ನನ್ನ ಪುಟಗಳು

10 ಅಕ್ಟೋಬರ್ 2017

ಕನಕದಾಸ ಶಿಕ್ಷಣ ಸಮಿತಿ ಸಂಸ್ಥಾಪಕರ ಆದರ್ಶದ ಬದುಕು

                             ಸಾಧನೆಯ ಕ್ಷೇತ್ರ ಇಂತಹುದೆ ಆಗಿರಬೇಕು ಎಂದೇನೂ ಇಲ್ಲ, ಅದು ಯಾವುದೇ ಇರಲಿ ಉನ್ನತವಾದ ಗುರಿಯನ್ನು ಹೊಂದಿ ಅಸಾಧ್ಯವಾದುದನ್ನು ಸಾಧಿಸಲೇಬೇಕೆಂಬ ಛಲವೊಂದಿದ್ದರೇ ಎಂತಹುದೆ ಗುರಿಯನ್ನಾದರೂ ಸಾಧಿಸಬಹುದೆಂಬ ನಿದರ್ಶನ ವ್ಯಕ್ತಿತ್ವವುಳ್ಳ ಮಹಾನ್ ವ್ಯಕ್ತಿಗಳು ಈ ನಾಡಿನಲ್ಲಿ ಹುಟ್ಟಿ ಸಾರ್ಥಕ ಬದುಕಿನ ಸಾಧಕರಾಗಿದ್ದಾರೆ. ಅಂತಹ ಸಾಧಕರಲ್ಲಿ ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕರಾದ ಡಾ. ಬಿ.ಎಫ್.ದಂಡಿನರವರು ಕಾಣಸಿಗುತ್ತಾರೆ. ಶಿಕ್ಷಣದ ಮೇಲೆ ಅಪಾರ ಪ್ರೇಮ, ಸಾಮಾಜಿಕ ಹಿತ ಚಿಂತನೆ ಹಾಗೂ ಬಡವ-ದೀನ-ದಲಿತರ ಮೇಲಿನ ಕಾಳಜಿ ಇವು ಇವರಲ್ಲಿನ ಆದರ್ಶಗಳು.
           ಡಾ.ದಂಡಿನರವರು ರೋಣ ತಾಲೂಕಿನ ದ್ಯಾಮುಣಸಿ ಗ್ರಾಮದ ಬಡಕುಟುಂಬದಲ್ಲಿ ೧೯೩೫ ಅಗಷ್ಟ ೫ ರಂದು ಜನಿಸಿದರು. ಇವರ ತಂದೆ ಫಕ್ಕಿರಪ್ಪ, ತಾಯಿ ದ್ಯಾಮವ್ವ. ಡಾ.ದಂಡಿನರವರು ಬಡತನದ ಬೇಗೆಯ ಬುತ್ತಿಯನ್ನೇ ಉಣ್ಣುತ್ತ ತಮ್ಮ ಪ್ರತಿಭೆಯ ಬಲದಿಂದ ಸಂಖ್ಯಾಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಬಡತನದ ನೋವನ್ನು ಅರಿತ ಇವರು ಗ್ರಾಮೀಣ ಹಾಗೂ ಬಡ ಮಕ್ಕಳ ಶಿಕ್ಷಣದ ಸಲುವಾಗಿ ಸದಾ ಚಿಂತಿಸುತ್ತಲೇ ಇದ್ದರು. ೧೯೬೩ರಲ್ಲಿ ಹಿರೇಕುಂಬಿ ಗ್ರಾಮದ ಬೆಳವಡಿ ಮನೆತನದ ಶಿವಪ್ಪ ಮತ್ತು ಲಕ್ಷ್ಮವ್ವ ದಂಪತಿಗಳ ಮಗಳಾದ ಶಕುಂತಲಾದೇವಿಯವರನ್ನು ವಿವಾಹವಾದರೂ ಮುಂದೆ ಶ್ರೀಮತಿ ಶಕುಂತಲಾದೇವಿಯವರು ತಮ್ಮ ಪತಿಯ ಸಾಧನೆಗೆ ಸ್ಪೂರ್ತಿಯ ಸೆಲೆಯಾಗಿ ನಿಂತರು.
                   ೧೯೬೫ರಲ್ಲಿ ಗದುಗಿನಲ್ಲಿ ಕನಕದಾಸ ಗಂಡು ಮಕ್ಕಳ ಪ್ರಸಾದ ನಿಲಯ ಆರಂಭಿಸುವ ಮೂಲಕ ಕನಕದಾಸ ಶಿಕ್ಷಣ ಸಮಿತಿಯನ್ನು ಸಂಸ್ಥಾಪಿಸಿದರು. ತಾವು ವಿದ್ಯಾರ್ಥಿ ಜೀವನದಲ್ಲಿ ಉಚಿತ ಪ್ರಸಾದ ನಿಲಯದಲ್ಲಿಯೇ ಆಶ್ರಯ ಪಡೆದು ಆಡಂಬರ ಜೀವನದ ಮೋಹ ಬೆಳೆಸಿಕೊಳ್ಳದೇ ಸರಳ ಶಿಸ್ತು ಬದ್ದ ಆದರ್ಶ ವಿದ್ಯಾರ್ಥಿಯಾಗಿ ಬೆಳೆದರು ಇದೇ ಕಾರಣ ಇರಬಹುದೇನೋ ಅವರು ಶಿಕ್ಷಣ ಕೊಡುವುದರೊಟ್ಟಿಗೆ ಉಚಿತ ಅನ್ನದಾನದ ಪ್ರಸಾದ ನಿಲಯದ ಮೂಲಕ ಕನಕದಾಸ ಶಿಕ್ಷಣ ಸಮಿತಿಯನ್ನು ಪ್ರಾರಂಭಿಸಿದರು. ಆರಂಭದಲ್ಲಿ ಉಚಿತ ಪ್ರಸಾದ ಹಾಗೂ ವಸತಿ ನಿಲಯ ನಡೆಸಲು ತುಂಬಾ ತೊಂದರೆಯಿತು ಆದರೂ ಹೇಗೋ ನಿಭಾಯಿಸಿಕೊಂಡು ತಮ್ಮ ಟ್ಯೂಶನ್ನಿನಿಂದ ಬಂದ ವರಮಾನವನ್ನು ವಿದ್ಯಾರ್ಥಿಗಳ ಊಟೋಪಚಾರಕ್ಕೆ ಹಾಕಿ ನಡೆಸಿಕೊಂಡು ಬಂದರು. ಪ್ರಸಾದ ನಿಲಯದಲ್ಲಿ ಕೆಲವು ಬಾರಿ ಅಡುಗೆಯವರು ಬರದ ಸಂದರ್ಭದಲ್ಲಿ ತಮ್ಮ ಮನೆಯಿಂದಲೇ ಅಡುಗೆ ಮಾಡಿಸಿ ವಿದ್ಯಾರ್ಥಿಗಳಿಗೆ ಊಟ ಬಡಿಸಿರೋ ನಿದರ್ಶನಗಳು ಇವೆ. ಹಾಗೂ ಆದರ್ಶಗಳು ಕೇವಲ ಮಾತುಗಳಲ್ಲಿ ಇಲ್ಲ, ಕೃತಿಯಲ್ಲಿವೆ ಎಂಬುದಕ್ಕೆ ಉತ್ತಮ ನಿದರ್ಶನವೆಂದರೆ ೧೯೭೫-೭೬ ರ ಸಂದರ್ಭದಲ್ಲಿ ಡಾ. ದಂಡಿನ ದಂಪತಿಗಳಿಬ್ಬರು ತಮ್ಮ ನೂತನ ಗೃಹ ಪ್ರವೇಶವನ್ನು ಹರಿಜನ ವಿದ್ಯಾರ್ಥಿಗಳಿಂದ ನೇರವೇರಿಸಿದ್ದು, ಇಂತಹ ಉದಾತ್ತ ಹಾಗೂ ಆದರ್ಶ ಗುಣಗಳು ಈ ದಂಪತಿಗಳಲ್ಲಿ ಇದೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಪ್ರೊ. ದಂಡಿನರವರ ಸಾಧನೆಯನ್ನು ಗುರುತಿಸಿ ೨೦೧೧ರಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು.
                  ಡಾ.ದಂಡಿನರವರು ನೆಟ್ಟ ಸಸಿ ಇಂದು ಹೆಮ್ಮರವಾಗಿ ಬೆಳೆದು ಲಕ್ಷಾಂತರ ವಿದ್ಯಾರ್ಥಿಗಳ ಜೀವನಕ್ಕೆ ನೆರಳಾಗಿದೆ ಈ ಸಂದರ್ಭದಲ್ಲಿ ಕನಕದಾಸ ಶಿಕ್ಷಣ ಸಮಿತಿಯು ಸುವರ್ಣ ಮಹೋತ್ಸವವನ್ನು ಪೂರೈಸಿ ಸಾಮಾಜಿಕ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಾ ಪ್ರಾಥಮಿಕ ಮತ್ತು ಪ್ರೌಢ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳನ್ನು, ಪದವಿ ಪೂರ್ವ ಕಾಲೇಜುಗಳನ್ನು, ಪದವಿ ಮಹಾವಿದ್ಯಾಲಯಗಳನ್ನು, ಸ್ನಾತಕೋತ್ತರ ಮಹಾವಿದ್ಯಾಲಯಗಳನ್ನು ಹೀಗೆ ೬೫ ಅಂಗ ಸಂಸ್ಥೆಗಳನ್ನು ಹೊಂದಿ ಸಾಧನೆಯ ದಾಪುಗಾಲು ಹಾಕುತ್ತಿದೆ.
ಲೇಖಕರು:
ರವಿಚಂದ್ರ ಕೊಣ್ಣೂರ
ಶ್ರೀ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ,
ಅರವಿಂದ ನಗರ, ಹಳೆ ಹುಬ್ಬಳ್ಳಿ ,
ಹುಬ್ಬಳ್ಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ