ನನ್ನ ಪುಟಗಳು

10th Kannada Poem ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
10th Kannada Poem ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

26 ಸೆಪ್ಟೆಂಬರ್ 2023

10ನೇ ತರಗತಿ ಪದ್ಯಪಾಠ-7 ವೀರಲವ-ವ್ಯಾಕರಣ/ಛಂದಸ್ಸು (10th-Veeralava-Grammar)

ಭಾಷಾ ಚಟುವಟಿಕೆ
೧. ವಿಗ್ರಹಿಸಿ ಸಮಾಸವನ್ನು ಹೆಸರಿಸಿ.
    ೧. ಸೊಲ್ಗೇಳಿ - ಸೊಲ್ಲನ್ನು + ಕೇಳಿ = ಕ್ರಿಯಾಸಮಾಸ
    ೨. ನಲ್ಗುದುರೆ - ನಲ್ಲಿತು + ಕುದುರೆ = ಕರ್ಮಧಾರಯಸಮಾಸ
    ೩. ಬಿಲ್ಗೊಂಡು - ಬಿಲ್ಲನ್ನು + ಕೊಂಡು = ಕ್ರಿಯಾಸಮಾಸ.
    ೪. ಬಿಲ್ದಿರುವನೇರಿಸಿ - ಬಿಲ್ಲಿನತಿರುವನ್ನು + ಏರಿಸಿ = ಕ್ರಿಯಾಸಮಾಸ.
    ೫. ಪೂದೋಟ - ಪೂವಿನ + ತೋಟ = ತತ್ಪುರುಷಸಮಾಸ.
    ೬. ಲಿಖಿತವನೋದಿ - ಲಿಖಿತವನ್ನು + ಓದಿ = ಕ್ರಿಯಾಸಮಾಸ
    ೭. ಯಜ್ಞತುರುಗ - ಯಜ್ಞದ + ತುರುಗ = ತತ್ಪುರುಷಸಮಾಸ.
    ೮. ಕದಳಿದ್ರುಮ - ಕದಳಿಯ + ದ್ರುಮ = ತತ್ಪುರುಷಸಮಾಸ.
    ೯. ಅಬ್ಧಿಪ - ಅಬ್ಧಿಗೆ (ಸಮುದ್ರಕ್ಕೆ) ಪತಿ (ಒಡೆಯ) ಯಾರೋ ಆತ (ವರುಣ) = ಬಹುವ್ರೀಹಿಸಮಾಸ.

೨. ತತ್ಸಮ-ತದ್ಭವ ಬರೆಯಿರಿ.
    ೧. ವೀರ - ಬೀರ
    ೨. ಯಜ್ಞ - ಜನ್ನ 
    ೩. ಬಂಜೆ - ವಂದ್ಯಾ 
    ೪. ಕುವರ - ಕುಮಾರ 
    ೫. ಲೋಕ - ಲೋಗ

೩. ವಿಂಗಡಿಸಿ ಸಂಧಿಯ ಹೆಸರು ಬರೆಯಿರಿ.
    ೧. ಚರಿಸುತಧ್ವರದ - ಚರಿಸುತ + ಅಧ್ವರದ = ಲೋಪಸಂಧಿ.
    ೨. ನಿಜಾಶ್ರಮ - ನಿಜ + ಆಶ್ರಮ = ಸವರ್ಣಧೀರ್ಘಸಂಧಿ.
    ೩. ಲೇಖನವನೋದಿ - ಲೇಖನವನು + ಓದಿ = ಲೋಪಸಂಧಿ.
    ೪. ತೆಗೆದುತ್ತರೀಯಮಂ - ತೆಗೆದು + ಉತ್ತರೀಯಮಂ = ಲೋಪಸಂಧಿ.
    ೫. ಬೇಡಬೇಡರಸುಗಳ - ಬೇಡಬೇಡ + ಅರಸುಗಳ = ಲೋಪಸಂಧಿ.
    ೬. ನಿಂತಿರ್ದನ್ - ನಿಂತು + ಇರ್ದನ್ = ಲೋಪಸಂಧಿ.
    ೭. ಪೂದೋಟ - ಪೂ + ತೋಟ = ಆದೇಶಸಂಧಿ.
    ೮. ಸೊಲ್ಗೇಳಿ - ಸೊಲ್ಲು + ಕೇಳಿ = ಆದೇಶಸಂಧಿ.

೪. ಪ್ರಸ್ತಾರಹಾಕಿ ಗಣ ವಿಭಾಗ ಮಾಡಿ ಛಂದಸ್ಸನ್ನು ಹೆಸರಿಸಿ ಲಕ್ಷಣ ಬರೆಯಿರಿ.
    5            5          5        5
_  u   _     _  _ u  uuuuu  _  _ u
ಉರ್ವಿಯೊಳ್ | ಕೌಸಲ್ಯೆ | ಪಡೆದಕುವ | ರಂರಾಮ|
    5            5          5        5
_  u   _   _ u _   uu_u   uuuuu
ನೊರ್ವನೇ | ವೀರನಾ | ತನಯಜ್ಞ | ತುರಗಮಿದು|
    5            5          5        5          5         5        2
_  uuu   _ u _   _  uu_    uuu _    _ u _   uuu _    _
ನಿರ್ವಹಿಸ | ಲಾರ್ಪರಾ | ರಾದೊಡಂ | ತಡೆಯಲೆಂ | ದಿರ್ದಲೇ | ಖನವನೋ |ದಿ
                                                    ಛಂದಸ್ಸು : ವಾರ್ಧಕ ಷಟ್ಪದಿ

ವಾರ್ಧಕ ಷಟ್ಪದಿಯ ಲಕ್ಷಣಗಳು:
* ಆರು ಸಾಲುಗಳಿರುತ್ತವೆ.
* ೧, ೩, ೪ ಮತ್ತು ೫ ನೆಯ ಸಾಲುಗಳು ತಲಾ ೨೦ ಮಾತ್ರೆಗಳನ್ನು ಹೊಂದಿದ್ದು ೫ ಮಾತ್ರೆಯ ೪ ಗಣಗಳಿರುತ್ತವೆ.
* ೩ ಮತ್ತು ೬ ನೆಯ ಸಾಲುಗಳು ತಲಾ ೩೨ ಮಾತ್ರೆಗಳನ್ನು ಹೊಂದಿದ್ದು ೫ ಮಾತ್ರೆಯ ೬ ಗಣಗಳೊಂದಿಗೆ ಒಂದು ಗುರು ಇರುತ್ತದೆ.
* ಮೊದಲನೆಯ ಸಾಲಿನನ ಗಣವಿನ್ಯಾಸ : 5/5/5/5/


ಬಹು ಆಯ್ಕೆ ಪ್ರಶ್ನೆಗಳು:
೧. ’ರಗಳೆ’ ಪದದ ತದ್ಭವ ರೂಪವಿದೆ.
    ಎ) ರಘಟಾ     ಬಿ) ರಗಳಾ     ಸಿ) ರಾಗಟ     ಡಿ) ರಂಗಗೀತೆ
೨. ಇವುಗಳಲ್ಲಿ ಬಹುಪಾದಗಳುಳ್ಳ ಪದ್ಯ :
    ಎ) ಕಂದ         ಬಿ) ಷಟ್ಟದಿ     ಸಿ) ವೃತ್ತ         ಡಿ) ರಗಳೆ
೩. ವಾರ್ಧಕ ಷಟ್ಪದಿಯ ಒಂದು ಪದ್ಯದಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ :
    ಎ) ೧೦೨         ಬಿ) ೧೪೦     ಸಿ) ೧೪೪         ಡಿ) ೬೪
೪. ಇವುಗಳಲ್ಲಿ ಯಾವುದು ರಗಳೆಯ ವಿಧವಾಗಿಲ್ಲ :
    ಎ) ಉತ್ಸಾಹ     ಬಿ) ಲಲಿತ     ಸಿ) ಸರಸಿ     ಡಿ) ಮಂದಾನಿಲ
೫. ವಾರ್ಧಕ ಷಟ್ಪದಿಯಲ್ಲಿ ಪ್ರತಿ ಗಣವು ಎಷ್ಟು ಮಾತ್ರೆಗಳಿಂದ ಕೂಡಿರುತ್ತದೆ?
    ಎ) ೩         ಬಿ) ೬         ಸಿ) ೫         ಡಿ) ೪
೬. ‘ನೆತ್ತಿಯೊಳ್’ ಇದು ಈ ವಿಭಕ್ತಿಗೆ ಉದಾಹರಣೆಯಾಗಿದೆ.
    ಎ) ಪ್ರಥಮ     ಬಿ) ದ್ವಿತೀಯ     ಸಿ) ತೃತೀಯ     ಡಿ) ಸಪ್ತಮಿ
೭. ‘ಲಿಖಿತಮಂ’ ಇಲ್ಲಿರುವ ವಿಭಕ್ತಿ :
    ಎ) ಪ್ರಥಮ     ಬಿ) ದ್ವಿತೀಯ     ಸಿ) ತೃತೀಯ     ಡಿ) ಚತುರ್ಧಿ
೮. ‘ಕುವರಂ’ ಇಲ್ಲಿರುವ ಅಕ್ಷರಗಣ :
    ಎ) ಭ-ಗಣ     ಬಿ) ಸ-ಗಣ     ಸಿ) ಮ-ಗಣ     ಡಿ) ತ-ಗಣ
೯. ’ಉರ್ವಿಯೊಳ್’ ಪದದಲ್ಲಿರುವ ಕಾರಕಾರ್ಥ :
    ಎ) ಕರ್ಮಾರ್ಥ     ಬಿ) ಸಂಪ್ರದಾನ     ಸಿ) ಅಪಾದಾನ     ಡಿ) ಅಧಿಕರಣ
೧೦. ‘ಅಗಡು’ ಪದದ ಹೊಸಗನ್ನಡ ರೂಪ ಇದಾಗಿದೆ :
    ಎ) ಅಡಗಿಕೋ      ಬಿ) ಶೌರ್ಯ      ಸಿ) ಕುದುರೆ      ಡಿ) ಹಡಗು

[ಉತ್ತರಗಳು: ೧. ಎ) ರಘಟಾ ೨. ಡಿ) ರಗಳೆ ೩. ಸಿ) ೧೪೪ ೪. ಸಿ) ಸರಸಿ ೫. ಸಿ) ೫ ೬. ಡಿ) ಸಪ್ತಮಿ ೭. ಬಿ) ದ್ವಿತೀಯ
೮. ಬಿ) ಸ-ಗಣ ೯. ಡಿ) ಅಧಿಕರಣ ೧೦. ಬಿ. ಶೌರ್ಯ]

ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ:
೧. ಭಾಮಿನಿ : ೧೦೨ : : ವಾರ್ಧಕ : ___________
೨. ವೃತ್ತಗಳು : ಅಕ್ಷರಗಣ : : ರಗಳೆ : ___________
೩. ಸೊಲ್ಗೇಳಿ : ಕ್ರಿಯಾ ಸಮಾಸ : : ಪೂದೋಟ : ___________
೪. ಬಿಲ್ದಿರುವನೇರಿಸಿ : ಕ್ರಿಯಾ ಸಮಾಸ : : ನಲ್ಗುದುರೆ : ___________
೫. ನೃ : ರಾಜ : : ಅಬ್ಧಿಪ : ___________
೬. ಸೊಲ್ಗೇಳಿ : ಸೊಲ್ಲನ್ನು+ಕೇಳಿ : : ನಲ್ಗುದುರೆ : ___________
೭. ವೀರ : ಬೀರ : : ಬಂಜೆ : ___________
೮. ಗಳ : ಕೊರಳು : : ವಾಜಿ : ___________

[ಉತ್ತರಗಳು: ೧) ೧೪೪ ೨) ಮಾತ್ರಾಗಣ ೩) ತತ್ಪುರುಷ ಸಮಾಸ ೪) ಕರ್ಮಧಾರಯ ೫) ವರುಣ ೬) ನಲ್ಲಿತು+ ಕುದುರೆ
೭) ವಂಧ್ಯಾ ೮) ಕುದುರೆ]






******** ಕನ್ನಡ ದೀವಿಗೆ ******

10ನೇ ತರಗತಿ ಪದ್ಯ ವೀರಲವ- ಸಾರಾಂಶ (10th-Veeralava-Saramsha)

ವೀರಲವ ಪದ್ಯದ ಹೊಸಗನ್ನಡ ರೂಪ
ಹಿನ್ನೆಲೆ ಕಥೆ:- ರಾವಣನನ್ನು ಸಂಹರಿಸಿದ ಶ್ರೀರಾಮನು ಸೀತಾ ಲಕ್ಷ್ಮಣ ಸಮೇತರಾಗಿ ಅಯೋಧ್ಯೆಗೆ ಮರಳಿ ರಾಜ್ಯಭಾರ ಮಾಡುತ್ತಿದ್ದ ಸಂದರ್ಭದಲ್ಲಿ ಸಾಮಾನ್ಯ ಪ್ರಜೆಯೊಬ್ಬನು ಸೀತೆಯ ಕುರಿತು ಕ್ಷುಲ್ಲಕವಾಗಿ ಮಾತನಾಡುವನು. ಪ್ರಜೆಗಳ ಅಭಿಪ್ರಾಯವೇ ಸರ್ವಸ್ವವೆಂದೂ ಕುಲಗೌರವ ಕಾಪಾಡುವುದು ತನ್ನ ಕರ್ತವ್ಯವೆಂದು ನಿಶ್ಚಯಿಸಿದ ರಾಮನು ತುಂಬು ಗರ್ಭಿಣಿಯಾದ ಸೀತೆಯನ್ನು ಕಾಡಿಗೆ ಕಳಿಸುವ ನಿರ್ಧಾರ ಮಾಡುವನು. ಅಣ್ಣನ ಆಣತಿಯಂತೆ ಲಕ್ಷ್ಮಣನು ಸೀತೆಯನ್ನು ಕಾಡಿನಲ್ಲಿ ಏಕಾಂಗಿಯಾಗಿ ಬಿಟ್ಟುಬಂದಾಗ, ಅಲ್ಲಿ ಅವಳ ರೋದನವನ್ನು ಕೇಳಿ ಆಗಮಿಸಿದ ವಾಲ್ಮೀಕಿ ಮಹರ್ಷಿಗಳು ಸೀತೆಯನ್ನು ತಮ್ಮ ಆಶ್ರಮಕ್ಕೆ ಕರೆದೊಯ್ಯುತ್ತಾರೆ. ಆಶ್ರಮದಲ್ಲಿ ಅವಳು ಅವಳಿ ಮಕ್ಕಳಿಗೆ ಜನ್ಮನೀಡುತ್ತಾಳೆ. ಅವರಿಗೆ ಲವ ಕುಶರೆಂದು ನಾಮಕರಣ ಮಾಡಿದ ಮಹರ್ಷಿಗಳು ಅವರಿಬ್ಬರನ್ನು ಸಕಲ ವಿದ್ಯಾ ಪಾರಂಗತರಾಗಿ ಮಾಡುತ್ತಾರೆ. ರಾವಣನ ವಧೆಯಿಂದ ಉಂಟಾದ ಬ್ರಹ್ಮಹತ್ಯಾ ದೋಷ ಬಂದಿರುವುದೆಂದು ಹೇಳಿದ ಮಹರ್ಷಿಗಳ ಆದೇಶದಂತೆ ಶ್ರೀರಾಮನು ಅಶ್ವಮೇಧ ಯಾಗವನ್ನು ಕೈಗೊಳ್ಳುತ್ತಾನೆ. ಶತ್ರುಘ್ನನ ಬೆಂಗಾವಲಿನೊಂದಿಗೆ ದೇಶ ದೇಶಗಳನ್ನು ಸುತ್ತಿದ ಅಶ್ವಮೇಧದ ಕುದುರೆಯು ವಾಲ್ಮೀಕಿ ಆಶ್ರಮದ ಆವರಣ ಪ್ರವೇಶಿಸಿದಾಗಶ್ರೀರಾಮನೇ ತನ್ನ ತಂದೆಯೆಂದು ತಿಳಿಯದ ಲವನು ಕುದುರೆಯನ್ನು ಕಟ್ಟುತ್ತಾನೆ.ಅದು ಪ್ರಸ್ತುತ ಪದ್ಯದಲ್ಲಿ ವ್ಯಕ್ತಗೊಂಡಿದೆ.

ಬಲ್ಗಯ್ಯ ನೃಪರಂಜಿ ತಡೆಯದೆ ರಘೂದ್ವಹನ |
ಸೊಲ್ಗೇಳಿ ನಮಿಸಲಿಳೆಯೊಳ್ ಚರಿಸುತಧ್ವರದ |
ನಲ್ಗುದುರೆ ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು ||
ಪುಲ್ಗಳ ಪಸುರ್ಗೆಳಸಿ ಪೊಕ್ಕೊಡಾ ತೋಟಗಾ|
ವಲ್ಗೆ ತನ್ನೊಡನಾಡಿಗಳ ಕೂಡಿ ಲೀಲೆ ಮಿಗೆ |
ಬಿಲ್ಗೊಂಡು ನಡೆತಂದವಂ ಕಂಡನರ್ಚಿತ ಸುವಾಜಿಯಂ ವೀರಲವನು || ೧ ||


         ಬಲಶಾಲಿಗಳಾದ ರಾಜರೂ ಸಹ ಶ್ರೀರಾಮನ ಶ್ರೇಷ್ಠತೆಯ ವಿಚಾರವನ್ನು ಕೇಳಿಯೆ ಕುದುರೆಯನ್ನು ಕಟ್ಟಲು ಹೆದರಿ ,ಅದಕ್ಕೆ ನಮಸ್ಕರಿಸಿ ಅದನ್ನು ತಡೆಯದೇ ಇರಲು ,ಶ್ರೀರಾಮನ ಯಜ್ಞಾಶ್ವದ ಪ್ರೀತಿಯ ಕುದುರೆಯು ಇಡೀ ಭೂಮಂಡಲದಲ್ಲಿ ಚಲಿಸುತ್ತ, ವಾಲ್ಮೀಕಿಯ ತಪೋವನದ ಉಪವನದಲ್ಲಿ ಬೆಳೆದು ನಿಂತಿದ್ದ ಹುಲ್ಲಿನ ಹಸುರಿಗೆ ಮನಸೋತು ಆಕರ್ಷಣೆಗೆ ಒಳಗಾಗಿ ಅದನ್ನು ಪ್ರವೇಶಿಸಿತು. ಅಲ್ಲಿ ತನ್ನ ಸ್ನೇಹಿತರೊಡನೆ (ಒಡನಾಡಿಗಳೊಡನೆ ) ಆಟವಾಡಿ ಮುಗಿಸಿ ಬಿಲ್ಲಿನ ಸಮೇತನಾಗಿ ಬರುತ್ತಿದ್ದ ವೀರ ಲವನು ಆಶ್ರಮವನ್ನು ಪ್ರವೇಶಿಸಿದ್ದ ಪೂಜಿತ (ಪೂಜಿಸಲ್ಪಟ್ಟಿದ್ದ)ಸುಂದರ ಕುದುರೆಯನ್ನು ಕಂಡನು.

ಎತ್ತಣ ತುರಂಗಮಿದು ಪೊಕ್ಕು ಪೂದೋಟಮಂ|
ತೊತ್ತಳದುಳಿದುದು ವಾಲ್ಮೀಕಿ ಮುನಿನಾಥನೇ |
ಪೊತ್ತುಮಾರೈವುದೆಂದೆನಗೆ ನೇಮಿಸಿ ಪೋದನಬ್ಧಿಪಂ ಕರೆಸಲಾಗಿ ||
ಮತ್ತೆ ವರುಣನ ಲೋಕದಿಂ ಬಂದು ಮುಳಿದಪನೆ
ನುತ್ತ ಹಯದೆಡೆಗೆ ನಡೆತಂದು ನೋಡಲ್ಕದರ |
ನೆತ್ತಿಯೊಳ್ ಮೆರವ ಪಟ್ಟದ ಲಿಖಿತಮಂ ಕಂಡು ಲವನೋದಿಕೊಳುತಿರ್ದನು || ೨ ||


ಉಪವನದೊಳಕ್ಕೆ ನುಗ್ಗಿದ ಕುದುರೆಯನ್ನು ನೋಡಿದ ಲವನು ಎಲ್ಲಿಯ ಕುದುರೆಯಿದು ? ಉಪವನಕ್ಕೆ ನುಗ್ಗಿ ಹೂದೋಟವನ್ನು ಹಾಳು ಮಾಡಿದೆಯಲ್ಲ ! ವಾಲ್ಮೀಕಿ ಮುನಿಶ್ರೇಷ್ಠರು ವರುಣನು ಕರೆದಿದ್ದರಿಂದ ಅಲ್ಲಿಗೆ ಹೋಗುವಾಗ ನನಗೆ ಈ ಉಪವನವನ್ನು ಕಾಯಲು ಹೇಳಿ ಹೋಗಿದ್ದರು. ಮತ್ತೆ ಅವರು ವರುಣನ ಲೋಕದಿಂದ ಹಿಂದಿರುಗಿ ಬಂದಾಗ ಈ ಹೂದೋಟವು ಹಾಳಾದುದನ್ನು ನೋಡಿ ಮುನಿಸಿಕೊಳ್ಳುವರು ಎಂದು ಯೋಚಿಸುತ್ತ ಕುದುರೆಯೆಡೆಗೆ ಬಂದನು. ಆಗ ಲವನು ಅದರ ಹಣೆಯ ಮೇಲೆ ಬರೆಹದ ಪಟ್ಟಿಯು ಇದ್ದುದನ್ನು ನೋಡಿ ಅದನ್ನು ಓದತೊಡಗಿದನು.

ಊರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮ |
ನೋರ್ವನೇ ವೀರನಾತನ ಯಜ್ಞತುರಗಮಿದು |
ನಿರ್ವಹಿಸಲಾರ್ಪರಾರಾದೊಡಂ ತಡೆಯಲೆಂದಿರ್ದ ಲೇಖನವನೋದಿ ||
ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ|
ಸರ್ವಜನಮುಂ ಬಂಜೆಯೆನ್ನದಿರ್ದಪುದೆ ತನ|
ಗುರ್ವತೋಳ್ಗಳಿವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದೆದ್ದನು|| ೩ ||


        ಈ ಭೂಮಿಯಲ್ಲಿ ಕೌಸಲ್ಯೆಯು ಪಡೆದ ಮಗನಾದ ಶ್ರೀರಾಮನೊಬ್ಬನೇ ವೀರ. ಅವನ ಯಜ್ಞ ತುರಗವಿದು. ಇದನ್ನು ನಿರ್ಸುವಹಿಸುವ ಸಮರ್ಥರು ಯಾರಾದರೂ ಇದ್ದರೆ ಈ ಕುದುರೆಯನ್ನು ತಡೆಯಿರಿ ಎಂದಿದ್ದನ್ನು ನೋಡಿ, "ಓಹೋ ! ಅವನ (ಶ್ರೀರಾಮನ) ಗರ್ವವನ್ನು ಮುರಿಯದಿದ್ದರೆ ನನ್ನ ತಾಯಿಯನ್ನು ಎಲ್ಲರೂ ಬಂಜೆಯೆಂದು ಕರೆಯದಿರುವರೇ ? ಅಲ್ಲದೇ ನನ್ನ ಶ್ರೇಷ್ಠವಾದ ತೋಳುಗಳಿದ್ದೂ ಏನು ಪ್ರಯೋಜನ ?" ಎಂದು ಪ್ರತಿಜ್ಞೆಯನ್ನು ಮಾಡಿ ಲವನು ಉರಿದೆದ್ದನು.

ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ |
ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ ಮುನಿಸುತರ್ |
ಮಿಗೆ ನಡುಗಿ ಬೇಡಬೇಡ ರಸುಗಳ ವಾಜಿಯಂ ಬಿಡು ಬಡಿವರೆಮ್ಮನೆನಲು ||
ನಗುತೆ ಪಾರ್ವರ ಮಕ್ಕಳಂಜಿದೊಡೆ ಜಾನಕಿಯ |
ಮಗನಿದಕೆ ಬೆದರುವನೆ ಪೋಗಿ ನೀವೆಂದು ಲವ |
ನಗಡುತನದಿಂದೆ ಬಿಲ್ದಿರುವನೇರಿಸಿ ತೀಡಿ ಜೇಗೈದು ನಿಂತಿರ್ದನು || ೪ ||


         ಲವನು ತನ್ನ ಉತ್ತರೀಯವನ್ನು ಹೊಸೆದು, ಅದನ್ನು ಕುದುರೆಯ ಕೊರಳಿಗೆ ಬಿಗಿದು ಬಾಳೆಯ ಗಿಡಕ್ಕೆ ಕಟ್ಟಲು ಮುನಿಸುತರು ಬಹಳ ನಡುಗುತ್ತಾ, "ಬೇಡ ಬೇಡ ಅರಸರ ಕುದುರೆಯನ್ನು ಬಿಟ್ಟುಬಿಡು, ಇಲ್ಲವಾದರೆ ನಮ್ಮನ್ನು ಹೊಡೆಯುವರು " ಎಂದರು ಅದಕ್ಕೆ ಲವನು ನಗುತ್ತ "ಬ್ರಾಹ್ಮಣರ ಮಕ್ಕಳು ಅಂಜುವರೆಂದರೆ ಜಾನಕಿಯ ಮಗನು ಇದಕ್ಕೆ ಹೆದರುವನೇ? ಹೋಗಿ ನೀವು" ಎಂದು ಶೌರ್ಯದಿಂದ ಬಿಲ್ಲನ್ನು ಹೆದೆಗೇರಿಸಿ, ತೀಡಿ ಜೇಂಕಾರ ಮಾಡಿ ನಿಂತಿದ್ದನು.
  
(ಕೃಪೆ: ಪ್ರತೀಕ್ಷಾ_ಮಮತಾ ಭಾಗವತ್)


******* ಕನ್ನಡ ದೀವಿಗೆ ******

10ನೇ ತರಗತಿ ಪದ್ಯಪಾಠ-7 ವೀರಲವ-ಪೂರಕ ಮಾಹಿತಿ/ಟಿಪ್ಪಣಿಗಳು (10th-Veeralava-tippani)

ಕಥಾ ಹಿನ್ನೆಲೆ :    ರಾಮಾಯಣ, ಮಹಾಭಾರತ, ಭಾಗವತಗಳಲ್ಲಿ ಅನೇಕ ಸಾಹಸಿಗಳಾದ ಬಾಲಕರ ಕಥೆಗಳು ಇವೆ. ಅಂತಹವುಗಳಲ್ಲಿ ಲವನ ಕತೆಯೂ ಒಂದು. ರಾವಣನನ್ನು ಸಂಹರಿಸಿ, ಅಯೋಧೈಗೆ ಸೀತಾಸಮೇತನಾಗಿ ಬಂದ ರಾಮ ಪ್ರಜಾನುರಾಗಿಯಾಗಿ ರಾಜ್ಯಭಾರ ಮಾಡುತ್ತಿದ್ದನು. ಗರ್ಭಿಣಿಯಾದ ಸೀತೆ ಒಂದು ದಿನ ವಾಲ್ಮೀಕಿ ಮಹರ್ಷಿಗಳ ಆಶ್ರಮವನ್ನು ನೋಡಬೇಕೆಂಬ ಆಸೆಯನ್ನು ವ್ಯಕ್ತಪಡಿಸುತ್ತಾಳೆ. ಕಾಕತಾಳೀಯವಾಗಿ ಅದೇ ರಾತ್ರಿ ಪ್ರಜೆಯೊಬ್ಬ ಸೀತೆಯ ಬಗ್ಗೆ ಅವಮಾನದ ನುಡಿಗಳನ್ನು ಆಡುತ್ತಾನೆ. ಇದನ್ನು ತಿಳಿದ ರಾಮನು ತಮ್ಮನಾದ ಲಕ್ಷ್ಮಣನನ್ನು ಕರೆದು ತುಂಬುಗರ್ಭಿಣಿಯಾದ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಬರುವಂತೆ ಆಜ್ಞಾಪಿಸುತ್ತಾನೆ. ಪ್ರಜೆಗಳ ಅಭಿಪ್ರಾಯವೇ ಸರ್ವಸ್ವವೆಂದು ತಿಳಿದ ರಾಮನ ಈ ಆಜ್ಞೆಯಂತೆ ಲಕ್ಷ್ಮಣ ವಾಲ್ಮೀಕಿ ಆಶ್ರಮಕ್ಕೆ ಹೋಗುವ ನೆಪದೊಂದಿಗೆ ಸೀತೆಯನ್ನು ಕಾಡಿಗೆ ಕೊಂಡೊಯ್ಯುತ್ತಾನೆ. 

    ಕಾಡಿನಲ್ಲಿ ಏಕಾಂಗಿಯಾಗಿದ್ದ ಸೀತೆ ದುಃಖಿಸುತ್ತಿರುವ ಸಂದರ್ಭದಲ್ಲಿ ಆ ಪ್ರದೇಶಕ್ಕೆ ಬಂದ ವಾಲ್ಮೀಕಿ ಮಹರ್ಷಿಗಳು ಸೀತೆಯನ್ನು ತಮ್ಮಾಶ್ರಮಕ್ಕೆ ಕರೆದೊಯ್ಯುತ್ತಾರೆ. ಆಶ್ರಮದಲ್ಲಿ ಕೆಲವೇ ದಿನಕ್ಕೆ ಸೀತೆ ಅವಳಿ ಮಕ್ಕಳನ್ನು ಹಡೆಯುತ್ತಾಳೆ. ವಾಲ್ಮೀಕಿ ಮಹರ್ಷಿಗಳು ಈ ಮಕ್ಕಳಿಗೆ ಕುಶ, ಲವರೆಂದು ನಾಮಕರಣ ಮಾಡಿ ಸಕಲ ವಿದ್ಯಾಪಾರಂಗತರನ್ನಾಗಿ ಮಾಡುತ್ತಾರೆ. 

    ಇತ್ತ ಸೀತೆಯ ಅಗಲುವಿಕೆಯಿಂದ ರಾಮ ಮಾನಸಿಕವಾಗಿ ದುಃಖಕ್ಕೀಡಾಗುತ್ತಾನೆ. ರಾವಣನ ವಧೆಯಿಂದ ಬ್ರಹ್ಮಹತ್ಯಾದೋ? ಬಂದಿರುವುದನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಮಹರ್ಷಿಗಳ ಆದೇಶದಂತೆ ರಾಮ ಅಶ್ವಮೇಧವನ್ನು ಕೈಗೊಂಡು, ಸಂಚಾರಕ್ಕೆ ತೆರಳಿದ ಕುದುರೆಯ ಬೆಂಗಾವಲಿಗೆ ಶತ್ರುಘ್ನನನ್ನು ಕಳುಹಿಸುತ್ತಾನೆ. ದೇಶದೇಶಗಳನ್ನು ಸುತ್ತಾಡಿದ ಅಶ್ವಮೇಧದ ಕುದುರೆ ಒಂದು ದಿನ ವಾಲ್ಮೀಕಿ ಆಶ್ರಮಕ್ಕೆ ಬರುತ್ತದೆ. ಶ್ರೀರಾಮನೇ ತನ್ನ ತಂದೆ ಎಂದು ತಿಳಿಯದ ಲವ ಕುದುರೆಯನ್ನು ಕಟ್ಟುವ ಸನ್ನಿವೇಶವೇ ಈ ಪಾಠ ಭಾಗ. 

ರಘು : ಸೂರ್ಯ ವಂಶದ ಅರಸ. ತನ್ನ ಪರಾಕ್ರಮದಿಂದ ಭೂಮಂಡಲವನ್ನು ಗೆದ್ದು ’ವಿಶ್ವಜಿತ್’ ಎಂಬ ಯಾಗ ಮಾಡಿ ಸರ್ವಸ್ವವನ್ನು ದಾನಮಾಡಿ ಪ್ರಸಿದ್ಧನಾದ. ಸೂರ್ಯವಂಶದ ಶ್ರೇ? ಅರಸನಾದ ಕಾರಣ ಈತನ ಕಾಲಾನಂತರ ಸೂರ್ಯವಂಶಕ್ಕೆ ರಘುವಂಶ ಎಂಬ ಹೆಸರು ಬಂತು. 

ವಾಲ್ಮೀಕಿ : ಒಬ್ಬ ಬ್ರಹ್ಮರ್ಷಿ. ದಾರಿಗಳ್ಳನಾಗಿದ್ದ ಬೇಡ. ನಾರದ ಮಹರ್ಷಿಗಳ ಬೋಧನೆಯಿಂದ ರಾಮನಾಮ ಜಪಿಸುತ್ತಿದ್ದಾಗ ಈತನ ಮೈಮೇಲೆ ಹುತ್ತ (ವಲ್ಮೀಕ) ಬೆಳೆಯಿತು. ನಾರದ ಮಹರ್ಷಿಗಳಿಂದಾಗಿ ವಲ್ಮೀಕದಿಂದ ಹೊರಗೆ ಬಂದ ಈತನು ವಾಲ್ಮೀಕಿ ಎಂದು ಪ್ರಸಿದ್ಧನಾದನು. ಆದಿಕಾವ್ಯ ರಾಮಾಯಣವನ್ನು ರಚಿಸಿ ಕೀರ್ತಿವಂತನಾದ. 

ವರುಣ : ಅ?ದಿಕ್ಪಾಲಕರಲ್ಲಿ ಒಬ್ಬನಾದ ಈತ ಪಶ್ಚಿಮದಿಕ್ಕಿಗೆ ಒಡೆಯ. ಜಲಾಧಿಪತಿ ಎಂದು ಪ್ರಸಿದ್ಧನಾದವ. 

ಲವ : ಶ್ರೀರಾಮನಿಂದ ಸೀತೆಯಲ್ಲಿ ಜನಿಸಿದ ಅವಳಿ ಮಕ್ಕಳಲ್ಲಿ ಚಿಕ್ಕವ. ಶ್ರೀರಾಮನಿಂದ ಪರಿತ್ಯಕ್ತಳಾದ ತುಂಬುಗರ್ಭಿಣಿ ಸೀತೆ ವಾಲ್ಮೀಕಿ ಆಶ್ರಮದಲ್ಲಿ ಆಶ್ರಯ ಪಡೆದ ಸಂದರ್ಭದಲ್ಲಿ ಜನಿಸಿದವ. ವಾಲ್ಮೀಕಿಯಿಂದ ರಚಿತವಾದ ರಾಮಾಯಣವನ್ನು ಅಣ್ಣ ಕುಶನ ಜೊತೆ ಸೇರಿ ಹಾಡುತ್ತಿದ್ದ. 

ಅಬ್ಧಿಪ : ಅಬ್ಧಿ - ಸಮುದ್ರ, ಪ - ಒಡೆಯ, ಅಬ್ಧಿಪ - ಸಮುದ್ರದ ಒಡೆಯ - ವರುಣ 

ಜೇಗೆಯ್ : ಬಿಲ್ಲಿಗೆ ಕಟ್ಟುವ ಹಗ್ಗವನ್ನು ಹೆದೆ ಎಂದು ಕರೆಯುತ್ತಾರೆ. ಈ ಹೆದೆಯನ್ನು ಬೇಕಾದಾಗ ಮಾತ್ರ ಬಿಗಿಯಲಾಗುತ್ತದೆ. ಉಳಿದ ಸಂದರ್ಭದಲ್ಲಿ ಬಿಲ್ಲಿನ ಒಂದು ತುದಿಯಲ್ಲಿ ಮಾತ್ರ ಕಟ್ಟಿರುತ್ತಾರೆ. ಯುದ್ಧಕ್ಕೆ ಸನ್ನದ್ಧನಾದಾಗ ಬಿಲ್ಲುಗಾರ ತನ್ನ ಬಿಲ್ಲಿನ ಹೆದೆಯನ್ನು ಅದರ ಇನ್ನೊಂದು ತುದಿಗೆ ಬಿಗಿಯಾಗಿ ಕಟ್ಟುತ್ತಾನೆ. ಈ ಹೆದೆಯ ಬಿಗಿತ ಸರಿಯಾಗಿದ್ದರೆ ಮಾತ್ರ ಬಾಣ ಗುರಿ ಮುಟ್ಟುತ್ತದೆ. ಅದಕ್ಕಾಗಿ ಬಿಲ್ಲುಗಾರ ಬಿಲ್ಲಿನ ಹೆದೆಯನ್ನು ಆಕರ್ಣಾಂತ (ಕಿವಿಯವರೆಗೆ) ಎಳೆದು ಬಿಡುತ್ತಾನೆ. ಆಗ ಆ ಹೆದೆ ಮೊದಲಿದ್ದ ಸ್ಥಳಕ್ಕೆ ಹೋಗುವಾಗ ’ಝೇಂ’ ಎಂಬ ಧ್ವನಿ ಮಾಡುತ್ತದೆ. ಈ ಧ್ವನಿಯ ಸಹಾಯದಿಂದ ಬಿಲ್ಲುಗಾರ ಹೆದೆಯ ಬಿಗಿತ ಸರಿಯಾಗಿದೆಯೇ ಎಂದು ಪರೀಕ್ಷಿಸುತ್ತಾನೆ. ಈ ಕ್ರಿಯೆಗೆ ’ಜೇಗೆಯ್ಯು’ವುದು ಎಂದು ಹೇಳಲಾಗುತ್ತದೆ. 

ಯಜ್ಞಾಶ್ವ :



ವಾಲ್ಮೀಕಿ ಋಷಿಗಳಿಂದ ಲವ-ಕುಶರಿಗೆ ವಿದ್ಯಾಭ್ಯಾಸ:









******* ಕನ್ನಡ ದೀವಿಗೆ ******

10ನೇ ತರಗತಿ ಪದ್ಯ ವೀರಲವ- ಕವಿ-ಕೃತಿ ಪರಿಚಯ(0th-Veeralava-Kavi-kruthi)

ಲಕ್ಷ್ಮೀಶ ಕವಿ ಮತ್ತು ಆತನ ಕೃತಿ ಪರಿಚಯ

    ಪೋಷಕರ ಅಸೆಯನ್ನು ನೆರೆವೆರಿಸುವ ಮಕ್ಕಳನ್ನು ನೀವು ಕಂಡಿರಬಹುದು. ಕರ್ನಾಟಕದ ಸಾಹಿತ್ಯದ ಇತಿಹಾಸದಲ್ಲಿ ತಂದೆಯ ಆಸೆಯಂತೆ ಮಗನು ಜೈಮಿನಿ ಋಷಿಗಳು ಸಂಸ್ಕೃತದಲ್ಲಿ ಬರೆದ ಭಾರತವನ್ನು ಕನ್ನಡದಲ್ಲಿ ರಚಿಸಿದ. ಪಂಪ, ರನ್ನ ಮತ್ತು ಕುಮಾರವ್ಯಾಸರನ್ನು ನೀಡಿದ ಕನ್ನಡ ಸಾಹಿತ್ಯಕ್ಕೆ ತನ್ನದೇ ಅದ ವಿಶಿಷ್ಟ ರೀತಿಯಲ್ಲಿ ಗುರುತಿಸಿ ಕೊಂಡ ಮಹಾಕವಿ ಯಾರು ಗೊತ್ತೇ . ಆತನೇ ಚಿಕ್ಕಮಗಳೂರಿನ ಕಡೂರು ತಾಲೂಕು ದೇವನೂರು ಗ್ರಾಮದ ಶ್ರೀಕಾಂತ ಮುಂದೆ `ಲಕ್ಷ್ಮೀಶ' ಎಂದು ಪ್ರಸಿದ್ಧಿ ಪಡೆದು 'ಜೈಮಿನಿ ಭಾರತ' ಕೃತಿಯನ್ನು ರಚಿಸಿದ.

ಸಾಲ ಸಾಲಂಗಳಿಂ ಬಕುಳ ಕುಳ ದಿಂದೆ ಹಿಂ
ತಾಳ ತಾಳಗಳಿಂ ಮಾದಲದಲರ್ಗಳಿಂ ತ
ಮಾಲ ಮಾಲತಿಗಳಿಂ ಸಂರಂಭ ರಂಭ ದಿಂದ ಮಂದ ಮಂದಾರದಿಂದೆ….


         ಈ ಮೇಲಿನ ಪದ್ಯ ನೋಡಿದರೆ ಒಂದು ಸ್ವಾರಸ್ಯ ಇದೆ. ಒಂದೇ ಪದ ವನ್ನ ಎರಡು ಬಾರಿ ಉಪಯೋಗಿಸಿರುವುದು. ಸಾಲ, ತಾಳ, ದಲ ಕುಳ, ಮಾಲ, ರಂಭ. ಇದು ವಾರ್ಧಕ ಷಟ್ಪದಿಯಲ್ಲಿ ಅನುಪ್ರಾಸ ಅಲಂಕಾರದಲ್ಲಿ ನಿಬಧ್ಧ ವಾಗಿರುವ ಒಂದು ಪದ್ಯದ ಮೂರು ಸಾಲುಗಳು. ಇಂತಹ ಸುಂದರವಾದ ಕಾವ್ಯಗಳನ್ನು ರಚಿಸಿ ಕನ್ನಡ ಸಾಹಿತ್ಯ ಪ್ರಪಂಚವನ್ನು ಶ್ರೀಮಂತ ಗೊಳಿಸಿದ, ಕರ್ನಾಟ ಕವಿ ಚೂತವನ ಚೈತ್ರ ಎಂದು ಬಿರುದಾಂಕಿತ ಕವಿ ಲಕ್ಷ್ಮೀಶ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಲಕ್ಷ್ಮೀಶನ ಜನ್ಮ ಸ್ಥಳ. ಅಣ್ಣಯ್ಯ ದಂಪತಿಗಳಿಗೆ ಚೈತ್ರ ಶುಧ್ಧ ಹುಣ್ಣಿಮೆಯಂದು ಜನಿಸಿದ ಶ್ರೀಕಾಂತ ಮುಂದೆ ಲಕ್ಷ್ಮೀಶನಾಗಿ ಪ್ರಸಿಧ್ಧಿ ಹೊಂದಿದ. ತಂದೆಗೆ ಮಗ ಕೀರ್ತಿಶಾಲಿಯಾಗಬೇಕು ಮತ್ತು ತನಗೆ ಪ್ರಿಯವಾದ ಜೈಮಿನಿ ಭಾರತವನ್ನು ಕನ್ನಡದಲ್ಲಿ ಬರೆಯಬೇಕು ಎಂಬ ಮಹದಾಸೆಯಿಂದ ಮಗನಿಗೆ ದಿನಕ್ಕೊಂದು ಕತೆ ಹೇಳಿ ಮಗನ ಯೋಚನಾ ಶಕ್ತಿಗೆ ನೀರೆರೆದ. ಜೈಮಿನಿ ಎಂಬ ಋಷಿ ಸಂಸ್ಕೃತದಲ್ಲಿ ಬರೆದದನ್ನು ಕನ್ನಡದಲ್ಲಿ ಬರೆ,ಇದು ನನ್ನ ಆಸೆ ಎಂದ ಮಗನಲ್ಲಿ ತನ್ನ ಮನದಾಳದ ಇಂಗಿತವನ್ನು ಮತ್ತು ಅವನ ಜೀವನದ ಉದ್ದೇಶವನ್ನು ತಿಳಿಸಿದ.
          ದೇವರ ಅನುಗ್ರಹದಿಂದ ಮತ್ತು ಪ್ರಾರ್ಥನೆಯಿಂದ ಅವನಿಗೆ ಚಮತ್ಕಾರವಾಗಿ ಜೈಮಿನಿ ಕವಿಯ ಭಾರತದ ಪ್ರತಿ ಸಿಗುತ್ತದೆ. ಅವನ ಅಂತರಂಗದಲ್ಲಿ “ನೀನು ದೇವನೂರಿಗೆ ಹೋಗಿ ದೇವರಗುಡಿಯಲ್ಲೇ ಬರೆ, ನೀನು ಕವಿಯಾಗಬಲ್ಲೆ ” ಎಂದು ಕೇಳಿಸುತ್ತದೆ. ಕವಿ ಕಾವ್ಯ ರಚನೆಯನ್ನು ಶುರುಮಾಡುತ್ತಾನೆ.

"ವೀಣೆಯಿಂ ಗಾನಮಂ ನುಡಿಸವಂದೊಳೆನ್ನ ವಾಣಿಯಿಂ ಕವಿತೆಯಂ ಪೇಲಿಸಿದ" ಎಂದು ನಾರಾಯಣನೆ ಕರ್ತೃ ಎಂದು ಹೇಳುತ್ತಾನೆ.
           ಜೈಮಿನಿ ಭಾರತವು ಸ್ವತಂತ್ರವಾದ ಕಥೆಗಳ ಗೊಂಚಲು.ಲಕ್ಷ್ಮೀಶನಿಗೆ ನಿರೂಪಣೆಯ ಕೌಶಲ್ಯ ಮತ್ತು ಭಾಷೆಯ ಮೇಲಿನ ಪ್ರಭುತ್ವಗಳೆರಡೂ ಇವೆ. ಈ ಕಾವ್ಯದಲ್ಲಿ ೩೪ ಅಧ್ಯಾಯಗಳಿದ್ದು ವಾರ್ಧಕ ಷಟ್ಪದಿಯಲ್ಲಿರುವ ೧೯೩೬ ಕಾವ್ಯಗಳಿವೆ. ಈ ಕಾವ್ಯವು, ಮಹಾಭಾರತ ಯುದ್ಧವು ಮುಗಿದು, ಧರ್ಮರಾಯನ ಪಟ್ಟಾಭಿಷೇಕವಾದ ನಂತರದ ಘಟನೆಗಳ ಮೇಲೆ ಒತ್ತು ಕೊಟ್ಟಿದೆ.ಇದು ವ್ಯಾಸಭಾರತದ ಅಶ್ವಮೇಧಿಕಪರ್ವದಲ್ಲಿ ಬರುವ ಕಥಾಭಾಗ. ದೈವಿಕತೆಯನ್ನು ಸ್ಥಾಪಿಸುವ ಮತ್ತು ಉದ್ಧಟ ವೀರರಿಗೆ ವಿನಯದ ಪಾಠ ಕಲಿಸುವ ತನ್ನ ಉದ್ದೇಶದಲ್ಲಿ ಕವಿಯು ಯಶಸ್ಸು ಪಡೆದಿದ್ದಾನೆ.
          ಲಕ್ಷ್ಮೀಶನು ಷಟ್ಪದಿ ಪ್ರಕಾರದಲ್ಲಿ ಅಪಾರ ಸಾಧನೆ ಮಾಡಿದ್ದ ಕುಮಾರವ್ಯಾಸ, ರಾಘವಾಂಕ, ಚಾಮರಸ ಮುಂತಾದವರ ಸವಾಲನ್ನು ಎದುರಿಸಬೇಕಾಗಿತ್ತು. ರಾಮಾಯಣ ಮತ್ತು ಮಹಾಭಾರತಗಳ ಹಲವು ಸಾಧ್ಯತೆಗಳನ್ನು ಅವನಿಗಿಂತ ಹಿಂದಿನ ಹಿರಿಯ ಕವಿಗಳು ಸೂರೆ ಮಾಡಿದ್ದರು. ಆದ್ದರಿಂದಲೇ ಈ ಕವಿಯು, ತನ್ನ ಕಾವ್ಯವಸ್ತುವಾಗಿ, ಮಹಾಭಾರತ ಯುದ್ಧದ ನಂತರದ ಘಟನೆಗಳನ್ನು ಆರಿಸಿಕೊಂಡನು.

ಲಕ್ಷ್ಮೀಶ ಕಾವ್ಯಗಳಲ್ಲಿ ಬರುವ ವಿಶೇಷತೆಗಳು:

ಸುರ್ರನೆ, ಕಿರ್ರನೆ, ಕರ್ರನೆ, ಘರ್ರನೆ, ತಿರ್ರನೆ ಸರ್ರನೆ ಎಂಬ ಪದಗಳಿಂದ ರಣರಂಗದ ಭೀಭತ್ಸವನ್ನು ಹೀಗೆ ವರ್ಣಿಸುತ್ತಾನೆ.

ಸುರ್ರನೆ ಸುಲಿದು ಸುತ್ತಿ ಬೆಂ ಡಾಗೆ ಕುದುರೆಗಳ್
ಕಿರ್ರನೆ ಕಪಿಶ್ವರ್ಮ್ ಪಲಿರಿದು ಚೀರಲ್ಕೆ
ಕರ್ರನೆ ಕವಿಯೇ ಕತ್ತಲೆ ಶಿರೋಭ್ರಮನೆಯಿಂ ಕೃಷ್ಣಾ ಫಳುಗುನರ್ಗೆ ….
ಮೇಲಿನ ಕಾವ್ಯ ಅರ್ಜುನ ಮತ್ತು ಬಬ್ರುವಾಹನರ ನಡುವಿನ ಯುದ್ಧದ ವರ್ಣನೆಯ ಬಗೆ

ತೇರ ವಂಗ ಡದ ಜರ್ಜಾವರಂ ಗಜದ ಘಂಟಾರವಂ
ಹಾಯದ ಹೆಷಾರವಂ ನಡೆವ ಸೇನಾರವಂ ಭೇರಿಯ ಮಹಾರವಂ ಬಹಳ ಕಹಳಾರವಂ …

ರವಂ ಪದ ಹೇಗೆ ಪ್ರಯೋಗಿಸಿಧ್ಧನೆ ಎಂಬುದನ್ನು ನೋಡಬಹುದು.

ಪದಲಾಲಿತ್ಯದ ಕೆಲ ಸಾಲುಗಳನ್ನು ನೋಡೋಣ

ಈ ವನದ ನಡುನಡುವೆ ಕೊಳ ತೊಳ ಗುತಿರುತಿಹ ಸ
ವರದೊಲೆರೋ ಬೆಳೆ ಬೆಳೆದು ರಾ
ಜೀವದಳರಲರ ತುಳಿತುಳಿದಿಡಿದಿಡಿದ ಬಂಡ ನೋಡ ನೋಡನೆ ಸವಿದು ಸವಿದು

ಸವಿಯೇ ಪ್ರಿಯರಾಗಮದರಾಗಮದರಾಗಮದ
ನ ವಿಳಾಸ ಮೆಂದು ತಾಂಬೂಲಮಂ ತೋರ್ಪರ್ಮು
ಡಿವೊಡೆ ಬೇಕಾದಳರ್ಕಾದಲರ್ಕಾದಲರ್ಕಂಗಜಾಹವದೊಳೆಂದು


ಅಶ್ವಮೇಧ ಯಾಗದ ಕಥೆಯ ಸೂತ್ರದಲ್ಲಿ ಅನೇಕ ಸಣ್ಣ ಕಥೆಗಳನ್ನುಪೋಷಿಸಿದ ಜೈಮಿನಿ ಭಾರತ. ಇದರಲ್ಲಿ ಮರುತ್ತನ ಕತೆ, ಅನುಸಾಲ್ವನ ಕಾಳಗ ಸ್ವಾಹ ಪರಿಣಯ ಬಬ್ರುವಾಹನನ ಕಾಳಗ, ವೀರವರ್ಮನ ಕತೆ, ಚಂದ್ರಹಾಸನ ಕತೆ ಮುಂತಾದವು ಇವೆ. ಯುದ್ಧಗಳ ವರ್ಣನೆ ಸ್ತ್ರೀ ಹಾಗು ಪ್ರಕೃತಿ ವರ್ಣನೆಗಳು ಕಾವ್ಯದಲ್ಲಿ ವಿಸ್ತಾರವಾಗಿ ಬಂದಿವೆ.

ಲಕ್ಷ್ಮೀಶನಿಗೆ ಹುಟ್ಟಿದ ಸ್ಥಳದ ಬಗ್ಗೆ ತುಂಬಾ ಪ್ರೇಮ. ” ಸ್ವರ್ಗಕ್ಕಿಂತಲೂ ನಾನ ಓರೆ ನನಗೆ ದೊಡ್ಡದು , ದೇವನೂರೆ ಕೈಲಾಸ ” ಎಂದು ಹಲವು ಬಾರಿ ತನ್ನ ಊರನ್ನು ಕೊಂಡಾಡಿದ್ದಾನೆ. ಹುಟ್ಟಿದ ಊರಿಗೆ ಅಷ್ಟಿಷ್ಟು ಸೇವೆ ಸಲ್ಲಿಸ ಬೇಕೆಂಬುದು ಕವಿಯ ಆಸೆ. ಅದಕ್ಕಾಗಿ ಊರ ಮುಂದೆ ಸುಂದರವಾದ ತೋಟ ಮಾಡಿಸಿದ, ನೀರಿಗಾಗಿ ಬಾವಿಗಳನ್ನು ತೊಡಿಸಿದ, ಕೆರೆ ತುಂಬಲು ಕಾಲುವೆಗಳನ್ನು ತೆಗೆಸಿದ. ಲಕ್ಷ್ಮೀಶನ ಗುಡಿಯಲಿ ಒಂದು ಕೀರ್ತಿ ಮಂಟಪ ಮಾಡಿಸಿದ. ಜನರನ್ನು ಮತ್ತು ಕವಿಗಳನ್ನು ಸತ್ಕರಿಸಿದ. ಅಭಿಮಾನಿಗಳು ನೀಡಿದ ಧನ ಕನಕ ವಸ್ತುಗಳನ್ನು ಜನ ಸೇವೆಗೆ ನೀಡಿದ ಉದಾರ ಕವಿ ನಮ್ಮ ಲಕ್ಷ್ಮೀಶ.

'ಜೈಮಿನಿ ಭಾರತ' ಕುರಿತು
ಕಾವ್ಯದ ಹೆಸರು: ಜೈಮಿನಿ ಭಾರತ
ಕವಿಯ ಹೆಸರು: ಲಕ್ಷ್ಮೀಶ
ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ)
ಸ್ಥಳ/ಸ್ಥಳಗಳು: ಚಿಕ್ಕಮಗಳೂರು ಜಿಲ್ಲೆಯ ದೇವನೂರು. (ಗುಲ್ಬರ್ಗ ಜಿಲ್ಲೆಯ ಸುರಪುರ.
ಮತ-ಧರ್ಮ: ಬ್ರಾಹ್ಮಣ
ಆಶ್ರಯದಾತರು: ಯಾವ ರಾಜನೂ ಇಲ್ಲ
ಬಿರುದುಗಳು: ಕರ್ನಾಟ ಕವಿಚೂತವನ ಚೈತ್ರ, ಉಪಮಾಲೋಲ.
ಸಾಹಿತ್ಯಪ್ರಕಾರ: ಕಾವ್ಯ
ಛಂದೋರೂಪ: ವಾರ್ಧಕ ಷಟ್ಪದಿ.
ಹಸ್ತಪ್ರತಿಗಳು: ಓಲೆಯ ಗರಿ ಮತ್ತು ಕಾಗದ
ಪ್ರಕಟವಾದ ವರ್ಷ: 1848, (ಕಲ್ಲಚ್ಚಿನ ಪ್ರತಿ), 1875, ವ್ಯಾಖ್ಯಾನಸಹಿತವಾಗಿ (ಕಲ್ಲಚ್ಚಿನ ಪ್ರತಿ)
ಸಂಪಾದಕರು: ವೆಂಕಟ ರಂಗೋ ಕಟ್ಟಿ (1875)(ಕಲ್ಲಚ್ಚಿನ ಪ್ರತಿ), ಹೊಳಕಲ್ ಶ್ರೀನಿವಾಸ ಪಂಡಿತ, 1875, ಮುದ್ರಿತ ಪ್ರತಿ.
ಪ್ರಕಾಶಕರು: ಕೃಷ್ಣರಾಜ ಮುದ್ರಾಕ್ಷರ ಶಾಲೆ, ಮೈಸೂರು.

ಕಿರು ಪರಿಚಯ: ಹತ್ತೊಂಬತ್ತನೆಯ ಶತಮಾನ ಮತ್ತು ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಜೈಮಿನಿ ಭಾರತವು ಕನ್ನಡದ ಅತ್ಯಂತ ಜನಪ್ರಿಯ ಕಾವ್ಯಗಳಲ್ಲಿ ಒಂದಾಗಿತ್ತು. ಗಮಕ ಪರಂಪರೆಯ ನೆರವಿನಿಂದ ಹಳ್ಳಹಳ್ಳಿಗಳಲ್ಲಿಯೂ ಪ್ರಚುರವಾಗಿದ್ದ ಈ ಕಾವ್ಯದ ಅನೇಕ ಸನ್ನಿವೇಶಗಳು ನಾಟಕರೂಪವನ್ನೂ ಪಡೆಯುತ್ತಿದ್ದವು. ಜೈಮಿನಿ ಭಾರತವು, ಸಂಸ್ಕೃತದಲ್ಲಿ ಜೈಮಿನಿ ಎಂಬ ಋಷಿಯಿಂದ ರಚಿತವಾದ ಕಾವ್ಯ. ಲಕ್ಷ್ಮೀಶನ ಕಾವ್ಯವು ಯಾವುದೇ ಅರ್ಥದಲ್ಲಿಯೂ ಮೂಲದ ಕನ್ನಡ ಅನುವಾದವಲ್ಲ. ಕವಿಯು ತನಗಿರುವ ಸ್ವಾತಂತ್ರ್ಯವನ್ನು ಉಪಯೋಗಿಸಿ ಅನೇಕ ನೀರಸವಾದ ಭಾಗಗಳನ್ನು ಬಿಟ್ಟಿದ್ದಾನೆ ಮತ್ತು ತನ್ನದೇ ಆದ ಹೊಸ ಾಯಾಮಗಳನ್ನು ಸೇರಿಸಿದ್ದಾನೆ. ಈ ಕಾವ್ಯದಲ್ಲಿ 34 ಅಧ್ಯಾಯಗಳಿದ್ದು ವಾರ್ಧಕ ಷಟ್ಪದಿಯಲ್ಲಿರುವ 1936 ಪದ್ಯಗಳಿವೆ. ಈ ಕಾವ್ಯವು, ಮಹಾಭಾರತ ಯುದ್ಧವು ಮುಗಿದು, ಧರ್ಮರಾಯನ ಪಟ್ಟಾಭಿಷೇಕವಾದ ನಂತರದ ಘಟನೆಗಳ ಮೇಲೆ ಒತ್ತು ಕೊಟ್ಟಿದೆ. ಇದು ವ್ಯಾಸಭಾರತದ ಅಶ್ವಮೇಧಿಕಪರ್ವದಲ್ಲಿ ಬರುವ ಕಥಾಭಾಗ. ಕೃಷ್ಣನ ದೈವಿಕತೆಯನ್ನು ಖಚಿತವಾಗಿ ಸ್ಥಾಪಿಸುವ ಮತ್ತು ಅರ್ಜುನನಂತಹ ಉದ್ಧಟ ವೀರರಿಗೆ ವಿನಯದ ಪಾಠ ಕಲಿಸುವ ತನ್ನ ಉದ್ದೇಶದಲ್ಲಿ ಕವಿಯು ಯಶಸ್ಸು ಪಡೆದಿದ್ದಾನೆ. ಅಶ್ವಮೇಧಯಾಗವನ್ನು ಮಾಡಬೇಕೆಂಬ ಧರ್ಮರಾಯನ ತೀರ್ಮಾನ ಮತ್ತು ಅದರ ಪೂರ್ವಸಿದ್ಧತೆ, ಪರಿಣಾಮಗಳನ್ನು ಬಹಳ ವಿವರವಾಗಿ ನಿರೂಪಿಸಲಾಗಿದೆ. ಅರ್ಜುನನು ತನಗಿಂತಲೂ ಎಷ್ಟೋ ಪಟ್ಟು ಬಲಶಾಲಿಗಳಾದ, ಆದರೆ ಕೃಷ್ಣನ ಬಗ್ಗೆ ಪ್ರಶ್ನಾತೀತವಾದ ಗೌರವವನ್ನು ಹೊಂದಿರುವ ಅನೇಕ ವೀರರನ್ನು ಅರ್ಜುನನು ಭೇಟಿಯಾಗುತ್ತಾನೆ. ಸುಧನ್ವ, ಹಂಸಧ್ವಜ, ಯೌವನಾಶ್ವ ಮುಂತಾದ ಅನೇಕ ವೀರರು ಅರ್ಜುನನನ್ನು ಸೋಲಿನ ಅಂಚಿಗೆ ತರುತ್ತಾರೆ. ಆದರೆ, ಎಲ್ಲ ಸಂದರ್ಭಗಳಲ್ಲಿಯೂ ಅವನು ಕೃಷ್ಣನ ಅನುಗ್ರಹದಿಂದ ಗೆಲುವು ಪಡೆಯುತ್ತಾನೆ ಮತ್ತು ಮರೆಯಲಾಗದ ಪಾಠವನ್ನು ಕಲಿಯುತ್ತಾನೆ. ಆದ್ದರಿಂದ ಜೈಮಿನಿ ಭಾರತವು ಪರಾಕ್ರಮವನ್ನು ಹಿನ್ನೆಲೆಗೆ ಸರಿಸಿ, ಭಕ್ತಿಯನ್ನು ಮುಂದೆಮಾಡುವ ಭಕ್ತಿಯುಗದ ಉತ್ಪನ್ನವೆಂದರೂ ತಪ್ಪಿಲ್ಲ.
         ಆದರೆ, ಲಕ್ಷ್ಮೀಶನ ಕೃತಿಯ ಜನಪ್ರಿಯತೆಗೆ, ತನ್ನ ಕಾವ್ಯವಸ್ತುವಿನ ನಿರ್ವಹಣೆಯಲ್ಲಿ ಕವಿಯು ತೋರಿಸಿರುವ ಅನುಪಮವಾದ ಕುಶಲತೆಯೇ ಕಾರಣ. ವಾಸ್ತವವಾಗಿ ಜೈಮಿನಿ ಭಾರತವು ಸ್ವತಂತ್ರವಾದ ಕಥೆಗಳ ಗೊಂಚಲು. ಯಾಗದ ಕುದುರೆಯ ಹಿಂದೆ ಚಲಿಸುತ್ತಾ ಲೋಕಪರ್ಯಟನೆ ಮಾಡುವ ಅರ್ಜುನನು ಈ ಕಥೆಗಳನ್ನು ಪೋಣಿಸುವ ದಾರ. ಆದರೆ, ಈ ಕಾವ್ಯದ್ದು, ಬಿಡುಬೀಸಾಗಿ ಚಲಿಸುವ ನಿಧಾನಗತಿಯೇ ವಿನಾ ಯುದ್ಧಕಾತರವಾದ ನಾಗಾಲೋಟವಲ್ಲ. ಲಕ್ಷ್ಮೀಶನಿಗೆ ನಿರೂಪಣೆಯ ಕೌಶಲ್ಯ ಮತ್ತು ಭಾಷೆಯ ಮೇಲಿನ ಪ್ರಭುತ್ವಗಳೆರಡೂ ಇವೆ. ಅವನು ನಿಸರ್ಗಸೌಂದರ್ಯವನ್ನು ಗುರುತಿಸಬಲ್ಲ. ಅಂತೆಯೇ ಮನುಷ್ಯಸ್ವಭಾವದ ಆಳವಾದ ಪರಿಚಯವೂ ಅವನಿಗಿದೆ. ಈ ಕಾವ್ಯದಲ್ಲಿ ಬರುವ ಸೀತಾಪರಿತ್ಯಾಗದ ಹೃದಯಸ್ಪರ್ಶಿಯಾಗಿದ್ದು, ಸರಿಯಾಗಿ ವ್ಯಾಖ್ಯಾನ ಮಾಡಿದಾಗ ಅದು ಸ್ತ್ರೀವಾದೀ ಆಯಾಮಗಳನ್ನು ಪಡೆಯಬಲ್ಲುದು. ಚಂಡಿ-ಉದ್ಧಾಲಕರ ಪ್ರಸಂಗದಲ್ಲಿ ಲಕ್ಷ್ಮೀಶನ ಹಾಸ್ಯಪ್ರಜ್ಞೆಯು ಪ್ರಖರವಾಗಿ ಕಂಡುಬರುತ್ತದೆ. ಚಂದ್ರಹಾಸನ ಕಥೆಯು ಕನ್ನಡ ಓದುಗರಿಗೆ ಪ್ರಿಯವಾದ ಇನ್ನೊಂದು ಸಂದರ್ಭ. ಕವಿಯು ತನ್ನ ಕಾವ್ಯದಲ್ಲಿ ವೀರ, ಶೃಂಗಾರ, ಕರುಣ, ಹಾಸ್ಯ ಮುಂತಾದ ರಸಗಳನ್ನು ಅಂತೆಯೇ ಭಕ್ತಿಯಂತಹ ಭಾವನೆಗಳನ್ನು ನಿರೂಪಿಸುವ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾನೆ ಮತ್ತು ಅವುಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾನೆ. ಈ ಕವಿಯ ಪ್ರತಿಭೆಯು ಅವನು ಬಳಸುವ ಉಪಮೆಗಳಲ್ಲಿ ಹಾಗೂ ಸಂಗೀತಕ್ಕೆ ಸಮೀಪವೆನ್ನುವಷ್ಟು ಮಧುರವಾದ ಭಾಷೆಯ ಬಳಕೆಯಲ್ಲಿ ನಿರ್ದಿಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಅವನನ್ನು ‘ಉಪಮಾಲೋಲ’, ‘ನಾದಲೋಲ’ ಎಂದೇ ಕರೆಯಲಾಗಿದೆ. ಕನ್ನಡದ ಶ್ರೇಷ್ಠ ವಿಮರ್ಶಕರಾದ ಕುವೆಂಪು, ಬೇಂದ್ರೆ, ಮಾಸ್ತಿ, ಕುರ್ತಕೋಟಿ, ಚಿ.ಎನ್. ರಾಮಚಂದ್ರನ್ ಅವರು ಲಕ್ಷ್ಮೀಶನ ಬಗ್ಗೆ ವಿವರವಾದ ಮತ್ತು ಒಳನೋಟಗಳಿಂದ ಕೂಡಿದ ವಿಮರ್ಶೆಯನ್ನು ಮಾಡಿದ್ದಾರೆ.

******* ಕನ್ನಡ ದೀವಿಗೆ ******

02 ಸೆಪ್ಟೆಂಬರ್ 2021

ರಾಷ್ಟ್ರಕವಿ ಕುವೆಂಪು (Kuvempu)

ಕುವೆಂಪು ಅವರ ಪರಿಚಯ

ಕುವೆಂಪು

ಪರೀಕ್ಷಾ ದೃಷ್ಟಿಯಿಂದ ಕಿರು ಪರಿಚಯ

ಕುವೆಂಪು ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಕುಪ್ಪಳಿಯವರು. ಜನನ ೧೯೦೪ ಡಿಸೆಂಬರ್ ೨೯. 

ಇವರು ಬರೆದಿರುವ ಪ್ರಮುಖ ಕೃತಿಗಳು: ಕೊಳಲು, ಪಾಂಚಜನ್ಯ, ಪ್ರೇಮಕಾಶ್ಮೀರ, ಪಕ್ಷಿಕಾಶಿ ಮುಂತಾದ ಕವನ ಸಂಕಲನಗಳು, ನನ್ನ ದೆವರು ಮತ್ತು ಇತರ ಕಥೆಗಳು, ಸಂನ್ಯಾಸಿ ಮತ್ತು ಇತರ ಕಥೆಗಳು -ಕಥಾಸಂಕಲನಗಳು, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು - ಕಾದಂಬರಿಗಳು. ರಸೋವೈಸಃ, ತಪೋನಂದನ - ವಿಮರ್ಶಾ ಸಂಕಲನಗಳು, ಅಮಲನ ಕಥೆ, ಮೋಡಣ್ಣನ ತಮ್ಮ, ಬೊಮ್ಮನಹಳ್ಳಿಯ ಕಿಂದರಿಜೋಗಿ - ಮಕ್ಕಳ ಪುಸ್ತಕಗಳು, ಜಲಗಾರ, ಯಮನ ಸೋಲು, ಬೆರಳ್ಗೆ ಕೊರಳ್ - ನಾಟಕಗಳು, ನೆನಪಿನ ದೋಣಿಯಲ್ಲಿ - ಆತ್ಮಕಥನ ಇವಲ್ಲದೆ ಮುಂತಾದ ಸುಮಾರು ಎಪ್ಪತ್ತು ಕೃತಿಗಳನ್ನು ರಚಿಸಿದ್ದಾರೆ. 

ಶ್ರೀಯುತರಿಗೆ ’ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ೧೯೬೮ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಧಾರವಾಡದಲ್ಲಿ ನಡೆದ ೧೯೫೭ ರ ಮೂವತ್ತೊಂಬತ್ತನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಇವರಿಗೆ ೧೯೬೪ರಲ್ಲಿ ರಾಷ್ಟ್ರಕವಿ, ೧೯೮೮ರಲ್ಲಿ ಪಂಪ ಪ್ರಶಸ್ತಿ, ೧೯೯೧ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ. ಅಲ್ಲದೆ ಮೈಸೂರು, ಕರ್ನಾಟಕ, ಬೆಂಗಳೂರು ಮತ್ತು ಗುಲ್ಬರ್ಗ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಸಂದಿದೆ. ೧೯೯೨ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ. 

ಪ್ರಸ್ತುತ ಪದ್ಯಭಾಗವನ್ನು ಕುವೆಂಪು ಅವರ ’ಪಕ್ಷಿಕಾಶಿ’ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.


ಕುವೆಂಪು ಅವರ ಬಗ್ಗೆ ಹೆಚ್ಚಿನ ಮಾಹಿತಿ

ಬಾಲ್ಯ

ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ ೨೯, ೧೯೦೪ ರಲ್ಲಿ ಜನಿಸಿದರು. ತಂದೆ ವೆಂಕಟಪ್ಪ; ತಾಯಿ ಸೀತಮ್ಮ. ಅವರ ಬಾಲ್ಯ ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆಯಿತು.

ಶಿಕ್ಷಣ

ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ಆಯಿತು. ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು. ನಂತರ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನೂ, ಕನ್ನಡದಲ್ಲಿ ಎಂ. ಎ. ಪದವಿಯನ್ನೂ ಪಡೆದರು. ಟಿ. ಎಸ್. ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು.

ವೃತ್ತಿಜೀವನ

ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿದ್ದರು. ನಂತರ ಉಪಕುಲಪತಿಗಳಾದರು. ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು. ವಿಶ್ವವಿದ್ಯಾನಿಲಯವನ್ನು ಅಧ್ಯಯನಾಂಗ, ಸಂಶೋಧನಾಂಗ ಹಾಗೂ ಪ್ರಸಾರಾಂಗ ಎಂಬುದಾಗಿ ವಿಭಾಗಿಸಿದರು. ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು.

ವೈವಾಹಿಕ ಜೀವನ

'ಉದಯರವಿ', ಒಂಟಿಕೊಪ್ಪಲ್, ಮೈಸೂರು

    ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಅವರ ಮಕ್ಕಳು. ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದ ಅಗ್ರಮಾನ್ಯ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕೋಕಿಲೋದಯ ಚೈತ್ರ ಅವರು ಇಂಜಿನಿಯರ್ ಆಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಚಿದಾನಂದಗೌಡ ಅವರು ಕುವೆಂಪು ಅವರ ಅಳಿಯ.

ನಿಧನ

ಕುವೆಂಪು ಅವರು ನವೆಂಬರ್ 11, 1994ರಂದು ಮೈಸೂರಿನಲ್ಲಿ ನಿಧನರಾದರು. ತಮ್ಮ ಹುಟ್ಟೂರಾದ ಕುಪ್ಪಳಿಯಲ್ಲಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಕುಪ್ಪಳಿಯಲ್ಲಿರುವ ಅವರ ಸಮಾಧಿ ಒಂದು ಸ್ಮಾರಕವಾಗಿದೆ.

ಸಾಹಿತ್ಯ ಕೃಷಿ

ಕುವೆಂಪು ಅವರು 20ನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ಅವರೊಬ್ಬ ರಸಋಷಿ. ತಮ್ಮ ಮೇರು ಕೃತಿ 'ಶ್ರೀ ರಾಮಾಯಣ ದರ್ಶನಂ'ನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದಾರೆ. ಅವರ ಎರಡು ಬೃಹತ್ ಕಾದಂಬರಿಗಳಾದ 'ಕಾನೂರು ಹೆಗ್ಗಡತಿ' ಹಾಗೂ 'ಮಲೆಗಳಲ್ಲಿ ಮದುಮಗಳು' ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿವೆ. ಅವರ ನಾಟಕಗಳಿಗೆ ವೈಚಾರಿಕತೆಯ ಸ್ಪರ್ಶವಿದೆ.

ಕೃತಿಗಳು

ಮಹಾಕಾವ್ಯ
ಶ್ರೀ ರಾಮಾಯಣ ದರ್ಶನಂ (1949)

ಖಂಡಕಾವ್ಯ
ಚಿತ್ರಾಂಗದಾ (1936)

ಕವನ ಸಂಕಲನಗಳು
ಕೊಳಲು (1930)
ಪಾಂಚಜನ್ಯ (1933)
ನವಿಲು (1934)
ಕಲಾಸುಂದರಿ (1934)
ಕಥನ ಕವನಗಳು (1937)
ಕೋಗಿಲೆ ಮತ್ತು ಸೋವಿಯಟ್ ರಷ್ಯಾ (1944)
ಪ್ರೇಮ ಕಾಶ್ಮೀರ (1946)
ಅಗ್ನಿಹಂಸ (1946)
ಕೃತ್ತಿಕೆ (1946)
ಪಕ್ಷಿಕಾಶಿ (1946)
ಕಿಂಕಿಣಿ (ವಚನ ಸಂಕಲನ) (1946)
ಷೋಡಶಿ (1946)
ಚಂದ್ರಮಂಚಕೆ ಬಾ ಚಕೋರಿ (1957)
ಇಕ್ಷುಗಂಗೋತ್ರಿ (1957)
ಅನಿಕೇತನ (1963)
ಜೇನಾಗುವ (1964)
ಅನುತ್ತರಾ (1965)
ಮಂತ್ರಾಕ್ಷತೆ (1966)
ಕದರಡಕೆ (1967)
ಪ್ರೇತಕ್ಯೂ (1967)
ಕುಟೀಚಕ (1967)
ಹೊನ್ನ ಹೊತ್ತಾರೆ (1976)
ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ (1981)

ಕಥಾ ಸಂಕಲನ
ಸಂನ್ಯಾಸಿ ಮತ್ತು ಇತರ ಕಥೆಗಳು (1936)
ನನ್ನ ದೇವರು ಮತ್ತು ಇತರ ಕಥೆಗಳು (1940)

ಕಾದಂಬರಿಗಳು
ಕಾನೂರು ಹೆಗ್ಗಡತಿ (1936)
ಮಲೆಗಳಲ್ಲಿ ಮದುಮಗಳು (1967)

ನಾಟಕಗಳು
ಯಮನ ಸೋಲು (1928)
ಜಲಗಾರ (1928)
ಬಿರುಗಾಳಿ (1930)
ವಾಲ್ಮೀಕಿಯ ಭಾಗ್ಯ (1931)
ಮಹಾರಾತ್ರಿ (1931)
ಸ್ಶಶಾನ ಕುರುಕ್ಷೇತ್ರಂ (1931)
ರಕ್ತಾಕ್ಷಿ (1933)
ಶೂದ್ರ ತಪಸ್ವಿ (1944)
ಬೆರಳ್‍ಗೆ ಕೊರಳ್ (1947)
ಬಲಿದಾನ (1948)
ಚಂದ್ರಹಾಸ (1963)
ಕಾನೀನ (1974)

ಪ್ರಬಂಧ
ಮಲೆನಾಡಿನ ಚಿತ್ರಗಳು (1933)

ವಿಮರ್ಶೆ
ಕಾವ್ಯವಿಹಾರ (1946)
ತಪೋನಂದನ (1950)
ವಿಭೂತಿಪೂಜೆ (1953)
ದ್ರೌಪದಿಯ ಶ್ರೀಮುಡಿ (1960)
ರಸೋ ವೈ ಸಃ (1963)
ಇತ್ಯಾದಿ (1970)

ಆತ್ಮಕಥೆ
ನೆನಪಿನ ದೋಣಿಯಲ್ಲಿ: ಕುವೆಂಪು ಮದುವೆ ಪ್ರಸಂಗ

ಜೀವನ ಚರಿತ್ರೆಗಳು
ಸ್ವಾಮಿ ವಿವೇಕಾನಂದ
ರಾಮಕೃಷ್ಣ ಪರಮಹಂಸ

ಅನುವಾದ
ಗುರುವಿನೊಡನೆ ದೇವರಡಿಗೆ (ಭಾಗ 1, 2) (1954)
ಕೊಲಂಬೋ ಇಂದ ಆಲ್ಮೋರಕೆ

ಭಾಷಣ-ಲೇಖನ
ಸಾಹಿತ್ಯ ಪ್ರಚಾರ (1930)
ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ (1944)
ಷಷ್ಠಿನಮನ (1964)
ಮನುಜಮತ-ವಿಶ್ವಪಥ (1971)
ವಿಚಾರ ಕ್ರಾಂತಿಗೆ ಆಹ್ವಾನ (1976)

ಶಿಶು ಸಾಹಿತ್ಯ
ಅಮಲನ ಕಥೆ (1924)
ಮೋಡಣ್ಣನ ತಮ್ಮ (ನಾಟಕ) (1926)
ಹಾಳೂರು (1926)
ಬೊಮ್ಮನಹಳ್ಳಿಯ ಕಿಂದರಿಜೋಗಿ (1928)
ನನ್ನ ಗೋಪಾಲ (ನಾಟಕ) (1930)
ನನ್ನ ಮನೆ (1946)
ಮೇಘಪುರ (1947)
ಮರಿವಿಜ್ಞಾನಿ (1947)
ನರಿಗಳಿಗೇಕೆ ಕೋಡಿಲ್ಲ (1977)

ಇತರೆ
ಜನಪ್ರಿಯ ವಾಲ್ಮೀಕಿ ರಾಮಾಯಣ

ಆಯ್ದ ಸಂಕಲನಗಳು
ಕನ್ನಡ ಡಿಂಡಿಮ (1968)
ಕಬ್ಬಿಗನ ಕೈಬುಟ್ಟಿ (1973)
ಪ್ರಾರ್ಥನಾ ಗೀತಾಂಜಲಿ (1972)

ಸ್ಮಾರಕಗಳು
  • ಕವಿಮನೆ, ಕುಪ್ಪಳಿ. ಈಗ ವಸ್ತು ಸಂಗ್ರಹಾಲಯವಾಗಿದೆ.
  • ಕುಪ್ಪಳಿಯಲ್ಲಿರುವ ಕುವೆಂಪು ಅವರು ಹುಟ್ಟಿದ ಮನೆ ವಸ್ತು ಸಂಗ್ರಹಾಲಯವಾಗಿದೆ.
  • ಅಲ್ಲೇ ಇರುವ ಅವರ ಸಮಾಧಿ ಸ್ಥಳವಾದ 'ಕವಿಶೈಲ' ಒಂದು ವಿಶಿಷ್ಟ ಸ್ಮಾರಕ.
  • ಶಿವಮೊಗ್ಗದ ಬಳಿ ಇರುವ ವಿಶ್ವವಿದ್ಯಾಲಯಕ್ಕೆ ಕುವೆಂಪು ಅವರ ಹೆಸರಿಡಲಾಗಿದೆ.
  • ಮೈಸೂರು ವಿಶ್ವವಿದ್ಯಾನಿಲಯದಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆಗೆ ಕುವೆಂಪು ಅವರ ಹೆಸರಿಡಲಾಗಿದೆ.
  • ಅನುವಾದ ಕಾರ್ಯವನ್ನು ಪ್ರೋತ್ಸಾಹಿಸಲು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಭಾಷಾ ಭಾರತಿ ಸಂಸ್ಥೆಗೆ ಕುವೆಂಪು ಅವರ ಹೆಸರಿಡಲಾಗಿದೆ.
  • ಮೈಸೂರಿನ ಕುವೆಂಪು ನಗರದಲ್ಲಿರುವ ರಸ್ತೆಗಳಿಗೆ ಕುವೆಂಪು ಅವರ ಪರಿಕಲ್ಪನೆಗಳ, ಪಾತ್ರಗಳ ಹೆಸರುಗಳನ್ನು ಇಡಲಾಗಿದೆ.

ಕುವೆಂಪು ಕುರಿತ ಕೃತಿಗಳು
  • ಮಗಳು ಕಂಡ ಕುವೆಂಪು - ಲೇ: ತಾರಿಣಿ ಚಿದಾನಂದ ಪ್ರಕಾಶಕರು:ಪುಸ್ತಕ ಪ್ರಕಾಶನ
  • ಅಣ್ಣನ ನೆನಪು - ಲೇ: ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರಕಾಶಕರು:ಪುಸ್ತಕ ಪ್ರಕಾಶನ
  • ಕುವೆಂಪು - ಲೇ: ದೇಜಗೌ
  • ಯುಗದ ಕವಿ - ಲೇ: ಡಾ.ಕೆ.ಸಿ.ಶಿವಾರೆಡ್ಡಿ
  • ಹೀಗಿದ್ದರು ಕುವೆಂಪು - ಲೇ: ಪ್ರಭುಶಂಕರ
  • ಕುವೆಂಪು - ಲೇ: ಎಸ್.ವಿ.ಪರಮೇಶ್ವರಭಟ್ಟ
  • ಶ್ರೀ ಕುವೆಂಪು ಸಂಭಾಷಣೆ ಮತ್ತು ಸಂದರ್ಶನ - ಲೇ: ಎಸ್.ವೃಷಭೇಂದ್ರಸ್ವಾಮಿ
  • ತರಗತಿಗಳಲ್ಲಿ ಕುವೆಂಪು - ಲೇ: ಎಸ್.ವೃಷಭೇಂದ್ರಸ್ವಾಮಿ
  • ಕುವೆಂಪು ಕಾವ್ಯಯಾನ - ಲೇ: ಬಿ.ಆರ್. ಸತ್ಯನಾರಾಯಣ
  • ಕುವೆಂಪು ನುಡಿತೋರಣ - ಸಂ: ಬಿ.ಆರ್.ಸತ್ಯನಾರಾಯಣ
ನಾಟಕ-ಚಲನಚಿತ್ರ-ಧಾರಾವಾಹಿ
  • "ಬೆರಳ್‌ಗೆ ಕೊರಳ್" ನಾಟಕವು ಚಲನಚಿತ್ರವಾಗಿದೆ.
  • "ಕಾನೂರು ಹೆಗ್ಗಡಿತಿ" ಕಾದಂಬರಿ ಚಲನಚಿತ್ರವಾಗಿದೆ.
  • "ಮಲೆಗಳಲ್ಲಿ ಮದುಮಗಳು" ಕಾದಂಬರಿ ಧಾರಾವಾಹಿಯಾಗಿದೆ ಹಾಗೂ ೯ ಗಂಟೆಗಳ ಅವಧಿಯ ನಾಟಕವಾಗಿಯೂ ಮೈಸೂರಿನ ರಂಗಾಯಣದಲ್ಲಿ ಮತ್ತು ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರದರ್ಶನಗೊಂಡಿದೆ.
ಅಮರ ಕೊಡುಗೆಗಳು
  • ಕುವೆಂಪು ಅವರು ಯುಗಪ್ರವರ್ತಕ ಕವಿ.
  • ಕುವೆಂಪು ಅವರು 'ಶ್ರೀ ರಾಮಾಯಣ ದರ್ಶನಂ' ರಚಿಸುವ ಮೂಲಕ ಆಧುನಿಕ ಕಾಲದಲ್ಲಿ ಮಹಾಕಾವ್ಯ ರಚನೆಗೆ ನಾಂದಿ ಹಾಡಿದರು.
  • ಕುವೆಂಪು ಅವರು ತಮ್ಮ ಮೇರು ಕೃತಿ 'ಶ್ರೀ ರಾಮಾಯಣ ದರ್ಶನಂ'ನಲ್ಲಿ ಹೊಸ ಕಾಲಕ್ಕೆ ಅಗತ್ಯವೆನ್ನಿಸಿದ ದರ್ಶನವನ್ನು ಕಟ್ಟಿಕೊಟ್ಟಿದ್ದಾರೆ.
  • ಕುವೆಂಪು ಅವರು ವಿಶ್ವಮಾನವ ಸಂದೇಶ ನೀಡಿದ್ದಾರೆ.
  • ಕುವೆಂಪು ಅವರು ಮಂತ್ರಮಾಂಗಲ್ಯ ಎಂಬ ಸರಳ ವಿವಾಹ ಪದ್ಧತಿಯನ್ನು ರೂಢಿಗೆ ತಂದರು.
  • ಕುವೆಂಪು ಅವರು ತಮ್ಮ ಕನಸಿನ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದ್ದಾರೆ.
  • ಕುವೆಂಪು ಅವರು ದಲಿತ ಹಾಗೂ ಬಂಡಾಯ ಚಳವಳಿಗಳಿಗೆ ಸ್ಫೂರ್ತಿಯಾಗಿದ್ದಾರೆ.
  • 1985ರಲ್ಲಿ ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದರು.
ಗೌರವ/ ಪ್ರಶಸ್ತಿ ಪುರಸ್ಕಾರಗಳು
  • ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - (ಶ್ರೀರಾಮಾಯಣ ದರ್ಶನಂ) (1955)
  • ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್. (1956)
  • ಪದ್ಮಭೂಷಣ (೧೯೫೮)
  • ರಾಷ್ಟ್ರಕವಿ ಪುರಸ್ಕಾರ (೧೯೬೪)
  • ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೬)
  • ಜ್ಞಾನಪೀಠ ಪ್ರಶಸ್ತಿ (ಶ್ರೀ ರಾಮಾಯಣ ದರ್ಶನಂ) (೧೯೬೮)
  • ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೯)
  • ಕೇಂದ್ರ ಸಾಹಿತ್ಯ ಅಕಾಡೆಮಿಯು ಫೆಲೋಷಿಪ್ (1979)
  • ಪಂಪ ಪ್ರಶಸ್ತಿ (೧೯೮೮)
  • ಪದ್ಮವಿಭೂಷಣ (೧೯೮೯)
  • ಕರ್ನಾಟಕ ರತ್ನ (೧೯೯೨)
  • ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ
  • ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ (ಮರಣೋತ್ತರ)
  • ಕುವೆಂಪು ಅವರ 113 ನೇ ಜನ್ಮ ದಿನದಂದು, ಗೂಗಲ್ ಇಂಡಿಯಾ ಅವರ ಗೌರವಾರ್ಥ ಡೂಡಲ್ ಪ್ರದರ್ಶಿಸಿತು.(2017 ಡಿಸೆಂಬರ್ 29) [೧]
ಅಧ್ಯಕ್ಷತೆ, ಇತ್ಯಾದಿ
  • 1928ರಲ್ಲಿ ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘದ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷರಾಗಿದ್ದರು.
  • ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು.
  • 1957ರಲ್ಲಿ ನಡೆದ 39ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ವಿಶ್ವ ಮಾನವ ದಿನ
  • ಕರ್ನಾಟಕ ಸರ್ಕಾರವು ೨೦೧೫ರ ಡಿಸೆಂಬರ್‌ನಲ್ಲಿ ಕುವೆಂಪು ಜನ್ಮದಿನವಾದ ಡಿಸೆಂಬರ್‌ ೨೯ ಅನ್ನು "ವಿಶ್ವ ಮಾನವ" ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು. ಈ ಮೂಲಕ ವಿಶ್ವಮಾನವ ಸಂದೇಶ ಸಾರಿದ ಕವಿಗೆ ಮತ್ತೊಂದು ಗೌರವ ಸಂದಾಯವಾದಂತಾಯ್ತು.

ಬಾಲ್ಯದಿಂದ ಹಿಡಿದು ಅವರ ಬದುಕಿನ ವಿವಿಧ ಮಜಲುಗಳನ್ನು ಅನಾವರಣಗೊಳಿಸುವ ಅಪರೂಪದ ಚಿತ್ರಗಳು
    ಬಾಲಕನಾಗಿ... 
ಕುವೆಂಪು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಜನಿಸಿದ್ದು (29.12.1904 - 11.11.1994) ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲೂಕಿನ ಹಿರೆಕೊಡಿಗೆ ಎಂಬ ಹಳ್ಳಿಯಲ್ಲಿ. ವೆಂಕಟಪ್ಪ ಗೌಡ ಮತ್ತು ಸೀತಮ್ಮ ಅವರ ಪುತ್ರನಾಗಿ ಜನಿಸಿದ ಕುವೆಂಪು ಅವರ ಬಾಲ್ಯದ ಅಪರೂಪದ ಚಿತ್ರವಿದು.

ಯುವಕನಾಗಿ... 
    ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಹಿಡಿತ ಸಾಧಿಸಿದ್ದ ಕುವೆಂಪು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ತೆರಳಿದರು. ಜ್ಞಾನದಾಹಿ ಕುವೆಂಪು ಯುವಕರಾಗಿದ್ದಾಗ ಹೀಗಿದ್ದರು.

ಪದವೀಧರ ಕುವೆಂಪು...
ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ವಿಷಯದಲ್ಲಿ ಪದವಿ ಪಡೆದ ಪದವೀಧರ ಕುವೆಂಪು ಇದ್ದಿದ್ದು ಹೀಗೆ. ಕುವೆಂಪು ಅವರು ಸಾಹಿತ್ಯ ಕೃಷಿ ಆರಂಭಿಸಿದ್ದ ಇಂಗ್ಲಿಷ್ ಭಾಷೆಯ ಮೂಲಕ ಎಂಬುದು ಇನ್ನೊಂದು ಅಚ್ಚರಿಯ ವಿಷಯ.


ಪತ್ನಿ ಹೇಮಾವತಿಯೊಂದಿಗೆ... 
    ಏಪ್ರಿಲ್ 30, 1937 ರಲ್ಲಿ ತಮಗೆ ಅನುರೂಪವೆಂಬಂತಿದ್ದ ಹೇಮಾವತಿಯವರನ್ನು ಕುವೆಂಪು ಅವರು ಮದುವೆಯಾದರು. ಹೇಮಾವತಿಯವರ ಮಡಿಲಲ್ಲಿ ಕುವೆಂಪು ಅವರ ನೆಚ್ಚಿನ ಮಗ ಪುಟ್ಟ ಪೂರ್ಣಚಂದ್ರ ತೇಜಸ್ವಿ ಕಂಡಿದ್ದು ಹೀಗೆ.

ಮಗ ತೇಜಸ್ವಿ ಅವರೊಂದಿಗೆ... 
    ಲೇಖಕ, ನಾಟಕಕಾರ, ಛಾಯಾಗ್ರಾಹಕ, ಕೃಷಿಕ, ಚಳವಳಿಗಾರರಾಗಿ ಹೆಸರು ಮಾಡಿದ ಕನ್ನಡದ ಖ್ಯಾತನಾಮರ ಪೈಕಿ ಒಬ್ಬರು ಕುವೆಂಪು ಅವರ ಪುತ್ರ ತೇಜಸ್ವಿ. ಅವರೊಂದಿಗೆ ಕುವೆಂಪು ಅವರು ಸ್ನೇಹಿತನಂತೇ ಇದ್ದರು ಎಂಬುದು ಈ ಚಿತ್ರವನ್ನು ನೋಡಿಯೇ ಅರ್ಥಮಾಡಿಕೊಳ್ಳಬಹುದು.



ವರಕವಿಯೊಂದಿಗೆ ರಾಷ್ಟ್ರಕವಿ.... 
    ಕುವೆಂಪು ಅವರನ್ನು 'ಜಗದ ಕವಿ, ಯುಗದ ಕವಿ' ಎಂದು ಕರೆದ, ಕುವೆಂಪು ಅವರ ಸಮಕಾಲೀನ ಕವಿ, ವರಕವಿ ಡಾ.ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರೊಂದಿಗೆ ಕುವೆಂಪು.

ಜ್ಞಾನ ಪೀಠ ಪ್ರಶಸ್ತಿ... 
    'ಶ್ರೀ ರಾಮಾಯಣ ದರ್ಶನಂ' ಮೂಲಕ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಅವರು 1968 ರಲ್ಲಿ ಪ್ರಶಸ್ತಿ ಸ್ವೀಕರಿಸಿದ ಸುವರ್ಣ ಘಳಿಗೆಯ ಚಿತ್ರ ಇದು.

ಪದ್ಮವಿಭೂಷಣ.... 
    ಸಾಹಿತ್ಯಕ್ಕೆ ಕುವೆಂಪು ಅವರು ನೀಡಿದ ಅನನ್ಯ ಕೊಡುಗೆಯನ್ನು ಸ್ಮರಿಸುತ್ತ 1989 ರಲ್ಲಿ ಭಾರತದ ಸರ್ಕಾರದ ಉನ್ನತ ನಾಗರಿಕ ಗೌರವಗಳಲ್ಲೊಂದಾದ ಪದ್ಮವಿಭೂಷಣ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು. ಪದ್ಮ ವಿಭೂಷಣ ಪ್ರಶಸ್ತಿ ಪತ್ರ ಮತ್ತು ಫಲಕ ಇದು.

ರಾಷ್ಟ್ರಕವಿ ಪುರಸ್ಕಾರ 
        1964 ರಲ್ಲಿ ರಾಷ್ಟ್ರಕವಿ ಪುರಸ್ಕಾರಕ್ಕೆ ಪಾತ್ರರಾದ ಕುವೆಂಪು ಅವರು 23 ಕವನ ಸಂಕಲನ, 2 ಕಥಾ ಸಂಕಲನ, 2 ಕಾದಂಬರಿ, 12 ನಾಟಕ ಸೇರಿದಂತೆ ವಿಮರ್ಶೆ, ಪ್ರಬಂಧ, ಜೀವ ಚರಿತ್ರೆ, ಅನುವಾದ, ಶಿಶುಸಾಹಿತ್ಯ ಸೇರಿದಂತೆ ಕನ್ನಡದ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಕೈಯಯಾಡಿಸಿದ್ದಾರೆ. ಅದಕ್ಕೆಂದೇ ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಬರೆಯದ ಸಾಹಿತ್ಯ ಪ್ರಕಾರವಿಲ್ಲ ಎಂದಿರುವುದು! ಈ ಎಲ್ಲ ಕೊಡುಗೆ ಮನಗಂಡು 1964 ರಲ್ಲಿ ನೀಡಿದ 'ರಾಷ್ಟ್ರಕವಿ' ಗೌರವವನ್ನು ಸ್ವೀಕರಿಸಿದ ಚಿತ್ರ ಇದು.

ಮೊಮ್ಮಕ್ಕಳೊಂದಿಗೆ... 
        ಕುವೆಂಪು ತಾತ ಮೊಮ್ಮಕ್ಕಳಾದ ಸುಸ್ಮಿತಾ, ಪ್ರಾರ್ಥನೆ, ಈಶಾನ್ಯೆಯೊಂದಿಗೆ ತಾತ ಕುವೆಂಪು. ಗಂಭೀರ ಸಾಹಿತ್ಯದಲ್ಲಿ ತಲ್ಲೀನರಾಗಿದ್ದರೂ, ಕುಟುಂಬಸ್ಥರೊಂದಿಗೆ ಪ್ರೀತಿ-ವಿಶ್ವಾಸ ಹಂಚಿಕೊಳ್ಳುವುದರಲ್ಲಿಯೂ ಎಂದಿಗೂ ಹಿಂದೆ ಬೀಳದ ಕುವೆಂಪು, ತಮ್ಮ ಮೊಮ್ಮಕ್ಕಳೊಂದಿಗೆ ಕಂಡಿದ್ದು ಹೀಗೆ.

ಕವಿಮಿತ್ರರೊಂದಿಗೆ... 
        ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಮತ್ತು ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮ್ಮದ್ ಅವರೊಂದಿಗೆ ಕುವೆಂಪು ಕಾರ್ಯಕ್ರಮವೊಂದರಲ್ಲಿ ಕಾಣಿಸಿದ್ದು...

ವರನಟನೊಂದಿಗೆ....
ರಾಷ್ಟ್ರಕವಿ ನಟಸಾರ್ವಭೌಮ, ವರನಟ ಡಾ.ರಾಜಕುಮಾರ್ ಅವರೊಂದಿಗೆ ರಾಷ್ಟ್ರಕವಿ ಕಂಡಿದ್ದು ಹೀಗೆ.

ಕವಿಶೈಲ




******


**************