ನನ್ನ ಪುಟಗಳು

26 ಸೆಪ್ಟೆಂಬರ್ 2023

10ನೇ ತರಗತಿ ಪದ್ಯ ವೀರಲವ- ಸಾರಾಂಶ (10th-Veeralava-Saramsha)

ವೀರಲವ ಪದ್ಯದ ಹೊಸಗನ್ನಡ ರೂಪ
ಹಿನ್ನೆಲೆ ಕಥೆ:- ರಾವಣನನ್ನು ಸಂಹರಿಸಿದ ಶ್ರೀರಾಮನು ಸೀತಾ ಲಕ್ಷ್ಮಣ ಸಮೇತರಾಗಿ ಅಯೋಧ್ಯೆಗೆ ಮರಳಿ ರಾಜ್ಯಭಾರ ಮಾಡುತ್ತಿದ್ದ ಸಂದರ್ಭದಲ್ಲಿ ಸಾಮಾನ್ಯ ಪ್ರಜೆಯೊಬ್ಬನು ಸೀತೆಯ ಕುರಿತು ಕ್ಷುಲ್ಲಕವಾಗಿ ಮಾತನಾಡುವನು. ಪ್ರಜೆಗಳ ಅಭಿಪ್ರಾಯವೇ ಸರ್ವಸ್ವವೆಂದೂ ಕುಲಗೌರವ ಕಾಪಾಡುವುದು ತನ್ನ ಕರ್ತವ್ಯವೆಂದು ನಿಶ್ಚಯಿಸಿದ ರಾಮನು ತುಂಬು ಗರ್ಭಿಣಿಯಾದ ಸೀತೆಯನ್ನು ಕಾಡಿಗೆ ಕಳಿಸುವ ನಿರ್ಧಾರ ಮಾಡುವನು. ಅಣ್ಣನ ಆಣತಿಯಂತೆ ಲಕ್ಷ್ಮಣನು ಸೀತೆಯನ್ನು ಕಾಡಿನಲ್ಲಿ ಏಕಾಂಗಿಯಾಗಿ ಬಿಟ್ಟುಬಂದಾಗ, ಅಲ್ಲಿ ಅವಳ ರೋದನವನ್ನು ಕೇಳಿ ಆಗಮಿಸಿದ ವಾಲ್ಮೀಕಿ ಮಹರ್ಷಿಗಳು ಸೀತೆಯನ್ನು ತಮ್ಮ ಆಶ್ರಮಕ್ಕೆ ಕರೆದೊಯ್ಯುತ್ತಾರೆ. ಆಶ್ರಮದಲ್ಲಿ ಅವಳು ಅವಳಿ ಮಕ್ಕಳಿಗೆ ಜನ್ಮನೀಡುತ್ತಾಳೆ. ಅವರಿಗೆ ಲವ ಕುಶರೆಂದು ನಾಮಕರಣ ಮಾಡಿದ ಮಹರ್ಷಿಗಳು ಅವರಿಬ್ಬರನ್ನು ಸಕಲ ವಿದ್ಯಾ ಪಾರಂಗತರಾಗಿ ಮಾಡುತ್ತಾರೆ. ರಾವಣನ ವಧೆಯಿಂದ ಉಂಟಾದ ಬ್ರಹ್ಮಹತ್ಯಾ ದೋಷ ಬಂದಿರುವುದೆಂದು ಹೇಳಿದ ಮಹರ್ಷಿಗಳ ಆದೇಶದಂತೆ ಶ್ರೀರಾಮನು ಅಶ್ವಮೇಧ ಯಾಗವನ್ನು ಕೈಗೊಳ್ಳುತ್ತಾನೆ. ಶತ್ರುಘ್ನನ ಬೆಂಗಾವಲಿನೊಂದಿಗೆ ದೇಶ ದೇಶಗಳನ್ನು ಸುತ್ತಿದ ಅಶ್ವಮೇಧದ ಕುದುರೆಯು ವಾಲ್ಮೀಕಿ ಆಶ್ರಮದ ಆವರಣ ಪ್ರವೇಶಿಸಿದಾಗಶ್ರೀರಾಮನೇ ತನ್ನ ತಂದೆಯೆಂದು ತಿಳಿಯದ ಲವನು ಕುದುರೆಯನ್ನು ಕಟ್ಟುತ್ತಾನೆ.ಅದು ಪ್ರಸ್ತುತ ಪದ್ಯದಲ್ಲಿ ವ್ಯಕ್ತಗೊಂಡಿದೆ.

ಬಲ್ಗಯ್ಯ ನೃಪರಂಜಿ ತಡೆಯದೆ ರಘೂದ್ವಹನ |
ಸೊಲ್ಗೇಳಿ ನಮಿಸಲಿಳೆಯೊಳ್ ಚರಿಸುತಧ್ವರದ |
ನಲ್ಗುದುರೆ ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು ||
ಪುಲ್ಗಳ ಪಸುರ್ಗೆಳಸಿ ಪೊಕ್ಕೊಡಾ ತೋಟಗಾ|
ವಲ್ಗೆ ತನ್ನೊಡನಾಡಿಗಳ ಕೂಡಿ ಲೀಲೆ ಮಿಗೆ |
ಬಿಲ್ಗೊಂಡು ನಡೆತಂದವಂ ಕಂಡನರ್ಚಿತ ಸುವಾಜಿಯಂ ವೀರಲವನು || ೧ ||


         ಬಲಶಾಲಿಗಳಾದ ರಾಜರೂ ಸಹ ಶ್ರೀರಾಮನ ಶ್ರೇಷ್ಠತೆಯ ವಿಚಾರವನ್ನು ಕೇಳಿಯೆ ಕುದುರೆಯನ್ನು ಕಟ್ಟಲು ಹೆದರಿ ,ಅದಕ್ಕೆ ನಮಸ್ಕರಿಸಿ ಅದನ್ನು ತಡೆಯದೇ ಇರಲು ,ಶ್ರೀರಾಮನ ಯಜ್ಞಾಶ್ವದ ಪ್ರೀತಿಯ ಕುದುರೆಯು ಇಡೀ ಭೂಮಂಡಲದಲ್ಲಿ ಚಲಿಸುತ್ತ, ವಾಲ್ಮೀಕಿಯ ತಪೋವನದ ಉಪವನದಲ್ಲಿ ಬೆಳೆದು ನಿಂತಿದ್ದ ಹುಲ್ಲಿನ ಹಸುರಿಗೆ ಮನಸೋತು ಆಕರ್ಷಣೆಗೆ ಒಳಗಾಗಿ ಅದನ್ನು ಪ್ರವೇಶಿಸಿತು. ಅಲ್ಲಿ ತನ್ನ ಸ್ನೇಹಿತರೊಡನೆ (ಒಡನಾಡಿಗಳೊಡನೆ ) ಆಟವಾಡಿ ಮುಗಿಸಿ ಬಿಲ್ಲಿನ ಸಮೇತನಾಗಿ ಬರುತ್ತಿದ್ದ ವೀರ ಲವನು ಆಶ್ರಮವನ್ನು ಪ್ರವೇಶಿಸಿದ್ದ ಪೂಜಿತ (ಪೂಜಿಸಲ್ಪಟ್ಟಿದ್ದ)ಸುಂದರ ಕುದುರೆಯನ್ನು ಕಂಡನು.

ಎತ್ತಣ ತುರಂಗಮಿದು ಪೊಕ್ಕು ಪೂದೋಟಮಂ|
ತೊತ್ತಳದುಳಿದುದು ವಾಲ್ಮೀಕಿ ಮುನಿನಾಥನೇ |
ಪೊತ್ತುಮಾರೈವುದೆಂದೆನಗೆ ನೇಮಿಸಿ ಪೋದನಬ್ಧಿಪಂ ಕರೆಸಲಾಗಿ ||
ಮತ್ತೆ ವರುಣನ ಲೋಕದಿಂ ಬಂದು ಮುಳಿದಪನೆ
ನುತ್ತ ಹಯದೆಡೆಗೆ ನಡೆತಂದು ನೋಡಲ್ಕದರ |
ನೆತ್ತಿಯೊಳ್ ಮೆರವ ಪಟ್ಟದ ಲಿಖಿತಮಂ ಕಂಡು ಲವನೋದಿಕೊಳುತಿರ್ದನು || ೨ ||


ಉಪವನದೊಳಕ್ಕೆ ನುಗ್ಗಿದ ಕುದುರೆಯನ್ನು ನೋಡಿದ ಲವನು ಎಲ್ಲಿಯ ಕುದುರೆಯಿದು ? ಉಪವನಕ್ಕೆ ನುಗ್ಗಿ ಹೂದೋಟವನ್ನು ಹಾಳು ಮಾಡಿದೆಯಲ್ಲ ! ವಾಲ್ಮೀಕಿ ಮುನಿಶ್ರೇಷ್ಠರು ವರುಣನು ಕರೆದಿದ್ದರಿಂದ ಅಲ್ಲಿಗೆ ಹೋಗುವಾಗ ನನಗೆ ಈ ಉಪವನವನ್ನು ಕಾಯಲು ಹೇಳಿ ಹೋಗಿದ್ದರು. ಮತ್ತೆ ಅವರು ವರುಣನ ಲೋಕದಿಂದ ಹಿಂದಿರುಗಿ ಬಂದಾಗ ಈ ಹೂದೋಟವು ಹಾಳಾದುದನ್ನು ನೋಡಿ ಮುನಿಸಿಕೊಳ್ಳುವರು ಎಂದು ಯೋಚಿಸುತ್ತ ಕುದುರೆಯೆಡೆಗೆ ಬಂದನು. ಆಗ ಲವನು ಅದರ ಹಣೆಯ ಮೇಲೆ ಬರೆಹದ ಪಟ್ಟಿಯು ಇದ್ದುದನ್ನು ನೋಡಿ ಅದನ್ನು ಓದತೊಡಗಿದನು.

ಊರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮ |
ನೋರ್ವನೇ ವೀರನಾತನ ಯಜ್ಞತುರಗಮಿದು |
ನಿರ್ವಹಿಸಲಾರ್ಪರಾರಾದೊಡಂ ತಡೆಯಲೆಂದಿರ್ದ ಲೇಖನವನೋದಿ ||
ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ|
ಸರ್ವಜನಮುಂ ಬಂಜೆಯೆನ್ನದಿರ್ದಪುದೆ ತನ|
ಗುರ್ವತೋಳ್ಗಳಿವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದೆದ್ದನು|| ೩ ||


        ಈ ಭೂಮಿಯಲ್ಲಿ ಕೌಸಲ್ಯೆಯು ಪಡೆದ ಮಗನಾದ ಶ್ರೀರಾಮನೊಬ್ಬನೇ ವೀರ. ಅವನ ಯಜ್ಞ ತುರಗವಿದು. ಇದನ್ನು ನಿರ್ಸುವಹಿಸುವ ಸಮರ್ಥರು ಯಾರಾದರೂ ಇದ್ದರೆ ಈ ಕುದುರೆಯನ್ನು ತಡೆಯಿರಿ ಎಂದಿದ್ದನ್ನು ನೋಡಿ, "ಓಹೋ ! ಅವನ (ಶ್ರೀರಾಮನ) ಗರ್ವವನ್ನು ಮುರಿಯದಿದ್ದರೆ ನನ್ನ ತಾಯಿಯನ್ನು ಎಲ್ಲರೂ ಬಂಜೆಯೆಂದು ಕರೆಯದಿರುವರೇ ? ಅಲ್ಲದೇ ನನ್ನ ಶ್ರೇಷ್ಠವಾದ ತೋಳುಗಳಿದ್ದೂ ಏನು ಪ್ರಯೋಜನ ?" ಎಂದು ಪ್ರತಿಜ್ಞೆಯನ್ನು ಮಾಡಿ ಲವನು ಉರಿದೆದ್ದನು.

ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ |
ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ ಮುನಿಸುತರ್ |
ಮಿಗೆ ನಡುಗಿ ಬೇಡಬೇಡ ರಸುಗಳ ವಾಜಿಯಂ ಬಿಡು ಬಡಿವರೆಮ್ಮನೆನಲು ||
ನಗುತೆ ಪಾರ್ವರ ಮಕ್ಕಳಂಜಿದೊಡೆ ಜಾನಕಿಯ |
ಮಗನಿದಕೆ ಬೆದರುವನೆ ಪೋಗಿ ನೀವೆಂದು ಲವ |
ನಗಡುತನದಿಂದೆ ಬಿಲ್ದಿರುವನೇರಿಸಿ ತೀಡಿ ಜೇಗೈದು ನಿಂತಿರ್ದನು || ೪ ||


         ಲವನು ತನ್ನ ಉತ್ತರೀಯವನ್ನು ಹೊಸೆದು, ಅದನ್ನು ಕುದುರೆಯ ಕೊರಳಿಗೆ ಬಿಗಿದು ಬಾಳೆಯ ಗಿಡಕ್ಕೆ ಕಟ್ಟಲು ಮುನಿಸುತರು ಬಹಳ ನಡುಗುತ್ತಾ, "ಬೇಡ ಬೇಡ ಅರಸರ ಕುದುರೆಯನ್ನು ಬಿಟ್ಟುಬಿಡು, ಇಲ್ಲವಾದರೆ ನಮ್ಮನ್ನು ಹೊಡೆಯುವರು " ಎಂದರು ಅದಕ್ಕೆ ಲವನು ನಗುತ್ತ "ಬ್ರಾಹ್ಮಣರ ಮಕ್ಕಳು ಅಂಜುವರೆಂದರೆ ಜಾನಕಿಯ ಮಗನು ಇದಕ್ಕೆ ಹೆದರುವನೇ? ಹೋಗಿ ನೀವು" ಎಂದು ಶೌರ್ಯದಿಂದ ಬಿಲ್ಲನ್ನು ಹೆದೆಗೇರಿಸಿ, ತೀಡಿ ಜೇಂಕಾರ ಮಾಡಿ ನಿಂತಿದ್ದನು.
  
(ಕೃಪೆ: ಪ್ರತೀಕ್ಷಾ_ಮಮತಾ ಭಾಗವತ್)


******* ಕನ್ನಡ ದೀವಿಗೆ ******

3 ಕಾಮೆಂಟ್‌ಗಳು: