ನನ್ನ ಪುಟಗಳು

06 ಅಕ್ಟೋಬರ್ 2015

೧೬) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಓ)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಓ)
೪೭೩. ಓಚಯ್ಯನ ಕೆಲಸ ಮಾಡು = ಉಪಾಧ್ಯಾಯವೃತ್ತಿ ಮಾಡು
(ಓಚಯ್ಯ < ಓಜಯ್ಯ < ಉವಜ್ಜಾಯ < ಉಪಾಧ್ಯಾಯ = ಶಿಕ್ಷಕ)
ಪ್ರ : ಓಚಯ್ಯನ ಕೆಲಸ ಮಾಡೋದು ನಾಚಿಕೆಗೇಡಿನ ಕೆಲಸ ಅಂತ ಯಾರು ಹೇಳಿದರು?
೪೭೪. ಓಡಾಡಿಸುತ್ತಿರು = ಸಂಭೋಗಿಸಲು ಪ್ರಯತ್ನಿಸು, ಹದರಿ ಹತ್ತಲು ಯತ್ನಿಸು
ಪ್ರ : ಹಸು ‘ತಿರುಗಿ’ರಬೇಕು, ಹೋರಿ ಓಡಾಡಿಸುತ್ತಿತ್ತು
೪೭೫. ಓಡಲ್ಲಿ ಹುರಿದು ಸುಣ್ಣಕಲ್ಲೊಳಗೆ ಬಿರಿಹುಯ್ = ಚಿತ್ರ ಹಿಂಸೆಕೊಡು
(ಓಡು = ಬಾಣಲಿಯಾಕಾರದ ಒಡೆದ ಮಡಕೆಯ ತಳಭಾಗ. ಲೋಹದ ಬಾಣಲಿ ಬರುವ ಮುನ್ನ ಕಾಳು ಹುರಿಯಲು ಈ ಓಡನ್ನೇ ಬಳಸಲಾಗುತ್ತಿತ್ತು)
ಪ್ರ : ನಾನು ತಡ ಮಾಡಿ‌ದ್ರೆ, ನಮ್ಮತ್ತೆ ನನ್ನನ್ನು ಓಡಲ್ಲಿ ಹುರಿದು, ಸುಣ್ಣಕಲ್ಲೊಳಗೆ ಬಿರಿ ಹುಯ್ತಾಳೆ ಅಷ್ಟ.
೪೭೬. ಓದಿ ಬೂದಿ ಹುಯ್ದುಕೊಳ್ಳು = ಓದಿ ಹಾಳಾಗು, ಓದಿ ಹುಚ್ಚನಾಗು
ಶಾಲೆಗೆ ಸೇರಿಸಿದ ಮಕ್ಕಳು ಸರಿಯಾಗಿ ಓದಿ ಉತ್ತೀರ್ಣರಾಗದೆ ಪೋಲಿ ಬಿದ್ದಾಗ, ಮೈಗಳ್ಳರಾದಾಗ ರೋಸಿದ ತಂದೆತಾಯಿಗಳು ಶಾಲೆ ಬಿಡಿಸಿ ಜಿರಾಯಿತಿ ಕೆಲಸಕ್ಕೆ ತೊಡಗಿಸುವಾಗ ಆಡುವ ಮಾತು.
ಪ್ರ : ನೀನು ಓದಿ ಬೂದಿ ಹುಯ್ದುಕೊಂಡದ್ದು ಸಾಕು, ಹೊಲ ಉಳು ನಡಿ.
೪೭೭. ಓದು ಒಕ್ಕಾಲು ಬುದ್ದಿ ಮುಕ್ಕಾಲಾಗಿರು = ವಿದ್ಯೆ ಕಮ್ಮಿಯಾದರೂ ಬುದ್ಧಿ ಹೆಚ್ಚಾಗಿರು
(ಒಕ್ಕಾಲು < ಒರ್ + ಕಾಲು, ಕಾಲು = ನಾಲ್ಕನೇ ಒಂದು ಭಾಗ; ಮುಕ್ಕಾಲು < ಮೂರು + ಕಾಲು = ನಾಲ್ಕರಲ್ಲಿ ಮೂರು ಭಾಗ)
ಪ್ರ : ಓದಲಿಲ್ಲ ಅಂತ ಹೀಗಳೆಯಬೇಡ, ಓದು ಒಕ್ಕಾಲಾದ್ರೂ ಬುದ್ಧಿ ಮುಕ್ಕಾಲು ಅನ್ನೋದನ್ನ ಮರೀಬೇಡ.
೪೭೮. ಓನಾಮ ಗೊತ್ತಿಲ್ಲದಿರು = ಪ್ರಾಥಮಿಕ ಜ್ಞಾನವಿಲ್ಲದಿರು, ಏನೂ ತಿಳಿಯದಿರು
(ಓನಾಮ < ಓಂ ನಮಃ = ಪ್ರಣವ ಸ್ವರೂಪಿಗೆ ನಮಸ್ಕಾರ)
ಪ್ರ : ಓನಾಮ ಗೊತ್ತಿಲ್ಲದೋರು ದೊಡ್ಡದಾಗಿ ಬೋಧನೆ ಮಾಡೋಕೆ ಬರ್ತಾರೆ.
೪೭೯. ಓರೆಯಾಗು = ಢೊಂಕಾಗು, ವಕ್ರವಾಗು
ಪ್ರ : ಗೆರೆಯನ್ನು ನೇರವಾಗಿ ಎಳೀಲಿಲ್ಲ, ಓರೆಯಾಯ್ತು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ