ನನ್ನ ಪುಟಗಳು

27 ನವೆಂಬರ್ 2013

ಜನಪದ ಕಲೆಗಳ ವೈಭವ (ಗದ್ಯ-9)


ಜನಪದ ಕಲೆಗಳ ವೈಭವ
ವೀರಗಾಸೆ
(ಮಾಹಿತಿ ಕೃಪೆ: ವಿಕಾಸ್ಪೀಡಿಯಾ, ಚಿತ್ರಗಳು: ಗೂಗಲ್)

         ‘ವೀರಗಾಸೆ’ ಕುಣಿತದ ಹಿನ್ನಲೆ ಬಗ್ಗೆ ಪ್ರಚಲಿತವಿರುವ ಒಂದು ಪೌರಾಣಿಕ ಪ್ರಸಂಗ ಹೀಗಿದೆ: “ಹಿಂದೆ ದಕ್ಷಬ್ರಹ್ಮನಿಗೂ ಅವನ ಅಳಿಯನಾದ ಈಶ್ವರನಿಗೂ ವೈರತ್ವ ಬಂದು ದಕ್ಷಬ್ರಹ್ಮನು ತಾನು ಮಾಡುವ ಯಾಗಕ್ಕೆ ಈಶ್ವರನನ್ನು ಬಿಟ್ಟು ಉಳಿದ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ಯಜ್ಞದಲ್ಲಿ ಈಶ್ವರನಿಗೆ ನ್ಯಾಯವಾಗಿ ಸಲ್ಲಬೇಕಾದ ಆವಿರ್ಭಾಗವನ್ನು ಕೊಡದೆ ತಿರಸ್ಕರಿಸುತ್ತಾನೆ. ಈಶ್ವರನು ಬೇಡವೆಂದರೂ ತಂದೆ ಮಾಡುವ ಯಾಗದಲ್ಲಿ ಭಾಗವಹಿಸಲು ಪಾರ್ವತಿ ಬರುತ್ತಾಳೆ. ದಕ್ಷಬ್ರಹ್ಮ ಅಳಿಯನ ಮೇಲಿನ ಕೋಪದಿಂದ, ಮಗಳೆಂಬ ಮಮತೆಯನ್ನೂ ತೊರೆದು, ಕಂಡೂ ಕಾಣದಂತೆ ತಿರಸ್ಕಾರವಾಗಿ ಕಾಣುತ್ತಾನೆ. ಅವಳೆದುರಿಗೆ ಈಶ್ವರನನ್ನು ನಿಂದಿಸುತ್ತಾನೆ. ಇದನ್ನು ಕೇಳಿದ ಪಾರ್ವತಿ ಸಹಿಸಲಾಗದೆ, ಪತಿನಿಂದೆಯನ್ನು ಹೊತ್ತು ಕೈಲಾಸಕ್ಕೆ ಹಿಂದಿರುಗಲಾಗದೆ “ಅಗ್ನಿಕೊಂಡ ಹಾಳಾಗಿ ಹೋಗಲಿ, ನಿನ್ನ ಹೆಣ್ಣು ಮಕ್ಕಳು ಮುಂಡೆಯರಾಗಲಿ, ಆಗಸ ತೂಕದ ಚಿನ್ನವಿಲ್ಲದಂತಾಗಲಿ, ಭೂಮಿ ತೂಕದ ಬೆಳ್ಳಿಯಿಲ್ಲದಂತಾಗಲಿ” ಎಂದು ತಂದೆಗೆ ಶಾಪವನ್ನು ಕೊಟ್ಟು ಅಗ್ನಿಕುಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆಗ ಇದೆಲ್ಲವನ್ನೂ ಏಕದೃಷ್ಟಿಯಿಂದ ಗಮನಿಸಿದ ಈಶ್ವರನು ಉಗ್ರವಾಗಿ ತಾಂಡವ ನೃತ್ಯವನ್ನು ಮಾಡುವಾಗ ಹಣೆಯ ಮೇಲೆ ಬಂದ ಬೆವರಿನ ಹನಿಗಳನ್ನು ಸೆಳೆದು ತೆಗೆದು ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ನೂರೊಂದು ಆಯುಧಗಳನ್ನು ಧರಿಸಿದಂತಹ ವೀರಭದ್ರನ ಜನನವಾಗುತ್ತದೆ. ಆಗ ಸಪ್ತ ಸಮುದ್ರಗಳು ಬತ್ತಿಹೋದವು. ಹುಟ್ಟಿದ ಮರುಕ್ಷಣದಲ್ಲಿಯೇ ವೀರಭದ್ರನು ಲೋಕವನ್ನೇ ಬಿಲ್ಲು ಮಾಡಿಕೊಂಡು, ಭೂಮಿಯನ್ನೇ ಬಾಣವನ್ನಾಗಿ ಮಾಡಿಕೊಂಡು, ‘ತಂದೆಯೇ ನಮಗೆ ವೈರಿ ಯಾರು?’ ಎಂದು ಕೇಳುತ್ತಾನೆ. ಅದಕ್ಕೆ ಶಿವನು ದಕ್ಷಬ್ರಹ್ಮನೆಂದು ಹೇಳಿ “ಅವನದು ಮುನ್ನೂರ ಅರವತ್ತು ಗಾವುದ ಪಟ್ಟಣ, ಅದಕ್ಕೆ ಮುನ್ನೂರ ಅರವತ್ತು ಬಾಗಿಲು, ಒಂದೊಂದು ಬಾಗಿಲಿಗೂ ಒಬ್ಬೊಬ್ಬ ರಾಕ್ಷಸರು ಕಾವಲಿರುತ್ತಾರೆ. ಆ ರಾಕ್ಷಸರ ಒಂದೊಂದು ತೊಟ್ಟು ರಕ್ತ ಬಿದ್ದರೆ ಒಂದು ಕೋಟಿ ರಾಕ್ಷಸರು ಜನಿಸುತ್ತಾರೆ” ಎಂದು ಹೇಳಿ ಅವನ ಹಿಂದೆಯೇ ಜನಿಸಿದ ಚೌಡೇಶ್ವರಿಯನ್ನು ಸಹಾಯಕ್ಕಾಗಿ ಕಳುಹಿಸಿ ಕೊಡುತ್ತಾನೆ.
       ವೀರಭದ್ರನು ರಾಕ್ಷಸರನ್ನು ಸಂಹರಿಸಿದ ನಂತರ ದಕ್ಷಬ್ರಹ್ಮನ ಯಾಗಶಾಲೆಗೆ ಹೋಗಿ ಅವನ ತಲೆಯನ್ನು ಚಂಡಾಡುತ್ತಾನೆ. ತಲೆ ಅಗ್ನಿಕುಂಡಕ್ಕೆ ಬಿದ್ದು ಸುಟ್ಟು ಕರಿಕಾಗುತ್ತದೆ. ಇದನ್ನು ಕಂಡ ದಕ್ಷಬ್ರಹ್ಮನ ಮಡದಿಯು ವೀರಭದ್ರನಿಗೆ ಆರತಿ ಬೆಳಗಿ ಪತಿಭಿಕ್ಷೆಯನ್ನು ಬೇಡುತ್ತಾಳೆ. ಶಿವನು ಯುದ್ಧಕ್ಕೆ ಕಳುಹಿಸುವಾಗ `ಶರಣು ಹೊಕ್ಕವರನ್ನು ಕಾಯಿ’ ಎಂದು ಹೇಳಿದ್ದನ್ನು ನೆನದುಕೊಂಡು, ಅವನಿಗೆ ಪ್ರಾಣದಾನ ಮಾಡಲು ರುಂಡವಿಲ್ಲದಿರುವುದನ್ನು ಗಮನಿಸಿ, `ಉತ್ತರ ದಿಕ್ಕಿಗೆ ಮುಖ ಮಾಡಿ ಮಲಗಿರುವ ಯಾವುದಾದರೂ ಪ್ರಾಣಿಯ ತಲೆಯನ್ನು ಕತ್ತರಿಸಿ ತನ್ನಿ’ ಎಂದು ಹೇಳಿ ಕಳುಹಿಸುತ್ತಾನೆ. ದಾರಿಯಲ್ಲಿ ಉತ್ತರ ದಿಕ್ಕಿಗೆ ತಲೆ ಹಾಕಿ ಒಂದು ಟಗರು ಮಲಗಿರುತ್ತದೆ. ಅದರ ರುಂಡವನ್ನೇ ಕತ್ತರಿಸಿ ತರುತ್ತಾರೆ. ಅದನ್ನೇ ದಕ್ಷನ ಮುಂಡಕ್ಕೆ ಜೋಡಿಸಿ ಪ್ರಾಣದಾನ ಮಾಡುತ್ತಾನೆ. ಈ ಸಂದರ್ಭದಲ್ಲಿ ವೀರಭದ್ರನು ತೋರಿದ ಪ್ರತಾಪದ ಪ್ರತೀಕವೇ `ವೀರಗಾಸೆ’ ಎಂದೂ, ಅಂದಿನಿಂದಲೇ ಈ ಕಲೆ ಬೆಳೆದು ಬಂದಿತೆಂದೂ ಕಲಾವಿದರು ಹೇಳುತ್ತಾರೆ.
          ಹಬ್ಬ ಹರಿದಿನಗಳಲ್ಲಿ ಜಾತ್ರೆ ಉತ್ಸವಗಳಲ್ಲಿ, ಕಾರ್ತೀಕ ಶ್ರಾವಣ ಸೋಮವಾರಗಳಲ್ಲಿ ಕಲಾವಿದರು (ಇವರಿಗೆ ಲಿಂಗದ ವೀರರು ಎಂದು ಹೇಳುತ್ತಾರೆ) ತಪ್ಪದೆ ಕಲೆಯನ್ನು ಪ್ರದರ್ಶಿಸುತ್ತಾರೆ. `ಲಿಂಗದ ವೀರ’ರನ್ನು ಊರಿಗೆ ಕರೆಸಿ ವೀರಭದ್ರನ ಪ್ರತಾಪದ ಬಗ್ಗೆ ಖಡ್ಗ ಹೇಳಿಸಿ ಕಥೆ ಕೇಳುವುದರಿಂದ ಗ್ರಾಮಕ್ಕೆ ಒಳ್ಳೆಯದಾಗುತ್ತದೆಂದೂ ದನಕರುಗಳಿಗೆ ರೋಗರುಜಿನಗಳಿದ್ದರೆ ಅವು ನಿವಾರಣೆಯಾಗುತ್ತವೆಂದೂ ನಂಬಿಕೆಯಿದೆ. ಕಲಾವಿದರಲ್ಲಿಯೂ `ಈ ಕಲೆಯನ್ನು ಬಿಟ್ಟರೆ ತಮಗೆ ದರಿದ್ರ ಬರುತ್ತದೆ’ ಎಂಬ ಭಾವನೆ ಇದೆ. ಕಲಾವಿದರು ಎಷ್ಟೇ ಶ್ರೀಮಂತರಾಗಿದ್ದರೂ ಶಿವರಾತ್ರಿ, ಯುಗಾದಿ ಹಬ್ಬದಂದು ಕಾವಿ ಧರಿಸಿ ಮೂರು ಮನೆಗಾದರೂ `ಕ್ವಾರಣ್ಯ’ಕ್ಕೆ ಹೋಗಬೇಕು. ಇವರನ್ನು ವೀರಭದ್ರನ ಅವತಾರವೆಂದೇ ಭಾವಿಸಿರುವ ಗ್ರಾಮೀಣರು ಎಂದೂ ಬರಿಗೈಯಲ್ಲಿ ಕಳುಹಿಸದೆ `ಭಿಕ್ಷೆ’ ನೀಡಿ ನಮಸ್ಕರಿಸುತ್ತಾರೆ.
         ಕಲಾವಿದರ ವೇಷಭೂಷಣ ವೈಶಿಷ್ಟ್ಯಪೂರ್ಣ. ತಲೆಗೆ ಬಿಳಿಯ ಚೌಲಿಯನ್ನು ಹಾಕಿಕೊಂಡಿರುತ್ತಾರೆ. ಕಾವಿ ಅಂಗಿ, ಕಾವಿ ಕಾಸೆಪಂಚೆ, ಕಿವಿಗೆ ರುದ್ರಾಕ್ಷಿ, ಹಣೆ ಹುಬ್ಬು, ಕಿವಿಗಳಿಗೆ ವಿಭೂತಿ, ಕೊರಳು ತೋಳು ಮುಂಗೈಗಳಲ್ಲಿ ರುದ್ರಾಕ್ಷಿ ಮಾಲೆ, ನಾಗಾಭರಣ, ಎದೆಯ ಹತ್ತಿರ ವೀರಭದ್ರಸ್ವಾಮಿಯ ಹಲಗೆ- ಇಷ್ಟನ್ನು ಧರಿಸಿರುತ್ತಾರೆ. ಸೊಂಟದಲ್ಲಿ ಚೌಲಿ ಹಾಕಿದ ಹಿತ್ತಾಳೆಯ ನರಸಿಂಹ ಮತ್ತು ದಕ್ಷಬ್ರಹ್ಮನ ಶಿರಗಳನ್ನು ಕಟ್ಟಿಕೊಂಡಿರುತ್ತಾರೆ. ಮೊಣಕಾಲಿಗೆ ಜಂಗು ಧರಿಸಿರುತ್ತಾರೆ. ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ವೀರಭದ್ರನ ಹಲಗೆಯನ್ನು ಹಿಡಿದಿರುತ್ತಾರೆ. ದೇವರ ಉತ್ಸವದ ಮುಂದೆ ಕರಡಿ ಮತ್ತು `ಚಮಾಳ’ ವಾದ್ಯದ ಗತ್ತಿಗೆ ಲಯಬದ್ಧವಾಗಿ ಕುಣಿಯುತ್ತಾರೆ. ಕುಣಿತದ ಮಧ್ಯೆ ವೀರಭದ್ರನ ಒಡಪುಗಳನ್ನು ಹೇಳುತ್ತಾರೆ. ಜಾತ್ರೆ ಉತ್ಸವಗಳಲ್ಲಿ ಇವರು ಕೊಂಡ ಹಾಯ್ದನಂತರ, ಇವರ ಹಿಂದೆ ಕಳಸದವರು ಹಾಗೂ ಹರಕೆ ಹೊತ್ತ ಭಕ್ತರು ಹಾಯುತ್ತಾರೆ. `ಶಸ್ತ್ರ ಪವಾಡ’ ನಡೆಸುವುದು ವೀರಗಾಸೆಯವರ ಮತ್ತೊಂದು ವಿಶೇಷ.
ವೀರಗಾಸೆ ಕುಣಿತದ ವೀಡಿಯೋ

********************************************* 
ಕಂಸಾಳೆ
(ಮಾಹಿತಿ ಕೃಪೆ: ವಿಕಿಪೀಡಿಯಾ, ಚಿತ್ರಗಳು:ಗೂಗಲ್)
         ಕಂಸಾಳೆ ಮಲೆ ಮಹಾದೇಶ್ವರನ ಭಕ್ತರಾದ ದೇವರಗುಡ್ಡರು ಬಳಸುವಂತಹ ವಿಶಿಷ್ಟ ಬಗೆಯ ವಾದ್ಯ. ಮಾದೇಶ್ವರನ ಕಾವ್ಯವನ್ನು ಈ ಕಲಾವಿದರು ಹಾಡುವರು. ಇವರು ಮೈಸೂರು, ಮಂಡ್ಯ, ಬೆಂಗಳೂರು ಜಿಲ್ಲೆಗಳಲ್ಲಿ ನೆಲೆಸಿರುವರು. ಕಥಾ ರೂಪದಲ್ಲಿ ಶಿವ ಮತ್ತು ಶರಣರ ಮಹಿಮೆಗಳನ್ನು ವಂಶಪರಂಪರ‍್ಯವಾಗಿ ಹೇಳುತ್ತಾ ಮುಂದುವರೆಸಿಕೊಂಡು ಬಂದಿರುವರು.

ಕಂಸಾಳೆ ಪದದ ನಿಷ್ಪತ್ತಿ

            ಇದರ ನಿಷ್ಪತ್ತಿಯ ಬಗೆಗೆ ಹಲವು ಚರ್ಚೆಗಳಿವೆ. ’ಕಾಂಸ್ಯ(ಕಂಚು)ತಾಳವೇ ಕಂಸಾಳೆಯಾಗಿದೆ’ ಎಂಬ ಅಭಿಪ್ರಾಯವಿದೆ. ಇದಕ್ಕೆ ಕೇಶಿರಾಜನ ಸಮರ್ಥನೆಯೆಂದರೆ "ಪೂರ್ವ ಪದಾಂತಕ್ಕೆ ದೀರ್ಘಮುಂ ಉತ್ತರ ಪದಾದಿಗೆ ಲೋಪಮುಮಾಗಿ ಕಾಂಸ್ಯತಾಳಕ್ಕೆ ಕಂಸಾಳಂ ಎಂದಾಯ್ತು" (ಸೂತ್ರ.೨೦೮) ಎಂಬ ವಿವರಣೆಯನ್ನು ನೀಡಿರುವನು. ಹಳಗನ್ನಡ ಕಾವ್ಯಗಳಲ್ಲಿ ಕಂಸಾಳೆಯ ಬಗೆ ಕಂಡುಬರುವ ಉಲ್ಲೇಖಗಳೆಂದರೆ ಹರಿಹರನ ’ಗಿರಿಜಾ ಕಲ್ಯಾಣ” ಮತ್ತು ವಿರೂಪಾಕ್ಷ ಪಂಡಿತನ ಚನ್ನಬಸವ ಪುರಾಣಗಳಲ್ಲಿ ’ಕಂಸಾಳ’ ಎಂಬ ಪದದ ಬಳಕೆಯಿರುವುದು. ಅಷ್ಟೇ ಅಲ್ಲದೆ ರಾಘವಾಂಕನ ’ಸಿದ್ದರಾಮ ಚಾರಿತ್ರ‍್ಯ’, ಭೀಮಕವಿಯ ’ಬಸವ ಪುರಾಣ’ , ಸೂರ‍್ಯಕವಿಯ ’ಕವಿಕಂಠಹಾರ’, ಗೋವಿಂದ ವೈದ್ಯನ ’ಕಂಠೀರವ ನರಸರಾಜ ವಿಜಯಂ’, ಗೋವಿಂದ ಕವಿಯ ’ನಾರಿಮಹಾತ್ಮ್ಯಂ’ ಕೃತಿಗಳಲ್ಲಿ ಕೌಸಾಳ, ಕಂಸತಾಳ, ಕಾಂಸಾಳ, ಕೈತಾಳ ಎಂಬ ಪ್ರಯೋಗಗಳು ಬಂದಿರುವುದನ್ನು ಗಮನಿಸಬಹುದಾಗಿದೆ. ಆಡುಭಾಷೆಯಲ್ಲಿ ಕಂಸಾಳೆ, ಕೈತಾಳ, ಕೌಸಳೆ, ಬಟ್ಲು ಎಂಬಿತ್ಯಾದಿ ಪದಗಳು ರೂಢಿಯಲ್ಲಿರುವುದು.’ಕಂಸಾಳೆ’ಯು ಕಂಚಿನಿಂದ ತಯಾರಿಸಿದ ತಾಳವಾಗಿರುವುದು.ಮಧ್ಯೆ ದಾರ ಕಟ್ಟಿರುವ ಅಂಗೈ ಅಗಲದ ಒಂದು ಬಟ್ಟಲು ಎಡ ಕೈಗೆ, ಹಾಗೆಯೇ ಇನ್ನೊಂದು ಕೈಯಲ್ಲಿ ಮಟ್ಟಸವಾದ ತಾಳ. ಮುಚ್ಚಳದ ನಡುಭಾಗ ಬಿಟ್ಟಿದ್ದು ಅದರ ರಂಧ್ರದ ಮೂಲಕ ದಾರವೊಂದನ್ನು ಬಿಗಿದು ಅದನ್ನು ಗೊಂಡೆಗಳಿಂದ ಅಲಂಕಾರ ಮಾಡಿ ಇಳಿ ಬಿಡುತ್ತಾರೆ. ಸಾಮ್ಯಾನವಾಗಿ ಇದು ಬಲಗೈ ಮೇಲಿಂದ ಇಳಿ ಬಿದ್ದಿರುತ್ತದೆ.

ಹುಲಿಹೆಜ್ಜೆ ಕುಣಿತ

            ಇದಕ್ಕೆ ಪ್ರಾಚೀನ ಜನಪದರು ಕೊಟ್ಟಿರುವ ಹೆಸರು 'ಹುಲಿಹೆಜ್ಜೆ ಕುಣಿತ'. ಬಹಳ ಹಿಂದೆ ಸಾರಿಗೆ ವ್ಯವಸ್ಥೆ ಇರಲಿಲ್ಲ. ಮಹದೇಶ್ವರನ ಬೆಟ್ಟಕ್ಕೆ ಭಕ್ತರು ಕಾಲ್ನಡಿಗೆಯಲ್ಲಿ, ದಟ್ಟ ಕಾಡಿನ ನಡುವೆ ಪ್ರಯಾಣ ಮಾಡಬೇಕಾಗಿತ್ತು. ಕ್ರೂರಪ್ರಾಣಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ಗುಂಪು ಗುಂಪಾಗಿ ಹೋಗುವಾಗ ಪ್ರಯಾಣದ ಆಯಾಸಕ್ಕೊ, ಪ್ರಾಣಿಗಳ ಮೇಲಿನ ಭಯಕ್ಕೊ, ದೊಡ್ಡ ದೊಡ್ಡ ಹೆಜ್ಜೆ ಇಡುತ್ತಾ ಸಾಗುತ್ತಿದ್ದರಂತೆ. ಕಂಸಾಳೆಯ ಎಡಗೈಭಾಗದ ಪರಿಕರ ತಟ್ಟೆ/ಬಟ್ಟಲಿನ ಮಾದರಿಯಲ್ಲಿದೆ. ಭಕ್ತರು ಹಲವಾರು ದಿನ ಅರಣ್ಯದಲ್ಲಿ ಸಂಚರಿಸುವಾಗ ತಾವು ತಂದ ಬುತ್ತಿ ಮುಗಿದು ಹೋಗಿ, ಭಿಕ್ಷಾಟನೆ ಮಾಡಬೇಕಾಗಿ ಬಂದಾಗ, ಜನರನ್ನು ರಂಜಿಸಲು ಕಂಸಾಳೆ ಆಡುತ್ತಾ ಭಿಕ್ಷೆ ಬೇಡುತ್ತಿದ್ದರೆಂದು ಕಂಸಾಳೆ ಮಹಾದೇವಯ್ಯ ಒಂದೆಡೆ ಉಲ್ಲೇಖಿಸಿದ್ದಾರೆ.

ಕಂಸಾಳೆ ಮೇಳದ ಬಗೆ

           ಕಂಸಾಳೆ ಮೇಳದಲ್ಲಿ ಮೂರರಿಂದ ಎಂಟು ಜನರು ಭಾಗವಹಿಸುತ್ತಾರೆ. ಹಾಡುವ ಸಂದರ್ಭದಲ್ಲಿ ಮೂವರು, ನೃತ್ಯ ಮಾಡುವ ಸಂದರ್ಭದಲ್ಲಿ ಎಂಟರಿಂದ ಹನ್ನೆರಡು ಜನ ಕಲಾವಿದರಿರುತ್ತಾರೆ. ಇವರಿಗೆ ಮೇಳದ ಸಮಯದಲ್ಲಿ ಇಂತಹುದೇ ವೇಷಭೂಷಣಗಳು ಇರಬೇಕೆಂಬ ನಿಯಮವೇನಿಲ್ಲ. ನಿತ್ಯದ ಅಂಗಿ, ಪಂಚೆ, ಹೆಗಲಿಗೆ ಜೋಳಿಗೆ, ಕೊರಳಿಗೆ ರುದ್ರಾಕ್ಷಿ, ಹಣೆಗೆ ವಿಭೂತಿಗಳಿರುತ್ತವೆ. ಈ ಕಲಾವಿದರಲ್ಲಿ ಒಬ್ಬ ಕಂಜರವನ್ನು ಹಿಡಿದಿರುತ್ತಾನೆ. ಇತರರು ಹಿಮ್ಮೆಳದವರು. ಹಾಡಿನ ಲಯಕ್ಕೆ ಅನುಗುಣವಾಗಿ ತಾಳದ ನುಡಿತವು ಉಂಟಾಗುತ್ತದೆ. ಉದಾಹರಣೆಗೆ: ’ಮಾದೇಶ್ವರನ’ ಸಾಲಿನಲ್ಲಿ ಹೀಗೆ ವರ್ಣಿಸಲಾಗಿದೆ.
"ವಾಸ ಕಂಸಾಳೆಯ ನುಡಿಸಿಕೊಂಡು ಮಾ
ದೇಶನಂಘ್ರಿಗೆ ನಮೋಯೆಂದು
ಭಾಷೆ ಪಾಲಕ ದುರಿತವ ಪೊರೆಯೆಂದು ವೀ
ರೇಶನ ಕೊಂಡಾಡಿದರು
ಕಂಸಾಳೆಯ ದೇವರ ಗುಡ್ಡರು"
ದೀಕ್ಷೆಯನ್ನು ಪಡೆದ ಮೇಲೆ ಗುಡ್ಡರಾಗುವ ಇವರು ತಮ್ಮ ಪಂಥದ ಪ್ರಚಾರಕರಾಗಿ, ಪ್ರಸಾರಕರಾಗಿ ಕಾರ‍್ಯವನ್ನು ನಿರ್ವಹಿಸುವರು. ಮಾದೇಶ್ವರನ ಗುಡ್ಡರನ್ನು ಕೈಸಾಳೆಯವರು, ಕಂಸಾಳೆಯವರು ಎಂದು ಕರೆಯುವರು. ಹರಿಜನರು, ಒಕ್ಕಲಿಗರು, ಕುರುಬರು, ಗಂಗಾಮತಸ್ಥರು, ಉಪ್ಪಲಿಗರು, ಮಡಿವಾಳರು, ಪರಿವಾರದವರು ಮಾದೇಶ್ವರನ ಗುಡ್ಡದವರಾಗುತ್ತಾರೆ. ಗಂಡಸರು ಮತ್ತು ಹೆಂಗಸರು ಮಾದೇಶ್ವರನ ಭಕ್ತರಾಗಿ ದೀಕ್ಷೆ ಪಡೆಯುವಾಗ ಗಂಡಸರನ್ನು ಗುಡ್ಡರೆಂದೂ, ಹೆಂಗಸರನ್ನು ಗುಡ್ಡಮ್ಮ, ಗುಡ್ಡಿಯರೆಂದು ಕರೆಯುವರು. ಸೂತಕವಾದ ಹೆಂಗಸರನ್ನು ಗುಡ್ಡಿಯಾಗಿ ಬಿಡುವಂತಹ ಕ್ರಮವಿಲ್ಲ. ಒಮ್ಮೆ ಗುಡ್ಡಿಯಾದ ಹೆಂಗಸಿಗೆ ಮದುವೆಯೂ ಇರುವುದಿಲ್ಲ. ಈ ಪದ್ದತಿಯು ಹೆಚ್ಚಾಗಿ ಹರಿಜನರಲ್ಲಿಯೇ ಕಂಡು ಬರುವುದುಂಟು. ಗುಡ್ಡರು ಮಾದೇಶ್ವರನ ಕಥೆಯನ್ನು, ಗುಡ್ಡಿಯರು ಬಿಡಿ ಹಾಡುಗಳನ್ನು ಹಾಡುವರು. ಗುಡ್ಡರಾಗಿ ಬಿಡುವಂತಹ ಸಂಪ್ರದಾಯವು ವಂಶಪರಂಪರ‍್ಯವಾಗಿ ಬಂದಿರುವಂತಹುದು.

ದೇವರ ಗುಡ್ಡರಲ್ಲಿ ೨ ಬಗೆ

 1. ಸಿರಿಯ ದೇವರ ಗುಡ್ಡರು
 2. ಅಲೆಮಾರಿ ಗುಡ್ಡರು

ಸಿರಿಯ ದೇವರ ಗುಡ್ಡರು

ಕಂಚಿನ ತಟ್ಟೆಯಲ್ಲಿ ಇವರು ಊಟವನ್ನು ಮಾಡುವುದಿಲ್ಲ. ಕಾರಣ ಇವರು ಕಂಚನ್ನು ಮಾದೇಶ್ವರನ ಶ್ರೇಷ್ಠ ಕಂಸಾಳೆಯೆಂದು ಭಾವಿಸುತ್ತಾರೆ.ಇವರು ಪಾದರಕ್ಷೆಯನ್ನು ಹಾಕುವುದಿಲ್ಲ. ಸೋಮವಾರ, ಶುಕ್ರವಾರ, ಅಮಾವ್ಯಾಸೆಯ ದಿನದಂದು ’ಕ್ವಾರಣ್ಯ’ವನ್ನು ಮಾಡುವರು. ಹಬ್ಬ, ಉತ್ಸವದ ದಿನಗಳಲ್ಲಿ ಮಾದೇಶ್ವರನ ದರ್ಶನವನ್ನು ಮಾಡುವರು. ಈ ಗುಡ್ಡರು ದೀಕ್ಷೆಯನ್ನು ಪಡೆದಿದ್ದರೂ ಕೂಡ ಮದುವೆಯನ್ನು ಆಗಬಹುದಾಗಿದೆ.

ಅಲೆಮಾರಿ ಗುಡ್ಡರು

ಮಾದೇಶ್ವರನ ಸಂಪೂರ್ಣ ಕಥೆಯನ್ನು ಹಾಡುವರು. ಅಲ್ಲದೇ ಹಬ್ಬ, ಉತ್ಸವದ ದಿನಗಳಲ್ಲಿ ಮಾದೇಶ್ವನ ದರ್ಶನವನ್ನು ಪಡೆದು ಸೇವೆಯನ್ನು ಸಲ್ಲಿಸುತ್ತಾರೆ.

ದೀಕ್ಷಾ ವಿಧಾನ

ಗುಡ್ಡರಾಗುವ ಮಾದೇಶ್ವರನ ಭಕ್ತರ ಸಾಲಿಗೆ ಸಂಬಂಧಿಸಿದಂತೆ ಪ್ರತಿಯೊಂದು ಪ್ರದೇಶಕ್ಕೆ ಸಂಬಂಧಿಸಿದಂತೆ ಒಬ್ಬ ’ಪುರಸೇಕಾರಿ’ಯಿರುತ್ತಾನೆ.ಈತನು ಗುಡ್ಡರಿಗೆ ದೀಕ್ಷೆಯನ್ನು ಕೊಡುವವನಾಗಿರುವನು. ಈ ದೀಕ್ಷೆಯು ಮಾದೇಶ್ವರನ ಗುಡ್ಡದಲ್ಲಿ ಅಥವಾ ಅವರವರ ಊರುಗಳಲ್ಲಿ ನಡೆಯುತ್ತದೆ. ಆಷಾಢಮಾಸವನ್ನು ಬಿಟ್ಟು ಉಳಿದ ಶಿವರಾತ್ರಿ, ದೀಪಾವಳಿ, ಯುಗಾದಿ, ಕಾರ್ತಿಕ ಮಾಸದಲ್ಲಿ ಗುಡ್ಡರನ್ನು ಬಿಡುವ ಸಂಪ್ರದಾಯವುಂಟು. ಅಲ್ಲದೇ ಶುಭ ಮೂಹರ್ತದ ಸಮಯವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.ಗುಡ್ಡರಾಗುವವರು ಮೊದಲು ಅವರ ಊರಿನ ಮಂಟೇಸ್ವಾಮಿ ಗುಡ್ಡರು, ಪಾರ್ವತಿ ಗುಡ್ಡರು, ಮಾದೇಶ್ವರನ ಗುಡ್ಡರು, ಜೋಗಿಗಳು, ದಾಸರುಗಳ ದರ್ಶನ ಮಾಡಿ ಹಿರಿಯ ವ್ಯಕ್ತಿಗಳೊಂದಿಗೆ ಬಾವಿ ಅಥವಾ ನದಿಯ ಬಳಿ ಸೇರುವರು. ಮೊದಲು ಮಂಡೆ, ಉಗುರು, ಉಡುದಾರಗಳನ್ನು ತೆಗೆಸಿ, ಅನಂತರ ಗಂಗೆಗೆ ಕರೆತರುವರು. ಗುಡ್ಡರ ಕೈಯಲ್ಲಿ ನೀರು ಹಾಕಿಸಿ ಹೊಸ ಉಡುದಾರ, ಕಚ್ಚೆಪಾವುಡ, ಭಸ್ಮಗಳನ್ನು ಧರಿಸಿ, ಕಂಸಾಳೆ ನಾದಗಳೊಂದಿಗೆ ಆತನನ್ನು ಸಾಲೂರು ಮಠಕ್ಕೆ ಕರೆತರಲಾಗುತ್ತದೆ. ಅಲ್ಲಿರುವಂತಹ ಪುರಸೇಕಾರಿಗೆ ಹುಡುಗನನ್ನು ಒಪ್ಪಿಸಿ, "ಈತ ನಮ್ಮ ಮಗನಲ್ಲ ಮಾದೇಶ್ವರನ ಮಗ" ಎಂದು ಹೇಳುತ್ತಾ "ಮಾದೇವ ನಿನ್ನೊಕ್ಕಲಾಯ್ತಿ ರೋ ಕಂದನನ್ನು ಉದ್ಧಾರ ಮಾಡಪ್ಪಾ" ಎಂದು ಕೈ ಮುಗಿಯುತ್ತಾರೆ. ಪುರಸೇಕಾರಿಯ ಗುಡ್ಡನ ಕಣ್ಣುರೆಪ್ಪೆ, ಕಿವಿ, ತಲೆ, ಹಣೆ, ತೋಳು, ಎದೆ, ಬೆನ್ನು,ಕೈಕಾಲುಗಳಿಗೆ ಬ್ರಹ್ಮ, ವಿಷ್ಣು, ಮಹೇಶ್ವರನ ಹೆಸರನ್ನು ಹೇಳುತ್ತಾನೆ. ನಂತರ ವಿಭೂತಿ ಧಾರಣೆ ಮಾಡಿಸಿ ಹುಡುಗನನ್ನು ಕರಿಕಂಬಳಿ ಯ ಗದ್ದುಗೆಯಲ್ಲಿ ಕೂರಿಸುವರು. ಹುಡುಗನ ಬಳಿ ೫ ಕಳಸಗಳನ್ನು ಇಡಲಾಗುತ್ತದೆ. ಕಳಸಗಳಿಗೆ ಸುತ್ತಿದ ದಾರದಲ್ಲಿ ಒಂದು ಎಳೆಯನ್ನು ಹುಡುಗನ ಕತ್ತಿಗೆ ಕಟ್ಟಲಾಗುತ್ತದೆ. ಹೊಸ ದಾರದಲ್ಲಿ ರುದ್ರಾಕ್ಷಿ ಮಣಿಯನ್ನು ಅಡ್ಡವಾಗಿ ಕಟ್ಟುತ್ತಾರೆ. ಅರಿಶಿನ ಬಟ್ಟೆಯಲ್ಲಿ ಅರಿಶಿನದ ಕೊಂಬು, ಕಬ್ಬಿಣದ ಉಂಗುರವನ್ನಿಟ್ಟು ಕಪ್ಪು ಉಡುದಾರದಲ್ಲಿ ಕಟ್ಟುತ್ತಾರೆ. ಕರ್ಪೂರ ಹಚ್ಚಿ, ರುದ್ರಾಕ್ಷಿ ಕಟ್ಟಿ ಕಂಕಣಧಾರಣೆ ಮಾಡಿ ಎಲ್ಲರಿಂದಲೂ ಶರಣು ಮಾಡಿಸುತ್ತಾರೆ.ಈ ಗುಡ್ಡರಿಗೆ ಅಕ್ಕಿ, ಎಲೆ, ಅಡಿಕೆ, ಬೆಲ್ಲ, ಕಾಯಿ ಕೊಟ್ಟು ಕಂಕಣ ಕಟ್ಟಿ ಎಲ್ಲರಿಗೂ ನಮಸ್ಕಾರವನ್ನು ಮಾಡಿಸಲಾಗುತ್ತದೆ. ಹೊಸದಾಗಿ ದೀಕ್ಷೆಯನ್ನು ಪಡೆದುಕೊಂಡ ಗುಡ್ಡರಿಗೆ ಮುತ್ತಗದ ಎಲೆಯನ್ನು ನೀಡಿ ಎಲ್ಲರ ಬಳಿಗೆ ಕಳುಹಿಸಿದಾಗ ಎಲ್ಲರು ಒಂದೊಂದು ಹಿಡಿ ಅನ್ನವನ್ನು ನೀಡುತ್ತಾರೆ. ನಂತರ ಅದನ್ನು ಎಲ್ಲರೊಂದಿಗೆ ಪಂಕ್ತಿಯಲ್ಲಿ ಕುಳಿತು ಉಣ್ಣುವುದು ರೂಢಿಯಲ್ಲಿರುವುದು.ಆ ದಿನದಿಂದ ಹುಡುಗನು ಗುಡ್ಡರ ಸಾಲಿಗೆ ಸೇರಿದ ಎಂಬ ಅರ್ಥವಿರುವುದು. ಈ ಗುಡ್ಡನು ಹಾಡುಗಾರನಾಗಿದ್ದರೆ ಆತನಿಗೆ ಮಾದೇಶ್ವನ ಕಥೆಯನ್ನು ಹೇಳಿಕೊಡಲಾಗುತ್ತದೆ. ಇಲ್ಲವೇ ಆತನಿಗೆ ಬಿಡಿ ಹಾಡುಗಳನ್ನು ಹೇಳಿಕೊಡಲಾಗುತ್ತದೆ.

ಕಂಸಾಳೆಯಲ್ಲಿ ಎರಡು ವಿಧ

 1. ಕುಳಿತು ಹಾಡುವ ಕಂಸಾಳೆ
 2. ಬೀಸು ಕಂಸಾಳೆ

ಕುಳಿತು ಹಾಡುವ ಕಂಸಾಳೆ

ಈ ಮೇಳದಲ್ಲಿ ಮೂವರಿಂದ ಎಂಟು ಜನ ಭಾಗವಹಿಸುವುದುಂಟು. ಪ್ರಧಾನ ಹಾಡುಗಾರನು ಮಧ್ಯದಲ್ಲಿದ್ದು ಸಹ ಕಲಾವಿದರು ಡಪ್ಪು, ಕಂಸಾಳೆ, ಚಿಟಿಕೆ ಹಿಡಿದು ಸುತ್ತಲೂ ಕುಳಿತಿರುತ್ತಾರೆ. ವಾದ್ಯಕ್ಕೆ ಅನುಗುಣವಾಗಿ ಹಾಡುತ್ತ ದನಿಗೂಡಿಸುತ್ತಾರೆ. ಕಥೆಯ ಸಂಭಾಷಣೆಗೆ ತಕ್ಕಂತೆ ನಡೆಯುವಾಗ ಉಳಿದವರು ’ಹೌದಪ್ಪಾ ಹೌದು’ ಎಂದು ಹೇಳುವರು. ಒಬ್ಬ ಕಲಾವಿದನು ಒಂದು ಕಥೆಯನ್ನು ಹೇಳಿ ನಿಲ್ಲಿಸಿದಾಗ, ಮತ್ತೊಬ್ಬ ಕಲಾವಿದನು ಮತ್ತೊಂದು ಕಥೆಯನ್ನು ಮುಂದುವರೆಸಿಕೊಂಡು ಹೋಗುವನು. ಇಂತಹ ಕಥಾ ನಿರೂಪಣೆಯು ಗದ್ಯ ಪದ್ಯ ಮಿಶ್ರಿತದಿಂದ ಕೂಡಿರುವುದು. ಕಂಸಾಳೆಯ ಮೂಲಕ ಮಾದೇಶ್ವರನ ಕಾವ್ಯವನ್ನು ಹೇಳುವುದಕ್ಕೆ ’ಕಥೆ ಮಾಡುವುದು’ ಎನ್ನಲಾಗುತ್ತದೆ. ಮೊದಲಿಗೆ ಗಣಪತಿ, ಸರಸ್ವತಿ ದೇವತೆಗಳನ್ನು ಸ್ತುತಿಸಿ ಕೊನೆಗೆ ಮಂಗಳದೊಂದಿಗೆ ಕಥೆಯನ್ನು ಮುಕ್ತಾಯ ಮಾಡುವರು. ಮಾದೇಶ್ವರ ಮತ್ತು ಇತರ ದೇವತೆಗಳನ್ನು ಕಥೆಯ ಆರಂಭ ಮತ್ತು ಅಂತ್ಯದಲ್ಲಿ ಸ್ಮರಿಸುವುದು ಕಡ್ಡಾಯವಾಗಿರುವುದು.

ಬೀಸು ಕಂಸಾಳೆ

ಮಾದೇವನು ಇದರ ಪ್ರವರ್ತಕನೆಂಬ ನಂಬಿಕೆಯಿದೆ. ಕತ್ತಿ ಪವಾಡದ ಹಳ್ಳದಲ್ಲಿ ಬಿಲ್ಲಯ್ಯ-ಕಾರಯ್ಯನನ್ನು ಪರೀಕ್ಷೆ ಮಾಡಿದ ಸಂತೋಷದಿಂದ ಮಾದೇಶ್ವರನು ಕಂಸಾಳೆ ಬೀಸಿ ನೃತ್ಯ ಮಾಡಿದರಿಂದ ಇದರ ಆರಂಭ ಎಂಬ ನಂಬಿಕೆಯು ಇರುವುದು. ಇದರಲ್ಲಿ ’ತಟ್ ಬಟ್ಲು’ , ’ತಾರ‍್ ಬಟ್ಲು’ ಎಂಬ ಎರಡು ವಿಧಗಳಿವೆ. ಕಂಸಾಳೆಯನ್ನು ತಟ್ಟುತ್ತಾ ಕುಣಿಯುವುದೇ ತಟ್ ಬಟ್ಲು. ಮೂವರಿಂದ ಎಂಟು ಜನರು ಇದರಲ್ಲಿ ಭಾಗವಹಿಸುತ್ತಾರೆ.ಈ ಕಂಸಾಳೆಯ ಮೇಲಿನ ಮುಸುಕಿಗೆ ಸುಮಾರು ೦.೪೫ ಮೀ. ಅಥವಾ ೦.೬೧ ಮೀ ಉದ್ದದ ದಾರವನ್ನು ಕಟ್ಟಲಾಗುತ್ತದೆ. ಇದಕ್ಕೆ ಬಣ್ಣದ ಗೊಂಡೆಗಳಿಂದ ಅಲಂಕಾರವನ್ನು ಮಾಡಲಾಗಿರುತ್ತದೆ. ಈ ದಾರದ ತುದಿಯನ್ನು ಹಿಡಿದು ಬೀಸಿ ತಾಳ ಹಾಕುವುದರಿಂದಲೇ ಇದನ್ನು ಬೀಸು ಕಂಸಾಳೆಯೆಂದು ಕರೆಯುವರು.

ಮಲೆಯ ಮಾದೇಶ್ವರನ ಕಾವ್ಯ
ಕಂಸಾಳೆಯ ಸಂಪ್ರದಾಯದಲ್ಲಿ ಮಲೆಯ ಮಾದೇಶ್ವರನ ಕಾವ್ಯವು ಪ್ರಮುಖವಾದುದು. ಈ ಕಾವ್ಯವು ಏಳು ಸಾಲುಗಳಾಗಿ ಒಡೆದಿದ್ದು ಒಂದೊಂದೂ ಸ್ವತಂತ್ರವೆನ್ನುವಂತೆ ವಿಶಿಷ್ಷತೆಯನ್ನು ಪಡೆದಿರುವುದು. ಅವುಗಳೆಂದರೆ:
 1. ತಾಳುಗತೆ
 2. ಶ್ರವಣದೊರೆ ಸಾಲು
 3. ಜುಂಜೆಗೌಡನ ಸಾಲು
 4. ಸಂಕಮ್ಮನ ಸಾಲು
 5. ಇಕ್ಕೇರಿ ದೇವಮ್ಮನ ಸಾಲು
 6. ಸರಗೂರಯ್ಯನ ಸಾಲು
 7. ಬೇವಿಹಟ್ಟಿ ಕಾಳಿಯ ಸಾಲು
ಸಂಕಮ್ಮನ ಸಾಲು
        ಸೋಲಿಗರ ನೀಲಪ್ಪನೊಡನೆ ಸಂಕಮ್ಮನ ಮದುವೆಯಾಯಿತು. ಮಾವನ ಮನೆಯಲ್ಲಿ ಹೆಚ್ಚು ದಿನ ಇರಬಾರದೆಂದು ನೀಲಪ್ಪ ಮಡದಿಯೊಡನೆ ಮೂಡುಮಲೆ ಕಾಡಿಗೆ ಬಂದ. ನಿರ್ಜನ ಪ್ರದೇಶದಲ್ಲಿ ಸೊಪ್ಪಿನ ಗುಡಿಸಲನ್ನು ಮಾಡಿ ಅದರಲ್ಲಿ ಹೆಂಡತಿಯೊಬ್ಬಳನ್ನೆ ಬಿಟ್ಟು ವಜ್ರದ ಮಲೆಯ ಕಾಡಿಗೆ ಬೇಟೆಗೆ ಹೊರಟ. ಒಂಬತ್ತು ತಿಂಗಳು ಬೇಟೆಯಾಡಿ ಬರಬೇಕು. ಆದರೆ ತನ್ನ ಹೆಂಡತೆ ಒಬ್ಬಳೆ ಇರುವಳು ಎಂದು ಅವಳ ’ತೋಳು ಬಾಳೆಯ ಕಂಬ, ಮುಖದ ಹೋಲಿಕೆ ಚಂದ್ರ ಒಂದು ಪಾಲು, ಸೂರ‍್ಯ ಒಂದು ಪಾಲು ಆದಂತೆ....’ಎಂಬ ಸಂಶಯವು ಬಂದು ಗುಡಿಸಲ ಮುಂದೆ ಎಪ್ಪತ್ತೇಳು ಮಂಡಲ ಬರೆದನು. ’ಚೀಟು’ ಬರೆದು ಮುಂದಿಟ್ಟನು. ’ರಾಕಾಸಿ’ ಗೊಂಬೆ ಮಾಡಿ ಬಾಗಿಲಲ್ಲಿ ನಿಲ್ಲಿಸಿದನು. ಅಷ್ಟೇ ಅಲ್ಲದೆ ಅವಳ ಬಟ್ಟೆ ಬರೆಗಳನ್ನೆಲ್ಲ ಬಿಚ್ಚಿಸಿ ಸೊಪ್ಪಿನ ಉಡುಗೆ ತೊಡಿಸಿದನು.
 "ಬಾಯಿಗೆ ಚೂಜಿಕೊಟ್ಟು ಕಣ್ಣಿಗೆ ಕಾವಾಡ ಕಟ್ಟಿಬಿಟ್ಟು
ಹಿಂಗೈ ಮುಂಗೈ ಕಟ್ಟಿ ಅವಳ್ನ ಮೊಕಡ್ನೆ ಕೆಡವಿ
ಜೂಲುನಾಯಿಯೊಡನೆ, ಬೀಸುವ ಮಚ್ಚನ್ನು ಹಿಡಿದು ಕಾಡಿಗೆ ಹೋದ".
 • ಸಂಕಮ್ಮನು ದುಃಖದಿಂದ ತನ್ನ ಮನೆ ದೇವರನ್ನು ಸ್ಮರಿಸುವಾಗ ಮಾದಯ್ಯನು ’ನರಲೋಕದಲ್ಲೆಲ್ಲೋ ಹೆಣ್ಣಿನ ಗೋಳಾಗುತ್ತಿದೆ’ ಎಂದು ಬರಗನೇರಿ ತವಸೆರೆ ಬೆಟ್ಟದ ಮಗ್ಗುಲಾಗಿ ಸಂಕಮ್ಮನ ಗುಡಿಸಲ ಬಳಿ ಬಂದ. ಬರಗನನ್ನು ನೋಡಿ ಹೆದರುವಳು ಎಂದು ಸಣ್ಣ ಕೊತ್ತಿಯನ್ನು ಮಾಡಿ ದೂರಬಿಟ್ಟು ತನ್ನ ’ಕಪ್ಪು ಧೂಳ್ತ’ದಿಂದ ಮಂಡಲವನ್ನು, ’ರಾಕಾಸಿ’ ಗೊಂಬೆಯನ್ನು ನಾಶಮಾಡಿ ಭಿಕ್ಷೆ ಸಾರಿದ. ಮನೆ ದೇವರಾದ ಮಾದೇವನೇ ಬಂದಿರುವನು. ಆದರೆ ಹೊರಗೆ ಬರುವ ಸ್ಥಿತಿಯಲ್ಲಿ ಇಲ್ಲವಲ್ಲ ಎಂದು ಕಣ್ಣಿರಿಟ್ಟಳು.
 • ನಂತರ ಮಾದೇವನು ಕಪ್ಪು ಧೂಳ್ತವನ್ನು ಮನೆಯ ಮೇಲೆ ಹಾಕಿದಾಗ ಏಳುಪ್ಪರಿಗೆಯ ಮನೆಯಾಯಿತು. ಸಕಲ ಐಶ್ವರ‍್ಯವು ಮನೆಯಲ್ಲಿ ತುಂಬಿದವು. ಸಂಕಮ್ಮನು ಸೀರೆ ಧರಿಸಿಕೊಂಡು ಮಾದೇವನಿಗೆ ಭಿಕ್ಷೆಯನ್ನು ತೆಗೆದುಕೊಂಡು ಬಂದಳು. ಆದರೆ ಅದನ್ನು ಬಂಜೆಯ ಕೈಯಿಂದ ತೆಗೆದುಕೊಳ್ಳುವುದಿಲ್ಲವೆಂದು ನಿರಾಕರಿಸಿದನು.
 • ಆಗ ಸಂಕಮ್ಮನು ಸಕಲ ಸಂಪತ್ತನ್ನು ನೀಡಿದ ನೀನೇ ಮಕ್ಕಳ ಫಲವನ್ನು ನನಗೆ ನೀಡು, ಇಲ್ಲವಾದರೆ ನಿನ್ನ ಪಾದದ ಬಳಿಯೇ ಪ್ರಾಣ ಬಿಡುವೆನು ಎಂಬುದಾಗಿ ಹೇಳಿದಳು. ಅದಕ್ಕೆ ಮಾದೇವನು ನಿನಗೆ ನಾನು ಮಕ್ಕಳ ಫಲ ನೀಡಿದರೆ ನನಗೆ ಏನು ಕೊಡುವೆ ಎಂದಾಗ ’ನನಗೆ ಹೆಣ್ಣಾಗಲಿ ಗಂಡಾಗಲಿ, ಹುಟ್ಟಿದ ಒಂಬತ್ತೇ ದಿನಕ್ಕೆ ಭಿಕ್ಷೆ ಕೊಟ್ಟುಬಿಡ್ತೀನಿ’ ಎಂದಳು. ಕಾಡು ಬೆಂಡೇಕಾಯಿಯಲ್ಲಿ ’ಪಿಂಡಪರಸಾದ’ ಕೊಟ್ಟುದಲ್ಲದೆ ಅವಳ ರಕ್ಷಣೆಗೆಂದೇ ಅವಳ ಮನೆಯಲ್ಲಿ ಬಿಳಿಯ ಪಲ್ಲಿಯಾಗಿ ಉಳಿದನು.
 • ’ಹೆಂಡತಿಯ ಮ್ಯಾಲೆ ಗ್ಯಾನ’ ಬರುವ ಹಾಗೆ ನೀಲೆಗೌಡನಿಗೆ ಬೇಟೆಯಿಂದ ಮರಳುವಂತೆ ಮಾದೇವನು ಮಾಡಿದನು. ತನ್ನ ಮನೆಯ ಸ್ಥಿತಿಯನ್ನು ಕಂಡ ತಕ್ಷಣ ನೀಲೆಗೌಡನಿಗೆ ಕೋಪವು ಹೆಚ್ಚಾಗಿ ಸಂಕಮ್ಮನ ತಲೆಯನ್ನು ಕತ್ತರಿಸಬೇಕೆಂದು ಕತ್ತಿಯನ್ನು ಮಸೆದು ಹಿಡಿದುಕೊಂಡು ಮನೆಯ ಬಳಿ ಬಂದ. ಈತನ ಮನಸ್ಥಿತಿಯನ್ನು ಅರಿತ ಮಾದೇವನು ಸಂಕಮ್ಮನ ಹಾಗೆ ಗೊಂಬೆಯನ್ನು ಸೃಷ್ಟಿಸಿ ಅವನೆದುರು ಬಿಟ್ಟ. ಅದನ್ನು ಮೂರು ತುಂಡುಗಳಾಗಿ ಕತ್ತರಿಸಿದ ಬಳಿಕ ಆತನ ಕೋಪವು ಇಳಿಯಿತು. ನಂತರ ಸಂಕಮ್ಮನು ಪತಿಯ ಬಳಿ ಬಂದು ನಡೆದ ಸಂಗತಿಯನ್ನು ವಿವರಿಸಿದಳು. ನೀಲೆಗೌಡನು ದೇವರ ದೃಢವನ್ನು ಪರೀಕ್ಷೆ ಮಾಡಲು ಹೆಂಡತಿಗೆ ಪರೀಕ್ಷೆಗಳನ್ನು ನೀಡಿದನು.
 • ಸಂಕಮ್ಮನು ೯ ತಿಂಗಳ ಗರ್ಭವತಿಯಾದಳು. ಅವಳ ಬೆನ್ನು ಮಚ್ಚೆಯನ್ನು ಸೀಳಿಕೊಂಡು ಎರಡು ಗಂಡು ಮಕ್ಕಳು ಜನಿಸಿದರು. ಮನೆಯಲ್ಲಿ ಬಿಳಿಯ ಪಲ್ಲಿಯಾಗಿ ಕಾಯುತ್ತಿದ್ದ ಮಾದೇವನು ನಂತರ ಜಂಗಮನಾಗಿ ’ಮಕ್ಕಳ ಭಿಕ್ಷೆ’ಯನ್ನು ಕೇಳಿದೊಡನೆ ನೀಲೆಗೌಡನಿಗೆ ಕೋಪ ಬಂದು ಮನೆಯ ಮುಂದೆ ಇದ್ದ ಸೌದೆಯನ್ನು ತೆಗೆದುಕೊಂಡು ಜಂಗಮನ ಹಿಂದೆಯೇ ಅಟ್ಟಿಸಿಕೊಂಡು ಹೋದ. ಸ್ವಲ್ಪ ಸಮಯದವರೆಗೆ ಮಾದೇವನು ಮರೆಯಾಗಿ ಬರಗನನ್ನು ಕರೆದು ಮಕ್ಕಳನ್ನು ಕೊಲ್ಲದೆ, ನೀಲೆಗೌಡನಿಗೆ ಬೆದರಿಸುವಂತೆ ಹೇಳಿ ಕಳುಹಿಸಿದನು. ನೀಲೆಗೌಡನು ಮಾದೇವನಿಗೆ ಶರಣಾಗಿ,
"ಸ್ವಾಮಿ ಇಂಥ ದುಷ್ಟಮೂರ್ತಿ ಅಂತ ತಿಳಿಯಲಿಲ್ಲ
ಮಕ್ಕಳ ಭಿಕ್ಷೆ ಕೊಡುತೀನಿ
ನಿನ್ನ ಮಾಯದ ಹುಲಿಯ ಕರಕಪ್ಪ"
ಎಂದನು.
ಸಂಕಮ್ಮನ ಮಕ್ಕಳಿಬ್ಬರೂ ‘ಕಾರಯ್ಯ-ಬಿಲ್ಲಯ್ಯ’ ಎಂಬ ಹೆಸರಿನಿಂದ ಮಾದೇವನ ಭಕ್ತರಾಗಿ ಸೇವೆಯನ್ನು ಸಲ್ಲಿಸಿದರು.

ಪರಿಸಮಾಪ್ತಿ

 • ಶಿವ ಮತ್ತು ಶರಣರ ಮಹಿಮೆಗಳನ್ನು ಕಥಾರೂಪದಲ್ಲಿ ಹಾಡುತ್ತ ಒಂದು ವಿಶಿಷ್ಟ ಜಾನಪದ ಸಂಪ್ರದಾಯವನ್ನು ಬೆಳಸಿಕೊಂಡು ಬಂದಿದೆ ಕಂಸಾಳೆ ಪ್ರಕಾರ. ಕಂಸಾಳೆಯ ಕಲಾವಿದರು ಪ್ರಮುಖವಾಗಿ ಮೈಸೂರು ಜಿಲ್ಲೆಯ ಮಲೆ ಮಹದೇಶ್ವರನ ಭಕ್ತರು. ಮಂಡ್ಯ-ಬೆಂಗಳೂರು ಜಿಲ್ಲೆಗಳಲ್ಲೂ ವಿರಳವಾಗಿ ಕಾಣುತ್ತಾರೆ. ಜಾನಪದ ಸತ್ವವುಳ್ಳ ಕಥನಗೀತೆ, ಕಂಚಿನ ತಾಳಗಳ ವಿಶಿಷ್ಟವಾದ ಶಬ್ದ ಹಾಗೂ ಕಲಾವಿದರ ಕೈಚಳಕಗಳ ಸುಂದರ ಸಮ್ಮಿಳನದಿಂದಾಗಿ ಈ ಕಲೆ ವಿಸ್ಮಯಕಾರಕವಾಗಿ ಜನಮನವನ್ನು ತಣಿಸಿ ಶ್ರವಣಾನಂತವುಂಟುಮಾಡುತ್ತದೆ.
 • ‘ಕಂಸಾಳೆ’ ಎನ್ನುವುದು ಕಲಾವಿದರು ಕೈಯಲ್ಲಿ ಹಿಡಿಯುವ ಒಂದು ಬಗೆಯ ವಾದ್ಯ ವಿಶೇಷ. ಭಿಕ್ಷಾಪಾತ್ರೆಯಂತಿರುವ, ಮಧ್ಯೆ ದಾರದ ಕುಚ್ಚು ಕಟ್ಟಿದ, ಅಂಗೈ ಅಗಲದ ಮಿಶ್ರಲೋಹದ ಒಂದು ಬಟ್ಟಲು ಎಡಗೈಯಲ್ಲಿದ್ದರೆ, ಬಲಗೈಯಲ್ಲಿ ಮಟ್ಟಸವಾದ ತಾಳವಿರುತ್ತದೆ. ಮುಚ್ಚಳದ ನಡುವಿನ ಹೊರಭಾಗ ಉಬ್ಬಿರುತ್ತದೆ. ಆ ಉಬ್ಬಿನ ರಂಧ್ರದಿಂದ ಬಿಗಿದ ನೀಳವಾದ ದಾರ ಗೊಂಡೆಗಳಿಂದ ಅಲಂಕೃತವಾಗಿ ಬಲಗೈ ಮೇಲಿಂದ ಇಳಿಬಿದ್ದಿರುತ್ತದೆ.
 • ಹಬ್ಬ ಹರಿದಿನಗಳಲ್ಲಿ, ಶಿವರಾತ್ರಿ-ನವರಾತ್ರಿ ಕಾಲದಲ್ಲಿ ಮಹದೇಶ್ವರನ ಜಾತ್ರೆ ಸಂದರ್ಭದಲ್ಲಿ ಕೈಯಲ್ಲಿ ಕಂಸಾಳೆ ಹಿಡಿದು, ಮಾದಯ್ಯನ ಕೋಲ (ನಾಗಬೆತ್ತ)ನ್ನು ಕಂಕುಳಲ್ಲಿಟ್ಟು ಕೊಂಡು, ಬುತ್ತಿಯ ಗಂಟನ್ನು ತಲೆಯ ಮೇಲಿಟ್ಟುಕೊಂಡು, ಯಾತ್ರೆ ಹೊರಡುವುದು ಮೈಸೂರು ಜಿಲ್ಲೆಯಲ್ಲಿ ಸಾಮಾನ್ಯ ದೃಶ್ಯ. ಕಂಸಾಳೆಯ ಕಲಾವಿದರಲ್ಲಿ ಮಹದೇಶ್ವರನ ಹುಟ್ಟು, ಬಾಲ್ಯ, ಬಾಲಲೀಲೆ, ಯೌವನ, ವಿನೋದ, ವಿರಸ, ಮುಪ್ಪು, ಮಹಿಮೆಗಳು ಕಂಠಸ್ಥವಾಗಿ ನಿಂತಿವೆ.
 • ಈ ಕಾವ್ಯವನ್ನು ಇಡೀ ರಾತ್ರಿ ಹಾಡಿ ತಣಿಸುವ ಅವರ ಕಲೆಗಾರಿಕೆ ಮೆಚ್ಚುವಂತಹುದು, ಇದಲ್ಲದೆ ಕಲಾವಿದರು ಪಿರಿಯಾಪಟ್ಟಣದ ಲಾವಣಿ, ಸಾರಂಗಧರ, ಚೆನ್ನಿಗರಾಮ, ಘನಪತಿರಾಯ, ಬಾಲನಾಗಮ್ಮ, ಅರ್ಜುನ ಜೋಗಿ ಮುಂತಾದ ಜನಪದ ಕಥಾ ಪ್ರಸಂಗಗಳನ್ನೂ ಹಾಡುತ್ತಾರೆ. ಜನಪದ ಬೆಳೆಸಿಕೊಂಡು ಬರುತ್ತಿರುವ ಇವರ ಕಲೆ ಜಾನಪದ ಕ್ಷೇತ್ರದ ದೊಡ್ಡ ನಿಧಿಗಳಲ್ಲೊಂದಾಗಿದೆ.
 • ಕಂಸಾಳೆಯ ಕಲಾಪ್ರಕಾರಗಳಲ್ಲಿ ‘ಬೀಸುಕಂಸಾಳೆ’ಯು ವಿಶಿಷ್ಟ ಶೈಲಿಯದು. ಚಮತ್ಕಾರ, ಶ್ರಮ ಎರಡೂ ಒಟ್ಟಿಗೆ ಸೇರಿ ಅಭಿವ್ಯಕ್ತವಾಗುವ ಈ ಪ್ರದರ್ಶನಕ್ಕೆ ನಾಲ್ಕು ಜನ ಬೇಕು, ಒಬ್ಬಾತ ಮಧ್ಯೆ ಇದ್ದು ತಾಳಕ್ಕೆ ತಕ್ಕಂತೆ ತಲೆಯ ಮೇಲೆ, ಬೆನ್ನ ಹಿಂದೆ, ಕಾಲು ಕೆಳಗೆ, ಕುಳಿತು, ನಿಂತು, ಬಾಗಿ ಬಳುಕಿ, ಉರುಳಾಡಿ, ಸುತ್ತ ನಿಂತ ಮೂವರಿಗೆ ತಾಳಗಳನ್ನು ಕೊಡುತ್ತ, ನಿರ್ದಿಷ್ಟ ಲಯದಲ್ಲಿ ಬೀಸು ಕಂಸಾಳೆಯನ್ನು ಪ್ರದರ್ಶಿಸುತ್ತಾನೆ.
 • ಹೀಗೆ ಆರಂಭವಾದ ಪ್ರದರ್ಶನ ಪರಾಕಾಷ್ಠೆಗೆ ಹೋದಾಗ ನಾಲ್ಕು ಜೊತೆ ಕಂಸಾಳೆಗಳ ತಾಳದ ಕಂಚಿನ ಸ್ವರ, ಮಿಂಚಿನ ವೇಗದ ಕೈ ಚಳಕ ನೋಟಕರನ್ನು ಮೂಕವಿಸ್ಮಯರನ್ನಾಗಿ ಮಾಡುತ್ತದೆ. ಎಷ್ಟೇ ಚುರುಕಿನಿಂದ ಕಲೆ ನಡೆದರೂ ಎಲ್ಲೂ ತಾಳ ತಪ್ಪದಂತೆ ಎಚ್ಚರ ವಹಿಸುವ ಕಲಾವಿದರ ಪರಿಪೂರ್ಣ ಕುಶಲತೆ ನಿಜಕ್ಕೂ ಸೋಜಿಗ ಪಡುವಂಥದು. ಗಾಯಕರು ‘ಲಿಂಗ ಬಾ, ಮುದ್ದು ಲಿಂಗ ಬಾ, ನಮ್ಮ ಮುದ್ದು ಮಾದಯ್ಯನ ಲಿಂಗ ಬಾ’-ಎಂಬ ಹಾಡನ್ನು ಲಯಬದ್ಧವಾಗಿ ತಾಳದೊಂದಿಗೆ ಹೊಂದಿಸಿಕೊಂಡೇ ಹಾಡುತ್ತಾರೆ.
ಕಂಸಾಳೆ ವೀಡಿಯೋ ವೀಕ್ಷಿಸಿ
 
******************************************
ಡೊಳ್ಳು ಕುಣಿತ
(ಮಾಹಿತಿ ಕೃಪೆ: ವಿಕಿಪೀಡಿಯಾ, ಚಿತ್ರಗಳು:ಗೂಗಲ್)


ಜನಪದ ಕಲೆಗಳಲ್ಲಿ ಗಂಡುಕಲೆ ಎನಿಸಿರುವ ಡೊಳ್ಳು ಕುಣಿತ ಪುರುಷರಿಗೆ ಮಿಸಲಾದ ಕಲೆ. ಒಳ್ಳೆಯ ಮೈಕಟ್ಠು ಮತ್ತು ಶಕ್ತಿ ಉಳ್ಳ ಕಲಾವಿದರು ಮಾತ್ರ ಈ ಕಲೆಯನ್ನು ಪ್ರದರ್ಶಿಸಬಲ್ಲರು. ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳು ಹಾಗೂ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಡೊಳ್ಳೂ ಕುಣಿತ ತನ್ನ ವಿಶಿಷ್ಟವಾದ ನತ್ಯ ಶೈಲಿಗಳಿಂದ ಉಳಿದುಕೊಂಡು ಬಂದಿದೆ. ಡೊಳ್ಳು ಕುಣಿತ- ಒಂದು ಜನಪದ ಹಾಗೂ ಶಾಸ್ತ್ರೀಯ ಕಲೆ, ನೃತ್ಯ. ಡೊಳ್ಳು ಬಾರಿಸಿಕೊಂಡು ಕುಣಿಯುವುದರಿಂದ ಇದಕ್ಕೆ ಡೊಳ್ಳು ಕುಣಿತ ಎಂಬ ಹೆಸರು.

ಡೊಳ್ಳಿನ ಇತಿಹಾಸ

ಮೂಲತಃ ಕುರುಬ ಜನಾಂಗದ ವಾದ್ಯವಾಗಿರುವ ಡೊಳ್ಳು ಹಳ್ಳಿಯ ಸಂಸ್ಕೃತಿ ಜೀವನದೊಂದಿಗೆ ಸಮರಸವಾಗಿ ಬೆರೆತುಕೊಂಡಿದೆ. ಡೊಳ್ಳಿನ ಉತ್ಪತ್ತಿಯ ಬಗ್ಗೆ ಹಲವು ಕಥೆಗಳು ರೂಡಿಯಲ್ಲಿರುವುದರಿಂದ ಅದರ ಬಗ್ಗೆ ಭಕ್ತಿ ಗೌರವಗಳು ವ್ಯಕ್ತವಾಗುತ್ತದೆ. ಡೊಳ್ಳಿನ ಉತ್ಪತ್ತಿಯ ಬಗ್ಗೆ ಪೌರಣಿಕ ಹಿನ್ನೆಲೆಯ ಒಂದು ವಿಚಿತ್ರ ಕತೆ ಹಿಗೀದೇ:

ಕಥೆ ಒಂದು

ಡೊಳ್ಳು ಸುರನೆಂಬ ರಕ್ಕಸ ತಪಸ್ಸಿನಿಂದ ಪರಶಿವನನ್ನು ಮೆಚ್ಚಿಸಿ ಪರಶಿವನು ತನ್ನ ಹೊಟ್ಟೆಯಲ್ಲಿಯೆ ನೆಲೆಸಬೇಕೆಂದು ವರಪಡೆದ. ಅದರಂತೆ ಶಿವನು ಗಂಗೆ, ಗೌರಿಯನ್ನು ಅತ ತೊರೆದು ರಕ್ಕಸನ ಹೊಟ್ಟೆಯನ್ನು ಸೇರಿದ. ಶಿವನಿಲ್ಲದ ಕ್ಯೆಲಾಸ ಕಳೆಗುಂದಿತು. ದುಃಖಿತರಾದ ಶಿವಗಣಗಳು ವಿಷ್ಣುವಿನ ಮೊರೆಹೊಕ್ಕರು ವಿಷ್ಣುವಿನ ರಹಸ್ಯ ನಿರ್ದೇಶನದಂತೆ ಪಂಚ ರಾತ್ರಿಗಳು (ಕಾಮ, ಕ್ರೊದ, ಮೋಹ, ಮದ, ಮಾತ್ಸರ್ಯಗಳು ಪಂಚ ರಾತ್ರಿಯ ಪ್ರತಿಕ) ಸೆರುವುದು. ಶಿವನು ಕೊಪದಿಂದ ಕಣ್ಣು ತೆರೆದರೆ ಪ್ರಳಯವೆ ಉಂಟಾಗುವುದೆಂದು ಅರಿತ ವಿಷ್ಣು ಡೊಳ್ಳಾಸುರನ ಹೊಟ್ಟಯನ್ನೆ ವಾದ್ಯವಿಶೇಷವಾಗಿ ಮಾಡಿಕೊಂಡು ಅವನ ಮೂಳೆಗಳಿಂದ ಡೊಳ್ಳು ಬಾರಿಸಲು ಆರಂಬಿಸಿದ. ಶಿವನು ಆ ವಾದ್ಯದ ದನಿಗೆ ಮಾರು ಹೋಗಿ ಲಾಸ್ಯದಲ್ಲಿ ತೊಡಗಿದ. ಈ ವೇಳೆಗೆ ತೊಡೆಯ ಗೌರಿ, ಜೆಡೆಯ ಗಂಗೆಯರು ಬಂದು ಶಿವನನ್ನು ಸೆರಿದರು. ಶಿವ ಸುಪ್ರಿತನಾದ! ಮುಂದೆ ಡೊಳ್ಳು ಶಿವಸ್ತುತಿಯ ವಿಶೇಷ ವಾದ್ಯವಾಯಿತು. ತಲತಲಾಂತರದಿಂದ ದೈವಿ ಆರಾಧನೆಯ ಸಾಧನವಾಗಿ ಬೆಳೆದು ಬಂದ ಈ ಕಲೆ ಇತ್ತೀಚೆಗೆ ಮನರಂಜನೆಯಾ ಮಾಧ್ಯಮವಾಗಿ ಮನ್ನಣೆಯನ್ನು ಗಳಿಸಿದೆ. ಯಾವುದೇ ಧಾರ್ಮಿಕ ಸಾಂಸ್ಕ್ರತಿಕ ಸಮಾರಂಭಗಳಲ್ಲಿ ಇದು ಒಂದು ಮುಖ್ಯ ಕಲೆಯಾಗಿದೆ ಗುರುತಿಸಿಕೊಂಡಿದೆ. ಡೊಳ್ಳು ಕುಣಿತವನ್ನು ಚೆನ್ನಾಗಿ ಮೈಗೂಡಿಸಿಕೊಂಡು ಪರಿಣಿತಿಯನ್ನು ಸಾಧಿಸಿರುವವರೆಂದರೆ ಕುರುಬ ಜನಾಂಗ. ಬಿಡುವು ದೊರೆತಾಗಲೆಲ್ಲಾ ಅದರ ಅಭ್ಯಾಸ ಅಭಿವ್ಯಕ್ತಿಗಳಲ್ಲಿ ಆಸಕ್ತರಾಗಿರುತ್ತಿದ್ದರು. ಕಲಾವಿದರಿಗೆ ವಯಸ್ಸಿನ ಕಟ್ಟುಕಟ್ಟಳೆಯಿಲ್ಲ. ಅದರೆ ಡೊಳ್ಳು ಹೊತ್ತು ಕುಣಿಯುವ ದೈಹಿಕ ಶಕ್ತಿ ಇರಬೇಕಾಗುತ್ತದೆ.

ಡೊಳ್ಳು ತಯಾರಿ

ಈ ಬೇಟೆಗೆ ಕಲಾವಿದರ ವೇಷ ಭೊಷಣಗಳು ಆಕರ್ಷಕ ರೀತಿಯಲ್ಲಿ ಮಾರ್ಪಾಟಾಗಿ ಕಲೆಗೆ ಮೆರಗುಕೊಟ್ಟದೆ. ಡೊಳ್ಳು ಮರ ಮತ್ತು ಚರ್ಮದಿಂದ ಮಾಡಿದ ಒಂದು ದೊಡ್ಡ ಆಕಾರದ ವಾದ್ಯವನ್ನು ಡೊಳ್ಳು ಎನ್ನಬಹುದು. ತಾಳೆ ಅಥವಾ ಹಗುರವಾದ ಮರದಿಂದ ಎರಡುವರೆ ಇಂದ ಮೂರುವರೆ ಅಡಿ ಉದ್ದದ ಹಾಗೂ ಎರಡು ಅಡಿ ವ್ಯಾಸವಿರುವ ಪಿಪಾಯಿ ಆಕಾರದ ಡೊಳ್ಳನ್ನು ಸಿದ್ದಪಡಿಸಿರುತ್ತಾರೆ. ಇದರ ಎಡಬಾಗಕ್ಕೆ ಆಡಿನ ಚರ್ಮವನ್ನು ಬಲಬಾಕ್ಕೆ ಕುರಿಯ ಚರ್ಮವನ್ನು ಬಿಗಿಯಾಗಿ ಬಿಗಿಯುತ್ತಾರೆ. ಬಳಿಕ ಡೊಳ್ಳುನ್ನು ಬಡಿಯಲು ಬಳಸುವುದು ಸುಮಾರು ಒಂದುವರೆ ಅಡಿ ಉದ್ದದ ಬಿದಿರು ಕೋಲು. ಇದಕ್ಕೆ 'ಗಣಿ' ಎಂದು ಕರೆಯುತ್ತಾರೆ. ಡೊಳ್ಳು ಬೀರೇಶ್ವರ ದೇವರಿಗೆ ಅತಿ ಪ್ರಿಯವಾದ ವಾದ್ಯ. ಎಲ್ಲ ಬೀರೇಶ್ವರ ದೇವರ ಗುಡಿಗಳಲ್ಲಿ ಒಂದು ಡೊಳ್ಳನ್ನು ಕಟ್ಟಿರುತ್ತಾರೆ. ಕುರುಬ ಗೌಡ ಜನಾಂಗದ ಜನರು ಡೊಳ್ಳು ಕುಣಿತ ಮಾಡುತ್ತಾ ಬೀರೇಶ್ವರ ದೇವರನು ಪೂಜಿಸುತ್ತಾರೆ. ಕುಣಿತದ ಜೊತೆ ಹಾಲುಮತ ಕುರುಬ ಪುರಾಣವನ್ನು ಹಾಡುತ್ತಾರೆ. ಡೊಳ್ಳು ಕುಣಿತ ಮಾಡಲು ತುಂಬಾ ಶಕ್ತಿ ಮತ್ತು ಧೈರ್ಯ ಬೇಕು, ತಮ್ಮ ಯುದ್ಧ ಕಲೆಗಳಲ್ಲಿ ಇದು ಒಂದು ಕುರುಬರು ಬಾವಿಸುತಾರೆ, ಕುರುಬರು ಹಿಂದಿನ ಕಾಲದಲ್ಲಿ ಸೈನಿಕರು, ನಾಯಕರು ಆಗಿದ್ದರೆಂದು ಈ ನೃತ್ಯ ತೋರಿಸುತ್ತದೆ. ಕುರುಬ ವಂಶಸ್ಥರು ಪಾರಂಪರಿಕವಾಗಿ ಈ ನೃತ್ಯವನ್ನು ತಲತಲಾಂತರದಿಂದ ಮಾಡಿಕೊಂಡು ಬಂದವರು. ಜನಪದದಲ್ಲೇ ಉಳಿದುಕೊಂಡ ಈ ಕಲೆಗೆ ಪ್ರೋತ್ಸಾಹ ನೀಡಲು ಇತ್ತೀಚೆಗೆ ಸಾಮಾನ್ಯವಾಗಿ ದಸರಾ ಸಂಭ್ರಮದಲ್ಲಿ, ವಸಂತಹಬ್ಬ ಹಾಗೂ ಇತರೆ ಸಂದರ್ಭಗಳಲ್ಲಿ ಇತರೆ ಕಾರ್ಯಕ್ರಮಗಳೊಂದಿಗೆ ಡೊಳ್ಳು ಕುಣಿತದ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮ ನಡೆದರೂ ಅಲ್ಲಿ ಡೊಳ್ಳು ಕುಣಿತ ಇರುತ್ತದೆ.

ಡೊಳ್ಳಿನ ನಿಯಮ

ಡೊಳ್ಳು ಕುಣಿತದ ತಂಡದಲ್ಲಿ ಸಾಮಾನ್ಯವಾಗಿ ನಾಲ್ಕು ಜನರಿರುತ್ತಾರೆ ಕೆಲವು ಬಾರಿ ಇಷ್ಟೆ ಜನರಿರಬೇಕು ಎಂಬ ನಿಯಮವಿಲ್ಲ. ಹಿನ್ನೆಲೆಯಲ್ಲಿ ತಾಳ, ತಪ್ಪಡಿ, ಕಹಳೆ, ಜಾಗಟೆ, ಕೊಳಲುಗಲನ್ನು ಬಳಸುತ್ತಾರೆ. ಪದ ಹೇಳಿಕೊಂಡು ಡೊಳ್ಳನ್ನು ಬಾರಿಸುತ್ತಾರೆ. ಪದಕ್ಕೆ ಪ್ರತ್ಯೆಕವಾದ ಕೈಪಟ್ಟು ಬಳಸುತ್ತಾರೆ ಡೊಳ್ಳು ಬಾರಿಸುವಾಗ ಬಲಗೈಯಲ್ಲಿ ಮಾತ್ರ ಕೊಲಿರುತ್ತದೆ. ಒಮ್ಮೆ ಕೊಲಿನಿಂದ ಬಾರಿಸಿದರೆ ಎಡಗೈಯಲ್ಲಿ ಒಂದು ಪೆಟ್ಟು ಕೊಡಬೇಕು. ಬಲಗೈ ಗುಣಿಯ ಬಡಿತ ಬ್ರಹ್ಮದೊಡ್ ಎಂದು ಸಪ್ಪಲ ಮಾಡಿದರೆ ಎಡಗೈ ಪೆಟ್ಟು ಡೌಂವ ಎಂದು ನಾದ ಹಬ್ಬಿಸುತ್ತದೆ. ಹೀಗೆ ಅದು ಬ್ರಹ್ಮದೊಡ್ಡಂವ ಎಂದು ಶದ್ದ ಹೊರಹೊಮ್ಮುತ್ತದೆ. ವೃತ್ತಾಕಾರವಾಗಿ ನಿಂತು ಸಜ್ಜುಗೊಂಡ ತಂಡದ ಸದಸ್ಯರು ನಿಧಾನವಾಗಿ ಡೊಳ್ಳು ಭಾರಿಸಲು ತೊಡಗುವುದರೊಂದಿಗೆ ಸುತ್ತಲು ಪ್ರಾರಂಭಿಸುತ್ತಾರೆ. ಹಿಮ್ಮಳವೂ ಜೊತೆಗೂಡುತ್ತದೆ. ಕ್ರಮೇಣ ಗತ್ತು ಹೋದಂತೆ ಡೊಳ್ಳನ್ನು ಶಕ್ತಿ ಮೀರಿ ಕೇಳುವವರ ಕಿವಿ ಗಡಗುಟ್ಟುವಂತೆ ಬಾರಿಸುತ್ತಾರೆ. ಒಂದು ಗತ್ತು ಶಿಖರವನ್ನು ಮುಟ್ಟಿದ ಬಳಿಕ ನಿಲ್ಲಿಸಿದಂತ್ತಾಗಿ, ಮತ್ತೆ ನಿಧಾನವಾಗಿ ಬೆರೋಂದು ಪ್ರಕಾರದ ಬಡಿತ ಆರಂಭವಾಗುತ್ತದೆ. ದಿಲ್ಗಿಗೆ ಹೋದರೂ ಡೊಳ್ಳಿಗೆ ಒಂದೆ ಪೇಟ್ಟು ಎಂಬ ಗಾದೆಯಿಂದ ತಿಳಿಯಬಹುದು. ಬಾರಿಸುವ ವಿಧಾನ ಎಲ್ಲಾ ಗತ್ತುಗಳಲ್ಲಿಯು ಒಂದೇ ರೀತಿ ಇರುತ್ತದೆ. ಲೆಕ್ಕದಲ್ಲಿ ಬಾರಿಸುವಿಕೆ ಹೊಡೆತಗಳ ಸಂಖ್ಯೆಯನ್ನು ಜೊಡಿಸುತ್ತದೆ. ಒಂದು ಗುಣಿ ಎಂದರೆ ಮೊದಲ ಹೆಜ್ಜೆ ಎಂದು ಕರೆಯುತ್ತಾರೆ. ಅಂದರೆ ಒಂದು ಕೊಲು ಬಲಕ್ಕೆ ಒಂದು ಪೆಟ್ಟು ಎಡಕ್ಕೆ. ಇದೇ ಕ್ರಮೇಣ ಹೆಚ್ಚುತ್ತಾ ಹೊಗುತ್ತದೆ. ಏಳು ಗುಣಿ ಪೆಟ್ಟು ಮಾತ್ರ ಬಾರಿಸುವುದಿಲ್ಲ ಕಾರಣ ಅವರ ದೃಶ್ಟಿಯಲ್ಲಿ ಏಳು ಅಶುಬ ಸಂಖ್ಯೆ!ಎನ್ನುತ್ತಾರೆ. ಹೆಚ್ಚು ಗುಣಿಯನ್ನು ಬಾರಿಸುವಾಗ ಜೊಡಿ ಕಲಾವಿದರು ಎದುರು ಬದುರು ಬಂದು ನಿಂತುಕೊಂಡು ಬಲಗಾಲು ಮುಂದಿಟ್ಟು ಬಾಗಿ ಪೈಪೊಟಿಯಿಂದ ಗತ್ತು ಬಾರಿಸುತ್ತಾರೆ. ಆಗ ಕಲಾವಿದರ ಭಂಗಿ, ಬಾರಿಸುವ ಗತ್ತುಗಾರಿಕೆ ನೋಡಲು ರಂಜನಿಯ. ಕೊಲಿನ ಪೆಟ್ಟು ಏರಿಕೆಯಲ್ಲಿಯೇ ಮುಂದುವರಿದು ಮುಕ್ತಾಯಕ್ಕೆ ಬರುತ್ತೆ. ಇದಕ್ಕೆ ಕಲಬುರಗಿ (ಗುಲ್ಬರ್ಗಾ) ಜಿಲ್ಲೆಯಲ್ಲಿ ಹೆಜ್ಜೆಗೆ ಪಾವುದಿ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದ ಕುರುಬರು ಮೈಗೆ ಕಂಬಳಿ ಸುತ್ತಿ ಡೊಳ್ಳು ಬಾರಿಸುತ್ತಾರೆ. ಮಧ್ಯದಲ್ಲಿ ವೀರಗಾರನೊಬ್ಬ ಕಾವಿ ಉಟ್ಟಿರುತ್ತಾನೆ. ಈತ ಡೊಳ್ಳು ಬಾರಿಸುವುದಿಲ್ಲ ಬದಲಿಗೆ ತಾಳ ನುಡಿಸುತ್ತಾ ಹಾಡು ಹೇಳುತ್ತಾನೆ. ಈತ ಮೆಳಕ್ಕೆ ಸೂತ್ರದಾರನಿದ್ದಂತೆ. ಕಾಲಿನ ಗೆಜ್ಜೆಯ ಸದ್ದು ಕೂಡ ಗುತ್ತಿಗೆ ಹಿನ್ನೆಲೆಯಾಗುತ್ತದೆ.

ಡೊಳ್ಳಿನ ಪ್ರಕಾರಗಳು

 1. ಕುಳಿತು ಭಾರಿಸುವುದು: ಇದನ್ನು ಕಲಬುರಗಿ ಜಿಲ್ಲೆಯಲ್ಲಿ ಕೂತು ಪೌಲಿ ಎಂದು ಕರೆಯುತ್ತಾರೆ. ಕುಕ್ಕರ ಗಾಲಿನಲ್ಲಿ ಕುಳಿತು ಡೊಳ್ಳು ಬರಿಸುತ್ತಾ ಕುಪ್ಪಳಿಸುವುದು. ಇದು ನಿಧಾನವಾಗಿ ನಡೆಯುತ್ತದೆ.
 2. ಲಾಗ ಹಾಕುವುದು: ಇದನ್ನು ತಂಡದ ಒಂದೆರಡು ಮಂದಿ ಮಾತ್ರ ಅಭ್ಯಾಸ ಮಾಡುತ್ತಾರೆ. ಡೊಳ್ಳು ಬಾರಿಸುವಾಗಲೇ ಗತ್ತಿಗೆ ತಕ್ಕಂತೆ ಲಾಗ ಹಾಕುವುದು, ಮತ್ತೆ ನೇರ ಸ್ಥಿತಿಗೆ ಬಂದು ಗತ್ತು ತಪ್ಪದೆ ಪೆಟ್ಟು ಹಾಕುವುದು.
 3. ಹಾರಿ ಬಾರಿಸುವುದು: ಡೊಳ್ಳು ಬಾರಿಸುವಾಗಲೆ ಎರಡು ಅಥವಾ ಮೂರು ಅಡಿ ಮೇಲೆ ಹಾರಿ ಕುಣಿಯುವುದು.
 4. ಮಂಡಿ ಬಡಿತ: ಜೊಡಿ ಕಲಾವಿದರು ಎಡಗಾಲು ಮಂಡಿಯನ್ನು ನೇಲಕ್ಕೆ ಒತ್ತಿ ಬಲಗಾಲನ್ನು ಊರಿಕೊಂಡು ಡೊಳ್ಳು ಬಾರಿಸುವುದು.
 5. ಮರಗಾಲು ಬಡಿತ: ಸುಮಾರು ಒಂದರಿಂದ ಎರಡು ಅಡಿ ಎತ್ತರದ ಮರಗಾಲನ್ನು ಕಟ್ಟಿಕೊಂಡು ಡೊಳ್ಳನ್ನು ಬಾರಿಸುವುದು.
 6. ಗಾಡಿ ಚಕ್ರದ ಬಡಿತ: ಕಬ್ಬಿಣದ ಅಚ್ಚಿನ ಮೇಲೆ ಎತ್ತಿನ ಗಾಡಿಯ ಚಕ್ರವನ್ನಿಟ್ಟು ಅದರ ಮೇಲೆ ನಿಂತುಕೊಂಡು ತಲೆಯ ಮೇಲೆ ತುಂಬಿದ ಕೊಡವನ್ನಿಟ್ಟುಕೊಂಡು ಡೊಳ್ಳು ಬಾರಿಸುವುದು. ಇದೊಂದು ವಿಶೇಷ ಪ್ರಕಾರವೆನಿಸುತ್ತದೆ. ಬಾಯಲ್ಲಿ ತುಂಬಿದ ಕೊಡ ಕಚ್ಚಿಕೊಂಡು ನೀರು ಚಲ್ಲದಂತೆ ಡೊಳ್ಳು ಬಾರಿಸುತ್ತ ಕುಣಿಯುವುದು. ಈ ರೀತಿ ಬಾರಿಸುವುದು ತುಂಬಾ ವಿರಳ.
 7. ಇತರೆ ಪ್ರಕಾರಗಳು: ಕಲಾವಿದನ ಹಿಂಭಾಗ ಹಾಗೂ ಮುಂಭಾಗಗಳಿಗೆ ಒಂದೊಂದು ಡೊಳ್ಳನ್ನು ಕಟ್ಟಿ ಅ ಡೊಳ್ಳಿನ ಮೇಲೆ ಚಿಕ್ಕ ಬಾಲಕರನ್ನು ಕೂರಿಸಿಕೊಂಡು ಎರಡು ಡೊಳ್ಳುಗಳನ್ನು ಬಾರಿಸುವುದು. ಅಲ್ಲದೆ ಒಂದ್ಹೆಜ್ಜೆ ಕುಣಿತ, ಎರಡ್ಡೆಜ್ಜೆ ಕುಣಿತ, ಮಂಡಲ ಕುಣಿತ, ಜೋಡು ಕುಣಿತ ಮುಂತಾದ ಗತ್ತುಗಳಿವೆ. ಜೊಡುಪಾಯಿಲಿ ಎಂದರೆ ಎದುರು ಬದುರು ಕುಳಿತುಕೊಂಡು ಎದೆಯ ಮೇಲೆ ಡೊಳ್ಳು ಕಟ್ಟಿಕೊಂಡು ಹಿಂಬಾಗದಲ್ಲಿ ನೆಲದ ಮೇಲೆ ಇಟ್ಟಿರುವ ಕೊಬ್ಬರಿಯನ್ನೊ ಅಥವಾ ರೂಪಾಯಿ ನೋಟನ್ನೊ ಬಾಯಲ್ಲಿ ತೆಗೆಯುವುದು. ಡೊಳ್ಳು ಕುಣಿತದಲ್ಲಿ ಮತ್ತೊಂದು ಪ್ರಾಕರವೆಂದರೆ ಲವಳ ಹಾಕುವುದು. ಕೆಲವು ಕಡೆ ಇದನ್ನು ಜಡೆ ಹೆಣೆಯುವುದು ಎಂದು ಕರೆಯತ್ತಾರೆ. ವೃತ್ತಾಕಾರದಲ್ಲಿ ಸಣ್ಣ ಹಲಗೆಯ ಮೇಲುಭಾಗದಲ್ಲಿ ಒಂದು ಕಬ್ಬಿಣದ ಕೊಂಡಿಯನ್ನು ಲಗತ್ತಿಸಿ ಅದರ ಸುತ್ತಲೂ ಎಂಟ ರಿಂದ ಹತ್ತು ರಂಧ್ರಗಳನ್ನು ಮಾಡಿ ಅದಕ್ಕೆ ನೂಲಿನ ಸಣ್ಣ ಹಗ್ಗಗಳನ್ನು ಸೇರಿಸಿ ಇಳಿಬಿಟ್ಟಿರುತ್ತಾರೆ. ಎಂಟು ಹತ್ತು ಅಡಿ ಎತ್ತರದಲ್ಲಿ ಕಟ್ಟಿರುವ ಬಿದಿರು ಬೊಂಬಿಗೆ ಈ ಕೊಂಡಿಯನ್ನು ಹುರಿಯಿಂದ ಭದ್ರವಾಗಿ ಬಿಗಿಯುತ್ತಾರೆ. ಡೊಳ್ಳು ಬಡಿಯುವವರು ಒಬ್ಬೊಬರು ತಮ್ಮ ಎಡಗೈಯಲ್ಲಿ ಹಗ್ಗವನ್ನು ಹಿಡಿದು, ಬಲಗೈಯಲ್ಲಿ ಡೊಳ್ಳನ್ನು ಬಾರಿಸುತ್ತಾರೆ ಎದುರು-ಬದುರು, ಅಕ್ಕ-ಪಕ್ಕ, ವೃತ್ತಾಕರವಾಗಿ ಹೀಗೆ ಒಂದು ಕಮ್ರದಲ್ಲಿ ಸುತ್ತುತ್ತಾರೆ. ಮಧ್ಯದಲ್ಲಿ ನಾಯಕ ನಿಂತು ಪದ ಹಾಡುತ್ತಾನೆ. ಕಲಾವಿದರು ಕ್ರಮವಾಗಿ ಸುತ್ತಿದಾಗ ಹಗ್ಗಗಳು ಜಡೆಯಂತೆ ಹೆಣೆದುಕೊಳುತ್ತದೆ. ಹಾಗೆಯೇ ಹಿಮ್ಮುಕ ಮಾಡಿದರೆ ಅದು ಬಿಡಿಸಿಕೊಳುತ್ತಾ ಹೊಗುತ್ತದೆ. ಈ ಕಲೆಯಲ್ಲಿ ಕುಣಿತವಷ್ಟೆ ಅಲ್ಲ ಒಳ್ಳೆಯ ಸಾಹಿತ್ಯವೂ ಇದೆ. ತಂಡದ ನಾಯಕ ತಾಳ ಬಡಿಯುತ್ತಾ ಪದ ಹೇಳಿಕೊಟ್ಟರೆ ಉಳಿದವರು ಧ್ವನಿ ಗೂಡಿಸುತ್ತಾರೆ. ಡೊಳ್ಳಿನ ವಿವಿಧ ಪ್ರಕಾರಗಳನ್ನು ನೋಡಿದಾಗ ಇದು ಶಕ್ತಿ-ಯುಕ್ತಿ ಎರಡನ್ನು ಮೈಗೂಡಿಸಿಕೊಂಡು ಬೆಳೆದು ಬಂದಿರುವ ವಿಶೇಷ ಕಲೆ ಎಂಬುದು ಸ್ವಷ್ಟವಾಗುತ್ತದೆ. ಡೊಡ್ಡ ಗಾತ್ರದ ಡೊಳ್ಳುಗಳನ್ನು ಸೊಂಟಕ್ಕೆ ಬಿಗಿದು ನಿಂತು ಗುಂಪಿನ ಪ್ರಥಮ ದರ್ಶನದಲ್ಲೆ ಪ್ರೇಕ್ಷಕರಿಗೆ ಕಲೆಯ ಭವ್ಯತೆಯ ಕಲ್ಪನೆಯುಂಟಾಗುತ್ತದೆ. ಕ್ರಮ ಕ್ರಮವಾಗಿ ಪೆಟ್ಟುಗಳೊಂದಿಗೆ ಬಡಿತ ಪರಾಕಾಷ್ಠೆಯನ್ನು ಮುಟ್ಟಿದಾಗ ಡೊಳ್ಳಿನ ನಾದ ಮುಗಿಲೇರುತ್ತದೆ. ಆರಂಭದಲ್ಲಿ ಡೊಳ್ಳಿನ ಗತ್ತು ಎಂಬ ಘೋಷಣೆಯನ್ನು ಹುಟ್ಟಿಸಿದೆರೆ ಮುಕ್ತಾಯಕ್ಕೆ ಬರುವ ಹೊತ್ತಿಗೆ ಹಿಡಿದ್ದಾಂಗ್ ಬಟ್ಟಂಗ್ ಎಂಬಂತೆ ಕೆಳುವ ಪೆಟ್ಟು ಹಾಕುತ್ತಾ ಡುಬ್ಬದ್ಹರಿ ಡುಬ್ಬದ್ದುರಿ ಎಂದು ತಿರ್ಮಾನ ಹೇಳುವಂತೆ ಗತ್ತನ್ನು ಮುಗಿಸುತ್ತಾರೆ.

ಡೊಳ್ಳಿನ ಹಾಡು

ಡೊಳ್ಳಿನ ಹಾಡು ಎಂದರೆ ಕುರುಬರ ಹಾಡುಗಳು ಎಂದು ಕರೆಯುತ್ತಾರೆ. ಬೀರದೇವರ ವರ್ಣನೆ ಮತ್ತು ಆತನ ಭಕ್ತಿಯ ಮಹಿಮೆಯನ್ನು ಕುರಿತು ಇರುವ ಹಾಡುಗಳೆ ಹೆಚ್ಚು ಬಹುತರವಾಗಿ ಡೊಳ್ಳಿನ ಹಾಡುಗಳನ್ನು ರಚಿಸಲಾಗಿದೆ. ಹಾಡುಗಳಲ್ಲಿ ಹಾಲುಮತ ಪುರಣ, ಅನಸೂಯ ಪದ, ಮಾರ್ಕಾಂಡೇಯ ಚರಿತ್ರೆ, ನಿಂಬೆಕ್ಕಿನ ಪದ, ಪಡವರ ಪದ, ಡೊಳ್ಳು ಮರದ ಪದ, ಬಸವಣ್ಣನ ಚರಿತ್ರೆ, ಬೀಮಾರ್ಜುನರ ಗರ್ವಭಂಗ, ಬೀರಲಿಂಗೇಶ್ವರನ ಪದ, ಜಂಗುಮನ ಪದ, ಸತ್ಯವಾನ ಸಾವಿತ್ರಿ, ಭಕ್ತ ಕುಂಬಾರ ಇತ್ಯಾದಿ ಪ್ರಸಂಗಗಳು ಸೇರಿವೆ.
ಡೊಳ್ಳುಕುಣಿತದ ವೀಡಿಯೋ ವೀಕ್ಷಿಸಿ
*********************************************************
ಯಕ್ಷಗಾನಯಕ್ಷಗಾನ ಎಲ್ಲಿಂದ ಹೇಗೆ ಬೆಳೆದು ಬಂತು - ಒಂದು ವಿಚಾರ
ಲೇಖಕರು :

ಡಾ. ಸುನೀತಾ ಶೆಟ್ಟಿ
     
     ಯಕ್ಷಗಾನ ಆಟವೆಂಬುದು ಯಾವ ಕಾಲದಲ್ಲಿ ಪ್ರಸಿದ್ಧಿಗೆ ಬಂದಿತು, ಎಂಬ ಪ್ರಶ್ನೆಗೆ ನಿಖರವಾಗಿ ಕೊಡಬಹುದಾದ ಉತ್ತರವೆಂದರೆ ವಿಜಯ ನಗರದ ಅವಸಾನದ ನಂತರದಲ್ಲಿ. ಎಂದರೆ ಕ್ರಿ.ಶ. 1614ರಲ್ಲಿ ತಂಜಾವರದ ಅರಸು ಸಂಗೀತ ಪ್ರೇಮಿ ರಘುನಾಥ ನಾಯಕನು ಬರೆದ ರುಕ್ಮಿಣಿ ಕೃಷ್ಣ ವಿವಾಹವೆಂಬ ಯಕ್ಷಗಾನ ಪ್ರಬಂಧವೆಂಬ ಕೃತಿ ಯಕ್ಷಗಾನದಲ್ಲಿ ಭಾಗವತನೇ ಪ್ರಧಾನ. ವಿದ್ಯಾರಣ್ಯರ ಕಾಲದಲ್ಲೇ ಭಾಗವತ ವಾಙ್ಮಯವು ವಿಫುಲವಾಗಿ ಬೆಳೆದಿದ್ದು, ಇದರ ಒಂದು ಶಾಖೆಯಾಗಿ ದಾಸ ಸಾಹಿತ್ಯ ಪ್ರಚಲಿತಗೊಂಡು ವಿಷಯ ಸರ್ವವಿದಿತ. ಪುರಂದರದಾಸರು ಅನಸೂಯ ಕಥೆ ಎಂಬ ಯಕ್ಷಗಾನ ಪ್ರಬಂಧವನ್ನು ರಚಿಸಿದ್ದರೆಂದು ಹೇಳಲಾಗುತ್ತಿದೆ. ಅವರ ಮಗ ಮಧ್ವಪತಿದಾಸರು ಆಭಿಮನ್ಯು ಕಾಳಗ, ಇಂದ್ರಜಿತು ಕಾಳಗ, ಉದ್ದಾಳೀಕನ ಕಥೆ, ಐರಾವತ, ಕಂಸವಧೆ ಎಂಬ ಯಕ್ಷಗಾನ ಪ್ರಬಂಧಗಳನ್ನು ರಚಿಸಿದ್ದನೆಂಬ ಊಹೆಗಳೂ ಇವೆ. ಎಂದರೆ `ಯಕ್ಷಗಾನ ಆಟವೆಂಬುದು 15ನೇ ಶತಮಾನದಲ್ಲಿ ರೂಪುಗೊಂಡು 19ನೇ ಶತಮಾನದಲ್ಲಿ ಬೆಳೆದು 17ನೇ ಶತಮಾನದಲ್ಲಿ ಪೂರ್ಣ ಪರಿಣತಿ ಹೊಂದಿತು` ಎಂದು ಡಾ.ಭೀಮರಾವ್ ಚಿಟಗುಪ್ಪಿ ಬರೆದಿದ್ದಾರೆ.
      ಕರ್ನಾಟಕದಲ್ಲಿ ಕೆಳದಿಯ ಅರಸರು ಮತ್ತು ಮೈಸೂರು ಅರಸರು ಈ ಕಲೆಯನ್ನು ಪೋಷಿಸಿದರು. ಯಕ್ಷಗಾನ ಕೃತಿಗಳನ್ನು ರಚಿಸಿದ ಪ್ರಮುಖ ಸಾಹಿತಿಗಳಲ್ಲಿ ನಮ್ಮ ಮುದ್ದಣನೂ ಒಬ್ಬ. ಈ ಯಕ್ಷಗಾನ ಭಕ್ತಿ ಸಂಪ್ರದಾಯದ ಅಂಗವಾಗಿ ಭಾರತದ ಇತರೆಡೆಗಳಿಗೂ ಹಬ್ಬಿದ್ದು, ಬರಿಯ ಒಣ ಅಭಿಮಾನದ ಸಂಗತಿಯಲ್ಲ. ಬಂಗಾಲದ ಯಾತ್ರಾ, ಅಸ್ಸಾಮದ ಆಂಖಯಾ, ತಮಿಳಿನ ತೆರಕೊಟ್ಟು. ಇವು ನಮ್ಮ ಯಕ್ಷಗಾನವನ್ನೇ ಹೋಲುತ್ತವೆ.
     ಈ ಆಟವನ್ನು ಯಕ್ಷಗಾನ ಬಯಲಾಟವೆಂದು ಏಕೆ ಕರೆಯಲಾಯಿತು ಎಂಬುದಕ್ಕೆ ವಿದ್ವಾಂಸರು ಕೊಡುವ ಆಧಾರವೆಂದರೆ - ಹಿಂದೆ ಸಾರ್ವಜನಿಕ ಮನರಂಜನೆಯ ಕಾರ್ಯಕ್ರಮಗಳು ಬಯಲಿನಲ್ಲೇ ನಡೆಯುತ್ತಿದ್ದುದು. ಕ್ರಿ.ಪೂ.3ನೇ ಶತಮಾನದಲ್ಲಿ ಇದ್ದನು ಎನ್ನಲಾದ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಗ್ರಾಮಾಂತರಗಳಲ್ಲಿ ಖಾಯಂ ನಾಟ್ಯಶಾಲೆಗಳನ್ನು ಕಟ್ಟವುದಕ್ಕೆ ನಿಷೇಧವಿತ್ತು. ಅವನ ಕಾಲದಲ್ಲಿಯೂ ರಂಗೋಪಜೀವಿಗಳೆಂಬ ಮನರಂಜನೆಯ ತಂಡಗಳು ಊರೂರು ಸುತ್ತಿ ಪ್ರದರ್ಶನ ನೀಡುತ್ತಿದ್ದವು. ಈ ಪ್ರದರ್ಶನಗಳು ಹೊಲಗೆಲಸಗಳ ಕಾಲವನ್ನು ಬಿಟ್ಟು ನಡೆಯಬೇಕೆಂದು ಅವನ ಆಜ್ಞೆಯಾಗಿತ್ತು. ಮತ್ತು ಇದಕ್ಕೆ ಊರವರು ವಂತಿಗೆ ನೀಡಬೇಕಾಗಿತ್ತು. ಆದ್ದರಿಂದ ಈ ಪರಂಪರೆ ಹರಿದು ಬಂದು ಮನರಂಜನೆಯ ಆಟಗಳು ಬಯಲಿನಲ್ಲೇ ನಡೆಯುತ್ತಿದ್ದರಿಂದ ಅವು `ಬಯಲಾಟ` ಗಳಾದವು. `ನಾಟಕ` ಗಳಿಂದ ಬೇರ್ಪಡಿಸಿ ಹೇಳಲು ಈ ಪದ ಪ್ರಯೋಗ ರೂಢಿಯಲ್ಲಿ ಬಂದಿರಬಹುದು.
      ಈಗ ಬಯಲಾಟಗಳಲ್ಲಿ ಬಹಳ ಅಪರೂಪವಾಗಿ ಕಾಣಸಿಗುವ `ಪೂರ್ವರಂಗ` (ಸಭಾಲಕ್ಷಣ-ಸಭಾವಂದನೆ)ಕ್ಕೆ ಕಲ್ಯಾಣದ ಪಶ್ಚಿಮ ಚಾಲುಕ್ಯ ದೊರೆ ಸೋಮೇಶ್ವರನ ಕಾಲವನ್ನು (ಕ್ರಿ.ಶ. 12ನೇ ಶತಮಾನ) ನಾವು ಗಮನಿಸಬೇಕು. ಈತ `ಕಲ್ಯಾಣಿ` ರಾಗದ ಕರ್ತೃ ಎನ್ನಲಾಗುತ್ತಿದೆ. `ಮಾನಸೋಲ್ಲಾಸ` ಈತನ ಗ್ರಂಥ. ಸಂಗೀತ ಈತನ ಪ್ರೀತಿಯ ವಿಷಯ. ವರಂಗಲ್ಲಿನ ಜಾಯಸೇನಾಪತಿ ಎಂಬವನು ಬರೆದಿದ್ದ ನೃತ್ಯ ರತ್ನಾವಳಿ ಗ್ರಂಥದಲ್ಲಿ ಬರುವ ಗೋಡಲಿ ನೃತ್ಯವನ್ನು ಸೋಮೇಶ್ವರನು ಪರಿಷ್ಕರಿಸಿ ತನ್ನ ಗ್ರಂಥದಲ್ಲಿ ಸೇರಿಸಿಕೊಂಡನಂತೆ. `ಗೋಂಡಲಿ` ಎಂದರೆ ಭಿಲ್ಲತಿಯರ ನೃತ್ಯ. ಇದರಲ್ಲಿ ಶುದ್ಧ ಮತ್ತು ಪೇರಣೆ ಎಂಬ ಎರಡು ವಿಭಾಗಗಳಿವೆ.
       ನಮ್ಮ ಯಕ್ಷಗಾನದ ಪೂರ್ವರಂಗದಲ್ಲಿ ಬರುವ ಸ್ತ್ರೀ ವೇಷಗಳು ಮತ್ತು ಹಾಸ್ಯಗಾರ ಈ ಪಾತ್ರಗಳು ಗೋಂಡಲಿಯಿಂದ ಬಂದವುಗಳು ಎಂಬ ಅಭಿಪ್ರಾಯ ಪುಷ್ಠಿ ಪಡೆದಿದೆ. ಭಾಗವತ ಸಂಪ್ರದಾಯದಲ್ಲಿ ಕೃಷ್ಣ ಭಕ್ತಿಗೆ ಹೆಚ್ಚು ಪ್ರಾಶಸ್ತ್ಯವಿದ್ದುದರಿಂದ ಪೂರ್ವರಂಗದಲ್ಲಿ ಬಾಲ - ಗೋಪಾಲದ ನರ್ತನವೂ ಸೇರಿಕೊಂಡಿದೆ. ಸ್ಥಳೀಯವಾಗಿ ಸುಬ್ರಹ್ಮಣ್ಯನೂ ಬರುತ್ತಾನೆ. ಉತ್ತರ ಕರ್ನಾಟಕಕದಲ್ಲಿ ನಮ್ಮ ಈ ಸ್ಥಳೀಯ ದೇವತೆಗಳು ಕಾಣುವುದಿಲ್ಲ. ಇದರಲ್ಲಿ ಮುಖ್ಯವಾಗಿ ರಂಗಸ್ಥಳದ ಆಯ್ಕೆ, ರಂಗ ನಿರ್ಮಾಣ, ರಂಗಪೂಜೆ, ಗಣಪತಿ ಮತ್ತು ಇಷ್ಟದೇವತೆಗಳ ಪೂಜೆ, ಸಭಾಪತಿಯ ಲಕ್ಷಣ ಸಭಿಕರ ಲಕ್ಷಣ ಸೇರಿಕೊಳ್ಳುತ್ತವೆ.
        ಸ್ತ್ರೀ ವೇಷಗಳು, ಗೀತ - ವಾದ್ಯಗಳ ಹಿನ್ನೆಲೆಯೊಂದಿಗೆ ರಂಗಸ್ಥಳದ ಮಧ್ಯಕ್ಕೆ ಬಂದು ಪುಷ್ಪಾಂಜಲಿಯನ್ನು ಅರ್ಪಿಸುವುದು ಕ್ರಮ. ಶಾಙ್ರ್ಙದೇವನು ತನ್ನ `ರಸ ರತ್ನಾಕರ` ದಲ್ಲಿ ಇದನ್ನು ಉಲ್ಲೇಖಿಸಿದ್ದಲ್ಲದೆ ಈ ಪಾತ್ರಗಳು ತ್ರಿವಳಿ (ದೊಡ್ಡ ಆಕಾರದ ಡಮರು)ಯೊಂದಿಗೆ ಹಾಡುತ್ತಾ ನರ್ತಿಸುತ್ತಿದ್ದವು ಎಂದಿದ್ದಾನೆ. ಸ್ವಯಂಗಾಯತಿ ವಾದ್ಯಂಚ ತ್ರಿವಲೀಂ ವಾದಯೇತ್ ಸ್ವಯಂ ಎಂದು ಹೇಳಿ ಶೃಂಗಾರ ನರ್ತನವೆಂದೂ ಬಣ್ಣಿಸಿದ್ದಾನೆ. ಈಗಲೂ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಪ್ರಚಲಿತವಿರುವ ಗೋಂದೊಳು ನೃತ್ಯವು ಭವಾನಿಯನ್ನು ಎಂದರೆ ಶಕ್ತಿದೇವತೆಯನ್ನು ಪೂಜಿಸುವುದೇ ಆಗಿದೆ. ಈ ಸಂದರ್ಭದಲ್ಲಿ ಡಮರು ಎಂಬ ವಾದ್ಯವನ್ನು ನುಡಿಸಲಾಗುತ್ತದೆ. ನೃತ್ಯ ಮಾಡುವವರು ದೊಂದಿಗಳನ್ನು ಹಿಡಿದು ನರ್ತಿಸುವುದು ವಾಡಿಕೆ. ಯಕ್ಷಗಾನದ ಪೂರ್ವರಂಗಕ್ಕೆ ಸಂಬಂಧಿಸಿ ರಂಗಸ್ಥಳದ ಮುಂಭಾಗದಲ್ಲಿ ಎರಡು ದೊಂದಿಗಳನ್ನು ನಿಲ್ಲಿಸುವ ಪರಿಪಾಠವು ಈ ಗೋಂದಲಿಯಿಂದ ಬಂದುದು.
     ಯಕ್ಷಗಾನ ಆಟದ ಪೂರ್ವರಂಗದಲ್ಲಿ ಕುಣಿಯುವ ಸ್ತ್ರೀ ಪಾತ್ರಗಳು `ಗೊಂದಲಿ` ನರ್ತಕಿಯರ ಪ್ರತಿನಿಧಿಗಳೆಂದು ತೋರುತ್ತದೆ. ಈ ನರ್ತಕಿಯರು ಸಭೆಯ ಗಣ್ಯ ವ್ಯಕ್ತಿಗಳಿಗೆ `ಸಲಾಮು` ಹಾಕುವ ಪದ್ಧತಿ ಇತ್ತು. ಆಗ ಅವರು `ದೌಲತ್ ಜ್ಯಾದಾ` (ಸಂಪತ್ತು ಹೆಚ್ಚಲಿ) ಎನ್ನುತ್ತಿದ್ದರು. ಆದರೆ ಇದು `ಜ್ಯಾದಾ` ಅಲ್ಲ `ತ್ಯಾಗ`, `ಗೊಂಡಲಿ` ನರ್ತಕಿಯರು ಮಾಡುವ ಸ್ತುತಿ, ಎಂದು ಶಾಙ್ರ್ಙದೇವ ಹೇಳಿದ್ದಾನೆ. ಹೀಗೆ `ತ್ಯಾಗ` ಹೇಳಿದಾಗ ಅರಸನು ಅವರನ್ನು ಪುರಸ್ಕರಿಸಬೇಕು ಎಂಬ ನಿಯಮವಿತ್ತು. `ಪೇರಣೆ`ಯಲ್ಲಿ ಹಾಸ್ಯಗಾರನೇ ಪ್ರಧಾನ. ಗೆಜ್ಜೆ ಕಟ್ಟಿದ ಆತನ ಹೆಜ್ಜೆಯಲ್ಲಿ ಐದು ಗತ್ತುಗಳಿರಬೇಕೆಂಬ ನಿಯಮವುಂಟು.
      ಉತ್ತರ ಕರ್ನಾಟಕದ `ದೊಡ್ಡಾಟ` ಅಘವಾ `ಮೂಡಲಪಾಯ`ದಲ್ಲಿ ಹಾಸ್ಯಗಾರನಿಗೇ ಪ್ರಮುಖ ಸ್ಥಾನ. `ಜಾನಪದದಲ್ಲಿ ಹುಟ್ಟಿ ಅರಳಿ, ಅಭಿಜಾತದತ್ತ ಮುಖ ಮಾಡಿದ ಯಕ್ಷಗಾನ, ಕುರಿತೋದಯಯುಂ ಕಾವ್ಯ ಪ್ರಯೋಗ ಮತಿಗಳಾದ ನಾಡವರ್ಗಳಿಗೆ ಅತಿ ಪ್ರಿಯವಾದ ಕಲೆಯಾಗಿದೆ` ಎಂದು ಡಾ. ಎನ್.ಆರ್. ನಾಯಕ ಬರೆಯುತ್ತಾರೆ. (ಉತ್ತರ ಕನ್ನಡ ಜಿಲ್ಲೆಯ ನಾಡವರ ಸಂಸ್ಕೃತಿ) ಹಿಂದಿನ ಕಾಲದಿಂದಲೂ ಪ್ರಚಲಿತವಿದ್ದುದನ್ನು ಹೇಳುವ ಅಲ್ಲಿಯ ಹಿರಿಯ ಕಲಾವಿದರೇ ತಮ್ಮ ಊರಿನ ಮಕ್ಕಳಿಗೆ ಯಕ್ಷಗಾನ ಕಲಿಸಿ ಪ್ರತಿ ಹಳ್ಳಿಯಲ್ಲಿಯೂ ಬಯಲಾಟ ಆಡಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಮಾತ್ರವಲ್ಲ ತುಳುನಾಡಿನ `ಹಿರಿಯನ` ಶಿಷ್ಯರೆಂದು ಹೇಳಿಕೊಳ್ಳಲು ಅವರು ಹೆಮ್ಮ ಪಡುತ್ತಾರೆ` ಎಂದಿದ್ದಾರೆ. ನಾಡವರು ಮೇಳ ಕಟ್ಟಿದ್ದು ಕಡಿಮೆ. ಆದರೂ 1940ರ ಸುಮಾರಿಗೆ `ಸುಭೋದ ಯಕ್ಷಗಾನ ಮಂಡಳಿ`ಯನ್ನು ಕಟ್ಟಿ ಎಂಟು ಹತ್ತು- ವರ್ಷಗಳ ಕಾಲ ಅದನ್ನು ನಡೆಸಿ ಖ್ಯಾತಿ ಗಳಿಸಿದ್ದಲ್ಲದೆ ಇವರ ಮೇಳದಲ್ಲಿ ಶಾಂತಿ ದೇವಳಿ ಎಂಬ ಹೆಣ್ಣೊಬ್ಬಳು ಕಲಾವಿದೆಯಾಗಿ ಭಾಗವಹಿಸಿದ್ದರ ಉಲ್ಲೇಖವನ್ನು ನಾಯಕರು ಮಾಡಿದ್ದಾರೆ. ಅವರು ಹೇಳುವಂತೆ ಈಕೆ ಯಕ್ಷಗಾನದಲ್ಲಿ ಭಾಗವಹಿಸಿದ ಪ್ರಥಮ ಮಹಿಳೆ. ಇದು ಗಮನಾರ್ಹ ಸಂಗತಿ.
      ನಾಡವರಿರುವ ಪ್ರತಿ ಹಳ್ಳಿಯಲ್ಲಿಯೂ `ತಾಲಮದ್ದಲೆ` ಯೂ ನಡೆಯುತ್ತದೆ. ಇದಕ್ಕೆ ಅವರು `ಓದಿಕೆ` `ಓದ್ಕೆ` ಎನ್ನುತ್ತಾರೆ. ಭಾಗವತನು ಪ್ರಸಂಗವನ್ನು ಓದಿ ಹಾಡುವುದರಿಂದ ಬಹುಶಃ ಈ ಹೆಸರು ಬಂದಿರಬೇಕು. ಶ್ರೀ ಎಂ.ಎಂ.ನಾಯಕ ಎಂಬವರು ಸಂಗ್ಯಾ -ಬಾಳ್ಯಾ ಸಣ್ಣಾಟವನ್ನು ಯಕ್ಷಗಾನ ಪ್ರಸಂಗರೂಪದಲ್ಲಿ ಬರೆದವರೆಂದು ಖ್ಯಾತರಾಗಿದ್ದರು. ನಾಡು ಮಾಸ್ಕೇರಿಯ ತಿಮ್ಮಣ್ಣ ಗಾಂವಕರು ಹೆಣ್ಣು ಮಕ್ಕಳ ಯಕ್ಷಗಾನವನ್ನು ಸಂಘಟಿಸಿದವರಲ್ಲಿ ಮೊದಲಿಗರು.
      ನಮ್ಮಲ್ಲಿ ನರ್ತನದ ಪೂರ್ವರಂಗವನ್ನು ಕಥಾತ್ಮಕವೆನಿಸುವ ತಮ್ಮ ಪ್ರಬಂಧಗಳಿಗೆ ಜೋಡಿಸಿ, ದಾಸಕೂಟವು ಇಂದಿನ ಯಕ್ಷಗಾನವನ್ನು ರೂಪಿಸಿರಬೇಕು ಎಂಬ ಹೇಳಿಕೆ ಕೂಡ ಒಪ್ಪುವಂತಹುದು. ಯಕ್ಷಗಾನ ಆಟಕ್ಕೆ ಶಾಸ್ತ್ರೀಯ ರೂಪಕೊಟ್ಟು ಅದನ್ನು ಲೋಕಪ್ರಿಯವನ್ನಾಗಿ ಮಾಡಿದವರು ಸಂಗೀತತಜ್ಞರಾದ ಪುಂಡರೀಕ ವಿಠ್ಠಲ ಮತ್ತು ಸಂಗೀತ ದರ್ಪಣಕಾರ ಚತುರ ದಾಮೋದರ. ಉಳಿದ ಸಂಗೀತದಲ್ಲಿ ರಾಗಾಶ್ರಯವಿದ್ದರೆ, ಯಕ್ಷಗಾನವು ತಾಳ ಮತ್ತು ಭಾವ ಪ್ರಧಾನವಾದುದು. ಬರ ಬರುತ್ತಾ ಸಂಸ್ಕೃತ ನಾಟಕದ ಲಕ್ಷಣಗಳು ಇದರಲ್ಲಿ ಸೇರಿಕೊಂಡಾಗ ಸ್ವರೂಪ ಬದಲಾದುದು ನಿಜ. ಆದರೂ ಗ್ರಾಮೀಣರು ತಮಗೆ ಸರಿ ಕಂಡ ರೀತಿಯಲ್ಲಿ ಪರಂಪರೆಯನ್ನು ಉಲ್ಲಂಘಿಸದೆ ಇದನ್ನು ಪೋಷಿಸಿಕೊಂಡು ಬಂದರು. ಅದು ಜಾನಪದವೆನಿಸಿದ್ದು ಹೀಗೆ. ಆಗ ಈಗಿನಂತೆ ಸರಿಯಾದ ಮಾರ್ಗದರ್ಶನ ಇರಲಿಲ್ಲವೆಂಬುದೂ ನಿಜ.
      ಕರಾವಳಿಯ ಯಕ್ಷಗಾನವು ಕೇರಳದ `ಕಥಕ್ಕಳಿ` ಯಿಂದ ಪ್ರಭಾವಿತಗೊಂಡುದೇ ಎಂಬ ಪ್ರಶ್ನೆ ಕೆಲವರನ್ನು ಕಾಡುವುದುಂಟು. ಆದರೆ ಇದು ಸರಿಯಲ್ಲ. ಕೇರಳದಲ್ಲಿ ಮೊದಲೇ `ಕೃಷ್ಣನಾಟ್ಯಂ` ಎಂಬುದು ಇದ್ದುದು ಇದೊಂದು ನಾಟ್ಯ ವಿಧಾನ ಮಾತ್ರ ಆಗಿತ್ತು. ಕೊಲ್ಲೂರು ಕ್ಷೇತ್ರಕ್ಕೆ ಆಗಾಗ ಬರುತ್ತಿದ್ದ ಕೇರಳದ ಕೊಟ್ಟಾರಕ ಮಹಾರಾಜನು ದಕ್ಷಿಣ ಕನ್ನಡದ ಯಕ್ಷಗಾನ ಬಯಲಾಟವನ್ನು ಕಂಡು, ಕೃಷ್ಣನಾಟ್ಯ ನೃತ್ಯಕ್ಕೆ ಹೊಸರೂಪಕೊಟ್ಟು `ಅಟ್ಟಕಥಾ` ಎಂಬುದನ್ನು ಪ್ರಚಾರಕ್ಕೆ ತಂದನಂತೆ. ಇದೇ `ರಾಮನಾಟ್ಟಂ`. ವಲ್ಲತ್ತೋಲ್ ನಾರಾಯಣ ಮೆನನ್ ಎಂಬುವರು ಇವುಗಳನ್ನು ಪರಿಷ್ಕರಿಸಿ ಅದಕ್ಕೆ ಕಥಕ್ಕಳಿ ಎಂದು ಹೆಸರುಕೊಟ್ಟರು. ಇದರಲ್ಲಿ ಮೊದಲು ಪಾತ್ರಧಾರಿಗಳು ಹಾಡುತ್ತಿದ್ದು ಆನಂತರ ಕರ್ನಾಟಕದ ಯಕ್ಷಗಾನದ ಪ್ರಭಾವದಿಂದಾಗಿ ಪ್ರತ್ಯೇಕ ಭಾಗವತರು ನೇಮಕಗೊಂಡರೆಂದು ಹೇಳಲಾಗುತ್ತದೆ. ನಮ್ಮ ಬಯಲಾಟದ ತಂತ್ರಗಾರಿಕೆ ಇದರಲ್ಲಿ ಇಲ್ಲ.
       ಇನ್ನು ರಂಗಸ್ಥಳ ರಚನೆ, ಕಲಾವಿದರು ಬಳಿಸಿಕೊಳ್ಳುವ ರೀತಿ ಹಿಂದೆ ಈಗಿನಂತೆ ಇಲ್ಲಿಲ್ಲವೆಂದು ಯಕ್ಷಗಾನ ರಂಗತಜ್ಞ, ಸಂಶೋಧಕ ಡಾ. ರಾಘವ ನಂಬಿಯಾರ್ ಹೇಳುತ್ತಾರೆ. ಪರದೆಗಳಿಲ್ಲ. ದೀವಟಿಕೆಯ ಬೆಳಕು ಮಾತ್ರ. ಹಿಮ್ಮೆಳದ ಐವರು ಗೋಡೆಯಂತೆ ನಿಂತುಕೊಂಡೇ ಕಾರ್ಯನಿರ್ವಹಿಸುವುದು, ಈ ಗೋಡೆಯನ್ನು ಸೀಳಿಕೊಂಡೇ ವೇಷಗಳು ರಂಗಸ್ಥಳ ಪ್ರವೇಶಿಸುವುದು. ಬಡಗುತಿಟ್ಟಿನಲ್ಲಿ ಮಾತ್ರ ಚೆಂಡೆಯವನು ಕುಳಿತುಕೊಳ್ಳುವುದು. ಒಡ್ಡೋಲಗಕ್ಕಾಗಿ ಒಂದು ಮರದ ರಥವಿರುತ್ತಿತ್ತು. ಅದು ಬೇಕಾದಾಗ ಮಾತ್ರ ಮುಂದೆ ಸರಿಸಲ್ಪಡುವುದು.
        ಬೇಟೆಯ ದೃಶ್ಯದಲ್ಲಿ ಕಿರಾತರು ಪ್ರವೇಶ ಮಾಡುವಾಗ ಹಿನ್ನೆಲೆಯ ಐದೂ ಮಂದಿ ಬದಿಗೆ ಸರಿದು ಸರಳ ರೇಖೆಯಲ್ಲಿ ನಿಲ್ಲುತ್ತಾರೆ. ಆಗ ಪ್ರೇಕ್ಷಕರಿಗೆ ರಂಗಸ್ಥಳದ ಹಿಂಬದಿಯಲ್ಲಿ ಏನು ನಡೆಯುತ್ತದೆ ಎಂಬುದೂ ಕಾಣುತ್ತದೆ. ಅಲ್ಲಿ ಬೈ ಹುಲ್ಲಿಗೆ ಬೆಂಕಿ ಕೊಟ್ಟು ಜ್ವಾಲೆ ಎಬ್ಬಿಸುತ್ತಾರೆ. ಅದಕ್ಕೆ ಪ್ರದಕ್ಷಿಣೆ ಬಂದು ಕಿರಾತರು ಒಬ್ಬೊಬ್ಬರೇ ಒಳ ಪ್ರವೇಶಸುತ್ತಾರೆ. ಈ ಹಿನ್ನೆಲೆಯಲ್ಲಿ ರಂಗಕ್ರಿಯೆ ಕೂಡಾ ಯಕ್ಷಗಾನವೊಂದು `ಟೋಟಲ್ ಥಿಯೇಟರ್` ಎಂಬುದಕ್ಕೆ ಸಾಕ್ಷಿ. ಉದಾ : ಜರಾಸಂಧನ ಭೇರಿಯನ್ನು ಭೀಮ ಬಾರಿಸುವುದು. ಹೀಗೆಯೇ ಚಕ್ರವ್ಯೂಹದೊಳಗೆ ಅಭಿಮನ್ಯು ಪ್ರವೇಶವನ್ನು ರಥಕ್ಕೆ ಏರುವುದರ ಮೂಲಕ ತೋರಿಸಲಾಗುತ್ತಿತ್ತು. ಬಿ.ವಿ.ಕಾರಂತರು ಒಮ್ಮೆ ತಮ್ಮ ಉಪನ್ಯಾಸದಲ್ಲಿ ಹೀಗೆ ಹೇಳಿದ್ದರಂತೆ - ರಂಗದಲ್ಲಿ ಬೆಳಕಿನ ಬಳಕೆ ಎಂದರೆ ನಾವು ಕತ್ತಲನ್ನು ಎಷ್ಟು ಉಪಯೋಗಿಸುತ್ತೇವೆ ಎನ್ನುವ ವಿವೇಕ.
         ಹಿಂದಿನ ಯಕ್ಷಗಾನ ಪ್ರದರ್ಶನಗಳು ಕತ್ತಲನ್ನು ಬಳಸಿಕೊಳ್ಳುತ್ತಿದ್ದ ರೀತಿ, ಈಗ ಕೇವಲ ಪುಸ್ತಕಗಳಲ್ಲಿ ಮಾತ್ರ ಉಳಿದುಕೊಂಡಿದೆ. ಕುಣಿದು ರಂಗ ಪ್ರವೇಶಿಸುವ ರೀತಿ ಮಾಯವಾಗಿ ಸಿಂಹಾಸನದಲ್ಲಿ ಕುಳಿತು ಒಡ್ಡೋಲಗ ನೀಡುವ ಪದ್ಧತಿ ಈಗ ಬಂದಿದೆ. ಓರ್ವಪಾತ್ರಧಾರಿ ಮಾತನಾಡುವಾಗ ಈಗಿನಂತೆ ಮತ್ತೊಬ್ಬ ಪಾತ್ರಧಾರಿ ಪ್ರತಿಕ್ರಿಯೆ ನೀಡುತ್ತಿದ್ದಿಲ್ಲ. ಏಕೆಂದರೆ ದೀವಟಿಗೆಯ ಮಂದ ಬಳಕಿನಿಂದ ಆತ ತೆರೆಮರೆಯ ಕತ್ತಲಲ್ಲಿ ಬೆನ್ನು ಹಾಕಿ ನಿಲ್ಲುತ್ತಿದ್ದ. ಆದರೆ ಈಗ ಸಭಾಗೃಹಗಳಲ್ಲಿ ಪ್ರದರ್ಶನ ಏರ್ಪಡಿಸುವಾಗ ಇವುಗಳನ್ನು ಪಾಲಿಸುವುದು ಸಾಧ್ಯವೂ ಇಲ್ಲ. ವಿದ್ಯುದ್ದೀಪಗಳ ಬೆಳಕೇ ಇಲ್ಲಿ ಮುಖ್ಯವಾಗುತ್ತದೆ. ರಂಗ ಪರಿಕರ, ಬಣ್ಣಗಾರಿಕೆ, ವೇಷ ಭೂಷಣ, ಅಭಿನಯಗಳಲ್ಲಿಯೂ ಬದಲಾವಣೆ ಇಲ್ಲಿ ಅನಿವಾರ್ಯವಾಗುತ್ತದೆ. 16ನೇ ಶತಮಾನದಿಂದಲೇ ಮಾತುಗಾರಿಕೆ ಪ್ರಧಾನವೆನಿಸುವ ತಾಮದ್ದಲೆ ಕೂಡಾ ಜನಪ್ರಿಯವಾಗುತ್ತ ಬಂದಿದೆ.
         ದೊರೆತ ಯಕ್ಷಗಾನ ಕೃತಿಗಳಲ್ಲಿ ವಾರಂಬಳ್ಳಿ ವಿಷ್ಣು ವಿರಚಿತ ವಿರಾಟಪರ್ವ ಮೊದಲನೆಯದು (1564) ಜನತೆಯಲ್ಲಿ ಉತ್ತಮ ಸಂಸ್ಕಾರ ಮೂಡಿಸುವುದೇ ಪ್ರಸಂಗಗಳ ಉದ್ದೇಶ. ವೀರ - ಶೃಂಗಾರ ಪ್ರಧಾನರಸಗಳು. ಹಾಸ್ಯರಸವು ಹಾಸ್ಯಗಾರನ ಮಾತುಗಳಲ್ಲೇ ವ್ಯಕ್ತವಾಗಬೇಕೆಲ್ಲದೆ ಪದ್ಯಗಳಿಂದಲ್ಲ. ನಗಿರೆಯ ಸುಬ್ಬು ದೇವಿದಾಸ, ಧ್ವಜಪುರದ ನಾಗಪ್ಪಯ್ಯ ಹಾಗೆಯೇ ಎಂಟು ಕೃತಿಗಳನ್ನು ರಚಿಸಿದ ಕುಂಬಳೆ ಪಾರ್ತಿಸುಬ್ಬ ಮುಖ್ಯರಾಗುತ್ತಾರೆ. ಪಾರ್ತಿಸುಬ್ಬನದು ಸರಳ ಭಾಷೆ - ಅದನ್ನು ಗೊಂವಿಂದ ಪೈಯವರು `ಪಡಸಾಲೆಯಲ್ಲಿ ಕುಳಿತು ಪಟ್ಟಾಂಗ ಹೊಡೆಯುವ ಭಾಷೆ` ಎಂದಿದ್ದಾರೆ.
          ಹಾಗೆಯೇ ಪೌರಾಣಿಕ ಕೃತಿಗಳಲ್ಲದೆ ಚಾರಿತ್ರಿಕ ವಿಷಯಕವಾದ ಪ್ರಸಂಗಗಳು ಬಂದಿವೆ. ವೀರಶೈವರು ಶಿವಭಕ್ತಿಗೆ ಪ್ರಾಶಸ್ತ್ಯ ಕೊಟ್ಟದ್ದರಿಂದ ಕರಿಭಂಟನಂತೆ, ಆದಿಪರಮೇಶ್ವರ ಪುರಾಣ ಇತ್ಯಾದಿಗಳು ಬಂದವು. ದ.ಕ.ಕ್ಕೆ ಈ ರೀತಿಯ ಪ್ರಸಂಗಗಳು ಕಾಲಿಟ್ಟದ್ದು ಬಹಳ ತಡವಾಗಿ ಒಟ್ಟಿನಲ್ಲಿ 18-19ನೇ ಶತಮಾನದ ಪ್ರವರ್ಧಮಾನದ ಕಾಲವೆನಿಸಿದೆ.
        ವೇಷ ಭೂಷಣಗಳು ಬಣ್ಣಗಾರಿಕೆ, ಇವು ಆಯಾಯ ಪಾತ್ರ ಸ್ವಭಾವಕ್ಕೆ ಅನುಗುಣವಾಗಿ ಇರುತ್ತವೆ. ಧಿರಿಸುವ ಉಡುಪು ಕೂಡ ಸತ್ವ, ರಜ, ತಮೋ ಗುಣಗಳಿಗೆ ಅನುಗುಣವಾಗಿ ಪೀಠಿಕೆ ವೇಷಗಳಿಗೆ ಹಸುರು, ವಿರೋಧ ಪಾತ್ರಗಳಿಗೆ ಕಪ್ಪು, ಭೀಮನಿಗೆ ಕೆಂಪು, ಅಭಿಮನ್ಯುವಿಗೆ ಕಪ್ಪು, ಬಬ್ರುವಾಹನನಿಗೆ ಕೆಂಪು, (ಹನುಮಂತ, ಭೀಷ್ಮ, ದಶರಥ, ವರಾಹ, ನರಸಿಂಹ ಇಂಥವೇಷಗಳಿಗೆ ಬಿಳಿದಗಲೆ) ಬಣ್ಣಗಳನ್ನು ಒಳಗೊಂಡಿರುತ್ತದೆ. ಈಗ ಇದನ್ನು ಎಷ್ಟರ ಮಟ್ಟಿಗೆ ಅನುಸರಿಸಲಾಗುತ್ತದೆ ಎನ್ನುವುದನ್ನು ಹೇಳಲು ಬರುವುದಿಲ್ಲ. ಕಲಾವಿದರು ಅವರವರೇ ಮುಖವರ್ಣಿಕೆ ಬರೆದುಕೊಳ್ಳುತ್ತಾರೆ. ಇದು ಇಲ್ಲಿಯ ವೈಶಿಷ್ಟ್ಯ. ಕಥಕ್ಕಳಿಯಲ್ಲಿ ಬೇರೆಯವರು ಬಣ್ಣ ಹಾಕುತ್ತಾರೆ.
        ಕುಣಿತದಲ್ಲಿ ಪುಂಡು ವೇಷದಲ್ಲಿ ಸಾಮಾನ್ಯವಾಗಿ ರಭಸದ ಕುಣಿತ. ಆದರೆ ಇದರಲ್ಲಿ ಪಾತ್ರ ವ್ಯತ್ಯಾಸಗಳನ್ನು ಗಮನಿಸದಿದ್ದಲ್ಲಿ ಅಭಿಮನ್ಯು ಎಷ್ಟು ದಿಗಿಣ ಹಾಕಿದನೋ ಅದಕ್ಕಿಂತ ಹೆಚ್ಚು ಬಬ್ರುವಾಹನ ಹಾಕುವುದು ನಾವು ನೋಡಿದ್ದೇವೆ. ಆದರೆ ಬಬ್ರುವಾಹನ ಮಣಿಪುರದ ಅರಸು, ಪುಂಡವೇಷವಾದರೂ ಅವನದು ರಾಜಗಾಂಭೀರ್ಯ. ಇದನ್ನು ಮರೆಯಬಾರದು. ಇದೇ ಔಚಿತ್ಯಭಂಗ, ವೇಷಭೂಷಣ, ಮುಖವರ್ಣಿಕೆಗಳಿಗೆ ಹೊಂದುವಂತಹ ಕುಣಿತ ಬೇಕು. 
     

ತುಳು ಪ್ರಸಂಗಗಳು ಮತ್ತು ಪ್ರದರ್ಶನಗಳು :
ಕರಾವಳಿ ಕರ್ನಾಟಕದ ದಕ್ಷಿಣ ಭಾಗ ತುಳು ಭಾಷೆಯನ್ನಾಡುವ ವ್ಯಾಪಕತೆಯಿಂದಾಗಿ 1887ರಲ್ಲಿ ಪೆರುವಡಿ ಸಂಕಯ್ಯ ಭಾಗವತರು ವಿಟ್ಲದ ಅರಸನ ಆಶ್ರಯದಲ್ಲಿ ಪಾರ್ತಿಸುಬ್ಬನ ಪಂಚವಟಿ ಮತ್ತು ವಾಲಿ ಸುಗ್ರೀವ ಕಾಳಗವನ್ನು ತುಳು ಭಾಷೆಗೆ ಅನುವಾದ ಮಾಡಿದ್ದಾತ. ಅವನ ಪ್ರತಿಭೆಗೆ ಸ್ವಂತಿಕೆಗೆ ಒಂದು ನಿದರ್ಶನವೆಂದರೆ ಕನ್ನಡ ಪಂಚವಟಿಯ 225 ಪದ್ಯಗಳನ್ನು 361 ಪದ್ಯಗಳಾಗಿ ಬೆಳೆಸಿದ್ದು. ಸೊಗಸಾದ ಶೈಲಿಗೆ ಒಂದು ಉದಾ :

`ನೋಡಿದನು ಮುರಿದವನನು ಅಲ್ಲಾಡಿದನು, ತುದಿಬೆರಳನಹುದೈ
ಖೋಡಿ ಇಲ್ಲದ ಖರೆಯನಹೆ ಖದ್ಯೋತವಂಶದಲಿ`
"ತೂಯೆ ಪಿಜಿರ್ತ್ ಕೊಡಿ ಬೆರೆಲ್ ನಾಡಾಯೆ ಭೂಮಿಟ್ ಕೊರತ ಇದ್ಯಾಂ
ತ್ಯಾಯೆ ಸೂರ್ಯವಂಶದ ಅರಸುಗುಳೆ ಕುಲೊಟು"

      16ನೇ ಶತಮಾನದಲ್ಲಿ ಇಂಥದ್ದೊಂದು ಪ್ರಯತ್ನ ನಡೆದಿರುವುದೇ ತುಳು ಭಾಷೆಯ ಮಟ್ಟಿಗೆ ಅಭಿಮಾನದ ಸಂಗತಿ. ಅನಂತರ 20 ನೇ ಶತಮಾನದ ಪೂರ್ವಾರ್ಧದಲ್ಲಿ ಎಂದರೆ ತುಳು ಚಳವಳಿಯ ಸಂದರ್ಭದಲ್ಲಿ ದೇರಂಬಳ ತ್ಯಾಂಪಣ್ಣ ಶೆಟ್ಟರು, ಅನಂತರಾಮ ಬಂಗಾಡಿ ಮೊದಲಾದವರು ಪ್ರಸಂಗ ರಚನೆ ಮಾಡಿದ್ದಾರೆ. ಅದರಲ್ಲೂ ಪದಂಬೆಟ್ಟು ವೆಂಕಟರಾಯರು ಕೋಟಿ-ಚೆನ್ನಯ ಪ್ರಸಂಗ ಬರೆದು ಒಂದು ಜಾನಪದವೂ ಐತಿಹಾಸಿಕವೂ ಎನಿಸುವ ಕತೆಯೊಂದನ್ನು ಪ್ರಸಂಗಕ್ಕೆ ಇಳಿಸಿದರು. ನಂತರ ಅಜ್ಜಿಕತೆಗಳೂ ಬಂದವು. ಆದರೆ ತುಳು ಪ್ರಸಂಗ ಪ್ರದರ್ಶನದಲ್ಲಿಯ ಒಂದು ಆರೋಪವೆಂದರೆ ಪ್ರೌಢತೆ ಕಾಣದ ಭಾಷೆ ಹಾಗೂ ಕೀಳು ಅಭಿರುಚಿಯ ಹಾಸ್ಯ. ಕಲ್ಲಾಡಿ ಕೊರಗಪ್ಪ ಶೆಟ್ಟರು ತುಳು ಪ್ರದರ್ಶನಕ್ಕೆ ಕೈಹಾಕಿದವರು. ಅವರ ಟೆಂಟ್ ಮೇಳ (ಯಕ್ಷಗಾನ ನಾಟಕ ಸಭಾ) ಇದಕ್ಕೆ ಅವಕಾಶ ಕೊಟ್ಟಿತು. ಮುಂದೆ ಅಸಂಖ್ಯ ತುಳು ರಚನೆಗಳು ಬಂದವು. ಒಂದು ವರ್ಷ ಪ್ರಯೋಗ ಕಂಡ ಮೇಲೆ ಮುಂದಿನ ವರುಷಕ್ಕೆ ಮತ್ತೊಂದನ್ನು ಚಿಂತಿಸಬೇಕಾಗಿ ಬಂದದ್ದೇ ಇದರ ದುರಂತ.
     ಪುರಾಣ ಪ್ರಸಂಗಗಳಂತೆ ಶಾಶ್ವತವಾಗಿ ಜನರನ್ನು ಆಕರ್ಷಿಸುವುದು ಇವುಗಳಿಂದ ಅಸಾಧ್ಯವಾಯಿತು. ಇದಕ್ಕೆ ಭಾಷೆ, ಒಂದೇ ಕಾರಣವಾಗಲಿಲ್ಲ. ಅಗ್ಗದ ಪ್ರಚಾರಕ್ಕಾಗಿ ಬಳಸಿಕೊಂಡ ಕೃತ್ರಿಮ ಸನ್ನಿವೇಶಗಳು, ಸಿನಿಮಾ ನೃತ್ಯಗಳಿಂದಾಗಿಯೂ ಇವು ಸೊರಗಿದವು. ಆದರೂ ಕೆಲವು ಉತ್ತಮ ಸಾಹಿತ್ಯ ಗುಣವುಳ್ಳ ಪ್ರಸಂಗಳನ್ನು ಅಮೃತ ಸೋಮೇಶ್ವರ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಬಂಗಾಡಿಯವರು ಈ ಕ್ಷೇತ್ರಕ್ಕೆ ನೀಡಿದ್ದಾರೆ. ಆದ್ದರಿಂದ ತುಳುತಿಟ್ಟು ಎಂಬೊಂದು ವಿಭಾಗ ಮಾಡಿದರೆ ಹೇಗೆ ಎಂಬ ವಿಚಾರವು ವಿಮರ್ಶಕರಲ್ಲಿ ಇದೆ. ಇದು ಅವಶ್ಯವಿಲ್ಲ. ಹಿಂದಿ, ಕೊಂಕಣಿ, ಕನ್ನಡದಲ್ಲಿ ಜಾನಪದ ರಂಗಭೂಮಿ ಇದ್ದಂತೆ ತುಳು ಭಾಷೆಗೆ ಸಮೃದ್ಧತೆಯನ್ನು ಕೂಡಿಸಿಕೊಳ್ಳುವುದು ಅಷ್ಟೊಂದು ಕಷ್ಟದ ಕೆಲಸವಲ್ಲ. ಕನ್ನಡವು ಸಂಸ್ಕೃತದಿಂದ ಎರವು ಪಡೆದಂತೆ ತುಳು ಕೂಡಾ ಈ ಕೆಲಸ ಮಾಡಬಹುದು.
ಯಕ್ಷಗಾನ ವಿಡೀಯೋ ವೀಕ್ಷಿಸಿ*************************
ಕಾಮೆಂಟ್‌‌ ಪೋಸ್ಟ್‌ ಮಾಡಿ