ನನ್ನ ಪುಟಗಳು

24 ಮೇ 2018

ಶ್ರೀರಾಮಾಯಣ ದರ್ಶನಂ: ಲಂಕಾ ಸಂಪುಟಂ: ಸಂಚಿಕೆ 5 - ಕವಿಗೊಟ್ಟನವನಿಜಾರಮಣನಂ


ಇತ್ತು ದೇವಿಗೆ ಧೈರ್ಯ ಸಂದೇಶಮಂ, ಮತ್ತೆ
ಪಡಿಪಡೆದು ಚೂಡಾಮಣಿಯ ಚಾರು ಚಿಹ್ನೆಯ
ಸುಧಾ ಸಾಕ್ಷ್ಯಮಂ, ಲೋಚನಾಗೋಚರ ಶರೀರಿ
ಪ್ರಳಯ ಜಂಝಾವಾತದೊಲ್ ಪ್ರಭಂಜನ ಸುತಂ
ಬೀಸಿದನಶೋಕವನದಿಂ. ತರುಗಳಂ ತಿರಿಪಿ
ಕೆಡಹುತ್ತೆ, ಪೊಡವಿಯಂ ಕಡೆದು ಪುಡಿವುಡಿಗೆಯ್ದು
ಸುಟ್ಟುರೆಯ ಧೂಳಿಯಂ ಸ್ತೂಪದೋಲೆಬ್ಬಿಸುತೆ
ಬಾನ್ಗೆ, ಬಿದಿರಿನ ಮೆಳೆಯ ನಡುವೊಕ್ಕು ಘೀಂಕರಿಸಿ
ಕಾಡುಕಿಚ್ಚಿಗೆ ಕಿಡಿಯ ಮುನ್ನುಡಿಯನಿಕ್ಕುತ್ತೆ, ೧೦
ದೈತ್ಯಭಟರೆದೆ ಧಿಗಿಲ್ಲೆನೆ ರೋಷಘೋಷದಿಂ
ನುಗ್ಗಿ ಬಂದಾ ಅಕಾಲಾಕಸ್ಮಿಕಾದ್ಭುತಂ
ಪ್ರಕಂಪನಾಟೋಪಕ್ಕೆ ಕಂಪಿಸಿತಖಿಲ ಲಂಕೆ!
ಬಿದ್ದರು ಕೆಲರ್; ತರಗೆಲೆಗಳೋಲೆದ್ದರು ಕೆಲರ್
ಕೆಲರ್. ನೆಲದೊಳೊದ್ದಾಡಿದರ್ ಕೆಲರ್, ಕಣ್ ಬಾಯಿ
ಮಣ್ ತಿಂಬುವೋಲ್; ವಾತಭೂತೋದ್ಧೂತ ಭೀತಿ
ಬಡಿದು ಬಗೆಗೆಟ್ಟುದು ಭಟಸ್ತೋಮ! ಮಲೆಗಳೊಳ್
ಮುಂಗಾರ್ ಗರೆಯೆ, ನೆರೆಯೇರಿ, ಕರೆಯಂ ಮೀರ್ದ
ಹೊಳೆಯೆಂತು ದಡಗಳಂ ಕೊರೆದು, ಮರ ಬುಡಗಳಂ
ಸಡಿಲಿಸುತುರುಳ್ಚಿ, ತೇಲಿಸಿ, ಕೊಚ್ಚಿ, ರಭಸದಿಂ
ಮುನ್ನುಗ್ಗುವುದೊ ಅಂತು ಧಾವಿಸಿದನನಿಲಜಂ, ೨೦ತಡೆಗಳಂ ಲೆಕ್ಕಿಸದೆ ಲಂಕಾಧಿದೇವಿಯಂ
ಮುರಿದು ತಾನೊಳಪೊಕ್ಕ ಪುರದ ಪೆರ್ಬಾಗಿಲಂ
ಕುರಿತು.
ವಿದ್ಯಾತ್ಮಕಂ ಕೋಂಟೆ ದುರ್ಗಮಮದಂ
ದ್ವಾರಮಲ್ಲದ ಬೇರೆಯೆಡೆಯೊಳುಲ್ಲಂಘಿಸುವ
ಸಾಹಸಕೆ ಸೀತಾ ಸುವಾರ್ತೆಯಂ ಕಾತರದ
ಕಿಷ್ಕಿಂಧೆಗುಯ್ವ ಸದ್ ಬುದ್ಧಿಯಂ ಖಲೀನಮಂ
ತುಡಿಸುತಲ್ಲಿಗೆ ಬಂದ ಯೋಗವಿಕ್ರಮಿಗಾಯ್ತು
ಪೇರುಬ್ಬಸಂ, ತನ್ನ ನಡೆಗೆ ತಡೆಯಿಕ್ಕಿದಾ
ಪ್ರತಿಮಾಯೆಯಂ ಸಂಧಿಸಲ್. ಬಿರುಗಾಳಿಯಾಗಿ
ಬಂದವನ್ ತಿರಿಗಾಳಿಯಾಗಿ ತಿರ್ರನೆ ತಿರುಗಿ
ತತ್ತರಿಸಿದನ್. ವಾಯು ಮಂಥನದೊಳಗ್ನಿಗಳ್ ೩೦
ಜ್ವಾಲಾ ಜಟಾಧಾರಿ ತಾಂಡವ ಶಿವನ ತೆರದಿ
ವಿಲಯನರ್ತನದೊಳಾರ್ಭಟಿಸಿದುವು, ಬಳಿಯಿರ್ದ
ಮನೆ ಮರಗಳಂ ಬೂದಿಗೆಯ್ದು. ಆ ರೌದ್ರಮಂ
ಕಂಡು ಧೃತಿಗೆಡುತಿರ್ದ ತನ್ನವರ್ಗಭಯಮಂ
ಪೂಣ್ದು ಪುರ ರಕ್ಷಕ ಶಿರೋಮಣಿ, ಪ್ರಹಸ್ತನ
ಸುತಂ, ದೈತ್ಯಮಾಯಾ ಸಮರ್ಥಂ ಜಂಬುಮಾಲಿ
ತಾನುಂ ವಿಸರ್ಜಿಸುತೆ ತನ್ನ ನರ ರೂಪಮಂ
ಜಗಳ್ದು ಪೊಕ್ಕನಯ್ ಜಝಾನಿಲನ ಜನ್ಮಕ್ಕೆ!
ಪೇಳ್ವುದೇಂ ಮುನ್ ನಡೆದುದಂ? ನೆರೆದ ಸುಭಟತತಿ ೪೦
ಬೆರಗಾಗಿ ನೋಡುತಿರೆ, ಸಿಡಿಲಂ ಸಿಡಿಲ್ ತುಡುಕಿ
ಪಿಡಿದುದೆನೆ, ಸಂಘಟ್ಟಿಸಿದುವಂತರಿಕ್ಷದೊಳ್
ಪ್ರಚಂಡಾಭೀಳ ಜಝಾದ್ವಯಂ. ಕೆಮ್ಮಿಂಚು
ಕುಣಿದುವು ತಟಿತ್‌ಫಣಿಯ ನಾಲಗೆಗಳೋಲ್ ನೆಕ್ಕಿ
ದೆಸೆದೆಸೆಯ. ಗಗನಮಂಡಲವೊಡೆದು ಬಿದ್ದುದೆನೆ
ಸದ್ದರಿದುದಾಲಿಸಿದ ಕಿವಿಗೆ ಕಿವುಡಿನ ಚಂಡೆ
ಬಡಿದಂತೆ. ಬಾನೊಳಲೆದುವು ಕಣ್ಗೆ ಬಹುವಿಧ
ವಿಕಾರ ಚೀತ್ಕಾರಗಳ್. ನೆತ್ತರ್ ಮಳೆಗಳಿಳಿದು
ಕೆಸರೆದ್ದುದೈ ಲಂಕಾ ಮಹಾದ್ವಾರ ಭೂಮಿ
ಇರ್ದಿರ್ದವೋಲ್, ತೆಕ್ಕನಾ ಗಾಳಿಗಳ್ ಚಣಂ ೫೦
ನಿಂತವೋಲಾಗಿ, ಕೆಡೆದುದು ಕೋಂಟೆ ಬಾಗಿಲೆಡೆ
ಗತಜೀವ ಜಂಬೂಮಾಲಿಯ ಕಳೇಬರಂ! ಮಾಯೆ
ಮಾಯಾವಿಯೊಡನಳಿಯೆ, ತಡೆಗೆಟ್ಟು ಬಾಗಿಲಿಂ
ಬೀಸಿ ಪೊಕ್ಕನಂ ಪೊರಗೆ ಮರುತಾತ್ಮಜಂ.
ಕೊಂದು
ನಗರ ರಕ್ಷಕ ಮುಖ್ಯನಂ ವಾತಭೂತಮದು
ಕೋಂಟೆವಾಗಿಲ ದಾಂಟಿದಾ ವಾರ್ತೆಯಂ ಕೇಳ್ದು
ದುರ್ಧರ, ವಿರೂಪಾಕ್ಷ, ಭಾಸಕರ್ಣ, ಪ್ರಘಸ,
ಯೂಪಾಕ್ಷರೆಂಬೈವರಂ ಕೂಟಕಲಿಗಳಂ
ಕರೆದು ಬೆಸಸಿದನಿಂತು ಲಂಕೇಶ್ವರಂ :
ನಡೆಯಿ
ಬೇಗದಿಂದಸುರು ವಿದ್ಯಾ ಸಿದ್ಧರೆಂಬುದಂ ೬೦
ತೋರಿಮಾ ಪ್ರೇತಕಿತವಂಗೆ, ಭೀತಿಯ ಬೂದಿ
ಲಂಕೆಯೆದೆಯಿಂ ತೂರುವೊಲ್ ಗಾಳಿಯಾಗೂದಿಮಾ
ಅಭಿಚಾರ ಸಂಭೂತಮಂ ಆ ವಾತಭೂತಮಂ.
ಸುರಪತಿಯ ಮಾಟವೊ? ಕುಬೇರನಟ್ಟಿದ ಕುಟಿಲ
ವಿದ್ಯಾಕಾಳಕೂಟವೊ? ಸಮುದ್ರನೊಳ್‌ಸೆರೆಗೆ
ನೂಂಕಿಮದನತಲಕ್ಕೆ!”
ವಜ್ರಿವೈರಿಯ ವಜ್ರ
ವಚನದ ಶಿರತ್ರಮಂ ಧರಿಸಿ ಪೊರಮಟ್ಟರಾ
ಕಲಿಗಳೈವರು ಪುರದ ಪೆರ್ಬಾಗಿಲಿಂ, ತಮ್ಮ
ಪಡೆಗೂಡಿ. ಕಂಡರಂಬುಧಿವೇಲೆಯಡವಿಯಂ
ಮುರಿಮುರಿದು ಮುಂಬರಿಯುತಿರ್ದ ಅನಿಲಸಿಂಹನ ೭೦
ಅರೂಪಾಟೋಪ ರಥದ ಪಥಮಂ. ಹೋಹೊ ನಿಲ್
ಮಾಣೆನುತೆ, ಸಮರೂಪಮಂ ತಳೆದು, ತಾಗಿದರ್
ಕಪಿಕುಲ ಸಮರಭೈರವ ಭ್ರೂ ಕುಟಿಯ ನಿಟಿಲ
ನೇತ್ರನಂ, ಏನಾದುದೆಂತಾದುದೆಂಬುದಂ
ಬಣ್ಣಿಪರದಾರ್? ಗಾಳಿ ಹೊಗೆ ಬೆಂಕಿಗಳ್‌, ಸಿಡಿಲ್‌
ಮಿಂಚುಗಳ್, ಕಲ್ಮಳೆಗಳುಳ್ಕೆಗಳ್. ಕೂಗುಗಳ್,
ನರಳುಗಳ್, ವೀರಾಟ್ಟಹಾಸಗಳ್, ಕಟುವಿಕಟ
ಚೀತ್ಕಾರಗಳ್ ಪ್ರಳಯಶಂಕೆಯನೊಡರ್ಚುತ್ತೆ
ದೆವ್ವಂಗುಣಿದುವಲ್ಲಿ! ದಾವಾಗ್ನಿ ದಹಿಸಲ್ಕೆ,
ಕಾಡಳಿಯಲೊಯ್ಯನುರಿ ನಂದಿ, ಸದ್ದಿಲಿತನಂ ೮೦
ಬೂದಿಯೊಳ್ ಬೀಡುಗೈದಂತಾಯ್ತಸುರ ಸೇನೆ,
ಪಂಚ ಸೇನಾನಿಗಳ್‌ವೆರಸಿ. ದುರ್ವಾರ್ತೆಯಂ
ಕೇಳ್ದು, ಪಿತನನುಮತಿಯನಾಂತು, ಪಗಲಿಳಿವಿನಂ
ರಣಧರೆಗೆ ಬಂದಿಂದ್ರಜಿತುಗೆ ದರ್ಶನವಾಯ್ತು
ಭಸ್ಮಶ್ಮಶಾನದಾ. ವ್ಯರ್ಥಮಾಯ್ತಂತೆವೋಲ್
ಕೈಕೊಂಡ ವಾತಭೂತಾನ್ವೇಷಣಂ. ಪಲರ್
ಪಲಪಲವು ಕಲ್ಪನೆಗಳಂ ಕಡೆದು, ನನ್ನಿಯಂ
ನಿಚ್ಚಯಿಸಲಾರದೆ ಪುರಪ್ರವೇಶಿಸಿದರಯ್,
ಧಾತ್ರಿಯನಲೆಯಲಿಳಿದ ರಾತ್ರಿಛಾಯೆಗಳಂತೆವೋಲ್!
ಅತ್ತಲಾ ಅನಿಲತನುವಾಂತನಿಲನಾತ್ಮಜಂ, ೯೦
ಲಂಕೆಗೆ ನಿರಾಕಾರ ಭೀತಿಯ ಮಹತ್ತರದ
ಭಯದ ಶಂಕೆಯ ರಾಹುವಿಡಿದುಲ್ಲಸಕೆ ಪೆರ್ಚಿ,
ಅನಿಲವೇಗದಿ ಪಯೋಧಿಯ ನೀಲ ಸೀಮೆಯಂ
ಕಳೆಕಳೆದು ಹಿಂದಕ್ಕಿದವನು ನೂರುಯೋಜನದ
ನಿಡುದೂರಮಂ.  ಕೊರಳ್  ನಿಮಿರಿ ಕಾಯುತ್ತಿರ್ದ
ಕಪಿಕುಲರ ಕಾತರತೆ ಕಂಡುದು, ಸಮುದ್ರಮಂ
ಕಡೆಕಡೆದು ತಮ್ಮೆಡೆಗೆ ಬಳಿಸಾರುತಿರ್ದೊಂದು
ಪ್ರಭಂಜನಾಟೋಪಮಂ. ಮೂಗದ ಮೇಲ್ ಪ್ರಶ್ನೆಗಳ್
ಮುಳ್ಮೂಡಿದಂಗದ ಕುಮಾರನಿಂಗಿತವರಿತು
ಗಿರಿ ಮಹೇಂದ್ರನ ಶಿರಶ್ಯಿಲೆ ಪೀಠಮಾಗಿರ್ದ ೧೦೦
ಜಾಂಬವಂ : “ಕೌತುಕಂ; ಪೊಳ್ತಲ್ಲದೀವೊಳ್ತು
ಕಡಲ ಕಡೆದೈತರುತ್ತಿದೆ ದಕ್ಷಿಣಾನಿಲಂ!
ಸಹಜಮಲ್ತಿದು ಕೃತಕಮಾಂಜನೇಯನ ವೇಗ
ಸಂಜನಿತಮೆಂಬವೋಲ್‌. ಇಂತೆ ಕಲಕದೆ ಕಡಲ್‌
ನಿನ್ನೆ ನೆಗೆದಂದು? ನೋಡುತಿರಮಾಕಾಶಮಂ
ದೂರ ದೃಷ್ಟಿಗಳಾಗಿ. ಕಾಣ್ಬನಂಬರಗಾಮಿ,
ವಿಜಯ ವಾರ್ತಾವಹಂ.” ತಮ್ಮಂತರಂಗದಾ
ಮೂಕ ಇಷ್ಟಕೆ ನಾಲಗೆಯನಿತ್ತ ಮುದಿತನಕೆ
ಗೌರವಂ ತೋರ್ಪಂತೆ ಕಣ್ಣಾದರನಿಬರುಂ
ದಕ್ಷಿಣ ದಿಗಂತದತ್ತಣ್ಗೆ. ಕಾಮರೂಪಿಯ ೧೧೦
ಕಾಣಲೆಳಸಿದ ಕಪಧ್ವಜರ ದೃಷ್ಟಿಯ ತೃಷೆಗೆ
ನಭದ ನೀಲವೆ ಮರುಸರಸ್ಸಾಯ್ತು!
ಇತ್ತಲಿದೊ
ಗೆಂಟರೊಳ್ ತೋರ್ದಾ ಕಡಲ್ಗಾಳಿ ಬಳಿಬಳಿಗೆ
ಸಾರೆ ಬಂದಪ್ಪಳಿಸಿದುದು ಗಿರಿಯ ನೆತ್ತಿಯಂ,
ತತ್ತರಿಸುವೋಲ್ ವಾನರರ ಸೇನೆ. ಮರಮರಂ
ಕೊಂಬೆ ಕೊಂಬೆಗೆ ತಿಕ್ಕಿಯೊರಲಿದುವೆ? ಕೀಚೆಂದು
ಕೀರಿದುವೆ ಬಿದಿರ ಮೆಳೆ? ಒಕ್ಕೊರಲ್ ಕೂಗಿದುವೆ
ಪಕ್ಷಿ ಸಂಘಾತ? ಒಕ್ಕಣಿಸಿದುದೆ ಪೇಳ್ ಗಾಳಿ
ಅಕ್ಕರಕ್ಕರಮಾಗಿ? ಬೆಕ್ಕಸದೊಳಾಲಿಸಿತೊ
ಅಕ್ಕಜವಗೆಗೆ ತೆಕ್ಕನುಕ್ಕಿದಾನಂದದೊಳ್ ೧೨೦
ತೇಲಿ ಸುಗ್ರೀವ ಭಟ ಸಮಿತಿ :
ರಘುಕುಲ ಕಮಲ
ರವಿಯುದಯಮಕ್ಕೆ! ಕಪಿಕುಲದ ಕಡಲ ಶಶಾಂಕ
ಸಂಪದಕೆ ಅಭ್ಯುದಯಮಕ್ಕೆ! ಕೋಡು ಮೂಡುಗೆ
ವಾಲಿಸುತನನುಚರರ ಸಾಹಸದ ಕೇಸರಿಯ
ಬಾಯ ಬೇಂಟೆಯ ಗಜದ ಗರ್ವಕೆ! — ಸಿಕ್ಕಿದಳ್
ದೇವಿ, ಸೀತಾದೇವಿ! ಕಂಡೆನಾ ಮಾತೆಯಂ;
ಕಂಡೆ ರಾಮನ ರಾಣಿಯಂ! ಕೊಟ್ಟು ತಂದಿಹೆನ್
ವಾರ್ತೆಯಂ, ಚಿಹ್ನೆಯಂ, ಸಂದೇಶಮಂ!”
ಘೇ ಉಘೇ
ಎಂಬುಲಿಗೆ ಕಡಲ ತಡಿ, ಗಿರಿ ಮೊರಡಿ, ಕಲ್‌ವೀಡು
ಕಾಡುಗಳ್ ಕಂಪಿಸುತ್ತಿರೆ ಪಾಡತೊಡಗಿದರ್ ೧೩೦
ಜಯಗಾಥೆಯಂ. ಅತೀಂದ್ರಿಯವೊಯ್ಯನಿಂದ್ರಿಯ
ಗ್ರಾಹ್ಯತೆಗೆ ಕೃಪೆಯಿನಿಳಿದುದೆನೆ, ಹೇಮಧೂಳಿಯ
ಮಂಜು ಮುಸುಕಿತು ಮಾರ್ದನಿಯ ಮಹೇಂದ್ರಾದ್ರಿಯಂ :
ಬೈಗು ಗೋವಿನ ಖುರಪ್ರಹತಿ ಕುಂಕುಮವೆರಚಿ
ಸಶರೀರತೆಗೆ ಕರೆದುದೆನೆ ಮರುತ್ಕುಮಾರನಂ,
ಹೊನ್ನ ಮಂಜಿನ ನಡುವೆ ರೇಖೆಗೊಂಡುದು ರೂಪು
ರಾಮ ಸಖನಾ. ಪರಿಚಯದ ಮನುಜನಾಕೃತಿಯ
ಕಂಡುದೆ ತಡಂ, ಮಣಿದು ಮುನ್ನುಗ್ಗಿದುದು ಮಂದಿ
ದರುಶನಕೆ, ಮೇಣ್ ಪಾದಧೂಳಿಯನಾಂಪ ಧನ್ಯತೆಗೆ.
ತನ್ನ ಸೇನಾವಾರ್ಧಿಯುತ್ಸಾಹ ವೀಚಿಗಳ್, ೧೪೦
ಸಂತೋಷ ಘೋಷಗಳ್ ತಣಿಯುತೊಯ್ಯನೆ ತಳ್ಗೆ,
ನೀಲಾದಿಗಳ್ ಬಳಸೆ, ಸಂಭ್ರಮದೊಳೈತಂದು
ಕೈಮುಗಿದು, ಕೈವಿಡಿದು ಕೊಂಡೊಯ್ದನಂಗದಂ
ಗಿರಿ ಮಹೇಂದ್ರನ ಪೊತ್ತ ಮಸ್ತಕದ ಮಣಿಶಿಲೆಯ
ಸಿಂಹಾಸನಕೆ ಆ ಮಹವೀರನಂ. ಸುತ್ತಲುಂ
ಸಭೆ ನೆರೆದರೈ ವಾರರ್ ತಮತಮಗೆ ದೊರೆತ
ಬಂಡೆ ಮೇಣ್ ಮರಗೋಡುಗಳ ನೆಮ್ಮಿ. ಕಪಿಕುಲ
ಕುತೂಹಲಂ ಹರ್ಷವಿಸ್ಮಯ ಪುಲಕ ಕಂಟಕಿತ
ತನುವಾಗಲಾಂಜನೇಯಂ ಸೂತ್ರಮಾರ್ಗದಿಂ
ಸೂರೆಗೈದನೊ ತನ್ನ ಸಾಹಸದ ಸಾಹಿತ್ಯ ೧೫೦
ಸರ್ವಸ್ವಮಂ! ಕೇಳ್ದು ಪುರ್ಚೆಳ್ದುದಾ ನೆರವಿ;
ಕೂಗಿದರು ಓರೊರ್ವರೊಂದೊಂದು ಹರುವಂ :
ಸಮುದ್ರಮಂ ದಾಂಟುವಂ ತಡಮೇಕೆ? ದೇವಿಯಂ
ತಂದೊಪ್ಪಿಪಂ ರಾಮಚಂದ್ರಂಗೆ!” “ಕೊಲ್ವಮಾ
ಖೂಳ ಲಂಕೇಶನಂ!” “ಅವಧಿ ಮೀರಿದುದಾಯ್ತು;
ಕಿಷ್ಕಿಂಧೆಗಿನ್ ಬರಿದೆ ಪೋಪುದು ತರಮೆ? ಕಜ್ಜಮಂ
ಕೈಗೀಡಿಸಿಯೆ ನಡೆವುದುಜ್ಜುಗಂ!” “ಗೆಲ್ಗೆ ಹನುಮಂ!
ಗೆಲ್ಗೆ ಮರುತಾತ್ಮಜಂ! ಗೆಲ್ಗಂಜನಾ ಸುತಂ!” ಆ
ಫೋಷಕನುರಣಿತಮಾದುದು ನಭೋಮಂಡಲಂ;
ಮರುದನಿಯನೆಸೆದುದು ಮಹೇಂದ್ರ ಗಹ್ವರ ಮುಖಂ; ೧೬೦
ಜಯಕಾರಮಂ ಕಡೆಕಡೆದು ಕಡಲ್ ಮೊರೆದುದು,
ದಿಗಂತ ದಂತಿಯ ಕಿವಿಯ ನಿದ್ದೆಗೆ ಕಠಾರಿಯಂ
ಕನಸೊಡವಗೈವಂತೆವೋಲ್!
ವೃದ್ಧನೆದ್ದನಾ
ಜಾಂಬವಂ, ಬುದ್ಧಿ ಏಳ್ವಂದದಿಂದುತ್ಸಾಹ
ಮಧ್ಯೆ. ಭಲ್ಲೂಕ ಚರ್ಮರಂಜಿತ ವರ್ಮದಾ
ಗಂಭೀರ ಗಾತ್ರನಂ, ಸರ್ವ ಗೌರವ ಪಾತ್ರನಂ
ಕಂಡು ಶಾಂತವಾದುದು ಸೈನ್ಯ ಸಂಭ್ರಮ ಶಬುದ
ಸಂಕ್ಷೋಭೆ : “ಮುಪ್ಪಿಗುಂ ಬಗೆ ಕದಡುವೋಲುಕ್ಕಿ
ಮಗಮಗಿಸಿ ಪರಿಯುತಿದೆ ನಿಮ್ಮ ಸೊಕ್ಕಿನ ಸೋಮ
ಫೇನಂ! ಮುದುಕನಾನುಂ ನಿಮ್ಮ ಚಟುಲ ಗತಿಯ ೧೭೦
ಸಾಹಸಾಶ್ವದ ಬೆನ್ನನೇರಿರ್ಪೆನಾದೊಡಂ
ಬಿರಿಯಿಕ್ಕುತಿದೆ ವಿವೇಕಂ ಖಲೀನವನೆಳೆದು
ಜಗ್ಗಿ. ನಮ್ರಾತ್ಮನೀ ಕಲಿ ಮಾರುತಾತ್ಮಜಂ
ತನ್ನ ಪ್ರತಿಮ ಸಾಹಸಂ ಸಕಲ ಸುಲಭಮೆನೆ
ನಿರ್ಮೋಹದಿಂ ಬಣ್ಣಿಸಿದನೆಂದು ನೀಮದಂ
ಸಾಮಾನ್ಯಮೆಂದರಿಯದಿರಿ : ನೂರು ಯೋಜನಂ
ದಾಂಟಲಿದೆ ಈ ಶರಧಿ! ದುರ್ಲಂಘ್ಯಮಾ ಕೋಂಟೆ
ವಿದ್ಯಾತ್ಮಕಂ! ಬರಿಯ ಕಥೆಯ ರಾಕ್ಷರಲ್ತು
ಲಂಕಿಗರ್; ಮಾಯಾ ಸಮರ್ಥರತಿ ನಾಗರಿಕ
ಯುದ್ಧಯಂತ್ರ ಪ್ರವೀಣರುಂ ದಿಟಂ! ಬರಿ ಕೆಚ್ಚು ೧೮೦
ಸಲ್ಲದಿಲ್ಲಿಗೆ. ಸಮರ್ಥರ ಬುದ್ಧಿ, ಸಜ್ಜನರ
ಪುಣ್ಯಹೃದಯದ ಸಿದ್ಧಿ ನೆರವೀಯದಿರೆ, ವೃಥಾ
ಸಾಹಸಂ ನಮ್ಮುಲ್ಲಸಂ. ಮೀರ್ದುದಾದೊಡಂ
ನಮ್ಮ ದೊರೆ ಇತ್ತವಧಿ, ಈ ಮರುತ್ಸುತನೆರ್ದೆಯೆ
ಬಯ್ಕೆಯಾಗಿರ್ಪ ಚೂಡಾಮಣಿಯೆ ಸಾಕ್ಷಿಯಂ
ರಕ್ಷೆಯುಂ ತಾನಪ್ಪುದೆಮಗೆ. ಅತಿಕಾತರನ್‌,
ದಾಶರಥಿ ಸೌಮಿತ್ರಿಯರ್ ಕೂಡಿ, ಕಪಿನೃಪಂ
ಸಗ್ರೀವನಲ್ಲಿ ಕಿಷ್ಕಿಂಧೆಯೊಳ್, ನಮಗಾಗಿ
ಮೇಣ್ ನಮ್ಮ ತರಲಿರ್ಪ ವಾರ್ತಾ ವಿಷಯಕಾಗಿ.
ನಡೆವಮೇಳಿಂ ಬೇಗದಿಂ. ತಾಯಿ ಕಿಷ್ಕಿಂಧೆ ೧೯೦
ಕಾಯುತಿಹಳೆಮಗೆ. ದೊರೆಯಾಣತಿಯೆ ಮುಂದೆಮಗೆ
ಬಟ್ಟೆ; ಇಂದೆಮಗದುವೆ ನಿಷ್ಠೆ!”
ಸಾರಿದುದೆನಲ್
ಒಮ್ಮನವನೊಕ್ಕೊರಲ್‌ಒಪ್ಪಿಗೆಯನುಲಿದುದು
ಕಪಿಧ್ವಜಿನಿ. ಇಳಿದುದಲ್ಲಿಂ ಬಳಿಕಲಾ ಮಹಾ
ವಾನರರ ವಾಹಿನಿ ಮಹೇಂದ್ರೋತ್ತಮಾಂಗದಿಂ
ಧುಮುಕಿ. ಪರಿದುದು ಮುಂದೆ ಭೋರ್ಗರೆಯುತುತ್ತರಕೆ
ಕುರಿತು ಕಿಷ್ಕಿಂಧೆಯಂ. ದಟ್ಟಡವಿ ಬೆಟ್ಟುಗಳ್‌
ಕಣಿವೆ ಹೊಳೆ ತೊರೆ ಬಯಲ್‌ಬೀಡುಗಳ್‌ಕಳೆಕಳೆಯೆ
ಹಿಂದಿಕ್ಕೆ ನಿಡುದೂರಮಂ, ದಾರಿಯೊಳ್ ಕಾಣೆ
ದಧಿಮುಖನ ಮಧುವನಂ ಪೊಕ್ಕರದನೀಂಟಿದರ್ ೨೦೦
ಮಧುಸುಖವನಾತನಾತಿಥ್ಯದಿಂ ನೆರೆ ತಣಿದು,
ದಣಿವನಾರಿಸಿಕೊಂಡು ಮುನ್‌ನಡೆದರಲ್ಲಿಂದೆ
ಕಾಣ್ಬೆನ್ನೆಗಂ ಸ್ವರ್ಗಮಾ ಗಿರಿವಿಪಿನ ದುರ್ಗಮಾ
ಕಮನೀಯ ಕಿಷ್ಕಿಂಧೆ. ಕಂಡುದೆ ತಡಂ ಕೋಟಿ
ಕೋಟಿ ಕಂಠಧ್ವನಿಯ ಜಯ ವಜ್ರಘೋಷಕ್ಕೆ
ಪ್ರಸ್ಪಂದಿಸಿತ್ತಾ ಅಚಲ ನಗರಿ. ಪ್ರಸ್ರವಣ
ಶೃಂಗದೊಳ್‌, ರಾಮನಂ ಸಂತೈಸಲೈತಂದು
ಮಾತನುಳಿದಾತನಾ ದುರ್ದರ್ಶನ ಸ್ಥಿತಿಗೆ,
ಖಿನ್ನಮುಖಿಯಾಗಿರ್ದ ಸುಗ್ರೀವನುಸ್ಸೆಂದು
ತಲೆಯೆತ್ತಿದನ್‌. ದೂರಮಟ್ಟಿದನು ದಿಟ್ಟಿಯಂ ೨೧೦
ಪ್ರತ್ಯಾಶೆಯಿಂ. ದಿಗ್ಗನೆದ್ದನ್‌, ಅಲಘುದೇಹಿ,
ಲಘು ಶೈಲಿಯಿಂ. ತುದಿವೆರಳ ಮೇಲ್‌ನಿಗುರಿ ನಿಂತು
ಕಾಲಡಿಯೊಳಿರ್ದ ಬಂಡೆಯನೊತ್ತಿದನ್‌, ಬೆರಳ್‌
ಅಚ್ಚೊತ್ತುವೋಲೊಣಗಿ ಹತ್ತಿರ್ದ ಹಾವಸೆಗೆ!
ಅವಧಿ ಮೀರ್ದುಂ ತಳುವಿದುದಕೆ, ಮೇಣನ್ನೆಗಂ
ಸುದ್ದಿಯ ಸುಳಿವನೇನೊಂದುಮಂ ಕಳುಹದಿರ್ದುದಕೆ,
ರಾಮನಂತಃಕರಣ ಖೇದಾಗ್ನಿ ದಳ್ಳುರಿದು
ತನ್ನ ಸಂಕಟವಳುರುತಿರ್ದುದಕೆ, ಕಪಿಕುಲದ
ಗೌರವ ಯಶಃಶ್ವೇತಕೊಯ್ಯನೆ ಮಷೀಮಯತೆ
ಸಾರ್ಚುತಿರ್ದುದಕೆ ಕಟುರುಷ್ಟತೆಯನಾಂತಿರ್ದ ೨೨೦
ರವಿಸುತ ಭ್ರೂ ಧನುರ್ ಮೌರ್ವಿಗೆ ಪ್ರಹೃಷ್ಟತಾ
ಶಿಥಿಲತೆ ಲಭಿಸಿದತ್ತು. ನಗೆವೆಳಗು ಮಲರಿದುದು
ಮೊಗಕೆ. ಹೇರೆದೆಯುರ್ಬಿತಯ್‌ಹಿಗ್ಗುವುಲ್ಲಸದ
ಸುಯ್ಗೆ. ಹೊಮ್ಮಿತು ನುಡಿಗಳುಗ್ಗಡಣೆ, ತನ್ನತ್ತಲಾ
ನಟ್ಟ ನೋಟವನಿತ್ತ ಹೊಡರಿಸದೆ : “ಏಳ್, ಏಳ್,
ರಘೂದ್ವಹ, ನೀನಾದಮಂ ಕೇಳ್‌ಶುಭಾವಹಮಂತೆ
ಕಾಣ್‌ಶುಭದ ದರ್ಶನವ! ಮೂಡುತಿದೆ ನೋಡು ಬಾ,
ದಾಶರಥಿ, ನಮ್ಮ ಕೇಡಿನ ಕತ್ತಲೆಯನೊತ್ತಿ
ಪುಣ್ಯದುದಯಾಚಲದ ಪುಣ್ಯಾರುಣಜ್ಯೋತಿ!
ಮಲೆಗಳಿಕ್ಕಟ್ಟಿನಲಿ, ಕಾಡುವೀಡಿನ ನಡುವೆ, ೨೩೦
ಲಂಕೆಯಿಹ ತೆಂಕಣದ ದಿಕ್ಕಿನಿಂ, ಸುರಿಯುತಿದೆ
ಕಷ್ಕಿಂಧೆಗೆಮ್ಮ ಬೇಹಿನ ಸೇನೆ! ಕಿಲಕಿಲದ
ಕೋಲಾಹಲಮೆ ಸಾಲ್ಗುಮದರ ಕೃತಕೃತ್ಯತೆಗೆ
ಡಂಗುರಂ : ಅಲ್ಲದಿರೆ ಪಿಂತಿರುಗಲಮ್ಮನೇಂ
ಯುವರಾಜನಂಗದನವಧಿ ಮೀರ್ದುಂ! ಪತ್ತುವಿಡು
ದುಗುಡಮಂ, ಮಿತ್ರಕುಲ ಮಿತ್ರವರ್ಯ. ಬಾ, ಬಾ,
ನೋಡು, ಸೀತೆಯ ಸೈಪು ಶರಣುಬರುತಿದೆ, ದಿಟಂ
ರಾಮರಕ್ಷೆಯ ಚರಣ ದುರ್ಗಕ್ಕೆ!”
ವಿದ್ಯುತ್‌
ಕಶಾಘಾತಕೆಂತು ಲೋಹದ ಜಡತೆ ಚೇತನಕೆ
ಚಿಮ್ಮುವುದೊ ಅಂತೆಯೆ ವಲಂ ಮೈಥಿಲಿಯ ವಾರ್ತೆ ೨೪೦
ತುಂಬಿದುದು ರಘುನಂದನನ ಮನವನಮೃತಮಯ
ರತಿಮದಿರೆಯಿಂ. ವ್ರತಶ್ಮಶ್ರು ಭೀಷ್ಮಾನನಂ
ಮೇಲೆಳ್ದನಶ್ರುಸೌಮ್ಯಂ. ಕಂಡನದ್ಭುತಂ
ನಾದಕಾರಣ ದೃಶ್ಯಮಂ ದುರ್ಗಮಂ ಪುಗುವ
ವಾಲಿಸುತನಂಗದನ ಸೇನಾ ಸಮುದ್ರಮಂ,
ನೀಲ ನಳ ಜಾಂಬವ ಸಮೀರಾತ್ಮಜರ ಮಹಾ
ಪ್ರತ್ಯಾಗಮನ ಯಾತ್ರೆಯಂ. ಬಳಿಯೆ ನಿಂದಿರ್ದ
ಸೌಮಿತ್ರಿಯಂ ನೋಡೆ, ಕಣ್ಣ ಶಂಕೆಯನರಿತು
ಸುಡಿದನಣ್ಣಂಗೆ : “ಅಕೃತ ಕೃತ್ಯರಿಗೆ ಸಾಧ್ಯಮೇನ್
ಆ ಸಂಭ್ರಮಂ? ಪ್ರಾಜ್ಞನೀ ವಾನರೇಶ್ವರಂ; ೨೫೦
ತನ್ನವರೆರ್ದೆಯನರಿತವನ್. ಮೇಣ್ ತಪೋಜ್ವಲಳ್‌
ನಿನ್ನ ಚಾತುರ್ಮಾಸ ಸಾಧನಾಶ್ರೀಮಂತಿನಿ ತಾನ್
ಅವಂಧ್ಯೆ!”
ಇಂತಿವರ್ ನಿಂತು ಮಾತಾಡುತಿರೆ
ಮಾಲ್ಯವತ್‌ಚಿತ್ರ ಕಾನನ ಸಾನುವೋರೆಯಂ
ಏರಿ ಬಂದುದು ಅಂಗದನ ಸಂಗ್ರಾಮ ಸಮಿತಿ,
ಹನುಮ ಜಾಂಬವ ನೀಲ ನಳ ಮುಖದಿ. ನಗೆಮೊಗದಿ
ಶುಭವನೊರೆಯುತ ಬಂದು ಕೈಮುಗಿದರನಿಬರುಂ
ಮೂವರಿಗೆ. ರಾಮಚಂದ್ರನ ಮೊಗದ ನವಿರಿಡಿದ
ಭೀಷ್ಮ ಗಾಂಭೀರ್ಯಕ್ಕೆ ಬೆರಗಾಗುತಂಗದಂ
ಜಾನಕೀವೃತ್ತಾಂತ ಕೋವಿದಗೆ ಪವನಜಗೆ ೨೬೦
ಕಣ್‌ಮಾಡಿದನು ವಾಕ್ಯಜ್ಞನಾಂನೇಯಂಗೆ.
ಮೊಳಗಿದುದು ವೇದಘೋಷ ಸಮಾನ ವಾಣಿ ಆ
ಯೋಗಿಯುರದಿಂದಿಂತು ” “ನಿಯತೆ! ಅಕ್ಷತೆ! ದೇವಿ
ಸುವ್ರತೆ! ಅಶೋಕವನಗತೆ! ಶೋಕಸಂಮ್ಲಾನೆ!
ತವ ವಿರಹ ದೀನೆ! ಹೇ ದಾಶರಥಿ, ಧನ್ಯನಾಂ
ಕಂಡು ಪುಣ್ಯಶ್ಲೋಕೆಯಿಂ!” ಎನುತೆ ಹೃದಯದ ಖನಿಗೆ
ಕೈಯಿಕ್ಕಿ, ವಕ್ಷದ ವಜ್ರರಕ್ಷೆಯೊಳಿರ್ದದನ್‌
ಚೂಡಾಮಣಿಯನಂಜುಳಿಗೆ ತೆಗೆದು, ನೋಳ್ಪರ್ಗೆ
ಕಣ್‌ಮಣಿಯೆ, ನೀಡಿದನವಿನ್ನಾಣಮಂ ಪ್ರೀತಿ
ಗೌರವಸ್ಪೀತನೇತ್ರಂಗೆ, ಸೀತಾ ಶ್ವಾಸ ೨೭೦
ಸೂತ್ರಂಗೆ. ನಾನಾ ಸ್ಮೃತಿಗಳುಣ್ಮುತಿರೆ ಮನಕೆ,
ಭಾವದುಬ್ಬರವೇರುತಿರೆ ಕಣ್ಗಳಿಗೆ, ಕಾಂತೆ
ಕಾನನದಿ ಮರೆಗೊಂಡು ರೂಪಾಂತರವನಾಂತೆ
ಮರಳಿ ಮೈದೋರ್ದಳೆಂಬಂತೆ ಆ ಸುಪರಿಚಿತ
ಮಣಿಯ ಕೊಂಡನು ಕೈಗೆ ಕಂಪಿಸುತ. ಧೀರನಾ
ಊರ್ಮಿಳೇಶಾಗ್ರಜಂ, ತನ್ನ ಅಸ್ಥೈರ್ಯಕ್ಕೆ ತಾಂ
ಕನಲಿ, ನೋಡಿದನೊಮ್ಮೆ ಚೂಡಾಮಣಿಯನೊಮ್ಮೆ
ಆಂಜನೇಯನ ಅದ್ರಿಭವ್ಯ ಮುಖಮುದ್ರೆಯಂ:
ಉಕ್ಕುವಕ್ಕರೆಗಿದಂ ಹೆಮ್ಮೆ ಹೊಮ್ಮಲ್ಕದಂ
ನೋಡೆ ನೋಡುತೆ, ತೋಳ್ಗಳಂ ನೀಡಿ ಮುಂಬರಿದು ೨೮೦
ನಡೆದನ್‌: ಪರಿಷ್ವಂಗಿಸಿದನಾಂಜನೇಯನ
ಪವಿತ್ರ ಗೋಪುರ ಗಾತ್ರಮಂ! ಕಂಡರೆಲ್ಲರ್ಗೆ
ಪುಲಕ ಜಲ ಚಿಮ್ಮಿದುವು ಕಣ್ಗೆ: ದರ್ಶನಮಲ್ತೆ
ದಿವ್ಯಮಾ ರಾಮಾಂಜನೇಯರ ಪರಸ್ಪರಂ
ಕೃತಜ್ಞತಾಲಿಂಗನಂ?
ಪ್ರಸ್ರವಣ ಗಿರಿಶಿರ
ಗುಹಾಮುಖ ಪ್ರಸ್ತರಾಸನವಾದುದಾಸ್ಥಾನ.
ರಘುಸೂನಗಳ್‌ವೆರಸಿ ಸುಗ್ರೀವನೊಂದರೆಯ
ಮೇಲೆ ಮಂಡಿಸೆ, ಇತರರುಂ ಕುಳಿತರಲ್ಲಲ್ಲಿ.
ಮೊಳಕೈಯನೊತ್ತಿ ಬಂಡೆಯ ಚಾಚುಡುಬ್ಬಕ್ಕೆ.
ಕರ್ನವಿರ ಕರಡಗಲ್ಲವನಿಳುಹುತಂಗಯ್ಗೆ, ೨೯೦
ಇದಿರೆ ಸನಿಯವೆ ಕುಳಿತ ಹನುಮನೊಳೆ ಕಣ್‌ನಟ್ಟು,
ಕಿವಿಗೊಟ್ಟನವನಿಜಾ ರಮಣಂ ಸಮೀರಜನ
ಸಾಹಸಾನ್ವೇಷಣದ ಮೇಣ್ ಆವೇಶ ಭಿಷಣದ
ಆ ಕಾವ್ಯಸುಂದರ ಭಾಷಣದ ವಿವರವರ್ಣನೆಗೆ




*****************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ