ಪದಚರಿತೆ" ಒಂದಷ್ಟು ಪದಗಳ ಮೂಲಚೂಲಗಳ ಕೆದಕಾಟ - 6
ನೆರಳು:
ಈ ದ್ರಾವಿಡ ಪದವು ಹಳಗನ್ನಡದಲ್ಲಿ 'ನೆೞಲ್' ಎಂಬ ರೂಪದಲ್ಲಿ ದೊರೆತರೆ ತಮಿಳಿನಲ್ಲಿ ನಿೞಲ್, ನೀೞಲ್
ಎಂದೂ, ಮಲಯಾಳಂನಲ್ಲಿ ನಿೞಲ್ ಎಂದೂ, ತೆಲುಗಿನಲ್ಲಿ ನೀಡ ಎಂದೂ, ತುಳುವಿನಲ್ಲಿ ನೆರಳ್, ನಿರಲ್ ಎಂದೂ
ದೊರೆಯುತ್ತದೆ. ಛಾಯೆ ಎಂಬುದು ಇದರ ಮೂಲಾರ್ಥ. "ನೆೞಲ್=ಆತಪತ್ರಾದಿ ಛಾಯೆ" ಎಂದು 'ಶಬ್ದಮಣಿದರ್ಪಣ'
ಅರ್ಥ ಕೊಡುತ್ತದೆ. "ಜಲದದ ನೆೞಲುಂ .. .. ನೆಲಸವು" ಎಂಬುದು 'ಕವಿರಾಜಮಾರ್ಗ'ದ ಮಾತು.
ಪಂಪನ 'ಆದಿಪುರಾಣ'ದ ಒಂದು ಸುಂದರ ಪದ್ಯದಲ್ಲಿ "ತನು ರೂಪ ವಿಭವ ಯೌವನಧನ ಸೌಭಾಗ್ಯಾಯುರಾದಿಗಳ"ನ್ನು
"ಕುಡುಮಿಂಚಿನ ಪೊಳಪು ಮುಗಿಲ ನೆೞಲ್" ಮುಂತಾದುವಕ್ಕೆ ಹೋಲಿಸಲಾಗಿದೆ. "ನೆೞಲಂಚೆಯಂತೆ
ನೆೞಲನೆ ತೋರ್ಪ ನೆೞಲ ಮರಂಗಳುಮಂ" ಎಂಬುದು ಬಂಧುವರ್ಮನ 'ಹರಿವಂಶಾಭ್ಯುದಯ' ಕಾವ್ಯದ ಸಾಲು (ನೆೞಲ್
ಎಂಬುದು ಒಂದು ಮರದ ಹೆಸರೂ ಹೌದು). "ನೀರೊಳಗಿರ್ದ ತನ್ನ ನಲ್ಲಳ ನೆೞಲಂ ಕಂಡು ನಲ್ಲಳೆಂದು ಮತಿಗೆಟ್ಟು"
ಎಂಬ 'ಧರ್ಮಾಮೃತ'ದ ಮಾತಿನಲ್ಲಿ ಈ ಶಬ್ದಕ್ಕೆ ಪ್ರತಿಬಿಂಬ ಎಂಬರ್ಥ ಹೊರಡುತ್ತದೆ. ಆಧುನಿಕ ಬರಹಗಾರರಾದರೂ
ತಮ್ಮ ನಾಟಕಗಳಲ್ಲಿ ಹಳಗನ್ನಡ ಬಳಸಿದ ಬಿಎಂಶ್ರೀ ಅವರು 'ಅಶ್ವತ್ಥಾಮನ್' ನಾಟಕದಲ್ಲಿ "ಇಂದವನ್,
ನಾಳೆ ನಾನ್, ಏನ್ ಪಾಡೊ ಆಳ ಬಾಳ್! ಬೀಸುವ ಬಯಲ್ಗಾಳಿ, ಪರಿದಡಂಗುವ ನೆಳಲ್" ಎಂದು ಬರೆಯುತ್ತಾರೆ.
ನಡುಗನ್ನಡದಲ್ಲಿ ಈ ಶಬ್ದದಲ್ಲಿನ ಳಕಾರ(ಅಂದರೆ ಱಳ)ದ ಸ್ಥಳದಲ್ಲಿ
ಳಕಾರ(ಅಂದರೆ ಕುಳ) ಬಳಕೆಗೆ ಬಂತು. "ನೆಳಲ ಹೂಳಿಹೆನೆಂದು ಬಳಲುತ್ತಿದೆ ಜಗವೆಲ್ಲ" ಎಂಬ
ಅದ್ಭುತ ರೂಪಕ ಅಲ್ಲಮನದು. ಪ್ರತಿಬಿಂಬ ಎಂಬರ್ಥದಲ್ಲಿ ಕುಮಾರವ್ಯಾಸನು "ನೆಳಲು ಜಲದಲಿ ನಡುಗಲಿನ
ಮಂಡಲಕೆ ಕಂಪವೆ" ಎಂಬ ಸಾಲನ್ನು ಬರೆಯುತ್ತಾನೆ. ನೆಳಲು ಎಂಬುದಕ್ಕೆ ಕೃಪೆ ಎಂಬರ್ಥದಲ್ಲಿ ಕುಮಾರವ್ಯಾಸನು
"ಕೃಷ್ಣನ ನೆಳಲು ದಿಟವುಂಟಾದೊಡೊಳಗಾಗರು ವಿರೋಧಿಗಳು" ಎಂಬಲ್ಲಿ ಬಳಸುತ್ತಾನೆ.
ಪುರಂದರದಾಸರ ಕೀರ್ತನೆಯೊಂದರಲ್ಲಿಯೇ ನೆರಳು ಎಂಬ ರೂಪ ಬಳಕೆಯಾಗಿದೆ:
"ನೆರಳಿಲ್ಲದೆ ನೀರಿಲ್ಲದೆ ಬೇರಿಲ್ಲದೆ ಸಸಿ ಹುಟ್ಟಿ" ಇತ್ಯಾದಿ. ಹೊಸಗನ್ನಡದಲ್ಲಿ ಈ ರೂಪವೇ
ಹೆಚ್ಚು ಬಳಕೆಯಲ್ಲಿರುವುದು. ಪುತಿನ ಗಾಂಧಿಜಿಯನ್ನು ಗರುಡನ ನೆರಳಿಗೆ ಹೋಲಿಸುತ್ತಾರೆ: "ಮೇಲೊಂದು
ಗರುಡ ಹಾರುತಿಹುದು, ಕೆಳಗದರ ನೆರಳು ಓಡುತಿಹುದು" ಎಂಬುದು 'ಗಾಂಧಿ' ಎಂಬ ಕವನದ ಸಾಲು. 'ನನ್ನ
ನೆರಳು' ಎಂಬ ತಮ್ಮೊಂದು ಕವನದಲ್ಲಿ ಚಂದ್ರಶೇಖರ ಪಾಟೀಲರು "ಸುಳಿದು ಸುಳಿಹಿಡಿವ ಆ ತುಂಟ ನೆರಳನು
ಕಂಡು ಒದೆಯಬೇಕೆನಿಸಿತ್ತು" ಎನ್ನುತ್ತಾರೆ. ಹಿಂಬಾಲಕ, ಆಶ್ರಯ, ಕೃಪೆ ಎಂಬ ಅರ್ಥಗಳಲ್ಲಿಯೂ ಈ
ಪದದ ಬಳಕೆಯಿದೆ.
=====
ನೇಗಿಲಯೋಗಿ: ತನ್ನಲ್ಲಿರುವ ಭಾವನೆಯನ್ನು ಸಮರ್ಪಕವಾಗಿ ತೋಡಿಕೊಳ್ಳಲು ಕವಿಗಳು
ಅನೇಕ ಸಂದರ್ಭಗಳಲ್ಲಿ ಹೊಸ ಶಬ್ದಗಳನ್ನೇ ಸೃಷ್ಟಿಸಿಕೊಳ್ಳುತ್ತಾರೆ. ಅದು ಇದುವರೆಗೆ ಇಲ್ಲದಿರುವ ಶಬ್ದವಾಗಿರಬಹುದು,
ಅಥವಾ ಹಳೆಯ ಶಬ್ದವನ್ನೇ ಹೊಸ ಅರ್ಥದಿಂದ ಬಳಸಿದುದಾಗಿರಬಹುದು, ಅಥವಾ ಇರುವ ಶಬ್ದಗಳ ಮರುಜೋಡಣೆಯಿಂದ
ಮತ್ತೊಂದನ್ನು ರೂಪಿಸಿಕೊಂಡಿರುವುದಾಗಿರಬಹುದು. ಇಂಥ ಕವಿಗಳನ್ನು ಅಥವಾ ಹೊಸ ಶಬ್ದವನ್ನು ರೂಪಿಸುವವರನ್ನು
'ಶಬ್ದಬ್ರಹ್ಮ' ಎಂದು ಕರೆಯಬಹುದು. 'ನೇಗಿಲಯೋಗಿ' ಎಂಬ ಶಬ್ದವು ರೈತನನ್ನು ಸೂಚಿಸಲು ಸೃಷ್ಟಿಸಿಕೊಂಡಿರುವ
ಹೊಸ ಶಬ್ದ. ಇದನ್ನು ಸೃಷ್ಟಿಸಿದವರು ಕುವೆಂಪು. ಆ ಹೆಸರಿನ ತಮ್ಮ ಕವನವೊಂದರಲ್ಲಿ ರೈತನನ್ನು ಹೀಗೆ
ಕರೆದಿದ್ದಾರೆ. ನಿಸ್ವಾರ್ಥಿಯಾಗಿ ಹೊಲದಲ್ಲಿ ದುಡಿದು ಮಿಕ್ಕವರಿಗೆಲ್ಲ ಅನ್ನ ಬೆಳೆದು ಕೊಡುವ ರೈತನ
ಕಾಯಕ ಕವಿಗೆ ಯೋಗದ ಹಾಗೆ ಕಾಣುತ್ತದೆ.
ಈ ಪದದಲ್ಲಿ ಎರಡು ಶಬ್ದಗಳು ಸೇರಿವೆ: ನೇಗಿಲು ಮತ್ತು ಯೋಗಿ.
ಇವೆರಡೂ ಕೂಡಿ ಆದ ರೂಪವನ್ನು ಸಮಾಸ ಎನ್ನುತ್ತಾರೆ. ಇಲ್ಲಿ ಮೊದಲ ಪದ ಅಚ್ಚಗನ್ನಡದ್ದಾದರೆ, ಎರಡನೆಯದು
ಸಂಸ್ಕೃತದ್ದು. ಇಂಥ ಶಬ್ದಸೃಷ್ಟಿಯನ್ನು ಹಿಂದಿನ ವ್ಯಾಕರಣಶಾಸ್ತ್ರಜ್ಞರು ತಪ್ಪು ಎನ್ನುತ್ತಿದ್ದರು.
ಕನ್ನಡ ಶಬ್ದಕ್ಕೆ ಕನ್ನಡ ಪದ ಸೇರಬೇಕು, ಸಂಸ್ಕೃತದ್ದಾದರೆ ಸಂಸ್ಕೃತ ಪದವನ್ನು ಸೇರಿಸಿ ಸಮಾಸ ಮಾಡಬೇಕು
ಎಂಬುದು ಅವರ ವಾದ. ಕನ್ನಡ-ಸಂಸ್ಕೃತ ಶಬ್ದಗಳು ಸೇರಿ ಆದುದು 'ಅರಿಸಮಾಸ'ವಂತೆ. ಕನ್ನಡ ಸಂಸ್ಕೃತಗಳು
ಶತ್ರು(ಅರಿ)ಗಳು! ಆದರೆ ಶಬ್ದಬ್ರಹ್ಮರಾದ ಕವಿಗಳು, ತಮ್ಮ ಭಾವನೆಯನ್ನು ಸಮರ್ಪಕವಾಗಿ ಹೇಳಲು ತವಕಿಸುವ
ಸಾಮಾನ್ಯ ಜನರು ಕೂಡ ಇಂಥ ಶಾಸ್ತ್ರಜ್ಞರ ಅಪ್ಪಣೆಯನ್ನೆಲ್ಲಿ ಪಾಲಿಸುತ್ತಾರೆ! ವ್ಯಾಕರಣ ನಿಯಮವನ್ನು
ಮೀರುವುದರಿಂದಲೇ ಭಾಷೆಗೆ ಎಷ್ಟೋ ವೇಳೆ ಒಳ್ಳೆಯದಾಗುವುದು!
ಅಂದ ಹಾಗೆ, ಇನ್ನೊಂದು ಮಾತು. ರೈತನನ್ನು ಬೇಂದ್ರೆಯವರು 'ಭೂಮಿತಾಯಿಯ
ಚೊಚ್ಚಿಲಮಗ' ಎಂದು ಕರೆಯುತ್ತಾರೆ. ಯಾಕಂದರೆ ಅವನು ತಾನೇ ಸದಾ ಭೂಮಿಯನ್ನು ಅವಲಂಬಿಸಿರುವುದು. ಆದರೂ
ಅವನಿಗೆ ಕಡುಕಷ್ಟ ತಪ್ಪದಲ್ಲ ಎಂಬ ವಿಷಾದ ಬೇಂದ್ರೆಯವರ ಅದೇ ಹೆಸರಿನ ಕವಿತೆಯೊಂದರಲ್ಲಿ ಸೂಚಿತವಾಗಿದೆ.
ಒಬ್ಬನನ್ನೇ ಕುರಿತು ಇಬ್ಬರು ಕವಿಗಳು ಬೇರೆ ಬೇರೆ ಶಬ್ದಗಳನ್ನು ರೂಪಿಸಿರುವುದರ ಹಿಂದೆ ಆಯಾ ಕವಿಗಳ
ಮನೋಭಾವವವೇ ಅಡಕವಾಗಿದೆ.
*****
ಪಂಚಮಹಾಪಾತಕ: ಇದೊಂದು ಸಂಸ್ಕೃತ ಸಮಾಸಪದ, ಐದು ದೊಡ್ಡ ಪಾತಕಗಳನ್ನು ಹೇಳುತ್ತದೆ.
ಅತಿಮಾನುಷವೆಂದು ನಂಬಲಾದ ಶಕ್ತಿಯನ್ನು ಕೆರಳಿಸುವ ಭಾವನೆಯನ್ನೋ ಕಾರ್ಯವನ್ನೋ ಸ್ಥೂಲವಾಗಿ ಪಾತಕ ಎಂದು
ಹೇಳಬಹುದು. ಪಾತಕದ ಕಲ್ಪನೆ ವೇದಗಳಷ್ಟೇ ಹಳೆಯದು. ಮನುಷ್ಯ ಪಾತಕವನ್ನು ಮಾಡಲು ಕಾರಣ ವಿಧಿ, ಮಾದಕ
ದ್ರವ್ಯಗಳು, ಕೋಪ, ದ್ಯೂತ, ಅಜಾಗರೂಕತೆ ಅಥವಾ ಸ್ವಪ್ನಸ್ಥಿತಿ ಎಂದು ಋಗ್ವೇದದಲ್ಲಿ ಹೇಳಿದೆ. ನಾನಾ
ಬಗೆಯ ಪಾತಕಗಳಿದ್ದರೂ ಛಾಂದೋಗ್ಯ ಉಪನಿಷತ್ತಿನ ಕಾಲದ ಹೊತ್ತಿಗೆ ಅತ್ಯಂತ ದೊಡ್ಡ ಪಾತಕಗಳೆಂದು ಭಾವಿಸಲಾದ
ಬ್ರಹ್ಮಹತ್ಯೆ, ಸುರಾಪಾನ, ಬ್ರಾಹ್ಮಣಸುವರ್ಣಾಪಹರಣ, ಗುರುತಲ್ಪಗಮನ ಮತ್ತು ಈ ನಾಲ್ಕು ಪಾತಕಗಳಲ್ಲಿ
ಒಂದನ್ನಾದರೂ ಮಾಡಿದವನ ಸಹವಾಸ - ಇವುಗಳು 'ಪಂಚಮಹಾಪಾತಕ' ಎಂದು ಪರಿಗಣಿತವಾಗಿದ್ದವು.
ಮುಂದೆ 'ಪಂಚಮಹಾಪಾತಕ' ಎಂಬುದು ನುಡಿಗಟ್ಟಿನಂತಾಗಿ ವಿವಿಧ ಧರ್ಮಗಳವರು
ವಿವಿಧ ಪಟ್ಟಿಗಳನ್ನು ಪರಿಗಣಿಸಿದರು. ಜೈನ ದೃಷ್ಟಿಕೋನದ ಗ್ರಂಥವಾದ 'ವಡ್ಡಾರಾಧನೆ'ಯಲ್ಲಿ "ಬಾಲವಧೆ
ಸ್ತ್ರೀವಧೆ ಗೋವಧೆ ಬ್ರಾಹ್ಮಣವಧೆ ಋಷಿವಧೆಯೆಂದೀ ಪಂಚಮಹಾಪಾತಕಂಗಳಂ" ಎಂಬ ವಿವರ ಸಿಕ್ಕುತ್ತದೆ.
ಬೌದ್ಧರಲ್ಲಿ ಪಂಚಾಂತರಾಯಗಳಾದ ಮಾತೃವಧೆ, ಪಿತೃವಧೆ, ಅರ್ಹತ್‍ವಧೆ, ಬೌದ್ಧನೊಬ್ಬನ ರಕ್ತಪಾತ ಮತ್ತು
ಪುರೋಹಿತವರ್ಗದಲ್ಲಿ ಭೇದವುಂಟುಮಾಡುವುದನ್ನೇ ಪಂಚಪಾತಕಗಳೆಂದು ಪರಿಗಣಿಸಲಾಗುತ್ತಿತ್ತು. ವಚನಕಾರರು
ವಿವಿಧ ರೀತಿಗಳಲ್ಲಿ 'ಪಂಚಮಹಾಪಾಕ'ಗಳನ್ನು ಅರ್ಥೈಸಿದರು. ಉದಾಹರಣೆಗೆ ಜೇಡರ ದಾಸಿಮಯ್ಯನು "ದರುಶನ
ತಪ್ಪುಕ ಪ್ರಥಮ ಪಾತಕ, ಸ್ಪರ್ಶನ ತಪ್ಪುಕ ದ್ವಿತೀಯ ಪಾತಕ, ಗುರು ತಪ್ಪುಕ ತೃತೀಯ ಪಾತಕ, ಪರದಾರ ಚತುರ್ಥ
ಪಾತಕ, ಮಾಂಸಾಹಾರ ಪಂಚಮ ಮಹಾಪಾತಕ" ಎಂದರೆ; ಚೆನ್ನಬಸವಣ್ಣನು "ಭವಿಪಾಕವೆಂಬುದು ಪ್ರಥಮ
ಪಾತಕ, ಪ್ರತಿಮಾದಿಗಳಿಗೆರಗಿದಡೆ ಎರಡನೆಯ ಪಾತಕ, ಗುರುವಾಕ್ಯವ ಮೀರಿದಡೆ ಮೂರನೆಯ ಪಾತಕ, ಪರಧನಪರಸ್ತ್ರೀಗಳುಪಿದಡೆ
ನಾಲ್ಕನೆಯ ಪಾತಕ, ಶಿವನಿಂದೆಯ ಕೇಳಿದಡೆ ಐದನೆಯ ಪಾತಕ" ಎನ್ನುತ್ತಾನೆ. ಮತ್ತೂ ಕೆಲವು ವಚನಕಾರರ
ವಿಭಿನ್ನ ಹೇಳಿಕೆಗಳಿವೆ. ಈಗಲೂ ಈ ನುಡಿಗಟ್ಟು ಬಳಕೆಯಲ್ಲಿದೆ.
=====
ಪಂಚಮಹಾವಾದ್ಯ: ದೇವಸ್ಥಾನಗಳಲ್ಲಿಯೂ ಮಹಾಗಣ್ಯರ ಸ್ವಾಗತಕ್ಕೂ ಬಳಸುತ್ತಿದ್ದ
ಐದು ವಾದ್ಯಗಳನ್ನು 'ಪಂಚಮಹಾವಾದ್ಯ' ಅಥವಾ 'ಪಂಚವಾದ್ಯ'ಗಳೆಂದು ಕರೆಯುವುದು ರೂಢಿ. ಇದನ್ನು ಕಪಂಚಮಹಾಶಬ್ದಕಿ
ಎಂಬ ಮಾತಿನಿಂದಲೂ ಕರೆಯಲಾಗುತ್ತಿತ್ತು. ಕನ್ನಡ ನಾಡಿನ ಪ್ರಾಚೀನ ಶಾಸನಗಳಲ್ಲಿ ರಾಜರುಗಳನ್ನು ಹಲವು
ವೇಳೆ ಕಸಮಧಿಗತಪಂಚಮಹಾಶಬ್ದಕಿ ಎಂಬ ವಿಶೇಷಣದಿಂದ ವರ್ಣಿಸಲಾಗಿದೆ. ಖಸ್ವಸ್ತಿ ಸಮಧಿಗತ ಪಞ್ಚಮಹಾಶಬ್ದ
ಮಹಾಸಾಮನ್ತಾಧಿಪತಿ ಪ್ರಭೂತ ವರಿಷ ಶ್ರೀಮಾನ್ಗೋಯಿನ್ದರಸರ್ಖ ಎಂಬ ಒಕ್ಕಣೆ ಎಂಟನೆಯ ಶತಮಾನದ ಶಾಸನದಲ್ಲಿದೆ.
ಖಸಮನೆನಿಸುವರ್ ಪ್ರಶಸ್ತಿಕ್ರಮದೊಳ್ ಸ್ವಸ್ತಿ ಸಮಧಿಗತ ಪಂಚಮಹಾಶಬ್ದ ಮಹಾಸಾಮಂತರೆನಲ್ ಸಮನೆನಿಪರೆ
ಗುಣದೊಳರಿಗನೊಳ್ ಸಾಮಂತರ್ಖ ಎಂಬುದು 'ಪಂಪಭಾರತ'ದಲ್ಲಿ ಅರಿಕೇಸರಿಯನ್ನು ವರ್ಣಿಸುವ ಪದ್ಯ. ದೊಡ್ಡವರನ್ನು
ಸನ್ಮಾನ ಮಾಡುವ ರೀತಿಯೂ ಇದೇ ಅಗಿದ್ದಿತೆಂದು ಕಾಣುತ್ತದೆ: ಏಕೆಂದರೆ ಬಸವಣ್ಣನ ವಚನವೊಂದು ಖಹೊಲೆಯ
ಮಾದಿಗ ಭಕ್ತನಾದಡೆ ಆತನ ಮನೆಯ ಸೊಣಗಂಗೆ ಪಂಚಮಹಾವಾದ್ಯದಲಿ ಸನ್ಮಾನವ ಮಾಡೆನೆ?ಖ ಎಂಬ ಮಾತಿದೆ.
'ಪಂಚಮಹಾವಾದ್ಯ'ಗಳೆಂದು ಕರೆದರೂ ಎಲ್ಲ ಕಾಲಗಳಲ್ಲಿಯೂ ಮತ್ತು
ಸ್ಥಳಗಳಲ್ಲಿಯೂ ಐದು ವಾದ್ಯಗಳ ಪಟ್ಟಿ ಒಂದೇ ಆಗಿರದೆ, ವ್ಯತ್ಯಾಸಗೊಂಡಿರುವುದನ್ನು ಗುರುತಿಸಬಹುದು.
ನಂಜನಗೂಡಿನ ಶಾಸನವೊಂದು ತಿವಿರಿ, ದಟ್ಟ, ಖಂಡಿಕ್ಕೆ, ಜಯಗಂಟೆ ಮತ್ತು ಕಾಳೆಗಳನ್ನು 'ಪಂಚಮಹಾವಾದ್ಯ'ಗಳೆಂದು
ಹೆಸರಿಸಲಾಗಿದೆ. 'ವಿವೇಕ ಚಿಂತಾಮಣಿ'ಯು ಶೃಂಗ, ತಮ್ಮಟ, ಶಂಖ, ಭೇರಿ, ಜಯಗಂಟೆಗಳನ್ನು 'ಪಂಚಮಹಾವಾದ್ಯ'ಗಳೆಂದು
ಹೇಳಿದೆ. ಕೆಲವು ವೇಳೆ ನಾಲ್ಕು ವಾದ್ಯಗಳೊಡನೆ ಮನುಷ್ಯಧ್ವನಿಯೂ ಸೇರುತ್ತಿತ್ತೆಂದು ಕೆಲವು ವಿದ್ವಾಂಸರು
ಅಭಿಪ್ರಾಯಪಡುತ್ತಾರೆ.
ಕೇವಲ ಸಾರ್ವಜನಿಕ ಸನ್ಮಾನಗಳಲ್ಲಿ ಮಾತ್ರವಲ್ಲದೆ ಬೇರೆ ಸಂದರ್ಭದಲ್ಲಿಯೂ
ಬಳಸುತ್ತಿದ್ದ ಐದು ವಾದ್ಯಗಳ ಸಮೂಹವನ್ನು ಈ ಮಾತಿನಿಂದ ಕರೆಯುತ್ತಿದ್ದರು: 'ಆದಿಪುರಾಣ'ದಲ್ಲಿ ಪಂಪನು
ಭರತ ಚಕ್ರವರ್ತಿಯು ಬೆಳಿಗ್ಗೆ ಏಳುವ ಹೊತ್ತಿಗೆ "ಪಂಚಮಹಾವಿಜೃಂಭಿತಧ್ವನಿ ಲಸದ್ಗಾಂಧಾರನಾದಂ"
ಎಂದು ವರ್ಣಿಸುವುದರಿಂದ ಅರಮನೆಯಲ್ಲಿ ಬೆಳಿಗ್ಗೆ ಈ ವಾದ್ಯಗಳ ಧ್ವನಿಯನ್ನು ಮಾಡಲಾಗುತ್ತಿತ್ತೆಂದು
ಭಾವಿಸಬಹುದು. ಇವುಗಳ ಜೊತೆಗೆ ಇತರ ವಾದ್ಯಗಳೂ ಇರುತ್ತಿದ್ದವು: "ಪಂಚಮಹಾಶಬ್ದಂಗಳುಂ ಬದ್ದವಣದ
ಪಱೆಗಳುಂ ಬಾಜಿಸೆ ಅರಮನೆಯಂ ಪೊಕ್ಕು" ಎಂಬ ವರ್ಣನೆ 'ವಡ್ಡಾರಾಧನೆ'ಯಲ್ಲಿದೆ. ಈ ವಾದ್ಯಗಳ ಬಜಾವಣೆ
ಮೊದಲು ದೇವಸ್ಥಾನಗಳಲ್ಲಿ ವಾಡಿಕೆಯಲ್ಲ್ಲಿದ್ದು ಆನಂತರ ರಾಜಮರ್ಯಾದೆಗೆ ವಿಸ್ತಾರಗೊಂಡಿರಬೇಕು.
======
ಪಂಚಾಂಗ: ಇದೊಂದು ಸಂಸ್ಕೃತ ಪದ; ಪಂಚ+ಅಂಗ=ಐದು ಭಾಗ ಎಂಬ ಅರ್ಥವುಳ್ಳದ್ದು.
ಸಾಮಾನ್ಯವಾಗಿ ಇದು ದಿನದ ಐದು ಅಂಶಗಳನ್ನು ಸೂಚಿಸುವಂಥದು. ಅವುಗಳೆಂದರೆ ತಿಥಿ, ವಾರ, ನಕ್ಷತ್ರ, ಕರಣ
ಮತ್ತು ಯೋಗ. ಹೀಗಾಗಿ ವರ್ಷದ ಎಲ್ಲ ದಿನಗಳ ಈ ಐದರ ವಿವರಣೆಗಳನ್ನು ನೀಡುವ ಪುಸ್ತಕವನ್ನೂ ಪಂಚಾಂಗ ಎಂದೇ
ಕರೆಯುತ್ತಾರೆ. ದಿನದ ಈ ಅಂಶಗಳಲ್ಲಿ ಯಾವುದೇ ದೋಷವಿಲ್ಲದಿರುವುದನ್ನು ಪಂಚಾಂಗಶುದ್ಧಿ ಎನ್ನುತ್ತಾರೆ.
ಹೊಸವರ್ಷದ ಆರಂಭದಲ್ಲಿ ಮುಂಬರುವ ವರ್ಷದ ಶುಭಾಶುಭ ಫಲಗಳನ್ನು ಹೇಳುವುದು ಮತ್ತು ಕೇಳವುದು ಪಂಚಾಂಗಶ್ರವಣ
ಎನಿಸಿಕೊಳ್ಳುತ್ತದೆ. ಈ ಫಲಗಳೇ ಪಂಚಾಂಗಫಲ. ಇದನ್ನು ವಚನಕಾರರು ವಿಡಂಬಿಸುತ್ತಾರೆ. 'ಪಂಚಾಂಗಬಿಚ್ಚು'
ಎಂಬ ಈಗಿನ ಮಾತೂ ಬುರುಡೆ ಹೇಳು ಎಂಬರ್ಥದಲ್ಲಿ ಬಳಕೆಯಾಗುತ್ತಿದೆ.
ಪಂಚಾಂಗವೆಂಬ ಶಬ್ದವು (ಆಯುರ್ವೇದ) ಔಷಧದ ತಯಾರಿಕೆಯಲ್ಲಿ ಬಳಸುವ
ಸಸ್ಯದ ಐದು ಭಾಗಗಳನ್ನು ಸೂಚಿಸುತ್ತದೆ: ತೊಗಟೆ, ಎಲೆ, ಹೂವು, ಬೇರು ಮತ್ತು ಹಣ್ಣು. ದೋಷರಹಿತವಾದ
ಈ ಐದು ಅಂಶಗಳನ್ನು ನೋಡುವುದನ್ನು ಶಾಂತಿನಾಥನ 'ಸುಕುಮಾರಚರಿತೆ'ಯು 'ಪಂಚಾಂಗಶುದ್ಧಿ' ಎನ್ನುತ್ತದೆ
("ವೈದ್ಯನಂತೆ ಪಂಚಾಂಗಶುದ್ಧಿಯಂ ನೋಡಿ").
ರಾಜನೀತಿಯ ಐದು ಅಂಶಗಳನ್ನೊಳಗೊಂಡ ಸಮಾಲೋಚನೆಯನ್ನು 'ಪಂಚಾಂಗಮಂತ್ರ'
ಎಂದು ಕೆಲವು ಕಡೆಗಳಲ್ಲಿ ಹೇಳಲಾಗಿದೆ: "ವಿಭವಮಂ ಪಂಚಾಂಗಮಂತ್ರಂ ಚತುರ್ಬಲಮಂ ಪ್ರಾಭವಂ ಎಯ್ದೆ
ಮಾಡೆ" ಎಂಬುದು ಪೊನ್ನನ 'ಶಾಂತಿಪುರಾಣ'ದಲ್ಲಿ ಬರುವ ಮಾತು. ಕರ್ಮಾರಂಭೋಪಾಯ, ಪುರುಷದ್ರವ್ಯಸಂಪತ್ತು,
ದೇಶಕಾಲವಿಭಾಗ, ವಿನಿಪಾತಪ್ರತೀಕಾರ ಮತ್ತು ಕಾರ್ಯಸಿದ್ಧಿ - ಎಂಬಿವು ರಾಜನೀತಿಯ ಐದು ಅಂಶಗಳು.
ಷಡಕ್ಷರದೇವನ 'ರಾಜಶೇಖರವಿಳಾಸ' ಕಾವ್ಯದಲ್ಲಿ ಐದು ಅಕ್ಷರಗಳ
ಶ್ರೇಷ್ಠ ಮಂತ್ರ ಎಂಬರ್ಥದಲ್ಲಿ ('ನಮಃಶಿವಾಯ' ಎಂಬ ಐದಕ್ಷರದ ಮಂತ್ರ) 'ಪಂಚಾಂಗಸನ್ಮಂತ್ರ' ಎಂಬ ಮಾತನ್ನು
ಬಳಸಿದಂತಿದೆ: "ಅರಿವರ್ಗಧ್ವಂಸಮಂ ಪೂಣ್ದೆಸಗಿ ಕಳೆದು ತಳೆದು ಪಂಚಾಂಗ ಸನ್ಮಂತ್ರಮಂ .. .. ತಾಳ್ದು".
=====
ಪಡು: ಇದೊಂದು ಕ್ರಿಯಾಪದ, ದ್ರಾವಿಡ ಮೂಲದ್ದು. ತಮಿಳಿನಲ್ಲಿ ಪಟು,
ಎಂದೂ, ತುಳುವಿನಲ್ಲಿ ಪಡ ಎಂದೂ, ಮಲಯಾಳಂನಲ್ಲಿ ಪಟುಕ ಎಂದೂ, ತೆಲುಗಿನಲ್ಲಿಯೂ ಪಡು ಎಂದು ಬಳಕೆಯಲ್ಲಿದೆ.
ಇದಕ್ಕೆ ಅನೇಕ ಅರ್ಥಗಳಿವೆ. ಕ್ರಿಯಾಪದವಾಗಿ ಈ ಶಬ್ದಕ್ಕೆ ಕೇಶಿರಾಜನು ಎರಡು ಅರ್ಥಗಳನ್ನು ನೀಡುತ್ತಾನೆ:
ಮಲಗು (ನಿದ್ರಿಸು) ಹಾಗೂ ಸಾಯು ಎಂದು ("ಪಡು-ಮರಣೇ, ಶಯನೇ ಚ"). ಅನುಭವಿಸು ಎಂಬ ಅರ್ಥವು
ಆಯಾಸಪಡು, ಕಷ್ಟಪಡು. ಸಂತೋಷಪಡು ಮುಂತಾದ ಕ್ರಿಯಾಸಮಾಸಗಳಲ್ಲಿ ಕಾಣಿಸುತ್ತದೆ. ಬೀಳು ಎಂಬರ್ಥದಲ್ಲಿ
ಈ ಪದವು 'ಪಂಪಭಾರತ'ದಲ್ಲಿದೆ ("ಧರ್ಮನಂದನನ ಕಾಲ ಮೇಲೆ ಕವಿದು ಪಟ್ಟು"). ಮಲಗು ಎಂಬುದು
ರೂಪಕವಾಗಿ ಕೂಡು ಅಥವಾ (ಲೈಂಗಿಕಕ್ರಿಯೆಯಲ್ಲಿ) ಸೇರು ಎಂಬ ಅರ್ಥವನ್ನೂ ಪಡೆಯುತ್ತದೆ. ಈ ಅರ್ಥದಲ್ಲಿ
ಬ್ರಹ್ಮಶಿವ ತನ್ನ 'ಸಮಯಪರೀಕ್ಷೆ'ಯಲ್ಲಿ "ಪರಲಲನೆಯೊಳಂ ಪಡುಗೆ ಶಿವಭಕ್ತನಾಗಿರ್ದೊಡೆ ಪೊರ್ದವು
ಪಾಪಮೆಂಬರ್ ಆಱಡಿಕಾರರ್" ಎನ್ನುತ್ತಾನೆ. (ಪಡುಗೆ=ನೆರೆಯಲಿ). ಪಡು ಎಂಬುದಕ್ಕಿರುವ ಮಲಗು ಎಂಬ
ಅರ್ಥವು ರೂಪಕವಾಗಿ ಸೂರ್ಯನು ಮುಳುಗುವುದನ್ನು (ಸೂರ್ಯ ಮಲಗುವುದನ್ನು) ಸೂಚಿಸುತ್ತದೆ. "ನೇಸರ್
ಪಟ್ಟೊಡೆ ಕಿತ್ತಯ್ಯಂಗೆ ಆಸನ್ನಕಾಲಮಾದುದು" ಎಂಬ ಪ್ರಯೋಗ 'ವಡ್ಡಾರಾಧನೆ'ಯಲ್ಲಿದೆ. ಈ ಅರ್ಥಗಳೆಲ್ಲವೂ
ತೆಲುಗು ತಮಿಳುಗಳಲ್ಲಿಯೂ ಇವೆ.
ಪಡು ಎಂಬುದು ವಿಶೇಷಣವಾಗಿಯೂ ಬಳಕೆಯಲ್ಲಿದೆ: ಪಡುಕೋಣೆ ಎಂದರೆ
ಮಲಗುವ ಮನೆ (ಈ ಹೆಸರಿನ ಊರೊಂದಿದೆ); ಈ ಅರ್ಥದಲ್ಲಿ ಪಡುವೋವರಿ ಎಂಬ ಶಬ್ದವು 'ಸುಕುಮಾರಚರಿತೆ'ಯಲ್ಲದೆ
("ಆ ಕನ್ಯೆ ಧನದೇವನ ಪಡುವೋವರಿಯ ಮನೆಯನೆಯ್ದಿ"). 'ಪಡುನೇಸರ್' ಎಂದರೆ ಅಸ್ತಮಿಸುತ್ತಿರುವ
ಸೂರ್ಯ; ಸೂರ್ಯ ಮುಳುಗುವ ದಿಕ್ಕು ಎಂಬರ್ಥದಲ್ಲಿ ಪಡುವು ಎಂಬ ಶಬ್ದ 'ಪಂಪಭಾರತ'ದಲ್ಲಿದೆ ("ನರನ
ರಥಮಂ ಪಡುವು ಎಣ್ಗಾವುದುವರಂ ಸಿಡಿಲ್ವಿನಂ ಎಚ್ಚು"). ಪಡುವಣ ಎಂಬು ಇದರ ಇನ್ನೊಂದು ರೂಪ. ಸೂರ್ಯ
ಮುಳುಗುವಾಗಿನ ಕೆಂಪು ಬಣ್ಣವನ್ನು ಕುವೆಂಪು ಪಡುಗೆಂಪು ಎನ್ನುತ್ತಾರೆ; 'ಶ್ರೀ ರಾಮಾಯಣ ದರ್ಶನಂ'ನಲ್ಲಿ
"ರವಿ ಮುಳುಗಿ, ಮೂಡಣ ದೆಸೆಗೆ ಪಡುಗೆಂಪು ಪಸರಿಸುತ್ತಿರೆ" ಎಂಬ ಸಾಲಿದೆ.
=====
ಪಡುವಲಕಾಯಿ: ಈ ಶಬ್ದದ ಮೊದಲ ಭಾಗ ಪಡುವಲ ಎಂಬುದನ್ನು ನೋಡಿದರೆ ಇದು ಪಡುವಲ
ಅಥವಾ ಪಶ್ಚಿಮ ದೇಶದಿಂದ ಬಂದಿರುವ ಪರಂಗಿ ಅಥವಾ ಟೊಮೆಟೋಗಳಂತಹ ತರಕಾರಿಯಾಗಿರಬಹುದೇ ಎಂಬ ಅನುಮಾನ ಹುಟ್ಟಿಸುವಂತಿದೆ.
ಆದರೆ ಹಾಗೇನಿಲ್ಲ; ಇದು ದೇಶೀಯ ಬಳ್ಳಿ ಮತ್ತು ಅದರ ಕಾಯಿಯನ್ನು ಸೂಚಿಸುತ್ತದೆ. ಇದು ಸಂಸ್ಕೃತದ ಪಟೋಲ
ಎಂಬ ಶಬ್ದದ ತದ್ಭವರೂಪ. ಈ ಕಾಯಿಯಲ್ಲಿ ಎರಡು ಬಗೆ: ಕಹಿ ಮತ್ತು ಕಹಿಯಲ್ಲದ್ದು. ಕಹಿಯಾದ ಪ್ರಭೇದಕ್ಕೆ
'ಪಟೋಲ' (ಈ ಶಬ್ದ ಪುಲ್ಲಿಂಗ ಶಬ್ದ) ಎಂಬ ಹೆಸರಿದ್ದರೆ ಕಹಿಯಲ್ಲದ್ದಕ್ಕೆ 'ಪಟೋಲಿಕಾ' (ಇದು ಸ್ತ್ರೀಲಿಂಗ
ಶಬ್ದ) ಎಂಬ ಹೆಸರಿದೆ. ಅದೇ ಕನ್ನಡದಲ್ಲಿ 'ಪಟಲ' ಎಂದಾಗಿ 'ಪಡಲ' ಎಂದೂ 'ಪಡಳ' ಎಂದೂ ಆಗಿದೆ. ಹಳಗನ್ನಡದಲ್ಲಿನ
ಅನೇಕ ಶಬ್ದಗಳ 'ಪ'ಕಾರವು ನಡುಗನ್ನಡದಲ್ಲಿ 'ಹ'ಕಾರವಾಗುವಂತೆ ಪಡಲ ಎಂಬುದು 'ಹಡಲ' ಎಂಬ ರೂಪವನ್ನೂ
ಪಡೆಯುತ್ತದೆ; ಈ ರೂಪವು ಅನೇಕ ಕನ್ನಡ ಕಾವ್ಯಗಳಲ್ಲಿ ಬಳಕೆಯಾಗಿದೆ. ಕ್ರಿಶ 1025 ರಲ್ಲಿ ರಚಿತವಾದ
ಚಾವುಂಡರಾಯನ 'ಲೋಕೋಪಕಾರ' ಎಂಬ ಕೃತಿಯಲ್ಲಿ ಪಡಲದ ಕಾಯಿ ಉಲ್ಲೇಖಗೊಂಡಿದೆ; ಪಡಲದ ಕಹಿಯನ್ನು ಹೋಗಲಾಡಿಸುವ
ಪರಿಯನ್ನು ಅಲ್ಲಿ ತಿಳಿಸಲಾಗಿದೆ. ಅಂದರೆ ಈ ತರಕಾರಿಯ ಉಪಯೋಗ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಪಟೋಲ ಎಂಬ ಶಬ್ದವು ಪ್ರಾಕೃತದಲ್ಲಿ ಪಡೋಲ ಎಂದಾಗುತ್ತದೆ, ತಮಿಳಿನಲ್ಲಿ ಪುಟಲ್ ಎಂದೂ, ಪುಟಲೈ ಎಂದೂ
ತೆಲುಗಿನಲ್ಲಿ ಪೊಟ್ಲ ಎಂದೂ ಪಟಲ ಎಂದೂ, ತುಳುವಿನಲ್ಲಿ ಪಟ್ಲ ಎಂದೂ, ಮಲಯಾಳಂನಲ್ಲಿ ಪುಟ್ಟಲ್ ಅಥವಾ
ಪಿಟ್ಟಲ್ ಅಥವಾ ಪುಟೋಲ್ ಎಂದೂ ಆಗುತ್ತದೆ. ಪಡುವಲ ಕಾಯಿ ಬೂದುಬಣ್ಣವಾಗಿರುತ್ತದೆ; ಒಂದು ಪ್ರಭೇದದಲ್ಲಿ
ಉದ್ದುದ್ದು ಪಟ್ಟೆಗಳೂ ಇರುತ್ತವೆ. ಪಡುವಲ ಕಾಯಿಯು ಸಣಕಲಾಗಿ ಉದ್ದವಾಗಿದ್ದು ಹಾವಿನ ಆಕಾರವನ್ನು ಹೋಲುವುದರಿಂದ
ಇಂಗ್ಲಿಷ್‍ನಲ್ಲಿ ಇದನ್ನು 'ಸ್ನೇಕ್ ಗೌರ್ಡ್' ಎಂದೇ ಕರೆಯುತ್ತಾರೆ. ಆದರೆ ಈಚೆಗೆ ಆಧುನಿಕ ತಂತ್ರಜ್ಞಾನವನ್ನು
ಬಳಸಿಕೊಂಡು ಇದರ ಆಕಾರವನ್ನು ಪರಿಷ್ಕರಿಸಿ ಗಿಡ್ಡದಾಗಿ ಮಾಡಲಾಗಿದೆ.
======
ಪದ-1: ವೇದಮಂತ್ರಗಳನ್ನು ಉಚ್ಚರಿಸುವ ಒಂದು ಬಗೆಯನ್ನು ಪದ
ಎನ್ನುತ್ತಾರೆ. ವೇದಮಂತ್ರಗಳನ್ನು ಬಿಡಿಸಿ ಹೇಳುವ ಗ್ರಂಥವನ್ನು ಪದಪಾಠ ಎನ್ನುತ್ತಾರೆ. ಪದ ಎಂಬುದು
ಶಬ್ದ ಎಂಬುದಕ್ಕೆ ಸಂವಾದಿಯಾಗಿ ವ್ಯಾಪಕವಾಗಿ ಬಳಕೆಯಲ್ಲಿದೆ. ಹಾಗೆಯೇ 'ಪದಕ್ರಮಕ' ಎಂದರೆ ವೇದದ ಪದ
ಮತ್ತು ಕ್ರಮಪಾಠಗಳನ್ನು ಅಧ್ಯಯನ ಮಾಡುವವನು ಹಾಗೂ ತಿಳಿದಿರುವವನು ಎಂದರ್ಥ. 'ಪದಕ' ಎಂದರೆ ವೇದಪಾಠವನ್ನು
ಅಧ್ಯಯನ ಮಾಡುವವನು ಎಂದು. ವ್ಯಾಕರಣದ ಪ್ರಕಾರ ಕಪ್ರಯೋಗಕ್ಕೆ ಅರ್ಹವಾದ ಅರ್ಥವತ್ತಾದ ವರ್ಣಗಳುಕಿ ಪದ
ಎನ್ನಿಸಿಕೊಳ್ಳುತ್ತದೆ; ಆದರೆ ವ್ಯಾಕರಣದಲ್ಲಿ "ಪ್ರಕೃತಿ ಪ್ರತ್ಯಯಂಗಳೆರಡುಂ ಕೂಡೆ ಪದಮಕ್ಕುಂ"
ಎಂದು ಕೇಶಿರಾಜನೆಂಬ ಹದಿಮೂರನೆಯ ಶತಮಾನದ ವೈಯಾಕರಣಿ ಹೇಳುತ್ತಾನೆ. "ಹಲಗೆ ಬಳಪವ ಹಿಡಿಯದೊಂದಗ್ಗಳಿಕೆ
ಪದವಿಟ್ಟಳುಪದೊಂದಗ್ಗಳಿಕೆ" ಎಂದು ಕುಮಾರವ್ಯಾಸ ಹೇಳಿಕೊಳ್ಳುವ ಮಾತು ಕಾವ್ಯವನ್ನು ತಾನು ಎಲ್ಲಿಯೂ
ಅಳಿಸದೆ ಸರಾಗವಾಗಿ ಬರೆದುಕೊಂಡು ಹೋಗುತ್ತೇನೆಂದು ಹೆಮ್ಮೆಪಡುವಾಗ ಹೇಳುವಾಗಿನದು. ಹಳಗನ್ನಡ ಕಾವ್ಯಗಳಲ್ಲಿ,
ವಿಶೇಷವಾಗಿ ಚಂಪೂ ಕಾವ್ಯಗಳ ವೃತ್ತಗಳಲ್ಲಿ ಅನೇಕ ಶಬ್ದಗಳು ಕೂಡಿ ದೀರ್ಘ ಸಮಾಸಗಳಾಗಿರುವುದುಂಟು. ಅಂಥದರ
ಅರ್ಥ ಹೇಳಲು ಅಲ್ಲಿರುವ ವಿವಿಧ ಪದಗಳನ್ನು ಬಿಡಿಸಿ ಹೇಳುವ ರೂಢಿಯನ್ನು 'ಪದವಿಭಾಗ' ಅಥವಾ 'ಪದಚ್ಛೇದ'
ಎನ್ನುತ್ತಾರೆ. 'ಪದಸಂಚಯ' ಎಂದರೆ ಶಬ್ದಗಳ ಸಮೂಹ; "ಕೆಟ್ಟುದು ಈಗಡೀಗಡಿನ ಕವಿವ್ರಜಕ್ಕೆ ಪದಸಂಚಯಂ"
ಎಂದು ಪೊನ್ನನೆಂಬ ಹತ್ತನೆಯ ಶತಮಾನದಕವಿ ತನ್ನ 'ಶಾಂತಿಪುರಾಣ'ದಲ್ಲಿ ಹೇಳುತ್ತಾನೆ! ಈ ಪದಗಳ ಬಗೆಗಿನ
ಶಾಸ್ತ್ರವೇ ಪದಾಗಮ; ಅದನ್ನು ತಿಳಿದವನೇ ಪದಾಗಮಜ್ಞ. ಪದಾರ್ಥ ಎಂಬುದು ಈಗ ವಸ್ತು ಎಂಬ ಅರ್ಥವನ್ನು
ಪಡೆದಿದ್ದರೂ ಅದರಲ್ಲಿ 'ಪದ+ಅರ್ಥ' ಎಂಬೆರಡು ಶಬ್ದಗಳು ಸೇರಿ ಅಭಿಪ್ರಾಯ ಎಂಬುದನ್ನು ಸೂಚಿಸುತ್ತದೆ.
ಪದಗಳಿಗೆ ಅರ್ಥಗಳನ್ನು ಸೂಚಿಸುವ ಗ್ರಂಥವೇ 'ಪದಕೋಶ' ಅಥವಾ ನಿಂಟು. 'ಪದವಿದ್ಯೆ' ಎಂದರೆ ವ್ಯಾಕರಣ.
ಪದ ಎಂಬುದು ಹಾಡು ಎಂಬರ್ಥದಲ್ಲಿಯೂ ಕನ್ನಡದಲ್ಲಿ ಬಳಕೆಯಲ್ಲಿರುವ
ಶಬ್ದ. 'ಒಂದು ಪದ ಹೇಳು' ಎಂದರೆ ಒಂದು ಹಾಡು ಹೇಳು ಎಂದರ್ಥ. ಹರಿದಾಸರ ಕೀರ್ತನೆಗಳನ್ನು ದಾಸರ ಪದಗಳು
ಎಂದೇ ಕರೆಯುವ ರೂಢಿಯಿದೆ. ಹಾಡುವುದಕ್ಕೆಂದೇ ರಚಿತವಾದ ಕಾವ್ಯವನ್ನು ಹಿಂದೆ 'ಪದಕವಿತೆ' ಎನ್ನುತ್ತಿದ್ದರು.
'ಪದಗಾರ್ತಿ' ಎಂಬುದನ್ನು ಹಾಡು ಹೇಳುವವಳು ಎಂಬರ್ಥದಲ್ಲಿ ಕಾವ್ಯಗಳಲ್ಲಿ ಬಳಸಲಾಗಿದೆ. ಗೀತರಚನೆಯಲ್ಲಿನ
ಒಂದು ವಿಶಿಷ್ಟ ಪ್ರಭೇದವನ್ನೂ ಪದ ಎಂದು ಕರೆಯುತ್ತಾರೆ: ಶೃಂಗಾರಪ್ರಧಾನವಾಗಿದ್ದು, ದೇವರ ಲೀಲಾವಿನೋದಗಳನ್ನು
ಒಳಗೊಂಡು ಭರತನಾಟ್ಯಕ್ಕೆ ಮೀಸಲಾದ ಸಾಹಿತ್ಯರಚನೆಗಳೇ ಈ ಪದಗಳು, ಜಾವಳಿ ಮುಂತಾದವು.
=====
ಪದ2: ಈ ಶಬ್ದದ ಮತ್ತೊಂದು ನೆಲೆಯ ಅರ್ಥಗಳನ್ನೀಗ ನೋಡೋಣ. ಇದರ ಮೂಲಪದ
'ಪದ್' ಎಂಬುದು, ಅದರರ್ಥ ಪಾದ, ಚರಣ, ಕಾಲು ಎಂದು. ಪದ ಎಂದರೂ ಅದೇ ಅರ್ಥಗಳಿವೆ. ಹಾಗೆಯೇ ಕಾಲಿನ ಹೆಜ್ಜೆ,
ಅಡಿ ಎಂಬ ಅರ್ಥಗಳೂ ಇವೆ. ಪಾದ ಎಂಬುದು ಈ ಶಬ್ದದ ಸಮಾನಾರ್ಥಕ ಪದ. ಕಾಲಿಗೆ ಸಂಬಂಧಿಸಿದುದು ಎಂದು ಸೂಚಿಸಲು
ಇದನ್ನು ಪೂರ್ವಪದವಾಗುಳ್ಳ ಅನೇಕ ಸಮಾಸಗಳು ರೂಢಿಯಲ್ಲಿವೆ. ಪದಾತಿ ಅಥವಾ ಪದಾಜಿ ಎಂಬುದು ಚತುರಂಗ ಸೈನ್ಯದ
ಕಾಲಾಳು ದಳವನ್ನು ಸೂಚಿಸುತ್ತದೆ. ಪದಪದ್ಧತಿ, ಪದನ್ಯಾಸಗಳು ಹೆಜ್ಜೆಯ ಗುರುತನ್ನು ಸೂಚಿಸುತ್ತವೆ.
ಪದಕಟಕ ಎಂಬ ಶಬ್ದವನ್ನು ಷಡಕ್ಷರ ಕವಿ ಕಾಲ್ಗಡಗ ಎಂಬರ್ಥದಲ್ಲಿ ಬಳಸಿದ್ದಾನೆ. ಪದಪೀಠ ಎಂಬ ಶಬ್ದವು
ಪಾದಗಳನ್ನಿರಿಸಿಕೊಳ್ಳಲು ಬಳಸುತ್ತಿದ್ದ ಪೀಠವನ್ನು ಸೂಚಿಸುತ್ತದೆ. ಪದ್ಯ ಎಂಬ ಶಬ್ದವು ಪದದಿಂದಲೇ
ಬಂದುದು. ಇದಕ್ಕೆ ಸಂಸ್ಕೃತ ನಿಘಂಟುಗಳು ಎರಡು ಅರ್ಥಗಳನ್ನು ಹೇಳುತ್ತವೆ. ದೇವರ ಪಾದದಿಂದ ಹುಟ್ಟಿದ
ನಾಲ್ಕನೆಯ ವರ್ಣದವನು ಎಂಬುದು ಒಂದು ಅರ್ಥವಾದರೆ ನಾಲ್ಕು ಪಾದಗಳುಳ್ಳ ಶ್ಲೋಕ ಎಂಬುದು ಮತ್ತೊಂದು.
ಪದ ಎಂಬುದು ಛಂದಶ್ಶಾಸ್ತ್ರದಲ್ಲಿಯೂ ಬಳಕೆಯಲ್ಲಿರುವ ಶಬ್ದ.
ಛಂದ ಎಂದರೇ ನಡಿಗೆ; ನಡಿಗೆಯಲ್ಲಿ ಪಾದಗಳದ್ದೇ ಮುಖ್ಯ ಪಾತ್ರ. ಛಂದಸ್ಸು ಎಂಬುದು ಪದ್ಯಗಳ ನಡೆಯನ್ನು,
ಪದ ಎಂಬುದು ಅಲ್ಲಿನ ಸಾಲನ್ನು ಸೂಚಿಸುತ್ತದೆ. ಸಂಸ್ಕೃತದ ಅನುಷ್ಟುಬ್ ಅಥವಾ ಶ್ಲೋಕದ ನಾಲ್ಕನೇ ಒಂದು
ಭಾಗವನ್ನು ಪದ ಎಂದು ಕರೆಯುತ್ತಾರೆ; ಶ್ಲೋಕಕ್ಕೆ ನಾಲ್ಕು ಸಾಲುಗಳು. ಮುಂದೆ ಯಾವುದೇ ಪದ್ಯಜಾತಿಯ ಸಾಲನ್ನು
ಪದ ಎಂದೇ ಕರೆಯುವ ರೂಢಿ ಬಂತು. ಸರಸ್ವತಿ ಮತ್ತು ಕಾವ್ಯ ಎರಡನ್ನೂ ಕವಿರಾಜಮಾರ್ಗಕಾರನು "ಚತುರರುಚಿರ
ಪದರಚನೆ" ಎಂದು ಶ್ಲೇಷೆಯಿಂದ ವರ್ಣಿಸುತ್ತಾನೆ. ಸರಸ್ವತಿಯ ಕಾಲು ಹಾಗೂ ಕಾವ್ಯದ ಪದ್ಯದ ಸಾಲು
ಎರಡೂ ಅರ್ಥಗಳನ್ನಿದು ಒಳಗೊಂಡಿದೆ.
ಪದ ಎಂಬುದು ಸ್ಥಾನವನ್ನೂ ಸೂಚಿಸುತ್ತದೆ. ಪದವಿ ಎಂಬುದು ಇದರ
ಇನ್ನೊಂದು ರೂಪ; ಇದಕ್ಕ ಮಾರ್ಗ ಹಾಗೂ ಸ್ಥಾನ ಎಂಬ ಅರ್ಥಗಳಿವೆ. ಪದಚ್ಯುತ ಎಂದರೆ ಸ್ಥಾನವನ್ನು ಕಳೆದುಕೊಂಡವನು
ಎಂಬರ್ಥವಿದೆ. ಹಾಗೆಯೇ ಅಧಿಕಾರದಲ್ಲಿ ಮೇಲಿನ ಹಂತಕ್ಕೇರುವುದನ್ನು 'ಪದೋನ್ನತಿ' ಎಂಬ ಶಬ್ದದಿಂದ ಸೂಚಿಸುತ್ತಾರೆ.
=====
ಬಾಳು1: ಹಳಗನ್ನಡದಲ್ಲಿ ಬಾೞ್ ಮತ್ತು ಬಾಳ್ ಎಂಬ ಎರಡು ರೂಪಗಳೂ ಬೇರೆ
ಬೇರೆ ಅರ್ಥದಲ್ಲಿದ್ದವು. ಈಗ ಇವೆರಡೂ ಒಂದೇ ರೂಪದಲ್ಲಿವೆ: ಅದೇ ಬಾಳು. ಇದರ ಮೂಲ ಸ್ವರೂಪವಾದ ಬಾೞ್
ಎಂಬುದು ತಮಿಳಿನಲ್ಲಿ ವಾೞ್ ಎಂದೂ ಮಲಯಾಳಂನಲ್ಲಿ ವಾೞು ಎಂದೂ ತುಳುವಿನಲ್ಲಿ ಬಾಳು ಎಂದೂ ದೊರಕುತ್ತದೆ.
ಬಾೞ್ ಹಳಗನ್ನಡದಲ್ಲಿ ಕ್ರಿಯಾರ್ಥ ಮತ್ತು ನಾಮವಾಚಕಗಳಾಗಿ ಬಳಕೆಯಲ್ಲಿತ್ತು. ಮೊದಲಿಗೆ ಇದರ ಕ್ರಿಯಾರೂಪದನ್ನು
ವಿವೇಚಿಸಬಹುದು. ಜೀವಿಸು ಎಂಬುದು ಇದರರ್ಥ. "ಇಂತು ಬಾೞ್ವುದೆ ಚೋದ್ಯಂ" ಎಂಬ ಮಾತು 'ಕವಿರಾಜಮಾರ್ಗ'ದಲ್ಲಿಯೇ
ಇದೆ. "ಜೋಳಕ್ಕೆ ತಪ್ಪಿಯುಂ ಇಂ ಬಾೞ್ವುದೆ, ಪೂಣ್ದು ನಿಲ್ಲದಿಕೆಯಿಂ ಬಾೞ್ವಂತು ವಿಖ್ಯಾತಕೀರ್ತಿಯವೊಲ್
ಈ ಒಡಲ್ ಅಬ್ಬೆ ಪೇೞಿಮೆನಗೇಂ ಕಲ್ಪಾಂತರಸ್ಥಾಯಿಯೇ" ಎಂಬ 'ಪಂಪಭಾರತ'ದ ಪ್ರಖ್ಯಾತ ವಾಕ್ಯದಲ್ಲಿ
ಈ ಪದ ಎರಡು ಬಾರಿ ಬಳಕೆಯಾಗಿದೆ. ಕೃದಂತರೂಪದಲ್ಲಿ ಆದಿದೀರ್ಘವು ಹ್ರಸ್ವವಾಗುತ್ತದೆ. "ತನ್ನ
ಸಂತತಿಗೆ ಮಕ್ಕಳಿಲ್ಲದಳ್ ಬೞ್ದು ಬಾೞ್ವಳ್" ಎಂಬಲ್ಲಿ 'ಬೞ್ದು' ಎಂದಾಗಿ ಬದುಕಿ ಎಂಬರ್ಥವನ್ನು
ಪಡೆಯುತ್ತದೆ. ಬಾೞ್ ಎಂದರೆ ಸುಖವಾಗಿರು ಎಂಬ ಅರ್ಥವೂ ಧ್ವನಿಸುತ್ತದೆ: "ಅರವಿಂದಮಿತ್ರನ ಬಲದಿಂ
ಕಾದಿ ಕೊಂದೆವಪ್ಪೊಡೆ ಸುಖದಿಂ ಬಾೞ್ವೆವು" ಎಂಬ 'ಪಂಚತಂತ್ರ'ದ ಮಾತು ಇದಕ್ಕೆ ಉದಾಹರಣೆ. ಹಾಗೆಯೇ
ಜೀವನ ಮಾಡು ಎಂಬರ್ಥವೂ ಇದಕ್ಕಿದೆ. "ಜೀವಿತಮಂ ಕೊಂಡು ಬಾೞ್ವನೆಂಬವಂ ಪ್ರಾಣಮಂ ಕುಡಲ್ವೇೞ್ಕುಂ"
ಎಂಬ ಅದರದ್ದೇ ಮತ್ತೊಂದು ವಾಕ್ಯದಲ್ಲಿ ಇದು ಸ್ಪಷ್ಟವಾಗುತ್ತದೆ. 'ಶಬ್ದಮಣಿದರ್ಪಣ'ವು "ಬೞ್ದಂ
(ಬಾೞ್ದಂ)=ಜೀವಿಸಿದಂ, ಒಕ್ಕಲಾದಂ" ಎಂಬ ಅರ್ಥವನ್ನು ಕೊಡುತ್ತದೆ.
ಮುಂದಿನ ಬರವಣಿಗೆಯಲ್ಲಿ ೞಕಾರ ಳಕಾರವಾಯಿತು; ಜೊತೆಗೆ ವ್ಯಂಜನಾಂತವು
ಸ್ವರಾಂತವಾಯಿತು; ಹೀಗಾಗಿ ಇದರ ರೂಪ ಬಾಳು ಎಂದಾಯಿತು. ನಡುಗನ್ನಡ ಕಾವ್ಯಗಳು 'ಬಾಳ್' ಎಂಬ ಶಬ್ದಕ್ಕಿರುವ
ಅರ್ಥಗಳಲ್ಲಿ ಈ ರೂಪವನ್ನೇ ಬಳಸುತ್ತವೆ. ಬದುಕಿರುವ ಹೆಣ ಎಂಬರ್ಥದಲ್ಲಿ ಬಸವಣ್ಣ 'ಬಾಳುವೆಣ' ಎಂಬ ರೂಪವನ್ನು
ಸೃಷ್ಟಿಸಿಕೊಳ್ಳುತ್ತಾನೆ: "ಬಾಳುವೆಣನ ಬೀಳುವೆಣನ ಸಂಸಾರವೇನವನ?" "ವನಿತೆ ನಿನ್ನಂ
ಬಾಳಲೀಯೆವು" ಎಂಬುದು 'ಬಸವಪುರಾಣ'ದ ವಾಕ್ಯ. ಹೊಸಗನ್ನಡದಲ್ಲೂ ಇದೇ ರೂಢಿ ಮುಂದುವರಿಯಿತು.
"ತಾಯೆ - ಬಾಳಮ್ಮ, ಬಾಳು" ಎಂಬುದು ಬಿಎಂಶ್ರೀ ಅವರ 'ಕನ್ನಡ ತಾಯ್ ನೋಟ'ದ ಸಾಲು. ಇಲ್ಲಿರುವುದು
ಹಾರೈಕೆ. ಹಳಗನ್ನಡದಲ್ಲಿ ಕೃದಂತ ರೂಪದಲ್ಲಿ ಆದಿ ಹ್ರಸ್ವವಾಗದೆ ಹೊಸಗನ್ನಡದಲ್ಲಿ ದೀರ್ಘವೇ ಉಳಿದುಕೊಳ್ಳುತ್ತದೆ:
ಅದೇ ಪದ್ಯದ "ಬಾಳ್ವವರು ಮೆರೆವವರು" ಎಂಬ ರೂಪವನ್ನು ನೋಡಬಹುದು.
=====
ಬಾಳು2: ಈಗ ಈ ಶಬ್ದದ ನಾಮರೂಪವನ್ನು ಪರಿಶೀಲಿಸೋಣ. ಕ್ರಿಯಾರ್ಥದಲ್ಲಿ
ಯಾವ ಯಾವ ಅರ್ಥಛಾಯೆಗಳನ್ನು ಪಡೆದಿತ್ತೋ ಆ ಎಲ್ಲ ಅರ್ಥಛಾಯೆಗಳ ನಾಮರೂಪವಿದು. ಕರ್ಣಪಾರ್ಯನ 'ನೇಮಿನಾಥಪುರಾಣ'ದ
ಮಾತು ಹೀಗಿದೆ: "ಶಂಕಾತಂಕದ ಸುತ್ತಿನೊಳಗುೞಿದುೞಿ ನಮೆವ ಬಾೞುಂ ಬಾೞೆ". "ಮಂತ್ರಪದವಿಯಂ
ಬಾೞುಮಂ ಪ್ರತಿಪತ್ತಿಯುಮಂ ಕೊಟ್ಟುದಂ" ಎಂಬುದು 'ವಡ್ಡಾರಾಧನೆ'ಯ ಮಾತು. ಈ ಶಬ್ದದಿಂದ ಹಳಗನ್ನಡದಲ್ಲಿ
ಅನೇಕ ಸಮಾಸಗಳನ್ನು ಸೃಷ್ಟಿಸಿಕೊಂಡು ಹೊಸ ಪರಿಕಲ್ಪನೆಗಳನ್ನು ತುಂಬಲಾಯಿತು. ಕನ್ನಡದ ಮೊತ್ತ ಮೊದಲ
ಶಾಸನ (ಹಲ್ಮಿಡಿ)ದಲ್ಲಿ "ವಿಜ ಅರಸನ್ಗೆ ಬಾೞ್ಗೞ್ಚು ಪಲ್ಮಿಡಿಉಂ ಮೂವಳ್ಳಿಉಂ ಕೊಟ್ಟಾರ್"
ಎಂಬ ವಾಕ್ಯವಿದೆ. ಗೆಲವನ್ನು ತಂದಿತ್ತ ವೀರನಿಗೆ ಸಾರ್ವಜನಿಕವಾಗಿ ಅವನ ಕತ್ತಿಯನ್ನು ತೊಳೆದು ಮಾಡುವ
ಗೌರವವೇ 'ಬಾೞ್ಗೞ್ಚು'. ಬದುಕು ಎಂಬರ್ಥದಲ್ಲಿ ಬಾೞ್ಕೆ ಎಂಬ ಪ್ರಯೋಗವೂ ಇದೆ: "ಸತ್ತೊಡೆ ಪುಟ್ಟರೆ
ತನಗಿದೇಕೆ ಬಾೞ್ಕೆಯ ಮೋಹಂ" ('ಧರ್ಮಾಮೃತ'). ಇಷ್ಟ ಎಂಬರ್ಥದಲ್ಲಿ ಬಾೞ್ತೆ ಎಂಬ ಪ್ರಯೋಗವೂ ಇದೆ
("ನಿಮಗೆ ಬಾೞ್ತೆಯಪ್ಪುದಂ ಬೇಡಿಕೊಳ್ಳಿಂ" - 'ಪಂಪಭಾರತ'). ಇದನ್ನೇ ಬೆಳೆಸಿ ಉಪಯುಕ್ತವಾಗು
ಎಂಬರ್ಥದಲ್ಲಿ 'ಬಾೞ್ತೆಯಾಗು' ಎಂಬ ಪ್ರಯೋಗ 'ಪಂಚತಂತ್ರ'ದಲ್ಲಿದೆ ("ಅರಸುಗೆಯ್ವಾತಂಗೆ ಎಂತಪ್ಪನುಂ
ಬಾೞ್ತೆಯಾಗದನಿಲ್ಲಂ"). ಉಂಬಳಿ ಕೊಡುವುದನ್ನು ನಾಗಚಂದ್ರನ 'ಮಲ್ಲಿನಾಥ ಪುರಾಣ'ದಲ್ಲಿ 'ಬಾೞ್ಕೆಗೊಡು'
ಎಂದಿದೆ ("ಕರುಣಾಗ್ರಾಮಮಂ ಈ ಮಾಮರಕ್ಕೆ ಮಧು ಬಾೞ್ಕೆಗೊಟ್ಟು"). ಜನ್ನನ 'ಅನಂತನಾಥಪುರಾಣ'ದ
"ಕೋಳ್ಗುದಿ ಬಾೞ್ಗುದಿಯಾಗಿ" ಬಲ್ಲಿನ ಬಾಳ್ಗುದಿ ಎಂದರೆ ಪ್ರಾಣಸಂಕಟ. ಫಲವತ್ತಾದ ನೆಲ
ಎಂಬರ್ಥದಲ್ಲಿ 'ಲೀಲಾವತಿ'ಯು ಬಾೞ್ನೆಲ ಎಂಬ ಶಬ್ದವನ್ನು ಬಳಸುತ್ತದೆ ("ಫಲಭರದಿಂದ ಅಲ್ಲಾಡುವ
ಬಳ್ಳಿವನದ ಬಾೞ್ನೆಲದಿಂ ತೆರಳ್ದು"). ಬಾೞ್ದಲೆವಿಡಿ ಎಂದರೆ ಜೀವಂತವಾಗಿ ಸೆರೆಹಿಡಿ ಎಂಬರ್ಥ
("ಪೆಱೆಯಂ ಬೀರದಿನಾ ಗೊರವನೆಯ್ದೆ ಬಾೞ್ದಲೆವಿಡಿದಂ" - 'ಕಬ್ಬಿಗರ ಕಾವ'). ಬಾೞ್ಮೊದಲ್
ಎಂದರೆ ಬಂಡವಾಳ ಎಂಬರ್ಥವು "ಅಂಗಜಂಗೆ ಬಾೞ್ಮೊದಲ್ ಅದು ಚಿತ್ತಜಂಗೆ ಕುಲವಂ" ಎಂಬ 'ಆದಿಪುರಾಣ'ದ
ಮಾತಿನಲ್ಲಿದೆ. ಗಟ್ಟಿ ಎಂಬರ್ಥದಲ್ಲಿಯೂ ಈ ಶಬ್ದದ ಬಳಕೆಯಾಗಿದೆ ("ಇದು ಬಾೞ್ಮೊಸರ್ ಇದು ಕಳಲ್
ಇಂತಿದು ರುಚಿವೆತ್ತಿರ್ದ ಪಾನಂ" - 'ಶಾಂತಿಪುರಾಣ').
ಹೊಸಗನ್ನಡದಲ್ಲಿ ಜೀವನ ಎಂಬರ್ಥದಲ್ಲಿ ಬಾಳು, ಬಾಳ್ವೆ ರೂಪಗಳು
ವ್ಯಾಪಕವಾಗಿ ಬಳಕೆಯಾಗುತ್ತದೆ. "ಇಂಥ ಬಾಳಿಗೆ ಒಲವೆ, ನಿನ್ನ ಕನಸು?" ಗ ಕೆಎಸ್ನ;
"ಬಾಳ್ಗೆ ಬಾಳನು ಬೆಸೆದೆವು" ಗ ಜಿಎಸ್ಎಸ್; "ಮೇಲು ಬಾಳಿನ ಆಸೆ ಹೊತ್ತು ತನ್ನಿರಿ,
ಅಣ್ಣ" - ಅಡಿಗ; "ನೀನೆ ಕಣಾ ನಮ್ಮ ಬಾಳ್ವೆ" ಗೋವಿಂದ ಪೈ ಇತ್ಯಾದಿ.
=====
ಪುರಾಣ: ಇದೊಂದು ಸಂಸ್ಕೃತ ಪದ, ಕನ್ನಡದಲ್ಲಿಯೂ ವ್ಯಾಪಕವಾಗಿಯೂ ವಿವಿಧಾರ್ಥಗಳಲ್ಲಿಯೂ
ಬಳಕೆಯಲ್ಲಿದೆ. ಪುರಾಣ ಎಂದರೆ ಹಳೆಯದು, ಪುರಾತನವಾದದ್ದು ಎಂಬುದು ಮೂಲಾರ್ಥ. "ಪುರಾಣಮಿತ್ಯೇವ
ನ ಸಾಧು ಸರ್ವಂ| ನಚಾಪಿ ಸರ್ವಂ ನವಮಿತ್ಯವದ್ಯಂ" ಎಂಬ ಕಾಳಿದಾಸನ ಮಾತು ಪ್ರಸಿದ್ಧ. ಹಳೆಯದೆಲ್ಲ
ಶ್ರೇಷ್ಠವಲ್ಲ, ಹೊಸತೆಲ್ಲ ಕನಿಷ್ಠವಲ್ಲ ಎಂಬುದು ಇದರ ಸ್ಥೂಲಾರ್ಥ. ದೇವರನ್ನು ಪುರಾಣಪುರುಷ ಎಂದು
ಕರೆಯುತ್ತಾರೆ (ಈ ಶಬ್ದಕ್ಕೆ ಮುದುಕ ಎಂಬರ್ಥವೂ ಇದೆ). ಕೆಲವು ಹಳಗನ್ನಡ ಕಾವ್ಯಗಳಲ್ಲಿಯೂ ಈ ಪದ ಈ
ಅರ್ಥದಲ್ಲಿಯೇ ಬಳಕೆಯಾಗಿದೆ: ಪುರಾಣಕವಿ ಎಂಬ ಮಾತು 'ಕವಿರಾಜಮಾರ್ಗ'ದಲ್ಲಿ ಹಾಗೂ 'ಪಂಪಭಾರತ'ಗಳಲ್ಲಿದ್ದರೆ,
ಪುರಾಣಕೂಪ (ಹಳೆಯ ಬಾವಿ) ಎಂಬುದು ದುರ್ಗಸಿಂಹನ 'ಪಂಚತಂತ್ರ'ದಲ್ಲಿ ಬಂದಿದೆ. ವಿಷ್ಣುವು ತಳೆದನೆನ್ನಲಾದ
ಕೂರ್ಮಾವತಾರವನ್ನು 'ಲೀಲಾವತಿ' ಎಂಬ ಕಾವ್ಯದಲ್ಲಿ 'ಪುರಾಣಕಮಠ' ಎಂದು ಕರೆಯಲಾಗಿದೆ.
ಆನಂತರ ಹಿಂದೆ ನಡೆದ ಕತೆ, ದೇವತೆಗಳ ಸಂಕಥನ ಎಂಬರ್ಥದಲ್ಲಿ ಪುರಾಣ
ಎಂಬ ಶಬ್ದ ಬಳಕೆಯಾಯಿತು. ವ್ಯಾಸನು ಹದಿನೆಂಟು ಪುರಾಣಗಳನ್ನೂ, ಹದಿನೆಂಟು ಉಪಪುರಾಣಗಳನ್ನೂ ಬರೆದನೆಂಬ
ಪ್ರತೀತಿಯಿದೆ. ವೈದಿಕ ಪುರಾಣದ ಲಕ್ಷಣಗಳನ್ನು ಹೀಗೆ ಹೇಳುತ್ತಾರೆ: "ಸರ್ಗಶ್ಚ ಪ್ರತಿಸರ್ಗಶ್ಚ
ವಂಶೋ ಮನ್ವಂತರಾಣಿ ಚ| ವಂಶಾನುಚರಿತಂ ಚೇತಿ ಲಕ್ಷಣಾನಾಂತು ಪಂಚಕಂ" (ಸೃಷ್ಟಿ, ವಿಕಾಸ, ಋಷಿವಂಶವರ್ಣನೆ,
ಮನುಗಳ ಕಾಲಾವಧಿ, ರಾಜವಂಶಾವಳಿಯ ಕಥನ). ಇಂಗ್ಲಿಷ್‍ನಲ್ಲಿ ಇದನ್ನು ಮೈಥಾಲಜಿ ಎನ್ನುತ್ತಾರೆ (ಗ್ರೀಕ್
ಭಾಷೆಯಲ್ಲಿ ಮೈಥಾಸ್ ಎಂದರೆ ಕಟ್ಟು ಕತೆ ಎಂದರ್ಥ). ವಿವಿಧ ಧರ್ಮಗಳಿಗೆ ಸಂಬಂಧಿಸಿದಂತೆ ಪುರಾಣಗಳ ಲಕ್ಷಣಗಳು
ಬದಲಾಗುತ್ತವೆ: ಜೈನ ಪುರಾಣ, ವೀರಶೈವಪುರಾಣ ಹೀಗೆ. ಆಯಾ ಮತಧರ್ಮದ ಪುರಾಣಗಳಲ್ಲಿ ಅವಕ್ಕೆ ಸಂಬಂಧಿಸಿದ
ಆಚರಣೆಗಳು, ಚಾರಿತ್ರಿಕ ಪುರುಷರ ದೈವೀಕರಣ, ಸಾಮೂಹಿಕ ಸ್ವಭಾವ, ನೀತಿಬೋಧೆಗಳಿರುತ್ತವೆ ಎಂದು ವಿದ್ವಾಂಸರು
ವಿಶ್ಲೇಷಿಸುತ್ತಾರೆ.
ಪುರಾಣ ಹೇಳುವವನು ಪೌರಾಣಿಕ, ಪುರಾಣವನ್ನು ಕೇಳುವುದು ಪುರಾಣಶ್ರವಣ,
ಹಿಂದಿನಕಾಲದಿಂದ ನಡೆದ ಬಂದ ರೀತಿಯೇ ಪುರಾಣಮಾರ್ಗ. ಪುರಾಣ ಕತೆಗಳಿಗೆ ಆಧಾರವಿಲ್ಲದ್ದರಿಂದ ಅದಕ್ಕೆ
ಸುಳ್ಳು ಎಂಬರ್ಥವೂ, ಕಾಲಹರಣದ ಹರಟೆ ಎಂಬರ್ಥವೂ ಬಂದಿದೆ. ಅಪ್ಪಟ ಸುಳ್ಳಿನ ಕತೆಯನ್ನು 'ಬುರುಡೆ ಪುರಾಣ'
ಎಂದೇ ಗೇಲಿಮಾಡುತ್ತಾರೆ.
=====
ಪಂಚಪ್ರಾಣ: ಶರೀರದಲ್ಲಿನ ಐದು ಬಗೆಯ ವಾಯುಗಳಿಗೆ ಒಟ್ಟಾರೆ ಈ ಹೆಸರಿದೆ;
ಅವನ್ನು ಪ್ರಾಣವಾಯುಗಳೆಂದು ಕರೆಯುವ ವಾಡಿಕೆಯೂ ಇದೆ. ಅವುಗಳನ್ನು 'ಅಮರಕೋಶ'ವು "ಪ್ರಾಣೋಪಾನಸ್ಸಮಾನಶ್ಚೋದಾನವ್ಯಾನೌ
ಚ ವಾಯವಃ" ಎಂದು ಹೆಸರಿಸುತ್ತದೆ (ಪ್ರಾಣ ಉಪಾನ ಸಮಾನ ಉದಾನ ಮತ್ತು ವ್ಯಾನ). ಇವು ಕ್ರಮವಾಗಿ
ದೇಹದಲ್ಲಿ ಹೃದಯ, ಗುದಪ್ರದೇಶ, ನಾಭಿ, ಕಂಠ ಹಾಗೂ ಶರೀರದ ಎಲ್ಲ ಭಾಗಗಳಲ್ಲೂ ಇರುವುದೆಂದು ಹೇಳುತ್ತಾರೆ.
ಪ್ರಾಣವಾಯುವು ಉಚ್ಛ್ವಾಸ-ನಿಶ್ವಾಸ, ಅಪಾನವಾಯುವು ಮಲಮೂತ್ರವಿಸರ್ಜನೆ, ಸಮಾನವಾಯುವು ಆಹಾರಪಚನ, ಉದಾನವಾಯುವು
ಮಾತನಾಡುವಿಕೆ ಅಥವಾ ಉದ್ಗಾರ, ವ್ಯಾನವಾಯುವು ಕಣ್ಣುರೆಪ್ಪೆ ಮಿಟುಕಿಸುವುದು - ಈ ಕಾರ್ಯಗಳನ್ನು ನೆರವೇರಿಸುವುವೆಂದು
ಹೇಳುತ್ತಾರೆ. "ಪ್ರಾಣವಾಯುಗಳವರು ಸುಭಟಶ್ರೇಣಿದೇಹಕೆ" ಎಂಬುದು ಕುಮಾರವ್ಯಾಸನ ಪ್ರಯೋಗ.
ಕೃಷ್ಣನು "ಮಮ ಪ್ರಾಣಾಹಿ ಪಾಂಡವಾಃ" ಎಂದು ಮಹಾಭಾರತದಲ್ಲಿ ಹೇಳುತ್ತಾನೆ. 'ಪ್ರಾಣಸಂಯಮ'
ಎಂದರೆ ಉಸಿರಾಟದ ಹತೋಟಿ. ದೇಹ ಮತ್ತು ಪ್ರಾಣವಾಯುಗಳ ಸಂಬಂಧವೇ ಜೀವನ; ಪ್ರಾಣವಾಯುವನ್ನು ದೇಹದಲ್ಲಿ
ತಡೆದು ನಿಲ್ಲಿಸಿದಷ್ಟು ಕಾಲವೂ ಮನುಷ್ಯ ಬದುಕಿರಬಹುದು ಎಂಬ ಕಾರಣದಿಂದ ಅದನ್ನು ಒಂದು ಕ್ರಮದಲ್ಲಿ
ವ್ಯವಸ್ಥೆಗೊಳಿಸುವುದನ್ನೇ ಯೋಗಶಾಸ್ತ್ರದಲ್ಲಿ 'ಪ್ರಾಣಾಯಾಮ' ಎನ್ನುತ್ತಾರೆ. "ವಿಪ್ರೋತ್ತಮರನುಮತದಿಂ
ಪ್ರಾಣಾಯಾಮಮಂ ಮಂತ್ರಿಸಿ" ಎಂಬುದು ಹರಿಹರನ 'ಗಿರಿಜಾ ಕಲ್ಯಾಣ'ದಲ್ಲಿ ಬರುವ ಮಾತು. ಐದು ಉಪವಾಯುಗಳನ್ನೂ
ಹೆಸರಿಸುತ್ತಾರೆ. ಅವೆಂದರೆ ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ ಎಂಬವು.
ದ್ವಿಜರು ಊಟಕ್ಕೆ ಕುಳಿತಾಗ ಪ್ರತಿನಿತ್ಯವೂ ಪಂಚಪ್ರಾಣಗಳ ಅಧಿದೇವತೆಗೆ
ಪೂಜೆಯನ್ನು ಸಮರ್ಪಿಸುತ್ತಾರೆ. ಇದನ್ನು ಬಸವಣ್ಣನು "ಪ್ರಾಣಲಿಂಗ ಪ್ರಸಾದವ ಮುಂದಿಟ್ಟುಕೊಂಡು
ಪ್ರಾಣಾಯ ಸ್ವಾಹಾ, ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ, ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ ಎಂಬ
ಕರ್ಮಿಗಳನೇನೆಂಬೆ" ಎಂದು ಲೇವಡಿ ಮಾಡುತ್ತಾನೆ. ಬೇಂದ್ರೆಯವರು ತಮ್ಮ 'ನಾನು' ಎಂಬ ಕವನದಲ್ಲಿ
ವಿಶ್ವಮಾತೆ, ಭೂಮಾತೆ, ಭರತಮಾತೆ, ಕನ್ನಡತಾಯಿ ಹಾಗೂ ಹಡೆದವ್ವ ಎಂಬ "ಈ ಐದು ಐದೆಯರೆ ಪಂಚಪ್ರಾಣಗಳಾಗಿ
ಈ ಜೀವದೇವನಿಹನು" ಎಂದು ಹೇಳಿಕೊಳ್ಳುತ್ತಾರೆ. 'ಪಂಚಪ್ರಾಣ' ಎಂಬುದು ತುಂಬ ಇಷ್ಟವೆಂದು ಹೇಳಲು
ಈಗ ಬಳಸುವ ಸಾಮಾನ್ಯ ನುಡಿಗಟ್ಟಾಗಿದೆ.
=====
ಪ್ರಾಣ: ಇದೊಂದು ಸಂಸ್ಕೃತ ಶಬ್ದ. ಇದಕ್ಕೆ ಕನ್ನಡದಲ್ಲಿ ತದ್ಭವವಾಗಿ
'ಹರಣ' ಎಂಬ ರೂಪವಿದೆ; ಆದರೆ ಪ್ರಾಣ ಶಬ್ದವೇ ಹೆಚ್ಚು ಬಳಕೆಯಲ್ಲಿದೆ. ಪ್ರಾಣ ಎಂದರೆ ಉಸಿರು ಎಂದರ್ಥ.
ಉಸಿರಾಟ ಜೀವವಿರುವ ಲಕ್ಷಣವಾದದ್ದರಿಂದ ಪ್ರಾಣ ಎಂದರೆ ಜೀವ ಎಂಬ ಅರ್ಥವೂ ಇದೆ. "ನಿನ್ನನಗಲ್ವಗಲ್ಕೆಯುಂ
ಪ್ರಾಣದಗಲ್ಕೆಯುಂ ಸಮಂ" ('ಆದಿಪುರಾಣ'). ಹೀಗಾಗಿ ತುಂಬ ಪ್ರೀತಿಪಾತ್ರ ಎಂಬರ್ಥವೂ ಪ್ರಾಪ್ತವಾಗುತ್ತದೆ.
("ಪ್ರಾಣದಿನಧಿಕ ಎನಗೆ ನೀಂ" – 'ಪಾರ್ಶ್ವನಾಥ ಪುರಾಣ'). 'ಅಮರಕೋಶ'ದಲ್ಲಿ ಈ ಶಬ್ದಕ್ಕೆ
ಶಕ್ತಿ, ಪರಾಕ್ರಮ ಎಂಬರ್ಥಗಳನ್ನೂ ಹೇಳಿದೆ ("ಶಕ್ತಿಃ ಪರಾಕ್ರಮಪ್ರಾಣೌ"). ಪ್ರಾಣ ಎಂಬುದು
ಐದು ಬಗೆಯ ವಾಯುಗಳಲ್ಲಿ ಒಂದು. ಈ ಶಬ್ದಕ್ಕೆ ಬ್ರಹ್ಮ ಎಂಬರ್ಥವೂ ಇದೆ. "ಪ್ರಾಣದೇವರು', 'ಮುಖ್ಯಪ್ರಾಣ',
'ಪ್ರಾಣೇಶ', 'ಪ್ರಾಣನಾಥ', 'ಪ್ರಾಣರಾಯ' ಮುಂತಾದವಕ್ಕೆ ಆಂಜನೇಯ ಎಂಬರ್ಥವಿದೆ _ ಈ ಎಲ್ಲ ಶಬ್ದಗಳನ್ನೂ
ಈ ಅರ್ಥದಲ್ಲಿ ಪುರಂದರದಾಸರು ತಮ್ಮ ಕೀರ್ತನೆಗಳಲ್ಲಿ ಬಳಸುತ್ತಾರೆ.
'ಪ್ರಾಣನ' ಎಂದರೆ ಬದುಕಿಸುವುದು ಎಂದರ್ಥ ("ಎನ್ನ ತಂದೆ
.. .. ಮತ್ ಪ್ರಾಣನ ಪ್ರಯತ್ನ ತತ್ಪರನಾಗಿ" - 'ಕರ್ಣಾಟಕ ಕಾದಂಬರಿ'). "ಪ್ರಾಣೋಪಕಾರ'
ಎಂದರೆ ಜೀವವನ್ನುಳಿಸುವಂಥ ಉಪಕಾರ ("ನೀಮೆನಗೆ ಪ್ರಾಣೋಪಕಾರಂಗೆಯ್ದಿರ್" - 'ಪಂಚತಂತ್ರ').
'ಪ್ರಾಣಂಬಡೆ' ಎಂದರೆ ಜೀವವನ್ನು ಹೊಂದು ಎಂದರ್ಥ ("ವೀರಭಕ್ತಿಯೊಳಟ್ಟೆಯಲಿ ತಲೆ ಸೇರಿಸಲು ಪ್ರಾಣಂಬಡೆದನು"
- ಭೀಮಕವಿಯ 'ಬಸವಪುರಾಣ'). 'ಪ್ರಾಣಾಹುತಿ' ಎಂದರೆ ಬಲಿ ("ಗಾಳದ ತುದಿಯೊಳಿಪ್ಪ ಭೂನಾಗನಂ ಕಂಡು
ಪ್ರಾಣಾಹುತಿಯೆಂದು ಸವಿವ" - ಕನಕದಾಸರ ಕೀರ್ತನೆ). 'ಪ್ರಾಣತೆಗೆ' ಎಂದರೆ ಕೊಲ್ಲು ಎಂಬರ್ಥದ
ಜೊತೆಗೆ ಕಾಟ ಕೊಡು ಎಂಬರ್ಥವೂ. 'ಸುಮ್ಮನೆ ನನ್ನ ಪ್ರಾಣ ತೆಗೀಬೇಡ' ಎಂಬಂತಹ ಮಾತುಗಳನ್ನು ಗಮನಿಸಿ.
'ಪ್ರಾಣಹಿಂಡು' ಎಂದರೂ ಇದೇ ಅರ್ಥವೇ. 'ಪ್ರಾಣ ಕಳೆದುಕೋ' 'ಪ್ರಾಣ ಹೋಗು' 'ಪ್ರಾಣಾಂತಕ, 'ಪ್ರಾಣಯಾತನೆ'
ಮುಂತಾದ ನುಡಿಗಟ್ಟುಗಳು ಬಳಕೆಯಲ್ಲಿವೆ. 'ಪ್ರಾಣವಲ್ಲಭ' 'ಪ್ರಾಣವಲ್ಲಭೆ' ಅಥವಾ 'ಪ್ರಾಣೇಶ್ವರ' 'ಪ್ರಾಣೇಶ್ವರಿ'
ಎಂದರೆ ಪ್ರಿಯಪ್ರೇಯಸಿಯರು. "ಬಿಡದೆ ಪೊಗೆ ಸುತ್ತೆ ತೋಳಂ ಸಡಿಲಿಸದಾ ಪ್ರಾಣವಲ್ಲಭರ್ ಪ್ರಾಣಮನಂದೊಡಗಳೆದರ್
ಓಪರೋಪರೊಳ್ ಒಡಸಾಯಲ್ ಪಡೆದರ್ ಇನ್ನವೇಂ ಸದಯ್ಪೊಳವೇ" – ಎಂಬುದು ಪಂಪನ 'ಆದಿಪುರಾಣ'ದ ಪದ್ಯ.
ವೀರಶೈವದಲ್ಲಿ 'ಪ್ರಾಣಲಿಂಗ'ದ ಪರಿಕಲ್ಪನೆಯಿದೆ.
ಪ್ರಾಣವುಳ್ಳುದೇ 'ಪ್ರಾಣಿ'. 'ಪ್ರಾಣಿ ಜಂತು ದೇಹಿಯೆನಿಕ್ಕುಂ"
ಎಂದು 'ಅಭಿಧಾನ ವಸ್ತುಕೋಶ'ದ ವಿವರಣೆ. ಪ್ರಾಣಿಯನ್ನು ಕೊಲ್ಲುವುದೇ 'ಪ್ರಾಣಿವಧೆ' "ಪ್ರಾಣಿವಧೆಯೆ
ಪರಮಪಾತಕವೆಂಬುದಂ" - 'ಪಂಚತಂತ್ರ'). ಪ್ರಾಣಿಗಳ ಬಗ್ಗೆ ತಿಳಿಸುವ ವಿಜ್ಞಾನವೇ 'ಪ್ರಾಣೀಶಾಸ್ತ್ರ'
ಅಥವಾ 'ಪ್ರಾಣಿವಿಜ್ಞಾನ'.
======
ಬಂಡವಾಳ: ಇದರ ಮೂಲ ಸಂಸ್ಕೃತದ 'ಭಾಂಡ' ಎಂಬಂತೆ ತೋರುತ್ತದೆ. ಅದರ ಅರ್ಥ
ಸರಕು ಅಥವಾ ಸಾಮಗ್ರಿ ಇಡುವ ಉಗ್ರಾಣ ಅಥವಾ ಪಾತ್ರೆ ಎಂದು. ಭಾಂಡಾಗಾರ ಎಂಬುದೂ ಉಗ್ರಾಣವನ್ನು ಸೂಚಿಸುತ್ತದೆ.
ಮುಂದೆ ಅದು ಹಣವಿರುವ ಕೋಶ ಎಂರ್ಥವನ್ನೂ ಪಡೆದಂತೆ ಕಾಣುತ್ತದೆ. ಭಾಂಡಾಗಾರ>ಭಾಂಡಾರ>ಭಂಡಾರ
ಎಂದಾಗಿದೆ. 'ಭಂಡ' ಕನ್ನಡದಲ್ಲಿ ಅಲ್ಪಪ್ರಾಣವಾಗಿ ಬಂಡ ಎಂಬ ರೂಪ ತಳೆಯಿತು. ಮಾರಾಟದ ಸರಕು ಎಂಬರ್ಥದಲ್ಲಿ
ಈ ಶಬ್ದ 'ವಡ್ಡಾರಾಧನೆ'ಯಲ್ಲೇ 'ಭಂಡ' ಹಾಗೂ 'ಬಂಡ' ಎರಡು ರೂಪಗಳಲ್ಲೂ ಬಂದಿದೆ ("ತಮ್ಮ ಕೊಂಡುಪೋದ
ಭಂಡಮಂ " ಹಾಗೂ "ಬಂಡಮುಮೆಳ್ತುಗಳುಂ ಮೊದಲಾಗೆಲ್ಲಮಂ ಕಳ್ಳರ್ ಕೊಂಡು ಪೋದರ್").
ವ್ಯಾಪಾರದ ಮೂಲಧನ ಎಂಬರ್ಥದಲ್ಲಿ ಬಂಡವಾಳ ಶಬ್ದವು ಬಂಡ ಮತ್ತು
(ಕರವಾಲ, ಭಿಂಡಿವಾಳ ಮುಂತಾದೆಡೆಗಳಲ್ಲಿರುವಂತೆ) ವಾಲ ಎಂಬುದರೊಡನೆ ಸೇರಿರಬೇಕು. ಈ ಶಬ್ದವು ಭಂಡವಾಳ,
ಭಂಡವಲು, ಬಂಡವಲ, ಬಾಂಡವಲು ಮುಂತಾದ ರೂಪಗಳನ್ನು ತಳೆಯುತ್ತದೆ. ಹದಿನಾಲ್ಕನೆಯ ಶತಮಾನದ ನಾಗರಾಜನ ಕೃತಿಯಾದ
'ಪುಣ್ಯಾಸ್ರವ'ದಲ್ಲಿ "ವ್ಯವಹಾರಿಸುವಂಗೆ ಬಂಡವಲಮಿಲ್ಲದೆಂತು ಪೋದಪ್ಪೆ" ಎಂಬ ವಾಕ್ಯವಿದೆ.
ಮೊದಲು ಸರಕು ವ್ಯಾಪಾರದ ಮೂಲವಾಗಿದ್ದರೆ ಬರಬರುತ್ತ, ಹಣದ ಬಳಕೆ ಹೆಚ್ಚಾದಂತೆ, ಹಣವಾಯಿತು. ಹೀಗಾಗಿ
ಎಲ್ಲದಕ್ಕೂ ಮೂಲವಾದುದನ್ನೂ ಬಂಡವಾಳ ಎಂಬ ಹೆಸರಿನಿಂದಲೇ ಸೂಚಿಸುವಂತಾಯಿತು. 'ಮಾತೇ ಅವನ ಬಂಡವಾಳ'
ಎಂಬಂತಹ ಕಡೆಗಳಲ್ಲಿ ಈ ಅರ್ಥವಿದೆ. ಮುಂದೆ ಅದು ಸಾಮರ್ಥ್ಯವನ್ನೂ ಸೂಚಿಸುವಂತಾಯಿತು: ಸಾಮರ್ಥ್ಯವಿಲ್ಲದೆ
ಕೊಚ್ಚಿಕೊಳ್ಳುವುದನ್ನು ಸೂಚಿಸುವ 'ಬಂಡವಾಳ್ವಿಲ್ಲದ ಬಡಾಯಿ' ಎಂಬ ನಾಣ್ಣುಡಿಯೇ ಇದೆ. ಆ ಹೆಸರಿನ ಟಿ.ಪಿ.
ಕೈಲಾಸಂ ಅವರ ನಾಟಕ ಪ್ರಸಿದ್ಧವಾಗಿದೆ.
ಹಣವಿರುವವನು 'ಬಂಡವಾಳಗಾರ' ಅಥವಾ 'ಬಂಡವಾಳಿಗ'ನಾದರೆ, ಹಣಗಳಿಕೆಗೇ
ಪ್ರಾಶಸ್ತ್ಯವೀಯುವ ಪ್ರವೃತ್ತಿ ಬಂಡವಾಳಶಾಹಿ ಬುದ್ಧಿ. ಮಿತಿಯಿಲ್ಲದ ಹಣಗಳಿಕೆಗೆ ಅವಕಾಶವೀಯುವ ಸರ್ಕಾರದ
ಧೋರಣೆ ಬಂಡವಾಳಶಾಹಿ ಪ್ರಭುತ್ವ. ಇಂಗ್ಲಿಷ್ನ 'ಕ್ಯಾಪಿಟಲಿಸ್ಮ್' ಎಂಬುದಕ್ಕಿದು ಸಂವಾದಿ.
=====
ಬಡ್ಡಿ: ಸಾಲವಾಗಿ ಪಡೆದ ಹಣದ ಮೇಲೆ ಹೆಚ್ಚಿಗೆ ನೀಡಬೇಕಾದ ಮೊತ್ತವನ್ನು
ಬಡ್ಡಿ ಎಂದು ಕರೆಯುವುದು ಎಲ್ಲರಿಗೂ ತಿಳಿದ ವಿಷಯ. ತಮಿಳು ಮಲಯಾಳಂಗಳಲ್ಲಿ ವಟ್ಟಿ ಎಂಬ ರೂಪದಲ್ಲಿಯೂ
ತೆಲುಗಿನಲ್ಲಿ ವಡ್ಡಿ ಎಂಬ ರೂಪದಲ್ಲಿಯೂ ದೊರೆಯುತ್ತದಾದರೂ ಇದು ದ್ರಾವಿಡ ಮೂಲದ ಶಬ್ದವಾಗಿರದೆ ಸಂಸ್ಕೃತದ
'ವೃದ್ಧಿ' ಎಂಬುದರ ತದ್ಭವವಾಗಿದೆ. ಈ ಶಬ್ದಕ್ಕೆ ಆ ಭಾಷೆಯಲ್ಲಿ ಮೂಲತಃ ಹೆಚ್ಚುವುದು, ಬೆಳೆಯುವುದು
ಎಂಬ ಅರ್ಥವಿದೆ. ಪ್ರಾಚೀನ ಕನ್ನಡ ಶಾಸನಗಳಲ್ಲಿ 'ವ್ರಿದ್ಧಿ' ಎಂಬ ರೂಪ ದೊರೆಯುತ್ತದೆ. (ವಯಸ್ಸು)
ಹೆಚ್ಚಾದ ಅಥವಾ ವೃದ್ಧಿಯಾದ ಎಂಬರ್ಥದಲ್ಲಿ ಮುದುಕನನ್ನು ಸಂಸ್ಕೃತದಲ್ಲಿ ವೃದ್ಧ ಎಂದು ಕರೆದಂ ಕಾಣುತ್ತದೆ.
ಸಾಲದ ಹಣ ಹೆಚ್ಚಾಗುವುದರಿಂದಾಗಿ ಆ ಹೆಚ್ಚಿನದನ್ನು ವೃದ್ಧಿ ಎಂದು ಕರೆದಂತೆ ತೋರುತ್ತದೆ. ಹಣವನ್ನು
ಬಡ್ಡಿಗೆ ಕೊಟ್ಟು ಜೀವಿಸುವವನನ್ನು 'ವೃದ್ಧಿಜೀವಿಕಾ' ಎಂದೇ ಕರೆಯುತ್ತಿದ್ದರು. 'ಕಡಬಡ್ಡಿ' (ಸಾಲ
ಬಡ್ಡಿ) ಎಂಬುದು ಒಟ್ಟಿಗೆ ಬಳಕೆಯಾಗುತ್ತಿದ್ದ ಪದ. ಕನ್ನಡ ಕಾವ್ಯಗಳಲ್ಲಿ ಕೆಲವೆಡೆ 'ಬಡ್ಡಿಕಾರ' ಎಂದು
ಇದೇ ಅರ್ಥದಲ್ಲಿ ಬಳಸಲಾಗಿದೆ. 'ಬಡ್ಡಿಯುಣ್' ಎಂಬ ಮಾತನ್ನು ಬಡ್ಡಿಯ ಹಣದಿಂದ ಜೀವಿಸು ಎಂಬರ್ಥದಲ್ಲಿ
ಬಳಸಲಾಗಿದೆ. ಹಡೆದೊಡವೆಯ ಮೃಡಭಕ್ತರಿಗಲ್ಲದೆ ಕಡಬಡ್ಡಿಯ ಕೊಡಲಾಗದು ಎಂಬುದು ಬಸವಣ್ಣನ ಮಾತು (ಭಕ್ತನು
ತನ್ನಲ್ಲಿರುವ ಹಣವನ್ನು ಇತರ ಭಕ್ತರಿಗಾಗಿ ಬಳಸಬೇಕೇ ಹೊರತು ಬಡ್ಡಿಯ ಆಸೆಯಿಂದ ಸಾಲವಾಗಿ ಕೊಡಬಾರದು
ಎಂಬುದು ಇಲ್ಲಿನ ಆಶಯ).
ಆಧುನಿಕ ಸನ್ನಿವೇಶದಲ್ಲಿ ಬಡ್ಡಿಯ ಪ್ರಭೇದಗಳನ್ನು ಗುರುತಿಸುತ್ತೇವೆ:
ಸರಳ ಬಡ್ಡಿ, ಚಕ್ರ ಬಡ್ಡಿ - ಹೀಗೆ. 'ಚಕ್ರವೃದ್ಧಿ' ಎಂಬ ಮಾತು ಸಂಸ್ಕೃತದಲ್ಲಿಯೂ ದೊರೆಯುತ್ತದೆ.
ಕೊಡಲು ತಡಮಾಡುವುದರಿಂದ ತೆರಬೇಕಾದ ಹೆಚ್ಚಿನ ಬಡ್ಡಿಯನ್ನು 'ಸುಸ್ತಿ ಬಡ್ಡಿ' ಎನ್ನುತ್ತಾರೆ. 'ಬಡ್ಡಿ
ವ್ಯವಹಾರ' ಈಗ ಸಾಮಾನ್ಯ.
'ಬಡ್ಡಿಮಗ' ಎಂಬ ಒಂದು ಬೈಗುಳದ ಮಾತಿದೆ. ಇದಕ್ಕೂ ಬಡ್ಡಿಗೂ
ಏನೇನೂ ಸಂಬಂಧವಿಲ್ಲ. ಈ ಸಮಾಸಪದದ ಮೊದಲ ಭಾಗವಾದ 'ಬಡ್ಡಿ' ಎಂಬುದು 'ಬೊಡ್ಡಿ' ಎಂಬುದರ ವ್ಯತ್ಯಸ್ತ
ರೂಪ. ಅದು ಪೊಡ್ಡಿ< ಪೋಟಿ ಎಂಬ ಶಬ್ದದಿಂದ ಬಂದಿದೆ; ಈ ಶಬ್ದಕ್ಕೆ ಸೂಳೆ ಎಂಬರ್ಥವಿದೆ. (ತಮಿಳಿನಲ್ಲಿ
ಪೊಟ್ಟಿ, ಮಲಯಾಳಂನಲ್ಲಿ ಪಟ್ಟಿ, ತುಳುವಿನಲ್ಲಿ ಪಡಪೆ, ಪಡಪ್ಪೆ ರೂಪಗಳಿವೆ). ಈಗ ಬೈಗುಳದ ಅರ್ಥ ಸ್ಪಷ್ಟವಾಗುತ್ತದಲ್ಲವೇ!
=====
ಬಯಕೆ: ಆಸೆ ಎಂಬರ್ಥದ ಈ ಶಬ್ದವು ತಮಿಳಿನಲ್ಲಿ 'ವಯಮ್' ಎಂದೂ ತೆಲುಗಿನಲ್ಲಿ
'ಬಯ್ಯಂಕ' ಎಂದೂ ತುಳುವಿನಲ್ಲಿ ಬಯಕೆ' ಎಂದೂ ಬಳಕೆಯಲ್ಲಿದೆ. "ಬಯಕೆ ತೀರದ ಕಾರಣದಿಂ ವಿಪರ್ಯಯಂ"
ಎಂಬ ಮಾತು 'ಕವಿರಾಜಮಾರ್ಗ'ದ್ದು. "ಸಾಮದೊಳಂ ಪದವಡದೊಡೆ ಬೞಿಕಿರ್ದಪ್ಪುದಲ್ತೆ ಮದವಡಿಸಲೆನ್ನ
ಬಯಕೆಯ ದಂಡಂ" ಎಂಬ 'ಆದಿಪುರಾಣ'ದ ಮಾತಿನಲ್ಲಿ ಈ ಶಬ್ದಕ್ಕೆ ಇಷ್ಟ ಎಂಬರ್ಥ ಬಂದಿದೆ. ನೇಮಿಚಂದ್ರ
ತನ್ನ 'ಲೀಲಾವತಿ'ಯಲ್ಲಿ ಈ ಶಬ್ದವನ್ನು ಆಸೆಬುರುಕ ಎಂಬರ್ಥದಲ್ಲಿ ಬಳಸುವಂತೆ ತೋರುತ್ತದೆ: "ಅಹಂಕಾರದೊಳ್
ಬಾತು ಬಲ್ಮೆಗೆ ಹಾರೈಸುವರೇಕೆ ಬಯಕೆಗವಿಗಳ್" (ಬಯಕೆ+ಕವಿ). "ಹುಲುಬಯಕೆ ಬಾ ಎನಲು ಓ ಎಂದು
ಬಾರದಿರು ವಾತಾಪಿಯಂದದೊಳು ಬಾಳನೊಡೆದು" ಎಂಬ ಆಶಯ ನುಡಿ ಪುತಿನ ಅವರ 'ಅಹಲ್ಯೆ' ನಾಟಕದ್ದು.
ಮಧುರಚೆನ್ನರ 'ನನ್ನ ನಲ್ಲ' ಎಂಬ ಪ್ರಸಿದ್ಧ ಕವನದಲ್ಲಿ "ಬರುವುದೇನುಂಟೊಮ್ಮೆ ಬರುವ ಕಾಲಕೆ ಬಹುದು,
ಬಯಕೆ ಬರುವದರ ಕಣ್ಸನ್ನೆ ಕಾಣೋ" ಎಂಬ ಸಾಲುಗಳಿವೆ.
ಈ ಶಬ್ದವು 'ಬಯಕ್ಕೆ' ಎಂಬ ರೂಪದಲ್ಲಿಯೂ ಬಳಕೆಗೊಂಡಿದೆ.
"ಸೂಡುಶಯ್ಯೆಗಳ ಬಯಕ್ಕೆ ಜೊಂಪಲರ್ದವು" ಎಂಬ ಮಾತು 'ಪಂಪಭಾರತ'ದಲ್ಲಿನದು. ಹಾಗೆಯೇ
"ಭವಸಂತಾನಂಗಳೊಳ್ ಕೂರ್ಪ ಕೂಡುವ ತೞ್ತಿರ್ಪ ಬಯಕ್ಕೆಯಂ ಬಯಸುಗುಂ" ಎಂಬ ಮಾತು ಪೊನ್ನನ
'ಶಾಂತಿಪುರಾಣ'ದಲ್ಲಿದೆ. ಈ ಶಬ್ದಕ್ಕೆ 'ಬಯ್ಕೆ' ಎಂಬ ರೂಪವೂ ಇದೆ. "ಚದುರರ ಮೆಚ್ಚು ಭಾವುಕರ
ಕೈಪಿಡಿ ಜಾಣರ ಬಯ್ಕೆ" ಎಂಬ ಮಾತು 'ಸೂಕ್ತಿಸುಧಾರ್ಣವ'ದ ಒಂದು ಪದ್ಯದಲ್ಲಿನ ಮಾತು.
ಈ ಮಾತನ್ನು ವಿಶೇಷವಾಗಿ ಬಸುರಿ ಹೆಂಗಸಿನ ಅಭೀಪ್ಸೆಗಳಿಗೆ ಅನ್ವಯಿಸುವುದುಂಟು.
"ಗರ್ಭಿಣಿಗಳಪ್ಪ ಕಾಮಿನಿಯರ್ ಬಯಸುವ ಬಯಕೆ ದೋಹಲಂ ದೌಹೃದಮುಂ" ಎಂದು 'ಅಭಿಧಾನ ವಸ್ತುಕೋಶ'ವು
ವಿವರಣೆ ನೀಡುತ್ತದೆ. "ಆಕೆಗೆ ಎಲ್ಲ ಜೀವಂಗಳಂ ದಯೆಗೆಯ್ವ ಬಯಕೆಯಾದುದು" ಎಂದು 'ವಡ್ಡಾರಾಧನೆ'ಯಲ್ಲಿ
ಬರುತ್ತದೆ. ಗರ್ಭಿಣಿ ಹೆಂಗಸನ್ನು ನಯಸೇನನ 'ಧರ್ಮಾಮೃತ'ದಲ್ಲಿ ಬಯಕೆವೆಂಡಿರ್ ಎಂದು ಕರೆದಿದೆ:
"ಬಯಕೆವೆಂಡಿರಂತೆ ಉಗುಳುತ್ತುಂ". ಮುದ್ದಣನು ತನ್ನ 'ರಾಮಾಶ್ವಮೇಧ'ದಲ್ಲಿ ಅಕ್ಷಯಪಾತ್ರೆಯನ್ನು
'ಬಯಕೆವಟ್ಟಲ್' ಎಂದು ಕರೆದಿದ್ದಾನೆ. ಈಗಲೂ ಗರ್ಭಿಣಿಯರ ಸೀಮಂತವನ್ನು 'ಬಯಕೆ ಮಾಡು' ಎನ್ನುತ್ತಾರೆ.
ಬಯಕೆಗಪ್ಪು ಅಥವಾ ಬೈಕೆಗಪ್ಪು ಬಸುರಿಯರಿಗೆ ಹಚ್ಚುವ ಕಾಡಿಗೆ. ಆಸೆ ಎಂಬರ್ಥದಲ್ಲಿ 'ಬಯಕ್ಕೆ' ಎಂಬ
ರೂಪವೂ ಬಳಕೆಯಲ್ಲಿತ್ತು. "ಜಿನಭವನಂಗಳಂ ಮಾಳ್ಪ .. .. ಚತುರ್ವಿಧ ದಾನಮಂ ಮಾಳ್ಪ ಬಯಕ್ಕೆಯಾಯ್ತು
ಜಿನದತ್ತೆಗೆ" ಎಂಬುದು ನೇಮಿಚಂದ್ರನ 'ಆರ್ಧನೇಮಿಪುರಾಣ'ದ ಮಾತು.
ಈ ಶಬ್ದ ಹಾಗೂ ಇದರ ರೂಪಾಂತರಗಳು ಹಿಂದೆ ಮತ್ತೊಂದು ಆರ್ಥದಲ್ಲಿಯೂ
ಬಳಕೆಯಲ್ಲಿತ್ತು. ಅದೆಂದರೆ ನಿಧಿ ಎಂಬುದು. "ಕವರಲ್ ಬಂದಂಗೆ ಬಯಕೆಯಂ ತೋದರೆಂಬಂತೆ" ಎಂಬುದು
'ಧರ್ಮಾಮೃತ'ದ ಮಾತು.. "ಸತ್ತ ಹೆಣ ಕೂಗಿದುದುಂಟು ಬೈತಿಟ್ಟ ಬಯಕೆ ಕರೆದುದುಂಟು ಹೆಪ್ಪಿಟ್ಟ
ಹಾಲು ಗಟ್ಟಿಗೊಂಡು ಸಿಹಿಯಾದುದುಂಟು" ಎಂಬುದು ಮಹಾದೇವಿಯಕ್ಕನ ಒಂದು ವಚನದ ಭಾಗ. 'ಬೈಕೆ' ರೂಪಕ್ಕೂ
ಈ ಅರ್ಥವಿದೆ: "ಇವರ ಬಯ್ತ ಬೈಕೆಯಂ ಆ ಪೊಳಲ ಕಳ್ಳನೊರ್ವಂ .. .. ಕಂಡು" ಎಂಬ ವಾಕ್ಯಖಂಡ
ಕರ್ಣಪಾಯನ 'ನೇಮಿನಾಥಪುರಾಣ'ದ್ದು. "ಬೈಚಿಟ್ಟ ಬೈಕೆಯ ಒಡೆಯ ಬೇಡಿದಡೆ ಕೊಡದಿರ್ದಡೆ ಸ್ವಾಮಿದ್ರೋಹಿಕೆಯಲ್ಲವೇ?"
ಎಂಬುದು ಅರಿವಿನ ಮಾರಿತಂದೆಯ ವಚನದ ಸಾಲು. ಬ್ರಹ್ಮಶಿವ ತನ್ನ 'ಸಮಯ ಪರೀಕ್ಷೆ'ಯಲ್ಲಿ 'ಬಯ್ಕೆ' ರೂಪವನ್ನು
ಬಳಸುತ್ತಾನೆ. "ಫಣಿಕಟಕನ ಕೆೞಗೆ ಬಯ್ಕೆಯಿರ್ದಪುದೆಂಬರ್". ಈ ಶಬ್ದ ವಿಸ್ತಾರಗೊಂಡು ಒತ್ತೆಯಿಡು
ಎಂಬರ್ಥದಲ್ಲಿ 'ಬೈಕೆಗೊಡು' ಎಂಬ ರೂಪದಲ್ಲಿ ಬಳಕೆಯಾಗಿದೆ: "ಬಗೆಗೆ ಬಂದೊಡಮೆಯಂ ಒಲ್ದಾ ನೆರೆದಾಗಳೆ
ಕುಡಿ ಎಂದಾ ನೃಪತಿಗೆ ಕೈಕೆ ಬೈಕೆಗೊಟ್ಟಳ್ ಮೆಚ್ಚಂ" ಎಂಬುದು 'ಪಂಪರಾಮಾಯಣ'ದ ಮಾತು.
'ಸಮಯಪರೀಕ್ಷೆ'ಯು 'ಬಯ್ಕೆಗೊಳ್' ರೂಪವನ್ನು ಅಡಗಿಸಿಕೊ ಎಂಬರ್ಥದಲ್ಲಿ ಬಳಸುತ್ತದೆ: "ಮುನಿವಂದು
ಅಧಿಕಂ ಗಡ ದೇವನಿಕಾಯದೆ ಬಯ್ಕೆಗೊಂಡು .. .. ಬಸಿಳಿಕ್ಕಿದಂ ಶಸ್ತ್ರಚಯಮುಮಂ".
ಈ ಶಬ್ದಕ್ಕೆ 'ಬಯ್' ಎಂಬ ಧಾತು ಮೂಲ. ತಮಿಳಿನಲ್ಲಿದು 'ವೈ'
ಎಂದೂ, ಮಲಯಾಳಂನಲಲ್ಲಿ 'ವೆಕ್ಕ' ಎಂದೂ, ತೆಲುಗಿನಲ್ಲಿ 'ವೇಯು' ಎಂದೂ ಬಳಕೆಯಲ್ಲಿದೆ. ಅದರರ್ಥ ಮರೆಮಾಚು,
ಅಡಗಿಸು ಎಂದು. "ಬಯ್-ನಿಕ್ಷೇಪೇ" ಎಂದು 'ಶಬ್ದಮಣಿದರ್ಪಣ' ಅರ್ಥ ನೀಡುತ್ತದೆ.
"ಅದನಾತಂ ಬಯ್ದೊನಲ್ಲ ನಾಂ ಬಯ್ದೆಂ" ಎಂಬುದು 'ವಡ್ಡಾರಾಧನೆ'ಯಲ್ಲಿನ ಪ್ರಯೋಗ.
"ವಿಷಾನಿಲದಂಷ್ಟ್ರಂ ಶ್ವಯುವಾಗಿ ಪುಟ್ಟಿ ಸುೞಿಗುಂ ಮುಂ ಬಯ್ತ ಭಂಡಾರದೊಳ್" ಎಂಬ ಪಂಪನ
'ಆದಿಪುರಾಣ'ದ ಸಾಲಿನಲ್ಲಿಯೂ ಈ ಅರ್ಥವಿದೆ. ಇದು ಕೂಡ ಕಬೈಕಿ ಎಂಬ ರೂಪದಲ್ಲಿ ಬಳಕೆಯಲ್ಲಿತ್ತು:
"ನಾರಾಯಣ ಬಾಹುದಡದಳವಂ ನೋಡಲ್ ಗದಾದಂಡದಿಂ ಹಲಂ ಕೂಡಿದ ಚಾಪ ದಂಡಯುಗಮಂ ಬೈತಲ್ಲಿ ಕಾದಿರ್ಪುದುಂ"
ಎಂಬ ವಾಕ್ಯ ನಾಚಂದ್ರನ 'ಪಂಪರಾಮಾಯಣ'ದಲ್ಲಿ ಬಂದಿದೆ. ಈ ಶಬ್ದವು 'ಬಯ್ಚಿಡು' ಎಂಬ ರೂಪದಲ್ಲಿಯೂ
ಬಳಕೆಯಲ್ಲಿದೆ. "ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು" ಎಂಬುದು ಬಸವಣ್ಣನ
ವಚನದ ಸಾಲು.
ಒಂದೇ ಶಬ್ದದ ವಿವಿಧ ರೂಪಗಳು ದೊರೆಯುವುದೇತಕ್ಕೆ? ಪ್ರಾಯಶಃ
ಅದರ ಉಚ್ಚಾರಣೆ ವಿವಿಧವಾಗಿರಬಹುದು, ಹಾಗಿರುವುದು ಹೆಚ್ಚು ಸಾಧ್ಯ. ಆಡುಮಾತಿನ ಬಳಕೆಯ ಶಬ್ದಗಳೇ ಗ್ರಾಂಥಿಕಗೊಂಡು
ಶಿಷ್ಟೀಕರಣಗೊಳ್ಳುತ್ತವೆ. ಅಂದರೆ ವಿವಿಧ ರೂಪಗಗಳಲ್ಲಿ ಉಚ್ಚಾರಣೆಯಲ್ಲಿದ್ದ ಶಬ್ದದ ಬರವಣಿಗೆಯ ರೂಪವು
ಅದನ್ನು ಬಳಸುವ ವ್ಯಕ್ತಿಯನ್ನು ಅವಲಂಬಿಸುತ್ತದೇನೋ. ಅಂದರೆ ಹೆಚ್ಚು ಗೌರವಾನ್ವಿತನಾದವನ ಬಳಕೆಯನ್ನು
ಜನರು ಅನುಸರಿಸುವುದು ರೂಢಿ. ಆದರೂ ಕೆಲ ಕವಿಗಳು ಅದರ ವಿಭಿನ್ನ ರೂಪಗಳನ್ನೂ ಬಳಸುವುದಕ್ಕೆ ಪ್ರಾಯಶಃ
ಕಾರಣ, ಛಂದಸ್ಸಾಗಿರಬಹುದು, ತನ್ನ ಕಾವ್ಯದ ಭಾಷೆಗೆ ತಕ್ಕುದಾಗಿರಬಹುದು ಅಥವಾ ತನಗೇ ಅದು ಸರಿಯೆನ್ನಿಸಿದ್ದಿರಬಹುದು.
ಜನರ ಬಳಕೆಯಲ್ಲಿ ಯಾವ ರೂಪಗಳಿದ್ದುವು, ಯಾವಾಗ ಬರವಣಿಗೆಯಲ್ಲಿ ಈ ರೂಪಗಳು ಬಂದುವು ಎಂದು ಹೇಳವುದು
ಅಸಾಧ್ಯದ ಮಾತು, ಏಕೆಂದರೆ ನಮಗೀಗ ದೊರೆಯುವುದು ಬರಹದ ರೂಪವೇ ಹೊರತು, ಆಡು ಮಾತಿನ ರೂಪಗಳಲ್ಲ. ಹಾಗಾಗಿ
ಇದನ್ನು ನಾವು ತಾರ್ಕಿಕ ಮಂಡನೆಯಿಂದಲೇ ಊಹಿಸಬೇಕಾಗುತ್ತದೆ.
ಈಗ ಈ ಶಬ್ದದ ವಿವೇಚನೆಗೆ ಬರೋಣ. ಬಯಕೆ ಎಂಬ ಶಬ್ದದ ಎರಡೂ ಅರ್ಥದ
- ಆಸೆ ಮತ್ತು ನಿಧಿ - ನಾಮರೂಪಗಳಿಗೆ ಒಂದೇ ಮೂಲವಿರಬಹುದೇ? ಅಂದರೆ 'ಬಯ್' ಎಂಬ ಧಾತುವೇ ಎರಡಕ್ಕೂ
ಮೂಲವಾಗಿರಬಹುದೇ ಎಂಬ ಅನುಮಾನ ಮೂಡುತ್ತದೆ. ಸಾಮಾನ್ಯವಾಗಿ ಒಂದು ಶಬ್ದದ ಎರಡು ಅರ್ಥಗಳಲ್ಲಿ ಒಂದು
ಇಂದ್ರಿಯಗ್ರಾಹ್ಯವಾಗಿದ್ದು, ಮತ್ತೊಂದು ಅಮೂರ್ತವಾದುದಾಗಿದ್ದರೆ, ಮೊದಲ ಅರ್ಥವು ಮೊದಲು ರೂಪಿತವಾಗಿ
ಆನಂತರ ಎರಡನೆಯದು ಬಂದಿರುವುದು ಹೆಚ್ಚು ಸಂಭಾವ್ಯ. ಇದನ್ನೊಂದು ಉದಾಹರಣೆಯಿಂದ ಸ್ಪಷ್ಟಪಡಿಸಬಹುದು.
'ಮಂಕು' ಎಂಬ ಶಬ್ದಕ್ಕೆ ಎರಡರ್ಥವಿದೆ: ಕಾಂತಿ ಕಡಿಮಯಾಗುವುದು ಮತ್ತು ದಡ್ಡತನ ಎಂದು. ಉರಿಯುವ ದೀಪ
ಬರಬರುತ್ತ (ಕಾರಣ ಯಾವುದೇ ಇರಲಿ) ತನ್ನ ಬೆಳಕನ್ನು ಕಡಿಮೆ ಮಾಡಿಕೊಳ್ಳುವುದು ಸ್ಪಷ್ಟವಾಗಿ ಕಾಣಿಸುತ್ತದೆ.
ಈ ಸ್ಥಿತಿಯನ್ನು ಮುಂದೆ ಅಮೂರ್ತ ಕಲ್ಪನೆಗೆ, ಅಂದರೆ ಕಾಣದ ಬುದ್ಧಿಯ ಕಾಂತಿಹೀನತ್ವಕ್ಕೆ ಅನ್ವಯಗೊಳಿಸಿರಬೇಕು.
ಅಂದರೆ ಕಾಲಕ್ರಮೇಣ ಅದೊಂದು ರೂಪಕವಾಗಿ ಮಾರ್ಪಾಟಾಗುತ್ತದೆ. ಮೊದಲು ಅಮೂರ್ತವಾದುದಕ್ಕೆ ಪದ ರೂಪಿತವಾಗಿ
ಆನಂತರ ಸ್ಪಷ್ಟವಾದದ್ದಕ್ಕೆ ಅನ್ವಯಿಸಿರುವುದು ಪ್ರಾಯಶ ಅಸಂಭವ.
ಇದರಂತೆಯೇ ಕಣ್ಣಿಗೆ ಕಾಣುವ ಹಣ, ಒಡವೆ, ಅಥವಾ ವಸ್ತುಗಳನ್ನು
ಕಾಣದಂತೆ ಅಡಗಿಸಿಡುವ ಕ್ರಿಯೆಗೆ ಮೊದಲು ಬಯ್ ಎಂಬ ರೂಪ ಬಳಕೆಗೆ ಬಂದು, ಆ ಕ್ರಿಯೆಯ ನಾಮರೂಪವಾದ ಬಯ್ಕೆ
ಮತ್ತದರ ರೂಪಾಂತರಗಳು ಬಂದಿರಬಹುದು. ಇನ್ನು, ಆಸೆ ಎಂಬರ್ಥವು ಅದರ ಮುಂದಿನ ಹಂತವಿರಬೇಕು. ಅಂದರೆ ಮನಸ್ಸಿನಲ್ಲಿ
ಇತರರಿಗೆ ಕಾಣದಂತಿರಿಸಿಕೊಳ್ಳುವ ಭಾವನೆ, ಅಂದರೆ 'ಆಸೆಪಡು' ಎಂಬರ್ಥದಲ್ಲಿ ಅಮೂರ್ತವಾದುದಕ್ಕೆ ಈ ಧಾತು
ಅನ್ವಯಗೊಂಡು, ಅದು ಮುಂದೆ ಆಸೆ ಎಂಬ ಅರ್ಥದ ಬಯ್ಕೆ ಎಂಬ ನಾಮರೂಪವನ್ನು ಪಡೆದಿರಬೇಕು ಅನ್ನಿಸುತ್ತದೆ.
ಈಗ ನಿಧಿ ಎಂಬರ್ಥದಲ್ಲಿ 'ಬಯಕೆ' ಅಥವಾ 'ಬೈಕೆ' ಶಬ್ದ ಬಳಕೆಯಲ್ಲಿಲ್ಲ. ಇದಕ್ಕೆ ಕಾರಣ 'ನಿಧಿ' 'ನಿಧಾನ'
ಮುಂತಾದ ಸಂಸ್ಕೃತ ಶಬ್ದಗಳೇ ವ್ಯಾಪಕ ಬಳಕೆಯಲ್ಲಿ ಬಂದಿರಬೇಕು.
'ಬಯ್' ಧಾತುವಿಗೆ ಇನ್ನೂ ಒಂದರ್ಥವಿದೆ, ಅವಹೇಳನ ಮಾಡು ಎಂದು.
ಈ ಅರ್ಥದಲ್ಲಿ 'ವೈ' ಎಂಬ ರೂಪ ತಮಿಳಿನಲ್ಲಿದೆಯಂತೆ. ತೆಲುಗು ತಮಿಳುಗಳಲ್ಲಿ ತೆಗಳು ಎಂಬರ್ಥದಲ್ಲಿ
'ತಿಟ್ಟು' ಎಂಬ ಶಬ್ದವಿದೆ. ಕನ್ನಡದಲ್ಲೂ ಈ ಪದ ಅಲ್ಪಸ್ವಲ್ಪ ಬಳಕೆಯಲ್ಲಿದೆ. ಬೈಗುಳ ಬೇರೆಯವರ
ಬಗ್ಗೆ ಮುಚ್ಚಿಟ್ಟುಕೊಂಡ ಭಾವನೆಯ ಹೊರ ರೂಪವೇ ತಾನೇ! ಹಾಗಾಗಿ ಇದೂ ಅದೇ ಮೂಲದಿಂದ ಬಂದಿರಬಹುದೇ? ಅಲ್ಲದೆ,
ಹೀಗೆ ಒಂದೇ ಶಬ್ದರೂಪಕ್ಕೆ ಬೇರೆ ಬೇರೆ ಅರ್ಥಗಳು ಬರುವುದಕ್ಕೇನು ಕಾರಣ ಎಂಬುದೂ ವಿಚಾರಣೀಯವೇ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ