ನನ್ನ ಪುಟಗಳು

ಸಾಹಿತ್ಯ ಸಂಚಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಾಹಿತ್ಯ ಸಂಚಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

23 ಜುಲೈ 2018

ಶ್ರೀರಾಮಾಯಣ ದರ್ಶನಂ : ಅಯೋಧ್ಯಾ ಸಂಪುಟಂ : ಸಂಚಿಕೆ 2 - ಶಿಲಾತಪಸ್ವಿನಿ

ಸಂಚಿಕೆ ೨ – ಶಿಲಾತಪಸ್ವಿನಿ
ಮೆಯ್‌ಸಿರಿಗೆ ಷೋಡಶ ವಸಂತ ವೀಚಿಯನೊತ್ತಿ
ಪ್ರವಹಿಸಿತು ಕಾಲನದಿ ರಾಮ ಲಕ್ಷ್ಮಣ ಭರತ
ಶತ್ರುಘ್ನ ಜೀವನದಿ. ಜೌವನ ರಸದ ಬಿಣ್ಪುಮಂ
ಬಿಜ್ಜೆಯಾಳದ ಗುಣ್ಪುಮಂ ಮೆರೆವ ವಿಗ್ರಹಂ
ಶೋಭಿಸಿದುದೋಜಸ್ವಿಗಳ್ಗೆ. ದಶರಥನೃಪಂ
ಮಕ್ಕಳ್ಗೆ ಮದುವೆಯಂ ನೆನೆದನಾಸಾರಮಂ
ನೆನೆವಂತುಟೊಕ್ಕಲಿಗನುತ್ತು ಬಿತ್ತಂ ಬಿತ್ತಿ
ಹರಗಿ. ವನಘನರಾಶಿಯಾಶಾ ದಿಗಂತದೊಳ್
ವರ್ಷದಾಶೀರ್ವಾದ ಮುದ್ರೆಯಿಂದೇರ್ದುದೆನೆ
ಬಂದನೋಲಗಕೆ ವಿಶ್ವಾಮಿತ್ರ ಮುನಿವರಂ,    ೧೦
ಚಂಡತೇಜಸ್ವಿ. ದೊರೆ ಕುಲಪುರೋಹಿತರಿಂದೆ
ಋಷಿಗರ್ಘ್ಯಮಂ ಕೊಡಿಸಿ, ಪಾಳಿಯಿಂದಡಿತಡಿಗೆ
ಮಣಿಯೆ, ಕುಶಿಕೋದ್ಭವಂ : “ನೃಪಾಲಶಾರ್ದೂಲ, ಕೇಳ್,
ಸಿದ್ಧ್ಯರ್ಥಮಾನೊಂದು ಜನ್ನಮಂ ಕೈಕೊಂಡು
ತೊಡಗಿಹೆನ್. ಅದಂ ಮಾಂಸರುಧಿರೌಫದಿಂ ಕಿಡಿಸಿ
ಕಾಡುವರ್ ತಾಟಕಿಯ ಮಕ್ಕಳ್ ಸುಬಾಹುವುಂ
ಮಾರೀಚನುಂ. ಕಳುಹು ರಕ್ಷೆಗೆನ್ನೊಡನೆ ನಿನ್ನಾ
ಜ್ಯೇಷ್ಠನಂ, ಕಾಕಪಕ್ಷಧರ ಕಲಿ ರಾಮನಂ,
ಶ್ರೇಷ್ಠನಂ. ಕರಿಯ ಕೊಲ್ಲುವ ಹರಿಗೆ ಮರಿಯೆಂಬ
ಶಂಕೆ ತಾನೇಕೆ? ಕಾಕುತ್ಸ್ಥ, ಯಮಪಾಶದಿಂ    ೨೦
ಪಾಪಕರ್ಮಂ ಮೊದಲೆ ಬಿಗಿದ ಪಿಶಿತಾಶರಂ
ತೇಜಸ್ವಿ ರಾಮನಾತನ ಮಹಾ ಶಕ್ತಿಯಿಂ
ಮೇಣೆನ್ನ ಗುಪ್ತ ದೈವಿಕಬಲದ ಮಹಿಮೆಯಿಂ
ಸಂಹರಿಸಿ, ಧರ್ಮಲಾಭಕೆ ಯಶೋದೀಪ್ತಿಯಂ
ಮೆರೆವನಯ್. ವರಮೆಂದು ನಂಬು ಮದ್ವಚನಮಂ.
ಪಡೆವೆ ಚಿರಕೀರ್ತಿಯಂ. ಗುರು ವಸಿಷ್ಠಾದ್ಯರಂ
ಬೆಸಗೊಂಡು ತಿಳಿ. ಪೊತ್ತು ತಾಂ ಪತ್ತು ಸೂಳಂ ಕಳಿದ
ಮರುವಗಲೆ ಆ ನಿನ್ನ ರಾಜೀವಲೋಚನಂ
ಪಿಂತಿರುಗಿ ಬರ್ಪನಯ್, ಬಹುಳ ಕಲ್ಯಾಣದಿಂ,
ಸಾಕೇತ ಜನಮನ ವನಧಿ ಪೆರ್ಚುವೋಲಂತೆ.”           ೩೦
ಹಣ್ಣೆಗೆಳಸಿದ ಕಣ್ಗೆ ಹುಳಿ ಸಿಡಿದವೋಲಾಯ್ತು;
ಜೇನಿಗೆಳಸಿದ ಜಿಹ್ವೆ ಕಹಿ ನೆಕ್ಕಿದಂತಾಯ್ತು;
ಸವಿಗೊರಲನಾಕರ್ಣಿಸಲ್ ಕಿವಿಯನಿತ್ತವಗೆ
ಕಾಯಿಸಿದ ಕಬ್ಬಿಣವ ಕರಗಿ ಹೊಯ್ದಂತಾದುದಯ್
ದಶರಥಗೆ, ಕುಶಿಕತನಯನ ಪೇಳ್ದ ಕೂರ್ನುಡಿಗೆ.
“ಕೃಪೆದೋರ್, ಮಹಾಮುನಿಯೆ ! ಮೊಗ್ಗಿನಿಂದಿರಿಯುವರೆ
ಕಗ್ಗಲ್ಲ ಬಂಡೆಯಂ? ಕದಳಿಯೆಳಕಂದಿನಿಂ
ಸಿಡಿಲು ತಡೆಯಲಹುದೆ? ಮುದ್ದಿನ ಕುಮಾರನಿಂ,
ಯುದ್ಧಾನುಭವವಿಲ್ಲದಿಹ ಮುಗ್ಧ ರಾಮನಿಂ,
ಕ್ರೂರಿಗಳ್ ಕೋಪಿಗಳ್ ವಜ್ರ ದೃಢದೇಹಿಗಳ್  ೪೦
ರಣವಿದಗ್ಧರನೆಂತು ಗೆಲಲಹುದೊ? ಮನ್ನಿಸೆನ್ನಂ.
ತಿಳಿಯದೆಳಪಸುಳೆ ತಾಂ ಕೊಲೆಯಹುದು ನಿರ್ನೆರಂ.
ಶಿಶುವೇಕೆ? ನಾನೆ ಬಹೆನತಿ ಬಲ ಸಮನ್ವಿತಂ,
ನಿರ್ವಿಘ್ನಮೆಸಗೆ. ಪೇಳ್, ಮುನಿಮಹೇಶ್ವರನೆ, ಆ
ದಾನವರದಾರ್? ಪೆಸರೇನ್? ಬಲಮೆನಿತ್ತವರ್ಗೆ?”
“ಲಂಕಾ ಕನಕಲಕ್ಷ್ಮಿಯನ್ನಾಳ್ವ ವಿಷ್ಣುವೆನೆ
ಕಲಿ, ಬಲಿಷ್ಠಂ, ಮಹಾ ದೈತ್ಯನಿರ್ದಪನಲ್ಲಿ
ದೂರ ತೆಂಕಲಲಿ, ನರ ಸುರ ಕಿನ್ನರರ್ಗೆಲ್ಲರ್ಗೆ
ಕಿವಿ ಭಯಂಕರದ ರಾವಣನೆಂಬ ಪೆಸರಿಂದೆ.
ಪೌಲಸ್ತ್ಯವಂಶಜಂ; ದ್ರಾವಿಡ ತಪಸ್ಸಿನಿಂ         ೫೦
ಮೃಡನಿಂ ಬರಂಗಳಂ ಪಡೆದನೆಂಬರ್ ಕಣಾ!
ದಿಗ್ಗಜ ದಶಂಗಳದಟಿರ್ಪುದಾತಂಗೆ, ಮೇಣ್
ದಶಶಿರಂ ತಾನೆಂಬರಯ್. ನಂಟರಾ ದೈತ್ಯಂಗೆ
ಮಾರೀಚ ಮೊದಲಪ್ಪ ಖಲ ನಿಶಾಚರರನಿಬರಂ;
ಸರ್ಪವೈರಿಗಳಾರ್ಯರಪ್ಪೆಮಗೆ.” ಋಷಿ ನುಡಿದು
ಮುಗಿವ ಮುನ್ನಮೆಯೆ ವಸುಧಾಧಿಪಂ : “ಶಿವ ಶಿವಾ,
ಸಾಲ್ಗುಮಾ ಕಥೆ, ಗುರುವೆ; ಬಲ್ಲೆನಾನೆಲ್ಲಮಂ
ಕೇಳ್ದು. ಕೀನಾಶನಣಲೊಳಗೆ ಕೈ ದುಮ್ಮಿಕ್ಕಿ
ಕೋರೆಯಂ ಕೀಳ್ವಾ ಪರಾಕ್ರಮಿಯಿದಿರ್ ನಾನೆ
ನಿಲಲಾರೆನೈ. ಮುದ್ದು ಮಗುವಂತಿರಲಿ. ಸುದ್ದಿ ೬೦
ಪರ್ವಿದೊಡೆ ರಾವಣನ, ಯಕ್ಷಕಿನ್ನರ ದೇವ
ಗಂಧರ್ವರೆರ್ದೆಗಳುಂ ತಳ್ಳಂಕಗೊಳ್ಳುವುವೊ
ಬೆರ್ಚ್ಚಿ. ಶಿಶು ರಾಮನೇಗೈವನೈ, ಧರ್ಮಜ್ಞ, ಪೇಳ್.
ಸುಂದೋಪಸುಂದರೆಂಬರ್ಗೆ ಮಾರೀಚಾದಿ
ಸೋದರರ್ ಮಕ್ಕಳ್; ಸಮರ ಯಮರ್ ! ರಾಮನಂ
ಕಳುಹಲಾರೆನೊ ದಿಟಂ; ಕ್ಷಮಿಸೈ, ತಪೋಧನಾ !”
ಮಕ್ಕಳಕ್ಕರೆಯಿಂದೆ ತೊದಲುತೊದಲಕ್ಕರಂ
ನುಡಿದು ಕೈಮುಗಿದು ಕಂಬನಿಗರೆವನಂ ನೋಡಿ,
ಗುರು ವಸಿಷ್ಠಂ : “ಇಕ್ಷ್ವಾಕು ಕುಲಧರ್ಮಮೂರ್ತಿ,
ಋಷಿಕೃಪಾಶೀರ್ವಾದಮಿದು ಕಣಾ ! ರಾಮನಂ           ೭೦
ಕಳುಹು ನಿಶ್ಶಂಕೆಯಿಂ. ಭಾಳನೇತ್ರಂಗೆ ತಾಂ
ಸದೃಶನೀ ಕೌಶಿಕಂ. ಕಂದನೀತನ ರಕ್ಷೆಯೊಳ್,
ಪ್ರಳಯಾಗ್ನಿ ಚಕ್ರಕೇಂದ್ರದೊಳಿರ್ಪ ಸುಧೆಯವೊಲ್,
ನಿತ್ಯಂ ಸುರಕ್ಷಿತಂ. ಸಕಲ ಮಂತ್ರಾಸ್ತ್ರವಿದನೀ
ರಣಕಲಾ ಪಂಡತಂ ತಾನೆ ಗುರುವಹನೆನಲ್
ಧನ್ಯನೈಸಲೆ ರಾಮಚಂದ್ರಂ ! ತಪೋಬಲಂ
ಕುಶಿಕಾತ್ಮಜಂಗೆ ನಿಗ್ರಹಕಿರ್ಪೊಡಂ, ನಿನ್ನ
ತನುಜಾತರಭ್ಯುದಯಕಾಗಿ ಬಂದಿಹನಿಂದು ಕೇಳ್
ಸಾಕೇತಪುರಿಗೆ, ನೆರಮಂ ಬೇಳ್ಪ ಬೇಳಂಬದಿಂ”.
ಆಪ್ತವಾಕ್ಯಂಗೇಳ್ದು ಸಂತೃಪ್ತನಾಗಿ, ದೊರೆ       ೮೦
ಬರಿಸಿದನು, ದೂತರಂ ಕಳುಹಿ, ಲಕ್ಷ್ಮಣಸಹಿತನಾ
ರಾಮನಂ ಪರಸುತಿರೆ ಗುರುಹಿರಿಯರೆಲ್ಲರುಂ
ಶಿರವನಾಘ್ರಾಣಿಸುತೆ, ಪೂವೆರಚಿ, ಹಿತವೇಳ್ದು,
ಶಂಖದುಂದುಭಿ ರವದ ಮಂಗಳಂ ಮೊಳಗುತಿರೆ,
ವಪು ಚಾರು ಧನ್ವಿಗಳನಾ ಪುತ್ರಯುಗ್ಮಮಂ
ಬೀಳ್ಕೊಟ್ಟನೈ ನ್ಮಪತಿ ಯತಿಯೊಡನೆ. ಮುದದಿಂದೆ
ನಡೆ ನಡೆದು ಮುಂಬರಿದು ಆ ಮೂವರೊಂದುವರೆ
ಯೋಜನವನುತ್ತರಿಸಿ, ಸೇರೆ ಸರಯೂ ನದಿಯ
ದಕ್ಷಿಣ ತಟವನಲ್ಲಿ, ಸವಿಗೊರಳ ನೇಹದಿಂ
ನೀಡಿದನು ಕುಶಿಕತನಯಂ ರಾಮಚಂದ್ರಂಗೆ,  ೯೦
ಮಂಗಳಸ್ನಾತಂಗೆ, ಮಂತ್ರ ಸದ್ವಿದ್ಯೆಯಂ.
ರಘುಜರ್ ನದೀತಟದ ತೃಣಶಯ್ಯೆಯೊಳ್ ಮಲಗಿ
ಜಲದ ಜೋಗುಳವೆರಸಿ ರಿಸಿನುಡಿಯನಾಲಿಸುತೆ
ನಕ್ಷತ್ರಮಯ ವಿಪುಲಗಗನದ ವಿಭಾವರಿಯ
ಕಳೆದರಯ್, ಸುಸ್ವಪ್ನಮಯ ಸುಖದ ನಿದ್ರೆಯಲಿ.
ಪ್ರಾಚೀ ದಿಗಂಗನೆಯ ಕಣ್ದೆರಹಿನೊಳ್ಬೆಳಗೊ,
ಕನಕ ಮೇರುವನೇರಿಬಹ ತೇರನೆಳೆಯುತಿಹ
ತಪನ ಹಯ ಖುರಪಟುದಿನೆದ್ದ ಹೊಂದೂಳಿಯೋ,
ಕತ್ತಲೆಯನಟ್ಟಿ ಬರ್ಪಿನನ ನಾರಾಚದಿಂ
ಗಾಯಗೊಂಡಿರ್ಪಿರುಳ್ ಕಾರ್ದ ನೆತ್ತರ್ ಸೋರ್ವ        ೧೦೦
ಸೋನೆ ತುಂತುರ್ ಮಳೆಯೊ ಪೇಳೆನಲ್, ಮರುದಿನಂ
ಬೆಳಗಾದುದಿಂದ್ರ ದಿಕ್ತಟದಿ. ತುಂಬಿತ್ತೊಡನೆ
ವನದೇಶಮಂ ಲಕ್ಷಪಕ್ಷಿಯುಲಿ. ರಾಜಿಸಿತು
ಸರಯೂ ನದಿಯ ವಕ್ಷಮೋಕುಳಿಯ ಕಾಂತಿಯಿಂ
ತಳಿಸಿ. ಋಷಿಯೊಡನೆ ಮಿಂದರು ರಾಮಲಕ್ಷ್ಮಣರ್,
ಶೀತ ಸುಂದರ ಸುಖದ ಸಲಿಲದಲಿ ! ಕುವರರಿಗೆ
ತಮ್ಮರಮನೆಯ ಸಿರಿಯೆ ಬಡತನಂ ತಾನಾಯ್ತಲಾ
ಕಾಡಿನ ಸೊಗದ ಸರಿಸದಲಿ ! ಬಂಡೆಯಿಂ ದುಮುಕಿ
ನೀರ್ಗೆ, ಮೇಣೊಬ್ಬರೊಬ್ಬರ ಮೊಗಕೆ ನೀರೆರಚಿ,
ನಲಿದಾಡಿದರ್ ಸ್ಪರ್ಧೆಯಿಂದೀಸಿ. “ಗುರುದೇವ,          ೧೧೦
ನಿಮ್ಮ ಕರುಣೆಯಿನೆಮಗೆ ಲಭಿಸಿತೀ ವನಸುಖಂ.
ದಾರಿದ್ರ್ಯಮಲ್ತೆ ಆ ನಾಗರಿಕ ಜೀವನಂ
ಈ ವನ್ಯ ಸಂಸ್ಕೃತಿಯ ಮುಂದೆ?” ಎಂದ ರಾಮನಂ
ಕುರಿತಾ ಮಹರ್ಷಿ ಮಂತ್ರಿಸಿದನಿಂತು :
“ದಿಟವೊರೆದೆ,
ಹೇ ವತ್ಸ, ಗಿರಿವನಪ್ರೀತಿ ತಾಂ ದೈವಕೃಪೆ ದಲ್.
ಜಗದೀಶ್ವರನ ಮಹಿಮೆ ಸಂವೇದ್ಯವಹುದಿಲ್ಲಿ
ಭವ್ಯ ಸೌಂದರ್ಯ ಶೀಲದ ವನ್ಯ ಶಾಂತಿಯಲಿ.
ಉಪನಿಷತ್ತಿನ ಮಹಾ ಮಂತ್ರಾನುಭವಗಳುಂ
ಹೃದ್ಗಮ್ಯವಿಲ್ಲಿ. ಚಿತ್ತಕೆ ಸಮಾಧಿಯನಿತ್ತು
ಹರಿದಂತ ವಿಶ್ರಾಂತ ಹರಿತ ಕಾನನಮಯಂ ತಾಂ       ೧೨೦
ಪರ್ವತಶ್ರೇಣಿ ಪರ್ವಿದೆ ನೋಡು ಶಿವನಂತೆವೋಲ್,
ಧ್ಯಾನ ಮಾಳ್ಪಗೆ ಹೃಷ್ಟರೋಮತೆಯನಿತ್ತು. ಅದೊ,
ಬಣ್ಣದ ಮುಗಿಲ್ ಗಗನ ಪಟದಲ್ಲಿ ತೇಲುತಿದೆ
ದೇವರೆ ಪೆಸರ್ ಬರೆದ ಮುದ್ರೆಯೋಲ್. ಕರೆಯುತಿದೆ ಕಾಣ್
ನಮ್ಮಾತ್ಮಮಂ ಕಲೋಪಾಸನೆಗೆ. ರಘುಜ ಕೇಳ್,
ಸೃಷ್ಟಿ ಸೌಂದರ್ಯದೊಲ್ಮೆಯೆ ಸೃಷ್ಟಿಕರ್ತಂಗೆ
ಪೂಜೆಯಯ್. ರಸಜೀವನಕೆ ಮಿಗಿಲ್ ತಪಮಿಹುದೆ?
ರಸಸಿದ್ಧಿಗಿಂ ಮಿಗಿಲೆ ಸಿದ್ಧಿ ? ಪೊಣ್ಮೆದೆ ಸೃಷ್ಟಿ
ರಸದಿಂದೆ; ಬಾಳುತಿದೆ ರಸದಲ್ಲಿ; ರಸದೆಡೆಗೆ ತಾಂ
ಪರಿಯುತಿದೆ; ಪೊಂದುವುದು ರಸದೊಳೈಕ್ಯತೆವೆತ್ತು     ೧೩೦
ತುದಿಗೆ. ರಸಸಾಧನಂಗೆಯ್ಯದಿರುವುದೆ ಮೃತ್ಯು.
ಆನಂದರೂಪಮಮೃತಂ ರಸಂ!”
ಋಷಿಮಂತ್ರಮಂ
ಕೇಳ್ದು ಬಾಲಕರಾತ್ಮ ಭಾವನೋಜ್ವಲರಾಗಿ
ರವಿಗರ್ಘ್ಯಮೆತ್ತಿದರ್, ಗಾಯತ್ರಿ ಘೋಷದಿಂ
ಜೇಂಕರಿಸಲಡವಿ.
ಅಲ್ಲಿಂದೆ ಮೇಣ್ ಮುಂಬರಿದು
ಕಾಮಾಶ್ರಮಂಬೊಕ್ಕು ಋಷಿಗಳಾತಿಥ್ಯಮಂ
ಕೈಕೊಂಡು, ಮುನಿಯಿಂದೆ ಕಮನೀಯ ಕಥೆಗಳಂ
ಕೇಳುತಿರುಳಂ ಕಳೆದು, ಮುಂಬೆಳಗಿನೊಳಗೆಳ್ದು
ನಡೆದು ಗಂಗಾತೀರಮಂ ಸೇರ್ದು, ದೋಣಿಯಿಂ
ದಾಂಟಿ, ಪೊಕ್ಕರ್ ಮಹಾ ಭೀಷಣ ಭಯಂಕರದ          ೧೪೦
ನಿಬಿಡ ಘೋರಾರಣ್ಯಮಂ. ಹಳುವ ಹೊಕ್ಕೊಡನೆ
ತರುಣನೆದೆ ನಡುಗಿ ವಿಶ್ವಾಮಿತ್ರನಂ ಕುರಿತು
ಲಕ್ಷ್ಮಣಂ : “ಮೌನಶಿಲೆಯಂ ಧ್ವನಿಕ್ರಕಚದಿಂ
ಗರ್ಗರಿಸಿ ಕೊಯ್ವಂತೆವೋಲ್, ಗುರುವೆ, ಚೀರುತಿವೆ
ಜೀರುಂಡೆಗಳ್, ಕರ್ಣಕರ್ಕಶಂ. ಶಕುನಿಗಳ್
ಕೂಡೆ ಕೂಗುತಿವೆ ದುಶ್ಶಕುನಮಂ, ಕಾಡಿನೀ
ಕಳ್ತಲೆಯೊ ಕಾನನ ನಿಶಾಚರಿಯ ಕರ್ಮೊಗದ
ಪುರ್ಬುಗಂಟೆಂಬಂತೆವೋಲ್ ನೀರವಕ್ರೌರ್ಯದಿಂ
ನಿಟ್ಟಿಸಿದೆ, ನೋಳ್ಪರನಣಕಿಪಂತೆ. ಗುರುವೆ, ಪೇಳ್,
ಕಾಡಾವುದಿದಕೆ ಪೆಸರೇನ್ ?”
“ತಾಟಕಾ ವನಂ  ೧೫೦
ತಾನಿದು ಕಣಾ! ಋಷಿಯ ಶಾಪದಿಂ ಸುಂದಸತಿ,  ಆ
ಮಾರೀಚನಬ್ಬೆ, ಜಕ್ಕಿಣಿಯಾಗಿ ಪುಟ್ಟಿ ಈ
ಪೆರ್ಬನವನಂಡಲೆಯುತಿಹಳು ತಾಟಕೆಯೆಂಬ
ಘೋರ ರಾಕ್ಷಸ ರೂಪದಿಂ.”
ತೆಕ್ಕನೆಯೆ ಕೇಳ್ದುದಯ್
ಚೀತ್ಕಾರವೊಂದು, ಗಿರಿಯಟವಿ ಚೀತ್ಕರಿಸಿದಂತೆ.
“ಅವಳೆ ತಾಟಕೆ ! ಬರ್ಪಳದೊ ! ಹೆದೆಗೆ ಬಾಣಮಂ
ಪೂಡಿ ನಿಲ್ಲಿಂ !” ಗುರುವಿನಾಣತಿಗೆ ಬಾಲಕರ್
ಬತ್ತಳಿಕೆಯಿಂ ತುಡುಕಿ ನಾರಾಚಮಂ, ಪೂಡಿ
ಸಿಂಜಿನಿಗೆ, ಸೆಳೆದು ನಿಂದರ್ ಜವಳಿಗಣ್ಗಳೋಲ್.
ಭೂಕಂಪ ಕಾಲದೊಳ್ ಶಿಖರದೌನ್ನತ್ಯದಿಂ     ೧೬೦
ಕಣಿವೆ ಕಿಬ್ಬಿಗುರುಳ್ದು ಬೀಳ್ವ ಪೆರ್ಬಂಡೆ ತಾಂ
ತಳ್ಪಲ್ಗಿಡುಮರಂಗಳಂ ನುರ್ಚ್ಚುನುರಿಗೆಯ್ದು
ನುರ್ಗಿ ಬರ್ಪಂತೆವೋಲ್ ಬಂದಳ್ ಮಹಾಘೋಷದಿಂ
ಕಿಡಿಯಿಡುವ ರೋಷದಿಂ ಕೋರೆದಾಡೆಗಳಸುರಿ,
ತಾಟಕೆ, ಕರಾಳೆ! ಮುಡಿಗೆದರಿದಳ್ ಮುಂಗಾರೆನಲ್.
ಕೊರಳೆತ್ತಿ ಮೊಳಗಿದಳ್. ಕಣ್‌ಸುಳಿಸಿ ಮಿಂಚಿದಳ್.
ಬೀಸಿದಳ್ ದೆಸೆದೆಸೆಗೆ ಬಿರುಗಾಳಿಯಂತೆವೋಲ್.
ದಿಕ್ತಟಂಗಿಡುವಂತೆ ಧೂಳಿಯಂ ಮುಸುಗಿದಳ್.
ಆಲಿಕಲ್ ಮಳೆಗರೆದಳಾ ಮಾಯಾಮಯೀ ಕೂಟ
ಯುದ್ಧಪ್ರವೀಣೆ. ಲಕ್ಷ್ಮಣ ರಾಮರಸ್ತ್ರಾಳಿಗಳ್    ೧೭೦
ತೂರುತಿರೆ ದೆಸೆದೆಸೆಗೆ, ರಾಕ್ಷಸಿಯ ಪೀನತನು ತಾಂ
ಮಳೆಗರೆದುದಯ್, ಹೊಳೆಹೊಳೆಗಳಾಗಿ ಕೆನ್ನೀರುಗಳ್
ಪರಿಯೆ. ಬಿದ್ದಳ್ ನೆಲಕೆ ಕರ್‌ಮುಗಿಲ್ ಬೀಳ್ವಂತೆ.
ರಾಕ್ಷಸಿಯ ರೂಪವಾನುತೆ ಬಂದ ಬಿರುವಳೆಯೆ
ಹೊಯ್ದು ಹೊಳವಾದಂತೆ, ಹೊರಗೊಳಗೆ ತಿಳಿಯಾಯ್ತು
ರಾಮ ಲಕ್ಷ್ಮಣ ಋಷಿಯರಾತ್ಮಲೋಕತ್ರಯಂ.
ಕಳೆಯುತಾ ರಜನಿಯಂ ತಾಟಕಾವನದೊಳಲ್ಲಿಂ
ಮರುದಿನಂ ಚಲಿಸಿದರ್ ಕೌಶಿಕ ತಪೋವನಕೆ.
ನಿಚ್ಚ ಪಚ್ಚೆಯ ಪಸುರ್‌ಬನದಿಂದೆಸೆವ ಮಲೆಯ
ತೋಳ್ತಳ್ಕೆಯೊಳ್, ನೀಳಿಯಾಗಸವನೆರ್ದೆಯಲ್ಲಿ          ೧೮೦
ರನ್ನಗನ್ನಡಿಯಂತೆ ತೊಟ್ಟ ವನದೇವತಾ
ಹೃದಯ ಲೋಚನಮೆನಲ್ ಮೆರೆವ ವಿಸ್ತಾರದಾ
ಸ್ಫಟಿಕ ನಿರ್ಮಲ ಸರೋವರ ಸುಭಗ ತೀರದಲಿ
ಶೋಭಿಸಿದುದಾ ಮುನಿ ನಿಕೇತನಂ.
ಐತಂದರಂ
ಸಂಕಟ ನಿವಾರಕರನೀಕ್ಷಿಸಿ ತಪೋಧನರ್
ಮನೆಗೆ ಬಿಜಯಂಗೈದ ಮಂಗಳದ್ವಯಗಳಂ
ಮುದ್ದಿಸಿದರುಪಚರಿಸಿದರ್ ದಶರಥ ಕುಮಾರರಂ.
ಮರುವಗಲ್ ತೊಡಗಿದನ್ ಕುಶಿಕತನಯಂ ಯಜ್ಞಮಂ.
ದುಪ್ಷಶಿಕ್ಷಣ ದೀಕ್ಷಿತರ ರಾಮಲಕ್ಷ್ಮಣರ
ಕೋದಂಡ ಠಂಕಾರ ಮಂತ್ರ ಚಿಚ್ಛಕ್ತಿಯ          ೧೯೦
ಶರಾಘಾತಕಳಿದನ್ ಸುಬಾಹು. ಮಾರೀಚನುಂ
ಏರ್ವಡೆದು, ದೇಹಮುರುಳಲ್ ಪ್ರಾಣಮೋಡುವೊಲ್
ಕೆಟ್ಟೋಡಿದನ್. ಋಷಿಯಭೀಷ್ಟಂ ಸಿದ್ಧಿಯಪ್ಪಂತೆ
ದಿನಂ ಮೂರರೊಳ್ ಮುಗಿದುದಯ್ ಮಖಂ.
ಕೆಲದಿನಕೆ
ಮಿಥಿಳೆಯಿಂ ಯಾತ್ರೆಬಂದುದು ಮುನಿಗಳಾಶ್ರಮಕೆ
ಧರಣಿಪತಿ ಜನಕನ ಮಹಾಕ್ರತು ಸುಕೃತವಾರ್ತೆ.
ರಾಮಲಕ್ಷ್ಮಣರೊಡನೆ ಪೊರಮಟ್ಟನಾಯೆಡೆಗೆ
ಮುನಿಪುಂಗವಂ, ವಿಧಿನಿಯಂತ್ರದಲಿ. ಹಾದಿಯಲಿ
ಹೇಳಿದನು, ಜನಕರಾಜಗೆ ದಿವಿಜ ಕೃಪೆಯಿಂದೆ
ಲಭಿಸಿರ್ಪ ಹರಧನುಸ್ಸಿನ ಕಥಾಚರಿತಮಂ.     ೨೦೦
ಕೇಳ್ದ ರಾಮಂಗೆ ಶಿವಶಕ್ತಿ ಸಂಚರಿಸಿದೊಲ್
ಪುಲಕಿಸಿತು ಮೆಯ್ : ತನ್ನ ಹೃದಯೇಶ್ವರಿಯನನ್ಯ
ಕಾಪುರುಷರಿಂ ಪೊರೆವ ಹರಕೃಪಾ ರೂಪಿಯೇಂ
ಚಾಪಮಾತ್ರಮೆ ಪೇಳ್ ? ಶಿವೇಚ್ಛಾಪ್ರಣಾಲಿಯೆ ದಿಟಂ !
ಕಣಿವೆಗಳನಿಳಿದದ್ರಿಗಳನಡರಿ ಬರುತಿರಲ್,
ಗೌತಮನ ವಾಙ್ಮಹಿಮೆಯೋ ಮೇಣಹಲ್ಯೆಯ
ತಪೋಬಲಮೊ ಕಾಣೆನಟವಿಯ ಕುಟಿಲ ಪಥದಲಿ
ಹಠಾತ್ತೆನಲ್ ಭ್ರಷ್ಟಮಾದುದು ಪರಿಚಿತಾಧ್ವಮಾ
ಕುಶಿಕ ಸೂನುವಿಗೆ. ತಾರಾಗಣಮೆ ತೋರ್ಬೆರಳ್         ೨೧೦
ತಾನಾಗೆ, ದೆಸೆಯರಿತು, ಕಳ್ತಲೊಳೆ ನಡೆದರಯ್
ಸಾಹಸದ ಕಣ್ಣೂಹೆಯಿಂ. ಪೂರೈಸಿದುದು ರಾತ್ರಿ.
ಕಣ್ದೆರೆದಳುಷೆ ಮೂಡಣಂಬರದಿ ಪಾಂಥರ್ಗೆ
ಗೋಚರಿಸಿತೊಂದು ಋಷಿವನ ಸದೃಶ ಕಾನನಂ.
ಪೊಕ್ಕರದನೇನೆಂಬೆನಾ ಮಹಾ ಶಕುನಮಯ
ದುಃಖಗರ್ಭಿತ ಮೌನಮಂ ! ಹಾಡದಿವೆ ಹಕ್ಕಿ.
ನಲಿದಾಡದಿವೆ ಮಿಗಂ. ಸಂಚರಿಸದಿದೆ ಗಾಳಿ.
ತನಿಗಂಪನೀಯದಿವೆ ಮರಗೋಡಿನೊಳ್ ಮಲರ್.
ಚಲಿಸವೆಲೆ ಪುಲ್ಲೆಸಳ್. ಆವ ದುಃಖವೊ ಅಲ್ಲಿ
ಕೊನೆಗಾಣದಂತಮಂ ದಿನಮುಂ ನಿರೀಕ್ಷಿಪೊಲ್
ಮೂಗುವಟ್ಟಿರ್ದ ಬನಮೆಸೆದುದಾ ಪಥಿಕರ್ಗೆ    ೨೨೦
ಬರೆದಂತೆ ನೀರವಂ, ಕೊರೆದಂತೆ ನಿಶ್ಚಲಂ,
ನಿಶ್ಶಬ್ದತಾ ಕುಂಭಕಸ್ಥಿತಿಯ ಯತಿನಾದದೋಲ್.
ರಾಮಾಯಣದೊಳತಿಮನೋ ಋತದ ಸಂಘಟನೆ
ಸಂಭವಿಸಲಿರ್ಪ ತಾಣಂ ತಾನದೆಂದರಿವರೇಂ?
ಗೌತಮ ಮಹಾಮುನಿಯ ಶಾಪದಿನಹಲ್ಯೆ ತಾಂ
ವರ್ಷ ಶತಮಾನಂಗಳಿಂದೆ ಜಡರೂಪದಿಂ,
ನಿಷ್ಠುರ ಶಿಲಾತಪಸ್ವಿನಿಯಾಗಿ, ಕನಿಕರದ
ಕಣ್ಗೆ ಬಾಹಿರೆಯಾಗಿ, ಜಗದ ನಿರ್ದಾಕ್ಷಿಣ್ಯ
ವಿಸ್ಮೃತಿಗೆ ತುತ್ತಾಗಿ, ವಜ್ರಮೌನದ ಅಚಿನ್
ನಿದ್ರೆಯಿಂದೆಳ್ಚರುವ ಬಯಕೆಯಿಂದೊರಗಿರ್ದ  ೨೩೦
ಸುಕ್ಷೇತ್ರಮಂ ಪ್ರವೇಶಿಸಿದುದೆ ತಡಂ, ಮರುಗಿ
ಕರಗಿದುದು ರಾಮಾತ್ಮವನಿಮಿತ್ತ ಶೋಕದಿಂ.
ಕಣ್ಗಳಿಂ ಪರಿದುದಯ್ ನೀರ್. ತಾಯಿ ಕೌಸಲ್ಯೆ
ಗೋಳಿಡುತೆ ತನ್ನ ಪೆಸರಂ ಪಿಡಿದು ಕರೆವವೊಲ್
ಕಲ್ಗಳಿಂ ಪುಲ್ಗಳಿಂ ಮರಮರದ ಹೃದಯದಿಂ
ಮೂಡಿ ಕೇಳ್ದುದು ಸಂಕಟಂ ರಾಮನೊರ್ವಂಗೆ.
ಕುಳಿರ್ಗಾಳಿ ಬೀಸಲ್ಕೆ ತಳಿರ ತುದಿಯೊಳಗಿರ್ದು
ತಳಿಸುವಿರ್ಪನಿ ತರತರನೆ ಕಂಪಿಸುವ ತೆರದಿ, ಕೇಳ್,
ಸ್ಪಂದಿಸಿದುದವನ ಮೆಯ್ ಚಿನ್ಮಯಾವೇಶದಿಂ.
ಕೈವೆರಸಿ ನಡುಗಿದುದು ಪಿಡಿದ ಬಿಲ್. ಕುಣಿದತ್ತು          ೨೪೦
ಬತ್ತಳಿಕೆ ಬೆನ್ನಮೇಲ್. ತಲೆಯ ಮೇಲಾಡಿದುದು
ಕಾಕಪಕ್ಷದ ಕುರುಳ್, ಗಾಳಿಗೊಲಿಯುವ ಬಳ್ಳಿ
ಜೋಲ್ವಂತೆವೋಲ್. ವಕ್ಷಮೇದಿದುದು ಸುಯ್ಗಳಿಂ.
ಚೆಲ್ಲಿತಯ್ ತೇಜಂ ವದನದಿಂದೆ ! ನೋಡುತಿರೆ,
ಬಾಹ್ಯಸಂಜ್ಞಾ ಶೂನ್ಯನೆಂಬಂತೆ ರಘುನಂದನಂ
ನರ್ತಿಸಲ್ ತೊಡಗಿದನು ಭಾವದ ಸಮಾಧಿಯಿಂ
ಮಧುಮತ್ತನಂತೆ. ಪೇಳೇನೆಂಬೆನದ್ಭುತಂ:
ಸ್ತಬ್ಧ ಗಿರಿವನ ಧರಣಿ ಸಪ್ರಾಣಿಸಿತು ಕೂಡೆ
ಚೈತ್ರಲಕ್ಷ್ಮೀ ಸ್ಪರ್ಶಮಾದಂತೆ. ಬೀಸಿದನ್
ಪುಣ್ಯಪವನಂ ತರುವರಂಗಳ ನಾಳನಾಳದೊಳ್         ೨೫೦
ಶಕ್ತಿ ಸಂಚರಿಸೆ. ತುಂಬಿತು ಕೊಂಬೆಕೊಂಬೆಯಂ
ಫುಲ್ಲಪಲ್ಲವ ರಾಶಿ ರಾಶಿ, ಪರಿಮಳಮಯಂ
ನವರುಚಿರ ಕುಸುಮಸಂಕುಲಮೆಸೆದುವೆತ್ತಲುಂ
ಸುಗ್ಗಿಯಾಣ್ಮನ ಸಗ್ಗದೋಲಗಸಾಲೆ ಸಮೆದಂತೆ.
ಕಾಜಾಣಮುಲಿದುದಯ್. ನಲಿದುದು ನವಿಲ್. ಪಿಕಂ
ಪಾಡಿದುದು. ಪಕ್ಕಿಯಿಂಚರದೊಡನೆ ಸಂಗಮಿಸಿ
ತುಂಬಿಮೊರೆ ತುಂಬಿ ಝೇಂಕರಿಸಿತೋಂಕಾರಮಂ.
ಸುಳಿ ಸುಳಿದುವೈ ಚಿನ್ನಚುಕ್ಕಿಯ ಚಿಗರೆ ಚೆಲ್ವಾಗಿ,
ಪ್ರಾಣಮಯಮಾಯ್ತನ್ನಮಯ ಜಗಂ. ಭೋಂಕನೆ
ಮನೋಮಯತೆವೆತ್ತು, ವಿಜ್ಞಾನಮಯಮಂ ಪೊಕ್ಕು,    ೨೬೦
ದುಮುಕಿತಾನಂದಮಯದೊಳ್, ಕೋಶಕೋಶಂಗಳಂ
ಮೀಂಟಿ ನೆಗೆನೆಗೆದುತ್ತರಿಸಿ ದಾಂಟಿ, ತಗುಳ್ದುದಾ
ಅಲೌಕಿಕಂ ನೋಳ್ಪರ್ಗಮನುಭೂತಿ. ನೋಡುತಿರೆ,
ಚಲಿಸಿದನು ರಾಮನೊಯ್ಯೊಯ್ಯನೆಯೆ ನೃತ್ಯಶೀಲಂ,
ಮುಂದೆ. ಹಿಂಬಾಲಿಸಿದರಿತರರುಂ ಮಂತ್ರಬಲದಿಂ
ಬದ್ಧರಾದಂತೆ. ನೆರೆದುದು ಚೈತ್ರ ಸೌಂದರ್ಯಮಂ
ಬಾನತ್ತಣಿಂದಿಳಿದ ಗಂಧರ್ವ ಮಧುರಗೇಯಂ,
ಅಶರೀರ ಲಕ್ಷ ವೀಣಾ ತಂತ್ರಿಯಂ ಮಿಡಿದು
ಮೇಳಗೈದಂತೆ,
ಮೆರೆದುದು ಮುಂದೆ ಪಳುವದೊಳ್,
ವನಭಿತ್ತಿಗೆದುರಾಗಿ, ಸುತ್ತಣೊರಲೆಯ ಪುತ್ತು   ೨೭೦
ತಬ್ಬಿರ್ದ ಕಲ್ಬಂಡೆಯೊಂದು, ಹಾವಸೆ ಹಬ್ಬಿ,
ಮುತ್ತಿದ ಬಿದಿರ್ಮೆಳೆಯ ವನಮಾತೃವಕ್ಷದಲಿ.
ಸತಿಯ ರಕ್ಷೆಗೆ ತಾನೆ ರೂಪಮಂ ತಾಳ್ದುದೆನೆ
ಪತಿಯ ಶಾಪಂ, ಶಿಲೆಯ ಮೇಲೊರಗಿ ಕಿಚ್ಚುಗಣ್ಣಿಂ
ನಿಚ್ಚಮುಂ ಕಾಪಿರ್ದ ಕರ್‌ಪಳದಿ ಪಟ್ಟೆಯಾ
ಪೆರ್ಬುಲಿಯದೊಂದು ಬರ್ಪವರ ಕಾಣಲೊಡಮಾ
ತಾಣದಿಂದೆದ್ದು ಮಿಂಚಂತೆ ಕಣ್ಗೆ ಮರೆಯಾಯ್ತು.
ಋಷಿಕೃಪಾವಚನದೊಲ್ ರಾಮನೇರ್ದನು ಬಂಡೆಯಂ,
ಲಾಸ್ಯಮಂ ತೊಡಗಿ. ಒಯ್ಯನೆ ಚರಣಚುಂಬನಕೆ
ಕಲ್ಲೆ ತಾಂ ಬೆಣ್ಣೆಯಾಯ್ತೆನೆ ಕಂಪಿಸಿತು ಬಂಡೆ, ೨೮೦
ಪ್ರೇಮ ಸಾಮೀಪ್ಯದಿಂ ಸಾನ್ನಿಧ್ಯದಿಂ ಮತ್ತೆ
ಸಂಸರ್ಗದಿಂ ತಲ್ಲಣಂಗೊಳ್ಳುವಬಲೆಯೋಲ್.
ಬಿಲ್ಲು ಬೆರಗಾಗಿ ನೆರೆದವರೆಲ್ಲರೀಕ್ಷಿಸಿರೆ,
ಬೆಂಗದಿರನುರಿಗೆ ಕರ್ಪೂರಶಿಲೆಯಂತೆವೋಲ್
ದ್ರವಿಸಿತಾ ಕರ್ಬಂಡೆ : ದಿವ್ಯ ಮಾಯಾ ಶಿಲ್ಪಿ
ಕಲ್ಪನಾ ದೇವಿಯಂ ಕಲ್ಲಸೆರೆಯಿಂ ಬಿಡಿಸಿ
ಕೃತಿಸಿದನೆನಲ್, ರಘುತನೂಜನಡಿದಾವರೆಗೆ
ಹಣೆಮಣಿದು ನಿಂದುದೊರ್ವ ತಪಸ್ವಿನೀ ವಿಗ್ರಹಂ,
ಪಾಲ್‌ಬಿಳಿಯ ನಾರುಡೆಯ, ಕರ್ಪಿರುಳ ಸೋರ್ಮುಡಿಯ,
ಪೊಳೆವ ನೋಂಪಿಯ ಮೊಗದ ಮಂಜು ಮಾಂಗಲ್ಯದಿಂ.           ೨೯೦
ಪೆತ್ತ ತಾಯಂ ಮತ್ತೆ ತಾನೆ ಪಡೆದಂತಾಗೆ
ನಮಿಸಿದನೊ ರಘುಜನುಂ ಗೌತಮಸತಿಯ ಪದಕೆ,
ತನ್ನ ಕಾವ್ಯಕೆ ತಾಂ ಮಹಾಕವಿ ಮಣಿಯುವಂತೆ !
ಇಂದ್ರನಳುಪಿಂಗಳ್ಕಿ ಪತಿಯ ಶಾಪಕೆ ಸಿಲ್ಕಿ
ಕಲ್ಲಾದಹಲ್ಯೆಯಂ ಸಿರಿಯಡಿಯ ಸೋಂಕಿಂದೆ
ಮರಳಿ ಪೆಣ್ ಮಾಡಿದಾ ರಾಮೋತ್ತಮಾಂಗಕ್ಕೆ
ಘೇಯೆಂದು ದೇವತೆಗಳರಳುಮಳೆಗರೆದರಯ್,
ದುಂದುಭಿ ರವಂಗಳಂ ಮೊಳಗಿ. ಕಲ್ಲಾದರೇನ್?
ತೀವ್ರತಪದಿಂದೆ ಚೇತನ ಸಿದ್ಧಿಯಾಗದೇಂ
ಜಡಕೆ? ಕಲ್ಲಾದ ಪೆಣ್ಣರಕೆ ತಾಂ ಕೌಶಿಕಗೆ        ೩೦೦
ಬಟ್ಟೆದಪ್ಪಿಸಿ ಸೆಳೆಯದೇನಿಹುದೆ, ಪೇಳ್, ಚರಣಮಂ
ಶ್ರೀರಾಮನಾ? ಮುನಿಜನಂ ಪರಸಿ ಕೊಂಡಾಡುತಿರೆ
ರಾಮಪದ ಮಹಿಮೆಯಂ ತೋರ್ದಹಲ್ಯೆಯ ತಪೋ
ಗೌರವವನಾ ಗೌತಮಂ ಬಂದನಲ್ಲಿಗೆ ಶಿವಂ
ಬರ್ಪಂತೆವೋಲ್. ಕೂಡೆ ಪಾಳ್‌ಪೋಗಿರ್ದುದಾ ಬನಂ
ಪ್ರಾಣಮಯ ಪಾವನಾಶ್ರಮವಾಯ್ತು. ನೊರೆಯ ಮುತ್ತಂ
ಚೆಲ್ಲಿ ಪರಿದುದು ಮೊರೆವ ನಿರ್ಝರಿಣಿ. ಹೂ ತುಂಬಿ
ತೆಳುಗಾಳಿಗೊಲೆದು ತಲೆದೂಗಿತಾ ವನಧರಣಿ.
ಹರಿಣನಂ ಬಳಿಸಾರ್ದು ಮೊಗಂ ನೆಕ್ಕಿ ಮೆಯ್‌ತಿಕ್ಕಿ
ಸೊಗಸಿದುವು ಹರಿಣಿ! ಪದತಲಕೆ ಮುಡಿಯಿಟ್ಟಳಂ        ೩೧೦
ದಿವ್ಯ ಸಹಧರ್ಮಿಣಿಯನೆತ್ತಿ, ಕಣ್ಣೀರ್ವೊರಸಿ,
ಕರೆದನು ತಪೋಧನಂ ಹರ್ಷಾಶ್ರುವಂ. ಪೇಳ್ವುದೇಂ
ರಾಮನಾನಂದಮಂ? ಗೌತಮಾಲಿಂಗನದಿ
ಮೈಮರೆದನಯ್, ಭಕ್ತಿಯಪ್ಪುಗೆಗೆ ಭಗವಂತನೋಲ್.
ಕಳೆಯುತಾ ರಾತ್ರಿಯಂ ಗೌತಮಾಶ್ರಮದಲ್ಲಿ
ಮುಂದೆ ನಡೆದರು ಮಿಥಿಲೆಗಾಗಿ. ನಾನಾ ಕಥಾ
ಶ್ರವಣದಿಂದಧ್ವಶ್ರಮಂಗಳಂ ನೀಗುತಂ,
ಬ್ರಹ್ಮರ್ಷಿ ವಚನ ತತ್ತ್ವಾಮೃತವನೀಂಟುತಂ,
ಪ್ರಕೃತಿ ಸೌಂದರ್ಯ ರತಿಯಿಂಪನನುಭವಿಸುತಂ
ಬರಬರಲ್ ಶೋಭಿಸಿತು ಮುಂದೆ, ಸಂಪತ್ತಿನಿಂ            ೩೨೦
ಶ್ರೀಯುತ ಕುಬೇರನಲಕಾವತಿಗೆ ಮಲೆತುದೆನೆ
ರಂಜಿಸುತ್ತಿರ್ದಾ ವಿದೇಹದ ರಾಜಧಾನಿ.
ರಾಮಂಗೆ ಪುಳಕಿಸಿರೆ ಮೆಯ್ ಚಿತ್ತದೆಚ್ಚರಕೆ
ತಿಳಿಯದಿಂಪಿಂದೆ, ಪೊಕ್ಕರ್ ಮಹಾ ಮಿಥಿಳೆಯಂ,
ಮುತ್ತುರತ್ನಕೆ ಶರಧಿಯಂ ಪುಗುವರೋಲ್. ಜನಂ
ಕಿಕ್ಕಿರಿದು ಸುರಿದುದು ವಿದೇಶ ದೇಶಂಗಳಿಂ
ಜನಕರಾಜನ ಮಖದ ಸಂಭ್ರಮಕೆ. ಪಟ್ಟಣದ
ಬೀದಿಯಲಿ ಕೌಶಿಕನೊಡನೆ ರಾಮಲಕ್ಷ್ಮಣರ್
ಸಾಗುತಿರೆ, ಮಂದಿ ನಿಂದುದು ದಿಟ್ಟಿನಟ್ಟು, ಕೇಳ್,
ಬಾಲಕರ ಭದ್ರಾಕೃತಿಗೆ ಕಣ್‌ಮನಂ ಸೋಲ್ತು.  ೩೩೦
ದೊರೆಯಾಳುಗಳ್ ಬಂದು ಪೊಳೆವತಿಥಿಗಳ್ಗೆರಗಿ
ಜನ್ನಸಾಲೆಯ ಬಳಿಯ ಪಂದಳಿರ ಪಂದರದಿ
ಸಮೆದ ಬೀಡಾರಕವರಂ ಪುಗಿಸಿ, ಪರಿದರ್
ಮಹರ್ಷಿ ವಿಶ್ವಾಮಿತ್ರನಾಗಮನ ವಾರ್ತೆಯಂ
ರಾಜರ್ಷಿಗರುಹಲ್ಕೆ. ಕೇಳ್ದೊಡನೆ ಬಂದನಾತಂ;
ಪೊಕ್ಕನಾ ಪರ್ಣಕುಟಿಯಂ. ಚಂದ್ರಸೂರ್ಯರ್ವೆರಸಿ
ಗಗನಮಿರ್ಪಂತೆ ಲಕ್ಷ್ಮಣರಾಮರೊಡನಿರ್ದ
ಕೌಶಿಕಂಗೆರಗಿದನ್ : ‘ಧನ್ಯನಾಂ, ಪುಣ್ಯಮಾಯ್ತೀ
ಮಿಥಿಲೆ’. ಸಂಭಾಷಿಸುತ್ತಿರೆ, ನೃಪನ ಕಣ್‌ಪರಮೆ
ರಾಮ ರೂಪದ ಚಾರು ಕುಟ್ಮಲಾಕರ್ಷಣೆಗೆ     ೩೪೦
ಸಿಲ್ಕಿರ್ದುದಂ ಕಂಡು, ನಸುನಗುತೆ ಕುಶಿಕತನಯಂ
ನುಡಿದನಿಂತಾ ಜನಕರಾಜನ ಕಿವಿಗೆ ಜೇನು
ಹೊಯ್ವಂತೆ :
“ಮಹಿಮೆ ಮಹಿಮೆಯ ಕಣ್ಗೆ ಮರೆಯಹುದೆ,
ರಾಜರ್ಷಿ? ಸದೃಶರೊಳ್ ನೆಟ್ಟುದಯ್ ನಿನ್ನ ಚಿತ್ತಂ.
ರಾಮ ಲಕ್ಷ್ಮಣರಿವರ್ ದಶರಥನ ಮಕ್ಕಳ್ ಕಣಾ.”
ಎಂದು ಮೊದಲಾಗವರ ಸಿರಿಮೆಯ್ಮೆಗಳನೊರೆದು
ಮತ್ತೆ “ನೃಪವರ, ಹರನ ಕೋದಂಡಮಂ ತೋರ್ಪ
ನೆವದಿನಿವರಂ ತಂದೆನೀಯೆಡೆಗೆ ತೋರಿಸಾ
ಶಿವಚಾಪಮಂ. ಕಣ್ದಣಿಯೆ ಕಾಣ್ಗೆ. ಮರಳವೇಳ್ಕುಂ
ಬೇಗಮಾ ಕೋಸಲಕೆ. ಕಾತರದಿ ಕಾಯುತಿಹರೈ          ೩೫೦
ತಂದೆ ತಾಯ್ವಿರ್. ದಶರಾತ್ರಿಯವಧಿಯಂ ಪೂಣ್ದು
ಕರೆತಂದೆನಿವರನೆನ್ನಾ ಯಜ್ಞಮಂಗಳಕೆ.”
ಮುನಿವರನ ನುಡಿಗೇಳ್ದನವನಿಪತಿ. ಸುಖರಸಂ
ತೀವಿದಾ ತನ್ನ ಹೃದಯವನೊರೆಯಲಾಶಿಸಿದ
ಜನಕನಿಂಗಿತವರಿತು ಕೌಶಿಕಂ ಕುವರರಿಗೆ
ಸನ್ನೆಗೆಯ್ದನ್, ಬಳಿಯೆ ಕಂಗೊಳಿಸುತಿರ್ದೊಂದು
ನಗುವ ಪೂದೋಂಟಮಂ ತೋರ್ದು. ಕಿವಿಮರೆಯಾಗೆ
ರಾಮ ಲಕ್ಷ್ಮಣರೊರೆದನವನೀಶನಿಂತು ಮನಮಂ:
“ತಿಮಿರದಿ ತೊಳಲ್ವಂಗೆ ತಣ್ಗದಿರನೈತಂದು
ಸೊಡರ್ವಿಡಿದವೋಲಾಯ್ತು ನಿನ್ನ ಬರವಿಂದೆನಗೆ,         ೩೬೦
ಮುನಿವರೇಣ್ಯ. ರಾಮನಂ ಕಂಡೆನಗದೇನಾಯ್ತೊ
ಪೇಳಲರಿಯೆಂ. ಮಲರ್ದ್ದುದು ಬಾಡಿದೊಂದಾಶೆ.
ಯಜ್ಞಾರ್ಥಮೊರ್ಮೆ ನಾಂ ನೆಲನನುಳುತಿರಲಲ್ಲಿ
ಕುಳದ ನೇಗಿಲ್‌ಗೆರೆಯ ಬೈತಲೆಯ ಬಟ್ಟೆಯೊಳ್
ರನ್ನದೊಟ್ಟಿಲೊಳಿರ್ದ ಶಿಶುರತ್ನಮಂ ಕೊಂಡು,
ಪೆಣ್ಗೂಸದಂ ಮಗಳ್‌ಗೆತ್ತು ಸಲಹಿದೆನೊಲಿದು
ಸೀತೆಯೆಂಬಭಿಧಾನಮಂ ಪ್ರೀತಿಯಿಂ ತೊಡಿಸಿ.
ರತಿ ಮನ್ಮಥರ ಮಾತೆಯೆಂಬಂತೆ ಬಳೆದಳು ಕುವರಿ
ಪಾರ್ಥಿವ ಕುಮಾರ ಕಂದರ್ಪರಾ ಕಣ್ಮೀನ್ಗಳಂ
ಸೆಳೆಯುವ ಸರೋವರದ ಚಾರು ನೀರೇಜದೋಲ್.      ೩೭೦
ಪಂತದಿಂ ಪಾಡಿನಿಂದೊಬ್ಬರೊಬ್ಬರ ಕಾಡಿ
ಕರುಬಿಂದೆ ಬಂದರಿಲ್ಲಿಗೆ ಧರಾಪುತ್ರಿಯಂ
ಕೈವಿಡಿಯೆ ಬೇಡಿ, ಮೇಣ್ ಬಲ್‌ಪಡೆಗಳಂ ಕೂಡಿ.
ಏಗೆಯ್ಯಲರಿಯದಾಂ ಹರನನರ್ಚಿಸುತಿರಲ್ :
ಶಿವಕಾರ್ಮುಕವನೆತ್ತಿ ಕೊಪ್ಪಿಗೇರಿಸಿ ನಾರಿಯಂ,
ನಾರಾಚಮಂ ಪೂಡಿ, ಕಿವಿವರೆಗೆ ಸೆಳೆದೆಸುವ
ವೀರಂಗೆ ನೀರೆಯಂ ಧಾರೆಯೆರೆಯೆಂದೊರೆದುದೈ
ವಾಣಿ. ಬಂದರಸರ್ಗೆ ದೇವವಾಣಿಯನರುಹಿ
ವೀರಶುಲ್ಕೆಯನಾಗಿ ಸಾರಿದೆನಯೋನಿಜಾ
ಕನ್ಯೆಯಂ. ವಜ್ರದುರ್ಕ್ಕಿನ ಮೇರುಭಾರದಾ     ೩೮೦
ರುದ್ರ ಕೋದಂಡಮಂ, ಗುರುವೆ, ನಾನಿನ್ನೆಗಂ
ಕಾಣೆನಲುಗಾಡಿಸಿದ ಸಾಹಸಿಗರಂ, ಕೇಳಾ
ವೀರನೊರ್ವಂ ವಿನಾ ! ಲಂಕಾಪುರವನಾಳ್ವನಾ
ದಶಶಿರ ಬಿರುದುವೊತ್ತಂ, ರಾವಣನಿದಂ ಕೇಳ್ದು
ಬಂದನಿಲ್ಲಿಗೆ ಪುಷ್ಪಕಾರೂಢನಾಗಿ, ಕೇಳ್,
ಗೆಲ್ದು ಸೀತೆಯನುಯ್ವ ಕಳ್ಗೆ ಮಿದುಳಂ ಮಾರಿ.
ರುಂದ್ರ ರಾಕ್ಷಸ ಮೂರ್ತಿಯಂ ಕಂಡು ಗೋಳಿಟ್ಟಳಯ್
ಸೀತೆ, ರೋದಿಸಿತಖಿಲ ಮಿಥಿಲೆಯುಂ, ಕೋಮಳೆಗೆ
ಬೇಡುತೆ ಮಹಾದೇವನಂ. ಪರಶಿವನ ಕೃಪೆ ಕಣಾ !
ಪರ್ವತೋಪಮ ಕರ್ಬುರಂ ದಿಗ್ಗಜದ ಮಾಳ್ಕೆಯಿಂ       ೩೯೦
ನೆಲಂ ನಡುಗೆ ಜಗ್ಗಜಗ್ಗನೆ ನಡೆದು, ಕೈತುಡುಕಿ
ನೆಗಹಿದನ್ ಹರಧನುವನಸು ಗದ್ಗದಿಸೆ ಜಗಕೆ.
ಗೊಲೆಗೆ ಹೆದೆಯೇರುತಿರೆ, ಸೀತೆಯ ಸುಕೃತವಲಾ,
ಚಾಪ ಭಾರಕೆ ಕರಂ ತತ್ತರಿಸಿ, ತನು ಬೆವರಿ,
ಚಿತ್ತ ಪಲ್ಲಟವಾಗಿ, ಕೈಲಾಸಮಂ ಪಿಡಿದು
ತೊನೆದ ದೈತ್ಯಂ ಕುಸಿದು ಬಿದ್ದನು, ಪರ್ವತಾಗ್ರಂ
ಪ್ರಳಯದಶನಿಗೆ ಕೆಡೆದು ಬೀಳ್ವಂತೆ ! ಲಂಕೇಶ್ವರಂ
ತನ್ನ ಬಿಂಕದ ಭಂಗಕುರೆ ಮುಳಿದು ಪಿಂತಿರುಗಿದನ್,
ಮತ್ತೆ ತಪದಿಂ ಬಲ್ಮೆಯಂ ಪಡೆದು ಬಹೆನೆಂಬ
ಕಡು ಸೂರುಳಂ ಗುಡುಗುಡಿಸಿ ಪೂಣ್ದು. ಗುರುವೆ, ಕೇಳ್,            ೪೦೦
ದಶಕಂಠನತಿದೃಢ ಮನಸ್ಕನಯ್. ಇನ್ನೊಮ್ಮೆ ಆ
ರಕ್ಕಸಂ ಬರ್ಪ ಮುನ್ನಮೆ ಮನುಜವೀರಂಗೆ ನಾಂ
ಕುವರಿಯಂ ಕೊಡುವ ಕಾತರ ಮನದಿ ಕುದಿಯುತಿರ್ಪೆಂ.”
ಅತ್ತಲಾ ಪೂದೋಂಟದೊಳ್ ಮದನನೊಡಗೂಡಿ
ಮಧುನೃಪಂ ವಿಧಿವಿಲಾಸಕೆ ತನ್ನ ಕೈಂಕರ್ಯಮಂ
ಸಲ್ಲಿಸುವ ಸಿರಿಗಜ್ಜದೊಳ್ ತೊಡಗಿ, ನೋಟದಿಂ
ನೋಟಕ್ಕೆ ನಡೆದು, ಸಿಂಗರಿಸಿದನು ಬೇಟಮಂ
ಪೊತ್ತಿಸುವ ಸಿರಿಯ ರಾಗಂಗಳಿಂ ಗಂಧಂಗಳಿಂ,
ಮಿರುಮಿರುಗಿ ಮೆರೆವವೊಲ್, ಕರೆವವೊಲ್, ತರತರದ
ಪೂವೆಲೆಗಳಂ. ಬಂದಳಲ್ಲಿಗೆ ಸೀತೆ, ತಂಗೆಯರ್          ೪೧೦
ಊರ್ಮಿಳಾ ಮಾಂಡವಿ ಶ್ರುತಕೀರ್ತಿಯರ್‌ವೆರಸಿ,
ಗಿಳಿವಿಂಡನಣಕಿಸುವವೋಲ್, ಬಣ್ಣದೆಲೆಗಳುಂ
ಪೂಗಳುಂ ನಾಣ್ಚಿ ತಲೆಬಾಗುವೋಲ್. ಕಾಲಪುರುಷಂ
ರೋಮ ಹರ್ಷಿತನಾಗುವಂತೆ ಮೈಥಿಲಿ ನಿಂದು
ನೋಡಿದಳ್, ಮಲ್ಲಿಗೆಯ ಹೊದರ ಮರೆಯಿಂ, ಕೊಳನ
ತಿಳಿನೀರ್ಗೆ ಕಲ್ಲೆಸೆಯುವಾಟದಲಿ ಲಕ್ಷ್ಮಣನ
ಕೆಲನಿರ್ದ ರಾಮ ಮೋಹಕ ಮೂರ್ತಿಯಂ. ಮೊಗಂ
ಬೆಟ್ಟದಾವರೆಗೆ ಬೈಗಾದವೋಲೋಕುಳಿಯ
ರಾಗಮಂ ತಳೆದುದಾಕೆಯ ಮನೋರಾಗಮಂ
ಪ್ರತಿಬಿಂಬಿಪೋಲ್. ನಿತ್ಯಮುಂ ತನಗೆ ಕನಸಿನೊಳ್     ೪೨೦
ಕಾಣುತಿರ್ದಾ ನೀಲದೇಹನಂ ವಿಸ್ಮಯದಿ
ನೋಡಿದಳ್, ಕಣ್‌ಸಿಲ್ಕಿ, ಪೆಸರರಿಯದಜ್ಞಾತನಂ,
ರೂಪವಾರಾಶಿಯಿಂದೆದ್ದ ರವಿಮದನನೊಲ್
ರಮಣೀಯನಂ. ಜನಕನೌರಸ ಕುಮಾರ್ತೆಯರ್
ಕಾರಣವನರಿಯಲೆಳಸಲ್, ಸೀತೆ ನಿಡುಸುಯ್ದು,
ಕಡುಸೇದೆಯಿಂದಲ್ಲಿ ನಿಲ್ಲಲಾರದೆ ತಿರುಗಿ
ನಡೆದಳರಮನೆಗೆ. ಊರ್ಮಿಳೆ ಕಣ್ಣನೊರಸಿದಳ್.
ಅಕ್ಕರೆಗೆ ತಬ್ಬಿ ತನ್ನಕ್ಕನಂ, ಪೇಳಕ್ಕ ಪೇಳ್,
ದುಗುಡಮೇಕೆಂದಳುತೆ ಕೇಳಲ್ಕೆ, ಇಂತೊರೆದಳಾ
ವೈದೇಹಿ ತನ್ನಾತ್ಮಮಂ :
“ತಂಗೆ, ನಾನಿನ್ನೆಗಂ         ೪೩೦
ಪೇಳ್ದೆನಿಲ್ಲೊಂದಾತ್ಮವಿಷಯಮಂ. ಬಾಲ್ಯದಿಂ ಕೇಳ್,
ನನಗರ್ಥವಾಗದೊಂದನುಭವಂ ತಾಂ ನಿಚ್ಚಮುಂ
ಬಂದೆನ್ನನೊಳಕೊಳ್ವುದವ್ : ಗಗನ ಮಂಡಲಮೆ
ಬಂದೆನ್ನ ಮೆಯ್ಯಪ್ಪುತೆರ್ದೆಯೊಳಗೆ ಸೇರ್ವಂತೆ;
ಕಡಲುಕ್ಕಿ ಮೇರೆ ಮೀರುತೆ ಪಾಯ್ದು ಮುಳುಗಿಸಲ್
ನಾನೆ ಕಡಲೊಡತಿಯಪ್ಪಂತೆ; ಪೃಥಿವಿಯೆ ಕರಗಿ
ಪೆಣ್ ಪಸುಳೆಯಾಗುತೆನ್ನಯ ತೊಡೆಯ ತೊಟ್ಟಿಲೊಳ್
ನಲಿವಂತೆ; ತೊರೆ ಬನಂ ಭೂಮಿ ಬಾನ್ ಗಿರಿಪಂಕ್ತಿ
ಪಗಲಿಗುಳ್ ಚುಕ್ಕಿ ತಿಂಗಳ್ ನೇಸರೆಲ್ಲಮುಂ
ಮೆಯ್ಯಾಗುತಾಂ ತ್ರೈಭುವನ ಲಕ್ಷ್ಮಿಯಪ್ಪಂತೆ. ೪೪೦
ಬೆದರಿದೆನ್ ಮೊದಮೊದಲ್. ಪೇಳಲೆಂದೆಳಸಿದರೆ
ತೊದಲಾಯ್ತು. ಮೂಗಿ ಕಂಡದ್ಭುತದವೋಲಾಯ್ತು
ಕೇಳನುಭವಂ! ಲಂಕೆಯಧಿಪತಿ ದಶಾನನಂ
ನಮ್ಮಯ್ಯನೆಡೆಗೆ ಹರಚಾಪಮಂ ಮುರಿಯಲ್ಕೆ
ಬಂದ ದುರ್ದಿನದಂದು ರಾತ್ರಿ, ಶಶಿಮೌಳಿಯಂ
ಕಣ್ಣೀರ್ಗಳಭಿಷೇಕದಿಂದೆ ಜಾನಿಪವೊಳ್ತು,
ಮತ್ತೊಮ್ಮೆ ತನಗಾದುದನುಭವಂ, ಏನೆಂಬೆನಾ
ತಿರೆ ಕಡಲ್ ಚುಕ್ಕಿ ಬಾನುಗಳೆಲ್ಲವೊಂದಾಗಿ
ನನ್ನ ಮೆಯ್ಗವತರಿಸಿದೋಲ್. ಪ್ರಜ್ಞೆ ನಿದ್ರಿಸಿರೆ;
ನಿಃಸಂಜ್ಞಳಾದೆನಗೆ ಕಣಸಾದುದಾ ದರ್ಶನದಿ  ೪೫೦
ಮೈದೋರ್ದುದೀ ಸರ್ವ ಲೋಕ ರಮಣೀಯತಾ
ನೀಲ ಮೇಘ ಶ್ಯಾಮಮೂರ್ತಿ. ಆ ರಾತ್ರಿಯಿಂ
ದಿನದಿನಂ ಸ್ವಪ್ನದೊಳ್ ಗೋಚರಿಸಿತಾ ವಿಗ್ರಹಂ,
ಗುರುತಿಸಿದೆನಾ ರೂಪಮಂ ನಮ್ಮ ಪೂದೋಂಟದೊಳ್
ಕೊಳನ ತಡಿಯೊಳ್ ನಿಂದ ಗಗನೋಪಮಾಂಗದಾ
ನೀಲ ಕಾಂತಿಯ ತರುಣ ವಿಗ್ರಹದಿ.”
ಮಿಥಿಳೇಂದ್ರ
ಧರಣಿಸಂಭೂತೆ ಊರ್ಮಿಳೆಯೊಡನೆ ಮಾತಾಡಿ
ಮುಗಿವನಿತರೊಳ್ ಕೆಳದಿಯರ್ ಬಂದರೋಡೋಡಿ;
ತಂದರಿಂಪಿನ ವಾರ್ತೆಯಂ : “ಅಕ್ಕ, ನೀನಲ್ಲಿ
ಕಂಡವಗೆ ರಾಮನೆಂಬಭಿಧಾನಮಿಹುದಂತೆ !”            ೪೬೦
“ರವಿಕುಲದರಸು ದೇವ ದಶರಥ ಪುತ್ರನಂತೆ !”
“ತಾನಯೋಧ್ಯೆಗೆ ಸ್ವಾಮಿಯಹನಂತೆ !” “ಬಿಲ್ಮುರಿಯೆ,
ನಿನಗವನಿನಿಯನಂತೆ!” “ಬಲ ಪರೀಕ್ಷೆಗೆ ನಾಳೆ
ದಿನವಂತೆ !” “ಏಳಕ್ಕ ! ಬಾರಕ್ಕ ಬಿಲ್ ಮುರಿವವೋಲ್
ಪಾರ್ವತಿಯನಾರಾಧಿಪಂ!” “ದಿಟಂ ಶಿವನ ಸೋಲ್!”
ಹರ ಶರಾಸನವಂತೆ ! ತೆಗೆ, ಪರೀಕ್ಷೆಯದೇಕೆ
ತಾನೊಲಿದ ನಲ್ಲಂಗೆ? ಜಗದೇಕವೀರಂಗೆ
ಪದ್ಧತಿಯ ಪಾಳ್ ತೊಡರುಮೆಡರೇಕೆ? ತುಕ್ಕಡರಿ
ಮುರಿಯಲಾ ರುದ್ರಚಾಪಂ ! – ಎನುತೆ ಸೀತಾಕನ್ಯೆ
ಮನದಿ ನೆನೆದಳೊ, ಮರೆತು ತನ್ನನಂದಿನವರೆಗೆ          ೪೭೦
ಬೇರೆ ಬಣಗರಸರಿಂ ಮತ್ತೆ ಲಂಕೇಶನಿಂ
ದಶರಥ ತನುಜಗಾಗಿ ಕಾಯ್ದಿತ್ತದೆಂಬುದಂ.
ಹಿಂದೆ ರಾವಣನಂದು ಬಂದಾಗಳ್ ‘ಓ ಧನುವೆ,
ಕಾಪಾಡು ಬಾಲೆಯಂ; ಕೈಮುಗಿವೆ ಕಾಲ್ಗೆರಗಿ;
ಮುರಿಯದಿರ್; ಬಾಗದಿರ್; ಸುರಮೇರು ಭಾರದಿಂ
ದೈತ್ಯನೆತ್ತದ ತೆರದಿ ಭಾರಗೊಂಡಬಲೆಯಂ
ಪೊರೆ’ – ಎಂದೆರೆವ ತರುಣಿ ತಾನಿಂದು – ‘ಹಗುರಾಗು
ಗರಿಯಂತೆ; ಬಾಗು ಬಳ್ಳಿಯ ತೆರದಿ; ರಾಮಂಗೆ
ಮುರಿದು ಬೀಳ್, ಓ ಧನುವೆ !’ ಎಂದು ಪರಿಪರಿಯಿಂದೆ
ಬಿನ್ನಹಂಗೈದಳೆನೆ, ನಿಂದಾ ಸ್ತುತಿಗಳೆಲ್ಲಮಾ   ೪೮೦
ಸಮಯವರ್ತಿಗಳಲ್ತೆ? ರಾಮನ ಬಲಕೆ ತನ್ನ
ಪ್ರೇಮದ ಬಲವನೀಯಲೆಂದು ನೋಂಪಿಯ ನೋಂತು
ಹೃತ್‌ಪದ್ಮದಿಂದೆ ಭೂಜಾತೆ ಗಿರಿಜೇಶನಂ
ಪೂಜಿಸಿದಳಾ ರಾತ್ರಿ, ನಿದ್ದೆ ನೈವೇದ್ಯಮಂ
ನೀಡಿ.
ತಳಿರಿದುದು ಮಂಬೆಳಗಿಂದ್ರದಿಕ್ತಟದಿ.
ನೆರೆದುದು ಜನಂ ಜನ್ನಸಾಲೆಯಲಿ. ತಿಮಿರಾರಿ
ಮೈದೋರಿದನು, ತನ್ನ ಸಂತಾನದೇಳಿಗೆಗೆ
ಕಾರಣಂ ತಾನಪ್ಪ ಸಾಹಸವನೀಕ್ಷಿಸುವ
ವಾತ್ಸಲ್ಯದುದ್ವೇಗದಿಂದರುಣಮುಖಿಯಾಗಿ,
ಮೂಡುವೆಟ್ಟಿನ ಮುಡಿಯ ಕೋಡಿನಲಿ. ಬಹುಮಂದಿ      ೪೯೦
ಬಲಶಾಲಿಗಳ್ ತಿಣಿಕಿ ತಂದಿಟ್ಟ ಕಾರ್ಮುಕದ
ಭೀಮ ಭೀಷ್ಮತೆಯುಜ್ವಲಿಸಿದತ್ತು ರೌದ್ರಮಾ
ತರುಣ ನವ ತರಣಿಯ ಕಿರಣದರುಣದಾತಪದಿ.
ನೆರೆದ ಮಹಿಳಾ ಜನದ ಮಧ್ಯೆ ತರುಣಿಯರೊಡನೆ
ಚಿತ್ತದುದ್ವೇಗ ಶೂಲದ ಮೇಲೆಯೆಂಬಂತೆ
ಕುಳಿತಿರ್ದ ಧರಣಿಜೆಗೆ ಗದಗದಿಸಿತೆದೆ, ತನ್ನ
ಮನದನ್ನ ರಾಘವನ ವಿಜಯ ವಿಷಯದಿ ಶಂಕೆ
ಭರವಸೆಗಳುಯ್ಯಾಲೆಯಂ ತೂಗಿ. ನೋಡುತಿರೆ,
ಕೌಶಿಕನ ಪಾರ್ಶ್ವದಿಂದೆದ್ದನು ರಘೂದ್ವಹಂ,
ಮಖಧೂಮ ಮುಖದಿಂ ಶಿಖಿಜ್ವಾಲೆಯೇಳ್ವವೋಲ್.      ೫೦೦
ನಯನಾಭಿರಾಮನಂ ಕಂಡೊಡನೆ ಘೇ ಉಘೇ
ಉಲಿದು ಕೈಪರೆಯಿಕ್ಕಿತಯ್ ಜನಂ. ತುಂಬುಹೊಳೆ
ಮರವಿಡಿದು ಕಾಡಾದ ದಡಗಳೆರಡರ ನಡುವೆ
ಮುಂಬರಿಯುವಂತೆ, ನಡೆದನು ರಾಮನಿಂಬಾದ
ಗಾಂಭೀರ್ಯದಿಂ, ಹರಧುನುವಿನೆಡೆಗೆ. ಮರುಗಿದುದು
ಸೌಮ್ಯನಂ ಕಂಡು ಮುದುಕರ ಮನಂ; ತಾಯ್ವಿರ್ಗೆ
ಕರಿಗಿದತ್ತೆರ್ದೆ : ಚಂದ್ರಚೂಡ ಕೋದಂಡದೆಡೆಯೊಳ್
ಲಲಿತ ರಾಮನ ಬಾಲ ಮೂರ್ತಿಯಂ ನೋಡಿ ‘ಹಾ !
ಧನುವೆಲ್ಲಿ ? ಶಿಶುವೆಲ್ಲಿ ? ಸಿಡಿಲೆತ್ತ ? ಹೂವೆತ್ತ ?
ಕಾಳಾಹಿಯಂ ಹರಿಣಶಿಶು ತಿವಿದು ಕೋಡಿಂದೆ ತಾಂ     ೫೧೦
ಕೊಲಲಹುದೆ ? ಗೆಲಲಹುದೆ ? ಬರ್ದುಕುವುದೆ ? ಹಾ’ ಎಂಬ
ಲಲನೆಯರ ಹೆಂಗರುಳ್ ಕುದಿಯೆ, ಹೋಹಾತನಂ
ಕಂಗಳಿಂದಪ್ಪಿದರೊ, ಸೊಬಗನಾಲಿಂಗಿಪೋಲ್, ಮೇಣ್
ಅಶುಭಮಂ ಪರಿಹರಿಪವೋಲ್ ! ಭೈರವ ಮುಹೂರ್ತಮಂ
ಸರ್ವೇಂದ್ರಿಯಂಗಳಿಂ ಚಿತ್ತದಿಂದಾತ್ಮದಿಂ
ಸಂವೀಕ್ಷಣಂಗೈದು ನೆರೆದಿರ್ದ ಪರಿಷತ್ತು
ನಿಶ್ಶಬ್ದತೆಯ ಕಡಲೊಳಳ್ದತ್ತು, ಬಣ್ಣದೊಳ್
ಕೆತ್ತಿ ಬರೆದಂತೆ. ಶಾಂತಿಸ್ಥೈರ್ಯಧೈರ್ಯನಿಧಿ ತಾಂ
ಶ್ರೀರಾಮನಾ ಧನುವಿನೆಡೆ ನಿಂತದರ ಮಹಾ
ಗಾತ್ರಮಂ ದೃಷ್ಟಿಸಿದನಾಪಾದಮಸ್ತಕಂ,        ೫೨೦
ತನ್ನಳವನದರ ಬಲ್ಮೆಗೆ ತೂಗಿ ನೋಳ್ಪಂತೆ.
ಕಿರುನಗೆಯ ಮಲರ ಸುಳಿವೊಂದರಳುತಿರೆ ಮೊಗದಿ,
ತಿರುಗಿ, ದಿಟ್ಟಿಯನಟ್ಟಿ, ನೆರೆದ ಸಭೆಯಂ ಕುರಿತು
ಕೈಮುಗಿದನೊರ್ಮೆ. ಮನದೊಳೆ ಮಣಿದು ಗುರುಜನಕೆ
ಕೈಮುಗಿದನಿರ್ಮೆ. ಶಂಕರ ಚರಣ ಪಂಕಜಕೆ
ಬಗೆಯ ಪೂಜೆಯ ಸಲಿಸುತಕ್ಷಿಪಕ್ಷಿಯನಟ್ಟಿ
ಪೀತಾಂಬರವನುಟ್ಟ ಲಲಿತಾಂಗಿಯರ ಮಧ್ಯೆ
ತರತರದ ರನ್ನದೊಡಮೆಯ ಪೊಗರನೇಳಿಸುತೆ,
ಹಸುರು ಕಾಡಿನೊಳಸುಗೆ ಹೂವಂತೆಸೆಯುತಿರ್ದಾ
ತನ್ನ ಮೀನಾಕ್ಷಿಯಂ ಮೈಥಿಲಿಯನೊಯ್ಯನೆಯೆ           ೫೩೦
ಕೋಮಳ ಕಟಾಕ್ಷದಿಂದೀಕ್ಷಿಸಿ, ಶರಾಸನಕೆ
ತಿರುಗಿದನ್ ಮತ್ತೆ. ಬಿಲ್ಲಿಗೆ ಬಾಗಿ, ಹಣೆಚಾಚಿ
ನಮಿಸಿ, ನಿಮಿರ್ದನ್ ಪ್ರಾಣಮಯನಾಗಿ.
ಪೇಳಲೇಂ ?
ರವಿಕುಲನ್ ಮಣಿದೇಳುತಿರೆಯಿರೆ ಹಠಾತ್ತನೆಯೆ
ರಾರಾಜಿಸಿತು ಜಾನಕಿಯ ಕಣ್ಗೆ ಶಿವಮೂರ್ತಿ ತಾಂ
ಕೋದಂಡದಿಂ ಮೂಡಿ ಮೈದೋರಿ ! ಶಶಿಧರಂ,
ಫಣಿಭೂಷಣಂ, ದೇವ ಗಂಗೋತ್ತಮಾಂಗಂ,
ಪಿಂಗಲ ಜಟಾಜೂಟ ಕೂಟಂ ತ್ರೆಣೇತ್ರಂ,
ವಿಭೂತಿ ಶೋಭಿತ ಕಳೇಬರನ್, ಇಭ ದುಕೂಲಾಂಗಿ,
ಶಂಕರ ಭಯಂಕರ ಪಿನಾಕಿ, ಕೇಳ್, ಕರವೆತ್ತಿ   ೫೪೦
ಪರಸುತಿಕ್ಷ್ಯಾಕು ಕುಲ ಸಂಜಾತನಂ, ಕಾರ್ಮಿಂಚು
ಮೋಡದೊಳಡಗುವಂತೆ ಮರೆಯಾದನೊರ್ಮೊದಲೆ
ಚಾಪ ಮಧ್ಯದೊಳೈಕ್ಯಮಾಗಿ :
ಐರಾವತಂ
ದೇವೇಂದ್ರನಂ ಪೊತ್ತು ದಿಕ್ಪಾಲ ಪುರಗಳಿಗೆ,
ಮತ್ತೆ ವೈಕುಂಠಕ್ಕೆ ಮತ್ತೆ ಕೈಲಾಸಕ್ಕೆ,
ಸತ್ಯಲೋಕಕೆ, ಮತ್ತೆ ತೆರಳುತಲ್ಲಿಂ ಮರಳಿ
ಬರ್ಪುದಮರಾವತಿಗೆ, ಸುರವಾದ್ಯ ನಿಸ್ವನಕೆ
ಬಿಂಕದಿಂ ಬೀಗಿ : ಬೀಳ್ಕೊಳುತ್ತಿರಲಿಂದ್ರನಂ
ವರುಣಂ ಸ್ವಹಸ್ತದಿಂದಮೆ ತನ್ನ ಮೈಮೇಲೆ
ಕೈಯನಾಡಿದನಲ್ತೆ? ಅಗ್ನಿ ನೀಡಿದನಲ್ತೆ
ತನ್ನಂಗಳದ ಮರದ ಮಾಂದಳಿರ ಚೆಂದೊಂಗಲಂ ?
ಮೇಣಾ ಕುಬೇರನುಂ ಸೊಂಡಿಲ್ಗಳಂ ನೀವಿ
ಸೋಂಕಿಗೆ ಸೊಗಂಬಡೆದನಲ್ತೆ ? ಮಾಹೇಶ್ವರಂ
ಬೆಳ್ಳಿಬೆಟ್ಟದ ತಳ್ಪಲೆಳೆವುಲ್ಲನೆಳೆದಿತ್ತು
ರತ್ನಖಚಿತಂ ದೀರ್ಘದಂತಂಗಳೆರಡುಮಂ
ಬಣ್ಣಿಸಿದನಲ್ತೆ ? ತನಗಾರು ಹೊಯಿಕಯ್ಯೆಂದು,
ಬೇರೆಬೇರೆಯ ಲೋಕದಾಹಾರಮಂ ಸವಿದ
ತೃಪ್ತಿಗೆ ಮನಂ ಮಿಕ್ಕು, ಶಚೀದೇವಿಯರಮನೆಯ
ಮರಕತದ್ವಾರದೆಡೆ ಸಗ್ಗದೊಡೆಯನನಿಳಿಸಿ,
ಕನಕ ಶೃಂಖಲೆಯಿಂ ಬಿಡುತೆಗೊಂಡು, ಸ್ವೇಚ್ಛೆಯಿಂ      ೫೬೦
ಪರಿತಂದು, ರತ್ನಧೂಳಿಯ ಮಳಲ ಪಾತ್ರದೊಳ್
ಪ್ರವಹಿಸುವಮರನದೀ ದುಗ್ಧ ತೀರ್ಥದೊಳೊಡನೆ
ದುಮ್ಮಿಕ್ಕುವುದು, ಸುಧೆಯ ತೆರೆ ದಡಕ್ಕವ್ವಳಿಸಿ
ಮೊರೆಯೆ. ಆ ಪಾಲ್ಗಲ್ಲ ಪೆರ್ಬಂಡೆ ಪಾಲ್ವೊಳೆಯ
ಮಿಂದು, ನಂದನ ವನದ ಕಲ್ಪದ್ರುಮಕೆ ನಡೆದು
ಬಂದು, ಮೆಯ್ ತಿಕ್ಕುವುದು ಕ್ರೀಡಾ ವಿನೋದದಿಂ.
ದೈತ್ಯಾಕೃತಿಯ ದೇವತರು ಬೃಹನ್ಮಸ್ತಕಂ
ಶಾಖೋಪಶಾಖಾ ಪ್ರಸಾರ ವಿನ್ಯಾಸದಿಂ
ತೂಗಿ ತೊನೆದಪುದೆಡಕೆ ಬಲಕೆ, ಚೀರ್ವುದು ದಿವಿಜ
ಖಗವೃಂದಮಿಂದ್ರನಾನೆಯ ಘೀಂಕೃತಿಯ ರವಕೆ         ೫೭೦
ಬೆರ್ಚಿ ಗಾರಾಗಿ. ಹೆಬ್ಬಳ್ಳಿ ಹಂಬುವ ತೆರದಿ
ಹೆಮ್ಮರನ ಮೆಯ್ಗೆ, ಕಲ್ಪದ್ರುಮದ ಗಾತ್ರಮಂ
ತನ್ನ ನೀಳ್ದೀರೈದು ಸೊಂಡಿಲ್ಗಳಿಂ ಸುತ್ತಿ,
ಕ್ಷೀರ ಫೇನ ಶ್ವೇತ ಗೀರ್ವಾಣ ವಾರಣಂ
ಮತ್ತ ವೈಖರಿಯಿಂದೆ ಜರ್ಗ್ಗಿಸೆಳೆವುದು, ಮರಂ
ಬಳ್ಳಿಯಾಗುತೆ ಬಳ್ಕುವಂತೆ !
ರಘುಕುಲ ಖಮಣಿ
ಬಿಳಿಯಾನೆ ಸೊಂಡಿಲಂದದ ನೀಳ ತೋಳಿಂದೆ
ತುಡುಕಿದನು ಕಲ್ಪಭೂರುಹ ಸದೃಶ ಚಾಪಮಂ
ಸೀತಾಫಲದ ಬಯಕೆಯಿಂದೆ. ಬಾಗಿದುದ್ ಬಿಲ್,
ಹಂಬಿನೋಲ್. ಹೆದೆ ಏರಿದುದು. ಪೂಡಿ ಬಾಣಮಂ       ೫೮೦
ಸೆಳೆಯುತಿರೆ ಕಿವಿಯನ್ನೆಗಂ, ಕರ್ಬು ಮುರಿವಂತೆ
ಮುರಿದುದಾ ಹರನ ಧನು ತಾಂ ಸಿಡಿಲ ಸದ್ದೊದರಿ.
ಜಾನಕಿಯ ಸುಖದಕ್ಷಿಯಿಂದಿಕ್ಷುರಸಧಾರೆ
ಸೋರ್ದುದಯ್. ಹರ್ಷವೀಚಿಗಳವ್ವಳಿಸಿದವೋಲ್
ಘೋಷಿಸಿತು ಘೇ ರವದೊಳಾ ನೆರೆದ ನರಶರಧಿ.
ಬಿಡದೆ ಪೂವಳೆ ಬಿಳ್ದುದಾಲಿಕಲ್ ಕರೆವಂತೆ,
ತರತರದ ಪರಿಮಳದ ಮೇಣ್ ವಿವಿಧ ವರ್ಣದಾ
ವರ್ಷ ಶೈಲಿಯಲಿ ! ಹರ್ಷಾಶ್ರು ಸುರಿಯುತಿರೆ, ಜನಕಂ
ತಡೆಯಲಾರದೆ ತುಂಬಿ ತುಳುಕುವ ಮಧುರ ಸುಖಕೆ
ಋಷಿಪದಕೆ ಮಣಿದನಯ್, ಕೃತಜ್ಞತಾಭಾರದಿಂ           ೫೯೦
ಬಾಗಿ. ಹುಟ್ಟಿಯನುಳಿದ ಹೆಜ್ಜೇನ ಹುಳುಹಿಂಡು
ದಟ್ಟಯಿಸಿ ಮೊರೆವಂತಿರಿರ್ದ ಜನ ಸಂದಣಿಯ
ನಡುವೆ ನಡೆದಪ್ಪಿದನು ರಘುಕುಲೋದ್ದೀಪನಂ,
ತನ್ನಿಷ್ಟದೇವತೆಯನಾಲಿಂಗಿಪಂತೆವೋಲ್.
ಅನಿತರೊಳ್, ಸಂಭ್ರಮಿತ ಸಖಿಯರ ನಡುವೆ, ಸೀತೆ ತಾಂ
ಕರದೊಳ್ ವಿಜಯಮಾಲೆಯಂ ಪಿಡಿದು, ಮೋಹಿನಿಯೊ
ತ್ರೈಭುವನ ರತಿಯೊ ವೈಯಾರ ಸುಂದರಿಯೊ ಮೇಣ್
ತುಹಿನ ಗಿರಿಶಿವ ಶಿರದ ಮಾನಸ ಸರೋವರದಿ
ಸಂಭವಿಸಿ ವನದೇವಿಯರ ಸೇವೆಯೊಳ್ ಸಂದು
ಮುಂಬರಿದು ಸಾಗರನನಪ್ಪುವಾ ತವಕದಿಂ    ೬೦೦
ಪ್ರವಹಿಪಾ ಜಾಹ್ನವಿಯ ಹೊನಲೊ ಹೇಳೆಂಬಿನಂ
ಹರಿದು ಬಂದಳು ರಾಮ ಮನ್ಮಥ ಶರಧಿತಟಿಗೆ.
ಪೊಣ್ಮುತಿರೆ ಸುಖರಸದ ಮಧುರ ಮಂಗಳ ಗೀತೆ
ವಾದ್ಯ ವೈವಿಧ್ಯ ವಿದ್ಯಾಶ್ರುತಿಯ ನಣ್ಪಿಂದೆ,
ರಾಮಂಗೆ ಮಾಲೆಸೂಡಿದಳೊ ಸೀತಾಕನ್ಯೆ,
ಭೂರಮೆ ಸಮುದ್ರಂಗೆ ಬೆಳ್ಪೆರೆಗಳಂ ಕೋದು
ಪೂದಂಡೆವೋಲ್ ಗೈದ ಬಾನ್ದೊರೆಯ ದಾಮಮಂ
ಹಾಯ್ಕಿದಳೆನಲ್ಕೆ !
ವಿಶ್ವಾಮಿತ್ರ ಮುನಿವರಂ
ಸಮ್ಮತಿಸೆ, ಮಿಥಿಳೇಂದ್ರನಾಜ್ಞೆಯಂತಾಳುಗಲ್
ಸಾಕೇತಪುರಿಗೆಯ್ದಿದರ್, ಮೂರಿರುಳ್ ಮೂರ್ಪಗಲ್     ೬೧೦
ನಿಲ್ಲದೆ ಪಯಣಗೈದು. ಸುತರಾಗಮನ ಚಿಂತೆ
ಮಸಗಿರ್ದ ದಶರಥಗೆ ಬಿನ್ನೈಸಿದರ್ ಶುಭದ
ವಾರ್ತೆಯಂ. ಕಡಲುಕ್ಕುವಂತುಕ್ಕಿತು ಅಯೋಧ್ಯೆ.
ಸಂತಸಕೆ ತಡಿಯಿಲ್ಲದಾದಳಾ ಕೌಸಲ್ಯೆ
ಮಗನಭ್ಯುದಯಕೆ : ನೆನೆದಳು ಬಗೆಯಲಂಪೇರೆ
ಚೆಲ್ವಿನೊಲ್ವಿನ ಸೊಸೆಯ ಗುಣಶೀಲರೂಪಮಂ,
ಮಗನ ಮಂಗಳ ಮೂರ್ತಿಯೆಡೆಯಲ್ಲಿ ! ಪಡೆವೆರಸಿ,
ಪರಿವಾರದೊಡನೆ, ಮಕ್ಕಳ್ ಕೂಡಿ ಮಹಿಷಿಯರ್
ಗುರು ಮಂತ್ರಿ ಬಂಧು ಬಾಂಧವ ಮುಖ್ಯಪೌರರುಂ
ಬರಲೊಡನೆ, ದಶರಥಂ ತಾನೆಯ್ದಿದನು ಮಿಥಿಳೆಯಂ   ೬೨೦
ನಾಲ್ಮೆ ದಿನಮಣಿ ಮುಳುಗುವನಿತರಲಿ. ಬೀಗರಂ
ವಿಭವದೊಳಿದಿರ್ಗೊಂಡು ಸಂಭ್ರಮಿಸಿತಯ್ ಮಿಥಿಳೆ.
ನಿಮಿವಂಶಜರ ಕೂಡೆ ಕೊಳುಕೊಡೆ ರವಿಕುಲರ್ಗೆ
ಪಣೆಗೆ ತಿಲಕಂ ಬಂದ ತೆರನಾದುದೆಂಬಂತೆ
ಸಮನಿಸಿತು ಮದುವೆ ಸೀತಾರಾಮರಿಗೆ. ಭೂಮಿ
ನಲಿದತ್ತು. ಸೊಗಸಿದುದು ದೇಶದೇಶದ ಜನಂ,
ಸಂಭ್ರಮಕೆ ಸಂಭ್ರಮವೆ ಸಂಘಟಿಸಿತೆಂಬಂತೆ,
ಕಲ್‌ಸಕ್ಕರೆಗೆ ಜೇನು ಸೋರ್ದಂತೆ. ನೆಲದೆರೆಯ
ಜನಕರಾಜನ ಹೃದಯದಿಂಗಿತಕೆ ಮನಮೊಪ್ಪಿ
ಸೌಮಿತ್ರಿಯೂರ್ಮಿಳೆಯನೊಪ್ಪಿದನ್, ಹೂಗೆಲಸಿ         ೬೩೦
ಸುಗ್ಗಿಮೊಗ್ಗನ್ನಪ್ಪುವಂತೆ. ಶತ್ರುಘ್ನಂಗೆ, ಕೇಳ್,
ಶ್ರುತಕೀರ್ತಿ ತಾನಾದಳೊಲ್ಮೆವೆಂಡಿತಿ. ಕೈಕೆ ತಾಂ
ಮಾಂಡವಿಯನೆರ್ದೆಯನ್ನಳಂ ಪಡೆದಳೈ ತನ್ನ
ಸುಂದರ ತನೂಜ ಭರತಂಗೆ.
ಇಂತೊಚ್ಚತಂ
ಪಗಲೇಳುಮಿರುಳೇಳುಮೆಸೆದತ್ತು ಬಿರ್ದಿನೊಸಗೆ,
ಬರ್ದಿಲರೂರಂ ಸೂರೆಗೊಳ್ವಂತೆ. ತರುವಾಯಮಾ
ಮಿಥಿಳೆಯಿಂ ಸಾಕೇತಪುರಕೆ ನಡೆದುದು ಮದುವೆಯಾ
ದಿಬ್ಬಣದ ಮೆರವಣಿಗೆ ಹೇಳಲದನೇನೆಂಬೆ ?
ನೆಲದರಸರಿರ್ವರ ಸಿರಿಗಳೊಂದುಗೂಡಿದೊಡೆ
ಶಿವಸಖ ಕುಬೇರಂ ಪುರಂದರಗೆ ಕೈಗೊಟ್ಟು    ೬೪೦
ಅಮರೆಯಿಂದಲಕೆವಯಣಂ ನಡೆವೊಲಾಯ್ತಲಾ
ಮರುದಿಬ್ಬಣದ ಮೆರವಣಿಗೆ ಜಾತ್ರೆ.
ಪಟ್ಟೆಮಡಿ
ತೇರಾನೆ ರನ್ನಗಂಬಳಿ ಗೋವು ಕಾಲಾಳು
ಮುತ್ತು ಪವಳಂ ತೊತ್ತು ಮೊದಲಪ್ಪ ತರತರಂ
ಸಿರಿಯ ಬಳುವಳಿವೊತ್ತು, ಜನಕನೃಪನಂ ಮರಳಿ
ಮಿಥಿಳಾ ಪುರಿಗೆ ಬೀಳುಕೊಟ್ಟು, ದೊರೆವಟ್ಟೆಯಂ
ಪಿಡಿದು ಮಂಗಳವರೆಯ ನಾದಕ್ಕೆ ನಡೆನಡೆಯೆ
ನಿಡುವೊಸಗೆ, ತೆಕ್ಕನೆಯ ತೋರ್ದುವುತ್ಪಾತ ತತಿ :
ಶಕುನಿ ಚೀರಿದವು ದುಶ್ಶಕುನಮಂ; ಜನಕೆ ಕಣ್
ಕಂಪಿಸಿತು; ಕುದುರೆ ಕೆನೆದುವು ರೋದಿಪಂದದಲಿ.        ೬೫೦
ಬೆದರುತಿರೆ ದಶರಥಂ ಬೀಸತೊಡಗಿತು ಗಾಳಿ
ಬಿರುಸಾಗಿ, ಭೂಮಿಯದಿರಿತು. ಪಣ್ಣಿಡಿದ ಮರಂ
ತಿರೆಗುರುಳಿದುವು ಲಕ್ಕಲೆಕ್ಕದಲಿ. ನುಂಗಿದುದು
ಕೃಷ್ಣ ಜಲಧರ ರಾಹು ರವಿಯಂ. ಚತುರ್ದಿಕ್ಕುಗಳ್
ಕಳ್ತಲೆಯ ಕಾಡಿಗೆಯ ಮೆತ್ತಿನಿಂದಿಲ್ಲಾದುವಯ್.
ರೋಷಭೀಷಣವಾಯ್ತು ಸಿಡಿಲುಮಿಂಚಿಟ್ಟಳಂ
ಕರ್‌ಧೂಳಿ ಬೊಮ್ಮಮಂ ಪರ್ವಿ. ಮೈ ಮರೆಯುತಿರೆ
ಸೇನೆ, ಸಂಮ್ಮೋಹ ಭಸ್ಮವನೆರಚಿದರೆನಲ್ಕೆ,
ಕಾಣಿಸಿತ್ತದ್ಭುತಂ ದಶರಥ ದೊರೆಯ ಕಣ್ಗೆ :
ಕಾರ್ಗೆ ಕಾಯಂ ಮೂಡಿದಂತೆ ಮೂಡಿತು ಮುಂದೆ        ೬೬೦
ಭೃಗುವಂಶಿ ಜಮದಗ್ನಿತನಯ ಭೈರವ ಮೂರ್ತಿ,
ಕಂಡರ್ಗೆ ಬರ್ದುಕು ಕಳವಳಿಸೆ. ಕಾಲಾಗ್ನಿಯೊಳ್
ಮುಳುಗುತೆ ಹದಂಗೊಂಡ ಕಾಳಾಹಿಸಂಕುಲಂ
ಜೋಲ್ವಂತೆ ಜೋಲ್ದುವು ಜಟಾಳಿ. ಭೀಷ್ಮತೆವೆತ್ತು
ರಂಜಿಸಿತು ಹೆಗಲಿನೊಳ್ ಕೆಂಗೊಡಲಿ. ಕೈಗಳಲಿ
ಮಿಂಚಿದುವು ವಿಷ್ಣುಕೋದಂಡ ಬಾಣಾಳಿಗಳ್,
ಕಣ್ಗಿರಿಯುವಂತೆ. ಬೆಚ್ಚಿರೆ ಸೈನ್ಯ ಸರ್ವಮುಂ,
ಶ್ರೀರಾಮನೊರ್ವನೆಯೆ ತನ್ನೊಸಗೆದೇರಿಳಿದು
ನಡೆದಂ ಶರತ್ಕಾಲ ಸುಪ್ರಸನ್ನತೆಯಂತೆವೋಲ್,
ಕೊಡಲಿಗೊರವನ ಕಡುಪಿನೆಡೆಗೆ. ತವಿದುದೊ ಗಾಳಿ.    ೬೭೦
ಪರಿದುದೊ ಮುಗಿಲ್ ಕೂಡೆ. ಪರಶುರಾಮನ ಮೊಗಕೆ
ಮಲರಿದುದೊ ಮುಗುಳುನಗೆ ! ಶೈಶವ ಸರಲ ಶಾಂತಿ
ಸೌಂದರ್ಯಗಳ್ಗೆ ಸೋಲದರೊಳರೆ ಲೋಕದೊಳೆನಲ್
ರಾಮಂಗೆ ತಾಂ ಮೆಚ್ಚುಗೊಟ್ಟನು ವಿಷ್ಣುಚಾಪಮಂ
ಜಮದಗ್ನಿಸೂನು, ಲೋಕಂ ನಿನ್ನಿಂದಮಾವಗಂ
ನಿರ್ವಿಘ್ನಮಕ್ಕೆಂದು ಪರಸಿ. ಸುಡಲೆಂದು ಕಿಡಿ ತಾಂ
ಬರಲೊಡಂ, ಪಿಡಿಯಲದೆ ಮಾಣಿಕಮಾಗಿ, ಬಡತನಂ
ಪೋಪಂತೆ ಪೋದನಾ ಪರಶುರಾಮಂ. ದಶರಥಂ
ಪಿರಿಯ ಮಗನಂ ತಬ್ಬಿ ಮೂಸಿದನು ಮಂಡೆಯಂ,
ಬಗೆಯಲಂಪಿಂಗೆ ಕಣ್ ತೊಯ್ವಿನಂ. ಒಸಗೆ ನಡೆದುದು  ೬೮೦
ಮುಂದೆ ಸಾಕೇತಪುರಕಾಗಿ. ಪನ್ನೀರಿರ್ಪಿನಿಂ
ತಣ್ಣಸಂಬಡೆದಿರ್ದು ನಲ್‌ಗಂಪುವೆತ್ತಲರ
ಹರಹಿಂದೆ ಮೇಣ್ ತೋರಣ ಪಸುರ್ಪಿಂದೆ ಸಿಂಗರಂ
ಬಡೆದಿರ್ದ ಬೀದಿಗಳಲೆಲ್ಲೆಲ್ಲಿಯುಂ ಕಿಕ್ಕಿರಿದ
ಮಂದಿ, ಬದ್ದವಣದಿಂ ಮೇಣ್ ಸುಸ್ವರಸ್ವಾಗತದ
ಸಂಗೀತದಿಂ, ವಧೂವರರನಿದಿರ್ಗೊಂಡುದಯ್,
ಶಶಿಯುದಯಸಮಯಾಬ್ಧಿ ವಾಹಿನಿಯನಾಲಿಂಗಿಪೋಲ್.
******

29 ಜೂನ್ 2018

ಮಲೆಗಳಲ್ಲಿ ಮದುಮಗಳು-64

       ನಾನು ಹೇಳಿದ್ದು ಹೌದೋ ಅಲ್ಲವೊ? ಕಾಡಿನಲ್ಲಿ ಹೋಗುವಾಗ ಕೋವಿ ಖಾಲಿ ಇರಬಾರದಂತೆ!…. ಈಡು  ತುಂಬಿಕೊಂಡು ಬಂದಿದ್ದರಿಂದ ಅಲ್ಲವೊ ಈ ಕೋಳಿ ಸಿಕ್ಕಿದ್ದು, ತಾನೆ ತನ್ನ ಕೈಯಲ್ಲಿ ಮ್ಯಾಣೆ ಹಿಡಿದುಕೊಂಡಿದ್ದ ಕಾಡುಕೋಳಿಯ ಕಡೆ ನೋಡುತ್ತಾ ಗಟ್ಟದ ತಗ್ಗಿನವರ ಕಾಕುದನಿಯಲ್ಲಿ ಐತ ಮುಂದುವರಿದನು ಹುಂಜ ಏನು ತೂಕ ಇದೆ ಅಂತೀರಿ?….  ಅಯ್ಯಾ, ನೀವೆ ನೋಡಿ!”

ಕೋವಿಗೆ ಮತ್ತೆ ಈಡು ತುಂಬುತ್ತಿದ್ದ ಮುಕುಂದಯ್ಯ ಐತನಿಗೆಂದನು, ಅವನು ನೀಡುತ್ತಿದ್ದ ಹುಂಜದ ಕಡೆ ಕಣ್ಣು ಹಾಯಿಸಿದೆ: “ನಿನ್ನ ಕೂಳು ಹೊತ್ತಿತ್ತು! ಒಂದು ಗಂಟೇನೆ ಆಯ್ತಲ್ಲಾ ಇಲ್ಲಿ, ಅದನ್ನು ಹುಡುಕಕ್ಕೆ! ಬೆಳಕು ಇರಾ ಹಾಂಗೆ ಮನೆ ಸೇರಾನ ಅಂತಿದ್ರೆ, ಮೇಗ್ರಳ್ಳಿ ಬುಡದಲ್ಲೇ ಕತ್ತಲೆ ಆಗಾ ಹಾಂಗೆ ಮಾಡ್ದೆಲ್ಲ, ನೀನು?”
ಮಿಶನ್ ಸ್ಕೂಲಿನ ಪ್ರಾರಂಭೋತ್ಸವ ಮುಗಿಯುವಷ್ಟರಲ್ಲೆ ಬೈಗು ಕಪ್ಪಾಗಿ ಬಿಟ್ಟಿತ್ತು. ಇನ್ನೂ ಹೊತ್ತು ಮಾಡುತ್ತಿದ್ದರೋ ಏನೋ? ಆದರೆ ದೀಪಕ್ಕೆ ಏರ್ಪಾಡು ಮಾಡಿರಲಿಲ್ಲವಾದ್ದರಿಂದ ಬೆಳಕಿರುವಂತೆಯೆ ಆದಷ್ಟು ಬೇಗನೆ ಮುಗಿಸಿದ್ದರು.
ಅಂತಕ್ಕನ ಮನೆಗೆ ಅನಂತಯ್ಯನವರೊಡನೆ ಹೋಗಿ, ಸ್ಕೂಲಿಗೆ ಓದಲು ಬರುವ ತಮ್ಮ ಹುಡುಗರನ್ನು ಅಲ್ಲಿ ಊಟ ವಸತಿಗೆ ಬಿಡುವ ವಿಚಾರ ಮಾತನಾಡಿ, ಮುಕುಂದಯ್ಯ ಹೊರಡುವುದೆ ಕತ್ತಲುಕತ್ತಲಾಗಿತ್ತು. ಹೆದ್ದಾರಿಯಿಂದ ಹುಲಿಕಲ್ಲು ನೆತ್ತಿಯ ಕಡೆಗೆ ಅಗಚುವ ಕಾಲುದಾರಿ ಸಿಕ್ಕಲ್ಲಿಯೆ ಐತ ಕೋವಿಗೆ ಈಡು ತುಂಬಿಕೊಳ್ಳುವಂತೆ ಮುಕುಂದಯ್ಯನನ್ನು ಪ್ರೇರೇಪಿಸಿದ್ದು, ಅದರ ಪರಿಣಾಮವಾಗಿಯೆ, ಹತ್ತು ಮಾರು ಕಾಡಿನಲ್ಲಿ ಹೋಗುವುದರೊಳಗಾಗಿ ಹಿಂದೆ ಗುತ್ತಿ ಸಿಂಬಾವಿ ಭರಮೈಹೆಗ್ಗಡೆಯವರು ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರಿಗೆ ಕೊಟ್ಟಿದ್ದ ಕಾಗದವನ್ನು ಹೊತ್ತು ತರುತ್ತಿದ್ದಾಗ ಹುಲಿಯ ಬೊಗಳಿ ಮೇಲೆ ಬಿದ್ದು ಎಬ್ಬಿಸಿದ್ದ ಹೆಚ್ಚಾವಿನ “ಬೆತ್ತದ ಸರ”ಕ್ಕೆ ಸಮೀಪದಲ್ಲಿ ಒಂದು ಕಾಡುಕೋಳಿ ಹುಂಜ, ಗೊತ್ತು ಕೂರಲೆಂದು, ನೆಲದ ಹಳುವಿನಿಂದ ಹಾರಿ ಒಂದು ದೊಡ್ಡ ಮರದ ಮೇಲೆ ಕೂತಿತು. ಅದು ಅಡಗಿದ್ದ ಕೊಂಬೆ ಎತ್ತರವಾಗಿದ್ದು ಸಂಧ್ಯಾ ಗಗನಕ್ಕೆ ಇದಿರಾಗಿದ್ದುದರಿಂದ ಬೈಗಿನ ಬಾನಿನ ಬಣ್ಣದ ಹಿನ್ನೆಲೆಯಲ್ಲಿ ಮಷೀಚಿತ್ರದಂತೆ ಎದ್ದು ಕಾಣುತ್ತಿದ್ದು, ಸುಲಭವಾಗಿ ಸಿಕ್ಕಿತ್ತು ಮುಕುಂದಯ್ಯನ ಗುರಿಗೆ. ಆದರೆ ಕೋಳಿ, ಹೊಡೆದಲ್ಲಿಯೆ ಕೆಳಕ್ಕೆ ಬೀಳದೆ, ಸ್ವಲ್ಪ ದೂರ ಇಳಿಜಾರಾಗಿ ಹಾರಿ ಹೋಗುತ್ತಾ ನೆಲಕ್ಕೆರಗಿತ್ತು. ಅದು ದೊಪ್ಪನೆ ಬಿದ್ದ ಸದ್ದೂ ಆ ಸಂಧ್ಯಾ ನಿಃಶಬ್ದತೆಯಲ್ಲಿ ಚೆನ್ನಾಗಿ ಕೇಳಿಸಿತ್ತು. ಆದರೆ ಆಗಾಗಲೆ ಕತ್ತಲೆ ಕವಿಯುತ್ತಿದ್ದ ಹಳುವಿನಲ್ಲಿ ಅದನ್ನು ಹುಡುಕುವುದೆ ಕಷ್ಟವಾಯಿತು. ಸುಮಾರು ಹೊತ್ತು ಅವರಿಬ್ಬರೂ ಹಳುವಿನಲ್ಲಿ ಅದನ್ನು ತಡಕಿ ಹುಡುಕಿದ ಮೇಲೆಯೆ ಅದು ಪತ್ತೆಯಾಗಿತ್ತು. ಚೆನ್ನಮ್ಮಗೆ “ಕತ್ತಲಾಗುವುದರೊಳಗೆ ಮನೆಯಲ್ಲಿರುತ್ತೇನೆ” ಎಂದು ಧೈರ್ಯ ಹೇಳಿ, ಆಶ್ವಾಸನೆ ಕೊಟ್ಟು ಬಂದಿದ್ದ ಮುಕುಮದಯ್ಯಗೆ, ಮೇಗರವಳ್ಳಿ ಹತ್ತಿರದ “ಬೆತ್ತದ ಸರ”ದಲ್ಲಿಯೆ ಅಷ್ಟು ಕತ್ತಲೆಯಾಗಿದ್ದನ್ನು ಕಂಡು, ತುಂಬ ಅಸಮಾಧಾನವಾಗಿತ್ತು. ಅದಕ್ಕೇ ಅವನು ಹುಂಜವನ್ನು ಕೈಯಲ್ಲಿ ಹಿಡಿದಿದ್ದ ಐತನ ಮೃಗಯಾ ಉತ್ಸಾಹಕ್ಕೆ ತಣ್ಣೀರೆರಚುವಂತೆ ಮಾತನಾಡಿದ್ದು!
ಇಬ್ಬರೂ ಬೇಗಬೇಗನೆ ಕಾಲುಹಾಕಿ ಹುಲಿಕಲ್ಲುನೆತ್ತಿಗೆ ಏರಿ ಇಳಿದು ಕೋಣೂರಿನ ಗಟ್ಟದ ತಗ್ಗಿನವರ ಬಿಡಾರದ ಸಮೀಪಕ್ಕೆ ಬಂದಾಗ ಐತ “ಅಯ್ಯಾ, ಒಂದು ಚಣ ಹಿಡಿದುಕೊಂಡಿರಿ, ಈಗ ಬಂದೆ” ಎಂದು ಕಾಡುಕೋಳಿಯನ್ನು ಮುಕುಂದಯ್ಯನ ಕೈಗಿತ್ತು ಕತ್ತಲೆಯಲ್ಲಿ ಕಾಣದಾದನು. ದೇಹಬಾಧೆಗೆ ಅವಸರವಾಗಿರಬೇಕು ಎಂದು ಭಾವಿಸಿ, ಮುಕುಂದಯ್ಯ ಕೋಳಿ ಹಿಡಿದು ಕಾದನು.
ಜಲಬಾಧೆಗಿರಲಿ, ಮಲಬಾಧೆಗಾದರೂ ಇಷ್ಟು ಹೊತ್ತು ಬೇಕೇ? ಎಲ್ಲೆಲ್ಲಿಯೂ ನೀರು ಹರಿಯುತ್ತಿರುವ ಈ ಕಾಲದಲ್ಲಿ ನೀರು ಹುಡುಕಿಕೊಂಡಾದರೂ ಎಲ್ಲಿಗೆ ಹೋದನು ಇವನು?…  ಅಥವಾ? ಹಾಳಾದವನು ಕುಡಿಯೋಕೆ ಗಿಡಿಯೋಕೆ ಸಿಗುತ್ತದೆ ಅಂತಾ ಯಾರ ಬಿಡಾರಕ್ಕಾದರೂ ನುಗ್ಗಿದನೋ?…. ಅವಳಿಗೆ ಬೇರೆ ಹೇಳಿ ಬಂದೀನಿ! ತುದಿಗಾಲ ಮೇಲೆ ಕಾಯ್ತಾ ಇರ್ತಾಳೆ, ಸೂಜಿ ಮೇಲೆ ನಿಂತ ಹಾಗೆ!….. ಕಡೆಗೆ, ನನಗೇನಾದುರೂ ಆಯ್ತೋ ಏನೋ ಅಂತಾ ಎದೆಗೆಟ್ಟು, ಏನಾದರೂ ಮಾಡಿಕೊಂಡರೂ ಮಾಡಿಕೊಂಡಳೆ! ಅದಕ್ಕೂ ಹೇಸುವವಳಲ್ಲ!…. ಇವತ್ತು ರಾತ್ರಿ ಬೇರೆ “ಬಂದೇ ಬರ್ತಿನಿ” ಅಂತಾ ಒಪ್ಪಿಯೂ ಬಿಟ್ಟಾಳೆ! ಮುಕುಂದಯ್ಯಗೆ ಮುಗುಳುನಗೆ ತಡೆಯಲಾಗಲಿಲ್ಲ. ಥೂ ಎಷ್ಟು ಹೊತ್ತಾಯ್ತು? ಎತ್ತ ಸತ್ತ ಈ ಬೋಳೀಮಗ?…. ನಾ ಹೋಗ್ತಾ ಇರ್ತೀನಿ. ಬರಲಿ ಹಾಳಾದವನು ಆಮೇಲೆ!….
ಮುಕುಂದಯ್ಯ ಕೋಳಿ ಕೋವಿ ಎರಡನ್ನೂ ಹೊತ್ತುಕೊಂಡು ಹೂವಳ್ಳಿಯ ಕಡೆಗೆ ಕತ್ತಲಲ್ಲಿಯೆ ಆದಷ್ಟು ಜೋರಾಗಿ ಕಾಲು ಹಾಕಿದನು. ಸ್ವಲ್ಪ ದೂರ ಹೋಗುವುದರಲ್ಲಿ ಹಿಂದುಗಡೆಯಿಂದ ಯಾರೊ ಓಡೋಡಿ ಬರುವ ಸದ್ದು ಕೇಳಿಸಿ ನಿಂತನು.
ಏದುತ್ತಾ ಹತ್ತಿರಕ್ಕೆ ದೌಡಾಯಿಸಿ ಬಂದು, ಕವಿದಿದ್ದ ಕುರುಡುಗತ್ತಲೆಯಲ್ಲಿ ಇನ್ನೇನು ಡಿಕ್ಕಿ ಹೊಡೆಯಬೇಕು ಅನ್ನುವಷ್ಟರಲ್ಲಿ ಮುಕುಂದಯ್ಯ ಕೂಗಿ ನಿಲ್ಲಿಸಿದನು:
“ಎತ್ತಲಾಗಿ ಸತ್ತಿದೆಯೊ, ಹಾಲಾದವನೆ?”
“ಅಕ್ಕಿಣಿ ಬಿಡಾರಕ್ಕೆ ಹೋಗಿ ಬಂದೆ.”
“ಯಾರ ಉಚ್ಚೆ ಕುಡಿಯಾಕೋ?” ಸಿಟ್ಟುರಿದಿತ್ತು ಮುಕುಂದಯ್ಯಗೆ.
“ಇಲ್ಲಾ, ಅಯ್ಯಾ, ಪೀಂಚಲು ಏನೋ ಹೇಳಿದ್ಲು, ಬಸಿರೀಗೆ ಮದ್ದು ತರಾಕ್ಕೆ ಹೋಗಿದ್ದೆ” ಎಂದಿತು ಐತನ ದೀನವಾಣಿ.
ಮುಕುಂದಯ್ಯನ ಮನಸ್ಸು ಮೃದುವಾಯಿತು. ಕಾಡುಕೋಳಿಯನ್ನು ಮುಂಚಾಚಿ, ಕೇಳಿದನು: “ಅಕ್ಕಣಿ ಮನೇಲಿಲ್ಲೇನೊ ಈಗ?”
ಮುಕುಂದಯ್ಯ ಮುಂದಕ್ಕೆ ನೀಡಿದ್ದ ಕೋಳಿಯನ್ನು ಕೈಗೆ ತೆಗೆದುಕೊಳ್ಳುತ್ತಾ ಐತನೆಂದನು:
“ಇಲ್ಲಾ, ಅಯ್ಯಾ! ಮೊನ್ನೆಯಿಂದ ಮತ್ತೆ ಬಿಡಾರಕ್ಕೇ ಬಂದಾಳೆ” ತುಸು ತಡೆದು ಮತ್ತೆ ಸ್ವಾರಸ್ಯ ಚಾಪಲ್ಯಕ್ಕೆ ವಶವಾಗಿ ಮುಂದುವರಿಸಿದನು: “ಹಳೆಮನೆ ಅಮ್ಮ ಮನೆಗೆ ಬಂದಮ್ಯಾಲೆ ರಂಗಪ್ಪಯ್ಯೋರು “ಬಿಡಾರಕ್ಕೇ ಹೋಗು, ಚೀಂಕ್ರನಿಂದ ನಿಂಗೇನೂ ಆಗದೆ ಇದ್ದಾಂಗೆ ನಾ ನೋಡ್ಕೋತೀನಿ” ಅಂದರಂತೆ!”
“ಇನ್ನೆಲ್ಲಿ ಚೀಂಕ್ರ ಬರ್ತಾನೆ, ಗಟ್ಟದಮೇಲೆ? ಅವನ ಕಥೆ ಪೂರೈಸದ್ಹಾಂಗೆ!” ಮನೆಕಡೆಗೆ ಬಿರುಬಿರನೆ ಕಾಲು ಹಾಕುತ್ತಲೆ ಗಂಟಲಲ್ಲಿಯೆ ನಕ್ಕು ಹೇಳಿದನು ಮುಕುಂದಯ್ಯ.
ಇಬ್ಬರೂ ಸ್ವಲ್ಪ ದೂರ ನೀರವವಾಗಿ ಮುಂದುವರಿದಿದ್ದರು.
ಹಿಂದುಗಡೆ ಬರುತ್ತಿದ್ದ ಐತ ಇದ್ದಕ್ಕಿದ್ದ ಹಾಗೆ ಕಿಸಕ್ಕನೆ ನಕ್ಕಿದ್ದು ಕೇಳಿಸಿ, ಮುಕುಂದಯ್ಯ ಕಾಲುಹಾಕುತ್ತಲೆ ಕೇಳಿದನು: “ಯಾಕೋ ಪೂರಾ ನಗ್ತೀಯಲ್ಲಾ?”
“ಯಾಕಿಲ್ಲಯ್ಯಾ…. “ ಎಂದನು ಐತ.
ಮತ್ತೆ ಇಬ್ಬರೂ ತಮ್ಮ ತಮ್ಮ ಆಲೋಚನೆಗಳಲ್ಲಿ ಮಗ್ನರಾಗಿಯೊ ಅಥವಾ ಕವಿದಿದ್ದ ಕತ್ತಲೆಯಲ್ಲಿ ಎಡವದಂತೆ ದಾರಿಗಾಣುವುದರಲ್ಲಿ ತಲ್ಲೀನರಾಗಿಯೊ ತುಸುದೂರ ಸಾಗಿದ್ದರು.
“ಅಯ್ಯಾ!” ಕರೆದನು ಐತ ಮತ್ತೆ.
“ಏನೋ?”
“ಅಕ್ಕಣಿ ಈಗ ಹೆಗ್ಗಡ್ತಮ್ಮ ಆಗಿಬಿಟ್ಟಾಳೆ! ನಿಮ್ಮೋರು ಉಟ್ಟಹಾಂಗೆ ಸೀರೆ ಉಟ್ಟುಕೊಂಡು ಗಡದ್ದಾಗಿದ್ದಾಳೆ!…. ಅವಳ ಬಿಡಾರಾನೂ…. ನನ್ನ ಬಿಡಾರ ಆಗಿತ್ತಲ್ಲಾ ಅದನ್ನೂ ಸೇರಿಸಿಯೆಬಿಟ್ಟಾರೆ!…. ಈಗ “ಮನೆ” ಆಗಿಬಿಟ್ಟದೆ…. “
“ಅದೆಲ್ಲಾ ನಿನಗ್ಯಾಕೋ? ಬಿಡಾರ ಬೀಳಿಸಿ “ಮನೇ”ನಾದ್ರೂ ಕಟ್ಟಲಿ,  ಅರಮನೇನಾದ್ರೂ ಕಟ್ಟಲಿ!…. ನೀನೇನು ಹೋಗ್ತೀಯಾ ನಿನ್ನ ಬಿಡಾರಕ್ಕೆ ಮತ್ತೆ?…..”
“ನನ್ನ ಜೀಂವ ಹೋದ್ರೂ ನಾನು ಹೋಗುದಿಲ್ಲ, ಒಡೆಯಾ” ಎಂದು ಪ್ರತಿಜ್ಞೆ ಮಾಡಿದ ಐತ, ಏನೋ ರಹಸ್ಯ ಹೇಳುವ ಧ್ವನಿಯಲ್ಲಿ ಮುಂದುವರಿದನು ಮತ್ತೆ: “ಇವೊತ್ತೊಂದು ತಮಾಸೇನ ಆಯ್ತಲ್ಲಾ, ಒಡೆಯಾ? ನಾನು…. ಅಕ್ಕಣಿ ಬಿಡಾರದ ಹತ್ತೆ ಹೋದಾಗ,…. ಒಳಗೆ…. ಮಾತಾಡೋದು ಕೇಳಿಸ್ತು….  ಮನೇ ದೊಡ್ಡಯ್ಯೋರು ಒಳಗಿದ್ರು!….”
“ಹರಕು ಬಾಯಿ ಮುಟ್ಠಾಳ, ಬಾಯಿ ಮುಚ್ಚಿಕೊಂಡು ಸುಮ್ಮನಿರಬಾರದೇನೋ? ನಿನ್ನ ನಾಲಗೆ ಪೂರಾ ಉದ್ದ ಆಗ್ತಾ ಇದೆಯೋ, ಇತ್ತಿತ್ತಲಾಗಿ…. ಒಂದು ದಿನ ನೀನು ಯಾರ ಕೈಲಾದ್ರೂ ಹಲ್ಲು ಉದುರಿಸಿಕೊಳ್ತೀಯಾ, ನೋಡ್ತಿರು! ನಿನಗ್ಯಾಕೊ ದೊಡ್ಡೋರ ವಿಚಾರ?”
ಐತ ಮುಂದೆ ಮಾತೆತ್ತಲಿಲ್ಲ, ಹೂವಳ್ಳಿ ಮನೆ ಮುಟ್ಟುವವರೆಗೂ.
ಆಗಿನ ಕಾಲದ ಮಲೆನಾಡಿನಲ್ಲಿ, ಸಾಮಾನ್ಯ ದಿನಗಳಲ್ಲಿ, ಆ ಒಂದೊಂದೆ ದೊಡ್ಡ ಮನೆಯ ಹಳ್ಳಿಗಳಲ್ಲಿ, ದುಡಿದು ದಣಿದು ಜನರು ಕತ್ತಲಾಗಿ ದೀಪ ಹಚ್ಚಿದೊಡನೆ ಉಂಡು ಮುಗಿಸಿ, ಕೋಣೆ ಸೇರುತ್ತಿದ್ದುದು ಮಾಡಿಕೆ. ಆದರೆ ಅಂದು ಹೂವಳ್ಳಿ ಮನೆಯಲ್ಲಿ ರಾತ್ರಿ ಬಹಳ ಹೊತ್ತಾಗಿದ್ದರೂ ಜಗಲಿಯ ದೀಪ ಉರಿಯುತ್ತಲೆ ಇತ್ತು.
ಜಗಲಿಯ ಕೆಸರುಹಲಗೆಯ ಮೇಲೆ ಮುಂಡಿಗೆಗೆ ಒರಗಿ ಒಬ್ಬಳೆ ಕುಳಿತಿದ್ದ ನಾಗಕ್ಕ, ಎದುರಿಗೆ ಅಂಗಳದಲ್ಲಿದ್ದ ತುಳಸಿಕಟ್ಟೆಯ ಮೇಲೆ ದೇವರಿಗೆ ಹಚ್ಚಿಟ್ಟಿದ್ದ ನೀಲಾಂಜನಗಳ ನಾಟ್ಯಮಾನ ಸೊಡರುಗಳ ಕಡೆಗೆ ನೋಡುತ್ತಾ, ಗಂಭೀರ ಚಿಂತಾಮಗ್ನಳಾಗಿ ಕುಳಿತಿದ್ದಳು. ಅವಳು ತನ್ನ ವಿಫಲ ಜೀವನವನ್ನಾಗಲಿ ಅದರ ದುಃಖ ಮಯ ದುರಂತತೆಯನ್ನಾಗಲಿ ಕುರಿತು ಯೋಚಿಸುತ್ತಿರಲಿಲ್ಲ. ಚಿನ್ನಮ್ಮನ ಭವಿಷ್ಯ ಜ್ಜೀವನದ ಯೋಗಕ್ಷೇಮವೆ ಅವಳ ಧ್ಯಾನದ ವಿಷಯವಾಗಿತ್ತು. ತನ್ನ ಸ್ವಂತ ಸುಖ ಸಂತೋಷ ಎಂಬುದೆಲ್ಲ ಮಣ್ಣು ಪಾಲಾಗಿದ್ದ ಈ ಜನ್ಮದ ಬಾಳುವೆಯಲ್ಲಿ ಇನ್ನು ಅವಳಿಗೆ ಉಳಿದಿದ್ದ ಏಕಮಾತ್ರ ಪ್ರತ್ಯಾಶೆ ಎಂದರೆ ಚಿನ್ನಮ್ಮ ಸುಖಸಂತೋಷಗಳಿಂದ ಬದುಕಿ ಬಾಳುವುದೆ ಆಗಿತ್ತು. ಮುಕುಂದಯ್ಯನೊಡನೆ ಚಿನ್ನಮ್ಮನ ಲಗ್ನವೂ ಇನ್ನೊಂದು ತಿಂಗಳಿಗೆ ನಿಶ್ಚಯವಾಗಿಯೂ ಇತ್ತು. ಅದಕ್ಕೆ ಮನುಷ್ಯ ದೃಷ್ಟಿಗೆ ಗೋಚರವಾಗುವ ಯಾವ ವಿಘ್ನವೂ ಇರಲಿಲ್ಲ ನಿಜ. ಆ ಮಂಗಳಕರವಾದ ಸುದಿನವನ್ನೆ ಇದಿರು ನೋಡುತ್ತಾ ನಾಗಕ್ಕ, ಹರ್ಷಚಿತ್ತೆಯಾಗಿ ಆ ಪುಣ್ಯಮುಹೂರ್ತವನ್ನೆ ಉತ್ಕಟಾಭಿಲಾಷೆಯಿಂದ ನಿರೀಕ್ಷಿಸುವ ಉಲ್ಲಾಸೋತ್ಸಾಹಗಳಲ್ಲಿ ತೇಲಿ ಸಾಗುತ್ತಿದ್ದ ತರಳೆ ಚಿನ್ನಮ್ಮನ ದ್ವಿಗುಣಿತ – ತ್ರಿಗುಣಿತ – ಶತಗುಣಿತ ಆನಂದಸ್ರೋತದಲ್ಲಿ ಲೀನೆಯಾಗಿದ್ದಳು. ಆದರೆ ಆವೊತ್ತು ಬೆಳಿಗ್ಗೆ ಚಿನ್ನಮ್ಮ ಮನೆಯಿಂದ ತುಸುದೂರವಿದ್ದ ಕಾಡುದಾರಿಯಲ್ಲಿ ಕೋವಿಯೊಡನೆ ಮೇಗರವಳ್ಳಿಗೆ ಹೋಗುತ್ತಿದ್ದ ಮುಕುಂದಯ್ಯನನ್ನು ಬೀಳುಕೊಟ್ಟು, ಮನೆಗೆ ಹಿಂತಿರುಗಿ, ಅಂಗಳದ ತುಳಸೀ ದೇವರಿಗೆ ಸುತ್ತು ಬಂದು, ನಾಗಕ್ಕಗೆ ನಡೆದ ವಿಷಯವನ್ನೆಲ್ಲ ತಿಳಿಸಿದ ಮೇಲೆ, ಮನೆಯಲ್ಲಿ ಎಲ್ಲರ ಮನಸ್ಸಿಗೂ ಮುಗಿಲು ಕವಿದಂತಾಗಿತ್ತು. ಈಡು ತುಂಬದಿದ್ದ ಕೋವಿಯನ್ನು ತೆಗೆದುಕೊಂಡು ಹೋಗುತ್ತಿದ್ದುದಕ್ಕೆ ಯಾವ ದುರುದ್ದೇಶವೂ ಇಲ್ಲವೆಂದೂ, ನಿರಪಾಯವಾಗಿ ತಾನು ಸಾಯಂಕಾಲವೆ ಸುರಕ್ಷಿತವಾಗಿ ಹಿಂದಕ್ಕೆ ಬರುತ್ತೇನೆ ಎಂದೂ ಮುಕುಂದಯ್ಯ ಧೈರ್ಯ ಹೇಳಿದ್ದರೂ, ಹೆಂಗಸರ ಹೃದಯಗಳು ದಿನವೆಲ್ಲ ತಳಮಳಗೊಳ್ಳುತ್ತಲೆ ಇದ್ದುವು; ಇಷ್ಟವ್ಯಕ್ತಿಯ ಸುರಕ್ಷಿತಾಗಮನಕ್ಕೆ ಪ್ರಾರ್ಥನಾಭಂಗಿಯಲ್ಲಿ ಆನತವಾಗಿಯೆ ಇದ್ದುವು, ತಮ್ಮ ತಮ್ಮ ಭಾವಾನುರೂಪದ ಭಗವಚ್ಚರಣತಲದಲ್ಲಿ!
ಮನೆಯಲ್ಲಿಯೆ ಇದ್ದರೆ ಕೆಲಸವಿಲ್ಲದ ಮನಸ್ಸು ಕಳವಳವನ್ನೆ ಮೆಲುಕು ಹಾಕುತ್ತಾ ಇರುವುದನ್ನು ತಪ್ಪಿಸುವುದಕ್ಕಾಗಿಯೆ ನಾಗಕ್ಕ ಚಿನ್ನಮ್ಮನನ್ನೂ ಪೀಂಚಲು ವೊಡನೆ ಕರೆದುಕೊಂಡು ಮಧ್ಯಾಹ್ನ ಊಟವಾದ ಮೇಲೆ ತೋಟದ ಕೆಲಸಕ್ಕೆ ಹೋಗಿದ್ದಳು. ಚಿನ್ನಮ್ಮನೊಡನೆ ತಾನೊಬ್ಬಳೆ ಇರುವಾಗಲೆಲ್ಲ ಸಾಧಾರಣವಾಗಿ ಆಶ್ಲೀಲಾಂಚಿತವೂ ಆಗಿರುವ ಹಾಸ್ಯ ಪರಿಹಾಸ್ಯದ ಮಾತುಕತೆಯಲ್ಲಿ ತಡಗಿ ಮನೋರಂಜನೆ ಮಾಡುತ್ತಿದ್ದ ಪೀಂಚಲುವೂ ಆ ದಿನ ಸಂಮ್ಲಾನೆಯೂ ಗಂಭೀರೆಯೂ ಆಗಿಬಿಟ್ಟಿದ್ದಳು. ಇನ್ನು ಕೆಲವೇ ತಿಂಗಳಲ್ಲಿ ಕಂದನೊಬ್ಬನನ್ನು ಪಡೆಯುವ ಹೇರಾಸೆಯಿಂದಿದ್ದ ಆ ಚೊಚ್ಚಲು ಬಸಿರಿಗೆ, ತನ್ನ ಗಂಡನಿಗೂ ಏನಾದರೂ ಆದರೆ ತನ್ನ ಗತಿಯೇನು? ಎಂಬ ಚಿಂತೆ ಹತ್ತಿತ್ತು.
ಅವಳಿಗೆ ಹುಟ್ಟುವ ಮಗು ಹೆಣ್ಣೊ? ಗಂಡೋ? ಎಂಬ ವಿಷಯದಲ್ಲಿ ಚಿನ್ನಮ್ಮಗೂ ಪೀಂಚಲುವಿಗೂ ಎಷ್ಟೋ ಸಾರಿ ತರತರವಾದ ಪಂಥ ಪಾಡು ನಡೆಯುತ್ತಿತ್ತು. ಇವೊತ್ತು ಕೆಲಸದ ಮಧ್ಯೆ ವಿಶ್ರಾಂತಿಗಾಗಿ ನೆರಳಲ್ಲಿ ಮೂವರೂ ಕುಳಿತಿದ್ದಾಗ, ಅಡಕೆಯ ಮರದ ಪೊಟರೆಯಲ್ಲಿ ಗೂಡುಕಟ್ಟಿ ಮರಿಮಾಡಿದ್ದ ಕಾಮಳ್ಳಿ ದಂಪತಿ ತಮ್ಮ ಎರಡು ಮರಿಗಳನ್ನು ಆಗತಾನೆ ಹೊರಕ್ಕೆ ಹಾರಿಸಿ, ಅವಕ್ಕೆ ಗುಟುಕು ಕೊಡುತ್ತಿದ್ದುವು. ಆ ಮರಿಗಳಲ್ಲಿ ಒಂದು ಗಂಡು ಒಂದು ಹೆಣ್ಣೆಂದೂ, ಎರಡೂ ಹೆಣ್ಣಾಗಿರಬೇಕೆ ಎಂದೂ, ಎರಡೂ ಗಂಡೇ ಆಗಿರಬಾರದೆಕೆ ಎಂದೂ ವಾದವಿವಾದ ಪ್ರಾರಂಭವಾಗಿತ್ತು. ಆಗ ವಿನೋದಶೀಲೆ ಚಿನ್ನಮ್ಮ ತನ್ನ ಎರಡು ಕೈಬೆರಳುಗಳನ್ನು ಮುಂದಕ್ಕೆ ಚಾಚಿ, ಒಂದನ್ನು ಮುಟ್ಟುವಂತೆ ಪೀಂಚಲುಗೆ ಹೇಳಿದಳು. ಪೀಂಚಲು ಏನು? ಎಂತು? ಏತಕ್ಕೆ? ಒಂದೂ ಗೊತ್ತಾಗದೆ ಸುಮ್ಮನೆ ಒಂದು ಬೆರಳನ್ನು ಮುಟ್ಟಿದಳು.
“ನೀನೆ ಪುಣ್ಯವಂತೆ ಕಣೇ” ಎಂದು ಚಿನ್ನಮ್ಮ.
“ಯಾಕ್ರೋ?” ಹಿಗ್ಗಿ ರಾಗವಾಗಿ ಕೇಳಿದಳು ಪೀಂಚಲು. ಸುಳ್ಳಾಗಲಿ, ನಿಜವಾಗಲಿ, ಮಂಗಳ ಹೇಳಿದರೆ ಮಾರುಹೋಗದವರಾರು?
“ದೊಡ್ಡಬೆರ್ಳ್ಳು ಮುಟ್ಟಿದೆಲ್ಲಾ? ಅದಕ್ಕೇ!”
“ದೊಡ್ಡಬೆರ್ಳ್ಳು ಮುಟ್ಟದ್ರೆ? ಏನು?”
“ದೊಡ್ಡಬೆರ್ಳ್ಳು,- ಗಂಡು: ಸಣ್ಣ ಬೆರ್ಳ್ಳು,- ಹೆಣ್ಣು!….  ನಿಂಗೆ ಹುಟ್ಟೋ ಬಾಲೆ ಗಂಡೋ ಹೆಣ್ಣೋ ಅಂತಾ ಸಕುನ ನೋಡ್ದೆ ಕಣೇ.”
“ತೋ ನಿಮ್ಮ!” ಚಿನ್ನಮ್ಮ ಮಾಡಿದುದಕ್ಕೂ ಹೇಳಿದುದಕ್ಕೂ ಒಳಗೊಳಗೆ ತುಂಬ ಹಿಗ್ಗಿದ್ದರೂ ಪೀಂಚಲು ಲಜ್ಜಿಗೊಂಡಂತೆ ನಗುನಗುತ್ತಾ ಹೇಳಿದಳು “ನಿಮಗೆ ಮಾಡೋಕೆ ಕಸುಬಿಲ್ಲ, ಚಿನ್ನಕ್ಕಾ.”
ದೂರ ಕುಳಿತು ಅನಾಸಕ್ತಿಯಂತೆ ತೋಟದ ಕಡೆಗೆ ನೋಡುತ್ತಿದ್ದರೂ ಅತ್ಯಂತ ಆಸಕ್ತಿಯಿಂದ ಕಿವಿಗೊಟ್ಟು ಆಗಲಿಸುತ್ತಿದ್ದಳು ನಾಗಕ್ಕ. ಆ ಇಬ್ಬರು ಹುಡುಗಿಯರ ಅಣುಗು – ಬಿರುಗು ಸಂಭಾಷಣೆಯನ್ನು ಅವಳು ತನ್ನ ಬದುಕಿನ ಶೂನ್ಯತೆಯನ್ನೂ ಅನ್ಯರ ಬಾಳುವೆಯ ಸುಖಸಂತೋಷ ತೃಪ್ತಿಗಳಿಂದಲೆ ತುಂಬಿಕೊಳ್ಳಬೇಕಾಗಿತ್ತು.
ಹುಡುಗಿಯರಿಬ್ಬರ ಮುಗ್ಧ ಅಟ್ಟಹಾಸ ಸಹ್ಯಾದ್ರಿಯ ಮೂಲೆಯ ಆ ಅಡಕೆಯ ತೋಟಕ್ಕೆ ಚಕ್ಕಳಗುಳಿ ಇಡುತ್ತಿತ್ತು!
ಕಾಮಳ್ಳಿಯ ಮರಿಗಳು ಗಂಡೋ ಹೆಣ್ಣೋ ಎಂಬುದರಲ್ಲಿ ಪ್ರಾರಂಭವಾದ ಚಿತ್ರ ವೃತ್ತಿ, ಪೀಂಚಲುಗೆ ಹುಟ್ಟುವ ಮಗು ಗಂಡೋ ಹೆಣ್ಣೋ ಎಂದು ಶಕುನ ನೋಡುವುದರಲ್ಲಿ ವ್ಯವಹರಿಸಿತ್ತು. ಆದರೆ ಚಿನ್ನಮ್ಮನ ಚಿತ್ತವೃತ್ತಿಯ ತರಂಗ ಚಲನೆ ಅಲ್ಲಿಗೇ ನಿಲ್ಲಲಿಲ್ಲ. ಬೆಳಗಿನಿಂದಲೂ ಅವಳನ್ನು ಕಾಡುತ್ತಿದ್ದ ಒಂದು ಚಿಂತೆಯ ಕಡೆಗೆ ಒಲೆಯಿತು. ಮತ್ತೆ ಎರಡು ಬೆರಳು ಎತ್ತಿ ಹಿಡಿದಳು, ಪೀಂಚಲುವ ಮುಖದ ಮುಂದೆ. ಹೇಳಿದಳು:
“ಮುಟ್ಟೆ, ಇದರಲ್ಲಿ ಯಾವುದಾದ್ರೂ ಒಂದು ಬೆರ್ಳ್ಳನ್ನ….”
ಈ ಸಾರಿ ಪೀಂಚಲು ಹಿಂದಿನ ಸಲದಂತೆ ಲಘುವಾಗಿಯಾಗಲಿ ಯಾಂತ್ರಿಕವಾಗಿಯಾಗಲಿ ವರ್ತಿಸಲಿಲ್ಲ. ತನ್ನ ಕಣ್ಣ ಮುಂದೆ ಕವಲಾಗಿ ನಿಂತಿದ್ದ ಚಿನ್ನಕ್ಕನ ಎರಡು ಬೆರಳುಗಳನ್ನೂ ತದೇಕಚಿತ್ತಳಾಗಿ ನೋಡತೊಡಗಿದಳು. ಯಾವ ಬೆರಳನ್ನು ಮುಟ್ಟಿದರೆ ಏನು ಶಕುನ ಬಂದುಬಿಡುತ್ತದೆಯೋ? ಕಂಡವರಾರು?
ಪೀಂಚಲು ಭಾವಿಸಿದ್ದಳು, ಚಿನ್ನಮ್ಮ ತನ್ನ ಸಲುವಾಗಿಯೆ ಕಣಿ ಹೇಳಲು ಬೆರಳೊಡ್ಡಿದ್ದಾಳೆ ಎಂದು. ಆದ್ದರಿಂದ ತನಗೆ ಶುಭವಾಗುವಂತೆ ಹೇಳುವ ಬೆರಳನ್ನೆ ಪತ್ತೆಹಚ್ಚಿ ಮುಟ್ಟಬೇಕೆಂದು ಅವಳ ಆಕಾಂಕ್ಷೆ. ತಪ್ಪಿ ಬೇರೆ ಮುಟ್ಟಿಬಿಟ್ಟರೆ ಏನು ಗತಿ?…. ಆವೊತ್ತು ತನ್ನ ಗಂಡ ಐತ, ನೆನೆದರೆ ಇವೊತ್ತಿಗೂ ಏನು ನಾಚಿಗೆಯೇರುತ್ತದೆ! ತನ್ನ ಬತ್ತಲೆಯೊಡನೆ ಅವನ ಬತ್ತಲೆಯನ್ನೂ ಸೇರಿಸಿ ಆಟವಾಡುತ್ತಿದ್ದಾಗ, ಹಾಲು ತುಂಬಿ ಉಬ್ಬುತ್ತಿರುವ ತನ್ನ ಪೆರ್ಮೊಲೆಗಳಿಗೆ ಮುತ್ತಿಟ್ಟು, “ಎಡವೊ? ಬಲವೊ? ಹೇಳು!” ಅಂದಾಗ ತಾನು ಫಕ್ಕನೆ “ಬಲ” ಅನ್ನಲು ಹಾಂಗಾದ್ರೆ ನೀನು ಹೆಣ್ಣು ಹಡೆಯುವುದೇ ನಿಶ್ಚಯ! ಎಂದು ಅಪಶಕುನ ಹೇಳಿದ್ದನಲ್ಲವೆ? ಹಾಂಗಾಗಬಾರದಲ್ಲಾ ಇಂದು?
ಚಿನ್ನಮ್ಮನ ಬೆರಳುಗಳನ್ನು ನೋಡುತ್ತಿದ್ದ ಪೀಂಚಲು ತನ್ನೊಳಗೇ “ಅಃ ಚಿನ್ನಕ್ಕನ ಕೈಬೆರಳು ಎಷ್ಟು ಬಿಳಿ! ಎಷ್ಟು ಸಪುರ! ಏನು ಚೆಂದ! ಮುದ್ದು ಮಾಡಬೇಕು ಅನ್ನಿಸುತ್ತದೆ!…. ನನಗೇ ಹೀಂಗಾದರೆ, ಇನ್ನು ಆ ಮುಕುಂದಯ್ಯೋರಿಗೆ ಹೆಂಗಾಗ ಬೇಕು?… ಅದಕ್ಕೇ ಮತ್ತೆ, ಆವೊತ್ತು ಸೊಪ್ಪು ತರಲು ಹಾಡ್ಯಕ್ಕೆ ಹೋಗಿದ್ದಾಗ…  ಅವರು…. ಚಿನ್ನಕ್ಕನಿಗೆ…  ಹಾಂಗೆ ಮಾಡಿಬಿಟ್ಟದ್ದು?” ಎಂದುಕೊಂಡು ಸಚಿತ್ರವಾಗಿ ನೆನೆಯುತ್ತಿದ್ದಂತೆಯೆ, ಅವಳ ಮುಖಮಂಡಲ ಭಾವಮಯವಾಗಿ ಕಾಂತಿಯುಕ್ತವಾಯಿತು.
ಅದನ್ನು ಗಮನಿಸಿ ಚಿನ್ನಮ್ಮ “ಏ ಯಾಕೇ, ಇಷ್ಟು ನಾಚಿಕೆ ನಿಂಗೆ? ಬೆರಳು ಮುಟ್ಟು ಅಂದ್ರೆ?” ಎಂದು ಅವಸರಪಡಿಸಿದಳು.
ಆಗ ಮಾಡಿದಂತೆ ಈಗಲೂ, ದೊಡ್ಡ ಬೆರಳೇ ಶುಭದ ನಿಧಿಯಾಗಿರಬೇಕು ಎಂದು ಭಾವಿಸಿ, ಪೀಂಚಲು ನೀಳವಾಗಿ ನಿಂತಿದ್ದ ಅದನ್ನೆ ಮುಟ್ಟಿದಳು. ಪಾಪ, ಅವಳಿಗೆ ಹೇಗೆ ಗೊತ್ತಾಗಬೇಕು, ಅದರ ಪರಿಣಾಮ ಅಷ್ಟೊಂದು ಭೀಕರವಾಗುತ್ತದೆ ಎಂದು?
ಶರತ್ಕಾಲದ ಸರೋವರದಂತೆ ಪ್ರಶಾಂತ ಸುಂದರವಾಗಿದ್ದ ಚಿನ್ನಮ್ಮನ ವದನರಂಗದಲ್ಲಿ ಇದ್ದಕ್ಕಿದ್ದಂತೆಯೆ ಭಯವಿಕಾರದ ತರಂಗಗಳೆದ್ದುವು. ಚಳಿಗಾಳವಾಗಿದ್ದೂ, ನೆರಳಿನಲ್ಲಿ ಕುಳಿತಿದ್ದೂ, ಕುಳಿರುಗಾಳಿ ಬೀಸುತ್ತಿದ್ದರೂ ಅವಳ ಹಣೆಯಲ್ಲಿ ಬೆವರಿನ ಹನಿ ಮೂಡಿದವು. ಉಸಿರು ಸುಯ್ಯುಸಿರಾಯಿತು, ಕಣ್ಣಲ್ಲಿ ಬಳಬಳನೆ ನೀರು ಉಕ್ಕಿ ಕೆನ್ನೆಗಳ ಮೇಲೆ ಹರಿದವು. ಹೆದರಿ ಕೂಗಿಕೊಂಡರೂ ದನಿ ಏಳಲಿಲ್ಲ. ಇನ್ನೇನು ಪ್ರಜ್ಞೆ ತಪ್ಪಿ ಬೀಳುತ್ತಾಳೆಯೊ ಏನೋ ಎಂಬಂತೆ ತತ್ತರಿಸುತ್ತಿದ್ದ ಅವಳನ್ನು ಕಂಡು, ಬೆಬ್ಬಳಿಸಿ “ಅಯ್ಯೋ ಚಿನ್ನಕ್ಕಾ, ಏನಾಯ್ತು? ಏನಾಯ್ತು?” ಎಂದು ಚೇತ್ಕರಿಸಿ, ದಿಗಿಲು ಬಡಿದಿದ್ದ ಪೀಂಚಲು ತನ್ನ ಗರ್ಭಸ್ಥೂಲತೆಯನ್ನೂ ಮರೆತು ಚಂಗನೆ ನೆಗೆದದ್ದು ಚಿನ್ನಮ್ಮನನ್ನು ಆತುಕೊಂಡಳು. ನಾಗಕ್ಕನೂ ಓಡಿಬಂದು ಹಿಡಿದುಕೊಂಡಳು.
ಪೀಂಚಲು ಪಕ್ಕದಲ್ಲಿಯೆ ಹರಿಯುತ್ತಿದ್ದ ತೋಟದ ಕಪ್ಪಿನ ನೀರನ್ನು ಬೊಗಸೆಯೆತ್ತಿ ತಂದು, ನಾಗಕ್ಕ ಹೇಳಿದಂತೆ ನೆತ್ತಿಗೂ ಹಣೆಗೂ ಚಿಮುಕಿಸಿದಳು. ಸೆರಗಿನಿಂದ ಗಾಳಿ ಬೀಸಿದಳು. ಅವರು ಕುಳಿತಿದ್ದ ಜಾಗದಲ್ಲಿ ಕಸಕಡ್ಡಿ ಜಿಗ್ಗು ಹಳು ತುಂಬಿದ್ದರಿಂದ ಆ ಸದೆಯಲ್ಲಿ ಎಲ್ಲಿಯಾದರೂ ಅಡಗಿದ್ದ ಹಾವು ಗೀವು ಕಚ್ಚಿತೋ ಎಂದು ಹುಡುಕಿ ನೋಡಿದರು.
ಸ್ವಲ್ಪ ಹೊತ್ತಿನ ಮೇಲೆ ಚಿನ್ನಮ್ಮ ಚೇತರಿಸಿಕೊಂಡಳು! ಆದರೆ ಯಾವ ಪ್ರಶ್ನೆಗೂ ಉತ್ತರ ಕೊಡಲಿಲ್ಲ. ಅಗಲವಾಗಿ ತೆರೆದಿದ್ದ ಕಣ್ಣುಗಳಲ್ಲಿಯೂ ಮುಖಭಂಗಿಯಲ್ಲಿಯೂ ತುಸು ಹೊತ್ತಿನ ಹಿಂದೆ ತಾಡಿತವಾಗಿದ್ದ ಭೀತಿಯ ಭಾವ ತನ್ನ ಮುದ್ರೆಯನ್ನೊತ್ತಿ ಬಿಟ್ಟಿತ್ತು. ಕಣ್ಣೀರು ಉಕ್ಕಿದಂತೆಲ್ಲ ಸೆರಗಿನಿಂದ ಒರಸಿಕೊಳ್ಳುತ್ತಿದ್ದಳು.
“ಐತ ಹೇಳುತ್ತಿದ್ದ, ಅಮ್ಮಾ: ಇಲ್ಲಿ ಹಗಲು ಹೊತ್ತಿನಲ್ಲಿ ಏನೋ ಒಂದು ತಿರುಗುತ್ತದೆಯಂತೆ!….” ಪ್ರಾರಂಭಿಸಿದಳು ಪೀಂಚಲು.
ರೇಗಿ ಅವಳ ಬಾಯಿ ಮುಚ್ಚಿಸಿದಳು ನಾಗಕ್ಕ: “ಸಾಕು ಸುಮ್ಮನಿರೆ!…  ಎಷ್ಟು ಸಾರಿ ಹೇಳಬೇಕೆ ನಿನಗೆ ನಾನು? ಬೆರಳೂ ಗಿರಳೂ ಮುಟ್ಟಿ, ಸಕುನ ಗಿಕುನ ನೋಡೋ ಆಟ ಆಡಬಾರದು ಅಂತಾ?…. ಏಳಿ, ಹೋಗಾನ ಮನೆಗೆ…. ಸಾಕು ನೀವು ಕಡಿದಿದ್ದು, ಕೆಲಸ!”
“ಏನು? ಎಂತು?” ಎಂಬುದು ಹೊಳೆಯದಿದ್ದರೂ “ಏಕೆ?” ಎಂಬುದನ್ನು ಊಹಿಸಿದ್ದಳು ನಾಗಕ್ಕ. ತನ್ನ ಇನಿಯನಿಗೆ ಸಂಬಂಧಪಟ್ಟಹಾಗೆ ಏನನ್ನೊ ಸಂಕಲ್ಪಿಸಿ, ಬೆರಳು ಮುಟ್ಟಿಸಿದ್ದಳು ಚಿನ್ನಮ್ಮ. ಅದು ಶುಭಕ್ಕೆ ವ್ಯತಿರಿಕ್ತವಾಗಿ, ಕೇಡಿನ ಕಡೆಗೇ ಇತ್ಯರ್ಥ ಹೇಳಿದ್ದರಿಂದ ಅವಳ ಮೃದು ಮುಗ್ಧ ಆಶಾಪೂರ್ಣ ಚೇತನ ತತ್ತರಿಸಿ ಹೋಗಿತ್ತು.
ಮನೆಗೆ ಹಿಂತಿರುಗುತ್ತಾ ದಾರಿಯಲ್ಲಿ ನಾಗಕ್ಕ ಚಿನ್ನಮ್ಮಗೆ ಧೈರ್ಯ ಹೇಳಿದಳು: “ತಂಗೀ, ನಾ ಹೇಳೋ ಮಾತನ್ನ ಸೆರಗಿನಲ್ಲಿ ಗಂಟುಹಾಕಿ ಕೊಂಡಿರು: ಇವೊತ್ತಲ್ಲ ನಾಳೆ, ನಾಳೆ ಅಲ್ಲ ಮುಂದೆ: ನಿನ್ನ ಒಳ್ಳೆಯದಕ್ಕೇ ನಾ ಹೇಳ್ತಿದ್ದೀನಿ: ನಿನ್ನ ಗಂಡನೇ ಆಗಲಿ, ನಂಟರಿಷ್ಟರು ಯಾರೇ ಆಗಲಿ, ಮನೆ ಬಿಟ್ಟು ಕೆಲಸಕ್ಕೆ ಹೊರಗೆ ಹೋದಾಗ, ನೀನು “ಕೆಟ್ಟದ್ದಾಗಿಬಿಟ್ಟರೆ ಏನು ಗತಿ?” ಅಂತಾ ಅಮಂಗಳಾನೇ ನೆನೆದು ಹೆದರ್ತಾ ಕೂತರೆ ಖಂಡಿತಾ ಒಳ್ಳೆದಲ್ಲ. ಅದಕ್ಕೆ ಬದಲಾಗಿ ಅವರಿಗೆ ಒಳ್ಳೇದಾಗ್ತದೆ; ಅವರು ಸುಖವಾಗಿ ಮನೆಗೆ ಬರ್ತಾರೆ” ಅಂತಾ ದೇವರನ್ನು ನೆನೀತಿದ್ರೆ, ಒಳ್ಳೇದು ಆಗೇಆಗ್ತದೆ.
ನಾಗಕ್ಕನ ಹಿತವಚನ ಚಿನ್ನಮ್ಮಗೆ ತನ್ನ ಮುಕುಂದ ಬಾವ ಜೈಮಿನಿ ಭಾರತ ಓದಿ ಕಥೆ ಹೇಳುತ್ತಿದ್ದಾಗ ಹೇಳಿದ್ದನ್ನೆ ನೆನಪಿಗೆ ತಂದಿತ್ತು. ತಾನು ಎಂಥಾ ತಪ್ಪು ಮಾಡುತ್ತುದ್ದೆ ಎಂದು ತನ್ನನ್ನು ತಾನೆ ಬೈದುಕೊಂಡಳು. ಈ ಅಮಂಗಳಾಶಂಕೆ ಆಕೆಯ ಬದುಕನ್ನೆ ಕೊರೆಯುತ್ತಿದ್ದ ಒಂದು ಕೆಟ್ಟ ಕೀಟಚಾಳಿಯಾಗಿತ್ತು. ಅವಳು ಹಗಲೆಲ್ಲ ತಾನು ಬಲ್ಲಂತೆ ಭಗವಂತನನ್ನು ನೆನೆಯುತ್ತಾ, ಮುಕುಂದ ಭಾವ ಯಾವ ಆಮಂಗಳ ಕಾರ್ಯವನ್ನೂ ಮಾಡದೆ, ಯಾವ ಅಮಂಗಳಕ್ಕೂ ಒಳಗಾಗದೆ, ಬೈಗಿಗೆ ಸುರಕ್ಷಿತವಾಗಿ ಮನೆಗೆ ಬರಲಿ ಎಂದು ಹಾರೈಸುತ್ತಾ ಇದ್ದು, ಮುಚ್ಚಂಜೆ ಕಪ್ಪಾಗಲು ಅಂಗಳದ ತುಳಸೀ ದೇವರಿಗೆ ದೀಪ ಹಚ್ಚಿಟ್ಟು, ಕೈಮುಗಿದು ಎರಡು ಸುತ್ತು ಬಂದು, ಅಡ್ಡಬಿದ್ದಳು.
ಅಡ್ಡಬಿದ್ದವಳು ಬಹಳ ಹೊತ್ತು ಮೇಲೇಳಲಿಲ್ಲ. ಅವಳ ಮನಸ್ಸಿಗೆ ತನ್ನ ಮೈಯಲ್ಲಿ ಎನೋ ಆಗುತ್ತಿರುವಂತೆ ಅನುಭವವಾಗಿ, ದೇವರ ಬಳಿಯ ತುಳಸಿಯ ಮುಂದೆ ಅದಾಗಿಬಿಟ್ಟರೆ ಮೈಲಿಗೆ ಆಗುತ್ತದೆಂದು ಹೆದರಿ, ಬೇಗಬೇಗನೆ ಜಗಲಿಗೇರಿ ಒಳಕ್ಕೆ ಹೋಗುವುದಕ್ಕೆ ಬದಲಾಗಿ, ಕೆಳಗರಡಿಯಲ್ಲಿದ್ದ ಮುರುವಿನ ಒಲೆಯ ಪಕ್ಕದಲ್ಲಿಟ್ಟಿದ್ದ ಅಕ್ಕಿಕಲಬಿಯ ಮರೆಗೆ ಹೋದಳು.
ಜಗಲಿಯ ಮೇಲಿದ್ದು, ಮೊಮ್ಮಗಳು ದೇವರಿಗೆ ಬಲಗೊಂಡು ಅಡ್ಡ ಬೀಳುತ್ತಿದ್ದ ದಿವ್ಯದೃಶ್ಯವನ್ನು ಆಶೀರ್ವಾದ ತುಂಬಿದ ಹೃದಯದಿಂದ ಕಣ್ಣುತೊಯ್ದು ನೋಡುತ್ತಿದ್ದ ಚಿನ್ನಮ್ಮನ ಅಜ್ಜಿ, ತನ್ನ ಪಕ್ಕದಲ್ಲಿ ನಿಂತಿದ್ದ ನಾಗಕ್ಕಗೆ “ಯಾಕೆ?… ಹುಡುಗಿ ಅತ್ತಲಾಕಡೆ ಹೋದ್ಲು?…” ಎಂದು ಸೋಜಿಗವೊರೆದಳು.
ನಾಗಕ್ಕ ಕರೆದಳು, ಚಿನ್ನಮ್ಮ ಓಕೊಂಡರೂ, ಜಗಲಿಗೆ ಬರಲಿಲ್ಲ.
ನಾಗಕ್ಕ ಕಲಬಿಯಿದ್ದ ಜಾಗಕ್ಕೆ ಇಳಿದುಹೋಗಿ, ತುಸು ಹೊತ್ತು ಪಿಸಿಪಿಸಿ ಮಾತನಾಡಿ ಹಿಂದಕ್ಕೆ ಬಂದವಳು ಅಜ್ಜಿಗೆ “ಏನೂ ಇಲ್ಲಂತೆ, ಅಜ್ಜಮ್ಮ…. ಚೆಂಬು, ಚಾಪೆ, ಕಂಬಳಿ ತಂದುಕೊಡಾಕೆ ಹೇಳ್ತು” ಎನ್ನುತ್ತಾ ಚೆನ್ನಮ್ಮ ಮಲಗುತ್ತಿದ್ದ ಅಜ್ಜಿಯಕೋಣೆಗೆ ನಡೆದಳು.
ಅಜ್ಜಿಗೆ ಅರ್ಥವಾಯ್ತು. ಆ ಮುರುವಿನ ಒಲೆಯ ಪಕ್ಕದಲ್ಲಿ, ಎತ್ತರವೂ ದೊಡ್ಡದೂ ಆಗಿದ್ದ ಅಕ್ಕಿಕಲಬಿಯಿಂದ ಮರೆಕಟ್ಟಿದಂತಿದ್ದ, ಕೆಳಗರಡಿಯ ಆ ಜಾಗದಲ್ಲಿ ಇಂದು ಚೆನ್ನಮ್ಮ ಮುಟ್ಟಾಗಿ, ಮೂರು ದಿನಗಳೂ, ಹಗಲೂ ರಾತ್ರಿಯೂ, ಕುಳಿತೂ ಎದ್ದೂ ಮಲಗಿಯೂ ಹರಟೆ ಹೊಡೆದೂ ಆಕಳಿಸಿಯೂ ನಿದ್ದೆಮಾಡಿಯೂ ಕಳೆಯಲಿರುವಂತೆ, ಚಿನ್ನಮ್ಮನ ತಾಯಿಯೂ ಚಿನ್ನಮ್ಮನ ಅಜ್ಜಿಯೂ ಚಿನ್ನಮ್ಮನ ಮುತ್ತಜ್ಜಿಯೂ, ಅವಳಜ್ಜಿಯ ಅಜ್ಜಿಯ ಅಜ್ಜಿಯೂ ನೂರಾರು ವರ್ಷಗಳಿಂದಲೂ, ಅವರು ಹೊರಗಾಗಿದ್ದಾಗಲೆಲ್ಲ, ಸಲಕ್ಕೆ ಮೂರು ಮೂರು ದಿನಗಳಂತೆ, ಬೀಡುಬಿಟ್ಟು ಕಳೆದಿದ್ದರು! ಈಗಲೂ ವಯೋಧರ್ಮದಿಂದ ಅಜ್ಜಿಗೆ ಆ ತೊಂದರೆ ತಪ್ಪಿದ್ದರೂ ನಾಗಕ್ಕಗೆ ಇನ್ನೂ ತಪ್ಪಿರಲಿಲ್ಲವಷ್ಟೇ?….
ಕತ್ತಲಾಗುವವರೆಗೆ ತಕ್ಕಮಟ್ಟಿಗೆ ಧೈರ್ಯದಿಂದಲೆ ಇತ್ತು, ಚಿನ್ನಮ್ಮನ ಚೈತನ್ಯ. ಬೈಗುಕಪ್ಪಾಗುತ್ತಾ ಬಂದಂತೆಲ್ಲ ಅವಳ ಪ್ರತೀಕ್ಷೆ ತೀಕ್ಷ್ಣವಾಗತೊಡಗಿತು. ಮತ್ತೆ ಮತ್ತೆ ಹೆಬ್ಬಾಗಿಲಾಚೆಗೆ ಹೋಗಿ ಹಾದಿಯ ಕಡೆಗೆ ನೋಡುತ್ತಿದ್ದಳು. ಪೂರ್ತಿ ಕತ್ತಲು ಕವಿದ ಮೇಲೂ ಮುಕುಂದಯ್ಯ ಹಿಂತಿರುಗದಿದ್ದುದನ್ನು ನೋಡಿ, ಅವಳ ಅಮಂಗಳಾಶಂಕೆ ಬಿಸಿಯಾಗುತ್ತ ಬಂದು ಕುದಿಯತೊಡಗಿತು.
ಮನೆಗೆ ಅಂಟಿಕೊಂಡಂತಿದ್ದ ಕೊಟ್ಟಿಗೆಯ ಮೂಲೆಯ ತನ್ನ ಬಿಡಾರದಲ್ಲಿ ಅಡುಗೆಮಾಡಿಟ್ಟು, ತನ್ನ ಗಂಡ ಬಂದ ಮೇಲೆ ಅವನೊಡನೆಯೆ ಉಣ್ಣುವ ಆಶೇಯಿಂದ, ಬಿಡಾರದ ಬಾಗಿಲು ಮುಚ್ಚಿಕೊಂಡು ಪೀಂಚಲು ಮನೆಗೆ ಬಂದಿದ್ದಳು. ಐತನಿಲ್ಲದ ರಾತ್ರಿಗಳಲ್ಲಿ ಪೀಂಚಲು ತನ್ನ ಬಿಡಾರದಲ್ಲಿ ಒಬ್ಬಳೆ ಮಲಗಲು ಅಂಜಿಕೆಯಾಗಿ ಮನೆಗೇ ಬಂದು, ಮನೆಗೆಲಸದ ಮುದುಕಿ ಸುಬ್ಬಿ ಯಾವಾಗಲೂ ಮಲಗುತ್ತಿದ್ದ ಅಕ್ಕಿ ಕಲಬಿಯ ಮೂಲೆಯಲ್ಲಿಯೆ ಮಲಗುತ್ತಿದ್ದುದು ರೂಢಿ. ಇವತ್ತು ಚಿನ್ನಕ್ಕನೂ ಅಲ್ಲಿಯೆಮಲಗುವಂತಾಗಿದ್ದುದನ್ನು ಕೇಳಿ ಅವಳಿಗೆ ತುಂಬಾ ಸಂತೋಷವಾಯ್ತು, ವಿನೋದಕ್ಕೂ ಮಾತಿಗೂ ಹೆಚ್ಚು ಕಡಿಮೆ ಸಮಸಮ ವಯಸ್ಸಿನ ಸಂಗಾತಿಯ ಸಖೀಸಂಗ ದೊರೆತಿದ್ದಕ್ಕಾಗಿ.
ಆದರೆ ಇವೊತ್ತಿನ ಪರಿಸ್ಥಿತಿ ಬೇರೆಯಾಗಿತ್ತು. ಚೆನ್ನಮ್ಮನ ಮನಃಸ್ಥಿತಿ ವಿನೋದಕ್ಕಾಗಲಿ ಪಟ್ಟಂಗಕ್ಕಾಗಲಿ ಸ್ವಲ್ಪವೂ ಸಿದ್ಧವಾಗಿರಲಿಲ್ಲ. ಒಂದೆರಡು ಸಾರಿ ಪೀಂಚಲು ಮಾಡಿದ ಪ್ರಯತ್ನವೂ ವಿಫಲವಾಗಿತ್ತು. ಅದು ಅಷ್ಟಕ್ಕೇ ನಿಂತಿರಲೂ ಇಲ್ಲ. ಚಿನ್ನಮ್ಮ ತನ್ನ ಪ್ರಿಯತಮನ ಆಗಮನ ನಿರೀಕ್ಷೆಯಿಂದಲೂ ಅಮಂಗಳಾಶಂಕೆಯಿಂದಲೂ ಕುದಿಯುತ್ತಿದ್ದಾಳೆ ಎಂಬುದನ್ನು ಗ್ರಹಿಸಿದ ಅನಂತರ ಆ ಉದ್ವೇಗ ಪೀಂಚಲಿಗೂ ತಟ್ಟಲಾರಂಭಿಸಿತು. ಒಮ್ಮೆ ಚಿನ್ನಮ್ಮ ಹೆಬ್ಬಾಗಿಲಾಚೆ ಹೋಗಿ ಬಂದು ನಿಟ್ಟುಸಿರು ಬಿಟ್ಟು, ತನಗೆ ತಾನೆ ಎಂಬಂತೆ “ತಮಗೆ ಬರಾಕೆ ತಡಾಗ್ತದೆ ಅಂತಾ ಗೊತ್ತಾದಮೇಲೆ ಐತನ್ನಾದ್ರೂ ಕಳಿಸಬಾರ್ದಿತ್ತೇ? ಸುಖಾ ಸುಮ್ಮನೆ ನಮ್ಮ ಹೊಟ್ಟೆ ಉರಿಸಾಕೆ?” ಎಂದು ಸಿಡುಕಿಕೊಂಡದ್ದನ್ನು ಆಲಿಸಿದ ಪೀಂಚಲಿಗೂ ಯಾಕೋ ಹೆದರಿಕೆಯಾದಂತಾಗಿ, ಸುಯ್ದೇರಿ, ಕಣ್ಣು ಒದ್ದೆಯಾಗಿತ್ತು: ಅವಳ ಹೊಟ್ಟೆಯಲ್ಲಿದ್ದು ಆಗಲೆ ಅಲ್ಪಸ್ವಲ್ಪ ಚಲನೆಗೂ ಷುರು ಮಾಡಿದ್ದ ಐತನ ಕಂದಮ್ಮ ತನ್ನ ಅಸ್ತಿತ್ವವನ್ನು ಅಬ್ಬೆಗೆ ಸುಪ್ರಕಟವಾಗಿಯೆ ತಿಳಿಸುವಂತೆ ಒದ್ದಾಡಿಕೊಂಡಿತ್ತು, ಕುಮುಟಿತ್ತೆಂಬಂತೆ!….
ರಾತ್ರಿ ಊಟದ ಹೊತ್ತಾಗಲು ನಾಗಕ್ಕ ಹಿತ್ತಲುಕಡೆಗೆ ಬಾ ಎಂದು ಊಟಕ್ಕೆ ಎಬ್ಬಿಸಿದಾಗ ಚಿನ್ನಮ್ಮ ತನಗೆ ಹಸಿವಾಗುತ್ತಿಲ್ಲ ಎಂದು ಹೇಳಿ ಮುಸುಗುಹಾಕಿಕೊಂಡು ಮಲಗಿಬಿಟ್ಟಿದ್ದಳು. ಅವಳಿಗೆ ತುಸು ದೂರದಲ್ಲಿ ಮಲಗಿದ್ದ ಪೀಂಚಲು, ತನಗೆ ಹಸಿವಾಗಿದ್ದರೂ, ಚಿನ್ನಮ್ಮ “ಬಿಡಾರಕ್ಕೆ ಹೋಗಿ ಉಂಡುಕೊಂಡು ಬಾರೆ” ಎಂದು ಒಂದೆರಡು ಸಾರಿ ಹೇಳಿದ್ದರೂ, “ಅವರು ಬಂದಮ್ಯಾಲೇ ಹೋಗ್ತೀನಿ” ಎಂದು ಮಲಗಿದ್ದಳು. ಚೆನ್ನಮ್ಮಗೆ ಗೊತ್ತಿತ್ತು, ಚೊಚ್ಚಲು ಬಸಿರಿ ಪೀಂಚಲು ತನ್ನ ಹಾಗೆ ಹಸಿದುಕೊಂಡಿರಲಾರಳು ಮತ್ತು ಹಸಿದಿರಲೂ ಬಾರದು ಎಂದು. ಆದರೆ, ಯಾವಾಗಲೂ ಲಘುವಾಗಿ ವಿನೋದಶೀಲೆಯಾಗಿರುತ್ತಿದ್ದ ಪೀಂಚಲಿಗೂ ಚಿನ್ನಮ್ಮನ ಅಮಂಗಳಾ ಶಂಕೆಯ ಆವೇಗ ತಟ್ಟಿಬಿಟ್ಟಿತ್ತು.
ಅಜ್ಜಿ ಕಾದೂ ಕಾದೂ, ಉಣ್ಣುವ ಶಾಸ್ತ್ರ ಮುಗಿಸಿ, ಮಲಗುವ ಕೋಣೆಗೆ ಹೋಗಿದ್ದಳು. ನಾಗಕ್ಕಗೆ ಹಸಿವೆಯಾಗಿದ್ದರೂ ದುಡಿದು ದಣಿದಿದ್ದರೂ ಉಣ್ಣುವ ಮನಸ್ಸಾಗದೆ ಜಗಲಿಗೆ ಬಂದು, ಕೆಸರು ಹಲಗೆಯ ಮೇಲೆ ಮಂಡಿಗೆಗೆ ಒರಗಿ ಕುಳಿತು, ಅಂಗಳದ ತುಳಸಿಯ ದೇವರಿಗೆ ಹಚ್ಚಿಟ್ಟಿದ್ದ ನೀಲಾಂಜನಗಳಲ್ಲಿ ಡೋಲಾಯಮಾನವಾಗಿ ಉರಿಯುತ್ತಿದ್ದ ಕೆಂಜೊಡರುಗಳ ಕಡೆಗೆ ನೋಡುತ್ತಾ, ಆ ದಿನ ನಡೆದ ಸಂಗತಿಗಳನ್ನು ಮೆಲಕುಹಾಕುತ್ತಾ, ಮುಕುಂದಯ್ಯನ ಆಗಮನವನ್ನೇ ಕಾತರತೆಯಿಂದ ಪ್ರತೀಕ್ಷಿಸುತ್ತಾ ಕುಳಿತಿದ್ದಳು. ಹಗಲು ಅಡಕೆ ತೋಟದಲ್ಲಿ ಅವಳು ಚಿನ್ನಮ್ಮಗೆ ಬುದ್ಧಿ ಹೇಳಿ, ಕೊಟ್ಟಿದ್ದ ಧೈರ್ಯ ಈಗ ಅವಳಿಗೇ ಅಷ್ಟಾಗಿರಲಿಲ್ಲ: ಏನಾದರೂ ನಡೆಯಬಾರದ್ದು ನಡೆದಿದ್ದರೆ? ಆಗಬಾರದ್ದು ಆಗಿದ್ದರೆ? ಏನು ಗತಿ? ಯಾಕೆ ಇಷ್ಟು ರಾತ್ರಿಯಾದರೂ ಇನ್ನೂ ಬರಲಿಲ್ಲ….  ಅಷ್ಟರಲ್ಲಿ ಹೊರಗಡೆ ನಾಯಿ ಬೊಗಳಿದವು. ನಾಗಕ್ಕ “ಅಂತೂ ಬಂದರಲ್ಲಾ?” ಎಂದು ದೀರ್ಘವಾಗಿ ಉಸಿರೆಳೆದು ಎದ್ದು ನಿಂತಳು. ಹೆಬ್ಬಾಗಿಲು ತಟ್ಟಿದ ಸದ್ದಾಯಿತು. ಐತನ ದನಿ ಕೇಳಿಸಿತು.
“ಸುಬ್ಬೀ. ಬಾಗಿಲು ತೆಗಿಯೆ” ಕೂಗಿ ಹೇಳಿದಳು ನಾಗಕ್ಕ.
ಮುದುಕಿ ಸುಬ್ಬಿ ಉರಿಯುತ್ತಿದ್ದ ಮುರುವಿನೊಲೆಯ ಪಕ್ಕದಲ್ಲಿ ಹೆಬ್ಬಾಗಿಲಿಗೆ ಸಮೀಪವೆ ಮಲಗಿದ್ದಳು. ಅನುದ್ವಿಗ್ನ ಭಂಗಿಯಲ್ಲಿ, ನಿಧಾನವಾಗಿ ಎದ್ದು, ತಾಳ ತೆಗೆದು, ಬಾಗಿಲು ಎಳೆಯತೊಡಗಿದಳು. ಆದರೆ ದಿಮ್ಮಿಗಳಂತಹ ಹಲಗೆಗಳಿಗೆ ಕಬ್ಬಿಣದ ದಪ್ಪ ಪಟ್ಟಿಗಳನ್ನು ಜೋಡಿಸಿ ಮಾಡಿದ್ದ ಆ ಹೆಬ್ಬಾಗಿಲು ಮುದುಕಿಗೆ ಜಗ್ಗಲಿಲ್ಲ, ಅತ್ತ ಕಡೆಯಿಂದ ಐತ ನೂಕುತ್ತಿದ್ದರೂ! ಮುಕುಂದಯ್ಯನೂ ಐತನಿಗೆ ನೆರವಾಗಿ ಅತ್ತ ಕಡೆಯಿಂದ ನೂಕಿದ ಮೇಲೆಯೆ ಹೆಬ್ಬಾಗಿಲು ಕಿರೇಂದು ತೆರೆಯಿತು…  ನಾಗಕ್ಕ ಅಡುಗೆ ಮನೆಗೆ ನಡೆದಳು.
“ಐತಾ, ಆ ಕೋಳೀನ ಅಕ್ಕಿ ಕಲಬಿಗೆ ಹಾಕಿಡೋ; ನಾಳೆ ಬೆಳಿಗ್ಗೆ ಸರಿಮಾಡಿ ಕೊಡಬಹುದು” ಎನ್ನುತ್ತಾ ಮುಕುಂದಯ್ಯ ಒಳಗೆ ಬಂದು, ಕೋವಿಯನ್ನು ಜಗಲಿಯ ಒಂದು ಮೂಲೆಗೆ ಒರಗಿಸಿಟ್ಟು, ಬಟ್ಟೆ ಬಿಚ್ಚಿಡತೊಡಗಿದನು.
ಮುಳ್ಳಿನ ಹಾಸಗೆಯ ಮೇಲೆ ಮಲಗಿದ್ದ ಚಿನ್ನಮ್ಮಗೆ ಸಂಪೂರ್ಣ ಎಚ್ಚರಿತ್ತು. ಅಳುತ್ತಿದ್ದ ಕಣ್ಣು ಒಂದು ಚಣವೂ ಮುಚ್ಚಿರಲಿಲ್ಲ. ನಾಯ ಕೂಗಿ, ಬಾಗಿಲು ತಟ್ಟಿ, ಐತನ ದನಿ ಕೇಳಿಸಿದಾಗಲೆ ಅವಳ ಎದೆಯ ಮೇಲಿದ್ದ ಭಾರವೆಲ್ಲ ತೊಲಗಿದಂತಾಗಿತ್ತು. ಮುಕುಂದಯ್ಯ ಒಳಗೆ ಬಂದು, ಐತನಿಗೆ ಕೋಳಿಯನ್ನು ಅಕ್ಕಿ ಕಲಬಿಯೊಳಗೆ ಇಡಲು ಹೇಳಿದ ಅವನ ಇಷ್ಟಪ್ರಿಯ ಕಂಠಧ್ವನಿ ಕಿವಿಗೆ ಬಿದ್ದೊಡನೆ ಚಿನ್ನಮ್ಮನ ಚೇತನ ಗರಿಹಗುರವಾಗಿ, ಹೆದೆ ತುಂಡಾದ ಬಿಲ್ಲಿನ ಸೆಟೆತವೆಲ್ಲ ತೊಲಗಿ ಅದರ ದಂಡವು ನೆಟ್ಟಗಾಗಿ ವಿರಾಮಭಂಗಿಯಲ್ಲಿ ಮಲಗುವಂತೆ, ಒಂದೆರಡು ನಿಮಿಷಗಳಲ್ಲಿಯೆ ಆನಂದ ಮೂರ್ಛೆಯೊ ಎಂಬಂತಹ ಗಾಢನಿದ್ರೆಗೆ ಮುಳುಗಿಬಿಟ್ಟಳು! ನರಕ ನಾಕಗಳಿಗೆ ಅದೆಷ್ಟು ಅಲ್ಪಾಂತರವೊ ವಿರಹ ಮಿಲನ ನಾಟಕದಲ್ಲಿ?
ಮುಕುಂದಯ್ಯ ಕೈಕಾಲು ತೊಳೆದುಕೊಂಡು, ತುಳಸಿಕಟ್ಟೆಗೆ ಬಲವಂದು ಅಡ್ಡಬಿದ್ದು, ಅಡುಗೆ ಮನೆಗೆ ಹೋಗಿ ಮಣೆಯ ಮೇಲೆ ಅಂಡೂರಿ ಕುಕ್ಕುರುಗಾಲಲ್ಲಿ ರೂಢಿಯಂತೆ ಊಟಕ್ಕೆ ಕುಳಿತನು. ನಾಗಕ್ಕ ಬಾಳೆ ಎಲೆ ಹಾಕಿ ಬಡಿಸಿದಳು. ಉಣ್ಣುತ್ತಾ ನಾಗಕ್ಕನೊಡನೆ ಮನೆ ಗೆದ್ದ ತೋಟಗಳಲ್ಲಿ ನಡೆದ ಆ ದಿನದ ಕೆಲಸಗಳ ವಿಚಾರವಾಗಿ ಆಗೊಂದು ಈಗೊಂದು ಪ್ರಶ್ನೆ ಹಾಕಿ ಮಾತನಾಡಿದನು. ಆದರೆ ಅವನು ಅತ್ತ ಇತ್ತ ಕಣ್ಣು ಹಾಯಿಸುತ್ತಿದ್ದ ರೀತಿಯಿಂದಲೂ, ಮಾತಿನ ಮಧ್ಯೆ ನಿಲ್ಲಿಸಿ ನಿಲ್ಲಿಸಿ ಏನನ್ನೊ ಆಲಿಸಲೆಳಸಿ ಸುಮ್ಮನಾಗುತ್ತಿದ್ದ ಭಂಗಿಯಿಂದಲೂ, ಒಟ್ಟಿನಲ್ಲಿ ಅವನಲ್ಲಿ ತೋರುತ್ತಿದ್ದ ಅಸಮಾಧಾನ ಭಾವದಿಂದಲೂ, ಅವನು ಚಿನ್ನಮ್ಮ ಕಾಣಿಸದಿದ್ದುದಕ್ಕಾಗಿಯೆ ಚಡಪಡಿಸುತ್ತಿದ್ದಾನೆ ಎಂಬುದು ಇಂಗಿತಜ್ಞೆ ನಾಗಕ್ಕಗೆ ಹೊಳೆಯಿತು. ಅವಳಿಗೆ ಹೊರಗಾಗಿದೆ ಎಂದು ನಾಗಕ್ಕ ಹೇಗೆ ಹೇಳುತ್ತಾಳೆ? ಅವನೇ ವಿಚಾರಿಸಿದರೆ ಹೇಳುತ್ತೇನೆ ಎಂದು ಕೊಂಡು ಸುಮ್ಮನಾದಳು. ಆದರೆ ಮುಕುಂದಯ್ಯಗೆ ನಿಮಿಷ ನಿಮಿಷಕ್ಕೂ ಅಸಮಾಧಾನ ಹೆಚ್ಚಾಗುತ್ತಾ ಹೋಯಿತು.
ಸಾಧಾರಣವಾಗಿ ಮುಕುಂದಯ್ಯ ಎಷ್ಟೇ ಹೊತ್ತಾಗಿ ಮನೆಗೆ ಬಂದರೂ ಚಿನ್ನಮ್ಮನ ಸ್ವಾಗತ ಸೇವೆ ಶುಶ್ರೂಷೆ ಸಲ್ಲಾಪಗಳು ತಪ್ಪುತ್ತಿರಲಿಲ್ಲ. ಅದರಲ್ಲಿಯೂ ಇವೊತ್ತು, ಮುಕುಂದಯ್ಯ ಏನೋ ಒಂದು ಅಪಾಯವಾಗಬಹುದಾಗಿದ್ದ ಸನ್ನಿವೇಶದಲ್ಲಿ ಸಿಕ್ಕಿಯೂ ಉಪಾಯದಿಂದ ಗೆದ್ದುಬಂದಿರುವಾಗ, ಚಿನ್ನಮ್ಮ ತನ್ನ ಆಗಮನವನ್ನು ಪ್ರತೀಕ್ಷಿಸದೆ, ನಿರ್ಲಕ್ಷಿಸಿ ನಿದ್ದೆ ಮಾಡಿಬಿಡ ಬಹುದೇ? ಬಹುಶಃ ತಾನು ಕತ್ತಲಾಗುವುದರೊಳಗೆ ಬರಲಿಲ್ಲ ಎಂದು ಮುನಿಸಿಕೊಂಡು, ತನ್ನನ್ನು ಶಿಕ್ಷಿಸುವ ಸಲುವಾಗಿ ಹೀಗೆ ಮಾಡಿರಬೇಕು! ಮಾಡಿದರೆ ಮಾಡಲಿ! ನಾನೂ ಮುನಿಸಿಕೊಳ್ಳಬಲ್ಲೆ…. ಇನ್ನು ಒಂದು ತಿಂಗಳೂ, ನಮ್ಮ ಮದುವೆ ಆಗುವವರೆಗೂ, ನಾನೂ ಅವಳೊಡನೆ ಮಾತುಬಿಡುತ್ತೇನೆ! ಆಗ ಗೊತ್ತಾಗುತ್ತದೆ ಅವಳಿಗೆ! ಅವಳಿಗೆ ಯಾವಾಗಲೂ ದಿಮಾಕು! ನಾನೇ ಯಾವಾಗಲೂ ಸೋಲಬೇಕೇನು? ತೋರಿಸ್ತೀನಿ ಅವಳಿಗೆ! ನಂಗೂ ಗೊತ್ತು ಸಿಟ್ಟುಮಾಡಿಕೊಳ್ಳೋಕೆ!….
ಮುಕುಂದಯ್ಯ ತನ್ನ ಸಿಗ್ಗನ್ನು ಆದಷ್ಟು ಮಟ್ಟಿಗೆ ಮುಚ್ಚಿಟ್ಟು ಕೊಳ್ಳಲು ಪ್ರಯತ್ನಿಸುತ್ತಾ ಊಟ ಮುಗಿಸಿ, ಎಂದಿನ ಪದ್ಧತಿಯಂತೆ ಜಗಲಿಯಲ್ಲಿ ಕುಳಿತು ಸ್ವಲ್ಪ ಹೊತ್ತು ರಾಗವಾಗಿ ಕಾವ್ಯ ಓದುವುದನ್ನೂ ತಿರಸ್ಕರಿಸಿ, ನೆಟ್ಟಗೆ ಮಲಗುವ ಕೋಣೆಗೆ ಹೋಗಿ ಬಾಗಿಲು ಮುಚ್ಚಿ ತಾಳಹಾಕಿಕೊಂಡನು. ಅವನು ತನ್ನ ನಿತ್ಯದ ಅಭ್ಯಾಸದಂತೆ ಸ್ವಲ್ಪ ಹೊತ್ತಾದರೂ ಜಗಲಿಯಲ್ಲಿ ಕೂತಿದ್ದರೆ, ತನ್ನ ಗಂಡ ಐತನ ಸಂಗಡ ಬಿಡಾರಕ್ಕೆ ಹೋಗಿ ಅವನೊಡನೆ ಉಂಡು ಪೂರೈಸಿ, ಅವನನ್ನೂ ಸಂಗಡ ಕರೆದುಕೊಂಡು ಮನೆಗೆ ಹಿಂತಿರುಗಿದ್ದ ಪೀಂಚಲು, ಹೊರಗಾದವರು ಮಲಗುತ್ತಿದ್ದ ಕಲಬಿಯ ಪಕ್ಕದ ಜಾಗದಲ್ಲಿ ಮಲಗುತ್ತಿದ್ದುದನ್ನಾಗಲಿ, ಆ ಜಾಗದಿಂದ ಬಹುದೂರವಿದ್ದ ಜಗಲಿಯ ತೆಣೆಯ ಮೇಲೆ ಐತನೊಬ್ಬನ ಮಲಗುವ ಚಾಪೆ ಬಿಚ್ಚಿಕೊಳ್ಳುತ್ತಿದ್ದುದನ್ನಾಗಲಿ ಗಮನಿಸದೆ ಇರಲಾಗುತ್ತಿರಲಿಲ್ಲ. ಬಿಡಾರದಲ್ಲಿ ಮಲಗಿಕೊಳ್ಳದೆ ಮನೆಯಲ್ಲಿ ಏಕೆ ಮಲಗುತ್ತಿದ್ದಾನೆ? ಎಂಬ ಮುಕುಂದಯ್ಯನ ಪ್ರಶ್ನೆಗೆ ಐತ ಹೇಳಬಹುದಾಗಿದ್ದ ಉತ್ತರದಲ್ಲಿ ಮುಕುಂದಯ್ಯನ ಎದೆಯ ಕುದಿದಾಟವೆಲ್ಲ ತಣ್ಣಗಾಗುತ್ತಿತ್ತು, ಚಿನ್ನಮ್ಮನ ಮೇಲಣ ಮುನಿಸೆಲ್ಲ ಮಾಯವಾಗಿ, ಸಮಾಧಾನದಿಂದ ಉಂಟಾಗುವ ಪ್ರಶಾಂತ ಮನಃಸ್ಥಿತಿಯಲ್ಲಿ ರಾತ್ರಿ ಅವನು ಚೆನ್ನಾಗಿ ನಿದ್ದೆಮಾಡಬಹುದಿತ್ತು.
ಆದರೆ?
ಆವೊತ್ತು ಬೆಳಗಿನಿಂದಲೂ ಮುಕುಂದಯ್ಯ ಮಾನಸಿಕ ಮತ್ತು ದೈಹಿಕ ಶ್ರಮಗಳಿಂದ ದಣಿದಿದ್ದನು. ಆದರೂ ದುಗುಡಕ್ಕೆ ಸಿಲಿಕಿದ ಚೇತನಕ್ಕೆ ನಿದ್ದೆ ಬರುತ್ತದೆಯೆ?
ಬಾಗಿಲು ಮುಚ್ಚಿ, ತಾಳವಿಕ್ಕಿ, ಮಲಗಿಕೊಂಡವನು ಸ್ವಲ್ಪ ಹೊತ್ತಿನಲ್ಲಿಯೆ ಎದ್ದು ತಾಳ ತೆಗೆದು, ಮತ್ತೆ ಮಲಗಿದನು: ಪಾಪ! ಹುಡುಗಿ ನಾನು ಬಂದಮೇಲೆ ಏಳೋಣ ಎಂದು ಮಲಗಿದ್ದವಳು ಹಾಗೆಯೆ ನಿದ್ದೆ ಹೋಗಿರಬಹುದು. ಫಕ್ಕನೆ ಎಚ್ಚರವಾಗಿ, ನಾನು ಬಂದು ಮಲಗಿರಬಹುದೆಂದು ಎಲ್ಲಿಯಾದರೂ ಬಂದರೆ? ಬಾಗಿಲು ತಳ್ಳಿ, ತಾಳ ಹಾಕಿರುವುದನ್ನು ನೋಡಿ, ಹಿಂದಕ್ಕೆ ಹೋಗಬೇಕಾಗಿ ಬಂದರೆ? ಎಷ್ಟು ದುಃಖಪಟ್ಟುಕೊಳ್ಳುತ್ತಾಳೊ? ಪ್ರಿಯೆಯ ಪರವಾಗಿ ತುಂಬ ಮೃದುವಾಯಿತು ಮುಕುಂದಯ್ಯನ ಮನಸ್ಸು…. ತಾನು ತುಂಬ ದಣಿದಿದ್ದುದರಿಂದಲೆ ಮುಂಗೋಪದಿಂದ ವರ್ತಿಸಿಬಿಟ್ಟೆ. ವಿಚಾರಿಸಿದ್ದರೆ ನಾಗಕ್ಕ ನಿಜಸ್ಥಿತಿ ಹೇಳುತ್ತಿದ್ದಳು….  ಆಃ ನನ್ನ ಚಿನ್ನಿ ಎಂಥ ಹುಡುಗಿ? ಏನು ಚೆಲುವೆ? ಎಷ್ಟು ಬುದ್ಧಿವಂತೆ? ನನಗಾಗಿ ಎಂಥೆಂಥ ಸಾಹಸ ಮಾಡಿಬಿಟ್ಟಿದ್ದಾಳೆ? ನಾನೆಂಥ ಕೃತಘ್ನ! ಮುಕುಂದಯ್ಯ ಚಿನ್ನಿಯೊಡನೆ ಮನೆಯಲ್ಲಿ, ಗದ್ದೆಯಲ್ಲಿ, ತೋಟದಲ್ಲಿ, ಹಾಡ್ಯದಲ್ಲಿ, ಹಾಡ್ಯದ ಮಾರಿಗುಡಿಯಲ್ಲಿ ಆಡಿದ ಆಟಗಳನ್ನೆಲ್ಲ ಮೆಲುಕುಹಾಕುತ್ತಾ ಸವಿದನು….  ರಾತ್ರಿ ಬಹಳ ಮುಂದುವರಿದರೂ ಬಾಗಿಲು ತೆರೆಯಲಿಲ್ಲ.
ಬಾಗಿಲು ಮುಚ್ಚಿದ್ದನ್ನು ನೋಡಿ ಹಿಂದಕ್ಕೆ ಹೋಗಿಬಿಟ್ಟಳೊ? ಛೇ? ಎಂಥ ಕೆಲಸ ಮಾಡಿಬಿಟ್ಟೆ? ಮುಕುಂದಯ್ಯ ಮತ್ತೊಮ್ಮೆ ಎದ್ದು, ಬಾಗಿಲನ್ನು ಅರ್ಧ ತೆಗೆದಿಟ್ಟು, ಮಲಗಿಕೊಂಡನು. ಹೊರಗಡೆಯ ಗಾಳಿ ನುಗ್ಗಿ ಕೋಣೆ ತುಸು ತಣ್ಣಗಾಯಿತು.
ಇವೊತ್ತೆ ಅಮಾಸೆ, ಮುಂದಿನ ಅಮಾಸೆ ಕಳೆದು ಎರಡೊ ಮೂರೊ ದಿನಗಳಲ್ಲಿ ನಮ್ಮ ಮದುವೆ! ಜೋಯಿಸರು ಅಮೃತ ಮೂಹೂರ್ತ ಇಟ್ಟುಕೊಟ್ಟಿದ್ದೀನಿ ಅಂತಾ ಹೇಳಿದ್ದಾರೆ. ಬ್ರಾಹ್ಮಣರಲ್ಲದವರಿಗೆ ಸಾಧಾರಣವಾಗಿ ನಿಶಾಲಗ್ನವನ್ನೆ ಇಟ್ಟುಕೊಡುವುದು ವಾಡಿಕೆಯಾಗಿದ್ದರೂ ನಮ್ಮ ಮದುವೆಗೆ ದಿವಾಲಗ್ನವನ್ನೆ ಇಟ್ಟುಕೊಟ್ಟಿದ್ದಾರೆ…  ಅವರೂ ಜನಾಜನ ನೋಡಿ ಪಂಚಾಂಗ ನೋಡ್ತಾರೆ!…. ಥೂ ಇವೊತ್ತು ಅವಳು ಬರುವ ತರಾ ಕಾಣಾದಿಲ್ಲ…  ಬಂದಿದ್ದರೆ ಏನಾಗುತ್ತಿತ್ತೊ?…. ಏನಾದರೂ ಆಗಿದ್ದರೂ ಏನು ಮಹಾ? ಇನ್ನೊಂದು ತಿಂಗಳಲ್ಲಿ ನಾನು ಗಂಡ, ಅವಳು ಹೆಂಡತಿ! ಆಮೇಲೆ ನಮಗೆ ಯಾರ ಮುಲಾಜು?… ಮತ್ತೆ ಮುಕುಂದಯ್ಯನ ಮನಸ್ಸಿನಲ್ಲಿ ಸಿಗ್ಗು ಹೊಗೆಯಾಡತೊಡಗಿತು…. ಇರಲಿ, ನಾನೂ ತೋರಿಸ್ತೀನಿ ಅವಳಿಗೆ! ಇನ್ನು ಒಂದು ತಿಂಗಳು ನಾನು ಅವಳ ಹತ್ತಿರ ಮಾತನಾಡಿದರೆ ನಾನು ಗಂಡಸೇ ಅಲ್ಲ! ಅವಳ ಗಂಡನಾದ ಮೇಲೆಯೇ ನಾನು ಅವಳ ಸಂಗಡ ಮಾತಾಡುವುದು! ಅದಕ್ಕೆ ಮೊದಲು ತುಟಿ ಪಿಟಿಕ್ಕೆನ್ನುವುದಿಲ್ಲ!….
ಅಂತೂ ಮುಕುಂದಯ್ಯನಿಗೆ ನಿದ್ದೆ ಹತ್ತುವುದರಲ್ಲಿ ಮುಕ್ಕಾಲು ಇರುಳು ಮುಗಿದಿತ್ತು. ಹಾಸಗೆಯ ಮೇಲೆ ಹೊರಳೀ ಹೊರಳೀ ಸಾಕಾಗಿ, ಆಕಳಿಸೀ ಆಕಳಿಸೀ ನಿದ್ದೆ ಹೋಗಿದ್ದನು.
ಬೆಳ್ಳಿಗ್ಗೆ ಮುಕುಂದಯ್ಯ ಎದ್ದು, ಅರ್ಧ ತೆರೆದೆ ಇದ್ದ ಕೋಣೆಯ ಬಾಗಿಲಲ್ಲಿ ನಿಂತು, ಅಂಗಳದ ತುಳಸಿದೇವರಿಗೆ ಕೈಮುಗಿದು, ಜಗಲಿಗೆ ಬಂದಾಗ ತೆಣೆಯಲ್ಲಿ ಮಲಗಿದ್ದ ಐತನನ್ನು ಕಂಡು ಅಚ್ಚರಿಗೊಂಡು ವಿಚಾರಿಸಿದನು.
“ಇದೇನೋ? ಇಲ್ಲಿ ಮಲಗೀಯ?”
“ಅವಳು ಬಿಡಾರದಲ್ಲಿ ಮಲಗಲಿಲ್ಲ; ಇಲ್ಲಿಗೇ ಬಂದಳು; ಅದಕ್ಕೇ ನಾನೂ ಇಲ್ಲಿಗೇ ಬಂದುಬಿಟ್ಟೆ” ಎದ್ದು ಕುಳಿತು ಚಾಪೆ ಸುತ್ತುತ್ತಾ ಹೇಳಿದನು ಐತ.
“ಯಾಕೋ? ನಿನ್ನ ಹೆಂಡ್ತಿಗೆ ಹುಷಾರಿಲ್ಲೇನೋ?” ಮಾಗಿಯ ಚಳಿಗೆ ಶಾಲನ್ನು ಬಿಗಿಯಾಗಿ ಹೊದ್ದುಕೊಳ್ಳುತ್ತಾ ಕೇಳಿದನು ಮುಕುಂದಯ್ಯ.
“ಹುಷಾರಿದ್ದಾಳೆ…  ಹು ಹು ಹು! ಏನು ಚಳಿ!”
“ಮತ್ತೆ?”
“ನಾವು ಬರುವ ಮುನ್ನ ಚಿನ್ನಕ್ಕನ ಹತ್ತಿರವೆ ಮಲಗಿದ್ದಳು. “ನಾನು ಚಿನ್ನಕ್ಕನ ಕೂಡೆ ಮಲಗುತ್ತೇನೆ, ನೀನು ಬೇಕಾದರೆ ಜಗಲಿಯ ತೆಣೆಯಮೇಲೆ ಮಲಗಿಕೊ!” ಎಂದು ಬಿಟ್ಟಳಲ್ದಾ?”
ಕೆಳಗರಡಿಯಲ್ಲಿದ್ದ ಅಕ್ಕಿಕಲಬಿಯ ಪಕ್ಕದಲ್ಲಿ, ಕವಿದಿದ್ದ ಅರೆಗತ್ತಲಲ್ಲಿ ಚಿನ್ನಮ್ಮ ಪೀಂಚಲು ಮಾತಾಡುತ್ತಿದ್ದದ್ದೂ ಕೇಳಿಸಿತು. ಹೆಬ್ಬಾಗಿಲನ್ನು ತೆರೆದಿಡುವ ನೆವಮಾಡಿಕೊಂಡು ಮುಕುಂದಯ್ಯ ಅಲ್ಲಿಗೆ ಹೋಗಿ, ಹರಟೆ ಹೊಡೆಯುತ್ತಿದ್ದ ಅವರಿಬ್ಬರೂ ಬಲವಾಗಿ ಹೊದ್ದುಕೊಂಡು ತಂತಮ್ಮ ಹಾಸಗೆಯಲ್ಲಿದ್ದುದನ್ನು ಕದ್ದುನೋಡಿ, ನಡೆದಿದ್ದ ಸಂಗತಿ ಏನು ಎಂಬುದನ್ನು ಪ್ರತ್ಯಕ್ಷ ಮನದಟ್ಟು ಮಾಡಿಕೊಂಡನು. ಅವನ ಅಂತಃಕರಣದ ಆಕಾಶದಲ್ಲಿ ಕವಿದಿದ್ದ ಕಾರ್ಮೋಡವೆಲ್ಲ ಇದ್ದಕ್ಕಿದ್ದ ಹಾಗೆ ತೂರಿಹೋಗಿ, ಚೇತನಸಮಸ್ತವೂ ಸುಪ್ರಸನ್ನವಾದಂತಾಯಿತು: “ಅಯ್ಯೋ ದೇವರೆ, ಮೊದಲೇ ಗೊತ್ತಾಗಿದ್ದರೆ ಇಷ್ಟೆಲ್ಲಾ ಪಾಡುಪಡುವುದು ತಪ್ಪುತ್ತಿತ್ತಲ್ಲಾ!” ಎಂದುಕೊಂಡನು.
ಅಷ್ಟರಲ್ಲಿ ಮುಕುಂದಯ್ಯ ತೆರೆದಿಟ್ಟಿದ್ದ ಹೆಬ್ಬಾಗಿಲಾಚೆಗೆ (ಬಹುಶಃ ಸಣ್ಣ ಕೆಲಸಕ್ಕಿರಬೇಕು?) ಹೋಗಿದ್ದ ಐತ ಹು ಹು ಹು ಹು ಹು ಎನ್ನುತ್ತಾ ಒಳಗೆ ನುಗ್ಗಿ ಬಂದು ಮುರುವಿನೊಲೆಯ ಬಳಿಗೆ ಓಡಿ, ಚಳಿಕಾಯಿಸುತ್ತಾ ಕುಳಿತುಃ “ಹು ಹು ಹು! ಏನು ಚಳಿ, ಅಯ್ಯಾ? ಹು ಹು ಹು! ಕವಣ ಹೆಂಗೆ ಕರೀತಾ ಅದೆ? ಸೊಲ್ಪ ನೋಡಿ! ಹು ಹು ಹು!” ಎನ್ನುತ್ತಾ ಬೆಂಕಿಯ ಉರಿಯ ಹತ್ತಿರಕ್ಕೆ ಕೈ ಚಾಚಿದನು.
ಮುಕುಂದಯ್ಯ ಹೆಬ್ಬಾಗಿಲಾಚೆಗೆ ಕಣ್ಣುಹಾಯಿಸಿದಾಗ, ದಟ್ಟವಾಗಿ ಬೀಳುತ್ತಿದ್ದ ಮಾಗಿಯ ಮಂಜು ಹೊರಗಡೆಯ ಲೋಕಸಮಸ್ತವನ್ನೂ ಆವರಿಸಿ ಆಚ್ಛಾದಿಸಿ ಆಕ್ರಮಿಸಿ ನುಂಗಿಬಿಟ್ಟಿತ್ತು! ಗಿಡ, ಮರ, ಗುಡ್ಡ, ಬೆಟ್ಟ, ಮಲೆ, ಕಾಡು, ಗದ್ದೆ, ತೋಟ, ನೆಲ, ಬಾನು ಒಂದೂ ಇರಲಿಲ್ಲ. ದಟ್ಟೈಸಿ ಸುರಿಯುತ್ತಿದ್ದ ಕಾವಣದ ಮಹಾಶ್ವೇತ ಜಲಪ್ರಲಯದಲ್ಲಿ ಜಗಲ್ಲಯವಾದಂತಿತ್ತು!
“ಐತಾ, ಕೊನೆ ತೆಗಿಯಾಕೆ ಯಾರನ್ನಾದರೂ ಕರಕೊಂಡು ಬರಬೇಕಲ್ಲೋ” ಎನ್ನುತ್ತಾ ಮುಕುಂದಯ್ಯನೂ ಮುರುವಿನ ಒಲೆಯ ಬಳಿಗೆ ಬಂದು ಚಳಿ ಕಾಯಿಸುತ್ತಾ ನಿಂತನು.
ಸುಮಾರು ಸೊಂಟೆತ್ತರ ಇದ್ದ ‘ಮುರಿನೊಲೆ’ಗೆ ಕಚ್ಚಿದ್ದ ಆನೆಗಲು ದಪ್ಪದ ಹೆಗ್ಗುಂಟೆಗಳೂ ದಿಮ್ಮಿಗಳೂ ನಿಗಿನಿಗಿ ಕೆಂಗೆಂಡವಾಗಿ ಧಗಧಗಿಸಿ ಉರಿಯುತ್ತಿದ್ದುವು. ಹೇರೊಲೆಗೆ ಶಾಶ್ವತವಾಗಿ ಹೂಳಿಬಿಟ್ಟಿದ್ದ ಭಾರಿಯ ಹಂಡೆಯಲ್ಲಿ, ಬೆಳಿಗ್ಗೆ ಹಾಲು ಕರೆಯುವಾಗ ಎಮ್ಮೆ ಹಸುಗಳಿಗೆ ತಿಂಡಿಯಾಗಲಿರುವ ಮುರು, ತೊಕ ತೊಕ ತೊಕ ಸದ್ದು ಮಾಡಿ, ಆವಿಗಂಪು ಬೀರಿ ಕುದಿಯುತ್ತಿತ್ತು!
“ಪಿಜಿಣ ಇದ್ದಿದ್ರೆ ನಮಗೆ ಎಷ್ಟು ಅನುಕೂಲ ಆಗ್ತಿತ್ತು ಈಗ?…. ಅಡಕೆ ಮರ ಹತ್ತೋದ್ರಲ್ಲಿ ಅವನ್ನ ಬಿಟ್ಟರೆ ಇರಲಿಲ್ಲ, ಕೊಟ್ಟೆ ಕಟ್ಟೋಕ್ಕಾಗಲಿ, ಕೊನೆ ತೆಗೆಯೋಕ್ಕಾಗಲಿ!….  ಕುದುಕನ ಕಡೆಯೋರಿಗೆ ಹೇಳಿ, ಯಾರನ್ನಾದರೂ ಕರಕೊಂಡು ಬರ್ತೀನಯ್ಯಾ.” ಎನ್ನುತ್ತಾ ಐತ ತುಸು ಅತ್ತತ್ತ ಸರಿದುಕೊಂಡನು, ಮುಕುಂದಯ್ಯನಿಗೆ ಕುಳಿತುಕೊಳ್ಳಲು ಜಾಗ ಬಿಡುವಂತೆ.
“ಗದ್ದೆ ಕೊಯ್ಲಿಗೂ ಜನಾ ಗೊತ್ತು ಮಾಡಬೇಕೋ….  ಸುಮ್ಮನೆ ಕೂತರೆ ಆಗಾದಿಲ್ಲ….” ಎನ್ನುತ್ತಾ ಮುಕುಂದಯ್ಯ ಬೆಂಕಿಗೆ ಬೆನ್ನು ಕಾಯಿಸುವಂತೆ ಕುಳಿತುಕೊಂಡನು.
ತನ್ನ ದನಿಕೇಳಿ ಸುಖಿಸುವವಳು ತನ್ನ ಮಾತನ್ನು ಆಲಿಸುತ್ತಿದ್ದಾಳೆ ಎಂಬ ಸುಖಾನುಭವಕ್ಕಾಗಿಯೆ ಅವನು ಮಾತಾಡುತ್ತಿದ್ದಂತಿತ್ತು.
ಚಿನ್ನಮ್ಮ ಪೀಂಚಲು ಇಬ್ಬರೂ ಮಾತು ನಿಲ್ಲಿಸಿ, ನಿದ್ದೆ ಮಾಡುವವರಂತೆ ನಟಿಸುತ್ತಾ, ಗಡದ್ದಾಗಿ ಹೊದ್ದುಕೊಂಡು ಬೆಚ್ಚಗೆ ಮಲಗಿದ್ದರು: ಮುಟ್ಟಾದ ಮೂರು ದಿನವಾದರೂ ಮಲೆನಾಡಿನ ಮಹಿಳೆಯರಿಗೆ ನಿವೃತ್ತಿಜೀವನದ ವಿರಾಮದ ಹಕ್ಕು ಇರುತ್ತಿತ್ತಷ್ಟೇ!
***ಮುಕ್ತಾಯ***



***********

ಮಲೆಗಳಲ್ಲಿ ಮದುಮಗಳು-63

        ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಸೀಮೆಯ ಮಲೆನಾಡಿನ ಈ ಕ್ಷುದ್ರೋಕ್ಷುದ್ರವಾಗಿ ತೋರುವ, ಮತ್ತು ನಾಗರೀಕತೆಯ ಐತಿಹಾಸಿಕ ಪ್ರವಾಹದ ವೈಭವಪೂರ್ಣವಾದ ಮಧ್ಯಸ್ರೋತಕ್ಕೆ ಬಹುದೂರವಾಗಿ ಅದರ ಅಂಚಿನ ಅಜ್ಞಾತೋಪಮವಲಯದಲ್ಲಿ ಯಃಕಶ್ಚಿತವಾಗಿರುವ ಈ ಅರಣ್ಯಕ ಪ್ರಪಂಚದ ಶ್ರೀಸಾಮಾನ್ಯರ ಬದುಕು-ಕ್ಷುದ್ರ ಅಲ್ಪ ಜಟಿಲ ರಾಗದ್ವೇಷಮಯ ಜೀವನ ಜಾಲ-ಇಂತಿಂತಿಂತು ಸಾಗುತ್ತಿದ್ದ ಸಮಯದಲ್ಲಿಯೆ ಅತ್ತ ಸುವಿಶಾಲ ಜಗತ್ತಿನಲ್ಲಿ ಚಾರಿತ್ರಕ ಮಹದ್ ಘಟನೆಗಳೆಂದು ಪರಿಗಣಿತವಾಗಲಿರುವ ಲೋಕವಿಖ್ಯಾತ ವ್ಯಾಪಾರಗಳೂ ನಡೆಯುತ್ತಿದ್ದವಷ್ಟೆ; ಯುದ್ಧ, ಕೌಲು, ಕ್ಷಾಮ, ಕಲಾ ಸಾಹಿತ್ಯ ಸೃಷ್ಟಿ, ಮಹಾ ಕಾವ್ಯರಚನೆ, ತಪಸ್ಯೆ, ಸಾಕ್ಷಾತ್ಕಾರ, ವೈಜ್ಞಾನಿಕ  ಸಂಶೋಧನೆ, ಇತಾದಿ ಇತ್ಯಾದಿ, ಇತ್ಯಾದಿ!

ಆಗ, ತತ್ಕಾಲದಲ್ಲಿ ಅಂತಹ ಮಹದ್ಘಟನೆ ಎಂದು ಭಾವಿತವಾಗದಿದ್ದರೂ ಲೋಕದಲ್ಲಿ ಆ ಕಾಲದಲ್ಲಿ ನಡೆಯುತ್ತಿದ್ದ ಯಾವ ಮಹದ್ ಘಟನೆಗೂ ದ್ವಿತೀಯವಲ್ಲದೆ ತತ್ಕಾಲ ಮಾತ್ರ ಅಖ್ಯಾತವಾಗಿದ್ದ ಒಂದು ವಿಭೂತಿ ಘಟನೆ ಜರುಗುತ್ತಿತ್ತು. ಅಮೇರಿಕ ಸಂಯುಕ್ತ ಸಂಸ್ಥಾನದ ಸೆಂಟ್ ಲಾರೆನ್ಸ್ ಮಹಾನದಿಯ ನಡುವೆಯಿರುವ ಸಹಸ್ರ ದ್ವೀಪೋದ್ಯಾನದಲ್ಲಿ.
ಕ್ರಿ.ಶ.೧೮೯೩ ರಲ್ಲಿ ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಮ್ಮೇಲನದಲ್ಲಿ ತಟಕ್ಕನೆ ಯಶೋಗೋಪುರದ ಶಿಖರಕ್ಕೇರಿ ಆಧ್ಯಾತ್ಮಿಕ ಜಗನ್ನಯನ ಕೇಂದ್ರ ಮೂರ್ತಿಯಾಗಿದ್ದ ಸ್ವಾಮಿ ವಿವೇಕಾನಂದರು ಎರಡು ವರ್ಷಗಳ ಕಾಲ ಅಮೇರಿಕಾದ ಅನೇಕ ನಗರಗಳಲ್ಲಿ ಸಂಚರಿಸಿ, ಕ್ರೈಸ್ತಮತ ಸಂಕುಚಿತ ವಲಯದಲ್ಲಿಯೆ ಬೆಳೆದು ಕುಬ್ಜದೃಷ್ಟಿಗಳಾಗಿದ್ದ ಪಾಶ್ಚಾತ್ಯರಿಗೆ ಅಭೂತಪೂರ್ವ ಧೀರೋದಾರ ದೃಷ್ಟ್ಯ ವೇದಾಂತದ ಸಂದೇಶವಿತ್ತು ಜಯಡಿಂಡಿಮವನ್ನು ಮೊಳಗಿಸಿದ್ದರಷ್ಟೆ. ತರುವಾಯ ಅವರು ವೇದಾಂತದ ಅಧ್ಯಾತ್ಮಿಕ ಯೋಗಸಾದನೆಯನ್ನು ಕೈಗೊಳ್ಳಲು ಹಂಬಲಿಸುತ್ತಿದ್ದ ಕೆಲವು ಶಿಷ್ಯ ಶಿಷ್ಯೆಯರೊಡನೆ ಸೆಂಟ್ ಲಾರೆನ್ಸ್ ಮಹಾನದಿಯ ಸುವಿಸ್ತೃತ ಜಲರಾಶಿಯ ಮಧ್ಯೆ ಅರಣ್ಯಾವೃತವಾಗಿದ್ದು ನಿಭೃತವಾಗಿದ್ದ ಸಹಸ್ರದ್ವೀಪೋದ್ಯಾನದ ಒಂದು ಕುಟೀರಕ್ಕೆ ಬಂದು ನಿಂತರು.
ಸ್ವಾಮೀಜಿ ಒಂದು ದಿನ ತಮ್ಮ ಶಿಷ್ಯರಲ್ಲಿ ಕೆಲವರಿಗೆ ಮಂತ್ರದೀಕ್ಷೆ ಕೊಡಲು ನಿರ್ಧರಿಸಿದ್ದರು. ಅವರು ಸಹೋದರಿ ಕ್ರಿಸ್ಟೈನ್ ಎಂಬ ಮಹಿಳೆಯನ್ನು ಎಕ್ಕಟಿ ಕರೆದು ಹೇಳಿದರು: “ನೀನು ದೀಕ್ಷೆ ತೆಗೆದುಕೊಳ್ಳಲು ಎಷ್ಟರಮಟ್ಟಿಗೆ ಅರ್ಹಳಾಗಿದ್ದೀಯೇ ಎಂಬುದನ್ನು ಅರಿಯಲು ಸಾಕಾಗುವಷ್ಟು ನಿನ್ನ ಪರಿಚಯ ನನಗಿನ್ನೂ ಆಗಿಲ್ಲ….ಆದರೆ ನನಗೆ ಒಂದು ಶಕ್ತಿ ಇದೆ. ಪರಮನಃಪ್ರವೇಶನ ಶಕ್ತಿ. ಅನ್ಯರ ಮನಸ್ಸನ್ನು ಹೂಕ್ಕು ಅದರ ರಹಸ್ಯಗಳನ್ನೆಲ್ಲ ಅರಿಯುವ ಶಕ್ತಿ. ನಾನು ಅದನ್ನು ಸಾಧಾರಣವಾಗಿ ಉಪಯೋಗಿಸುವದಿಲ್ಲ. ಅತ್ಯಂತ ಅಪೂರ್ವವಾಗಿ ಅವಶ್ಯ ಬಿದ್ದಾಗ ಮಾತ್ರ ಉಪಯೋಗಿಸಿಕೊಳ್ಳುತ್ತೇನೆ… ನೀನು ಅನುಮತಿತ್ತರೆ, ನಿನ್ನ ಮನಸ್ಸನ್ನು ಪ್ರವೇಶಿಸಿ ಅದನ್ನು ಓದಿಕೊಳ್ಳುವ ಇಚ್ಛೆ ಇದೆ; ಏಕೆಂದರೆ ಇತರರೊಂದಿಗೆ ನಿನಗೂ ನಾಳೆ ದೀಕ್ಷೆ ಕೊಡಬೇಕೆಂದಿದ್ದೇನೆ.”
ಆಕೆ ಸಂತೋಷದಿಂದಲೆ ಒಪ್ಪಿಗೆಕೊಟ್ಟಳು.
ಮರುದಿನ ಶಿಷ್ಯರೆಲ್ಲ ಮಂತ್ರದೀಕ್ಷಿತರಾದ ಮೇಲೆ ಸ್ವಾಮೀಜಿ, ಅದೂ ಇದೂ ಮಾತನಾಡುತ್ತಾ, ಸೂಕ್ಷ್ಮವಾಗಿ, ಶಿಷ್ಯರಲ್ಲಿ ಕೆಲವರ ಪೂರ್ವ ಜೀವನದ ಸಂಗತಿಗಳನ್ನು ಭವಿಷ್ಯಜೀವನದಲ್ಲಿ ಸಂಭವಿಸಲಿರುವ ಘಟನೆಗಳನ್ನೂ ಅವರವರಿಗೆ ಪ್ರತ್ಯೇಕವಾಗಿ ತಿಳಿಸಿದರು. ಕೆಲವಂತೂ ಅವರವರಿಗೇ ಮಾತ್ರ ಗೊತ್ತಿದ್ದ ಕಟ್ಟೇಕಾಂತ ವಿಷಯಗಳಾಗಿದ್ದವು. ಶಿಷ್ಯರ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ. ಆದರೆ ಸ್ವಾಮೀಜಿ ಆ ಶಕ್ತಿ ಅಂತಹ ಅದ್ಭುತ ಶಕ್ತಿಗಳ ಅಪೇಕ್ಷೆ ಹಾನಿಕರವೆಂದೂ ಎಚ್ಚರಿಸಿದರು.
ಸೋದರಿ ಕ್ರಿಸ್ಟೈನ್ ಸಂಗಡ ಮಾತನಾಡುತ್ತಾ, ಆಕೆಯ ಭೂತಭವಿಷ್ಯತ್ ಜೀವನದ ಮತ್ತು ಪೂರ್ವಸಂಸ್ಕಾರಗಳ ಸಂಸ್ಕ್ರಣದ ವಿಚಾರವಾಗಿ ತಿಳಿಸಿ ಹಿತೋಪದೇಶ ನೀಡುತ್ತಿದ್ದಾಗ, ಸ್ವಾಮೀಜಿ ಇದ್ದಕಿದ್ದ ಹಾಗೆ ಹೊಟ್ಟೆ ಹುಣ್ಣಾಗುವಂತೆ ನಗತೊಡಗಿದರು. ಏನನ್ನೊ ಕಂಡೂ ಕಂಡೂ ಮತ್ತೆ ನಕ್ಕರು. ಅಳ್ಳೆಹಿಡಿದುಕೊಂಡು ನಕ್ಕರು ಉಸಿರು ಕಟ್ಟಿ ಕಣ್ಣಲ್ಲಿ ನೀರುಕ್ಕುವಂತೆ ನಕ್ಕರು.
ಸಹೋದರಿಗೆ ಮೊದಮೊದಲು ಪರಿಹಾಸವಾಗಿದ್ದುದು ಬರಬರುತ್ತಾ ಸೋಜಿಗವಾಯಿತು. ಕಡೆಕಡೆಗೆ ಸ್ವಾಮಿಗಳಿಗೆ ಏನಾದರೂ ಮಾನಸಿಕ ವ್ಯಪರೀತ್ಯ ಉಂಟಾಯಿತೊ ಎಂದು ಶಂಕಿಸಿದಳು. ಆಕೆ ಭೀತೆಯಾದುದನ್ನು ನೋಡಿದ ಸ್ವಾಮೀಜಿ ತಮ್ಮ ನಗೆಯನ್ನು ಹತೋಟಿಗೆ ತಂದುಕೊಂಡು, ನಗುಮೊಗರಾಗಿಯೆ ಮೌನವಾಗಿ ಕುಳಿತುಬಿಟ್ಟರು. ಕುತೂಹಲಾವಿಷ್ಟೆಯಾದ ಕ್ರಿಸ್ಟೈನ್ ಎಷ್ಟು ಪ್ರಶ್ನೆ ಕೇಳಿದರೂ ಅವರು ಬಾಯಿಬಿಡಲಿಲ್ಲ.
ಹಿಂದಿನ ರಾತ್ರಿ, ದೀಕ್ಷೆ ತೆಗೆದುಕೊಳ್ಳಲಿರುವ ಶಿಷ್ಯರ ಈ ಜನ್ಮದ ಮತ್ತು ಪೂರ್ವಾಪರ ಜನ್ಮಗಳ ಸೂಕ್ಷ್ಮಭೂಮಿಕೆಗಳಲ್ಲಿ ಸಂಚರಿಸಿ, ಅವರ ಚೈತ್ಯದ ವಿಕಾಸನ ಸ್ಥಿತಿಯನ್ನು ಅರಿಯುವ ಕಾರ್ಯದಲ್ಲಿದ್ದಾಗ, ಸ್ವಾಮೀಜಿಯ ಸರ್ವಕಾಲ ಸರ್ವದೇಶ ವ್ಯಾಪ್ತಿಯಾಗಿಯೂ ಅತೀತವಾಗಿದ್ದ ಅತಿಮಾನಸಕ್ಕೆ ಗೋಚರವಾಗಿದ್ದ ಅಸಂಖ್ಯ ದೃಷ್ಯ ಪರಂಪರೆಗಳಲ್ಲಿ ಒಂದು ದೃಶ್ಯದ ನೆನಪು ಅವರ ಈ ವಿಕಟಾಟ್ಟಹಾಸಕ್ಕೆ ಕಾರಣವಾಗಿತ್ತು.
ಕಡೆಗೂ ಸ್ವಾಮೀಜಿ ಅದರ ವಿಚಾರವಾಗಿ ಸಹೋದರಿ ಕ್ರಿಸ್ಟೈನ್ ಗೆ ಯಾವ ವಿವರವನ್ನೂ ಕೊಡಲಿಲ್ಲ. ಆದರೆ ಇಷ್ಟನ್ನು ಮಾತ್ರ ಸೂಚ್ಯವಾಗಿ ಹೇಳಿದ್ದರು:
“ನೋಡು, ಸೋದರೀ, ನಾನು ಇಂಡಿಯಾದಿಂದ ಇಲ್ಲಿಗೆ ಬಂದು ನಿಮಗೆ ವೇದಾಂತ ಭೋಧನೆ ಮಾಡಿ, ಸರ್ವಧರ್ಮ ಸಮನ್ವಯ ದೃಷ್ಟಿಯನ್ನು ನೀಡಿ, ನಿಮ್ಮನ್ನು ಮತಾಂತರಗೊಳಿಸುವ ರೂಕ್ಷಬರ್ಬರವಾದ ಕಿರಾತನೀತಿಗೆ ಕೈಹಾಕದೆ, ಕ್ರೈಸ್ತರಿಗೆ, ಯೆಹೂದ್ಯರಿಗೆ, ಮೆಥಡಿಸ್ಟರಿಗೆ, ಪ್ಯೂರಿಟನ್ನರಿಗೆ, ಕ್ಯಾಥೋಲಿಕ್ಕರಿಗೆ, ಅವರವರ ಭಾವದಲ್ಲಿಯೆ, ಅವರವರ ಶ್ರದ್ದೆಯಲ್ಲಿಯೆ, ಅವರವರು ಮುಂದುವರಿಯುವಂತೆ ಹೇಳಿ ದೀಕ್ಷೆಕೊಡುವ ಕೆಲಸದಲ್ಲಿದ್ದೇನೆ. ಸ್ವಲ್ಪ ಹೆಚ್ಚು ಕಡಮೆ, ಅದೇ ದಿನದಲ್ಲಿ, ಅದೇ ಸಮಯದಲ್ಲಿ, ನನ್ನ ಮಾತೃಭೂಮಿಯ ಒಂದು ಪರ್ವತಾರಣ್ಯ ಪ್ರದೇಶದ ಮೂಲೆಯಲ್ಲಿ, ಕ್ರೈಸ್ತಮತ ಪ್ರಚಾರಕರು ಬ್ರಿಟಿಷ್ ಸರ್ಕಾರದ ರಾಜಕೀಯ ಬಲ ಮತ್ತು ಪ್ರತಿಷ್ಠೆ ಮತ್ತು ಸೌಕರ್ಯ ಸೌಲಭ್ಯಗಳನ್ನು ಪಡೆದು, ವಿದ್ಯಾಭ್ಯಾಸದ ಮತ್ತು ವೈದ್ಯಕೀಯದ ನೆರವೀಯುವ ಬಲೆಯೊಡ್ದಿ, ಅರಿಯದ ಅಜ್ಞಾನಿಗಳನ್ನು ತಮ್ಮ ಜಾತಿಗೆ ಸೇರಿಸಿಕೊಂಡು, ತಮ್ಮ ಸಂಖ್ಯಾ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ವ್ಯಾಪಾರೀ ಉದ್ಯಮದಲ್ಲಿದ್ದಾರೆ. ಆದರೆ ಆ ಅಜ್ಞಾನೀ ಜನರಲ್ಲಿಯೂ ಒಂದು ಅಂಥವಾದ ಸ್ವಮತನಿಷ್ಠೆ ಇರುವುದರಿಂದ ಅವರೂ ಮಿಶನರಿಗಳ ಮತಾಂತರ ಕಾರ್ಯವನ್ನು ತಮ್ಮದೇ ಆದ ದಸ್ಯುವಿಧಾನದಿಂದ ವಿಫಲಗೊಳಿಸುತ್ತಿದ್ದಾರೆ. ಅಂತಹ ಒಂದು ದೃಶ್ಯವನ್ನು ಕಂಡಿದ್ದೆ, ನಿನ್ನೆಯ ಅತೀಂದ್ರಿಯ ಮನಃಪರ್ಯಟನದಲ್ಲಿ. ಅದರ ನೆನಪಾಗಿ, ಆ ಚಿತ್ರ ಕಣ್ಣಿಗೆ ಕಟ್ಟಿದಂತಾಗಿ ತಡೆಯಲಾರದೆ ನಕ್ಕುಬಿಟ್ಟೆ….ನಾನು ಕಂಡ ಅನೇಕ ದರ್ಶನ ಚಿತ್ರಗಳಲ್ಲಿ ಅದೇ ಏಕೆ ನೆನಪಿಗೆ ಬರಬೇಕೊ?….ಯಾರಿಗೆ ಗೊತ್ತು? ಬಹುಶಃ ನನಗೂ ನಾನು ಕೈಗೊಂಡಿರುವ ಶ್ರೀ ರಾಮಕೃಷ್ಣ ಲೋಕಸಂಗ್ರಹ ಕಾರ್ಯಕ್ಕೂ, ಅಲ್ಲಿ ನಾನು ಕಂಡ ದ್ರಶ್ಯದಲ್ಲಿ ಪಾತ್ರದಾರಿಗಳಾಗಿದ್ದವರಿಗೋ ಅಥವಾ ಅವರ ಮಕ್ಕಳಾಗಿ ಹುಟ್ಟಲಿರುವವರಿಗೋ ಅಥವಾ ಅವರ ಮೊಮ್ಮಕ್ಕಳು ಮರಿಮಕ್ಕಳಿಗೋ, ಏನಾದರೂ ಸಂಬಂಧ ಇರಬಾರದೇಕೆ?….ಇಲ್ಲವೆ, ಇಂದು ನನ್ನಿಂದ ದೀಕ್ಷಿತರಾದವರು ಮರಣಾನಂತರ ಮತ್ತೊಂದು ಜನ್ಮದಲ್ಲಿ ಅಲ್ಲಿಯೆ ಹುಟ್ಟಿಬಂದು ನನ್ನ ಕಾರ್ಯವನ್ನು ಮುಂದುವರಿಸುವ ಸೇವೆಗೆ ಪಾತ್ರಗಳಾಗಬಾರದೇಕೆ?….”
* * *
ಅಂದು ಬೆಳಿಗ್ಗೆ ಮುಂಚೆ, ಹೂವಳ್ಳಿ ಮನೆಯಲ್ಲಿ, ಕೋವಿಚೀಲವನ್ನು ಬಗಲಿಗೆ ಸಿಕ್ಕಿಸಿಕೊಂಡು, ಕೋವಿಗೆ ಈಡು ತುಂಬದೆ ಬರಿಯ ಕೇಪನ್ನು ಮಾತ್ರ ಹಾಕಿಕೊಂಡು ಹೊರಗೆ ಹೊರಡಲನುವಾಗುತ್ತಿದ್ದ ಮುಕುಂದಯ್ಯನಿಗೆ ತಾನು, ಸ್ವಾಮಿ ವಿವೇಕಾನಂದ್ರು ಅಮೇರಿಕಾದಲ್ಲಿ ಸಹೋದರಿ ಕ್ರಿಸ್ಟೈನ್ ಗೆ ಹೇಳಿದ್ದ. ಆ ಶ್ರೀರಾಮಕೃಷ್ಣ ಲೋಕ ಸಂಗ್ರಹ ಕಾರ್ಯದ ಸಫಲತೆಗಾಗಿ ವಿಧಿಯ ಕೈಯಲ್ಲಿ ಒಂದು ಉಪಾಂಗೋಪಕರಣವಾಗುತ್ತಿದ್ದೇನೆ ಎಂಬುದು ಹೇಗೆ ತಾನೆ ಗೊತ್ತಾಗಬೇಕು. ಅವನು ತನ್ನ ಅಕ್ಕನಿಗೆ ಮಾತು ಕೊಟ್ಟಿದ್ದಂತೆಯೂ ತನ್ನ ಬೆಟ್ಟಳ್ಳಿ ದೇವಯ್ಯ ಬಾವನನ್ನು, ಅವನ ಅಪೇಕ್ಷೆಯಂತೆಯೆ, ಕಿಲಸ್ತರ ಜಾತಿಗೆ ಸೇರುವುದನ್ನು ತಪ್ಪಿಸುವ ಸಲುವಾಗಿಯೂ ಮೇಗರವಳ್ಳಿಯ ಮಿಶನ್ ಇಸ್ಕೂಲಿಗೆ ಹೊರಟಿದ್ದನು.
ಅವನು ಕೋವಿ ಮತ್ತು ಕೋವಿಚಿಲಗಳನ್ನು ತೆಗೆದುಕೊಂಡಿದ್ದರೂ, ಬೇಟೆಯ ಉಡುಪಿನಲ್ಲಿರದೆ, ನೆಂಟರ ಮನೆಗೆ ಹೋಗುವಾಗ ಹಾಕಿಕೊಳ್ಳುವಂತೆ ತೋಪಿ, ಅಂಗಿ, ಕಚ್ಚೆಪಂಚೆಗಳನ್ನು ತೊಟ್ಟುಕೊಂಡಿದ್ದನ್ನು ಕಂಡ ನಾಗಕ್ಕಗೆ ಏನೊ ಅನುಮಾನ ಬಂದು, ಅದನ್ನು ಚಿನ್ನಮ್ಮಗೆ ತಿಳಿಸಿದಳು.
ಭೀತಿ ಬಡಿದಂತಾಗಿ ಚಿನ್ನಮ್ಮ ಏದಿದಳು: “ನಾಗಕ್ಕಾ, ಅಜ್ಜೀಗಾದರೂ ಹೇಳೆ, ಅವರು ಹೋಗದಾಂಗೆ ಮಾಡೆ….ಅವರು ಷಿಕಾರಿಗೆ ಹೋಗ್ತಾ ಇಲ್ಲ ಕಣೇ. ಮೇಗ್ರೊಳ್ಳಿಗೆ ಹೋಗ್ತಾರಂತೆ, ಪಾದ್ರೀನ ಹೊಡೆದಾಕಾಕೆ! ನಂಗೆ ಮೊನ್ನೇನೆ ಹೇಳಿದ್ಲು ಪೀಂಚ್ಲು. ಸುಳ್ಳು ಅಂತಾ ಮಾಡಿದ್ದೆ. ಐತ ಹೇಳಿದ್ದನಂತೆ ಅವಳಿಗೆ. ಅಂವನ್ನೂ ಕರಕೊಂಡು ಹೋಗ್ತಾರಂತೆ!….ಅಯ್ಯಯ್ಯೋ, ಬ್ಯಾಗ ಹೋಗೋ!….
ನಾಗಕ್ಕ ಗಟ್ಟಿಯಾಗಿ ಕೂಗಿ ಹೇಳಿದ ಮೇಲೆ ಅಜ್ಜಿಗೆ ವಿಷಯವೇನೊ ಗೊತ್ತಾಯಿತು. ಆದರೆ ಅರ್ಥವಾಗಲಿಲ್ಲ. ಯಾರಾದರೂ ಮನುಷ್ಯರನ್ನು ಹೊಡೆಯುತ್ತಾರೆಯೆ ಕೋವಿಯಲ್ಲಿ? ಕೋವಿ ಇರುವುದು ಹಂದಿ, ಮಿಗ, ಕಾಡುಕುರಿ, ಕಾಡುಕೋಳಿ, ಹುಲಿ ಮೊದಲಾದ ಕಾಡುಪ್ರಾಣಿಗಳನ್ನು ಹೊಡೆಯುವುದಕ್ಕೆ: “ಏ ಹೋಗೆ! ಅವನಿಗೇನು ಹುಚ್ಚೇನೆ, ಮನುಷ್ಯನ್ನ ಹೊಡೆಯಾಕೆ?” ಎಂದು ನಾಗಕ್ಕನನ್ನು ಗದರಿಸಿದರೂ, ಸೊಂಟದ ಮೇಲೆ ಕೈಯಿಟ್ಟು ನಸುಬಾಗಿ ಬಾಗಿಲಿಗೆ ನಡೆದು ಬಂದು ಮುಕುಂದಯ್ಯನನ್ನು ವಿಚಾರಿಸಿದಳು.
“ಇವೊತ್ತು ಮೇಗ್ರೊಳ್ಳಿ ಮಿಶನ್ ಇಸ್ಕೂಲಿನ ಪ್ರಾರಂಭೋತ್ಸವವಂತೆ, ಅಜ್ಜೀ ಅದಕ್ಕೆ ಹೋಗ್ತಿದ್ದೀನಿ…. ಬರ್ತಾ ಎಂತಿದ್ರೂ ಕಂಡರೆ ಒಂದು ಈಡು ಹೊಡೆಯಾನ ಅಂತಾ ಕೋವಿ ತಗೊಂಡೀನಿ.” ಎಂದು ಅಜ್ಜಿಗೆ ಸಮಾಧಾನ ಹೇಳಿ ಹೋರಟೇಬಿಟ್ಟನು. ಅಜ್ಜಿಗೆ ಕೇಳಿಯೆ ಮುಕುಂದಯ್ಯನ ಮೇಲೆ ಪ್ರೀತಿಪೂರ್ವಕವಾದ ಗೌರವವುಂಟಾಯಿತು. ಒಳಗೆ ಹೋಗಿ ನಾಗಕ್ಕ ಚಿನ್ನಮ್ಮ ಇಬ್ಬರಿಗೂ ಛೀಮಾರಿ ಮಾಡಿದಳು: “ಗಂಡಸರು ಏನಾದರೂ ದೊಡ್ಡ ಕೆಲಸಕ್ಕೆ ಹೊರಟು ನಿಂತಾಗ ಹೀಂಗೆಲ್ಲ ಅನಿಬಿರುಗು ಆಡಬಾರದು ಕಣೇ. ಅಪಶಕುನ ಆಗ್ತದೆ!”
ಮುಕುಂದಯ್ಯ ಮನೆಯಿಂದ ಸ್ವಲ್ಪದೂರ ಹೋಗುವುದರೊಳಗೆ, ಅವನ ಹಿಂದೆ ಸಂಗಡ ಹೊರಟಿದ್ದ ಐತ “ಅಯ್ಯಾ, ಚಿನ್ನಕ್ಕೋರು ಯಾಕೊ ಬಿರುಬಿರನೆ ಬರಾಹಾಂಗೆ ಕಾಣ್ತದೆ.” ಎಂದು ಪಿಸುದನಿಯಲ್ಲಿ ಗುಟ್ಟಾಡುವಂತೆ ಹೇಳಿದನು.
ಐತನಿಗೆ ಮುಂದೆ ಹೋಗುತ್ತಿರುವಂತೆ ಹೇಳಿ. ಮುಕುಂದಯ್ಯ ನಿಂತನು.
ಚಿನ್ನಮ್ಮ ಏದುತ್ತಾ ಬಂದು ಹತ್ತಿರ ನಿಂತಳು. ಚಳಿಗಾಲದ ಬೆಳಗಿನ ಎಳಬಿಸಿಲಿನಲ್ಲಿ ಅವಳ ಬಾಯುಸಿರು ಹೊಗೆಹೊಗೆಯಾಗಿ ಮೇಲೇರುತ್ತಿತ್ತು. ಏನೋ ಕೆಲಸ ಮಾಡುತ್ತಿದ್ದವಳು ಹಾಗೆಯೆ ಎದ್ದು ಓಡಿ ಬಂದಿದ್ದಳಾದ್ದರಿಂದ ನೇಲುಬಿದ್ದಿದ್ದ ಗೊಬ್ಬೆಯ ಸೆರಗನ್ನೂ ಎತ್ತಿ ಕಟ್ಟಿರಲಿಲ್ಲ. ಸಾಮಾನ್ಯವಾಗಿ ರವಕೆ ಕುಪ್ಪಸ ಯಾವುದನ್ನೂ, ಅದರಲ್ಲಿಯೂ ಮನೆಯಲ್ಲಿರುವಾಗ, ತೊಟ್ಟುಕೊಳ್ಳುತ್ತಿರಲಿಲ್ಲವಾದ್ದರಿಂದ ಸೀರೆಯ ಮರೆಯಲ್ಲಿ ಅದನ್ನೊತ್ತಿಎತ್ತಿ ತಳ್ಳುವಂತಿದ್ದ ಅವಳ ವಿಕಾಸಮಾನ ಕುಟ್ಮಲಜುಚಗಳು ಮೇಲಕ್ಕೂ ಕೆಳಕ್ಕೂ ಉಸಿರಾಡಿದಂತೆಲ್ಲ ಎದ್ದು ಬೀಳುತ್ತಿದ್ದವು. ಅವಳ ಆ ಉದ್ವೇಗದ ಪರಿಸ್ಥಿತಿಯಲ್ಲಿ ಅವಳಿಗೆ ಸರ್ವದಾ ಸಹಜವಾಗಿರುತ್ತಿದ್ದ ಲಜ್ಜೆಯೂ ಹಿಂಜೈದಂತಿತ್ತು. ಕಣ್ಣೀರು ಸುರಿಯುತ್ತಿತ್ತು. ಬಿಕ್ಕುತ್ತಿದ್ದುದರಿಂದ ಮೂಗುತಿ ಮತ್ತು ಎಸಳು ಬುಗುಡಿಗಳು ಲಯಬದ್ಧವಾಗಿ ಅಳ್ಳಾಡುತ್ತಿದ್ದಂತಿತ್ತು. ಅವಳು ತನ್ನೆದೆಯನ್ನು ಸಂತೈಸಲೆಂಬಂತೆ ಒತ್ತಿಕೊಂಡಿದ್ದು, ಮುಂಗೈಮೇಲೆ ಹಚ್ಚೆ ಜುಚ್ಚಿದ್ದ ಜೋಗಿ ಜಡೆಯ ಕರ್ನೀಲಿ ಬಣ್ಣವು ತಾರತಮ್ಯದಿಂದ ಅವಳ ಮೈ ಬಣ್ಣವನ್ನು ಮನೋಹರವಾಗಿ ಎತ್ತಿ ತೋರಿಸುತ್ತಿತ್ತು. ಮನೆಯೊಳಗಿನ ಬೆಳಕಿನಲ್ಲಿ ಕಾಣಿಸದೆ ಮರೆಯಾಗಿರುತ್ತಿದ್ದ ಅವಳ ಆ ಅಪ್ಸರ ಸೌಂದರ್ಯದ ಪ್ರಭಾವದಿಂದ ರುದ್ರಕಾರ್ಯಕ್ಕೆ ದೃಢಚಿತ್ತನಾಗಿ ಹೊರಟಿದ್ದ ಮುಕುಂದಯ್ಯಾ ಹೃದಯ ಆರ್ದ್ರವಾಯಿತು. ಇನ್ನು ಕೆಲವೇ ದಿನಗಳಲ್ಲಿ ತನ್ನ ಧರ್ಮಪತ್ನಿಯಾಗಲಿರುವ ಅವಳನ್ನು ಮನಸ್ಸಿನಿಂದಲೆ ಬಿಗಿದಪ್ಪಿ ಮುದ್ದಾಡಿತು ಅವನ ಚೇತನ ಸಮಸ್ತವೂ! ಅವಳಿಗೆ ಹೇಳದೆ ಬಂದದ್ದು ತಪ್ಪಾಯಿತು ಎನ್ನಿಸಿತವನಿಗೆ.
“ಯಾಕೆ, ಚಿನ್ನಿ?”
ಚಿನ್ನಮ್ಮ ಓಡಿ ಬಂದದ್ದು ಸಣ್ಣ ಕೆಲಸಕ್ಕಾಗಿರಲಿಲ್ಲ; ತನ್ನ ಐದೆತನವನ್ನು ಕಾಪಾಡಿಕೊಳ್ಳುವ, ಮಾಂಗಲ್ಯವನ್ನು ರಕ್ಷಿಸಿಕೊಳ್ಳುವ ಮಹತ್ಕಾರ್ಯಕ್ಕಾಗಿ ಧಾವಿಸಿ ಬಂದಿದ್ದಳು ಆ ಮಲೆಯ ಕನ್ಯೆ. ಅವಳಿನ್ನೂ ಅವನನ್ನು ಶಾಸ್ತ್ರೋಕ್ತವಾಗಿ ಮದುವೆಯಾಗಿರಲಿಲ್ಲ, ತಾಳಿ ಕಟ್ಟಿಸಿಕೊಂಡಿರಲಿಲ್ಲ, ನಿಜ. ಆದರೆ ಉಳಿದೆಲ್ಲ ರೀತಿಗಳಿಂದಲೂ ಅವಳು ಅವನ ಹೆಂಡತಿಯಾಗಿಬಿಟ್ಟಿದ್ದಳು. ತನ್ನ ಕನ್ನೆತನವೂ ಅವನಿಗೆ ಸಮರ್ಪಿತವಾಗಿಬಿಟ್ಟಿತ್ತು. ಅವನಿಗಾಗಿ ಮಲೆನಾಡಿನ ಮನೆತನದ ಹೆಣ್ಣು ಮಾಡಬಾರದ್ದನ್ನೆಲ್ಲ ಮಾಡಿದ್ದಳು. ಅವನನ್ನು ಬಿಟ್ಟು ತನಗಿನ್ನು ಇಹಜೀವನವಿರಲಿಲ್ಲ. ಅವನಿಗೇನಾದರೂ ಆಗಬಾರದ್ದು ಆದರೆ? ಅಯ್ಯೋ, ಅದನ್ನು ನೆನೆದರೇ ಅವಳಿಗೆ ಪ್ರಜ್ಞೆ ತಪ್ಪುವಂತಾಗುತ್ತಿತ್ತು! ಅವನೇನಾದರೂ ಅವಶನಾಗಿ ಗುಂಡು ಹಾರಿಸಿದರೆ, ನರಹತ್ಯೆ ನಡೆದರೆ, ನೆವ ಸಿಕ್ಕಿದರೆ ಸಾಕು ನೇಣು ಹಾಕುತ್ತಿದ್ದ ಆ ಕಾಲದಲ್ಲಿ,-ಅವನಿಗೆ ಗಲ್ಲಾಗುವುದೆ ಖಂಡಿತ! ಅಯ್ಯೋ ಆಮೇಲೆ? ನನ್ನ ಗತಿ? ಚೆನ್ನಮ್ಮ ನೆಲಕ್ಕೆ ದಿಂಡುರುಳಿ, ಮುಕುಂದಯ್ಯನ ಪಾದಗಳನ್ನು ಬಲವಾಗಿ ಹಿಡಿದುಕೊಂಡು, ಅವನ್ನು ಕಣ್ಣೀರಿನಿಂದ ತೋಯಿಸುತ್ತಾ ಬಿಕ್ಕಿ ಬಿಕ್ಕಿ ಅತ್ತಳು.
ಮುಕುಂದಯ್ಯ ಕೋವಿಯನ್ನು ನೆಲಕಿಟ್ಟು, ಬಗ್ಗಿ, ಎರಡೂ ಕೈಗಳಿಂದ ಅವಳನ್ನು ಎತ್ತುತ್ತಾ “ಯಾಕೆ, ಚಿನ್ನೀ?” ಎಂದನು ಮತ್ತೆ, ಸ್ತಂಭಿತನಾಗಿ.
“ನಂಗೊತ್ತು, ನೀವು ಯಾಕೆ ಹೋಗ್ತಿದ್ದೀರಿ ಅಂತಾ. ಬೆಟ್ಟಳ್ಳಿ ಅತ್ತಿಗೆಮ್ಮಗೆ ಕೊಟ್ಟಿದ್ದ ಮಾತನ್ನು ನಡೆಸಿಕೊಡುವುದಕ್ಕೆ! ಐತ ಹೇಳಿದನಂತೆ; ಪೀಂಚ್ಲು ಹೇಳಿತು ನಂಗೆ….ಖಂಡಿತಾ ಬೇಡ, ನೀವು ಕೋವಿ ತಗೊಂಡು ಹೋಗೋದು. ನಂಗೆ ಜೀವಾನೆ  ಹಾರ್ತಿದೆ! ನೀವು ಯಾರನ್ನಾದ್ರೂ ಕೊಂದರೆ?….ನಾನು ಕೋಣೆಗೆ ಬರ್ಲಿಲ್ಲಾ ಅಂತಾ ನಿಮಗೆ ಸಿಟ್ಟಾಗಿದ್ರೆ, ನನ್ನ ಸರೂ ತಪ್ಪಾಯ್ತು! ಕಾಲಿಗೆ ಬೀಳ್ತೀನಿ…. ಇವೊತ್ತು ಬಂದೇ ಬರ್ತಿನಿ…. ಇನ್ನೊಂದು ತಿಂಗಳು ತಡೆದರೆ…. ಆಗೇ ಅಗ್ತದಲ್ಲಾ…. ಅಂತಾ….ಬರ್ಲಿಲ್ಲ!”
ನಡುನಡುವೆ ಬಿಕ್ಕಿಬಿಕ್ಕಿ, ನಿಲ್ಲಿಸಿ ನಿಲ್ಲಿಸಿ, ಅಳತ್ತಳುತ್ತಾ ಹೇಳುತ್ತಿದ್ದ ಚಿನ್ನಮ್ಮನ ಮಾತುಗಳನ್ನು ಕೇಳುತ್ತಿದ್ದ ಮುಕುಂದಯ್ಯಗೆ ಅವಳ ದುಃಖವನ್ನು ನೋಡಿ ಮನಸ್ಸು ನೊಂದಿತಾದರೂ ತುದಿತುದಿಗೆ ಅವಳಾಡಿದ ಮಾತುಗಳಿಗೆ ತಡೆಯಲಾರದೆ ನಕ್ಕುಬಿಟ್ಟನು.
“ಸುಮ್ಮಸುಮ್ಮನೆ ಏನೇನೋ ಉಹಿಸಿಕೊಂಡು ಹೀಂಗೆ ಅಳ್ತಿಯಲ್ಲಾ? ನಿಗೆ ಯಾರು ಹೇಳ್ದೋರು? ಆ ಹರಕಲು ಬಾಯಿ ಐತಾ ಹೇಳ್ದಾ ಅಂತಾ ಅದನ್ನೆಲ್ಲಾ ನಂಬ್ತೀಯಾ?…ನೋಡು, ಚಿನ್ನೀ, ನಾನೇನು ನೂನು ತಿಳಿದಕೊಂಡಷ್ಟು ಧೈರ್ಯಶಾಲೀನೂ ಅಲ್ಲ, ಮೂರ್ಖನೂ ಅಲ್ಲ. ನನಗೂ ನಿನ್ನಷ್ಟೇ ಆಸೆ ಇದೆ, ನಿನ್ನ ಮದುವೆಯಾಗಬೇಕೂ ಸುಖವಾಗಿ ಬಾಳಬೇಕೂ ಅಂತಾ. ಇಷ್ಟೆಲ್ಲ ಪಾಡುಪಟ್ಕೊಂದು, ನಿನ್ನೂ ದಣಿಸಿ, ನೆಂಟರು ಇಷ್ಟರು ಊರೋರ ಬಾಯಿಗೆಲ್ಲ ಬಂದು, ಈಗ ನಿನಗೆ ಅನ್ಯಾಯ ಆಗೋ ಹಾಂಗೆ ಮಾಡ್ತಿನಿ ಅಂತಾ ಖಂಡಿತ ತಿಳಿಕೊಳ್ಳಬ್ಯಾಡ….ನಾನು ಕೋವಿ ತಗೋಂಡು ಹೋಗ್ತೀನಿ ಅಂತಾ ನಿಂಗೆ ಹೆದರಿಕೇನೇ?” ಮುಕುಂದಯ್ಯ ಬಗ್ಗಿ ಕೆಳಗಿಟ್ಟಿದ್ದ ಕೋವಿಯನ್ನು ಕೈಗೆ ತೆಗೆದುಕೊಂಡನು. “ಇಲ್ಲಿ ನೋಡು, ಈ ಕೋವೀಲಿ ಏನು ಅದೆ ಅಂತಾ.” ಚಿನ್ನಮ್ಮ ಬೆಚ್ಚುವಂತೆ ಅವಳ ಕಡೆಗೆ ಕೋವಿನಳಿಗೆ ತಿರುಗಿಸಿ ಹಿಡಿದು, ಕುದುರೆ ಎತ್ತಿ, ಬಿಲ್ಲೆಳೆದುಬಿಟ್ಟನು! ಛಾಟ್ ಎಂದು ಕೇಪು ಹೊಟ್ಟಿ ಹಾರಿತು: ಢಾಂ ಎಂದು ಈಡಾಗಲಿಲ್ಲ. ಹೆದರಿ ಬಿಳಿಚಿಕೊಂಡಿದ್ದಚಿನ್ನಮ್ಮ ಮುಕುಂದಯ್ಯನ ನಗೆಗೆ ಕಕ್ಕಾವಿಕ್ಕಿಯಾದಳು. “ನೋಡಿದೆಯಾ? ಕೋವಿಗೆ ಬರೀ ಕೇಪು ಹಾಕಿದ್ದೆ. ಈಡು ತುಂಬಿರಲಿಲ್ಲ. ಆದರಿಂದ ಯಾರಿಗೂ ಅಪಾಯಾಅಗುವುದಿಲ್ಲ…. ನಿನ್ನ ‘ಗಂಡ’ ಇವೊತ್ತು ರಾತ್ರಿ ಸುರಕ್ಷಿತವಾಗಿ ಬಂದೇ ಬರ್ತಾನೆ. ಗೊತ್ತಾಯ್ತೆ?….”ಗಂಡ ಅಂದದ್ದಕ್ಕೆ ಸಿಟ್ಟು ಮಾಡಿಕೊಳ್ಳೋದಿಲ್ಲಷ್ಟೆ? “ವರ” ಅಂತ ಬದಲಾಯಿಸಿಕೋ ಬೇಕಾದ್ರೆ….”
ಚಿನ್ನಮ್ಮ ಲಜ್ಜಾಭಂಗಿಯಿಂದ ನಿಂತಿದ್ದನ್ನು ನೋಡಿ “ಇವೊತ್ತು ರಾತ್ರಿ ‘ಬಂದೇ ಬರ್ತೀನಿ’ ಅಂತಾ ನೀನು ಹೇಳಿದ್ದು ಜ್ಞಾಪಕ ಇರಲಿ! ಮತ್ತೆಲ್ಲಾದರೂ ಮರೆತು ಬಿಟ್ಟೀಯಾ?…. ಏನು?…. ನೆಲ ನೋಡ್ತಾ ನಿಂತುಬಿಟ್ಟೇಲ್ಲಾ, ಚಿನ್ನೀ?…. ನೀನು ಬಂದ್ರೆ ಅಲ್ಲಿ ನಡೆಯೋ ಕತೇನೆಲ್ಲಾ ಸ್ವಾರಸ್ಯವಾಗಿ ಹೇಳ್ತೀನಿ, ಆಯ್ತಾ?” ಎಂದು ವಿನೋದವಾಡಿ, ತನ್ನ ಕಡೆಗೆ ಮುದ್ದು ನೋಟ ಬೀರಿ ಎವೆಯಿಕ್ಕದೆ ನೋಡುತ್ತಾ ನಿಂತಿದ್ದ ತನ್ನ ಪ್ರಾಣೇಶ್ವರನನ್ನು ನೇರವಾಗಿ ನೋಡುವುದರಿಂದಲೆ ಕಣ್ಣುತ್ತರವಿತ್ತು ಮನೆಯ ಕಡೆಗೆ ತಿರುಗಿದಳು “ವಧೂ” ಚಿನ್ನಮ್ಮ.
* * *
ಮೇಗರವಳ್ಳಿಯ ಮಿಶನ್ ಇಸ್ಕೂಲಿನ ಹೊಸ ಕಟ್ಟಡವು ಪ್ರಾರಂಭೋತ್ಸವಕ್ಕೆ ಸಜ್ಜಾಗಿತ್ತು ಒಳಗೂ ಹೊರಗೂ. ಒಳಗೆ ಬೆಂಚು, ಕುರ್ಚಿ, ಪಟಗಳು: ಹೊರಗೆ ಮಾವು ಹಲಸಿನ ತೋರಣ, ಬಗನಿ ಬಾಳೆಯ ಗಿಡಗಳನ್ನು ಕಟ್ಟಿ ಸಿಂಗರಿಸಿದ್ದ ಅಡಕೆ ಮರದ ಚಪ್ಪರ. ಪ್ರಾರಂಭೋತ್ಸವದ ಸಮಯ ಸಾಯಂಕಾಲವೆಂದು ಗೊತ್ತಾಗಿದ್ದರೂ ಆ ದಿನ ಪ್ರಾತಃಕಾಲವೆ ಒಂದು ಸಣ್ಣ ಗುಂಪು ಅಲ್ಲಿ ಸೇರಿತ್ತು. ಬೆಳಿಗ್ಗೆ ಅಲ್ಲಿ ನಡೆಯುವುದೆಂದು ಗೊತ್ತಾಗಿದ್ದ ಸಮಾರಂಭವು ಸಾರ್ವಜನಿಕ ಸ್ವರೂಪದ್ದಾಗಿರಲಿಲ್ಲ, ಖಾಸಗಿಯಾದಾಗಿತ್ತು. ಒಂದು ರೀತಿಯಲ್ಲಿ ಗೋಪ್ಯವಾದದ್ದೂ ಆಗಿತ್ತು: ಬೆಟ್ಟಳ್ಳಿ ದೇವಯ್ಯಗೌಡರ ಮತಾಂತರ ಸಮಾರಂಭ!
ಅಂತಹ ಮತಾಂತರಕಾರ್ಯ ಗುಟ್ಟಾಗಿ ನಡೆಯಬೇಕಾಗಿರಲಿಲ್ಲ. ಚರ್ಚಿನಂತಹ ಅಥವಾ ಚರ್ಚು ಇಲ್ಲದೆಡೆಗಳಲ್ಲಿ ಪ್ರಾರ್ಥನಾ ಮಂದಿರದಂತಹ ಪವಿತ್ರ ಸ್ಥಳಗಳಲ್ಲಿ ಸುಪ್ರಕಟವಾಗಿಯೆ ನಡೆಯುತ್ತಿದ್ದುದು ವಾಡಿಕೆಯಾಗಿತ್ತು. ಅಲ್ಲದೆ ಮಿಶನರಿಗಳಿಗೆ ಅಂತಹ ಪ್ರಕಟನೆ ಮತ್ತುಪ್ರಚಾರದ ಅವಶ್ಯಕತೆಯೂ ಇತ್ತು. ಆದರೆ ದೇವಯ್ಯಗೌಡರ ಸಕಾರಣವಾದ ಅಪೇಕ್ಷೆಯಂತೆ ಅವರ ಮತಾಂತರವನ್ನು ಸಧ್ಯಕ್ಕೆ ಅಂತರಂಗವಾಗಿಯೆ ನಡೆಯಿಸಲು ಒಪ್ಪಿಕೊಂಡಿದ್ದರು ರೆಬರೆಂಡ್ ಲೇಕ್ ಹಿಲ್ ಪಾದ್ರಿಗಳು.”ದೇವಯ್ಯನವರ ಬಂಧುಬಾಂಧವರೆಲ್ಲ ಅವರ ಮತಾಂತರಕ್ಕೆ ವಿರೋಧವಾಗಿದ್ದಾರೆ. ದೇವಯ್ಯನವರು ಮಾತ್ರ ಪವಿತ್ರ ಬೈಬಲ್ಲಿನ ಉಪದೇಶಗಳಿಗೂ ದೇವರ ಕುಮಾರ ಯೇಸುಕ್ರಿಸ್ತನ ವ್ಯಕ್ತಿತ್ವಕ್ಕೂ ಮಾರುಹೋಗಿ, ಬ್ರಾಹ್ಮಣರ ಹಿಂದೂ ಧರ್ಮದ ಮೌಢ್ಯ ವಲಯದಿಂದ ಹೊರಬರಲು ಕಾತರರಾಗಿದ್ದಾರೆ. ಬ್ರಾಹ್ಮಣರ ಜಗದ್ ಗುರುಗಳೂ ಆವರ ಮಠಗಳೂ ಅವರ ಪುರೋಹಿತರು ನಾಮಧಾರಿ ಗೌಡರ ಜನಾಂಗವನ್ನು ಕೀಳುಭಾವನೆಯಿಂದ ಕಾಣುತ್ತಿರುವುದನ್ನೂ, ಅವರು ವಿದ್ಯೆ ಕಲಿತು ಮುಂದಕ್ಕೆ ಬರದಂತೆ ಮಾಡಲು ವರ್ಣಾಶ್ರಮಧರ್ಮ ಸ್ವಧರ್ಮಪರಿಪಾಲನೆ ಮೊದಲಾದ ತತ್ವಗಳನ್ನು ತಂದೊಡ್ಡಿ, ತಾವೇ ಬರೆದಿಟ್ಟಿರುವ ಸಂಸ್ಕೃತ ಶ್ಲೋಕಗಳನ್ನು ಉದ್ಧರಿಸಿ, ಆ ಶಾಸ್ತ್ರೋಕ್ತಿಯನ್ನು ಉಲ್ಲಂಘಿಸಿದರೆ ದೇವರ ಕೋಪಕ್ಕೂ ಬ್ರಾಹ್ಮಣರ ಶಾಪಕ್ಕೂ ಗುರಿಯಾಗಿ ನರಕಕ್ಕೆ ಹೋಗುತ್ತಾರೆಂದು ಹೆದರಿಸುವುದನ್ನೂ ಸಹಿಸಿ ಸಹಿಸಿ, ಅವರಿಗೆ ಸಾಕಾಗಿದೆ. ಆದ್ದರಿಂದ ಈ ಬ್ರಾಹ್ಮಣರ ಹಿಡಿತದಿಂದ ಹೊರಬಂದು ತಮ್ಮ ಜನಾಂಗದ ಉದ್ದಾರವನ್ನು ಸಾಧಿಸಬೇಕೆಂಬುದೇ ಅವರ ಅಭಿಲಾಷೆ…. ಆದರೆ ಸದ್ಯದ ಸಾಮಾಜಿಕ ಪ್ರಸ್ಥಿತಿಯಲ್ಲಿ, ಸದ್ಯಕ್ಕಾದರೂ, ತಾವು ಬಹಿರಂಗವಾಗಿ ಕ್ರೈಸ್ತ ಮತಕ್ಕೆ ಸೇರುವುದರಿಂದ ತಮ್ಮ ಉದ್ದೇಶ ಸಾಧನೆಗೆ ಅನುಕೂಲವಾಗುವುದರ ಬದಲು ಪ್ರತಿಕೂಲವೆ ಹೆಚ್ಚಾಗ ಬಹುದಾದ್ದರಿಂದ ಅವರು ತಮ್ಮ ಮಾತಾಂತರವನ್ನು ಸದ್ಯಕ್ಕೆ ಗೋಪ್ಯವಾಗಿಡಲು ಬಯಸಿದ್ದಾರೆ.” ಉಪದೇಶಿ ಜೀವರತ್ನಯ್ಯನ ಈ ವಾದ ರೆವರೆಂಡ್ ಅವರಿಗೆ ಸಾಧುವಾಗಿಯೂ ಸತರ್ಕವಾಗಿಯೂ ತೋರಿತ್ತು: ದೇವಯ್ಯಗೌಡರನ್ನು ಗಲಾಟೆಯಿಲ್ಲದೆ, ಗಲಾಟೆಗೆ ಅವಕಾಶವಾಗದಂತೆ, ಗುಟ್ಟಾಗಿ ಮತ್ತು ಸರಳವಾಗಿ ಖುದ್ದು ತಾವೆ ಮತಾಂತರಗೊಳಿಸಲು ಒಪ್ಪಿದ್ದರು. ಸಧ್ಯಕ್ಕೆ ಗೌಡರ ಹಿಂದೂ ಹೆಸರನು ಕ್ರೈಸ್ತ ಹೆಸರಿಗೆ ಬದಲಾಯಿಸಬಾರದೆಂದೂ ವಸನವೇಷಭೂಷಣಗಳಲ್ಲಿ ಬಾಹ್ಯಕವಾದ ಯಾವ ವ್ಯತ್ಯಾಸವೂ ಗೋಚರವಾಗದಂತಿರಬೇಕೆಂದೂ ತೀರ್ಮಾಣವಾಗಿತ್ತು.
ತೀರ್ಮಾನದ ಎರಡನೆಯ ಭಾಗಕ್ಕೆ ನಿಜವಾಗಿಯೂ ಅವಶ್ಯಕತೆ ಇರಲಿಲ್ಲ. ಆಗಬೇಕಾದ ಪರಿವರ್ತನೆಯಲ್ಲ ಮೊದಲೆ ಆಗಿಯೆಹೋಗಿತ್ತು. ಕ್ಯಾಥೋಲಿಕ್ಕರಂತೆ ಯಾವ ವಿಧವಾದ ಶಿಲುಬೆಯ ಲಾಂಛನವನ್ನೂ ಕೊರಳಲ್ಲಿ ಧರಿಸದ ಪ್ರೋಟೆಸ್ಟೆಂಟ್ ರಿಗೂ ನಾಮಧಾರಿಗಳಿಗೂ, ಜುಟ್ಟು ತ್ತೆಗೆದು ಕ್ರಾಪು ಬಿಡುವುದೊಂದನ್ನು ಬಿಟ್ಟರೆ, ಹೆಚ್ಚು ಬಾಹ್ಯಕವಾದ ಆಂಗಿಕ ವ್ಯತ್ಯಾಸ ಯಾವುದು ಇರಲಿಲ್ಲ. ದೇವಯ್ಯ ಎಂದೋ ಜುಟ್ಟು ಬೋಳಿಸಿ ಕ್ರಾಪು ಬಿಟ್ಟಾಗಿತ್ತು! ಇನ್ನು ಹಣೆಯ ಮೇಲೆ ನಾಮಗೀಮ ಧರಿಸುವುದು? ಅದನ್ನು ಅವನು ತಿರಸ್ಕರಿಸಿ ಎಷ್ಟೋ ಕಾಲವಾಗಿತ್ತು! ಸಾಮಾನ್ಯ ಜನದ ಮಟ್ಟಿಗೆ ಹೇಳುವುದಾದರೆ, ಅವರ ದೃಷ್ಟಿಯಲ್ಲಿ ದೇವಯ್ಯ ಥೇಟು ಕಿಲಸ್ತರವನೆ ಆಗಿದ್ದನು!
ಬಿಳಿಪಾದ್ರಿ ಕರಿಪಾದ್ರಿ ಇಬ್ಬರೂ ಬೈಸಿಕಲ್ಲುಗಳ ಮೇಲೆ ಬಂದಿದ್ದರು. ಇಷ್ಟಪಟ್ಟಿದ್ದರೆ ಲೇಕ್ ಹಿಲ್ ದೋರೆಸಾನಿಯೊಡನೆ ಕೋಚಿನಲ್ಲಿಯೆ ತೀರ್ಥಹಳ್ಳಿಯಿಂದ ಮೇಗರವಳ್ಳಿಗೆ ಬರಬಹುದಾಗಿತ್ತು. ಅವನು ಇಷ್ಟಪಟ್ಟಿದ್ದರೆ ತೀರ್ಥಹಳ್ಳಿಯ ಅಮಲ್ದಾರರೂ ಪೋಲೀಸು ಇನ್ಸಪೇಕ್ಟರೂ ರೆವರೆಂಡ್ ಸಾಹೇಬರಿಗೆ ಮೈಗಾವಲಾಗಿ ಪರಿವಾರ ಬರುತ್ತಿದ್ದರು. ಏಕೆಂದರೆ, ಆಳುವ ಬ್ರಿಟಿಷರ ಕ್ರೈಸ್ತಮತಕ್ಕೆ ಸೇರಿದ್ದು, ಕ್ರೈಸ್ತಮತ ಪ್ರಚಾರಕ ಗುರುವಾಗಿದ್ದ ಆತನಿಗೆ ಸರಕಾರದ ಆಡಳಿತ ಯಂತ್ರವೆಲ್ಲ ಕಂ ಕಿಂ ಎನ್ನದೆ ಕೈಂಕರ್ಯ ಸಲ್ಲಿಸಬೇಕೆಂದು ಮೇಲಿಂದ ಕಟ್ಟಾಜ್ಞೆಯಿದ್ದಿತು. ಅಲಿಖಿತವಾಗಿ, ಆದರೂ ಕಟ್ಟು ನಿಟ್ಟಾಗಿ. ಆದರೆ ಇಂದು ಮತಾಂತರ ಕಾರ್ಯವು ಸಂಪ್ರದಾಯ ಸಮಾಜದ ಅಂಧರೋಷವನ್ನು ಕೆರಳಿಸದ ರೀತಿಯಲ್ಲಿ ಗಲಾಟೆಯಿಲ್ಲದೆ ನಡೆಯುವುದು ಬಹುಮುಖ್ಯವಾಗಿತ್ತು; ಜೊತೆಗೆ ಆಗತಾನೆ ತುದಿಮುಟ್ಟುತ್ತಿದ್ದ ಮಳೆಗಾಲದ ರಸ್ತೆಯೂ ತುಂಬ ಕೆಟ್ಟುಹೋಗಿತ್ತು?
ಸಧ್ಯಕ್ಕೆ ಐಗಳು ಅನಂತಯ್ಯನವರನ್ನೆ ಹೆಡ್ ಮಾಸ್ಟರ್ ಆಗಿ ನೇಮಿಸಿ ಕೊಂಡಿದ್ದರು. ಉಪದೇಶಿ ಜೀವರತ್ನಯ್ಯನ ಸಿಫಾರಸಿನ ಮೇಲೆ. ಅದಕ್ಕೆ ಅನಿವಾರ್ಯವಾದ ಕೆಲವು ಕಾರಣಗಳಿದ್ದವು: ಊರುಮನೆಯವರನ್ನೆ ನೇಮಿಸುವುದರಿಂದ ಸುತ್ತಮುತ್ತಣ ಹಳ್ಳಿಯ ಜನರು ತಮ್ಮ ಮಕ್ಕಳನ್ನು ಕಿಲಸ್ತರ ‘ಇಸ್ಕೋಲ್ಮನೆ’ಗೆ ಸೇರಿಸಿದರೆ ಜಾತಿ ಕೆಡಸಿಬಿಡುತ್ತಾರೆ ಎಂಬ ಸಂಶಯದಿಂದ ಪಾರಾಗಿ ಸ್ಕೂಲಿನ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತದೆ ಎಂಬುದು ಒಂದು. ಎರಡನೆಯದಾಗಿ, ಕ್ರೈಸ್ತರಾಗಿದ್ದು ಅರ್ಹರಾಗಿರುವ ಉಪಧ್ಯಾಯರು ಯಾರೂ ಆ ಕೊಂಪೆಗೆ ಬರುವಂತಿರಲಿಲ್ಲ. ಮೂರನೆಯದು, ಮಿಶನರಿಗಳು ಕೊಡುತ್ತಿದ್ದ ಆ ಅತ್ಯಲ್ಪ ಸಂಬಳವು ಐಗಳಂಥವರಿಗೆ ಭಾರಿ ತಲುಬಾಗಿ ತೋರಿ ಆಕರ್ಷಣೀಯವಾಗಿರುತ್ತಿದ್ದದು. ನಾಲ್ಕನೆಯದಾಗಿ ಅಥವಾ ಮೂರನೆಯ ಒಂದು ಉಪಕಾರಣವಾಗಿ, ಕೋಣುರು ಮನೆಯ ಹಿಸ್ಸೆಯ ಅನಂತರ ಅನಂತಯ್ಯನವರಿಗೆ ಅಲ್ಲಿರಲು ಮನಸ್ಸು ಬರಲಿಲ್ಲ: ಅಕ್ಕಣಿಗೂ ಸೋತಿದ್ದ ರಂಗಪ್ಪಗೌಡರ ಸಡಿಲಕಚ್ಚೆ ಅವರಿಗೆ ಅತೀವ ಅಸಹ್ಯವಾಗಿತ್ತು! ಹೂವಳ್ಳಿಗೆ ಬಂದು ಇರುತ್ತೇನೆ ಎಂದು ಅವರು ಮುಕುಂದಯ್ಯನಿಗೆ ತಿಳಿಸಿದ್ದರು. ಮುಕುಂದಯ್ಯನಿಗೂ ಐಗಳಲ್ಲಿ, ತಾನು ಹುಡುಗನಾಗಿದ್ದಾಗಿನಿಂದಲೂ ಗೌರವ ಬುದ್ಧಿಯಿದ್ದು, ಅವರಿಂದ ಭಾರತ ರಾಮಾಯಣಾದಿಗಳನ್ನು ಓದಿ ಅರ್ಥಮಾಡಿಕೊಳ್ಳುವುದನ್ನು ಕಲಿತಿದ್ದನಾದ್ದರಿಂದ, ಒಂದು ಗುರು ಶಿಷ್ಯ ಸಂಬಂಧ ಬೆಳೆದುಬಿಟ್ಟಿತ್ತು; ಆದರೆ ಐಗಳನ್ನು ಮುಕುಂದಯ್ಯನೇ ಕೋಣುರಿನಿಂದ ಬಿಡಿಸಿ ಹೂವಳ್ಳಿಗೆ ಕರೆದೊಯ್ದು ತಾನು ಹುಟ್ಟಿ ಬೆಳೆದು ದೊಡ್ಡವನಾದ ಮನೆಯ ಕೆಲಸಕಾರ್ಯಗಳಿಗೆ ಅಡ್ಡಿ ತಮ್ದನೆಂದು ಅಪಖ್ಯಾತಿ ಬರುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ, ಸದ್ಯಕ್ಕೆ ಐಗಳು ಬೇರೆ ಇನ್ನೆಲ್ಲಿಯಾದರೂ ಕೆಲಸಕ್ಕೆ ಸೇರಿಕೊಳ್ಳುವುದು ಉತ್ತಮವೆಂದು ಸೂಚಿಸಿದ್ದನು. ಅಲ್ಲದೆ, ಎಲ್ಲಕ್ಕಿಂತಲೂ ಹೆಚ್ಚಾಗಿ, ಆಗ ತತ್ಕಾಲದಲ್ಲಿ ಅತಿ ಮುಖ್ಯವೆಂಬಂತೆ  ತೋರುತಿದ್ದರೂ, ಮೇಗರವಳ್ಳುಯ ಮತ್ತು ಮಲೆನಾಡಿನ ಮತ್ತು ಕನ್ನಡನಾಡಿನ ಮತ್ತು ಭರತ ಭೂಮಿಯ ಭಾವೀ ಪ್ರಗತಿಯ ಮತ್ತು ಜಾಗ್ರತಿಯ ದೃಷ್ಠಿಯಿಂದ ನಿಜವಾಗಿಯೂ ಬಹು ಮುಖ್ಯವಾದದ್ದೆಂದು ಮುಂದೆ ಗೊತ್ತಾಗುವಂತಹ ಮತ್ತೊಂದು ದೈವಿಕ ಉದ್ದೇಶದ ಕಾರಣವೂ ಒಂದು ಇತ್ತು, ಅಗೋಈಚರವಾಗಿ ಅಂತರ್ಗತವಾಗಿ, ಗೂಢವಾಗಿ: ಹಳೆಮನೆ, ಕೋಣುರು, ಹೂವಳ್ಳೀ, ಬೆಟ್ಟಳ್ಳಿ, ಕಲ್ಲೂರು ಸಿಂಬಾವಿ ಮೊದಲಾದ ಸುತ್ತಮುತ್ತಣ ಹಳ್ಳಿಗಳಲ್ಲಿದ್ದು, ಓದು ಬರಹ ಕಲಿಯಲು ಇಷ್ಟಪಡುವ ಹುಡುಗರೆಲ್ಲ, ಅಂತಕ್ಕನ ಮನೆಯಲ್ಲಿದ್ದುಕೊಂಡು ಮಿಶನ್ ಇಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡುವುದೆಂದು ನಿರ್ಣಯವಾಗಿತ್ತು. ಅದುವರೆಗೂ ‘ಓಟ್ಲುಮನೆ’ಯಾಗಿದ್ದ ಅಂತಕ್ಕನ ಮನೆ ‘ವಿದ್ಯಾರ್ಥಿ ನಿಲಯ’ವಾಗಿ ಪರಿವರ್ತನೆಗೊಳ್ಳುವದನ್ನೆ ಇದಿರು ನೋಡುತ್ತಿತ್ತು. ಕೆಲವೆ ತಿಂಗಳ ಹಿಂದೆ ಮಗಳನ್ನು ದುರಂತವಾಗಿ ಕಳೆದುಕೊಂಡಿದ್ದು ಮುದುಕಿಯಾಗುತ್ತಿದ್ದ ಅಂತಕ್ಕನ ಬದುಕಿಗೂ, ಮಕ್ಕಳ ಸಹವಾಸದ ಮತ್ತು ಸೇವೆಯ ಅಕ್ಕರೆಯ ಆಪು ಸಿಕ್ಕಿ, ಪುನಶ್ಚೇತನಗೊಳ್ಳುವ ಸುಯೋಗ ಸಮೀಪಿಸಿತ್ತು…..
ಕೋವಿ ಹಿಡಿದಿದ್ದ ಮುಕುಂದಯ್ಯ, ಹಿಂಬಾಲಿಸಿದ್ದ ಐತನೊಡನೆ, ಅಂತಕ್ಕನ ಮನೆಯನ್ನು ದಾಟಿ ಇಸ್ಕೂಲಿನ ಹತ್ತಿರಕ್ಕೆ ಬಂದಾಗ, ಸ್ವಲ್ಪ ದೂರದಲ್ಲಿ ಕಾಡಿನ ಅಂಚಿನಲ್ಲಿ ಬಿದ್ದಿದ್ದ ಒಂದು ಮರದ ಮೇಲೆ ಕುಳಿತು ಸಂಭಾಷಣೆಯಲ್ಲಿ ತೊಡಗಿದ್ದ ಐಗಳು ಅನಂತಯ್ಯನವರನ್ನೂ ಕಣ್ಣಾ ಪಂಡಿತರನ್ನೂ ಕಂಡನು: ಅವರಿಬ್ಬರೂ ಮುಕುಂದಯ್ಯನ ಕಡೆ ನೋಡಿ ಮುಗುಳು ನಕ್ಕರು, ಭಾಗವತರಾಟ ಪ್ರಾರಂಭವಾಗುವುದಕ್ಕೆ ರಂಗಸ್ಥಳ ಸಿದ್ದವಾಗಿದೆ ಎಂಬಂತೆ! ತನಗೆ ಸಂಬಳ ಕೊಡುವ ಅಧಿಕಾರಿಯ ಆಜ್ಞೆಯಂತೆ ಬೆಳಿಗ್ಗೆಯ ಜರುಗಲಿದ್ದ ಮತಾಂತರ ಪವಿತ್ರ ಕ್ರಿಯೆಗೂ ಮತ್ತು ಸಂಜೆಗೆ ನಡೆಯುವುದೆಂದು ಗೊತ್ತಾಗಿದ್ದ ಸ್ಕೂಲಿನ ಪ್ರಾರಂಭೋತ್ಸವಕ್ಕೂ ಬೇಕಾದುದನ್ನೆಲ್ಲ ಅಣಿಗೊಳಿಸಿ, ಕಿಲಸ್ತರ ಜಾತಿ ವಿಷಯಕವಾದ ಕಾರ್ಯದಲ್ಲಿ ತಾನು ಪಾಲುಗೊಳ್ಳುವುದು ತನಗೆ ನಿಷಿದ್ದವೆಂದು ಕ್ಷಮೆ ಕೇಳಿ, ಹೆಡ್ ಮಾಸ್ಟರ್ ಅನಂತಯ್ಯನವರು ಆ ಪ್ರಾತಃ ಕಾಲದ ಗೋಪ್ಯ ಸಮಾರಂಭದಿಂದ ದೂರ ಸರಿದಿದ್ದರು. ಆದರೆ ಅವರಿಗೆ ಗೊತ್ತಿತ್ತು, ಮುಂದೆ ಏನಾಗುತ್ತದೆ ಎಂಬುದು. ಅದನ್ನೆ ಕುರಿತು ಅವರು ಕಣ್ಣಾ ಪಂಡಿತರೊಡನೆ ಮಾತಾಡುತ್ತಿದ್ದುದು.
ಕೋವಿಯೊಡನೆ ಬಂದಿದ್ದ ಮುಕುಂದಯ್ಯನನ್ನು ಕಂಡು, ಅವನ ಧಾರ್ಮಿಕ ಸಾಹಸಕ್ಕೆ ತಮ್ಮ ಸಂಪೂರ್ಣ ಸಮ್ಮತಿ ಮತ್ತು ಬೆಂಬಲವನ್ನು ಸೂಚಿಸುವಂತೆ ಅವರಿಬ್ಬರೂ ಮುಗುಳುನಗೆಯಿಂದ ಅವನನ್ನು ಸ್ವಾಗತಿಸಿ ಹುರಿದುಂಬಿಸಿದ್ದರು….
ಮುಕುಂದಯ್ಯ ಐತನ ಕಿವಿಯಲ್ಲಿ ಏನನ್ನೊ ಪಿಸುಗುಟ್ಟಿ ಕಳಿಸಿದನು….
ಪೀಟಿಲು ಕೊಯ್ದು ಪ್ರಾರ್ಥನೆ ನಡೆಸುತ್ತಿದ್ದ ಉಪದೇಶಿ ಜೀವರತ್ನಯ್ಯನವರು ಬೆಳಕಂಡಿಯ ಕಡೆಗೆ ನೋಡುತ್ತಾರೆ. ಒಂದು ಕೋವಿಯ ನಳಿಗೆಯ ಬಾಯಿ ತಮ್ಮ ಕಡೆಗೇ ಗುರಿಯಿಟ್ಟು ಕಿಟಕಿಯ ಮರದ ಸರಳುಗಳ ಮಧ್ಯೆ ತೂರುತ್ತಿದೆ! ಯೇಸುಕ್ರಿಸ್ತ, ಬೈಬಲ್ಲು, ಕ್ರೈಸ್ತಮತ, ಧರ್ಮಪ್ರಚಾರ, ಉಪದೇಶಿತ್ವ, ಪಾದ್ರಿತ್ವ ಇತ್ಯಾದಿಯಾದೆಲ್ಲ ಮನುಷ್ಯತ್ವದ ಉಪಾಧಿಗಳೂ ತಟಕ್ಕನೆ ಕಳಚಿಬಿದ್ದು, ಅವರ ಜೀವ ತನ್ನ ಪ್ರಾಣಿತ್ವದ ಮೂಲೋಪಾದಿಯೊಂದನ್ನು ಮಾತ್ರ ಅವಲಂಬಿಸಿದೆ. ಬತ್ತಲೆ ನಿಂತಂತಾಯಿತು! ಬದುಕಿದರೆ ಬೆಲ್ಲ ತಿಂದೇನು ಎಂಬಂತೆ ಹೌಹಾರಿ, ಪೀಟಿಲನ್ನೂ ಸುವಾರ್ತೆಯನ್ನೂ ಹೊತ್ತುಹಾಕಿ, ಮರೆಯಾಗಿ ಅವಿತುಕೊಳ್ಳಲು ಒಂದು ಮೂಲೆಯ ಕಡೆಗೆ ಓಡಿದರು. ಅವರಿಗೆ ಏನು? ಯಾರು? ಏಕೆ? ಎಂಬುದೊಂದೂ ಅರ್ಥವಾಗದಿದ್ದರೂ ತನ್ನನ್ನು ಗುಂಡಿಕ್ಕಿ ಕೊಲೆಮಾಡಲು ಹವಣಿಸುತ್ತಿದ್ದಾರೆ ಎಂಬುದಂತೂ ಚೆನ್ನಾಗಿ ಅರ್ಥವಾಗಿತ್ತು. ಮೊನ್ನೆ ತಾನೆ ಬುಯಲುಸೀಮೆಯ ಒಂದು ಹಳ್ಳಿಯಲ್ಲಿ, ಕಿಲಸ್ತರ ಜಾತಿಗೆ ತನ್ನ ಮಗನನ್ನು ಸೇರಿಸಲು ಹವಣಿಸುತ್ತಿದ್ದ ಒಬ್ಬ ಪಾದ್ರಿಯನ್ನು ರೈತನೊಬ್ಬನು ದೊಣ್ಣೆಯಿಂದ ಹೊಡೆದು ಕೊಂದಿದ್ದ ಸುದ್ದಿ ಬಂದಿದ್ದು, ಅದರ ನೆನಪಿನ್ನೂ ಹಸಿಗಾಯವಾಗಿಯೆ ಇತ್ತು, ಜೀವರತ್ನಯ್ಯನ ಮನಸ್ಸಿನಲ್ಲಿ.
ಆ ಮತಾಂತರದ ಯಜ್ಞದಲ್ಲಿ ಯೂಪಸ್ತಂಭಕ್ಕೆ ಕಟ್ಟುಗೊಂಡು ಬಲಿಪಶು ವಾಗಿದ್ದ ದೇವಯ್ಯ, ತನ್ನ ರಕ್ಷಣೆಗೆ ಬರುತ್ತೇನೆಂದು ಭಾಷೆಯಿತ್ತು ಮೋಸಮಾಡಿ ಬಿಟ್ಟನೇನೋ ಎಂದು ಕಳವಳಿಸುತ್ತಾ, ಮುಕುಂದಯ್ಯನ ಆಗಮನವನ್ನೇ ನಿರೀಕ್ಷಿಸುತ್ತಿದ್ದವನು, ಮರದ ಸರಳುಗಳ ನಡುವೆ ಬೆಳಕಂಡಿಯಲ್ಲಿ ತೂರಿದ ಕೋವಿಯ ನಳಿಗೆಯನ್ನು ಕಂಡು, ಸದ್ಯಕ್ಕೆ ಬದುಕಿದೆ! ಎಂದು ಕೊಂಡನು. ತಟಕ್ಕನೆ ತನ್ನ ನಾಟಕಾಭಿನಯವನ್ನು ಪ್ರಾರಂಭಿಸಿ ಬಿಳಿ ಪಾದ್ರಿ ರೆವರೆಂಡ್ ಲೇಕ್ ಹಿಲ್ಲರನ್ನು, ಪ್ರಾಣಾಪಾಯದಿಂದ ತಪ್ಪಿಸಲೆಂಬಂತೆ ತೋಳ್ವಿಡಿದು ಎಳೆದುಕೊಂಡೆ ಓಡೆದನು, ಕರಿ ಪಾದ್ರಿ ಅವಿತುಕೊಂಡಿದ್ದ ಮೂಲೆಗೆ!
ಅಷ್ಟರಲ್ಲಿ ಕಿಟಕಿಯ ಆಚೆಯಿಂದ ಮೊಳಗಿತು ಮುಕುಂದಯ್ಯನ ರುದ್ರವಾಣಿ: “ಪಾದ್ರಿಗಳೆ, ನನ್ನ ಬಾವನಿಗೆ ಜಾತಿ ಕೆಡಿಸುವ ಕೆಲಸ ಮಾಡುತ್ತಿದ್ದೀರಿ. ಬಾವಿಗೆ ಹಾರಲಿದ್ದ ನನ್ನ ಅಕ್ಕನನ್ನು ತಡೆದು ನಿಲ್ಲಿಸಿ ಬಂದಿದ್ದೇನೆ. ಒಳ್ಳೆಯ ಮಾತಿಗೆ, ನನ್ನ ಭಾವವನ್ನು ಕಿಲಸ್ತರ ಜಾತಿಗೆ ಸೇರಿಸುವವುದಿಲ್ಲ ಎಂದು ನಿಮ್ಮ ದೇವರ ಮೇಲೆ ಆಣೆಯಿಟ್ಟು ಅವನನ್ನು ಬಿಟ್ಟುಕೊಡದಿದ್ದರೆ ನಿಮ್ಮನ್ನೆಲ್ಲ ಸುಟ್ಟುಬಿಡುತ್ತೇನೆ!”
“ದೇವಯ್ಯಗೌಡರೆ, ನಿಮ್ಮ ಭಾವನಿಗೆ ಬುದ್ಧಿ ಹೇಳಿ. ಅವರು ಮಾಡುತ್ತಿರುವುದು ಕ್ರಿಮಿನಲ್ ಕಾರ್ಯ. ಅದಕ್ಕೆ ತಕ್ಕ ಶಿಕ್ಷೆಯಾಗುತ್ತದೆ!” ಎಂದರು ರೆವರೆಂಡ್ ಲೇಕ್ ಹಿಲ್. ಅವರು ಉಪದೇಶಿ ಜೀವರತ್ನಯ್ಯನಂತೆ ದಿಗಿಲುಗೊಂಡಿರಲಿಲ್ಲ.
ಇಷ್ಟರಲ್ಲಿ ಉಪದೇಶಿ ಜೀವರತ್ನಯ್ಯನವರು ಸ್ಕೂಲಿಗೆ ಇದ್ದ ಏಕೈಕ ಬಾಗಿಲ ಬಳಿಗೆ ಧಾವಿಸಿ, ಅದನ್ನು ತೆರೆಯಲೆಂದು ಎಳೆದರು, ಬಾಗಿಲಿಗೆ ಹೊರಗಡೆಯಿದ್ದ ಸರಪಣಿಯ ಚಿಲಕವನ್ನು ಐತ, ಮುಕುಂದಯ್ಯನ ಅಪ್ಪಣೆಯಂತೆ, ಹಾಕಿಕೊಂಡು, ಅದರ ರಕ್ಷಣೆಗೆ ಕತ್ತಹಿಡಿದು ನಿಂತಿದ್ದನಾದ್ದರಿಂದ ಅದು ತೆರೆಯಲೊಲ್ಲದೆಹೋಯ್ತು!
ಮೇಲುಸಿರು ಕೀಳುಸಿರು ಬಿಡುತ್ತಾ ಉಪದೇಶಿ ಕೂಗಿದರು: “ದೇವಯ್ಯಗೌಡರೆ, ನೀವೇ ಹೊಣೆಯಾಗುತ್ತೀರಿ, ರೆವರೆಂಡ್ ಅವರಿಗೆ ಏನಾದರೂ ಆದರೆ! ಇಡೀ ಬ್ರಿಟಿಷ್ ಚಕ್ರಾಧಿಪತ್ಯವೆ ನಿಮ್ಮ ಮನೆಮಾರುಗಳನ್ನೆಲ್ಲಾ ಧ್ವಂಸಮಾಡಿಬಿಡುತ್ತದೆ! ನಮ್ಮನ್ನು ರಕ್ಷಿಸುವ ಭಾರ ನಿಮ್ಮದು!”
“ಹೆದರಬೇಡಿ, ಉಪದೇಶಿಗಳೇ! ನಾನು ಹೇಗಾದರೂ ಮಾಡಿ ನಿಮ್ಮನ್ನು ಉಳಿಸುತ್ತೇನೆ!” ನಾಟಕದ ಮಾತನಾಡಿ ದೇವಯ್ಯಗೌಡರು ಕಿಟಕಿಯ ಕಡೆಗೆ ನೋಡಿದಾಗ ಅಲ್ಲಿ ಕೋವಿಯ ನಳಿಗೆ ಕಾಣಿಸಲಿಲ್ಲ. ಆದರೆ ಅದು ಆ ಕಿಟಕಿಯ ಎದುರಿಗಿದ್ದ ಗೋಡೆಯ ಕಿಟಕಿಯಿಂದ ತೂರುತ್ತಿತ್ತು! ಈ ಕಿಟಕಿಗೆ ಮರೆಯಾಗಿ ಮೂಲೆಹಿಡಿದು ನಿಂತಿದ್ದವರೆಲ್ಲ ಆ ಕಿಟಕಿಗೆ ತೆರೆದಿಟ್ಟಂತೆ ಕಾಣಿಸುತ್ತಿದ್ದರು! ಯಾವಾಗ ಕೋವಿಯ ನಳಿಗೆ ತಮ್ಮ ಕಡೆಗೆ ಮುಖವಾಡಿತೋ ಅವಾಗ ಉಪದೇಶಿ ಅಲ್ಲಿದ್ದವರನ್ನೆಲ್ಲ ತಳ್ಳಿಕೊಂಡುಹೋಗಿ ಎದುರಿಗಿದ್ದ ಮತ್ತೊಂದು ಮೂಲೆಯಲ್ಲಿ ರಕ್ಷಣೆ ಪಡೆದು ನಿಂತರು!
ದೇವಯ್ಯ ಮಾತ್ರ ಕೈಮುಗಿದುಕೊಂಡು, ನೇರವಾಗಿ ಬೆಳಕಂಡಿಯ ಬಳಿಸಾರಿ, ಕೋವಿಯ ನಳಿಗೆಗೆ ಅಡ್ಡನಿಂತು ಬಿನ್ನಯ್ಸಿದನು: “ಭಾವ, ಮುಕುಂದಬಾವ, ಬೇಡ, ಖಂಡಿತಾ ಬೇಡ! ನನ್ನನ್ನವರು ಜಾತಿಗೆ ಸೇರಿಸಿಕೊಳ್ಳುವುದಿಲ್ಲ. ಬಾಗಿಲ ಚಿಲಕ ತೆಗಿ!”
“ಹಾಗೆಂದು ಉಪದೇಶಸಿಗಳೆ ಹೇಳಲಿ. ಇಲ್ಲದಿದ್ದರೆ ನಾನು ಬಿಡುವುದಿಲ್ಲ!” ಎಂದಿತು ಮುಕುಂದಯ್ಯನ ದೃಢಧ್ವನಿ.
ದೇವಯ್ಯ ಮೂಲೆಗೆ ಹಿಂತಿರುಗಿ, ತನ್ನ ಬಾವನಿಗೆ ಒಮ್ಮೊಮ್ಮೆ ಒಂದು ತರಹದ ಹುಚ್ಚು ಕೆರಳುತ್ತದೆಂದೂ, ಸದ್ಯಕ್ಕೆ ಅಪಾಯದಿಂದ ಪಾರಾಗಬೇಕಾದರೆ ಅವನು ಹೇಳಿದಂತೆ ಮಾಡುವುದೇ ಲೇಸೆಂದೂ ತಿಳಿಸಿದನು.
ರೆವರೆಂಡ್ ಲೇಕ್ ಹಿಲ್ ಹೇಳಿದರು: “ನಾವೇನೂ ನಿಮ್ಮನ್ನು ಬಲತ್ಕಾರವಾಗಿ ಕ್ರೈಸ್ತಮತಕ್ಕೆ ಸೇರಿಸುತ್ತಿಲ್ಲ. ನಿಮ್ಮ ಇಷ್ಟದ ಮೇರೆಗೆ ಹಾಗೆ ಮಾಡುತ್ತಿದ್ದೇವೆ. ನಿಮ್ಮ ಹೆಂಡತಿಯನ್ನು ನೀವು ಒಪ್ಪಿಸದಿದ್ದರೆ ಅದು ನಿಮ್ಮ ತಪ್ಪು. ಅದು ನನಗೆ ಮೊದಲೆ ಗೊತ್ತಾಗಿದ್ದರೆ ನಿಮ್ಮನ್ನು ಮತಾಂತರಗೊಳಿಸಲು ನಾನೇ ಒಪ್ಪುತ್ತಿರಲಿಲ್ಲ. ಕ್ರೈಸ್ತರಿಗೆ ನಿಮ್ಮ ಕುಟುಂಬವನ್ನು ನಾಶಗೊಳಿಸುವ ಉದ್ದೇಶ ಎಂದೂ ಇರುವುದಿಲ್ಲ” ಎಂದು ಕರಿಯ ಪಾದ್ರಿಯ ಕಡೆಗೆ ತಿರುಗಿ ಮುಂದುವರಿದರು: “ಉಪದೇಶಿಗಳೇ, ನೀವು ಅದನ್ನೆಲ್ಲ ಮೊದಲೆ ಚೆನ್ನಾಗಿ ಅರಿಯಬೇಕಿತ್ತು. ಹೋಗಿ, ದೇವಯ್ಯ ಗೌಡರ ಬಾವನಿಗೆ ತಿಳಿಸಿ, ನಾವು ಯಾರನ್ನೂ ಬಲತ್ಕಾರವಾಗಿ ಕ್ರೈಸ್ತಮತಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬುದಾಗಿ!”
ಪಾಪ, ರೆವರೆಂಡ್ ಸಾಹೇಬರಿಗೆ ಹೇಗೆ ತಾನೆ ಗೊತ್ತಾಗಬೇಕು, ಯೇಸುಕ್ರಿಸ್ತ, ಮತ, ಧರ್ಮ, ಪರಲೋಕ, ದೇವರು ಇವು ಯಾವುದಕ್ಕೂ ಸಂಬಂಧಪಡದ ಪಾದ್ರಿಯ, ಪಾದ್ರಿಯ ಮಗಳ ಮತ್ತು ದೇವಯ್ಯಗೌಡರ ಆಂತರಂಗಿಕವೂ ಶುದ್ಧ ಲೌಕಿಕವೂ ಆಗಿದ್ದ ಗುಪ್ತ ವ್ಯಾವಹಾರಿಕ ಜಟಿಲತೆ?
ಯಾವುದು ಬಹಿರಂಗವಾಗಬಾರದೋ ಅದು ಎಲ್ಲಿ ಹೊರಬಿದ್ದು, ತನಗೆ ಉನ್ನತತರಸ್ಥಾನ ಲಭಿಸುವುದಕ್ಕೆ ಬಲವಾಗಿ ಸ್ಥಾನಾವನತಿಯೆ ಉಂಟಾಗಿಬಿಡುತ್ತದೆಯೋ ಎಂದು ಹೆದರಿ, ಪಾದ್ರಿ ಜೀವರತ್ನಯ್ಯ ಮುಕುಂದಯ್ಯನಿಗೆ ಅವನ ಇಷ್ಟದಂತೆ ಆಶ್ವಾಸನೆಯಿತ್ತು. ಬಾಗಿಲು ಚಿಲಕ ತೆಗೆಸಿದನು.
“ನಿಮ್ಮ ಭಾವನವರೊಡನೆ ನಾನು ಮಾತನಾಡಬೇಕಾಗಿದೆ, ದಯವಿಟ್ಟು ಅವರನ್ನು ಒಳಗೆ ಕರೆದುಕೊಂಡು ಬನ್ನಿ,” ರೆವರೆಂಡ್ ಅವರು ಕೇಳಿಕೊಳ್ಳಲು, ಮುಕುಂದಯ್ಯನನ್ನು ಕರೆತರಲು ದೇವಯ್ಯ ಹೊರಗೆ ಹೋದನು.
ಪಾದ್ರಿ ಜೀವರತ್ನಯ್ಯನವರು ಇಂಗ್ಲೀಷಿನಲ್ಲಿ ಮಾತನಾಡಲಾರಂಭಿಸಿ, ಲೇಕ್ ಹಿಲ್ ಅವರಿಗೆ ಸ್ಥಳೀಯ ವಿದ್ಯಮಾನಗಳ ವಿಚಾರವಾಗಿ ತಿಳಿವಳಿಕೆ ಉಂಟು ಮಾಡುವ ಉದ್ದೇಶದ ನೆವದಲ್ಲಿ ಅವರಿಗೆ ಮುನ್ನೆಚ್ಚರಿಕೆ ನೀಡಿದರು: “ಸ್ವಾಮಿ, ತಮಗೆ ಇಲ್ಲಿಯ ಜನರ ನೀತಿ, ರೀತಿ, ನಡೆ, ನುಡಿ ಯಾವುದರ ಪರಿಚಯವೂ ಇಲ್ಲ. ಇವರೊಡನೆ ನಾವು ತುಂಬ ಎಚ್ಚರಿಕೆಯಿಂದಿರಬೇಕು. ಈ ದೇವಯ್ಯಗೌಡರ ಬಾವ ಕೋಣೂರಿನವನು. ಮುಕುಂದಗೌಡ ಎಂದು ಹೆಸರು. ಅವನು ಕೇಡೆ ನಂಬರ ಒನ್. ಗುತ್ತಿ ಎಂಬ ಹೆಸರಿನ ಒಬ್ಬ ಹೊಲೆಯನ ಸಂಗಡ ಸೇರಿಕೊಂಡು, ಹುಡುಗಿಯನ್ನು ಅಪಹರಿಸುವುದು, ಮಾರಾಮಾರಿ ಮಾಡಿಸುವುದು, ಪುಂಡುಪೋಕರಿ ಮುಸಲ್ಮಾನರನ್ನು ಕೂಡಿಸಿ ಅತ್ಯಾಚಾರ, ಕೊಲೆ ಮಾಡಿಸುವುದು. ಹೀಗೆ ಈ ನಾಡಿಗೇ ಒಬ್ಬ ಭೀಕರ ವ್ಯಕ್ತಿಯಾಗಿದ್ದಾನೆ. ಒಂದೆರಡು ತಿಂಗಳ ಹಿಂದೆ, ಸಿಂಬಾವಿಯ ಒಬ್ಬ ಗೌರವಸ್ಥ ಹೆಗ್ಗಡೆಯವರ ಮದುವೆ ಗೊತ್ತಾಗಿದ್ದು, ಇನ್ನೇನು ಲಗ್ನದ ಮೂಹೂರ್ತ ಬಂದಿತು ಎನ್ನುವಷ್ಟರಲ್ಲಿ, ಈ ಮುಕುದಂಗೌಡ ಮದುಮಗಳಾಗುವ ಆ ಹುಡುಗಿಯನ್ನು ಅಪಹರಿಸಿ,ಯಾವುದೊ ಕಾಡಿನಬಲ್ಲಿ ಹುದುಗಿಸಿಟ್ಟನಂತೆ. ಅವಲ ತಂದೆಯನ್ನೂ ಅವನೆ ಕೊಲ್ಲಿಸಿದ ಎಂದು ಹೇಳುತ್ತಾರೆ. ಈಗ ಆ ಹುಡುಗಿಯ ಮನೆ ಆಸ್ತಿ-ಪಾಸ್ತಿಯನ್ನೆಲ್ಲ ಲಬಟಾಯಿಸಿ ಕೊಂಡು ಅವಳ ತಂದೆಗೆ ಆ ಹುಡುಗಿ ಒಬ್ಬಳೆ ಮಗಳಂತೆ ಅವಳ ಮನೆಯಲ್ಲಿಯೆ ಇದ್ದುಬಿಟ್ಟಿದ್ದಾನಂತೆ. ಇನ್ನೂ ಅವಳನ್ನು ಮದುವೆ ಮಾಡಿಕೊಂಡೂ ಇಲ್ಲ; ಮಾಡಿಕೊಳ್ಳುತ್ತೇನೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾನಂತೆ. ಅಷ್ಟರಲ್ಲಿ, ಅವಳು ಗರ್ಭಿಣಿ ಆಗಿಬಿಟ್ಟಿದ್ದಾಳೆ ಎಂದೂ ವದಂತಿ! ಇನ್ನು, ಅವರ ಜಾತಿಯ ನೀತಿಯ ಪ್ರಕಾರ ಅವಳನ್ನು ಅಕ್ರಮ ಗರ್ಭಿಣಿ ಎಂದು ಸಾರಿ, ಬಹಿಷ್ಕಾರ ಹಾಕಿಸಿ ಹೊರಗಟ್ಟಿ, ಆಕೆಯ ಮನೆಮಾರನ್ನೆಲ್ಲ ತಮ್ಮ ಹೆಸರಿಗೆ ಮಾಡಿಸಿಕೊಳ್ಳಬೇಕೆಂದು, ಬಹುಶಃ ಅವನ ಒಳ ಇರಾದೆ ಇರಬೇಕು! ಬೆಟ್ಟಳ್ಳಿಯ ಹೊಲೆಯ ಬಚ್ಚ ಎಂಬಾತನನ್ನು ಕ್ರೈಸ್ತಮತಕ್ಕೆ ಸೇರಿಸಿಕೊಳ್ಳುತ್ತಾರೆಂದು ಸುದ್ದಿ ಹಬ್ಬಿಸಿ, ಅವನಿಗೆ ಗೊತ್ತಾಗಿದ್ದ ಹುಡುಗಿಯನ್ನು ಸಿಂಬಾವಿಯ ಹೊಲೆಯ ಗುತ್ತಿ ಎಂಬ ಹೆಸರಿನ ಕೇಡಿಯ ಮುಖಾಂತರ ಅಪಹರಿಸಿ, “ನಾವು ಅಂದೆಮ್ಮೊ ತೀರ್ಥಹಲ್ಳಿಯ ಹೊಳೆಯನ್ನು ದೋಣಿಯಲ್ಲಿ ದಾಟಿ ಹೋಗಿದ್ದೆವಲ್ಲಾ? ಸುಬ್ಬಯ್ಯಗೌಡರು ಚಂದ್ರಯ್ಯಗೌಡರು ಎಂಬ ಹೆಸರಿನ ನಾಮಧಾರಿ ಯುವಕರ ಮನೆಗೆ? ಆ ಕಾನೂರು ಕಡೆಗೆ ಕಳಿಸಿದ್ದಾನಂತೆ ತಲೆತಪ್ಪಿಸಿಕೊಳ್ಳಲು, ಈ ಮುಕುಂದಗೌಡ!…. ಆ ಇಜಾರದ ಸಾಬಿ ಎಂಬ ಧೂರ್ತ ಪುಂಡ ಮುಸಲ್ಮಾನನ್ನು ಗುತ್ತಿಯ ಕೈಲಿ ಕಡಿಸಿದ್ದೂ ಇವನೇ ಅಂತೆ!…  ಆ ಪುಂಡರೆ ಎಲ್ಲ ಸೇರಿ ಇದೆ ಸ್ಕೂಲಿನಲ್ಲಿ ಕಾವೇರಿ ಎಂಬ ಹುಡುಗಿಯ ಮೇಲೆ ಅತ್ಯಾಚಾರ ಮಾಡಿ ಅವಳನ್ನು ನಮ್ಮ ಇದೇ ಬಾವಿಗೆ ಹಾಕಿದ್ದರಂತೆ!…  ಅವರಲ್ಲಿ ಒಬ್ಬ ಮುಸಲ್ಮಾನ ತಲೆತಪ್ಪಿಸಿಕೊಂಡು ಕನ್ನಡ ಜಿಲ್ಲೆಗೆ ಓಡಿದ್ದಾನಂತೆ. ಇನ್ನಿಬ್ಬರನ್ನೂ ದಸ್ತಗಿರಿ ಮಾಡಿ ವಿಚಾರಣೆಗಾಗಿ ಲಾಕಪ್ಪಿನಲ್ಲಿ ಇಟ್ಟಿದ್ದಾರೆ…. ನನ್ನ ಅಭಿಪ್ರಾಯ ಕೇಳುವುದಾದರೆ, ನಿಮ್ಮನ್ನು ಗುಂಡಿಕ್ಕಿ ಕೊಲ್ಲಲು ಪ್ರಯತ್ನಿಸಿರುವ ಇವನನ್ನು ಬಂಧಿಸಿ ಕಾನೂನು ರೀತ್ಯಾ ಶಿಕ್ಷೆಗೆ ಒಳಪಡಿಸುವುದೆ ಉತ್ತಮ. ಹಾಗೆ ಮಾಡಿದರೆ ಈ ಜನಕ್ಕೆ ಸ್ವಲ್ಪ ಹೆದರಿಕೆ ಹುಟ್ಟಿ, ನಮ್ಮ ಪವಿತ್ರ ಕ್ರಿಸ್ತನ ಸುವಾರ್ತೆಯನ್ನು ನಾವು ನಿರಾತಂಕವಾಗಿ ಬೋಧಿಸಲು ಅನುಕೂಲ ಸನ್ನಿವೇಶ ಕಲ್ಪಿತವಾಗುತ್ತದೆ, ಈ ಕಾಡು ಜನರನ್ನೂ ಪಳಗಿಸಿದಂತಾಗುತ್ತದೆ….!”
“ಉಪದೇಶಿಗಳೆ, ಕ್ರಿಸ್ತಸ್ವಾಮಿಯ ಸಂದೇಶವನ್ನು ಕ್ರೈಸ್ತೋಚಿತವಲ್ಲದ ವಿಧಾನಗಳಿಂದ ಪ್ರಚಾರಮಾಡಲು ನೀವು ಹೊರಟಿರಾದರೆ, ಜನರನ್ನು ಮೈಮೇಲೆ ಹಾಕಿಕೊಂಡು, ತದ್ವಿರುದ್ಧ ಪರಿಣಾಮಕ್ಕೆ ಭಾಜನರಾಗುತ್ತೀರಿ. ನಾವು ನಮ್ಮ ಸ್ವಾರ್ಥ ಉದ್ದೇಶಗಳನ್ನೆಲ್ಲ ತ್ಯಜಿಸಿ, ಸತ್ತ್ವಮಾರ್ಗದಿಂದಲೆ ಮುಂದುವರಿದು, ಜನರ ನಂಬಿಕೆಗೆ ಪಾತ್ರರಾಗಬೇಕು. ಅವರ ವಿಶ್ವಾಸ ಲಭಿಸಿದ ತರುವಾಯವೆ ಅವರು ನಮ್ಮ ಉಪದೇಶಕ್ಕೆ ಕಿವಿಗೊಡುತ್ತಾರೆ. ಔಷಧೋಪಚಾರ, ವಿದ್ಯಾಭ್ಯಾಸ ಮೊದಲಾದ ಸಹಾಯಗಳ ಮೂಲಕ ಅವರ ಹೃದಯವನ್ನು ನಾವು ಗೆಲ್ಲಬೇಕು.ಅವರ ಮತೀಯ ಮೌಢ್ಯಗಳಿಂದ ಅವರಿಗಾಗುತ್ತಿರುವ ಅಪಾಯಗಳನ್ನು ಉಪಾಯವಾಗಿ ಅವರಿಗೆ ಮನದಟ್ಟಾಗುವಂತೆ ಮಾಡಬೇಕು… “ಅಷ್ಟರಲ್ಲಿ ಮುಕುಂದಯ್ಯನೊಡನೆ ಪ್ರವೇಶಿಸಿದ ದೇವಯ್ಯಗೌಡರನ್ನು ಕಂಡು ರೆವರೆಂಡ್ ಲೇಕ್ ಹಿಲ್ ಅವರು ಪಾದ್ರಿಯಿಂದ ಅತ್ತ ತಿರುಗಿದರು.
ಕೈಯಲ್ಲಿ ಕೋವಿ ಹಿಡಿದಿದ್ದ ಮುಕುಂದಯ್ಯ ಮುಗುಳು ನಗುತ್ತಾ “ನಮಸ್ಕಾರ, ಪಾದ್ರಿಗಳಿಗೆ” ಎಂದನು.
ರೆವರೆಂಡ್ ಅವರು ಪ್ರತಿನಮಸ್ಕಾರ ಮಾಡಿ, ಬೆಂಚಿನ ಕಡೆಗೆ ಕೈತೋರಿ ಅವರನ್ನೆಲ್ಲ ಕೂರಿಸಿ, ತಾವೂ ಒಂದು ಕುರ್ಚಿಯ ಮೇಲೆ ಎದುರಾಗಿ ಕುಳಿತುಕೊಂಡರು.
ಒಂದೆರಡು ನಿಮಿಷಗಳ ಕಾಲ ಮುಕುಂದಯ್ಯನನ್ನೇ ಗಮನಿಸುತ್ತಿದ್ದರು, ತಾವು ಏನು ಮಾತಾಡಬೇಡು ಎಂಬುದನ್ನು ಆಲೋಚಿಸುತ್ತಿದ್ದಂತೆ ತೋರಿದರು ಲೇಕ್ ಹಿಲ್. ಆದರೆ ಅವರು ಏನನ್ನೂ ಆಲೋಚಿಸುತ್ತಿರಲಿಲ್ಲ. ಮುಕುಂದಯ್ಯನ ವ್ಯಕ್ತಿತ್ವದ ಸ್ವರೂಪವನ್ನು ಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದರು: ಮುಕುಂದಯ್ಯ ದೇವಯ್ಯನಂತೆ ಕ್ರಾಪು ಬಿಟ್ಟಿರಲಿಲ್ಲ; ಟೋಪಿಯ ಹಿಂದೆ ಕಟ್ಟಿದ್ದ ಜುಟ್ಟು ಕಾಣಿಸುತ್ತಿತ್ತು. ಹಣೆಯ ಮೇಲೆ ನಾಮವೂ ಇತ್ತು. ಕಿವಿಯಲ್ಲಿ ಒಂಟಿಗಳೂ ಇದ್ದುವು. ಆದರೆ ಅವನ ಮುಖದಲ್ಲಿ ಅಲ್ಲಿದ್ದವರಾರಲ್ಲಿಯೂ ಇಲ್ಲದಿದ್ದ ಒಂದು ಸತ್ವಪೂರ್ಣ ತೇಜಸ್ಸನ್ನೂ ಸರಳ ಸುಂದರ ಪ್ರಸನ್ನತೆಯನ್ನೂ ದರ್ಶಿಸಿದ ಲೇಕ್ ಹಿಲ್ ರಿಗೆ  ಅವನ ವಿಷಯದಲ್ಲಿ ಒಂದು ಗೌರವಪೂರ್ವಕವಾದ ವಿಶ್ವಾಸ ಹುಟ್ಟಿ, ಅವರ ಮುಖದ ಮೇಲೆಯೂ ಸುಪ್ರಸನ್ನತೆ ಸುಳಿದಾಡಿದುದನ್ನು ಕಂಡು ಜೀವರತ್ನಯ್ಯಗೆ ಬೆರಗಾಯಿತು. ತಾನು ಮುಕುಂದಯ್ಯನ ಮೇಲೆ ಹೇಳಿದ್ದುದೆಲ್ಲ ವ್ಯರ್ಥವಾಯಿಯೋ ಏನೋ ಎಂದು ಕರಿಪಾದ್ರಿಗೆ ಮುಖಭಂಗವೂ ಆಯಿತು.
ಆದರೆ ಒಂದು ವಿಷಯ ಮಾತ್ರ ಆ ಘಟನೆಯ ರೂಪಣೆಯಲ್ಲಿ ಭಾಗಿಗಳಾಗಿದ್ದವರೆಲ್ಲರ ಪ್ರಜ್ಞಾಭೂಮಿಕೆಗೂ ಅತೀತವಾಗಿದ್ದು, ಅಗೋಚರವಾಗಿತ್ತು; ರೆವರೆಂಡ್ ಲೇಕ್ ಹಿಲ್ ಆಗಲಿ, ಉಪದೇಶಿ ಜೀವರತ್ನಯ್ಯನಾಗಲಿ, ಮುಕುಂದಯ್ಯನಾಗಲಿ, ಯಾವ ಇತ್ಯರ್ಥಗಳನ್ನು ತಾವೇ ಸ್ವತಂತ್ರವಾಗಿ ನಿರ್ಣಯಿಸುತ್ತಿದ್ದೇವೆ ಎಂದು ಭಾವಿಸಿ ವರ್ತಿಸುತ್ತಿದ್ದರೋ ಆ ಇತ್ಯರ್ಥಗಳಿಗೆಲ್ಲ ಅಂತರ್ಯಾಮಿ ಸೂತ್ರಧಾರಿಯಾಗಿತ್ತು, ಭಗವಂತನ ಅಡಿದಾವರೆವರೆಗೂ ನಿಡುಚಾಚಿ ಅದನ್ನು ತನ್ನ ಹೂವೆದೆಗೆ ಬಿಗಿದಪ್ಪಿದ ಒಬ್ಬಳು ಪ್ರಣಯಾರ್ಥಿ ತರುಣಿಯ ಪ್ರೇಮಮಯ ಮುಗ್ಧ ಹೃದಯದ ಆರ್ತ ಅಭೀಪ್ಸೆಯ ಪ್ರಾರ್ಥನಾಬಾಹು~
“ಮುಕುಂದಯ್ಯ ಗೌಡರೆ, ನೀವು ಎಂಥ ಭಯಂಕೆರ ಅಪರಾಧ ಕಾರ್ಯದಲ್ಲಿ ತೊಡಗಿದ್ದೀರಿ ಎಂಬುದು ನಿಮಗೆ ಅರ್ಥವಾಗಿದೆಯೇ?” ಗಂಭೀರ ಧ್ವನಿಯಲ್ಲಿ ಪ್ರಶ್ನಿಸಿದ್ದರು ರೆವರೆಂಡ್ ಲೇಕ್ ಹಿಲ್, “ಗುಂಡಿಕ್ಕಿ ಕೊಂದು ಕೊಲೆಮಾಡಿದವರಿಗೆ ಏನು ಶಿಕ್ಷೆ ಗೊತ್ತೆ?”
“ಗೊತ್ತು, ಸ್ವಾಮೀ, ನಾನೇನು ಕೊಲೆಮಾಡುವುದಕ್ಕೆ ಬಂದಿರಲಿಲ್ಲ. ನನ್ನ ಅಕ್ಕನಿಗೆ ಗಂಡನನ್ನು ಉಳಿಸಿಕೊಟ್ಟು, ಅವಳ ಪ್ರಾಣವನ್ನೂ ಮಾಂಗಲ್ಯವನ್ನೂ ರಕ್ಷಿಸಲು ಬಂದಿದ್ದೆ.” ಸಾಹಿತ್ಯ ಭಾಷೆಯಲ್ಲಿ ಮಾತನಾಡುತ್ತಿದ್ದ ರೆವರೆಂಡರಿಗೆ ಆ ರೀತಿಯ ಭಾಷೆಯಲ್ಲಿಯೆ ಉತ್ತರವಿತ್ತನು ಮುಕುಂದಯ್ಯ.
“ಹಾಗಾದರೆ ಬಂದೂಕು ಏಕೆ ತಂದಿದ್ದೀರಿ?”
ಮುಕುಂದಯ್ಯ ಕೋವಿಯೆಡನೆ ಎದ್ದ, ಮುಂದಕ್ಕೆ ಬಾಗಿ ಅದನ್ನು ರೆವರೆಂಡರ ಮುಂದೆ ಮೇಜಿನ ಮೇಲೆ ಇಟ್ಟು, ನಗುತ್ತಲೆ ಹೇಳಿದನು: “ಇದು ಖಾಲಿ ಕೋವಿ, ಸ್ವಾಮಿ, ಅದರಿಂದ ಯಾರ ಕೊಲೆಯೂ ಸಾಧ್ಯವಿಲ್ಲ. ಅದಕ್ಕೆ ಈಡು ತುಂಬಿಲ್ಲ. ಕೇಪು ಇಟ್ಟಿಲ್ಲ. ತಾವೇ ಪರಾಂಬರಿಸಬಹುದು. ಬರಿಯ ತೋರಿಕೆಯ ಬೆದರಿಕೆಗೆ ತಂದಿದ್ದೆ. ಅಷ್ಟೇ…”
ಕ್ರೈಸ್ತ ಮಿಶನರಿಗಳ ವೈದ್ಯಕೀಯ ಸಹಾಯ, ವಿದ್ಯಾಭ್ಯಾಸ ಪ್ರಚಾರ ಇತ್ಯಾದಿ ಲೋಕೋಪಕಾರ ಕಾರ್ಯಗಳನ್ನು ಬಾಯಿತುಂಬ ಶ್ಲಾಘಿಸಿದ ಮುಕುಂದಯ್ಯ ಅವರ ಮತಾಂತರ ಚಟುವಟಿಕೆಗಳನ್ನು ಸಮಾಜದ ಅಡಿಪಾಯವನ್ನೇ ಬುಡಮೇಲು ಮಾಡುವ ಕೆಲಸ ಎಂದು ವರ್ಣಿಸಿ, ಕೆಲವು ನಿದರ್ಶನಗಳನ್ನು ಕೊಟ್ಟು, ಮಿಶನ್ ಸ್ಕೂಲು ಚೆನ್ನಾಗಿ ನಡೆಯುವಂತೆ ತಾನು ಸಹಕರಿಸುವುದಾಗಿಯೂ, ಇತರರನ್ನೂ ಸಹಕರಿಸುವಂತೆ ಮಾಡುವುದಾಗಿಯೂ ಭರವಸೆಯಿತ್ತನು.
“ನಿಮ್ಮ ಸಹಕಾರಕ್ಕಾಗಿ ನಿಮಗೆ ಅನೇಕ ವಂದನೆಗಳು.” ಲೇಕ್ ಹಿಲ್ ಮುಂದುವರಿದರು: “ನಮ್ಮ ಮತಾಂತರ ಚಟುವಟಿಕೆಗಳನ್ನೇನೊ ನೀವು ಸಾಮಾಜಿಕ ಜೀವನವನ್ನು ಬುಡಮೇಲು ಮಾಡುವ ಕಾರ್ಯ ಎಂದು ವರ್ಣಿಸುತ್ತಿದ್ದೀರಿ. ಯಾರನ್ನೂ ಬಲಾತ್ಕಾರವಾಗಿ ಕ್ರೈಸ್ತರನ್ನಾಗಿ ಮಾಡುವ ಇಚ್ಛೆ ನಮಗಿಲ್ಲ. ನೀವು ನಮ್ಮ ಜಾತಿಗೆ ಸೇರದಿರಬಹುದು; ಸೇರದಿದ್ದರೆ ಚಿಂತೆಯಿಲ್ಲ… ಆದರೆ, ಗೌಡರೆ, ನಾನು ಹೇಳುವುದನ್ನು ದಯವಿಟ್ಟು ಗಮನಿಸಿ ಕೇಳಿ…  ನಿಮ್ಮ ಜಾತಿಯವರು ಎಲ್ಲಿಯವರೆಗೆ ಬ್ರಾಹ್ಮಣರ ಪಾದ ತೊಳೆದು, ಅದನ್ನು ತೀರ್ಥವೆಂದು ಕುಡಿಯುವುದನ್ನೇ ತಮ್ಮ ಧರ್ಮಜೀವನ ಸರ್ವಸ್ವ ಎಂದು ಭಾವಿಸುವರೊ ಅಲ್ಲಿಯವರೆಗೆ ನಿಮಗೆ, ನಾಮಧಾರಿ ಗೌಡರಿಗೆ ಮತ್ತು ಇತರ ಬ್ರಾಹ್ಮಣೇತರ ವರ್ಗದವರಿಗೆ, ಉದ್ಧಾರವಿಲ್ಲ; ಉಳಿಗತಿಯಿಲ್ಲ. ನಿಮ್ಮ ಮೂಢಾಚಾರಗಳು ಬ್ರಾಹ್ಮಣರ ಜೀವನೋಪಾಯಕ್ಕೆ, ಸಂಪಾದನೆಗೆ, ಬಂಡವಾಳ ಸ್ವರೂಪವಾಗಿವೆ. ನಿಮ್ಮನ್ನು ಅವರು ನಾಯಿಗಳನ್ನು ಕಂಡಹಾಗೆ ಕಾಣುತ್ತಾರೆ. ಮುಟ್ಟುವುದಿರಲಿ ಹತ್ತಿರ ಬಂದರೂ ಅವರಿಗೆ ಮೈಲಿಗೆ. ಬ್ರಾಹ್ಮಣರೆಲ್ಲ ಬ್ರಹ್ಮನ ಮುಖದಿಂದ ಬಂದವರೆಂದೂ ಶೂದ್ರು ಅವನ ಕಾಲಡಿಯಿಂದ ಬಿದ್ದವರೆಂದೂ ಕಟ್ಟುಕಥೆ ಕಟ್ಟಿದ್ದಾರೆ. ಅವರೇ ಅವರ ಅನುಕೂಲಕ್ಕಾಗಿ ಬರೆದುಕೊಂಡಿರುವ ಪುರಾಣ ಕಥೆಗಳನ್ನು, ನಿಜವಾಗಿ ನಡೆದವೆಂಬಂತೆ ನಿಮಗೆ ಹೇಳಿ, ನಿಮ್ಮನ್ನು ಮರುಳು ಮಾಡಿದ್ದಾರೆ. ಶೂದ್ರರು ವೇದ ಓದಬಾರದಂತೆ! ಓದುವುದಿರಲಿ, ಯಾರಾದರೂ ಓದುವುದನ್ನು ಆಲಿಸಿದರೂ ನರಕದಲ್ಲಿ ಶೂದ್ರನ ಕಿವಿಗೆ ಕಾಯಿಸಿದ ಕಬ್ಬಿಣವನ್ನು ಹೊಯ್ಯುತ್ತಾರಂತೆ! ಶತಶತಮಾನಗಳಿಂದಲೂ ನಿಮ್ಮನ್ನು ಈ ಮೂಢಸ್ಥಿತಿಯಲ್ಲಿ ಇಟ್ಟು, ನಿಮ್ಮಿಂದ ಸೇವೆ ಸಲ್ಲಿಸಿಕೊಂಡು, ಸುಖಜೀವನ ನಡೆಸುತ್ತಿದ್ದಾರೆ…. ಕ್ರೈಸ್ತ ಧರ್ಮದಲ್ಲಿ ಜಾತಿಭೇದವಿಲ್ಲ; ಎಲ್ಲರೂ ದೇವರ ಇದಿರಿನಲ್ಲಿ ಸಮನರು. ನಾನು ಕೇಳಿಕೊಲ್ಳುವುದಿಷ್ಟೇ: ನೀವು ಕ್ರಿಸ್ತಮತಕ್ಕೆ ಸೇರಿ, ಬಿಡಿ, ಅದು ಅಷ್ಟು ಮುಖ್ಯವಲ್ಲ; ಆದರೆ ಕ್ರೈಸ್ತ ಧರ್ಮದ ಉದಾರ ತತ್ತ್ವಗಳನ್ನೂ ಸೇವಾ ಮನೋಧರ್ಮವನ್ನೂ ಸರ್ವ ಸಮಾನತಾ ದೃಷ್ಟಿಯನ್ನೂ ಉನ್ನತ ಆದರ್ಶಗಳನ್ನೂ ನಿಮ್ಮ ಮಾರ್ಗದರ್ಶನ ಜ್ಯೋತಿಯನ್ನಾಗಿ ಮಾಡಿಕೊಂಡು, ಬ್ರಾಹ್ಮಣ್ಯದ ದುರ್ಮುಷ್ಟಿಯಿಂದ ಬಿಡಿಸಿಕೊಳ್ಳುವುದು ಮಾತ್ರ ನಿಮ್ಮ ಜನಾಂಗದ ಪ್ರಗತಿಗೆ ಅತ್ಯಂತ ಅವಶ್ಯಕವಾದ ಆತ್ಯ ಕರ್ತವ್ಯ ಕರ್ಮ! ಆ ದಾರಿಯಲ್ಲಿ ಮುಂದುವರಿಯುವುದಕ್ಕೆ ನಿಮ್ಮ ಜನಾಂಗದವರಿಗೆ ನಾವು ಸರ್ವ ಸಹಾಯ ನೀಡಲು ಸಿದ್ಧರಿದ್ದೇವೆ…. ಈ ಸಾಯಂಕಾಲ ನಡೆಯಲಿರುವ ಈ ಸ್ಕೂಲಿನ ಪ್ರಾರಂಭೋತ್ಸವ ಆ ದಿಕ್ಕಿನಲ್ಲಿ ನಿಮ್ಮ ಮಿಶನ್ ಇಟ್ಟಿರುವ ಮೊದಲ ಹೆಜ್ಜೆ. ನಿಮ್ಮ ಜನರೆಲ್ಲ, ಅದರಲ್ಲಿಯೂ ನಿಮ್ಮಂಥ ಮತ್ತು ದೇವಯ್ಯಗೌಡ ರಂಥ ಮುಂದಾಳುತನದ ಯುವಕರು, ಮುಂದೆ ಬಂದು ನಮ್ಮೊಡನೆ ಸಹಕರಿಸುತ್ತೀರೆಂದು ನಾನು ದೃಢವಾಗಿ ನಂಬಿದ್ದೇನೆ. ಸರಕಾರದಿಂದಾಗಲಿ, ವಿದ್ಯಾಭ್ಯಾಸದ ಇಲಾಖೆಯಿಂದಾಗಲಿ, ನಮ್ಮ ಮಿಶನ್ನಿನ ಕಡೆಯಿಂದಾಗಲಿ ನಿಮಗೆ ಬೇಕಾಗುವ ಎಲ್ಲ ನೆರವೂ ಒದಗುವಂತೆ ಮಾಡಲು ನಾನು ಪವಿತ್ರಾತ್ಮ ಯೇಸುಕ್ರಿಸ್ತನ ಹೆಸರಿನಲ್ಲಿ ಕಂಕಣ ಬದ್ಧನಾಗಿದ್ದೇನೆ…. ತಮಗೆಲ್ಲರಿಗೂ ನಮಸ್ಕಾರ…..”
ರೆವರೆಂಡರು ಕುರ್ಚಿಯಿಂದೆದ್ದು ನಿಂತು ಮುಕುಂದಯ್ಯನ ಕಡೆಗೆ ಕೈಚಾಚಿದರು. ಮುಕುಂದಯ್ಯ ಒಂದು ಅರೆನಿಮಿಷ ಹಳ್ಳಿಬೆಪ್ಪಾಗಿ ನಿಮತಿದ್ದನು. ಆದರೆ ಪಕ್ಕದಲ್ಲಿದ್ದ ದೇವಯ್ಯನ ಇಂಗಿತ ತಿವಿತದಿಂದ ಎಚ್ಚತ್ತುಕೊಂಡು, ಹಸ್ತಲಾಘವದ ಅರಿವು ತೋರಿ, ಹಲ್ಲುಬಿಡುತ್ತಾ ಕೈ ನೀಡಿದನು. ಲೇಕ್ ಹಿಲ್ ಅವರು ಮುಕುಂದಯ್ಯನಿಗಂತೂ ಅಂತೆಯೆ ಎಲ್ಲರಿಗೂ ಹಸ್ತಲಾಘವವಿತ್ತು, ಸಾಯಂಕಾಲದ ಪ್ರಾರಂಭೋತ್ಸವಕ್ಕೆ ಎಲ್ಲರನ್ನೂ ಆಹ್ವಾನಿಸಿ, ಜೀವರತ್ನಯ್ಯನಿಗೆ ಹಿಂಬಾಲಿಸಿ ಹೊರಡುವ ಸನ್ನೆ ಮಾಡಿ, ಬಾಗಿಲು ದಾಟಿದರು.
“ಕರೀ ಪಾದ್ರಿಯಂತಲ್ಲೊ; ನಿಜವಾಗಿಯೂ ದೊಡ್ಡ ಮನುಷ್ಯನೆ ಕಣೋ, ಈ ಬಿಳೀ ಪಾದ್ರಿ!” ಮುಕುಂದಯ್ಯ ದೇವಯ್ಯನ ಕಡೆ ತಿರುಗಿ ಶ್ಲಾಘಿಸಿದನು.
“ನಮ್ಮ ಕಾಡು, ನಿಮ್ಮ ತಿಮ್ಮು, ಹಳೆಮನೆ ಧರ್ಮು, ಹೆಂಚಿನಮನೆ ರಾಮು ಎಲ್ಲರನ್ನೂ, ಇಸ್ಕೂಲು ಸುರುವಾದ ಕೂಡ್ಲೆ, ಮೊದಲೂ ತಂದು ಸೇರಿಸಿಬಿಡಬೇಕು, ಓದಕ್ಕೆ!…  ಏನಂತೀಯ?” ದೇವಯ್ಯ ಕೇಳಿದನು, ರೆವರೆಂಡರ ಭಾಷಣಕ್ಕೆ ತನ್ನ ಪ್ರಥಮ ಪ್ರತಿಕ್ರಿಯೆ ಎಂಬಂತೆ.
“ಸೇರಿಸದೆ ಮತ್ತೆ!” ಮುಕುಂದಯ್ಯ ಅನಂತಯ್ಯನ ಕಡೆ ತಿರುಗಿದನು. ಎಂತಿದ್ದರೂ ನಮ್ಮ ಐಗಳೆ ಹೆಡ್ ಮಾಸ್ಟರ್ ಆಗ್ಯಾರಲ್ಲಾ!….  ನೀವೇನ್ ಹೇಳ್ತೀರಿದ ಅನಂತೈಗಳೆ?”
“ಆಗಲೆ ಹುಡುಗರಿಗೆಲ್ಲಾ ಹೇಳಿಬಿಟ್ಟೀನಿ, ಬಟ್ಟೆ ಗಿಟ್ಟೆ ಒಕ್ಕೊಂಡು ಸಿದ್ಧವಾಗಿರಿ ಅಂತಾ….. ಅವರಿಗೂ ಖುಷಿಯೋ ಖುಷಿ! ಮಕ್ಕಳು ಬರ್ತಾರಲ್ಲಾ ಅಂತಾ ಅಂತಕ್ಕಗೂ ಪೂರಾ ಗೆಲುವಾಗಿ ಬಿಟ್ಟಿದೆ!” ಎಂದರು ಅನಂತಯ್ಯ.
*****


ಮಲೆಗಳಲ್ಲಿ ಮದುಮಗಳು-62

      ಗೌರಿ ಹಬ್ಬಕ್ಕೆ ಇನ್ನೂ ಮೂರು ದಿವಸವಿದೆ ಎನ್ನುವಾಗ, ಒಂದು ಸಂಜೆ ಮೇಗರವಳ್ಳಿಯ ಹೆದ್ದಾರಿಯಲ್ಲಿ ಆಗುಂಬೆಯ ಕಡೆಯಿಂದ ತೀರ್ಥಹಳ್ಳಿಯ ದಿಕ್ಕೆಗೆ ನಾಲ್ವರು ಪ್ರಯಾಣಿಕರು, ಅವರನ್ನು ನೋಡಿದರೆ ಬಹುದೂರದಿಂದ ಬಂದವರಂತೆ ಕಾಣುತ್ತಿದ್ದರು, ಸೋತು ಕಾಲುಹಾಕುತ್ತಿರುವಂತೆ ನಡೆದು ಬರುತ್ತಿದ್ದರು. ಮುಂದೆ ಬರುತ್ತಿದ್ದ ಇಬ್ಬರು ಕೊಡೆ ಹಿಡಿದಿದ್ದರು. ಹಿಂದೆ ಬರುತ್ತಿದ್ದವರು ಕಂಬಳಿ ಕೊಪ್ಪೆ ಹಾಕಿಕೊಂಡಿದ್ದರು. ಮಳೆಗೂ ಕೆಸರಿಗೂ ರಕ್ಷೆಯಾಗಿ ತಮ್ಮ ಕಚ್ಚೆ ಪಂಚೆಗಳನ್ನು ಮೊಳಕಾಲಿನವರೆಗೂ ಎತ್ತಿ ಕಟ್ಟಿಕೊಂಡಿದ್ದು ಮೈಮುಚ್ಚುವಂತೆ ಬಟ್ಟೆ ಹಾಕಿಕೊಂಡಿದ್ದ ಆಗ್ರೇಸರಿಬ್ಬರನ್ನು ಯಜಮಾನರೆಂದೂ, ಹಿಂದೆ ತಲೆಯಮೇಲೆ ಗಂಟು ಮೂಟೆ ಹೊತ್ತು ಅರಮೈ ಬಿಟ್ಟುಕೊಂಡಿದ್ದ ಇಬ್ಬರನ್ನು ಅವರು ಆಳುಗಳೆಂದೂ ಯಾರಾದರೂ ಗುರುತಿಸಬಹುದಿತ್ತು.

ಮಳೆ ಸೋನೆಯಾಗಿ ಬೀಳುತ್ತಿದ್ದುದರಿಂದ ಮೇಗರೊಳ್ಳಿ ಪೇಟೆಯ ಬೀದಿ ನಿರ್ಜನವಾಗಿತ್ತು. ಆದರೆ ತುಂಬ ವಿರಳವಾಗಿ ಆ ಕಡೆ ಈ ಕಡೆ ಹುದುಗಿದಂತಿದ್ದ ಹುಲ್ಲಿನ ಮತ್ತು ಓಡುಹೆಂಚಿನ ಮಣೆಗಳ ಮತ್ತು ಅಂಗಡಿ ಮಳಿಗೆಗಳ ಮುಂಭಾಗದ ತೆಣೆಗಳಲ್ಲಿ ಒಬ್ಬರು ಇಬ್ಬಸ್ರು ಮೂವರು ಕಲೆತು ಮಾತಾಡಿಕೊಳ್ಳುತ್ತಿದ್ದುದು ಕಣ್ಣಿಗೆ ಬೀಳಬಹುದಾಗಿತ್ತು. ಕೆಲವರು ಎಲೆಯಡಿಕೆ ಜಗಿಯುತ್ತಿದ್ದರೆ ಇನ್ನು ಕೆಲವರು-ಅವರು ಸಾಬರು ಎಂದು ಅನಿವಾರ್ಯವಾಗಿ ಹೇಳಬಹುದಿತ್ತು-ಬೀಡಿ ಸೇಯುತ್ತಿದ್ದರು. ಮತ್ತೆ ಕೆಲವರು ಮಂಗಳೂರು ನಶ್ಯ ಸೇಯುವುದೊ ಮಡ್ಡಿ ನಶ್ಯ ತಿಕ್ಕುವುದೋ ಅಂತಹ ವಿರಾಮಶೀಲ ಕಾರ್ಯಗಳಲ್ಲಿ ತೊಡಗಿದ್ದರು
ಕಣ್ಣಾ ಪಂಡಿತರ ಮನೆಯ ಮುಂದೆ ಕಂಬಳಿಕೊಪ್ಪೆ ಹಾಕಿಕೊಂಡು ನಿಂತಿದ್ದ ಒಬ್ಬನು ಹಾದಿಯಲ್ಲಿ ಮುಂದೆ ಬರುತ್ತಿದ್ದ ಪಯಣಿಗರಲ್ಲಿ ಒಬ್ಬರನ್ನು ಗುರುತಿಸಿ, ಬಗ್ಗಿ, ಎರಡೂ ಕೈ ಜೋಡಿಸಿ “ಅಡ್ಡಬಿದ್ದ, ಐಗಳಿಗೆ, ಸಿಂಬಾವಿ ಕರಸಿದ್ದ” ಎಂದನು.
“ಎಲ್ಲ ಸುಖವಾಗಿದ್ದಾರೇನೋ?…. ಗುತ್ತಿ ಮನೇಲಿ ಇದಾನಷ್ಟೆ?” ಎಂದು ಹೊಲೆಯನ ಯೋಗಕ್ಷೇಮ ವಿಚಾರಿಸಿದರು. ಅನಂತಯ್ಯ.
ಗುತ್ತಿಯ ಅಪ್ಪ ಸಿಂಬಾವಿ ಕರಸಿದ್ದ ಮೋರೆ ಸಣ್ಣಗೆ ಮಾಡಿಕೊಂಡು, ಮಗ ಸೊಸೆಯನ್ನು ಕಟ್ಟಿಕೊಂಡು ದೇಶಾಂತರ ಹೋದುದನ್ನು ಸಾವಧಾನವಾಗಿ ಹೇಳುತ್ತಾ ಸುಖ ದುಃಖ ತೋಡಿಕೊಂಡನು. ಅವನಿಗೆ ಎರಡು ಸಮಾಧಾನದ ಮಾತು ಹೇಳಿ, ಕನ್ನಡ ಜಿಲ್ಲೆಯಿಂದ ಅದೇ ತಾನೆ ಹಿಂತಿರುಗುತ್ತಿದ್ದ ಐಗಳು ಅನಂತಯ್ಯ ನಾಲ್ಕು ಹೆಜ್ಜೆ ಕನ್ನಡ ಜಿಲ್ಲೆಯಿಂದ ಅದೇ ತಾನೆ ಹಿಂತಿರುಗುತ್ತಿದ್ದ ಐಗಳು ಅನಂತಯ್ಯ ನಾಲ್ಕು ಹೆಜ್ಜೆ ಮುಂದುವರಿದಿದ್ದರು. ಕರೀಂಸಾಬರ ಮಳಿಗೆಯಲ್ಲಿದ್ದ ಗುಂಪು ಸಸಂಭ್ರಮವಾಗಿ ಕೂಗಿತು: “ಓಹೋಹೋ! ಊರಿಗೆ ಹೋಗಿದ್ದ ಐಗಳ ಸವಾರಿ ಈಗ ಬರ್ತಾ ಇರೋ ಹಾಂಗೆ ಕಾಣ್ತದಲ್ದಾ?”
ಅನಂತಯ್ಯ ನೋಡಿದರು. ಬೀಡಿ ಸೇಯುತ್ತಿದ್ದ ಗುಂಪಿನಲ್ಲಿ ಪುಡಿಸಾಬಿ, ಲುಂಗಿಸಾಬಿ, ಅಜ್ಜೀಸಾಬಿ ಎಲ್ಲ ಇದ್ದರು. ತುಸು ಎತ್ತರದಲ್ಲಿ ವ್ಯಾಪಾರ ಕೊಡುವವನ ಕೂರುವ ಮಣೆಪೀಠದ ಮೇಲೆ ಕರ್ಮೀನ್ ಸಾಬರೂ ಮಂಡಿಸಿದ್ದರು. ಸರಿಸಮಾನ ಸ್ಕಂಧನಂತೆ ಚೀಂಕ್ರ ಸೇರೆಗಾರನೂ ಅಲ್ಲಿಯೆ ಬಳಿ ಕೂತಿದ್ದುದೂ ಕಾಣಿಸಿತು: “ಎಲ್ಲಾ ಏನೋ ಒಂದು ಮಸಲತ್ತಿಗೆ ಸೇರಿಕೊಂಡಹಾಗೆ ಕಾಣ್ತದೆ, ನೋಡು” ಎಂದು ತಮ್ಮ ಪಕ್ಕದಲ್ಲಿ ಬರುತ್ತಿದ್ದ ಕಿಟ್ಟಯ್ಯ ಸೆಟ್ಟರಿಗೆ ಹೇಳಿ, ಮಳಿಗೆಯವರ ಸ್ವಾಗತಕ್ಕೆ ಮಂದಸ್ಮಿತ ಮಾತ್ರ ಉತ್ತರವನ್ನೀಯುತ್ತಾ ಮುಂದುವರಿದರು ಅನಂತಯ್ಯ.
ಅವರು ಅಂತಕ್ಕನ ಮನೆಯ ಹತ್ತಿರಕ್ಕೆ ಬರುವಷ್ಟರಲ್ಲಿ ಶ್ರಾವಣಬೈಗು ಮೋಡಗಪ್ಪಾಗತೊಡಗಿತ್ತು. ಸುಪರಿಚಿತ ಪ್ರದೇಶಕ್ಕೆ ಪ್ರವೇಶಿಸುವಂತೆ, ಉಣುಗೋಲಿನ ಪಕ್ಕದಲ್ಲಿದ್ದ ತಡಬೆಯನ್ನು ಹತ್ತಿ ದಾಟಿ, ಅನಂತಯ್ಯ ತಮ್ಮ ಹಿಂದೆಯೆ ತಡಬೆಯನ್ನು ಕಿಟ್ಟಯ್ಯ…. ತಡಬೆಮೇಲೆ ಜಾರಿ ಬಿದ್ದೀಯಾ?….ಮಳೇಲಿ ಮರದ ದಿಂಡಿನ ತುಂಬಾ ಹಾಸುಂಬೆ ಕಟ್ಟಿದೆ, ಹುಷಾರಾಗಿಳಿ….”
ಅವರ ಹಿಂದೆ ಸಾಮಾನು ಹೊತ್ತು ಬರುತ್ತಿದ್ದ ಗಟ್ಟದ ತಗ್ಗಿನ ಆಳುಗಳಿಬ್ಬರು ತಡಬೆ ಹತ್ತಿ ಇಳಿಯುವ ಗೋಜಿಗೆ ಹೋಗದೆ, ಉಣುಗೋಲಿನ ಗಳುಗಳನ್ನು ಸರಿಸಿ ನಾಯಿ ಬೊಗಳಿತು. ಕೊರಗನು ಬಂದ ಆಗಂತುಕರನ್ನು ಗುರುತಿಸುವ ಮೊದಲೆ ಒಳಗೆ ಓಡಿ ಸುದ್ದಿ ಕೊಟ್ಟನು. ಹೊರಗೆ ಜಗಲಿಗೆ ಬಂದ ಅಂತಕ್ಕ “ಅಂತೂ ಕಡೆಗೂ ಬಂದಿರಲ್ಲ?”
ಕಿಟ್ಟಯ್ಯ ವಯಸ್ಸಿನಲ್ಲಿ ಇನ್ನೂ ಇಪ್ಪತೈದನ್ನೂ ದಾಟಿರಲಿಲ್ಲ. ಅಷ್ಟರಲ್ಲಿಯೆ ಅವನಿಗೆ ಎರಡು ಮದುವೆಗಳಾಗಿ ಇಬ್ಬರು ಹೆಂಡಿರೂ ತೀರಿಕೊಂಡಿದ್ದರು. ಮೊದಲನೆಯ ಹೆರೆಗೆಯ ಅನಂತರವೆ ತೀರಿಕೊಂಡಿದ್ದಳು. ಎರಡನೆಯವಳಿಗೆ ಒಂದು ಹೆಣ್ಣೂ ಹುಟ್ಟಿದ ಒಂದೂವರೆ ವರ್ಷದೊಳಗಾಗಿ ಮತ್ತೊಂದು ಗಂಡು ಹುಟ್ಟಿ, ಬಾಲೆ ಬಾಣಂತಿಯರು ಅದನ್ನೆಲ್ಲ ತಿಳಿದಿದ್ದ ಅಂತಕ್ಕ, ಅನಂತಯ್ಯ ಊರಿಗೆ ಹೋಗುವಾಗ್ಸ, ಅವರೊಡನೆ ಹೇಳಿಕಳಿಸಿದ್ದಳು, ಕಿಟ್ಟಯ್ಯನನ್ನೂ ತಮ್ಮ ಜೊತೆಯಲ್ಲಿ ಕರೆತರಲು. ತಕ್ಕ ಮಟ್ಟಿಗೆ ಹೊಟ್ಟೆಬಟ್ಟೆಗೆ ಏನೂ ಕಡಿಮೆಯಿಲ್ಲದಷ್ಟು ಆಸ್ತಿವಂತನಾಗಿದ್ದ ಸೋದರಳಿಯನಿಗೆ ಕಾವೇರಿಯನ್ನು ಕೊಟ್ಟು ಮದುವೆಮಾಡಿ, ಜನರ ಬಾಯಿಗೆ ಬೀಳುವುದನ್ನು ತಪ್ಪಿಸಿಕೊಳ್ಳುವ ಉದ್ದೇಶ ಅಂತಕ್ಕಗೆ.
“ಅವಳೇನು ಸಣ್ಣ ಹುಡುಗಿಯೆ? ಮದುವೆ ಮಾಡಿದ್ದರೆ ಮೂರು ಮಕ್ಕಳ ತಾಯಿ ಆಗುತ್ತಿದ್ದಳು! ಆದರೂ ಸುಮ್ಮನೆ ಚೆಲ್ಲು ಹರಿಯುತ್ತಿರುತ್ತಾಳೆ…. ಪರಿಕಾರ ಹಾಕುತ್ತಿದ್ದಾಗ ಹೇಗೆ ಆಡುತ್ತಿದ್ದಳೊ ಹಾಗೆಯೆ ಆಡುತ್ತಿರುತ್ತಾಳೆ ಕಂಡಕಂಡವರೊಡನೆ… ತೆಳ್ಳಗೆ ಬೆಳ್ಳಗೆ ಚೆನ್ನಾಗಿ ಇದ್ದಾಳೆ ಎಂದು ಎಲ್ಲರೂ ಅವಳನ್ನು ಮುದ್ದುಮಾಡುವವರೆ ಆಗಿದ್ದಾರೆ…. ಏನ್ನಾದರೂ ಒಂದಾದರೆ ಕಿಸಾಕೊಳ್ಳಿ ಆವಾಗ ಗೊತ್ತಾಗುತ್ತದೆ, ಅಂತಕ್ಕಗೆ ಋತುವಾದ ಮೇಲೆ ಹೆಣ್ಣು ಮಕ್ಕಳನ್ನು ಮದುವೆ ಮಾಡದೆ ಇಷ್ಟು ದಿನ ಯಾರಾದರೂ ಮನೆಯಲ್ಲಿ ಇಟ್ಟುಕೊಳ್ಳೂತ್ತಾರೆಯೇ?….”ಹೀಗೆಲ್ಲ ಜನರು ಆಡಿಕೊಳ್ಳತೊಡಗಿದ್ದರು, ಕಾವೇರಿಯ ವಿಚಾರವಾಗಿ
ಆ ವಿಷಯದಲ್ಲಿ ತಾಯಿ ಮಗಳಿಗೆ ಸೂಕ್ಷ್ಮವಾಗಿ ಎಚ್ಚರಿಕೆ ಕೊಟ್ಟಿದ್ದಳು, ನಿಜ. ಆದರೆ ಒಡೆಯರೂ ಅನ್ನದಾತರೂ ಕಷ್ಟಕ್ಕೆ ಬೇಕಾದವರೂ ಆಗಿ, ಹಿಂದಿನಿಂದಲೂ ತನಗೂ ತನ್ನ ಬಾಳದೆ ಹೋದ ಗಂಡ ಸುಬ್ಬಣ್ಣ ಸೆಟ್ಟರಿಗೂ ಆಪ್ತರಾಗಿದ್ದ ಶ್ರೀಮಂತ ಮನೆತನದ ಗೌರವಸ್ಥ ಯುವಕರು, ಬೆಟ್ಟಳ್ಳಿ ಕಲ್ಲಯ್ಯಗೌಡರ ಮಗ ದೇವಯ್ಯನಂಥವರು, ಮನೆಗೆ ಬಂದರೆ ಬೇಡ ಅನ್ನುವುದಕ್ಕಾಗುತ್ತದೆಯೆ? ಬಹುಕಾಲದ ಪರಿಚಯದಿಂದ ಸ್ನೇಹಪೂರ್ವಕವಾಗಿ ಮಾತಾಡಿಸಿದರೆ, ವರ್ತಿಸಿದರೆ, ಏನನ್ನಾದರೂ ಸ್ನೇಹಪೂರ್ವಕವಾಗಿ ಉಡುಗೋರೆ ತಂದಿದ್ದರೆ, ಬೇಡ ಎಂದು ನಿಷ್ಟುರವಾಗಿ ಹೇಳುವುದಕ್ಕಾಗುತ್ತದೆಯೇ? ಮಗಳ ಮೇಲೆ ಮೂರು ಹೊತ್ತು ಕಾವಲು ಕೂರುವುದಕ್ಕಾಗುತ್ತದೆಯೇ? ಎಷ್ಟಂದರೂ ಅವಳೂ ಪ್ರಾಯಕ್ಕೆ ಬರುತ್ತಿರುವ ಹುಡುಗಿ. ಪ್ರಾಯದ ಹುಡುಗರೊಡನೆ, ಒಂದೆರಡು ವಿನೋದದ ಮಾತಾಡಿ, ಕುಶಾಲು ಮಾಡುವುದು ಬೇಡ ಎಂದರೆ, ಮೇಲುಮೇಲಕ್ಕೆ ಹೂ ಅಂದರೂ, ನಿಜವಾಗಿಯೂ ಸುಮ್ಮನಿರುತ್ತಾಳೆಯೇ?…. ತನ್ನ ಪ್ರಾಯದ ಕಾಲದಲ್ಲಿ ಅಂತಹ ಅನುಭವಗಳಿಗೆ ಒಳಗಾಗಿದ್ದ ಅಂತಕ್ಕನ ಅಂತರಂಗ ಇನ್ನೂ ಮುಂದುವರಿದು ಹೇಳಿಕೊಂಡಿತ್ತು: ಸುಮ್ಮನಿರಲು ಖಾರ, ಉಪ್ಪು, ಹುಳಿ ತಿನ್ನುವ ಮನುಷ್ಯ ಮಾತ್ರದವರಿಗೆ ಸಾಧ್ಯವೇ?”
ಆವೊತ್ತು ರಾತ್ರಿ ಅಳಿಯನ ಉಪಚಾರಾರ್ಥವಾಗಿ ಔತಣದ ಊಟ ಸಿದ್ದವಾಗುವುದೇ ಹೊತ್ತಾಯಿತು. ಅದರಲ್ಲಿ ಕಾವೇರಿ ತಾಯಿಗೂ ಕೊರಗನಿಗೂ ನೆರವಾದಳು. ಆದರೆ ಅದು ಮನಃಪೂರ್ವಕವಾಗಿ ಆಗಿರಲಿಲ್ಲ. ಮೊದಲನೆಯದಾಗಿ, ಅಂದಿನ ರಾತ್ರಿಯೆ ಮಿಶನ್ ಸ್ಕೂಲಿನಲ್ಲಿ ತನಗೆ ಪುಡಿಸಾಬರು ಉಂಗುರ ಕೊಡುವುದೆಂದು ಗೊತ್ತಾಗಿದೆ ಎಂಬುದನ್ನು ಚೀಂಕ್ರ ಮಧ್ಯಾಹ್ನವೆ ತಿಳಿಸಿಹೋಗಿದ್ದನು. ಅನಿರೀಕ್ಷಿತವಾಗಿ ಬಂದಿದ್ದ ಅತಿಥಿಗಳಿಂದ ಅದಕ್ಕೆಲ್ಲಿ ಭಂಗವುಂಟಾಗುತ್ತದೆಯೋ ಎಂಬ ಅಶಂಕೆ ಕಾಡತೊಡಗಿತ್ತು ಕಾವೇರಿಯನ್ನು. ಎರಡನೆಯದಾಗಿ, ತನಗೆ ಸ್ವಲ್ಪವೂ ಇಷ್ಟವಿಲ್ಲದ ಕಿಟ್ಟಯ್ಯಸೆಟ್ಟಿಯನ್ನು ತನ್ನ ಗಂಡನಾಗುವಂತೆ ಮಾಡಲು ಸಂಚು ಮಾಡಿದ್ದಾರಲ್ಲಾ ಎಂಬುದು. ಕಿಟ್ಟಯ್ಯನನ್ನು, ಅವನು ಮದುವೆಯಾಗುವ ಮುನ್ನ ಹುಡುಗನಾಗಿದ್ದಾಗ ನೋಡಿದ್ದಳು. ಅವನ ಉಬ್ಬು ಹಲ್ಲು, ಕೋಳಿಯ ಕುತ್ತಿಗೆಯಂತೆ ಉದ್ದವಾಗಿದ್ದ ಕುತ್ತಿಗೆ, ಗಳುವಿನಂತಿದ್ದ ಸಪುರ ಕಾಲು-ಇವೆಲ್ಲ ಅವಳಿಗೆ ಹಿಡಿಸಿರಲಿಲ್ಲ. ಅದರಲ್ಲಿಯೂ ದೇವಯ್ಯನಂಥವರ ಭದ್ರಾಕಾರ ಮತ್ತು ಸ್ಪುರದ್ರೂಪಗಳನ್ನು ನೋಡಿ ಮೆಚ್ಚಿದ ಅವಳಿಗೆ ಕಿಟ್ಟಯ್ಯ ಜಿಗುಪ್ಸೆಗೆ ಕಾರಣನಾಗಿದ್ದನು. ಆಗೊಮ್ಮೆ ವಿನೋದಕ್ಕಾಗಿ ಅವಳ ತಾಯಿ “ನಮ್ಮ ಕಿಟ್ಟಯ್ಯನನ್ನು ಮದುವೆಯಾಗ್ತಿಯೇನೆ?” ಎಂದು ಕೇಳಿದ್ದಕ್ಕೆ, “ಅವನ್ನ ಮದುವೆಯಾಗುವುದಕ್ಕಿಂತ ಹಾಳುಬಾವಿಗಾದ್ರೂ ಹಾರುತ್ತೀನಿ!” ಆಮೇಲೆ ಕಿಟ್ಟಯ್ಯ ಕನ್ನಡ ಜಿಲ್ಲೆಯಲ್ಲಿಯೆ ಮದುವೆಯಾಗುವ ಸುದ್ದಿ ಕೇಳಿ, ತನಗೆ ಶನಿ ತೊಲಗಿತಲ್ಲಾ ಎಂದು ಸಂತೋಷಪಟ್ಟಿದ್ದಳು. ಅವನ ಮೊದಲನೆ ಹೆಂಡತಿ ಹೆತ್ತು ಸತ್ತಾಗಲೂ ಕಾವೇರಿಗೆ ಹೆದರಿಕೆಯಾಗಿತ್ತು, ಮತ್ತೆ ಎಲ್ಲಿ ತನಗೆ ಶನಿ ತಗಲಿಕೊಳ್ಳುತ್ತದೆಯೆ ಎಂದು. ಆದರೆ ಶನಿ ಗಟ್ಟದ ಮೇಲಕ್ಕೆ ಹತ್ತದೆ, ಗಟ್ಟದ ಕೆಳಗೇ ಅವನಿಗೆ ಮತ್ತೊಂದು ಮದುವೆ ಮಾಡಿಸಿತ್ತು ಆ ಎರಡನೆಯ ಹೆಂಡತಿ ಸತ್ತು ಎರಡು ಮೂರು ವರ್ಷಗಳಾಗಿದ್ದರೂ ಅವನಿಗೆ ಹೆಣ್ಣು ಸಿಕ್ಕಿಲಿಲ್ಲ ಎಂಬ ಸುದ್ದಿ ಕಾವೇರಿಗೆ ಅನಿಷ್ಟಕರವಾಗಿತ್ತು. ಏಕೆಂದರೆ ಈಗ ಎಲ್ಲರೂ ತನ್ನನ್ನು ಮದುವೆಗೆ ಬಂದ ಹೆಣ್ಣು ಎಂಬ ಅರ್ಥದಲ್ಲಿಯೆ ಕಾಣತೊಡಗಿದ್ದರು. ಅದೂ ಒಂದು ಒಳಕಾರಣವಾಗಿತ್ತು, ಕಾವೇರಿ ಶ್ರೀಮಂತ ಪ್ರತಿಷ್ಠಾವಂತರ ಮನೆತನದವನಾಗಿದ್ದ ದೇವಯ್ಯನಿಗೆ ಹತ್ತಿರ ಹತ್ತಿರ ಸರಿಯುವುದಕ್ಕೆ, ತನ್ನ ಬದಕನ್ನು ಅವನ ಬದುಕಿನೊಡನೆ ಸಾವಿರಪಾಲು ಹರ್ಷದಾಯಕವಾಗಿತ್ತು ಅವಳಿಗೆ-ದೇವಯ್ಯಗೌಡರು ಇಟ್ಟುಕೊಂಡವಳಾಗಿರುವುದು! ಅದರಲ್ಲಿಯೂ ಬಂದ ನೆಂಟರಿಗಾಗಿ ಹರಿವಾಣದಲ್ಲಿ ಇಟ್ಟಿದ್ದ ಎಲೆಡಕೆ ಹಾಕಿಕೊಂಡು ಜಗಿಯುತ್ತಿದ್ದ ಕಿಟ್ಟಯ್ಯಸೆಟ್ಟಿಯ ಹುಳುಹಿಡಿದು ವಿಕಾರವಾಗಿ ಅಸ್ತವ್ಯಸ್ತ ಕಾವೇರಿಗೆ ಅಮೇಧ್ಯ ಮೆಟ್ಟಿದ್ದಕ್ಕಿಂತಲೂ ಅಸಹ್ಯಕರವಾಗಿ ತೋರಿತ್ತು ತಾಯಿಯ ಆ ಸೋದರಳಿಯನೊಡನೆ ಒಡಬಾಳು.
ರಾತ್ರಿ ಊಟವಾಗುವುದಕ್ಕೆ ಮೊದಲೂ ಆಮೇಲೆಯೂ ಅಂತಕ್ಕ ಅನಂತಯ್ಯ ಕಿಟ್ಟಯ್ಯರು ಲೋಕಜೀವನ, ಗೃಹಕೃತ್ಯ ಮತ್ತು ಬಂಧು ಬಾಂಧವರು, ಭೂತ ಮತ್ತು ಭವಿಷ್ಯತ್ತು-ಅನೇಕ ವಿಷಯ ಮಾತಾಡುತ್ತಿದ್ದರು. ತಾವು ತಮ್ಮ ಮುದಿತಾಯಿಯನ್ನು ನೋಡಲು ಊರಿಗೆ ಹೋದಮೇಲೆ ಕೋಣುರು, ಹೂವಳ್ಳಿ, ಹಳೆಮನೆ, ಸಿಂಭಾವಿ, ಬೆಟ್ಟಳ್ಳೀ ಮತ್ತು ಮೇಗರವಳ್ಳಿಗಳಲ್ಲಿ ಜರುಗಿದ ಸಂಗತಿಗಳನ್ನೆಲ್ಲ ಕೇಳಿ ಕೇಳಿ, ಮತ್ತೆ ಮತ್ತೆ ಪ್ರಶ್ನೆಹಾಕಿ, ತಿಳಿದುಕೊಂಡರು. ಮುಕುಂದಯ್ಯ ಹೂವಳ್ಳಿಗೆ ಮನೆಅಳಿಯನಾಗಿ ಹೋಗಿ ನೆಲಸಿರುವುದನ್ನೂ, ಕೋಣುರು ಮನೆ ಜಮೀನುಗಳ ಹಿಸ್ಸೆ ತಮ್ಮ ಆಗಮನಕ್ಕಾಗಿಯೆ ಇದಿರು ನೋಡುತ್ತಿರುವ ವಿಚಾರವನ್ನು ಕೇಳಿದಾಗ ಅವರು ದೀರ್ಘಕಾಲ ಚಿಂತಾಮಗ್ನರಾಗಿದ್ದರು. ಅಂತಕ್ಕ ಅವರ ಮುದಿ ಅಬ್ಬೆಯ ಯೋಗಕ್ಷೇಮವನ್ನು ವಿಚಾರಿಸಿದಾಗ ಅವರು ಹೇಳಿದರು ಹನಿಗಣ್ಣಾಗಿ: ‘ಅಂತೂ ಅದು ನಾನು ಹೋಗುವವರೆಗೆ ಕಾದಿದ್ದುದೇ ನನ್ನ ಪುಣ್ಯ. ನಾನು ಬರುವುದನ್ನೆ  ಕಾಯುತ್ತಿತ್ತೆಂದು ತೋರುತ್ತದೆ ಅದರ ಜೀವ. ನಾನು ಹೋದ ಮರುದಿವಸವಲ್ಲ ಅದರ ಮರುದಿವಸವೆ ಅದರ ಪ್ರಾಣ ದೇವರ ಪಾದ ಸೇರಿತು! ಅದರದ್ದೇ ದಿನಾಗಿನ ಬಜ್ಜಗಿಜ್ಜ ಎಲ್ಲಾ ಪೂರೈಸಿ ಬರುವುದೇ ಇಷ್ಟು ತಡವಾಯಿತು. ರಂಗಪ್ಪಗೌಡರು ಏನು ತಿಳಿದುಕೊಂಡಿದಾರೆಯೋ?…”ಅನಂತಯ್ಯ ಕುಂಡೆಗೆ ಕಾಲು ಮುಟ್ಟಿಸಿಯೆ ಬಿಟ್ಟ!” ಎಂದು ಎಷ್ಟು ಜನರ ಕೈಲಿ ಆಗಲೆ ಹೇಳಿಬಿಟ್ಟಿದ್ದಾರೆಯೋ?”
ಆ ಮಾತುಕತೆಗಳಲ್ಲಿ ಬಹುಬಾಲು ಕಾವೇರಿಗೆ ನೀರಸವಾಗಿತ್ತು: ಕೆಲವು ಪಾಲು ಆಯಾ ಸಂದರ್ಭದ ಅಜ್ಞಾನದಿಂದಾಗಿ ಅರ್ಥವಾಗಿರಲಿಲ್ಲ. ಆದರೆ ಕಿಟ್ಟಯ್ಯಸೆಟ್ಟರನ್ನು ಮೇಗರವಳ್ಳಿಗೆ ಕರೆತಂದಿದ್ದ ಮುಖ್ಯಕಾರಣದ ವಿಷಯದಲ್ಲಿ ಮಾತ್ರ ಕಾವೇರಿ ಅನಾಸಕ್ತೆಯಾಗಿರಲು ಸಾಧ್ಯವಿರಲಿಲ್ಲ. ತನ್ನನ್ನು ಅವನಿಗೆ ಕೊಟ್ಟು ಲಗ್ನಮಾಡುವ ವಿಚಾರ, ಸ್ವಲ್ಪವೂ ಸಂದೇಹಕ್ಕೆ ಅವಕಾಶವಿಲ್ಲದೆ, ದೃಡವಾಗಿ ನಿರ್ಧರಿಸಲ್ಪಟ್ಟಿದೆ. ಎಂಬುದು ಅವಳಿಗೆ ಮರಣದಂಡನೆ ವಿಧಿಸಿದಷ್ಟು ಸುಸ್ಪಷ್ಟವಾಗಿತ್ತು. ಅವಳಿಗೆ ಏನು ಮಾಡುವುದು ತೋರಲಿಲ್ಲ. ಬೋನಿನೊಳಗೆ ಸಿಕ್ಕಿಬಿದ್ದ ಇಲಿಯಂತೆ ಅವಳ ಮನಸ್ಸು ಸುಮ್ಮನೆ ಅತ್ತಿಂದಿತ್ತ ಇತ್ತಿಂದತ್ತ ಪರಿದಾಡತೊಡಗಿತ್ತು. ಇದ್ದಕ್ಕಿದ್ದ ಹಾಗೆ ಅವಳಿಗೆ ಹೂವಳ್ಳಿ ಚಿನ್ನಕ್ಕನ ನೆನಪಾಯಿತು. ತನ್ನದಕ್ಕಿಂತಲೂ ಹೆಚ್ಚಿನ ಸಂಪ್ರದಾಯಬದ್ದವಾದ ಬೋನಿನಲ್ಲಿ ಸಿಕ್ಕಿಕೊಂಡಿದ್ದ ಅವರು ಮದುವೆ ನಿಶ್ಚಯವಾಗಿ ಇನ್ನೇನು ಲಗ್ನದ ಮುಹೂರ್ತವೂ ಹತ್ತಿರ ಬಂತು ಎನ್ನುವಾಗಲೂ, ಹೇಗೆ ಧೈರ್ಯಮಾಡಿ ಆ ಅನಾಹುತದಿಂದ ತಪ್ಪಿಸಿಕೊಂಡಿದ್ದರು ಎಂಬುದನ್ನು ನೆನೆದಳು. ಅವರಿಗಿಂತಲೂ ಹೆಚ್ಚು ಸ್ವತಂತ್ರ ವಾತಾವರಣದಲ್ಲಿ ಬೆಳೆದಿರುವ ತನಗೆ, ಒದಗಲಿರುವ, ಆದರೆ ಇನ್ನೂ ಸ್ವಲ್ಪ ದೂರವಾಗಿರುವ, ಅನಾಹುತದಿಂದ ಪಾರಾಗಲು ಏಕೆ ಸಾಧ್ಯವಿಲ್ಲ?.
ಹಿಂದೊಮ್ಮೆ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರು ಐಗಳು ಅನಂತಯ್ಯನವರೊಡನೆ ಹುಲಿಕಲ್ಲು ಗುಡ್ಡ ಹತ್ತಿ, ಪ್ರಜ್ಞೆತಪ್ಪಿ, ದೋಲಿಯಲ್ಲಿ ತಮ್ಮ ಮನೆಗೆ ಬಂದಿದ್ದಾಗ, ತನ್ನ ತಾಯಿಯೊಡನೆ ಮಾತಾಡುತ್ತಾ, ಚಿನ್ನಕ್ಕನ್ನನ್ನು ಸಿಂಬಾವಿ ಭರಮೈಹೆಗ್ಗಡೆಯವರಿಗೆ ಕೊಟ್ಟು ಲಗ್ನವಾಗುವ ವಿಷಯದ ಪ್ರಸ್ತಾಪ ಬಂದಾಗ, ಅಂತಕ್ಕ ಹೂವಳ್ಳಿ ಚಿನ್ನಮ್ಮಗೂ ಕೋಣುರು ಮುಕುಂದಯ್ಯನಿಗೂ ಬಾಲ್ಯದಿಂದಲೂ ಇರುವ ಪ್ರಣಯ ಸಂಬಂಧದ ನೆನಪು ಮಾಡಿದಾಗ, ಮುದುಕ ಹೆಗ್ಗಡೆಯವರು ಹೇಳಿದ್ದ ಮಾತೂ ಮಾತಿನ ರೀತಿಯೂ ನೆನಪೂ ಮಾಡಿದಾಗ, ಮುದಕ ಹೆಗ್ಗಡೆಯವರು ಹೇಳಿದ್ದ ಮಾತೂ ಮಾತಿನ ರೀತಿಯೂ ಕಾವೇರಿಯ ಮುಂದೆ ನಿನ್ನೆಯೊ ಮೊನ್ನೆಯೊ ನಡೆದಂತೆ ಬಂದಿತು! “ಈ ಹುಡುಗರ ಆಟಾನೆಲ್ಲ ಲೆಕ್ಕಕ್ಕೆ ತಂಗೊಂಡ್ರೆ ಅಂದಹಾಗೆ ಆಯ್ತು ಬಿಡು: ಏನು ಮನೇಲಿ ಹೇಳೋರು ಕೇಳೋರು ಹಿರೇರು ದೊಡ್ಡೋರು ಯಾರು ಇಲ್ಲೇನು? ಇವರಿವರೇ ಗೊತ್ತು ಮಾಡಿಕೊಳ್ಳಾಕೆ? ನಾವೇನು ಕಿಲಸ್ತರೆ?…
ಆಗ ಸುಬ್ಬಣ್ಣ ಹೆಗ್ಗಡೆಯವರು ತಾಯಿಯ ಬೆನ್ನ ಹಿಂದೆ ನಿಂತಿದ್ದ ತನ್ನನ್ನೆ ಆ ವಿಚಾರದಲ್ಲಿ ತನ್ನ ಅಭಿಪ್ರಾಯ ಏನು ಎಂದು ಬರಿಯ ವಿನೋದಕ್ಕಾಗಿಯೆ ಕೇಳಿದ್ದರು. ತಾನು ಏನೂ ಉತ್ತರ ಕೊಡದೆ ಮುಂಡಿಗೆಯ ಹಿಂದೆ ಅವಿತುಕೊಂಡಿದ್ದಳು. ಈಗ? ತನಗೇ ಅಂತಹ ಸಂಕಟ ಪ್ರಾಪ್ತಿಯಾದಾಗ? ಕಾವೇರಿ ಚಿಂತಿಸಿದಳು: ಯಾವ ಮುಂಡಿಗೆ ಹಿಂದೆ ಅವಿತುಕೊಳ್ಳುವುದು? ತನ್ನನ್ನು ಮರೆಹೊಗಿಸಿಕೊಳ್ಳುವ ಮುಂಡಿಗೆ ಎಲ್ಲಿದೆ? ಚಿನ್ನಕ್ಕಗಾದರೂ ಮುಕುಂದಯ್ಯ ಇದ್ದರು. ತನಗೆ? ದೇವಯ್ಯಗೌಡರೂ ಉಂಗುರದ ಅನುಮಾನದಿಂದ ವಿಮುಖರಾಗಿಬಿಟ್ಟಿದ್ದಾರೆ!…. ಚೀಂಕ್ರ ಎಲ್ಲರೂ ಮಲಗಿದ ಮೇಲೆ ಹಿತ್ತಲುಕಡೆ ದನದ ಕೊಟ್ಟಿಗೆಯ ಹತ್ತಿರಬಂದು, ದನದ ಕೋಡು ಕಂಬಕ್ಕೆ ಬಡಿದಂತೆ ಸದ್ದು ಮಾಡುತ್ತಾನಂತೆ….ಇವೊತ್ತು ಇವರೆಲ್ಲಾ ಎಷ್ಟು ಹೊತ್ತಿನ ಮೇಲೆ ಮಲಗುತ್ತಾರೋ? ನಾನೂ ಹೊತ್ತಾಗಿ ಮಲಗಿದರೆ? ಎಲ್ಲಿಯಾದರೂ ಚೀಂಕ್ರ ಬರುವ ಸಮಯಕ್ಕೆ ಸರಿಯಾಗಿಒ ನನಗೆ ಜೋರಾಗಿ ನಿದ್ದೆ ಬಂದುಬಿಟ್ಟರೆ? ಇಲ್ಲ, ಇವೊತ್ತು ಏನಾದರೂ ನಿದ್ದೆ ಮಾಡುವುದೆ ಇಲ್ಲ; ಎಚ್ಚರವಾಗಿಯೆ ಇರುತ್ತೇನೆ… ಆ ಸಾಬು ಏನಾದರೂ ಕೆಟ್ಟ ಮನಸ್ಸು ಇಟ್ಟಿದ್ದಾನೆಯೊ? ಏನಾದರೂ ಮಾಡಿಬಿಟ್ಟರೆ? ಏನು ಮಾಡಿಯಾನು ಮಹಾ? ಚೀಂಕ್ರ ಜೊತೆಗಿರುವುದಿಲ್ಲವೆ? ಹಾಗೇನಾದರೂ ಮಾಡಿದರೆ, ಕತ್ತಿಯಲ್ಲಿ ಕಡಿದೆ ಬಿಡುತ್ತಾನೆ ಸಾಬಿಯನ್ನು! ಒಂದು ವೇಳೆ ಸ್ವಲ್ಪ ಮೈಮುಟ್ತಿ ಮುದ್ದಾಡಿದರೂ ಚಿಂತೆಯಿಲ್ಲ…. ಇತರರರೂ ಕೆಲವರು ಹಾಗೆ ನನ್ನನ್ನು ಪ್ರೀತಿಗಾಗಿ ಮುದ್ದಾಡಿಲ್ಲವೆ?…. ಏನಾದರೂ ಆಗಲಿ! ನನ್ನ ಬದಕು ಹಸನಾಗಬೇಕಾದರೆ ಆ ಉಂಗುರ ಮತ್ತೆ ನನ್ನ ಕೈ ಸೇರಬೇಕು. ಇಲ್ಲದಿದ್ದರೆ ಸಾಬಿ ಮಾಡಬಹುದಾದ ಕೇಡಿಗಿಂತಲೂ ಸಾಸಿರಮಡಿ ಕೇಡು ನನಗೆ ಕಟ್ಟಿಟ್ಟ ಬುತ್ತಿ….
ರಾತ್ರಿ ಅವರೆಲ್ಲ ಮಾತು ಮುಗಿಸಿ ಮಲಗುವುದು ತುಸು ಹೊತ್ತೇ ಆಗಿತ್ತು. ಇನ್ನೂ ಹೊತ್ತಾಗುತ್ತಿತ್ತೊ ಏನೊ? ಆದರೆ ಕಿಟ್ಟಯ್ಯಸೆಟ್ಟರು ಪದೇ ಪದೇ ಆಕಳಿಸತೊಡಗಿದ್ದರು. ಎಲಡಕೆ ಹಾಕಿದ್ದ ಕೆನ್ನಾಲಿಗೆಯನ್ನೂ ಹುಳುತಿಂದು ಅಸಹ್ಯವಾಗಿದ್ದ ದಂತಪಂಕ್ತಿಯನ್ನೂ ಪ್ರದರ್ಶಿಸುತ್ತ ಆಕಳಿಕೆಯಿಂದಲೆ ಉಕ್ಕಿದ್ದ ಕಣ್ಣನೀರನ್ನು ಮತ್ತೆ ಮತ್ತೆ ಪಂಚಿಯ ಸೆರಗಿನಿಂದ ಒರೆಸಿಕೊಳ್ಳುತ್ತಿದ್ದರು, ರೋಮಮಯವಾಗಿದ್ದ ತಮ್ಮ ತೊಡೆ ಬುಡದವರೆಗೂ ಕಾಣುವುದನ್ನು ಒಂದಿನಿತೂ ಲೆಕ್ಕಿಸದೆ. ಅದನ್ನು ಕಂಡು ಅನಂತಯ್ಯ ಹೇಳಿದ್ದರು: “ಕಿಟ್ಟಯ್ಯಗೆ ಪೂರ್ತಿ ಸಾಕಾಗಿದೆ, ಹಾದಿ ನಡೆದು. ಅದರಲ್ಲಿಯೂ ಕೊನೆಕೊನೆಗೆ ಸ್ವಲ್ಪ ಓಡಿಓಡಿಯೆ ದೌಡು ಬರಬೇಕಾಯ್ತು, ಕತ್ತಲಾಗೋಕೆ ಮೊದಲೇ ಮನೆ ಸೇರುವ ಅಂತಾ. ಇವೊತ್ತು ಅಮಾಸೆ, ಕದ್ದಿಂಗಳು. ಪೂರಾ ಕೆಟ್ಟಕಾಲವಂತೆ! ರಾತ್ರಿ ಭೂತ ಪಿಶಾಚಿದೆಯ್ಯ ತಿರಗ್ತವೆ ಅಂತಾ ನಮ್ಮ ಕಿಟ್ಟಯ್ಯಗೆ ಪೂರಾ ಹೆದರಿಕೆ!….ನನಗೆ ಕಳ್ಳರ ಹೆದರಿಕೆ; ಇವನಿಗೆ ದೆವ್ವದ ಭಯ…. ಮೇಗರೊಳ್ಳಿಗೆ ಕಾಲಿಟ್ಟಮೇಲೆಯೇ ನಾವು ಮೆಲ್ಲಗೆ ಕಾಲು ಹಾಕಿದ್ದು….”
ಮನೆಯಲ್ಲಿ ನಿ:ಶಬ್ದವಾಗಿತ್ತು; ಕಗ್ಗತ್ತಲೆ ಕವಿದಿತ್ತು. ಮಳೆಗಾಲದ ಅಮವಾಸ್ಯೆಯಾಗಿದ್ದರಿಂದ ಮನೆಯ ಹೊರಗೆ ಯಾವ ವಸ್ತುವನ್ನೂ ಗುರುತಿಸಲು ಅಸಾಧ್ಯವಾಗುವಂತೆ ಕಗ್ಗತ್ತಲೆ ಕವಿದಿರುವಾಗ ಇನ್ನು ಮನೆಯ ಒಳಗೆ ಕೇಳಬೇಕೆ? ಮಲಗಿದ್ದವರು ಉಸಿರೆಳೆದುಕೊಳ್ಳುವ ಸದ್ದೂ ಆ ನಿಃಶಬ್ದ ಕತ್ತಲೆಯ ಬುಸುಗುಟ್ಟುವಿಕೆಯೆಂಬಂತೆ ಭಯಾನಕವಾಗಿತ್ತು. ಕಗ್ಗತ್ತಲೆಯನ್ನೆ ನೋಡುತ್ತಾ ನಿಃಶಬ್ದತೆಯನ್ನೆ ಆಲಿಸುತ್ತಾ ಕಾವೇರಿ ನಿಶ್ಚಲವಾಗಿ ಮಲಗಿದ್ದಳು, ಹಿತ್ತಲುಕಡೆಯ ದನದ ಕೊಟ್ಟಿಗೆಯ ದಿಕ್ಕಿಗೆ ಕಿವಿಯಾಗಿ. ಒಮ್ಮೊಮ್ಮೆ ದನವೂ ಎಮ್ಮೆಯೋ ಸೀನಿದರೆ, ಅಥವಾ ಕೊಳಗಿನ ಸದ್ದು ಮಾಡಿದರೆ ಕಾವೇರಿಗೆ ಮೈಯೆಲ್ಲ ಬಿಸಿಯಾದಂತಾಗಿ, ಹೊದೆದಿದ್ದ ಶಾಲನ್ನು ಸರಿಸುತ್ತಿದ್ದಳು, ಮೈ ತಣ್ಣಗಾಗಲಿಕ್ಕೆ.
ನಿದ್ದೆ ಮಾಡದಿದ್ದರೆ ಅಥವಾ ನಿದ್ದೆ ಬರದಿದ್ದರೆ ಇರಳು ಅದೆಷ್ಟು ದೀರ್ಘವೋ? ಕಾಯುವ ನಿಮಿಷನಿಮಿಷವೂ ಕಾವೇರಿಗೆ ಯುಗದೀರ್ಘವಾಗಿತ್ತು!
ಬರಬರುತ್ತಾ ಮನಸ್ಸಿನ ನೆಲದಲ್ಲಿ ನಡೆದಾಡುತ್ತಿದ್ದ ಅಲೋಚನೆಗಳು ಕನಸಿನ ನೀರಿನಲ್ಲಿ ತೇಲತೊಡಗಿದವು. ಭವಗಳಿಗಿದ್ದ ಸ್ಥೂಲತೆ ತೊಲಗಿ, ಗರಿ ಹಗುರವಾಗಿ ಕ್ರಮ ತೃಪ್ತಿ ಹಾರಾಡತೊಡಗಿದುವು, ಗುರುಲಘು ಭೇದವಿಲ್ಲದೆ ಅಸ್ತವ್ಯಸ್ತವಾಗಿ ಅಡ್ಡಾಡುವಂತೆ:
ಒಡ್ದಿಯಲ್ಲಿ ಕೋಳಿಯ ಹೇಟೆಯನ್ನು ಹಿಡಿದೆತ್ತಿಕೊಂಡು, ಆ ದಿನವೆ ಇಕ್ಕಲು ಮೊಟ್ಟೆ ಇದೆಯೋ ಇಲ್ಲವೋ ಎಂದು ಕಿರುಬೆರಳು ಹೆಟ್ಟಿ ನೋಡುತ್ತಿದ್ದಾಳೆ….
ಕೊರಗ ಹೇಳುತ್ತಿದ್ದಾನೆ “ಸುಳ್ಳು ಹೇಳೋ, ಸುಕ್ರ, ಅಂದರೆ “ವಾಟೆ ಕೊಳವೀಲಿ ಒಂಬತ್ತು ಆನೆ ಹೋಗಿ, ಮರಿ ಆನೆ ಬಾಲ ಸಿಕ್ಕೊಂಡ್ತು” ಅಂದನಂತೆ!” ಹಿ ಹ್ಹಿ ಹ್ಹಿ ಎಂದು ಫಕ್ಕನೆ ಕಣ್ಣು ಬಿಟ್ಟಳು ಕಾವೇರಿ.
‘ಅಯ್ಯೋ! ನಿದ್ದೆಮಾಡಿಬಿಟ್ಟಿದ್ದೆನಲ್ಲಾ?’ ಎಂದುಕೊಂಡು ಪಕ್ಕದಲ್ಲಿ ಅದೇ ಉದ್ದೇಶದಿಂದ ಇಟ್ಟುಕೊಂಡಿದ್ದ ತಾಮ್ರದ ಚೆಂಬಿನಿಂದ ನೀರು ತೆಗೆದು ಕಣ್ಣುಗಳನ್ನು ಒದ್ದೆ ಮಾಡಿಕೊಂಡಳು
ಮತ್ತೆ ಆಲೋಚನೆ: ಮೊದಮೊದಲು ಸಕ್ರಮ, ತರುವಾಯ ಅಕ್ರಮ:
ನಾಳೆ ಅಲ್ಲ, ನಾಡಿದ್ದಲ್ಲ, ಆಚೆ ನಾಡಿದ್ದು ಗೌರಿಹಬ್ಬಕ್ಕೆ ಮುಂಚೆ ದೇವಯ್ಯಗೌಡರು ಬಂದಾಗ ನನ್ನ ಕೈಲಿ ಉಂಗುರ ಕಂಡು ಬೆರಗಾಗ್ಬೇಕು!… ಬರದೆ ಇರ್ತಾರೆಯೆ? ಹೋದ ವರುಷವು ಗೌರಿ ಹಬ್ಬಕ್ಕೆ ಎರಡು ದಿನ ಇದೆ ಅನ್ನುವಾಗ ಬಂದು, ಈಗ ನಾನು ಹೊದ್ದುಕೊಂಡು ಇರೋ ಶಾಲನ್ನೆ ಕೊಟ್ಟು….ಏನೆಲ್ಲ ಮಾಡಿ ಹೋಗಿದ್ದರಲ್ಲಾ? (ಕಾವೇರಿ ಅದನ್ನು ನೆನೆದು ಪ್ರತ್ಯಕ್ಷವೆಂಬಂತೆ ಚಿತ್ರಿಸಿಕೊಂಡು ಸೊಗಸಿದಳು)….ದೇವಯ್ಯಗೌಡರು ಕಿಲಸ್ತರ ಜಾತಿಗೆ ಸೇರಿದರೆ ನಾನೂ ಸೇರುತ್ತೇನೆ. ಆ ಜಾತಿಯಲ್ಲಿ ಉಂಗುರ ತೊಡಿಸಿದ ಮೇಲೆ ಮದುವೆಯಾದಂತೆಯೆ ಲೆಕ್ಕವಂತೆ! ಪಾದ್ರಿ ಹೇಳಿದ್ದರಲ್ಲವೆ?…. ಪಾಪ, ಚೀಂಕ್ರನ ಮೇಲೆ ಏನೆಲ್ಲ ಹೇಳುತ್ತಿದ್ದರು? ಎಷ್ಟು ಒಳ್ಳೆಯವನು ಅಂವ? ಅವನ ಹೆಂಡತಿಯನ್ನು ಕುತ್ತಿಗೆ ಹಿಸುಕಿ ಕೊಂದ ಎಂದು ಸುದ್ದಿ ಹುಟ್ಟಿಸಿದ್ದರಲ್ಲಾ?….ಮೊನ್ನೆ ಅವನ ಕೈಬೆರಳನ್ನೆ ಕಡಿದಿದ್ದಳಲ್ಲಾ ಯಾವಳೋ ಹಿಡಿಂಬಿ? ಬೆರಳಿಗೆ ಬಟ್ಟೆ ಸುತ್ತಿಕೊಂಡು, ಅಳುತ್ತಾ ನನ್ನ ಹತ್ತಿರ ದುಃಖ ತೋಡಿಕೊಂಡನಲ್ಲಾ? ಪಾಪ, ಅವನ ಮಕ್ಕಳ ಗೋಳು ಬೇಡವಂತೆ!….ನನ್ನ ಹತ್ತಿರ ದೇವಯ್ಯ ಗೌಡರು ಕೊಟ್ಟ ದುಡ್ಡು ಇದೆಯಲ್ಲಾ ಅದನ್ನೆಲ್ಲ ಚೀಂಕ್ರನಿಗೆ ಕೊಟ್ಟುಬಿಡುತ್ತೇನೆ, ಅವನ ಅವನ ಉಪಕಾರಕ್ಕಾಗಿ…. ಏ ಈ ನಾಯಿಗೆ ಏನು ಕಲಿಯೆ? ಹೇಂಟೆ ಮೇಲೆ ಹತ್ತಕ್ಕೆ ಹೊಗ್ತದಲ್ಲಾ!…. ಯೇಸುಸ್ವಾಮಿ ಒಂದೇ ಮೀನನ್ನು ಐದು ಸಾವಿರ ಜನಕ್ಕೆ ಹೊಟ್ಟೆ ತುಂಬ ಹಂಚಿಕೊಟ್ಟನಂತಲ್ಲಾ!…. ತ್ಚೂ! ಬ್ಯಾಡ ಸುಮ್ಮನಿರಿ! ಅಲ್ಲಿಗೆಲ್ಲ ಕೈ ಹಾಕಬ್ಯಾಡಿ!…. ಅಲ್ಲಿಗೆ ಮುತ್ತುಕೊಡಾದು ಬ್ಯಾಡ; ನೀವು ಕಚ್ಚಿಬಿಡ್ತೀರಿ!….
ಕೋಣೆಯ ಮೂಲೆಯಲ್ಲಿ ಕೊಬ್ಬರಿ ಸುಟ್ಟು ಕಟ್ಟಿ ಇಟ್ಟಿದ್ದ ಇಲಿಕತ್ತರಿ ಸಿಡಿದ ಸದ್ದಾಗಿ ಕಾವೇರಿ ಕುಮುಟಿ ಎಚ್ಚೆತ್ತಳು. ಸಿಕ್ಕಿಕೊಂಡಿದ್ದ ಇಲಿ ಚ್ಞಿ ಚ್ಞಿ ಚ್ಞಿ ಎಂದು ಕೂಗಿತು. ಅಭ್ಯಾಸ ಬಲದಿಂದ ಛೇ ಪಾಪ! ಎಂದುಕೊಂಡಳು ಕಾವೇರಿ. ಆದರೆ ಅಷ್ಟರಲ್ಲೆ ಅದರ ಸದ್ದು ನಿಂತಿತ್ತು. ಅದು ಸತ್ತುಹೋಯಿತೆಂದು ಸುಮ್ಮನಾದಳು….
ಯಾಕೆ ಇನ್ನೂ ಚೀಂಕ್ರ ಬರಲಿಲ್ಲ? ಮಳೆ ಬಂದಿತೆಂದು ಸುಮ್ಮನಾಗಿ ಬಿಡುತ್ತಾನೊ? ಆಗ ಮಳೆ ಬಂದಿದ್ದರೇನಾಯ್ತು? ಈಗ ನಿಂತಿದೆಯಲ್ಲ!….ಮೆಲ್ಲಗೆ ಎದ್ದು ಹೋಗಿ ಹಿತ್ತಲು ಕಡೆಯ ಬಾಗಿಲು ತೆರೆದು ನೋಡಲೇ?…ಕಾವೇರಿಗೆ ಅನಂತಯ್ಯ ಹೇಳಿದ್ದು ನೆನಪಾಯಿತು: ಇವೊತ್ತು ಅಮವಾಸ್ಯೆ, ಕೆಟ್ಟಕಾಲ. ಭೂತ ಪಿಶಾಚಿ ತಿರುಗುತ್ತವೆ? ಒಬ್ಬಳೆ ಎದ್ದು ಹೋಗಿ ಬಾಗಿಲು ತೆರೆದಾಗ ಭೂತಗೀತ ಕಾಣಿಸಿಕೊಂಡರೆ?….ಈಗ ಬೇಡ, ಚೀಂಕ್ರ ಬಂದಮೇಲೆ ಹೋಗ್ತೀನಿ. ಆಗ ಧೈರ್ಯಕ್ಕೆ ಅಂವ ಇರ್ತಾನೆ!….
ದನದ ಕೋಡು ಕಂಬಕ್ಕೆ, ಅದು ಕುತ್ತಿಗೆ ತೀಡುವಾಗ ತಗುಲಿ, ಹೊಡೆದಂತೆ ಸದ್ದು ಕೇಳಿಸಿತು!
ಕಾವೇರಿ ಸರಕ್ಕನೆ ಹಾಸಗೆಯಲ್ಲಿ ಎದ್ದು ಕುಳಿತಳು. ಆಲಿಸಿದಳು. ಹೌದು, ಚೀಂಕ್ರನೆ ಇರಬೇಕು. ಎದೆ ಢವಢವನೆ ಹೊಡೆದುಕೊಂಡಿತು. ಉಸಿರಾಟ ಹೆಚ್ಚಿತು….ನಿಜವಾಗಿಯೂ ಬಂದೇ ಬಿಟ್ಟನೆ? ನಿಜವಾಗಿಯೂ ನಾನು ಅವನ ಸಂಗಡ ಒಬ್ಬಳೆ ಈ ರಾತ್ರಿ ಕಗ್ಗತ್ತಲೆಯಲ್ಲಿ ಹೋಗಿ ಸಾಬಿಯ ಕೈಲಿ ಉಂಗುರ ಹಾಕಿಸಿಕೊಂಡು ಬರಬೇಕೆ?….ಇದುವರೆಗೂ ಭಾವಮಾತ್ರವಾಗಿದ್ದು ಕಲ್ಪನಾ ಸ್ವಾರಸ್ಯದ ಸಾಹಸದಂತೆ ಆಕರ್ಷಣೀಯವಾಗಿದ್ದುದು ಈಗ ವಾಸ್ತವವಾಗಿ ನಡೆಯಲಿರುವ ಲೋಕಚರಿತವಾಗಿ ಇದಿರುನಿಂತಾಗ ತರಳೆ ಕಾವೇರಿಗೆ ಹೆದರಿಕೆಯಾಗತೊಡಗಿತು. ಪಕ್ಕದ ಕೋಣೆಯಲ್ಲಿ ಮಲಗಿದ್ದ ತಾಯಿಯನ್ನು ಎಬ್ಬಿಸಿದರೆ? ಏನು ಮಾಡುತ್ತಿದ್ದರೂ ತಾಯಿಯನ್ನೆ ಕೇಳಿ, ಕಾರ್ಯಾಚರಣೆ ಕೈಕೊಳ್ಳುವ ಸಮಯ ಬಂದಾಗ ದಿಕ್ಕು ತೋರದಂತಾಗಿ ಹಾಸಗೆಯ ಮೇಲೆ ಕುಳಿತೆ ಇದ್ದಳು, ಕಾಲು ಏಕೊ ಸೋತುಬಂದಂತಾಗಿತ್ತು…. ಆದರೆ? ತುಸು ನಿಂತಿದ್ದ ಆ ಕೋಡುಬಡಿಯುವ ಸದ್ದು ಮತ್ತೆ ಕೇಳಿಸಿತು….ಉಂಗುರ….ದೇವಯ್ಯಗೌಡರು…. ಕಿಟ್ಟಯ್ಯಸೆಟ್ಟಿ…. ಮದುವೆ…. ಹೂವಳ್ಳಿ ಚಿನ್ನಕ್ಕ….ತಲೆಯೊಳಗೆ ಏನೇನೋ ಸುತ್ತತೊಡಗಿತು…. ಈಗ ಹಿಂಜರಿದರೆ ನಾನು ಕೆಟ್ಟೆ. ನನ್ನ ಬಾಳೆಲ್ಲ ಹಾಳಾಗುತ್ತದೆ!….ಕಾವೇರಿ ದಿಟ್ಟಮನಸ್ಸಿನಿಂದ ಆವೇಶ ಬಂದವರಂತೆ ಹಾಸಗೆಯ ಮೇಲೆ ಎದ್ದುನಿಂತು, ಶಾಲನ್ನೆತ್ತಿ ಸುತ್ತಿ ಹೊದೆದುಕೊಂಡಳೂ.
ಅವಳು ಮಲಗುವಾಗ ದಿನನಿತ್ಯದ ರೂಢಿಯಂತೆ ಗಟ್ಟದ ತಗ್ಗಿನವರ ಉಡುಗೆಯಲ್ಲಿರಲಿಲ್ಲ; ಗಟ್ಟದ ಮೇಲಿನವರಂತೆ ಸೊಂಟಕ್ಕೆ ಸೀರೆ ಬಿಗಿದು ಸುತ್ತಿ, ಗೊಬ್ಬೆ ಸೆರಗು ಕಟ್ಟಿ, ಭದ್ರವಾಗಿ ಉಡುಗೆ ಉಟ್ಟಿದ್ದಳು. ಗಟ್ಟದ ತಗ್ಗಿನ ಉಡುಗೆ ತುಂಬ ಸಡಿಲ ಉಡುಗೆ ಎಂಬುದು ಅವಳ ನಂಬುಗೆ. ಯಾರಾದರೂ ತುಸು ಜಗ್ಗಿಸಿ ಎಳೆದರೂ ಬಿಚ್ಚಿಯೆ ಹೋಗುವ ಸಂಭವ ಹೆಚ್ಚು. ಗಟ್ಟದ ಮೇಲಿನದಾದರೋ, ದಂಡುಕಡಿಯಲು ಹೋಗುವವರ ಸಮವಸ್ತ್ರದಂತೆ, ಬಿಗಿಯಾಗಿ ಭದ್ರವಾಗಿದ್ದು, ಎಂತಹ ಹೋರಾಟದಲ್ಲಿಯೂ ಸಡಿಲವಾಗುವ ಸಂಭವ ಬಹಳ ಕಡಿಮೆ: ಬಿಚ್ಚಿಹೋಗುವುದಂತೂ ಸಾಧ್ಯವೆ ಇಲ್ಲ!….
ಕಾವೇರಿ ಸದ್ದುಮಾಡದೆ ತುದಿಗಾಲಿನಲ್ಲಿ ಮೆಲ್ಲನೆ ತಡವಿ ನಡೆದು, ತಾಳವನ್ನು ಅದಷ್ಟು ಎಚ್ಚರಿಕೆಯಿಂದ ಹಿಂದಕ್ಕೆ ಸರಿಸಿ, ಬಾಗಿಲನ್ನು ಕೀಲು ಸದ್ದಾಗದಂತೆ ತೆರೆದಳು. ಮಳೆಗಾಲದ ಚಳಿಗಾಳಿ ಸುಯ್ಯನೆ ಬೀಸಿತು. ಮತ್ತೆ ಬೇಗನೆ ಬಾಗಿಲು ಹಾಕಿಕೊಂಡು ಹೊರಗಣ ಚಿಲಕವಿಕ್ಕಿದಳು, ಬೀಸುವ ಚಳಿಗಾಳಿಯಿಂದ ಒಳಗೆ ಮಲಗಿರುವವರಿಗೆ ಎಚ್ಚರವಾಗದಿರಲಿಕ್ಕೆ….
ಮುತ್ತಿ ದಟ್ಟಯಿಸಿದ್ದ ಕತ್ತಲೆಯಲ್ಲಿ ವಸ್ತುಪ್ರತ್ಯೇಕತೆ ಕಾಣಿಸುತ್ತಿರಲಿಲ್ಲ. ಆದರೆ ಬಳಿಸಾರಿ ಪಿಸುದನಿಯಲ್ಲಿ ಮಾತನಾಡಿದ ಚೀಂಕ್ರನ ಗುರುತು ಹಿಡಿದು ಅವನ ಹಿಂದೆ ಹೊರಟಳು. ಸುಪರಿಚಿತ ಪ್ರದೇಶದಲ್ಲಿ ಮರ ಗಿಡ ಹುಳುವಿನ ನಡುವೆ, ಕಣ್ಣಿಗೇನೂ ಹಿಂದೆ ಬೇಗಬೇಗನೆ ನಡೆದು, ಅಡ್ಡಬಂದ ಆಗುಂಬೆ ತೀರ್ಥಹಳ್ಳೀ ಹೆದ್ದಾರಿಯನ್ನು ದಾಟಿ, ಮಿಷನ್ ಇಸ್ಕೂಲಿನ ಬಾವಿಯ ಹತ್ತಿರದಿಂದಾಗಿ ಅದರ ಕಟ್ಟಡದ ಮುಂಭಾಗದ ಬಾಗಿಲನ್ನು ಚೌಕಟ್ಟಿಗೆ ಕೈ ಆನಿಸಿ ಹೊಸ್ತಿಲ ಮೇಲೆ ನಿಂತು, ಒಳಗೆ ನೋಡಿದಳು:
ಕಗ್ಗತ್ತಲೇ! ಯಾರೂ ಏನೂ ಕಾಣಿಸುವಂತಿರಲಿಲ್ಲ. ಆದರೆ ಬೀಡಿಯ ವಾಸನೆ ಮತ್ತು ಹೊಗೆ ತುಂಬಿತ್ತು. ನೋಡುತ್ತಿದ್ದಂತೆ, ಸೇದುತ್ತಿದ್ದ ಬೀಡಿಯ ತುದಿಯ ಬೆಂಕಿಯ ಹುಂಡುಗಳು ಕೆಂಪಗೆ ಮಿರುಗಿದವು: ಒಂದಲ್ಲ, ಎರಡಲ್ಲ, ಮೂರು! ಕಾವೇರಿಗೆ ಕೈ ಕಾಲು ನಡುಗಿದಂತಾಗಿ ತುಂಬ ಹೆದರಿಕೆಯಾಯಿತು: ಕುಸಿದು ಬೀಳುತ್ತೇನೆಯೊ ಎಂಬಷ್ಟು ಭೀತಿ! ಅಷ್ಟರಲ್ಲಿ ಯಾರೊ ತನ್ನನ್ನು ಎಳೆದುಕೊಂಡರು. ‘ಉಂಗುರ ಬೇಡವೆ? ಬಾ.  ಯಾಕೆ ಹೆದರಿಕೆ?’ ಎಂದು ಹೇಳಿದಷ್ಟು ಮಾತ್ರ ಕೇಳಿಸಿತ್ತು. ಮುಂದೆ ಅವಳ ಕಿವಿಗೆ ಕೇಳಿಸುವ ಸಾಮರ್ಥ್ಯವೆ ಉಡುಗಿಹೋಗಿತ್ತು. ಮನಸ್ಸೂ ಮಂಜುಗಟ್ಟಿತ್ತು. ಚೀಂಕ್ರನನ್ನು ಕೂಗಿಕೊಂಡಳು. ಆದರೆ ಬಾಗಿಲು ಹಾಕಿತು. ಯಾವುದೋ ಬಲಿಷ್ಠ ಬಾಹು ತನ್ನನ್ನು ತೊಡೆಯ ನಡುವೆ ಅಪ್ಪಿ ಹಿಡಿದು, ಬೆರಳಿಗೆ ಉಂಗುರ ತೊಡಿಸುತ್ತಿದ್ದಂತೆಯೆ ಅವಳಿಗೆ ಪ್ರಜ್ಞೆ ತಪ್ಪಿತ್ತು: ಹಿಂದೆ ದೇವಯ್ಯ ತೊಡಿಸಿದ್ದಾಗ ಅದು ಸಡಿಲವಾಗಿದ್ದು ನುಣುಚಿ ಬಿದ್ದುಹೋಗಿತ್ತು; ಈವೊತ್ತು ಅದು ಭದ್ರವಾಗಿ ಬೆರಳನ್ನಪ್ಪಿ ಕೂತುಬಿಟ್ಟಿತು; ಜನರು ಆಡಿಕೊಳ್ಳುತ್ತಿದ್ದುದ್ದು ಸುಳ್ಳಲ್ಲ: ಹುಡುಗಿ ಈಚಿಚೇಗೆ ಎಷ್ಟು ಹುಲುಸಾಗಿ ಬಾಳೆದಿಂಡಿನಂತೆ ಬೆಳೆದು ನಿಂತಿದ್ದಾಳೆ!”….
* * *
ಬೆಳಗಿನ ಜಾವದ ಚಳಿಗಾಳಿ ಬೀಸಿ ಕಾವೇರಿಗೆ ಮೆಲ್ಲಗೆ ಪ್ರಜ್ಞೆ ಮರಳತೊಡಗಿತು. ಆದರೆ ಇನ್ನೂ ಎಚ್ಚರಾಗಿರಲಿಲ್ಲ. ಮೆಲ್ಲನೆ ನರಳಿದಳು. ಹೊರಳಲು ಯತ್ನಿಸಿದಾಗ ತುಂಬ ನೋವಾಗಿ. ಎಚ್ಚರವೂ ಆಯಿತು. “ಅಬ್ಬೇ! ಅಬ್ಬೇ!” ಕರೆದಳು. ಆದರೆ ದನಿ ಶಬ್ದರೂಪಕ್ಕೆ ತಿರುಗಲು ಸಮರ್ಥವಾಗಿರಲಿಲ್ಲ. ತಾನು ಮನೆಯಲ್ಲಿಯೆ ಮಲಗಿದ್ದೇನೆ ಎಂದೇ ಭಾವಿಸಿ, ಕಣ್ಣು ತೆರೆದು ಸಪ್ರಜ್ಞವಾಗಿ ಈಕ್ಷಿಸಿದಳು. ಬಾಗಿಲು ಪೂರ್ಣವಾಗಿ ತೆರೆದು ಬಿದ್ದಿದ್ದುದರಿಂದ ಬೆಳಗಿನ ಜಾವದ ಪೂರ್ವದ ಬೆಳಕಿನ ಛಾಯೆ ಒಂದಿನಿತು ನುಗ್ಗಿತ್ತು. ತಾನು ಮನೆಯಲ್ಲಿ ಮಲಗಲಿಲ್ಲ ಎಂಬ ಅರಿವು ಮರಳಿತು. ಒಡನೆಯೆ ನಡೆದ ಸತ್ಯಸಂಗತಿ ಸಿಡಿಲಿನಂತೆ ಮನದ ಮೇಲೆರಗಿತು: ಚೀಂಕ್ರನೊಡನೆ ಬಂದದ್ದು….ಉಂಗುರದ ನೆವದಿಂದ ತನ್ನನ್ನು ಸೆಳೆದು ಅಮಾನುಷವಾಗಿ ಪಶುಕ್ರೂರವಾಗಿ….ದ್ದು…ಮತ್ತೆ ಸ್ವಲ್ಪಹೊತ್ತು ಸೋತಂತೆ ಬಿದ್ದಿದ್ದಳು, ಕನ್ಯೆ!….ಮತ್ತೆ ಎಚ್ಚತ್ತು ಕಷ್ಟಪಟ್ಟು ಎದ್ದು ಕುಳಿತಾಗ ಇಸ್ಕೂಲಿನೊಳಕ್ಕೆ ಇನ್ನಷ್ಟು ಬೆಳಕು ನುಗ್ಗಿತ್ತು…ಇಸ್ಕೂಲು….ಅದೇ ಬೆಂಚಿನ ಮೇಲೆ ಕೂತಿದ್ದರಲ್ಲವೆ ಬೀಡಿ ಸೇದುತ್ತಿದ್ದವರು….ನೋಡುತ್ತಾಳೆ, ಕೊರಗ ಹುಡುಗನು ತಮ್ಮ ದನ ಎಮ್ಮೆಗಳಿಗಾಗಿ ಹುಲ್ಲು ದಾಸ್ತಾನು ಮಾಡಿದ್ದ ಸ್ಥಳದಲ್ಲಿಯೆ ತನ್ನನ್ನು ಕೆಡವಿ ಅತ್ಯಾಚಾರ ನಡೆಸಿದ್ದರೆ! ಆ ಹುಲ್ಲನ್ನೆ ಹಾಸುಗೆಯಾಗಿ ಹಾಸಿಬಿಟ್ಟಿದ್ದಾರೆ. ಸೀರೆ ಹರಿದು ಹೋಗಿದೆ. ರಕ್ತದ ಕಲೆ ಹುಲ್ಲಿನ ಮೇಲೆ, ಬಟ್ಟೆಯ ಮೇಲೆ-ತೊಡೆಯಲ್ಲಾ ನೆತ್ತರು. ತುಟಿ ಹರಿದು ಊದಿವೆ. ಕೆನ್ನೆ ಗಾಯಗೊಂಡು ರಕ್ತಮಯ, ಸೆರಗೆಲ್ಲಾ ಚೂರು. ಅಯ್ಯೋ ಎದೆಗಳೂ….! ಅಯ್ಯೋ…. ಅಯ್ಯೋ….ಅಯ್ಯೋ!…. ಕಾವೇರಿಗೆ ತನ್ನ ಶರೀರ ತನ್ನ ಜೀವಕ್ಕೆ ಮೆತ್ತಿಕೊಂಡಿರುವ ಅಮೇಧ್ಯದಷ್ಟು ಅಸಹ್ಯಕರವಾಯಿತು. ಆ ಎಂಚಲನ್ನು ಹ್ಯಾಕ್ ಥೂ ಉಗುಳಿಬೆಡಬೇಕೆಂದು ಮನಸ್ಸು ಉರಿಯತೊಡಗಿತು. ಪಕ್ಕದಲ್ಲಿ ಬಿದ್ದಿದ್ದ ಶಾಲನ್ನು ಎತ್ತಿಕೊಂಡಳು. ಬಾಗಿಲಿಂದ ಹೊರಬಿದ್ದಳು; ಗಾಯ, ನೋವು, ಅವಮಾನ, ಆಯಾಸ ಒಂದೂ ಅವಳಿಗೆ ತಡೆಯಾಗಲಿಲ್ಲ….ಮನೆಯ ಕೋಳಿಹುಂಜದ ಕಡೆಯ ಜಾವದ ಕೂಗು ಕೇಳುತ್ತಿತ್ತು…. ಇನ್ನು ಅವಳು ಯಾರಿಗೂ ಸಿಕ್ಕುವುದಿಲ್ಲ. ದೇವಯ್ಯಗೌಡರಿಗೂ ದೂರ; ಕಿಟ್ಟಯ್ಯನಿಗೂ ದೂರ….ಸ್ಕೂಲಿನ ಬಾವಿಯ ಬಳಿಗೆ ಬಂದಳು… ಅನಂತಯ್ಯ ಹಸುರು ಕೋಲು ಹಿಡಿದು ತೋಡಿಸಿದ್ದ ಬಾವಿ! ಎಷ್ಟೋ ಸಾರಿ ಸಿಟ್ಟು ಬಂದಾಗ ತಾಯಿಗೆ ಹೆದರಿಸಿದ್ದಳು, “ನಾನು ಇಸ್ಕೂಲು ಬಾವಿಗೆ ಹಾರಿ ಬಿಡ್ತಿನೆ” ಎಂದು…. ಶಾಲನ್ನು ಬಾವಿಯ ಬಳಿ ಬಿಚ್ಚಿ ಬಿಸುಟು….
ತನ್ನ ಮೈಯನ್ನು ಕೆಡಿಸಿದ್ದ ಕಡುಪಾಪಿಗಳಲ್ಲಿ ಚೀಂಕ್ರನೂ ಸೇರಿದ್ದನೆಂಬುದು ಕಾವೇರಿಗೆ ಗೊತ್ತಾಗದಿದ್ದುದು ಒಂದು ಭಗವತ್ ಕೃಪೆಯೆ ಆಗಿತ್ತು. ಆದೇನಾದರೂ ಗೊತ್ತಾಗಿದ್ದರೆ ಭಗವಂತನೆ ಸತ್ತು ಹೋಗುತ್ತಿದ್ದನು! ಆತ್ಮಹತ್ಯೆಗೂ ಪ್ರಯೋಜನವಿರುತ್ತಿರಲಿಲ್ಲ. ಸಕಲ ಮೌಲ್ಯ ವಿನಾಶವಾದಮೇಲೆ ಸತ್ತಾದರೂ ಸೇರಿಕೊಳ್ಳಲು ಯಾವ ಪುರುಷಾರ್ಥರೂಪದ ಯಾವ ದೇವರು ತಾನೆ ಇರುತ್ತಿತ್ತು?
* * *
ಅಂತಕ್ಕನ ಮನೆ ನಿರುದ್ವಿಗ್ನವಾಗಿ ನಿಃಶಬ್ದವಾಗಿತ್ತು. ಬೆಳಕು ಬಿಡುತ್ತಿದ್ದ ಹಾಗೆ ಒಡ್ಡಿಯ ಕೋಳಿಗಳು ಹೊರಗೆ ಬರಲು ಒಂದರ ಮೇಲೊಂದು ಒಡ್ದಿಯ ಬಾಗಿಲ ಬಳಿಗೆ ನುಗ್ಗಿ ಸದ್ದುಗೈಯತೊಅಡಗಿದ್ದವು. ಮುರುವನ್ನು ನಿರೀಕ್ಷಿಸಿ, ಹಸಿದ ದನವೊಂದು, ಕೊಟ್ಟಿಗೆಯಲ್ಲಿ ಅಂಬಾ ಎನ್ನುತ್ತಿತ್ತು. ಕೊರಗ ಹುಡುಗ ಎತ್ತು ಹಿತ್ತಲುಕಡೆಯ ಬಾಗಿಲನ್ನು ತೆರೆಯಲು ತಾಳಕ್ಕೆ ಕೈಹಾಕಿ ಹಿಂದಕ್ಕೆಳೆದನು. ತಾಳ ಸರಿಯಲ್ಲಿಲ್ಲ. ನೋಡುತ್ತಾನೆ ತಾಳ ಸರಿದೇ ಇತ್ತು. “ಅಯ್ಯೋ ದೇವರೆ, ರಾತ್ರಿ ತಾಳ ಹಾಕಿಯೆ ಇರಲಿಲ್ಲ?”ಎಂದುಕೊಂಡು ಬಾಗಿಲನ್ನು ಎಳೆದನು. ಬಾಗಿಲು ತೆರೆಯಲಿಲ್ಲ; ಹೊರಗಡೆಯಿಂದ ಚಿಲಕ ಹಾಕಿಬಿಟ್ಟಿದ್ದಾರಲ್ಲ?” ಎಂದುಕೊಂಡು ಮುಂಚೆಕಡೆಯ ಬಾಗಿಲಿಂದ ಹೊರಗೆ ಹೋಗಿ, ಹಿತ್ತಲುಕಡೆಯ ಬಾಗಿಲ ಚಿಲಕ ತೆಗೆದು, ತನ್ನ ದಿನನಿತ್ಯದ ಕೆಲಸಗಳಿ ಶುರು ಮಾಡಿದನು.
ಅಂತಕ್ಕ ಎದ್ದವಳು ಪದ್ಧತಿಯಂತೆ “ಕಾವೇರೀ” ಎಂದು ಕರೆದು ತನ್ನ ಕೆಲಸಕ್ಕೆ ಹೋದಳು.
ಸ್ವಲ್ಪ ಹೊತ್ತಾದ ಮೇಲೆ ತಾಯಿ ಅಡುಗೆಮನೆಯಿಂದಲೆ ಮಗಳನ್ನು ಮತ್ತೆ ಕೂಗಿ ಕರೆದಳು: ‘ಕಾವೇರಿ! ಕಾವೇರೀ!’
ಉತ್ತರ ಬರದಿರಲು ‘ಗಂಡನಾಗುವವನು ಬಂದಿದ್ದರೂ ಸ್ವಲ್ಪವೂ ಉತ್ಸಾಹ ತೋರಿಸದೆ ಉದಾಸೀನವಾಗಿ ಮಲಗಿಬ್ಬಿಟ್ಟಿದ್ದಾಳಲ್ಲಾ! ಏನು ಹಟದ ಹುಡುಗಿಯೋ ಇವಳು?’ ತನ್ನಲ್ಲಿಯೆ ತಾನೆಂದುಕೊಂಡು ಅಂತಕ್ಕ ಮಗಳು ಮಲಗಿದ್ದ ಕೋಣೆಗೆ ಹೋದಳು. ಬರಿದಾಗಿದ್ದ ಹಾಸಗೆಯನ್ನು ಕಂಡು ಮುಖ ತೊಳೆಯುವದಕ್ಕೋ ಬಯಲು ಕಡೆಗೋ ಹೋಗಿರಬೇಕೆಂದು ಭಾವಿಸಿ ಮತ್ತೆ ಅಡುಗೆ ಮನೆಗೆ ಹೋದಳು, ನೆಂಟರಿಗೆ ಬೆಳಗಿನ ಉಪಹಾರ ತಯಾರಿಸಲು.
ಕೊರಗ ಎಮ್ಮೆ ದನಗಳಿಗೆ ಮುರು ಇಡಲು ಸರಿಮಾಡಿ, ಹುಲ್ಲು ತರಲೆಂದು ಇಸ್ಕೂಲಿಗೆ ಓಡಿದನು. ಸ್ಕೂಲು ಕಟ್ಟಡದೊಳಗೆ ಎಮ್ಮೆ ದನ ಬಿಡಬೇಡ ಹುಲ್ಲು ಕೂಡಿಡಬೇಡ ಎಂದು ಪಾದ್ರಿ ಮೇಗರವಳ್ಳಿಗೆ ಬಂದಾಗಲೆಲ್ಲ ಹೇಳಿದ್ದರೂ ಕೊರಗ ಅತಿಕ್ರಮಿಸಿ ಹಾಗೆ ಮಾಡುತ್ತಲೆ ಬಂದಿದ್ದನು. ಜೀವರತ್ನಯ್ಯ ಬಾಗಿಲಿಗೆ ಬೀಗ ತಂದು ಹಾಕುವವರೆಗೂ ಇಸ್ಕೂಲನ್ನು ಹುಲ್ಲು ಕೊಡುವ ಜಾಗವನ್ನಾಗಿ ಬಳಸಲು ನಿಶ್ಚಯಿಸಿ ಬಿಟ್ಟಿದ್ದನು ಅವನು.
ಬಾವಿಯ ಬಳಿಗೆ ಬಂದಾಗ ಗುಲಾಬಿ ಬಣ್ಣದ ಶಾಲು ಬಿದ್ದಿದ್ದುದು ಕಾಣಿಸಿತು. ಕಾವೇರಿಯ ಹತ್ತಿರ ಅಂತಹ ಬಣ್ಣದ ಶಾಲು ಇದ್ದುದನ್ನು ಕಂಡಿದ್ದ, ಮತ್ತು ಮೆಚ್ಚಿ ಆಸೆಪಟ್ಟಿದ್ದ. ಅವನಿಗೆ ‘ಇಲ್ಲಿಗೆ ಯಾಕೆ ಬಂದಿದ್ದಾರೆ ಅವರು? ಇಷ್ಟು ಬೆಳಿಗ್ಗೆ?’ ಅನ್ನಿಸಿತು. ‘ಬಹುಶಃ ಹೊಟ್ಟೆ ಸರಿಯಾಗಿಲ್ಲವೆನೋ?… ಅವರೇ ಇರಬೇಕು ಹೊರಕಡೆಗೆ ಹೋಗಲಿಕ್ಕಾಗಿ ಹಿತ್ತಲುಕಡೆಯ ಬಾಗಿಲು ತೆರೆದು, ಹೊರಚಿಲಕ ಹಾಕಿಕೊಂಡಿದ್ದು’ ಎಂದುಕೊಂಡು ಸುತ್ತಲೂ ನೋಡಿದನು. ಯಾರೂ ಎಲ್ಲಿಯೂ ಇದ್ದ ಚಿಹ್ನೆ ಕಾಣಿಸಲಿಲ್ಲ. ಅವನಿಗೇ ತುಸು ಇಸ್ಸಿ ಅನ್ನಿಸಿತು, ಹಾಗೆ ನೋಡಿದುದ್ದಕ್ಕೆ: ‘ಅವರು ಇಲ್ಲೆ ಎಲ್ಲಿಯಾದರೂ ಮಟ್ಟಿನ ಮರೆಯಲ್ಲಿ ಹೊರಕಡೆಗೆ ಕೂತಿದ್ದರೆ?’ ಅಷ್ಟರಲ್ಲಿ ಕಾಡಿನಿಂದ ಒಂದು ಮೀಂಗುಲಿಗನ ಹಕ್ಕಿ ಕೂಗಿತು: ಮ್ಞೀ! ಮ್ಞೀ! ಮ್ಞೀ! ಮ್ಞೀ! ‘ಹಾಳು ಅಪಶಕುನದಹಕ್ಕಿ! ಎನು ಕೇಡು ಕರೆಯಲು ಒರಲುತ್ತಿದಿಯೋ?’ ಎಂದುಕೊಂಡ ಕೊರಗ ಹೊರಗೆ ಹುಲ್ಲು ತರಲು ಇಸ್ಕೂಲಿನ ಬಾಗಿಲಿಗೆ ಬಂದನು.
ನೋಡುತ್ತಾನೆ, ಬಾಗಿಲು ಆಈ ಎಂದು ಬಾಯಿ ತೆರೆದುಕೊಂಡಿದೆ ‘ಹಾಳು ಸೂಳೆಮಕ್ಕಳು! ಹಾಕಿದ್ದ ಚಿಲಕ ತೆಗೆದು, ಬಾಗಿಲು ಹಾರು ಹೊಡೆದಿಟ್ಟಿದ್ದಾರಲ್ಲಾ? ಕಂಡವರ ದನ ನುಗ್ಗಿಸಿ ಹುಲ್ಲು ತಿನ್ನಿಸಿರಬೇಕು’ ಎಂದು ಶಪಿಸುತ್ತಾ ಒಳಗೆ ದಾಟಿ ನೋಡುತ್ತಾನೆ.
ಹುಲ್ಲು ಕೆದರಿ ಬಿದ್ದಿದೆ. ಏನೇನೊ ವಾಸನೆ: ಬೀಡಿಯ ವಾಸನೆ, ಸಾರಾಯಿ ವಾಸನೆ, ಮಾಂಸದ ಮೇಲೋಗರದ ಕಂಪು! ನೋಡುತ್ತಾನೆ, ಒಂದು ಮೂಲೆಯಲ್ಲಿ ಲಾಟೀನು! ದೀಪ ಕಾಣಬಾರದಷ್ಟು ಸಣ್ಣಗೆ ಮಾಡಿದೆ! ಇನ್ನೂ ನೋಡುತ್ತಾನೆ, ಬಳೆ ಒಡೆದ ಓಡಿನ ಚೂರುಗಳು ಬಿದ್ದಿವೆ! ಮತ್ತೂ ನೋಡುತ್ತಾನೆ, ನೆತ್ತರು, ನೆಲದಮೇಲೆ ಮತ್ತು ಹಾಸಿದ್ದ ಹುಲ್ಲಿನ ಮೇಲೆ! ಕೊರಗನಿಗೆ ಪೂರಾ ದಿಗಿಲಾಯಿತು. ಏನೂ ಅರ್ಥವಾಗಲಿಲ್ಲ. ಹೊರಗೆ ಓಡಿ ಬಂದು, ಶಾಲನ್ನು ಸಮೀಪಿಸಿ, ಸುತ್ತಲೂ ನೋಡಿ ‘ಕಾವೇರಮ್ಮಾ! ಕಾವೇರಮ್ಮಾ!’ ಎಂದು ಕರೆದನು. ಸುತ್ತಣ ಕಾಡು, ಮಳೆಗಾಲದ ಕಡುಹಸರು ಕಾಡು, ಬದ್ಧಭ್ರುಕುಟಿ ಭೀಷಣ ನೀರವವಾಗಿತ್ತು. ದೆವ್ವಕಂಡವನಂತೆ ಶಾಲನ್ನು ಎತ್ತಿಕೊಂಡು ಮನೆಗೆ ಓಡಿ ಓಡಿ ಬಂದನು.
ಕೊರಗ ಹುಡುಗನು ಹೇಳಿದ್ದನ್ನು ಕೇಳಿ, ಅವನು ಕೊಟ್ಟ ಗುಲಾಬಿ ಬಣ್ಣದ ಶಾಲನ್ನು ನೋಡಿ, ಅಂತಕ್ಕಗೆ ದಿಗಿಲು ಬಡಿಯಿತು. ಹೌಹಾರಿ ಕಾವೇರಿಯ ಕೋಣೆಗೆ ಓಡಿದಳು. ಮಗಳ ಹೆಸರು ಹಿಡಿದು ಕೂಗುತ್ತಾ ಕರೆಯುತ್ತ ಮನೆಯಲ್ಲೆಲ್ಲ ಓಡಾಡಿದಳು ಹಿತ್ತಲು ಕಡೆಗೆ ಓಡಿ ಕೊಟ್ಟಿಗೆಯ ಹತ್ತಿರ ಕಾಡಿನ ಬಳಿ ನಿಂತು ಕರೆದಳು, ಮಗಳು ದಿನವೂ ಬಯಲ ಕಡೆಗೆ ಹೋಗುತ್ತಿದ್ದತ್ತ ಮುಖಮಾಡಿ. ಅಂತಕ್ಕನ ರೋದನವನ್ನು ಕೇಳಿ ಅನಂತಯ್ಯ ಕಿಟ್ಟಯ್ಯರೂ ಗಾಬರಿಯಿಂದ ಓಡಿಬಂದರು. ಕೊರಗನಿಂದ ವಿಷಯವನ್ನೆಲ್ಲ ಕೇಳಿ ತಿಳಿದು ಬಾವಿಯ ಬಳಿಗೆ ಶಾಲು ಸಿಕ್ಕಿದ್ದ ಸ್ಥಳಕ್ಕೆ ಓಡಿದರು.
* * *
ಮಗಳ ಹೆಣವನ್ನು ಬಾವಿಯಿಂದೆತ್ತಿ ತಂದು ಮನೆಯಲ್ಲಿ ಮಲಗಿಸಿದಾಗ ಅಂತಕ್ಕನ ಗೋಳು ಹೇಳತೀರದಾಗಿತ್ತು. ದುಃಖ ಉನ್ಮಾದದ ಮಟ್ಟಕ್ಕೇರಿತ್ತು. ಮಗಳು ಕಿಟ್ಟಯ್ಯ ಸೆಟ್ಟಿಯನ್ನು ಮದುವೆಯಾಗಲು ಇಷ್ಟವಿಲ್ಲದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳೆಂದೇ ಅವಳು ನಿರ್ಣಯಿಸಿ ನಂಬಿಬಿಟ್ತಿದ್ದಳೂ. ಆ ಸಂಕಟದ ಉರಿಯಲ್ಲಿ ಅವಳಿಗೆ ಉಚಿತ ಅನುಚಿತದ ಪರಿವೆಯಿರಲಿಲ್ಲ. ಮಗಳ ಸಾವಿಗೆ ಕಿಟ್ಟಯ್ಯಸೆಟ್ಟಿಯೆ ಕಾರಣವಾದನೆಂದು ಅವನನ್ನೂ ಶಪಿಸಿದಳು. ಆ ಶನಿಯನ್ನು ಮನೆಗೆ ಕರೆತಂದರು ಎಂದು ಅನಂತಯ್ಯನನ್ನು ಶಪಿಸಿದಳು. ಮಗಳ ಆ ಘೋರ ನಿರ್ಧಾರಕ್ಕೆ ಮೂಲಕಾರಣವಾದವನು ದೇವಯ್ಯನೇ ಎಂದು ಅತ್ತಕಡೆ ಬಹುದಿನಗಳಿಂದ ಸುಳಿಯದಿದ್ದ ಅವನನ್ನೂ ಹೀನಾಯವಾಗಿ ಬೈದಳು. ಅವರಿಗೆ ಯಾರು ಉಂಗುರ ತೊಡಿಸಲು ಅಪ್ಪಣೆ ಕೊಟ್ಟಿದ್ದರು? ಉಂಗುರ ಕಳೆದುಹೋಯಿತೆಂದು ಮಗಳ ಮನಸ್ಸನ್ನು ಆ ರೀತಿ ನೋಯಿಸಿ ಈ ಅಪಘಾತಕ್ಕೆ ಅವಳನ್ನೇಕೆ ನೂಕಬೇಕಿತ್ತು? ಎಂದೂ ಬಹಿರಂಗವಾಗಿಯೆ ಬೈದೂ ತಲೆ ಚಚ್ಚಿಕೊಂಡಳು.
ಹೆಣದ ಕೈಬೆರಳಲ್ಲಿ ಹರಳುಂಗುರ ಇದ್ದದ್ದನ್ನು ಗಮನಿಸಿದ್ದ ಅನಂತಯ್ಯ, ಕೊರಗನನ್ನು ವಿಚಾರಿಸಿ ನಡೆದ ಸಂಗತಿ ಏನು ಎಂಬುದನ್ನು ಅರಿತ ತರುವಾಯ, ಅಂತಕ್ಕ ರೋದಿಸಿ, ದುಃಖಿಸಿ, ಶಪಿಸಿ, ಎದೆ ಬಡಿದುಕೊಂಡೂ ತಲೆ ಚಚ್ಚಿಕೊಂಡೂ, ಅತ್ತೂ ಅತ್ತೂ ಸೋತುಸುಸ್ತಾಗಿ ತುಸು ತಣ್ಣಗಾದಮೇಲೆ, ಕಾವೇರಿಯ ಕಳೇಬರದ ಕೈಬೆರಳಿನಿಂದ ಹರಳುಂಗುರವನ್ನು ಕಳಚಿ ಅವಳಿಗೆ ನೀಡಿದರು. ಆಗ ಅವಳಿಗುಂಟಾಗಿದ್ದ ಬೆರಗಿಗೆ ಮೇರೆ ಇರಲಿಲ್ಲ., ಮಗಳ ಕೈಗೆ ಉಂಗುರ ಹೇಗೆ ಬಂತು ಎಂದು!
ಉಂಗುರ ಕಳೆದುಹೋಗಿ, ಎಲ್ಲಿ ಹುಡುಕಿದರೂ ಯಾರನ್ನು ಕೇಳಿದರೂ ಅದು ಪತ್ತೆಯಾಗದಿದ್ದಾಗ, ಅಂತಕ್ಕ ಧರ್ಮಸ್ಥಳಕ್ಕೆ ಆಣೆಯಿಟ್ಟುಕೊಂಡಿದ್ದಳು: ‘ಅಣ್ಣಪ್ಪದೇವರಿಗೆ ಶಕ್ತಿ ಇದ್ದಲ್ಲಿ ಉಂಗುರ ಎಲ್ಲಿಗೆ ಹೋಗುತ್ತದೆ ನೋಡುವ!’ ಎಂದು. ಅಣ್ಣಪ್ಪ ಭೂತರಾಯ ಇಂತಹ ಭಯಂಕರ ರೀತಿಯಲ್ಲಿ ಆ ಊಂಗುರವನ್ನು ತನಗೆ ಹಿಂತಿರುಗಿಸುತ್ತಾನೆ ಎಂದು ಆ ಭಕ್ತೆ ಸ್ವಪ್ನದಲ್ಲಿಯೂ ಭಾವಿಸಿರಲಿಲ್ಲ!.
ಅಂತಕ್ಕನ ಮಗಳು ಬಾವಿಗೆ ಬಿದ್ದು ಸತ್ತ ಸುದ್ದಿ ಹಬ್ಬಲು ತಡವಾಗಲಿಲ್ಲ. ಸಹಾನುಭೂತಿ ತೋರಿಸುವ; ದುಃಖದಲ್ಲಿ ಭಾಗಿಗಳಾಗುವ, ಸಮಾಧಾನ ಹೇಳಿ ಸಂತೈಸುವ ಸಲುವಾಗಿ ಮೇಗರವಳ್ಳಿಯ ಪರಿಚಿತರಲ್ಲಿ ಅನೇಕರು ಅಂತಕ್ಕನ ಮನೆಯಲ್ಲಿ ನೆರದಿದ್ದರು. ಅವರಲ್ಲಿ ಒಬ್ಬರಾಗಿದ್ದರು, ಕರೀಂಸಾಬರು. ಅನಂತಯ್ಯ ಹೆಣದ ಬೆರಳಿಂದ ಕಳಚಿದ ಹರಳುಂಗುರವನ್ನು ನೋಡಿ, ಗುರುತಿಸಿ, ಅವರು ಬೆಚ್ಚಿಬಿದ್ದಿದ್ದರು. ಆ ಅನಿಷ್ಟ ಉಂಗುರವನ್ನು ತನ್ನ ತಮ್ಮನ ಮುಖಾಂತರ ಬೆಟ್ಟಳ್ಳಿ ಕಲ್ಲಯ್ಯಗೌಡರಿಗೆ ಮಾರಿಬಿಟ್ಟೆನೆಂದು ತಿಳಿದಿದ್ದರು ಅವರು. ಮತ್ತೆ ಅದು ಕಾವೇರಿಯ ಬೆರಳಿಗೆ ಬಂದದ್ದು ಹೇಗೆ? ಅದು ಹೇಗೆಯೆ ಬಂದದ್ದಾಗಿರಲಿ, ಅದರ ಕೆಡಕು ಮಾಡುವ ಶಕ್ತಿಯ ಅವರ ಸಿದ್ಧಾಂತಕ್ಕೆ ಮತ್ತೊಂದು ನಿದರ್ಶನ ದೊರಕಿದಂತಾಗಿತ್ತು. ಅವರು ಅನಂತಯ್ಯನ ಕಿವಿಗೆ ಪಿಸುಗುಟ್ಟಿದ್ದರು: “ಐಗಳೆ, ಆ ಶನಿ ಉಂಗುರ ಇದ್ದಲ್ಲಿ ಕೇಡು ತಪ್ಪುವುದಿಲ್ಲ. ಪಾಪ, ಅದು ಹೇಗೆ ಬಂದಿತೊ ಆ ಮಗುವಿನ ಕೈಗೆ? ಎಳೆದುಕೊಂಡು ಹೋಗಿ ಅವಳನ್ನು ಬಾವಿಯೊಳಗೆ ಹಾಕಿಬಿಟ್ಟಿತಲ್ಲಾ!”
ಅದನ್ನು ಆಲಿಸಿದ್ದ ಒಬ್ಬನು ಮತ್ತೊಬ್ಬನ ಕಿವಿಯಲ್ಲಿ “ಆ ಹುಡುಗಿಯ ಕೆಟ್ಟಚಾಳಿಯೆ ಮೊದಲಿನಿಂದಲೂ ಹಾಂಗಿರುವಾಗಳು, ಹೌದಾ, ಆ ಉಂಗುರ ಏನು ಮಾಡೀತು?” ಎಂದು ತನ್ನ ನೀತಿಪ್ರಜ್ಞೆಯನ್ನು ಮೆರೆದಿದ್ದನು.
ಕೊರಗ ಹುಡುಗನ ಹೇಳಿಕೆಗಳಿಂದಲೂ, ಇಸ್ಕೂಲಿನ ಒಳಗೆ ತಾವು ಕಂಡಿದ್ದ ದೃಶ್ಯದ ವಿವರಜ್ಞಾನದ ನೆರವಿನಿಂದಲೂ, ಅಲ್ಲಿಯೆ ಸಿಕ್ಕಿದ್ದು, ಬತ್ತಿ ಇಳಿಸಿ ದೀಪ ಸಣ್ಣಗೆ ಮಾಡಿದ್ದ ಲಾಟೀನಿನ ಸಾಕ್ಷಿಯಿಂದಲೂ ಅನಂತಯ್ಯ ಕಾವೇರಿಯ ಸಾವು ಆತ್ಮಹತ್ಯೆಯಲ್ಲ, ಅತ್ಯಾಚಾರದ ತರುವಾಯ ನಡೆದ ಘಟನೆ ಎಂದು ಶಂಕಿಸಿದರು. ಅತ್ಯಾಚಾರದ ಪರಿಣಾಮವಾಗಿ ಹುಡುಗಿ ಪ್ರಜ್ಞೆತಪ್ಪಲು ಅವಳು ಸತ್ತಳೆಂದು ಭಾವಿಸಿಯೋ, ಅಥವಾ ಅವಳು ವಾಸ್ತವವಾಗಿ ತತಪ್ರಾಣೆಯ ಆಗಿದ್ದರಿಂದಲೋ, ಅವಳು ಆತ್ಮಹತ್ಯೆ ಮಾಡಿಕೊಂಡಳು ಎಂಬ ಭಾವನೆ ಹುಟ್ಟಿಸಲು ಶರೀರವನ್ನು ಹೊತ್ತು ತಂದು ಬಾವಿಗೆ ಹಾಕಿರಬೇಕು ಎಂದು ನಿರ್ಧರಿಸಿದರು. ಅವರ ನಿರ್ಧಾರಕ್ಕೆ ಪೋಷಕವಾಗಿ ಮತ್ತೊಂದು ಸಾಕ್ಷಿಯೂ ದೊರೆಯಿತು. ಅಲ್ಲಿ ಸಿಕ್ಕಿದ್ದ ಲಾಟೀನು ಕರ್ಮೀನ್ ಸಾಬರದ್ದು ಎಂದು ಕೊರಗ ಹುಡುಗ ಗುರುತಿಸಿದ್ದು! ಆದರೆ ಕರೀಂಸಾಬರು ತಮ್ಮ ಭಾವೋದ್ವೇಗವನ್ನು ಒಂದಿನಿತು ಹೊರಗೆಡಹದೆ ತಣ್ಣಗೆ ಹೇಳಿದರು: “ಆ ಲಾಟೀನು ನನ್ನದೇನೋ ಹೌದು. ಆದರೆ ಅದನ್ನು ಚೀಂಕ್ರ ಸೇರೆಗಾರ ತೆಗೆದುಕೊಂಡು ಹೋಗಿದ್ದ.”
ಆದರೆ ಅಲ್ಲಿ ನೆರದಿದ್ದ ಗುಂಪಿನಲ್ಲಾಗಲಿ, ಮೇಗರವಳ್ಳಿಯಲ್ಲೆ ಆಗಲಿ ಚೀಂಕ್ರಸೇರೆಗಾರನ ಸುಳಿವು ಎಲ್ಲಿ ಹುಡಕಿದರೂ ಕಾಣಲಿಲ್ಲ.
ಅಂತಕ್ಕ ಮಾತ್ರ, ಐಗಳು ಎಷ್ಟು ಸಕಾರಣವಾಗಿ ವಾದಿಸಿದರೂ, ತನ್ನ ಮಗಳು ಅತ್ಯಾಚಾರಕ್ಕೆ ಒಳಗಾದಳು ಎಂಬ ಅವಮಾನಕರವಾದ ಆಪಾದನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿಬಿಟ್ಟಳು. ಮಗಳ ಮೈಮೇಲೆ ಆಗಿದ್ದ ಗಾಯಗಳನ್ನೂ ಕೆನ್ನೆ ತುಟಿ ಕುಚಗಳಾದಿಯಾಗಿ ಅಂಗೋಪಾಂಗಗಳಲ್ಲಿದ್ದ ಕ್ಷತವಿಕ್ಷತಗಳನ್ನೂ, ಮಗಳು ಬಾವಿಗೆ ಹಾರಿದಾಗ ಬಾವಿಯ ಬುಡದವರೆಗೂ ಇದ್ದ ಸುತ್ತಣ ಕಲ್ಲು ಕಟ್ಟಣೆ ಬಡಿದೂ ಬಡಿದೂ ಆಗಿದ್ದ ಗಾಯಗಳೆಂದೇ ಸಮರ್ಥಿಸಿದಳು: ಮಗಳು ಎಂತಿದ್ದರೂ ಸತ್ತುಹೋಗಿದ್ದಾಳೆ. ಮತ್ತೆ ಬರುವುದಿಲ್ಲ. ಸತ್ತವಳ ಹೆಸರಿಗೆ ಕಳಂಕಾರೋಪಣೆ ಮಾಡಿ ಅವಮಾನಗೊಳಿಸುವುದನ್ನು ತಾಯಿಯ ಕರುಳು ಎಂದಾದರೂ ಸಹಿಸುತ್ತದೆಯೇ?
ಆದರೂ ಐಗಳು ಅನಂತಯ್ಯನವರು ತಮ್ಮ ಕರ್ತವ್ಯವನ್ನು ನೇರವೇರಿಸಿದರು ಅತ್ಯಾಚಾರದ ಮತ್ತು ಕೊಲೆಯ ಸಂಗತಿಗಳನ್ನು ಕಾನೂನಿನ ಸನ್ನಿಧಿಗೆ ಒಯ್ಯುವ ಕ್ರಮ ಜರುಗಿಸಿದರು. ಕಾನೂನಿನ ದೂತರು, ಬೆಟ್ಟಳ್ಳಿ ದೇವಯ್ಯಗೌಡರು ಈ ಮೊದಲೆ ಮೇಗರವಳ್ಳಿ ಸಾಬರಮೇಲೆ ಫಿರ್ಯಾದಿ ಕೊಟ್ಟಿದ್ದನ್ನು ಗಮನಿಸಿ, ತಮ್ಮ ಕರ್ತ್ಯವ್ಯ ನಿರ್ವಹಣೆಯ ಅಂಗವಾಗಿ ಬಂದು ತನಿಖೆ ನಡೆಸಿದಾಗ ಮುಖ್ಯ ಅಪಾದಿತನಾಗಿದ್ದ. ಚೀಂಕ್ರ ಎಲ್ಲಿಯೂ ಪತ್ತೆಯಾಗಲಿಲ್ಲ. ಘಟ್ಟದ ಕೆಳಕ್ಕೆ ಪರಾರಿಯಾಗಿದ್ದಾನೆಂದು ಬರೆದುಕೊಂಡರು. ಆ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಅಪರಾಧವೆಸಗಿ ತಲೆ ತಪ್ಪಿಸಿಕೊಳ್ಳುವವರು ಬ್ರಿಟಿಷರ ಆಡಳಿತಕ್ಕೆ ಸೇರಿದ್ದ ಕನ್ನಡ ಜಿಲ್ಲೆಗೆ ಓಡಿಹೋಗುವುದು ಒಂದು ರಾಜತಂತ್ರದ ರೂಢಿಯಾಗಿತ್ತು! ಪುಡಿಸಾಬಿಯನ್ನು ದಸ್ತಗಿರಿ ಮಾಡಲು ಹುಡುಕಿದಾಗ, ಕರೀಂಸಾಬರು ಹೇಳಿದರು “ನನ್ನ ತಮ್ಮನಿಗೂ ಅಂತಕ್ಕನ ಮಗಳ ಆತ್ಮಹತ್ಯೆಗೂ ಏನೂ ಸಂಬಂಧವಿಲ್ಲ. ಕಾವೇರಿ ಬಾವಿಗೆ ಹಾರಿಕೊಳ್ಳುವುದಕ್ಕೆ ಒಂದು ವಾರದ ಹಿಂದೆಯೇ ಅವನು ವ್ಯಾಪಾರದ ಕೆಲಸದ ನಿಮಿತ್ತವಾಗಿ ಕಾಸರಗೋಡಿನ ಕಡೆಗೆ ಹೋದವನು ಇನ್ನು ಬಂದಿಲ್ಲ.” ತಮ್ಮ ಹೇಳಿಕೆಯ ಸತ್ಯತಾ ಸ್ಥಾಪನೆಗೆ ಬೆಂಬಲವಾಗಿ ಕಾನೂನಿನ ದೂತರ ಕೈ ಬೆಚ್ಚಗಾಗುವಂತೆ ತಕ್ಕ ವ್ಯವಸ್ಥೆಮಾಡಲು ಅವರು ಮರೆಯಲಿಲ್ಲ! ಅಂತಕ್ಕನಂತೂ ತನ್ನ ಮಗಳ ಪರಿಶುದ್ಧ ನಡತೆಯ ವಿರುದ್ಧವಾಗಿರುವ ಎಲ್ಲ ಆರೋಪಣೆಗಳನ್ನೂ ಅಲ್ಲಗಳೆದು ಅವಳ ಅತ್ಮಹತ್ಯೆಯನ್ನೆ ಸಮರ್ಥಿಸಿದಳು. ಪ್ರಬಲ ಸಾಕ್ಷಿಯ ವಸ್ತುವಾಗಿದ್ದ ಹರಳುಂಗರವನ್ನು ವಿಚಾರಿಸಲು, ಆ ಅನಿಷ್ಟ ವಸ್ತುವನ್ನು ಧರ್ಮಸ್ಥಳದ ದೇವರ ಪೆಟ್ಟಿಗೆಗೆ ಹಾಕಿಬಿಡಲು ಕಿಟ್ಟಯ್ಯಸೆಟ್ಟರ ಕೈಲಿ ಕಳುಹಿಸಿದನೆಂದು ಹೇಳಿದಳು. ಕಾನೂನಿನ ಕೈಯಿಂದ ತಲೆ ತಪ್ಪಿಸಿಕೊಳ್ಳಲು ಉಂಗುರವೂ ಘಟ್ಟದ ಕೆಳಕ್ಕೆ ಹಾರಿತ್ತು! ಧರ್ಮಸ್ಥಳದ ದೇವರ ಸನ್ನಿಧಿಯ ರಕ್ಷೆಗೆ! ಕಡೆಗೆ ಪೋಲೀಸರು ಬರಿ ಕೈಯಲ್ಲಿ ಹೇಗೆ ಹೋಗುವುದು ಎಂದು, ಕೇಡಿಗಳೆಂದು ಪ್ರಸಿದ್ಧರಾಗಿದ್ದ ಸಾಬಿಗಳ ಪಟ್ಟಿಯಲ್ಲಿದ್ದ ಅಜ್ಜೀಸಾಬಿ ಮತ್ತು ಲುಂಗೀಸಾಬಿ ಇಬ್ಬರನ್ನು ಕೋಳಹಾಕಿ ತೀರ್ಥಹಳ್ಳಿ ಲಾಕಪ್ಪಿಗೆ ಕರೆದುಕೊಂಡು ಹೋದರು.
*****