ನನ್ನ ಪುಟಗಳು

18 ಅಕ್ಟೋಬರ್ 2014

ಪದಚರಿತೆ-9ಪದಚರಿತೆ: ಒಂದಷ್ಟು ಪದಗಳ ಮೂಲಚೂಲಗಳ ಕೆದಕಾಟ -9

ಷೋಡಶೋಪಚಾರ: ಈ ಸಂಸ್ಕೃತ ಸಮಾಸ ಪದದಲ್ಲಿ ಎರಡು ಭಾಗಗಳಿವೆ: ಷೋಡಶ ಮತ್ತು ಉಪಚಾರ. ದೇವರಿಗೆ ಮಾಡಬೇಕಾದ ಹದಿನಾರು ಬಗೆಯ ಸೇವೆಯನ್ನು ಇದು ಹೇಳುತ್ತದೆ: ವಚನಗಳಿಗಿಂತ ಹೆಚ್ಚು ಪ್ರಾಚೀನವಾದ ಕನ್ನಡ ಕಾವ್ಯಗಳಲ್ಲಿ ಇದರ ಉಲ್ಲೇಖವಿದ್ದಂತಿಲ್ಲ; ಹಿಂದಿನವು ಜೈನ ಕಾವ್ಯಗಳಾದುದರಿಂದಲೂ, ಮೂಲತಃ ಜೈನರಲ್ಲಿ ದೇವರ ಕಲ್ಪನೆಯಾಗಲೀ ಪೂಜೆಯ ಕಲ್ಪನೆಯಾಗಲೀ ಇಲ್ಲದಿದ್ದುದರಿಂದ ೀ ರೀತಿಯಾಗಿರಬಹುದು. ಹೀಗಾಗಿ ಇದು ಈಚಿನ ಪರಿಕಲ್ಪನೆಯಿರಬಹುದು. ಬಸವಣ್ಣನ ವಚನವೊಂದರಲ್ಲಿ "ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದು" ಎಂಬ ಮಾತು ದೊರೆಯುತ್ತದೆ. ಹಾಗೆಯೇ "ಅಷ್ಟವಿಧಾರ್ಚನೆ ಷೋಡಶೋಪಚಾರ ಸನ್ನಿಹಿತಂಗೆ ಅವಗುಣಗಳುಂಟೆ" ಎಂಬ ವಾಕ್ಯ ಚೆನ್ನಬಸವಣ್ಣನ ವಚನವೊಂದರಲ್ಲಿದೆ. ಸೋಮದೇವನ 'ಉದ್ಭಟಕಾವ್ಯ'ದಲ್ಲಿ  "ಷೋಡಶೋಪಚಾರದಿಂದೆ ಪೂಜೆಗೈದು ಶೀತರುಕ್ಚೂಡ ನೀಲಕಂಠದೇವನಂ" ಎಂಬ ವಾಕ್ಯವಿದೆ.  ಆದಯ್ಯನೆಂಬೊಬ್ಬ ವಚನಕಾರನು 'ಷೋಡಶೋಪಚರ್ಯ' ಎಂಬ ರೂಪವನ್ನು ಬಳಸುತ್ತಾನೆ ("ಅಷ್ಟವಿಧಾರ್ಚನೆ ಷೋಡಶೋಪಚರ್ಯಂಗಳಿಂದ ಇಷ್ಟಲಿಂಗಧಾರಣದಿಂದಪ್ಪುದು ಧಾರಣಯೋಗ"). ಭೀಮಕವಿಯ 'ಬಸವ ಪುರಾಣ'ದಲ್ಲಿ 'ಷೋಡಶೋಚಾರ' ("ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ" ಎಂಬ ಪ್ರಯೋಗದ ಜೊತೆ "ಷೋಡಶೋಪಚರಣೆ' ("ಷೋಡಶೋಪಚರಣೆಯೆಸೆಯೆ ಶಿವರಾತ್ರಿವಿಧಿಯಲಿ") ಎಂಬ ರೂಪವೂ ದೊರೆಯುತ್ತದೆ. ವಾಹನ, ಆಶನ, ಪಾದ್ಯ, ಅರ್ಘ್ಯ, ಸ್ನಾನ, ಉದ್ವರ್ತನ, ವಸ್ತ್ರ, ಉಪವೀತ, ಗಂಧ, ಧೂಪ, ದೀಪ, ನೈವೇದ್ಯ, ಆಚಮನ, ಫಲ, ತಾಂಬೂಲ ಮತ್ತು ಪ್ರದಕ್ಷಿಣಗಳು 'ಗೌತಮ ಧರ್ಮಸೂತ್ರ'ವು ಹೇಳುವ ಹದಿನಾರು ಬಗೆಯ ಉಪಚಾರಗಳು. 'ಧರ್ಮಸಿಂಧು'ವಿನಲ್ಲಿ ಇದಕ್ಕೆ ಭಿನ್ನವಾದ ವಿವರವಿದೆ. ಮಹಾದೇವಿಯಕ್ಕನ ವಚನವೊಂದರಲ್ಲಿ ಇದರ ಪಟ್ಟಿ ಹೀಗಿದೆ: ಮಜ್ಜನ, ದೇವಾಂಗ, ಪರಿಮಳ, ಅಕ್ಷತೆ, ಪುಷ್ಪ, ಧೂಪ, ಆರತಿ, ಮೃಷ್ಟಾನ್ನ, ಪಾನ, ಹಸ್ತಪ್ರಕ್ಷಾಲನ, ತಾಂಬೂಲ, ಆಸನ, ಸಂಗೀತವಾದ್ಯ, ಭೂಷಣ, ವಾಹನ ಮತ್ತು ಗೃಹ "ಇಂತೀ ಹದಿನಾರು ತೆರದ ಭಕ್ತಿಯನು ಚರಲಿಂಗಕ್ಕೆ ಕೊಟ್ಟು ಆ ಚರಲಿಂಗಮೂರ್ತಿ ಭೋಗಿಸಿದ ಬಳಿಕ" ತಾನು ಭೋಗಿಸುವುದಾಗಿ ಹೇಳಿದೆ. ಎಂದರೆ ಇವುಗಳನ್ನೆಲ್ಲ ತಾನು ಅನುಭವಿಸುವುದಕ್ಕೆ ಮುಂಚೆ ಜಂಗಮನಿಗೆ ಅರ್ಪಿಸಬೇಕು ಎಂಬುದು ಭಕ್ತನ ನಿಲವು. ಕನ್ನಡದಲ್ಲಿ ವೀರಶೈವ ಕಾವ್ಯಗಳಲ್ಲಿ ಮಾತ್ರ 'ಷೋಡಶೋಪಚಾರ'ದ ಉಲ್ಲೇಖ ಬಂದಿರುವುದನ್ನು ಗಮನಿಸಿದರೆ ಇದು ವೀರಶೈವಕ್ಕೆ ವಿಶಿಷ್ಟವಾದ ಪರಿಕಲ್ಪನೆಯಿರಬಹುದೇ ಎಂಬ ಅನುಮಾನ ಬರುತ್ತದೆ.
=====
ಸಾಮಾನ್ಯ: ಇದು ಸಮಾನ ಎಂಬುದರಿಂದ ರೂಪಿತವಾದ ವಿಶೇಷಣ. 'ಎಲ್ಲಕ್ಕೂ ಅನ್ವಯಿಸುವ' ಎಂದು ಇದರರ್ಥ. "ಸಾಮಾನ್ಯವಾಚಿಗಳನೀ ತೆರದಿಂದ" ಎಂಬ 'ಅಭಿಧಾನ ವಸ್ತುಕೋಶ'ದ ಮಾತಿನಲ್ಲಿ ಈ ಅರ್ಥವಿದೆ. 'ಸಾಮಾನ್ಯಂ ಸರ್ವಶಾಸ್ತ್ರೇಷು' ಎಂಬುದನ್ನು ದುರ್ಗಸಿಂಹನು 'ಪಂಚತಂತ್ರ'ದಲ್ಲಿ "ಎಲ್ಲಾ ಶಾಸ್ತ್ರಂಗಳಲ್ಲಿ ಸಾಧಾರಣಂ" ಎಂದು ಅನುವಾದಿಸುತ್ತಾನೆ. "ಸಾಮಾನ್ಯಜನಂಗಳನತಿಕ್ರಮಿಸಲೋಸ್ಕರಮಾಗಿ ಅಳಿಪಿಲ್ಲದೆ ಉದ್ಯೋಗಂಗೆಯ್ವ ಮನುಷ್ಯರ ತೊಡೆಯ ಮೇಲೆ ಲಕ್ಷ್ಮೀ ನೆಲಸಿಹಳು" ಎಂಬುದೂ ದುರ್ಗಸಿಂಹನ ಮಾತು. ಸಾಮಾನ್ಯನಿಯಮ, ಸಾಮಾನ್ಯಲಕ್ಷಣ ಮುಂತಾದ ಸಮಾಸಗಳಲ್ಲಿಯೂ ಇದು ಸ್ಫುಟವಾಗುತ್ತದೆ. ವಿಶೇಷವಲ್ಲದ್ದು ಸಾಮಾನ್ಯ. "ಯುಯು ಎಂಬುದು ಅಶ್ವಮೇಧದ ಹಯಮುಂ ಸಾಮಾನ್ಯ ಹಯಮುಮಕ್ಕುಂ" ಎಂಬುದೂ ಅಲ್ಲಿಯದೇ ವಿವರಣೆ. ಸಾಧಾರಣವಾದುದು ಎಂಬರ್ಥವೂ ಈ ಶಬ್ದಕ್ಕಿದೆ ("ಸಾವಭೃತಂ ಸಾಮಾನ್ಯಂ ಕೇವಳಂ" - 'ಅಭಿಧಾನ ವಸ್ತುಕೋಶ'). "ಅಬ್ಜದಳಾಕ್ಷೀ ಪೇಳ ಸಾಮಾನ್ಯಮೇ ಬಗೆಯೆ ಭವತ್ಕೇಶಪಾಶಪ್ರಪಂಚಂ" ಎಂಬ ಮಾತಿನಲ್ಲಿಯೂ ಈ ಅರ್ಥವಿದೆ. 'ಸಾಮಾನ್ಯಮೇ' ಎಂಬುದು ಸಾಮಾನ್ಯವಲ್ಲ ಎಂಬುದನ್ನು ಧ್ವನಿಸುತ್ತದೆ. "ಸಾಮಾನ್ಯನಲ್ಲನಾತಂ ನೀಮಿದನವಧರಿಪುದು" ಎಂಬ ನೇಮಿನಾಥನ 'ಅರ್ಧನೇಮಿಪುರಾಣ'ದ ಮಾತಿನಲ್ಲಿ ಸಾಮಾನ್ಯ ಎಂಬುದಕ್ಕೆ ಸಾಮಾನ್ಯ ವ್ಯಕ್ತಿ ಎಂಬ ಅರ್ಥ ಹೊಮ್ಮುತ್ತದೆ. "ಸುಖಿಜಂಗಮ ಸಾಮಾನ್ಯ ಜಂಗಮ ಉಂಟೆ ಕೂಡಲಸಂಗಮದೇವ" ಎಂಬ ಬಸವಣ್ಣನ ಮಾತಿನಲ್ಲಿಯೂ ಈ ಅರ್ಥವಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಧಾರಣ ಪ್ರಜೆಗೂ ಹೆಚ್ಚಿನ ಮೌಲ್ಯ ಪ್ರಾಪ್ತವಾದ ಕಾರಣ ಇಂಗ್ಲಿಷ್‍ನಲ್ಲಿ ಸಾಮಾನ್ಯ ಪ್ರಜೆಯನ್ನು 'ಮಿಸ್ಟರ್ ಕಾಮನರ್' ಎಂದು ಕರೆಯುವ ವಾಡಿಕೆ ಬಂತು. ಇದಕ್ಕೆ ಸಂವಾದಿಯಾಗಿ  ಕನ್ನಡದಲ್ಲಿ 'ಶ್ರೀ ಸಾಮಾನ್ಯ' ಎಂದು ಬಳಸಿದವರು ಕುವೆಂಪು. 'ಶ್ರೀ ಸಾಮಾನ್ಯರ ದೀಕ್ಷಾಗೀತೆ' ಎಂಬ ತಮ್ಮ ಕವನದಲ್ಲಿ ಅವರು "ಶ್ರೀಸಾಮಾನ್ಯನೆ ಭಗವತ್ ಮಾನ್ಯಂ ಶ್ರೀ ಸಾಮಾನ್ಯನೆ ಭಗವದ್ ಧನ್ಯಂ ಸಾಮಾನ್ಯತೆ ಭಗವಂತನ ರೀತಿ ಸಾಮಾನ್ಯತೆ ದಿಟ ಭಗವತ್ ಪ್ರೀತಿ" ಎಂದು ಹೇಳಿದರು. ಇಲ್ಲಿ ಕುವೆಂಪು ಸಾಮಾನ್ಯತೆ ಎಂಬ ಶಬ್ದವನ್ನೂ ರೂಪಿಸಿಕೊಂಡಿದ್ದಾರೆ. ಸಾಮಾನ್ಯ ಎಂಬುದರ ವಿರುದ್ಧಾರ್ಥಕವಾಗಿ ಅಸಾಮಾನ್ಯ ಎಂಬ ಪದವೂ ರೂಪಗೊಂಡಿದೆ. ಸಾಧಾರಣವಲ್ಲದ್ದು ಎಂಬುದು ಇದರರ್ಥ. "ಅಂದಾ ಮಹಿಮೆಯುತ್ಸವಮೆಂಬುದು ಅಸಾಮಾನ್ಯಂ ಅದೃಷ್ಟಂ ಅಪೂರ್ವಂ ಅಶ್ರುತಮಪೂರ್ವಂ" ಎಂಬುದು ಪೊನ್ನನ 'ಶಾಂತಿಪುರಾಣ'ದ ಮಾತು.
=====
ಸೂತಕ: ಇದೊಂದು ಸಂಸ್ಕೃತ ಶಬ್ದ. ಇದರ ಮೂಲಾರ್ಥ ಹುಟ್ಟು ಅಥವಾ ಜನನ ಎಂದು. "ಮನೆಗೆ ತಂದು ತನ್ನ ನಲ್ಲಳ ಸೋಂಕಿನೊಳ್ ಕೂಸನಿಟ್ಟೊಡೆ ರಾಗಿದಿಂ ಸುತನ ಸೂತಕಮಂ ಕೊಂಡಾಡೆ" ಎಂಬ ಮಾತು 'ಪಂಪಭಾರತ'ದದಲ್ಲಿ ಬರುತ್ತದೆ. ಜನನವೀಯುವವಳು ಸೂತಿಕೆ ಅಥವಾ ಬಾಣಂತಿ. ಸೂತಿಕಾಗೃಹ ಎಂದರೆ ಹೆರಿಗೆಮನೆ; 'ಅಮರಕೋಶ' ಇದನ್ನು ಹೆಸರಿಸುತ್ತದೆ. ಸೂತಿಕಾಗಾರ ಎಂಬ ಶಬ್ದವೂ ಇದೆ. "ಮಂಗಳಾಸ್ಪದಮಾಗಿರ್ದ ಸೂತಿಕಾಗಾರ ದ್ವಾರಕ್ಕೆ ಬಂದು" – 'ಕುಸುಮಾವಳಿ ಕಾವ್ಯಂ'; ಸೂತಿಕಾಸದನ ("ಅಂತು ಸೂತಿಕಾಸದನಮಂ ಪೊಕ್ಕು ದೇವಕಿಯ ಮುಂದೆ ಪಟ್ಟಿರ್ದ ಶಿಶುವಿನ" – 'ಜಗನ್ನಾಥವಿಜಯ'); ಸೂತಿಕಾಸದ್ಮ ("ಖಚರೇಂದ್ರನಿಂತು ಪುಗುತಂದಂ ಸೂತಿಕಾಸದ್ಮಮಂ" – 'ಶಾಂತೀಶ್ವರಪುರಾಣ') ಎಂದರೂ ಇದೇ. ಸೂತೀಜನ ಎಂದರೆ ಸೂಲಗಿತ್ತಿಯರು ("ಸೂತೀಜನ ಸಖಿಜನಮೆನಿತನಿತುಮಂ ಅವನಿಪತಿ ನಿಯೋಜಿಸಿ ತಳರ್ದಂ" – 'ಪುಷ್ಪದಂತ ಪುರಾಣ').
ಸೂತಕ ಎಂಬುದು ಹುಟ್ಟು, ಗರ್ಭಪಾತ ಮತ್ತು ಸಾವುಗಳ ಕಾಲದ ಮೈಲಿಗೆಯನ್ನೂ ಸೂಚಿಸುತ್ತದೆ. ಈ ಕಾಲದಲ್ಲಿ ತಂದೆತಾಯಿಗಳಿಬ್ಬರೂ ಮೈಲಿಗೆ (ಅಶೌಚ) ಆಚರಿಸಬೇಕೆಂದು ಗೌತಮ, ವಾಸಿಷ್ಠ ಮುಂತಾದ ಧರ್ಮಶಾಸ್ತ್ರಕಾರರು ನಿಯಮಿಸುತ್ತಾರೆ. ತಮ್ಮ ಕಾಲದಲ್ಲಿ ವೈದಿಕ ಸಂಪ್ರದಾಯದಲ್ಲಿ ಆಚರಿಸುತ್ತಿದ್ದ ಐದು ಬಗೆಯ ಮೈಲಿಗೆಯ ಆಚರಣೆಯನ್ನು ವಚನಗಳು 'ಪಂಚಸೂತಕಕ' ಎಂಬ ಮಾತಿನಿಂದ ಸೂಚಿಸುತ್ತವೆ. ಅವುಗಳೆಂದರೆ ಜಾತಿ ಸೂತಕ (ಜಾತಿಯ ಕಾರಣದಿಂದ ಮೈಲಿಗೆ ಆಚರಣೆ), ಜನನ ಸೂತಕ (ಮಗು ಹುಟ್ಟಿದಾಗಿನ ಮೈಲಿಗೆ) ಪ್ರೇತಸೂತಕ (ಯಾರಾದರೂ ಸತ್ತರೆ), ಉಚ್ಚಿಷ್ಟ ಸೂತಕ (ಎಂಜಲು) ಮತ್ತು ರಜಸ್ಸೂತಕ (ಹೆಣ್ಣು ಬಿಹಿಷ್ಠೆಯಾದಾಗ). ಇವುಗಳ ಆಚರಣೆಯನ್ನು ವಚನಕಾರರು ಟೀಕಿಸಿದರು. ಈ ಐದಲ್ಲದೆ ಚೆನ್ನಬಸವಣ್ಣ 'ಭ್ರಾಂತು ಸೂತಕ' 'ವರ್ಣ ಸೂತಕ'ಗಳನ್ನೂ ಸೇರಿಸಿ "ಇವರೆಂತು ಭಕ್ತರಹರು?" ಎಂದು ಪ್ರಶ್ನಿಸುತ್ತಾನೆ. ಪಂಚಸೂತಕಗಳನ್ನು ಬಿಟ್ಟ ಭಕ್ತರಲ್ಲಿ ಕೊಟ್ಟು ಕೊಂಬುದು ಸದಾಚಾರ ಎಂಬುದು ಅವನ ಹೇಳಿಕೆ. ಬೇರೊಂದೆಡೆ ಆರು ಸ್ಥಲಗಳಿಗೆ ಸಂಬಂಧಿಸಿದಂತೆ ಕುಲ, ಛಲ, ತನು, ಮನ, ನೆನಹು, ಭಾವಸೂತಕಗಳನ್ನು ಹೆಸರಿಸುತ್ತಾನೆ. ಬೇರೆ ವಚನಕಾರರು ತ್ಯಜಿಸಬೇಕಾದ ಇನ್ನೂ ಅನೇಕವನ್ನು ಸೂತಕ ಎಂದೇ ಕರೆಯುತ್ತಾರೆ. "ಕಿವಿಯ ಸೂತಕ ಹೋಯಿತ್ತು ಸದ್ಗುರುವಿನ ವಚನದಿಂದ" ಮುಂತಾಗಿ ಬಸವಣ್ಣ ಹೇಳುತ್ತಾನೆ. ಲಿಂಗವನ್ನು "ಧರಿಸಿ ಪರಿಶುದ್ಧವಾದೆವೆಂದು ತಿಳಿಯದೆ ಸೂತಕವನಾಚರಿಸುವ ವ್ರತಗೇಡಿಗಳ ಎನಗೆ ತೋರದಿರಯ್ಯಾ" ಎಂಬುದೂ ಚೆನ್ನಬಸವಣ್ಣನ ಮಾತು.
ಸೂತಕ ಶಬ್ದಕ್ಕೆ ಪಾದರಸ ("ರಸ ಪಾರದ ಸೂತಕ" - 'ಅಭಿಧಾನ ವಸ್ತುಕೋಶ') ಎಂಬರ್ಥವೂ ಇದೆ.
=====
ಸುಂಕ: ವ್ಯಾಪಾರದಲ್ಲಿ ಸರಕುಗಳ ಮೇಲೆ ಹಾಕುವ ತೆರಿಗೆಯೇ ಸುಂಕ. ಈ ಶಬ್ದವು ಸಂಸ್ಕೃತದ 'ಶುಲ್ಕ' ಎಂಬುದರ ತದ್ಭವ. ಪ್ರಾಕೃತದಲ್ಲಿಯೂ ಇದು ಸುಂಕ ಎಂದಾಗಿದೆ; ತೆಲುಗು, ತುಳುಗಳಲ್ಲಿಯೂ ಇದೇ ರೂಪವಿದೆ. ತಮಿಳಿನಲ್ಲಿ ಚುಙ್ಕ ಚುಕ್ಕ ಎಂದೂ, ಮಲಯಾಳಂನಲ್ಲಿ ಚುಂಗ ಎಂದೂ ಆಗುತ್ತದೆ.  ಈಗ ಸರಕಾರವು ಮಾಡುವ ರೀತಿಯಲ್ಲಿ ಹಿಂದೆ ರಾಜನೂ ಸುಂಕ ವಿಧಿಸುತ್ತಿದ್ದ. ಇದು ಪ್ರಾಚೀನ ಪದ್ಧತಿ. ಖವರ್ಷಕ್ಕೆ ಮರದಲೊಂದಡಕೆ ಎಲೆಯ ಸುಂಕಖ ಎಂಬ ಮಾತು ಹನ್ನೊಂದನೇ ಶತಮಾನದ ಶಾಸನದಲ್ಲಿದೆ.
ಸುಂಕ ವಸೂಲಿಗೆಂದು ನೌಕರರಿರುತ್ತಿದ್ದರು, ನಿರ್ದಿಷ್ಟ ಜಾಗವೂ ಇರುತ್ತಿತ್ತು. "ಸುಂಕವೆರ್ಗಡೆ ಮಲ್ಲಿಯಣ ದಂಡನಾಯಕ"ನ ಉಲ್ಲೇಖ ಹತ್ತನೆಯ ಶತಮಾನದ ಶಾಸನದಲ್ಲಿದೆ. ಇದು ಮುಂದೆ ನಡಗನ್ನಡದಲ್ಲಿ 'ಸುಂಕದ ಹೆಗ್ಗಡೆ' ಎಂದಾಗಿದೆ "ಸುಂಕದ ಹೆಗ್ಗಡೆ ಬೊಪ್ಪಡೆ ಒಳಗಾಗಿ" ಎಂಬ ಪ್ರಯೋಗವು ಹನ್ನೆರಡನೆಯ ಶತಮಾನದ ಶಾಸನದಲ್ಲಿದೆ. ಹೆಸರೇ ಸೂಚಿಸುವಂತೆ ಈ ಹೆಗ್ಗಡೆ ಪ್ರಾಯಶಃ ಹಿರಿಯ ಅಧಿಕಾರಿ. ಆದರೆ ಸಾಮಾನ್ಯ ನೌಕರನನ್ನು 'ಚಾವುಂಡರಾಯಪುರಾಣ'ವು 'ಸುಂಕಿ' ಎನ್ನುತ್ತದೆ ("ಮೊಕ್ಕಳಂ ಒಡಮೆವಡೆದು ಪೊಳಲಂ ಪುಗುವಲ್ಲಿ ಸುಂಕಿಗಳ್ಗಳ್ಕಿ ಮಗುಳ್ದು ಬಂದು"). 'ಸುಂಕಿಗ' ಎಂಬುದು ಇದರ ಇನ್ನೊಂದು ರೂಪ. ಊರಲ್ಲಿನ ಅಂಗಡಿ ಮುಂತಾದವುಗಳಿಂದ ಸುಂಕ ವಸೂಲು ಮಾಡುತ್ತಿದ್ದವನೇ 'ಹೊಳಲ ಸುಂಕಿಗ'. ಈ ಮಾತನ್ನು ಮಹಾದೇವಿಯಕ್ಕ ಬಳಸುತ್ತಾಳೆ. ಸುಂಕದ ಬಂಕಣ್ಣ ಎಂಬೊಬ್ಬ ವಚನಕಾರ ತನ್ನೊಂದು ವಚನದಲ್ಲಿ 'ಹೊರೆಸುಂಕ' 'ಪಸರಸುಂಕ'ಗಳನ್ನು (ಪಸರ=ಅಂಗಡಿ) ಹೆಸರಿಸುತ್ತಾನೆ. ಸುಂಕ ವಸೂಲಿ ಮಾಡುವುದೇ 'ಸುಂಕಂಗೊಳ್' ("ಒದ್ದಾಯನಮಹಾರಾಜನ ಬಿಂಕಮಂ ಸುಂಕಂಗೊಂಡು"- ನಯಸೇನನ 'ಧರ್ಮಾಮೃತ').
ಸುಂಕ ವಸೂಲು ಮಾಡುವ ನಿಗದಿತ ಜಾಗ ಅಥವಾ ಉಕ್ಕಡವೇ 'ಸುಂಕದ ಕಟ್ಟೆ'. ಈ ಪದವು ಈಚಿನದೆಂದು ತೋರುತ್ತದೆ. ಹಿಂದೆ ಇಂತಹ ಜಾಗವನ್ನು 'ಡಂಗ' ಎಂದು ಕರೆಯುತ್ತಿದ್ದರು. ಇದನ್ನು ಹತ್ತೊಂಬತ್ತನೆ ಶತಮಾನದ ಶಾಸನವೊಂದು 'ಸುಂಕಠಾಣೆ' ಎನ್ನುತ್ತದೆ. ಸುಂಕ ಕೊಟ್ಟವರಿಗೆ ರಸೀದಿಯನ್ನು ಕೊಡುತ್ತಿದ್ದರು. ಇದನ್ನು ಕೋಲಶಾಂತಯ್ಯ ಎಂಬ ವಚನಕಾರನು 'ಒಪ್ಪದ ಚೀಟು' (ಒಪ್ಪ=ಸಹಿ) ಎನ್ನುತ್ತಾನೆ. ಸುಂಕವನ್ನು ತಪ್ಪಿಸಿಕೊಳ್ಳಲು ಕೆಲವರು ರಾತ್ರಿ ಕಾಲದಲ್ಲಿ ಪಯಣಿಸುತ್ತಿದ್ದರು ("ಇರುಳೆಲ್ಲ ನಡೆದನಾ ಸುಂಕಕಂಜಿ" - ಜೇಡರ ದಾಸಿಮಯ್ಯನ ವಚನ). "ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೋಗಬಾರದು .. .. ಕಳ್ಳನಾಣ್ಯವ ಸಲ್ಲಲೀಯರಯ್ಯಾ" ಎಂಬ ಬಸವಣ್ಣನ ಮಾತಿನಲ್ಲಿ ಸುಂಕ ಕೊಡುವಾಗ ಕಳ್ಳನಾಣ್ಯದ ಚಲಾವಣೆಗೆ ಪ್ರಯತ್ನಿಸುತ್ತಿದ್ದ ಸೂಚನೆಯಿದೆ.
=====
ಸೋಗೆ: ಇದು ತೋಕೆ ಎಂಬುದರ ವ್ಯತ್ಯಸ್ತ ರೂಪ. ದ್ರಾವಿಡ ಪದವಾದ ಇದು ತಮಿಳಿನಲ್ಲಿ 'ತೋಕೈ' ಎಂದೂ, ಮಲಯಾಳಂ ಹಾಗೂ ತೆಲುಗುಗಳಲ್ಲಿ ತೋಕ ಎಂದೂ, ತುಳುವಿನಲ್ಲಿ ಸೋಗೆ ಎಂದೂ ಆಗುತ್ತದೆ. ತೋಕೆ ಎಂದರೆ ಬಾಲ ಎಂಬರ್ಥವಿದೆ. ತೋಕೆಗೋಧಿ ಎಂಬುದು ನೀಳವಾದ ಗೋಧಿಯ ಒಂದು ಪ್ರಭೇದ. ಸೋಗೆ ಎಂದರೆ ನವಿಲಿನ ನೀಳವಾದ ಪುಚ್ಛ. ("ಸೋಗೆಯಂ ಪರಪಿ .. .. ತಾಂಡವಮೆಸೆದುದು" - 'ಆದಿಪುರಾಣ'). ನವಿಲುಗರಿಯೇ 'ಸೋಗೆ' ("ಮೊಗಮಂ ತಾವರೆ ಕಣ್ಣಂ ಉತ್ಪಳದಳಂ ಧಮ್ಮಿಲ್ಲಮಂ ಸೋಗೆ .. .. ಪೋಲ್ತುವು" 'ಆದಿಪುರಾಣ'). ಸೋಗೆಯನ್ನು ಹರಹಿ ನರ್ತಿಸುವ ಗಂಡುನವಿಲನ್ನೂ 'ಸೋಗೆ' ಎಂಬ ಪದದಿಂದ ನಿರ್ದೇಶಿಸುತ್ತಾರೆ: "ಕಾರ್ಗಾಲದ ಸೋಗೆಯಂತೆ ಸೊಗಯಿಸೆ" ಎಂಬುದು 'ಪಂಪಭಾರತ'ದ ಮಾತು. ಆದರೆ ಅದನ್ನು 'ಸೋಗೆನವಿಲು' ಎಂದೂ ಕರೆಯುವುದುಂಟು ("ಸೋಗೆನವಿಲ್ ಒಯ್ಯನೆ ಕರ್ಕಡೆಗಾಸಿಯಾಗಿ ಪಾರುವುದುಂ" - 'ಪಂಪಭಾರತ'). ಹೆಣ್ಣು ನವಿಲನ್ನು 'ಸೋಗೆವೆಣ್' ಎಂದು ಎರಡನೆಯ ಗುಣವರ್ಮನ 'ಪುಷ್ಪದಂತ ಪುರಾಣ'ದಲ್ಲಿ ಕರೆದಿದೆ ("ಮಿಂಚಿನಂಚೆಯಂ ಪಳಂಚಲೆಯದಂಚೆಯಿಲ್ಲ ಕುಮಾರರ ಮಯೂರಮಂ ಕೂರಿಸದ ಸೋಗೆವೆಣ್ಣಿಲ್ಲ").
ತೆಂಗು, ತಾಳೆ, ಅಡಿಕೆ ಮುಂತಾದ ಮರಗಳ ಗರಿಯನ್ನೂ 'ಸೋಗೆ' ಎನ್ನುತ್ತಾರೆ. "ಎಸೆವ ಸೋಗೆಗಳ ಸೀಗುರಿಗಳ ಮಿಗೆ ಮೆಱೆವ ತೆಂಗುಗಳ ಸತ್ತಿಗೆಗಳಿಂ" ಎಂಬುದು ಪದ್ಮಣಾಂಕನ 'ಪದ್ಮರಾಜ ಪುರಾಣ'ದ ಮಾತು. ಅಂತೆಯೇ ಕಬ್ಬಿನ ನೀಳವಾದ ಗರಿಗಳೂ ಸೋಗೆಗಳೇ ("ಬೆಳೆದ ರಸದಾಳಿಗರ್ವುಗಳ ಸೋಗೆಗಳ ಪಸುರುವೊಗರಾಗಸಕೆ ಪರ್ವುತಿಹುದು" – 'ಜೈಮಿನಿ ಭಾರತ'). ನೀಳವಾದ ಜೊಂಪೆಯನ್ನೂ ಈ ಹೆಸರಿನಿಂದಲೇ ಸೂಚಿಸುವ ವಾಡಿಕೆಯಿದೆ ("ಕರುಳ ಸೋಗೆಯುಂ ಕವಿದವವನಿಗಾ ಯತಿಪತಿಯಾ" - ಆಚಣ್ಣನ 'ವರ್ಧಮಾನ ಪುರಾಣ'). ಉದ್ದವಾದ ತುರುಬು 'ಸೋಗೆದುರುಬು' ("ಸೋಗೆದುರುಭಿನ ಸರಸವಚನದ" – 'ತೊರವೆ ರಾಮಾಯಣ'). ಸೀರೆಯ ನೀಳವಾದ ಸೆರಗೂ ಸೋಗೆಯೇ ("ಅಚ್ಚರಸೆಯ .. .. ಎಳಲ್ವ ಮುಂದಣ ಸೋಗೆ ಕಾರ್ಗಾಲದ ಸೋಗೆಯಂತೆ ಸೊಗಯಿಸೆ" ('ಆದಿಪುರಾಣ'). ಇದನ್ನು ಜನ್ನ 'ಸೋಗೆನಿ' ಎನ್ನುತ್ತಾನೆ ("ಸೆಳೆದು ಮರಳ್ಚಿ ಸೋಗೆನಿಯಂ .. .. ಮಳಯಸಮೀರಣಂ ಸರಸವಾಡಿದಂ" – 'ಅನಂತನಾಥಪುರಾಣ'. ಇದಕ್ಕೆ ಮಡಿಲು ಎಂಬರ್ಥವೂ ಇದೆ ("ಶುಕ್ತಿಕೆಯ ಸೋಗೆಯೊಳ್ ನವಮುಕ್ತಾಫಲದಂತೆ"  - 'ಅನಂತನಾಥ ಪುರಾಣ').
=====
ಸ್ಥಳ: ಇದು ಸಂಸ್ಕೃತದ 'ಸ್ಥಲ' ಎಂಬುದರ ಕನ್ನಡ ರೂಪ; ಸಂಸ್ಕೃತದ ಪದಗಳಲ್ಲಿನ ಲಕಾರಕ್ಕೆ ಬದಲಾಗಿ ಅನೇಕ ವೇಳೆ ಕನ್ನಡದಲ್ಲಿ ಳಕಾರ ಬರುತ್ತದೆ (ಇದನ್ನು ಕ್ಷಳ ಎನ್ನುತ್ತಾರೆ). ಈ ಶಬ್ದದ ಮೂಲಾರ್ಥ ಭೂಮಿ, ಪ್ರದೇಶ ಎಂದು. ದುರ್ಗಸಿಂಹನು ತನ್ನ 'ಕರ್ಣಾಟಕ ಪಂಚತಂತ್ರ'ದಲ್ಲಿ ಮಹಾಸ್ಥಲವನ್ನು ಹೆಸರಿಸುತ್ತಾನೆ. "ಸರೋವರಪರಿವೃತಮಪ್ಪ ಭೂಪ್ರದೇಶಂ ಮಹಾಸ್ಥಲಮೆಂಬುದಕ್ಕುಂ" ಎಂಬುದು ಅವನ ವಿವರಣೆ; ಇದು ಜಲದುರ್ಗದ ಒಂದು ಪ್ರಭೇದ. ನೆಲದಾವರೆಯನ್ನು ನಾಗಚಂದ್ರನ 'ಮಲ್ಲಿನಾಥ ಪುರಾಣ'ವು 'ಸ್ಥಲಕಮಳ' ಎಂದು ಕರೆಯುತ್ತದೆ ("ಜಳಕಮಳಂ ಮೇಣ್ ಸ್ಥಲಕಮಳಮಲ್ತು") ಇದೇ ಕಮಲಭವನ 'ಶಾಂತೀಶ್ವರಪುರಾಣ'ದಲ್ಲಿನ 'ಸ್ಥಲನಳಿನಿ' ("ಸ್ಥಳನಳಿನೀಮಯಂ ಅದು ಆ ವಿಷಯದಿಳೆಯೆಲ್ಲಂ"). ಅಗ್ಗಳನ 'ಚಂದ್ರಪ್ರಭಪುರಾಣ'ದಲ್ಲಿ 'ಸ್ಥಲೀಕ' ಎಂದರೆ ನೆಲಗಟ್ಟು ("ನೀಲಬದ್ಧ ಸ್ಥಲೀಕಂ ಮರಕತಜಗತೀ ಮಂಡಲಂ"). ನೆಲದ ಮೇಲೆ ವ್ಯಾಪಾರಕ್ಕೆಂದು ಮಾಡುವ ಪ್ರಯಾಣ 'ಸ್ಥಳಯಾತ್ರೆ' ("ಸ್ಥಳಯಾತ್ರೆಗೆ ಪೋಗಿ ಸಂಖ್ಯಾತೀತ ಸಾರಧನಮಂ ಪಡೆದು ಬರ್ಪೆಡೆಯೊಳ್" - ಪೊನ್ನನ 'ಶಾಂತಿಪುರಾಣ').
ವೀರಶೈವದಲ್ಲಿ 'ಸ್ಥಲ' ಎಂಬುದು ಸಾಧಕಜೀವವು ಶಿವನೇ ಆಗಿ ವಿಕಾಸಗೊಳ್ಳುವ ಪ್ರಕ್ರಿಯೆಯ ಒಂದು ಹಂತ ಎಂಬರ್ಥದಲ್ಲಿ ಬಳಕೆಯಾಗುತ್ತದೆ. ಈ ಹಂತಗಳು ಆರು, ಒಟ್ಟಾರೆ ಇವನ್ನು ಷಟ್ಸ್ಥಲಗಳೆಂದು ಸೂಚಿಸುವುದು ರೂಢಿ: ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯಗಳೇ ಇವು. ಇವುಗಳನ್ನು ಪುನಃ ಒಳವಿಂಗಡಣೆ ಮಾಡಿ ನೂರೊಂದುಸ್ಥಲ ಅಥವಾ ಏಕೋತ್ತರಶತಸ್ಥಲಗಳೆಂದೂ ಕರೆಯಲಾಗುತ್ತದೆ. ಹರಿಹರನು ತನ್ನ ದೀರ್ಘ ರಗಳೆಗಳ ವಿಭಾಗಗಳನ್ನು ಸ್ಥಲ ಎಂದೇ ಕರೆಯುತ್ತಾನೆ. ಪ್ರಾಯಶಃ ತನ್ನ ರಗಳೆಗಳ ನಾಯಕರು ಸಾಧಕರು, ಅವರ ಸಾಧನೆಯ ವಿವಿಧ ಘಟ್ಟಗಳನ್ನೇ ತನ್ನ ರಗಳೆ ವರ್ಣಿಸುವುದು ಎಂಬುದರಿಂದಾಗಿ ಅವನು ಈ ರೀತಿ ಕರೆದಿರಬಹುದು.
ಸ್ಥಳ ಎಂದರೆ ಈಗ ಜಾಗ (ಸೀಟ್) ಎಂಬರ್ಥವೂ ಬಂದಿದೆ; ರೈಲುಬಸ್ಸುಗಳಲ್ಲಿ 'ಸ್ಥಳ ಕಾದಿರಿಸುವ' ಪದ್ಧತಿಯಿದೆ. ಸ್ಥಳ ಊರನ್ನೂ ಸೂಚಿಸುತ್ತದೆ: "ನಿಮ್ಮ ಸ್ಥಳ ಯಾವುದು?"  ಎಂಬುದು ಸಾಮಾನ್ಯ ಪ್ರಶ್ನೆ. 'ಪರಸ್ಥಳದವರು' ಎಂಬಲ್ಲಿಯೂ ಇದೇ ಅರ್ಥವಿದೆ. ನಿರ್ದಿಷ್ಟ ಪ್ರದೇಶವಾಸಿಯನ್ನು 'ಸ್ಥಳವಂದಿಗ' 'ಸ್ಥಳೀಯ' ಎಂಬ ಶಬ್ದಗಳಿಂದ ಸೂಚಿಸುತ್ತೇವೆ. ಕಟ್ಟಡವನ್ನೋ ಮತ್ತೇನನ್ನೋ ನಿರ್ಮಿಸುವ ಮುನ್ನ 'ಸ್ಥಳ ಪರಿಶೀಲನೆ' ಮಾಡುವುದು ರೂಢಿ.
=====
ಹಗರಣ: ಇದು ಸಂಸ್ಕೃತದ ಪ್ರಕರಣ ಎಂಬ ಶಬ್ದದ ಕನ್ನಡ ರೂಪ. ಪ್ರಕರಣ>ಪಗರಣ>ಹಗರಣ ಎಂಬುದಾಗಿ ಬದಲಾಗಿದೆ. ಹಗರಣ ಮತ್ತು ಪ್ರಕರಣ ಈ ಎರಡೂ ಪದಗಳು ಕನ್ನಡದಲ್ಲೀಗ ಬಳಕೆಯಲ್ಲಿವೆ, ಆದರೆ ಭಿನ್ನ ಅರ್ಥಗಳಲ್ಲಿ. ಪಗರಣ ಎಂಬುದು ಹಳಗನ್ನಡದಲ್ಲಿ ಮಾತ್ರ ದೊರೆಯುತ್ತದೆ. ಪ್ರಕರಣ ಎಂಬುದು ಮೂಲಕತಃ ಹತ್ತು ರೂಪಕಗಳಲ್ಲಿನ ಒಂದು ಪ್ರಭೇದ; ಕಲ್ಪಿತ ವಸ್ತು, ಧೀರಪ್ರಶಾಂತ ಎಂಬ ಬಗೆಯ ನಾಯಕ, ಶೃಂಗಾರರಸಪ್ರಧಾನವಾದ ನಗೆನಾಟಕ ಎಂಬರ್ಥದಲ್ಲಿ ಕನ್ನಡ ಕಾವ್ಯಗಳಲ್ಲಿ ಈ ಶಬ್ದ ಪ್ರಯೋಗಗೊಂಡಿದೆ. ಈ ಅರ್ಥದಲ್ಲಿ 'ಕವಿರಾಜಮಾರ್ಗ'ದಲಿಯ್ಲೇ ಪಗರಣ ಎಂಬ ಶಬ್ದ ಪ್ರಯೋಗವಾಗಿದೆ ("ಪಗರಣದೊಳ್ ಉೞಿದ ಮೂಱುಂ ನಗಿಸುಗುಮಪ್ಪುದಱಿಂ ಅದೋಷಂ"). ವೀರಶ್ರೀ ಎಂಬ ವಿಷಾದಭರಿತಳನ್ನು ವಿಚಿತ್ರ ವೇಷದಿಂದ ಒಬ್ಬ ನಗಿಸುತ್ತಾನೆ: ಆಗ "ಬಾದುಬ್ಬೆಯ ಪರ್ವಮುಂ ಪಗರಣದಾಟಮುಂ ಆದುವು" ಎಂದು 'ವಡ್ಡಾರಾಧನೆ'ಯ 'ಕಾರ್ತಿಕಋಷಿಯ ಕತೆ'ಯಲ್ಲಿ ಹೇಳಿದೆ. ಇದು ಏನನ್ನು ಸೂಚಿಸುವುದೋ ಹೇಳುವುದು ಕಷ್ಟ; ಆದರೆ ಪಗರಣ ಎಂಬುದು ನಗಿಸುವಂಥದು ಎಂಬ ಅರ್ಥ ಸ್ಪಷ್ಟವಾಗಿದೆ. 'ಶಬ್ದಮಣಿದರ್ಪಣ'ದಲ್ಲಿ ನಾಳ್ಪಗರಣ ಮತ್ತು ರಕ್ಕಸವಗರಣ ಎಂಬ ಪ್ರಭೇದಗಳನ್ನು ಹೇಳಿದೆ. ಹೀಗೆ ವೇಷ ಹಾಕುವವನೇ 'ಪಗರಣಿಗ'; ಈ ಪ್ರಯೋಗವೂ ಅಲ್ಲಿಯೇ ಇದೆ. 'ಪಗರಣದರಸ' ಎಂಬ ಪ್ರಯೋಗವು ಪಂಪನ 'ಆದಿಪುರಾಣ'ದಲ್ಲಿ ವೇಷಧಾರಿ ಎಂಬ ಅರ್ಥದಲ್ಲಿ ಬಂದಿದೆ ("ಬೆಸೆವವರ್ ಅರಸದೆಂತೊ ಪಗರಣದರಸಂ"). ಹಾಗೆಯೇ ಪಗರಣ ಎಂಬುದು ಕೃತಕ, ಕೃತ್ರಿಮ ಎಂಬರ್ಥದಲ್ಲಿಯೂ ಬಳಕೆಯಲ್ಲಿತ್ತು. 'ಧರ್ಮಾಮೃತ'ದಲ್ಲಿ 'ಪಗರಣದಾನೆ' ಎಂಬ ಪ್ರಯೋಗವಿದೆ.
ಈಗ ಪ್ರಕರಣ ಎಂಬ ಶಬ್ದವು ಪ್ರಸಂಗ ಅಥವಾ ಘಟನೆ ಎಂಬ ಸರಳ ಅರ್ಥದಲ್ಲಿ ಬಳಕೆಯಲ್ಲಿದ್ದರೂ, ಹಗರಣ ಎಂಬುದು ಮಾತ್ರ ಮೋಸ ಎಂಬರ್ಥದಲ್ಲಿ ಬಳಕೆಯಲ್ಲಿದೆ. ಅಕ್ಕಮಹಾದೇವಿಯು 'ನಗೆಹಗರಣ' (ಪ್ರಾಯಶಃ ನಗೆಪಾಟಲು)ದ ಬಗ್ಗೆ ಪ್ರಸ್ತಾಪಿಸುತ್ತಾಳೆ. ಈ ಅರ್ಥದಲ್ಲಿ ಈ ಶಬ್ದವನ್ನು ಪುರಂದರದಾಸರೂ ಬಳಸುತ್ತಾರೆ (ನಗೆಯು ಬರುತಿದೆ .. .. ಜಗದೊಳಿರುವ ಮನುಜರೆಲ್ಲ ಹಗರಣ ಮಾಡುವುದ ಕಂಡು). ಈಗಂತೂ ಈ ಶಬ್ದ ಇಂಗ್ಲಿಷ್‍ನ  scam ಎಂಬರ್ಥದಲ್ಲಿ ಬಳಕೆಯಾಗುತ್ತಿದೆ.
=====
ಹಗಲು: ಇದರ ಮೂಲರೂಪ 'ಪಗಲ್'. ತಮಿಳು, ಮಲಯಾಳಂಗಳಲ್ಲಿ ಇದು 'ಪಕಲ್', ತೆಲುಗಿನಲ್ಲಿ 'ಪಗಲು' 'ಪವಲು' ತುಳುವಿನಲ್ಲಿ 'ಪಗೆಲ್' ಎಂದಾಗುತ್ತದೆ. ಇದರ ಅರ್ಥ ದಿವಸ ಎಂದು ("ದಿವಸಂ ದಿನಂ .. .. ಪಗಲ್" - ನಾಗವರ್ಮನ 'ಅಭಿಧಾನ ವಸ್ತುಕೋಶ'). ಸೂರ್ಯನನ್ನು ಕೆಲವು ಕಾವ್ಯಗಳು 'ಪಗಲಾಣ್ಮ' ಎನ್ನುತ್ತವೆ ("ಪಗಲಾಣ್ಮನ ಮೆಯ್ ಬಿಸುಪೇ ಮಾಗಿ ಚೆಚ್ಚರದೊಳೆ ಪಾ" - ಆಂಡಯ್ಯನ 'ಕಬ್ಬಿಗರ ಕಾವ'). ಸೂರ್ಯನನ್ನು ಸೋಮದೇವನ 'ಉದ್ಭಟಕಾವ್ಯವು' 'ಪಗಲೆಱೆಯ' ಎನ್ನುತ್ತದೆ ("ಪಗಲೆರಙೆಯನುದಯಮಂ ಬಯಸಿ ಕಡು ಪೆರ್ಚುತುಂ"). ಉಲ್ಕೆಯನ್ನು ಕಾವ್ಯಗಳು ಪಗಲುಳ್ಕ ಎನ್ನುತ್ತವೆ ("ಮಿಱುಗಿದುವು ಪಗಲುಳ್ಕಂಗಳ್ ದೆಸೆಯೊಳ್" - ಅಗ್ಗಳನ 'ಚಂದ್ರಪ್ರಭ ಪುರಾಣ'). ಇರುಳುಪಗಲು ನಿರಂತರೆಯನ್ನು ಸೂಚಿಸುವ ಸಮಾಸಪದ ("ನೆನೆದಿರುಳುಂ ಪಗಲುಂ ನಿನ್ನನೆ" - 'ಕವಿರಾಜಮಾರ್ಗ'). ನಾಗಚಂದ್ರನ 'ಪಂಪರಾಮಾಯಣ'ವು ದಿನದ ಬೆಳಕನ್ನು 'ಪಗಲ ಸಿರಿ' ಎಂದು ವರ್ಣಿಸುತ್ತದೆ ("ಪಗಲಸಿರಿಗೆ ಕಣ್ದೆಱವಿ ಮಾಡೆ").
ನಡುಗನ್ನಡ-ಹೊಸಗನ್ನಡಗಳಲ್ಲಿ 'ಪಗಲು' 'ಹಗಲು' ಎಂದಾಗುತ್ತದೆ. ದುರ್ಗಸಿಂಹನ 'ಪಂಚತಂತ್ರ'ದಲ್ಲಿಯೇ ಈ ರೂಪವಿದೆ ("ಹಗಲಿರುಳು, ಉದಯಬೈಗುಗಳು"). ಚೆನ್ನಬಸವಣ್ಣ ಹಗಲನ್ನು ವಾರ ಎನ್ನುತ್ತಾನೆ: "ಹಗಲೊಂದು ವಾರ ಇರುಳೊಂದು ವಾರ, ಭಕ್ತನೊದು ಕುಲ ಭವಿಯೊಂದು ಕುಲ". "ನಿಗಿನಿಗಿ ಮುಗಿಲು ನಿಗಿನಿಗಿ ಹಗಲು ಕೆಂಡವ ಕಾರುವದು" ಎಂಬುದು ಬೇಂದ್ರೆಯವರ ಸಾಲು. ಸೂರ್ಯನನ್ನು ಗೋವಿಂದಪೈ ತಮ್ಮ 'ಗೊಲ್ಗೊಥಾ'ದಲ್ಲಿ 'ಹಗಲಿನ ದೀಪ' ಎನ್ನುತ್ತಾರೆ ("ಹಗಲಿನ ದೀಪವಾರಿತೇನೆಂದು ನೆರೆದವರೆಲ್ಲರೆದೆ ನಡುಗೆ").
'ಹಗಲುಗನಸು' ಎಚ್ಚರಸ್ಥಿತಿಯಲ್ಲಿ ಮಾಡಿಕೊಳ್ಳುವ ರಮ್ಯಕಲ್ಪನೆ. 'ಹಗಲುಗನಸುಗಳು' ಎಂಬುದು ಎ.ಎನ್. ಮೂರ್ತಿರಾಯರ ಸುಂದರವಾದ ಲಲಿತಪ್ರಬಂಧ. ಈ ಶಬ್ದವನ್ನು ಭ್ರಮೆ, ಸುಳ್ಳು, ವ್ಯರ್ಥಕಲ್ಪನೆ ಎಂಬರ್ಥದಲ್ಲಿಯೂ ಬಳಸುತ್ತೇವೆ. 'ಹಗಲುವೇಷದವರು' ಎಂಬ ಒಂದು ಪಂಗಡವು ವೇಷ ಹಾಕಿ ಜೀವನ ನಡೆಸುವವರು. ಎಲ್ಲರಿಗೂ ಗೊತ್ತಾಗುವ ಹಾಗೆಯೇ ಮಾಡುವ ಮೋಸವನ್ನು 'ಹಗಲು ದರೋಡೆ' ಎನ್ನುತ್ತಾರೆ.
=====
ಹಣತೆ: ಪ್ರಾಯಶಃ ಇದು ಸಂಸ್ಕೃತದ 'ಪ್ರಣಿತ' ಎಂಬ ಶಬ್ದದ ತದ್ಭವ.; 'ಪ್ರಣೀತಾ'ದ ತದ್ಭವ ಎಂದೂ ಕೆಲವರು ಹೇಳುತ್ತಾರೆ.  "ಪ್ರಣಿತಃ ಸಂಸ್ಕೃತೋನಲಃ" (ಮಂತ್ರದಿಂದ ಸಂಸ್ಕರಿಸಲ್ಪಟ್ಟ ಅಗ್ನಿ) ಎಂದು 'ಅಮರಕೋಶ'ವು ಅರ್ಥ ನೀಡುತ್ತದೆ. ಕನ್ನಡದಲ್ಲಿ ಇದು ಪಣತಿ, ಪಣಿತೆ, ಪ್ರಣತಿ, ಪ್ರಣತೆ, ಹಣತೆ ಮುಂತಾದ ಹಲವು ರೂಪಗಳನ್ನು ತಾಳುತ್ತದೆ; ಮಣ್ಣಿನ ಅಥವಾ ಲೋಹದ ಸೊಡಲು ಎಂಬುದು ಇದರ ಅರ್ಥ. ಈ ಶಬ್ದ ಹನ್ನೆರಡನೆಯ ಶತಮಾನದಿಂದೀಚೆಗೆ ವ್ಯಾಪಕ ಬಳಕೆಗೆ ಬಂದಿರಬಹುದು; ಏಕೆಂದರೆ ಪ್ರಾಚೀನ ಚಂಪೂ ಕಾವ್ಯಗಳಲ್ಲಿ ಈ ಯಾವ ರೂಪಗಳೂ ಈ ಅರ್ಥದಲ್ಲಿ ದೊರೆಯುವುದಿಲ್ಲ. ಆದರೆ ಕ್ರಿಶ 1112 ರಚಿತವಾದ ನಯಸೇನನ 'ಧರ್ಮಾಮೃತ'ದಲ್ಲಿ ಮಾತ್ರ "ಹಣಿತೆಯೊಳ್ ಕೂಡಿ ಬತ್ತಿಯಿಂದೆಣ್ಣೆಯಿಂದಂ ಬೆಂಕಿಯಿಂದಂ ಬೆಳಗಿಂದಂ ಸೊಡರೆಂತೊಪ್ಪುಗುಂ" ಎಂಬ ಉಪಮೆಯೊಂದು ದೊರೆಯುತ್ತದೆ. ವಚನಗಳಲ್ಲಿ ಈ ಶಬ್ದದ ವಿವಿಧ ರೂಪಗಳು ಬಳಕೆಗೊಂಡಿವೆ. "ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬೊ ತೈಲವನೆರೆದು" ಎಂದು ಆರಂಭವಾಗುವ ಅಲ್ಲಮನ ವಚನ ಸುಪ್ರಸಿದ್ಧವಾದುದು. "ಪ್ರಣಿತೆಯೂ ಇದೆ, ಬತ್ತಿಯೂ ಇದೆ ಜ್ಯೋತಿಯ ಬೆಳಗುವರೆ ತೈಲವಿಲ್ಲದೆ ಎಂತಪ್ಪುದಯ್ಯಾ" ಎಂಬುದು ಅಲ್ಲಮನ ಮತ್ತೊಂದು ವಚನ. "ಮೂಗಿನ ಕಪ್ಪು ಪಣಿತೆಯ ಕತ್ತಲೆ ಜ್ಯೋತಿಯೆಂಬರು" ಎಂಬುದು ಸರ್ವಜ್ಞನ ಒಂದು ತ್ರಿಪದಿಯ ಸಾಲು. ಅಲ್ಲದೆ, ಹಳಗನ್ನಡ ಪದಗಳ ಆದಿಯ ಪಕಾರ ನಡುಗನ್ನಡದಲ್ಲಿ ಹಕಾರವಾದಂತೆ ಇಲ್ಲಿಯೂ ಆಗಿ, ಹಣತೆ ಎಂದಾಗುತ್ತದೆ. ಹಳಗನ್ನಡ ವ್ಯಾಕರಣಗ್ರಂಥವಾದ 'ಶಬ್ದಮಣಿದರ್ಪಣ'ದಲ್ಲಿಯೇ "ಪ್ರಣಿತ=ಹಣತೆ" ಎಂದು ಅರ್ಥ ಕೊಟ್ಟಿದೆ. ಈ ಗ್ರಂಥದ ಕಾಲ ಹದಿಮೂರನೆಯ ಶತಮಾನದ ಕೊನೆ: ಆ ಹೊತ್ತಿಗೆ ವಚನ ಚಳವಳಿ ನಡೆದಿತ್ತು. ಅದರ ಪ್ರಭಾವದಿಂದ ಆ ಪದ ಇಲ್ಲಿ ಕಾಣಿಸಿಕೊಂಡಿರಬೇಕು. ಅಂಬಿಗರ ಚೌಡಯ್ಯನ ವಚನವೊಂದರಲ್ಲಿ 'ಹಣತಿ' ಎಂಬ ರೂಪ ದೊರೆಯುತ್ತದೆ: "ಹಣತಿ ನೆಕ್ಕುವ ಮಠಪತಿ ಪಂಚಮಠಕ್ಕೆ ಸಲ್ಲ" ಎಂಬುದು ಅಲ್ಲಿನ ಮಾತು.
 ಹೊಸಗನ್ನಡದಲ್ಲಿ 'ಹಣತೆ' ಎಂಬ ರೂಪದ ಬಳಕೆ ಸಾಮಾನ್ಯ. "ಗುಡಿಕತ್ತಲೆಯೊಳು ಹಣತೆಗಳೆಸೆದಿವೆ ತಮವೇ ಪುಷ್ಪಿತವಾದಂತೆ" ಎಂಬ ಚಿತ್ರ ಪುತಿನ ಅವರ 'ಯದುಗಿರಿಯ ಮೌನವಿಕಾಸ' ಕವಿತೆಯದು. "ಎಣ್ಣೆ ತೀರುತ್ತಲಿರೆ ಒಡಕು ಹಣತೆಯ ಮುಂದೆ ಬತ್ತಿ ಹೊಸೆತ" ಎಂಬ ವ್ಯರ್ಥತೆಯ ಪ್ರತೀಕ ಗೋಪಾಲಕೃಷ್ಣ ಅಡಿಗರ 'ಭೂಮಿಗೀತ' ಕವನದಲ್ಲಿ ಬರುತ್ತದೆ. ಚೆನ್ನವೀರ ಕಣವಿಯವರ 'ನೆಲಮುಗಿಲು' ಕವನದ "ಹಳತು ಹೊಸತನು ಹಿಂಜಿ ಹೊಸೆದು ಹೊತ್ತಿಸಿ ಹಿಡಿದ ಶಾಂತಿಪಣತಿ" ಎಂಬಲ್ಲಿ ಹಳೆಯ ರೂಪವೇ ಇದೆ.
=====
ಹಸಿವು: ಇದು ಪಸಿ ಎಂಬ ಧಾತುವಿನಿಂದ ರೂಪಿತವಾದ ಶಬ್ದ. ಪಸಿ ಎಂದರೆ ಹಸಿವಾಗುವುದು: "ಪೆಣ್ಬುಲಿ ಪಲವು ದಿವಸಂ ಆಹಾರಮಂ ಪೆಱದೆ ಪಸಿದು ಮಮ್ಮಲ ಮಱುಗುತ್ತಿರ್ದು" - ಎಂಬುದು 'ವಡ್ಡಾರಾಧನೆ'ಯ ಪ್ರಯೋಗ. "ಕ್ಷುಧಾಶನಾಯಾಗ್ರಾಸೇಚ್ಛಂ ಕ್ಷುದ್ಭುಭುಕ್ಷೆಗಳ್ ಪಸಿವೆನಿಕುಂ" ಎಂಬುದು 'ಅಭಿಧಾನ ವಸ್ತುಕೋಶ'ದ ವಿವರಣೆ. "ವಿಚಿತ್ರಮೇಂ ಕಾಣಲೊಡಂ ಪಸಿವುಂ ತೃಷೆಯುಂ ಕೆಡುವುದು ರಸಋದ್ಧಿಯಿನಾ ಮುನೀಂದ್ರಚಂದ್ರನ ಮುಖಮಂ" - ಜನ್ನನ 'ಅನಂತನಾಥ ಪುರಾಣ'. "ಭದ್ರಬಾಹು ಭಟ್ಟಾರರ್ .. .. ಪಲವು ದಿವಸದಿಂದಂ ಪಸಿವುಂ ನೀಱೞ್ಕೆಮಂ ಸೈರಿಸಿ" - 'ವಡ್ಡಾರಾಧನೆ'.
ನಡುಗನ್ನಡದಲ್ಲಿ ಹಸಿವು ಎಂಬ ರೂಪ ಕಾಣಿಸಿಕೊಂಡಿತು. ಆದರೆ 'ಕರ್ಣಾಟಕ ಪಂಚತಂತ್ರಕಿದಲ್ಲಿ ಈ ಎರಡು ರೂಪಗಳೂ ದೊರೆಯುತ್ತವೆ: "ಅಂತ್ಪಡಂ ನಿನ್ನ ಪಸಿವು ಕೆಟ್ಟು ಬಲಮಪ್ಪನ್ನೆವರಂ ಕಿರುಗಪ್ಪೆಗಳಂ ತಿನುತಿರು" ಹಾಗೂ "ಹಸಿವು ತೃಷೆಯುಳ್ಳಾತನು, ಕುರುಡನು ಆಗ ಹಗೆಯ ಮನೆಗೆ ತಿರಿದುಂಬುದಕ್ಕೆ ಹೋಹನು". "ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿದಡೆ ವಿಷವೇಱಿತ್ತಯ್ಯಾ ಆಪಾದಮಸ್ತಕಕ್ಕೆ; ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ ವಸುಧೆಯೊಳಗಾತನೇ ಗಾರುಡಿಗ ಕಾಣಾ ರಾಮನಾಥ" ಎಂಬ ವಚನದಲ್ಲಿ ಜೇಡರ ದಾಸಿಮಯ್ಯನು ಹಸಿವಿನ ವಿರಾಡ್ರೂಪ ಹಾಗೂ ಅನ್ನದ ನಿತ್ಯಸಮಸ್ಯೆಯನ್ನು ಅದ್ಭುತವಾಗಿ ಚಿತ್ರಿಸುತ್ತಾನೆ. "ಹಸಿವಿನ ಪ್ರೇಮಕ್ಕೆ ಬೋನವ ಹಿಡಿವರು, ತೃಷೆಯ ಪ್ರೇಮಕ್ಕೆ ಮಜ್ಜನಕ್ಕೆರೆವರು; ದೇವರಿಲ್ಲ, ಭಕ್ತರಿಲ್ಲ" ಎಂಬ ಮಾರ್ಮಿಕವಾದ ಮಾತು ಅಲ್ಲಮಪ್ರಭುವಿನದು. "ಹಸಿವಾದಡುಂಬುದನು ಸತಿಯ ಸಂಭೋಗವನು ಆನಾಗಿ ನೀ ಮಾಡೆಂಬವರುಂಟೆ?" ಎಂಬ ಮರ್ಮಛೇದಕ ಮಾತು ಬಸವಣ್ಣನದು. "ಹಸಿವೆ ನೀನು ನಿಲ್ಲು ನಿಲ್ಲು; ತೃಷೆಯೇ ನೀನು ನಿಲ್ಲು ನಿಲ್ಲು .. .. ನಾನು ಚೆನ್ನಮಲ್ಲಿಕಾರ್ಜುನನ ಅವಸರದ ಓಲೆಯನೊಯ್ಯುತ್ತಿದ್ದೇನೆ" ಎಂದು ಸಹಜಪ್ರವೃತ್ತಿಗಳಿಗೆ ತಡೆಯೊಡ್ಡುವವಳು ಮಹಾದೇವಿಯಕ್ಕ. "ಜಿಂಕೆಗೂ ಹಸಿವು: ಹುಲಿಗೂ ಹಸಿವು" ಎಂಬುದು ಕೆಎಸ್ನ ಅವರ 'ತೆರೆದ ಬಾಗಿಲ' ಕವನದ ಸಾಲು. ಹಸಿವೆ ಎಂಬ ರೂಪವೂ ಇದೆ: "ಗಂಟಲೊತ್ತಿತು ಹಸಿವೆ - ಹೆಣ್ಣುಸಿರು ಹೊರಳಾಡಿತು" ಎಂಬುದು ಕವೆಂ ರಾಜಗೋಪಾಲರ 'ಕರ್ಮಕಾಂಡ' ಕವಿತೆಯ ಸಾಲು. ಹಸಿವು ಎಂಬುದು ರೂಪಕವಾಗಿ ಎಲ್ಲ ತರದ ಬಯಕೆಗಳನ್ನೂ ಸಂಕೇತಿಸುತ್ತದೆ.
=====
ಹಾಡು: ಇದು ಮೂಲತಃ ಪಾಡು ಎಂಬ ರೂಪದ್ದು; ರಾಗಬದ್ಧವಾಗಿ ಸಂಗೀತ ಹೇಳು ಎಂದು ಕ್ರಿಯಾಪದವಾಗಿಯೂ ಗೀತ ಎಂಬ ನಾಮವಾಚಕವಾಗಿಯೂ ಬಳಕೆಯಲ್ಲಿದೆ. ಇದೊಂದು ದ್ರಾವಿಡ ಪದ. ತಮಿಳು ಮತ್ತು ಮಲಯಾಳಂಗಳಲ್ಲಿ ಪಾಟು, ತೆಲುಗಿನಲ್ಲಿ ಕ್ರಿಯಾಪದವಾಗಿ ಪಾಡು ಮತ್ತು ನಾಮರೂಪದಲ್ಲಿ ಪಾಟ ಎಂಬ ರೂಪಗಳನ್ನು ತಾಳುತ್ತದೆ. ಹಳಗನ್ನಡದಲ್ಲಿ ಪಾಟ ಎಂಬುದು ಹಾಡು, ಹಾಡಿಕೆ ಎಂಬರ್ಥದಲ್ಲಿ ಬಳಕೆಯಾಗಿದೆ; ರನ್ನನ 'ಅಜಿತಪುರಾಣ'ದಲ್ಲಿ "ಪಾಟಂ ಕಾಮುಕಗಣಮೃಗಕೋಟಿಗೆ ಮನಸಿಜನ ಗೋರಿಗಾಡುವ ಪಾಟಂ" ಎಂಬ ಸಾಲಿದೆ. ಹಾಗೆಯೇ ಪಾಡುಂಗಾಱ, ಪಾಡುಕಾಱ, ಪಾಡುಂಗಾಱಿಕೆ ಮುಂತಾದ ಸಾಧಿತರೂಪಗಳು ದೊರೆಯುತ್ತವೆ. ಹೊಸಗನ್ನಡದಲ್ಲಿ ಇವು ಹಾಡಿಕೆ, ಹಾಡುಗಾರ, ಹಾಡುಗಾರ್ತಿ, ಹಾಡುಗಾರಿಕೆ ಎಂದಾಗುತ್ತವೆ. ಕೋಗಿಲೆಯ ಹಾಡು ಎನ್ನುವಾಗ ಈ ಪದಕ್ಕೆ ಮಧುರಧ್ವನಿ ಎಂಬ ಅರ್ಥವುಂಟಾಗುತ್ತದೆ.
ಹಳಗನ್ನಡದ ಪಾಡು ಹೊಸಗನ್ನಡದಲ್ಲಿ ಹಾಡು ಎಂದಾಗಿ ಹಿಂದಿನ ಅರ್ಥಗಳನ್ನು ಮುಂದುವರೆಸಿಕೊಂಡು ಬಂದಿದ್ದರೂ, ಪಾಡು ಎಂಬ ಹಳೆಯ ರೂಪವೂ ಬಳಕೆಯಲ್ಲಿದೆ, ಆದರೆ ಬೇರೆಯ ಅರ್ಥದಲ್ಲಿ. ಪಾಡು ಎಂದರೆ ಕಷ್ಟ, ಕೋಟಲೆ ಎಂಬರ್ಥಗಳಿವೆ. ಬೇಂದ್ರೆಯವರ "ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ಹೇಳುವೆನು ರಸಿಕ ನಿನಗೆ; ಕಲ್ಕುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ" ಎಂಬ ಪ್ರಸಿದ್ಧವಾದ ಸಾಲುಗಳಲ್ಲಿ ಪಾಡು-ಹಾಡುಗಳ ಅರ್ಥವ್ಯತ್ಯಾಸ ಎದ್ದು ಕಾಣುತ್ತದೆ. ಆದರೆ ಹಾಡು ಎಂಬುದಕ್ಕೆ ಇಲ್ಲಿ ಒಳ್ಳೆಯದು, ಸತ್ವ ಎಂಬ ಅರ್ಥ ಬಂದಿದೆ. ಹಾಡುಗಬ್ಬ ಎಂಬುದು ರಾಗವಾಗಿ ಹೇಳಬಲ್ಲಂತಹ ಕಾವ್ಯವನ್ನು ಸೂಚಿಸುತ್ತದೆ.
ಪಾಡು ಎಂಬುದು ಕೆಲವು ಕಡೆ ಸುಸ್ಥಿತಿ, ಒಳ್ಳೆಯದು ಎಂಬರ್ಥಗಳಲ್ಲಿಯೂ ಬಳಕೆಯಲ್ಲಿದೆ. 'ಪಾಡೈತಿ' ಎಂದರೆ ಚೆನ್ನಾಗಿದೆ ಎಂಬರ್ಥ. 'ಪಾಡದೀರೇನ್ರೀಕ?' ಎಂಬುದು ಆರೋಗ್ಯ ವಿಚಾರಿಸುವ ಶಬ್ದ. 'ಅದ ಪಾಡಕ' ಎಬಂಥ ಕಡೆ ಆ ಶಬ್ದಕೆ ಚೆನ್ನ ಎಂಬರ್ಥ ಬರುತ್ತದೆ. ಹಾಗೆಯೇ ಕಷ್ಟ ಎಂಬರ್ಥವೂ ಇದೆ: ಪಾಡಚಾಕರಿ ಎಂದರೆ ಕಷ್ಟದ ಕೆಲಸ.
=====
ಹಾದರ: ಹಳಗನ್ನಡದಲ್ಲಿದು 'ಪಾದರ' ಎಂಬ ರೂಪವನ್ನು ಹೊಂದಿತ್ತು. ಇದು ಸಂಸ್ಕೃತದ 'ಪಾರದಾರ್ಯ' ಎಂಬ ಶಬ್ದದ ತದ್ಭವ. ಇದಕ್ಕೆ ಜಾರತನ ಎಂಬರ್ಥವಿದೆ. 'ಪರದಾರ' ಎಂದರೆ ಬೇರೆಯವನ ಹೆಂಡತಿ ಎಂಬರ್ಥ; ಹೀಗಾಗಿ ಬೇರೆಯವನ ಹೆಂಡತಿಯ ಜೊತೆಗಿರಿಸಿಕೊಂಡ ಸಂಬಂಧವನ್ನೇ ಪಾರದಾರ್ಯ ಎಂದು ಕರೆದಿರುವಂತೆ ತೋರುತ್ತದೆ. ಈ ಶಬ್ದದ ಇತರ ರೂಪಗಳಾದ 'ಪಾರದಾರ' 'ಪಾರದರ' 'ಪಾರದ್ವಾರ' ಎಂಬ ರೂಪಗಳು ಹಳಗನ್ನಡ ಕಾವ್ಯಗಳಲ್ಲಿ ಬಳಕೆಯಲ್ಲಿದ್ದುವು. "ಮಹಾದುಃಖಕೆ ಪಾರದಾರಮೆ ಮೊದಲ್" ('ಧರ್ಮಾಮೃತ'); "ನೋಡುವೊಡೆ ಅವನೇಕಾಂತದೊಳಾಡುವೊಡೆ ಅದು ಪಾರದರಮೆ ದಿಟಂ" ('ಪಾರ್ಶ್ವನಾಥ ಪುರಾಣ'); 'ಕೊಲೆ ಹೊಲೆ ಪಾರದ್ವಾರವ ಪಾತಕ ಮಾಡುವರೊಳಗಿಟ್ಟುಕೊಂಡು" (ಕೋಲಶಾಂತಯ್ಯನ ವಚನ). ಪಾದರ ಶಬ್ದವನ್ನು ರನ್ನನ 'ಗದಾಯುದ್ಧ'ದ "ದೋಷಾವಸಥರ್ ಪಾದರದಿಂ ಜನಿಯಿಸಿದರ್" ಎಂಬ ಪ್ರಯೋಗದಲ್ಲಿ ಕಾಣಬಹುದು.
ಪಾದರ ಮಾಡುವವನು 'ಪಾದರಿಗ' ("ಅನ್ನೆಗಮವಳ್ ನೆರೆಮನೆಯ ಪಾದರಿಗನಂ ಬರಿಸುವುದುಂ" - ದುರ್ಗಸಿಂಹನ 'ಪಂಚತಂತ್ರ'). ಸ್ತ್ರೀಲಿಂಗರೂಪ 'ಪಾದರಿ' ("ಆ ಪಾದರಿ ಬೇಸತ್ತವೊಲಿರೆ ಪೋದಂ" - ಜನ್ನನ 'ಯಶೋಧರ ಚರಿತೆ'). (ಪಾದರಿ ಎಂಬುದು ಸಂಸ್ಕೃತದ ಪಾಟಲ ಎಂಬ ಮರ ಮತ್ತದರ ಹೂವಿಗೂ ಅನ್ವಯಿಸುವ ಪದವಾಗಿದೆ). 'ಪಾದರಿಗೆ' ಎಂಬ ರೂಪವೂ ಇದೆ ("ತುಡುಗುಣಿ ಪಾದರಿಗೆ ರಂಡೆ ಕೀೞ್ಜಾತಿಯವಳ್" - ಬ್ರಹ್ಮಶಿವನ 'ಸಮಯ ಪರೀಕ್ಷೆ'). ಜಾರತನ ಮಾಡು ಎಂಬರ್ಥದಲ್ಲಿ 'ಪಾದರಿಸು' ಎಂಬ ಪ್ರಯೋಗವಿತ್ತು ("ಜಲಜಶರಚಾಪಮಂ ನಿಲಿಸಲಾರದೆ ಬಂಧುಗಳು ತಿಳಿಯದಂತೆ ಪಾದರಿಸುತಡಕದೊಳಿರಲು" - ಕೋಳೂರು ಶಂಕರಕವಿಯ 'ನವಮೋಹನ ತರಂಗಿಣಿ").
ಹಳಗನ್ನಡಪದಗಳಲ್ಲಿನ ಆದಿ ಪಕಾರ ನಡುಗನ್ನಡದಲ್ಲಿ ಬಹುತೇಕ ಕಡೆ ಹಕಾರ ಆಗಿರುವಂತೆ, ಪಾದರ ಹಾದರವಾಗುತ್ತದೆ. "ಅನ್ಯದೈವವೆಂಬುದು ಹಾದರ ಕಾಣಿರೋ" ಎಂಬುದು ಬಸವಣ್ಣನ ವಚನ. 'ಹಾದರಗಿತಿ' ಎಂಬ ಪ್ರಯೋಗ 'ಶಬ್ದಮಣಿದರ್ಪಣ'ದಲ್ಲಿಯೇ ಇದೆ. 'ಹಾದರಗಿತ್ತಿ' ಎಂಬ ರೂಪ ಚೆನ್ನಬಸವಣ್ಣನ ವಚನವೊಂದರಲ್ಲಿದೆ. ಹಾದರ ಮಾಡುವುದು ಹಾದರವಾಡು: "ಮುರಾರಿ ಗೋಪಿಯರಲ್ಲಿ ಹಾದರವಾಡಿ" ಎಂಬುದು 'ಬಸವಪುರಾಣ'ದ ಮಾತು. 'ಹಾದರವಿದ್ದೆ'ಯ ಪ್ರಸ್ತಾಪ ಕನಕದಾಸರ 'ಮೋಹನತರಂಗಿಣಿ'ಯಲ್ಲಿದೆ. ಹಾದರಿಕೆಗೆ ವಿಧಿಸುವ ಶಿಕ್ಷೆ ಗಂಡಸಿನ ತಲೆ ಕತ್ತರಿಸುವುದು, ಹೆಂಗಸಿನ ಮೂಗು ಕತ್ತರಿಸುವುದು ಎಂದು ಕ್ರಿಶ. 992 ಶಾಸನ ಹೇಳುತ್ತದೆ ("ಪಾದರಿಗೆಯ ಮೂಗನರಿದು ಪಾದರಿಗನಂ ಕೊಲ್ವುದು"). ಹಾದರದ ಪ್ರಸಂಗದಲ್ಲಿ ಸತ್ತವರಿಗಾಗಿ ಯಾರು ಅಳುತ್ತಾರೆ ಎಂದು 'ಪಂಪಭಾರತ'ದಲ್ಲಿ ಬರುತ್ತದೆ: "ಪಾರದರೊಳ್ ಸತ್ತಂಗಳಲ್ವನ್ನರಾರ್".
=====
ಹಿಡಿ: ಹಿಡಿದುಕೊ ಎಂಬ ಕ್ರಿಯಾರ್ಥದಲ್ಲಿಯೂ, ಹಿಡಿದುಕೊಳ್ಳುವಾಗ ಬೆರಳುಗಳನ್ನು ಮಡಿಸಿ ಆಗುವ ಮುಷ್ಟಿ ಎಂಬ ಅರ್ಥದಲ್ಲಿಯೂ, ಮುಷ್ಟಿಯಲ್ಲಿ ಅಡಗಿಸಿಕೊಳ್ಳಬಹುದಾದಷ್ಟು ಪ್ರಮಾಣ ಎಂಬರ್ಥದಲಿಯೂ ಈ ಪದ ಬಳಕೆಯಲ್ಲಿದೆ. ಇದರ ಮೂಲ ಪಿಡಿ ಎಂಬುದು: ಹಳಗನ್ನಡದಲ್ಲಿನ ಶಬ್ದಗಳ ಪಕಾರ ನಡುಗನ್ನಡದಲ್ಲಿ ಹಕಾರವಾಯಿತು. ಮೂಲರೂಪದಲ್ಲಿ ಪಿಡಿಕೆಯ್ ಮುಷ್ಟಿಯನ್ನು ಸೂಚಿಸುತ್ತದೆ, ಪಿಡಿಪೆಱು ಎಂದರೆ ಸೆರೆಸಿಕ್ಕು ಎಂದು, ಪಿಡಿಖಂಡ ಎಂದರೆ ಚಿಕ್ಕ ಚಿಕ್ಕ ತುಣುಕು. ಪಿಡಿಕಲ್ ಎಂಬುದು ಕುಂಬಾರನು ಮಡಕೆ ಮಾಡುವಾಗ ಕೈಯಲ್ಲಿ ಹಿಡಿದು ಬಡಿಯುವ ಸಣ್ಣ ಕಲ್ಲು ಎಂಬುದನ್ನು ಸೂಚಿಸುತ್ತದೆ. ಸ್ವೀಕರಿಸು, ಸೆರೆಹಿಡಿ, ಅವಲಂಬಿಸು, ಸ್ವಾಧೀನಪಡಿಸಿಕೊ ಮುಂತಾದ ಅರ್ಥಗಳೂ ಈ ಶಬ್ದಕ್ಕಿವೆ. ವಸ್ತುಗಳನ್ನು ಹಿಡಿಯುವ ಅರ್ಥವು ಮುಂದೆ ವಿಸ್ತಾರಗೊಂಡು ಮಾನಸಿಕ ಕ್ರಿಯೆಗಳನ್ನು ಅಥವಾ ಅಮೂರ್ತವಾದುದನ್ನು ಸೂಚಿಸಲೂ ಅನ್ವಯಗೊಂಡಿತು: 'ಅರ್ಥ ಹಿಡಿ' 'ಕಂಡುಹಿಡಿ' (ಡಿಸ್ಕವರಿ)  'ದೆವ್ವ ಹಿಡಿ' ಮುಂತಾದುವು.
ಪುರಸ್ಕಾರ ಹೊಂದು ಎಂಬ ಅರ್ಥವೂ ಈ ಪದಕ್ಕಿದೆ: "ನಮ್ಮ ರೂಪಾಯಿ ಅಮೆರಿಕದಲ್ಲಿ ಹಿಡಿಯುವುದಿಲ್ಲ" ಎಂಬ ವಾಕ್ಯವನ್ನು ನೋಡಿ. ಹಿಡಿ ಎಂಬುದಕ್ಕೆ ತೊಡಗು ಎಂಬರ್ಥವೂ ಇದೆ: "ಬೆಳಿಗ್ಗೆ ಹಿಡಿದ ಮಳೆ ಇನ್ನೂ ಬಿಟ್ಟಿಲ್ಲ" ಎಂಬುದನ್ನು ನೋಡಬಹುದು. ಹಿಡಿಹಿಡಿ ಎಂದರೆ ತೆಗೆದುಕೊ ಎಂಬರ್ಥವಿದೆ: "ಹಿಡಿಹಿಡೀಲೆ ರೊಕ್ಕಾ ತೆಗೆದು ಹಿಡಿಹಿಡಿ ಅನ್ನಾಂವಾ" ಎಂಬ ಸಾಲು ಬೇಂದ್ರೆಯವರ 'ಹುಬ್ಬಳ್ಳಿಯಾಂವ' ಕವನದಲ್ಲಿದೆ.
ವಸ್ತುಗಳನ್ನು ಹಿಡಿದುಕೊಳ್ಳುವ ಭಾಗವನ್ನು ಸೂಚಿಸಲೂ ಈ ಪದ ಬಳಕೆಯಾಗಿದೆ. ಕೈಯಲ್ಲಿ ಹಿಡಿದು ಗುಡಿಸುವ ಪೊರಕೆ ಎಂಬರ್ಥದಲ್ಲಿಯೂ ಕಠಾರಿ ಎಂಬರ್ಥದಲ್ಲಿಯೂ ಹಳೆಯ ಕಾವ್ಯಗಳಲ್ಲಿ ಈ ಪದ ಬಳಕೆಯಾಗಿದೆ. ಹಾಗೆ ಹಿಡಿದುಕೊಳ್ಳಲು ಇರುವ ಭಾಗವೇ ಹಿಡಿಕೆ ಅಥವಾ ಹಿಡಿ (ಇದನ್ನು ಕಾವು ಎಂದೂ ಕರೆಯುತ್ತಾರೆ). ಹಿಡಿದುಕೊಳ್ಳುವ ಕ್ರಿಯೆಯೇ ಹಿಡಿತ; ಹತೋಟಿ ಎಂಬರ್ಥವೂ ಇದಕ್ಕೆ ಬರುತ್ತದೆ. ಅನ್ನ, ಉಪ್ಪಿಟ್ಟು ಮುಂತಾದುವನ್ನು ಹಿಡಿಯಲ್ಲಿ ಒತ್ತಿ ಮಾಡುವ ತುತ್ತನ್ನು 'ಪಿಡಿಚೆ' ಎಂದು ಈಗಲೂ ಹೇಳುತ್ತಾರೆ.
ಪಿಡಿ ಎಂಬುದು ಪ್ರಾಣಿಗಳ ಹೆಣ್ಣನ್ನು ಸೂಚಿಸುವ ಪದವಾಗಿ ಹಳಗನ್ನಡದಲ್ಲಿಯೂ, ತಮಿಳು, ತೆಲುಗು ಮಲಯಾಳಂಗಳಲ್ಲಿಯೂ ಬಳಕೆಗೊಳ್ಳುತ್ತಿತ್ತು. ಪಿಡಿ ಎಂಬುದು ಮೊದಲು ಹೆಣ್ಣು ಆನೆಯನ್ನು ಮಾತ್ರ ಸೂಚಿಸುತ್ತಿದ್ದು, ಬರಬರುತ್ತ ಅದರ ಅರ್ಥ ವಿಸ್ತಾರಗೊಂಡಿದೆ.
====
ಹುಣಿಸೆ: ಇದು 'ಪುಳಿ' ಎಂಬ ಶಬ್ದದಿಂದ ರೂಪಿತವಾಗಿರುವ ಪದ. ಪುಳಿ+ಸೆ=ಪುಳಿಸೆ ಆಗಿ ಅದು ಮುಂದೆ ಪುಣಿಸೆ ಎಂದಾಗಿ ಈಗ ಹುಣಿಸೆ ರೂಪವನ್ನು ಪಡೆದಿದೆ. ಹಳಗನ್ನಡದಲ್ಲಿ ಪುಳಿಸೆ, ಪುಣಿಸೆ, ಪುಣುಸೆ, ಪುಣಸೆ, ಪುಳುಂಸೆ ಮುಂತಾದ ರೂಪಗಳಲ್ಲಿ ಬಳಕೆಯಾಗಿದೆ. ಪುಳಿ(ಹುಳಿ)ಯಾದ ರುಚಿಯಿರುವ ಹಣ್ಣು ಮತ್ತು ಅದರ ಮರ ಎರಡಕ್ಕೂ ಈ ಶಬ್ದ ಅನ್ವಯಿಸುತ್ತದೆ. "ಸಯ್ಯನೆ ಬನ್ದು ಪೊಲ ಪುಣಸೆ ಎವ ಕೀಲೆ ಅನ್ತೆ ಪೋಯಿ ಏ ಬಿರಿದೊರ್ಗ್ಗೆಱೆ ಮುಕೂಡಲ್" ಎಂಬ ವಾಕ್ಯ ಒಂಬತ್ತನೇ ಶತಮಾನದ ಶಾಸನವೊಂದರಲ್ಲಿ 'ಪುಣಸೆ' ರೂಪ ದೊರೆಯುತ್ತದೆ.  "ಸೂರಣದ ಗಡ್ಡೆಯಂ ಸೌವೀರದೆ ಮೇಣ್ ಕಲಸಿಕೊಂಡು ಪುಳಿಸೆಯ ಚಿಗುರಿಂ ನೀರೊಳ್ ಕುದಿಸಲ್ಕದು ಸಂಹಾರಿಕುಂ ಅಂತದಱ ವಿಷಮನಾಕ್ಷಣದಿಂ" ಎಂದು 'ಲೋಕೋಪಕಾರ' ಹೇಳುತ್ತದೆ. "ಪುಣಿಸೆಯ ಪೂವೆಲ್ಲಂ ಕಾಯಪ್ಪವೆ" ಎಂಬ ಪ್ರಶ್ನೆ 'ಧರ್ಮಾಮೃತ'ದಲ್ಲಿದೆ. ಹುಣಿಸೆ ಮರ ಬೆಳೆದ ಪ್ರದೇಶವೂ ಪುಣಿಸೆ ಎನಿಸಿಕೊಳ್ಳುತ್ತಿತ್ತು: "ಪುಣಿಸೆಯ ಮಧ್ಯದಿ ಭೂಮಿಯಂ ಮಾರುಗೊಂಡ" ಎಂಬುದು ಹನ್ನೊಂದನೆಯ ಶತಮಾನದ ಶಾಸನವೊಂದರ ಮಾತು. ಹದಿನಾಲ್ಕನೆ ಶತಮಾನದ ಒಂದು ಶಾಸನವು ಪುಣ್ಸೆ ರೂಪವನ್ನು ಬಳಸುತ್ತದೆ: "ಬಗೆವೊಡದೇನಾನುಂ ಬಾರ್ತೆಗಲದೆನಿಪರಳಿಗೊಲ್ದು ಪೊಡೆವಡುವ ನರಂ ಚಿಗುರಿಂ ಪೂವಿಂ ಕಾಯಿಂ ಸೊಗಯಿಪ ಮಾವಿಂಗೆ ಪುಣಿಸೆಗೆರಗಲ್ವೇಡಾ" ಎಂಬ ಗೇಲಿಯ ಮಾತು 'ಸಮಯ ಪರೀಕ್ಷೆ'ಯಲ್ಲಿದೆ. "ಭತ್ತ ಭ 1ಕ್ಕಂ ಹೆರ್ಜುಂಕಂ ಪುಣ್ಸೆ ಮೆಣಸಿನ ಭಾರಕ್ಕೆ ಗ 1". ಪುಣಿಸೆವಣ್ ಎಂಬ ಬಳಕೆಯೂ ಇದೆ: "ಜೇನ್ ಪುಣಿಸೆವಣ್ ಪೊಸನಾರ್ .. ಪೀಲಿಯೆಂಬಿವಂ ತುಂಬಿದ ಕಂಬಿಯಂ ತಳೆದದೇಂ ತಳರ್ದತ್ತೊ ಪುಳಿಂದ ಸಂಕುಳಂ" ಎಂಬುದು 'ರಾಜಶೇಖರವಿಳಾಸ'ದಲ್ಲಿನ ವರ್ಣನೆ.
ನಡುಗನ್ನಡದಲ್ಲಿ ಪಕಾರ ಹಕಾರವಾಗಿ ತಿರುಗಿತು: ಹುಣಸೆ, ಹುಣಿಸೆ, ಹುಣುಸೆ, ಹುಣಚಿ ಮುಂತಾದ ರೂಪಗಳಲ್ಲಿ ಈ ಪದ ಬಳಕೆಯಲ್ಲಿದೆ. "ಹುಣಿಸೆ ತಂತ್ರಿಣೀ ಚಿಂಚಾಹ್ವಂ" ಎಂದು ಹನ್ನೊಂದನೆಯ ಶತಮಾನದ ನಾಗವರ್ಮನ 'ಅಭಿಧಾನ ವಸ್ತುಕೋಶ'ವು ಸಮಾನಾರ್ಥಕಗಳನ್ನು ಕೊಡುತ್ತದೆ. "ಹುಣಿಸೆಯ ಕಾಯಂ ತಿಂದರಂತೆ ಚಳಿತು" ಎನ್ನುತ್ತದೆ 'ಧರ್ಮಾಮೃತ'. "ಹುಣುಸೆ ಮುಪ್ಪಡಸಿದಡೆ ಹುಳಿ ತಗ್ಗದು" ಎಂಬ ಗಾದೆಯನ್ನು ಹದಿನೆಂಟನೆಯ ಶತಮಾನದ 'ಪರಶುರಾಮ ರಾಮಾಯಣ'ವೆಂಬ ಕಾವ್ಯವು ಹೇಳುತ್ತದೆ. 'ಹೂತದ ಹುಣಸಿ' ಎಂಬ ತಮ್ಮ ಕವಿತೆಯಲ್ಲಿ ಬೇಂದ್ರೆಯವರು "ಉಗುರ್ಗೆಂಪು ಹಸಿರು ಬಿಳಿ ನಿಂಬಿ ಹುಣಸಿಯ ರೆಂಬಿ ಚಿಗತೀತೇನೊ ನಂಬಿ ಕಾಮನ ಬಿಲ್ಲಿನ ಕೊಂಬಿ" ಎಂದು ವರ್ಣಿಸುತ್ತಾರೆ. ಹುಣಿಸೆ ಹಣ್ಣು ಈಗ ನಾವು ಬಳಸುವ ಸಾಮಾನ್ಯ ರೂಪ. 'ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದ ಹಾಗೆ' ಎಂಬುದು ಪ್ರಸಿದ್ಧ ಗಾದೆ. ಸಾವಿರ ವರ್ಷದ ಹಿಂದೆ ಹುಣಿಸೆ ಈ ದೇಶದಲ್ಲಿಲ್ಲದಿದ್ದಾಗ ಅಡುಗೆಗೆ ಹುಳಿಮಾವನ್ನು ಬಳಸುತ್ತಿದ್ದರು  ಎಂದು ಬಿಜಿಎಲ್ ಸ್ವಾಮಿ ಹೇಳುತ್ತಾರೆ. ಆದರೆ ಒಂಬತ್ತನೆ ಶತಮಾನದ ಶಾಸನದಲ್ಲೇ 'ಪುಣಸೆ' ಶಬ್ದದ ಬಳಕೆಯಿತ್ತೆಂಬುದನ್ನಾಗಲೇ ನೋಡುದ್ದೇವೆ.  
=====
ಹುತ್ತ: ಇದು 'ಪುತ್ತ' ಅಥವಾ 'ಪುತ್ತು' ಎಂಬ ಶಬ್ದದ ಹೊಸಗನ್ನಡ ರೂಪ. ಪುತ್ತ ಎಂಬುದು ತಮಿಳಿನಲ್ಲಿ ಪುಱ್ಱಮ್ ಎಂಬ ರೂಪದಲ್ಲಿಯೂ, ಮಲಯಾಳಂನಲ್ಲಿ ಪುಱ್ಱ ಎಂಬಂತೆಯೂ, ತೆಲುಗಿನಲ್ಲಿ ಪುಟ್ಟ ರೂಪದಲ್ಲಿಯೂ ದೊರಕುತ್ತದೆ. ಗೆದ್ದಲು ಕಟ್ಟಿ ಹಾವು ವಾಸಿಸುವ ಜಾಗ ಎಂಬುದು ಇದರ ವಿವರಣೆ. 'ಕವಿರಾಜಮಾರ್ಗ'ದಲ್ಲಿ "ಬಿಸುಡಾಯುಧಮಂ ಪುಲ್ಲಂ ಕರ್ಚೇರು ಪುತ್ತನ್" ಎಂಬಲ್ಲಿ 'ಪುತ್ತ' ರೂಪವಿದ್ದರೆ, 'ಆದಿಪುರಾಣ'ದಲ್ಲಿನ "ಪುತ್ತಿನೊಳಗೊಯ್ಯನೆ ಕುತ್ತಿದ ಕೈಯಂ" ಎಂಬಲ್ಲಿ 'ಪುತ್ತು' ರೂಪವಿದೆ. ಆಲಂಕಾರಿಕ ಅರ್ಥದಲ್ಲಿ ನೆಲೆ ಎಂದಾಗುತ್ತದೆ: "ಇದು ಕಡು ನಾಣ ಪುತ್ತು" ('ಆದಿಪುರಾಣ').
ಈ ಶಬ್ದದಿಂದ ಅನೇಕ ನುಡಿಗಟ್ಟುಗಳಾಗಿವೆ. ಮೇಲೆ ಉಲ್ಲೇಖಿಸಿದ 'ಕವಿರಾಜಮಾರ್ಗ'ದ 'ಪುಲ್ಲಂ ಕರ್ಚೇಱು ಪುತ್ತನ್' ಎಂಬುದು ಯುದ್ಧದಲ್ಲಿ ಶರಣಾಗುವುದನ್ನು ಸೂಚಿಸುತ್ತದೆ. ಇದು 'ಗದಾಯುದ್ಧ'ದಲ್ಲಿ 'ಪುತ್ತನೇಱು' ಆಗಿದ್ದರೆ ("ಪುತ್ತನೇಱಿ ಕೊಲ್ಲದ ತುೞಿಲಾಳ್ತನಕ್ಕೆ"); 'ಪಂಚತಂತ್ರ'ದಲ್ಲಿ ಇದು 'ಪುತ್ತೇಱು' ಆಗುತ್ತದೆ ("ಪುತ್ತೇಱಿದನಂ ಕೈದುವನಿತ್ತನೇರ್ಪೆತ್ತನಂ ರಣಾಂಗಣದೊಳ್ ಬೆನ್ನಿತ್ತನನಿಱಿಯರ್"); ಹಾಗೆಯೇ 'ಪುತ್ತ' ಅಪಾಯ ಸ್ಥಳದ ಸಂಕೇತ: "ಪುಲಿಗಂಜಿ ಪುತ್ತವೇಱಿದಂತೆ" ('ಧರ್ಮಾಮೃತ'). ಪುತ್ತುಂಗಾಲ್ ಎಂದರೆ ಆನೆಕಾಲು ರೋಗ: "ಜವೆಯಂ ಗಂಧಕಮಂ ವಿಳಂಗವುನರೆದುಕೊಂಡು ನಾಡೆ ಭಾವಿಸಿ ಸರಳದ್ರವದಿದಂ ಪೂಸಿದೊಡಂ ಪುತ್ತುಂಗಾಲ ಪುತ್ತನಿರದುಪಶಮಿಕುಂ" ಎಂದು 'ಲೋಕೋಪಕಾರಂ'ನಲ್ಲಿ ಅದಕ್ಕೆ ಚಿಕಿತ್ಸೆಯನ್ನು ಹೇಳಿದೆ.
ಈ ಶಬ್ದ ಡುಗನ್ನಡದಲ್ಲಿ 'ಹುತ್ತ' ಅಥವಾ 'ಹುತ್ತು' ರೂಪ ಪಡೆಯುತ್ತದೆ. "ಹುತ್ತಕ್ಕೆ ಏಸು ಬಾಯಾದಡೇನು, ಸರ್ಪನಿಪ್ಪುದು ಒಂದೇ ಸ್ಥಾನ" ಎಂಬುದು ಬಸವಣ್ಣನ ಮಾತು. ರಾಘವಾಂಕನ 'ಹರಿಶ್ಚಂದ್ರಕಾವ್ಯ'ದಲ್ಲಿನ "ನಿಜಸುತನ ಕಂಡಳು ಹರಿಶ್ಚಂದ್ರನರಸಿ ಹುತ್ತಿನ ಮೊದಲೊಳು" ಎಂಬಲ್ಲಿ ಹುತ್ತು ರೂಪ ಪ್ರಯೋಗವಾಗಿದೆ. ಇಲ್ಲಿಯೂ ಅದು ಅನೇಕ ನುಡಿಗಟ್ಟುಗಳ ಮೂಲ. "ಮರನ ಹುತ್ತವನೇಱಿದವರ ಸಂಗರದಿ ದೈನ್ಯಬಡುವರ" ('ನಕದಾಸರ ಕನಳಚರಿತ್ರೆ') ಶರಣಾಗತಿಯ ಸೂಚನೆ; ಬಸವಣ್ಣನ ವಚನಗಳಲ್ಲಿನ "ಹುತ್ತದ ಮೇಲಣ ರಜ್ಜು ಮುಟ್ಟಿದಡೆ ಸಾವರು ಶಂಕಿತರಾದವರು" ಎಂಬಲ್ಲಿನ 'ಹುತ್ತದ ಮೇಲಣ ರಜ್ಜು' ಭ್ರಮೆಯನ್ನು ಸೂಚಿಸಿದರೆ; ಇನ್ನೊಂದೆಡೆಯ"'ಹುತ್ತವ ಬಡಿದಡೆ ಹಾವು ಸಾಯಬಲ್ಲುದೆ" ಎಂಬಲ್ಲಿ 'ಹುತ್ತವ ಬಡಿಕ' ವ್ಯರ್ಥಪ್ರಯತ್ನದ ಸಂಕೇತ. "ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಆ ಅಂಥ ರೂಪುರೇಖೆ' ಎಂಬ ಗೋಪಾಲಕೃಷ್ಣ ಅಡಿಗರ ಸಾಲಿನ 'ಹುತ್ತಗಟ್ಟು' ಎಂಬುದು ಚಿತ್ತೈಕಾಗ್ರತೆಯ ಸಂಕೇತವಾಗಿದೆ.
ವಾಲ್ಮೀಕಿ ಎಂದರೆ ಹುತ್ತದಲ್ಲಿ ಹುಟ್ಟಿದವನು ಎಂದರ್ಥ. ಇದನ್ನು ಕನ್ನಡ ಕವಿಗಳು ಕನ್ನಡಿಸುತ್ತಾರೆ: "ನಾನು ಕರಣೇಂದ್ರಿಯಂಗಳಿಗೆ ಹುತ್ತದ ಮೊತ್ತದವನ" ಎಂಬ ಘಟ್ಟಿವಾಳಯ್ಯನೆಂಬೊಬ್ಬ ವಚನಕಾರನ ಮಾತಿನಲ್ಲಿರುವ 'ಹುತ್ತದ ಮೊತ್ತದವ' ಋಷಿಯನ್ನು ಸೂಚಿಸುತ್ತದೆ. ಹಾಗೆಯೇ ಮುದ್ದಣ ವಾಲ್ಮೀಕಿಯನ್ನು 'ಪುತ್ತಿನಣುಗ' 'ಪುತ್ತಿನ ಪುತ್ರ' ಎನ್ನುತ್ತಾನೆ.
=====
ಹೆಂಗಸು: ಇದು ಎರಡು ಪದಗಳು ಕೂಡಿ ಆಗಿರುವ ಶಬ್ದ: ಪೆಣ್+ಕೂಸು. ಪೆಣ್ ತಮಿಳು, ಮಲಯಾಳಂಗಳಲ್ಲದ್ದರೆ, ತುಳುವಿನಲ್ಲಿ ಪೊಣ್ಣು ಎಂದಾಗುತ್ತದೆ. ಅಂತೆಯೇ ಕೂಸು ತಮಿಳಿನಲ್ಲಿ ಕುಙು, ಎಂದಿದ್ದರೆ ತೆಲುಗಿನಲ್ಲಿ ಕೂತು(ರು) ಎಂಬ ರೂಪಗಳಲ್ಲಿ ದೊರೆಯುತ್ತದೆ. ಪೆಣ್ ಎಂಬುದಕ್ಕೆ ಹೆಣ್ಣು ಎಂಬ ಅರ್ಥ ಸಾಮಾನ್ಯ. ಆದರೆ ಕೂಸು ಎಂಬುದು ಬೇರೆ ಬೇರೆ ಕಾಲಗಳಲ್ಲಿ ವಿವಿಧ ಅರ್ಥಚ್ಛಾಯೆಗಳನ್ನು ಪಡೆದಿದೆ. ಮಗು ಎಂಬ ಅರ್ಥದಲ್ಲಿ ಈ ಶಬ್ದವು 'ಕವಿರಾಜಮಾರ್ಗ'ದಲ್ಲಿಯೇ ಬಳಕೆಗೊಂಡಿದೆ ("ಕೂಸಿನ ತಲೆಯೊಳ್ ಬಿಣ್ಪೊರೆಯಂ ಇಟ್ಟ ತೆರಂ"); ಈ ಅರ್ಥದ ಜೊತೆಗೆ 'ವಡ್ಡಾರಾಧನೆ', 'ಆದಿಪುರಾಣ'ಗಳಲ್ಲಿ ಮಗು, ಗಂಡು ಮಗು, ಹೆಣ್ಣು ಮಗು ಎಂಬರ್ಥಗಳಲ್ಲಿ ಈ ಶಬ್ದ ಬಳಕೆಯಾಗಿದೆ. 'ಪಂಪಭಾರತದಲ್ಲಿ' ಮದುವೆ ಮಾಡಿಕೊಡಲು ಹೆಣ್ಣು ಕೇಳು ಎಂಬರ್ಥದಲ್ಲಿ 'ಕೂಸಂ ಬೇಡು' ಎಂಬ ಪ್ರಯೋಗವಿದೆ  ("ಶಂತನು .. .. ದಾಶರಾಜನಲ್ಲಿಗೆ ಕೂಸಂ ಬೇಡೆ"). ಮಕ್ಕಳಾಟ ಎಂಬರ್ಥದಲ್ಲಿ 'ಆದಿಪುರಾಣ'ದಲ್ಲಿ 'ಕೂಸಾಟ' ಎಂಬ ಶಬ್ದವಿದೆ.
ಮೊದಲು ಮಗು ಎಂಬ ಅರ್ಥವಿದ್ದುದು ಬರಬರುತ್ತ ಹೆಣ್ಣು ಮಗು ಎಂಬರ್ಥ ಪಡೆದಂತೆ ತೋರುತ್ತದೆ. "ನಮ್ಮ ಕುನ್ನಿಗೆ ಕೂಸ ಕೊಡಬೇಡ, ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ" ಎಂಬ ಬಸವಣ್ಣನ ಸಾಲಿನಲ್ಲಿ ಕೂಸು ಎಂಬುದಕ್ಕೆ ಕನ್ಯೆ, ಮದುವೆಯಾಗದ ಹುಡುಗಿ ಎಂಬ ಅರ್ಥವಿದೆ. ಅರ್ಥಸ್ಪಷ್ಟತೆಗೆ ಪೆಣ್ಗೂಸು ಎಂದು ಕರೆಯಲು ತೊಡಗಿ ('ಪೆಣ್ಗೂಸು' ಎಂಬ ಪ್ರಯೋಗ 'ವಡ್ಡಾರಾಧನೆ', 'ಪಂಪಭಾರತ', 'ಪಂಪರಾಮಾಯಣ' ಮುಂತಾದ ಕಾವ್ಯಗಳಲ್ಲಿಯೇ ಇದೆ) ಆ ಬಳಿಕ ನಡುಗನ್ನಡದಲ್ಲಿ ಹೆಂಗೂಸು ಎಂಬ ರೂಪ ಪಡೆಯಿತು: ಹರಿಹರನ 'ಬಸವರಾಜದೇವರ ರಗಳೆ'ಯಲ್ಲಿ "ನಾವು ಹೆಂಗೂಸಿಲ್ಲದೆ ಇರ್ದುದಿಲ್ಲ" ಎಂಬ ವಾಕ್ಯವಿದೆ. ಮುಂದೆ  ಈ ಶಬ್ದ ಹೆಂಗಸು ಎಂಬ ರೂಪವನ್ನು ಪಡೆದಿದೆ.
ಈಗ ಹೆಣ್ಣುಹೆಂಗಸು ಎಂಬ ಮಾತೂ ಇದೆ; ಅಸಹಾಯಕಳು ಎಂಬ ಅರ್ಥ ಇದಕ್ಕೆ ಇರುವಂತಿದೆ, ಹಾಗೆಯೇ 'ಮೂರು ಕಾಸಿನ ಹೆಂಗಸು ಎಂಬ ತಿರಸ್ಕಾರದ ಮಾತಿದೆ. ಆದರೆ ಇದು ಮೂಲತಃ 'ಮೂರು ಕೂಸಿನ ಹೆಂಗಸು' ಎಂಬ ಗೌರವಸೂಚಕ ಅಭಿವ್ಯಕ್ತಿ ಎಂದೂ ಕೆಲವರು ಹೇಳುತ್ತಾರೆ.
=====
ಹೊಟ್ಟೆ: ಇದೊಂದು ದ್ರಾವಿಡ ಪದ; ಹಳಗನ್ನಡದಲ್ಲಿದು 'ಪೊಡೆ' ಮತ್ತು 'ಪೊಟ್ಟೆ' ಎಂಬ ಎರಡು ರೂಪಗಳಲ್ಲಿಯೂ ದೊರೆಯುತ್ತದೆ. ತಮಿಳಿನಲ್ಲಿ ಪುಟೈ ಎಂದೂ ತೆಲುಗಿನಲ್ಲಿ ಪೊಡುಚು ಎಂದೂ ತುಳುವಿಲ್ಲಿ ಪೊಡೆ ಅಥವಾ ಪುಡೆ ಎಂದೂ ಆಗುತ್ತದೆ. ಕೇಶಿರಾಜನ 'ಶಬ್ದಮಣಿದರ್ಪಣ'ದಲ್ಲಿ ಪೊಡೆ ಎಂಬುದಕ್ಕೆ ಹೊಡೆಯುವುದು ಮತ್ತು ಹೊಟ್ಟೆ ಎಂಬ ಎರಡು ಅರ್ಥಗಳನ್ನು ಹೇಳಿದೆ ("ಪೊಡೆ- ಪ್ರಹರಣೇ ಕುಕ್ಷೇ ಚ"). "ಪೊಟ್ಟೆ ಬಟ್ಟಾಗಿರ್ದ ಪೆರವಟ್ಟ ನಡುವಂ ನೋಡಿ ಪೊಕ್ಕು" ಎಂಬುದು ರನ್ನನ 'ಗದಾಯುದ್ಧ'ದ ಮಾತು. 'ಪೊಟ್ಟೆವಾಯ್' ಎಂದರೆ ಹೊಟ್ಟೆ ಉಬ್ಬರಿಸಿಕೊಳ್ಳುವುದು ("ಅಂತು ಪೊಟ್ಟೆವಾಯಲ್ ತಿಂದು" - ನಾಗರಾಜನ ಕಪುಣ್ಯಾಸ್ರವಕಿ).
ಪ್ರಾಯಶಃ ಸಮಾಸಗಳಲ್ಲಿ ಪೊಡೆ ಎಂಬ ರೂಪವು ಬಳಕೆಯಲ್ಲಿತ್ತು. ಪೊಡೆಗಿಚ್ಚು ಎಂದರೆ ಹೊಟ್ಟೆಯುರಿ ("ಪೊಡೆಗಿಚ್ಚಿಂದವೆ ಜೀರ್ಣನಾದನಸುರಂ ವಾತಾಪಿ" - 'ಕರ್ಣಾಟಕ ಕಾದಂಬರಿ'). ವಿಷ್ಣುವನ್ನು ಆಂಡಯ್ಯನ 'ಕಬ್ಬಿಗರಕಾವ'ವು 'ಪೊಡೆಯಲರ' ಎನ್ನುತ್ತದೆ ("ಸಿರಿಯೊಳೊಂದಿಯುಂ ಪೊಡೆಯಲರನೆನಿಸಂ"). ಹೊಟ್ಟೆಯನ್ನು ನೆಲಕ್ಕೆ ತಾಕಿಸಿ (ಸಾಷ್ಟಾಂಗ) ನಮಸ್ಕಾರ ಮಾಡುವುದೇ 'ಪೊಡೆಮಡು'ವುದು ("ಪೊಡೆಮಡಲೆತ್ತುವ ಕೈಗಳ" – 'ಯಶೋಧರ ಚರಿತೆ'); ("ನಿನಗೆ ಪೊಡೆಮಡುವೆ ಏಕೆ ಎಡೆತಡವೆ" ಎಂಬ ಮಾತು ಬೇಂದ್ರೆಯವರ 'ಗಂಗಾವತರಣ'ದಲ್ಲಿ ಬಂದಿದೆ). ಅಥವಾ 'ಪೊಡೆವಡು'ವುದು ("ಕಂಡು ಪೊಡೆವಡುವನಿತುವರಂ" - ಪಂಪನ 'ಆದಿಪುರಾಣ'). ಇವು 'ಪೊಡವಡು' 'ಪೊಡಮಡು' ಎಂಬ ರೂಪಗಳಲ್ಲಿಯೂ ಬಳಕೆಯಲ್ಲಿತ್ತು.
ನಡುಗನ್ನಡ ಕಾಲದ ನಂತರ ಹೊಟ್ಟೆ ಎಂಬ ರೂಪವು ಬಳಕೆಯಲ್ಲಿ ಬಂದಿತು. ಪುರಂದರದಾಸರ "ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ" ಎಂಬ ಹಾಡಿನಲ್ಲಿ 'ಹೊಟ್ಟೆ' ಎಂದರೆ ಜೀವನೋಪಾಯ ಎಂಬ ಅರ್ಥ ಪಡೆಯುತ್ತದೆ. ಇದೇ 'ಹೊಟ್ಟೆಪಾಡು'. ಅಸೂಯೆ ಎಂಬರ್ಥದಲ್ಲಿ 'ಹೊಟ್ಟೆಕಿಚ್ಚು' ಎಂಬ ಪದ ಬಳಕೆಯಲ್ಲಿದೆ. 'ಹೊಟ್ಟೆಕಿಚ್ಚಿನ ಮೊಟ್ಟೆಕೋಳಿ' ಎಂಬ ನುಡಿಗಟ್ಟು ಅತೀವವಾಗಿ ಮತ್ಸರಿಸುವ ವ್ಯಕ್ತಿಯ ಬಗ್ಗೆ ಆಡುವ ಮಾತು. ಈ ಅರ್ಥದಲ್ಲಿಯೇ 'ಹೊಟ್ಟೆ ಕಿವಿಚಿಕೊ' ಎಂಬ ನುಡಿಗಟ್ಟೂ ಇದೆ. 'ಒಳ್ಳೆಯದಾಗಲಿ' ಎಂಬ ಹಾರೈಕೆಯ ಅರ್ಥದಲ್ಲಿ 'ಹೊಟ್ಟೆ ತಣ್ಣಗಿರಲಿ' ಎಂಬ ನುಡಿಗಟ್ಟಿದೆ.
=====
ಹೊಸಗನ್ನಡ: ಕನ್ನಡ ಭಾಷೆ ಬಹಳ ಪ್ರಾಚೀನವಾದದ್ದು. ಭಾಷೆಯೂ ವ್ಯಕ್ತಿಯಂತೆ ಬೆಳೆಯುತ್ತದೆ, ಬದಲಾವಣೆ ಹೊಂದುತ್ತದೆ. ಅದರಂತೆ ಕನ್ನಡವೂ ತನ್ನ ಎರಡು ಸಾವಿರ ವರ್ಷಗಳ ಇತಿಹಾಸದಲ್ಲಿ ಬೆಳೆದಿದೆ, ಬದಲಾಗಿದೆ. ಬಹಳ ಹಿಂದಿನ ಕನ್ನಡ ರೂಪ ಈಗಿನವರಿಗೆ ಅರ್ಥವಾಗುವುದೇ ಇಲ್ಲ, ಮಗು ಬೆಳೆದು ದೊಡ್ಡದಾದರೆ ಅದರ ಸ್ವರೂಪ ಪೂರ್ತಿ ಬದಲಾಗುತ್ತದಲ್ಲ, ಹಾಗೆ. ಕನ್ನಡದ ಈ ಬೆಳವಣಿಗೆಯನ್ನು ಭಾಷಾವಿಜ್ಞಾನಿಗಳು ನಾಲ್ಕು ಹಂತಗಳಾಗಿ ವಿಂಗಡಿಸುತ್ತಾರೆ: ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂದು. ಈ ವಿಭಜನೆ ಕರಾರುವಾಕ್ಕಾದ್ದೇನಲ್ಲ. ಆದರೂ ಅಧ್ಯಯನದ ಅನುಕೂಲಕ್ಕಾಗಿ ಹೀಗೆ ಮಾಡುತ್ತಾರೆ. ಇದರ ಪ್ರಕಾರ, ಕನ್ನಡದ ಇತ್ತೀಚಿನ ರೂಪವೇ ಹೊಸಗನ್ನಡ, ಇದು ನಮ್ಮ ಕಾಲದ ಕನ್ನಡ ಎಂದರ್ಥ. ಬ್ರಿಟಿಷ್ ಆಡಳಿತ ಬಂದ ಮೇಲೆ ನಾನಾ ರೀತಿಗಳಲ್ಲಿ ನಮ್ಮ ಬದುಕು ಬದಲಾದಂತೆ ನಮ್ಮ ಭಾಷೆಯೂ ಬದಲಾಯಿತು, ಹಿಂದಿನದಕ್ಕಿಂತ ಭಿನ್ನವಾದ ರೂಪವನ್ನು ಪಡೆಯಿತು, ಕನ್ನಡದ ಈ ಹೊಸ ರೂಪವೇ ಹೊಸಗನ್ನಡ ಎಂಬುದು ಸಾಮಾನ್ಯ ತಿಳಿವಳಿಕೆ.
ಆದರೆ ಕನ್ನಡದಲ್ಲಿ ಸಿಕ್ಕಿರುವ ಮೊದಲ ಗ್ರಂಥವಾದ ಕ್ರಿಸ್ತಶಕ 850ರ 'ಕವಿರಾಜಮಾರ್ಗ'ದಲ್ಲಿ 'ಪೞಗನ್ನಡ' (ಹಳಗನ್ನಡ) ಎಂಬ ಶಬ್ದವಿದೆ. ಅಂದರೆ ತನ್ನ ಕಾಲಕ್ಕೆ ಹಿಂದಿನ ಕನ್ನಡ ಎಂಬುದು ಗ್ರಂಥಕರ್ತೃವಿನ ಅಭಿಪ್ರಾಯ, ಹಾಗಾದರೆ ತನ್ನ ಕಾಲದ್ದು ಹೊಸಗನ್ನಡ ಎಂಬುದು ಅವನ ಅಭಿಪ್ರಾಯವಿರಬೇಕು. ಆದರೆ ಹೊಸಗನ್ನಡ ಎಂಬ ಶಬ್ದವನ್ನೇನೂ ಆ ಗ್ರಂಥದಲ್ಲಿ ಬಳಸಿಲ್ಲ. ಕ್ರಿಸ್ತಶಕ 1112 ರಲ್ಲಿ ರಚಿತವಾದ ನಯಸೇನ ಕವಿಯ 'ಧರ್ಮಾಮೃತ' ಎಂಬ ಕಾವ್ಯದಲ್ಲಿ ಈ ಮಾತಿದೆ: "ಪೊಸಗನ್ನಡದಿಂ ವ್ಯಾವರ್ಣಿಸುವೆಂ ಸತ್ಕೃತಿಯನೆಂದು ಕನ್ನಡದೊಳ್ ಚಿಂತಿಸಿ.. .." ಇತ್ಯಾದಿ. ಅಂದರೆ ಈ ಕವಿಯ ದೃಷ್ಟಿಯಲ್ಲಿ ತನ್ನ ಕಾಲದ್ದು ಹೊಸಗನ್ನಡ ಎಂಬ ಭಾವನೆಯಿದೆ. ಆದರೆ ಅವನ ಕಾಲದ ಕನ್ನಡ ನಮಗೆ ಹಳಗನ್ನಡ! ಹಾಗಾದರೆ ಹಳಗನ್ನಡ ಯಾವುದು, ಹೊಸಗನ್ನಡ ಯಾವುದು? ಉತ್ತರ ಸುಲಭ: ಎಲ್ಲರಿಗೂ ತಮ್ಮ ಕಾಲದ್ದು ಹೊಸದು, ಹಿಂದಿನದೆಲ್ಲ ಹಳೆಯದು. ಹೀಗಾಗಿ ನಾವೀಗ ನಮ್ಮ ಕಾಲದ ಕನ್ನಡವನ್ನು ಹೊಸಗನ್ನಡ ಎಂದು ಕರೆದುಕೊಳ್ಳುತ್ತಿದ್ದೇವೆ. ಮುಂದೆ ಇದರ ಸ್ವರೂಪವೂ ಸಾಕಷ್ಟು ಪ್ರಮಾಣದಲ್ಲಿ ಬದಲಾವಣೆಯನ್ನು ಕಾಣುತ್ತದೆ. ಬೇಡ ಎಂದರೆ ನಿಲ್ಲುವುದೇ? ಈಗಾಗಲೇ ಅದರ ಸ್ವರೂಪ ಢಾಳಾಗಿ ವ್ಯತ್ಯಾಸವಾಗುತ್ತಿದೆ. ಒಟ್ಟಾರೆ ಹೇಳಬಹುದಾದುದಿಷ್ಟು: ಆಯಾ ಕಾಲದ ಕನ್ನಡ ಜನರಿಗೆ ಸಮಕಾಲೀನವಾದುದು ಹೊಸಗನ್ನಡ, ಹಿಂದಿನದೆಲ್ಲ ಹಳಗನ್ನಡ.

ಕಾಮೆಂಟ್‌‌ ಪೋಸ್ಟ್‌ ಮಾಡಿ