ನನ್ನ ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-39

        ಬೆಟ್ಟಳ್ಳಿಯಿಂದ ಕಲ್ಲೂರಿಗೆ ಹೋಗುವ ದಾರಿಯ ಹೆಗ್ಗಾಡಿನ ಕಾಡುರಸ್ತೆಯಲ್ಲಿ ಕಮಾನು ಕಟ್ಟಿದ್ದ ಜೋಡೆತ್ತಿನ ಗಾಡಿಯೊಂದು ನಿಧಾನವಾಗಿ ಹೋಗುತ್ತಿತ್ತು. ಅದು ಹಾಗೆ ಮೆಲ್ಲಗೆ ಹೋಗುತ್ತಿದ್ದುದಕ್ಕೆ ಕಾರಣ ಎತ್ತುಗಳೂ ಆಗಿರಲಿಲ್ಲ, ಗಾಡಿ ಹೊಡೆಯುವವನೂ ಆಗಿರಲಿಲ್ಲ; ಹಾದಿಯೆ ಮುಖ್ಯ ಕಾರಣವಾಗಿತ್ತು. ಅಲ್ಲಿ ಸಾಮಾನ್ಯವಾಗಿ ಯಾವ ನಾಗರಿಕ ವಾಹನವೂ ಸಂಚರಿಸುತ್ತಿರಲಿಲ್ಲ ಎಂಬುದಕ್ಕೆ ಅದರ ಕೊರಕಲೂ. ಅಪೂರ್ವವಾಗಿ ಉಪಯೋಗಿಸುತ್ತಿದ್ದುದರ ದೆಸೆಯಿಂದಾಗಿ ಎದ್ದು ಕಾಣುತ್ತಿದ್ದ ಅದರ ಪಾಳುತನವೂ ಸಾಕ್ಷಿಯಾಗಿದ್ದುವು; ಗಾಡಿಯ ಚಕ್ರಗಳು ಹೋಗುತ್ತಿದ್ದ ಕೊರಕಲು ಓಣಿಯಲ್ಲಿ ಬಿದ್ದು ತುಂಬಿದ್ದ ತರಗೆಲೆಗಳೂ ಒಣಕಲು ಕಡ್ಡಿಗಳೂ ಹರಿಯದೆ ಮುರಿಯದೆ ಅಕ್ಷತವಾಗಿದ್ದುವು.

ಗಾಡಿಗೆ ಕಮಾನು ಕಟ್ಟಿದ್ದ ಠೀವಿ, ಎತ್ತುಗಳ ಕೊರಳಿನಲ್ಲಿ ಇಂಚರಗೈಯುತ್ತಿದ್ದ ಗಂಟೆ ಗಗ್ಗರದ ಸರಗಳು, ಚೆನ್ನಾಗಿ ಕೀಸಿ ಸೊಗಸುಗೊಳಿಸಿದ್ದ ಕೋಡುಗಳ ತುದಿಯಲ್ಲಿ ಹೊಳೆಯುತ್ತಿದ್ದ ಹಿತ್ತಾಳೆಯ ಕೋಡು ಕುಂಚುಗಳು, ಆ ಕುಂಚಗಳ ತುದಿಯಲ್ಲಿ ಜೋಲಾಡುತ್ತಿದ್ದ ಬಣ್ಣದ ಕುಚ್ಚುಗಳು, ಗಾಡಿ ಹೊಡೆಯುತ್ತಿದ್ದವನು ಹಿಡಿದಿದ್ದ ಬಾರುಕೋಲಿನ ಬಣ್ಣದ ಶೃಂಗಾರ, ಅವನು ತಲೆಗೆ ಸುತ್ತಿದ್ದ ಕೆಂಪು ಎಲೆವಸ್ತ್ರ, ಅವನು ಹಾಕಿಕೊಂಡಿದ್ದ ಅಂಗಿ, ಅವನು ಮೊಣಕಾಲವರೆಗೆ ಸುತ್ತಿ ಉಟ್ಟುಕೊಂಡಿದ್ದ ಕೆಂಪಂಚಿನ ಅಡ್ಡಪಂಚೆ, ಅವನ ಕಿವಿಗಳಲ್ಲಿದ್ದ ಒಂಟಿಗಳು ಎಲ್ಲವೂ ಏನೊ ಒಂದು ಷೋಕಿಯನ್ನೂ ಸೊಗಸುಗಾರಿಕೆಯನ್ನೂ ಮನಸ್ಸಿಗೆ ತರುವಂತಿದ್ದುವು.
ಗಾಡಿಯ ಒಳಗಡೆ ಮೂವರು ಹೆಂಗಸರೂ ಮೂವರು ಹುಡುಗರೂ ಇದ್ದರು. ಹೆಂಗಸರಲ್ಲಿ ಅತ್ಯಂತ ಕಿರಿಯವಳೆಂದು ತೋರುತ್ತಿದ್ದಾಕೆಯ ತೊಡೆಯ ಮೇಲಿದ್ದ ಕೈಗೂಸೊಂದು ಆಗಾಗ ಅಳುತ್ತಿದ್ದ ಸದ್ದು, ಗಾಡಿ ಜಟಕಾ ಹೊಡೆಯದೆ ಸಮವಾಗಿದ್ದ ರಸ್ತೆಯಲ್ಲಿ ಹೋಗುತ್ತಿದ್ದಾಗ ಮಾತ್ರ, ಗಗ್ಗರದ ಸರದ ಟಿಂಟಿಣಿಯೊಡನೆ ಬೆರೆತು ಕೇಳಿಸುವಂತಿತ್ತು.
ಗಾಡಿಯ ಹಿಂಭಾಗದಲ್ಲಿ ಕುಳಿತು ಕಾಡನ್ನೂ ಆಕಾಸವನ್ನೂ ಪ್ರಾಣಿಪಕ್ಷಿ ಜೀವನದ ವ್ಯಾಪಾರ ವಿಶೇಷಗಳನ್ನೂ ಬಾಲಕಸಹಜವಾದ ಕುತೂಹಲದಿಂದ ಈಕ್ಷಿಸುತ್ತಿದ್ದ ಮೂವರು ಹುಡುಗರಲ್ಲಿ ಇಬ್ಬರು, ಗಾಡಿಯ ಶಬ್ದವನ್ನೂ ಮೀರಿಸುವಂತೆ, ತಮ್ಮಿಂದಾದಷ್ಟು ಗಟ್ಟಿಯಾಗಿ ಗಳಪುತ್ತಾ, ಮಕ್ಕಳ ಟೀಕೆಟಿಪ್ಪಣಿಯ ಮುಗ್ಧ ಸಂವಾದದಲ್ಲಿ ತೊಡಗಿದ್ದರು. ಮೂರನೆಯವನು ತನ್ನ ಸಂಗಾತಿಗಳ ಮಾತಿನಲ್ಲಿಯೂ, ಅವರು ನೋಡಿ ತೋರಿ ನಕ್ಕು ಕೇಕೆ ಹಾಕಿ, ಕೈ ಚಪ್ಪಾಳೆ ಹೊಡೆದು ಗಮನಿಸುತ್ತಿದ್ದ ಪ್ರಕೃತಿದೃಶ್ಯ ಮತ್ತು ಪಶುಪಕ್ಷಿ ಚೇಷ್ಟಿತಗಳಲ್ಲಿಯೂ ಆಸಕ್ತನಂತೆ ತೋರುತ್ತಿದ್ದರೂ ಯಾವೊಂದು ಮಾತನ್ನೂ ಆಡದೆ ನೀರವವಾಗಿದ್ದನು. ಒಮ್ಮೊಮ್ಮೆ ಅವನು ಅತ್ಯಂತ ಅಂತರ್ಮೂಖನಾದಂತೆ ತತ್ಕಾಲ ದೇಶದಲ್ಲಿರದೆ ಇನ್ನೆಲ್ಲಿಯೋ ಇದ್ದು ಇನ್ನಾವುದನ್ನೋ ಗಮನಿಸುತ್ತಿರುವಂತೆ ಭಾಸವಾಗುತ್ತಿತ್ತು.
ಆದ್ದರಿಂದಲೆ ಒಂದು ಸಾರಿ ತಿಮ್ಮು, ಕಾಡು, ಇಬ್ಬರೂ ಒಟ್ಟಿಗೆ ಒಕ್ಕೊರಲಿನಲ್ಲಿ “ಅಲ್ನೋಡೋ! ಅಲ್ನೋಡೋ, ಧರ್ಮೂ, ಕಾಡುಕೋಳಿ ಹುಂಜ | ಕಾಡುಕೋಳಿ ಹುಂಜ! ಅಲ್ಲಿ! ಅಲ್ಲಿ! ಅಲ್ಲಿ! ಆ ಮುಟ್ಟಿನಾಚೀಲಿ” ಎಂದು ಕೂಗಿಕೊಂಡಾಗ ಧರ್ಮು ಕುಮುಟಿ ಬಿದ್ದು ಆಗತಾನೆ ಎಚ್ಚರಗೊಂಡಂತೆ ಗಾಬರಿಯಾಗಿದ್ದನು.
ಅವನು ಹಾಗೆ ಬೆಚ್ಚಿ ಬೆದರಿದ್ದನ್ನು ಗಮನಿಸಿದ್ದ ಬೆಟ್ಟಳ್ಳಿ ಅಜ್ಜಮ್ಮ, ಅವನ ತಾಯಿಯ ತಂಗಿಯ ಅತ್ತೆ, ಬೆಟ್ಟಳ್ಳಿ ಕಲ್ಲಯ್ಯಗೌಡರ ಹೆಂಡತಿ ದೊಡ್ಡಮ್ಮ ಹೆಗ್ಗಡತಿಯವರು, ವಯಸ್ಸಿನಲ್ಲಿ ಉಳಿದ ಇಬ್ಬರಿಗಿಂತ ಹಿರಿಯನಾಗಿದ್ದ ತಮ್ಮ ಕಿರಿಯ ಮಗ ಕಾಡುವನ್ನೂ, ಕೋಣೂರು ರಂಗಪ್ಪಗೌಡರ ಮಗ ತಿಮ್ಮುವನ್ನೂ ಕುರಿತು “ಏ ಹುಡುಗುರಾ, ಯಾಕ್ರೋ ಹಂಗೆ ಕೂಗ್ತೀರಿ?” ಎಂದು ಗದರಿಸಿದ್ದರು.
ಧರ್ಮು ಮಾತ್ರ ಏನೊಂದೂ ಮಾತಾಡದೆ, ತನ್ನ ಅವ್ವನ ಕಡೆ ಅವ್ಯಕ್ತ ದುಃಖ ಮುಖಮುದ್ರೆಯಿಂದ ನೋಡಿ, ಅಭ್ಯಾಸ ಮಾತ್ರವಾಗಿ ಒಂದು ಔಪಚಾರಿಕ ಮುಗುಳು ನಗೆ ಬೀರಿದ್ದನು.
ಚಿಂತಾಮುಖಮುದ್ರೆಯಿಂದಿದ್ದ ಹಳೆಮನೆ ದೊಡ್ಡಣ್ಣ ಹೆಗ್ಗಡೆಯವರ ಸಹಧರ್ಮಿಣಿ ರಂಗಮ್ಮ ತನ್ನ ಮಗನನ್ನು ಸಂತೈಸಲೂ ಎಂಬಂತೆ ಅವನ ತಲೆಯ ಮೇಲೆ ಕೈಯಾಡಿಸಿ, ಪಕ್ಕದಲ್ಲಿ ಶಿಶು ಚೆಲುವಯ್ಯನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕುಳಿತಿದ್ದ ತನ್ನ ತಂಗಿಯ ಬೆಟ್ಟಳ್ಳಿ ದೇವಯ್ಯಗೌಡರ ಸೌಭಾಗ್ಯವತಿ ದೇವಮ್ಮ ಕಡೆ ಅರ್ಥಪೂರ್ಣವಾಗಿ ನೋಡಿದಳು. ದೇವಮ್ಮ ಚೆಲುವಯ್ಯನನ್ನು ತನ್ನ ಅಕ್ಕಯ್ಯನ ತೊಡೆಗೆ ಸಾಗಿಸಿದಳು. ಧರ್ಮು ಇದ್ದಕ್ಕಿದ್ದ ಹಾಗೆ, ತನ್ನನ್ನು ಕವಿದಿದ್ದ ಮೋಡಗಳನ್ನೆಲ್ಲ ವಿಸರ್ಜಿಸಿದ ನೀಲಾಕಾಶದಂತೆ, ಸುಪ್ರಸನ್ನವದನನಾಗಿ ತನ್ನ ತಮ್ಮನನ್ನು-ತಾಯಿಯ ತಂಗಿಯ ಮಗ-ಮಾತನಾಡಿಸುತ್ತಾ ಅವನೊಡನೆ ಶಿಶುಲೀಲೆಯಲ್ಲಿ ಮಗ್ನನಾಗಿಬಿಟ್ಟನು.
ಇತ್ತೀಚೆಗೆ ಧರ್ಮುಗೆ ತನ್ನ ತಾಯಿಗೆ ಒದಗಿದ್ದ ಮಹಾಸಂಕಟದ ಅರ್ಥವೇನು ಎಂಬುದು ಅರಿವಾಗಹತ್ತಿತ್ತು. ತಾನು ಇನ್ನೂ ಅರಿಯದ ಮೂರುನಾಲ್ಕು ವರ್ಷದ ಮಗುವಾಗಿದ್ದಾಗಲೆ ತನ್ನ ತಂದೆ ತಿರುಪತಿಗೆ ಹೋಗಿ ಹಿಂತಿರುಗಿರಲಿಲ್ಲ. ಬಾಲ್ಯಕ್ಕೆ ಆ ದುರಂತದ ಅರಿವು ಅರ್ಥ ದುಃಖ ಅನರ್ಥ ಯಾವುದೂ ಅಷ್ಟಾಗಿ ನಾಟಿರಲಿಲ್ಲ. ಆದರೆ ಅವನ ಚೇತನ ವಯಸ್ಸಾದಂತೆಲ್ಲಾ ಕಣ್ದೆರೆದು ಪ್ರಜ್ಞಾಪೂರ್ವಕವಾಗಿ ಗಮನಿಸುವುದನ್ನು ಕಲಿತಂತೆ, ತನ್ನ ಅವ್ವನ ದುಃಖವೂ ದುಃಸ್ಥಿತಿಯೂ ಅವನ ಹೃದಯಕ್ಕೆ ತಾಗಿದ್ದುವು. ಆಮೇಲೆ, ತನ್ನ ಮನೆಯ ಅಥವಾ ತನ್ನ ಮಾವನ ಮನೆಯ ಹಿರಿಯರಾರೂ ತನ್ನೊಡನೆಯಾಗಲಿ ತನ್ನಿದಿರಿನಲ್ಲಾಗಲಿ ಆ ಪ್ರಸ್ತಾಪವನ್ನೇ ಎತ್ತುತ್ತಿರಲಿಲ್ಲವಾದರೂ, ಕೋಣೂರಿಗೆ ಐಗಳ ಮಠದಲ್ಲಿ ಓದುವುದಕ್ಕೆ ಹೋದ ತರುವಾಯ ಐತನಂತಹ ಆಳುಮಕ್ಕಳಿಂದಲೂ ಆ ವಿಚಾರವನ್ನು ಸ್ವಲ್ಪಮಟ್ಟಿಗೆ ಗ್ರಹಿಸಿ ಮರುಗಿದ್ದನು. ಅಲ್ಲದೆ, ಒಮ್ಮೊಮ್ಮೆ ಅವನ ಸಣ್ಣಮಾವ (ಮುಕುಂದಯ್ಯ) ದೊಡ್ಡಮಾವ (ರಂಗಪ್ಪ ಗೌಡರು) ಕಾಗಿನಹಳ್ಳಿ ಅಜ್ಜಮ್ಮ (ದಾನಮ್ಮ ಹೆಗ್ಗಡತಿಯವರು: ಮುಕುಂದಯ್ಯ, ರಂಗಪ್ಪ ಗೌಡರು, ಧರ್ಮುವಿನ ತಾಯಿ ಮತ್ತು ಬೆಟ್ಟಳ್ಳಿ ದೇವಯ್ಯನ ಹೆಂಡತಿ ದೇವಮ್ಮ ಇವರನ್ನೆಲ್ಲ ಹೆತ್ತ ತಾಯಿ) ಅತ್ತೆಮ್ಮ (ರಂಗಪ್ಪಗೌಡರ ಹೆಂಡತಿ, ತಿಮ್ಮುವ ತಾಯಿ ಮತ್ತು ತನ್ನ ತಂದೆ ಹಳೆಮನೆ ದೊಡ್ಡನ್ಣ ಹೆಗ್ಗಡೆಯವರ ತಂಗಿ.) ಇವರೆಲ್ಲ ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದಾಗ ಕದ್ದು ನಿಂತು ಆಲಿಸಿಯೂ ಸತ್ಯಸಂಗ್ರಹ ಮಾಡಿದ್ದನು. ಕೆಲವು ಸಾರಿ, ತನ್ನ ಇಚ್ಛೆಯಿಂದಲ್ಲದಿದ್ದರೂ, ಘಟನಾವೈಚಿತ್ರದಿಂದಲೇ ತನ್ನ ತಂದೆಗೆ ಒದಗಿರುವ ದುರಂತದ ವಿಚಾರ ಅವನ ಕಿವಿಗೆ ಬಿದ್ದಿತ್ತು. ಹೀಗಾಗಿ, ಇತ್ತೀಚಿಗಂತೂ, ತನಗೂ ತನ್ನ ತಾಯಿಗೂ ಒದಗಿರುವ ವಿಪತ್ತಿನ ಅರಿವು ಅವನಿಗೆ ತಕ್ಕ ಮಟ್ಟಿಗೆ ಸಂಪೂರ್ಣವಾಗಿಯೆ ಗ್ರಾಹ್ಯವಾಗಿತ್ತು.
ಅದರಲ್ಲಿಯೂ ಆವೊತ್ತು ರಾತ್ರಿ ಅವರೊಡನೆ ಸನಿಹದಲ್ಲಿ ಕೋಣೂರಿನ ಜಗಲಿಯ ಮೇಲೆ ಮಲಗಿದ್ದಾಗ, ಅವನ ಸಣ್ಣ ಮಾವನಿಗೂ ಐಗಳಿಗೂ ನಡೆದ ಸಂಭಾಷಣೆಯನ್ನು ಕೇಳಿ, ಮರುದಿನ ತಾನು ಐತನನ್ನು ಜೊತೆಗೆ ಕರೆದುಕೊಂಡು ಹಳೆಮನೆಗೆ ಹೋದಾಗಿನಿಂದ ನಡೆದ ದುರ್ಘಟನಾ ಪರಂಪರೆಗಳಿಂದ ಅವನ ಶಿಶುಹೃದಯ ಜರ್ಝರಿತವಾಗಿತ್ತು. ತನ್ನ ತಾಯಿಯನ್ನು ಹೊಡೆದು ಕೋಣೆಗೆ ತಳ್ಳಿ ಚಿಕ್ಕಯ್ಯ ಬೀಗಹಾಕಿದ್ದುದನ್ನು ಕಂಡು ಮಂಜತ್ತೆಮ್ಮನಿಂದ ನಡೆದದ್ದನ್ನೆಲ್ಲ ಕೇಳಿ, ಬೀಗ ತೆಗೆದು ತಾನೆಷ್ಟು ಬಾಗಿಲು ತಳ್ಳಿ ಏನೇನೆಲ್ಲ ಹೇಳಿಕೊಂಡು ಅತ್ತರೂ ಅವ್ವ ಓಕೊಳ್ಳದೆ ಬಾಗಿಲು ತೆಗೆಯದೆ ಇದ್ದು, ಆಮೇಲೆ ಕೋಣೂರಿನಿಂದ ಸಣ್ಣ ಮಾವ ದೊಡ್ಡಮಾವ ಬಂದವರು ಕೊಡಲಿಯಿಂದ ಬಾಗಿಲು ಒಡೆದಮೇಲೆ ಒಳಗೆ ಹೋಗಿ ಪ್ರಜ್ಞೆತಪ್ಪಿ ಮಂಚದ ಮೇಲೆ ಬಿದ್ದಿದ್ದ ತನ್ನ ತಾಯಿಯನ್ನು ನೋಡಿದಾಗ, ಧರ್ಮು ಅವಳ ಪಾದ ಹಿಡಿದುಕೊಂಡು ಆಲಿಸಿದವರೆಲ್ಲರ ಕರುಳು ಬೇಯುವಂತೆ ಅತ್ತಿದ್ದನು. ಮರುದಿನ ಬೆಟ್ಟಳ್ಳಿಯ ಗಾಡಿ ಅಜ್ಜಯ್ಯನನ್ನು (ಸುಬ್ಬಣ್ಣ ಹೆಗ್ಗಡೆ) ಕರೆತಂದಾಗ ಅವರ ಮೊಣಕಾಲುಗಳನ್ನು ಅಪ್ಪಿ ಬಿಕ್ಕಿ ಬಿಕ್ಕಿ ರೋದಿಸಿದ್ದನು. ಅಜ್ಜಯ್ಯನಿಗೆ ಸಿಟ್ಟು ಬಂದು, ಚಿಕ್ಕಯ್ಯನನ್ನು (ತಿಮ್ಮಪ್ಪ ಹೆಗ್ಗಡೆ) ಹೀನಾಯಮಾನವಾಗಿ ಬೈದು, ಅವನ ಕಪಾಳಕ್ಕೆ  ಹೊಡೆಯಲು ಹೋದಾಗ, ಅವನು ತಳ್ಳಿದ ರಭಸಕ್ಕೆ ಅವರು ತೆಣೆಯಿಂದ ಕೆಳಗೆ ಉರುಳಿಬಿದ್ದು ಮೂರ್ಛೆ ಹೋಗಿದುದ್ದನ್ನೂ ಧರ್ಮು ಸ್ತಂಭಿತವಾಗಿ ಕಂಡಿದ್ದನ್ನು! ಆಮೇಲೆ ಅಜ್ಜಯ್ಯ ಹಾಸಗೆ ಹಿಡಿದಿದ್ದು, ಎರಡು ಮೂರು ದಿನಗಳಾದರೂ ಇನ್ನೂ ಎದ್ದಿರಲಿಲ್ಲ, ಕೋಣೂರು ದೊಡ್ಡಮಾವ, ಸಣ್ಣಮಾವ, ಬೆಟ್ಟಳ್ಳಿ, ದೇವ್ಯೆ ಚಿಕ್ಕಪ್ಪಯ್ಯು ಎಲ್ಲರೂ ಒತ್ತಿ ಒತ್ತಿ ಹೇಳಿ ಹೇಳಿ ಒಪ್ಪಿಸಿದ ಮೇಲೆ ತನ್ನ ಅವ್ವ ಬೆಟ್ಟಳ್ಳಿಗೆ ಕೆಲವು ದಿನಗಳ ಮಟ್ಟಿಗೆ ಹೋಗಿರಲು ಒಪ್ಪಿದಳು. ಅವಳೊಡನೆ ತಾನೂ ಬೆಟ್ಟಳ್ಳಿಗೆ ಬಂದು, ಕಲ್ಲೂರು ದೇವಸ್ಥಾನಕ್ಕೆ ಸತ್ಯನಾರಾಯಣ ವ್ರತ ಮಾಡಿಸಲು ಹೋಗುವ ತನ್ನ ತಾಯಿಯನ್ನೂ, ಅತ್ತಿಗೆಯನ್ನೂ ಜೊತೆಗೊಳ್ಳು ತಮ್ಮ ಮನೆ ಬೆಟ್ಟಳ್ಳಿಗೆ ಬಂದಿದ್ದ ಗೆಳೆಯ ಕಾಡುವನ್ನೂ ಅವನೊಡನೆ ಇದ್ದ ತಿಮ್ಮುವನ್ನೂ ಕೂಡಿಕೊಂಡಿದ್ದನು.
ಬೆಟ್ಟಳ್ಳಿಗೆ ಬಂದ ಮೇಲೆ ಧರ್ಮುಗೆ ಒಂದು ಅಪೂರ್ವ ಅನುಭವವಾಗಿತ್ತು. ನಿಚ್ಚರೋತೆಯ ತಮ್ಮ ಮನೆಯ ವಾತಾವರಣದಿಂದ ಹೊರಬಿದ್ದು ಬೆಟ್ಟಳ್ಳಿ ಮನೆಯ ಸಂತೋಷದ ಮನೋವಲಯಕ್ಕೆ ಪ್ರವೇಶಿಸಿದ್ದುದರ ಪರಿಣಾಮವಾಗಿದ್ದರೂ ಆಗಿರಬಹುದು; ತನ್ನ ಒಡನಾಡಿಗಳಾಗಿದ್ದ ಕಾಡು, ತಿಮ್ಮು ಅವರನ್ನು ಮರಳಿ ಕೂಡಿಕೊಂಡು ಆತ ಅಲೆದಾಟಗಳಲ್ಲಿ ಮಗ್ನನಾಗಿ ಮನಸ್ಸನ್ನು ದುಃಖಚಿಂತನೆಯಿಂದ ತಾತ್ಕಾಲಿಕವಾಗಿಯಾದರೂ ದೂರಮಾಡಿಕೊಂಡುದರ ಫಲವಾಗಿಯೂ ಇರಬಹುದು; ಅವರೆಡಕ್ಕಿಂತಲೂ ಅತಿಶಯವಾಗಿ ಪ್ರಭಾವಶಾಲಿಯಾಗಿದ್ದುದೆಂದರೆ, ಅವನ ತಾಯಿಯಲ್ಲಿ ಹಠಾತ್ತನೆ ತೋರಿಬಂದಿದ್ದ ಭಾವಪರಿವರ್ತನೆ! ತನ್ನ ಅವ್ವನ ಕಣ್ಣಲ್ಲಿ ಹೊಸಬೆಳಕು ಮೂಡಿ, ತನ್ನ ಅಕ್ಕರೆಯ ಆ ಮೊಗದಲ್ಲಿ ‘ಗೆಲವು’ ಕಾಣಿಸಿದುದನ್ನು ಕಂಡ ಧರ್ಮುವ ಹೃದಯವೂ ಗೆಲುವಾಗಿಬಿಟ್ಟಿತ್ತು: ಇಲ್ಲಿ, ಈಗ, ಯಾರೂ ಅವಳನ್ನು ‘ಹುಚ್ಚು ಹೆಗ್ಗಡ್ತಿ’ ಎಂದು ಕರೆಯುತ್ತಲೂ ಇರಲಿಲ್ಲ, ಕರೆಯುವಂತೆಯೂ ಇರಲಿಲ್ಲ. ಅವಳ ಮನಸ್ಸು, ಮಾತು, ನಡತೆ ಮತ್ತು ಎಲ್ಲ ಕ್ರಿಯೆ ಎಲ್ಲ ಇತರ ಸಾಧಾರಣವಾಗಿ ಸರ್ವರಿಗೂ ಹರ್ಷದಾಯಕವಾಗಿತ್ತು.
ಆ ಪರಿವರ್ತನೆಗೆ ಮೂಲಕಾರಣವಾಗಿದ್ದವನೆಂದರೆ: ಚೆಲುವಯ್ಯ!
ಬೆಟ್ಟಳ್ಳಿಗೆ ಬಂದು ತನ್ನ ತಂಗಿಯ ಮಗನನ್ನು, ಬಾಲೆಯಾಡಿಸುವ ಹುಡುಗಿಯ ಸೊಂಟದ ಮೇಲೆ, ಕಂಡಾಗಣಿಂದ ಧರ್ಮುವ ತಾಯಿ ರಂಗಮ್ಮಗೆ ತನ್ನ ಕಷ್ಟ ಸಂಕಟ ದುಃಖ ಎಲ್ಲ ಹೆಡೆಮುಚ್ಚಿದಂತಾಗಿ ಮನಸ್ಸಿಗೆ ಏನೋ ಒಂದು ಅನಿರ್ವಚನೀಯವಾದ ನೆಮ್ಮದಿ ಒದಗಿದಂತಾಗಿತ್ತು. ಅವಳು ಅವನನ್ನು ಎವೆಯಿಕ್ಕದೆ ನೋಡುತ್ತಾ ನಿಂತುದನ್ನು ನೋಡಿ ಪಕ್ಕದಲ್ಲಿಯೆ ನಿಂತಿದ್ದ ದೇವಮ್ಮಗೆ ತನ್ನ ಅಕ್ಕಯ್ಯನ ಮನಃಸ್ಥಿತಿಯ ವಿಚಾರದಲ್ಲಿ ತುಸು ಕಳವಳ ಉಂಟಾಗಿತ್ತು. ಅವಳನ್ನು ‘ಹುಚ್ಚು ಹೆಗ್ಗಡತಿ’ ಎಂದು ಜನರು ಕರೆಯುತ್ತಿದ್ದುದು ನೆನಪಿಗೆ ಬಂದು, ಆಕೆಗೆ ಆಗಾಗ ತಲೆ ಕೆಟ್ಟಂತಾಗಿ ಹುಚ್ಚಿಯಂತೆ ವರ್ತಿಸಿ ಬಿಡುವ ಸಂಭವ ಉಂಟು ಎಂಬುದನ್ನೂ ನೆನೆದು, ತನ್ನ ಕಂದನಿಗೆ ಏನಾದರೂ ಅಮಂಗಳವಾದೀತೆಂದು ಒಳಗೊಳಗೆ ಬೆದರಿದ್ದಳು. ಆದರೆ ಅದನ್ನು ತೋರಗೊಡದೆ, ತನ್ನ ಕಂದನನ್ನು ಹುಡುಗಿಯ ಸೊಂಟದಿಂದ ತಾನೆ ಎತ್ತಿಕೊಂಡು, ಅಕ್ಕನ ಮುಂದೆ ನಿಂತು ತೋರುತ್ತಾ “ನಿನ್ನ ದೊಡ್ಡಮ್ಮನ್ನ ನೋಡೋ, ಮಾತಾಡ್ಸೋ ಏ ತುಂಟಾ” ಎಂದಿದ್ದಳು. ಚೆಲುವಯ್ಯನೂ ತನ್ನ ದೊಡ್ಡಮ್ಮನ ಕಡೆ ಕಣ್ಣರಳಿ ನೋಡುತ್ತಾ, ಬಿಜಿಲು ಬಿಜಿಲು ದನಿಮಾಡುತ್ತಾ, ಅವಳೇ ಎತ್ತಿಕೊಳ್ಳಲಿ ಎಂಬಂತೆ, ತನ್ನ ಪುಟ್ಟ ಇನಿದೋಳುಗಳನ್ನು ಮುಂದಕ್ಕೆ ಚಾಚಿ ತನ್ನ ಅಮ್ಮನ ವಕ್ಷದಿಂದ ಚಿಮ್ಮತೊಡಗಲು, ರಂಗಮ್ಮ ಅಕ್ಕರೆಯುಕ್ಕಿ ಅವನನ್ನು ಎತ್ತಿಕೊಂಡು, ತನ್ನ ಎದೆಗವುಚಿ, ಕೆನ್ನೆಗೆ ಮೊಗವಿಟ್ಟು, ಮುಂಡಾಡಿದ್ದಳು. ಆ ಮುದ್ದಾಟದಲ್ಲಿ ಎಂತಹ ಅದ್ಭುತ ಪವಾಡ ನಡೆದು ಹೋಗಿತ್ತೆಂಬುದನ್ನು ಅಲ್ಲಿದ್ದವರಾರೂ ಗ್ರಹಿಸಲಿಲ್ಲ. ಆದರೆ ಒಂದು ವಿಷಯ ಮಾತ್ರ ಎಲ್ಲರಿಗೂ ಹೃದ್ಗೋಚರವಾಗಿತ್ತು: ಆ ಕ್ಷಣದಿಂದ ರಂಗಮ್ಮ ಬೇರೆಯ ವ್ಯಕ್ತಿಯಾಗಿದ್ದಳು! ಅವಳ ಮನಸ್ಸು ವಿಷಣ್ಣತೆಯ ಪೊರೆಗಳಚಿ ಸುಪ್ರಸನ್ನವಾಗಿಬಿಟ್ಟಿತ್ತು! ಆ ವ್ಯತ್ಯಾಸ ಎಷ್ಟು ಆಶ್ಚರ್ಯಕರವಾಗಿತ್ತು ಎಂದರೆ ಕೆಲವರಿಗಂತೂ ಅದೂ ಅವಳ ಹುಚ್ಚಿನ ಮತ್ತೊಂದು ರೀತಿಯೋ ಏನೋ ಎಂಬ ಶಂಕೆ ತಲೆದೋರಿತ್ತು.
ತನ್ನ ತಾಯಿ ತನಗೆ ಬುದ್ಧಿ ತಿಳಿದ ಮೇಲೆ ಅನೇಕ ವರ್ಷಗಳಿಂದಲೂ ಸರಿಯಾಗಿ ಉಣದೆ, ಉಡದೆ, ಮೀಯದೆ, ಬಾಚಿಕೊಳ್ಳದೆ ಕೃಶಳಾಗಿ, ಮಲಿನವಸ್ತ್ರೆಯಾಗಿ, ನೋಡುವುದಕ್ಕೆ ಹುಚ್ಚಿಯಂತೆಯೆ ತೋರುತ್ತಿದ್ದವಳು ಇದ್ದಕ್ಕಿದಂತೆ ಇತರ ಮುತ್ತೈದೆ ಗರತಿಯರಂತೆ ಇರತೊಡಗಿದುದನ್ನು ಕಂಡು ಧರ್ಮುಗೆ ಕಾಡುಪಾಲಾಗಿದ್ದ ಅವ್ವ; ಮತ್ತೆ ಮನೆಗೆ ಮರಳಿದಷ್ಟು ಹರ್ಷವಾಗಿತ್ತು. ತಾಯಿ ಮೂರು ಹೊತ್ತೂ ಚೆಲುವಯ್ಯನನ್ನು ಎತ್ತಿಕೊಂಡೊ, ಅವನಿಗೆ ಉಣಿಸುತ್ತಲೊ, ಸೀರೆ ಸರಿಸಿ ನೀಡಿದ ಕಾಲಿನ ಬತ್ತಲೆ ತೊಡೆಗಳ ಮೇಲೆ ಅವನನ್ನು ಮಲಗಿಸಿಕೊಂಡು ನೀರುಹೊಯ್ದು ಮೈತಿಕ್ಕಿ ಮೀಯಿಸುತ್ತಲೋ, ರಾತ್ರಿ ತೊಟ್ಟಿಲಿಗೆ ಹಾಕಿ ಮಲಗಿಸುವ ಮುನ್ನ ಪದ್ಧತಿಯಂತೆ ಮೈಗೆ ಎಣ್ಣೆ ತಿಕ್ಕುತ್ತಲೊ ಅಥವಾ ತೊಟ್ಟಿಲು ತೂಗುತ್ತಲೊ ಹರ್ಷಚಿತ್ತಳಾಗಿರುವುದನ್ನು ಕಂಡು ಧರ್ಮವೂ ಚೆಲುವಯ್ಯನನ್ನು, ತನ್ನ ಗೆಳೆಯರು ಕಾಡು ತಿಮ್ಮು ಪರಿಹಾಸ್ಯಮಾಡುವಷ್ಟರ ಮಟ್ಟಿಗೆ, ಓಲೈಸುತ್ತಿದ್ದನು.
ಬೆಟ್ಟಳ್ಳಿಯ ಗಾಡಿ ಇವರನ್ನೆಲ್ಲ ಕರೆದುಕೊಂಡು ಕಲ್ಲೂರು ದೇವಸ್ಥಾನಕ್ಕೆ ಸತ್ಯನಾರಾಯಣ ವ್ರತಾಚರಣೆಗಾಗಿ ಹೋಗಲು ಗೊತ್ತಾದ ದಿನಕ್ಕೆ ಹಿಂದಿನ ದಿನ ಸಾಯಂಕಾಲ ಕೋಣೂರಿನಿಂದ ಮುಕುಂದಯ್ಯ ಬಂದಾಗ, ಧರ್ಮು ತಿಮ್ಮು ಕಾಡು ಮೂವರೂ ಅವನ ಸುತ್ತಮುತ್ತ ಕೈಹಿಡಿದುಕೊಂಡೂ ಬಟ್ಟೆ ಹಿಡಿದುಕೊಂಡೂ ಚಪ್ಪಾಳೆ ಹೊಡೆಯುತ್ತಾ ಕುಣಿದಾಡಿದ್ದರು. ಒಬ್ಬನಿಗೆ ಸಣ್ಣಮಾವ, ಇನ್ನೊಬ್ಬನಿಗೆ ಚಿಕ್ಕಯ್ಯ, ಮತ್ತೊಬ್ಬನಿಗೆ ಸಣ್ಣಭಾವ ಆಗಿದ್ದ ಮುಕುಂದಯ್ಯ ಹುಡುಗರೊಡನೆ ಹುಡುಗನಾಗಿ, ಅವರ ಬಾಲಚೇಷ್ಟೆಗಳಲ್ಲೆಲ್ಲ ಭಾಗಿಯಾಗಿ ಅವರನ್ನು ನಗಿಸಿ ಕುಣಿಸಿ ಸಂತೋಷಪಡಿಸುತ್ತಿದ್ದುದರಿಂದ ಅವನನ್ನು ಕಂಡರೆ ಹುಡುಗರಿಗೆಲ್ಲ ಖುಷಿಯೋ ಖುಷಿ!
ತೀರ್ಥಹಳ್ಳಿಗೆ ಪಾದ್ರಿ ಜೀವರತ್ನಯ್ಯನ ಜೊತೆ ಹೋಗಿ ಅಷ್ಟು ಹೊತ್ತಿಗಾಗಲೆ ಹಿಂದಿರುಗಿ ಬಂದಿರಬಹುದಾಗಿದ್ದ ಮಗಳು ಅನಂತಯ್ಯ ಆ ಗೋಸಾಯಿ ತನ್ನ ತಂದೆ ಹೌದೊ ಅಲ್ಲವೊ ಎಂಬುದರ ವಿಚಾರವಾಗಿ ಏನಾದರೂ ಖಚಿತವಾರ್ತೆಯನ್ನು ತಂದಿರಬಹುದೆಂದು ಊಹಿಸಿ, ತಿಳಿಯಲು ಕಾತರನಾಗಿದ್ದ ಧರ್ಮಗೆ ನಿರಾಶೆಯಾಯಿತು. ಸಣ್ಣಮಾವ ಆ ಸುದ್ದಿಯನ್ನೇ ಎತ್ತಲಿಲ್ಲ. ಧರ್ಮೂಗೂ ಆ ಪ್ರಸ್ತಾಪವೆತ್ತಲು ಧೈರ್ಯ ಬರಲಿಲ್ಲ. ಆದರೂ ಅವನು ಕಿವಿಯಾಗಿ ಕಣ್ಣಾಗಿ, ಸಣ್ಣಮಾವ ದೇವೈಚಿಕ್ಕಪ್ಪಯ್ಯನೊಡನೆ ಕಲ್ಲಜ್ಜಯ್ಯನೊಡನೆ ಸೇರೆಗಾರ ಸುಬ್ಬಣ್ಣಸೆಟ್ಟರೊಡನೆ ಮಾತಾಡುವಾಗಲೆಲ್ಲ ಏನಾದರೂ ನೆವಮಾಡಿಕೊಂಡು ಅವರ ಸಂವಾದವನ್ನು ಆಲೈಸುವಷ್ಟು ಸಮೀಪದಲ್ಲಿಯೆ ಸುಳಿಯುತ್ತಿದ್ದನು. ಅದರಿಂದಲೂ ಏನೂ ಪ್ರಯೋಜನವಾಗಲಿಲ್ಲ. ಏಕೆಂದರೆ ಧರ್ಮುವಿನ ಸಂಚು ಮುಕುಂದಯ್ಯನಿಗೂ ಹೊಳೆದುಬಿಟ್ಟಿತ್ತಾದ್ದರಿಂದ ಅವನೂ ಯಾವುದೊ ರಹಸ್ಯವನ್ನು ದೊಡ್ಡವರೊಡನೆ ತುಂಬ ಕೆಳದನಿಯಲ್ಲಿ ಮಾತನಾಡುತ್ತಿದ್ದು, ಧರ್ಮು ಸಮೀಪಕ್ಕೆ ಸುಳಿದೊಡನೆ ಆ ಪ್ರಸ್ತಾಪವನ್ನೆ ತುಂಡುಗಡಿಸಿ, ಇನ್ನೇನನ್ನೊ-ತೋಟ ಗದ್ದೆ ಅಡಕೆಧಾರಣೆ ಷಿಕಾರಿ ಇತ್ಯಾದಿಗಳ ವಿಚಾರವಾಗಿ – ಮಾತನಾಡುತ್ತಿದ್ದವನಂತೆ ದನಿ ಏರಿಸಿ ಹೇಳತೊಡಗುತ್ತಿದ್ದನು!
ಸಾಲದ್ದಕ್ಕೆ ಬೇರೆ, ಕತ್ತಲಾದ ಮೇಲೆ ಜಗಲಿಯಲ್ಲಿ, ಆಗಿನ ಕಾಲಕ್ಕೆ ಆ ಪ್ರಾಂತಕ್ಕೇ ಸುವಿಶೇಷವಾಗಿ ಬೆಟ್ಟಳ್ಳಿ ಮನೆಯ ನವನಾಗರಿಕತೆಯ ಸಾಮಗ್ರಿಗಳಾಗಿದ್ದ ಲಾಟೀನು, ಲಾಂದ್ರ, ಲ್ಯಾಂಪುಗಳ ಉಜ್ವಲ ಪ್ರಕಾಶದಲ್ಲಿ ಮುಕುಂದಯ್ಯ ಹುಡುಗರನ್ನೆಲ್ಲ ಜಮಾಯಿಸಿ ಕುಮ್ ಚಟ್ ಹೊಡೆಯಿಸಿದ್ದನು; ಲಾಗ ಹಾಕಿಸಿ ನಗಿಸಿದ್ದನು; ಕುಸ್ತಿಮಾಡಿಸಿದ್ದನು; ಮಗ್ಗಿ ಹೇಳಿಸಿ, ಗೋವಿನ ಕಥೆ ಹಾಡಿಸಿದ್ದನು. ಕಡೆಗೆ, ಸೇರೆಗಾರ ಸುಬ್ಬಣ್ಣಸೆಟ್ಟರೂ ತಾನೂ ಸೇರಿ ಜೈಮಿನಿಯನ್ನು ರಾಗವಾಗಿ ಓದಿ ಪ್ರಸಂಗವನ್ನೂ ನಡೆಯಿಸಿದ್ದನು.
ಬಲ್ಲವರಿಗೆ ಮುಕುಂದಯ್ಯನ ಉದ್ದೇಶ ಸ್ಪಷ್ಟವಾಗಿತ್ತು; ಬೆಟ್ಟಳ್ಳಿಗೆ ಬಂದ ಮೇಲೆ ತನ್ನ ಅಕ್ಕ ಮತ್ತು ಅಕ್ಕನ ಮಗ ಇಬ್ಬರೂ ಚೆಲುವಯ್ಯನ ಸಂಗದಲ್ಲಿ ಹರ್ಷಚಿತ್ತರಾಗಿದ್ದಾರೆ ಎಂಬುದನ್ನು ಕೇಳಿ ತಿಳಿದಿದ್ದ ಅವನಿಗೆ ಅವರ ಆ ಗೆಲುವಿಗೆ ಹಾನಿತರುವ ವಾರ್ತೆಯನ್ನು ಬಹಿರಂಗಪಡಿಸಲು ಇಷ್ಟವಿರಲಿಲ್ಲ; ಮಾತ್ರವಲ್ಲ, ಅವರ ಮನಸ್ಸನ್ನು ಆ ವಿಚಾರದಿಂದ ದೂರವಾಗಿಸಬೇಕೆಂಬುದೂ ಅವನ ಇಚ್ಛೆಯಾಗಿತ್ತು. ಆದ್ದರಿಂದಲೇ, ಧರ್ಮು ಮೈಮರೆತಂತೆ ತಲ್ಲೀನನಾಗಿ ಚಂದ್ರೂಸನ ಕಥೆಯನ್ನು ಕೇಳಿ, ಭಗವದ್ ಭಕ್ತಿ ಎಂತಹ ಸಂಕಟಗಳನ್ನೂ ನಿವಾರಿಸುತ್ತದೆ ಎಂಬ ಆಶ್ವಾಸನೆಗೆ ಭಾವವುಕ್ಕಿ ಕಣ್ಣೀರು ಕರೆಯುತ್ತಿದ್ದುದನ್ನು ಗಮನಿಸಿದಾಗ ಮುಕುಂದಯ್ಯನಿಗೆ ಸಂತೃಪ್ತಿಯಾಗಿತ್ತು.
ಮರುದಿನ ಕಲ್ಲೂರಿಗೆ ಹೋಗುತ್ತಿದ್ದಾಗ ಗಾಡಿಯ ಮೇಲೆ ತನ್ನ ಗೆಳೆಯರೊಡನೆ ಕುಳಿತಿದ್ದಾಗ ಧರ್ಮು ಅಂತರಮುಖಿಯಾಗಿ ಮನಸ್ಸಿನಲ್ಲಿ ಮೆಲುಕು ಹಾಕುತ್ತಿದ್ದುದೂ ಅದನ್ನೆ!
ಅಲ್ಲೊಂದೆಡೆ ದಾರಿಯ ಪಕ್ಕದಲ್ಲಿದ್ದ ರಂಜದ ಮರದಿಂದ ಹೂವು ಉದುರಿ ನಿಬಿಡವಾಗಿ ಬಿದ್ದಿದ್ದು ಅದರ ಕಂಪು ಘಮ್ಮೆಂದು ಬರುತ್ತಿದ್ದುದನ್ನು ಗಮನಿಸಿದೊಡನೆ ತಿಮ್ಮವೂ ಕಾಡುವೂ, ಅಜ್ಜಮ್ಮ ‘ತಡೆಯಿರೋ; ತಡೆಯಿರೋ; ಹಾರಬೇಡಿ; ಗಾಡಿ ನಿಲ್ಲಿಸುತ್ತಾನೆ!’ ಎಂದು ಕೂಗಿಕೊಳ್ಳುತ್ತಾ ಗಾಡಿ ಹೊಡೆಯುವವನಿಗೆ ‘ಏ ಬಚ್ಚಾ, ಗಾಡಿ ನಿಲ್ಲಿಸೋ, ಹುಡುಗರು ಇಳೀಬೇಕಂತೆ’ ಎನ್ನುತ್ತಿರುಷ್ಟರಲ್ಲಿಯೆ ಗಾಡಿಯ ಹಿಂಭಾಗದಿಂದ ಕೆಳಗೆ ಹಾರಿಯೆಬಿಟ್ಟರು! ಕಾಡು ಹೇಗೋ ತತ್ತರಿಸಿ ನಿಂತನು; ತಿಮ್ಮು ಬಿದ್ದು ಎರಡುರುಳು ಉರುಳಿ, ಕೈಕಾಲು ಕೀಸಿಕೊಂಡು, ಸತ್ಯರಾಯಣೋತ್ಸವಕ್ಕಾಗಿ ಉಟ್ಟುಕೊಂಡಿದ್ದ ಅಡ್ಡಪಂಚೆಗೂ ತೊಟ್ಟಿದ್ದ ಬನೀನಿನ ತೋಳಿಗೂ ರಕ್ತದ ಕಲೆ ಕೆಂಪೇರುವಂತೆ ಮಾಡಿಕೊಂಡನು. ಸಾಲದ್ದಕ್ಕೆ ತನ್ನನ್ನು ನೂಕಿ ಬೀಳಿಸಿದವನು ಕಾಡಣ್ಣನೇ ಎಂದು ಕಿರಿಚಿ, ಅವನ ಮೈಮೇಲೆ ಬಿದ್ದು ಮುಖ ಮೋರೆ ಎನ್ನದೆ ಗುದ್ದಿಯೂ ಬಿಟ್ಟನು! ಧರ್ಮು ಬೇಗ ಬೇಗನೆ, ಅಷ್ಟರಲ್ಲಿಯೆ ನಿಂತಿದ್ದ ಗಾಡಿಯಿಂದ ಕೆಳಗೆ ಹಾರಿ, ಅವರಿಬ್ಬರ ನಡುವೆ ನುಗ್ಗಿ, ಜಗಳ ಬಿಡಿಸಬೇಕಾಯಿತು….
ಗಾಡಿ ಮುಂಬರಿದು ಕಾಡನ್ನು ದಾಟಿ ಒಂದು ಗದ್ದೆ ಕೋಗಿನ ಹತ್ತಿರಕ್ಕೆ ಬಂದಾಗ ಅಡೆಹಳ್ಳವೊಂದು ಅಡ್ಡಬಂದಿತು. ಗಾಡಿ ನಿಲ್ಲಿಸಿ, ಎತ್ತುಗಳ ಕೊರಳು ಬಿಚ್ಚಿದ ಮೇಲೆ ಎಲ್ಲರೂ ಇಳಿದರು. ಹೆಂಗಸರು ಮೂವರೂ ಸೇರಿ, ವೀಳೆಯದೆಲೆಯಲ್ಲಿ ಅಡಕೆಯನ್ನು ಮಡಿಚಿಟ್ಟು. ಪದ್ಧತಿಯಂತೆ ಗಂಗೆಗೆ ವೀಳೆಯ ಅರ್ಪಿಸುವ ಶಾಸ್ತ್ರ ಮಾಡಿದರು. ಚೆಲುವಯ್ಯನ ಮೇಲೆ ‘ಗಂಗವ್ವಾ ಒಳ್ಳೇದು ಮಾಡಮ್ಮಾ’ ಎಂದು ಪ್ರಾರ್ಥಿಸಿ ತೀರ್ಥ ಚಿಮುಕಿಸಿದರು. ಹುಡುಗರು ಹಳ್ಳದ ಬಿಳಿಯ ಕಲ್ಲುಗುಂಡುಗಳನ್ನು ತೆಗೆದೆತ್ತಿ ಕಪ್ಪೆಗಳಿಗೆ ಗುರಿಕಟ್ಟಿ ಹೊಡೆಯುವ ಪಂಥದಲ್ಲಿ ತೊಡಗಿದ್ದರು!…
ಹಳ್ಳವನ್ನು ದಾಟಿ ಗಾಡಿ ಗದ್ದೆಕೋಗಿನ ಮೂಲೆಗೆ ಹೋದಾಗ, ಹಾದಿಯ ಬಳಿಯೆ ಇದ್ದ ಹಳೆಪೈಕದವರ ಮನೆಯ ತಡಬೆಗೆ ವಾಲಿಸಿ ನಿಲ್ಲಿಸಿದ್ದ ಬೈಸಿಕಲ್ಲು ಕಣ್ಣಿಗೆ ಬಿತ್ತು. ಅಲ್ಲಿಯೆ ಪಕ್ಕದಲ್ಲಿದ್ದ ಅಗೋಡಿಯಲ್ಲಿ ಆರುಕಟ್ಟಿ ಉರುಳಿದ್ದ ಆ ಮನೆಯ ಮುದುಕ ಯಜಮಾನ ಗಾಡಿಯನ್ನು ಗುರುತಿಸಿ, ಮೇಣಿಯನ್ನು ಬೇರೆಯವನ ಕೈಗೆ ಕೊಟ್ಟು, ಓಡಿಬಂದು ‘ದ್ಯಾವೇಗೌಡ್ರು, ಮುಕುಂದೇಗೌಡ್ರು ಇಲ್ಲೆ ಷಿಕಾರಿಮಾಡಿ ಒಂದು ಹಂದೀ ಹಸಿಗೆ ಮಾಡಿಸ್ತಿದಾರೆ. ಗಾಡಿ ಬರಾಕೂ ಹೇಳಿ ನಿಲ್ಲಿಸು ಅಂತಾ ಹೇಳಿದ್ರು ನನ್ನ ಹತ್ರ’ ಎಂದನು.
“ನಾನು ಹೇಳ್ದೆ ‘ದೇವರ ಕೆಲಸಕ್ಕೆ ಹೋಗುವಾಗ ಕೋವಿ ಯಾಕ್ರೋ ತಗೊಂಡು ಹೋಗ್ತೀರಿ?’ ಅಂತಾ. ನನ್ನ ಮಾತು ಎಲ್ಲಿ ಕೇಳ್ತಾರೆ? ಇಬ್ಬರೂನೂ ಒಂದೇ ಬೈಸಿಕಲ್ಲಿನ ಮ್ಯಾಲೆ ಹತ್ತಿಕೊಂಡು, ಕೋವೀನೂ ಹಿಡುಕೊಂಡು, ‘ನಾವ್ ಮುಂದೆ ಹೋಗ್ತಾ ಇರ್ತೀವಿ; ನೀವ್ ನಿಧಾನವಾಗಿ ಗಾಡೀಲಿ ಬನ್ನಿ’ ಅಂತಾ ಹೊಲ್ಟರು. ಈಗ ನೋಡಿದ್ಯಾ? ಹಂದಿ ಹೊಡಕೊಂಡು, ಹಸಿಗೆ ಮಾಡಿಸ್ತಾ ಕೂತಾರೆ!” ದೊಡ್ಡಮ್ಮ ಹೆಗ್ಗಡಿತಿಯವರು ತಮ್ಮ ಅಸಮಾಧಾನವನ್ನು ಗೊಣಗುತ್ತಾ ‘ಏ ಬಚ್ಚಾ, ಎತ್ತಿನ ಕೊರಳು ಬಿಚ್ಚಿ, ಹೋಗಿ ಕೇಳಿಕೊಂಡು ಬಾರೋ, ‘ನಾವು ಮುಂದೆ ಹೋಗಾದೇನು?’ ಅಂತಾ ದೊಡ್ಡಮ್ಮ ಕೇಳ್ತಾರೆ ಅನ್ನು” ಎಂದು ಗಾಡಿ ಹೊಡೆಯುತ್ತಿದ್ದವನಿಗೆ ಬೆಸಸಿದರು. ಅವನು ಅವರು ಹೇಳಿದಂತೆ ಮಾಡಿ, ಹಂದಿ ಹಸಿಗೆಯಾಗುತ್ತಿದ್ದ ಜಾಗಕ್ಕೆ ಹಳೆಪೈಕದವನೊಡನೆ ಹೊರಡಲು, ಮೂವರು ಹುಡುಗರೂ ಕುತೂಹಲದಿಂದ ತಕಪಕನೆ ಕುದಿಯುತ್ತಾ ಅವರನ್ನು ಹಿಂಬಾಲಿಸಿದರು. ಅವ್ವ, ಅಜ್ಜಮ್ಮ ಕೂಗಿ ಕರೆಯುತ್ತಿದ್ದುದನ್ನು ಒಂದಿನಿತೂ ಲೆಕ್ಕಿಸದೆ: ‘ಗಂಡು ಮಕ್ಕಳ ಹಣೆಬರಾನೆ ಹೀಂಗೆ!’ ಎಂದರು ದೊಡ್ಡಮ್ಮ ಹೆಗ್ಗಡಿತಿಯವರು ದೇವಮ್ಮ ತನ್ನ ಅಕ್ಕನ ತೊಡೆಯ ಮೇಲಿದ್ದ ತನ್ನ ಕಂದನನ್ನು ಅವನ ಅಜ್ಜಮ್ಮನ ಟೀಕೆಯಿಂದ ಹೊರತುಪಡಿಸುವಂತೆ, ತನ್ನ ಮಾತೃತ್ವದ ದೃಷ್ಟಿರಕ್ಷೆ ನೀಡಿದಳು, ಮುಗುಳು ನಗೆಗೂಡಿ ನೋಡಿ!
ಮಲೆನಾಡಿನಲ್ಲಿ ಹುಡುಗರೆಲ್ಲರಿಗೂ ಬೇಟೆ ಎಂದರೆ ಪ್ರಾಣ. ದೊಡ್ಡವರು ನಾಯಿ ಕರೆದುಕೊಂಡು ಕಾಡು ಹತ್ತುವುದನ್ನು ಅವರು ಎಂತಹ ಕರುಬಿನಿಂದ ನೋಡುತ್ತಿರುತ್ತಾರೆ? ‘ನಾವೂ ನಾಯಿಗಳಾಗಿದ್ದಿದ್ದರೆ!’ ಎಂದುಕೊಳ್ಳುವುದೂ ಉಂಟು. ಯಾವಾಗಲಾದರೂ ಒಮ್ಮೆ ಬೇಟೆ ನುಗ್ಗುವ ಕಾಡು ಅಂತಹ ಅಪಾಯಕರವಾದ ದುರ್ಗಮ ಪ್ರದೇಶವಲ್ಲದಿದ್ದಾಗ ಹುಡುಗರನ್ನೂ ಕರೆದುಕೊಂಡು ಹೋಗುವುದೂ ಉಂಟು. ಅಂತಹ ಕೃಪೆಗೆ ಪಾತ್ರರಾದಾಗ ಆ ಹುಡುಗರ ಆನಂದ ಹೇಳತೀರದು. ಬೇಟೆಯಲ್ಲಿ ಅವರ ಆಸಕ್ತಿ ಎಷ್ಟು ಎಂದರೆ, ಬೇಟೆಯಾದ ಪ್ರಾಣಿಯನ್ನು ಹಸಿಗೆ ಮಾಡುವ ಮುನ್ನ ತೋರಿಸಿದರೂ ಸಾಕು, ಧನ್ಯರಾದೆವೆಂದು ಭಾವಿಸುತ್ತಾರೆ! ಎಷ್ಟೋ ಸಾರಿ ಮಧ್ಯರಾತ್ರಿಯಾಗಿದ್ದು ಅವರು ಗಾಢ ನಿದ್ರೆಯಲ್ಲಿದ್ದರೂ, ತಿಂಗಳ ಬೆಳಕಿನ ಬೇಟೆಯಲ್ಲಿ ಹೊಡೆದು ಮನೆಗೆ ತಂದ ಕಾಡು ಹಂದಿಯನ್ನು ಅವರನ್ನೆಬ್ಬಿಸಿ ತೋರಿಸದಿದ್ದರೆ ಮರುದಿನವೆಲ್ಲಾ ಅವರು ಆ ನಿರಾಶೆಯನ್ನನುಭವಿಸಿ ಸಂಕಟಪಡುತ್ತಾರೆ! ಬೇಟೆ ಅಂದರೆ ಅಂಥಾ ಹುಚ್ಚು!
ಸಮೀಪಿಸುತ್ತಿದ್ದ ಹಾಗೆಯೇ ‘ಹಸಿಗೆ’ಯಾಗುತ್ತಿದ್ದ ಕಾಡುಹಂದಿಯ ಜಂವಿ ಸುಟ್ಟ ವಾಸನೆ ಗಾಳಿಯಲ್ಲಿ ತೇಲಿಬಂತು. ಮೂಗಾಳಿ ಸಿಕ್ಕ ನಾಯಿಗಳಂತೆ ಮೂವರು ಹುಡುಗರೂ ಆ ಸ್ಥಳಕ್ಕೆ ಒಬ್ಬರ ಮೇಲೆ ಒಬ್ಬರು ನುಗ್ಗಿ ಓಡಿದರು. ನಾಲ್ಕಾರು ಜನರು ಒಂದು ದೊಡ್ಡ ಒಂಟಿಗ ಹೋರಿ ಕಾಡು ಹಂದಿಯನ್ನು ದೊಡ್ಡ ಮರಗಳನ್ನಡಕಿ ಹೊತ್ತಿಸಿದ್ದ ಬೆಂಕಿಯಲ್ಲಿ ಸುಡುತ್ತಿದ್ದರು. ಅದರ ಎರಡೆರಡು ಕಾಲುಗಳನ್ನು ಹೆಬ್ಬಳ್ಳಿಗಳಿಂದ ಬಿಗಿದು ಕಟ್ಟಿ, ನಡುವೆ ಬಿದಿರಗಳು ತೂರಿಸಿ, ಅದನ್ನು ಎತ್ತಿ ಎತ್ತಿ ಮಗ್ಗುಲಿಂದ ಮಗ್ಗುಲಿಗೆ ಬೆಂಕಿಯ ಮೇಲೆ ಕಾಯಿಸಿ, ತಿರುಗಿಸುತ್ತಿದ್ದರು. ಇನ್ನಿಬ್ಬರು, ಆಚೆಗೊಬ್ಬ ಈಚೆಗೊಬ್ಬ, ಕೀಸಿ ಹರಿತಮಾಡಿದ ಅಡಕೆಯ ದಬ್ಬೆಗಳಿಂದ ಹಂದಿಯ ಚರ್ಮವನ್ನು ಹತ್ತರಿ ಹಿಡಿವಂತೆ ಹೆರಸುತ್ತಿದ್ದರು. ಅದರ ಅಂಗಾಂಗಗಳೆಲ್ಲ, ಮರ್ಯಾಂಗಗಳೂ ಸೇರಿ, ನಿಮ್ಮನೆ ನಿಗುರಿದ್ದುವು. ಹುಡುಗರ ಕುಚೋದ್ಯ ಟೀಕೆಗಳಿಗೆ ಪಕ್ಕಾಗಿ.
ಮೂವರು ಹುಡುಗರೂ ಆ ದೃಶ್ಯವನ್ನು ಆಸೆಯಿಂದ, ಹೆಮ್ಮೆಯಿಂದ, ಪ್ರಶಂಸೆಯಿಂದ ಅವಲೋಚಿಸುತ್ತಾ ನಿಂತರು, ಕೂತರು, ಎದ್ದರು, ಓಡಾಡಿದರು. ಸುತ್ತಲೂ ಸುತ್ತಿ ಸುತ್ತಿ ಮತ್ತೆ ಮತ್ತೆ ವೀಕ್ಷಿಸಿದವರು. ಅವರಿಗೆ ಆ ಹಂದಿ ಒಂದು ಪ್ರತೀಕವಾಗಿತ್ತು ಸಹ್ಯಾದ್ರಿಯ ವಿಸ್ತೃತ ಅರಣ್ಯಗಳಿಗೆ, ಅಲ್ಲಿಯ ದುರ್ಗಮ ಕಾನನಾಂತರಕ್ಕೆ, ಅದರ ನಿಬಿಡ ಹಳುವಿಗೆ, ಅದರ ಘೋರ ಭಯಂಕರತೆಗೆ, ಅದರ ಬೇಟೆಯ ಸಾಹಸಕ್ಕೆ. ‘ಹಸಿಗೆ’ಯಾಗುತ್ತಿದ್ದ ಆ ಮಹಾಕಾಯದ ಜಂತುವಿನ ಪ್ರತಿಮಾ ಗವಾಕ್ಷದ ಮುಖಾಂತರ ಅವರ ಚೇತನಗಳಿಗೆ ಅದರ ಹಿಂದಿರುವ ವಿಸ್ಮಯಲೋಕಕ್ಕೆ ಪ್ರವೇಶ ಒದಗಿದಂತಾಗಿತ್ತು.
“ಅಲ್ಲಿ ನೋಡೋ, ಅದರ ಕೋರೆ!”
“ಅದೆಲ್ಲಾದ್ರೂ ತಿಂವಿದ್ರೆ ಹೊಟ್ಟೆಪಚ್ಚಿ ಎಲ್ಲ ಹೊರಗೇ ಬರ್ತದೆ, ಅಲ್ಲೇನೊ?”
“ನಮ್ಮನೇಲಿ ಅವತ್ತೊಂದಿನ ಬ್ಯಾಟೆಗೆ ಹೋಗಿದ್ದಾಗ, ನಮ್ಮದೊಂದು ಹೊಸಾ ಚೀನೀನಾಯಿ ಕಣೋ, ಕಮೀನು, ಚಿಕ್ಕಯ್ಯ ತೀರ್ಥಹಳ್ಳಿಗೆ ಹೋಗಿದ್ದಾಗ ತಂದಿದ್ರು, ಏನು ಚೆನ್ನಾಗಿ ಷಿಕಾರಿ ಮಾಡ್ತಿತ್ತು ಅಂತೀಯಾ? ಅದನ್ನು ಸಿಗಿದು ಹಾಕಿ ಬಿಟ್ಟಿತ್ತು ಕಣೋ, ಒಂದು ಒಂಟಿಗನ ಹಂದಿ!” ತಿಮ್ಮು ಅದರ ಕತೆ ಹೇಳಿದನು.
“ಇಂಥಾ ಹಂದಿ ಎಂಥಾ ಹೆಬ್ಬುಲೀನೂ ಸೀಳಿಹಾಕಿಬಿಡ್ತದೆ ಕಣೋ. ಆಗುಂಬೇಲಿ….” ಎಂದು ಕಾಡು ತಾನು ಕೇಳಿದ್ದ ಸಂಗತಿಯನ್ನು ಹೇಳಿದನು.
“ಇಂಥಾ ಹಂದಿ ಎಂಥಾ ಹೆಬ್ಬುಲೀನೂ ಸೀಳಿಹಾಕಿಬಿಡ್ತದೆ ಕಣೋ. ಆಗುಂಬೇಲಿ….” ಎಂದು ಕಾಡು ತಾನು ಕೇಳಿದ್ದ ಸಂಗತಿಯನ್ನು ಹೇಳಿದನು.
ಅಷ್ಟರಲ್ಲಿ “ಏ ಕಾಡು, ನೀವೆಲ್ಲ ಹೋಗ್ರೋ ಗಾಡಿಗೆ. ಗಾಡಿ ಹೊರಡ್ತದೆ. ನಾವು ಆಮೇಲೆ ಬರುತ್ತೀವಿ” ಎಂಬ ದೇವಯ್ಯನ ಆಜ್ಞಾಪನೆ ಕೇಳಿಸಿ, ಮುವರು ಹುಡುಗರೂ ಮನಸ್ಸಿಲ್ಲದ ಮನಸ್ಸಿನಿಂದ, ಹಸಿಗೆಯಾಗುತ್ತಿದ್ದ ಹಂದಿಯ ಕಡೆಗೆ ತಿರುಗಿ ತಿರುಗಿ ನೋಡುತ್ತಾ ಹಿಂದಿರುಗಿದರು.
ಗಾಡಿ ಕಲ್ಲೂರನ್ನು ಸಮೀಪಿಸುತ್ತಿದ್ದಾಗ, ರಸ್ತೆಗೆ ಒಳದಾರಿಯಿಂದ ಬಂದು ಕೂಡುತ್ತಿದ್ದ ಕಾಲುದಾರಿ ಸೇರುವೆಡೆ, ಒಂದು ಬಾನೆತ್ತರ ಬೆಳೆದಿದ್ದ ದೊಡ್ಡ ಧೂಪದ ಮರದ ಬುಡದ ಹೆಬ್ಬೇರಿನ ಮೇಲೆ ಯಾರೋ ಒಬ್ಬರು ಕುಳಿತಿದ್ದುದು ಗಾಡಿ ಹೊಡೆಯುವ ಬಚ್ಚನ ಕಣ್ಣಿಗೆ ಬಿತ್ತು. ಅವರು ಹಣೆಗೆ ಬಳಿದುಕೊಂಡಿದ್ದ ಬಿಳಿಯ ಮತ್ತು ಕೆಂಪು ನಾಮಗಳ ಪಟ್ಟೆ ಆ ದೂರಕ್ಕೂ ಎದ್ದು ಕಾಣುತ್ತಿತ್ತು.
ಗಾಡಿಯೊಳಗೆ ಮುಂದೆ ಕುಳಿತಿದ್ದ ದೊಡ್ಡಮ್ಮ ಹೆಗ್ಗಡಿತಿಯವರು ಕೇಳಿದರು “ಯಾರೋ ಅದು ಅಲ್ಲಿ ಕೂತಿದಾರಲ್ಲಾ? ದಾಸಯ್ಯನ ಕಂಡ ಹಾಂಗೆ ಕಾಣ್ತದೆ!”
ತುಸು ನಗುತ್ತಾ ಬಚ್ಚ ಹೇಳಿದನು “ಆ ರೀತಿ ನಾಮದ ಪಟ್ಟೆ ಬಡುಕೊಳ್ಳೋರು ಮತ್ಯಾರು? ಹಳೆಮನೆ ಹಂಚಿನಮನೆ ಅಯ್ಯೋರು ಇರಬೇಕು. ಅವರು ಆಗಾಗ್ಗೆ ಬರ್ತಾನೆ ಇರ್ತಾರೆ, ಕಲ್ಲೂರು ದೇವರ ಹತ್ರಕ್ಕೆ.”
ಗಾಡಿ ಸಮೀಪಿಸುತ್ತಿದ್ದುದನ್ನು ಕಂಡು ಧೂಪದ ಮರದ ಬೇರಿನ ಮೇಲೆ ಕುಳಿತಿದ್ದ ವ್ಯಕ್ತಿ ಎದ್ದು ನಿಂತಿತು. “ಓಹೋ, ಬೆಟ್ಟಳ್ಳಿ ಗೌಡರ ಗಾಡಿ ಇರಬೇಕು!” ಎಂದುಕೊಂಡರು. ಶಂಕರಪ್ಪ ಹೆಗ್ಗಡೆಯವರು, ತಮಗೆ ತಾವೆ ಮತ್ತೆ ಕಾಲುದಾರಿಯ ದಿಕ್ಕಿಗೆ ತಿರುಗಿ, ಯಾರನ್ನೋ ನೀರಿಕ್ಷಿಸುತ್ತಿರುವಂತೆ ಅತ್ತ ನೋಡುತ್ತಾ ನಿಂತರು. ಅವರ ಹೆಂಡತಿ ಸೀತಮ್ಮ, ಮಗ ರಾಮು, ಬಾಲೆ ಆಡಿಸುವ ಹುಡುಗಿ ಕೆಂಪಿ – ದೂರದಲ್ಲಿ ದಣಿದು ಮೆಲ್ಲಗೆ ಕಾಲುಹಾಕುತ್ತಿದ್ದರು. ಅವರ ಕೈಕೂಸು ತಾಯಿಯ ಸೊಂಟದಲ್ಲಿತ್ತು.
ಬೆಟ್ಟಳ್ಳಿ ಮನೆಯ ವಿಚಾರವಾಗಿ ಹಳೆಮನೆ ಹೆಂಚಿನ ಮನೆಯ ಶಂಕರಪ್ಪ ಹೆಗ್ಗಡೆಯವರಿಗೆ ನೇರವಾದ ಯಾವ ವೈರಭಾವ ಇರಲಿಲ್ಲವಾದರೂ ತನ್ನ ತಂಗಿ ಜಟ್ಟಮ್ಮನನ್ನು ಭರಮೈಹೆಗ್ಗಡೆಯವರು ಲಗ್ನವಾದಂದಿನಿಂದ ಸಿಂಬಾವಿ ಮನೆಯ ನೆಂಟಸ್ತಿಕೆಯ ದೆಸೆಯಿಂದಾಗಿ ಅವರು ಬೆಟ್ಟಳ್ಳಿಯ ವಿಚಾರದಲ್ಲಿ ಬಿಗುಮನಸ್ಸಿನಿಂದ ಇರುತ್ತಿದ್ದುದೆ ರೂಢಿ. ಅಲ್ಲದೆ ಜಾತಿ, ನೀತಿ, ಪೂಜೆ, ಪುನಸ್ಕಾರ, ಬಿರಾಂಜರು, ದೇವರು, ದೆಯ್ಯ, ಆಚಾರ, ಕಟ್ಟಳೆಗಳಲ್ಲಿ ಸಂಪ್ರದಾಯನಿಷ್ಠೆಯ ವೀರಾನುಯಾಯಿಯಾಗಿದ್ದ ಶಂಕರಪ್ಪ ಹೆಗ್ಗಡೆಗೆ ಕಿಲಸ್ತರ ಪಾದ್ರಿಗಳನ್ನೆಲ್ಲ ಮನೆಗೆ ಸೇರಿಸಿ, ಅವರೊಡನೆ ಸಹಪಂಕ್ತಿ ಭೋಜನವನ್ನೂ ಮಾಡಿ, ಅವರು ಕೊಟ್ಟ ವಿಲಾಯತಿ ವಸ್ತುಗಳನ್ನೆಲ್ಲ ಲಾಟೀನು, ಬೈಸಿಕಲ್ಲು, ತೋಟಾಕೋವಿ, ಸೀಮೆ ಬಿಸ್ಕತ್ತು, ಕ್ರಾಪು, ಹ್ಯಾಟು, ಬೂಟ್ಸು ಇತ್ಯಾದಿ ಇತ್ಯಾದಿ ತಿರುಪತಿ, ಧರ್ಮಸ್ಥಳಗಳ ದೇವರ ಕಾಣಿಕೆ ಇಟ್ಟಿರುವ ಮನೆಯ ಒಳಕ್ಕೆ ತಂದಿಟ್ಟುಕೊಂಡು, ಕುಲಗೆಟ್ಟು ಹೋಗಿರುವ ಬೆಟ್ಟಳ್ಳಿಯವರನ್ನು ಕಂಡರೆ ತಿರಸ್ಕಾರ, ಜಿಗುಪ್ಸೆ!
ಆದ್ದರಿಂದಲೆ ಎತ್ತಿನ ಕೊರಳ ಗಂಟೆ ಗಗ್ಗರದ ಸರಗಳಿಂದ ಸಶಬ್ದವಾಗಿ ಚಲಿಸುತ್ತಿದ್ದ ಗಾಡಿ ತಮ್ಮ ಬಳಿಯೆ ಬಂದು ನಿಂತು ನಿಃಶಬ್ದವಾದುದನ್ನು ಕಿವಿ ಸಂಪೂರ್ಣವಾಗಿ ಗಮನಿಸಿದ್ದರೂ ಶಂಕರಪ್ಪ ಹೆಗ್ಗಡೆ ಯಾವುದನ್ನೂ ನೋಡದೆ ಏನನ್ನೂ ಆಲಿಸದಿದ್ದವರಂತೆ ಅತ್ತ ಮುಖಹಾಕಿದ್ದವರು ಇತ್ತ ಮುಖ ತಿರುಗಿಸದೆ ನಿಂತಿದ್ದರು!
“ಇಲ್ಲಿ ಯಾಕೆ ನಿಂತೀಯಾ, ಶಂಕರಮಾವಾ?” ಗಾಡಿಯ ಹಿಂದುಗಡೆಯಿಂದ ಕೆಳಗೆ ಹಾರಿದ ತಿಮ್ಮು ಪ್ರಶ್ನೆ ಕೇಳುತ್ತಾ ತಮ್ಮ ಹತ್ತಿರಕ್ಕೆ ಬಂದ ಮೇಲೆಯೆ ಶಂಕರಹೆಗ್ಗಡೆ ಇತ್ತ ಮುಖ ತಿರುಗಿಸಿ ಗಾಡಿಯ ಮುಂಭಾಗದಲ್ಲಿ ಕುಳಿತಿದ್ದ ದೊಡ್ಡಮ್ಮ ಹೆಗ್ಗಡತಿಯವರನ್ನು ಆಗತಾನೆ ಗುರುತಿಸಿದಂತೆ ನೋಡಿ “ಓಹೋಹೋ, ನೀವೇನು? ನಾನು ಮೇಗರೊಳ್ಳಿ ಜವಳಿ ಅಂಗಡಿ ಪೈಗಳ ಗಾಡಿ ಅಂತ ಮಾಡಿದ್ದೆ!… ಏನು, ಬೆಟ್ಟಳ್ಳಿ ಚಿಗಮ್ಮಾ, ಎಲ್ಲಾ ಚೆನ್ನಾಗಿ ಇದ್ದೀರಾ?” ಎಂದು ಗಾಡಿಯ ಹತ್ತಿರಕ್ಕೆ ಬಂದು ಅದರ ಮುಂಭಾಗದಲ್ಲಿ ಎತ್ತಿನ ಪಕ್ಕಕ್ಕೆ ನಿಂತು, ತುಸು ತಲೆ ಬಾಗಿಸಿ ಗಾಡಿಯೊಳಕ್ಕೆ ನೋಡಿ “ಓ ಹೋ ಹೋ! ಎಲ್ಲಾ ಹೊರಟಿದ್ದೀರಿ!….. ದೂರಾ?” ಎಂದರು.
ತಿರುಪತಿಗೆ ಹೋಗಿ ಹಿಂದಿರುಗದಿದ್ದ ದೊಡ್ಡಣ್ಣ ಹೆಗ್ಗಡೆಯೂ ತಾನೂ ಸಣ್ಣ ಹುಡುಗರಾಗಿ ಹಳೆಮನೆಯ ಉಚ್ಛ್ರಾಯ ಕಾಲದ ಕಣ್ಮಣಿಗಳಂತಿದ್ದ ಆ ಪಾಲಾಗುವ ಮುನ್ನಿನ ಬಹುಪೂರ್ವ ಸ್ಮರಣೆಯ ಪುಣ್ಯಕಾಲದಲ್ಲಿ ಬೆಟ್ಟಳ್ಳಿ ಚಿಕ್ಕಮ್ಮ (ದೊಡ್ಡಮ್ಮ ಹೆಗ್ಗಡತಿಯವರು) ಹಳೆಮನೆಗೆ ಬಂದಾಗಲೆಲ್ಲ, ಅವರ ಮಡಿಲಿನಿಂದ ಹೊರಹೊಮ್ಮುತ್ತಿದ್ದ ಕೊಬರಿ ಬೆಲ್ಲವನ್ನೋ ಮಂಡಕ್ಕಿ ಮಿಠಾಯಿಯನ್ನೊ ತಿಂದು, ಸುಖಿಸಿ, ಕೇಕೆ ಹಾಕುತ್ತಿದ್ದ ಸಲಿಗೆಯ ಕಾಲದ ನೆನಪಾಗಿ, ಸೆಡೆತು ನಿಂತಿದ್ದ ಶಂಕರ ಹೆಗ್ಗಡೆಯ ಚೇತನ ಸರಳ ಸ್ಥಿತಿಗಿಳಿದು, ಆಲಿಸಿತು.
“ಏನೋ ಎಲ್ಲಾ ದೇವರು ನಡಸಿ ಹಿಂಗಿದ್ದೀಂವಪ್ಪಾ, ಶಂಕರೂ. ಇಲ್ಲೇ ಕಲ್ಲೂರಿಗೆ ಹೋಗ್ತಾ ಇದ್ದೀಂವಿ, ದೇವರಿಗೆ ಒಂದು ಹಣ್‌ಕಾಯಿ ಮಾಡ್ಸಿ ಬರಾನಾ ಅಂತಾ. ನಿಮ್ಮನೇ ಕಡೇ ಹ್ಯಾಂಗಿದಾರೆ, ಸೀತೂ ಮಕ್ಕಳೂ ಎಲ್ಲಾ?”
‘ಚಿಕ್ಕಮ್ಮನ ತಲೆಕೂದಲೆಲ್ಲಾ ಎಷ್ಟು ಬೆಳ್ಳಗಾಗಿ ಹೋಗ್ಯದೆ? ಅಜ್ಜೀ ನೋಡಿದ್ಹಾಂಗ ಆಗ್ತದಲ್ಲಾ!’ ಮನಸ್ಸಿನಲ್ಲಿಯೆ ಅಂದುಕೊಂಡ ಶಂಕರ ಹೆಗ್ಗಡೆ, ಗಟ್ಟಿಯಾಗಿ ಉತ್ತರಿಸಿದನು ತನ್ನಲ್ಲಿ ಮಾತೃಭಾವವನ್ನು ಉದ್ದೀಪಿಸುತ್ತಿದ್ದ ದೊಡ್ಡಮ್ಮ ಹೆಗ್ಗಡಿತಿಯವರ ಸುಕ್ಕೇರಿದ ಮುಖವನ್ನು ಅಕ್ಕರೆಗೂಡಿದ ಕನಿಕರದಿಂದ ಗಮನಿಸುತ್ತಾ; “ಹ್ಯಾಂಗಿದಾರೆ ಅಂತಾ ಹೇಳ್ಲಿ, ಚಿಗಮ್ಮಾ?” ದೂರ ಕಾಲುದಾರಿಯತ್ತ ಕಣ್ಣಾಗಿ, “ಅಲ್ಲೇ ದೂರ ಬರತಾ ಇದಾರಲ್ಲಾ, ನೀವೇ ನೋಡಬಹುದು” ಎಂದು ಆ ಕಡೇಗೇ ಹಿಗ್ಗಿ ಕೇಕೆ ಹಾಕುತ್ತಾ ಓಡುತ್ತಿದ್ದ ತಿಮ್ಮು ಧರ್ಮ ಕಾಡು ಅವರನ್ನು ನಿರ್ದೇಶಿಸಿ “ಬಿದ್ದೀರ್ರೋ? ಯಾಕೆ ಹಂಗೆ ಓಡ್ತಿರೋ?” ಎಂದು ಕೂಗಿದರು.
ತನ್ನ ಕಡೆಗೆ ಓಡಿ ಬರುತ್ತಿದ್ದ ‘ಧರ್ಮಣ್ಣಯ್ಯ’, ‘ಕಾಡಣ್ಣಯ್ಯ’ ಮತ್ತು ‘ತಿಮ್ಮಬಾವ’ ಮೂವರನ್ನೂ ಗುರುತಿಸಿದ ರಾಮು, ಮೆಲ್ಲಗೆ ಏದುತ್ತಾ ಬಹುಪ್ರಯಾಸದಿಂದ ಕಾಲುಹಾಕುತ್ತಿದ್ದ ತನ್ನ ತಾಯಿಯ ಪಕ್ಕದಲ್ಲಿ ಅಷ್ಟೇ ಆಯಾಸದಿಂದ ಮೆಲ್ಲಗೆ ಬರುತ್ತಿದ್ದವನು, ತನ್ನ ಬಡಕಲು ಒಡಲಿನ ಅಸಾಮರ್ಥ್ಯವನ್ನು ಒಂದಿನಿತೂ ಬಗೆಗೆ ತಾರದೆ, ಹಿಗ್ಗಿನ ಹೊನಲಿಗೆ ಸಿಕ್ಕವನಂತೆ ಮುನ್ನುಗ್ಗಿ ಓಡಿದನು: ಹತ್ತು ಹೆಜ್ಜೆಗಳಲ್ಲಿಯೆ ಬಿದ್ದೂ ಬಿಟ್ಟನು! ಧರ್ಮ ಓಡಿ ಬಂದು ತಬ್ಬಿ ಅವನನ್ನು ಎತ್ತಿದಾಗ, ಅವನ ಮೊಣಕಾಲು ಮಂಡಿ ಮೊಣಕೈಗಳು ಹಾದಿಯ ಜಂಬಿಟ್ಟಿಗೆ ಕಲ್ಲಿಗೆ ತೀಡಿ ಗಾಯವಾಗಿ, ಅವನು ಸದ್ದು ಮಾಡದೆ ಅಳುತ್ತಿದ್ದನು. ತಿಮ್ಮು ಕಾಡು ಇಬ್ಬರೂ ರಾಮುವ ಬಟ್ಟೆಗೆ ಬಂದಿದ್ದ ಶಂಕರ ಹೆಗ್ಗಡೆಯವರ ಕೈ ಜೀವಚ್ಛವದಂತಿದ್ದ ತಮ್ಮ ಮಗನ ಬೆನ್ನಿಗೆ ಒಂದು ಏಟನ್ನೂ ಕೊಟ್ಟು ಬಿಟ್ಟಿತು! ‘ಬೇಡ, ಚಿಕ್ಕಯ್ಯ!’ ‘ಬೇಡ, ಶಂಕರಮಾವ!’ ‘ಬೇಡ ಚಿಗಪ್ಪಯ್ಯ!’ ಎಂದು ಕೈ ಅಡ್ಡಹಾಕಿ ಮೂವರು ಹುಡುಗರೂ ಅಂಗಲಾಚಿ ಕೂಗಿ ತಡೆಯದಿದ್ದರೆ ರಾಮೂಗೆ ಇನ್ನೂ ಎಷ್ಟು ಏಟು ಬೀಳುತ್ತಿತ್ತೊ?
ಕಂಕುಳಲ್ಲಿ ಕೂಸನ್ನೆತ್ತಿಕೊಂಡು, ಹಣೆಯ ಮೇಲೆ ಮುಖದಲ್ಲಿ ಬೆವರು ಸುರಿಸುತ್ತಾ, ದೀರ್ಘವಾಗಿ ಸುಯ್ಯುತ್ತಾ ಬಳಿಸಾರಿದ ಸೀತಮ್ಮನನ್ನು ವಿಶ್ವಾಸದಿಂದ ಮಾತಾಡಿಸಿ, ದೊಡ್ಡಮ್ಮ ಹೆಗ್ಗಡತಿಯವರು ಗಾಡಿ ಹತ್ತುವಂತೆ ಹೇಳಿದರು. ಸೀತಮ್ಮ ಗಂಡನ ಕಡೆ ಒಮ್ಮೆ ಹೌದೊ ಅಲ್ಲವೊ ಎಂಬಂತೆ ಕಣ್ಣು ಸುಳಿಸಿದಳು. ಅವಳ ಕೃಶತ್ವ, ಅವಳ ದುರ್ಬಲತೆ, ಅವಳಿಗೆ ಆಗ ಇದ್ದ ಆಯಾಸ ಸ್ಥಿತಿ, ಕಂಕುಳಲ್ಲಿದ್ದ ಮಗುವಿನ ಹೊರೆ ಒಂದೊಂದೂ ಗಾಡಿಗೆ ಹತ್ತುವ ಪರವಾಗಿ ವಾದಿಸುತ್ತಿದ್ದರೂ ಅವಳಿಗೆ ಗೊತ್ತು, ತಾನೆಲ್ಲಿಯಾದರೂ ಬೆಟ್ಟಳ್ಳಿ ಗಾಡಿಗೆ ಹತ್ತಿದರೆ ತನ್ನ ಗಂಡ ಆಮೇಲೆ ತನಗೆ ಶನಿ ಬಿಡಿಸುತ್ತಾರೆ ಎಂದು! ಅವಳು ‘ಒಲ್ಲೆ’ ಎಂಬರ್ಥದಲ್ಲಿ ತಲೆ ಅಲ್ಲಾಡಿಸುತ್ತಿದ್ದಂತೆಯೆ, ಶಂಕರ ಹೆಗ್ಗಡೆ “ಚಿಗಮ್ಮಾ, ಅದಕ್ಕೆ ಗಾಡಿ ಹತ್ತಿದ್ರೆ ಆಗೋದೆ ಇಲ್ಲ. ತಲೆ ತಿರುಗಿ ಕಕ್ಕಿಕೊಂಡು ಬಿಡ್ತದೆ! ಅದೂ ಅಲ್ಲದೆ….” ಮುಂದೆ ಹೇಳುವುದೊ? ಬಿಡುವುದೊ? ಎಂದು ನಾಚಿಸುತ್ತಿರುವಷ್ಟರಲ್ಲಿ, ಬಿಳಿಚಿಕೊಂಡಿರುವ ಮುಖ ಮತ್ತು ಇತರ ದೈಹಿಕ ಲಕ್ಷಣಗಳಿಂದ ಸೀತಮ್ಮಗೆ ಬಸಿರು ನಿಂತಿದ್ದರೂ ನಿಂತಿರಬಹುದೆಂದು ಊಹಿಸಿ ದೊಡ್ಡಮ್ಮ “ಎಷ್ಟು ತಿಂಗಳಾಗಿದೆಯೊ?” ಎಂದು ಕೇಳಿಯೆ ಬಿಟ್ಟರು.
“ಆ-ಗ್ಯದೆ-ಮೂರು ನಾಲ್ಕು ತಿಂಗಳು ಅಂತ್ತಾ ಕಾಣ್ತದೆ.” ಕೆಂಪು ಬಿಳಿಯ ಪಟ್ಟೆನಾಮಗಳ ಧರ್ಮ ಧ್ವಜವನ್ನು ಹಣೆ ತುಂಬ ಎತ್ತಿ ಹಿಡಿದು, ಸುಪುಷ್ಟನಾಗಿ ದುಂಡು ದುಂಡಗೆ ಬೆಳೆದು, ಮೈ ಮುಖ ಎಲ್ಲಿಯೂ ಬಿರಾಂಬರ ಕಳೆ ತುಂಬಿದೆ ಎಂಬ ಖ್ಯಾತಿ ಪಡೆದಿದ್ದ ಶಂಕರಹೆಗ್ಗಡೆ ನಿಧಾನವಾಗಿ ಹೇಳಿದರು. ಇನ್ನೂ ಒಂದು ವರ್ಷವೂ ಆಗಿದೆಯೋ ಇಲ್ಲವೋ ಎಂಬ ಕೃಶಗಾತ್ರದ ಕೂಸನ್ನು ಸೊಂಟದ ಮೇಲೆ ಹೊರಲಾರದೆ ಹೊತ್ತು ನಿಂತಿದ್ದ ಸೀತಮ್ಮನನ್ನು ಕರುಳುಬೆಂದು ನೋಡಿದರು ಗಾಡಿಯಲ್ಲಿದ್ದ ಮೂವರು ಹೆಂಗಸರೂ!
ರಾಮುವನ್ನಾದರೂ ತಮ್ಮ ಜೊತೆ ಗಾಡಿ ಹತ್ತಿಸಿ ಕರೆದುಕೊಂಡು ಹೋಗುತ್ತೇವೆ ಎಂದ ಹುಡುಗರಿಗೂ ಅದೇ ಮರ್ಯಾದೆಯಾಯಿತು. ತಾನೆಲ್ಲಿಯಾದರೂ ನೆರೆಮನೆಯ ದಾಯಾದಿಗಳ ಮಗ ಧರ್ಮು ಒಡನೆ ಗಾಡಿ ಹತ್ತಿದರೆ ಅಪ್ಪಯ್ಯ ಚಮಡ ಸುಲಿಯುತ್ತಾನೆ ಎಂದು ಹಿಂದಿನ ಅನೇಕ ಅನುಭವಗಳಿಂದ ಅರಿತಿದ್ದ ರಾಮು ಸುಮ್ಮನೆ ಅಳತೊಡಗಲು, ಶಂಕರ ಹೆಗ್ಗೆಡ “ಅಯ್ಯೋ ಅವನಿಗೆ ಗಾಡೀ ಎತ್ತೂ ಅಂದ್ರೇ ಬಾಳ ಹೆದರಿಕೊಳ್ತಾನೋ!” ಎಂದು ವ್ಯಾಖ್ಯಾನ ಮಾಡಿದರು.
ಗಾಡಿ ಕಾಡಿನ ರಸ್ತೆಯಲ್ಲಿ ಮುಂದುವರಿದು ಕಿಕ್ಕಿರಿದು ಹಳು ಮತ್ತು ಮರಗಳ ನಡುವೆ ಮರೆಯಾಗುವುದನ್ನೆ ಹೆಂಡತಿ ಮಕ್ಕಳೊಡನೆ ನಿಂತು ಕರುಬುಗೂಡಿದ ತಿರಸ್ಕಾರ ಭಾವದಿಂದ ನೋಡುತ್ತಾ ನಿಂತಿದ್ದ ಶಂಕರ ಹೆಗ್ಗಡೆ ಸ್ವಗತ ಎಂಬಂತೆ ಗಟ್ಟಿಯಾಗಿಯೆ ಹೇಳಿಕೊಂಡರು. ಎಲ್ಲರಿಗೂ ಸ್ಪಷ್ಟವಾಗಿ ಕೇಳಿಸಲಿ ಎಂಬಂತೆ: “ದೇವಸ್ಥಾನಕ್ಕೆ ಹೋಗ್ತಾರಂತೆ, ದೇವಸ್ಥಾನಕ್ಕೆ! ಮ್ಹುಃ! ಹೊಲೇರವನ್ನ ಗಾಡಿ ಹೊಡೆಯಾಕೆ ಕೂರಿಸಿಕೊಂಡು ಏನು ಮಡಿಯಾಗಿ ಹೋಗ್ತಾರೋ ದೇವರ ಸೇವೆಗೆ? ನಮ್ಮನ್ನೂ ಬೇರೆ ಗಾಡಿ ಹತ್ತೀ ಅಂತಾರೆ! ನಮಗೆ ಇರೋ ರ್ವೋತೇನೆ ಸಾಲದು? ಇನ್ನು ಇವರ ಸಂಗಡ ಮಡಿಗೆಟ್ಟು ಹೋಗಿ, ದೇವರು ಮುನಿದಾ ಅಂದ್ರೆ ಮುಗೀತು ನಮ್ಮ ಗತಿ! ಈ ಅನಾಚಾರನೆಲ್ಲಾ ಹ್ಯಾಂಗೆ ಸಹಿಸ್ತಾನೋ ಆ ಭಗವಂತ? ಅವನಿಗೇ ಗೊತ್ತು!…. ಹೂಂ! ನಡಿಯೋ ರಾಮು, ಇನ್ನು! ದಣಿವು ಆರಿಸಿಕೊಂಡಿದ್ದು ಆಯ್ತಲ್ಲಾ!…. ಯಾಕೆ ನಿಂತಿಯೇ? ನಡೆಯೇ! ನಿಂಗೆ ಆಗ್ದೆ ಇದ್ರೆ ಕೆಂಪೀಕೈಲೊ ಕೊಡೇ ಬಾಲೇನ…. ಏ ಕೆಂಪೀ, ಕರಕೊಳ್ಳೆ ಅವನ್ನ!… "
*****


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ