸಿಂಪು ಎಂಬ ರೂಪದಲ್ಲಿದು ಮುತ್ತಿನ ಚಿಪ್ಪು ಎಂಬರ್ಥದಲ್ಲಿ ಹನ್ನೊಂದನೆಯ ಶತಮಾನದ 'ಕರ್ಣಾಟಕ ಕಾದಂಬರಿ'ಯಲ್ಲಿ ದೊರೆಯುತ್ತದೆ. ("ನಸುದೆಱೆಯುತ್ತುಮಿರ್ದ ಪೊಸಮುತ್ತಿನ ಸಂಪುಟಂಗಳಿಂ"). ತಲೆಬುರುಡೆಯನ್ನೂ ಈ ಶಬ್ದವು ಸೂಚಿಸುತ್ತದೆ: ರನ್ನಕವಿಯ 'ಅಜಿತಪುರಾಣ'ದಲ್ಲಿ "ಪಳವದ ತಿವಳಯ ಜುಂಕದ ಮೊಳಸಿನ ಜೇಕಿರದ ಸಿವಿಱ ಸಿಪ್ಪಿನ ಲಯದಿಂದ ಎಳಲದೆ ಕುಣಿದರ್" ಎಂಬ ಪ್ರಯೋಗವಿದೆ. ಈ ಶಬ್ದವು ಚಿಪ್ಪು ಎಂಬ ರೂಪದಲ್ಲಿ ತೆಂಗಿನ ಕಾಯಿ ಮುಂತಾದವುಗಳ ಕವಚ ಎಂಬರ್ಥವನ್ನು ಪಡೆಯಿತು. ತೆಂಗಿನ ಚಿಪ್ಪು ಎಂಬುದು ಸಾಮಾನ್ಯ ಬಳಕೆಯಲ್ಲಿನ ಪ್ರಯೋಗ. "ಕೈಗೆ ಚಿಪ್ಪು ಕೊಡು" ಎಂಬುದು ನಿರ್ಗತಿಕನನ್ನಾಗಿಸು ಎಂಬರ್ಥದ ನಾಣ್ಣುಡಿ. ಸಿಂಪಿ ಎಂಬ ರೂಪದಲ್ಲಿದು ಒಳಲೆಯನ್ನೂ ಸೂಚಿಸುತ್ತದೆ. ಬಾಳೆಯ ಹಣ್ಣುಗಳಿರುವ ಬೇರ್ಪಡಿಸಬಹುದಾದ ಗುಂಪಿಗೆ ಚಿಪ್ಪು ಎಂಬುದು ಸಾಮಾನ್ಯವಾಗಿ ಬಳಸುವ ಪದ. ಮುಂದೆ ಸಿಪ್ಪೆ ಎಂಬ ರೂಪದಲ್ಲಿ ಈ ಶಬ್ದಕ್ಕೆ ಹೊರಮೈ ಎಂಬ ಅರ್ಥ ಪ್ರಾಪ್ತವಾಯಿತು. ಹಣ್ಣಿನ ಸಿಪ್ಪೆ ಸಾಮಾನ್ಯ ಬಳಕೆಯ ಶಬ್ದ. 'ಹಣ್ಣು ತಿಂದವನು ತಪ್ಪಿಸಿಕೊಂಡ, ಸಿಪ್ಪೆ ತಿಂದವನು ಸಿಕ್ಕಿಹಾಕಿಕೊಂಡ' ಎಂಬುದು ಜನಬಳಕೆಯಲ್ಲಿರುವ ಒಂದು ಗಾದೆ. 'ಸಿಪ್ಪೆಗಟ್ಟು' ಎಂಬ ರೂಪವು ಹೆಕ್ಕಳಿಕೆಯುಂಟಾಗು ಎಂಬರ್ಥದಲ್ಲಿ ಬಳಕೆಯಾಗುತ್ತದೆ.
=====
ಚೊಂಬು: ತಂಬಿಗೆ ಎಂಬರ್ಥದ ಈ ಪದದ ಇನ್ನೊಂದು ರೂಪ ಚೆಂಬು ಅಥವಾ ಚಂಬು. ತಮಿಳು, ತೆಲುಗು, ಮಲಯಾಳಂ ಮತ್ತು ತುಳು ಭಾಷೆಗಳಲ್ಲೂ ಈ ಶಬ್ದ ಬಳಕೆಯಲ್ಲಿದೆ. ಇದು ಚೆಂಬೊನ್ ಎಂಬ ರೂಪದಿಂದ ಬಂದುದು, ಅಥವಾ ಅದರ ಸವಕಳಿ ರೂಪ. ಚೆಂಬೊನ್ ಎಂದರೆ ತಾಮ್ರ ಎಂಬ ಅರ್ಥವಿತ್ತು, ಕೆಚ್ಚನೆಯ ಅಥವಾ ಕೆಂಪಾದ ಎಂಬರ್ಥದ ಚೆಂ ಪೂರ್ವಪದವಾಗಿ ಬಂದ ಅನೇಕ ಶಬ್ದಗಳಿವೆ: ಚೆಂಬುಗೆಂಪು ಎಂದರೆ ತಾಮ್ರದಂತಹ ಕೆಂಪು, ಚೆಂಬೆರಲ್ ಎಂದರೆ ಕೆಂಪು ಬೆರಳು, ಚೆಂಬೆಳಗು ಎಂದರೆ ಬೆಳಗಿನ ಕೆಂಪಾದ ಕಾಂತಿ ಇತ್ಯಾದಿ. ಚೆಂಬೋತ ಎಂಬುದು ಒಂದು ಬಗೆಯ ಕೆಂಪು ಬಣ್ಣದ ಪಕ್ಷಿಯ ಹೆಸರು; ಅದೇ ಕೆಂಬೋತ ಅಥವಾ ಕೆಂಬೂತ ಎಂದಾಗಿದೆ. ಸಮಾಸವಾಗುವಾಗ ಕೆಂಪು ಎಂಬರ್ಥದ ಪೂರ್ವಪದ ಕೆಂ ಎಂಬುದು ಚೆಂ ಎಂಬುದಾಗಿ ಬದಲಾಗುತ್ತದೆ (ಇದನ್ನು ಭಾಷಾವಿಜ್ಷಾನದಲ್ಲಿ ತಾಲವ್ಯೀಕರಣ ಎನ್ನುತ್ತಾರೆ; ಚ ಎಂಬ ವರ್ಣವು ತಾಲುವಿನಲ್ಲಿ - ಅಂದರೆ ಬಾಯ ಅಂಗುಳು -  ಹುಟ್ಟುವುದರಿಂದ ಈ ಪ್ರಕ್ರಿಯೆಗೆ ಈ ಹೆಸರು ಬಂದಿದೆ). ಕೆಂ ಎಂಬುದಕ್ಕೆ ಪೊನ್ ಎಂಬುದು ಸೇರಿ ಚೆಂಬೊನ್ ಆಗಿದೆ. ಹಳಗನ್ನಡದಲ್ಲಿ ಪೊನ್ ಎಂದರೆ ಲೋಹ ಎಂದಷ್ಟೇ ಅರ್ಥವಿದ್ದುದು; ಹೀಗಾಗಿ ಚೆಂಬೊನ್ ಎಂದರೆ ಕೆಂಪು ಲೋಹ ಎಂಬ ಅರ್ಥವಿತ್ತು. "ಚೆಂಬೊನ್ನ ಘಟ" (ತಾಮ್ರದ ಕೊಡ)ಎಂಬ ಪ್ರಯೋಗವು ಹದಿಮೂರನೆಯ ಶತಮಾನದ ಕವಿ ಎರಡನೆಯ ಗುಣವರ್ಮನ 'ಪಾರ್ಶ್ವನಾಥಪುರಾಣ'ದಲ್ಲಿದೆ. ಚೆಂಬು ಎಂದರೂ ತಾಮ್ರ ಎಂದೇ ಅರ್ಥವಿತ್ತು. ಚೆಂಬುಕುಟಿಗ ಅಥವಾ ಚೆಂಬುಕುಟ್ಟಿಗ ಎಂದರೆ ತಾಮ್ರದ ಕೆಲಸ ಮಾಡುವವನು.
ಕೆಲವು ಕಾವ್ಯಗಳಲ್ಲಿ ಚೆಂಬೊನ್ ಎಂಬ ಪದವನ್ನು ಚಿನ್ನದ ನಾಣ್ಯ ಎಂಬರ್ಥದಲ್ಲಿಯೂ ಬಳಸಿರುವುದು ಕಾಣುತ್ತದೆ. "ಚೆಂಬೊಂಗಳಂ ಓರಂತಿರೆ ಬೇಡಿಕೊಳ್ವೆಂ ಎನ್ನಾರ್ಪನಿತಂ" ಎಂಬ ಮಾತು ಕ್ರಿಶ ಹನ್ನೆರಡನೆಯ ಶತಮಾನದ ಕವಿ ನಯಸೇನನ 'ಧರ್ಮಾಮೃತ'ದಲ್ಲಿದೆ. ಚೆಂಬು ಎಂಬುದು ಮುಂದೆ ಗೋಪುರದ ಕಳಶ ಎಂಬರ್ಥದಲ್ಲಿಯೂ ಬಳಕೆಯಾಗಿದೆ.
'ಕೈಗೆ ಚೆಂಬು ಕೊಟ್ಟ' 'ಚೆಂಬೇ ಗತಿ' ಇತ್ಯಾದಿ ಮಾತುಗಳನ್ನು ಹೊಸಗನ್ನಡದಲ್ಲಿ ನಾವು ಬಳಸುತ್ತೇನೆ. ದಾಸಯ್ಯಗಳು ಚೆಂಬುಹಿಡಿದು ಭಿಕ್ಷೆಗೆ ಬರುವುದು ಹೀಗಾಗಿ ಚೆಂಬು ಹಿಡಿಯುವುದು ಎಂದರೆ ಭಿಕ್ಷೆ ಬೇಡು ಎಂಬರ್ಥ ಬಂದು, ಚೆಂಬು ಕೊಡು ಎಂದರೆ ಭಿಕ್ಷೆ ಬೇಡುವ ಸ್ಥಿತಿಯುಂಟುಮಾಡು ಎಂಬ ವ್ಯಂಗ್ಯದ ಅರ್ಥ ಬಂದಿದೆ. 'ನಮ್ಮಪ್ಪ ದೊಡ್ಡ ಚೆಂಬು ಕೊಟ್ಟ' ಎಂದರೆ ಏನೇನೂ ಕೊಡಲಿಲ್ಲ ಎಂಬುದೇ ಅರ್ಥ.
=====
ತಂಬಾಕು: ತಂಬಾಕ ಎಂಬದು ಇದರ ಮತ್ತೊಂದು ರೂಪ. ಎಲೆಯಡಿಕೆಯ ಜೊತೆ ಅಗಿಯುವ, ಒಣಗಿದೆಲೆಗಳಿಂದ ಮಾಡಿದ ಪುಡಿಯನ್ನು ಮೂಗಿಗೇರಿಸುವ, ಹಾಗೂ ಅದರ ಹೊಗೆಯನ್ನು ಸೇವಿಸುವ ರೂಢಿಯಿದೆ. ಈ ಕೊನೆಯ ರೀತಿಯಿಂದಾಗಿ ಈ ಸಸ್ಯವನ್ನು ಹೊಗೆಸೊಪ್ಪು ಎಂಬ ಹೆಸರಿನಿಂದಲೂ ಕರೆಯುತ್ತಾರೆ.  ತಂಬಾಕು ಎಂಬ ಶಬ್ದವು ಇಂಗ್ಲಿಷ್ನ 'ಟೊಬಾಕೊ'ದಿಂದ ಬಂದುದೆಂದು ಹೇಳುತ್ತಾರೆ.
ಧೂಮವರ್ತಿಯ ಉಲ್ಲೇಖ ಬಾಣ, ಸುಶ್ರುತ, ವಾಗ್ಭಟ, ಮತ್ತು ಚರಕರ ಪ್ರಾಚೀನ ಸಂಸ್ಕೃತ ಕೃತಿಗಳಲ್ಲಿ ಸಿಕ್ಕುತ್ತದೆ; 'ಸ್ಕಾಂದಪುರಾಣ'ದಲ್ಲಿ "ಧೂಮಪಾನೇನ ಭೋ ಪ್ರೇತಾ ಪ್ರೇತತ್ವಂ ಚೈವ ಜಾಯತೇ| ಕಲೌತು ಕಾಲರೂಪಂ ಹಿ ತಮಾಲಮೇವ ಜಾಯತೇ||" ಎಂಬ ಶ್ಲೋಕವಿದೆ. (ಧೂಮಪಾನ ಮಾಡುವವರು ಮರಣಾನಂತರ ಪ್ರೇತಗಳಾಗುತ್ತಾರೆ; ಕಲಿಯುಗದಲ್ಲಿ ಕಲಿಯೇ ತಮಾಲಪತ್ರದ ರೂಪದಲ್ಲಿ ಅವತರಿಸುತ್ತಾನೆ - ಎಂಬುದು ಇದರ ಅರ್ಥ). ಹೀಗಾಗಿ ಧೂಮಪಾನವು ನಮ್ಮಲ್ಲಿನ ಹಳೆಯ ಪದ್ಧತಿ ಎಂಬುದು ಕೆಲವರ ವಾದ. ಕನ್ನಡದಲ್ಲಿ 'ನಾಶಿ ತಂಬಾಕ'ದ ಪ್ರಸ್ತಾಪ ಅಂಬಿಗರ ಚೌಡಯ್ಯ ಮತ್ತು ಬಹುರೂಪಿ ಚೌಡಯ್ಯ ಎಂಬ ಇಬ್ಬರು ವಚನಕಾರರ ವಚನಗಳಲ್ಲಿದೆ. ನಮ್ಮಲ್ಲಿನ ಧೂಮಪಾನವು ತಮಾಲ ಅಥವಾ ತಮಾಲಪಾಕ ಎಂಬ ಸಸ್ಯದ ಹೊಗೆಯ ಸೇವನೆ. ತಮಾಲಪಾಕ ಎಂಬ ಶಬ್ದವೇ ತಂಬಾಕ ಏಕಾಗಿರಬಾರದು ಎಂಬುದು ಕೆಲವರ ವಾದ.
ಆದರೆ ಚರಿತ್ರೆ ಬೇರೆ ಕತೆಯನ್ನೇ ಹೇಳುತ್ತದೆ. ಕೊಲಂಬಸ್ನ ತಂಡ ಇಂಡಿಯವನ್ನು ಕಾಣಲೆಂದು ಸಮುದ್ರಯಾನ ಕೈಗೊಂಡದ್ದು ಮೊದಲು ಕ್ರಿಶ 1492 ರಲ್ಲಿ; ಅದು ತಲುಪಿದ್ದು ಲ್ಯಾಟಿನ್ ಅಮೆರಿಕವನ್ನು. ಅಲ್ಲಿನ ಜನ ಕೈಯಲ್ಲಿ ಸಣ್ಣ ಕೊಳವೆ ಹಿಡಿದು, ಅದರಲ್ಲಿ ಸಸ್ಯವೊಂದರ ಒಣಗಿದ ಎಲೆಯ ಪುಡಿಯನ್ನು ತುಂಬಿ ಒಂದು ತುದಿಗೆ ಬೆಂಕಿ ತಾಕಿಸಿ ಮತ್ತೊಂದು ತುದಿಯಿಂದ ಅದರ ಹೋಗೆಯನ್ನು ಸೇವಿಸುತ್ತಿದ್ದರು; ಆ ಕೊಳವೆಗೆ ಟೊಬಾಕೊ ಎಂದವರು ಕರೆಯುತ್ತಿದ್ದರು. ಅದು ಪೋರ್ಚುಗೀಸರ ಮೂಲಕ ಇಂಡಿಯ ಪ್ರವೇಶಿಸಿದ್ದು ಕ್ರಿಶ. 1556 ರ ನಂತರ. ಹೀಗಾಗಿ ಇಲ್ಲಿನ ತಮಾಲಪಾಕ ತಂಬಾಕಕ್ಕಿಂತ ಭಿನ್ನ ಸಸ್ಯವಾಗಿರಬೇಕು; ಆದ್ದರಿಂದ ಮೇಲೆ ಹೇಳಿದವರ ವಚನಗಳು ಪ್ರಾಯಶಃ ಪ್ರಕ್ಷಿಪ್ತವಾದವು.
=====
ತಲೆ: ಇದೊಂದು ದ್ರಾವಿಡ ಪದ; ಶಿರಸ್ಸು ಎಂಬ ಅರ್ಥವನ್ನು ಪಡೆದ ಈ ಶಬವು ತಮಿಳಿನಲ್ಲಿ ತಲೈ ಎಂದೂ ಮಲಯಾಳಂ ಮತ್ತು ತೆಲುಗಿನಲ್ಲಿ ತಲ ಎಂದೂ ತುಳುವಿನಲ್ಲಿ ತರೆ ಎಂದೂ ಆಗುತ್ತದೆ. ಮುಖ್ಯವಾದುದು ಎಂಬರ್ಥದಲ್ಲಿ ತಲೆ ಅನೇಕ ಸಮಾಸಪದಗಳಲ್ಲಿ ಬಳಕೆಯಲ್ಲಿದೆ; ತಲೆಬಾಗಿಲು, ತಲೆಮಣಿ ಇತ್ಯಾದಿ. ಹೆಡೆ ಎಂಬರ್ಥವೂ ಈ ಶಬ್ದಕ್ಕಿದೆ: 'ವಡ್ಡಾರಾಧನೆ'ಯಲ್ಲಿ "ಪನ್ನೆರಡು ತಲೆಯ ಪಾವುಮಂ" ಎಂಬ ಪ್ರಯೋಗವಿದೆ. ತಲೆಮಾರು ಎಂಬರ್ಥದಲ್ಲಿ ತಲೆ 'ಪಂಪಭಾರತ'ದಲ್ಲಿ ಬಂದಿದೆ ("ಸಲೆ ಸಂದಿರ್ಪತ್ತೊಂದು ತಲೆವರೆಗಂ"). ತಲೆ ಎಂದರೆ ಶ್ರೇಷ್ಠ ಎಂಬರ್ಥವೂ ಇದೆ: "ಅಂತು ಅರಿಸೇನೆಯಂ ಇದಿರ್ಚಿ ತಲೆವಿಲ್ ಎನೆ ಎಱೆದು ತವಿಸುವ ತೆಱದಿಂ" ಎಂಬುದು ಪೊನ್ನನ 'ಶಾಂತಿಪುರಾಣ'ದ ಮಾತು.
'ತಲೆಯಿಕ್ಕು' ಎಂಬ ರೂಪವು ಮಲಗು ಎಂಬರ್ಥವನ್ನು ಪಡೆಯುತ್ತದೆ ("ಅಂತದರ ಮೊದಲೊಳ್ ಕೆಲವು ದಿವಸಂ ತಲೆಯಿಕ್ಕಿ ಪಟ್ಟಿರ್ದುದಂ" - ದುರ್ಗಸಿಂಹನ 'ಪಂಚತಂತ್ರ'). ತಲೆದೋರು ಎಂಬುದು ಕಾಣಿಸಿಕೊ ಎಂಬರ್ಥವನ್ನು ಪಡೆಯುತ್ತದೆ ("ತದ್ಭೋಗಿಫಣಾದ್ಯುತಿಯೆ ಕೞ್ತಲೆಯಂ ತಲೆದೋರಲೀಯದು" - 'ಪಂಪಭಾರತ'). ತಲೆಗಾಯ್ ಎಂದರೆ ರಕ್ಷಿಸು ಎಂದು: "ಧರ್ಮಮೆ ತಲೆಗಾಯ್ಗುಂ" ಎಂಬುದು ರನ್ನನ 'ಅಜಿತಪುರಾಣ'ದ ಮಾತು. ರಕ್ಷಣೆಗಿರುವ ಮೈಗಾವಲ ಭಟನೇ 'ತಲೆಗಾಪಿನಾಳ್'; "ತಲೆಗಾಪಿನಾಳ್ ಉಕ್ಕಡದಾಳ ಮೇಲಿಕ್ಕಿ ಉಕ್ಕಡದಾಳ್ ರವಟ್ಟಿಗೆಯಾಳ ಮೇಲಿಕ್ಕಿ" (ರನ್ನನ 'ಗದಾಯುದ್ಧ'). ತಲೆಗರೆ ಎಂದರೆ ತಲೆಮರೆಸಿಕೊಳ್ಳುವುದು: "ಮಂತ್ರಪದಕ್ಕೆ ಉರಗಂ ಸುಗಿವಂತೆವೊಲ್ ಅಗಿದು ಸುಗಿದು ತಲೆಗರೆದಿರ್ಪಂ" - 'ಪಂಪಭಾರತ'.
ಕನ್ನಡದ ಕೆಲವು ವ್ಯಂಜನಾಕ್ಷರಗಳನ್ನು ಬರೆಯುವಾಗಿನ ಮೇಲುಗಡೆಯ ಗೆರೆಯೇ 'ತಲೆಕಟ್ಟು'. "ಬಿಂದುವಿನೊಂದು ಶೋಭೆ ತಲೆಕಟ್ಟಿನ ಪೊರ್ಕುಳ ಚೆಲ್ವು" ಇವುಗಳ ಬಗ್ಗೆ ಎರಡನೆಯ ಗುಣವರ್ಮನ 'ಪುಷ್ಪದಂತಪುರಾಣ'ದಲ್ಲಿ ಹೆಮ್ಮೆಯ ವರ್ಣನೆಯಿದೆ. ತಲೆವೊಯ್ಕ ಅಥವಾ ತಲೆಹೊಯ್ಕ ಎಂದರೆ ಕೊಲೆಗಾರ ಎಂದಿದ್ದುದು ಈಗಿನ 'ತಲೆಹೋಕ' ಎಂದರೆ ಮೂರ್ಖ ಎಂದಾಗಿದೆ. ಅತಿ ಮಾತು 'ತಲೆಹರಟೆ'. ಹೀಗೆ ತಲೆಯನ್ನು ಒಳಗೊಂಡ ಶಬ್ದಗಳು ಅಸಂಖ್ಯವಾಗಿವೆ.
=====
ತಾಯಿಗ್ಗಂಡ: ಹೀಗೆಂದು ಬಯ್ಯವುದನ್ನು ಕೇಳಿರಬಹುದು. ಸರಳವಲ್ಲದ ಹಾಗೂ ವಿದ್ರೋಹಕಾರಿಯಾದ ಕೃತ್ಯಗಳಲ್ಲಿ ತೊಡಗಿದವನನ್ನು 'ತಾಯಿಗ್ಗಂಡ' ಅಥವಾ 'ತಾಯಿಗಂಡ' ಎಂಬ ಶಬ್ದದಿಂದ ತಿರಸ್ಕಾರಪೂರ್ವಕವಾಗಿ  ಕರೆಯುತ್ತಾರೆ. ಪ್ರಾಯಶಃ ಈ ಶಬ್ದವು ತಾಯಿಗೆ+ಗಂಡ ಎಂಬುದರಿಂದ ಆಗಿರಬಹುದು. ತಾಯಿಯನ್ನೂ ಒಂದು ಹೆಣ್ಣೆಂದೇ ಭಾವಿಸಿ ನೆರೆಯುವ ಮನೋಭಾವವನ್ನು ಈ ಸಮಾಸಪದ ಸೂಚಿಸುತ್ತದೆ. (ಇಲ್ಲಿ ಸಾಫೋಕ್ಲೀಸ್ ಕವಿಯ ನಾಟಕದ ಪಾತ್ರವಾದ ಈಡಿಪಸ್ ದೊರೆಯ ನೆನಪಾಗುವುದು ಸಹಜ, ಆದರೆ ಅಲ್ಲಿನ ಸಂದರ್ಭ ಬೇರೆ). ಬೇಂದ್ರೆಯವರು ತಮ್ಮೊಂದು ಕವನದಲ್ಲಿ ಈ ಪದವನ್ನು ಬಳಸಿದ್ದಾರೆ. ಅವರ 'ಮೊದಲಗಿತ್ತಿ'ಯಲ್ಲಿ ಈ ಸಾಲುಗಳಿವೆ: "ಹಿಂಡಾಗಿ ಪುಂಡಾಗಿ ಅಂಡಲೆಯಲು ನಿನ್ನ ನೆತ್ತರು ಒರೆಹಚ್ಚಿ ನೋಡಿರುವೆ; ಪಾತಾಳ ಕಂಡರು ಕೆಲ ತಾಯಿಗ್ಗಂಡರು ಅವರನ್ನು ಮಡಿಲಾಗ ಮಡಗಿಸಿಹೆ; ಹದಿನಾರು ರಾಜರು ತಲೆಕೆಳಕಾದರು, ಆದರೂ ತಲೆಯೆತ್ತಿ ನಿಂತಿರುವೆ, ನಿನ್ನ ತೇಜದ ಮುಂದೆ ರಾಜತೇಜವು ಕೂಸು, ಮೊದಲಗಿತ್ತಿಯು ನೀನು ಮೆರೆಯುತಿಹೆ!". ಭೂಮಿಯನ್ನು ಮೊದಲಗಿತ್ತಿ ಎಂದು ಕರೆಯುವ ಕವಿಯು ಎಲ್ಲರಿಗೂ ಅವಳು ತಾಯಿಸ್ವರೂಪಳು; ಆದರೆ ರಾಜರುಗಳು (ರಾಜಕಾರಣಿಗಳು?) ಮಾತ್ರ ಅವಳನ್ನು ಕೇವಲ ಹೆಣ್ಣಿನಂತೆಯೇ ಕಂಡು ನಡೆಸಿಕೊಂಡಿದ್ದಾರೆ ಎಂಬುದು ಕವಿಯ ಆಕ್ರೋಶ; ಆದರೆ ಅಂಥವರನ್ನೂ ಸಹಿಸಿಕೊಂಡು ಮಡಿಲಲ್ಲಿ ಹಾಕಿಕೊಳ್ಳುವ ಕರುಣಾಮಯಿ ಈ ತಾಯಿ ಎಂಬುದು ಕವಿಯ ಆಶಯ. "ವೀರಭೋಜ್ಯಾ ವಸುಂಧರಾ'" ಎಂಬುದು ಒಂದು ಸಂಸ್ಕೃತದ ಮಾತು; ವೀರರು ಮಾತ್ರವೇ ವಸುಂಧರೆ(ಭೂಮಿ)ಯನ್ನು ಭೋಗಿಸುವವರು ಎಂಬುದು ಅದರರ್ಥ. ಎಂದರೆ ಹೆಣ್ಣನ್ನು ಪರಾಕ್ರಮದಿಂದ ಗೆಲ್ಲಬೇಕು ಎಂಬ ಅಭಿಪ್ರಾಯ. 'ಭೂಪತಿ' 'ಭೂಪ' 'ಭುವನಪತಿ' ಎಂಬಂತಹ ಸಂಸ್ಕೃತ ಶಬ್ದಗಳು ರಾಜನನ್ನು ಸೂಚಿಸುವ ಪದಗಳು; ಅವುಗಳ ಅರ್ಥವೇ ಭೂಮಿಯ ಒಡೆಯ, ಯಜಮಾನ, ಗಂಡ ಎಂದು. ಪಂಪನ 'ಆದಿಪುರಾಣ'ದಲ್ಲಿ ಅಣ್ಣನಾದ ಭರತನನ್ನು ಕುರಿತು ಬಾಹುಬಲಿಯು "ನೀನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗೞ್ತೆ ಮಾಸದೇ" ಎಂದು ಕೇಳುವ ಮಾತಿನಲ್ಲಿ ಹೆಣ್ಣು ಮತ್ತು ಭೂಮಿ ಎರಡನ್ನೂ ಸಮಾನವೆಂದು ಪರಿಗಣಿಸುವ ರೂಢಿಯು ವ್ಯಕ್ತವಾಗಿದೆ. ರನ್ನನ 'ಗದಾಯುದ್ಧ'ದಲ್ಲಿ ಅಶ್ವತ್ಥಾಮನು ರಾಜ್ಯಲಕ್ಷ್ಮಿಯ ಕೂದಲು ಹಿಡಿದು ಎಳೆದೊಯ್ಯುವ ಪ್ರಸಂಗವಿದೆ!
======
      
ತಾಳಿ: ತಾಲಿ ಅಥವಾ ತಾಳಿ ಎಂಬ ರೂಪಗಳು ತೆಲುಗು, ತಮಿಳು, ಮಲಯಾಳಂ ಮತ್ತು ತುಳುಭಾಷೆಗಳಲ್ಲಿಯೂ ದೊರೆಯುತ್ತದೆ. ಮದುವೆಯಲ್ಲಿ ಗಂಡು ಹೆಣ್ಣಿನ ಕೊರಳಿಗೆ ಕಟ್ಟುವ ಮಾಂಗಲ್ಯ ಅಥವಾ ಮಂಗಳಸೂತ್ರದ ಮಧ್ಯದ ಚಿನ್ನದ ಬಟ್ಟನ್ನು ತಾಲಿ ಎಂದು ಕರೆಯುತ್ತಾರೆಂಬುದು ಸರ್ವವಿದಿತ. 'ಪಂಪಭಾರತ'ದಲ್ಲಿ ತಾಳಿ ಎಂಬುದಕ್ಕೆ ಸಂವಾದಿಯಾಗಿ 'ಅಯ್ದೆಮಿನುಗು' ಎಂಬ ಶಬ್ದವಿದೆ ("ವರುಣಾನಿಯ ಕೊರಲೊಳ್ ಅಯ್ದೆಮಿನುಗುಮುೞಿಯೆ") ಅಯ್ದೆ ಎಂದರೆ ಸುಮಂಗಲಿ; ಅವಳ ಕೊರಳಿನ ಮಿನುಗುವ ವಸ್ತು, ಪ್ರಾಯಶಃ ಚಿನ್ನದ ತಾಳಿ. ಹರಿಹರನ 'ಗಿರಿಜಾ ಕಲ್ಯಾಣ'ದಲ್ಲಿ 'ತಾಳಿಗಟ್ಟು' ಎಂಬ ಪ್ರಯೋಗವಿದೆ ("ಚಂದ್ರಾಭರಣಂ ಮನಮೊಸೆದು ತಾಳಿಗಟ್ಟಿದನೆನೆ"). ರಾಘವಾಂಕನ 'ಹರಿಶ್ಚಂದ್ರ ಕಾವ್ಯ'ದಲ್ಲಿ, ಚಂದ್ರಮತಿಯು ಮಗ ರೋಹಿತಾಶ್ವ ಸತ್ತಾಗ ಅವನ ದೇಹವನ್ನು ಸುಡಲು ಶ್ಮಶಾನಕ್ಕೆ ಬರುತ್ತಾಳೆ. ಕೊಡಬೇಕಾದ ಮಸಣವಾಡಗೆಯ ಹಣ ತನ್ನಲ್ಲಿಲ್ಲವೆಂದಾಗ ಹರಿಶ್ಚಂದ್ರನು "ನಿನ್ನ ಕೊರಳಿನೊಳಿರ್ದ ಕಡುಚೆಲುವ ತಾಳಿಯನದನು ಅಡವನಿರಿಸಿ ನೀ ಬಿಡಿಸಿಕೊ ಬಳಿಕ" ಎನ್ನುತ್ತಾನಂತೆ. ತಾಳಿಯು ಚಿನ್ನದ್ದಾಗಿರುತ್ತಿತ್ತೆಂಬುದು ಇಲ್ಲಿ ಹೆಚ್ಚು ಸ್ಪಷ್ಟವಾಗಿದೆ.
ತಾಲ ಎಂಬುದು ಸಂಸ್ಕೃತದಲ್ಲಿ ಪನೆಮರಕ್ಕಿರುವ ಹೆಸರು. ತಾಲಿ ಅಥವಾ ತಾಳಿ ಎಂದರೂ ತಾಳೆಯ ಮರ ಎಂಬ ಅರ್ಥವಿದೆ. 'ಪಂಪಭಾರತ'ದಲ್ಲಿ "ಲವಂಗ ಲುಂಗ ಹಿಂತಾಳ ತಾಳೀ ತಮಾಳತಾಲ ಸುಂದರ ನಂದನ" ಎಂಬಲ್ಲಿ ಅನೇಕ ಮರಗಳ ಜೊತೆಗೆ ತಾಳಿಯ ಪ್ರಸ್ತಾಪವಿದೆ. ಚಿನ್ನದ ತಾಳಿಯು ಬಳಕೆಗೆ ಬರುವುದಕ್ಕೆ ಮುಂಚೆ ಪ್ರಾಯಶಃ ತಾಳೆಯ ಗರಿಯನ್ನು ಒಣಗಿಸಿ ನಂತರ ನೆನೆಸಿ ಮೆತ್ತಗೆ ಮಾಡಿ ಸುರುಳಿ ಸುತ್ತಿ ಕಟ್ಟಿಕೊಳ್ಳುವ ಪದ್ಧತಿಯಿತ್ತೆಂದು ವಿದ್ವಾಂಸರು ಊಹಿಸುತ್ತಾರೆ. ಅದಕ್ಕೇ ಅದು ತಾಳಿ ಎನ್ನಿಸಿಕೊಳ್ಳುತ್ತದೆ. ಸಂಸ್ಕೃತದಲ್ಲಿ ತಾಲಂಕ ಅಥವಾ ತಾಲಕ ಎಂದರೆ ಕಿವಿಯ ಓಲೆ. ಅದೂ ತಾಳೆಗರಿಯ ಸುರುಳಿ; ಅದಕ್ಕೆ ಕರ್ಣಪತ್ರ ಎಂಬ ಹೆಸರೂ ಇದೆ. ಪ್ರಾಯಶಃ ತಾಳಿಯೂ ಮೊದಲು ಅದೇ ರೂಪದಲ್ಲಿತ್ತು. ಗೌರಿಯ ಹಬ್ಬದ ದಿನ ಕೊಡುವ ಮೊರದ ಬಾಗಿನದಲ್ಲಿ ಇತರ ವಸ್ತುಗಳ ಜೊತೆ ತಾಳೆಗರಿಯ ಬಿಚ್ಚೋಲೆಯನ್ನು ಕೊಡುವುದು ರೂಢಿ.
=====
ತಿಂಗಳು1: ಇದೊಂದು ದ್ರಾವಿಡ ಪದ: ಹಳಗನ್ನಡದಲ್ಲಿ ತಿಂಗಳ್ ಎಂಬ ರೂಪದಲ್ಲಿದ್ದು, ತಮಿಳು, ಮಲಯಾಳಂಗಳಲ್ಲಿ ತಿಙ್ಕಳ್ ಎಂದೂ ತುಳುವಿನಲ್ಲಿ ತಿಂಗೊಳು ಎಂದೂ ಬಳಕೆಯಲ್ಲಿದೆ. ಇದರ ಒಂದು ಅರ್ಥ ಚಂದ್ರ ಎಂದು. "ನಗೆಯೆಂಬ ನೆವದೆ ಬೆಳೆಗೀ ಮೊಗಮೆಂಬೀ ನೆವದೆ ತಿಂಗಳೊಳಗೆಸೆದಾದಂ ಸೊಗಯಿಸಿ ತೋರ್ಕುಂ ಲೋಚನಯುಗಂ" ಎಂಬುದು 'ಕವಿರಾಜಮಾರ್ಗ'ದ ವರ್ಣನೆ. "ತಿಂಗಳ ತಣ್ಣನಪ್ಪ ಕದಿರ್ದೊಂಗಲೊಳಭ್ಯಸಿಸಿತ್ತೋ" ಎಂದು ತನ್ನ ಮಾತಿನ ಬಂದ ಬಗ್ಗೆ ಅಗ್ಗಳ ತನ್ನ 'ಚಂದ್ರಪ್ರಭಪುರಾಣ'ದಲ್ಲಿ ಹೇಳಿಕೊಳ್ಳುತ್ತಾನೆ. "ತಿಂಗಳ ಸಿರಿಯಂತೆ ಸೋಲಿಸದೆ ಕಾವನ ಕಬ್ಬಮನದಾರನಾದೊಡಂ" ಎಂಬ ಹೆಮ್ಮೆಯ ಮಾತು 'ಕಬ್ಬಿಗರ ಕಾವ'ದ ಕವಿ ಆಂಡಯ್ಯನದ್ದು. "ಇಂಗಡಲ ಒಡನಾಡಿಯೋ ನೆಱೆ ತಿಂಗಳ ಸೋದರಮೋ" ಎಂಬ ಉದ್ಗಾರ ಷಡಕ್ಷರದೇವನ 'ರಾಜಶೇಖರ ವಿಳಾಸ'ದ್ದು. "ತಿಂಗಳಿಗೆ ತಂಪಿಹುದೆ ಸಾಗರಕೆ ಪೆಂಪಿಹುದೆ" ಎಂಬುದು ಗೋವಿಂದ ಪೈ ಅವರ 'ಗಿಳಿವಿಂಡು' ಕವನದ ಸಾಲು. ಚಂದ್ರಕಾಂತ ಶಿಲೆ ಎಂಬರ್ಥದಲ್ಲಿ 'ನೇಮಿನಾಥಪುರಾಣ'ದಲ್ಲಿ 'ತಿಂಗಳ್ಗಲ್' ಎಂಬ ಪ್ರಯೋಗವಿದೆ. ಶಿವನು ಚಂದ್ರಧರ; ಹೀಗಾಗಿ ಕನ್ನಡ ಕವಿಗಳನೇಕರು ಅಚ್ಚಗನ್ನಡದಲ್ಲಿ ಹೇಳುತ್ತಾರೆ: ಸಿದ್ಧರಾಮನು ತನ್ನ ವಚನಗಳಲ್ಲಿ 'ತಿಂಗಳಧರ', 'ತಿಂಗಳಸೂಡ' ಎಂದು ಕರೆದಿದ್ದರೆ ಭೀಮಕವಿಯು ತನ್ನ 'ಬಸವಪುರಾಣ'ದಲ್ಲಿ 'ತಿಂಗಳ ಸೂಡಿದವ' ಎನ್ನುತ್ತಾನೆ.
ತಿಂಗಳು ಎಂದರೆ ಚಂದ್ರನ ಬೆಳಕು. "ತಂಗಾಳಿಯುಂ ತಿಂಗಳುಂ ಬನಮುಂ ಬೆಂಬಲಮಾಗಿ ತೀರ್ಚವೆ ಗಡಂ ಕೊಂಡುಗ್ಗಿಯಂ ಸುಗ್ಗಿಯೊಳ್" ಎಂಬ ಮಾತು ರನ್ನನ 'ಅಜಿತಪುರಾಣ'ದ್ದು. "ತಿಂಗಳ ಸೊಂಪು ಪುಷ್ಪಬಾಣದ ಪೊದೆ" ಎಂಬುದು ಮಧುರಕವಿಯ 'ಧರ್ಮನಾಥಪುರಾಣ'ದ್ದು. ಚಂದ್ರನ ಬೆಳಕು ಬೆಳ್ಳಗಿರುವುದರಿಂದಾಗಿ ಅದು ಬೆಳುದಿಂಗಳು, ಬೆಳ್ದಿಂಗಳು ಎಂದೂ ಕರೆಯುವುದು ವಾಡಿ. "ಬೆಳ್ದಿಂಗಳೆಂಬೊಂದು ಪಂಬಲ ಬಂಬಲ್ಗೆಡೆಯಾಗೆ" ಎಂಬುದು 'ಪಂಪಭಾರತ'ದ ವರ್ಣನೆ. ನೇಮಿಚಂದ್ರನ 'ಲೀಲಾವತಿ'ಯಲ್ಲಿ "ಬೆಳ್ದಿಂಗಳ ಬೆಳತಿಗೆಯಂ ಪಂಸೆ ಪಾಲ್ಗೆತ್ತು ಸಾರ್ದಪ್ಪುದೋ" ಎಂಬ ವರ್ಣನೆಯಿದೆ. "ಸುಳಿದು ಬೀಸುವ ಗಾಳಿ ಉರಿಯಾಯಿತ್ತವ್ವ, ಬೆಳುದಿಂಗಳು ಬಿಸಿಲಾಯಿತ್ತು ಕೆಳದಿ" ಎಂಬ ಮಾತು ಚೆನ್ನಮಲ್ಲಿಕಾರ್ಜುನನ ವಿರಹದಲ್ಲಿ ಬೆಂದ ಮಹಾದೇವಿಯಕ್ಕನ ಚೀತ್ಕಾರ. "ಮೇಘವೇ ಜಡೆ ಬೆಳುದಿಂಗಳೇ ವಿಭೂತಿ ಪರ್ವತಂಗಳೇ ರುದ್ರಾಕ್ಷಿ" ಎಂಬ ಅದ್ಭುತ ಚಿತ್ರ ಆದಯ್ಯನ ವಚನವೊಂದರಲ್ಲಿದೆ. 'ಬೆಳುದಿಂಗಳ ನೋಡಾ' ಎಂಬ ಬೇಂದ್ರೆಯವರ ಒಂದು  ಪ್ರಸಿದ್ಧ ಕವನವಿದೆ. 'ಬೆಳ್ದಿಂಗಪ್ಪನ ಪೂಜೆ' ಎಂಬ ಜಾನಪದ ಗೀತೆ ಪ್ರಸಿದ್ಧವಾಗಿದೆ. ಚಕೋರವನ್ನು 'ಬೆಳದಿಂಗಳ ಹಕ್ಕಿ' ಎನ್ನುವುದುಂಟು. 'ಬೆಳುದುಂಗಳೂಟ' ಹಿಂದೆಲ್ಲ ಜನಪ್ರಿಯವಾಗಿತ್ತು. 'ಬೆಳುದಿಂಗಳು' ಎಂಬ ಶಬ್ದಕ್ಕೆ ವಿರುದ್ಧವಾಗಿ ಕುವೆಂಪು 'ಕದ್ದಿಂಗಳು' ಶಬ್ದವನ್ನು ಸೃಷ್ಟಿಸಿಕೊಳ್ಳುತ್ತಾರೆ: "ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ" ಎಂಬುದು ಅವರ ಸಾಲು.

                                  =====      ಮುಂದಿನ ಭಾಗಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕಾಮೆಂಟ್‌‌ ಪೋಸ್ಟ್‌ ಮಾಡಿ