ಕಾರ್ಮೋಡ ಮುಸುಗಿ ಮಳೆ ಹಿಡಿದು ಹೊಡೆಯುತ್ತಿದ್ದುದರಿಂದ ಹೊತ್ತಿಗೆ ಮುನ್ನವೆ ಬೈಗುಗಪ್ಪು ಕವಿದಿತ್ತು. ಗದ್ದೆಯ ಕೆಲಸದಿಂದ ಹಿಂದಿರುಗುತ್ತಿದ್ದ ಆಳುಗಳೆಲ್ಲ ’ಇವೊತ್ತು ಎಂದಿಗಿಂತಲೂ ಹೆಚ್ಚು ಹೊತ್ತು ಕೆಲಸಮಾಡಿಬಿಟ್ಟರು. ಮುಕುಂದೇಗೌಡರು.’ ಎಂದು ಮನಸ್ಸಿನಲ್ಲಿಯೆ ತುಸು ಅಸಮಾಧಾನಪಟ್ಟುಕೊಂಡು ತಮ್ಮ ತಮ್ಮ ಬಿಡಾರಗಳಿಗೆ, ಉಪ್ಪು ಮೆಣಸು ಬಾಳೇಕಾಯಿ ಅಕ್ಕಿ ಎಲೆ ಅಡಿಕೆ ಹೊಗೆಸೊಪ್ಪು ಮೊದಲಾದ ಗಂಟುಕಟ್ಟಿದ್ದ ಪಡಿಯ ಸಾಮಗ್ರಿಗಳೊಡನೆ, ಕೆಲವರು ಕಂಬಳಿಕೊಪ್ಪೆ ಹಾಕಿಕೊಂಡೂ, ಕೆಲವರು ಗೊರಬು ಸೂಡಿಕೊಂಡೂ ದಣಿದು ಮೆಲ್ಲನೆ ಹಿಂದಿರುಗುತ್ತಿದ್ದರು. ಹೆಣ್ಣಾಳುಗಳ ಗುಂಪಿನಲ್ಲಿ ಬರುತ್ತಿದ್ದ ಪೀಂಚಲು ತನ್ನ ಬಿಡಾರದ ಮುಂದೆ ನಿಂತು ಅಕ್ಕಣಿ, ಬಾಗಿ, ಚಿಕ್ಕಿ ಮೊದಲಾದವರನ್ನು ಬರಿಯ ನಗೆಯಿಂದಲೋ ಅಥವಾ ರೂಢಿಯ ಉಪಚಾರದ ಮಾತಿನಿಂದಲೋ ಬೀಳುಕೊಟ್ಟಳು. ತನ್ನ ಬಿಡಾರದ ತಡಿಕೆ ಬಾಗಿಲಿಗೆ ಬಿಗಿದಿದ್ದ ಹಗ್ಗವನ್ನು ಬಿಚ್ಚಿ, ಅದನ್ನು ನೂಕಿ, ಗೊರಬು ಬಾಗಿಲಿಗೆ ಹಿಡಿಸುವಂತೆ ಅಡ್ಡಡ್ಡವಾಗಿ ತನ್ನೆಲ್ಲ ಗಂಟುಮೂಟೆಗಳೊಡನೆ ಒಳಹೊಕ್ಕು, ಮತ್ತೆ ಬಾಗಿಲು ಹಾಕಿಕೊಂಡಳು, ಹೊರಗಡೆ ಬೀಳುತ್ತಿದ್ದ ಮಳೆಯ ಇರಿಚಲು ಒಳಕ್ಕೆ ಸಿಡಿದುಹಾರಿ ಬಿಡಾರದ ನೆಲ ಒದ್ದೆಯಾಗದಿರಲಿ ಎಂದು.
ಹೊರಗಡೆ ಮೇಯುತ್ತಿದ್ದು, ಒದ್ದೆಮುದ್ದೆಯಾಗಿ ಗರಿ ತಿಪ್ಪುಳು ಮೆಯ್ಗಂಟಿ ಸಣ್ಣಗೆ ಕಾಣುತ್ತಿದ್ದ ಅವಳ ಒಂದು ಹುಂಜವೂ ಎರಡು ಹೇಂಟೆಗಳೂ ಮೂರುನಾಲ್ಕು ಮರಿಗಳೂ ಕತ್ತಲಾಗುತ್ತಿದ್ದುದರಿಂದ ಒಳಕ್ಕೆ ಹೋಗಲು ಮನೆಯ ಯಜಮಾನಿಯ ಆಗಮನವನ್ನೇ ನಿರೀಕ್ಷಿಸುತ್ತಿದ್ದಳು, ಅವಳು ಬಂದು ಬಾಗಿಲು ತೆಗೆದೊಡನೆಯೆ ಅವಳಿಗಿಂತಲೂ ಮೊದಲೆ ಒಳಕ್ಕೆ ನುಗ್ಗಿ, ಗೊತ್ತು ಕೂರುವ ಜಾಗಕ್ಕೆ ಹೋಗಿದ್ದುವು. ಪೀಂಚಲು ಮೂಲೆಯಲ್ಲಿ ಗೂಟಕ್ಕೆ ತಗುಲಿಸಿದ್ದ ಒಂದು ಕಣ್ಣುಕಟ್ಟಿನ ದೊಡ್ಡ ಬುಟ್ಟಿಯನ್ನು ತೆಗೆದು ಆ ಕೋಳಿಗಳನ್ನೆಲ್ಲ ಒಟ್ಟಿಗೆ ಮೂಲೆಗೆ ತಳ್ಳಿ ಮುಚ್ಚಿಹಾಕಿದಳು. ತನ್ನ ಗೊರಬನ್ನು ಆ ಗೂಟಕ್ಕೆ ತಗುಲಿಹಾಕಿದಳು. ಕೈಯಲ್ಲಿದ್ದ ಗಂಟನ್ನು ಕೆಳಗಿಟ್ಟು, ಆ ಗಂಟಿಗೇ ಒತ್ತಿ ಹಿಡಿದುಕೊಂಡು ಬಂದಿದ್ದ ಒಂದು ಕೆಸುವಿನ ಎಲೆಯ ಕೊಟ್ಟೆಯನ್ನು ತೆಗೆದು, ಪ್ರತ್ಯೇಕವಾಗಿ, ಒಲೆಯಿದ್ದ ಮೂಲೆಯೆಡೆ ಇಟ್ಟಳು. ಇಟ್ಟೊಡನೆ ಬಿಚ್ಚಿಕೊಂಡ ಆ ಪೊಟ್ಟಣದಲ್ಲಿ ಕೆಲವು ಬೆಳ್ಳೇಡಿ, ಸೋಸಲು, ತೊಳ್ಳೆಮೀನುಗಳಿದ್ದು, ಒಂದು ತೊಳ್ಳೆಮೀನಿಗೆ ಇನ್ನೂ ಜೀವವಿದ್ದುದರಿಂದ ಚಿಮ್ಮಿಹಾರಿ ಒಲೆಯ ಬೂದಿಗೆ ಬಿದ್ದಿತು. ಪೀಂಚಲು ಅದನ್ನೆತ್ತಿ ನೆಲಕ್ಕೆ ಬಡಿದು ನಿಶ್ಚಲವಾದ ಅದನ್ನು ಮತ್ತೆ ಎತ್ತಿ ಕೊಟ್ಟೆಯ ಎಲೆಗೇ ಹಾಕಿದಳು.
ಒಂದು ಅರುವೆಯಿಂದ ಕೈಕಾಲು ಮುಖದ ಒದ್ದೆಯನ್ನೆಲ್ಲ ಒರಸಿಕೊಂಡು, ತುಸು ಹೆಚ್ಚು ಕತ್ತಲೆ ಕವಿದಿದ್ದ ಮೂಲೆಯಲ್ಲಿ ಬಾಗಿಲಕಡೆಗೆ ಬೆನ್ನಾಗಿ ನಿಂತು ಒದ್ದೆಯಾಗಿದ್ದ ಸೀರೆಯನ್ನು ಬಿಚ್ಚಿ ಹರಡಿದಳು. ಯಾರೂ ಇರದಿದ್ದರೂ ಯಾರೂ ನೋಡುವ ಸಂಭವವೂ ಇರದಿದ್ದರೂ ಅವಳು ತನ್ನ ನಗ್ನತೆಗೆ ತಾನೇ ನಾಚಿಯೂ ಅದನ್ನು ಸವಿಯದಿರಲಾಗಲಿಲ್ಲ. ಅದರಲ್ಲಿಯೂ ತುಸುವೆ ಉಬ್ಬಿದಂತಿದ್ದ ತನ್ನ ಬದ್ದೆಯ ಭಾಗವನ್ನು ನೋಡಿಕೊಂಡು ಮುಗುಳುನಗುತ್ತಾ ಏನನ್ನೋ ಸವಿಯುವಂತೆ ಕ್ಷಣಕಾಲ ನಿಂತಳು. ಅಲ್ಲಿಯೆ ಅಲ್ಲವೆ ಇನ್ನೊಂದು ಆರು ತಿಂಗಳಲ್ಲಿಯೆ ತನಗೆ ಕಂದಮ್ಮನಾಗಿ ಬರುವ ಒಂದು ಜೀವ ಬೆಳೆಯುತ್ತಿರುವುದು? ಆದರೆ ಚಳಿಯನ್ನನುಭವಿಸಿದ ಮೈ ಅವಳನ್ನು ಎಚ್ಚರಿಸಿದುದರಿಂದ ಬೇಗಬೇಗನೆ ಮತ್ತೊಂದು ಒಣಗಿದ ಉತ್ತಮತರದ ಸೀರೆಯನ್ನು ಸುತ್ತಿಕೊಂಡು, ಮುಂದಿನ ಅಡುಗೆಯ ಕೆಲಸಕ್ಕೆ ತೊಡಗಿದಳು. ಗಂಡ ದುಡಿದು ದಣಿದು ಮಳೆಯಲ್ಲಿ ಒದ್ದೆಯಾಗಿ ಬರುವ ಹೊತ್ತಿಗೆ ಏನನ್ನಾದರೂ ಬಿಸಿಬಿಸಿ ಮಾಡಿರದಿದ್ದರೆ? ಐತ ತುಂಬ ಒಲವಿನ ಸ್ವಭಾವದವನಾಗಿದ್ದರೂ ದಣಿದು ಹಸಿದಾಗ, ಹಟಮಾಡುವ ಮಕ್ಕಳ ಹಾಗೆ, ರೇಗಾಡುತ್ತಿದ್ದುದು ಉಂಟು! ಜೊತೆಗೆ ಈಗೀಗ ಪೀಂಚಲುವಿನ ಸತೀತ್ವ ಪರಿಪಕ್ವವಾಗುತ್ತಾ ಮಾತೃತ್ವಕ್ಕೆ ತಿರುಗುತ್ತಿದ್ದುದು, ಅದರ ಅಕ್ಕರೆಯ ವಲಯಕ್ಕೆ ತನ್ನ ಗಂಡನನ್ನೂ ಸೆಳೆದುಕೊಳ್ಳುವ ಮೃದುಲ ಸಾಹಸದಲ್ಲಿ ಸಂತೋಷಿಸುತಿತ್ತು!
ಒಲೆಯಲ್ಲಿ ಬೂದಿಮುಚ್ಚಿಕೊಂಡಿದ್ದ ಒಂದು ಸಣ್ಣ ಕೊಳ್ಳಿಯನ್ನೂದಿ, ಜಿಗ್ಗು ಕಚ್ಚಿ, ಬೆಂಕಿಮಾಡಿದಳು. ಅದರಿಂದಲೆ ಒಂದು ಉರಿಯುವ ಕಡ್ಡಿಯಿಂದ ಹಣತೆಯ ಸೊಡರು ಹೊತ್ತಿಸಿಬಿಟ್ಟಳು. ಆಗತಾನೆ ಹಳ್ಳಿಗಳ ಕಡೆಗೂ ಬರತೊಡಗಿ ಅತಿಅತಿ ಅಪೂರ್ವ ವಸ್ತುವಾಗಿದ್ದ ಒಂದು ಬೆಂಕಿಪೊಟ್ಟಣವನ್ನು ಐತ ಹೇಗೋ ಸಂಪಾದಿಸಿ ಅವಳಿಗೆ ತಂದುಕೊಟ್ಟಿದ್ದನಾದರೂ ಪೀಂಚಲು ಅದನ್ನು ಅಮೂಲ್ಯವಸ್ತುವನ್ನು ರಕ್ಷಿಸುವಂತೆ ಕಾಪಾಡಿಟ್ಟುಕೊಂಡಿದ್ದಳು. ಕಷ್ಟಕಾಲದಲ್ಲಿ ಅನಿವಾರ್ಯವಾದಾಗ ಮಾತ್ರ ಅದರ ಉಪಯೋಗವೆಂಬುದು ಅವಳ ದೃಢನಿಶ್ಚಯವಾಗಿತ್ತು: ತನಗೆ ಮಗು ಜನಿಸಿದ ಮೇಲೆ ವೇಳೆಯಲ್ಲದ ವೇಳೆಯಲ್ಲಿ ದೀಪ ಹೊತ್ತಿಸಬೇಕಾಗಿಬರಬಹುದು; ಬೆಂಕಿಮಾಡಿ ಏನನ್ನಾದರೂ ತಯಾರಿಸಬೇಕಾಗಿ ಬರಬಹುದು! ಅದಕ್ಕಾಗಿ ದಿನವೂ ಒಲೆಯಲ್ಲಿ ಒಂದು ಗಟ್ಟಿಕೊಳ್ಳಿ ಜೀವಂತವಾಗಿರುವಂತೆ ಮಾಡಿಟ್ಟು, ಸಾಯಂಕಾಲ ಅದನ್ನು ಊದಿಯೆ ಬೆಂಕಿ ಹೊತ್ತಿಸುತ್ತಿದ್ದಳು. ಒಂದು ವೇಳೆ ಅದು ಆರಿಯೆ ಹೋಗಿದ್ದರೆ ನೆರೆಯ ಬಿಡಾರಗಳಿಗೆ ಹೋಗಿ ಬೆಂಕಿ ತರುತ್ತಿದ್ದಳು. ಅಂತೂ ತನ್ನಲ್ಲಿದ್ದ ಬೆಂಕಿಪೊಟ್ಟಣದಲ್ಲಿ ಕಡ್ಡಿ ಒಂದೊ ಎರಡಕ್ಕಿಂತ ಹೆಚ್ಚಾಗಿ ಖರ್ಚಾಗದಂತೆ ಭದ್ರವಾಗಿಟ್ಟಿದ್ದಳು, ಒಲೆಯ ಸಮೀಪದಲ್ಲಿ ಥಂಡಿ ತಗುಲದಂತೆ.
ಏಡಿ ಮೀನುಗಳನ್ನು ಕೆಂಡದಲ್ಲಿ ಸುಟ್ಟು, ಚಟ್ನಿಗೆ ನುರಿದಿಟ್ಟು, ಸಣ್ಣ ಗಡಿಗೆಯಲ್ಲಿಟ್ಟಿದ್ದ ಅದಕ್ಕೆ ಸೇರಿಸುವ ಒಣಮೆಣಸಿನಕಾಯಿ ನೀರುಳ್ಳಿ ಕೊಬ್ಬರಿಯ ಚೂರು ಇತ್ಯಾದಿ ಮಸಾಲೆ ಸಾಮಗ್ರಿಗಳನ್ನು ಹುಡುಕತೊಡಗಿದಾಗ ಅವಳು ಹೌಹಾರಿ, ಸಣ್ಣಗೆ ಕೂಗಿಕೊಂಡು, ತಟಕ್ಕನೆ ಎದ್ದು ಹಿಂದಕ್ಕೆ ಚಿಮ್ಮಿ ನಿಂತಳು: ಐದಾರೇಳು ಕುಂಬ್ರಿ ಹುಳುಗಳೂ ಕೊಡ್ಲಿ ಹುಳುಗಳೂ ಗಡಿಗೆಯಿಂದ ನೆಗೆದು ನೆಲದ ಮೇಲೆಯೂ ಅವಳ ಮೈಮೇಲೆಯೂ ಹರಿದಾಡತೊಡಗಿದವು! ಒಂದನ್ನು ಕಾಲಿನಿಂದಲೆ ನೆಲಕ್ಕೆ ತಿಕ್ಕಿದಳು. ಆದರೆ ಸೆರಗಿನೊಳಗೆ ಹೊಕ್ಕ ಒಂದನ್ನು ಅಲ್ಲಿಂದ ಹೊರಡಿಸುವ ಪ್ರಯತ್ನದಲ್ಲಿ ಸದ್ಯಪ್ರಪುಲ್ಲವಾಗಿದ್ದ ಕೋಮಲ ಕುಚದ್ವಯಗಳನ್ನೂ ಪೀಡಿಸಬೇಕಾಗಿ ಬಂತು. ಅದರಲ್ಲಿ ಒಂದು ಹುಳು ಹಾರಿಹೋಗಿ ಗೊರಬಿನ ಮೇಲೆ ಕೂತಿತು. ಪೀಂಚಲು ಓಡಿಹೋಗಿ ಮೂಲೆಯಲ್ಲಿದ್ದ ಹಿಡಿಯನ್ನು ತೆಗೆದುಕೊಂಡು ಬಂದು ಬಡಿದಳು. ಅದು ಅರ್ಧಪ್ರಾಣವಾಗಿ ಬಿದ್ದು ತೆವಳಿಕೊಂಡು ಕೋಳಿಗಳನ್ನು ಕವುಚಿಹಾಕಿದ್ದ ಬುಟ್ಟಿಯೊಳಗೇ ನುಗ್ಗಿತು. ಕೋಳಿಗಳೇ ಅದರ ಮುಂದಿನ ಕ್ಷೇಮಸಮಾಚಾರ ತೆಗೆದುಕೊಳ್ಳುತ್ತವೆ ಎಂಬ ವಿಶ್ವಾಸದಿಂದ ಪೀಂಚಲು ನೆಲದ ಕಡೆ ತಿರುಗಿ ಅಲ್ಲಿ ಇಲ್ಲಿ ಮರೆಯಾಗಲು ಪ್ರಯತ್ನಿಸುತ್ತಿದ್ದ ಎರಡು ಮೂರನ್ನು ಹಿಡಿಯಿಂದ ಹೊಡೆದು ಕೊಂದಳು. ಉಳಿದವು ತಪ್ಪಿಸಿಕೊಂಡೆಬಿಟ್ಟುವು. ಎಳೆಬಸಿರಿ ಏದುತ್ತಾ ನಿಂತು, ತನಗೆ ತಿಳಿದಿದ್ದ ಕೆಲವೇ ಅತ್ಯಂತ ಅಸಹ್ಯವಾದ ಅಶ್ಲೀಲ ಪದಪ್ರಯೋಗದಿಂದ ಅವುಗಳನ್ನು ಶಪಿಸಿದಳು.
ಹೊರಗಡೆ ಬೃಹತ್ ಪ್ರಪಂಚ ಜೀವನದ ಮಹದ್ ವ್ಯಾಪಾರಗಳೂ ಇಷ್ಟೇ ಆಸ್ಥೆಯಿಂದ ಸಾಗಿದ್ದುವು; ಮಲೆನಾಡಿನ ಮಳೆಗಾಲದ ಜಡಿಮಳೆ ಸುರಿಯುತ್ತಿತ್ತು; ಕಾರ್ಗತ್ತಲೆ ದಟ್ಟೈಸಿತ್ತು.
ಅಡುಗೆಯನ್ನಲ್ಲ ಮುಗಿಸಿ ಪೀಂಚಲು ಕಾದಳು, ಗಂಡನಿಗಾಗಿ. ಅವನು ಇವೊತ್ತು ಬರುವುದು ಹೊತ್ತಾಗಬಹುದೆಂದು ಅವಳು ಊಹಿಸಿಯೇ ಇದ್ದಳು. ಆದರೆ ಈ ಮಳೆಯಲ್ಲಿ ಈ ಕಗ್ಗತ್ತಲೆಯಲ್ಲಿ ಐತನೂ ಮುಕುಂದಯ್ಯಗೌಡರೂ ಆ ಗುತ್ತಿಯನ್ನು ಕಟ್ಟಿಕೊಂಡು ಹುಲಿಕಲ್ಲು ನೆತ್ತಿಯ ಆಚೆಯ ಕಡೆಗಿದ್ದ ಕಲ್ಲುಮಂಟಪವಿದ್ದ ಕಂಟಕಮಯ ಪ್ರದೇಶದಲ್ಲಿ ಏನು ಮಾಡುತ್ತಿರಬಹುದು ಎಂದು ಊಹಿಸಲೂ ಸಾಧ್ಯವಿರಲಿಲ್ಲ ಅವಳಿಗೆ.
ಗಂಡನು ಬಂದ ಮೇಲೆಯೆ ಅವನೊಡನೆ ತಾನು ಉಣ್ಣುವುದು ಎಂದು ಮನಸ್ಸು ಮಾಡಿದ್ದಳು ಪೀಂಚಲು. ಆದರೆ ಗದ್ದೆಯಲ್ಲಿ ಪಾದಮುಚ್ಚುವಷ್ಟರ ನೀರಿನಲ್ಲಿ ನಿಂತು ದುಡಿದಿದ್ದ ಅವಳಿಗೆ ಹಸಿವು ಜೋರಾಗಿತ್ತು. ಹಸಿವಿನ ತೀಕ್ಷ್ಣತೆಯನ್ನು ಸ್ವಲ್ಪ ಕಡಿಮೆ ಮಾಡುವ ಉದ್ದೇಶದಿಂದ ಇನಿತೆ ಉಣ್ಣುವೆನೆಂದು ಕುಳಿತಳು. ಊಟಕ್ಕೆ ಕುಳಿತು, ಒಂದೆರಡು ತುತ್ತು ಏಡಿಮೀನಿನ ಚಟ್ನಿಯೊಡನೆ ಗಂಟಲಿಂದ ಹೊಟ್ಟೆಗಿಳಿದಮೇಲೆ, ನಾಲಗೆಯ ಹತೋಟಿ ಅವಳ ಕೈ ಮೀರಿತ್ತು. ಮತ್ತೆ ಮತ್ತೆ ಉಣ್ಣುವುದೇಕೆ ಎಂದು ಚೆನ್ನಾಗಿಯೆ ತನ್ನ ಊಟವನ್ನು ಪೂರೈಸಿದ್ದಳು. ಹಾಗೆಯೆ ಚಾಪೆಯ ಮೇಲೆ ಒರಗಿದ್ದಳು. ಅರೆ ನಿದ್ದೆಯ ಜೊಂಪು ಹತ್ತಿತ್ತು….
ಯಾರೊ ಬಾಗಿಲು ದೂಕುವ ಸದ್ದಾಗಿ ಪೀಂಚಲು ಚಾಪೆಯ ಮೇಲೆ ಎದ್ದುಕುಳಿತಳು. ತನ್ನ ಗಂಡನೆ ಎಂಬ ನಿಶ್ಚಯದಿಂದ ಎದ್ದು, ಹಗ್ಗ ಬಿಚ್ಚಿ, ತಟ್ಟಿಬಾಗಿಲನ್ನು ತುಸುವೆ ಓರೆಮಾಡಿದಳು: ಪೀಂಚಲು ಬೆಚ್ಚಿಬಿದ್ದಳು; ಮೈಯೆಲ್ಲ ಬಿಸಿಯೇರಿ ಕಂಪಿಸಿತು; ಒಂದು ಹೆಜ್ಜೆ ಹಿಂಜರಿದರೂ ಬಾಗಿಲನ್ನು ಮತ್ತೆ ಭದ್ರವಾಗಿ ನೂಕಿ ಹಿಡಿದುಕೊಂಡಳು. ಅವಳ ಕಣ್ಣಿಗೆ ಬಿದ್ದ ರೂಪು ಐತನದಾಗಿರಲಿಲ್ಲ. ಸ್ತ್ರೀಯಾಕೃತಿಯೊಂದು ಮಳೆಯಲ್ಲಿ ತೊಯ್ದು ಒದ್ದೆ ಮುದ್ದೆಯಾಗಿ ನಿಂತಿದ್ದುದು ಒಳಗಿನ ಹಣತೆಯ ಸುಮಂದಕಾಂತಿಯಲ್ಲಿ ಅಸ್ಪಷ್ಟವಾಗಿ ವಿಕಾರವಾಗಿ ಗೋಚರಿಸಿತ್ತು.
ಅಳುತ್ತಿದ್ದುದೂ, ತನ್ನ ಹೆಸರನ್ನು ಮೆಲ್ಲಗೆ ಉಚ್ಚರಿಸಿ ಕರೆದು, ತಾನು ಯಾರೆಂಬುದನ್ನು ಹೇಳಿದುದೂ ಕೇಳಿಸಿ, ಅಚ್ಚರಿಗೊಂಡ ಪೀಂಚಲುಗೆ ಯಾವುದೂ ಅರ್ಥವಾಗದಿದ್ದರೂ ಬೆಟ್ಟಳ್ಳಿಯ ಹೊಲೆಯರ ಹುಡುಗಿ ತಿಮ್ಮಿಗೆ ತನ್ನ ಆಶ್ರಯದ ರಕ್ಷೆ ಬೇಕಾಗಿದೆ ಎಂಬುದನ್ನು ತಟಕ್ಕನೆ ಅರಿತಳು: ಅವಳು ಗುತ್ತಿಯ ಹೆಂಡತಿ ಅಲ್ಲವೆ?
“ಪೀಂಚಲವ್ವಾ, ನಾನು ಬೆಟ್ಟಳ್ಳಿ ತಿಮ್ಮಿ!” ಎಂದಿತು ಆ ಧ್ವನಿ.
ಬಾಗಿಲು ತೆರೆದು, ತಲೆಯಿಂದ ಕಾಲಿನವರೆಗೂ ಒದ್ದೆಯಾಗಿ ಸೀರೆಯಿಂದ ನೀರು ಸೋರುತ್ತಿದ್ದ ಹೊಲೆಯರ ಹುಡುಗಿಯನ್ನು ಒಳಕ್ಕೆ ಬಿಟ್ಟು, ಮತ್ತೆ ಬಾಗಿಲು ಮುಚ್ಚಿ ಹಗ್ಗ ಬಿಗಿದಳು.
ಬೇರೆಯ ಸಮಯ ಅಥವಾ ಸನ್ನಿವೇಶವಾಗಿದ್ದರೆ ಎಷ್ಟೊಂದು ಮೀನಮೇಷ ನಡೆಯುತ್ತಿತ್ತೋ ಮನಸ್ಸಿನಲ್ಲಿ? ಆದರೆ ಆಗ ಹೊಲೆಯರವಳನ್ನು ಒಳಗೆ ಸೇರಿಸಬಹುದೆ ಬೇಡವೆ ಎಂಬ ಪ್ರಶ್ನೆಗೆ ಅವಳ ಪ್ರಜ್ಞೆಯಲ್ಲಿ ಅವಕಾಶವೆ ಇರಲಿಲ್ಲ.
ತಿಮ್ಮಿಯ ಸೀರೆಯಿಂದ ಧಾರಾಕಾರವಾಗಿ ಸೋರುತ್ತಿದ್ದ ನೀರನ್ನು ನೋಡಿ ಪೀಂಚಲು ಅವಳನ್ನು ಬಿಡಾರದ ಒಂದು ಮೂಲೆಯಲ್ಲಿ ವಿಶೇಷ ಸಂದರ್ಭಗಳಲ್ಲಿ ಕಾಲುತೊಳೆದುಕೊಳ್ಳಲೆಂದು ಹಾಕಿದ್ದ ಸಣ್ಣ ಚಪ್ಪಡಿ ಕಲ್ಲಿಗೆ ಕರೆದೊಯ್ದು ಸೀರೆಯನ್ನು ಹಿಂಡಿಕೊಳ್ಳಲು ಹೇಳಿದಳು. ತಲೆ ಒರೆಸಿಕೊಳ್ಳಲು ಒಂದು ಅರುವೆ ಕೊಟ್ಟಳು….
ಆದರೆ ತಿಮ್ಮಿಗೆ ಆ ಉಪಚಾರಗಳೊಂದೂ ಬೇಡವಾಗಿತ್ತು. ಅವಳ ಕಣ್ಣು ಮುಖಗಳಲ್ಲಿದ್ದ ಬೆದರಿದ ಪ್ರಾಣಿಯ ಗಾಬರಿ ಹಣತೆಸೊಡರಿನ ಮಂದಕಾಂತಿ ಯಲ್ಲಿಯೂ ಗೋಚರವಾಗಿತ್ತು. “ನನ್ನ ಬ್ಯಾಗ ಅಡಗಿಸಿಡಿ! ಅಟ್ಟಿಕೊಂಡು ಬರ್ತಿದಾರೆ! ಹುಡುಕ್ತಿದಾರೆ! ಸಿಕ್ಕರೆ ಕೊಂದೇಹಾಕ್ತಾರೆ! ನಿಮ್ಮ ದಮ್ಮಯ್ಯ!….” ಎಂದು ಪಿಸುಮಾತಿನಲ್ಲಿ ಅಳುತ್ತಲೆ ಗಳಪುತ್ತಿದ್ದಳು.
ಏಕೆ? ಏನು? ಎಂತು? ಯಾವುದನ್ನೂ ಕೇಳುವ ಗೋಜಿಗೆ ಹೋಗದೆ, ಯಾವುದೋ ಸನ್ನಿಹಿತವಾದ ಅಪಾಯವಿರಬೇಕು ಎಂದರಿತು, ಪೀಂಚಲು ಗೂಟಕ್ಕೆ ಸಿಕ್ಕಿ ಹಾಕಿದ್ದ ಗೊರಬನ್ನು ತಂದು ಮೂಲೆಗೆ ಆನಿಸಿಟ್ಟು, ತಾನು ಬೆಚ್ಚಿ ಹರಡಿದ್ದ ತನ್ನ ಗದ್ದೆ ಕೆಲಸದ ಒದ್ದೆ ಸೀರೆಯನ್ನೆ ತೆರೆಮರೆಯಾಗುವಂತೆ ಮಾಡಿ, ತಿಮ್ಮಿಯನ್ನು ಸಂಪೂರ್ಣವಾಗಿ ಮುಚ್ಚಿಟ್ಟಳು….
ಐದೇ ನಿಮಿಷದ ಹಿಂದೆ ಪ್ರಶಾಂತವಾಗಿ, ಬೇಜಾರಿನ ಬೀಡೊ ಎನ್ನುವಷ್ಟರ ಮಟ್ಟಿಗೆ ತಾಟಸ್ಥ್ಯದಿಂದಿದ್ದ ಐತನ ಬಿಡಾರ ಈಗ ಅಪಾಯ ಬಹಳ ಭಯಂಕರ ಗರ್ಭಿತವಾಗಿ ತೋರತೊಡಗಿತ್ತು ಪೀಂಚಲುಗೆ. ಮುಂದೇನಾಗುತ್ತದೆಯೊ? ಏನು ಕಾದಿದೆಯೊ? ಏನಾದರೆ ಏನು ಮಾಡಬೇಕೊ? ತಾನೊಬ್ಬಳೆ ಇದ್ದೇನಲ್ಲಾ? ಗಂಡನೂ ಇದ್ದಿದ್ದರೆ! ಅನೇಕ ಭಯ ಭೀತಿ ಭಾವಗಳ ಸಂಚಾರಕ್ಕೆ ವೇದಿಕೆಯಾದ ಪೀಂಚಲುವಿನ ಹೃದಯ ಡವಡವಗುಟ್ಟತೊಡಗಿತು. ಚಳಿಗೆ ಬದಲಾಗಿ ಸೆಕೆಯಾಗತೊಡಗಿತು. ಸೆರಗಿನಿಂದ ಬೆವರನ್ನೂ ಒರೆಸಿಕೊಂಡಳು.
ಇದ್ದಕ್ಕಿದ್ದಹಾಗೆ ನಾಲ್ಕಾರು ಜನ ತನ್ನ ಬಿಡಾರದ ಬಳಿಯೆ ಓಡಿದ ಹಾಗೆ ತೋರಿತು. ಒಂದು ಬೆಳಕೂ, ತಡಿಕೆಯ ಸಂಧಿಗಳಲ್ಲಿ, ಚಲಿಸುತ್ತಿದ್ದುದು ಕಾಣಿಸಿತು. ಉಸಿರುಕಟ್ಟಿ ಕಾದು ಕುಳಿತಳು ಚಾಪೆಯ ಮೇಲೆ, ಏನೋ ಕೆಲಸದಲ್ಲಿ ತೊಡಗಿರುವಂತೆ ನಟಿಸುತ್ತಾ: ಹತ್ತಿರವಿದ್ದ ಒಂದು ಮೊರವನ್ನು ಬಳಿಗೆಳೆದುಕೊಂಡು ಅದರಲ್ಲಿದ್ದ ಅಕ್ಕಿಯಲ್ಲಿ ಕೈಯಾಡಿಸತೊಡಗಿದ್ದಳು….
ಪಕ್ಕದ ಬಿಡಾರದಲ್ಲಿ ಏನೊ ಮಾತುಕತೆ ಗಟ್ಟಿಯಾಗಿ, ನಡೆಯುತ್ತಿದ್ದುದು ಕೇಳಿಸಿತು! ’ಇಲ್ಲಿ ಯಾರೂ ಬರಲಿಲ್ಲವೊ!’.’ನಾನು ಕಾಣೆ’! ’ಏ ನಿಜ ಹೇಳೋ!’ ’ಸುಳ್ಳು ಹೇಳಲಿಕ್ಕೆ ನನಗೆ ಏನು ತೆವಲು?’ -ಇಂತಹ ಪ್ರಶ್ನೆ ಉತ್ತರಗಳ ಬಳಿಕ ಎಲ್ಲ ನಿಃಶಬ್ದವಾಯಿತು. ಮಳೆಯೂ ನಿಂತಿದ್ದಂತೆ ತೋರಿತು.
ಪೀಂಚಲು, ಹುಡುಕಿಕೊಂಡು ಬಂದವರು ಹೋದರೆಂದು ಧೈರ್ಯ ತಾಳಿ, ಗೊರಬಿನ ಕಡೆ ನೋಡಿದಳು. ಅದು ನಿಶ್ಚಲವಾಗಿ ಮುಗ್ಧವಾಗಿತ್ತು: ಅದರ ಹಿಂದೆ ಅದೆಂತಹ ಸುಮಹದ್ ದುರಂತವಾಗಬಹುದಾದ ಘಟನಾ ಪರಂಪರೆಯ ಪಿಂಡಿಯೆ ಅಡಗಿ ಕುಳಿತಿತ್ತು?
ಮತ್ತೆ?…. ಅದೇನು?…. ಪೀಂಚಲು ಕಿವಿಗೊಟ್ಟೂ ಆಲಿಸಿದಳು:
ಹಿಂದೆ ಕಾಣಿಸಿಕೊಂಡಿದ್ದ ಬೆಳಕೂ ಕೇಳಿಸಿದ್ದ ಜನರ ಓಡಾಟದ ಸದ್ದೂ ಪುನಃ ಬಳಿಸಾರುವಂತೆ ತೋರಿತು. ಐತನ ಹೆಂಡತಿಯ ಹೃದಯ ಹೊಡೆದುಕೊಳ್ಳತೊಡಗಿತು.
ಯಾರೋ ಬಿಡಾರದ ತಡಿಕೆಯ ಬಾಗಿಲನ್ನು ಅಳ್ಳಾಡಿಸಿದಂತಾಯ್ತು.
ಆ ಮುಹೂರ್ತದಲ್ಲಿ ಪೀಂಚಲು ಹೇಗೆ ವರ್ತಿಸುತ್ತಾಳೆ ಎಂಬುದರ ಮೇಲೆ ತೂಗುತ್ತಿತ್ತು ಹಲವು ಜೀವಗಳ ಗತಿ ಮತ್ತು ವಿಧಿ! ಅವಳ ಧ್ವನಿ ಧೈರ್ಯಗೆಟ್ಟಿದ್ದರೆ, ನಡುಗಿದ್ದರೆ, ತಡವರಿಸಿದ್ದರೆ, ಮುಂದಣ ಘಟನಾಪರಂಪರೆಯ ದಿಕ್ಕೇ ಬದಲಾಯಿಸುತ್ತಿತ್ತು!
ಆದರೆ ಐತನ ಸತಿ ಧೈರ್ಯಗೆಡಲಿಲ್ಲ; ಅವಳ ದನಿ ನಡುಗಲಿಲ್ಲ; ಅವಳು ತಡವರಿಸಲಿಲ್ಲ. ಗುತ್ತಿ ಅಂದು ಪರ್ವತಶಿಖರದ ಅರಣ್ಯ ಮಧ್ಯೆ ಹುಲಿಯನನ್ನು ತಬ್ಬಿಕೊಂಡು ಅಳುತ್ತಾ ಭಗವಂತನಿಗೆ ಸಲ್ಲಿಸಿದ್ದ ಪ್ರಾರ್ಥನೆ ಐತನ ಹೆಂಡತಿಯ ಹೃದಯದಲ್ಲಿ ಇಂದು ಅವ್ಯರ್ಥ ಆಶೀರ್ವಾದವಾಗಿತ್ತೆಂದು ತೋರುತ್ತದೆ:
ದಿಟ್ಟದನಿಯಿಂದ “ಯಾರದು?” ಎಂದಳು.
“ಐತಣ್ಣ ಅದಾನೇನು?” ಎಂದಿತು ಒಂದು ಕರ್ಕಶಕಂಠ.
“ಮನೆಗೆ ಹೋಗಿದಾರೆ. ಈಗ ಬರಬೌದು.”
ಮತ್ತೊಂದು ದುರ್ಬಲ ಮುದಿದನಿ ಕೇಳಿತು: “ಇಲ್ಲಿ ಯಾರಾದ್ರೂ ಬಂದಿದ್ರೇನು, ಕಪ್ಪಾದ ಮ್ಯಾಲೆ?”
“ಯಾರ್ನೂ ನಾ ಕಾಣೆ!” ಎಂದು ತುಸು ರಾಗವೆಳೆದು ಮುಚ್ಚು ಮರೆಯ ಸಂದೇಹಕ್ಕೆ ಒಂದಿನಿತೂ ಅವಕಾಶವೀಯದ ಪ್ರಶಾಂತಮುಗ್ಧವಾಣಿ ಯಿಂದ ಉತ್ತರಿಸಿದಳು ಪೀಂಚಲು.
“ಕಮ್ಮಾರಸಾಲೆ ಹತ್ತಿರಾನೆ ಎಲ್ಲೋ ಅಡಗಿಕೊಂಡಳು ಅಂತಾ ಕಾಣ್ತದೆಯೋ. ಲೌಡಿ ಎಲ್ಲಿಗೆ ಸಾಯ್ತಾಳೆ ನೋಡಾನ ಬನ್ನಿ” ಎಂದಿತು ಒಂದು ಸಿಟ್ಟಿಗೆದ್ದ ಗಡಸು ದನಿ.
“ಸಿಕ್ಕಲಿ ಅವಳು, ಈ ಸಾರಿ. ಒಂದು ಕಾಲು ಕಡಿದೇ ಹಾಕ್ತೀನಿ, ಮನೇಬಿಟ್ಟು ಹೋಗದೆ ಇದ್ದ್ಹಾಂಗೆ” ಎಂದಿತು ಮತ್ತೆ ಆ ದುರ್ಬಲ ಮುದಿಧ್ವನಿ.
ಬೆಳಕು ದೂರ ದೂರ ಹೋಗಿ ಕಣ್ಮರೆಯಾಯಿತು; ಓಡಾಟದ ಸದ್ದು ನಿಂತು, ಮತ್ತೆ ಹನಿಹಾಕತೊಡಗಿದ್ದ ಮಳೆಯ ಮೊದಲ ಹೆಜ್ಜೆಯ ಪಟಪಟ ಸದ್ದೂ ಕೇಳಿಸತೊಡಗಿತು. ತುಂಬ ಕ್ಲಿಷ್ಟವಾದ, ಆದರೂ ಬಹು ಮುಖ್ಯವಾದ ತನ್ನ ಪಾತ್ರವನ್ನು ಪ್ರೇಕ್ಷಕರು ಮೆಚ್ಚುವಂತೆ ಅಭಿನಯಿಸಿ, ನೇಪಥ್ಯವನ್ನು ಹೊಕ್ಕಮೇಲೆಯೂ ಮುಂದುವರಿಯುತ್ತಿರುವ ಕೈಚಪ್ಪಾಳೆ ಮತ್ತು ಸಿಳ್ಳುಗಳ ಉತ್ಸಾಹ ಕೋಲಾಹಲವನ್ನು ಆಲಿಸುವ ನಟನಂತಾಗಿ ದೀರ್ಘವಾಗಿ ನಿಟ್ಟುಸಿರು ಬಿಟ್ಟು ಕುಳಿತಳು ಪೀಂಚಲು. ತಿಮ್ಮಿಯನ್ನಂತೂ ಹೊರಕ್ಕೆ ಕರೆಯುವ ಸಾಹಸಕ್ಕೆ ಹೋಗಲಿಲ್ಲ. ಅಪಾಯದಿಂದ ಇನ್ನೂ ಸಂಪೂರ್ಣವಾಗಿ ಪಾರಾದೆವೋ ಇಲ್ಲವೋ ಎಂಬ ಸಂಶಯದಿಂದ ಅವಳು ದೃಢಮನಸ್ಸು ಮಾಡಿದ್ದಳು, ತನ್ನ ಗಂಡ ಬರುವವರೆಗೂ ತಿಮ್ಮಿಯನ್ನು ಹೊರಕ್ಕೆ ಕರೆಯಬಾರದು ಎಂದು. ಕರೆದಿದ್ದರೂ ಆಗ ಹೊರಕ್ಕೆ ಬರುತ್ತಿರಲಿಲ್ಲ ತಿಮ್ಮಿ!
ಹಣತೆಯ ಎಣ್ಣೆ ಮುಗಿಯುತ್ತಾ ಬಂದಿತ್ತು. ಆದರೂ ಐತ ಬಂದಿರಲಿಲ್ಲ. ಗೊರಬಿನಾಚೆ ತಿಮ್ಮಿ ಒದ್ದೆಬಟ್ಟೆಯಲ್ಲಿ ನಡುಗುತ್ತಿದ್ದುದು ಗೊತ್ತಾಗಿ, ದೀಪವನ್ನಾರಿಸಿ ತಿಮ್ಮಿಯನ್ನು ಹೊರಕ್ಕೆ ಕರೆದಳು. ಒಲೆಯ ಬೆಂಕಿಯನ್ನು ತುಸುವೆ ಹೊತ್ತಿಸಿದಳು. ಅದರ ಮಬ್ಬು ಬೆಳಕಿನಲ್ಲಿ, ಅವಳಿಗೆ ತನ್ನದೊಂದು ಜಡ್ಡುಸೀರೆಯನ್ನು ಕೊಟ್ಟು, ಬಟ್ಟೆ ಬದಲಾಯಿಸುವಂತೆ ಮಾಡಿದಳು. ಪೀಂಚಲುಗಿಂತಲೂ ಸುಪುಷ್ಟಳಾಗಿದ್ದ ತಿಮ್ಮಿ ಗಟ್ಟದ ಮೇಲಿನವರು ಉಡುವಂತೆ ಆ ಸೀರೆಯನ್ನು ಗೊಬ್ಬೆ ಸೆರಗುಹಾಕಿ ಉಡತೊಡಗಲು ಅದು ಸಾಕಾಗದಿದ್ದುದನ್ನು ಕಂಡು ಗಟ್ಟದ ಕೆಳಗಿನವರು ಉಡುವಂತೆ ತಾನೆ ಅವಳಿಗೆ ಉಡಿಸಿದಳು. ಒಂದುವೇಳೆ ಯಾರಾದರೂ ಕಂಡರೂ ಅವಳನ್ನು ಗಟ್ಟದ ತಗ್ಗಿನ ಹುಡುಗಿ ಎಂದೇ ತಪ್ಪಾಗಿ ತಿಳಿದುಕೊಳ್ಳಲಿ ಎಂಬುದೂ ಅವಳ ಭಾವವಾಗಿತ್ತು. ಆಮೇಲೆ ಒಲೆಯ ಬಳಿ ಕತ್ತಲೆಯಲ್ಲಿಯೆ ಕುಳಿತು ಮೈಬಿಸಿ ಮಾಡಿಕೊಳ್ಳುವಂತೆ ಹೇಳಿದಳು: ಅದಾದಮೇಲೆ ಗೊರಬು ಮರೆಯಿಟ್ಟದ್ದ ಮೂಲೆಯಲ್ಲಿ ಚಾಪೆಯ ಮೇಲೆ ಮಲಗಿಕೊಳ್ಳುವಂತೆ ಹೇಳಿ, ಸ್ವಲ್ಪ ಬಲಾತ್ಕಾರವಾಗಿಯೆ ಮಲಗಿಸಿದಳು.
ತುಸುಹೊತ್ತು ಹೊರಗನಾಲಿಸುವುದು, ಯಾರೂ ಇಲ್ಲವೆಂದು ಧೈರ್ಯವಾದ ಮೇಲೆ ಮೆಲ್ಲಗೆ ಮಾತಾಡುವುದು, ಮತ್ತೆ ಮಾತು ನಿಲ್ಲಿಸಿ ಆಲಿಸುವುದು, ಮತ್ತೆ ಪಿಸಿಪಿಸಿ ಮಾತಾಡುವುದು, ಹೀಗೆ ಇಬ್ಬರೂ ಮುಂದುವರಿಸಿದರು: ತಿಮ್ಮಿ ಸಂಕ್ಷೇಪವಾಗಿ ತಾನು ಬಿಡಾರದಿಂದ ಓಡಿಬಂದ ವಿಚಾರವನ್ನೂ, ತನ್ನ ಮದುವೆ ಬಚ್ಚನೊಡನೆ ಆಗಬೇಕೆಂದಿದ್ದ ವಿಚಾರವನ್ನೂ, ತನ್ನ ಗಂಡ ಹಳೆಮನೆಯ ಹೊಲಗೇರಿಗೆ ಬಂದು ತನಗಾಗಿ ಹೊಂಚು ಹಾಕುತ್ತಿದ್ದಾನೆ ಎಂಬುದನ್ನು ತಾನು ಗುಟ್ಟಾಗಿ ಆಲಿಸಿದ ಸಂಗತಿಯನ್ನೂ, ಅವನನ್ನು ಹೇಗಾದರೂ ಮಾಡಿ ಹಿಡಿದು ಪೋಲೀಸರಿಗೆ ಒಪ್ಪಿಸಲು ಸಂಚು ನಡೆಯುತ್ತಿದ್ದುದನ್ನೂ, ಆ ಸಂಚಿಗೆ ಅವನು ಬೀಳುವುದಕ್ಕೆ ಮೊದಲೆ ತಾನು ಅವನನ್ನು ಸೇರಿದರೆ ಇಬ್ಬರಿಗೂ ಕೇಡು ತಪ್ಪುತ್ತದೆ ಎಂದು ತನಗೆ ತೋರಿ, ಗುಮಾನಿಯಾಗದಂತೆ ಜಡಿಮಳೆಯ ರಾತ್ರಿಯನ್ನೆ ಪರಾರಿಯಾಗಲು ಆರಿಸಿದುದನ್ನೂ, ಅಳುತ್ತಳುತ್ತಲೆ ತಿಳಿಸಿದಳು.
ಒಮ್ಮೆ ಇವರು ಮಾತು ನಿಲ್ಲಿಸಿ ಆಲಿಸಿದಾಗ ಯಾರೋ ಬಾಗಿಲಬಳಿ ಬಂದಂತಾಯಿತು. ತಿಮ್ಮಿ ಬೇಗಬೇಗನೆ ಸೆರಗು ಮುಸುಗು ಹಾಕಿಕೊಂಡು ಚಾಪೆಯ ಮೇಲೆ ಮೂಲೆಯ ಕಡೆ ಮೊಗ ಮಾಡಿ ಮಲಗಿಕೊಂಡಳು. ಐತ ಹೆಂಡತಿಯ ಹೆಸರು ಹಿಡಿದು ಕರೆದದ್ದು ಕೇಳಿಸಿತು. ಪೀಂಚಲು ಬಾಗಿಲು ತೆರೆದು ಅವನನ್ನು ಒಳಗೆ ಬಿಟ್ಟು ಬಾಗಿಲು ಮುಚ್ಚಿದಳು. ಒಲೆಯ ಕೆಂಡದ ಬೆಳಕು ಇದ್ದತಾದರೂ ಐತ ಒಳಗೆ ಬಂದವನೆ ಅತ್ತ ಇತ್ತ ಸಂಶಯದೃಷ್ಟಿ ಬೀರಿ “ಯಾರ ಹತ್ರಾನೆ ಪಿಸಿಪಿಸಿ ಮಾತಾಡ್ತಿದ್ದೆಯಲ್ಲಾ?” ಎಂದು ತನ್ನ ಕಂಬಳಿಕೊಪ್ಪೆಯನ್ನು ಮೂಲೆಗೆ ಕೊಡಹಿ ಗೂಟಕ್ಕೆ ಸಿಕ್ಕಿಸಿದನು.
“ಯಾರ ಹತ್ತಿರ ಮಾತಾಡುವುದು ಮತ್ತೆ? ಕಾದು ಕಾದು ಸಾಕಾಗಿಹೋಗಿತ್ತಲ್ದಾ? ನನ್ನಷ್ಟಕ್ಕೆ ನಾನೆ ಏನೊ ಹೇಳಿಕೊಳ್ಳುತ್ತಿದ್ದೆ.”
ಐತ ಹೆಂಡತಿಯ ಕಡೆಗೆ ಮುದ್ದಾಗಿ ನೋಡುತ್ತಾ “ನಿನ್ನ ಒಳಗಿರುವವನ ಕೂಡೆ ಮಾತಾಡುತ್ತಿದ್ದೆ ಅನ್ನು; ಸುಭದ್ರೆಯ ಗರ್ಭದಲ್ಲಿರುವ ಅಭಿಮನ್ಯು ಸಂಗಡ! ಐಗಳು ಪರ್ಸಂಗದಲ್ಲಿ ಹೇಳಿದ್ದರಲ್ಲಾ ಹಾಂಗೆ!” ಎನ್ನುತ್ತಾ ಪೀಂಚಲುವಿನ ಕಡೆಗೆ ಪ್ರಣಯಚೇಷ್ಟೆಯ ಉದ್ದೇಶದಿಂದ ಚಲಿಸತೊಡಗಲು ಅವಳು ಗಾಬರಿಯಾದಳು. ತಾವಿಬ್ಬರೇ ಅಲ್ಲಿರುವುದು ಎಂದು ನಂಬುಗೆಯಿಂದ ಐತ ಏನೆಲ್ಲ ನಾಚಿಕೆಗೇಡಿನ ಕೆಲಸಮಾಡಲು ಹಿಂಜರಿಯುವುದಿಲ್ಲ ಎಂಬುದನ್ನು ನೂರಾರು ಅನುಭವಗಳಿಂದ ಅರಿತಿದ್ದ ಪೀಂಚಲು, ತಟಕ್ಕನೆ ಸರಿದು ನಿಂತು, ಕಣ್ಣುಸನ್ನೆಯಿಂದಲೆ ತಿಮ್ಮಿ ಮುಸುಗು ಹಾಕಿಕೊಂಡು ಮಲಗಿದ್ದ ಕಡೆಗೆ ಕೈದೋರಿ ಎಚ್ಚರಿಸಿದಳು. ಬೆಚ್ಚಿ ನಿಂತ ಐತ ಒಲೆಯ ಕೆಂಡದ ಅರೆಗತ್ತಲೆಯ ಮಬ್ಬು ಬೆಳಕಿನಲ್ಲಿ ಚಾಪೆಯ ಮೇಲೆ ಮಲಗಿದ್ದ ಮನುಷ್ಯಕಾರವನ್ನೊಮ್ಮೆಯೂ ತನ್ನ ಹೆಂಡತಿಯ ಕಡೆಗೊಮ್ಮೆಯೂ ಸಂಶಯ ಮತ್ತು ಪ್ರಶ್ನದೃಷ್ಟಿ ಪ್ರಸಾರ ಮಾಡತೊಡಗಿದನು.
ಗಂಡಸಿನ ಅನುಮಾನ ಅಸೂಯೆಗಳ ಸ್ವಭಾವವನ್ನು ಚೆನ್ನಾಗಿ ತಿಳಿದಿದ್ದ ಪೀಂಚಲು ಅರ್ಧ ಮೂದಲೆಯ ಧ್ವನಿಭಂಗಿಯಿಂದ “ಹೆದರುವುದು ಬೇಡ: ಗಂಡಸಲ್ಲ!” ಎಂದು ತುಟಿ ಕೊಂಕಿಸಿ ನಗೆಬೀರಿದಳು.
ತಮ್ಮ ಭಾಷೆಯಲ್ಲಿ ಮಾತಾಡಿಕೊಂಡರೆ ಗಟ್ಟದ ಮೇಲಿನವರೆಗೆ ತಿಳಿಯುವುದಿಲ್ಲ ಎಂದು “ಮತ್ತೆ ಯಾರೆ ಅದು?” ತುಂಬ ಕೆಳದನಿಯಲ್ಲಿ ಕೇಳಿದನು ಐತ್, ತುಳುವಿನಲ್ಲಿ.
“ನನ್ನ ತಂಗಿ!” ಪರಿಹಾಸ್ಯವಾಡಿದಳು ಪೀಂಚಲು. ತುಳುವೂ ಪ್ರಯೋಜನವಿಲ್ಲದಾಯ್ತಲ್ಲ!
“ನಿನಗೆ ಎಂಥಾ ತಂಗಿಯೆ? ನನಗೆ ಗೊತ್ತಿಲ್ಲದವಳು?
“ನಿನಗೆ ಗೊತ್ತಿರುವವಳೆ! ಗಟ್ಟದ ಕೆಳಗಿನಿಂದ ಬಂದಿದ್ದಾಳೆ!”
“ಒಬ್ಬಳೆಯೊ? ಗಂಡಗಿಂಡ ಉಂಟೊ?”
“ಅದೆಲ್ಲ ಯಾಕೆ ನಿನಗೆ? ಗಂಡ ಇಲ್ಲದೆ ಒಬ್ಬಳೆ ಬಂದಿದ್ದರೆ ಮತ್ತೊಂದು ಕಟ್ಟಿಕೊಳ್ಳುವ ಆಸೆಯೋ? ನಾನು ಆಗಲೇ ಸಾಕಾಗಿಬಿಟ್ಟೆನೋ?”
“ನಿನ್ನೊಬ್ಬಳನ್ನೇ ತಣಿಸುವುದು ನನ್ನಿಂದ ಆಗದ ಕೆಲಸ ಆಗಿದೆ. ಇನ್ನು ಮತ್ತೊಬ್ಬಳನ್ನು ಕಟ್ಟಿಕೊಂಡು ಗುಂಡಿಗೆ ಹಾರಬೇಕು!”
ಅಷ್ಟರಲ್ಲಿ ಇದ್ದಕ್ಕಿದ್ದಂತೆ ಚಾಪೆಯಮೇಲೆ ಮೂಲೆಯಲ್ಲಿ ಮುದುಡಿಕೊಂಡಿದ್ದ ವ್ಯಕ್ತಿ ತಡೆಯಲಾರದೆ ಬಟ್ಟೆ ಹರಿದಂತೆ ಕಿಸಕ್ಕನೆ ನಕ್ಕುಬಿಟ್ಟಿತು: ಹಾಗೆಯೆ ತಟಕ್ಕನೆ ಎದ್ದು ಕುಳಿತು ಮೂಲೆಯ ಕಡೆಗೆ ಮುಖ ತಿರುಗಿಸಿ ಕೊಂಡಿತು, ಸೆರಗು ಮುಚ್ಚಿಕೊಂಡು. ಆಶ್ಚರ್ಯವಾಯಿತು ಪೀಂಚಲುವಿಗೆ, ಹೊಲೆಯರ ಹುಡುಗಿಗೂ ತುಳು ಅರ್ಥವಾಗುತ್ತೆ!
ಐತನಿಗೆ ಮುಖಭಂಗವಾದಂತಾಗಿ, ತನ್ನ ಕುತೂಹಲ ಪರಿಹಾರ ಮಾಡಿಕೊಳ್ಳುವ ಉದ್ದೇಶದಿಂದ, ಹೆಂಡತಿಗೆ ದೀಪ ಹೊತ್ತಿಸಲು ಅಪ್ಪಣೆ ಮಾಡಿದನು. ಆದರೆ ಆ ಹಣತೆಯ ಸೊಡರಿನಲ್ಲಿಯೂ ಐತನಿಗೆ ಯಾವ ಗುರುತು ಸಿಕ್ಕಲಿಲ್ಲ.
ತಾನು ನೆಂಟರೊಡನೆ ಊಟ ಪೂರೈಸಿದುದಾಗಿ ಹೇಳಿ ಪೀಂಚಲು ಐತನಿಗೆ ಉಣಬಡಿಸಿದಳು. ದಿನವೂ ಗಂಡಹೆಂಡಿರಿಬ್ಬರೂ ಒಟ್ಟಿಗೆ ಕುಳಿತು ಮಾತಿನ ಉಪ್ಪು ಹುಳಿ ಖಾರ ಸಹಿತವಾಗಿ ಉಣ್ಣುತ್ತಿದ್ದುದು ವಾಡಿಕೆ. ಇವೊತ್ತು ಐತ ಯಾವ ಮಾತನ್ನೂ ಆಡಲಾರದೆ ಉಂಡನು. ಅವನು ಹೆಂಡತಿಗೆ ಹೇಳುವ ವಿಷಯ ಬಹಳವಿತ್ತು; ಬಹಳ ಸ್ವಾರಸ್ಯದ್ದೂ ಆಗಿತ್ತು. ಆದರೆ ಅಪರಿಚಿತರಿದ್ದುದರಿಂದ ಆ ರಹಸ್ಯವನ್ನು ಹೊರಗೆಡಹಲಿಲ್ಲ. ಒಮ್ಮೆ ಪೀಂಚಲು ’ಯಾಕೆ ಇಷ್ಟು ಹೊತ್ತು ಮಾಡಿದಿರಿ?’ ಎಂದೇನೊ ಕೇಳಿದ್ದಳು. ಆಗ ಅವನು ಕಣ್ಣಿಂದಲೆ ’ಗುಟ್ಟಾಗಿರಬೇಕಾದುದನ್ನು ಇತರರೆದುರು ಕೇಳಬ್ಯಾಡ!’ ಎಂದು ಸೂಚಿಸಿದ್ದನು.
ಊಟ ಪೂರೈಸಿದ ತರುವಾಯ ಐತ ಕೈಬಾಯಿ ತೊಳೆಯಲೆಂದೂ, ಮತ್ತು ಉಣ್ಣಲು ಬಟ್ಟಲಿನಂತೆ ತಾನು ಉಪಯೋಗಿಸಿದ್ದ ಅಡಕೆಯ ಹಾಳೆಯನ್ನು ಮರುದಿನದ ಊಟಕ್ಕೆ ಬಳಸುವ ಸಲುವಾಗಿ ತೊಳೆದು ತಂದಿಡಲೆಂದು ಬಾಗಿಲಾಚೆಗೆ ಹೋದನು. ಮಳೆ ತುಸು ನಿಂತಿತ್ತು. ಕಗ್ಗತ್ತಲೆ ಮಸಿಯ ಗೋಡೆಯಂತೆ ಬದ್ಧಭ್ರುಕುಟಿಯಾಗಿತ್ತು.
ಗಂಡನ ಕೈಗೆ ನೀರು ಹಾಕಲೆಂದು ಪೀಂಚಲು ಒಂದು ನೀರು ತುಂಬಿದ ಮೊಗೆಯೊಡನೆ ಅವನನ್ನು ಹಿಂಬಾಲಿಸಿದಳು. ಆ ಸಮಯವನ್ನುಪಯೋಗಿಸಿಕೊಂಡು ಐತ ಪಿಸುಗುಟ್ಟಿದನು: ಗುತ್ತೀಗೆ ಇಲ್ಲಿಗೇ ಬಾ ಮಲಗಾಕ್ಕೆ ಅಂತಾ ಹೇಳಿಬಿಟ್ಟೀನಲ್ಲಾ? ನಿನ್ನ ತಂಗಿ ಬರ್ತಾಳೆ ಅಂಬೋದು ನನಗೆ ಗೊತ್ತಿರಲಿಲ್ಲ. ಈಗ ಏನು ಮಾಡುವುದು? ಅವನನ್ನು ಎಲ್ಲಿ ಮಲಗಿಸುವುದು? ನಾನೆಲ್ಲಿ ಮಲಗುವುದು? ನಿನ್ನ ತಂಗೀನ ಎಲ್ಲಿ ಮಲಗಿಸೋದು? ಒಳ್ಳೆ ಪೀಕಲಾಟಕ್ಕೆ ಬಂದಿತಲ್ಲಾ!”
“ಎಲ್ಲಿಗೆ ಹೋಗಿದಾನೆ ಆ ಗುತ್ತಿ?”
“ಮುಕುಂದಯ್ಯೋರ ಸಂಗಡ ಮನೀಗೆ ಹೋದ, ಅವರನ್ನು ಅಲ್ಲಿ ಬಿಟ್ಟು, ಅಲ್ಲೇ ತಂಗಳುಂಡು ಬರ್ತಾನಂತೆ. ನಾಳೆ ಹೊತಾರೆ ಮುಂಚೆ ನಾನೂ ಅವನೂ ಹುಲಿಕಲ್ಲು ನೆತ್ತಿಯ ಕಲ್ಲುಮಂಟಪಕ್ಕೆ ಹೋಗ್ತೀಂವಿ.”
“ಮತ್ತೆ ಈವೊತ್ತು ಅಲ್ಲೀಗೆ ಅಲ್ಲೇನು ನೀವು ಹೋಗಿದ್ದು?”
“ಹೋಗಿದ್ದು ಉಂಟು. ಆದರೆ ದಾರೀಲೆ ಹಳೆಮನೆ ಸಣ್ಣಹೆಗ್ಗಡೇರು ಸಿಕ್ಕಿದ್ರು. ಅವರು ಸಿಂಬಾವಿಗೆ ಹೋಗಿ ಬರ್ತಿದ್ರು. ಭರಮೈಹೆಗ್ಗಡೆರಿಗೆ ಈ ಸಂಬಂಧ ತಪ್ಪಿಸಾಕೆ ಏನೇನೋ ಹುನಾರು ಮಾಡ್ತಿದ್ದಾರೆ ಅವರೂ….! ಕಲ್ಲು ಮಂಟಪಕ್ಕೆ ನಮ್ಮ ಸಂಗಡಾನೆ ಬಂದು ಕೆಲಸಾನೂ ಮಾಡಿಕೊಟ್ರು ಅನ್ನು! ಅವರ ಕತೇನೆಲ್ಲ ಕೇಳೂದೆ ಸುಮಾರು ಹೊತ್ತು ಆಗಿಬಿಟ್ಟಿತ್ತಲ್ದಾ?….ಹೂವಳ್ಳಿ ಚಿನ್ನಕ್ಕನ ಆ ಕಲ್ಲುಮಂಟಪದಾಗೆ ಕದ್ದಡಗಿಸಿ ಇಡುವುದೆಂದು ಗೊತ್ತುಮಾಡಿದ್ದೇವೆ. ಒಂದು ಹದಿನೈದು ದಿನದ ಮಟ್ಟಿಗಾದರೂ ಅಲ್ಲಿ ಇರುವ ಏರ್ಪಾಡು ಮಾಡಬೇಕಾಗಿದೆ….”
“ಬೇರೆ ಜನಕ್ಕೆ ಗೊತ್ತಾದರೆ?”
“ಈ ದನಗೋಳು ಮಳೆಯಲ್ಲಿ?…. ಈ ಮಳೆಗಾಲದಲ್ಲಿ ಆ ಹುಳುವಿನ ಬಳಿ ಒಂದು ನರ ನುಸಿ ಸುಳಿಯಲಾರದು. ನಮಗೇ ಅಲ್ಲಿ ದಾರಿ ಕಾಣಬೇಕಾದರೆ ಸಾಕುಸಾಕಾಯಿತು. ಅದನ್ನು ತೋರಿಸಿಕೊಟ್ಟವನೂ ಆ ಗುತ್ತಿಯೆ! ಹಿಂದೆ ಅವನು ಆ ಬೆಟ್ಟಳ್ಳಿ ಹುಡುಗಿಯನ್ನು ಹಾರಿಸಿಕೊಂಡು ಹೋದಾಗ ಅಲ್ಲಿಯೆ ಒಂದು ರಾತ್ರೆ ಮಲಗಿದ್ದನಂತೆ! ಬಡ್ಡಿಮಗನಿಗೆ ಆವೊತ್ತೆ ಅವಳ ಕೂಡೆ…. ಹಿಹ್ಹಿಹ್ಹಿ….” ಐತ ಅರ್ಧದಲ್ಲಿಯೆ ಮಾತು ನಿಲ್ಲಿಸಿ ಹೆಂಡತಿಯ ಗಲ್ಲವನ್ನು ಅರ್ಥಪೂರ್ಣವಾಗಿ ತಿವಿದನು.
“ಇಸ್ಸಿ! ನಿನಗೆ ಯಾವಾಗಲೂ ಅದೇ!” ರೇಗು ನಟಿಸಿದಳು ಪೀಂಚಲು.
“ಈಗ ಅವನು ಇಲ್ಲಿಗೆ ಬರುವುದೂ ಅದಕ್ಕೆ ಅಲ್ವಾ?”
“ಯಾವುದಕ್ಕೇ? ಆವೊತ್ತು ಮಲಗಿದ ಹಾಂಗೇ ಈವೊತ್ತು ಅವಳ ಮಗ್ಗುಲಿಗೆ ಮಲಗುವುದಕ್ಕಾ?….”
“ಇಸ್ಸೀ! ನಿನಗೆ ಯಾವಾಗಲೂ ಅದೇ!” ಪ್ರತೀಕಾರದ ರೇಗು ನಟಿಸಿದ್ದನು ಐತ.
ಗಂಡನ ಮೂದಲೆಯನ್ನು ಗಮನಿಸದವಳಂತೆ ಮುಂದುವರಿಸಿದಳು ಪೀಂಚಲು: “ಅವನಿಗೆ ಯಾರು ಹೇಳಿದರು, ಅವಳು ಇಲ್ಲಿ ಇದ್ದಾಳೆ ಎಂದು? ಬೇಕಾದರೆ ಬೆಟ್ಟಳ್ಳಿಗೆ ಹೋಗಿ ಕರೆದುಕೊಂಡು ಬರಲಿ!….”
“ಸ್ವಲ್ಪ ತಡೆ, ಮಾರಾಯ್ತೀ…. ಅದನ್ನೆ ನಿನ್ನ ಹತ್ತಿರ ಹೇಳುವುದಕ್ಕೆ ಅವನು ಬರುತ್ತಾನೆ…. ನನ್ನ ಹತ್ತಿರ ಹೇಳಿದ. ನಾನು ಹೇಳಿದೆ ’ಗಂಡಸಿಂದ ಆಗದ ಕೆಲಸ ಅದು’ ಎಂದು…. ಅವನು ಅಲ್ಲಿಗೆ ಹೋದರೆ ಹಿಡಿದು ಪೋಲೀಸಿಗೆ ಕೊಡುತ್ತಾರಂತೆ. ಆವೊತ್ತು ನಿನಗೆ ಹೇಳಿದ್ದೆನಲ್ಲಾ ಅವನ ರಾಮಾಯಣ?….ಈಗ ನೀನು ಹೇಂಗಾದರೂ ಮಾಡಿ ಅವಳನ್ನು ಕೇರಿಯಿಂದ ತಪ್ಪಿಸಿ ತಂದುಕೊಡಬೇಕಂತೆ. ಅವಳನ್ನೂ ಕೂಡಿಕೊಂಡೇ ಅವನು ಪರಾರಿಯಾಗುತ್ತಾನಂತೆ, ಆರು ತಿಂಗಳೋ? ಒಂದು ವರ್ಷವೊ?…. ಅವನ ಒಡೆಯರೂ ಹಾಂಗೇ ಹೇಳಿದ್ದರಂಬ್ರು…. ತಿಮ್ಮಪ್ಪಹೆಗ್ಗಡೇರೂ ಮುಕುಂದಯ್ಯಗೌಡರೂ ಅವನಿಗೆ ಏನೋನೋ ಧೈರ್ಯ ಹೇಳಿ ನಿಲ್ಲಿಸಿಕೊಂಡಿದ್ದಾರೆ, ಕಲ್ಲುಮಂಟಪದಲ್ಲಿ ಬಿಡಾರ ಮಾಡಿ ಕಾವಲಿರುವುದಕ್ಕೆ!….ಈಗ ಹೇಂಗಾದ್ರೂ ಮಾಡಿ ಅವನ ಹೆಂಡತೀನ ಬಿಡಿಸಿಕೊಡಬೇಕಲ್ಲ!….ಇಲ್ಲದಿದ್ದರೆ ಅವನು ಒಪ್ಪುತ್ತಿದ್ದನೇ, ಅವನ ಒಡೆಯರಿಗೆ ಗೊತ್ತಾದ ಹೆಣ್ಣನ್ನು ಮುಕುಂದಯ್ಯಗೌಡರಿಗಾಗಿ ಹಾರಿಸುವುದಕ್ಕೆ?…. ಅದೆಲ್ಲಾ ಇರಲಿ ಈಗ ಅವನು ಬರುತ್ತಾನಲ್ಲಾ ಎಲ್ಲಿ ಮಲಗಿಸುವುದು?….”
“ಆ ಗೊರಬನ್ನು ಮರೆಯಾಗಿಟ್ಟು ಈ ಬಾಗಿಲ ಬದಿಯೆ ಮಲಗಿಕೋ ಅಂದರೆ ಸೈ….”
“ನಾವು?” ಐತನ ಪ್ರಶ್ನೆಯಲ್ಲಿ ಬಿಡಿಸಲಾರದ ಮಹಾಸಮಸ್ಯೆಯ ಸಂಕಟಧ್ವನಿ ಇತ್ತು, ತನ್ನನ್ನು ಎಲ್ಲಿ ದೂರ ಮಲಗಿಸಿಬಿಡುತ್ತಾಳೆಯೊ ಎಂದು.
“ನೀನು ಈವತ್ತೊಂದು ದಿವಸ ಗುತ್ತಿಯ ಸಮೀಪದಲ್ಲಿ ದೂರ ಮಲಗಿದರಾಯ್ತು! ನಾನು ತಂಗಿಯ ಕೂಡೆ ಮಲಗುತ್ತೇನೆ….” ಪೀಂಚಲುವಿನ ಮೊಗದಲ್ಲಿ ತುಂಟುನಗೆ ಆಡುತ್ತಿದ್ದುದು ಐತನಿಗೆ ಆ ಕತ್ತಲೆಯಲ್ಲಿ ಕಾಣಿಸುವಂತಿರಲಿಲ್ಲ.
“ಥೂ! ಥೂ!ಥೂ! ನಾನು ಒಲ್ಲೆ. ಗೊರಬು ಮರೆಯಿದ್ದರೂ ಹೊಲೆಯನ ಬಳಿ ಮಲಗುವುದೆ?” ಐತನ ಪ್ರತಿಭಟನೆಯ ನಿಜವಾದ ಕಾರಣ ಬೇರೆಯಾಗಿತ್ತು ಎಂಬುದನ್ನು ಅವನ ಹೆಂಡತಿಗೆ ಹೇಳಿಕೊಡಬೇಕಾಗಿರಲಿಲ್ಲ.
“ಹಾಗಂದರೆ ನಾವು ದಿನವೂ ಮಲಗುವಲ್ಲಿಯೆ ಮಲಗುವ.”
“ನಿನ್ನ ತಂಗಿ?”
“ಅವಳನ್ನು ಗುತ್ತಿಯ ಜೊತೆಯೆ ಮಲಗಿಸಿದರಾಯ್ತು!”
“ಅಯ್ಯಯ್ಯೋ! ನಿನಗೇನು ಪಿತ್ತವೆ?”
“ಮತ್ತೇನು ನಿನ್ನ ಮಗ್ಗುಲಲ್ಲಿ ಮಲಗಿಸಿಕೊಳ್ತೀಯಾ?”
“ಏನು ಮಾತನಾಡುತ್ತಿ ನೀನು? ಬುದ್ಧಿ ನೆಟ್ಟಗಿದೆಯೋ?”
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ