ನನ್ನ ಪುಟಗಳು

27 ನವೆಂಬರ್ 2013

ಪಂಥಾಹ್ವಾನ (ಗದ್ಯ1)

ಪಂಥಾಹ್ವಾನ ಇದು ಶಿವಕೋಟ್ಯಾಚಾರ್ಯರ 'ವಡ್ಡಾರಾಧನೆ' ಕೃತಿಯ 'ವಿದ್ಯುಚ್ಚೋರನೆಂಬ ರಿಸಿಯ ಕಥೆ' ಇಂದ ಆರಿಸಿಕೊಳ್ಳಲಾಗಿದೆ.
ಶಿವಕೋಟ್ಯಾಚಾರ್ಯ:-
ಪಂಪಯುಗದಲ್ಲಿ ರಚಿತವಾದ ಒಂದೇ ಒಂದು ಗದ್ಯ ಗ್ರಂಥವೆಂದರೆ ''ವಡ್ಡಾರಾಧನೆ''. ಇದನ್ನು ರಚಿಸಿದವರು ಶಿವಕೋಟ್ಯಾಚಾರ್ಯ. ಇವರ ಕಾಲ ಸುಮಾರು ಕ್ರಿ.ಶ.೯೨೦ ರ ಸನಿಹದಲ್ಲಿದೆ. ಶ್ರೇಷ್ಠ ಜೈನ ಕವಿಯಾದ ಶಿವಕೋಟ್ಯಾಚಾರ್ಯರು ಹಳೆಗನ್ನಡದಲ್ಲಿ ಸುಂದರವಾದ ಗದ್ಯಕಾವ್ಯವನ್ನು ರಚಿಸಿದರು. ಈ ಕಥಾ ಗ್ರಂಥದಲ್ಲಿ ೧೯ ಮಹಾತ್ಮರ ಜೀವನ ಕಥೆಗಳಿವೆ. ಕಥಾಕೋಶವೆಂದೇ ಈ ಗ್ರಂಥ ಪ್ರಸಿದ್ದವಾಗಿದೆ. ಈ ಕಾವ್ಯವು ೯ ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು. ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ ಶಿವಕೋಟ್ಯಾಚಾರ್ಯ ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾರೆ. ನೀತಿ, ಚರಿತ್ರೆ, ಧರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು. ಇದು ಒಂದು ಅದ್ಭುತ ಗದ್ಯ ಕಾವ್ಯ.
******
ವಿದ್ಯುಚ್ಚೋರನೆಂಬ ರಿಸಿಯ ಕಥೆಯ ಮೂಲ ಹಳಗನ್ನಡ ಗದ್ಯವನ್ನು ಡೌನ್ಲೋಡ್ ಮಾಡಲು ಡೌನ್ ಲೋಡ್ ಬಟನ್ ಕ್ಲಿಕ್ ಮಾಡಿ


*******
ವಿದ್ಯುಚ್ಚೋರನೆಂಬ ರಿಸಿಯ ಕಥೆ ಸಂಕ್ಷಿಪ್ತ ಹೊಸಗನ್ನಡ ಸರಳಾನುವಾದ

ಜೈನ ಪುರಾಣ ಚಿತ್ರಗಳು
ಜಂಬೂದ್ವೀಪದ ಭರತ ಕ್ಷೇತ್ರದಲ್ಲಿ ವಿದೇಹವೆಂಬ ನಾಡು. ಅಲ್ಲಿಯ ಮಿಧಿಲೆ ಎಂಬ ನಗರವನ್ನು ಪರಂಪರಾಗತವಾಗಿ ವಾಮರಥ ಎಂಬ ಅರಸನು ಆಳುತ್ತಿದ್ದನು. ಆತನು ಮಹಾದೇವಿ ಬಂಧುಮತಿ. ಅವರು ಇಷ್ಟ ವಿಷಯ ಕಾಮ ಭೋಗಗಳನ್ನು ಅನುಭವಿಸುತ್ತ ಸುಖವಾಗಿದ್ದರು. ಆ ನಗರವನ್ನು ಕಾಯಲು ಯಮದಂಡನೆಂಬ ತಳಾರನು ಇದ್ದನು. ಆ ಸಂದರ್ಭದಲ್ಲಿ ಅಲ್ಲಿ ವಿದ್ಯಚ್ಚೋರನೆಂಬ ಕಳ್ಳನೂ ಇದ್ದನು. ಅವನು ಜಂಭಿನಿ, ಸ್ತಂಭಿನಿ, ಮೋಹಿನಿ ಮೊದಲಾದ ತಸ್ಕರ ಶಾಸ್ತ್ರದಲ್ಲಿ ನಿಪುಣ. ಆ ಚೋರನು ರಾತ್ರಿಕಾಲದಲ್ಲಿ ನಗರದಲ್ಲಿರುವ ಹಣ ಒಡವೆಗಳನ್ನು ಕದ್ದು ಪರ್ವತದ ಗುಹೆಯೊಂದರಲ್ಲಿ ಗುಪ್ತವಾಗಿ ಇಟ್ಟು ಹಗಲಲ್ಲಿ ಅಂಜನ ವಿದ್ಯೆಯಿಂದ ತೊನ್ನಿನ ವೇಷತೊಟ್ಟು ಭಿಕ್ಷೆ ಬೇಡುತ್ತಿದ್ದನು. ರಾತ್ರಿಯಾಗುತ್ತಿದ್ದಂತೆ ತನ್ನ ದಿವ್ಯವಾದ ರೂಪ ತೆಳೆದು, ವೇಷ ಭೂಷಿತನಾಗಿ, ಸುಗಂಧ ದೃವ್ಯವನ್ನು ಲೇಪಿಸಿಕೊಂಡು ಹೂವನ್ನು ಮುಡಿದು, ವೇಶ್ಯಯರಿದ್ದಲ್ಲಿಗೆ ಹೋಗುತ್ತಿದ್ದನು.. ಅಲ್ಲಿ ತಾನು ಕದ್ದಿದ್ದನ್ನು ನೀಡಿ ಸುಖ ಅನುಭವಿಸುತ್ತಿದ್ದನು. ಹೀಗೆ ನಗರದ ಎಲ್ಲ ಪ್ರಮುಖರ ಮನೆಯ ಹಣ ಒಡವೆಗಳನ್ನು ಕದ್ದನು. ಒಮ್ಮೆ, ರಾಜನಾದ ವಾಮರಥನಿಗೆ ಹಿಂದಿನಿಂದ ಬಳುವಳಿಯಾಗಿ ಬಂದ ದಿವ್ಯವಾದ ಸರ್ವರುಜಾಪಹಾರವನ್ನು ಅಪಹರಿಸಿದನು. ಅದು ಅರಮನೆಯ ಒಳಗಿನ ಏಳನೇ ಮಹಡಿಯ ಶಯ್ಯಾಗಾರದ ಪೆಟ್ಟಿಗೆಯಲ್ಲಿತ್ತು. ಅಂತದ್ದನ್ನು ವಿದ್ಯುಚ್ಚೋರನು ಅಲ್ಲಿದ್ದವರ ಮೇಲೆ ಅಂಜನವನ್ನು ಎರೆಚಿ ಕದ್ದು ತನ್ನ ಗುಹೆಯಲ್ಲಿ ಇಟ್ಟು ಮುನ್ನಿನಂತೆ ತೊನ್ನನ ರೂಪದಲ್ಲಿ ಇದ್ದನು. ಇತ್ತ ಬೆಳಗಾಗುತ್ತಿದ್ದಂತೆ ರಾಜನು ಪೂಜೆಗೆ ಸಿದ್ಧನಾಗುತ್ತಿದ್ದಂತೆ ಹಾರವನ್ನು ಕಾಣದೆ ತಳಾರನನ್ನು ಕರೆದು, “ ಎಲವೋ ಯಮದಂಡ ಇಷ್ಟುದಿನ ನಗರದ ಬ್ರಾಹ್ಮಣರ, ವ್ಯಾಪಾರಿಗಳ, ವೇಶ್ಯೆಯರ, ಒಕ್ಕಲು ಮಕ್ಕಳ ಒಡವೆ ವಸ್ತುಗಳನ್ನು ಕದ್ದರೂ ಸುಮ್ಮನಿರುವೆ. ಈಗ ನಮ್ಮ ಶಯ್ಯಾಗಾರದಲ್ಲಿದ್ದ ಅಪೂರ್ವವಾದ ಹಾರವನ್ನೇ ಕಳ್ಳನು ಅಪಹರಿಸಿದ್ದಾನೆ. ನೀನು ಅವನನ್ನು ಹುಡುಕಿ ಹಾರವನ್ನು ಒಪ್ಪಿಸು. ಇಲ್ಲದಿದ್ದರೆ ಕಳ್ಳನಿಗೆ ನೀಡುವ ಶಿಕ್ಷೆಯನ್ನು ನಿನಗೆ ಕೊಡಲಾಗುತ್ತದೆ” ಎಂದನು. ಅದಕ್ಕೆ ಯಮದಂಡನು “ಇನ್ನು ಏಳು ದಿವಸದಲ್ಲಿ ಕಳ್ಳನನ್ನು ಹುಡುಕಿ ಹಾರವನ್ನು ಒಪ್ಪಿಸದಿದ್ದರೆ, ನಿಮಗೆ ಇಷ್ಟವಾದಂತೆ ಮಾಡಬಹುದು” ಎಂದು ನಗರದ ಎಲ್ಲ ಕಡೆಯಲ್ಲೂ ಹುಡುಕಿದನು. ಆರು ದಿನಗಳು ಕಳೆದವು. ಏಳನೇ ದಿವಸ ಹಾಳು ದೇಗುಲದಲ್ಲಿದ್ದ ತೊನ್ನನೊಬ್ಬನು ಹಳ್ಳವನ್ನು ದಾಟುವಾಗ ವಿದ್ಯಾಧರ ಶಕ್ತಿಯಿಂದ ಹಾರಿ ಹೋದದನ್ನು ಕಂಡು ಅವನೇ ಕಳ್ಳನೆಂದು ನಿಶ್ಚಯಿಸಿ ಹಿಡಿದು ರಾಜನಿಗೆ ಒಪ್ಪಿಸಿದಾಗ ಆ ತೊನ್ನು ರೂಪದ ಚೋರನು, “ದೇವಾ ನಾನು ಕಳ್ಳನಲ್ಲ. ಈ ನಿಮ್ಮ ತಳಾರನು ಕಳ್ಳನನ್ನು ಹುಡುಕಲಾಗದೇ ನನ್ನನ್ನು ಹಿಡಿದುಕೊಂಡು ಬಂದಿದ್ದಾನೆ” ಎಂದನು. ಆಗ ಯಮದಂಡನು “ಘಟಿಕಾಂಜನವಿದ್ಯೆಯಿಂದ ಅವನು ವೇಷಾಂತರ ಮಾಡುತ್ತಿದ್ದ” ಎಂಬುದನ್ನು ಪ್ರಯೋಗದ ಮೂಲಕ ತೋರಿಸಿಕೊಟ್ಟನು.
“ಹಾಗಿದ್ದರೆ ಇವನನ್ನು ದಂಡಿಸಿ ಒಪ್ಪಿಸು’ ಎಂದು ರಾಜನು ಹೇಳಿದನು.
ಅದೇ ಪ್ರಕಾರ ಯಮದಂಡನು ವಿದ್ಯುಚ್ಚೋರನನ್ನು ತನ್ನ ಮನೆಗೆ ಎಳೆದೊಯ್ದು ಚಳಿಗಾಲದ ಕಡು ಶೀತದಲ್ಲಿ ೩೨ ವಿಧದ ದಂಡನೆಯನ್ನು ನೀಡಿದನು. ಆದರೂ ಚೋರನು ಅದೆಲ್ಲವನ್ನು ಸಹಿಸಿಕೊಂಡು ‘ನಾನು ಕಳ್ಳನಲ್ಲ’ ಎಂದೇ ವಾದಿಸಿದನು. ಇದರಿಂದ ತಳಾರನಿಗೆ “ಇವನು ನಿಜವಾಗಿಯೂ ಚೋರನಲ್ಲದಿನಬೇಕು” ಎಂದೆನಿಸಿ ರಾಜನಿದ್ದಲ್ಲಿಗೆ ಹೋಗಿ ತನ್ನಿಂದಲೇ ತಪ್ಪಾಗಿದೆ ಎಂದು ಹೇಳಿ ತನಗೇ ಶಿಕ್ಷೆ ವಿಧಿಸಬೇಕು ಎಂದು ಕೇಳಿಕೊಂಡನು. ರಾಜನು ಯಮದಂಡನಿಗೆ ಮರಣದಂಡನೆಯನ್ನು ವಿಧಿಸಿದನು. ಸೇವಕರು ಶೂಲಕ್ಕೆ ಹಾಕಲು ಅವನನ್ನು ಒಯ್ದರು. ಆ ಸಮಯದಲ್ಲಿ ವಿದ್ಯುಚ್ಚೋರನು ತನ್ನ ಸ್ವಾಭಾವಿಕ ರೂಪದಲ್ಲಿ ಪ್ರತ್ಯಕ್ಷನಾಗಿ ಮರಣದಂಡನೆಯನ್ನು ತಡೆದು “ಯಮದಂಡ, ನಾನು ನೀನು ಚಿಕ್ಕವರಾಗಿದ್ದಾಗ ಒಂದೇ ಉಪಾಧ್ಯಾಯರಲ್ಲಿ ಓದಿದ್ದೆವು. ಒಮ್ಮೆ ನಾನು ಉದ್ಯಾನದಲ್ಲಿ ಒಂದು ಪ್ರತಿಜ್ಞೆ ಮಾಡಿದ್ದೆ ನೆನಪಿದೆಯಾ. 
‘ಒಂದೂ ದೋಷವಿಲ್ಲದೇ ನಿನ್ನನ್ನು ಕೊಲ್ಲಿಸುತ್ತೇನೆ’ ಎಂದು. “ಹಾಂ ನೆನಪಾಯಿತು” ಎಂದ ಯಮದಂಡ.
“ಸೊತನೀರು ಕುಡಿದೆಯಾ !”
“ಹೌದು ಮಾರಾಯಾ , ನಾನೇ ಸೋತೆ ನೀನು ಗೆದ್ದೆ ಆಂ!!” ಎಂದನು.
ಇವರ ಮಾತನ್ನು ಕೇಳಿದ ಅಲ್ಲಿನ ಸೇವಕರು ಆಶ್ಚರ್ಯಗೊಂಡರು
"ಎಂಥ ಮರಣದಂಡನೆ ಶಿಕ್ಷೆಯವರಿಗೂ ಮೂರು ಮಾತು ಕೇಳುವ ಪದ್ದತಿಯಿದೆ. ಹಾಗೆಯೇ ಇವನನ್ನು ನನ್ನನ್ನು ನಿಮ್ಮ ರಾಜನಿದ್ದಲ್ಲಿಗೆ ಕರೆದೊಯ್ಯಿರಿ" ಎಂದ ವಿದ್ಯಚ್ಚೋರ. ಅಂತೆಯೆ ಅವರು ಅವರಿಬ್ಬರನ್ನು ರಾಜನಲ್ಲಿಗೆ ಒಯ್ದರು. ರಾಜನು ಈ ಇಬ್ಬರ ವಿವರಗಳನ್ನು ಕೇಳಿದನು. ಆಗ ವಿದ್ಯಚ್ಚೋರನು "ನಿಮ್ಮ ಯಮದಂಡನಿದೇನು ತಪ್ಪಿಲ್ಲ. ನಾನೇ ನಿಮ್ಮ ಸರ್ವಾರುಜಾಪಹಾರದ ಜೊತೆ ನಗರದ ಎಲ್ಲರ ಹಣ ಒಡವೆಯನ್ನು ಕದ್ದವನು. ಇದರಲ್ಲಿ ೫೦ ಸಾವಿರ ದೀನಾರನನ್ನು ಸೂಳೆಯರಿಗೆ ವೆಚ್ಚಮಾಡಿದ್ದೇನೆ. ಉಳಿದವು ಮತ್ತು ತಮ್ಮ ಹಾರವನ್ನು ತೆಗೆದುಕೊಳ್ಳಬಹುದು" ಎಂದನು. ರಾಜನು ಪ್ರಜೆಗಳ ವಸ್ತು ಒಡವೆಗಳನ್ನು ಅವರವರಿಗೆ ನೀಡಿದನು. ಅರಸನಿಗೆ ಹಾರವನ್ನು ಮುಟ್ಟಿಸಲಾಯಿತು. ಆಗ ರಾಜನು "ಮಾಘಮಾಸದ ಚಳಿಯ ರಾತ್ರಿಯಲ್ಲಿ ೩೨ ವಿಧದ ಘೋರ ಶಿಕ್ಷೆಯನ್ನು ಹೇಗೆ ಸಹಿಸಿದೆ?" ಎಂದು ವಿದ್ಯುಚ್ಚೋರರನ್ನು ಕೇಳಿದರು. ಅಗ ಅವನು
"ದೇವಾ ನಾನು ಬಾಲ್ಯದಲ್ಲಿ ಸಹಸ್ರಕೋಟ ಚೈತ್ಯಾಲಯಕ್ಕೆ ಹೋಗಿದ್ದನು. ಅಲ್ಲಿ ಗುರುಗಳು ಪುರಾಣಗಳನ್ನು ಹೇಳುತ್ತಿದ್ದರು. ಅದರಲ್ಲಿ ನರಕದ ವರ್ಣನೆಯನ್ನು ಮಾಡುತ್ತಿದ್ದರು. ಯಾವ್ಯಾವ ಪಾಪ ಮಡಿದವರಿಗೆ ಯವ್ಯಾವ ಶಿಕ್ಷೆ ಎಂಬುದನ್ನು ವಿವರವಾಗಿ ವರ್ಣಿಸಿದ್ದರು. ಅದನ್ನು ಕೇಳಿದ ನನಗೆ ಈ ೩೨ ಶಿಕ್ಷೆಗಳು ಕ್ಷುಲ್ಲಕವಾದದ್ದು ಅನ್ನಿಸಿತು. ಅದರ ನೆನಪಿನಲ್ಲಿ ಇದನ್ನು ಸಹಿಸಿದೆ" ಎಂದನು.
ಇದನ್ನು ಕೇಳಿದ ಅರಸನು ಮೆಚ್ಚಿ "ನಿನಗೇನು ಬೇಕು ಕೇಳು ಕೊಡುತ್ತೇನೆ" ಎಂದನು.
"ಯಮದಂಡನ್ನು ಕ್ಷಮಿಸು" ಎಂದನು ವಿದ್ಯುಚ್ಚೋರ
"ಈ ಯಮದಂಡ ನಿನಗೆ ಹೇಗೆ ಗೆಳೆಯನಾದ?" ಎಂದು ಕೇಳಿದನು.
ಆಗ ವಿದ್ಯತಚೋರನು ಎಲ್ಲವನ್ನು ತಿಳಿಸಿದನು.

ಜಂಬೂದ್ವೀಪದ ಭರತ ಕ್ಷೇತ್ರದ ತಿಲಕದಂತಿರುವ ದಕ್ಷಿಣಾಪಥದ ಆಭೀರ ಎಂಬ ನಾಡಿನ ವರ್ಣೆ ಎಂಬ ತೊರೆಯ ದಡದಲ್ಲಿ ವೇಣಾತಟವೆಂಬ ನಗರವಿದೆ. ಸ್ವರ್ಗವನ್ನೆ ಹೋಲುವ ಆ ನಗರವನ್ನು ಜಿತಶತ್ರು ಎಂಬವನು ಆಳುತ್ತಿದ್ದನು. ಅವನ ಮಡದಿ ವಿಜಯಮತಿ. ಇವರಿಬ್ಬರ ಮಗನಾಗಿ ನಾನು ಹುಟ್ಟಿದೆನು. ಈ ನಾಡಿನ ಯಮಪಾಶನೆಂಬ ತಳಾರ ಮತ್ತು ನಿಜಗುಣದೇವತೆ ಎಂಬ ದಂಪತಿಗಳಿಗೆ ಮಗನಾಗಿ ಯಮದಂಡನು ಹುಟ್ಟಿದನು. ನಾವಿಬ್ಬರೂ ೬ ವರ್ಷದವರಾಗಿದ್ದಾಗ ಸಿದ್ದಾರ್ಥ ಎಂಬ ಉಪಾಧ್ಯಾಯರಲ್ಲಿ ಅನೇಕ ವಿಧದ ಶಾಸ್ತೃಗಳನ್ನು ಓದಿದೆವು. ಆದೇ ಗುರುಗಳಲ್ಲಿ ಯಮದಂಡನು ತಳಾರನ ಮಗನಾದ್ದರಿಂದ ಕಳ್ಳರನ್ನು ಹುಡುಕುವ ಸುರಖ ಎಂಬ ಶಾಸ್ತೃವನ್ನು ಕಲಿತನು. ನಾನು ಕದಿಯುವ ಉಪಾಯವನ್ನು ಹೇಳುವ ಕರಪಟ ಶಾಸ್ತ್ರವನ್ನು ಕಲಿತೆನು. ಒಬ್ಬರಲ್ಲೆ ಇಬ್ಬರು ಬೇರೆ ಬೇರೆ ವಿದ್ಯೆ ಕಲಿತೆವು.
ಒಮ್ಮೆ ನಾವಿಬ್ಬರೂ ವನಕ್ರೀಡೆಯಾಡಲು ಹೋದೆವು. ಅಲ್ಲಿ ಉಳಿಸೆಂಡನ್ನು ಅಡುತ್ತಿರುವಾಗ ಅಲೋಕನ ವಿದ್ಯೆ ಕಲಿತ ಯಮದಂಡನು ಮಾಯವಾದನು. ಅವನನ್ನು ಹುಡುಕಿ ಬೇಸತ್ತು ನಾನು ಮುಂದೆ ನೀನು ತಳಾರನಾಗಿರುವಲ್ಲಿಯೆ ಕದ್ದು ನಿನ್ನನ್ನು ಗಲ್ಲಿಗೇರುವಂತೆ ಮಾಡುತ್ತೇನೆಂದು ಪ್ರತಿಜ್ಞೆ ಮಾಡಿದೆನು. ಮಂದೆ ನಾನು ತಂದೆಯು ವಾನಪ್ರಸ್ಥಕ್ಕೆ ಹೋದ ಮೇಲೆ ಅಲ್ಲಿಯ ರಾಜನಾದೆನು. ಯಮದಂಡನು ನನಗೆ ಗೊತ್ತಿಲ್ಲದಂತೆ ಬಂದು ತಮ್ಮ ರಾಜ್ಯದಲ್ಲಿ ತಳಾರನಾದನು. ಅವನು ಇರುವ ಜಾಗವನ್ನು ಹುಡುಕಿದ ನಾನು ವಜ್ರಸೇನನೆಂಬ ಪೆರ್ಗಡೆಯನ್ನು ರಾಜ್ಯವಾಳಲು ನೇಮಿಸಿ ಇಲ್ಲಿಗೆ ಬಂದು ಈ ರೀತಿ ವರ್ತಿಸಿದೆನು" ಎಂದನು.
ವಾಮರಥನು ತನಗೆ ಪಿತ್ರಾರ್ಜಿತವಾಗಿ ಹೇಗೆ ಸರ್ವರುಜಾಪಹಾರ ಎಂಬ ದಿವ್ಯ ಹಾರವು ಬಂತೆಂಬುದನ್ನು ತಿಳಿಸಿದನು.ಅದೆ ಸಮಯದಲ್ಲಿ ವಜ್ರಸೇನ ಕಳಿಸಿದ ದೂತರು ಬಂದು ಓಲೆಯನ್ನು ನೀಡಿದರು. ಇದನ್ನು ರಾಜನು ಸಂಧಿವಿಗ್ರಹಿಗಳ ಮೂಲಕ ಓದಿಸಿದನು. ಇದರಲ್ಲಿ ವಜ್ರಸೇನನು ವಿದ್ಯಚ್ಚೋರರು ಇಲ್ಲದೆ ನಾಡನ್ನು ನೋಡಿಕೊಳ್ಳು ಯಾರು ಇಲ್ಲದಂತಾಗಿದೆ. ಆದ್ದರಿಂದ ಕೂಡಲೇ ಬರಬೇಕೆಂದು ವಿನಂತಿ ಮಾಡಲಾಗಿತ್ತು. ಇದನ್ನು ಕೇಳಿದ ವಾಮರಥನಿಗೆ ಈತ ಹೇಳಿದ್ದು ಸತ್ಯವಾದ ಸಂಗತಿ ಎಂದು ದೃಢವಾಯಿತು. ಅವನಿಗೆ ಉನ್ನತ ಆಸನವನ್ನು ನೀಡಿದನು. "ನೀನು ನನ್ನ ತಂಗಿಯ ಮಗನಾಗುತ್ತೀಯ. ನನಗೆ ಸೊದರಳಿಯ. ಆದ್ದರಿಂದ ನಿನಗೆ ನನ್ನ ಹೆಣ್ಣುಮಕ್ಕಳಾದ ಶ್ರೀಮತಿ, ವಸುಮತಿ, ಗುಣಮತಿ, ಸುಲೋಚನಾ, ಸುಕಾಂತೆ, ಸುಶೀಲ, ಸುಪ್ರಭೆ, ಮನೋಹರಿ ಎಂಬ ಎಂಟು ಮಂದಿಯನ್ನು ಮದುವೆ ಮಾಡಿಕೊಡುತ್ತೇನೆ, ಎಂದು ಹೇಳಿದನು. ಅವರನ್ನು ಮದುವೆಯಾಗಿ ತನ್ನ ರಾಜ್ಯಕ್ಕೆ ಮರಳಿದನು. 
ಯಮದಂಡನನ್ನು ವಾಮರಥನ ಒಪ್ಪಿಗೆಯ ಮೇರೆಗೆ ತನ್ನ ರಾಜ್ಯಕ್ಕೆ ಕರೆತಂದನು. ಹೀಗೆ ವಿದ್ಯುತ್ಚೋರನು ತನ್ನ ರಾಜ್ಯಕ್ಕೆ ಬಂದು ಹಲವು ಕಾಲ ರಾಜ್ಯವಾಳಿ ಸುಖೋಪಭೋಗ ಅನುಭವಿಸಿ ಹೇಸಿ ವಿರಕ್ತನಾಗ ಬಯಸಿದನು. ಮಗನಾದ ವಿದ್ಯುದಂಗನಿಗೆ ರಾಜ್ಯಭಾರವನ್ನು ಒಪ್ಪಿಸಿ ತನ್ನೆಲ್ಲ ಮಡದಿಯರ ಜೊತೆ ವನವಾಸಕ್ಕೆ ಹೋದನು. ಅಲ್ಲಿ ಗುಣಧರನೆಂಬ ಆಚಾರ‍್ಯರಲ್ಲಿ ದೀಕ್ಷೆ ಪಡೆದು ‘ಗಿಡಿ ಗಿಡಿ ಜಂತ್ರಂ ಮಿಳಿ ಮಿಳಿ ನೇತ್ರಂ’ ಆಗಿ ಘೋರ ತಪಸ್ಸನ್ನು ಆಚರಿಸಿದನು.
ಹೀಗೆ ವಿದ್ಯುತ್ಚೋರ ಮುನಿಯೂ ೧೨ ವರ್ಷ ತಪಸ್ಸನ್ನು ಆಚರಿಸಿ ೫೦೦ ಶಿಷ್ಯರ ಜೊತೆ ಗ್ರಾಮ, ನಗರ, ಕೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾ ಮುಖಂಗಳಲ್ಲಿ ವಿಹರಿಸಿ, ಕಾಳಿ ಮಂಡಲ ಎಂಬ ನಾಡಿನ ತಾಮ್ರಲಿಪ್ತಿ ಎಂಬ ನಗರಕ್ಕೆ ಬಂದನು. ಅಲ್ಲಿ ವರಂಗಾಯಿ ಎಂಬ ಉಗ್ರ ದೇವತೆ ಇದ್ದಳು. ಅವಳಿಗೆ ಅದು ಜಾತ್ರ ಸಮಯವಾಗಿತ್ತು. ಆಗ ಅಲ್ಲಿ ಅನೇಕ ವಿಧದ ಬಲಿ ಅರ್ಪಿಸುತ್ತಿದ್ದುರು. ಈ ಸಮಯದಲ್ಲಿ ಅಹಿಂಸಾ ವ್ರತಿಯಾದ ಜೈನ ಮುನಿ ಬರುವುದು ತರವಲ್ಲವೆಂದು ಆ ದೇವತೆ ತಡೆದಳು. ಆಗ ವಿದ್ಯುತ್ಚೋರರು ಅಲ್ಲಿಯ ಕೋಟೆ ಬಾಗಿಲಲ್ಲೆ ಪ್ರತಿಮಾ ಯೋಗದಿಂದ ನಿಂತರು. ಆ ದುರ್ಗಾ ದೇವತೆ ಕೋಪದಿಂದ ಅವನ ದೇಹವನ್ನು ಕಿತ್ತು ತಿನ್ನುವಂತೆ ಮಾಡಿದರೂ ಧರ್ಮ ಧ್ಯಾನವನ್ನು ಧ್ಯಾನಿಸಿದರು. ಇದರಿಂದ ಚೋರ ಮುನಿಗಳಿಗೆ ಮೋಕ್ಷ ಪ್ರಾಪ್ತಿಯಾಯಿತು.
                                                                   (ಕೃಪೆ: kendasampige.com)
**********
 ವಿದ್ಯುಚ್ಚೋರನೆಂಬ ರಿಸಿಯ ಕಥೆ  (ಕೃಪೆ: kanaja.in)
ಮೂಲಗದ್ಯ:- ವಿದ್ಯುಚ್ಚೋರನೆಂಬ ರಿಸಿಯ ಕಥೆಯಂ ಪೇೞ್ವೆಂ :

                   ಗಾಹೆ || ದಂಸೇಹಿಯ ಮಸಕೇಹಿಯ ಖಜ್ಜಂತೋ ವೇದಣಂ ಪರಮಘೋರಂ
                  
ವಿಜ್ಜುಚ್ಚೋರೋ ಅಯಾಸಿಯ ಪಡಿವಣ್ಣೋ ಉತ್ತಮಂ ಅಟ್ಠಂ ||

       ದಂಸೇಹಿಯ – ಚಿಕ್ಕುಟುಗಳಿಂದಂ, ಮಸಕೇಹಿಯ – ಗುಂಗುಱುಗಳಿಂದಂ, ಖಜ್ಜಂತೋ – ತಿನೆಪಡುತಿರ್ದೊನಾಗಿ, ವೇದಣಂ – ವೇದನೆಯಂ, ಪರಮಘೋರಂ – ಆದಮಾನುಂ ಕಂಡಿದಪ್ಪುದಂ, ವಿಜ್ಜುಚ್ಚೋರೋ – ವಿದ್ಯುಚ್ಚೋರನೆಂಬ ರಿಸಿ, ಅಯಾಸಿಯ – ಲೇಸಾಗಿ ಸೈರಿಸಿ, ಪಡಿವಣ್ಣೋ – ಪೊರ್ದಿದೊಂ, ಉತ್ತಮ ಅಟ್ಠಂ – ಮಿಕ್ಕ ದರ್ಶನ ಜ್ಞಾನ ಚಾರಿತ್ರಗಳಾರಾಧನೆಯುಂ

    ಅದೆಂತೆಂದೊಡೆ : ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ವಿದೇಹಮೆಂಬುದು ನಾಡಲ್ಲಿ ಮಿಥಿಳೆಯೆಂಬುದು ಪೊೞಲದನಾಳ್ವೊಂ ಪದ್ಮರಥನೆಂಬೊನರಸನ ಸಂತತಿಯಿಂ ಬಂದ ವಾಮರಥ ನೆಂಬೊನರಸನಾತನ ಮಹಾದೇವಿ ಬಂಧುಮತಿಯೆಂಬೊಳಂತವರ್ಗ್ಗಳಿಷ್ಟವಿಷಯ ಕಾಮಭೋಗಂಗಳನನುಭವಿಸುತ್ತಂ ಪಲಕಾಲಂ ಸಲೆ ಮತ್ತಾ ಪೊೞಲೊಳ್ ಯಮದಂಡನೆಂಬೊಂ ತಳಾಱಂಮತ್ತಲ್ಲಿ ಇರ್ಪ್ಪೊಂ ವಿದ್ಯುಚ್ಚೋರನೆಂಬೊಂ ಕಳ್ಳನಾತಂ ಜೃಂಭಿನಿ ಸ್ತಂಭಿನಿ ಮೋಹಿನಿ ಸರ್ಷಪಿ ತಾಳೋದ್ಟಾಟಿಸಿ ವಿದ್ಯಾಮಂತ್ರಂ ಚೂರ್ಣ ಯೋಗ ಘುಟಕಾಂಜನಮೆಂದಿವು ಮೊದಲಾಗೊಡೆಯ ತಸ್ಕರಶಾಸ್ತ್ರಂಗಳೊಳಾದಮಾನುಂ ಕುಶಲನಂತಪ್ಪ ಕಳ್ಳಂ ಪೊೞಲ ಕಸವರಂಗಳನಿರುಳ್ ಕಳ್ದು ಪೊೞಲ್ಗೆ

ಸರಳಾನುವಾದ:-ವಿದ್ಯುಚ್ಚೋರನೆಂಬ ಋಷಿಯ ಕಥೆಯನ್ನು ಹೇಳುವೆನು : (ವಿದ್ಯುಚ್ಚೋರನೆಂಬ ಋಷಿ ಚಿಗಟ (ಗೊರಜು)ಗಳಿಂದಲೂ ಗುಂಗಾಡಿ ಹುಳು (ದೊಡ್ಡನೊಣ)ಗಳಿಂದಲೂ ಕಚ್ಚಿ ತಿನ್ನಲ್ಪಡುತ್ತಿದ್ದವನಾಗಿ ಅತ್ಯಂತ ಕಠಿನವಾದ ನೋವನ್ನು ಸಹಿಸಿ, ಶ್ರೇಷ್ಠವಾದ ದರ್ಶನ – ಜ್ಞಾನ – ಚಾರಿತ್ರ ಎಂಬ ರತ್ನತ್ರಯದ ಆರಾಧನೆಯನ್ನು ಆಚರಿಸಿದನು) ಅದು ಹೇಗೆಂದರೆ: ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ವಿದೇಹ ಎಂಬ ಹೆಸರುಳ್ಳ ನಾಡು ಇದೆ. ಆ ನಾಡಿನಲ್ಲಿ ಮಿಥಿಳೆ ಎಂಬ ಪಟ್ಟಣವಿದೆ. ಅದನ್ನು ಪದ್ಮರಥನೆಂಬ ಅರಸನ ಸಂತತಿಯಿಂದ ಬಂದ ವಾಮರಥನೆಂಬ ಅರಸನು ಆಳುತ್ತಿದ್ದನು. ಅವನ ರಾಣಿ ಬಂಧುಮತಿ ಎಂಬವಳು. ಅಂತೂ ಅವರು ತಮ್ಮ ತಮ್ಮ ಮೆಚ್ಚಿನ ವಿಷಯದ ಬಯಕೆಯ ಸುಖಗಳನ್ನು ಅನುಭವಿಸುತ್ತ ಹೀಗೆಯೇ ಹಲವು ಕಾಲಕಳೆಯಿತು. ಆ ಪಟ್ಟಣದಲ್ಲಿ ಯಮದಂಡನೆಂಬ ತಳಾರ (ನಗರದ ಕಾವಲುಗಾರ)ನಿದ್ದನು; ಮತ್ತು ವಿದ್ಯುಚ್ಚೋರನೆಂಬ ಕಳ್ಳನೂ ಇದ್ದನು. ಆತನು ಕಳವಿನ ಶಾಸ್ತ್ರಗಳಲ್ಲಿ ಬಹಳ ಪ್ರವೀಣನಾಗಿದ್ದನು. ಜೃಂಭಿನಿ (ಪ್ರತ್ಯಕ್ಷವಾಗುವುದು ಮತ್ತು ಮಾಯವಾಗುವುದು), ಸ್ತಂಭಿನಿ (ಗತಿನಿರೋಧ) ಮೋಹಿನಿ (ಮೂರ್ಛೆಯುಂಟು ಮಾಡುವುದು), ಸರ್ಷಪಿ (ವಿಷಪ್ರಯೋಗ), ತಾಳೋದ್ಘಾಟಿನಿ ವಿದ್ಯಾ (ಬೀಗ ತೆಗೆಯುವ ವಿದ್ಯೆ), ಮಂತ್ರಪ್ರಯೋಗ, ಚೂರ್ಣ (ಪುಡಿ ಎರಚುವುದು) ಯೋಗ (ವಂಚನೆ, ಇಂದ್ರಜಾಲ, ಗುಪ್ತಚಾರತ್ವ – ಮುಂತಾದವು), ಗುಳಿಗೆ, ಅಂಜನ(ಕಣ್ಣಿಗೆ ಹಚ್ಚುವ ಲೇಪನ) – ಎಂದಿವೇ ಮೊದಲಾಗಿ ಉಳ್ಳ ತಸ್ಕರ ವಿದ್ಯೆಗಳನ್ನು ಬಲ್ಲ ಅವನು ರಾತ್ರಿಯಲ್ಲಿ ಕಳವು ಮಾಡುತ್ತಿದ್ದನು. ಆ ಪಟ್ಟಣಕ್ಕೆ ಬಹಳ ದೂರದಲ್ಲಿ ಒಂದು ಪರ್ವತವಿದೆ. ಅಲ್ಲಿ

ಮೂಲಗದ್ಯ:- ನಾಡೆಯಂತರದೊಳೊಂದು ಪರ್ವತಮುಂಟಲ್ಲಿ ಪಿರಿದೊಂದು ಗುಹೆಯುಂಟದಱೊಳಗೆ ಕಳ್ದ ಕಸವರಂಗಳೆಲ್ಲಮಂ ಪೊೞಟ್ಟು ಗುಹೆಯ ಬಾಗಿಲಂ ಪಿರಿದೊಂದು ಸಿಲೆಯಂ ತಂದಿಟ್ಟು ಮುಚ್ಚಿ ಬಂದು ಪಗಲೆಲ್ಲಂ ಪಾೞ್ದೇಗುಲದೊಳಂಜನಮನೆಚ್ಚಿ ತಾಂ ತೊನ್ನನಾಗಿ ಮುರುಂಟಿದ ಕೈಯುಂ ಕಾಲುಂ ಬೆರಸು ಮೂಗೊಳಗರ್ದು ರಸಿಗೆ ಸುರಿಯೆ ನೊೞವುಗಳ್ ಮುಸುಱೆಕೊಂಡು ತಿನೆ ಪೇಸಿದನಾಗಿ ಲೋಗರ ಮನೆಗಳೊಳ್ ಭೈಕ್ಷಮಂ ಬೇಡಿ ಮನೆಮನೆಯಂ ತೊೞಲ್ದು ತನ್ನ ತೊನ್ನುಗೊಂಡಿರ್ಪುದನಱೆಪುತ್ತುಮಿಂತು ಪಗಲೆಲ್ಲಮಿರ್ದಿರುಳಪ್ಪಾಗಳ್ ದಿವ್ಯಮಪ್ಪ ತನ್ನ ಸ್ವಾಭಾವಿಕಮಪ್ಪ ಮುನ್ನಿನ ರೂಪಂ ಕೈಕೊಂಡು ಪುಟ್ಟಿಗೆಯನುಟ್ಟು ಮೆಯ್ಯಂ ಪೂಸಿ ಪೂವಂ ಮುಡಿದು ಕರ್ಪೂರ ಸಮ್ಮಿಶ್ರಿತಮಪ್ಪ ತಂಬುಲಂದಿನುತ್ತುಂ ಸೂಳೆಗೇರಿಗಳಂ ತೊೞಲ್ದು ತನ್ನಂ ಮೆಱೆಯುತ್ತಂ ಮನಕ್ಕೆವಂದಗ್ಗಳದೊಳ್ಪೆಂಡಿರೊಳೊತ್ತೆಯನಿಟ್ಟು ಭೋಗೋಪಭೋಗಂಗಳ್ಗೆ ಕಸವರಮಂ ಕೊಟ್ಟನುಭವಿಸುತ್ತಮಾರುಮಱಯದಂತಿರ್ದು ಬಚ್ಚರ ದೂಸಿಗರ ನಿಯೋಗಿಗಳ ಅಗ್ಗಯಿಲೆಯರಪ್ಪ ಸೂಳೆಯರ ಸಾಮಂತರ ಕಸವರಂಗಳೆಲ್ಲಮಂ ಕಳ್ದು ಮತ್ತೊಂದು ದಿವಸಂ ಪದ್ಮರಥಮ್ಗೊಸೆದಚ್ಯುತೇಂದ್ರನಟ್ಟಿದ ದಿವ್ಯಮಪ್ಪ ಸರ್ವರುಜಾಪಹಾರಮೆಂಬ ಹಾರುಂ ಸಂತತಿಯಂ ವಾಮರಥಂಗೆ ಬಂದುದಂ ವಾಮರಥಂ ಕರುಮಾಡದೇೞನೆಯ ನೆಲೆಯೊಳ್ ತನ್ನ ಲುಂದು

ಸರಳಾನುವಾದ:- ದೊಡ್ಡದಾದ ಒಂದು ಗುಹೆಯಿದೆ. ವಿದ್ಯುಚ್ಚೋರನು ಕಳವು ಮಾಡಿದ ಹೊನ್ನುಗಳನ್ನೆಲ್ಲ ಆ ಗುಹೆಯೊಳಗೆ ಹೂಳಿಟ್ಟು ಗುಹೆಯ ಬಾಗಿಲನ್ನು ದೊಡ್ಡದಾದ ಒಂದು ಬಂಡೆ ಕಲ್ಲು ತಂದು ಇಟ್ಟು ಮುಚ್ಚಿ ಬಂದು ಹಗಲೆಲ್ಲಾ ಹಾಳು ದೇವಾಲಯದಲ್ಲಿ ಅಂಜನ ಹಚ್ಚಿ ತಾನು ತೊನ್ನುರೋಗದವನಾಗಿ ಕಾಣಿಸಿಕೊಳ್ಳುತ್ತಿದ್ದನು. ಮುದುಡಿದ ಕೈಕಾಲುಗಳುಳ್ಳವನಾಗಿ, ಮೂಗು ಒಳಕ್ಕೆ ಕುಸಿದು ಕೀವು ಸುರಿಯುತ್ತಿರಲು ನೊಣಗಳು ಕವಿದುಕೊಂಡು ತಿನ್ನುತ್ತಿರಲು ಅಸಹ್ಯ ಪಟ್ಟುಕೊಂಡ ಜನರ ಮನೆಗಳಿಗೆ ಹೋಗಿ ಭಿಕ್ಷೆಯನ್ನು ಬೇಡುತ್ತಿದ್ದನು. ಮನೆಮನೆಗಳಿಗೆ ಸುತ್ತಾಡುತ್ತ ತನಗೆ ತೊನ್ನುರೋಗ ಬಂದಿರುವುದನ್ನು ತಿಳಿಸುತ್ತ ಹೀಗೆ ಹಗಲೆಲ್ಲಾ ಇರುತ್ತಿದ್ದನು. ರಾತ್ರಿಯಾಗುವ ವೇಳೆಗೆ ದಿವ್ಯವಾದ ತನ್ನ ಸ್ವಾಭಾವಿಕ ವಾದ ಹಿಂದಿನ ರೂಪವನ್ನು ಧರಿಸುತ್ತಿದ್ದನು. ವಸ್ತ್ರವನ್ನುಟ್ಟು, ಮೈಗೆ ಸುಗಂಧಲೇಪನವನ್ನು ಮಾಡಿ, ಹೂವನ್ನು ಮುಡಿದು ಕರ್ಪೂರದಿಂದ ಬೆರಕೆಯಾದ ತಾಂಬೂಲವನ್ನು ತಿನ್ನುತ್ತ ಸೂಳೆಯರ ಬೀದಿಗಳಲ್ಲಿ ಸುತ್ತಾಡಿ, ತನ್ನನ್ನು ಮೆರೆಯಿಸುತ್ತ ತನ್ನಮನಸ್ಸಿಗೆ ಬಂದ ಶ್ರೇಷ್ಠರಾದ ಒಳ್ಳೆಯ ಹೆಂಗುಸರಲ್ಲಿ ಮುಂಗಡವಾಗಿ ದ್ರವ್ಯವನ್ನು ಕೊಟ್ಟು, ವಿಧವಿಧವಾದ ಸುಖಭೋಗಗಳಿಗಾಗಿ ಹೊನ್ನನ್ನು ಕೊಟ್ಟು ಸುಖವನ್ನು ಅನುಭವಿಸುತ್ತ ಯಾರೂ ತಿಳಿಯದ ಹಾಗೆ ಇದ್ದನು. ವೈಶ್ಯರು, ಬಟ್ಟೆಯ ವ್ಯಾಪಾರಿಗಳು, ಅಕಾರಿಗಳು, ಹೆಚ್ಚು ಹಣ ತೆಗೆದುಕೊಳ್ಳುವವರಾದ ಸೂಳೆಯರು, ಸಾಮಂತರು – ಇವರ ದ್ರವ್ಯಗಳನ್ನೆಲ್ಲ ಕದ್ದುಕೊಂಡನು. ಮತ್ತೊಂದು ದಿವಸ ಅಚ್ಯುತೇಂದ್ರನು ಪದ್ಮರಥನಿಗೆ ಪ್ರೀತಿಯಿಂದ ಕಳುಹಿಸಿದ ದಿವ್ಯವಾಗಿರತಕ್ಕ ‘ಸರ್ವರುಜಾಪಹಾರ* (ಎಲ್ಲ ರೋಗಗಳನ್ನೂ ನಾಶಮಾಡುವಂಥದು) ಎಂಬ ಹೆಸರುಳ್ಳ ಮತ್ತು ವಂಶಪರಂಪರೆಯಿಂದ ವಾಮರಥನಿಗೆ ಬಂದಿದ್ದ ಮಾಲೆಯನ್ನು ವಾಮರಥನು ತನ್ನ ಅರಮನೆಯ ಏಳನೆಯ ಉಪ್ಪರಿಗೆಯ ನೆಲೆಯಲ್ಲಿ ತಾನು ಮಲಗುವ ಕೊಠಡಿಯಲ್ಲಿ

ಮೂಲಗದ್ಯ:- ವೋವರಿಗೆಯ ಪುಡಿಕೆಯೊಳಿಟ್ಟೆಲ್ಲಾಕಾಲಮುಂ ಗಂಧ ಪುಷ್ಪ ದೀಪ ಧೂಪಾಕ್ಷತಂಗಳಿಂದರ್ಚಿಸುತ್ತುಂ ಪೊಡೆಮಡುತ್ತಮಿರ್ಕ್ಕುಮಿಂತಪ್ಪ ಹಾರಮಂ ವಿದ್ಯುಚ್ಚೋರನಂಜನಮಂ ಕಣ್ಣೊಳೆಚ್ಚಿ ಯಾರುಂ ತನ್ನಂ ಕಾಣದಂತಾಗಿರೆ ಅರಮನೆಯಂ ಪೊಕ್ಕರಸನ ಮಱಲುಂದುವೋವರಿಯಂ ಪೊಕ್ಕು ತಲೆ ದೆಸೆಯೊಳರ್ಚಿಸಿರ್ದ ಪುಡಿಕೆಯಂ ತೆಱೆದು ಹಾರಮಂ ಕೊಂಡರಮನೆಯಿಂ ಪೊಱಮಟ್ಟು ಪೋಗಿ ಪೊಱವೊೞಲ ಗುಹೆಯೊಳ್ ಪೂೞಟ್ಟು ಪೊೞಲ್ಗೆವಂದು ಮುನ್ನಿನಂತೆ ತೊನ್ನರೂಪಂ ಕೈಕೊಂಡಿರ್ದಂ ಮತ್ತಿತ್ತರಸಂ ನೇಸರ್ಮೂಡೆ ಹಾರಮಂ ಕಾಣದೆ ಆಸ್ಥಾನ ಮಂಟಪದೊಳ್ ಸಿಂಹಾಸನ ಮಸ್ತಕಸ್ಥಿತನಾಗಿರ್ದು ತಳಾಱನಪ್ಪ ಯಮದಂಡಂಗೆ ಬೞಯಟ್ಟಿವರಿಸಿ ಇಂತೆಂದನೆಲವೋ ಯಮದಂಡಾ ಪೊೞಲ ಪಾರ್ವರ ಪರದರ ಸೂಳೆಯರ ಒಕ್ಕಲ ಮಕ್ಕಳ ಕಸವರಮೆಲ್ಲಮಂ ಕಳ್ದೊಡಮಾರಯ್ಯದೆ ಕೆಮ್ಮಗಿರ್ಪೆಯಲ್ಲದೆಯುಮೆಮ್ಮ ಸೆಜ್ಜೆಯೋವರಿಯಂ ಕಳ್ಳಂ ಪೊಕ್ಕು ಪುಡಿಕೆಯಂ ತೆಱೆದಚ್ಯುತೇಂದ್ರನಿತ್ತ ಕುಲಧನಮಪ್ಪ ಹಾರಮಂ ಕೊಂಡು ಪೋದುಂ ಕಳ್ಳನನಾರಯ್ದು ಹಾರಮಂ ಕೊಂಡು ಬಾ ಅಲ್ಲದಾಗಳ್ ಕಳ್ಳಂಗೆ ತಕ್ಕ ನಿಗ್ರಹಮಂ ನಿನಗೆ ಮಾಡಿದಪ್ಪೆನೆಂದೊಡೆ ತಳಾಱನೆಂದಂ ದೇವಾ ಏಱುದಿವಸಮೆನಗೆಡೆಯನೀವುದೇಱುದಿವಸದಿಂದೊಳಗೆ ಕಳ್ಳನನಾರಯ್ಯಲಾಱದಾಗಳ್ ದೇವರೆನ್ನಂ ಮೆಚ್ಚುಕೆಯ್ವುದೆಂದೊಡರಸನೆಂತೆಯ್ಯೆಂದೊಡರಮನೆಯಿಂದಂ ಪೊಱಮಟ್ಟು ಪೊೞಲೊಳಗೆ

 ಸರಳಾನುವಾದ:ಪೆಟ್ಟಿಗೆಯಲ್ಲಟ್ಟು ಎಲ್ಲಾ ಕಾಲದಲ್ಲಿಯೂ ಗಂಧ – ಪುಷ್ಪ – ದೀಪ – ಧೂಪ – ಅಕ್ಷತೆಗಳಿಂದ ಪೂಜಿಸುತ್ತ ಸಾಷ್ಟಾಂಗ ವಂದಿಸುತ್ತ ಇರುತ್ತಿದ್ದನು. ಹೀಗಿರತಕ್ಕ ಮಾಲೆಯನ್ನು ವಿದ್ಯಚ್ಚೋರನು ಕದ್ದನು. ಅವನು ತನ್ನ ಕಣ್ಣಿಗೆ ಅಂಜನ ಹಚ್ಚಿ ಯಾರೂ ತನ್ನನ್ನು ಕಾಣದ ಹಾಗೆ ಅರಮನೆಯನ್ನು ಹೊಕ್ಕು ಅರಸನು ನಿದ್ರಿಸುವ ಕೊಠಡಿಯನ್ನು ಹೊಕ್ಕು, ಅವನ ತಲೆಯ ಕಡೆ ಪೂಹೆಮಾಡಿದ್ದ ಪೆಟ್ಟಿಗೆಯನ್ನು ತೆರೆದು ಹಾರವನ್ನು ತೆಗೆದುಕೊಂಡು ಅರಮನೆಯಿಂದ ಹೊರಟು ಹೋಗಿ ಪಟ್ಟಣದ ಹೊರಗಿನ ಗುಹೆಯಲ್ಲಿ ಹೂಳಿಟ್ಟು ಪಟ್ಟಣಕ್ಕೆ ಬಂದು ಹಿಂದಿನ ರೀತಿಯಲ್ಲಿ ತೊನ್ನು ರೋಗಿಯ ರೂಪವನ್ನು ತಾಳಿಕೊಂಡಿದ್ದನು. ಆಮೇಲೆ ಇತ್ತ ರಾಜ ವಾಮರಥನು ಸೂರ್ಯನುದಯಿಸುವ ವೇಳೆಗೆ ಮಾಲೆಯನ್ನು ಕಾಣದೆ ಆಸ್ಥಾನಮಂಟಪಕ್ಕೆ ಬಂದು ಸಿಂಹಾಸನದ ಮೇಲೆ ಕುಳಿತನು. ನಗರದ ಕಾವಲುಗಾರನಾದ ಯಮದಂಡನ ಬಳಿಗೆ ದೂತನನ್ನು ಕಳುಹಿಸಿ ಅವನನ್ನು ಬರಮಾಡಿ ಅವನೊಡನೆ ಹೀಗೆಂದನು – “ಎಲ್ಲವೋ ಯಮದಂಡಾ, ನಮ್ಮ ಪಟ್ಟಣದ ಬ್ರಾಹ್ಮಣರು, ವರ್ತಕರು, ವೇಶೈಯರು, ಒಕ್ಕಲಿನವರು ಮಕ್ಕಳು – ಮುಂತಾದವರ ಹೊನ್ನನ್ನೆಲ್ಲ ಕದ್ದರೂ ನೀನು ವಿಚಾರಿಸದೆ ಸುಮ್ಮನಿರುವೆಯಲ್ಲ! ನನ್ನ ಮಲಗುವ ಮನೆಯ ಕೊಠಡಿಯನ್ನು ಕಳ್ಳನು ನುಗ್ಗಿ ಪೆಟ್ಟಿಗೆ ತೆರೆದು, ಅಚ್ಯುತೇಂದ್ರನು ಕೊಟ್ಟ ಕುಲಧನವಾಗಿರುವ ಮಾಲೆಯನ್ನು ಕೊಂಡುಹೋಗಿದ್ದಾನೆ. ಕಳ್ಳನನ್ನು ಕಂಡುಹಿಡಿದು ಮಾಲೆಯನ್ನು ತೆಗೆದುಕೊಂಡು ಬಾ, ಅದಲ್ಲವಾದರೆ, ಕಳ್ಳನಿಗೆ ತಕ್ಕುದಾದ ದಂಡನೆಯನ್ನು ನಿನಗೆ ಮಾಡುತ್ತೇನೆ." ಹೀಗೆ ರಾಜನು ಹೇಳಿದಾಗ, ಯಮದಂಡನು – “ಪ್ರಭುವೇ, ನನಗೆ ಏಳುದಿವಸದ ಸಮಯವನ್ನು ಕೊಡಬೇಕು. ಏಳುದಿವಸದೊಳಗಾಗಿ ಕಳ್ಳನನ್ನು ಕಂಡುಹಿಡಿಯಲು ಸಾಧ್ಯವಾಗದೆ ಹೋದರೆ, ಪ್ರಭುಗಳು ನನ್ನ ಏನು ಬೇಕೋ ಹಾಗೆ ಮಾಡಬಹುದು" ಎಂದನು. ಅದಕ್ಕೆ ರಾಜನು ‘ಹಾಗೆಯೇ ಮಾಡು’ ಎಂದನು. ಯಮದಂಡನು ಅರಮನೆಯಿಂದ ಹೊರಟು ಪಟ್ಟಣದಲ್ಲಿ ಸೂಳೆಯರ ಬೀದಿಗಳಲ್ಲಿಯೂ

ಮೂಲಗದ್ಯ:- ಸೂಳೆಗೇರಿಗಳೊಳಮಂಗಡಿಗಳೊಳಂ ಬಸದಿಗಳೊಳಂ ವಿಹಾರಂಗಳೊಳಂ ಕೇರಿಗಳೊಳಮಾರಮೆಗಳೊಳಂ ದೇವಾಲಯಂಗಳೊಳಂ ಪೊಱವೊೞಲೊಳಂ ಕೆಲದ ಪೊೞಲ್ಗಳೊಳಮಾಱುಂ ದಿವಸಂ ನಿರಂತರಮಾರಯ್ದೆಲ್ಲಿಯುಂ ಕಾಣದೇೞನೆಯ ದಿವಸದಂದು ಪಾೞ್ದೇಗುಲದೊಳಿರ್ದು ತೊನ್ನಂ ಪೋಪಾಗಳಳಿಱುವಳ್ಳಮಂ ಕಂಡದಂ ವಿದ್ಯಾಧರಕರಣದಿಂ ಲಂಘಿಸಿ ಪೋಪುದಂ ಯಮದಂಡಂ ಗೆಂಟಱೊಳಿರ್ದು ಕಂಡಿವನೆ ಕಳ್ಳನೆಂದು ನಿಶ್ಚಯಿಸಿ ಪಿಡಿದರಮನೆಗೆ ಪುಯ್ಯಲಿಡೆಯಿಡೆ ಕೊಂಡುಪೋಗಿಯರಸಮಗೆ ಕಳ್ಳನಂ ತಂದೆನೆಂದು ತೋಱ ಈತಂ ಕಳ್ಳನೆಂದರಸಂಗೆ ವೇೞ್ದೊಡೆ ತೊನ್ನನಿಂತೆಂದಂ ದೇವಾ ನಾಂ ಕಳ್ಳನಲ್ಲದುದರ್ಕ್ಕೆ ಪೊೞಲೆಲ್ಲಮಱಗುಂ ಕಳ್ಳನನಾರಯ್ಯಲಾಱದೆನ್ನಂ ತನ್ನ ಸಾವಿಂಗಂಜಿ ಬಡವನಂ ದೇಸಿಗನಂ ಪೊೞಲೊಳ್ ಬೈಕಂದಿರಿದುಂಡು ಬಾೞ್ವನಂ ಪಿಡಿದು ಕೊಂಡು ಬಂದು ಕೊಲಿಸಿದಪ್ಪನೆಂದೊಡೆ ತಳಾಱಂ ಕಳ್ಳರನಾರಯ್ವ ಶಾಸ್ತ್ರಂಗಳೊಳಾದಮಾನುಂ ಕುಶಲನಪ್ಪುದಱಂದರಸಂಗಿಂತೆಂದನೀತಂ ತನ್ನ ರೂಪುಗರೆದಿರುಳ್ ಪೊೞಲೆಲ್ಲಮಂ ಕಳ್ನು ದಿವಸಕ್ಕೀ ಪಾಂಗಿನೊಳ್ ತೊನ್ನನಾಗಿರ್ಪೊಂ ನೀಮುಂ ನಂಬದಾಗಳ್ ಪ್ರತ್ಯಯಮಂ ಮಾಡಿ ತೋರ್ಪೆನೆಂದಾಗಳ್ ಪ್ರತಿಘುಟಿಕಾಂಜಂಗಳಂ ತೊನ್ನನ ಕಣ್ಣಿನೊಳೆಚ್ಚಿದೊಡೆ ದಿವ್ಯಮಪ್ಪ ತನ್ನ ಮುನ್ನಿನ ರೂಪಾಗಿರ್ದಿಂತೆಂದನೀತಂ ಘುಟಕಾಂಜನ ಕುಹಕಂ ಇಂದ್ರಜಾಲಂಗಳಂ ಬಲ್ಲೊನಪ್ಪುದಱಂದೆಲ್ಲಾ

ಸರಳಾನುವಾದ:- ಅಂಗಡಿಗಳಲ್ಲಿಯೂ ಜಿನಾಲಯಗಳಲ್ಲಿಯೂ ವಿನೋದವಾಟಿಕೆಗಳಲ್ಲಿಯೂ ಬೀದಿಗಳಲ್ಲಿಯೂ ಉದ್ಯಾನಗಳಲ್ಲಿಯೂ ದೇವಾಲಯಗಳಲ್ಲಿಯೂ ಪಟ್ಟಣದ ಹೊರಗಡೆಯಲ್ಲಿಯೂ ಅಕ್ಕಪಕ್ಕದ ಪಟ್ಟಣಗಳಲ್ಲಿಯೂ ಆರುದಿವಸ ಎಡಿಬಿಡದೆ ವಿಚಾರಿಸಿದರೂ ಎಲ್ಲಿಯೂ ಕಾಣಲಿಲ್ಲ. ಏಳನೆಯ ದಿವಸದಂದು ಹಾಳು ದೇವಾಲಯದಲ್ಲಿದ್ದು ತೊನ್ನನು ಹೋಗುವಾಗ ಕೆಸರಿನ ಹಳ್ಳವನ್ನು ಕಂಡು ವಿದ್ಯಾಧರರು ವಿದ್ಯಾಬಲದಿಂದ ಹಾರಿ, ದಾಟಿ ಹೋಗುವುದನ್ನು ಯಮದಂಡನು ದೂರದಲ್ಲಿದ್ದು ಕಂಡನು. ‘ಇವನೇ ಕಳ್ಳನು’ ಎಂದು ನಿರ್ಣಯಿಸಿ ಅವನನ್ನು ಹಿಡಿದನು. ಕಳ್ಳನು ಕೂಗಿಕೊಳ್ಳುತ್ತದ್ದಂತೆಯೇ ಅವನನ್ನು ಅರಮನೆಗೆ ಕೊಂಡುಹೋಗಿ ‘ಕಳ್ಳನನ್ನು ತಂದೆನು’ ಎಂದು ಅರಸನಿಗೆ ತೋರಿಸಿ ‘ಈತನು ಕಳ್ಳನು* ಎಂದು ಅರಸನಿಗೆ ಹೇಳಿದನು. ಆಗ ತೊನ್ನನು ಹೀಗೆಂದನು – “ದೇವಾ, ನಾನು ಕಳ್ಳನಲ್ಲ ಎಂಬುದನ್ನು ಈ ಪಟ್ಟಣವೆಲ್ಲವೂ ತಿಳಿದಿದೆ. ಈ ತಳಾರನು ಕಳ್ಳನನ್ನು ಕಂಡುಹಿಡಿಯಲು ಅಸಮರ್ಥನಾಗಿ, ತನ್ನ ಸಾವಿಗೆ ಹೆದರಿ, ಬಡವನೂ ದಿಕ್ಕಿಲ್ಲದವನೂ ಪಟ್ಟಣದಲ್ಲಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಂಡು ಜೀವಿಸುತ್ತಿರುವವನೂ ಅದ ನನ್ನನ್ನು ಹಿಡಿದುಕೊಂಡು ಬಂದು ಕೊಲ್ಲಿಸುತ್ತಿದ್ದಾನೆ*. ಹೀಗೆನ್ನಲು, ತಳಾರನು ಕಳ್ಳರನ್ನು ಕಂಡುಹಿಡಿವ ಶಾಸ್ತ್ರಗಳಲ್ಲಿ ಬಹು ಪ್ರವೀಣನಾಗಿರುವುದರಿಂದ ರಾಜನಿಗೆ ಹೀಗೆಂದನು – “ಈತನು ತನ್ನ ರೂಪವನ್ನು ಮರೆಮಾಡಿ ರಾತ್ರಿಯವೇಳೆ ಪಟ್ಟಣದಲ್ಲೆಲ್ಲ ಕಳವು ಮಾಡಿ ಹಗಲಿನ ವೇಳೆ ಈ ರೀತಿಯಲ್ಲಿ ತೊನ್ನನಂತೆ ಕಾಣಿಸುತ್ತಿರುವನು. ನೀವು ನಂಬುವುದಿಲ್ಲವಾದರೆ ನಂಬಿಕೆ ಬರುವಂತೆ ಮಾಡಿ ತೋರಿಸುವೆನು.* ಹೀಗೆ ಹೇಳಿ ಯಮದಂಡನು ಆಗಲೇ ವಿರುದ್ದವಾದ ಗುಳಿಗೆ ಕಾಡಿಗೆಗಳನ್ನು ತೊನ್ನಿನ ಕಣ್ಣಿಗೆ ಹಚ್ಚಿದನು. ಆಗ ದಿವ್ಯವಾದ ತನ್ನ ಹಿಂದಿನ ರೂಪಗೊಂಡು – “ಈತನು ಗುಳಿಗೆ ಅಂಜನಗಳ ಕಪಟವನ್ನೂ ಇಂದ್ರಾಜಾಲವನ್ನೂ ಬಲ್ಲವನಾಗಿರುವುದರಿಂದ 

ಮೂಲಗದ್ಯ:- ಯಾವ ರೂಪುಗಳಂ ಮಾಡಲ್ ಬಲ್ಲೊನೆಂದೊಡೆ ತಳಾಱನೆಂದಂ ಪೆಱರ್ಗ್ಗೆ ಮಾಡೀ ಪ್ರತ್ಯಯಮಂ ತೋರ್ಪೆನೆಂದರಸನನುಮತದಿಂದರಸಿಯರ ಸೂಳೆಯರ ಕಣ್ಗಳೊಳ್ ಘುಟಿಕಾಂಜನಂಗಳನೆಚ್ಚಿದೊಡ ನಿಬರುಂ ತೊನ್ನೆಯರಾಗಿರ್ಪ್ಪನ್ನೆಗಂ ಮತ್ತಂ ಬೞಕ್ಕೆ ಪ್ರತಿಘುಟಿಕಾಂಜನಂಗಳನೆಚ್ಚಿದೊಡೆ ಸ್ವಾಭಾವಿಕಮಪ್ಪ ತಮ್ಮ ಮುನ್ನಿನ ರೂಪುಗಳಂ ಕೈಕೊಂಡಿರ್ದ್ದೊರಾಗಳರಸಂಗೆ ನಂಬುಕೆಯಾಗಿ ನೆಟ್ಟನಿವಂ ಕಳ್ಳನಪ್ಪೊನೀತನಂ ದಂಡಿಸೆಂದು ಯಮದಂಡಂಗೆ ಬೆಸವೇೞ್ದೊಡಾತನಂತೆ ಗೆಯ್ಯೆನೆಂದಾತನಂ ತನ್ನ ಮನೆಗೊಡಗೊಂಡು ಪೋಗಿ ಮಾಘಮಾಸದಿರುಳ್ ಕಡುಸೀತದೊಳ್ ಘೋರಮಪ್ಪ ಮೂವತ್ತೆರಡು ದಂಡಣೆಗಳಿಂ ನೀಡುಂ ದಂಡಿಸೆಯನಿತುಮಂ ಬಾೞೆವಾೞೆ ಅವಯವದೆ ಸೈರಿಸಿಯುಂ ಕಳ್ಳನಲ್ಲೆನಯ್ಯೊ ಬಲ್ಲಾಳ್ತನದಿಂದೆನ್ನಂ ತಳಾಱಂ ಕೊಂದಪ್ಪನೆಂದೊಳಱ ಪುಯ್ಯಲಿಡೆ ತಳಾಱಂಗೆ ಕಳ್ಳನೀತಲ್ಲೆಂಬುದೊಂದು ನಂಬುಗೆಯಾಗಿ ನೇಸಱ್ ಮೂಡೆಯರಮನೆಗೆ ಪೋಗಿ ಅರಸಂಗಿಂತೆಂದು ಬಿನ್ನಪಂಗೆಯ್ದುಂ ದೇವಾ ಮೂವತ್ತೆರಡು ಘೋರಮಪ್ಪ ದಂಡಣೆಗಳಿಂದಂ ಶ್ಮಶಾನದ ಸೂಲದೊಳ್ ಯಮದಂಡನ ನಿಕ್ಕಿಮೆಂದಾಳ್ಗಳ್ಗೆ ಬೆಸವೇೞ್ದೊಡವರುಮಾತನಂ ಶ್ವಶಾನಕ್ಕೆೞೆದುಕೊಂಡು ಪೋಗಿ ದರ್ಕ್ಕಂ ಬಸಿದು
ಸರಳಾನುವಾದ:- ಯಾವ ರೂಪವನ್ನು ಬೇಕಾದರೂ ಮಾಡಬಲ್ಲನು* ಎಂದನು. ಆಗ ತಳಾರನು – “ಇದನ್ನು ನಾನು ಬೇರೆಯವರಿಗೆ ಮಾಡಿ ನಂಬಿಕೆಯುಂಟುಮಾಡುವೆನು* ಎಂದು ಹೇಳೀ ರಾಜನ ಒಪ್ಪಿಗೆಯಿಂದ ರಾಣಿಯರ ಮತ್ತು ಸೇವಕಿಯರ ಕಣ್ಣುಗಳಿಗೆ ಗುಳಿಗೆ ಅಂಜನಗಳನ್ನು ಹಚ್ಚಿದನು. ಆಗ ಅವರೆಲ್ಲರೂ ತೊನ್ನುರೋಗದವರಾಗಿ ಕಾಣಿಸಿದರು. ಹೀಗಿರಲು, ಮತ್ತೆ ವಿರುದ್ದದ ಗುಳಿಗೆ ಆಂಜನಗಳನ್ನು ಹಚ್ಚಿದಾಗ ಸಹಜವಾದ ತಮ್ಮ ಹಿಂದಿನ ರೂಪಗಳನ್ನು ತಾಳಿದವರಾಗಿದ್ದರು. ಆಗ ರಾಜನಿಗೆ ನಂಬುಗೆಯಾಯಿತು. “ಇವನು ಸ್ಪಷ್ಟವಾಗಿ ಕಳ್ಳನಾಗಿರುತ್ತಾನೆ. ಇವನನ್ನು ದಂಡಿಸು* ಎಂದು ರಾಜನು ಯಮದಂಡನಿಗೆ ಆಜ್ಞೆಮಾಡಿದನು. ತಳಾರನು ‘ಹಾಗೆಯೇ ಮಾಡುವೆನು’ ಎಂದು ವಿದ್ಯುಚ್ಚೋರನನ್ನು ತನ್ನ ಮನೆಗೆ ಕರೆದುಕೊಂಡು ಹೋದನು. ಮಾಘಮಾಸದ ಚಳಿಯಳ್ಳ ರಾತ್ರಿಯಲ್ಲಿ ಕಡುತಂಪಿನಲ್ಲಿ ಭಯಂಕರವಾದ ಮೂವತ್ತೆರಡು ವಿಧದ ಶಿಕ್ಷೆಗಳಿಂದ ಅತಿಶಯವಾಗಿ ದಂಡಿಸಿದನು. ಕಳ್ಳನು ಅವೆಲ್ಲವನ್ನೂ ಜೀವಿಸುತ್ತಿದ್ದಂತೆಯೇ ಸುಲಭವಾಗಿ ಸಹಿಸಿಕೊಂಡು – ಅಯ್ಯೋ, ನಾನು ಕಳ್ಳನಲ್ಲದವನಾಗಿರುವೆನು. ತಳಾರನು ನನ್ನನ್ನು ತನ್ನ ಬಲದರ್ಪದಿಂದ ಕೊಲ್ಲುತ್ತಿದ್ದಾನೆ !* ಎಂದು ಕೂಗಿ ಬೊಬ್ಬಿಡುತ್ತಿದ್ದನು. ಇದರಿಂದ ಈತನು ಕಳ್ಳನಲ್ಲವೆಂದು ತಳಾರನಿಗೆ ನಂಬಿಕೆಯುಂಟಾಗಿ ಸೂರ್ಯೋದಯವಾದೊಡನೆ ಅರಮನೆಗೆ ಹೋಗಿ ಅರಸನಿಗೆ ಹೀಗೆ ಬಿನ್ನವಿಸಿದನು – ‘ದೇವಾ, ನಾನು ಕಳ್ಳನನ್ನು ಮೂವತ್ತೆರಡು ಬಗೆಯ ಉಗ್ರಶಿಕ್ಷೆಗಳಿಂದ ದಂಡಿಸಿ ನೋಡಿದೆನು. ಆತನು ನಿಶ್ಸಯವಾಗಿಯೂ ಕಳ್ಳನಲ್ಲ. ಪ್ರಭುವು ನನ್ನನ್ನು ಬೇಕಾದಂತೆ ಮಾಡಬಹುದು’ ಎಂದನು. ಆಗ ರಾಜನು “ ಯಮದಂಡನನ್ನು ಶ್ಮಶಾನದ ಶೂಲಕ್ಕೆ ಹಾಕಿ* ಎಂದು ಸೇವಕರಿಗೆ ಆಜ್ಞೆ ಮಾಡಿದನು. ಅವರು ಯಮದಂಡನನ್ನು ಶ್ಮಶಾನಕ್ಕೆ ಎಳೆದುಕೊಂಡು ಹೋದರು. ಶೂಲದ ಮೊಳೆಯನ್ನು ಹರಿತಮಾಡಿ, ಶೂಲದಲ್ಲಿ ಅವನನ್ನು ಹಾಕುವಾಗ ತೊನ್ನನೂ ಅವರೊಡನೆ ಹೋಗಿ

ಮೂಲಗದ್ಯ:- ಸೂಲದೊಳಿಕ್ಕುವಾಗಳವರೊಡವೋಗಿ ತೊನ್ನಂ ರೂಪಪರಾವರ್ತನಂಗೆಯ್ದು ತನ್ನ ಸ್ವಾಭಾಮಿಕಮಪ್ಪ ವಿದ್ಯುಚ್ಚೋರನಪ್ಪ ದಿವ್ಯರೂಪಂ ಕೈಕೊಂಡು ಸೂಲದೊಳಿಕ್ಕಲೀಯದೆ ಅಡ್ಡಮಾಗಿರ್ದರಸನ ಕಾಪಿನವನೆಂದನೆಲೆಯಣ್ಣಗಳಿರಾ ನೀಮೀತನಂ ಕೊಂದಿರೀತನುಂ ಸೂಲದೊಳಿಕ್ಕೆಪಟ್ಟನಾಗಿ ಸತ್ತವನೆಂದವರೊಳ್ ನುಡುದು ತಳಾಱನನಿಂತೆಂದನೆಲೆ ಗಳಾ ಯಮದಂಡಾ ನೀನುಮಾನುಂ ಕಿಱಯಂದೊರ್ವರುಪಾಧ್ಯಾಯರ ಪಕ್ಕದೊಳೋದುವಂದು ನಂದನವನದೊಳಗೆ ನೀನೆನ್ನ ಪೂಣ್ದ ಪ್ರತಿಜ್ಞೆಯಂ ನೆನೆದಾ ಒಂದುಂ ದೋಷಮಿಲ್ಲದೆ ನಿನ್ನಂ ಕೊಲಿಸಿದೆನೊ ಕೊಲಿಸೆನೊ ಪುಣ್ಯ ಪ್ರತಿಜ್ಞೆಯಂ ನೆನೆವೆಯೊ ನೆನೆಯೆಯೊ ಎನೆ ಯಮದಂಡನೊಳ್ಳಿತ್ತಾಗಿ ನೆನೆದೆನೆಂದೊಡೆ ವಿದ್ಯುಚ್ಚೋರನಿಂತೆಂದು ಮತ್ತೀಗಳ್ ನೀನೇನ್ ಸತ್ತೆಯೊ ಸಾಯೆಯೊ ಮತ್ತೇನೊ ಎಂದಾಗಳ್ ಯಮದಂಡನೆಂದಂ ದೇವ ನೀಂ ಗೆಲ್ದೆಯಾಂ ಸೋಲ್ತೆನುಂ ಸತ್ತೆನುಮಂದಿರ್ವರ್ ಪದಿರಿನಿಂ ನುಡಿವ ಸೂೞ್ಮೂತುಗಳಂ ಕಾಪಿನವರುಂ ಪೊೞಲ ಜನಮುಂ ಕೇಳ್ದು ಚೋದ್ಯಂಬಟ್ಟು ಬೆಱಗಾಗಿರ್ದೊಡೆ ವಿದ್ಯುಚ್ಚೋರಂ ಕಾಪಿನವರನಿಂತೆಂದನೆನ್ನುಮನೀತನುಮನರಸನಲ್ಲಿಗೆ ಕೊಂಡು ಪೋಗಿಮರಸನ ಮುಂದೀತಂಗಮೆನಗಂ ಮಾತುಂಟಲ್ಲಿ ನುಡಿದ ಬೞಕ್ಕರಸನೀತನಂ ಮೆಚ್ಚುಕೆಯ್ಗೆ ಎಂತುಂ ಕೊಲವೇೞ್ದೊಡಂ ಮೂಱು ಸೂೞ್ ಬೆಸಗೊಂಡಲ್ಲದೆ ಕೊಲಲಾಗದೆಂದು ನೀತಿಶಾಸ್ತ್ರದೊಳ್
ಸರಳಾನುವಾದ:- ರೂಪಾಂತರ ವಿದ್ಯೆಯಿಂದ ತನ್ನ ರೂಪವನ್ನು ಪರಿವರ್ತನಗೊಳಿಸಿ ತನ್ನ ಸ್ವಾಭಾವಿಕವಾದ ವಿದ್ಯುಚ್ಚೋರನಾಗಿರುವ ದಿವ್ಯರೂಪವನ್ನು ತಾಳಿಕೊಂಡು ಬಂದು ಯಮದಂಡನನ್ನು ಶೂಲಕ್ಕೆ ಹಾಕಲು ಬಿಡದಂತೆ ಅಡ್ಡವಾಗಿ ನಿಂತು ರಾಜನ ಕಾವಲುಗಾರರೊಡನೆ ಹೀಗೆ ಹೇಳಿದನು – “ಎಲೈ ಅಣ್ಣಂದಿರಾ ನೀವು ಇವನನ್ನು ಕೊಂದಿರಿ, ಈತನು ಶೂಲಕ್ಕೆ ಹಾಕಲ್ಪಟ್ಟವನಾಗಿ ಸತ್ತವನಾಗಿದ್ದಾನೆ* ಎಂದು ಅವರಲ್ಲಿ ಹೇಳಿ, ತಳಾರನೊಡನೆ ಹೀಗೆಂದನು – “ಎಲೈ ತಿಳಿಯತೇ ಯಮದಂಡಾ, ನೀನೂ ನಾನೂ ಚಿಕ್ಕಂದಿನಲ್ಲಿ ಒಬ್ಬರೇ ಉಪಾಧ್ಯಾಯರ ಬಳಿ ವಿದ್ಯಾಭ್ಯಾಸ ಮಾಡುವಂದು ನಂದನವೆಂಬ ಉದ್ಯಾನದಲ್ಲಿ ನಾನು ಶಪಥ ಮಾಡಿದುದನ್ನು ನೀನು ನೆನಪಿಟ್ಟಿರುವೆಯಾ? ಅದರಂತೆ ಒಂದೂ ದೋಷವಿಲ್ಲದೆ ನಿನ್ನನ್ನು ನಾನು ಕೊಲಿಸಿದೆನೊ ಕೊಲಿಸಲಿಲ್ಲವೋ? ಮಾಡಿದ ಪ್ರತಿಜ್ಞೆಯನ್ನು ಸ್ಮರಿಸುವೆಯೋ? ಸ್ಮರಿಸೆಯೋ?* ಎಂದು ಕೇಳಿದನು. ಯಮದಂಡನು “ಚೆನ್ನಾಗಿ ನೆನಪಿಟ್ಟುರುವೆನು* ಎಂದನು. ಆಗ ವಿದ್ಯುಚ್ಚೋರನು – “ಮತ್ತೆ ಈಗ ನೀನೇನು ಸತ್ತೆಯೋ? ಸಾಯೆಯೋ ? ಮತ್ತೇನು?* ಎಂದಾಗ ಯಮದಂಡನು ಹೀಗೆಂದನು – “ದೇವಾ, ನೀನು ಗೆದ್ದವನಾಗಿರುವೆ. ನಾನು ಸೋತವನೂ ಸತ್ತವನೂ ಆಗಿರುವೆನು* – ಎಂದು ಇಬ್ಬರೂ ಒಗಟಿನಂತಹ ರೀತಿಯಿಂದ ಹೇಳುವ ಉತ್ತರ ಪ್ರತ್ಯುತ್ತರಗಳನ್ನು ಕಾವಲಿನವರೂ ಪಟ್ಟಣದ ಜನರೂ ಕೇಳಿ, ಆಶ್ಚರ್ಯಪಟ್ಟು ಬೆರಗಾಗಿದ್ದರು. ವಿದ್ಯುಚ್ಚೋರನು ಕಾವಲುಗಾರರೊಡನೆ – “ನೀವು ನನ್ನನ್ನೂ ಇವನನ್ನೂ ಅರಸರಲ್ಲಿಗೆ ಕೊಂಡುಹೋಗಿರಿ. ಅರಸನ ಮುಂದೆ ಈತನಿಗೂ ನನಗೂ ಹೇಳತಕ್ಕ ಮಾತಿದೆ. ಅಲ್ಲಿ ನಾವು ಮಾತಾಡಿದನಂತರ ರಾಜನು ಇವನನ್ನು ತನಗೆ ಮೆಚ್ಚಿದಂತೆ ಮಾಡುವನು. ಹೇಗಿದ್ದರೂ, ಕೊಲ್ಲಲು ಆಜ್ಞಾಪಿಸಿದರೂ ಮೂರು ಬಾರಿ ಕೇಳದೆ ಕೊಲ್ಲಬಾರದೆಂದು ನೀತಿಶಾಸ್ತ್ರದಲ್ಲಿ ಹೇಳಿರುವುದರಿಂದ, ನಮ್ಮಿಬ್ಬರನ್ನೂ ಅರಮನೆಗೆ

ಮೂಲಗದ್ಯ:- ಪೇೞ್ದುದಱಂದೆಮ್ಮಿರ್ವರುಮನರಮನೆಗೆ ಕೊಂಡು ಪೋಗಿ ಅರಸಂಗೆ ತೋಱಮೆಂದೊಡಾ ಕಾಪಿನವರಿರ್ವರುಮನರಸನಲ್ಲಿಗೆ ಕೊಂಡು ಪೋಗಿ ಇಂತೆಂದು ಬಿನ್ನಪಂಗೆಯ್ದರ್ ದೇವಾ ಈತಂ ಯಮದಂಡನಂ ಕೊಲಲೀಯದೆ ಬಾರಿಸಿದನೆಂದು ವಿದ್ಯುಚ್ಚೋರನಂ ತೋಱ ನುಡಿದೊಡರಸನೇಕೆ ನೀಂ ಬಾರಿಸಿದೆಯೆಂದು ಬೆಸಗೊಂಡೊಡೆ ವಿದ್ಯುಚ್ಚೋರನೆಂದಂ ಯಮದಂಡಂಗೇನುಂ ಪೊಲ್ಲಮೆಯುಂ ದೋಷಮುಮಿಲ್ಲ ನಿಮ್ಮ ದೇವತಾರಕ್ಷಿತಮಪ್ಪ ಸರ್ವರುಜಾಪಹಾರಮೆಂಬುದು ಮೊದಲಾಗಿ ಪೊೞಲ ಕಸವರಮನಿರುಳೀ ರೂಪಿನೊಳ್ ಕಳ್ದು ಪಗಲೆಲ್ಲಂ ತೊನ್ನನಾಗಿ ಪಾೞ್ದೇಗುಲದೊಳಿರ್ಪೆನದಱಂದೆನ್ನಂ ಕೊಲ್ಲಿಮೀತಂಗೇನುಂ ದೋಷಮಿಲ್ಲೆಂದೊಡರಸನೆಂದನಾ ಕಳ್ದ ಕಸವರಮನೆಲ್ಲಮನೇಗೆಯ್ದೆಯೆಂದು ಬೆಸಗೊಂಡೊಡನಿತುವಿರ್ದುವಯ್ಸಾಸಿರಮಱುಸಾಸಿರ ದೀನಾರಮೆನ್ನ ಸೂಳೆಗೆ ಬಿಯಾಮಾದುದುೞದುವೆಲ್ಲಂ ವಣ್ಣಂ ಚಳಿಯದಿರ್ದುದೆಂದೊಡರಸಂ ವಿದುಚ್ಚೋರನಂ ಹಾರಮಂ ಕೊಂಡು ಬಾ ಪೊೞಲವರ್ಗ್ಗಂ ಕಸವರಮಂ ಮಡಗಿದೆಡೆಯಂ ತೋಱೆಂದಾತನೊಡನೆ ಪೂೞಲ ಜನಮುಮನಟ್ಟೆ ಕಾಪುವೆರಸು ಪೋಗಿ ಪೊೞಲ್ಗೆ ನಾಡೆಯಂತರದೊಳ್ ಪಿರಿದೊಂದು ಪರ್ವತಮುಂಟಲ್ಲಿಯೊಂದು ವಿಸ್ತೀರ್ಣ ಗುಹೆಯುಂಟದಱ ಬಾಗಿಲಂ ಮುಚ್ಚಿರ್ದ ಪಿರಿಯ ಸಿಲೆಯಂ ಕಳೆದದಱೊಳಗೆ ಪೊಕ್ಕು ಹಾರಮಂ ಕೊಂಡು ಪೊೞಲ ಜನಮೆಲ್ಲಮನೆಂದಂ ನಿಮ್ಮ ನಿಮ್ಮ ಕಸವರಮಪ್ಪುದನಾರಯ್ದು ಪಲ್ಲಟಿಸಲೀಯದೆ
ಸರಳಾನುವಾದ:- ಕೊಂಡುಹೋಗಿ ಅರಸನಿಗೆ ತೋರಿಸಿ' ಎಂದನು. ಅದರಂತೆ ಕಾವಲುಗಾರರು ಇಬ್ಬರನ್ನೂ ಅರಸನಲ್ಲಿಗೆ ಕೊಂಡುಹೋಗಿ ಈ ರೀತಿಯಾಗಿ ವಿಜ್ಞಾಪನೆ ಮಾಡಿದರು – “ದೇವಾ ಈತನು ಯಮದಂಡನನ್ನು ಕೊಲ್ಲಲು ಬಿಡದೆ, ನಮ್ಮನ್ನು ತಡೆದನು' ಎಂದು ವಿದ್ಯುಚ್ಚೋರನನ್ನು ತೋರಿಸಿ ಹೇಳಿದನು. ಆಗ ‘ರಾಜನು ನೀನು ಯಾಕೆ ತಡೆದೆ?’ ಎಂದು ಕೇಳಲು ವಿದ್ಯುಚ್ಚೋರನು ಹೀಗೆ ಹೇಳಿದನು – “ಯಮದಂಡನಲ್ಲಿ ಯಾವುದೊಂದು ತಪ್ಪಾಗಲೀ ದೋಷವಾಗಲೀ ಇಲ್ಲ. ನಿಮ್ಮದಾಗಿರುವ ದೇವತೆಗಳಿಂದ ರಕ್ಷಿಸಲ್ಪಡುವ ಸರ್ವರುಜಾಪಹಾರವೆಂಬ ಮಾಲೆಯೇ ಮುಂತಾಗಿ ಪಟ್ಟಣದ ಹೊನ್ನನ್ನು ರಾತ್ರಿಯಲ್ಲಿ ಈ ರೂಪದಲ್ಲಿ ನಾನೇ ಕಳವು ಮಾಡಿ ಹಗಲೆಲ್ಲ ತೊನ್ನು ರೋಗದವನಂತೆ ಕಾಣಿಸಿಕೊಂಡು ಪಾಳುಬಿದ್ದ ದೇವಾಲಯದಲ್ಲಿ ಇರುತ್ತೇನೆ. ಆದುದರಿಂದ ನನ್ನನ್ನು ಕೊಲ್ಲಿರಿ, ಈತನಲ್ಲಿ ಏನೂ ದೋಷವಿಲ್ಲ – ವಿದ್ಯುಚ್ಚೋರನು ಹೀಗೆನ್ನಲು ರಾಜನು – ಅವನೊಡನೆ – “ಆ ಕದ್ದ ಹೊನ್ನನ್ನೆಲ್ಲ ಏನು ಮಾಡಿದೆ ಎಂದು ಕೇಳಿದನು, ವಿದ್ಯುಚ್ಚೋರನು – “ಅಷ್ಟೂ ಇದ್ದುವು. ಅವುಗಳಲ್ಲಿ ಐದು ಸಾವಿರ ಆರುಸಾವಿರ ದೀನಾರನಾಣ್ಯ ನನ್ನ ಸೂಳೆಗೆ ಕೊಟ್ಟು ವೆಚ್ಚವಾಗಿದೆ. ಉಳಿದುದೆಲ್ಲ ಬಣ್ಣವಳಿಯದೆಯೇ ಇದೆ* ಎಂದು ಹೇಳಿದನು. ರಾಜನು ವಿದ್ಯುಚ್ಚೋರನೊಂದಿಗೆ – ‘ಹಾರವನ್ನು ತೆಗೆದುಕೊಂಡು ಬಾ, ಪಟ್ಟಣಿಗರಿಗೆ ಹೊನ್ನನ್ನು ಇಟ್ಟ ಸ್ಥಳವನ್ನು ತೋರಿಸು, ಎಂದು ಹೇಳೀ, ಆತನೊಂದಿಗೆ ಪಟ್ಟಣದ ಜನರನ್ನು ಕಳುಹಿಸಿದನು. ವಿದ್ಯುಚ್ಚೋರನು ಕಾವಲಿನವರೊಂದಿಗೆ ಹೋದನು. ಆ ಪಟ್ಟಣಕ್ಕೆ ಬಹಳ ದೂರದಲ್ಲಿ ದೊಡ್ಡದೊಂದು ಬೆಟ್ಟವಿದೆ. ಆ ಬೆಟ್ಟದಲ್ಲಿ ಒಂದು ವಿಶಾಲವಾದ ಗವಿಯಿದೆ. ಅದರ ಬಾಗಲನ್ನು ದೊಡ್ಡ ಕಲ್ಲಿನಿಂದ ಮುಚ್ಚಿತ್ತು. ವಿದ್ಯುಚ್ಚೋರನು ಆ ಕಲ್ಲನ್ನು ತೆಗೆದು ಅದರ ಒಳಗೆ ಹೊಕ್ಕು ಮಾಲೆಯನ್ನು ತಂದು, ಪಟ್ಟಣದ ಜನರನ್ನೆಲ್ಲ ಸಂಬೋಸಿ ಹೇಳಿದನು – “ನಿಮ್ಮ ನಿಮ್ಮದಾಗಿರುವ ದ್ರವ್ಯ ಯಾವುದೆಂದು ಪರಿಶೀಲಿಸಿ, ಒಬ್ಬರದು

ಮೂಲಗದ್ಯ:- ನೋಡಿಕೊಳ್ಳಿಮೆಂದು ತೋಱದೊಡವರುಂ ತಂತಮ್ಮ ಕಸವರಮನೆಲ್ಲಮನಾರಯ್ದು ಕೊಂಡರ್ ಮತ್ತೆ ವಿದ್ಯುಚ್ಚೋರನುಂ ಹಾರಮಂ ಕೊಂಡು ಪೋಗಿಯರಸಂಗೊಪ್ಪಿಸಿದೊಡರಸನಿಂತೆಂದು ವಿದ್ಯುಚ್ಚೋರನಂ ಬೆಸಗೊಂಡಂ ಮಾಘಮಾಸದಿರುಳಿನ ಸೀತದೊಳ್ ನಾಲ್ಕು ಜಾವಮುಂ ಮೂವತ್ತೆರಡು ಘೋರಮಪ್ಪ ದಂಡಣೆಯನೆಂತು ಸೈರಿಸಿದೆಯೆಂದೊಡಾತನಿಂತೆಂದರಸಂಗೆ ಪೇೞ್ಗುಂ ದೇವಾ ಒಂದು ದಿವಸಂ ಸಹಸ್ರಕೂಟ ಚೈತ್ಯಾಲಯಕ್ಕೆ ಕಿಱಯಂದೆನ್ನನೋದಿಸುವೋಜರುಮಾನುಂ ಪೋಗಿ ಓಜಂ ದೇವರಂ ಬಂದಿಸುವನ್ನೆಗಂ ಚರಿತಪುರಾಣಂಗಳಂ ವಖ್ಖಾಣಿಸುತ್ತಿರ್ದ ಶಿವಗುಪ್ತರೆಂಬಾಚಾರ್ಯರ ಪಕ್ಕದೆ ಕುಳ್ಳಿರ್ದು ವಖ್ಖಾಣೆಯಂ ಕೇಳುತ್ತಿರ್ಪನ್ನೆಗಂ ನರಕವ್ಯಾವರ್ಣನೆಯನಾ ಭಟಾರರಿಂತೆಂದು ಪೇೞ್ವುದಂ ಕೇಳ್ದೆಂ ವ್ರತ ಶೀಲ ಚಾರತ್ರ ಗುಣಂಗಳನಿಲ್ಲದವರುಂ ಜೀವಂಗಳಂ ಕೊಲ್ವರುಂ ಬೇಂಟೆಯಾಡುವರುಂ ರಾಗದ್ವೇಷಲೋಭಂ ಕಾರಣಮಾಗಿ ಪುಸಿ ನುಡಿದು ಜೀವಂಗಳ್ಗೆ ಸಂತಾಪಮಂ ವಧೆಯುಮಂ ಮಾಡಿಸುವರುಮಾಱಡಿಗೊಳ್ವರುಂ ಕಳ್ವೊರುಂ ಪೆಱರ ಪೆಂಡಿರೊಳ್ ಮಱೆವಾೞ್ವರುಮಪರಿಮಿತ ಪರಿಗ್ರಹಮಂ ನೆರಪುವರುಂ ಮತ್ತಂ ಮಧುಮದ್ಯ ಮಾಂಸಂಗಳುಮಯ್ದು ಪಾಲ್ಮರದ ಪಣ್ಗಳುಮಾಳಂಬೆಯುಂ ಸಣಂಬಿನ ಪೂವುಮೆಂದಿವಂ ಸೇವಿಸುವರುಂ ಮತ್ತಮಮೋಘಮಪೇಯ
ಸರಳಾನುವಾದ:- ಮತ್ತೊಬ್ಬರಿಗಾಗದಂತೆ ನೋಡಿಕೊಳ್ಳಿ* ಎಂದು ತೋರಿಸಿದನು. ಅವರು ತಮ್ಮ ತಮ್ಮ ದ್ರವ್ಯವೆಲ್ಲವನ್ನೂ ಪರೀಕ್ಷಿಸಿ ನೋಡಿ ತೆಗೆದುಕೊಂಡರು. ಆಮೇಲೆ ವಿದ್ಯುಚ್ಚೋರನು ಮಾಲೆಯನ್ನು ತೆಗೆದುಕೊಂಡು ಹೋಗಿ ರಾಜನಿಗೆ ಒಪ್ಪಿಸಿದನು. ಆಗ ರಾಜನು ವಿದ್ಯುಚ್ಚೋರನೊಡನೆ – “ನೀನು ಮಾಘಮಾಸದ ರಾತ್ರಿಯ ಶೀತದಲ್ಲಿ ನಾಲ್ಕು ಜಾವದಷ್ಟು ಹೊತ್ತು ಮೂವತ್ತೆರಡು ವಿಧವಾದ ಕಠಿನವಾದ ಶಿಕ್ಷೆಯನ್ನು ಹೇಗೆ ಸಹಿಸಿಕೊಂಡೆ?* ಎಂದು ಕೇಳಲು, ಅವನು ಅರಸನಿಗೆ ಹೀಗೆಂದನು – “ದೇವಾ, ನಾನು ಚಿಕ್ಕವನಾಗಿದ್ದಾಗ ನನಗೆ ಉಪಾಧ್ಯಾಯರೂ ನಾನೂ ಸಹಸ್ರಕೂಟ ಜಿನಾಲಯಕ್ಕೆ ಹೋಗಿದ್ದೆವು. ನನ್ನ ಉಪಾಧ್ಯಾಯರು ದೇವರನ್ನು ನಮಸ್ಕರಿಸುತ್ತಿದ್ದಾಗ ಪುರಾಣಗಳನ್ನೂ ವೈಖ್ಯಾನಮಾಡುತ್ತಿದ್ದ ಶಿವಗುಪ್ತರೆಂಭ ಆಚಾರ್ಯರ ಬಳಿಯಲ್ಲಿ ನಾನು ಕುಳಿತು ವ್ಯಾಖ್ಯಾನವನ್ನು ಕೇಳುತ್ತಿದ್ದೇನು. ಆ ಸಂದರ್ಭದಲ್ಲಿ ಆ ಋಷಿಗಳು ನರಕದ ವಿಶೇಷ ವರ್ಣನೆಯನ್ನು ಈ ರೀತಿಯಾಗಿ ಹೇಳುವುದನ್ನು ಕೇಳಿದೆನು – “ವ್ರತ – ಶೀಲ – ಚಾರಿತ್ರ್ಯ – ಗುಣಗಳಿಲ್ಲದವರೂ ಪ್ರಾಣಿವಧೆಯನ್ನು ಮಾಡುವವರೂ ಬೇಟೆಯಾಡುವವರೂ ಒಲವು ಹಗೆತನ – ಜಿಪುಣತನಗಳೇ ಕಾರಣವಾಗಿ ಸುಳ್ಳು ಹೇಳಿ ಜೀವಿಗಳಿಗೆ ದುಃಖವನ್ನುಂಟು ಮಾಡುವವರೂ ಹತ್ಯೆಮಾಡುವವರೂ ಹಿಂಸೆಮಾಡುವವರೂ ಕಳವು ಮಾಡುವವರೂ ಪರಸ್ತ್ರೀಯರಲ್ಲಿ ಜಾರತ್ವದಿಂದ ರಹಸ್ಯವಾಗಿ ಬಾಳುವವರೂ ಮಿತಿಯಿಲ್ಲದೆ ವಸ್ತುಸಂಗ್ರಹವನ್ನು ಕೂಡಿಡುವವರೂ ಅದಲ್ಲದೆ, ಸಾರಾಯಿ – ಹೆಂಡ – ಮಾಂಸಗಳನ್ನು, ಆಲ – ಆಶ್ವತ್ಥ – ಅತ್ತಿ – ಇಪ್ಪೆ – ಗೋಳಿ ಎಂಬ ಐದು ಬಗೆಯ ಹಾಲು ಮರಗಳ ಹಣ್ಣುಗಳನ್ನು, ಅಣಬೆಯನ್ನು, ಸಣಬಿನ ಹೂವನ್ನು ಸೇವನೆ ಮಾಡುವವರೂ ಇವೂ ಅಲ್ಲದೆ ಕುಡಿಯಬಾರದುದನ್ನು ಕುಡಿಯುವುದು, ತಿನ್ನುಬಾರದುದನ್ನು ತಿನ್ನುವುದು ಎಂಬಿವನ್ನು

ಮೂಲಗದ್ಯ:- ಪೇಯಮಭಕ್ಷ್ಯ ಭಕ್ಷಮೆಂದಿವಱೊಳ್ ನೆಗೞ್ವರುಂ ಪಂಚಮಹಾಪಾತಕಂಗಳಂ ಗೆಯ್ದೊರುಮಿವರೆಲ್ಲಂ ನಿವೃತ್ತಿಪರಿಣಾಮಮಿಲ್ಲದೆ ಕಾಲಂಗೆಯ್ದೇೞುಂ ನರಕಂಗಳೊಳ್ ಪುಟ್ಟಿ ದುಃಖಂಗಳನೆಯ್ದುವರ್

ಗಾಹೆ || ಅಚ್ಛಿಣಿಮೀಳಣ ಮೆತ್ತಂ ಣತ್ಥಿಸುಹಂ ದುಖ್ಖಮೇವ ಅನುಬದ್ಧಂ
ಣಿರಯೇ ಣಿರಯಿಯಾಣಂ ಅಹಣ್ಣಿಸಂ ಪಚ್ಚಮಾಣಾಣಂ ||

ವೃ || ಕರಜನಿವೇಶಿತ ತೀಕ್ಷ್ಣಶಲಾಕಾಃ
ಕ್ರಕಚ ವಿಪಾಟತ ಭಿನ್ನ ಶರೀರಾಃ
ನರಕ ಭವೇ ವಿರಸಾ ವಿಷಹಂತೇ
ಚಿರಮಪಿ ತತ್ಕ್ಷಣ ದುಃಖವಿಷಾದಂ ||
ಮತ್ತಂ

ಕಂದ || ಇಱಕಿಱದನೊದಱ ಕೈರಂ
ದಱ ಮುಱ ನಿಟ್ಟೆಲ್ವನರಿದು ನೆಱನೆಡೆಗಳ್ ಬಾ
ಯ್ದೆಱೆಯೆ ಪೊಸವುಣ್ಗಳೊಳ್ ಪೊಯ್
ಮಱುಗುವಿನಂ ಲೋಹವಾರಿಯಂ ಮಱುಗುವಿನಂ ||
ಕಡಿ ಕಟಿವಮನುಡಿ ಕೊಡೆಯಂ
ನಡನಡನಡುಗುವಿನಮಡಸಿ ತಡೆಯದೆ ಖಳನಂ
ಪಿಡಿದುಡಿಯೆ ಕಟ್ಟು ಮಿಡ ಮಿಡ
ಮಿಡುಕುವಿನಂ ಬಡಿಯೊಳೊಡೆಯೆ ಪೊಡೆ ಪೆಡತಲೆಯಂ |
ಸರಳಾನುವಾದ:- ಮಾಡುವವರೂ ಬ್ರಹ್ಮಹತ್ಯೆ, ಸುರಾಪಾನ, ಸ್ತೇಯ, ಗುರುಪತ್ನೀ ಗಮನ, ಮತ್ತು ಈ ಪಾಪಗಳನ್ನು ಮಾಡಿದವರ ಒಡನಾಟ – ಎಂಬ ಪಂಚ ಮಹಾಪಾತಕಗಳನ್ನು ಮಾಡಿದವರೂ – ಇವರೆಲ್ಲರೂ ಹಿಂದಿರುಗುವ ಅವಕಾಶವೇ ಇಲ್ಲದೆ ಸತ್ತು, ಏಳು ನರಕಗಳಲ್ಲಿ ಹುಟ್ಟಿ ದುಃಖಗಳನ್ನು ಹೊಂದುವರು. (ನರಕದಲ್ಲಿ ಹಗಲೂ ರಾತ್ರಿಯೂ ಬೇಯಿಸಲ್ಪಡುತ್ತಿರುವ ನರಕದಜೀವಿಗಳಿಗೆ ಕಣ್ಣರೆಪ್ಪೆ ಹೊಡೆಯುವಷ್ಟು ಕಾಲ ಕೂಡ ಸುಖವಿಲ್ಲ. ಅವರಿಗೆ ಕಟ್ಟಿಟ್ಟದ್ದು ದುಃಖವೋಂದೇ.) ನರಕದಲ್ಲಿ ಹುಟ್ಟಿಬಂದವರ ಉಗುರಗಳಲ್ಲಿ ಹರಿತವಾದ ಸಲಾಕೆಗಳನ್ನು ಹೊಗಿಸುತ್ತಾರೆ. ಶರೀರವನ್ನು ಕತ್ತರಿಸಿ ಗರಗಸದಿಂದ ಸೀಳುತ್ತಾರೆ. ನಾರಕಿಗಳು ಸಂತೋಷವಿಲ್ಲದವರು. ಒಡನೆಯೇ ಉಂಟಾದ ದುಃಖೋದ್ವೇಗಗಳನ್ನು ಬಹುಕಾಲ ಅನುಭವಿಸುತ್ತಾರೆ. ಅದಲ್ಲದೆ, ತಿವಿದು ಕೆರೆದು ಒದರಿ ಕಾಜಿನಂತೆ ಚೂರುಚೂರು ಮಾಡಿ, ಮುರಿದು, ನೀಳವಾದ ಮೂಳೆಗಳನ್ನು ತುಂಡು ಮಾಡಿ ಮರ್ಮಸ್ಥಳಗಳು ಬಾಯಿ ತೆರೆಯುವಂತೆ ಹೊಸಹುಣ್ಣುಗಳ ಮೇಲೆ ಹೊಯಿ ಎನ್ನುತ್ತ ನರಕದಲ್ಲಿ ಶಿಕ್ಷಿಸುತ್ತಾರೆ. ‘ಸೊಂಟವನ್ನು ಕತ್ತರಿಸು. ತೊಡೆಯನ್ನು ಮುರಿ. ಗಡಗಡ ನಡುಗುವಂತೆ ಮೇಲೆ ಬಿದ್ದು ತಡಮಾಡದೆ ಪಾಪಿಯನ್ನು ಹಿಡಿದು ಮುರಿಯುವ ಹಾಗೆ ತಟ್ಟು. ವಿಲಿವಿಲಿ ಒದ್ದಾಡಲು ಹೆಡತಲೆ ಒಡೆಯುವಂತೆ ದೊಣ್ಣೆಯಲ್ಲಿ ಬಡಿ’ ಎನ್ನುತ್ತಾರೆ. ‘ಬಡಿ, ಕೊಲ್ಲು, ಕಟ್ಟು, ತಿವಿ, ಮುರಿ, ಕಡಿ, ಸೊಂಟ, ಕತ್ತರಿಸು, ಕುತ್ತಿ ಕರುಳನ್ನು ಹೊರ ತೆಗೆ, ಮುಖಕ್ಕೆ ಬೆಂಕಿ ಹಾಕು, ಹಿಡಿ, ಹೊಡೆ, ನೇರವಾಗಿ ತಿವಿ, ಬಯ್ಯು, ಉತ್ಸಾಹದಿಂದ

ಮೂಲಗದ್ಯ:-
ಬಡಿ ಕೊಲ್ ಕಟ್ಟಿಱ ಮುಱ ಕಡಿ
ನಡುವಂ ಕೊಱೆ ಕುತ್ತಿಕರುಳ್ಗಳಂ ತೆಗೆ ಮೊಗಮಂ
ಸುಡು ಪಿಡಿ ಬಡಿ ನಿಮಿರ್ದಿಱ ಬಯ್
ಕಡಂಗಿ ನುಂಗೆಂದು ಮುಸುಱ ನಾರಕರಾಗಳ್ ||

ಮತ್ತಂ ಕೊಂತಂಗಳಿಂದಮಿಟ್ಟಗಳಿಂದಂ ಕುತ್ತಿಸಿಱಂದಂ ಕರುಳ್ಮಾಲೆಗಳ್ ನೆಲದೊಳ್ ಸುರಿಯೆ ಕುತ್ತುವುದುಂ ಮುಟ್ಟಗೆಗಳೊಳಿಟ್ಟು ತೆಗಪುವುದುಂ ಕರಗಸಂಗಳಿಂದಂ ಮರನಂ ಪೋೞ್ವಂತೆ ಕೆಯ್ಯಂ ಕಾಲನಗಲ್ಚಿ ಪಿಡಿದಡಸಿ ಕಟ್ಟಿಯುದ್ದಂಬಿಡಿದು ಪೋೞ್ವುದುಮಿಂತಿವು ಮೊದಲಾಗೊಡೆಯ ದುಃಖಂಗಳಂ ಕಣ್ಣಿಮೆಯಿಕ್ಕುವನಿತು ಪೊೞ್ತಪ್ಪೊಡಮುಸಿರ್ ಪತ್ತಿಲ್ಲದುತ್ಕೃಷ್ಟದಿಂದಮೇೞನೆಯ ನರಕದೊಳ್ ಮೂವತ್ತುಮೂಱು ಸಾಗರೋಪಮಕಾಲಂಬರೆಗಂ ದುಃಖಂಗಳನೆಯ್ದುವರ್ ಮತ್ತಂ ದಾನ ಪೂಜೆ ಶೀಲೋಪವಾಸಮೆಂದಿಂತು ಚತುರ್ವಿಧಮಪ್ಪ ಶ್ರಾವಕಧರ್ಮದೊಳ್ ನೆಗೞ್ವವರುಂ ತಪಂಗೆಯ್ವರುಂ ಸ್ವರ್ಗಾಪವರ್ಗ ಸುಖಂಗಳನೆಯ್ದುವರೆಂದಿಂತು ಪೇೞೆ ಕೇಳ್ದು ಭಟಾರರ ಪಕ್ಕದೆ ಅನಣುವ್ರತ ಗುಣವ್ರತ ಶಿಕ್ಷಾವ್ರತಮೆಂದಿಂತು ದ್ವಾದಶವಿಧಮಪ್ಪ ಶ್ರಾವಕಧರ್ಮಮುಮನರ್ಹಂತ ಪರಮದೇವರೆ ದೇವರ್ ಕೊಲ್ಲದುದೆ ಧರ್ಮಂ ಬಾಹ್ಯಾಭ್ಯಂತರ ಪರಿಗ್ರಹಮಿಲ್ಲದುದೆ ತಪಮರ್ಹಂತ ಪರಮ ದೇವರಾಗಮದೊಳ್ ಪೇೞೆಪಟ್ಟ ಜೀವಾಜೀವ ಪುಣ್ಯಪಾಪಾಸ್ರವ ಸಂವರ ನಿರ್ಜರ ಬಂಧ
ಸರಳಾನುವಾದ:- ನುಂಗಿಬಿಡು’ – ಎಂದು ನರಕದವರು ಮುತ್ತಿಕೊಳ್ಳುತ್ತಾರೆ. ಅದಲ್ಲದೆ, ಒನಕೆಗಳಿಂದ ಈಟಿಗಳಿಂದ ಚುಚ್ಚುವ ಕೋಡುಗಳಿಂದ ಕರುಳಿನ ಮಾಲೆಗಳು ನೆಲದಲ್ಲಿ ಸುರಿಯುವಂತೆ ಕುತ್ತುವುದು, ಸೌದೆಗಳಿಂದ ಹೊಡೆದು ಎಳೆಯುವುದು ಕರಗಸಗಳಿಂದ ಮರವನ್ನು ಸೀಳುವಂತೆ ಕೈಯನ್ನೂ ಕಾಲನ್ನೂ ಅಗಲಿಸಿ ಹಿಡಿದು ಬಿಗಿಚಿiiಗಿ ಕಟ್ಟಿ ಉದ್ದಕ್ಕೆ ಹಿಡಿದು ಸೀಳುವುದು – ಇಂತು ಇವೇ ಮೊದಲಾಗಿ ಉಳ್ಳ ದುಃಖಗಳನ್ನು ಕಣ್ಣರೆಪ್ಪೆ ಮುಚ್ಚಿ ತೆರೆಯುವಷ್ಟು ಹೊತ್ತು ಕೂಡ ದುಃಖವಿಲ್ಲದ ಉಸಿರು ಬಿಡಲು ಅವಕಾಶವಿಲ್ಲದಿರುವ ಅತ್ಯಂತ ಕಠಿಣಕರವಾದ ಏಳನೆಯ ನರಕದಲ್ಲಿ ಮೂವತ್ತಮೂರು ಸಾಗರ ಸಮಾನವಾದ ಕಾಲದವರೆಗೆ ನಾರಕಿಗಳು ದುಃಖವನ್ನು ಅನುಭವಿಸುವರು. ಮತ್ತೇನೆಂದರೆ, ದಾನ – ಪೂಜೆ – ಶೀಲ – ಉಪವಾಸ ಎಂದು ಈ ರೀತಿ ನಾಲ್ಕು ವಿಧವಾಗಿರುವ ಶ್ರಾವಕಧರ್ಮದಲ್ಲಿ ವರ್ತಿಸುವವರೂ ತಪವನ್ನು ಆಚರಿಸುವವರು ಸ್ವರ್ಗ – ಮೋಕ್ಷಗಳ ಸುಖಕ್ಕೆ ಭಾಗಿಗಳಾಗುವರು ಎಂದು ಈ ರೀತಿಯಾಗಿ ಶಿವ ಗುಪ್ತಾಚಾರ್ಯರು ಹೇಳುತ್ತಿದ್ದರು. ಅದನ್ನು ನಾನು ಕೇಳಿ ಋಷಿಗಳ ಬಳಿಯಲ್ಲಿ ಅನುವ್ರತ (ಅಹಿಂಸೆ, ಸತ್ಯ, ಆಚೌರ್ಯ, ಬ್ರಹ್ಮಚರ್ಯ, ಆಪರಿಗ್ರಹ) ಗುಣವ್ರತ(ದಿಗ್ವ್ರತ, ದೇಶವ್ರತ, ಅನರ್ಥದಂಡವ್ರತ), ಶಿಕ್ಷಾವ್ರತ (ಸಾಮಾಯಿಕವ್ರತ ಪ್ರೋಷಧೋಪವಾಸವ್ರತ, ಭೋಗ ಪರಿಭೋಗ ಪರಮಾಣುವ್ರತ, ಅತಿಥಿಸಂವಿಭಾಗವ್ರತ) – ಎಂಬೀ ಹನ್ನೆರಡು ಬಗೆಯ ಶ್ರಾವಕ ಧರ್ಮವನ್ನೂ ಜಿನೇಶ್ವರನೇ ದೇವರು, ಕೊಲ್ಲದಿರುವುದೇ (ಅಹಿಂಸೆಯೆ) ಧರ್ಮ, ಹತ್ತು ಬಗೆಯ ಬಾಹ್ಯ ಪರಿಗ್ರಹವೂ ಹತ್ತು ಬಗೆಯ ಅಂತರಂಗ ಪರಿಗ್ರಹವೂ ಇಲ್ಲದಿರುವುದೇ ತಪಸ್ಸು, ಜೈನಧರ್ಮ ಶಾಸ್ತ್ರದಲ್ಲಿ ಹೇಳಿರುವ ಜೀವ – ಅಜೀವ – ಪುಣ್ಯ – ಪಾಪ – ಅಸ್ರವ – ಸಂವರ – ನಿರ್ಜರ – ಬಂಧ – ಮೋಕ್ಷ

ಮೂಲಗದ್ಯ:- ಮೋಕ್ಷಮೆಂದಿಂತು ನವಪದಾರ್ಥಂಗಳುಮಂ ಪಂಚಾಸ್ತಿಕಾಯಂಗಳುಮಂ ಷಡ್ದ್ರವ್ಯಂಗಳುಮಂ ನಂಬುವುದು ಸಮ್ಯಕ್ತ್ವಮೆಂಬುದಕ್ಕುಮಾ ಸಮ್ಯಕ್ತ್ವದತಿಚಾರಂಗಳ್ ಶಂಕಾದ್ಯಷ್ಟಮಳಂಗಳುಮೆಂಟು ಮದಂಗಳುಂ ಮೂಱುಮೂಢಮುಮಾಱನಾಯತನ ಸೇವೆಗಳುಮೆಂದಿಂತಿರ್ಪ್ಪತ್ತಯ್ದಕ್ಕುಮವಂ ಪಿಂಗಿಸಿ ನಿಶ್ಯಂಕಾದ್ಯಷ್ಟಗುಣಂಗಳಿಂ ಕೂಡಿದ ಶುದ್ಧಮಪ್ಪ ಸಮ್ಯಕ್ತ್ವಪೂರ್ವಕಂ ವ್ರತಂಗಳನೇಱಸಿಕೊಂಡು ಮತ್ತೆ ನರಕಂಗಳ ದುಃಖಂಗಳಂ ಕೇಳ್ವವಱ ಶತಸಹಸ್ರಭಾಗಕ್ಕಪ್ಪೊಡಮೀ ದುಃಖಮಿಲ್ಲೆಂದು ಮನದೊಳ್ ಬಗೆದು ಮೂವತ್ತೆರಡುಂ ದಂಡಣಿಗಳಂ ಸೈರಿಸಿದೆನೆಂದೊಡರಸಂ ಕೇಳ್ದು ನಿನಗೊಸೆದೆಂ ಬೇಡಿಕೊಳ್ ನಿನ್ನ ಬೇಡಿದುದೆಲ್ಲಮಂ ಕುಡುವೆನೆಂದೊಡೆ ಪೆಱತೇನುಮನೊಲ್ಲೆನೆನ್ನ ಕೆಳೆಯನಪ್ಪ ಯಮದಂಡಂಗೆ ಕ್ಷಮಿಯಿಸುವುದನೆ ಬೇಡಿದೆನೆಂದೊಡರಸನಿಂತೆಂದು ಬೆಸಗೊಂಡಂ ಯಮದಂಡಂ ನಿನಗೆಂತು ಕೆಳೆಯನಾದಂ ಮತ್ತೆ ನೀಂ ಶ್ರಾವಕವ್ರತಂಗಳಂ ಕೈಕೊಂಡೆಯಪ್ಪೊಡೇಕೆ ಕಳ್ವೆಯೆಂದು ಬೆಸಗೊಂಡೊಡಾತನಿಂತೆಂದು ಯಮದಂಡನೆನಗೆ ಕೆಳೆಯನಪ್ಪುದುಮಂ ನಿಮ್ಮ ಪೊೞಲ ಕಸವರಮಂ ಕಳ್ದುದರ್ಕೆ ಕಾರಣಮುಮಂ ಪೇೞ್ವೆಂ ಕೇಳರಸಾ ಎಂದು ವಿದ್ಯುಚ್ಚೋರನಿಂತೆಂದು ಪೇೞಲ್ತೊಡಂಗಿದಂ ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ತಿಲಕಮನೆ ಪೋಲ್ವುದು ದಕ್ಷಿಣಾಪಥದೊಳಾಭೀರಮೆಂಬುದು ನಾಡಲ್ಲಿ ವರ್ಣೆಯೆಂಬ ತೊಱೆಯಾ ತಡಿಯೊಳ್ ವೇಣಾತಟಮೆಂಬುದು ಪೊೞಲದು ಪೊೞಲಗುಣಂಗಳಿನಾದಮಾನುಂ ರಮ್ಯಮಪ್ಪುದು ಸ್ವರ್ಗಮನೆ ಪೋಲ್ವುದದನಾಳ್ವೊಂ
ಸರಳಾನುವಾದ:- ಎಂಬೀ ಒಂಬತ್ತು ಪದಾರ್ಥಗಳನ್ನೂ ಪಂಚಾಸ್ತಿಕಾಯಗಳನ್ನೂ ಆರು ಬಗೆಯ ದ್ರವ್ಯಗಳನ್ನೂ ನಂಬುವುದು ಸಮ್ಯಕ್ತ್ವವೆನಿಸುವುದು. ಆ ಸಮ್ಯಕ್ತ್ವದ ಉಲ್ಲಂಘನೆಯ ವರ್ತನೆಗಳು – ಶಂಕೆ ಮೊದಲಾದ ಎಂಟು ಮಲಗಳು, ಎಂಟು ಮದಗಳು, ಮೂರು ಮೂಢಗಳು, ಆರು ಅನಾಯತನ ಸೇವೆಗಳು – ಎಂಬೀ ಇಪ್ಪತ್ತೈದಾಗಿವೆ. ಅವನ್ನೆಲ್ಲ ಹಿಂಗಿಸಿ ನಿಶ್ಯಂಕೆ ಮೊದಲಾದ ಎಂಟು ಗುಣಗಳಿಂದ ಕೂಡಿದ ಶುದ್ಧವಾದ ಸಮ್ಯಕ್ತ್ವದೊಡನೆ ವ್ರತಗಳನ್ನು ಸ್ವೀಕರಿಸಿ, ನರಕಗಳ ದುಃಖಗಳನ್ನು ಕೇಳಿ ಅವುಗಳ ಲಕ್ಷದಲ್ಲಿ ಒಂದು ಭಾಗದಷ್ಟು ಕೂಡ ದುಃಖವೂ ಇಲ್ಲವೆಂದು ಮನಸ್ಸಿನಲ್ಲಿ ಭಾವಿಸಿ ಮೂವತ್ತೆರಡು ಶಿಕ್ಷೆಗಳನ್ನು ನಾನು ಸಹಿಸಿದೆನು* ಎಂದು ವಿದ್ಯುಚ್ಚೋರನು ಹೇಳಿದನು. ಅದನ್ನು ಕೇಳಿ ರಾಜನು ” ನಿನಗೆ ನಾನು ಒಲಿದಿದ್ದೇನೆ. ಬೇಡಿಕೋ ; ನೀನು ಬೇಡಿದುದೆಲ್ಲವನ್ನೂ ಕೊಡುವೆನು” ಎಂದು ಹೇಳಿದನು. ” ನನಗೆ ಬೇರೆ ಯಾವುದೂ ಬೇಕಾಗಿಲ್ಲ, ನನ್ನ ಗೆಳೆಯನಾದ ಯಮದಂಡನಿಗೆ ಕ್ಷಮೆಕೊಡಬೇಕು ಎಂಬುದಾಗಿ ಬೇಡಿದ್ದೇನೆ” ಎಂದು ವಿದ್ಯುಚ್ಚೋರನು ಕೇಳಲು, ರಾಜನು ಹೀಗೆ ಹೇಳಿದನು – “ಯಮದಂಡನು ನಿನಗೆ ಹೇಗೆ ಗೆಳೆಯನಾದ? ಅಲ್ಲದೆ, ನೀನು ಶ್ರಾವಕವ್ರತಗಳನ್ನು ಸ್ವೀಕರಿಸಿರುವೆಯಾದರೆ ಏಕೆ ಕಳವು ಮಾಡುತ್ತಿ?* ಹೀಗೆ ಕೇಳಿದಾಗ ಅವನು – ‘ಯಮದಂಡನು ನನಗೆ ಗೆಳೆಯನಾದುದನ್ನೂ ನಿಮ್ಮ ಪಟ್ಟಣದ ಹೊನ್ನನ್ನ್ನು ಕಳವು ಮಾಡಿದುದಕ್ಕೆ ಕಾರಣವನ್ನೂ ಹೇಳುವೆನು. ಅರಸನೇ ಕೇಳು* ಎಂದು ವಿದ್ಯುಚ್ಚೋರನು ಹೀಗೆ ಹೇಳತೊಡಗಿದನು – ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ದಕ್ಷಿಣದೇಶದಲ್ಲಿ ಬೊಟ್ಟನ್ನು ಹೋಲುವಂತಿರುವ (ಶ್ರೇಷ್ಠವಾದ) ಆಭೀರವೆಂಬ ನಾಡು ಇದೆ. ಅಲ್ಲಿ ವರ್ಣೆ ಎಂಬ ನದಿಯ ತೀರದಲ್ಲಿ ವೇಣಾತಟ ಎಂಬ ಪಟ್ಟಣವಿದೆ. ಅದು ಪಟ್ಟಣದ ಗುಣಗಳಿಂದ ಅತ್ಯಂತ ರಮಣೀಯವಾದುದು, ಇಂದ್ರಲೋಕವನ್ನೇ ಹೋಲುವುದು. ಅದನ್ನು ಜಿತಶತ್ರು

 ಮೂಲಗದ್ಯ:- ಜಿತಶತ್ರುವೆಂಬೊನರಸನಾತನ ಮಹಾದೇವಿ ವಿಜಯಮತಿಯೆಂಬೊಳಾ ಇರ್ವರ್ಗ್ಗಂ ಮಗನೆನಾಂ ವಿದ್ಯೂಚ್ಚೋರನೆಂಬೆಂ ಮತ್ತಾ ಪೊೞಲೊಳ್ ಯಮಪಾಶನೆಂಬೊಂ ತಳಾಱನಾತನ ಪೆಂಡತಿ ನಿಜಗುಣದೇವತೆಯೆಂಬೊಳಾ ಇರ್ವರ್ಗ್ಗಂ ಮಗನೀತಂ ಯಮದಂಡನೆಂಬೊಂ ಮತ್ತಾಮಿರ್ವೆಮುಂ ಸಮಾನವಯಸರೆಮಯ್ದಾಱು ವರ್ಷದ ಪ್ರಾಯದಂದು ಶ್ರಾವಕನಪ್ಪ ಸಿದ್ದಾರ್ಥನೆಂಬುಪಾಧ್ಯಾಯನ ಪಕ್ಕದೆ ಇರ್ವರುಮನೋದಲಿಟ್ಟೊಡೇೞೆಂಟು ವರುಷದೊಳಗೆ ವ್ಯಾಕರಣಂ ಪ್ರಮಾಣಂ ಛಂದಮಲಂಕಾರಂ ನಿಘಂಟು ಕಾವ್ಯಂ ನಾಟಕಂ ಸಾಮುದ್ರಿಕಂ ವಾತ್ಸಾಯನಂ ಶಾಲಿಹೋತ್ರಂ ಪಾಲಕಾಷ್ಯಂ ಚಾಣಕ್ಯಂ ವೈದ್ಯಂ ಮೊದಲಾಗೊಡೆಯ ಶಾಸ್ತ್ರಗಳನೆಲ್ಲಮನಿರ್ವರುಂ ಕಲ್ತು ಬೞಕ್ಕೀತಂ ತಳಾಱನ ಮಗನಪ್ಪುದಱಂ ತನಗೆ ತಕ್ಕ ಕಳ್ಳರನಾರಯ್ಯ ತೆಱನಂ ಪೇೞ್ವ ಸುರಖಮೆಂಬೋದಂ ಕಲ್ತೊನಾನುಂ ಕಳ್ವುಪಾಯಮಂ ಪೇೞ್ವಕರಪಟಶಾಸ್ತ್ರಮಂ ಕಲ್ತೆನಿಂತೆಮಗನ್ಯೋನ್ಯ ಪ್ರೀತಿಯಿಂದಂ ಕಾಲಂ ಸಲೆ ಮತ್ತೊಂದು ದಿವಸಮಿರ್ವರುಂ ವನಕ್ರೀಡೆಯಾಡಲೆಂದಿದ್ರೋಪಮಮೆಂಬ ವನಕ್ಕೆ ಪೋಗಿಯಲ್ಲಿಯಶೋಕ ಪುನ್ನಾಗ ವಕುಳ ತಿಳಕ ತಮಾಳ ಚಂಪಕ ಕ್ರಮುಕ ನಾಳಿಕೇರ ಖರ್ಜೂರ ಜಂಬು ಜಂಬೀರ ಪನಸ ದಾಡಿದು ಕದಳೀ ದ್ರಾಕ್ಷಾ ಸಹಕಾರಂ ಮೊದಲಾಗೊಡೆಯ ಪಲವುಂ ತೆಱದ ವೃಕ್ಷಜಾತಿಗಳಿಂದಂ ಕಿಕ್ಕಿಱಗಿಱದಿರ್ದ ನಂದನವನದೊಳಿರ್ವರುಮುಳಿಸೆಂಡನಾಡುತ್ತಿರಲೋಕನ
ಸರಳಾನುವಾದ:- ಎಂಬ ಅರಸನು ಆಳುತ್ತಿದ್ದನು. ಅವನಿಗೆ ವಿಜಯಮತಿ ಎಂಬ ರಾಣಿಯಿದ್ದಳು. ಆ ಇಬ್ಬರಿಗೆ ನಾನು ಮಗನಾಗಿರುವೆನು, ವಿದ್ಯುಚ್ಚೋರನೆಂಬವನಾಗಿರುವೆನು. ಆ ಪಟ್ಟಣದಲ್ಲಿ ಯಮಪಾಶನೆಂಬ ನಗರರಕ್ಷಕ (ತಳಾರ)ನಿದ್ದನು. ಅವನ ಹೆಂಡತಿ ನಿಗುಣದೇವತೆ ಎಂಬವಳು. ಆ ಇಬ್ಬರಿಗೂ ಯಮದಂಡನೆಂಬ ಈತನು ಮಗನು. ನಾವಿಬ್ಬರೂ ಸಮಾನ ವಯಸ್ಸಿನವರಾಗಿದ್ದೇವೆ. ನಮಗಿಬ್ಬರಿಗೂ ಐದು ಆರು ವರ್ಷ ಪ್ರಾಯವಾದಾಗ ಜೈನಸದ್ಗ*ಹಸ್ಥನಾದ ಸಿದ್ದಾರ್ಥನೆಂಬ ಉಪಾಧ್ಯಾಯನ ಬಳಿಯಲ್ಲಿ ಇಬ್ಬರನ್ನೂ ವಿದ್ಯಾಭ್ಯಾಸಕ್ಕೆ ಇಟ್ಟರು. ಏಳೆಂಟು ವರ್ಷದೊಳಗಾಗಿ ನಾವಿಬ್ಬರೂ ವ್ಯಾಕರಣ, ಪ್ರಮಾಣ, ಛಂದಸ್ಸು, ಅಲಂಕಾರ, ನಿಘಂಟು, ಕಾವ್ಯ, ನಾಟಕ, ಸಾಮುದ್ರಕ, ವಾತ್ಸ್ಯಾಯನ, ಶಾಲಿಹೋತ್ರ, ಪಾಲಕಾಪ್ಯ, ಚಾಣಕ್ಯ, ವೈದ್ಯ – ಮೊದಲಾಗಿ ಉಳ್ಳ ಶಾಸ್ತ್ರಗಳೆಲ್ಲವನ್ನೂ ಕಲಿತೆವು. ಆಮೇಲೆ, ಇವನು ತಳಾರನ ಮಗನಾದುದರಿಂದ ತನಗೆ ಯೋಗ್ಯವಾದ ಕಳ್ಳರನ್ನು ಕಂಡುಹಿಡಿವ ಕ್ರಮವನ್ನು ಹೇಳತಕ್ಕ ‘ಸುರಖ* ಎಂಬ ವಿದ್ಯೆಯನ್ನು ಕಲಿತನು. ನಾನು ಕಳವು ಮಾಡುವ ಉಪಾಯವನ್ನು ತಿಳಿಸುವ ಕರಪಟಶಾಸ್ತ್ರವನ್ನು ಕಲಿತೆನು. ಹೀಗೆ ನಮ್ಮೊಳಗೆ ಪರಸ್ಪರ ಪ್ರೀತಿಯಿಂದ ಕಾಲ ಕಳೆಯುತ್ತಿತ್ತು. ಒಂದು ದಿವಸ ನಾವಿಬ್ಬರೂ ಕಾಡಿನಲ್ಲಿ ಆಟವಾಡಲೆಂದು ‘ಇಂದ್ರೋಪಮ’ ಎಂಬ ಕಾಡಿಗೆ ಹೋದೆವು. ಅಲ್ಲಿ ಅಶೋಕ, ಪುನ್ನಾಗ, ರಂಜೆ, ತಿಲಕ, ಹೊಂಗೆ, ಸಂಪಗೆ, ಅಡಕೆಮರ, ತೆಂಗಿನಮರ, ಖರ್ಜೂರ, ಜಂಬು, ನಿಂಬೆ, ಹಲಸು,ದಾಳಿಂಬೆ, ಬಾಳೆ, ದ್ರಾಕ್ಷೆ, ಮಾವು – ಮುಂತಾಗಿರತಕ್ಕ ಹಲವು ಬಗೆಯ ಮರಗಳ ಜಾತಿಗಳಿಂದ ಒತ್ತೊತ್ತಾಗಿರುವ ನಂದನದ ಉದ್ಯಾನದಲ್ಲಿ ಇಬ್ಬರೂ ಉಳಿಚೆಂಟಾಟವನ್ನು ಆಡುತ್ತಿದ್ದೆವು.

ಮೂಲಗದ್ಯ:- ವಿದ್ಯೆಯನೀತಂ ಕಲ್ತನಪ್ಪುದಱಂದೆಲ್ಲಿಯುಳಿದೊಡಂ ಕಾಣಲಾಗದೀತನಂ ನೀಡುಮಱಸಿ ಕಾಣದೆ ದೆಸೆಗೆಟ್ಟು ಬೇಸತ್ತಾನಿಂತೆಂದೆನಕ್ಕುಂ ಮಗನೆ ನೀಂ ತಳಾಱನಪ್ಪಂದು ನಿನ್ನ ಕಾಪಿನೊಳ್ ಕಳ್ದು ನಿನ್ನಂ ಕೊಲಿಸದಾಗಳೆನಾಯ್ತೆಂದು ನುಡಿದೊಡೀತನುಮಿಂತೆಂದನಕ್ಕುಂ ಮಗನೆ ನೀನೆನ್ನ ತಳಾಱುಗೆಯ್ಯಂದು ಕಳ್ದೊಡೆ ನಿನ ಪಿಡಿದುಡಿಯೆ ಕಟ್ಟಿ ಕಳ್ಳರ ದಂಡಣೆಯಿಂ ದಂಡಿಸದಾಗಳೇನಾಯ್ತೆಂದು ನುಡಿದೊಡೀ ನುಡಿಯಂ ಮಱೆಯಲ್ವೇಡೆಂದಿರ್ವರುಮೋರೊರ್ವರಂ ಮೂದಲಿಸಿ ಪ್ರತಿಜ್ಞೆಗೆಯ್ದು
ಕೆಲಕಾಲದಿಂದೆನ್ನ ತಂದೆಯೆನಗೆ ರಾಜ್ಯಪಟ್ಟಂಗಟ್ಟಿ ಶ್ರುತಸಾಗರರೆಂಬ ಭಟಾರರ ಪಕ್ಕದೆ ತಪಂಬಟ್ಟನೀತನ ತಂದೆಯುಂ ತನ್ನ ಸಂತಾನಮನೀತಂಗೆ ಕೊಟ್ಟರಸನೊಡನೆ ತಪಂಬಟ್ಟಂ ಮತ್ತಾನುಂ ರಾಜ್ಯಂಗೆಯ್ಯುತ್ತಿರೆ ಈತನುಮಾ ಪೊೞಲೊಳ್ ತಳಾಱುಗೆಯ್ಯುತ್ತಿರ್ಕುಮಿಂತು ಸುಖದೊಳಿರ್ವರ್ಗ್ಗಂ ಕಾಲಂ ಸಲೆ ಮತ್ತೊಂದು ದಿವಸಮೀತಂ ತನ್ನ ಮನದೊಳಿಂತೆಂದು ಬಗೆದನೆನ್ನರಸಂ ಕಳ್ಳನಾನುಮೀ ಪೊೞಲೊಳ್ ತಳಾಱು ಗೆಯ್ದೆನಿದು ಕಜ್ಜಮೊಳ್ಳಿತ್ತಲ್ತೆಂದೆನಗಂಜಿ ನಾಡಂ ಬಿಟ್ಟು ಬಂದು ನಿಮಗಾಳಾದನಾನುಮೀತನನೆನ್ನಾಳ್ವ ನಾಡೆಂಟುದೆಸೆಯ ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳೊಳಾರಯ್ಸಿಯುಂ ಕಾಣದೆ ಪರಮಂಡಲಂಗಳೊಳಮಾರಯ್ಸಿಯುಂ ಕಾಣದಿಲ್ಲಿಗಾರಯ್ಯಲಟ್ಟಿದೊಡೆ ಚರಪುರುಷರಾರಯ್ದು ಕಂಡು ಬಂದೆನಗಿಂತೆಂದು ಪೇೞ್ವರ್
ಸರಳಾನುವಾದ:- ಈತನು ಅದೃಶ್ಯವಾಗತಕ್ಕ ವಿದ್ಯೆಯನ್ನು ಕಲಿತವನಾದುದರಿಂದ ಎಲ್ಲಿದ್ದರೂ ಕಾಣದ ರೀತಿಯಲ್ಲಿರಲು ಈತನನ್ನು ಬಹಳವಾಗಿಹುಡುಕಿದೆನು. ಆದರೂ ಕಾಣದೆ ದಿಕ್ಕುಕಾಣದೆ ಬೇಸರಗೊಂಡು ಹೀಗೆ ಹೇಳಿದೆನು – “ಮಗನೇ, ನೀನು ಪಟ್ಟಣದ ಕಾವಲುಗಾರನಾದಾಗ ನಗರ ನಿನ್ನ ರಕ್ಷಣೆಯಲ್ಲಿದ್ದಾಗಲೇ ನಾನು ಕದ್ದು ನಿನ್ನನ್ನು ಕೊಲ್ಲಿಸದಿದ್ದರೆ ಪಂಥವೇನು?* ಎಂದು ನಾನು ಹೇಳಿದಾಗ ಈತನು “ಮಗನೇ, ನಾನು ತಳಾರ ಕೆಲಸ ಮಾಡುವಾಗ ನೀನು ಕದ್ದರೆ ನಿನ್ನನ್ನು ಹಿಡಿದು ಮುರಿಯುವ ಹಾಗೆ ಕಟ್ಟಿ ಕಳ್ಳರಿಗೆ ವಿಸತಕ್ಕ ಶಿಕ್ಷೆಯಿಂದ ದಂಡಿಸದಿದ್ದರೆ ಏನಾಯ್ತು?* ಎಂದು ಹೇಳಿದನು. ‘ಈ ಶಪಥದ ಮಾತನ್ನು ಮರೆಯಬೇಡ’ ಎಂದು ನಾವು ಒಬ್ಬರೊಬ್ಬರನ್ನು ಮೂದಲಿಸಿ ಪ್ರತಿಜ್ಞೆ ಮಾಡಿದೆವು. ಕೆಲವು ಕಾಲದ ನಂತರ ನನ್ನ ತಂದೆ ನನಗೆ ರಾಜ್ಯಾಕಾರವನ್ನು ಕೊಟ್ಟು ಶ್ರುತಸಾಗರರೆಂಬ ಋಷಿಗಳ ಬಳಿಯಲ್ಲಿ ತಪಸ್ಸನ್ನು ಕೈಗೊಂಡನು. ಈ ಯಮದಂಡನ ತಂದೆಯೂ ತನ್ನ ವಂಶಕ್ರಮದಿಂದ ಬಂದ ತಳವಾರಿಕೆಯನ್ನು ಇವನಿಗೆ ಕೊಟ್ಟು ರಾಜನೊಡನೆ ತಪಸ್ಸನ್ನು ಸ್ವೀಕರಿಸಿದನು. ಆಮೇಲೆ ನಾನು ಅರಸನಾಗಿ ರಾಜ್ಯವಾಳುತ್ತಿದ್ದಾಗ ಈತನು ಆ ಪಟ್ಟಣದಲ್ಲಿ ತಳವಾರ ಕೆಲಸವನ್ನು ಮಾಡುತ್ತಿದ್ದನು. ಹೀಗೆಯೇ ಇಬ್ಬರಿಗೂ ಸುಖದಲ್ಲಿ ಕಾಲ ಕಳೆಯುತ್ತಿತ್ತು. ಅನಂತರ ಒಂದು ದಿವಸ ಈತನು ತನ್ನ ಮನಸ್ಸಿನಲ್ಲಿ ಈ ರೀತಿಯಾಗಿ ಯೋಚಿಸಿದನು – “ನನ್ನ ರಾಜನು ಕಳ್ಳನಾಗಿರುವನು. ನಾನು ಈ ಪಟ್ಟಣದಲ್ಲಿ ಕಾವಲುಗಾರಿಕೆ ಮಾಡುತ್ತಿದ್ದೇನೆ. ಈ ಕೆಲಸ ಒಳ್ಳೆಯದಲ್ಲ* ಎಂದು ನನಗೆ ಹೆದರಿ ನಾಡನ್ನು ತ್ಯಜಿಸಿ ಬಂದು ನಿಮ್ಮ ಸೇವಕನಾದನು. ನಾನು ಇವನನ್ನು ನಾನಾಳುವ ನಾಡಿನ ಎಂಟೂ ದಿಕ್ಕುಗಳಲ್ಲರುವ ಗ್ರಾಮ – ನಗರ – ಖೇಡ – ಖರ್ವಡ – ಮಡಂಬ – ಪಟ್ಟಣ – ದ್ರೋಣಾಮುಖ – ಎಂಬ ಭೂಭಾಗಗಳಲ್ಲಿ ವಿಚಾರಿಸಿಯೂ ಕಾಣಲು ಸಿಗಲಿಲ್ಲ. ಅನ್ಯರ ರಾಜ್ಯಗಳಲ್ಲಿ ವಿಚಾರಿಸಿಯೂ ಕಾಣಸಿಗಲಿಲ್ಲ. ಆದುದರಿಂದ ಇಲ್ಲಿ ಹುಡುಕಿಸುವುದಕ್ಕಾಗಿ ಇಲ್ಲಿಗೆ ಚಾರಕರನ್ನು ಕಳುಹಿಸಿದೆನು. ಅವರು ಹುಡುಕಿ ಕಂಡು ಬಂದು ನನಗೆ ಹೀಗೆ ಹೇಳಿದರು –

ಮೂಲಗದ್ಯ:- ದೇವಾ ಮೀಥಿಳೆಯೆಂಬುದು ಪೊೞಲದನಾಳ್ವೊಂ ವಾಮರಥನೆಂಬರಸಂಗೆ ಯಮದಂಡಂ ಪೋಗಿಯಾಳಾಗಿ ಪೊೞಲ ಕಾಪಂಬೆತ್ತು ಸುಖದೊಳಿರ್ದೊನೆಂದು ಪೇೞ್ದೊಡಾ ಮಾತಂ ಕೇಳ್ದು ಪುರುಷೋತ್ತಮನೆಂಬ ಮಂತ್ರಿಗೆ ಮಿಥಿಳೆಯೆಂಬ ಪೊೞಲ್ಗಾನಾರುಮಱಯದಂತಿರೆ ಪೋಗಿ ಯಮದಂಡನೊಡಗೊಂಡು ಬಂದಪೆನೆಂದು ಪೇೞ್ದು ವಜ್ರಸೇನನೆಂಬ ಪೆರ್ಗಡೆಯಂ ಕರೆಯಿಸಿ ಅನೊಂದು ಮನೆವಾೞ್ತೆಗೆ ಪೋಗಿ ಬಂದಪೆನೆನ್ನ ಬರ್ಪನ್ನೆಗಂ ರಾಜ್ಯಮಂ ಪ್ರತಿಪಾಲಿಸುತ್ತಿರೆಂದು ಕಲ್ಪಿಸಿ ಸಮಸ್ತರಾಜ್ಯಭಾರಮಂ ಸಮರ್ಪಿಸಿ ಆರ್ಧರಾತ್ರದಾಗಳ್ ಕಪ್ಪಡಮಂ ಪಱೆದುಟ್ಟು ಬೞಕಾರು ಮಱಯಲೀಯದೊರ್ವನೆ ಪೊಱಮಟ್ಟು ಬಂದೀ ಪೊೞಲಂ ಪೊಕ್ಕು ಪ್ರತಿಜ್ಞೆ ಕಾರಣವಾಗಿ ಕಸವರಮಂ ಕಳ್ದೀತನಂ ಕೊಲಿಸುವಂತು ಮಾಡಿದೆನಿದು ಕಳ್ದುದರ್ಕೆ ಕಾರಣಮೀತನುಮೆನಗೀ ಪಾಂಗಿನೊಳ್ ಮಿತ್ರನೆಂದು ಪೇೞ್ದು ಮತ್ತಮಿಂತೆಂದಂ ನಿಮ್ಮ ದೇವತಾಷ್ಠಿತಮಪ್ಪ ಸರ್ವರುಜಾಪಹಾರಮೆಂಬ ಹಾರಮಗಮಸಮ್ಯಗ್ದೃಷ್ಟಿಯೆನಪ್ಪುದಱಂದೆನ್ನ ಕೆಯ್ಗೆವಂದುದುೞದ ಮಿಥ್ಯಾದೃಷ್ಟಿಗಳ ಕೆಯ್ಗೆವಾರದೆಂದೊಡರಸಂ ತನ್ನ ಸಭೆಯೊಳಿರ್ದ ನೆರವಿಗೆಲ್ಲಂ ಹಾರಂ ಬಂದ ತೆಱನನಿಂತೆಂದು ಪೇೞಲ್ ತೊಡಡಗಿದೊಂ ಧನ್ವಂತರಿ ವಿಶ್ವಾನುಲೋಮರ್ಕಳ ಕಥೆಯಂ ಮೊದಲಿಂ ತಗುಳ್ದು ಪೇೞುತ್ತುಮಿಂತೆಂದನೆಮ್ಮ ಸಂತತಿಯ ಪದ್ಮರಥನೆಂಬರಸನೊಂದು ದಿವಸಂ ವಾಸುಪೂಜ್ಯತೀರ್ಥಕರ ಪರಮದೇವರಂ ಬಂದಿಸಲ್ ಪೋಗುತ್ತಿರ್ದೊನನೆಡೆಯೊಳ್ ಅಚ್ಯುತೇಂದ್ರನುಂ
ಸರಳಾನುವಾದ:- “ದೇವಾ, ಮಿಥಿಳೆ ಎಂಬ ಪಟ್ಟಣವಿದೆ. ಅದನ್ನು ವಾಮರಥನೆಂಬ ರಾಜನು ಆಳುತ್ತಿದ್ದಾನೆ. ಯಮದಂಡನು ಅಲ್ಲಿಗೆ ಹೋಗಿ ಅವನ ಸೇವಕನಾಗಿ ಪಟ್ಟಣದ ರಕ್ಷಣೆಯ ಕೆಲಸವನ್ನು ಪಡೆದು ತಳವಾರನಾಗಿ ಸುಖದಿಂದ ಇದ್ದಾನೆ* – ಎಂದು ಚಾರಕರು ಹೇಳಲು, ಆ ಮಾತನ್ನು ನಾನು ಕೇಳಿ ‘ಮೀಥಿಳೆಯೆಂಬ ಪಟ್ಟಣಕ್ಕೆ ನಾನು ಯಾರೊಬ್ಬರೂ ತಿಳಿಯದ ಹಾಗೆ ಹೋಗಿ ಯಮದಂಡನನ್ನು ಕೂಡಿಕೊಂಡು ಬರುತ್ತೇನೆ’ ಎಂದು ಪುರುಷೋತ್ತಮನೆಂಬ ಮಂತ್ರಿಗೆ ಹೇಳಿದೆನು. ಆ ಮೇಲೆ ವಜ್ರಸೇನನೆಂಬ ಹೆಗ್ಗಡೆಯನ್ನು ಕರೆಯಿಸಿ, ‘ನಾನು ಒಂದು ಗೃಹಕೃತ್ಯದ ಸಂಬಂಧದಲ್ಲಿ ಹೋಗಿ ಬರುತ್ತೇನೆ. ನಾನು ಬರುವವರೆಗೆ ರಾಜ್ಯಪಾಲನೆ ಮಾಡುತ್ತಿರು’ ಎಂದು ಹೇಳಿ ಎಲ್ಲ ರಾಜ್ಯಭಾರವನ್ನೂ ಅವನಿಗೆ ಒಪ್ಪಿಸಿಕೊಟ್ಟು ನಡುವಿರುಳಿನಲ್ಲಿ ಬಟ್ಟೆಯನ್ನು ಹರಿದು ಉಟ್ಟುಕೊಂಡು, ಆಮೇಲೆ ಯಾರೊಬ್ಬರೂ ತಿಳಿಯದ ರೀತಿಯಲ್ಲಿ ಒಬ್ಬನೆ ಹೊರಟುಬಂದು, ಈ ಪಟ್ಟಣವನ್ನು ಪ್ರವೇಶಿಸಿದೆನು. ಇಲ್ಲಿ ನನ್ನ ಪ್ರತಿಜ್ಞೆಯೇ ಕಾರಣವಾಗಿ ದ್ರವ್ಯವನ್ನು ಕಳವು ಮಾಡಿ, ಈ ಯಮದಂಡನನ್ನು ಕೊಲ್ಲಿಸುವ ಹಾಗೆ ಮಾಡಿದ್ದೇನೆ. ಇದೇ ನಾನು ಕಳ್ಳತನ ಮಾಡಲು ಕಾರಣ. ಈತನು ನನಗೆ ಈ ರೀತಿಯಲ್ಲಿ ಮಿತ್ರನಾಗಿದ್ದಾನೆ*. ವಿದ್ಯುಚ್ಚೋರನು ಹೀಗೆ ಹೇಳಿ, ಮತ್ತೆ ಹೀಗೆಂದನು – “ದೇವಶಕ್ತಿಯುಳ್ಳ ನಿಮ್ಮ ಸರ್ವರುಜಾಪಹಾರ ಎಂಬ ಮಾಲೆ ಸಮ್ಯಗ್ದೃಷ್ಟಿಯುಳ್ಳವನಾದ ಕಾರಣದಿಂದ ನನ್ನ ಕೈಗೆ ಬಂದಿದೆ, ಇನ್ನುಳಿದ ಮಿಥ್ಯಾದೃಷ್ಟಿಯುಳ್ಳವರ ಕೈಗೆ ಇದು ಬರಲಿಕ್ಕಿಲ್ಲ*‘ – ಎಂದಾಗ ರಾಜನು ತನ್ನ ಕೈಗೆ ಹಾರ ಬಂದ ಸಂಗತಿಯನ್ನು ತನ್ನ ಸಭೆಯ ಜನ ಸಮೂಹಕ್ಕೆಲ್ಲ ಹೀಗೆ ಹೇಳತೊಡಗಿದನು – ವಾಮರಥ ರಾಜನು ತನ್ನಕಥೆಯನ್ನು ಧನ್ವಂತರಿ ವಿಶ್ವಾನುಲೋಮ ಎಂಬ ಪೂರ್ವಿಕರಿಂದಲೇ ಪ್ರಾರಂಭಿಸಿ ಹೇಳುತ್ತ ಮತ್ತೆ ಹೀಗೆಂದನು – ನಮ್ಮ ವಂಶದ ಪದ್ಮರಥನೆಂಬ ರಾಜನು ಒಂದು ದಿವಸ ವಾಸುಪೂಜ್ಯ ತೀರ್ಥಂಕರ ದೇವರನ್ನು ವಂದಿಸುವುದಕ್ಕಾಗಿ ಹೋಗುತ್ತಿದ್ದನು. ನಡುವಿನಲ್ಲಿ ಅವನನ್ನು ಅಚ್ಯುತೇಂದ್ರನೂ

ಮೂಲಗದ್ಯ:- ವಿಶ್ವಾನುಲೋಮಚರನಪ್ಪ ವಾಹನದೇವನುಮಿಂತಿರ್ವರುಂ ಕಂಡು ಅಚ್ಯುತೇಂದ್ರ ವಾಹನದೇವನನಿಂತೆಂದನೀತಂ ಆಧರ್ಮಿಯಿಂದೆ ಧರ್ಮಮಂ ಕೆಯ್ಕೊಂಡು ವಾಸುಪೂಜ್ಯ ತೀರ್ಥಕರ ಪರಮದೇವರಂ ಬಂದಿಸಿದಲ್ಲದುಣ್ಣೆನೇಂದಾಗ್ರಹಂ ಗೊಂಡು ಚಂಪಾನಗರಕ್ಕೆವೋದಪೊನೀತನಂ ಪೋಗಲೀಯದೆ ಮಗುೞ್ಚಲಾಱಡೆ ಮಗುೞ್ಚೆಂದು ನುಡಿದೊಡೆ ವಾಹನದೇವನುಂ ತನ್ನಾರ್ಪ ತೆಱದಿಂದೆಲ್ಲಮೆನಿತಾನುಂ ತೆಱದುಪಸರ್ಗಂಗೆಯ್ದು ಮಗುೞ್ಚಲಾಱದೆ ಬೇಸತ್ತುೞದೊಡೆ ಅಚ್ಯುತೇಂದ್ರಂ ಪದ್ಮರಥಂಗೊಸೆದು ನತ್ನ ತೊಟ್ಟ ಸರ್ವರುಜಾಪಹಾರ ಮೆಂಬ ಹಾರಮನಾತನ ಕೊರಳೊಲ್ ತಾನೆ ಕಟ್ಟಿ ಪೊಗೞ್ದು ಪೂಜಿಸಿ ಪೋದೊನಿಂತೀ ಪಾಂಗಿನೊಳೆಮಗೀ ಹಾರಂ ಸಂತತಿಯಿಂ ಬಮದುದೆಂದು ಪೇೞ್ದರ್ದ ತದನಂತರಂ ಇರ್ವರ್ ಪರಿವೊಟ್ಟೆಯವರೋಲೆಯಂ ಕೊಂಡು ಬಂದರಸನ ಮನೆಯ ಬಾಗಿಲೊಳ್ ನಿಂದು ಪಡಿಯಱಂಗೆ ಪೇೞ್ದೊಡೆ ಪಡಿಯಱಂ ತಮ್ಮರಸಂಗೆ ವೇೞ್ದೊಡರಸನನುಮತದಿಂದರಮನೆಯಂ ಪೊಕ್ಕಾಸ್ಥಾನಮಂಟಪ ದೊಳಿರ್ದ ವಿದ್ಯುಚ್ಚೋರನಂ ಕಂಡು ಪೊಡೆವಟ್ಟಾತನ ಮೂಂದೋಲೇಯನಿಕ್ಕಿದಾಗಳ್ ಸಂವಿಗ್ರಹಿ ಓಲೆಯಂ ಕೊಂಡರಸನ ಮುಂದಿಂತೆಂದು ಬಾಚಿಸಿದಂ
ಸರಳಾನುವಾದ:- ವಿಶ್ವವನ್ನು ಸಹಜ ರೀತಿಯಲ್ಲಿ ಸಂಚರಿಸತಕ್ಕ ವಾಹನದೇವನೂ ಹೀಗೆ ಇಬ್ಬರೂ ಕಂಡು. ಅಚ್ಚುತೇಂದ್ರನು ವಾಹನದೇವನೊಡನೆ “ಈತನು ಆಧರ್ಮಿಯಿಂದ ಧರ್ಮವನ್ನು ಸ್ವೀಕರಿಸಿ ವಾಸುಪೂಜ್ಯ ತೀರ್ಥಂಕರ ಪರಮದೇವರನ್ನು ವಂದಿಸಿದಲ್ಲದೆ ಊಟ ಮಾಡುವುದಿಲ್ಲವೆಂದು ಹಟತೊಟ್ಟುಕೊಂಡು ಚಂಪಾನಗರಕ್ಕೆ ಹೋಗುತ್ತಿದ್ದಾನೆ. ಇವನನ್ನು ಹೊಗಲಿಕ್ಕೆ ಬಿಡದೆ ಹಿಂದಿರುಗಿಸಲು ನೀನು ಸಮರ್ಥನಾದರೆ ಹಿಂದಿರುಗಿಸು* ಎಂದು ಹೇಳಿದನು. ವಾಹನದೇವನು ತನ್ನಿಂದ ಸಾಧ್ಯವಾಗುವಷ್ಟು ರೀತಿಯಲ್ಲಿ ಎಲ್ಲ ಬಗೆಯಲ್ಲಿ ಎಷ್ಟೆಷ್ಟೋ ವಿಧದಲ್ಲಿ ಉಪಸರ್ಗವನ್ನು ಉಂಟುಮಾಡಿ ಹಿಂದಿರುಗಿಸಲಾರದೆ ಬೇಸರಗೊಂಡವನಾಗಿ ಬಿಟ್ಟು ಬಿಟ್ಟನು. ಅಚ್ಯುತೇಂದ್ರನು ಪದ್ಮರಥನಿಗೆ ಮೆಚ್ಚಿ ತಾನು ಧರಿಸಿದ್ದ ಸರ್ವರುಜಾಪಹಾರವೆಂಬ ಹಾರವನ್ನು ಅವನ ಕೊರಳಿಗೆ ತಾನೇ ಕಟ್ಟಿ, ಹೊಗಳಿ, ಪೂಜಿಸಿ, ತೆರಳಿದನು. ಈ ರೀತಿಯಲ್ಲಿ ಈ ಮಾಲೆ ನನಗೆ ನಮ್ಮ ವಂಶಾನುಗತವಾಗಿ ಬಂದಿದೆ ಎಂದು ವಾಮರಥನು ಹೇಳಿದನು. ಆಮೇಲೆ, ಒಂಟೆಯನ್ನೇರಿಕೊಂಡು ಬರುವ ದೂತರಿಬ್ಬರು ಪತ್ರವನ್ನು ತೆಗೆದುಕೊಂಡು ಬಂದು ಅರಸನ ಮನೆಯ ಬಾಗಿಲಲ್ಲಿ ನಿಂದು ತಮಗೆ ರಾಜನನ್ನು ಕಾಣಬೇಕಾಗಿದೆಯೆಂದು ದ್ವಾರಪಾಲಕನಿಗೆ ತಿಳಿಸಿದರು. ದ್ವಾರಪಾಲನು ಇದನ್ನು ರಾಜನಿಗೆ ಹೇಳಲು, ರಾಜನು ಅನುಮತಿಯಿತ್ತನು. ಅದರಂತೆ ದೂತರು ಅರಮನೆಯನ್ನು ಹೊಕ್ಕು ಅಸ್ಠಾನಮಂಟಪದಲ್ಲಿದ್ದ ವಿದ್ಯುಚ್ಚೋರನನ್ನು ಕಂಡು ಸಾಷ್ಠಾಂಗವಂದನೆ ಮಾಡಿ, ಆತನ ಮುಂದೆ ಪತ್ರನ್ನು ಇಟ್ಟರು. ಆಗ ರಾಜನ ಅಕಾರಿ (ಮಂತ್ರಿ)ಯೊಬ್ಬನು ಪತ್ರವನ್ನು ತೆಗೆದುಕೊಂಡು ರಾಜನ ಮುಂದೆ ಈ ರೀತಿಯಾಗಿ ಓದಿದನು –
ಮೂಲಗದ್ಯ:- ವಿದ್ಯುಚ್ಚೋರ ಪರಮಸ್ವಾಮಿಗೆ ಮಂತ್ರಿ ಪುರುಷೋತ್ತಮನುಂ ಪೆರ್ಗಡೆ ವಜ್ರಸೇನನುಂ ಸಾಷ್ಟಾಂಗವೆಱಗಿ ಪೊಡೆವಟ್ಟು ಕಾರ್ಯಮಂ ಬಿನ್ನವಿಪ್ಪರ್ ತಾಮುಂ ಪಲವು ದಿವಸಂ ಪೋಗಿರ್ದರ್ ಪೆಱತಣ ಮನೆವಾೞ್ತೆಯಂ ಮಱೆದಿರ್ದರ್ ತಾಮಿಲ್ಲದೆ ರಾಜ್ಯಮಂ ಪ್ರತಿಪಾಲಿಸುವೊರಾರುಮಿಲ್ಲೀಯೋಲೆಯಂ ಕಾಣಲೊಡಂ ತಡೆಯದೆ ಪೊಱಮಟ್ಟು ಬೇಗಂ ಬರ್ಕೆಂದು ಬಾಚಿಸಿದುದಂ ವಾಮರಥಂ ಕೇಳ್ದು ಮುನ್ನೀತನ ಪೇೞ್ದುದುಮೋಲೆಯ ಮಾತುಮೊಂದಾದಾದುದೆಂದು ಸಂದೇಹಮಿಲ್ಲದಾಗಳ್ ನಂಬಿ ಈತಂ ಮಂಡಳಿಕನೆಂದಱದು ತನ್ನ ಸಿಂಹಾಸನದೊಳೋರಂತಪ್ಪಾಸನ ಮನಿಕ್ಕಲ್ವೇೞರಿಸಿ ಇಂತೆಂದನೆನ್ನ ತಂಗೆಯ ಮಗನಯ್ ಸೋದರಳಿಯನಯ್ ನಿನಗೆನ್ನ ಮಕ್ಕಳಂ ಶ್ರೀಮತಿ ವಸುಮತಿ ಗುಣಮತಿ ಸುಲೋಚನೆ ಸುಪ್ರಭೆ ಸುಕಾಂತೆ ಸುಶೀಲೆ ಮನೋಹರಿಯೆಂಬೆಣ್ಣರುಂ ಕನ್ನೆಯರತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿ ಹಾವ ಭಾವ ವಿಲಾಸ ವಿಭ್ರಮಂಗಳನೊಡೆಯರ್ ನವಯೌವನೆಯರಕ್ಷರಾಲೇಖ್ಯ ಗಣಿತ ಗಾಂಧರ್ವ ನೃತ್ಯ ಚಿತ್ರಕರ್ಮ ಪತ್ರಚ್ಛೇದ್ಯಮೆಂದಿವು ಮೊದಲಾಗೊಡೆಯ ಚತುಷ್ಪಷ್ಟಿ ಕಲೆಗಳೊಳಾದಮಾನುಂ ಕುಶಲೆಯರ್ ಪರಮಂಡಲಿಕರ್ ಪಲರ್ ಪಾಗುಡಂಗಳುಮೋಲೆಗಳುಂ ಪೆರ್ಗಡೆಗಳುಮನೆನವರತಂ ಕೂಸುಗಳಂ ಬೇಡಿಯಟ್ಟುತ್ತಿರ್ಪರವರಾರುಮಂ ನಾಂ ಮೆಚ್ಚದೆ ಕುಡದಿನ್ನೆಗಮಿಂತಿವರ್ಗಳಂ ತಾಂಗಿರ್ದೆನೀ ಕನ್ಯಾರತ್ನಂಗಳ್ಗೆ ನೀನೆ ಯೋಗ್ಯನಯ್ ನಿನಗೆಣ್ವರುಮಂ ಕೊಟ್ಟೆನ್ ಮದುವೆನಿಲ್ಲೆಂದೊಡಾತನಿಂತೆಂದನಾನೊರ್ವಳ್ಗೆ ಬೇಂಟಂಗೊಂಡಿರ್ದೆನಿವರಂ ಕೊಂಡೇವೆನೆಂದೊಡರಸನಾರ್ಗೆ ಬೇಂಟಂಗೊಂಡಿರ್ದೆಯೆಂದು ಬೆಸಗೊಂಡೊಡೆ ಮುಕ್ತಿಶ್ರೀಯೆಂಬೊಳ್ ಪೆಂಡತಿಗೆ ಬೇಂಟಂ ಗೊಂಡಿರ್ದನಾಕೆಯಂ ಮದುವೆನಿಲಲ್ವೇೞ್ದುಮೆಂದು ಪರಿಚ್ಛೇದಿಸಿ ನುಡಿದು
    ಸರಳಾನುವಾದ:- “ವಿದ್ಯುಚ್ಚೋರ ಮಹಾರಾಜರಿಗೆ ಮಂತ್ರಿಯಾದ ಪುರುಷೋತ್ತಮನೂ ಹೆಗ್ಗಡೆಯಾದ ವಜ್ರಸೇನನೂ ಸಾಷ್ಟಾಂಗ ವಂದನೆ ಮಾಡಿ ಕಾರ್ಯವನ್ನು ವಿಜ್ಞಾಪಿಸುವರು – ತಾವು ಹೋಗಿ ಹಲವು ದಿವಸವಾಯಿತು. ಹಿಂದಿನ ಗೃಹಕೃತ್ಯವನ್ನು ಮರೆತಿದ್ದೀರಿ. ತಾವು ಇಲ್ಲದೆ, ರಾಜ್ಯಪರಿಪಾಲನೆ ಮಾಡುವವರು ಯಾರೂ ಇಲ್ಲ. ಈ ಪತ್ರವನ್ನು ಕಂಡ ಕೂಡಲೇ ತಡವಿಲ್ಲದೆ ಹೊರಟು ಬೇಗನೆ ಬರಬೇಕು*. ಹೀಗೆ ಓದಿದುದನ್ನು ವಾಮರಥನು ಕೇಳಿ ‘ಮೊದಲು ಈತನು ಹೇಳಿದುದೂ ಪತ್ರದ ಮಾತೂ ಒಂದೇ ಆಯಿತು’ ಎಂದು ಸಂಶಯವಿಲ್ಲದೆ ಆಗ ವಿಶ್ವಾಸಪಟ್ಟನು. ಈತನು ತನ್ನ ಸಾಮಂತರಾಜನು ಎಂದು ತಿಳಿದು ಸಿಂಹಾಸನದಂತೆಯೇ ಇರತಕ್ಕ ಪೀಠವನ್ನು ಇಡಲು ಹೇಳಿ ಇರಿಸಿ ಹೀಗೆಂದನು – “ನೀನು ನನ್ನ ತಂಗಿಯ ಮಗನಯ್ಯಾ, ಸೋದರಳಿಯನಯ್ಯಾ. ನಿನಗೆ ನನ್ನ ಹೆಣ್ಣುಮಕ್ಕಳನ್ನು ಕೊಡುತ್ತೇನೆ. ಈ ಕನ್ಯೆಯರು ಅತ್ಯಂತ ರೂಪ – ಲಾವಣ್ಯ – ಸೌಭಾಗ್ಯ – ಕಾಂತಿ – ಹಾವ – ಭಾವ – ವಿಲಾಸ – ವಿಭ್ರಮಗಳಿಂದ ಕೂಡಿದವರು. ಶ್ರೀಮತಿ, ವಸುಮತಿ, ಗುಣಮತಿ, ಸುಲೋಚನೆ, ಸುಪ್ರಭೆ, ಸುಕಾಂತೆ, ಸುಶೀಳೆ, ಮನೋಹರಿ – ಎಂದು ಹೆಸರುಳ್ಳ ಎಂಟು ಮಂದಿ ಕನ್ಯೆಯರಿವರು. ಹೊಸ ಜವ್ವನೆಯರು. ಬರಹ, ಚಿತ್ರವಿದ್ಯೆ, ಗಣಿತ, ಗಾನ, ನೃತ್ಯ, ಚಿತ್ರಕಲೆ, ಭೂರ್ಜಾದಿ ಪತ್ರಗಳನ್ನು ಒಂದೇ ರೀತಿ ಕತ್ತರಿಸುವುದು, ಎಂದಿವೇ ಮೊದಲಾಗಿ ಉಳ್ಳ ಅರುವತ್ತನಾಲ್ಕು ಕಲೆಗಳಲ್ಲಿ ಅತ್ಯಂತ ಪ್ರವೀಣೆಯರಾಗಿದ್ದಾರೆ. ಬೇರೆ ರಾಜರುಗಳಲ್ಲಿ ಹಲವರು ಉಡುಗೊರೆ – ಕಾಣಿಕೆಗಳನ್ನೂ ಪತ್ರಗಳನ್ನೂ ಅಕಾರಿಗಳನ್ನೂ ಕಳುಹಿಸಿ ಕನ್ಯೆಯರನ್ನು ಕೇಳುತ್ತಿದ್ದಾರೆ. ಕನ್ಯೆಯರನ್ನು ಕೊಡದೆ ಇದುವರೆಗೂ ಇವರನ್ನು ಸಲಹಿಕೊಂಡಿದ್ದೆನು. ಈ ಕನ್ಯಾರತ್ನಗಳಿಗೆ ನೀನೇ ಯೋಗ್ಯನಯ್ಯಾ. ಈ ಎಂಟು ಮಂದಿಯನ್ನೂ ನಿನಗೆ ಕೊಡುತ್ತೇನೆ, ಮದುವೆಯಾಗು* ಎಂದು ಹೇಳಿದನು. ಆಗ ಅವನು ಹೀಗೆಂದನು – “ನಾನು ಒಬ್ಬಳ ಮೇಲೆ ಪ್ರೀತಿಪಟ್ಟಿದ್ದೇನೆ. ಇವರನ್ನು ಸ್ವೀಕರಿಸಿ ಏನು ಮಾಡುವೆನು?” ಹೀಗೆಂದಾಗ ರಾಜನು ’ಯಾರಿಗಾಗಿ ಪ್ರೀತಿಪಟ್ಟಿದ್ದೀ?’ ಎಂದು ಕೇಳಲು, “ಮುಕ್ತಿಶ್ರೀ ಎಂಬ ಹೆಂಡತಿಯ ಮೇಲೆ ಪ್ರೀತಿಪಟ್ಟಿದ್ದೇನೆ. ಅವಳನ್ನು ಮದುವೆಯಾಗಬೇಕು" ಎಂದು ನಿಚ್ಚಯವಾಗಿ ನುಡಿದನು.
ಮೂಲಗದ್ಯ:- ಮತ್ತಮಿಂತೆಂದನೆನ್ನ ಕೆಳೆಯನನೆಗೊಪ್ಪಿಸಲ್ವ್ೞ್ಕುಮೆಂದೊಡರಸನುಮೊಪ್ಪಿಸಿದೆನೆಂದೊಡೆ ಅರಸನಂ ಬೀೞ್ಕೊಂಡು ಯಮದಂಡ ಪುರಸ್ಸರಮಿರ್ವರುಮೊಟ್ಟೆಯನೇಱ ತುರಿಪದಿಂ ಕತಿಪಯ ದಿವಸಂಗಳಿಂ ವೇಣಾತಟಮನೆಯ್ದಿ ಪೊಱವೊಱಲೊಳಿರ್ದು ಪೇೞ್ದಟ್ಟಿಯಪ್ಪಶೋಭೆಯಂ ಮಾಡಿಸಿ ಮಂತ್ರಿಮಹತ್ತರ ಪರಿವಾರ ಸಾಮಂತ ಮಹಾಸಾಮಂತರುಂ ಪೆಂಡವಾಸದ ಸೂಳೆಯರುಂ ಪೊೞಲ ಜನಮೆಲ್ಲಮಿದಿರಂ ಬಂದು ಕಂಡು ಪೊಡೆವಟ್ಟು ಸೇಸೆಗಳನಿಕ್ಕಿದ ಬಱಕ್ಕೆ ಪಟ್ಟವರ್ಧನಮನಿರ್ವರುಮೇಱ ಬೆಳ್ಗೊಡೆ ಮೊದಲಾಗೊಡೆಯ ರಾಜಚಿಹ್ನಂಗಳ್ ಮುಂದೆ ಪರಿಯೆ ಪಂಚಮಹಾಶಬ್ದಂಗಳುಂ ಬದ್ದವಣದ ಪಱೆಗಳುಂ ಬಾಜಿಸೆ ಅರಮನೆಯಂ ಪೊಕ್ಕು ಮಱುದಿವಸಮಾಸ್ತಾನಮಂಡಪದೊಳ್ ಸಿಂಹಾಸನಮಸ್ತಕಸ್ಥಿತನಾಗಿ ಸಾಮಂತ ಮಹಾಸಾಮಂತರ್ಕಳಂ ಮಂತ್ರಿಮಹತ್ತರ ಪುರೋಹಿತ ಪರಿವಾರದವರ್ಗಳಮರಸಿಯರ್ಕಳಂ ಬೞಯಟ್ಟಿ ಬರಿಸಿ ಇಂತೆಂದು ನುಡಿದನಾನೀ ಸಂಸಾರದೊಳಪ್ಪ ಭೋಗೋಪಭೋಗಂಗಳ್ಗೆ ಪೇಸಿ ವಿರಕ್ತನಾಗಿ ತಪಂಬಡಲ್ ಬಗೆದಪ್ಪೆನೆಂದೊಡನಿಬರುಂ ನೆರೆದಿಂತೆಂದರಿನ್ನುಮಾವುದು ಕಾಲಂ ತಪಂಬಡಲಿನ್ನುಂ ನೀ ಕೂಸನಯ್ ನವಯೌವನನಯ್ ಕೆಲಕಾಲಮರಸುಗೆಯ್ದು ಪಶ್ಚಾತ್ಕಾಲದೊಳ್ ತಪಂಬಡಲಕ್ಕುಮೆಂದೊಡರಸನಿಂತೆಂತನೆಂತಱಯಲಕ್ಕು ಮನ್ನೆಗಂ ಸಾವರೊ ಬಾೞ್ವರೊ ಎಂದೀ ಪ್ರಸ್ತುತುಂಗಳನವರ್ಗ್ಗಾಡಿ ಪೇೞಲ್ ತೊಡಂಗಿದಂ
ಸರಳಾನುವಾದ:- ಅನಂತರ – “ನನ್ನ ಗೆಳೆಯನನ್ನು ನನಗೆ ಒಪ್ಪಿಸಬೇಕು" ಎಂದು ಹೇಳಲು, ರಾಜನು, ‘ಒಪ್ಪಿಸಿದ್ದೇನೆ’ ಎಂದನು. ಅದರಂತೆ, ರಾಜನನ್ನು ಬಿಟ್ಟು ಹೊರಟು, ಯಮದಂಡನ ಸಮೇತವಾಗಿ ಇಬ್ವರೂ ಒಂಟೆಯ ಮೇಲೆ ಕುಳಿತರು. ತ್ವರೆಯಾಗಿ ಹೋಗುತ್ತ ಕೆಲವು ದಿವಸಗಳಲ್ಲಿ ವೇಣಾತಟಕ್ಕೆ ಬಂದು, ಆ ಪಟ್ಟಣದ ಹೊರಗಿದ್ದು ಹೇಳಿಕಳುಹಿಸಿ, ಕಲಶ, ಕನ್ನಡಿ, ಬಾವುಟ, ತೋರಣ, ಧೂಪ, ದೀಪ, ಭೇರಿ, ಬೀಸಣಿಗೆ – ಎಂಬೀ ಎಂಟು ಬಗೆಯ ಅಲಂಕಾರಗಳನ್ನು ಮಾಡಿಸಿದನು. ಮಂತ್ರಿ, ಮೇಲಕಾರಿ, ಪರಿವಾರ, ಸಾಮಂತ ಮಹಾಸಾಮಂತರೂ ರಾಣೀವಾಸದ ಸ್ತ್ರೀಯರೂ ಪಟ್ಟಣಿಗರೆಲ್ಲರೂ ಎದುರಿಗೆ ಬಂದು ವಂದಿಸಿ ಮಂತ್ರಾಕ್ಷತೆ ಹಾಕಿದನಂತರ ವಿದ್ಯುಚ್ಚೋರ – ಯಮದಂಡ ಇಬ್ಬರೂ ಪಟ್ಟದಾನೆಯನ್ನೇರಿದರು. ಮುಂದುಗಡೆಯಲ್ಲಿ ಶ್ವೇತಚ್ಛತ್ರ ಮುಂತಾದ ಅರಸುತನದ ಚಿಹ್ನೆಗಳು ಹೋಗುತ್ತಿದ್ದವು. ಪಂಚಮಹಾಶಬ್ದಗಳೂ ಮಂಗಳವಾದ್ಯಗಳೂ ಶಬ್ದಮಾಡುತ್ತಿರಲು ಅವರು ಅರಮನೆಯನ್ನು ಪ್ರವೇಶಿಸಿದರು. ಮಾರನೆಯ ದಿನ ವಿದ್ಯುಚ್ಚೋರನು ಆಸ್ತಾನಮಂಟಪದಲ್ಲಿ ಸಿಂಹಾಸನದ ಮೇಲೆ ಕುಳಿತು ಸಾಮಂತರನ್ನೂ ಮಹಾಸಾಮಂತರನ್ನೂ ಮಂತ್ರಿ, ಅಕಾರಿ, ಪುರೋಹಿತ, ಪರಿವಾರದವರನ್ನೂ ಅರಸಿಯರನ್ನೂ ಕರೆ ಕಳುಹಿಸಿ ಬರಮಾಡಿ ಹೀಗೆ ಹೇಳಿದನು – “ನಾನು ಈ ಸಂಸಾರದಲ್ಲಿ ಉಂಟಾಗುವ ಸುಖಗಳಿಗೆಲ್ಲ ಅಸಹ್ಯಪಟ್ಟು ವೈರಾಗ್ಯವನ್ನು ತಾಳಿ ತಪಸ್ಸನ್ನು ಸ್ವೀಕರಿಸಬೇಕೆಂದು ಭಾವಿಸುತ್ತಿದ್ದೇನೆ" ಹೀಗೆನ್ನಲು ಅವರೆಲ್ಲರೂ ಒಟ್ಟು ಸೇರಿ ಹೀಗೆಂದರು – “ತಪಸ್ಸು ಮಾಡುವುದಕ್ಕೆ ಇನ್ನೂ ಕಾಲ ಯಾವುದು? ನೀನಿನ್ನೂ ಚಿಕ್ಕವನಯ್ಯಾ ! ಈಗ ತಾನೇ ಯುವಕನಾಗಿದ್ದೀಯಷ್ಟೆ. ಕೆಲವು ಕಾಲದವರೆಗೆ ಅರಸುತನವನ್ನು ಮಾಡಿ, ಆಮೇಲೆ ತಪಸ್ಸನ್ನು ಸ್ವೀಕರಿಸಬಹುದು." ಆಗ ರಾಜನು ಹೀಗೆ ಹೇಳಿದನು. – “ಆ ವೇಳೆಗೆ ಸಾಯುವರೊ ಬದುಕಿರುವರೋ ತಿಳಿಯಲು ಹೇಗೆ ಸಾಧ್ಯ?" ಎಂದು ಈ ರೀತಿ ತಾತ್ಕಾಲಿಕವಾಗಿ ಅವರಿಗೆ ತಿಳಿಸಿ ಆಮೇಲೆ ಹೇಳಲು ತೊಡಗಿದನು –
 
ಮೂಲಗದ್ಯ:-  
 ಶ್ಲೋಕ || ಡಿಂಡೀರಪಿಂಡಸಂಕಾಶಮಾಯುಃ ಸಂಸಾರವರ್ತಿನಾಂ
ಆಖಂಡಲ ಧನುಷ್ಕಾಂಡ ಸನ್ನಿಭಂ ರೂಪಯೌವನಂ ||
ವೃತ್ತ || ರೂಪಂ ಯೌವನಮಾಯುರಕ್ಷವಿಷಯಾ ಭೋಗೋಪಭೋಗಾ ವಪುಃ
ವೀರ್ಯಂ ಸ್ವೇಷ್ಟಸಮಾಗಮೋ ವಸುಮತಿಃ ಸೌಭಾಗ್ಯಭಾಗ್ಯೋದಯೋ
ಯೇನಿತ್ಯಾಃ ಸುಟಮಾತ್ಮನಃ ಸಮುದಿತಾ ಜ್ಙಾನೇಕ್ಷೀಣಾಂ ಭೂಭೃತಾಂ
ಶೇಷಾ ಇತ್ಯನುಚಿಂತಯಂತು ಸುಯಃ ಸರ್ವೇಸದಾನಿತ್ಯತಾಂ ||
ಯದಿ ಜಾತಿಜರಾಮರಣಂ ಭವೇತ್
ಯದಿ ಚೇಷ್ಟ ವಿಯೋಗಭಯಂ ಭವೇತ್
ಯದಿ ಸರ್ವಮನಿತ್ಯಮಿದಂ ಭವೇತ್
ಇಹ ಜನ್ಮನಿ ಕಸ್ಯ ರತಿರ್ನಭವೇತ್ ||
ಅದಱಂ ಮಾನಸರ ರೂಪುಂ ಯೌವನಮುಂ ತೇಜಮುಂ ಲಾವಣ್ಯಮುಂ ಸೌಭಾಗ್ಯಮುಂ ಆಯುಷ್ಯಮುಂ ಶ್ರೀಯುಂ ಸಂಪತ್ತುಂ ವಿಭವಮುಂ ನಲ್ಮೆಯುಂ ಎಂದಿವು ಮೊದಲಾಗೊಡೆಯವನಿತ್ಯಂಗಳ್ ಮತ್ತಂ ಮೆಯ್ಯೊಳ್ಳಿತ್ತೆಯೆಂದೊಡದುವುಂ ತಾನಿಂತುಟೆ
ಗಾಹೆ || ಏದಂ ಸರೀರಮಸುಚಿಂ ಣಿಚ್ಚಂ ಕಲಿ ಕಲುಸಭಾಜಣಮಚೊಕ್ಖಂ
ಅಂತೋ ಬಾಹಿರದಿಟ್ಟಂ ಸಕ್ಕಿಬ್ಬಿಸ ಭಿರಿದಂ ತು ಅಮೇಜ್ಜಪುರಂ
ವಸಮಜ್ಜ ಮಾಂಸ ಸೇಣಿದ ಪುಪ್ಪುಸ ಕಾಲಿಜ್ಜ ಸೇಮ್ಮ ಸೀಹಾಣಂ
ಬಿಡಜಾಲ ಅಟ್ಠಿಸಕಲ (?) ಚಮ್ಮಾಣದ್ಧಂ (?) ಸರೀರಪುರಂ
ಸರಳಾನುವಾದ:- (ಸಂಸಾರದಲ್ಲಿ ಇರತಕ್ಕವರ ಆಯುಷ್ಯವು ನೊರೆಯ ಉಂಡೆಗೆ ಸಮಾನವಾಗಿರುತ್ತದೆ. ರೂಪವೂ ಯೌವನವೂ ಇಂದ್ರಧನುಸ್ಸಿನ ಕೋಲಿಗೆ ಸಮಾನವಾಗಿರುತ್ತದೆ) ರೂಪ ಯಾವನ, ಆಯುಸ್ಸು, ಇಂದ್ರಿಯಗೋಚರವಾದ ವಸ್ತುಗಳು, ಬಗೆ ಬಗೆಯ ಸುಖಗಳು, ಶರೀರ, ಶಕ್ತಿ, ಇಷ್ಟಜನರ ಸಹವಾಸ, ಭೂಮಿ (ರಾಜ್ಯದ ಒಡೆತನ), ಸೊಬಗು, ಸಂಪತ್ತುಗಳು ನಮಗೆ ಶಾಶ್ವತವಲ್ಲ. ಹೀಗೆಂದು ಉಳಿದ ಎಲ್ಲಾ ಬದ್ಧಿಶಾಲಿಗಳೂ ತಮ್ಮಲ್ಲಿ ಉದಿಸಿದ ಜ್ಞಾನದ ಕಣ್ಣುಗಳಿಂದ ಇವು ಅಶಾಶ್ವತವೆಂಬುದನ್ನು ಸರಿಯಾಗಿ ಯೋಚಿಸಲಿ) ಹುಟ್ಟು, ಮುಪ್ಪು, ಸಾವುಗಳು ಉಂಟಾಗುವುದಿಲ್ಲವಾದರೆ, ಪ್ರೀತಿಯ ಜನರ ಆಗಲಿಕೆಯ ದುಃಖ ಉಂಟಾಗುವುದಿಲ್ಲವಾದರೆ, ಈ ಎಲ್ಲ ವಸ್ತುಗಳು ಅಶಾಶ್ವತವಾಗುವುದಿಲ್ಲವಾದರೆ, ಈ ಲೋಕದಲ್ಲಿ ಜನ್ಮವೆತ್ತಲು ಯಾರಿಗೆ ತಾನೇ ಒಲವಾಗದು !)ಆದುದರಿಂದ ಮನುಷ್ಯರ ರೂಪ, ಯೌವನ, ತೇಜಸ್ಸು, ಲಾವಣ್ಯ, ಸೌಭಾಗ್ಯ, ಆಯುಷ್ಯ, ಸಿರಿಸಂಪತ್ತು, ವೈಭವ, ಪ್ರೀತಿ – ಎಂದಿವೇ ಮೊದಲಾಗಿ ಉಳ್ಳವು ಶಾಶ್ವತಗಳಲ್ಲ. ಅದಲ್ಲದೆ, ಶರೀರ ಒಳ್ಳೆಯದೆ? ಎಂದು ಕೇಳಬಹುದು. ಅದು ಕೂಡ ಈ ರೀತಿಯದೇ ಆಗಿದೆ – ಈ ಶರೀರವು ಆಶುಚಿಯಾದುದು. ಯಾವಾಗಲೂ ರಾಗದ್ವೇಷಗಳಿಗೆ ಪಾತ್ರವಾದುದು, ಅಶುಭವಾದುದು – ಒಳಗೂ ಹೊರಗೂ ಚರ್ಮದಿಂದ ಮುಚ್ಚಲ್ಪಟ್ಟುದು ಅಥವಾ ಕರುಳು ಮಾಂಸ ನರಗಳಿಂದ ಅವರಿಸಿದುದು. ಅಶುಚಿಯಾಗಿರುವ ಶುಕ್ಲಶೋಣಿತಗಳಿಂದ ತುಂಬಿದೆ. ಮೂತ್ರಮಲಾದಿಗಳ ಮನೆಯಾಗಿದೆ.

ಮೂಲಗದ್ಯ:-
ಅಟ್ಮಿಹಿ ಛಣ್ಣಂ ಣಾಳಿಹಿ ಬದ್ಧಂ ಕಲಿಮಲಭರಿದಂ ಕಿಮಿಕಉಲಪುಣ್ಣಂ
ಮಾಂಸವಿಲಿತ್ತಂ ತಯಪಡಿಛಣ್ಣಂ ಸರೀರಪುರಂತಂ ಸಂತತಮಚೊಕ್ಖಂ
ಏದಾರಿಸೇ ಸರೀರೇ ದುಗ್ಗಂಧೇ ಕುಣಿಮಪೂತಿಏ ಯಚೊಕ್ಖೇ
ಪಡಣ ಪಡಣಯ ಸಾರೇ ರಾಗಂ ಕರೇಂತಿ ಸಪ್ಪುರಿಸಾ
ಛಾಯೇವ ಸಕದಕ್ಕಮ್ಮಂ ಅಣುಯಾದಿ ಕಾರಗಂ ಸೇಸಂ (?)
ಪಲಾಯಿದಂ ದುಸ್ಸಕ್ಕಂ ಅನ್ಣತ್ಥ ಜಿಣಸಾಸಣೇ (?)
ಶ್ಲೋಕ || ದುರ್ಗಂಧೇ ದುರ್ಧರಶ ದುಃಖೇ ದುಃಸ್ವಭಾವೇ ನಶ್ವರೇ
ದುರ್ವಿಲೋಕೇ ವೃಥಾ ಕಾಯೇ ಕಿಂತು ಜ್ಞಾನಿ ತವಾಗ್ರಹಃ
ಅಚ್ಛೇದ್ಯೋನಂತ ಸೌಖ್ಯೋಹಂ ವೇತ್ತಾ ಪೂರ್ವೋನಿರಂಜನಃ
ಸರ್ವದುಃಖಾಕರಂ ದೇಹಂ ತ್ಯಜಾಮ್ಯೇತತ್ ಪರಿಸುಟಂ
ವೃತ || ಜಾತಿಕ್ಷ್ಮಾಜತತೇ ಕೃತಾಂತಕಯಪಿತ ಕ್ರೂರೋರು ದುಃಶ್ವಾಪದೇ
ವೈ ವೈಧಭಯೇ ದುರಂತ ದುರಿತ ಸೂರ್ಜ್ಜದವಾಗ್ನಿಚ್ಛದೇ
ನಿಸ್ತ್ರಾಣಸ್ಯ ವಿಚೇತಸೋ ದೈಢತೃಷಾ ದುಃಖಾಕುಳಸ್ಯಾಂಗಿನೋ
ಜೈನಂ ಶಾಸನಮೇಕಮೇವ ಶರಣಂ ಜನ್ಮಾಟವೀಸಂಕಟೇ

ಸರಳಾನುವಾದ:- ಶರೀರವೆಂಬ ಮನೆಯು ಕೊಬ್ಬು, ಮಜ್ಜೆ, ಮಂಸ, ರಕ್ತ, ಪುಪ್ಪುಸ, ಯಕೃತ್ತು, ಕಫ, ಸಿಂಬಳ, ರಕ್ತನಾಳ, ಮೂಳೆ ಇವುಗಳಿಂದ ತುಂಬಿದೆ. ಚರ್ಮದಿಂದ ಹೊದಿಸಲ್ಪಟ್ಟಿದೆ. ಯಾವಾಗಲೂ ಅಶುಚಿಯಾಗಿದೆ. ಆ ದೇಹವೆಂಬ ಮನೆ ಎಲುಬುಗಳಿಂದ ಆವರಿಸಿದೆ. ರಕ್ತನಾಳಗಳಿಂದ ಕಟ್ಟಲ್ಪಟ್ಟಿದೆ. ಕೆಟ್ಟ ಕೊಳಕುಗಳಿಂದ ತುಂಬಿದೆ. ಕ್ರಿಮಿಗಳಿಂದ ಪೂರ್ಣವಾಗಿದೆ. ಮಾಂಸದಿಂದ ಮೆತ್ತಲ್ಪಟ್ಟಿದೆ. ಚರ್ಮದ ಹೊದಿಕೆಯುಳ್ಳದು. ಯಾವಾಗಲೂ ಅಶುಚಿಯಾದುದು. ದುರ್ಗಂಧವುಳ್ಳ, ಕಶ್ಮಲ ತುಂಬಿದ, ಅಶುಚಿಯಾದ, ಸಡಿಲವಾಗಿ ಬಿದ್ದುಹೋಗತಕ್ಕ, ಸಾರವಿಲ್ಲದ ಇಂತಹ ಶರೀದಲ್ಲಿ ಸತ್ಪುರುಷರು ಪ್ರೀತಿಯನ್ನು ಮಾಡುವುದಿಲ್ಲ. ತಾನು ಮಾಡಿದ ಕರ್ಮವು ತನ್ನ ನೆರಳಿನಂತೆ ಕರ್ತೃವನ್ನು ಅನುಸರಿಸಕೊಂಡು ಹೋಗುತ್ತದೆ, ಬೇರೆಯವನನ್ನಲ್ಲ. ಆದುದರಿಂದ ಜಿನಶಾಸನ ಮಾತ್ರ ಆಶ್ರಯವಲ್ಲದೆ, ಅದನ್ನು ಬಿಟ್ಟು ಬೇರೆ ಕಡೆಗೆ ಓಡಿಹೋಗುವುದು ಅತ್ಯಂತ ಅಸಾಧ್ಯ. ಎಲೌ ಜ್ಞಾನಿಯೇ, ಕೆಟ್ಟನಾತ, ತಾಳಲಾಗದ ದುಃಖ, ಕೆಟ್ಟ ಸ್ವಭಾವಗಳುಳ್ಳ, ನಾಶವುಳ್ಳ, ನೋಡಲು ಅಸಹ್ಯವಾಗುವಂಥ ಶರೀರದಲ್ಲಿ ನಿನ್ನ ಆಸಕ್ತಿ ವ್ಯರ್ಥ, ಅಲ್ಲದೆ ಬೇರೇನು? ನಾನು ಕತ್ತರಿಸಲಾಗದವನು. ಕೊನೆಯೇ ಇಲ್ಲದ ಸುಖವನ್ನುಳ್ಳವನು ; ಜ್ಞಾನಿ ; ಅನಾದಿ , ಕರ್ಮಲೇಪವಿಲ್ಲದವನು. ಎಲ್ಲಾ ದುಃಖಗಳಿಗೂ ಆಸರೆಯಾಗಿರುವ ಶರೀರವನ್ನು ತೊರೆಯುತ್ತೇನೆ – ಇದು ನಿಶ್ಚಯ. ಈ ಜನ್ಮವೆಂಬ ಕಾಡು – ಜಾತಿ ವೃಕ್ಷಗಳಿಂದ ಆವರಿಸಿದೆ. ಯಮನಂತೆ ಕೋಪಗೊಂಡ ಕ್ರೂರವಾದ ಹೆಚ್ಚು ದುಷ್ಟಜಂತುಗಳಿಂದ ಕೂಡಿದೆ. ರೋಗಗಳೆಂಬ ಬೇಡರ ಭಯವುಳ್ಳದು. ಅತಿಕಠಿನ ಪಾಪಗಳೆಂಬ ಉಜ್ಜ್ವಲವಾದ ಕಾಳ್ಕಿಚ್ಚಿನ ಹೊದಿಕೆಯುಳ್ಳುದು. ಅಂತಹ ಪೀಡಿತರಾದ ದೇಹಿಗಳಿಗೆ ಜಿನಶಾಸನವೊಂದೇ ಆಶ್ರಯಸ್ವಾನವಾಗಿದೆ.

ಮೂಲಗದ್ಯ:-
ವೃತ್ತ || ಯಾವತ್ ಸ್ವಸ್ಥಮಿದಂ ಶರೀರಮರುಜಂ ಯಾವಜ್ಜರಾದೂರತಃ
ಯಾವಚ್ಛೇಂದ್ರಿಯ ಶಕ್ತಿಪ್ರತಿಹತಾ ಯಾವತ್ ಕ್ಷಯೋ ನಾಯುಷಃ
ಆತ್ಮಶ್ರೇಯಸಿ ತಾವದೇವ ವಿದುಷಾ ಕಾರ್ಯಃ ಪ್ರಯತ್ನೋ ಮಹಾನ್
ಪ್ರೋದ್ದೀಪ್ತೇ ಭವನೇ ತು ಕೂಪಜನನಂ ಪ್ರತ್ಯುದ್ಯಮಃ ಕೀದೃಶಃ
ಎಂದಿವು ಮೊದಲಾಗೊಡೆಯವನೋದಿಯವಱರ್ಥಮಂ ನೆರವಿಗೆಲ್ಲಂ ವಖ್ಖಾಣಿಸಿ ಪೇೞ್ದು ಮತ್ತಮಿಂತೆಂದಂ
ಕಂದ || ಅನಾಳ್ದ ನಾಳ್ಗಳಿವರೆನ
ಗೇನಾಯ್ತೆಂದರಱದುಮಱಯದುಱದಾಂ ನುಡಿದೊಂ
ದೇನಾನುಮೇವಮುಳ್ಳೊಡ
ಮಾ ನುಡಿಯಂ ಮಱೆಯಿಮೆಲ್ಲಮಿಂ ನಿಶ್ಯಲ್ಯಂ
ಗಾಹೆ || ಖಮ್ಮಾಮಿ ಸವ್ವಜೀವಾಣಂ ಸವ್ವೇ ಜೀವಾ ಖಮಂತು ಮೇ
ಮೇತ್ತೀ ಮೇ ಸವ್ವಭೂದೇಸು ವೇರಂ ಮಜ್ಝಣ ಕೇಣ ಚಿ
ಎಂದೆಲ್ಲರುಮಂ ಕ್ಷಮೆಗೊಳಿಸಿ ನಿಶ್ಯಲ್ಯಂಗೆಯ್ದು ವಿದ್ಯುದಂಗನೆಂಬ ಪಿರಿಯ ಮಗಂಗೆ ರಾಜ್ಯಂಗಟ್ಟಿ ರಾಜ್ಯಭಿಷೇಕಂಗೆಯ್ದೀತನಂ ಪಿಡಿದು ನೀಮೆಲ್ಲಂ ಸುಖಂ ಬಾಱಮೆಂದು ಕಲ್ಪಿಸಿ ಯಮದಂಡಂಗಂ

ಸರಳಾನುವಾದ:- ಆದುದರಿಂದ – ಯಾವಲ್ಲಿಯವರೆಗೆ ಈ ಶರೀರವು ಕ್ಷೇಮವಾಗಿ ರೋಗವಿಲ್ಲದೆ ಇರುವುದೋ ಮುಪ್ಪು ಎಲ್ಲಿಯವರೆಗೆ ಹತ್ತಿರ ಬರುವುದಿಲ್ಲವೋ ಇಂದ್ರಿಯಗಳ ಶಕ್ತಿ ಎಲ್ಲಿಯತನಕ ಕುಗ್ಗದೆ ಇರುವುದೋ ಎಲ್ಲಿಯವರೆಗೆ ಆಯುಸ್ಸು ನಾಶವಾಗದೆ ಇರುವುದೋ ಅಷ್ಟರೊಳಗಾಗಿಯೇ ಬುದ್ಧಿವಂತನು ಆತ್ಮದ ಶ್ರೇಯಸ್ಸಿಗಾಗಿ ವಿಶೇಷ ಪ್ರಯತ್ನವನ್ನು ಮಾಡಬೇಕು. ಮನೆ ಬೆಂಕಿ ಹತ್ತಿ ಉರಿಯುತ್ತಿರುವಾಗ ಬಾವಿ ತೋಡುವ ಪ್ರಯತ್ನವು ಎಂತಹದು ? ಎಂದು ಇವೇ ಮುಂತಾಗಿ ಉಳ್ಳ ನೀತಿಗಳನ್ನು ಉಚ್ಚರಿಸಿ, ಅವುಗಳ ಅರ್ಥವನ್ನು ಜನಸಮೂಹಕೆಲ್ಲ ವ್ಯಾಖ್ಯಾನಮಾಡಿ ಹೇಳಿ ಮತ್ತೆ ಹೀಗೆಂದನು – “ನಾನು ಆಳತಕ್ಕವನು, ರಾಜನು. ಇವರೆಲ್ಲ ನನಗೆ ಸೇವಕರು. ಹೀಗಿರುವಾಗ ಏನಾಗುತ್ತದೆ – ಎಂದು ತಿಳಿದೂ ತಿಳಿಯದೆ, ಲೆಕ್ಕಿಸದೆ, ನಾನು ಹೇಳಿದ ಯಾವುದಾದರೂ ಒಂದು ಮಾತಿನ ವಿಷಯದಲ್ಲಿ ನಿಮಗೆ ಮನಸ್ಸಿನಲ್ಲಿ ಕೋಪವಿದ್ದರೂ ಆ ಮಾತನ್ನು ಮರೆತುಬಿಡಿ. ಇನ್ನು ಮುಂದೆ ಎಲ್ಲವೂ ಪಾಪಾನುಷ್ಠಾನವಿಲ್ಲದುದಾಗಿ ಇರುವುದು. ಎಲ್ಲ ಜೀವಿಗಳನ್ನು ಕ್ಷಮಿಸುತ್ತೇನೆ. ಎಲ್ಲ ಜೀವಿಗಳೂ ನನ್ನನ್ನು ಕ್ಷಮಿಸಲಿ. ಸರ್ವಪ್ರಾಣಿಗಳಲ್ಲಿಯೂ ನನಗೆ ಮೈತ್ರಿಯಿದೆ. ಯಾರಲ್ಲಿಯೂ ನನಗೆ ವೈರವಿಲ್ಲ. ಹೀಗೆ ನುಡಿದು ಎಲ್ಲರನ್ನೂ ಕ್ಷಮೆಗೊಳಿಸಿ, ಮಾಯಾಶಲ್ಯ – ಮಿಥ್ಯಾಶಲ್ಯ, – ನಿದಾನಶಲ್ಯಗಳನ್ನು ಪರಿಹಾರಗೊಳಿಸಿದನು. ತನ್ನ ಹಿರಿಯ ಮಗನಾದ ವಿದ್ಯುದಂಗನಿಗೆ ರಾಜ್ಯದ ಅಕಾರಪಟ್ಟವನ್ನು ಕಟ್ಟಿ ರಾಜ್ಯಾಭಿಷೇಕವನ್ನು ಮಾಡಿದನು. “ನೀವೆಲ್ಲರೂ ಈತನನ್ನು ಆಶ್ರಯಿಸಿಕೊಂಡು ಸುಖವಾಗಿ ಬಾಳಿ* ಎಂದು ಹೇಳಿ, ಯಮದಂಡನಿಗೆ ಆ ಪಟ್ಟಣದ ತಳವಾರವೃತ್ತಿಯನ್ನು (ಕಾವಲುಗಾರಿಕೆಯ ಕೆಲಸವನ್ನು) ಕೊಟ್ಟನು.

ಮೂಲಗದ್ಯ:- ಪೊೞಲ ತಲಾಱಕೆಯಂ ಕೊಟ್ಟು ಮಂಗಳವಸದನಂಗೊಂಡು ಪಟ್ಟವರ್ಧನಮನೇಱ ಸತಿಯರ್ ಸಂಗಡಂ ಬರೆ ಪೆಂಡವಾಸದ ಸೂಳೆಯರಿರ್ಬರ್ ಪೆಱಗೇಱರ್ಕೆಲದೊಳಂ ಚಾಮರಂಗಳನಿಕ್ಕುತ್ತುಂ ಬರೆ ಬೆಳ್ಗೊಡೆಗಳುಂ ಪಾಳಿದ್ವಜಂಗಳುಂ ತಜಿನೆವೞಯಿಗೆಗಳುಂ ಚಂದ್ರಾದಿತ್ಯರ್ಕಳುಂ ಸಿಂಹ ವ್ಯಾಘ್ರ ಮಕರ ಮತ್ಸ್ಯಂಗಳೆಂದಿವು ಮೊದಲಾಗೊಡೆಯ ರಾಜ್ಯಚಿಹ್ನಂಗಳ್ ಮುಂದೆ ಪರಿಯೆ ಪಂಚಮಹಾಶಬ್ದಂಗಳುಂ ಬದ್ದವಣದ ಪಱೆಗಳುಂ ಬಾಜಿಸೆ ವಂದಿ ಮಾಗಧ ಯಾಚಕ ಪ್ರಭೃತಿಗಳ್ಗಂ ದೀನಾನಾಥಾಂಧರ್ಕಳ್ಗಂ ತುಷ್ಟಿದಾನಮಂ ಕೊಡುತ್ತಂ ಪೋಗಿ ಸಹಸ್ರಕೂಟ ಚೈತ್ಯಾಲಯಮನೆಯ್ದಿ ಪಟ್ಟವರ್ಧನದಿಂದಿೞದು ಬಸದಿಯಂ ತ್ರಿಃ ಪ್ರದಕ್ಷಿಣಂಗೆಯ್ದು ದೇವರಂ ವಂದಿಸಿ ಗುಣಧರರೆಂಬಾಚಾರ್ಯರಂ ಗುರುಭಕ್ತಿಗೆಯ್ದು ವಂದಿಸಿ ಇಂತೆಂದಂ ಭಟಾರಾ ಸಂಸಾರಮೆಂಬ ಸಮುದ್ರದೊಳ್ ಮುೞುಗುತ್ತಿರ್ದೆನ್ನಂ ಮುೞುಗಲೀಯದೆತ್ತಿಮೆನಗೆ ದೀಕ್ಷೆಯಂ ಪ್ರಸಾದಂಗೆಯ್ಯಿಮೆಂದು ನುಡಿದೊಡಂಬಡಿಸಿ ಸಾಸಿರ್ವರರಸು ಮಕ್ಕಳ್ವೆರಸು ಕಟಕ ಕಟಿಸೂತ್ರ ಕುಂಡಲಾಭರಣಾದಿಗಳಂ ಕಳೆದು ಬಾಹ್ಯಾಭ್ಯಂತರ ಪರಿಗ್ರಹಮೆಲ್ಲಮಂ ತೊಱೆದು ಗುಣಧರ ಭಟ್ಟಾರರ ಪಕ್ಕದೆ ತಪಂಬಟ್ಟಂ ಮತ್ತಂ ದೇವಗಣಿಕೆಯರನೆ ಪೋಲ್ವ ಸೌಂದರಿಮಹಾದೇವಿ ಮೊದಲಾಗೇೞ್ವೂರ್ವರರಸಿಯರ್ಕಳ್ ಗುಣಧರ ಭಟಾರರೆ ಗುರುಗಳಾಗೆ ತಮ್ಮತ್ತೆವಿರಪ್ಪ ವಿಜಯಮತಿ ಕಂತಿಯರ್ ಕಂತಿಯರಾಗೆ ತಪಂಬಟ್ಟು ಗಿಡಿಗಿಡಿಜಂತ್ರಂ ಮಿಳಿಮಿಳಿ ನೇತ್ರಮಾಗಿ ಘೋರವೀರ ತಪಶ್ಚರಣದೊಳ್ ನೆಗೞುತ್ತಿರ್ದರ್ ಇತ್ತ ವಿದ್ಯುಚ್ಚೋರ ಮುನಿಯಂ
ಸರಳಾನುವಾದ:- ಮಂಗಳಕರವಾದ ಅಲಂಕಾರವನ್ನು ಮಾಡಿಕೊಂಡು ಪೂಜಾಗಜವನ್ನು ಹತ್ತಿದನು. ಆಗ ಅವನ ಹೆಂಡಿರು ಸಂಗಡದಲ್ಲಿ ಬಂದರು. ರಾಣಿವಾಸದ ಇಬ್ಬರು ದಾಸಿಯರು ಹಿಂದುಗಡೆ ಹತ್ತಿಕೊಂಡು ಎರಡು ಬದಿಗಳಲ್ಲಿಯೂ ಚಾಮರವನ್ನು ಬೀಸುತ್ತ ಬಂದರು. ಶ್ವೇತಚ್ಛತ್ರಗಳು, ಪಾಳಿಧ್ವಜಗಳು, ಬಾವುಟಗಳು, ಚಂದ್ರಸೂರ್ಯರು, ಸಿಂಹ ಹುಲಿ, ಮೀನು – ಎಂದು ಇವೇ ಮೊದಲಾಗಿ ಉಳ್ಳ ರಾಜ್ಯಾಕಾರದ ಚಿಹ್ನೆಗಳು ಅವನ ಮುಂದೆ ಹೋದವು. ಶಂಖ, ಪಟಹ – ಮುಂತಾದ ಐದು ಬಗೆಯ ಮಹಾವಾದ್ಯ ಶಬ್ದಗಳೂ ಮಂಗಳವಾದ್ಯಗಳೂ ಶಬ್ದಮಾಡಿದವು. ವಂದಿಮಾಗಧರು (ಸುತ್ತಿಪಾಠಕರು), ಬೇಡುವವರು, ದೀನರು, ಅನಾಥರು, ಕುರುಡರು – ಇಂಥವರಿಗೆಲ್ಲ ಸಂತೋಷವಾಗುವಷ್ಟು ದಾನವನ್ನು ಕೊಡುತ್ತ ವಿದ್ಯುಚ್ಚೋರನು ಸುಸ್ರಕೂಟವೆಂಬ ಜಿನಾಲಯಕ್ಕೆ ಹೋಗಿ ಪಟ್ಟದಾನೆಯಿಂದ ಇಳಿದನು. ಬಸದಿಗೆ ಮೂರುಸುತ್ತು ಬಲವಂದು ದೇವರಿಗೆ ವಂದನೆ ಸಲ್ಲಿಸಿದನು. ಗುಣಧರರೆಂಬ ಆಚಾರ್ಯರನ್ನು ಗುರುಭಕ್ತಿಯಿಂದ ಸಂದರ್ಶಿಸಿ ನಮಸ್ಕರಿಸಿ ಹೀಗೆಂದನು. “ಪೂಜ್ಯರೇ, ಸಂಸಾರವೆಂಬ ಸಮುದ್ರದಲ್ಲಿ ಮುಳುಗುತ್ತಿರುವ ನನ್ನನ್ನು ಮುಳುಗುವುದಕ್ಕೆ ಅವಕಾಶವೀಯದೆ ಎತ್ತಿರಿ. ನನಗೆ ಜಿನದೀಕ್ಷೆಯನ್ನು ಅನುಗ್ರಹಿಸಿರಿ!* – ಎಂದು ನುಡಿದು ಅವರು ದೀಕ್ಷೆ ಕೊಡಲು ಒಪ್ಪುವಂತೆ ಮಾಡಿದನು. ಸಾವಿರ ಮಂದಿ ರಾಜಕುಮಾರರು ಸಹಿತ ಬಳೆ, ಉಡಿದಾರ, ಕುಂಡಲ, ಆಭರಣ – ಮುಂತಾದುವನ್ನು ತೆಗೆದುಹಾಕಿ ಹೊರಗಿನ ಮತ್ತು ಒಳಗಿನ ಪರಿಗ್ರಹಗಳನ್ನೆಲ್ಲ ಬಿಟ್ಟು ಗುಣಧರ ಋಷಿಗಳ ಬಳಿ ತಪಸ್ಸನ್ನು ಸ್ವೀಕರಿಸಿದನು. ಆಮೇಲೆ, ಸುರಸ್ತ್ರೀಯರನ್ನು ಹೋಲತಕ್ಕ ಸೌಂದರಿ ಮಹಾದೇವಿ ಮುಂತಾದ ಏಳುನೂರು ಮಂದಿ ರಾಣಿಯರು ಗುಣಧರ ಋಷಿಗಳನ್ನೇ ಗುರುಗಳಾಗಿ ಕಲ್ಪಿಸಿ, ತಮ್ಮ ಅತ್ತೆಯವರಾದ ವಿಜಯಮತಿ ಕಂತಿಯವರೇ ತಮಗೆ ಮಾರ್ಗದರ್ಶನ ಮಾಡುವ ಸಂನ್ಯಾಸಿನಿಯರಾಗಿರಲು,

ಮೂಲಗದ್ಯ:- ಪನ್ನೆರಡುವರ್ಷಂಬರೆಗಂ ಗುರುಗಳನಗಲದೆ ದ್ವಾದಶಾಂಗ ಚತುರ್ದಶ ಪೂರ್ವಮಪ್ಪಾಗಮಮೆಲ್ಲಮಂ ಕಲ್ತುಗ್ರೋಗ್ರ ತಪಶ್ಚರಣದೊಳ್ ನೆಗೞುತ್ತುಮಾಚಾರ್ಯರಾಗಿ ಆಯ್ನೂರ್ವರ್ ಶಿಚ್ಯರ್ಕಳ್ವೆರಸು ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಪೋಗಿ ಪೂರ್ವದೇಶದೊಳ್ ಖಾಳಿಮಂಡಳಮೆಂಬ ನಾಡೊಳ್ ತಾಮ್ರಲಿಪ್ತಿಯೆಂಬ ಪೊೞಲ ಪೊಱವೊೞಲನೆಯ್ದಿದಾಗಳಲ್ಲಿ ವರಾಂಗಾಯಿಯೆಂಬೊಳುಗ್ರದೇವತೆಗಱುದಿಂಗಳಱುದಿಂಗಳಿಂಗೆಲ್ಲಾ ಕಾಲಮುಂ ಜಾತ್ರೆಯಪ್ಪುದಾ ಜಾತ್ರೆಗೆ ನಾಡೆಯಷ್ಟಮಿಯಂದು ಬಂದು ನೆರೆದು ಜಾತ್ರೆಯಂ ಮಾಡೆ ದುರ್ಗಾದೇವತೆ ರಿಸಿಯರ ಬರವಂ ಗೆಂಟಱೊಳಿರ್ದು ಕಂಡಿದಿರಂ ಪೋಗಿ ಇಂತೆಂದಳೆನ್ನ ಜಾತ್ರೆ ಸಮೆವನ್ನೆಗಂ ನೀಮೀ ಪೊೞಲಂ ಪುಗದಿರಿಮೆಂದು ಬಾರಿಸಿದೊಡೆ ಶಿಷ್ಯರ್ಕಳೆಂದರ್ ನಮ್ಮಂ ದೇವತೆಯೇಗೆಯ್ದಪ್ಪೊಳ್ ಪೋಪಂ ಭಟಾರಾ ಎಂದು ಭಟಾರರನೊಡಗೊಂಡು ದೇವತೆ ಬಾರಿಸೆವಾರಿಸೆ ಪೊೞಲಂ ಪೊಕ್ಕು ಮತ್ತಿರುಳ್ ಪೊೞಲ ಪಡುವಣ ದೆಸೆಯಂ ಕೊಂಟೆಯಿಂ ಪೋಱಗಣ ದೆಸೆಯೊಳ್ ವಿದ್ಯುಚ್ಚೋರ ಭಟಾರರ್ ಪ್ರತಿಮಾಯೋಗಂ ನಿಂದೊಡೆ ದೇವತೆ ಮುಳಿದು ಪೊಱಸುಗಳನಿವಿರಿಯವು ದಂಸಮಸಂಕಂಗಳಂ ವಿಗುರ್ವಿಸೆ ಮೆಯ್ಯೆಲ್ಲಮನಿರುಳ್ ನಾಲ್ಕು ಜಾವಮುಂ ತಿನೆ ನರಕವೇದನೆಯಿಂದ

ಸರಳಾನುವಾದ:- ತಪಸ್ಸನ್ನು ಸ್ವೀಕರಿಸಿದರು. ಅವರೆಲ್ಲರೂ ಸವೆದು ಸಣಕಲಾದ ದೇಹವನ್ನೂ ಗುಳಿಬಿದ್ದ ಕಣ್ಣಗಳನ್ನೂ ಉಳ್ಳವರಾಗಿ ಉಗ್ರವೂ ಶ್ರೇಷ್ಠವೂ ಅದ ತಪವನ್ನು ಆಚರಿಸುತ್ತ ಇದ್ದರು. ಇತ್ತ ವಿದ್ಯುಚ್ಚೋರ ಋಷಿ ಹನ್ನೆರಡು ವರುಷಗಳವರೆಗೆ ಗುರುಗಳನ್ನಗಲದೆ ಹನ್ನೆರಡು ಅಂಗಗಳುಳ್ಳ ಮತ್ತು ಹದಿನಾಲ್ಕು ಪೂರ್ವಗಳುಳ್ಳ ಶಾಸ್ತ್ರಗಳನ್ನೆಲ್ಲ ಕಲಿತು ಅತ್ಯಂತ ಘೋರವಾದ ತಪಸ್ಸನ್ನು ಆಚರಣೆ ಮಾಡುತ್ತ ಆಚಾರ್ಯರಾದರು. ಐನೂರು ಮಂದಿ ಶಿಷ್ಯರನ್ನು ಕೂಡಿಕೊಂಡು ಗ್ರಾಮ – ನಗರ – ಖೇಡ – ಖರ್ವಡ – ಮಡಂಬ – ಪಟ್ಟಣ ದ್ರೋಣಾಮುಖಗಳಲ್ಲಿ ಸಂಚಾರ ಮಾಡುತ್ತ ಹೋದರು. ಅವರು ಪೂರ್ವದೇಶದಲ್ಲಿರತಕ್ಕ ಖಾಳಿಮಂಡಳವೆಂಬ ನಾಡಿನಲ್ಲಿ ತಾಮ್ರಲಿಪಿಯೆಂಬ ಪಟ್ಟಣದ ಹೊರಗಣ ಭಾಗಕ್ಕೆ ಹೋದರು. ಅಲ್ಲಿ ವರಾಂಗಾಯಿ ಎಂಬ ಉಗ್ರದೇವತೆಯಿದ್ದಳು. ಅವಳಿಗೆ ಆರುತಿಂಗಳಗೊಮ್ಮೆ ಪ್ರತಿವರ್ಷವೂ ಬಿಡದೆ ಜಾತ್ರೆಯಾಗುತ್ತಿತ್ತು. ಆ ಜಾತ್ರೆಗೆ ವಿಶೇಷವಾಗಿ ದುರ್ಗಾಷ್ಟಮಿಯಂದು ಜನರೆಲ್ಲ ಬಂದು ಸೇರಿ, ಜಾತ್ರೆಯನ್ನು ಆಗ ಮಾಡುತ್ತಿದ್ದರು. ಆ ದುರ್ಗಾದೇವತೆ ಋಷಿಗಳು ಬಂದಿರುವುದನ್ನು ದೂರದಿಂಲೇ ಕಂಡು ಇದಿರಿಗೆ ಹೋಗಿ ಹೀಗೆಂದಳು – “ನನ್ನ ಜಾತ್ರೆ ಕೊನೆಗೊಳ್ಳವವರೆಗೂ ನೀವು ಈ ಪಟ್ಟನವನ್ನು ಪ್ರವೇಶಿಸದಿರಿ* – ಎಂದು ಆತಂಕಪಡಿಸಿದಳು. ಆಗ ಋಷಿ ಶಿಷ್ಯರು – “ಪೂಜ್ಯರೇ, ನಮ್ಮನ್ನು ಈ ದೇವತೆ ಏನು ಮಾಡುವಳು! ನಾವು ಹೋಗೋಣ* ಎಂದು – ವಿದ್ಯುಚ್ಚೋರ ಮುನಿಯನ್ನು ಕೂಡಿಕೊಂಡು, ದೇವತೆ ಅಡ್ಡಿಪಡಿಸಿದರೂ ಲೆಕ್ಕಿಸದೆ ಪಟ್ಟಣವನ್ನು ಹೊಕ್ಕರು. ಮತ್ತೆ ರಾತ್ರಿವೇಳೆ ವಿದ್ಯುಚ್ಚೋರ ಋಷಿಗಳು ಪಟ್ಟಣದ ಪಶ್ಚಿಮದಿಕ್ಕಿನ ಕೋಟೆಯ ಹೊರಗಿನ ಭಾಗದಲ್ಲಿ ಪ್ರತಿಮಾಯೋಗದಲ್ಲಿ ನಿಂತರು. ವರಾಂಗಾಯಿ ದೇವತೆ ಆಗ ಕೋಪಗೊಂಡು, ಪಾರಿವಾಳದಷ್ಟು ದೊಡ್ಡವುಗಳಾದ ಚಿಗಟಗಳನ್ನೂ ಗುಂಗುರುಗಳನ್ನೂ (ಸೊಳ್ಳೆ ನೊಣಗಳನ್ನು) ಮಾಯೆಯಿಂದ ನಿರ್ಮಾಣಮಾಡಿದಳು. ಅವು ವಿದ್ಯುಚ್ಚೋರ ಋಷಿಗಳ ಶರೀರವನ್ನು ರಾತ್ರಿಯ ನಾಲ್ಕು ಜಾವ (ಹನ್ನೆರಡು ಗಂಟೆ) ಸಮಯವೂ ಕಚ್ಚಿ ತಿನ್ನುತ್ತ ನರಕದ ಯಾತನೆಗಿಂತ

ಮೂಲಗದ್ಯ:- ಮಗ್ಗಳಮೆ ವೇದನೆಯಪ್ಪಂತುಪಸರ್ಗಂಗೆಯ್ಯೆ ಅಂತಪ್ಪ ದುಃಖಮುಂ ವೇದನೆಯುಮಂ ಮನದೊಳಿಲ್ಲದಂತಿರೆ ಸೈರಿಸಿ ಆಜ್ಞಾವಿಚಯಮಪಾಯವಿಚಯ ವಿಪಾಕವಿಚಯ ಸಂಸ್ಥಾನ ವಿಚಯಮೆಂಬೀ ನಾಲ್ಕು ಧರ್ಮಧ್ಯಾನಂಗಳಂ ಧ್ಯಾನಿಸಿ ಬೞಕ್ಕೆ ಪೃಥಕ್ತ್ವ ವಿತರ್ಕ ವೀಚಾರಮೆಂಬ ಪ್ರಥಮ ಶುಕ್ಲಧ್ಯಾನಮಂ ಧ್ಯಾನಿಸುತ್ತಂ ಕ್ಷಪಕ ಶ್ರೇಣಿಯನೇಱ ಏಕತ್ವ ವಿತರ್ಕ ವೀಚಾರಂ ಸೂಕ್ಷ್ಮಕ್ರಿಯಾ ಪ್ರತಿಪಾತಿ ಸಮುಚಿನ್ನ ಕ್ರಿಯಾನಿವೃತ್ತಿಯೆಂಬ ಶುಕ್ಲಧ್ಯಾನಂಗಳಂ ಧ್ಯಾನಿಸಿ ಘಾತಿಕರ್ಮಂಗಳಂ ಕಿಡಿಸಿ ಅಂತರ್ಗತಕೇವಳಿಯಾಗಿ ಅಘಾತಿಕರ್ಮಂಗಳಂ ಕಿಡಿಸಿ ಮೋಕ್ಷಕ್ಕೆ ವೋದರ್ ಮತ್ತೆ ಸಂನ್ಯಸನಂಗೆಯ್ಯುತ್ತಿರ್ದ ಭವ್ಯರ್ಕಳ್ ಪರಮ ಶುದ್ಧ ಸಹಜ ರತ್ನತ್ರಯಮನಾರಾಸುತ್ತಿರ್ದೊರ್ ವಿದ್ಯುಚ್ಚೋರ ಋಷಿಯರಂ ಮನದೊಳ್ ಬಗೆದು ದಂಡಣೆಗಳುಮಂ ವೇದನೆಗಳುಮಂ ವ್ಯಾಗಳುಮಂ ಚತುರ್ವಿಧಮಪ್ಪುಪಸರ್ಗಮುಮಂ ಪಸಿವುಂ ನೀರೞ್ಕೆಯುಂ ಶೀತೋಷ್ಣವಾತ ದಂಸಮಸಕಂ ಮೊದಲಾಗೊಡೆಯವಱಂದಪ್ಪ ವೇದನೆಗಳುಂ ದುಃಖಂಗಳುಮಂ ಸೈರಿಸಿ ಪರಮ ಶುದ್ದ ಸಹಜ ರತ್ನತ್ರಯಂಗಳಂ ಸಾಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ
ಸರಳಾನುವಾದ:- ಅಕವಾದ ನೋವನ್ನುಂಟುಮಾಡುವ ಉಪಸರ್ಗವನ್ನು ಮಾಡಿದವು. ಅಂತಹ ದುಃಖವೂ ನೋವೂ ಮನಸ್ಸಿನಲ್ಲಿ ಇಲ್ಲದ ರೀತಿಯಲ್ಲಿ ಅವನ್ನು ಸಹಿಸಿಕೊಂಡು ಅಜ್ಞಾವಿಚಯ, ಅಪಾಯವಿಚಯ, ವಿಪಾಕವಿಚಯ, ಸಂಸ್ಥಾನವಿಚಯ ಎಂಬ ಈ ನಾಲ್ಕು ವಿಧವಾದ ಧರ್ಮಧ್ಯಾನವನ್ನು ಧ್ಯಾನಿಸಿದರು. ಆಮೇಲೆ, ಪೃಥಕ್ತ್ವ, ವಿತರ್ಕ, ವೀಚಾರ – ಎಂಬ ಮೊದಲಿನ ಶುಕ್ಲಧ್ಯಾನವನ್ನು ಧ್ಯಾನಿಸುತ್ತ, ಕ್ಷಪಕಶ್ರೇಣಿಯನ್ನು ಏರಿ, ಏಕತ್ವ – ವಿತರ್ಕ ವಿಚಾರ – ಸೂಕ್ಷ್ಮಕ್ರಿಯಾ ಸಮುಚ್ಛಿನ್ನ ಕ್ರಿಯಾನಿವೃತ್ತಿ ಎಂಬ ಶುಕ್ಲಧ್ಯಾನಗಳನ್ನು ಧ್ಯಾನಿಸಿ, ಘಾತಿಕರ್ಮಗಳನ್ನು ನಾಶಗೊಳಿಸಿ, ಅಂತರ್ಗತ ಕೇವಲಿಯಾಗಿ ಅಘಾತಿಕರ್ಮಗಳನ್ನು ಕೆಡಿಸಿ ಮುಕ್ತಿಗೆ ಹೋದರು. ಸಂನ್ಯಾಸವನ್ನು ಆಚರಿಸುತ್ತಿರುವ ಭವ್ಯರು ಹಾಗೂ ಶ್ರೇಷ್ಠವೂ ಶುದ್ಧವೂ ಸಹಜವೂ ಅದ ರತ್ನತ್ರಯವನ್ನು ಆರಾಸುವವರು ವಿದ್ಯುಚ್ಚೋರ ಋಷಿಗಳನ್ನು ಮನಸ್ಸಿನಲ್ಲಿ ಭಾವಿಸಿಕೊಂಡು ದಂಡನೆಗಳನ್ನೂ ಯಾತನೆಗಳನ್ನೂ ರೋಗಗಳನ್ನೂ ನಾಲ್ಕು ವಿಧವಾದ ಉಪಸರ್ಗಗಳನ್ನೂ ಹಸಿವು, ಬಾಯಾರಿಕೆ, ಶೀತ – ಉಷ್ಣ – ವಾಯು – ಸೊಳ್ಳೆ – ನೊಣ – ಮುಂತಾಗಿರುವವುಗಳಿಂದ ಅಗತಕ್ಕ ಯಾತನೆಗಳನ್ನೂ ದುಃಖಗಳನ್ನೂ ಸಹುಸಿಕೊಂಡು, ಶ್ರೇಷ್ಠವೂ ಶುದ್ದವೂ ಸಹಜವೂ ಆದ ರತ್ನತ್ರಯವನ್ನು (ಸಮ್ಯಗ್ಧರ್ಶನ, ಸಮ್ಯಗ್ ಜ್ಞಾನ, ಸಮ್ಯಕ್ ಚಾರಿತ್ರ ಎಂಬಿವನ್ನು) ಸಾಸಿ ಸ್ವರ್ಗ – ಮೋಕ್ಷ ಸುಖಗಳನ್ನು ಪಡೆಯಲಿ.

5 ಕಾಮೆಂಟ್‌ಗಳು: