ನನ್ನ ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-31

    ಪಾದ್ರಿ ಜೀವರತ್ನಯ್ಯಗೆ ಕೊಂಚ ಯೋಚನೆಗಿಟ್ಟುಕೊಂಡಿತು: ಮಿಶನ್ ಸ್ಕೂಲಿನ ಹತ್ತಿರ ಬಾವಿ ತೋಡಿಸಲು ಸ್ಥಳ ಗೊತ್ತುಮಾಡುವ ಕಾರ್ಯದಲ್ಲಿ ನೀರಿನ ಪರಿಮಾಣ, ನೀರಿರುವ ಸ್ಥಾನ, ನೀರು ದೊರೆಯುವ ಆಳ ಇವುಗಳನ್ನು ನಿರ್ಧರಿಸುವುದಕ್ಕೆ ಐಗಳ ವಿಶೇಷ ಸಾಮರ್ಥ್ಯದ ಹಸುರುಕಡ್ಡಿಯ ವಿಧಾನವನ್ನು ಉಪಯೋಗಿಸಿಕೊಳ್ಳಬಹುದೆ ಬಾರದೆ ಎಂಬುದರ ವಿಚಾರವಾಗಿ: ಕ್ರೈಸ್ತರಾದ ತಾವು, ಮುಖ್ಯವಾಗಿ ಕ್ರೈಸ್ತ ಮತ ಪ್ರಚಾರಕ್ಕಾಗಿಯೆ ನಿರ್ಮಿತವಾಗಲಿರುವ ಸಂಸ್ಥೆಗೆ, ಕ್ರೈಸ್ತ ಸಮ್ಮತವಲ್ಲದ ಹಿಂದೂ ದುರ್ಮಂತ್ರವಿಧಾನದ ಸಹಾಯ ಪಡೆಯಬಹುದೆ? ನಿಮಿತ್ತ ಕೇಳುವುದು, ಗಣ  ಬರಿಸುವುದು, ದೆಯ್ಯದ ಹರಕೆ ಪೂಜೆ ಮಾಡುವುದು ಇತ್ಯಾದಿಗಳನ್ನೆಲ್ಲ ಅವಹೇಳನ ಮಾಡಿ ಖಂಡಿಸುತ್ತಿದ್ದ ತಾವೆ ಈ ಅವೈಜ್ಞಾನಿಕವಾದ ಅಪ್ರಾಕೃತ ಉಪಾಯವನ್ನು ಕೈಗೊಂಡರೆ ನಾಳೆ ತಮ್ಮ ದೊಡ್ಡ ಗುರುಗಳಾದ ರೆವರೆಂಡ್ ಲೇಕ್‌ಹಿಲ್ ದೊರೆಗಳು ಏನೆಂದಾರು?

ಆದರೆ ಕಣ್ಣಾ ಪಂಡಿತರು, ಬೆಟ್ಟಳ್ಳಿ ದೇವಯ್ಯಗೌಡರು, ಕಡೆಗೆ ಅಲ್ಲಿಗೆ ಸುಮ್ಮನೆ ನೋಡಿಕೊಂಡು ಹೋಗಲು ಬಂದಿದ್ದ ಕರಿಮಿನು ಸಾಬರೂ ಕೂಡ ಹಸುರುಕಡ್ಡಿಯ ವಿಧಾನದ ಸಮರ್ಪಕತೆಯ ವಿಷಯವಾಗಿ ತಮ್ಮ ತಮ್ಮ ಅನುಭವಗಳನ್ನು ಒತ್ತಿ ಹೇಳಿ ಸಮರ್ಥಿಸಿ, ಅದು ಅನಿರ್ವಚನೀಯ ಶಕ್ತಿಯಾದರೂ ಅತ್ಯಂತ ಸಹಜವಾದದ್ದೆಂದೂ, ಅದಕ್ಕೂ ದೆವ್ವ ಭೂತಗಣ ನಿಮಿತ್ತಾದಿಗಳಿಗೂ ಏನೂ ಸಂಬಂಧವಿಲ್ಲವೆಂದೂ ದೃಢಪಡಿಸಿದ ಮೇಲೆ ಜೀವರತ್ನಯ್ಯ ಪರೀಕ್ಷಾರ್ಥವಾಗಿ ಪ್ರಯೋಗಿಸಲು ಅನುಮತಿಯಿತ್ತರು.
ಜೀವರತ್ನಯ್ಯಗೂ ಕೆರಳಿ ಅತ್ಯಂತ ಜಾಗರೂಕ ಮನಸ್ಸಿನಿಂದ ಸಮೀಕ್ಷಿಸತೊಡಗಿದರು, ಏನಾದರೂ ದುರ್ಮಂತ್ರದ ಸುಳಿವು ಕಂಡೊಡನೆಯ ಪ್ರಯೋಗ ವಿರಾಮ ಮಾಡಲು ನಿಶ್ಚಯಿಸಿ.
ಐಗಳಿಗೆ, ಪೀಠಿಕೆಪ್ರಾಯವಾಗಿ, ಮೈಮೇಲೆ ಬಂದಂತಾಗಿ ಹೂಂಕರಿಸಬಹುದೆಂದು ನಿರೀಕ್ಷಿಸಿದ್ದ ಜೀವರತ್ನಯ್ಯಗೆ ಆಶ್ಚರ್ಯವಾಯಿತು, ಐಗಳು ತಮ್ಮ ದಿನನಿತ್ಯದ ಸಹಜ ಸ್ಥಿತಿಯಲ್ಲಿಯೆ ಇದ್ದು, ಚೀಂಕ್ರನಿಗೆ ಒಂದು ಕವಲೊಡೆದ ಹಸುರುಕಡ್ಡಿಯನ್ನು ಯಾವುದಾದರೂ ಒಂದು ಗಿಡದಿಂದ ಮುರಿದುಕೊಂಡು ಬರುವಂತೆ ಹೇಳಿದುದನ್ನು ನೋಡಿ! ಚೀಂಕ್ರ ಕೀಳುಜಾತಿಗೆ ಸೇರಿದ್ದ ಅಸ್ಪ್ರಶ್ಯ; ಅವನ ಹತ್ತಿರ ಅದನ್ನು ತರಲು ಹೇಳುತ್ತಿದ್ದಾರಲ್ಲಾ? ಅಂತಹ ಅಸಾಧಾರಣ ದೈವಿಕ ಕಾರ್ಯನಿರ್ವಹಣೆಗೆ?
ಚೀಂಕ್ರ ಯಾವ ಮುಚ್ಚುಮರೆಯು ಇಲ್ಲದೆ ಬಹಿರಂಗವಾಗಿಯೆ ಸಮೀಪದಲ್ಲಿದ್ದ ಒಂದು ಗಿಡದಿಂದ ಎಲ್ಲರೂ ನೋಡುತ್ತಿದ್ದಂತೆಯೆ ಒಂದು ದೊಡ್ಡ ಕವಲು ಕಡ್ಡಿಯನ್ನು ಮುರಿದು ತಂದ. ಐಗಳು ಅದನ್ನು ಹಿಡಿದು ನೋಡಿ “ಏನೊ ಇದು? ಯಾರಿಗಾದರೂ ಹೊಡೆಯುವುದಕ್ಕೆ ಬರಲು ಮುರಿದುಕೊಂಡು ಬರುವಂತೆ ತಂದಿದ್ದೀಯಲ್ಲಾ ಇಷ್ಟು ದೊಡ್ಡ ಹರೆಯನ್ನ? ಸಣ್ಣದಾಗಿರಬೇಕು; ಬಳುಕಬೇಕು.” ಎಂದು ಹೇಳುತ್ತಿರುವಾಗಲೆ ಕಣ್ಣಾಪಂಡಿತರು ತಾವೆ ಹೋಗಿ ಒಂದನ್ನು ಮುರಿದು ತಂದರು.
ಅದು ಐಗಳಿಗೆ ಒಪ್ಪಿಗೆಯಾಯಿತೆಂದು ಅವರ ಮುಖಭಂಗಿಯಿಂದಲೆ ಗ್ರಹಿಸಿದರು ಪಾದ್ರಿ.
ಎಲ್ಲರಿಗೂ ಪವಾಡ ಸಂದರ್ಶನದ ಕುತೂಹಲ, ಆತುರ. ದೂರ ದೂರ ಕೆಲಸ ಮಾಡುತ್ತಿದ್ದ ಆಳುಗಳೆಲ್ಲ ಕೆಲಸ ನಿಲ್ಲಿಸಿ, ನಿಂತು, ಇತ್ತಕಡೆಗೇ ನೋಡುತ್ತಿದ್ದವರು, ಈಗ ಸುತ್ತಣಿಂದಲೂ ಬಳಿ ಸಾರಿ ಗುಂಪಾಗಿ ಸಾಲಾಗಿ ಐಗಳಿಗೆ ತುಸು ದೂರವಾಗಿ ನಿಂತು, ಹುಬ್ಬು ನಿಮಿರಿಸಿ ನೋಡತೊಡಗಿದರು.
ಐಗಳು ಆ ಬಳಕುವ ಹಸುರು ಕಡ್ಡಿಯ ಕವಲಿನ ಎರಡೂ ತುದಿಗಳನ್ನು ತಮ್ಮ  ಎರಡೂ ಕೈಯಲ್ಲಿ ಪ್ರತ್ಯೇಕವಾಗಿ ಹಿಡಿದು, ತಮ್ಮ ಎದೆಗೆ ನೇರವಾಗಿ ಚಾಚಿಕೊಂಡರು. ಅದು ಯಾವ ಒಂದು ಕಡ್ಡಿಯಿಂದ ಎರಡಾಗಿ ಕವಲಿತ್ತೊ ಆ ಕಡ್ಡಿಯ ಮೂರು ನಾಲ್ಕು ಅಂಗುಲದುದ್ದದ ಮೂಲಭಾಗ ಸಮತಲವಾಗಿ ಮುಂದಕ್ಕೆ ಚಾಚಿತ್ತು. ಐಗಳು ಮುಂದುವರೆದು ನಡೆಯತೊಡಗಿದರು, ಬಾವಿ ತೊಡಿಸಬೇಕು ಎಂದಿದ್ದ ಎಡೆ.
ನೀರು ಸಿಕ್ಕುವ ತಾಣಕ್ಕೆ ಬಂದೊಡನೆ ಆ ಹಸುರುಕಡ್ಡಿಯ ಚಾಚಿದ್ದ ಮೂಲಭಾಗ ನೆಲದ ಕಡೆ ತನಗೆ ತಾನೆ ಬಾಗುತ್ತದೆ ಎಂದು ಕೇಳಿದ್ದ ಅವರೆಲ್ಲರೂ ಆ ಕಡ್ಡಿಯ ಕೊನೆಯ ಕಡೆಗೆ ನೋಡುತ್ತಾ ಐಗಳನ್ನು ಹಿಂಬಾಲಿಸಿದರು. ಪಾದ್ರಿಯೂ ನಡೆಯಬಹುದಾದ ಮೋಸವನ್ನು ಕಂಡುಹಿಡಿಯುವ ಪತ್ತೇದಾರಿಕೆ ಬುದ್ಧಿಯಿಂದ ಕಣ್ಣಿನ ಮೇಲೆ ಕಣ್ಣಿಟ್ಟುಕೊಂಡು ಎಲ್ಲರಿಗಿಂತಲೂ ಮುಂದಾಗಿಯೆ ಐಗಳನ್ನು ಅನುಸರಿಸುತ್ತಿದ್ದನು.
ಪಾದ್ರಿ ಬಾವಿ ಅಗೆಯಲು ನಿರ್ದೇಶಿಸಿದ್ದ ಜಾಗದಲ್ಲಿ ಹಸುರುಕಡ್ಡಿ ಭಾಗಲಿಲ್ಲ. ಐಗಳು ಇನ್ನೂ ಮುಂಬರಿದರು. ಸ್ವಲ್ಪ ದೂರ ಸಾಗುವುದರಲ್ಲಿಯೆ ಕಡ್ಡಿಯ ತುದಿ ನೆಲದ ಕಡೆ ನಮಸ್ಕಾರ ಮಾಡುತ್ತದೆಯೊ ಎಂಬಂತೆ  ನಸುವೆ ಬಾಗತೊಡಗಿತು. ಅದನ್ನು ಕಂಡೊಡನೆ ಹೋ ಎಂದು ಜಯಘೋಷ ಮಾಡುವಂತೆ ನೆರೆದವರ ಅನಂದ್ಗೋದ್ಗಾರವೆದ್ದಿತು.
ಪಾದ್ರಿಗೆ ನಂಬಿಕೆಯಾಗಲಿಲ್ಲ. ಐಗಳೇ ತಮ್ಮ ಕೈಚಳಕದಿಂದ ಆ ಬಳುಕುವ ಹಸುರು ಕಡ್ಡಿಯ ತಲೆಯನ್ನು ಹಾಗೆ ನೆಲದ ಕಡೆಗೆ ತುಯ್ಯುವಂತೆ ಮಾಡುತ್ತಿರಬೇಕು ಎಂದುಕೊಂಡನು.
ಐಗಳು ಇನ್ನೂ ಮುಂದುವರಿದರು, ಕಡ್ಡಿ ಮತ್ತೆ ತಲೆಯೆತ್ತಿ ಮೊದಲಿನಂತೆ ನಿಂತಿತು.
“ಅತ್ತ ಕಡೆ ಪ್ರಯೋಜನವಿಲ್ಲ, ಐಗಳೆ. ಇತ್ತ ಮೊಕ ತಿರುಗಿ, ಆ ಹಲಸಿನ ಮರದ ಕಡೆಗೆ” ಎಂದರು ಕಣ್ಣಾಪಂಡಿತರು.
ಕಣ್ಣಾಪಂಡಿತರ ಸೂಚನೆಯ ಮೇರೆಗೆ ಐಗಳು ಹಲಸಿನ ಮರದ ದಿಕ್ಕಿಗೆ ತಿರುಗಿ ನಡೆಯತೊಡಗಿದರು. ಹಲಸಿನ ಮರ ಸಮಿಪಿಸಲು ಹಸುರು ಕಡ್ಡಿಯ ತಲೆ ಇದ್ದಕ್ಕಿದ್ದಂತೆ, ಅದರ ತುದಿಗೆ ಕಟ್ಟಿದ್ದ ಅದೃಶ್ಯ ಸೂತ್ರವನ್ನು ಯಾರೋ ನೆಲದ ಕಡೆಗೆ ಬಲವಾಗಿ ಜಗ್ಗಿಸಿ ಎಳೆದರೋ ಎಂಬಂತೆ, ಮುರಿಯುವಷ್ಟರ ಮಟ್ಟಿಗೆ ಬಾಗಿ ಕೊಂಕಿಬಿಟ್ಟಿತು! ನೋಡುತ್ತಿದ್ದವರಿಗೆ ಆ ಕ್ರಿಯೆ ಎಷ್ಟು ವಿಸ್ಮಯಕರವಾಗಿತ್ತೆಂದರೆ,  ಯಾವುದೊ ಅತಿಮಾನುಷವಾದ ಜೀವಂತ ಶಕ್ತಿಯೆ ಆ ನಿರ್ಜೀವ ಹಸುರು ಕಡ್ಡಿಯಲ್ಲಿ ಸೇರಿಕೊಂಡು ಆಟವಾಡುತ್ತಿದೆಯೋ ಏನೋ ಎಂಬ ಭ್ರಾಂತಿಭಯ ಮೂಡುವಂತಾಯಿತು. ’ಇದು ಖಂಡಿತ ದೇವರ ಶಕ್ತಿಯಲ್ಲ; ದೇವರ ವೈರಿಯಾದ ಸೈತಾನನ ಶಕ್ತಿಯೆ ಇರಬೇಕು!’ ಎಂದುಕೊಂಡರು ಪಾದ್ರಿ ಜೀವರತ್ನಯ್ಯ. ಯೇಸುಕ್ರಿಸ್ತನು ಮಾಡಿದ ಮಹಾದ್ಭುತಕರವಾದ ಪವಾಡಗಳಲ್ಲಿ ಅವರಿಗೆ ಅಪಾರ ಶ್ರದ್ಧೆಯಿದ್ದರೂ, ಕ್ರೈಸ್ತನಲ್ಲದವನಲ್ಲಿ ತೋರಿಬರುವ ಆ ಪವಾಡಶಕ್ತಿ ಎಂದಿಗೂ ಸೈತಾನನದೇ ಎಂಬುದು ಅವರ ಅವೈಚಾರಿಕ ಮತಶ್ರದ್ಧೆಯಾಗಿತ್ತು.
ಐಗಳೆ, ಸ್ವಲ್ಪ ನಿಲ್ಲಿ, ಇಲ್ಲಿ ಕೊಡಿ, ನಾನು ನೋಡುತ್ತೇನೆ ಆ ಹಸುರುಕಡ್ಡಿಯನ್ನ, ಎಂದರು ಪಾದ್ರಿ
ಐಗಳು ಪರಿಹಾಸ ಮುಖ ಮುದ್ರೆಯಿಂದಲೆ ತಮ್ಮ ಎರಡೂ ಕೈ ಹಿಡಿದಿದ್ದ ಹಸುರು ಕಡ್ಡಿಯನ್ನು ಜೀವರತ್ನಯ್ಯಗೆ ನೀಡಿದರು. ಅವರು ಅದನ್ನು ಸ್ವಲ್ಪ ಎಚ್ಚರಿಕೆಯಿಂದಲೆ ತೆಗೆದುಕೊಂಡು ಅತ್ತ ಇತ್ತ ತಿರುಗಿಸಿ ನೋಡಿ “ನಾನು ಬೇರೆ ಒಂದು ಕಡ್ಡಿ ಮುರಿದು ಕೊಡಬಹುದೇ?” ಎಂದರು.
ಐಗಳೊಡನೆ ನಾಲ್ಕಾರು ದನಿಗಳು “ಅದಕ್ಕೇನಂತೆ ಮುರಿದು ಕೊಡಿ” ಎಂದುವು ಒಟ್ಟಿಗೆ.
ಪಾದ್ರಿ ಸ್ಕೂಲಿನ ಸುತ್ತಲೂ ಕಡಿದು ಬಯಲು ಮಾಡಿದ್ದ ಕಾಡಿನ ಅಂಚಿಗೆ ಹೋಗಿ ಒಂದು ಕವಲುಕಡ್ಡಿಯನ್ನು ಮುರಿದು ತಂದರು.
ಅದನ್ನು ಕೈಗೆ ತೆಗೆದುಕೊಳ್ಳುತ್ತಾ ಬೆಟ್ಟಳ್ಳಿ ದೇವಯ್ಯಗೌಡರು “ಇದು ಅದಕ್ಕಿಂತ ಪಸಂದಾಗಿದೆ. ಲಾಯಖ್ಖಾಗಿ ಬಳುಕ್ತದೆ.” ಎಂದು ಐಗಳಿಗೆ ಕೊಟ್ಟರು.
ಐಗಳು ಮೆಚ್ಚಿನೋಡಿ ಹಿಂದಿನ ಕಡ್ಡಿಯನ್ನು ಹಿಡಿದ್ದಂತೆಯೆ ಇದನ್ನೂ ಹಿಡಿದುಕೊಂಡರು.
ಒಡನೆಯೆ, ನೋಡುತ್ತಿದ್ದ ಜನರೆಲ್ಲ ಕೈಚಪ್ಪಾಳೆ ಹೊಡೆದು ಹೋ ಎಂದ ಸದ್ದು ಪಾದ್ರಿಯ ಕಿವಿಗೆ ಅಪ್ಪಳಿಸಿದಂತಾಯ್ತು: ಪಾದ್ರಿ ನೋಡುತ್ತಾರೆ: ತಾವು ಕೊಟ್ಟಿದ್ದ ಹಸುರುಕಡ್ಡಿ ಹಿಂದಿನ ಕಡ್ಡಿಗಿಂತಲೂ ಹೆಚ್ಚಾಗಿ ತಲೆಬಾಗಿದಂತಾಗಿ, ಹಲಸಿನ ಮರದ ಬುಡದಲ್ಲಿ ಬಾವಿ ಅಗೆದರೆ ನೀರು ಸಮೃದ್ಧವಾಗಿ ಉಕ್ಕುತ್ತದೆ ಎಂಬುದನ್ನು ಮೌನವಾಗಿ ಘೋಷಿಸುತ್ತದೆ!
ಪಾದ್ರಿಯ ಸೂಚನೆಯ ಪ್ರಕಾರ ಐಗಳು ಆ ಕಡ್ಡಿಯನ್ನೆ ಹಿಡಿದು ಮೊದಲು ನಡೆದ ಹಾದಿಯಲ್ಲಿಯೆ ಮತ್ತೊಮ್ಮೆ ನಡೆದರೂ ಈ ಕಡ್ಡಿ ಆ ಕಡ್ಡಿ ಗಿಂತಲೂ ಸ್ಪಷ್ಟವಾಗಿ ಬಾಗಿ ಅಥವಾ ಬಾಗದೆ ಮೊದಲಿನ ಕಡ್ಡಿ ಬರೆದಿದ್ದ ಇತಿಹಾಸವನ್ನೆ ಬರೆದುಬಿಟ್ಟಿತು.
“ಐಗಳೆ, ನಾನು ಕಡ್ಡಿ ಹಿಡಿಯುತ್ತೇನೆ, ನೋಡೋಣ ಇತ್ತ ಕೊಡಿ “ ಎಂದರು ಪಾದ್ರಿ, ಪರೀಕ್ಷೆ ನಡೆಸುವ ಉದ್ದೇಶದಿಂದ.
ಪಾದ್ರಿ ಐಗಳು ಹಿಡಿದಿದ್ದಂತೆಯೆ ಹಿಡಿದು ಅಲ್ಲೆಲ್ಲ ಸುತ್ತಾಡಿದರು. ಕಡ್ಡಿ ಇನಿತೂ ಮಿಸುಕಲಿಲ್ಲ. ನೆರೆದಿದ್ದವರೆಲ್ಲ ನಕ್ಕರು ಅಷ್ಟೆ!
ಅಷ್ಟರಲ್ಲಿ ಐಗಳು ವಿನೋದ ಮಾಡಿ ನೋಡುವ ಉದ್ದೇಶದಿಂದ “ಪಾದ್ರಿಗಳೆ, ಇನ್ನೊಮ್ಮೆ ಹಿಡಿಯಿರಿ ನೀವು. ಒಂದು ವಿಚಿತ್ರ ತೋರಿಸುವಾ!” ಎಂದು ಕಡ್ಡಿಯನ್ನು ಸರಿಯಾಗಿ ಹಿಡಿಸುವ ನೆವದಿಂದ ಅವರ ತೋಳನ್ನು ಮುಟ್ಟಿಹಿಡಿದು “ಹ್ಞೂ! ಈಗ ನಡೆಯಿರಿ!” ಎಂದರು.
ಹತ್ತು ಹೆಜ್ಜೆ ಹೋಗುವುದರಲ್ಲಯೆ ಪಾದ್ರಿ ಹಿಡಿದಿದ್ದ ಹಸುರುಕಡ್ಡಿ ಬಳುಕತೊಡಗಿತು! ಪಾದ್ರಿಗೆ ವಿಸ್ಮಯ, ದಿಗಿಲು! ತಾನೆಲ್ಲ ಸೈತಾನನ ಪ್ರಭಾವಕ್ಕೆ ಒಳಗಾದೆನೋ ಎಂದು! ಆದರೂ ಧೈರ್ಯಮಾಡಿ ನಡೆದರು. ಹಲಸಿನ ಮರದ ಬುಡಕ್ಕೆ ಬರುವಷ್ಟರಲ್ಲಿ ಪಾದ್ರಿ ಹಿಡಿದಿದ್ದ ಹಸುರುಕಡ್ಡಿ ಐಗಳು ಹಿಡಿದಿದ್ದಾಗ ಹೇಗೆ ಬಾಗಿತೋ ಹಾಗೆಯೆ ಬಾಗಿತ್ತು!
“ಹಾಗಾದರೆ ಇದು ಎಲ್ಲರಿಗೂ ಬಾಗುತ್ತದೆ! ಎಲ್ಲರಿಗೂ ಸಾಧ್ಯ!” ಎಂದ ಜೀವರತ್ನಯ್ಯ ನೋಡುತ್ತಾರೆ, ಬಾಗಿದ್ದ ಕಡ್ಡಿ ನೆಟ್ಟಗೆ ನಿಂತಿದೆ, ಏನು ಮಾಡಿದರೂ ಬಾಗುವ ಚಿಹ್ನೆ ತೋರಿಸಿದೆ!
ಪಾದ್ರಿ ಬೆರಗಾಗಿ ಹೋದರು. ಆದರೆ ಮತ್ತೆ ನೋಡುತ್ತಿದ್ದಂತೆ, ಕಡ್ಡಿ ಮೊದಲಿನಂತೆ ಬಾಗಿತ್ತು! ಪಾದ್ರಿ ವಿಸ್ಮಯ ಸಂಮೂಢರಾದಂತೆ ಬೆಪ್ಪುನಗೆ ನಗುತ್ತಾ ಹಲ್ಲು ಬಿಡುತ್ತಿದ್ದುದನ್ನು ನೋಡಿ, ಗುಟ್ಟು ಅರಿತಿದ್ದ ದೇವಯ್ಯ ಮತ್ತು ಕಣ್ಣಾಪಂಡಿತರು ಗಹಗಹಿಸಿ ನಕ್ಕರು.
ಪಾದ್ರಿಯ ಪ್ರಶ್ನಾರ್ಥಕ ಮುಖಮುದ್ರೆಯನ್ನು ನೋಡಿ ಕಣ್ಣಾಪಂಡಿತರು ರಾಗಸ್ವರದಲ್ಲಿ “ಅಯ್ಯೋ, ಪಾತ್ರಿಗಳೇ, ನಿಮಗೆ ಇಷ್ಟೂ ಗೊತ್ತಾಕಕಿಲ್ಲವೋ? ಐಗಳು ನಿಮ್ಮ ರಟ್ಟೆ ಹಿಡಿದುಕೊಂಡಿದ್ದರಲ್ಲವಾ? ಅವರು ನಿಮ್ಮನ್ನು ಮುಟ್ಟಿದಾಗ ಕಡ್ಡಿ ಬಾಕುತ್ತಿತ್ತು; ಬಿಟ್ಟಾಗ ನೆಟ್ಟಕಾಕುತಿತ್ತು… ಅವರೆ ಹಿಡಿದುಕೊಂಡರೂ ಸೈ, ಯಾರೆ ಹಿಡಿದುಕೊಂಡಿರಲಿ ಅವರು ಮೈಮುಟ್ಟಿದರೂ ಸೈ, ಹಸುರುಕಡ್ಡಿ ಕೆಲಸಮಾಡುತ್ತದೆ!” ಎಂದರು.
ಜೀವರತ್ನಯ್ಯ ಸ್ವಲ್ಪ ಅಪ್ರತಿಭರಾದರು. ಅದರ ತರ್ಕ ಅವರಿಗೆ ಬಗೆಹರಿಯಲಿಲ್ಲ. ಇದು ಮಂತ್ರಶಕ್ತಿಯೋ? ಅಥವಾ ವಿದ್ಯುಚ್ಛಕ್ತಿಯಂತೆಯೆ ಒಂದು ತರಹದ ನೈಸರ್ಗಿಕ ಶಕ್ತಿಯೋ? ನೈಸರ್ಗಿಕ ಶಕ್ತಿಯಾದರೆ ಎಲ್ಲರಲ್ಲಿಯೂ ಏಕೆ ಇಲ್ಲ?
ಅಥವಾ ಬುದ್ಧಿಶಕ್ತಿಯಂತೆ, ಮೇಧಾ ಪ್ರತಿಭಾ ಶಕ್ತಿಗಳಂತೆ, ದೈವದತ್ತವಾಗಿ ಒಬ್ಬರಲ್ಲಿದ್ದು ಇನ್ನೊಬ್ಬರಲ್ಲಿ ಇರದೆ ಇರಬಹುದಲ್ಲವೆ? ಆದರೆ ಬುದ್ಧಿ ಮೇಧಾ ಮತ್ತು ಪ್ರತಿಭಾಶಕ್ತಿಗಳನ್ನು ಪಡೆದವರು ಐಗಳಂತೆ ಆ ಶಕ್ತಿಗಳನ್ನು ಇತರರಲ್ಲಿ ಸ್ಪರ್ಶಮಾತ್ರದಿಂದ ಪ್ರಚೋದಿಸಲು ಸಾಧ್ಯವೇ? ಅಲ್ಲದೆ ಐಗಳೇನು ತಮ್ಮ ಇಚ್ಛಾಶಕ್ತಿಯಿಂದ ಅದನ್ನು ಇತರರಲ್ಲಿ ಪ್ರಚೋದಿಸುತ್ತಿಲ್ಲ. ಅವರು ಯಾರನ್ನು ಮುಟ್ಟಿದರೂ, ಇಚ್ಛೆಯಿರಲಿ ಇಲ್ಲದಿರಲಿ ಹಸುರುಕಡ್ಡಿ ಕೆಲಸಮಾಡುತ್ತದೆ! ಇದೆಂತಹ ವಿಚಿತ್ರಶಕ್ತಿ?
“ಅನಂತಯ್ಯನವರೆ, ನಿಮಗೆ ಈ ಶಕ್ತಿ ಹೇಗೆ ಬಂತು? ಎಲ್ಲಿ ಸಂಪಾದಿಸಿರಿ? ಯಾರಾದರೂ ಮಂತ್ರ ಹೇಳಿಕೊಟ್ಟರೇ?” ಎಂದು ಐಗಳನ್ನೇ ಕೇಳಿದರು ಪಾದ್ರಿ.
ಐಗಳು ನಕ್ಕರು: “ಮಂತ್ರವೂ ಇಲ್ಲ, ತಂತ್ರವೂ ಇಲ್ಲ. ನಾನು ಹುಡುಗನಾಗಿದ್ದಾಗ ನಮ್ಮೂರಲ್ಲಿ, ಗಟ್ಟದ ತಗ್ಗಿನಲ್ಲಿ ಸೋಮೇಶ್ವರದ ಸಮೀಪದ ಒಂದು ಹಳ್ಳಿ, ಅಲ್ಲಿ ಯಾರೋ ಹೀಗೆಯೆ ಬಾವಿ ತೋಡಿಸಲು ಇಬ್ಬರನ್ನು ಕರೆಯಿಸಿದ್ದರು. ನಾವು ನಾಲ್ಕಾರು ಮಕ್ಕಳು ಅಲ್ಲಿಯೆ ಚಿಣ್ಣಿಕೋಲು ಆಡುತ್ತಿದ್ದರು ನೋಡುತ್ತಾ ನಿಂತೆವು. ಅವರು ಹೀಗೆಯೆ ಹಸುರುಕಡ್ಡಿ ಹಿಡಿದು ಹೋಗುತ್ತಿದ್ದಾಗ ಅದು ಬಾಗುತ್ತಿತ್ತು, ನೆಟ್ಟಗಾಗುತ್ತಿತ್ತು, ಮತ್ತೆ ಬಾಗುತ್ತಿತ್ತು. ನಮಗೆ ಅದನ್ನು ಕಂಡು ಬೆಪ್ಪು ಬೆರಗು! “ಅಂವ ಏನೋ ಕೈಚಳಕ ಮಾಡ್ತಿದ್ದಾನೆ; ಕಳ್ಳ!” ಎಂದ ನಮ್ಮಲ್ಲಿ ಒಬ್ಬ. “ನಾವೂ ಮಾಡಿ ನೋಡುವಾ!” ಎಂದ ಇನ್ನೊಬ್ಬ. ಅವರೆಲ್ಲರೂ ಹೋದಮೇಲೆ ಮಾವೋ ಕವಲೊಡೆದ ಹಸರುಕಡ್ಡಿ ಮುರಿದು ತಂದು, ಅವನು ಹಿಡಿದಿದ್ದ ಹಾಗೆಯೆ ಹಿಡಿದುಕೊಂಡು ನಡೆದಾಡಿದೆವು. ಯಾರ ಕಡ್ಡಿಯೂ ಬಳುಕಲಿಲ್ಲ; ನನ್ನ ಕಡ್ಡಿ ಮಾತ್ರ ಅವನ ಕಡ್ಡಿಯಂತೆಯೆ ಬಳಕುತ್ತಿತ್ತು, ನೆಟ್ಟಗಾಗುತ್ತಿತ್ತು; ಒಂದು ಕಡೆ ಚೆನ್ನಾಗಿ ಬಾಗಿಯೆ ನಿಂತೂಬಿಟ್ಟಿತು! ಮಕ್ಕಳೆಲ್ಲರಿಗೂ ಬೆರಗೋ ಬೆರಗು!…. ನನಗೆ ಬಂದದ್ದು, ನೋಡಿ, ಹೀಗೆ, ಈ ಶಕ್ತಿ….”
“ಹೋಯ್, ಐಗಳೇ, ಕೂಗುತ್ತಾರಂತೆ ಹೆಗ್ಗಡೇರು” ಎಂದರು ಯಾರೋ ಒಬ್ಬರು ಗುಂಪಿನಲ್ಲಿದ್ದವರು.
ಅಷ್ಟರಲ್ಲಿ ಅಂತಕ್ಕನ ಮನೆಗೆಲಸ ಆಳು, ಕೊರಗ ಹುಡುಗ, ಅನಂತಯ್ಯನವರ ಕಡೆಗೆ ಧಾವಿಸಿ ಬಂದು, ಹೆಗ್ಗಡೆಯವರು ಕರೆಯುತ್ತಾರೆ ಎಂದು ತುಳುವಿನಲ್ಲಿ ಹೇಳಿದನು.
ಪಾದ್ರಿಗೆ ಗಾಬರಿಯಾಗಿ “ಏನಂತೆ?” ಎಂದರು.
ಅನಂತಯ್ಯ ಮತ್ತೆ ತುಳುವಿನಲ್ಲಿಯೆ ಆ ಹುಡುಗನೊಡನೆ ಮಾತಾಡಿ, ಪಾದ್ರಿಗೆ ಹೇಳಿದರು: “ಏನೂ ಇಲ್ಲ, ಸುಮ್ಮನೆ ಹೇಳಿಕಳಿಸಿದ್ದಾರೆ ನನಗೆ, ಅಷ್ಟೆ ಹಾಸಗೆಯ ಮೇಲೆ ಎದ್ದು ಕುಳಿತ್ತಿದ್ದಾರಂತೆ. ಮಾತುಕತೆ ಆಡುತ್ತಿದ್ದಾರಂತೆ….”
ಊಟದ ಹೊತ್ತು ಆಗಲೆ ಮೀರಿ ಹೋಗಿತ್ತು. ಎಲ್ಲರೂ ಹಗಲೂಟಕ್ಕಾಗಿ ಕೆಲಸ ನಿಲ್ಲಿಸಿ ಹೊರಟರು. ಜೀವರತ್ನಯ್ಯ, ದೇವಯ್ಯ, ಅನಂತಯ್ಯ ಮೂವರೂ ಅಂತಕ್ಕನ ‘ಹೋಟೆಲ್’ ಆಗಿ ಪರಿವರ್ತಿತವಾಗಿದ್ದ ಮನೆಗೆ ನಡೆದರು. ಅದನ್ನಾಗಲೆ ‘ಓಟ್ಲುಮನೆ’ ಎನ್ನತೊಡಗಿದ್ದರು ಜನ.
ಅಂತಕ್ಕನ ಓಟ್ಲುಮನೆಯ ಜಗಲಿಯಲ್ಲಿ ಸ್ವಸ್ಥರಾದಂತೆ ಹಾಸಗೆಯ ಮೇಲೆ ಎದ್ದು ಕುಳಿತಿದ್ದ ಸುಬ್ಬಣ್ಣಹೆಗ್ಗಡೆಯವರು ತಡಬೆ ಹತ್ತಿಳಿದು ದಾಟಿಬರುತ್ತಿದ್ದ ದೇವಯ್ಯ ಜೀವರತ್ನಯ್ಯರನ್ನು ಕಂಡು, ತಮಗೆ ರೂಢಮೂಲವಾಗಿದ್ದ ಹಳ್ಳಿಯ ಯಜಮಾನಿಕೆಯ ದೊಡ್ಡ ಗಂಟಲಿನಿಂದಲೆ ಕೇಳಿದರು “ಓಯ್ ಅನಂತೈಗಳೆ, ನನ್ನ ಜೋಡು ಅಲ್ಲೇ ಬಿಟ್ಟು ಬಂದಿರಾ ಏನು ಕತೆ? ಬೆತ್ತದ ದೊಣ್ಣೇನೂ ಕಾಣಾದಿಲ್ಲ?….”
ತಮ್ಮ ವಸ್ತುಗಳ ವಿಚಾರದಲ್ಲಿ ಹೆಗ್ಗಡೆಯವರಿಗೆ ಕೃಪಣೋಪಮ ಮನೋಧರ್ಮವಿರುವುದನ್ನೂ, ಅವು ಎಲ್ಲಿಯಾದರೂ ಕಳೆದುಹೋಗುವುದಿರಲಿ ತುಸು ಕಣ್ಮರೆಯಾದರೂ ಹುಡುಗರಂತೆ ರೊಚ್ಚಿಗೆದ್ದು ಹಠಮಾಡುತ್ತಾರೆ ಎಂಬುದನ್ನೂ ಅರಿತಿದ್ದ ಅನಂತಯ್ಯ ಮಕ್ಕಳನ್ನು ಸಾಂತ್ವನಗೊಳಿಸುವಂತೆ “ಇಲ್ಲ ಇಲ್ಲ; ಎಲ್ಲವನ್ನೂ ತೆಗೆದುಕೊಂಡು ಬಂದಿದ್ದೇವೆ. ದೇವಯ್ಯಗೌಡರೆ ತೆಗೆದು ಇಟ್ಟಿದ್ದಾರೆ “ ಎಂದು ಹಿಂದೆ ಅಂಜಿಕೆಯಿಂದಲೆಂಬಂತೆ ತುಸು ಹುದುಗಿಯೆ ಬರುತ್ತಿದ್ದ ದೇವಯ್ಯನ ಕಡೆ ಮುಖ ಮಾಡಿ “ಅಲ್ಲವೋ, ದೇವಯ್ಯಾ? ನಿಮ್ಮ ಕಡೆಗೇ ನಾನು ಕೊಟ್ಟೆನಲ್ಲವೇ?” ಎಂದು ಹೆಗ್ಗಡೆಯವರಿಗೆ ಗೊತ್ತಾಗದಂತೆ ಕಣ್ಣು ಮಿಟುಕಿಸಿದರು.
ದೇವಯ್ಯನಿಗೂ ಗೊತ್ತಿತ್ತು, ತನ್ನ ಹಳೆಮನೆ ದೊಡ್ಡಪ್ಪಯ್ಯನ ಸ್ವಭಾವ. ಆದ್ದರಿಂದಲೆ ಅವನಿಗೆ ಐಗಳ ಕಣ್ಮಿಟುಕು ಅರ್ಥವಾಗಿ, ಮೆಟ್ಟು ದೊಣ್ಣೆಗಳು ಎಲ್ಲಿವೆಯೋ ಏನೋ ಎಂಬುದು ಅವನಿಗೆ ಸ್ವಲ್ಪವೂ ಗೊತ್ತಿಲ್ಲದಿದ್ದರೂ “ಅಲ್ಲೆ ಇವೆ, ಐಗಳೆ, ಕಲಬಿ ಹಿಂದುಗಡೆ “ ಎಂದುಬಿಟ್ಟನು, ಹೆಗ್ಗಡೆಯವರಿಗೆ ಕೇಳಿಸುವಂತೆ ಗಟ್ಟಿಯಾಗಿ.
ಜಗಲಿಯ ಕೆಳಗಣ ಅರೆಗತ್ತಲೆ ಕಿರುಜಗಲಿಯ ಮೂಲೆಯಲ್ಲಿದ್ದ ಪುರಾತನವಾದ ಆ ಕಲಬಿಯ ಮೇಲೆ ಮಲಗಿದ್ದ ಯಾವನೊ ಒಬ್ಬ ಊಟದ ಗಿರಾಕಿ ಕಲಬಿಯ ಸುತ್ತಮುತ್ತ ಮೇಲೆ ಕೆಳಗೆ ಕಣ್ಣಟ್ಟಿನೋಡಿ, ಯಾವ ಮೆಟ್ಟನ್ನೂ ದೊಣ್ಣೆಯನ್ನೂ ಕಾಣದೆ ಸೋಜಿಗಪಟ್ಟು ಸುಮ್ಮನಾದದ್ದನ್ನು ಯಾರೂ ಗಮನಿಸಲಿಲ್ಲ.
ಜೀವರತ್ನಯ್ಯಗೆ ಮುದುಕ ಹೆಗ್ಗಡೆಯ ವರ್ತನೆ ಕಂಡು ಸೋಜಿಗವೆನಿಸಿತು: ತನ್ನ ಹಿರಿಯ ಮಗ ದೊಡ್ಡಣ್ಣಹೆಗ್ಗಡೆಯ ಅನ್ವೇಷಣೆಗೆ ಶೋಕಕಾತರವಾಗಿ ಮನೆಯಿಂದ ಹೊರಟು, ಹತ್ತಲಾರದ ಗುಡ್ಡ ಹತ್ತಿ, ಆಯಾಸದಿಂದಲೆ ಮೈಮರೆತು, ಇತ್ತೋ ಇತ್ತೋ ಎಂಬ ಸ್ಥಿತಿಗಿಳಿದು, ಈಗತಾನೆ ಚೇತರಿಸಿಕೊಂಡಿದ್ದ ಆತನು, ಕಡು ಬಡತನದ ಬಾಳಿನವರಿಗೆ ಮಾತ್ರ ಸಹಜವಾಗುವ ಜಿಪುಣ ರೀತಿಯಲ್ಲಿ ಮೆಟ್ಟು ದೊಣ್ಣೆಗಳಂತಹ ಅಲ್ಪ ಬೆಲೆಯ ಸಾಮಾನ್ಯ ವಸ್ತುಗಳಿಗಾಗಿ ಅಷ್ಟೊಂದು ಸೋದ್ವಿಗ್ನನಾಗಿ ಗೋಗರೆಯುತ್ತಿರುವುದನ್ನು ಕಂಡು! ಜೊತೆಗೆ ಬೆಟ್ಟಳ್ಳಿ ದೇವಯ್ಯಗೌಡರ ವರ್ತನೆಯೂ ಆಶ್ಚರ್ಯಕರವಾಗಿಯೆ ಇತ್ತು: ಸ್ಕೂಲು ಜಾಗದಿಂದ ಬದುವಾಗ ಅಂತಕ್ಕನ ಮನೆಯ ಅಂಗಳದೊಳಕ್ಕೆ ಬೈಸಿಕಲ್ಲನ್ನು ತಂದು ನಿಲ್ಲಿಸುವ ಸಲುವಾಗಿ ಪಾದ್ರಿ ಉಣುಗೋಲಿನ ಗಳುಗಳನ್ನು ಸರಿಸಲು ಹೋದಾಗ, ಹಿಂದೆ ಬೈಸಿಕಲ್ಲನ್ನು ನೂಕಿಕೊಂಡು ಬರುತ್ತಿದ್ದ ದೇವಯ್ಯ ಬೇಡವೆಂದು ಸನ್ನೆಮಾಡಿ, ಬೈಸಿಕಲ್ಲನ್ನು ಹೊರಗಡೆಯೆ ಮರೆಯಾಗಿ ನಿಲ್ಲಿಸಿ, ಇತರರಂತೆ ತಡಬೆ ಹತ್ತಿ ದಾಟಿಯೆ ಬಂದಿದ್ದನು. ಅಂಗಳದೊಳಕ್ಕೆ ಬಂದ ಮೇಲೆಯೂ, ಬೆತ್ತಹಿಡಿದ ಮೇಷ್ಟರನ್ನು ಎದುರುಗೊಳ್ಳಲು ಹಿಂಜರಿವ ತಪ್ಪುಮಾಡಿದ ಹುಡುಗನಂತೆ, ಸುಬ್ಬಣ್ಣಹೆಗ್ಗಡೆಯವರ ಸಾನ್ನಿಧ್ಯದಲ್ಲಿ ಕುಗ್ಗಿ ಕುನುಗಿ ಜಣುಗುವಂತೆ, ಹೆದಹೆದರಿ ನಡೆದುಕೊಳ್ಲುತ್ತಿದ್ದನ್ನು. ಶರೀರ ದಾರ್ಢ್ಯದಲ್ಲಿ, ಧೈರ್ಯದಲ್ಲಿ, ವ್ಯಕ್ತಿತ್ವದಲ್ಲಿ, ದಿಟ್ಟತನದಲ್ಲಿ ಇತರರೆಲ್ಲರಿಗೂ ಮೀರಿ ಎದ್ದು ಕಾಣುತ್ತಿದ್ದ ಅವನು ಇತರ ಯಾರ ಮುಂದೆಯೂ ನಡೆದುಕೊಳ್ಳದಿದ್ದ ರೀತಿಯಲ್ಲಿ ಸುಬ್ಬಣ್ನಹೆಗ್ಗಡೆಯವರ ಮುಂದೆ ನಡೆದುಕೊಳ್ಲುತ್ತಿದ್ದುದನ್ನು ನೋಡಿ ಪಾದ್ರಿ ಕಕ್ಕಾವಿಕ್ಕಿಯಾದನು.
“ಏನೋ, ದೇವು? ನೀನ್ಯಾವಾಗ ಬಂದ್ಯೋ? ಮನೇಕಡೆ ಎಲ್ಲ ಹ್ಯಾಂಗಿದಾರೊ? ನಿನ್ನ ಅಪ್ಪಯ್ಯ ಚಂದಾಗಿದಾರೇನೋ?” ದೇವಯ್ಯನ ಧ್ವನಿಯನ್ನು ಕೇಳಿದ ಹೆಗ್ಗಡೆಯವರು ಆತನು ಸಮೀಪಿಸಿದೊಡನೆ ಪ್ರಶ್ನೆಯ ಹಿಂದೆ ಪ್ರಶ್ನೆಯ ಬಾಣಬಿಟ್ಟರು. ಆತ ತಡವರಿಸುತ್ತಿದ್ದುದನ್ನು ನೋಡಿ “ಯಾಕೋ ಮಾತಾಡೋದಿಲ್ಲಾ?” ಎಂದೂ ಕೇಳಿಬಿಟ್ಟರು.
ದೇವಯ್ಯ ಪಾದ್ರಿಯ ಪಕ್ಕದ ರಕ್ಷೆಯಲ್ಲೆಂಬಂತೆ ಸಂಕುಚಿತನಾಗಿ ನಿಮತು “ನಾನಾಗ್ಲೆ ಬಂದಿದ್ದೆ, ದೊಡ್ಡಪಯ್ಯ…. ಮನೇಲೆಲ್ಲ ಚಂದಾಗಿದ್ದಾರೆ” ಎಂದು ಉತ್ತರ ಹೇಳಿ, “ನಿಮಗೆ ಹ್ಯಾಂಗದೆ ಈಗ, ದೊಡ್ಡಪ್ಪಯ್ಯ?” ಎಂದು ಯೋಗಕ್ಷೇಮ ವಿಚಾರಿಸಿದನು.
ದೊಡ್ಡ ಗಂಟಲಿನಿಂದ ರಭಸವಾಗಿ ಎಂಬಂತೆ ಸುಬ್ಬಣ್ಣಹೆಗ್ಗಡೆ “ಈಗ ಹ್ಯಾಂಗದೆ ಅಂತಾ ಕೇಳ್ತೀಯಲ್ಲಾ? ನಂಗೇನಾಗಿದ್ಯೋ?” ಎಂದು ಹ್ಹ ಹ್ಹ ಹ್ಹ ನಕ್ಕರು.
ಮುದುಕನಿಗೆ ತನಗೇನಾಗಿತ್ತು ಎಂಬುದರ ಅರಿವೂ ನೆನಪೂ ತಪ್ಪಿದೆ ಎಂಬುದೇನೊ ಎಲ್ಲರಿಗೂ ಗೊತ್ತಾಯಿತು. ಆದ್ದರಿಂದ ಜೀವರತ್ನಯ್ಯ ತಾನು ವಿಚಾರಿಸಬೇಕೆಂದಿದ್ದ ಯೋಗಕ್ಷೇಮದ ಪ್ರಶ್ನೆಯನ್ನು ತಡೆಹಿಡಿದು, ಬೇರೆ ರೀತಿಯಲ್ಲಿ ಮಾತಾಡತೊಡಗಿದನು, ಜಗುಲಿಯ ಮೇಲಿದ್ದ ಚಾಪೆಯ ಮೇಲೆ ಕುಳಿತುಕೊಂಡು. ದೇವಯ್ಯ ಮಾತ್ರ ನಿಂತೇ ಇದ್ದನು: ಹಳೆಯ ಹಿರಿಯರ ಮುಂದೆ ಕೈಕಟ್ಟಿಕೊಂಡು, ಮಾತಾಡದೆ, ವಿಧೇಯತಾಭಂಗಿಯಲ್ಲಿ ನಿಲ್ಲುವ ಆ ಬಾಲ್ಯ ಅಭ್ಯಾಸ ಸ್ನಾಯುಗತವಾಗಿತ್ತು ಆತನಿಗೆ, ಮತ್ತು ಆ ಕಾಳದ ಮಲೆನಾಡಿನ ನಾಮಧಾರಿ ಗೌಡರ ದೊಡ್ಡ ಮನೆತನದ ಹಲವು ಮಕ್ಕಳಿಗೆ!
“ಯಜಮಾನರಿಗೆ ಬಹಳ ಪ್ರಯಾಸವಾಗಿರಬೇಕು, ಗುಡ್ಡ ಹತ್ತಿ ಇಳಿದು ಇಲ್ಲಿಯವರೆಗೆ ನಡೆದು ಬರುವುದಕ್ಕೆ, ಅಲ್ಲವೆ?” ಪಾದ್ರಿ ಔಪಚಾರಿಕವಾಗಿ ಮಾತು ಪ್ರಾರಂಭಿಸಿದರು.
“ನೀವೇನೊ ನಮ್ಮ ದೊಡ್ಡಣ್ಣ ವಿಚಾರ ಹೇಳಿದರಂತೆ, ಅನಂತಯ್ಯ ತಿಳಿಸಿದರು. ಇಷ್ಟು ವರ್ಷ ಆ ಸುದ್ದಿ ಈ ಸುದ್ದಿ ಕೇಳಿ ಕೇಳಿ, ಕಾದೂ ಕಾದೂ ಸಾಕಾಗಿದೆ ನನಗೆ, ಪಾದ್ರಿಗಳೆ” ಎನ್ನುತ್ತಿದ್ದ ಹಾಗೆ ಸುಬ್ಬಣ್ಣಹೆಗ್ಗಡೆಯವರ ಮುಖಚರ್ಯೆ, ಕಂಠಧ್ವನಿ, ಯಾಜಮಾನ್ಯದ ಭಂಗಿ, ಮಾತಿನ ರೀತಿ ಎಲ್ಲ ಬದಲಾಯಿಸಿದಂತೆ ತೋರಿತು. ಗಂಟಲು  ತುಸು ಗದ್ಗದವಾಗಿ ಮುಂದುವರೆಸಿದರು, ಹನಿಗೂಡುತ್ತಿದ್ದ ಕಣ್ಣುಗಳಿಂದ ಜೀವರತ್ನಯ್ಯನ ಕಣ್ಣುಗಳನ್ನೆ ನೇರವಾಗಿ ನೋಡುತ್ತಾ: “ಮ್ಯಾಲೆ ಮ್ಯಾಲೆ ಹಸಿಯಾಗಿದ್ದ್ಹಾಂಗೆ ಕಾಣ್ತೀನಿ; ಒಳಗೆಲ್ಲಾ ಬೆಂದು ಸುಟ್ಟು ಹೋಗ್ಯದೆ…. ಆ ಪಾಪದ ಹುಡುಗಿ, ನನ್ನ ಸೊಸೇ ಗೋಳೋ ಹೇಳಬಾರದು; ಮುಂಡೇನೂ ಅಲ್ಲ, ಮುತ್ತೈದೇನೂ ಅಲ್ಲ; ಅಂತರಾಳದಲ್ಲಿ ಸಿಕ್ಕಿ ನಕ್ಕಬಳೀತಾ ಅದೆ. ಅಂವ ಸತ್ತೇಹೋದಿದ್ರೂ, ಅತ್ತೂ ಕರೆದೂ ಪೂರೈಸ್ತಿತ್ತು. ಬದುಕಿದಾನೆ ಅಂತಾ ಹೇಳಿದ್ರು. ಎಲ್ಲಿದಾನೋ? ಹ್ಯಾಂಗಿದಾನೋ? ಏನೇನು ಕಷ್ಟಪಡ್ತಿದಾನೊ? ಹೆಂಡ್ತಿ ಮಕ್ಕಳ್ನೆಲ್ಲ ಎಷ್ಟು ನೆನೆದು ಗೋಳಾಡ್ತಿದಾನೋ? ಚಿಂತೆ ಮಾಡಿ ಮಾಡಿ ಅದೂ ಸಾಯ್ತಾ ಅದೆ; ನಾನೂ ಅಬ್ರಿ ತುದಿಗೆ ಜಾರ್ತಾ ಇದೀನಿ. ಈ ಸಾರಿ ಸತ್ತಿದಾನೆ ಇಲ್ಲ ಬದುಕಿದಾನೆ, ಒಂದನ್ನ ನಿಚ್ಚೆಯ್ಸಿಕೊಂಡು ಹೋಗಾನ ಅಂತಾ ಹತ್ತಲಾರದ ಗುಡ್ಡಾನೂ ಹತ್ತಿ ಬಂದೆ…. ಎಲ್ಲಿ ಕಂಡ್ರಿ? ಯಾರು ಕಂಡ್ರು? ಅವನೇ ಹೌದೆ? ಇಲ್ಲ, ಹಿಂದೆಲ್ಲ ಆದ ಹಂಗೆ, ಯಾರನ್ನೋ ಏನೋ ಅವನು ಅಂತಾ ಹೇಳ್ತಿದಾರೋ?….”
ಅಷ್ಟರಲ್ಲಿ ಅಂತಕ್ಕ ದೇವಯ್ಯನನ್ನು ಒಳಗೆ ಕರೆದಳು. ಸುಬ್ಬಣ್ಣಹೆಗ್ಗಡೆಯವರು ಊಟಕ್ಕೆ ಏರ್ಪಾಡಾಗುತ್ತಿದೆ ಎಂಬುದನ್ನು ಅರಿತು “ಪಾದ್ರಿಗಳೆ, ಪಾಪ, ನಿಮಗೆ ಊಟಕ್ಕೆ ಬಾಳ ಹೊತ್ತಾಯ್ತು. ಮೊದಲು ಊಟ ಮುಗಿಸಿ” ಎಂದರು.
ಇತ್ತೀಚೆಗೆ, ಸಾಮಾನ್ಯವಾಗಿ, ಪಾದ್ರಿಯೊಡನೆಯೆ ಹೊರಗಡೆ ಜಗಲಿಯಲ್ಲಿ ಊಟಕ್ಕೆ ಕುಳಿತುಕೊಳ್ಳುತ್ತಿದ್ದ ದೇವಯ್ಯ ಇವತ್ತು ಹಾಗೆ ಮಾಡಲು ಅಂಜಿ, ಜೀವರತ್ನಯ್ಯ ಒಬ್ಬರಿಗೇ ಕುಳಿತುಕೊಳ್ಳುತ್ತಿದ್ದ ದೇವಯ್ಯ ಇವತ್ತು ಹಾಗೆ ಮಾಡಲು ಅಂಜಿ, ಜೀವರತ್ನಯ್ಯ ಒಬ್ಬರಿಗೇ ಜಗಲಿಯಲ್ಲಿ ಬಳ್ಳೆಹಾಕಲು ಹೇಳಿ, ತಾನೂ ಐಗಳೂ ಒಳಗೆ ಜಾತಿಯವರು ಕೂರುವಲ್ಲಿ ಊಟಕ್ಕೆ ಕುಳಿತರು. ಬೆಟ್ಟಳ್ಳಿ ದೇವಯ್ಯಗೌಡರ ಆ ಬದಲಾಯಿಸಿದ ವರ್ತನೆಯನ್ನು ಗಮನಿಸಿ ಜೀವರತ್ನಯ್ಯ ಒಳಗೊಳಗೆ ತುಸು ಅಸಮಾಧಾನ ಪಟ್ಟುಕೊಂಡರು.
ಊಟವಾದ ಮೇಲೆ ಜೀವರತ್ನಯ್ಯ ಸುಬ್ಬಣ್ಣಹೆಗ್ಗಡೆಯವರು ಮಲಗಿದ್ದ ಹಾಸಗೆಯ ಪಕ್ಕಕ್ಕೆ ಹೋದರು. ಮುದುಕ ಮಲಗಿ ನಿದ್ರಿಸುತ್ತಿದ್ದಂತೆ ತೋರಿತು. ಆದರೆ ತುಸು ಹೆಚ್ಚು ಸಂಖ್ಯೆಯಲ್ಲಿಯೆ ಅಲ್ಲಿ ನಿತ್ಯವಾಸವಾಗಿದ್ದ ಮನೆಯೆ ನೊಣಗಳು ವೃದ್ಧನ ಮುಖದ ಮೇಲೆ ಕುಳಿತೂ ಹಾರಿ, ಹಾರೀ ಕುಳಿತು, ನಿದ್ದೆಯ ನಿರಂತರತೆಗೆ ಭಂಗ ತರುತ್ತಿದ್ದುವು. ಪಾದ್ರಿ ತನ್ನ ಅಂಗವಸ್ತ್ರದಿಂದ ಅವುಗಳನ್ನು ಅಟ್ಟಿದಾಗ, ಅದರ ಗಾಳಿ ಬೀಸಿದಕ್ಕೆ ಮುದುಕ  ಕಣ್ಣುತೆರೆದರು.
“ತಮಗೆ ನಿದ್ರಾಭಂಗವಾಯಿತೇನೊ? ನೊಣ ಅಟ್ದೆ ಅಷ್ಟೆ, ಮಲಗಿ ನಿದ್ದೆಮಾಡಿ.”
“ಇಲ್ಲ ಇಲ್ಲ, ನಿದ್ದೆ ಬಂದಿರಲಿಲ್ಲ. ಸುಮ್ಮನೆ ಕಣ್ಣುಮುಚ್ಚಿಕೊಂಡು ಮಲಗಿದ್ದೆ,  ಬನ್ನಿ, ಕೂತುಕೊಳ್ಳಿ….” ಎಂದು ಸುಬ್ಬಣ್ಣಹೆಗ್ಗಡೆ ಏಲತೊಡಗಿದರು.
“ಬೇಡ, ಬೇಡ, ಏಳುವುದು ಬೇಡ. ನೀವು ಮಲಗೇ ಇರಿ. ನಾನು ಕೂತು ಕೊಳ್ಳುತ್ತೇನೆ” ಎಂದು ಪಾದ್ರಿ ಏಳುತ್ತಿದ್ದ ಹೆಗ್ಗಡೆಯವರನ್ನು ಮಲಗಿರುವಂತೆ ಮಾಡಿ, ತಾವು ಪಕ್ಕದಲ್ಲಿ ಕುಳಿತುಕೊಂಡರು.
ದೇವಯ್ಯನೂ ಅನಂತಯ್ಯನೂ ಎಲೆ, ಅಡಿಕೆ, ಹೊಗೆಸೊಪ್ಪು, ಸುಣ್ಣದಡಬ್ಬಿ ಇರುವ ಮಾಸಿದ ಹಳೆಯ ಬೆತ್ತದ ತಟ್ಟೆಯೊಂದನ್ನು ತಂದು ಇಟ್ಟು, ತಾವೂ ಪಾದ್ರಿಯ ಪಕ್ಕದಲ್ಲಿಯೆ ಕುಳಿತರು.
ಪಾದ್ರಿ ಪ್ರಶಾಂತ ಧ್ವನಿಯಿಂದ ನಿಧಾನವಾಗಿ ಹೇಳತೊಡಗಿದರು. ಮುದುಕನಿಗೆ ಉದ್ವೇಗ ಹೆಚ್ಚಿ, ಮತ್ತೆ ಎಲ್ಲಿಯಾದರು. ಹೃದಯಾಘಾತಕ್ಕೆ ಅವಕಾಶವಾದೀದು ಎಂಬುದು ಅವರ ಭಯಾಶಂಕೆಯಾಗಿತ್ತು:
“ಆ ದಿನ ನಮ್ಮ ಮಿಶಲ್ ಆಸ್ಪತ್ರೆ ನೋಡಲು ಮಂಡಗದ್ದೆಗೆ ಬಂದಿದ್ದ ಸಿಂಧುವಳ್ಳಿ ಚೆನ್ನಪ್ಪಗೌಡರು, ಸಾಯಂಕಾಲ ನಮ್ಮ ದೊಡ್ಡ ಗುರು ರೆವರೆಂಡ್ ಲೇಕ್‌ಹಿಲ್ ಸಾಹೇಬರು ಮತ್ತು ಲೇಡಿ ಡಾಕ್ಟರರಾಗಿರುವ ಮಿಸ್ ಕ್ಯಾಂಬೆಲ್ ಇವರೊಡನೆ ಹೊಳೆಯ ಕಡೆ ವಾಕ್ ಹೋಗಿದ್ದರು. ಅಂದರೆ ಸುಮ್ಮನೆ ಗಾಳಿಸೇವನೆಯಾಗಿ ತಿರುಗಾಡಲು ಹೋಗಿದ್ದರಂತೆ. ತುಂಗಾ ನದಿಯ ತೀರದ ಒಂದು ಕಡೆ ಬಯಲಿನಲ್ಲಿ ಗೋಸಾಯಿಗಳು ಬಿಡುಬಿಟ್ಟಿದ್ದರಂತೆ. ನಮ್ಮ ರೆವರೆಂಡ್ ಸಾಹೇಬರು, – ಅವರು ಅಂಥ ಜನರನ್ನು ಕಂಡರೆ ಯೋಗಕ್ಷೇಮ ಇಚಾರಿಸದೆ ಹೋಗುವುದಿಲ್ಲ, – ಬೀಡಿನ ಹತ್ತಿರಕ್ಕೆ ಹೋಗಿ ಅವರ ಯಜಮಾನನೊಡನೆ ಮಾತನಾಡುತ್ತಿದ್ದಂತೆ. ಅವರು ಕನ್ನಡಭಾಷೆ ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ. ಉಪನ್ಯಾಸವನ್ನೂ ಕೊಡಬಲ್ಲರು. ನಮ್ಮ ಮೇಗರವಳ್ಳಿ ಮಿಶನ್‌ಸ್ಕೂಲಿನ ಕಟ್ಟಡ ಮುಗಿದ ಮೇಲೆ, ಇದನ್ನು ಪ್ರಾರಂಭಮಾಡುವ ಸಂದರ್ಭದಲ್ಲಿ, ಅವರನ್ನೆ ಕರೆಯಬೇಕು ಎಂದಿದ್ದೇವೆ. ಆಗ ನೀವು ಅವರನ್ನು ನೋಡಬಹುದು, ಮತ್ತು ಕನ್ನಡದಲ್ಲಿಯೇ ಮಾತನ್ನೂ ಆಡಬಹುದು. ಅವರು ಇಂಗ್ಲೀಷ್ ಜನರಲ್ಲಿ ಬಹಳ ದೊಡ್ಡ ಧರ್ಮಗುರುಗಳು….”
“ದೊಡ್ಡಣ್ಣಹೆಗ್ಗಡೆಯವರ ವಿಚಾರ ಹೇಳುತ್ತಿದ್ದಿರಲ್ಲಾ?” ನಡುವೆ ಬಾಯಿ ಹಾಕಿದರು ಐಗಳು ಅನಂತಯ್ಯ, ಪಾದ್ರಿಯ ಗಮನವನ್ನು ಪ್ರಕೃತ ವಿಷಯಕ್ಕೆ ತಿರುಗಿಲೆಂದು.
ಪಾದ್ರಿ ಮುಂದುವರಿದರು:
“ಕಾವಿಲ್ಲದ ಬಾವುಟ ಅಲ್ಲಲ್ಲಿ ನೆಟ್ಟು, ಒಂದು ಎರಡು ಮಾರು ದೂರದೂರದಲ್ಲಿ ಬಣ್ಣ ಬಣ್ಣದ ತೇಪೆಹಾಕಿದ ಬಟ್ಟೆಯ ಸಣ್ಣಸಣ್ಣ ಡೇರೆ ಹಾಕಿಕೊಂಡಿದ್ದರಂತೆ. ಚಿನ್ನಪ್ಪಗೌಡರು ಅವುಗಳ ನಡುನಡುವೆ ಸುಮ್ಮನೆ ಕುತೂಹಲಕ್ಕಾಗಿ ಕಂಡವರೊಡನೆ ಮಾತಾಡುತ್ತಾ ಹೋಗುತ್ತಿದ್ದರು. ಇದ್ದಕ್ಕಿದ್ದಹಾಗೆ ಅವರ ಗಮನ ದೊಡ್ಡಣ್ಣ ಹೆಗ್ಗಡೆಯವರ ನೆನಪುತರುವ ಹಾಗಿದ್ದ ಒಬ್ಬ ಗೋಸಾಯಿಯ ಮೇಲೆ ಬಿತ್ತು. ಅವನನ್ನೂ ಮಾತಾಡಿಸಿರಂತೆ ಹತ್ತಿರ ಹೋಗಿ. ಗಡ್ಡ ಮೀಸೆ ಕೆದರಿಬಿಟ್ಟಿದ್ದನಂತೆ, ತಲೆಕೂದಲು ಉದ್ದುದ್ದ ಬೆಳೆದು ಸಿಕ್ಕುಗಟ್ಟಿತಂತೆ. ಸುಮ್ಮನೆ ಇವರನ್ನೆ ದುರುದುರು  ನೋಡಿದರಂತೆ. ಚಿನ್ನಪ್ಪಗೌಡರಿಗೆ ಅನುಮಾನ ಬಂದು ರೆವರೆಂಡ್ ಲೇಕ್‌ಹಿಲ್‌ರಿಗೂ ತಿಳಿಸಿದರಂತೆ. ಅವರು ಯಜಮಾನ ಗೋಸಾಯಿಯನ್ನು ಪ್ರಶ್ನಿಸಿದಾಗ ಅವನು ಒಪ್ಪಕೊಂಡನಂತೆ, ಚಿನ್ನಪ್ಪಗೌಡರು ಕಂಡ ಗೋಸಾಯಿ ನಿಜವಾದ ಗೋಸಾಯಿ ಅಲ್ಲವೆಂದೂ, ಕೆಲವು ವರ್ಷಗಳ ಹಿಂದೆ ತಿರುಪತಿಗೆ ಬಂದಿದ್ದ ಯಾತ್ರಿಕರು ಸತ್ತನೆಂದು ಬಿಟ್ಟುಹೋಗಿದ್ದ ಯಾವನೊ ಒಬ್ಬನನ್ನು ತಮ್ಮ ಕಡೆಯವರು ನೋಡಿ, ಜೀವವಿದ್ದಂತೆ ತೋರಿದ್ದರಿಂದ ಮದ್ದುಕೊಟ್ಟು ಬದುಕಿಸಿಕೊಂಡರೆಂದೂ, ಆದರೆ ಆದರೆ ಅವನಿಗೆ ತನ್ನ ಪೂರ್ವ ಜೀವನವೆಲ್ಲ ಮರೆತುಹೋಗಿ, ತಾನು ಯಾರು? ಎಲ್ಲಿಂದ ಬಂದವನು? ಎಂಬ ವಿಷಯ ಯಾವುದನ್ನೂ ಹೇಳಲಾರದೆ ಹೋದನಂತೆ. ಕಡೆಗೆ ಮಾತು ಕೂಡ ಆಡಲಾರದೆ ಮೂಗನಂತೆ ಗೋಸಾಯಿಗಳ ಸಂಗಡ ಅಲೆಯುತ್ತಾ ಇದ್ದಾನಂತೆ.”
“ಗೋಸಾಯಿಗಳೇ ಮದ್ದುಹಾಕಿ ದೊಡ್ಡಣ್ಣ ಹೆಗ್ಗಡೆಯವರಿಗೆ ಅವರ ಹಿಂದಿನದೆಲ್ಲ ಮರೆಯುವಂತೆ ಮಾಡಿರಲಿಕ್ಕೂ ಸಾಕು! ಮಂತ್ರ ಮಾಟದಲ್ಲಿ ಕದೀಮರಂತೆ ಈ ಗೋಸಾಯಿಗಳು” ಐಗಳು ನಡುವೆ ಬಾಯಿಹಾಕಿದರು.
“ಹಾಗಿರಲಿಕ್ಕಿಲ್ಲ, ಐಗಳೆ” ಅನಂತಯ್ಯನವರ ಅಭಿಪ್ರಾಯಕ್ಕೆ ಈ ಸಂದರ್ಭದಲ್ಲಿ ಆದಾರವಿಲ್ಲ ಎಂಬುದನ್ನು ಸಮರ್ಥಿಸಲು ಪಾದ್ರಿ ಮುಂದುವರೆದರು: “ಆ ಯಜಮಾನ ಗೋಸಾಯಿ, ಪಾಪ. ಆ ದಿಕ್ಕುಗೆಟ್ಟ ಅನಾಥನನ್ನು ತಾವು ಹೋದಲೆಲ್ಲ ಕರೆದುಕೊಮಡು ಹೋಗಿ, ಅವನ ಊರು ಮನೆ ವಾರಸುದಾರರನ್ನು ಪತ್ತೆಮಾಡಲು ಬಹಳ ಪ್ರಯತ್ನ ಮಾಡಿದನಂತೆ. ಈಗಲೂ ಪ್ರಯತ್ನ ಮಾಡುತ್ತಲೆ ಇದ್ದಾನಂತೆ. ತಾವು ಅಲೆಯುತ್ತಾ ಹೋಗಿ ಬೀಡು ಬಿಟ್ಟ ಅನೇಕ ಊರುಗಳಲ್ಲಿ ವಿಚಾರಿಸಿದರಂತೆ; ಯಾರೂ ಗುರುತಿಸಲಿಲ್ಲವಂತೆ. ಈಗ್ಗೆ ಸುಮಾರು ಐದಾರು ತಿಂಗಳ ಹಿಂದೆ ಬೀರೂರು ಹತ್ತಿರ ಅವರು ಬೀಡು ಬಿಟ್ಟಿದ್ದಾಗ ಕತ್ತೆ ಹೇರೆತ್ತುಗಳ ಮೇಲೆ ಅಡಿಕೆ ಸಾಗಿಸುತ್ತಿದ್ದ ಒಡ್ಡರ ಗುಂಪು ಸಿಕ್ಕಿ, ಅವರಲ್ಲೊಬ್ಬನು – ತೀರ್ಥಹಳ್ಳಿ ಕಡೆ ಯಾರೊ ಒಬ್ಬರು ತಿರುಪತಿಗೆ ಹೋಗಿದ್ದವರು ತಪ್ಪಿಹೋಗಿದ್ದಾರೆಂದು ಬಹಳ ಕಾಲದಿಂದಲೂ ಹುಡುಕುತ್ತಿದ್ದಾರೆ ಎಂಬ ವದಂತಿ ಹೇಳಿದನಂತೆ. ಆದ್ದರಿಂದಲೆ ಅವರು ಈ ಕಡೆ ಬೀಡು ತಿರುಗಿಸಿ ಹೊರಟಿದ್ದಾರಂತೆ….”
ಮಲಗಿ ಆಲಿಸುತ್ತಿದ್ದ ಸುಬ್ಬಣ್ಣ ಹೆಗ್ಗಡೆಯವರಿಗೆ ಸಂತೋಷಾಧಿಕ್ಯದಿಂದಲೆ ಉಕ್ಕಿ ಬರುತ್ತಿದ್ದ ದುಃಖಪ್ರವಾಹವನ್ನು ತಡೆಯಲಾಗಲಿಲ್ಲ. ಕಣ್ಣೀರು ಸುರಿಸುತ್ತಾ ಎದ್ದು ಕುಳಿತು “ಮತ್ಯಾಕೆ ಅನುಮಾನ? ಬಿಡಿ, ಬಿಡಿ, ಪಾದ್ರಿಗಳೆ, ಅಂವ ನಮ್ಮ ದೊಡ್ಡಣ್ಣ ಅಲ್ಲದೆ ಬ್ಯಾರೆ ಯಾರೂ ಅಲ್ಲ. ಹೋಗಾನ, ನಾನೂ ಬರ್ತಿನಿ. ಹ್ಯಾಂಗಾರು ಮಾಡಿ ಅವನ್ನೊಂದು ಮನೆಗೆ ಕರಕೊಂಡು ಬಂದ್ರೆ ಸಾಕು. ತಣ್ಣಗೆ ಕಣ್ಣು ಮುಚ್ತೀನಿ…. ಅಂತೂ ಕಡೆಗೂ ಕಣ್‌ಬಿಟ್ಟ ನಮ್ಮ ತಿರುಪತಿ ತಿಮ್ಮಪ್ಪ!” ಎನ್ನುತ್ತಾ ತಮ್ಮ ಎರೆಡೂ ಕೈಗಳನ್ನು ಜೋಡಿಸಿ ಹಣೆಗಿಟ್ಟುಕೊಂಡು “ಸ್ವಾಮಿ! ಸ್ವಾಮಿ! ಕಾಪಾಡಪ್ಪಾ!” ಎಮದು ಅಗೋಚರನಿಗೆ ಕೃತಜ್ಞತೆ ಅರ್ಪಿಸುವ ಭಂಗಿಯಲ್ಲಿ ನಮಸ್ಕಾರ ಮಾಡಿದರು.
ದೇವಯ್ಯನಿಗೆ ಭಾವಾವೇಗದಿಂದ ಗಂಟಲು ಉಬ್ಬಿಬಂದ ಹಾಗಾಗಿ ಮುಖ ತಿರುಗಿಸಿಕೊಂಡನು. ಬಾಗಿಲು ಸಂಧಿಯಲ್ಲಿ ಮರೆಯಾಗಿ ನಿಂತು ಆಲಿಸುತ್ತಿದ್ದ ಕಾವೇರಿ ಓಡಿ ಹೋಗಿ ತನ್ನ ತಾಯಿಗೆ ಮಂಗಳವಾರ್ತೆಯನ್ನು ಒದರಿಬಿಟ್ಟಳು.
ಹೆಗ್ಗಡೆಯವರು ತಿರುಪತಿ ತಿಮ್ಮಪ್ಪಗೆ ಕೃತಜ್ಞತೆ ಸಲ್ಲಿಸಿದ್ದನ್ನು ನೋಡಿ, ಪಾದ್ರಿ ಕನಿಕರದಿಂದ ಮುಗುಳುನಗುತ್ತಾ ಹೇಳಿದರು: “ಸ್ವಲ್ಪ ಸಮಾಧಾನ ತಂದುಕೊಳ್ಳಿ, ಯಜಮಾನರೆ. ನಿಮ್ಮ ತಿರುಪತಿ ತಿಮ್ಮಪ್ಪನವರು ಇನ್ನೂ ಪೂರ್ತಿ ಕಣ್ಣುಬಿಟ್ಟಂತೆ ತೋರುತ್ತಿಲ್ಲ!”
“ಯಾಕೆ ಕಣ್ಣು ಬಿಡಬಾರದು ಅವನು? ಅವನಿಗೆ ಸಲ್ಲಿಸಬೇಕಾದ ಕಾಣಿಕೆ ಗೀಣಿಕೆ ಎಲ್ಲ ಸಲ್ಲಿಸಿ, ಋಣ ತೀರಿಸಿ, ಹಿಂದಕ್ಕೆ ಬರ್ತಿದ್ದಾಗಲೆ ಅಲ್ಲೇನು ನಮ್ಮ ದೊಡ್ಡಣ್ಣ ಕಾಯಿಲೆ ಬಿದ್ದದ್ದು? ನಮ್ಮ ಕಷ್ಟಾನೆಲ್ಲ ಕಾಣದೆ ಇರಾಕೆ ಅವನ ಕಣ್ ಇಂಗಿ ಹೋಗ್ಯಾದೇನು? ನಾವೇನು ಪಾಪ ಮಾಡಿದ್ದು ನಮಗೀ ದುಕ್ಕ ಕೊಡಾಕೆ?” ಹೇಳುತ್ತಾ ಸಿಟ್ಟು ದುಃಖಕ್ಕೆ ತಿರುಗಿ ಅಳತೊಡಗಿದರು ಸುಬ್ಬಣ್ಣ ಹೆಗ್ಗಡೆ.
ತಾನು ‘ಸ್ವಾಮಿ, ಕಾಪಾಡಪ್ಪಾ!’ ಎಂದು ಸ್ವಲ್ಪ ಹೊತ್ತಿಗೆ ಮುನ್ನ ಕೃತಜ್ಞತೆಯಿಂದ ಕೈಮುಗಿದಿದ್ದ ತನ್ನ ದೇವರನ್ನೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಸವಾಲು ಹಾಕುತ್ತಿದ್ದ ಮುದುಕ ಹೆಗ್ಗಡೆಯ ಹಿಂದೂಭಕ್ತಿ ಕ್ರೈಸ್ತಪಾದ್ರಿಗೆ ಅರ್ಥವಾಗದೆ ಬೆಪ್ಪು ಬೆರಗಾಗಿ ಹೋದನು. “ಇವರ ಕೈಗೆಲ್ಲಿಯಾದರೂ ಇವರ ದೇವರು ಸಿಕ್ಕರೆ, ಗುದ್ದಿಯೂ ಬಿಡುತ್ತಾರೆ!” ಎಂದುಕೊಂಡನು ಮನಸ್ಸಿನಲ್ಲಿಯೆ ಜೀವರತ್ನಯ್ಯ. ಆದರೆ ಅಳುತ್ತಿದ್ದ ಮುದುಕನನ್ನು ನೋಡಿ, ಮನಕರಗಿ, ಸಹಿಸಲಾರದೆ ಸಂತೈಸಿದನು: “ಅಳಬೇಡಿ, ಯಜಮಾನರೆ, ದೇವರು ಒಳ್ಳೆಯದು ಮಾಡಿಯಾನು…. ಆ ಗೋಸಾಯಿ ಕಳೆದು ಹೋಗಿದ್ದ ದೊಡ್ಡಣ್ಣಹೆಗ್ಗಡೆಯವರೇ ಹೌದು ಎನ್ನುವುದಕ್ಕೇನೂ ಬೇಕಾದಷ್ಟು ಸಾಕ್ಷಿ ಸಿಕ್ಕಿದೆ. ತೀರ್ಥಹಳ್ಳಿಯ ದಾಸಯ್ಯನವರೂ ಅವರ ಕೆಲವು ಪರಿಚಯಸ್ಥರೂ ಅವರನ್ನು ಗುರುತಿಸಿದ್ದಾರೆ. ಆದರೆ ಅವರಿಗೆ ನೆನಪು ತಪ್ಪಿ ಹೋಗಿದೆ. ಹಳೆಯದೊಂದೂ ಜ್ಞಾಪಕವಿಲ್ಲ. ತನಗೆ ತಾನೆ ಒಮ್ಮೊಮ್ಮೆ ಏನನ್ನೊ ಹೇಳಿಕೊಳ್ಳುತ್ತಿದ್ದಾರಂತೆ. ಆದರೆ ಅದು ಏನು ಎತ್ತ ಎಂದು ಯಾರಿಗೂ ಅರ್ತವಾಗಲಿಲ್ಲ. ಅದಕ್ಕೇ ಯಾವುದೋ ಬೇರೆಯ ಪ್ರೇತ ಅವರ ದೇಹಕ್ಕೆ ಸೇರಿಕೊಂಡುಬಿಟ್ಟಿದೆ ಎಂದು ಹೇಳತೊಡಗಿದ್ದಾರೆ. ಆದರೆ ಅದೆಲ್ಲ ನಂಬಲಾರ್ಹವಾದುದೆಲ್ಲ….”
“ಈಗ ಎಲ್ಲಿದ್ದಾನೆ ಅವನು?” ಮುದುಕನ ಪ್ರಶ್ನೆ.
“ತೀರ್ಥಹಳ್ಳಿ ಲಾಕಪ್ಪಿನಲ್ಲಿ!” ಪಾದ್ರಿಯ ಉತ್ತರ.
ಸುಬ್ಬಣ್ಣಹೆಗ್ಗಡೆಯವರಂತೆ ದೇವಯ್ಯನೂ ಐಗಳು ಬೆಚ್ಚಿದಂತಾದರು.
“ಆ? ಲಾಕಪ್ಪಿನಲ್ಲೇಕೆ?” ಕೇಳಿದನು ದೇವಯ್ಯ.
“ಪೋಲಿಸರ ವಶದಲ್ಲಿ!…. ನೀವು ಯಾರೂ ಗಾಬರಿಯಾಗುವ ಅವಶ್ಯಕತೆ ಏನಿಲ್ಲ…. ಯಜಮಾನ ಗೋಸಾಯಿ ಏನೊ ದೊಡ್ಡಣ್ಣಹೆಗ್ಗಡೆಯವರಂತಿರುವ ಆ ಮೂಕಗೋಸಾಯಿಯನ್ನು ನಮ್ಮ ಕಡೆ ಒಪ್ಪಿಸಲು ಸಿದ್ಧನಾಗಿದ್ದ…. ಆದರೆ ಆ ಗೋಸಾಯಿ ನಮ್ಮ ಜೊತೆ ಬರಲು ನಿರಾಕರಿಸಿದ. ಅಲ್ಲದೆ ಸಿಂಧುವಳ್ಳಿ ಚಿನ್ನಪ್ಪಗೌಡರಿಗೂ ತೀರ್ಥಹಳ್ಳಿ ದಾಸಯ್ಯನವರಿಗೂ ಹೊಡದೇಬಿಟ್ಟ! ಜೊತೆಗೆ ನಮ್ಮ ರೆವರೆಂಡ್ ಸಾಹೇಬರೂ ಒಂದು ವಿಚಾರ ಎಚ್ಚರಿಕೆ ಹೇಳಿದರು. ಅದು ಕಾನೂನಿಗೆ ಸಂಬಂಧಪಟ್ಟದ್ದು….”
“ಏನಂತೆ? ಕಾನೂನಿಗೆ ಸಂಬಂಧಪಟ್ಟದ್ದು?”
“ಆಮೇಲೆ ಅವನು ಒಂದು ವೇಳೆ ದೊಡ್ಡಣ್ಣಹೆಗ್ಗಡೆ ಅಲ್ಲ ಎಂದು ಹತ್ತಿರದ ಸಂಬಂಧಿಗಳು ಹೇಳಿಬಿಟ್ಟರೆ? ಯಜಮಾನ ಗೋಸಾಯಿಗೆ ಎರಡು ಸಾವಿರ ರೂಪಾಯಿ ಕೊಡುತ್ತೇವೆ ಎಂದು ನಾವು ಒಪ್ಪಿಕೊಂಡಿದ್ದೇವೆ. ಅವನು ದೊಡ್ಡಣ್ಣಹೆಗ್ಗಡೆಯವರ ರಕ್ಷಣೆ ಪೋಷಣೆಗಾಗಿ ಖರ್ಚು ಮಾಡಿದ್ದೇನೆ ಎಂದು ಹೇಳುತ್ತಿರುವ ಸಾವಿರದ ಐನೂರು: ಜೊತೆಗೆ ಅವನು ಮಾಡಿರುವ ಉಪಕಾರಕ್ಕಾಗಿ ಬಹುಮಾನರೂಪಾಯಿ ಕೊಡುವ ಐನೂರು….”
ಸುಬ್ಬಣ್ಣಹೆಗ್ಗಡೆಯವರು ಆ ಭಯಂಕರ ಪ್ರಮಾಣದ ಮೊತ್ತಕ್ಕೆ ದಿಗ್‌ಭ್ರಮೆ ಹೊಡೆದವನಂತೆ ಕಣ್ಣುಬಾಯಿ ಬಿಟ್ಟುಕೊಂಡು ತಮ್ಮನ್ನೆ ನೋಡುತ್ತಿದ್ದ ಭಯಭಂಗಿಯ ಅರ್ಥ ಏನು ಎಂಬುದನ್ನು ಗ್ರಹಿಸಿಯೂ ಗ್ರಹಿಸದವರಂತೆ ಜೀವರತ್ನಯ್ಯ ಮುಂದುವರಿದರು: “ಆತ ದೊಡ್ಡಣ್ಣಹೆಗ್ಗಡೆಯವರೇ ಹೌದು ಎಂದಾದರೆ ನಾವು ಕೊಡುವುದೇನು ಹೆಚ್ಚಲ್ಲ ಎಂದು ಇಟ್ಟುಕೊಳ್ಳಿ….”
ತಟಕ್ಕನೆ ಬಾಯಿ ಹಾಕಿದರು ಸುಬ್ಬಣ್ಣಹೆಗ್ಗಡೆ, ಮುನಿದ ದನಿಯಿಂದ: “ಹ್ಯಾಂಗೆ ಹೆಚ್ಚಲ್ಲ ಅಂತೀರಿ, ಪಾದ್ರಿಗಳೆ? ದೊಡ್ಡಣ್ಣ ತಿರುಪತಿಗೆ ಹೋಗುವಾಗ ಅವನ ಸೊಂಟದಾಗೆ ಇದ್ದ ಚಿನ್ನದ ನೆವಣಾನೆ ಸಾವಿರಾರು ರೂಪಾಯಿ ಬೆಲೆಬಾಳ್ತದೆ. ಒಂದು ಕಿರುಬೆಳ್ಳು ಗಾತ್ರಾನೆ ಇತ್ತು ಆ ನೆವಣ! ಅವನ ಕಿವೀಲಿ ಇದ್ದ ಒಂಟಿಗಳಿಗೇ ಸುಮಾರು ದುಡ್ಡು ಆಗ್ತಿತ್ತು. ಅದನ್ನೆಲ್ಲ ಕಿತ್ತಿಕೊಂಡು ಆ ನಿಮ್ಮ ಯಜಮಾನ ಗೋಸಾಯಿ ಮತ್ತೂ ಎರಡು ಸಾವಿರ ರೂಪಾಯಿ ನುಂಗಾನ ಅಂತಾ ಮಾಡ್ಯಾನೆ! ಅವನ ಮ್ಯಾಲೆ ಫಿರ್ಯಾದಿ ಕೊಡ್ತೀನಿ, ಅಮಲ್ದಾರ ಹತ್ರ, ನನ್ನ ಮಗನ್ದೆಲ್ಲಾ ದೋಚಿಕೊಂಡಿದಾನೆ ಅಂತಾ!….”
ಪಾದ್ರಿಗೆ ಇಸ್ಸಿ ಎನಿಸಿತು. ಇಂತಹ ದುರಂತ ಸನ್ನಿವೇಶವಲ್ಲದಿದ್ದರೆ ಅವನು ನಗುತ್ತಿದ್ದನೊ ಏನೊ! ಅನಂತಯ್ಯನೂ ಏನು ಸನ್ನಿವೇಶವಲ್ಲದಿದ್ದರೆ ಅವನು ನಗುತ್ತಿದ್ದನೊ ಏನೊ! ಅನಂತಯ್ಯನೂ ಏನು ಹೇಳುವುದಕ್ಕೂ ತೋಚದೆ ಪೆಚ್ಚಾದವನಂತೆ ಕುಳಿತು. ನೆಲ ನೋಡುತ್ತಿದ್ದನು. ದೇವಯ್ಯನಿಗೆ ತುಂಬ ಅವಮಾನವಾದಂತಾಗಿ “ಬಿಡಿ, ದೊಡ್ಡಪ್ಪಯ್ಯ; ಈಗ ಅದನ್ನೆಲ್ಲ ಯಾಕೆ ಎತ್ತಬೇಕು? ಮೊದುಲು ಆ ಗೋಸಾಯಿ ನಮ್ಮ ದೊಡ್ಡಣ್ಣಯ್ಯ ಹೌದೇ ಅಲ್ಲವೇ ಅಂತ ಗೊತ್ತಾಗಲಿ” ಎಂದು ಮನಸ್ಸಿನ ದಿಕ್ಕು ಬದಲಾಯಿಸುವ ಸಲುವಾಗಿ ಜೀವರತ್ನಯ್ಯನ ಕಡೆಗೆ ತಿರುಗಿ “ಮಂಡಗದ್ದೆ ಮಿಶನ್ ಆಸ್ಪತ್ರೆ ಲೇಡಿ ಡಾಕ್ಟರು ಪರೀಕ್ಷೆ ಮಾಡಿ ಅದೇನೊ ಹೇಳಿದರು ಅಂತಾ ಹೇಳಿದ್ಹಾಂಗಿತ್ತು ನೀವು?” ಎಂದನು.
“ಅವರು ಸಾಧಾರಣ ಪರೀಕ್ಷೆ ಮಾಡಿದರಷ್ಟೆ. ಆದರೆ ಅವನನ್ನು ಪೋಲಿಸು ಇನ್‌ಸ್ಪೆಕ್ಟರ್ ಸಹಾಯದಿಂದ ತೀರ್ಥಹಳ್ಳಿಗೆ  ತಂದಮೇಲೆ, ತೀರ್ಥಹಳ್ಳಿ ಆಸ್ಪತ್ರೆ ಡಾಕ್ಟರೇ ಪರೀಕ್ಷೆ ಮಾಡಿ, ಔಷಧ ಪಥ್ಯ ಎಲ್ಲ ನೋಡಿಕೊಳ್ತಿದ್ದಾರೆ. ಅವನು ಕಾನೂನು ಪ್ರಕಾರ ಲಾಕಪ್ಪಿನಲ್ಲಿದ್ದಾನೆ ಅಷ್ಟೆ. ಆದರೆ ವಾಸ್ತವವವಾಗಿ ಆಸ್ಪತ್ರೆಯ ಹತ್ತಿರ ಇರುವ ನಮ್ಮ ಮನೆಯ ಹಿಂಭಾಗದ ಒಂದು ಕೋಣೆಯಲ್ಲಿ ಇಟ್ಟಿದ್ದೇವೆ. ನನ್ನ ಮಗಳೂ ಸಹಾಯ ಮಾಡುತ್ತಿದ್ದಾಳೆ. ಎಷ್ಟೋ ವರ್ಷ ಆಗಿರಬೇಕು ಆ ಪುಣ್ಯಾತ್ಮ ಸ್ನಾನಮಾಡಿ, ನಮಗೆ ನಾಲ್ಕೈದು ಜನಕ್ಕೆ ಸಾಕೋಸಾಕಾಯ್ತು, ಅವನಿಗೆ ಸ್ನಾನ ಮಾಡಿಸಬೇಕಾದರೆ! ಅವನಿಗೊಂದು ಕ್ಷೌರ ಮಾಡಿಸುವುದಕ್ಕೆ ಪ್ರಯತ್ನ ಮಾಡಿದೆವು; ನಮ್ಮಿಂದಾಗಲಿಲ್ಲ. ಕ್ಷೌರದ ಕತ್ತಿಯನ್ನೆ ಹಿಡಿದೆಳೆಯುವುದರಲ್ಲಿದ್ದ. ಗಡ್ಡ ಕೂದಲು ಎಲ್ಲ ಕತ್ತರಿಸಿದರೆ ದೊಡ್ಡಣ್ಣಹೆಗ್ಗಡೆ ಹೌದೊ ಅಲ್ಲವೊ ಎನ್ನುವುದನ್ನು ಸಂಶಯಕ್ಕೆ ಆಸ್ಪದವಿಲ್ಲದಂತೆ ಹೇಳಿಬಿಡಬಹುದು ಎನ್ನುತ್ತಿದ್ದಾರೆ ತೀರ್ಥಹಳ್ಳಿಯ ದಾಸಯ್ಯ ಮತ್ತು ಇತರ ಮಿತ್ರರು.
“ಆ ಅಣ್ಣಪ್ಪಯ್ಯ ನೋಡಿದರೇನು?” ಅನಂತಯ್ಯ ಕೇಳಿದರು.
“ಕಾಫಿ ಹೋಟೆಲ್ ಇಟ್ಟಿದ್ದಾರಲ್ಲಾ ಅವರೇ?”
“ಹೌದು, ಅವರೆ! ಕಾಡು ಕೊಂಕಣಿ, ಗೌಡ ಸಾರಸ್ವತರು.”
“ಇಲ್ಲ ಅವರು ನೋಡಿಲ್ಲ.”
ಸುಬ್ಬಣ್ಣಹೆಗ್ಗಡೆಯವರು ಕೀರಲು ಧ್ವನಿಯಲ್ಲಿ ಚಪ್ಪಾಳೆ ಹೊಡೆದು ಹೇಳಿದರು, ಕಣ್ಣಾಮುಚ್ಚಾಲೆಯಲ್ಲಿ ಕಳ್ಳನನ್ನು ಕಂಡು ಹಿಗ್ಗಿ ಕೂಗುವ ಹುಡುಗನಂತೆ: ಹೌದೆ ಸೈ, ಪಾದ್ರಿಗಳೆ! ಅಣ್ಣಪ್ಪಯ್ಯಗೆ ನೀವು ತೋರಿಸಿದ್ರೆ, ಒಂದು ಚಣಕ್ಕೆ ಗುರ್ತು ಹಿಡಿದುಬಿಡ್ತಿದ್ದ! ಬಾಳ ಸೂಟಿ ಮನುಷ್ಯ. ನಮ್ಮ ದೊಡ್ಡಣ್ಣ ಹೌದೆ ಅಲ್ಲೆ ಅಂತಾ ಕಡ್ಡಿ ತುಂಡು ಮಾಡಿದ್ಹಾಂಗೆ ಹೇಳಿಬಿಡ್ತಿದ್ದ!…. ಅಂವ ತೀರ್ಥಹಳ್ಳಿ ಹೋದಾಗ್ಲೆಲ್ಲಾ ಅಲ್ಲೆ ಉಂಡು ಮಲಗ್ತಿದ್ದ! ಅಂವ ಒಂದು ಬುರುಬುರಿ ಮಾಡ್ತಾನೆ ನೋಡಿ, ಪಸಂದಾಗಿರ್ತದೆ!….”
ಎಲ್ಲರೂ ಕಿಸಕ್ಕನೆ ನಕ್ಕುಬಿಟ್ಟರು, ಮುದುಕನ ಮೇದುಳಿನ ಕಲಸುಮೇಲೋಗರದ ತಿಕ್ಕಲುತನಕ್ಕೆ!
ಆದರೆ ಆ ನಗೆ ಒಂದು ಉಪಕಾರ ಮಾಡಿತ್ತು. ಹೆಗ್ಗಡೆಯವರ ಕೃಪಣಕಟುವಾದ ಮಾತುಗಳಿಂದ ಜಿಗುಪ್ಸಾಕಲುಷಿತವಾಗಿದ್ದ ಮನೋವಾರಣ ತಿಳಿಯಾಗಲು ಸಹಾಯ ಮಾಡಿತು. ಬಿಗಿಗೊಂಡಿದ್ದ ಸರ್ವರ ಚಿತ್ತಸ್ಥಿತಿಯೂ ಸಡಿಲಗೊಂಡಂತಾಯಿತು. ಅಂಗಳದಲ್ಲಿ ಕಸವನ್ನು ಕೆದಕುತ್ತಿದ್ದ ಕೋಳಿಗಳಲ್ಲಿ ಒಂದು ಹುಂಜ ತೆಣೆಯ ಮೇಲಕ್ಕೆ ನೆಗೆದು, ಅಸಹ್ಯ ಮಾಡಿ, ಅಲ್ಲಿಯೆ ಮಲಗಿ ನಿದ್ರಿಸುತ್ತಿದ್ದ ನಾಯಿಯನ್ನು ನೋಡುತ್ತಾ ಲೊಕ್ ಲೊಕ್ ಲೊಕ್ ಎಂದು ಹೆದರುಸದ್ದು ಮಾಡಲು, ಕಣ್ದೆರೆದ ನಾಯಿ ಎದ್ದು ಕೂತಿದ್ದನ್ನು ಕಂಡು, ಅದು ಮತ್ತೆ ಅಂಗಳಕ್ಕೆ ಹಾರಿದುದನ್ನು ಅಷ್ಟೇನೂ ಗಮನಿಸದೆ ಸುಮ್ಮನೆ ನೋಡುತ್ತಿದ್ದ ಜೀವರತ್ನಯ್ಯ  ನಗುನಗುತ್ತಲೆ: “ಯಜಮಾನರೆ, ನೀವೀಗ ಅಣ್ಣಪ್ಪಯ್ಯನ ಬುರುಬುರಿ ರುಚಿ ನೋಡುವ ಅವಶ್ಯಕತೆ ಏನಿಲ್ಲ!…. ಸದ್ಯಕ್ಕೆ ನನ್ನ ಸಂಗಡ ಐಗಳೊಬ್ಬರು ಬಂದರೆ ಸಾಕು. ಆ ಗೋಸಾಯಿ ದೊಡ್ಡಣ್ಣಹೆಗ್ಗಡೆಯವರೇ ಹೌದು ಎಂದಾದರೆ, ಸರಕಾರದ ಅನುಮತಿ ಪಡೆದು, ಅವರನ್ನು ಕರೆತರುತ್ತೇವೆ. ಒಂದು ವೇಳೆ ಕಾನೂನು ಪ್ರಕಾರ ಅವರ ಹತ್ತಿರದ ಸಂಬಂಧಿಗಳು, – ಅಂದರೆ ಹೆಂಡತಿ, ಮಕ್ಕಳು, ಅಣ್ಣ, ತಮ್ಮ, ತಂದೆ, ತಾಯಿ – ಯಾರಾದರೂ ಬಂದು, ಗುರುತಿಸಬೇಕು ಎಂದು ಅಮಲ್ದಾರರು ಹೇಳಿದರೆ, ಆಗ ನೀವಾಗಲಿ ನಿಮ್ಮ ಸೊಸೆಯಾಗಲಿ ಬರಬೇಕಾಗಬಹುದು….”
“ನಾನು ಗುರುತಿಸಿದರೆ ಸಾಲದೇನು?” ದೇವಯ್ಯ ಕೇಳಿದನು.
“ಸಾಕಾಗದೆ ಏನು? ನೋಡೋಣ” ಎಂದರು ಜೀವರತ್ನಯ್ಯ.
*****



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ