ನನ್ನ ಪುಟಗಳು

24 ಮೇ 2018

ಶ್ರೀರಾಮಾಯಣ ದರ್ಶನಂ: ಲಂಕಾ ಸಂಪುಟಂ: ಸಂಚಿಕೆ 6 - ರಣವ್ರತರ್ ವಹ್ನಿರಂದರ್


ಶಿಲೆಯ ಸೃಷ್ಟಿಸಿದವನೆ ಶಿಲ್ಪಿಗಾವೇಶಮಂ
ಕೊಡುವಂತೆ, ರಾಮಕಥೆಯಂ ಕಲ್ಪಿಸಿದ ನೀನೆ
ಕೃಪೆಗೆಯ್ಯವೇಳ್ಕುಂ ನನಗೆ ಮಹತ್ ಪ್ರತಿಭೆಯಂ,
ಜಗದ್ಭವ್ಯ ದೈತ್ಯ ಕಾವ್ಯವನಿದಂ ದಿವ್ಯಮೆನೆ
ಮುಂದೆ ನಡಸಲ್ಕೆ. ಹೇ ದೇವಕವಿ ವಾಲ್ಮೀಕಿ,
ಮಹಿಮೆ ಶಿಲ್ಪಿಗೆ ಕಲೆಯದಲ್ಲದೆಯೆ ಶಿಲೆಯನೇಂ
ನಿರ್ಮಿಸಿದ ಪೆರ್ಮೆ ಸಲ್ವುದೆ? ನಿನ್ನ ಸೃಷ್ಟಿಯಾ
ವ್ಯೋಮ ಚುಂಬಿತ ಭೂಮ ವೈಭವದ ಶಾಶ್ವತಂ
ಶ್ರವಣಶೈಲದ ಶಿಲಾಜೂಟದಿಂ, ಕಾಣ್ಕೆಯಂ
ಕಂಡವೊಲೆ, ಕಂಡರಿಪೆನೀ ಕಾವ್ಯಗೋಮಟನ! ೧೦ಕೈಮುಗಿದೆರಗಿ ಬೇಡುವೆನು; ಹರಸಿ ಕೊಡು, ತಂದೆ,
ವರವಲ್ಲದೆಯೆ ಬರಲೊಲ್ಲದಾ ಚಿರಂತನಂ
ಶ್ರೀ ಸ್ಫೂರ್ತಿಯಂ.
ಭರ್ಮದೀಪ್ಯ ಹರ್ಮ್ಯಾಂತರದಿ
ರತ್ನ ನಾನಾ ರಮ್ಯ ಕರ್ಬೂರಿತಾಸನದಿ
ಬರ್ಬರಶ್ರೀಯುತಂ ಕಲಿ ಕರ್ಬುರೇಶ್ವರಂ
ಶೋಭಿಸಿದನ್ನನುನ್ನತ ದಶ ಕಿರೀಟಿ, ತ್ರೈಲೋಕ್ಯ
ಬೀಭತ್ಸು, ಬಲಿ ರಾವಣಂ. ರೋಷಭೀಷಣಂ,
ಬಹುಶ ಭಗ್ನಾಶೆಯಿಂ ಕರ್ಕಶದಶಾನನಂ,
ಪೆಣ್ಣೊರ್ವಳವಹೇಳನದಿ ಗಂಡುಗೆಟ್ಟೆರ್ದೆಯ
ನಾಣ್ ಮುಳಿಸನನ್ಯರ್ಗೆ ತೋರಗೊಡದಿರ್ದೊಡಂ ೨೦ಹೋರಾಡುತೊಳಸೋರ್ದವಂ, ತನಗೆ ತಾನಳುಕಿದಾ
ತನ್ನಂತರಾತ್ಮನ ಭಯದಿನಪ್ರಸನ್ನಂ, ನೆರೆದ
ದೈತ್ಯ ಪ್ರಮುಖ ಸಮ್ಮುಖದೊಳಿಂತು, ಕೆಮ್ಮೀಸೆ
ಕಿಡಿಯುಗುಳೆ, ಕೊಡಹಿದನು ಸರ್ಪರೋಮದ ತನ್ನ
ದರ್ಪ ಕೇಸರವ:
ಲಂಕಾ ಮಹೋದಯರಿರ,
ಸಚೀಶರಿರ, ಪಡೆವಳರ್ಗಳಿರ, ಸತ್ ಪ್ರಜೆಗಳಿರ,
ರಾಕ್ಷಸ ಕುಲಾಕಳಂಕ ಶಶಾಂಕರಿರ, ನಮ್ಮ
ಜನನಿಗೆ ಮಿಗಿಲ್ ಜನ್ಮಭೂಮಿಗೆ ಕುಲೋನ್ನತಿಗೆ
ಜಾತಿ ಗೌರವಕಿಂದು ಬಂದಿದೆ ಮಹಾಂತಕ
ಶಂಕೆ. ದೈತ್ಯ ನಾಗರಿಕತೆಯ ತಾಯಿಬೇರಂ ೩೦ನೆಕ್ಕತೊಡಗಿದ ದಸ್ಯುದೌಷ್ಟ್ಯದ ದಂದಶೂಕೋಗ್ರ
ಜಿಹ್ವಾಗ್ರದಗ್ನಿ. ಪೂರ್ವಿಕರೆಮ್ಮ ಮುಡಿಗಿಟ್ಟ
ಸಂಸ್ಕೃತಿ ಕಿರೀಟಕೊದಗಿದೆ ಮಹಾ ವಿಲಯದ
ವಿಪತ್ ಸಮಯ. ನಮ್ಮ ಮಕ್ಕಳ್ ತಾಯಿ ತಂಗೆಯರ
ನೆಮ್ಮದಿಗೆ ಕರುಬಿ ಹೊಂಚುತಿದೆ ಬಡಗದಿಕ್ಕಿನ
ಪಲ್ಲುಗುರ್ ಪುಲಿಯ ಕಣ್. ಲಂಕಾ ಲತಾಂಗಿಯರ,
ದೈತ್ಯ ವೀರರನೊಲಿದ ನಲ್ಲೆಯರ, ಪಾಲೆದೆಯ
ಧವಳಿಮಕ್ಕೆಳಸಿ ಶರಧಿಯ ವಾಮವೇಲೆಯಲಿ
ಬೀಡುಬಿಟ್ಟಿದೆ ಭೀಮ ಕಪಿಕೇತು ಸಂಕೇತ
ರಾಮಸೇನಾ ರುಷಿತ ರಾಹು. . . ಬಂದಿಹುದೆಮಗೆ ೪೦ಬೇಹು. ಬಹು ದಿನಗಳಿಂದಟ್ಟುತಿಹುದದು ನಮ್ಮ
ಶಾಂತಿ ಶಶಿಯಂ. ನಿನ್ನೆ ಮೊನ್ನೆಯ ವೈರಮಲ್ತು.
ತಾಟಕಾದೇವಿಯಂ ಕೊಂದುದೆ ಮೊದಲ್. ನೆವಂ
ಋಷಿ ರಕ್ಷಣಂ. ಗುರಿಯೊ? ನಮ್ಮ ಕುಲನಾಶನಂ!
ನಮ್ಮಾಳ್ವಿಕೆಯ ನೆಲದ ನೇಮಿಯನತಿಕ್ರಮಿಸಿ,
ತಟೆದರೆಮ್ಮನೆ ಆಕ್ರಮಣಕಾರರೆಂದಿರದೆ
ನಿಂದಿಸಿ, ಕುಲಾಂಕಿತವನನ್ವರ್ಥವೆಂದಾಡಿ
ನಮಗೆ ರಕ್ಕಸತನದ ಬಿರುದಿಕ್ಕಿ, ನಮ್ಮ ಕೊಲೆ
ತಮಗೆ ಸಗ್ಗದ ಬಟ್ಟೆಯೆಂಬ ಧರ್ಮವನೊರೆದು,
ಕೊಲೆಗಾರರಿಗೆ ವೀರಪಟ್ಟಮಂ ಕಟ್ಟುವಾ ೫೦ಅನ್ಯಾಯ ಶೀಲರಾರ್ಯರ್ಗೆ ರಾಮನೆಂಬೊನ್
ಅವರ ದೇವರ ಅವತರಣವಂತೆ . . . ಕೊಂದನು
ಸುಬಾಹುವಂ. ಸಾಲದೆಯೆ, ಮುಂದು ಮುಂದಕೆ ನುಗ್ಗಿ
ಕಾಮರೂಪಿಗಳೆಮ್ಮ ಕುಲಕೆ ಭೂಷಣರೆನಿಸಿ
ದೈತ್ಯ ಗೌರವ ಪಾತ್ರರಾಗಿರ್ದ ವಾತಾಪಿ
ಇಲ್ವಲರನಳಿಪಿದ ಅಗಸ್ತ್ಯನೆಂಬನ ಮತಂ
ಮರುಳ್ವಿಡಿಯೆ, ಪಂಚವಟಿಗೈತಂದು, ನಿರ್ನೆರಂ,
ಕಾಲ್ ಮೆಟ್ಟಿ ಕದನಮಂ ಕೆದಕಿ, ಖರದೂಷಣರ್
ಮೊದಲಾಗೆ ಕೊಲೆದನ್ ಚತುರ್ದಶ ಸಹಸ್ರರಂ,
ಲಂಕಾಧಿಪನ ಬಂಧುಮಿತ್ರರಂ, ಲಂಕಾ ೬೦
ಪ್ರಕೃತಿ ರತ್ನಮಂ. ಮತ್ತೆ, . . . ಹತನಾದನಾ ತಪಸ್ವಿ
ಮಾರೀಚನತ್ಯಂತ ಸಾತ್ವಿಕಂ.”
ನಡು ನಡುವೆ
ಭಾವದಾವೇಗದಿಂದೆಂಬವೊಲ್ ಕೆಲವೊಳ್ತು
ಕೆಮ್ಮನಿರುತಿರ್ದವಂ ಮಾರೀಚ ನಾಮಮಂ
ಪೇಳ್ದುದೆ ತಡಂ, ಬಾಷ್ಪಮಂ ಸ್ರವಿಸಿ, ಕಣ್‌ಮುಚ್ಚಿ
ಸಲಿಸಿದನು ಗೌರವದ ನೈವೇದ್ಯಮಂ. ನೃಪಂ
ಕಣ್ಣೀರಿಡಲ್ ತಣ್ಣಗಿರಲಹುದೆ ನೃಪನ ಸಭೆ?
ಅಳ್ತರ್ ದಿಟಂ ಕೆಲರ್. ಕಣ್ಣೊರಸಿಕೊಂಡರ್
ಪಲರ್. ರಾಕ್ಷಸೇಶ್ವರಂ ಹೊದೆದ ಹೊಂಬಟ್ಟೆಯಿಂ
ಮೆಲ್ಲನೊತ್ತಿದನುಶ್ರು ತರ್ಪಣವ: ಅನ್ಯರಿಗೆ ೭೦ವೇದ್ಯಮೆಂತಾ ಅಕ್ಷಿವಾರಿಯುಷ್ಣಂ?
ಇರ್ಕೆ.
ಪಳೆಯಳಲ ನೆನೆಹುನೀರಿಂದೇಕೆ ಚಿಗುರಿಪುದು
ಪೊಸತಳಲ?” ಮತ್ತೆ ಸುಯ್ದನು ದಿಟ್ಟದನಿಯಿಂ
ದಶಗ್ರೀವ: “ನಮ್ಮ ಮುಂದಿದೆ ನಮಗೆ ಬೇಳ್ಪನಿತು
ಬರ್ಪ ನಿಜಸಂಕಟಂ. ನೀಮನಿಬರರಿತಿಹಿರಿ.
ಕೆಲದಿನಗಳಾಚೆ ಪೊಕ್ಕುದು ನಮ್ಮ ಪೊಳಲಿಂಗೆ,
ಬಾಗಿಲೊಳ್ ಭಂಗಿಸಿ ನಗರಲಕ್ಷ್ಮಿಯನ್, ತಾನೊಂದು
ಭೀತಿಭೂತಂ. ಪ್ರಹಸ್ತಾತ್ಮಜಂ, ಜಂಝೆಯೊಲ್
ಸಮರೂಪಿಯಾಗಿ ತಾಗುತ್ತದಂ, ವೀರನಾಕ
ನಿವಾಸಿಯಾದನು ಜಂಬುಮಾಲಿ. ಮತ್ತಮಂತೆಯೆ ೮೦ದುರ್ಧರಾದಿಗಳೈವರೆಮ್ಮ ಸೇನಾನಿಗಳ್
ಕೂಟ ರಣದೊಳ್ ತೆತ್ತರಸುವನಾ ಭೂತಕ್ಕೆ;
ಪೊರೆದರ್ ತ್ರಿಕೂಟಮಂ. ತಿಳಿಯದದ್ಭುತಕಂದು
ಲಂಕಾ ನಿವಾಸಿಗಳ್ ಭ್ರಾಂತರಾದರ್. ತಿಳಿದು
ಶಾಂತರಾಗಲಿ ಸಕಲರಿಂದು . . . ಪೆರತಾರುಮಲ್ತು.
ಬೇಹಿನವರರಿತೊರೆದುದಂ ಪೇಳ್ವೆನಾಲಿಸಿಂ.
ಹೇಡಿ ರಾಮನ ಕೈಯೊಳೆಮ್ಮ ಕೆಳೆ ವಾಲಿಯಂ
ಬೆನ್ಗೆಚ್ಚು, ಮರೆಯಿಂ ಕೊಲಿಸಿ, ಗದ್ದುಗೆಗೇರ್ದ
ವಾನರ ಕುಲಕಳಂಕ ಸುಗ್ರೀವನನುಚರನ್
ಆಂಜನೇಯನೆಯೆ ಆ ಬಂದವಂ. ಇಂದ್ರಜನ ೯೦ಸನ್ಮಿತ್ರರಿರ್ಪರಾದೊಡಮಿಲ್ಲಿ, ಮುಯ್ಗೆ ಮುಯ್
ತೀರ್ಚದೇಂ ಬಿಟ್ಟಪರೆ? ಅಂತಪ್ಪ ಕೆಳೆಯರೊಳ್
ಒರ್ವನೆನ್ . . . ಅಂತುಮಾ ನೀಚಪಂಥಿಗಳೆಲ್ಲರ್
ಒರ್ವರೊರ್ವರ ನೆರಂ ಬಡೆದು, ಪೆರ್ ಪಡೆಗಟ್ಟೆ,
ಕಡಲನುತ್ತರಿಸಿ ಲಂಕೆಗೆ ಲಗ್ಗೆ ನುಗ್ಗಲ್,
ಸ್ವತಂತ್ರರೆಮ್ಮಂ ಗೆಲ್ದು ದಾಸ್ಯದೀಕ್ಷೆಯನೀಯೆ
ಪೂಣ್ದು ತರಿಸಂದು ಬೀಡು ಬಿಟ್ಟಿಹರಲ್ಲಿ,
ದೂರಪಾರದಪಾರತೆಯುಮೆಡೆಸೋಲುವೋಲ್.
ನಮ್ಮ ಸೈನಿಕ ಶಕ್ತಿಗಿದಿರಿಲ್ಲಮೆಂಬುದಂ
ನಾನ್ ಬಲ್ಲೆನಾದೊಡಂ, ಪಗೆಯುಂ ಸಮರ್ಥನೆ ೧೦೦ವಲಂ. ದೇಶಭಕ್ತರಿರ, ಸಮರ ಸರ್ವಜ್ಞರಿರ,
ನೃಪನೀತಿ ಕುಶಲರಿರ, ಮಾಯಾ ಸಮರ್ಥರಿರ,
ತಿಳಿಯಲಾಟಿಪೆನಿಲ್ಲಿಗೇಂ ಮುಂದೆ ಪದನೆಂಬ
ನಿಮ್ಮ ಮಂತಣವಟ್ಟೆಯಂ.”
ಅದ್ದವೋಲಂತೆ
ಮೋನಮಿರ್ದ್ದತ್ತೋಲಗಂ. ದೈತ್ಯೇಂದ್ರ ವಾಗ್‌ಝರಿಯ
ಘೋಷಮಿನ್ನುಂ ಪ್ರತಿಧ್ವನಿಸಿತೆನೆ ಮೊಳಗಿತಾ
ಸಭೆ, ಹರಾದ್ರಿಗುಹೆ ಝರಸಿಂಹಗರ್ಜನೆಗೆಂತೊ
ಅಂತೆ. ಅವ್ಯಕ್ತ ಮರ್ಮರ ಸ್ವರಗಳಿಂದೊಯ್ಯನೆಯೆ
ಅಲ್ಲಲ್ಲಿ ಮೂಡಿದುವು, ವಿವಿಧ ವ್ಯಕ್ತಿಧ್ವನಿಯ
ಬುದ್ಭುದಂಗಳ್. ನೋಡೆ ನೋಡೆ, ಚಲಿಸಲ್ ಸಭೆಯ ೧೧೦ಪೆರ್ಮಡು, ವನೇಭಮಂ ಪಿಡಿಯಲೆಳಸುತೇಳ್ವ
ಪೆರ್ಬಂಡೆಮೆಯ್ಯ ಕರ್ ಮೊಸಳೆವೋಲೆದ್ದನ್
ಪ್ರಸಸ್ತಂ, ಪೃಥುಲ ಗಾತ್ರಂ, ಪ್ರಥಮ ಸೇನಾನಿ
ಇಲ್ಲ ಲಂಕೆಯೊಳವಂಗಿಂ ಮಿಗಿಲ್ ಭೀಕರರ್,
ಪಶುಸಹಜ ಸುಖ ಸೂಕರರ್. ಸುಖದೊಳೆಂತಂತೆ
ಶಕ್ತಿಯೊಳುಮಂಗಜವನಲ್ಲದಾತ್ಮಜವನ್
ತಿರಸ್ಕರಿಸಿದಾತನ್ ಪುಲಸ್ತ್ಯಜಾತಂಗಿಂತು
ಕೆಯ್ಮುಗಿದು ಬಿನ್ನೈಸಿದನು ತನ್ನ ಕುಮತಿಯಂ:
ಅಚ್ಚರಿಯೊ? ಬಿನದವೋ? ನಾನರಿಯೆನೀ ಕೇಳ್ದ
ದನವೇಂದ್ರನ ಜಿಹ್ವೆಯಿಂಗಿತವ! ಬಿನದಮೆ ೧೨೦
ವಲಂ: ನುಸಿಯ ಮಂದೆಯ ಬಾಧೆಯಂ ನಿವಾರಿಸಲ್
ನೆರೆದೀ ಮದದ್ವಿರದ ಸಭೆಯೊಳೆಯೆ, ಸಲಗಗೆ ಶಂಕೆ.
ಘನ ಘಟೆಗಳಜಿನ ರಕ್ಷೆಯ ಮಹದ್ ವಿಷಯದೊಳ್
ಶೂಲ ಪಟ್ಟಸ ಪರಿಘ ಶಕ್ತಿ ಸಂಕುಲ ಬಲದ
ತನ್ನ ರಾಕ್ಷಸ ಸೇನೆಯಿರ್ಕೆ. ತಾನೊರ್ವನೆಯೆ
ಸಾಲ್ವನಸುಹೃದ್ದಳವನುರುಹಲ್ಕೆ. ಭೋಗವತಿಯಂ
ಪೊಕ್ಕು ಪನ್ನಗರಂ ಪಡಲ್ವಡಿಸಿದಾತಂಗೆ,
ಕೈಲಾಸವಾಸಿಯಾ ಫಾಲಾಕ್ವ ಸಖನಮ್
ಕುಬೇರನಂ ಯಕ್ಷಬಲವೆರಸಿ ಗೆಲ್ದಾತಂಗೆ,
ಮಯನಂ ಭಯಂಗೊಳಸಿ ಅವನ ಮಗಳಂ ಪಡೆದು ೧೩೦
ಮದುವೆನಿಂದವಗೆ, ವಾಸುಕಿ ಶಂಖ ತಕ್ಷಕರ್
ಬಾಯ್ವಿಡೆ ರಸಾತಳವನಳ್ಕಾಡಿದಾತಂಗೆ,
ನಾಶರಹಿತರೆ ಕಾಲಕೇಯರ್ಗೆ ಬರಿಸಂ ಮಿಗಲ್
ಕಾಳೆಗಂಗೊಟ್ಟು ಸೋಲಿಸಿದಾತನೀತಂಗೆ,
ಕಡಲವೋಲೆದ್ದು ಮೇಲ್ವಾಯ್ದ ಯಮಸೇನೆಯನೆ
ತರುಬುತೆಳ್ಬಟ್ಟೀತಂಗೆ, ದೇವೇಂದ್ರಾದಿ
ದಿಕ್ಪಾಲರಂ ಬಡಿದು ಬಾಯ್ಕೇಳಿಸಿರ್ಪನಂ
ಕಂದನೆಂಬೀತಂಗೆ — ಕಪಿಸೇನೆ ಭೀತಿಯೆನೆ.
ಅಚ್ಚರಿಯೆ? ಬಿನದಮೆ ದಿಟಂ ! ಕಿತವ ವಾನರಂ
ಕುಟಿಲ ವಿದ್ಯೆಯೊಳೆಳ್ಚರಿಕೆ ವಿಹರಿಸಿರ್ದೆಮ್ಮ ೧೪೦
ಪೊಳಲನಿರುಳಿನಲಿ ಕಳ್ದೊಳಪೊಕ್ಕ ಮಾತ್ರದಿಂ
ಕಪಿಸೈನ್ಯ ಶಕ್ತಿಸ್ತುತಿಯದತ್ಯುತ್‌ಪ್ರೇಕ್ಷೆ. ನೀಂ
ಧೀರೋದಾರ ವೀರನದರಿಂ ವೈರಿವೀರ್ಯಮಂ
ನಿರ್ಮತ್ಸರಂ ಶ್ಲಾಘಿಸಿರ್ಪೆಯದು ನಿನ್ನವೋಲ್
ದೊರೆಗೆ ದೊರೆ; ಪಿರಿಯರ್ಗೆ ತಗುವ ನಡೆ, ದೈತ್ಯೇಂದ್ರ
ಕೇಳ್, ಆದೊಡಂ, ನೆರವಿ ನನ್ನಿಯನರಿಯಲೆಂದಾಂ
ಪೇಳ್ವೆನೆಮ್ಮ ಪಡೆಯಗ್ಗಳಿಕೆಯಂ: — ಸಂಖ್ಯೆಯಂ
ಪರಿಗಣಿಸೆ. ಅಕ್ಷೌಹಿಣಿಗಳಿದಿರ್ ಸೋಲ್ವುವಯ್
ನಕ್ಷತ್ರಗಳ್. ಗಣಗಣದೊಳಿರ್ಪ ದಳದಳಗಣನೆ?
ಸುಲಭಮೆಣಿಕೆಗೆ ಮಳಲ ಕಣಗಳ್, ಕಡಲ್ ಸುತ್ತಿ ೧೫೦
ಬಳಸಿದೀ ದ್ವೀಪ ವಿಸ್ತೃತ ವೇಲೆಯೊಳ್ ! ನೆಲದ ಪಡೆ,
ನೀರಪಡೆ, ಗಾಳಿಪಡೆಗಳ್ — ಕೋಟಿ ಕೋಟಿಗಳ್ —
ಸಿದ್ಧವಾಗಿಹವಿಂದು ಯುದ್ಧ ಲೀಲಾ ವಿಲಯ
ಕಲೆಗೆ. ಬಾನಲೆಯುವರ್; ನೀರ್ ಮುಳುಗುವರ್; ಮುನುಜ
ಪರಿಜಂ ಬಿಸುಟ್ಟು, ಪೆರ್ಬಂಡೆಗಳವೋಲುರುಳಿ,
ಪಗೆಯಾಳ್ಗಳಂ ಪುಡಿಯರೆದು, ಮಾಂಸಲೇಹ್ಯಮಂ
ನೆಗಳುವರ್; ಕಿಡಿ ತಗುಳೆ, ಬೆಟ್ಟಗಳೆ ಪುಡಿವೋಗಿ
ಸಮದೇಶಮಪ್ಪವೋಲ್ ಸಿಡಿವ ಸಿಡಿಲಿನ ಫಣಿಯ
ಪೊಟ್ಟಣಂಗಳ ಮಹಾ ಹೇಳಿಗೆಗಳಾಗುವರ್;
ಬೀಸುವರ್ ವಿಷಗಾಳಿಯಾಗಿ; ಬೀಳ್ವರ್ ಬೆಂಕಿ ೧೬೦
ಮಳೆಯಾಗಿ . . ಬರೈ ಕಪಿದಳಮಿಲ್ಲಿ; ಕಾಣದಯ್
ಲಂಕೆಯಂ : ನರಕಮೇಳುಂ ಕೋಟಿ ಬಾಯ್ಗಳಂ
ತೆರೆದುದಂ ಕಾಣ್ಬುದಲ್ಲದೆ ಕಾಣದೀ ನಮ್ಮ
ಸೊಬಗುವೊಳಲಂ!”
ಸುಮಾಲಿಯ ಸುತಂ ಕುಳಿತೊಡನೆ
ಎದ್ದುದು ಸಭಾಟ್ಟಹಾಸಂ. ನಗೆ ಮುಗುಳ್ ಮಾಲೆ,
ಸಂತೃಪ್ತಿಸೂಚಕಂ, ಸುಳಿದುದು ಮುಖದ ಮೇಲೆ
ದಾನವೇಂದ್ರಂಗೆ. ಪೆರ್ಮೆಗೆ, ನೆರೆದ ನೆರವಿಯಂ
ಬಳಸಿ ಕುಣಿದತ್ತವನ ನೋಟದ ನವಿಲ್, ಕೆದರಿ
ಕಣ್ಣು ಕಣ್ಣಿನ ಜೈತ್ರಪಿಂಛಮಂ. ಇರಲಿರಲ್,
ಇದ್ದಿದ್ದವೊಲ್, ಸದ್ದು ಹೊಳವಾಯ್ತು. ನೋಡುತಿರೆ, ೧೭೦
ಮತ್ತೊರ್ವನೆದ್ದನು, ಮಹತ್ ಶಿಖರ ಭ್ಯಗಿರಿ
ಸಮುದ್ರದಿಂದೇಳ್ವವೋಲ್. ಭೂಕ್ಷೇಮ ಭಾರಮಂ
ಭರಿಸೆ ಸಂಭವಿಸಿರ್ಪ ಭೂಧರಂಗಳ ತೆರದಿ
ಭುಜಂಗಳಾತಂಗೆ. ಭೀತಿಯರಿಯದ ಭರವಸಂ
ಓಲಗಂಗೊಟ್ಟುದಾತನ ಸಿಂಹ ಸಮನಹ
ವಿಶಾಲ ಧೈರ್ಯದ ವಕ್ಷವೇದಿಯಲಿ. ಮೂರನೆಯ
ಕಣ್ಣೆನಲ್ ಪಣೆಯೊಳೆಸೆದುದು ಶಕ್ತಿಪೂಜಾ
ತ್ರಿಶೂಲಾಭೀಳಚಿಹ್ನೆ. ಬೆಳಗುತಿರೆ ಕಣ್ಮೊಗದಿ
ಸಾಧನೆ ವಿನಾ ಲಭಿಸದೊಂದು ತೇಜಂ, ಮಹಾ
ಸಮಿತಿ, ದಶಗ್ರೀವನುಂ ಬೆರಸಿ, ಗೌರವದಿಂದೆ
ಸೊಲ್ಲುಳಿದು ಕಣ್ಬೆಸೆದು ಕಿವಿಗೊಡಲ್, ನುಡಿದನು ೧೮೦
ನಿಧಾನದಿಂ, ವಿರನಕ್ಷರ ವಚೋವಿಧಾನದಿಂ,
ಮಂತ್ರ ಸಂ‌ಗ್ರಾಮ ವಿದ್ಯೆಯ ಪರಮಗುರು, ದೈತ್ಯ
ದಳಪರಿ ಮಹಾಪಾರ್ಶ್ವಂ :
ಪೊಸತನೇನುಮನಿಲ್ಲಿ
ಪೇಳಲೆಂದೆಳ್ದೆನಿಲ್ಲಾಂ. ಪ್ರಹಸ್ತೇಂದ್ರನಿಂ
ನೀಂ ಕೇಳ್ದಿರೆಮ್ಮತುಲ ಸೈನ್ಯಪ್ರಶಂಸೆಯಂ,
ಆ ಪೊಗಳ್ಕೆಗೆ ನವೇದಿಪೆನೆನ್ನ ಗೌರವದ
ಕಾಣ್ಕೆಯಂ.” ವ್ಯಕ್ತಿಯಿಂ ವ್ಯಕ್ತಿಗೆನೆ ದಿಟ್ಟಿಯಂ
ಪಸರಿಸಿ ಸಭಾವಲಯ ವಿಸ್ತಾರಮಂ ನೋಡಿ,
ಮುನ್ನೊರೆದನಭಿಮಾನದಿಂ : “ಇನ್ನನ್ನರಿರ್ಪ ೧೯೦
ಈ ಸಭೆಯೊಳನ್ಯಕ್ಕೆ ಭಿನ್ನಕ್ಕೆ ಭಾವಕ್ಕೆ
ಎಡೆಯಿಹುದೆ? ನೆರೆದೀ ಕಲಿಗಳಿದಿರ್ ನಾಣ್ಚದೆ
ನಿರಾಶೆ? ತಲೆಯಿಣುಕಲಣ್ಮುದೆ ಭಯಂ? ಶಂಕೆ
ಬಾಲವ ಮುದುರಿ, ಕಾಲಡಿಗಿಕ್ಕಿ, ನಾಯೋಡದೇಂ
ನಿಲಲಹುದೆ? ಪೆಸರ ಪಟ್ಟಿಕೆಯೆ ಸಾಲ್ಗುಂ; ಹಗೆಗೆ
ಹೊಳ್ಳುಗಳೆವುದು ಹೃದಯಮಂ! ದಿಗಿಭಕರ್ಣಗಳ್
ನಾಮಶ್ರವಣ ಮಾತ್ರದಿಂ ನಡುಗವೇನುಡುಗಿ
ಯುವರಾಜಗಿಂದ್ರಜಿತುಗೀ ಮೇಘನಾದಂಗೆ?
ಆ ಒರ್ವನಿಲ್ಲಿಲ್ಲ ಅಖರ್ವ ಗರ್ವಂ, ಮಹಾ
ಕುಂಭಕರ್ಣಂ! ಮುಖಸ್ತುತಿಯಾಗದೆನ್ನಿಂ ೨೦೦ಪೊಗಳ್ದೊಡಾನಾತನೊಂದಳವಂ. ಪುಲಸ್ತ್ಯಜನ್,
ವಿಶ್ರವಸ ಕೈಕಸಿಯರೆರಡನೆಯ ಮಗನವನ್;
ಜನ್ಮಮಾತ್ರದಿನೆರಡನೆಯ ಮಗನ್. ಸಹಜದಿಂ
ಪರ್ವತಾದ್ಭುತನವನ್; ವಿಕ್ರಿಯಾಬಲದಿಂ
ವಿಗುರ್ಬ್ಬಿಸಿ ವಿಜೃಂಭಿಸಿದನೆನೆ, ಹಿಮಾಚಲವೊಂದು
ಕಡೆ, ವಿಂಧ್ಯವೊಂದು ಕಡೆ, ತೂಗಿ ತೊನೆಯುವುವವನ
ನಡೆಗೆ! ಗದೆಗೊಂಡು ಮಲೆತನೆನೆ ಏದುವುದುಸಿರ್
ಯಮನಳ್ಳೆಯೊಳ್! ವಜ್ರದಿಂದಿಕ್ಕಿದಿಂದ್ರನಂ
ಸಹಿಸಿ, ಐರಾವತದ ದಂತವೊಂದಂ ತಿರಿಪಿ
ಕಿತ್ತು, ಗದೆಗೈದದನೆ, ಬಡಿದಟ್ಟಿದಾತಂಗೆ ೨೧೦ಬ್ರಹ್ಮನಿಂದಾಯ್ತು ನಿದ್ರಾಶಾಪಮಲ್ಲದಿರೆ,
ಸಭೆಗಳೇತಕೆ? ಸೇನೆಯೇತಕೆ? ನಮ್ಮ ರಾಷ್ಟ್ರ
ರಕ್ಷಣೆಗೆ! ಆದೊಡೇನಾತನೊರ್ವನ ನಿದ್ರೆ
ಮಿಗಿಲಗುರ್ವೆಮ್ಮನ್ನರನಿಬರೆಳ್ಚರಿಕೆಗಿನ್!
ಮದ್ದಿನ ಮನೆಯ ನಿದ್ದೆಯನ್ ಕೆಡಿಸೆ ಸಾಲದೇನ್
ಒಂದೆ ಕಿಡಿ? ಅಂತಪ್ಪರಿಪ್ಪೀ ನಮ್ಮ ಲಂಕೆ ತಾಂ
ದುಸ್ಸಾಧ್ಯಮಾರ್ಗುಂ ದಿಟಂ. ಸಾಲದುದಕಿಲ್ಲಿ
ನೆರೆದಿರ್ಪರೋರೊರ್ವರುಂ ಭೀಮ ವಿಕ್ರಮರ್:
ಈ ಸೂರ್ಯಶತ್ರುವೀ ಶೋಣಿತಾಕ್ಷಂ;
ಅಕಂಪನಂ; ವಜ್ರಹನು, ಮಕರಾಕ್ಷ, ರಾಹುರೋಷರ್; ೨೨೦ಸುಪ್ತಘ್ನ, ರಶ್ಮಿಕೇತು; ಧೂಮ್ರಾಕ್ಷನ್, ಅಗ್ನಿಕೇತು;
ವಿದ್ಯುನ್ಮಾಲಿ, ವಿದ್ಯುಜ್ಚಿಹ್ವ, ದೇವಾಂತಕರ್;
ಆ ದುರ್ಮುಖನ ಮರೆಯೊಳಿರ್ಪುನ್ನತಂ ಮಹಾ
ವಜ್ರದಂಷ್ಟ್ರಂ; ದೂರಮಿರ್ಪೊಡಂ ಬಳಿಯೊಳೆಯೆ
ಬಂದವೋಲಿರ್ಪಾ ಮಹೋದರಂ; ಅತ್ತಲಾ
ಶಾರ್ದೂಲ ಶುಕ ಸಾರಣರ್; ಮತ್ತಮತ್ತಲಾ
ಬ್ರಹ್ಮಾಕ್ಷ ಯಜ್ಞಹರ್; ಮೇಣ್, ಮೇಣ್, . . ಇತ್ತಲೀ
ಎಲ್ಲರ್ಗೆ ಮಿಗಿಲಿರ್ಪನವನ ಪೆಸರಂ ಪೇಳೆ
ಪುಣ್ಯಮಂತೆಯೆ ಕೇಳ್ದೊಡಂ ಪುಣ್ಯಮದರಿಂದೆ
ಪೇಳ್ವೆನಲ್ಲದೆ, ನಿಮಗೆ ತಿಳುಪಲೆಂದೊರೆಯಲಾನ್ ೨೩೦ಬೆಳ್ಪಹೆನ್: ಪೌಲಸ್ತ್ಯನಾ ವೈಶ್ರವಣನಾ
ಕೈಕಸಿಯ ಮೂರನೆಯ ಮಗನಾ ವಿಭೀಷಣಂ,
ನಮ್ಮ ಲಂಕೆಗೆ ಧರ್ಮವರ್ಮೋಪಮಂ!” ಉಘೇ
ಘೇ ಎನುತ್ತಿರೆ ಸಭೆ, ಅದನ್ ಬೆರಳ ಸನ್ನೆಯಿಂ
ಸಂತಯ್ಸಿ, “ಪೆಸರ ಪಟ್ಟಿಯೆ ಸಾಲದೇನ್ ಅರಿಗೆ
ಪೇಳಿಮೆರ್ದೆಯಂ ಪೊಳ್ಳುಗೈಯಲ್ಕೆ? ಸಾಲ್ಗುಂ
ದಿಟಂ. ಕೇಳಿಮಾದೊಡಂ; ಪೇಳ್ವೆನೊಂದಂ ನಿಮಗೆ
ಬಿಸವಂದಮಂ. ಪ್ರಹಸ್ತನ ಪೇಳ್ದುದಂ ಕೇಳ್ದಿರ್;
ಅಖಿಲ ವಿದಿತವನಾಂ ಮುಹಾರ್ ವಚಿಸಲೇವುದೋ?
ಕಿರುಳನಲ್ತೀ ದಾನವಾಧಿಪಂ, ನನಗಿನ್, ೨೪೦ಪ್ರಹಸ್ತಂಗಿನ್, ಇಲ್ಲಿ ರಾಜಿಪ ಶೂರರೆಲ್ಲರಿನ್.
ಅಂತಿರ್ಪೊಡಂ, ಏಕೆ ಈ ವಿಶ್ವವಿಜಿಗೀಷು,
ರಿಪುಶಕ್ತಿಯಂ ಗೌರವಿಸಿ, ವಿನಯವಾಣಿಯಿಂ
ನುಡಿದನು ಸಶಂಕೆಯಿಂ? ತಿಣ್ಣಮಾಲೋಚಿಸಿಮ್.
ಹಡಗಿನ ಕಾಣ್ಬ ಭಾಗಮಂ ಬಣ್ಣಿಸಿದರಾಯ್ತೆ?
ಕಣ್ಗೆ ಕಾಣದಯೆ ನೀರಡಿಯಿರ್ಪ ಪಕ್ಕದೊಳ್
ಕಿರಿಯ ಬಿರುಕಿರಲದುವೆ ಸಾಲದೆ ಮುಳುಂಗಿಸೆ
ಬೃಹನ್ನೌಕೆಯಂ? ಕ್ಷೇಮ ಯಾತ್ರೆಯಂ ಕೋರುವರ್
ಮುಚ್ಚಲಾಗದು ಕಣ್ಣನಂತರಂಗದ ರಂಧ್ರ
ದೋಷಕ್ಕೆ. ಕಾಣೂತಿಹುದೆಮ್ಮ ದೊರೆಯೊಳಗಣ್ಗೆ ೨೫೦ಕುಹರಮಾ ಸರ್ವವೈನಾಶಿಕಂ. ಬರಿಯದಟು
ಸಲ್ಲದಿಲ್ಲಿಗೆ. ಧರ್ಮದೇವತಾ ಕೋಪಮಂ
ಪ್ರತಿಭಟಿಸಿ ಗೆಲ್ಲರಾರುಂ! ಸಾಕ್ಷಿ ಬೇಳ್ಪೊಡೆ,
ಮಹಾದ್ವಾರದೊಳ್ ಮೊಗಂದಿರುಹಿ ನಿಂದಿಹ ನಮ್ಮ
ನಗರ ಲಕ್ಷ್ಮಿಯ ಕಯ್ಯ ಕೊಂಕಿಹ ತ್ರಿಶೂಲಮಂ
ನಡೆದು ನೋಡಿಂ!”
ತನ್ನ ಹೆಗ್ಗಣ್ಗಳಂ ಹಿರಿದು
ತೆರೆದು, ಇಂಗಿತವರಿತು ನಿಸ್ತಬ್ಧಮಾಗಿರ್ದ
ರಾವಣ ಸಭಾ ಸಮುದ್ರವನಿಕ್ಕದೆವೆಯಿಂ
ಸಮೀಕ್ಷಿಸುತೆ, ಗಂಭಿರ ಮುಖಮುದ್ರೆಯಿಂ ಸುಯ್ದು,
ತನ್ನೊಳಗೆ ತಾನ್ ಪುಗುವನೆಂಬಂತೆ ನಯನಂ ೨೬೦
ನಿಮೀಲತೆಯನೈದುತಿರೆ, ಪ್ರಿಯವಲ್ಲದಿರ್ದೊಡಂ
ಸತ್ಯವನೊರೆದ ತಿಕ್ತತೃಪ್ತಿಯಿಂ, ಕುಳಿತನಾ
ಮಹಾಪಾರ್ಶ್ವನಮೃತಮಂ ಮಥಿಸಿ ಕೊಟ್ಟಾ ಬಳಿಂ
ವಿಶ್ರಮಿಸಲೆಂದು ದಡಮಂ ಸೇರ್ದ ತಾಟಸ್ಥ್ಯ
ಮಂದರಮೆನಲ್! . . . . ಬಳಿಕಲೆದ್ದನು ಅಕಂಪನಂ,
ಸುಮಾಲಿಯ ತನೂಭವಂ; ಅನುಜಂ ಪ್ರಹಸ್ತಂಗೆ.
ಮಾರ್ನುಡಿಯೆ ಮಾರ್ಮಲೆತುದವನೇಳ್ಕೆಯೊಳ್. ನುಣ್ಪು
ನಯಗಳಂ ಕಂಡರಿಯವವನೊಳಗು ಹೊರಗುಗಳ್.
ವ್ಯಂಗ್ಯಮಿಂಗಿತಮೆಂಬ ಸೂಕ್ಷ್ಮತೆಯ ತೈಲಕ್ಕೆ
ಸೀಗೆಯಾತನ್ ; ರೂಕ್ಷನಿಷ್ಠುರಂ. ಬಾಯ್ಗೆರೆಯೆ ೨೭೦
ನುಡಿಗಳೊಡನಾದಿಯಾಗಿಯೆ ಸಿಡಿಯುವುದು ಪೊಲೆಯ
ಕೌರುಗಳ್. ಕಣ್ಗಳೊಳ್ ರೋಷಮಲ್ಲದೆ ಬುದ್ಧಿ
ಲವಶಲೇಶಮಿಲ್ಲದಾತಂ ಮದಿಸಿದಾನೆವೊಲ್
ನೆಗಹಿ ಹಸ್ತವನತ್ತಲಿತ್ತಲೊಲೆಯುತ್ತಿಂತು
ಘೀಂಕರಿಸಿದನು ತನ್ನ ಪ್ರತಿಮತವ:
ವಿದ್ರೋಹಿ
ನಾನಾಗೆನೆನ್ನನ್ನದಾತಂಗೆ. ಮೇಣ್ ಸಹಿಸೆನಾ
ಹೀನ ಹೃದಯವನನ್ಯರೊಳ್. ದ್ರೋಹಮೆಲ್ಲಿರಲ್, —
ದ್ರೋಹಮೆಂತಿರ್ದೊಡೇನ್? ದ್ರೋಹಿ ಆರಾದೊಡೇನ್? —
ಶಿಕ್ಷೆಗರ್ಹಂ. ಕಣ್ಗೆ ಕಾಣ್ಬ ದೈವಂ ನೃಪಂ.
ದೊರೆಯ ಸೇವೆಯೆ ದೈವ ಸೇವೆ. ದೊರೆಯಂ ಪಳಿಯೆ ೨೮೦
ಜಗದೀಶ ನಿಂದೆ. ರಾಜೇಂದ್ರ ರುಚಿಯಂ ಗೆಗಳೆ,
ನೃಪನ ಸುಖಕಿದಿರಾಡೆ, ಪ್ರಭುವಿನಾನಂದಮಂ
ಸಾಧಿಸಲ್ ತ್ಯಜಿಸಿದರೆ ನಮ್ಮ ಸರ್ವಸ್ವಮಂ,
ಪ್ರಭುವಿನಿಷ್ಟಂ ನಡೆವ ಮಾರ್ಗಮಂ ಪ್ರಶ್ನಿಸಲ್,
ಖಂಡಿಸಲ್, ದೈವ ನಿಂದೆಯ ದಿಟಂ! ಪ್ರಜೆಗಳಾರ್?
ಪ್ರಭುಕೃಪಾ ಮಹಿಮೆಯಿಂ ಬರ್ದುಕುವ ಪುಳುಗಳಲ್ತೆ?
ಕ್ರಿಮಿಗಳ್ ಸ್ವತಂತ್ರರೇಂ? ತಾಯ್ವೇರಿಗೊದಗದಿರೆ
ನೀರ್ ಪರ್ಣಗಳ್ ಬಾಡುವೊಲ್ , ನೃಪಂಗಿಲ್ಲದಿರೆ
ಸಂತೃಪ್ತಿ ನಿಸ್ತೇಜಮಾಗಿ ಸಾವರ್ ಪ್ರಜಾ
ಕೋಟಿಗಳ್, ಪ್ರಮುಖಮದರಿಂ ನರೇಂದ್ರನ ಸುಖಂ. ೨೯೦
ನಾವೆಸಗವೇಳ್ಪುದಂ ತಾನೆ ಸಾಧಿಸಿಹನಾ
ದ್ವಿಷದ್‌ಯೋಷೆಯಂ ತಂದು. ನೃಪನಭ್ಯುದಯಕಾಂ.
ಕೃತಜ್ಞರೆಂ. ಕರುಬುವರ್ ಕೀಳ್ಮಾನಿಸರ್. ಪ್ರೀತಿಯುಂ,
ನೃಪನೀತಿಯುಂ ಮೇಣ್ ಪ್ರತೀಕಾರಂಗಳೆಲ್ಲಮುಂ
ಏಕವಾಣಿಯೊಳೊರೆದುದಂ ನೆಗಳ್ದನ್. ಮುನ್ನೆ
ತಾನೊಲಿದಳನ್, ತಪ್ಪಿ ಪೆರರ ಪಾಲಾದಳನ್,
ಮರಳಿ ಪಡೆದನ್ ಕಾಲವೊದಗಲ್ಕೆ ತಂಗೆಯನ್,
ದೈತ್ಯೇಂದ್ರ ಭಗಿಯನ್, ಪಂಚವಟಿ ವಿಪಿನದೊಳ್
ತನಗೆ ತಾನ್ ವಿಹರಿಸುತ್ತಿರ್ದಳನ್, ನಿರ್ನೆರಂ
ಭಂಗಿಸಿದವಂಗೆ ಪರಿಭವಮಾಯ್ತು, ಪೋಲ್ವಂತೆ ೩೦೦
ಪ್ರಬಲ ವೈರಿಯ ತೇಜಮಳಿವುದೊಂದೆಯೆ ಅಲ್ತು,
ಬೆಂಗೊಡುತ್ತಾತಂಗೆ ಪಗೆಗಳೆನಿಬರೊ ಕೂಡಿ
ಇಲ್ಲಿಗೈತಂದೊಟ್ಟಿಜೆಯಿನಳಿವವೋಲೊಂದು
ಹೂಡಿಹನರಸುಪಾಯಮಂ. ಆ ಉಪಾಯಮಂ
ಸಾಧಿಸುವುದೆಂತೆಂಬುದೆಮಗಿಲ್ಲಿ ಮಂತಣಂ.
ವ್ಯರ್ಥಮಾಳಾಪಮಾ ಗುರಿಗೆ ಹೊರಗಾಗಿರಲ್
ಮತ್ತೆ ಕುರುಡಾಗಿರಲ್ ನುಡಿಯ ಕಣ್!”
ನಿಲ್ಲಿಸಲ್
ಅಕಂಪನಂ, ಮೆಲ್ಲನೆಳ್ದನ್ ಮತ್ತಮೊರ್ವನ್
ಸಭಾನೇಮಿಯಂ, ಮದ್ಗುದಿನೋದಯ ಸರೋವರದಿ
ಕೋಕನದ ಕುಟ್ಮಲಂ ಪ್ರಫುಲ್ಲಿಪೋಲ್. ಬೆರಗಾಗೆ ೩೧೦
ಸುಪ್ರಸಿದ್ಧರ್, ಉಘೇ ಎನಲಪ್ರಸಿದ್ಧರ್ ,
ಸುಪ್ರಸಿದ್ಧರೊಳಪ್ರಸಿದ್ಧನ್, ಅಖ್ಯಾತರೊಳ್
ವಿಖ್ಯಾತನಕ್ಷಿವನ ಚೈತ್ರನಾದನ್ ಸಕಲ
ಸದಸ್ಯರಿಗೆ. ಹೊಂಬಣ್ಣದ ಕುರುಳ್ಗಳೋಳಿಗಳ್
ಸುರಳಿಗೊಂಡಲೆಯಲೆಯುರುಳ್ದುವು ಮನೋಹರಂ,
ಸುಂದರ ವದನ ಸಂಪದದ ಕಾವ್ಯವೈಖರಿಗೆ
ಚವರಿ ವೀಸಿ. ಕೌಮಾರ್ಯಮಂ ತೊರೆಯಲೊಲ್ಲದಿಹ
ತಾರುಣ್ಯಮೆಸೆದುದಾತನ ಮುಖದ ಮುಗ್ಧತೆಗೆ
ಮೋಹವನೊಡರ್ಚ್ಚಿ. ಲಂಕೆಯೊಳವಂಗಿಂ ಮಿಗಿಲ್
ಇರ್ಪರೆ ಲಸದ್ರೂಪಿಗಳ್? ಎಂಬ ಶಂಕೆಯಿಂ. ೩೨೦ಸಂತೋಷದಿಂ, ಮತ್ತಮಾತನೇನಂ ಪೇಳ್ದೊಡಂ
ಭಾರಮಿರದೆಂಬುಪೇಕ್ಷೆಯ ಹಗುರ ಹೃದಯದಿಂ,
ಪಿರಿಯರಿರ್ದರು ನಾಟಕಪ್ರೇಕ್ಷಕರೆನಲ್
ರಸಾಪೇಕ್ಷೆಯಿಂ. ಸಭಾಕೈರವ ಕುತೂಹಲಕೆ
ಬಿದಿಗೆದಿಂಗಳ್ ನಗೆಯ ಜೊನ್ನಮಂ ಸಿಚಿಸುತೆ,
ಮಿಡಿಯ ತೊಡಗಿದನಿಂತು ತನ್ನುಸಿರ್ತೇನೆಯಂ
ಹೆಸರಾ ಹಿರಣ್ಯಕೇಶಿ:
ಸಭೆಗೆ ಕೈಮುಗಿದಪೆನ್;
ಪಿರಿಯರ್ಗೆ ನಮಿಸುವೆನ್; ಕೆಳೆಯರ್ಗೆ ವಂದಿಪೆನ್;
ಮೇಣ್ ಗೌರವವನರ್ಪಿಪೆನ್ ದಾನವೇಂದ್ರಂಗೆ.
ಪಿರಿಯರಿರ್ಪೀ ರಾಜಸಭೆಯ ಮಧ್ಯದೊಳೇಳ್ವ ೩೩೦ಪೆರ್ಮೆ ತನಗಿನಿತಿಲ್ಲಮಾದೊಡಂ, ಕಿರಿತನದ
ಸಾಲ್ವುದುತ್ಸಾಹಮಿಲ್ಲಿಗೆ ಸಲ್ವ ಕಾರಣಂ.
ಕಿರಿಯನೆಂ; ಸಾಮಾನ್ಯನೆಂ; ಕಿರಿಯ ಸಾಮಾನ್ಯ
ಜನಮನಪ್ರತಿನಿಧಿಯುಮೆನ್. ಪಿರಿರೆಂತೆಂತು
ಚಿಂತಿಪ್ಪರೆಂಬುದಂ, ಸಭೆಯಾಲಿಸಿದೆ, ನಮ್ಮ
ಪೆರ್ಮೆಯಾಳ್ಗಳ್ ನಾಲ್ವರಿಂ. ಕಿರಿಯರೆರ್ದೆಗಳೊಳ್
ಚಲಿಪ ಚಿಂತೆಯ ಚರಣಚಿಹ್ನೆಗಳನೀ ಗೋಷ್ಠಿ
ದಿಕ್ ತಿಳಿಯೆ ಚಿತ್ರಿಸುವುದೆನಗಿಷ್ಟ ಕರ್ತವ್ಯಮ್.”
ಅಕಂಪನಂ ಕುಳ್ತ ಕಡೆಗಕ್ಷಿಪ್ರಸಾರದಿಂ
ಸೂಕ್ಷ್ಮದಿಂ ವ್ಯಂಗ್ಯದಿಂ ಮುಂಬರಿದನುದ್ ಗ್ರೀವನ್ ೨೪೦
ಉತ್ತೇಜಕೋತ್ಥಿತ ಧ್ವನಿಯಿಂದಮಾ ತರುಣ
ಮೇಧಾವಿ: “ಸುಖಮಮೂಲ್ಯಂ ಅದಾರ್ಗಾದೊಡಂ.
ರಾಜಸುಖದಂತೆಯೆ ಪ್ರಜಾಸುಖಂ. ರಾಮಗೇಂ
ಸುಖಿಮೊ? ಸೀತೆಗೆ ಸುಖಮೊ? ಮೇಣೆಮ್ಮ ದೊರೆಗುಮೇಂ
ಸುಖಮಹದೊ? ಸುಖಮೊರ್ವನದೆ ಸರ್ವಸುಖಮಹದೊ?
ಬಹುಜನರ ಸುಖಕೆ ಒರ್ವನ ಸುಖಂ ಬೆಲೆಯಹುದೊ?
ಬೆಲೆಯಪ್ಪೊಡಂ, ಸುಖಕೆ ಸುಖಮೆ ತಾಂ ನಾಣ್ಯಮೋ?
ಮೇಣ್ ಅಳತೆಗಿನ್ ಬೇರೆ ಪೊನ್ನಿಹುದೊ? ಧರ್ಮಮಾ
ಪೊನ್ನಹುದೊ? ….. ತತ್ತ್ವದರ್ಶಿಗಳಿಪ್ಪರಿಲ್ಲಿ; ಅವರ್
ತರಿಸಲ್ಗೆ…… ಪೇಳ್ವೆನೆನ್ನನ್ನರೊಂದು ಮತಮಂ : ೩೫೦
ಸುಖಮದೊರ್ವನದು ಸಕಲರ ದುಃಖಕಾರಣಂ
ತಾನಪ್ಪೊಡದು ನಿಂದನೀಯಂ, ನೃಪನದಾದೊಡಂ.
ಮುಸುಗಿಹುದು, ಲಂಕಿಣಿಯ ಭಂಗಮಾದಂದಿನಿಂ,
ರೂಪಮಿಲ್ಲದ ಭೀತಿ ಭೂತದ ಬೃಹಚ್ಛಾಯೆ
ನಮ್ಮ ನಗರದ ಮಂದಿವಾಳ್ಕೆಯಂ. ಶಕುನಗಳ್,
ದುಶ್ಯಕುನಗಳ್, ಸಾರಿ ಹೇಳುತಿಹವೆಂಬರ್
ಪುರೋಹಿತರ್, ಬರಲಿಹ ದುರಂತಮಂ. ನಂಬಿ, ಬಿಡಿ,
ಮೌಢ್ಯಮೆಂಬರ್. ತಿರಸ್ಕರಿಸುವರೆ ತಿಳಿದವರ್
ಜನಮನದ ಮೇಲಪ್ಪ ಪರಿಣಾಮಮಂ? ಭಯಂ
ವೈರಿಯಿಂದಲ್ತು; ಧರ್ಮದ ಮುನಿಸಿನೊಂದಳ್ಕು ೩೬೦ಕಲಕುತಿದೆ ಪುರಧೈರ್ಯಮಂ. ಲಂಕೆ, ನಮ್ಮೀ
ಕನಕಲಂಕೆ, ದೈತ್ಯನಾಗರಿಕತೆಯ ನಂದನಂ:
ಅಮರರೈಶ್ವರ್ಯಮಂ ಸೂರೆಗೊಂಡಿಹರೆಮ್ಮ
ಅಸುರ ವೀರರ್. ಸುರಾಂಗನಾ ಸೌಂದರ್ಯಮಂ
ಸೂರೆಗೊಂಡಿಹರೆಮ್ಮ ಲಲನೆಯರ್. ಶಿಲ್ಪಿಗಳ್
ವಿಶ್ವಕರ್ಮನ ಕೈಯ ಮರ್ಮಮಂ ಸೆಳೆದಿಹರ್
ನಮ್ಮ ಪುರರಚನೆಯೊಳ್. ಮಲೆತಿಹವು ಮಲೆಗಳುಂ
ಅಲಕಾವತಿಯ ಗಿರಿವನಾಟವಿಗಳಂ. ಲಂಕೆ
ದೈತ್ಯಸಂಸ್ಕೃತಿಯ ದೇವಾಲಯಮೆ ದಲ್! ಇದನ್
ಪಾಳ್ಗೆಯ್ಯಲೆರ್ದೆಯಿಹುದೆ ನಮಗೆ, ರಾಕ್ಷಸಕುಲದ ೩೭೦ಮಕ್ಕಳ್ಗೆ? ಮೇಣ್ ಪೆರರ್ಗಾದೊಡಂ ಪಾಳ್ಗೆಯ್ಯೆ
ಬಿಟ್ಟಪೆವೆ? ಸರ್ವರ ಕರ್ಮ ಕಟ್ಟಿದೀ ದಿವ್ಯ
ಕನಕಲಂಕಾ ಗರ್ವ ಗೋಪುರವನೊರ್ವನ
ಅನಿಶ್ಚಿತ ಸುಖಕೆ ಮಾರಲೊಪ್ಪುವುದೆ, ತಿಳಿದೀ
ಸಭಾ ಪ್ರಜ್ಞೆ? . . ಪೆಣ್ಮೊಗಕೆ ಮಿಗುವ ಚೆಲ್ವುಂ, ಮತ್ತೆ
ಮೆಯ್ ಸೊಗಕೆ ಮಿಗುವ ಸೊಗಮುಂ, ಇರ್ಪುವೀ ಪುಣ್ಯ
ಲಂಕೆಯಲಿ: ಚಲಿಸುತಿರಲಿಂದು ಬೆಳಗುಂಬೊಳ್ತು,
ವೇಲಾದ್ರಿವಿಪಿನದೊಳ್, ಕಂಡೆನು ವಸಂತನಂ,
ಮರಮರದ ಹರೆಹರೆಯ ಸಿಂಗರಿಸುತಿರ್ದನಂ;
ಬಳ್ಳಿವಳ್ಳಿಗೆ ನಡೆದು, ಸುಮಸುಮದ ಗಲ್ಲಮಂ ೩೮೦ಪಿಡಿದು, ಕೆನ್ನೆಗೆ ಬಣ್ಣಬಣ್ಣವಿಡುತಿರ್ದನಂ;
ಹಕ್ಕಿಹಕ್ಕಿಯ ಕರೆದು, ಕೊರಳುಲಿಯ ಕೈಗೈದು,
ಗರಿಗೆ ಕಾಮನ ಬಿಲ್ಲನುರ್ಜ್ಜುತಿರ್ದಾತನಂ!
ನಿಂತೆನೊಂದೆಡೆ ಪೂತ ಪನ್ನೇರಿಳೆಯ ಮರದ
ಮೂಲದೊಳ್. ಚವರಿ ಚವರಿಯ ಜಂತನವಿರೆನಲ್
ಬೆಳ್ಪಂ ಕೆದರ್ವ ತುಂತುರಿನ ಬುಗ್ಗೆಗಳವೋಲ್
ಕುಚ್ಚುಕುಚ್ಚಿನ ಕೇಸರದ ಅರಳ್ ಮಲರುಗಳ್
ಸಿಂಗರಿಸಿ ತುಂಬಿರ್ದುವಾ ತರು ತರುಣಿಯಂ. ಬಿಳಿಯ
ಪೂಗಳೊಳ್ ಕರ್ಪರಮೆ ಬಂಡೀಂಟಲೈತಂದು
ಮೊರೆದು ಝೇಂಕರಿಸಿದುವು, ಮಿಡಿದು, ಕುಸುಮ ಕೋಮಲ ೩೯೦ಕುಟಜ ಹೃದಯಮಂ. ಹೊಂಗೆ ಚೆಲ್ಲಿತು ಸೇಸೆಯಂ
ತನ್ನ ಹೂವಕ್ಕಿಯಿಂ ರಂಗವಲ್ಲಿಯನಿಕ್ಕಿ,
ತಾನೆ ಪೂಜಿಸಿ ತನ್ನ ಪದವಲಯಮಂ. ಕಿಚ್ಚು
ಕುಚ್ಚಾಯ್ತೊ, ಹೂವಿನೋಕುಳಿಯ ಜೀರ್ಕೋವಿಯಿಂ
ವಿಪಿನರತಿ ಮಧುನೃಪಂಗೊಸಗೆಯಂ ರಚಿಪೊಂದು
ಮಾಳ್ಕೆಯಚ್ಚಾಯ್ತೊ ಎನೆ, ಕಣ್ ಸೋತು ಶರಣಾಗೆ,
ಪೂತೆಸೆದುವಸುಗೆಗಳ್ . . . ಇರ್ಪುವೀ ಲಂಕೆಯೊಳ್
ಪೆಣ್ ಮೊಗಕೆ ಮಿಗುವ ಚೆಲ್ವುಂ, ಮತ್ತೆ ಮೆಯ್ ಸೊಗಕೆ
ಮಿಗುವ ಸೊಗಮುಂ! . . ಬರಿಯ ಸೈನ್ಯಬಲಮಂ ನೆಮ್ಮಿ
ಲಂಕೆಯಂ ಪಾಳ್ಗೆಡಿಪುದನುಚಿತಂ. ಧರ್ಮಮಂ ೪೦೦ಕೆರಳಿಸುವ ಕಾರಣವನುಳಿಯಿಮ್. ಅನಂತರಂ,
ಬರಲಿ ನೋಳ್ಪಂ ಮೂರು ಲೋಕಗಳ್! ನಮಗಿದಿರೆ?
ನಮ್ಮೊಳೊರ್ವಂಗಿದಿರೆ? ಶೌರ್ಯಖನಿ ಈ ಲಂಕೆ;
ಋತದ ರೋಷನುಳಿಯಲನ್ಯವೈರಿಯ ಶಂಕೆ
ತನಗೆ ತೃಣಮಿಲ್ಲ.”
ಅಚ್ಚರಿಗಳಚ್ಚೊತ್ತಿದೋಲ್
ಇರ್ದರು ಸಭಾಸದರ್, ಆಲಿಸಿ ಹಿರಣ್ಯಕೇಶಿಯ
ಉಪನ್ಯಾಸಮಂ ಮತ್ತೆ ವಿಷಯವಿನ್ಯಾಸಮಂ.
ಕುಳ್ತು ಮರೆಯಾದೊಡಂ ಆತನಿರ್ದಾ ದಿಕ್ಕೆ
ಪಕ್ಕಾದುದೆನಿತೊ ಕಣ್ಗಳ್ಗೆ. ಅವನಾರ್? ಆತನಾರ್?
ಎಂದೊರ್ವರೊರ್ವರಂ ದೃಷ್ಟಿಸುತ್ತಿರೆ ಪ್ರಶ್ನೆಯಂ ೪೧೦ಸುಪ್ರಸಿದ್ಧರ್, ಘೋಷಿಸಿತು ಘೇ ಉಘೇ ಎಂದು
ಅಪ್ರಸಿದ್ಧರ ನೀಳ್ದ ತೋಳ್ಗಳಗ್ರದ ಕುಣಿವ
ಕರವಸ್ತ್ರಕೇತನಂಗಳ್ . . . ಇದ್ದಕಿದ್ದಂತೆ,
ಪ್ರತೀಪವಾಗದೆ ಮನಂ,ತಿರುಗಿತು ಸಭಾನನಂ
ಸಿಂಹಾಸನದ ಬಳಿಯ ಮನ್ನಣೆಯ ಮನ್ನೆಯರ
ಏರ್ಮಣೆಗಳಿರ್ದೆಡೆಗೆ. ಮತ್ತೆ ಘೇ ಗೈದುದಾ
ಸಭೆ ಕಾಣಲುದ್ದಮೆಳ್ದಿರ್ದನಂ, ದೈತ್ಯಕೀರ್ತಿಯ
ಕಲಶದಗ್ರಮಣಿಯಂ, ಇಂದ್ರಜಿನ್ ಮೇಘನಾದನ
ರತ್ನರಂಜಿತ ಖಡ್ಗಭೀಷಣ ಕಟಿಯ ಚಟುಲ
ಭವ್ಯಕ್ಷಾತ್ರಮಯ ಗೌರಗಾತ್ರಮಂ. ತುಟಿಗಳೆಡೆ ೪೨೦ಮಿಂಚಾಡಿದುದು ರಜತ ಸರ್ಪಸ್ಮಿತದ ರಜೋ
ಜಿಹ್ವೆ. ತುಪ್ಪುಳ್ ಮೀಸೆಗಳ ಬಿಂಕಗೊಂಕುಗಳ್
ಕಾವಲಿರ್ದುವು ಲಘುತ್ವವನೆಡೆಗೆ ಬರಗೊಡದೆ,
ವದನ ದುರ್ಗ ದ್ವಾರಪಾಲಕ ಕರ ಪ್ರಖರ
ಛುರಿಕೆಗಳವೋಲ್. ಪೊದೆಯ ಪುರ್ಬ್ಬಿನ ಚೆಲ್ವುಕರ್ಪಿನ
ಕೃಪಾಶ್ರಯದಿ, ಕರ್ದ್ದಿಂಗಳಂತರಿಕ್ಷಾಭೋಗದೊಳ್
ಪ್ರಜ್ವಲಿಪ ಕಿರಣ ತಾರಾ ಸ್ಮರಣ ಕಾರಿಗಳ್,
ಕಣ್ಣಾಲಿಯಲೆದುವು ಸಭಾವಲಯ ವಿಶ್ವಮಂ,
ಕೋಪಪ್ರಚುರ ರಾಹುಕೇತುಗಳವೋಲ್! ದ್ರವೀ
ಕೃತ ಶಿಲಾ ಲೋಹ ಮಿಶ್ರಪ್ರವಾಹಂಗಳಂ ೪೩೦
ಓಕರಿಸುವಗ್ನಿ ಕುಕ್ತೀಲದಂದೊಳಿಂತು
ಕರೆದನುರಿವೆಂಕೆಯಂ ಮೇಘನಾದಂ:
ಫ್ರಭುಗೆ,
ಪ್ರಭು ಕಿಂಕರರ ಮಂಡಲೇಶ್ವರರ ಮಂಡಲಿಗೆ,
ಲಂಕಾ ಪ್ರಕೃತಿ ಪೌರುಷ ಪ್ರಾತಿನಿಧ್ಯರಿಗೆ,
ದೈತ್ಯ ವಿಕ್ರಮ ಸಿಂಹರಿಗೆ ನಿವೇದಿಪೆನೆನ್ನ
ಗೌರವ ನಮಸ್ಕಾರಮಂ. ಇಂದಿನೀ ಸಭೆಗೆ
ಬಂದೆನಿಲ್ಲಾಂ ನಾಲಗೆಯ ಚಮತ್ಕಾರಮಂ
ತೋರಲ್ಕೆ. ಮಾತನಾಡುವ ಮನಂ ಇನ್ನೆಗಮ್
ಇನಿತಿರ್ದುದಿಲ್ಲೆನಗೆ. ಕೇಳ್ದೀಗಳೊರ್ವನಂ,
ಕಾರ್ಯವಂಚಕ ವಾಕ್ಯ ಚತುರನಂ, ಕೋಮಲ ೪೪೦
ಕಿಶೋರನಂ, ಸವಿನುಡಿಯ ಶೂರನಂ, ಸರ್ವಕೆ, ಮಿಗಿಲ್
ಲಂಕಾ ತರುಣರೆರ್ದೆಗಳೊಳ್ ಚರಿಪ ಚಿಂತೆಯ
ಚರಣ ಚಿಹ್ನೆಗಳನೀ ಬೃಹದ್ ಗೋಷ್ಠಿಗರಿಪವೊಲ್
ಕೆಚ್ಚಾಡಿದಾತನಂ, ಕೆರಳ್ದುದೆನ್ನೀ ಮನದ
ಮೌನವ್ರತಂ. ಅರಿಯೆನಾಂ ಆತನಾರೆಂದು.
ಮೊಳೆವ ಕಬ್ಬಿಗನಿರಲ್ವೇಳ್ಕುಮೆಂಬುದೆ ದಿಟಂ
ನನಗೆ ನಿಶ್ಯಂಕೆ. ಅಂತಲ್ಲದಿರೆ ಅನ್ಯರ್ಗೆ ದಲ್‌
ಆ ಸ್ತ್ರೈಣ ಚಾರುತೆ ಸುಲಭಮಲ್ತು! ಬುದ್ಧಿಯನ್
ಮಲಗಿಸಲ್ ಮೊದಲು ಜೋಗುಳವುಲಿದು, ತರ್ವಾಯ
ಭಾವಕೇನೊರೆದಡೆಏನಹಿತಮಪ್ಪುದೆ? ಕವಿಯ ೪೫೦
ಕಾವ್ಯಕೈತವಮಂತುಟೆ ವಲಂ ಅಬೋಧಪೂರ್ವಂ
ಹೃದಯವಿಜಯಿ! ಹೊಂಗೆವೂ ಚೆಲ್ವು : ಪೂರ್ವಪಕ್ಷಂ;
ಸಿದ್ಧಾಂತಮೆಮಗೆ ಪೆಣ್ತನಮೆ ಸಲ್ಲಕ್ಷಣಂ!
ಬಂಡೀಂಟಿ ಮೊರೆಯುತಿದೆ ತುಂಬಿ : ಪೂರ್ವಪಕ್ಷಂ;
ಸಿದ್ಧಾಂತಮೆಮ್ಮ ಲಂಕಾ ಲಕ್ಷ್ಮಿಗಿನಿತುಮಂ
ಗಾಯಮೆಸಗದೆ ವೈರಿಗಕ್ಷತೆಯನಾಕೆಯಂ
ಸಮರ್ಪಿಸಿಂ! . . . .” ನೃಪ ಸಭಾಮಂದಿರಂ ಬಿರಿವುದೆನೆ
ಗೊಳ್ಳೆಂದು ಗುಲ್ಲೆದ್ದುದಟ್ಟಹಾಸಂ! ನಗದೆ,
ಬದ್ಧ ಭ್ರಕುಟಿಯಿಂ ಸಭಾಲಘುತ್ವವನಿಕ್ಕಿ
ಮೆಟ್ಟುತೆ, ಗುರುತ್ತಾಲ ಕಂಠದಿಂದಿಂದ್ರಜಿತು ೪೬೦
ಮತ್ತೆ : “ಸಹಜಂ; ಕವಿಗೆ ಮೇಣ್ ಸ್ತ್ರೀಗೆ ತರ್ಕಂ
ಪ್ರಕೃತಿವಕ್ರಂ. ರಾಜಕಾರಣಕಬಲೆಯೊರ್ವಳನ್
ಅಕಾರಣಂ ನೆವವೊಡ್ಡಿ, ವಾದಮಂ ಚತಿಲತೆಯ
ಮುಳ್ಮೆಳೆಗೆ ತಳ್ಳಿ ತಾನ್ ಬಟ್ಟೆಗೆಟ್ಟು, ಪೆರರ್ಗೆ
ಕಣ್ಗೆಡಿಸುವಾ ಕುಶಲಕಲೆ ಇಲ್ಲಿಗಪ್ರಕೃತಮ್
ಅಸ್ಥಾನಮವಿವೇಕಮಪಮಾನ ಕಾರಣಂ.
ಧರ್ಮಜಿಜ್ಞಾಸೆಗಿದು ಲಂಬಕೂರ್ಚರ ವಲಿತ
ಫಲಿತಸ್ಥವಿರ ಸಮಿತಿಯಲ್ತು. ರಾಕ್ಷಸ ಬಲಂ
ನಿಶ್ಯಂಕಿ; ತನಗೆ ಬೇಡನ್ಯಾಶ್ರಯದ ಶಕ್ತಿ,
ಸೀತೆಯಿಂದಕ್ಕೆ, ಮೇಣ್ ರಾಮನಿಂದಕ್ಕೆ, ಮೇಣ್ ೪೭೦
ದರ್ಮದಿಂದಕ್ಕೆ. ಹಗೆ ಬೀಡು ಬಿಟ್ಟಿಹುದಲ್ಲಿ,
ದೂರದಾ ಶರಧಿ ವೇಲೆಯ ಸಿಕತವೇದಿಯೊಳ್.
ಲಂಕೆಗೆ ಬಹುಳಮಪಾಯಂ. ನಮ್ಮ ದೊರೆಗಿಲ್ಲಿ
ಬೇಕಾದುದೆಮ್ಮ ಹರಣಂ; ಕಾವ್ಯಮಲ್ತು ಮೇಣ್
ಧರ್ಮಬೋಧೆಯುಮಲ್ತು. . . ” ಎನ್ನುತ್ತೆ, ಸಿಂಹಾಸನದ
ಕಡೆಗೆ ಕಣ್‌ನಟ್ಟು ದಶಶಿರನ ಮೆಚ್ಚಿನ ಮಗಂ
ಚಕ್ರೇಶ್ವರರಂಗರ್ಪಿಸಿದನಿಂತು ತನ್ನುರುವ
ಶಕ್ರಜಿತ್ ಧೈರ್ಯದೈರಾವತಸ್ಕಂಧಮಂ:
ತ್ರೈಭುವನ ವಿಜಯಿ, ಹೇ ದೈತ್ಯ ಚಕ್ರೇಶ್ವರಾ,
ನೀಂ ನಿರಂಕುಶನುಮಸಹಾಯ ಶೂರನುಮಾಗಿ ೪೮೦
ಈ ಬೆರಕೆನೆರವಿಯ ಮಂತಣಕ್ಕೆ ಕಿವಿಗೊಡಲ್
ಬಗೆದಂದುದದು, ನಮ್ಮ ಮತಿಯ ಮೇಲ್ಮೆಯನಲ್ತು,
ಮೇಣೆಮ್ಮ ಕೈದುಗಾರಿಕೆ ಹಿರಿಮೆಯನಲ್ತು,
ಸೂಚಿಪುದು ರಾಜಹೃದಯ ಪ್ರಜಾ ವತ್ಸಲ
ಮಹೌದಾರ್ಯಮಂ. ತಿಳಿಯದದನೆಳೆಮೊಗಕೆ ನವಿರ್
ಕರ್ಪ್ಪಿನಂಕುರಮಿನ್ನುಮುದ್ಭವಿಸದಿರ್ಪ್ಪಣುಗುಗಳ್
ಬಣಗುಗಳ್ ಭಾವುಕ ಸಹಜ ಬಾಲಭಾಷೆಯಿಂ
ಬೋಧಿಸುತ್ತಿವೆ ನಿನಗೆ, ಸಮರ ನಟರಾಜಂಗೆ,
ರಣ ತಾಂಡವದ ರಾಜಕೀಯಮಂ. ಕೇಸರಿಯ
ನಖಕೆ ನರಿ ನೀಡುತಿದೆ ತನ್ನ ಹಲ್ಲಿನ ಹುಲು ೪೯೦
ತನುತ್ರಮಂ! ಬಜ್ಜರಕ್ಕಿದ್ದಿಲಿನ ಸಾಣೆಯಂ
ಪಿಡಿವ ಗಾಂಪಿಗೆ ಜಗುಳ್ವೊಂದು ಜಂಗುಳಿಜಸಕೆ
ಬಾಯ್ವಿಡುವ ನೀರಳ್ಕೆಯೆನ್ನೆಡೆ ಸುಳಿಯದಿರ್ಕೆ :
ನಿನಗೆ ನಾಂ ಬುದ್ಧಿವೇಳುವ ಮರುಳಮರದಿರ್ಕೆ!
ನಿನಗೆ ಮಗನೆಂಬುದೊಂದೆಯೆ ಅಲ್ತು; ದೊರೆಗೆ ನಾಂ
ಪ್ರಜೆಯೆಂಬುದುಂ ತರ್ಕಮಿಲ್ಲಿಗೆನ್ನಯ ಧೃತಿಯ
ನಿರ್ಣಯಕೆ : ನಿನ್ನಿಷ್ಟದಂತೆ ನಡೆವುದೆ ಧರ್ಮ;
ನಿನ್ನಾಜ್ಞೆಯಂ ಪಾಲಿಪುದೆ ತನೂಭವನೆನಗೆ
ಕರ್ತವ್ಯ ಕರ್ಮ. ರಾಕ್ಷಸ ಕುಲಕ್ಷೇಮಕ್ಕೆ
ರಾಕ್ಷಸೇಂದ್ರಗೆ ವಿಧೇಯತೆಯನುಳಿದನ್ಯಮಂ ೫೦೦
ಕಾಣೆ ರಕ್ಷೆಯ ವರ್ಮಮಂ!. . . . ತಮ್ಮ ಬಲ್ಮೆಯಂ
ತಾಮೆ ಕೊಂಡಾಡುವುದು ಸಭ್ಯ ಲಕ್ಷಣಮಲ್ತು;
ಪೇಳ್ವೆನಾದೊಡಮೀ ಸಭೆಗೆ ಸಮಾಧಾನಮಂ.
ಬೇಡ ಬೆದರಿಕೆ ನಿರ್ನೆರಂ. ಕಳವಳಮೆ ನಮಗೆ
ವೈರಿಗೆ ಮಿಗಿಲ್ ಪರಮವೈರಿ. ದುರ್ಗಂ ಲಂಕೆ;
ದುಷ್ಟಾರಮಂಭೋಧಿ; ನಮ್ಮ ಪಡೆಯುಂ ಭೀಮ
ಭೀಷಣಮದಮ್ಯ ರೌದ್ರಂ. ಚೋರ ನಿಪುಣನಾ
ಕಿತವ ವಾನರನೊರ್ವನೊಳವೊಕ್ಕು ಜುಣುಗಿದನ್
ಪಿಡಿಯಲಾಂ ನಡೆವನಿತರೊಳ್. ಹನುಮನೆಂಬವನ್,
ಬೇಹಿನವರೊರೆದವೋಲ್, ವಿಕ್ರಿಯಾ ವಿದ್ಯೆಯಿಂ ೫೧೦
ಶರಧಿಯಂ ಲಂಘಿಸೆ ಸಮರ್ಥನಾದನ್. ಅದರ್ಕ್ಕೆ
ಮಾಯಾ ಪ್ರತಿಕ್ರಿಯೆಯನೊಡ್ಡಿ ನಿಂದೆನಪ್ಪೊಡೆ,
ಮಾರುತಿಯ ಮಾತಿರಲಿ ಸೋಲ್ವನವನಯ್ಯನೆ
ಗಮನಗೆಟ್ಟು. ಇಂದ್ರಾದಿ ದೇವ ದಿಗುಪಾಲರಂ
ಸೊರ್ಕಿಳಿಸಿ ಬಾಯ್ಕೇಳಿಸಿರ್ಪುರ್ಕಿನೊರ್ ಸಿಡಿಲ್
ಸುಟ್ಟುರಿಪುದರಿಗಳಂ; ಬರಲಿ ರಾಮನ ಸೇನೆ,
ಕಾಡಿನ ಕಪಿಧ್ವಜದ ವಾನರ ಚಮೂ! ಕಡಲ್
ನೀರ್ಮಸಣವಾಗದಿರಲವರಿಗೆ, ಸಮಾಧಿಯಂ
ತನ್ನ ಮಣ್ಣೊಡಲೊಳೀ ಲಂಕೆ ರಚಿಪುದೆ ದಿಟಂ
ಶತ್ರುಗಾತ್ರಕ್ಕೆ! ಬಿರುಗಾಳಿ ತರಗೆಲೆಗಳಂ ೫೨೦
ಬೀಸುತೆಳ್ಬಟ್ಟುವೋಲ್, ಕಾಳ್ಗಿಚ್ಚು ಕರಡಬೆಣಮಂ
ನೊಣೆನೆಕ್ಕಿ ಕರಿಕುವರಿಪೋಲ್, ಕಲ್ತ ಮಾಯಾ
ಸಮಸ್ತ ವಿದ್ಯೆಯನವರ ಮೇಲ್ ವ್ಯಯಿಸುವೆನ್; ಪಿಳ್ಳೆ
ಪಿಂತಿರುಗದೊಲ್ ದಹಿಸುವೆನ್. ದೈತ್ವ ಕುಲ ದೇವ,
ನಿನಗೆ ಮಡಿಪಿತ್ತೆನಿದೊ ನನ್ನ ಸರ್ವಸ್ವಮಂ:
ಬೆಸನೆಸಗುವುದೆ ನನಗುಸಿರ್ವಟ್ಟೆ; ಸತ್‌ಪ್ರಜೆಗೆ,
ಮೇಣ್‌ಕ್ಷಾತ್ರತೇಜಕೆ, ಉಚಿತನಿಷ್ಠೆ!”
ಕರ್ನಿಶೆಯ
ನಕ್ಷತ್ರದೋಲಗದೊಲೊಂದರಿಲ್ ತಾನಿರ್ದ
ತಾಣದಿಂದೆದ್ದು ಧಾವಿಸಿ ನುಗ್ಗುತುಜ್ವಲಿಸಿ
ಜವದಿ ಕಣ್ಮರೆಯಾದೊಡಂ ವಿಯದ್‌ಯವನಿಕೆಯ ೫೩೦
ಕರ್ಪಿನೊಳ್‌ಪಿನ್ ತಳ್ವದರ ರಂಜಕೋದ್ದೀಪ್ತ
ಪಥರೇಖೆಯಂ ನೋಳ್ಪ ವಿಸ್ಮಿತರವೋಲ್ , ಸಭೆಯ
ಜನರುಲ್ಲಸದ ಕೊರಲ್ ಬಿನ್ನನಿರ್ದುದು ಮರೆತು
ಘೇಘೋಷಮಂ, ಶ್ರವಣದರ್ಥ ರೋಮಂಹನದಿ
ಭಾವಮಂಥರಮೆನಲ್ . ವಿರಮಿಸುತ್ತಿಂದ್ರಜಿತು,
ಮಣಿಗಣ ಫಣಾಹಿ ಹೆಡೆಯಾಟಮಂ ನಿಲ್ಲಿಸಿ
ಮರಳ್ವವೋಲ್ ತನ್ನ ವಲ್ಮೀಕಕೆ, ಸಸಂಭ್ರಮಂ
ಸರಿದನಯ್ ತನ್ನುನ್ನತಾಸನಕೆ. ಲಂಕ
ಪ್ರತಾಪಕೆ ಪರಾಕ್ರಮಕೆ ಕಲಶಮಣಿಯಾಗಿರ್ದ
ಮೇಘನಾದನ ವಾಗಶನಿ ಬಡಿದ ಮೂರ್ಛೆಯಿಂ ೫೪೦
ಸಭೆ ಮೆಲ್ಲನೆಳ್ಚರುತ್ತಿರೆ, ಪೊರೆಯನುರ್ಚುತ್ತೆ
ನಾಲಗೆಯನೊರೆಗಳಚಿ ಕೋರೆದಾಡೆಯ ಮಸೆವ
ಮಾರುತ್ತರದ ಮಸಕದಿಂದೇಳಲಿರ್ದಾ
ಹಿರಣ್ಯಕೇಶಿಯ ಕಣ್ಗೆ ಬಿಳ್ದುದು ವಿಭೀಷಣನ
ಮೇಲೇಳ್ವ ಭಾಷಣೋನ್ಮುಖ ಹೃದಯಧೈರ್ಯಕರ
ಪೂಜ್ಯಚಿತ್ರಂ. ತಟಕ್ಕನೆ ಕುಳ್ತು ಕಣ್ಣಾಯ್ತು,
ಕಿವಿಯಾಯ್ತು, ತರುಣನಾತ್ಮಂ !
ಭವ್ಯಮೆಳ್ತರಂ
ಬೆಳ್ಳುಡೆಯೊಡಲ ವಿಭೀಷಣನ ಸಾತ್ತ್ವಿಕ ದೀರ್ಘ
ವಿಗ್ರಹಂ ವೇದಿಕಾಪ್ರಾಂಗಣಾಗ್ರದೊಳಲ್ಲಿ
ತಾನಾಯ್ತು ನೇತ್ರನಿರ್ವಾಣಕರಮಖಿಲರಿಗೆ. ೫೫೦
ಅಮೃತ ಫೇನಾಂಬರ ಸುಶೋಭಿತ ಜೈನದೇವತಾ
ಪ್ರತಿಮೆಯೋಲ್. ನಿಶ್ಯಬ್ಧಮಿರ್ದುದಾ ಮಂದಿರಂ,
ನೆನಹಿಗೆಳೆವಂತೆವೋಲಾಚಾರ್ಯ ವಕ್ತೃತಾ
ಶ್ರವಣಕಾತರ ಛಾತ್ರ ವೃಂದಮಂ. ಅಸ್ಥೂಲ್
ಚಟುಲೋನ್ನತನ ಮುಖದ ಧರ್ಮತೇಜಕೆ ತಮೋ
ದೃಷ್ಟಿದೋಷಂ ತಗುಳದಿರೆಂದು ಸತ್ತ್ವ ತಾಂ
ಬರೆದುದೆನೆ , ಕೊಂಕುಬಿಂಕಗಳಿರದ ಮೀಸೆಗಳ್
ಮನವೊಲಿಪವೋಲೆಸೆದುವಾತನಾನನದಲ್ಲಿ.
ಸರಳ ಶೈಲಿಯ ನಿರಭಿಮಾನದ ತಪಃಪರುಷ
ಸಭ್ಯ ಭಂಗಿಯಲಿ. ಬುದ್ಧಿಯ ತೀಕ್ಷ್ಣತೆಗೆ ಸಾಕ್ಷಿ ೫೬೦
ತಾನೆನಲ್ ನೀಳ್ದ ತೆಳ್ಳನೆ ನಾಸಿಕಂ, ಕಣ್
ಸರೋವರಂಗಳೆರಡರ ನಡುವಣೇರಿಯ ತೆರದೆ,
ತಿರುಗುವಡುಂಬೊಲದ ಶಾಂತಿಪಥವಾದುದಾ
ನೆರೆದ ನೆರವಿಯ ನಯನ ಸಂಚರಕೆ. ರಾವಣಂ
ಸೇರಿ ಸರ್ವರುಮಿಷ್ಟಗಂಭೀರ ಗೌರವದಿ
ಚಾತಕಗಳಾದರನಲೆಯ ಜನಕನಾತ್ಮದ
ವಿಪಂಚೀ ಕ್ವಣನ ಮಧುರ ಮಧುಸುಧಾ ಶೀಕರಕೆ:
ಸರ್ವರುಂ ಲಂಕಾಕ್ಷೇಮ ಕಾತರರಿಲ್ಲಿ ; ಮೇಣ್
ದೈತ್ಯ ಕೀರ್ತಿಯ ಕಲಶದ ಕಿಲುಂಬನುಜ್ಜಲ್ಕೆ
ತವಕಿಪ್ಪರನ್ ಬಿಟ್ಟು ಬೇರೆ ಬಗೆಯಿರ್ಪರನ್ ೫೭೦
ಕಾಣೆನೊರ್ವನನಿಲ್ಲಿ; ನೆರೆದಿಹ ಸದಸ್ಯರಿಗೆ
ತಮ್ಮ ಭಾಶಣ ಮಧುವನುಣಬಡಿಸಿದೆಲ್ಲರೊಲ್,
ಪಿರಿಯರೊಲ್ ಕಿರಿಯರೊಲ್, ಒಂದೆ ಮತಿ, ಒಂದೆ ಗತಿ,
ಒಂದೆ ಗುರಿಯಿರ್ಪುದನ್ ಕಂಡೆನಾನ್. ಅವರವರ
ಪ್ರಕೃತಿಗನುಗುಣಮೆನಲ್ ಬೇರೆ ಬೇರೆಯ ರೀತಿ
ಪೊಣ್ಮಿದತ್ತವರವರ ಧ್ವನಿಯೊಳ್, ವಿಧಾನದೊಳ್,
ಶೈಲಿಯೊಳ್, ಧಾಟಿಯೊಳ್, ಮತಿಯ, ವಿನ್ಯಾಸದೊಳ್,
ಮೇಣ್ ಉಪನ್ಯಾಸದೊಳ್. ಆರ್ಗಾದೊಡಂ ಇಲ್ಲಿ
ಗುರಿಯೊಳಗೆ ಕವಲಿಲ್ಲ. ಭಿನ್ನಮೇನಿರ್ದೊಡಂ
ಬಟ್ಟೆಯೊಳ್. ತಾತ್ಪರ್ಯಮಿನಿತೆ: — ರಕ್ಷಿಸವೇಳ್ಕುಮ್ ೫೮೦
ಈ ಲಂಕೆಯಂ. ದೈತ್ಯ ಗೌರವವಳಿಯದಂತೆ
ರಾಕ್ಷಸಕುಲದ ಕುವರರೆಲ್ಲರುಂ ಹೋರುವರ್
ಹರಣದ ಹಂಗುದೊರೆದು, — ಆರಿಂದಲಾದೊಡಂ
ಕೇಡಡಸದೊಲ್ ಸೊಗವಾಳ್ತೆಗಂತೆ ಮಸಿ ತಗುಳದೊಲ್
ಬೆಳ್ ಜಸಕೆ, ನಾಮೆಳ್ಚರಿಂ ನಡೆವುದುತ್ತಮಂ.
ಸೊಗವಾಳ್ತೆ ಬೆಳ್ಜಸಗಳೆರಡುಂ ಅಧರ್ಮದಿಂ
ಕಿಡುಗುಮೆಂಬುದು ಪಿರಿಯರನುಭವಂ. ಎಂತಪ್ಪ
ಬೀರಮುಂ, ಅರದ ಬೆಂಬಲಮಿರದ ಎಂತಪ್ಪ
ಬಲ್ಮೆಯುಂ, ವ್ಯರ್ಥಮಪ್ಪುದು ತುದಿಗೆ. ಪೆಣ್ ತನಗೆ
ತಾನೊಲಿದು ಬರೆ, ಸೊಗಂ ಮೇಣರಂ. ಬರದಿರಲ್. ೫೯೦
ತವಿವುವೆರಡುಂ. ಏಕಪತ್ನೀವ್ರತನ ರಾಮನ
ಪತಿವ್ರತೆಯ ತಪದ ತೀವ್ರಾತಪದ ರೌದ್ರಮಂ,
ಪೆಣ್ಕೊರಂಗದೇವುದೆಂದೇವಯ್ಸುವುದು ತರಮೆ,
ಪಲವು ಹದಿಬದೆಯರಿಂ ಧನ್ಯಮಾದೀ ನಮ್ಮ
ದಾನವ ಕುಲದ ಬಲದ ಪೌರುಷಕೆ? ಅನುದಿನಂ
ಇನಿಯನಂ ನೆನೆನೆನೆದು ಕೊರಗಿ ಕರಗುವ ಸತಿಯ
ಸುಯ್ಯುಸಿರ ಶಾಪತಾಪಂ ವಿಧಿಯ ವಜ್ರಕೆ ಮಿಗಿಲ್
ಕ್ರೂರಮಪ್ರತಿಹತಂ. ಸಹಸ್ರ ಲಂಕೇಶ್ವರರ
ಮತ್ತೆ ಶತ ಮೇಘನಾದರ ಶಕ್ತಿ ಶೈಲಗಳ್,
ಬೆಂಗದಿರಗೈಕಿಲೊಟ್ಟಿಲ್ ಮಿಣ್ಣನಳಿವಂತೆ, ೬೦೦
ತಿಳಿವ ಮುನ್ನಮೆ ಮಳಲರಾಸಿಗಳ್, ಪೆಣ್ಣಳಲ್
ತಿಣ್ಣಮರೆಯಲ್ಕೆ! ಕುಲಕೀರ್ತಿ ನಾಸನ ಕರಂ
ಪರಿಹರಿಪುದಾ ಒಂದು ಪಾಪಮನ್ ! ಅನಂತರಂ,
ರಾಮಲಕ್ಷ್ಮಣರಿರ್ಕೆ, ಕಪಿಸೇನೆಗಳ್ ಬರ್ಕೆ,
ಲಂಕೆ ದುರ್ಗಂ; ಸ್ವರ್ಗಮೆಮಗಂತೆ ವೈರಿಗುಂ
ಸ್ವರ್ಗಕಾರಣ ಕವಾಟಂ! …”
ಸಿಂಹವಿಷ್ಟರದಿ
ತೆಕ್ಕನೆಳ್ದನ್ ತ್ರಿವಿಷ್ಟಪಾರಿಗಳಗ್ರಗಣ್ಯನ್,
ಅನಿಷ್ಟದಿಂದೋಡಲೆಳಸುವನಂತೆವೋಲ್. ನೆಮ್ಮಿ
ಕೆಲದೊಳಿರ್ದಾ ವೃದ್ಧಮಂತ್ರಿಯನವಿಂಧ್ಯನಂ
ನಿಂದನಸ್ವಸ್ಥನೊಲ್ ಸುಯ್ದು. ತೆರೆಸುರ್ಕ್ಕೇರ್ದು ೬೧೦
ಕಳೆಗೆಟ್ಟುದಾ ರಾಕ್ಷಸೇಶ್ವರನ ವಿಸ್ರಸ್ತ
ವದನ ತೇಜಂ. ಪ್ರಜ್ಞೆ ಮುಸುಳಾಗಿ, ಕಣ್ಣಾಲಿ
ತೇಲಿ, ಮೆಲ್ಲನಲ್ಲಿಂ ತೆರಳ್ದನಸುರಾಧಿಪಂ,
ಭಯ ಕುತೂಹಲ ಚೇಷ್ಟಿತಂ ತಾನಾಗಲಾ
ಸಭಾ ಚೇತನಂ, ಸಹೋದರನ ಅಂತಃಸ್ಥಿತಿಯ
ತಿಳಿದಾ ವಿಭೀಷಣಂ, ಸಭೆಯಂ ವಿಸರ್ಜಿಸುತೆ,
ರಾಕ್ಷಸ ಕುಲಕ್ಷೇಮ ಚಿಂತನ ಮಥಿತ ಮನನಾಗಿ,
ತೇರೈಸಿದನು ನೇರಮಲ್ಲಿಂ ತನ್ನ ತೇರ್ಮನೆಗೆ.





*************




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ