ನನ್ನ ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-38

       ಹೆಂಡತಿ ದೇಯಿ ತೀರಿಕೊಂಡಾಗ ಸೇರೆಗಾರ ಚೀಂಕ್ರ ಒಂದು ದಿನವೆಲ್ಲ ಶೋಕವನ್ನಾಚರಿಸಿದ್ದನು: ತನ್ನ ಮೂವರು ಚಿಕ್ಕಮಕ್ಕಳ ಬತ್ತಲೆ ಅರೆಬತ್ತಲೆಯ ಒಡಲುಗಳನ್ನು ತಬ್ಬಿ ತಬ್ಬಿ ಮುಂಡಾಡಿ ಕಣ್ಣೀರು ಕರೆದಿದ್ದನು. ನೆರೆಯ ಬಿಡಾರದ ಪಿಜಿಣನ ಹೆಂಡತಿ ಅಕ್ಕಣಿಯ ಸಹಾಯದಿಂದ ಮಕ್ಕಳಿಗೆಲ್ಲ ತಾನೆ ಗಂಜಿ ಉಣಬಡಿಸಿದ್ದನು. ಅಕ್ಕಣಿಯನ್ನು ಬಾಯಿತುಂಬ ಹೊಗಳಿ ತನ್ನ ಕೃತಜ್ಞತೆಯನ್ನು ನೂರುಸಾರಿ ಹೇಳಿಕೊಂಡಿದ್ದನು. ಜ್ವರ ಬಂದು ತನ್ನ ಬಿಡಾರದ ಮೂಲೆಯಲ್ಲಿ ಕಂಬಳಿ ಹೊದೆದು ಚಾಪೆಯ ಮೇಲೆ ಬಿದ್ದುಕೊಂಡಿದ್ದ ಪಿಜಣನ ಬಲಿ ಬಹಳ ಹೊತ್ತು ಕುಳಿತು ತನ್ನ ದುಃಖವನ್ನು ತೋಡಿಕೊಂಡು ತನ್ನ ಅನಾಥಮಕ್ಕಳಿಗೆ ಇನ್ನುಮುಂದೆ ಅಕ್ಕಣಿಯೆ ಗತಿ ಎಂದು ಅತ್ತಿದ್ದನು. ಹುಡುಗ ಐತನ ಮುಂದೆಯೆ ಇನ್ನೂ ಹುಡುಗಿಯತನವನ್ನೇ ದಾಟದಿದ್ದ ಅವಳ ಪುಟ್ಟ ಹೆಂಡತಿ ಪೀಂಚಲುಗೆ ದೈನ್ಯದಿಂದ ಕೈಮುಗಿದು, ತನ್ನ ತಬ್ಬಲಿ ಮಕ್ಕಳಿಗೆ ಅವಳೇ ತಾಯಿಯೆಂದೂ ಐತನೇ ತಂದೆ ಎಂದೂ, ಮುತ್ತಿನಂಥ ಹೆಂಡತಿ ಹೋದ ಮೇಲೆ ತಾನಿನ್ನು ಬದುಕುವ ಸಂಭವವಿಲ್ಲವೆಂದೂ, ನಾಟಕವಾಡುತ್ತಿದ್ದಾನೆಯೊ ಎಂಬಷ್ಟರಮಟ್ಟಿಗೆ ವರ್ತಿಸುತ್ತಿದ್ದನು. ಕೇಳಿದವರಿಗೆ ಸಂಕಟವುಕ್ಕುವಂತೆ. ಸೇರೆಗಾರನೆಂದು ಮೆರೆಯುತ್ತಿದ್ದವನು ಬರಿಯ ಕೆಲಸದಾಳುಗಳಾದ ತಮ್ಮ ಮುಂದೆ ಅಷ್ಟು ದೈನ್ಯದಿಂದ ಯಾಚಿಸುತ್ತಾ ಶೋಕಿಸುತ್ತಿದ್ದುದನ್ನು ಕಂಡು, ಐತನೊಬ್ಬನು ವಿನಾ, ಸರ್ವರೂ ಚೀಂಕ್ರನ ಸತೀಪ್ರೇಮಕ್ಕೂ ಸಂಕಟಕ್ಕೂ ಸಭ್ಯತೆಗಳು ಬೆರಗಾಗಿ, ಮರುಗಿ ಮಾರುಹೋಗಿದ್ದರು.

ಆದರೆ ಮಾರನೆಯ ದಿನವೆ ಚೀಂಕ್ರನ ಮನಸ್ಥಿತಿ ಬದಲಾಯಿಸಿತ್ತು. ಮಧ್ಯಾಹ್ನದವರೆಗೂ ಹಾಗೂ ಹೀಗೂ ಕಷ್ಟಪಟ್ಟು ಬಿಡಾರದ ಶೂನ್ಯತೆಯನ್ನು ಸಹಿಸಿಕೊಂಡಿದ್ದನು. ಅಪರಾಹ್ನದಲ್ಲಿ ಅವನಿಂದ ತಡೆಯಲಾಗಲಿಲ್ಲ. ಬಿಡಾರದ ತುಂಬ ಬಿಕೋ ತುಂಬಿದಂತಾಯ್ತು. ಸತ್ತುಹೋದ ಹೆಂಡತಿಯ ಬಡ ಸಂದೂಕವನ್ನು ಬೀಗ ಮುರಿದು ಬಾಯಿ ತೆರೆದು, ಹುಡುಕಿ ಮಾಡಿ, ಕೈಯಾಡಿಸಿದವನು. ಗತಿಸಿದವಳ ಬಡ ಒಡವೆಯ ಚೂರುಪಾರನ್ನು ಬೊಕ್ಕಣ್ಣಕ್ಕೆ ಹಾಕಿಕೊಂಡನು. ಅವಳದ್ದೆ ಆಗಿದ್ದು ಅವಳು ಉಡದೇ ಮಾಡದೇ ಇಟ್ಟೇ ರಕ್ಷಿಸಿಕೊಂಡು ಬಂದಿದ್ದ ಒಂದು, ಇದ್ದಿದ್ದರಲ್ಲಿ ಚೆನ್ನಾಗಿದ್ದು ವಿಶೇಷ ಸಂದರ್ಭಗಳಲ್ಲಿ ಉಡಲು ಬೇಕೆಂದು ಜೋಪಾನವಾಗಿಟ್ಟಿದ್ದ, ಸೀರೆಯನ್ನು ಹೊರತೆಗೆದು, ಕಣ್ಣೀರು ಸುರಿಸುತ್ತಲೇ ತನ್ನ ಮಕ್ಕಳಿಗೆ ಹೊರಗೆ ತಲೆಬಾಚುತ್ತಿದ್ದ ಅಕ್ಕಣಿಯನ್ನು ಕರೆದು, ಕಾಣಿಕೆ ನೀಡಿದನು, ಅವಳಿಗೆ ತನ್ನ ಮಕ್ಕಳ ರಕ್ಷಣೆಯ ಹೊಣೆಗಾರಿಕೆ ನೀಡುವಂತೆ. ಆಮೇಲೆ ಅವನ ಪದ್ಧತಿಯಂತೆ, ತೆಂಗಿನೆಣ್ಣೆ ಹಚ್ಚಿ ತಲೆಬಾಚಿಕೊಂಡು, ತನಗೆ ಸ್ವಲ್ಪ ಕೆಲಸವಿದೆಯೆಂದೂ ಕಪ್ಪಾಗುವುದರೊಳಗೆ ಬಂದು ಬಿಡುತ್ತೇನೆಂದೂ ಅಕ್ಕಣಿಗೆ ಹೇಳಿ, ಕಮ್ಮಾರಸಾಲೆಯ ಕಳ್ಳಂಗಡಿಯ ಕಡೆಗೆ ಹೊರಟು ಹೋದನು.
ಮತ್ತೆ ಎರಡು ದಿನ ಇತ್ತಕಡೆ ತಲೆ ಹಾಕಲಿಲ್ಲ!…  ಆ ದಿನ ಕತ್ತಲೆವರೆಗೂ ನೋಡಿ ನೋಡಿ ಅಕ್ಕನಿ, ತಮ್ಮ ಕಾಣೆಯಾದ ಅಬ್ಬೆಯನ್ನು ನೆನೆನೆದು ಅಳುತ್ತಿದ್ದ ಅವನ ಮಕ್ಕಳಿಗೆ ಗಂಜಿಹಾಕಿ, ತನ್ನ ಬಿಡಾರದಲ್ಲೇ ಅವರನ್ನು ಮಲಗಿಸಿಕೊಂಡಿದ್ದಳು.
ಮೂರನೆಯ ದಿನ ಚೀಂಕ್ರ ಬಿಡಾರಕ್ಕೆ ಹಿಂದಿರುಗಿದನು. ಅವನ ಮುಖದಲ್ಲಿ ಶೋಕದ ಛಾಯೆ ಕೂಡ ಇರಲಿಲ್ಲ. ಬದಲಾಗಿ ಗೆಲುವಿನ ಕಳೆಯೆ ಕಾಣಿಸುತ್ತಿತ್ತು. ಅಳುತ್ತಾ ಬಳಿಸಾರಿದ ಮಕ್ಕಳಿಗೆ ತಾನು ತಂದಿದ್ದ ಓಲೆಬೆಲ್ಲವನ್ನು ಕೊಟ್ಟು, ಸಿಂಬಳ ಸುರಿಯುತ್ತಿದ್ದ ಮೂಗು ಮುಸುಡಿಗಳನ್ನು ಒರಸಿ, ಸಮಾಧಾನ ಮಾಡಿದನು. ಅಕ್ಕಣಿಗೆ ತಾನು ಕಣ್ಣಾಪಂಡಿತರ ಜೊತೆಗೂಡಿ ಮೇಗರ ವಳ್ಳಿಯಲ್ಲಿ ಪಾದ್ರಿ ಕಟ್ಟಿಸಲಿರುವ ಇಸ್ಕೂಲಿನ ಕಂತ್ರಾಟು ಹಿಡಿದಿರುವುದಾಗಿಯೂ, ಒಂದು ನಾಲ್ಕು ದಿನ ಅಲ್ಲಿಯೆ ಇರಬೇಕಾಗಿ ಬರುತ್ತದೆಂದೂ, ನಡುನಡುವೆ ಎರಡೂ ಮೂರು ದಿನಕ್ಕೊಮ್ಮೆ ಬಂದು ಹೋಗುತ್ತಿರುವುದಾಗಿಯೂ ಹೇಳಿ, ಅವಳ ಕೈಗೆ ತನ್ನ ಮಕ್ಕಳ ಬಾಬ್ತು ಖರ್ಚಿಗಾಗಿ ಸ್ವಲ್ಪ ಹಣವನ್ನು ಕೊಟ್ಟನು. ಹಣವನ್ನೆ ಮುಟ್ಟಿ ಕಾಣದಿದ್ದ ಅವಳು ಚೀಂದ್ರ ಸೇರೆಗಾರರ ಶ್ರೀಮಂತತೆಗೆ ಬೆರಗಾದಳು. ದೇಯಿಯ ಗಂಡ ಇಷ್ಟು ಸಾಹುಕಾರರಾಗುವ ಸಮಯಕ್ಕೆ ಸರಿಯಾಗಿ ಅವಳು ಸಾಯಬೇಕ? ಅಯ್ಯೋ ಅವಳಿಗೆ ಅದೃಷ್ಟವಿಲ್ಲದೆ ಹೋಯಿತಲ್ಲಾ! ಅವಳೇ ಇದ್ದಿದ್ದರೆ ಎಷ್ಟು ಸಂತೋಷಪಡುತ್ತಿದ್ದಳು? ಎಂದುಕೊಂಡಳು.
ಹೀಗೆ ಚೀಂಕ್ರ ಸೇರೆಗಾರನು ಆಗಾಗ್ಗೆ ಬಿಡಾರಕ್ಕೆ ಬಂದು, ಒಂದು ಹಗಲೋ ಒಂದು ಇರುಳೋ ತಂಗಿದ್ದು, ಮತ್ತೆ ಮೇಗರವಳ್ಳಿಗೆ ಕಂತ್ರಾಟು ಕೆಲಸಕ್ಕೆ ಹೋಗುತ್ತೇನೆ ಎಂದು ಕಣ್ಮರೆಯಾಗುತ್ತಿದ್ದನು. ಅವನು ತಮ್ಮ ಗದ್ದೆ ತೋಟದ ಕೆಲಸಕ್ಕೆ ಬರಬೇಕು; ಇಲ್ಲಾ? ನಮ್ಮ ಸಾಲಾನೆಲ್ಲ ತೀರಿಸಿ, ಬಿಡಾರ ಖಾಲಿ ಮಾಡಬೇಕು ಎಂದು ಐತನ ಕೈಯಲ್ಲಿ ಹೇಳಿಕಳಿಸಿದರು.
ಒಂದು ದಿನ ಅಕ್ಕಣಿ ತನ್ನ ಖಾಯಿಲೆ ಗಂಡನಿಗೆ ನಿತ್ಯವೂ ಬಡಿಸುವಂತೆ ಕುಚ್ಚಲಕ್ಕೆ ಗಂಜಿ ಮತ್ತು ಒಂದು ಹಸಿಮೆಣಸಿನಕಾಯಿ ಬಡಿಸುವುದಕ್ಕೆ ಬದಲಾಗಿ ಹಚ್ಚನಕ್ಕಿ ಅನ್ನವನ್ನೂ ಸ್ವಾರ್ಲುಮೀನು ಚಟ್ನಿಯನ್ನೂ ಬೆರಕಜೆಸೊಪ್ಪಿನ ಸಾರನ್ನೂ ನಂಚಿಕೊಳ್ಳುವುದಕ್ಕೆ ಮೇಗರವಳ್ಳಿ ಅಂತ್ಯಕ್ಕಸೆಡ್ತಿಯವರ ಮನೆಯಿಂದ ತಂದದ್ದು ಎಂದು ಚೀಂಕ್ರ ತಂದುಕೊಟ್ಟಿದ್ದ ಕಳಲೆ ಉಪ್ಪಿನ ಕಾಯನ್ನೂ ಬಡಿಸಲು, ಪಿಜಿಣ ಆಶ್ಚರ್ಯಚಕಿತನಾಗಿ ಆನಂದದ ಗರಬಡಿದವನಂತೆ ಹೆಂಡತಿಯ ಸುಧಾರಿಸಿದ ಬಟ್ಟೆಬರೆ ಕಡೆಯೂ ನೋಡಿ “ಎಲ್ಲಿಂದ ಬಂತೇ ಇದೆಲ್ಲಾ?” ಎಂದು ಕೇಳಿದನು, ಬೆರಗುಸಿರೆಳೆದು.
“ಏನೋ ಅವರ ಮಕ್ಕಳನ್ನ ನೋಡಿಕೊಳ್ತೇನೆ ಅಂತಾ ಚೀಂಕ್ರ ಸೇರೆಗಾರು ತಂದು ಕೊಟ್ಟದ್ದು.”
“ಅಂತೂ ಹೆಂಡ್ತಿ ಸತ್ತಮೇಲಾದ್ರೂ ಅವನಿಗೆ ದೇವ್ರು ಒಳ್ಳೆಬುದ್ಧಿ ಕೊಟ್ನಲ್ಲಾ!… “
“ಮೇಗ್ರೊಳ್ಳಿ ಕಣ್ಣಾಪಂಡಿತ್ರು ಕೊಟ್ರು ಅಂತಾ ನಿಮ್ಮ ಜಡಕ್ಕೂ ಮದ್ದು ತಂದು ಕೊಟ್ಟಾರೆ… “
“ಎಲ್ಲಿ ಮತ್ತೆ? ನೀ ಕೊಡಲೇ ಇಲ್ಲಾ!”
“ಅಂಬಲಿ ಉಂಡಮ್ಯಾಲೆ ತಗೊಳ್ಳಬೇಕಂತೆ. ಆಮ್ಯಾಲೆ ಕೊಡ್ತೀನಿ.”
ಅಂತೂ ಆ ಊಟ ಔಪಧಿಗಳ ಪ್ರಭಾವದಿಂದಲೋ ಏನೋ ಪಿಜಿಣನಿಗೆ ಹೊಟ್ಟೆ ಗೆಡ್ಡಯ ರೋಗ ಪೂರ್ತಿ ಗುಣವಾಗದಿದ್ದರೂ ಗೌಡರ ಮನೆಯ ಕೆಲಸಕ್ಕೆ ಹೋಗುವಂತಾದನು. ಅಕ್ಕಣಿಯೂ ಆಗೊಮ್ಮೆ ಈಗೊಮ್ಮೆ ಗೌಡರ ಹೆದರಿಕೆಗಾಗಿ ಕೆಲಸಕ್ಕೆ ಹೋಗುತ್ತಿದ್ದರೂ ಚೀಂಕ್ರ ಸೇರಗಾರನ ಉದಾರ ಕೊಡುಗೆಯಿಂದಾಗಿ ಅವಳಿಗೆ ಕೆಲಸಕ್ಕೆ ಹೋಗಲೇಬೇಕಾದ ಅವಶ್ಯಕತೆ ಅಷ್ಟಾಗಿ ಇರಲಿಲ್ಲ. ಅಲ್ಲದೆ ಸೇರೆಗಾರನ ಮೂರು ಮಕ್ಕಳ ಯೋಗಕ್ಷೇಮದ ಭಾರ ಬೇರೆ ಅವಳ ಮೇಲೆ ಬಿದ್ದಿತ್ತು.
ಮಕ್ಕಳಿಲ್ಲದ ಅಕ್ಕಣಿ ಚೀಂಕ್ರನ ಮಕ್ಕಳಿಗೆ ಎರಡನೆಯ ತಾಯಿಯಾಗಿ, ಅವರನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾ, ಅವನ ಬಿಡಾರದ ವಹಿವಾಟುಗಾರಳಾಗಿ, ತುಸು ಉತ್ತಮವಾದ ಬಟ್ಟೆಬರೆಗಳಿಂದ ಮೆರೆಯತೊಡಗಿದುದನ್ನು ನೋಡುತ್ತಿದ್ದ ಪೀಂಚಲುಗೆ ಕೆಲವು ದಿನಗಳಲ್ಲಿಯೆ ಏನೋ ಅನುಮಾನ ಸುಳಿಯತೊಡಗಿತು. ಆದರೆ ಅದುವರೆಗೂ ತನಗೆ ಗೊತ್ತಿದ್ದ ಅಕ್ಕಣಿ ಯಕ್ಕನ ಮೇಲೆ ಅಂತಹ ಅಪವಾದವನ್ನು ಹೊರಿಸಲು ಅವಳ ಮನಸ್ಸು ಬಹಿರಂಗವಾಗಿ ಒಪ್ಪಲಿಲ್ಲ. ಆದರೂ ಅವಳ ಅಂತರಂಗದಲ್ಲಿ ಆ ಕಹಿ ಕೊರೆಯತೊಡಗಿತ್ತು. ಅಲ್ಲದೆ ಅಕ್ಕಣಿಯ ಗಂಡ ಪಿಜಿಣನೇ ಚೀಂಕ್ರ ಸೇರೆಗಾರನನ್ನು ಬಾಯಿ ತುಂಬ ಹೊಗಳುತ್ತಾ ಮೆಚ್ಚುಗೆಯಿಂದಿರುವಾಗ ನಚ್ಚಿನ ಅವನ ಹೆಂಡತಿಯ ಮೇಲೆ ಯಾರಿಗೆ ತಾನೆ ದೂರು ಹೊರಿಸಲು ಧೈರ್ಯವಾದೀತು?
ಆದರೂ ಪೀಂಚಲು ಒಂದು ರಾತ್ರಿ ತನ್ನ ಗಂಡನೊಡನೆ ಏಕಾಂತದ ಸರಸದಲ್ಲಿದ್ದಾಗ, ಅದೂ ಇದೂ ಮಾತನಾಡುತ್ತಾ ನಾಲಿಗೆ ಸಡಿಲಗೊಂಡು, ಅಕ್ಕಣಿಯ ವಿಚಾರವಾಗಿದ್ದ ತನ್ನ ಅನುಮಾನವನ್ನು ಐತನ ಕಿವಿಗೆ ಪಿಸುಗುಟ್ಟಿದಳು. ಐತನಿಗೂ ಅಂತಹುದೇ ಅನುಮಾನ ಅಂತಹುದೇ ಅನುಮಾನ ತೋರತೊಡಗಿತ್ತೆಂದು ಅವಳಿಗೆ ಗೊತ್ತಾದ ಮೇಲೆ ನೆರೆಯ ಬಿಡಾರಗಳ ಕಡೆ ಸ್ವಲ್ಪ ವಿಶೇಷ ಆಸಕ್ತಿಯಿಂದ ಕಣ್ಣು ಕಿವಿ ಇಡತೊಡಗಿದಳು.
ಐತ ಒಂದು ಸಂಜೆ ಒಡೆಯರ ತೋಟದ ಕೆಲಸ ಪೂರೈಸಿ ಬಿಡಾರಕ್ಕೆ ಹಿಂದಿರುಗಿದವನು, ಗಂಜಿ ಕಾಯಿಸುತ್ತಿದ್ದ ತನ್ನ ಹುಡುಗಿ ಹೆಂಡತಿಯೊಡನೆ ಸರಸಸಲ್ಲಾಪದಲ್ಲಿದ್ದನು. ಕೆಲದಿನಗಳಿಂದ ಅವಳಿಗೆ ಬೆಳಿಗ್ಗೆ ಎದ್ದಾಗ ವಾಕರಿಕೆ ಯಾಗುತ್ತಿದ್ದುದನ್ನೇ ಕುರಿತು ಇಬ್ಬರೂ ವಿನೋದವಾಡುತ್ತಿದ್ದರು. ಹೆಂಡತಿಗೆ ದಿನವೂ ಬೆಳಿಗ್ಗೆ ವಾಂತಿಯಾಗುತ್ತಿದ್ದುದನ್ನು ಕಂಡು ಐತನಿಗೆ ಗಾಬರಿಯಾಗಿತ್ತು. ಆ ದಿನ ಅವನು ಕೋಣೂರು ಮನೆಗೆ ಕೆಲಸಕ್ಕೆ ಹೋಗಿದ್ದಾಗ ಮುಕುಂದಯ್ಯನ ತಾಯಿ, ಕಾಗಿನಹಳ್ಳಿ ಅಮ್ಮ ಎಂದು ಎಲ್ಲರೂ ಕರೆಯುತ್ತಿದ್ದ ದಾನಮ್ಮ ಹೆಗ್ಗಡಿಯವರು, ಅವನ ಹತ್ತಿರ ತೋಟದಿಂದ ‘ಬಳ್ಳೆ’ ತರಲು ಹೇಳಿದರು. ಐತ ಅಡಕೆ ತೋಟಕ್ಕೆ ಹೋಗಿ ಒಂದು ಹೊರೆ ಊಟಕ್ಕೆ ಉಪಯೋಗವಾಗುವ ಬಾಳೆಯ ಎಲೆಗಳನ್ನು ತಂದು, ಮನೆಯ ಹಿತ್ತಲು ಕಡೆ ಬಾಗಿಲ ಬಳಿ ಇಟ್ಟನು. ಕಾಗಿನಹಳ್ಳಿ ಅಮ್ಮ, ಹಾಗೆ ತಾವು ಹೇಳಿದ ಏನಾದರೂ ಸಣ್ಣಪುಟ್ಟ ಕೆಲಸ ಮಾಡಿಕೊಟ್ಟವರಿಗೆ ಕೊಡುವ ಪದ್ಧತಿಯಂತೆ, ಐತನಿಗೂ ಮಜ್ಜಿಗೆ ಉಪ್ಪಿನಕಾಯಿ ಕೊಟ್ಟು, ನಗುತ್ತಾ ಹೇಳಿದ್ದರು: “ಏನೋ ಹುಡುಗಾ, ಹುಡುಗಿ ಕಟ್ಟಿಕೊಂಡು ಇನ್ನೂ ಒಂದು ವರ್ಷಾನೂ ಆಯ್ತೋ ಇಲ್ಲೋ ಅಷ್ಟರಲ್ಲೇ….” ಎಂದು ಅರ್ಧಕ್ಕೆ ನಿಲ್ಲಿಸಿ, ವ್ಯಂಗ್ಯವಾಗಿ ತನ್ನ ಕಡೆಗೆ ನೋಡಿ ಹಾಸ್ಯ ಮಾಡುವಂತಿದ್ದುದನ್ನು ಕಂಡು ಐತನಿಗೆ ಮುಖವೆಲ್ಲಾ ಪೆಚ್ಚಾಯಿತು. ಅವನಿಗೆ ಅವರ ವ್ಯಂಗ್ಯದ ಇಂಗಿತ ಹೊಳೆಯಲಿಲ್ಲ. ಪೀಂಚಲುಗೆ ವಾಂತಿಯಾಗುತ್ತಿರುವುದರಿಂದ ಅವಳನ್ನು ಏನೋ ಅಪಾಯಕ್ಕೆ ತಾನು ಈಡುಮಾಡಿಬಿಟ್ಟಿದ್ದೇನೆ ಎಂದು ಅಮ್ಮ ನಿಂದಿಸುತ್ತಿರಬೇಕೆಂದೇ ಊಹಿಸಬಿಟ್ಟನು!
ತಪ್ಪೊಪ್ಪಿ ಕ್ಷಮೆಯನ್ನು ಅಂಗಲಾಚಿ ಬೇಡುವವನಂತೆ ಗಟ್ಟದ ತಗ್ಗಿನವರ ರೀತಿಯಿಂದ “ನಾನು ಏನು ಮಾಡಲಿ, ಅಮ್ಮಾ? ಅವಳು ಬೇಡ ಎಂದರೂ ಕೇಳದೆ ಅಲ್ಲಿ ಇಲ್ಲಿ ಹೋಗುತ್ತಾಳೆ; ಅದನ್ನೂ ಇದನ್ನೂ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತಾಳೆ. ಮರಹತ್ತಿ ಪ್ಯಾರಲ ಕಡ್ಡೇನೂ ತಿನ್ತಾಳೆ! ಆವೊತ್ತು ತ್ವಾಟದಾಚೆ ದರೆಯಲ್ಲಿ ಜೇನುಕಿತ್ತು ಮೋರೆ ಊದಿಸಿಕೊಂಡಿದ್ದಳಲ್ಲಾ! ಈಗ ವಾಂತಿ ಹತ್ತಿ ಬಿಟ್ಟಿದೆ, ದಿನಾ ಹೊತ್ತಾರ! ದಿನಾ ಬೈಗಿನಹೊತ್ತು ಅದೆಲ್ಲಿಗೋ ಹೋಗ್ತಾಳೆ, ಮದ್ದಿಗೆ ಎಲಿಕೆವಿ ಸೊಪ್ಪ ತರಲಿಕ್ಕಂತೆ!….. ನೀವಾದ್ರೂ ಹೇಳಿ, ಅಮ್ಮಾ, ಏನು ಮಾಡುವುದು ಆ ಖಾಯಿಲೆಗೆ?… “
“ಥೂ ಹುಡುಗಾ! ನೀನೆಂಥಾ ಮಂಗನೋ! ನಿಂಗೇನು ಅಷ್ಟೂ ತಿಳಿಯಲಿಕ್ಕಿಲ್ಲಾ? ಅವಳಿಗೆ ಏನೂ ಕಾಯಿಲೆ ಅಲ್ಲೊ, ಬೆಪ್ಪಾ! ನಾನೇ ಹೇಳಿದ್ದೋ ಆ ಸೊಪ್ಪು ತಂದು, ಹಸೋಳೆ ಮಾಡಿಕೊಳ್ಳಾಕೆ!”
ರೋಗದ ವಿಚಾರ ಕೇಳಿ, ಸಂಕಟಪಟ್ಟು, ಸಹಾನುಭೂತಿ ತೋರಿಸುವುದಕ್ಕೆ ಬದಲಾಗಿ, ಹೆಗ್ಗಡ್ತಮ್ಮೋರು ಬೈದು ಮೂದಲಿಸುತ್ತಿರುವುದನ್ನು ಕಂಡು ಐತ ಬೆಪ್ಪಾಗಿ “ಮತ್ತೆ? ಯಾಕಮ್ಮ ಹಾಂಗೆ ವಾಂತಿ ಮಾಡಿಕೊಳ್ತಾಳಲ್ಲಾ?” ಎಂದನು.
“ಅವಳಿಗೆ ನೀರು ನಿಂತದೆ ಕಣೋ, ಬೆಪ್ಪು ಹುಡುಗಾ!” ಎಂದು ನಕ್ಕು ಸರಕ್ಕನೆ ತಿರುಗಿ ಒಳಗೆ ಹೋಗಿದ್ದರು. ಐತ ಅದನ್ನೆಲ್ಲ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ಆಶ್ಚರ್ಯಪಡುತ್ತಾ ಬಿಡಾರಕ್ಕೆ ಹಿಂದಿರುಗಿದ್ದನು.
“ನೀರು ನಿಂತದೆ ಅಂದರೆ ಏನೇ?” ಗಂಜಿ ಬೇಯಿಸುತ್ತಾ ಒಲೆಯ ಕಡ ಮುಖ ಮಾಡಿ ಕುಳಿತಿದ್ದ ಹೆಂಡತಿಗೆ ಪ್ರಶ್ನೆ ಹಾಕಿದ್ದನು ಐತ. ಅವಳು ಮುಖ ಇತ್ತ ತಿರುಗಿಸದೆ ತನ್ನ ಕೆಲಸದಲ್ಲಿ ಮಗ್ನಳಾಗಿ:
“ನೀರು ನಿಂತದೆ ಆಂದ್ರೆ? ನೀರು ನಿಂತದೆ ಅಂತಾನೆ ಅರ್ಥ! ತ್ವಾಟದ ಹಳ್ಯದಾಗೆ ನೋಡಿಲ್ಲೇನು ನೀನು ನೀರು ನಿಂತಿರೋದನ್ನ?” ಎಂದಳು.
ಐತನಿಗೆ ಸ್ವಲ್ಪ ಸಿಟ್ಟು ಬಂದಂತಾಯ್ತು, ಹಳ್ಳದಲ್ಲಿ ನೀರು ನಿಂತಿರುವ ವಿಚಾರವನ್ನು ಇವಳಿಂದ ತಾನು ಕೇಳಿ ತಿಳಿದುಕೊಳ್ಳಬೇಕಾಗಿತ್ತೇ ಎಂದು.
“ಅದನ್ನಲ್ಲ ನಾ ಕೇಳಿದ್ದು. ಹೆಗ್ಗಡ್ತಮ್ಮೋರು ಹೇಳಿದ್ರಲ್ಲಾ ನಿಂಗೆ ನೀರು ನಿಂತದೆ ಅಂತಾ, ಅದನ್ನ ನಾ ಕೇಳಿದ್ದು.”
ಪೀಂಚಲು ತನ್ನ ಗಂಡನ ಕಡೆಗೆ ತಿರುಗದೆಯೆ, ತಡೆಯಲಾರದೆ, ಕಿಸಕ್ಕನೆ ನಕ್ಕುಬಿಟ್ಟಳು, ಐತನ ದಡ್ಡತನದ ಕಪಾಳಕ್ಕೆ ಹೊಡೆಯುವಂತೆ.
“ಯಾಕೆ? ನಗುತ್ತೀಯಾ?” ಬಿಗುದನಿಯಿಂದಲೆ ಕೇಳಿದನು ಐತ.
ಪೀಂಚಲು ಮುಖ ತಿರುಗಿಸಿ, ಗಂಡನನ್ನು ಪ್ರೀತಿಯುಕ್ಕುವಂತೆ ವಿನೋದದಿಂದ ದೃಷ್ಟಿಸಿ ನೋಡಿ, ನಾಚಿಕೆಯಿಂದ ಮುಖದ ಮುದ್ದು ಇಮ್ಮಡಿಯಾಯಿತೆಂಬಂತೆ ಗದರಿಸಿದಳು. ಗಂಡನೆಂಬ ಗೌರವಕ್ಕೆ ಇದ್ದಕ್ಕಿದ್ದ ಹಾಗೆ ಬಹುವಚನವನ್ನುಪಯೋಗಿಸಿ:
“ನಿಮಗೆ ಯಾಕೆ ಆ ಪಂಚಾಯ್ತಿ? ಗಂಡಸರಿಗೆ? ಹೆಗ್ಗಡ್ತಮ್ಮೋರ ಹತ್ರ ಏನೇನೆಲ್ಲಾ ಆಡಿಬಿಟ್ಟಿರೋ ಏನೋ? ಇನ್ನು ನಾನು ಮನೆಗೆ ಹೋದಾಗ ಎಲ್ಲರ ಮುಂದೆ ಹೇಳಿಕೊಂಡು ಏನೆಲ್ಲ ನಗುತ್ತಾರೋ ದೊಡ್ಡ ಅಮ್ಮ? ನಾನು ನಾಚಿಕೆಯಿಂದ ಮುಖ ಎತ್ತುವುದು ಹೇಂಗೆ?”
ಅದುವರೆಗೂ ತನಗೆ ತಿಳಿಯದಿದ್ದ ಯಾವುದೋ ಗುಟ್ಟಿನ ಅರಿವು ತಟಕ್ಕನೆ ಮನಕ್ಕೆ ಮೂಡಿದಂತಾಗಿ ಐತನ ಕಣ್ಣು ಅರಳಿ ಬೆಳಗಿದುವು. ಮೊಗದಲ್ಲಿ ಮುಗ್ಧ ಮಂದಸ್ಮಿತವೊಂದು ತುಟಿಗಳೆಡೆ ಹೊಮ್ಮಿತು. ಯಾರೂ ಮೈಮೇಲೆ ನೀರೆರಚಿದಂತಾಗಿ ರೋಮಾಂಚನವಾಯಿತು. ತನ್ನ ಪುಟ್ಟ ಹೆಂಡತಿಯನ್ನು ಎದ್ದು ಅಪ್ಪಿಕೊಂಡು ಬಿಡಬೇಕು ಎನ್ನಿಸಿತು. ಅದರೆ ಪೀಂಚಲುವಿನ ಭಂಗಿ ಅಷ್ಟು ಉತ್ತೇಜನಕರವಾಗಿಲ್ಲದುದನ್ನು ಗ್ರಹಿಸಿ, ತನ್ನ ಉಲ್ಲಾಸವನ್ನೆಲ್ಲ “ಓಹೋ! ಅಷ್ಟೇನೆ? ಈಗ ಗೊತ್ತಾಯ್ತು! ಕಳ್ಳಿ!” ಎಂಬ ಉದ್ಗಾರದಲ್ಲಿ ಮರೆಸಿಬಿಟ್ಟು “ಸೇರಿಗಾರ್ರ ಸವಾರಿ ಬಂದ್ಹಾಂಗೆ ಕಾಣ್ತದೆ, ಅವರ ಬಿಡಾರಕ್ಕೆ ಹೋಗಿ ಬರ್ತೀನಿ” ಎಂದು ಎದ್ದನು.
“ಈಗ ಯಾಕೆ ನೀವು ಹೋಗುವುದು? ಅಲ್ಲಿ ಅಕ್ಕಣಿ ಮಕ್ಕಳು ಎಲ್ಲ ಇರಲಕ್ಕು!” ಧ್ವನಿಪೂರ್ಣವಾಗಿಯೆ ಇತ್ತು ಪಿಂಚಲು ಹೇಳಿದ್ದು.
“ಗೌಡರು ಕಂಡಾಬಟ್ಟೆ ಬೈದರಲ್ಲಾ ಇವತ್ತು, ನನಗೆ? ಅವರು ‘ಅವೊತ್ತು ನಾ ಹೇಳಿದ್ದನ್ನ ಚೀಂಕ್ರನಿಗೆ ಹೇಳಿದೆಯೇನೋ?’ ಅಂದರು. ‘ಇಲ್ಲಾ, ಇನ್ನೂ ಅವನು ಸಿಕ್ಕಿಲ್ಲ’ ಅಂದೆ. ‘ನೀವೇಲ್ಲ ಒಂದೇ ಜಾತಿ. ನನ್ನ ಹತ್ರ ಠಕ್ಕು ಮಾಡ್ತೀಯಾ’ ಅಂದುಬಿಟ್ಟರು. ಇವತ್ತಾದ್ರೂ ಹೋಗಿ ಹೇಳಿಬಿಡ್ತೀನಿ.
ಐತ ಹೊರಟುಹೋದ ಮೇಲೆ, ಪೀಂಚಲು ಮುಗುಳು ನಗುತ್ತಲೇ ಎಸರು ಕುದಿಯುತ್ತಿದ್ದ ಒಲೆಯ ಕಡೆಗೆ ತಿರುಗಿ, ತನ್ನ ಹೊಟ್ಟೆಯ ಕಡೆ ನೋಡಿಕೊಂಡು, ಯಾವುದೋ ಒಂದು ಹಿಗ್ಗನ್ನು ಮೆಲುಕು ಹಾಕುವಳಂತೆ ನಿಮೀಲಿತನೇತ್ರೆಯಾದಳು.
ಐತ ಬೈಗು ಹೊತ್ತಿನ ಮುಂಗಪ್ಪಿನಲ್ಲಿ, ಪಿಜಿಣನ ಕತ್ತಲು ಕವಿದಿದ್ದ ಬಿಡಾರವನ್ನು ದಾಟಿ, ಚೀಂಕ್ರನ ಬಿಡಾರದ ಬಾಗಿಲಿಗೆ ಬಂದಾಗ ಅದರ ಒಳಗಡೆಯಿಂದ ಮಾತಿನ ಗುಜುಗುಜು ಕೇಳಿಸಿತು. ಬಾಗಿಲ ಹೊರಗಿದ್ದ ಮಬ್ಬು ಬೆಳಕಿನಲ್ಲಿ ಕೋಳಿತಪ್ಪುಳದ ರಾಶಿ ಚೆದರಿಬಿದ್ದಿದ್ದನ್ನು ಗಮನಿಸಿದನು. ಕೋಳಿ ಸುಡುವ ವಾಸನೆಯೂ ಮೂಗಿಗೆ ಬಿತ್ತು, ಹಿತಕರವಾಗಿಯೆ! ಮುಚ್ಚಿದ್ದ ಬಿದಿರು ಕಣೆಯ ತಟ್ಟಿಬಾಗಿಲನ್ನು ತಳ್ಳಿದನು. ಅದು ತೆರೆದಾಗ ಒಳಗೆ ದೂರದ ಮೂಲೆಯಲ್ಲಿ ಉರಿಯುತ್ತಿದ್ದ ಬೆಂಕಿಯ ಒಲೆಯ ಬಳಿ ಅಕ್ಕಣಿ ಇಡೀ ಕೋಳಿಯನ್ನು ಸುಡುತ್ತಿದ್ದುದನ್ನೂ, ಬಾಗಿಲಿಗೆ ಹತ್ತಿರವಾಗಿ ಹಣತೆ ದೀಪದ ಮಬ್ಬು ಬೆಳಕಿನಲ್ಲಿ ಚೀಂಕ್ರ ತನ್ನ ಮೂರು ಮಕ್ಕಳೊಡನೆ ಏನೋ ವಿನೋದವಾಡುತ್ತಿದ್ದುದನ್ನೂ ನೋಡಿ ಪ್ರವೇಶಿಸದೆ, ಬಾಗಿಲಲ್ಲಿಯೆ, ಅದನ್ನು ತುಂಬಿಕೊಂಡೆ, ನಿಂತನು. ಏತಕ್ಕೂ ಅವನಿಗೆ ಒಳಕ್ಕೆ ಹೋಗಲು ಸಂಕೋಚವಾಯಿತು.
ತಲೆಯೆತ್ತಿ ನೋಡಿದ ಚೀಂಕ್ರ “ಯಾರು? ಐತನೇನೋ?” ಎಂದು, ಎದ್ದು, ಬಾಗಿಲಿಗೆ ಬಂದನು. ಅವನ ಆ ಚಲನೆಯಲ್ಲಿ, ತನ್ನ ಏಕಾಂತದ ನೆಮ್ಮದಿಗೆ ಅನ್ಯರಾರೂ ಒಳನುಗ್ಗಿ ಭಂಗ ತರದಿರಲಿ ಎಂಬ ಇಂಗಿತವಿತ್ತು.
“ಸೊಲ್ಪ ಮಾತಾಡುವುದಿತ್ತು, ಸೇರುಗಾರ್ರೆ” ಎಂದು ಐತ ಹಿಂದಕ್ಕೆ ಕತ್ತಲಿಗೇ ಸರಿದನು. ಚೀಂಕ್ರನೂ ಅವನನ್ನು ಹಿಂಬಾಲಿಸಿದನು. ಇಬ್ಬರಿಗೂ ಪರಸ್ಪರ ಆಕಾರ ವಿನಾ ಒಬ್ಬರ ಮುಖ ಇನ್ನೊಬ್ಬರಿಗೆ ಕಾಣಿಸುತ್ತಿರಲಿಲ್ಲ.
ಐತ ಗೌಡರು ತನ್ನೊಂದಿಗೆ ಹೇಳಿ ಕಳುಹಿಸಿದ್ದ ‘ಇಲ್ಲಾ ಒಂದೇ ಕೆಲಸಕ್ಕೆ ಬರಬೇಕು. ಇಲ್ಲಾ? ಸಾಲ ತೀರಿಸಿ, ಬಿಡಾರ ಖಾಲಿ ಮಾಡಬೇಕು’ ಎಂಬ ಕಠೋರ ಸತ್ಯವನ್ನು ತನ್ನ ಕೈಲಾದ ಮಟ್ಟಿಗೆ ಅನಿಷ್ಠುರವಾಗಿಯೆ ತಿಳಿಸಿದನು.
ಬೆಳಕಿದ್ದಿದ್ದರೆ, ಐತನಿಗೆ ಚೀಂಕ್ರನ ಮುಖದ ಮೇಲೆ ಏನೇನು ಭಾವದ ಛಾಯೆ ಕಾಣಿಸುತ್ತಿತ್ತೊ?
ಆದರೆ ಚೀಂಕ್ರನ ಕೃತಕ ವಿನಯದ ವಾಣಿಮಾತ್ರ ಕೇಳಿಸಿತ್ತು ಐತನಿಗೆ: “ಇಲ್ಲಿ ಕಾಣು, ಐತ, ನಾವೇನೂ ಅವರ ಸಾಲಕ್ಕೆ ದಗಾ ಹಾಕುವುದಿಲ್ಲ. ಅವರ ಉಪ್ಪು ಅಂಬಲಿ ತಿಂದ ರುಣಾನ ತೀರ್ಸೇ ತೀರಿಸ್ತೀನಿ. ಏನೋ ಕಣ್ಣಾಪಂಡಿತ್ರು ಅಷ್ಟಲ್ದೆ ಕೇಳಿಕೊಂಡರು: ‘ಮಿಶನ್ ಇಸ್ಕೂಲ್ ಕಂತ್ರಾಟು ಹಿಡಿದು ಬಿಟ್ಟೀನಿ; ‘ಸೇರೆಗಾರ, ನೀನೇನಾದ್ರೂ ಮಾಡಿ ನಾಲ್ಕಾಳು ತಂದು ಕೆಲ್ಸ ಮುಗಿಸಿಕೊಂಡು’ ಅಂತ. ಒಪ್ಪಿಬಿಟ್ಟೆ. ಅದು ಮುಗಿದ ಒಡನೆಯೆ ನಾನು ಗೌಡರ ಕೆಲಸಕ್ಕೆ ಹಾಜರಾಲ್ದಾ?” ಚೀಂಕ್ರ ಮತ್ತೆ ಏನನ್ನೊ ಗುಟ್ಟು ಹೇಳುವವನಂತೆ ಕೆಳದನಿಯಲ್ಲಿ ಮುಂದುವರಿಸಿದನು. “ಇಕಾ, ಐತ, ಇನ್ನೊಂದು ಮಾತು ಹೇಳ್ತಿನಿ. ನಾ ಹೇಳ್ದ ಅಂತಾ ಯಾರಿಗೂ ಹೇಳಬ್ಯಾಡ. ಆ ಪಾದ್ರಿ ನಿಮ್ಮ ಗೌಡರು ಕೊಡಾಕಿಂತ ಎಲ್ಡರಷ್ಟು ದುಡ್ಡೂನೂ ಪಡೀನೂ ಕೊಡ್ತಾನೋ. ನೀನೂ ಬರ್ತಿದ್ರೆ ಬಾ, ನೋಡು ಒಂದಿ ಕೈಯ್ನಾ. ಅಲ್ದೆ, ಜಾಣತನ ಇದ್ರೆ, ಬ್ಯಾರೆ ತರದ ಆದಾಯನು ಮಾಡಿಕೊಳ್ಳ ಬೌದು ಅಂತ ಇಟ್ಟುಕೋ!” ಎಂದು ವ್ಯಂಗ್ಯ ಧ್ವನಿಯಲ್ಲಿ ತಟಕ್ಕನೆ ಮಾತು ನಿಲ್ಲಿಸಿದನು.
“ಅದನ್ನೇ ಏನೋ ಸಣ್ಣಗೌಡರು ಹೇಳ್ತಿದ್ರು ಕಣೊ.”
“ಯಾರೋ? ಏನು ಹೇಳ್ತಿದ್ರೋ”
“ಮುಕುಂದಣ್ಣ ಕಣೋ. ನೀನು ಆ ಸಾಬರ ಸಂಗಡ ಸೇರಿಕೊಂಡು ಕದಿಯೋದು ಖೂನಿಮಾಡೋದು ಎಲ್ಲಾ ಮಾಡ್ತೀಯಂತೆ ಅಂತಾ ಯಾರೋ ಅವರಿಗೆ ಹೇಳಿದ್ರಂತೆ.”
ಚೀಂಕ್ರನ ಧ್ವನಿ ಬಿಗಡಯಿಸಿತು; “ಯಾರಂತೋ ಕಳ್ಳಸೂಳೇ ಮಕ್ಳು, ಹಂಗೆ ಹೇಳ್ದೋರು? ಅವರ ಬಾಯಿಗೆ ನನ್ನ….  ನ ಹಾಕ!” ಎಂದು ಬೈದವನು, ಮತ್ತೆ ಐತನ ಹೆಗಲ ಮೇಲೆ ಕೈ ಇಟ್ಟು “ನೋಡು, ಯತ ನಾ ಹೇಳ್ತಿನಿ, ನಿನ್ನ ಒಳ್ಳೇದಕ್ಕೆ…. ಆ ಮುಕುಂದೇಗೌಡ್ರನ್ನ ನಂಬಿ ನೀ ಕಟ್ಟೆ. ಆದಷ್ಟು ಬ್ಯಾಗ ನಿನ್ನ ಹೆಂಡ್ತೀನ ಇಲ್ಲಿಂದ ಕರಕೊಂಡು ಎಲ್ಲಿಗಾದ್ರು ಹೋಗಿಬಿಡು. ನಂಗೆ ನೋಡ್ದೋರೆ ಒಬ್ಬರು ಹೇಳಿದ್ರು, ಪೀಂಚಲು ಅವರ ಸಂಗಡ ಕೆಟ್ಟ ಸಂಬಂಧಕ್ಕೆ ಇಳಿದುಬಿಟ್ಟಿದ್ದಾಳೆ ಅಂತಾ. ಆ ವಾಟೆ ಹಿಂಡಲ ಹತ್ರ ಮಟ್ಟಿನಲ್ಲಿ, ಕತ್ತಲಾದ ಮ್ಯಾಲೆ ಅವರಿಬ್ಬರೂ ಒಟ್ಟಾಗ್ತಾರಂತೆ. ನಿನ್ನ ಲಗ್ನ ಆಗಬೇಕಾದ್ರೆ ಮುಂಚೇನೆ ಪೀಂಚಲೂಗೂ ಅವರಿಗೂ ಎನೋ ಗುಟ್ಟಿನ ಸಂಬಂಧ ಇತ್ತಂತೆ. ನೀನು ಮಾತ್ರ ಬೆಪ್ಪನ ಹಾಂಗೆ ‘ಮುಕುಂದಣ್ಣ! ಮುಕುಂದಣ್ಣ!’ ಅಂತಾ ಅವರ ಬಾಲ ಕಟ್ಟಿಕೊಂಡು ತಿರುಗ್ತೀಯ!…  ನನಗ್ಯಾಕೆ ಬೇಕಿತ್ತು, ಆ ಸುದ್ದೀನ ನಿನಗೆ ಹೇಳಾದು? ಏನೋ ಮಾತು ಬಂತಲ್ಲಾ, ಹೇಳಿಬಿಟ್ಟೇ” ಎಂದವನು, ಐತ ಒಂದು ಮಾತನ್ನೂ ಆಡದೆ ಮರವಟ್ಟವನಂತೆ ನಿಂತಿದ್ದನ್ನು ನೋಡಿ, ತಾನು ಮಾಡಿದ ಅನಾಹುತವನ್ನು ಪರಿಹರಿಸಲೆಂಬಂತೆ ಆಹ್ವಾನಿಸಿದನು: “ನಮ್ಮ ಬಿಡಾರಕ್ಕೆ ಊಟಕ್ಕೆ ಬಾರೊ, ಇವತ್ತು ಔಂವುತ್ಲ ಮಾಡೀವಿ!”
ಐತ ಯಾವ ಉತ್ತರವನ್ನೂ ಕೊಡದೆ ತನ್ನ ಬಿಡಾರಕ್ಕೆ ಗುಂಡು ತಗುಲಿದ ಮಿಗದಂತೆ ಕಲೆಳೆದುಕೊಂಡೇ ಹೋದನು. ಚೀಂಕ್ರ ತನ್ನೊಳಗೆ ತಾನೆ ನಗುತ್ತಾ ತನ್ನ ಬಿಡಾರಕ್ಕೆ ಹಿಂದಿರುಗಿ, ಕೋಳಿ ಹಸಿಗೆಯಲ್ಲಿ ಅಕ್ಕಣಿಗೆ ನೆರವಾದನು.
ಚೀಂಕ್ರನ ಬಿಡಾರದಿಂದ ಹಿಂದಿರುಗಿ ಬಂದ ಐತನ ಮುಖಭಂಗಿ ಆ ಬಡಜೋಪಡಿಯ ಒಳಗಿದ್ದ ಬಡಬೆಳಕಿನಲ್ಲಿಯೂ ಪೀಂಚಲುಗೆ ಏನೋ ಶಂಕಾಸ್ಪದವಾಗಿ ಕಂಡಿತು. ಅವನು ತನ್ನ ನಿತ್ಯದ ರೂಢಿಯಂತಲ್ಲದೆ ಮೌನವಾಗಿದ್ದುದನ್ನು ಗಮನಿಸಿ, ಅವಳಿಗೆ ತುಸು ಗಾಬರಿಯಾಗಿ, ಅವನು ಚೀಂಕ್ರನ ಬಿಡಾರಕ್ಕೆ ಹೋಗುವ ಮುನ್ನ ಅವರಿಬ್ಬರೂ ಮಾತನಾಡುತ್ತಿದ್ದು ತುಂಡುಗಡಿದಿದ್ದ ವಿನೋದ ವಿಚಾರವನ್ನು ಪ್ರಸ್ತಾಪಿಸಿ ಗಂಡನ ಮನಸ್ಸನ್ನು ರಮಿಸಲೆಳೆಸಿದಳು. ಅದರಿಂದಲೂ ಪ್ರಯೋಜನ ತೋರಲಿಲ್ಲ. “ನಾನು ಹೇಳಲಿಲ್ಲೇನು ನಿಮಗೆ? ಆ ಚೀಂಕ್ರನ ಹತ್ತಿರಕ್ಕೆ ಹೋಗಬ್ಯಾಡಿ ಈಗ ಅಂತಾ? ಈ ಹೊತ್ತಿನಲ್ಲಿ ಅವನಿಗೆ ತಲೆ ಸಮನಾಗಿರುವುದು ಉಂಟೆ? ಅವನ ಹತ್ತಿರ ಏನೋ ಅನ್ನಿಸಿಕೊಂಡು ಬಂದಿದ್ದೀರಿ ಅಂತಾ ಕಾಣುತ್ತದೆ. ನಮಗೆ ಯಾಕೆ ಬೇಕಿತ್ತು ಅವನ ತಂಟೆ?” ಎಂದು, ಗಂಡನ ರೀತಿಗೆ ತನ್ನ ವ್ಯಾಖ್ಯಾನವನ್ನೇ ನೀಡಿ, ಸಮಾಧಾನ ಮಾಡಿಕೊಂಡಳು. ಇಬ್ಬರೂ ಒಟ್ಟಿಗೆ ಊಟಕ್ಕೆ ಕೂತಾಗಲೂ ಐತ ಅವಶ್ಯಕವಾದುದಕ್ಕಿಂತಲೂ ಹೆಚ್ಚಿಗೆ ಮಾತಾಡಲಿಲ್ಲ. ಪೀಂಚಲು ತನ್ನ ಕಡೆಗೆ ನೋಡದೆ ಇರುವಾಗಲೆಲ್ಲ ಅವಳ ಮುಖವನ್ನೇ ಕದ್ದು ಕದ್ದು ನೋಡುತ್ತಿದ್ದನು. ತನ್ನ ಒಲವಿನ ಆ ಮುಖದಲ್ಲಿ ಚೀಂಕ್ರನು ಹೇಳಿದ್ದಕ್ಕೆ ಏನಾದರೂ ಸಾಕ್ಷಿದೊರೆಯುತ್ತದೆಯೋ ಎಂದು ಸಮೀಕ್ಷಿಸುವಂತೆ. ಪೀಂಚಲು ಅದನ್ನೂ ಗಮನಿಸಿ ಒಂದೆರಡು ಸಾರಿ ಗಂಡನ ಕಣ್ಣನ್ನೇ ನೇರವಾಗಿ ನೋಡಿದಳು. ಹಾಗೆ ನೋಡಿದಾಗಲೆಲ್ಲ ಐತ ತಟಕ್ಕನೆ ತಲೆ ಬಗ್ಗಿಸಿ ಉಣ್ಣಲು ತೊಡಗುತ್ತಿದ್ದನು.
ಆ ರಾತ್ರಿ ಪೀಂಚಲು ಗಂಡನ ಮಗ್ಗುಲಲ್ಲಿ ಮಲಗುವಾಗ ಎಂದಿನಂತೆ ಉಟ್ಟ ಬಟ್ಟೆಯನ್ನು ಬಿಚ್ಚಿಟ್ಟು, ತನ್ನ ಬತ್ತಲೆಯನ್ನು ಅವನ ಮೈಗೊತ್ತಿ ಒಂದೆ ಕಂಬಳಿಯನ್ನು ಹೊದ್ದುಕೊಂಡು ಮಲಗಲಿಲ್ಲ. ಐತನೂ ಉದಾಸೀನನಂತೆ ತಟಸ್ಥನಾಗಿ ಮುಖ ತಿರುಗಿಸಿ ಮಲಗಿದನು, ನಿದ್ದೆ ಹೋದಂತೆ. ತನ್ನ ಪುಟ್ಟ ಹೆಂಡತಿ ನಿಃಶಬ್ದವಾಗಿ ಅಳುತ್ತಿದ್ದುದೂ ಅವನಿಗೆ ಗಮನಕ್ಕೆ ಬರಲಿಲ್ಲ. ಹಾಲಿನಂತಿದ್ದ ಅವರ ಬಡ ಸಂಸಾರದ ಸಿರಿಬಾಳಿಗೆ ಚೀಂಕ್ರ ಸೇರೆಗಾರ ಹುಳಿ ಹಿಂಡಿಬಿಟ್ಟಿದ್ದನು.
ಐತ ಆ ದಿನ ರಾತ್ರಿಯೂ ಮರುಹಗಲೂ ತಾನು ಚೀಂಕ್ರನಿಂದ ಕೇಳಿದ್ದುದನ್ನು ಕುರಿತು ಬಹಳ ಆಲೋಚಿಸಿದನು. ತಾನು ಪೀಂಚಲುವನ್ನು ಮದುವೆಯಾಗುವ ಮುನ್ನ ಪೀಂಚಲು ಪರವಾಗಿದ್ದ ಮುಕುಂದಯ್ಯನ ವರ್ತನೆಯನ್ನು ಪರಿಚಿಂತಿಸಿದನು. ಮದುವೆಯಾದ ಮೇಲೂ ತನ್ನ ಕಣ್ಣಿಗೆ ಬಿದ್ದ ಮತ್ತು ಗಮನಕ್ಕೆ ಬಂದ ಎಲ್ಲವನ್ನೂ ನೆನೆದು ನೆನೆದು ವಿಚಾರಮಾಡಿದನು. ಯಾವುದರಲ್ಲಿಯೂ ಅವನಿಗೆ ಚೀಂಕ್ರ ಹೇಳಿದ್ದು ಸತ್ಯವಾಗಿರುವಂತೆ ತೋರಲಿಲ್ಲ. ಆದರೆ ಮುಕುಂದಯ್ಯ ಪೀಂಚಲು ಅವರ ಪರಸ್ಪರವಾದ ಸರಳ ಸ್ನೇಹ ವರ್ತನೆಯನ್ನು ಸಂಶಯಕ್ಕೊಳಗಾದ ಮನಸ್ಸು ಹಾಗೆ ಬೇಕಾದರೆ ಹಾಗೆ, ಹೀಗೆ ಬೇಕಾದರೆ ಹೀಗೆ, ಹೇಗೆ ಬೇಕಾದರೂ ಅರ್ಥಯಿಸಬಹುದಿತ್ತು. ಸಂಶಯಕ್ಕೆ ಪೋಷಕವಾಗಿದ್ದ ಒಂದು ಸಂಗತಿ ಮಾತ್ರ ಚೀಂಕ್ರ ಹೇಳಿದ್ದೂ ಸತ್ಯವಾಗಿತ್ತು: ಪೀಂಚಲು ತನ್ನ ವಾಕರಿಕೆಗೆ ಮದ್ದು ಮಾಡಲು ಇಲಿಕಿವಿಸೊಪ್ಪು ತರುತ್ತೇನೆಂದು ಬೈಗುಹೋತ್ತಿನಲ್ಲಿ ವಾಟೆಹಿಂಡಲಿನ ಸರಲಿನ ಕಡೆ ಆಗಾಗ್ಗೆ ಹೋಗುತ್ತಿದ್ದುದು ಮತ್ತು ಒಮ್ಮೊಮ್ಮೆ ತುಂಬ ಕತ್ತಲಾದ ಮೇಲೆ ನಿಧಾನವಾಗಿ ಹಿಂದಿರುಗುತ್ತಿದ್ದದ್ದು, ಜೊತೆಗೆ, ಹೊವಳ್ಳಿ ಚಿನ್ನಮ್ಮನನ್ನು ಸಿಂಬಾವಿ ಭರಮೈಹೆಗ್ಗಡೆಯವರು ಕೇಳುತ್ತಿದ್ದಾರೆ ಎಂಬ ಸುದ್ದಿ ಹುಟ್ಟಿದಾಗ, ಹರಕು ಬಾಯಿಯ ಐತವನ್ನು ಬಿಟ್ಟು, ತಾನು ಸಮರ್ಥ ಎಂದು ಭಾವಿಸಿದ್ದ ಪೀಂಚಲುವನ್ನೆ ತನ್ನ ಮತ್ತು ಚಿನ್ನಮ್ಮನ ನಡುವೆ ರಹಸ್ಯ ವ್ಯವಹಾರ ನಡೆಸಲು ಮುಕುಂದಯ್ಯ ಆರಿಸಿಕೊಂಡ ಸಂದರ್ಭದಲ್ಲಿ, ತನ್ನ ಹೆಂಡತಿ ತನಗೆ ತಿಳಿಸಲೊಲ್ಲದ ಏನೋ ಒಂದು ಗುಟ್ಟನ್ನು ತನ್ನಿಂದ ಬೈತಿಡುತ್ತಿದ್ದಳೆ ಎಂಬ ಅನುಮಾನವೊಂದು ಐತನ ಮನಸ್ಸನ್ನು ಹೊಕ್ಕಿತ್ತು. ಆದ್ದರಿಂದಲೇ ಐತ ತಾನೊಮ್ಮೆ ಪ್ರತ್ಯಕ್ಷವಾಗಿ ಸತ್ಯ ಏನೆಂದು ಪರಿಶೀಲಿಸಲು ನಿಶ್ಚಯಿಸಿದನು.
ಇದಾದ ಮೂರು ನಾಲ್ಕು ದಿನಗಳಲ್ಲಿಯೆ ಒಂದು ಸಂಜೆ, ಕತ್ತಲೆಯ ಮೊದಲ ಅಡಿ ಮಲೆನಾಡಿನ ಬೆಟ್ಟಗಾಡಿನ ಮುಡಿಗೆ ಎರಗುತ್ತಿದ್ದಾಗ, ಪೀಂಚಲು ತನ್ನ ಗಂಡನಿಗೆ ಮದ್ದಿನ ಸೊಪ್ಪು ತರಲು ಹೋಗುತ್ತೇನೆ ಎಂದು ಕರ್ತವ್ಯ ಧ್ವನಿಯಿಂದ ಹೇಳಿ ಹೊರಟಳು. ಅವಳ ಮಾತಿನಲ್ಲಿ ಏನೋ ಉದ್ವೇಗವಿದ್ದಂತೆ ತೋರಿತು ಐತನಿಗೆ. ಅವಳ ಚಲನೆಯಲ್ಲಿ ಅವಸರವೂ ಕಾಣಿಸಿತು. ಅವಳು ಮೂರು ನಾಲ್ಕು ದಿನಗಳಿಂದಲೂ, ಇದ್ದಕ್ಕಿದ್ದಂತೆ ತನ್ನ ಗಂಡ ನಿಷ್ಠುರವಾಗಿ ವರ್ತಿಸುತ್ತಿದ್ದುದನ್ನು ಅರ್ಥಮಾಡಿಕೊಳ್ಳಲಾರದೆ, ಸೋತು, ಕುದಿದು, ಅತ್ತು, ಸೊರಗಿ ಬೇಗುದಿಗೊಂಡಿದ್ದುದನ್ನು  ಮಾತ್ರ ಅವನ ಸಂಶಯ ಪೀಡಿತ ಚಿತ್ತ ಗ್ರಹಿಸಲಿಲ್ಲ.
ತಾನು ಮೊದಲೆ ಮಸೆದು ಹರಿತಮಾಡಿ ಇಟ್ಟಿದ್ದ ಕೆಲಸದ ಕತ್ತಿಯನ್ನು ಸೊಂಟದ ಒಡ್ಯಾಣಕ್ಕೆ, ಸಿಕ್ಕಿಸಿಕೊಂಡು ಐತ ಹತ್ತಿರದ ಒಳದಾರಿಯಿಂದ ತೋಟದ ಮೇಲೆ ಹಾದು ವಾಟೆಹಿಂಡಲನ್ನು ತಲುಪಿ, ಅಲ್ಲಿಗೆ ತುಸುವೆ ದೂರದಲ್ಲಿದ್ದು ಎಲೆ ದಟ್ಟಯಿಸಿ ಬೆಳೆದಿದ್ದ ಒಂದು ಹಲಸಿನ ಮರವನ್ನೇರಿ ಅಡಗಿ ಕುಳಿತು ಕಾದನು.
ಕತ್ತಲೆ ಹೆಚ್ಚು ಹೆಚ್ಚು ಕಪ್ಪಾಗುತ್ತಿತ್ತು. ಗೊತ್ತು ಕೂರಲು ಹಾರಿ ಹೋಗುತ್ತಿದ್ದ ಹಕ್ಕಿಗಳ ಸದ್ದೂ ಅಡಗಿತು. ಹಳುವಿನಲ್ಲಿ ಕರ್ಕಶವಾಗಿ ಒರಲುತ್ತಿದ್ದ ಜೀರುಂಡೆಗಳು ಮಾತ್ರ ಉತ್ತೇಜನಗೊಳ್ಳುವಂತೆ ಕಿವಿಗೆ ಚಿಟ್ಟು ಹಿಡಿಯಿಸುತ್ತಿದ್ದುವು. ಯಾರೂ ಕಾಣಿಸದಿರಲು ಐತನಿಗೆ ತಾನು ಬಹಳ ಹೊತ್ತು ಕಾಯುತ್ತಿದ್ದಂತೆ ಅನುಭವವಾಗತೊಡಗಿತು. ಒಂದು ಸಾರಿ ಆಕಳಿಸಿಯೂ ಬಿಟ್ಟನು! ‘ಎಲ್ಲಿಗೆ ಹೋದಳು ಅವಳು?’ ಎಂದುಕೊಂಡನು. ‘ಏನಾದರೂ ವಾಸನೆ ತಿಳಿದು ಜಾಗವನ್ನೇ ಬದಲಾಯಿಸಿಬಿಟ್ಟರೇ?’ ಎಂದೂ ಮನದಲ್ಲಿ ಒಂದು ಸಂಶಯ ಸುಳಿಯಿತು, “ಅಥವಾ ಆ ಹಾಳು ಚೀಂಕ್ರ ಹೇಳಿದ್ದೆಲ್ಲ ಬರಿಯ ಸುಳ್ಳೋ?” ಆದರೆ ಅವಳೇ ಹೇಳಿದಳಲ್ಲಾ “ಮದ್ದಿಗೆ ಸೊಪ್ಪು ತರಲು ಹೋಗುತ್ತೇನೆ” ಎಂದು? ‘ಚೆನ್ನಾಗಿ ಕತ್ತಲಾದ ಮೇಲೆ ನಾನು ಇಲ್ಲಿ ಕೂತಿದ್ದರೂ ಏನು ಪ್ರಯೋಜನ? ಏನೂ ಕಾಣಿಸುವುದಿಲ್ಲ!’ ಹೀಗೆಲ್ಲ ಚಿಂತಿಸುತ್ತಿದ್ದಂತೆಯೆ ಸೊಪ್ಪು ತುಂಬಿದ ಬುಟ್ಟಿ ಹಿಡಿದ ಪೀಂಚಲು ಪೊದೆಗಳ ನಡುವೆ ಬರುತ್ತಿದ್ದುದು ಕಾಣಿಸಿ, ಐತನ ಮೈಯಲ್ಲಿ ನೆತ್ತರು ಬಿಸಿಯಾಗಿ, ಹೆಬ್ಬುಲಿಯಂತೆ ಭೋರಿಟ್ಟಿತು! ಬಂದವಳು ಪೊದೆಗಳ ನಡುವಣ ಒಂದು ಕಿರುಬಯಲಿನಲ್ಲಿ ಕುಳಿತಳು. ತುಸು ಹೊತ್ತಿನೊಳಗಾಗಿ ಮತ್ತೊಂದು ವ್ಯಕ್ತಿ ನಸುಕು ಮಬ್ಬಿನಲ್ಲಿ ಗೋಚರವಾಯಿತು. ಅದು ಕೋಣೂರು ಮುಕುಂದಯ್ಯ ಎಂದು ಐತನಿಗೆ ಯಾರೂ ಪರಿಚಯ ಮಾಡಿಕೊಡಬೇಕಾಗಿರಲಿಲ್ಲ! ಮುಕುಂದಯ್ಯ ಪೀಂಚಲುಗೆ ಒಂದೆರಡು ಮಾರು ದೂರದಲ್ಲಿ ಕುಳಿತುಕೊಂಡನು. ಇಬ್ಬರೂ ಮಾತನಾಡತೊಡಗಿದರು. ಆದರೆ ಏನು ಮಾತಾಡುತ್ತಿದ್ದಾರೆ ಎಂಬುದು ಐತನಿಗೆ ಕೇಳಿಸಲಾರದಷ್ಟು ಮೆಲ್ಲಗೆ, ಆ ಮುಂಗಪ್ಪಿನಲ್ಲಿ ಅವರ ಮುಖ ಭಾವಗಳೂ ಆಗೋಚರವಾಗಿತ್ತು.
ಚೀಂಕ್ರ ಹೇಳಿದ ಸತ್ಯಕ್ಕೆ ಪ್ರತ್ಯಕ್ಷ ಪ್ರಮಾಣವನ್ನು ಕಂಡ ಐತನ ಚೇತನ ಕ್ರೋಧವನ್ನು ಅನುಭವಿಸುವುದಕ್ಕಿಂತಲೂ ಹೆಚ್ಚಾಗಿ ದುಃಖದಿಂದ ಬಿಕ್ಕತೊಡಗಿತು. ಆ ಇಬ್ಬರಲ್ಲಿ ಯಾರೊಬ್ಬರಾದರೂ ತನಗೆ ದೂರದವರಾಗಿ ಅನ್ಯರಾಗಿದ್ದರೆ ಅವನು ಕೋಪವನ್ನೇ ಸ್ವಾಗತಿಸಿ ಪ್ರತೀಕಾರಕ್ಕೆ ಅಣಿಯಾಗುತ್ತಿದ್ದನು. ಆದರೆ ಅಲ್ಲಿ ಇದ್ದವರಿಬ್ಬರೂ ತನಗೆ ಚಿಕ್ಕಂದಿನಿಂದಲೂ ಪರಿಚಿತರಾಗಿ, ಬೇಕಾದವರಾಗಿದ್ದರು. ತನ್ನವರೇ ಆದ ಅವರಿಬ್ಬರೂ ಸೇರಿ, ಅವರನ್ನು ನಂಬಿದ್ದ ತನಗೆ, ಇಂತಹ ಅವಮಾನಕರವಾದ ಅನ್ಯಾಯವೆಸಗುತ್ತಿದ್ದಾರಲ್ಲಾ ಎಂದು ಸುಯ್ದು ಐತನ ಕಣ್ಣಿನಿಂದ ನೀರು ತೊಟ್ಟಕ್ಕಿತು. ತಾನು ಎಷ್ಟೊಂದು ಪ್ರೀತಿಸುತ್ತಿದ್ದ ಪೀಂಚಲು ತನಗೆ ಹೀಗೆ ಮೋಸ ಮಾಡುವುದೆ…? “ಅರೇ! ಇದೇನು? ಮತ್ತೂ ಯಾರೋ ಇಬ್ಬರು ಪೊದೆಗಳ ಮಧ್ಯೆ ಮಬ್ಬುಗತ್ತಲಲ್ಲಿ ಬರುತ್ತಿದ್ದಾರೆ! ಇವರಿಬ್ಬರೂ ಕುಳಿತಿದ್ದೆಡೆಗೇ! ಬಂದವರು ಸ್ತ್ರೀವ್ಯಕ್ತಿಗಳೆಂಬುದೂ ಐತನಿಗೆ ಚೆನ್ನಾಗಿ ಗೊತ್ತಾಯಿತು. ಐತನ ಖೇದ ಇದ್ದಕ್ಕಿದ್ದ ಹಾಗೆ ಬೆಕ್ಕಸಕ್ಕೆ ತಿರುಗಿತು: ಹಾದರಕ್ಕೆ ಹೊರಟವರು ಯಾರಾದರೂ ಹೀಗೆ ಗುಂಪು ನೆರೆಯುತ್ತಾರೆಯೇ? ಛೇ! ಚೀಂಕ್ರ ಹೇಳಿದ್ದೆಲ್ಲಾ ಸುಳ್ಳೆ! ಸುಮ್ಮನೆ ನನ್ನನ್ನು ನಾಲ್ಕು ಐದು ದಿನ ಬೇಯಿಸಿಬಿಟ್ಟನಲ್ಲಾ, ಆ ಸೊಣಗ? ಇವರು ಇಲ್ಲಿ ಸೇರುವುದಕ್ಕೆ ಇನ್ನೇನೋ ಬೇರೆ ರಹಸ್ಯ ಇರಬೇಕು. ನನ್ನಿಂದ ಮುಚ್ಚಿಡುವಂಥ ಗುಟ್ಟು ಅದೇನು ನನ್ನ ಹೆಂಡತಿಗೆ?
ಐತ ಆಲೋಚಿಸುತ್ತಿದ್ದಂತೆಯೆ ಕವಿದು ಬಂದ ಕತ್ತಲೆಯಲ್ಲಿ ಅವರು ಯಾರೂ ಕಾಣಿಸದಂತಾಯ್ತು. ಅವರೆಲ್ಲರೂ ಸೇರಿ ಏನನ್ನೋ ಗುಜುಗುಜು ಮಾತಾಡಿಕೊಳ್ಳುತ್ತಿದ್ದದ್ದು ಮಾತ್ರ ಕೇಳಿಸುತ್ತಿತ್ತು. ಮರದಿಂದಿಳಿದು ಸದ್ದು ಮಾಡದೆ ಪೊದೆಗಳ ನಡುವೆ ಅವರಿದ್ದ ಎಡೆಗೆ ಹೋಗಿ ಆಲಿಸೋಣವೇ ಎನ್ನಿಸಿತು ಐತನಿಗೆ. ಆದರೆ ಎಲ್ಲಿಯಾದರೂ ಸದ್ದಾಗಿ ತಾನು ಸಿಕ್ಕಿಬಿದ್ದರೆ ಏನು ವಿವರಣೆ ಕೊಡಲು ಸಾಧ್ಯ? ಈಗ ಮಾಡಿರುವ ಅವಿವೇಕವೆ ಸಾಕು; ಇನ್ನೂ ಹೆಚ್ಚಿನ ಅವಿವೇಕಕ್ಕೆ ಬೀಳುವುದು ಬೇಡ ಎಂದು, ಗಟ್ಟಿ ಮನಸ್ಸು ಮಾಡಿ, ಮರದಿಂದ ಮೆಲ್ಲನೆ ಇಳಿದು, ತಾನು ಬಂದಿದ್ದ ಒಳದಾರಿಯಿಂದಲೆ ಕತ್ತಲೆಯಲ್ಲಿ ಕಾಲು ತಡವುತ್ತಾ ನಡೆದು ಐತ ಬಿಡಾರ ಸೇರಿ, ಪೀಂಚಲುವಿನ ಬರವನ್ನೇ ಇದಿರು ನೋಡುತ್ತಾ ಕಾತರನಾಗಿ  ಕುಳಿತನು.
ಐತ ಮರದ ಮೇಲೆ ಕುಳಿತಿದ್ದಾಗಲೆ ದೂರ ಪಶ್ಚಿಮ ದಿಗಂತದತ್ತ ಮೋಡ ಕವಿದು ಮಿಂಚುತ್ತಿತ್ತು. ಅದನ್ನವನು ನೋಡಿದ್ದನೆ ವಿನಾ ಗಮನಿಸಿರಲಿಲ್ಲ. ಅವನು ಬಿಡಾರ ಸೇರುವ ಹೊತ್ತಿಗಾಗಲೆ ಮುಗಿಲು ಮುಚ್ಚಿ, ಮಿಂಚು ಗುಡುಗು ಸಿಡಿಲು ಪ್ರಾರಂಭವಾಗಿ, ಗಾಳಿ ಜೋರಾಗಿ ಬೀಸಿ, ಮಳೆಯ ತೋರಹನಿ ಟಪ್ಪಟಪ್ಪನೆ ವಿರಳವಾಗಿ ಬೀಳತೊಡಗಿತ್ತು. ಸ್ವಲ್ಪ ಹೊತ್ತಿನಲ್ಲಿಯೆ ಮುಂಗಾರು ಮಳೆ ಭೋರೆಂದು ಹೊಯ್ದು, ಅರ್ಧಗಂಟೆಯೊಳಗೆ ನಿಂತುಬಿಟ್ಟಿತು. ಅಲ್ಲಿ ಸೇರಿದ್ದ ನಾಲ್ವರೂ ಚೆನ್ನಾಗಿ ನೆನೆದು ಒದ್ದೆಮುದ್ದೆಯಾಗಿರಬೇಕು ಎಂದು ಭಾವಿಸಿದ ಐತ ತನ್ನ ಬಸುರಿ ಹೆಂಡತಿಯ ಯೋಗಕ್ಷೇಮದ ವಿಚಾರವಾಗಿ ಕಳವಳಗೊಂಡನು! ಮಳೆಯಲ್ಲಿ ತೊಯ್ದು ಶೀತವಾಗಿ ಜ್ವರಬಂದು ಏನಾದರೂ ಆಗಿಬಿಟ್ಟರೆ?
ಮಳೆ ನಿಂತು ಸ್ವಲ್ಪ ಹೊತ್ತಿನ ಮೇಲೆ ಪಿಂಚಲು, ಸೋಂಟದ ಮೇಲಿಟ್ಟು ಎಡಗೈಯಿಂದ ಹಿಡಿದಿದ್ದ ಬುಟ್ಟಿಯೊಡೆನೆ ಬಿಡಾರದ ಒಳಗೆ ಬಂದು, ಅದನ್ನು ಒಲೆಯ ಬಳಿಯ ಮೂಲೆಯಲ್ಲಿ ಇಳಿಸಿದಳು. ಅನೈಚ್ಛಿಕವಾಗಿಯೆ ಅತ್ತಕಡೆ ತಿರುಗಿದ್ದ ಐತನ ಕಣ್ಣಿಗೆ ಬುಟ್ಟಿಯಲ್ಲಿ ಸೊಪ್ಪೂ ಮತ್ತು ಅದರ ಪಕ್ಕದಲ್ಲಿದ್ದ ಹಿತ್ತಾಳೆಯ ಪಾತ್ರೆಯೂ ಕಾಣಿಸಿ ಮನಸ್ಸಿಗೆ ಸಂತೋಷವಾಯಿತು. ಆ ಹಿತ್ತಾಳೆಯ ಪಾತ್ರೆ ಕೋಣೂರು ಮನೆಯದೆಂದೂ ಅದು ತನ್ನ ಹೆಂಡತಿಯೊಡನೆ ಬಿಡಾರಕ್ಕೆ ಬಂದಾಗಲೆಲ್ಲ, ತಿನ್ನಲೋ ನಂಚಿಕೊಳ್ಳಲೋ ಹನಿಸಿಕೊಳ್ಳಲೋ, ದೊಡ್ಡಮ್ಮನ ಕೃಪೆ ಅದರಲ್ಲಿ ಏನಾದರೂ ಇರುತ್ತದೆ ಎಂದೂ ಐತನಿಗೆ ಬಹುಕಾಲದಿಂದಲೂ ಗೊತ್ತು.
“ಎಲ್ಲಿಗೇ ಹೋಗಿದ್ದೇ? ಇಷ್ಟು ಹೊತ್ತು ಯಾಕೆ?” ಪ್ರಶ್ನಿಸಿದ ಐತನ ಧ್ವನಿಯಲ್ಲಿ ಉಗ್ರತೆಯಿರದೆ ತನಗೆ ಅತ್ಯಂತ ಪರಿಚಿತವಾದ ಸವಿ ಇದ್ದುದನ್ನು ಗಮನಿಸಿ ಪೀಂಚಲು ಸ್ವಲ್ಪ ಚಕಿತೆಯಾದಳು. ಮೊಗವೆತ್ತಿ ಗಂಡನ ಮುಖದತ್ತ ಕಿರಿಹಿಡಿದು ನೋಡಿದಳು. ಗಂಡ ಮೊದಲಿನ ಗಂಡನಾಗಿದ್ದನು! ನಾಲ್ಕೈದು ದಿನಗಳಿಂದಲೂ ಇದ್ದ ಬಿಮ್ಮಾಗಲಿ ಸೆಡೆತವಾಗಲಿ ಮುಖದಲ್ಲಿ ಲೇಶವೂ ಇರಲಿಲ್ಲ. ಅವನ ಕಣ್ಣೂ ತುಟಿಯೂ ನಗುತ್ತಿದ್ದುವು! ಅವನಿಗೆ ಸಹಜವಾಗಿದ್ದ ಹುಡುಗುಮೊಗದಲ್ಲಿ ಅಣುಗತನದ ಮಾಸದ ಛಾಯೆಯನ್ನು ಕಂಡು, ತಾಯ್ತನಕ್ಕೆ ನಿಗೂಢ ಅಭ್ಯರ್ಥಿಯಾಗಿದ್ದ ಅವಳ ಹೃದಯ ಮಾತೃಭಾವದಿಂದ ತುಂಬಿಹೋಯಿತು. ಮುದ್ದುಮಗುವನ್ನು ಅಪ್ಪಿಕೊಂಡು ಮುದ್ದಿಸುವಂತೆ ಗಂಡನನ್ನು ಮುಂಡಾಡಬೇಕು ಎನ್ನಿಸಿತು. ಆದರೂ ನಾಲ್ಕೈದು ದಿನಗಳಿಂದ ತನಗಾಗಿದ್ದ ಬೇಗೆಯನ್ನು ನೆನೆದು ತನ್ನ ಹಿಗ್ಗನ್ನು ತಡೆಹಿಡಿದು “ಎಲ್ಲಿಗೆ ಹೋಗಿದ್ದೆ? ಸೊಪ್ಪು ತರಾಕೆ! ಕಾಣದಿಲ್ಲೇನು?” ಎಂದು ಬಿಗುಮಾನವನ್ನು ನಟಿಸಿಯೇ ಉತ್ತರ ಕೊಟ್ಟಳು.
“ಮತ್ತೆ? ಆ ತಂಬಾಳೆ?”
“ಅದು ಮನೆಯದು. ದೊಡ್ಡಮ್ಮ ಕೊಟ್ಟದ್ದು.”
“ನೀವೆಲ್ಲ ಮಳೆ ಬರುವಾಗ ಅಲ್ಲೇ ಇದ್ದೀರೇನು?” ಸರಳಹೃದಯದ ಬೆಪ್ಪು ಹುಡುಗ ಐತ ತನ್ನ ಪ್ರಶ್ನೆ ತನಗೇ ದ್ರೋಹ ಬಗೆದು ತನ್ನನ್ನು ಹಿಡಿದುಕೊಡುತ್ತದೆ ಎಂಬುದನ್ನು ಗ್ರಹಿಸಿರಲಿಲ್ಲ. ಯಾವುದನ್ನು ಮುಚ್ಚಿಡಬೇಕೆಂದು ಎಚ್ಚರಿಕೆ ವಹಿಸಿದ್ದನೋ ಅದನ್ನೇ ಬಿಚ್ಚಿಬಿಟ್ಟನು!
“ಎಲ್ಲೀ? ಯಾರು? ಏನೆಲ್ಲ ನೀವು ಕೇಳಾದು?” ಅಚ್ಚರಿಯಿಂದ ಐತನ ಕಣ್ಣನ್ನೇ ನೋಡುತ್ತಾ ಕೇಳಿದಳು ಪೀಂಚಲು.
ತಟಕ್ಕನೆ ತನ್ನ ಅವಿವೇಕ ಹೊಳೆದಂತಾಗಿ ಐತ “ಅ…. ಅ….  ಅಲ್ಲಾ…. ನೀನು ಎಲ್ಲಿದ್ದೇ ಅಂದೆ…  ನಿನಗೆ ಶೀತಗೀತ ಆಗಿಬಿಟ್ಟಾತು ಅಂತಾ ಹೆದರಿದ್ದೆ…. ಆದ್ರೆ ನೀನು ಮಳೇಲಿ ನೆಂದೇ ಇಲ್ಲಲ್ಲಾ? ಅದ್ಕೇ ಕೇಳ್ದೆ!” ಎಂದು ನಾಚಿಕೊಂಡಂತೆ ನೆಲ ನೋಡಿದನು.
“ಯಾಕೆ ಹೀಂಗೆ ಮಾಡುತ್ತಿದ್ದೀರಿ ನೀವು, ನಾಲ್ಕೈದು ದಿನಗಳಿಂದಲೂ? ಚೀಂಕ್ರ ಏನೆಲ್ಲ ಹೇಳಿದ ಆವೊತ್ತು ನಿಮಗೆ? ನನ್ನ ಜೀವ ಸುಟ್ಟು ಸೋತು ಹೋಯಿತಲ್ಲಾ!”ಪೀಂಚಲು ಧನಿ ಭಾವೋದ್ವೇಗದಿಂದ ಅಳುವಂತೆ, ಗದ್ಗದವಾಗಿತ್ತು.
“ಅಂವ ಸತ್ತ! ಅಂವ ಹೇಳುತ್ತಾನೇನು? ಅವನ ಹೆಣಾ!…  ನನ್ನಿಂದ ತಪ್ಪಾಯ್ತು, ಪೀಂಚಲು!….. ನನಗೆ ಹೇಳದೆ ನೀನು ಎನನ್ನೋ ಮುಚ್ಚುಮರೆ ಮಾಡುತ್ತಿದ್ದೀಯಾ ಅಂತಾ….” ಐತ ಮುಂದೆ ನುಡಿಯಲಾರದೆ, ಅರ್ಧದಲ್ಲಿಯೆ ನಿಲ್ಲಿಸಿ, ಮಗುವಿನಂತೆ ಬಿಕ್ಕಿ ಬಿಕ್ಕಿ ಅಳತೊಡಗಿದನು. ಪೀಂಚಲು ತಡೆಯಲಾರದೆ ಅವನ ಬಳಿಗೆ ಓಡಿ, ಪಕ್ಕದಲ್ಲಿಯೆ ಅವನಿಗೆ ಒತ್ತಿ ಕುಳಿತು, “ಅಳಬೇಡ, ಐತ ಅಳಬೇಡ!” ಎಂದು ತಾನೂ ಅಳುತ್ತಲೆ ಮಕ್ಕಳನ್ನು ಸಂತೈಸುವಂತೆ ಕಣ್ಣು ಕೆನ್ನೆ ಒರಸಿ ಸಮಾಧಾನ ಮಾಡಿದಳು.
ಮತ್ತೆ ಮೆಲ್ಲಗೆ ಹೇಳತೊಡಗಿಸಳು: “ನನಗೆ ಗೊತ್ತಾಯ್ತು. ಆದರೆ ಏನು ಮಾಡಲಿ?….. ಮುಕುಂದಯ್ಯ ನನ್ನನ್ನು ನಂಬಿ ಹೇಳಿದ್ದರಲ್ಲಾ; ‘ಐತನಿಗೆ ಈಗ ಹೇಳಬೇಡ. ಅವನದು ಹರಕುಬಾಯಿ. ಯಾರು ಯಾರಿಗೆಲ್ಲಾ ಹೇಳಿಬಿಡುತ್ತಾನೆ. ಆಮೇಲೆ ಅವನಿಂದಲೂ ಕೆಲಸವಾಗಬೇಕಾದಾಗ ಹೇಳಿದರಾಯ್ತು’ ಅಂತ. ಅದಕ್ಕೇ ನಾನು ಬಾಯಿ ಕಟ್ಟಿಕೊಂಡಿದ್ದೆ. ಇವೊತ್ತು ಅವರಿಗೆ ಹೇಳಿಯೆಬಿಟ್ಟೆ, ನೀನು ಮಾತುಬಿಟ್ಟು ಕೊರಗ್ತಾ ಇರೋದ. ‘ಹಾಂಗಾದರೆ ಅವನಿಗೆ ತಿಳಿಸಿಬಿಡು’ ಅಂದಿದ್ದಾರೆ. ಅದಕ್ಕೇ ಹೇಳ್ತೀನಿ… “
ಪೀಂಚಲು ತನ್ನ ಅಡುಗೆ ಕೆಲಸವನ್ನು ಮಾಡುತ್ತಲೇ ಹೇಳುತ್ತಿದ್ದಳು. ಅವಳು ಕುಳಿತರೆ, ಎದ್ದರೆ, ಅತ್ತ ಇತ್ತ ಓಡಾಡಿದರೆ ಐತನ ಕಣ್ಣು, ಹಸಿದ ನಾಯಿ ತನಗೆ ಅನ್ನ ಹಾಕುವವರು ಬೋಗಣಿ ಹಿಡಿದು ಅತ್ತ ಇತ್ತ ಓಡಾಡಿದರೆ ಅನ್ನವಿರುವ ಆ ಬೋಗಣಿಯನ್ನು ಹಿಡಿದ ಕೈಯ ಕಡೆಗೇ ನೋಡುತ್ತಾ ಬಾಲ ಅಲ್ಲಾಡಿಸುತ್ತಾ ಅವರ ಹಿಂದೇ ಮುಂದೇ ತಿರುಗುವಂತೆ, ತನ್ನ ಹೆಂಡತಿಯನ್ನೇ ಬಯಸಿ ನೋಡಿ, ಬಿಡದೆ ಹಿಂಬಾಲಿಸುತ್ತಿತ್ತು. ನಡು ನಡುವೆ ಆಗೊಂದು ಈಗೊಂದು ಏನಾದರೂ ಪ್ರಶ್ನೆ ಹಾಕುತ್ತಿದ್ದನು: ‘ಪೀಂಚಲು ಎಂಥ ಚೆಲುವೆ!’ ‘ಅಃ ನನ್ನ ಹೆಂಡತಿ ಅದೆಷ್ಟು ಚೆನ್ನಾಗಿದ್ದಾಳೆ!’ ‘ನಾನೆಷ್ಟು ಪುಣ್ಯ ಮಾಡಿದ್ದೆ ಇವಳನ್ನು ಪಡೆಯುವುದಕ್ಕೆ?’ ‘ನಾನೆಂಥಾ ಪಾಪಿ ಅವಳನ್ನು ಅಷ್ಟು ಬೇಯಿಸಿಬಿಟ್ಟೆನಲ್ಲಾ?’ ‘ಇನ್ನು ಎಂದೆಂದಿಗೂ ಹಾಗೆ ಮಾಡುವುದಿಲ್ಲ!’ ಹೀಗೆಲ್ಲ ಐತನ ಮನಸ್ಸು ತನ್ನೊಳಗ ತಾನೇ ಹೇಳಿಕೊಳ್ಳುತ್ತಿತ್ತು.
ಗೌಡರ ಗದ್ದೆ ತೋಟಗಳಲ್ಲಿ ಕೆಲಸಮಾಡುವ ಗಟ್ಟದ ತಗ್ಗಿನ ಹೆಣ್ಣಾಳುಗಳಿಗೂ (ಗಂಡಾಳುಗಳ ಮಾತು ಅಂತಿರಲಿ!) ಮೈಯನ್ನೆಲ್ಲ ಮುಚ್ಚಿಕೊಳ್ಳುವಷ್ಟು ಬಟ್ಟೆ ಇರುವುದಿಲ್ಲ. ಕುಪ್ಪಸವನ್ನಂತೂ ಅವರು ಕಂಡೇ ಅರಿಯರು. ಸೊಂಟಕ್ಕೆ ಸುತ್ತಿಕೊಂಡ ಅರಿವೆಯ ತುಂಡಿನ ಒಂದು ಸೆರಗೇ ಅವರ ಎದೆಯನ್ನೆಲ್ಲ ಗೋಪ್ಯವಾಗಿಡುವ ಕರ್ತವ್ಯವನ್ನೂ ಹಾಗೂ ಹೀಗೂ ಹೊರುತ್ತಿತ್ತು. ವಯಸ್ಸಾದ ಹೆಣ್ಣಾಳುಗಳಂತೂ ಆ ಗೋಪ್ಯವನ್ನೂ ರಕ್ಷಿಸುವ ಶ್ರಮ ತೆಗೆದುಕೊಳ್ಳಲಾರದಷ್ಟು ಅಸಡ್ಡೆಯಿಂದಿರುತ್ತಿದ್ದರು. ಐತ ಅಂಥವರ ನಡುವೆಯೆ ಚಿಕ್ಕಂದಿನಿಂದಲೂ ಬೆಳೆದಿದ್ದನು. ಅವರ ಕೂಡೆಯೆ ಕೆಲಸಮಾಡಿಯೂ ಇದ್ದನು. ಚಿಕ್ಕಂದಿನಿಂದಲೂ ಅವನು ನೋಡುತ್ತಿದ್ದು, ಬಹಿರಂಗವಾಗಿಯೆ ಇರುತ್ತಿದ್ದ ಅಮಗ ಅಂಗ ಭಾಗ ಉಪಾಂಗಗಳ ವಿಚಾರದಲ್ಲಿ ಅವನು ಸಂಪೂರ್ಣವಾಗಿ ಅಲಕ್ಷದಿಂದಿದ್ದನ್ನು. ಆದರೆ ಇಂದು ಅವನಿಗೆ ಹೊಸ ಕಣ್ಣು ತೆರೆದಂತೆ ಬೇರೆಯ ರೀತಿಯ ಅನುಭವವಾಗತೊಡಗಿತ್ತು.
ಹೂವಳ್ಳಿ ‘ಚಿನ್ನಕ್ಕ’ನ, ಕೋಣೂರು ಮುಕುಂದಯ್ಯನ, ನಾಗಕ್ಕ, ನಾಗತ್ತೆ ಮತ್ತು ಹೂವಳ್ಳಿ ನಾಯಕರ, ಸಿಂಬಾವಿ ಹೆಗ್ಗಡೆಯವರ ಮತ್ತು ಹಳೆಮನೆ ತಿಮ್ಮಪ್ಪ ಹೆಗ್ಗಡೆಯ ವಿಚಾರವಾಗಿ ತಾನು ಕೇಳಿ ತಿಳಿದದ್ದನ್ನೆಲ್ಲ ಹೇಳುತ್ತಿದ್ದ ಪೀಂಚಲು ಎಸರು ಇಳಿಸಲು ಒಲೆಯ ಮೇಲೆ ಬಾಗಿ, ತನ್ನ ಕಡೆಗೆ ಬೆನ್ನಾಗಿ ನಿಂತಾಗ, ಐತನಿಗೆ ತೆಳ್ಳನೆಯ ಸೀರೆಯ ತುಂಡು ಬಿಗಿದು ಮುಚ್ಚಿದ್ದ ಅವಳ ದುಂಡನೆಯ ನಿತಂಬಗಳನ್ನು ನೋಡಿ ಮೋಹವುಕ್ಕಿದಂತಾಯ್ತು. ‘ಎಷ್ಟು ಚೆನ್ನಾಗಿ ಕಾಣುತ್ತಾಳೆ ಈ ಪೀಂಚಲು?’ ಎಂದುಕೊಂಡನು ಮತ್ತೊಮ್ಮೆ! ಮತ್ತೆ ಅವನ ಕಣ್ಣು ಅವಳ ತೋಳುಗಳತ್ತ ಸರಿದು ‘ಎಷ್ಟು ಬೆಳ್ಳಗಿದ್ದಾಳೆ ನನ್ನ ಹೆಂಡತಿ? ನಾನು ನೋಡಿಯೆ ಇರಲಿಲ್ಲಾ ಇಷ್ಟು ದಿನ!’ ಎಂದುಕೊಂಡನು. ಹಾಗೆಯ ಅವಳೊಮ್ಮೆ ಊಟಕ್ಕೆ ಹಾಳೆಯ ಕೊಟ್ಟೆಯನ್ನೂ ಕುಡಿಯಲಿಕ್ಕೆ ಗರಟವನ್ನೂ ಅಣಿಮಾಡಿಡಲೆಂದು ನೆಲಕ್ಕೆ ಬಾಗಿದಾಗ ಸಡಿಲಗೊಂಡ ಅವಳ ಸೆರಗಿನೊಳಗಣ ಮೃದು ಕುಟ್ಮಲಸದೃಶ ಕುಚಗಳನ್ನು ಹಿಗ್ಗಿನೋಡಿ ‘ಅಯ್ಯೋ! ಕಾಣುತ್ತಲೇ ಇರಲಿಲ್ಲ! ಈಗ ಎಷ್ಟು ದೊಡ್ಡದಾಗಿ ಬಿಟ್ಟಿವೆ? ಇವತ್ತು ರಾತ್ರಿ ನಾನು ಅವಕ್ಕೊಂದು ಮುತ್ತು ಕೊಡಲೇಬೇಕು!’ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದರೂ ಬಾಯಲ್ಲಿ. “ಹಾಂಗಾದ್ರೆ ನಾಗಕ್ಕನ ಸೀರುಡಿಕೆ ಮಾಡಿಕೊಂಡಾಯ್ತಾ ಹೂವಳ್ಳಿ ನಾಯಕ್ರು?” ಎಂದು ಕೇಳಿದನು.
“ದೆಯ್ಯದ ಹರಿಕೆ ಆಯ್ತಲ್ಲಾ? ಅದಾಗಿ ಒಂದು ವಾರಾನೋ ಹದಿನೈದು ದಿನಾನೋ ಆಗಿತ್ತಂತೆ, ನಾಗಕ್ಕ ತಾಳಿ ಕಟ್ಟಿಸಿಕೊಂಡೇ ಬಿಟ್ರಂತೆ!”
“ಮತ್ತೆ ನಾಗಕ್ಕನ ಮೊದಲನೆಯ ಗಂಡ ಸತ್ತಮೇಲೆ ಅವರು ಯಾರನ್ನೂ ಕೂಡಿಕೆ ಮಾಡಿಕೊಳ್ಳೋದಿಲ್ಲಾ ಅಂತ ಹಟ ಹಿಡಿದಿದ್ರಂತೆ?”
“ಹೌದೋ…. ಆದರೆ ಈ ಸಂಬಂಧ ಅವರು ಒಪ್ಪಿಕೊಂಡಿದ್ದು, ನನಗೆ ಅನ್ನಿಸ್ತದೆ, ಚಿನ್ನಕ್ಕನ ಕಷ್ಟ ತಪ್ಪಿಸೋಕಾಗೇ ಅಂತಾ.”
“ಇವರು ಕೂಡಿಕೆ ಆದ್ರೆ ಚಿನ್ನಕ್ಕನ ಕಷ್ಟ ಹ್ಯಾಂಗೆ ತಪ್ತದೆ?”
“ಹ್ಯಾಂಗೆ ತಪ್ತದೆ ಅಂದ್ರೆ! ಗಂಡನ್ನ ಮನಸ್ಸನ್ನ ಒಲಿಸಿಕೊಂಡು, ಚಿನ್ನಕ್ಕನ್ನ ಸಿಂಬಾವೀ ಹೆಗ್ಗಡೇರಿಗೆ ಕೊಡೋದು ತಪ್ಪಿಸಿ, ನಮ್ಮ ಮುಕುಂದಯ್ಯಗೇ ಕೊಡೋ ಹಾಂಗೆ ಮಾಡೋದಕ್ಕೆ….” ನೋಡುತ್ತಾಳೆ, ಗಂಡನ ದೃಷ್ಟಿ ಸಡಿಲವಾಗಿರುವ ತನ್ನ ಸೆರಗಿನ ಒಳಗೆ ನುಗ್ಗಿ ಆಟವಾಡುತ್ತಿದೆ! “ಏ, ನೀನೇನು ನನ್ನ ಮಾತು ಆಲೈಸ್ತಿದ್ದೀಯೊ? ಎತ್ತಲಾಗೋ ನೋಡ್ತಿದ್ದೀಯಲ್ಲಾ!”
“ಎತ್ತಲಾಗಿ ನೋಡ್ತಿದ್ದೀನೇ? ನಿನ್ನ ಕಡೀಗ ಕಣ್ಣಿಟ್ಟೀನಲ್ಲಾ!… “
“ನನ್ನ ಕಡೀಗೆ ಕಣ್ಣಿಟ್ಟೀಯ ಅನ್ನೋದು ಕಾಣ್ತಾನೆ ಇದೆಯಲ್ಲಾ….” ಎಂದು ಸಡಿಲವಾಗಿ ಎಳಲುತ್ತಿದ್ದ ತನ್ನ ಸೆರಗನ್ನು ಎಳೆದು ಭದ್ರಪಡಿಸಿಕೊಂಡು, ಶೃಂಗಾರಪೂರ್ಣವಾದ ಭರ್ತ್ಸನಾದೃಷ್ಟಿಯಿಂದ ಮುಗುಳು ನಕ್ಕು ಗಂಡನನ್ನು ಸೂರೆ ಹೊಡೆದುಬಿಟ್ಟಳು.
ಇಬ್ಬರೂ ಅಂಬಲಿ ಉಣ್ಣಕ್ಕೆ ಎದುರು ಬದುರಾಗಿ ಕೂತರು. ಐತನ ಕಣ್ಣು ಪೀಂಚಲು ಮೂಲೆಯಲ್ಲಿಟ್ಟಿದ್ದ ಹಿತ್ತಾಳೆ  ಪಾತ್ರೆಯತ್ತ ಮತ್ತೆ ಮತ್ತೆ ಹೋಗುತಿತ್ತು. ದೊಡ್ಡ ಅಮ್ಮ ಏನನ್ನೋ ಕೊಟ್ಟಿದ್ದಾರೆ; ಊಟಕ್ಕೆ ಕುಳಿತೊಡನೆ ಅದನ್ನು ಬಡಿಸುತ್ತಾಳೆ ಎಂದು ಹಾರೈಸಿದ್ದ ಐತನಿಗೆ ತನ್ನ ಹೆಂಡತಿ ಆ ಕಡೆ ಗಮನವನ್ನೆ ಹಾಕದೆ ಉಣ್ಣಲು ಕುಳಿತಿದ್ದನ್ನು ಕಂಡು ನಿರಾಶೆಯಾಯಿತು. ಮತ್ತೆ ಮತ್ತೆ ಆ ಕಡೆ ನೋಡತೊಡಗಿದನು.
“ಅದು ಗಂಡಸರ ತಿಂಡಿ ಅಲ್ಲ” ಎಂದು ಓರೆಗಣ್ಣಿನಿಂದ ನೋಡಿ ನಕ್ಕಳು ಪೀಂಚಲು.
“ತಿಂಡೀಲಿ ಗಂಡಸರ ತಿಂಡಿ ಹೆಂಗಸರ ತಿಂಡಿ ಅಂತಾ ಬೇರೆ ಬೇರೆ ಇರುತ್ತದೇನು?….” ಮೂದಲಿಸಿದನು ಐತ.
“ಇರದೆ ಏನು ಮತ್ತೆ? ಬಸಿರೇರು ಬಾಣಂತೇರು ತಿನ್ನೋದನ್ನೆಲ್ಲ ಗಂಡಸರೂ ತಿಂತಾರೇನು?….” ಅಣಕಿಸಿ ನುಡಿದಳು ಪೀಂಚಲು.
“ಓಹೋಹೋ ಈಗ ಗೊತ್ತಾಯ್ತು ಬಿಡು. ಅದಕ್ಕೆ ನೀನು ಅಷ್ಟು ಹೊತ್ತಾಗಿ ಬಂದದ್ದು….. ದೊಡ್ಡ ಅಮ್ಮಗೆ ಎಲ್ಲಾ ಹೇಳಿಬಿಟ್ಟಿದ್ದೀಯಾ ಅನ್ನು.”
“ಅದಕ್ಕೇನಲ್ಲ ಹೊತ್ತಾಗಿ ಬಂದದ್ದು.”
“ಮತ್ತೇ?”
“ಅದೆಲ್ಲಾ ನಿನಗೆ ಈಗಲೆ ಹೇಳಬಾರ್ದು….”
“ಅದು ಯಾರು? ಇಬ್ಬರು ಹೆಂಗಸರು ಬಂದ ಹಾಂಗಿತ್ತಲ್ಲಾ ಕತ್ತಲೆ ಆದಮೇಲೆ ನೀವಿದ್ದಲ್ಲಿಗೆ?”
ಬಾಯಿಗೆ ಸುರಿದುಕೊಳ್ಳುವುದರಲ್ಲಿದ್ದ ಅಂಬಲಿಯನ್ನು ಕೈಬೊಗಸೆಯಿಂದ ಹಾಗೆಯೆ ಹಾಳೆಕೊಟ್ಟಿಗೆ ಹಾಕಿ, ಪೀಂಚಲು ಬೆರಗು ಬಡಿದವಳಂತೆ ಗಂಡನ ಕಣ್ಣನ್ನೆ ನೋಡತೊಡಗಿದಳು:
“ಅದು ನಿನಗೆ ಹೆಂಗೆ ತಿಳಿದದ್ದು?” ಎಂದಳು ತುಸು ಹೊತ್ತು ತಡೆದು.
“ನಾನು ಅಲ್ಲೇ ಹಲಸಿನ ಮರ ಹತ್ತಿದ್ದೆ, ಕುಜ್ಜು ಸಿಗುತ್ತವೆಯೆ ನೋಡಲಿಕ್ಕೆ… “
“ನೀನು ಮೇಲೆ ಕಾಣುವಷ್ಟು ಸಾಮಾನ್ಯ ಏನಲ್ಲ, ಹೊಂಚಿ ನೋಡುವ ಅಭ್ಯಾಸ ಬೇರೆ ಕಲಿತುಕೊಂಡಿದ್ದೀಯಾ?… “
ಐತ ತಲೆ ಬಗ್ಗಿಸಿಬಿಟ್ಟನು. ಅಪರಾಧಿಯಂತೆ. ಅವನ ಮೋರೆ ಬಾಡಿತು. ಅದನ್ನರಿತು ಪೀಂಚಲು ಅವನ ಮನಸ್ಸನ್ನು ಆ ಕಹಿಯಿಂದ ಪಾರುಮಾಡುವ ಉದ್ದೇಶದಿಂದ “ಹೂವಳ್ಳಿ ಚಿನ್ನಕ್ಕ, ನಾಗಕ್ಕನ್ನ ಕರಕೊಂಡು ಬಂದಿದ್ರು” ಎಂದಳು.
ಅದನ್ನು ನಂಬಲಾರದವನಂತೆ ಐತ ಸರಕ್ಕನೆ ತಲೆಯೆತ್ತಿ “ಆ? ಯಾರು ಬಂದಿದ್ರು ಅಂದೆ?” ಎಂದು ಬೆರಗಾದನು.
“ಹೂವಳ್ಳಿ ಚಿನ್ನಕ್ಕ ನಾಗಕ್ಕನ್ನ ಕರಕೊಂಡು ಬಂದಿದ್ರು… “ ಮತ್ತೆ ಹೇಳಿದಳು ಪೀಂಚಲು.
ಕಲ್ಲೂರು ಮಂಜಭಟ್ಟರ ಸಾಲಕ್ಕೆ ಸಿಂಬಾವಿ ಭರಮೈ ಹೆಗ್ಗಡೆಯವರು ಜಾಮೀನು ನಿಂತು ಹೂವಳ್ಳಿ ವೆಂಕಪ್ಪನಾಯಕರ ತೋಟಗದ್ದೆಗನ್ನು ಉಳಿಸಿಕೊಟ್ಟ ವಿಚಾರವನ್ನೂ, ಚಿನ್ನಮ್ಮನನ್ನು ಭರಮೈ ಹೆಗ್ಗಡೆಯವರಿಗೆ ಕೊಟ್ಟು ಲಗ್ನವಾಗುವ ವಿಚಾರವನ್ನೂ ಕೇಳಿದ ಐತ “ಲಗ್ನ ನಿಶ್ಚಯ ಆಗೇ ಹೋಯ್ತಂತೇನು?” ಎಂದನು.
“ಮಳೆ ಹಿಡಿಯೋದರ ಒಳಗೇ ಮಾಡಿಬಿಡ್ತಾರಂತೆ! ಆ ಚಿನ್ನಕ್ಕನ ದುಃಖ ನೋಡಾಕೆ ಆಗೋದಿಲ್ಲ. ಜೀವಕ್ಕ ಏನಾದ್ರೂ ಮಾಡಿಕೊಂಡು ಬಿಟ್ಟಾರು ಅಂತಾ ನಾಗಕ್ಕ ಮೂರು ಹೊತ್ತೂ ಅವರ ಹಿಂದೇನೆ ಇರತಾರಂತೆ. ಅವರು ಒಂದು ಮಾತು ಆಡಲಿಲ್ಲ. ಸುಮ್ಮನ ಅಳ್ತಾನೆ ಇದ್ರು. ನಾಗಕ್ಕನೇ ಎಲ್ಲಾ ಹೇಳಿದ್ದು ಮಾಡಿದ್ದು…. “
“ಮತ್ತೆ ನಾಗಕ್ಕ ಉಡಿಕೆ ಮಾಡಿಕೊಳ್ಳಾಕ್ಕ ಒಪ್ಪಿದ್ದು ಚಿನ್ನಕ್ಕನ ಕಷ್ಟ ತಪ್ಪಿಸಾಕೆ ಅಂತಿದ್ದೀ? ಈಗ ಏನ್ ಆದ್ಹಾಂಗಾತು?”
“ಚಿನ್ನಕ್ಕನ ಅಪ್ಪಯ್ಯನೂ ಒಂದು ತರದ ಮಂಡ ಮನುಷ್ಯ. ಸಾಲ ತೀರ್ಸಾಕೆ ದುಡ್ಡು ಕೊಡ್ತಾರೆ. ತೆರಾನೂ ಕೈತುಂಬ ಕೊಡ್ತಾರೆ ಅಂತಾ ಹೇಳಿ ಚಿನ್ನಕ್ಕನ ಕೊರಳೀಗೆ ಆ ರೋಗಿಷ್ಟನ್ನ ಕಟ್ಟಾಕೆ ಒಪ್ಪಿಕೊಂಡುಬಿಟ್ಟಾರ. ಪಾಪ, ನಾಗಕ್ಕನೂ ಏನೆಲ್ಲ ಮಾಡಿದ್ರಂತೆ: ಏನೂ ಪ್ರಯೋಜನ ಆಗ್ಲಿಲ್ಲಂತೆ.”
“ಈಗ ಮತ್ತೇನು ಮಾಡಾದೆ?” ತುಂಬ ಸಂಕಟದ ಧ್ವನಿಯಿಂದಲೇ ಕೇಳಿದನು ಐತ. ಚಿನ್ನಮ್ಮನನ್ನು ಪಾರುಗಾಣಿಸುವ ಹೊಣೆಯನ್ನು ತಾನೆ ಹೊತ್ತುಕೊಂಡು ಬಿಟ್ಟನೊ ಎಂಬಂತೆ.
“ಅದೆಲ್ಲ ನಿನಗ್ಯಾಕ? ಮುಕುಂದಯ್ಯ ನಾಗಕ್ಕ ನಾನು ಎಲ್ಲಾ ಸೇರಿ ಏನೋ ಹುನಾರು ಮಾಡ್ತೀವಿ. ನೀನು ಯಾರ ಹತ್ರನೂ ತುಟಿಪಿಟಕ್ಕೆನ್ನದೆ ನಾವು ಹೇಳ್ದಂಗೆ ಮಾಡ್ತಿಯೇನು ಹೇಳು?….”
“ನೀ ಹೇಳಿದ್ಹಾಂಗೆ ಅಂದ್ರೆ? ಮುಕುಂದಯ್ಯ ಹೇಳಿದ್ಹಾಂಗೆ!…  ಅದೇನು ನಾ ಹೇಳಿದ್ಹಾಂಗೆ ಮಾಡಿದ್ರೆ ನಿಂಗೆ ಮಾನ ಮುಕ್ಕಾಗ್ತದೇನೋ?… “
“ಇಲ್ಲ ಮಹಾರಾಯ್ತೀ, ನೀ ಹೇಳದ್ಹಂಗೇ ಮಾಡ್ತೀನಿ!” ಐತನ ಭಂಗಿಯಲ್ಲಿ ಸಂಪೂರ್ಣ ಶರಣಾಗತಿಯ ಭಾವ ತುಳುಕುತ್ತಿತ್ತು.
ನಾಲ್ಕೈದು ದಿನಗಳಿಂದಲೂ ಪ್ರೇಮಲ ಸ್ವಭಾವದ ಐತನ ಜೀವಕ್ಕೆ, ಸುಡುಬಿಸಿಲಿನಲ್ಲಿ ಬಾಯಾರಿ, ಮರುಭೂಮಿ ಪ್ರವಾಸ ಕೈಗೊಂಡ ಹಾಗೆ ಆಗಿತ್ತು. ಪಕ್ಕದಲ್ಲಿಯೆ ತಂಪೀಯುವ ಮರುವನವಿದ್ದರೂ ನಿರ್ಮಲ ಶೀತಲೋದಕದ ತಟಾಕವಿದ್ದರೂ ಗರ್ವಕ್ಕೂ ಅಭಿಮಾನಕ್ಕೂ ವಶವಾಗಿದ್ದ ಅವನ ಚೇತನ ಆ ನೀರನ್ನು ಕುಡಿಯಲೊಲ್ಲದೆ, ಆ ತಣ್ಣೆಳಲನ್ನು ಆಶ್ರಯಿಸಲು ತಿರಸ್ಕರಿಸಿ ಬಿಸಿಲಿನಲ್ಲಿಯೆ ಬಿಗುಮಾನದಿಂದ ಬೇಯುತ್ತಿತ್ತು. ಇಂದು ಅನಿರೀಕ್ಷಿತವಾಗಿ ಆಶ್ಚರ್ಯಕರವಾಗಿ ಆ ದುಃಸ್ವಪ್ನ ಬಿರಿದು ಬಯಲಾಗಿತ್ತು. ತನ್ನ ಹೆಂಡತಿಯನ್ನು ತಾನು ತಪ್ಪಾಗಿ ತಿಳಿದುಕೊಂಡೆನೆಂದು ಅವನಿಗೆ ಗೊತ್ತಾದ ಒಡನೆಯೆ ಕವಿದಿದ್ದ ಮೋಡವೆಲ್ಲ ತೊಲಗಿ ಹೋಗಿತ್ತು; ಹುಣ್ಣಿಮೆಯ ತಿಂಗಳ ಬೆಳಕು ಬದುಕನ್ನೆಲ್ಲ ತನ್ನ ತಣ್ಬೆಳಗಿನಿಂದ ಆಹ್ಲಾದಕರವನ್ನಾಗಿ ಮಾಡಿತ್ತು; ಮಾತ್ಸರ್ಯದ ಚಪ್ಪಡಿ ಬಂಡಿಯಡಿ ಸಿಕ್ಕಿ ಅದರ ನುಗ್ಗುನುರಿ ಮಾಡುತ್ತಿದ್ದ ಭಾರಕ್ಕೆ ಏದುತ್ತಿದ್ದ ಅವನ ಹೃದಯ, ಇದ್ದಕ್ಕಿದ್ದ ಹಾಗೆ ವಿಮುಕ್ತವಾಗಿ, ಹಗುರವಾಗಿ ಗರಿಕೆದರಿ ಗಾಳಿಯಲ್ಲಿ ಹಾರಾಡಿ ತಿಳ್ಳೆಯಾಡುತ್ತಿತ್ತು. ಪೀಂಚಲುವಿನ ಒಂದೊಂದು ಚಲನೆ, ಒಂದೊಂದು ಭಂಗಿ, ಒಂದೊಂದು ಅಂಗ ಉಪಾಂಗ ಎಲ್ಲವೂ ಸ್ವರ್ಗೀಯವಾಗಿ ತೋರಿ ಅವನನ್ನು ಇಂದ್ರಪಟ್ಟಕ್ಕೇರಿಸಿತ್ತು; ಅಡಕೆಯ ಸೋಗೆ ಹೊದಿಸಿದ್ದ ಅವನ ಆ ಜೋಪಡಿಬಿಡಾರವನ್ನು ಅಮರಾವತಿಯ ನಂದನವನ್ನಾಗಿ ಮಾರ್ಪಡಿಸಿತ್ತು.
ಪೀಂಚಲು ದೀಪ ಆರಿಸಿ, ಕತ್ತಲೆಯಲ್ಲಿಯೆ ತನ್ನ ಸೀರೆಯನ್ನು ಬಿಚ್ಚಿಟ್ಟು, ಐತನು ಹೊದೆದಿದ್ದ ಕಂಬಳಿಯಡಿ ನುಸುಳಿ, ತನ್ನ ಬತ್ತಲೆ ಮೈಯನ್ನು ಅವನ ಬತ್ತಲೆಯ ಮೈಗೆ ಒತ್ತಿ ಚಾಪೆಯ ಮೇಲೆ ಹಾಸಿದ್ದ ಕಂಬಳಿಯ ಮೇಲೆ ಹಾಸಿದ್ದ ಇನ್ನೊಂದು ಹರಕಲು ಸೀರೆಯನ್ನೇ ಮಗ್ಗಲು ಹಾಸಿಗೆಯನ್ನಾಗಿ ಮಾಡಿದ್ದ ಶಯ್ಯೆಯಲ್ಲಿ ಪವಡಿಸಿದಾಗ ಐತನಿಗೆ ಅದು ಹಂಸತೂಲಿಕಾತಲ್ಪವಾಗಿ ಬಿಟ್ಟಿತ್ತು! ತನ್ನ ಸರ್ವಸ್ವದಿಂದಲೂ ಅವಳ ಸರ್ವಸ್ವವನ್ನೂ ತಬ್ಬುವಂತೆ ತನ್ನೆರಡು ತೋಳುಗಳಲ್ಲಿ ಅವಳನ್ನು ಬಿಗಿದಪ್ಪಿ, ಕೆನ್ನೆಯ ಮೇಲೆ ಕೆನ್ನೆಯಿಟ್ಟು ಸಮಾಧಿಸ್ಥನಾಗಿ ಕರಗಿಯೆ ಹೋದಂತೆ ಸ್ವಲ್ಪ ಹೊತ್ತು ನಿಶ್ಚಲನಾಗಿ ಬಿಟ್ಟನು. ಆದರೆ ಅವನ ಅಳ್ಳೆ ಹೊಡೆದುಕೊಳ್ಳುತ್ತಾ ಇದ್ದುದು ಅವಳ ಹೊಡೆದುಕೊಳ್ಳುತ್ತಿದ್ದ ಅಳ್ಳೆಗೆ ಆಪ್ಯಾಯಮಾನವಾಗಿ ಅರಿವಾಗುತ್ತಿತ್ತು. ನಾಲ್ಕು ತೊಡೆಗಳೂ ನಾಲ್ಕು ಕೈಗಳೂ ಒಂದನ್ನೊಂದು ಬಿಗಿಯುವುದರಲ್ಲಿ ಸೆಣಸುವಂತಿದ್ದುವು. ಅವಳ ಮೆತ್ತನೆಯ ಕುಚಗಳು ತನ್ನ ವೃಕ್ಷಕ್ಕೆ ಒತ್ತಿದ್ದಂತೆಲ್ಲ ಐತನ ಎಡದ ಕೈ ಅವಳ ಬೆನ್ನಿನ ಮೇಲೆ ಆಡುತ್ತಾ ಆಡುತ್ತಾ ಕೆಳಕೆಳಗಿಳಿದು ಅವಳ ಮೃದುಕಠಿಣ ನಿತಂಬಗಳನ್ನು ಸೋಂಕಿ, ಒತ್ತಿ, ಕೈಮುತ್ತನ್ನೊತ್ತಿ ಸೊಗಸಿದಾಗ ಅವನ ಪ್ರಜ್ಞೆ, ಜೇನುತುಪ್ಪದ ಕೆರೆಯಲ್ಲಿ ನಾಲಗೆಯಾಗಿ ಮುಳುಗಿ ಲಯವಾಗಿಬಿಟ್ಟಿತು. ಆ ಆನಂದಕ್ಕೆ ಆ ರೋಮಾಂಚನಕ್ಕೆ ಪೀಂಚಲು ಅವಶಳಾಗಿ, ತನ್ನ ಮಾನಸಮಸ್ತದ್ವಾರದ ರತಿಕವಾಟಗಳನ್ನು ಸಂಪೂರ್ಣವಾಗಿ ಅಗಲಿಸಿ ತೆರೆದು, ತನ್ನ ಇನಿಯನ ಮನ್ಮಥಾವಿಷ್ಟ ಪೌರುಷ ಪ್ರವೇಶನಕ್ಕೆ ಸುಗಮ ಮಾರ್ಗ ಮಾಡಿಕೊಟ್ಟು, ಆತನ ಸಮಸ್ತ ಪುರುಷಕಾರವೂ ತನ್ನೊಳಗೆ ಸಂಮಗ್ನಲಗ್ನವಾಗುವಂತೆ ಸ್ವೀಕರಿಸಿದಳು….
ಹೊರಗೆ ಸುತ್ತಲಿದ್ದ ಹಳುವಿನಲ್ಲಿ, ನೀರಿನಲ್ಲಿ, ಒಡ್ಡಿನಲ್ಲಿ, ಕೆಸರಿನಲ್ಲಿ, ಹುಳುಹುಪ್ಪಟೆ ಕಪ್ಪೆಗಳು, ಆಗಲೆ ಏಳೆಂಟು ಬಾರಿ ಸುರಿದಿದ್ದ ಮುಂಗಾರು ಮಳೆಗಳ ಪ್ರಭಾವದಿಂದ ಮತ್ತವಾದಂತೆ ಕೋಟಿಕೋಟಿಕೋಟಿ ಕೂಗುತ್ತಿದ್ದುವು, ಚೀರುತ್ತಿದ್ದುವು, ವಟಗುಟ್ಟುತ್ತಿದ್ದುವು. ಆದರೆ ಸುಖನಿದ್ರಾ ಸಮುದ್ರದಲ್ಲಿ ಮಗ್ನವಾಗಿದ್ದ ಕಿವಿಗಳಿಗೆ ಅವು ಗಮನಕ್ಕೂ ಬರಲಿಲ್ಲ.
ನಡುರಾತ್ರಿ ಒಮ್ಮೆ ಹುಲಿಕಲ್ಲಿ ನೆತ್ತಿಯಲ್ಲಿ ಹುಲಿ ಕೂಗಿದಾಗ ಪೀಂಚಲು ಬೆದರಿದಂತೆ ಕುಮುಟಿ, ತುಸು ಸಡಿಲವಾಗಿದ್ದ ತನ್ನ ತೋಳುಗಳನ್ನು ಗಂಡನ ಮೈಗೆ ಬಿಗಿದು ಸುತ್ತಿ ಮತ್ತಷ್ಟು ಒತ್ತಿ ಮಲಗಿದ್ದಳು.
ಬೆಳಗಿನ ಜಾವದಲ್ಲಿ ಐತನಿಗೆ ತನ್ನ ಆಲಿಂಗನದಲ್ಲಿದ್ದು ತನ್ನನ್ನು ಆಲಿಂಗಿಸಿದ್ದ ಪೀಂಚಲು ಆಳುತ್ತಿರುವಂತೆ ಭಾಸವಾಯಿತು. “ಯಾಕೆ, ಪೀಂಚಲು ಆಳುತ್ತೀಯಾ?” ಎಂದನು, ಮೆಲುದನಿಯಲ್ಲಿ ಮುದ್ದಾಗಿ ಕರೆದು.
ಅವಳು ನಿಡಿದಾಗಿ ಸುಯ್ದು “ಚಿನ್ನಕ್ಕ ಅಳುತ್ತಿದ್ದರು; ನನಗೂ ಅಳೂ ಹಂಗಾಯ್ತು!” ಎಂದಳು.
“ಕನಸು ಕಂಡೆಯಾ ಏನು?”
“ಅಲ್ಲ ಎಚ್ಚರಾಗಿತ್ತು. ಆ ವಾಟೆ ಹಿಂಡಲ ಹತ್ತಿರ ಅವರು ಅಳುತ್ತಿದ್ದುದು ನೆನಪಿಗೆ ಬಂತು…. "
“ಅಳುವುದು ಯಾಕೆ ಸುಮ್ಮನೆ? ಮುಕುಂದಯ್ಯ ಹೇಳಿದ ಹಾಗೆ ಮಾಡಿದರಾಯ್ತು. ಚಿನ್ನಕ್ಕನ ಆ ಮದುವೆ ಹೇಂಗೆ ಆಗುತ್ತದೆ ನೋಡುವಾ!” ಎಂದು ಅವಳ ಕೆನ್ನೆಗೆ ಕೆನ್ನೆಯೊತ್ತಿ ಸಂತೈಸಿದನು. ಅವಳೂ ಅಪ್ಪುಗೆಯನ್ನು ಸಡಿಲಿಸಿ, ಮಗ್ಗುಲಿಗೆ ತಿರುಗಿ, ತನ್ನ ಬತ್ತಲೆ ಬೆನ್ನನ್ನು ಅವನ ಬತ್ತಲೆ ಹೊಟ್ಟೆಗೆ ಬೆಚ್ಚಗೆ ಅನಿಸಿ ಒತ್ತಿ ಮಲಗಿದಳು. ಐತ ತನ್ನ ಬಲಗೈಯಿಂದ ಅವಳನ್ನು ಎದೆಗೊತ್ತಿಕೊಂಡು ಮಲಗುವ ನೆವದಲ್ಲಿ ಅವಳ ನಿತಂಬ ಸುಖಾ ಸ್ವಾದನ ಮಾಡುತ್ತಾ ಕೇಳಿದನು, ಪಿಸುದನಿಯಲ್ಲಿ, ಅವಳ ಕಿವಿಯ ಬಳಿಯೆ ಬಾಯಿಬಿಟ್ಟು:
“ಹೌದಾ, ಪೀಂಚಲು, ಚಿನ್ನಕ್ಕ ಮುಕುಂದಯ್ಯನ ಲಗ್ನ ಆದ ಮೇಲೆ, ಅವರಿಬ್ಬರೂ ಹೀಂಗೆ ಮಲಗಿಕೊಳ್ತಾರೇನೇ?”
“ಇಸ್ಸಿ, ಸುಮ್ಮನೆ ಮಲಗಿ! ನಿಮಗೆ ಬೇರೆ ಕಸುಬಿಲ್ಲ! ಏನೆಲ್ಲ ಕೇಳುತ್ತೀರಿ!” ಎಂದು ಗದರಿಸಿ, ತನ್ನ ನಿತಂಬದೇಶವನ್ನು ಇನ್ನಷ್ಟು ಬಲವಾಗಿ ಗಂಡನ ಉದರ ಊರು ಸಂಗಮ ಪ್ರದೇಶಕ್ಕೆ ಒತ್ತಿ ಒತ್ತಿ ಹೊಕ್ಕು ಮಲಗಿದಳು.
*****

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ