ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಕ೫)
೭೫೭. ಕೆನ್ನೆಗೆ ಉಂಡಿಗೆ ಹಾಕು = ಕೆನ್ನೆ ಕಚ್ಚು, ಪ್ರೀತಿಯ ಆಧಿಕ್ಯವನ್ನು ಕೆತ್ತು.(ಉಂಡಿಗೆ = ಹಲಸಿನ ತೊಳೆ ತಿನ್ನಲು ಹಣ್ಣಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸಲು ಹಲಸಿನ ಹಣ್ಣಿಗೆ ಹಾಕುವ ಕಚ್ಚು ಅಥವಾ ತೂತು)
ಪ್ರ : ಹಲಸಿನ ಹಣ್ಣಿಗೆ ಹಾಕೋ ಉಂಡಿಗೇನ ನನ್ನ ಕೆನ್ನೆಗೆ ಹಾಕ್ತಿಯೇನೋ ಪೋರ.
೭೫೮. ಕೆಪ್ಪರೆಗೆ ತಪ್ಪರಿಸು = ಮೆಲುಕಿಗೆ ಹೊಡಿ, ಕೆನ್ನೆಗೆ ತಾಡಿಸು
(ಕೆಪ್ಪರೆ = ಮೆಲುಕು, ದವಡೆ, ತಪ್ಪರಿಸು < ಚಪ್ಪರಿಸು = ತಾಡಿಸು)
ಪ್ರ : ಇನ್ನೊಂದು ಸಾರಿ ಅಪ್ಪ ಅಮ್ಮ ಅಂದ್ರೆ, ಕೆಪ್ಪರೆಗೆ ತಪ್ಪರಿಸಿಬಿಡ್ತೀನಿ
೭೫೯. ಕೆರ ಕಡಿಯೋ ಕೆಲಸ ಮಾಡು = ನಾಯಿ ಕೆಲಸ ಮಾಡು, ಕೆಟ್ಟ ಕೆಲಸ ಮಾಡು
ನಾಯಿ ಹಳೆಯ ಕೆರವನ್ನು ಕಡಿಯುತ್ತಾ ಮಾಂಸದ ಮೂಳೆ ಕಡಿಯುತ್ತಿದ್ದೇನೆ ಎಂಬ ಸವಿ ಕಾಣುತ್ತದೆ. ಅಂಥ ನಾಯಿಯ ವರ್ತನೆ ಈ ನುಡಿಗಟ್ಟಿಗೆ ಮೂಲ.
ಪ್ರ : ಕೆರ ಕಡಿಯೋ ಕೆಲಸ ಮಾಡಿ, ತಾನೆಂಥ ಗುಣಸಂಪನ್ನ ಅನ್ನೋದನ್ನು ತಾನೇ ಊರಿಗೆಲ್ಲ ತೋರಿಸಿಕೊಂಡಿದ್ದಾನೆ.
೭೬೦. ಕೆರ ಬಿಡೋ ತಾವ ಇರಿಸು = ದೂರವಿರಿಸು, ಬಾಗಿಲಾಚೆ ಇರಿಸು.
(ತಾವ < ತಾವಿನಲ್ಲಿ < ಠಾವಿನಲ್ಲಿ = ಜಾಗದಲ್ಲಿ) ಗ್ರಾಮೀಣ ಜನರು ಸಾಮಾನ್ಯವಾಗಿ ಕೆರ ಮೆಟ್ಟಿಕೊಂಡು ನಡುಮನೆಗೆ ಬರುವುದಿಲ್ಲ. ಸಾಮಾನ್ಯವಾಗಿ ಬಾಗಿಲಾಚೆ ಅಥವಾ ಬಾಗಿಲ ಬಳಿ ಬಿಡುವ ಪದ್ಧತಿ ಉಂಟು. ಅಷ್ಟೇ ಏಕೆ ಧಾನ್ಯ ಒಕ್ಕುವ ಕಣದ ಒಳಕ್ಕೂ ಕೆರ ಮೆಟ್ಟಿಕೊಂಡು ಹೋಗುವುದಿಲ್ಲ. ಆದರೆ ನಗರ ಸಂಸ್ಕೃತಿಯಲ್ಲಿ ಗ್ರಾಮೀಣ ಸಂಸ್ಕೃತಿಯಲ್ಲಿರುವ ಆರೋಗ್ಯ ದೃಷ್ಟಿ ಮಾಯವಾಗಿ, ನಡುಮನೆ ಊಟದ ಮನೆಗೂ ಬೂಟುಗಾಲಲ್ಲಿ ಬರುವ ರೂಢಿ ಬೆಳೆಯುತ್ತಿದೆ. ಧೂಳು ಪಾಳಿನಿಂದ ಆರೋಗ್ಯಕ್ಕಾಗುವ ಹಾನಿಯ ಬಗೆಗೆ ಕಣ್ಣು ಮುಚ್ಚಿಕೊಂಡಿರುವುದು ದುರದೃಷ್ಟಕರ. ಇದು ನಗರನಾಗರಿಕತೆಯ ಪ್ರಸಾದ.
ಪ್ರ :ಅವನು ಒಳ್ಳೇವನಲ್ಲ, ಅವನ್ನ ಕೆರ ಬಿಡೋ ತಾವ ಇರೀಸು.
೭೬೧. ಕೆರೆ ಕಡೆಗೆ ಹೋಗು = ಮಲವಿಸರ್ಜನೆಗೆ ಹೋಗು
ಹಳ್ಳಿಯಲ್ಲಿ ಪ್ರತಿಮನೆಗೂ ಕಕ್ಕಸ್ಸು ಮನೆಗಳಿಲ್ಲದಿರುವುದನ್ನೂ, ಕೆರೆಯನ್ನು ಬಿಟ್ಟರೆ ಹೊಳೆ ಅಥವಾ ನಾಲೆಯ ಸೌಲಭ್ಯ ಇಲ್ಲದಿರುವ ಬೆಂಗಾಡಿದ ಸ್ಥಿತಿಯನ್ನೂ ಬಯಲಲ್ಲಿ ಹೋಗಬೇಕಾದ ಅನಿವಾರ್ಯತೆಯನ್ನು ಈ ನುಡಿಗಟ್ಟು ತನ್ನ ಒಡಲಲ್ಲಿ ಅಡಗಿಸಿಕೊಂಡಿದೆ.
ಪ್ರ : ಕೆರೆ ಕಡೆಗೆ ಹೋಗಿದ್ದಾನೆ. ಈಗಲೋ ಆಗಲೋ ಬರ್ತಾನೆ, ಬಾ, ಕೂತಿಕೋ.
೭೬೨. ಕೆರೆ ಕೋಳು ಹೋಗು = ಸಾರ್ವಜನಿಕ ಮೀನುಬೇಟೆಯ ದಾಳಿಯಾಗಿ, ನೀರೆಲ್ಲ ಬಗ್ಗಡವಾಗಿ ಒಣಗು, ಬತ್ತಿ ಹೋಗು.
(ಕೋಳು = ದಾಳಿ, ಗ್ರಹಣ (ಪಂಪ ಗೋಗ್ರಹಣವನ್ನು ‘ತುರುಗೋಳ್’ ಎಂದು ಹೆಸರಿಸುವುದನ್ನು ನಾವು ಮೆಲುಕು ಹಾಕಬಹುದು)
ಪ್ರ : ತಿಂಗಳ ಹಿಂದೆಯೇ ಕೆರೆ ಹೋಳು ಹೋಯ್ತು, ಮೀನೂ ಇಲ್ಲ, ನೀರೂ ಇಲ್ಲ.
೭೬೩. ಕೆರೆ ಬಾವಿ ನೋಡಿಕೊಳ್ಳು = ಆತ್ಮಹತ್ಯೆ ಮಾಡಿಕೊಳ್ಳು.
ಪ್ರ : ನೀವು ಹಿಂಗೇ ಹಿಜ ಕೊಟ್ರೆ, ಕೆರೆ ಬಾವಿ ನೋಡ್ಕೊಳ್ಳೋದು ಒಂದೇ ಮಾರ್ಗ.
೭೬೪. ಕೆಲಸ ಕಿತ್ತುಕೊಳ್ಳು = ಶ್ರಮ ತಪ್ಪಿಸು, ಆರಾಮವಾಗಿರಲು ಅನುವಾಗು
ಪ್ರ : ನೀನು ಮದುವೆಯಾಗಿ ಸೊಸೆ ಮನೆಗೆ ಬಂದ್ರೆ ನನ್ನ ಕೈ ಕೆಲಸ ಕಿತ್ಕೊಳ್ತಾಳೆ, ನಾನು ಆರಾಮಾಗಿರಬಹುದು, ಯೋಚನೆ ಮಾಡು
೭೬೫. ಕೆಳಕ್ಕೆ ತುಳಿ = ತಲೆ ಎತ್ತದಂತೆ ಮಾಡು.
ವಿಷ್ಣು ವಾಮನಾಕಾರದಲ್ಲಿ ಬಂದು ಬಲಿಚಕ್ರವರ್ತಿಯಿಂದ ಮೂರು ಹೆಜ್ಜೆ ಭೂಮಿಯನ್ನು ಬೇಡಿ, ಆಮೇಲೆ ತ್ರಿವಿಕ್ರಮನಾಗಿ ಬೆಳೆದು, ಆಕಾಶದ ತುಂಬ ಒಂದು ಹೆಜ್ಜೆಯನ್ನೂ, ಭೂಮಿಯ ತುಂಬ ಮತ್ತೊಂದು ಹೆಜ್ಜೆಯನ್ನೂ ಇಟ್ಟು, ಮೂರನೆಯ ಹೆಜ್ಜೆಯನ್ನು ಎಲ್ಲಿಡಲಿ ಎಂದು ಕೇಳಿದಾಗ, ಅವನು ತಲೆಯ ಮೇಲೆ ಇಡು ಎಂದನೆಂಬ, ಅದೇ ರೀತಿ ಇಟ್ಟು ಪಾತಾಳಕ್ಕೆ ತುಳಿದನೆಂಬ ಪೌರಾಣಿಕ ಕಥೆ ಈ ನುಡಿಗಟ್ಟಿಗೆ ಮೂಲ.
ಪ್ರ : ಪಟೇಲ ನನ್ನನ್ನು ಅನಾಮತ್ತು ಕೆಳಕ್ಕೆ ತುಳಿದುಬಿಟ್ಟ, ಮೇಲೇಳದಂತೆ.
೭೬೬. ಕೆಳಕ್ಕೆ ಬೀಳು = ಕೆಡು, ನಿರ್ಗತಿಕಾವಸ್ಥೆಗೆ ಬರು
ಪ್ರ : ನಾವು ಕೆಳಕ್ಕೆ ಬಿದ್ರೆ, ನಂಟರೂ ಆಗಲ್ಲ, ನಲ್ಲರೂ ಆಗಲ್ಲ.
೭೬೭. ಕೇಡು ಇಳೇಲಿಕ್ಕು = ಕೆಡುಕು ತೊಟ್ಟಿಕ್ಕುತ್ತಿರು, ತುಂಬಿ ತುಳುಕುತ್ತಿರು
(ಇಳೇಲಿಕ್ಕು < ಇಳಿಯಲಿಕ್ಕು = ಇಳಿಯತೊಡಗು)
ಪ್ರ : ಅವನ ಮುಖದ ಮೇಲೆ ಕೆಡು ಅನ್ನೋದು ಇಳೇಲಿಕ್ತದೆ.
೭೬೮. ಕೇಡು ಬಗೆದು ಓಡು ಹಿಡಿ = ಬೇರೆಯವರಿಗೆ ಕೆಟ್ಟದ್ದು ಬಗೆದು ತಾನೇ ಕೆಟ್ಟು ಹಾಳಾಗು
ಕಂಠ ಕಿತ್ತ ಮಡಕೆಯ ತಳಭಾಗವನ್ನು ಬಾಳಲಿಯಂತೆ ಕಾಳು ಹುರಿಯುವುದಕ್ಕೆ ಹಳ್ಳಿಗಾಡಿನಲ್ಲಿ ಬಳಸುತ್ತಿದ್ದರು ಅದಕ್ಕೆ ಓಡು ಎಂದು ಕರೆಯುತ್ತಿದ್ದರು. ಅದು ಭಿಕ್ಷಾಪಾತ್ರೆಯ ಆಕಾರದಲ್ಲಿರುವುದರಿಂದ, ಇನ್ನೊಬ್ಬರಿಗೆ ಕೇಡು ಬಗೆದು, ತಾನೇ ತಿರುಪೆಗಿಳಿದದ್ದನ್ನು ಧ್ವನಿಸುತ್ತದೆ.
ಪ್ರ :ಅನ್ಯರಿಗೆ ಕೇಡು ಬಗೆದೂ ಬಗೆದೂ ಕೊನೆಗೆ ತಾನೇ ಓಡು ಹಿಡೀಬೇಕಾಯ್ತು.
೭೬೯. ಕೇಪು ಹೊಡಿ = ಸಂಭೋಗಿಸು.
(ಕೇಪು = ತುಪಾಕಿಯ ಗುಂಡುಗಳಿಗೆ ಹಾಕಿರುವ ಹಿಂದಿನ ಅಣಸು, ಗುಂಡಿ)
ಪ್ರ :ಕೇಪು ಹೊಡದ್ರೆ ಗಂಡುಳ್ಳ ಗರತಿಗೇ ಹೊಡೀಬೇಕು, ಯಾಕೇಂದ್ರೆ ಅವಳಿಗೆ ಹೊಟ್ಟೆ ಮುಂದಕ್ಕೆ ಬಂದ್ರೂ ದೂರು ನಮ್ಮ ಮುಂದಕ್ಕೆ ಬರಲ್ಲ.
೭೭೦. ಕೇಮೆ ಇಲ್ಲದಿರು = ಕೆಲಸ ಇಲ್ಲದಿರು, ಪೋಲಿ ತಿರುಗು
(ಕೇಮೆ > ಕೇವೆ = ಕೆಲಸ)
ಪ್ರ : ಕೇಮೆ ಇಲ್ಲದೋರು ಅವರಿವರ ಮೇಲೆ ಗೊಂಬೆ ಕೂರಿಸ್ತಾರೆ.
೭೭೧. ಕೇರಿ ಕಾಣದಿರು = ಊರು ಕಾಣದಿರು
(ಕೇರಿ = ಬೀದಿ, ಊರು)
ಕೇರಿ ಎಂಬುದಕ್ಕೆ ಬೀದಿ ಎಂಬ ಅರ್ಥವಿರುವಂತೆಯೆ ಊರು ಎಂಬ ಅರ್ಥವೂ ಇದೆ. ತುಮಕೂರು ಬಳಿ ‘ಊರುಕೇರಿ’ ಎಂಬ ಗ್ರಾಮವೇ ಇದೆ. ಅವು ಜೋಡು ನುಡಿ ಎಂಬುದು ಇದರಿಂದ ಗೊತ್ತಾಗುತ್ತದೆ. ಕಿಕ್ಕೇರಿ (ಕಿರಿದು + ಕೇರಿ = ಕಿರಿಯೂರು) ಇಕ್ಕೇರಿ (ಹಿರಿದು + ಕೇರಿ= ಹಿರಿಯೂರು) ಎಂಬ ಊರ ಹೆಸರುಗಳಲ್ಲಿ ಕೇರಿಯೇ ಬಳಕೆಯಾಗಿದೆ, ಊರು ಎಂಬ ಅರ್ಥದಲ್ಲಿ.
ಪ್ರ : ಊರು ಕಾಣೆ ಕೇರಿ ಕಾಣೆ, ನಾನು ಎಲ್ಲಿಗೆ ಅಂತ ಹೋಗಲಿ?
೭೭೨. ಕೈ ಅಲ್ಲಾಡಿಸು = ಇಲ್ಲವೆನ್ನು, ಆಗುವುದಿಲ್ಲ ಎನ್ನು
ಪ್ರ :ಕೇಳಿದ್ದಕ್ಕೆ ಅವನು ಕೈ ಅಲ್ಲಾಡಿಸಿಬಿಟ್ಟ.
೭೭೩. ಕೈ ಆಡಿಸು = ಹೆಣ್ಣಿಗೆ ಉದ್ರೇಕಿಸು, ಕಾಮ ಪ್ರಚೋದಿಸು
ಪ್ರ : ಮೊದಲು ಕೈಯಾಡಿಸು, ಆಮೇಲೆ ಝಾಡಿಸು
೭೭೪. ಕೈ ಎತ್ತು = ಸಮ್ಮತಿ ಸೂಚಿಸು, ಸಮರ್ಥಿಸು
ಪ್ರ : ಗೊತ್ತುವಳಿಗೆ ಕೈ ಎತ್ತಿದೋರೇ ಕಡಮೆ.
೭೭೫. ಕೈ ಎತ್ತು = ಇಲ್ಲವೆನ್ನು, ಪಾಪರ್ ಎಂದು ಸಾರು
ಪ್ರ : ಕೊಡ್ತೀನಿ ಅಂತ ಹೇಳ್ಕೊಂಡಿದ್ದೇನು ಕೊನೆಗೆ ಕೈ ಎತ್ತಿಬಿಟ್ಟ.
೭೭೬. ಕೈ ಒಡ್ಡು = ಬೇಡು, ಯಾಚಿಸು
ಪ್ರ : ಗಂಡ ಕಂಡಕಂಡೋರ ಎದುರು ಕೈ ಒಡ್ಡಿದರೆ, ಹೆಂಡ್ರು ಕಂಡಕಂಡೋರಿಗೆ ಮೈ ಒಡ್ತಾಳೆ – ಹೆಚ್ಚೇನು ಕಡಮೆಯೇನು?
೭೭೭. ಕೈ ಕಚ್ಚು = ಲುಕ್ಸಾನು ಆಗು, ನಷ್ಟ ಆಗು
ಪ್ರ :ಬೆಲ್ಲದ ವ್ಯಾಪಾರದಲ್ಲಿ ಈ ಸಾರಿ ಸರಿಯಾಗೇ ಕೈ ಕಚ್ಚಿತು.
೭೭೮. ಕೈಕಡಿ = ಹೊಡೆಯಲು ತವಕಿಸು, ಹೊಡಿ
(ಕಡಿ = ನವೆಯಾಗು, ನಸನಸ ಎನ್ನು)
ಪ್ರ : ಅಯ್ಯೋ ಶಿವನೆ, ಇವರ ಕೈ ಕಡಿಯೋ ಬದಲು, ಕಾವು ಕಡಿಯಬಾರ್ದಾಗಿತ್ತ?
೭೭೯. ಕೈಕಾಲು ತಣ್ಣಗಾಗು = ಪ್ರಾಣ ಹೋಗು, ಮರಣ ಹೊಂದು.
ಪ್ರ : ಕೈಕಾಲು ತಣ್ಣಗಾದವು, ಮುಂದಿನ ಕೆಲಸ ನೋಡಿ, ಅತ್ತೇನು ಫಲ?
೭೮೦. ಕೈಕಾಲು ಬಿದ್ದು ಹೋಗು = ಸುಸ್ತಾಗು
ಪ್ರ : ಆ ದೇಗುಲದಿಂದ ಇಲ್ಲಿಗೆ ಬರಬೇಕಾದ್ರೆ ನನ್ನ ಕೈಕಾಲು ಬಿದ್ದು ಹೋದವು.
೭೮೧. ಕೈ ಕೈ ಮಿಲಾಯಿಸು = ಜಗಳಕ್ಕೆ ಬೀಳು, ಹೊಡೆದಾಟಕ್ಕಿಳಿ
ಪ್ರ : ನಾನು ಅಡ್ಡ ಹೋಗದಿದ್ರೆ ಕೈ ಕೈ ಮಿಲಾಯಿಸುತಿದ್ದರು ಅನ್ನೋದು ಖಾತ್ರಿ
೭೮೨. ಕೈ ಕೈ ಹಿಸುಕಿಕೊಳ್ಳು = ಕೆಲಸ ಕೆಟ್ಟಿತೆಂದು ಸಂಕಟಪಡು
ಪ್ರ : ಏನೋ ಮಾಡಲು ಹೋಗಿ ಏನೋ ಆಯಿತಲ್ಲ ಅಂತ ಕೈ ಕೈ ಹಿಸುಕಿಕೊಂಡೆ.
೭೮೩. ಕೈ ಕೊಡು = ಮೋಸ ಮಾಡು
ಪ್ರ: ಸರಿಯಾದ ಸಮಯದಲ್ಲಿ ನನಗೆ ಕೈ ಕೊಟ್ಟು ಬಿಟ್ಟ ಹಲ್ಕಾ ನನ್ಮಗ.
೭೮೪. ಕೈ ಕೊಸರಿಕೊಂಡು ಹೋಗು = ಕೈ ಕಿತ್ತುಕೊಂಡು ಹೋಗು, ಸಿಡಾರನೆ ಹೋಗು
ಪ್ರ : ಕೈ ಕೊಸರಿಕೊಂಡು ಹೋದೋನ ಹಿಂದೆ ಯಾಕೆ ಒಡ್ಕೊಂಡು ಹೋಗೋದು?
೭೮೫. ಕೈಗೂ ಸಿಗದಿರು ಬಾಯ್ಗೂ ಸಿಗದಿರು = ನುಣುಚಿಕೊಳ್ಳು, ತಲೆಮರೆಸಿಕೊಂಡು ತಿರುಗು
ಪ್ರ : ವಾರದಿಂದ ಕಾದರೂ ಅವನು ಕೈಗೂ ಸಿಗಲಿಲ್ಲ ಬಾಯ್ಗೂ ಸಿಗಲಿಲ್ಲ.
೭೮೬. ಕೈಗೆ ಅಮರದಿರು = ಕೈ ಹಿಡಿತಕ್ಕೆ ಸಿಕ್ಕದಿರು, ಸಾಕಷ್ಟು ಗಾತ್ರವಾಗಿರು
(ಅಮರು = ಹಿಡಿತಕ್ಕೆ ಸಿಕ್ಕು)
ಪ್ರ : ಮಲಗೋಬ ಮಾವಿನಹಣ್ಣು ಎಷ್ಟು ದಪ್ಪಗಿವೆ ಅಂದ್ರೆ ಕೈಗೆ ಅಮರಲ್ಲ.
೭೮೭. ಕೈಗೆ ಹಚ್ಚು = ಕೊಡು, ಕೊಡುವ ಶಾಸ್ತ್ರ ಮಾಡು
(ಹಚ್ಚು = ಲೇಪಿಸು)
ಪ್ರ : ಮಕ್ಕಳು ಅಳ್ತಾ ಅವೆ, ಕೈಗೆ ಏನಾದರೂ ಹಚ್ಚು.
೭೮೮. ಕೈಗೊಂಬೆಯಾಗಿರು = ಪರಾಧೀನವಾಗಿರು, ಸ್ವತಂತ್ರ ಅಸ್ತಿತ್ವ ಇಲ್ಲದಿರು
(ಗೊಂಬೆ < ಬೊಂಬೆ < ಪೊಮ್ಮೈ(ತ)) ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿಯನ್ನು ದಿಲ್ಲಿಯ ಸುಲ್ತಾನನ ಮಗಳು ಪ್ರೇಮಿಸಿದ್ದಳೆಂಬ ಕಥಾ ಐತಿಹ್ಯದ ಹಿನ್ನೆಲೆಯಲ್ಲಿ ಒಂದು ಹೆಣ್ಣಿನ ಗೊಂಬೆಯನ್ನು ಬಲಗೈಯಲ್ಲಿ ಹಿಡಿದು, ‘ಮದುವೆಯಾಗೇ ವರನಂದಿ’ ಎಂದು ಹಾಡನ್ನು ಹಾಡುತ್ತಾ, ಹಾಡಿಗನುಗುಣವಾಗಿ ಗೊಂಬೆಯನ್ನು ಕುಣಿಸುತ್ತಾ ತಿರುಗುವ ಅಲೆಮಾರಿ ಗಾಯಕ ವರ್ಗವಿತ್ತು. ಈ ಕೈಗೊಂಬೆಗೂ ಸೂತ್ರದ ಗೊಂಬೆಗೂ ವ್ಯತ್ಯಾಸವಿದೆ. ಆ ಹಿನ್ನೆಲೆಯಿಂದ ಮೂಡಿದ್ದು ಈ ನುಡಿಗಟ್ಟು.
ಪ್ರ : ಹೆಂಡ್ರು ಗಂಡನ್ನ ಕೈಗೊಂಬೆ ಮಾಡ್ಕೊಂಡು ಹೆಂಗಂದ್ರೆ ಹಂಗೆ ಕುಣಿಸ್ತಾ ಅವಳೆ.
೭೮೯. ಕೈ ಚೆಲ್ಲಿ ಕೂರು = ನಿಷ್ಕ್ರಿಯನಾಗಿ ಕೂಡು.
ಪ್ರ : ಬದುಕೋ ಮಾರ್ಗ ತಪ್ತು ಅಂತ ನಿರಾಶೆಯಿಂದ ಕೈಚೆಲ್ಲಿ ಕೂಡಬಾರ್ದು.
೭೯೦. ಕೈ ಜೋಡಿಸು = ಕೈ ಮುಗಿ, ನಮಸ್ಕರಿಸು.
ಗ್ರಾಮೀಣರು ದೇವರಿಗೆ ಕೈಜೋಡಿಸುವ ಅಥವಾ ಕೈ ಮುಗಿಯುವ ಪದ್ಧತಿ ಇಟ್ಟುಕೊಂಡಿದ್ದರೂ, ಬೇರೆಯವರನ್ನು ಸಂಧಿಸಿದಾಗ ಕೈ ಮುಗಿಯುವುದಕ್ಕೆ ಬದಲಾಗಿ ಎದ್ದಿರಾ? ಬಂದಿರಾ? ಸೌಖ್ಯನಾ? ಎಂಬ ಕುಶಲಪ್ರಶ್ನೆಗಳ ಮುಖೇನ ಸ್ವಾಗತವನ್ನು ಬಯಸುವ ಗೌರವವನ್ನು ಸೂಚಿಸುವ ಪದ್ಧತಿ ಇತ್ತು. ಈಗಲೂ ಕೆಲವು ಕಡೆ ಕೆಲವು ಜನರಲ್ಲಿ ಇದೆ. ಮೇಲು ವರ್ಗದವರು, ತಮ್ಮನ್ನು ತಾವೇ ಭೂದೇವರೆಂದು ಕರೆದುಕೊಂಡವರು, ದೇವರಿಗೆ ಕೈ ಮುಗಿದಂತೆ ತಮಗೂ ಕೈ ಮುಗಿಯಬೇಕೆಂದು ಅಧರ್ಮವಾದರೂ ಧರ್ಮವೆಂದು ಉಪದೇಶಿಸಿರಬೇಕು, ಬಲಾತ್ಕರಿಸಿರಬೇಕು. ಶೂದ್ರರೂ, ಅಸ್ಪೃಶ್ಯರೂ ಕಾಲುಮುಟ್ಟಿ ನಮಸ್ಕರಿಸಿದರೆ ಮೈಲಿಗೆಯಾಗುವುದೆಂದೂ ಕೈ ಮುಗಿಯುವ ಪದ್ಧತಿಯನ್ನು ಚಾಲ್ತಿಗೆ ತಂದರಿಬೇಕೆಂದು ತೋರುತ್ತದೆ. ಭಾರತದಲ್ಲಿ ಹಸ್ತಲಾಘದ ಪದ್ಧತಿ ಇರಲಿಲ್ಲ. ಅದರಲ್ಲಿ ಸ್ಪರ್ಶದ ಪ್ರಶ್ನೆ ಬರುತ್ತದೆ. ಆದರೆ ಕೈ ಮುಗಿಯುವ ಪದ್ಧತಿಯಲ್ಲಿ ಸ್ಪರ್ಶದ ಪ್ರಶ್ನೆ ಬರುವುದಿಲ್ಲ; ಸಮೀಪಗತವಾಗಬೇಕಾದ ಅಗತ್ಯವೂ ಇಲ್ಲ. ದೂರದಿಂದಲೇ ಕೈ ಜೋಡಿಸಬಹುದು. ಆದ್ದರಿಂದ ಮಡಿಪ್ರಜ್ಞೆಯವರ ಹುನ್ನಾರು ಈ ಪದ್ಧತಿಯ ಅಸ್ತಿತ್ವಕ್ಕೆ ಕಾರಣವಾಗಿರಬಹುದೆ ಎಂಬುದು ಚಿಂತನಾರ್ಹ. ಅಂದರೆ ಸಮಾನರು ಸವರ್ಣೀಯರು ಎನ್ನಿಸಿಕೊಂಡವರು ಸಮಾನರಲ್ಲದವರು ಸವರ್ಣಿಯರಲ್ಲದವರು ಕಾಲಿಗೆರಗುವುದಕ್ಕೆ ಅವಕಾಶ ಕೊಡದೆ ಕೈ ಮುಗಿಯುವುದಕ್ಕೆ ಮಾತ್ರ ಅವಕಾಶ ಕೊಟ್ಟಿರುವ ಸಂಭಾವ್ಯತೆ ಇಲ್ಲದಿಲ್ಲ. ಇಂದಿಗೂ ವೈದಿಕಶಾಹಿಯ ಗುತ್ತಿಗೆಯಲ್ಲಿರುವ ದೇವಸ್ಥಾನಗಳಿಗೆ ಗಂಡಸರು ಶರಟು ಬನಿಯನ್ನು ತೆಗೆದು ಬರಿ ಮೈಯಲ್ಲಿ ಹೋಗದಿದ್ದರೆ ಪ್ರವೇಶ ನಿರಾಕರಿಸುತ್ತಾರೆ. ಆದರೆ ಪ್ಯಾಂಟು ಕಳಚಿ ಬರೆಬೇಕೆಂದು ಒತ್ತಾಯಿಸುವುದಿಲ್ಲ. ಅಂದರೆ ಸೊಂಟದ ಮೇಲಿನ ಭಾಗ ಅವರಿಗೆ ಮುಖ್ಯ. ಎದೆಯ ಮೇಲೆ ಜನಿವಾರ ಇದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಒಳ್ಳೆಯ ಉಪಾಯ. ಆದರೆ ಹೆಂಗಸರಿಗೆ ಕುಬುಸ ಕಳಚಿ ಬನ್ನಿ ಎಂದು ಒತ್ತಾಯಿಸುವುದಿಲ್ಲ. ಕಾರಣ ಸ್ತ್ರೀಯರಿಗೆ ಜನಿವಾರ ನಿಷೇಧವಿದೆ. ಆದ್ದರಿಂದ ಬ್ರಾಹ್ಮಣ ಹೆಂಗಸರು ಶೂದ್ರ ಹೆಂಗಸರು ಎಂದು ವಿಂಗಡಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಹೆಂಗಸರ ಸೊಂಟದ ಮೇಲಿನ ಉಡುಪನ್ನು ತೆಗೆದು ಬನ್ನಿ ಎಂದು ಹೇಳುವ ಪ್ರಮೇಯವೇ ಬರುವುದಿಲ್ಲ. ಆದ್ದರಿಂದ ಕಾಲಿಗೆರಗುವ ಪದ್ಧತಿಯಿಂದ ತಮ್ಮ ಮಡಿಗೆ ಧಕ್ಕೆಯಾಗುವುದೆಂದು ಬರೀ ಕೈ ಮುಗಿಯುವ ಪದ್ಧತಿಯನ್ನು ಚಾಲ್ತಿಗೆ ತಂದಿರಬೇಕು ಎನ್ನಿಸುತ್ತದೆ. ಅದು ಕ್ರಮೇಣ ಸಾರ್ವತ್ರಿಕ ಸ್ವರೂಪ ಪಡೆದುಕೊಂಡಿರಬೇಕೆಂದು ತೋರುತ್ತದೆ.
ಪ್ರ : ಆಳುಗಳಾದ ನಾವು ದಣಿಗಳನ್ನು ಕಂಡ ಕೂಡಲೇ ಕೈ ಜೋಡಿಸದಿದ್ರೆ, ಅವರು ಕಾಲಿನ ಜೋಡನ್ನು ಕೈಗೆ ತಗೊಂತಾರೆ.
೭೯೧. ಕೈ ತೊಳೆದುಕೊಳ್ಳು = ಸಮಸ್ಯೆಯಿಂದ ಮುಕ್ತವಾಗು, ಸಂಬಂಧ ಕಡಿದುಕೊಳ್ಳು
ಪ್ರ : ಲಾಗಾಯ್ತಿನಿಂದ ಹೆಣಗೀ ಹೆಣಗೀ ಹೆಣ ಬಿದ್ದು ಹೋಗಿದ್ದೆ, ಸದ್ಯ ಇವತ್ತು ಕೈ ತೊಳೆದುಕೊಂಡೆ
೭೯೨. ಕೈ ತೊಳೆದು ಮುಟ್ಟುವಂತಿರು = ತುಂಬ ಸುಂದರವಾಗಿರು, ತುಂಬ ಬೆಳ್ಳಗೆ ಕೆಂಪಗೆ ಇರು, ಫಳಫಳ ಹೊಳೆಯುತ್ತಿರು.
ಈ ನುಡಿಗಟ್ಟಿನಲ್ಲಿ ಹೆಣ್ಣಿನ ರೂಪ ಮತ್ತು ಬಣ್ಣಗಳೆರಡೂ ಒಟ್ಟೊಟ್ಟಿಗೆ ಅನುಕ್ತವಾಗಿ ಅಭಿವ್ಯಕ್ತವಾಗಿದೆ. ಸುಂದರಿ ಎಂಬ ಸವಕಲಾದ ಪೇಲವ ಅಭಿವ್ಯಕ್ತಿಗೂ, ತಾಜಾತನದಿಂದ ಕೂಡಿದ ಈ ಸಚಿತ್ರ ಸಶಕ್ತ ಅಭಿವ್ಯಕ್ತಿಗೂ ಅಜಗಜಾಂತರವಿದೆ. ಕಪ್ಪು ಬಣ್ಣದ ವಸ್ತುವನ್ನು ಕೊಳೆಗೈಯಿಂದ ಮುಟ್ಟಿದರೂ ಕೊಳೆಯ ಕಲೆ, ಮಚ್ಚೆ ಅಥವಾ ಕೆರೆ ಎದ್ದು ಕಾಣುವುದಿಲ್ಲ. ಆದರೆ ಬೆಳ್ಳಗಿನ, ಕೆಂಪಗಿನ ವಸ್ತುವನ್ನು ಮುಟ್ಟಿದರೆ ಕೊಳೆಯ ಕಲೆ ಅಥವಾ ಕರೆ ಎದ್ದು ಕಾಣುತ್ತದೆ; ಕಣ್ಣಿಗೆ ರಾಚುತ್ತದೆ. ಕೈ ತೊಳೆದು ಮುಟ್ಟುವಂತಿರಬೇಕಾದರೆ ಪರಂಗಿ ಹಣ್ಣಿನಂಥ ಅಥವಾ ಹಲಸಿನ ತೊಳೆಯಂಥ ಬಣ್ಣ ಉಳ್ಳವಳು ಎಂಬುದು ವ್ಯಕ್ತವಾಗುತ್ತದೆ. ಒಟ್ಟಿನಲ್ಲಿ ಮೀಸಲು ಬಣ್ಣದ ಮೀಸಲು ಸೌಂದರ್ಯದ ಕಟ್ಟೆರಕವಾಗಿ ಕಂಡು ಬರುತ್ತದೆ ಈ ನುಡಿಗಟ್ಟು
ಪ್ರ : ಕೈ ತೊಳೆದು ಮುಟ್ಟಬೇಕು – ಹಂಗಿದ್ದಾಳೆ ಹುಡುಗಿ, ಕಣ್ಣು ಮಚ್ಕೊಂಡು ಮದುವೆಯಾಗು.
೭೯೩. ಕೈ ನೆರೆಗೆ ಬರು = ಮದುವೆ ವಯಸ್ಸಿಗೆ ಬರು
(ಕೈನೆರೆಗೆ < ಕೈನೀರಿಗೆ; ಕೈನೀರು = ಧಾರೆ ನೀರು (ಕೆಯ್ನೀರೆರೆದು = ಧಾರೆ ಎರೆದು (ಪಂ.ಭಾ))
ಪ್ರ : ಆ ಹುಡುಗಿ ಮೈನೆರೆದು ಕೈನೆರೆಗೆ ಬಂದಿದೆ.
೭೯೪. ಕೈ ಬಾಯಿ ಆಡಿಸು = ಮಾತು ನಿಂತು ಸನ್ನೆ ಮಾಡು, ಸಾವು ಸನ್ನಿಹಿತವಾಗು
ಪ್ರ : ಕೈ ಬಾಯಿ ಆಡಿಸ್ತಾನೆ ಅಂದ್ರೆ ಅವನ ಕತೆ ಮುಗೀತಾ ಬಂತು
೭೯೫. ಕೈ ಬಾಯಿ ಚೆನ್ನಾಗಿರು = ನಡೆ ನುಡಿ ಶುದ್ಧವಾಗಿರು
ಪ್ರ : ರಾಜಕೀಯದಲ್ಲಿ ಗೌರವ ಸ್ಥಾನ ದೊರಕಬೇಕು ಅಂದ್ರೆ ಕೈ ಬಾಯಿ ಚೆನ್ನಾಗಿರಬೇಕು
೭೯೬. ಕೈ ಬಾಯ್ಗೆ ಬರು = ರುಗ್ಣಾವಸ್ಥೆಯಲ್ಲಿರು, ಯಾವ ಗಳಿಗೆಯಲ್ಲೇನೋ ಎನ್ನುವಂತಿರು
ಪ್ರ : ಗೌಡ ಕೈ ಬಾಯ್ಗೆ ಬತ್ತಾ ಅವನೆ, ಬೇಗ ಹೋಗಿ ನೋಡ್ಕೊಂಡು ಬಾ
೭೯೮. ಕೈ ಬಿಡು= ಉಣ್ಣಲು ತೊಡಗು
ಪ್ರ : ಪಂತಿ ಕೂಡಿದೆ, ಬಡಿಸಿದ್ದೂ ಆಗಿದೆ, ನೀವಿನ್ನು ಕೈ ಬಿಡಿ
೭೯೯. ಕೈ ಬೆಚ್ಚಗೆ ಮಾಡು = ಲಂಚ ಕೊಡು
ಪ್ರ : ಕಾಂಗ್ರೆಸ್ ಆಡಳಿತದಲ್ಲಿ ಕೈ ಬೆಚ್ಚಗೆ ಮಾಡದೆ ಇದ್ರೆ ಯಾವ ಕೆಲಸವೂ ಆಗಲ್ಲ.
೮೦೦. ಕೈ ಮಸುಕಿಕ್ಕು = ಕೈ ಮದ್ದು ಇಕ್ಕು
(ಕೈ ಮಸುಕು = ಆಹಾರದಲ್ಲಿ ಅಥವಾ ತಾಂಬೂಲದಲ್ಲಿ ಕ್ಷಯವಾಗುವ ಮದ್ದು ಕೊಂಡು) ಊಸರವಳ್ಳಿ (ಗೋಸುಂಬೆ)ಯ ರಕ್ತದಿಂದ ಆ ಮದ್ದನ್ನು ಮಾಡುತ್ತಾರೆ ಎಂದು ಪ್ರತೀತಿ. ಅದನ್ನು ಕರಗತ ಮಾಡಿಕೊಂಡವರು, ಯಾರಿಗಾದರೂ ಮದ್ದು ಹಾಕದಿದ್ದರೆ ತಾವು ತಿನ್ನುವ ಅನ್ನ ಹುಳುವಾಗುತ್ತದೆ ಎಂಬ ನಂಬಿಕೆಯುಂಟು. ಆದ್ದರಿಂದಲೇ ಯಾರಿಗೂ ಹಾಕಲು ಸಾಧ್ಯವಾಗದಿದ್ದರೆ ತಮ್ಮ ಆತ್ಮೀಯರಿಗಾದರೂ ಹಾಕಿ ಅವರು ಉಸಿರಾಡಬೇಕಂತೆ. ಬಹುಶಃ ತಿನ್ನುವ ಅನ್ನ ಹುಳುವಾಗುತ್ತದೆ ಎಂಬುದು ಅವರ ಪಾಪ ಪ್ರಜ್ಞೆಯ ಪರಿಣಾಮ ಎನ್ನಬಹುದು.
ಪ್ರ : ಯಾರೋ ಕೈ ಮಸುಕು ಇಕ್ಕಿರಬಹುದು, ಇಲ್ಲದಿದ್ರೆ ಮರದ ಬೊಡ್ಡೆಯಂತಿದ್ದ ಮಗ ಹಿಂಗೆ ಗಳು ಆದಂಗೆ ಆಗ್ತಿರಲಿಲ್ಲ.
೮೦೧. ಕೈ ಮೀರಿ ಹೋಗು = ಹಿಡಿತ ತಪ್ಪು, ಸರಿಪಡಿಸಲಾಗದ ಹಂತ ತಲುಪು
ಪ್ರ : ಗಾದೆ – ಕೈ ಮೀರಿ ಹೋದದ್ದಕ್ಕೆ ಮೈಗೀರಿಕೊಂಡೇನು ಫಲ?
೮೦೨. ಕೈ ಮುರಿದಂತಾಗು = ಶಕ್ತಿ ಉಡುಗಿದಂತಾಗು.
ಪ್ರ : ಕೈ ಹಿಡಿದ ಹೆಂಡ್ರು ತೀರ್ಕೊಂಡ್ಲು ಅಂದ್ರೆ ನನ್ನ ಕೈ ಮುರಿದಂಗಾಯ್ತು ಅಂತಾನೇ ಲೆಕ್ಕ
೮೦೩. ಕೈ ಮೇಲೆ ಉಪ್ಪಿಕ್ಕದಿರು = ಕನಿಷ್ಠ ಸಹಾಯವನ್ನು ಯಾರೂ ಮಾಡದಿರು, ಮಾನ್ಯತೆ ಕೊಡದಿರು
ಪ್ರ : ಊರಿಗೆಲ್ಲ ಅವನ ಯೋಗ್ಯತೆ ಗೊತ್ತಾಗಿದೆ, ಯಾರೂ ಅವನ ಕೈ ಮೇಲೆ ಉಪ್ಪಿಕ್ಕಲ್ಲ.
೮೦೪. ಕೈ ಮೇಲೆ ಕೈ ಹಾಕು = ಆಣೆ ಮಾಡು, ಭಾಷೆ ಹಾಕು.
ಪ್ರ : ಬಂದೇ ಬರ್ತೀನಿ ಅಂತ ಕೈ ಮೇಲೆ ಕೈ ಹಾಕಿ ಹೇಳಿ ಹೋಗಿದ್ದಾನೆ.
೮೦೫. ಕೈಲಿದ್ದದ್ದನ್ನು ಕೊಟ್ಟು ಗೊಗ್ಗಯ್ಯನಾಗು = ನಿರ್ಗತಿಕನಾಗು, ಭಿಕ್ಷುಕನಾಗು.
(ಗೊಗ್ಗಯ್ಯ < ಗೊರವಯ್ಯ = ಮೈಲಾರಲಿಂಗನ ಭಕ್ತ) ಗೊರವಯ್ಯಗಳು ಸಾಮಾನ್ಯವಾಗಿ ಕರಡಿ ಕೂದಲಿನ ಟೊಪ್ಪಿಗೆಯನ್ನು ಧರಿಸಿ, ಕಂಬಳಿಯ ಅಂಗಿಯನ್ನು ಧರಿಸಿ, ಹಣೆಗೆ ದೇವರ ಭಂಡಾರ (ಅರಿಶಿನ) ವನ್ನು ಬಳಿದುಕೊಂಡು, ಡಮರುಗವನ್ನು ಹಿಡಿದು ನುಡಿಸುತ್ತಾ ಬೀದಿ ಬೀದಿಯಲ್ಲಿ ಭಿಕ್ಷೆ ಎತ್ತುತ್ತಾರೆ. ಹಿರೇ ಮೈಲಾರದ ಮೈಲಾರ ಲಿಂಗನ ಜಾತ್ರೆಯಲ್ಲಿ ಮಣೇವು ಹಾಕುವುದು, ಸರಪಣಿ ಸೇವೆಯಲ್ಲಿ ಭಾಗಿಯಾಗುವುದು ಮಾಡುತ್ತಾರೆ. ತಮ್ಮ ಜೋಳಿಗೆಯಲ್ಲಿರುವ ದೇವರ ಭಂಡಾರವನ್ನು ಎದುರು ಸಿಕ್ಕಿದವರಿಗೆ ಬಳಿಯುತ್ತಾರೆ, ಬೇಡವೆಂದವರಿಗೆ ಬಿಡುತ್ತಾರೆ. ಕೊರಳಿಗೆ ಕವಡೆಸರ ಹಾಕಿಕೊಂಡಿರುತ್ತಾರೆ. ಉಣ್ಣುವುದಕ್ಕೆ ಮರದ ದೋಣಿ ಇರುತ್ತದೆ. ದೇವರ ನಾಯಿಗಳೆಂದು, ಹುಲಿಗಳೆಂದು ದೋಣಿಯೊಳಗಿನ ಅನ್ನವನ್ನು ಕೈಯಲ್ಲಿ ತಿನ್ನದೆ ಬಾಯಿ ಹಾಕಿ ತಿನ್ನುತ್ತಾರೆ. ಪ್ರಮುಖವಾಗಿ ಕುರುಬಜನಾಂಗದವರ ಆರಾಧ್ಯದೈವ ಮೈಲಾರಲಿಂಗ. ದೀಕ್ಷೆ ಪಡೆದ ಗೊರವಯ್ಯಗಳು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶಗಳಲ್ಲೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಕೆಲವು ಕಡೆ ಇವರಿಗೆ ವಗ್ಗಯ್ಯ (< ವ್ಯಾಘ್ರಯ್ಯ) ಎಂಬ ಹೆಸರೂ ಉಂಟು. ಮೈಸೂರಿನ ಕಡೆ ಅಳುವ ಮಕ್ಕಳನ್ನು ಸುಮ್ಮನಿರಿಸಲು ಅಗೋ ಗಡಬಡಯ್ಯ ಬಂದ ಎಂದು ಹೇಳುತ್ತಾರೆ. ಡಮರುಗದ ಗಡಬಡ ಎಂಬ ಸದ್ದಿನಿಂದ ಗಡಬಡಯ್ಯ ಎಂಬ ನಾಮಕರಣ ನಾಮಧೇಯ ಚಾಲ್ತಿಗೆ ಬಂದಿದೆ ಅಷ್ಟೆ. ಒಟ್ಟಿನಲ್ಲಿ ವ್ಯಾಘ್ರಯ್ಯ ಎಂಬುದು ಜನರ ಬಾಯಲ್ಲಿ ವಗ್ಗಯ್ಯ ಆಗಿರುವ ಶಬ್ದ ಸಾದೃಶ್ಯದ ಮೇಲೆ ಗೊರವಯ್ಯ ಗೊಗ್ಗಯ್ಯ ಆಗಿದೆ ಎಂಬುದು ಸ್ಪಟಿಕಸ್ಪಷ್ಟ.
ಪ್ರ : ಕೈಲಿದ್ದದ್ದನ್ನು ಕೊಟ್ಟು ಗೊಗ್ಗಯ್ಯನಾದದ್ದು ನನ್ನ ತಪ್ಪು, ಯಾರನ್ನು ದೂರಿ ಏನು ಫಲ?
೮೦೬. ಕೈ ಸುಟ್ಟುಕೊಳ್ಳಿ = ನಷ್ಟ ಅನುಭವಿಸು
ಪ್ರ : ದರಿದ್ರ ವ್ಯವಹಾರಕ್ಕೆ ಕೈ ಹಾಕಿ ಸಕತ್ತು ಕೈ ಸುಟ್ಕೊಂಡೆ
೮೦೭. ಕೈ ಹಾಕು = ಸಹಾಯ ಮಾಡು
ಪ್ರ : ಬಾರಪ್ಪ, ಈ ಹೊರೆಗೊಂದು ಕೈ ಹಾಕಿ ತಲೆ ಮೇಲಕ್ಕೆತ್ತು.
೮೦೮. ಕೈ ಹಿಡಿ = ಮದುವೆಯಾಗು
ಪ್ರ : ಈಕೇನ ಕೈ ಹಿಡಿದ ಲಾಗಾಯ್ತು ಮೈ ಮೇಲೊಂದು ಏಟು ಹಾಕಿಲ್ಲ
೮೦೯. ಕೈ ಹಿಡಿ = ಕಷ್ಟದಲ್ಲಿ ನೆರವಾಗು
ಪ್ರ : ಈ ಮಾರಾಯ ಕಷ್ಟದಲ್ಲಿ ನನ್ನ ಕೈ ಹಿಡಿಯದಿದ್ರೆ, ಮುಳುಗಿ ಹೋಗ್ತಿದ್ದೆ.
೮೧೦. ಕೊಕ್ ಕೊಡು = ಸ್ಥಳಾಂತರಿಸು, ವರ್ಗಾಯಿಸು
ಕೊಕ್ಕೋ ಆಟದ ಹಿನ್ನೆಲೆ ಈ ನುಡಿಗಟ್ಟಿಗುಂಟು. ಸಾಲಾಗಿ ಕುಳಿತ ಯಾರದಾದರೂ ಬೆನ್ನ ಹಿಂದೆ ಹೋಗಿ ‘ಕೊಕ್’ ಎಂದ ಕೂಡಲೇ, ಕುಳಿತ ಜಾಗವನ್ನು, ಬಿಟ್ಟು ಆತ ಎದ್ದು ಒಡಬೇಕು, ಎದುರು ಬಣದ ಆಟಗಾರನನ್ನು ಹಿಡಿಯಲು ಒಟ್ಟಿನಲ್ಲಿ ಸ್ಥಳಾಂತರದ ನಿರ್ದೇಶನವಿದೆ.
ಪ್ರ : ಸಂಬಂಧಿಕ ಅಧಿಕಾರಿಯನ್ನು ಬೆಂಗಳೂರಿಗೆ ಕರೆಸಿಕೊಳ್ಳೋದಕ್ಕೆ, ಮೂರು ವರ್ಷ ಆಗದಿದ್ರೂ ನನಗಿಲ್ಲಿಂದ ಕೊಕ್ ಕೊಟ್ರು.
೮೧೧. ಕೊಟ್ಟು ಬದುಕು = ದಾನ ಮಾಡು ಜೀವಿಸು, ಅನ್ಯರೊಡನೆ ಹಂಚಿಕೊಂಡುಣ್ಣು
ಪ್ರ : ಕೊಟ್ಟು ಬದುಕೋ ಜನ ಇವತ್ತು ಕಡಮೆ ಆಗ್ತಿದ್ದಾರೆ
೮೧೨. ಕೊಟ್ಟು ಬಿಟ್ಟವನಂತೆ ಮಾತಾಡು = ಬಾಯಿಗೆ ಬಂದಂತೆ ಮಾತಾಡು, ಸಾಲಗಾರನನ್ನು ಹಂಗಿಸಿ ನುಡಿವಂತೆ ಬಡಬಡಿಸು.
ಪ್ರ : ಕೊಟ್ಟು ಬಿಟ್ಟೋನಂಗೆ ಮಾತಾಡಿದ್ರೆ ಕೆಪ್ಪರೆಗೆ ತಟ್ಟಿ ಕಳಿಸ್ತೀನಿ
೮೧೩. ಕೊಡತಿ ಉಳಿಕೊಡು = ನಾಮ ಹಾಕು, ಕೊಡದೆ ಮೋಸ ಮಾತಾಡು
(ಕೊಡತಿ < ಕೊಡಂತಿ = ಮರದ ಸುತ್ತಿಗೆ, ಉಳಿ = ಬಡಗಿಯ ಉಕ್ಕಿನ ಹತಾರ (Chisel) ಬಡಗಿ ವೃತ್ತಿಯ ಮೂಲದ್ದು ಈ ನುಡಿಗಟ್ಟು ಇಲ್ಲಿಯ ಕೊಡತಿ ಉಳಿಗಳು ಶಿಷ್ನಕ್ಕೆ ಸಂಕೇತವಾಗಿವೆ. ಗಂಟನ್ನು ಹಾರಿಸುತ್ತಾನೆ, ಅದನ್ನು ತೋರಿಸುತ್ತಾನೆ ಎಂಬುದು ಧ್ವನಿ.
ಪ್ರ : ಆ ಠಕ್ಕರ್ ಸೂಳೇಮಗ ನಿನಗೆ ಕೊಡೋದು ಕೊಡ್ತಿ ಉಳೀನೆ, ತಿಳಕೋ.
೮೧೪. ಕೊನೆ ಕೊಡು = ಕೈ ಎತ್ತು, ಮೋಸ ಮಾಡು
(ಕೊನೆ > ಗೊನೆ = ಶಿಷ್ನ)
ಪ್ರ : ನಿನಗೆ ಕೊಡೋದು ಏನೂ ಇಲ್ಲ, ನಿನಗೆ ಕೊಡೋದು ನನ್ನ ಕೊನೇನೇ!
೮೧೫. ಕೊಪ್ಪಲು ಹಾಕು = ಅನ್ನ ಸತ್ರವನ್ನಿಡು.
ಕೊಪ್ಪಲು ಎನ್ನುವುದಕ್ಕೆ ಗುಂಪು, ರಾಶಿ ಎಂಬ ಅರ್ಥವಿರುವ ಹಾಗೆಯೇ (ಉದಾಹರಣೆಗೆ ಹುಲ್ಲುಕೊಪ್ಪಲು, ಹೂಗೊಪ್ಪಲು) ಅನ್ನ ಸತ್ರ ಎಂಬ ಅರ್ಥವೂ ಇದೆ. ಕನ್ನಡದ ಯಾವ ಶಬ್ದಕೋಶವೂ ಈ ಜಾನಪದೀಯ ಅರ್ಥವನ್ನು ದಾಖಲು ಮಾಡಿಲ್ಲ. ಉದಾಹರಣೆಗೆ ಮಂಡ್ಯ ಜಿಲ್ಲೆಯಲ್ಲಿರುವ ಹಿಟ್ನಳ್ಳಿ ಕೊಪ್ಪಲು (ಅಂದರೆ ಅನ್ನವಿಲ್ಲದ ಬರೀ ಮುದ್ದೆ ಊಟದ ಛತ್ರ) ಮೈಸೂರಿನಲ್ಲಿರುವ ಕನ್ನೇಗೌಡನ ಕೊಪ್ಪಲು (ಅನ್ನಸತ್ರ) ಎಂಬ ಹೆಸರುಗಳು ಅದರ ಇನ್ನೊಂದು ಮುಖದ ಅರ್ಥಕ್ಕೆ ಸಾಕ್ಷಿಯಾಗಿವೆ.
ಪ್ರ : ದನಗಳ ಜಾತ್ರೆಯಲ್ಲಿ ಮಂಡ್ಯ ಕಾಡಿನೋರು ಕೊಪ್ಪಲು ಹಾಕಿದ್ದಾರೆ. ಅಲ್ಲಿ ಹೋಗಿ ಆರಾಮವಾಗಿ ಉಂಡು ಬರದೆ, ಹೋಟ್ಲಿಗೆ ಹೋಗಿ ಯಾಕೆ ದುಡ್ಡು ತೆರಬೇಕು?
೮೧೬. ಕೊಬರಿಗಿಟಕಾಗಿರು = ಹೆಚ್ಚು ವಯಸ್ಸಾಗಿರು, ಬಲಿತು ಹೋಗಿರು.
ತೆಂಗಿನಕಾಯಿ ತಳ್ಳಾದಾಗ ಅಂದರೆ ಒಳಗಿನ ನೀರೆಲ್ಲ ಇಂಗಿ ಹೋಗಿ, ತೆಂಗಿನಕಾಯಿಯ ತಿರುಳಿನ ಭಾಗ ಕರಟದಿಂದ ಕಳಚಿಕೊಂಡು ಪ್ರತ್ಯೇಕಗೊಂಡಿದ್ದರೆ, ಆಗ ಕರಟವನ್ನು ಒಡೆದು, ಒಳಗಿನದನ್ನು ಹೊರದೆಗೆಯುತ್ತಾರೆ. ಅದಕ್ಕೆ ಕೊಬರಿಗಿಟುಕು ಎನ್ನುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು
ಪ್ರ : ಹುಡುಗಿ ನೋಡೋಕೆ ಹಂಗೆ ಕಾಣ್ತಾಳೆ ಅಷ್ಟೆ. ಬಲಿತು ಕೊಬರಿ ಗಿಟಕಾಗಿದ್ದಾಳೆ.
೮೧೭. ಕೊಬ್ಬು ಕರಗಿಸು = ಅಹಂಕಾರ ಇಳಿಸು
(ಕೊಬ್ಬು = ನೆಣ, ಚರ್ಬಿ)
ಪ್ರ : ಹೆಂಗೆ ಅವನ ಕೊಬ್ಬು ಕರಗಿಸಬೇಕು ಅನ್ನೋದು ನನಗೆ ಗೊತ್ತಿದೆ, ನೀನು ಸುಮ್ನೀರು.
೮೧೮. ಕೊರಡಿಗೆ ಹಾಕು = ಎದೆ ಮೇಲೆ ಲಿಂಗವಿರುವ ಕರಡಿಗೆ ಕಟ್ಟಿಕೊಳ್ಳು
(ಕರಡಿಗೆ = ಲಿಂಗವಿರುವ ಲೋಹದ ಭರಣಿ ; ಕೊರಡಿಗೆ = ನೊಗದ ಮೇಲಿನ ನೇಗಿಲಿನ ಈಚವನ್ನು ಆ ಕಡೆ ಈ ಕಡೆ ಜರುಗಾಡದಂತೆ ಬಿಗಿಯಾಗಿ ಬಂಧಿಸುವಂಥ ಉಳುವ ಹಗ್ಗಕ್ಕೆ ಪೋಣಿಸಿರುವ ಅಂಗೈ ಅಗಲದ ಅಂಗೈ ಮಂದದ ಗೇಣುದ್ದದ ಬಾಗಿದ ಮರದ ದಿಂಡು) ಬೇಸಾಯದ ವೃತ್ತಿ ಈ ನುಡಿಗಟ್ಟಿಗೆ ಮೂಲ. ಇಲ್ಲಿ ವೀರಶೈವ ಲಾಂಛನವಾದ ಕರಡಿಗೆಗೆ ಬೇಸಾಯದ ಸಾಧನವಾದ ಕೊರಡಿಗೆ ರೂಪಕವಾಗಿ ನಿಂತಿದೆ ಅಷ್ಟೆ.
ಪ್ರ : ಗಾದೆ – ಉಳೋ ಹಗ್ಗಕ್ಕೆ ಕೊರಡಿಗೆ
ಶಿವ ದಾರಕ್ಕೆ ಕರಡಿಗೆ
೮೧೯. ಕೊರಡು ಮೂಡು = ಎರಡು ಕಾಮನಬಿಲ್ಲುಗಳು ಮೂಡು
ಒಂದು ಕಾಮನ ಬಿಲ್ಲು ಕಮಾನಿನಂತೆ ಬಾಗಿದ್ದು, ಇನ್ನೊಂದು ಬಾಗಿರದೆ ನೆಟ್ಟಗಿದ್ದರೆ ಕೊರಡು ಮೂಡಿದೆ ಎನ್ನುತ್ತಾರೆ ಜನಪದರು. ಇದು ಮೂಡಿದರೆ ಮಳೆ ಬರುತ್ತದೆ ಎಂದು ಕೆಲವರೂ, ಮಳೆ ಹೋಗುತ್ತದೆ ಎಂದು ಕೆಲವರೂ ಹೇಳುತ್ತಾರೆ.
ಪ್ರ : ಕೊರಡು ಮೂಡಿದೆ ನೋಡೋ ಕಮಂಗಿ ಅಂದ್ರೆ, ಬಗ್ಗಿ ಕರಡು ನೋಡ್ತಾನೆ.
೮೨೦. ಕೊರಬಲಿತು ಕೂತಿರು = ಹೆಚ್ಚು ವಯಸ್ಸಾಗಿರು
(ಕೊರ.< ಕರ = ಹೆಚ್ಚಾಗಿ, ಅಧಿಕವಾಗಿ)
ಪ್ರ : ಈಗ ತಾನೇ ಮೀಸೆ ಮೊಳೆಯುತ್ತಿರುವ ಹುಡುಗನಿಗೆ, ಕೊರಬಲಿತು ಕೂತಿರೋ ಆ ಹುಡಗೀನ ಕಟ್ಟಲಿಕ್ಕೆ ನೋಡ್ತಾರಲ್ಲ, ಇವರಿಗೇನು ಬುದ್ಧಿಗಿದ್ಧಿ ಇದೆಯೋ ಇಲ್ಲವೋ?
೮೨೧. ಕೊರೆ ಬೀಳು = ಮಂಜು ಬೀಳು, ಇಬ್ಬನಿ ಬೀಳು
(ಕೊರೆ = ಹಿಮ, ಇಬ್ಬನಿ)
ಪ್ರ : ಚಳಿಗಾಲದಲ್ಲಿ ಕೊರೆ ಬೀಳ್ತದೆ, ಕೊರೆಗೆ ಮೈ ಒಡ್ಡಬೇಡ, ಶೀತ ಆಗ್ತದೆ.
೮೨೨. ಕೊರೆ ಬೀಳು = ನಿಗದಿತ ಪ್ರಮಾಣಕ್ಕಿಂತ ಕಡಮೆ ಇರು
(ಕೊರೆ = ಅರ್ಧ ತುಂಬಿದ ಚೀಲ, ಕೊರತೆ ಇರುವಂಥದು)
ಪ್ರ : ತುಂಬಿದ ಪಲ್ಲಾ ಚೀಲ ಎಣಿಸಿಕೊಳ್ಳಿ, ಕೊರೆ ಚೀಲ ಹಂಗಿರಲಿ.
೮೨೩. ಕೊಸರಾಡು = ಹಿಡಿತದಿಂದ ತಪ್ಪಿಸಿಕೊಳ್ಳಲು ಗುಂಜಾಡು, ಎಳೆದಾಡು
(ಕೊಸರು <ಕೊಜರು (ತ) = ಗುಂಜು, ಕೀಳು)
ಪ್ರ : ಮೊದಮೊದಲು ಕೊಂಚ ಕೊಸರಾಡಿದಳು, ಆಮೇಲೆ ಅವಳೇ ಕೊಸೆದಾಡಿದಳು.
೮೨೪. ಕೊಸರು ಕೇಳು = ದುಡ್ಡು ಕೊಟ್ಟು ನಿಗದಿತ ಪ್ರಮಾಣದ ಪದಾರ್ಥವನ್ನು ಕೊಂಡ ಮೇಲೆ ಕೊಂಚ ಬಿಟ್ಟಿ ಹಾಕಬೇಕೆಂದು ಒತ್ತಾಯಿಸುವ ಚೌಕಾಸಿ ಪ್ರಯತ್ನ.
ಪ್ರ : ಕೊಂಡೋರು ಕೊಸರು ಕೇಳೇ ಕೇಳ್ತಾರೆ, ಕೊಡೋದು ಬಿಡೋದು ವ್ಯಾಪಾರಿಗಳ ಮರ್ಜಿ.
೮೨೫. ಕೊಸೆಯೋಕೆ ಬರು = ಸಂಭೋಗಿಸಲು ಬರು
(ಕೊಸೆ = ಸಂಭೋಗಿಸು)
ಪ್ರ : ಗಾದೆ – ಕೋಣನಿಗೆ ಕೊಸೆಯೋ ಸಂಕಟ
ಎಮ್ಮೆಗೆ ಈಯೋ ಸಂಕಟ
೧೨೬. ಕೊಳ್ಳಿ ಇಕ್ಕು = ಬೆಂಕಿ ಇಕ್ಕು, ಸುಡು
(ಕೊಳ್ಳಿ = ಉರಿಯುವ ಸೌದೆ, ಕಟ್ಟಿಗೆ)
ಪ್ರ : ಅಯ್ಯೋ ಅವನ ಹುಟ್ಟಿಗಷ್ಟು ಕೊಳ್ಳಿ ಇಕ್ಕ, ನೋಡೋಕಾಗಲ್ಲ
೮೨೭. ಕೊಳ್ಳಿ ಹೊಕ್ಕ ಮನೆಯಾಗು = ಎಲ್ಲ ನಾಶವಾಗು, ಭಸ್ಮವಾಗು
(ಕೊಳ್ಳಿ = ಬೆಂಕಿ ಉರಿಯುವ ಸೌದೆ ಸೀಳು)
ಪ್ರ : ಗಾದೆ – ಕಳ್ಳ ಹೊಕ್ಕ ಮನೇಲಿ ಏನಾದರೂ ಸಿಕ್ತದೆ
ಕೊಳ್ಳಿ ಹೊಕ್ಕ ಮನೇಲಿ ಏನು ಸಿಕ್ತದೆ?
೮೨೮. ಕೊಳ್ಳಿಗೆ ಉಳ್ಳಾಗು = ಕುತ್ತಿಗೆಗೆ ನೇಣಾಗು, ಪ್ರಾಣಕ್ಕೆ ಕಂಟಕವಾಗು
(ಕೊಳ್ಳು = ಕೊರಳು, ಉಳ್ಳು = ಉರುಳು, ನೇಣು)
ಪ್ರ : ಕೊಳ್ಳಿಗೆ ಕಟ್ಕೊಂಡ ಹೆಣ್ಣೇ ನನ್ನ ಕೊಳ್ಳಿಗೆ ಉಳ್ಳಾಗಬೇಕ?
೮೨೯. ಕೊಳ್ಳಿಗೆ ಗುದ್ದಿಗೆ ಹಾಕು = ಮದುವೆ ಮಾಡು.
(ಗುದ್ದಿಗೆ = ಕಳ್ಳ ದನಗಳ ಕೊರಳಿಗೆ ಕಟ್ಟುವ, ಕಾಲಿಗೆ ಲೊಟಲೊಟನೆ ಬಡಿಯುವ ಕಣಕಾಲು ಗಾತ್ರ ಮತ್ತು ಕಣಕಾಲುದ್ದದ ಮರದ ತುಂಡು, ದಡಿ)
ಗುದ್ದಿಗೆ ಮುಂಗಾಲುಗಳಿಗೆ ಬಡಿಯುವುದರಿಂದ ಕಳ್ಳದನಗಳು ಕಣ್ತಪ್ಪಿಸಿ ಬೇಗ ಹೊಲ ತೋಟಗಳಿಗೆ ನುಗ್ಗಿ ಬೆಳೆ ಮೇಯಲು ಹೇಗೆ ಕಷ್ಟವಾಗುತ್ತದೊ ಹಾಗೆ ಕೊರಳಿಗೆ ಕಟ್ಟಿದ ಹೆಂಡತಿ ಪೋಲಿಗಂಡನ ಸ್ವೇಚ್ಚಾಚಾರಕ್ಕೆ ಮೂಗುದಾರ ಹಾಕಿದಂತಾಗುತ್ತದೆ ಎಂಬ ಧ್ವನಿ ಈ ನುಡಿಗಟ್ಟಿನಲ್ಲಿದೆ.
ಪ್ರ : ಇವನ ಪೋಲಿತನ ನಿಲ್ಲಬೇಕಾದರೆ, ಮೊದಲು ಕೊಳ್ಳಿಗೆ ಗುದ್ದಿಗೆ ಹಾಕಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ