ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಕ೩)
೬೨೦. ಕಳ್ಳಿ ಹೋಗು = ಬವಳಿ ಬಂದಂತಾಗು, ಸೊರಗಿದಂತಾಗು(ಕಳ್ಳಿ < ಕಳಲಿ – ಸೊರಗಿ)
ಪ್ರ : ಉರಿ ಬಿಸಿಲಿನಲ್ಲಿ ಜೀವ ಕಳ್ಳಿ ಹೋದಂತಾಗಿ ಕುಸಿದು ಬಿದ್ದೆ.
೬೨೧. ಕಳ್ಳು ಕಿತ್ತ ಬೆಕ್ಕಿನಂತಿರು = ಒಣಗಿಕೊಂಡಿರು, ಮೂಳೆಚಕ್ಕಳವಾಗಿರು
(ಕಳ್ಳು < ಕರುಳು) ಕಾಡು ಬೆಕ್ಕಿನ ಕರುಳನ್ನು ಕಿತ್ತು, ಒಣಗಿಸಿ, ಮನೆಯ ಅಲಂಕಾರಕ್ಕಾಗಿ ಮಾರುವ, ಕೊಳ್ಳುವ ಪದ್ಧತಿ ಈ ನುಡಿಗಟ್ಟಿಗೆ ಮೂಲ.
ಪ್ರ : ತೋಳನಂಥ ಗಂಡಿಗೆ ಕಳ್ಳು ಕಿತ್ತ ಬೆಕ್ಕಿನಂಥ ಹೆಣ್ಣು ಸರಿಜೋಡಿಯಾಗ್ತದ?
೬೨೨. ಕಳ್ಳು ಕೊಟ್ಟು ನೆಳ್ಳು ಮಾಡು = ಹೆಣ್ಣು ಕೊಟ್ಟು ಹೂಡು ಮಾಡು
(ಕಳ್ಳು < ಕರುಳು ; ನೆಳ್ಳು < ನೆರಳು)
ಪ್ರ : ಕಳ್ಳು ಕೊಟ್ಟು ನೆಳ್ಳು ಮಾಡಿದ ಅತ್ತೆ ಮಾವಂದಿರನ್ನು ಅನಾದರ ಮಾಡೋಕಾಗುತ್ತ?
೬೨೩. ಕಳ್ಳು ತೆಗೆದು ಕಾಲಿಗೆ ಸುತ್ತು = ಮದುವೆ ಮಾಡು, ಹೆತ್ತ ಕರುಳ ಕುಡಿಯನ್ನು ಅಳಿಯನ ಕಾಲ ಮೇಲೆ ಹಾಕು.
ಮರಕ್ಕೆ ಬಳ್ಳಿ ಸುತ್ತಿಕೊಳ್ಳುತ್ತದೆ. ಮರ ಬಳ್ಳಿಗೆ ಆಧಾರಸ್ತಂಭ. ಮಳೆಗಾಳಿಗೆ ಕೆಳಗೆ ಬಿದ್ದು ಹೋಗುವ ಭಯವಿಲ್ಲ. ಆದ್ದರಿಂದಲೇ ಬಳ್ಳಿ ಮರದ ಆಸರೆ ಬಯಸಿ ಅದಕ್ಕೆ ಸುತ್ತಿಕೊಂಡು ಪಲ್ಲವಿಸುತ್ತದೆ. ಹೂಕಾಯಿ ಹಣ್ಣುಗಳನ್ನು ಬಿಡುತ್ತದೆ. ಆ ಹಿನ್ನೆಲೆಯಿಂದ ಮೂಡಿರಬಹುದಾದ ನುಡಿಗಟ್ಟು ಇದು.
ಪ್ರ : ನಮ್ಮ ಕಳ್ಳು ತೆಗೆದು ನಿನ್ನ ಕಾಲಿಗೆ ಸುತ್ತಿದ್ದೇವೆ; ಅದರ ರಕ್ಷಣೆ ನಿನಗೆ ಸೇರಿದ್ದು.
೬೨೪. ಕಳ್ಳು ಬಳ್ಳಿಗೇ ಸುತ್ತಿಕೊಳ್ಳು = ಸಂಬಂಧದೊಳಗೇ ಮದುವೆಯಾಗು
(ಕಳ್ಳು ಬಳ್ಳಿ = ನೆಂಟಸ್ತನ, ವಂಶ)
ಪ್ರ : ನಮ್ಮ ಕಳ್ಳು ಬಳ್ಳಿಗೇ ಸುತ್ತಿಕೊಂಡಿರೋದ್ರಿಂದ ಮಗಳ ಬಗೆಗೆ ನಮಗೆ ಚಿಂತೆ ಇಲ್ಲ.
೬೨೫. ಕಳ್ಳು ಪಚ್ಚಿ ಹೊರಡಿಸು = ಸಾಯಬೀಳ ಸದೆ ಬಿಡಿ
(ಪಚ್ಚಿ = ಬೋಟಿ, ಜಠರ)
ಪ್ರ :ಏನಾದರೂ ಗರ್‌ಮಿರ್ ಅಂದ್ರೆ, ಕಳ್ಳು ಪಚ್ಚಿ ಹೊರಡಿಸಿಬಿಡ್ತೀನಿ, ಹುಷಾರ್ !
೬೨೬. ಕಳ್ಳು ಬಿರಿಯ ಪೋಣಿಸು = ಕಂಠ ಪೂರ್ತಿ ಉಣ್ಣು, ಕರುಳು ಹಿಗ್ಗುವಂತೆ ತಿನ್ನು
(ಬಿರಿಯ = ಅರಳುವಂತೆ, ಅಗಲಗೊಳ್ಳುವಂತೆ, ಪೋಣಿಸು = ತುತ್ತನ್ನು ಒಂದರ ಹಿಂದೆ ಒಂದನ್ನು ಸೇರಿಸು, ದಾರಕ್ಕೆ ಮಣಿಗಳನ್ನು ಏರಿಸಿದಂತೆ)
ಪ್ರ : ಅವರ ಮನೆಯಲ್ಲಿ ಕಳ್ಳು ಬಿರಿಯ ಪೋಣಿಸಿ ಬಂದಿದ್ದೀನಿ, ನನಗೆ ಊಟ ಬೇಡ
೬೨೭. ಕಾಕಾ ಎನ್ನು = ಕಾಗೆಯಂತೆ ಸದಾ ಕ್ರಾಕ್ರಾ ಎಂದು ಅರಚು, ಮಾತು ನಿಲ್ಲಿಸದಿರು
ಪ್ರ: ಗಾದೆ – ಬೆಳ್ಳಯ್ಯ ಕಾ
ಅರಿವಯ್ಯ ಮೂಕ
೬೨೮. ಕಾಗೆ ಎಂಜಲು ಮಾಡು = ಮೇಲೆ ಬಟ್ಟೆ ಹಾಕಿ ಕಡಿದುಕೊಂಡು, ಕೊಂಚ ಕೊಡು
ಹಣ್ಣನ್ನು ಭಾಗಮಾಡಲು ಹತಾರ ಇಲ್ಲದಿದ್ದಾಗ ಮಕ್ಕಳು ಹಣ್ಣಿನ ಮೇಲೆ ಬಟ್ಟೆಯನ್ನು ಹಾಕಿ, ಬಾಯಿಂದ ಕಡಿದು, ಹೋಳು ಎಂಜಲಾಗಿಲ್ಲವೆಂದು ಇನ್ನೊಬ್ಬರಿಗೆ ಕೊಡುವುದುಂಟು. ಹೀಗೆ ಮಾಡುವುದಕ್ಕೆ ಕಾಗೆ ಎಂಜಲು ಎಂದು ಹೇಳುತ್ತಾರೆ- ಕೊಂಚ ಎಂಬ ಅರ್ಥದಲ್ಲಿ.
ಪ್ರ : ದಾಸ ಸಾಹಿತ್ಯದಲ್ಲಿ ಕನಕನದು ಸಿಂಹಪಾಲು, ಉಳಿದವರದು ಕಾಗೆ ಎಂಜಲು
೬೨೯. ಕಾಜಿ ನ್ಯಾಯ ಮಾಡು = ಕಣ್ಣೊರೆಸುವ ನ್ಯಾಯಮಾಡು, ತಿಪ್ಪೆ ಸಾರಿಸುವ ನ್ಯಾಯ ಮಾಡು
(ಕಾಜಿ = ಮಹಮ್ಮದೀಯ ಸಂತ, ನ್ಯಾಯಾಧೀಶ)
ಪ್ರ : ಹಿಂಗೆ ಕಾಜಿ ನ್ಯಾಯ ಮಾಡೋದನ್ನು ಬಿಟ್ಟು, ತಪ್ಪಿಸ್ಥರಿಗೆ ಶಿಕ್ಷೆ ವಿಧಿಸಿ.
೬೩೦. ಕಾತಾಳ ಪಡು = ರೋಷದ್ವೇಷಗಳಿಗೆ ತುತ್ತಾಗು, ಕೇಡಿನಿಂದ ಕುದಿ
(ಕಾತಾಳ < ಘಾತಾಳ < ಘಾತಾಳಿಕೆ = ಕೇಡು, ಭಯೋತ್ಪಾದನಾ ಉದ್ವೇಗ)
ಪ್ರ : ಮನುಷ್ಯ ಸಂಯಮದಿಂದ ಇರಬೇಕು, ಹಿಂಗೆ ಕಾತಾಳ ಪಡಬಾರದು.
೬೩೧. ಕಾದು ಕಾದು ಕಣ್ಣು ಬೆಳ್ಳಗಾಗು = ನಿರೀಕ್ಷೆಯಿಂದ ಕಣ್ಣು ನಿಸ್ತೇಜವಾಗು, ಬಾಡಿದಂತಾಗು
ಪ್ರ : ಕಾದು ಕಾದು ಕಣ್ಣು ಬೆಳ್ಳಗಾದವೇ ವಿನಾ ಅವಳು ಮಾತ್ರ ಬರಲಿಲ್ಲ.
೬೩೨. ಕಾಯಿಗಟ್ಟು = ಗಂಟಾಗು, ಗಟ್ಟಿಯಾಗು
ಪ್ರ : ಒಳದೊಡೆಯಲ್ಲಿ ಹದಗಳ್ಳೆ ಕಾಯಿಗಟ್ಟಿದೆ
೬೩೩. ಕಾರ ಅರೆ = ಕೇಡು ಬಗೆ, ದ್ವೇಷ ಸಾಧಿಸು
ಪ್ರ : ಉಪಕಾರ ಮಾಡಿದ ನನಗೇ ಕಾರ ಅರೆದನಲ್ಲಪ್ಪ ಅವನು
೬೩೪. ಕ್ಯಾಕ ಹಾಕು = ನಲಿ, ಸಂತೋಷ ಸೂಚಿಸು
(ಕ್ಯಾಕ < ಕೇಕೆ)
ಪ್ರ : ಘನತೆ ಗಾಂಭಿರ್ಯ ಇಲ್ಲದೆ, ಕುಡಿದು ಕ್ಯಾಕ ಹಾಕ್ಕೊಂಡು ಕುಣೀತಾ ಅವರೆ
೬೩೫. ಕ್ಯಾರೆ ಅನ್ನದಿರು = ಏನು ಎನ್ನದಿರು, ವಿಚಾರಿಸಿಕೊಳ್ಳದಿರು
(ಕ್ಯಾರೆ < ಕ್ಯಾ + ರೆ = ಏನಯ)
ಪ್ರ : ಮನೆಗೆ ಹೋದ್ರೆ ಯಾರೂ ಕ್ಯಾರೆ ಅನ್ನಲಿಲ್ಲ
೬೩೬. ಕ್ವಾರಣ್ಯಕ್ಕೆ ಹೋಗು = ಭಿಕ್ಷೆಗೆ ಹೋಗು
(ಕ್ವಾರಣ್ಯ < ಕೋರನ್ನ = ಕೋರಕ್ಕಿ, ಒಂದು ಬಗೆಯ ಧಾನ್ಯ) ಸಾಮಾನ್ಯವಾಗಿ ಕುರುಬ ಲಿಂಗಾಯತರನ್ನು ಒಡೇರಯ್ಯ (< ಒಡೆಯರ್) ನೋರು ಎಂದು ಕರೆಯಲಾಗುತ್ತದೆ. ಅವರು ಕಾಲಿಗೆ ಜಂಗು ಕಟ್ಟಿಸಿಕೊಂಡು ಮನೆಮನೆಗೆ ಹೋಗಿ ಕ್ವಾರುಣ್ಯ ಭಿಕ್ಷಾ ಎಂದು ಹೇಳಿ ಜೋಳಿಗೆ ಹಿಡಿಯುವ ಪದ್ಧತಿ ಉಂಟು. ಈ ನುಡಿಗಟ್ಟು ಆ ಮೂಲದ್ದು.
ಪ್ರ : ಮನೇಲಿ ನಿತ್ಯ ಹಿಂಗೆ ಒಂದಲ್ಲ ಒಂದು ರಾಮಾಣ್ಯ ಆಗ್ತಿದ್ದರೆ, ಕೊನೆಗೆ ಕ್ವಾರಣ್ಯಕ್ಕೆ ಹೋಗೋ ಗತಿ ಬರಬಹುದು.
೬೩೭. ಕಾಲ ಹಾಕು = ಜೀವನ ಸಾಗಿಸು
ಪ್ರ : ಕಷ್ಟವೋ ಸುಖವೋ ಒಬ್ಬರ ಬಾಯಿಗೆ ಬರದಂತೆ ಕಾಲ ಹಾಕೋದು ಮುಖ್ಯ.
೬೩೮. ಕಾಲು ಕಟ್ಟು = ಓಲೈಸು, ಅಂಗಲಾಚು
ಪ್ರ : ಗಾದೆ – ಕಾರ್ಯವಾಸಿ ಕತ್ತೆ ಕಾಲು ಕಟ್ಟು
೬೩೯. ಕಾಲು ಕಟ್ಟಿ ಹುಡುಕು = ಹಿಟ್ಟಾಗಿ ಹಿಸುಕು, ಆಮೂಲಾಗ್ರವಾಗಿ ಶೋಧಿಸು.
ಯಾವುದೇ ಮನುಷ್ಯ ಅಥವಾ ಪ್ರಾಣಿಯನ್ನು ಓಡಲಾಗದಂತೆ ಕಾಲುಕಟ್ಟಿ ಸಾವಧಾನವಾಗಿ ಎಲ್ಲ ಮಗ್ಗುಲನ್ನೂ ಹಿಟ್ಟಾಗಿ ಹಿಸುಕು ಶೋಧಿಸುವ ಹಿನ್ನೆಲೆಯಿಂದ ಈ ನುಡಿಗಟ್ಟು ಮೂಡಿದೆ.
ಪ್ರ : ದೇಶಾನೆ ಕಾಲ್ಕಟ್ಟಿ ಹುಡುಕಿದರೂ ತಪ್ಪಿಸಿಕೊಂಡ ಎಮ್ಮೆ ಪತ್ತೆ ಆಗಲಿಲ್ಲ.
೬೪೦. ಕಾಳು ಕೀಳು = ಹೊರಡು, ಸ್ಥಳಬಿಡು
ಪ್ರ : ನನ್ನ ಮುಖ ಕಂಡ ತಕ್ಷಣ,ಲ ಅವನು ಅಲ್ಲಿಂದ ಕಾಲು ಕಿತ್ತ
೬೪೧. ಕಾಲು ಕೆರೆದು ಕ್ಯಾತೆ ತೆಗಿ = ತಾನಾಗಿಯೇ ಜಗಳಕ್ಕೆ ನಿಲ್ಲು
(ಕ್ಯಾತೆ < ಕೇತೆ = ಜಗಳ) ಸಾಮಾನ್ಯವಾಗಿ ನಾಯಿಗಳು ಅಥವಾ ಗೂಳಿಗಳು ಜಗಳಕ್ಕೆ ಪೂರ್ವಸಿದ್ಧತೆ ಎಂಬಂತೆ ಅಥವಾ ಆಹ್ವಾನಿಸುವಂತೆ ಕಾಲುಗಳಿಂದ ನೆಲವನ್ನು ಪರ್ರ‍್ಪರ್ರನೆ ಕೆರೆಯುತ್ತದೆ. ಅವುಗಳ ವರ್ತನೆ ಈ ನುಡಿಗಟ್ಟಿಗೆ ಮೂಲ.
ಪ್ರ : ಅವನೇ ಕಾಲು ಕೆರೆದು ಕ್ಯಾತೆ ತಕ್ಕೊಂಡು ಬಂದ, ನಾನೇನು ಮಾಡಲಿ?
೬೪೨. ಕಾಲು ಪದ ಹೇಳು = ನೋವಾಗು, ನೋವಿನಿಂದ ತಕಪಕ ಕುಣಿ
(ಪದ ಹೇಳು = ಪಲುಕು, ಕಂಪನರಾಗಕ್ಕೆ ಅಣಿಯಾಗು)
ಪ್ರ : ನಡೆದೂ ನಡೆದೂ ಕಾಲು ಪದ ಹೇಳ್ತವೆ, ನಾನೀಗ ಬರಲಾರೆ
೬೪೩. ಕಾಲು ಕಸಕ್ಕೆ ಕಡೆಯಾಗು = ಕೀಳಾಗು, ನಿಕೃಷ್ಟವಾಗು
ಕಾಲುಕಸವನ್ನು ಗುಡಿಸಿ ಮೂಲೆಗೆ ಹಾಕುತ್ತಾರೆ ಅಥವಾ ಹೊರಕ್ಕೆ ಎಸೆಯುತ್ತಾರೆ. ಉಳ್ಳವರು ಇಲ್ಲದವರನ್ನು ಕೀಳಾಗಿ ದೂರವಿಡುವ ವರ್ತನೆಯನ್ನು ಈ ನುಡಿಗಟ್ಟು ಧ್ವನಿಸುತ್ತದೆ.
ಪ್ರ: ಅವರು ನನ್ನನ್ನು ಕಾಲುಕಸಕ್ಕೆ ಕಡೆಯಾಗಿ ಕಂಡ್ರು
೬೪೪. ಕಾಲು ಕೆಳಗೆ ನುಸಿ = ಸೋಲೊಪ್ಪಿಕೊಂಡು ಶಿಕ್ಷೆ ಅನುಭವಿಸು
(ನುಸಿ < ನುಸುಳು = ತೆವಳು) ಹಳ್ಳಿಗಾಡಿನಲ್ಲಿ ಸೋಲುಗೆಲುವುಗಳ ಬಗ್ಗೆ ಪಂಥ ಕಟ್ಟುವುದು ಅಥವಾ ಬಾಜಿ ಕಟ್ಟುವುದು ಹಣದ ರೂಪದಲ್ಲಲ್ಲ, ಬದಲಾಗಿ ಪೌರುಷಕ್ಕೆ ಕುಂದು ತರುವಂತಹ ಶಿಕ್ಷೆಗೊಳಗಾಗುವ ಮೂಲಕ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಇದು ಸುಳ್ಳು ಅಂತ ಸಾಬೀತಾದರೆ ನಿನ್ನ ಕಾಲುಕೆಳಗೆ ನುಸಿಯೋಕೆ ನಾನು ಸಿದ್ಧ
೬೪೫. ಕಾಲು ಕೆಳಗಿನ ನೋಟ ನೋಡು = ದೂರದೃಷ್ಟಿ ಇಲ್ಲದಿರು, ತತ್‌ಕ್ಷಣದ ಯೋಚನೆ ಮಾಡು
ಪ್ರ : ಕಾಲು ಕೆಳಗಿನ ನೋಟ ನೋಡಿದ್ರೆ, ಕೂಡುಕುಟುಂಬ ಚುಪ್ಪಾನು ಚೂರಾಗ್ತದೆ.
೬೪೬. ಕಾಲು ಮೇಲೆ ಕಲ್ಲು ಎತ್ತಿ ಹಾಕಿಕೊಳ್ಳು = ತನಗೆ ತಾನೇ ಹಾನಿ ಮಾಡಿಕೊಳ್ಳು
ಪ್ರ : ನಿನ್ನ ಕಾಲ ಮೇಲೆ ನೀನೇ ಕಲ್ಲು ಎತ್ತಿ ಹಾಕಿಕೊಳ್ಳಬೇಡ, ಯೋಚನೆ ಮಾಡು
೬೪೭. ಕಾಲಲ್ಲಿ ತೋರಿಸಿದ ಕೆಲಸಾನಾ ಕೈಯಲ್ಲಿ ಮಾಡು = ಭಯಭಕ್ತಿ ವಿನಯಗಳಿಂದ ಕೂಡಿರು
ಪ್ರ : ಕಾಲಲ್ಲಿ ತೋರಿಸಿದ ಕೆಲಸಾನ ಕೈಯಲ್ಲಿ ಮಾಡೋ ಅಂಥ ಚಿನ್ನದಂತಹ ಹುಡುಗಿಯನ್ನು ನಾವೊಂದು ಅಂದ್ರೆ ಆಡಿದ್ರೆ ನಮ್ಮ ಬಾಯಲ್ಲಿ ಹುಳ ಬೀಳ್ತವೆ ಅಷ್ಟೆ.
೬೪೮. ಕಾಲವಾಗು = ಮರಣ ಹೊಂದು
(ಕಾಲ = ಯಮ, ಆಯಸ್ಸಿನ ಅವಧಿ)
ಪ್ರ : ಅವನು ಕಾಲವಾಗಿ ಆಗಲೇ ವರ್ಷಕ್ಕೆ ಬಂತು.
೬೪೯. ಕಾಲಿಕ್ಕು = ಪ್ರವೇಶಿಸು, ಹೆಜ್ಜೆ ಇಡು
ಪ್ರ : ಅವನು ಕಾಲಿಕ್ಕಿದ ಮನೆ ಎಕ್ಕ ಹುಟ್ಟೋಗದಂತೂ ನಿಜ
೬೫೦. ಕಾಲಿಗೆ ಕಾಲು ಹೆಚ್ಚಾಗು = ಸಂತಾನ ವೃದ್ಧಿಯಾಗು
ಪ್ರ : ಒಂದು ಕುರಿ ಒಂದು ಟಗರು ತಂದು ಸಾಕಿದ್ರೆ, ಕಾಲಕ್ರಮೇಣ ಕಾಲಿಗೆ ಕಾಲು ಹೆಚ್ಚಾಗಿ ದೊಡ್ಡ ಮಂದೆಯೇ ಆಗಬಹುದು.
೬೫೧. ಕಾಲಿಗೆ ಬುದ್ಧಿ ಹೇಳು = ಕಾಲುನಡಿಗೆಯಲ್ಲಿ ಹೊರಡು, ವಾಹನಕ್ಕಾಗಿ ಕಾಯದಿರು.
ಪ್ರ : ನೀವು ಕಾದುಕೊಂಡಿದ್ದು ಬಸ್ಸಿಗೇ ಬನ್ನಿ ಅಂತ ಹೇಳಿ, ನಾನು ಕಾಲಿಗೆ ಬುದ್ಧಿ ಹೇಳಿದೆ.
೬೫೨. ಕಾಲಿಗೆಬೀಳು = ನಮಸ್ಕರಿಸು
ಕಿರಿಯರು ಹಿರಿಯರ ಕಾಲು ಮುಟ್ಟಿ ನಮಸ್ಕರಿಸುವ ಪರಿಪಾಠವಿತ್ತು. ಅದು ಕ್ರಮೇಣ ಮದುವೆಗಳಲ್ಲಿ ಮಾತ್ರ ಹೆಣ್ಣುಗಂಡುಗಳು ಹಿರಿಯರ ಕಾಲುಗಳಿಗೆ ನಮಸ್ಕರಿಸುವಷ್ಟಕ್ಕೆ ಸೀಮಿತವಾಗಿದೆ. ಅದಕ್ಕೆ ಬದಲಾಗಿ ಮಠಾಧೀಶರ ಕಾಲುಗಳಿಗೆ ಬೀಳುವ ಪರಿಪಾಠ ಹೊಸದಾಗಿ ಬೆಳೆದಿದೆ. ಅರ್ಥಾತ್ ಬೆಳೆಸಿದ್ದಾರೆ. ಆದರೆ ಮೂಲದ ಕಲ್ಪನೆ ಇಂದಿಗೂ ಕೊಡಗಿನ ಜನರಲ್ಲಿ ಬಳಕೆಯಲ್ಲಿದೆ.
ಪ್ರ : ಗಾದೆ – ಕಂಡಕಂಡೋರ ಕಾಲಿಗೆ ಬಿದ್ರು
ಗಂಡನ ಮನೆಗೆ ಹೋಗೋದು ತಪ್ಪಲ್ಲ
೬೫೩. ಕಾಲಿಗೆ ಸರವಿ ಹಾಕು = ಮರಣ ಹೊಂದು
ಹೊರೆ ಕಟ್ಟಲು ನೆದೆಹುಲ್ಲಿನಿಂದ ಹೊಸೆದು ಮಾರುದ್ದದ ಹಗ್ಗಕ್ಕೆ ಸರವಿ ಎನ್ನುತ್ತಾರೆ. ‘ಕುರುಡ ಸರವಿ ಹೊಸೆದಂಗೆ’ ಎಂಬ ಗಾದೆ, ಕಣ್ಣಿರುವವರು ಮಾರುದ್ದವನ್ನು ಅಂದಾಜಿನಲ್ಲೇ ಅರ್ಥ ಮಾಡಿಕೊಂಡು ತುದಿಯನ್ನು ಗಂಟು ಹಾಕಿ ಅತ್ತೆಸದು, ಬೇರೊಂದನ್ನು ಹೊಸೆಯಲು ತೊಡಗುತ್ತಾರೆ. ಆದರೆ ಕಣ್ಣಿಲ್ಲದವರಿಗೆ ಸರವಿಯ ಅಂದಾಜು ಉದ್ದ ಗೊತ್ತಾಗದೆ ಹೊಸೆಯುತ್ತಲೇ ಹೋಗುತ್ತಾರೆ ಎಂದು ಹೇಳುವಲ್ಲಿ ಔಚಿತ್ಯರಾಹಿತ್ಯವನ್ನು ಬಯಲು ಮಾಡಲಾಗಿದೆ.
ಹೆಣವನ್ನು ಚಟ್ಟದ ಮೇಲೆ ಮಲಗಿಸಿ ಕೈಕಾಲುಗಳಿಗೆ ಸರವಿ ಹಾಕಿ ಬಿದಿರ ಬೊಂಬಿಗೆ ಬಿಗಿಯುತ್ತಾರೆ, ಹೆಣ ಜಾರಿ ಕೆಳಗೆ ಬೀಳದಿರಲೆಂದು. ಗುಂಡಿಯ (ಸಮಾಧಿ) ಬಳಿ ಚಟ್ಟವನ್ನು ಇಳಿಸಿ, ಸರವಿಯನ್ನು ಬಿಚ್ಚಿ, ಹೆಣವನ್ನು ಗುಂಡಿಯ ಒಳಗೆ ಮಲಗಿಸಿ ಮೇಲೆ ಮಣ್ಣೆಳೆಯುತ್ತಾರೆ. ಉತ್ತರ ಕ್ರಿಯೆಯ ಆಚರಣಾ ಮೂಲವುಳ್ಳದ್ದು ಈ ನುಡಿಗಟ್ಟು.
ಪ್ರ : # 360. Begur Hobli. Near Yelanhalli Village. Kopa Main Road. Bangalore-560 058
ಇವನ ಕಾಲಿಗೆ ಸರವಿ ಹಾಕಿದ ಮೇಲೇ ಈ ಮನೆ ನೆಮ್ಮದಿಯಾಗಿರೋದು
೬೫೪. ಕಾಲುಗುಣ ನೋಡು = ಕಾಲಿರಿಸಿದ್ದರಿಂದ ಬಂದ ಭಾಗ್ಯ ಅಭಾಗ್ಯಗಳನ್ನು ಪರೀಕ್ಷಿಸು.
ಮನೆಗೆ ಬಂದ ಹೆಣ್ಣಿನ ಕಾಲ್ಗುಣ ಮನೆಯ ಸ್ಥಿತಿಗತಿಯನ್ನೇ ಬದಲಾಯಿಸಿಬಿಡುತ್ತವೆ ಎಂಬ ನಂಬಿಕೆ ಜನಪದರಲ್ಲಿದೆ. ಆ ನಂಬಿಕೆಯ ಕೂಸು ಈ ನುಡಿಕಟ್ಟು.
ಪ್ರ : ಮನೆ ಈ ಸ್ಥಿತಿಗೆ ಬರೋದಕ್ಕೆ ಸೊಸೆಯ ಕಾಲ್ಗುವೇ ಕಾರಣ.
೬೫೫. ಕಾಲ್ಧೂಳಾಗು = ಭೇದಿಯಾಗು, ಹೊಟ್ಟೆ ಉಬ್ಬರಿಸಿಕೊಳ್ಳು
ಕಾಲಿನ ಧೂಳಿನಿಂದ ಸೋಂಕಾಗಿ ಆರೋಗ್ಯ ಕೆಟ್ಟರೆ ನಮ್ಮ ಜನಪದರು ‘ಕಾಲ್ಧೂಳು ತೆಗೆ’ ಯುವ ಅಂಧ ಆಚರಣೆಯನ್ನು ಮಾಡುತ್ತಿದ್ದರು. ಆದರೆ ವಿದ್ಯೆ ನಾಗರಿಕ ಸೌಲಭ್ಯಗಳ ದೆಸೆಯಿಂದಾಗಿ ಅಂಥ ಆಚರಣೆಯನ್ನು ಬಿಟ್ಟು ಆಸ್ಪತ್ರೆಗೆ ಹೋಗುತ್ತಿದ್ದಾರೆ ಈಗ.
ಪ್ರ : ಕಾಲ್ಧೂಳಾಗಿ ಹೊಟ್ಟೆ ಉಬ್ಬರಿಸಿಕೊಂಡಿದೆ, ಮೊದಲು ಕಾಲ್ಧೂಳು ತೆಗೀರಿ.
೬೫೬. ಕಾಲು ಕಟ್ಟಿಕೊಳ್ಳು = ಕಾಪಾಡು ಎಂದು ಗೋಗರೆ, ಅಂಗಲಾಚು.
ಕಾಲಿಗೆ ಬೀಳುವುದು ಹಿರಿಯರ ಆಶೀರ್ವಾದಕ್ಕಾಗಿ. ಆದರೆ ಕಾಲು ಕಟ್ಟಿಕೊಳ್ಳುವುದು ಶ್ರೀಮಂತ ಜಮೀನ್ದಾರರ, ಕಟುಕರ, ಕೇಡಿಗರ ಮನಸ್ಸನ್ನು ಕರಗಿಸಲೋಸುಗ. ಮಂಡಿಯೂರಿ ಅವರ ಕಾಲುಗಳೆರಡನ್ನೂ ಕೈಗಳಿಂದ ಬಾಚಿ ತಬ್ಬಿಕೊಂಡು ಗೋಗರೆಯುವ ಚಿತ್ರ ಈ ನುಡಿಗಟ್ಟಿನಲ್ಲಿದೆ.
ಪ್ರ : ಕಾಲು ಕಟ್ಕೊಂಡು ಕಣ್ಣಾಗೆ ಖಂಡುಗ ಸುರಿಸಿದೆ, ಆದರೆ ಆ ಕಟುಕನ ಎದೆ ಕರಗಿದ್ರೆ ಕೇಳು.
೬೫೭. ಕಾಲು ಜಾರು = ಅಡ್ಡದಾರಿಗಿಳಿ, ಶೀಲ ಕಳೆದುಕೊಳ್ಳು
ಪ್ರ : ದೇಶದಲ್ಲಿ ಕಾಲು ಜಾರಿದೋರೆ, ಶೀಲೋಪದೇಶ ಮಾಡ್ತಾ ಕಾರುಬಾರು ನಡೆಸ್ತಾರೆ.
೬೫೮. ಕಾಲು ಮಡಿಯೋಕೆ ಹೋಗು = ಮೂತ್ರ ವಿಸರ್ಜನೆಗೆ ಹೋಗು.
(ಮಡಿ = ಮಡಿಚು) ನಮ್ಮ ಗ್ರಾಮೀಣ ಸಂಸ್ಕೃತಿಯಲ್ಲಿ ಹೆಣ್ಣಾಗಲೀ ಗಂಡಾಗಲೀ ಕುಕ್ಕುರುಗಾಲಿನಲ್ಲಿ ಕುಳಿತುಕೊಂಡೇ ಮೂತ್ರ ವಿಸರ್ಜನೆ ಮಾಡುತ್ತಿದ್ದದ್ದು ಎಂಬುದಕ್ಕೆ ಈ ನುಡಿಗಟ್ಟು ಸಾಕ್ಷ್ಯ ನೀಡುತ್ತದೆ. ಆದರೆ ನಾಗರಿಕತೆ ಬೆಳೆದಂತೆಲ್ಲ, ಮುಸ್ಲಿಮರ ಪೈಜಾಮಗಳು ಇಂಗ್ಲೀಷರ ಪ್ಯಾಂಟುಗಳು ಉಡುಪಾಗಿ ಮೆರೆಯತೊಡಗಿದಾಗ ಗಂಡಸರು ನಿಂತುಕೊಂಡೇ ಉಚ್ಚೆ ಹುಯ್ಯುವ ಪದ್ಧತಿ ಬೆಳಸಿಕೊಂಡರು. ಅಷ್ಟೇ ಅಲ್ಲ, ಪುರುಷಪ್ರಧಾನ ಸಮಾಜದಲ್ಲಿ ಗಂಡು ಶ್ರೇಷ್ಠ ಹೆಣ್ಣು ಕನಿಷ್ಠ ಎಂದು ಭಾವಿಸಿ ಅವರ ಮೇಲೆ ದಬ್ಬಾಳಿಕೆ ನಡೆಸಲು ಈ ಮೂತ್ರ ವಿಸರ್ಜನೆಯ ಹೊಸ ಭಂಗಿಯನ್ನೇ ಮಾನದಂಡವನ್ನಾಗಿ ಮಾಡಿಕೊಂಡು ಸ್ತ್ರೀಯರನ್ನು ‘ಕಾಲ್ಮೇಲೆ ಉಚ್ಚೆ ಹುಯ್ಕೊಳೋರು’ ಎಂದು ಹೆಸರಿಸಿರುವುದೂ ಉಂಟು, ಲೇವಡಿ ಮಾಡುವ ಜೂರತ್ತಿನ ಗಂಡಸರೂ ಉಂಟು. ಇದು ಅವರ ಅಜ್ಞಾನದ ಕ್ಷುಲ್ಲಕತನವನ್ನು ಮಾತ್ರ ಹರಾಜಿಗೆ ಇಟ್ಟಂತಾಗಿದೆ.
ಪ್ರ : ಹಿತ್ತಲಿಗೆ ಕಾಲು ಮಡಿಯೋಕೆ ಹೋಗಿದ್ದಾಗ, ಹಾಳು ಬೆಕ್ಕು ಬಂದು ಹಾಲು ಕುಡಿದುಬಿಟ್ಟಿದೆ.
೬೫೯. ಕಾಲು ಮೇಲೆ ಕಾಲು ಹಾಕ್ಕೊಂಡು ಕೂತಿರು = ರಾಜನಂತೆ ದರ್ಬಾರು ನಡೆಸು
ಪ್ರ : ಕಾಲು ಮೇಲೆ ಕಾಲು ಹಾಕ್ಕೊಂಡು ಕೂತಿರೋರಿಗೆ ಹಬೆಯಾಡುವ ಬಿಸಿಬಿಸಿಯೂಟ. ಆದರೆ ಎರಡು ಕಾಲು ಒಂದ್ಕಡೆ ಇಡದಂಗೆ ಗೇದು ಬಂದೋರಿಗೆ ಆರಿದ್ದೋ ಹಳಸಿದ್ದೋ ಊಟ.
೬೬೦. ಕಾಲು ಮೆಟ್ಟಿ ಕಾಲು ಸಿಗಿದು ಊರಬಾಗಿಲಿಗೆ ತೋರಣಕಟ್ಟು = ರಾಜಾರೋಷ್ಟಾಗಿ
ಶಿಕ್ಷೆ ವಿಧಿಸು
(ಮೆಟ್ಟಿ = ಕಾಲಲ್ಲಿ ತುಳಿದುಕೊಂಡು, ತೋರಣ = ಬಾಗಿಲಿಗೆ ಕಟ್ಟುವ ಮಾಂದಳಿರ ಮಾಲೆ)
ಪ್ರ : ಕಾಲು ಮೇಲೆ ಉಚ್ಚೆ ಹುಯ್ಕೊಳ್ಕೋ ನೀನು ನನಗೆ ಕಾಲೆತ್ತಿ ಒದೆಯೋಕೆ ಬಂದ್ರೆ ನಾನು ಸುಮ್ನೆ ಇರ್ತೀನಾ, ಕಾಲುಮೆಟ್ಟಿ ಕಾಲು ಸಿಗಿದು ಊರಬಾಗಿಲಿಗೆ ತೋರಣ ಕಟ್ಟಿ ಬಿಡ್ತೀನಿ.
೬೬೧. ಕಾಲೂರು = ಇಳಿದು ಕೊಳ್ಳು, ನೆಲೆಗೊಳ್ಳು
ಪ್ರ : ಪಡುವಲ ಕಡೆ ಮಳೆ ಕಾಲೂರಿತು, ಬೇಗೆ ಬೇಗ ಹೆಜ್ಜೆ ಹಾಕು, ಮಳೆಗೆ ಸಿಕ್ಕೊಂಡ್ರೆ ಕಷ್ಟ.
೬೬೨. ಕಾಲೆತ್ತು = ರತಿಕ್ರೀಡೆಗೆ ಸಿದ್ಧವಾಗು
ಪ್ರ : ಪ್ರವಾಹದಲ್ಲಿ ಹಾದು ಹೋಗುವಾಗ ಕಾಲೆತ್ತಿದರೆ ಕೆಟ್ಟಂತೆಯೇ ಸಿಕ್ಕಿಸಿಕ್ಕಿದೋರಿಗೆ ಕಾಲೆತ್ತಿದರೂ ಕೆಟ್ಟು ಹೋಗ್ತೇವೆ ಅನ್ನೋ ಅರಿವಿರಲಿ.
೬೬೩. ಕಾಲೆತ್ತಿಕೊಳ್ಳು = ಕಾಯಿಲೆ ಮಲಗು, ಹಾಸಿಗೆ ಹಿಡಿ
ಪ್ರ : ಕೆಟ್ಟ ಆಟ ಆಡಿ, ಈ ವಯಸ್ಸಿಗಾಗಲೇ ಕಾಲೆತ್ತಿಕೊಂಡಿದ್ದಾನೆ.
೬೬೪. ಕಾಲೆಳೆ = ಅಭಿವೃದ್ಧಿ ಸಹಿಸದೆ ಕಾಲು ಹಿಡಿದು ಹಿಂದಕ್ಕೆ ಜಗ್ಗು, ಅಡ್ಡಿಯುಂಟು ಮಾಡು
ಪ್ರ : ಕಾಲೆಳೆಯೋ ಬುದ್ಧಿ ಹಿಂದುಳಿದವರಲ್ಲಿ ಇರೋತನಕ, ಇವರು ಉದ್ಧಾರ ಆಗಲ್ಲ
೬೬೫. ಕಾವು ಕೂರು = ಚಿಂತಿಸು, ಮನನ ಮಾಡು.
ಕೋಳಿಗಳು ಮೊಟ್ಟೆಗಳ ಮೇಲೆ ಕಾವು ಕೂತು ಮರಿ ಮಾಡುತ್ತವೆ. ಅವು ಒಂದು ರೀತಿ ಧ್ಯಾನಸ್ಥ ಭಂಗಿಯಲ್ಲಿ ಕುಳಿತಿರುತ್ತವೆ. ಆ ಹಿನ್ನೆಲೆ ಈ ನುಡಿಗಟ್ಟಿಗೆ ಮೂಲ
ಪ್ರ : ಏನು ಮಾಡೋದು ಅಂತ ಅದೇ ವಿಷಯದ ಮೇಲೆ ಕಾವು ಕೂತಿದ್ದೇನೆ.
೬೬೬. ಕಾವು ಹಿಡ್ಕೋ ಅನ್ನು = ಕೊಡುವುದಿಲ್ಲ ಎನ್ನು, ಮೋಸ ಮಾಡು
(ಕಾವು < ಕಾಪು < ಕಾಂಬು (ತ) = ಹಿಡಿ [Handle]) ಪ್ರಸ್ತುತ ನುಡಿಗಟ್ಟಿನಲ್ಲಿ ಕಾವು ಎಂಬುದು ಪುರುಷಜನನೇಂದ್ರಿಯ ಎಂಬ ಅರ್ಥದಲ್ಲಿ ಬಳಕೆಯಾಗಿದೆ.
ಪ್ರ : ಗಾದೆ – ಮಾವ, ಹಿಡ್ಕೋ ನನ್ನ ಕಾವ
೬೬೭. ಕಾಸಿಗೆ ಕಡೆಯಾಗಿ ಕಾಣು = ನಿಕೃಷ್ಟವಾಗಿ ಕಾಣು, ಕೀಳಾಗಿ ಕಾಣು
ಪ್ರ : ಆ ಮನೇಲಿ ನನ್ನನ್ನು ಕಾಸಿಗೆ ಕಡೆಯಾಗಿ ಕಾಣ್ತಾರೆ, ನಾನಿರಲ್ಲ
೬೬೮. ಕಾಸಿಗೆ ಕಾಸು ಗಂಟು ಹಾಕು = ಜಿಪುಣತನದಿಂದ ಖರ್ಚು ಮಾಡದೆ ಕೂಡಿಡು
ಪ್ರ : ಗಾದೆ – ಕಾಸಿಗೆ ಕಾಸು ಗಂಟು ಹಾಕಿದೊ?
ಬೆನ್ನಿಗೆ ಹೊಟ್ಟೆ ಅಂಟು ಹಾಕಿದೊ?
೬೬೯. ಕಾಸಿಗೊಂದು ಕೊಸರಿಗೊಂದು ಸಿಕ್ಕು = ಅಗ್ಗವಾಗಿ ಸಿಕ್ಕು, ಸಸ್ತಾ ಬೆಲೆಗೆ ದೊರಕು
(ಕೊಸರು = ಕೊಂಡಾದ ಮೇಲೆ ಬಿಟ್ಟಿಯಾಗಿ ಈಸಿಕೊಳ್ಳುವಂಥ ಹೆಚ್ಚುವರಿ ಭಾಗ)
ಪ್ರ : ಇವನಿಗೆ ಯಾಕೆ ದುಬಾರಿ ಕೊಡಬೇಕು ? ಸಂತೆಗೆ ಹೋದ್ರೆ ಕಾಸಿಗೊಂದು ಕೊಸರಿಗೊಂದು ಸಿಕ್ತವೆ
೬೭೦. ಕಾಸಿ ಸೋಸಿ ಕೊಡು = ಒಪ್ಪ ಮಾಡಿ ಕೊಡು
(ಕಾಸಿ < ಕಾಯಿಸಿ, ಸೋಸಿ < ಶೋಧಿಸಿ)
ಪ್ರ : ತುಪ್ಪವನ್ನು ಚೆನ್ನಾಗಿ ಕಾಸಿ, ಆಮೇಲೆ ಜಾಲರಿಯಿಂದ ಸೋಸಿ ಬಡಿಸಬೇಕು
೬೭೧. ಕಾಸು ಕರಿಮಣಿ ಇಲ್ಲದಿರು = ದುಡ್ಡಿಲ್ಲದಿರು, ಹಣವಿಲ್ಲದಿರು
ನಾಣ್ಯ ಬರುವುದಕ್ಕೆ ಮುಂಚೆ ಅಡಕೆ, ಕವಡೆ, ಕರಿಮಣಿಗಳು ವಿನಿಮಯದ ಸಾಧನಗಳಾಗಿದ್ದವು. ಆದ್ದರಿಂದಲೇ ಈ ನುಡಿಗಟ್ಟಿನಲ್ಲಿ ಕಾಸುಕರಿಮಣಿ ಜೋಡುನುಡಿಯಾಗಿದ್ದು ತನ್ನ ಮೊದಲಿನ ಅಸ್ತಿತ್ವದ ಪಳೆಯುಳಿಕೆಯಾಗಿ ಕಾಣಿಸಿಕೊಂಡಿದೆ ಕರಿಮಣಿ.
ಪ್ರ : ಕಾಸು ಕರಿಮಣಿ ಇಲ್ಲದೆ ಯಾಪಾರ ಮಾಡೋಕಾಗ್ತದ?
೬೭೨. ಕಾಸು ಬಿಚ್ಚದಿರು = ಲೋಭಿಯಾಗಿರು, ಕಾಸನ್ನು ಜೇಬಿನಿಂದ ತೆಗೆಯದಿರು
ಪ್ರ : ಗಾದೆ – ಕಾಸೂ ಬಿಚ್ಚ, ಕುಬುಸಾನೂ ಬಿಚ್ಚ
೬೭೩. ಕ್ವಾಚೆ ಸ್ವಭಾವವಾಗಿರು = ಕೆಟ್ಟ ಸ್ವಭಾವವಾಗಿರು
(ಕ್ವಾಚೆ < ಕೋಚೆ = ಡೊಂಕು, ಓರೆ, ವಕ್ರ)
ಪ್ರ : ಇಂಥ ಕ್ವಾಚೆ ಸ್ವಭಾವದೋನ್ನ ನಾನು ಕಂಡಿರಲೇ ಇಲ್ಲ
೬೭೪. ಕ್ವಾಷ್ಟ ಹತ್ತು = ಕುಷ್ಠರೋಗ ಬರು
(ಕ್ವಾಷ್ಟ < ಕೋಷ್ಠ < ಕುಷ್ಠ = ಬೆರಳುಗಳು ಅಂಗಾಂಗಗಳು ಕೊಳೆತು ಉದುರುವ ರೋಗ)
ಪ್ರ : ಕೆನ್ನೆ ಚುರುಗರಿಯೋ ಹಂಗೆ ಹೊಡೆದು ಹೋದ್ನಲ್ಲೆ, ಇವನ ಕೈಗೆ ಕ್ವಾಷ್ಟ ಹತ್ತ !
೬೭೫. ಕಿಟ್ಟಗಟ್ಟು = ಕರಿಕಾಗು, ಮಂಕಾಗು
(ಕಿಟ್ಟಗಟ್ಟು < ಕಿಟ್ಟ + ಕಟ್ಟು = ಕಿಲ್ಬಿಷ ದಟ್ಟವಾಗು)
ಪ್ರ : ಒಂದು ಕಡ್ಡಿ ತಗೊಂಡು ಬತ್ತಿದ ಕಿಟ್ಟ ಕೆಡವಿ, ದೀಪವನ್ನು ರಜಗೊಳಿಸು
೬೭೬. ಕಿಡಿಕಿಡಿಯಾಗು = ರೋಷಾವೇಶದಿಂದ ಹಾರಾಡು, ಬೆಂಕಿಯ ಅವಲಾಗು.
ತೂಬರೆ ಮರದ ಸೌದೆಯನ್ನು ಒಲೆಗಿಟ್ಟರೆ ಅದು ಚಟಪಟ ಎಂದು ಕಿಡಿಗಳನ್ನು ಕಾರತೊಡಗುತ್ತದೆ. ಆ ಹಿನ್ನೆಲೆ ಈ ನುಡಿಗಟ್ಟಿಗೆ ಮೂಲ
ಪ್ರ : ಆ ಸುದ್ಧಿ ಕೇಳಿದ ತಕ್ಷಣ, ಕಿಡಿಕಿಡಿಯಾಗಿಬಿಟ್ಟ ಮಾರಾಯ
೬೭೭. ಕಿತ್ತು ಈಡಾಡು = ಚೆಲ್ಲಾಡು, ಹರಿದು ಹಲ್ಲಂಡೆ ಮಾಡು
ಪ್ರ : ನನಗೆ ಸಿಟ್ಟು ಬರಿಸಿದ್ರೆ, ನಿನ್ನನ್ನು ಹಲ್ಲಾಗಿ ಕಿತ್ತು ಈಡಾಡಿಬಿಡ್ತೀನಿ
೬೭೮. ಕಿತ್ತರೆ ಬರದಂತಿರು = ಪರಸ್ಪರ ಬೆಸೆದುಕೊಂಡಿರು, ನಿಕಟಸ್ನೇಹದಿಂದಿರು
ಪ್ರ : ಮೊದಲು ಕಿತ್ತರೆ ಬರದಂಗಿದ್ದೋರು, ಈಗ ಎಣ್ಣೆ ಸೀಗೆಕಾಯಿ
೬೭೯. ಕಿಬ್ಬೊಟ್ಟೆ ಹಿಡಿದುಕೊಳ್ಳುವಂತೆ ಜಡಿ = ರಭಸದಿಂದ ಗುದ್ದು, ಸಂಭೋಗಿಸು
(ಕಿಬ್ಬೊಟ್ಟೆ < ಕಿಳ್‌ಪೊಟ್ಟೆ = ಕೆಳ ಹೊಟ್ಟೆ; ಜಡಿ = ಹೊಡಿ, ಗುದ್ದು, ಸಂಭೋಗಿಸು)
ಪ್ರ : ಗಾದೆ – ಕಿಬ್ಬೊಟ್ಟೆ ಹಿಡಿಕೊಳ್ಳಂಗೆ ಜಡಿದ
ತನ್ನ ತೀಟೆ ತೀರ್ತಲೇ ಕಡೆದ
೬೮೦. ಕಿಮ್ಮತ್ತು ಕಟ್ಟು = ಬೆಲೆಗಟ್ಟು
(ಕಿಮ್ಮತ್ತು = ಬೆಲೆ)
ಪ್ರ : ಕುವತ್ತು ನಿಯತ್ತುಗಳೆರಡಕ್ಕೂ ಕಿಮ್ಮತ್ತು ಕಟ್ಟಬೇಕು
೬೮೧. ಕಿರ್ದಿ ಬಿಚ್ಚು = ಜಮಾಖರ್ಚಿನ ವಿವರ ತೆಗಿ
(ಕಿರ್ದಿ = ಶಾನುಭೋಗದ ಲೆಕ್ಕದ ಪುಸ್ತಕ)
ಪ್ರ : ನನ್ನ ಮುಂದೆ ನಿನ್ನ ಹಳೇ ಕಿರ್ದಿ ಬಿಚ್ಚಬೇಡ, ಅದುಮಿಕೊಂಡಿರು
೬೮೨. ಕಿರ್ಬೆಳ್ಳಿನ ಮೇಲೆ ಕುಣಿಸು = ಮನ ಬಂದಂತೆ ಆಟವಾಡಿಸು
(ಕಿರ್ಬೆಳ್ಳು < ಕಿರುಬೆರಳು = ಸಣ್ಣ ಬೆಟ್ಟು)
ಪ್ರ : ಸಣ್ಣಗಿದ್ದಾಳೆ ಅಂತ ಸಸಾರ ಮಾಡಿಬ್ಯಾಡ, ಗಂಡನ್ನ ಕಿರ್ಬೆಳ್ಳಿನ ಮೇಲೆ ಕುಣಿಸ್ತಾಳೆ.
೬೮೩. ಕಿಲುಬನಾಗಿರು = ಜಿಪುಣನಾಗಿರು
(ಕಿಲುಬು = ಕಿಟ್ಟ, ಕಿಲ್ಬಿಷ)
ಪ್ರ : ಗಾದೆ – ಕಿಲುಬ ಹಾರುವಯ್ಯ ಕಚ್ಚೇರವೆ ಒಳಗೆ ಕಾಯಿ ಕಟ್ಟಿದ
೬೮೪. ಕಿಲುಬನ ಹತ್ತಿರ ಗಿಲುಬು = ಜಿಪುಣನ ಹತ್ರ ಕೀಳು
(ಕಿಲುಬ = ಕಿಲುಬು ಹಿಡಿದವನು, ಜಿಪುಣ ; ಗಿಲುಬು =ಕೀಳು, ಗುಂಜು
ಪ್ರ : ಕಿಲುಬನ ಹತ್ರ ಕಾಸುನ ಗಿಲುಬುವ ಇವನು ಮಹಾ ಕಿಲುಬ
೬೮೫. ಕಿಲುಬು ಹಿಡಿ = ಸ್ವಸ್ಥತೆ ಕಳೆದುಕೊಳ್ಳು, ಜಡ್ಡುಗಟ್ಟು, ಜೀವವಿರೋಧಿಯಾಗಿರು
ಪ್ರ : ಕಿಲುಬು ಹಿಡಿದು ಕೂತೋರಿಗೆ ಜೀವಪರವಾದ ಒಲವುನಿಲುವುಗಳಿರಲು ಹೇಗೆ ಸಾಧ್ಯ?
೬೮೬. ಕಿವಿ ಕಿತ್ತ ನಾಯಾಗು = ಮೆತ್ತಗಾಗು, ಕಯಕ್‌ಕುಯಕ್ ಅನ್ನದಿರು
ಪ್ರ : ಅಲ್ಲಿ ಹೊಡೆತ ಬಿದ್ದ ಮೇಲೆ, ಈಗ ಕಿವಿ ಕಿತ್ತ ನಾಯಾಗಿದ್ದಾನೆ.
೬೮೭. ಕಿವಿಗೆ ಕಲ್ಮುಳ್ಳು ಹುಯ್ಯಿ = ಒಂದೇ ಸಮನೆ ಕೊರೆ, ಹೇಳಿದ್ದನ್ನೇ ಪದೆಪದೇ ಹೇಳು
ಹಸೆಕಲ್ಲು (< ಹಾಸುಗಲ್ಲು) ಮತ್ತು ಗುಂಡುಕಲ್ಲು ಸವೆದು ನುಣ್ಣಗಾದರೆಕಾರ ಮಸಾಲು ನುಣ್ಣಗೆ ಅರೆಯಲು ಸಾಧ್ಯವಾಗುವುದಿಲ್ಲ. ಆಗ ಕಲ್ಲುಕುಟಿಗನನ್ನು ಕರೆಸಿ ಉಳಿಯಿಂದ ಕಲ್ಮುಳ್ಳು ಹುಯ್ಯಿಸಿ, ಉರುಕುರುಕು ಮಾಡುತ್ತಾರೆ. ಹಾಗೆ ನುಣ್ಣಗಿನ ಕಲ್ಲನ್ನು ಉರುಕು ಮಾಡಲು ಹುಯ್ಯಿಸುವ ಮುಳ್ಳಿಗೆ ಕಲ್ಮುಳ್ಳು ಎಂದು ಹೇಳುತ್ತಾರೆ. ಸುತ್ತಿಗೆಯಿಂದ ಚಾಣ (ಉಳಿ)ಕ್ಕೆ ಹೊಡೆದು ಹೊಡೆದು ಕಲ್ಲನ್ನು ಮುಳ್ಳು ಮುಳ್ಳು ಮಾಡುವಂತೆ, ಮಾತಿನ ಸುತ್ತಿಗೆಯಿಂದ ಹೊಡೆದು ಹೊಡೆದು ಕಿವಿಗೆ ಮುಳ್ಳು ಹುಯ್ಯಲಾಗುತ್ತಿದೆ ಎಂಬ ಭಾವವಿದೆ. ಒಟ್ಟಿನಲ್ಲಿ ಕಲ್ಲುಕುಟಿಗ ವೃತ್ತಿಯಿಂದ ಹುಟ್ಟಿ ಬಂದ ನುಡಿಗಟ್ಟಿದು.
ಪ್ರ : ಅಯ್ಯೋ ಎದ್ದಾಗಳಿಂದ ಇಲ್ಲೀವರೆಗೆ ಒಂದೇ ಸಮ ಕಿವಿಗೆ ಕಲ್ಮುಳ್ಳು ಹುಯ್ದುಬಿಟ್ಟಳು, ಸಾಕು ಸಾಕು ಅಂದರೂ ಬಿಡದೆ.
೬೮೮. ಕಿವಿಗೆ ಕಲ್ಲು ಹಾಕಿ ಹಿಂಡು = ಚಿತ್ರ ಹಿಂಸೆ ಕೊಡು.
ಕಿವಿ ಹಿಂಡಿದರೇ ನೋವು ಸಹಿಸಲಾಗುವುದಿಲ್ಲ. ನುರುಜುಗಲ್ಲನ್ನು ಹಾಕಿ ಹಿಂಡಿದರೆ ಆ ಯಮಯಾತನೆಯನ್ನು ಸಹಿಸಲು ಅಸಾಧ್ಯ. ಶೋಷಕರ ಕ್ರೌರ್ಯಕ್ಕೆ, ನಾನಾ ಬಗೆಯ ಶಿಕ್ಷಾ ವಿಧಾನಗಳಿಗೆ ಇದು ಒಂದು ಸಾಮಾನ್ಯ ನಿದರ್ಶನವಾಗಿ ನಿಂತಿದೆ.
ಪ್ರ : ನಾನು ಕೊಂಚ ತಡ ಮಾಡಿದ್ರೆ, ನನ್ನ ಚಿಕ್ಕವ್ವ ಕಿವಿಗೆ ಕಲ್ಲು ಹಾಕಿ ಹಿಂಡ್ತಾಳೆ, ನಾನಿನ್ನು ಬರ್ತೀನಿ
೬೮೯. ಕಿವಿಗೆ ರಸ ಹಿಂಡು = ಚಾಡಿ ಹೇಳು.
ಕಿವಿ ಪೋಟು (ನೋವು) ಬಂದರೆ, ಗಿಡಮೂಲಿಕೆಯ ರಸ ಹಿಂಡುವ ಪದ್ಧತಿ ಗ್ರಾಮೀಣರಲ್ಲಿ ಉಂಟು. ಆ ಜನಪದ ವೈದ್ಯ ಪದ್ಧತಿ ಈ ನುಡಿಗಟ್ಟಿಗೆ ಮೂಲ.
ಪ್ರ : ಆ ಮಾಯಕಾತಿಯೇ ಅವನ ಕಿವಿಗೆ ರಸ ಹಿಂಡಿರೋದು, ಇಲ್ಲದಿದ್ರೆ, ಅವನು ಇದ್ದಕ್ಕಿದ್ದ ಹಾಗೆ ತಿರುಗಿ ಬೀಳ್ತಿರಲಿಲ್ಲ.
೬೯೦. ಕಿವಿಗೊಡು = ಆಲಿಸು, ಕೇಳು
ಪ್ರ : ಕಿವಿಗೊಡೋರೇ ಇಲ್ಲದಾಗ ಕವಿಗೋಷ್ಠಿಯ ಗತಿಯೇನು?
೬೯೧. ಕಿವಿ ಚುಚ್ಚು = ಬುದ್ಧಿ ಗಲಿಸು, ವಿವೇಕ ಕಲಿಸು
ಮಕ್ಕಳು ಹೆಣ್ಣಾಗಿರಲಿ ಗಂಡಾಗಿರಲಿ ಹಿಂದೂಗಳಲ್ಲಿ ಕಿವಿಚುಚ್ಚುವ ಪದ್ಧತಿ ಇದೆ. ಆದರೆ ಮುಸ್ಲಿಮರಲ್ಲಿ ಹೆಣ್ಣು ಮಕ್ಕಳಿಗೆ ಕಿವಿ ಚುಚ್ಚುವ ಪದ್ಧತಿ ಇದ್ದರೂ ಗಂಡು ಮಕ್ಕಳಿಗೆ ಕಿವಿ ಚುಚ್ಚುವ ಪದ್ಧತಿ ಇಲ್ಲ. ಆದ್ದರಿಂದಲೇ ಗಂಡಸರ ಕಿವಿಯನ್ನು ನೋಡುತ್ತಲೇ ಹಿಂದುವೋ ಮುಸ್ಲಿಮ್ಮೋ ಎಂಬುದನ್ನು ಪತ್ತೆ ಹಚ್ಚುವ ಪದ್ಧತಿ ಇತ್ತು. ಆದರೆ ಇತ್ತೀಚೆಗೆ ನಾಗರಿಕತೆಯ ದೆಸೆಯಿಂದ ಹಿಂದುಗಳಲ್ಲಿ ಗಂಡು ಮಕ್ಕಳಿಗೆ ಕಿವಿ ಚುಚ್ಚುವ ಪದ್ಧತಿಯನ್ನು ಎಷ್ಟೋ ಜನ ಬಿಡುತ್ತಾ ಬಂದಿದ್ದಾರೆ. ಆದ್ದರಿಂದ ಕಿವಿ ನೋಡಿ ಮತ ನಿರ್ಣಯಿಸುವ ಕೆಟ್ಟ ಚಟಕ್ಕೆ ಚಟ್ಟ ಕಟ್ಟುವ ಕಾಲ ಬಂದಿದೆ, ಬರುತ್ತಿದೆ, ಬರಬಹುದು
ಪ್ರ : ಹುಟ್ಟಿದಾಗ ನಮ್ಮವ್ವನೂ ನನಗೆ ಕಿವಿ ಚುಚ್ಚಿದ್ದಾಳೆ, ತಿಳಕೋ
೬೯೨. ಕಿವಿ ಚುಚ್ಚು = ಚಾಡಿ ಹೇಳು
ಪ್ರ : ಯಾರೋ ಅವನಿಗೆ ಕಿವಿ ಚುಚ್ಚಿದ್ದಾರೆ, ಇಲ್ಲದಿದ್ರೆ ಈ ರಂಪ ಆಗ್ತಿರಲಿಲ್ಲ.
೬೯೩. ಕಿವಿ ನೆಟ್ಟಗಾಗು = ಕುತೂಹಲ ಹೆಚ್ಚಾಗು, ಜಾಗೃತಿ ಚಿಗುರ ತೊಡಗು
ಸಾಮಾನ್ಯವಾಗಿ ನಾಯಿಗಳು, ದನಗಳು ಅಥವಾ ಯಾವುದೇ ಪ್ರಾಣಿಗಳು ತಮ್ಮ ಜೋಲು ಬಿದ್ದ ಕಿವಿಯನ್ನು ನೆಟ್ಟಗೆ ನಿಲ್ಲಿಸಿ ಆಲಿಸತೊಡಗುತ್ತವೆ, ಅಪಾಯದ ಗಂಟೆ ಸದ್ದು ಇರಬಹುದೇ ಎಂದು, ಆ ಪ್ರಾಣಿಗಳ ವರ್ತನೆ ಈ ನುಡಿಗಟ್ಟಿಗೆ ಮೂಲ.
ಪ್ರ : ಅವರ ಕೌಟುಂಬಿಕ ಸಮಸ್ಯೆಯಲ್ಲಿ ನನ್ನ ಹೆಸರು ಯಾಕೆ ಬಂತಪ್ಪಾ ಅಂತ ನನ್ನ ಕಿವಿ ನೆಟ್ಟಗಾದವು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ