ಗದ್ಯಪಾಠ-6
ಹರಲೀಲೆ (ನಡುಗನ್ನಡ ರಗಳೆ)
ಕವಿಕಾವ್ಯ
ಪರಿಚಯ: ಹರಿಹರ
ವೀರ ಬಲ್ಲಾಳನ ಕರಣಿಕನಾಗಿ ಹರಿಹರ |
ಹರಿಹರನು ೧೨ನೆಯ ಶತಮಾನದ
ಉತ್ತರಾರ್ಧದಲ್ಲಿದ್ದ ವೀರಶೈವ ಕವಿ.
ಕಾಲ: ಕ್ರಿ.ಶ.ಸು.1260. ಸ್ಥಳ: ಹಂಪೆ,
ತಂದೆ:
ಮಹಾದೇವ, ತಾಯಿ:
ಶರ್ವಾಣಿ
ಆರಾಧ್ಯದೈವ: ಹಂಪೆಯ ವಿರೂಪಾಕ್ಷ
ರಗಳೆಯ ಕವಿ ಎಂದೇ ಪ್ರಸಿದ್ಧವಾಗಿರುವ ಹರಿಹರನು
ಕನ್ನಡ ಸಾಹಿತ್ಯದಲ್ಲಿ ಪ್ರಧಾನವಾಗಿದ್ದ ಚಂಪೂ ಕಾವ್ಯ ಪರಂಪರೆಯನ್ನು ಬಿಟ್ಟು ರಗಳೆಯಲ್ಲಿ ಕಾವ್ಯ
ರಚಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದನು. ಈತನ ಸೋದರಳಿಯನೆ ರಾಘವಾಂಕ.
ಹರಿಹರನು ಕೆಲವು ಕಾಲ ಬಲ್ಲಾಳ
ರಾಜನಲ್ಲಿ ಕರಣಿಕನಾಗಿದ್ದು, ಆ ಬಳಿಕ ಹಂಪೆಗೆ
ಬಂದು ನೆಲೆಸಿದನು.
ಹರಿಹರನು
ಗಿರಿಜಾಕಲ್ಯಾಣ ಎಂಬ ಚಂಪೂಕಾವ್ಯವನ್ನೂ, ಪಂಪಾಶತಕ,
ರಕ್ಷಾಶತಕ, ಮುಡಿಗೆಯ ಆಷ್ಟಕ ಮತ್ತು
ಅನೇಕ ಶಿವಶರಣರ ರಗಳೆಗಳನ್ನೂ ರಚಿಸಿದ್ದಾನೆ.
ಅಲ್ಲದೆ "ರಗಳೆಗಳ ಕವಿ" ಎಂದೆ
ಪ್ರಸಿದ್ಧನಾಗಿದ್ದಾನೆ. ಹನ್ನೆರಡನೆಯ ಶತಮಾನದ ಬಹು ಮಹತ್ವದ
ಶರಣ ಚಳವಳಿ ಮತ್ತು ವಚನ
ಸಾಹಿತ್ಯದ ಪ್ರಭಾವವು ಹರಿಹರನ ಮೇಲೆ ದಟ್ಟವಾಗಿದೆ.
ಮೂಲತಃ ಆತನು ಭಕ್ತ ಕವಿ.
ಆತನ ಕಾವ್ಯದ ತುಂಬ ಭಕ್ತಿಯು
ಓತಪ್ರೋತವಾಗಿ ಹರಿದಿದೆ. ಹರಿಹರನ ಎರಡೂ ಶತಕಗಳಲ್ಲಿ
ಆತನು ಹಂಪೆಯ ಶ್ರೀ ವಿರೂಪಾಕ್ಷನಲ್ಲಿ
ತಳೆದಿರುವ ಭಕ್ತಿಯು ಎದ್ದು ಕಾಣುತ್ತದೆ.
ಅಂತೆಯೇ ಆತನ ಶಿವಗಣದ ರಗಳೆಗಳಲ್ಲಿ
ಶಿವಶರಣರ ಶಿವಭಕ್ತಿಯ ಉಜ್ವಲ ಚಿತ್ರಣವಿದೆ.
ಹರಿಹರನ
ಶತಕದ್ವಯವು ಪ್ರಮುಖವಾಗಿ ಆತನ ಆತ್ಮಕಥನಗಳೇ ಆಗಿವೆ.
ಗಿರಿಜಾ ಕಲ್ಯಾಣವು ಹರಿಹರನ ಮಹೋನ್ನತ ಚಂಪೂ
ಕಾವ್ಯವಾಗಿದೆ. ಆವರೆಗಿನ ಕನ್ನಡ ಚಂಪೂ
ಕೃತಿಗಳಲ್ಲಿ ಕಾಣದ ಕಥಾ ವಿಷಯವು
ಇಲ್ಲಿದೆ. ಶೈವ ಪುರಾಣಗಳಲ್ಲಿ ಕಂಡು
ಬರುವ ಶಿವಪಾವ೯ತಿಯರ ವಿವಾಹದ ಕಥೆ ಗಿರಿಜಾ
ಕಲ್ಯಾಣದ ವಸ್ತು. ಗಿರಿಜೆಯ ಜನನದಿಂದ
ಶಿವನೊಡನೆ ಅವಳ ವಿವಾಹದವರೆಗೆ ಮನೋಜ್ಞವಾಗಿ
ಅವಳ ಸೌಂದಯ೯, ಸೊಬಗು, ಭಕ್ತಿಯ
ಕಠೋರತೆ ಇವುಗಳನ್ನು ಸೂಕ್ಷ್ಮವಾಗಿ ಕವಿಯು ಚಿತ್ರಿಸಿದ್ದಾನೆ.
ಹರಿಹರನ
ರಗಳೆಗಳಂತೂ ಆತನ ಹೆಸರನ್ನು ಕನ್ನಡ
ಸಾಹಿತ್ಯ ಚರಿತ್ರೆಯಲ್ಲಿ ಅಜರಾಮರಗೊಳಿಸಿರುವ ಅಮರ ಕೃತಿಗಳು. ಹರಿಹರನ
ನೈಜಪ್ರತಿಭೆಯು ಇಲ್ಲಿ ಗೋಚರಿಸುತ್ತದೆ. ಅವನ
ರಗಳೆಗಳ ಸಂಖ್ಯೆಗಳ ಬಗ್ಗೆ ಗೊಂದಲವಿದೆಯಾದರೂ,ಅವುಗಳ
ಸಂಖ್ಯೆಯು ೧೦೬ ಎಂದು ಬಹುತೇಕರ
ಅಭಿಪ್ರಾಯವಾಗಿದೆ. ವಿವಿಧ ಗಾತ್ರದ, ಬೇರೆ
ಬೇರೆ ಶಿವಶರಣರ ಕಥೆಗಳನ್ನು ಈ
ರಗಳೆಗಳಲ್ಲಿ ಹೇಳಲಾಗಿದೆ. ಮುಖ್ಯವಾಗಿ ೬೩ ಪುರಾತನರ, ಅಂದರೆ
ತಮಿಳಿನ 'ಪೆರಿಯ ಪುರಾಣ'ದಲ್ಲಿ
ಹೇಳಲಾಗಿರುವ ೬೩ ಶಿವಭಕ್ತರ ಕಥೆಗಳು
ಇಲ್ಲಿವೆ. 'ಬಸವರಾಜದೇವರ ರಗಳೆ', 'ತಿರುನೀಲಕಂಠದೇವರ ರಗಳೆ',
'ನಂಬಿಯಣ್ಣನ ರಗಳೆ', 'ಮಹಾದೇವಿಯಕ್ಕನ ರಗಳೆ',
'ಪ್ರಭುದೇವರ ರಗಳೆ', 'ಗುಂಡಯ್ಯನ ರಗಳೆ',
ಮತ್ತು 'ರೇವಣಸಿದ್ಧೇಶ್ವರ ರಗಳೆಗಳು' ಹರಿಹರನ ಪ್ರಮುಖ ರಗಳೆಗಳು.
ನಂಬಿಯಣ್ಣನ ರಗಳೆ (ಸರಳಾನುವಾದ)
ನಂಬಿಯಣ್ಣನ
ರಗಳೆಯಲ್ಲಿ ಕವಿ ಹಾಸ್ಯಶಕ್ತಿಯನ್ನೂ ಲೋಕಾನುಭವವನ್ನೂ
ಕಾಣಬಹುದು.
ಕೈಲಾಸದಲ್ಲಿ
ಈಶ್ವರನ ಸೇವೆಯಲ್ಲಿದ್ದ ಪುಷ್ಪದತ್ತನು ಪಾರ್ವತಿಯ ಇಬ್ಬರು ಸಖಿಯರಿಗೆ ಮನಸೋತನು.
ಇದರಿಂದ ಈಶ್ವರನು ಅವರು ಮೂವರನ್ನೂ
ಭೂಲೋಕಕ್ಕೆ ಕಳುಹಿಸಿ ಅಲ್ಲಿ ಹುಟ್ಟಿ
ಬಾಳುತ್ತ ನಿಮ್ಮ ಆಸೆಗಳು ನೆರವೇರಿದ
ಮೇಲೆ ಇತ್ತ ಬನ್ನಿರಿ ಎಂದು
ಹೇಳಿ ಕರುಣೆಯಿಂದ ಕಳಿಹಿಸಿದನು. ಅವರು ಭಯಪಟ್ಟು, “ಲೋಕದಲ್ಲಿ
ಹುಟ್ಟಿದ ಮೇಲೆ ಅಜ್ಞಾನವಶರಾಗಿ ನಿನ್ನನ್ನೇ
ಮರೆತರೇನು ಗತಿ ತಂದೆಯೇ” ಎಂದು
ಕೊರಗಿದಾಗ, “ಭಯ ಪಡಬೇಡಿ, ನಾನು
ಬಂದು ಎಚ್ಚರಿಸಿ ಕರೆತರುತ್ತೇನೆ” ಎಂದು ಅಭಯವಿತ್ತನು.
ಇತ್ತ
ಪುಷ್ಪದತ್ತ ನಂಬಿಯಣ್ಣನಾಗಿ ತಿರುನಾವಲೂರಿನಲ್ಲಿ ಹುಟ್ಟಿದನು. ತನ್ನ ಲೋಕೋತ್ತರವಾದ ಸೊಬಗಿನಿಂದ
ತಿರುನಾವಲೂರಿನ ರಾಜನಾದ ನರಸಿಂಗ ಮೊನೆಯವರ
ಸಾಕುಮಗನಾಗಿ ಸೌಂದರ ಪೆರುಮಾಳ್ ಎಂಬ
ಹೆಸರಿನಿಂದ ಬೆಳೆದನು. ಅವನ ಸುಖ-ಸಂತೋಷಗಳಿಗೆ
ಎಣೆಯಿಲ್ಲವೆಂದಾಯಿತು. ಆತನು ಹದಿನಾರು ವರ್ಷದ
ಯುವಕನಾದಾಗ ಇಬ್ಬರು ರಾಜಕುಮಾರಿಯರೊಡನೆ ಅವನ
ವಿವಾಹ ನಿಶ್ವಿತವಾಯಿತು.
ಸೌಂದರ
ಪೆರುಮಾಳ್ ಸಹ ಮದುವಣಿಗನಾಗಿ ಅಲಂಕೃತ
ನಾಗಿ ಉತ್ಸುಕತೆಯಿಂದ ಊರ ಹೊರಗಿನ ಉದ್ಯಾನದಲ್ಲಿ
ದಿಬ್ಬಣ ಹೊರಡಲು ಸಿದ್ಧವಾಗಿದ್ದನು. ಆದರೆ
ಪರಮೇಶ್ವರನ ಇಚ್ಛೆಯೇ ಬೇರೆ. ಅವನು
ಕಳುಹಿಸಿದ ಪಾರ್ವತಿಯ ಸಖಿಯರು ಪರವೆ, ಶಂಕಿಲೆ
ಎಂಬ ಹೆಸರಿನ ಶಿವಭಕ್ತೆಯರಾಗಿ, ಬೆಳೆಯುತ್ತಿರುವರು.
ಅವರೊಡನೆ ವಿವಾಹವಾಗಿ ಶಿವಧ್ಯಾನದಲ್ಲಿ ಶೈವಧರ್ಮಾನುಸರಣೆಯಲ್ಲಿ ಬಾಳಬೇಕಾದ ನಂಬಿಯಣ್ಣನು ರಾಜಕುವರಿಯರನ್ನು ಮದುವೆಯಾಗಿ ಲೌಕಿಕನಾಗುವುದೆ?
ಆದ್ದರಿಂದ
ಪರಮೇಶ್ವರನು ನೂರರ ಮುದುಕನಂತೆ ಮುಪ್ಪಿನಿಂದ
ಕುಗ್ಗಿ ಕೆಮ್ಮುತ್ತ, ಹಿಡಿದವರ ಕೈ ಬಾಯೊಳೆ
ಜೀವ ಹೋಗುವುದೆಂಬಂತೆ ನಟಿಸುತ್ತ ವಿವಾಹ ಮಂಟಪಕ್ಕೆ ಬಂದನು.
ಶಿವಶಿವ ಎನ್ನುತ್ತ ತೋರಣವನ್ನು ಹರಿದನು. ಇವನಾರು ಅಪಶಕುನಕಾರನೆಂದು
ಹಿಡಿಯಬಂದರೆ ಓಡಾಡುತ್ತ ತುಪ್ಪದ ಕೊಡಗಳ ಮೇಲೆ
ಬಿದ್ದು ಅವನ್ನೊಡೆದು ಚೆಲ್ಲಿದನು. ಅತ್ತಿತ್ತ ಕುಳಿತ ಸರ್ವಾಲಂಕೃತರಾದ ಪೌರರು
ತಮ್ಮ ರೇಶಿಮೆಯ ವಸ್ತ್ರಕ್ಕೆ ಹನಿದ
ತುಪ್ಪವನ್ನು ಕೊಡವಿ ಸಿಡಿಮಿಡಿಗೊಂಡರು. ಇನ್ನೇನು
ಈ ಮದುವೆ ಹಸನಾಗದೆಂದು
ಕಳವಳಗೊಂಡರು. ಆದರೂ ಅರಸನ ಮದುವೆಯಲ್ಲಿ
ಈ ಪೀಡೆಯನ್ನು ಪ್ರವೇಶಿಸಲು
ಬಿಟ್ಟವರಾರು ಎನ್ನುತ್ತ ಅವನನ್ನು ಹೊತ್ತೊಯ್ದು ಸಭಾಮಂಟಪದಿಂದ
ದೂರ ಒಯ್ದುಬಿಟ್ಟು ಬಾಗಿಲು ಹಾಕಿಕೊಂಡು ಬರುವ
ವೇಳೆಗೆ ಅವರಿಗಿಂತ ಮುಂದಾಗಿ ಈ ಮುದುಕ
ಒಳಗಿದ್ದಾನೆ! ಇದೇನು ಕಾಟ, ಈ
ವಿಚಿತ್ರವೇಕೆ ಎಂದವರು ವಿಚಾರಿಸಿದಾಗ ಕೆಮ್ಮುತ್ತ,
“ನಂಬಿಯಣ್ಣನದು ತೊತ್ತಿನ ವಂಶ. ತಮ್ಮ
ಸೇವಕ ಅವನು, ಅವನಿಗೆ ಹೆಣ್ಣು
ಕೊಟ್ಟು ನಿಮ್ಮ ರಾಜಕುಲವನ್ನು ಹಾಳುಮಾಡಿಕೊಳ್ಳಬೇಡಿ”
ಎಂದು ಸಾರಿ ಹೇಳಿದನು.
ನಂಬಿಯಣ್ಣ
ಇಳಿದುಕೊಂಡಿದ್ದ ಉದ್ಯಾನಕ್ಕೆ ಬಂದನು. ಆತನನ್ನು ಕರೆದು,
“ಅಯ್ಯಾ, ನೀನು ಸೌಂದರ ಪೆರುಮಾಳೆಯಾದರೂ
ರಾಜಪುತ್ರನಲ್ಲ, ನಮ್ಮ ವಂಶಕ್ಕೆ ತೊತ್ತಾಗಿ
ಸಲ್ಲುವವನು. ಹಾಗೆಂದು ನನ್ನ ಹತ್ತಿರ
ಪತ್ರವುಂಟು. ನನಗೆ ತಿರುವಗೆನಲ್ಲೂರಿನಲ್ಲಿ ಮನೆಯಿದೆ.
ನೀನು ನಂಬು. ನಿಮ್ಮ ತಂದೆ
ಬರೆದುಕೊಟ್ಟ ಪತ್ರವಿದೆ. ಊರ ಜನರ ಸಾಕ್ಷಿಯಿದೆ”
ಎನ್ನುತ್ತ ಕಾಡಿದ. ಸಿಡಿಮಿಡಿಗೊಂಡ ನಂಬಿಯಣ್ಣ
ರಾಜನ ಅಪ್ಪಣೆಯಂತೆ ಇದನ್ನು ಪರೀಕ್ಷಿಸಲು ಹೊರಟನು.
ಆನೆಯ ಮೇಲೇರಿಕೊಂಡು ಕಂದಿದ ಮುಖದವನಾಗಿ, ಮುನಿದು
ನುಡಿಯದೆ ಬಂದ ರಾಜಕುಮಾರನನ್ನು ತಿರುವಗೆನಲ್ಲೂರಿನಲ್ಲಿ
ಪುರಪ್ರಮುಖರು ಬಂದು ಇದಿರುಗೊಂಡರು. ರಾಜಕುಮಾರನಿಗೆ
ಮುನಿಸು. ಅದನ್ನು ಕಂಡ ಊರ
ಜನರಿಗೆ ಭಯ, ಆತಂಕಗಳು. “ಏಕೆ
ಸ್ವಾಮಿ, ನಮ್ಮ ತಪ್ಪಿಲ್ಲವಲ್ಲ” ಎಂದು
ಅವರು ಬಿನ್ನವಿಸಿಕೊಂಡಾಗ, “ನಿಮ್ಮೂರಿನ ಒಬ್ಬ ಹಾಳು ಮುದುಕ
ಬಂದು ನನ್ನನ್ನು ತೊತ್ತೆನ್ನುತ್ತಾನೆ, ಅದಕ್ಕೆ ನೀವೆಲ್ಲ ಸಾಕ್ಷಿಯಿದ್ದೀರಂತೆ,
ಈಗ ವಿನಯದ ಸೋಗು ಹಾಕುತ್ತೀರಾ?”
ಎಂದು ಗದರಿದ. ಬೆಚ್ಚಿ ಮುಖಮುಖ
ನೋಡುತ್ತಾ ಒಂದನ್ನೂ ಅರಿಯದೆ ಭ್ರಮಿಸಿ
ನಿಂತ ಜನರ ನಡುವೆ ಗಡ್ಡನರೆದಲೆಯ
ಈಶ್ವರ ಶತವೃದ್ಧನಾಗಿ ಕೊಡೆ ಕಮಂಡಲಗಳನ್ನು ಹಿಡಿದು
ಪ್ರತ್ಯಕ್ಷನಾದ. ಅವನನ್ನು ಅರಸುಕುಮಾರ ಊರವರಿಗೆ
ತೋರಿಸಿದಾಗ ಅವರು ಈತನನ್ನು ಅರಿಯರು.
ಶಿವ ಸುಮ್ಮನೆ ಬಿಟ್ಟಾನೆ? ತನ್ನ
ನಾಟಕವನ್ನು ಪ್ರಾರಂಭಿಸಿದ.
“ಏನಿರಿ
ಪಶುಪತಿ ಭಟ್ಟರೆ, ಏನಿರಿ ಈಶಾನ
ಭಟ್ಟರೆ, ನನ್ನನ್ನು ಅರಿಯರೆ? ನಿಮ್ಮ ತಂದೆಯ
ಗೆಳೆಯನಲ್ಲವೆ ನಾನು? ಸ್ಮಶಾನ ಶಯನ
ಭಟ್ಟನೆಂದು ನನ್ನ ಹೆಸರು” ಎನ್ನುತ್ತ
ಅಳಿದುಹೋದ ಅವರ ತಂದೆಯರನ್ನು ಕುರಿತಾಡುತ್ತ
ಬದುಕಿರುವ ಇವರ ರಹಸ್ಯಗಳನ್ನು, ಕುರುಹುಗಳನ್ನು
ಎತ್ತಿ ಆಡಿದ. ಇವರೆಲ್ಲ ಸೋಜಿಗದಿಂದ
ಇವನ ಮಾತನ್ನು ಒಪ್ಪಿದರು. ಆದರೆ
ಇವನನ್ನು ಅರಿಯರು. ಅಲ್ಲಿಗೆ ಬಿಡದ
ಶಿವ, “ಬನ್ನಿ, ನಿಮ್ಮೂರಿನ ಗಣಕಗಳು
ನನ್ನ ಬಳಿಯಿರುವ ಪತ್ರವನ್ನು ನೋಡಲಿ” ಎಂದು ಪತ್ರವನ್ನು
ಹಿಡಿದಾಗ ಆ ಊರಿನ ಗಣಕ
ಬಂದು, “ಆಹಾ! ಇದು ನನ್ನ
ತಂದೆಯ ಅಕ್ಷರ” ಎನ್ನುತ್ತ ಗುರುತಿಸಿ
ಅಳತೊಡಗಿದ. ಅದರಲ್ಲಿ ನಂಬಿಯಣ್ಣ ಈ
ಬ್ರಾಹ್ಮಣ ವಂಶಕ್ಕೆ ತೊತ್ತೆಂದು ಬರೆದಿದ್ದಿತು.
ನೋಡು ನೋಡೆಂದು ರಾಜಕುಮಾರನಿಗೆ ಹೇಳಿದಾಗ
ಅವನು ಕುತೂಹಲಗೊಂಡು ಪತ್ರ ಕೈಗೆ ತೆಗೆದುಕೊಂಡು
ಓದಿ ಕೋಪದಿಂದ ಅದನ್ನು ನೂರಾರು
ಚೂರಾಗಿ ಹರಿದು ಗಾಳಿಗೆ ತೂರಿ
ನಕ್ಕನು.
ಆದರೆ
ಚತುರನಾದ ಬ್ರಾಹ್ಮಣ ತಲೆದೂಗುತ್ತ, “ಹೀಗಾಗುವುದೆಂದು ಜಾಣೆಯಾದ ನನ್ನ ಪತ್ನಿ
ಹೇಳಿದ್ದಳು. ಇದು ಪತ್ರದ ನಕಲು.
ಮೂಲಪತ್ರ ನನ್ನ ಮನೆಯಲ್ಲಿದೆ. ಬಾ
ಹೋಗೋಣ” ಎಂದು ನಿಂತ. ಹೇಗೆ
ಮಾಡಿಯೂ ಮುದುಕನನ್ನು ನಿವಾರಿಸಲರಿಯದೆ ತನ್ನ ರಾಜಪರಿವಾರವನ್ನು ತೊರೆದು
ಈ ಮುದುಕನನ್ನು ಹಿಂಬಾಲಿಸಿದಾಗ
ಅವನು ಊರ ದೇವಾಲಯವನ್ನು ಹೊಕ್ಕನು.
ಏನಾಶ್ಚರ್ಯ! ಕೆರೆಗಳನ್ನು ಕಳೆಯದೆ ಒಳಹೊಕ್ಕು ಮುದುಕನನ್ನು,
ಶನಿಯನ್ನು ನಿವಾರಿಸಿಬಿಡುವೆನೆಂದು ನಂಬಿಯಣ್ಣನು ಖಡ್ಗವನ್ನು ಹೀರಿದ! ಆದರೆ ಒಳಹೊಕ್ಕ
ಮುದುಕ ಶಿವಲಿಂಗದಲ್ಲಿ ಸೇರಿಹೋದ.
ನಂಬಿಯಣ್ಣನಿಗೆ ಶಿವ ಪ್ರತ್ಯಕ್ಷನಾದುದು |
ನಂಬಿಯಣ್ಣನ
ಮನಸ್ಸಿಗೆ ಫಕ್ಕನೆ ಬೆಳಗಾಯಿತು. ಆಹಾ,
ಎಂತಹ ಭಾಗ್ಯ ತಪ್ಪಿಹೋಗುವುದರಲ್ಲಿತ್ತು, ಈಗ ಒದಗಿತು.
ನನ್ನ ಒಡೆಯನನ್ನು, ಸ್ವಾಮಿಯನ್ನು ಮರೆತೇ ಬಿಟ್ಟಿದ್ದೆನಲ್ಲ ಎನ್ನುತ್ತ
ಈಶ್ವರನನ್ನು ಹಾಡಿ ಭಜಿಸಿದ. ಅವನ
ಅದುವರೆಗಿನ ಕಳವಳವೆಲ್ಲ ಕರಗಿ ನೀರಾಯಿತು. ಮನಕ್ಕೆ
ತುದಿಮೊದಲಿಲ್ಲದ ನೆಮ್ಮದಿ ದೊರಕಿತು. ಪ್ರತ್ಯಕ್ಷನಾದ
ಶಿವ, “ಮಗು, ನನ್ನನ್ನು ಕುರಿತು
ಹಾಡಯ್ಯ” ಎಂದನು. “ನಾನ್ಯಾವ ಹಾಡನ್ನು
ಬಲ್ಲೆ ತಂದೆಯೇ?” ಎಂಬುದಕ್ಕೆ, “ಹುಚ್ಚನೆಂದು ನನ್ನನ್ನು ನಿನ್ನ ಬಾಲಭಾವದಲ್ಲಿ ಮುಗ್ಧನಾಗಿ
ಬೈದೆಯಲ್ಲ, ಅದನ್ನೇ ಹಾಡು” ಎಂದು
ಪುತ್ರಮೋಹದಿಂದ ಕೇಳಿಕೊಂಡ.
ಮುಂದಿನದು
ಸೋಜಿಗಕರವಾದ ಕಥೆ. ನಂಬಿಯಣ್ಣ ಏನು
ಬೇಕೆಂದರೆ ಶಿವ ಅದನ್ನು ಕೊಡುವನು.
ಶಿವಭಕ್ತರಿಗೆ ಸಮಾರಾಧನೆಯೋ ದಾನವೋ ಮಾಡಬೇಕಾದರೆ ನಂಬಿಯಣ್ಣನ
ಇಚ್ಛೆಯಂತೆ ಶಿವನು ಸಿದ್ಧ. ಅವನ
ವಿವಾಹಕ್ಕಾಗಿ ಪರವೆ, ಸಂಕಿಲೆಯಲ್ಲಿ ಈಶ್ವರ
ದೂತನೆಂದು ಓಡಾಡಿದ. ಶೈವಧರ್ಮ ಪ್ರಚಾರಕ್ಕೆ
ನಂಬಿಯಣ್ಣ ನಿಂತರೆ ಅವನ ಬಲಗೈ
ಬಂಟನಾಗಿ ಶಿವ ನಿಂತ. ಅಲ್ಲದಿದ್ದರೆ,
“ನೀನೆಂತಹ ಯಜಮಾನ? ನನ್ನನ್ನು ಅಳಲಾರದ
ನೀನೆಂತಹ ಸ್ವಾಮಿ? ಕೊಡು ನನ್ನ
ಪತ್ರವನ್ನು, ಬಿಡು ನನ್ನ” ಎಂದೆಲ್ಲ
ನಂಬಿಯಣ್ಣ ಕೂಗಾಡಿಬಿಡುವನು. ಶಿವನು ಓಡೋಡುತ್ತ ಬಂದು,
“ಮಗುವೆ, ಏನಾಗಬೇಕಯ್ಯ?” ಎಂದು ಕೇಳಿ ನಲಿಸುವನು.
ಆಹಾ, ಭಕ್ತಪರಾಧೀನನಾದ ಸ್ವಾಮಿಯೇ, ನಿನ್ನ ಕಾಟದ ಹುಯಿಲೇನು,
ನಿನ್ನ ಆಟದ ಸವಿಯೇನು! ಎಂದು
ಹರಿಹರ ತಲೆದೂಗುವನು. ಭಕ್ತನನ್ನು ಅಳಲು ಹೋಗಿ ಅವನನ್ನೇ
ಮಗನಂತೆ ಪಾಲಿಸಿದವರುಂಟೆ? ಅವನು ಸಂಸಾರದಲ್ಲಿ ಮುಳುಗಿ
ಹೋದಾನೆಂದು ಭಯಪಟ್ಟು ಮುಪ್ಪಿನ ಮುದುಕನಾಗಿ
ಸುಳಿಯುತ್ತ, ಸಾಯುವವನಂತೆ ಅಭಿನಯಿಸುತ್ತ, ಗುಂಪು ಸೇರಿದ ಜನರಲ್ಲಿ
ಚಾತುರ್ಯವನ್ನು ತೋರುತ್ತ ಊರತುಂಬೆಲ್ಲ ಸುಳಿದಾಡುವ
ಪರಮೇಶ್ವರನನ್ನು ಕಂಡು ಮೈಮರೆಯದ ಭಕ್ತರಾರು?
ಹರಲೀಲೆ (ಗದ್ಯಪಾಠದ
ಅನುವಾದ)
ಇಂತು ಮಣಮಂದ ಪುತ್ತೂರ್ಗೆ
ನಡೆವುತ್ತಮಿರೆ
ಮುಂತೊರ್ವನೆಯ್ತಂದು
ಬಿನ್ನಪವೆನುತ್ತಮಿರೆ|
ದೇವ ಲಗ್ನದ ಮುಹೂರ್ತಂ ಬರಂ
ಬನದೊಳಗೆ
ದೇವ ಸುಖದಿಂದಿರ್ಪುದೀ ವೂರ
ಬನದೊಳಗೆ|
ಎನೆ ತಿರುಗಿ ನಡೆದುದಾ
ವನದತ್ತ ಮುಂತಾಗಿ
ತನತನಗೆ
ಮುಯ್ಯಾನುತಾನಂದಮಯರಾಗಿ
ಸಾರಾಂಶ- ಹೀಗೆ ಸೌಂದರ ಪೆರುಮಾಳ್ (ನಂಬಿಯಣ್ಣ) ಮದುವಣಿಗನಾಗಿ ಅಲಂಕೃತ ನಾಗಿ ಉತ್ಸುಕತೆಯಿಂದ
ಮಣಮಂದ ಪುತ್ತೂರಿಗೆ ಹೋಗುತ್ತಿರುವಾಗ ಒಬ್ಬನು ಬಂದು “ನಿಮ್ಮಲ್ಲಿ
ಒಂದು ವಿಜ್ಞಾಪನೆ. ದೇವಾ ಲಗ್ನದ ಮುಹೂರ್ತ ಬರುವವರೆಗೆ ನೀವು ಈ ಊರಿನ ವನದೊಳಗೆ ಸುಖವಾಗಿ
ಕಾಲಕಳೆಯಿರಿ” ಎಂದು ಹೇಳಿದಾಗ
ನಂಬಿಯಣ್ಣನು ವನದತ್ತ ನಡೆದು ತನ್ನೊಳಗೆ ತಾನೇ ಆನಂದಪಡುತ್ತಾ
ಬಂದು ಬನಮಂ ಪೊಕ್ಕು ಮಿಕ್ಕು
ಸಂತೋಷದಿಂ
ಮುಂದೆ ಸಿಂಹಾಸನವನಿಕ್ಕಲು
ವಿಲಾಸದಿಂ-|
ದೆಸೆಯೆ ಕುಳ್ಳಿರ್ದನಾ
ಸುಕುಮಾರ ಸೌಂದರಂ
ವಸುಧೆಗೊಪ್ಪುವ
ಮರ್ತ್ಯಮಂಡಲಪುರಂದರಂ|
ಸಾರಾಂಶ:- ಬಂದು ವನವನ್ನು ಹೊಕ್ಕು ಬಹಳ ಸಂತೋಷಗೊಂಡನು. ನಂತರ
ಭೂಮಿಗೆ ಒಪ್ಪುವಂತೆ ಸುಂದರವಾಗಿದ್ದ ಭೂಮಂಡಲವೆಂಬ
ವಿವಾಹಮಂಟಪದಲ್ಲಿ(ಪುರಂದರ) ಸುಕುಮಾರನಾದ ಸೌಂದರ ಪೆರುಮಾಳನು
ತನಗೆ ಇರಿಸಿದ ಸಿಂಹಾಸನದಲ್ಲಿ ವಿಲಾಸದಿಂದ ಕಾಣುವಂತೆ ಕುಳಿತನು.
ಮುಗಿದಿರ್ದ ನೈದಿಲುಗೊಳಂಗಳಂ
ನೋಡುತುಂ
ಮಿಗೆ ಬಳಲುವಾ ಚಕೋರಂಗಳಂ
ಕಾಣುತುಂ|
ರಸಫಳಂಗಳನಱಸುತಿರ್ಪ ಶುಕನಿಕರಮಮಂ
ಪೊಸಪೂವನೆಳಸಿರ್ಪ
ಮಧುಕರಪ್ರಕರಮಂ|
ನೋಡುತುಂ ಕೊಂಡಾಡುತಿರ್ದನಾ
ವನದೊಳಗೆ
ಆಡಿಸುತೆ ಪಾಡಿಸುತಮಿರ್ದನಾ
ವನದೊಳಗೆ|
ಇಂತು ಮುದದಿಂ
ನಲಿವುತರಸುಮಗನೊಪ್ಪಿದಂ
ಸಂತತಂ ವನದೊಳಗೆ
ಸುಕುಮಾರನೊಪ್ಪಿದಂ|
ಸಾರಾಂಶ:- ಮುದುಡಿಕೊಂಡಿದ್ದ ನೈದಿಲೆಗಳಿಂದ ಕೂಡಿದ
ಕೊಳಗಳನ್ನು ನೋಡುತ್ತ [ಸೂರ್ಯೋದಯವಾಗುತ್ತಿದ್ದಂತೆ ನೈದಿಲೆಗಳು ಮುದುಡುತ್ತವೆ. ಚಕೋರ (ಚಕ್ರವಾಕ)
ಪಕ್ಷಿಗಳ ಜೋಡಿಯಲ್ಲಿ ಗಂಡು ಚಕೋರ ಆಹಾರವನ್ನರಸಿ ಗೂಡಿನಿಂದ ಹೊರಹೋಗುತ್ತದೆ. ಆಗ ಹೆಣ್ಣು ಚಕೋರಿ
ಸಂಗಾತಿಯ ಅಗಲಿಕೆಯ ವಿರಹವೇದನೆಯನ್ನು ಅನುಭವಿಸುತ್ತದೆ] ಸಂಗಾತಿಯ ವಿರಹವೇದನೆಯಿಂದ ತುಂಬಾ ಬಳಲುವ
ಚಕೋರಗಳು, ರುಚಿಯಾದ ಹಣ್ಣುಗಳನ್ನು ಅರಸುತ್ತಿರುವ ಗಿಳಿಗಳ ಸಮೂಹ, ಮಕರಂದ ಹೀರಲು ಹೊಸ
ಹೂವುಗಳನ್ನು ಸುತ್ತುವರಿದಿರುವ ದುಂಬಿಗಳ ಸಮೂಹವನ್ನು ನೋಡುತ್ತಾ ಕಾಡಿನ ಪ್ರಕೃತಿ ಸೌಂದರ್ಯವನ್ನು
ಹೊಗಳುತ್ತಾ ಅರಸನ ಮಗನಾದ ನಂಬಿಯಣ್ಣನು ಆಡುತ್ತಾ ಹಾಡುತ್ತಾ ಆನಂದದಿಂದ ನಲಿದಾಡಿದನು.
ವಿವಾಹತತ್ಪರನಾಗಿ
ನಂಬಿಯಣ್ಣಂ ವನದೊಳಗಿರಲಿತ್ತಲು ಕೈಲಾಸಪುರದರಮನೆಯಲಪರಿಮಿತಪರಿವಾರನಾಗಿ ವಿರೂಪಾಕ್ಷನಿರ್ದು
ಗಿರಿಜೆಗಿಂತೆಂದಂ – ದೇವಿ, ಕೇಳೌ, ನಮ್ಮ ಪುತ್ರಂ ಪುಷ್ಪದತ್ತಂ ನರಲೋಕದೊಳ್ ಪುಟ್ಟಿ, ನಂಬಿಯೆಂಬ
ನಾಮವಾಗಿ, ಸಂಸಾರದಿಂದ ಕೆಟ್ಟು ಪೋಗಲನುವಾಗಿರ್ದಪಂ. ಆತಂಗೆ ಮುನ್ನಿತ್ತ ನಂಬುಗೆಯ ಬೆಂಬಳಿಗೊಂಡು
ಪೋಗಿ, ಮರ್ತ್ಯದೊಳ್ ತೊತ್ತುಗೊಂಡು ಆವು ಕಳುಪಿದ ನಿಮ್ಮಿರ್ಬರು ರುದ್ರಕನ್ನಿಕೆಯರು ಚೋಳದೇಶದ ತಿರುವಾರೂರೊಳಂ, ತಿರುವತ್ತಿಯೂರೊಳಂ ಪರವೆ
ಸಂಕಿಲಿಗಳೆಂಬ ನಾಮದಿಂ ಜನಿಯಿಸಿರ್ದಪರವಂದಿರನಾತನೊಳ್ ನೆರಪಿ, ಸಕಲಸುಖಮಂ ಪೂಜೆಯಾಗಿ ಕೈಕೊಂಡು
ಬರ್ಪೆನೆನಲ್ ಆನುಂ ನಿಮ್ಮೊಡನೆ ನೋಡುತ್ತುಂ ಬಂದಪೆನೆಂದು ದೇವಿಯರ್ ಬಿನ್ನೈಸೆ, ನೀನತ್ಯಂತಕರುಣಿ
ನಾಂ ಮಾಳ್ಪುದತಿನಿಷ್ಠುರಚರಿತ್ರಂ. ಆದೊಡಂ ನೀಂ ಬಂದು, ಆನಾವೂರೊಳಿರ್ದೆನೆನಲಲ್ಲಿಯ
ದೇವಾಲಯದೊಳಿರುತೆ ಬರ್ಪುದೆಂದು ಕರುಣಿಸಿ, ವಿಚಿತ್ರಂ ಮತ್ತಂ ದೇವಿಯರ್ ನೋಡನೋಡಲೊರ್ವ
ಶತವೃದ್ಧನಾಗಿ ನಿಂದಿರ್ದನೆಂತೆಂದೊಡೆ-
ಸಾರಾಂಶ:- ನಂಬಿಯಣ್ಣನು ವಿವಾಹಕಾರ್ಯದಲ್ಲಿ ಮಗ್ನನಾಗಿ
ವನದಲ್ಲಿರುವ ಸಮಯದಲ್ಲಿ ಇತ್ತ ಕೈಲಾಸದಲ್ಲಿ ದೊಡ್ಡ ಶಿವಗಣ ಪರಿವಾರದೊಂದಿಗೆ ನೆಲೆಸಿದ್ದ
ವಿರೂಪಾಕ್ಷನು (ಶಿವನು) ಗಿರಿಜೆ(ಪಾರ್ವತಿ)ಯನ್ನು ಕುರಿತು ಹೀಗೆಂದನು-“ದೇವಿ, ಕೇಳು, ನಮ್ಮ
ಪುತ್ರನಾದ ಪುಷ್ಪದತ್ತನು ನರಲೋಕದಲ್ಲಿ(ಬೂಲೋಕದಲ್ಲಿ) ಹುಟ್ಟಿ, ನಂಬಿ ಎಂಬ ಹೆಸರನ್ನು ಪಡೆದು
ಸಂಸಾರದಿಂದ ಕೆಟ್ಟು ಹೋಗುವುದಕ್ಕೆ ಸಿದ್ಧವಾಗಿದ್ದಾನೆ. ಆತನಿಗೆ ಮುಂಚೆ ನೀಡಿದ ನಂಬಿಕೆಯ
ಮಾತನ್ನು ಅನುಸರಿಸಿಕೊಂಡು ನಾವು ಕಳುಹಿಸಿದ ರುದ್ರಕನ್ನಿಕೆಯರಿಬ್ಬರೂ ಚೋಳದೇಶದ
ತಿರುವಾರೂರಿನಲ್ಲಿ ಮತ್ತು ತಿರುವತ್ತಿಯೂರಿನಲ್ಲಿ ಪರವೆ ಮತ್ತು ಸಂಕಿಲೆ ಎಂಬ ಹೆಸರಿನಿಂದ
ಹುಟ್ಟಿದ್ದಾರೆ. ಅವರನ್ನು ಆತನೊಡನೆ ಸೇರಿಸಿ, ಸಕಲಸುಖವನ್ನು ಪೂಜೆಯಾಗಿ ಸ್ವೀಕರಿಸಿ ಬರುವೆನು”
ಎಂದಾಗ ಗಿರಿಜೆ ಮತ್ತು ಗಂಗೆ ಇಬ್ಬರೂ “ನಾವೂ ನಿಮ್ಮೊಡನೆ ಬರುತ್ತೇವೆ” ಎಂದರು. ಅದಕ್ಕೆ ಶಿವನು
ಗಿರಿಜೆಗೆ “ನೀನು ಬಹಳ ಕರುಣೆ ಹೋಂದಿರುವವಳು, ಆದರೆ ನಾನು ಅಲ್ಲಿ ಮಾಡುವುದು ಅತಿ ನಿಷ್ಠುರದ
ಕಾರ್ಯ. ಆದರೂ ನಾನು ಊರಿನೊಘೆ ಇರುತ್ತೇನೆ. ನೀನು ಅಲ್ಲಿಯ ದೇವಾಲಯದಲ್ಲಿದ್ದು ನಂತರ ಬರುವುದು
ಎಂದು ಅನುಮತಿ ನೀಡಿದನು. ದೇವಿಯರು ನೋಡನೋಡುತ್ತಿದ್ದಂತೆಯೇ ಶಿವನು ಒಬ್ಬ ಶತವೃದ್ಧನಾಗಿ
(ನೂರುವರ್ಷ ದಾಟಿದ ಮುದುಕ) ನಿಂತನು. ಆತನ ರೂಪ ಹೇಗಿತ್ತೆಂದರೆ-
ಆಪಾದಮಸ್ತಕಪರ್ಯಂತರವುದ್ಧೂಳಿಸಿದ ವಿಭೂತಿಯ ತಲೆಯುಂ
ಮಯ್ಯುಂ ನರೆತೆರೆಗಳಾಗೆಜಡೆಯ ಚಂದ್ರಕಳೆ ಕೊಡೆಯಾಗೆ, ಪಿಡಿದ ತ್ರಿಶೂಲಂ ಕೊಡೆಯ ಕಾವಾಗೆ, ಖಟ್ವಾಂಗಂ
ಯಷ್ಠಿಯಾಗೆ, ಆಭರಣದೊಳೊಂದು ಸರ್ಪಂ ಪ್ರಮಾಣಪತ್ರಮಾಗೆ, ಕಮಲಜಶಿರಂ ಕಮಂಡಲಮಾಗೆ, ಪುಲಿದೊವಲ್
ಗಜಚರ್ಮಂ ಉಟ್ಟ ಹೊದೆದ ವೇಷ್ಟಿಗಳಾಗೆ, ಮೆಟ್ಟಿದ ನಾಗಾಸುರಂ ಪಾದರಕ್ಷೆಗಳಾಗೆ, ಕಟ್ಟಿದ ಶಿರೋಮಾಲೆ
ಜಪಮಾಲೆಯಾಗೆ, ಮಹಾವೃದ್ಧನಾಗಿ ಕೈಲಾಸದಿಂದಂ ಚೋಳದೇಶದ ಮಣಮಂದಪುತ್ತೂರ ಮದುವೆಯ ಚಪ್ಪರದ
ಮುಂದಿಳಿಹಿದಂತಿರ್ದಂ. ಕಯ್ಯ ಕೊಡೆಯಿಂ, ಮಯ್ಯತೆರೆಯಿಂ. ಜೋಲ್ವಪುರ್ವಿಂ, ನೇಲ್ವ ತೋಳತೊವಲಿಂ,
ಇಟ್ಟ ವಿಭೂತಿಯಿಂ, ಊಱಿದ ಯಷ್ಟಿಯ ಕೋಲಿಂ, ಪಿಡಿದ ಕಮಂಡಲದಿಂಯಿಳಿದ ಬೆಳುಗಡ್ಡದಿಂ, ನಡುಗುವ
ನರೆದಲೆಯಿಂ, ನರೆತು ಸಡಿಲ್ವ ಸರ್ವಾಂಗದಿಂ, ಪುಣ್ಯಂ ಪಣ್ಣಾದಂತೆ ಒಮ್ಮೊಮ್ಮೆ
ಕೆಮ್ಮುತ್ತೊಮ್ಮೊಮ್ಮೆ ಗೊಹೆಗೊಹೆಗುಟ್ಟುತುಂ ಶಿಥಿಲಾಕ್ಷರಂಗಳಿಂ ನಮಃಶಿವಾಯ ನಮಃಶಿವಾಯಯೆನುತ್ತೆನಲಾಱದಂತೆ
ನಡುಗುತ್ತುಂ ಹೊಱಗೆ ನೆರೆದ ನೆರವಿಗಳೆಲ್ಲಂ ನೋಡುತ್ತಿರಲು ಮೆಲ್ಲಮೆಲ್ಲನೆ ಚಪ್ಪರದ ಬಾಗಿಲ್ಗೆ
ಬಂದೊಡವರ್ ಪೊಗಲೀಯದಿರ್ದೊಡೆ ಅವಂದಿರಱಿಯದಂತೆ ಪೊಗುತಪ್ಪಾಗಳ್—
ಸಾರಾಂಶ:- ಪಾದದಿಂದ ತಲೆಯವರೆಗೂ ಲೇಪಿಸಿಕೊಂಡ ವಿಭೂತಿ,
ನರೆತ ತಲೆ, ಸುಕ್ಕುಗಟ್ಟಿದ ದೇಹಹೊಂದಿದನು. ಆತನ ಜಟೆಯಲ್ಲಿದ್ದ ಚಂದ್ರಕಳೆಯೇ ಕೊಡೆಯಾಯಿತು.
ಹಿಡಿದಿದ್ದ ತ್ರಿಶೂಲ ಕೊಡೆಯ ಹಿಡಿಕೆಯಾಯಿತು. ನರಕಪಾಲ ಹೊಂದಿದ ದಂಡ(ಖಟ್ವಾಂಗ)
ಊರುಗೋಲಾಯಿತು(ಯಷ್ಟಿ). ಸರ್ಪವು ಪ್ರಮಾಣಪತ್ರವಾಯಿತು.(ನಂಬಿಯಣ್ಣನಿಗೆ ತೋರಿಸಲು ಶಿವ ಸರ್ಪವನ್ನು
ಒಪ್ಪಂದದ ಪ್ರಮಾಣಪತ್ರವನ್ನಾಗಿಸಿದನು. ಇದಕ್ಕೆ ಮೇಲಿನ ಮೂಲ ಕಥೆಯನ್ನು ಗಮನಿಸಿ). ಬ್ರಹ್ಮನ
ಶಿರವೇ ಕಮಂಡಲವಾಯಿತು. ಹುಲಿ ಮತ್ತು ಜಿಂಕೆಯ ಚರ್ಮಗಳು ಉಡುವ ಮತ್ತು ಹೊದೆಯುವ ವಸ್ತ್ರವಾದವು. ಶಿವನು
ಕಾಲಿನಿಂದ ಮೆಟ್ಟಿಕೊಂಡಿರುವ ನಾಗಾಸುರ ಎಂಬ ರಾಕ್ಷಸನೆ ಪಾದರಕ್ಷೆಗಳಾಗಿ, ಕೊರಳಿನಲ್ಲಿ
ಕಟ್ಟಿಕೊಂಡಿರುವ ಶಿರೋಮಾಲೆ (ತಲೆಬುರುಡೆಗಳ ಹಾರ) ಜಪಮಾಲೆಯಾಗಿ, ಮಹಾವೃದ್ಧನಾಗಿ ರೂಪಧರಿಸಿ
ಕೈಲಾಸದಿಂದ ಹೊರಟು ಚೋಳದೇಶದ ಮಣಮಂದ ಪುತ್ತೂರಿನ ಮುಂದೆ ಇಳಿದನು. ಕೈಯಲ್ಲಿರುವ ಕೊಡೆ, ಮೈಯ
ಸುಕ್ಕು, ಜೋತಾಡುವ ಹುಬ್ಬು, ನೇತಾಡುವ ತೋಳಿನ ಚರ್ಮ, ಇಟ್ಟಿರುವ ವಿಭೂತಿ, ನೆಲಕ್ಕೆ ಊರಿದ ಊರುಗೋಲು,
ಹಿಡಿದ ಕಮಂಡಲ, ಇಳಿಬಿಟ್ಟ ಬಿಳಿಯಗಡ್ಡ, ನಡುಗುವ ನರೆತ ತಲೆ, ನರೆತು ಹೋಗಿ ಸಡಿಲವಾಗಿರುವ
ಸರ್ವಾಂಗದಿಂದ ಶಿಥಿಲವಾಗಿದ್ದ ವೃದ್ಧನು ಪುಣ್ಯವೇ ಹಣ್ಣಾದಂತೆ ಒಮ್ಮೊಮ್ಮೆ ಕೆಮ್ಮುತ್ತ,
ಒಮ್ಮೊಮ್ಮೆ ಗೊರ್ ಗೊರ್ ಎಂದು ಶಬ್ದಮಾಡುತ್ತಾ, ತೊದಲುವ ಮಾತುಗಳಿಂದ ನಮಃಶಿವಾಯ… ನಮಃಶಿವಾಯ
ಎನ್ನುತ್ತಾ, ಎನ್ನಲಾರದಂತೆ ನಡುಗುತ್ತಾ ಹೊರಗೆ ನೆರೆದಿದ್ದ ಜನರೆಲ್ಲಾ ನೋಡುತ್ತಿರಲು ಚಪ್ಪರದ
ಬಾಗಿಲಿಗೆ ಬಂದಾಗ ಬಾಗಿಲಿನಲ್ಲಿ ನಿಂತಿದ್ದ ಕಾವಲುಗಾರರು ಒಳಗೆ ಹೋಗಲು ತಡೆದರೂ ಅವರಿಗೆ
ತಿಳಿಯದಂತೆ ಮದುವೆ ಮಂಟಪದೊಳಗೆ ನುಗ್ಗಿಹೋಗುತ್ತಿರುವಾಗ-
ವಿವಾಹಮಂಟಪಮಂ
ಪೊಗುತಿರ್ಪ ತಮ್ಮನಾರುವಱಿಯದೆ, ಕಾಣದೆ, ಲೆಕ್ಕಿಸದೆ ಸಂಭ್ರಮದೊಳಿರೆ, ಮೆಲ್ಲಮೆಲ್ಲನೆಲ್ಲವ
ನೋಡುತುಂ, ಮನದೊಳ್ ನಗುತುಂ, ಕೋಲನೂಱುತೆ ಕೆಮ್ಮಿ ಕೆಮ್ಮುತ್ತೆ, ಸಾಲ್ಗೊಂಡಿರ್ದ ತುಪ್ಪದ
ಕೊಡಂಗಳೊಳ್ ನಾಲ್ಕೆರಡನೆಡಹಿ ನಮಃಶಿವಾಯಯೆಂಬ ವೃದ್ಧಧ್ವನಿ ಪುಟ್ಟೆ ಕೊಡಂಗಳೊಳ್ ಮೇಲೊಡೆಬಿಳ್ದುಕುಳ್ಲಿರ್ದರ
ಮುಖದೊಳಂ, ಕಂಣ್ಣೊಳಂ, ಮಯ್ಯೊಳಂ ತುಪ್ಪಂ ಚೆಲ್ಲೆ ಎಲ್ಲರೆರ್ದುಮಲ್ಲಳಿಗೊಂಡು ಘೊಳ್ಳೆಂದು ಬಿಳ್ದ
ವೃದ್ಧಮಾಹೇಶ್ವರನಂ ಮುತ್ತಿಕೊಂಡೆತ್ತಲನುವಾಗಿ ಮೆಲ್ಲನೆ ನೆಗಪಿ ನಿಂದಿರಿಸಲ್ ಒಂದೆರಡಡಿಯಿಟ್ಟು
ದಡದಡಿಸಿ ನೋಡುವ ಜನವೆಲ್ಲಂ ಎಲೆಲೆ ವೃದ್ಧನಾಬಿದ್ದನೆಂಬಲ್ಲಿಂ ಮುನ್ನಂನಿಲಲಾಱದೆ ಹಳಿಲನೆ ಘಳಿಗೆವಟ್ಟಲ
ಮೇಲೆ ಬೀಳೆ ಕಳಸಿಗೆಯೊಡೆದು ಘಳಿಗೆವಟ್ಟಲು ಮುಱಿದು ತಂಡುಲಂ ಚೆಲ್ಲಿ ಜೋಯಿಸರೆಲ್ಲಂ ಕೆದಱಿಪೋಗೆ,
ಬಿದ್ದೇಳಲಾಱದೆ ಹಮ್ಮೈಸಿದಂತಿರೆ ಪರಿತಂದು ಕಣ್ಣೊಳಂ ಬಾಯೊಳಂ ನೀರಂ ತಲಿದೆಂತಕ್ಕೆಚ್ಚಱಿಸೆ
ಎತ್ತುವರ ಕಯ್ಯ ಬಾಯೊಳೆ ಜೀವಂ ಹಿಡಿಯಬಾರದು ಮುಟ್ಟಬಾರದು ನೋಡಬಾರದು ನುಡಿಸಲರಿದು
ಪಿಡಿದುಬಿಟ್ಡಡೆ ತುಪ್ಪದ ಕೊಡದ ಮೇಲಲ್ಲದೆ ಬೀಳಂ. ಈ ವೃದ್ಧಬ್ರಾಹ್ಮಣನನೀ ಮುಪ್ಪಿನ ಮರುಳನನೀ
ಗೌತಮನ ಗೋವನೀ ಬ್ರಹ್ಮೇತಿಕಾಱನನಾರ್ ಪೊಗಿಸಿದರಾರ್ ತಂದರ್. ಇದೆ ಅಪಶಕುನವಿನ್ನೇನೀ ಮದುವೆ ಹಸನಾಗದೆನ್ನುತ್ತೆಲ್ಲರುಂ
ಮೆಲ್ಲನೆ ಕಯ್ಯುಮಂ ಕಾಲುಮಂ ಪಿಡಿದೆತ್ತಿಕೊಂಡು ಪೋಗಿ ತಮ್ಮಾಯುಷ್ಯಭಾಷೆಗಳಂ ಪೊಱಗಿಡುವಂತೆ
ಚಪ್ಪರದವೊಱಗೆ ಮೆಲ್ಲನಿಳುಪಿ ಈತನಂ ಪೊಗಲೀಯದಿರೀವೃದ್ಧನಂ ಪೊಗಿಸದಿರೆಂದು ಬಾಗಿಲವನನದುಹುತ್ತೆ
ಕದವನಿಕ್ಕಿ ಒಳಗಂ ಪೊಗುವೈಸಕ್ಕೆ ಅವರಿಂ ಮುನ್ನವೆಯ್ತಂದೊಳಗಂ ಪೊಕ್ಕು ತೋರಣದ ತಳಿರಂ ಪಱಿದು
ಶಿವದಿಡುತ್ತಿರಲ್ ಅವರ್ ಕಂಡು ಬೆಱಗಾಗಿ ಈಗಳಿಂತು ಪೊಱಗಿರಿಸಲಾಗಳಂತೆ ಬಂದು ಮುಂದಿರ್ದಪನೀ
ವೃದ್ಧಂ ಕಿಱುಕುಳನಲ್ಲ ಕಾರಣಿಕನಾಗಲೆವೇಳ್ಕುಮೆಂದು ನೋಡುತಿರ್ದರ್.
ಸಾರಾಂಶ:- ವಿವಾಹ ಮಂಟಪದೊಳಗೆ ಹೋಗುತ್ತಿರುವ ತನ್ನನ್ನು
ಯಾರೂ ಅರಿಯದೆ, ನೋಡದೆ, ಲೆಕ್ಕಿಸದೆ(ಗಣನೆಗೆ ತೆಗೆದುಕೊಳ್ಳದೆ) ಇರುವುದನ್ನು ಕಂಡು ಶಿವನು
ಮೆಲ್ಲಮೆಲ್ಲನೆ ನೋಡುತ್ತಾ, ಮನದೊಳಗೆ ನಗುತ್ತಾ, ಕೋಲನೂರಿಕೊಂಡು ಕೆಮ್ಮುತ್ತಾ ವಿವಾಹ ಮಂಟಪದ ಬಳಿ
ಸಾಲಾಗಿ ಜೋಡಿಸಲಾಗಿದ್ದ ತುಪ್ಪದ ಕೊಡಗಳ ಮೇಲೆ ನಾಲ್ಕೆರಡನ್ನು ಎಡವಿ ‘ನಮಃಶಿವಾಯ’ ಎಂಬ
ವೃದ್ಧಧ್ವನಿ ಅವನ ಬಾಯಿಂದ ಬರುತ್ತಿದ್ದಂತೆ ಕೊಡಗಳಮೇಲೆ ಬಿದ್ದು ಅಲ್ಲಿ ಕುಳಿತಿದ್ದವರ ಮುಖಕ್ಕೆ,
ಕಣ್ಣುಗಳಿಗೆ, ಮೈಯ ಮೇಲೆ ತುಪ್ಪ ಚೆಲ್ಲಿದಾಗ ಎಲ್ಲರೂ ಗಾಬರಿಯಿಂದ ಎದ್ದು ಗುಂಪುಗೂಡಿ ದಡ್ಡನೆ
ಬಿದ್ದ ವೃದ್ಧಮಾಹೇಶ್ವರನ ಸುತ್ತ ಸೇರಿಕೊಂಡು ಅವನನ್ನು ಮೆಲ್ಲಮೆಲ್ಲನೆ ಎತ್ತಿ ನಿಲ್ಲಿಸಿದಾಗ
ಅವನು ಒಂದಡಿಯಿಟ್ಟು ತಡವರಿಸಿ ಅಲ್ಲಿ ನೆರೆದಿದ್ದ ಜನರೆಲ್ಲರೂ “ಅಯ್ಯೋ ವೃದ್ಧಬಿದ್ದನು ಎಂದು
ಕೂಗಿಕೊಳ್ಳುವಷ್ಟರಲ್ಲಿ ಆತನು ನಿಲ್ಲಲಾರದೆ ತಟ್ಟನೆ ಘಳಿಗೆಬಟ್ಟಲಿನ (ಸಮಯವನ್ನು
ಅಳೆಯಲು/ತಿಳಿಯಲು ಬಳಸುತ್ತಿದ್ದ ಉಪಕರಣ) ಮೇಲೆ ಬಿದ್ದನು. ಆಗ ಅಲ್ಲಿದ್ದ ಕಳಶ ಒಡೆದು,
ಘಳಿಗೆಬಟ್ಟಲು ಮುರಿದು ಹೋಗಿ, ಅಕ್ಕಿಯೆಲ್ಲಾ ಚೆಲ್ಲಿಹೋಗಿ, ಅಲ್ಲಿದ್ದ ಜೋಯಿಸರು ಚದುರಿ
ಅತ್ತಿತ್ತ ಓಡಿಹೋದರು. ನಂತರ ಬಿದ್ದು ಮೇಲೇಳಲಾರದೆ ಮೂರ್ಚೆಹೋದಂತೆ ಬಿದ್ದಿದ್ದಾಗ ಎಲ್ಲರೂ
ಅವನನ್ನು ಸುತ್ತುವರಿದು(ಪರಿತಂದು) ಕಣ್ಣಿಗೆ ಬಾಯಿಯೊಳಕ್ಕೆ ನೀರುಹಾಕಿ ಎಚ್ಚರಿಸಿ, ಮೇಲೆತ್ತುವವರು
ಜೀವವನ್ನೆ ಕೈಲ್ಲಿಡಿದುಕೊಂಡಂತೆ ಹಿಡಿಯಲಾರದೆ, ಮುಟ್ಟಲಾರದೆ, ನೋಡಲಾರದೆ ಮಾತನಾಡಿಸಲು
ಪ್ರಯತ್ನಿಸಿ ಹಿಡಿದು ಬಿಟ್ಟಕೂಡಲೆ ಅವನು ತುಪ್ಪದ ಕೊಡದ ಮೇಲಲ್ಲದೆ ಬೇರೆಲ್ಲಿಗೂ
ಬೀಳುತ್ತಿರಲಿಲ್ಲ. ಇದನ್ನು ನೋಡಿ ಅಲ್ಲಿ ಸೇರಿದ ಜನರೆಲ್ಲಾ “ಈ ವೃದ್ಧ ಬ್ರಾಹ್ಮಣನನ್ನು,
ಮುಪ್ಪಿನ ಮೂರ್ಖನನ್ನು, ಗೌತಮನ ಗೋವನ್ನು(ಬಡಕಲಾದ ಗೋವು) ಬ್ರಾಹ್ಮಣನನ್ನು ಕೊಂದ
ಬ್ರಹ್ಮಹತ್ಯಾದೋಷಿಯನ್ನು ಒಳಗೆ ಬಿಟ್ಟವರಾರು? ಕರೆದು ತಂದವರು ಯಾರು? ಇದು ಅಪಶಕುನ. ಇನ್ನೇನು ಈ
ಮದುವೆ ಸರಿಯಾಗುವುದಿಲ್ಲ” ಎನ್ನುತ್ತಾ ಎಲ್ಲರೂ ಮೆಲ್ಲಗೆ ಅವನ ಕೈಯನ್ನು ಕಾಲನ್ನು ಹಿಡಿದು
ಎತ್ತಿಕೊಂಡು ಹೋಗಿ ‘ತಮ್ಮ ಆಯುಷ್ಯದ ಭಾಷೆಗಳನ್ನು ಹೊರಹಾಕುವಂತೆ ಚಪ್ಪರದ ಹೊರಗೆ ಮೆಲ್ಲಗೆ
ಇಳಿಸಿದರು. ಬಾಗಿಲು ಕಾಯುತ್ತಿದ್ದವನನ್ನು (ಇವನೇ ಬಿಟ್ಟಿರಬಹುದೆಂದು) ಸಂಶಯಪಡುತ್ತಾ “ಈ ವೃದ್ಧನು ಒಳಗೆ
ಪ್ರವೇಶಿಸದಂತೆ ನೋಡಿಕೋ ಎಂದು ವಿವಾಹಮಂಟಪದ ಬಾಗಿಲನ್ನು ಹಾಕಿಕೊಂಡು ಒಳಗೆ ಹೋಗುವಷ್ಟರಲ್ಲಿ ವೃದ್ಧಮಾಹೇಶ್ವರನು
ಅವರಿಗಿಂತ ಮುನ್ನವೇ ಒಳಗೆ ಬಂದು ಅಲ್ಲಿದ್ದ ತೋರಣದ ತಳಿರನ್ನು ಕಿತ್ತು ಬೀಸಾಡುತ್ತಾ ಶಿವಾ ಶಿವಾ
ಎಂದು ಕೂಗುತ್ತಿರುವುದನ್ನು ನೋಡಿ ಅವರೆಲ್ಲರೂ ನೋಡಿ ಬೆರಗಾದರು. ಈಗತಾನೆ ಈತನನ್ನು ಹೊರಗೆ ಹಾಕಿ ಬಂದಿದ್ದೇವೆ!
ಆದರೆ ಈತ ನಮಗಿಂತ ಮುಂಚೆಯೇ ಒಳಗೆ ಬಂದಿರುವನು! ಈ ವೃದ್ಧನು ಕಿರುಕುಳ ಕೊಡಲು ಬಂದವನಂತೆ
ತೋರುತ್ತಿಲ್ಲ. ಈತ ಯಾರೋ ಕಾರಣಿಕ(ಅಸಾಧಾರಣ ಪುರುಷ) ಇರಬೇಕು ಎಂದು ವಿಸ್ಮಯದಿಂದ
ನೋಡುತ್ತಿದ್ದರು.
************************
ಮನಪೂರ್ವಕ ಧನ್ಯವಾದಗಳು
ಪ್ರತ್ಯುತ್ತರಅಳಿಸಿಮನಪೂರ್ವಕ ಧನ್ಯವಾದಗಳು
ಪ್ರತ್ಯುತ್ತರಅಳಿಸಿಧನ್ಯವಾದಗಳು🙏
ಪ್ರತ್ಯುತ್ತರಅಳಿಸಿಧನ್ಯವಾದಗಳು
ಪ್ರತ್ಯುತ್ತರಅಳಿಸಿಧನ್ಯವಾದಗಳು
ಪ್ರತ್ಯುತ್ತರಅಳಿಸಿಧನ್ಯವಾದಗಳು ಸರ್
ಪ್ರತ್ಯುತ್ತರಅಳಿಸಿಶಿವನು ಗಿರಿಜೆಯನ್ನು ಕುರಿತು ನನ್ನೊಡನೆ ಬರುವುದು ಬೇಡ ಎಂದು ಹೇಳಲು ಕಾರಣ
ಅಳಿಸಿಗಿರಿಜೆಯು ಶಿವನನ್ನು ಸಮಾಧಾನಪಡಿಸಲು ನೋಡುವಳು ಮತ್ತು ನಿಷ್ಠುರ ನಾಗಿ ನಡೆದುಕೊಳ್ಳಲು ಬಿಡುವುದಿಲ್ಲ ಎಂದು.
ಅಳಿಸಿDanyavadagalu
ಅಳಿಸಿSuper 💝💝😘 bro and sister 💞💞
ಅಳಿಸಿThank you
ಸರ್ ತುಂಬಾ ತುಂಬಾ ದನ್ಯವಾದಗಳು ಸರ್ ತಾವು ಕುಂಬಾರ ಗುಂಡಯ್ಯನ ಕುರಿತು ಮಾಹಿತಿ ನೀಡಿ ಸರ್
ಪ್ರತ್ಯುತ್ತರಅಳಿಸಿಸಾರಾಂಶ ಉತ್ತಮವಾಗಿದೆ
ಪ್ರತ್ಯುತ್ತರಅಳಿಸಿThank you for the info
ಪ್ರತ್ಯುತ್ತರಅಳಿಸಿತುಂಬ ಧನ್ಯವಾದಗಳು ಸರ್,ಉತ್ತಮವಾದ ಸಾರಾಂಶ.
ಪ್ರತ್ಯುತ್ತರಅಳಿಸಿಸರ್, ಇಳೆಯಾಂಡ ಗುಡಿಮಾರರ ರಗಳೆ ಬಗ್ಗೆ ಮಾಹಿತಿ ಇದ್ರೆ ಹಾಕಿ.
ಪ್ರತ್ಯುತ್ತರಅಳಿಸಿಧನ್ಯವಾದ
ಪ್ರತ್ಯುತ್ತರಅಳಿಸಿಧನ್ಯವಾದಗಳು
ಪ್ರತ್ಯುತ್ತರಅಳಿಸಿಧನ್ಯವಾದಗಳು
ಪ್ರತ್ಯುತ್ತರಅಳಿಸಿಧನ್ಯವಾದಗಳು ಸರ್ 🙏
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿಸಾರಾಂಶ ಉತ್ತಮವಾಗಿದೆ
ಪ್ರತ್ಯುತ್ತರಅಳಿಸಿthank you
ಪ್ರತ್ಯುತ್ತರಅಳಿಸಿThank you sir 🙏🙏
ಪ್ರತ್ಯುತ್ತರಅಳಿಸಿThanks 👍🙏
ಪ್ರತ್ಯುತ್ತರಅಳಿಸಿThanks you so much sir this is my project work
ಪ್ರತ್ಯುತ್ತರಅಳಿಸಿthank you very much sir
ಪ್ರತ್ಯುತ್ತರಅಳಿಸಿಚನ್ನಾಗಿದೆ ಸರ್ .ಧನ್ಯವಾದಗಳು...
ಪ್ರತ್ಯುತ್ತರಅಳಿಸಿThank you sir this is very useful to us
ಪ್ರತ್ಯುತ್ತರಅಳಿಸಿ