ನನ್ನ ಪುಟಗಳು

24 ಮೇ 2018

ಶ್ರೀರಾಮಾಯಣ ದರ್ಶನಂ: ಲಂಕಾ ಸಂಪುಟಂ: ಸಂಚಿಕೆ 9 - ಮರಣಮಥವಾ ಶರಧಿತರಣಂ


ಬಡಬನಂತಶ್ಶಿಖಿಗೆನಲ್ ಪಡುಪುಡನೆ ಕುಡಿಯಲ್
ಕಡಲ್, ನಡುಗಿ ವರುಣಂ ವಿಶ್ವಕರ್ಮಂಗೆ : “ಜವದಿ
ನಧೆಯಯ್, ದಿವೌಕಸರ ಶಿಲ್ಪಿ, ಬರ್ದುಕಿಸು ಜಲಧಿ
ಜೀವನವ. ಕಾಯಿ ಜಲಚರ ಜೀವರಾಶಿಗಳ.
ಬೇಗದಿಂದಾ ಮಹೇಂದ್ರನ ಚರಣತಲವರ್ತಿ
ಶರಧಿವೇಲೆಯನಿರದೆ ಸೇರಯ್, ಕಪಿಧ್ವಜಿನಿ
ಬೀಡುಬಿಟ್ಟೆಡೆಗೆ. ವಿಸ್ತೃತ ಸಲಿಲ ಸೀಮೆಯ
ಸರಿತ್ಪತಿಯ ಸಮ್ಮುಖದೊಳಾ ಸಿಕತನೇಮಿಯ
ಮಹಮ್ನಂಚದೊಳ್ ಕುಶಾಸ್ತೀರ್ಣದೊಳ್, ಮಖಸುಕೃತ
ವೇದಿಯೊಳ್ ಮಂಡಿಪ ಹುತಾಶನವೋಲೊರ್ದು ೧೦ಅನಶನವ್ರತಿಯಾಗಿ, ಸತಿಗಾಗಿ ತಪಮಿರ್ಪ,
ಮರಣಮಥವಾ ಶರಧಿತರಣಂ’ ಪ್ರತಿಜ್ಞೆಯಿಂ
ಸರ್ಪಭೂಷಣ ಭಾಳನೇತ್ರ ಭೀಷಣನಾಗಿ
ಲೋಕಪ್ರಳಯಕರ ಭಯಂಕರಕೆ ಕಾರ್ಯಕ್ಕೆ
ಕೋಪ ಚಾಪಕೆ ಘೋರ ಚಿತ್ತನಾರಾಚಮಂ
ಸಂಧಾನಗೈವ ವಿಕಟಕ್ರಿಯಾ ನಿಕಟನಂ
ಬಳಿಸಾರ್, ಕಪೀಂದ್ರ ಸಂಕಟ ತಪ್ತ ಸಂವೀತ
ಕಟಕನಂ ! ಪ್ರೇಮನಿಷ್ಠೆಯ ಪರಮ ತಪದಿಂ
ತ್ರಿಲೋಕ ಗೌರವಕರ ಪವಿತ್ರಂಗೆ ಮೈದೋರ್,
ಮಗರ್ಷಿ ಪೂಜಿತ ರಾಮ ಭವ್ಯಂಗೆ! ಕಯ್‌ಮುಗಿದು. ೨೦ಬಿನ್ನಯ್ಸಿ, ತಡೆ ರೌದ್ರಮಂ. ನಿನ್ನ ಬಲ್ಲಂತೆ,
ಪ್ರಕೃತಿ ಮರ್ಯಾದೆಯಂ ಕಿಡದಂತೆ, ಅಂಭೋಧಿ
ಗಾಂಭೀರ್ಯಕೂನ ಬರದಂತೆ ಕಪಿಸೇನೆಯಂ
ದಾಂಟಿಸು ಸಮುದ್ರಮಂ ; ತಪ್ಪಿಸು ಅಕಾಲದೀ
ಲಯಕಾಲಮಂ, ಹೇ ದೇವಶಿಲ್ಪ!” ಕಡಲೊಡೆಯ
ವರುಣ ವಿಜ್ಞಾಪನಾಜ್ಞೆಗೆ ವಿಶ್ವಕರ್ಮಂ,
ದಿವೌಕಸರ ಶಿಲ್ಪವಿದ್ಯೆಗೆ ಪರಮ ಮಂತ್ರಗುರು,
ವಿಜ್ಞಾನಿ, ಅಲೌಕಿಕ ಪ್ರತಿಭಾಸಮನ್ವಿತಂ
ಬಾಗಿ ಸಾಗಿದನೂರ್ಮಿ ತೇಜಿಗಳೆಳೆವ ಸುಧಾ
ಫೇನ ಸುಂದರ ಕೂರ್ಮರಥದೊಳ್ ಸಮೀರಣನ ೩೦
ಸಾರಥಿತ್ವದ ಸಿಡಿಲ ಚಾಟಿಯ ತಟಿಚ್ಚಟುಲ
ಸೂಟಿಯಲಿ!
ದಿವಸತ್ರಯಂ ಮುಗಿದುವಿನ್ನುಮೀ
ಸಾಗರೌದಾಸೀನ್ಯಮಿರ್ಪುದಚ್ಯುತಮೆನಲ್,
ನಗುವವೋಲೆನ್ನೀದೆಯ ದುಕ್ಕಮಂ ತನ್ನೀ
ತರಂಗಾಟ್ಟಹಾಸದಲಿ! ಸಗರನಿಂದಾದನೀ
ಸಾಗರಂ. ಮರೆತನುಪಕಾರಮಂ ನಮ್ಮವರ್
ಗೈದುದನ್. ವಿಸ್ಮೃತಿ ಕೃತಘ್ನರಿಗೆ ಸಹಜಮಯ್,
ಸೌಮಿತ್ರಿ. ಚಾಪಮಂ ತಾ! ” ಆಗಳಾಗಳೆಯ
ನಸುಕು ನಸುಗಣ್ದೆರೆಯುತಿರ್ದಾಗಸದ ಕಡೆಗೆ
ನೋಡಿ, ನಿಡುಸುಯ್ದು, ಸೋದರ ಹಸದಿಂ ತನ್ನ ೪೦
ಕೋದಂಡಮಂ ಕೊಂಡು ಮೇಲೇಳುತಾ ಶ್ಮಶ್ರು
ಭೀಷ್ಮಾನನಂ ಮತ್ತೆ ತನಗೆ ತಾನೆಂಬವೋಲ್:
ನಡೆವೆನೀ ತಡಿಯಿನಾ ತಡಿಗೆ, ಬಟ್ಟೆಗೊಡದಿರೆ
ತುಡುವೆನಂಬಂ ಬಡಬ ಸಂಕಾಶಮಂ. ಕುಡಿದು
ಬರಿಗೆಯ್ವುದೀ ಕಡಲಿನೊಡಲಂ. ಕಪೀಂದ್ರ, ಕೇಳ್,
ನನ್ನ ಬೆಂಬಳಿವಿಡಿದು ಬರಲೀ ಮಹಾ ಸೈನ್ಯ
ಸಾಗರಂ!”
ತನ್ನಾತ್ಮಸಾಮರ್ಥ್ಯ ಸರ್ವಮಂ
ತತ್ಕಾರ್ಯಕಾಹ್ವಾನಿಸುತ್ತಾ ಮಹಾಯೋಗಿ
ದರ್ಭಾಸ್ತರಣದಿಂ ಮಳಲ್ಗಿಳಿದು ನಡೆದನೊ
ಸರಿತ್ಪತಿಯ ಮೇಲೆ! ಏದಿತು ಮಹೇಂದ್ರಾಚಲ
ಶಿಲಾಹೃದಯ ಪಿಂಡಂ. ಅರಣ್ಯರೋಮಾಂಚನದಿ
ಗದಗದಿಸಿದುದು ಪೃಥಿವಿ. ಕುಡಿದುದೈ, ಬೆದರ್ದುದೈ
ರೋದಿಸಿದುದೈ ಮಹಾಂಭೋಧಿ, ಆಘೂರ್ಣೀತ
ತರಂಗೌಘ ಕರಂಗಳಂ ಮುಗಿದು, ಕರುಣಿಸು ಶರಣು
ಶರಣೆಂಬವೋಲ್! ಕ್ಷಮಾಯಾಚನೆಗೆ ಕಾಲ್ವಿಡಿದು
ಬೇಡಲೆಳಸಿಯುಮದಂ ಸೋಂಕಲಂಜುತೆ ಸೆಡೆತು
ಹಿಂಜರಿಯುರ್ದುದೆಂಬಂತೆ, ಮುನ್ನೀರ್ ಮೇರೆ
ಸೀತಾಪತಿಯ ಪಜ್ಜೆಪಜ್ಜೆಗೆ ಪೆಡಂಮ್ಮೆಟ್ಟಿ
ಓಡತೊಡಗಿದುದೊ, ಹಾವಾಡಿಗನ ಕೈಯೊಳಿಹ
ಗರುಡ ಮಂತ್ರದ ಮಣಿಗೆ ಮಣಿದಳ್ಕಿ ಹೆಡೆಸೆಡೆವ ೬೦
ಫಣಿಯಂತೆವೋಲ್ ! ಸುಟ್ಟರೆಯ ಕಡು ಕಡೆಹದೊಂದು
ಕಟ್ಟೆಸಕಕೆಂತು ಮರುಭೂಮಿಯೊಳ್ ತೆಕ್ಕನೆಯೆ
ಸ್ತೂಪ ಭೀಮಂ ರಾಶಿಗೊಳ್ಳುವುವೊ ರಕ್ಕಸ
ಮಳಲ್ವೆಟ್ಟುಗಳ್ ಅಂತೆವೊಲ್ ಕಾಳಜಲಶರಧಿ,
ಮೆಯ್ಯ ಮುರಿಯುವ ತೆರದಿ ತೆರೆಮಗುಳ್ಚುತೆ , ಭರದಿ
ಮಲೆತುದು, ಮಹೇಂದ್ರ ಶಿಖರಂಗಳುಂ ನಾಣ್ಬೆದರಿ
ಗೋಣ್ತಳ್ಗುವೋಲ್!
ಕೇಳ್ದುದನಿತರೊಳಬುಧಿರಾವಮಂ
ಮೀರ್ವಂತೆ ವರುಣನಟಿರ್ದಮರಶಿಲ್ಪಿಯ
ಮಹಾಧ್ವನಿ ರಘೂದ್ವಹಂಗೆ:
ನಿಲ್, ತಾಳ್, ಮಹಾತ್ಮಾ,
ತಡೆ, ತಡೆ ಅಕಾಲಪ್ರಳಯ ಕರ್ಮಮಂ! ಕೊಳ್ಳಿದೆಕೊ ೭೦ವರುಣದೇವನ ನಮಸ್ಕಾರಮಂ ! ದೂತಂ;
ದಿವೌಕಸರ ಶಿಲ್ಪಿಯೆಂ; ವಿಶ್ವಕರ್ಮಂ. ನಿನಗೆ
ಪೇಳಲೆಂದೈತಂದೆನೀ ಉದನ್ವಂತನಂ
ನಿಯತಿ ಮರ್ಯಾದೆಯಿಂದುತ್ತರಿಪ ಉತ್ತಮ
ಉಪಾಯಮಂ. ಉಪಸಂಹರಿಸು ನಿಯತಿನಿಯಮದ
ತಿರಸ್ಕಾರಮಂ, ಪ್ರಾಜ್ಞ! ಸಮುದ್ರನಪರಾಧಿಯೆ?
ಋತಾಜ್ಞೆಯಂ ಪರಿಪಾಲಿಪೊರ್ವನಧಿಕಾರಿ ತಾನ್.
ಕಾರ್ಯಗೌರವದಿಂದೆ, ತೀವ್ರ ತಪದಿಂದೆ ಮೇಣ್
ನಿಜಮಹಿಮೆಯಿಂ ನಿನಗೆ ಲಭ್ಯಮಾಗಿರ್ಪುದು
ಋತಪ್ರಭುತ್ವಂ ದಿಟಂ. ಆಳ್ವನುಲ್ಲಂಘಿಪುದೆ ೮೦
ಲೀಲೆಯೊಳಗಿರ್ದುಮಾ ಸೂತ್ರಸಮಯಂಗಳಂ
ಸುಪ್ರಕಟಮಿಂತು?”
ನಿಂದಡೆ ನಿಂದು, ಕಣ್ಣಾಲಿ
ತನ್ನಿದಿರ್ ನಟ್ಟು, ಆಲಿಸುತಿರ್ದ ರಾಮಂಗೆ,
ಒರ್ವನಿಗೆ, ತೆರೆ ಮಸಗಿದಂಬುಧಿಯ ತುಂತುರಿನ
ಹೊಗೆಯ ಮುಗಿಲಿನ ನಡುವೆ ಮೈದೋರ್ದುದಸ್ಫುಟಂ
ಗಾತ್ರಮಾ ಸುಮನಸರ ವರಶಿಲ್ಪಿಯಾ. ಮುಗಿದ
ಕೈತೋಳ್ಗಳಂ ಮಳೆಯ ಬಿಲ್ಲವೊಲ್ ನೆಗಹುತಾ
ವಿದ್ಯುದ್‌ವಿಯನ್ ಮೂರ್ತಿ ಮತ್ತಮೊರೆದತ್ತಿಂತು
ವರುಣನ ಹಿತಾದೇಶಮಂ:
ತಿರುಗು ತೀರಕೆ , ತರುಣಿ
ವಂಶೋದ್ಭವನೆ; ಮರಳಲಂಬುಧಿಯ ಮರ್ಯಾದೆ ೯೦
ತನ್ನ ಮುನ್ನಿರ್ದುನ್ನತಿಗೆ. ನಿನ್ನ ಸೇನೆಯೊಳ್
ಇರ್ಪನೊರ್ವಂ ವಸನಧವಳಂ; ಪೆಸರ್ ನಳಂ.
ಬರ್ದಿಲರ ಬಡಗಿಗೆನಗೆ ಪುಟ್ತಿದಾತಂ ; ನನ್ನ
ಕಲ್ಲೋಜತನಮವಗೆ ಗುಪ್ತವರಮಿರ್ಪುದಯ್.
ವಿರಚಿಸವನಿಂ ಮಹಾಸೇತುವಂ, ರಾವಣ
ವಿನಾಶಕೇತುವನವನಿಜಾ ಕ್ಷೇಮಕಾಮಿನೀ
ಸೀಮಂತ ಸಂಕೇತಮಂ. ಪ್ರಚೋದಿಸುವೆನಾಂ
ಹೃದ್ಯಾಮಿಯಾತನಾತ್ಮದ ಶಿಲ್ಪಬೋಧಮಂ.
ಮತ್ತಮಂತರ್ಯಾಮಿಯಾಗಿ ವಾನರರೆಲ್ಲರೊಳ್
ತನುಗಳೊಳ್ ಶಕ್ತಿ, ಮನದೊಳ್ ಯುಕ್ತಿ, ಕಾರ್ಯುದೊಳ್ ೧೦೦
ಭಕ್ತಿ ನೂರ್ಮಡಿಯಪ್ಪವೊಲ್ ಮಾಳ್ಪೆನದ್ಭುತಮೆ
ತಮತಮಗೆ ಸಾಮಾನ್ಯಮಾಗಿ ತೋರ್ಪಂತೆವೋಲ್.
ಕಾಣ್, ಜಾನಕೀಜಾನಿ; ನಿನ್ನ ಮೇಣ್ ನಿನ್ನಾ
ಕೃಶಾಂಗಿ ಸೀತಾ ಪ್ರೇಮಮಾಗಳೆಯೆ ವಿರಚಿಸಿಹ
ಸೂಕ್ಷ್ಮರೂಪದ ಮಹಾಸೇತು ಕಂಗೊಳಿಪುದದೊ
ತನ್ನ ದೀರ್ಘಾಯತದ ವಿಸ್ತೀರ್ಣಮಂ ಬೀಸಿ,
ಆ ಪಾರದಿಂದಮೀ ಪಾರಂಬರಂ,
ಮಹಾರ್ಣವಕೆ! ತುಂಬಿಸುವನಾ ಪ್ರಾಣಸೇತುವೆಯ
ಪ್ರೇತಪಂಜರಕೆನ್ನ ಪುತ್ರಂ ಜಡಂಗಳಂ,
ವೃಕ್ಷಂಗಳಂ, ಮೇಣ್ ಶಿಲಾ ಖಂಡಂಗಳಂ, ಬಲ್ಮೆ ೧೧೦ನೂರ್ಮಡಿಸುವೀ ವಾನರರ ಶತಶತ ಸಹಸ್ರ
ದೋರ್ದಂಡ ಭೀಮರ್ಕಳಿಂ. ಅತೀಂದ್ರಿಯ ಭಾವ
ಪಂಜರಮೆ ತಾನಾಧಾರಮಲ್ತೆ ಸೇಂದ್ರಿಯ ಸೃಷ್ಟಿ
ರಚನೆಗೆ? ಅದಾಗಳೆಯ ನಿರ್ಮತಂ ನಿಮ್ಮಿರ್ವರಿಂ:
ಕಾಣ್, ರಘೂದ್ವಹ, ರಾಮಸಿತಾರಚಿತ ಸೂಕ್ಷ್ಮತನು
ಸೇತುವಂ!”
ನೋಡುತಿರೆ ಕರಗಿದುದೊ ಕಣ್ಣೊಳೆಯೆ
ವಿಶ್ವಕರ್ಮನ ಮೂರ್ತಿ! ಗೋಚರಿಸಿತೊಡನೊಡನೆ
ಆ ಪೇಳ್ದ ಭಾವ ಸೇತು ಪ್ರೇತಪಂಜರಂ,
ದಶರಥಾತ್ಮಜ ರೋಮ ಹರ್ಷಣಕರಂ, ಮೇಣ್
ಜಗನ್ನೇತ್ರಾದ್ಭುತಂ! ನೋಡೆ ನೋಡುತೆ, ಹಿಗ್ಗಿ ೧೨೦
ಬಿರಿದುದೆನೆ ಚೇತನಂ, ಲಕ್ಷ್ಮಣಾಗ್ರಜ ಮನಕೆ
ಬಡಿದುದಾನಂದದ ಸಿಡಿಲ್. ಸಡಿಲ್ದೊಯ್ಯನೆಯೆ
ಜೋಂಪಿಸಿತೊಡಲ್. ಶಾಂತಮಾಯ್ತಯ್, ಪವಾಡಕೆನೆ
ತಕಪಕಿಸುತಿರ್ದಾ, ಪೆರುಂಗಡಲ್, ಏನುಮಂ
ಕಾಣದೆಯೆ, ಕೇಳದೇನೊಂದುಮಂ, ಕೆಮ್ಮನೆಯೆ
ಬೆರಗಾಗಿ ರಾಮಚರ್ಯೆಯನೀಕ್ಷಿಸುತ್ತಿರ್ದ
ಕಪಿಮಹಾಸಮಿತಿ ಹಮ್ಮಯ್ಸಿದುದು, ಮೂರ್ಛಿತ
ಮಹೀಪತಿಯನಾಂಜನೇಯನ ತೋಳ ತಳ್ಕೆಯೊಳ್
ಕಂಡು. ಸೀತಾನಾಥನಂ ಪೊತ್ತು ಪಿಂತಿರುಗಿ
ದರ್ಭಾಸ್ತರಣದೆಡೆಗೆ ಗಮಿಸುತಿರ್ದಂಜನಾ ೧೩೦
ಸುತನ ಚರಣಾನುಚರನಾದುದೊ ಸುನೀಲಾಭ್ಧಿ
ತನ್ನ ಮುನ್ನಿನ ಮೇರೆಗೆಯ್ದುವತ್ಯಾತುರದಿ,
ಕುದಿವ ಪಶ್ಚಾತ್ತಾಪದಿಂ ಪತಿತ ಸಾಧಕನ
ಹೃದಯವಾದರ್ಶದೆಡೆಗಿನ್ನೊಮ್ಮೆ ಹಂಬಲಿಸಿ
ಮುಂಬರಿಯುವಂತೆ!
ಏರಿದುದಂತೆ ಪೊಳ್ತರೆಯ
ನೇಸರ್, ದಿನೇಶವಂಶಜನ ಸುತ್ತಂ ನೆರೆದು
ಬೇಲಿಗಟ್ಟಿರ್ದಾ ಕಪೀಂದ್ರರ ನೆಳಲ್ಗಳಂ
ಮಳಲ ಹರಹಿನ ಮೇಲೆ ಪಟ್ಟೆ ಪಟ್ಟೆಯಿನೆಳೆದು
ನಿಡುದೂರಮೆಸೆದು. ತೆರೆದನಕ್ಷಿಯನೊಯ್ಯನೆಯೆ
ಸುಪ್ತನೋಲವಶವಾಕ್. ನೋಡಿ ವದನವ್ಯಥೆಯ ೧೪೦
ವಾನರ ಮಹಾ ವಾಹಿನೀಪತಿಗಳಂ, ಸುಯ್ದು,
ಕಣ್ಣಾದನಂಬುಧಿಯ ಕಡೆಗೆ. “ನಳನ ಪೆಸರಂ
ಕೇಳ್ದೆನೈಸಲೆ ದಿವೌಕಸ ಶಿಲ್ಪಿಯಿಂ! ಸೇತು —
ರಚನಾ ಸಮರ್ಥನೈಸಲೆ ನಳಂ ! ಮಗನಲ್ತೆ
ವಿಶ್ವಕರ್ಮಂಗೆ!” ತನ್ನೊಳಗೆ ತಾನಿಂತೆನುತೆ
ತಿರುಗಿದನು ರಾಮಚಂದ್ರಂ ಮರಳಿ ಕಪಿವರನ
ಕಣ್ಗೆ. ಸಂಧಿಸೆ ನೇರಮಾ ನಳನ ನೇತ್ರಮಂ
ರಾಮನೇತ್ರಂ, ದೀಪಮಿನ್ನೊಂದು ದೀಪಕ್ಕೆ
ದೀಪ್ತಿದಾನಂಗೆಯ್ದುದೆನೆ , ತೆಕ್ಕನುದ್ಭವಿಸಿ
ಬಗೆಯಾಳದಿಂದೆದ್ದುದಯ್, ಬುದ್ಬುದದ ತೆರದಿ, ೧೫೦
ಬುದ್ಧಿಯ ಬಹಿರ್ಮುಖಕೆ ವಿಶ್ವಕರ್ಮನ ಮಗನ
ಶಿಲ್ಪಿಸಿದ್ಧಿಸ್ಮರಣ ಬೋಧಿ. ರೋಮೋದ್ಗಮಂ
ಕಂಪಿಸುತ್ತಿರೆ ತನ್ನ ತನುವಂ, ನವಿರ್ ನಿಮಿರೆ
ಕೇಳ್ದರೆಲ್ಲರ ಮೆಯ್ಗೆ, ಕೈಮುಗಿಯುತಿಂತಾ
ನಳಂ ಮೈಥಿಲೀಪ್ರೇಮಜೀವಿಗೆ: “ತೊರೆ, ದೇವ,
ತಳ್ಳಂಕಮಂ. ಮರೆತ ಮನದ ನಿಧಿಯೊಂದೆನಗೆ
ಕೈಸಾರ್ದುದೀಗಳಚ್ಚರಿಯೆನಲ್. ಪಿತೃಕೃಪಾ
ಬಲದಿ ಕಟ್ಟುವೆನದ್ಭುತದ ಸೇತುವಂ, ಕೇಳ್,
ಘೋರಾವರ್ಣವದ ದರ್ಪಮಿರ್ಭಾಗಮಪ್ಪಂತೆ! . . . .
ಸ್ತಂಭಿತನವೋಲಪ್ಪನೀ ಸಾಗರಂ! ನೀನೆ ೧೬೦
ಕಾಣ್ಬೆಯಯ್ . . . ಬಂಡೆ ತೇಲ್ವುವು; ಬೃಹತ್ತರುಗಳುಂ
ಮುಳುಗದಿರ್ದ್ದಲ್ಲಿರ್ಪುವಚಲಗಳವೊಲ್ ದೃಢಂ,
ಸುಸ್ಥಿರಂ! ನೀನೆ ಕಾಣ್ಬಯ್… ಇಲ್ಲಿ ನೆರೆದಿರ್ಪ
ಕೀಳ್ಗಳೊಳ್ ಕೀಳ್ಗಳುಂ ಪೊತ್ತುತ್ತರ್ಪರ್ ಕಿಳ್ತು
ಶೈಲ ಬಾರಂಗಳಂ ಪ್ರಾಕ್ ಶಿಲಾಖಂಡಗಳಂ!
ನೀನೆ ನೋಳ್ಪಯ್ . . . ಬೆಸಸೆನಗೆ; ಬೆಸಸೀ ಮಹಾ
ಕಪಿಧ್ವಜಿನಿಯಕ್ಷೌಹಿಣಿಗಳುತ್ಸಾಹಕೆ! ಕಟ್ಟಿ
ಸೇತುವಂ, ಮುಟ್ಟಿಸುವೆನಖಿಲರಂ ಲಂಕೆಯ
ನೆಲಕೆ, ಶಂಕೆಯಿಲ್ಲದ ನಮ್ಮ ವಿಜಯವೇದಿಕೆಗೆ!”
ಮುಂದೆ ನಡೆದದ್ಭುತವನಾವ ಕವಿ ಬಣ್ಣಿಪನೊ? ೧೭೦
ಜೋಲುತೆ ಬಳಲ್ದು ಗರಿಗೆಟ್ಟುದುರವೇ ಮನಂ?
ಭೂಮಾನುಭೂತಿಯಾ ಭವ್ಯದೃಶ್ಯಕೆ ಬೆದರಿ
ತೊದಲದೇ ಜಿಹ್ವೆ? ಬಲ್ಲನಿತೆ ಬಣ್ಣಿಪ್ಪೆನಾಂ
ಕಾಣ್ಬುದಂ, ನನ್ನಿಯಂ, ಕಾಣ್ಮೆಯಿರ್ಪೆಲ್ಲರ್ಗೆ
ಅನುಭವಪ್ರತ್ಯಕ್ಷಮಂ. ಪೇಳ್ವೆನತ್ಯಲ್ಪಮಂ.
ಕಲ್ಲುಮಣ್ಣಂ ಕಡೆದು ಕೊರೆದುಮಪ್ರತಿಮನಂ
ಪ್ರತಿಮಿಸುವ ವೋಲ್. ಭಾವ ಸತ್ಯವನರಿಯದಿರ್ಪ
ಕಲ್ಪನಾ ಕುಬ್ಜರಿಗಿದಲ್ಪಮಲ್ತುದ್ಯಮಂ, ಕೇಳ್,
ಸೇತು ಬಂಧನ ಬೃಹದ್ದರ್ಶನಂ!
ಪೇಳ್ವುದೇಂ?
ಕೇಳ್ವುದೆ ತಡಂ  ನಳನ ವಾಣಿಯಾಶಾ ವಾರ್ತೆ ೧೮೦ಘೇ ಉಘೇ ಘೋಷಮೆಳ್ಬಿಸಿತದ್ರಿದ್ರೆಯಂ
ಬಡಿದಪ್ಪಳಿಸಿತುಪ್ಪವಡಿಸಿತ್ತು ಭೂವ್ಯೋಮ
ತಾಟಸ್ಥ್ಯಮಂ. ಕಂಡುದದ್ಭುತಂ ರಾಮಂಗೆ,
ಕಣ್ ಭೋಂಕನೆಯೆ ಭೂತಕನ್ನಡಿಯಿಕ್ಕಿದಂತೆವೋಲ್:
ಸುರರ ಶಿಲ್ಪಿಯ ವರದ ಮಹಿಮೆಯೋ? ಮೇಣ್, ನಳನ
ನವ್ಯ ಸಿದ್ಧಿಯ ಭವ್ಯ ವಿಕ್ರಿಯೆಯೊ? ಬಳೆದರ್
ಮಹಾದ್ಭುತಕೆ ವಾನರರೊಳತ್ಯಲ್ಪಗಾತ್ರರುಂ,
ಶಿಖರಸಮಮೆಂಬುಪಮೆ ಸೋಲ್ವಂತೆ! ಗಿರಿಗಳಿಗೆ
ಗಿರಿರಾಜನಾಣತಿಯನೀವಂತೆ ಕೈವೀಸಲಾ
ವಿಂಧ್ಯಮಂದರ ಸನ್ನಿಭಂ ನಳಂ, ಮತ್ತೇಭ ೧೯೦ಸಮುದಯಂ ಸಲಗ ಸನ್ನೆಯನರಿತು ನಡೆವಂತೆ,
ನೂಲ್ವಿಡದು ನಿಂದರ್ ಕೆಲರ್; ಕೋಲ್ವಿಡಿದು ನಿಂದರ್
ಕೆಲರ್: ಹಿಂಡು ಹಿಂಡೆದ್ದು ಮಲೆಯೇರಿದರ್ ಪಲರ್,
ನದ ನದೀ ಪತಿಗೆ ಸಾರಂಗಟ್ಟುವೊರ್ ಚಲದ
ಬಲದ ವಾನರಕುಲದ ಕ್ಷಿಪ್ರಕಾರ್ಮಿಕಕೌಶಲರ್.
ಬೆಂಡುವೋದುವೊ ಬಂಡೆ ಎನೆ ಮಹದ್ಭಾರದಾ
ಪ್ರಾಕ್ ಶಿಲಾ ಕಕುದಂಗಳಂ ತಬ್ಬಿ ಪಿಡಿದಲುಗಿ
ಕಿತ್ತು ಪೊತ್ತೆತ್ತಿದರು; ಬೀಸಿದರು ಚೆಂಡೆಸೆದು,
ಕೈಯಿಂದ ಕೈಗೆ, ಕಡಲನ್ನೆಗಂ. ಕಿರುಕಳೆಯ
ಪಳುವಾದುವೆನೆ ಬೃಹತ್ತರುಗಳುಂ, ದಿಂಡಲುಗೆ, ೨೦೦ಬರಲಾಗಲೆಲೆಯುದುರೆ, ಹರೆ ಮುರಿಯೆ, ಬೇರುಡಿಯೆ,
ಲರಿಲರಿಲ್ಲೆಂದು ಪರಿದರು; ಬೀಸಿಯೆಸೆದರು
ಕಡಲ್ ಗಡಿಗೆ. ಭೂಮಿಕಂಪವ ನಗುವ ಘಾತಕೆನೆ
ಧರಣಿ ದಳದುಳವಾಯ್ತು; ಬಯಲಾದುವೈ ಕಾಡು;
ನೆಲಸಮವಾದುವೈ ಬೆಟ್ಟಗೋಡು. ನೀರ್ ಬತ್ತಿ,
ತೊರೆಗಳಿರ್ದೆಡೆ ಕೊರಕಲುಳಿದುವು; ಸರೋವರಂ
ಸಂಭವಿಸಿದುವು ಬೃಹದ್ ಗ್ರಾವಂಗಳಂ ಕಿಳ್ತ
ರುಂದ್ರ ರಂಧ್ರಂಗಳಂ ಬುಗ್ಗೆಚಿಮ್ಮಿದ ಜಲಂ
ತೀವಲ್ಕೆ. ಬಿದಿರ್ಗಾಡೊಳಿರ್ದಾನೆವಿಂಡುಗಳ್,
ಚಂದ್ರಭಾಸ್ಕರಪಥದ ದೇವ ರಥಿಕರ ಕಣ್ಗೆ, ೨೧೦
ಕೆಟ್ಟು ಕೆದರಿದುವತುಲ ಗಾತ್ರದ ಕಪಿಗಳಿದಿರ್
ಪರಿವ ಕರಿ ಗೊದ್ದಗಳೊ ತಾಮೆಂಬವೋಲ್! ಒಡಲ್
ಕಡಲ ನೀರ್ಗಳ್ದೊಡೇನುಳಿವುದೈಸಲೆ ಜಸಂ
ಎಂಬ ದಾರ್ಢ್ಯದೊಳಿರ್ದನಾ ಮಹೇಂದ್ರ ಮಹೀಧ್ರಂ.
ಚಣಚಣಕೆ ತಗ್ಗಿ ನೆಲಸಮ ಕುಗ್ಗುತಿರ್ದೊಡಂ
ಹೆಸರ ಹೆಮ್ಮೆಗೆ ಧನ್ಯನೆನೆ ಹಿಗ್ಗಿ!
ಅತ್ತಲಾ
ದಿವಿಜ ಶಿಲ್ಪಿಯ ಮಗನ ನಳನ ನೇತೃತ್ವದಲಿ,
ಸತ್ತ್ವದಲಿ, ಮಂತ್ರಮುಗ್ಧಮಹಾಬ್ಢಿವಕ್ಷದ
ಬೃಹನ್ನೀಲಿಮಾ ಜಲಕ್ಷೇತ್ರದಲಿ, ಸುರಕಲಾ
ಸೂತ್ರದಲಿ, ಹೆಡೆನಿಮಿರಿ ಹರಿವಂತೆ ಹರಿದುದಾ ೨೨೦
ಸೇತುಸರ್ಪಂ, ಕ್ಷಣಕ್ಷಣಕೆ ಮುಂಮುಂ ಬೆಳೆದು
ಭೀಮ ಭವ್ಯಾದಮ್ಯ ಠೀವಿಯಲಿ. ಕಲ್ಬಂಡೆಗಳ್
ಬಿಳ್ದ ರಭಸಕ್ಕಂಬುರಾಶಿ ಸೌಳನೆ ಸೀಳ್ದು,
ಕಣಿವೆ ಬೆಟ್ಟಗಳಾಗಿ ವಾರಿ, ನೊರೆನೊರೆವೋಗಿ
ಬಾಯ್ವಿಟುದಂಭೋಧಿ. ಹೊತ್ತ ಅರೆಬಂಡೆಯಂ
ಹೆಗಲಿಂದೆ ಹಾಯ್ಕಿ, ಮೆಯ್ಗಂಟಿದೆರೆಯಂ ಕೊಡಹಿ.
ಬಲ್ದನಿಯ ಚಪ್ಪಳೆಗಳುಣ್ಮುವೋಲಪ್ಪಳಿಸಿ
ತೋಳ್ಗಳಂ, ಜಂಘೆ ಧಮ್ಮಸವಿಕ್ಕೆ ಕುಪ್ಪಳಿಸಿ,
ಪೋಣಿಸಿದವೊಲ್ ಪೋಗಿ ಬರ್ಪಾ ಮಹಾಕೃತಿಯ
ವಾನರರಸಂಕ್ಯ ಪಂಕ್ತಿಗಳೆಸೆದುವಲ್ಲಲ್ಲಿ. ೨೩೦
ಶಿಲ್ಪಾಚಾರ್ಯ ದಳಪತಿ ನಳನ ಇಚ್ಛಾರಜ್ಜು
ಪಡೆದು ಪಿಡಿದು ನಡೆಯಿಪನೇಕ ಸೂತ್ರಂಗಳೋಲ್
ಆಶ್ವೀಜದಾದಿಯೊಲ್, ವರುಣದಿಗ್ ವೇದಿಯೊಲ್,
ಸಾಯಂ ಸಮಯ ದಿವಾಕರ ಪಾದವೀಧಿಯೊಳ್
ಪುಂಜೀಭೂತ ಬೃಹಜ್ಜೀಮೂತದೊಡ್ಡುಗಳ್
ಓಳಿಗೊಳ್ವಂದದಿಂ ಪೆರ್ಬ್ಬಂಡೆ, ಪೆರ್ಮರಂ,
ಮಳಲೊಟ್ಟು, ಮಣ್ಗುಡ್ಡೆಗಳ್ ಸಂಕವರಿದುವಾ
ರಾಕ್ಷಸದ್ವೀಪಕೀ ವಾನರ ದ್ವೀಪಕೃತಿ ತಾಂ
ವಾರ್ಧಿ ವೀಥೀ ತೋರಣಂಗಟ್ಟುವೋಲಂತೆ!
ಇಂತೊಂದು ಪಗಲೊಂದಿರುಳ್ ಪತ್ತು ಮೇಲ್ ನಾಲ್ಕು ೨೪೦
ಯೋಜನಂಗಳ್ ಮುಂದುವರಿದರೆ ಮಹಾ ಸೇತು,
ನಾಯಕ ಶಿಲ್ಪಿ ನಳಂ ಕೃತಿಯಗ್ರಭಾಗದೊಳ್
ಶೃಂಗ ಸದೃಶಂ ನಿಂದು, ಕಟ್ಟಣೆಯ ಮುನ್ನಡೆಗೆ
ಬಟ್ಟೆಯಂ ತರಿಸಲ್ವ ಕಣ್ಣ ಕರ್ತವ್ಯದೊಳ್
ತೊಡಗಿರಲ್, ತೆಂಕಣದ ದಿಗುತಟದಿನೆದ್ದುದು
ವಿಚಿತ್ರಮೆನಲೊಂದಪೂರ್ವಂ ವಸ್ತುರೂಪಂ.
ಕುತೂಹಲದಿ ನೋಡುತಿರೆಯಿರೆ, ಪಿರಿದುಪಿರಿದಾಗಿ,
ತೆರೆವೊಲವನುಳುವ ಹಲವೆನೆ ಸೀಳಿ ಶರಧಿಯಂ
ಬಂದುದು ಕರಾಳ ಕೃತನಿಶ್ಚಯದ ದುಶ್ಯಕುನ
ಘನ ವಿಘ್ನ ವಿನ್ಯಾಸದಿಂ ಕರೆದು ಸಂಜ್ಞೆಯಿಂ ೨೫೦
ತೋರಲದನಗ್ನಿಪುತ್ರಂಗಾ ಮಹಾ ಸೇನಾನಿ,
ಪುರ್ಬ್ಬು ಸುರ್ಕಲ್ ನೋಡಿ, ಶಂಕಿಸುತೆ , ಬಳಿಯಿರ್ದ
ವಾನರಂಗೊರ್ವಂಗೆ ಪೇಳ್ದನೊಂದರೆಯಂ
ಗುರಿಯಿಡಲ್ಕೆ. ಬಂದನನಿತರೊಳಲ್ಲಿಗಾಂಜನೇಯಂ;
ಕಂಡನವನುಂ ಸೇತುಮುಖಕಿದಿರಾಗಿ ತೇಲಿ
ಭೀಮವೇಗದಿ ಬರುತಲಿರ್ದಾ ಭಯಂಕರದ
ಬಂಡೆಗುಂಡಂ. ರಾಮಲಕ್ಷ್ಮಣರುಮನ್ನೆಗಂ
ಬಂದರಲ್ಲಿಗೆ; ಕಂಡರದ್ರಿಕೂಟೋಪಮದ
ಶಿಲೆಯ ಸಿಡಿಲಂ, ತ್ರಿಕೂಟಾಚಲರ ರಾಕ್ಷಸೀ
ಕೂಟವಿದ್ಯಾ ಕುಟಿಲ ಪಾರಂಗತೆಗೆ ಪ್ರಮಾ ೨೬೦
ಸಾಕ್ಷಿಯಂ ಪ್ರತ್ಯಕ್ಷಮಂ. ಸೇತು ಮುಖದಲ್ಲಿ
ಮೊಗಸಿ, ಸಾಗರದೆಡೆಗೆ ದಿಟ್ಟಿ ನಿಕ್ಕುಳಿಸಿರ್ದ
ವಾನರ ಮಹಾಮುಖ್ಯರಂ ಕಂಡು, ದೂರದೊಳ್
ರಚನಾ ಕ್ರಿಯೆಯೊಳಿರ್ದ ನರೆನವಿರ ಜಾಂಬವಂ
ಬಂದನಲ್ಲಿಗೆ. ನಿಂದು ನೋಡಿದನು ಪಡಗೆನಲ್
ತೇಲಿ ಬರ್ಪಾ ಸಿಡಿಲ್ ಬಂಡೆಯಂ. ಸೇನಾನಿ
ಬೆಸಸಲರೆಯಂ ತುಡುಕಿ ಗುರಿವಿಡಿದು ನಿಂದಿರ್ದ
ವಾನರಂಗೆಂದನ್: “ಎಸೆ ಬೇಗಮಿಡು, ಇಡು ಗುರಿಗೆ!
ತಳುವದಿರ್. ಬಳಿಸಾರಲನುವಿತ್ತೊಡಾ ಮಹಾ
ಮಾಯಾವಿ ಕಿಡಿಸದಿರನೀ ಸೇತುಕಾರ್ಯಮಂ. ೨೭೦
ಬಲ್ಲೆನವನಂ: ಜಿಹ್ಮಯೋಧಿ; ವಿದ್ಯುಜ್ಜಿಹ್ವನಾ
ಪೆಸರ ದೈತ್ಯಂ! ಸೇತು ಬಂಧನದ ವಾರ್ತೆಯಂ
ಬೇಹಿನವರಿಂದರಿಯುತದರ ಭಗ್ನಕೆ ಲಂಕೆ
ಕಳುಹಿದೀ ಪ್ರಲಯಾಗ್ನಿ ವಿಘ್ನನಂ ದೂರದೊಳೆ
ಪರಿಹರಿಸದಿರೆ, ನೀರ್ಗೆ ಹೋಮಮೈಸಲೆ ನಮ್ಮ
ಗೆಯ್ದು ಕಜ್ಜಂ!”
ಜಾಂಬವನ ನುಡಿಗೇಳುತಾ ಭೀಮ
ವಾನರಂ ಕವಣೆಯೆಸೆದನು ಕೈಯ ಕೋವಿಯಿಂ
ಸಿಡಿಲೆಣೆಯ ಬಂಡೆಗುಂಡಂ. ಕೋನಕೋನಮಯ
ಕರ್ಕಶಾಕೃತಿಯ ಕಲ್ಮೊರಡಿಯದು ಸರಿಸರಿದು
ಮೇಲೇರಿ, ದುಂಡಾಗಿ ನುಣುಪಾಗಿ ಕಿರಿದಾಗಿ ೨೮೦
ದೂರ ದೂರಕೆ ಸಾರಿ, ತನ್ನ ಪಥದಿಂ ರಚಿಪವೊಲ್
ಜ್ಯಾರೇಖೆಯಂ ಜಿಹ್ಮಯೋಧಿದೈತ್ಯನ ಕಡೆಗೆ
ಧಾವಿಸಿತು, ಧುಮುಕಿತು ಜವಂಜದಿ. ಕ್ರೂರವಿಧಿ
ಬ್ರಹ್ಮಾಂಡ ಚಂಡೆಯಂ ಸಿಡಿಲ ಕುಡುಹಿಂ ಬಡಿದು
ನುಡಿದುದೋ ನಾಂದಿಯಂ ಲಯನಾಟಕಕ್ಕೆನೆ
ಪೊದಳ್ದುಣ್ಮಿದುದು, ಪೊಡವಿಯ ಕೊಡಂಕೆ ಕಿವುಡೇಳೆ.
ಢಣಢಣಢಣತ್ಕಾರ ಘೋರ ರಾವಂ. ಕೂಡೆ
ಕಿಡಿಕಿಡಿಯೆಳ್ದು ಪುಡಿಪುಡಿವೋಗಿ ಬಿಳ್ದುದು ಬಂಡೆ
ತುಂತುರು ತುಂತುರಾಗಿ. ಹತಿಗೆ ತೆಕ್ಕನೆ ತೆರೆದ
ಶತ ಶತ ಮುಖಂಗಳಿಂ ಹೊಗೆಯುಗುಳ್ದೊಡನೊಡನೆ ೨೯೦
ಓಕರಿಸುತುರಿವೆಂಕೆಯಂ ಆ ಭೈತ್ರದೈತ್ಯಂ,
ತಟಿತ್ತು ಮೇಘಂಬೊಕ್ಕು ಮರೆಯಪ್ಪವೊಲ್, ಮುಳುಗಿ
ಮಾಯವಾದನು ಮಹಾಭ್ಧಿಕುಕ್ಷಿಯಲಿ. ಮಂಜೆನಲ್
ಕವಿದ ಧೂಮದ ಸಾಂದ್ರ ಜವನಿಕೆಯೊಳಡಗಿದಾ
ಪಡಗುರಕ್ಕಸನಿರವನರಿಯಲೆಂದಾ ದೆಸೆಗೆ
ಹುಡುಕುದಿಟ್ಟಿಯೊಳಿರ್ದ ಕಪಿಗಳಚ್ಚರಿ ತಾನೆ
ತಮಗೆ ವೃಶ್ಚಿಕಮಾಯ್ತಲಾ ಪಶ್ಚಿಮ ದಿಶಾ
ಸಮೀಪದೊಳ್ ಕಡಲ ಹೊಡೆಸೀಳ್ದೆದ್ದು ಮೂಡಿದ
ಮಹೀಧರೋಪಮ ನೌಚರ ನಿಶಾಚರನ ಬೃಹದ್
ಭ್ರೂಕುಟಿಯನವಲೋಕಿಸಲ್! “ಸುಲಭನಲ್ತಿವಂ.” ೩೦೦
ಎನುತೆ ಕಪಿನೃಪನಲ್ಲಿ ನಿಂದಿರ್ದ ಶತಬಲಿಗೆ
ಬೆಸಸಿದನು ಕಲಿಗೆ. ಗಗನಚರರಗ್ರೇಸರಂ,
ಕಾಮರೂಪಿಗಳೋಜನುರುವ ಶತಬಲಿ ಕರೆದು
ಕಟ್ಟಾಣತಿಯನಿತ್ತನೈವರಿಗೇ, ತನ್ನಯ
ಚಮೂ ಗೌರವ ತ್ರಾಣರೆನಿಪರ್ಗೆ.
ಮುಗಿಲೆಡೆಗೆ
ನೆಗೆದರವರೈವರುಂ. ಮರೆಯಾದರಭ್ರದೊಳ್.
ವಾನರ ಕುತೂಹಲಂ — ನೋಡುತಿರೆಯಿರೆ ಕೊರಳ್
ನಿಮಿರಿ, ಧುಮುಕಿದರು ವಿದ್ಯುಜ್ಜಿಹ್ವನಿರ್ದೆಡೆಗೆ
ಧೂಮಕೇತುಗಳಾಗಿ, ಹೊಲದ ಹೊದರೊಳು ಹುದುಗಿ
ಹೊಂಚುತಿಹ ಹೊರಸಿಗೆರಗುವ ಡೇಗೆಬೇಗದಲಿ. ೩೧೦
ಪೊರೆಕೆವೋಲ್ ನೀಳ್ದ ಲಾಂಗೂಲಾಗ್ನಿ ಜಟೆಗಳಂ
ಬಾನ್ದೆಸೆಗೆ ಬೀಸಿದುಲ್ಕೋಜ್ಜಲ ಮುಖಂಗಳಂ.
ತನ್ನ ಮೇಲ್ವಾಯ್ವ ಮೃತ್ಯುವ್ಯಾಘ್ರ ಭೈರವ
ನಖಂಗಳಂ ಕಂಡು ವಿದ್ಯುಜ್ಜಿಹ್ವ ರಾಕ್ಷಸಂ
ಹೊಡೆಮಗುಚಿ ಕಡಲೊಡಲ ಬಗಿದಡಗುವನಿತರೊಳೆ
ಹೊಕ್ಕುಳೊಡೆಯಲ್ ಹೊಕ್ಕರೈವರು ರಕ್ಕಸನ ಮೆಯ್ಯ
ಸಿಡಿಮದ್ದಿನಾಗಾರಮಂ. ಹಗಲೆ ಇರುಳಾಯ್ತೊ
ಎನಲ್ಕೊಂದು ತೆಕ್ಕನುಕ್ಕಿತು, ಚುಕ್ಕಮುಕ್ಕಿಯಂ
ಕುಕ್ಕಿದೊಲ್, ಭಾಸ್ಕರ ಲಕ್ಷ ತಿಗ್ಮ ಖರ ರೋಚಿ.
ಬಡಿಯಲೊಡೆದುದೊ ಸಿಡಿಲ ಡಿಂಡಿಮವೆನಲ್, ಕೇಳ್ದ ೩೨೦
ಕಿವಿ ಮೂರ್ಛೆಯಂ ಮರೆವೊಗಲ್ ಪೊಣ್ಮೆದುದೊ ಸದ್ದು
ದಿಗಿಭ ಹೃದಯದ ಧೈರ್ಯಮಳ್ಕಾಡುವೊಲ್! ಬೆಂಕೆ
ತಗುಳಿದೆಣ್ಣೆಯ ಗಣಿಯಿನುಣ್ಮುವಂದದಿ ಕರಿಯ
ಮುದ್ದೆ ಮುದ್ದೆಯ ರಾಸಿರಾಸಿಯ ಹೊಗೆಯ ಹೊರಳಿ,
ಧೂಮಕಾಳಾಂಧಕಾರದಿ ಮುಸುಗುತಂಬುಧಿಯ
ಸೀಮೆಯಂ, ಘುಳುಘುಳುಘುಳುಂ ಮೂಳುಗಿದನು ಮಹಾ
ಧ್ವಾನ ಚೀತ್ಕಾರದಿಂದಾ ಭಯಂಕರಾಭೀಳ
ಭೈತ್ರಾವತಾರಿ ದೈತ್ಯಂ. ಮುಳುಗಿ, ಮುಳುಮುಳುಗಿ,
ಮುಳುಗಿದನು ಮರಳಿ ಮೇಲೇಳಗೊಡದಿಹ ಕಡಲ
ಕುಳಿರು ಕೋಳುವ ತಣ್ಣನೆಯ ತಳಾತಳ ತಳಕೆ. ೩೩೦
ಇಂತಯ್ದ ಪಗಲೈದಿರುಳ್, ಪೃಥಿವೀ ಬೃಹನ್
ವಲ್ಮೀಕದಿಂದುಣ್ಮಿದಾದಿಶೇಷಂ ದೇವಿ
ಲಕ್ಷ್ಮಿಯನರಸಿ ವಿಷ್ಣುಶಯ್ಯಾಗಾರಮಂ
ಪ್ರವೇಶಿಸುವ ಮಾಳ್ಕೆಯಿಂ, ವಾರ್ಧಿವಕ್ಷದೊಳಖಿಲ
ದೈತ್ಯ ವಿಘ್ನದ ದಂತ ಕೋಟಿಯಂ ಮುರಿದಿಕ್ಕಿ
ಸಂವರ್ಧಿಸಿತು ದೇವಶಿಲ್ಪಿಯ ತನೂಭವನ
ಭವ್ಯರಚನೆಯ ಸೇತುಸಿಂಹಂ. ಸುವೇಲಾದ್ರಿ
ಸುಖದುಃಖ ರೋಮಾಂಚನಕೆ ವಿಕಂಪಿಸುತ್ತಾ
ತ್ರಿಕೂಟಾದ್ರಿಯಂ ಸನ್ನೆಯಿಂದೆಳ್ಚರಿಪ್ಪವೋಲ್
ತನ್ನ ತರುವಸ್ತ್ರದಿಂ ಬೀಸಿತಿಂಗಿತದೊಂದು
ಬಲ್ಗಾಳಿಯಂ. ಐವಗಲ್ ಮೊದಲ್ಗೊಂಡಿರದೆ
ಅಸ್ಥಿರೆತೆಯಾಂತಿರ್ದ ಸಾಗರಸ್ಥಿರಜಲದ
ಸುಖೋದ್ವಗ್ನ ಸಂಕ್ಷೋಭೆಯಂ ಕಂಡು ಮೈಥಿಲಿಗೆ
ಮನದಾಸೆ ಕೊನರಿದುದು; ಹೃದಯಮನುಕರಿಸಿದುದು
ಸಲಿಲ ಸಂಭ್ರಮದ ಉಲ್ಲೋಲ ಕಲ್ಲೋಲಮಯ
ಜಲಧಿಯಂತಃಕರಣಮಂ. ಕನಕ ಲಂಕಾ
ಪ್ರಜಾಮನಂ ಕಡೆದೊಲ್ ಕಲಂಕಿದತ್ತಾ ಪ್ರಕೃತಿ
ಶಕುನಂಗಳಿಗೆ ಶಂಕೆಗೊಂಡು. ಲಂಕೇಶ್ವರಂ
ನೆರೆವೊನಲ್ಗಾಂಕೆಗೊಂಡದರ ಬೇಗಕೆ ಕುಸಿದು
ಹಿಸಿದು ಬೀಳುತ್ತೊಯ್ಯನೆಯೆ ಹಿಂದು ಹಿಂದಕ್ಕೆ ೩೫೦
ಸರಿವ ಪುಸಿಯೆರೆಮಣ್ಣಿನೊರ್ವೊಳೆಯ ದಡದಂತೆ
ಮತ್ತ ಮತ್ತಂ ಕಡಿದು ಕಡಿದುಗ್ರನಾಗುತ್ತೆ
ಬೆಸಸಿದನು ಪಡೆಗೆ ಬೇಹಿಂಗೆ ಚತುರೋಪಾಯ
ಚತುರಂಗ ಸಮರ ಸನ್ನಾಹಮಂ.
ಹೆಮ್ಮರನ
ಬೇರರಿವುದೆಂತೈ ಕೊನೆ ಹೂತು ಕಾತುದನಂತೆ
ಪಣ್ತುದಂ? ತರುಗಳಂ ಕಿಳ್ತು, ಗಿರಿಗಳನೆತ್ತಿ,
ಕಲ್ಲು ಮರ ಮಟ್ಟು ಮಟ್ಟಿಯನಿತ್ತು ಸೇತುವೆಯ
ಕಟ್ಟಿತಕೆ, ಬೆಟ್ಟಗಾಡಂ ಬಯಲ್‌ಗೆಯ್ಯುತ್ತೆ
ನೆಲದ ಮಟ್ಟಕೆ ಮೆಟ್ಟುತಿರ್ದ ಕಪಿಯಾಳ್ಗಳುಂ
ಪೇಳರಿವರೆಂತಾ ನಿಪುಣ ನಲ ವಿಪುಲ ಕೃತಿ ೩೬೦
ಶ್ರೀರಾಮಸೇತು ಗುರಿಸೇರ್ದುದಂ? ಐದನೆಯ
ಪಗಲೆಯ್ದುತಿರ್ದತ್ತು ದಿಜ್ಮೇಖಲಾರುಣಿಮ
ವರುಣ ಮಂಚಕೆ. ಬೈಗಿನೊರೆಯ ಕದಿರ್ಗೆಂಪು
ಪೆತ್ತುದು ಬೃಹಚ್ಛಾಯೆಯಂ ಭೀಮದೀರ್ಘಮಂ
ಬಂಡೆಗಾ ಗಿರಿಮಹೇಂದ್ರನ ರುಂದ್ರರುಂಡದಾ.
ತಪಸ್ವಿ ಸಂಪಾತಿಯಂ ಶತಮಾನ ಶತಗಳಿಂ
ಪೊತ್ತೊಂದು ಗುರುತಪದ ಗೌರವದ ಭಾರದಿಂ,
ಪತ್ತು ಸೂಳ್ ಪತ್ತಾನೆಯೆತ್ತರದ ಮೇಣನಿತೆ
ಬಿತ್ತರದ ತೋರದಿಂ ನಿಂತಾ ಬೃಹಚ್ಛಿಲೆಯ
ಬಳಿಯೆ ನಿಂದನೊರ್ವಂ ಬೃಹತ್ತರ ವಾನರಂ. ೩೭೦
ಅದ್ರಿಯೊ ಅರಣ್ಯವೊ? ವನೇಚರನ ರೂಪದಿಂ
ಪೊಣ್ಮಿತೊ ಮಹೀಧ್ರಕೂಟಾಗ್ರಂ? ಎನಿಪ್ಪಂತೆ
ರುಂದ್ರಮಿರ್ದಾತನ ಶರೀರಮಂ ಕಿಕ್ಕಿರಿದು
ರೋಮಮಿರ್ದುವು ಮುದ್ಗರ ಭಯಂಕರಂ. ಮಲೆಯ
ತಲೆನೆಳಲ್ಗಾಂಕೆಗೊಂಡಿರ್ದುದಾತನ ನೆಳಲ್,
ದೈತ್ರಯಗಾತ್ರಂ, ಭೂತ ಭೀಷಣಂ!
ಜಾಂಬವನ
ದಳದವನದೊರ್ವನಾ ಮೇರು ನಾಮಕ ಮಹಾ
ವಾನರಂ. ಶಕುನಿಶಿಲೆಯೆಡೆ ನಿಂತು, ಸುತ್ತಲುಂ
ನೋಡಿದನು, ಸೋಜಿಗದ ಮುಖಮುದ್ರೆಯಿಂ : “ಇದೇನ್!
ಕಲ್ ಮರಗಳನಿತುಮಂ ಕಿಳ್ತವರ್ಗೀ ಬಂಡೆ ೩೮೦
ತಾನೊಂದೆ ಭಾರವಾದುದೆ? ಕಾಂಬೆನೊಂದು ಕಯ್!
ಕಿಳ್ತೆತ್ತಿ ಪೊತ್ತುಯ್ದೆನಾದೊಡೀ ಕಲ್ಲೊಂದೆ
ಸಾಲ್ವುದೈಸಲೆ ಯೋಜನಂಗಳ್ಗೆ!” ತರಿಸಂದು
ಉಸಿರೆಳೆದು ನಿಮಿರಿದನ್, ವಕ್ಷಖಂಡಗಳುರ್ಬ್ಬೆ
ವೃಕ್ಷಮಯ ಗಂಡಶೈಲದ ಬಂಡೆಗಳವೋಲ್.
ಕೆದರ್ದ ಕೇಶದ ಮೇಘರಾಶಿಯಂ ಬೆಳಗುತಿರೆ
ಬೈಗಿನ ಬಿಸಿಲ್, ತಬ್ಬಿದನು ತೋಳ್‌ಬಿಗಿದು ಶಿಲೆಯ
ಡುಬ್ಬಮಂ, ವಾಸುಕಿಯ ತನು ಮಂದರದ ಮೆಯ್ಗೆ
ಸುರುಳಿಯುರುಳಂ ಸುತ್ತಿಬಿವಂತೆ, ಪಲ್ಗಚ್ಚೆ.
ಕಣ್ಬಿಚ್ಚಿ, ಉಸಿರ್ಕಟ್ಟಿ; ನವಿರುನವಿರಿಂ ಬೆಮರ್ ೩೯೦
ತೊರೆಯಿಳಿಯೆ, ಮೆಯ್ ನರಗಳೆಲ್ಲ ಹೆದೆಯೇರ್ದವೋಲ್‌
ನಿಮ್ಮನೆ ನಿಗುರೆ, ನೆತ್ತರ್ ಚಿಮ್ಮಿ ಮೊಗಗೆಂಪೇರೆ;
ಮಲೆಯ ಮಂಡೆಯ ಶಕುನಿಶಿಲೆಯ ಬಲ್‌ಬಂಡೆಯಂ
ತಳ್ಳಿದನ್, ನೂಂಕಿದನ್, ಸೆಳೆದನೆಳೆದನ್, ಮತ್ತೆ
ಮತ್ತಲುಗಿನ್, ಪೇಳ್ವುದೇನಂ? ಸಡಿಲ್ದುದಾ
ಶಕುನಿಲೆ! ಯೋಜನಜ್ಯಾರೇಖೆಯಂ ಗೀಚಿ
ತೊನೆದತ್ತದರ ಛಾಯೆ! ನಡುಗಿತು ನೆಲಂ. ಗುಡುಗಿ
ಗೈರಗರ್ಭಂ ಕರೆದುದು ಕಳಚಿ ಕಳಲ್ದರೆಯ
ಕೂರ್ಬರಿಸಮಂ, ಸದ್ದುಹದ್ದುಗಳೆದ್ದು ದಿಗ್ದೆಸೆಗೆ
ಚೀರಿ ಹಾರಿದುವಚಲ ಚೀತ್ಕಾರ ಶಕುನಗಳವೋಲ್. ೪೦೦
ಬಂಡೆಯಡಿ ಗುದ್ದಿನೊಳಗೊರಗಿ ನಿದ್ದೆಯೊಳಿರ್ದ
ಕಣೆಹಂದಿಗಳ್ ದಿಗಿಲ್‌ಗೊಂಡೆದ್ದು ಹೊರನುಗ್ಗಿ
ಬೀಳ್ವನಿತರೊಳೆ ನುಚ್ಚುವೋದುವೋ, ಒರಳ್‌ಗುಂಡು
ಕಡೆದರೆದವೋಲ್!
ಕಂಡನುತ್ಪಾತಮಂ, ಬಳಿಯ
ಮತ್ತೊಂದು ಶಿಖರದಿ, ಶರಗುಲ್ಮ. ಅಲ್ಲಿಂದೆ
ದೈತ್ಯಕಂಠದಿ ಕೂಗಿ ಕರೆದನೀ ಮೇರುವಂ.
ಕೇಳುತಾ ವ್ಯಾಘೋಗ್ರನಧಿಕಾರ ವಾಣಿಯಂ
ರುಂದ್ರಕರ್ಮವನಿನಿತು ಕೈತಡೆದು, ಶಿರವೆತ್ತಿ,
ಶರಗುಲ್ಮನಂ ನೋಡಿ, ಗುರುತಿಸಿ, ಮುಗ್ನುಳ್ನಕ್ಕು,
ಕಿವಿಗೊಟ್ಟನೈ ಮೇರು : ಲಂಕೆಯಿಹ ತಾಣಮಂ ೪೧೦
ತೋರಿ, ಸೀತೆಯನುಯ್ದ ರಾವಣನ ವಾರ್ತೆಯಂ
ಪೇಳ್ದ ಸಂಪಾತಿಯಂ ತಾಳ್ದೊಂದು ಪುಣ್ಯದ
ಪವಿತ್ರತೆಗೆ ಕೀಳಲೊಲ್ಲದೆ ಬಿಟ್ಟರ್, ಆರದೆಯೆ
ಬಿಟ್ಟರಲ್ಲೆಂಬುದನ್ನರಿತು ಉಪಸಂಹರಿಸುತಿರೆ
ತನ್ನ ಕಡುಗೆಯ್ಮೆಯಂ, ಬಂದುದು ಧಳಂ ಧಳಂ
ಧಳಧಳಧಳಂ ಮಹೋತ್ಸಾಹ ಭೇರೀರವಂ,
ಪ್ರತಿರಣಿಸೆ ಶೈಲ ವನ ಸಂಧ್ಯಾಭ್ರ ಸಂಭ್ರಮತ್
ಪ್ರಾಣನಕಂ!
ಓಡಿ ಬಂದೊರೆದರೈ ಚರರ್,
ಡಿಂಡಿಮೋದ್ಘೋಷದಿಂ : “ಕೇಳಿಮೆಲ್ಲರ್,
ಕಪಿಧ್ವಜರಿರಾ, ಸೋತುದಂಬುಧಿ ನಮ್ಮ ಸೇತುವಿಗೆ! ೪೨೦
ಮರಣಮಥವಾ ಶರಧಿತರಣಂ’ ರಘೂದ್ವಹನ
ಪೊಣ್ಕೆ ಪೂಡಿದುದು ಲಂಕೆಯ ನೆಲದಿ ತನ್ನಡಿಯ
ಗೆಲ್ಗಂಬಮಂ! ದೇವ ಸುಗ್ರೀವನಾಜ್ಞೆಯಿಂ,
ಗಿರಿಗಳನಿಳಿದು ಬನ್ನಿ; ವನಗಳನುಳಿದು ಬನ್ನಿ;
ಬೆಟ್ಟಗಳಿರಲಿ ಬನ್ನಿ; ಕಾಡುಗಳಿರಲಿ ಬನ್ನಿ;
ಸೇನೆ ನೆರೆದಿದೆ ದಾಂಟಲಿಂದನೊಂದಿರುಳಿನೊಳೆ
ನೂರು ಯೋಜನ ಸೇತುದೂರಮಂ! ಬನ್ನಿ,
ಬನ್ನಿ, ಬೇಗನೆ ಬನ್ನಿ!”
ಕಿತ್ತ ಬಂಡೆಯನಲ್ಲೆ
ಮತ್ತೆ ಜಡಿದೊತ್ತಿದನ್; ಕಾಳ್ಕೋಣವಿಂಡುಗಳ್
ತೊತ್ತಳದುಳಿಯುತಡವಿಯಂ ಧಾವಿಸುವ ತೆರದಿ, ೪೩೦
ಪದದ ಘಾತಕೆ ಗಿರಿಯ ಬರಿ ಕುಸಿದು ದರಿಬೀಳೆ,
ಗುಡುಗುಡನೆ ನಡೆದನಾ ಮೇರು, ಪಡೆಯಂ ಕೂಡಿ
ದೈತ್ಯದುರ್ಗಕೆ ಲಗ್ಗೆ ನುಗ್ಗುವ ತವಕದೊಂದು
ತೇರುರುಳ್ವಂತೆ. ನಡೆತರೆ ಕಂಡನಲ್ಲಲ್ಲಿ,
ಹಾದಿಯೆಡೆಯೊಳೆ ಹೊತ್ತ ಬಂಡೆಯನೆಸೆವರಂ;
ಬೇರನರೆಪರಿದ ತರುವರವನೋರೆಯೆ ತೊರೆದು
ಬರುತಿರ್ದರಂ; ಹೆಡಗೆ ಮಣ್ಗಳಂ ಹೆಗಲಿಂದೆ
ಗುಪ್ಪೆ ಗುಪ್ಪೆಯೆ ಹಾಯ್ಕಿ, ಮಣ್‌ವೆಟ್ಟುಗಳನೊಟ್ಟಿ
ಹಜ್ಜೆ ಹಜ್ಜೆಗೆ, ಹಂತಿಗೆಯ್ದೋಡುತಿರ್ದರಂ;
ಶುಭದ ವಾರ್ತೆಯನೊಬ್ಬರೊಬ್ಬರಿಗೆ ಕೊರಳೆತ್ತಿ ೪೪೦
ಕೂಗಿ, ಕೈವೀಸಿ ಸಾರುತ್ತಿರ್ದರಂ; ದಾರಿ
ಕಿಕ್ಕಿರಿದು ಮುನ್ನಡೆವ ತವಕಕ್ಕೆ ನಾನು ತಾನ್
ಪೋರ್ದಿರ್ದ್ದರಂ!
ಇರುಳ್ ಮುಡಿಗೆ ಮಲರಿದುವರಿಲ್.
ಪರ್ಬಿದತ್ತಂಬುಧಿಯ ಮೇಲೆ ಮರ್ಬುದಿಂಗಳ್
ಮುಂಜುಜೊನ್ನಂ. ಪೊನಲ್ವರಿದುದು ಕಪಿಧ್ವಜನಿ,
ಸೇತುಪಾತ್ರಂ ತುಂಬಿ ತುಳ್ಕಿತೆನೆ, ಲಂಕಾ
ಸರಿಲ್ಲಕ್ಷ್ಮಿಯಂ ಅಘ ನಿದಾಘದಿಂ ಪೊರೆಯಲ್
ಸಮುದ್ರ ಮಘಮಂ ಕಳುಹಿದಂಬುದಾಕ್ಷೌಹಿಣಿಯ
ಅಸಂಖ್ಯ ವಾಹಿನಿಗಳೋಲ್. ಅಂತುಟಾ ಇರುಳೆಲ್ಲ
ಗಿರಿ ಮಹೆಂದ್ರನನುಳಿದ ವಾನರರ ವಾಹಿನಿಯ ೪೫೦
ಕೋಲಾಹಲಂ, ಸಾಗರದ ಸೀಮೆಯಂ ದಾಂಟಿ,
ಶಿಬಿರವಿಕ್ಕಿತು ಸುವೇಲಾದ್ರಿನಿದ್ರೆಯನೊದ್ದು
ಕಡೆದೆಬ್ಬಿಸುತ್ತದರ ಜಲ ಸಸ್ಯ ಸುಂದರದ
ಸಾನು ಕಂದರದ ವಂಕಿಮ ವಕ್ಷವೇದಿಯಲಿ!




*************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ