ನನ್ನ ಪುಟಗಳು

18 ಅಕ್ಟೋಬರ್ 2014

ಪದಚರಿತೆ-8



ಪದಚರಿತೆ: ಒಂದಷ್ಟು ಪದಗಳ ಮೂಲಚೂಲಗಳ ಕೆದಕಾಟ - 8

ಮರ1: ತಮಿಳು ಮಲಯಾಳಗಳಲ್ಲಿ 'ಮರಂ' ಎಂದೂ, ತೆಲುಗಿನಲ್ಲಿ 'ಮ್ರಾನು' ಎಂದೂ, ಕನ್ನಡ ತುಳುಗಳಲ್ಲಿ 'ಮರ' ಎಂದೂ ಇರುವ ಈ ಶಬ್ದವು ದೊಡ್ಡ ಗಿಡ ಎಂಬರ್ಥದಲ್ಲಿದೆ. "ಆಮೋದ ಕುಮುದಸಮಿತಿಯನಾ ಮರಂಗಳೊಳಾಯ್ದು ಕೊಯ್ದುಮಿಲ್ಲಿಗೆ ಬರ್ಪೆಂ" ಎಂಬುದು 'ಕವಿರಾಜಮಾರ್ಗ'ದಲ್ಲಿಯ ಸಾಲು. "ಕಜ್ಜಂ ಪಲಸಿನ ಮರದಂತೆ ಫಲಮನೆತ್ತಿಕೊಂಡು ಬರಲಕ್ಕುಂ" ಎಂಬುದು 'ಪಂಚತಂತ್ರ'ದ ವಾಕ್ಯ. ಮರಗಳಿಂದ ಕೂಡಿದ ದಟ್ಟ ಕಾಡಿನ ಕತ್ತಲೆಯನ್ನು 'ಮರಗಳ್ತಲೆ' ಸೂಚಿಸುತ್ತದೆ: "ತುರುಗೆದೆಗಣ್ಣ ಕಾಂತಿ ಮರಗಳ್ತಲೆಯಂ ಬೆದರಟ್ಟೆ" ಎಂಬುದು 'ಜಗನ್ನಾಥವಿಜಯ' ಸಾಲು. ಇಂತಹ ಕಾಡನ್ನು ಕುಮಾರವ್ಯಾಸ 'ಮರಗಾಡು' ಎನ್ನುತ್ತಾನೆ: "ಮರಗಾಡಿನಲಿ ಮೃಗಗಣದ ನೆಲೆಯಲಿ ಕಾಣಿರೆಲೆ ನೀವು" ಎಂಬುದು ಅವನ ಪ್ರಯೋಗ. 'ಮರಗಟ್ಟು' ಎಂದರೆ ಮರದ ಬುಡದ ಪಾತಿ: "ಮರಗಟ್ಟೆಂಬಂತೆ ಸುತ್ತುಂ ಮೊದಲೊಳ್ ಅಜಗರಂ .. .. ನೀಳ್ದಂತಿರೆ" 'ಕರ್ನಾಟಕ ಕಾದಂಬರಿ'. 'ಮರಮೊದಲ್' ಎಂದರೆ ಮರದ ಬುಡ: "ಮುನೀಂದ್ರಂ ಬೇರೂಱಿದ ಬೀಳಲಂತೆ ಮರಮೊದಲಿರ್ದಂ" - 'ಚಂದ್ರಪ್ರಭಪುರಾಣ'. 'ಮರಗೊಂಬು' = ಮರದ ಕೊಂಬೆ: "ಮರಗೊಂಬಿನೊಳವುಂಕಿದ ಸೆಲ್ಲದ ಮುಷ್ಟಿ" - ಆಚಣ್ಣನ 'ವರ್ಧಮಾನಪುರಾಣ'. ಈ ಶಬ್ದಕ್ಕೆ ಮರಕೋತಿಯಾಟ ಎಂಬ ಅರ್ಥವೂ ಇದೆ: "ವಿನೋದರಸದ ಬಸದಿಂ ಮರಗೊಂಬನಾಡುತಿರ್ದ ವೀರಜಿನಕುಮಾರನಂ" ಎಂಬುದೂ ಅಲ್ಲಿಯದೇ ಪ್ರಯೋಗ. 'ಮರದುರುಗಲ್' ಎಂದರೆ ತೋಪು: "ಪರ್ವತದ ಮೇಲೆ ಕರಂಗಿ ಕಳ್ತಲಿಸಿದ ಮರದುರುಗಲ ನಡುವೆ" - 'ಪಂಪಭಾರತ'. 'ಮರವಕ್ಕಿ' ಎಂದರೆ ಮರಕುಟಿಗ ಪಕ್ಷಿ: "ಕಾಗೆ ವಿಹಂಗ ಮಾರ್ಜಾಲ ಮರವಕ್ಕಿ ಗರ್ದಭ ಶಶಕ ಜಿಂಕೆಗಳು" ಎಂಬ ಸಾಲು ಏಲೇಶ್ವರ ಕೇತಯ್ಯನ ವಚನದ್ದು. 'ಮರವಡೆ' ಎಂಬುದು ಮರಗಳ ಆದಾಯದ ಮೇಲೆ ಹಾಕುತ್ತಿದ್ದ ತೆರಿಗೆಯೆಂಬಂತೆ ಶಾಸನಗಳಲ್ಲಿ ಬಂದಿದೆ: "ತೋಟ ತುಡಿಗೆ ಗದೆ ಬೆದಲು ಮಾವಡೆ ಮರವಡೆ ನಿಧಿ ನಿಕ್ಷೇಪ .. ..." ಎಂಬುದು ಹದಿನಾರನೆಯ ಶತಮಾನದ ಶಾಸನವೊಂದರ ಉಲ್ಲೇಖ.
"ಮರ ಬೇರು ಸಾರದಿಂದ ನಾನಾ ಶಾಖೆಗಳು ಪಲ್ಲವಿಸುವ ತೆರನಂತೆ .. .. ಮರಕ್ಕೆ ಬೇರು ನಷ್ಟದಿಂದ ಶಾಖೆ ನಷ್ಟ" ಎಂಬ ಉಪಮೆ ಅಂಬಿಗರ ಚೌಡಯ್ಯನ ವಚನದಲ್ಲಿದೆ. ಬಸವಣ್ಣ "ಮರನೇರಿದ ಮರ್ಕಟನಂತೆ" ಎಂದು ಚಂಚಲ ಮನಸ್ಸನ್ನು ವರ್ಣಿಸುತ್ತಾನೆ. ಮತ್ತೊಂದೆಡೆ "ಮರಕ್ಕೆ ಬೇರು ಬಾಯೆಂದು ತಳಯಿಂಕೆ ನೀರನೆರೆದಡೆ ಮೇಲೆ ಪಲ್ಲವಿಸಿತ್ತು ನೋಡಾ" ಎಂದು ಜಂಗಮದ ಶ್ರೇಷ್ಠತೆಯನ್ನು ವರ್ಣಿಸುತ್ತಾನೆ. "ಮರವನು ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ" ಎಂದು ಕನಕದಾಸರು 'ಮರ'ವನ್ನು ಸಾಂಕೇತಿಕವಾಗಿ ಬಳಸಿಕೊಳ್ಳುತ್ತಾರೆ. "ಮರದ ಇಂಬಿಗೆ ಬಾಗಿ ಬಳುಕುತಿರುವೆಳಲತೆಯು ತಳಿರ ತೂಗುಯ್ಯಾಲೆ ಹೂ ತೊಂಗಲು" ಎಂಬುದು ವಿಸೀಯವರು ನೀಡುವ ಚಿತ್ರ. "ಬೇರು ಸತ್ತೀ ಮರವನೆತ್ತಿ ನಿಲ್ಲಿಸು ಮಗೂ, ಕೊಂಬೆರೆಂಬೆಗಳಿರಲಿ ಇದ್ದ ಹಾಗೆ" ಎಂಬ ಸಾಲು ದೇಶದ ಸ್ಥಿತಿ ವರ್ಣಿಸುವ ಗೋಪಾಲಕೃಷ್ಣ ಅಡಿಗರ 'ಇಂದು ನಮ್ಮೀ ನಾಡು - 3ಕ' ಕವನದ್ದು.
=====
ಮರ2: ಮರ ಶಬ್ದವನ್ನು ಕಾಷ್ಠ, ಒಣಮರದ ತುಂಡು ಎಂಬರ್ಥದಲ್ಲಿಯೂ ಬಳಸುತ್ತೇವೆ, "ಅರದಿದಾರ್ಪುದೆನ್ನದೆ ತಗುಳ್ದು ಮರಂಗಳನೊಟ್ಟಿ" ಎಂಬುದು 'ಸುಕುಮಾರಚರತೆ' ಕಾವ್ಯದ ಸಾಲು. "ಕೀಲಂ ಬೆಟ್ಟಿರ್ದ ಮರನಂ ಕಂಡದರ ಮೇಲೆ ಕುಳ್ಳಿರ್ದು" ಎಂಬುದು 'ಪಂಚತಂತ್ರ'ದ ಸಾಲು. ಈ ಶಬ್ದವು ಅನೇಕ ಭಾವಗಳನ್ನು ಸೂಚಿಸಲು ಬಳಕೆಯಾಗಿದೆ. "ಮರದೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ" ಎಂಬಲ್ಲಿ ಜೇಡರ ದಾಸಿಮಯ್ಯ ವಿಸ್ಮಯವನ್ನು ಸೂಚಿಸಿದರೆ, "ಮರದೊಳಗಣ ಕಿಚ್ಚು ಮರನ ಸುಟ್ಟಂತಾದೆನಯ್ಯಾ" ಎಂಬ ಅಲ್ಲಮಪ್ರಭುವಿನ ಮಾತು ಲಿಂಗಪೂಜೆಯ ಪರಿಣಾಮವನ್ನು ಹೇಳಲು ಬಳಕೆಯಾಗಿದೆ. 
 "ಮರಮರ ಮಥನಿಸಿ ಕಿಚ್ಚು ಹುಟ್ಟಿ" ಎಂಬ ಮಹಾದೇವಿಯಕ್ಕನ ವಚನದ ಸಾಲಿನಲ್ಲಿ ಮರದ ತುಂಡುಗಳನ್ನು ಉಜ್ಜಿಯೋ ಕಡೆದೋ ಬೆಂಕಿ ಮಾಡಿಕೊಳ್ಳುತ್ತಿದ್ದ ಅರ್ಥವಿದೆ. ಮರದಿಂದ ಅನೇಕ ವಸ್ತುಗಳನ್ನು ಮಾಡಿಕೊಳ್ಳುವ ರೂಢಿ ಹಿಂದಿನದು. ಮರಗೋಲಿನ ಉಲ್ಲೇಖ 'ಧರ್ಮಾಮೃತ'ದಲ್ಲಿದೆ: "ಜಾತ್ಯಶ್ವಮಂ ಬಿಟ್ಟು ಮರಗಾಲಂ ಕೊಳ್ವ." ಬಸವಣ್ಣನೂ ಇದನ್ನು ಉಲ್ಲೇಖಿಸುತ್ತಾನೆ: "ಮರಗಾಲಲಟ್ಟಿ ಸದೆದು ನೋಡಯ್ಯಾ". ಮರದಿಂದ ಮಾಡಿದ ಮುಖವಾಡವನ್ನು 'ಮರಮೊಗ' ಎಂಬ ಶಬ್ದದಿಂದಲೇ ಕರೆಯುತ್ತಿದ್ದರು. "ಲೋಗರ್ ಪಗರಣಿಗರಾಗಿ ಎನಿತಾನುಂ ತೆರದ ರೂಪುಗಳುಮಂ ಕೈಕೊಂಡು ಮರಮೊಗಂಗಳನಿಟ್ಟು" ಎಂಬುದು 'ವಡ್ಡಾರಾಧನೆ'ಯಲ್ಲಿನ ಮಾತು. ಮರವಾಳ್ ಎಂದರೆ ಮರದ ಕತ್ತಿ: "ಕರವಾಳಂ ಮಸೆವಂದದೆ ಮರವಾಳಂ ಮಸೆಯೆ ಕೂರಿತಮಕ್ಕುಮೇ" - 'ಗದಾಯುದ್ಧ'. ಮರದ ಬಿಲ್ಲೇ 'ಮರವಿಲ್': "ತೊಟ್ಟ ಎಕ್ಕವಡಂ ಮರವಿಲ್ ಕಟ್ಟಿದ ಪಣೆಕಟ್ಟು" - 'ಪಂಪಭಾರತ'.  ಮರದಿಂದ ಮಾಡಿದ ಮಣಿಯೇ 'ಮರವಣೆ'; "ಮರವಣೆಗಂ ಬೀಣೆಗಮಂತರಮಾವುದೋ" ಎಂಬುದು 'ಕಾವ್ಯಾವಲೋಕನ'ದಲ್ಲಿನ ಪದ್ಯವೊಂದರ ಸಾಲು.
ಮರವನ್ನು ಪೂರ್ವಪದವಾಗಿಟ್ಟುಕೊಂಡು ಅನೇಕ ನುಡಿಗಟ್ಟುಗಳು ರಚಿತವಾಗಿವೆ. ಹಳಗನ್ನಡ ಕಾವ್ಯಗಳಲ್ಲಿ 'ಮರವಡು' ಎಂಬ ಪ್ರಯೋಗ ಮೊದಲು ಚಲನೆಯಿಲ್ಲದಿರು ಎಂಬರ್ಥದಲ್ಲಿ ಪ್ರಯೋಗವಾಗಿದೆ. ಇದು ಪಂಪನ 'ಆದಿಪುರಾಣ'ದಲ್ಲಿ "ಮರವಟ್ಟು ಕುಡದೆ ಕಲ್ಪಮಹೀಜಂ ನಿಂದುವು" ಎಂಬಲ್ಲಿ ಸ್ಪಷ್ಟವಾಗಿದೆ. ಆದರೆ ಇದೇ ರೂಪವು ರೂಪಕವಾಗಿ ಜಡ್ಡುಗಟ್ಟು ಎಂಬ ಅರ್ಥದಲ್ಲಿ 'ಪಂಪಭಾರತ'ದಲ್ಲಿ ಪ್ರಯೋಗವಾಗಿದೆ: "ಅತ್ತ ಸುಭದ್ರೆಯುಮೊಡಲುರಿಯುತ್ತಿರೆ ಮರವಟ್ಟು ವಿಜಯನಿರ್ದತ್ತಲೆ ನೋಡುತ್ತಿರೆ". ಅಂತೆಯೇ "ಅಂತಃಪೀಡಾಕ್ರಾಂತಿಯನೊಂದಿನಿತು ಪೊಳ್ತು ಮರವಟ್ಟಿರ್ದಳ್" ಎಂಬುದು 'ಕರ್ಣಾಟಕ ಕಾದಂಬರಿ'ಯಲ್ಲಿನ ವರ್ಣನೆ. ಮರವಾನಸ, ಮರವಾನಸಿ, ಮರವಾನಸೆ ಮುಂತಾದವು ಮರದಿಂದ ಮಾಡಿದ ಗಂಡು-ಹೆಣ್ಣು ಬೊಂಬೆಗಳನ್ನು ಸೂಚಿಸುತ್ತವೆ: "ಪೊಯ್ವ ಸಿಡಿಲ್ ಕಾರಿರೊಳಗುರ್ವಂ ಪಡೆದಿರೆ ಮರವಾನಸನೆನೆ ತಪಸ್ವಿ ಮರದ ಮೊದಲಿರ್ದಂ" ('ಪಂಪಭಾರತ'); "ನೋಡ ಮಾನಸೆಯಣಮಲ್ಲಮೀಕೆ ಮಾರವಾನಸಿಯಾಗಿಯುಂ .. .." ('ಆದಿಪುರಾಣ'); "ಅರವಿಂದವಕ್ತ್ರೆ  ಕೋಮಳೆ ಕಡುಗಾಡಿಕಾರ್ತಿ ಮರವಾನಿಸೆಯೆಂಬುದನುಮಟುಮಾಡಿದೌ" ('ಧರ್ಮಾಮೃತ') ಎಂಬ ಪ್ರಯೋಗಗಳನ್ನು ನೋಡಬಹುದು. ಬಿರುಸನ್ನು ಸೂಚಿಸಲೂ ಮರ ಬಳಕೆಯಾಗಿದೆ: ಕಾಡುಬಾಳೆಯನ್ನು ಮರವಾೞೆ ಎನ್ನುತ್ತಿದ್ದರು: "ಕಾಷ್ಠಕದಳೀ-ಮರವಾೞೆ" ಎಂದು 'ಓಷಧಿಕೋಶ'ದಲ್ಲಿ ಅರ್ಥ ಹೇಳಿದೆ. ಮರಗೆಣಸು, ಮರಗಬ್ಬು ಇತ್ಯಾದಿ. ಮರಗಟ್ಟು ಎಂದರೆ ಜೋಮು ಹಿಡಿ; ನಾಲಗೆ ಮರವಾಗು ಎಂದರೆ ರುಚಿಯಿಲ್ಲದಾಗು ಎಂದರ್ಥ ಇತ್ಯಾದಿ.
ಮರವಲಗೆ ಎಂಬುದು ಒಣಮರದ ಹಲಗೆ. "ಶರದೀಮಧ್ಯದಿ ಹಡಗೊಡೆದು ಮುಳುಗಲಾ ಮರವಲಗೆಯ ಪಿಡಿದವನು ಭರದಿ ತಡಿಯ ಸಾರ್ದು" ಎಂಬ ಮಾತು 'ಜೀವಂಧರ ಸಾಂಗತ್ಯ'ದಲ್ಲಿದೆ.
=====
ಮರುಗು: ಇದರ ಮೂಲ ರೂಪ 'ಮಱು'ಗು ಎಂದು; ಇದೊಂದು ದ್ರಾವಿಡ ಕ್ರಿಯಾಪದ, ತಮಿಳಿನಲ್ಲಿ ಮಱುಕು (ತಮಿಳಿನಲ್ಲಿ ಪದಮಧ್ಯದ 'ಕ' ವು 'ಗ' ಎಂದೇ ಉಚ್ಚಾರವಾಗುತ್ತದೆ), ತೆಲುಗಿನಲ್ಲಿ ಮಱುಗು ಹಾಗೂ ತುಳುವಿನಲ್ಲಿ ಮರ್ಕುನಿ ಎಂಬ ರೂಪಗಳಲ್ಲಿ ದೊರೆಯುತ್ತದೆ. ಇದರ ಮೂಲಾರ್ಥ ಕುದಿ, ಮರಳು ಎಂಬುದು. "ಮಱುಗುವ ಪಾಲ್ಗೆ ಅಳೆಯ ಪನಿಗಳಂ ಬೆರೆಸಿದವೋಲ್" (ಅಳೆ=ಮಜ್ಜಿ) ಎಂಬ ಉಪಮೆ 'ಕವಿರಾಜಮಾರ್ಗ'ದಲ್ಲಿಯೇ ಇದೆ. ಇದು ಮುಂದೆ ರೂಪಕವಾಗಿ ಮಾನಸಿಕವಾಗಿ ಕುದಿಯುವುದಕ್ಕೆ, ಅಂದರೆ ಕಳವಳಗೊಳ್ಳುವುದಕ್ಕೆ ಅನ್ವಯವಾಯಿತು. "ಮಗನಳಲೊಳ್ ಕರಂ ಮಱುಗುತ್ತಿರ್ಪಿನಂ" ಎಂಬುದು 'ಪಂಪಭಾರತ'ದ ಮಾತು. ಈ ಅರ್ಥವೂ ವಿಸ್ತಾರಗೊಂಡು ಬೇರೆಯವರ ದುಃಖ ಕಂಡು ಪಡುವ ಸಹಾನುಭೂತಿಗೂ ಅನ್ವಯಿಸುವಂತಾಯಿತು, "ಸುಧನ್ವಂಗೆ ಮಱುಗುವಂತೆ ಸಚಿವನಿಂತೆಂದಂ" ಎಂಬುದು ಜೈಮಿನಿ ಭಾರತದ ಮಾತು. ಈ ಅರ್ಥ ಮುಂದೆ ಪ್ರೀತಿಸು ಎಂಬರ್ಥವನ್ನೂ ಪಡೆಯುತ್ತದೆ; 'ಶಬ್ದಮಣಿದರ್ಪಣ'ದಲ್ಲಿ "ಮಱುಗಿದಂ-ಕೂರ್ತಂ" ಎಂದು ಅರ್ಥ ಕೊಡಲಾಗಿದೆ.
ಪ್ರೇರಣಾರ್ಥದಲ್ಲಿ ಎಂದರೆ ಕುದಿಯುವ ಹಾಗೆ ಮಾಡು ಎಂಬರ್ಥದಲ್ಲಿ ಇದು ಮಱುಗಿಸು ಎಂಬ ರೂಪ ಪಡೆಯುತ್ತದೆ. "ಪಾಲಂ ಅರ್ಧಮಪ್ಪಿನಂ ಮಱುಗಿಸಿ" ಎಂಬ ಸಾಲು 'ಲೋಕೋಪಕಾರ'ದಲ್ಲಿ. ಇದೂ ಮಾನಸಿಕವಾಗಿ ಕೋಟಲೆಗೊಳಿಸು ಎಂಬರ್ಥವನ್ನು ಪಡೆಯುತ್ತದೆ: "ಮನುಷ್ಯಜನ್ಮಮಂ ಮಱುಗಿಸಿ ನಿನ್ನೀ ಪದಕೆ ತಂದುದು ಮುನ್ನಿನ ಗೆಯ್ದ ದೋಷಂ" ಎಂಬ ವಾಕ್ಯ ಕಮಲಭವ ಎಂಬ ಕವಿಯ 'ಶಾಂತೀಶ್ವರ ಪುರಾಣ'ದಲ್ಲಿದೆ.
ಇದರ ನಾಮರೂಪವೇ ಮಱುಕ ಅಥವಾ ಈಗಿನ ಮರುಕ, ಅಂದರೆ ಕುದಿಯುವಿಕೆ. ಹಿಂದೆ ಹೇಳಿದ 'ಲೋಕೋಪಕಾರ'ದಲ್ಲಿ ಈ ಶಬ್ದ ಇದೇ ಅರ್ಥದಲ್ಲಿ ಬಳಕೆಯಾಗಿದೆ. ಇಂತಹ ಮಾನಸಿಕ ಸ್ಥಿತಿಯೂ ಮರುಕವೇ, ದುಃಖ, ತಳಮಳ ಎಂದು. "ಮಱುಕಂ ಅಮಾಯಮಪ್ಪ ಅಪಮೃತ್ಯುವೆಂಬಲ್ಲಿಗೆ ಪೊಱಗೆ" ಎಂಬ ಮಾತು ಪಂಪನ 'ಆದಿಪುರಾಣ'ದಲ್ಲಿದೆ. "ಎನಗೆ ಮನದ ಮಱುಕಂ ಪಿರಿದುಮಾಹಾರಕ್ಕೆಂತು ಚಿಂತೆಗೆಯ್ವೆಂ" ಎಂಬ 'ಧರ್ಮಾಮೃತ'ದ ಮಾತಿನಲ್ಲಿ ಈ ಶಬ್ದಕ್ಕೆ ಚಿಂತೆ ಎಂಬರ್ಥವಿದೆ. ಈ ಅರ್ಥ ಮತ್ತಷ್ಟು ವಿಸ್ತಾರಗೊಂಡು ಸಹಾನುಭೂತಿಪರವಾದ ಕಳವಳಕ್ಕೂ ಅನ್ವಯಸಿ ಕರುಣೆ ಎಂಬರ್ಥವನ್ನು ಪಡೆಯುತ್ತದೆ.: "ವಾಸರಪತಿ ಬಿಸುಗದಿರಂ ಪೇಸದೆ ತವೆ ಪೀರ್ಗುಮೆಂಬ ಮಱುಕದೊಳಂಭೋಜಾಸನನಂಬುಜವನಮಂ ಬಾಸಣಿಸಿದನೆನಿಪುವಿಡಿದ ತಾವರೆಯಗೆಲೆಗಳ್" ಎಂಬುದು 'ಕಾವ್ಯಾವಲೋಕನ'ದ ಒಂದು ಪದ್ಯದ ಸಾಲು. ವ್ಯಾಮೋಹ ಎಂಬರ್ಥದಲ್ಲಿ 'ಜಯನೃಪ ಕಾವ್ಯ'ವು ಈ ಶಬ್ದವನ್ನು ಬಳಸುತ್ತದೆ: "ಎನ್ನವರನ್ನಿಗರೆನುತಂ ಮಱುಕಂ ಮಚ್ಚರಗೊಳ್ಳದ ಸತ್ಯಕ್ಕೆಱೆವಟ್ಟೆನಿಸುವ ಸಾಧುಸಮಿತಿಗತಿಸಮಿತಿಯೊಳೆಱಗುವೆನು". ಹೀಗೆ ಇನ್ನೂ ಅನೇಕ ಅರ್ಥಚ್ಛಾಯೆಗಳು ಈ ಶಬ್ದಕ್ಕೆ ಒದಗುತ್ತವೆ.
=====
ಮಲ್ಲಿಗೆ: ಕನ್ನಡನಾಡಿನಲ್ಲಿ ಸುಪ್ರಸಿದ್ಧವಾದ ಕಂಪಿನ ಹೂ ಮತ್ತು ಅದು ಬಿಡುವ ಬಳ್ಳಿಯ ಹೆಸರು. ಇದು ಸಂಸ್ಕೃತದ ಮಲ್ಲಿಕಾ ಎಂಬುದರ ತದ್ಭವ. "ತೃಣಶೂಲಂ ತು ಮಲ್ಲಿಕಾ ಭೂಪದೀ ಶೀತಭಿರುಶ್ಚ ಸೈವಾಸ್ಫೋಟಾ ವನೋದ್ಭವಾ" ಎಂದು 'ಅಮರಕೋಶ'ದಲ್ಲಿ ವಿವಿಧಾರ್ಥಗಳನ್ನು ಹೇಳಿದೆ. "ಮಲ್ಲಿಗೆ ವಿಚಕಿಳಂ" ಎಂದು 'ಅಭಿಧಾನ ವಸ್ತುಕೋಶ' ಹೇಳುತ್ತದೆ. ತನಗೆ ಬನವಾಸಿಯ ನೆನಪನ್ನು ತರುವ ವಸ್ತುಗಳಲ್ಲಿ 'ಬಿರಿದ ಮಲ್ಲಿಗೆ'ಯೂ ಒಂದು ಎನ್ನುತ್ತಾನೆ ಪಂಪ ("ಬಿರಿದ ಮಲ್ಲಿಗೆಗಂಡೊಡಂ .. .. ನೆನೆವುದೆನ್ನ ಮನಂ ಬನವಾಸಿ ದೇಶಮಂ" - 'ಪಂಪಭಾರತ'). ಇದರಲ್ಲಿ ಸೂಜಿಮಲ್ಲಿಗೆ, ದುಂಡು ಮಲ್ಲಿಗೆ ಮುಂತಾದ ಭೇದಗಳಿವೆ; ಅಲ್ಲದೆ ಮೈಸೂರ ಮಲ್ಲಿಗೆ, ಆಂಬೂರು ಮಲ್ಲಿಗೆ ಮುಂತಾದ ಪ್ರಾದೇಶಿಕ ಪ್ರಭೇದಗಳೂ ಇವೆ. ಕೆಎಸ್‍ನ ಅವರ 'ಮೈಸೂರ ಮ್ಲಲಿಗೆ' ಅತ್ಯಂತ ಜನಪ್ರಿಯ ಕವನ ಸಂಕಲನ.
ಮನ್ಮಥನ ಬಾಣಗಳು ಹೂಗಳೇ ಎಂಬುದು ಹಿಂದಿನವರ ನಂಬಿಕೆ. "ಅರವಿಂದಂ ಅಶೋಕಂ ಚ ಚೂತಂ ಚ ನವಮಲ್ಲಿಕಾ ನೀಲೋತ್ಪಲಂ ಚ ಪಂಚೈತೆ ಪಂಚಬಾಣಸ್ಯ ಸಾಯಕಾಃ". ಮಲ್ಲಿಕಾಮಾಲೆ ಎಂಬುದು ಪ್ರಾಚೀನ ಕನ್ನಡ ಚಂಪೂ ಕವಿಗಳ ಪ್ರಿಯವಾದ ಒಂದು ಅಕ್ಷರ ವೃತ್ತದ ಹೆಸರು. ಮಲ್ಲಿಗೆಯ ಸುವಾಸನೆಯಂತೆ ಹರಡಿದ ಕೀರ್ತಿಯುಳ್ಳವನು ಎಂಬ ಅರ್ಥದ 'ಮಲ್ಲಿಕಾಮೋದ' ಎಂಬ ಬಿರುದು ಶಾಸನಗಳಲ್ಲಿ ಉಲ್ಲೇಖಗೊಂಡಿದೆ ("ಚಾಳುಕ್ಯಾಭರಣಂ ಮಲ್ಲಿಕಾಮೋದಂ"). ಮಲ್ಲಿಕಾವೃತಿ ಎಂದರೆ ಮಲ್ಲಿಗೆಯ ಪೊದೆ ("ಮಲ್ಲಿಕಾವೃತಿಯೊಳ್ ವಲ್ಲಭೆಯಯಂ ತೊಳಲ್ದರಸಿದಂ ವಿದ್ಯಾವಧೂವಲ್ಲಭಂ" - ನೇಮಿಚಂದ್ರನ 'ಲೀಲಾವತಿ').
ಮಲ್ಲಿಕಾರ್ಜುನ ಶ್ರೀಶೈಲದ ಅಧಿದೈವ. 'ಚೆನ್ನ ಮಲ್ಲಿಕಾರ್ಜುನ' ಎಂಬುದು ಮಹಾದೇವಿಯಕ್ಕನ ಅಂಕಿತವಾದರೆ, 'ಕಪಿಲಸಿದ್ಧ ಮಲ್ಲಿಕಾರ್ಜುನ' ಎಂಬುದು ಸಿದ್ಧರಾಮನ ವಚನಾಂಕಿತ. ಮಲ್ಲಿಕಾರ್ಜುನ ಎಂಬ ಹೆಸರು ಕನ್ನಡೀಕರಣಗೊಂಡು ಮಲ್ಲಯ್ಯ, ಮಲ್ಲಣ್ಣ, ಮಲ್ಲಪ್ಪ, ಮಲ್ಲೇಶಪ್ಪ, ಮಲ್ಲಾರಾಧ್ಯ ಮುಂತಾದ ವ್ಯಕ್ತಿನಾಮಗಳಾಗಿವೆ. ಆದರೆ ಮಲ್ಲಿಕಾ+ಅರ್ಜುನ ಎಂಬ ಪದವಿಭಜನೆಯು ಶಿವನಿಗೆ ಹೇಗೆ ಅನ್ವಯವಾಗುತ್ತದೆ? ತಮಿಳು ಪಂಡಿತರೊಬ್ಬರು ಈ ಶಬ್ದದ ವ್ಯುತ್ಪತ್ತಿಯನ್ನು 'ಮಲೈಕ್ಕು ಅರಸನ್' ಎಂದು ಹೇಳುತ್ತಾರೆಂದು ನನ್ನ ಗೆಳೆಯರೊಬ್ಬರು ಹೇಳಿದರು. ಮಲ್ಲಿಕಾರ್ಜುನ ಬೆಟ್ಟದ ದೈವವಾದ್ದರಿಂದ ಈ ವ್ಯತ್ಪತ್ತಿ ವಿಚಾರಯೋಗ್ಯ.
=====
ಮಾಡು ಶಬ್ದದ ಮೂರಾರು ಅವತಾರಗಳು
ಕನ್ನಡ ಮಾತನಾಡುವ ನೀವು ಒಂದು ದಿನ ನಿಮ್ಮ ಮಾತಿನಲ್ಲಿ 'ಮಾಡು' ಶಬ್ದದ ಯಾವ ರೂಪವನ್ನೂ ಬಳಸುವುದಿಲ್ಲ ಎಂದು ಪಂತ ಕಟ್ಟಿ ನೋಡಿ; ಗೆಲ್ಲುವಿರೋ ಸೋಲುವಿರೋ ಗೊತ್ತಾಗುತ್ತದೆ! ಏಕೆಂದರೆ ನಮ್ಮ ದಿನನಿತ್ಯದ ಮಾತಿನಲ್ಲಿ ನಾವು ಹತ್ತಾರು ಬಾರಿ 'ಮಾಡು'ವನ್ನೊಳಗೊಂಡ ಶಬ್ದರೂಪಗಳನ್ನು ಬಳಸುವುದು ಅನಿವಾರ್ಯ; ಅದರ ಬಳಕೆ ಅಷ್ಟೊಂದು ಸಾಮಾನ್ಯವಾದುದು, ಅನಿವಾರ್ಯವಾದುದು. ಅದರ ಸಹಾಯದಿಂದ ಬಹಳ ಅಭಿವ್ಯಕ್ತಿರೂಪಗಳನ್ನು ಸಾಧಿಸಿಕೊಳ್ಳುತ್ತೇವೆ; ಅದು ನಾನಾ ಬಗೆಯ ಕಾರ್ಯಗಳನ್ನು ನಿರ್ವಹಿಸುತ್ತದೆ.
'ಮಾಡು' ಎಂಬ ಶಬ್ದಕ್ಕೆ ಕೇಶಿರಾಜನು ತನ್ನ 'ಶಬ್ದಮಣಿದರ್ಪಣ'ದಲ್ಲಿ ಧಾತುಗಳಿಗೆ ಅರ್ಥ ಕೊಡುವಾಗ ಎಸಗು ಎಂಬ ಕ್ರಿಯಾರ್ಥ ಹಾಗೂ ಗೋಡೆ (ಕುಡ್ಯ) ಎಂಬ ನಾಮಾರ್ಥವನ್ನು ಕೊಡುತ್ತಾನೆ ("ಮಾಡು-ಕರಣೇ ಕುಡ್ಯ ವಿಶೇಷೇ ಚ"). ಆದರೆ ಗೂಡು ಎಂಬರ್ಥದ ಮಾಡ ಮುಂದೆ ಮಾಡು ಎಂದಾಗಿದೆ: ಪುರಂದರ ದಾಸರ "ಮಾಡು ಸಿಕ್ಕದಲ್ಲ, ಮಾಡಿನ ಗೂಡು ಸಿಕ್ಕದಲ್ಲ" ಎಂದು ಆರಂಭವಾಗುವ ಪ್ರಸಿದ್ಧ ಕೀರ್ತನೆಯ ಪಲ್ಲವಿಯಿದು. ಈ ನಾಮವಾಚಿ ಅರ್ಥಗಳು ಅಷ್ಟಕ್ಕೇ ಸೀಮಿತವಾದ. ಆದರೆ ಅದರ ಕ್ರಿಯಾರ್ಥ ಮಾತ್ರ ವ್ಯಾಪಕವಾದ ಪ್ರಭಾವ ಹೊಂದಿದೆ. 'ಮಾಡು ಇಲ್ಲ ಮಡಿ' ಎಂಬುದು ನಲವತ್ತೇಳರ ಸ್ವಾತಂತ್ರ್ಯ ಚಳವಳಿಯ ಮೂಲ ಮಂತ್ರವಾಗಿತ್ತು. ಈ ಪದ ಬಳಕೆ ಆರಂಭದಿಂದ ಇಂದಿನವರೆಗೂ ಹೀಗೆಯೇ ಇದೆ, ಹೆಚ್ಚುತ್ತಲೂ ಇದೆ. "ಕೇಡಡಸಿದೊಡಂ ಬಗೆಯುಂ ಕೂಡದು ಕೂಡಿದುದುಮದು ವಿಪರೀತಮುಮಂ ಮಾಡುಗುಂ" ಎಂಬ 'ಕವಿರಾಜಮಾರ್ಗ'ದ ವಾಕ್ಯದಿಂದ ಹಿಡಿದು, "ಮಾಡು ದಾನ ಧರ್ಮ ಪರ ಉಪಕಾರವ ಮರೆಯದಿರೆಚ್ಚರಿಕೆ" ಎಂಬ ಕನಕದಾಸರ ಮಾತನ್ನೊಳಗೊಂಡು, "ವಾನರನ ಮಾಡಮಾಡುತ್ತಲಿ ವಿನಾಯಕನ ಮಾಡಿಬಿಟ್ಟರು ಸರಿಯೆ" ಎಂಬ ಗೋಪಾಲಕೃಷ್ಣ ಅಡಿಗರ 'ಏನಾದರೂ ಮಾಡುತಿರು ತಮ್ಮ' ಎಂಬ ಕವನದ ಸಾಲಿನವರೆಗೆ ಇದನ್ನು ಸಾಮಾನ್ಯಾರ್ಥದಲ್ಲಿ ಅಸಂಖ್ಯ ಕಡೆ ಬಳಸಲಾಗಿದೆ.
ವಿಧ್ಯರ್ಥದಲ್ಲಿ (ಆಜ್ಞೆ, ಕೋರಿಕೆ, ಆಶಯ) ಮಧ್ಯಮ ಪುರುಷದಲ್ಲಿ (ನೀನು, ನೀವು) 'ಕೊ' ('ಕೊಳ್' ಎಂಬುದರಲ್ಲಿ ಕೊನೆಯ ವ್ಯಂಜನ ಲೋಪವಾಗಿ) ಸೇರಿ ಇದು 'ಮಾಡಿಕೊ' ಆಗುತ್ತದೆ, ಪುರಂದರದಾಸರ "ದಾಸನ್ನ ಮಾಡಿಕೊ ಎನ್ನ, ಇಷ್ಟು ಘಾಸಿ ಮಾಡುವರೇನೊ ಕರುಣಾಸಂಪನ್ನ" ಎಂಬ ಸಾಲಿನಲ್ಲಿನಂತೆ. ಪ್ರಥಮ ಪುರುಷ (ಅವನು, ಅವಳು, ಅವರು, ಅದು, ಅವು)ದಲ್ಲಿ 'ಮಾಡುಗೆ' ಎಂಬುದು ಹಳಗನ್ನಡದಲ್ಲಿ ಬಳಕೆಯಲ್ಲಿತ್ತು  "ಪ್ರೋದ್ಭಾಸಿ ಚಂದ್ರಂ ತ್ರಿಭುವನಜನಕಾನಂದಮಂ ಮಾಡುಗೆಂದುಂ" - 'ಕರ್ಣಾಟಕ ಕಾದಂಬರಿ'). ಹೊಸಗನ್ನಡದಲ್ಲಿದು 'ಮಾಡಲಿ' ಎಂದಾಗುತ್ತದೆ: 'ಇಸು' ಪ್ರತ್ಯಯ ಸೇರಿದಾಗ ಇದು ಪ್ರೇರಣಾರ್ಥವನ್ನು ಪಡೆಯುತ್ತದೆ, ಅಂದರೆ ಕ್ರಿಯೆಯನ್ನು ಮಾಡುವಂತೆ ಮಾಡುವ ಅರ್ಥ ಪಡೆಯುತ್ತದೆ. "ಬೀಡುಬಿಡುವಿಂಬು ಕದಳಿ ತೆಂಗಿನ ತಾಣಂ ಜಾಣಿಂ ನೀರ್ದಾಣಮೆಂದೆಡೆಯಱಿದುಂ ಮಾಡಲ್ ಮಾಡಿಸಲ್ ಪಡೆ ನೀಂ ಬಲ್ಲೆ ನೀಂ ಮೆಚ್ಚೆ ಹರಿಗ ಕೇಳಾನೆ ಬಲ್ಲೆಂ" ಎಂಬುದು 'ಪಂಪಭಾರತ'ದ ಪದ್ಯವಾದರೆ, "ತನ್ನಾಶ್ರಯದ ರತಿಸುಖವನು ತಾನುಂಬ ಊಟವನು ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ? ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ" ಎಂಬುದು ಬಸವಣ್ಣನ ವಚನ. ಈ ಶಬ್ದ ಮಾಡುವ ಕ್ರಿಯೆ ಎಂಬರ್ಥದಲ್ಲಿ 'ಮಾಡುಹ' ಎಂಬ ಕೃನ್ನಾಮವಾಗುತ್ತದೆ. ಇದಕ್ಕೆ ಉದಾಹರಣೆ ದುರ್ಗಸಿಂಹನ 'ಪಂಚತಂತ್ರ'ದ ಈ ವಾಕ್ಯ: "ನೋಡದೆಯಿರುಹವುಂ, ಪ್ರೀತಿಪೂರ್ವಕವಹಂತಹುದ ಕಿಡಿಸುವಹವುಂ, ವಿವಾದಮಂ ಮಾಡುಹವುಂ, ನುಡಿಯದಿರುಹವುಂ, ವಿಸ್ಮಯವಿಲ್ಲದಿರುಹವುಂ, ಇಂತಿಹವು ಸ್ನೇಹವಿಲ್ಲದ ಜನದ ಲಕ್ಷಣವೆಂದವುದು". ಆಧುನಿಕ ಕನ್ನಡದಲ್ಲಿ ಇದು 'ಮಾಡುವಿಕೆ' ಎಂದಾಗುತ್ತದೆ. ಇದು ಕೆಲಸ ಎಂಬರ್ಥದ 'ಮಾಡಿಕೆ' ಎಂದೂ ಆಗುತ್ತದೆ. ಮಾಡು ಎಂಬುದಕ್ಕೆ 'ಅಣ' ಎಂಬ ಪ್ರತ್ಯಯ ಸೇರಿಸಿದಾಗ (ಮಾಡು+ಅಣ) ಮಾಡುವಣ>ಮಾಡೋಣ  ಎಂಬ ಕೃದಂತ ಭಾವಾನಾಮರೂಪ ಬರುತ್ತದೆ: "'ಈಗೇನು ಮಾಡೋಣ' ಮತ್ತೆ ಕೇಳುವೆಯಲ್ಲ, ಹೊಕ್ಕ ಮನೆಯನ್ನೆಲ್ಲ ಹೊಸ ಮನೆಯೆಂದೆ ಕರೆಯೋಣ" ಎಂಬುದು ಕೆಎಸ್ನ ಅವರ ಕವನದ ಸಾಲು.
ವಾಕ್ಯದಲ್ಲಿ ಮಾಡು ಎಂಬುದರ ಹಿಂದೆ ಬರುವ ದ್ವಿತೀಯಾವಿಭಕ್ತಿಯ ನಾಮಪದದಿಂದಾಗಿ ಬೇರೆ ಬೇರೆ ಅರ್ಥಛಾಯೆಗಳನ್ನು ಪಡೆಯುತ್ತದೆ. 'ವಡ್ಡಾರಾಧನೆ'ಯಲ್ಲಿನ "ಮುಂಜಿಬಂಧನ ಕ್ರಿಯೆಯಂ ಮಾಡಿದ ಬೞಿಕ್ಕೆ" ಎಂಬ ವಾಕ್ಯಖಂಡದಲ್ಲಿ ಮಾಡು ಎಂಬುದಕ್ಕೆ ನೆರವೇರಿಸು ಎಂಬರ್ಥ ಬಂದಿದೆ; "ವಿರಕ್ತಿಯಂ ಮಾಡುವುದುಂ ನಾಡೆಯುಂ ಗಹನಂ" ಎಂಬ 'ಪಂಚತಂತ್ರ' ಮಾತಿನಲ್ಲಿ ಇದಕ್ಕೆ ಕೈಗೊಳ್ಳುವುದು ಎಂಬರ್ಥ ಬಂದಿದೆ; "ಮಡಕೆಯ ಮಾಡುವಡೆ ಮಣ್ಣೇ ಮೊದಲು, ತೊಡುಗೆಯ ಮಾಡುವಡೆ ಹೊನ್ನೆ ಮೊದಲು" ಎಂಬ ಬಸವಣ್ಣನ ಮಾತಿನಲ್ಲಿ ಈ ಶಬ್ದಕ್ಕೆ ತಯಾರಿಸು ಎಂಬರ್ಥವಿದೆ; "ಅತಿ ಅಭ್ಯಾಗತರಿಗೆ ಅನ್ನವನ್ನೆ ಇಕ್ಕುವರು ಆಯುತ ವೃತ್ತಿಯನ್ನೆ ಮಾಡುವರು" ಎಂಬ ಪುರಂದರದಾಸರ ಮಾತಿನಲ್ಲಿ ಇದಕ್ಕೆ ಆಚರಿಸು ಎಂಬರ್ಥ ಪ್ರಾಪ್ತವಾಗುತ್ತದೆ.
'ಮಾಡು' ಧಾತು ಮತ್ತೊಂದು ಪದದ ಮುಂದೆ ಬಂದು ಸಂಯುಕ್ತ ಧಾತುವಾದಾಗ ಅದರ ಅರ್ಥದ ಬಣ್ಣಗಳು ಬದಲಾಗುತ್ತ ಹೋಗುತ್ತವೆ. ಈ ಬಗೆಯಲ್ಲಿ ಸಾಧಿತವಾಗುವ ಧಾತುಗಳನ್ನು ನಾಲ್ಕು ಮುಖ್ಯ ವರ್ಗಗಳಾಗಿ ವಿಂಗಡಿಸಬಹುದು: (1) ಕನ್ನಡ ನಾಮವಾಚಕಗಳ ಜೊತೆ ಸೇರಿ, (2) ಸಂಸ್ಕೃತ ಶಬ್ದಗಳ ಜೊತೆ ಸೇರಿ ಮತ್ತು (3) ಇಂಗ್ಲಿಷ್ ಧಾತುಗಳ ಮುಂದೆ ಬಂದು, (4) ಸಂಸ್ಕೃತ ಮತ್ತು ಇಂಗ್ಲಿಷ್ ಮತ್ತಿತರ ಅನ್ಯದೇಶ್ಯ ನಾಮಪದಗಳ ಜೊತೆಗೂಡಿ. ಮೇಲೆ ನೋಡಿದಂತೆ, ವಾಕ್ಯಗಳಲ್ಲಿ ದ್ವಿತೀಯಾವಿಭಕ್ತಿಯ 'ಮಾಡು'ವಿಗೆ ಆಯಾ ಪೂರ್ವಪದದ ಕಾರಣದಿಂದ ಬೇರೆ ಬೇರೆ ಆರ್ಥ ಬರುತ್ತದೆ. ಆದರೆ ಸಾಮಾನ್ಯ ಮಾತಿನಲ್ಲಿ ದ್ವಿತೀಯಾ ವಿಭಕ್ತಿ ಪ್ರತ್ಯಯವಾದ 'ಅನ್ನು' ಕೈಬಿಟ್ಟು ಮಾಡು ಜೊತೆಯಲ್ಲಿ ಸೇರಿಸುವುದು ರೂಢಿಯಲ್ಲಿದೆ; ಇದು ಬರವಣಿಗೆಯಲ್ಲಿಯೂ ಕಾಣಿಸಿಕೊಳ್ಳುತ್ತದೆ. "ದೇವ ನಿನ್ನಂಘ್ರಿಯನು ಪೂಜೆಮಾಡುವೆವೆಂದು" ಎಂಬ ಸಾಲಿನಲ್ಲಿ 'ಪೂಜೆಮಾಡು' ಒಂದೇ ಪದವಾಗಿ ಸಂಯುಕ್ತಧಾತುವಾಗುತ್ತದೆ. "ಮರುಳುಮಾಡಾಕ ಹೋಗಿ ಮರುಳಸಿದ್ಧನ ನಾರಿ ಮರುಳಾಗ್ಯಾಳ ಜಂಗಮಯ್ಯಗ" ಎಂಬ ಬೇಂದ್ರೆಯವರ ಮಾತನ್ನೂ ನೋಡಬಹುದು; "ಇಡಿಯ ಕೊಡವನ್ನೆಲ್ಲ ಬರಿದುಮಾಡುವ ಆಸೆ" ಎಂಬ ಚಂದ್ರಶೇಖರ ಕಂಬಾರರ ನುಡಿಯನ್ನು ಉದಹರಿಸಬಹುದು. ಹೀಗೆಯೇ ಹಣ, ರಾಡಿ, ಕೀಟಲೆ, ಮುದ್ದೆ, ಸುರುಳಿ, ಕಳ್ಳತನ, ಮಣ್ಣು ಮುಂತಾದ ನಾಮಪದಗಳೊಡನೆ 'ಮಾಡು' ಸೇರಿಸಿ ಸಂಯುಕ್ತಧಾತುವನ್ನಾಗಿ ಮಾಡಿಕೊಳ್ಳುತ್ತೇವೆ.
ಹೀಗೆಯೇ ಸಂಸ್ಕೃತ ಶಬ್ದಗಳು ಹಾಗೂ ತದ್ಭವಗಳೊಡನೆ ಸೇರಿಸಿಯೂ ಇಂತಹ ಸಂಯುಕ್ತಧಾತುಗಳಳನ್ನು ಮಾಡಿಕೊಳ್ಳುತ್ತೇವೆ. "ಸ್ನಾನಮಾಡಿದರೆನ್ನ ದೇಹ ತಾಳದು ಎಂದು ಕಳ್ಳನಾಮವ ತಿದ್ದುವೆ" ಎಂಬ ಪುರಂದರದಾಸರ ಸಾಲಿನಲ್ಲಿನ 'ಸ್ನಾನಮಾಡು' ಇಂತಹ ರಚನೆ. "ಕಟ್ಟಿದ ಲಿಂಗವ ಕಿರಿದುಮಾಡಿ ಬೆಟ್ಟದ ಲಿಂಗವ ಹಿರಿದುಮಾಡುವ ಪರಿಯ ನೋಡ!" ಎಂಬ ಅಂಬಿಗರ ಚೌಡಯ್ಯ ಮಾತಿನಲ್ಲಿ ಇಂತಹ ರಚನೆಯಿದೆ. ದಾನ, ಕರ್ಮ, ಕೃತ್ಯ, ಚೇಷ್ಟೆ ಮುಂತಾದ ಸಂಸ್ಕೃತದ ನಾಮಪದಗಳ ಜೊತೆ 'ಮಾಡು' ಸೇರುತ್ತದೆ. ಹೀಗೆಯೇ ತದ್ಭವಗಳ ಜೊತೆ ಕೂಡ. "ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮೋಸಮಾಡಿ" ಎಂಬ ಕನಕದಾಸರ ಮಾತು (ಮೋಸ <ಮೋಷ), "ಹೆಣ ಹೊತ್ತು ಮಸಣ ಮುಟ್ಟಿಸಿ ಸುಟ್ಟು ಬೂದಿಮಾಡಿ" ಎಂಬ ಗಂಗಾಧರ ಚಿತ್ತಾಲರ ಸಾಲು (ಬೂದಿ<ಭೂತಿ) ಮುಂತಾದುವನ್ನು ನೋಡಬಹುದು. ಹೀಗೆಯೇ ಕತೆ (ಕಥಾ), ಜಾತ್ರೆ (ಯಾತ್ರಾ), ಹಬ್ಬ (ಪರ್ವನ್) ಮುಂತದ ಶಬ್ದಗಳಿಗೂ ಮಾಡು ಸೇರುತ್ತದೆ.
ಇತರ ಅನ್ಯಭಾಷಾ ಶಬ್ದಗಳಿಗೂ ಹಲವೆಡೆ ಮಾಡು ಸೇರಿ ಧಾತುವಾಗುತ್ತದೆ. ಇಂಗ್ಲಿಷ್‍ನ ಕೆಲವು ನಾಮಪದಗಳಿಗೆ ಮಾಡು ಸೇರುವ ಉದಾಹರಣೆಗಳನ್ನು ನೋಡೋಣ: "ಜೋಕ್ ಮಾಡಿ ಪೀಡಿಸ್ತಾನೆ ಕಣೆ, ಹಿತವಾಗಿರತ್ತೆ" ಎಂಬ ನಿಸಾರ್ ಅಹಮದ್ರ ವಾಕ್ಯದಲ್ಲಿನ 'ಜೋಕ್ ಮಾಡು'; "ಆಗಾಗ ಸುಣ್ಣ ಬಣ್ಣ ಹೊಡೆದು ರಿಪೇರಿ ಮಾಡಿದರೆ ಇನ್ನರ್ಧ ಶತಮಾನ ಗ್ಯಾರಂಟಿ" ಎಂಬ ಜಿಎಸ್ಎಸ್ ಅವರ ಸಾಲಿನಲ್ಲಿರುವ 'ರಿಪೇರಿಮಾಡು' ಇಂಥವುಗಳು. ಹೀಗೆಯೇ ಐರನ್‍ಮಾಡು, ಪರ್ಮಿಟ್ ಮಾಡು, ಸ್ಟಡಿಮಾಡು (ಇಂಥವು ಧಾತುಗಳೂ ಹೌದು) ಇತ್ಯಾದಿ. ಇಂಗ್ಲಿಷ್‍ನ ಧಾತುಗಳಿಗೂ ಮಾಡು ಸೇರುತ್ತದೆ: ಟೈಪ್ ಮಾಡು, ಡ್ರೈವ್ ಮಾಡು, ಕಂಡಕ್ಟ್ ಮಾಡು, ಸರ್ವ್‍ ಮಾಡು ಇತ್ಯಾದಿ. ಅರೆಬಿಕ್, ಪರ್ಷಿಯನ್, ಉರ್ದುವಿನಂತಹ ಭಾಷೆಗಳಿಂದ ಬಂದ ನಾಮಪದಗಳಿಗೂ ಮಾಡು ಸೇರಿ ಸಂಯುಕ್ತಧಾತುವಾಗುತ್ತದೆ: "ನನ್ನೆದುರಿನಲ್ಲೇ ತನಿಖೆ ಮಾಡುವ ಕ್ಷಣವನ್ನ ಹುಸಿನಗುತ್ತ ಎದುರಿಸುವುದಿದೆಯಲ್ಲ" (ತನಿಖೆ<ತನಕೀಹ್, ಅರೆಬಿಕ್); "ಬಿರಿಯಾನಿಯ ಮೆಹರುಬಾನಿ ಮಾಡಿ ಕೈಯ ಜೋಡಿಸುತ್ತ" (ಮೆಹರುಬಾನಿ<ಮೆಹರ್ಬಾನಗಿ, ಪರ್ಷಿಯನ್) ಮುಂತಾದ ನಿಸಾರ್ ಅಹಮದ್ ಅವರ ಕವನದ ಸಾಲುಗಳನ್ನು ನೋಡಬಹುದು. ಹೀಗೆಯೇ ಜುಲುಮೆಮಾಡು, ಕಬ್ಜಮಾಡು, ಮನ್ನಾ ಮಾಡು, ವಸೂಲುಮಾಡು ಮುಂತಾದ ಹಲವಾರು ಉದಾಹರಣೆಗಳನ್ನು ಕೊಡಬಹುದು. ಈಗ ಹೇಳಿ, 'ಮಾಡು'ವಿಲ್ಲದೆ ಒಂದು ದಿನವಾದರೂ ಕನ್ನಡವನ್ನು ಮಾತನಾಡಬಹುದೇ? ಟ್ರೈ ಮಾಡಿ ನೋಡಿ.
=====
=====
ಮಾಟ: ಇದು ಮಾಡು ಎಂಬ ಕ್ರಿಯಾಪದದ ನಾಮರೂಪ. ಅಂದರೆ ಇದರರ್ಥ ಮಾಡಿದುದು, ಕೆಲಸ ಎಂದು. ಮಲಯಾಳಂನಲ್ಲಿ ಮಾಟ್ಟಂ ಎಂದೂ ತುಳುವಿನಲ್ಲಿ ಮಾಟ ಎಂಬ ರೂಪದಲ್ಲಿಯೂ ಈ ಶಬ್ದವಿದೆ. ಮೂಲವಾದ ಕೆಲಸ ಎಂಬರ್ಥದಲ್ಲಿ 'ಕರ್ಣಾಟಕ ಕಾದಂಬರಿ'ಯಲ್ಲಿ ಈ ಶಬ್ದದ ಪ್ರಯೋಗವಿದೆ: "ನುಡಿಯೊಂದು ಮಾಟವೊಂದು ಎನಿಸಿದ ಮಾನವಂಗೆ". ಪಂಪನ 'ಆದಿಪುರಾಣ'ದಲ್ಲಿ ಇದಕ್ಕೆ ನಿರ್ಮಿತಿ, ರಚನೆ ಎಂಬ ಅರ್ಥವಿದೆ: "ಲಲಿತೋನ್ನತ ಮಣಿಮಯ ಮಾಟದಂದದಮದು ಪಲವುಂ ದೇಸೆಯ ಮಾಟದಂದಂ". ಪಂಪನ 'ಆದಿಪುರಾಣ'ದಲ್ಲಿ "ಮಾಟದ ಕುರುಳ್' ಎಂಬಲ್ಲಿಯೂ ನಾಗಚಂದ್ರನ 'ಪಂಪರಾಮಾಯಣ'ದಲ್ಲಿನ "ಮಾಟಕೂಟಂಗಳಿಂ ನವರತ್ನೋಪಲ ಕರ್ಮದಿಂ" ಎಂಬ ವಾಕ್ಯಖಂಡದಲ್ಲಿಯೂ ಈ ಶಬ್ದಕ್ಕೆ ಸುಂದರವಾದ ಎಂಬ ಅರ್ಥ ಬಂದಿದೆ.
ಮಾಡಿದುದು ಎಂದರೆ ಸಹಜವಲ್ಲದ್ದು, ಅಂದರೆ ಕೃತಕವಾದುದು ಎಂಬರ್ಥವೂ ಈ ಶಬ್ದಕ್ಕೆ ಪ್ರಾಪ್ತವಾಯಿತು. ನಯಸೇನನು ತನ್ನ 'ಧರ್ಮಾಮೃತ'ದಲ್ಲಿ "ಮಾಟದ ಮುಡಿಯಂತೆ ಕಟ್ಟಿದ ಪಲ್ಲಿನಂತೆ ಪೀಲಿಯ ಕಣ್ಣಂತೆ" ಎಂಬ ವಾಕ್ಯವನ್ನು ಬರೆಯುತ್ತಾನೆ. 'ಪಂಪರಾಮಾಯಣ'ದಲ್ಲಿ ಈ ಶಬ್ದವು ಕಣ್ಕಟ್ಟು, ಮಾಯೆ ಎಂಬರ್ಥದಲ್ಲಿಯೂ ಬಳಕೆಗೊಂಡಿದೆ: "ಭವದೀಯ ಪ್ರಸಾದದಿಂ ಎನಗೆ ಬಲ್ವಲಮಪ್ಪ ಬವರಮಿಲ್ಲದಾವನಾನುಮೊರ್ವಂ ಮಾಯಾವಿಯ ಮಾಟಮಕ್ಕುಂ"
ಕ್ಷುದ್ರದೇವತೆಯ ಸಹಾಯದಿಂದ ತನ್ನ ಶತ್ರುಗಳಿಗೆ ಮಾಡಿಸುವ ವಾಮಾಚಾರ ಅಥವಾ ಕೇಡುಗೆಲಸವನ್ನು ಮಾಟ ಅಥವಾ ಅಭಿಚಾರ ಎಂಬ ಮಾತಿನಿಂದ ಕರೆಯುತ್ತಿದ್ದರು. ಕನಕಸ್ವಾಮಿಯೆಂಬುವನಿಂದ ಪಾಂಡವರ ವಿರುದ್ಧ ದುರ್ಯೋಧನನು ಅಭಿಚಾರ ಮಾಡಿಸಿದ ಪ್ರಸಂಗ 'ಪಂಪಭಾರತ'ದಲ್ಲಿದೆ. ಮಾಟಮಾಡುವವನು 'ಮಾಟಗಾರ'; ಅಂಥ ಹೆಂಗಸು ಮಾಟಗಾರ್ತಿಯ ಉಲ್ಲೇಖ ಮಡಿವಾಳ ಮಾಚಯ್ಯನ ವಚನವೊಂದರಲ್ಲಿದೆ. ಮಾತಿನಿಂದಲೋ, ಒನಪು ವಯ್ಯಾರಗಳಿಂದಲೋ ಆಕರ್ಷಣೆ ಮಾಡಬಲ್ಲವರನ್ನೂ 'ಮಾಟಗಾರ' 'ಮಾಟಗಾತಿ' ಎಂಬ ಮಾತುಗಳಿಂದ ಕರೆಯುವುದು ರೂಢಿ.
=====
ಮಾವು: 'ಹಣ್ಣುಗಳ ರಾಜ' ಎನಿಸಿಕೊಂಡ ಮಾವು ಎಲ್ಲ ದ್ರಾವಿಡ ಭಾಷೆಗಳಳ್ಲೂ 'ಮಾ' ಇಂದಲೇ ಆರಂಭಗೊಳ್ಳುತ್ತದೆ. ಪಂಪನಿಗೆ ಚಿಗುರಿದ ಮಾವು ಎಂದರೆ ತುಂಬ ಇಷ್ಟ. ಸುಂದರ ಕಾವ್ಯವೆಂದರೆ "ಎಳಮಾವು ಕೆಂದಳಿರ ಪೂವಿನ ಬಿಣ್ಪೊಱೆಯಿಂ ಬಳಲ್ದು ತುಂಬಿಗಳಿನೆ ತುಂಬಿ ಕೋಗಿಲೆಯೆ ಬಗ್ಗಿಸೆ ಸುಗ್ಗಿಯೊಳ್ ಒಪ್ಪುವಂತೆ" ಇರುತ್ತದಂತೆ ('ಪಂಪಭಾರತ'). ಮಾವಿನ ಕಾಯಿಯೇ ಮಾಂಗಾಯ್ ("ಪೂವಂ ಮಾಂಗಾಯಂ .. .. ಒಲವಿಂ ತೋಂಟಿಗಂ ಕೊಟ್ಟನೊರ್ವಂ" - ಆಂಡಯ್ಯನ 'ಕಬ್ಬಿಗರ ಕಾವ').  ಮಾವಿನ ಚಿಗುರು 'ಮಾಂಗೊನರ್' ("ಮಾಂಗೊನರ ರಸಮಂ .. .. ಉಂಡ ಗಂಡುಗೋಗಿಲೆಖ ಲೀಲಾವತಿ"). 'ಮಾವಿನ ಕೋಡು' ಎಂದರೆ ಮಾವಿನ ಕೊನೆ, ಎಲ್ಲ ಶುಭ ಸಂದರ್ಭಗಳಲ್ಲೂ ಎಲೆಗಳುಳ್ಳ ಕೊನೆ ಬಳಕೆಗೆ ಬರುವಂಥದು. "ಅಭಿಷೇಕಂ ಮಾಡುವರೊಲ್ದುಂ ಮಾವಿನ ಕೋಡಿಂ" ಎಂಬುದು ಬ್ರಹ್ಮಶಿವನ 'ಸಮಯ ಪರೀಕ್ಷೆ'ಯಲ್ಲಿ ಉಕ್ತವಾದ ಪದ್ಧತಿ. ಮಾವಿನೆಲೆಯ ತುದಿಯನ್ನು ಪವಿತ್ರವಾದ ನೀರಲ್ಲದ್ದಿ ಪ್ರೋಕ್ಷಣೆ ಮಾಡುವ ಪದ್ಧತಿ ಈಗಲೂ ಇದೆ. ಮಾವಿನ ಕಸುಗಾಯಿಯೇ 'ಮಾಮಿಡಿ': "ಮಾಮಿಡಿಗಳಂ ತೆಗೆದು ಪಚ್ಚೆಸಾರಮನಿಕ್ಕಿ ಪೂಮಿಡಿಗಳೊಳ್ ತಳಿರ ಲಂಬಣಮನೆಳಲಿಕ್ಕಿ" - ನೇಮಿಚಂದ್ರನ 'ಲೀಲಾವತಿ').
ಹದಿನಾರನೆಯ ಶತಮಾನಕ್ಕೆ (ಅಂದರೆ ಕಸಿ ಮಾಡುವ ವಿಧಾನ ಬರುವ) ಮುಂಚೆ ನಮ್ಮಲ್ಲಿದ್ದುದು ಹುಳಿಮಾವು ಮಾತ್ರ; ಅದನ್ನು ಸಾವಿರ ವರ್ಷದ ಹಿಂದೆ ಹುಳಿಗಾಗಿ ಬಳಸುತ್ತಿದ್ದರು (ಏಕೆಂದರೆ ಹುಣಿಸೆ ಆಗ ಈ ದೇಶದಲ್ಲಿರಲಿಲ್ಲ), ಅದಕ್ಕೋ ಏನೋ ಸಂಸ್ಕೃತದಲ್ಲಿ ಮಾವು ಎಂಬುದನ್ನು 'ಆಮ್ರ' ಎಂದು ಕರೆಯುತ್ತಾರೆ ಎಂಬುದು ಬಿಜಿಎಲ್ ಸ್ವಾಮಿಯವರ ವಾದ. ಆದರೆ ನಮ್ಮ ಪ್ರಾಚೀನ ಕಾವ್ಯಗಳಲ್ಲಿ ಸಿಹಿಮಾವಿನ ಉಲ್ಲೇಖವಿದೆ: "ತನಿವಣ್ಣಾಗಿರ್ದುದು ಇಮ್ಮಾವು ಕಳ್ತಲಿಸಿದತ್ತೆಳವಳ್ಳಿ" ಎಂಬುದು ಪಂಪನ 'ಆದಿಪುರಾಣ'ದ ಮಾತು. (ಇನಿದು ಮಾವು=ಇಮ್ಮಾವು)
ಮಾವಿನ ಕಾಯಿಯ ಆಕಾರದ ಆಭರಣಗಳನ್ನೂ ಅದೇ ಹೆಸರಿನಿಂದ ಕರೆಯುತ್ತಿದ್ದರು ("ಚೆಂಬೊನ್ನ ಮಾಂಗಾಯ ಗೊಂಚಲ್ಗಳ" (ಚೆಂಬೊನ್=ಚಿನ್ನ) 'ಲೀಲಾವತಿ'. ಹಳಗನ್ನಡ ಕಾವ್ಯಗಳಲ್ಲಿ ಮಾವಿನ ಮರಕ್ಕೆ ಹತ್ತಿದ ಮಲ್ಲಿಗೆಯ ಬಳ್ಳಿ ನಲ್ಲನಲ್ಲೆಯರ ಸಂಕೇತ.
=====
ಮೀನು: ಇದೊಂದು ದ್ರಾವಿಡ ಪದ; ಪ್ರಮುಖವಾದ ದ್ರಾವಿಡ ಭಾಷೆಗಳಲ್ಲೆಲ್ಲ 'ಮೀನ್' ಎಂಬ ರೂಪವೇ ಇದೆ. ಇದೊಂದು ಜಲಚರ. ಇದು ದ್ರಾವಿಡ ಭಾಷಾ ವರ್ಗದಿಂದ ಸಂಸ್ಕೃತಕ್ಕೆ ಹೋದ ಒಂದು ಶಬ್ದವೆಂದು ಕಾಲ್ಡ್‍ವೆಲ್ ಅಭಿಪ್ರಾಯಪಡುತ್ತಾರೆ. 'ಮೀಂಗುಲಿ' ಅಥವಾ 'ಮೀಂಗುಲಿಗ' ಎಂದರೆ ಮೀನು ಹಿಡಿಯುವವನು, ಬೆಸ್ತ. ಮೀನ್+ಕುಲಿಗ (ಮೀನನ್ನು ಕೊಲ್ಲುವವನು, ಹಿಡಿಯುವವನು) "ಮೀಂಗುಲಿಗರ್ ಬಲೆಯಂ ತೆಗೆದು ನೋಡಿ" ಎಂಬುದು ದುರ್ಗಸಿಂಹನ 'ಪಂಚತಂತ್ರ'ದ ವಾಕ್ಯ. 'ಮೀಂಗುಲಿಗೆ' ಎಂದರೆ ಬೆಸ್ತ ಹೆಂಗಸು ("ವ್ಯಾಸನ ತಂದೆ ಮೀಂಗುಲಿಗೆಯೊಳ್" - ಬ್ರಹ್ಮಶಿವನ 'ಸಮಯ ಪರೀಕ್ಷೆ'). ಮೀನನ್ನು ತಿನ್ನುವ ಪಕ್ಷಿಯೇ 'ಮೀಂಗುಲಿಗವಕ್ಕಿಕ'. "ಮೀಂಗುಲಿಗವಕ್ಕಿ ಕೊಳದೊಳ್ ಮೀಂಗೆಱಗುವ ತೆಱದಿನೆಱಗಿ" ಎಂಬ ಮಾತು ರನ್ನನ 'ಗದಾಯುದ್ಧ'ದಲ್ಲಿ ಬರುತ್ತದೆ. 'ಮೀನಂಬುಳು' ಎಂಬ ಶಬ್ದವನ್ನು 'ಅನಂತನಾಥಪುರಾಣ'ದಲ್ಲಿ ಬಕಪಕ್ಷಿ ಎಂಬರ್ಥದಲ್ಲಿ ಬಳಸಲಾಗಿದೆ. 'ಮೀಂಚುಳ್ಳಿ' ಮೀನನ್ನು ಹಿಡಿದು ತಿನ್ನುವ ವಿಶಿಷ್ಟ ಹಕ್ಕಿಗೆ (ಕಿಂಗ್‍ಫಿಶರ್) ಇರುವ ಹೆಸರು. ಮೀನಿನ ಮಾಂಸವನ್ನು 'ಸುಕುಮಾರ ಚರಿತೆ' ಯಲ್ಲಿ 'ಮೀಂಬೊಲಸು' ಎಂದಿದೆ ("ಮೀಂಬೊಲಸು ನಾರ್ಪ ಮೆಯ್ಗಂ"). ಮೀನನ್ನು ಹಿಡಿಯಲು ಬಳಸುವ ಸಾಧನವೇ 'ಮೀನ ಗಾಳ'. ಆಕರ್ಷಣೆಗೊಳಗಾಗು ಎಂಬರ್ಥದಲ್ಲಿ 'ಮೀನು ಗಾಳಕ್ಕೆ ಬಿತ್ತು' ಎಂಬ ನಾಣ್ಣುಡಿಯನ್ನು ಬಳಸುವುದು ರೂಢಿ.
ಮೀನ ಶಬ್ದವು ಸಂಸ್ಕೃತದಲ್ಲಿಯೂ ಬಳಕೆಯಲ್ಲಿದ್ದು ಬಹುತೇಕ ಸಮಾಸಗಳಲ್ಲಿ ಮಾತ್ರ ಬರುತ್ತದೆ. 'ಮೀನ' ಎಂಬುದು ದ್ವಾದಶ ರಾಶಿಗಳಲ್ಲೊಂದು. ಅನುಮಾನ ಪಡುವುದನ್ನು 'ಮೀನ ಮೇಷ ಎಣಿಸು' ಎಂಬುದು ಕನ್ನಡದ ನುಡಿಗಟ್ಟು. ಮೀನಕೇತು ಎಂದರೆ ಮೀನಿನ ಗುರುತಿನ ಬಾವುಟ(ವುಳ್ಳವನು) ಎಂದರೆ ಮನ್ನಥ. ("ಮೀನಕೇತುವೆತ್ತಿಸಿದ ಸಮುಲ್ಲಸ ಝಷಪತಾಕೆ"  ಅಗ್ಗಳನ 'ಚಂದ್ರಪ್ರಭಪುರಾಣ'). ಮೀನಧ್ವಜ, ಮೀನಕೇತನ, ಮೀನಾಂಕ ಮುಂತಾದ ಶಬ್ದಗಳೆಲ್ಲ ಇದೇ ಅರ್ಥದವು. ಮೀನಿನಾಕಾರದ ಕಣ್ಣುಳ್ಳವಳು ಎಂಬರ್ಥದಲ್ಲಿ ಸುಂದರಿಯನ್ನು 'ಮೀನಾಕ್ಷಿ' 'ಮೀನಲೋಚನೆ' 'ಮೀನನೇತ್ರೆ' ಮುಂತಾದ ಶಬ್ದಗಳಿಂದ ಕವಿಗಳು ವರ್ಣಿಸುತ್ತಾರೆ.
=====
ಮುತ್ತುಗ: ಇದೊಂದು ಮರ; ಅಗಲವಾದ ಎಲೆಗಳಿಂದಲೂ ಕಡುಗೆಂಪು ಹೂಗಳಿಂದಲೂ ಕೂಡಿರುವುದು. ಇದು ದ್ರಾವಿಡ ಪದ: ಇದನ್ನು ಕನ್ನಡದಲ್ಲಿ ಮುತ್ತ, ಮುತ್ತಕ, ಮುತ್ತಲ, ಮುತ್ತಲು, ಮುತ್ತುಕ ಮುಂತಾದ ಹೆಸರುಗಳಿಂದಲೂ ಕರೆಯುವ ರೂಢಿಯಿದೆ. ತಮಿಳಿನಲ್ಲಿ ಈ ಮರವನ್ನು ಮರುಕ್ಕು ಎಂದೂ, ಮಲಯಾಳಂನಲ್ಲಿ ಮುರಿಕ್ಕು ಎಂದೂ, ತೆಲುಗಿನಲ್ಲಿ ಮೋದುಗ, ಮ್ರೋದುಗು, ಮೋದುವು ಎಂದೂ, ತುಳುವಿನಲ್ಲಿ ಮುತ್ತಕ ಎಂದೂ ಕರೆಯುತ್ತಾರೆ. ಸಂಸ್ಕೃತದಲ್ಲಿ ಈ ಮರವನ್ನು ಪಲಾಶ ಎಂದೂ ತಾಪಿಚ್ಛ ಎಂದೂ ಕರೆಯುತ್ತಾರೆ. "ಮುೞ್ತುಗಮೆಂದು ಒಂದು ಮರಂ" ಎಂದು 'ಶಬ್ದಮಣಿದರ್ಪಣ'ದಲ್ಲಿ ಹೇಳಿದ್ದರೆ, 'ಅಭಿಧಾನ ವಸ್ತುಕೋಶ'ದಲ್ಲಿ ಖಪಲಾಶಮಾಖ್ಯಂ ಮುತ್ತಂ" ಎಂದಿದೆ. ಮುಳ್ಳುಗಳಿರುವ ಈ ಮರದ ಪ್ರಭೇದವೇ ಮುಳ್ಮುಳ್ತುಗ ಅಥವಾ ಮುಳ್ಮುತ್ತುಗ. "ಸುತ್ತಲುಂ ಪೂತ ಮುಳ್ಮುಳ್ತುಗದ ಮರಂಗಳೊಳಂ" ಎಂಬುದು 'ಕಬ್ಬಿಗರ ಕಾವ'ದ ಮಾತು.
ಆಗಲೇ ಹೇಳಿದಂತೆ ಈ ಮರದ ಹೂಗಳು ಕಡುಗೆಂಪಿನ ದೊಡ್ಡ ಗಾತ್ರದವು. ಇಂತಹ ಅಸಂಖ್ಯಾತ ಹೂಗಳು ಉದುರಿದ್ದುದನ್ನು ಕವಿ ಜನ್ನನು ತನ್ನ 'ಯಶೋಧರ ಚರಿತೆ'ಯಲ್ಲಿ (ಮಾರಿಬಲಿಯ ವರ್ಣನೆಯ ಹಿನ್ನೆಲೆಯಲ್ಲಿ) ವಸಂತನು ಶಿಶಿರನನ್ನು ಹಿಡಿದು "ಕುಸುರಿದದಡಗಿನಂತೆವೊಲೆಸೆದುವು ತದ್ವನದೊಳುದಿರ್ದ ಮುತ್ತದ ಮುಗುಳ್ಗಳ್" ಎಂದು ವರ್ಣಿಸುತ್ತಾನೆ. ಮುತ್ತುಗದ ಹೂಗಳು ಕತ್ತರಿಸಿದ ಮಾಂಸದ ತುಂಡುಗಳಂತಿದ್ದುವಂತೆ!
ಈ ಮರದ ಎಲೆಗಳೂ ಅಗಲವಾಗಿರುತ್ತವೆ, ಮಂದವಾಗಿರುತ್ತವೆ, ಸಾಮಾನ್ಯವಾಗಿ ಮೂರೆಲೆಗಳು ಒಟ್ಟಿಗೇ ಇರುತ್ತವೆ, ಈ ಎಲೆಗಳನ್ನು ಒಣಗಿಸಿ ಬೇಕಾದಾಗ ನೀರಲ್ಲದ್ದಿ ಮೃದು ಮಾಡಿಕೊಂಡು ಹಂಚಿಕಡ್ಡಿಯಿಂದ ಹಚ್ಚಿ ದೊಡ್ಡದಾದ ಊಟದೆಲೆಗಳನ್ನು ಮಾಡುವ ರೂಢಿಯಿದೆ. ಈ ಎಲೆಗಳನ್ನು ಇಸ್ತ್ರೆಲೆಗಳೆಂದೂ ಕರೆಯುತ್ತಾರೆ (ಇಸ್ತ್ರ+ಎಲೆ). ತೆಲುಗಿನಲ್ಲಿ 'ಇಸ್ತ್ರಾಕು' ಎಂಬ ಶಬ್ದವಿದೆ. ಇಸ್ತ್ರ ಎಂಬುದು ವಿಸ್ತರ ಎಂಬ ಸಂಸ್ಕೃತ ಪದದ ವ್ಯತ್ಯಸ್ತ ರೂಪವಿರಬಹುದು ಎಂದು ಊಹಿಸಲಾಗಿದೆ. ಮುಂಜಿಯ ಕಾಲದಲ್ಲಿ ವಟುವು ಮುತ್ತುಗದ ರೆಂಬೆಯನ್ನು ಹಿಡಿದುಕೊಳ್ಳುವ ಸಂಪ್ರದಾಯವಿದೆ.
=====
ಮೂಡಲಗಿರಿ: ಇದರಲ್ಲಿ ಎರಡು ಪದಗಳು ಸೇರಿವೆ ಗ ಮೂಡಲ ಮತ್ತು ಗಿರಿ; ಮೊದಲ ಶಬ್ದ ಅಚ್ಚಗನ್ನಡದ್ದಾದರೆ ಎರಡನೆಯದು ಸಂಸ್ಕೃತದ್ದು. ಮೂಡು ಎಂದರೆ ಹುಟ್ಟು, ಕಾಣಿಸಿಕೋ ಎಂದು ಅರ್ಥ. ಹೀಗಾಗಿ ಸೂರ್ಯ ಹುಟ್ಟುವ ದಿಕ್ಕನ್ನು ಮೂಡು ಎಂದು ಕರೆಯುವ ರೂಢಿ ಉಂಟಾಯಿತು. ಹತ್ತನೆಯ ಶತಮಾನದ ಕನ್ನಡ ಶಾಸನದಲ್ಲಿಯೇ ಇದರ ಪ್ರಯೋಗವಿದೆ. ಇದು ಮೂಡಣ್, ಮೂಡಲ್ ಎಂಬ ರೂಪಗಳನ್ನೂ ಪಡೆಯುತ್ತದೆ. ಕಮೂಡಣ್ಕಿ ಎಂಬ ಪ್ರಯೋಗ ಪಂಪಭಾರತದಲ್ಲಿಯೇ ದೊರೆಯುತ್ತದೆ. ಆ ದಿಕ್ಕಿಗೆ ಎದುರು ಅಥವಾ ಅಭಿಮುಖ ಎಂಬರ್ಥದಲ್ಲಿ ಮೂಡಮೊಗ ಎಂಬ ಪ್ರಯೋಗವೂ ಪಂಪಭಾರತದಲ್ಲಿಯೇ ಇದೆ. ಹಳಗನ್ನಡದ ವ್ಯಂಜನದಿಂದ ಕೊನೆಯಾಗುವ ಶಬ್ದಗಳು ಬರಬರುತ್ತ ಸ್ವರಾಂತ್ಯಗೊಳ್ಳುವುದಕ್ಕೆ ಅನುಗುಣವಾಗಿ ಮೂಡಲ್ ಎಂಬುದು ಮೂಡಲು ಎಂದಾಯಿತು. ಈ ರೂಪಗಳು ಹನ್ನೊಂದು ಹನ್ನೆರಡನೇ ಶತಮಾನದ ಕನ್ನಡ ಚಂಪೂ ಕಾವ್ಯಗಳಲ್ಲಿಯೇ ದೊರೆಯುತ್ತವೆ. ಈ ರೂಪಗಳಿಗೆ ಕಅಕಿ ಎಂಬ ಷಷ್ಠೀವಿಭಕ್ತಿ ಪ್ರತ್ಯಯ ಸೇರಿದರೆ ಮೂಡಣ, ಮೂಡಲ ಎಂಬ ರೂಪಗಳಾಗುತ್ತವೆ; ಎರಡರ ಅರ್ಥವೂ ಪೂರ್ವದಿಕ್ಕಿನ, ಪೂರ್ವದಿಕ್ಕಿಗೆ ಸೇರಿದ ಎಂದಾಗುತ್ತದೆ. ಮೂಡಲಗಿರಿ ಎಂದರೆ ಸೂರ್ಯ ಹುಟ್ಟುವ ದಿಕ್ಕಿನ ಬೆಟ್ಟ ಎಂದಾಗಬಹುದು; ಅಥವಾ ಪೂರ್ವದಿಕ್ಕು ಎಂಬ ಬೆಟ್ಟ ಎಂಬ ರೂಪಕವೂ ಆಗಬಹುದು. ಸೂರ್ಯೋದಯವನ್ನು ರೇಖೆಗಳಲ್ಲಿ ಚಿತ್ರಿಸುವಾಗ ಎರಡು ಬೆಟ್ಟಗಳ ನಡುವೆ ಸೂರ್ಯ ಕಾಣಿಸಿಕೊಳ್ಳುವಂತೆ ಬರೆಯುತ್ತಾರಲ್ಲವೇ! ಮೂಡಲಗಿರಿ ಎಂಬರ್ಥದಲ್ಲಿ ಮೂಡುವೆಟ್ಟ, ಮೂಡುವೆಟ್ಟು ಎಂಬ ಎಂಬ ಶಬ್ದಗಳೂ ಮುಂದೆ ಬಳಕೆಯಾಗಿವೆ.
ಮೂಡಲಗಿರಿಯಪ್ಪ, ಮೂಡಲಪ್ಪ, ಮೂಡಲಯ್ಯ ಎಂಬಿವು ಈಗಲೂ ಕನ್ನಡ ನಾಡಿನಲ್ಲಿ ಸಾಮಾನ್ಯವಾದ ವ್ಯಕ್ತಿಯ ಅಂಕಿತನಾಮ. ಮೂಡಲಗಿರಿ ಎಂಬುದಕ್ಕೆ ಅಪ್ಪ ಎಂಬ ಸಂಬಂಧವಾಚಿ ಸೇರಿದೆ. ಅಪ್ಪ ಎಂದರೆ ತಂದೆ, ಒಡೆಯ ಎಂಬ ಅರ್ಥ. ಹೀಗಾಗಿ ಮೂಡಲಗಿರಿಯಪ್ಪ ಎಂದರೆ ಆ ದಿಕ್ಕಿನ ಒಡೆಯನಾದ ಸೂರ್ಯ ಎಂದಾಗುತ್ತದೆ. ಈ ಬಗೆಯ ರಚನೆ ಕನ್ನಡದಲ್ಲಿ ಸಾಮಾನ್ಯ. ಎಡೆಯೂರು ಪ್ರಸಿದ್ಧ ಕ್ಷೇತ್ರ; ಅದರ ಒಡೆಯನಾದ ವ ಎಡೆಯೂರಪ್ಪ; ಮೈಲಾರ ಎಂಬ ಊರಿನ ಒಡೆಯನಾದ ದೈವ ಮೈಲಾರಪ್ಪ ಹೀಗೆ.
======
ಮೈದುನ:  ಹಿಂದೆ ಈ ಪದವನ್ನು ಮೆಯ್ದುನ, ಮಯ್ದುನ, ಮಯಿದುನ ಎಂದು ಮುಂತಾಗಿ ಬರೆಯುತ್ತಿದ್ದುದು ರೂಢಿ. ಇದೊಂದು ದ್ರಾವಿಡ ಪದ: ತಮಿಳಿನಲ್ಲಿ ಮೈತುನನ್, ಮಚ್ಚಾನ್. ಮಚ್ಚುನನ್ ಎಂಬ ರೂಪಗಳಲ್ಲಿಯೂ, ಮಯಲಯಾಳಂನಲ್ಲಿ ಮಚ್ಚುನನ್, ಮಚ್ಚಿನನ್, ಎಂದೂ, ತೆಲುಗಿನಲ್ಲಿ ಮೇನ ಎಂದೂ, ತುಳುವಿನಲ್ಲಿ ಮೈತಿನೆ ಅಥವಾ ಮಯದಿನೆ ಎಂದೂ ರೂಪಗಳನ್ನು ತಾಳುತ್ತದೆ. ಇದರ ಅರ್ಥ ತಂಗಿಯ ಗಂಡ, ಸೋದರಮಾವನ (ತನಗಿಂತ ಚಿಕ್ಕವನಾದ) ಮಗ, ಗಂಡನ ಅಥವಾ ಹೆಂಡತಿಯ ತಮ್ಮ ಎಂಬಿವುಗಳು. ತೆಲುಗಿನಲ್ಲಿ 'ಮರದಿ' ಎಂಬುದು ಈ ಸಂಬಂಧವನ್ನು ಸೂಚಿಸುವ ರೂಢಿಯ ಶಬ್ದ. "ಕಾಶ್ಯಪಿಯೆಂಬೊಳೆನಗೆ ತಂಗೆಯುಮಿಲ್ಲ ಸೋಮಶರ್ಮನೆಂಬೊಂ ಮಯ್ದುನನುಮಿಲ್ಲ" ಎಂಬ ವಾಕ್ಯ 'ವಡ್ಡಾರಾಧನೆ'ಯ 'ಸುಕುಮಾರಸ್ವಾಮಿಯ ಕಥೆ'ಯಲ್ಲಿ ಸಿಕ್ಕುತ್ತದೆ. "ಎನ್ನ ಮೆಯ್ದುನನಪ್ಪ ವಜ್ರಬಾಹುಗಂ ಎನ್ನ ತಂಗೆಯಪ್ಪ ವಸುಂಧರೆಗಂ" ಎಂಬುದು ಪಂಪನ 'ಆದಿಪುರಾಣ'ದ ಮಾತು. ಮಇದು ಎಂಬ ರೂಪವನ್ನೂ ಕೆಲವು ಶಾಸನಗಳಲ್ಲಿ ಕಾಣಬಹುದು. "ಸಹೋದರಿ ಗಿರಿಜೆ ಮೈದುನನು ಶಂಕರನು ಸುರರೆಲ್ಲ ಕಿಂಕರರು" ಎಂಬ ಮಾತು  ಕನಕದಾಸನ 'ಹರಿಭಕ್ತಿಸಾರ'ದಲ್ಲಿದೆ. ಸಾಮಾನ್ಯರ ನುಡಿಯಲ್ಲಿ ಇದು ಮೈದ ಎಂಬ ರೂಪವನ್ನೂ ಪಡೆಯುತ್ತದೆ. 'ಬಾವಮೈದುನ', ಎಂಬುದು ಸಾಮಾನ್ಯರ ಮಾತಿನಲ್ಲಿ ಬಾಮೈದ' ಎಂದಾಗುತ್ತದೆ.
ಮೆಯ್ದುನಿಸು ಎಂಬ ಅಪರೂಪದ ರೂಪವು ಮೈದುನನ ಜೊತೆಯ ಸಲಿಗೆಯಿಂದ ನಡೆದುಕೊಳ್ಳುವುದನ್ನು ಸೂಚಿಸುತ್ತದೆ. ನೇಮಿಚಂದ್ರನೆಂಬ ಕ್ರಿಶ. 1170 ರ ಕವಿಯ 'ಅರ್ಧನೇಮಿಪುರಾಣದ'ಲ್ಲಿ ಈ ವಾಕ್ಯ ದೊರೆಯುತ್ತದೆ: "ವಧು ಮೆಯ್ದುನಿಸುತುಮಡ್ಡಂ ಬಂದಳ್". ಇದರ ಭಾವನಾನ ರೂಪದಲ್ಲಿ ಕುಮಾರವ್ಯಾಸನು 'ಮೈದುನತನ' ಎಂಬ ಮಾತನ್ನು ಬಳಸುತ್ತಾನೆ. ಕರ್ಣನ ದುರ್ಯೋಧನನಿಷ್ಠೆಯ ಮನಸ್ಸನ್ನು ಒಡೆಯಲು ಬಂದ ಕೃಷ್ಣನು ಮೊದಲು "ಇನತನೂಜನ ಕೂಡೆ ಮೈದುನತನದ ಸರಸವನೆಸಗು"ತ್ತಾನಂತೆ.
=====
ರಾಜ: ಇದರ ಮೂಲ ಸಂಸ್ಕೃತ ರೂಪ ರಾಜನ್ ಎಂಬುದು. "ಅವನೀಪತಿ ರಾಜಂ ಪಾರ್ಥಿವಂ ನೃಪಂ ಕ್ಷತ್ರಿಯಂ ಜನಾಧಿಪಂ ಅರಸಂ" ಎಂದು ಮುಂತಾಗಿ ನಾಗವರ್ಮನ 'ಅಭಿಧಾನ ವಸ್ತುಕೋಶ'ವು ಸಮಾನಾರ್ಥಕಗಳನ್ನು ನೀಡುತ್ತದೆ. ರಾಜರಲ್ಲಿ ವಾರ್ಷಿಕ ವರಮಾನದ ಆಧಾರದಿಂದ ಸಾಮಂತ, ಮಾಂಡಲಿಕ, ರಾಜನ್, ಮಹಾರಾಜ, ಸ್ವರಾಟ್, ಸಮ್ರಾಟ್, ವಿರಾಟ್, ಸಾರ್ವಭೌಮ ಎಂಬ ಬಗೆಗಳನ್ನು ಕಶುಕ್ರನೀತಿಸಾರಕಿವು ಹೇಳುತ್ತದೆ. ಆದರೆ ಈ ವರ್ಗೀಕರಣವು ರೂಢಿಯಲ್ಲೇನೂ ಇರಲಿಲ್ಲ. ಪಂಪನ 'ಆದಿಪುರಾಣ'ದಲ್ಲಿ ಬಾಹುಬಲಿಯು ರಾಜಾಧಿರಾಜ ಎಂಬುದನ್ನು 'ಅಡಕಿಲ್ವೆಸರ್' (ಒಂದರ ಮೇಲೊಂದು ಪೇರಿಸಿದ ಹೆಸರು) ಎಂದು ಹಾಸ್ಯಮಾಡುತ್ತಾನೆ.
ರಾಜನನ್ನು ಸೃಷ್ಟಿಸುವಾಗ ದೇವರು ಅವನಲ್ಲಿ ಅಷ್ಟದಿಕ್ಪಾಲಕರ ಅಂಶಗಳನ್ನು ಸೇರಿಸಿರುವನೆಂದು ಮನು ಹೇಳುತ್ತಾನೆ. ರಾಜನಿಗಿರಬೇಕಾದ ಯೋಗ್ಯತೆಗಳೇ 'ರಾಜಲಕ್ಷಣ'; ನಾಲ್ಕು ಉಪಾಯಗಳು, ಐದು ಬಗೆಯ ತಂತ್ರಗಳು, ಮೂರು ಬಗೆಯ ಶಕ್ತಿಗಳು, ಚತುರಂಗಬಲ, ಸಪ್ತಾಂಗಗಳು - ಇವುಗಳ್ನು 'ವಿವೇಕ ಚಿಂತಾಮಣಿ'ಯು ರಾಜಲಕ್ಷಣಗಳೆಂದು ಕರೆಯುತ್ತದೆ. 'ರಾಜಸಭೆ' ಎಂದರೆ ರಾಜನು ಮಂತ್ರಿ ಮತ್ತಿತರ ಗಣ್ಯರ ಜೊತೆ ಸಮಾಲೋಚನೆ ಮಾಡುತ್ತಿದ್ದ ಸಭೆ; ಇದನ್ನು ಕನ್ನಡದಲ್ಲಿ ಒಡ್ಡೋಲಗ ಎನ್ನುತ್ತಿದ್ದರು. ರಾಜನ ಏಳು ಮೂಲಭೂತ ಆಧಾರಗಳನ್ನು ಬಂಧುವರ್ಮನ 'ಹರಿವಂಶಾಭ್ಯುದಯ'ವು ರಾಜ್ರಕೃತಿಗಳೆಂದು ಕರೆಯುತ್ತದೆ. ಅವುಗಳೆಂದರೆ, ಸ್ವಾಮಿ ಅಮಾತ್ಯ ಜನಪದ ದುರ್ಗ ದಂಡ ಕೋಶ ಮತ್ತು ಮಿತ್ರ. ಪಂಪನ 'ಆದಿಪುರಾಣ'ದಲ್ಲಿ ಒಳ್ಳೆಯ ರಾಜನಿರುವ ನಾಡನ್ನು 'ರಾಜನ್ವತಿ' ಎಂದೂ, ಹೆಸರಿಗೆ ಮಾತ್ರ ರಾಜನಿರುವ ನಾಡನ್ನು 'ರಾಜವತಿ' ಎಂದೂ ಕರೆದಿದೆ: "ರಾಜವತಿಯಕ್ಕುಮಲ್ಲದೆ ರಾಜನ್ವತಿಯಾಗದಲ್ತೆ ಧರೆ". ರಾಜನ ಅರಮನೆಯಿದ್ದು ಆಡಳಿಕೇಂದ್ರವಾಗಿರುವ ಪಟ್ಟಣವೇ 'ರಾಜಧಾನಿ'.
ಮುಖ್ಯವೆಂದು ಸೂಚಿಸುವೆಡೆಯಲ್ಲೆಲ್ಲ ರಾಜ ಎಂಬ ಪೂರ್ವಪದವನ್ನು ಸೇರಿಸುವುದು ರೂಢಿ: ರಾಜಬೀದಿ, ರಾಜಮರ್ಯಾದೆ, ರಾಜವೈಭವ ಇತ್ಯಾದಿ. ರಾಜ ಎಂಬುದಕ್ಕೆ ಚಂದ್ರ ಎಂಬ ಅರ್ಥವೂ ಇದೆ. ರಾಜಶೇಖರ (ಚಂದ್ರನನ್ನು ತೆಯಲ್ಲಿ ಧರಿಸಿರುವವನು, ಶಿವ) ಎಂಬುದು ಇದಕ್ಕೆ ಉದಾಹರಣೆ.
=====
ರೂಪಾಯಿ: ಇದು ಭಾರತದ ಒಂದು ನಾಣ್ಯ ಎಂಬುದು ಎಲ್ಲರಿಗೂ ಗೊತ್ತು. ಕನ್ನಡದಲ್ಲಿ ಇದನ್ನು ರೂಪಾಯಿ ಎಂದು ಕರೆಯುವಂತೆ, ಇದರ ವ್ಯತ್ಯಸ್ತ ರೂಪಗಳು ಇತರ ಭಾಷೆಗಳಲ್ಲಿ ಬಳಕೆಯಲ್ಲಿವೆ. ಉದಾಹರಣೆಗೆ ಹಿಂದಿಯಲ್ಲಿ ಇದನ್ನು ರೂಪ್ಯಾ, ರುಪಯ್ಯಾ ಎನ್ನುತ್ತಾರೆ, ಕೆಲವರು ಮಾತನಾಡುವಾಗ ರೂಪಾ ಎಂದಷ್ಟೇ ಉಚ್ಚರಿಸುತ್ತಾರೆ. ತಮಿಳು ಮಲಯಾಳಂ ಭಾಷಿಕರಲ್ಲಿ ಪದಮಧ್ಯದ ಪ ವರ್ಣವು ಬ ಎಂದು ಉಚ್ಚಾರವಾಗುವುದರಿಂದ ಇದು ರುಬಾ ಅಥವಾ ರೂಬಾ ಎಂದಾಗುತ್ತದೆ. ಇಂಗ್ಲಿಷಿನಲ್ಲಿ ಇದನ್ನು ರುಪೀ ಎಂದರು.
ಈ ಎಲ್ಲದರ ಮೂಲದಲ್ಲಿರುವುದು ಸಂಸ್ಕತದ 'ರೌಪ್ಯ' ಎಂಬ ಶಬ್ದ. ಅದರ ಅರ್ಥ ಬೆಳ್ಳಿ ಎಂದು. ಇದು ರೂಪ್ಯ ಎಂಬ ರೂಪದಲ್ಲಿಯೂ ಸಿಕ್ಕುತ್ತದೆ. ಬೆಳ್ಳಿಬೆಟ್ಟ ಎಂಬರ್ಥದಲ್ಲಿ ಹಿಮಾಲಯವನ್ನು ರೂಪ್ಯಾಚಲ ಎನ್ನುತ್ತಿದ್ದರು. ಹಿಂದಿನ ಕಾಲದಲ್ಲಿ ವಿವಿಧ ಲೋಹಗಳಿಂದ ಮಾಡಿದ ವಿವಿಧಾಕಾರದ ನಾಣ್ಯಗಳೇ ಬಳಕೆಯಲ್ಲಿದ್ದುದು. ಚಿನ್ನ ಬಹು ಬೆಲೆಬಾಳುವ ಲೋಹ, ಅದಾದನಂತರ ಬೆಳ್ಳಿ. ಈಚೆಗಿನ ಪ್ರಮಾಣೀಕೃತ ನಾಣ್ಯ ಎಂದರೆ ರೂಪಾಯಿಯೇ. ಪೈಸೆ ಬರುವ  ಮುಂಚೆ ಅದನ್ನು ಹದಿನಾರು ಭಾಗ ಮಾಡಿ ಒಂದೊಂದಕ್ಕೂ ಆಣೆ ಎನ್ನುತ್ತಿದ್ದರು; ಒಂದು ಆಣೆಗೆ ಹನ್ನೆರಡು ಕಾಸುಗಳು; ಹೀಗಾಗಿ ಒಂದು ರೂಪಾಯಿಗೆ ತೊಂಬತ್ತಾರು ಕಾಸುಗಳಾಗಿದ್ದವು. ಇವುಗಳಿಗೆ ಬೇರ ಬೇರೆಯೇ ಆಕಾರದ ಲೋಹಗಳ ನಾಣ್ಯಗಳಿದ್ದುವು. ಜೊತೆಗೆ ನಾಲ್ಕು ಆಣೆಗಳ ಪಾವಲಿ ಮತ್ತು ಎರಡು ಪಾವಲಿ ಬೆಲೆಯ ಎಂಟಾಣೆ ನಾಣ್ಯಗಳೂ ಇದ್ದವು. ಒಂದೆರಡು ದಶಕಗಳಿಂದ ಈಗಿನ ದಶಾಂಶ ಪದ್ಧತಿ ಜಾರಿಗೆ ಬಂದಿದೆ; ಒಂದು ರೂಪಾಯಿಗೆ ನೂರು ಪೈಸೆಗಳು. ಬಂದ ಹೊಸತರಲ್ಲಿ ಇದನ್ನು ನಯಾಪೈಸಾ ಎಂದೇ ಕರೆಯುತ್ತಿದ್ದರು.
ಬ್ರಿಟಿಷರು ನಮ್ಮನ್ನು ಆಳುತ್ತಿದ್ದಾಗ, ಕಳೆದ ಶತಮಾನದ ಮೊದಲಲ್ಲಿ ಅವರ ರಾಣಿ ವಿಕ್ಟೋರಿಯ. ಆಗ ಅವಳ ಚಿತ್ರವಿದ್ದ ಬೆಳ್ಳಿಯ ರೂಪಾಯಿಗಳು ಚಲಾವಣೆಯಲ್ಲಿದ್ದುವಂತೆ; ಒಂದು ತೊಲ ತೂಕದ ಅಪ್ಪಟ ಬೆಳ್ಳಿಯ ನಾಣ್ಯ ಅದು. ಬರಬರುತ್ತ ರೂಪಾಯಿಯ ಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತ ಅದರ ಲೋಹ, ತೂಕ, ಆಕಾರಗಳು ಬದಲಾಗುತ್ತ ಬಂದವು; ಜೊತೆಗೆ ಕಾಗದದ ನೋಟು ಕೂಡ ಬಂತು. ಕನ್ನಡದಲ್ಲಿ ರೂಪಾಯಿಯನ್ನು ಸೂಚಿಸಲು ರೂ ಎಂದು ಬರೆಯುವ ವಾಡಿಕೆಯಿದೆ; ಇಂಗ್ಲಿಷ್‍ನಲ್ಲಿ ಒಂದನ್ನು ಸೂಚಿಸುವಾಗ Re. ಎಂದೂ ಹೆಚ್ಚಿನದನ್ನು ಸೂಚಿಸುವಾಗ   Rs. ಎಂದೂ ಈಚಿನವರೆಗೆ ಬರೆಯುತ್ತಿದ್ದರು. ಈಚೆಗೆ ಭಾಷೆ ಯಾವುದೇ ಇರಲಿ ರೂಪಾಯಿಯನ್ನು ಸೂಚಿಸುವ ` ಎಂಬ ಏಕರೂಪದ ಸಂಕೇತವೊಂದನ್ನು ಭಾರತ ಅಂಗೀಕರಿಸಿ ಎಲ್ಲೆಡೆ ಬಳಕೆಯಲ್ಲಿದೆ.
=====
ವಚನ: ಇದೊಂದು ಸಂಸ್ಕೃತ ಶಬ್ದ, ಇದರ ಅರ್ಥ ಮಾತು ಎಂದು. ವಚ ಎಂದರೆ ಮಾತನಾಡುವ ಪಕ್ಷಿ, ಗಿಣಿ ಎಂಬರ್ಥವಿದೆ. ವಚಕ್ನಿ ಎಂಬುದು ಚೆನ್ನಾಗಿ ಮಾತನಾಡಬಲ್ಲವನನ್ನು ಸೂಚಿಸುತ್ತದೆ. ನುಡಿನಿಪುಣತೆಯನ್ನು ನಾಗಚಂದ್ರ ತನ್ನ 'ಮಲ್ಲಿನಾಥ ಪುರಾಣ'ದಲ್ಲಿ 'ವಚನಪ್ರೌಢಿ' ಎನ್ನುತ್ತಾನೆ. ವ್ಯಾಕರಣದಲ್ಲಿ ಇದು ಸಂಖ್ಯೆಯನ್ನು ಸೂಚಿಸುವ ಪಾರಿಭಾಷಿಕ ಶಬ್ದವಾಗಿದೆ: ಏಕವಚನ, ದ್ವಿವಚನ, ಬಹುವಚನ.
ಕನ್ನಡ ಚಂಪೂ ಕಾವ್ಯಗಳಲ್ಲಿ ಪದ್ಯಗಳ ನಡುವೆ ಬರುವ ಗದ್ಯವನ್ನು ವಚನ ಎಂದು ಕರೆಯುತ್ತಿದ್ದರು. ಹನ್ನೆರಡನೆಯ ಶತಮಾನದಲ್ಲಿ ಬಂದ ಬಸವಾದಿ ಶಿವಶರಣರು ರಚಿಸಿದ ಕೃತಿಗಳನ್ನು ವಚನ ಎಂಬ ಮಾತಿನಿಂದ ಸೂಚಿಸುವ ಪರಿಪಾಟ ವಚನಕಾರರಲ್ಲಿಯೇ ಕಾಣಬರುತ್ತದೆ. ನಮಗೆ ತಿಳಿದ ಮೊದಲ ವಚನಕಾರ ಜೇಡರ ದಾಸಿಮಯ್ಯನು 'ಆದ್ಯರ ವಚನ'ವನ್ನು ಉಲ್ಲೇಖಿಸುತ್ತಾನೆ. ಪ್ರಾಯಶಃ ಇದು ಹಿರಿಯ ಭಕ್ತರು ಆಡಿದ ಮಾತು ಎಂಬರ್ಥವನ್ನು ಹೊಂದಿದೆ. "ಎರಡೆಂಬತ್ತು ಕೋಟಿ ವಚನಗಳ ಹಾಡಿ ಹಾಡಿ ಹಲವ ಹಂಬಲಿಸಿತ್ತೆನ್ನ ಮನವು" ಎಂಬುದು ಅಲ್ಲಮನ ಮಾತು.. "ಆನು ಒಲಿದಂತೆ ಹಾಡುವೆ" ಎಂಬ ಬಸವಣ್ಣನ ಮಾತಿನಲ್ಲಿ ವಚನಗಳ ಹಾಡುವಿಕೆಯು ನಿರ್ದಿಷ್ಟತೆಯಿಂದ ಕೂಡಿರದೆ ಭಾವಸಂವಾದಿಯಾದುದು ಎಂಬ ಅರ್ಥವು ಸೂಚಿತವಾಗಿದೆ. ಸಿದ್ಧರಾಮನು "ವಚನಾನುಭವ, ವಾಗ್ರಚನೆಯಲ್ಲ" ಎನ್ನುತ್ತಾನೆ. ವಚನಗಳು ಅನುಭ(ಭಾ)ವದ ಅಭಿವ್ಯಕ್ತಿಯೇ ಹೊರತು, ಕೇವಲ ಮಾತಿನ ಜೋಡಣೆಯಲ್ಲ ಎಂಬ ಅರ್ಥ ಇಲ್ಲಿದ್ದಂತಿದೆ.
ವಚನ ಕೊಡು ಎಂಬುದು ಮಾತು ಕೊಡು ಎಂಬ ಅರ್ಥದಲ್ಲಿಯೂ ಬಳಕೆಯಲ್ಲಿದೆ. ಮಾತಿಗೆ ತಪ್ಪಿದವನನ್ನು 'ವಚನಭ್ರಷ್ಟ' ಎಂದೇ ಕರೆಯುತ್ತಾರೆ. ಮಾತಿನ ಮಲ್ಲ ಎಂಬರ್ಥದಲ್ಲಿ ಕುಮಾರವ್ಯಾಸನು 'ವಚನಶೂರ' ಎಂಬ ಶಬ್ದವನ್ನು ಬಳಸುತ್ತಾನೆ ("ವಚನಶೂರರು ನಾವು ಪಾವನಿಚಯವೇ ಭುಜಶೂರರು"). ಮಾತು ಕೊಡು ಎಂಬರ್ಥದಲ್ಲಿ 'ವಚನಿಸು' ಎಂಬ ಪ್ರಯೋಗವೂ ಕುಮಾರವ್ಯಾಸನಲ್ಲಿಯೇ ಇದೆ ("ವಚನಿಸಿ ಮಾಡದಿಹ ಬಾಹಿರರು ನಾವಲ್ಲ"). ಕಂಠಪಾಠ  ಅಥವಾ ಗಟ್ಟಿಮಾಡಿಕೊಳ್ಳುವುದು 'ವಚೋವಿಧೇಯತೆ' ಎಂದು ಕರೆಯುತ್ತಾರೆ; ಹಾಗೆ ಮಾಡಿಕೊಂಡಿರುವವನಿಗೆ ವಿಷಯ 'ವಚೋವಿಧೇಯ'ವಾಗಿರುತ್ತದೆ.
=====
ವೀಳ್ಯ: ಸಂಸ್ಕೃತದ ವೀಟಿ ಹಾಗೂ ವೀಟಿಕಾಗಳು ವೀಳೆಯದೆಲೆಯ ಹಂಬು ಮತ್ತು ಎಲೆಗಳನ್ನು ಸೂಚಿಸುತ್ತವೆ. ವೀಟಿಕಾ>ವೀಟಿಕೆ>ವೀಳೆಯ>ವೀಳ್ಯ ಆಗಿದೆ. ವೀಟಿಕೆ ವೀಳಿಗೆಯಾಗುತ್ತದೆಂದು 'ಶಬ್ದಮಣಿದರ್ಪಣ' ಹೇಳುತ್ತದೆ.  ಈ ಬಳ್ಳಿಗೆ ಸಂಸ್ಕೃತದಲ್ಲಿ 'ತಾಂಬೂಲವಲ್ಲೀ ತಾಂಬೂಲೀ ನಾಗವಲ್ಲಿ' ಎಂಬ ಹೆಸರುಗಳನ್ನೂ 'ಅಮರಕೋಶ' ಹೇಳುತ್ತದೆ. ಅಡಿಕೆ ಮತ್ತು ಸುಣ್ಣಗಳೊಡನೆ ಸೇರಿ 'ಎಲೆಯಡಿಕೆ' ಆಗುತ್ತದೆ; ಇದೇ ತಾಂಬೂಲ. ತಾಂಬೂಲಚರ್ವಣವು ಎರಡು ಸಾವಿರ ವರ್ಷಗಳಷ್ಟು ಹಳೆಯದೆಂದೂ, ಪೂರ್ವದೇಶಗಳ ಜೊತೆಗೆ ಭಾರತವು ಸಂಪರ್ಕ ಪಡೆದ ಮೇಲೆ ಇಲ್ಲಿಯೂ ಬಳಕೆಗೆ ಬಂತೆಂದೂ ವಿದ್ವಾಂಸರು ಹೇಳುತ್ತಾರೆ. ಇದು ಜೀರ್ಣಕಾರಿಯೆಂಬ ಭಾವನೆಯಿದ್ದುದನ್ನು ಆಲ್ಬೆರೂನಿ ಎಂಬ ಪ್ರವಾಸಿ ಹೇಳುತ್ತಾನಂತೆ. ನಯಸೇನ ತನ್ನ 'ಧರ್ಮಾಮೃತ'ದಲ್ಲಿ ಕರ್ಪೂರ ಬೆರೆಸಿದ ವೀಳೆಯವನ್ನು ಉಲ್ಲೇಖಿಸುತ್ತಾನೆ. ("ಕಿಯರ್ಪಿರಿಯರೆನ್ನದೆ ಮನ್ನಣೆಯಿಂ ಕರ್ಪುರಸಹಿತಂ ವೀಳೆಯಂಗೊಟ್ಟು") 'ಕರ್ಪುರ ವೀಳೆಯ'ದ ಉಲ್ಲೇಖ ಆದಯ್ಯನ ವಚನವೊಂದರಲ್ಲಿಯೂ ಇದೆ.
ಗೌರವಸೂಚಕವಾಗಿ ಇದನ್ನು ದೇವರಿಗೆ ಹಾಗೂ ಹಿರಿಯರಿಗೆ ವೀಳೆಯ ಅರ್ಪಿಸುವುದು ಹಳೆಯ ಪದ್ಧತಿ. ಮದುವೆಯಂತಹ ಶುಭಸಮಾರಂಭಗಳಲಿ ಸುವಾಸಿನಿಯರು ಬಂದ ಹೆಣ್ಣುಮಕ್ಕಳಿಗೆ ಹೂವು ತಾಂಬೂಲಗಳನ್ನು ನೀಡುತ್ತಿದ್ದ 'ಹೂದಂಬುಲ'ದ ಪದ್ಧತಿಯನ್ನು ವಚನಗಳು ಹೇಳುತ್ತವೆ. ಇದೇ ಈಗಿನ 'ಹೂವೀಳ್ಯ'. ವೀರಶೈವರಲ್ಲಿ ವಿಭೂತಿಯೊಡನೆ ವೀಳೆಯ ಕೊಡುವುದನ್ನು ವಚನಗಳು 'ವಿಭೂತಿವೀಳೆಯ' ಎನ್ನುತ್ತವೆ. ಮದುವೆ ನಿಶ್ಚಯದ ಸಂದರ್ಭದಲ್ಲಿ ವೀಳ್ಯ ಬದಲಾಯಿಸುವ ಪದ್ಧತಿ ಈಗಲೂ ಇದೆ.
ಯುದ್ಧದಂತಹ ಮಹತ್ವದ ಜವಾಬ್ದಾರಿಯನ್ನು ವಹಿಸಿ ತಾಂಬೂಲ ಕೊಡುವುದರ ಉಲ್ಲೇಖ ಕಾವ್ಯಗಳಲ್ಲಿದೆ. "ವೀಳೆಯಗೊಂಡುಕ" ಮೆರೆದ ಸುಧನ್ವನ ಚಿತ್ರ 'ಜೈಮಿನಿಭಾರತ'ದಲ್ಲಿದೆ. ಇದೇ ಈಗಿನ 'ಸುಪಾರಿ ಕೊಡು'ವುದು. ಎಲ್ಲ ಪರಿಕರಗಳನ್ನು ಸೇರಿಸಿ ಮೆಲ್ಲಲು ಸಿದ್ಧಪಡಿಸುವುದನ್ನು 'ವೀಳ್ಯಕಟ್ಟು'ಎನ್ನುವುದು ವಾಡಿಕೆ.
=====
'ಶಾಸ್ತ್ರೀಯ ಭಾಷೆ ಕನ್ನಡ' - ಹಾಗಂದರೇನು? ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಕಸ್ಥಾನ-ಮಾನಕಿ ಬಂದಿರುವ ವಿಷಯ ಈಗ ಇತಿಹಾಸವೆಂಬುದು ನಿಜ. ಅದಕ್ಕೆ ಕಾರಣವಾದ ಹಿನ್ನೆಲೆಯೂ ಸಾಕಷ್ಟು ಜನಕ್ಕೆ ತಿಳಿದಿರಬೇಕು. ಆದರೆ ಈ ಕಶಾಸ್ತ್ರೀಯಕಿ ಎನ್ನುವ ವಿಶೇಷಣದ ಅರ್ಥವೇನು, ಅದರ ಸ್ವರೂಪವಾವುದು ಎಂಬುದು ಜನಗಳಿಗೆ ತಿಳಿಯದು, ಯಾಕಂದರೆ ವಿದ್ವಾಂಸರಿಗೇ ಆ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲ.
ಕನ್ನಡಕ್ಕೆ ಯಾವುದೋ ವಿಶೇಷಣವನ್ನು ಸೇರಿಸಿ ಹೇಳುವ ರೂಢಿ ಇಂದಿನದೇನಲ್ಲ, ಹಿಂದೆಯೂ ಇತ್ತು. 'ಕವಿರಾಜಮಾರ್ಗ'ದಲ್ಲಿ (ಕ್ರಿಶ 850) ಕನ್ನಡ ಶಬ್ದವನ್ನು ನಾಡು ಮತ್ತು ನುಡಿ ಎರಡೂ ಅರ್ಥಗಳಲ್ಲಿ ಬಳಸಲಾಗಿದೆ. 'ಕನ್ನಡಂಗಳ್' ಎಂಬ ಶಬ್ದ ಅಲ್ಲಿ ತನ್ನ ಕಾಲದ ಕನ್ನಡದ ಪ್ರಾದೇಶಿಕ ಉಪಭಾಷೆಗಳನ್ನು ಸೂಚಿಸುತ್ತಿದ್ದ ಶಬ್ದ. ಅಲ್ಲಿ ಒಂದೆಡೆ "ಅದಱೊಳಂ ಕಿಸುವೊಳಲಾ ವಿದಿತ ಮಹಾ ಕೊಪಣ ನಗರದಾ ಪುಲಿಗೆಯಾ ಸದಭಿಸ್ತುತಮಪ್ಪ ಒಂಕುಂದದ ನಾಡೆ ನಾಡೆ ಕನ್ನಡದ ತಿರುಳ್" ಎಂಬ ಮಾತಿದೆ. ಪಟ್ಟದಕಲ್ಲು, ಕೊಪ್ಪಳ, ಲಕ್ಷ್ಮೇಶ್ವರ ಒಕ್ಕುಂದ _ ಊರುಗಳ ನಡುವಣ ಪ್ರದೇಶ ಕನ್ನಡದ ಸಾರಪ್ರದೇಶ ಎಂದು ಇದರ ಅರ್ಥ (ಇಲ್ಲಿ ಎರಡು ಬಾರಿ 'ನಾಡೆ' ಎಂದು ಬಳಸಲಾಗಿದೆ; ಮೊದಲನೆಯದು ಪ್ರದೇಶವೇ ಎಂಬ ಅವಧಾರಣೆಯ ಅರ್ಥವನ್ನು ಪಡೆದಿದ್ದರೆ, ಎರಡನೆಯದು 'ವಿಶೇಷವಾಗಿ' ಎಂಬ ಅರ್ಥದಲ್ಲದೆ). ಇಲ್ಲಿ ಸ್ಪಷ್ಟವಾಗಿ ತಿರುಳ್ ಎಂಬುದು ನಾಡನ್ನು ಸೂಚಿಸುತ್ತದೆ. ಆದರೆ ಮತ್ತೊಂದೆಡೆ ಈ ಕೃತಿಯಲ್ಲಿ "ಪಳಗನ್ನಡಮಂ ಪೊಲಗೆಡಿಸಿ ನುಡಿವರ್ ಆಗಮ ಬಲಹೀನರ್" ಎಂಬ ಮಾತಿದೆ. ಇಲ್ಲಿ ತನಗಿಂತ ಹಿಂದಿನ ಕನ್ನಡವನ್ನು ಹಳಗನ್ನಡ ಎನ್ನುವ ಗ್ರಂಥಕರ್ತೃವು ಅದನ್ನು ಕೆಲವರು ಕೆಡಿಸಿ 'ನುಡಿವರ್' ಎನ್ನುತ್ತಾನೆ (ಎಂದರೆ ಬರೆಯುವರು ಎಂದೇ ಅರ್ಥ). ಇಲ್ಲಿಯದು ನುಡಿಯ ಬಗೆಗಿನ ಉಲ್ಲೇಖ. ಮುಂದೆ ಕ್ರಿಶ. ಹತ್ತನೆಯ ಶತಮಾನದ ಪಂಪನು ತನ್ನ 'ವಿಕ್ರಮಾರ್ಜುನ ವಿಜಯ'ದ ಕೊನೆಯಲ್ಲಿ "ರಾಜದ್ರಾಜಕಮೆನಿಸಿದ ಸಾಜದ ಪುಲಿಗೆಯ ತಿರುಳ ಕನ್ನಡದೊಳ್" ರಚಿಸಿದುದು ತನ್ನ ಕವಿತೆ ಎಂದು ಹೇಳಿಕೊಳ್ಳುತ್ತಾನೆ. ಪುಲಿಗೆ ಎಂಬುದು ಈಗಿನ ಹಾವೇರಿ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ಹಿಂದೆ ಇದ್ದ ಹೆಸರು. ಅಲ್ಲಿನ ಕನ್ನಡವನ್ನು ಪಂಪ ಸಾಜದ ಕತಿರುಳ ಕನ್ನಡಕಿ ಎನ್ನುತ್ತಿದ್ದಾನೆ. ಕವಿರಾಜಮಾರ್ಗಕಾರನೂ ಪುಲಿಗೆಯನ್ನು ಹೆಸರಿಸಿದ್ದ. ಹಾಗಾಗಿ ಅವನ ದೃಷ್ಟಿಯಲ್ಲಿಯೂ ಪ್ರದೇಶದ ಜೊತೆಗೆ ನುಡಿಯನ್ನೂ ಸೂಚಿಸುವ ಉದ್ದೇಶವಿದ್ದಿರಬಹುದು ಎನ್ನಿಸುವುದು ಸಹಜ.
ಮುಂದೆ ಹನ್ನೆರಡನೆಯ ಶತಮಾನದ ನಯಸೇನನು ಹೇಳುವ "ಪೊಸಗನ್ನಡದೊಳ್ ವ್ಯಾವರ್ಣಿಸುವೆಂ ಸತ್ಕೃತಿಯಂ" ಎಂಬ ಮಾತಿನಲ್ಲಿ ಹೊಸಗನ್ನಡ ಎಂಬ ಶಬ್ದವಿದೆ. ಅವನ ದೃಷ್ಟಿಯಲ್ಲಿ ತನ್ನ ಕಾಲದಲ್ಲಿ ಬರೆಯುತ್ತಿದ್ದ ಕನ್ನಡದ ಸ್ವರೂಪ ಹೊಸಗನ್ನಡ (ನಾವು ಯಾವುದೇ ಭಾಷೆಯ ಪೂರ್ವ ಸ್ವರೂಪದ ಬಗ್ಗೆ ಮಾತನಾಡುವಾಗ, ಧ್ವನಿಮುದ್ರಣ ಆರಂಭಗೊಳ್ಳುವವರೆಗಿನ ಕಾಲದವರೆಗೂ, ಅನಿವಾರ್ಯವಾಗಿ ಬರವಣಿಗೆಯನ್ನೇ ಅವಲಂಬಿಸಬೇಕು). ಈಚೆಗೆ ಕಳೆದ ಶತಮಾನದಿಂದ ಕನ್ನಡ ಭಾಷೆಯು ಬೆಳೆದು ಬಂದ ವಿವಿಧ ಘಟ್ಟಗಳನ್ನು ಕುರಿತು ಹೇಳುವಾಗ, ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂಬ ಮಾತುಗಳನ್ನು ಬಳಸುವುದು ರೂಢಿಯಲ್ಲಿ ಬಂದಿದೆ. ಆದರೆ ಈಗ ಎಂಟು ವರ್ಷಗಳಿಂದ, ಅದರಲ್ಲೂ ಈಚಿನ ನಾಲ್ಕು ವರ್ಷಗಳಿಂದ, ಅದರಲ್ಲಿಯೂ ಕಳೆದ ಒಂಬತ್ತು ತಿಂಗಳುಗಳಿಂದ ಶಾಸ್ತ್ರೀಯ ಕನ್ನಡದ ಬಗ್ಗೆ ಮಾತನಾಡುತ್ತಿದ್ದೇವೆ. ಅದಕ್ಕೆ ಹಿಂದೆ ಈ ಮಾತನ್ನು ಕನ್ನಡಕ್ಕೆ ಅನ್ವಯಿಸಿ ಹೇಳುತ್ತಿರಲಿಲ್ಲ, ಅಥವಾ ಯಾವುದೇ ಭಾಷೆಗೆ ಅನ್ವಯಿಸುತ್ತಿರಲಿಲ್ಲ.
2004 ರಲ್ಲಿ ನಡೆದ ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತಮಿಳುನಾಡಿನಲ್ಲಿ ಚುನಾವಣಾ ಮೈತ್ರಿ ಮಾಡಿಕೊಂಡಾಗ ಡಿಎಂಕೆ ಹಾಕಿದ ಒಂದು ಷರತ್ತೆಂದರೆ, ಅಧಿಕಾರಕ್ಕೆ ಬಂದ ತಕ್ಷಣ ತಮಿಳನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಬೇಕು ಎಂಬುದು; ಕಾಂಗೆಸ್ ಇದಕ್ಕೆ ಒಪ್ಪಿತು. ಈ ಮೈತ್ರಿಕೂಟ ವಿಜಯದುಂದುಭಿ ಮೊಳಗಿಸಿತು. ತಮಿಳು ನಾಡು ಸರ್ಕಾರ ತಮಿಳನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಲು ಒತ್ತಾಯಿಸಿತು. ಆದರೆ ಆವರೆಗೆ ಶಾಸ್ತ್ರೀಯ ಭಾಷೆಯ ಬಗ್ಗೆ ಯಾರಿಗೂ ಪರಿಕಲ್ಪನೆಯಿರಲಿಲ್ಲ, ತಮಿಳರಿಗೂ. ತಮ್ಮದು ಜಗತ್ತಿನಲ್ಲಿಯೇ ಅತಿಶಯದ ಭಾಷೆ, ಅದರಂತೆ ಮತ್ತೊಂದಿಲ್ಲ ಎಂದು ಅವರು ಹೇಳಿಕೊಳ್ಳಬೇಕಾಗಿತ್ತು, ಅಷ್ಟೆ; ಅದಕ್ಕೇ ತಮಿಳನ್ನು Classical Language ಎಂದು ಕರೆಯಬೇಕೆಂಬ ಒತ್ತಾಯ. ಹಾಗೆ ಕರೆಯಲು ಕಾರಣ ಬೇಕಲ್ಲ, ಕೇಂದ್ರ ಸರ್ಕಾರವು ಭಾಷೆಯೊಂದನ್ನು Classical ಎಂಬ ವಿಶೇಷಣದಿಂದ ಸಂಬೋಧಿಸಲು ಅದಕ್ಕಿರಬೇಕಾದ ಲಕ್ಷಣಗಳನ್ನು ನಿಗದಿ ಪಡಿಸಲು ಕೇಂದ್ರ ಸಾಹಿತ್ಯ ಅಕಾಡೆಮಿಯನ್ನು ಕೇಳಿಕೊಂಡಿತು.
ಅಕಾಡೆಮಿಗೆ ತಲೆ ನೋವು ಶುರುವಾಯಿತು, ಏಕೆಂದರೆ Classical Language ಪರಿಕಲ್ಪನೆ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ. ಭಾಷಾವಿಜ್ಞಾನದಲ್ಲಿಯೂ, ಈಗ ಜನಬಳಕೆಯಲ್ಲಿಲ್ಲದೆ, ಕೇವಲ ಗ್ರಾಂಕ ಸಾಹಿತ್ಯವನ್ನು ಹೊಂದಿರುವ ಸಂಸ್ಕೃತ, ಲ್ಯಾಟಿನ್, ಪಾಲಿ ಮುಂತಾದವುಗಳಂತೆ ಪ್ರಾಚೀನ ಭಾಷೆ ಎಂಬ ಅಸ್ಪಷ್ಟ ಭಾವನೆ ಇತ್ತು; ಯಾರೂ ಜನಬಳಕೆಯ ಭಾಷೆಯನ್ನು Classical ಎಂಬ ವಿಶೇಷಣದಿಂದ ಕರೆಯುತ್ತಿರಲಿಲ್ಲ. ಆದರೆ ಶ್ರೇಷ್ಠ ಕೃತಿ, ಪ್ರಾಚೀನವಾದದ್ದಿರಬಹುದು, ಆಧುನಿಕವಿರಬಹುದು, Classic ಎನ್ನಿಸಿಕೊಳ್ಳುತ್ತದೆ. ಹೀಗಾಗಿ ಅಕಾಡೆಮಿ ಏನನ್ನೂ ಮಾಡಲಿಲ್ಲ, ಅದಕ್ಕೆ ಗೊಂದಲ; ಆದರೆ ಡಿಎಂಕೆ ಒತ್ತಾಯ. ಹೀಗಾಗಿ ಕೇಂದ್ರ ಸರ್ಕಾರ ಮತ್ತೊಮ್ಮೆ ಕೇಳಿದಾಗ, ಅಕಾಡೆಮಿಯು ಒಂದು ಸಮಿತಿಯನ್ನು ರಚಿಸಿತು, ಅದು ತಮಿಳಿಗೆ ಹೊಂದುವಂತಹ ನಾಲ್ಕು ಲಕ್ಷಣಗಳನ್ನು ಗುರುತಿಸಿ ಹೇಳಿತು. ಅದಕ್ಕನುಗುಣವಾಗಿ ಕೇಂದ್ರ ಸರ್ಕಾರ 12-10-2004 ರಂದು ತಮಿಳನ್ನು Classical Language ಎಂದು ಘೋಷಿಸಿತು. ಒಂದು ವರ್ಷದ ನಂತರ ಸಂಸ್ಕೃತವನ್ನೂ ಹಾಗೆ ಕರೆಯಿತು. ಈ ನಾಲ್ಕೂ ಲಕ್ಷಣಗಳಿದ್ದ ಕನ್ನಡ ಮತ್ತು ತೆಲುಗು ಭಾಷೆಗಳವರು ತಮ್ಮದೂ Classical Language ಗಳೇ ಎಂದು ಘೋಷಿಸಲು ವರಾತ ಆರಂಭಿಸಿದರು. ಏನೇನೋ ಅಡಚಣೆಗಳು, ಗೊಂದಲಗಳು, ಕೊನೆಗೆ ಈ ಎರಡಕ್ಕೂ Classical Language 'ಸ್ಥಾನಮಾನ' ನೀಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಮುಂದಿಟ್ಟಾಗ, ಹಿಂದೆ ನಿಗದಿಪಡಿಸಿದ್ದ 'ಒಂದು ಸಾವಿರ ವರ್ಷದ ಇತಿಹಾಸ' ಎಂಬ ಲಕ್ಷಣವನ್ನು ಸಮಿತಿಯು '1500 ರಿಂದ 2000 ವರ್ಷಗಳು' ಎಂದು ಬದಲಾಯಿಸಿತು. ಆಗಲೂ ಈ ಎರಡು ಭಾಷೆಗಳಿಗೆ ಆ ಲಕ್ಷಣವಿದ್ದುದರಿಂದ ಅಳೆದು ಸುರಿದೂ 31-10-2008 ರಂದು ಕನ್ನಡ ತೆಲುಗುಗಳನ್ನೂ ಶಾಸ್ತ್ರೀಯ ಭಾಷೆಗಳು ಎಂದು ಘೋಷಿಸಲಾಯಿತು. (ಈ ಮಧ್ಯೆ ಸಂಸ್ಕೃತಕ್ಕೆ ಆ ಪಟ್ಟ ಕಟ್ಟಲಾಯಿತು. ಇದೀಗ ಮಲಯಾಳಂಗೂ ಕೇಳದೆಯೇ ಆ ಪಟ್ಟ ದೊರೆತಿದೆ).
ಮುಂದೆಯೂ ಏನೇನೋ ಅಡಚಣೆಗಳು; ಕೊನೆಗೆ ಆ ಗೌರವ ಪಡೆದ ಕನ್ನಡ ಭಾಷೆಯ ಅಧ್ಯಯನಕ್ಕೆ ಒಂದು ಉನ್ನತ ಸಂಸ್ಥೆಯ ಸ್ಥಾಪನೆ ಮಾಡಬೇಕಾಗಿದ್ದು, 18-12-2011 ರಂದು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ 'ಶಾಸ್ತ್ರೀಯ ಕನ್ನಡದ ಉನ್ನತ ಅಧ್ಯಯನ ಕೇಂದ್ರಕ' (Centre of Excellence for the Study of Classical Kannada) ಉದ್ಘಾಟನೆಗೊಂಡಿತು; ಕಳೆದ ನಾಲ್ಕಾರು ತಿಂಗಳಿಂದ ಹಣಸಹಾಯವೂ ದೊರೆಯುತ್ತಿದೆ. ಆದರೆ ಶಾಸ್ತ್ರೀಯ ಕನ್ನಡ ಅಂದರೆ ಏನು ಎಂಬುದರ ಸ್ಪಷ್ಟ ಪರಿಕಲ್ಪನೆ ಈಗಲೂ ಇಲ್ಲ. (ಹೀಗಾಗಿಯೇ ಏನು ಮಾಡಬೇಕೆಂದು ತೋಚದೆಯೋ ಏನೋ ಬಹುಪಾಲು ಹಣ ಬಳಕೆಯಾಗುತ್ತಲೇ ಇಲ್ಲ). ಒಬ್ಬೊಬ್ಬ ವಿದ್ವಾಂಸರದು ಒಂದೊಂದು ಅಭಿಪ್ರಾಯ. ಆದರೂ ಅದರ ಅಧ್ಯಯನಕ್ಕೆ ಒಂದು ಸಂಸ್ಥೆ ಆಗಿದೆ, ಅದರ ವತಿಯಿಂದ ಶಾಸ್ತ್ರೀಯ ಕನ್ನಡಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ನೀಡುತ್ತದೆ. ಹೀಗಾಗಿ ಏನಾದರೂ ಮಾಡಬೇಕಲ್ಲ.
ಶಾಸ್ತ್ರೀಯ ಭಾಷೆಗಿರಬೇಕಾದ ನಾಲ್ಕು ಲಕ್ಷಣಗಳಲ್ಲಿ ನಾಲ್ಕನೆಯದು "ಶಾಸ್ತ್ರೀಯ ಭಾಷಾ ಸಾಹಿತ್ಯಗಳು ಆಧುನಿಕವಾದುದಕ್ಕಿಂತ ಭಿನ್ನವಾದುದಾಗಿದ್ದು, ಶಾಸ್ತ್ರೀಯ ಭಾಷೆ ಹಾಗೂ ಈಚಿನ ಅವಸ್ಥಾಂತರಗಳ ನಡುವೆ ಕಂದರವಿರಬಹುದು" ಎಂಬುದು. ತಮಿಳು ವಿದ್ವಾಂಸರೇ ರೂಪಿಸಿದ್ದರಿಂದ ಈ ಲಕ್ಷಣವೂ ಸೇರಿಕೊಂಡಿದೆ ಎನ್ನಬಹುದು. ಏಕೆಂದರೆ ಕ್ರಿಸ್ತಶಕದ ಆರಂಭಕಾಲದಲ್ಲಿತ್ತೆಂದು ಹೇಳಲಾದ ತಮಿಳಿನ ಚಂಗಕಾಲದ ನಂತರ ಅನೇಕ ಶತಮಾನಗಳ ಕಾಲ ತಮಿಳು ಕೃತಿಗಳು ಕ್ರಿಶ ಒಂಬತ್ತನೇ ಶತಮಾನದವರೆಗೆ ದೊರೆಯದಿರಲು ಕಾರಣ ಅವನ್ನೆಲ್ಲ ನಾಶಮಾಡಿದ ಕಳಪ್ಪರ್ ಎಂಬ ಶತ್ರುಗಳು ಕಾರಣ ಎಂಬ ವಾದ ಮಾಡಿ, ತಮಿಳು ಸಾಹಿತ್ಯದಲ್ಲಿ ನಿರಂತರತೆ ಕಾಣುತ್ತಿಲ್ಲ ಎಂದು ಹೇಳುತ್ತಾರೆ. ಆದರೆ ಕನ್ನಡದಲ್ಲಿ ಕ್ರಿಶ. 450 ರ ಹಲ್ಮಿಡಿ ಶಾಸನದಿಂದ ಇಲ್ಲಿಯವರೆಗೂ ಬರವಣಿಗೆ ಹಾಗೂ ಕ್ರಿ 850 ರ 'ಕವಿರಾಜಮಾರ್ಗ'ದಿಂದ ಸಾಹಿತ್ಯ ಕೃತಿಗಳು ನಿರಂತರವಾಗಿ ದೊರೆಯುತ್ತವೆ. ಸರ್ಕಾರ ನಿಗದಿಪಡಿಸಿದ ಲಕ್ಷಣಕ್ಕನುಗುಣವಾಗಿ ತಾನೇ ಕನ್ನಡ ಶಾಸ್ತ್ರೀಯ ಭಾಷೆಯನ್ನು ಗುರುತಿಸಬೇಕಾದದ್ದು? ಹಾಗಾಗಿ ಒಂದು ನಿರಂತರ ಧಾರೆಯಾಗಿ ಒಂದು ಚೌಕಟ್ಟಿನಲ್ಲಿ, ಒಂದೇ ರೂಪದ ಕನ್ನಡವನ್ನು ಬಳಸಿ ಆರಂಭದಿಂದ ಹನ್ನೆರಡನೆಯ ಶತಮಾನದವರೆಗೆ ಊರ್ಜಿತವಾಗಿದ್ದ ಚಂಪೂ ಪರಂಪರೆಯನ್ನು ಕನ್ನಡದ ಶಾಸ್ತ್ರೀಯ ಸಾಹಿತ್ಯ ಎಂದೂ, ಅದರಲ್ಲಿ ಬಳಕೆಯಾದ ಈಗ ನಾವು ಹಳಗನ್ನಡ ಎನ್ನುವ ಭಾಷಾಸ್ವರೂಪವನ್ನು ಶಾಸ್ತ್ರೀಯ ಕನ್ನಡ ಎಂದೂ ಕರೆಯುವುದು ಸಮಂಜಸವೆನ್ನಿಸುತ್ತದೆ. ಉನ್ನತ ಅಧ್ಯಯನ ಕೇಂದ್ರಗಳ ಈಗಿನ ಕರ್ತವ್ಯವೆಂದರೆ ಅವುಗಳಿಗೆ ಸಂಬಂಧಿಸಿದ ಸಂಶೋಧನೆ ನಡೆಸಲು ಯುವಕರನ್ನು ಸಜ್ಜುಗೊಳಿಸುವುದಕ್ಕಾಗಿ 'ಶಾಸ್ತ್ರೀಯ ಕನ್ನಡ'ದ ವಿಶೇಷ ಅಧ್ಯಯನಕ್ಕೆ ಅನುವು ಮಾಡಿಕೊಡಬೇಕಾದುದು. ಕನ್ನಡಕ್ಕೆಂದು ಬೇರೆಯೇ ಆದ ಇಲಾಖೆಯಿದ್ದು ಕೋಟ್ಯಂತರ ರೂಪಾಯಿಗಳನ್ನು ಬಜೆಟ್‍ನಲ್ಲಿ ನಿಗದಿಪಡಿಸಿರುವ ಕನ್ನಡ ನಾಡಿನ ಸರ್ಕಾರ ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಬೇಕು; ಅಲ್ಲದೆ ಶಾಸ್ತ್ರೀಯ ಕನ್ನಡದ ಉನ್ನತ ಅಧ್ಯಯನ ಕೇಂದ್ರ'ವನ್ನು ಭಾರತೀಯ ಭಾಷಾ ಸಂಸ್ಥಾನದಿಂದ ಸ್ವತಂತ್ರಗೊಳಿಸಿ, ತಮಿಳಿನ ಸಂಸ್ಥೆಯಿರುವಂತೆ ಅದನ್ನು ಕನ್ನಡ ನಾಡಿನ ಸರ್ಕಾರದ ವ್ಯಾಪ್ತಿಯಲ್ಲಿ ತಂದು, ವಿದ್ವಾಂಸರೊಡನೆ ಸಮಾಲೋಚಿಸಿ ವಿವಿಧ ಯೋಜನೆಗಳನ್ನು ತ್ವರಿತವಾಗಿ ರೂಪಿಸಿ, ಕೇಂದ್ರದಿಂದ ಹಣ ಸಹಾಯ ಪಡೆದು ಅವುಗಳನ್ನು ಕಾರ್ಯರೂಪಕ್ಕಿಳಿಸುವುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ