ನನ್ನ ಪುಟಗಳು

20 ಅಕ್ಟೋಬರ್ 2015

೦೩.ಭಾಸ್ಕರ


ಭಾಸ್ಕರ
ಈತನ ಕಾಲ ಕ್ರಿ.ಶ. ೧೪೨೪
ಅನಂತಪುರ ಜಿಲ್ಲೆಯ ಪೆನಗೊಂಡೆ ಇವನ ಊರು ಎಂದು ಪಂಡಿತರ ಅನಿಸಿಕೆ.
ವಿಶ್ವಾಮಿತ್ರ ಗೋತ್ರದ ಬಸವಾಂಕನ ಮಗ, ಜೈನಬ್ರಾಹ್ಮಣ ಕವಿ
ಕೃತಿಗಳು :
ಜೀವಂಧರ ಚರಿತೆ -ಇವನು ಭಾಮೀನಿ ಷಟ್ಪದಿಯಲ್ಲಿ ಬರೆದ ಕಾವ್ಯ.
ಇದು ಜೀವಂಧರ ಎಂಬ ರಾಜನ ಕಥೆ. ಸಂಸ್ಕೃತದಲ್ಲಿ ವಾದೀಭಸಿಂಹಸೂರಿ ಬರೆದಿರುವ ಜೀವಂಧರ ಚರಿತ್ರೆಯ ಕನ್ನಡ ಅನುವಾದ.
ನೇಮಿಚಂದ್ರ, ಗುಣವರ್ಮ, ನಾಗವರ್ಮ, ಪೊನ್ನ, ಅಗ್ಗಳ, ಗಜಾಂಕುಶ ಮೊದಲಾದ ಪೂರ್ವ ಕವಿಗಳನ್ನು ತನ್ನ ಕಾವ್ಯದಲ್ಲಿ ಹೊಗಳಿದ್ದಾನೆ.

ಈತನಿಗೆ ’ವಾಣೀವದನದರ್ಪಣ’ ಎಂಬುದು ಇವನ ಬಿರುದಿತ್ತು


ಭಾಸ್ಕರ ಕವಿಕೃತ-ಜೀವಂಧರ ಚರಿತೆ ಕುರಿತು
 - ಲೇಖನ ಕೃಪೆ: ‘ಭಾಸ್ಕರ ಕವಿಕೃತ-ಜೀವಂಧರ ಚರಿತೆ’ ಆರ್.ಸಿ.ಹಿರೇಮಠ


      ಭಾಸ್ಕರ ಕವಿಯ ‘ಜೀವಂಧರ ಚರಿತೆ’ ಕನ್ನಡ ಸಾಹಿತ್ಯದ ಉತ್ತಮ ಕೃತಿಗಳಲ್ಲಿ ಒಂದು. ಕಾವ್ಯಧರ್ಮ ಮತ್ತು ಧರ್ಮ ಎರಡರ ದೃಷ್ಟಿಯಿಂದಲೂ ಜೀವಂಧರ ಚರಿತೆ ವೈಶಿಷ್ಟ್ಯಪೂರ್ಣವಾಗಿದೆ. ಮಹಾವೀರ ಸ್ವಾಮಿ ಕೃತಿಪತಿ. ಆ ಸ್ವಾಮಿಯ ಸನ್ನಿಧಾನದಲ್ಲಿದ್ದ ಗೌತಮ ಗಣಧರರಿಂದ ಜೀವಂಧರ ಚರಿತೆ ಲೋಕಕ್ಕೆ ಪ್ರಕಟವಾಗಿದೆ. ಕಾವ್ಯದ ತುಂಬ ಬರುವ ಘಟನೆಗಳು, ವರ್ಣನೆಗಳು ಕವಿಯ ಶಕ್ತಿಯನ್ನು ಪ್ರಕಟಿಸುತ್ತವೆ. ಕೇವಲ ಜೈನ ಮತದ ದೃಷ್ಟಿಯಿಂದ ಮಾತ್ರವಲ್ಲ, ಕನ್ನಡ ಸಾಹಿತ್ಯದ ದೃಷ್ಟಿಯಿಂದಲೂ, ಉತ್ತಮೋತ್ತಮ ಗುಣಗಳನ್ನು ಒಳಗೊಂಡಿರುವ ಜೀವಂಧರ ಚರಿತೆಯನ್ನು ಕನ್ನಡ ಸಾಹಿತ್ಯ ಸಹೃದಯರಿಗೆ ಅರ್ಪಿಸಲು ಸಂತೋಷವೆನ್ನಿಸುತ್ತದೆ.

    ತೀರ್ಥಂಕರರು, ಚಕ್ರವರ್ತಿಗಳು, ಬಲದೇವ, ವಾಸುದೇವ ಮುಂತಾದ ಶಲಾಕಾ ಪುರುಷರು ತಮ್ಮ ತಪಸ್ಸಿನ ಬಲದಿಂದ ಪರಮ ಸಿದ್ಧಿಯನ್ನು ಪಡೆದುದು ಲೋಕ ಪ್ರಸಿದ್ಧವಾಗಿದೆ. ಅದರಂತೆ ಸಾಮಾನ್ಯ ಜೀವಿಗಳೂ ಸಹ, ತಮ್ಮ ಕರ್ಮದ ಫಲವನ್ನು ಅನುಭವಿಸಿ ಅದರ ನಿರ್ಜರೆಯಿಂದ ಮೋಕ್ಷ ಸಂಪಾದನೆ ಮಾಡಿದ ಕಥೆಗಳೂ ಉಂಟು. ಒಂದು ದೃಷ್ಟಿಯಿಂದ ಇಂತಹ ಕಥೆಗಳು ಜನ ಸಾಮಾನ್ಯರ ದೃಷ್ಟಿಯಿಂದ ಅತಿ ಮಹತ್ವವಾದುವು. ಜೀವಂಧರ ಚರಿತೆ, ಯಶೋಧರ ಚರಿತೆ ಮುಂತಾದುವು. ಈ ಸಾಲಿನಲ್ಲಿ ನಿಲ್ಲುತ್ತವೆ. ಜೀವಂಧರ ಚರಿತೆಯಲ್ಲಿ ಕರ್ಮದ ಕೈವಾಡ ಬೃಹದ್ ರೂಪ ತಾಳಿ ನಿಂತಿದೆ. ತನ್ಮೂಲಕವಾಗಿ ಜೀವಂಧರ ಚರಿತೆ ಸಹಸ್ರಾರು ಜನರಿಗೆ ಅತ್ಯಂತ ಪ್ರಿಯಕರ ಕಥೆಯಾಗಿದೆ. ಆದುದಿರಂದಲೇ ಜೀವಂಧರ ಚರಿತೆ ಪ್ರಾಚೀನ ಭಾರತದ ವಿವಿಧ ಸಾಹಿತ್ಯಗಳಲ್ಲಿ ಮೈದೋರಿ ನಿಂತಿದೆ. ಕನ್ನಡ ಸಾಹಿತ್ಯದಲ್ಲಿ ಜೀವಂಧರ ಚಿರಿತೆಯನ್ನು ಹೇಳುವ ನಾಲ್ಕೆಂಟು ಗ್ರಂಥಗಳು ಪ್ರಕಟವಾಗಿದ್ದರೂ ಭಾಸ್ಕರ ಕವಿಯ ಜೀವಂಧರ ಚರಿತೆ, ಶೈಲಿ, ವಸ್ತುವಿನ್ಯಾಸ ಮುಂತಾದುವುಗಳ ದೃಷ್ಟಿಯಿಂದ ಅತ್ಯಂತ ಮೇಲ್ಮಟ್ಟದಲ್ಲಿ ನಿಂತಿದೆ. ಕನ್ನಡ ನಾಡಿನಲ್ಲಿ ಜೀವಂಧರ ಚರಿತೆ ಜನ ಜೀವಾಳವಾಗಿ, ಅವರ ಜೀವನವನ್ನು ಹಸನುಗೊಳಿಸಿರುವುದು ಗಮನಾರ್ಹವಾಗಿದೆ. ಭಾಸ್ಕರ ಕವಿಯ ಜೀವಂಧರ ಚರಿತೆ ಈ ಕಾರ್ಯವನ್ನು ಮೊಟ್ಟಮೊದಲು ಮಾಡಿರುವುದು ಇನ್ನೂ ಗಮನಾರ್ಹ!

     ಭಾಸ್ಕರ ಕವಿಯ ಭಾಮಿನೀ ಷಟ್ಪದಿ ತನ್ನ ಲಯ, ಗತಿ ಇವುಗಳ ಮೂಲಕ ವೈಶಿಷ್ಟ್ಯ ಪೂರ್ಣವಾಗಿದೆ. ಭಾಮಿನೀ ಷಟ್ಪದಿಯಲ್ಲಿ ಒಳ್ಳೆ ಪಳಗಿದ ಕವಿಗಳೆನಿಸಿದ ಕುಮಾರವ್ಯಾಸ, ಚಾಮರಸರ ಶೈಲಿಗೆ ಹೊಯ್‌ ಕೈ ಎನಿಸುವ ಪದ್ಯಗಳು ಜೀವಂಧರ ಚರಿತೆಯಲ್ಲಿ ಬಂದಿರುವುದನ್ನು ಗಮನಿಸಬೇಕು. ಹಲವಾರು ಈ ಶೈಲಿಯ ಸಾಮ್ಯ ದೃಷ್ಟಿಯಿಂದ ಭಾಸ್ಕರ ಕವಿಯು ಕುಮಾರವ್ಯಾಸನ ಅನಂತರ ಬಂದಿರಬೇಕೆಂದು ಆತನ ಅನುಕರಣ ಮಾಡಿರುವನೆಂದು ಊಹಿಸಿರುವರು. ಇದು ವಸ್ತು ಸ್ಥಿತಿಗೆ ಸರಿಯಾಗಿ ತೋರುವುದಿಲ್ಲ. ಭಾಸ್ಕರನು ಸಮರ್ಥನಾದ ಕವಿ. ಆತನ ಪ್ರಾಸಾದಿತ ವಾಣಿಯಲ್ಲಿ ಕುಮಾರವ್ಯಾಸ, ಚಾಮರಸರಂತಹ ಭಾಮಿನಿ ಷಟ್ಪದಿಗಳು ಝೇಂಕರಿಸಿದರೆ ಆತನು ಅವರ ನಂತರವೇ ಬಂದಿರಬೇಕೆಂದು ಊಹಿಸುವ ಕಾರಣವಿಲ್ಲ. ಮುಂದಿನ ಕವಿ ಎಂತಹ ದೊಡ್ಡವನಿದ್ದರೂ ತನ್ನ ಹಿಂದಿನ ಸಾಹಿತ್ಯ ಆತನಲ್ಲಿ ಅಡಗಿರುವ, ಕರಗಿರುವ ಸಂಭವವಿದೆ. ಭಾಸ್ಕರನು ಕ್ರಿ.ಶ. ೧೪೨೪ರ ಹೊತ್ತಿಗೆ ಜೀವಿಸಿದ್ದನೆಂಬುದು ಸೂರ್ಯಪ್ರಕಾಶದಷ್ಟು ಸತ್ಯ.
******

ಕಾಮೆಂಟ್‌‌ ಪೋಸ್ಟ್‌ ಮಾಡಿ