ಕೋಣೂರಿನ ಅಡಕೆ ತೋಟದ ಒಂದು ಮೂಲೆಯಲ್ಲಿ ರಂಗಪ್ಪ ಗೌಡರ ಗಟ್ಟದಾಳುಗಳು-ಚೀಂಕ್ರ, ಪಿಜಿಣ, ಐತ, ಮೊಡಂಕಿಲ-ಹಿಂದಿನ ದಿನದ ಬಿರುಗಾಳಿ ಮಳೆಯಲ್ಲಿ ಉರುಳಿ, ಅಡಕೆ ಮರಗಳ ಮೇಲೆ ಬಿದ್ದಿದ್ದ ಒಂದು ದೊಡ್ಡ ಮುದಿ ಅತ್ತಿಯ ಮರವನ್ನು ಸವರಿ ಕುಡಿಯುವ ಕೆಲಸದಲ್ಲಿ ತೊಡಗಿದ್ದರು. ಅವರ ಹೆಣ್ಣಾಳುಗಳು-ದೇಯಿ, ಅಕ್ಕಣಿ, ಪೀಂಚಲು, ಬಾಗಿ- ತಮ್ಮ ಗಂಡಸರಿಗೆ ನೆರವಾಗಿ, ಸವರಿದ ಸೊಪ್ಪನ್ನು ಅಡಕೆ ಮರಗಳ ಬುಡದ ಮೇಲುಸೊಪ್ಪಿನ ಜಿಗ್ಗು ಮುಚ್ಚುವಂತೆ ಹೊತ್ತು ಹಾಕುವುದರಲ್ಲಿ ನಿರತವಾಗಿದ್ದರು. ಪೂರ್ವಾಹ್ನದ ಏರುಂಬಿಸಿಲಿನಲ್ಲಿ, ಎತ್ತರವಾಗಿ ಬೆಳೆದಿದ್ದ ಅಡಕೆ ಮರಗಳ ಬುಡದಲ್ಲಿ, ಕೆಲಸ ಮಾಡುತ್ತಿದ್ದ ಅವರೆಲ್ಲರೂ ತಾರತಮ್ಯದಿಂದ ಬಹು ಸಣ್ಣ ಗಾತ್ರದ ಪ್ರಾಣಿಗಳಂತೆ ಭಾಸವಾಗಿದ್ದರು. ಸೊಂಟಕ್ಕೆ ಬಿಗಿದಿದ್ದ ಲಂಗೋಟಿ ಮಾತ್ರವೆ ಉಡುಪಾಗಿದ್ದ ಗಂಡಾಳುಗಳಲ್ಲಿ ಚೀಂಕ್ರ ಪಿಜಿಣರು ಕೊಡಲಿ ಹಿಡಿದು ಕಡಿಯುತ್ತಿದ್ದರು. ಮೊಡಂಕಿಲ ಐತರು ಕತ್ತಿಗಳಿಂದ ಸಣ್ಣ ಸಣ್ಣ ಹರೆಗಳನ್ನು ಸವರಿಹಾಕುತ್ತಿದ್ದರು. ಗಟ್ಟದ ತಗ್ಗಿನವರ ರೀತಿ ಬಡ್ಡು ಸೀರೆಗಳನ್ನು ಮೈಗೆ ಸುತ್ತಿ, ತಲೆಗೆ ಹಾಳೆ ತೋಪಿ ಹಾಕಿಕೊಂಡಿದ್ದ ಹೆಣ್ಣಾಳುಗಳು ತುಳು ಭಾಷೆಯಲ್ಲಿ ಸಣ್ಣಗೆ ಗೊಣಗೊಣ ಮಾತಾಡಿಕೊಳ್ಳುತ್ತಾ ಯಾವ ಉತ್ಸಾಹವನ್ನೂ ಪ್ರದರ್ಶಿಸದ ನಡಿಗೆಯಿಂದ ಹಿಂದಕ್ಕೂ ಮುಂದಕ್ಕೂ ಅಡಕೆ ಮರದ ಬುಡದಿಂದ ಅತ್ತಿಮರ ಬಿದ್ದಿದ್ದ ಜಾಗಕ್ಕೆ ಚಲಿಸುತ್ತಿದ್ದರು. ಎಚ್ಚತ್ತಿರಲಿಲ್ಲ. ಅಡಕೆ ಮರದ ಪೊಟರೆಗಳಿಂದ ಹಾರುವ ಗಿಣಿಗಳ ಉಲಿಹ ಅವರ ದೈಹಿಕವಾದ ಕಿವಿಗಳಿಗೆ ಅನಿವಾರ್ಯವಾಗಿ ಕೇಳಿಸುತ್ತಿದ್ದರೂ ಅವರ ಮನಸ್ಸು ಅದನ್ನು ಆಲಿಸುವ ಗೋಜಿಗೂ ಹೋಗುತ್ತಿರಲಿಲ್ಲ; ಇನ್ನು ಗ್ರಹಿಸಿ ಸವಿಯುವ ಮಾತೆಲ್ಲಿ? ಹಿಂದಿನ ದಿನ ಸಂಜೆಯ ಮಳೆಯಲ್ಲಿ ತೊಯ್ದು ತೊಳೆದಿದ್ದ ಲಕ್ಷ ಲಕ್ಷ ವಿವಿಧ ವರ್ಣಚ್ಛಾಯೆಯ ಕಾಡಿನ ತೋಟದ ಅಡಕೆಯ ಬಾಳೆಯ ಎಲೆಹಸುರನ್ನು ಅವರ ಕಣ್ಣು ಅನಿವಾರ್ಯವಾಗಿ ನೋಡುತ್ತಿದ್ದರೂ, ಅದನ್ನು ಕಾಣುವ ಮಟ್ಟಕ್ಕೆ ಅವರ ಗಮನ ಒಂದಿನಿತೂ ಬೆಳೆದಿರಲಿಲ್ಲ, ಸೊಪ್ಪು ಮೇಯುವ ಪ್ರಾಣಿಯ ಪ್ರಜ್ಞೆಯಂತೆ!
ಇದ್ದಕ್ಕಿದ್ದ ಹಾಗೆ ಮರಕಡಿಯುವ ಕೊಡಲಿಯ ಸದ್ದು ನಿಂತಿತು. ಚೀಂಕ್ರ ಪಿಜಿಣ ಇಬ್ಬರೂ ತಮ್ಮ ತಮ್ಮ ಕೊಡಲಿಯ ಕಾವಿನ ತುದಿಗೆ ಮೈ ಆನಿಸಿದಂತೆ ನಸು ಒರಗಿ ನಿಂತು ವಿಶ್ರಾಂತಿ ತೆಗೆದುಕೊಳ್ಳತೊಡಗಿದರು. ಕುತ್ತಿಗೆಯಿಂದ ಇಳಿಯುತ್ತಿದ್ದ ಬೆವರನ್ನು ಒರೆಸಿಕೊಂಡರು.
ಪೂರ್ವದ ಕಡೆಗೆ ಮುಖಮಾಡಿ, ತನ್ನ ಎಡಗಾಲನ್ನು ತುಸು ಎತ್ತಿ ಮರದ ದಿಂಡಿನ ಮೇಲಿಟ್ಟು ನಿಂತಿದ್ದ ಚೀಂಕ್ರನಿಗೆ ಎದುರಾಗಿ ಅಡಕೆ ತೋಟ, ಅದಕ್ಕೆ ಮೇಲೆ ಗುಡ್ಡವೇರಿದ್ದ ಕಾಡು, ಅದಕ್ಕೂ ಮೇಲೆ ದೂರ ಎತ್ತರದಲ್ಲಿ ಹುಲಿಕಲ್ಲು ನೆತ್ತಿಯ ದೃಶ್ಯವಿತ್ತು. ಅವನಿಗೆ ಇದಿರಾಗಿ ಪಶ್ಚಿಮದ ಕಡೆಗೆ ಮುಖವಾಗಿ ನಿಂತಿದ್ದ ಪಿಜಿಣನಿಗೆ ಕೋಣೂರಿನ ಗದ್ದೆಯ ಕೋಗು, ಅದರ ಒತ್ತಿಗೆ ಬ್ಯಾಣದ ಹಕ್ಕಲು, ಅದರಾಚೆಗೆ ಸೊಪ್ಪಿನ ಹಾಡ್ಯ ಕಣ್ಬೊಲವಾಗಿತ್ತು.
ತುಸುಹೊತ್ತು ಇಬ್ಬರೂ ದಣಿವಾರಿಸಿಕೊಳ್ಳುತ್ತಾ ಮಾತಾಡದೆ ನಿಂತಿದ್ದರು. ಏದುಸಿರು ಬರಬರುತ್ತಾ ಸಾಮಾನ್ಯಸ್ಥಿತಿಗಿಳಿದು, ಪಿಜಿಣ ಕೆಮ್ಮಿ ಕ್ಯಾಕರಿಸಿ ಪಕ್ಕಕ್ಕೆ ಉಗುಳಿದನು.
ಹಾಗೆ ಉಗುಳಿದುದೆ ಮಾತು ಶುರುಮಾಡಲು ಒಂದು ಸಂಕೇತವಾಯಿತೆಂಬಂತೆ ಚೀಂಕ್ರ “ಹೌದಾ, ಹಸಲೋರ ಬಿಡಾರದಲ್ಲಿ ಒಂದು ಸುದ್ದಿ ಹಬ್ಬಿತ್ತು, ಕೇಳ್ದ್ಯಾ?” ಎಂದನು.
ಜ್ವರಗಡ್ಡೆಯ ಪ್ರಭಾವ ಹೊಟ್ಟೆಯ ಡೊಳ್ಳಿನಲ್ಲಿ ಪ್ರಸ್ಫುಟವಾಗಿದ್ದ ಪಿಜಿಣ ದಣಿದ ದನಿಯಲ್ಲಿ “ಅವನು ಹೊತ್ತಾರೆ ಒಲೆ ಹಚ್ಚಲು ಕೆಂಡ ತರಲು ಕುದುಕನ ಬಿಡಾರಕ್ಕೆ ಹೋಗಿದ್ದನಂತೆ. ಅದನ್ನೆ ದೊಡ್ಡದು ಮಾಡಿ ಕುದುಕನ ಹೆಂಡತಿ ಮ್ಯಾಲೆ ಪುಕಾರು ಹುಟ್ಟಿಸಿದ್ದಾರಂತೆ. ಕುದುಕನ ಹೆಂಡತಿ ಅಂಥವಳೇನಲ್ಲ” ಎಂದವನು ದೂರ ಪಕ್ಕಕ್ಕೆ ಏನನ್ನೋ ಗಮನಿಸುವಂತೆ ನೋಡಿ “ಸಣ್ಣ ಅಯ್ಯ ಬರ್ತಿದ್ದಾರೊ!” ಎನ್ನುತ್ತಾ ಕೊಡಲಿಯನ್ನೆತ್ತಿ ಮರಕಡಿಯಲು ಪ್ರಾರಂಭಿಸಿದನು. ತಟಕ್ಕನೆ ಹಿಂದಿರುಗಿ ನೋಡಿದ ಚೀಂಕ್ರನೂ ಪಿಜಿಣನನ್ನೆ ಅನುಸರಿಸಿದನು.
ಒಂದು ತೆಳು ಅಂಗಿ ತೊಟ್ಟು, ಮೊಣಕಾಲಿನಿಂದ ಇನಿತೆ ಕೆಳಗಿನವರೆಗೆ ಕೋಚು ಇಳಿಬಿದ್ದಿದ್ದ ಒಂದು ಅರೆಕೊಳಕು ಅಡ್ಡಪಂಚೆಯುಟ್ಟು, ಕೈಯಲ್ಲಿ ಬಿದಿರಿನಿಂದ ಮಾಡಿದ್ದ ಒಂದು ಚಿಟ್ಟುಬಿಲ್ಲು ಹಿಡಿದು ಕೋಣೂರು ರಂಗಪ್ಪಗೌಡರ ತಮ್ಮ, ಪ್ರಾಯಪೂರ್ವದ ತರುಣವಯಸ್ಸಿನ ಮುಕುಂದಯ್ಯ, ಆಳುಗಳು ಮರ ಸವರುತ್ತಿದ್ದಲ್ಲಿಗೆ ಬರುತ್ತಾ, ದೂರದಿಂದಲೆ, ಮಾತಾಡುತ್ತಾ ನಿಂತಿದ್ದ ಚೀಂಕ್ರ ಪಿಜಿಣರು ತಟಕ್ಕನೆ ತಾನು ಬರುತ್ತಿದ್ದುದನ್ನು ಗಮನಿಸಿ ಮರಕಡಿಯಲು ಶುರುಮಾಡಿದ್ದನ್ನು ನೋಡಿ “ಏನ್ರೋ ಮರ ಕಡಿಯಾಕೆ ಬಂದೀರೋ? ಪಂಚಾಯ್ತಿ ಹೊಡಿಯಾಕೆ ಬಂದೀರೋ?” ಎಂದು ಭರ್ತ್ಸನೆ ಮಾಡಿದನು.
ಅವರಿಬ್ಬರೂ ತುಸು ಹಲ್ಲುಬಿಟ್ಟರೇ ಹೊರತು ಯಾವ ಉತ್ತರವನ್ನೂ ಕೊಡದೆ ಕಡಿಯುವ ಕೆಲಸವನ್ನೆ ಮುಂದುವರಿಸಿದರು. ಮುಕುಂದಯ್ಯ ಹತ್ತಿರ ಬಂದುನಿಂತು “ಮಧ್ಯಾಹ್ನದೊಳಗೇ ಪೂರೈಸಿಬಿಡಬೇಕು, ಅಣ್ಣಯ್ಯ ಈಗ ಬರ್ತೀನಿ ಅಂತ ಹೇಳಿದಾನೆ. ನಿಮ್ಮ ಚಮಡ ಸುಲೀತಾನೆ, ನೀವು ಮಾತಾಡ್ತಾ ಇರೋದನ್ನ ಕಂಡರೆ!” ಎಂದವನು ಸೊಪ್ಪಿನ ಹರೆ ಕಡಿಯುತ್ತಿದ್ದ ಐತನಿಗೆ “ಏ ಐತ, ನನ್ನ ಸಂಗಡ ಬಾರೋ; ಸ್ವಲ್ಪ ಕೆಲಸ ಇದೆ” ಎಂದನು.
ಮುಕುಂದಯ್ಯನ ಹಾಗೆಯೆ ಅಣುಗನಾಗಿದ್ದ ಐತ, ಹರೆ ಕಡಿಯುತ್ತಲೇ, ತುಸು ದೂರದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಅಣುಗಿ ಹೆಂಡತಿ ಪೀಂಚಲು ಕಡೆಗೆ ನೋಡಿದ. ಅವನು ಆ ಅಣುಗಿಯನ್ನು ಮದುವೆಯಾಗಿ ಇನ್ನೂ ಒಂದು ವರ್ಷವೂ ಆಗಿರಲಿಲ್ಲ. ಅವಳನ್ನು ಒಂದು ಅರೆಕ್ಷಣವೂ ಬಿಟ್ಟಿರಲು ಅವನ ಮನಸ್ಸು ಒಪ್ಪುತ್ತಿರಲಿಲ್ಲ. ಅವನು ಯಾವ ಕೆಲಸಕ್ಕೆ ಹೋದರೂ ಅದೇ ಕೆಲಸಕ್ಕೆ ಅವಳನ್ನು ಹೇಗಾದರೂ ಮಾಡಿ ಕರೆದೊಯ್ಯುತ್ತಿದ್ದ. ಅವಳನ್ನು ಯಾವಾಗಲೂ ತನ್ನ ಕಣ್ಣಹೊಲದಲ್ಲಿಯೆ ಇರಿಸಿಕೊಳ್ಳುತ್ತಿದ್ದ. ಕೆಲಸದ ದೆಸೆಯಿಂದ ಎಲ್ಲಿಯಾದರೂ ಸ್ವಲ್ಪ ಹೊತ್ತು ಅವಳು ಕಣ್ಣು ತಪ್ಪಿಸಿದರೂ ಅವನು ವಿಹ್ವಲನಾಗಿಬಿಡುತ್ತಿದ್ದ. ಇದನ್ನು ಕಂಡು ಎಲ್ಲರೂ ನಗೆಯಾಡುತ್ತಿದ್ದರು. ಆದರೆ ಐತ-ಪೀಂಚಲು ಮಾತ್ರ ಜೋಡಿ ತಪ್ಪಿರುತ್ತಿರಲಿಲ್ಲ.
ಇದನ್ನರಿತ ಕೆಲವು ಗಂಡಾಳುಗಳು ಐತನನ್ನು ಪೀಡಿಸುವ ಸಲುವಾಗಿ ಪೀಂಚಲು ಒಡನೆ ಮಾತಾಡುವ, ಅಥವಾ ಎಲೆಯಡಿಕೆ ಕೊಡುವ ಇಲ್ಲವೆ ಕೊಳ್ಳುವ ಸೋಗಿನಿಂದ ರಸಿಕನಗೆ ನಗುತ್ತಲೋ ಕಣ್ಣು ಮಿಟುಕಿಸುತ್ತಲೋ ವ್ಯವಹರಿಸಿದರೆ ಐತನ ಜೀವವೇ ಹೊತ್ತಿ ಉರಿಯುತ್ತಿದ್ದು. ಅವನು ಅವರ ವರ್ತನೆಯನ್ನು ಅಷ್ಟು ಲಘುವಾಗಿ ಭಾವಿಸುತ್ತಿರಲಿಲ್ಲ. ಒಮ್ಮೊಮ್ಮೆ ಅವರ ಆ ನಾಟಕದ ಹಿಂದೆ ದುರುದ್ದೇಶವೂ ಇದ್ದುದನ್ನು ಅವನು ಮನಗಂಡಿದ್ದನು. ಆ ವಿಚಾರವಾಗಿ ಪೀಂಚಲುವಿಗೂ ಗುಟ್ಟಾಗಿ ಬುದ್ದಿ ಹೇಳಿದ್ದನು. ಅವಳು ಏನನ್ನೂ ಹೇಳದೆ ಬೆಪ್ಪುನಗೆ ನಕ್ಕಿದ್ದಳು ಅಷ್ಟೆ!
“ಬತ್ತೆ. ಹೋಪ” ಎಂದು ತನ್ನ ಸಮ್ಮತಿಯನ್ನು ಸೂಚಿಸಿದನೇ ಹೊರತು ಐತ ಸೊಪ್ಪು ಕಡಿಯುವುದನ್ನು ನಿಲ್ಲಿಸಲಿಲ್ಲ.
ಮೊಡಂಕಿಲ ಸ್ವಲ್ಪ ವಯಸ್ಸಾದವನು; ಅವನ ಕೂದಲೂ ಹಣ್ಣಾಗುತ್ತಿದೆ; ಅಲ್ಲದೆ ಅವನಿಗೆ ಗಟ್ಟಿಮುಟ್ಟಾದ ಹೆಂಡತಿ ಬಾಗಿ ಇದ್ದಾಳೆ. ಪಿಜಿಣ ಚಳಿಜ್ವರದಿಂದ ಆಗಾಗ್ಗೆ ನರಳುತ್ತಾ, ಜ್ವರಗಡ್ಡೆ ಬೆಳೆದ ಹೊಟ್ಟೆ ಡುಬ್ಬಣ್ಣನಾಗಿ ತನ್ನ ಹೆಂಡತಿ ಅಕ್ಕಣಿಯನ್ನೆ ನಿಬಾಯಿಸಿಕೊಂಡು ಹೋಗುವ ಸ್ಥಿತಿಯಲ್ಲಿಲ್ಲ. ಇನ್ನು ಏನು ಅನುಮಾನವಿದ್ದರೂ ಅದೆಲ್ಲ ಚೀಂಕ್ರನ ಮೇಲೆ. ಅವನು ಇದ್ದುದರಲ್ಲಿ ಕಟ್ಟುಮಸ್ತಾದ ಆಳು: ಅವರೆಲ್ಲೆಲ್ಲಾ ಮರ ಕಡಿಯುವ ಕೆಲಸಕ್ಕೆ ಬಂದಾಗಲೂ! ಅವನಿಗೂ ಹೆಂಡತಿ ಇದ್ದಾಳೆ, ದೇಯಿ. ಆದರೆ ಅವಳು ಬಸಿರಿ; ಯಾವಾಗಲೂ ಏನಾದರೂ ರೋಗದಿಂದ ನರಳುತ್ತಿರುತ್ತಾಳೆ. ನೋಡುವುದಕ್ಕೂ ಇಸ್ಸಿ ಎನ್ನಿಸುವಂತಿದೆ ಅವಳ ಬಚ್ಚುಮೋರೆ. ಆದ್ದರಿಂದಲೆ ಐತನಿಗೆ ಅವನ ಮೇಲೆ ಏನೋ ಆಶಂಕೆ. ಅವನು ತನ್ನನ್ನು ಮಾತನಾಡಿಸುವಾಗಲೆಲ್ಲ ಏನೋ ಕುಹಕ ತೋರುತ್ತದೆ; ಪೀಂಚಲುವನ್ನು ಮಾತಾಡಿಸುವಾಗ ಚೀಂಕ್ರನ ಧ್ವನಿ ಮುಖ ಭಂಗಿ ಎಲ್ಲ ಅಕ್ಕರೆಮಿದುವಾದಂತೆ ಅನ್ನಿಸುತ್ತದೆ ಐತನಿಗೆ. ಚೀಂಕ್ರನ ಸನಿಹದಲ್ಲಿ ಪೀಂಚಲುವನ್ನು ಬಿಟ್ಟುಹೋಗುವುದರಲ್ಲಿ ಏನೋ ಅನಾಹುತವನ್ನು ಅನುಭವಿಸುತ್ತಿದ್ದಾನೆ ಐತ. ಅವನ ಕೈ ಸೊಪ್ಪು ಹರೆ ಸವರುತ್ತಿದ್ದರೂ ಅವನ ಮನಸ್ಸು ಇದೆಲ್ಲವನ್ನೂ ಕ್ಷಣಮಾತ್ರದಲ್ಲಿ ಆರೋಪಿಸಿ ಬಿಟ್ಟಿದೆ.
ಐತನನ್ನು ಕರೆದು ನಾಲ್ಕುಮಾರು ಮುಂಬರಿದ ಮುಕುಂದಯ್ಯ ತಿರುಗಿ ನೋಡಿದರೆ ಐತ ಸೊಪ್ಪು ಕಡಿಯುತ್ತಲೆ ಇದ್ದಾನೆ.
“ಏ, ಬೇಗ ಬಾರೋ; ಹೊತ್ತಾಗ್ತದೆ. ಆ ಹಳ್ಳದಾಗೆ ಒಂದೆರಡು ಕಾರೇಡಿ ಹಿಡುಕೊಂಡು ಬರಾನ, ಕಪ್ಪೆಗೋಲು ಹಾಕಿ. ಅತ್ತಿಗಮ್ಮಗೆ ಮೈ ಹುಷಾರಿಲ್ಲ; ನಾಲಿಗೆ ಜಡ್ಡುಗಟ್ಟಿದೆಯಂತೆ….” ಎಂದ ಮುಕುಂದಯ್ಯನ ಮಾತಿನಲ್ಲಿ ಒಡೆಯನಾದವನ ಆಜ್ಞಾವಾಣಿಗಿಂತಲೂ ಹೆಚ್ಚಾಗಿ ಆಪ್ತನಾದ ಸಂಗಾತಿಯ ಸಲುಗೆ ಎದ್ದು ಕಾಣುತ್ತಿತ್ತು. ಕಾರಣ, ಚಿಕ್ಕಂದಿನಿಂದಲೂ ಐತ ಮುಕುಂದಯ್ಯನಿಗೆ ಒಡನಾಡಿಯಾಗಿ ಹಕ್ಕಿಬೇಟೆ, ಮೀನುಬೇಟೆ, ಉರುಳುಬೇಟೆ ಮೊದಲಾದುವುಗಳಲ್ಲಿ ಸಹಾಯಕನಾಗಿದ್ದದ್ದೆ. ಅವರಿಬ್ಬರ ಒಡೆಯ ಆಳಿನ ಸಂಬಂಧ ಇತ್ತೀಚೆಗೆ ಕಣ್ಣುಬಿಡುತ್ತಿತ್ತು.
ಐತ ಈಗ ಇಕ್ಕಟ್ಟಿನಲ್ಲಿ ಸಿಕ್ಕಿದ್ದ. ಮುಕುಂದಯ್ಯ ಮೊದಲು ತನ್ನನ್ನು ಕರೆದಾಗ ‘ಏನೋ ಕೆಲಸ ಇದೆ’ ಎಂದು ಮಾತ್ರ ಹೇಳಿದ್ದ. ಕೆಲಸ ಏನು? ಅದರ ಸ್ವರೂಪ ಎಂಥಾದ್ದು? ಅದನ್ನು ಹೇಳಿರಲಿಲ್ಲ. ಆದ್ದರಿಂದ ಅದಾವುದೊ ಯಾರು ಬೇಕಾದರೂ ಮಾಡಬಹುದಾದ ಕೆಲಸಕ್ಕೆ ಮೊಡಂಕಿಲನನ್ನೆ ಕರೆದುಕೊಂಡು ಹೋಗಿ ಎಂದೂ, ತನ್ನ ಅಂಗಾಲಿಗೆ ಮುಳ್ಳು ಹೊಕ್ಕು ಕೀತು ನೋವಾಗುತ್ತಿರುವುದರಿಂದ ತನಗೆ ಕಾಡುಕೊರಕಲಿನಲ್ಲಿ ಹೆಚ್ಚಾಗಿ ತಿರುಗಾಡಲು ಆಗುವುದಿಲ್ಲ ಎಂದು ನೆಪ ಹೇಳಿ ತಪ್ಪಿಸಿಕೊಳ್ಳುವ ಯೋಜನೆ ಮಾಡಿದ್ದ. ಆದರೆ ಯಾವಾಗ ಮುಕುಂದಯ್ಯನ ಬಾಯಿಂದ ‘ಕಾರೇಡಿ’ ‘ಕಪ್ಪೆಗೋಲು’ ಎಂಬೆಲ್ಲ ರೋಮಾಂಚನಕಾರಿಗಳಾದ ಮಾತುಗಳು ಕೇಳಿ ಬಂದುವೋ ಐತನ ಮನಸ್ಸು ತೂಗಾಡತೊಡಗಿತು. ಮೊದಲನೆಯದಾಗಿ, ಬೇಟೆಗಳಲ್ಲಿ ಅದರಲ್ಲಿಯೂ ಕಪ್ಪೆಗೋಲು ಹಾಕಿ ಕಾರೇಡಿ ಹಿಡಿಯುವುದರಲ್ಲಿ ಐತ ಆ ಕಡೆ ಹಳ್ಳಿಗಳಲ್ಲೆಲ್ಲ ಸುವಿಖ್ಯಾತನಾಗಿದ್ದನು. ಚಿಕ್ಕಂದಿನಿಂದಲೂ ಮುಕುಂದಯ್ಯನ ಆಪ್ತ ಕಾರ್ಯದರ್ಶಿಯಾಗಿ ಅಂತಹ ಕಿರಾತಕಾರ್ಯಗಳಲ್ಲೆಲ್ಲ ಅವನಿಗೆ ತಪ್ಪದೆ ನೆರವಾಗುತ್ತಿದ್ದನು. ಪೀಂಚಲುವನ್ನು ಮದುವೆಯಾಗುವುದಕ್ಕೆ ಮುಂಚೆ ಐತನಿಗಿದ್ದ ಕೆಳೆಜೋಡಿ ಎಂದರೆ ವಿಶೇಷವಾಗಿ ಮುಕುದಯ್ಯನೆ! ಆದ್ದರಿಂದ ತಾನು ಯಾವ ಕಾಯ್ಯದಲ್ಲಿ ಪ್ರವೀಣನೆಂದು ಊರಿಗೆ ಊರೇ ಹೊಗಳುತ್ತಿದ್ದಿತೋ ಅಂತಹ ಕಾರ್ಯಕ್ಕಾಗಿಯೆ ತನ್ನನ್ನು ಮುಕುಂದಯ್ಯನು ಕರೆಯುತ್ತಿದ್ದಾನೆ ಎಂದ ಮೇಲೆ ಮೊಡಂಕಿಲ್ಲನ ಹೆಸರನ್ನು ಎತ್ತುವುದಕ್ಕೂ ಅವನಿಗೆ ಸಾಧ್ಯವಾಗಲಿಲ್ಲ. ಎರಡನೆಯದಾಗಿ, ಅಂತಹ ಬೇಟೆಯ ಕೆಲಸಗಳೆಂದರೆ ಐತನಿಗೆ ಜೀವವೆಲ್ಲ ಉತ್ಸಾಹ ಉಜ್ವಲವಾಗುತ್ತಿತ್ತು. ಪೀಂಚಲುವಿನ ಸಂಗರುಚಿ ಒಂದು ವರ್ಷದ್ದಾಗಿದ್ದರೆ ಕಪ್ಪೆಗೋಲು ಬೇಟೆಯ ಕಾಡುರುಚಿ ಬಾಲ್ಯದಿಂದ ಮೊದಲುಗೊಂಡು ಅನೇಕ ವರ್ಷಗಳದ್ದಾಗಿತ್ತು!
ತಟಕ್ಕನೆ ಹರೆ ಕಡಿಯುವುದನ್ನು ನಿಲ್ಲಿಸಿ “ಅಯ್ಯಾ, ಪೀಂಚಲು ನಮ್ಮ ಒಡನೆ ಬರಲಿ. ಏಡಿ ಹಿಡಿದುಕೊಳ್ಳುವುದಕ್ಕೆ ಆಳು ಬೇಕಲ್ಲ? ಒಂದು ಹಾಳೆಕೊಟ್ಟೆ ಮಾಡಿಕೊಟ್ಟರಾಯಿತು” ಎಂದು ಐತನ ಕಡೆಗೆ ಚೀಂಕ್ರನೂ ಪಿಜಿಣನೂ, ಮರಕಡಿಯುತ್ತಿದ್ದುದನ್ನು ತುಸುನಿಲ್ಲಿಸಿ, ನಗೆಮೊಗರಾಗಿ ನೋಡತೊಡಗಿದರು. ಹೆಣ್ಣಾಳುಗಳೂ ತಮ್ಮತಮ್ಮೊಳಗೆ ಏನೊ ಹೇಳಿಕೊಂಡು ಕಿಲಕಿಲನೆ ಒಳನಗೆ ನಕ್ಕರು. ಪೀಂಚಲು ನಾಚಿ ಎಲ್ಲರ ಕಡೆಗೂ ಬೆನ್ನು ಮಾಡಿಯೆ ನಿಂತು ಬಿಟ್ಟಳು!
ಮನೆಯಿಂದ ಹೊರಡುವಾಗಲೆ ತಾನು ಆಲೋಚಿಸಿದ್ದಂತೆಯೆ ತನ್ನ ವ್ಯೂಹ ಸಫಲವಾಗುತ್ತಿದ್ದುದನ್ನು ಕಂಡು, ವಿನೋದ ವಿಷಯವನ್ನೆಲ್ಲ ಕ್ಷಣಾರ್ಧದಲ್ಲಿ ಗ್ರಹಿಸಿದ ಮುಕುಂದಯ್ಯ “ಹೌದೋ, ಅವಳೂ ಬರಲಿ ಮತ್ತೆ, ಏಡಿ ಕೊಟ್ಟೆ ಹೊತ್ತುಕೊಳ್ಳೋರು ಯಾರು? ಈಗ….ಒಂದಡಕೆ ಅಗಿಯೋದ್ರೊಳಗೆ ಬಂದು ಬಿಡಾನ….ಬೇಗ ಬನ್ನಿ ಮತ್ತೆ” ಎಂದು ನಟನೆಯ ಗಂಭೀರವಾಣಿಯಿಂದ ಆಜ್ಞೆಮಾಡಿದಂತೆ ಹೇಳಿ, ಅಡಕೆ ಬಾಳೆಯ ಮರಗಳೆಡೆ ತೂರಿ ಗುಡ್ಡದತ್ತ ಮರೆಯಾದನು. ಐತ ಬಾಳೆಮರದ ಹೆಡಲಿನ ಸಂಧಿಯಲ್ಲಿಟ್ಟಿದ್ದ ತನ್ನ ಸೊಂಟದ ಪಂಚೆಯನ್ನು ಸುತ್ತಿಕೊಂಡು, ಪೀಂಚಲು ನಿಂತಿದ್ದೆಡೆಗೆ ಹೋಗಿ ಏನನ್ನೊ ಹೇಳಿದನು. ಗಂಡ ಮುಂದೆ ಹೆಂಡತಿ ಹಿಂದೆ ಇಬ್ಬರೂ ಬಿರುಬಿರನೆ ನಡೆದು, ಮುಕುಂದಯ್ಯ ಹೋದ ದಾರಿಯಲ್ಲಿ ಮುಂಬರಿದು, ಮರೆಯಾದರು, ಉಳಿದವರು ಒಬ್ಬರ ಮುಖವನ್ನೊಬ್ಬರು ಇಂಗಿತಪೂರ್ಣವಾದ ದೃಷ್ಟಿಯಿಂದ ನೋಡಿ ಮತ್ತೆ ಕೆಲಸಕ್ಕೆ ಕೈ ಹಾಕಿದರು.
ಮೊಡಂಕಿಲ ತನ್ನ ವಿನೋದಭಾವದ ಹರ್ಷವನ್ನು ಅದುಮಿಡಲಾರದೆ “ನಮ್ಮ ಸಣ್ಣ ಅಯ್ಯಗೆ ಐತ ಅಂದರೆ ಬಹಳ ಪಿರೀತಿ” ಎಂದನು.
ಚೀಂಕ್ರನ ವ್ಯಂಗ್ಯಧ್ವನಿ ಕೇಳಿಸಿತು: “ಅಲ್ಲದೆ ಮತ್ತೆ? ಆ ಹೆಣ್ಣೂ ಸಂಗಡ ಇದ್ದರೆ, ಮತ್ತೂ ಪಿರೀತಿ!”
ಉಳಿದವರು ತನ್ನ ಮಾತಿಗೆ ಮೆಚ್ಚುಗೆ ಈಯುತ್ತಾರೆಂದು ಭಾವಿಸಿದ್ದ ಚೀಂಕ್ರನಿಗೆ ನಿರಾಶೆಯಾಯಿತು: ಯಾರೂ ನಗಲಿಲ್ಲ.
ಬೇಸಗೆಯಲ್ಲಿ ಮೊದಲ ಬಿರುಮಳೆ ಬಿದ್ದ ಮೇಲೆ ಮರುದಿನ ಕಂಡು ಬರುವ ತೀಕ್ಷ್ಣತರವಾದ ಬಿಸಿಲು ಏರುತ್ತಿತ್ತು. ಚೀಂಕ್ರ ಪಿಜಿಣರು ಅತ್ತಿಯ ಮರವನ್ನು ಎರಡು ಮೂರು ದೊಡ್ಡ ದೊಡ್ಡ ತುಂಡುಗಳನ್ನಾಗಿ ಮಾಡಿ, ಆ ದಿಮ್ಮಿಗಳ ಮೇಲೆಯೆ ಕುಳಿತು ದಣಿವಾರಿಸಿಕೊಳ್ಳುತ್ತಿದ್ದರು. ಮೊಡಂಕಿಲನೂ ಹೆಣ್ಣಾಳುಗಳೂ ಬಾಳೆ ಮರದ ಎಲೆನೆರಳಿನಲ್ಲಿ ಕುಳಿತು ಎಲೆ ಹಾಕಿಕೊಳ್ಳುವ ನೆವದಲ್ಲಿ ವಿರಾಮ ತೆಗೆದುಕೊಳ್ಳಲು ಪ್ರಾರಂಭಿಸಿದ್ದರು. ದೂರ ತೋಟದ ಕಾಲುದಾರಿಯಲ್ಲಿ ರಂಗಪ್ಪಗೌಡರು ಯಾರೊಡನೆಯೊ ಅವರ ವಾಡಿಕೆಯಂತೆ ಒಂದು ಮೈಲಿ ಆಚೆಗೂ ಕೇಳಿಸಬಹುದೋ ಏನೋ ಎಂಬಂತಹ ಗಟ್ಟಿದನಿಯಲ್ಲಿ ಸಂಭಾಷಿಸುತ್ತಾ ಬರುತ್ತಿದ್ದುದು ಕೇಳಿಸಿತು.
“ಈಗಲೇ ಎಲ್ಲಿ ಆಗುತ್ತದೇರಿ, ನೀವು ಊರಿಗೆ ಹೋಗಿ ಬರಾಕೆ? ಜೈಮುನಿ ಬರೆದು ಕೊಡ್ತೀನಿ ಅಂದಿರಿ, ಅದೂ ಪೂರೈಸಿಲ್ಲ. ನಮ್ಮ ಆಳುಲೆಕ್ಕ ಬ್ಯಾರೆ ಇದೆ…. ಸರಕಾರ ಬೇರೆ ಏನೇನೊ ಹೊಸ ರೂಲೀಸು ಮಾಡಿ, ಹೊಸ ಅಮಲ್ದಾರರು ಲೋಟೀಸಿನ ಮೇಲೆ ಲೋಟೀಸು ಜಾರಿ ಮಾಡ್ತಿದ್ದಾರೆ….”
“ಮಳೆ ಹಿಡಿಯುವ ಮುನ್ನ ಬಂದುಬಿಟ್ಟರಾಯ್ತಲ್ಲಾ, ಗೌಡರೆ? ಗಟ್ಟದ ಮೇಲಕ್ಕೆ ಬಂದವ ಕೆಳಗಿಳಿಯದೆ ಎರಡು ವರ್ಷಕ್ಕೆ ಬಂದಿತ್ತಲ್ದಾ? ನನ್ನ ತಾಯಿ ಮುದುಕಿ ಸಾಯುವ ಮುನ್ನ ಒಮ್ಮೆ ಮೋರೆ ಕಂಡು ಬಂದು ಬಿಡುತ್ತೇನೆ.”
“ನಿಮಗೆ ಕೊಡಬೇಕಾದ್ದನ್ನೆಲ್ಲಾ ಕೊಡೋಕೆ ಈಗ ನನ್ನ ಹತ್ರ ಹಣ ಇಲ್ಲವಲ್ಲ. ಇನ್ನೊಂದು ನಾಲ್ಕುದಿನ ತಡೆದರೆ….”
“ಹೆಚ್ಚೇನು ಬೇಡ ನನಗೆ. ಹೋಗಿ ಬರುವ ದಾರಿಯ ಖರ್ಚು, ಆ ಮುದುಕಿಗೆ ಒಂದು ಸ್ವಲ್ಪ ಕೊಡುವುದಕ್ಕೆ ಆದರೆ ಸಾಕು….”
“ಯಾವುದನ್ನೂ ನೋಡಿ ಹೇಳ್ತೀನಿ, ಐಗಳೆ. ಒಂದೆರಡು ದಿನದಲ್ಲಿ ಕಲ್ಲೂರು ಸಾಹುಕಾರ್ರು ಮಂಜಭಟ್ಟರ ಹತ್ತಿರ ಹೋಗಿ ಬರ್ತೀನಿ; ಏನಿದ್ದರೂ ಆಮೇಲೆ ಗೊತ್ತಾಗೋದು.”
ಚೀಂಕ್ರ ಪಿಜಿಣರು ನೋಡುತ್ತಿದ್ದಂತೆಯೆ ಕೋಣೂರು ರಂಗಪ್ಪಗೌಡರೂ ಅವರ ಹಿಂದೆ ಐಗಳು ಅನಂತಯ್ಯನವರೂ ಕಾಣಿಸಿಕೊಂಡರು, ಅಡಕೆ ಬಾಳೆಯ ಮರಗಳ ಸಂಧಿಯಲ್ಲ: ನಡುಹರೆಯದ ಗೌಡರು ತಕ್ಕಮಟ್ಟಿಗೆ ಸುಪುಷ್ಟ ದೇಹದ ಬಲಿಷ್ಠ ವ್ಯಕ್ತಿಯಾಗಿದ್ದರು. ಗೌರವರ್ಣದ ಅವರ ಮುಖದ ಮೇಲಣ ಕರ್ರನೆಯ ಕೊಂಕುಮೀಸೆ ಅವರನ್ನು ಮೊದಲನೆಯ ಸಾರಿ ನೋಡಿದವರಿಗೆ ಹೆದರಿಕೆ ಹುಟ್ಟಿಸುವಂತೆ ಕ್ಷಾತ್ರದ್ಯೋತಕವಾಗಿತ್ತು. ಅವರು ತಾವು ಹೊದೆದಿದ್ದ ಕೆಂಪು ಶಾಲನ್ನು, ಸೆಕೆಯಿಂದ ಪರಿಹಾರ ಪಡೆಯಲೆಂಬಂತೆ, ಹೆಗಲಮೇಲೆ ಹಾಕಿಕೊಂಡಿದ್ದರಿಂದ ಅವರ ವಿಶಾಲವಾದ ಉಬ್ಬಿದೆದೆಯ ಮೇಲೆ ಬೆಳೆದಿದ್ದ ರಾಶಿ ರಾಶಿ ಕರಿಯ ರೋಮ ಬಿಳಿಮೈಯಲ್ಲಿ ಎದ್ದು ಕಾಣುತ್ತಿತ್ತು. ಎರಡು ಕಿವಿಗಳಲ್ಲಿಯೂ ಮೇಲೆ ಕೆಳಗೆ ಇದ್ದ ಎರಡೆರಡು ಚಿನ್ನದ ಒಂಟಿಗಳು ಬಿಸಿಲಿಗೆ ಆಗಾಗ ತಳಿಸುತ್ತಿದ್ದುವು. ಆ ಕಾಲದ ನಾಡಿನ ಪದ್ಧತಿಯಂತೆ ಲಾಳಾಕಾರವಾಗಿ ಕ್ಷೌರಮಾಡಿಸಿಕೊಂಡಿದ್ದ ತಲೆಯ ಮುಂಭಾಗ ಅವರ ಹಣೆಗೆ ಒಂದು ವಿಸ್ತರಣೆಯೋಪಾದಿ ಇತ್ತು. ಸೊಂಟದ ಕಚ್ಚೆಪಂಚೆ ಮೊಣಕಾಲನ್ನು ಮುಚ್ಚಿತ್ತು ಮಾತ್ರ. ಒಂದು ಚಿನ್ನದ ನೇವಳ ಉಡಿದಾರದಂತೆ, ಸುತ್ತಿದ್ದ ಪಂಚೆಯ ಮೇಲೆ, ಸೊಂಟದಲ್ಲಿ ಹಳದಿಯಾಗಿ ಹೊಳೆಯುತ್ತಿತ್ತು. ಅವರು ಕಾಲಿಗೆ ಹಾಕಿಕೊಂಡಿದ್ದ ಕೆಂಪು ಹೂ ಕೂರಿಸಿದ ಕನ್ನಡ ಜಿಲ್ಲೆಯ ಗಿರ್ಕಿಮೆಟ್ಟು ಗಿರಕು ಬರಕು ಸದ್ದು ಮಾಡುತ್ತಾ ಅವರ ಆಗಮನಕ್ಕೆ ಒಂದು ರೀತಿಯ ಪರಾಕು ಹೇಳುವಂತಿತ್ತು.
ಅವರ ಹಿಂದೆ ಬರುತ್ತಿದ್ದ ಐಗಳು ಅನಂತಯ್ಯನವರು ಗೌಡರ ಹಾಗೆ ಎತ್ತರದ ವ್ಯಕ್ತಿಯಾಗಿರಲಿಲ್ಲ. ಆದರೆ ಕುಳ್ಳು ಎಂದೂ ಯಾರೂ ಹೇಳುವಂತೆಯೂ ಇರಲಿಲ್ಲ. ಅವರು ದಪ್ಪನೆಯವರಾಗಿದ್ದರೆ ಕುಳ್ಳಾಗಿ ತೋರುತ್ತಿದ್ದರೆಂದೆ ಹೇಳಬೇಕು. ಆದರೆ ತೆಳ್ಳಗೆ ಸಣಕಲಾಗಿದ್ದುದರಿಂದ ಉದ್ದವಾಗಿರುವಂತೆ ಕಾಣಿಸುತ್ತಿದ್ದರು ಅಷ್ಟೆ. ಅವರು ಹೆಂಗಸರಂತೆ ಪೂರ್ತಿ ಕೂದಲು ಬಿಟ್ಟಿದ್ದರು. ಬೈತಲೆ ತೆಗೆಯದೆ ಬಾಚಿ ಹಿಂದಕ್ಕೆ ಜುಟ್ಟು ಗಂಟು ಹಾಕಿದ್ದರು. ಅವರ ಕಿವಿಯಲ್ಲಿಯೂ ಒಂಟಿ ಹೊಳೆಯುತ್ತಿದ್ದವು. ಒಂದು ಕಾಲಿನಲ್ಲಿ ಬೆಳ್ಳಿಯ ಸರಿಗೆಯೂ ಇತ್ತು. ಒಂದು ಜಾಳು ಪಂಚೆಯ ಕಚ್ಚೆ ಹಾಕಿ, ಬನೀನು ತೊಟ್ಟಿದ್ದರು. ಅವರ ಕಚ್ಚೆ ಮೊಣಕಾಲಿನವರೆಗೆ ಮಾತ್ರ ಇಳಿಬಿದ್ದು ರಾಮ ಲವಲೇಶವಿಲ್ಲದ ನುಣ್ಣನೆಯ ಜಂಘೆಗಳನ್ನು ಪ್ರದರ್ಶಿಸುತ್ತಿತ್ತು. ಅವರೂ ಮೆಟ್ಟು ಹಾಕಿಕೊಂಡಿದ್ದರು; ಆದರೆ ಅವು ನಿಃಶಬ್ದವಾಗಿದ್ದುವು; ಅಲ್ಲದೆ ಗೌಡರ ಮೆಟ್ಟುಗಳಂತೆ ಹೂವಿನ ಕುಚ್ಚಿನ ಅಲಂಕಾರ ಕಣ್ಣು ಸೆಳೆಯುತ್ತಲೂ ಇರಲಿಲ್ಲ. ಅವರಿಗೆ ಮೀಸೆಯೇನೊ ಇತ್ತು. ಆದರೆ ಗೌಡರ ಮೀಸೆಗಳಂತೆ ‘ನಾವು ಇದ್ದೇವೆ’ ಎಂಬ ಠೀವಿಯಿಂದಿರದೆ, ಇದ್ದರೂ ಇಲ್ಲದಂತೆ, ಯಾರ ಕಣ್ಣಿಗೂ ಬೀಳದಿದ್ದರೆ ಸಾಕಪ್ಪಾ ಎಂಬಂತೆ ಮೈಗರೆದುಕೊಂಡಿತ್ತು. ಅವರ ಮುಖದಲ್ಲಿ ಒಂದು ಸಂಸ್ಕೃತಿಯ ಕಳೆ ಬೆಳಗುತ್ತಿದ್ದುರಿಂದ, ಉಳಿದೆಲ್ಲ ದೃಷ್ಟಿಯಿಂದ ನಿರ್ಲಕ್ಷಿಸಬಹುದಾಗಿದ್ದ ಅವರ ವ್ಯಕ್ತಿತ್ವಕ್ಕೆ ಒಂದು ಆಕರ್ಷಣೆಯೊದಗಿಸಿ, ಅವರನ್ನು ಸಾಧಾರಣತೆಯಿಂದ ಬಹುಮಟ್ಟಿಗೆ ಪಾರುಮಾಡಿತ್ತು. ಅವರ ನಡಿಗೆಯನ್ನು ನೋಡಿದರೆ, ಒಂದು ಕಾಲು ಮತ್ತೊಂದಕ್ಕಿಂತ ತುಸು ಉದ್ದವಾಗಿರುವಂತೆ ಭಾಸವಾಗುತ್ತಿತ್ತು. ಆದರೆ ನಿಜಸ್ಥಿತಿ ಹಾಗಿರಲಿಲ್ಲ. ಅವರು ಹುಡುಗರಾಗಿದ್ದಾಗ ಕಾಲಿಗೆ ಪೆಟ್ಟು ಬಿದ್ದುದರಿಂದ ನರಹಿಡಿದು ಹಾಗೆ ಕುಂಟುತ್ತಿದ್ದು, ಅದು ಅಭ್ಯಾಸವಾಗಿ ಉಳಿದುಬಿಟ್ಟಿತ್ತು.
“ಐಗಳೆ, ಮರೆತಿದ್ದೆ ಒಂದು ಕೆಲಸಾನ…. ಆ ಬಚ್ಚಲಮನೆ ಎದುರು ಕೆಳಗರಡೀಲಿ ಒಂದು ಹೆರಿಗೆ ಅಂಕಣ ಇದೆಯಲ್ಲ ಅಲ್ಲಿಗೆ ತಟ್ಟಿಮರೆ ಕಟ್ಟಿಸಬೇಕು…. ಅವ್ವನ್ನ ಕೇಳಿ, ಜೊತಕ ಗಿತಕ ಕಟ್ಟಬೇಕು ಅಂದರೆ, ಅದನ್ನೂ ಕಟ್ಟಿಬಿಡಿ…. ಹೆರಿಗೆ ಮಾಡಿಸ್ತಾಳಲ್ಲಾ ಆ ಹಳೇಪೈಕದ ಮುದುಕಿ ಅದಕ್ಕೆ ಬರಾಕೆ ಹೇಳಿಕಳ್ಸಿದ್ದೆ. ಬಂತೊ ಇಲ್ಲೊ ನೋಡಿ, ಬೇಗ ಹೇಳಿ ಕಳ್ಸಿ, ಅದನ್ನ ಕರ್ಸೆಬಿಡಿ…. ಅದಕ್ಕೆ ಹೆರೋ ಸಮಯ. ಅವ್ವ ಹೇಳ್ತು, ಬೇನೆ ಸಂಕಟ ಸುರು ಆದ್ಹಾಂಗೆ ಕಾಣ್ತದೆ ಅಂತ. ನಾನೀಗ್ಲೆ ಗಟ್ಟದೋರ ಕೆಲಸ ನೋಡಿ, ಹೇಳೋದನ್ನೆಲ್ಲ ಹೇಳಿ, ಬ್ಯಾಗ ಬಂದುಬಿಡ್ತನಿ.”
ಐಗಳೆ ಅನೇಕಾನೇಕ ಕರ್ತವ್ಯಗಳಲ್ಲಿ-ಹುಡುಗರಿಗೆ ಕೂಲಿಮಠದಲ್ಲಿ ಅಕ್ಷರಾಭ್ಯಾಸ ಮಾಡಿಸುವುದು, ಅಭ್ಯಂಜನಾದಿಗಳನ್ನು ಮಾಡಿಸಿ ಅವರ ಯೋಗಕ್ಷೇಮ ನೋಡಿಕೊಳ್ಳುವುದು, ಸಮಯ ಬಿದ್ದರೆ ಅವರ ಬಟ್ಟೆಗಳನ್ನು ಒಗೆಯುವುದು, ಆಳುಲೆಕ್ಕ ಇಡುವುದು, ಗದುಗಿನ ಭಾರತ, ತೊರವೆ ರಾಮಾಯಣ, ಜೈಮಿನಿ ಭಾರತ ಇತ್ಯಾದಿಗಳನ್ನು ಓಲೆಗರಿಯಲ್ಲಿ ನಕಲು ಮಾಡುವುದು ಇತ್ಯಾದಿ ಇತ್ಯಾದಿ- ತಟ್ಟಿಗಿಟ್ಟಿ ಕಟ್ಟಿಸಿ ಗೌಡರ ಹೆಂಡತಿಯ ಹೆರಿಗೆಗೆ ಅನುಕೂಲ ಮಾಡಿಕೊಡುವುದೇನು ಒಂದು ವಿಶೇಷವಾಗಿರಲಿಲ್ಲ. ಯಾವ ಕೆಲಸವನ್ನೆ ಹೇಳಿದರೂ ಅವರು ಮೇಲು ಕೀಳು ಎನ್ನದೆ ಸಂತೋಷವಾಗಿಯೆ ಮಾಡುತ್ತಿದ್ದರು. ಆದ್ದರಿಂದಲೆ ಅವರು ಸದಾ ನಗುನಗುತ್ತಲೆ ಇರುವಂತೆ ತೋರುತ್ತಿತ್ತು.
ಐಗಳನ್ನು ಹಿಂದಕ್ಕೆ ಕಳುಹಿಸಿ, ರಂಗಪ್ಪಗೌಡರು ಕಡಿದಿದ್ದ ದಿಮ್ಮಿಗಳ ಮೇಲೂ ಅಡಕೆ ಬಾಳೆಯ ಮರದ ಬುಡಗಳಲ್ಲಿಯೂ ಕುಳಿತು ಎಲೆಯಡಿಕೆ ಹಾಕಿಕೊಳ್ಳುತ್ತಿದ್ದ ಗಟ್ಟದ ತಗ್ಗಿನವರಿಗೆ ಗಟ್ಟಿಯಾದ ದನಿಯಲ್ಲಿಯೆ ಬಿರುಸಾಗಿ ಹೇಳಿದಳು:
“ಅಯ್ಯೋ ಮನೆಹಾಳ್ ಮುಂಡೇಮಕ್ಕಳ್ರಾ, ಯಾಕ್ರೋ ಕೂತೀರಿ? ಹಾಸಿಕೊಂಡು ಮನಿಕ್ಕೊಳ್ರೋ….!”
ಗೌಡರ ಆರ್ಭಟದ ನಿತ್ಯ ಪರಿಚಯವಿದ್ದ ಆ ಆಳುಗಳು ಅಷ್ಟೇನು ಗಡಿಬಿಡಿ ಮಾಡಿಕೊಳ್ಳದೆ ನಿಧಾನವಾಗಿಯೆ, ಆದರೂ ಗೌಡರಿಗೆ ಭಯಪಟ್ಟು ಅವರ ವಾಣಿಗೆ ಗೌರವ ತೋರಿಸುತ್ತೇವೆ ಎಂಬುದನ್ನು ಅವರಿಗೆ ತೋರಿಸಲು ಕಾತರರಾದವರಂತೆ, ಕೂತಲ್ಲಿಂದ ಎದ್ದು ತಮ್ಮ ತಮ್ಮ ಕೆಲಸದ ಉಪಕರಣಗಳನ್ನು ಕೈಗೆ ತೆಗೆದುಕೊಂಡರು. ಚೀಂಕ್ರ ಸ್ವಲ್ಪ ಧೈರ್ಯ ತಂದುಕೊಂಡು ಹಲ್ಲುಬಿಟ್ಟು ಸುಳ್ಳೇ ನಗುತ್ತಾ, ಆಳುಗಳೆಲ್ಲರೂ ಅದುವರೆಗೂ ಸ್ವಲ್ಪವೂ ವಿರಾಮವಿಲ್ಲದೆ ಕೆಲಸ ಮಾಡುತ್ತಲೆ ಇದ್ದರೆಂದೂ ಆಗತಾನೆ ಕೂತಿದ್ದರೆಂದೂ ಸಮಾಧಾನ ಹೇಳಿದನು.
ಗೌಡರು ಅವನಿಗೆ “ನೀನೊಬ್ಬ ದೊಡ್ಡ ಸೇರೆಗಾರ ಆಗಿಬಿಟ್ಟಿದೀಯ”…. ಎಂದು ಗದರಿಸಿ, ಸುತ್ತಲೂ ಏನನ್ನೊ ಹುಡುಕುವರಂತೆ ಕಣ್ಣು ಸುಳಿಸಿ “ನೀವು ಇಷ್ಟೇ ಜನ ಏನೋ ಕೆಲಸಕ್ಕೆ ಬಂದೋರು? ಅಂವ ಎಲ್ಲೋ ಆ ಸಿಟ್ಲುಮಿಂಚ? ಮದೇ ಆಯ್ತು ಅಂತಾ ಹೆಂಡ್ತೀನ ಹಿಡಿಕೊಂಡೇ ಕಾಡ್ನೆಲ್ಲಾ ಅಲೀತಿರ್ತಾನೊ?…. ಅಂವ ಕೆಲಸಕ್ಕೆ ಬರ್ಲಿಲ್ಲೇನೊ, ಏ….ಏ….” ಎಂದು ಪಿಜಿಣನನ್ನು ನೋಡುತ್ತಾ, ಅವನ ಹೆಸರು ನೆನಪಿಗೆ ಬರದೆ “ಸುಡಗಾಡು ಹೆಸರು…. ಎಂಥದೋ ನಿನ್ನ ಹೆಸರು?” ಎಂದರು.
“ಅವನ ಹೆಸರೇ? ಪಿಜಿಣ” ಎಂದು ಸೂಚಿಸಿ ಮೊಡಂಕಿಲ ಹರೆ ಕಡಿಯಲು ಪ್ರಾರಂಭಿಸಿದ.
“ಅವನು ಎಲ್ಲೋ, ಪಿಜಿಣಾ? ನಿನ್ನ ಬಿಡಾರದ ಬದೀಲೇ ಅಲ್ಲೇನೋ ಅವನ ಬಿಡಾರ?” ಗೌಡರ ಪ್ರಶ್ನೆಗೆ
ಪಿಜಿಣ “ಯಾರು? ಐತನಾ? ಕೆಲಸಕ್ಕೆ ಬಂದಿತ್ತು ಹುಡುಗ-”
“ಮತ್ತೆಲ್ಲಿ ಹೋದನೋ?”
“ಸಣ್ಣ ಒಡೇರು ಕರಕೊಂಡು ಹೋದರು, ಏಡಿ ಹಿಡಿಯುದಕ್ಕೆ.”
“ಯಾರೋ? ಮುಕುಂದನೇನೋ?…. ಅವನ ದೆಸೆಯಿಂದ ಆಗೋದಿಲ್ಲ! ಕೆಲಸ ಮಾಡ್ತಾರೆಯೊ ಇಲ್ಲವೊ ನೋಡ್ತಾ ಇರು ಅಂತ ಕಳಿಸಿದ್ರೆ, ಕೆಲಸ ಮಾಡವನ್ನೆ ಕರಕೊಂಡು ಷಿಕಾರಿಗೆ ಎದ್ದುಬಿಡ್ತಾನಲ್ಲಾ! ಐತನ ಹೆಂಡ್ತಿ ಬರಲಿಲ್ಲೇನೊ, ಕೆಲ್ಸಕ್ಕೆ?”
“ಅದು ಅವನ್ನ ಬಿಟ್ಟು ಇರುತ್ತದಾ? ಹಿ ಹಿ ಹಿ! ಅದನ್ನೂ ಕರಕೊಂಡು ಹೋದ್ರು, ಏಡಿ ಹೊರುವುದಕ್ಕಂತೆ!”
“ಏಡಿ ಹೊರುವುದಕ್ಕೆ?! ಸೈ ಬಿಡು! ಏನು ಒಂದು ಪಾಟಿ ಚೀಲವೋ? ಮಣಗಟ್ಲೆ ಏಡಿ ಹಿಡೀತಾರೇನೋ?”
“ಅಮ್ಮಾವರಿಗೆ ಏನೋ ಹುಸಾರಿಲ್ಲವಂತೆ. ಅದಕ್ಕೆ ಜಡದ ಬಾಯಿಗೆ….” ಚೀಂಕ್ರ ಒಡೆಯರ ಮನಸ್ಸು ಪ್ರಸನ್ನವಾಗುವಂತೆ ಮಾಡಲು ಅವರ ಹೆಂಡತಿಯನ್ನೆ ಕಾರಣವನ್ನಾಗಿ ಒಡ್ಡಲು ಮಾತೆತ್ತಿದುದನ್ನು ತಡೆದು ಗೌಡರು “ಸಾಕು ಸುಮ್ಮನಿರೊ, ಸೇರೆಗಾರ!…. ಕಡಿ, ಕಡಿ, ನೀ ಮರ ಕಡಿ” ಎಂದು ಒಂದು ದಿಮ್ಮಿಯ ಮೇಲೆ ಹೆಗಲ ಮೇಲಿದ್ದ ಕೆಂಪು ಶಾಲನ್ನು ಹಾಕಿಕೊಂಡು ಅದರ ಮೇಲೆ ಕುಳಿತರು. ಸೊಂಟದಲ್ಲಿದ್ದ ಮಡ್ಡಿ ನಶ್ಯದ ಕೋಡಿನ ಡಬ್ಬಿಯನ್ನು ತೆಗೆದು ಅದರ ಮುಚ್ಚಳವನ್ನು ಹಿಡಿದುಕೊಂಡು, ಡಬ್ಬಿ ಮುಚ್ಚಳವನ್ನು ಯಥಾಪ್ರಕಾರ ಹಾಕಿ, ಅದನ್ನು ಸೊಂಟಕ್ಕೆ ಮೊದಲಿನಂತೆ ಸಿಕಕಿಸಿ, ಸಾವಧಾನವಾಗಿ ನಶ್ಯವನ್ನು ಮೂಗಿಗೆ ಏರಿಸಿ ಸವಿಯುತ್ತಾ ಕುಳಿತು ಕೊಂಡರು. ಕೊಡಲಿಯ ಪೆಟ್ಟಿನ ಸದ್ದು ತೋಟದಿಂದ ಮರುದನಿಯಾಗುವಂತೆ ತೋರುತ್ತಿತ್ತು: ಠಾಪ್! ಠಾಪ್! ಠಾಪ್! ಠಾಪ್! ಠಾಪ್!….
ಸಾವಧಾನವಾಗಿ ನಶ್ಯ ಸೇಯುವ ಬಹಿಃಕ್ರಿಯೆಯಲ್ಲಿ ತೊಡಗಿದ್ದಂತೆ ತೋರುತ್ತಿದ್ದರೂ ಗೌಡರ ಮನಸ್ಸು ತನ್ನ ಅಂತರ್ಮುಖ ಪ್ರಪಂಚದಲ್ಲಿ ಅಲೆಯತೊಡಗಿತ್ತು. ಆ ಆಲೋಚನೆಗಳಿಗೆ ಒಂದು ತರ್ಕವಾಗಲಿ ಕ್ರಮವಾಗಲಿ ಸ್ಪಷ್ಟವಾಗಿರಲಿಲ್ಲ. ತಮ್ಮದೇ ಆದ ಯಾವುದೋ ಕ್ರಮದಲ್ಲಿ, ನೀರಿನ ತಳದಿಂದ ಮೇಲು ಮೈಗೆ ಗುಳ್ಳೆಗಳೇಳುವಂತೆ, ಅವು ಎದ್ದೆದ್ದು ಒಡೆಯುತ್ತಿದ್ದುವು:
ಅವರು ಅರ್ಧ ವಿಶ್ವಾಸಕ್ಕಾಗಿಯೂ ಅರ್ಧ ವಿನೋದಕ್ಕಾಗಿಯೂ “ಸಿಟ್ಲುಮಿಂಚ” ಎಂದು ಕರೆಯುತ್ತಿದ್ದ ಐತನಿಂದ ಪ್ರಾರಂಭವಾದ ಆಲೋಚನೆ, ತಮ್ಮ ಮುಕುಂದಯ್ಯನ ಕಡೆ ತಿರುಗಿ, ಐತನ ಹುಡುಗಿ ಹೆಂಡತಿ ಪೀಂಚಲು ಕಡೆ ಹೊರಳಿ, ಗರ್ಭಿಣಿಯಾಗಿ ಹೆರಿಗೆಯ ಬೇನೆಯಲ್ಲಿದ್ದ ತಮ್ಮ ಹೆಂಡತಿಯ ಕಡೆಗೂ, ಅಲ್ಲಿಂದ ಕನ್ನಡ ಜಿಲ್ಲೆಗೆ ಹೋಗಿ ಬರುತ್ತೇನೆಂದು ಹಣ ಕೇಳಿದ ಐಗಳು ಅನಂತಯ್ಯನವರತ್ತ ಹೋಗಿ, ಸಾಹುಕಾರ ಮಂಜಭಟ್ಟರಲ್ಲಿಗೆ ಸಾಗಿತ್ತು.
ಅಷ್ಟರಲ್ಲಿ, ತುಸುದೂರದಲ್ಲಿ ಗದ್ದೆಕೋಗಿನ ಅಂಚಿನಲ್ಲಿ, ಹಾಡ್ಯದ ಪಕ್ಕದ ಹಕ್ಕಲನ್ನು ಹಾದು, ಅಗಳಿನ ಸಂಕವನ್ನು ದಾಟಲು ಪ್ರಯತ್ನಿಸುತ್ತಿದ್ದ ಇಬ್ಬರು ಸ್ತ್ರೀವ್ಯಕ್ತಿಗಳು ಅವರ ದೃಷ್ಟಿಗೆ ಬಿದ್ದು, ಅವರನ್ನು ಗುರುತಿಸಲೆಂದು ಹುಬ್ಬು ಸುಕ್ಕಿಸಿ ಕಿರಿಹಿಡಿದು ನೋಡತೊಡಗಿದರು. ಯಾರು ಎಂಬುದು ಸ್ಪಷ್ಟವಾಗದಿರಲು ತಮಗೆ ತಾವೆ ಎಂಬಂತೆ ಆಳುಗಳಿಗೂ ಕೇಳಿಸುವ ರೀತಿಯಲ್ಲಿ “ಯಾರೋ ಅದು? ಅಲ್ಲಿ ಆ ತಡಬೆ ಹತ್ತಿರ ಸಂಕ ದಾಟುತ್ತಿರೋರು?” ಎಂದರು, ಸ್ವಲ್ಪ ರಾಗವಾಗಿ, ಉದಾಸೀನ ಧ್ವನಿಯಿಂದಲೆ.
ಅವರು ಯಾರನ್ನೂ ನಿರ್ದೇಶಿಸಿ ಪ್ರಶ್ನಿಸಿರಲಿಲ್ಲ. ಆದರೂ ಆಳುಗಳೆಲ್ಲ, ಗಂಡಸರೂ ಹೆಂಗಸರೂ, ಕೆಲಸ ನಿಲ್ಲಿಸಿ, ನಿಂತು, ಆ ಕಡೆ ನೋಡತೊಡಗಿದರು.
ಪಿಜಿಣ ಗೊಬ್ಬೆಸೆರಗು ಕಟ್ಟಿ ಉಟ್ಟಿದ್ದ ಸೀರೆಯನ್ನೂ ಕುತ್ತಿಗೆಗೆ ಕಟ್ಟಿ ಬೆನ್ನಿನ ಮೇಲೆ ಇಳಿಬಿದ್ದಿದ್ದ ವಲ್ಲಿಯನ್ನೂ ಗಮನಿಸಿ “ಯಾರೋ ಹೆಗ್ಗಡಿತಮ್ಮೋರು ಕಂಡ ಹಂಗೆ ಕಾಣ್ತದೆ” ಎಂದನು.
“ಯಾರೇನು? ನೋಡಿದರೆ ಕಾಂಬುದಿಲ್ಲೇನು? ಅತ್ತೆ ಸೊಸೆ ಜೋಡಿ!” ಎಂದು ಚೀಂಕ್ರ ಹಲ್ಲುಬಿಟ್ಟು ನಗುತ್ತಾ ನಿಂತನು.
“ಓಹೋ! ನಾಗಕ್ಕ ನಾಗತ್ತೆಯರ ಸವಾರಿ ಅಂತಾ ಕಾಣ್ತದೆ! ಹೂವಳ್ಳಿಗೆ ಹೋಗೋರೇನೋ!” ಎಂದು ಗೌಡರು ಇಂಗಿತವಾಗಿ ಚೀಂಕ್ರನ ಕಡೆ ನೋಡಿದರು.
ಗೌಡರಿಗೆ ಹೇಗೋ ಹಾಗೆ ಚೀಂಕ್ರೆನಂತಹರಿಗೂ ಗಾಳಿಸುದ್ದಿ ಕಿವಿಗೆ ಬಿದ್ದಿತ್ತು. ನಾಗತ್ತೆ ಹೇಗಾದರೂ ಮಾಡಿ ತನ್ನ ಸೊಸೆ ನಾಗಕ್ಕನನ್ನು ಹೂವಳ್ಳಿ ವೆಂಕಟಪ್ಪ ನಾಯಕರಿಗೆ ಸೀರುಡಿಕೆ ಮಾಡಲು ಒಂದು ವರುಷದಿಂದಲೂ ಹವಣಿಸುತ್ತಿದ್ದಾಳೆ ಎಂಬ ಸಂಗತಿ. ಆದರೆ ಚೀಂಕ್ರನ ನೋಟದಲ್ಲಿದ್ದ ನಿಃಸ್ಪೃಹತಾಭಾವ ಗೌಡರ ನೋಡದಲ್ಲಿರಲಿಲ್ಲ. ಏಕೆಂದರೆ ರಂಗಪ್ಪಗೌಡರು ಹೃದಯಭ್ರಮರವೂ ನಾಗಕ್ಕನ ಪುಷ್ಪಪಾತ್ರೆಯ ಮೇಲೆ ಆಗೊಮ್ಮೆ ಈಗೊಮ್ಮೆ ಹಾರಾಡಿ, ಜೇನೀಂಟುವ ಆಶೆಯನ್ನು ತೋರಿತ್ತು; ತೋರಿಸುತ್ತಲೂ ಇತ್ತು. ಆದರೆ, ಒಂದು ವೇಳೆ ಅದು ಸಾಧ್ಯವಾದರೆ, ತಮಗೂ ನಾಗಕ್ಕಗೂ ಇರಬಹುದಾದ ಸಂಬಂಧದ ಸ್ವರೂಪವನ್ನು ನಿರ್ಣಯಿಸಲು ಅವರಿನ್ನೂ ಸಮರ್ಥರಾಗಿರಲಿಲ್ಲ. ಒಮ್ಮೆ ಯೋಚನೆ: ಅವಳನ್ನು ಸುಮ್ಮನೆ ಇಟ್ಟುಕೊಳ್ಳಬಹುದಲ್ಲಾ ಎಂದು, ಮತ್ತೊಮ್ಮೆ: ಸೀರುಡಿಕೆ ಮಾಡಿಕೊಂಡರೇನಾಗುತ್ತದೆ ಎಂದು. ಛೆ ಛೆ! ಅದು ತಮ್ಮಂತಹ ಮನೆತನಸ್ಥರ ಅಂತಸ್ತಿಗೆ ಕೀಳು ಎಂಬ ಭಾವನೆ ಅವರನ್ನು ನಾಚಿಸುತ್ತಿದ್ದುದೂ ಉಂಟು. ಗಟ್ಟಿಮುಟ್ಟಾದ ತನ್ನ ಹೆಂಡತಿ ಲಕ್ಷಣವಾಗಿಯೇ ಇರುವಾಗ? ಅದರಲ್ಲಿಯೂ ಐಗಳು ಅನಂತಯ್ಯನವರು ಭಾರತ ರಾಮಾಯಣ ಜೈಮಿನಿ ಇವುಗಳನ್ನು ಓದಿ, ಧರ್ಮವಿಚಾರ ಸೂಕ್ಷ್ಮವನ್ನು ಹೃದಯಸ್ಪರ್ಶಿಯಾಗಿ ಬಿತ್ತರಿಸುತ್ತಿದ್ದಾಗ, ಅದ್ನನು ಗ್ರಹಿಸಿದ ತ್ಕಾಲದಲ್ಲಿ ರಂಗಪ್ಪಗೌಡರ ರಸವಶವಾದ ಮನಸ್ಸು ಎಷ್ಟೋಸಾರಿ ಧರ್ಮಾಧರ್ಮ ಪ್ರಸಂಗದ ಕುರುಕ್ಷೇತ್ರವೆ ಆಗಿಬಿಟ್ಟಿದ್ದಿತು. ಆದರೆ, ‘ಮನ್ಮಥವಿಜಯವು ನೀಲಕಂಠನಿಗೂ ಸುಲಭವಾಗಲಿಲ್ಲ ಎಂದಮೇಲೆ ಬರಿಯ ಧರ್ಮಶ್ರವಣದಿಂದಲೆ ಮನುಷ್ಯ ಮಾತ್ರನಾದವನು ಉತ್ತೀರ್ಣನಾಗುತ್ತಾನೆಯೆ?’ ಎಂದು ಐಗಳು ತಾಳಮದ್ದಳೆಯ ಪ್ರಸಂಗ ಸಮಯದಲ್ಲಿ ವ್ಯಾಖ್ಯಾನ ಮಾಡಿದ್ದರಲ್ಲವೆ?
ಗೌಡರು ನೋಡುತ್ತಿದ್ದಂತೆಯೆ ಆ ಇಬ್ಬರೂ ಹೂವಳ್ಳಿಗೆ ಅಗಚುವ ಗದ್ದೆಯಂಚಿನ ಕಾಲುದಾರಿಯನ್ನು ಉತ್ತರಿಸಿ ಕೋಣೂರು ಮನೆಯ ದಾರಿಯನ್ನೆ ಹಿಡಿದಿದ್ದರು. ಅದನ್ನು ಕಂಡು ಗೌಡರಿಗೆ ಸಂತೋಷವಾಯಿತು.
ಆ ಸಂತೋಷಕ್ಕೆ ಬೇರೆ ಬೇರೆ ಕಾರಣಗಳಿದ್ದಿರಬಹುದು. ಆದರೆ ಅವರ ಮನಸ್ಸು ತನಗೆ ತಾನೆ ಧೈರ್ಯವಾಗಿ ಸ್ಪಷ್ಟಪಡಿಸಿಕೊಂಡ ಕಾರಣವೆಂದರೆ ತಮ್ಮ ಹೆಂಡತಿಯ ಹೆರಿಗೆ ಮತ್ತು ತರುವಾಯದ ಉಪಚಾರದ ಸಂದರ್ಭದಲ್ಲಿ ಅನುಭವಶಾಲಿಯಾದ ನಾಗತ್ತೆ ಮತ್ತು ಉತ್ಸಾಹಿಯಾದ ನಾಗಕ್ಕ ಇವರಿಂದ ತಮ್ಮ ತಾಯಿಗೆ ದೊರೆಯಬಹುದಾದ ಸಹಾಯ.
ಹೆಂಗಸರಿಬ್ಬರೂ ಗದ್ದೆ ತೋಟಗಳನ್ನು ಬೇರ್ಪಡಿಸುವ ಬೇಲಿಯ ಬಳಿಗೆ ಸೇರಿ, ತಡಬೆಯನ್ನು ನಿಸ್ಸಂಕೋಚವಾಗಿ ಹತ್ತಿ ದಾಟಿ, ತಮ್ಮ ತಮ್ಮೊಳಗೆ ತುಸು ಗಟ್ಟಿಯಾಗಿಯೆ ಮಾತನಾಡಿಕೊಳ್ಳುತ್ತಾ ಅಡಕೆಯ ಮತ್ತು ಬಾಳೆಯ ಮರಗಳ ಸಂದಿಯಲ್ಲಿ ಮನೆಗೆ ಹೋಗುವ ಕಾಲುದಾರಿಯಲ್ಲಿ ಮುಂದುವರಿದರು. ಮುಂದೆ ಹೋಗುತ್ತಿದ್ದ ನಾಗಕ್ಕ ಇದ್ದಕ್ಕಿದ್ದಹಾಗೆ ನಿಂತು, ತನ್ನನ್ನು ದಾಟಿ ಮುಂದುವರಿದ ಅತ್ತೆಯ ಹಿಂದೆ ಮರೆಯಾಗಲೆಳೆಸಿದಾಗ ನಾಗತ್ತೆ ನೋಡಿದಳು, ತೋಟದಲ್ಲಿ ತುಸು ದೂರದಲ್ಲಿ ಕಡಿದ ಮರದ ದಿಮ್ಮಿಯ ಮೇಲೆ ಕುಳಿತು ನಶ್ಯ ಸೇಯುತ್ತಾ ಆಳುಗಳಿಂದ ಕೆಲಸ ಮಾಡಿಸುತ್ತಿದ್ದ ರಂಗಪ್ಪಗೌಡರನ್ನು ಹೆಂಗಸರಿಬ್ಬರೂ ಅದುವರೆಗೆ ಗಂಡಸರ ಕಣ್ಣಿಗೆ ಬೀಳದೆ, ಗಂಡಸರ ಸುಳಿವೂ ಇಲ್ಲದೆ, ತಾವು ತಾವಾಗಿಯೆ ಇದ್ದಾಗ ಇದ್ದ ರೀತಿಯನ್ನು ಸಂಪೂರ್ಣವಾಗಿ ತ್ಯಜಿಸಿ, ನಾಚಿ ಹದುಗುವಂತಹ ಭಂಗಿಯನ್ನಾರೋಪಿಸಿಕೊಂಡು, ಬೇಗಬೇಗನೆ ಮನೆಯ ಕಡೆಗೆ ನಡೆದು ಕಣ್ಮರೆಯಾದರು.
ಸ್ವಲ್ಪ ಹೊತ್ತಿನಲ್ಲಿಯೆ ಗೌಡರು ಎದ್ದುನಿಂತು, ತಾವು ಕೂತಿದ್ದ ಶಾಲನ್ನು ಎತ್ತಿ ಹೆಗಲಮೇಲೆ ಹಾಕಿಕೊಂಡು “ಏ ಸೇರೆಗಾರ” ಎಂದು ಚೀಂಕ್ರನನ್ನು ನಿರ್ದೇಶಿಸಿ “ಹಗಲು ಉಣ್ಣಕ್ಕೆ ಹೋಗಾಕೆ ಮೊದಲು ಈ ಮರ ಕಡಿಯಾ ಕೆಲಸಾನೆಲ್ಲ ಪೂರೈಸಿ ಹೋಗ್ಬೇಕು. ಗೊತ್ತಾಯ್ತಾ?” ಎಂದು ಆಜ್ಞಾಪಿಸಿ ಹೊರಾಡುವುದರಲ್ಲಿದ್ದರು. ಅಷ್ಟರಲ್ಲಿ ತೋಟದ ಮೇಲುಭಾಗದ ಹಳುವಿನಲ್ಲಿ ಏನೋ ಪ್ರಾಣಿ ಓಡುತ್ತಿರುವ ಸದ್ದಾಯಿತು. ಎಲ್ಲರೂ ಚಕಿತರಾಗಿ ಆ ಕಡೆ ನೋಡುತ್ತಾ ಆಲಿಸುತ್ತಾ ನಿಂತರು. ಏಡಿ ಹಿಡಿಯಲು ಹೋದವರು ಯಾವುದೋ ಪ್ರಾಣಿಯನ್ನು ಹೆದರೆಬ್ಬಿಸಿದ್ದಾರೆಂದು ಗೌಡರು ಊಹಿಸಿದರು. ಆ ಸದ್ದು ಕಾಡಿನ ಕಡೆಯಿಂದ ತೋಟದ ಕಡೆಗೇ ಬರುವಂತೆ ತೋರತೊಡಗಿತು. ಹೆಣ್ಣಾಳುಗಳು ಗಾಬರಿಯಾಗಿ ಅಡಕೆ ಬಾಳೆಯಮರಗಳ ಸಂದಿಯಲ್ಲಿ ಒಟ್ಟಾದರು. ಮಿಗವೊ ಕಾಡುಕುರಿಯೊ ಒಂಟಿಗ ಹಂದಿಯೊ ಎಂಬ ಸಂದೇಹ ವಿಸ್ಮಯಗಳಿಂದ ಉಳಿದವರು ಅತ್ತಕಡೆ ಕಣ್ಣಾಗಿ ನಿಂತಿದ್ದರು.
“ಹಾಳು ಹುಡುಗ, ಆ ‘ಸಿಟ್ಲುಮಿಂಚ’ ಕಣೋ!” ಎಂದು ಗೌಡರು ಕೂಗಿಕೊಂಡರು. ಅಡಕೆ ಬಾಳೆ ಮರಗಳ ನಡುವೆ ಮೇಲುಸೊಪ್ಪಿನ ಜಿಗ್ಗನ್ನು ಲರಿಲರಿ ತುಳಿಯುತ್ತಾ ಕಪ್ಪಿಂದ ಕಪ್ಪಿಗೆ ನೆಗೆಯುತ್ತಾ ದೌಡಾಯಿಸಿ ಬರುತ್ತಿದ್ದ ಐತ ಗೌರದನ್ನು ಕಂಡವನೆ ಏದುತ್ತಾ ನಿಂತನು.
ಯಾರಿಗೋ ಏನೋ ಅಪಾಯವಾಗಿರಬೇಕೆಂಬ ಭಯ ಎಲ್ಲರನ್ನೂ ಆವರಿಸಿತು. ಐತನ ಮೈಯ್ಯೆಲ್ಲ ಕೆಸರು ಸಿಡಿದಿತ್ತು. ಓಡಿಬರುವ ಅವಸರದಲ್ಲಿ ಕಾಲಿಗೂ ಮೈಗೂ ಮುಳ್ಳುಗೀರಿದ ಕಲೆಗಳು ಕಾಣುತ್ತಿದ್ದುವು. ಏನು ವಿಷಯ ಎಂದು ಗೌಡರು ಕೇಳಿದ ಪ್ರಶ್ನೆಗೂ ಅವನು ತಕ್ಷಣ ಉತ್ತರಕೊಡಲು ಸಮರ್ಥನಾಗಲಿಲ್ಲ; ಉಸಿರು ಮೇಲೆ ಕೆಳಗೆ ಆಗುತ್ತಿತ್ತು.
ಅಂತೂ ಏದುತ್ತಲೇ ಹೇಳತೊಡಗಿದ:
“ಸಣ್ಣ ಅಯ್ಯ…. ಓಡು ಅಂದರು…. ಓದಿ ಬಂದೆ. ಐಗಳಿಗೆ ಹೇಳು ಅಂದರು: ಕೋವಿ ತಕ್ಕೊಂಡು ನಾಯಿ ಕರಕೊಂಡು ಬರಬೇಕಂತೆ. ಒಂದು ಹಂದಿ…. ದೊಡ್ಡ ಹಂದಿಯಂತೆ! ಇಲಾತಿ ಸೀಂಗೆಯಲ್ಲಿ ಸೇರಿಕೊಂಡಿದೆ ಅಂಬರು. ಒಂಟಿಗ ಅಂಬರು!”
ಚೀಂಕ್ರ ಪಿಜಿಣ ಮೊಡಂಕಿಲರು ‘ಹಾಂಗಾರೆ ಒಂದು ಕೈ ಕಾಂಬ ಷಿಕಾರಿಗೆ!” ಎಂದು ಹರ್ಷಿಸತೊಡಗಿದ್ದರು. ಗೌಡರು ಏನು ಹೇಳುತ್ತಾರೆಯೊ ಎಂದು ಕಾತರರಾಗಿ ವರ ಮುಖ ಕಣ್ಣು ಬಾಯಿಗಳನ್ನೆ ದಿಟ್ಟಿಸುತ್ತಿದ್ದರು. ಗೌಡರು ಸ್ವಲ್ಪವೂ ಕಾತರರಾಗಲಿಲ್ಲ. ಅವರ ಮುಖದ ಮೇಲೆ ಒಂದು ಮಂದಸ್ಮಿತ ಆಡತೊಡಗಿತು. ಅವರಿಗೆ ತಟಕ್ಕನೆ ತಮ್ಮ ಪ್ರಾಯಾಂಕುರಕಾಲದ ಪ್ರಣಯದ ಆಟಗಳ ನೆನಪಾಯಿತು. ಪೀಂಚಲು ಹತ್ತಿರದಿಂದ ಐತನನ್ನು ದೂರ ಕಳುಹಿಸುವ ಸಲುವಾಗಿಯೆ ಮುಕುಂದಯ್ಯ ಈ ಹೂಟ ಹೂಡಿರಬೇಕೆಂದು ಊಹಿಸಿ ಗದರಿಸಿದರು:
“ಥೂ, ಹುಚ್ಚು ಮುಂಡೆಗಂಡ? ನಿನಗೆ ಬುದ್ಧಿಯಿಲ್ಲ. ಬೇಗ ಓಡಿ ಹೋಗಿ ಹೇಳು, ಐಗಳಿಗೆ ಪುರಸತ್ತಿಲ್ಲವಂತೆ, ಈಗ ಬರಾಕೆ ಆಗಾದಿಲ್ಲ ಅಂದ್ರು ಅಂತಾ. ಏಡಿ ಹಿಡುಕೊಂಡು ಬೇಗ ಬರಾಕೆ ಹೇಳಿದ್ರು ಅನ್ನು. ಹೂಂ ನಡಿ! ಓಡು!!”
ಐತ ನಿರಾಶನಾಗಿ ಹಿಂದಿರುಗಿ ಓಡುತ್ತಲೆ ಹೋಗಿ ಕಣ್ಮರೆಯಾದನು. ಬರುವಾಗ ಅವನಲ್ಲಿ ಇದ್ದ ಆತುರದ ವೇಗ ಹೋಗುವಾಗ ಇರಲಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ