ನನ್ನ ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-46

         ದಟ್ಟಗಾಡಿನ ಮರದೆಲೆಗಳ ಮೇಲೆ ಮಳೆ ಬೀಳುತ್ತಿದ್ದ ಸದ್ದಿನಲ್ಲಿಯೂ ಕೆರೆಹೊಂಡದ ಕಂಪಕ್ಕೆ ಹಾರಿ ಉಸುಬಿನಲ್ಲಿ ಸಿಕ್ಕಿಬಿದ್ದು ಕೂಗಿಕುಳ್ಳುತ್ತಿದ್ದ ಗಿರ್ಲುಮೀಸೆ ಪೋಲೀಸೀನವನ ಆರ್ತನಾದವೂ ಗುತ್ತಿಗೆ ಕೇಳಿಸಿತ್ತು; ಬೇರೆಯ ಕಡೆಯಿಂದ ನನ್ನನ್ನು ಅಡ್ಡಹಾಕಲು ಓಡಿ ಬಂದು ಮುಳ್ಳಿನ ಪೊದೆಗಳಲ್ಲಿ ಸಿಕ್ಕಿಕೊಂಡ ಬೋಳುಮೀಸೆಯ ಪೋಲೀಸಿನವನ ಮೇಲೆ ಹುಲಿಯ ಹಾರಿದಾಗ ಅವನು ಉರುಳಿಬಿದ್ದು ಶಪಿಸಿ ಕೂಗಿಕೊಂಡದ್ದು ಅವನಿಗೆ ಕೇಳಿಸಿತ್ತು. ಅವನು ಮಾತ್ರ, ಇಜಾರದ ಸಾಬಿಯ ದೊಣ್ಣೆ ಪೆಟ್ಟಿನ ಗಾಯದ ಗುಣ್ಣಿನಿಂದ ನೋಯುತ್ತಿದ್ದ ತನ್ನ ಕಾಲಿನ ಕುಂಟನ್ನು ಒಂದಿನಿತೂ ಲೆಕ್ಕಿಸದೆ, ಒಂದೇ ಸಮನೆ ಗುಡ್ಡವೇರಿ ಕಾಡಿನಲ್ಲಿ ಓಡತೊಡಗಿದ್ದನು. ಆದಷ್ಟು ಬೇಗನೆ ಅಪಾಯದಿಂದ ದೂರ ಓಡಿ ಪಾರಾಗಬೇಕು ಎಂಬುದೇ ಅವನ ಮುಖ್ಯ ಲಕ್ಷ್ಯವಾಗಿತ್ತು. ಎಲ್ಲೆಗೆ? ಎತ್ತ ಕಡೆಗೆ? ಅದೊಂದೂ ಅವನ ಪ್ರಜ್ಞೆಯಲ್ಲಿರಲಿಲ್ಲ.

ಕೊಪ್ಪೆ ಹಾಕಿಕೊಂಡಿದ್ದ ಕಂಬಳಿ ಮುಳ್ಳಿಗೆ ಸಿಕ್ಕಿಕೊಂಡಾಗ ಅದನ್ನು ಓಡುತ್ತಲೆ ರಭಸಿದಿಂದ ಎಳೆದು ಬಗಲಿಗೆ ಸೇರಿಸಿದ್ದನು. ಆಮೇಲೆ ತಲೆಯ ಎಲೆವಸ್ತ್ರ ಪೊದೆಯ ಮುಳ್ಳಿಗೆ ಸಿಕ್ಕಿ ನೇತಾಡುತ್ತಿದ್ದುದನ್ನು, ನಿರ್ದಯವಾಗಿ ಅದು ಹರಿದುದನ್ನೂ ಲೆಕ್ಕಿಸದೆ, ಎಳೆದು ಸೊಂಟಕ್ಕೆ ಸುತ್ತಿಕೊಂಡಿದ್ದನು. ಕಂಬಳಿಕೊಪ್ಪೆ ಮತ್ತು ತಲೆವಸ್ತ್ರಗಳು ಸ್ಥಳಾಂತರ ಹೊಂದಿದಮೇಲೆ ಮಳೆಯ ನೀರಿನಲ್ಲಿ ತಲೆ ಮೈ ಎಲ್ಲ ತೊಪ್ಪನೆ ತೊಯ್ದಿದ್ದವು. ಮುಖಕ್ಕೆ ಹರೆ ಗೀರಿ ನೆತ್ತರು ಸೋರಿದ್ದುದು ಅವನಿಗೆ ಗೊತ್ತೆ ಇರಲಿಲ್ಲ. ಕಾಲಿಗೊಮ್ಮೆ ಕೊರಕಲು ಹೆಟ್ಟದಾಗ ಯಾಂತ್ರಿಕವಾಗೆಂಬಂತೆ ನಿಂತು ಅದನ್ನು ಕಿತ್ತು ಹಾಕಿದ್ದನೆ ಹೊರತು ರಕ್ತ ಹರಿದುದನ್ನು ಗಮನಿಸಲು ಪುರುಸೊತ್ತೆ ಇರಲಿಲ್ಲ. ಇನ್ನು ಕಾಲಿಗೆ ಹತ್ತಿ, ತೊಡೆಗೇರಿ, ಸೊಂಟದ ಸುತ್ತಮುತ್ತಣ ಪ್ರದೇಶಗಳನ್ನೂ ಆಕ್ರಮಿಸುತ್ತಿದ್ದ ಇಂಬಳಗಳ ತಂಟೆಗೂ ಅವನು ಹೋಗಿರಲಿಲ್ಲ. ತಲೆಯಮೇಲೆ ಬಿದ್ದ ಮಳೆಯ ನೀರಿನೊಡನೆ ಸಂಗಮವಾಗಿ, ಏದುತ್ತಿದ್ದ ಅವನ ಬಿಸಿಯುಸಿರ ಮೈಯಿಂದ ಇಳಿಯುತ್ತಿದ್ದ ಬೆವರು ಅವನ ದಗಲೆಯನ್ನೂ ಸೊಂಟದ ಪಂಚೆಯನ್ನೂ ಒದ್ದೆಮುದ್ದೆಯನ್ನಾಗಿ ಮಾಡಿತ್ತು.
ಪ್ರಯಾಣಕಾಲದಲ್ಲಿ ತಪ್ಪದೆ ಗತ್ತಿಯೊಡನೆ ಇರುತ್ತಿದ್ದ ಉಪಕರಣಗಳಲ್ಲಿ ಅವನ ಕತ್ತಿ ಮತ್ತು ಬಗನಿದೊಣ್ಣೆ ಎರಡೂ ಇಂದು ಅವನನ್ನು ಕೈಬಿಟ್ಟಿದ್ದುವು. ಅವನು ಹೊರಡುವ ಮುಂಚೆ ಅವೆರಡನ್ನೂ ಪದ್ಧತಿಯಂತೆ ತೆಗೆದುಕೊಂಡಾಗ ಗಿರ್ಲುಮೀಸೆಯವನು ಅವನ್ನು ಅವನ ಕೈಯಿಂದ ಕಿತ್ತು ಬಿಡಾರದ ಒಳಕ್ಕೆ ಎಸೆದಿದ್ದನು. ದೊಣ್ಣೆ ಇರದಿದ್ದರೂ ಚಿಂತೆಯಿರಲಿಲ್ಲ ಗುತ್ತಿಗೆ! ಕತ್ತಿಯಾದರೂ ಇದ್ದಿದ್ದರೆ? ದೊಣ್ಣೆಯನ್ನೂ ಮಾಡಿಕೊಳ್ಳಬಹುದಾಗಿತ್ತು; ಕಾಡಿನಲ್ಲಿ ಹೊಟ್ಟೆ ತುಂಬಿಕೊಳ್ಳುವುದಕ್ಕೂ ಅನುಕೂಲವಾಗುತ್ತಿತ್ತು!
ಎಷ್ಟು ಹೊತ್ತು ಓಡಿದ್ದನೊ? ಗುತ್ತಿಗೆ ಅರಿವಿರಲಿಲ್ಲ! ಅಂತೂ ಕೊನೆಗೆ, ಅಪಾಯದಿಂದ ಪಾರಾದೆ ಎಂಬ ಧೈರ್ಯ ಹೃದಯಕ್ಕೆ ಸ್ಪುರಿಸಿದಾಗ, ಕಾಡಿನ ನಡುವೆ ಬಿದ್ದಿದ್ದ ಒಂದು ಪುರಾತನ ಮರದ ದಿಂಡಿನ ಮೇಲೆ ಕಂಬಳಿ ಹಾಕಿಕೊಂಡು ಉಸ್ಸೆಂದು ಕೂತನು. ತೊಪ್ಪನೆ ತೊಯ್ದ ಅವನ ಒಕ್ಕಣ್ಣಿನ ಚತುಷ್ಪಾದಿ ಸ್ವಾಮಿಭಕ್ತ ಹುಲಿಯನೂ ಅವನ ಕಾಲಬುಡದಲ್ಲಿ ಕೂರಲು ಪ್ರಯತ್ನಿಸಿ, ಇಂಬಳಗಳಿಂದ ಪಾರಾಗಲೆಂಬಂತೆ ಗುತ್ತಿ ಕೂತ್ತಿದ್ದ ಹೆಮ್ಮರದ ದಿಂಡಿನ ಮೇಲಕ್ಕೆ ನೆಗೆದು, ಅವನ ಪಕ್ಕದಲ್ಲಿ, ಅವನಿಗಿಂತಲೂ ತುಸು ಎತ್ತರವಾಗಿಯೆ, ಅಂಡೂರಿ ಕೂತುಕೊಂಡಿತು. ಏದುತ್ತಿದ್ದ ನಾಯಿಯ ತೆರೆದ ಬಾಯಿಯಿಂದ ಜೋಲುತ್ತಿದ್ದ ಕೆನ್ನಾಲಗೆಯಿಂದ ಜೊಲ್ಲೋ ನೀರೋ ತೊಟ್ಟಿಕ್ಕುತ್ತಿತ್ತು. ಒದ್ದೆಯಾದ ರೋಮಮಯ ಮೈಯಿಂದ ಆವಿಯೂ ಸಿನುಗುವಾಸನೆಯೂ ಹೊಮ್ಮುತ್ತಿದ್ದುದನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ ಒಡೆಯನ ಜಾಗೃತಪ್ರಜ್ಞೆ.
ತಾನು ಮಾಡಿದುದೇನು? ತನಗಾಗಿರುವುದೇನು? ಎಂಬುದನ್ನು ಬುದ್ಧಿ ಗ್ರಹಿಸತೊಡಗಬೇಕಾದರೆ ಸ್ವಲ್ಪ ಕಾಲವೆ ಹಿಡಿಯಿತು ಗುತ್ತಿಗೆ. ಏದಾಟ ನಿಂತಮೇಲೆ ಮನಸ್ಸು ಸಾವಧಾನವಾಗಿ ಆಲೋಚಿಸಲು ಸಮರ್ಥವಾಯಿತು. ತಾನು ಪಾರಾಗಿದ್ದ ಅಪಾಯಕ್ಕಿಂತಲೂ ಹೆಚ್ಚು ಅಪಾಯಕರವಾಗಿ ತೋರಿತು ತಾನು ತಪ್ಪಿಸಿಕೊಂಡಿದ್ದ ಉಪಾಯದ ಸ್ವರೂಪ: ಆ ಗೀರ್ಲುಮೀಸೆಯವನು ಕಂಪದಲ್ಲಿ ಮುಳುಗಿ ಸತ್ತಿದ್ದರೆ!? ಅವನನ್ನು ಬಿಡಿಸಲು ಹೋಗಿ ಆ ಮೀಸೆಬೋಳನೂ ಕಂಪದ ಪಾಲಾಗಿದ್ದರೆ?! ನಾನೇ ಅವರಿಬ್ಬರ ಸಾವಿಗೂ ಕಾರಣನಾದೆನೆಂದು ಮರಣದಂಡನೆಗೆ ಗುರಿಮಾಡದೆ ಬಿಡುತ್ತಾರೆಯೆ? ಈಗಾಗಲೆ ನನ್ನ ಪತ್ತೆಗೆ ಶುರುವಾಗಿರಬೇಕು. ನಾನು ಎಲ್ಲಿ ಹೇಗೆ ತಲೆತಪ್ಪಿಸಿಕೊಳ್ಳಲಿ? ಮುತ್ತೂರು ಸೀಮೆಯ ಕಡೆಗೋ, ಕೊಪ್ಪದ ಸೀಮೆಯ ಕಡೆಗೋ, ಮುಂಡಕಾರು ಸೀಮೆಯ ಕಡೆಗೋ ಹೊಳೆ ದಾಟಿ ಓಡಿಹೋಗಿ, ಹೆಸರುಗಿಸರು ಬದಲಾಯಿಸಿಕೊಂಡು, ಒಂದೆರಡು ವರ್ಷ ಸಿಕ್ಕದಿದ್ದರೆ, ಅಷ್ಟರಲ್ಲಿ ಎಲ್ಲ ಅಡತಿ ಮರೆತು ಹೋಗಬಹುದು…. ಆದರೆ? ಆದರೆ ತಿಮ್ಮಿ?…. ನನ್ನ ತಿಮ್ಮಿ?…. ತಿಮ್ಮಿಯ ಯೋಚನೆ ಬಂದೊಡನೆ ಮೈನರಗಳೆಲ್ಲ ಸಡಿಲವಾಗಿ, ಸೋತು, ನಿದ್ದೆಮಾಡಿಬಿಡುತ್ತೇನೆಯೋ ಎಂಬ ಹಾಗಾಯಿತು ಗುತ್ತಿಗೆ. ಅವನ ಕ್ರಿಯಾಪಟುತ್ವಕ್ಕೇ ಲಕ್ವ ಬಡಿದಹಾಗಾಯಿತು. ಆ ಭಯಂಕರ ಅರಣ್ಯದಲ್ಲಿ, ಆಕಾಶ ಮುಟ್ಟಿ ಬೆಳೆದಿದ್ದ ಮರಗಳ ನಿರ್ದಾಕ್ಷಿಣ್ಯ ತಾಟಸ್ಥ್ಯದಲ್ಲಿ, ಆಗ ತಾನೆ ಮಳೆ ನಿಂತಿದ್ದ ಆ ಭೀಷಣ ನಿರ್ಜನತೆಯಲ್ಲಿ ತನ್ನ ನಿಸ್ಸಾಹಾಯಕವಾದ ಒಂಟಿತನ ತನ್ನನ್ನು ಮೂದಲಿಸುವಂತೆ ತೋರಿ, ಬಿಕ್ಕಿಬಿಕ್ಕಿ ಅಳುತ್ತಾ, ಪಕ್ಕದಲ್ಲಿ ಒಮ್ಮೊಮ್ಮೆ ಮೈ ಕಚ್ಚಿಕೊಳ್ಳುತ್ತಲೂ, ಒಮ್ಮೊಮ್ಮೆ ಸೀನುತ್ತಲೂ, ಮತ್ತೆ ಕಾಡಿನ ಕಡೆಗೂ ತನ್ನ ಒಡೆಯನ ಕಡೆಗೂ ನೋಡುತ್ತಲೂ ಕುಳಿತ್ತಿದ್ದು, ತನಗಿಂತಲೂ ಹೆಚ್ಚು ಎತ್ತರವಾಗಿಯೂ ದೃಢತರವಾಗಿಯೂ ಧೈರ್ಯಶಾಲಿಯಾಗಿಯೂ ತೋರುತ್ತಿದ್ದ ಹುಲಿಯನ ಒದ್ದೆ ಮೈಯನ್ನೇ ಬಲವಾಗಿ ಅಪ್ಪಿ, ಅದರ ಬಲಿಷ್ಠತೆಯನ್ನು ಕುಸಿದು ಬೀಳುತ್ತಿದ್ದ ತನ್ನ ಚೇತನಕ್ಕೆ ಆಪು ಕೊಟ್ಟುಕೊಂಡನು! ಅವನು ಹಿಂದೆ ಎಂದೂ ಹಾಗೆ ಅತ್ತಿರಲಿಲ್ಲ! ಹುಲಿಯನಿಗೆ ಅದರ ನಿಜವಾದ ಆರ್ಥವಾಗದೆ, ಒಡೆಯ ತನ್ನೊಡನೆ ಆಟವಾಡುತ್ತಿದ್ದಾನೆಂದು ಭಾವಿಸಿ, ಕ್ರೀಡಾರೂಪದ ಪ್ರತಿಕ್ರಿಯೆಯನ್ನೇ ಪ್ರದರ್ಶಿಸಿತ್ತು!
ತಿಮ್ಮಿಯನ್ನೂ ಜೊತೆಗೆ ಕರೆದುಕೊಂಡು ಓವಿಹೋಗಲೇ? ಹೇಗೆ? ಅವಳನ್ನು ಬಲಾತ್ಕಾರವಾಗಿ ಬೇರೆಯೊಬ್ಬನಿಗೆ ಮದುವೆಮಾಡಿಸುವ ದುರುದ್ದೇಶದಿಂದ ಬೆಟ್ಟಳ್ಳಿ ಕಲ್ಲಯ್ಯಗೌಡರು ಉಪಾಯಹೂಡಿ, ಹುಡುಗಿಯ ತಂದೆ ಅಣ್ಣಂದಿರನ್ನು ಕಳಿಸಿ, ಹುಡುಗಿಯನ್ನು ಕರೆಯಿಸಿಕೊಂಡಿದ್ದಾರೆ ಎಂಬ ಸುದ್ದಿ ಆಗಲೆ ಹರಡಿಬಿಟ್ಟಿತ್ತಲ್ಲಾ? ಈಗ ನಾನು ಬೆಟ್ಟಳ್ಳಿ ಹೊಲೆಗೇರಿಯಲ್ಲಿ ಕಾಣಿಸಿ ಕೊಂಡರೆ ಸಾಕು, ನನ್ನನ್ನು ಹಿಡಿದು ಪೋಲೀಸರಿಗೆ ಒಪ್ಪಿಸದೆ ಇರುತ್ತಾರೆಯೆ?…. ಅಯ್ಯೋ, ಹೋದ ಜಲ್ಮದಲ್ಲಿ ನಾನು ಏನು ಪಾಪ ಮಾಡಿದ್ದೆನೋ? ಇಲ್ಲದಿದ್ದರೆ ಹೀಂಗೆಲ್ಲಾ ಯಾಕೆ ಆಗಬೇಕಿತ್ತು? ಆ ಹಾಳು ಸಾಬರು ಆವೊತ್ತೆ ಸಿಂಬಾವಿಗೆ ಹೇರು ತರಬೇಕೆ? ಆ ದುಷ್ಟಮುಂಡೆಗಂಡ ಇಜಾರದಸಾಬಿ ಗಬ್ಬದ ಆಡನ್ನು ಕೊಲ್ಲದಿದ್ದರೆ ನಾನೇಕೆ ಅವನೊಡನೆ ಜಗಳಕ್ಕೆ ಹೋಗ್ತಿದ್ದೆ? ಅವನದೇ ಎಲ್ಲಾ ತಪ್ಪು! ಆದರೆ ಪೋಲೀಸರ ಕೈಗೆ ಸಿಕ್ಕಿಬಿದ್ದವನು ನಾನು! ಕತ್ತಿಬೀಸಿದವನು ಆ  ಸಣ್ಣಬೀರ! ಹೇಳಿದರೂ ಯಾರೂ ನಂಬುವುದಿಲ್ಲ. ’ಆ ಬಡಕಲಗೆ ಎಲ್ಲಿ ಬಂತು ಜೂರತ್ತು, ಕತ್ತಿ ಬೀಸಾಕೆ?’ ಅಂತಾರೆ. ನಾನು ಬಲಿಷ್ಠನಾಗಿದ್ದದ್ದೇ ತಪ್ಪೇ? ಏನು ಪಾಪ ಮಾಡಿದ್ದೇನೋ ಹೋದ ಜಲ್ಮದಲ್ಲಿ? ಅದಕ್ಕೇ ಈಗ ಈ ಶಿಕ್ಷೆ.
ಇದ್ದಕ್ಕಿದ್ದ ಹಾಗೆ ಏನೋ ಮಿಂಚು ಹೊಳೆದಂತಾಯ್ತು ಗುತ್ತಿಗೆ. “ನಾನು ಹೊಲೆರವನಲ್ಲದೆ ಬ್ಯಾರೆ ಜಾತಿಗೆ ಸೇರಿದವನಾಗಿದ್ದರೆ ಹೀಂಗಾಗ್ತಿತ್ತೇ?” ಎಂದುಕೊಂಡನು, “ಗೌಡರ ಜಾತಿಗೆ? ಸೆಟ್ಟರ ಜಾತಿಗೆ? ಬಿರಾಂಬರ ಜಾತಿಗೆ?…. ಉಂಹ್ಞೂ ಈ ಜಲ್ಮದಾಗೆ ಅದೆಲ್ಲಿ ಸಾಧ್ಯ?…. ಸಾಬರ ಜಾತಿಗೆ? ಕಿಲಸ್ತರ ಜಾತಿಗೆ?….ಥೂ ಥೂ ಥೂ!” ತನ್ನ ತಲೆಯಲ್ಲಿ ಸುಳಿದಿದ್ದ ಏನನ್ನೊ ಉಗಳಿ ನಿರಾಕರಿಸಿದನು. ಆದರೂ ಬೆಟ್ಟಳ್ಳಿ ಹಕ್ಕಲಿನಲ್ಲಿ ದೇವಯ್ಯಗೌಡರಿಗ್ ಬೈಸಿಕಲ್ಲು ಕಲಿಸುತ್ತಿದ್ದಾಗ, ಹೊತ್ತು ಮುಳುಗಿದ ಮೇಲೆ ಬೈಗಿನ ಹೊತ್ತಿನಲ್ಲಿ, ತೀರ್ಥಹಳ್ಳಿಯ ಪಾದ್ರಿ ಮಾಡಿದ ಪ್ರಾರ್ಥನೆಯೂ, ಆಮೇಲೆ ಅವನು ಹೇಳಿದ ಉಪದೇಶ ಭಾಷಣದ ಕೆಲವು ಭಾಗಗಳೂ ಅವನ ನೆನಪಿಗೆ ಬಂದುವು. ಅದರ ಜೊತೆಜೊತೆಗೇ ಐಗಳೂ ಮುಕುಂದಯ್ಯನೂ ’ಪರ್ಸಂಗ’ದಲ್ಲಿ ಭಾರತ ರಾಮಾಯಣ ಓದುತ್ತಾ ಕಥೆ ಹೇಳುತ್ತಿದ್ದ ಹಿತೋಪದೇಶಗಳೂ ಮನಸ್ಸಿನಲ್ಲಿ ಸುಳಿಯತೊಡಗಿದುವು. ಅಲ್ಲದೆ ಭಾಗವತರಾಟಗಳಲ್ಲಿ ತಾನು ಕೇಳಿ ಗ್ರಹಿಸಿದ್ದ ಕೆಲವು ವಿಚಾರಗಳೂ ಅವನ ಸುಪ್ತಚಿತ್ತದಿಂದ ಅಪತ್ಸಮಯಾನುಸಂಗಿಗಳಾಗಿ ಮೂಡಿ ಸುಳಿಯತೊಡಗಿದುವು. ಅಳುವುದನ್ನು ನಿಲ್ಲಿಸಿ, ಏನೋ ಧೈರ್ಯ ಬಂದವನಂತೆ ಉಸಿರೆಳೆದು ನೆಟ್ಟಗೆ ಕುಳಿತು, ತನಗೆ ತಿಳಿದಂತೆ, ಒರಟು ಒರಟಾಗಿ, ಆದರೂ ಭಾವಪೂರ್ವಕವಾಗಿ, ಭಕ್ತಿಯಿಂದ ಭಗವಂತನಿಗೆ ಮೊರೆಯಿಟ್ಟನು. ಅವನು ಮೊರೆಯಿಟ್ಟ ರೀತಿಯ ಮತ್ತು ಅದರ ಭಾಷೆಯ ಸರಿಯಾದ ಅರ್ಥ ಭಗವಂತನೊಬ್ಬನಿಗೇ ಆಗತಕ್ಕದ್ದಾಗಿತ್ತು! ಅವನ ಭಗವಂತನೂ ಅಷ್ಟೇ ಜಟಿಲ ಸ್ವರೂಪದವನಾಗಿದ್ದನು: ಸಾಕಾರ, ನಿರಾಕಾರ, ಆ ಕಾರ, ಈ ಕಾರ ಎಲ್ಲವೂ ಆಗಿಯೂ ಯಾವುದು ಆಗಿರದೆ, ಬರಿಯ ಗುತ್ತಿಯ ಭಾವಮಾತ್ರನಾಗಿದ್ದು, ಎಂತಹ ವೇದಾಂತಿಯ ದರ್ಶನವೂ ತತ್ತರಿಸುವಂತಿತ್ತು! ಅಂತೂ ಏರಿತ್ತು, ಹೊಲೆಯನ ಹೃದಯದ ಪ್ರಾರ್ಥನೆ, ಭಗವಂತನ ಚರಣಾರವಿಂದಗಳಿಗೆ!
ಸ್ವಲ್ಪ ಕಾಲ ವಿರಮಿಸಿದ್ದ ಮಳೆಗಾಲದ ಹೊಯ್ಯಳೆ ಮತ್ತೆ ಸುರಿಯತೊಡಗಿದಾಗ ಗುತ್ತಿ ಎದ್ದು ಹೊರಟನು. ಸಾಧಾರಣವಾಗಿ ಮೇಗರ ಹಳ್ಳಿ, ಹಳೆಮನೆ, ಕೋಣೂರು, ಹೂವಳ್ಳಿ, ಸಿಂಬಾವಿ ಇವುಗಳ ಆಸುಪಾಸಿನ ಬೆಟ್ಟಗುಡ್ಡ ಕಾಡುಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಗುತ್ತಿಗೆ ಪರಿಚಿತವಾಗಳಾಗಿದ್ದುವು. ಬೇಟೆಯಲ್ಲಿ ಹುಳು ನುಗ್ಗಿಯೊ, ವಾಟೆ ಬಿದಿರು ಬೆತ್ತಗಳ ಅನ್ವೇಷಣೆಯಲ್ಲಿಯೊ, ಭೂಮಿಹುಣ್ಣಿಮೆ ಹಬ್ಬದಲ್ಲಿ ನೂಲೆಗೆಣಸು, ಉಗನಿಕಾಯಿ, ಬೆರಕೆಸೊಪ್ಪು ಇತ್ಯಾದಿಗಳನ್ನು ಸಂಗ್ರಹಿಸುವಾಗಲೋ, ಬಗನಿ ಕಟ್ಟಲು ಸರಿಯಾದ ಮರಗಳನ್ನು ಹುಡುಕುವುದಕ್ಕಾಗಿಯೋ, ತುಡುವೆಜೇನು ಕೀಳಲೆಂದು ಮರದ ಪೊಟರೆ ಮತ್ತು ಹುತ್ತಗಳನ್ನು ಅಜಮಾಯಿಸಿ ಮಾಡುತ್ತಾ ಬುತ್ತಿ ಕಟ್ಟಿಕೊಂಡು ಅಲೆಯುವಾಗಲೊ-ಅಂತೂ ಒಂದಲ್ಲ ಒಂದು ರೀತಿಯಲ್ಲಿ ಗುತ್ತಿಗೆ ಸಹ್ಯಾದ್ರಿಯ ಆ ಅರಣ್ಯಪ್ರದೇಶ ಸುಪರಿಚಿತವಾದದ್ದೆ ಆಗಿತ್ತು. ಕಣ್ಣುಕಟ್ಟಿ ಬಿಟ್ಟರೂ ಊರಿಗೆ ಬರುತ್ತೇನೆ ಎನ್ನುತ್ತಿದ್ದ ಅವನು. ಆದರೆ ಈ ದಿನ ಅವನು ನಡುಹಗಲು ಪೂರೈಸಿ, ಹೊತ್ತು ಓರೆಯಾಗುವವರೆಗೂ ಅಲೆದರೂ ತಾನು ಎಲ್ಲಿದ್ದೇನೆ? ಎತ್ತ ಹೋಗುತ್ತಿದ್ದೇನೆ? ಎಂಬುದರ ಗೊತ್ತು ಸಿಕ್ಕಲಿಲ್ಲ. ಅಷ್ಟು ನಿಬಿಡವೂ ಉನ್ನತವೂ ಕರಾಳವೂ ಕಂದರಮಯವೂ ಆ ಕಾಣಿಸತೊಡಗಿತ್ತು ಆ ಹೆಗ್ಗಾಡು. ಇಳಿದು ಏರಿ, ಏರಿ ಇಳಿದು, ಸರಲು ಸರಲುಗಳನ್ನು ದಾಟಿದರೂ ಎಲ್ಲಿಯೂ ಊರು ಸಮೀಪಿಸುವ ಚಿಹ್ನೆ ತೋರಲಿಲ್ಲ. ’ಇದೇನಿದು? ದಿಕ್ಕು ತಪ್ಪಿಬಿಟ್ಟೆನೆ?’ ಎಂದುಕೊಂಡಿದ್ದನು, ’ಅಥವಾ ಹುಚ್ಚುಬಳ್ಳಿ ಎಲ್ಲಿಯಾದರೂ ಕಾಲಿಗೆ ತಗುಲಿಬಿಟ್ಟಿತೆ?’
ಹೆಗ್ಗಾಡಿನಲ್ಲಿ ಒಂದು ಜಾತಿಯ ವಿಷಬಳ್ಳಿ ಇದೆ ಎಂದೂ, ಅದನ್ನು ಮುಟ್ಟಿದವನು ಮನೆ ಸೇರುವ ಸಂಭವವಿಲ್ಲವೆಂದೂ ಹಳ್ಳಿಗರಲ್ಲಿ ಒಂದು ನಂಬಿಕೆ ರೂಢಿಯಾಗಿತ್ತು. ಆ ಬಳ್ಳಿ ಮುಟ್ಟಿ ಅನೇಕ ಜನರೂ ಜಾನುವಾರುಗಳೂ ಕಾಡಿನಲ್ಲಿ ದಿಕ್ಕುತಪ್ಪಿ ಅಲೆದೂ ಅಲೆದೂ ಸತ್ತುಹೋಗಿದ್ದುವೆಂಬ ಕಥೆಗಳೂ ಪ್ರಚಲಿತವಾಗಿದ್ದುವು. ಸಾಯಂಕಾಲವಾಗುತ್ತಾ ಬಂದರೂ ಯಾವ ಊರಿನ ಸನಿಹವೂ ಕಿವಿಗಾಗಲಿ ಕಣ್ಣಿಗಾಗಲಿ ಗೋಚರವಾಗದಿದ್ದಾಗ ಗುತ್ತಿಗೆ ತುಸು ದಿಗಿಲಾಯಿತು. ಹೊಟ್ಟೆ ಹಸಿವಾಗಿದ್ದಾಗ ಬಗನಿ ಸಸಿಗಳನ್ನು ಕಿತ್ತು ಮರಕ್ಕೆ ಬಡಿದು, ಅವುಗಳ ತಿರುಳನ್ನು ತಿಂದಿದ್ದನು. ಒಂದುಕಡೆ ಹಲಸಿನ ಮರದಿಂದ ಬಿಳುವನ ಜಾತಿಯ ಹಣ್ಣನ್ನು ಕೆಡವಿ, ಬಿದ್ದ ರಭಸಕ್ಕೆ ಬಿರಿದಿದ್ದ ಅದನ್ನು ಸಿಗಿದು, ತೊಳೆಗಳನ್ನು ನುಂಗಿದ್ದನು. ಕುರ್ಕನುಗುರು ಬಗೆದಿದ್ದ ಕಣ್ಣಿನ ಗಾಯದ ದೆಸೆಯಿಂದ ಬಹಳ ಕಾಲ ನರಳಿದ್ದುದರ ಫಲವಾಗಿ ಅವನ ತಾಯಿ, ಹುಲಿಯ, ಲಾಚಾರಾಗಿದ್ದರೂ ಮೊಲವನ್ನೊ ಬರ್ಕವನ್ನೊ ಅಥವಾ ಇನ್ನಾವುದೊ ಸಣ್ಣ ಜಂತುವನ್ನೊ ಬೇಟೆಯಾಡಿ ತಿಂದು ತನ್ನ ಹಸಿವೆಯನ್ನು ಪರಿಹರಿಸಿಕೊಂಡಿದ್ದದನ್ನು ಅವನು ಅರಿತಿದ್ದನು, ಬಾಹ್ಯ ಚಿಹ್ನೆಗಳಿಂದ. ಆದರೆ ಅವನಿಗಾದದ್ದು ಹಸಿವೆಯ ಭೀತಿಯಲ್ಲ. ಹುಚ್ಚುಬಳ್ಳಿ ಮುಟ್ಟಿ ತಾನು ಯಾವ ಊರನ್ನೂ ಸೇರದೇ ಇರುವಂತಾಗಿಬಿಟ್ಟರೆ ಏನು ಗತಿ? ಎಂಬುದು ಅವನ ಹೃದ್ಗತ ಭಯವಾಗತೊಡಗಿತು. ಎಷ್ಟೋಸಾರಿ ಮಲೆಯ ನೆತ್ತಿಗಳಲ್ಲಿ ಇದ್ದೇನೆ ಎಂದು ಗೊತ್ತಾದಾಗ, ಬಹಳ ಹೊತ್ತು ಕಿವಿಗೊಟ್ಟು ಆಲಿಸಿದ್ದನು, ಯಾವ ದಿಕ್ಕಿನಿಂದಾದರೂ ಮನುಷ್ಯಾವಾಸದ ಸದ್ದು ಬರುತ್ತದೆಯೆ ಎಂದು: ದೂರದ ಊರುಕೋಳಿಯ ಕೂಗು? ನಾಯಿಯ ಬೊಗಳು ದನಿ? ದನಗಳ ಅಂಬಾ ಶಬ್ದ? ಅಥವಾ ಯಾರಾದರೂ ಯಾವನನ್ನಾದರೂ ಕೂಗಿ ಕರೆಯುವ ಕಾಕು?-ಆದರೆ ಮರಗಳಲ್ಲಿ ಬೀಳುವ ಮಳೆ ಮತ್ತು ಬೀಸುವ ಗಾಳಿಯ ಸದ್ದಲ್ಲದೆ ಬೇರೆ ಕೇಳಿಸಿರಲಿಲ್ಲ. ಇಜಾರದ ಸಾಬಿಯ ದೊಣ್ಣೆಯೇಟಿನ ಗಾಯದ ಕಾಲು ಬೇರೆ ಹಿಸಿದು ರಕ್ತ ಸೋರಿ ನೋಯತೊಡಗಿತ್ತು! ಗುತ್ತಿಯ ಮನಸ್ಸಿನಲ್ಲಿ ಪ್ರಾರ್ಥನೆಗೂ ಜಾಗವಿರದಷ್ಟು ಕಳವಳ ತುಂಬಿಕೊಂಡಿತ್ತು! ಅವನು ಹೊತ್ತು ಇಳಿದಂತೆಲ್ಲ ಹೆಚ್ಚು ಹೆಚ್ಚು ಗಾಬರಿಯಿಂದ ಉನ್ಮತ್ತನಂತೆ ಬೇಗಬೇಗನೆ ಹತ್ತಿ ಇಳಿದು ಇಳಿದು ಹತ್ತಿ ನಡೆಯತೊಡಗಿದನು. ಮೋಡವಿರದಿದ್ದರೆ ತನಗೆ ಗೊತ್ತಿದ್ದ ’ಬೆಳ್ಳಿ’ಯನ್ನಾದರೂ ನೋಡಿ ದಿಕ್ಕು ತಿಳಿಯುತ್ತಿದ್ದನೋ ಏನೋ? ಆದರೆ ಕತ್ತಲಾಗುತ್ತ ಬಂದ ಹಾಗೆ ಮೋಡ ದಟ್ಟಯಿಸಿ, ಮಳೆ ಜೋರಾಗಿ ಸುರಿಯಿತು. ಆದರೂ ಗುತ್ತಿ, ಕತ್ತಲೆಯಲ್ಲಿಯೂ, ಮುಂದೆ ಸಾಗುವುದನ್ನು ಮಾತ್ರ ಬಿಡಲಿಲ್ಲ. ಅದೇ ಅವನನ್ನು ಬದುಕಿಸಿದ್ದು!
ರಾತ್ರಿ ಸುಮಾರು ಎಂಟು ಎಂಟೂವರೆ ಗಂಟೆಯ ಹೊತ್ತಿಗೆ, ಗುತ್ತಿಗೆ ತಾನಿದ್ದ ಮಲೆನೆತ್ತಿಯೊಂದರ ಬುಡದಲ್ಲಿ, ಆದರೂ ಬಹುದೂರ ಕೆಳಗಡೆ, ಏನೋ ಒಂದು ಬೆಳಕು ಕಾಣಿಸಿತು: ದೊಂದಿಯೊ? ಲಾಟೀನೊ? ಮುರುವಿನ ಒಲೆಯ ಬೆಂಕಿಯೊ? ಆ ಬೆಳಕಿನ ಕಡೆಗೆ ಸ್ವಲ್ಪ ಸಂದೇಹದಿಂದಲೆ ಇಳಿಯತೊಡಗಿದನು. ಏಕೆಂದರೆ ಮಳೆಯಲ್ಲಿ ನೆನೆದಾಗ ಕೆಲವು ಮರದ ತೊಗಟೆಗಳೂ ಪೊದೆಯ ಕಡ್ಡಿಗಳೂ ಗುಂಪಾಗಿದ್ದು ಉಜ್ವಲಕಾಂತಿಯಿಂದ ಬೆಳಗುತ್ತವೆ-ಎಂಬುದನ್ನು ಗುತ್ತಿ ಅನುಭವದಿಂದ ಅರಿತಿದ್ದನು. ಆದರೆ ಸ್ವಲ್ಪ ದೂರ  ಇಳಿಯುವುದರಲ್ಲಿ, ಆ ಬೆಳಕು ಮರೆಯಾದರೂ, ಒಂದು ನಾಯಿ ಬೊಗಳಿದ ಸದ್ದು ಕೇಳಿಸಿದ ಗುತ್ತಿಗೆ ಧೈರ್ಯವಾಯಿತು. ಇನ್ನೂ ಸ್ವಲ್ಪ ದೂರ ಇಳಿದ ಮೇಲೆ ಮಾತಾಡುತ್ತಿದ್ದ ಮನುಷ್ಯರ ಧ್ವನಿಯೂ ಕೇಳಿಸಿ, ಯಾವುದೊ ಮನೆಗೆ ತಾನು ಸಮೀಪಿಸುತ್ತಿದ್ದೇನೆ ಎಂದರಿತು ’ದೇವರೇ ಕಾಪಾಡಿದ’ ಎಂದುಕೊಂಡನು.
ಮಲೆಯ ನೆತ್ತಿಯಿಂದ ಗುತ್ತಿಗೆ ಕಂಡಿದ್ದ ಆ ಬೆಳಕು ಒಂದು ಸೋಗೆ ಹೊದಿಸಿದ್ದ ದೊಡ್ಡ ಚೌಕಿಮನೆಗೆ ಅಂಟಿಕೊಂಡತಿದ್ದ ಅದರ ಬಚ್ಚಲು ಕೊಟ್ಟಿಗೆಯ ಮೂಲೆಯಲ್ಲಿ ಧಗಧಗನೆ ಉರಿಯುತ್ತಿದ್ದ  ಮುರುವಿನ ಒಲೆಯ ಬೆಂಕಿಯದ್ದಾಗಿತ್ತು. ಆ ಬಚ್ಚಲು ಕೊಟ್ಟಿಗೆಗೆ ಅರೆಗೋಡೆ ಹಾಕಿದ್ದುದರಿಂದಲೆ ಆ ಮುರುವಿನ ಒಲೆಯ ಬೆಂಕಿ ಮಲೆಯ ನೆತ್ತಿಯ ಆ ದೂರಕ್ಕೆ ಗುತ್ತಿ ಯಾವುದೊ ಒಂದು ಕೋನದಲ್ಲಿದ್ದಾಗ ಕಾಣಿಸಿತ್ತು. ಗುತ್ತಿ ಪ್ರವೇಶಿಸಿದಾಗ ಆ ಒಲೆಯ ಬಳಿ ಹಳೆಪೈಕದವನೊಬ್ಬನು ಸ್ವಲ್ಪ ವಯಸ್ಸಾದಂತೆ ತೋರುತ್ತಿದ್ದ ಗೌಡರೊಬ್ಬರಿಗೆ ಕಳ್ಳುಕಾಯಿಸಿ ಕೊಡುವ ಕೆಲಸದಲ್ಲಿದ್ದನು. ಮಳೆಯಲ್ಲಿ ತೊಯ್ದು, ಚಳಿಗೆ ಉಡುರುಹತ್ತಿ, ಗತಗತನೆ ನಡುಗುತ್ತಿದ್ದ ಒಬ್ಬ ಮನುಷ್ಯನು ಒಂದು ನಾಯಿಯೂ ಬಚ್ಚಲು ಕೊಟ್ಟಿಗೆಯೊಳಗೆ ಬಂದು ಅದರ ಬಾಗಿಲಿಲ್ಲದ ಬಾಗಿಲಲ್ಲಿ ನಿಂತು ಬೆಂಕಿಯ ಬೆಳಕಿನಲ್ಲಿ ಕಾಣಿಸಿಕೊಂಡಾಗ ಒಳಗಿದ್ದವರಿಬ್ಬರೂ ತುಸು ಬೆಚ್ಚಿದಂತೆ ತೋರಿದರು. ಅಂತಹ ಅವೇಳೆಯಲ್ಲಿ ಅನಿರೀಕ್ಷಿತವಾಗಿ ಪ್ರತ್ಯಕ್ಷನಾದ ಆ ಅಪರಿಚಿತನನ್ನು ಕಂಡು ಅವರಿಬ್ಬರಿಗೂ ಮಾತೇ ಹೊರಡದೆ ಸುಮ್ಮನೆ ನೋಡತೊಡಗಿದ್ದರು. ’ನಾನು, ಒಡೆಯಾ, ಕೊಳಿಗಿ ಸಿದ್ದ!’ ಎಂದು ಗುತ್ತಿ ಹೇಳಿ ಕೊಂಡಾಗಲೆ ಅವರಿಬ್ಬರಿಗೂ ಸಮಾಧಾನವಾಗಿ, ತಾವು ಕಂಡದ್ದು ರಾತ್ರಿ ಹೇಳಬಾರದ ಬೇರೆ ಯಾವುದು ಅಲ್ಲ ಎಂದು ಧೈರ್ಯ ತಾಳಿ ಮಾತಾಡತೊಡಗಿದರು.
ಗುತ್ತಿ ಬೇಕಂತಲೆ ತನ್ನ ನಿಜವನ್ನು ಮರೆಮಾಡಿ, ತನ್ನ ಊರು ಹೆಸರು ಎಲ್ಲವನ್ನೂ ಹುಸಿಹೇಳಿದ್ದನು. ತಾನು ಹೆಡಗೆಬಳ್ಳಿ ಹುಡುಕುತ್ತಾ ಕಾಡು ಹತ್ತಿದ್ದನೆಂದೂ ದಿಕ್ಕು ತಪ್ಪಿ ಅಲೆದು ಅಲ್ಲಿಗೆ ಬಂದಿದ್ದನೆಂದೂ ತಿಳಿಸಿ, ಬೆಳಿಗ್ಗೆಯಿಂದ ಊಟವಿಲ್ಲದೆ ಹಸಿದಿರುವ ಸಂಗತಿಯನ್ನೂ ಹೇಳಲು ಮರೆಯಲಿಲ್ಲ. ತಾನು ಎಲ್ಲಿಗೆ ಬಂದಿದ್ದೇನೆ ಎಂಬುದೂ ಅವನಿಗೆ ಗೊತ್ತಿರಲಿಲ್ಲವಾದ್ದರಿಂದ ಹಳೆಪೈಕದವನನ್ನು ಆಲಾಯಿದ ವಿಚಾರಿಸಿ ತಿಳಿದುಕೊಂಡನು: ’ಕಾಗಿನಹಳ್ಳಿ!’ ಎಂಬ ಹೆಸರನ್ನು ಕೇಳಿದೊಡನೆ ತಾನು ದೇಶಾಂತರ ಬಂದುಬಿಟ್ಟಿದ್ದೇನೆ ಎಂದೇ ಭಾವಿಸಿದ್ದನು. ’ಕಾಗಿನಹಳ್ಳಿ’ ಎಂಬ ಹೆಸರೇನೂ ಅವನಿಗೆ ಪರಿಚಿತವಾಗಿದ್ದದ್ದೆ. ಕೋಣೂರು ಮುಕುಂದಯ್ಯನ ತಾಯಿ ದಾನಮ್ಮ ಹೆಗ್ಗಡಿತಿಯವರನ್ನು ಆಳುಕಾಳು ಸಾಧಾರಣ ಜನ ಕರೆಯುತ್ತಿದ್ದದ್ದೆ ’ಕಾಗಿನಹಳ್ಳಿ ಅಮ್ಮ’ ಎಂದು. ದಾನಮ್ಮ ಹೆಗ್ಗಡಿತಿಯವರ ತವರುಮನೆ ’ಕಾಗಿನಹಳ್ಳಿ’ ಎಂದು ಗೊತ್ತಿತ್ತೆ ಹೊರತು ಗುತ್ತಿ ಆ ದೂರದ ಊರಿನ ಮನೆಗೆ ಎಂದೂ ಹೋಗಿರಲಿಲ್ಲ. ಆದರೂ ತಾನು   ಬಂದದ್ದು ಕಾಗಿನಹಳ್ಳಿ ಅಮ್ಮನ ತವರುಮನೆಗೆ ಎಂಬ ಭಾವನೆ ಅವನಲ್ಲಿ ಅದುವರೆಗೂ ಇದ್ದ ಅಪರಿಚಿತತ್ವ ಮತ್ತು ದೂರತ್ವದ ಭಾವನೆಯನ್ನು ಪರಿಹರಿಸಿ, ಇದು ’ಕಾಗಿನಹಳ್ಳಿ ಅಮ್ಮ’ನ ತವರು ಎಂಬ ಸಲುಗಯ ಭಾವನೆಯನ್ನುದ್ದೀಪಿಸಿತ್ತು. ಆದ್ದರಿಂದಲೆ ಅವನಿಗೆ ತನಗೆ ಬೇಕಾದ್ದನ್ನು ಕೇಳಿ ಈಸಿಕೊಳ್ಳಲು ನೆಂಟಸ್ತಿಗೆಯ ಹಕ್ಕಿದೆ ಎಂಬ ಗ್ರಾಮೀಣ ಸುಲಭವಾದ ಧೈರ್ಯವೂ ಮೂಡಿತ್ತು. ತನಗೂ ತನ್ನ ನಾಯಿಗೂ ಹೊಟ್ಟೆ ತುಂಬುವಷ್ಟು ಅನ್ನ ದೊರಕಿಸಿಕೊಳ್ಳುತ್ತೇನೆ ಎಂದು.
ಕಳ್ಳುಕುಡಿಯುತ್ತಿದ್ದ ಗೌಡರಿಗಾಗಲಿ, ಅದನ್ನು ವಿನಿಯೋಗಿಸುತ್ತಿದ್ದ ಹಳೆಪೈಕದವನಿಗಾಗಲಿ ಗುತ್ತಿಯ ನಿಜಸ್ಥಿತಿಯನ್ನು ವಿಚಾರಿಸುವುದಕ್ಕೂ ಅರಿಯುವುದಕ್ಕೂ ಮನಸ್ಸೂ ಇರಲಿಲ್ಲ; ಸಮಯವೂ ಅಂತಹದ್ದಾಗಿರಲಿಲ್ಲ. ತಮ್ಮ ಕೆಲಸವನ್ನು ಬೇಗಬೇಗನೆ ಪೂರೈಸಿ ಗೌಡರು ಮನೆಯೊಳಕ್ಕೆ ಹೋದರು; ಹಳೆಪೈಕದವನೂ ಅಲ್ಲಿಯೆ ಎಲ್ಲಿಯೊ ಸಮೀಪದಲ್ಲಿದ್ದ ತನ್ನ ಗುಡಿಸಲಿಗೆ ನಡೆದನು. ಗುತ್ತಿಯೂ ಹುಲಿಯನೂ ಮುರುವಿನ ಒಲೆಯ ಬೆಂಕಿಯ ಸಾನಿಧ್ಯದ ಬೆಚ್ಚೆನೆಯ ಮಡಿಲಿಗೆ, ತಾಯಿಯ ಎದೆಗೆ ಮುಗ್ಗುವ ಮಕ್ಕಳಂತೆ, ನುಗ್ಗಿ ಓಡಿ ಚಳಿ ಕಾಯಿಸುತ್ತಾ ಕುಳಿತರು.
ಆಃ! ಹಿಂದೆಂದೂ ಗುತ್ತಿಗೆ ಅಷ್ಟು ಆಪ್ಯಾಯಮಾನವಾಗಿ ತೋರಿರಲಿಲ್ಲ ಬೆಂಕಿ! ಹುಲಿಯನಂತೂ ಬೆಂಕಿಯ ಜ್ವಾಲೆಗೇ ತನ್ನ ಮುಸುಡಿಯನ್ನು ತೂರಿ, ಒಲೆಯ ಒಳಕ್ಕೆ ನುಗ್ಗುತ್ತದೆಯೊ ಏನೋ ಎಂಬಂತೆ ವರ್ತಿಸುತ್ತಿದ್ದುದನ್ನು ನೋಡಿ, ಗುತ್ತಿ ಎರಡು ಮೂರು ಸಾರಿ ಅದನ್ನು ಬಾಲ ಹಿಡಿದೆಳೆದು ಹಾಕಬೇಕಾಯಿತು! ಒಂದು ಸಾರಿಯಂತೂ ಅವನ ಶಕ್ತಿಯನ್ನೂ ಮೀರಿ ಅದು ಮುಂದಕ್ಕೆ ಮೈಚಾಚುತ್ತಿರಲು ಅವನಿಗೆ ಸಿಟ್ಟೇರಿ ಬೆನ್ನಿಗೆರಡು ಗುದ್ದು ಕೊಟ್ಟಿದ್ದನು, ಧಿಃಕ್ಕೆಂದು!
ಒಮ್ಮೆ ಬೆನ್ನು ತಿರುಗಿಸಿ, ಒಮ್ಮೆ ಹೊಟ್ಟೆ ತಿರುಗಿಸಿ, ಒಮ್ಮೆ ಎರಡೂ ಕೈಗಳನ್ನು ಜ್ವಾಲೆಯ ಹತ್ತಿರಕ್ಕೆ ಒಡ್ಡಿ, ಒಮ್ಮೆ ಸೊಂಟದ ಪಂಚೆ ಯನ್ನು ಬಿಚ್ಚಿ ಆರಿಸಿ, ಅದನ್ನು ಸುತ್ತಿಕೊಂಡು, ಒಳಗಿನ ಕೌಪೀನವನ್ನೂ ತೆಗೆದು ಒದ್ದೆಹಿಂಡಿ ಒಲೆಯ ಮೇಲೆ ಹರಡಿ ಆರಿಸಿ ಕಟ್ಟಿಕೊಂಡು, ಕಂಬಳಿ ಮತ್ತು ಬಟ್ಟೆಗಳನ್ನು ಮುರುವಿನ ಹಂಡೆಯ ಮೇಲೆಯೂ ಒಲೆಯ ತೋಳುಗಳ ಮೇಲೆಯೂ ಹರಡಿದನು. ಇಂಬಳಗಳನ್ನು ತನ್ನು ಮೈಯ ಸಂದುಗೊಂದುಗಳಿಂದಲೂ ಹುಲಿಯ ಮೈಯ ಸಂದುಗೊಂದು ರಂಧ್ರಾದಿಗಳಿಂದಲೂ ಕಿತ್ತು ತೆಗೆದು ಕೆಂಡದ ಮೇಲೆ ಜುಂಯೆಂನ್ನುವಂತೆ ಹಾಕಿ ಹೋಮ ಮಾಡಿದನು. ಅಂತೂ ನರನ ಮತ್ತು ನಾಯಿಯ ಚಳಿ, ಉಡುರು, ನಡುಕ ಎಲ್ಲ ತೊಲಗಿ ಮೈಗೆ ಬಿಸುಪೇರಿ ಸುಖಾನುಭವವಾಗುವ ಹೊತ್ತಿಗೆ ಆಳು ಹುಡುಗನೊಬ್ಬನು ಮೊರದಲ್ಲಿದ್ದ ಬಾಳೆಯ ಕೀತನ ಮೇಲೆ ಹಾಕಿದ್ದ ಅನ್ನ ಸಾರು ಪಲ್ಯ ಉಪ್ಪಿನಕಾಯಿಗಸಿಯ ಊಟವನ್ನು, ಸಣ್ಣಗೆ ಸುರಿಯುತ್ತಿದ್ದ ಮಳೆಯಲ್ಲಿ ಓಡೋಡಿ ಬಂದು, ತಂದಿಟ್ಟನು.
ಅನ್ನವೇನೊ ಮೊರದ ತುಂಬ ಕುತ್ತುರೆಯಾಗಿ ಇದ್ದಿತಾದರೂ ಹಸಿದ ಹೊಲೆಯನಿಗೆ ಅದು ಸಾಲದೆಂಬಂತೆ ತೋರಿ “ತಂಗಳಿದ್ದರೆ ಇನ್ನೊಂದು ಚೂರು ತಂದು ಹಾಕ್ರೋ…. ನಾಯಿಗೂ ಬೆಳಗಿನಿಂದ ಅನ್ನ ಇಲ್ಲ.” ಎಂದು ರಾಗ ಎಳೆದು, ಮತ್ತೆ ನಗುತ್ತಾ “ಕೋಣೂರಿನ ಕಾಗಿನಹಳ್ಳಿ ಅಮ್ಮ ನಂಗೊತ್ರೋ, ನಾಳೆ ಏನಾದ್ರೂ ಹೇಳಾದಿದ್ರೆ, ಕೊಡಾದಿದ್ರೆ, ನನ್ಹತ್ರ ಹೇಳಿಕೊಡಬೈದು ಅಂತಾ ಹೇಳ್ರೋ ಹೆಗ್ಗಡ್ತಮೋರಿಗೆ” ಎಂದೂ ಸೇರಿಸಿದನು.
ಆ ಹುಡುಗ ಮತ್ತೆ ಮನೆಯೊಳಗೆ ಹೋಗಿ ಬಂದು “ಇದ್ದುಬದ್ದಿದ್ದನೆಲ್ಲಾ ಬಳ್ದು ತಂದೀನೋ; ಒಂದು ಅಗಳೂ ಇಲ್ಲ ಅನ್ನ.” ಎಂದು ಹೇಳಿ, ಕೈಯಲ್ಲಿದ್ದ ಒಂದು ಮೊಗೆಯನ್ನು ಗುತ್ತಿಯ ಮುಂದಿಟ್ಟು, ಮತ್ತೆ ಮಳೆಯಲ್ಲಿಯೆ ಮನೆಯೊಳಕ್ಕೆ ಓಡಿಬಿಟ್ಟನು. ಮೊಗೆಯಿಂದ ಹೊಮ್ಮಿ ಬಂದ ಕಂಪಿಗೆ ಮೂಗೊಡ್ಡಿದ ಗುತ್ತಿಗೆ ಬ್ರಹ್ಮನಂದವಾಗಿ ಒಂದು ಮುಕ್ಕುಳು ಅದರಿಂದಲೇ ಕುಡಿದೇ ಬಿಟ್ಟನು: ಹತ್ತಿರವಿಟ್ಟಿದ್ದ ಗರಟಕ್ಕೆ ಹೊಯ್ದುಕೊಂಡು ಕುಡಿಯುವಷ್ಟು ಅನವಸರವೂ ಸಾಧ್ಯವಿರಲಿಲ್ಲ ಅವನಿಗೆ.
ಒಲೆಗೆ ಕಚ್ಚಿದ್ದ ಭಾರಿ ಕುಂಟೆಗಳನ್ನು ಆದಷ್ಟು ಮುಂದೆ ನೂಕಿ, ಬೆಂಕಿ ಬೆಳಗುವವರೆಗೂ ಉಜ್ವಲಿಸುವಂತೆ ಮಾಡಿ, ಗುತ್ತಿ ಉಣ್ಣುವುದಕ್ಕೆ ಕುಳಿತನು. ಮುರುವಿನ ಹಂಡೆಯಲ್ಲಿ ಕತ್ತರಿಸಿದ್ದ ಹುಲ್ಲು, ಕಲಗಚ್ಚು, ಅನ್ನ ಬಸಿದ ಬಾಗುಮರಿಗೆಯ ಗಂಜಿ, ಹಲಸಿನ ಹಣ್ಣಿನ ಕೊಚ್ಚಿದ ಸೇಡೆ ಇತ್ಯಾದಿ ವಿಶ್ರಣದ ಮುರು ತಕಪಕನೆ ಕುದಿಯುತ್ತಾ ಗೊಜಗೊಜಗೊಜ ಸದ್ದುಮಾಡುತ್ತಿತ್ತು. ಕರೆಯುವ ಎಮ್ಮೆ ದನಗಳಿಗೆ ಮರುಬೆಳಗಿನ ಉಪಾಹಾರವಾಗಿ.
ದೊಡ್ಡ ದೊಡ್ಡ ತುತ್ತುಗಳನ್ನು ಉಂಡೆ ಕಟ್ಟಿ ಕಟ್ಟಿ ಬಾಯಿಗೆ ಎಸೆದುಕೊಳ್ಳುತ್ತಿದ್ದ ಗುತ್ತಿ ಕೂಳಿನ ಕುತ್ತುರೆ ಅರೆ ಮುಗಿಯುವಷ್ಟರಲ್ಲೆ ನೋಡುತ್ತಾನೆ: ಹತ್ತಿರ-ಹತ್ತಿರ-ಹತ್ತಿರ-ಹತ್ತಿರ ಒರಕಿಬಂದ ಹುಲಿಯ ಬಳ್ಳೆಯ ಅಂಚಿಗೇ ಮುಟ್ಟೀಕೊಂಡೇ ಕುಳಿತು, ಕರಗಿಹೋಗುತ್ತಿದ್ದ ಅನ್ನದ ರಾಶಿಯ ಕಡೆಗೂ ಗುತ್ತಿಯ ಬಾಯಿಯ ಕಡೆಗೂ ಕೆಳಗೆ-ಮೇಲೆ ಮೇಲೆ-ಕೆಳಗೆ ನೋಡುತ್ತಾ, ನೋಡುತ್ತಾ ಅನ್ನುವುದಕ್ಕಿಂತಲೂ ಕಣ್ಣು ಕಣ್ಣುಬಿಡುತ್ತಾ, ಬಾಲವಳ್ಳಾಡಿಸುತ್ತಾ, ಜೊಲ್ಲು ಸುರಿಸುತ್ತಾ ಕೂತಿದೆ! ’ಹಛೀ! ಏನು ಹೊಟ್ಟೆಬಾಕ ಮುಂಡೇದೊ ಹಾಳ್ ನಾಯಿ!’ ಎಂದು ಶಪಿಸಿ, ಗುತ್ತಿ ಅದನ್ನು ದೂರಕ್ಕೆ ನೂಕಿದನು, ಎಡಗೈಯಿಂದ. ಅದುವರೆಗೂ ಅವನು ಅದರ ಕಡೆ ನೋಡಿರಲೂ ಇಲ್ಲ; ಅದನ್ನು ಗಮನಿಸಿರಲೂ ಇಲ್ಲ. ಈಗ ಪಕ್ಕನೆ ಅದರ ಒಕ್ಕಣ್ಣು ಅವನ ಕಣ್ಣುಗಳಿಗೆ ಇದಿರಾಗಲು, ಕರುಳಿಗೇ ಎನೋ ಇರಿದಂತಾಯಿತು! ಗುತ್ತಿಯ ಹಸಿವೆಯೇನೋ ಎಲ್ಲವನ್ನೂ ಕಬಳಿಸುವ ಬಡಬಾಗ್ನಿಯಂತಿತ್ತು. ಆ ಅನ್ನ ತನಗೇ ಸಾಲುವುದಿಲ್ಲ ಎಂಬ ಭಾವನೆಯೂ ಇತ್ತು. ಅಲ್ಲದೆ, ನಾಯಿ ಕಾಡಿನಲ್ಲಿ ಮೊಲವನ್ನೊ ಏನನ್ನೊ ಹಿಡಿದು ತಿಂದಿದೆ; ಅದಕ್ಕೆ ಅಷ್ಟೇನೂ ಹಸಿವಾಗಿರಲಾರದು, ಎಂಬ ವಾದವನ್ನೂ ಹೂಡುತ್ತಿತ್ತು ಅವನ ಲೋಭಿಮನಸ್ಸು. ಆದರೂ ಗುತ್ತಿ ಉಣ್ಣುವುದನ್ನು ನಿಲ್ಲಿಸಿದನು. “ಇದೊಂದು ಯಾವಾಗಲೂ ನನ್ನ ಬಲಗೊಡೆಯ! ಬಸವನ ಹಿಂದೆ ಬಾಲ ಬಂದ್ಹಗೆ! ನೀನು ಇನ್ನೆಲ್ಲಿಯಾದ್ರೂ ನನ್ನ ಹಿಂದೆ ಬಾ. ನಿನಗೆ ಮಾಡ್ತೀನಿ ತಕ್ಕ ಶಾಸ್ತಿ! ಕಾಡಿನಾಗೇ ಹೆಡಗೆಬಳ್ಳೀಲಿ ಮರಕ್ಕೆ ಕಟ್ಟಿಹಾಕಿ ಬರದಿದ್ರೆ, ನೋಡು ಮತ್ತೆ, ನಾ ಗುತ್ತೀನೆ ಅಲ್ಲ! ಇದೇ ಮೊದಲು, ಇದೇ ಕಡೆ! ಗೊತ್ತಾ’ತಾ?” ಎಂದು ಕಣ್ಣು ಕೆರಳಿ ಹುಲಿಯನ್ನು ಬೈದು ಗದರಿಸಿ, ಅದಕ್ಕೆ ಬುದ್ದಿ ಹೇಳಿ, ಇದೊಂದು ಬಾರಿ ಕ್ಷಮಿಸುವಂತೆ ಉಳಿದಿದ್ದ ತನ್ನ ಅನ್ನದಲ್ಲಿ ಅರ್ಧದಷ್ಟನ್ನು ತೆಗೆದು ನಾಯಿಯ ಮುಂದೆ ನೆಲದಮೇಲೆ ಹಾಕಿದನು. ಒಡೆಯನ ಬೈಗುಳವನ್ನೆಲ್ಲ ಅನಾಸಕ್ತಿಯಿಂದ ಕೇಳುತ್ತಿದ್ದ, ಇಲ್ಲವೆ ಒಕ್ಕಣ್ಣಿನಿಂದಲೆ ನೋಡುತ್ತಿದ್ದ, ಆ ನಾಯಿ ನಿರ್ದಾಕ್ಷಿಣ್ಯವಾಗಿ, ಆನಂದಾತಿಶಯಕ್ಕೆ ಬಾಲವೆ ಬಿದ್ದುಹೋಗುತ್ತಿದೆಯೊ ಎಂಬಂತೆ ಅದನ್ನು ಅಳ್ಳಾಡಿಸುತ್ತಾ, ಕೂಳನ್ನೆಲ್ಲ ಗಬಗಬನೆ ಖಾಲಿಮಾಡಿಬಿಟ್ಟಿತು, ನಿಮಿಷಾರ್ಧದಲ್ಲಿ!….
ಮರುದಿನ ಬೆಳಗ್ಗೆ ಸ್ವಲ್ಪ ಹೊತ್ತಾಗಿಯೆ ಎದ್ದ ಗುತ್ತಿ ಮುಂದೇನು ಮಾಡಬೇಕೆಂದು ಯೋಚಿಸತೊಡಗಿದನು. ಪೋಲೀಸಿನವರು ಕಂಪದಲ್ಲಿ ಸಿಕ್ಕಿ ಸತ್ತ ವಿಚಾರದ ಗಾಳಿಸುದ್ದಿ ಏನಾದರೂ ಕಾಗಿನಹಳ್ಳಿಯನ್ನು ತಲುಪಿ, ಯಾರ ಬಾಯಿಂದಾದರೂ ಬರಬಹುದೋ ಏನೋ ಎಂದು ನಿರೀಕ್ಷಿಸಿದನು. ಆದರೆ ಕಾಗಿನಹಳ್ಳಿ ಕೋಟಿಮೈಲಿ ಆಚೆಗಿದ್ದರೆ ಎಂತೊ ಅಂತೆ ಆ ವಿಚಾರದಲ್ಲಿ ಅತ್ಯಂತ ಅನಾಸ್ಥೆಯಿಂದಿತ್ತು. ಆ ದಿನವೆ ಅಮೆರಿಕಾದಲ್ಲಿ ಸ್ವಾಮಿ ವಿವೇಕಾನಂದರು ಒಬ್ಬ ಐರೋಪ್ಯ ಶಿಷ್ಯನಿಗೆ ಸಂನ್ಯಾಸ ದೀಕ್ಷೆಯಿತ್ತು ಆತನನ್ನು ಸ್ವಾಮಿ ಕೃಪಾರಂದರನ್ನಾಗಿ ಮಾಡಿರಬಹುದಾಗಿದ್ದ ಸುದ್ದಿಯ ವಿಷಯವಾಗಿ ಎಷ್ಟು ತಿಳುವಳಿಕೆಯಿತ್ತೊ ಅಷ್ಟೆ ತಿಳುವಳಿಕೆ ಇತ್ತು ಕಾಗಿನಹಳ್ಳಿಗೆ ಸಿಂಬಾವಿ ಗುತ್ತಿ ಪೋಲೀಸರಿಂದ ತಪ್ಪಿಸಿಕೊಂಡು ಬಂದಿದ್ದ ವಿಷಯದಲ್ಲಿಯೂ!
ಆವೊತ್ತು ಕಾಗಿನಹಳ್ಳಿಯನ್ನೆಲ್ಲ ಕಲಕಿದ ಸುದ್ದಿ ಬೇರೊಂದಾಗಿತ್ತು: ಬೆಳಗ್ಗೆ ಸುಮಾರು ಒಂಬತ್ತು ಗಂಟೆಯ ಹೊತ್ತಿನಲ್ಲಿ ಹಳೆಮನೆ ಹೆಗ್ಗಡೆಯವರು ಕಳಿಸಿದ್ದ ಬೈರ ಬಂದು, ದೊಡ್ಡಣ್ಣಹೆಗ್ಗಡೆಯವರು ತೀರ್ಥಹಳ್ಳಿಯಲ್ಲಿ ವಿಚಾರವನ್ನೂ ಬೆಟ್ಟಳ್ಳಿ ಗಾಡಿಯಲ್ಲಿ ದೇವಯ್ಯಗೌಡರು ಮುಕುಂದಯ್ಯಗೌಡರು ಹೆಣ ತರಲು ಹೋಗಿರುವ ವಿಚಾರವನ್ನೂ ತಿಳಿಸಿದನು. ತಮ್ಮ ಅಕ್ಕನ ಮಗಳ ಗಂಡನ ಶವಸಂಸ್ಕಾರದಲ್ಲಿ ಪಾಲುಗೊಳ್ಳಲು ಕಾಗಿನಹಳ್ಳಿ ಗೌಡರು ಸುದ್ದಿ ಮುಟ್ಟಿದ ಒಡನೆಯೆ ಸುಮಾರು ಏಳೆಂಟುಮೈಲಿ ದೂರವಿದ್ದ ಹಳೆಮನೆಗೆ ಹೊರಟರು. ಅವರ ಸಂಗಡವೆ ಮತ್ತೆ ಹಿಂದಕ್ಕೆ ಹೊರಟಿದ್ದ ಬೈರನನ್ನು ಕೂಡಿಕೊಂಡು ಗುತ್ತಿಯೂ ಹೊರಟನು.
ಬೈರನನ್ನು ಕಂಡಾಗ ಗುತ್ತಿ ದಿಗಿಲುಗೊಂಡಿದ್ದನು, ತನ್ನ ಕಥೆ ಅವನಿಗೆ ಗೊತ್ತಿದೆಯೊ ಏನೋ ಎಂದು. ಆದರೆ ಬೈರನಿಗೆ ಅದಾವುದೂ ತಿಳಿದಿದ್ದಂತೆ ತೋರಲಿಲ್ಲ. ಬೈರನೇ ಆಶ್ಚರ್ಯ ಸೂಚಿಸಿ, ಸಿಂಬಾವಿಗೆ ಬಹುದೂರದ ಮೂಲೆಯಲ್ಲಿದ್ದ ಕಾಗಿನಹಳ್ಳಿಗೆ ಗುತ್ತಿ ಏಕೆ ಬಂದಿದ್ದನೆಂದು ಕೇಳಿದಾಗ, ಹೆಗ್ಗಡೆಯವರು ಏನೋ ಕಾಗದ ಕೊಟ್ಟಿದ್ದರು, ಅದಕ್ಕಾಗಿ ಬಂದಿದ್ದೆ ಎಂದಿದ್ದನು. ಅಂತೂ ಹಳೆಮನೆಯವರಿಗೂ ತಲುಪಿಲ್ಲ ಸುದ್ದಿ ಎಂದುಕೊಂಡು ಧೈರ್ಯತಾಳಿದ್ದನು. ಆದರೂ ಯಾರಿಂದಾದರೂ ಸುದ್ದಿ ಕೇಳಲು ಅವನು ಕಾತರನಾಗಿದ್ದನು. ಏಕೆಂದರೆ, ಅವನಿಗೆ ಪೋಲೀಸರು ಸತ್ತಿದ್ದಾರೆಯೆ ಇಲ್ಲವೆ ಎಂಬ ವಾರ್ತೆ ಬಹು ಮುಖ್ಯವಾಗಿತ್ತು. ಅವರೇನಾದರೂ ಸತ್ತಿದ್ದರೆ, ತಾನು ಆ ಕಡೆ ಕಾಲು ಹಾಕುವುದು ಅತ್ಯಂತ ಅಪಾಯಕಾರಿಯಾಗಿತ್ತು.
ಏನಾದರೂ ಆಗಲಿ, ತನ್ನ ಎಚ್ಚರಿಕೆ ತನಗಿರುವುದು ಮೇಲು ಎಂದುಕೊಂಡು, ಅವನು ತನ್ನ ಗುರುತು ಆದಷ್ಟು ಮಟ್ಟಿಗೆ ಫಕ್ಕನೆ ಯಾರಿಗೂ ಸಿಕ್ಕದಿರಲಿ ಎಂದು, ಹಿಂದಿನ ದಿನ ಇಡೀ ದಿನವೆಲ್ಲ ಜಪ್ಪಿದ್ದ ಬಿರುಮಳೆ ಈವೊತ್ತು ಸೋಜಿಗವೆಂಬಂತೆ ನಿಂತು ಚೆನ್ನಾಗಿ ಹೊಳವಾಗಿ ಬಿಸಿಲು ಬಂದಿದ್ದರೂ, ಹಾಕಿದ್ದ ಕಂಬಳಿಕೊಪ್ಪೆಯನ್ನು ತೆಗೆದಿರಲಿಲ್ಲ. ಹಾದಿ ನೋಡಲು ಎಷ್ಟು ಬೇಕೋ ಅಷ್ಟು ಮಾತ್ರ ಕಂಡಿಬಿಟ್ಟು ಕೊಂಡಿದ್ದನು, ಮುಖವನ್ನೆಲ್ಲ ಆದಷ್ಟು ಮರೆಮಾಡಿಕೊಂಡು.
ಗುತ್ತಿ ಬೈರನೊಡನೆ ಹಳೆಮನೆಯ ಸುಡುಗಾಡಿಗೆ ಹೋಗುವಷ್ಟರಲ್ಲಿ ದೊಡ್ಡಣ್ಣ ಹೆಗ್ಗಡೆಯವರ ಕಳೇಬರವಾಗಲೆ ಅಲ್ಲಿಗೆ ಬಂದಿತ್ತು. ಹೊಲೆಯರು ಮೊದಲಾದ ಕೀಳು ಜಾತಿಯ ಜನರೆಲ್ಲ ದೂರದೂರ ಪೊದೆಗಳೆಡೆ ಗುಂಪುಸೇರಿ ದುಃಖಿಸುತ್ತಿದ್ದರು. ಯಾರೂ ಗುತ್ತಿಯನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಗುತ್ತಿಗೂ ದುಃಖವುಕ್ಕಿಬಂದು ನೋಡುತ್ತಾ ನಿಂತಿದ್ದನು. ಏಕೆಂದರೆ ತನ್ನ ಚಿಕ್ಕಂದಿ ನಿಂದಲೂ ಅವರು ತರುಣರಾಗಿ ಯುವಕರಾಗಿ, ಸಿಂಬಾವಿಯ ನೆಂಟರ ಮನೆಗೆ ಬರುತ್ತಿದ್ದಾಗಿನಿಂದಲೂ ಅವರೊಡನೆ ಆಡಿ ಓಡಾಡಿ ಬೇಟೆಯಾಡಿ, ದೊಡ್ಡಣ್ಣ ಹೆಗ್ಗಡೆಯವರಲ್ಲಿ ಅವನಿಗೊಂದು ಗೌರವಪೂರ್ಣ ವಿಶ್ವಾಸ ಉಂಟಾಗಿತ್ತು.
ಅವನು ನೋಡುತ್ತಾ ನಿಂತಿದ್ದಾಗಲೆ ದೊಡ್ಡಣ್ಣಹೆಗ್ಗಡೆಯವರ ಧರ್ಮಪತ್ನಿ ರಂಗಮ್ಮ ಹೆಗ್ಗಡಿತಿಯವರು ಗಂಡನ ಪಾದಕ್ಕೆ ಅಡ್ಡಬಿದ್ದರು ಎಷ್ಟು ಹೊತ್ತಾದರೂ ಮೇಲೇಳದೆ, ಸತ್ತೇಹೋಗಿದ್ದರು! ಆಗಂತೂ ನೆರೆದಿದ್ದ ಬಂಧುಗಳೊಡನೆ ಆಳುಕಾಳುಗಳೆಲ್ಲರೂ ಸುಡುಗಾಡೇ ಗೋಳಾಡುವಂತೆ ರೋದಿಸಿದ್ದರು. ಗುತ್ತಿಗೆ ಆ ರೋದನ, ಆ ಶೋಕ, ಆ ದುಃಖ ಇವುಗಳ ಮುಂದೆ ’ಛೀಃ ತಾನೆಷ್ಟರವನು? ತನ್ನ ಕಷ್ಟ ಏನು ಮಹಾ?’ ಎಂಬ ಒಂದು ತರಹದ ವೈರಾಗ್ಯಭಾವನೆ ಹುಟ್ಟಿ, ಮುಂದೆ ತನಗೇನಾಗುತ್ತದೆ ಎಂಬ ವಿಚಾರದಲ್ಲಿ ಅಲಕ್ಷವಾಗಿದ್ದನು: ’ಹಾಳು ಈ ಭೂಮಿಯ ಬಾಳೇ ಇಷ್ಟು! ಇಂದಲ್ಲ ನಾಳೆ ಎಲ್ಲರಿಗೂ ಇದೇ ಗತಿ! ಅದಕ್ಕಾಗಿ ಸುಮ್ಮನೆ ಪಾಡುಪಡುವುದೇಕೆ? ಬ್ರಹ್ಮ ಹಣೆಯಲ್ಲಿ ಬರೆದದ್ದು ಏನಾಗಬೇಕು ಅಂತಾ ಇದೆಯೋ ಅದೇ ಆಗುತ್ತದೆ!’
ಆ ದಿನ ರಾತ್ರಿ ಅವನು ಬೈರನ ಬಿಡಾರದಲ್ಲಿಯೆ ಉಳಿದಿದ್ದನು. ಶವಸಂಸ್ಕಾರದಲ್ಲಿ ಭಾಗಿಗಳಾಗಲು ಬಂದಿದ್ದ ಬಂಧುವರ್ಗದವರ ಮಧ್ಯೆ ತನ್ನ ಒಡೆಯರು ಸಿಂಬಾವಿ ಭರಮೈಹೆಗ್ಗಡೆಯವರನ್ನೂ ನೋಡಿದ್ದನು. ನಾಳೆ ಅವರನ್ನು ಹೇಗಾದರೂ ಮಾಡಿ ಏಕಾಂತವಾಗಿ ಸಂಧಿಸಿ, ತಾನು ಮುಂದೆ ಮಾಡಬೇಕಾದುದನ್ನು ಅವರಿಂದ ತಿಳಿದು, ಅದರಂತೆ ಮಾಡುತ್ತೇನೆ-ಎಂದು ಆಲೋಚಿಸುತ್ತಾ ಬಿಡಾರದ ಒಳಗೆ ಕತ್ತಲೆಯಲ್ಲಿ ಒಬ್ಬನೆ ಮಲಗಿದ್ದ ಗುತ್ತಿಗೆ, ಯಾರೋ ಬಾಗಿಲ ಬಳಿ ಬಂದದ್ದು ಗೊತ್ತಾಗಿ, ಒಡೆಯರ ಮನೆಗೆಲಸಕ್ಕೆ ಇತರ ಆಳುಗಳೊಡನೆ ಹೋಗಿದ್ದ ಬೈರನೇ ಬಂದನೆಂದು ಭಾವಿಸಿ, “ಯಾರದು?” ಎಂದನು.
ಯಾವ ಉತ್ತರವೂ ಬರಲಿಲ್ಲ; ಯಾರೂ ಮಾತಾಡಲಿಲ್ಲ; ಆದರೆ ಕೈ ಬಳೆಗಳ ಕಿಂಕಿಣಿಕಿಣಿ ಕೇಳಿಸಿತು.
ಬೈರನ ಹೆಂಡತಿ ಸತ್ತುಹೋಗಿದ್ದು, ಅವನಿನ್ನೂ ಮದುವೆಯಾಗದೆ ಒಬ್ಬೊಂಟಿಗನಾಗಿಯೆ ಬಿಡಾರದಲ್ಲಿದ್ದುಕೊಂಡು, ತನ್ನ ಅಡುಗೆಯನ್ನು ತಾನೇ ಮಾಡಿಕೊಂಡು ’ಒಂಟಿಗೇಡಿ’ ಎನ್ನಿಸಿಕೊಂಡಿದ್ದಾನೆ ಎಂಬ ಸಂಗತಿಯನ್ನು ತಿಳಿದಿದ್ದ ಗುತ್ತಿಗೆ, ಬಳೆಯ ಸದ್ದು ಕೇಳಿ ತುಸು ಸೋಜಿಗವಾಯಿತು. ಆದರೆ ಬೈರನ ಶೃಂಗಾರಜೀವನದ ಖುಖ್ಯಾತಿಯನ್ನು ಅರಿತಿದ್ದ ಅವನಿಗೆ ಮನ್ಮಥಕುತೂಹಲ ಕೆರಳಿ ಬಾಗಿಲತ್ತ ನೋಡುತ್ತ ಮಲಗಿಯೆ ಇದ್ದನು.
ಬೈರನ ಬಿಡಾರದ ಒಳಗೆ ಕತ್ತಲೆ ಕವಿದಿದ್ದಿತಾದರೂ ಹೊರಗಡೆ ಇದ್ದ ಬಯಲುಗತ್ತಲೆಯ ಬೆಳಕಿನ ದೆಸೆಯಿಂದ ಬಾಗಿಲಷ್ಟು ಅಗಲದ ಚೌಕದಲ್ಲಿ ಬಾಗಿಲಿಗೆ ಬಂದ ಯಾರನ್ನಾದರೂ ಆಕಾರಮಾತ್ರವಾಗಿ ನೋಡ ಬಹುದಾಗಿತ್ತು. ಗುತ್ತಿ ಅತ್ತಕಡೆಯೇ ಕಣ್ಣಾಗಿರಲು ಒಂದು ಹೆಣ್ಣಿನ ಆಕೃತಿ ಬಾಗಿಲಿಗೆ ಬಂದು ನಿಂತಿತು. ಗುತ್ತಿಗೆ ತುಸುವೆ ಮೈ ಬಿಸಿಯೇರಿತು. ಯಾರಿರಬಹುದು? ಹಳೆಮನೆಯ ಕೇರಿಯವರೆಲ್ಲರೂ ಒಂದಲ್ಲ ಒಂದು ರೀತಿಯಿಂದ ನನಗೆ ಗೊತ್ತಿರುವವರೆ? ಆಕೃತಿ ನೋಡಿದರೆ ಹುಡುಗಿಯಂತೆ ಕಾಣುತ್ತಿದೆ! ಬೈರನಿಗಾಗಿ ಬಂದವಳೇ? ಅಥವಾ ತನಗೇ ಆಗಿಯೋ? ತಾನು ಬಂದದ್ದು ಅಷ್ಟಾಗಿ ಯಾರಿಗೂ ಗೊತ್ತಾಗಿಲ್ಲ. ಆ ತೆರನ ಸಂಬಂಧದಲ್ಲಿ ತನಗೆ ಗೊತ್ತಿರುವವಳೆಂದರೆ ತಳವಾರ ಸಣ್ಣನ ಮಗಳು ಪುಟ್ಟಿ! ಹಿಂದೆ ಹುಡುಗಾಟದ ಮಟ್ಟದಲ್ಲಿ ಅವಳ ಸಂಗ ಮತ್ತು ಅಂಗಸುಖಗಳೆರಡನ್ನೂ ಅನುಭವಿಸಿದ್ದನು. ಅದನ್ನು ನೆನೆದು ಅವನಿಗೆ ನವಿರು ನಿಮಿರಿತು. ಹೊಲೆಯನ ರೂಕ್ಷಪ್ರಜ್ಞೆಗೆ ಒಂದು ಕ್ಷಣದ ಮಟ್ಟಿಗೆ ಪೂರ್ವಾಪರ ಸಂಬಂಧ ತಪ್ಪಿ ಹೋದಂತಾಗಿ ತಿಮ್ಮಿಯನ್ನೂ ಅವಳ ಸರ್ವಾಂಗ ಸರ್ವಸುಖ ಸಂಬಂಧವನ್ನೂ ಅದು ಮರೆತೆಬಿಟ್ಟಿತ್ತು.!
ಏನನ್ನೋ ಗುಟ್ಟಾಗಿ ಮಾತಾಡುವವನಂತೆ ಗಟ್ಟಿಯಾಗಿ ಪಿಸುದನಿಯಲ್ಲಿ “ಯಾರು? ಪುಟ್ಟಿಯೇನೇ?” ಎಂದು ಕೇಳಿ, ಉತ್ತರವನ್ನು ನಿರೀಕ್ಷಿಸದೆ “ನಾನೊಬ್ಬನೆ ಇದ್ದೀನಿ ಕಣೆ!” ಎಂದು ಆಶ್ವಾಸನೆ ಕೊಡುವಂತೆ ನುಡಿದನು.
ಅಷ್ಟರಲ್ಲಿ ಹೊರಗಡೆ ದೂರದಲ್ಲಿ ಯಾರೊ ಕೆಲವರು ಮಾತನಾಡಿಕೊಳ್ಳುತ್ತಿರುವ ಸದ್ದು ಕೇಳಿಸಿ, ಬಾಗಿಲಲ್ಲಿ ನಿಂತಿದ್ದ ಆಕೃತಿ ತಟಕ್ಕನೆ ಹಿಂದಕ್ಕೆ ಸರಿದು ಮರೆಯಾಯಿತು. ಬೈರನೂ ಗುತ್ತಿಯನ್ನು ಹೆಸರು ಹಿಡಿದು ಕೂಗುತ್ತಾ ಬಾಗಿಲಿಗೆ ಬಂದನು….
ಮರುದಿನ ಗುತ್ತಿ ಸಮಯಕಾದು, ಹಳೆಮನೆ ಹೆಂಚಿನ ಮನೆಯಲ್ಲಿ ಉಳಿದುಕೊಂಡಿದ್ದ ತನ್ನ ಒಡೆಯರನ್ನು ಏಕಾಂತವಾಗಿಯೆ ಸಂಧಿಸಿದನು. ಅವರು ಪೋಲೀಸಿನವನು ಕಂಪದಲ್ಲಿ ಸಿಕ್ಕಿಬಿದ್ದಿದ್ದು, ತೀರ್ಥಹಳ್ಳಿಗೆ ಹೋಗುತ್ತಿದ್ದ ಬೆಟ್ಟಳ್ಳಿ ಗಾಡಿಯಲ್ಲಿದ್ದವರಿಂದ ರಕ್ಷಿಸಲ್ಪಟ್ಟಿದ್ದ ವಿಚಾರವನ್ನು ತಿಳಿಸಿ, ಗುತ್ತಿಯ ದಸ್ತಗಿರಿಗಾಗಿ ವಾರಂಟು ಹೊರಡಿಸುತ್ತಾರಂತೆ ಎಂಬುದನ್ನು ಹೇಳಿ “ನೀನು ಒಂದು ಆರು ತಿಂಗಳು ಒಂದು ವರ್ಷ, ಎಲ್ಲಾದರೂ ತಲೆತಪ್ಪಿಸಿಕೊಂಡಿರು. ಇದೆಲ್ಲ ತಣ್ಣಗಾದ ಮ್ಯಾಲೆ ಕೇರಿಗೆ ಬರಬಹುದು. ನಾನೂ ಕಲ್ಲೂರು ಮಂಜಭಟ್ಟರಿಗೆ ಹೇಳಿ ಏನಾದ್ರೂ ಮಾಡಿಸ್ತೀನಿ. ತೀರ್ಥಹಳ್ಳಿ ಅಮಲ್ದಾರ್ರು ಅವರ ಸಂಬಂಧದೋರಂತೆ.” ಎಂದು ಸಲಹೆ ಕೊಟ್ಟರು.
ದಸ್ತಗಿರಿ, ವಾರಂಟು ಎಂಬ ಭಯಂಕರ ಪದಗಳನ್ನು ಕೇಳಿಯೆ ಗುತ್ತಿಗೆ ಜಂಘಾಬಲ ಉಡುಗಿದಂತಾಯ್ತು. ಓಡಿಹೋಗಿ ತಲೆ ತಪ್ಪಿಸಿಕೊಂಡಿರುವ ಸಲಹೆ ಅವನಿಗೆ ಅನಾವಶ್ಯಕವಾಗಿತ್ತು. ಆದರೂ ಧೈರ್ಯ ಮಾಡಿ ಅವನು ತಿಮ್ಮಿಯನ್ನು ಕರೆದುಕೊಂಡೇ ಓಡಿ ಹೋಗುವ ವಿಚಾರವೆತ್ತಿದಾಗ, ಒಡೆಯರು ರೇಗಿ ಬಯ್ದರು: “ಮುಂಡೇಮಗನೇ, ನಿನ್ನ ತಲೆಯಂತೂ ಹೋಗ್ತದಲ್ಲಾ! ನಮ್ಮ ತಲೆಗೂ ತಂದಿಡಬ್ಯಾಡ! ನೀನೆಲ್ಲಾದ್ರೂ ಬೆಟ್ಟಳ್ಳಿ ಕೇರಿಕಡೆ ಸುಳಿದ್ರೆ, ನಿನ್ನ ಹಿಡಿದು ಪೋಲೀಸರಿಗೆ ಕೊಡ್ತಾರೆ? ಗೊತ್ತಾತೇನು?…. ಕೊಪ್ಪದ ಸೀಮೆ, ಮುತ್ತೂರು ಸೀಮೆ ಕಡೆಗೆ ಹೋಗು. ತೀರ್ಥಹಳ್ಳಿ ಮ್ಯಾಲೆ ಹೋಗೀಯಾ ಹುಷಾರು! ಆಗುಂಬೆ ಕಡೆಯಿಂದ ಹೋಗು…. ಕೊಪ್ಪದ ಹತ್ತಿರ ’ಆಲೆಗದ್ದೆ’ ಅಂತಾ ಇದೆ. ಅಲ್ಲಿ ಗಣಪಯ್ಯನಾಯ್ಕರು ಅಂತಾ ಅದಾರೆ. ಅವರ ಹತ್ತಿರ ಕೆಲಸಕ್ಕೆ ಸೇರಿದ್ರೆ, ಪೋಲೀಸರು ನಿನ್ನ ಹತ್ರಾನೇ ಬರಾದಿಲ್ಲ…. ಅಲ್ಲಿದ್ರೆ ಮುತ್ತೂರು ಸೀಮೇಲಿ ’ಕಾನೂರು’ ಅಂತಾ ಅದೆ. ಅಲ್ಲಿ ಸುಬ್ಬಯ್ಯಗೌಡ್ರು, ಚಂದ್ರಯ್ಯಗೌಡರು ಅಂತಾ ಎಲ್ಲಾ ಅದಾರೆ. ಅವರನ್ನಾದ್ರೂ ಸೇರು…ಎಲ್ಲ ತಣ್ಣಗಾದಮ್ಯಾಲೆ ನಾ ಹೇಳಿಕಳಿಸ್ತೀನಿ!….”
*****


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ