ನನ್ನ ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-44

    ಹಳೆಮನೆಯ ಹೊಲಗೇರಿಯಿಂದ ಕತ್ತಿ ಕೊಡಲಿ ಹಿಡಿದು, ಕಂಬಳಿಕೊಪ್ಪ ಹಾಕಿಕೊಂಡಿದ್ದ ಆಳುಗಳು-ಮಂಜ, ತಿಮ್ಮ, ಸಿದ್ದ, ಕಿಸಿದ್ದ, ಸಣತಿಮ್ಮ-ಸುಡುಗಾಡು ಪಟ್ಟೆಯಲ್ಲಿ ಕಟ್ಟಿಗೆ ಒಟ್ಟಿ ಸೂಡುಮಾಡಲು ಹೊರಟಿದ್ದರು. ಮಳೆ ಸಣ್ಣಗೆ ಬೀಳುತ್ತಲೆ ಇತ್ತು. ಬೆಳಗ್ಗೆ ಒಂಬತ್ತು ಗಂಟೆಯ ಸಮಯವಾಗಿದ್ದರೂ ಆಗತಾನೆ ಹೊತ್ತಾರೆಯಾಗಿದ್ದಂತೆ ಮೋಡಗಪ್ಪು ತುಂಬಿ ಚಳಿಗಾಳಿ ಬೀಸುತ್ತಿತ್ತು. ‘ದುರ್ದಿನ’ ಎಂಬ ವರ್ಣನೆಗೆ ಅತ್ಯಂತ ಅರ್ಹ ನಿದರ್ಶನವಾಗಿತ್ತು ಆ ದಿನ.

‘ಒಡೇರ ದಿಬ್ಬ’ದ ಹತ್ತಿರಕ್ಕೆ ಗುಂಪು ಬಂದ ಮಂಜ “ಹಿಂಗಾಗ್ತದೆ ಅಂತಾ ಯಾರಿಗೆ ಗೊತ್ತಿತ್ತು” ಎಂದು ಅಳು ತಡೆದವನಂತೆ ನಿಡುಸುಯ್ಯುತ್ತಾ ಹೇಳಿದನು: “ನೋಡು ತಿಮ್ಮಣ್ಣಾ, ಅವರು ತಿರುಪತಿಗೆ ಹೊರಡಾಕೆ ಹಿಂದಿನ ದಿನ, ಇದೇ ದಿಬ್ಬದ ಮೇಲೆ ನಿಂತುಕೊಂಡು ನಮ್ಮನ್ನೆಲ್ಲ ಕೆಲಸಕ್ಕೆ ಕರೆದಿದ್ರು! ಆವಾಗ್ಲೂ ನನ್ನ ಬಿಡಾರ ಇಲ್ಲೆ ಇತ್ತಲ್ಲಾ, ಹಿಂಗೆ ಎದಿರಿಗೆ! ಬಿಡಾರದ ಒಳಗಿನಿಂದಲೆ ಅವರನ್ನ ನೋಡಿದ್ದೆ: ದೇವರ್ನೇ ನೋಡಿದ್ಹಾಂಗೇ ಆಗಿತ್ತು! ನಂಗೂ ಅವರಿಗೂ ಸುಮಾರು ಒಂದೇ ವಯಸ್ಸು. ಅವರು ಕೆಲಸಕ್ಕೆ ಕರೆದಿದ್ರೋ! ಇಷ್ಟು ಬ್ಯಾಗ ಅವರ ಸೂಡು ಕಡಿಯಾಕೆ ಹೋಗ್ತೀನಿ ಅಂತಾ….” ಮಂಜಗೆ ದುಃಖ ಉಕ್ಕಿ ಬಂದು ಮುಂದೆ ಮಾತಾಡದೆ ಕತ್ತಿ ಹಿಡಿದಿದ್ದ ಕೈಯಿಂದಲೆ ಕಣ್ಣೊರಸಿಕೊಂಡನು.
“ಈ ಸಣ್ಣ ಹೆಗ್ಗಡೇರ್ಹಾಗಲ್ಲ, ಅವರು ಒಂದು ಸಾರೀನೂ ಬೈದಿದ್ದು ನಂಗೆ ನೆನಪಿಲ್ಲ. ಏನು ವೈನಾಗಿ ಮಾತಾಡ್ಸಿದ್ರು: ‘ತಿಮ್ಮಾ, ಹಾಂಗೆ ಮಾಡಬ್ಯಾಡೋ, ಹೀಂಗೆ ಮಾಡೋ’ ಅಂತಾ ಬುದ್ದಿ ಹೇಳಿ ತಿದ್‌ತಿದ್ರೆ ಹೊರ್ತೂ, ಒಂದು ಪೆಟ್ಟು ಹೊಡೀತಿರ್ಲಿಲ್ಲ, ಒಂದು ಕೆಟ್ಟ ಬೈಗುಳ ಬೈತಿರ್ಲಿಲ್ಲ ಅವರ ಬಾಯ್ಲಿ….ನಾನೊಂದು ಸರ್ತಿ, ಏನಾತು ಅಂತೀಯಾ? ನಮ್ಮ ಬಿಡಾರಕ್ಕೆ ಯಾರೋ ನೆಂಟರು ಬಂದಾರೆ ಅಂತಾ, ಬಾಯಿಗೆ ಹಾಕಾಕೆ ಒಂದೆಲ್ಡು ಈಳ್ಯೆದೆಲೆ ತರಾನ ಅಂತಾ, ಮೆಲ್ಲಕೆ ಕದ್ದುಹೋಗಿ, ಅಡಕೆ ಮರಕ್ಕೆ ಒರಕಿ ಒಂದೆಲ್ಡು ಎಲೆ ಕುಯ್ದಿದ್ದೆ. ಹಾಳ್‌ಬಳ್ಳಿ! ನನ್ನ ಜೊತೇನೆ ಹರಕೊಂಡು ಬಿದ್ದು ಬಿಡಾದೇನು? ಅಷ್ಟು ಹೊತ್ತಿಗೆ, ಎಲ್ಲಿಂದ್ಲೋ ಏನೋ, ಇಳಿದು ಬಂದ್ಹಾಗೆ ಬಂದೇ ಬಿಟ್ರು ಅವರು! ಇನ್ಯಾರಾದ್ರೂ ಆಗಿದ್ರೆ ನನ್ನ ಬೆನ್ನು ಮುರಿಯಾಂಗ ಕನಾತಿ ಕೊಡ್ತಿದ್ರು! ಅವರು…. ತಂಪು ಹೊತ್ತಿನಾಗೆ ನೇನೀಬೇಕು, ಪುಣ್ಯಾತ್ಮರು, ಸತ್ತು ಸ್ವರ್ಗದಾಗೆ ಇದಾರೆ!…. ಅವರು ಬೈಲೂ ಇಲ್ಲ, ‘ತಿಮ್ಮಾ, ಎಷ್ಟು ಸಾರಿ ಬುದ್ಧಿ ಹೇಳೋದೋ ನಿನಗೆ? ತ್ವಾಟದಾಗ ಬಾಳೆಕೊನೆ, ಮೆಣಸು, ವೀಳ್ಯದೆಲೆ, ಕದ್ದೀಬಾರ್ದು ಅಂತಾ?…. ಎಲೆ ಕದ್ದಿದ್ದರ ಜೊತೆಗೆ ಬಳ್ಳೀನೂ ಜಾರಿಸಿಬಿಟ್ಟಿಯಲ್ಲಾ! ಈ ಕೆಟ್ಟ ಚಾಳಿ ಬಿಟ್ಟುಬಿಡು ಒಳ್ಳೆದಲ್ಲ!’ ಅಂತಾ ಅಂದು, ಅವರೂನೂ ಒಂದು ಕೈಕೊಟ್ಟು, ನನ್ನ ಕೈಲಿ ಬಳ್ಳಿನೆಲ್ಲಾ ಎತ್ತಿ ಕಟ್ಸಿ…. ನಾ ಕದ್ದು ಕುಯ್ದು ಎಲೇನೂ ನಂಗೇ ಕೊಟ್ಟು ಕಳ್ಸಿದ್ರು ಕಣೋ!….”
ತಿಮ್ಮ ಹೇಳುತ್ತಿದ್ದುದನ್ನು ಕೇಳುತ್ತಾ ಸಿದ್ದ ಸಣತಿಮ್ಮನ ಕಡೆ ನೋಡಿ ನಕ್ಕನು. ತಿಮ್ಮನ ಆ ಕೆಟ್ಟಚಾಳಿಗೆ ಇನ್ನೂ ನಿವೃತ್ತಿಯ ವಯಸ್ಸಾಗಿರಲಿಲ್ಲ ಎಂಬುದು ಅವರಿಬ್ಬರಿಗೂ ಚೆನ್ನಾಗಿ ಗೊತ್ತಿತ್ತು.
“ರಾತ್ರೇಲಿ ‘ಮನೆ’ಯಿಂದ ಕೋವಿ ಈಡು ಕೇಳಿಸಿದಾಗ ನಂಗೆ ಎದೆ ಹಾರಿಬಿಟ್ಟಿತ್ತು, ದೊಡ್ಡ ಹೆಗ್ಗಡೇರೆ ಹೋದ್ರೋ ಏನೋ ಅಂತಾ! ನಮ್ಮ ಹೆಗ್ಗಡೇರು ದೂಕಿ ಬೀಳ್ಸಿ ಅವರನ್ನೂ ಹಾಸಿಗೆ ಹಿಡ್ಸಿಬಿಟ್ಟಿದ್ದಾರಲ್ಲಾ!” ಎಂದನು ಕರಿಸಿದ್ದ. ಯಾರಾದರೂ ತೀರಿಕೊಂಡಾಗ ಆ ಸುದ್ದಿಯನ್ನು ಹತ್ತಿರದ ಹಳ್ಳಿಗಳಿಗೆ ತಿಳಿಸುವ ಒಂದು ವಿಧಾನವಾಗಿತ್ತು, ಹಾಗೆ ಕೋವಿ ಹಾರಿಸುವ ಪದ್ಧತಿ.
“ಇನ್ನೇನು ಬಿಡು, ನಿರುಂಬಳ ಆಯ್ತಲ್ಲಾ ಇವರಿಗೆ! ಅಪ್ಪಯ್ಯನ ಹಾಸಿಗೆ ಹಿಡ್ಸಿದ್ರು; ಅಣ್ಣಯ್ಯನ್ನ – ತಿರುಪತಿಗೆ  ಕಳಿಸಿದೋರನ್ನ, – ಅತ್ತ ಮಖಾನೇ ಕಳಿಸಿದಂಗಾಯ್ತು! ಅವರು ಎಲ್ಲಿ ಮತ್ತೇ ಮನಿಗೆ ಬಂದು ಬಿಡ್ತಾರೋ ಅಂತಾ ಏನೆನೆಲ್ಲ ಮಾಡಿದ್ರೂ? ಅಂವ ಅಣ್ಣಯ್ಯನೇ ಅಲ್ಲ; ಯಾವುನೋ ಗೋಸಾಯಿನ ಮನಿಗೆ ಕರಕೊಂಡು ಬರಾಕೆ ಮಾಡ್ತಿದಾರೆ. ಯಾವನಾದ್ರೇನಂತೆ? ನಮ್ಮತ್ತಿಗೆಮ್ಮಗೆ ಒಬ್ಬ ಗಂಡ ಸಿಕ್ಕಿದ್ರೆ ಸಾಕಾಗಿದೆ? ಅಂತಾ ಏನೆನಲ್ಲ ಹೇಳಾಕೆ ಸುರು ಮಾಡಿದ್ರು, ಮಾರಾಯರು ನಮ್ಮ ತಿಮ್ಮಪ್ಪಯ್ಯ” ಕರಿಸಿದ್ದ ಮೂದಲಿಸುವ ದನಿಯಿಂದ ತನ್ನ ಟೀಕೆಯನ್ನು ಕೊನೆಗಾನಿಸಲು, ದೊಡ್ಡಣ್ಣ ಹೆಗ್ಗಡೆಯವರ ಶವವನ್ನು ಬೆಟ್ಟಳ್ಳಿ ಗಾಡಿಯ ಮೇಲೆ ತೀರ್ಥಹಳ್ಳಿಯಿಂದ ತರುತ್ತಿದ್ದಾರೆ. ಎಂಬ ಸುದ್ದಿ ಕಿವಿಗೆ ಬಿದ್ದಾಗಿನಿಂದಲೂ, ಆ ಒಡೆಯನನ್ನು ಚಿಕ್ಕಂದಿನಿಂದಲೂ ಮೆಚ್ಚಿಕೊಂಡು ಒಡನಾಡಿಯಂತೆ ಬೆಳೆದಿದ್ದು, ಈಗ ಆಪ್ತಬಂಧುವನ್ನು ಕಳೆದುಕೊಂಡಂತೆ ದುಃಖಿಸುತ್ತಿದ್ದ ಮಂಜನು ತನ್ನ ಕ್ರೋಧವನ್ನು ತಡೆಯಲಾರದೆ, ತಿಮ್ಮಪ್ಪ ಹೆಗ್ಗಡೆಯ ನೀಚತನವನ್ನು ಮುಲಾಜಿಲ್ಲದೆ ಬಯಲಿಗೆಳೆಯತೊಡಗಿದನು.
“ಯಾರಿಗೇನೂ ಗೊತ್ತಿಲ್ಲೇನು ಇವರ ಹಣೆಬರಾ? ಇವರ ಕುಲಗೆಟ್ಟ ಅನಾಚಾರನ ಯಾರ ಹತ್ರ ಮುಚ್ಚಿಡ್ತಾರಂತೆ? ಅವರು ಈಗಂತೂ ಸಣುಬಿನ ನಾಯಿ, ಹಲುಬಿನ ಎತ್ತಿಗಿಂತ ಅತ್ತತ್ತ ಆಗಿಬಿಟ್ಟಾರೆ! ಹಳೆಪೈಕದೋರು? ಹೊಲೆರೋ? ಸೆಟ್ಟರೋ? ಹಸಲರೋ? ಬಿಲ್ಲರೋ? ಕಡೀಗೆ ಕಿಲಸ್ತರು ಸಾಬರೋ? ಯಾರಾದರೂ ಸೈ ಹೆಣ್‌ಜಾತಿ ಆಗಿಬಿಟ್ರೆ  ಆತು. ಮನೆಕೆಲಸಕ್ಕಿರೋ ಆ ಹಳೆ ಪೈಕದ ಹೂವಿ, ಹಡಬೆಹಾದರಗಿತ್ತಿ, ಅದನ್ನ ಪೂಜಿಸಿ ಈಗ ನಮ್ಮ ಕೇರಿಗೆ ಕೈ ಹಾಕ್ಯಾರೆ!”
ಮಂಜನ ಆಪಾದನೆಗೆ ಬೆಚ್ಚಿಬಿದ್ದು ಸಿದ್ದ ಕರಿಸಿದ್ದ ಸಣತಿಮ್ಮ ಮೂವರು ಒಟ್ಟಿಗೆ ಕೂಗಿದರು “ಹೌದೇನೋ? ಸುಳ್ಳೋ ಬದ್ದೋ?”
“ಸುಳ್ಳು ಹೇಳದ್ರೆ ನನ್ನ ನಾಲಿಗೆ ಬಿದ್ದು ಹೋಗ್ಲಿ!” ಎಂದು ಆಣೆ ಇಟ್ಟುಕೊಳ್ಳುತ್ತಾ ಮಂಜ ಮತ್ತೂ ಬಿರುಸಿನಿಂದ ಮುಂದುವರಿದನು: “ದೀವರನ್ನ ಯಾರಾದರೂ ಗೌಡರ ಮನೆಗೆ ಸೇರಸ್ತಾರೇನೋ? ಈ ತಿಮ್ಮಪ್ಪಹೆಗ್ಗಡೇರು ಆ ದೀವರನ್ನ ಹೂವಿನ, ಎತ್ತಿಕಟ್ಟಿದ್ರಿಂದಲೇ ಅಲ್ಲೇನೂ, ಅವಳು ಆವತ್ತು, ಮಂಜಮ್ಮೊರ, ಕೋಣೂರು ಅಮ್ಮೊರ ಕಣ್ಣು ತಪ್ಪಿಸಿ, ಅಡಿಗೆ ಮನೆಯೊಳಗೆ ಹೋಗಿ ಸಿಕ್ಕಿದ ಮೇಲಿದ್ದ ಉಪ್ಪಿನಕುಕ್ಕೆಯಿಂದ ಮುಷ್ಟಿಗಟ್ಲೆ ಉಪ್ಪು ತೆಗೆದು ಪಲ್ಯಕ್ಕೂ ಸಾರಿಗೂ ಹಾಕಿ ಬಂದಿದ್ದು? ಪಾಪ! ಅವತ್ತೇ ಕೋಣುರು ಅಮ್ಮ ‘ನಾನೇ ಅಡಿಗೆ ಮಾಡ್ತೀನಿ’ ಅಂತಾ ಮಾಡಿದ್ರಂತೆ. ಅವರನ್ನ ‘ಹುಚ್ಚು ಹೆಗ್ಗಡ್ತೀ’ ಅನ್ನಿಸಿ, ಮನೆಯಿಂದ ಹೊರಗೆ ಹಾಕಬೇಕು ಅಂತಲೇ, ಆ ಹಳೇಪೈಕದೋಳ ಕೈಲಿ ಉಪ್ಪು ಹಾಕಿಸಿ, ಆಮ್ಯಾಲೆ ಉಣ್ಣಕ್ಕೆ ಕೂತಾಗ ರಂಪ ಮಾಡಿ ಎದ್ದು ಹೋಗಿ, ಕಡೀಗೆ ರಂಗಮ್ಮ ಹೆಗ್ಗಡ್ತೇರನ್ನೂ ಗುದ್ದಿ, ಹೊಡೆದು, ಅವರ್ನ ಕೋಣೆ ಒಳಗೆ ಕೂಡಿ, ಬಾಗಿಲು ಹಾಕಿ, ಬೀಗ ಹಾಕಿದ್ದು!”
“ನಮ್ಮ ಕೇರೀಗೂ ಕೈ ಹಾಕ್ಯಾರೆ ಅಂದ್ಯಲ್ಲೋ?”
“ನೋಡು, ಬಾಯಿ ಬಿಟ್ರೆ ಬಣ್ಣಗೇಡು. ನಮ್ಮ ಬುಡಕ್ಕೇ ಬರ್ತದೆ!….”
“ಯಾರು? ನಮ್ಮ ಕುಳವಾಡಿ ಸಣ್ಣಯ್ಯನ ಮಗಳು ಪುಟ್ಟಿನೇನೊ?”
“ಮಾಡಿದೋರ ಪಾಪ ಆಡಿದೋರ ಬಾಯಲ್ಲಂತೆ. ನಮಗ್ಯಾಕೆ ಆ ಇಚಾರ?” ಮಂಜ ಆ ವಿಷಯವನ್ನು ಅಲ್ಲಿಗೇ ಮುಕ್ತಾಯಗೊಳಿಸುವಂತೆ ನುಡಿದು, ಎದುರಿಗೇ ಕಾನಿಸುವಷ್ಟು ಸಮೀಪಕ್ಕೆ ಬಂದಿದ್ದ ಸುಡುಗಾಡು ಪಟ್ಟೆಯ ಕಡೆ ಕಣ್ಣಟ್ಟಿ “ಚೆನ್ನಾಗಿ ಒಣಗಿದ ಸೌದೇನೆ ಕಡೀಬೇಕ್ರೊ….” ಎಂದು ಮುಗಿಲುಕಡೆ ನೋಡಿ ಹೇಳಿಕೊಂಡನು “ಮಳೆ ಏನೋ ಹೊಳವಾಗೋ ಹಾಂಗೆ ಕಾಣ್ತದೆ…. ಇನ್ ಸತ್ತೋರ ಪುಣ್ಯ ಹ್ಯಾಂಗಿದೆಯೋ ನೋಡಬೇಕು? ಒಂದೀಟು ಬಿಸಿಲು ಕಾದಿದ್ರೆ, ಮಳೇಲಿ ನೆನ್ದ ಕಟ್ಟಿಗೆ ಆರಿಯಾದ್ರೂ ಆರ್ತಿತ್ತೇನೋ.”
“ಒಂದು ಸೊಲ್ಪಾನಾದ್ರೂ ಒಣಗಿದ ಸೌದೇನ ತರಬೇಕಾಗ್ತದೆ ಮನೇ ಸೌದೆ ಕೊಟ್ಟಿಗೆಯಿಂದ. ಇಲ್ದಿದ್ರೆ ಬೆಂಕಿ ಹೊತ್ತಾದಾದ್ರೂ ಹ್ಯಾಂಗೆ?” ಎಂದ ಸಿದ್ದ, ಕಾಡಿನ ನಡುವೆಯಿಂದ ಒಂದು ಶಕುನದ ಹಕ್ಕಿ ವಿಕಾರವಾಗಿ ದನಿಗೈಯುತ್ತಿರುವುದನ್ನು ಆಲಿಸಿ, ತನಗೆ ತಾನೆಂಬಂತೆ ಅಂದುಕೊಂಡನು “ಹಾಳು ಹಕ್ಕಿ! ಮತ್ತೇನು ಕೇಡು ನುಡೀತಾ ಅದೆಯೋ ಮೀಮೀಮೀಮೀ ಅಂತಾ?
‘ಸುಡುಗಾಡು ಪಟ್ಟೆ’ ಗುಡ್ಡದ ಓರೆಮಗ್ಗುಲಲ್ಲಿದ್ದು, ಇಳಿಜಾರು ಒಂದೆಡೆ ತುಸು ಸಮತಟ್ಟಾಗಿದ್ದ ಸ್ಥಾನವಾಗಿತ್ತು. ಸುತ್ತಮುತ್ತಣ ಹಕ್ಕಲು ಬಯಲಿಗೂ ಅದಕ್ಕೂ ಯಾವ ವ್ಯತ್ಯಾಸವೂ ಇರಲಿಲ್ಲ. ಎಲ್ಲ ಕಡೆಯೂ ಇರುವಂತೆಯೆ ಅಲ್ಲಲ್ಲಿ ನೇರಿಳೆ, ಹಲಸು, ಹುಣಿಸೆ, ಹೊನ್ನೆ, ಆಲ, ಮತ್ತಿ, ನೆಲ್ಲಿ, ವಾಟೆ ಮೊದಲಾದ ಮರಗಳಿದ್ದು, ನಡುನಡುವೆ ಅಲ್ಲಲ್ಲಿ ಸೀಗೆ, ಲಕ್ಕಿ, ಕೆಂಜಿಗೆ, ಹುಳಿಚೊಪ್ಪು, ಇಲಾತ್ಸೀಂಗೆ, ಅರಮರಲು, ಬೆಮ್ಮಾರಲು, ಕರ್ಜಿ ಇತ್ಯಾದಿ ಪೊದೆಗಳು ಬೆಳೆದುಕೊಂಡಿದ್ದುವು. ಅದು ಶ್ಮಶಾನ ಎಂಬುದಕ್ಕೆ ಯಾವೊಂದು ವಿಶೇಷವಾದ ಚಿಹ್ನೆಯೂ ಕಾಣುತ್ತಿರಲಿಲ್ಲ. ಇತರ ಕಡೆಗಳಂತೆ ಅಲ್ಲಿಯೂ ಹುಲ್ಲು ಹಚ್ಚ ಹಸುರಾಗಿ ಹಬ್ಬಿ ನಯನಮನೋಹರವಾಗಿತ್ತು. ಅದರಲ್ಲಿಯೂ ಈಗ ಮಳೆಗಾಲವಾದ್ದರಿಂದ ಆ ಹಸುರು ಚ್ಯತಿಯಿಲ್ಲದೆ ಬೆಳೆದು ಹುಲುಸಾಗಿದ್ದು, ಜೀವನವನ್ನಲ್ಲದೆ ಸಾವಿನ ಛಾಯೆಯನ್ನೂ ಸುಳಿಯಗೊಡುತ್ತಿರಲಿಲ್ಲ. ಅದು ಹಳೆಮನೆ ಮನೆತನದ ಸ್ವಂತ ಶ್ಮಶಾನವಾಗಿತ್ತು. ಹೊಲೆಯರು, ಹಳೆಪೈಕದವರು, ಗಟ್ಟದತಗ್ಗಿನವರು ಯಾರೂ ಅದನ್ನು ಬಳಸುತ್ತಿರಲಿಲ್ಲ. ಅದು ಹೆಗ್ಗಡೆ ಮನೆತನದ ಹೆಣಗಳಿಗೆ ಮೀಸಲಾಗಿತ್ತು. ಆದ್ದರಿಂದ ಅದಕ್ಕೆ ಪದೇಪದೇ ತನ್ನ ಕರ್ತವ್ಯ ನಿರ್ವಹಣೆ ಮಾಡುವ ಅವಕಾಶ ಒದಗುತ್ತಿರಲಿಲ್ಲ. ವರ್ಷಕ್ಕೋ, ಎರಡು ವರ್ಷಕ್ಕೋ, ಕಡೆಗೆ ಮೂರು ನಾಲ್ಕು ಐದು ಆರು ವರ್ಷಗಳಿಗೊಮ್ಮೆಯೋ ಅದಕ್ಕೆ ಸುಡುಗಾಡುತನ ಅಥವಾ ಶ್ಮಶಾನತ್ವ ಒದಗುತ್ತಿತ್ತು. ಹುಡುಗರು ಮಕ್ಕಳು ಸತ್ತರೆ ಹೂಳಿಬಿಡುತ್ತಿದ್ದರು. ದೊಡ್ಡವರು ಸತ್ತರೆ ಮಾತ್ರ ಸುಡುತ್ತಿದ್ದರು. ಈಗಲೂ ಅಲ್ಲಿ ಹೆಣ ಸುಟ್ಟಿದ್ದರ ಯಾವ ಚಿಹ್ನೆಯೂ ಗೋಚಾರವಾಗದಿದ್ದರೂ ಹುಡುಗರು ಮಕ್ಕಳನ್ನು ಹೂಳಿದ್ದರ ಗುರುತು ಸಣ್ಣ ಸಣ್ಣ ಹಸುರು ದಿಣ್ಣೆಗಳಾಗಿ, ಹುಡುಕಿನೋಡಿದರೆ, ಕಾನಿಸುವಂತಿತ್ತು. ಇವತ್ತಿಗೆ ಹಿಂದೆ  ಆ ಸ್ಮಶಾನ ಸೂಡಿನ ಬೆಂಕಿ ಕಂಡಿದ್ದು ಎಂದರೆ, ಸುಮಾರು ಹತ್ತು ಹನ್ನೆರಡು ವರ್ಷಗಳಾಚೆ ಸುಬ್ಬಣ್ಣಹೆಗ್ಗಡೆಯವರ ಹೆಂಡತಿ, ಇವತ್ತು ಅಗ್ನಿ ಸಂಸ್ಕಾರಕ್ಕೆ ಒಳಗಾಗಲಿರುವ ದೊಡ್ಡಣ್ಣಹೆಗ್ಗಡೆಯವರ ತಾಯಿ ತೀರಿಕೊಂಡಿದ್ದಾಗಲೆ! ಅಲ್ಲಿಂದಿತ್ತ ಹೆರಿಗೆ ಯಾದೊಡನೆಯೆ ಸತ್ತಿದ್ದ ಹೆಂಚಿನ ಮನೆ ಶಂಕರಪ್ಪ ಹೆಗ್ಗಡೆಯವರ ಒಂದೆರಡು ಬಾಳದೆ ಹೋದ ಸಂತಾನಗಳನ್ನು ಬಿಟ್ಟರೆ ತನ್ನ ವೃತ್ತಿಯೆ ಮರೆತುಹೋಗಿ ನಿವೃತ್ತಿಯಾದಂತೆ ತೋರತೊಡಗಿತ್ತು! ಆದರೆ ಈ ಸುಡುಗಾಡಿಗೆ ತನ್ನ ಸ್ವಧರ್ಮ ಸಂಫೂರ್ಣವಾಗಿ ಮರೆತುಹೋಗದಂತೆ ನೋಡಿಕೊಳ್ಳುತ್ತಿದ್ದುವು, ಇದಕ್ಕೆ ತುಸು ಸಮೀಪದಲ್ಲಿಯೆ ಇದ್ದ ಇತರ ಸುಡುಗಾಡು ಪಟ್ಟೆಗಳು: ಹೊಲೆಯರದು, ಹಳೆಪೈಕರದು, ಸೆಟ್ಟರದು ಮತ್ತು ಇತರ ಗಟ್ಟದ ತಗ್ಗಿನ ಕೀಳುಜಾತಿಯವರದ್ದು.
ಹೊರಗಣಿಂದ ಬಂದು ನೋಡಿದರೆ ಆ ಸ್ಥಳ ಒಂದು ಸುಮನೋಹರವಾದ ಗಿರಿವನಭಾಗಿಯಾಗಿ, ಆಹ್ಲಾದಕರವಾಗಿ, ಪ್ರಶಾಂತವಾಗಿ, ಪಕ್ಷಿಕೂಜನದಿಂದ ಸುಮಧುರ ಬಂಧುರವಾಗಿ ಕಾಣಿಸುವಂತಿದ್ದರೂ ಅಲ್ಲಿಯ ನಿವಾಸಿಗಳಿಗೆ ಅದು ‘ಮಸಣ’ವಾಗಿಯೆ ಇತ್ತು, ದುಃಸ್ಮೃತಿ ನಿಧಿಯಾಗಿ. ರಾತ್ರಿಯ ಹೊತ್ತು ಅಮವಾಸ್ಯೆಯಲ್ಲಿ, ಯಾರೂ ಆ ದಾರಿಯಲ್ಲಿ ಓಡಾಡಲು ಧೈರ್ಯಮಾಡುತ್ತಿರಲಿಲ್ಲ. ಹೊಲೆಯರ ಸಿದ್ದನನ್ನು ಕೇಳಿದರೆ ಹೇಳುತ್ತಾನೆ: ಅವನಿಗೆ ಎಷ್ಟು ಸಲ ಕಾಣಿಸಿಕೊಂಡಿಲ್ಲ ಮಸಣಿ? ಹಳೆಪೈಕದ ಹೂವಿಯನ್ನು ಕೇಳಿದರೆ ಹೇಳುತ್ತಾಳೆ: ಯಾವುದೋ ವಿಕಾರರೂಪು ಹಿಂದಿನಿಂದ ಬಂದು ಸೆರಗು ಹಿಡಿದು ಎಳೆದ ಹಾಗೆ ಆಗಿಲ್ಲ? ಮಟಮಟ ಬೇಸಗೆಯ ಮಧ್ಯಾಹ್ನದಲ್ಲಂತೂ ಅಲ್ಲಿ ರಣ ತಿರುಗಾಡುವುದು ಎಲ್ಲರಿಗೂ ಗೊತ್ತಿದ್ದ ವಿಷಯವೆ ಆಗಿತ್ತು! ಅದನ್ನು ನಂಬದ ಕಿಲಿಸ್ತಾನರ ಕಿಲಾಮತ್ತು ಕೆಲವು ವರ್ಷಗಳ ಹಿಂದೆ ಅದೇ ಸ್ಥಳದಲ್ಲಿಯೆ, ಹಗಲು ಹನ್ನೆರಡು ಗಂಟೆಯಲ್ಲಿ, ರಣ ಹೊಡೆದು ರಕ್ತ ಕಾರಿಕೊಂಡು ಸತ್ತುಹೋಗಿರಲಿಲ್ಲವೆ! ಆ ಸುಡುಗಾಡಿನ ನಿಸರ್ಗಸುಂದರ ಪ್ರಶಾಂತ ಮುಖಕ್ಕೆ ಮರುಳಾಗಿ ಮೋಸ ಹೋಗುತ್ತಾರೆಂದು ಅದರ ಕರ್ಕಶ ಕರುಳನ್ನರಿತ ಊರು ಮನೆಯವರು?
ಇಂತಹ ವಿಚಾರಗಳನ್ನೆ ಕುರಿತು ಸಂವಾದ ಮಾಡುತ್ತಾ ಹಳೆ ಮನೆಯ ಹೊಲೆಯರು ಕಟ್ಟಿಗೆ ಕಡಿದು ಒಟ್ಟಿ ಸೂಡುಮಾಡುತ್ತಿದ್ದರು. ಮೊದ ಮೊದಲು ಹೂಳವಾಗಿದ್ದ ಮಳೆ ಬರುಬರುತ್ತಾ ಬಿಸಿಲಿಗೆ ತಾವು ಬಿಡುವಂತೆ ಮೋಡಗಳನ್ನು ಸರಿಯತೊಡಗಿತು. ಆಗೊಮ್ಮೆ ಈಗೊಮ್ಮೆ ಹೂಬಿಸಿಲು ಆಡ ತೊಡಗಿ, ಕ್ರಮೇಣ ಆಕಾಶ ನಿರ್ಮಲವೂ ಆಯಿತು. ಬಿಸಿಲು ಚೆನ್ನಾಗಿಯೇ ಕಾಯತೊಡಗಿತು.
“ಅವರ ಪುಣ್ಯ ಕಣೋ!” ಮಂಜನೆಂದಿದ್ದನು.
ಅಷ್ಟರಲ್ಲಿ ಕಾಡು ಗುಡ್ಡಗಳನ್ನೆಲ್ಲ ಮೊಳಗಿಸುತ್ತಾ ಗುಢುಂ ಗುಢುಂ ಗುಢುಂ ಎಂದು ಒಂದಾದ ಮೇಲೊಂದರಂತೆ ಕದಿನಿ ಹಾರಿಸಿದ ಸದ್ದು ಪರ್ವತ ಕಂದಗಳಿಂದ ಭೀಷಣವಾಗಿ ಅನುರಣಿತವಾಯಿತು.
“ತೀರ್ಥಹಳ್ಳಿಯಿಂದ ಗಾಡಿ ಬಂತು ಅಂತಾ ಕಾಣ್ತದೆ!” ಎಂದನು ತಿಮ್ಮ. ಅವನ ಮುಖಮುದ್ರೆ ಇನ್ನೇನು ಸ್ವಲ್ಪ ಹೊತ್ತಿನಲ್ಲಿಯೆ ಎದುರುಗೊಳ್ಳಬೇಕಾಗಿರುವ ಸಂಕಟಕರ ದೃಶ್ಯವನ್ನು ನೆನೆದು ಹೆದರಿಕೊಂಡಂತ್ತಿತ್ತು.
“ಗಾಡಿ ಮನೆ ಹತ್ರಕ್ಕೆ ಎಲ್ಲಿ ಬತ್ತದೆ? ಇನ್ನೂ ದಾರೀನೆ ಮಾಡಿಲ್ಲ? ತ್ವಾಟದಾಚೆ ಹಕ್ಕಲಾಗೇ ನಿಲ್ಲಿಸಿ, ಶವ ಹೊತ್ತುಕೊಂಡು ಬತ್ತಾರೆ” ಎಂದನು ಸಣತಿಮ್ಮ. ಅವನ ಮುಖ ಬಿಳಿಚಿಕೊಳ್ಳತೊಡಗಿತ್ತು; ಕಣ್ಣೂ ಹನಿ ತುಂಬಿದಂತಿತ್ತು.
“ಅವರು ಮನೇಬಿಟ್ಟು ತಿರುಪತಿಗೆ ಹೋದಾಗಿನಿಂದ ಎಲ್ಲ ಹಾಳಾಗ್ತಾ ಅದೆ. ಮನೆಪಾಲೂ ಆಗಿಹೋಯ್ತು! ಹಾಸಿಗೆ ಹಿಡಿದ ದೊಡ್ಡ ಹೆಗ್ಡೇರು ಇನ್ನೇನು ಮ್ಯಾಲೆ ಏಳೂ ಹಾಂಗೆ ಕಾಣಾದಿಲ್ಲ. ಹ್ಞೂ!…. ನಮ್ಮ ತಿಮ್ಮಪ್ಪಹೆಗ್ಡೇರ ದರ್ಬಾರಿನಾಗೆ ಇನ್ನು ಏನೇನಾಗ್ತದ್ಯೋ ಭಗವಂತಗೇ ಗೊತ್ತು. ಅವರ ಹತ್ರ ಇನ್ನು ಆ ರಂಗಮ್ಮ ಹೆಗ್ಗಡ್ತೇರು ಹ್ಯಾಂಗೆ ಏಗ್ತಾರೋ ಏನೋ ನಾ ಬ್ಯಾರೆ ಕಾಣೆ! ಮೊದಲೇ ಅವರ್ನ ‘ಹುಚ್ಚು ಹೆಗ್ಗಡ್ತಿ’ ಮಾಡಿ ಕೂರಿಸ್ಯಾರೆ! ಅವರ ಮಗ ಧರ್ಮಯ್ಯ ಇನ್ನೂ ಏನೂ ಅರಿಯದ ಹುಡುಗ. ಅವರು ಇರ್ಲಿ; ನಾವೂ ಇನ್ನು ಮ್ಯಾಲೆ ಇವರ ಕೈಲಿ ಹ್ಯಾಂಗೆ ಕಾಲಾ ಹಾಕಾದೋ ಏನೋ?….” ಮಂಜ ತಟಕ್ಕನೆ ಮಾತು ನಿಲ್ಲಿಸಿ ದೂರ ನೋಡಿ ಅದ್ಯಾರೋ ಓಡಿ ಬರ್ತಾ ಇದಾರಲ್ಲಾ!” ಎಂದು ಚೆನ್ನಾಗಿ ನೋಡುತ್ತಾ “ನಮ್ಮ ಹೆಂಚಿನ ಮನೆ ಹೆಗ್ಡೇರು ಅಲ್ಲೇನೋ?…. ಹೌದು ಕಣೋ…. ಅವ್ರೆ” ಎನ್ನುತ್ತಾ ಅವರನ್ನು ಎದುರುಗೊಳ್ಳಲು ಬೇಗ ಬೇಗ ಓಡಿದನು.
ಶಂಕರ ಹೆಗ್ಗಡೆ “ಅವರೆಲ್ಲ ಬರ್ತಿದಾರ್ರೊ…. ನೀವು ಮುಟ್ಟಾಳ್ಗಳೆಲ್ಲ, ದೂರ ಸರಿದು, ಮರೇಲಿ ನಿಂತ್ಕೊಳ್ಳಿ” ಎಂದರು.
ಅಪ್ಪಣೆಯಂತೆ ಹೊಲೆಯರೂ ಮತ್ತು ಗತಿಸಿದ ಒಡೆಯರಿಗೆ ಅಂತ್ಯ ಗೌರವ ಸಲ್ಲಿಸಲು ಆಗಲೆ ನೆರೆದಿದ್ದ ಐತ, ಪಿಜಿಣ, ತುಕ್ರ, ಕುದುಕ ಮೊದಲಾದ ಗಟ್ಟದ ತಗ್ಗಿನವರೂ ಬೇಗ ಬೇಗನೆ ದಾರಿಬಿಟ್ಟು ದೂರಸರಿದು ಪೊದೆಗಳನ್ನಾಶ್ರಯಿಸಿ ಮರೆಯಲ್ಲಿ ನಿಂತರು, ದೂರದಲ್ಲಿ ಕಾಣಿಸಿಕೊಂಡು ಶ್ಮಶಾನವನ್ನು ಸಮೀಪಿಸುತ್ತಿದ್ದ ಹೆಂಗಸರ ಗುಂಪನ್ನು ಭಯವಿಹ್ವಲನಾದ ನಿರ್ನಿಮೇಷ ನೇತ್ರಗಳಿಂದ ನೋಡುತ್ತಾ!
ಏಳೆಂಟು ವರುಷಗಳಿಂದ ಹಿಂದೆ ತಿರುಪತಿಗೆ ಹೋಗಿ ಹಿಂದಿರುಗದಿದ್ದ ದೊಡ್ಡಣ್ಣಹೆಗ್ಗಡೆಯವರ ಕಳೇಬರವನ್ನು ತೀರ್ಥಹಳ್ಳಿಯಿಂದ ಹಳೆಮನೆಗೆ ದಹನ ಸಂಸ್ಕಾರಾರ್ಥವಾಗಿ ಬೆಟ್ಟಳ್ಳಿಯ ಗಾಡಿಯಲ್ಲಿ ತರುತ್ತಿದ್ದಾರೆ ಎಂಬ ಸಿಡಿಲಸುದ್ದಿ ಮಿಂಚಿನ ವೇಗದಿಂದ ಎಲ್ಲ ನೆಂಟರ ಮನೆಗಳಿಗೂ ಮುಟ್ಟಿ, ಸಿಂಬಾವಿ ಬಾವಿಕೊಪ್ಪ ಹೊಸಮನೆ ಬೆಟ್ಟಳ್ಳಿ ಹೂವಳ್ಳಿ ಕೋಣೂರು ಆದಿಯಾಗಿ ಅನೇಕ ಕಡೆಗಳಿಂದ ಹತ್ತಿರದ ಸಂಬಂಧಿಗಳು ಹಳೆಮನೆಯಲ್ಲಿ ನೆರೆಯತೊಡಗಿದ್ದರು. ಅದರಲ್ಲಿಯೂ ತನ್ನ ಗಂಡನು ತಿರುಪತಿಗೆ ಹೋಗಿ ಹಿಂತಿರುಗಿ ಬಂದವರೊಡನೆ ಬರಲಿಲ್ಲವೆಂದೂ, ಆತನು ತಿರುಪತಿಯೆ ವಾಂತಿಭೇದಿಯಾಗಿ ತೀರಿಕೊಂಡನೆಂದೂ, ಗೋಸಾಯಿಗಳು ಮದ್ದು ಕೊಟ್ಟು ರಕ್ಷಿಸಿ ತಮ್ಮೊಡನೆ ಕರೆದುಕೊಂಡು ಹೋಗಿದ್ದಾರೆಂದೂ, ಇಂದೊ ನಾಳೆಯೊ ಮನೆಯ ನೆನಪಾಗಿ ಹಿಂತಿರುಗಬಹುದೆಂದು ಏಳೆಂಟು ವರ್ಷಗಳಿಂದ ಆಸೆ ಭಯ ಶಂಕೆ ಹತಾಶೆ ನಿಂದೆ ದ್ವೇಷ ಕಷ್ಟ ದೈನ್ಯ ದಾಸ್ಯಾದಿಗಳಲ್ಲಿ ಸಿಕ್ಕಿ, ನಾನಾ ವಿಧವಾದ  ವಾರ್ತೆಗಳ ಜಂಝಾಟದಲ್ಲಿ ತೊಳಲಿ ಬಳಲಿ ಬೆಂದು ಹೋಗಿದ್ದ ರಂಗಮ್ಮನನ್ನು ‘ಮಾತಾಡಿಸಿಕೊಂಡು’ ಹೋಗಲೆಂದು, ಕೆಲರು ಸಂಪ್ರದಾಯಕ್ಕೂ ಮತ್ತೆ ಕೆಲರು ವಿಶ್ವಾಸಕ್ಕೂ ಬದ್ಧರಾಗಿ, ಅನೇಕ ಹೆಗ್ಗಡಿತಮ್ಮರುಗಳೂ ಬಂದು ಸೇರಿದ್ದರು.
ಶೋಕದ ನಾನಾ ಭಂಗಿಗಳಲ್ಲಿ ಗುಂಪುಕಟ್ಟಿ ಬರುತ್ತಿದ್ದ ಹೆಂಗಸರ ನಡುವೆ, ಎರಡು ಮೂರು ದಿನ ಬಿಚ್ಚದಿದ್ದು ಮಾಸಿದ ಕೊಳಕು ಸೀರೆಯುಟ್ಟು, ಅವರ್ಣನೀಯವಾದ ದುಃಖಾತೀಶಯದಿಂದ ಬಿಕ್ಕಿಬಿಕ್ಕಿ ಅಳುತ್ತಾ, ಎರಡೇ ದಿನಗಳಲ್ಲಿ ಮುದುಕಿಯಾಗಿ ಬಿಟ್ಟಳೆಂಬಂತೆ ಸೊಂಟ ಬಾಗಿ, ತಲೆತಗ್ಗಿಸಿ, ತನ್ನ ವೃದ್ಧಮಾತೆ ದಾನಮ್ಮ ಹೆಗ್ಗಡಿತಿಯವರ- ಕೋಣೂರಿನ ಕಾಗಿನಹಳ್ಳಿ ಅಮ್ಮ-ಮತ್ತು ಸಿಂಬಾವಿ ಭರಮೈಹೆಗ್ಗಡೆ ಯವರ ಹೆಂಡತಿ ಜಟ್ಟಮ್ಮ ಹೆಗ್ಗಡಿತಿಯವರ ನಡುವೆ, ಅವರ ಕೈಯಾಪಿನಲ್ಲಿ, ಸಂಕಟವೆ ಸಾಕಾರಗೊಂಡಂತೆ, ತತ್ತರಿಸುತ್ತಾ ಬರುತ್ತಿದ್ದ ರಂಗಮ್ಮ ಹೆಗ್ಗಡಿತಿಯವರನ್ನು ನೋಡಿ ನೆರೆದಿದ್ದ ಹೆಣ್ಣುಗಂಡು ಆಳುಗಳೆಲ್ಲ ಬಿಕ್ಕಿಬಿಕ್ಕಿ ಅಳತೊಡಗಿದರು; ಶೋಕದ ನಾನಾ ರೀತಿಯ ಉದ್ಗಾರಗಳೂ ಹೊಮ್ಮಿ ಸುಡುಗಾಡೆಲ್ಲ ರೋದನಮಯವಾಯಿತು.
ಅಳಲು ಬಡಿದು ಮರವಟ್ಟವನಂತೆ ನಿಂತು ನೋಡುತ್ತಿದ್ದ ಐತನನ್ನು ಯಾರೋ ಹಿಂದಿನಿಂದ ಮುಟ್ಟಿದಂತಾಯಿತು. ತಿರುಗಿ ನೋಡಿದಾಗ, ಅವನ ಹೆಂಡತಿ ಪೀಂಚಲು ಕಣ್ಣುಸನ್ನೆ ಮಾಡಿ ಕರೆದಳು. ಇತರ ಗಟ್ಟದ ತಗ್ಗಿನ ಗಂಡಸರ ಗುಂಪಿನಿಂದ ಸ್ವಲ್ಪ ದೂರ ಸರಿದ ಮೇಲೆ ಹೇಳಿದಳು: “ಧರ್ಮಯ್ಯೋರು, ಪಾಪ! ಅಳ್ತಾ ಇದಾರೆ! ‘ಐತನ್ನ ಕರಕೊಂಡು ಬಾರೇ, ಪೀಂಚಲು!’ ಅಂತಾ ನನ್ನ ಕೂಡೆ ಹೇಳಿಕಳ್ಸಿದ್ರು!”
“ಎಲ್ಲಿ ಇದಾರೆ?” ಎಂದು ಕೇಳಿದ ಐತ, ಸ್ವಲ್ಪ ಅಸಮಾಧಾನದಿಂದಲೆ ಹೆಂಡತಿಯ ಕಡೆ ಎವೆಯಿಕ್ಕದೆ ನೋಡುತ್ತಾ “ಅಂತೂ ಬರಬ್ಯಾಡ ಅಂದ್ರೂ  ಬಂದೇಬಿಟ್ಟೀಯಾ!” ಎಂದು ಬಸರಿಯಾಗಿದ್ದ ತನ್ನ ಹೆಂಡತಿಯ ಚೊಚ್ಚಲು ಹೊಟ್ಟೆಯ ಕಡೆ ಮುನಿದುಕೊಂಡಂತೆ ನೋಡಿದನು.
“ದೊಡ್ಡಮ್ಮೋರೆ ‘ಪೀಂಚಲೂ, ನನ್ನ ಸಂಗಡ ಬಾರೆ’ ಅಂತಾ ಕರೆದಮ್ಯಾಲೆ ಬರದೆ ಇರೋಕೆ ಆಗ್ತದೇನು? ಏನೋ ಅವರೀಗೂ ಕಷ್ಟಕಾಲ!” ಎಂದು ಸಮಾಧಾನ ಹೇಳಿ, ತನ್ನ ಗಂಡನನ್ನು ಮಹಿಳೆಯರ ಗುಂಪಿನ ಬಳಿಯಿದ್ದ ಧರ್ಮು ಇದ್ದಲ್ಲಿಗೆ ಕರೆದುಕೊಂಡಿ ಹೋದಳು.
ಗರ್ಭಿಣಿಯರು ಶ್ಮಶಾನ ಮತ್ತು ಶವಸಂಸ್ಕಾರದಂತಹ ಅಮಂಗಲಗಳಿಂದ ದೂರವಾಗಿರಬೇಕೆಂದೂ, ಇಲ್ಲದಿದ್ದರೆ ಹುಟ್ಟುವ ಶಿಶುವಿನ ಮೇಲೆ ಕೆಟ್ಟ ಪರಿಣಾಮವಾಗುತ್ತದೆಂದೂ ಐತನು ಹಳೆಮನೆಗೆ ಹೋಗಬಾರದೆಂದು ಪೀಂಚಲುಗೆ ಕಟ್ಟಪ್ಪಣೆ ಮಾಡಿ, ಅವಳನ್ನು ಬಿಡಾರದಲ್ಲಿಯೆ ಇರಲು ಹೇಳಿ, ತಾನು ಇತರ ಗಂಡಾಳುಗಳೊಡನೆ ಕೋಣೂರಿನಿಂದ ಹಳೆಮನೆಗೆ ಬೆಳಗಿನ ಜಾವದಲ್ಲಿಯೆ ಹೊರಟು ಬಂದಿದ್ದನು. ಆದರೆ ಅವಳು ಆಪತ್ತಿಗೆ ಸಿಕ್ಕಿದ್ದ ರಂಗಮ್ಮ ಹೆಗ್ಗಡಿತಿಯವರನ್ನು ಬಿಟ್ಟಿರಲಾರದೆ ದಾನಮ್ಮ ಹೆಗ್ಗಡಿತಿಯವರೊಡನೆ, ಗಂಡನ ಆಜ್ಞೆಯನ್ನು ಉಲ್ಲಂಘಿಸಿ, ಹೊರಟು ಬಂದಿದ್ದಳು.
ಸುಡುಗಾಡಿಗೆ ಸುಡುಗಾಡೇ ಚಕಿತವಾದಂತೆ ಅಲ್ಲಿ ನೆರೆದಿದ್ದವರ ಮನಸ್ಸು ಮುಖ ಕಣ್ಣುಗಳೆಲ್ಲ ಗಾಡಿ ನಿಂತಿದ್ದ ದಿಕ್ಕಿನ ದಾರಿಯ ಕಡೆಗೆ ಏಕಾಗ್ರವಾದವು. ಐಗಳು ಅನಂತಯ್ಯ ‘ಅಗ್ನಿ’ ಹಿಡಿದು ಪೊದೆಪೊದೆಯ ನಡುವಣ ಬಯಲಿನ ಇಕ್ಕಟ್ಟು ಕಾಲುದಾರಿಯಲ್ಲಿ ಬರುತ್ತಿದ್ದುದು ಕಾಣಿಸಿತು. ಅವರ ಹಿಂದೆ ಚಟ್ಟವನ್ನು ಹೊತ್ತಿದ್ದವರ ಪಂಕ್ತಿ ಗೋಚರಿಸಿತು. ಅಗ್ರಭಾಗದಲ್ಲಿ ಬೆಟ್ಟಳ್ಳಿ ದೇವಯ್ಯ ಕೋಣೂರು ಮುಕುಂದಯ್ಯ ಹೆಗಲು ಕೊಟ್ಟಿದ್ದರು. ಹಿಂಭಾಗದಲ್ಲಿ ಹೆಗಲು ಕೊಟ್ಟಿದ್ದವರಲ್ಲಿ ತಿಮ್ಮಪ್ಪನೂ ಸಿಂಭಾವಿ ಭರಮೈಹೆಗ್ಗಡೆಯೂ ಇದ್ದರು. ಹೂವಳ್ಳಿ ವೆಂಕಟಣ್ಣನ  ಬೃಹತ್ತಾದ ಸುದೀರ್ಘ ಸ್ಥೂಲಕಾಯವೂ ಮುಂಭಾಗದಲ್ಲಿ ಹೆಗಲು ಕೊಟ್ಟಿದ್ದವರೊಡನೆಯೆ ಕಾಣಿಸಿತ್ತಾದರೂ ಅವನು ಇತರರಿಗೆ ತನ್ನ ಎತ್ತರದ ದೆಸೆಯಿಂದ ತೊಂದರೆಯಾಗಬಾರದೆಂದು ಹೆಗಲು ಕೊಡದೆ ಇತರರ ಮಟ್ಟದೆತ್ತರಕ್ಕೆ ಕೈ ಆನಿಸಿಯೆ  ಗೌರವಾರ್ಥವಾಗಿ ಕೂಡಿ, ಕುಂಟಿ ಬರುತ್ತಿದ್ದನು. ಅವರ ಹಿಂದೆ ಗಂಡಸರದೊಂದು ಗುಂಪೇ ಬರುತ್ತಿತ್ತು: ಮೇಗರವಳ್ಳಿಯ ಕಣ್ಣಾಪಂಡಿತರು, ಕರೀಂಸಾಬರು, ಜವಳಿ ಅಂಗಡಿ ಕಾಮತರು, ದಿನಸಿ ಅಂಗಡಿ ಪೈಗಳು, ತೀರ್ಥಹಳ್ಳಿ ದಾಸಯ್ಯ, ಪಾದ್ರಿ ಜೀವರತ್ನಯ್ಯ ಇತ್ಯಾದಿ ಇತ್ಯಾದಿ.
ಸೂಡಿಗೆ ಸ್ವಲ್ಪ ಸಮೀಪದಲ್ಲಿ ಚಟ್ಟ ನೆಲಮುಟ್ಟಿದುದೆ ತಡೆ ರೋದನ ಧ್ವನಿಯೊಂದಿಗೆ ನೆರೆದವರ ನೂಕುನುಗ್ಗಲು ಕಿಕ್ಕಿರಿಯಿತು. ಐತನ ಸಹಾಯದಿಂದ ಧರ್ಮುವೂ ತಾನು ಹಿಂದೆ ನೋಡಿದ್ದಿರಬಹುದಾದ ನೆನಪೂ ಅಳಿಸಿಹೋಗಿದ್ದ ತನ್ನ  ಅಪ್ಪಯ್ಯನ ಮುಖವನ್ನಾದರೂ ಕೊನೆಯ ಸಾರಿ ನೋಡುವ ಉದ್ದೇಶದಿಂದ ಜನರ ಮಧ್ಯೆ ತೂರಿಕೊಂಡು ಹೋಗಿ ನೋಡಿದನು. ಆದರೆ ಏನೋ ಹೆದರಿಕೆಯಾದಂತಾಗಿ, ಕುತೂಹಲ ಪರಿಹಾರವಾದವನಂತೆ ಮತ್ತೆ ಐತನ ಕೈ ಹಿಡಿದುಕೊಂಡು ಹಿಂದಕ್ಕೆ ಬಂದು, ಬೆದರುಗಣ್ಣಾಗಿ ನಿಂತುಬಿಟ್ಟನು. ಅವನಿಗೆ ದುಃಖಕ್ಕಿಂತಲೂ ಹೆಚ್ಚು ದಿಗಿಲಾದಂತೆ ತೋರಿತು: ‘ಹೆದರಬೇಡಿ, ಅಯ್ಯಾ’ ಎಂದನು ಐತ.
ಆದಷ್ಟು ಪ್ರಯತ್ನದಿಂದ, ತುಸುಹೊತ್ತಿನಲ್ಲಿಯೆ, ಚಟ್ಟದ ಹತ್ತಿರಕ್ಕೆ ಮುಖ ದರ್ಶನಕ್ಕಾಗಿ ನುಗ್ಗಿದ್ದವರನ್ನೆಲ್ಲಾ ದೂರದೂರ ಹಿಂದಕ್ಕೆ ಕಳಿಸಿದರು. ಒಂದು ಕಡೆ ತಾಯಿ ದಾನಮ್ಮ ಹೆಗ್ಗಡಿತಿಯವರು ಇನ್ನೊಂದು ಕಡೆ ಅತ್ತಿಗೆ ಜಟ್ಟಮ್ಮ ಹೆಗ್ಗಡಿತಿಯವರು ತೋಳು ಹಿಡಿದಿರಲು ರಂಗಮ್ಮ ಗಂಡನ ಕಳೇಬರವಿದ್ದ ಚಟ್ಟದ ಕಡೆಗೆ, ಬಗ್ಗಿ ಕುಗ್ಗಿ, ಮುಖ ಮುಚ್ಚಿಕೊಂಡು, ಬಿಕ್ಕಿಬಿಕ್ಕಿ ಅಳುತ್ತಾ, ಇನ್ನೊಂದು ಸ್ವಲ್ಪ ಹೊತ್ತಿನಲ್ಲಿಯೆ ಕಳಚಿಹೋಗಲಿರುವ ಕರಿಮಣಿ ಸರದ ತಾಳಿ ಜೋಲುವಂತೆ ಬಾಗಿ, ತುಸು ಹೊತ್ತಿನಲ್ಲಿಯೆ ಒಡೆದು ಬೀಳಲಿರುವ ಬಳೆ ಸದ್ದಾಗುವಂತೆ ನಡುಗುತ್ತಾ ಬಂದಳು. ಏಳೆಂಟು ವರ್ಷಗಳಿಂದ ತನ್ನನ್ನು ದಹಿಸಿದ್ದ, ಏಳೆಂಟು ವರ್ಷಗಳೂ ತಾನು ಸಹಿಸಿದ್ದ ದುಃಖಾಗ್ನಿಪ್ರವಾಹಗಳೆಲ್ಲ ಒಟ್ಟಾಗಿ ಅವಳ ಹೃದಯವನ್ನು ಸುಟ್ಟುವೆಂಬಂತೆ ಚೀತ್ಕರಿಸಿದಳು: “ಅಯ್ಯೋ, ಸ್ವಾಮೀ, ತಿರುಪತಿ ತಿಮ್ಮಪ್ಪಾ, ನನ್ನನ್ನೂ ಕರಕೊಳ್ಳಪ್ಪಾ ನಿನ್ನ ಪಾದಾರವಿಂದಕ್ಕೆ! ಸ್ವಾಮೀ! ಸ್ವಾಮೀ! ಸ್ವಾಮೀ!” ಎನ್ನುತ್ತಾ ನೆರೆದಿದ್ದವರೆಲ್ಲ ಕಿಂಕರ್ತವ್ಯ ವಿಮೂಢರಂತೆ ನೋಡುತ್ತಿರಲು, ಮುನ್ನುಗ್ಗಿ ತನ್ನ ಗಂಡನ ಕಳೇಬರದ ಪಾದಗಳನ್ನು ಹಣೆಗೂ ಮುಖಕ್ಕೂ ಬಲವಾಗಿ ಒತ್ತಿ, ಕೈಯಲ್ಲಿ ಹಿಡಿದಮರಿಕೊಂಡು ಸಾಷ್ಟಾಂಗ ಪ್ರಣಾಮ ಮಾಡುವಂತೆ ಉದ್ದುದ್ದ ಅಡ್ಡಬಿದ್ದಳು!
ಸಂತೈಸುವ ಸಲುವಾಗಿ ಮಗಳ ಒಂದು ಪಕ್ಕದಲ್ಲಿ ದುಃಖದಗ್ಧಳಾಗಿದ್ದ ತಾಯಿಯೂ ಇನ್ನೊಂದು ಪಕ್ಕದಲ್ಲಿ ಚಿಕ್ಕಂದಿನಿಂದಲೂ ಗೆಳತಿಯಾಗಿ ಬೆಳೆದಿದ್ದ ಅತ್ತಿಗೆಯೂ ಕುಳಿತರು.
ಅಷ್ಟರಲ್ಲಿ, ಮನೆಯ ಕಡೆಯಯಿಂದ, ಮಗಳು ಮಂಜಮ್ಮನ ಹೆಗಲ ಮೇಲೆ ಎಡಗೈಯಿಟ್ಟು, ಬಲಗೈಯಲ್ಲಿ ದೊಣ್ಣೆಯೂರಿ, ಮೆಲ್ಲನೆ ಬರುತ್ತಿದ್ದ ಸುಬ್ಬಣ್ಣಹೆಗ್ಗಡೆಯವರನ್ನು ನಡೆಯಿಸಿಕೊಂಡು ಬಂದ ಬೆಟ್ಟಳ್ಳಿ ಕಲ್ಲಯ್ಯಗೌಡರು ಕಳೇಬರದ ಹತ್ತಿರಕ್ಕೆ ಬಂದರು.
“ಮಾವಯ್ಯ ಬಂದ್ರು, ಏಳು, ರಂಗೂ!” ಎಂದು ತಾಯಿಯೂ “ಅತ್ತಿಗೆಮ್ಮಾ! ಅತ್ತಿಗೆಮ್ಮಾ! ಏಳಿ, ಮಾವಯ್ಯ ಬಂದಾರೆ!” ಎಂದು ಜಟ್ಟಮ್ಮನೂ ರಂಗಮ್ಮನನ್ನು ಕರೆದು ಎಬ್ಬಿಸಲು ಪ್ರಯತ್ನಿಸಿದರು. ಆದರೆ ಗಂಡನ ಪಾದನಗಳನ್ನು ಅದುಮಿ ಹಿಡಿದಿದ್ದ ರಂಗಮ್ಮನ ಕೈಗಳು ಸಡಿಲಲಿಲ್ಲ; ಪಾದಕ್ಕೆ ಒತ್ತಿದ್ದ ಹಣೆ ಚಲಿಸಲಿಲ್ಲ. ಉಸಿರಾಡುತ್ತಿದ್ದಾಳೆಯೋ ಇಲ್ಲವೋ ಎಂಬಷ್ಟು ನಿಶ್ಚಲವಾಗಿದ್ದಳು!
ದಾನಮ್ಮ ಹೆಗ್ಗಡಿತಿಯವರಿಗೆ ಯಾಕೋ ಹೆದರಿಕೆಯಾಯಿತು. “ಮುಕುಂದಾ, ಇಲ್ಲಿ ಬಾರಪ್ಪಾ!” ಎಂದು ಅಳುದನಿಯಿಂದ ಕೂಗಿದರು, ಸ್ವಲ್ಪ ದೂರದಲ್ಲಿಯೆ ನಿಂತಿದ್ದ ಮಗನನ್ನು.
ಮುಕುಂದಯ್ಯ ಹತ್ತಿರ ಬರಲು “ನಿನ್ನ ಅಕ್ಕಯ್ಯ ಯಾಕೋ ಮಾತಾಡಾದಿಲ್ಲ; ಸ್ವಲ್ಪ ನೋಡಪ್ಪಾ!” ಎಂದು ಎದ್ದು ನಿಂತರು. ಅವರೊಡನೆ ಜಟ್ಟಮ್ಮನೂ ಎದ್ದು ನಿಂತು ಗಾಬರಿಯಿಂದಲೆ ಸ್ವಲ್ಪ ದೂರ ಸರಿದರು.
ಮುಕುಂದಯ್ಯ ತನ್ನ ಅಕ್ಕನನ್ನು ಕರೆದು, ಮುಟ್ಟಿ, ಎಬ್ಬಿಸಲು ಮಾಡಿದ ಪ್ರಯತ್ನ ವ್ಯರ್ಥವಾಗುತ್ತಿರುವುದನ್ನು ಕಂಡು ದೇವಯ್ಯನೂ ಬಳಿಸಾರಿ ಪರಿಶೀಲಿಸಿದನು.
“ಧಾತು ಹಾರಿರಬೇಕು ಸ್ವಲ್ಪ ನೀರು ತನ್ನಿ” ಎನ್ನುತ್ತಾ ದೇವಯ್ಯ ತನ್ನ ಅಂಗ ವಸ್ತ್ರದಿಂದ ಗಾಳಿ ಬೀಸತೊಡಗಿದನು.
ಹಾಹಾಕಾರವೆದ್ದಿತು!
ಮುಖಕ್ಕೆ ನೀರು ಎರಚಿದರು. ಬಾಯಿಗೂ ನೀರು ಬಿಟ್ಟರು: ತಿರುಪತಿ ತಿಮ್ಮಪ್ಪನು ಧರ್ಮೂ ತಾಯಿಯ ಆರ್ತಪ್ರಾರ್ಥನೆಗೆ ಸಂಪೂರ್ಣವಾಗಿ ಓಗೊಟ್ಟಿದ್ದನು!
ತನ್ನ ಅವ್ವಗೆ ಪ್ರಾಣ ಹೋಯಿತು ಎಂದು ಗೊತ್ತಾದೊಡನೆ, ಐತನ ಕೈಹಿಡಿದು,- ಹುಲಿ ಅಟ್ಟಿ ಕೊಂದು ತಿನ್ನುತ್ತಿದ್ದ ತಾಯಿಯನ್ನು ನೋಡುತ್ತಾ ದಿಕ್ಕುಗೆಟ್ಟು ಹೆದರಿ ದೂರ ನಿಲ್ಲುವ ಜಿಂಕೆಮರಿಯಂತೆ,-ದಿಗ್ಭ್ರಾಂತನಾಗಿ ನಿಂತಿದ್ದ ಧರ್ಮು “ಅಯ್ಯೋ ಐತಾ!” ಎಂದು ನಡುಗಿ ಚೀತ್ಕರಿಸಿ ನೆಲಕ್ಕುರುಳಿ ವಿಲಿವಿಲಿ ಒದ್ದಾಡತೊಡಗಿದನು! ಐತ ಅವನನ್ನು ಹಿಡಿದೆತ್ತಿ ನಿಲ್ಲಿಸಿ, ತನ್ನ ಎದೆಗೆ ಬಲವಾಗಿ ಅವುಚಿಕೊಂಡು “ಹೆದರಬ್ಯಾಡಿ, ಅಯ್ಯಾ! ಹೆದರಬ್ಯಾಡಿ ಅಯ್ಯಾ!” ಎಂದೆಂದು ಗದ್ಗದಿಸಿ ಅಳತೊಡಗಿದನು.
ಅದನ್ನು ಗಮನಿಸಿದ ಮುಕುಂದಯ್ಯ ದೇವಯ್ಯ ಇಬ್ಬರೂ ತಮ್ಮೊಳಗೆ ಮಾತಾಡಿಕೊಂಡು ಐಗಳು ಅನಂತಯ್ಯನವರನ್ನು ಕರೆದು ಅವರ ಕಿವಿಯಲ್ಲಿ ಏನನ್ನೊ ಹೇಳಿ ಕಳುಹಿಸಿದರು. ಅವರು ಐತ ಅಪ್ಪಿ ಹಿಡಿದಿದ್ದ ಧರ್ಮು ಬಳಿಗೆ ಬಂದು ಸಮಾಧಾನ ಪಡಿಸುತ್ತಾ ಅವನನ್ನು ಮನೆಗೆ ಕರೆದು ಕೊಂಡುಹೋದರು, ಐತನನ್ನೂ ಸಂಗಡ ಇರಹೇಳಿ.
ದುಃಖದ ಮೇಲೆ ದುಃಖದ ಆಘಾತವಾಗಿದ್ದ ಬಾಲಕನ ಹೃದಯ ಅವರ ಸಂತೈಕೆಯಿಂದ ತುಸು ಶಾಂತವಾದ ಮೇಲೆ ಐಗಳು ಹೇಳಿದರು: “ಧರ್ಮು, ನಿನ್ನ ತಾಯಿ ನಿಜವಾಗಿಯೂ ದೈವಭಕ್ತೆ, ಪುಣ್ಯವಂತೆ. ಆದ್ದರಿಂದಲೆ ದೇವರು ಅವರ ಪ್ರಾರ್ಥನೆಯನ್ನು ತಡಮಾಡದೆ ಸಲ್ಲಿಸಿದ್ದಾನೆ. ಇಂಥಾ ಇಚ್ಛಾಮರಣ ಎಲ್ಲರಿಗೂ ಸಿಗುವುದಿಲ್ಲ. ಪತಿವ್ರತೆಗೆ ಮಾತ್ರ ಸಾಧ್ಯ, ಈ ರೀತಿ ಪತಿಯೊಡನೆ ಚಿತೆ ಏರುವ ಭಾಗ್ಯ. ನಿಮಗೆ ನಾನು ಪುರಾಣದ ಕಥೆಗಳಲ್ಲಿ ಹೀಗೆ ಆಗುವುದನ್ನು ಹೇಳಿದ್ದೆ. ಇವೊತ್ತು ನಾವೇ ಅಂಥಾದ್ದು ಒಂದನ್ನ ಕಣ್ಣಾರೆ ಕಂಡ ಹಾಗಾಯ್ತು…. ನೀನು ಚೆನ್ನಾಗಿ ಓದುಬರಹ ಕಲಿತು ದೊಡ್ಡವನಾದರೆ ಸ್ವರ್ಗದಲ್ಲಿರುವ ನಿನ್ನ ತಂದೆ ತಾಯಿಗಳಿಗೆ ತುಂಬಾ ಸಂತೋಷವಾಗುತ್ತದೆ.”
*****

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ