ನನ್ನ ಪುಟಗಳು

26 ನವೆಂಬರ್ 2013

ವಾತ್ಸಲ್ಯ (ಪದ್ಯ-8)

ಪ್ರಕೃತ ಪದ್ಯಭಾಗವನ್ನು ಎನ್ ಬಸವಾರಾಧ್ಯರು ಸಂಪಾದಿಸಿರುವ ಕುಮಾರವಾಲ್ಮೀಕಿ ರಚಿಸಿರುವ ‘ತೊರವೆ ರಾಮಾಯಣ’ ಕೃತಿಯ ಒಂದನೆಯ ಸಂಪುಟದ ಅಯೋಧ್ಯಾಕಾಂಡದ ಐದನೆಯ ಸಂಧಿಯಿಂದ ಆರಿಸಿಕೊಳ್ಳಲಾಗಿದೆ.
ಕುಮಾರ ವಾಲ್ಮೀಕಿಯ ಪರಿಚಯ
ಈತನ ನಿಜವಾದ ಹೆಸರು: ನರಹರಿ
ಈತನ ಕಾಲ: ಕ್ರಿ.ಶ.ಸು. ೧೫೦೦
ಈತನ ಕೃತಿ: ‘ತೊರವೆ ರಾಮಾಯಣ’
ಈತನ ಸ್ಥಳ: ವಿಜಾಪುರ ಜಿಲ್ಲೆಯ ತೊರವೆ ಗ್ರಾಮ. ಅಲ್ಲಿನ ದೇವರಾದ ನರಸಿಂಹನ ಅಂಕಿತದಲ್ಲಿ ಕಾವ್ಯರಚನೆ ಮಾಡಿದ್ದಾನೆ.
ಈತನಿಗಿದ್ದ ಬಿರುದು: ಕವಿರಾಜ ಹಂಸ
ಈತ ಬರೆದ “ತೊರವೆ ರಾಮಾಯಣ”ವು ಜನಪ್ರಿಯವಾದ ನಡುಗನ್ನಡ ಕಾವ್ಯವಾಗಿದೆ.  ಕುಮಾರವ್ಯಾಸ ನಂತೆ ಈತ ಸಹ ಭಾಮಿನಿ ಷಟ್ಪದಿಯಲ್ಲಿ ರಚಿಸಿರುತ್ತಾನೆ. ಇದು ಎರಡು ಸಂಪುಟಗಳ ಬೃಹತ್ಕಾವ್ಯ.

ವಾಲ್ಮೀಕಿ ರಾಮಾಯಣದ ಕಥೆಯನ್ನು ಅಂದಗೆಡದಂತೆ ಮೊತ್ತ ಮೊದಲಬಾರಿಗೆ ಕನ್ನಡಕ್ಕೆ ಕೊಟ್ಟ ಕೀರ್ತಿ ತೊರವೆಯ ನರಹರಿಗೆ ಅರ್ಥಾತ್ ಕುಮಾರವಾಲ್ಮೀಕಿಗೆ ಸೇರಿದ್ದು. ನಿರೂಪಣೆ ಮತ್ತು ದೃಷ್ಟಿಗಳಲ್ಲಿ ನಾರಣಪ್ಪನ ಸಂಪ್ರದಾಯಕ್ಕೆ ಸೇರಿದವನು ನರಹರಿ. ರಾಮಾವತಾರದ ಮಹತ್ವವನ್ನು ಸಾರಿ ರಾಮಭಕ್ತಿಯ ತರಂಗಿಣಿಯಲ್ಲಿ ಆಸ್ತಿಕರನ್ನು ಮೀಯಿಸುವುದೇ ಅವನ ಪರಮ ಗುರಿ. ನಾರಣಪ್ಪನ ಭಾಷಾ ಸಾಮರ್ಥ್ಯವಾಗಲೀ ರೂಪಕ ವೈಭವವಾಗಲೀ ಕಲ್ಪನೋಜ್ವಲತೆಯಾಗಲೀ ಅವನಿಗಿಲ್ಲ. ಜನಮನಸ್ಸಿಗೆ ತಾಕುವಂತೆ ಸರಳವಾಗಿ ನಿರರ್ಗಳವಾಗಿ ಕಥೆ ಹೇಳುವುದೇ ಅವನ ಉದ್ದೇಶ. ರಾಮವ್ಯಕ್ತಿತ್ವಕ್ಕೆ ತನ್ನನ್ನು ಅರ್ಪಿಸಿಕೊಂಡದ್ದರಿಂದ ಕಾವ್ಯದಲ್ಲಿ ತಲೆ ದೋರುವ ರಾಮಚಾರಿತ್ರ್ಯದ ಕೆಲವು ವಿರೋಧಾಭಾಸಗಳ ಬಗ್ಗೆ ಆತ ತಲೆಕೆಡಿಸಿಕೊಳ್ಳುವುದಿಲ್ಲ. ರಾಮ ದೇವರಾದುದರಿಂದ ಆತನ ಕಾರ್ಯಗಳೆಲ್ಲ ದೋಷರಹಿತವೆಂದೇ ಅವನ ಭಾವನೆ. ಆದ್ದರಿಂದ ಬುದ್ದಿಜನ್ಯವಾದ ಜಿಜ್ಞಾಸೆಗಳಿಗೆ ಇಲ್ಲಿ ಎಡೆಯೇ ಇಲ್ಲ. ಮೂಲಕಥೆಯನ್ನು ಅಗತ್ಯವಾದೆಡೆ ಹಿಗ್ಗಿಸಿ, ಅನಗತ್ಯವಾದೆಡೆ ಸಂಕ್ಷಿಪ್ತಗೊಳಿಸುವುದು ಶ್ರೇಷ್ಠ ಕವಿಯ ಸಲ್ಲಕ್ಷಣಗಳಲ್ಲಿ ಒಂದು. ಆದರೆ ಕುಮಾರವಾಲ್ಮೀಕಿ ವಾಲ್ಮೀಕಿಯ ಕಥಾಸಂವಿಧಾನವನ್ನು ಅತ್ಯಂತ ಅಗತ್ಯವೂ ರೋಚಕವೂ ಆದ ಎಡೆಗಳಲ್ಲೇ ಕುಗ್ಗಿಸಿ, ಅನಗತ್ಯವೂ ಅನಾಕರ್ಷಕವೂ ಆದೆಡೆಗಳಲ್ಲೆ ಹಿಗ್ಗಿಸಿ ಕಾವ್ಯಕ್ಕೆ ಬೊಜ್ಜು ಹೆಚ್ಚಿಸಿದ್ದಾನೆ. ವಾಲ್ಮೀಕಿಯಲ್ಲಿ ಬಾಲಕಾಂಡ ಅತ್ಯಂತ ಚಿಕ್ಕದು. ಆದರೆ ನರಹರಿ ಅದನ್ನು ಸುಮಾರು ಎರಡರಷ್ಟು ಗಾತ್ರಕ್ಕೆ ಉಬ್ಬಿಸಿ ನೀರಸಗೊಳಿಸಿದ್ದಾನೆ. ಹಾಗೆಯೇ ಅತ್ಯಂತ ಪ್ರಭಾವಕಾರಿಯೂ ಮಾನವೀಯತೆಯ ಅಂತ ರಾಳದ ಪ್ರಬಲ ಅನಿಕೆಗಳ ಕ್ರಿಯೆಗಳ ಜ್ವಲಂತ ಸಮರ್ಥ ಚಿತ್ರಣವಿರುವ ಅಯೋಧ್ಯಾ ಕಾಂಡವನ್ನು ಅನುಚಿತವಾಗಿ ಹ್ರಸ್ವಗೊಳಿಸಿಬಿಟ್ಟಿದ್ದಾನೆ. ಯುದ್ಧಕಾಂಡವಂತೂ ಸಹನಾತೀತ ವಾಗಿ ಅಕ್ಷಮ್ಯವಾಗಿ ಲಂಬಿತವಾಗಿದೆ, ನಿಸ್ಸಾರವಾಗಿದೆ. ಸಂವಾದಗಳ ಮೂಲಕ ವಾಲ್ಮೀಕಿಯ ಪಾತ್ರಗಳಲ್ಲಿ ವ್ಯಕ್ತಗೊಳ್ಳುವ ಜೀವನ ಸಂಘರ್ಷ ಇಲ್ಲಿ ತೀರಾ ಸಪ್ಪೆಯಾಗಿದೆ. ಇಡೀ ಕೃತಿ ರಾಮಮಹಿಮಾಮಯವಾಗಿದ್ದು, ಸರಳ ನಿರೂಪಣೆಯಿಂದಾಗಿ ಸಾಮಾನ್ಯ ಜನಪ್ರಿಯತೆಯನ್ನು ಪಡೆಯಿತೆಂಬುದನ್ನು ಬಿಟ್ಟರೆ, ಇದರ ಕೊರತೆಗಳ ಪಟ್ಟಿಯನ್ನು ಹೀಗೇ ಬೆಳೆಸುತ್ತ ಹೋಗ ಬಹುದು.
ತೊರವೆ ರಾಮಾಯಣದ ಗದ್ಯಾನುವಾದವನ್ನು ಕೆ.ಎಸ್.ಕೃಷ್ಣಮೂರ್ತಿಯವರು ಮಾಡಿದ್ದಾರೆ
********ವಿಮರ್ಶೆ ಕೃಪೆ: ಕಣಜ*********
ವಾತ್ಸಲ್ಯ ಪದ್ಯಭಾಗದ ಪೂರ್ವಕಥೆ 
       ಇಕ್ಷ್ವಾಕುವಂಶದ ಮಹಾರಾಜ ದಶರಥ. ಆತನ ರಾಜ್ಯ ಸರಯೂ ನದಿತೀರದಲ್ಲಿರುವ ಅಯೋಧ್ಯೆ. ಮಾನವೇಂದ್ರನಾದ ಮನುವಿನಿಂದ ನಿರ್ಮಿತವಾದ ರಾಜ್ಯ. ಮನುನಾ ಮಾನವೇಂದ್ರೇಣ ಯಾ ಪುರೀ ನಿರ್ಮಿತಾ ಸ್ವಯಂ (ವಾಲ್ಮೀಕಿ ರಾಮಾಯಣ, ಬಾಲಕಾಂಡ, ೫ನೆ ಸರ್ಗ)
     ಸಮೃದ್ಧವಾದ ರಾಜ್ಯ, ಸಮರ್ಥ ಮಂತ್ರಿಗಳು, ವಸಿಷ್ಠ-ವಾಮದೇವರಂಥ ತಪಸ್ವಿಗಳಾದ ಗುರುಗಳು, ಪುರೋಹಿತರು. ಮನಮೆಚ್ಚಿದ ಮೂವರು ಮಡದಿಯರು. ಕೌಸಲ್ಯಾ, ಸುಮಿತ್ರಾ, ಕೈಕೇಯಿ. ಇಷ್ಟೆಲ್ಲ ಇದ್ದರೂ ರಾಜನಿಗೆ ಮಕ್ಕಳಿಲ್ಲ ಎಂಬ ಚಿಂತೆ ಸದಾ ಕಾಡುತ್ತಿತ್ತು. ಅದರ ಪರಿಹಾರಕ್ಕಾಗಿ ಗುರುಗಳನ್ನು ಪ್ರಾರ್ಥಿಸಿದ. ಗುರುಗಳು ಸೂಚಿಸಿದ ಉಪಾಯದಂತೆ ಪುತ್ರಕಾಮೇಷ್ಠಿಯಾಗ ಮಾಡಿದ. ಅದರ ಫಲದಿಂದ ಮಕ್ಕಳಾದರು ಅವರೇ ರಾಮ. ಲಕ್ಷಣ. ಭರತ. ಶತ್ರುಘ್ನ. ರಾಜ ರಾಣಿಯರು ಪರಮಾನಂದ ಭರಿತರಾದರು. ಮಕ್ಕಳು ದೊಡ್ಡವರಾದರು. ಅವರ ವಿವಾಹವಾಯಿತು. ಎಲ್ಲರು ಸಂತೋಷದಿಂದ ಇದ್ದರು. 
     ಹೀಗಿರುವಾಗ ಬಾನಿನಲ್ಲಿ ಕಂಡ ಧೂಮಕೇತುವು ತನ್ನ ಅಂತ್ಯಕಾಲದ ಸೂಚನೆ ಎಂದು ತಿಳಿದ ದಶರಥನು ತನ್ನ ಹಿರಿಯ ಮಗನಾದ ರಾಮನಿಗೆ ಯುವರಾಜನ ಪಟ್ಟಕಟ್ಟಲು ಸಂಕಲ್ಪಿಸಿದ. ಆದರೆ ಮಂಥರೆಯ ದುರ್ಬೋಧನೆಯಿಂದ ಮತಿಗೆಟ್ಟ ಕಿರಿಯ ಹೆಂಡತಿ ಕೈಕೆಯು ದಶರಥನು ತನಗೆ ಹಿಂದೊಮ್ಮೆ ಕೊಟ್ಟಿದ್ದ ವಚನವನ್ನು ನಡೆಸಿಕೊಡಲು ಕೇಳಿದಳು. ಅವಳ ಕೋರಿಕೆ: ರಾಮನನ್ನು ಹದಿನಾಲ್ಕು ವರ್ಷ ವನವಾಸಕ್ಕೆ ಕಳುಹಿಸುವುದು ಮತ್ತು ತನ್ನ ಮಗನಾದ ಭರತನಿಗೆ ರಾಜ್ಯ ಪಟ್ಟಾಭಿಷೇಕ ಮಾಡುವುದು. ಹೆಂಡತಿಯ ಮಾತನ್ನು ನಡೆಸಿದರೆ ರಾಜ್ಯದ ವಿರೋಧ, ನಡೆಸದಿದ್ದರೆ ಮಾತಿಗೆ ತಪ್ಪಿದಂತಾಗುತ್ತದೆ. ಆದರೆ ಅವನ ರಾಜ್ಯದಲ್ಲಿ ಇರುವ ಯಾರೂ ಕೂಡ ಅಸತ್ಯವನ್ನು ಮಾತನಾಡುತ್ತಿರಲಿಲ್ಲ. ಕ್ರೋಧಾತ್‌ ಕಾಮಾರ್ಥಹೇತೋರ್ವಾ ನ ಬ್ರೂಯಿರನೃತಂ ವಚಃ (ಕಾಮ-ಕ್ರೋಧಾದಿ ಅರಿಷಡ್ವರ್ಗಗಳ ಕಾರಣಕ್ಕಾಗಿ ಯಾರೂ ಸುಳ್ಳು ಹೇಳುತ್ತಿರಲಿಲ್ಲ) ಹೀಗಿರುವಾಗ ರಾಜನಾದ ತಾನು ಕೊಟ್ಟ ಮಾತಿಗೆ ತಪ್ಪುವುದು ಹೇಗೆ ಸಾಧ್ಯ? ಹೀಗೆ ಅನೇಕ ಕಾರಣಗಳಿ೦ದ ರಾಮನಿಗೆ ಪಟ್ಟಾಭಿಷೇಕ ಮಾಡುವುದು ಸಾಧ್ಯವಾಗಲಿಲ್ಲ. ತಂದೆಯ ವಚನ ಪರಿಪಾಲನೆ ಈಡೇರಿಸಲು ಶ್ರೀರಾಮ ಕಾಡಿಗೆ ಹೋದ. ಇದರಿಂದ ಬಹು ನೊಂದ ದಶರಥ ಪುತ್ರಶೋಕದಿಂದ ತತ್ತರಿಸಿಹೋದನು. ಇದಕ್ಕೆ ತಂಡುಮುನಿಯ ಶಾಪವೇ ಕಾರಣವೆಂದು ಊಹಿಸಿದನು. ತನ್ನನ್ನು ಸಮಾಧಾನ ಪಡಿಸುತ್ತ ಸಮೀಪದಲ್ಲಿದ್ದ  ಹಿರಿಯ ರಾಣಿ ಕೌಸಲ್ಯೆಗೆ ಹಲವು ವರ್ಷಗಳ ಹಿಂದೆ ತನ್ನಿಂದ ನಡೆದ ಅಚಾತುರ್ಯದ ಘಟನೆಯನ್ನು ಹೇಳುವ ಸಂದರ್ಭವೇ ಈ ಕಥಾಭಾಗ.

ವಾತ್ಸಲ್ಯ ಪದ್ಯಭಾಗದ ಭಾವಾರ್ಥ


[ತಾಂಡವ ಅಥವಾ ಶ್ರವಣಕುಮಾರನ ತಂದೆಯ ಹೆಸರು-ವೈಶ್ಯ , ತಾಯಿ - ಶೂದ್ರಣತಿ]

ಅಂಬುಜಾನನೆ ಕೇಳು ತಾಂಡವ
ನೆಂಬಮುನಿ ಪಿತೃಮಾತೃಸೇವಾ
ಲಂಬಕನು ತೊಳಲಿದನು ನಾನಾ ತೀರ್ಥಯಾತ್ರೆಯಲಿ ||
ಅಂಬುವನು ತರಲೆಂದು ಪಿತೃಗಳ
ಕಂಬಿಯನು ನೇರಿರಿಸಿ ಚರ್ಮದ
ತಂಬುಗೆಯನು ಕೊಂಡಱಸುತಿರುಳೈದಿದನು ಜೀವನವ ||೧||

ಭಾವಾರ್ಥ: ತಾವರೆಯಂತಹ ಕಣ್ಣುಗಳನ್ನು ಹೊಂದಿರುವವಳೆ(ಕೌಸಲ್ಯೆ) ಕೇಳು, ತಂದೆ-ತಾಯಿಯ ಸೇವೆಯಲ್ಲಿ ತೊಡಗಿಕೊಂಡಿದ್ದ ತಾಂಡವ ಎಂಬ ಮುನಿಯು ತನ್ನ ತಂದೆ ತಾಯಿಯನ್ನು ಹೊತ್ತುಕೊಂಡು ಹಲವಾರು ತೀರ್ಥಕ್ಷೇತ್ರಗಳ ಯಾತ್ರೆಯನ್ನು ಮಾಡುತ್ತಿದ್ದನು. ಆತನ ತಂದೆ-ತಾಯಿಗೆ ಬಾಯಾರಿಕೆಯಾದಾಗ ಅವರನ್ನು ಹೊತ್ತಿದ್ದ ಕಂಬಿಯನ್ನು(ಸಲಾಕೆ/ಅಡ್ಡೆ) ಮರದ ಕೊಂಬೆಗೆ ನೇತುಹಾಕಿ, ಚರ್ಮದ ತಂಬುಗೆಯನ್ನು ತೆಗೆದುಕೊಂಡು ನೀರನ್ನು ಹುಡುಕುತ್ತಾ ಹೋದನು.

ತೋಹಿನಲಿ ತಾನಿರುಳು ಶರಸ
ನ್ನಾಹನಾಗಿರೆ ತಾಂಡವನು ತ
ದ್ವಾಹಿನಿಯೊಳದ್ದಿದನು ಕರವತಿಗೆಯನು ಕೈ ನೀಡಿ ||
ಮೋಹಿಸಿತು ಘುಳುಘುಳು ನಿನಾದ ವ
ರಾಹನಿಸ್ವನದಂತೆ ಮುನಿಯೆಂ
ಬೂಹೆಕೊಳ್ಳದೆ ಕೊಂಡು ಹರಿದುದು ಚಿತ್ತವಘಪಥಕೆ ||೨||

ಭಾವಾರ್ಥ: ನಾನು ಆ ರಾತ್ರಿ ನದಿಯ ಪಕ್ಕದಲ್ಲಿ ಮರದ ತೋಪಿನಲ್ಲಿ ನಿಂತು ಬೇಟೆಯಾಡಲು ಬಾಣಹೂಡಿಕೊಂಡು ಸಿದ್ಧನಾಗಿ ನಿಂತಿರುವಾಗ ತಾಂಡವನು ಅದೇ ನದಿಯಲ್ಲಿ ನೀರು ತುಂಬಿಕೊಳ್ಳಲು ತಂಬುಗೆಯನ್ನು ಅದ್ದಿದನು. ಆತನು ನೀರು ತುಂಬಿಸಿಕೊಳ್ಳಲು  ತಂಬುಗೆಯನ್ನು ಅದ್ದಿದಾಗ ಕೇಳಿಸಿದ ಘುಳುಘುಳು ಧ್ವನಿಯು ಕಾಡು ಹಂದಿಯು ಮಾಡುತ್ತಿರುವ ಶಬ್ದವೆಂಬಂತೆ ನನ್ನನ್ನು ಮೋಹಗೊಳಿಸಿ, ಮುನಿ ಎಂದು ಊಹೆ ಮಾಡಲಾಗದೆ ನನ್ನ ಮನಸ್ಸು ಪಾಪಮಾರ್ಗದ ಕಡೆಗೆ ಹರಿಯಿತು.

ಆ ರವ ಧ್ವನಿಗೊಡುವುದನು ಭೂ
ದಾರವೆಂದೇ ಬಗೆದು ಹೂಡಿದ
ಕೂರಲಗು ಬಿಡೆ ಬಿದ್ದುದುರದಲಿ ವೈಶ್ಯಮುನಿವರನ ||
ಭೂರಿಬಾಣ ವ್ಯಥೆಯನಾ ಮುನಿ
ಸೈರಿಸದೆ ಶಂಕರ ಸದಾಶಿವ
ಮಾರಹರ ಹರಯೆನುತ ಹಮ್ಮೈಸಿದನು ಮೂರ್ಚೆಯಲಿ ||೩||

ಭಾವಾರ್ಥ: ಆ ಶಬ್ದವನ್ನು ಕಾಡುಹಂದಿ ಎಂದೇ ಭಾವಿಸಿ ನಾನು ಹೂಡಿದ್ದ ಹರಿತವಾದ ಬಾಣವನ್ನು ಬಿಟ್ಟೆನು. ಆ ಬಾಣವು ವೈಶ್ಯಮುನಿಪುತ್ರನ ಎದೆಯಲ್ಲಿ ನಾಟಿತು. ಆ ಮಹಾ ಬಾಣದ ನೋವನ್ನು ಆತನು ಸಹಿಸಿಕ್ಕೊಳ್ಳಲಾಗದೆ “ಶಂಕರಾ.. ಸದಾಶಿವಾ.. ಮಾರಹರಾ.. ಹರಾ..” ಎಂದು ಕೂಗುತ್ತಾ ಮೂರ್ಚೆಹೋದನು.

ನರರರು ರಜನೀಮುಖದ ಸೀಮಾ
ಚರಿತರುತ್ತರಭಾಗ ರಾತ್ರೀ
ಚರರಿಗಾಗಿಹುದಿದುವೆ ನೀ ನರನೋ ನಿಶಾಚರನೊ ||
ನಿರುತವಾವುದು ಹೇಳೆನಲು ನಾವ್
ನರರು ವಿಟತಾಪಸರು ತೀರ್ಥಾ
ಚರಿತರಿನ್ನಾರಾದಡೇನೆಮಗಾಯ್ತು ಹರಿವೆಂದ ||೪||
ಭಾವಾರ್ಥ: ಈ ಸೂರ್ಯಾಸ್ತದ ಸಮಯವು(ರಜನೀಮುಖ) ರಾತ್ರಿವೇಳೇಯಲ್ಲಿ ಅಲೆದಾಡುವ ರಾಕ್ಷಸರು ಸಂಚರಿಸುವವರ ಸಮಯವಾಗಿದೆ. ನೀನು ನರನೋ?(ಮನುಷ್ಯನೋ) ಅಥವಾ ನಿಶಾಚರನೋ? ನಿಜವನ್ನು ಹೇಳು ಎಂದಾಗ ತಾಂಡವ ಮುನಿಯು “ನಾವು ಮನುಷ್ಯರು. ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸುವ ತಪಸ್ವಿಗಳು (ವಿಟತಾಪಸರು). ಯಾರಾದರೇನು! ನಮಗೆ (ತಂದೆ-ತಾಯಿ-ಮಗ) ಅಗಲಿಕೆಯುಂಟಾಯಿತು” ಎಂದನು

ಹಳೆದಿನದ ತಾಯ್ತಂದೆಗಳ ಬಿಡ
ದಲಸದವರನು ಹೊತ್ತು ತೊಳಲಿದೆ
ನಿಳೆಯೊಳುಳ್ಳ ಸಮಸ್ತತೀರ್ಥಕ್ಷೇತ್ರಗಿರಿವನವ ||
ಉಳಿದುದೊಂದೇ ಕಾಶಿ ಕಾಶಿಯೊ
ಳಿಳುಹುವದೆ ಸಂಕಲ್ಪವದು ತಾ
ನಿಲುಕದಾದುದು ದೈವಗತಿ ಬೇಱಿದ್ದುದೆನಗೆಂದ  || ೫ ||

ಭಾವಾರ್ಥ: ಬಹಳ ವಯಸ್ಸಾದ ನನ್ನ ತಾಯಿ-ತಂದೆಗಳನ್ನು ನಾನು ಎಂದೂ ಬಿಡದೆ ಆಯಾಸಪಡದೆ ಬೇಸರಗೊಳ್ಳದೆ ಹೊತ್ತುಕೊಂಡು ಈ ಭೂಮಿಯಲ್ಲಿರುವ ಸಮಸ್ತ ತೀರ್ಥಕ್ಷೇತ್ರ-ಗಿರಿ-ವನಗಳನ್ನು ಸಂದರ್ಶಿಸಿದೆ. ಕಾಶಿ ಸಂದರ್ಶೀಸುವುದು ಮಾತ್ರ ಉಳಿದಿತ್ತು. ಆ ಕಾಶಿಯಲ್ಲಿ ತಂದೆತಾಯಿಗಳನ್ನು ಇಳಿಸುವುದು ನನ್ನ ಸಂಕಲ್ಪವಾಗಿತ್ತು. ಆದರೆ ಅದು ಕೈಗೂಡಲಿಲ್ಲ. ನನ್ನ ಮೇಲೆ ದೇವರ ಇಚ್ಛೆಯೇ ಬೇರೆಯಾಗಿತ್ತು. ಎಂದನು ತಾಂಡವನು.

ನೀರನೆಱೆಕೊಂಡೊಯ್ದು ಮೇಲುಪ
ಚಾರವೇನದ ಮಾಡು ಗಂಗಾ
ತೀರವನು ಸಾರುವೆಡೆ ಕೊಂಡೊಯ್ದಿಳುಹು ಕಾಶಿಯಲಿ ||
ಭಾರವಿದು ನಿನಗಿದುವೆ ಮೃತಸಂ
ಸ್ಕಾರಪರಿಯಂತರಸ ಕೇಳೆಂ
ದೂರುಜವ್ರತಿ ಸರಳ ಕೀಲಿಸಿ ಮುಗಿದನಕ್ಷಿಗಳ || ೬ ||

ಭಾವಾರ್ಥ: “ನೀನು ನನ್ನ ತಂದೆ-ತಾಯಿಗೆ ಈ ನೀರನ್ನು ತೆಗೆದುಕೊಂಡು ಹೋಗಿ ಅವರಿಗೆ ಏನಾದರೂ ಮೇಲುಪಚಾರವನ್ನು ಮಾಡು. ಗಂಗಾ ತೀರಕ್ಕೆ ಹೋವಾಗ ಅವರನ್ನು ತೆಗೆದುಕೊಂಡುಹೋಗಿ ಕಾಶಿಯಲ್ಲಿ ಇಳಿಸಿಬಿಡು. ಅರಸನೇ ಕೇಳು ಸತ್ತವರಿಗೆ ಮಾಡುವ ಉತ್ತರ ಕ್ರಿಯಾದಿ ಸಂಸ್ಕಾರದಂತೆ ಇದು ನಿನಗೆ ಭಾರವಾಗಬಹುದು” ಎಂದು ವೈಶ್ಯನಾದ ತಾಂಡವಮುನಿಯು ಎದೆಗೆನಾಟಿದ್ದ ಬಾಳವನ್ನು ಕಿತ್ತುಹಾಕಿಸಿ ಕಣ್ಣುಮುಚ್ಚಿದನು.

ನೀರೊಳಗೆ ಜಾಱಿದನೊ ಮೇಣು
ಗ್ರೋರಗನೊಳಳಿವಾಯ್ತೊ ದುಷ್ಟಚ
ಮೂರ ಚಪ್ಪರಿಸಿದುದೊ ಕೆಡೆದನೊ ಹಳ್ಳಕೊಳ್ಳದಲಿ ||
ಕ್ರೂರಲುಬ್ಧಕರಸ್ತ್ರಹತಿಯಲಿ
ತೀರಿದನೊ ಹಾ ಕಂದ ಹಾ ಎಂ
ಬೂರುಜವ್ರತಿಗಳನು ಕಂಡತಿಮರುಕವಾಯ್ತೆಂದ ||೭||

ಭಾವಾರ್ಥ: ಅವನು ನೀರಿನೊಳಗೆ ಜಾರಿದನೋ ಉಗ್ರವಾದ ಸರ್ಪವೊಂದರಿಂದ ಹತನಾದನೋ ಉಗ್ರವಾದ ಹುಲಿ(ಚಮೂರ) ಚಪ್ಪರಿಸಿತೋ ಹಳ್ಳಕೊಳ್ಳದಲ್ಲಿ ಕೆಡೆದನೋ ಅಥವಾ ಬೇಟೆಗಾರರ ಬಾಣದ ಹೊಡೆತಕ್ಕೆ ತೀರಿಹೋದನೋ? “ಹಾ ಕಂದ.. ಹಾ...” ಎನ್ನುತ್ತಾ ಆರ್ತನಾದ ಮಾಡುತ್ತಿದ್ದ ವೈಶ್ಯ ವ್ರತಿಗಳನ್ನು (ತಾಂಡವನ ತಂದೆತಾಯಿಗಳನ್ನು) ನೋಡಿ ನನಗೆ ಬಹಳ ಮರುಕ ಉಂಟಾಯಿತು” ಎಂದನು.ನೊಂದೆನಾ ನುಡಿಗೇಳುತವೆ ಪೂ
ರ್ಣೇಂದುಮುಖಿ ಕೇಳ್ ತಾಂಡವನ ತಾಯ್
ತಂದೆಗಳ ದನಿದೋಱದಿಳುಹಿದೆನಿಳೆಗೆ ಮರದಿಂದ ||
ಇಂದಿದೇನೈ ತಡೆದೆ ನೀರನು
ತಂದಡೆಱೆ ತಮಗೆನಲು ವಿಗತಾ
ನಂದಮಾನಸನಾಗಿ ಬಳಿಕೆಱೆದೆನು ಹಿಮೋದಕವ || ೮ ||

ಭಾವಾರ್ಥ: ನಾನು ಅವರ ಕೂಗಾಟದ ಮಾತನ್ನು ಕೇಳಿ ನೊಂದೆನು. ಪೂರ್ಣಚಂದ್ರನಂತ ಮುಖವುಳ್ಳವಳೆ ಕೇಳು, ನಾನು ಮಾತನಾಡದೆ ಮೌನವಾಗಿ ತಾಂಡವನ ತಾಯಿ-ತಂದೆಯನ್ನು ಮರದಿಂದ ನೆಲದಮೇಲಕ್ಕೆ ಇಳಿಸಿದೆನು. ಆಗ ಅವರು “ಇಂದು ಇದೇನೈ ತಡಮಾಡಿ ಬಂದೆ? ನೀರನ್ನು ತಂದಿದ್ದರೆ ನಮಗೆ ಕುಡಿಸು” ಎಂದಾಗ ನಾನು ದುಖಃದ ಮನಸ್ಸಿನಿಂದ (ವಿಗತಾನಂದಮಾನಸ=ಆನಂದ ಕಳೆದುಕೊಂಡ ಮನಸ್ಸಿನಿಂದ) ಅವರಿಗೆ ತಣ್ಣನೆಯ ನೀರನ್ನು ಎರೆದೆನು.

ಹೊಲಸುದೋಱಿದೆ ಮಗನೆ ಜಲವೆಮ
ಗಲಸಿದೆಯಲಾ ಸೇವೆಯಲಿ ವಿಧಿ
ಮುಳಿಯದಕಟಾ ಪಾಪಿಗಳಿಗೆನುತೊಕ್ಕರಾ ಜಲವ ||
ಬಳಿಕ ತನ್ನಿಂದಾದ ಹದನನು
ತಿಳಿಯ ಹೇಳಿದು ಶಾಪವನು ಕೈ
ಗೊಳಿಸಿ ತನಗೆಂದವರ್ಗೆ ಕೈಗಳ ಮುಗಿದೆ ನಾನೆಂದ || ೯ ||

ಭಾವಾರ್ಥ: ನಾನು ಅವರಿಗೆ ನೀರು ಕುಡಿಸಿದ ಕೂಡಲೇ ಅವರು, “ಮಗನೇ ನೀನು ಕುಡಿಸಿದ ನೀರು ಹೊಲಸಾಗಿದೆ(ಅಶುದ್ಧವಾಗಿದೆ). ನಮಗೆ ಸೇವೆ ಮಾಡುವುದರಲ್ಲಿ ಆಲಸಿಕೆ ತೋರಿದೆಯಲ್ಲವೇ? ವಿಧಿ ನಿನ್ನಂತಹ ಪಾಪಿಗಳ ಮೇಲೆ ಮುನಿಯದೇ?” ಎಂದು ಕುಪಿತರಾಗಿ ನೀರನ್ನು ಉಗಿದುಬಿಟ್ಟರು. ಆನಂತರ ನಾನು ನನ್ನಿಂದ ಸಂಭವಿಸಿದ ಘಟನೆಯನ್ನು ತಿಳಿಯುವಂತೆ ಹೇಳಿ, “ನನ್ನಿಂದ ತಪ್ಪಾಯಿತು ನನಗೆ ಏನು ಶಾಪ ಬೇಕಾದರೂ ನೀಡಿ” ಎಂದು ನಾನು ಅವರಿಗೆ ಕೈಮುಗಿದೆನು ಎಂದನು.

ಅಳಿದ ಮಗನೋಪಾದಿ ನಿಮ್ಮನು
ಸಲಹುವೆನು ನಂಬುವುದು ನೀವೆನ
ಲಲಸಿ ಬಳಿಕಸುವಿಡಿಯಲೊಲ್ಲದೆ ಸುತವಿಯೋಗದಲಿ ||
ಅಳಿವು ಸಮನಿಸಲೆನುತ ನಳಿನಜ
ನಿಳಯಕಭಿಮುಖರಾದರನಿಬರು
ಜಳನ ಸಂಸ್ಕೃತಿಯಿಂದ ಮಾಡಿದೆನೂರ್ಧ್ವದೇಹಿಕವ || ೧೦ ||

ಭಾವಾರ್ಥ: ನಾನು ಅವರನ್ನು ಸಂತೈಸುತ್ತಾ “ಅಳಿದು ಹೋದ ನಿಮ್ಮ ಮಗನಂತೆಯೇ ನಿಮ್ಮನ್ನು ಸಲಹುತ್ತೇನೆ. ನೀವು ನನ್ನನ್ನು ನಂಬಿ” ಎಂದು ಬೇಡಿದೆನಾದರೂ ಅವರು ಬೇಸರಿಸಿ ಇನ್ನು ಬದುಕಿರಲು ಇಚ್ಛಿಸದೆ, “ಮಗನ ಅಗಲಿಕೆಯಿಂದ ನಿನಗೆ ಸಾವು ಸಂಭವಿಸಲಿ” ಎಂದು ನನಗೆ ಶಾಪ ನೀಡಿ ಬ್ರಹ್ಮಲೋಕದ ಕಡೆಗೆ ಮುಖಮಾಡಿದರು(ಪ್ರಾಣಬಿಟ್ಟರು). ಇಬ್ಬರ ದೇಹಗಳನ್ನು ಜಲನಸಂಸ್ಕೃತಿಯಿಂದ(ಉತ್ತರಕ್ರಿಯೆಗೆ ಸಂಬಂಧಿಸಿದ ವಿಧಿವಿಧಾನಗಳನ್ನು ಮಾಡಿದನಂತರ ದೇಹವನ್ನು ನೀರಿನಲ್ಲಿ ತೇಲಿಬಿಡುವುದು) ಸಂಸ್ಕಾರಮಾಡಿದೆನು.
**********
 ವಾತ್ಸಲ್ಯ ಪದ್ಯಪಾಠಕ್ಕೆ ಪೂರಕವಾದ ವೀಡಿಯೋ ವೀಕ್ಷಿಸಿ
********
ವಾತ್ಸಲ್ಯ ಪದ್ಯಪಾಠಕ್ಕೆ ಪೂರಕವಾದ ಚಿತ್ರಗಳು


 
ಆಧುನಿಕ ಶ್ರವಣಕುಮಾರ
********************
ಕಾಮೆಂಟ್‌‌ ಪೋಸ್ಟ್‌ ಮಾಡಿ