ನನ್ನ ಪುಟಗಳು

06 ಅಕ್ಟೋಬರ್ 2015

೨೦) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಕ೪)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಕ೪)
೬೯೪. ಕಿಸಲೆಯಂತಾಡು = ಹಸುಳೆಯಂತಾಡು, ಎಳೆಸೆಳೆಸಾಗಿ ಆಡು
(ಕಿಸಲೆ < ಕಿಸಲಯ = ಚಿಗುರು, ಮಗುರು)
ಪ್ರ : ಇಷ್ಟು ವಯಸ್ಸಾಗಿ ಒಳ್ಳೆ ಕಿಸಲೆಯಂತಾಡ್ತಿಯಲ್ಲ.
೬೯೫. ಕ್ರಿಯಾ ಅನುಸರಿಸು = ಕೃತಜ್ಞನಾಗಿ ಬಾಳು, ನಿಷ್ಠೆ ಬಿಡದಿರು
(ಕ್ರಿಯಾ = ಕೃತಜ್ಞತೆ, ನಿಷ್ಠೆ)
ಪ್ರ : ಆದೋರು ಹೋದೋರ್ನ ಮರೀಬೇಡ, ಕ್ರಿಯಾ ಅನುಸರಿಸು
೬೯೬. ಕ್ರಿಯಾಭ್ರಷ್ಟನಾಗು = ಕೃತಜ್ಞನಾಗು, ನೇಮನಿಷ್ಠೆ ತೂರು, ನಿಷ್ಕ್ರಿಯನಾಗು
ಪ್ರ : ಗಾದೆ – ಕ್ರಿಯಾ ಭ್ರಷ್ಟನಾಗೋದೂ ಒಂದೆ, ಕ್ರಿಮಿಯಾಗೋದೂ ಒಂದೆ.
೬೯೭. ಕೀತ ಬೆಳ್ಳಿಗೆ ಉಚ್ಚೆ ಹುಯ್ಯದಿರು = ಮಹಾ ಜಿಪುಣನಾಗಿರು, ಯಾರಿಗೂ ಏನನ್ನೂ ಕೊಡದಿರು
(ಕೀತ = ಕೀವುಗೊಂಡ, ಬೆಳ್ಳಿಗೆ = ಬೆರಳಿಗೆ) ಹೊಲ ಹುಯ್ಯುವಾಗ ಕುಡಲು ಏನಾದರೂ ಬೆರಳಿಗೆ ತಾಕಿ ಕುಯ್ದುಕೊಂಡರೆ ಜನಪದರು ಬೇಲಿ (ರೋಜಗಿಡ) ಸೊಪ್ಪನ್ನು ಕಿತ್ತು ಒಸಗಿ ಅದರ ರಸವನ್ನು ಹಿಂಡುತ್ತಾರೆ. ಆಮೇಲೆ ಪ್ರತಿ ನಿತ್ಯ ತಾವು ಮೂತ್ರ ವಿಸರ್ಜಿಸುವಾಗ ಆ ಬೆರಳಿಗೂ ಸ್ನಾನ ಮಾಡಿಸುತ್ತಾರೆ. ಐದಾರು ದಿನಗಳಲ್ಲಿ ಕೀತ ಬೆಳ್ಳು ವಾಸಿಯಾಗಿ ಬಿಡುತ್ತದೆ. ಅಂದರ ಮೂತ್ರದಲ್ಲಿ ಕೀತ ಗಾಯವಾಗಿ ವಾಸಿ ಮಾಡುವ, ಮಾಯಿಸುವ ಯಾವುದೋ ಗುಣವಿರಬೇಕು. ಅದನ್ನು ವೈದ್ಯರು ಪತ್ತೆ ಹಚ್ಚಬೇಕು. ನೆಲದಲ್ಲಿ ಇಂಗಿ ಹೋಗುವ ಉಚ್ಚೆಯನ್ನು ಕೀತ ಬೆಳ್ಳಿಗೆ ಹುಯ್ಯಿ ಎಂದರೂ ಹುಯ್ಯದ ಜಿಪುಣತನದ ಪರಾಕಾಷ್ಠೆಯನ್ನು ನಾವಿಲ್ಲಿ ಕಾಣತ್ತೇವೆ.
ಪ್ರ : ಗಾದೆ – ಕೀತ ಬೆಳ್ಳಿಗೆ ಉಚ್ಛೆ ಹುಯ್ಯಿ ಅಂದ್ರೆ
ಜಲಮಲ ಕಟ್ಟಿ ಆರುತಿಂಗಳಾಯ್ತು ಅಂದ
೬೯೮. ಕೀರನಂತಾಡು = ಮುಂಗುಸಿಯಂತೆ ಕಿರ್‌ಪರ್ ಎಂದು ಚೀರಾಡು, ಮೈಯೆಲ್ಲ ಪರಿಚಿಕೊಳ್ಳುವ ಮುಂಗೋಪದ ಸ್ವಭಾವವಾಗಿರು
(ಕೀರ = ಮುಂಗುಸಿ)
ಪ್ರ : ಮಾತಿನಲ್ಲಿ ಮಟ್ಟವೇ ಇಲ್ಲ, ಒಳ್ಳೆ ಕೀರನಂಗಾಡ್ತಾಳೆ.
೬೯೯. ಕೀವುಗಟ್ಟು = ಸಾಲುಗಟ್ಟು
(ಕೀವು < ಎಘಿ = ಸಾಲಾಗಿ ನಿಲ್ಲು)
ಪ್ರ : ಜನ ಸೀಮೆ ಎಣ್ಣೆಗಾಗಿ ಕೀವುಗಟ್ಟಿ ನಿಂತವರೆ
೭೦೦. ಕುಟ್ಟಾಣಿಯಾಗು = ತೆವಲು ತೀರಿಸುವ ಸಾಧನವಾಗು
(ಕುಟ್ಟಾಣಿ < ಕುಟ್ಟಣಿ = ಹಲ್ಲಿಲ್ಲದವರು ಎಲೆಅಡಿಕೆ ಕುಟ್ಟಲು ಬಳಸುವ ಕಬ್ಬಿಣದ ಒರಳು)
ಪ್ರ : ನಾನು ನಿಗೆ ಬರೀ ಕುಟ್ಟಾಣಿಯಾಗಿದ್ದೇನೆ, ಕಟ್ಟಾಣಿಯಾಗಿಲ್ಲ
೭೦೧. ಕುಟ್ಟಿ ಲಗಾಯಿಸು = ಚೆನ್ನಾಗಿ ತಿನ್ನು
ಪ್ರ : ಇಟ್ಟಿದ್ದನ್ನೆಲ್ಲ ಒಂದು ಚೂರು ಬಿಡದೆ ಕುಟ್ಟಿ ಲಗಾಯಿಸಿಬಿಟ್ಟ.
೭೦೨. ಕುಟ್ರಿ ಸಂತೆಗೆ ಹೋದಂತಾಗು = ಮಲಗುವವರಿಗೆ ಹಾಸಿ ಕೊಟ್ಟಂತಾಗು
(ಕುಟ್ರಿ < ಕೊಟರಿ < ಕೋಟರಿ = ಬೆತ್ತಲೆ ಹೆಣ್ಣು)
ಪ್ರ : ಗಾದೆ -ಕುಟ್ರ ಸೂಳೆಗೇರಿಗೆ ಹೋಗೋದು, ಕುಟ್ರಿ ಸಂತೆಗೆ ಹೋಗೋದು – ಎರಡೂ ಒಂದೆ.
೭೦೩. ಕುಡಿದ ನೀರು ಅಲುಗಾಡದಂತಿರು = ಶ್ರಮ ಬೀಳದಿರು, ಹಾಯಾಗಿ ಕುಳಿತಿರು
ಪ್ರ : ಅತ್ತೆ ಮನೇಲಿ ನನ್ನನ್ನು ಕುಡಿದ ನೀರು ಅಲುಗಾಡದಂತೆ ಇರಿಸಿಕೊಂಡಿದ್ದಾರೆ.
೭೦೪. ಕುಣಿದು ಕುಪ್ಪಳಿಸಿ ಕುಣಿ ಪಾಲಾಗು = ಮೆರೆದು ಮೆಕ್ಕೆಕಾಯಿ ತಿಂದು ಮಣ್ಣು ಪಾಲಾಗು
(ಕುಪ್ಪಳಿಸು = ನೆಗೆ, ಕುಣಿ < ಕುಳಿ = ಗುಂಡಿ, ಸಮಾಧಿ)
ಪ್ರ : ಮನಸೇಚ್ಛೆ ಕುಣಿದು ಕುಪ್ಪಳಿಸಿ, ಕೊನೆಗೆ ಕುಣಿ ಪಾಲಾದ.
೭೦೫. ಕುತ್ತರಿಸು = ನಡುಗು, ಕಂಪಿಸು
(ಕುತ್ತರಿಸು < ಕುಸ್ತರಿಸು?)
ಪ್ರ : ಹಸು ಕುತ್ತರಿಸ್ತಾ ಅದೆ, ದನಗಳ ಡಾಕ್ಟರಿಗೆ ತೋರಿಸಿ
೭೦೬. ಕುತ್ತಾಗು = ಗಂಡಾಂತರವಾಗು, ಅಪಾಯವಾಗು)
(ಕುತ್ತು = ಅಪಾಯ, ಗಂಡಾಂತರ)
ಪ್ರ : ನೀನಿವತ್ತು ಅವಳಿಗೆ ಮೆತ್ತಗಾದ್ರೆ, ನಾಳೆ ಅವಳು ನಿನಗೆ ಕುತ್ತಾಗ್ತಾಳೆ
೭೦೭. ಕುತ್ತು ಬಂದು ಹೊತ್ಕೊಂಡು ಹೋಗು = ಆಪತ್ತು ಬಂದು ಸಾಯು,
ಕಾಯಿಲೆಯಿಂದ ಮರಣ ಹೊಂದು
(ಕುತ್ತು = ಕಾಯಿಲೆ, ಆಪತ್ತು ; ಹೊತ್ಕೊಂಡು ಹೋಗು = ಚಟ್ಟದ ಮೇಲೆ ಮಲಗಿ ನಾಲೋರ ಹೆಗಲ ಮೇಲೆ ಹೋಗುವಂತಾಗು)
ಪ್ರ : ಇವನಿಗೆ ಏನಾದ್ರೂ ಕುತ್ತು ಬಂದು, ಹೊತ್ಕೊಂಡು ಹೋಗೋ ಹಂಗಾದ್ರೆ, ಸಾಕು.
೭೦೮. ಕುತ್ಗೆ ಕುಯ್ದ ಕೋಳಿಯಂತಾಡು = ಮೇಲಕ್ಕೆ ನೆಗೆದು ಕೆಳಕ್ಕೆ ಬೀಳು, ಎಗರಾಡು
(ಕುತ್ಗೆ < ಕುತ್ತಿಗೆ = ಕೊರಳು)
ಪ್ರ : ಕುತ್ತಿಗೆ ಕುಯ್ದ ಕೋಳಿಯನ್ನು ಮೀರಿಸಿ ಎಗರಾಡ್ತಿದ್ದಾನಲ್ಲ ಇವನು.
೭೦೯. ಕುತ್ಗೆ ಗೆಣ್ಣಿಕ್ಕು = ಗೋಮಾಳೆ ಮುರಿ, ಧ್ವನಿ ಬದಲಾಗು
ಬೆರಳಿಗೆ ಗೆಣ್ಣು ಇರುವಂತೆ ಕಬ್ಬಿಗೂ ಗೇಣುದ್ದದ ಅಂತರದಲ್ಲಿ ಸುತ್ತಲೂ ಬಳೆಯಾಕಾರದ ಉಬ್ಬುಗೆರೆಯ ಗೆಣ್ಣುಗಳಿರುತ್ತವೆ. ಅದಕ್ಕೆ ಕಬ್ಬು ಗೆಣ್ಣಿಕ್ಕಿದೆ ಎನ್ನುತ್ತಾರೆ. ಗಂಟಲ ಬಳೆಯೂ ಉಬ್ಬುವುದರಿಂದ ಗೆಣ್ಣಿಕ್ಕಿದೆ ಎನ್ನುತ್ತಾರೆ.
ಪ್ರ : ಕುತ್ಗೆ ಗೆಣ್ಣಿಕ್ತು ಅಂತ ಅವನಿಗಾಗಲೇ ಕುತ್ಗೆಗೆ ಒಂದು ಗುದ್ದಿಗೆ ಕಟ್ಟೋಕೆ ಯತ್ನಿಸುತ್ತಾ ಅವರೆ.
೭೧೦. ಕುತ್ಗೆಗೆ ತರು = ಅಪಾಯ ತರು
ಪ್ರ : ಇದ್ದೂ ಇದ್ದೂ ಇವನು ನನ್ನ ಕುತ್ಗೆಗೇ ತಂದಿಟ್ಟನಲ್ಲ.
೭೧೧. ಕುತ್ಗೆ ಜಿಗುಟಿ ಹಾಕೋ ಹಂಗಾಗು = ಕುತ್ತಿಗೆ ಸವೆದು ಹೋಗು, ಕೃಶವಾಗು
(ಜಿಗುಟಿ < ಚಿವುಟಿ = ಉಗುರಿನಿಂದ ತುಂಡರಿಸಿ)
ಪ್ರ : ಇದ್ಯಾಕೆ ಹರೇದ ಹುಡುಗ ಹಿಂಗೆ ಕುತ್ಗೆ ಜಿಗುಟಿ ಹಾಕೋ ಹಂಗಾಗಿದ್ದಾನೆ ? ಡಾಕ್ಟರಿಗೆ ತೋರಿಸಿ.
೭೧೨. ಕುತ್ಗೆಗೆ ಮಾರಮ್ಮನ ಉಗ್ಗ ಹಾಕು = ಬಲಿ ಸಾಕು, ಸಾಯಿಸು
(ಉಗ್ಗ < ಉಕ್ಕ (ತೆ, ತ) = ಪಾತ್ರೆಯ ಕಂಠಕ್ಕೆ ಹುರಿ ಹಾಕಿ ಬಿಗಿದು, ಮೇಲೆ ಹಿಡಿದುಕೊಳ್ಳಲು ಅನುವಾಗುವಂತೆ ಮಾಡಿದ ಕುಣಿಕೆ) ಮಾರಮ್ಮನಿಗೆ ಕುರಿ ಮೇಕೆ ಕೋಣಗಳನ್ನು ಬಲಿ ಕೊಡುವ ಪದ್ಧತಿ ಇದೆ. ಕುರಿ ಮೇಕೆಗಳ ತಲೆಗಳು ಪಂಜನ್ನು ಹಿಡಿದ ಅಗಸರಿಗೆ ಹೋಗುವ ಪದ್ಧತಿ ಉಂಟು. ಕತ್ತರಿಸಿದ ಟಗರಿನ ಅಥವಾ ಹೋತದ ಕೊಂಬಿಗೆ ಉಗ್ಗದಂತೆ ಹುರಿ ಕಟ್ಟಿ ಹಿಡಿದುಕೊಂಡು ಹೋಗುತ್ತಾರೆ. ಆ ಮೂಲದಿಂದ ಬಂದದ್ದು ಈ ನುಡಿಗಟ್ಟು.
ಪ್ರ : ಮುಂಡೇ ಮಗನ ಕುತ್ಗೆಗೆ ಮಾರಮ್ಮನ ಉಗ್ಗ ಎಂದು ಬೀಳ್ತದೋ ಕಾಣೆ.
೭೧೩. ಕುತ್ಗೆ ಮೇಲೆ ಕೂರು = ತಗಾದೆ ಮಾಡು, ಪೀಡಿಸು
ಪ್ರ : ಸಾಲಗಾರನ ಕುತ್ಗೆ ಮೇಲೆ ಕೂತಿದ್ದಾನೆ ಸಾಲ ಕೊಟ್ಟೋನು, ಪಾಪ ಆ ಬಡಪಾಯಿ ಏನು ಮಾಡ್ತಾನೋ ಏನೋ, ದೇವರಿಗೆ ಗೊತ್ತು
೭೧೪. ಕುತ್ಗೆ ಮೇಲೆ ಕೈ ಹಾಕು = ದಬ್ಬು, ನೂಕು
ಪ್ರ : ಮನೆಯಿಂದ ಹೋಗ್ತಿಯೋ, ಇಲ್ಲ, ಕುತ್ಗೆ ಮೇಲೆ ಕೈ ಹಾಕಲೊ?
೭೧೫. ಕುದುರೆ ಎಳೆ = ಗುಂಡು ಹಾರಿಸು, ಈಡು ಹೊಡೆ
(ಕುದುರೆ = ಗುಂಡು ಹಾರಿಸುವ ಕೀಲಿ, ಗುಂಡಿ)
ಪ್ರ : ಕುದುರೆ ಮೇಲಿದ್ದ ಹಗೆಗೆ ಗುರಿಯಿಟ್ಟು ಕುದುರೆ ಎಳೆದ
೭೧೬. ಕುದುರಿಕೊಳ್ಳು = ಪಳಗು, ಒಗ್ಗಿಕೊಳ್ಳು
ಪ್ರ : ಇತ್ತೀಚೆಗೆ ರಾಜಕೀಯದಲ್ಲಿ ಚೆನ್ನಾಗಿ ಕುದುರಿಕೊಂಡ
೭೧೭. ಕುದುರೆ ಬಾಯಿಯಾಗಿರು = ಸುಮ್ಮನಿರದಿರು, ಮೆಲುಕು ಆಡಿಸುತ್ತಿರು
ಪ್ರ : ಗಾದೆ – ಕುದುರೆ ಬಾಯಿ, ಹಾದರಗಿತ್ತಿ ಬಾಯಿ ಸುಮ್ನಿರಲ್ಲ
೭೧೮. ಕುದುರೆ ಮೇಲೆ ಬಂದಂತಾಡು = ತರಾತುರಿ ಮಾಡು
ಪ್ರ : ಬಿಡುಬೀಸಾಗಿ ಬಂದು ಒಂದೆರಡು ದಿನ ಇದ್ದು ಹೋಗದೆ, ಕುದುರೆ ಮೇಲೆ ಬಂದಂತೆ ಆಡಿದರೆ ಹೆಂಗಪ್ಪ?
೭೧೯. ಕುಪ್ಪೆ ಇಕ್ಕು = ಮಲ ವಿಸರ್ಜಿಸು
(ಕುಪ್ಪೆ = ಗುಡ್ಡೆ)
ಪ್ರ : ಮಕ್ಕಳು ಬೀದಿ ತುಂಬ ಕುಪ್ಪೆ ಇಕ್ಕಿವೆ, ಹೆಜ್ಜೆ ಇಕ್ಕೋಕೆ ತಾವಿಲ್ಲ.
೭೨೦. ಕುಮ್ಮಣ್ಣಿ ಮರಿಗೆ ಮುತ್ತಿಕ್ಕು = ಶಿಷ್ನಕ್ಕೆ ಮುತ್ತಿಡು
(ಕುಮ್ಮಣ್ಣಿ = ಶಿಷ್ನ; ಕುಮ್ಮು > ಗುಮ್ಮು = ಹೆಟ್ಟು, ತಿವಿ; ಅಣ್ಣಿ < ಅಣ್ಣ < ಅಣ್ಣೈ)
ಪ್ರ : ಅಮ್ಮಣ್ಣಿ ತನ್ನ ಮಗನ ಕುಮ್ಮಣ್ಣಿ ಮರಿಗೆ ಮುತ್ತಿಕ್ಕಿದಳು.
೭೨೧. ಕುಮ್ಮರಿಸು = ನೀರನ್ನು ಕೆಳಕ್ಕೆ ಸುರಿ, ವೀರ್ಯವನ್ನು ಸುರಿಸು.
ಪ್ರ : ಆ ಚಿನಾಲಿಗೆ ಚೆನ್ನಾಗಿ ಕುಮ್ಮರಿಸಿ ಬಂದಿದ್ದೀನಿ
೭೨೨. ಕುಮುರುದೆಗೆ = ಹಣ್ಗಾಯಿ ನೀರ್ಗಾಯಿ ಮಾಡು, ಸಾಯಬೀಳ ಸದೆಬಡಿ.
(ಕುಮುರ < ಕುಮ್ಮರಿ (ಕುಮ್ಮರಿಗಡಿ = ಕುಸಿದು ಬೀಳುವಂತೆ ಕಡಿ – ಪಂಪಭಾರತ) = ಕುಸಿ)
ಪ್ರ : ನನಗೆ ಅಮರಿಕೊಂಡಾಗ ಸರಿಯಾಗಿ ಕುಮುರುದೆಗೆದು ಕಳಿಸಿದೆ.
೭೨೩. ಕುಯ್ದು ಪಾಲು ಹಾಕು = ಸಾಯಿಸು, ಚಿಂದಿ ಚಿಂದಿ ಮಾಡು
(ಪಾಲು = ಭಾಗ) ಹಳ್ಳಿಗಳಲ್ಲಿ ಐದಾರು ಜನ ಹಣ ಹಾಕಿ ಮರಿ ಅಥವಾ ಕುರಿ ತಂದು ಮೇಯಿಸಿ ಮಾರಿ ಹಬ್ಬಕ್ಕೆ ಕಡಿಯುತ್ತಾರೆ. ಎಷ್ಟು ಜನ ದುಡ್ಡು ಹಾಕಿದ್ದರೋ ಅಷ್ಟು ಸಮಪಾಲುಗಳನ್ನು ಅಥವಾ ಮಾಂಸದ ಗುಡ್ಡೆಗಳನ್ನು ಹಾಕುತ್ತಾರೆ. ಒಬ್ಬೊಬ್ಬರೂ ಒಂದೊಂದು ಗುಡ್ಡೆಯನ್ನು ತೆಗೆದುಕೊಂಡು ಹೋಗುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ನನ್ನ ಕುಯ್ದು ಪಾಲು ಹಾಕಿದರೂ ಸಮನೆ, ನಾನು ಅವನಿಗೆ ತಲೆ ಬಾಗಲ್ಲ.
೭೨೪. ಕುಯ್ಯೊ ಮರ್ರೋ‍ಎನ್ನು = ಜೋರಾಗಿ ಆಳು
(ಕುಯ್ಯೋ = ಕೀರಲು ದನಿಯ ಅಳು; ಮರ್ರೋ‍< ಮೊರ್ರೋ‍= ಜೋರು ದನಿಯ ಅಳು)
ಪ್ರ : ಹೆಣ್ಣಿನ ಕಟ್ಟಕಡೆಯ ಅಸ್ತ್ರವೆಂದರೆ ಕುಯ್ಯೋ ಮರ್ರೋ‍ಅನ್ನೋದು.
೭೨೫. ಕುರಿತುಕೊಳ್ಳು = ಮನಸ್ಸಿನಲ್ಲಿ ಒಂದನ್ನು ನೆನೆಸಿಕೊಳ್ಳು, ಲಕ್ಷ್ಯದಲ್ಲಿರಿಸಿಕೊಳ್ಳು
ಪ್ರ : ನಾನು ವಯಸ್ಸಿನಲ್ಲಿ ಏನನ್ನೋ ಕುರಿತುಕೊಂಡಿದ್ದೀನಿ, ಅದನ್ನು ಹೇಳಿದ್ರೆ, ಆಗ ನಂಬ್ತೀನಿ ನಿಮ್ಮ ಶಾಸ್ತ್ರಾನ.
೭೨೬. ಕುರಿಯದಿರು = ವಿಚಾರಿಸದಿರು, ಲಕ್ಷಿಸದಿರು
ಪ್ರ : ನನ್ನನ್ನು ಯಾರೂ ಕುರಿಯದಿರುವಾಗ, ನಾನಲ್ಲೇಕೆ ಕುರಿಯಂಗೆ ಕೂತಿರಲಿ?
೬೨೭. ಕುರುಕ್ಷೇತ್ರವಾಗು = ಜಗಳವಾಗು
ಪ್ರ : ಅಣ್ಣತಮ್ಮಂದಿರ ಮಧ್ಯೆ ದೊಡ್ಡ ಕುರುಕ್ಷೇತ್ರವೇ ಜರುಗಿ ಹೋಯ್ತು
೭೨೮. ಕುರ್ಜು ಹೊರಡು = ಸಣ್ಣ ತೇರು ಹೊರಡು ; ತೇರಿನಂಥ ಆಕರ್ಷಕ ಹೆಣ್ಣು ಹೊರಡು
(ಕುರ್ಜು < ಕುರುಜು = ಚಿಕ್ಕ ಅಲಂಕೃತ ತೇರು)
ಪ್ರ : ಈ ಮನೆಯ ಕುರ್ಜು ಹೊರಡೋದನ್ನೇ ಕಾಯ್ತಾ ಇರ್ತಾರೆ, ಗರ್ಜಲು ಹುಡುಗರು.
೭೨೯. ಕುರುಡು ಕವಡೆ ಕಿಮ್ಮತ್ತಿಲ್ಲದಿರು = ಚಿಕ್ಕಾಸಿನ ಬೆಲೆ ಇಲ್ಲದಿರು
ನಾಣ್ಯ ಚಾಲ್ತಿಗೆ ಬರುವ ಮುನ್ನ ಅಡಕೆ, ಕರಿಮಣಿ ವಿನಿಮಯ ಮಾಧ್ಯಮವಾದಂತೆ ಕವಡೆಯೂ ಆಗಿರಬೇಕು ಎಂಬುದಕ್ಕೆ ಈ ನುಡಿಗಟ್ಟು ಸಾಕ್ಷಿಯಾಗಿದೆ.
ಪ್ರ : ಊರಿನಲ್ಲಿ ಅವನಿಗೆ ಒಂದು ಕುರುಡು ಕವಡೆ ಕಿಮ್ಮತ್ತಿಲ್ಲ.
೭೩೦. ಕುರೋ ಕುರೋ ಎನ್ನು = ಹೆಸರನ್ನು ಹಿಡಿದು ಕರೆಯದಿರು, ನಾಯಿ ಎಂದು ಕರೆ.
(ಕುರೋ ಕುರೋ < ಕುರ ಕುರ < ಕುರ್ಕುರ = ನಾಯಿ)
ಪ್ರ : ಆ ಕಳ್ಳನ್ನ ನಾನು ಹಿಡಕೊಡದಿದ್ರೆ ನನ್ನ ಹೆಸರನ್ನು ಹಿಡಿದು ಕರೆಯೋದು ಬೇಡ, ಕುರೋ ಕುರೋ ಅಂತ ಕರಿ.
೭೩೧. ಕುಲಗೆಟ್ಟು ಹೋಗು = ಹಾಳಾಗು, ವಿರೂಪವಾಗು.
ವರ್ಣವ್ಯವಸ್ಥೆ ವ್ಯವಸ್ಥಿತವಾದ ಜಾತಿ ವ್ಯವಸ್ಥೆಯಾಗಿ, ಅದರಲ್ಲಿ ಮೇಲು ಕೀಳು ಎಂಬ ಭೇದಭಾವವನ್ನು ಬೆಳೆಸಿದ್ದು ಬದುಕಿನ ದುರಂತಗಳಲ್ಲೊಂದು. ಜಾತಿ ಕುಲ ಎಂಬ ಶಬ್ದಗಳು ಮೊದಮೊದಲು ಉತ್ತಮ, ಶ್ರೇಷ್ಠ ಎಂಬ ಅರ್ಥದಲ್ಲಿಯೇ ಬಳಕೆಯಾಗುತ್ತಿದ್ದವು ಎಂದು ಕಾಣುತ್ತದೆ. ಉದಾಹರಣೆಗೆ ಜಾತಿಮುತ್ತು ಎಂದರೆ ಶ್ರೇಷ್ಠ ಮುತ್ತು ಎಂದೂ, ಜಾತ್ಯಶ್ವ ಎಂದರೆ ಶ್ರೇಷ್ಠ ಕುದುರೆಯೆಂದೂ ಇಂದಿಗೂ ಅರ್ಥವಿದೆ. ಹಾಗೆಯೇ ಕುಲಪರ್ವತ ಎಂದರೆ ಶ್ರೇಷ್ಠ ಪರ್ವತ ಎಂದೇ ಅರ್ಥವಿದೆ. ಹತ್ತನೆಯ ಶತಮಾನದ ಪಂಪ ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಜಾತ್ಯಶ್ವ, ಕುಲಪರ್ವತ ಎಂದು ಬಳಸಿದಂತೆಯೇ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದೂ ಹೇಳಿದ್ದಾನೆ. ಅಂದರೆ ಅಷ್ಟು ಹೊತ್ತಿಗಾಗಲೇ ಮೇಲು ಜಾತಿ, ಕೀಳು ಜಾತಿ, ಉತ್ತಮ ಕುಲ ಅಧಮ ಕುಲ ಎಂಬ ತಾರತಮ್ಯ ತಲೆಗೆದರಿ, ಬೇರು ಬಿಟ್ಟಿದ್ದುದು ರುಜುವಾತಾಗುತ್ತದೆ. ಅಂತೂ ಜಾತಿ ಕೆಡುವುದು ಮಹಾಪರಾಧ ಎಂಬ ಮತಾಂಧತೆ ಪ್ರಬಲವಾಗಿದ್ದುದರ ಪಳೆಯುಳಿಕೆಯಂತಿರುವ ಈ ನುಡಿಗಟ್ಟು ಈಗ ಬಣ್ಣ ಬದಲಾಯಿಸಿ ಬೇರೆ ವೇಷದಲ್ಲಿ ಆದರೆ ಅದೇ ದೇಹದಲ್ಲಿ ಚಲಿಸುತ್ತಿದೆ ಎನ್ನಿಸುತ್ತದೆ.
ಪ್ರ : ರಾಜಕಾರಣಿಗಳು ಕುಲಗೆಟ್ಟು ಹೋಗಿರೋದರಿಂದ ಮತಗಳು ಕುಲಗೆಟ್ಟು ಹೋಗೋದು ಸಹಜ.
೭೩೨. ಕುಲಾಕರ್ಮ ನೋಡಲಾಗದಿರು = ಹೊಲಸಿನ ನಡೆನುಡಿ ನೋಡಿ ಸಾಕಾಗು
(ಕುಲಾಕರ್ಮ < ಕುಲ + ಅಕರ್ಮ = ಕುಲಕ್ಕೆ ವಿರುದ್ಧವಾದ ಕರ್ಮ)
ಪ್ರ : ಪಾರ್ವಪಿಳ್ಳೆಗಳು ಮದ್ವಕೇಂದ್ರದಲ್ಲಿ ಮದ್ಯ ಕುಡಿದು, ಮೂಳೆ ಕಡಿದು ಬೆಳಗ್ಗೆ ಎದ್ದ ಕೂಡಲೇ ಮಡೀಬಟ್ಟೆಯಲ್ಲಿ ಗುಡಿ ಸುತ್ತುವ ಕುಲಾಕರ್ಮವನ್ನು ಕಣ್ಣಿಂದ ನೋಡಿ ಪುಣ್ಯ ಕಟ್ಟಿಕೊಳ್ಳಬೇಕು ಎಂದರು ವಿಚಾರವಾದಿಯೊಬ್ಬರು.
೭೩೩. ಕುಲಾಜಾಗು = ಮುಕ್ತಾಯವಾಗು
(ಕುಲಾಜು < close = ಮುಗಿ)
ಪ್ರ : ಕೋರ್ಟಿನ ಮೊಕದ್ದಮೆಯೂ ಕುಲಾಜಾಯ್ತು, ಅವನ ಕಾಯಿಲೆಯೂ ಕುಲಾಜಾಯ್ತು.
೭೩೪. ಕುಲ್ಲಿ ಕೂಳೆ ಮೀನಾಗು = ಅಸೂಯೆಯಿಂದ ಕುದಿದೂ ಕುದಿದೂ ಕೊನೆಗೆ ಮರಣ ಹೊಂದು
(ಕೂಳೆ < ಕೂಳಿ < ಕೂಣಿ = ಕೊಡಮೆ, ಮೀನು ಹಿಡಿಯುವ ಸಾಧನ; ಕುಲ್ಲಿ = ಅಸೂಯೆ ಪಟ್ಟು, ಒಳಗೊಳಗೆ ಅಸಹನೆಯಿಂದ ಬೆಂದು)
ಪ್ರ : ಇವಳೊಬ್ಬಳು ಮೊದಲಿಂದಲೂ ಕುಲ್ಲಿ ಕುಲ್ಲಿ ಕೊನೆಗೆ ಕೂಳೆ ಮೀನಾದಳು.
೭೩೫. ಕುವಿ ಕುವಿ ಅನ್ನು = ಮೇಕೆಗಳನ್ನು ಕರಿ
(ಕುವಿ = ಮೇಕೆ) ಕೋಳಿಗಳನ್ನು ಕರೆಯುವಾಗ ಕೋಕೋ ಎಂದು ಕರೆಯುತ್ತಾರೆ. ಕೋಕ ಎಂದರೆ ಕೋಳಿ. ಹಾಗೆಯೇ ನಾಯಿಗಳನ್ನು ಕುರೋ ಕುರೋ ಎಂದು ಕರೆಯುತ್ತಾರೆ. ಕುರ ಕುರ ಎಂದರೆ ನಾಯಿ. ಬೆಕ್ಕುಗಳನ್ನು ಸೀಬಿ ಸೀಬಿ ಎಂದು ಕೂಗುತ್ತಾರೆ. ಸೀಬಿ ಎಂದರೆ ಬೆಕ್ಕು. ಕುರಿಗಳನ್ನು ‘ ಬ್ಯಾ ಬ್ಯಾ’ ಎಂದು ಕರೆಯುತ್ತಾರೆ. ಬ್ಯಾ ಎಂದರೆ ಕುರಿ. ಧಾರವಾಡದ ಬಳಿ ಇರುವ ಬ್ಯಾಹಟ್ಟಿ ಎಂಬ ಊರ ಅರ್ಥ ಕುರಿಹಟ್ಟಿ ಎಂದು. ದನಗಳನ್ನು ತ್ರುವೇ ತ್ರುವೇ (< ತುರುವೇ) ಎಂದು ಕರೆಯುತ್ತಾರೆ ತುರು ಎಂದರೆ ದನ. ತುರುವಿನೂರು ಇಂದು ತುರುವನೂರು ಆಗಿದೆ (ಚಿತ್ರದುರ್ಗದಲ್ಲಿ). ಹಾಗೆಯೇ ಮೇಕೆಗಳನ್ನು ಕುವಿಕುವಿ ಎಂದು ಕರೆಯುತ್ತಾರೆ. ಕುವಿ ಎಂದರೆ ಮೇಕೆ.
ಪ್ರ : ಕುವಿ ಕುವಿ ಅಂತ ಕರೆದಾಗ ಮೇಕೆಗಳೆಲ್ಲ ಒಟ್ಟಿಗೆ ಬಂದು ಗುಂಪು ನಿಂತವು.
೭೩೬. ಕುಸಾಕುಳಿ ಬೀಳು = ಪರದಾಡು, ಒದ್ದಾಡು
(ಕುಸಾಕುಳಿ < ಕುಸಾಕೂಳು..< ಕುಸುವುವ ಕೂಳು. < ಕುಸುಬುವ ಕೂಳು = ಬೇಯುವ ಅನ್ನ) ಅನ್ನ ಮಾಡಲು ಅಕ್ಕಿಗೆ ಎಸರಿಟ್ಟ ಮೇಲೆ, ಅದು ಕೊತಕೊತನೆ ಕುದಿಯತೊಡಗಿದಾಗ ಅಕ್ಕಿ ಮೇಲಿಂದ ಕೆಳಕ್ಕೆ ಕೆಳಗಿನಿಂದ ಮೇಲಕ್ಕೆ ಲಾಗ ಹಾಕುತ್ತಿರುತ್ತವೆ. ಆ ಒದ್ದಾಟ ಈ ನುಡಿಗಟ್ಟಿನಲ್ಲಿ ಕಂಡರಣೆಗೊಂಡಿದೆ. ಅಡುಗೆಯ ಮೂಲದಿಂದ ಮೂಡಿದ ನುಡಿಗಟ್ಟಿದು
ಪ್ರ : ನಿತ್ಯ ಕುಸಾಕುಳಿ ಬಿದ್ದು ನನಗೆ ಸಾಕಾಗಿದೆ, ನನ್ನಿಂದ ಇನ್ನು ಸಾಧ್ಯವಿಲ್ಲ.
೪೩೭. ಕುಸುಕ ತೊಡಗು = ಮೆಲ್ಲಗೆ ಅಳತೊಡಗು, ತಡೆ ತಡೆದು ಅಳತೊಡಗು
(ಕುಸುಕು < ಕುಸುಂಕು = ಸಣ್ಣ ದನಿಯಲ್ಲಿ ಅಳು)
ಪ್ರ : ಏನು ಕಡಮೆಯಾಗಿದೆ ಅಂತ ಕುಸುಕತೊಡಗಿದ್ದಿ, ಅದನ್ನಾದರೂ ಹೇಳು.
೭೩೮. ಕುಸುವಿ ಹಾಕು = ಬೇಯಿಸಿ ಹಾಕು, ಅಡುಗೆ ಮಾಡಿ ಬಡಿಸು
(ಕುಸುವು < ಕುಸುಬು = ಬೇಯಿಸು)
ಪ್ರ : ಈ ಮನೇಲಿ ಬಂದುಬಂದೋರಿಗೆಲ್ಲ ಕುಸುವಿ ಹಾಕೋದೇ ಒಂದು ಕಸುಬು.
೭೩೯. ಕೂಗಳತೆಯಲ್ಲಿರು = ದೂರವಿರದಿರು, ಕೂಗಿದರೆ ಕೇಳಿಸುವಷ್ಟು ಅಂತರದಲ್ಲಿರು.
ಕಾಲವನ್ನು ತೋರಿಸುವ ಗಡಿಯಾರವಾಗಲೀ, ಮಳೆಯ ಪ್ರಮಾಣವನ್ನು ಹೇಳುವ ಮಾಪನ ಯಂತ್ರವಾಗಲೀ, ದೂರವನ್ನು ಹೆಸರಿಸುವ ಮೈಲಿ, ಪರ್ಲಾಂಗ್ ಎಂಬ ಪರಿಭಾಷೆಯಾಗಲೀ ಇಲ್ಲದಿದ್ದಾಗ ಗ್ರಾಮೀಣ ಜನ ತಮ್ಮದೇ ಪರಿಭಾಷೆಯ ಮೂಲಕ ಅಭಿವ್ಯಕ್ತಿ ನೀಡಿದರು. ಉದಾಹರಣೆಗೆ ಉಣ್ಣೋ ಹೊತ್ತು, ಮಲಗೋ ಹೊತ್ತು, ಕೋಳಿ ಕೂಗೋ ಹೊತ್ತು ಎಂಬ ಕಾಲಸೂಚಕ ಪರಿಭಾಷೆಯನ್ನು, ಒಂದು ಬಟ್ಟೆ ಹದ, ಒಂದು ಕಂಬಳಿ ಹದ, ದೋಣಿದುಮುಕಲು ಎಂಬ ಮಳೆಯ ಪ್ರಮಾಣ ಸೂಚಕ ಪರಿಭಾಷೆಯನ್ನು ರೂಢಿಸಿಕೊಂಡಂತೆಯೇ ದೂರ ನಿರ್ದೇಶನ ಪರಿಭಾಷೆಯನ್ನೂ ರೂಢಿಸಿಕೊಂಡರು. ‘ಕೂಗಳತೆ’ ಎಂಬುದು ದೂರ ಸೂಚಕ ಪರಿಭಾಷೆಯ ಪಳೆಯುಳಿಕೆ.
ಪ್ರ : ಆ ಊರೇನೂ ದೂರ ಇಲ್ಲ. ಒಂದು ಕೂಗಳತೆಯಲ್ಲಿದೆ.
೭೪೦. ಕೂಡಿಕೆ ಮಾಡಿಕೊಳ್ಳು = ಮರುಮದುವೆ ಮಾಡಿಕೊಳ್ಳು.
ಗಂಡ ಸತ್ತಾಗ ಅಥವಾ ಗಂಡ ಬಿಟ್ಟಾಗ ಹೆಣ್ಣು ಬೇರೊಬ್ಬನನ್ನು ಮದುವೆಯಾಗಿ ಸಂಸಾರ ಸಾಗಿಸುವ, ಸುಖ ಅನುಭವಿಸುವ ಸ್ವಾತಂತ್ಯ್ರವನ್ನು ಹೆಣ್ಣಿಗೆ ಶೂದ್ರ ಜನಾಂಗ ಕಲ್ಪಿಸಿಕೊಟ್ಟದ್ದು ಹೆಚ್ಚುಗಾರಿಕೆಯ ದಿಟ್ಟ ಹೆಜ್ಜೆ ಎಂದೇ ಹೇಳಬೇಕು. ಏಕೆಂದರೆ ವಿದ್ಯಾಬುದ್ಧಿಯುಳ್ಳ ಮೇಲ್ವರ್ಗ ಸ್ತ್ರೀಯರಿಗೆ ಆ ಸ್ವಾತಂತ್ಯ್ರ ಕೊಟ್ಟಿರಲಿಲ್ಲ. ಆ ದೃಷ್ಟಿಯಿಂದ ಯಜಮಾನ ಸಂಸ್ಕೃತಿಗಿಂತ ನಮ್ಮ ಜನಪದ ಸಂಸ್ಕೃತಿ ಹೆಚ್ಚು ಸ್ವಸ್ಥ ಧೋರಣೆಯುಳ್ಳದ್ದು ಎನ್ನಬಹುದು. ಆದರೆ ದುರ್ದೈವ ಎಂದರೆ ಕ್ರಮೇಣ ಕೆಲ ಸಂಕುಚಿತ ಮನೋಭಾವದ ಶೂದ್ರ ಸಂಪ್ರದಾಯವಾದಿಗಳು ಹಾಗೆ ಮದುವೆಯಾದವರನ್ನು ‘ಕೂಡಿಕೆ ಸಾಲಿನವರು’ ‘ಕೂಟಿಕೆ ಸಾಲಿನವರು’ ಎಂದು ಪ್ರತ್ಯೇಕವಾಗಿ ಹೆಸರಿಸಿ, ವಮನ ಮಾಡಿದ ಅನ್ನವೆಂಬಂತೆ ಕಾಣತೊಡಗಿದ್ದು ಖಂಡನಾರ್ಹ. ಆದರೆ ಈಗ ಅದೆಲ್ಲ ಸೊಲ್ಲಡಗಿರುವುದು ಸಂತೋಷದ ಸಂಗತಿ.
ಪ್ರ : ಗಾದೆ – ಕೂಡಿಕೆ ಹೆಂಡ್ರಿಗೆ ಗೌಡಿಕೆ ಕೊಟ್ಟಿದ್ಕೆ
ಕೂತುಣ್ಣೊದು ನಮ್ಮ ವಾಡಿಕೆ ಅಂದ್ಲು.
೭೪೧. ಕೂತುಣ್ಣುವಂತಿರು = ಬೇಕಾದಷ್ಟಿರು, ದುಡಿಯದೆ ಹಾಯಾಗಿರುವಷ್ಟು ಐಶ್ವರ್ಯವಿರು.
ಪ್ರ : ಅವರಿಗೇನಪ್ಪ ಕೂತುಣ್ಣೋವಷ್ಟು ಮನೇಲಿ ಗಿಟಕಾಯಿಸಿಕೊಂಡು ಬಿದ್ದದೆ, ಆದರೆ ಗೇದುಣ್ಣೋರಿಗಿಂತ ಕೂತುಣ್ಣೋರಿಗೆ ಕಾಯಿಲೆ ಕಸಾಲೆ ಜಾಸ್ತಿ.
೭೪೨. ಕೂದಲು ಕೊಂಕದಿರು = ಒಂದು ಚೂರೂ ಅಪಾಯವಾಗದಿರು, ಮುಕ್ಕಾಗದಿರು
ಪ್ರ : ಒಂದು ಕೂದಲೂ ಕೊಂಕದ ಹಾಗೆ ನಾವು ನೋಡಿಕೊಂಡು ಕಳಿಸ್ತೇವೆ
೭೪೩. ಕೂದಲು ಹಣ್ಣಾಗು = ಹೆಚ್ಚು ವಯಸ್ಸಾಗು, ಕೂದಲು ಬೆಳ್ಳಗಾಗು.
ಕಾಯಿ ಹಣ್ಣಾಗುವ ಪ್ರಾಕೃತಿಕ ಕ್ರಿಯೆಯ ಆಧಾರದ ಮೇಲೆ ಮೂಡಿರುವ ನುಡಿಗಟ್ಟಿದು.
ಪ್ರ : ಕೂದಲು ಹಣ್ಣಾಗಿದ್ರೂ, ಮೈಕಟ್ಟು ಗಟ್ಟಿಯಾಗಿದೆ.
೭೪೪. ಕೂನು ಸಿಗದಿರು = ಗುರುತು ಹತ್ತದಿರು
(ಕೂನು = ಗುರುತು)
ಪ್ರ : ಕೂನು ಸಿಗದಿದ್ದಾಗ ಏನು ಮಾತಾಡಲಿ, ನೀನೇ ಹೇಳು.
೭೪೫. ಕೂರಿಗೆ ದಾಳು ಮುಳುಗು = ಬೆಳಗಿನ ಜಾವವಾಗು, ಮಸಕು ಹರಿಯುವ ಹೊತ್ತಾಗು
(ಕೂರಿಗೆದಾಳು < ಕೂರಿಗೆ + ತಾಳು) ಕೂರಿಗೆ ಬಿತ್ತನೆಯ ಉಪಕರಣ. ಮೂರು ತಾಳಿನ ಕೂರಿಗೆ, ಆರುತಾಳಿನ ಕೂರಿಗೆ, ಒಂಬತ್ತು ತಾಳಿನ ಕೂರಿಗೆ, ಹನ್ನೆರಡು ತಾಳಿನ ಕೂರಿನ ಇರುವುದುಂಟು. ತಾಳು ಎಂದರೆ ಕೂರಿಗೆಯ ಹಲುಬೆಯಾಕಾರದ ಮರದ ದಿಂಡಿಗೆ ಎಜ್ಜ ಮಾಡಿ ಕೆಳಭಾಗದಲ್ಲಿ ಲಗತ್ತಿಸಿರುವ ಕೊಳವೆಯಾಕಾರದ ಒಂದೂವರೆ ಗೇಣುದ್ದದ ಬಿದಿರಗೂಟಗಳು. ಮೇಲುಭಾಗದಲ್ಲಿ ಅದೇ ರಂದ್ರಗಳಿಗೆ ಲಗತ್ತಿಸಿದ ಸೆಡ್ಡೆ (ಕೊಳವೆಯಿರುವ ಬಿದಿರ ಕೋಲುಗಳು) ಗಳನ್ನು ಮೇಲಿರುವ ಕೂರಿಗೆ ಬಟ್ಟಲು ರಂದ್ರಗಳಿಗೆ ಜೋಡಿಸಿ ಅಲುಗಾಡದಂತೆ ಹುರಿ ಸೇದಿ ಕಟ್ಟಿರುತ್ತಾರೆ. ಕೂರಿಗೆ ಬಟ್ಟಲಲ್ಲಿ ರೈತ ಬಿಡುವ ರಾಗಿ ಸೆಡ್ಡೆಗಳ ಮೂಲಕ ಕೆಳಗಿಳಿದು, ತಾಳುಗಳ ಮೂಲಕ ನೆಲದ ಮಣ್ಣೊಳಗೆ ಬೀಳುತ್ತದೆ.
ಮೂರು ತಾಳಿನ ಕೂರಿಗೆಯಂತೆ, ಸಾಲಾಗಿರುವ ಮೂರು ಚುಕ್ಕೆಗಳಿಗೆ ಜನಪದರು ‘ಕೂರಿಗೆದಾಳು’ ಎಂದು ಕರೆಯುತ್ತಾರೆ. ಅಂದರೆ ಅವರಲ್ಲಿ ಯಾವುದೇ ವಸ್ತುವಿಗೆ, ಪ್ರಾಣಿಪಕ್ಷಿ ಕ್ರಿಮಿ ಕೀಟಾದಿಗಳಿಗೆ ಅರಗಳಿಗೆಯಲ್ಲಿ ಅಭಿವ್ಯಕ್ತಿ ನೀಡಿ ಹೆಸರಿಸುವ ಸೃಜನಪ್ರತಿಭೆ ಇರುವುದನ್ನು ಕಾಣಬಹುದು. ಉದಾಹರಣೆಗೆ ಧ್ರುವ ನಕ್ಷತ್ರಕ್ಕೆ ‘ಬೇಡತಿ ಮೂಗುತಿ’ ಎಂದೂ (ಚಂದ್ರನ ವರ್ಣನೆ ಮಾಡುತ್ತಾ ಹರಿಹರ ‘ಪುಳಿಂದಿ ತಾಳ್ದೆಸೆವ ಮೂಗಿನ ನತ್ತು’ ಎಂದು ವರ್ಣಿಸಿರುವುದಕ್ಕೆ ಮೂಲ ಪ್ರಚೋದನೆ ಮೇಲಿನ ಜನಪದ ಕಲ್ಪನೆ ಇರಬಹುದೆ?)ಸಪ್ತರ್ಷಿ ಮಂಡಲಕ್ಕೆ ‘ಅಜ್ಜಿ ಮಂಚ’ ಎಂದೂ, ಶುಕ್ರನಿಗೆ ‘ಬೆಳ್ಳಿ’ ಎಂದೂ, ಧೂಮಕೇತುವಿಗೆ ‘ಬರಲು ಚುಕ್ಕೆ’ ಎಂದೂ ನಿರಾಯಾಸವಾಗಿ, ನೀರು ಕುಡಿದಷ್ಟು ಸುಲಭವಾಗಿ ಅಭಿವ್ಯಕ್ತಿಸಬಲ್ಲವರು. ನೆತ್ತಿಯ ಮೇಲಿದ್ದ ಕೂರಿಗೆದಾಳು ಪಡುವಲತ್ತ ಜಾರಿ ಕಾಣದಾದಾಗ ‘ಕೂರಿಗೆ ದಾಳು ಮುಳುಗಿದವು’ ಎನ್ನುತ್ತಾರೆ. ಅಂದರೆ ಬೆಳಗಿನ ಜಾವವಾಯಿತು ಎಂಬ ಕಾಲ ನಿರ್ದೇಶಕ ಪರಿಭಾಷೆಯಾಗಿ ಚಾಲ್ತಿಯಲ್ಲಿದೆ. ವಿಜ್ಞಾನಿಗಳು ಇದನ್ನು “ಮಹಾವ್ಯಾಧ ನಡುಪಟ್ಟಿಎಂದು ಕರೆಯುತ್ತಾರೆ. ಇಂಗ್ಲಿಷಿನಲ್ಲಿ “Belt of the Orien” ಎನ್ನುತ್ತಾರೆ.
ಪ್ರ : ಆಗಲೇ ಕೂರಿಗೆ ದಾಳು ಮುಳುಗಿದೊ, ಎದ್ದು ಆರು ಕಟ್ಕೊಂಡು ಹೋಗು
೭೪೬. ಕೂರಗವಿಲ್ಲದ ಕದವಾಗು = ಕ್ರಿಯಾವಿಹೀನವಾಗು, ಚಲನರಹಿತವಾಗು, ಹೆಣ್ಣಿಲ್ಲದ ಸ್ಪಂದನರಹಿತ ನಿಸ್ಸಾರ ಸಂಸಾರವಾಗು.
ಕೂರವೆಂದರೆ ಮರೆದ ಕದ ಹಿಂದಕ್ಕೂ ಮುಂದಕ್ಕೂ ತೆಗೆಯುವುದಕ್ಕೆ ಸಹಕಾರಿಯಾದ, ಇಡೀ ಕದದ ವಜೆ ಅದರ ಮೇಲೆ ನಿಂತಿರುವ, ಕದದ ಎಡ ಭಾಗದ ಅಂಚಿನ ಕೆಳಗಿರುವ, ಕೆಳಗಿನ ತಿರುಗಣೆಯ ಗೂಟ. ಕೂರಗವಿಲ್ಲದಿದ್ದರೆ ಕದವನ್ನು ತೆಗೆಯಲೂ ಆಗುವುದಿಲ್ಲ, ಮುಚ್ಚಲೂ ಆಗುವುದಿಲ್ಲ. ಜಂಗಮಕ್ಕೆ ಬದಲು ಸ್ಥಾವರವಾಗಿ ಬಿಡುತ್ತದೆ. ಯಾವಾಗಲೂ ಸ್ಥಾವರಕ್ಕಿಂತ ಜಂಗಮ ಲೇಸು. ಅದಕ್ಕೆ ಪಂಪ ‘ಸಾರಂ, ಜಂಗಮ ಲತಾಲಲಿತಾಂಗಿಯರಿಂದಮಲ್ತೆ ಸಂಸಾರಂ?’ ಎಂದು ಸಾರಿದ್ದು.
ಪ್ರ : ಹೆಂಡ್ರಿಲ್ಲದ ಮನೆ, ಕೂರಗವಿಲ್ಲದ ಕದ ನಿಷ್ಪ್ರಯೋಜಕ
೭೪೭. ಕೂಲಿಸಿ ಹೋಗು = ನಾಶವಾಗು, ದಡ ಕುಸಿದು ಹೋಗು
(ಕೂಲ = ದಡ)
ಪ್ರ : ಗಾದೆ – ಕೀಲು ಸುಳಿ ಎತ್ತು ತಂದ್ರೆ ಮನೆ ಕೂಲಿಸಿ ಹೋಗ್ತದೆ.
೭೪೮. ಕೂಸುಮರಿ ಮಾಡಿಕೊಳ್ಳು = ಪ್ರೀತಿಯಿಂದ ಬೆನ್ನ ಮೇಲೆ ಕೂಡಿಸಿಕೊಳ್ಳು.
ಸಾಮಾನ್ಯವಾಗಿ ಅಳುವ ಮಕ್ಕಳನ್ನು ನಗಿಸಲು, ಅವರನ್ನು ಆಟವಾಡಿಸಲು ಬೆನ್ನಮೇಲೆ ಕೂಡಿಸಿಕೊಂಡು, ತಮ್ಮ ಎರಡೂ ಕೈಗಳನ್ನು ಹಿಂದಕ್ಕೆ ಚಾಚಿ, ಮಗುವಿನ ಸೊಂಟವನ್ನು ಬಳಸುವಂತೆ, ಹಿಡಿದುಕೊಂಡಿರುತ್ತಾರೆ. ಹಾಗೆ ಹಿಡಿದುಕೊಂಡು ‘ಕೂಸುಮರಿ ಬೇಕೇ ಕೂಸುಮರಿ’ ಎಂದು ಓಡಾಡುತ್ತಾರೆ. ಕೆಲವು ಸಾರಿ ಹೊಲದ ಬಳಿಗೋ ಅಥವಾ ಮನೆಯ ಬಳಿಗೋ ಅತಿ ಮುದ್ದಿನಿಂದ ಸಾಕಿದ ಏಳೆಂಟು ವರ್ಷದ ಹುಡುಗರನ್ನೂ ಕೂಸುಮರಿ ಮಾಡಿಕೊಂಡು ಹೋಗುವುದುಂಟು.
ಪ್ರ : ಗಾದೆ – ಕೂಸುಮರಿ ಮಾಡಿಕೊಂಡಿದ್ದಕ್ಕೆ ಕಂಕುಳ ಸಂದಿ ಕೈಯಿಕ್ಕಿದ !
೭೪೯. ಕೂಳು ಕುಕ್ಕು = ಅನ್ನ ಮದ ಹೆಚ್ಚಾಗು, ಅಹಂಕಾರ ಅಧಿಕವಾಗು
(ಕೂಳು = ಅನ್ನ) ಸಂಸ್ಕೃತದಿಂದ ಬಂದ ‘ಅನ್ನ’ ಶಬ್ದ ಅಚ್ಚಗನ್ನಡದ ‘ಕೂಳು’ ಶಬ್ದವನ್ನು ಮೂಲೆಪಾಲು ಮಾಡಿ ಮಣೆಯ ಮೇಲೆ ಕೂತಿತು. ಹೀಗೆಯೇ ಅಚ್ಚಗನ್ನಡ ‘ನೀರು’ ಶಬ್ದ ಸಂಸ್ಕೃತದವರ ಪಾಲಾಗಿ ಅಲ್ಲಿ ಭದ್ರವಾಗಿ ಮಣೆಯ ಮೇಲೆ ವಿರಾಜಮಾನವಾಯಿತು. ಅದಕ್ಕೋಸ್ಕರವಾಗಿಯೇ ತೀನಂಶ್ರೀ ಅವರು “ನಾವು ಸಂಸ್ಕೃತದವರ ಅನ್ನ ಕಿತ್ಕೊಂಡು ಅವರಿಗೆ ನೀರು ಕುಡಿಸಿದೆವು” ಎಂದು ವಿನೋದವಾಗಿ ಹೇಳುತ್ತಿದ್ದರು. ಆದರೆ ಇವತ್ತಿಗೂ ಅನ್ನ ಎಂಬ ಅರ್ಥದಲ್ಲಿ “ತಂಗಳು ಬೆಂಗಳು” ಎಂಬ ಶಬ್ದಗಳಲ್ಲಿ ಕೂಳು ಬೆಸೆದುಕೊಂಡಿರುವುದನ್ನು ಕಾಣಬಹುದು.
ಪ್ರ : ನಿನಗೆ ಕೂಳು ಕುಕ್ತದೆ, ಏನ್ಮಾಡ್ತೀಯ ? ಕೂಳಿಲ್ಲದಿದ್ರೆ ಗೊತ್ತಾಗೋದು ಗೋಳು
೭೫೦. ಕೂಳು ಹಾಕು = ಶ್ರಾದ್ಧ ಮಾಡು, ತಿಥಿ ಮಾಡು, ಪಿಂಡಹಾಕು.
ಕೂಳು ಎಂಬ ಶಬ್ದ ವ್ಯಾಪಕವಾದ ‘ಅನ್ನ’ ಎಂಬ ಅರ್ಥವನ್ನು ಕಳೆದುಕೊಂಡು (ಸಂಸ್ಕೃತದ ಅನ್ನ ಶಬ್ದದ ಪ್ರಾಚುರ್ಯದಿಂದಾಗಿ) ಈಗ ತೀರಿ ಹೋದವರಿಗೆ ಪಿಂಡ ಹಾಕು ಎಂಬ ಅರ್ಥದಲ್ಲಿ ಬಳಕೆಗೊಳ್ಳುತ್ತಿದೆ. ಆದರೂ ಹಳ್ಳಿಗಾಡಿನಲ್ಲಿ ಅನ್ನ ಎಂಬ ಅರ್ಥದಲ್ಲಿ ದಿನನಿತ್ಯದ ಮಾತುಕತೆಯಲ್ಲಿ ಬಳಕೆಯಾಗುವುದುಂಟು. ಉದಾಹರಣೆಗೆ ‘ಒಂದು ಹೊತ್ತಿನ ಕೂಳಿಗೂ ಗತಿ ಇಲ್ಲ’ ‘ಹೊತ್ತಿಗ್ಹೊತ್ತಿಗೆ ಕೂಳು ಹಾಕಿದ್ರೆ ಹೊತ್ತಿಗ್ಹೊತ್ತಿಗೆ ಕೆಲಸಕ್ಕೆ ಹೋಗಬಹುದು’ ಇತ್ಯಾದಿ.
ಪ್ರ : ಇವತ್ತಿಗೆ ಸರಿಯಾಗಿ ಹನ್ನೊಂದನೇ ದಿವಸಕ್ಕೆ ‘ಕೂಳು ಹಾಕ್ತೇವೆ’ ತಪ್ಪಿಸಿಕೊಳ್ಳದ ಹಂಗೆ ಬಂದುಬಿಡಿ.
೭೫೧. ಕೂಳೆ ಮೇಲೆ ಹಾದು ಅಂಗಾಲು ಮೋಳೆ ಬೀಳು = ನಡೆಯಬಾರದಲ್ಲಿ ನಡೆದು ನೋವು ತಂದುಕೊಳ್ಳು
(ಕೂಳೆ = ಬೆಳೆಯನ್ನು ಕೊಯ್ದ ಮೇಲೆ ಉಳಿಯುವ ಬುಡ, ಮೋಟು; ಮೋಳೆ = ತೂತು)
ಪ್ರ : ಗಾದೆ – ಕೂಳೆ ಮೇಲೆ ಹಾದರೆ ಅಂಗಾಲು ಹೈರಾಣ
ಸೂಳೆ ಮೇಲೆ ಹೋದರೆ ಕಂಗಾಲು ಪರಾಣ
೭೫೨. ಕೆಕ್ಕರಿಸು = ದ್ವೇಷಿಸು, ಸೇಡಿಗಾಗಿ ಕಾಯುತ್ತಿರು
(ಕೆಕ್ಕರಿಸು < ಕ್ಯಾಕರಿಸು < ಕೇಕರಿಸು = ಕಾಲು ಕೆರೆದು ಕ್ಯಾತೆ ತೆಗೆಯುವ ಧಾಟಿಯಲ್ಲಿ ಕೆಮ್ಮುವುದು, ಕ್ಯಾಕರಿಸಿ ಉಗಿಯುವುದು, ದುರುಗುಟ್ಟಿ ನೋಡುವುದು – ಇತ್ಯಾದಿ ಮಾಡು)
ಪ್ರ : ನನ್ನ ಕಂಡ್ರೆ ಸಾಕು, ಹಂಗೆ ಕೆಕ್ಕರಿಸ್ತಾನೆ.
೭೫೩. ಕೆಚ್ಚಲು ಬಿಡು = ಸೊರ ಬಿಡು.
(ಕೆಚ್ಚಲು = ಜಾನುವಾರುಗಳ ಮೊಲೆಯ ಮೇಲುಭಾಗದ ಮಾಂಸಲಭಾಗ)
ಪ್ರ : ಕರ ಕುಡಿಯೋಕೆ ಬಿಟ್ಟಾಗ ಕೆಚ್ಚಲು ಬಿಡ್ತದೆ; ನೀನು ಮೊದಲೇ ಮೊಲೆಗೆ ಕೈ ಹಾಕಿ ಹಾಲು ಕರೆಯೋಕೆ ಹೋದ್ರೆ ಒದೀತದೆ ಅಷ್ಟೆ, ಹಾಲೂ ಇಲ್ಲ ಗೀಲೂ ಇಲ್ಲ
೭೫೪. ಕೆಟ್ಟು ಕೆರ ಹಿಡಿದು ಹೋಗು = ಸಂಪೂರ್ಣ ಹಾಳಾಗು, ಆಸ್ತಿ ಪಾಸ್ತಿಯನ್ನೆಲ್ಲ ಕಳೆದುಕೊಂಡು ದುಡಿಮೆಗೆ ದಾರಿಯೇ ಇಲ್ಲದಂತೆ ಮಾಡಿಕೊಳ್ಳು.
ಹಿಂದೆ ಕರೆ ಹೊಲಿಯುವ, ಮಾರುವ ವೃತ್ತಿಯನ್ನು ಮಾಡುತ್ತಿದ್ದವರು ಎಡಗೈ ಜಾತಿಯ ಜನ. ಕೂಲಿ ನಾಲಿ ಮಾಡಿಕೊಂಡು ಕಾಲ ಹಾಕುವ ಸ್ಥಿತಿ ಇತ್ತೇ ವಿನಾ ಅವರಿಗೆ ಉಳುವ ಭೂಮಿ ಇರಲಿಲ್ಲ. ಅರ್ಥಾತ್ ಸಮಾಜ ಆ ಅವಕಾಶವನ್ನು ವಂಚಿಸಿತ್ತು. ಆದ್ದರಿಂದ ಕೆರ ಹೊಲಿಯುವ ವೃತ್ತಿ ಏನೂ ಸಂಪನ್ಮೂಲವಿಲ್ಲದ ನಿರ್ಗತಿಕನ ಅಂತಿಮ ನೆಲೆ ಎಂಬ ಭಾವನೆ ಇತ್ತು. ಅದು ಈ ನುಡಿಗಟ್ಟಿಗೆ ಮೂಲ. ಆದರೆ ಈಗ ಆ ವೃತ್ತಿ ಕೀಳೆಂಬ, ನಿರ್ದಿಷ್ಟ ಜನರು ಮಾತ್ರ ಮಾಡುವಂಥದು ಎಂಬ ಅಭಿಪ್ರಾಯ ಮಾಯವಾಗಿ, ಎಲ್ಲ ಜಾತಿಯ ಜನ ಲಾಭದಾಯಕ ವೃತ್ತಿಯೆಂದು ಕೈಗೆತ್ತಿಕೊಂಡಿರುವುದು ಸಮಾಧಾನದ ಸಂಗತಿ.
ಪ್ರ : ಅಯ್ಯೋ ಅವನು ಎಲ್ಲ ಕಳಕೊಂಡು ಕೆಟ್ಟ ಕೆರ ಹಿಡಿದು ಹೋದ.
೭೫೫. ಕೆತ್ತ ಕೆತ್ತ ಸಿಬರಾಗು = ಮಾತಿಗೆ ಮಾತು ಮಥನಕ್ಕೆ ಕಾರಣವಾಗು, ಸಮಸ್ಯೆ ಉಲ್ಬಣಿಸು
(ಕೆತ್ತ ಕೆತ್ತ < ಕೆತ್ತುತ್ತಾ ಕೆತ್ತುತ್ತಾ; ಸಿಬರು = ಮರದ ಸಣ್ಣ ರೇಕುಗಳು, ಕೂಳೆ) ಮರವನ್ನು ನಯಸ್ಸು ಮಾಡಲು ಅಥವಾ ನುಣುಪು ಮಾಡಲು ಬಾಚಿಯಿಂದ ಕೆತ್ತುತ್ತಾರೆ. ಯಾವುದೋ ಭಾಗದಲ್ಲಿ ಸಿಬರೆದ್ದಿದೆ ಎಂದು ಅದನ್ನು ಕೆತ್ತಿ ನುಣುಪು ಮಾಡಲು ಹೋದರೂ ಮತ್ತೊಂದು ಸಿಬರು ಮೇಲೇಳುತ್ತದೆ. ಹಾಗೆ ಮಾತಿಗೆ ಮಾತು ಕೊಡುತ್ತಾ ಹೋದರೆ ಅದರ ಸಿಬರು ಏಳುತ್ತಲೇ ಹೋಗುತ್ತದೆ. ಸಮಸ್ಯೆಯು ನುಣುಪು ನಯವಾಗುವ ಬದಲು ಸಿಬರೆದ್ದು ಉರುಕು ಉರುಕಾಗುತ್ತಾ ಹೋಗುತ್ತದೆ. ಈ ನುಡಿಗಟ್ಟು ಬಡಗಿ ವೃತ್ತಿಯ ಮೂಲದ್ದು.
ಪ್ರ : ಮಾತಿಗೆ ಮಾತು ಎದುರಾಡಬೇಡ, ಗೊತ್ತಿಲ್ಲದ ‘ಕೆತ್ತಕೆತ್ತ ಸಿಬರು’ ಅಂತ?
೭೫೬. ಕೆದಕಿ ತದಕಿಸಿಕೊಳ್ಳು = ಹಿಂದಿನದನ್ನೆಲ್ಲ ಎತ್ತಾಡಿ ಮೂಳೆ ಮುರಿಸಿಕೊಳ್ಳು
(ಕೆದಕು = ಕೆದರು, ಬೆದಕು; ತದಕು = ಹೊಡಿ)
ಪ್ರ : ಹಿಂದಿನದನ್ನೆಲ್ಲ ಕೆದಕಿ ಅವನಿಂದ ಚೆನ್ನಾಗಿ ತದಕಸಿಕೊಂಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ