ನನ್ನ ಪುಟಗಳು

27 ನವೆಂಬರ್ 2013

ಸಮಾಗಮ (ಗದ್ಯ-5)

ಪ್ರಸ್ತುತ ಗದ್ಯಭಾಗವನ್ನು ಸಂಸ್ಕೃತದ ಪ್ರಸಿದ್ಧ ನಾಟಕಕಾರ ಭಾಸನ ‘ಮಧ್ಯಮ ವ್ಯಾಯೋಗ’ ಕೃತಿಯಿಂದ ಅನುವಾದಿಸಲಾದ ಎಸ್.ವಿ.ಪರಮೇಶ್ವರಭಟ್ಟ ಮತ್ತು ಬಿ.ಚಂದ್ರಶೇಖರ ಅವರ ಕೃತಿಗಳನ್ನು ಬಳಸಿಕೊಂಡು ಪಠ್ಯಪುಸ್ತಕ ರಚನಾಸಮಿತಿಯು ಸಂಪಾದಿಸಿದೆ.
ಭಾಸನ ಬಗ್ಗೆ ಪರಿಚಯ
       ಭಾಸನು ಸಂಸ್ಕೃತ ಭಾಷೆಯ ಪ್ರಾಚೀನ ಕಾಲದ ಸುಪ್ರಸಿದ್ಧ ನಾಟಕಕಾರ . ಆದರೆ ಇವನ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿಲ್ಲ. ಕಾಳಿದಾಸನು ತನ್ನ ಕೃತಿಯೊಂದರಲ್ಲಿ ಭಾಸನ ಹೆಸರು ಹೇಳಿರುವದರಿಂದ ಭಾಸನು ಕಾಳಿದಾಸನಿಗೂ ಮೊದಲು ಇದ್ದನೆಂದು ನಮಗೆ ಗೊತ್ತಾಗುತ್ತದೆ. ಕಾಳಿದಾಸನು ಕ್ರಿ.ಪೂ. ಒಂದನೇ ಶತಮಾನದಿಂದ ಕ್ರಿ.ಶ. ನಾಲ್ಕನೇ ಶತಮಾನದವರೆಗಿನ ನಡುವಿನ ಅವಧಿಯಲ್ಲಿ ಇದ್ದನು . ಆದ್ದರಿಂದ ಭಾಸನು ಕ್ರಿ.ಪೂ. ೨ ನೇ ಶತಮಾನ ಮತ್ತು ಕ್ರಿ.ಶ. ೨ ನೇ ಶತಮಾನದ ನಡುವಿನ ಅವಧಿಯಲ್ಲಿ ಇದ್ದನು ಎಂದು ತಿಳಿಯಬಹುದು. (ಪಠ್ಯಪುಸ್ತಕದಲ್ಲಿ ಭಾಸನ ಕಾಲವನ್ನು ಕ್ರಿ.ಪೂ. ಸುಮಾರು ೩೦೦ ಎಂದು ಹೇಳಲಾಗಿದೆ) ಭಾಸನ ಕೃತಿಗಳಲ್ಲಿ ಬಳಸಿದ ಭಾಷೆಯ ಆಧಾರದ ಮೇಲೆ ಅವನು ಕ್ರಿ.ಶ. ಐದನೇ ಶತಮಾನದಲ್ಲಿ ಇದ್ದನು ಎಂದೂ ಹೇಳುತ್ತಾರೆ. ಅವನ ನಾಟಕಗಳು ಶತಮಾನಗಳ ಕಾಲ ನಾಪತ್ತೆ ಆಗಿದ್ದವು. ಕ್ರಿ.ಶ. ೮೮೦-೯೨೦ ರ ನಡುವೆ ಹೆಸರಾಂತ ಕವಿ, ನಾಟಕಕಾರ ಮತ್ತು ವಿಮರ್ಶಕ ರಾಜಶೇಖರನು ಬರೆದ ಕಾವ್ಯಮೀಮಾಂಸೆಯಂತಹ ಇತರ ಕೃತಿಗಳಲ್ಲಿನ ಉಲ್ಲೇಖದ ಮೂಲಕವೇ ಅವನ ಬಗ್ಗೆ ತಿಳಿದಿತ್ತು. ಕಾವ್ಯಮೀಮಾಂಸೆಯಲ್ಲಿ ರಾಜಶೇಖರನು ಸ್ವಪ್ನವಾಸವದತ್ತ ನಾಟಕವನ್ನು ಭಾಸನದೆಂದು ಹೇಳುತ್ತಾನೆ.

ಭಾಸನ ನಾಟಕಗಳ ಶೋಧ      
      ೧೯೧೨ ರಲ್ಲಿ ದಿವಂಗತ ಮಹಾಮಹೋಪಾಧ್ಯಾಯ ಗಣಪತಿ ಶಾಸ್ತ್ರಿಗಳಿಗೆ ತ್ರಿವೇಂದ್ರಂ ನಲ್ಲಿ ಹದಿಮೂರು ನಾಟಕಗಳು ಸಿಕ್ಕವು. ಉಳಿದ ಶಾಸ್ತ್ರೀಯ(ಕ್ಲಾಸಿಕಲ್) ನಾಟಕಗಳ ರೀತಿಯಲ್ಲಿ ಅವುಗಳಲ್ಲೂ ಅವನ್ನು ರಚಿಸಿದವರ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಆದರೆ ಸ್ವಪ್ನವಾಸವದತ್ತವು ಅವುಗಳಲ್ಲೊಂದಾಗಿತ್ತು. ಅವುಗಳಲ್ಲಿನ ಬರವಣಿಗೆಯ ಶೈಲಿ ಮತ್ತು ತಂತ್ರಗಾರಿಕೆಯ ರೀತಿಯನ್ನು ಗಮನಿಸಿಯೂ , ಸ್ವಪ್ನವಾಸವದತ್ತ ನಾಟಕವು ಭಾಸನದೆಂದು ಗೊತ್ತಾಗಿರುವದರಿಂದಲೂ ಈ ಎಲ್ಲ ನಾಟಕಗಳು ಭಾಸನವು ಎಂದು ಒಪ್ಪಲಾಯಿತು. ಕೆಲವರು ಈ ನಾಟಕಗಳೆಲ್ಲವನ್ನು ಭಾಸನು ಬರೆದಿರುವದರ ಬಗ್ಗೆ ಸಂದೇಹ ವ್ಯಕ್ತಪಡಿಸಿದರಾದರೂ ಕಾಲಕ್ರಮೇಣ ಈ ಎಲ್ಲ ನಾಟಕಗಳು ಭಾಸನವೇ ಎಂಬ ತೀರ್ಮಾನಕ್ಕೆ ಬರಲಾಯಿತು.

ಭಾಸನ ನಾಟಕಗಳು
   ಭಾಸನು ನಾಟ್ಯಶಾಸ್ತ್ರದ ಎಲ್ಲ ನಿಯಮಗಳನ್ನು ಪಾಲಿಸಿಲ್ಲ. ನಾಟ್ಯಶಾಸ್ತ್ರದ ನಿಯಮಗಳನ್ನು ಅನುಸರಿಸದ, ಕಾಳಿದಾಸನ ನಂತರದ ನಾಟಕವಾವುದೂ ಸಿಕ್ಕಿಲ್ಲದುದರಿಂದ ಕಾಳಿದಾಸನಿಗಿಂತಲೂ ಈ ನಾಟಕಗಳು ಹಳೆಯವು ಎಂಬುದಕ್ಕೆ ಈ ವಿಷಯವೇ ರುಜುವಾತು ಎಂದು ಸ್ವೀಕರಿಸಲಾಗಿದೆ. ದೈಹಿಕ ಹಿಂಸೆಯನ್ನೊಳಗೊಂಡಂತಹ ದೃಶ್ಯಗಳನ್ನು ಊರುಭಂಗದಂತಹ ನಾಟಕಗಳಲ್ಲಿ ಭಾಸನು ಬರೆದಿದ್ದಾನೆ . ಇದನ್ನು ನಾಟ್ಯಶಾಸ್ತ್ರವು ಖಂಡಿತಾ ಅನುಮತಿಸುವದಿಲ್ಲ.
     ಊರುಭಂಗ ಮತ್ತು ಕರ್ಣಭಾರ ಇವೆರಡೇ ಪ್ರಾಚೀನ ಭಾರತದ ದುರಂತ ಸಂಸ್ಕೃತನಾಟಕಗಳು. ದುರ್ಯೋಧನನು ಮಹಾಭಾರತದ ಖಳನಾಯಕನೆಂದೇ ಇದ್ದರೂ , ತನ್ನ ತೊಡೆಗಳನ್ನು ಮುರಿಸಿಕೊಂಡು , ಸಾವನ್ನು ಎದುರುನೋಡುತ್ತಾ , ತನ್ನ ಕೃತಿಗಳಿಗೆ ಪಶ್ಚಾತ್ತಾಪ ಪಡುವ ಅವನು 'ಊರುಭಂಗ'ದಲ್ಲಿ ನಾಯಕನೇ ಆಗಿದ್ದಾನೆ. ತನ್ನ ಕುಟುಂಬದವರೊಂದಿನ ಅವನ ಸಂಬಂಧಗಳನ್ನು ಬಹಳ ಕರುಣಾಜನಕವಾಗಿ ಭಾಸನು ಚಿತ್ರಿಸಿದ್ದಾನೆ. ಮಹಾಭಾರತವಾದರೋ ಅಂಥ ಪಶ್ಚಾತ್ತಾಪವನ್ನು ಸೂಚಿಸುವುದಿಲ್ಲ. ಕರ್ಣಭಾರವು ಮಹಾಭಾರತದ ಇನ್ನೊಂದು ಪ್ರಮುಖಪಾತ್ರವಾದ ಕರ್ಣನ ದುಃಖಮಯ ಅಂತ್ಯದ ಮುನ್ಸೂಚನೆಗಳೊಂದಿಗೆ ಕೊನೆಯಾಗುವದು. ಭಾರತದಲ್ಲಿ ಆರಂಭಿಕ ನಾಟಕಗಳು ನಾಟ್ಯಶಾಸ್ತ್ರದಿಂದ ಪ್ರೇರಿತವಾಗಿದ್ದು ದುಃಖಾಂತ್ಯವನ್ನು ಅನುಚಿತ ಎಂದು ಪರಿಗಣಿಸಿದವು.       ನಂತರದ ನಾಟಕಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ಈ ನಾಟಕಗಳು ಚಿಕ್ಕವಾಗಿದ್ದು ಭಾರತದ ಮಹಾಕಾವ್ಯಗಳಾದ ರಾಮಾಯಣ , ಮಹಾಭಾರತಗಳನ್ನು ಆಧರಿಸಿವೆ. ಭಾಸನು ಕಾವ್ಯಗಳ ನಾಯಕರ ಪರ ಇದ್ದರೂ ವಿರೋಧಿಗಳನ್ನು ಬಲು ಸಹಾನುಭೂತಿಯಿಂದ ಕಾಣುತ್ತಾನೆ. ಅದಕ್ಕಾಗಿ ಅವನು ತಕ್ಕಮಟ್ಟಿಗೆ ಸ್ವಾತಂತ್ರ್ಯವನ್ನೂ ವಹಿಸುತ್ತಾನೆ. ಪ್ರತಿಮಾನಾಟಕದಲ್ಲಿ ರಾಮಾಯಣದಲ್ಲಿ ಅನಾಹುತಗಳಿಗೆ ಕಾರಣವಾಗುವ ಕೈಕೇಯಿಯು ಉದಾತ್ತಧ್ಯೇಯವೊಂದರ ಸಾಧನೆಗಾಗಿ ಖಂಡನೆಭರ್ತ್ಸನೆಗಳನ್ನು ಸಹಿಸುವಂತೆ ತೋರಿಸಲಾಗಿದೆ.

ರಾಮಾಯಣ ಆಧರಿಸಿದ ನಾಟಕಗಳು
   ಪ್ರತಿಮಾ-ನಾಟಕ
   ಅಭಿಷೇಕ-ನಾಟಕ
ಮಹಾಭಾರತ ಆಧರಿಸಿದ ನಾಟಕಗಳು
   ಪಂಚರಾತ್ರ
   ಮಧ್ಯಮವ್ಯಾಯೋಗ
   ದೂತಘಟೋತ್ಕಚ
   ದೂತವಾಕ್ಯ
   ಊರುಭಂಗ
   ಕರ್ಣಭಾರ
   ಹರಿವಂಶ ಅಥವಾ ಬಾಲಚರಿತ

       ಬಹುಶಃ ದೂತವಾಕ್ಯ ಮತ್ತು ಬಾಲಚರಿತ ಇವೆರಡೇ ಸಂಸ್ಕೃತದಲ್ಲಿ ಪ್ರಸಿದ್ಧ ನಾಟಕಾರನೊಬ್ಬ ಕೃಷ್ಣನನ್ನು ಪ್ರಮುಖ ಪಾತ್ರವಾಗಿಟ್ಟು ರಚಿಸಿದ ನಾಟಕಗಳು . ಅವನ ಉಳಿದ ನಾಟಕಗಳು ಕಾವ್ಯಗಳನ್ನು ಆಧರಿಸಿಲ್ಲ. ಅವಿಮಾರಕ ಒಂದು ರಮ್ಯಕಥಾನಕ. ಅಪೂರ್ಣವಾಗಿರುವ ದರಿದ್ರ ಚಾರುದತ್ತ ನಾಟಕದ ಕಥೆಯನ್ನು ಮುಂದುವರೆಸಿ ಶೂದ್ರಕನು ಮೃಚ್ಛಕಟಿಕ ನಾಟಕವನ್ನು ಬರೆದು ಅದು ಸುಪ್ರಸಿದ್ಧವಾಯಿತು . ಈ ನಾಟಕವನ್ನು ಆಧರಿಸಿಯೇ ಗಿರೀಶ್ ಕಾರ್ನಾಡ್ ಅವರು ಉತ್ಸವ್ ಎಂಬ ಚಲಚ್ಚಿತ್ರವನ್ನು ೧೯೮೪ರಲ್ಲಿ ನಿರ್ಮಿಸಿದರು.
    ಅವನ ಅತ್ಯಂತ ಪ್ರಸಿದ್ಧ ನಾಟಕಗಳಾದ ಸ್ವಪ್ನವಾಸವದತ್ತ ಮತ್ತು ಪ್ರತಿಜ್ಞಾಯೌಗಂಧರಾಯಣ ಬುದ್ಧನ ಸಮಕಾಲೀನನಾದ ಉದಯನ ಎಂಬ ರಾಜನ ಸುತ್ತ ಇದ್ದ ದಂತಕತೆಗಳನ್ನಾಧರಿಸಿದ್ದವು ಆಗಿವೆ. ಅವನ ನಾಟಕಗಳು ೨೦ನೇ ಶತಮಾನದಲ್ಲಿ ಬೆಳಕಿಗೆ ಬಂದರೂ ಅವುಗಳಲ್ಲಿ ಊರುಭಂಗ ಮತ್ತು ಕರ್ಣಭಾರನಾಟಕಗಳು ಇಂದಿನ ಅಭಿರುಚಿಗೆ ಹೊಂದುವಂತಿರುವದರಿಂದ ಜನಪ್ರಿಯವಾಗಿ ಸಂಸ್ಕೃತದಲ್ಲಿ, ಇತರ ಭಾಷೆಗಳಲ್ಲಿಯೂ ಅನುವಾದಗೊಂಡು ಪ್ರದರ್ಶನಗೊಳ್ಳುತ್ತಿವೆ. ಅನೇಕ ನಾಟಕಗಳ ಭಾಗಗಳು ಕೊಡಿಯಾಟ್ಟಂನಲ್ಲಿಯೂ ಪ್ರದರ್ಶನಗೊಳ್ಳುತ್ತಿವೆ.
       ಕಾಳಿದಾಸನಿಗಿಂತ ಹಿಂದಿನ ಶ್ರೇಷ್ಠ ಸಂಸ್ಕೃತ ನಾಟಕಕಾರ ಭಾಸ, ಸುಮಾರು ೧೬೦೦ ವರ್ಷದ ಹಿಂದೆ, ಬರೆದ ಹಲವು ಪ್ರಸಿದ್ಧ ನಾಟಕಗಳಲ್ಲಿ ಎರಡು 'ಮಧ್ಯಮ ವ್ಯಾಯೋಗ' ಮತ್ತು 'ದೂತ ಘಟೋತ್ಕಚ'. ಮಹಾಭಾರತದಿಂದ ಆಯ್ದ ಕಥಾವಸ್ತುವನ್ನಿಟ್ಟುಕೊಂಡು ರಚಿತವಾದ ನಾಟಕಗಳಿವು.

ನಾಟಕದ ಕಿರು ಸಾರಾಂಶ
        ರಾಕ್ಷಸ ಕುಲದ ಹಿಡಿಂಬೆ ಮತ್ತು ಪಾಂಡವರಲ್ಲಿ ಒಬ್ಬನಾದ ಭೀಮನಿಗೆ ಜನಿಸಿದ ಘಟೋತ್ಕಚನ ಸುತ್ತ ಇರುವ ನಾಟಕದಲ್ಲಿ ಮೊದಲಾರ್ಧ ಬ್ರಾಹ್ಮಣ ಕುಟುಂಬವನ್ನು ತನ್ನ ಹಸಿದ ತಾಯಿಯ ಹೊಟ್ಟೆ ತುಂಬಿಸಲು ಪೀಡಿಸುವ ಘಟೋತ್ಕಚನ ಬಗ್ಗೆ ಹೇಳಲಾಗಿದೆ. ಬ್ರಾಹ್ಮಣ ಕುಟುಂಬವನ್ನು ಕಾಡಿನಲ್ಲಿ ಅಡ್ಡಗಟ್ಟುವ ಘಟೋತ್ಕಚ ಅವರಲ್ಲಿ ಒಬ್ಬನನ್ನು ತನ್ನ ತಾಯಿಗೆ ಆಹಾರವಾಗಿಸಲು ಕಳಿಸಿ ಎಂದು ಹೇಳುತ್ತಾನೆ. ಬ್ರಾಹ್ಮಣ ಕುಟುಂಬ ಭಯಭೀತವಾಗುತ್ತದೆ. ಮೂವರು ಮಕ್ಕಳಲ್ಲಿ ಮೊದಲನೆಯವರು ಮತ್ತು ಕಿರಿಯವನು ಅಪ್ಪನಿಗೊಬ್ಬ ಅಮ್ಮನಿಗೊಬ್ಬ ಪ್ರಿಯನಾದುದರಿಂದ ಕಳಿಸಲು ಒಪ್ಪುವುದಿಲ್ಲ. ಆಗ ಮಧ್ಯದವನೇ ಆಹಾರವಾಗಲು ಸಿದ್ಧವಾಗುತ್ತಾನೆ. ಆ ಸಂದರ್ಭದಲ್ಲಿ ಅಲ್ಲಿಗೆ ಇನ್ನೊಬ್ಬ ಬ್ರಾಹ್ಮಣನ ಪ್ರವೇಶವಾಗುತ್ತದೆ. ಶೌರ್ಯ, ಪ್ರತಾಪಗಳಿಂದ ಆತ ಸಾಮಾನ್ಯ ಬ್ರಾಹ್ಮಣನಾಗಿ ಕಾಣುವುದಿಲ್ಲ. ಅವನು ಭೀಮ. ಘಟೋತ್ಕಚ ಯಾರೆಂದು ತಿಳಿದ ಭೀಮ ನಾನು ನಿನ್ನ ತಂದೆ ಎಂದರೂ ನಂಬದ ಘಟೋತ್ಕಚ ಅವನನ್ನು ತನ್ನ ತಾಯಿ ಹಿಡಿಂಬೆಯ ಬಳಿಗೆ ಕರೆದೊಯ್ಯುತ್ತಾನೆ. ಅಲ್ಲಿ ನಿಜ ಸಂಗತಿ ಗೊತ್ತಾಗಿ ಕಾಲಿಗೆರಗುತ್ತಾನೆ.
       ಎರಡನೇ ಭಾಗದಲ್ಲಿ ಯುದ್ಧದಲ್ಲಿ ಅಭಿಮನ್ಯು ಮೃತ್ಯುವನ್ನಪ್ಪಿದಾಗ, ಕೃಷ್ಣ ಘಟೋತ್ಕಚನ ಮೂಲಕ ತನ್ನ ಸಂದೇಶವನ್ನು ಕುರುವಂಶಕ್ಕೆ ಹೇಳುತ್ತಾನೆ. ಇದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ದುರ್ಯೋದನರಾದಿ ಕುರುವಂಶ ಎದುರಿಸಲಿದೆ ಎಂಬ ಎಚ್ಚರಿಕೆಯನ್ನು ನೀಡಲು ದೂತನಾಗಿ ಘಟೋತ್ಕಚ ಕುರು ವಂಶದ ಬಿಡಾರಕ್ಕೆ ಬಂದಾಗ ದೃತರಾಷ್ಟ್ರನನ್ನು ತಾತ ಎಂದು ಮಾತನಾಡಿಸುತ್ತಾನೆ.
       ಈ ನಾಟಕದಲ್ಲಿ ರಾಕ್ಷಸ ಕುಲದವನಾದರೂ ಘಟೋತ್ಕಚನಲ್ಲಿರುವ ಕ್ಷತ್ರಿಯ ಗುಣಗಳು, ಮಾನವ ಸಹಜ ಗುಣಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.
ಸಮಾಗಮ(ಮಧ್ಯಮ ವ್ಯಾಯೋಗ ನಾಟಕದ ಕೆಲವು ದೃಶ್ಯಗಳು

ನಡುಮಗನನ್ನು ಕಳೆದುಕೊಳ್ಳುವ ದುಖಃದಲ್ಲಿ ಆತನ ತಾಯಿ
ಘಟೋತ್ಕಚನ ಆರ್ಭಟ
ಬ್ರಾಹ್ಮಣ ಕುಟುಂಬದ ರಕ್ಷಣೆಗೆ ಬಂದ ಭೀಮ


ಭೀಮ-ಹಿಡಿಂಬೆ-ಘಟೋತ್ಕಚ ಈ ಮೂವರ ಸಮಾಗಮ
  ಹಿಡಿಂಬೆ ಎಂಬ ಮಾತೃ ಹೃದಯ 
[ಲೇಖಕರು: ರಾಘವೇಂದ್ರಗುಡಿ, ಲೇಖನ ಕೃಪೆ: ಸಂಪದ.ನೆಟ್]
       ಇವತ್ತು ಯಾಕೋ ಮನಸ್ಸು ಸರಿ ಇಲ್ಲ, ಏನೋ ಕಸಿವಿಸಿ, ಯಾಕೋ ನನ್ನ ಗಂಡ ಹಾ ಅದೇ ನನ್ನನ್ನು ದೂರ ಮಾಡಿ ಹೋಗಿರುವ ಇದ್ದರೂ ಇಲ್ಲದಂತಿರುವ ಭೀಮನ ನೆನಪು ಬಹಳ ಕಾಡುತ್ತಿದೆ, ನನಗೆ ನನ್ನವರೆಂದು ಅದರಲ್ಲೂ ನನ್ನ ಜೀವನವೇ ಆಗಿ ಇರುವವನು ಒಬ್ಬನೇ ಮಗ. ಇರುವುದು ಘೋರವಾದ ಕಾಡು, ಕಣ್ಣು ಹಾಯಿಸಿದೆಡೆಗೆ ಕಾಣುವುದೆಲ್ಲ ಹಚ್ಚ ಹಸಿರ ಕಾಡು, ಭೀಕರ ಕಾಡು ಪ್ರಾಣಿಗಳು. ನನ್ನ ಕುಲವನ್ನು ಬೆಳಗಬೇಕಾದವ, ನನ್ನ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಸಾಗಿಸಬೇಕಾಗಿರುವವನೂ ಆ ಮಗನೇ. ಆ ನನ್ನ ಮಗ ಘಟೋತ್ಕಚ ರಾಕ್ಷಸ ಕುಲದವನಾದರೂ ತಾಯಿಯ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ, ವೀರಾಧಿವೀರ ಗಂಡುಗಲಿ. ಇತರರಿಗೆ ಸಿಂಹ ಸ್ವಪ್ನವಾದರೂ ನನಗೆ ಪುಟ್ಟ ಮುಗ್ಧ ಮಗು. ಈ ತಾಯಿಯ ಪ್ರಪಂಚವೇ ಮಗ, ಈ ಮಗನ ಪ್ರಪಂಚವೂ ತಾಯಿಯೇ. ನನ್ನ ಮಗ ನಾನು ಪಟ್ಟ ಕಷ್ಟವನ್ನು, ನನ್ನ ನೋವನ್ನು, ನಲಿವನ್ನು ಕಾಣುತ್ತ, ನಾನು ಅತ್ತಾಗ ಅಳುತ್ತ, ನಕ್ಕಾಗ ನಗುತ್ತ ಬೆಳೆದವ. ಒಮ್ಮೇಲೆ ನೂರಾರು ಜನರನ್ನು ಕೊಲ್ಲಬಲ್ಲಂತಹ ಬಲವಂತ, ಯುದ್ಧಕ್ಕೆ ನಿಂತರೆ ಇಡೀ ವೈರಿಪಡೆಯನ್ನು ನುಂಗಿಹಾಕಬಹುದಾದಂತ ವೀರಾಧಿವೀರ, ಇನ್ನೂ ಮದುವೆಯಾಗಿಲ್ಲ, ಆ ವಯಸ್ಸೂ ಅಲ್ಲ! ಹಾಗಂತ ಗೊಂಬೆಗಳೊಂದಿಗೂ ಆಡುವ ವಯಸ್ಸಲ್ಲ. ನನ್ನ ರಾಜ್ಯವನ್ನು ಉತ್ತುಂಗಕ್ಕೇರಿಸುವ ಮಗನಿವನು ಎಂಬ ಹೆಮ್ಮೆ ಇದೆ ನನಗೆ! ಅದಕ್ಕಿಂತ ಇನ್ನೇನು ಸಂಭ್ರಮ ಬೇಕು? ಅಲ್ಲದೇ ಇನ್ನೊಂದು ಕಾರಣವೂ ಇದೆ, ಇನ್ನೆಷ್ಟು ದಿನ ಇವನನ್ನು ಹೀಗೆಯೇ ಬಿಡುವುದು? ಇವನಿಗೂ ಮದುವೆ ಮಾಡಬೇಕು, ಅವನಿಗೂ ಒಂದು ಆಸರೆ, ನನಗೂ ತನ್ನವರೆನಿಸಿಕೊಳ್ಳುವ ಒಂದು ಹೆಣ್ಣು ಜೀವ ಮನೆಗೆ ಬರುವುದು ಎಂಬ ಅಭಿಲಾಷೆ.
      ನಾನು ಕುಲದಿಂದ ರಾಕ್ಷಸಿ ಒಪ್ಪುತ್ತೇನೆ. ಆದರೆ, ತಾಯಿ ತಾಯಿಯೇ, ಅಲ್ಲವೇ? ಅಲ್ಲದೇ ನನಗೇನು ಕಡಿಮೆ? ವೀರಾಧಿವೀರ, ವಾಯುಪುತ್ರ, ಮಹಾ ಪ್ರಚಂಡ, ಶ್ರೀಕೃಷ್ಣನ ಕೃಪಾಕಟಾಕ್ಷವನ್ನು ಪಡೆದಿರುವ, ವಿಶ್ವವೇ ಮೆಚ್ಚುವ ಪಾಂಡು ಪುತ್ರ ‘ಭೀಮ’ ನನ್ನ ಗಂಡ ಎಂಬ ಹೆಮ್ಮೆ ಇದೆಯಾದರೂ, ಘಟೋತ್ಕಚನೆಂಬ ಮಗನ ಜನನ ಬೀಜವನ್ನು ಬಿತ್ತಿಹೋದ ಪುಣ್ಯಾತ್ಮ ಈ ಕಡೆ ತಿರುಗಿಯೂ ನೋಡಿಲ್ಲ, ಸೌಜನ್ಯಕ್ಕಾದರೂ ನೀನು ಹೇಗಿದ್ದಿಯಾ? ಎಂದು ಕೇಳಿಲ್ಲ. ನನ್ನ ನೆನಪಾಗದಿದ್ದರೂ ಬೇಡ, ಪಾಪ ತಂದೆಯಿದ್ದೂ ಅನಾಥನಂತೆ, ನಾಲ್ಕು ಜನ ಅತ್ಯುತ್ಕೃಷ್ಟ ಕಲಿಗಳು ದೊಡ್ಡಪ್ಪ, ಚಿಕ್ಕಪ್ಪರಾಗಿದ್ದರೂ ಸಹಿತ ಯಾರ ಪ್ರೀತಿಯೂ ಸಿಗಲಾರದಂತಹ ತಪ್ಪನ್ನು ನನ್ನ ಮಗನೇನು ಮಾಡಿದ್ದ? ಭೀಮ ಗಂಡಸು ಹೋಗಲಿ, ಅವನ ತಾಯಿ ಕುಂತಿಗಾದರೂ ನನ್ನ ಸ್ಥಿತಿಯ ಅರಿವಾಗಬೇಡವೇ? ನಾನು ಹಿಡಿಂಬಿ, ರಾಕ್ಷಸ ಕುಲದವಳು, ಅನಾರ್ಯಳೇ ಆಗಿರಬಹುದು, ನಾನು ಅವಳ ಸೊಸೆ ಎಂಬುದು ಸುಳ್ಳೇ? ಹೋಗಲಿ ನನ್ನನ್ನು ಅವಳ ಸೊಸೆ ಎಂದು ಒಪ್ಪಿಕೊಳ್ಳಲು ಕುಂತಿಗೆ ಪ್ರತಿಷ್ಠೆ ಅಡ್ಡ ಬಂದಿರಬಹುದು, ಆದರೆ ಒಂದು ಬಾರಿಯಾದರೂ ನನ್ನನ್ನು ಭೇಟಿ ಮಾಡಿ ಕ್ಷೇಮ ಸಮಾಚಾರವನ್ನು ಕೇಳಿ ಬಾ ಎಂದು ಹೇಳಬೇಡವೇ? ಇವರೆಲ್ಲ ಹುಲುಮಾನವರು, ಮನುಷ್ಯರಿಂದ ತಪ್ಪಾಗುವುದು ಸಹಜ, ಅದರಲ್ಲೇನು ಉತ್ಪ್ರೇಕ್ಷೆ ಇಲ್ಲ. ಆದರೆ, ದೇವಾನುದೇವತೆಗಳಿಂದಲೇ ಪೂಜೆಗೊಳಗಾಗುವ, ತನ್ನ ತಾಯಿಗೆ ಬಾಯಿಯಲ್ಲಿಯೇ ವಿಶ್ವವನ್ನು ತೋರಿಸಿದ ಶ್ರೀ ಕೃಷ್ಣ ಪರಮಾತ್ಮನಿಗಾದರೂ ಈ ತಾಯಿಯ, ಗಂಡನಿಂದ ಪರಿತ್ಯಕ್ತಳಾದ ಒಂದು ಹೆಣ್ಣಿನ ವೇದನೆ ಅರ್ಥವಾಗಲಿಲ್ಲವೇ? ಅವನಾದರೂ ಒಂದು ಬಾರಿಯಾದರೂ ನನ್ನ ಬಗ್ಗೆ ಭೀಮನಿಗೆ ನೆನಪಿಸಿದ್ದರೆ, ಅವನ ಮಾತನ್ನು ಮೀರುವ ಧೈರ‍್ಯವಾಗಲಿ, ಸ್ಥೈರ್ಯವಾಗಲಿ ಇತ್ತೆ? ಎಂಬುವುದರ ಬಗ್ಗೆ ಕೋಪವು ಇದೆ. ಆದರೂ ಗಂಡನ ಮೇಲಿನ ಪ್ರೀತಿ ಕಿಂಚಿತ್ ಕಡಿಮೆಯಾಗಿಲ್ಲ. ಅವನು ಮತ್ತೆ ಬರುವನು ಎಂಬ ನಂಬಿಕೆಯಲ್ಲಿಯೇ ಕಾಲ ಕಳೆಯುತ್ತಿದ್ದೇನೆ. ನಾನು ರಾಕ್ಷಸಿಯೂ ಹೌದು, ಗಂಡನೊಬ್ಬನಿಗೇ ಮೀಸಲಾದ ಪತಿವೃತೆಯೂ ಹೌದು...
       ಅಯ್ಯೋ ಯಾಕೆ ನಾನು ಹೀಗೆಲ್ಲ ಒಬ್ಬಳೇ ಮಾತನಾಡಿಕೊಳ್ಳುತ್ತಿದ್ದೇನೆ? ಏನಾಗಿದೆ ಇಂದು ನನಗೆ? ಮತ್ತೆ ಯಾರೊಂದಿಗೆ ಮಾತನಾಡಲಿ, ಯಾರಿದ್ದಾರೆ ಈಗ ನನ್ನೊಂದಿಗೆ, ಯಾಕೆ ಮಗ ಇನ್ನೂ ಮನೆಗೆ ಬಂದಿಲ್ಲ? ಇಷ್ಟೊತ್ತಿಗೆಲ್ಲ ಬಂದಿರುತ್ತಿದ್ದನಲ್ಲ, ಊಟದ ಸಮಯವಾಗಿದೆ, ಪಾಪ ಏನಾದರೂ ತಿಂದಿರುತ್ತಿತ್ತಾನೊ ಇಲ್ಲವೋ? ನನ್ನ ಮಗನಿಗೆ ಏನಾದರೂ ತೊಂದರೆಯಾಗಿದೆಯೇ? ಛೆ ಛೆ ಅವನಿಗೆ ಏನೂ ಆಗುವುದಿಲ್ಲ, ಅವನು ವೀರ ಸುಪುತ್ರ. ಹಾಂ! ದೂರದಲ್ಲಿ ಯಾರೋ ಬರುತ್ತಿರುವಂತೆ ಕಾಣುತ್ತಿದೆಯಲ್ಲ, ಈಗ ನನಗೆ ಸಮಾಧಾನವಾಯಿತು. ಅರೆ, ಅವನೊಂದಿಗೆ ಬರುತ್ತಿರುವ ಆ ದೈತ್ಯದೇಹಿ ಯಾರು!?
     ಓಹ್ ಅದು ಅವರೇನಾ? ನನ್ನ ಕಣ್ಣು ನನಗೆ ಸುಳ್ಳು ಹೇಳುತ್ತಿದೆಯಾ? ಅಥವಾ ನನನ್ನ ಮನಸ್ಸಿನೊಳಗಿರುವ ರೂಪ ಜೀವ ತಳೆದು ಬರುತ್ತಿದೆಯಾ? ಅದು ಮರಿಚಿಕೆಯಾ? ಸಾಧ್ಯವಿಲ್ಲ, ಇದು ಮರುಭೂಮಿಯಲ್ಲ. ಅಂದರೆ....ಅಂದರೆ ಅವನು ನಿಜವಾಗಿಯೂ ಅವನೇ! ಪಾಂಡವ........., ವಾಯುಪುತ್ರ ಬಲ ಭೀಮ, ನನ್ನ ಗಂಡ. ಹಾಂ.... ಹೌದು ಆತನೇ ಬರುತ್ತಿದ್ದಾನೆ, ಅದೂ ಮಗನೊಟ್ಟಿಗೆ, ಬೆಳಗಿನಿಂದ ನನ್ನ ಕಸಿವಿಸಿಗೆ ಇದೆ ಕಾರಣವೇ? ಏನಾದರಾಗಲಿ ನನ್ನ ಪತಿರಾಯ ಬರುತ್ತಿದ್ದಾನಲ್ಲ, ಅದೇ ಖುಷಿ. ಬರಲಿ ಅವನು, ಅವನೊಂದಿಗೆ ನಾನು ಮಾತನಾಡುವುದೇ ಇಲ್ಲ, ಅವನು ನನ್ನನ್ನು ರಮಿಸಿ ಎಷ್ಟು ವರುಷಗಳುರುಳಿವೆ? ಇಲ್ಲ, ಇಲ್ಲ ಅವನೊಂದಿಗೆ ನಾನು ಮುನಿಸಿ ಕೊಂಡಿದ್ದು ನಿಜವೆಂದು ತಿಳಿದು ಹಾಗೆ ಹೋದರೆ ಅವನನ್ನು ಭಕ್ತಿಯಿಂದ ಬರಮಾಡಿಕೊಳ್ಳಬೇಕು, ಅವನು ಬಂದೇ ಬರುವನು ಎಂಬ ನಂಬಿಕೆ ಸುಳ್ಳಾಗಲಿಲ್ಲ, ಬರುವುದಷ್ಟೇ ಅಲ್ಲ ತನ್ನ ಮಗನನ್ನೂ ಒಪ್ಪಿಕೊಂಡಿದ್ದಾನೆ, ಅಪ್ಪಿಕೊಂಡಿದ್ದಾನೆ, ಇನ್ನಾದರೂ ತನ್ನ ಜೀವನ ಖುಷಿಯಲ್ಲಿ ಕಳೆಯುವುದು, ಅಬ್ಬಾ ನಾನು ಎಂಥ ಪುಣ್ಯವಂತೆ, ಬಹಳ ದಿನಗಳ ನಂತರ ಮರಳಿದ ಗಂಡ, ವಯಸ್ಸಿಗೆ ಬರುತ್ತಿರುವ ಮಗ, ನಾಳೆ ಅವನ ಮದುವೆ, ನಂತರ ಸೊಸೆ, ಮೊಮ್ಮಕ್ಕಳು, ವಂಶವೂ ಬೆಳೆಯುವುದು, ಜೀವನವೂ ಸಾರ್ಥಕ.
    ಅಯ್ಯೋ....ಎಂಥ ಘಾತಕವಿದು? ಅವನು ನನ್ನ ಮೇಲಿನ ಪ್ರೀತಿಗಾಗಿ ಇಲ್ಲವೇ ಮಗನ ಮೇಲಿಮ ಮಮಕಾರಕ್ಕಾಗಿ ಬಂದಿಲ್ಲ....ಅವನು ಬಂದದ್ದು ವ್ಯಾಪಾರಕ್ಕಾಗಿ, ತಾನು ಯುದ್ಧದಲ್ಲಿ ಗೆಲ್ಲಲು ಬೇಕಾಗಿರುವ ಸಾಧನಕ್ಕಾಗಿ, ಘಟೋತ್ಕಚನೇ ನನ್ನ ಲೋಕ, ಆದರೆ ಅವರಪ್ಪನಿಗೆ ಅವನೊಬ್ಬ ಸಾಮಾನ್ಯ ಸೈನಿಕ, ಅವನು ಸತ್ತರೆ ಭೀಮನಿಗೆ ಯಾವನೋ ಒಬ್ಬ ರಣ ಸೈನಿಕ ಸತ್ತಂತೆ, ಅದೇ ನನಗೆ..., ಮಗನ ಒಂದು ಕೂದಲು ಕೊಂಕಿದರೂ, ಜಗತ್ಪ್ರಳಯವಾದಂತೆ, ನನ್ನ ಜೀವನವೇ ನಶಿಸಿದಂತೆ. ಅದು ಭಿಮನಿಗೆ ಎಂದಿಗೂ ಅರ್ಥವಾಗುವುದಿಲ್ಲ. ಏಕೆಂದರೆ ತಾಯಿ, ಅಣ್ಣತಮ್ಮಂದಿರು, ಎಲ್ಲಕ್ಕಿಂತಲೂ ಮಿಗಿಲಾದ ಶ್ರೀಕೃಷ್ಣನ ಸಂಗ ಅವನಿಗಿದೆ. ಬಾಯಿ ಬಿಟ್ಟರೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ‘ಧರ್ಮ’ ಎಂಬ ಕಾರಣವಿದೆ. ಆದರೆ, ಆದರೆ ನನಗೆ ಅವುಗಳಾವವೂ ಇಲ್ಲ, ಬೇಕಾಗಿಯೂ ಇಲ್ಲ. ನನ್ನ ಮಗನೊಬ್ಬನಿದ್ದರೆ ಸಾಕು, ಅವನೇ ಬೇಕು. ಅದೂ ಅಲ್ಲದೇ ಸಾಯಲಿಕ್ಕಾಗಿಯೇ ಮಗನನ್ನು ಕಳಿಸಬೇಕು ಎಂದು ಗೊತ್ತಿದ್ದೂ ನನ್ನ ಜೀವನ, ನನ್ನ ಲೋಕವೇ ಆಗಿರುವ ಮಗನನ್ನು ಹೇಗೆ ಕಳಿಸುವುದು, ನನ್ನನ್ನು ಬಿಡಿ ಯಾವ ತಾಯಿ ಹೃದಯ ಇದಕ್ಕೆ ಒಪ್ಪುತ್ತದೆ? ನನ್ನ ಮಗ ಘಟೋತ್ಕಚ ವೀರನೇನೋ ಹೌದು, ಆದರೆ ನಗರದ ಕುತ್ಸಿಕ ಬದ್ಧಿಯನ್ನು, ಮೋಸದ ಆಟವನ್ನು ತಿಳಿಯದ ಮುಗ್ಧ, ಅದೂ ವೀರಾಧಿವೀರರನ್ನು, ಬೃಹತ್ ಸ್ಯನ್ಯವನ್ನು ಹೊಂದಿರುವ ಕೌರವರ ವಿರುದ್ಧದ ಯುದ್ಧಕ್ಕೆ ಹೇಗೆ ಕಳಿಸುವುದು? ಗಂಡನೆಂಬ ತ್ರಿಲೋಕ ವೀರ, ಮಹಾನುಭಾವ ನಾಚಿಕೆ ಬಿಟ್ಟು ನನ್ನ ಮಗನನ್ನೇ ಕೇಳುತ್ತಿದ್ದಾನಲ್ಲ.......ಹೇಗೆ ನಾನು ಒಪ್ಪಲಿ? ಆದರೂ ಬೇಡವೆನ್ನು ಅಧಿಕಾರ ನನಗಿಲ್ಲ.

ಅಯ್ಯೋ.....ನನ್ನ ಮಗ ಘಟೋತ್ಕಚ ಯುದ್ಧ ಭೂಮಿಯಲ್ಲಿ ಮರಣವನ್ನಪ್ಪಿದನೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ