ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಕ೨)
೫೫೦. ಕಣ್ಣು ಮುಚ್ಚಿಕೊಳ್ಳು = ಮರಣ ಹೊಂದುಪ್ರ : ಅವನು ಎಂದೋ ಕಣ್ಮುಚ್ಕೊಂಡ, ಗೊತ್ತಿಲ್ವೇನು?
೫೫೧. ಕಣ್ಣು ಮುಚ್ಚಿಕೊಂಡಿರು = ನಿದ್ದೆ ಮಾಡು, ಮಲಗು
ಪ್ರ : ಒಂದು ಗಳಿಗೆ ಕಣ್ಮುಚ್ಕೊಂಡಿರ್ತೀನಿ, ಯಾರೂ ಗಲಾಟೆ ಮಾಡಬೇಡಿ
೫೫೨. ಕಣ್ಣು ಮುಚ್ಚಿ ಕಣ್ಣು ತೆರೆಯೋದ್ರಲ್ಲಿ ಬರು = ಕ್ಷಣಾರ್ಧದಲ್ಲಿ ಬರು
ಪ್ರ : ಹೇಳಿದ್ದೆ ತಡ, ಕಣ್ಣು ಮುಚ್ಚಿ ಕಣ್ಣು ತೆರೆಯೋದ್ರಲ್ಲಿ ಬಂದು ಬಿಟ್ಟ
೫೫೩. ಕಣೆ ಹಂದಿಯಂತೆ ನುಗ್ಗು = ಸಿಟ್ಟಿನಿಂದ ಹರಿಹಾಯು
(ಕಣೆ ಹಂದಿ = ಮುಳ್ಳು ಹಂದಿ)
ಪ್ರ : ಸಿಟ್ಟಿನಿಂದ ಕಣೆ ಹಂದಿಯಂತೆ ನುಗ್ಗಿ ಕೈಗೆ ಸಿಕ್ಕಿದವರಿಗೆ ಹೊಡೆದು ರಾಣಾರಂಪ ಮಾಡಿಬಿಟ್ಟ.
೫೫೪. ಕಣ್ಣೆಂಜಲಾಗು = ದೃಷ್ಟಿಯಾಗು, ಕೆಟ್ಟಕಣ್ಣಿನ ನೋಟದಿಂದ ನಂಜಾಗು
(ಎಂಜಲು = ಮೈಲಿಗೆ)
ಪ್ರ : ಕಣ್ಣೆಂಜಲು ಆಗಿರೋದ್ಕೆ ಮಗು ಹಿಂಗಾಡ್ತಿರೋದು. ಮೊದಲು ದೃಷ್ಟಿ ತೆಗೀರಿ.
೫೫೫. ಕಣ್ಣೊರೆಸು = ನಾಟಕವಾಡು, ಕೃತಕ ಸಹಾನುಭೂತಿ ತೋರು
ಪ್ರ : ಮಣ್ಣು ತಿನ್ನೋ ಕೆಲಸ ಮಾಡಿ, ಮೇಲೆ ಕಣ್ಣೊರೆಸೋ ಮಾತಾಡ್ತಾನೆ.
೫೫೬. ಕತ್ತಿ ಪಾರದಲ್ಲಿ ಬರು = ಕತ್ತಿ ಹಿಡಿದ ಅಂಗರಕ್ಷಕ ಕಾವಲಿನಲ್ಲಿ ಬರು
(ಪಾರ < ಪಹರೆ = ಕಾವಲು) ಈ ನುಡಿಗಟ್ಟು ಪಾಳೆಗಾರಿಕೆಯ ಪಳೆಯುಳಿಕೆ ಎನ್ನಬಹುದು. ಆದರೆ ಅದು ಇನ್ನೊಂದು ವೇಷದಲ್ಲಿ ಚಾಲ್ತಿಯಲ್ಲಿದೆ.
ಪ್ರ : ದಣಿಗಳು ಕತ್ತಿಪಾರದಲ್ಲಿ ದಯ ಮಾಡಿಸ್ತಾ ಇದ್ದಾರೆ.
೫೫೭. ಕತ್ತಿ ಮಸೆ = ದ್ವೇಷ ಸಾಧಿಸು
(ಮಸೆ = ಉಜ್ಜು, ಆಯುಧಗಳನ್ನು ಹರಿತಗೊಳಿಸು.)
ಪ್ರ : ನನ್ನ ದಾಯಾದಿ ನನ್ನ ಮೇಲೆ ಕತ್ತಿ ಮಸೀತಾ ಇದ್ದಾನೆ.
೫೫೮. ಕತೆ ಮುಗಿ = ಸಾವು ಸಮೀಪಿಸು, ಉಸಿರು ಹೋಗು
ಪ್ರ : ಇನ್ನು ಅವನ ಕತೆ ಮುಗೀತು, ನೀವು ಮುಂದಿನ ಕೆಲಸ ಮಾಡಿ
೫೫೯. ಕತೆ ಹಾಕು = ಜೀವನ ಸಾಗಿಸು, ಕಾಲ ಕಳೆ.
ಪ್ರ : ಗಾದೆ-ಕೋಗಿಲೆಯಂಥದೂ ಕಾಲ ಬಂದ್ಹಂಗೆ ಕಾಗೆ ಗೂಡಿನಲ್ಲಿ ಕತೆ ಹಾಕ್ತದೆ.
೫೬೦. ಕತ್ತೆ ಮೇದಂತಾಗು = ನುಣ್ಣಗೆ ಮಾಡು, ಗೆಡ್ಡೆಗತ್ತ ತಿನ್ನು
ಪ್ರ : ಗಾದೆ – ಕತ್ತೆ ಮೇದ ಕಡೆ ಮತ್ತೆ ಮೇವಿಲ್ಲ.
೫೬೧. ಕತ್ತೆ ಬಡವ ಎನ್ನು = ಕತ್ತೆ ಹಾರುವ ಎಂದು ಬಯ್ಯು
(ಬಡವ < ಬಾಡವ = ಹಾರುವ, ತಿಂಡಿಪೋತ) ಹಾರುವರು ‘ಶೂದ್ರ ಮುಂಡೇದೆ’ ‘ಹೊಲೆಮಾದಿಗ ಮುಂಡೇದೆ’ ಎಂದು ಬೈದಹಂಗೆ ಇವರೂ ಸಹ ಅವರಿಗೆ ‘ಕತ್ತೆಬಾಡವ’ (ಕತ್ತೆ ಹಾರುವ) ಎಂದು ಬೈದಿರುವುದು ಕಂಡು ಬರುತ್ತದೆ. ಕತ್ತೆ ಬಾಡವ ಎಂಬುದು ಕಾಲಕ್ರಮೇಣ ಜನರ ಬಾಯಲ್ಲಿ ಕತ್ತೆ ಬಡವ ಆಗಿದೆ.
ಪ್ರ : ಊಟ ಸಿಕ್ಕಿದ ಕಡೆ ಸುಳ್ಳು ಕಡೆ ಕಳ್ಳು ಬಿರಿಯ ಕತ್ತರಿಸೋಕೇ ಸರಿ ನೀನು, ಕತ್ತೆ ಬಡವ
೫೬೨. ಕದಕ್ಕನ್ನಿಸು = ಜೀವ ಹಿಡಿಯಾಗು, ನಾಚಿಕೆಯಿಂದ ಕುಗ್ಗಿಹೋಗು
ಪ್ರ : ಇಳೇ ಹಾಕ್ಕೊಂಡಿರೋರ ಮುಂದೆ, ಮೈಮೇಲೊಂದು ಎಳೆಯೂ ಇಲ್ಲದ ನಾನು ಹೋಗೋಕೆ ಜೀವ ಕದಕ್ಕನ್ನಿಸಿತು
೫೬೩. ಕದ ಹಾರ್ದೆಗೆ = ಸದಾ ತೆಗಿದಿರು, ಪ್ರವೇಶಕ್ಕೆ ಅಡ್ಡಿ ಇಲ್ಲದಿರು
ಪ್ರ : ಗಾದೆ – ಕದ ಹಾರ್ದೆಗೆದಿದ್ದರೆ ಎದೆ ಹಾರ್ದೆಗೆದಿರ್ತಾರ ?
೫೬೪. ಕದಿಯದಿರು = ಗೈರು ಹಾಜರಾಗದಿರು
ಪ್ರ : ಇವತ್ತು ಅವನ ಕೆಲಸಕ್ಕೆ ಕದಿಯದೆ ಇದ್ರೆ, ಕಷ್ಟ ಸಾಕಾಗಿದೆ
೫೬೫. ಕನಲಿ ಕೆಂಡವಾಗು = ಹೆಚ್ಚು ಸಿಟ್ಟುಕೊಳ್ಳು
(ಕನಲು = ರೇಗು, ಕೋಪಗೊಳ್ಳು)
ಪ್ರ : ಕನ್ನೆ ಹುಡುಗಿಗೆ ಕನ್ನ ಹುಡುಗನೇ ಆಗಬೇಕು, ಸಿರಿವಂತ ಅಂತ ಹೆಂಡ್ರು ಸತ್ತೋನಿಗೆ ಮಗಳ್ನ ಕೊಡೋಕೆ ನಾನು ಒಪ್ಪಲ್ಲ ಅಂತ ಹೆಂಡ್ರು ಅಂದಾಗ ಗಂಡ ಕನಲಿ ಕೆಂಡವಾದ
೫೬೬. ಕನುಗಿ ಹೋಗು = ಕರಗಿ ಹೋಗು
(ಕನುಗು = ಕರಗು, ದ್ರವವಾಗು)
ಪ್ರ : ಹೆತ್ತುಕೊಂಡ ತುಪ್ಪಾನ ಒಲೆ ಮೇಲಿಟ್ರೆ, ಅರಗಳಿಗೆಯಲ್ಲಿ ಕನುಗಿ ಹೋಗ್ತದೆ
೫೬೭. ಕಪ್ಪಾಳಕ್ಕೆ ಅಪ್ಪಳಿಸು = ಕೆನ್ನೆಗೆ ಹೊಡಿ
(ಕಪ್ಪಾಳ < ಕಪೋಲ = ಕೆನ್ನೆ)
ಪ್ರ : ಕಪ್ಪಾಳಕ್ಕೆ ಅಪ್ಪಳಿಸಿದ್ರೆ ತಿಪ್ಪೆ ಹಳ್ಳಕ್ಕೆ ಬೀಳಬೇಕು, ಹುಷಾರ್
೫೬೮. ಕಪ್ಪು ಹಾಕಿಸಿ ನೋಡು = ಅಂಜನ ಹಾಕಿಸಿ ನೋಡು
(ಕಪ್ಪು = ಅಂಜನ) ಒಂದು ವೀಳ್ಯದೆಲೆಯ ಮೇಲೆ ಕಪ್ಪು (ಅಂಜನ) ಸವರಿ, ಅದನ್ನು ದೀಪದ ಕುಡಿಯ ಹತ್ತಿರ ಹಿಡಿದು ನೆಟ್ಟ ಕಣ್ಣಿನಿಂದ ನೋಡುತ್ತಿದ್ದರೆ ಆಂಜನೇಯ ಕಾಣಿಸಿಕೊಳ್ಳುವನೆಂದೂ, ದೂರಗಾಮಿ ಸ್ಥಳಗಳನ್ನು ಕಣ್ಮುಂದೆ ಬರಿಸಿ, ಆಗಾಮಿ ವಿಷಯಗಳನ್ನು ಸೂಚಿಸುವುದೆಂದು ಪ್ರತೀತಿ. ನಂಬುವುದೂ ಬಿಡುವುದೂ ವ್ಯಕ್ತಿಗತ.
ಪ್ರ : ಎಮ್ಮೆ ಯಾವ ದಿಕ್ಕಿಗೆ ಹೋಗಿದೆ ಅಂತ ಕಪ್ಪು ಹಾಕಿಸಿ ನೋಡಿ, ಆ ದಿಕ್ಕಿನಲ್ಲಿ ಹುಡುಕಿ
೫೬೯. ಕಪ್ಪೆಗೂಡು ಕಟ್ಟು = ಮಕ್ಕಳಾಟವಾಡು, ವ್ಯರ್ಥ ಕಾರ್ಯದಲ್ಲಿ ತೊಡಗು.
ಮಕ್ಕಳು ತಮ್ಮ ಕಾಲ ಹೆಜ್ಜೆಯ ಮೇಲೆ ಮರಳನ್ನು ಪೇರಿಸಿ, ಕೈಯಿಂದ ಅದನ್ನು ತಟ್ಟಿ, ತದನಂತರ ಅಲುಗಾಡದ ಹಾಗೆ ಮೆಲ್ಲಗೆ ಹೆಜ್ಜೆಯನ್ನು ಹೊರಗೆಳೆದಾಗ ಗೂಡು ಸಿದ್ಧವಾಗುತ್ತದೆ. ಗೂಡು ಎಂದರೆ ಮನೆ. (ಉದಾಹರಣೆಗೆ ಅರಕಲಗೂಡು ಎಂಬ ಊರ ಹೆಸರು ಅರೆಕಲ್ಲುಗೂಡು ; ಅಂದರೆ ಬಂಡೆಗಲ್ಲ ಗೂಡು ಎಂದು.) ಆದರೆ ಅದು ಅಸ್ಥಿರ. ಕೈ ತಾಕಿದರೆ ಅಥವಾ ಬಿರುಗಾಳಿ ಬೀಸಿದರೆ, ಅಥವಾ ನೀರಿನ ಅಲೆ ಬಡಿದರೆ ಅದು ನೆಲಸಮವಾಗುತ್ತದೆ. ಅಂಥ ಕೆಲಸದಲ್ಲಿ ಕಾಲವನ್ನು ವ್ಯರ್ಥಗೊಳಿಸುವ ಬಾಲಿಶತವನ್ನು ಸೂಚಿಸುತ್ತದೆ.
ಪ್ರ : ಕಪ್ಪೆಗೂಡು ಕಟ್ಕೊಂಡು ಕಾಲ ಕಳೀತಿದ್ರೆ ನೀವು ಬಾಳಿ ಬದುಕಿ, ಬಂದೋರಿಗೆ ಅನ್ನ ಹಾಕ್ತೀರಾ?
೫೭೦. ಕಪ್ಪೆ ಎತ್ತು = ಅಂಡೆತ್ತು, ಜಾಗ ಬಿಡು
(ಕಪ್ಪೆ = ಯೋನಿ)
ಪ್ರ : ಮೊದಲ ನೀನಿಲ್ಲಿಂದ ನಿನ್ನ ಕಪ್ಪೆ ಎತ್ತು, ಕೆಪ್ಪರೆಗೆ ತಾಡಿಸಿಬಿಟ್ಟೇನು
೫೭೧. ಕಪೋದ್ರಿ ಕೈಗೆ ಕನ್ನಡಿ ಕೊಟ್ಟಂತಾಗು = ಫಲವಿಲ್ಲದಿರು, ವ್ಯರ್ಥವಾಗು
(ಕಪೋದ್ರಿ < ಕಪೋತಿ = ಕುರುಡ ; ದೇಹ ಜನರ ಬಾಯಲ್ಲಿ ದ್ರೇಹವಾದ ಹಾಗೆ, ಅನಾಥ ಎಂಬುದು ಅನಾದ್ರಿ ಆದ ಹಾಗೆ ಕಪೋತಿ ಎಂಬುದು ಕಪೋದ್ರಿ ಆಗಿದೆ)
ಪ್ರ : ಗಾದೆ – ರಣಹೇಡಿ ಕೈಗೆ ಚಂದ್ರಾಯುಧ ಕೊಡೋದೂ ಒಂದೆ
ಕಪೋದ್ರಿ ಕೈಗೆ ಕನ್ನಡಿ ಕೊಡೋದೂ ಒಂದೆ
೫೭೨. ಕಬ್ಬು ಮುರಿದಂತೆ ಮಾತಾಡು = ಖಂಡತುಂಡವಾಗಿ ಮಾತಾಡು
(ಕಬ್ಬು < ಕಬ್ಬು < ಕರುಂಬು)
ಪ್ರ : ಯಾರಿಗೂ ಹೆದರಲ್ಲ, ಕಬ್ಬು ಮುರಿದಂತೆ ಲಟಕ್ಕನೆ ಮಾತಾಡಿಬಿಡ್ತಾನೆ, ಗಬ್ಬೂರ (< ಕಬ್ಬೂರ) ಗುಬ್ಬಯ್ಯ.
೫೭೩. ಕಬೂಲಾಗು = ರಾಜಿಯಾಗು, ಒಪ್ಪಂದಕ್ಕೆ ಬರು
(ಕಬೂಲು = ಸಮ್ಮತಿ, ಒಪ್ಪಂದ)
ಪ್ರ : ಹಗೆ ಸಾಧಿಸೋದು ಬೇಡ ಅಂತ ರಾಜಿಕಬೂಲಾದರು.
೫೭೪. ಕಮಕ್ ಕಿಮಕ್ ಅನ್ನದಿರು = ಮಾತಾಡದಿರು, ಉಸಿರು ಬಿಡದಿರು
ಪ್ರ : ಪಾಲು ಮಾಡುವಾಗ ಅವನು ಕಮಕ್ ಕಿಮಕ್ ಅನ್ನದಂಗೆ ಕೂತಿದ್ದ
೫೭೫. ಕಮ ಕಾಣದಿರು = ರೀತಿ ಮಾರ್ಗ ಗೊತ್ತಿಲ್ಲದಿರು, ರುಚಿ ಅರುಚಿಯ ಗಂಧ ಗೊತ್ತಿಲ್ಲದಿರು.
(ಕಮ < ಕ್ರಮ = ರೀತಿ)
ಪ್ರ : ಗಾದೆ – ಕಮ ಕಾಣದ ನಾಯಿ ಕಪ್ಪಾಳ ನೆಕ್ಕಿತು
೫೭೬. ಕಮ್ಮಗೆ ತಿನ್ನಿಸಿದರೂ ಬಿಮ್ಮಗಿರಿಸಿಕೊಂಡಿರು = ಅಕ್ಕರೆಯಿಂದ ಸಾಕಿದರೂ ಅಂಕೆಯಲ್ಲಿಟ್ಟಿರು.
(ಕೆಮ್ಮಗೆ = ರುಚಿ,ಲ ಸುವಾಸನೆ ; ಬಿಮ್ಮಗೆ = ಬಿಗಿಯಾಗಿ, ಭದ್ರವಾಗಿ)
ಪ್ರ: ಮಕ್ಕಳಿಕಗೆ ಕಮ್ಮಗಿರೋದನ್ನ ತಿನ್ನಿಸಿದರೂ ಬಿಮ್ಮಗಿರಿಸಿಕೊಂಡಿರಬೇಕು
೫೭೭. ಕಮಾಲು ಮಾಡು = ಕರಾಮತ್ತು ತೋರಿಸು, ಕೈಚಳಕ ತೋರಿಸು
(ಕಮಾಲು < ಕಮಾಲ್ (ಉ) = ಪರಿಪೂರ್ಣತೆ, ನೈಪುಣ್ಯತೆ)
ಪ್ರ : ಈಗೊಂದು ಕಮಾಲ್ ಮಾಡ್ತೀನಿ, ಎಲ್ಲರೂ ಈ ಕಡೇನೇ ನೋಡಿ.
೫೭೮. ಕುಮುರದೇಗು ಬರು = ಅಜೀರ್ಣದ ತೇಗು ಬರು, ಹುಳಿದೇಗು ಬರು
(ಕಮುರು = ಕಮಟು, ಹುಳಿಹುಳಿ ವಾಸನೆಯ)
ಪ್ರ :ತಿಂದದ್ದು ಅರಗಲಿಲ್ಲವೇನೋ, ಕಮುರುತೇಗು ಬರ್ತಾ ಅದೆ.
೫೭೯. ಕಯಕ್ ಕುಯಕ್ ಅನ್ನದಿರು = ಸದ್ದು ಮಾಡದಿರು
ನಾಯಿಗೆ ಏಟು ಬಿದ್ದಾಗ ಕಯಕ್ ಕುಯಕ್ ಎಂದು ಸದ್ದು ಮಾಡುತ್ತದೆ. ಆ ಪ್ರಾಣಿ ವರ್ತನೆ ಈ ನುಡಿಗಟ್ಟಿಗೆ ಮೂಲ
ಪ್ರ : ರಾತ್ರಿ ಮಲಗಿದ ಮಗ ಬೆಳಗಾಗೋ ತನಕ ಒಂದೇ ಒಂದು ಸಾರಿ ಕಯಕ ಕುಯಕ್ ಅಂದಿದ್ರೆ ಕೇಳು
೫೮೦. ಕಯ್ಯ ಕಯ್ಯ ಅನ್ನು = ಸದಾ ಚೀರಾಡು, ಮೈಪರಚಿಕೊಳ್ಳು
ವಯಸ್ಸಾದ ಮುದುಕ ಮುದುಕಿಯರು ಸದಾ ಲೊಟ್ಟೆಲೊಸಗು ಅಂತ ಲೊಟಗುಟ್ಟುತ್ತಲೇ ಇರುತ್ತಾರೆ. ಬಾಯಿಗೆ ಬಿಡುವೇ ಇರುವುದಿಲ್ಲ. ಏಟು ಬಿದ್ದ ನಾಯಿಗಳು ಒಂದೇ ಸಮನೆ ಕಿರುಚುವ ಹಿನ್ನೆಲೆ ಈ ನುಡಿಗಟ್ಟಿಗಿದೆ.
ಪ್ರ : ಮುದುಕ ಮುದುಕಿಯರು ಸದಾ ಕಯ್ಯ ಕಯ್ಯ ಅಂತಿದ್ರೆ ಮನೇಲಿ ಯಾರು ತಾನೇ ನಿದ್ದೆ ಮಾಡೀಕಾಗ್ತದೇ ? ನಿಸೂರಾಗಿರೋಕಾಗ್ತದೆ?
೫೮೧. ಕರಡಿಗೆ ಕಿತ್ತು ಕೈಗೆ ಕೊಡು = ತರಡು ಕಿತ್ತು ಕೈಗೆ ಕೊಡು, ತಕ್ಕ ಮೋಕ್ಷ ಮಾಡು.
(ಕರಡಿಗೆ < ಕರಂಡಿಕೆ = ಲಿಂಗಾಯಿತರ ಎದೆಯ ಮೇಲೆ ನೇತಾಡುವ ಲಿಂಗದ ಭರಣಿ)
ಪ್ರ : ಸಿಕ್ಕಿದೋರಿಗೆ ಸೆರಗು ಹಾಸೋ ಸೂಳೆ ಅಂತ ತಿಳಕೊಂಡಿದ್ದಿಯೇನೋ ಬೇವಾರ್ಸಿ, ನನ್ನ ತಂಟೆಗೆ ಬಂದ್ರೆ ನೇತಾಡೋವೆರಡು ಕರಡಿಗೆ ಕಿತ್ತು ಕೈಗೆ ಕೊಡ್ತೀನಿ!
೫೮೨. ಕರಡಿಗೆ ಕೂದಲಿದ್ದಂತಿರು = ಮಾನ ಅವಮಾನ ಒಂದೇ ಆಗಿರು, ಅವಮಾನಕ್ಕೆ ಹೇಸದಿರು
ಪ್ರ : ಗಾದೆ – ಕರಡಿಗೆ ಕೂದಲು ಯಾವುದು? ಶ್ಯಾಟ ಯಾವುದು?
೫೮೩. ಕರಿಬಿಟ್ಟುಕೊಳ್ಳು = ಹಾಲು ಕರೆದುಕೊಳ್ಳು.
(ಕರಬಿಟ್ಟುಕೊಳ್ಳು = ಕರುವನ್ನು ಮೊದಲು ಹಾಲು ಕುಡಿಯಲು ಬಿಟ್ಟು, ಆಮೇಲೆ ಹಾಲು ಕರೆದುಕೊಳ್ಳು) ಜನಪದರ ಅಭಿವ್ಯಕ್ತಿಗೆ ಚಿತ್ರಕ ಶಕ್ತಿ ಇರುತ್ತದೆ. ಹಾಲು ಕರೆದುಕೊಳ್ಳಬೇಕಾದರೆ ಮೊದಲು ಕರುವನ್ನು ಬಿಡಬೇಕು. ಅದು ತಾಯಿಯ ಕೆಚ್ಚಲಿಗೆ ಬಾಯಿ ಹಾಕಿ, ಮುಸುಡಿಯಿಂದ ಕೆಚ್ಚಲನ್ನು ಗುದ್ದು ಹಾಲು ಕುಡಿಯಲು ತೊಡಗಿದಾಗ, ತಾಯಿ ಹಸು ‘ಸೊರ’ ಬಿಡುತ್ತದೆ. ಕೆಚ್ಚಲ ತುಂಬ ಹಾಲು ಇಳಿದುಕೊಳ್ಳುತ್ತದೆ, ಮೊಲೆಗಳಿಂದ ಜಿನುಗ ತೊಡಗುತ್ತದೆ. ಕರುವಿನ ಪಾಲು ಸಂದ ಮೇಲೆ ನಾವು ಕರೆದುಕೊಳ್ಳಬೇಕಾಗುತ್ತದೆ. ಈ ಎಲ್ಲ ಕ್ರಿಯಾನುಕ್ರಮಣಿಕೆ ನುಡಿಗಟ್ಟಿನಲ್ಲಿ ಒಡಮೂಡಿದೆ. ಬೆಳಿಗ್ಗೆ ನಾಷ್ಟಾಕ್ಕೆ ಮುನ್ನ, ರಾತ್ರಿ ಊಟಕ್ಕೆ ಮುನ್ನ ಕರಬಿಟ್ಟುಕೊಳ್ಳುವ ಗ್ರಾಮೀಣ ಸಂಸ್ಕೃತಿ, ಮೂಕಪ್ರಾಣಿಗಳ ಬಗೆಗಿನ ಅವರ ಪ್ರೀತಿಯ ನಿಲುವನ್ನು ಸಾದರಪಡಿಸುತ್ತದೆ.
ಪ್ರ : ಕರಬಿಟ್ಕೊಂಡಾದ ಮೇಲೆ ಉಣ್ಣೋದು ತಿನ್ನೋದು; ನಾವು ತಿಂದು ಉಂಡ ಮೇಲೆ ಕರಬಿಟ್ಕೊಂಡ್ರೆ ದೇವರು ಮೆಚ್ತಾನ?
೫೮೪. ಕರಾಬು ಜಮೀನಾಗಿರು = ಮೈನೆರೆಯದ ಹೆಣ್ಣಾಗಿರು
(ಕರಾಬು ಜಮೀನು = ಸಾಗುವಳೀಗೆ ಯೋಗ್ಯವಲ್ಲದ ಜಮೀನು, ನೇಗಿಲು ಕಟ್ಟಿ ಉಳಲಾಗದ ಕಲ್ಲು ಗಿಡಗೆಂಟೆಗಳಿಂದ ತುಂಬಿ ತುಳುಕುವ ಜಮೀನು)
ಪ್ರ : ಸಾಗುವಳಿ ಜಮೀನಿಗೆ ನೇಗಿಲು ಹೂಡಬಹುದು. ಕರಾಬು ಜಮೀನಿಗೆ ನೇಗಿಲು ಕಟ್ಟಿ ಉಳೋಕಾಗ್ತದ?
೫೮೫. ಕರಿ ಎಳೆ ಬಿಳಿ ಎಳೆ ಹಾಕು = ಸದೃಶ ಜೋಡಿಯಾಗಿರು, ಕೊಂಚವೂ ವ್ಯತ್ಯಾಸ ಕಾಣದಿರು
ಮನೆಯಲ್ಲಿ ಹುಟ್ಟಿದ ಹೋರಿಗೆ ತಕ್ಕ ಜೋಡಿಯನ್ನು ಹುಡುಕಿ ಕೊಂಡುಕೊಂಡು ಬಂದ ಜೊತೆ ಹಾಕುತ್ತಾರೆ. ಅವು ಎಷ್ಟು ಸದೃಶವಾಗಿರುತ್ತವೆ ಎಂದರೆ ಮನೆಯಲ್ಲಿ ಹುಟ್ಟಿದ್ದು ಯಾವುದು, ಕೊಂಡು ತಂದದ್ದು ಯಾವುದು ಎಂದು ಪತ್ತೆ ಹಚ್ಚಲು ತಬ್ಬಿಬ್ಬು ಆಗುವಷ್ಟು. ಅದಕ್ಕೋಸ್ಕರವಾಗಿ ಒಂದರ ಕೊರಳಿಗೆ ಕರಿ ದಂಡೆಯನ್ನೂ, ಇನ್ನೊಂದರ ಕೊರಳಿಗೆ ಬಿಳಿ ದಂಡೆಯನ್ನು ಹಾಕುತ್ತಾರೆ. ಆ ಹಿನ್ನೆಲೆ ಈ ನುಡಿಗಟ್ಟಿಗಿದೆ. ವಾಲಿಸುಗ್ರೀವರು ಹಾಗೆ ಸದೃಶರಾಗಿದ್ದರೆಂದೂ, ಅದಕ್ಕೋಸ್ಕರವಾಗಿಯೇ ರಾಮನಿಗೆ ತಬ್ಬಿಬ್ಬಾಗಿ ಸುಗ್ರೀವನ ಕೊರಳಿಗೆ ಹೂಮಾಲೆ ಹಾಕಿಸಿ, ಆ ಮೂಲಕ ವಾಲಿಯನ್ನು ಪತ್ತೆ ಹಚ್ಚಿ ಬಾಣಪ್ರಯೋಗಿಸಿದನೆಂಬುದಕ್ಕೆ ಜನಪದ ಕಲ್ಪನೆಯೇ ಮೂಲವಾಗಿರಬಹುದೆ?
ಪ್ರ : ನಿಮ್ಮಬ್ಬರಿಗೂ ಕರಿ ಎಳೆ ಬಿಳಿ ಎಳೆ ಹಾಕಬೇಕು, ಹಂಗಿದ್ದೀರಿ.
೫೮೬. ಕರಿತಲೆಯವರು ತುಂಬಿರು = ಹೆಂಗಸರು ತುಂಬಿತುಳುಕು
(ಕರಿತಲೆಯವರು = ಹೆಂಗಸರು ) ಹಿಂದೆ ಗಂಡಸರು ತಲೆಯ ಮುಂಭಾಗದ ಕೂದಲನ್ನು ಅರ್ಧ ಚಂದ್ರಕಾರವಾಗಿ ಬೋಳಿಸಿಕೊಂಡು, ಉಳಿದ ಜುಟ್ಟನ್ನು ಹಿಂದಕ್ಕೆ ಗಂಟು ಹಾಕಿಕೊಳ್ಳುತ್ತಿದ್ದರು. ಅಥವಾ ನೆತ್ತಿಯ ಮೇಲೆ ಜುಟ್ಟನ್ನು ಬಿಟ್ಟುಕೊಂಡು ಸುತ್ತಲೂ ಬೋಳಿಸಿಕೊಳ್ಳುತ್ತಿದ್ದರು. ಆದರೆ ತಲೆ ಬೋಳಿಸುವುದು ಹೆಂಗಸರಿಗೆ ಅನ್ವಯಿಸುತ್ತಿರಲಿಲ್ಲ. ಅದನ್ನು ಅಶುಭವೆಂದು ಭಾವಿಸಿದ್ದರು. ಆದ್ದರಿಂದ ಗಂಡಸರ ಹಾಗೆ ಬಿಳಿ ತಲೆ ಕಾಣದೆ, ಬರೀ ಕರಿತಲೆಯೇ ಕಾಣುತ್ತಿತ್ತು. ಆ ಕಾರಣದಿಂದ ಕರೆತಲೆಯವರು ಎಂಬ ಹೆಸರು ಬಂದಿರಬಹುದು. ಹನ್ನೆರಡನೆಯ ಶತಮಾನದ ವಚನಕಾರರು ಅಜ್ಞಾನದ ಮಾನವರನ್ನು ‘ಕರಿತಲೆಯ ಮಾನವ’ ಎಂದು ತಮ್ಮ ವಚನಗಳಲ್ಲಿ ಹೆಸರಿಸಿದ್ದಾರೆ. ವೇದಾಧ್ಯಯನ ಹಾಗೂ ವಿದ್ಯೆಯಿಂದ ವಂಚಿತರಾದ ಹೆಂಗಸರೂ ಅಜ್ಞಾನಿಗಳೆ ಎಂಬ ಅರ್ಥದಲ್ಲಿ ಅವರಿಗೂ ಅನ್ವಯವಾಗಿರಬಹುದು. ಕ್ರಮೇಣ ಹೆಂಗಸರು ಎಂಬ ಅರ್ಥವೇ ಚಾಲ್ತಿಗೆ ಬಂದಿರಬಹುದು.
ಪ್ರ : ಕರಿತಲೆಯೋರೇ ತುಂಬಿರುವಾಗ ಕುರಿತಲೆಯೋರಿಗೇನು ಕೆಲಸ?
೫೮೭. ಕರುಗಲ್ಲಿನಂತೆ ನಿಲ್ಲು = ಮೂಕವಾಗಿ ನಿಲ್ಲು.
(ಕರುಗಲ್ಲು = ಊರಮುಂದೆ, ಊರಬಾಗಿಲಲ್ಲಿ ಇರುವ ಕಲ್ಲು ಕಂಬ, ಕಾರಹುಣ್ಣಿಮೆಯ ದಿನ ಪೂಜಿಸುವ ಕಲ್ಲು. ಸಾಮಾನ್ಯವಾಗಿ ದನಕರುಗಳು ಮೈಯುಜ್ಜಿಕೊಳ್ಳಲು ಹಾಕಿರುವ ಕಲ್ಲಾಗಿರಬಹುದೆ ಎಂಬುದು ವಿಚಾರಾರ್ಹ. ಅಥವಾ ಊರಿನ ಸಕಲ ವಿದ್ಯಾಮಾನಗಳ ಸಾಕ್ಷಿಪ್ರಜ್ಞೆಯ ಸಂಕೇತವಾಗಿ ನಿಲ್ಲಿಸಿದ ಮೌನಿಗಂಬವಾಗಿರಬಹುದೆ?)
ಪ್ರ : ಕರುಗಲ್ಲಿನಂತೆ ನಿಂತು ಬಿಟ್ರೆ, ನಾವು ಏನಂತ ತಿಳ್ಕೋಬೇಕು.
೫೮೮. ಕರುಳು ಕಿವುಚಿದಂತಾಗು = ಸಂಕಟವಾಗು
(ಕಿವುಚು < ಕಿಮುಳ್ಚು = ಹಿಸುಕು, ಮಿದಿ)
ಪ್ರ : ಮಗಳ ಗತಿ ನೋಡಿ ಕರುಳು ಕಿವುಚಿದಂತಾಯ್ತು
೫೮೯. ಕರುಳು ಕಿತ್ತು ಬರು = ಅತೀವ ನೋವಾಗು
ಪ್ರ : ನಿರ್ಗತಿಕರ ಸ್ಥಿತಿ ನೋಡಿ ಕರುಳು ಕಿತ್ತುಬರುವಂತಾಯ್ತು
೫೯೦. ಕರೆ ಕಟ್ಟು = ಅಂಚು ಗಟ್ಟು
(ಕರೆ = ಬಟ್ಟೆ ಅಥವಾ ಕಂಬಳಿಯ ಅಂಚಿನ ಹಾಸು ಎಳೆಗಳು)
ಪ್ರ : ಗಾದೆ – ಕಂಬಳಿಗೆ ಕರೆ ಕಟ್ಟಬೇಕು
ಬಾಣಂತಿಗೆ ನಡಕಟ್ಟಬೇಕು.
೫೯೧. ಕರೆಯಾಗು = ಮಷ್ಟವಾಗು, ಮಚ್ಚೆಯಾಗು
(ಕರೆ = ಮಷ್ಟ, ಮಸಿ)
ಪ್ರ : ಬಟ್ಟೆಗೆ ಅಡಿಕೆ ಕರೆಯಾದರೆ ಒಗೆದರೂ ಹೋಗಲ್ಲ ಗಿಗಿದ್ರೂ ಹೋಗಲ್ಲ
೫೯೨. ಕರೆಕತ್ತೆ ಕೂಗಿದರೂ ಬಿಡದಿರು = ಮುಗಿಸದಿರು, ವಿಲಂಬಿಸು
ಪ್ರ : ಇವನು ರಾಜ್ಯಕ್ಕೆ ಬಿದ್ದ ಅಂದ್ರೆ, ಕರೆಕತ್ತೆ ಕೂಗಿದ್ರೂ ಬಿಡೋಲ್ಲ.
೫೯೩. ಕರೆಕಪ್ಪಟ ಇದ್ದಂತಿರು = ಇಜ್ಜಲಮಸಿಯಂತಿರು, ಅಸಹ್ಯವಾಗಿರು
(ಕಪ್ಪಟ > ಕಪ್ಪಡ (ಹಿಂ) = ಕಪ್ಪಾದ ಬಟ್ಟೆ [<ಕರ್ + ಪಟ.] ಕರೆಕಪ್ಪಟ ಎಂದರೆ ಮುಟ್ಟಲೂ ಅಸಹ್ಯವೆನ್ನಿಸುವ ಮೂಳೆಚಕ್ಕಳದಂತಿರುವ ಒಂದು ಬಗೆಯ ಹಕ್ಕಿ. ಸಾಮಾನ್ಯವಾಗಿ ಹಾಳು ಬಿದ್ದ ಗುಡಿಗಳಲ್ಲಿ, ಕತ್ತಲು ತುಂಬಿದ ಮೂಲೆಮುಡುಕುಗಳಲ್ಲಿ ಅವುಗಳ ವಾಸ. ಎಳೆಯ ಮಕ್ಕಳಿಗೆ ಬರುವ ‘ಹಕ್ಕಿ ಅಳಕ’ ಎಂಬ ರೋಗಕ್ಕೆ ಈ ಹಕ್ಕಿಯನ್ನು ತಂದು ಬೇಯಿಸಿ ತಿನ್ನಿಸುವ ಪದ್ಧತಿ ಹಳ್ಳಿಗಳಲ್ಲುಂಟು.
ಪ್ರ : ಕರೆಕಪ್ಪಟ ಇದ್ದಂತಿರೋಳ್ನ ಸೊಸೆಯಾಗಿ ತರೋಕೆ ನಿನ್ನ ಮನಸ್ಸು ಒಪ್ತದ?
೫೯೪. ಕರೆ ನೀರು ಹೋಗುವಂತೆ ಕಕ್ಕು = ಅತಿಯಾಗಿ ವಾಂತಿ ಮಾಡು
(ಕರೆ = ಕರಿಯ, ಕಕ್ಕು = ವಮನ ಮಾಡು)
ಪ್ರ : ಕರೆ ನೀರು ಹೋಗುವಂತೆ ಕಕ್ಕಿ ಕಕ್ಕಿ ಸುಸ್ತಾಗಿ ಬಿದ್ದಿದ್ದಾನೆ.
೫೯೫. ಕರೆನೆರೆ ನೀಚು = ಹೆಣ್ಣುಮಕ್ಕಳನ್ನು ತೌರಿಗೆ ಕರೆತಂದು ಕಳಿಸುವ ಹೊಣೆ ನಿಭಾಯಿಸು
(ನೀಚು = ನಿಭಾಯಿಸು, ನೀಗು, ಕಳೆ)
ಪ್ರ : ನಾನು ಸತ್ತ ಮೇಲೆ ಹೆಣ್ಣುಮಕ್ಕಳ ಕರೆನೆರೆ ನೀಚೋರು ಯಾರಪ್ಪ?
೫೯೬. ಕಲಾಯಿ ಮಾಡಿಸು = ತಲೆ ಬೋಳಿಸು, ಕೂದಲನ್ನು ತೆಗೆಸು
ಹಿತ್ತಾಳೆ, ತಾಮ್ರದ ಪಾತ್ರೆಗಳಿಗೆ ಆಗಾಗ್ಗೆ ಒಳಭಾಗಕ್ಕೆ ಕಲಾಯಿ ಮಾಡಿಸುತ್ತಾರೆ. ಏಕೆಂದರೆ ಕಲಾಯಿ ಮಾಡಿಸದಿದ್ದರೆ ಕಿಲುಬು ಹಿಡಿದ ಆ ಪಾತ್ರೆಗಳಲ್ಲಿ ಮಾಡಿದ ಪಾಯಸ ಅಥವಾ ಸಾರು ಬೇಗ ಹಳಸಿ ಹುಳುನೊರೆ ಬಂದು ಬಿಡುತ್ತದೆ. ಕಲಾಯಿಯದು ಬಿಳಿ ಬಣ್ಣವಾಗಿರುತ್ತದೆ. ಹಾಗೆಯೇ ತಲೆಯ ಕೂದಲನ್ನು ಕ್ಷೌರಿಕನ ಕತ್ತಿಗೊಪ್ಪಿಸಿದರೆ ತಲೆ ಬೆಳ್ಳಗೆ ಕಾಣುತ್ತದೆ.
ಪ್ರ : ತಿರುಪತಿಗೆ ಹೋಗಿ ತಲೆ ಕಲಾಯಿ ಮಾಡಿಸಿದ್ದರಿಂದ ತಲೆಗೆ ಕುಲಾಯಿ (< ಕುಲಾವಿ) ಹಾಕ್ಕೊಂಡಿದ್ದೀನಿ ಅಷ್ಟೆ.
೫೯೭. ಕಲಿಗಾಲ ಬರು = ಕೆಟ್ಟ ಕಾಲ ಬರು, ಥಳಕುಪಳಕಿನ ಕಾಲ ಬರು
ಪ್ರ : ನಾವು ಆಡಿದ ಮಾತಿಗೆ ತಪ್ಪುತ್ತಿರಲಿಲ್ಲ. ಮರವೇ ಸಾಕ್ಷಿಯಾಗಿ ಸಾಲ ಕೊಡುತ್ತಿದ್ದೆವು, ಅವರು ಸಾಲದ ಹಣವನ್ನು ತಂದುಕೊಡುತ್ತಿದ್ದರು. ಇವತ್ತು ಕಾಗದ ಪತ್ರ ಬರೆದುಕೊಟ್ಟು ಹಣ ತೆಗೆದುಕೊಂಡು ಕೊಡಲು ತರಲೆ ಮಾಡುತ್ತಾರೆ, ಏನು ಕಲಿಗಾಲ ಬಂತು?
೫೯೮. ಕಲಿ ಕಲಿತಿರು = ವಿದ್ಯೆ ಕಲಿತಿರು, ಜ್ಞಾನ ಹೊಂದಿರು
ಕ್ರಿಯಾ ಪದವನ್ನೇ ನಾಮ ಪದವನ್ನಾಗಿ ಬಳಸುವ ಜಾಣ್ಮೆಯನ್ನು ಜನಪದರಲ್ಲಿ ಅಪಾರವಾಗಿ ಕಾಣುತ್ತೇವೆ. ಉದಾಹರಣೆಗೆ ಕಡಿದದ್ದು ಯಾವುದೋ ಅದು ಕಡಿ = ತುಂಡು, piece. ಹಾಗೆಯೇ ಕಲಿತದ್ದು ಯಾವುದೋ ಅದು ಕಲಿ = ವಿದ್ಯೆ
ಪ್ರ : ಇಷ್ಟು ಸಣ್ಣ ಹುಡುಗ, ಏನು ಕಲಿ ಕಲಿತವನೆ ನೋಡಕ್ಕ.
೫೯೯. ಕಲ್ಲು ತಿಂದು ಕಲ್ಲು ಅರಗಿಸೋ ಕಾಲವಾಗಿರು = ಕಟ್ಟರೆಯದಲ್ಲಿರು, ತುಂಬು ಪ್ರಾಯದಲ್ಲಿರು
ಕೋಳಿಗಳು ಆಹಾರವನ್ನು ಅರಗಿಸಲು ಸಣ್ಣ ಸಣ್ಣ ಕಲ್ಲು ಹರಳುಗಳನ್ನು ನುಂಗುತ್ತವೆ. ಬಹುಶಃ ಈ ನುಡಿಗಟ್ಟಿಗೆ ಅದು ಮೂಲವೆನ್ನಿಸುತ್ತದೆ.
ಪ್ರ : ನಾವು ಮುದುಕರಪ್ಪ, ಹೆಚ್ಚು ತಿಂದ್ರೆ ಅರಗಲ್ಲ, ಆದರೆ ನಿಮಗೇನು ? ಕಲ್ಲು ತಿಂದು ಕಲ್ಲು ಅರಗಿಸೋ ವಯಸ್ಸು ನಿಮ್ಮದು
೬೦೦. ಕಲ್ಲು ಹುಯ್ಯಸಿ = ದೆವ್ವ ಬಿಡಿಸು, ಮೈಮೇಲಿರುವ ದೆವ್ವ ಶಿಲಾಗತವಾಗುವಂತೆ ಮಾಡು
ಪ್ರೇತಗಳು ತಮ್ಮ ತೀರದ ಬಯಕೆಗಾಗಿ ಬೇರೆಯವರ ಮೈಮೇಲೆ ಬರುತ್ತವೆ ಎಂದು ನಂಬಿಕೆ. ಆ ಮೂಲಕ ತಮ್ಮ ಆಸೆಗಳನ್ನು ಅಥವಾ ಸೇಡುಗಳನ್ನು ತೀರಿಸಿಕೊಳ್ಳುತ್ತವೆ ಎಂದು ಪ್ರತೀತಿ. ಅಂಥ ದೆವ್ವ ಹಿಡಿದವರನ್ನು ಪವಿತ್ರ ಕ್ಷೇತ್ರಗಳಿಗೆ, ದೇವಸ್ಥಾನಗಳಿಗೆ ಕರೆದುಕೊಂಡು ಹೋಗಿ ಅಲ್ಲಿ ಉಚ್ಚಾಟನೆಯ ವಿಧಿ ವಿಧಾನಕ್ಕೆ ಅನುಗುಣವಾಗಿ ಕಲ್ಲಿನ ಮೇಲೆ ಹೆಸರನ್ನು ಕೆತ್ತಿಸುತ್ತಾರೆ. ಹಾಗೆ ಮಾಡಿದರೆ ಅದು ಅಲ್ಲಿ ಬಂಧಿಯಾಗುತ್ತದೆ ಎಂದು ನಂಬಿಕೆ.
ಪ್ರ : ಮೊನ್ನೆ ಹುಡುಗೀನ ಗಾಳಿ ಹನುಮಂತರಾಯನ ಗುಡಿಗೆ ಕರೆಕೊಂಡು ಹೋಗಿ ಕಲ್ಲು ಹುಯ್ಸಿಕೊಂಡು ಬಂದೆವು. ಆ ನಮ್ಮಪ್ಪ ಒಳ್ಳೇದು ಮಾಡಿದ್ರೆ ಅಷ್ಟೆ ಸಾಕು
೬೦೧. ಕಲ್ಲೂ ಕರಗುವಂತೆ ಹೇಳು = ಮರುಕ ಹುಟ್ಟುವಂತೆ ಹೇಳು, ಕಣ್ಣೀರ ಕತೆ ಹೇಳು.
ಪ್ರ : ಅವಳು ಪಟ್ಟ ಪಾಡನ್ನು ತೋಡಿಕೊಂಡಳು, ಕಲ್ಲೂ ಕರಗುವಂತೆ
೬೦೨. ಕಲ್ಲೂ ನೀರೂ ಕರಗೋ ಹೊತ್ತಾಗಿರು = ಇಡೀ ಪ್ರಪಂಚವೇ ಸುಷುಪ್ತಿಯಲ್ಲಿರುವ ಸಮಯವಾಗಿರು, ಸರಿ ಹೊತ್ತಿನ ನಂತರದ ಹಾಗೂ ಮೊಲದ ಕೋಳಿ ಕೂಗುವ
ಮುನ್ನಿನ ಅವಧಿಯಾಗಿರು
ಪ್ರ : ಕಲ್ಲೂ ನೀರೂ ಕರಗೋ ಹೊತ್ತು ಅನ್ನದೆ, ಕಾಡಿನಲ್ಲಿ ಒಬ್ಬನೇ ನಡಕೊಂಡು ಬಂದೆ.
೬೦೩. ಕಲ್ಲೇಡಿ ಕೈಗೆ ಬೆಳ್ಳು ಕೊಡು = ಕಷ್ಟಕ್ಕೆ ಸಿಕ್ಕು, ತಾನಾಗಿಯೇ ತೊಂದರೆಗೊಳಗಾಗು
(ಕಲ್ಲೇಡಿ = ಕಲ್ಲ ಪೊಟ್ಟರೆಯಲ್ಲಿರುವ ಕಪ್ಪಗಿನ ದಪ್ಪ ನಳ್ಳಿ, ಬೆಳ್ಳು < ಬೆರಳು = ಬೆಟ್ಟು) ಏಡಿಗಳಲ್ಲಿ ಮುಖ್ಯವಾಗಿ ಎರಡು ವಿಧ, ಕಲ್ಲೇಡಿ ಮತ್ತು ಹುಲ್ಲೇಡಿ. ಹುಲ್ಲೇಡಿಗಳು ಸಾಮಾನ್ಯವಾಗಿ ಗದ್ದೆ ಬದುವಿನ ಬಿಲಗಳಲ್ಲಿ, ನೀರಿನಲ್ಲಿ, ಔಗಿರುವ ಹುಲ್ಲಿನಲ್ಲಿ ಇರುವಂಥ ಸಣ್ಣ ಗಾತ್ರದವು. ಸಾಮಾನ್ಯವಾಗಿ ಮಾಸಲು ಬಿಳಿ ಅಥವಾ ಮಾಸಲು ಕೆಂಪು ಬಣ್ಣಕ್ಕಿರುತ್ತವೆ. ಆದರೆ ಕಲ್ಲೇಡಿ ಕಪ್ಪಗೆ ದಪ್ಪಗೆ ಬಲಶಾಲಿಯಾಗಿರುತ್ತದೆ. ಅವುಗಳ ಕೊಂಡಿಗೆ (ಕೈಗೆ) ಬೆರಳು ಸಿಕ್ಕಿದರೆ ಬಿಡಿಸಿಕೊಳ್ಳುವುದು ಬಲು ಕಷ್ಟ.
ಪ್ರ : ನಾನು ಇದ್ದೂ ಇದ್ದೂ ಇವನ್ನ ನಂಬಿ, ಕಲ್ಲೇಡಿ ಕೈಗೆ ಬೆಳ್ಳು ಕೊಟ್ಹಂಗೆ ಮಾಡ್ಕೊಂಡೆ.
೬೦೪. ಕವಡು ಮಾತಾಡು = ದ್ವಂದ್ವಾರ್ಥದ ಮಾತಾಡು, ನಯವಂಚನೆಯ ಮಾತಾಡು
(ಕವಡು = ಕವೆ, ಕವಲು)
ಪ್ರ : ನಿನ್ನ ಕವಡು ಮಾತನ್ನು ಕೇಳಿದರೆ, ಮೊದಲು ಇಲ್ಲಿಂದ ದೌಡು ಹೋಗಬೇಕು ಅನ್ನಿಸ್ತದೆ.
೬೦೫. ಕವಣೆ ಕಲ್ಲಿನಂತೆ ಬರು = ವೇಗವಾಗಿ ಬರು
(ಕವಣೆ < ಕವಣೈ (ತ) = ಹಕ್ಕಿಗಳನ್ನು ಹೊಡೆಯಲು ಅಥವಾ ಓಡಿಸಲು, ಅವುಗಳಿಗೆ ಕಲ್ಲು ಬೀರಲೋಸಗ ಬಳಸುವ ಸಾಧನ.) ಹುರಿಯಿಂದ ಹೆಣೆದ ಅಂಗೈ ಅಗಲದ ಪಟ್ಟಣಿ (Belt)ಗೆ ಕಲ್ಲನ್ನಿಟ್ಟು, ಅದರ ಎರಡು ತುದಿಗಳಿಗೂ ಕಟ್ಟಿರುವ ಹುರಿಯನ್ನು ಜೋಡಿಸಿಕೊಂಡು ಕೈಯಲ್ಲಿ ಹಿಡಿದು, ಜೋರಾಗಿ ಗರಗರನೆ ತಿರುಗಿಸಿ ಗುರಿಯತ್ತ ಕಲ್ಲು ಹೋಗುವಂತೆ ಒಂದು ಹುರಿಯನ್ನು ಬಿಡಲಾಗುತ್ತದೆ. ಗರಗರನೆ ಬಿರುಸಾಗಿ ತಿರುಗಿಸಿ ಎಸೆದದ್ದರಿಂದ ಅದಕ್ಕೆ ಹೆಚ್ಚು ವೇಗ ಪ್ರಾಪ್ತವಾಗುತ್ತದೆ. ಈಗ ಕವಣೆ ಆಧುನಿಕ ಸಲಕರಣೆಗಳ ಆಗಮನದಿಂದ ಹಳ್ಳಿಯಲ್ಲೂ ಇಲ್ಲವಾಗುತ್ತಿದೆ.
ಪ್ರ : ಕಣ್ಣುಮುಚ್ಚಿ ಕಣ್ಣು ತೆರೆಯೋ ಅಷ್ಟರಲ್ಲಿ ಒಳ್ಳೆ ಕವಣೆ ಕಲ್ಲು ಬಂದ್ಹಂಗೆ ಬಂದು ಬಿಟ್ಟ.
೬೦೬. ಕವಳ ಕತ್ತರಿಸು = ಊಟ ಮಾಡು
(ಕವಳ < ಕಬಳ < ಕಬಲ = ಅನ್ನ)
ಪ್ರ : ನಾನು ಕವಳ ಕತ್ತರಿಸದೆ ಮನೆಯಿಂದ ಹೊರಕ್ಕೆ ಹೆಜ್ಜೆ ಇಕ್ಕಲ್ಲ
೬೦೭. ಕವಳ ಹಾಕಿಕೊಳ್ಳು = ತಾಂಬೂಲ ಸೇವಿಸು
(ಕವಳ < ಕವಳಿಗೆ = ಇಪ್ಪತ್ತು ಎಲೆಗಳ ಕಟ್ಟು) ಹಳೆಯ ಮೈಸೂರು ಕಡೆ ಕವಳ ಎಂದರೆ ಅನ್ನ. ತಿರುಪೆಯವರು ‘ಕವಳ ತಾಯಿ’ ಎಂದೇ ಬಿದಿಯಲ್ಲಿ ಬೇಡುತ್ತಾ ಬರುತ್ತಾರೆ. ಆದರೆ ಮಲೆನಾಡಿನಲ್ಲಿ ಕವಳ ಎಂದರೆ ತಾಂಬೂಲ. ಬಹುಶಃ ಇಪ್ಪತ್ತು ವೀಳ್ಯದೆಲೆಗಳ ಕಟ್ಟಿಗೆ ಕವಳಿಗೆ ಎಂದು ಹೆಸರು. ಅದರಿಂದ ತಾಂಬೂಲ ಎಂಬ ಅರ್ಥದಲ್ಲಿ ಕವಳ ಎಂಬ ಶಬ್ಧ ಬಳಕೆಗೆ ಬಂದಿರಬೇಕು.
ಪ್ರ : ಊಟ ಆದ್ಮೇಲೆ ಕವಳ ಹಾಕ್ಕೊಳ್ಳದಿದ್ರೆ ತಳಮಳ ಆಗ್ತದೆ ಮನಸ್ಸಿಗೆ.
೬೦೮. ಕಷ್ಟ ಮಾಡಿಸಿಕೊಳ್ಳು = ಕ್ಷೌರ ಮಾಡಿಸಿಕೊಳ್ಳು
(ಕಷ್ಟ = ಕ್ಷೌರ)
ಪ್ರ : ಕಷ್ಟ ಮಾಡಿಸಿಕೊಂಡು ಜಳಕ ಮಾಡಿದಿದ್ರೆ ಹೆಂಗೆ?
೬೦೯. ಕಷ್ಟವಾಗು = ಹೆರಿಗೆ ನೋವು ಕಾಣಿಸಕೊಳ್ಳು, ಬೇನೆ ತಿನ್ನು.
ಪ್ರ : ಮಗಳಿಗೆ ಕಷ್ಟವಾಗಿದೆ ಅಂತ ಆಸ್ಪತ್ರೆಗೆ ಕರಕೊಂಡು ಹೋದ್ರು
೬೧೦. ಕಸಬು ತೋರಿಸು = ಸ್ವಭಾವ ಬಹಿರಂಗಪಡಿಸು
(ಕಸುಬು = ವೃತ್ತಿ)
ಪ್ರ : ಕೊನೆಗೂ ತನ್ನ ಕಸುಬು ತೋರಿಸಿದ
೬೧೧. ಕಸರೆಪಸರೆ ತಿಂದು ಕಿಸಗೊಂಡು ಬೀಳು = ಕೊಳಕುಪಳಕು ತಿಂದು ಕಾಯಿಲೆ ಬೀಳು
(ಕಸರೆ ಪಸರೆ = ಕೊಳಕುಪಳಕು, ಕಿಸಗೊಂಡು < ಕಿಸಿದುಕೊಂಡು = ಕಾಲು ಅಗಲಿಸಿಕೊಂಡು)
ಪ್ರ : ಕಸರೆ ಪಸರೆ ತಿಂದು ಕಿಸಗೊಂಡು ಬಿದ್ದಿರುವಾಗ ತನ್ನ ತಪ್ಪಿನ ಅರಿವಾಯ್ತು
೬೧೨. ಕಸ ಹಾಕು = ಮಲ ವಿಸರ್ಜಿಸು, ಹಿಕ್ಕೆ ಹಾಕು
ಪ್ರ : ಹಕ್ಕಿಗಳು ಬಟ್ಟೆ ಮೇಲೆ ಕಸ ಹಾಕಿದವು
೬೧೩. ಕಸಿದುಕೊಳ್ಳು = ಕೆಳಕ್ಕೆ ಬೀಳು
(ಕಸಿ < ಕುಸಿ = ನೆಲಕ್ಕೆ ಬೀಳು)
ಪ್ರ : ಹೊಸದಾಗಿ ಕಟ್ಟಿದ ಮನೆ ಭಾರಿ ಮಳೆಯ ದೆಸೆಯಿಂದ ಕಸಿದುಕೊಳ್ತು
೬೧೪. ಕಸುಗಾಯಾಗಿರು = ಎಳಸಾಗಿರು, ಅಪರಿಪಕ್ವವಾಗಿರು
(ಕಸುಗಾಯಿ = ಹೀಚು, ಪೀಚು)
ಪ್ರ : ಕಸುಗಾಯ್ತಾನದ ಹೇಳಿಕೆ ಬಗ್ಗೆ ತಲೆ ಏಕೆ ಕೆಡಿಸಿಕೊಳ್ಳಬೇಕು.
೬೧೫. ಕಸೆ ಕಟ್ಟು = ಅಂಗಿಯ ಅಥವಾ ಕುಬುಸದ ಕೆಳಗಿನ ಎರಡು ತುದಿಗಳನ್ನು ಗಂಟು ಹಾಕು.
ಗುಂಡಿಗಳು ಬಳಕೆಗೆ ಬರುವ ಮುನ್ನ ಅಂಗಿಗಳ ಕೆಳತುದಿಗಳನ್ನು ಅಥವಾ ಕುಬುಸದ ಕೆಳತುದಿಗಳನ್ನು ಗಂಟು ಹಾಕಿಕೊಳ್ಳುತ್ತಿದ್ದರು. ಅವುಗಳಿಗೆ ಕಸೆ ಅಂಗಿ, ಕಸೆ ಕುಬುಸ ಎಂದೇ ಹೆಸರುಂಟು. ಆ ಹಳೆಯ ನಮೂನೆಗಳನ್ನು ಈಗ ಮತ್ತೆ ಹೊಸ ಫ್ಯಾಷನ್‌ಗಳಾಗಿ ನವಪೀಳಿಗೆಯ ತರುಣ ತರುಣಿಯರು ಚಾಲ್ತಿಗೆ ತರುತ್ತಿದ್ದಾರೆ.
ಪ್ರ : ಗಾದೆ – ಕಸೆ ಬಿಚ್ಚೋಕೆ ಬರದೋನು ಕೊಸೆಯೋಕೆ ಬಂದ
೬೧೬. ಕಳಕ್ ಅನ್ನು = ನೋವುಂಟಾಗು, ಚಳುಕುಂಟಾಗು
ಪ್ರ : ತುಂಬಿದ ಬಿಂದಿಗೆ ಎತ್ತಿಗೊಳ್ಳುವಾಗ ಸೊಂಟ ಕಳಕ್ ಅಂತು.
೬೧೭. ಕಳಗ ಕಿತ್ಕೊಂಡು ಇಳುವಿಬಿಡು = ಗಾಡಿಗೂಟ ಕಿತ್ಕೊಂಡು ಹೊಡಿ.
(ಕಳಗ = ಎತ್ತಿನ ಗಾಡಿಯ ಎರಡು ಕಡೆ ಪಾರಿಗಳಲ್ಲೂ ಸಮಾನಾಂತರದಲ್ಲಿ ಎಜ್ಜ ಮಾಡಿ ನಿಲ್ಲಿಸಿರುವ ಒತ್ತೋಳುದ್ದದ ಬಿದಿರ ಗೂಟಗಳು ; ಗೊಬ್ಬರ ಅಥವಾ ಧಾನ್ಯ ತುಂಬಲು ಗೋಡಿ ಮುಖಕ್ಕೆ ನಿಲ್ಲಿಸುವ ಹಲಗೆಗಳಿಗೆ ಆಲಂಬನವಾಗಿರುವಂಥವು.) (ಇಳುವು < ಇಳುಹು < ಇಳುಂಪು = ಇಕ್ಕು, ಹೊಡಿ)
ಪ್ರ : ತುಂಬಿದ ಗಾಡಿಗಳನ್ನು ಲೂಡಿ ಮಾಡಲು ಕಳ್ಳರು ಬಂದರು. ನಾವೆಲ್ಲ ಗಾಡಿ ಕೆಳಗೆ ಕಿತ್ಕೊಂಡು ಪರಸಾದ ಇಟ್ಟಾಡೋ ಹಂಗೆ ಇಳುವಿದೆವು.
೬೧೮. ಕಳಸ ಇಕ್ಕು = ಉದ್ಧಾರ ಮಾಡು, ಔನ್ನತ್ಯಕ್ಕೇರಿಸು.
(ಕಳಸ < ಕಳಶ = ಕುಂಭ, ಶಿಖರ) ಗುಡಿಯ ಗೋಪುರದ ತುದಿಯಲ್ಲಿರುವ ಲೋಹದ ಕಲಾಕೃತಿಗೆ ಕಳಸ ಎನ್ನುತ್ತಾರೆ. ಎತ್ತುಗಳ ತುದಿಗೊಂಬಿಗೆ ಹಾಕುವಂಥವಕ್ಕೆ ಕೊಂಬಿನಕಳಸ ಎನ್ನುತ್ತಾರೆ. ಶುಭ ಕಾರ್ಯಗಳಲ್ಲಿ ಬಳಸುವ, ಅದರ ನೀಳ ಕೊರಳಿಗೆ ಹೊಂಬಾಳೆ ಇಟ್ಟು ಪೂಜೆ ಸಲ್ಲಿಸುವ ಕೊಡಕ್ಕೂ ಕಳಸ ಎನ್ನುತ್ತಾರೆ.
ಪ್ರ: ದೇಶ ಉದ್ಧಾರ ಮಾಡ್ತೀವಿ ಅಂತ ಓಟು ತಗೊಂಡು ಐವತ್ತು ವರ್ಷಗಳಿಂದ ಎಲ್ಲರ ಮನೆ ಮೇಲೆ ಕಳಸ ಇಕ್ಕಿದ್ದಾರಲ್ಲ ನಮ್ಮನ್ನು ಆಳೋರು !
೬೧೯. ಕಳ್ಳ ಬೆಕ್ಕಿನಂತೆ ಬರು = ಸದ್ದು ಮಾಡದಂತೆ ಮೆಟ್ಟುಗಾಲಲ್ಲಿ ಬರು
ಪ್ರ : ಕಳ್ಳ ಬೆಕ್ಕಿನ ಸರಕಾಡದಂಗೆ ಬಂದು ಬಿಡ್ತಾಳೆ ಬಿಡಾಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ