ನನ್ನ ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-16

           ಆ ದಿನವೆ ಬೆಳಿಗ್ಗೆ, ಹೊತ್ತು ಚೆನ್ನಾಗಿ ಮೂಡಿದ ಮೇಲೆ, ಸಿಂಬಾವಿ ಹೊಲೆಯರ ಗುತ್ತಿ ನಾಗತ್ತೆ ನಾಗಕ್ಕರನ್ನು ಹಾದಿಯಲ್ಲಿ ಸಂಧಿಸಿ ಹುಲಿಕಲ್ಲು ನೆತ್ತಿಗೆ ಏರುತ್ತಿದ್ದ ಸಮಯವಿರಬಹುದು, ಕೋಣೂರು ಮುಕುಂದಯ್ಯ ಕೈಯಲ್ಲಿ ಎಂದಿನಂತೆ ಚಿಟ್ಟುಬಿಲ್ಲು ಹಿಡಿದು ಮನೆಯಿಂದ ಗುಡ್ಡದ ಕಡೆಗೆ ಅವಸರವಸರವಾಗಿ ಹೊರಡುತ್ತಿದ್ದನು. ಅವನ ಅಣ್ಣ ರಂಗಪ್ಪಗೌಡರ ಮಗ ತಿಮ್ಮು, ಓದುಬರಹ ಕಲಿಯಲೆಂದು ಕೋಣೂರಿನಲ್ಲಿರುತ್ತಿದ್ದ, ತಿರುಪತಿಗೆ ಹೋಗಿ ಕಣ್ಮರೆಯಾಗಿದ್ದ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರ ಹಿರಿಯ ಮಗ ದೊಡ್ಡಣ್ಣ ಹೆಗ್ಗಡೆಯವರ ಮಗ ಧರ್ಮು ಮತ್ತು ಬೆಟ್ಟಳ್ಳಿ ಕಲ್ಲಯ್ಯಗೌಡರ ಕಿರಿಯ ಮಗ ಕಾಡು, ಇನ್ನೂ ಮೂರು ನಾಲ್ಕು ಹತ್ತಿರದ ಹಳ್ಳಿಯ ಹುಡುಗರೂ ಒಟ್ಟಾಗಿ ಕೋಣೂರು ಮನೆಯ ಕೆಳಗರಡಿಯಲ್ಲಿದ್ದ ಐಗಳು ಅನಂತಯ್ಯನವರ ಕೂಲಿ ಮಠದಲ್ಲಿ ಕುಳಿತಿದ್ದರು, ತಮ್ಮ ಮುಂದೆ ಅಕ್ಷರ ತಿದ್ದಲು ಗೋಡೆಗೆ ಒತ್ತಿ ನೆಲದ ಮೇಲೆ ಹರಡಿದ್ದ ಮಳಲಿನ ಮುಂದೆ! ಚಿಕ್ಕಯ್ಯ ಕಾಡಿಗೆ ಹೊರಡುತ್ತಿದ್ದುದನ್ನು ನೋಡಿ ತಿಮ್ಮು ತಿದ್ದುವುದನ್ನು ನಿಲ್ಲಿಸಿ ಎದ್ದು ಓಡಿಬಂದನು. ಒಡನೆಯೆ ಧರ್ಮು ಕಾಡು ಇಬ್ಬರೂ ಅವನನ್ನು ಹಿಂಬಾಲಿಸಿದರು. ದೂರದ ಸಂಬಂಧಿಗಳಾಗಿ ಮುಕುಂದಯ್ಯನೊಡನೆ ಅಷ್ಟು ಸಲುಗೆ ಇರದಿದ್ದ ಇತರ ಬಾಲಕರು ಹತ್ತಿರಕ್ಕೆ ಓಡಿಬರದಿದ್ದರೂ ಮಾಡುತ್ತಿದ್ದ ಕೆಲಸವನ್ನೆಲ್ಲ ನಿಲ್ಲಿಸಿ, ಓಡಿಹೋದ ಮಿತ್ರರ ಕಡೆ ನೋಡಹತ್ತಿದ್ದರು. ಅಷ್ಟರಲ್ಲಿ ಮುಕುಂದಯ್ಯ ಗಟ್ಟಿಯಾಗಿ “ಐಗಳೇ” ಎಂದು ಕರೆದನು. ಒಡನೆಯೆ ಹುಡುಗರೆಲ್ಲ ಹಿಂದಕ್ಕೆ ಓಡಿಹೋಗಿ ಮೊದಲಿನಂತೆ ಕುಳಿತು ಕಾರ್ಯಮಗ್ನರಾದಂತೆ ತೋರಿಸಿಕೊಂಡರು. “ಹೋಯ್‌, ಯಾರು? ಮುಕುಂದ ಕರೆದದ್ದಾ?” ಎನ್ನುತ್ತಾ ಅನಂತಯ್ಯ ಮನೆಯೊಳಗಿನಿಂದ ಬಂದರು. ಮುಕುಂದಯ್ಯ ನಗುತ್ತಾ “ಏನಿಲ್ಲ. ಐಗಳೇ, ಅವರೆಲ್ಲ ನನ್ನ ಜೊತೆ ಬರೋದಕ್ಕೆ ಎದ್ದು ಬಿಟ್ಟಿದ್ದರು! ಅದಕ್ಕೆ ಕೂಗಿದೆ” ಎಂದನು. “ಎಲ್ಲಿಗೆ ಹೊರಟೆ, ಚಿಟ್ಟುಬಿಲ್ಲು ಹಿಡುಕೊಂಡು?” ಎಂದ ಅನಂತಯ್ಯನವರ ಪ್ರಶ್ನೆಗೆ ಉತ್ತರವನ್ನೂ ಕೊಡದೆ ಮುಕುಂದಯ್ಯ ಗುಡ್ಡವೇರಿ ಹಳುವಿನಲ್ಲಿ ಅಡಗಿ ಹೋಗಿದ್ದನು.

ಚಿಕ್ಕಂದಿನಿಂದ ಮುಕುಂದಯ್ಯನಿಗೂ ಅಕ್ಷರಾಭ್ಯಾಸ ಮಾಡಿಸಿ, ಭಾರತ ರಾಮಾಯಣ ಜೈಮಿಗಳನ್ನು ಓದಿ ಅರ್ಥ ಹೇಳುವಷ್ಟರ ಮಟ್ಟಿನ ವಿದ್ವತ್ತನ್ನೂ ಅವನಿಗೆ ದಯಪಾಲಿಸಿದ್ದ ಅನಂತಯ್ಯಗಳಿಗೆ ತಮ್ಮ ಶಿಷ್ಯನ ವಿಚಾರದಲ್ಲಿ ಅಪಾರ ಮಮತೆಯಿತ್ತು. ಹೆಮ್ಮೆಯೂ ಇತ್ತು. ಪ್ರಶಂಸೆಯಿಂದ ಅವನು ಹೋದ ದಿಕ್ಕಿನ ಕಡೆಗೆ ನೋಡುತ್ತಾ ನಿಂತಿದ್ದು, ಸ್ಮೃತಿತರಂಗಮಯವಾದ ಅನೇಕ ಆಲೋಚನಾಪ್ರವಾಹವನ್ನು ಮನಸ್ಸು ದಾಟಿದ ಅನಂತರವೆ ಅವರು ಶಾಲೆಯ ಹುಡುಗರ ಕಡೆಗೆ ತಿರುಗಿದರು.
ಕೋಣೂರಿನಿಂದ ಹಳೆಮನೆಗೆ ಹೋಗುವ ದಾರಿಯಲ್ಲಿ ಅಡ್ಡಲಾಗಿದ್ದ ಕಾಡಿನ ಒಂದು ಸರಲಿನಲ್ಲಿ ತಾನು ಒಡ್ಡಿದ್ದ ಉರುಳನ್ನು ನೋಡಿಕೊಂಡು ಬರುವ ಸಲುವಾಗಿಯೆ ಮುಕುಂದಯ್ಯ ಗುಡ್ಡ ಹತ್ತಿದ್ದನು. ನ್ಯಾಯವಾಗಿ ಹಿಂದಿನ ದಿನವೇ ಅದನ್ನು ನೋಡಿಕೊಂಡು ಬರಬೇಕಾಗಿತ್ತು. ಆದರೆ ಗರ್ಭಿಣಿಯಾಗಿ ಈಗಲೊ ಆಗಲೊ ಹೆರಿಗೆಯಾಗುವಂತಿದ್ದ ಅತ್ತಿಗೆಯ ಅಸ್ವಸ್ಥತೆಯ ದೆಸೆಯಿಂದ ಅವನಿಗೆ ಪುರುಸೊತ್ತೆ ದೊರಕಲಿಲ್ಲ.
ಮುಕುಂದಯ್ಯನ ಶೈಶವಪ್ರಜ್ಞೆ ಬಹಿರ್ವಸ್ತುಗಳನ್ನು ಗ್ರಹಿಸಲೂ ಗುರುತಿಸಲೂ ಕಲಿತಂದಿನಿಂದಲೂ ಅವನ ಚಿತ್ತವನ್ನೆಲ್ಲ ಆಕ್ರಮಿಸಿ ತುಂಬಿಬಿಟ್ಟಿದ್ದ ಮಹದ್ ವಸ್ತುವೆಂದರೆ ಮಲೆ, ಕಾಡು! ಅರಣ್ಯಾಚ್ಛಾದಿತವಾಗಿ ಮೇಘಚುಂಬಿಗಳಾಗಿ ನಿಂತಿರುವ ಗಿರಿ ಶಿಖರ ಶ್ರೇಣಿಗಳ ಮಲೆನಾಡಿನಲ್ಲಿ ಎಲ್ಲಿಯೋ ಕೆಳಗೆ ಒಂದು ಕಣಿವೆಯ ಮೂಲೆಯಲ್ಲಿ ಹೆದರಿ ಹದುಗಿದಂತೆ ಮರಗಳ ನಡುವೆ ಹುದುಗಿರುವ ಮನೆಗಳಲ್ಲಿ ಹುಟ್ಟಿ ಕಣ್ಣು ಬಿಡುವ ಮಕ್ಕಳ ಪಾಲಿಗೆ ಆಕಾಶ ಕೂಡ ಕಾಡಿನಷ್ಟು ವಿಸ್ತಾರಭೂಮವಾಗಿ ಕಾಣಿಸುವುದಿಲ್ಲ. ಆಕಾಶಕ್ಕಿಂತಲೂ ಕಾಡೆ ಸರ್ವವ್ಯಾಪಿಯಾಗಿ ತನ್ನ ಅಧಿಕಾರವನ್ನು ಸ್ಥಾಪಿಸಿ ಭೂಮಂಡಲವನ್ನೆಲ್ಲ ವಶಪಡಿಸಿಕೊಂಡಂತಿರುತ್ತದೆ. ಪೃಥ್ವಿಯನ್ನೆಲ್ಲ ಹಬ್ಬಿ ತಬ್ಬಿ ಆಳುವ ಕಾಡಿನ ದುರ್ದಮ್ಯ ವಿಸ್ತೀರ್ಣದಲ್ಲಿ ಎಲ್ಲಿಯೊ ಒಂದಿನಿತಿನಿತೆ ಅಂಗೈಯಗಲದ ಪ್ರದೇಶವನ್ನು ಮನುಷ್ಯ ಗೆದ್ದುಕೊಂಡು ತನ್ನ ಗದ್ದೆ  ತೋಟ ಮನೆಗಳನ್ನು ರಚಿಸಿಕೊಂಡಿದ್ದಾನೆ, ಅಷ್ಟೆ. ಅದೂ ಕೂಡ ಅವನು ನಿಚ್ಚವೂ ಜಾಗರೂಕನಾಗಿ ತಾನು ಗೆದ್ದುಕೊಂಡಿದ್ದನ್ನು ನಿರಂತರವೂ ರಕ್ಷಿಸಿಕೊಳ್ಳುತ್ತಾ ಹೋಗುವುದನ್ನು ಮರೆತನೆಂದರೆ, ಬಹುಬೇಗನೆ ಹಳು ಬೆಳೆದು ಮತ್ತೆ ಅದು ಕಾಡಿನ ವಶವಾಗಿ ಬಿಡುತ್ತದೆ. ಮುಕುಂದಯ್ಯನಿಗಂತೂ ಕಾಡು ಎಂದರೆ ದೇವರಿಗೆ ಸರಿಸಮಾನವಾಗಿತ್ತು. ಅಷ್ಟೊಂದು ಭಯಮಿಶ್ರಿತ ಭಕ್ತಿ ಅದರಲ್ಲಿ. ಅವನಿಗೆ ಅದರ ಮುಳ್ಳು, ಕಲ್ಲು, ಕೊರಕಲು, ಏರು, ಇಳಿತ, ಹುಲಿ, ಹಂದಿ, ಹಾವು, ಚೇಳು, ನುಸಿ, ಇಂಬಳ ಇವೆಲ್ಲದರಿಂದ ಒದಗುವ ತೊಂದರೆಯ ಅನುಭವವಿತ್ತು. ಹಾಗೆಯೆ ಹಕ್ಕಿ, ಹೂವು, ಹಣ್ಣು, ಚಿಟ್ಟೆ, ಜೇನು, ಬೇಟೆ ಇತ್ಯಾದಿಗಳಿಂದ ಒದಗುವ ಆನಂದದ ಅರಿವೂ ಇತ್ತು. ಮಲೆಕಾಡಿನ ಭವ್ಯತೆಯ ಅವನ ಅನುಭವವನ್ನು ಹೆದರಿಕೆ ಎಂದು ವರ್ಣಿಸಲಾಗುತ್ತಿರಲಿಲ್ಲ. ಅವನು ಚಿಕ್ಕಂದಿನಲ್ಲಿ ಐತ ಮೊದಲಾದವರೊಡನೆ ಚಿಟ್ಟುಬಿಲ್ಲು ಹಿಡಿದು ಕಾಡಿನಲ್ಲಿ ತಿರುತ್ತಿದ್ದಂತೆ ತರುಣನಾದ ಮೇಲೆಯೂ ಕೋವಿ ಹಿಡಿದು ಒಬ್ಬನೆ ದಟ್ಟ ನಡುಗಾಡಿನಲ್ಲಿಯೂ ಧೈರ್ಯದಿಂದಲೆ ಅಲೆದಾಡಿದ್ದನು ಮತ್ತು ಅಲೆದಾಡುತ್ತಲೂ ಇದ್ದನು.
ಕೋಣೂರು ಹಳೆಮನೆಗಳ ನಡುವೆ ಇದ್ದ ಕಾಡಿನ ಸರಲನ್ನು, ತಾನು ಕಾಡಿನಲ್ಲಿ ಹೋಗುತ್ತಿದ್ದೇನೆ ಎಂಬ ವಿಶೇಷ ಪ್ರಜ್ಞೆ ಏನೂ ಇಲ್ಲದೆ, ಸೇರಿದ ಅವನಿಗೆ ತಾನು ಒಡ್ಡಿದ್ದ ಉರುಳಿನ ಜಾಗ ಫಕ್ಕನೆ ಗೊತ್ತು ಸಿಕ್ಕಲಿಲ್ಲ. ಅಲ್ಲಿಯೆ ಎಲ್ಲಿಯೊ ಹಳುವಿನ ನಿಬಿಡತೆಯಲ್ಲಿ ಕಣ್ಣು ತಪ್ಪಿರಬೇಕೆಂದು ಭಾವಿಸಿ ಹುಡುಕಿದನು. ಒಂದು ಕಡೆ ತಿಪ್ಪುಳು ಉದುರಿದ್ದು ಕಾಣಿಸಿತು. ಮತ್ತೊಂದು ಕಡೆ ದೊಡ್ಡ ಗರಿಗಳೆ ಬಿದ್ದಿವೆ! ಇನ್ನೂ ಮುಂದೆ ಹೋಗು ನೋಡುತ್ತಾನೆ: ತಾನು ಒಡ್ಡಿದ್ದ ಉರುಳೆ ಸ್ಥಳಾಂತರ ಹೊಂದಿ ಬಿದ್ದಿದೆ! ಉರುಳಿಗೆ ಸಿಕ್ಕಿದ್ದ ಒಂದು ಚಿಟ್ಟುಗೋಳಿಯ ತಲೆ, ಕಾಲು, ರೆಕ್ಕೆಯ ತುದಿ ಭಾಗಗಳು ಮಾತ್ರ ಬಿದ್ದಿವೆ! “ಅಯ್ಯೋ ನಿನ್ನೆಯೆ ಬಂದಿದ್ದರೆ! ಹಾಳು ನರಿಯೊ, ಮುಂಗುಸಿಯೊ, ಕಬ್ಬೆಕ್ಕೊ ರಾತ್ರಿ ತಿಂದುಹಾಕಿಬಿಟ್ಟಿದೆ! ಕುಲನಾಶನಾಗಾಕೆ, ನನ್ನ ಉರುಳನ್ನೂ ಕಡಿದು ತುಂಡು ಮಾಡಿದೆಯಲ್ಲಾ” ಎಂದು ಶಪಿಸಿದನು, ಸಿಟ್ಟಿನಲ್ಲಿ.
ಇದ್ದಕ್ಕಿದ್ದಂತೆ ನಾಯಿ ಬೊಗಳಿದಂತಾಗಿ ಮುಕುಂದಯ್ಯ ತಟಕ್ಕನೆ ಎಚ್ಚೆತ್ತವನಂತೆ ನಿಮಿರಿನಿಂತನು. ಕಾಡಿನ ನಡುವೆ ನಾಯಿಯ ಬೊಗಳಿಕೆ ಎಂದರೆ ಸಾಹಸಕ್ಕೆ ನಾಂದಿ ಹಾಡಿದ ಅನುಭವ, ಬೇಟೆಗಾರರಿಗೆ. ಅವನ ಮೈಯೆಲ್ಲ ಬಿಸಿಯಾಯಿತು. ಅಭ್ಯಾಸಬಲದಿಂದ. ಚಿಟ್ಟುಬಿಲ್ಲಿಗೆ ಕಲ್ಲುಹರಳು ಹೂಡಿ ನಿಮಿರಿ ನಿಂತು, ಕಣ್ಣರಳಿಸಿ ನೋಡತೊಡಗಿದನು. ಬೊಗಳುತ್ತಿದ್ದ ನಾಯಿ ಹಳು ಅಲ್ಲಾಡಿಸುತ್ತಾ ತಾನಿದ್ದ ಕಡೆಗೆ ಇಳಿದು ಬರುತ್ತಿದ್ದುದು ಗೊತ್ತಾಯಿತು. ಆದರೆ ಯಾವ ನಾಯಿ? ಯಾರ ನಾಯಿ? ತಾನು ಬರುವಾಗ ತಮ್ಮ ಮನೆಯ ಯಾವ ನಾಯಿಯೂ ತನ್ನನ್ನು ಹಿಂಬಾಲಿಸದಂತೆ ತನಗಿಂತಲೂ ಎಚ್ಚರಿಕೆಯಿಂದ ಬಂದಿದ್ದನು. ಏಕೆಂದರೆ ಜೊತೆ ಬಂದ ನಾಯಿಗಳು ತನಗಿಂತಲೂ ಮುಂದಾಗಿ ಹಳು ನುಗ್ಗಿ ಹೋಗಿ ಉರುಳಿಗೆ ಸಿಕ್ಕಿದ್ದ ಕೋಳಿಗಳನ್ನು ಕಚ್ಚಿಕೊಂಡು ಓಡಿಹೋಗಿದ್ದ ಪೂರ್ವಾನುಭವ ಅವನಿಗೆ ಸಾಕಷ್ಟಿತ್ತು.
ನಾಯಿ ಹಳುವಿನಲ್ಲಿ ಸಾಕಷ್ಟು ಸಮೀಪಕ್ಕೆ ಮುಂದುವರಿದು ತುಸು ಬಯಲಾಗಿದ್ದ ಜಾಗದಲ್ಲಿ ಕಾಣಿಸಿಕೊಂಡಾಗ ನೋಡುತ್ತಾನೆ: ಸಿಂಬಾವಿ ಗುತ್ತಿಯ ನಾಯಿ-ಹುಲಿಯ! ಅದರ ಗುರುತು ಎಲ್ಲಿದ್ದರೂ ಸಿಕ್ಕುತ್ತಿತ್ತು ಮುಕುಂದಯ್ಯನಿಗೆ. ಮುಕುಂದಯ್ಯನ ಗುರುತೂ ಅದಕ್ಕೆ ಎಲ್ಲಿದ್ದರೂ ಸಿಕ್ಕುತ್ತಿದ್ದುದರಲ್ಲಿ ಸಂಶಯವಿಲ್ಲ. ಆದ್ದರಿಂದಲೆ ಅವನು ಅದರ ಹೆಸರು ಹಿಡಿದು ಕರೆದೊಡನೆಯೆ ತನ್ನ ರೋಷವನ್ನೆಲ್ಲ ತೆಕ್ಕನೆ ತ್ಯಜಿಸಿ, ತಟಕ್ಕನೆ ಸಂತೋಷಕ್ಕೆ ಮುಗ್ಗರಿಸಿದಂತೆ ಮುನ್ನುಗ್ಗಿ ಹಳು ಮುರಿಯುವಂತೆ ನೆಸೆನೆಸೆದು ಬಂದು, ‘ಹಚೀ ಹಚೀ ಏ ಹುಲಿಯಾ!’ ಎಂದು ಗದರಿಸುತ್ತಿದ್ದರೂ ಲೆಕ್ಕಿಸದೆ ಮುಕುಂದಯ್ಯನ ಎದೆಯವರೆಗೂ ತನ್ನ ಮುಂಗಾಲು ಹಾಕಿ ಹಿಂಗಾಲ ಮೇಲೆ ನಿಂತು ಕುಂಯಿಗುಡುತ್ತಾ ತನ್ನ ಮೂತಿಯಿಂದ ಅವನ ಮುಖದವರೆಗೂ ಬಾಗಿ ಅವನ ಬಾಯನ್ನೆ ನೆಕ್ಕಿಬಿಟ್ಟಿದ್ದು! ಮುಕುಂದಯ್ಯ ಆ ದೈತ್ಯಗಾತ್ರದ ಬಲಿಷ್ಠ ಪ್ರಾಣಿಯ ಸ್ನೇಹಾಘಾತಕ್ಕೆ ಸ್ವಲ್ಪ ತತ್ತರಿಸಿಯೆ ನಿಲ್ಲಬೇಕಾಯಿತು.
“ಥೂ! ನಿನ್ನ ಹಾಳಾಗ!” ಎಂದು ಎರಡು ಕೈಯಿಂದಲೂ ಅದರ ಕುತ್ತಿಗೆ ಹಿಡಿದು ದಬ್ಬಿ ತಳ್ಳಿದಾಗ ಅದು ಹಿಂದಕ್ಕೆ ಬೀಳುವಂತಾಗಿ ನಿಂತು ಅವನ ಮೋರೆಯನ್ನೇ ನೋಡುತ್ತಾ ರಭಸದಿಂದ ಬಾಲವಳ್ಳಾಡಿಸತೊಡಗಿತು. ಮುಕುಂದಯ್ಯನ ಎದೆಯ ಮೇಲೆ ಬಟ್ಟೆ ತುಂಬಾ ನಾಯಿಯ ಹೆಜ್ಜೆಯ ಕೆಸರುಮುದ್ರೆ ಒತ್ತಿತ್ತು. ನಾಯಿ ನೆಕ್ಕಿದ್ದ ಬಾಯನ್ನು ಒರಸಿಕೊಂಡು, ಎದೆಯ ಮೇಲಿದ್ದ ಹೆಜ್ಜೆಯ ಕೆಸರನ್ನು ತಿಕ್ಕಿದನು. ಅದು ಮತ್ತಷ್ಟು ಹಸರಿಸಿತಷ್ಟೆ! ಫಕ್ಕನೆ ನೋಡಿಕೊಳ್ಳುತ್ತಾನೆ: ತನ್ನ ಕೈಯಲ್ಲಿ ರಕ್ತದ ಕಲೆ! ಮತ್ತೆ ನೋಡಿದರೆ, ನಾಯಿಯ ಮೂತಿಯಲ್ಲೂ ರಕ್ತ ಹಿಡಿದಿದೆ. ಕತ್ತಲೆ ಹೆಪ್ಪುಗಟ್ಟಿ ಕಗ್ಗಲ್ಲಾದ ಇರುಳನ್ನೆ ಕಡೆದು ಮಾಡಿದಂತೆ ಕರ್ರಗೆ ನಿಂತಿದ್ದ ನಾಯಿಯ ಬಾಯಿಯ ನಸು ಬಿಳುಪಾದ ಜಾಗದಲ್ಲಿ ಪ್ರಾರಂಭವಾದ ನೆತ್ತರಿನ ಕಲೆಗಳು, ಕಣ್ಣಿಟ್ಟು ನೋಡಿದಾಗ, ಅದರ ಕಿವಿಯ ಹತ್ತಿರವೂ ಕುತ್ತಿಗೆಯ ಮೇಲೆಯೂ ಕಾಣಿಸಿಕೊಂಡುವು. ಹುಲಿಯ ಬರ್ಕವನ್ನೊ ಮೊಲವನ್ನೊ ಕಬ್ಬೆಕ್ಕನ್ನೊ ಮುಂಗಿಸಿಯನ್ನೊ ಬೇಟೆಯಾಡಿ ಹಿಡಿದು ತಿಂದಿರಬೇಕೆಂದು ಮುಕುಂದಯ್ಯ ಊಹಿಸಿ, ಮೆಚ್ಚಿಗೆಯಿಂದ ಅದರ ತಲೆ ಸವರಿದನು. ಪಾಪ! ಅವನಿಗೆ ಹೇಗೆ ಗೊತ್ತಾಗಬೇಕು, ಕೋಣೂರು ಕಾಡಿನಲ್ಲಿ ತಾನು ಒಡ್ಡಿದ್ದ ಉರುಳಿಗೆ ಸಿಕ್ಕಿಬಿದ್ದ ಚಿಟ್ಟುಗೋಳಿಯನ್ನು ದೂರದೂರಿನ ಸಿಂಬಾವಿಯ ನಾಯಿ ಅಷ್ಟು ಹೊತ್ತಾರೆಮುಂಚೆ ಬಂದು ತಿನ್ನುತ್ತದೆ ಎಂದು?
ಮುಕುಂದಯ್ಯನಿಗೂ ಹುಲಿಯನಿಗೂ ಇದ್ದ ಪರಸ್ಪರ ಪರಿಚಯ ಇಂದು ನಿನ್ನೆಯದಾಗಿರಲಿಲ್ಲ. ಹುಲಿಯ ತನ್ನ ಮರಿಯತನವನ್ನು ದಾಟಿ ಬೇಟೆಗಾರರೊಡನೆ ಕಾಡಿಗೆ ಹೋಗಲು ಪ್ರಾರಂಭ ಮಾಡಿದಾಗಲೆ ಅದರ ಶಕ್ತಿ, ಯುಕ್ತಿ, ಧೈರ್ಯ, ವೇಗ, ಬುದ್ದಿವಂತಿಕೆ ಇವುಗಳ ವಿಚಾರವಾಗಿ ಕಥೆ ಕಥೆಗಳೆ ಹಳ್ಳಿಯಿಂದ ಹಳ್ಳಿಗೆ ಹಬ್ಬಿಬಿಟ್ಟಿತ್ತು. ಸಿಂಬಾವಿ ಗುತ್ತಿ ಸ್ವತಃ ಹಳು ನುಗ್ಗಿ ಭಾಗವಹಿಸಿದ್ದ ದೊಡ್ಡ ಬೇಟೆಗಳಲ್ಲಿ ಬಿಲ್ಲಿಗೆ ನಿಂತಿದ್ದ ಮುಕುಂದಯ್ಯನಿಗೆ ಹುಲಿಯನ ಹೆಚ್ಚುಗಾರಿಕೆಯ ಅನುಭವ ಪ್ರತ್ಯಕ್ಷವಾಗಿಯೆ ದೊರಕಿತ್ತು. ಒಮ್ಮೆ ಒಂದು ಒಂಟಿಗ ಹಂದಿಯನ್ನು ಕಾಡಿನಲ್ಲಿ ಅತ್ತ ಇತ್ತ ಹೋಗದಂತೆ ತಡೆದೂ ತಡೆದೂ ಅಟ್ಟಿಅಟ್ಟಿ ತಾನು ನಿಂತಿದ್ದ ಬಿಲ್ಲಿಗೆ ಸರಿಯಾಗಿ ಸೋವಿ ಎಬ್ಬಿದುದರಿಂದಲೆ ತಾನು ಅದಕ್ಕೊಂದು ಗುಂಡು ಹೊಡೆಯಲು ಸಾಧ್ಯವಾಗಿತ್ತು. ಆ ಒಂಟಿಗನ ಹಿಂಗಾಲ ತೊಡೆಗೆ ಗುಂಡು ಬಿದ್ದು ಗಾಯಗೊಂಡರೂ ಅದು ಮುನ್ನುಗ್ಗಿ ಮುಂದಿನ ಕಾಡಿಗೆ ತಪ್ಪಿಸಿಕೊಂಡು ಹೋಗುತ್ತಿದ್ದುದನ್ನು ಅಡ್ಡಗಟ್ಟಿ ಹಸಲವರು ಮಿಣಿಬಲೆ ಒಡ್ಡಿದ್ದ ಕಂಡಿಗೇ ಅದನ್ನು ಎಬ್ಬಿತ್ತು. ಆ ದಡಿಗಬಲೆಗೆ ಸಿಕ್ಕಿದ್ದ ಒಂಟಿಗನನ್ನು ಭರ್ಜಿಯವರು ಓಡಿಬಂದು ತಿವಿಯುವ ಮುನ್ನವೆ ಹುಲಿಯ ಅದರ ಮೇಲೆ ಬಿದ್ದು ಕೋರೆಯಿಂದ ತಿವಿಸಿಕೊಂಡು ಹಲವು ದಿನಗಳವರೆಗೆ, ಸಿಂಬಾವಿಗೆ ಹಿಂತಿರುಗಲು ಸಾಧ್ಯವಾಗದೆ, ಕೋಣೂರಿನಲ್ಲಿಯೆ ಮುಕುಂದಯ್ಯನ ಶುಶ್ರೂಷೆಗೆ ಋಣಿಯಾಗಿತ್ತು. ಗಾಯವೆಲ್ಲ ಮಾಯ್ದಮೇಲೆ ಗುತ್ತಿ ಅದನ್ನು ಕರೆದುಕೊಂಡು ಹೋಗಲು ಬಂದಾಗ ಅದು ಅವನ ಮೇಲೆ ತೋರಿದ ಅಕ್ಕರೆ ವಿಶ್ವಾಸ ಸ್ವಾಮಿಭಕ್ತಿಯನ್ನು ಕಂಡು ಎಲ್ಲರೂ ಬೆರಗಾಗಿದ್ದರು. ಆದರೆ ಮುಕುಂದಯ್ಯನಿಗೆ ಹುಲಿಯನ ಮೇಲೆ ಭಾರಿ ಮಮತೆ ಹುಟ್ಟಿಬಿಟ್ಟಿದ್ದರಿಂದ ಅದನ್ನು ತನಗೇ ಕೊಟ್ಟು, ಕೋಣೂರಿನಲ್ಲಿಯೆ ಬಿಟ್ಟ ಹೋಗಬೇಕೆಂದು ಗುತ್ತಿಯನ್ನು ಪರಿಪರಿಯಾಗಿ ಪೀಡಿಸಿದನು. ಹೊಲೆಯ ತುಂಬ ಇಕ್ಕಟ್ಟಿಗೆ ಸಿಕ್ಕಿಕೊಂಡನು. ಮೇಲುಜಾತಿಯವರೂ ಒಡೆಯರೂ ದೊಡ್ಡ ಮನುಷ್ಯರೂ ಆದ ಕೋಣೂರು ರಂಗಪ್ಪಗೌಡರ ತಮ್ಮ ಹುಡುಗನಾಗಿದ್ದರೇನಂತೆ? ಅವನ ಮಾತಿಗೆ ಯಃಕಶ್ಚಿತ ಹೊಲೆಯ ಬೆಲೆ ಕೊಡದಿರುವುದಕ್ಕಾಗುತ್ತದೆಯೆ? ಗೌರವದಿಂದ ನಡೆದುಕೊಳ್ಳದಿರಲು ಸಾಧ್ಯವೆ? ಅದರಲ್ಲಿಯೂ ಮುಕುಂದಯ್ಯನಂತಹ ಸರಳನ್ನೂ ಸ್ನೇಹಪರನೂ ಆದ ವ್ಯಕ್ತಿಯ ವಿಚಾರದಲ್ಲಿ? ಆತನೇನು ಆಜ್ಞೆ ಮಾಡುತ್ತಿಲ್ಲ; ಬೇಡುತ್ತಿದ್ದಾನೆ? ಹೊಲೆಯನ ಮುಂದೆ ಅಂಗಲಾಚುತ್ತಿದ್ದಾನೆ! ಒಂದು ಕರಿಯ ನಾಯಿಗಾಗಿ!
ಗುತ್ತಿ ಕಣ್ಣೀರು ತುಂಬಿ ಗದ್ಗದಸ್ವರದಿಂದ ಒಪ್ಪಿಕೊಳ್ಳಬೇಕಾಯಿತು. ಅದು ನಾಯಿಗೆ ಹೇಗೆ ಗೊತ್ತಾಗಬೇಕು? ಕಂಬಕ್ಕೆ ಕಟ್ಟಿದ್ದ ಹುಲಿಯನನ್ನು ತಲೆ ಸವರಿ ಮುದ್ದಾಡಿ ಗುತ್ತಿ ಸಿಂಬಾವಿಯ ಕಡೆಗೆ ಹೊರಟನು, ಮುಕುಂದಯ್ಯ ಅವನು ಬೇಡವೆಂದರೂ ಕೊಟ್ಟಿದ್ದ ಒಂದು ಹೊಸ ಹೆಗ್ಗಂಬಳಿ, ಒಂದು ಹಳೆಯದಾದರೂ ಚೆನ್ನಾಗಿದ್ದ ಕಸೆ ಅಂಗಿ, ಒಂದಷ್ಟು ಎಲೆ ಅಡಿಕೆ ಹೊಗೆಸೊಪ್ಪು, ಒಂದು ರೂಪಾಯಿ-ಇವುಗಳನ್ನು ಹೊತ್ತು.
ಒಂದು ಮೈಲಿ ಹೋಗುವುದರೊಳಗೆ ಗುತ್ತಿಗೆ ಮುಂದಕ್ಕೆ ಅಡಿಯಿಡಲಾಗಲಿಲ್ಲ. ಏನೋ ಸುಸ್ತು! ಏನೋ ಸಂಕಟ! ಯಾರನ್ನೋ ಅತ್ಯಂತ ಪ್ರಿಯತಮರನ್ನು ಅಗಲಿದಂತೆ ಎದೆ ಬೇಗೆ! ಹಾದಿಯ ಪಕ್ಕದಲ್ಲಿ ಉಸ್ಸೆಂದು ಕುಳಿತು, ಕಾಡಿನ ನಡುವೆ ಯಾರೂ ನೋಡುವುದಿಲ್ಲವೆಂದು ಧೈರ್ಯ ಮಾಡಿಕೊಂಡು, ಬಿಕ್ಕಿ ಬಿಕ್ಕಿ ಅತ್ತುಬಿಟ್ಟನು.
ಮುಕುಂದಯ್ಯನಿಗೆ ಯಾರೋ ಹೇಳಿದ್ದರು, ನೆಲ ಸುಟ್ಟು, ಆ ಸುಟ್ಟ ಸ್ಥಳದಲ್ಲಿಯೆ ಬೆಲ್ಲ ಬೆರಸಿದ ಅನ್ನ ಹಾಕಿ ತಿನ್ನುವಂತೆ ಮಾಡಿದರೆ, ಎಂತಹ ನಾಯಿಯಾದರೂ ತನ್ನ ಹಳೆಯ ಒಲವನ್ನೆಲ್ಲಾ ಮರೆತುಬಿಡುತ್ತದೆ, ಮನೆ ಬಿಟ್ಟು ಹೋಗುವುದಿಲ್ಲ ಎಂದು. ಗುತ್ತಿ ಒಪ್ಪಿ, ಹುಲಿಯನನ್ನು ತನಗೊಪ್ಪಿಸಿ ಹೋದ ಮೇಲೆ, ಕಟ್ಟಿದ್ದ ಸರಪಳಿಯನ್ನು ತುಯ್ದು ಜಗ್ಗಿಸಿ ಎಳೆದು, ಗುತ್ತಿ ಹೋದಕಡೆ ಮುಖಮಾಡಿ ರೋದಿಸುವಂತೆ ಊಳಿಡುತ್ತಿದ್ದ ಹುಲಿಯನನ್ನು ನಾನಾ ರೀತಿಯಿಂದ  ಸಮಾಧಾನಪಡಿಸಿ, ಕೊನೆಗೆ ನೆಲ ಸುಟ್ಟು ಬೆಲ್ಲದನ್ನ ಹಾಕುವ ಉಪಾಯವನ್ನು ಯೋಚಿಸಿದನು. ಅಷ್ಟರಲ್ಲಿ ನೋಡುತ್ತಾನೆ: ಗುತ್ತಿ! ಮತ್ತೆ ಹಿಂತಿರುಗಿ ಬಂದಿದ್ದಾನೆ! ‘ಯಾಕೆ?’ ಎಂದು ಕೇಳಿದರೆ ಮಾತಾಡದೆ, ಉತ್ತರರುಪವಾಗಿ, ಮುಕುಂದಯ್ಯ ಕೊಟ್ಟಿದ್ದ ಸಾಮಾನುಗಳನ್ನೆಲ್ಲ, ರೂಪಾಯಿಯೂ ಸೇರಿ, ಹುಲಿಯನ ಮುಂದೆ ಇಟ್ಟು ಕೈಮುಗಿದು ನಿಂತುಬಿಟ್ಟನು. ರಂಗಪ್ಪಗೌಡರಾದಿಯಾಗಿ ಐಗಳೂ ಮನೆಯವರೂ ಎಲ್ಲರೂ ಮನಕರಗಿ ನಾಯಿಯನ್ನು ಗುತ್ತಿಗೆ ಕೊಟ್ಟು ಬಿಡುವಂತೆ ಮುಕುಂದಯ್ಯನಿಗೆ ಹೇಳಿದರು. ಆದರೆ ಮುಕುಂದಯ್ಯನಿಗೆ ಮನಸ್ಸಿಲ್ಲ. ಅವನ ಕಣ್ಣು ತೇವವಾಗತೊಡಗಿತ್ತು. ಅದನ್ನು ಗಮನಿಸಿದ ಗುತ್ತಿ ಒಡೆಯರ ದೈನ್ಯಕ್ಕೆ ಮನಸೋತು, ‘ನನಗೆ ನಾಯಿಯನ್ನು ಕೊಡದಿದ್ದರೂ ಚಿಂತೆಯಿಲ್ಲ, ಅದನ್ನು ಮಾರಿಬಿಟ್ಟೆ ಎಂದು ನನ್ನ ಮನಸ್ಸಿಗೆ ಇಸ್ಸಿ ಆಗಬಾರದು; ಆದ್ದರಿಂದ ನಿಮ್ಮ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತೇನೆ; ಈ ಸಾಮಾನನ್ನೆಲ್ಲ ಹಿಂದಕ್ಕೆ ತೆಗೆದುಕೊಳ್ಳಿ!’ ಎಂದು ತಟಕ್ಕನೆ ಹಿಂದಿರುಗಿ ಅಲ್ಲಿ ನಿಲ್ಲದೆ ಹುಲಿಯನ ಊಳನ್ನೂ ಗೋಳನ್ನೂ ಇನಿತೂ ಗಮನಿಸದವನಂತೆ ನಡೆದೇ ಬಿಟ್ಟನು.
ಗುತ್ತಿ ಹೋದ ಮೇಲೆ ಮುಕುಂದಯ್ಯನ ಮನಸ್ಸಿಗೆ ಸಮಾಧಾನವಾಯಿತು. ನಾಯಿ ಇನ್ನು ಶಾಶ್ವತವಾಗಿ ತನ್ನದಾಯಿತು ಎಂದು. ಆದರೆ ತುಸು ಹೊತ್ತಿನಲ್ಲಿಯೆ ನಾಯಿ ಮೌನವಾಗಿ ಚಿಂತಾಕ್ರಾಂತವಾಗಿ ದುಃಖಿಸುವಂತೆ, ಗುತ್ತಿ ಹೋದಕಡೆಯೆ ಕಣ್ಣಾಗಿ ಕುಳಿತಿದ್ದುದನ್ನು ಕಂಡಾಗ, ಹೊಲೆಯನ ವರ್ತನೆ ತನ್ನ ವರ್ತನೆಗಿಂತಲೂ ಉದಾತ್ತವಾಗಿ ತೋಡತೊಡಗಿ, ಮನಸ್ಸು ಚುಚ್ಚದಂತಾಯಿತು. ಒಲಿದ ಹೃದಯಗಳನ್ನು ಬಲಾತ್ಕಾರವಾಗಿ ಬೇರ್ಪಡಿಸುವಷ್ಟು ವ್ಯಥೆಯಾಯಿತು. ಸರಪಳಿ ಬಿಚ್ಚಿ ಬಿಟ್ಟುಬಿಡಲು ಮನಸ್ಸಾಯಿತು. ಗುತ್ತಿಯ ಹಿಂದೆ ಹೋದರೆ ಹೋಗಲಿ ಎಂದುಕೊಂಡನು. ಆದರೆ ಅವನ ಮೋಹ ಇನ್ನೂ ಪೂರ್ತಿಯಾಗಿ ವಿವೇಕವಶವಾಗಿರಲಿಲ್ಲ. ನೆಲ ಸುಟ್ಟು ಬೆಲ್ಲ ಹಾಕಿದರೆ ಎಲ್ಲ ಮರೆತುಹೋಗಿ ಸೇರಿದ ಮನೆಯನ್ನು ಬಿಡುವುದಿಲ್ಲವಂತೆ; ಅದನ್ನೂ ಮಾಡಿ ನೋಡುತ್ತೇನೆ. ಆಮೇಲೆ ತಾನಾಗಿ ನಿಂತರೆ ನಿಲ್ಲಲಿ, ಹೋದರೆ ಹೋಗಲಿ ಎಂದು ನಿಶ್ಚಯಿಸಿ, ಒಂದು ಕಡೆ ಬಿಳಿಹುಲ್ಲು ಹಾಕಿ, ಬೆಂಕಿ ಹೊತ್ತಿಸಿ, ಆ ಬಿಸಿಜಾಗದಲ್ಲಿ ಬೆಲ್ಲದ ಜೋನಿಯನ್ನು ಇಟ್ಟು, ನಾಯಿಯನ್ನು ಕಂಬದಿಂದ ಬಿಚ್ಚಿ ಅದರ ಬಳಿಗೆ ಕಟ್ಟಿದನು. ಆದರೆ ನಾಯಿ ಅದನ್ನು  ಮೂಸಿನೋಡಿತೇ ಹೊರತು ನೆಕ್ಕಲಿಲ್ಲ. ಏನಾಶ್ಚರ್ಯ! ಅಂತಹ ಸೊಗಸಾದ ಬೆಲ್ಲ! ಏನು ಸುವಾಸನೆ ಬರುತ್ತಿದೆ, ತನ್ನ ಮೂಗಿಗೇ? ತನಗೇ ತಿಂದು ಬಿಡೋಣ ಎನ್ನಿಸುತ್ತಿದೆ! ಆದರೆ ನಾಯಿ ಮುಟ್ಟಲಿಲ್ಲ! ಮುಕುಂದಯ್ಯನಿಗೆ ಮತ್ತೆ ಆಶಾಭಂಗವಾಯಿತು.
ಸ್ವಲ್ಪ ಹೊತ್ತಾದ ಮೇಲೆ, ಹಸಿವೆಯಾಗಿ ತಿಂದರೂ ತಿನ್ನಬಹುದು ಎಂದು ಕೊಂಚ ಅನ್ನವನ್ನೂ ತಂದು ಆ ಬೆಲ್ಲಕ್ಕೆ ಕಲಸಿದನು. ಆಗಲೂ ನಾಯಿ ಸುಮ್ಮನೆ ಕೂತಿತ್ತು. ನೊಣಗಳು ಮಾತ್ರ ಬೆಲ್ಲದನ್ನಕ್ಕೆ ಗೊಂಯ್ಯೆಂದು ಮುತ್ತಿದ್ದುವು!
ಇನ್ನೂ ಸ್ವಲ್ಪ ಹೊತ್ತು ಬಿಟ್ಟು ಬಂದು ನೋಡಿದಾಗ ಬೆಲ್ಲ ಅಲ್ಲಿರಲಿಲ್ಲ. ಹುಲಿಯನೇ ತಿಂದಿತೋ ಅಥವಾ ಇನ್ನಾವುದಾದರೂ ತಮ್ಮ ನಾಯಿಗಳಲ್ಲಿ ಒಂದು ಅದನ್ನು ಕಬಳಿಸಿತೋ ಎಂದು ಸಂದೇಯವಾಯಿತು, ಮುಕುಂದಯ್ಯನಿಗೆ. ‘ಇನ್ನಾವ ನಾಯಿಗೆ ಹುಲಿಯನ ಹತ್ತಿರ ಹೋಗಲು ಎದೆ ಬಂದೀತು? ಹುಲಿಯನ್ನೇ ತಿಂದಿರಬೇಕು’ ಎಂದು ನಿಶ್ಚಯಿಸಿ, ಅವನಿಗೆ ಹರ್ಷವಾಗಿ ಹುಲಿಯನ ತಲೆ ನೇವರಿಸಿ ಮುದ್ದು ಮಾಡಿದನು. ಅದೂ ಅವನ ಕಡೆ ನೋಡಿ ಕೃತಜ್ಞತೆಗೆ ಎಂಬಂತೆ ಬಾಲವಲ್ಲಾಡಿಸಿತು. “ಗೆದ್ದೆ!” ಎಂದುಕೊಂಡನು ಮುಕುಂದಯ್ಯ. ತನ್ನ ಧೈರ್ಯವನ್ನು ಒರೆಗೆ ಹಚ್ಚಲು ಸಿದ್ಧನಾಗಿ, ಹುಲಿಯನ ಕೊರಳು ಬಿಚ್ಚಿದನು. ನಾಯಿ ಸಂತೋಷಕ್ಕೆ ಅವನ ಮೈಮೇಲೆ ನೆಗೆದಾಡಿತು. ಅಲ್ಲಿಯೆ ಸುತ್ತಮುತ್ತ ಓಡಾಡಿತು. ಒಂದು ಸಾರಿ ಮನೆಯ ಒಳಜಗಲಿಗೂ ಹೋಗಿಬಂತು. ಮುಕುಂದಯ್ಯನಿಗೆ ಖುಷಿಯೋ ಖುಷಿ! ಅಂತೂ ನೆಲ ಸುಟ್ಟ ಬೆಲ್ಲದನ್ನ ಹಾಕಿ ಮಾಡಿದ ‘ಮುಷ್ಟ’ ಸುಳ್ಳಾಗಲಿಲ್ಲ!…. ಅರೆ! ಇದೇನು ನಾಯಿ ಓಡುತ್ತಿದೆ!
“ಹುಲಿಯಾ! ಏ ಹುಲಿಯಾ! ಬಾ ಬಾ ಹುಲಿಯಾ! ಹುಲಿಯಾ! ಹುಲಿಯಾ!…. ಥೂ ಹೊಲೆಯ!” ಎಂದುಬಿಟ್ಟನು ತಡೆಯಲಾರದೆ. ಮುಕುಂದಯ್ಯ ನೋಡುತ್ತಿದ್ದಂತೆಯೆ, ಕಣ್ಣುಬಿಟ್ಟು ಮುಚ್ಚುವುದರಲ್ಲಿ ಅವನ ಕರೆಯನ್ನು ಇನಿತೂ ಲೆಕ್ಕಿಸದೆ ನಾಯಿ ಗುತ್ತಿ ಹೋದ ಕಡೆ ಧಾವಿಸಿ ಕಣ್ಮರೆಯಾಗಿದ್ದಿತು:….
ಗುತ್ತಿ ಖಿನ್ನಮನನಾಗಿ, ಲಕ್ಕುಂದದ ಹತ್ತಿರ ಹಳ್ಳ ದಾಟುತ್ತಿದ್ದಾಗ, ಹಿಂದಕ್ಕೆ ಸದ್ದಾಗಿ, ತಿರುಗಿ ನೋಡುವುದರಲ್ಲಿಯೆ ಹುಲಿಯ ಅವನ ಮೈಮೇಲೆ ನೆಗೆದಾಡುತ್ತಿತ್ತಂತೆ!!

ಇಂತಹ ಹಲವಾರು ನೆನಪುಗಳಿಂದ ಭಾವಕೋಶ ತುಂಬಿದ್ದ ಮುಕುಂದಯ್ಯ ಕಾಡಿನಿಂದ ತಮ್ಮ ಮನೆಯ ಕಡೆಗೆ ಹೊರಟು, ಹಳೆಮನೆಯ ಕಡೆಗೆ ಹೋಗುತ್ತಿದ್ದ ಕಾಲುದಾರಿಯನ್ನು ಸೇರಿ, ಅಕ್ಕಪಕ್ಕದ ಮರಗಳಲ್ಲಿ ಕಂಡು ಬಂದ ಕಾಜಾಣ, ಮರಕುಟಿಗ, ಮಂಗಟ್ಟೆ ಮೊದಲಾದ ಕಾಡಿನಲ್ಲಿಯೆ ವಿಶೇಷವಾಗಿ ವಾಸ ಮಾಡುವ, ತಾವು ತಿನ್ನದ ಹಕ್ಕಿಗಳಿಗೆ ವಿನೋದಕ್ಕೆಂಬಂತೆ ಚಿಟ್ಟುಬಿಲ್ಲಿನಿಂದ ಕಲ್ಲು ಹೊಡೆಯುತ್ತಾ ನಡೆಯುತ್ತಿರಲು, ಹಳುವಿನಲ್ಲಿ ಕಣ್ಮರೆಯಾಗಿ ಎತ್ತೆತ್ತಲೋ ಹೋಗುತ್ತಿದ್ದ ನಾಯಿ ಮತ್ತೆ ತನಗೆ ಅಭಿಮುಖವಾಗಿ ಓಡಿಬರುತ್ತಿದ್ದುದು ಕಾಣಿಸಿತು. ಹೊಗೆಯಿದ್ದಲ್ಲಿ ಬೆಂಕಿಯಿರುವಂತೆ ಹುಲಿಯ ಕಂಡಲ್ಲಿ ಗುತ್ತಿಯೂ ಇರಬೇಕೆಂದು ಮುಕುಂದಯ್ಯ ಮೊದಲೇ ಊಹಿಸಿದ್ದನು. ಹಾಗೆಯೇ ನಿರೀಕ್ಷಿಸಿ ನೋಡುತ್ತಾನೆ: ನಾಯಿಗೆ ಸ್ವಲ್ಪದೂರದಲ್ಲಿ ಹಿಂದೆ ಗುತ್ತಿಯ ಸವಾರಿ ತನಗೆ ಅಭಿಮುಖವಾಗಿ ಬರುತ್ತಿದ್ದುದು ಕಾಣಿಸಿತು! ಮುಕುಂದಯ್ಯನಿಗೆ ಗುತ್ತಿಯನ್ನು ಕಂಡು, ಮೊದಲು ಹುಲಿಯನನ್ನು ಕಂಡಷ್ಟೆ ಸಂತೋಷವಾಯಿತು; ಅಂತಹ ಅಭೇದ ಸಂಬಂಧವಿತ್ತು, ಅವನ ಮನಸ್ಸಿನಲ್ಲಿ, ನಾಯಿಗೂ ಹೊಲೆಯನಿಗೂ!
“ಏನ್ರಯ್ಯಾ ಚಿಟ್ಟಿಲ್ಲು ಹಿಡ್ಕುಂಡು ಷಿಕಾರಿಗೆ ಹೊಲ್ಟ್‌ ಬಿಟ್ಟೀರಲ್ಲಾ? ಕೋವಿನಾದ್ರೂ ತರಬೈದಿತ್ತಲ್ಲಾ!” ಎಂದು ತನ್ನ ಕೆಂಬರು ಬಣ್ಣದ ಹಲ್ಲೆಲ್ಲ ಕಾಣುವಂತೆ ವಿಶಾಲವಾಗಿ ನಗುತ್ತಾ ಕೇಳಿದನು.
ಅಂತಹ ಖಚಿತ ಉತ್ತರಾಪೇಕ್ಷೆಯಿಲ್ಲದ ಗುತ್ತಿಯ ಲೋಕಾಭಿರಾಮ ಪ್ರಶ್ನೆಗೆ ಉತ್ತರಕೊಡುವ ಗೋಜಿಗೆ ಹೋಗದೆ ಮುಕುಂದಯ್ಯನೂ ಸ್ವಲ್ಪ ಲೋಕಾಭಿರಾಮವಾಗಿಯೆ “ಏನು? ಎತ್ತಮಖ ಹೊರಡ್ತು ಗುತ್ತಿ ಸವಾರಿ?” ಎಂದು ಪ್ರತಿಪ್ರಶ್ನೆ ಹಾಕಿದನು, ಸ್ವಲ್ಪ ಪರಿಹಾಸ್ಯಧ್ವನಿಯಿಂದಲೆ.
“ಈಲ್ಲೇ ಹಳೇಮನೀಗೆ ಹೋಗ್ತೀನಿ….”
“ಸಿಂಬಾವಿಯಿಂದ ಬಂದೆಯೇನೋ?”
ಗುತ್ತಿ ತಲೆಯಾಡಿಸಲು ಮುಕುಂದಯ್ಯ “ಏನೋ? ನಿಮ್ಮ ಹೆಗ್ಡೇರ ಎರಡನೆ ಮದುವೆ ಏನಾಯ್ತೋ? ಹಳೇಮನೆ ಹೆಣ್ಣನ್ನ ಕೇಳ್ತಿದ್ರಂತೆ?”
“ಮೊದ್ಲು ಮದೇ ಆದ ಹಳೇಮನೆ ಹೆಣ್ಣು ಬಿಟ್ಟರಷ್ಟೆ?”
“ಹಾಂಗಾದ್ರೆ ಮದುವೆ ನಿಂತಂತೇ ಅನ್ನು”
“ಅಯ್ಯೋ ನಮ್ಮ ಹೆಗ್ಡೇರು ಬಿಟ್ಟಾರಾ?”
“ಬಿಡದೆ ಮತ್ತೇನು ಮಾಡ್ತಾರೋ? ಏನು ಹಿಡಿದು ಎಳಕೊಂಡು ಹೋಗಿ ಮದುವೆ ಆಗ್ತಾರೇನೋ?”
“ಆಗ್ಲೆ ಬ್ಯಾರೆಕಡೆ ಇಚಾರ್ಸಿ ಆಗಿದೆಯಂತೆ!”
“ಅವರಿಗೆ ಯಾರೋ ಹೆಣ್ಣು ಕೊಡೋರು? ಕುಡ್ದೂ ಕುಡ್ದೂ ಕಾಯಿಲೆ ಬೇರೆ ಹಿಡಿದಿದೆಯಂತೆ!”
“ಏನ್ರಯ್ಯಾ ಹೆಣ್ಣು ಕೊಡೋರಿಗೇನು ಬರಗಾಲ? ದುಡ್ಡೊಂದಿದ್ರೆ? ಕೈತುಂಬಾ ತೆರಾ ಕೊಟ್ರೆ ದಮ್ಮಯ್ಯ ಅಂತ ಕೊಡ್ತಾರೆ?….!! ಅವರೂ ಇವರೂ ಅಂತ ದೂರ ಯಾಕೆ ಹೋಗ್ಬೇಕು? ಹೂವಳ್ಳಿ ಹೆಣ್ಣನ್ನೇ ಇಚಾರಿಸ್ತಾರಂತೆ-ಅಂತಾ ವರ್ತ್ಮಾನ”…. ಮನ್ನೆ ನನ್ನವ್ವ ಹಿಟ್ಟು ಬೀಸಾಕೆ ಹೋಗಿದ್ಲಂತೆ ಮನೆಗೆ. ಹಳೆಮನೆ ಅಮ್ಮನೂ ನಮ್ಮ ಹೆಗ್ಡೇರ ತಂಗೀನೂ ಜಗಳ ಆಡ್ತಾ ಆಡ್ತಾ ಏನೇನೋ ಅಂದುಕೊಂಡರಂತೆ ಒಬ್ಬರಿಗೊಬ್ಬರು. ನಮ್ಮ ಕೇರೀಲೂ ಹಂಗೆ ಬೈಕೊಳ್ಳೋದಿಲ್ಲಂತೆ! ಹಿತ್ತಲುಕಡೆ ಚೌಕೀಲಿ ಹಿಟ್ಟು ಬೀಸ್ತಾ ಕೂತಿತ್ತಂತೆ ನನ್ನವ್ವ. ಅಡಿಗೆ ಮನೇಲಿ ಸುರುವಾಯಿತಂತೆ…. ಹಳೇಮನೆ ಜಟ್ಟಮ್ಮ ಲಕ್ಕಮ್ಮಗೆ “ನಿನ್ನ ಕೊಡ್ತಾರಲ್ಲಾ ಹಂದಿ ಒಡ್ಡಿಗೆ!” ಅಂದರಂತೆ. ಅದಕ್ಕೆ ಲಕ್ಕಮ್ಮ ‘ಬರ್ತಾಳಲ್ಲಾ ನಿನ್ನ ಸವ್ತಿ ಹಂದಿ ಒಡ್ಡಿಯಿಂದ್ಲೆ!’ ಅಂದರಂತೆ. ಅದಕ್ಕಿವ್ರು ‘ನನ್ನ ಹೆಣ ಬೀಳ್ಬೇಕು ಆ ತಾಟಗಿತ್ತಿ ಈ ಮನೆಗೆ ಕಾಲಿಡಬೇಕಾದ್ರೆ. ನಾನು ಮಾಡಾದ್ನೆಲ್ಲಾ ಮಾಡೀನಲ್ಲ: ಇನ್ನೆಲ್ಲಿ ಬರ್ತಾಳೆ ಅವ್ಳು?’ ಅಂದರಂತೆ. ‘ಬರದಿದ್ರೇ…. ಈ ಬಂಜೆಮುಂಡೇನ ಕಟ್ಟಿಕೊಂಡೂ…. ಗುಂಡಿಹಾರ್ತಾನೇನು ಅಣ್ಣಯ್ಯ?’ ಅಂದೇಬಿಟ್ರಂತೆ ನಮ್ಮ ಹೆಗ್ಡೇರ ತಂಗಿ ಲಕ್ಕಮ್ಮೋರು! ‘ನಿನ್ನ ಮಿಂಡನ ತಂಗಿ ಅಲ್ಲದಿದ್ರೆ ಇನ್ಯಾರೂ ಇಲ್ಲೇನು-ಹೆಣ್ಣು? ನಿನ್ನ ಮಂಜಿ ಏನು ರತಿ ಅಂತಾ ಮಾಡೀಯಾ? ನಿನ್ನ ಗಂಡ ಅಗಾಂವ್ನ ಕರೀಹಂದಿ ಮುಸುಡಿಗೂ ಅವನ ತಂಗಿ ಅವಳ ಮುಸುಡಿಗೂ ಏನೂ ಇಲ್ಲ ಯತ್ಯಾಸ? ಆ ಹೂವಳ್ಳಿ ಹೆಣ್ಣು, ಚಿನ್ನದಂಥಾ ಹೆಣ್ಣು, ಚಿನ್ನಮ್ಮನೇ ತರ್ತೀನಿ?” ಅಂದರಂತೆ ಹಳೇಮನೆ ಅಮ್ಮ. ಅದಕ್ಕೆ ಲಕ್ಕಮ್ಮ ‘ತಂದ್ಯಾ ಆ ದದ್ದುಹಿಡುಕ ಕುನ್ನೀನೆ! ಯಾರು ಬ್ಯಾಡ ಅಂತಾರೆ?’ ಅಂದ್ರಂತೆ. ‘ಥೂ ನಿನ್ನ ಬಾಯಲ್ಲಿ ಹುಳು ಬಿದ್ದುಹೋಗ! ಅವಳು ಹೇತು ಬಂದಲ್ಲಿ ನಿಂಗೆ ಕೂತು ಬರಾ ಯೋಗ್ತೇ ಇದ್ಯೇನೆ?’ ಅಂತ ಏನೇನೋ ಬಯ್ದು, ಉಗ್ದು ಬಿಟ್ರಂತೆ ಜಟ್ಟಮ್ಮ. ಜಟಾಪಟೀನೆ ಸುರುವಾಯ್ತಂತೆ. ಕಡೀಗೆ, ಅಡಿಗೆ ಮಾಡಾಕೆ ಇದಾರಲ್ಲ ಆ ಮರಾಟೆ ಮಂಜಯ್ಯ?-ಅವರು ಕೈಕೈ ಮುಗ್ದು, ನಡೂ ಬಂದು, ಜಗಳ ಬಿಡಿಸಿದ್ರಂತೆ….”
ಗುತ್ತಿ ಇನ್ನೂ ಹೇಳಬೇಕಾದ ಸ್ವಾರಸ್ಯವಿವರ ಇದೆ ಎನ್ನುವಂತೆ ಮಾತು ನಿಲ್ಲಿಸಿ ಮತ್ತೆ ಮುಂದುವರಿಯುವ ಮುನ್ನ ಮುಕುಂದಯ್ಯನ ಮುಖದ ಕಡೆ ನೋಡಿ ಬೆಚ್ಚಿ ಬೆರಗಾಗಿ “ಯಾಕ್ರಯ್ಯಾ? ಹಿಂಗೆ ನೋಡ್ತಾ ಇದೀರಿ? ಮಾತೇ ಆಡ್ದೆ?” ಎಂದನು.
ಮುಕುಂದಯ್ಯ ಸಂಪೂರ್ಣ ಅನ್ಯಮನಸ್ಕನಾಗಿದ್ದನು. ಗುತ್ತಿ ಹೇಳಿದ್ದರಲ್ಲಿ ಎಷ್ಟು ಅವನ ಕಿವಿಗೆ ಬಿತ್ತೋ? ಎಷ್ಟು ಬೀಳಲಿಲ್ಲವೋ? ಆದರೆ ಗುತ್ತಿಯ ಪ್ರಶ್ನೆಗೆ ಎಚ್ಚತ್ತಂತೆ ದೀರ್ಘವಾಗಿ ಉಸಿರೆಳೆದುಕೊಂಡು “ನನಗೆ ಕೆಲಸ ಇದೆಯೋ: ಹೊತ್ತಾಯ್ತು. ನೀ ಹೋಗೊ!” ಎಂದು ಕ್ಷಣವೂ ಅಲ್ಲಿ ನಿಲ್ಲದೆ, ಏನನ್ನೊ ಮರೆತದ್ದನ್ನು ಜ್ಞಾಪಿಸಿಕೊಂಡವನಂತೆ ವೇಗವಾಗಿ ಕಣ್ಮರೆಯಾದನು.
“ಇದ್ಯಾಕೆ ಹಿಂಗೆ ಮಾಡ್ತಾರೆ ಇವತ್ತು ನಮ್ಮ ಮುಕುಂದಯ್ಯ?” ಆಶ್ಚರ್ಯಚಕಿತನಾಗಿ ನಿಂತು ನೋಡುತ್ತಿದ್ದ ಗುತ್ತಿ, ಮುಕುಂದಯ್ಯ ಕಾಡಿನ ತಿರುಗಣೆಯಲ್ಲಿ ಕಣ್ಮರೆಯಾದ ಮೇಲೆ, ಹಳೆಮನೆಯ ಹಾದಿ ಹಿಡಿದನು, ಇಬ್ಬರ ಸಂವಾದವನ್ನೂ ಅರಿತು ಆಲಿಸುವಂತೆ ನಿಂತು ಬಾಲವಾಡಿಸುತ್ತಿದ್ದ ಹುಲಿಯ ನೊಡಗೂಡಿ.
*****


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ