ನನ್ನ ಪುಟಗಳು

ಕವಿ ಪರಿಚಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವಿ ಪರಿಚಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

26 ಸೆಪ್ಟೆಂಬರ್ 2023

10ನೇ ತರಗತಿ ಪದ್ಯ ವೀರಲವ- ಕವಿ-ಕೃತಿ ಪರಿಚಯ(0th-Veeralava-Kavi-kruthi)

ಲಕ್ಷ್ಮೀಶ ಕವಿ ಮತ್ತು ಆತನ ಕೃತಿ ಪರಿಚಯ

    ಪೋಷಕರ ಅಸೆಯನ್ನು ನೆರೆವೆರಿಸುವ ಮಕ್ಕಳನ್ನು ನೀವು ಕಂಡಿರಬಹುದು. ಕರ್ನಾಟಕದ ಸಾಹಿತ್ಯದ ಇತಿಹಾಸದಲ್ಲಿ ತಂದೆಯ ಆಸೆಯಂತೆ ಮಗನು ಜೈಮಿನಿ ಋಷಿಗಳು ಸಂಸ್ಕೃತದಲ್ಲಿ ಬರೆದ ಭಾರತವನ್ನು ಕನ್ನಡದಲ್ಲಿ ರಚಿಸಿದ. ಪಂಪ, ರನ್ನ ಮತ್ತು ಕುಮಾರವ್ಯಾಸರನ್ನು ನೀಡಿದ ಕನ್ನಡ ಸಾಹಿತ್ಯಕ್ಕೆ ತನ್ನದೇ ಅದ ವಿಶಿಷ್ಟ ರೀತಿಯಲ್ಲಿ ಗುರುತಿಸಿ ಕೊಂಡ ಮಹಾಕವಿ ಯಾರು ಗೊತ್ತೇ . ಆತನೇ ಚಿಕ್ಕಮಗಳೂರಿನ ಕಡೂರು ತಾಲೂಕು ದೇವನೂರು ಗ್ರಾಮದ ಶ್ರೀಕಾಂತ ಮುಂದೆ `ಲಕ್ಷ್ಮೀಶ' ಎಂದು ಪ್ರಸಿದ್ಧಿ ಪಡೆದು 'ಜೈಮಿನಿ ಭಾರತ' ಕೃತಿಯನ್ನು ರಚಿಸಿದ.

ಸಾಲ ಸಾಲಂಗಳಿಂ ಬಕುಳ ಕುಳ ದಿಂದೆ ಹಿಂ
ತಾಳ ತಾಳಗಳಿಂ ಮಾದಲದಲರ್ಗಳಿಂ ತ
ಮಾಲ ಮಾಲತಿಗಳಿಂ ಸಂರಂಭ ರಂಭ ದಿಂದ ಮಂದ ಮಂದಾರದಿಂದೆ….


         ಈ ಮೇಲಿನ ಪದ್ಯ ನೋಡಿದರೆ ಒಂದು ಸ್ವಾರಸ್ಯ ಇದೆ. ಒಂದೇ ಪದ ವನ್ನ ಎರಡು ಬಾರಿ ಉಪಯೋಗಿಸಿರುವುದು. ಸಾಲ, ತಾಳ, ದಲ ಕುಳ, ಮಾಲ, ರಂಭ. ಇದು ವಾರ್ಧಕ ಷಟ್ಪದಿಯಲ್ಲಿ ಅನುಪ್ರಾಸ ಅಲಂಕಾರದಲ್ಲಿ ನಿಬಧ್ಧ ವಾಗಿರುವ ಒಂದು ಪದ್ಯದ ಮೂರು ಸಾಲುಗಳು. ಇಂತಹ ಸುಂದರವಾದ ಕಾವ್ಯಗಳನ್ನು ರಚಿಸಿ ಕನ್ನಡ ಸಾಹಿತ್ಯ ಪ್ರಪಂಚವನ್ನು ಶ್ರೀಮಂತ ಗೊಳಿಸಿದ, ಕರ್ನಾಟ ಕವಿ ಚೂತವನ ಚೈತ್ರ ಎಂದು ಬಿರುದಾಂಕಿತ ಕವಿ ಲಕ್ಷ್ಮೀಶ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಲಕ್ಷ್ಮೀಶನ ಜನ್ಮ ಸ್ಥಳ. ಅಣ್ಣಯ್ಯ ದಂಪತಿಗಳಿಗೆ ಚೈತ್ರ ಶುಧ್ಧ ಹುಣ್ಣಿಮೆಯಂದು ಜನಿಸಿದ ಶ್ರೀಕಾಂತ ಮುಂದೆ ಲಕ್ಷ್ಮೀಶನಾಗಿ ಪ್ರಸಿಧ್ಧಿ ಹೊಂದಿದ. ತಂದೆಗೆ ಮಗ ಕೀರ್ತಿಶಾಲಿಯಾಗಬೇಕು ಮತ್ತು ತನಗೆ ಪ್ರಿಯವಾದ ಜೈಮಿನಿ ಭಾರತವನ್ನು ಕನ್ನಡದಲ್ಲಿ ಬರೆಯಬೇಕು ಎಂಬ ಮಹದಾಸೆಯಿಂದ ಮಗನಿಗೆ ದಿನಕ್ಕೊಂದು ಕತೆ ಹೇಳಿ ಮಗನ ಯೋಚನಾ ಶಕ್ತಿಗೆ ನೀರೆರೆದ. ಜೈಮಿನಿ ಎಂಬ ಋಷಿ ಸಂಸ್ಕೃತದಲ್ಲಿ ಬರೆದದನ್ನು ಕನ್ನಡದಲ್ಲಿ ಬರೆ,ಇದು ನನ್ನ ಆಸೆ ಎಂದ ಮಗನಲ್ಲಿ ತನ್ನ ಮನದಾಳದ ಇಂಗಿತವನ್ನು ಮತ್ತು ಅವನ ಜೀವನದ ಉದ್ದೇಶವನ್ನು ತಿಳಿಸಿದ.
          ದೇವರ ಅನುಗ್ರಹದಿಂದ ಮತ್ತು ಪ್ರಾರ್ಥನೆಯಿಂದ ಅವನಿಗೆ ಚಮತ್ಕಾರವಾಗಿ ಜೈಮಿನಿ ಕವಿಯ ಭಾರತದ ಪ್ರತಿ ಸಿಗುತ್ತದೆ. ಅವನ ಅಂತರಂಗದಲ್ಲಿ “ನೀನು ದೇವನೂರಿಗೆ ಹೋಗಿ ದೇವರಗುಡಿಯಲ್ಲೇ ಬರೆ, ನೀನು ಕವಿಯಾಗಬಲ್ಲೆ ” ಎಂದು ಕೇಳಿಸುತ್ತದೆ. ಕವಿ ಕಾವ್ಯ ರಚನೆಯನ್ನು ಶುರುಮಾಡುತ್ತಾನೆ.

"ವೀಣೆಯಿಂ ಗಾನಮಂ ನುಡಿಸವಂದೊಳೆನ್ನ ವಾಣಿಯಿಂ ಕವಿತೆಯಂ ಪೇಲಿಸಿದ" ಎಂದು ನಾರಾಯಣನೆ ಕರ್ತೃ ಎಂದು ಹೇಳುತ್ತಾನೆ.
           ಜೈಮಿನಿ ಭಾರತವು ಸ್ವತಂತ್ರವಾದ ಕಥೆಗಳ ಗೊಂಚಲು.ಲಕ್ಷ್ಮೀಶನಿಗೆ ನಿರೂಪಣೆಯ ಕೌಶಲ್ಯ ಮತ್ತು ಭಾಷೆಯ ಮೇಲಿನ ಪ್ರಭುತ್ವಗಳೆರಡೂ ಇವೆ. ಈ ಕಾವ್ಯದಲ್ಲಿ ೩೪ ಅಧ್ಯಾಯಗಳಿದ್ದು ವಾರ್ಧಕ ಷಟ್ಪದಿಯಲ್ಲಿರುವ ೧೯೩೬ ಕಾವ್ಯಗಳಿವೆ. ಈ ಕಾವ್ಯವು, ಮಹಾಭಾರತ ಯುದ್ಧವು ಮುಗಿದು, ಧರ್ಮರಾಯನ ಪಟ್ಟಾಭಿಷೇಕವಾದ ನಂತರದ ಘಟನೆಗಳ ಮೇಲೆ ಒತ್ತು ಕೊಟ್ಟಿದೆ.ಇದು ವ್ಯಾಸಭಾರತದ ಅಶ್ವಮೇಧಿಕಪರ್ವದಲ್ಲಿ ಬರುವ ಕಥಾಭಾಗ. ದೈವಿಕತೆಯನ್ನು ಸ್ಥಾಪಿಸುವ ಮತ್ತು ಉದ್ಧಟ ವೀರರಿಗೆ ವಿನಯದ ಪಾಠ ಕಲಿಸುವ ತನ್ನ ಉದ್ದೇಶದಲ್ಲಿ ಕವಿಯು ಯಶಸ್ಸು ಪಡೆದಿದ್ದಾನೆ.
          ಲಕ್ಷ್ಮೀಶನು ಷಟ್ಪದಿ ಪ್ರಕಾರದಲ್ಲಿ ಅಪಾರ ಸಾಧನೆ ಮಾಡಿದ್ದ ಕುಮಾರವ್ಯಾಸ, ರಾಘವಾಂಕ, ಚಾಮರಸ ಮುಂತಾದವರ ಸವಾಲನ್ನು ಎದುರಿಸಬೇಕಾಗಿತ್ತು. ರಾಮಾಯಣ ಮತ್ತು ಮಹಾಭಾರತಗಳ ಹಲವು ಸಾಧ್ಯತೆಗಳನ್ನು ಅವನಿಗಿಂತ ಹಿಂದಿನ ಹಿರಿಯ ಕವಿಗಳು ಸೂರೆ ಮಾಡಿದ್ದರು. ಆದ್ದರಿಂದಲೇ ಈ ಕವಿಯು, ತನ್ನ ಕಾವ್ಯವಸ್ತುವಾಗಿ, ಮಹಾಭಾರತ ಯುದ್ಧದ ನಂತರದ ಘಟನೆಗಳನ್ನು ಆರಿಸಿಕೊಂಡನು.

ಲಕ್ಷ್ಮೀಶ ಕಾವ್ಯಗಳಲ್ಲಿ ಬರುವ ವಿಶೇಷತೆಗಳು:

ಸುರ್ರನೆ, ಕಿರ್ರನೆ, ಕರ್ರನೆ, ಘರ್ರನೆ, ತಿರ್ರನೆ ಸರ್ರನೆ ಎಂಬ ಪದಗಳಿಂದ ರಣರಂಗದ ಭೀಭತ್ಸವನ್ನು ಹೀಗೆ ವರ್ಣಿಸುತ್ತಾನೆ.

ಸುರ್ರನೆ ಸುಲಿದು ಸುತ್ತಿ ಬೆಂ ಡಾಗೆ ಕುದುರೆಗಳ್
ಕಿರ್ರನೆ ಕಪಿಶ್ವರ್ಮ್ ಪಲಿರಿದು ಚೀರಲ್ಕೆ
ಕರ್ರನೆ ಕವಿಯೇ ಕತ್ತಲೆ ಶಿರೋಭ್ರಮನೆಯಿಂ ಕೃಷ್ಣಾ ಫಳುಗುನರ್ಗೆ ….
ಮೇಲಿನ ಕಾವ್ಯ ಅರ್ಜುನ ಮತ್ತು ಬಬ್ರುವಾಹನರ ನಡುವಿನ ಯುದ್ಧದ ವರ್ಣನೆಯ ಬಗೆ

ತೇರ ವಂಗ ಡದ ಜರ್ಜಾವರಂ ಗಜದ ಘಂಟಾರವಂ
ಹಾಯದ ಹೆಷಾರವಂ ನಡೆವ ಸೇನಾರವಂ ಭೇರಿಯ ಮಹಾರವಂ ಬಹಳ ಕಹಳಾರವಂ …

ರವಂ ಪದ ಹೇಗೆ ಪ್ರಯೋಗಿಸಿಧ್ಧನೆ ಎಂಬುದನ್ನು ನೋಡಬಹುದು.

ಪದಲಾಲಿತ್ಯದ ಕೆಲ ಸಾಲುಗಳನ್ನು ನೋಡೋಣ

ಈ ವನದ ನಡುನಡುವೆ ಕೊಳ ತೊಳ ಗುತಿರುತಿಹ ಸ
ವರದೊಲೆರೋ ಬೆಳೆ ಬೆಳೆದು ರಾ
ಜೀವದಳರಲರ ತುಳಿತುಳಿದಿಡಿದಿಡಿದ ಬಂಡ ನೋಡ ನೋಡನೆ ಸವಿದು ಸವಿದು

ಸವಿಯೇ ಪ್ರಿಯರಾಗಮದರಾಗಮದರಾಗಮದ
ನ ವಿಳಾಸ ಮೆಂದು ತಾಂಬೂಲಮಂ ತೋರ್ಪರ್ಮು
ಡಿವೊಡೆ ಬೇಕಾದಳರ್ಕಾದಲರ್ಕಾದಲರ್ಕಂಗಜಾಹವದೊಳೆಂದು


ಅಶ್ವಮೇಧ ಯಾಗದ ಕಥೆಯ ಸೂತ್ರದಲ್ಲಿ ಅನೇಕ ಸಣ್ಣ ಕಥೆಗಳನ್ನುಪೋಷಿಸಿದ ಜೈಮಿನಿ ಭಾರತ. ಇದರಲ್ಲಿ ಮರುತ್ತನ ಕತೆ, ಅನುಸಾಲ್ವನ ಕಾಳಗ ಸ್ವಾಹ ಪರಿಣಯ ಬಬ್ರುವಾಹನನ ಕಾಳಗ, ವೀರವರ್ಮನ ಕತೆ, ಚಂದ್ರಹಾಸನ ಕತೆ ಮುಂತಾದವು ಇವೆ. ಯುದ್ಧಗಳ ವರ್ಣನೆ ಸ್ತ್ರೀ ಹಾಗು ಪ್ರಕೃತಿ ವರ್ಣನೆಗಳು ಕಾವ್ಯದಲ್ಲಿ ವಿಸ್ತಾರವಾಗಿ ಬಂದಿವೆ.

ಲಕ್ಷ್ಮೀಶನಿಗೆ ಹುಟ್ಟಿದ ಸ್ಥಳದ ಬಗ್ಗೆ ತುಂಬಾ ಪ್ರೇಮ. ” ಸ್ವರ್ಗಕ್ಕಿಂತಲೂ ನಾನ ಓರೆ ನನಗೆ ದೊಡ್ಡದು , ದೇವನೂರೆ ಕೈಲಾಸ ” ಎಂದು ಹಲವು ಬಾರಿ ತನ್ನ ಊರನ್ನು ಕೊಂಡಾಡಿದ್ದಾನೆ. ಹುಟ್ಟಿದ ಊರಿಗೆ ಅಷ್ಟಿಷ್ಟು ಸೇವೆ ಸಲ್ಲಿಸ ಬೇಕೆಂಬುದು ಕವಿಯ ಆಸೆ. ಅದಕ್ಕಾಗಿ ಊರ ಮುಂದೆ ಸುಂದರವಾದ ತೋಟ ಮಾಡಿಸಿದ, ನೀರಿಗಾಗಿ ಬಾವಿಗಳನ್ನು ತೊಡಿಸಿದ, ಕೆರೆ ತುಂಬಲು ಕಾಲುವೆಗಳನ್ನು ತೆಗೆಸಿದ. ಲಕ್ಷ್ಮೀಶನ ಗುಡಿಯಲಿ ಒಂದು ಕೀರ್ತಿ ಮಂಟಪ ಮಾಡಿಸಿದ. ಜನರನ್ನು ಮತ್ತು ಕವಿಗಳನ್ನು ಸತ್ಕರಿಸಿದ. ಅಭಿಮಾನಿಗಳು ನೀಡಿದ ಧನ ಕನಕ ವಸ್ತುಗಳನ್ನು ಜನ ಸೇವೆಗೆ ನೀಡಿದ ಉದಾರ ಕವಿ ನಮ್ಮ ಲಕ್ಷ್ಮೀಶ.

'ಜೈಮಿನಿ ಭಾರತ' ಕುರಿತು
ಕಾವ್ಯದ ಹೆಸರು: ಜೈಮಿನಿ ಭಾರತ
ಕವಿಯ ಹೆಸರು: ಲಕ್ಷ್ಮೀಶ
ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ)
ಸ್ಥಳ/ಸ್ಥಳಗಳು: ಚಿಕ್ಕಮಗಳೂರು ಜಿಲ್ಲೆಯ ದೇವನೂರು. (ಗುಲ್ಬರ್ಗ ಜಿಲ್ಲೆಯ ಸುರಪುರ.
ಮತ-ಧರ್ಮ: ಬ್ರಾಹ್ಮಣ
ಆಶ್ರಯದಾತರು: ಯಾವ ರಾಜನೂ ಇಲ್ಲ
ಬಿರುದುಗಳು: ಕರ್ನಾಟ ಕವಿಚೂತವನ ಚೈತ್ರ, ಉಪಮಾಲೋಲ.
ಸಾಹಿತ್ಯಪ್ರಕಾರ: ಕಾವ್ಯ
ಛಂದೋರೂಪ: ವಾರ್ಧಕ ಷಟ್ಪದಿ.
ಹಸ್ತಪ್ರತಿಗಳು: ಓಲೆಯ ಗರಿ ಮತ್ತು ಕಾಗದ
ಪ್ರಕಟವಾದ ವರ್ಷ: 1848, (ಕಲ್ಲಚ್ಚಿನ ಪ್ರತಿ), 1875, ವ್ಯಾಖ್ಯಾನಸಹಿತವಾಗಿ (ಕಲ್ಲಚ್ಚಿನ ಪ್ರತಿ)
ಸಂಪಾದಕರು: ವೆಂಕಟ ರಂಗೋ ಕಟ್ಟಿ (1875)(ಕಲ್ಲಚ್ಚಿನ ಪ್ರತಿ), ಹೊಳಕಲ್ ಶ್ರೀನಿವಾಸ ಪಂಡಿತ, 1875, ಮುದ್ರಿತ ಪ್ರತಿ.
ಪ್ರಕಾಶಕರು: ಕೃಷ್ಣರಾಜ ಮುದ್ರಾಕ್ಷರ ಶಾಲೆ, ಮೈಸೂರು.

ಕಿರು ಪರಿಚಯ: ಹತ್ತೊಂಬತ್ತನೆಯ ಶತಮಾನ ಮತ್ತು ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಜೈಮಿನಿ ಭಾರತವು ಕನ್ನಡದ ಅತ್ಯಂತ ಜನಪ್ರಿಯ ಕಾವ್ಯಗಳಲ್ಲಿ ಒಂದಾಗಿತ್ತು. ಗಮಕ ಪರಂಪರೆಯ ನೆರವಿನಿಂದ ಹಳ್ಳಹಳ್ಳಿಗಳಲ್ಲಿಯೂ ಪ್ರಚುರವಾಗಿದ್ದ ಈ ಕಾವ್ಯದ ಅನೇಕ ಸನ್ನಿವೇಶಗಳು ನಾಟಕರೂಪವನ್ನೂ ಪಡೆಯುತ್ತಿದ್ದವು. ಜೈಮಿನಿ ಭಾರತವು, ಸಂಸ್ಕೃತದಲ್ಲಿ ಜೈಮಿನಿ ಎಂಬ ಋಷಿಯಿಂದ ರಚಿತವಾದ ಕಾವ್ಯ. ಲಕ್ಷ್ಮೀಶನ ಕಾವ್ಯವು ಯಾವುದೇ ಅರ್ಥದಲ್ಲಿಯೂ ಮೂಲದ ಕನ್ನಡ ಅನುವಾದವಲ್ಲ. ಕವಿಯು ತನಗಿರುವ ಸ್ವಾತಂತ್ರ್ಯವನ್ನು ಉಪಯೋಗಿಸಿ ಅನೇಕ ನೀರಸವಾದ ಭಾಗಗಳನ್ನು ಬಿಟ್ಟಿದ್ದಾನೆ ಮತ್ತು ತನ್ನದೇ ಆದ ಹೊಸ ಾಯಾಮಗಳನ್ನು ಸೇರಿಸಿದ್ದಾನೆ. ಈ ಕಾವ್ಯದಲ್ಲಿ 34 ಅಧ್ಯಾಯಗಳಿದ್ದು ವಾರ್ಧಕ ಷಟ್ಪದಿಯಲ್ಲಿರುವ 1936 ಪದ್ಯಗಳಿವೆ. ಈ ಕಾವ್ಯವು, ಮಹಾಭಾರತ ಯುದ್ಧವು ಮುಗಿದು, ಧರ್ಮರಾಯನ ಪಟ್ಟಾಭಿಷೇಕವಾದ ನಂತರದ ಘಟನೆಗಳ ಮೇಲೆ ಒತ್ತು ಕೊಟ್ಟಿದೆ. ಇದು ವ್ಯಾಸಭಾರತದ ಅಶ್ವಮೇಧಿಕಪರ್ವದಲ್ಲಿ ಬರುವ ಕಥಾಭಾಗ. ಕೃಷ್ಣನ ದೈವಿಕತೆಯನ್ನು ಖಚಿತವಾಗಿ ಸ್ಥಾಪಿಸುವ ಮತ್ತು ಅರ್ಜುನನಂತಹ ಉದ್ಧಟ ವೀರರಿಗೆ ವಿನಯದ ಪಾಠ ಕಲಿಸುವ ತನ್ನ ಉದ್ದೇಶದಲ್ಲಿ ಕವಿಯು ಯಶಸ್ಸು ಪಡೆದಿದ್ದಾನೆ. ಅಶ್ವಮೇಧಯಾಗವನ್ನು ಮಾಡಬೇಕೆಂಬ ಧರ್ಮರಾಯನ ತೀರ್ಮಾನ ಮತ್ತು ಅದರ ಪೂರ್ವಸಿದ್ಧತೆ, ಪರಿಣಾಮಗಳನ್ನು ಬಹಳ ವಿವರವಾಗಿ ನಿರೂಪಿಸಲಾಗಿದೆ. ಅರ್ಜುನನು ತನಗಿಂತಲೂ ಎಷ್ಟೋ ಪಟ್ಟು ಬಲಶಾಲಿಗಳಾದ, ಆದರೆ ಕೃಷ್ಣನ ಬಗ್ಗೆ ಪ್ರಶ್ನಾತೀತವಾದ ಗೌರವವನ್ನು ಹೊಂದಿರುವ ಅನೇಕ ವೀರರನ್ನು ಅರ್ಜುನನು ಭೇಟಿಯಾಗುತ್ತಾನೆ. ಸುಧನ್ವ, ಹಂಸಧ್ವಜ, ಯೌವನಾಶ್ವ ಮುಂತಾದ ಅನೇಕ ವೀರರು ಅರ್ಜುನನನ್ನು ಸೋಲಿನ ಅಂಚಿಗೆ ತರುತ್ತಾರೆ. ಆದರೆ, ಎಲ್ಲ ಸಂದರ್ಭಗಳಲ್ಲಿಯೂ ಅವನು ಕೃಷ್ಣನ ಅನುಗ್ರಹದಿಂದ ಗೆಲುವು ಪಡೆಯುತ್ತಾನೆ ಮತ್ತು ಮರೆಯಲಾಗದ ಪಾಠವನ್ನು ಕಲಿಯುತ್ತಾನೆ. ಆದ್ದರಿಂದ ಜೈಮಿನಿ ಭಾರತವು ಪರಾಕ್ರಮವನ್ನು ಹಿನ್ನೆಲೆಗೆ ಸರಿಸಿ, ಭಕ್ತಿಯನ್ನು ಮುಂದೆಮಾಡುವ ಭಕ್ತಿಯುಗದ ಉತ್ಪನ್ನವೆಂದರೂ ತಪ್ಪಿಲ್ಲ.
         ಆದರೆ, ಲಕ್ಷ್ಮೀಶನ ಕೃತಿಯ ಜನಪ್ರಿಯತೆಗೆ, ತನ್ನ ಕಾವ್ಯವಸ್ತುವಿನ ನಿರ್ವಹಣೆಯಲ್ಲಿ ಕವಿಯು ತೋರಿಸಿರುವ ಅನುಪಮವಾದ ಕುಶಲತೆಯೇ ಕಾರಣ. ವಾಸ್ತವವಾಗಿ ಜೈಮಿನಿ ಭಾರತವು ಸ್ವತಂತ್ರವಾದ ಕಥೆಗಳ ಗೊಂಚಲು. ಯಾಗದ ಕುದುರೆಯ ಹಿಂದೆ ಚಲಿಸುತ್ತಾ ಲೋಕಪರ್ಯಟನೆ ಮಾಡುವ ಅರ್ಜುನನು ಈ ಕಥೆಗಳನ್ನು ಪೋಣಿಸುವ ದಾರ. ಆದರೆ, ಈ ಕಾವ್ಯದ್ದು, ಬಿಡುಬೀಸಾಗಿ ಚಲಿಸುವ ನಿಧಾನಗತಿಯೇ ವಿನಾ ಯುದ್ಧಕಾತರವಾದ ನಾಗಾಲೋಟವಲ್ಲ. ಲಕ್ಷ್ಮೀಶನಿಗೆ ನಿರೂಪಣೆಯ ಕೌಶಲ್ಯ ಮತ್ತು ಭಾಷೆಯ ಮೇಲಿನ ಪ್ರಭುತ್ವಗಳೆರಡೂ ಇವೆ. ಅವನು ನಿಸರ್ಗಸೌಂದರ್ಯವನ್ನು ಗುರುತಿಸಬಲ್ಲ. ಅಂತೆಯೇ ಮನುಷ್ಯಸ್ವಭಾವದ ಆಳವಾದ ಪರಿಚಯವೂ ಅವನಿಗಿದೆ. ಈ ಕಾವ್ಯದಲ್ಲಿ ಬರುವ ಸೀತಾಪರಿತ್ಯಾಗದ ಹೃದಯಸ್ಪರ್ಶಿಯಾಗಿದ್ದು, ಸರಿಯಾಗಿ ವ್ಯಾಖ್ಯಾನ ಮಾಡಿದಾಗ ಅದು ಸ್ತ್ರೀವಾದೀ ಆಯಾಮಗಳನ್ನು ಪಡೆಯಬಲ್ಲುದು. ಚಂಡಿ-ಉದ್ಧಾಲಕರ ಪ್ರಸಂಗದಲ್ಲಿ ಲಕ್ಷ್ಮೀಶನ ಹಾಸ್ಯಪ್ರಜ್ಞೆಯು ಪ್ರಖರವಾಗಿ ಕಂಡುಬರುತ್ತದೆ. ಚಂದ್ರಹಾಸನ ಕಥೆಯು ಕನ್ನಡ ಓದುಗರಿಗೆ ಪ್ರಿಯವಾದ ಇನ್ನೊಂದು ಸಂದರ್ಭ. ಕವಿಯು ತನ್ನ ಕಾವ್ಯದಲ್ಲಿ ವೀರ, ಶೃಂಗಾರ, ಕರುಣ, ಹಾಸ್ಯ ಮುಂತಾದ ರಸಗಳನ್ನು ಅಂತೆಯೇ ಭಕ್ತಿಯಂತಹ ಭಾವನೆಗಳನ್ನು ನಿರೂಪಿಸುವ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾನೆ ಮತ್ತು ಅವುಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾನೆ. ಈ ಕವಿಯ ಪ್ರತಿಭೆಯು ಅವನು ಬಳಸುವ ಉಪಮೆಗಳಲ್ಲಿ ಹಾಗೂ ಸಂಗೀತಕ್ಕೆ ಸಮೀಪವೆನ್ನುವಷ್ಟು ಮಧುರವಾದ ಭಾಷೆಯ ಬಳಕೆಯಲ್ಲಿ ನಿರ್ದಿಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಅವನನ್ನು ‘ಉಪಮಾಲೋಲ’, ‘ನಾದಲೋಲ’ ಎಂದೇ ಕರೆಯಲಾಗಿದೆ. ಕನ್ನಡದ ಶ್ರೇಷ್ಠ ವಿಮರ್ಶಕರಾದ ಕುವೆಂಪು, ಬೇಂದ್ರೆ, ಮಾಸ್ತಿ, ಕುರ್ತಕೋಟಿ, ಚಿ.ಎನ್. ರಾಮಚಂದ್ರನ್ ಅವರು ಲಕ್ಷ್ಮೀಶನ ಬಗ್ಗೆ ವಿವರವಾದ ಮತ್ತು ಒಳನೋಟಗಳಿಂದ ಕೂಡಿದ ವಿಮರ್ಶೆಯನ್ನು ಮಾಡಿದ್ದಾರೆ.

******* ಕನ್ನಡ ದೀವಿಗೆ ******

05 ಫೆಬ್ರವರಿ 2021

10ನೇ ತರಗತಿ-ಕನ್ನಡ-ಪದ್ಯ-04-ಕೌರವೇಂದ್ರನ ಕೊಂದೆ ನೀನು-ಕವಿ ಕುಮಾರವ್ಯಾಸನ ಪರಿಚಯ

ಕುಮಾರವ್ಯಾಸನ ಪರಿಚಯ
 
ಕುಮಾರವ್ಯಾಸ ಕಂಬ
ಕುಮಾರವ್ಯಾಸನ ಕಾಲ: ಕ್ರಿ.ಶ. ೧೩೫೦-೧೪೦೦
ಸ್ಥಳ : ಗದುಗಿನ ಕೋಳಿವಾಡ (ಈಗಿನ ಧಾರವಾಡ ಜಿಲ್ಲೆ, ಹುಬ್ಬಳ್ಳಿ ತಾಲೂಕಿನ ಕೋಳಿವಾಡ)
ಆರಾಧ್ಯದೈವ: ಗದುಗಿನ ವೀರನಾರಾಯಣ
ಕೃತಿ: ‘ಕರ್ಣಾಟಭಾರತ ಕಥಾಮಂಜರಿ’ ಇದಕ್ಕೆ ಕನ್ನಡಭಾರತ, ಗದುಗಿನ ಭಾರತ ಎಂಬ ಹೆಸರುಗಳೂ ಇವೆ.
ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. “ಗದುಗಿನ ನಾರಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸ ನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ.

ಕುಮಾರವ್ಯಾಸನ ಕಾಲದ ಬಗ್ಗೆ ಚರ್ಚೆ

  • ಕುಮಾರವ್ಯಾಸನ ಕಾಲದ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ. ಆದರೂ ಕವಿಚರಿತಾಕಾರರು ಕೆಲವು ಸಾಹಿತ್ಯದ ಹಿನ್ನೆಲೆಯಿಂದ ಕುಮಾರವ್ಯಾಸನ ಕಾಲವನ್ನು ನಿರ್ಣಯಿಸಲು ಪ್ರಯತ್ನಿಸಿದ್ದಾರೆ.
  • ಕುಮಾರವ್ಯಾಸನ ಹೆಸರು ಹೇಳುವ ಉತ್ತರಕಾಲೀನ ಕವಿಗಳಲ್ಲಿ ಮೊದಲಿಗ ತಿಮ್ಮಣ್ಣಕವಿ. ಇವನ ಕಾಲ ಸುಮಾರು ೧೫೧೦. ಇವನು ವಿಜಯನಗರದ ಶ್ರೀಕೃಷ್ಣದೇವರಾಯನ(ಕ್ರಿ.ಶ.೧೫೦೯ ರಿಂದ ೧೫೨೯ರವರೆಗೆ) ಆಜ್ಞಾನುಸಾರ ‘ಕೃಷ್ಣರಾಜ ಭಾರತ’ಎಂಬ ಕೃತಿಯನ್ನು ರಚಿಸಿದ್ದಾನೆ.
  • ಸುಮಾರು ಕ್ರಿ.ಶ. ೧೫೦೦ ರಲ್ಲಿದ್ದ ‘ತೊರವೆ ರಾಮಾಯಣ’ ಬರೆದ ಕುಮಾರ ವಾಲ್ಮೀಕಿ ಅಥವಾ ತೊರವೆ ನರಹರಿ ಮತ್ತು ‘ಕೃಷ್ಣರಾಯ ಭಾರತ’ ಬರೆದ ತಿಮ್ಮಣ್ಣ ಕವಿ ಕುಮಾರವ್ಯಾಸನನ್ನು ಹೊಗಳಿರುವುದರಿಂದ ಕುಮಾರವ್ಯಾಸನು ಆ ಕಾಲಕ್ಕಿಂತ ಹಿಂದಿನವನೆಂದು ಸಿದ್ಧವಾಗಿದೆ.
  • ಜೀವಂಧರ ಚರಿತೆ ಬರೆದ ಕ್ರಿ.ಶ. ೧೪೨೪ ರಲ್ಲಿದ್ದ ಭಾಸ್ಕರ ಕವಿಯು ಕುಮಾರವ್ಯಾಸನ ಅನೇಕ ನುಡಿಕಟ್ಟುಗಳನ್ನು ಬಳಸಿ ಅವನಿಂದ ಪ್ರಭಾವಿತನಾಗಿರುವುದರಿಂದ, ಕುಮಾರವ್ಯಾಸನು ಅವನಿಗಿಂತ ಹಿಂದಿನವನೆಂದು ಸಂಶೋಧಕರು ನಿರ್ಧರಿಸಿದ್ದಾರೆ.
  • ಕುಮಾರವ್ಯಾಸನ ಹೆಸರಿರುವ ಒಂದು ಶಾಸನ ಗದುಗಿನ ವೀರನಾರಾಯಣ ದೇವಸ್ಥಾನಕ್ಕೆ ಸೇರಿದ ಬಾವಿಯ ಎಡಮಗ್ಗುಲ ಗೋಡೆಯ ಮೇಲಿದೆ. ಇದರ ಕಾಲ ಸುಮಾರು ಕ್ರಿ.ಶ. ೨೬-೮-೧೫೩೯ ರಲ್ಲಿ ಬರೆದ ಶಾಸನದಲ್ಲಿ ಕವಿ ಕುಮಾರವ್ಯಾಸಂಗೆ ಪ್ರಸನ್ನನಾದ ಗದುಗಿನ ವೀರ ನಾರಾಯಣನ ಸನ್ನಿಧಿಯಲ್ಲಿ.. ಎಂದು ಕುಮಾರವ್ಯಾಸನ ಹೆಸರನ್ನು ಉಲ್ಲೇಖಿಸಿರುವುದರಿಂದ ಅವನು ಅದಕ್ಕಿಂತ ಹಿಂದಿನವನೆಂದು ಸ್ಪಷ್ಟವಾಗಿದೆ.
  • ಕುಮಾರವ್ಯಾಸ ಶ್ರೀಕೃಷ್ಣದೇವರಾಯನ ಆಳ್ವಿಕೆಯಲ್ಲಿದ್ದವನೆಂದೂ, ‘ಪ್ರಭುಲಿಂಗಲೀಲೆ’ ಬರೆದ ಚಾಮರಸನ ತಂಗಿಯ ಗಂಡನೆಂದೂ, ಇದರ ಪ್ರಕಾರ ಇವನ ಕಾಲ ಸುಮಾರು ೧೪೩೯ ಆಗುತ್ತದೆಂದು ಕವಿಚರಿತಾಕಾರರು ಅಭಿಪ್ರಾಯ ಪಟ್ಟಿದ್ದಾರೆ.
  • ಆದ್ದರಿಂದ ಅವನ-ಕುಮಾರವ್ಯಾಸನ ಕಾಲವನ್ನು ಕ್ರಿ.ಶ. ೧೩೫೦-೧೪೦೦ ಎಂದು ನಿರ್ಣಯಿಸಿರುತ್ತಾರೆ. (ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ : ಕುಮಾರವ್ಯಾಸ ಭಾರತ ಸಂಗ್ರಹ ಪ್ರ : ಬಿ.ಎಂ.ಶ್ರೀ. ಪ್ರತಿಷ್ಠಾನ).
  • ಕುಮಾರವ್ಯಾಸನು ‘ಕರ್ಣಾಟ ಭಾರತ ಕಥಾಮಂಜರಿ’ ರಚಿಸಿ, ವ್ಯಾಸರಾಯರಿಗೆ ತೋರಿಸಿದನೆಂಬ ಐತಿಹ್ಯವಿದೆಯೆಂದು ತಿಳಿಸಿರುವ ಪಂಚಮುಖಿ ಎಂಬ ವಿದ್ವಾಂಸರು- “ಹರಿ ಶರಣರೆನ್ನ ಮನೆಯ ಮೆಟ್ಟಲು ಮನೆ ಪರಮಪಾವನವಾಯಿತು” ಎಂಬ ಸುಳಾದಿಯಲ್ಲಿ ಪುರಂದರದಾಸರು ತಮ್ಮ ಮನೆಗೆ ಕುಮಾರವ್ಯಾಸ ಬಂದುದನ್ನು, ಆತ ತನ್ನ ಕೃತಿಗೆ ಶ್ರೀಕೃಷ್ಣನೇ ಕಥಾನಾಯಕನೆಂದು ಶಾಸ್ತ್ರ ಸಮ್ಮತವಾಗಿ ಹೇಳಿದನೆನ್ನಲಾಗಿದೆ.
  • ಈ ದಿಶೆಯಲ್ಲಿ ಕುಮಾರವ್ಯಾಸ ಅತಿ ಪ್ರಾಚೀನನೂ ಅಲ್ಲ, ಅರ್ವಾಚೀನನೂ ಅಲ್ಲ. ಮಧ್ಯಕಾಲದವನೆಂದೂ, ಅವನ ಭಾಷಾಶೈಲಿಯ ದೃಷ್ಠಿಯಿಂದ ನಿರ್ವಿವಾದವಾಗಿ ಹೇಳಬಹುದು.

ಕುಮಾರವ್ಯಾಸನ ಊರು

ಹುಟ್ಟೂರು ಈಗಿನ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕೋಳೀವಾಡವೆಂಬ ಗ್ರಾಮವೆಂದೂ ಅವನ ವಂಶಸ್ಥರು ಈಗಲೂ ಅಲ್ಲಿ ವಾಸಿಸುತ್ತಾರೆಂದೂ ಹೇಳಲಾಗಿದೆ. ಈ ಬಗ್ಗೆ ಸಂಶೋಧನೆ ಮಾಡಿದ ಶ್ರೀ ಎ.ವಿ.ಪ್ರಸನ್ನ, ಕೆ.ಎ.ಎಸ್. ಅವರು ಅವರ ಮನೆಗೆ ಹೋಗಿ ವಿಚಾರ ವಿನಿಮಯ ಮಾಡಿ ಅವರಲ್ಲಿರುವ ಕಾಗದ ಪತ್ರಗಳನ್ನೂ ಕುಮಾರವ್ಯಾಸ ಭಾರತದ ಓಲೆಗರಿ ಪ್ರತಿಗಳನ್ನೂ ಪರಿಶೀಲಿಸಿರುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ಪತ್ರಗಳ ಆಧಾರದ ಮೇಲೆ ಕವಿಯ ವಂಶಸ್ಥರು ತಮ್ಮ ವಂಶದ ಚರಿತ್ರೆಯನ್ನು ಈ ರೀತಿ ತಿಳಿಸುತ್ತಾರೆ. ಕುಮಾರವ್ಯಾಸನ ಪೂರ್ವಿಕರಾದ ಚಿನ್ನದ ಕೈ ಮಾಧವರಸಯ್ಯನು ಹಿರೇಹಂದಿಗೋಳ ಗ್ರಾಮದವನಾಗಿದ್ದು ಕೋಳೀವಾಡ ಗ್ರಾಮವನ್ನು ಕ್ರಯಕ್ಕೆ ಪಡೆದು, ಕೋಳೀವಾಡದಲ್ಲಿಯೇ ನೆಲಸಿದ. ಅವರು ಅದ್ವೈತಿಗಳಾಗಿದ್ದು ಹರಿ-ಹರರಲ್ಲಿ ಅಬೇಧವನ್ನು ಕಾಣುವವರು. ಇವರು ಅಗಸ್ತ್ಯ ಗೋತ್ರಕ್ಕೆ ಸೇರಿದವರು. ಈ ಬಗ್ಗೆ ಗದುಗಿನ ಕುಮಾರವ್ಯಾಸ ಸಂಘದ ಅಧ್ಯಕ್ಷರೂ ಆದ ಶ್ರೀ ಎಂ.ಎಚ್. ಹರಿದಾಸ ಅವರು ರಚಿಸಿರುವ ಮಹಾಕವಿ ಕುಮಾರವ್ಯಾಸ (ಪ್ರ.ವಿಕ್ರಮ ಪ್ರಕಾಶನ ಗದಗ) ಕಿರು ಹೊತ್ತಿಗೆಯಲ್ಲಿ ಹೆಚ್ಚನ ವಿಷಯವಿದೆ. ಅವನ ವಂಶಸ್ಥರಾದ ದತ್ತಾತ್ರೇಯ ಪಾಟೀಲರು ಶ್ರೀ ಎ.ವಿ.ಪ್ರಸನ್ನ ಅವರಿಗೆ ಕೊಟ್ಟ ಕುಮಾರವ್ಯಾಸನ ವಂಶಾವಳಿಯನ್ನು ಗಮಕ ಸಂಪದ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಒಟ್ಟಿನಲ್ಲಿ ಕವಿ ನಾರಾಯಣಪ್ಪ ಕೋಳಿವಾಡದ ಶಾನುಭೋಗ. ಗದುಗಿನ ವೀರನಾರಾಯಣ ಇವನ ಆರಾಧ್ಯದೈವ. ಇವನಿಗೆ ವೇದವ್ಯಾಸ ಮತ್ತು ಅಶ್ವತ್ಥಾಮರ ಅನುಗ್ರಹವಾಗಿತ್ತೆಂದು ಹೇಳಲಾಗುತ್ತದೆ.

ವಂಶಾವಳಿ

ಈ ವಂಶಾವಳಿಯಂತೆ, ವೀರನಾರಾಯನೆಂಬ ಹೆಸರಿನವರು ಐದು ಜನ ಬರುತ್ತಾರೆ. ಅದರಲ್ಲಿ ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ನಂತರ ನಾಲ್ಕನೆಯವನಿಗೆ ೧ನೇ ವೀರನಾರಾಯಣ ಗೌಡ ಎಂದಿದೆ. ಅವನೇ ಕುಮಾರವ್ಯಾಸನೆಂದು ನಿರ್ಧರಿಸಿದ್ದಾರೆ. ಇಲ್ಲಿ ಗೌಡ ಎಂಬ ಪದ ಜಾತಿ ಸೂಚಕವಲ್ಲ. ಅದು ಗ್ರಾಮವೃದ್ಧ > ಗಾಮುಂಡ > ಗೌಡ ಎಂದು ನಿರ್ಣಯಿಸಿದ್ದಾರೆ. ಆನವ್ಮತರ ಕೆಲವು ಅದೇ ಮನೆತನದವರು ಅಯ್ಯ, ಪಾಟೀಲ ಎಂದು ತಮ್ಮ ಹೆಸರಿನ ಕೊನೆಗೆ ಸೇರಿಸಿ ಕೊಂಡಿದ್ದಾರೆ. ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ಕಾಲ ಕ್ರಿ.ಶ. ೧೧೪೮. ಇವನ ನಂತರದ ನಾಲ್ಕನೆಯ ತಲೆಮಾರಿನವ ಕುಮಾರವ್ಯಾಸ. ಪ್ರತಿ ತಲೆಮಾರಿಗೆ ೨೫ ವರ್ಷವೆಂದು ಹಿಡಿದರೆ, ಕುಮಾರವ್ಯಾಸನ ಕಾಲ ಕ್ರಿ.ಶ. ೧೨೪೮ . ಅವನು ಸುಮಾರು ೭೦ ವರ್ಷ ಬದುಕಿದ್ದನೆಂದು ಭಾವಿಸಿದರೂ ಕ್ರಿ.ಶ. ೧೨೪೮ ರಿಂದ ೧೩೧೮ ಎಂದರೆ ೩೦-೪೦ ವರ್ಷ ವ್ಯತ್ಯಾಸ ಬರುತ್ತದೆ.
  • ವಂಶಾವಳಿ :
  • ||ಶ್ರೀ ವೀರನಾರಾಯಣ ಪ್ರಸನ್ನಃ||
  • ೧.ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯ.
  • ೨.ತಿರುಮಲಯ್ಯ.
  • ೩. ಲಕ್ಕರಸಯ್ಯ.
  • ೪.ವೀರನಾರಾಯಣ ಗೌಡ.; ಕೃಷ್ಣರಸಯ್ಯ ; ತಂಕರಸಯ್ಯ ; ತಿರುಮಲಯ್ಯ. ಅಶ್ಯತ್ಥಯ್ಯ ?
  • ೪-೧ ನೇ ವೀರನಾರಾಯಣ ನೇ ಕುಮಾರವ್ಯಾಸ
  • ನಂತರ ೧೯೪೧ ಕ್ಕೆ ೧೯ ತಲೆಮಾರಿನ ಪಟ್ಟಿ ಇದೆ

ಕೃತಿಗಳು

ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಕನ್ನಡಾನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೆ ಕುಮಾರವ್ಯಾಸ ತನ್ನ ಕಾವ್ಯಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, ೧೪೭ ಸಂಧಿ, ೭೯೭೧ ಪದ್ಯಗಳನ್ನು ಒಳಗೊಂಡಿದೆ. ‘ಕುಮಾರವ್ಯಾಸ ಭಾರತ’ದ ಭಾಷೆ ನಡುಗನ್ನಡ.
ಸಂಪೂರ್ಣ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗುಬಡಿಸುತ್ತದೆ. ಅವನ ಕಾವ್ಯಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸನ ಹೆಸರು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದೆ. ಉದಾಹರಣೆಗೆ ಪರಿಶೀಲಿಸಿ:
  • “ಬವರವಾದರೆ ಹರನ ವದನಕೆ ಬೆವರ ತಹೆನು” (ಅಭಿಮನ್ಯುವಿನ ವೀರೋಕ್ತಿ!)
  • “ನರಶರದ ಜುಂಜುವೊಳೆಯಲಿ ಜಾರುವನೆ ಜಾಹ್ನವೀಧರ” (ಕಿರಾತಾರ್ಜುನೀಯ ಪ್ರಸಂಗದಲ್ಲಿ)
  • “ಜವನ ಮೀಸೆಯ ಮುರಿದನೋ” (ಉತ್ತರನ ಪೌರುಷದಲ್ಲಿ)
  • “ಅರಿವಿನ ಸೆರಗು ಹಾರಿತು”
ರೂಪಕಗಳೊಂದಿಗೆ ಕುಮಾರವ್ಯಾಸನ ಇನ್ನೊಂದು ಸಾಮರ್ಥ್ಯ ಮಾನವಪ್ರಕೃತಿಯ ವರ್ಣನೆ. ಕುಮಾರವ್ಯಾಸನ ಪಾತ್ರಗಳು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟ. ಅವನ ಎಲ್ಲ ಪಾತ್ರಗಳು ಅವರವರದೇ ರೀತಿಯಲ್ಲಿ ಮಾತನಾಡುತ್ತಾರೆ, ಬೈಯುತ್ತಾರೆ, ನಗುತ್ತಾರೆ, ಹಾಗೂ ಅಳುತ್ತಾರೆ ಸಹ. ಕುಮಾರವ್ಯಾಸ ಅಷ್ಟೇ ಆಳವಾದ ದೈವಭಕ್ತ ಸಹ. ಶ್ರೀ ಕೃಷ್ಣನ ವರ್ಣನೆ ಅವನ ಕಾವ್ಯರಚನೆಯ ಮೂಲೋದ್ದೇಶಗಳಲ್ಲಿ ಒಂದು. (“ತಿಳಿಯ ಹೇಳುವೆ ಕೃ‍ಷ್ಣ ಕಥೆಯನು”) ಅವನ ಮಹಾಭಾರತ ಕಥೆ ಕೃಷ್ಣನ ಸುತ್ತಲೂ ಸುತ್ತುತ್ತದೆ. ಕುಮಾರವ್ಯಾಸ ಕೃಷ್ಣನ ಭಕ್ತ. ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಹತ್ತರ (ಗದಾಪರ್ವ) ವರೆಗೆ. ಬರೆದು ದುರ್ಯೋಧನನ ಅವಸಾನದ ನಂತರ, ಕುಮಾರವ್ಯಾಸನು ಮುಂದೆ ಸಂಕ್ಷಿಪ್ತವಾಗಿ, ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ;
ಕುಮಾರವ್ಯಾಸನ ಪ್ರತಿಭೆಗೆ ಕನ್ನಡಿಯಾಗಿ ಹಿಡಿದ ಕುವೆಂಪು ರವರ ಸಾಲುಗಳನ್ನು ನೋಡಿ:
“ಕುಮಾರ ವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿವುದು! ಮೈಯಲಿ
ಮಿಂಚಿನ ಹೊಳೆ ತುಳುಕಾಡುವುದು!“
  • ಕುಮಾರವ್ಯಾಸನ ಇನ್ನೊಂದು ಕೃತಿ ಐರಾವತ. ಇದು ಅಷ್ಟಾಗಿ ಪ್ರಸಿದ್ಧವಾಗಿಲ್ಲ.

ಪ್ರಭಾವ

ಕುಮಾರವ್ಯಾಸ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾನೆ. ಕುಮಾರವ್ಯಾಸ ಭಾರತವನ್ನು ಇಂದಿಗೂ ಸಹ ಕರ್ನಾಟಕದಲ್ಲಿ ಓದಲಾಗುತ್ತದೆ, ವ್ಯಾಖ್ಯಾನ ಮಾಡಲಾಗುತ್ತದೆ. ಕುಮಾರವ್ಯಾಸ ಭಾರತವನ್ನು ಓದುವ ಒಂದು ವಿಶಿಷ್ಟ ಶೈಲಿಯಾದ ಗಮಕ ಕಲೆ ಸಾಕಷ್ಟು ಪ್ರಸಿದ್ಧವಾಗಿದೆ.
“ಹಲಗೆ ಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ವೀರನಾರಾಯಣನ ಕಿಂಕರಗೆ”

“ವೀರನಾರಾಯಣನೆ ಕವಿ ಲಿಪಿ
ಕಾರ ಕುಮಾರವ್ಯಾಸ ಕೇಳುವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ಧನರು
ಚಾರು ಕವಿತೆಯ ಬಳಕೆಯಲ್ಲ ವಿ
ಚಾರಿಸುವಡಳವಲ್ಲ ಚಿತ್ತವ
ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ”

 
************

************