ನನ್ನ ಪುಟಗಳು

24 ಮೇ 2018

ಶ್ರೀರಾಮಾಯಣ ದರ್ಶನಂ: ಲಂಕಾ ಸಂಪುಟಂ: ಸಂಚಿಕೆ 11 - ಸಫಲಮಾಯ್ತಾ ರಾಯಭಾರಂ


ಮಲೆಯ ಓರೆಯ ಮರಗಳಿಡುಕುರೊಳ್, ಗದ್ಗದಿಸಿ
ದುಮುಕುತಿರ್ದೊಂದು ಗಿರಿನಿರ್ಝರದ ತೀರದೊಳ್,
ಪುದುಗಿದುಟಜದೊಳೋದುತಿರ್ದನು ವಿಭೀಷಣಂ
ತನ್ನ ಮಗಳನಲೆ ಕಳುಹಿರ್ದೋಲೆಯಂ. ಕದಂ
ನಸು ತೆರೆದುದನಿಲ ಸಂಚರಕೆ ಹಣತೆಯ ಸೊಡರ
ಕುಡಿ ಕುಣಿದು, ಕುಣಿಸಿದುದು ಮೊಗವೆತ್ತಿದಾತನ
ಬೃಹಚ್ಛಾಯೆಯಂ. ಗರ್ಜಿಸುತ್ತುರುಳ್ವರ್ಬಿದನಿ
ಪೊರಗಿಟ್ಟಣಿಸಿದಂಧಕಾರವ ಕಡೆವವೋಲುರ್ಕ್ಕಿ
ಬಂದತ್ತು. ಪಣೆ ಸುರ್ಕಿ ನೋಡುತಿರೆ, ಬಾಗಿಲೊಳ್
ಕಂಡನಾಳ್. ಕಣ್ ಪ್ರಶ್ನೆಗಾತನ್ ತುಳಿಲ್ ಗೆಯ್ದು ೧೦ಬಿನ್ನಯ್ಸಿದನು ಬರವನಪರಿಚಿತರಾ! ಕುತುಕ
ಚಿತ್ತನ್ ವಿಲೋಕಿಸುತ್ತಿರೆ, ದೊಂದಿವೆಳಗಂ
ಸಮರ್ಪಿಸಿ ನಿಶೀಥಿನಿಯ ವಶಕೆ, ದಾಂಟಿದರಗಂ
ಇರ್ವರ್ ಸುಧೀರಗಮನದ ವಿದೇಶವೇಷದ
ಕಪಿಧ್ವಜರ್!
ಕೈಮುಗಿದರಿಗೆ ವಿನಯ ವಿನಿಮಯಂ
ಗೆಯ್ದಾ ವಿಭೀಷಣಂ ತೋರ್ದಾಸನದಿ ಕುಳ್ತು,
ಹರುಷದೆಳನಗೆವೆರಸಿ ನೋಡಿದರು, ಬೆರಗಾಗಿ,
ರಾಕ್ಷಸ ಕುಲೋತ್ತಮನ ವದನದೋಜಸ್ಸತ್ತ್ವ
ಸುಭಗ ಗಾಂಭೀರ್ಯಮಂ. ಅನಲೆ ಬರೆದೋಲೆಯಿಂ
ರಾಜಕೀಯ ಸ್ಥಿತಿಯನಾಮೂಲಾಗ್ರಮಖಿಲಮಂ
ಅರಿತಾ ವಿಭೀಷಣಂ ಸ್ಮಿತಸೌಮ್ಯನಿಂತೆಂದು ೨೦ಬೆಸಗೊಂಡನಾ ಬಂದವರ ಪೆರ್ಮೆಯಂ ಗ್ರಹಿಸಿ
ಚಲನ ಚಾರಿತ್ರದಿಂ:
ಧನ್ಯಮಾಯ್ತೆನ್ನ ಕುಟಿ
ಮಾನ್ಯರಾಗಮನದಿಂ!”
ಮಾನ್ಯನಿರ್ಪುದರಿಂದೆ
ಮುನ್ನಮೆಯೆ ಧನ್ಯಮಾಗಿರ್ಪ ಧರ್ಮಸ್ಥಳಕೆ
ಪುಣ್ಯಕಾರ್ಯಕೆ ಪುಣ್ಯಪಕ್ಷದ ನೆರಂ ಬೇಡಿ
ಯಾತ್ರೆವಂದಿರ್ಪೆವೆನೆ ನಿನ್ನೆಂದುದರ ನನ್ನಿ
ನೆರೆವುದಿನ್ನುಂ, ಮಹಾಸತ್ತ್ವ,” ವಾನರ ಕವಿಯ
ವಾಗ್ ಧ್ವನಿಯ ಮೈತ್ರಿಗಾಹ್ಲಾದಿಸುತ್ತಾ ದೈತ್ಯ
ಸಾಗರ ಸುಧೋಪಮ ವಿಭೀಷಣಂ ಮೈಂದಂಗೆ
ಸುಪ್ರಸನ್ನಂ: ೩೦
ನಿನ್ನ ಸೌಜನ್ಯಮೇ ಪೇಳ್ವುದಯ್
ನೀಂ ತಂದ ಕಜ್ಜದೊಳ್ಪಂ. ನಗೆಯ ಬೆಳ್ಮಡಿಯೆ
ಸಕ್ಕಿಯೊರೆದಿದೆ ಬಗೆಯ ಸಯ್ಪಿಂಗೆ. ನಿಮ್ಮವರ್
ನಮ್ಮ ಲಂಕೆಗೆ ವೈರಿಗಳ್ ತಾಮಾದೊಡಂ
ವೈರಮೇಳದು ನಿನ್ನ ಮೇಲೆನಗೆ.”
ಲಂಕೆಗಲ್ತಾಂ
ವೈರಿಗಳ್; ಪಾಪಕ್ಕಧರ್ಮಕ್ಕೆ.”
ಸ್ವಹಿತಕ್ಕೆ
ಪುಣ್ಯವರ್ಣಂ ಬಳಿದು, ಧರ್ಮನಾವನಿತ್ತು,
ತನ್ನ ಪಕ್ಷಕೆ ಲೋಕದನುಕಂಪಮಂ ಸೆಳೆದು,
ಬಲ ಸಂಗ್ರಹಂಗೈದು ಶತ್ರುವೈನಾಶಮಂ
ಸಾಧಿಪ್ಪುದಲ್ತೆ ಪದ್ಧತಿ ರಾಜತಂತ್ರಕ್ಕೆ?
ಪಲ್ಲವಿಯನುಲಿಯುತಿಹೆ ನೀನೆಲ್ಲರುಲಿವುದನೆ, ೪೦
ವಾನರೋತ್ತಮ!”
ಮೈಂದನೆಂ! ದ್ವಿವಿದನೀತಂ
ತನೂಜಂ ಸುಷೇಣ ಸೇನಾಪತಿಗೆ; ಮೇಣೆನಗೆ
ಪರಮ ಗೆಳೆಯಂ; ತಾನುಮೊಂದಕ್ಷೌಹಿಣಿಯನಾಳ್ವ
ಗೌರವಕ್ಕರ್ಹನಾಗಿರ್ಪ್ಪಂ! ಲಘುತ್ವಮಂ
ಕಾಣನೀತಂ, ಅನೇಕಾನೇಕಪ ಮಹದ್ಬಲ
ಸಮನ್ವಿತಂ! ಬಂದೆವಾವ್ ಸುಗ್ರೀವನಾಜ್ಞೆಯಿಂ,
ರಾಘವಾಪೇಕ್ಷೆಯಂ ನಿನಗರುಹೆ, ದೈತ್ಯವರ.
ನಿನ್ನ ಕೀರ್ತಿಯ ವಾರ್ತೆಗಿದಿರಾಡುತಿದೆ ನಿನ್ನ
ಜಹ್ವೆ ನಿನ್ನೆಲ್ಲ ಕಥೆಯಂ ವಿವರಿಸಿದ ಶುಕಂ ೫೦
ಪುಸಿವೇಳ್ದನೇಂ? ಶರಗುಲ್ಮನಿತ್ತುರುವ ಶಿಕ್ಷೆಗೆ
ಒರಲ್ದನೇಂ ತನ್ನೆರ್ದೆಯ ಕೌಟಿಲ್ಯಮಂ? ಮೇಣ್
ದಶಾನನಂ ನಿನ್ನನೆಮ್ಮಂ ವಂಚಿಸಲ್ಕೆಂದೆ
ತೋರ್ಕೆಯಂತಃಕಲಹಮಂ ರಚಿಸಿ, ಶುಕನವೊಲೆ
ಬೇಹುಗಾರಂ ಗೆಯ್ದು, ನಿರಸನಂ ಗೆಯ್ದಿರ್ಪನೇಂ
ಲಂಕೆಯಿಂ? — ಅಲ್ತಲ್ತು! ನಯನ ಸಾತ್ತ್ವಿಕ ಕಾನ್ತಿ,
ಮೊಗದೊಜೆ, ಮೇಣ್ ದ್ವನಿಯ ಧೈರ್ಯಂ, ಇವೆಲ್ಲಮುಂ
ಬಯ್ಯುತಿವೆ ನನ್ನೂಹೆಯಂ. — ಸ್ವಹಿತಮೇಂ ನನಗೆ
ಮೇಣ್ ದ್ವಿವಿದನೀತಂಗೆ ಇಲ್ಲಿ, ಈ ಲಂಕೆಯೊಳ್,
ಪೇಳ್, ವಿಭೀಶಣ? ಕಪಿಧ್ವಜ ಕುಲಕೆ ನೆಲದ ತೃಷೆ, ೬೦ರಾಜ್ಯ ರಚನಾಕಾಂಕ್ಷೆ, ಬಾಯ್ಕೇಳಿಪಾಸೆಗಳ್‌
ಬಹು ದೂರಮಿಂದುಮೆಂದುಂ. ವಾನರೇಂದ್ರಂ
ಧರಾಜಾತೆಯಾಣ್ಮಂಗೆ ನೆರವಾದುದೀ ನಿಮ್ಮ
ಲಂಕೆಯಂ ಗೆಲ್ದು ಭೋಗಿಸಲಲ್ತು. ನೀನೆಲ್ಲಮಂ
ಬಲ್ಲೆ. ರಾವಣನಿದಿರ್ ನೀನೆಮ್ಮ ಸಲುವಾಗಿ
ಪೇಳ್ದುದಕ್ಕಿಂ ಮಿಗಿಲನೊರೆಯಲಾರೆನ್. — ಪೆಣ್
ಪಾಣ್ಬೆಯಾದದೊಡಮವಳನಿಚ್ಛೆಗೆ ವಿರುದ್ಧಮ್
ಕವರ್ದುಯ್ಯೆ ಶಿಕ್ಷೆಗರ್ಹಂ. ಪತಿವ್ರತೆಯರ್ಗೆ
ಆರಾಧನಾ ಪ್ರತಿಮೆಯೊಲ್ ಪೂಜ್ಯೆಯಾಗಿರ್ಪ
ದೇವಸಮ ರಘುಕುಲ ಲಲಾಮನಾ ಭಾರ್ಯೆಯಂ ೭೦
ಕಳ್ದುಯ್ದ ನೀಚಂಗದಾವುದಕ್ಕುಮೊ ಬಿದಿಯೆ
ಬರೆದಿರ್ಪುದೆನೆ, ನೀನುಮಾನುಮದನೋದುವುದೆ
ಸಾಧ್ಯಕಾರ್ಯಂ. ತಿದ್ದಲಕ್ಕುಮೆ, ವಿವೇಕನಿಧಿ,
ಪೇಳ್? ನೀಂ ತಟಸ್ಥಮಿರು ಮೇಣ್ ದಶಗ್ರೀವಂಗೆ
ನೆರಂಬೋಗು, ರಾಮನ ವಿಜಯವೀಧಿಗೆ ವಿಧಿಯೆ
ಕಿಂಕರ ಶಿಲ್ಪಿ. ವಾನರರ ಸೇನೆಗನ್ಯರ ನೆರಂ
ಜಯಪೀಠಮಲ್ತು, ಬೀಸುವ ಚಾಮರಂ! — ಕೇಳ್.
ಮಹಾಪ್ರಾಜ್ಞ, ದುರಿತವನರಿಯುತದಂ ತ್ಯಜಿಸುತ್ತೆ
ದೂರಕೆ ಸರಿದ ಮಾತ್ರದಿಂ ಕೈಸಾರ್ವುದೇಂ ಸಯ್ಪು?
ದೇವನಟ್ಟುವ ಕೃಪಾ ದೂತರ್ಗೆ ಕಿವಿಗೊಟ್ಟು, ೮೦
ಪುಣ್ಯ ಪಕ್ಷದಿ ನಿಂತು, ಕರ್ಮಂಗೆಯ್ಯದೆಯೆ ಸಿದ್ಧಿ
ಲಭಿಸುವುದೆ? ನಾಂ ಪೇಳ್ವುದಿದು ಬರಿ ಸಾಮ್ಯಮಲ್ತು;
ಕಂಡೊರ್ಗೆ ಕಡು ದಿಟಂ ಕಾಕುತ್‌ಸ್ಥನಂ!”
ಕೆಳ್ದು,
ಕಪಿ ಕವೀಂದ್ರನ ಭಾವದೀಪ್ತ ವಾಕ್‌ತೀರ್ಥದೊಳ್
ಮಿಂದನಲೆಯಯ್ಯನ ಬಗೆಯ ಕಣ್ಗುಣ್ಮಿದತ್ತು
ಮಗಳೆಡೆಯ ಮೂರ್ತಿ ಸೀತಾದೇವಿಯಾ, ಸುಯ್ದು,
ಕಣ್ಗೆ ಬಂದೊಂದಶ್ರು ಬಿಂದುವಂ ಹಿಂಗಿಸುತೆ
ಕರವಸ್ತ್ರದಿಂ, ಮೈಂದನಂ ದೈನ್ಯದಿಂ ನೋಡಿ
ಇಂತೆಂದನಾ ಇಂದ್ರಜಿತುಪಿತನವರಜಂ:
ನೀನ್
ಪೇಳ್ದುದನಿತುಂ, ಮೈಂದ, ಕಟುವಾದೊಡಂ ದಿಟಂ. ೯೦
ರಘೂದ್ವಹ ಮಹಾ ಸತೀ ಮೈಥಿಲಿಯ ರಕ್ಷಣೆಗೆ
ಮಡದಿಯಂ ಮಗಳಂ ನೆವಂ ಪೇಳ್ದು ನಗರಿಯೊಳ್
ಬಿಟ್ಟು ಬಂದಿರ್ಪೆನ್ನ ಈ ಕುದಿಬಗೆಯನರಿಯದೆಯೆ
ಕ್ರೂರ ವಾಗಸಿಪತ್ರದಿಂದೆನ್ನ ಹೃದಯಮಂ
ಸೀಳುತಿರ್ಪ್ಪಯ್. ದುರಿತದಿಂ ನಿವಾರಿಸಲೆಮಗೆ
ಕೈಲಾಗದಿರೆ ದುರಿತದಿಂ ದೂರಮಿರ್ಪುದುಂ
ನಿವಾರಣಾ ಸಮರ್ಥರಿಗೆ ಸಾಹಾಯ್ಯಮೈಸೆ?
ಪೇಳ್, ದ್ವಿವಿದ, ನೀಂ. ಕಪಿಧ್ವಜರೊಡನೆ ಕೂಡಿ ನಾಂ
ಪೆತ್ತ ತಾಯ್ಗೆಣೆಯೆಮ್ಮ ಪುಟ್ಟಿದೂರಂ ಪಾಳ್ಗೆಯ್ಸೆ
ದುರ್ಯಶೋ ನರಕದೊಳ್ ಚಿರಂ ಬೀಳ್ವೆನೈಸಲೆ? ೧೦೦
ಪೊಲ್ಲಮಂ ಗೆಯ್ದನಣ್ಣಂ; ತೊರೆದೆನದರಿಂದೆ,
ತಿದ್ದಲೆಲ್ಲಮನೆಸಗಿ ಸೋಲ್ತು. ಪಗೆಯೊಡವೆರೆದು
ಸ್ವಜನಸ್ವದೇಶಂಗಳಂ ವೈರಿವಶಮಾಳ್ಪವೊರ್
ಕ್ಷುದ್ರ ವಿದ್ರೋಹಿಯಲ್ತಾಂ. ಧರ್ಮಕ್ಕೆ ಜಯಮಕ್ಕೆ
ಎಂದಾ ಜಗಚ್ಚೈತನ್ಯಮಂ ಪ್ರಾರ್ಥಿಸುತ್ತಿಲ್ಲಿ
ತಪಂಗೈಯ್ವದೆನ್ನಾಶೆ.”
ತಪದ ಮಹಿಮೆಯೊಳೆನಗೆ
ವಿಪುಲಮೈ ಶ್ರದ್ಧೆ. ಸೀತಾನಾಥನಾಶೆಯನೆ
ನೀನಾಶಿಸಿದೆಯೈಸೆ! ಸೈನ್ಯಶಕ್ತಿಗೆ ಮಿಗಿಲ್
ದಲ್ ಸಂತರಾಶೀರ್ವಾದಮಪ್ರತಿಹತಂ,
ವಿಭೀಷಣಾಖ್ಯ.” ಪರ್ವತಂ ಗುಹಾಧ್ವನಿಗೈವವೋಲ್ ೧೧೦
ಧ್ವನಿಗೈದುದಾಭೀಳ ಕಂಠಮಾ ದ್ವಿವಿದನಾ:
ರಾಮನಾಸೆಗೆ ನಿನ್ನದಿದಿರಲ್ತು. ಲಂಕೆಯೊಳ್
ಬರ್ದುಕಲರ್ಹತೆಯಾಂತುದೆಲ್ಲಮಂ ಪೊರೆಯಲ್ಕೆ
ಪಾರುತಿರ್ಪಂ ನಿನ್ನ ನೆರಮಂ. ಕಪಿಧ್ವಜರ್
ಉತ್ತಮಾನುತ್ತಮಂಗಳನೆಂತುಟರಿವರಯ್?
ನಿಷ್ಪಕ್ಷಪಾತದಿಂ ನಿರ್ಮೂಲನಂಗೈದಪರ್
ಲಂಕಾ ಸಮಸ್ತಮಂ. ನೀನೆಮ್ಮ ಪಕ್ಕಮಿರೆ,
ಅಳಿವುದಧಮಂ, ಉಳಿವುದುತ್ತಮಂ. ನಮಗಾಗಿ
ಬರದಿರ್ದೊಡಂ ನಿನ್ನ ದೇಶಕ್ಕೆ, ಜನಕೆ, ಮೇಣ್
ಧರ್ಮಕೆ ಹಿತಂಗೆಯ್ಯಲೆಂದಾದೊಡಂ ನೀಂ ೧೨೦
ಬರಲ್‌ವೇಳ್ಕುಮಯ್, ಸತ್ತ್ವಶೀಲ.”
ವಿಪುಲ ವಪುವಿಂ
ಸ್ಫುರಿಸಿದಾ ತರ್ಕದ ಸುಸೂಕ್ಷ್ಮತೆಗೆ ತಲೆದೂಗಿದನ್;
ಬಾಗಿದನ್; ಕಿರುನಗೆಗೂಡಿ ನೋಡಿದನ್ ಮೈಂದ
ದ್ವಿವಿದರಂ : “ವಾದ ಮಾತ್ರಕೆ ನುಡಿದುದಾದೊಡಂ
ನೀನೆಂದುದೆನಗೆ ಮಾನ್ಯಂ, ದ್ವಿವಿದ. ಪೊಳ್ತರೆಗೆ
ನಿಮಗೊರೆವೆನೆನ್ನ ನಿರ್ಧಾರಮಂ. ಈಗಳೇಳಿಂ;
ಪಣ್ಪಲಂಗಳ ಬಡವು ನೈವೇದ್ಯಮಂ ಸವಿದು
ಪವಡಿಪೊಂ. ಸಾಗಿತಾಗಳೆ ರಜನಿ ಬಹುಳದೂರಂ.”
ಎನುತ್ತಾ ದಶಗ್ರೀವಸೋದರಂ ಮೇಲೆಳ್ದು,
ಬಾಗಿಲಂ ನಸುತೆರೆದಿಣುಕಿದನ್; “ಶಶಾಂಕಾಕ್ಷ, ೧೩೦
ಬರವೇಳ್ ಹಿರಣ್ಯಕೇಸಿಯಂ.” ಅಣತಿಯನೊರೆದು
ತನ್ನ ನಚ್ಚಿನ ಸೇವಕಗೆ, ತಿರುಗಿ, ಸುಗ್ರೀವ
ದೂತರಿಗೆ : “ಅಮಿತ್ರಗೃಹ ಭೋಜನದೊಳೇನಾನುಮ್
ಆಕ್ಷೇಪಮಿರ್ಪುದೇಂ ನಿಮಗೆ?” “ನೀನಮಿತ್ರನ್?”
ಮೈಂದನೆಂದನ್ ಮುಗುಳ್‌ನಗುತೆ “ನಿನ್ನೊಡನುಣಲ್
ಮಿತ್ರಕುಲರಿರ್ವರುಂ, ಸುಗ್ರೀವ ರಾಘವರ್,
ಮೈತ್ರಿಗೆಳಸುತ್ತಿರಲ್, ನಮಗೆ ದೂತರ್ಗದುವೆ
ದಿಟದಿಂ ಪ್ರಸಾದಮಯ್, ಸಹೃದ್ವರ! ಭೋಜನಂ
ಸ್ನೇಹ ಕಾರಕಮಂತೆ ದೀಪಕಂ!” ಹಾಸ್ಯಕ್ಕೆ
ಮೂವರುಂ ನಕ್ಕರಾ ನಗೆಯೆ ಬೆಸೆದುದು ಅಳಿಸಿ ೧೪೦
ಭೇದವನವರನೆರ್ದೆಯೆರ್ದೆಗೆ.
ಬಂದನನಿತರೊಳ್
ರಾಕ್ಷಸ ತರುಣನೊರ್ವನಕ್ಷಿಗಾನಂದಮಂ
ಪ್ರೋಕ್ಷಿಸುವವೋಲ್. “ವಯೋಮಾನದಿಂ ಕಿರಿಯನ್;
ಪಿರಿಯನಭಿಮಾನದಿಂ; ಪೆಸರ್ ಹಿರಣ್ಯಕೇಶಿ.
ಲಂಕೆಯೊಳಗಿರ್ಪೆಮ್ಮವನ್. ತಂದನನಲೆಯಿಂ,
(ನನ್ನ ಮಗಳಿಂ ಮೇಣ್ ಧರಾತ್ಮಜೆಯ ಶಿಷ್ಯೆಯಿಂ)
ಪತ್ರಮೊಂದಂ ಮಿತ್ರನೆಮಗೆ.” ವಿಭೀಷಣನಿಂತು
ಪರಿಚಯವನುಸುರೆ, ಮೊಗಮರಳಿ ಕೈಮುಗಿದಾ
ಹಿರಣ್ಯಕೇಶಿಗೆ, ಹಸ್ತಲಾಘವನೀಯುತಿರ್ವರುಂ
ವಂದಿಸಿದರಾ ವಾನರರ್. “ಅತಿಥಿಗಳಿವರ್, ೧೫೦
ಹಿರಣ್ಯಕ, ಕಪಿಧ್ವಜ ಚಮೂಪತಿಗಳೆಮ್ಮೆಡೆಗೆ
ನೀತಿಗೈತಂದಿಹರ್. ಮೈಂದನೀತಂ, ಮಹಾ
ಮಧುರಮತಿ, ಮೇಣ್ ವಶ್ಯವಾಕ್. ದ್ವಿವಿದನೀತಂ,
ಬೃಹದ್ ವ್ಯಕ್ತಿ, ಯುಕ್ತಿಶಕ್ತಿಗಳೆರಡರೊಳ್! ನಾಳೆ
ನೀನಿವರೊಡನೆ ಪೋಗವೇಳ್ಕುಂ ರಘೂದ್ವಹನ
ಸನ್ನಿಧಿಗೆ, ನನ್ನ ಪ್ರತಿನಿಧಿಯಾಗಿ. . . . ಅದಂತಿರ್ಕೆ.
ಈಗಳಣೆಗೆಯ್ದುಣಿಸಿಗಿವರನುಯ್ವೊಂ. ಮುಂದೆ
ನಡೆ; ದಾರಿ ತೋರ್.”
ನಡೆದರನಿಬುರಂ ಹಿಂದಾ
ಹಿರಣ್ಯಕನಾ. ಅನತಿದೂರದೊಳಿರ್ದ ಶಾಲೆಯೊಳ್
ಸಿದ್ಧಮಿರ್ದುದು ದೈತ್ಯ ಭೋಜನಂ! ತರತರದ ೧೬೦
ಪರಿಮಳವೆರಸಿದಾವಿಗಳ್ ವಿಧವಿಧದ ವರ್ಣ
ವರ್ಣಂಗಳಿಂ ಮೆರೆದ ಭೋಜ್ಯಂಗಳಿಂದೇರ್ದ್ದು
ಮೋಹಿಸಿರ್ದುವು ನಾಸ ನೇಂತ್ರಗಳಂ. ದ್ವಿವಿದ
ಮೈಂದರಾ ರಕ್ಕಸರೆ ಬೆಕ್ಕಸಂಬಡುವವೋಲ್
ಹೊಡೆ ಡೊಳ್ಳಲುಂಡರೆನೆ, ಬೇರೆವೇಳ್ಕುಮೆ ಪೇಳ್
ಶಕುನ ಸಾಕ್ಷಿ, ರಾಯಭಾರ ಸ್ನೇಹ ಸಫಲತೆಗೆ?





******************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ