ನನ್ನ ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-37

         ಮರುದಿನ ಹೊತ್ತಾರೆ ಮುಂಚೆ ಸಿಂಬಾವಿಯ ಹೊಲಗೇರಿಯ ಅಂಚಿನಲ್ಲಿ, ಕರಿಸಿದ್ದನ ಬಿಡಾರದಿಂದ ತುಸುದೂರಕ್ಕೆ, ಆಕಾಶ ಮುಟ್ಟುವಂತೆ ಬೆಳೆದಿದ್ದ ಗೊಜ್ಜಿನ ಮಾವಿನ ಮರದ ಹತ್ತಿರ, ಹೊರಡಲು ಅಣಿಯಾಗಿ ನಿಂತಿದ್ದ ಸಣ್ಣಬೀರನು ತುಸು ತಾಳ್ಮೆಗೆಟ್ಟವನಂತೆ ಬೇಸರ ಮೋರೆ ಮಾಡಿಕೊಂಡು, ಕೇರಿಯ ಕಡೆ ತಿರುಗಿ, ತನ್ನ ಮಾವನ ಬಿಡಾರದ ಬಾಗಿಲಕಡೆಯೇ ನೋಡುತ್ತಿದ್ದನು. ಬಹಳ ಹೊತ್ತಾದರೂ ಬೆಟ್ಟಳ್ಳಿಗೆ ಹೊರಡಬೇಕಾಗಿದ್ದ ಗುಂಪಿನವರು – ಅಪ್ಪ ದೊಡ್ಡಬೀರ, ಅವ್ವ ಸೇಸಿ, ತಮ್ಮ ಪುಟ್ಟಬೀರ, ತಮ್ಮನ ಹೆಂಡತಿ ಚಿಕ್ಕಪುಟ್ಟಿ, ಮದುವಣಗಿತ್ತಿ ತಂಗಿ ತಿಮ್ಮಿ – ಯಾರೊಬ್ಬರೂ ಬಿಡಾರದಿಂದ ಹೊರಕ್ಕೆ ಬರಲಿಲ್ಲ. ಹೆಗಲಮೇಲಿದ್ದ ಕಂಬಳಿಯನ್ನು ನೆಲಕ್ಕೆ ಹಾಕಿಕೊಂಡು ಅದರ ಮೇಲೆ ಕುಳಿತು ಹಾದಿ ಕಾಯುತ್ತಿದ್ದನು. ಅವನ ಮುಖದ ಮೇಲೆ, ಕೆನ್ನೆ ಗಲ್ಲಗಳಲ್ಲಿ ಆಗಿದ್ದ ಗಾಯಗಳಿಗೆ ಏನೋ ಕರಿಔಷಧಿ ಹಚ್ಚಿಕೊಂಡಿದ್ದರಿಂದ ಆ ಕಪ್ಪು ಕಲೆಗಳು ವಿಕಾರವಾಗಿ ಎದ್ದು ಕಾಣುತ್ತಿದ್ದುವು. ಆದರೆ ಅವನ ಮುಖಭಾವದಲ್ಲಿ ಇಜಾರದ ಸಾಬಿಯ ಮೇಲೆ ಸೇಡು ತೀರಿಸಿಕೊಂಡ ಹೆಮ್ಮೆಯ ಕಳೆ ಸಂಚಾರಿಯಾಗಿ ನಲಿದಾಡುತ್ತಿತ್ತು.

ಹಿಂದಿನ ದಿನ ಸಂಜೆ ಆಗಿದ್ದ ಹೊಡೆದಾಟದಲ್ಲಿ ತನ್ನ ಕತ್ತಿಯ ಪ್ರಭಾವದಿಂದ ಇಜಾರದ ಸಾಬಿಯ ಬೆರಳು ಕತ್ತರಿಸಿ, ಕುತ್ತಿಗೆ ಹೆಗಲುಗಳ ಮೇಲೆಯೂ ಘಾತವಾಗಿ ಗಾಯಗಳಾಗಿದ್ದು, ಸಾಬಿಯ ಸ್ಥಿತಿ ವಿಷಮಿಸಿ, ರಾತ್ರಿಯೆ, ಅವನನ್ನು ಕುದುರೆಯ ಮೇಲೆ ಮೇಗರವಳ್ಳಿಗೆ ಸಾಗಿಸಿದ್ದರು, ಕಣ್ಣಾಪಂಡಿತರಿಂದ ತಾತ್ಕಾಲಿಕವಾಗಿ ಮದ್ದು ಹಾಕಿಸಿ, ಆಮೇಲೆ ತೀರ್ಥಹಳ್ಳಿಯ ಆಸ್ಪತ್ರೆಗೆ ಸಾಗಿಸುವ ಉದ್ದೇಶದಿಂದ. ಆದರೆ ಆ ಭಯಂಕರ ಘಾತವಾದದ್ದು ತನ್ನಿಂದಲೇ ಎಂಬುದು ಮಾತ್ರ ಆ ದೊಂಬಿಯಲ್ಲಿ ಯಾರಿಗೂ ಗೊತ್ತಾಗದಂತೆ ಕುಶಲತೆಯಿಂದ ಕೆಲಸ ನಿರ್ವಹಿಸಿದ್ದನು ಸಣ್ಣಬೀರ. ತನ್ನ ಬಾವ, ಗುತ್ತಿ, ಸಾಬಿಯ ಬುರುಡೆಗೆ ಬೀಸಿ ಬೀಸಿ ಹೊಡೆದಿದ್ದ ಬಗನಿ ದೊಣ್ಣೆಯ ಪೆಟ್ಟುಗಳೆ ಎಲ್ಲರ ಕಣ್ಣಿಗೂ ಬಿದ್ದಿದ್ದು, ಕತ್ತಿಯ ಏಟುಗಳಿಗೂ ಗುತ್ತಿಯೆ ಕಾರಣ ಎಂಬ ಭಾವನೆಗೆ ಎಡೆಗೊಟ್ಟಿತ್ತು. ಸಣ್ಣಬೀರ ಆ ಭಾವನೆಯನ್ನು ತಿದ್ದುವ ಗೋಜಿಗೆ ಹೋಗದೆ ಅದಕ್ಕೆ ಪುಷ್ಟಿಯನ್ನೆ ಕೊಟ್ಟಿದ್ದನು. ಒಂದು ವೇಳೆ ಹುಣ್ಣು ವಿಷಮಿಸಿ ಸಾಬಿ ಎಲ್ಲಿಯಾದರೂ ಸತ್ತುಬಿಟ್ಟರೆ, ತನ್ನ ಮೇಲೆ ಖೂನಿಯ ಆಪಾದನೆ ಬರದಂತೆ ನೋಡಿಕೊಳ್ಳುವುದೂ ಅವನ ಎಚ್ಚರಿಕೆಯಾಗಿತ್ತು.
ಬಿಡಾರದದೊಳಗೆ ಒಂದು ಸಣ್ಣ ರುದ್ರನಾಟಕದ ದೇಶ್ಯವೆ ನಡೆಯುತ್ತಿತ್ತು. ಕಾಲಿಗೆ ಮದ್ದು ಹಾಕಿ ಬಟ್ಟೆ ಸುತ್ತಿಕೊಂಡಿದ್ದ ಗುತ್ತಿ, ಕಂಬಳಿ ಹೊದೆದು ಚಾಪೆಯ ಮೇಲೆ, ಎಲ್ಲವನ್ನೂ ನೋಡುತ್ತಾ ಮಲಗಿದ್ದನು, ಆ ನಾಟಕದಲ್ಲಿ ಪಾತ್ರಧಾರಿಯಾಗಿದ್ದರೂ ಪ್ರೇಕ್ಷಕನಂತೆ ತಟಸ್ಥನಾಗಿ. ಗುತ್ತಿಯ ತನ್ನ ಹೆಂಡತಿಯನ್ನು ತವರುಮನೆಗೆ ಕಳುಹಿಸಲು ಮನಸ್ಸಿರಲಿಲ್ಲ. ತನ್ನ ಒಡೆಯರು, ಸಿಂಬಾವಿ ಹೆಗ್ಗಡೆಯವರು, ಮನೆಗೆ ಬಂದಮೇಲೆ ಅವರನ್ನು ಕೇಳಿ ಕರೆದುಕೊಮಡು ಹೋಗಬಹುದು ಎಂದಿದ್ದನು. ಆದರೆ ಹೆಗ್ಗಡೆಯವರೇ ದಾರಿಯಲ್ಲಿ ಸಿಕ್ಕಿ, ತಿಮ್ಮಿಯನ್ನು ತವರಿಗೆ ಕರೆದೊಯ್ಯಲು ಅನುಮತಿ ಕೊಟ್ಟಿದ್ದಾರೆ ಎಂಬುದನ್ನು ಕೇಳಿದ ಮೇಲೆ ಅವನಿಗೆ ಅನುಮಾನ ಇನ್ನೂ ಹೆಚ್ಚಾಗಿತ್ತು. ಆದ್ದರಿಮದ ತಾನೂ ತಿಮ್ಮಿಯೊಡನೆ ಹೋಗುವುದಾಗಿ ಮನಸ್ಸು ಮಾಡಿದ್ದನು. ದೊಡ್ಡಬೀರನು ಗುತ್ತಿಯ ಮೇಲಿನ ಗೌಡರ ಸಿಟ್ಟು ಇಳಿಯುವವರೆಗೂ ಗುತ್ತಿ ಬೆಟ್ಟಳ್ಳಿಗೆ ಕಾಲಿಡದಿರುವುದೇ ಲೇಸು ಎಂದು ಉಪಾಯವಾಗಿ ಗುತ್ತಿಯನ್ನು ಬರದಂತೆ ಮಾಡಲು ಪ್ರಯತ್ನಿಸಿ ಬೆದರಿಕೆ ಹಾಕಿದ್ದನು. ಗುತ್ತಿಯ ಸಂಶಯ ಇನ್ನೂ ಹೆಚ್ಚಿದಂತಾಗಿ ತಾನೂ ಜೊತೆಗೆ ಹೋಗುವುದೆಂದೇ ನಿಶ್ಚಯಿಸಿದ್ದನು. ಆದರೆ ಹಿಮದಿನ ಸಂಜೆ ನಡೆದ ದುರ್ಘಟನೆಯಲ್ಲಿ ತನಗೆ ಬಲವಾದ ಪೆಟ್ಟು ತಗಲಿ, ತಾನು ಹಾಸಗೆ ಹಿಡಿದುದರಿಂದ ಹತಾಶನಾಗಿ ಮಲಗಿದ್ದನು.
ಹೊರಡುವ ಮುನ್ನ ಕರಿಸಿದ್ದ ತಾನು ತನ್ನ ಒಡೆಯರಿಂದ ಮದುವೆಗಾಗಿ ತಂದು ಸೊಸೆ ತಿಮ್ಮಿಗೆ ತಿಮ್ಮಿಗೆ ತೊಡೊಸಿದ್ದ ಆಭರಣಗಳನ್ನೆಲ್ಲ ಹಿಂದಕ್ಕೆ ತೆಗೆದಿಟ್ಟುಕೊಂಡನು. ಆಗ ಸೇಸಿಗೆ ಮದುವೆ ಹೊತ್ತಿನಲ್ಲಿ ಮಗಳಿಗೆ ತಾನು ಇಡಿಸಿದ್ದ ಜಡೆಬಿಲ್ಲೆಯ ನೆನಪಾಗಿ, ಅದನ್ನು ತನಗೆ ಕೊಡು ಎಂದು ಮಗಳನ್ನು ಕೇಳಲು, ಅವಳು ಹುಡುಕಿ ಹುಡುಕಿ, ಅದು ಸಿಗದಿರಲು ಅಳತೊಡಗಿದ್ದಳು. ತಾಯಿ ಮಗಳು ಇಬ್ಬರೂ ಕಣ್ಣೊರೆಸಿ ಕೊಳ್ಳುತ್ತಿದ್ದರೂ ಯಾರಿಗೆ ಗುಮಾನಿ ಬರಲಿಲ್ಲ. ಗಂಎನನ್ನು ಆ ದುಸ್ಥಿತಿಯಲ್ಲಿ ಬಿಟ್ಟು ಒಬ್ಬಳೆ ತವರಿಗೆ ಹೋಗಬೇಕಾದುದರಿಂದ ಹುಡುಗಿ ಅಳುತ್ತಿದ್ದಾಳೆ ಎಂದೂ, ಮಗಳ ದುಃಖದಲ್ಲಿ ತಾಯಿಯೂ ಭಾಗಿಯಾಗಿದ್ದಾಳೆಂದೂ ಎಲ್ಲರೂ ಭಾವಿಸಿದರು. ಆದರೆ ಬಹಳ ಹೊತ್ತಾದರೂ ಅವರಿಬ್ಬರೂ ಹುಡುಕುವುದರಲ್ಲಿಯೆ ತೊಡಗಿ ತಡಮಾಡುತ್ತಿದ್ದುದರಿಂದ ದೊಡ್ಡಬೀರ ‘ಹೊರಡಿ’ ಎಂದು ಗದರಿಸಿದ್ದನು. ಕಳ್ಳಮಾಲು ಕಳುವಾಗಿದ್ದರೂ ಬಾಯಿ ಬಿಡಲಾರದ ಸಂಕಟದಿಂದ ಸೇಸಿ ಏನೇನೋ ನೆವ ಹೇಳುತ್ತಾ ಹುಡುಕುವುದನ್ನು ಮುಂದುವರಿಸಿದ್ದಳು. ಆದ್ದರಿಂದಲೆ ಬಿಡಾರದ ಬಾಗಿಲಕಡೆ, ಈಗ ಹೊರಡುತ್ತಾರೆ, ಇನ್ನೇನು ಹೊರಡುತ್ತಾರೆ, ಎಂದು ನೋಡುತ್ತಿದ್ದ ಸಣ್ಣಬೀರ ತಾಳ್ಮೆಗೆಟ್ಟು, ಕಂಬಳಿ ಹಾಸಿಕೊಮಡು ಹಾದಿ ಕಾಯುತ್ತಾ ಕೂತದ್ದು.
ಕಡೆಗೆ ತಿಮ್ಮಿಯೆ ಮಲಗಿದ್ದ ಗುತ್ತಿಯ ಕಿವಿಯಲ್ಲಿ ಏನೇನೋ ಹೇಳಿ, ತಾಯಿ ಅತ್ತಿಗೆಯವರೊಡನೆ ಅಣ್ಣಂದಿರನ್ನು ಹಿಂಬಾಲಿಸಿದ್ದಳು.
ದೊಡ್ಡಬೀರನ ಗುಂಪು ಬೆಟ್ಟಳ್ಳಿಗೆ ಹಿಮದಿರುಗುವ ಮಾರ್ಗವಾಗಿ ಲಕ್ಕುಂದ ಮೇಗರವಳ್ಳಿಗಳನ್ನು ದಾಟಿ ಹುಲಿಕಲ್ಲು ಗುಡ್ಡವನ್ನು ಏರುತ್ತಿದ್ದಾಗಲೆ ಕಾಡಿನ ಕಾಲುದಾರಿಯಲ್ಲಿ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರನ್ನು ನಡೆಸಿಕೊಮಡು ಇಳಿದು ಬರುತ್ತಿದ್ದ ಕೋಣೂರಿನ ಐಗಳು ಅನಂತಯ್ಯನವರಿಗೆ ಇದಿರಾದದ್ದು. ಐಗಳ ಸನ್ನೆಯ ಕೋರಿಕೆಯಂತೆ ದೊಡ್ಡಬೀರನು ಸಣ್ಣಬೀರ ಪುಟ್ಟಬೀರರನ್ನು ಅವರ ಜೊತೆ ಹೋಗುವಂತೆ ಹೇಳಿ ಉಳಿದವರೊಡನೆ ಮುನ್ನಡೆದಿದ್ದನು.
ಐಗಳ ಆದೇಶದಂತೆ ಪುಟ್ಟಬೀರ ಮೇಗರವಳ್ಳಿಗೆ ಓಡಿ, ಅಂತಕ್ಕ ಸೆಟ್ಟಿಗಿತ್ತಿಯ ಮನೆಯಲ್ಲಿದ್ದ ಬೆಟ್ಟಳ್ಳಿ ದೇವಯ್ಯಗೌಡರಿಗೆ ಹಳೆಮನೆ ಹೆಗ್ಗಡೆಯವರಿಗೆ ಒದಗಿದ್ದ ಆಪತ್ತಿನ ವಿಚಾರ ತಿಳಿಸಿ, ದೇವಯ್ಯ ಪಾದ್ರಿಯೊಡಗೂಡಿ ಡೋಲಿಯೊಡನೆ ಹೋಗಿ, ಹೆಗ್ಗಡೆಯವರನ್ನು ಅಂತಕ್ಕನ ಮನೆಗೆ ಸುರಕ್ಷಿತವಾಗಿ ಸಾಗಿಸಿದ ತರುವಾಯ, ಬೆಟ್ಟಳ್ಳಿಗೆ ಹಿಂದಿರುಗುತ್ತಿದ್ದ ಸಣ್ಣಬೀರರ ಕೈಲಿ, ತನ್ನ ತಂದೆಗೆ ‘ಹಳೆಮನೆ ದೊಡ್ಡಪ್ಪಯ್ಯನ್ನ ಬೆಟ್ಟಳ್ಳಿಗೆ ಸಾಗಿಸಲು ಬೇಗ ಗಾಡಿ ಕಳುಹಿಸುವಂತೆ’ ಹೇಳಿಕಳುಹಿಸಿದ್ದನು. ಏಕೆಂದರೆ ಸುಬ್ಬಣ್ಣಹೆಗ್ಗಡೆಯವರು ಮತ್ತೆ ಹುಲಿಕಲ್ಲಿನ ಕಾಡುದಾರಿಯನ್ನೇರಿ ಹಳೆಮನೆಗೆ ಹಿಂತಿರುಗುವುದು ಅಸಾಧ್ಯವೆಂಬುದು ದೇವಯ್ಯನಿಗೆ ಮನದಟ್ಟಾಗಿತ್ತು.
ಸಾಯಂಕಾಲ ಮೇಗರವಳ್ಳಿಯ ಕಾಡುಕೊರಕಲು ರಸ್ತೆಯಲ್ಲಿ, ಎತ್ತಿನ ಕೊರಳ ಗಗ್ಗರದ ಸರ ಗೈಲುಗೈಲೆಂದು ಚಕ್ರಗಳ ಗಡಗಡದ ಸದ್ದು ಮೊಳಗುವಂತೆ ಇಂಚರ ಗೈಯುತ್ತಾ ಬಂದು ಬೆಟ್ಟಳ್ಳಿಯ ಕಮಾನುಗಾಡಿ ಅಂತಕ್ಕನ ಮನೆಯ ಮುಂದೆ ನಿಲ್ಲಲು, ಸಾಲಂಕೃತನಾಗಿದ್ದ ಸಾರಥಿ ಬಚ್ಚನು ಗಾಡಿಕತ್ತರಿಯಿಂದ ಕೆಳಕ್ಕೆ ನಗೆದು, ಎತ್ತಿನ ಕೊರಲು ಬಿಚ್ಚಿ ನೊಗಕ್ಕೆ ಕಟ್ಟಿ, ಒಳಗೆ ಹೋಗಿ ಒಡೆಯ ದೇವಯ್ಯಗೌಡರಿಗೆ ಸಮಾಚಾರ ತಿಳಿಸಿದನು. ಬೆಟ್ಟಳ್ಳಿಯ ಗಾಡಿ ತಮ್ಮನ್ನು ಕರೆದೊಯ್ಯಲು ಬಂದುದನ್ನು ಕೇಳಿ ಸುಬ್ಬಣ್ಣಹೆಗ್ಗಡೆಯವರು ದೇವಯ್ಯಗೆ “ಅಯ್ಯೋ ನಿನ್ನ! ಗಾಡಿ ಯಾಕೆ ಬರಾಕೆ ಹೇಳಿದ್ಯೋ? ನನಗೇನು ನಡಕೊಂಡು ಹೋಗಾಕೆ ಆಗ್ತಿರ್ಲಿಲೆನೋ?” ಎಂದಾಗ ಅವನು “ನಮ್ಮ ಹೊಲೇರು ಎಲ್ಲೋ ಹೇಳಿರಬೇಕು ಅಂತಾ ಕಾಣ್ತದೆ ಅಪ್ಪಯ್ಯಗೆ. ಅದಕ್ಕೆ ಗಾಡಿ ಕಳಿಸಿದಾರೆ, ನಿಮ್ಮನ್ನ ಕರಕೊಂಡು ಬರಾಕೆ” ಎಂದು ಸಮಾಧಾನ ಹೇಳಿ, ಅವರನ್ನು ಮೆಲ್ಲಗೆ ಗಾಡಿ ಹತ್ತಿಸಿ, ತಾನು ಗಾಡಿಯ ಹಿಂದೆಯೆ ಬೈಸಿಕಲ್ಲಿನಲ್ಲಿ ಹೊರಡಲು ಹವಣಿಸುತ್ತಿದ್ದನು. ಅಷ್ಟರಲ್ಲಿ ಜೀವರತ್ನಯ್ಯ ಅವನ ಕಿವಿಯಲ್ಲಿ ಏನನ್ನೊ ಹೇಳಿದುದರ ಪರಿಣಾಮವಾಗಿ ಬೈಸಿಕಲ್ಲನ್ನು ಪಾದ್ರಿಗೆ ಕೊಟ್ಟು, ತಾನೂ ಹಿಂಬಾಗದಿಂದ ಗಾಡಿ ಹತ್ತಿ ಕುಳಿತನು. ಬಚ್ಚನೂ ಗಾಡಿ ಕತ್ತರಿಗೆ ನೆಗೆದು ಕುಳಿತಿದ್ದೆ ತಡ, ಬಲಿಷ್ಠವೂ ಸುಪುಷ್ಟವೂ ಆದ ಎತ್ತುಗಳು ತುಸು ವೇಗವಾಗಿಯೆ ಕಾಲು ಹಾಕಿದುವು, ಹುರುಳಿಯಾಸೆಯ ಮನೆಯ ಕಡೆಗೆ.
ತಡಿ ದಿಂಬು ಹಾಕಿ ಮೆತ್ತಗೆ ಮಾಡಿದ್ದ ಗಾಡಿಯ ಒಳಗೆ ಒರಗಿ ಕುಳಿತಿದ್ದ ಸುಬ್ಬಣ್ಣಹೆಗ್ಗಡೆ  ಸ್ವಲ್ಪಹೊತ್ತು ಬಾಲಕನೋಪಾದಿಯಲ್ಲಿ ಸುತ್ತಣ ದೃಶ್ಯಗಳನ್ನು ನೋಡುತ್ತಾ ಹಸನ್ಮುಖಿಗಳಾಗಿ ಕುಳಿತಿದ್ದರು. ನಡುನಡುವೆ, ರಸ್ತೆಯಾಗಲಿ ಗಾಡಿಗಳಾಗಲಿ ಅಪೂರ್ವವಾಗಿದ್ದ ಆ ಕಾಲದ ಆ ಕೊರಕಲು ದಾರಿಯಲ್ಲಿ, ಗಾಡಿ ಭಯಂಕರವಾಗಿ ಅತ್ತಯಿತ್ತ ಕುಲುಕಿದಾಗ ಮಾತ್ರ ಬಾಯಲ್ಲಿ ಏನಾದರೂ ಹೇಳಿಕೊಳ್ಳುತ್ತಿದ್ದರು: ‘ಹೋ ನನ್ನ ಬೆನ್ನು ಮುರಿದುಹೋಗ್ತದೆ.’ ‘ಇದೊಳ್ಳೆ ಗಾಡಿಸವಾರಿ, ಮಾರಾಯ!’ ‘ಇಳಿದಾದ್ರೂ ಹೋಗ್ತಿನಪ್ಪಾ ನಾನು!’ ಇತ್ಯಾದಿ, ಸ್ವಲ್ಪ ದೂರ ಹೋದಮೇಲೆ ಇದ್ದಕಿದ್ದಹಾಗೆ ‘ನಿಲ್ಲಿಸೋ, ಗಾಡಿ ನಿಲ್ಲಸೋ!’ ಎಂದು ಕೂಗಿಕೊಂಡರು. ಗಾಡಿ ನಿಲ್ಲಿಸಿ, ಏಕೆ ಎಂದು ಕೇಳಲು ‘ನನ್ನ ದೊಣ್ಣೆ, ಮೆಟ್ಟು ತಂದೀರೇನೋ?’ ಎಂದು ದೇವಯ್ಯನ ಕಡೆ ಗಾಬರಿಯಾಗಿ ನೋಡಿದರು. ಬಚ್ಚ ‘ಗಾಡಿಯೊಳಗೆ ಹುಲ್ಲಿನಡಿ ಇಟ್ಟಿದ್ದೇನೆ’ ಎಂದು ಹೇಳಿದ ಮೇಲೆಯೆ ಶಾಂತಚಿತ್ತರಾಗಿ ಮತ್ತೆ ಒರಗಿ ಕುಳಿತರು. ದೇವಯ್ಯ ಅವರನ್ನು ಮಾತನಾಡಿಸಿದರೆ ಅವರಿಗೆ ಏನೇನೋ ಕೆರಳಿದಂತಾಗುತ್ತದೆ ಎಂದು ಹೆದರಿ ಆದಷ್ಟು ಸುಮ್ಮನಿರಲು ಪ್ರಯತ್ನಿಸುತ್ತಿದ್ದನು. ಆದರೆ ತುಸುಹೊತ್ತಿನಲ್ಲಿಯೆ ಮತ್ತೆ ಅವರು ತಮ್ಮ ದೊಡ್ಡಮಗ ದೊಡ್ಡಣ್ಣನ ವಿಷಯವಾಗಿ ಸ್ವಲ್ಪ ಅಬದ್ದವಾಗಿಯೆ ಎಂಬಂತೆ ಮಾತಾಡತೊಡಗಿದರು. ದೇವಯ್ಯಗೆ ಒಳಗೊಳಗೇ ದಿಗಿಲಾದರೂ ಅದನ್ನು ತೋರಗೊಡದೆ ‘ದೊಡ್ಡಪಯ್ಯ, ನಿಮಗೆ ಬೆನ್ನು ನೋಯ್ತದೆ ಅಂತ ಕಾಣ್ತದೆ, ಹಾಳ್ ರಸ್ತೆ! ಗಾಡಿ ತುಂಬಾ ಜಟಕಾ ಹೊಡೀತದೆ! ಒಂದು ಸ್ವಲ್ಪ ಮಲಗಿಕೊಳ್ಳಿ’ ಎಂದು ದಿಂಬು ಸರಿಮಾಡಿಟ್ಟು ಕೊಟ್ಟನು. ‘ಆಗಲಪ್ಪಾ! ಉಸ್!’ ಎಂದು ದೀರ್ಘವಾಗಿ ಸುಯ್ದು ಮಲಗುತ್ತಾ ತಮಗೆ ತಾವೇ ಎಂಬಂತೆ ಹೇಳಿಕೊಂಡದ್ದು ದೇವಯ್ಯಗೂ ಕೇಳಿಸಿತ್ತು: ‘ದೊಡ್ಡಣ್ಣಗೆ ಎಲ್ಲ ವಹಿಸಿಕೊಟ್ಟು ತಣ್ಣಗೆ ಕಣ್ಣು ಮುಚ್ಚಿಕೊಂಡುಬಿಡ್ತೀನಿ!’
ಗಾಡಿ ತೊಟ್ಟಿಲು ತೂಗಿತೆಂಬಂತಾಗಿ ಚೆನ್ನಾಗಿ ನಿದ್ದೆ ಮಾಡುತ್ತಿದ್ದ ಮುದುಕನಿಗೆ ಮೋಡವೇರಿದ್ದಾಗಲಿ, ಗುಡುಗು ಮಿಂಚಾಗಲಿ, ಭೋರೆಂದು ಸುರಿದಿದ್ದ ಮಳೆಯಾಗಲಿ ಪ್ರಜ್ಞಾಗೋಚರವಾಗಿರಲಿಲ್ಲ. ಮಳೇ ಹೊಳವಾಗಿ, ಸೂರ್ಯ ಮುಳುಗಿ, ಕತ್ತಲೆಯ ಮೊದಲ ಛಾಯೆ ಕಾಡನ್ನೆಲ್ಲ ಕವಿಯುತ್ತಿರಲು ಇದ್ದಕಿದ್ದಹಾಗೆ ಕುಮುಟಿ ಎದ್ದು ಕುಳಿತ ಸುಬ್ಬಣ್ಣ ಹೆಗ್ಗಡೆಯವರು “ಅರೆ! ಎಲ್ಲಿ ಹೋದ್ನೋ?” ಎಂದರು.
“ಯಾರು?” ದೇವಯ್ಯ ಬೆಚ್ಚಿಯೆ ಕೇಳಿದನು.
“ನಮ್ಮ ದೊಡ್ಡಣ್ಣ ಕಣೋ! ನಿಮ್ಮ ಮನೆ ಅಂಗಳದಲ್ಲಿ ನಿನ್ನ ಜೊತೆ ಸಣ್ಣ ಹುಡುಗನಾಗಿ ಆಡ್ತಿದ್ದ ಕಣೋ! ಚೆನ್ನಾಗಿ ಕಂಡೆನೋ!….”
“ನಿದ್ದೆ ಮಾಡ್ತಿದ್ರಿ; ಕನಸು ಬಿತ್ತು ಅಂತಾ ಕಾಣ್ತದೆ, ದೊಡ್ಡಪಯ್ಯಾ. ಮಲಗಿಕೊಳ್ಳಿ…. ಮಲಗಿಕೊಳ್ಳಿ…. ಇನ್ನೇನು ಬಂದುಬಿಡ್ತು ನಮ್ಮ ಮನೆ….”
“ಇನ್ನೆಷ್ಟು ದೂರ ಅದಿಯೋ?”
“ಒಂದರ್ಧ ಮೈಲಿ ಒಳಗೇ.”
“ಆಗ್ಲೆ ಕತ್ತಲಾಗಿಬಿಟ್ಟದಲ್ಲೋ….” ಮುದುಕ ಸುತ್ತಲೂ ಕಣ್ಣು ಹೊರಳಿಸಿದನು.
“ಹೌದು ದೊಡ್ಡಪಯ್ಯ. ಈ ಗಾಡಿ ಹೊಡೆಯೋನು ಲಾಟೀನ್ನೂ ತಂದಿಲ್ಲ….”
“ಕತ್ತಲಾಗಾಕೆ ಮುಂಚೇನೆ ಬತ್ತೀಂವಿ ಅಂತ ಮಾಡಿದ್ದೆ, ಅಯ್ಯಾ” ಬಚ್ಚ ಹೇಳಿದನು ಕ್ಷಮೆ ಕೇಳುವಂತೆ.
ಮುಂದೆ ನಾಲ್ಕು ಮಾರು ಹೋಗುವುದರಲ್ಲಿ ಒಂದು ಲಾಟೀನೂ ಎರಡು ಮೂರು ದೊಂದಿಗಳ ಬೆಳಕೂ ಕಾಡಿನ ನಡುವೆ ಕಾಣಿಸಿ, ಗಾಡಿಯ ಕಡೆಗೆ ಬಂದುವು. ಮೇಗರವಳ್ಳಿಯಿಂದ ಗಾಡಿ ಬರುವುದು ಹೊತ್ತಾದ್ದರಿಂದ ಬೆಟ್ಟಳ್ಳಿ ಕಲ್ಲಯ್ಯಗೌಡರು ಮುಂಜಾಗ್ರತೆಯ ಕ್ರಮವಾಗಿ ಬೆಳಕು ಕೊಟ್ಟು ಕಳಸಿದ್ದ ಆಳುಗಳು ದೇವಯ್ಯನ ಪ್ರಶ್ನೆಗೆ ಓಗೊಟ್ಟು, ಗಾಡಿಯ ಹಿಂದೆ ಮುಂದೆ ಬೆಳಕು ಹಿಡಿದು ನಡೆಯತೊಡಗಿದರು. ಗಾಡಿಯ, ಎತ್ತುಗಳ ಮತ್ತು ದೊಂದಿ ಲಾಟೀನು ಹಿಡಿದು ಹಿಂದೆ ಮುಂದೆ ನಡೆದವರ ಕಾಲುಗಳ ಭೂತಾಕಾರದ ನೆರಳುಗಳು ದಾರಿಯ ಪಕ್ಕದ ಕಾಡಿನ ಮೇಲೆಯೂ ರಸ್ತೆಯ ಮೇಲೆಯೂ ಶಕುನಪೂರ್ಣವಾಗಿ ಹಿಂದಕ್ಕೂ ಮುಂದಕ್ಕೂ ಚಲಿಸುತ್ತಿದ್ದುವು.
ಬೆಟ್ಟಳ್ಳಿಗೆ ಹಳೆಮನೆ ಹೆಗ್ಗಡೆಯವರು ಬರದೆ ಒಂದೆರಡು ವರ್ಷಗಳೆ ಆಗಿದ್ದುವೇನೋ? ಅವರಿಗೇನೂ ಆಪತ್ತು ಒದಗಿದೆ ಎಂಬ ಸುದ್ದಿ ವಿಷಾದಕರವಾಗಿದ್ದಿತಾದರೂ ಅವರನ್ನು ಕರೆದು ತರಲು ಗಾಡಿ ಕಳುಹಿಸಿದ್ದಾರೆ ಎಂಬ ವಾರ್ತೆ ಮನೆಯ ಒಳಗೂ ಹೊರಗೂ ಸಡಗರವನ್ನೆ ತುಂಬಿತ್ತು. ಕಲ್ಲಯ್ಯಗೌಡರೂ ಸಸಂಭ್ರಮರಾಗಿಯೆ ಗಾಡಿ ಬರುವುದನ್ನು ಇದಿರು ನೋಡುತ್ತಿದ್ದರು.
ಕತ್ತಲಾದಮೇಲೆ ದೊಂದಿ ಲಾಟೀನುಗಳನ್ನು ಕೊಟ್ಟು ಆಳುಗಳನ್ನು ಕಳುಹಿಸಿದ್ದರು. ಅವರು ಬರುವುದು ತಡವಾಯಿತೆಂದೆನೆಸಿದಾಗ ಮತ್ತೊಬ್ಬ ಆಳನ್ನು ಒಳದಾರಿಯಿಂದ ಅಟ್ಟಿದ್ದರು. ಅವನು ಓಡೋಡಿ ಬಂದು ಗಾಡಿ ಬರುತ್ತಿರುವ ಸುದ್ದಿಯನ್ನು ತಿಳಿಸಿದ ಮೇಲೆಯೆ ಗೌಡರು ಹೊರಚಾವಡಿಯಿಂದ ಒಳಜಗಲಿಗೆ ಹೊಗಿ, ಜಗಲಿಗೆ ಲಾಂದ್ರವನ್ನು ಹೊತ್ತಿಸಿದ್ದರು. ಲಾಂದ್ರ ಲ್ಯಾಂಪು ಲಾಟೀನುಗಳು ಬೆಟ್ಟಳ್ಳಿ ಮನೆಯ ಮುಂದುವರೆಯುತ್ತಿದ್ದ ನಾಗರಿಕತೆಯ ಸಂಕೇತಗಳಾಗಿದ್ದುವು. ಆ ಪ್ರಾಂತದ ಉಳಿದ ಶ್ರೀಮಂತರ ಮನೆಗಳಲ್ಲಿ ಇನ್ನೂ ಹರಳೆಣ್ಣೆಯ ಹಣತೆ ಮತ್ತು ಚಿಮಿನಿ ದೀಪಗಳೆ ಇದ್ದು, ಬೆಟ್ಟಳ್ಳಿ ಮನೆಯ ಸುಧಾರಿಸಿದ ವಾತಾವರಣವನ್ನು ಇವು ಬೆಳಗುತ್ತಿದ್ದುವು, ಕಮಾನುಗಾಡಿಯಿಂದೆಂತೊ ಅಂತೆ!
ಗಗ್ಗರದ ಸರದ ಸುಸ್ವರ ನಿಂತು, ದೇವಯ್ಯ ತನ್ನ ದೊಡ್ಡಪ್ಪಯ್ಯನವರನ್ನು ಮೆಲ್ಲನೆ ಗಾಡಿಯಿಂದಿಳಿಸಿ, ಜಗಲಿಗೆ ಕರೆತಂದನು. ಬೊಗಳುತ್ತಿದ್ದ ನಾಯಿಗಳನ್ನು ಗದರಿಸಿ ಅಟ್ಟಿ, ಕಲ್ಲಯ್ಯಗೌಡರು ‘ಬಂದ್ರೇ?’ ಎಂದು ಅತಿಥಿಯನ್ನು ಸ್ವಾಗತಿಸಿ, ಕೆಸರಲಗೆಯ ಮೇಲೆ ಹೊಳೆಯುತ್ತಿದ್ದ ಹಿತ್ತಾಳೆ ಚೊಂಬುಗಳಲ್ಲಿದ್ದ ಬಿಸಿನೀರನ್ನು ಕಾಲು ತೊಳೆದುಕೊಳ್ಳಲು ಕೊಟ್ಟು, ಒರೆಸಿಕೊಳ್ಳಲು ಅಂಗವಸ್ತ್ರವನ್ನು ನೀಡಿ, ಜಗಲಿಯ ಮೇಲೆ ಹಾಸಿದ್ದ ಜಮಖಾನೆಯ ಮೇಲೆ ದಿಂಬಿಗೆ ಒರಗಿ ಕುಳಿತುಕೊಳ್ಳುವಂತೆ ನೆರವಾದರು.
ಅದುವರೆಗೂ ಹೆಚ್ಚು ಮಾತಾಡದೆ ಆ ಊ ಹೌದು ಇಲ್ಲ ಎಂದು ಒಂದೊಂದೆ ಶಬ್ದದಲ್ಲಿ ಸೋತದನಿಯಿಂದ ಉತ್ತರ ಹೇಳುತ್ತಿದ್ದ ಸುಬ್ಬಣ್ಣಹೆಗ್ಗಡೆಯವರು ಇದ್ದಕಿದ್ದಹಾಗೆ, ಕಿವಿ ಮಂದವಾದವರೊಡನೆ ಮಾತನಾಡುವವರಂತೆ, ಗಟ್ಟಿಯಾಗಿ ಗಂಟಲೆತ್ತಿ ನುಡಿಯತೊಡಗಿದರು: ‘ಹ್ಯಾಂಗಿದ್ದೀರಿ ಈಗ?’ ಎಂದು ಕೇಳಿದ್ದಕ್ಕೆ ‘ಹ್ಯಾಂಗಿರೋದು? ನೋಡ್ತಿದ್ದೀರಲ್ಲಾ! ಇದ್ದೀನಿ ಹೀಂಗೆ!’ ಎಂದು ಕೂಗಿದರು, ಮಹೋಲ್ಲಾಸ ಧ್ವನಿಯಿಂದ, ನಿಃಶಬ್ದವಾಗಿದ್ದ ಮನೆ ಮರುದನಿ ತುಂಬುವಂತೆ! ‘ಮನೆ ಕಡೆ ಎಲ್ಲ ಕ್ಷೇಮವೇ?’ ಎಂದು ಪದ್ದತಿಯಂತೆ ಕ್ಷೇಮ ಸಮಾಚಾರ ವಿಚಾರಿಸಿದ್ದಕ್ಕೆ ಉತ್ತರವಾಗಿ ಎಲ್ಲ ಕ್ಷೇಮವೇ?’ ಎಂದು ಪದ್ಧತಿಯಂತೆ ಕ್ಷೇಮ ಸಮಾಚಾರ ವಿಚಾರಿಸಿದ್ದಕ್ಕೆ ಉತ್ತರವಾಗಿ ಅಡುಗೆಮನೆಯಲ್ಲಿದ್ದ ಸ್ತ್ರೀ ವರ್ಗವೆಲ್ಲ ಗಾಬರಿಗೊಂಡು ಮಾಣಿಗೆಯ ಬಾಗಿಲಲ್ಲಿ ಬೆರಗಾಗಿ ನೆರೆದು ಇಣಿಕಿ ನೋಡುವಂತೆ, ಗಟ್ಟಿಯಾಗಿ ತಮ್ಮ ಗೃಹಕೃತ್ಯದ ಕಷ್ಟಕೋಟಲೆಗಳನ್ನೆಲ್ಲ ಹೇಳತೊಡಗಿದರು. ಆಗ ದೇವಯ್ಯ ಯಾವುದನ್ನೊ ನೆವ ಮಾಡಿಕೊಂಡು ತನ್ನ ತಂದೆಯನ್ನು ದೂರ ಕರೆದೊಯ್ದು, ದೊಟ್ಟಪ್ಪಯ್ಯನ ಆ ದಿನದ ಅಸಾಧಾರಣ ಮನಃಸ್ಥಿತಿಯ ವಿಚಾರವಾಗಿ ತಿಳಿಸಿ ಅವರನ್ನು ಎಚ್ಚರಿಸಿದನು.
ಆಮೇಲೆ ಕಲ್ಲಯ್ಯಗೌಡರು ಅವರೊಡನೆ ಹೆಚ್ಚುಮಾತಿಗೆ ಹೋಗಲಿಲ್ಲ. ಅವರನ್ನು ಆದಷ್ಟು ಬೇಗನೆ ಊಟಕ್ಕೆ ಏಳಿಸಿದರು. ಅವರ ಗೌರವಾರ್ಥವಾಗಿಯೇ ತಯಾರಿಸಿದ್ದ ಔತಣವನ್ನು ಆತಿಥ್ಯಕ್ಕೆ ಅಪಚಾರವಾಗದಷ್ಟು ಮಿತಪ್ರಮಾಣದಲ್ಲಿ ಬಡಿಸಿದರು. ಕೋಳಿತುಂಡು, ಕಡಬು, ಕಳ್ಳು ಇವುಗಳ ಸೇವನೆಯಿಂದ ಸಂತೃಪ್ತರಾದ ಹೆಗ್ಗಡೆಯವರು ಊಟ ಪೂರೈಸಿದ ಮೇಲೆ ಎಲೆಯಡಿಕೆ ಹಾಕಿಕೊಳ್ಳುತ್ತಿದ್ದಾಗ ಒಳಗೆ ದೇವಯ್ಯನ ಮಲಗುವ ಕೋಣೆಯಲ್ಲಿ ಅವನ ಮಗು ಚೆಲುವಯ್ಯ ಅಳುತ್ತಿದ್ದುದು ಕೇಳಿಸಿ, ಬೆಚ್ಚಿದಂತಾಗಿ, ಕಣ್ಣರಳಿಸಿ ಸುತ್ತಲೂ ಹುಡುಕುನೋಟದಿಂದಲೆಂಬಂತೆ ಹಣೆ ಸುಕ್ಕಿಸಿ ನೋಡಿ “ಯಾರೋ ಅದೂ? ನಮ್ಮ ದೊಡ್ಡಣ್ಣನ ಸರಾ ಕೇಳಿಸಿದ್ಹಾಂಗೇ ಆಯ್ತಲ್ಲಾ!” ಎಂದು ತಟಕ್ಕನೆ ಅಂತರ್ಮುಖಿಯಾಗಿಬಿಟ್ಟರು. ಕಣ್ಣಿಂದ ನೀರು ತೊಟ್ಟಕ್ಕಿತು. ಬಿಕ್ಕಿ ಬಿಕ್ಕಿ ಅಳತೊಡಗಿದರು.
ಕಲ್ಲಯ್ಯಗೌಡರು ಅವರನ್ನು ಸಮಾಧಾನ ಮಾಡುತ್ತಿರಲು, ದೇವಯ್ಯ “ಯಾರೂ ಅಲ್ಲ, ದೊಡ್ಡಪ್ಪಯ್ಯಾ, ಬ್ಯಾಲೇನ ತೊಟ್ಟಿಲಿಗೆ ಮಲಗಿಸಕ್ಕೆ ಮುಂಚೆ, ಮೈಗೆ ಎಣ್ಣೆ ಹಚ್ತದೆ ಅಂತಾ ಕಾಣ್ತದೆ. ಅದಕ್ಕೆ ಅಳ್ತಾ ಇದೆ…. ನೀವು ಸ್ವಲ್ಪ ಮಲಗಿಕೊಳ್ಳಿ. ಹಾಸಿಗೆ ಹಾಸಿದೆ. ನಿಮಗೆ ಗಾಡಿ ಪಯಣ ಪೂರಾ ಮೈನೋವಾಗಿರಬೇಕು” ಎಂದು ಅವರನ್ನು ಹಾಸಿಗೆಗೆ ಕರೆದೊಯ್ದು ಮಲಗಿಸಿದನು.
ದೇವಯ್ಯ ಶಾಲು ಹೊದಿಸುತ್ತಿದ್ದಾಗ ಸುಬ್ಬಣ್ಣ ಹೆಗ್ಗಡೆಯವರು ಮತ್ತೆ “ಯಾರು? ನಿನ್ನ ಮಗನೇನೋ?” ಎಂದು ಕೇಳಿದರು.
“ಹೌದು ಅವನ ಮಗನೆ” ಎಂದರು ಕಲ್ಲಯ್ಯಗೌಡರು.
“ಏನು ಹೆಸರು ಇಟ್ಟಾರೆ ದೋಯಿಸರು?” ಎಂದು ಕೇಳಿದ ಹೆಗ್ಗಡೆಯವರು “ದೊಡ್ಡಣ್ಣ ಅಂತ್ಲೇನೋ?” ಎಂದರು.
“ಅಲ್ಲ ‘ಚೆಲುವಯ್ಯಾ’ ಅಂತಾ.”
ಆವೊತ್ತು ರಾತ್ರಿ ದೇವಯ್ಯ ಮುದುಕನ ಬಳಿಯಲ್ಲಿಯೆ ಹಾಸಗೆ ಹಾಸಿಕೊಂಡು ಮಲಗಿದ್ದನು. ನಿದ್ದೆಯಲ್ಲಿ ಏನೀನೋ ಅವರು ಕನವರಿಸುತ್ತಿದ್ದರು. ಒಮ್ಮೆ “ಚೆಲುವಯ್ಯಾ” ಎಂದೂ ಕನಸಿನಲ್ಲಿಯೆ ಕರೆದದ್ದು ಕೇಳಿಸಿತು. ಎರಡು ಸಾರಿ ಅವರನ್ನು, ದೊಡ್ಡದು ಮಾಡಿದ ಲಾಟೀನು ಬೆಳಕಿನಲ್ಲಿ, ಮೆಲ್ಲಗೆ ನಡೆಸಿಕೊಂಡು ಹೆಬ್ಬಾಗಿಲಾಚೆಗೆ ಹೋಗಿ ಒಂದ ಮಾಡಿಸಿಕೊಂಡು ಕರೆತಂದು ಮಲಗಿಸಿದನು.
ಮರುದಿನ ಬೆಳಿಗ್ಗೆ ಹಳೆಮನೆ ಹೆಗ್ಗಡೆಯವರು ಸಂಪೂರ್ಣವಾಗಿ ಸ್ವಸ್ಥರಾಗಿ ಮುನ್ನಿನ ಸಾಧಾರಣ ಸ್ಥಿತಿಗೆ ಬಂದಂತೆ ಉಲ್ಲಾಸಭರಿತವಾದ ಹರ್ಷಚಿತ್ತದಿಂದ ಮಾತನಾಡುತ್ತಾ ವರ್ತಿಸತೊಡಗಿದರು. ಕಲ್ಲಯ್ಯಗೌಡರೊಡನೆ ಹಿಂದಿನ ಹಳೆಯ ದಿನಗಳನ್ನು ಕುರಿತು ಅನೇಕಾನೇಕ ವಿನೋದವಾಡಿದರು. ಬೆಟ್ಟಳ್ಳಿ ಮನೆಯಲ್ಲಿ ಇತ್ತೀಚೆಗೆ ಪ್ರಚಲಿತವಾಗಿದ್ದ ಕಾಫಿ ಕುಡಿಯುವ ನವನಾಗರಿಕ ಚಾಳಿಯನ್ನು ಕುಚೋದ್ಯ ಮಾಡಿ, ತಾವು ಹಾಲು ಹಾಕಿ ತಯಾರಿಸಿದ ಕುನ್ನೇರಿಲುಕುಡಿಯ ಕಷಾಯವನ್ನೆ ಕುಡಿದರು.
ಕಷಾಯ ಕುಡಿಯುತ್ತಿದ್ದಾಗ ಅದರ ರುಚಿಯನ್ನು ಬಹಳವಾಗಿ ಶ್ಲಾಘಿಸುತ್ತಾ, ಅದನ್ನು ತಯಾರು ಮಾಡಿದ್ದ ದೇವಯ್ಯನ ತಾಯಿ ದೊಡ್ಡಮ್ಮ ಹೆಗ್ಗಡಿತಿಯವರಿಗೆ “ಏನು, ದೊಡ್ಡಕ್ಕ, ಗೌಡರಿಗೂ ಕಾಫಿ ಜಲಿಸಿಬಿಟ್ಟಿದ್ದೀರಲ್ಲಾ? ಕಾಫಿ ಎಷ್ಟಾದರೂ ಉಷ್ಣ. ಕುನ್ನೇರ್ಲು ಕುಡಿ ಕಷಾಯಾನೇ ತಂಪು. ಅದರಲ್ಲೂ ನನ್ನ ನಿನ್ಹಾಂಗೆ ವಯಸ್ಸಾದೋರಿಗೆ ಕಾಫಿ ಖಂಡಿತಾ ನಂಜು. ಅಲ್ಲೇನು ಹೇಳು?” ಎಂದು ಕೇಕೆಹಾಕಿ ನಕ್ಕರು.
ಕಲ್ಲಯ್ಯಗೌಡರು ತಮ್ಮ ಹೆಂಡತಿಯ ಕಡೆ ನೋಡಿ ವಿನೋದವಾಗಿ “ನೋಡಿದ್ಯಾ? ನಿಂಗೆ ಈಗ್ಲಾದ್ರೂ ಗೊತ್ತಾಯ್ತೇನು, ವಯಸ್ಸಾಗಿದೆ ಅಂತಾ? ಹೆಗ್ಡೇರೆ ಹೇಳ್ತಿದಾರೆ, ನೀನು ಅವರೂ ವಯಸ್ಸಾದವರು ಅಂತಾ!” ಎಂದು ನಕ್ಕರು.
ನಡುವಯಸ್ಸು ಮೀರಿದ್ದ ಗಂಭೀರ ಮಹಿಳೆ ದೊಡ್ಡಮ್ಮ ಹೆಗ್ಗಡಿತಿಯವರು ಗಂಡನ ಮತ್ತು ಹಳೆಮನೆ ಬಾವನವರ ವಿನೋದದ ಮಾತುಗಳಿಗೆ ಏನೊಂದೂ ಉತ್ತರ ಕೊಡದೆ, ಬಾಯಿಗೆ ಸೆರಗು ಮುಚ್ಚಕೊಂಡು ನಕ್ಕರು. ಸುಮಾರು ಸಮ ಸಮ ವಯಸ್ಕರಾಗಿದ್ದ ಗೌಡರೂ ಬಹಳ ಕಾಲದ ಮೇಲೆ ಒಟ್ಟಿಗೆ ಸೇರಿ ತಮ್ಮ ಎಳೆಗಾಲದ ಮನೋಭಂಗಿಯನ್ನು ಸವಿಯುತ್ತಿದ್ದಂತೆಯೆ, ವರ್ಷವೆಲ್ಲವೂ ತಮಗಿಂತಲೂ ಬಹಳ ಚಿಕ್ಕವರೊಡನೆಯೆ ವ್ಯವಹರಿಸುತ್ತಿದ್ದ ಹೆಗ್ಗಡಿತಿಯವರ ಮನಸ್ಸೂ ಕಳೆದುಹೋಗಿ ಬಹುದೂರವಾಗಿದ್ದ ತಮ್ಮ ಎಳೆಗಾಲದ ಭೂಮಿಕೆಗೆ ಪ್ರವೇಶಿಸಿದಂತಾಗಿತ್ತು.
ಜೊತೆಗೆ, ನಗಲಿರುವೆವರಿಗೆ ಕಚಗುಳಿ ಇಡುವಂತೆ, ದೇವಯ್ಯ ತಾನು ಕುಡಿಯುತ್ತಿದ್ದ ಕಾಫಿಯನ್ನು ಕೆಳಗಿಟ್ಟು ತನ್ನ ತಾಯಿಯ ಕಡೆಗೆ ನಗುಮೊಗವಾಗಿ ನೋಡುತ್ತಾ “ಅಯ್ಯಯ್ಯೋ, ಇದೇನು? ಅವ್ವಗೆ ಇವತ್ತು ಎಲ್ಲಿಲ್ಲದ ನಾಚಿಕೆಯಾಗಿಬಿಟ್ಟದಲ್ಲಾ!” ಎಂದು ಹಾಸ್ಯವಾಡಿದನು. ಹೊಗೆಯಿಂದ ತುಂಬಿರುತ್ತಿದ್ದ ಅಡುಗೆಮನೆಯೆಲ್ಲ ನಗೆಯಿಂದ ತುಂಬಿಹೋಯಿತು.
ಅಷ್ಟರಲ್ಲಿ ಬಾಲೆಯಾಡಿಸುವ ಹುಡುಗಿ ಶಿಶು ಚೆಲುವಯ್ಯನನ್ನು ಎತ್ತಿಕೊಂಡು ಹೋಗುತ್ತಿದ್ದುದನ್ನು ಕಂಡ ಹೆಗ್ಗಡೆಯವರು “ಎಲೆಲೆಲೆಲೆ ಹುಡುಗಿ, ಇತ್ತ ಎತ್ತಿಕೊಂಡು ಬಾರೆ; ನಾನೊಂದಿಷ್ಟು ನೋಡ್ತೀನಿ, ನನ್ನ ಮೊಮ್ಮಗನ್ನ!” ಎಂದು ಅಟ್ಟಹಾಸ ಮಾಡಿದರು.
ಹುಡುಗಿ ಚೆಲುವಯ್ಯನನ್ನು, ಕಿಟಕಿಯಿಂದ ಬಂದ ಎಳಬಿಸಿಲು ಬಿದ್ದಲ್ಲಿ, ಉರುಡು ಹಾಸಗೆ ಹಾಸಿ ಮಲಗಿಸಿದಳು. ಹಿಂದಿನ ದಿನ ಸಂಜೆ ಬಿದ್ದಿದ್ದ ಬಿರುಮಳೆಗೆ ಚಳಿಯಾಗುವಷ್ಟರಮಟ್ಟಿಗೆ ತಣ್ಣಗಾಗಿದ್ದ ಹವೆಯಲ್ಲಿ, ಎಳಬಿಸಿಲ ಸುಖೋಷ್ಣವನ್ನು ಅನುಭವಿಸಿದ ಆ ಕೂಸು ಅಂಗಾತನೆ ಮಲಗಿ ಕೈಕಾಲು ಆಡಿಸುತ್ತಾ, ನಗುವಂತೆ ಮೊದಲು ದನಿಯೆಸಗುತ್ತಾ, ಅದರ ಕಡೆಗೇ ಕಣ್ಣಾಗಿದ್ದ ಎಲ್ಲರ ಹೃದಯದ ಮೇಲೆಯೂ ಆನಂದ ಕಾಂತಿಯನ್ನು ಸಿಂಚಿಸಿ, ಮುದ್ದುಮೋಹವುಕ್ಕುವಂತೆ ಮಾಡಿತು.
ಮಣೆಯ ಮೇಲೆ ಕುಕ್ಕುರುಗಾಲಾಗಿ ಕುಳಿತು, ಗೋಡೆಗೆ ಒರಗಿಕೊಂಡಿದ್ದ ಸುಬ್ಬಣ್ಣ ಹೆಗ್ಗಡೆಯವರು ಮಗುವನ್ನು ನೋಡುತ್ತಿದ್ದ ಹಾಗೆಯೆ ಇತರರಿಗೆ ಅಚ್ಚರಿಯಾಗುವಂತೆ ಆನಂದಮಯರಾಗಿಬಿಟ್ಟರು. ಗೋಡೆಗೆ ಒರಗಿದ್ದವರು ನೆಟ್ಟಗೆ ನಿಮಿರಿ ಕುಳಿತರು. ಮತ್ತೆ ಮುಂದಕ್ಕೆ ಬಾಗಿ, ನಗೆಬೀರಿ ನೋಡತೊಡಗಿದರು. ಮತ್ತೆ ಮಣೆಯ ಮೇಲಿಂದ ಎದ್ದು ಉರುಡುಹಾಸಿಗೆಯ ಪಕ್ಕಕ್ಕೆ ಸರಿದು, ತುದಿಗಾಲ ಮೇಲೆ ಕುಳಿತು, ಬಗ್ಗಿ, ಮುದ್ದಿಸತೊಡಗಿದರು. ಆಮೇಲೆ ತುದಿಗಾಲಮೇಲೆ ಕುಳಿತಿದ್ದವರು ಅಂಡೂರಿ ಚಿಕ್ಕಾಲು ಬಕ್ಕಾಲು ಹಾಕಿ ಬಲವಾಗಿ ಕುಳಿತುಬಿಟ್ಟರು. ಯಾವುದೋ ಭಾವಾವೇಶದಿಂದ ಅವರ ಮುಖಭಂಗಿ ತೇಜಸ್ವಿಯಾಯಿತು. ಚೆಲುವಯ್ಯನ ಕೆನ್ನೆ ಗಲ್ಲ ಹಣೆಗಳನ್ನು ಮೆಲ್ಲಗೆ ಮುಟ್ಟಿ ನೀವಿ ಸೊಗಸುತ್ತಾ ಲಲ್ಲೆಗೈದು ತೊದಲಾಡಿದರು. ಅಷ್ಟರಲ್ಲಿ ಅವರ ಪಕ್ಕಕ್ಕೆ ಬಂದು ಕುಳಿತಿದ್ದ ದೇವಯ್ಯನ ಕಡೆ ಹನಿಗಣ್ಣಾಗಿ ನೋಡುತ್ತಾ ‘ಅವನ ಹಾಂಗೆ ಕಾಣ್ತಾನೊ ನಿನ್ನ ಮಗ! ಅವನೆ ಇವನು ಅನ್ನಬೇಕು, ಹಾಂಗೇ ಅದಾನೆ! ನಮ್ಮ ದೊಡ್ಡಣ್ಣ ಬಾಲೆ ಆಗಿದ್ದಾಗ ಹಿಂಗೇ ಇದ್ದ ಕಣೋ! ಅದೇ ಕಣ್ಣು, ಅದೇ ಮೂಗು, ಅದೇ ಚೆಂದ!’ ಎನ್ನುತ್ತಾ ಕಲ್ಲಯ್ಯಗೌಡರು ಮತ್ತು ದೊಡ್ಡಮ್ಮ ಹೆಗ್ಗಡಿತಿಯವರ ಕಡೆಗೂ ತಿರುಗಿ “ಗೌಡರಿಗೆ ಗೊತ್ತಿರಬೇಕಲ್ಲಾ? ನಮ್ಮ ದೊಡ್ಡಣ್ಣನ ತೊಟ್ಟಿಲಿಗೆ ಹಾಕೋ ಮನೆಗೆ ನೀವಿಬ್ಬರೂ ಬಂದಿದ್ರಲ್ಲಾ?… ನಾ ಹೇಳಾದು ಸುಳ್ಳೋ ಬದ್ದೋ ನೀನೆ ನೋಡು, ದೊಡ್ಡಕ್ಕಾ!” ಎಂದು ಮಗುವನ್ನು ಮೆಲ್ಲಗೆ ಎತ್ತಿ ತೊಡೆಯ ಮೇಲೆ ಮಲಗಿಸಿಕೊಂಡರು.
ಆಗಲೆ ಮುದುಕನ ವರ್ತನೆಯ ಅಸಾಧಾರಣತೆಗೆ ಎಲ್ಲರಿಗೂ ಸ್ವಲ್ಪ ಗಾಬರಿಯಾಗತೊಡಗಿತ್ತು. ಅದಕ್ಕೆ ಸರಿಯಾಗಿ ಮಗುವೂ ಗಟ್ಟಿಯಾಗಿ ಅಳತೊಡಗಿತು.
ದೇವಯ್ಯ “ದೊಡ್ಡಪ್ಪಯ್ಯಾ, ನಿಮ್ಮ ಬಟ್ಟೇನೆಲ್ಲಾ ಒದ್ದೆಮಾಡಿ ಬಿಟ್ಟಾನು! ಇತ್ತ ಕೊಡಿ ಅವನ್ನ” ಎಂದು ಮಗನ ಅಳುದನಿಗೇಳಿ ಆಗಲೆಯೆ ಅಲ್ಲಿಗೆ ಬಂದಿದ್ದ ತನ್ನ ಹೆಂಡತಿಯ ಕಡೆ ನೋಡಿದನು. ದೇವಮ್ಮ ಚೆಲುವಯ್ಯನನ್ನು ಎತ್ತಿ ಎದೆಗವಚಿಕೊಂಡು ಬೇಗಬೇಗನೇ ತಮ್ಮ ಮಲಗುವ ಕೋಣೆಗೆ ಹೋದಳು.
ಆ ದಿನ ಪೂರ್ವಾಹ್ನವೆಲ್ಲ ಹೆಗ್ಗಡೆಯವರ ಹರ್ಷಚಿತ್ತಕ್ಕೆ ಇನಿತೂ ಭಂಗ ಬರಲಿಲ್ಲ. ಶಿಶು ಚೆಲುವಯ್ಯನನ್ನು ಕಂಡಾಗಣಿಂದ ಅವರ ಮೊಗದ ಮೇಲೆ ಅರಳಿದ್ದ ನಗೆಯ ಮಲರು ಅವರು ಮಧ್ಯಾಹ್ನದ ಊಟ ಮುಗಿಸಿ ಹಗಲು ನಿದ್ದೆ ಮಾಡಿ ಎದ್ದಮೇಲೆಯೂ ಮಾಸದೆ ಬಾಡದೆ ಹುಸುಸಾಗಿಯೆ ಇತ್ತು, ಹಿಂದಿನ ದಿನ ರಾತ್ರಿ ಹಳೆಮನೆಗೆ ಹೋಗಿ ಬಂದಿದ್ದ ಮುಕುಂದಯ್ಯ ಐತನ ಕೈಲಿ ದೇವಯ್ಯಗೆ ಚೀಟಿಕೊಟ್ಟು ಕಳುಹಿಸುವವರೆಗೆ.
ಚೀಟಿಯನ್ನು ಓದಿಕೊಂಡ ದೇವಯ್ಯ ವಿಷಯವನ್ನು ತಟಕ್ಕನೆ ಸುಬ್ಬಣ್ಣ ಹೆಗ್ಗಡೆಯರಿಗೆ ತಿಳಿಸಲಿಲ್ಲ. ತನ್ನ ತಂದೆಯೊಡನೆ ಪ್ರಸ್ತಾಪಿಸಿದನು. ಹೆಗ್ಗಡೆಯವರು ಆ ದಿನವೆ ಕಾಲುನಡಿಗೆಯಲ್ಲಿ ಬೆಟ್ಟಳ್ಳಿಯಿಂದ ಹಳೆಮನೆಗೆ ನಡೆದುಕೊಂಡು ಹೋಗುವುದು ಅಸಾಧ್ಯವೆ ಆಗಿತ್ತು. ಗಾಡಿಯ ಮೇಲೆಯೆ ಕಳುಹಿಸುವುದಕ್ಕೂ ಆಗುವಂತಿರಲಿಲ್ಲ. ಏಕೆಂದರೆ ಹಳೆಮನೆಗೆ ಗಾಡಿದಾರಿಯೆ ಇರಲಿಲ್ಲ. ಎತ್ತುಗಾಡಿ ಇಟ್ಟುಕೊಳ್ಳುವುದೇ ಅಪೂರ್ವ ಭೋಗವಾಗಿದ್ದ ಆ ಕಾಲದಲ್ಲಿ ಗಾಡಿಯ ರಸ್ತೆ ಎಲ್ಲಿಂದ ಬರಬೇಕು? ಕಟ್ಟಿಗೆ ಗೊಬ್ಬರಗಳೂ ತಲೆಹೊರೆಯ ಮೇಲೆಯೆ ಸಾಗುತ್ತಿದ್ದುವು; ಹೊರಗಡೆಯಿಂದ ಬರುತ್ತಿದ್ದ ದಿನಸಿ ಸಾಮಾನುಗಳೆಲ್ಲ ಹೇರೆತ್ತಿನ ಮೇಲೆ ಆಮದಾಗುತ್ತಿದ್ದವು. ಹೀಗಾಗಿ ಜನಕ್ಕೆ ಗಾಡಿ ರಸ್ತೆಯ ಅವಶ್ಯಕತೆಯೆ ತೋರಿರಲಿಲ್ಲ.
ಹೆಗ್ಗಡೆಯವರಂತೂ ಸಂತೋಷಚಿತ್ತರಾಗಿ ಸದ್ಯಕ್ಕೆ ತಾಪತ್ರಯಮಯವಾದ ತಮ್ಮ ಮನೆಯನ್ನೇ ಮರೆತುಬಿಟ್ಟಂತೆ ಇದ್ದರು. ಪದೇ ಪದೇ ಮೊಮ್ಮಗನನ್ನು ಕರೆದು ತರಹೇಳಿ ಮುದ್ದು ಮಾತಾಡಿಸಿ ನಲಿಯುತ್ತಿದ್ದರು. ಕಲ್ಲಯ್ಯಗೌಡರು ಮನಸ್ಸಿಲ್ಲದ ಮನಸ್ಸಿನಿಂದ ಅವರಿಗೆ ತಮ್ಮ ಮನೆಯ ನೆನಪುಕೊಟ್ಟು, ಅಲ್ಲಿಗೆ ಆ ದಿನವೆ ಹಿಂತಿರುಗಬೇಕಾಗಬಹುದೆಂದು ಸೂಚಿಸಿದಾಗ, ಅವರು ಮುನಿಸಿಕೊಂಡಂತೆ ಮಾತಾಡಿದರು: “ಅಯ್ಯೋ ಇದ್ದೇ ಇದೆ, ಗೌಡರೆ, ಹಾಳು ಮನೆ! ಇನ್ನೆರಡು ದಿನ ಇಲ್ಲೇ ಸುಖವಾಗಿ ಇದ್ದುಬಿಡ್ತೀನಿ, ನನ್ನ ಮೊಮ್ಮಗನ್ನ ನೋಡ್ತಾ, ಹಾಯಾಗಿ!”
ಕೊನೆಗೆ, ನಿರ್ವಾಹವಿಲ್ಲದೆ, ದೇವಯ್ಯ ಮೆಲ್ಲಗೆ ಮುಕುಂದಯ್ಯನ ಚೀಟಿಯ ಪ್ರಸ್ತಾಪವೆತ್ತಿ, ಹಳೆಮನೆಯಲ್ಲಿ ನಡೆದ ದುರಂತವನ್ನು ಆದಷ್ಟು ಸೌಮ್ಯ ರೀತಿಯಲ್ಲಿ ತಿಳಿಸಿದಾಗ, ಹೆಗ್ಗಡೆಯವರಿಗೆ ಆದ ಸಂಕಟ ಹೇಳತೀರದ್ದಾಗಿತ್ತು. ಬಾಲಕರಂತೆ ಅವರು ರೋದಿಸುವುದನ್ನು ನೋಡಿ ಕಲ್ಲಯ್ಯಗೌಡರಾದಿಯಾಗಿ ಕಣ್ಣೀರು ತಡೆಯಲಾಗಲಿಲ್ಲ: “ದೇವಯ್ಯ, ನನ್ನ ದೊಡ್ಡಣ್ಣನ್ನ ಯಾವಾಗ ಕರಕೊಂಡು ಬರತಿಯಪ್ಪಾ ತೀರ್ಥಹಳ್ಳಿಯಿಂದ? ಎಲ್ಲ ಅವನಿಗೆ ವಹಿಸಿ, ತಣ್ಣಗೆ ಕಣ್ಣು ಮುಚ್ಚಿಕೋಳ್ತಿನಪ್ಪಾ! ನಂಗೆ ಸಾಕಪ್ಪಾ ಈ ಸಂಸಾರ!” ಎಂದು ತಲೆಮೇಲೆ ಕೈ ಹೊತ್ತುಕೊಂಡು ಅಳುತ್ತಾ ಕುಳಿತುಬಿಟ್ಟರು.
ಗಾಡಿ ಹಿಡಿದುಕೊಳ್ಳುವುದಕ್ಕೂ ದಾರಿಗಡ್ಡವಾದ ಹಳು ಮಟ್ಟು ಸವರುವುದಕ್ಕೂ ಮೂರು ನಾಲ್ಕು ಜನರಿದ್ದರೆ ಗಾಡಿಯನ್ನು ಹೇಗಾದರೂ ಮಾಡಿ ಹಕ್ಕಲು ಬಯಲಿನ ಮುಖಾಂತರ ಹಲೆಮನೆಯ ಹತ್ತಿರದವರೆಗೆ ಹೊಡೆದು ಕೊಂಡು ಹೋಗಬಹುದು ಎಂದು ಬಚ್ಚ ಭರವಸೆ ಕೊಟ್ಟಮೇಲೆ, ಸುಬ್ಬಣ್ಣ ಹೆಗ್ಗಡೆಯವರನ್ನು ತಡಿ ಹಾಸಿ, ದಿಂಬುಗಳ ನಡುವೆ ಮಲಗಿಸಿ, ದೇವಯ್ಯನೂ ಗಾಡಿಯ ಹಿಂದೆ ಅವರಿಗೆ ಮೈಗಾವಲಾಗಿ ಹತ್ತಿದನು. ವಿಷಣ್ಣ ವಾತಾವರಣದಲ್ಲಿ ಬೆಟ್ಟಳ್ಳಿ ಮನೆಯವರೆಲ್ಲ ನಿಂತು ನೋಡುತ್ತಿರಲು, ಗಾಡಿ ಮರೆಯಾಗಿ ಗಂಟೆ ಗಗ್ಗರದ ಸರಗಳ ಸದ್ದು ಮಾತ್ರ ಕೇಳಿಸಿ, ಕಡೆಗೆ ಅದೂ ನಿಂತಿತು. ಕಲ್ಲಯ್ಯಗೌಡರು ನೀಡಿದಾಗಿ ಸುಯ್ದು, ಯಾರ ಕಡೆಯೂ ನೋಡದೇ ನೆಲವನ್ನೇ ನೋಡುತ್ತಾ ಒಳಗೆ ನಡೆದರು. ಅತ್ತೆಯೊಡನೆ ಮಗನನ್ನು ಎತ್ತಿಕೊಂಡು ನಿಂತಿದ್ದ ದೇವಮ್ಮ ತನ್ನ ಅಕ್ಕನಿಗೊದಗಿದ್ದ ಸಂಕಟದ ಸ್ಥಿತಿಗೆ ಕಣ್ಣೀರು ಸುರಿಸುತ್ತಾ, ಮೈದುನ ತಿಮ್ಮಪ್ಪ ಹೆಗ್ಗಡೆಯನ್ನು ಶಪಿಸಿದಳು. ತನ್ನ ತಮ್ಮನಿಂದ ಚೀಟಿ ತಂದಿದ್ದ ಐತನನ್ನು ಪ್ರತ್ಯೇಕವಾಗಿ ಮನೆಯ ಹಿತ್ತಲು ಕಡೆಯ ಬಾಗಿಲಿಗೆ ಕರೆದು, ಅವನಿಂದ ತಾನು ಕೇಳಿ ತಿಳಿದಿದ್ದ ವಿವರವನ್ನೆಲ್ಲಾ ಗದ್ಗದ ಕಂಠದಿಂದ ಅತ್ತೆ ದೊಡ್ಡಮ್ಮ ಹೆಗ್ಗಡಿತಿಯವರಿಗೂ ಹೇಳಿದಳು:
ಧರ್ಮವನ್ನು ಹಳೆಮನೆಗೆ ಕೆರೆದೊಯ್ದು ಬಿಟ್ಟು, ಕತ್ತಲೆಯಲ್ಲಿಯೆ ಕೋಣೂರಿಗೆ ಹಿಂದಿರುಗಿದ್ದ ಐತನು, ತಾನು ಹಳೆಪೈಕದ ಕೆಲಸದ ಹೆಣ್ಣಾಳು ಹೂವಿಯಿಂದಲೂ, ಬಾಯಿಗೆ ತೆಗೆದುಕೊಂಡು ಬಿಡಾರಕ್ಕೆ ಹೊರಟಿದ್ದ ಹಳೆಮನೆ ಕೇರಿಯ ಹೊಲೆಯರಿಂದಲೂ ಸಂಗ್ರಹಿಸಿದ್ದ ಸುದ್ದಿಯನ್ನು ಮುಕುಂದಯ್ಯನಿಗೆ ತಿಳಿಸಿದನಂತೆ. ಒಡನೆಯ, ತನ್ನ ಅಕ್ಕನನ್ನು ಹೇಗಾದರೂ ಉಳಿಸಬೇಕೆಂದು, ಮುಕುಂದಯ್ಯ ಅಣ್ಣ ರಂಗಪ್ಪಗೌಡರನ್ನೂ ಕೂಡಿಕೊಂಡು ಹಳೆಮನೆಗೆ ಹೋಗಿ, ಕೋಣೆಯ ಬಾಗಿಲನ್ನು ಒಡೆದು ಒಳನುಗ್ಗಿ, ಪ್ರಜ್ಞೆತಪ್ಪಿ ಮಂಚದ ಮೇಲೆ ಬಿದ್ದುಕೊಂಡಿದ್ದ ರಂಗಮ್ಮನಿಗೆ ಶೈತ್ಯೋಪಚಾರ ಮಾಡಿ, ಧಾತು ಬರುವಂತೆ ಮಾಡಿದ್ದರಂತೆ!
*****



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ