ನನ್ನ ಪುಟಗಳು

06 ಅಕ್ಟೋಬರ್ 2015

೨೩) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಗ೧)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಗ೧)
೮೮೪. ಗಕ್ಕುಪಟ್ಟಾಗಿ ನಿಲ್ಲು = ತಬ್ಬಿಬ್ಬಾಗಿ ನಿಂತುಕೊಳ್ಳು.
(ಗಕ್ಕುಪಟ್ಟು = ಕಕಮಕ, ತಬ್ಬಿಬ್ಬು)
ಪ್ರ : ದೆವ್ವದಂತೋನು ಗಕ್ಕನೆ ಎದುರು ನಿಂತಾಗ, ನಾನು ಗಕ್ಕುಪಟ್ಟಾಗಿ ನಿಂತುಬಿಟ್ಟೆ.
೮೮೫. ಗಟ್ಟಿ ಮಾಡಿಕೊಳ್ಳು = ಬಾಯಿಪಾಠ ಮಾಡಿಕೊಳ್ಳು
ಪ್ರ : ಮಗ್ಗಿ ಗಟ್ಟಿ ಮಾಡಿಕೊಂಡು ಹೋಗದಿದ್ರೆ ಮೇಷ್ಟ್ರು ಹೊಡೀತಾರೆ
೮೮೬. ಗಡಗಡನೆ ನಡೆ = ವೇಗವಾಗಿ ಹೆಜ್ಜೆ ಹಾಕು
(ಗಡಗಡ < ಘಾಡ + ಘಾಡ = ಬೇಗ ಬೇಗ)
ಪ್ರ : ಗಡಗಡನೆ ನಡೆದು ಬಾ, ಕತ್ತಲಾಗ್ತಾ ಬಂತು.
೮೮೭. ಗಡರುಗಬ್ಬು ಮಾಡು = ಜೋರು ಮಾಡು, ಆವುಟ ಮಾಡು
ಪ್ರ : ನಿನ್ನ ಗಡರಗಬ್ಬು ಇಲ್ಲಿ ನಡೆಯಲ್ಲ, ಅದುಮಿಕೊಂಡು ಹೋಗು.
೮೮೮. ಗಡಿ ಮೀರಿ ಗಡಾರಿ ನುಂಗಿರು = ಹದ್ದು ಮೀರಿ ಹರಾಮಿಯಾಗಿರು
(ಗಡಿ = ಎಲ್ಲೆಕಟ್ಟು, ಸರಹದ್ದು; ಗಡಾರಿ = ಒರಳು ಕಲ್ಲಿನಲ್ಲಿ ಧನಿಯಾ ಕುಟ್ಟಲು ಬಳಸುವ ಮೊಳದುದ್ದರ ಕಬ್ಬಿಣದ ಒನಕೆಮಂಡಿ)
ಪ್ರ : ಅವಳು ಗಡಿ ಮೀರಿ ಗಡಾರಿ ನುಂಗಿದೋಳು, ಯಾರಿಗೂ ಬಾಯಿ ಕೊಡಲ್ಲ.
೮೮೯. ಗಣೆ ನಿಲೆ ಹಾಕ್ಕೊಂಡು ಮಲಗು = ಕೆಲಸ ಕಾರ್ಯ ಮಾಡದೆ ಸೋಮಾರಿಯಾಗಿ ಮಲಗು, ಮಾನೆ ನಿಗುರಿಸಿಕೊಂಡು ಮಲಗು.
(ಗಣೆ < ಗಳೆ = ಬಿದಿರ ಬೊಂಬು, ಶಿಷ್ನ ; ನಿಲೆ ಹಾಕು = ನೆಟ್ಟಗೆ ನಿಲ್ಲಿಸು)
ಪ್ರ :ವಯಸ್ಸಿಗೆ ಬಂದ ಮಕ್ಕಳು ಮನೆ ಕೆಲಸ ಮಾಡದೆ ಹಿಂಗೆ ಗಣೆ ನಿಲೆ ಹಾಕ್ಕೊಂಡು ಮಲಗಿದ್ರೆ, ಹೆತ್ತೋರೂ ಎಷ್ಟೂ ಅಂತ ದುಡೀತಾರೆ?
೮೯೦. ಗಣೆಮರದಂತಿರು = ಉದ್ದವಾಗಿರು, ಬೊಂಬಿನಂತೆ ಎತ್ತರವಾಗಿರು
ಪ್ರ : ಮಕ್ಕಳೆಲ್ಲ ಗಣೆಮರದಂತೆ ಬೆಳೆದು ನಿಂತವರೆ.
೮೯೧. ಗತಿ ಕಾಣಿಸು = ಉತ್ತರ ಕ್ರಿಯೆ ಮಾಡು
ಪ್ರ : ಸತ್ತೋರಿಗೆ ಒಂದು ಗತಿ ಕಾಣಸದೆ ಇದ್ರೆ ಆಗ್ತದ?
೮೯೨. ಗತಿಗೆಡಿಸು = ಹಾಳು ಮಾಡು, ನಿರ್ಗತಿಕ ಸ್ಥಿತಿಗೆ ತರು
ಪ್ರ : ಸರಿಯಾಗಿದ್ದ ಸಂಸಾರಾನ ಸೊಸೆ ಬಂದು ಗತಿಗೆಡಿಸಿಕ್ಕಿ ಬಿಟ್ಲು
೮೯೩. ಗತಿ ನೆಟ್ಟಗಾಗು = ಹಾಳಾಗು, ಅಪಾಯ ಸಂಭವಿಸು, ಮರಣ ಹೊಂದು
(ನೆಟ್ಟಗಾಗು = ಹೆಣವಾಗು; ಉಸಿರು ಹೋದ ಮೇಲೆ ಕೈಕಾಲು ಮಡಿಚಲು ಆಗದಂತೆ ನೆಟ್ಟಗೆ ಬಿದಿರುಕಡ್ಡಿಯಂತಾಗುವುದನ್ನು ಇದು ಧ್ವನಿಸುತ್ತದೆ.)
ಪ್ರ : ನೀನವತ್ತು ನನ್ನ ಕೈ ಹಿಡೀದಿದ್ರೆ ನನ್ನ ಗತಿ ನೆಟ್ಟಗಾಗ್ತಿತ್ತು
೮೯೪. ಗದ್ದಗೈಯಾಗು = ಚಿಂತಾಮಗ್ನನಾಗು
ಪ್ರ : ಸಂಸಾರಸದ ಸಿಕ್ಕನ್ನು ಬಿಡಿಸುವ ಬಗೆ ಹೇಗೆ ಎಂದು ಗದ್ದಗೈಯಾಗಿ ಕುಳಿತ.
೮೯೫. ಗದುಕಿ ಹೋಗು = ತಿಂದು ಹೋಗು, ಕಬಳಿಸಿ ಹೋಗು
(ಗದುಕು < ಕರ್ದುಕು <ಕರ್ದುಂಕು = ಕುಕ್ಕು, ತಿ‌ನ್ನು)
ಪ್ರ : ಹೆಂಡ್ರನ್ನು ತದುಕಿದ್ದೂ ಅಲ್ಲದೆ, ಇದ್ದಬದ್ದದ್ದನ್ನೆಲ್ಲ ಗದಕಿ ಹೋದ
೮೯೬. ಗದ್ದೆಗೆ ನೀರು ತಿದ್ದು = ಸಂಭೋಗಿಸು, ವೀರ್ಯಸ್ಖಲನ ಮಾಡು
(ಗದ್ದೆ = ಯೋನಿ; ತಿದ್ದು = ಹಾಯಿಸು)
ಪ್ರ :ಎಲ್ಲಿಗೆ ಹೋಗಿದ್ದೆ ಅಂದ್ರೆ, ಗದ್ದೆಗೆ ನೀರು ತಿದ್ದೋಕೆ ಹೋಗಿದ್ದೆ ಎಂದು ನಕ್ಕ.
೮೯೭. ಗರ್ಜಲು ಹಾಕ್ಕೊಂಡು ನಿಂತುಕೊಳ್ಳು = ಬಾಯಲ್ಲಿ ನೀರು ಸುರಿಸಿಕೊಂಡು ನಿಂತಿರು.
(ಗರ್ಜಲು < ಗರ್ಜ (ಹಿಂ) = ಆಸೆ)
ಪ್ರ : ತಿನ್ನೋರ ಉಣ್ಣೋರ ಮುಂದೆ ಗರ್ಜಲು ಹಾಕ್ಕೊಂಡು ನಿಂತ್ಕೊಳ್ಳೋಕೆ ನಾಚಿಕೆ ಆಗಲ್ವ ನಿನಗೆ?
೮೯೮. ಗಪ್‌ಚಿಪ್ಪಾಗು = ಮೌನವಾಗು, ಬಾಯಿ ಮುಚ್ಚಿಕೊಳ್ಳು
ಪ್ರ : ಯಾರದೋ ಹೆಜ್ಜೆ ಸದ್ದು ಕೇಳಿ ಗಪ್‌ಚಿಪ್ಪಾದಳು
೮೯೯. ಗಫಾ ಹೊಡಿ = ಉಡಾಪೆ ಹೊಡಿ, ರೈಲು ಬಿಡು.
ಪ್ರ : ಗಫಾ ಹೊಡೆಯೋದ್ರಿಂದ ಒಂದು ಚಿಕ್ಕಾಸಿನ ನಫೆ ಇದೆಯಾ?
೯೦೦. ಗರಂ ಆಗು = ಸಿಟ್ಟುಗೊಳ್ಳು
(ಗರಂ = ಬಿಸಿ)
ಪ್ರ : ಗರಂ ಆದೋನ್ನ ಹೆಂಗೆ ನರಂ ಮಾಡ್ಬೇಕು ಅನ್ನೋದು ನನಗೆ ಗೊತ್ತು
೯೦೧. ಗರ ಬಡಿದಂತಾಗು = ಸ್ತಂಭೀಭೂತನಾಗು, ಮಾತುಕತೆಯಿಲ್ಲದೆ ಕಂಬದಂತೆ ನಿಲ್ಲು
(ಗರ < ಗ್ರಹ)
ಪ್ರ : ಆ ಸುದ್ಧಿ ಕೇಳಿ ಗರಬಡಿದಂತಾದ, ಕಣ್ಣು ಮಿಟುಕಿಸ, ಮಾತಾಡ
೯೦೨. ಗರ್‌ಮಿರ್ ಅನ್ನು = ಜೋರು ಮಾಡು, ಆವುಟ ಮಾಡು
ಪ್ರ : ಗರ‍್ಮಿರ್ ಅಂದ್ರೆ ಮೂಳೆ ಮುರಿಯೋಂಗೆ ತದಕಿ ಜಾನ್ ನಿಕಲ್‌ಗಯಾ ಮಾಡು
೯೦೩. ಗರಾಗತಿ ಕೇಳು = ಭವಿಷ್ಯ ಕೇಳು, ಕಣಿ ಕೇಳು
(ಗರಾಗತಿ < ಗ್ರಹಗತಿ)
ಪ್ರ : ಗಾದೆ – ಹೊರೆ ಹೊತ್ಕೊಂಡು ಗರಾಗತಿ ಕೇಳ್ದಂಗೆ
೯೦೪. ಗರಿಗಟ್ಟು = ಬಲಕಾಯಿಸು, ಏಳಿಗೆ ಹೊಂದು
ಪ್ರ : ಇತ್ತೀಚೆಗೆ ಅವನು ಚೆನ್ನಾಗಿ ಗರಿಗಟ್ಟಿಕೊಂಡ
೯೦೫. ಗರಿ ಮುರಿಯದಿರು = ಸುಕ್ಕಾದಿರು, ಸುಂಕು ಮುರಿಯದಿರು
ಪ್ರ : ಇಸ್ತ್ರೀ ಮಾಡಿದ ಬಟ್ಟೆಯನ್ನು ಗರಿಮುರಿಯದಂತೆ ತೊಟ್ಟುಕೊಂಡ
೯೦೬. ಗಲೀತ ಬೀಳು = ಏಟು ಬೀಳು
(ಗಲೀತ < ಗಳಿತ ? = ಕೆಳಕ್ಕೆ ಬೀಳುವಂತಹ ಒದೆ)
ಪ್ರ :ಗಲೀತ ಬೀಳದ ಹೊರತೂ ಮಲೀತಾ ಇರೋ ಮಕ್ಕಳಿಗೆ ಬುದ್ಧಿ ಬರಲ್ಲ
೯೦೭. ಗಲ್ಲೆ ಬಾನಿಗೆ ತುಂಬು = ಹೊಟ್ಟೆಗೆ ಅನ್ನ ತುಂಬು
(ಗಲ್ಲೆ < ಗಲ್ಲಾ (ಮರಾಠಿ) = ಕಾಳು ಅಥವಾ ವ್ಯಾಪಾರಿಗಳು ದುಡ್ಡು ತುಂಬುವ ಪೆಟ್ಟಿಗೆ, ಬಾನಿ = ಹರವಿಗಿಂತ ದೊಡ್ಡದಾದ ಗುಡಾಣಕ್ಕಿಂತ ಚಿಕ್ಕದಾದ ಮಣ್ಣಿನ ಪಾತ್ರೆ)
ಪ್ರ : ಯಾರು ಉಂಡಿರಲಿ ಬಿಟ್ಟಿರಲಿ, ಇವನಿಗೆ ಮಾತ್ರ ಗಲ್ಲೇಬಾನಿಗೆ ತುಂಬೋದೇ ಕೆಲಸ.
೯೦೮. ಗಸ್ತು ಕೊಡು = ಕೈಕೊಡು, ಮೋಸ ಮಾಡು
(ಗಸ್ತು = ಪಹರೆ, ಕಾವಲು)
ಪ್ರ :ಸರಿಯಾದ ಸಮಯದಲ್ಲಿ ನನಗೆ ಗಸ್ತು ಕೊಟ್ಟನಲ್ಲ ಇವನು
೯೦೯. ಗಳಗಂಟೆ ಅಲ್ಲಾಡಿಸಿಕೊಂಡು ಬರು = ಭೋಗಿಸಲು ಬರು
(ಗಳಗಂಟೆ < ಗಳ + ಗಂಟೆ = ಕೊರಳಿಗೆ ಕಟ್ಟಿದ ಗಂಟೆ; ಗಳ = ಕೊರಳು) ಎತ್ತುಗಳ ಕೊರಳಿಗೆ ಗಂಟೆ ಕಟ್ಟುವುದುಂಟು. ಅವು ನಡೆಯುವಾಗ ಗಂಟೆ ಅಲ್ಲಾಡುವುದರಿಂದ ಗಳಗಳ ಶಬ್ದವಾಗುತ್ತದೆ. ಇಲ್ಲಿ ಶಿಷ್ನಕ್ಕೆ ಸಂಕೇತವಾಗು ಬಳಸಲಾಗಿದೆ.
ಪ್ರ : ಗಾದೆ – ಒಳಗ್ಗಂಟ ಬಾ ಅಂದಿದ್ಕೆ ಗಳಗಂಟೆ ಅಲ್ಲಾಡಿಸಿಕೊಂಡು ಬಂದ
೯೧೦. ಗಳಿಗೆಗೊಂದು ಗಂಟೆಗೊಂದು ಮಾತಾಡು = ಅಭಿಪ್ರಾಯ ಬದಲಿಸುತ್ತಿರು, ನಿಲುವು ಬದಲಾಯಿಸು
ಪ್ರ : ಗಳಿಗ್ಗೊಂದು ಗಂಟೆಗೊಂದು ಮಾತಾಡೋ ಊಸರವಳ್ಳಿ ನಂಬಿಕೊಂಡ್ರೆ ನಾವು ಕೆಡ್ತೀವಿ
೯೧೧. ಗ್ಯಪ್ತಿ ಇರು = ನೆನಪಿರು
(ಗ್ಯಪ್ತಿ < ಜ್ಞಪ್ತಿ = ನೆನಪು, ಅರಿವು)
ಪ್ರ : ಅವನೇ ತುಟಿ ಮೀರಿ ಮಾತಾಡಿದ್ದು, ನನಗೆ ಚೆನ್ನಾಗಿ ಗ್ಯಪ್ತಿ ಅದೆ.
೯೧೨. ಗಾಚಾರ ಕೂಡು = ಕೆಟ್ಟದ್ದು ಕೂಡಿ ಬರು, ಕಾದಿರು
(ಗಾಚಾರ < ಗ್ರಾಚಾರ < ಗ್ರಹಚಾರ = ಗ್ರಹಬಲ)
ಪ್ರ :ಅವನಿಗೆ ಗಾಚಾರ ಕೂಡಿರೋದಕ್ಕೆ ಹಿಂಗೆಲ್ಲ ಆಡ್ತಿರೋದು
೯೧೩. ಗಾಚಾರ ಬರು = ತೊಂದರೆ ಬರು, ಕಷ್ಟಬರು
ಪ್ರ : ಇವನ ದೆಸೆಯಿಂದ, ನನಗೊಳ್ಳೆ ಗಾಚಾರ ಬಂತಲ್ಲ
೯೧೪. ಗಾಚಾರ ಬಿಡಿಸು = ದೆವ್ವ ಬಿಡಿಸು, ಚೆನ್ನಾಗಿ ಚಚ್ಚು
ಪ್ರ : ಇವತ್ತು ಅವನಿಗೆ ಗಾಚಾರ ಬಿಡಿಸಿ ಕಳಿಸಿದ್ದೀನಿ
೯೧೫. ಗಾಡಿ ಬಿಡು = ಬೊಗಳೆ ಬಿಡು, ಬುರುಡೆ ಬಿಡು
ಪ್ರ : ನೀನು ಗಾಡಿ ಬಿಡಬೇಡ, ನಾನು ಕಂಡಿದ್ದೀನಿ, ಸುಮ್ನಿರು
೯೧೬. ಗಾಡಿ ಬಿಡು = ಮರಣ ಹೊಂದು
ಪ್ರ : ಇವನು ಈಗಲೋ ಆಗಲೋ ಗಾಡಿ ಬಿಡೋದು ಗ್ಯಾರಂಟಿ
೯೧೭. ಗಾಡಿ ಬಿಡು = ಜಾಗ ಬಿಡು, ಹೊರಡು
ಪ್ರ : ನೀನು ಮೊದಲಿಲ್ಲಿಂದ ಗಾಡಿ ಬಿಡು, ನೀನಿದ್ದಷ್ಟೂ ತಲೆನೋವು
೯೧೮. ಗಾಣಕ್ಕಿಟ್ಟ ಕಬ್ಬಾಗು = ನೀರಸ ಸಿಪ್ಪೆಯಾಗು, ಮೂಳೆ ಚಕ್ಕಳವಾಗು
(ಗಾಣ = ಆಲೆ, ಕಬ್ಬನ್ನು ಅರೆಯುವ ಯಂತ್ರ)
ಪ್ರ : ಒಳ್ಳೆ ತುಂಡು ತೊಲೆಯಂತಿದ್ದ ಹುಡುಗ ಇದ್ದಕಿದ್ದಂತೆ ಗಾಣಕ್ಕಿಟ್ಟ ಕಬ್ಬಾಗಿದ್ದಾನಲ್ಲ, ಯಾಕೆ ಅಂತ ಎಂದಾದರೂ ಯೋಚನೆ ಮಾಡಿದ್ದೀರಾ?
೯೧೯. ಗಾಣದೆತ್ತಿನಂತೆ ದುಡಿ = ಎದ್ದಾಗಳಿಂದ ಮಲಗುವ ತನಕ ನಿರಂತರವಾಗಿ ದುಡಿ.
ಗಾಣಕ್ಕೆ ಕಟ್ಟಿದ ಎತ್ತು ಅತ್ತಿತ್ತ ಅಲೆದಾಡುವಂತಿಲ್ಲ, ನಿಲ್ಲುವಂತಿಲ್ಲ. ಬೆಳಗ್ಗೆಯಿಂದ ಸಂಜೆಯವರೆಗೂ ತಿರುಗುತ್ತಲೇ ಇರಬೇಕು. ಗಾಣಿಗ ವೃತ್ತಿ ಈ ನುಡಿಗಟ್ಟಿಗೆ ಮೂಲ. ಈಗ ಎತ್ತು ಕಟ್ಟಿ ಹೊಂಗೆಬೀಜವನ್ನೋ, ಹಿಪ್ಪೆ ಬೀಜವನ್ನೋ, ಹುಚ್ಚೆಳ್ಳನ್ನೋ ಗಾಣದಲ್ಲಿ ಅರೆದು ಹೊಂಗೆ ಎಣ್ಣೆ, ಹಿಪ್ಪೆ ಎಣ್ಣೆ, ಹುಚ್ಚಳ್ಳೆಣ್ಣೆ ಮೊದಲಾದವುಗಳನ್ನು ತೆಗೆಯಬೇಕಾದ ಕಷ್ಟವಿಲ್ಲ. ನಾಗರಿಕತೆಯ ದೆಸೆಯಿಂದ ಯಂತ್ರಗಳು ಎತ್ತುಗಳ ಕೆಲಸವನ್ನು ನಿರ್ವಹಿಸುತ್ತವೆ.
ಪ್ರ : ಗಾಣದೆತ್ತಿನಂತೆ ದುಡಿಯೋ ಜನರು ಈ ಮನೇಲಿ ಲೆಕ್ಕಕ್ಕೇ ಇಲ್ಲ, ಕಾಲು ಮೇಲೆ ಕಾಲು ಹಾಕ್ಕೊಂಡು ಕೂತಿರೋರ್ಗೇ ಮಾನ್ಯತೆ
೯೨೦. ಗಾಯದ ಮೇಲೆ ಬರೆ ಹಾಕು = ನೋವನ್ನು ದ್ವಿಗುಣಗೊಳಿಸು, ಉರಿಯುವುದರ ಮೇಲೆ ಉಪ್ಪು ಹಾಕು
ಪ್ರ : ಗಾಯವನ್ನು ಮಾಯಿಸೋ ಜನರಿಗಿಂತ ಗಾಯದ ಮೇಲೆ ಬರೆ ಹಾಕೋ ಜನರೇ ಹೆಚ್ಚು ಈ ಮನೇಲಿ
೯೨೧. ಗಾರುಗಾರಾಗು = ಉರುಕುರುಕಾಗು, ನಯನುಣುಪಿಲ್ಲದಿರು
(ಗಾರು = ಉರುಕು)
ಪ್ರ : ಆಡೋ ಮಾತು ಗಾರ್‌ಗಾರಾದ್ರೆ ನಂಟಸ್ತನ ಉಳೀತದ?
೯೨೨. ಗಾವಿನ ಮರಿ ಸಿಗಿದಂತೆ ಸಿಗಿ = ಅಮಾನುಷವಾಗಿ ಕೊಲ್ಲು, ಹಲ್ಲಿನಿಂದ ಸಿಗಿ.
ಮಾರಿ ಹಬ್ಬಗಳಲ್ಲಿ ದೇವತೆಯ ಮುಂದೆ ಮರಿಗಳ (ಕುರಿ, ಮೇಕೆ, ಹೋತ, ಟಗರು) ಕುತ್ತಿಗೆಯನ್ನು ಬಂಡುಗುಡಲಿನಿಂದ ಕತ್ತರಿಸುವ ಪದ್ಧತಿ ಉಂಟು. ಬಂಡುಗುಡಲನ್ನು ಬಳಸದೆ ಆಸಾದಿ ಮರಿಯ ಗೋಮಾಳೆಗೆ ಬಾಯಿ ಹಾಕಿ. ರಕ್ತವನ್ನು ಗಟಗಟನೆ ಕುಡಿದು, ಹಲ್ಲಿನಿಂದಲೇ ಸಿಗಿಯುವ ಆಚರಣೆಯೂ ಉಂಟು. ಇದಕ್ಕೆ ‘ಗಾವುಸಿಗಿ’ ‘ಗಾವು ಕೊಡು’ ಎಂಬ ಹೆಸರುಗಳುಂಟು. ಆ ಹಿನ್ನೆಲೆ ಇದಕ್ಕೆ ಮೂಲ.
ಪ್ರ : ಏನು ತಿಳಿದುಕೊಂಡಿದ್ದೀಯಾ ನನ್ನ, ಗಾವಿನ ಮರಿ ಸಿಗದಂಗೆ ಸಿಗಿದು ಬಿಟ್ಟೇನು, ಹುಷಾರ್ !
೯೨೩. ಗಾಳ ಹಾಕು = ಹೊಂಚು ಹಾಕು.
(ಗಾಳ = ಮೀನು ಹಿಡಿಯುವ ಸಾಧನ) ಒಂದು ಉದ್ದನೆಯ ಬಿದಿರುಕಡ್ಡಿಗೆ ದಾರಕಟ್ಟಿ, ದಾರದ ತುದಿಯಲ್ಲಿ ಲೋಹದ ಕೊಕ್ಕೆ ಸಿಕ್ಕಿಸಿ, ಅದಕ್ಕೆ ಮಣ್ಣು ಮುಕ್ಕ ಒಂದನ್ನು ಸಿಗಿಸಿರುತ್ತಾರೆ. ಮೀನು ಬೇಟೆಗಾರ ದಡದಲ್ಲಿ ಕುಳಿತು, ಕಡ್ಡಿಯನ್ನು ಕೈಯಲ್ಲಿ ಹಿಡಿದು, ಅದರ ದಾರ ನೀರೊಳಗೆ ಬೀಳುವಂತೆ ಎಸೆದು, ಕಾಯುತ್ತಾ ಕೂರುತ್ತಾನೆ. ಗಾಳದ ಕೊಕ್ಕೆಗೆ ಸಿಕ್ಕಿಸಿರುವ ಎರೆಹುಳವನ್ನು ತಿನ್ನುತ್ತಾ ಬಂದ ಮೀನಿನ ಗಂಟಲಿಗೆ ಕೊಕ್ಕೆ ಸಿಕ್ಕಿಕೊಂಡು, ಬಿಡಿಸಿಕೊಳ್ಳಲು ಜಗ್ಗಾಡುತ್ತದೆ. ಆಗ ಮೀನು ಬೇಟೆಗಾರ ತನ್ನ ಕೈಯಲ್ಲಿರುವ ಕಡ್ಡಿಯನ್ನು ಚಿಮ್ಮುತ್ತಾನೆ, ದಾರ ತನ್ನ ಬೆನ್ನ ಹಿಂದಕ್ಕೆ ಬರುವಂತೆ. ಆಗ ಮೀನನ್ನು ಹಿಡಿದು ಬುಟ್ಟಿಗೆ ಹಾಕಿಕೊಳ್ಳುತ್ತಾನೆ. ಬೆಸ್ತವೃತ್ತಿ ಈ ನುಡಿಗಟ್ಟಿಗೆ ಮೂಲ.
ಪ್ರ : ಅವನು ಸರಿಯಾದ ಗಾಳಾನೆ ಹಾಕಿದ್ದ, ಆದರೆ ನಾನು ಸಿಕ್ಕಲಿಲ್ಲ ಅಷ್ಟೆ.
೯೨೪. ಗಾಳಕ್ಕೆ ಹೋಗು = ಮೀನು ಬೇಟೆಗೆ ಹೋಗು
ಪ್ರ : ಗಾದೆ – ನಾಡೆಲ್ಲ ಗೋಕರ್ಣಕ್ಕೆ ಹೋದ್ರೆ, ಗೋಕರ್ನದೋರು ಗಾಳಕ್ಕೆ ಹೋದ್ರು.
೯೨೫. ಗಾಳಿಗಂತ್ಲು ಮಾಡು = ತರಲೆ ಮಾಡು, ಇಲ್ಲದ ಸಮಸ್ಯೆ ಹುಟ್ಟುಹಾಕಿ ಹೆಣಗಿಸು
(ಗಂತಲು < ಗಂಟ್ಲು < ಗಂಟು = ಸಿಕ್ಕು, ಗೋಜು)
ಪ್ರ : ಗಾಳಿಗಂತ್ಲು ಮಾಡೋದು ಅಂದ್ರೆ ಆ ವಂಶದೋರಿಗೆ ಹಾಲು ಅನ್ನ ಉಂಡಷ್ಟು ಸಂತೋಷ.
೯೨೬. ಗಾಳಿಗುದ್ದಿ ಮೈ ನೋಯಿಸಿಕೊಳ್ಳು = ವ್ಯರ್ಥ ಕೆಲಸ ಮಾಡಿ ಸುಸ್ತಾಗು
ಪ್ರ : ನನ್ನ ಬುದ್ಧಿ ಮಾತು ಕೇಳು, ವೃಥಾ ಗಾಳಿ ಗುದ್ದಿ ಮೈನೋಯಿಸಿಕೊಳ್ಳೋದು ಬೇಡ.
೯೨೭. ಗಾಳಿಗೊಡ್ಡಿದ ದೀಪವಾಗು = ನಂದಿ ಹೋಗು
(ಒಡ್ಡು = ಎದುರು ನಿಲ್ಲಿಸು)
ಪ್ರ : ಕಿಡಿಗೇಡಿಗಳ ದಾಳಿಯಲ್ಲಿ ನನ್ನ ಬದುಕು ಗಾಳಿಗೊಡ್ಡಿದ ದೀಪವಾಯ್ತು
೯೨೮. ಗಾಳಿಗೋಪುರ ಕಟ್ಟು = ಕಲ್ಪನಾ ಲೋಕದಲ್ಲಿ ವಿಹರಿಸು, ಬರಿಗೈಯಲ್ಲಿ ಮೊಳ ಹಾಕು
ಪ್ರ : ವಾಸ್ತವ ಅರ್ಥ ಮಾಡಿಕೋ, ಗಾಳಿಗೋಪುರ ಕಟ್ತಾ ಕೂರಬೇಡ
೯೨೯. ಗಾಳಿ ಬಂದಾಗ ತೂರಿಕೊಳ್ಳು = ಸಮಯ ಸಿಕ್ಕಿದಾಗ ಸಾಧಿಸಿಕೊಳ್ಳು, ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳು
ಪ್ರ : ಗಾದೆ – ಗಾಳಿ ಬಂದಾಗ ತೂರಿಕೊ
ಧಾರಣೆ ಬಂದಾಗ ಮಾರಿಕೊ
೯೩೦. ಗಾಳಿ ಬಿಡಿಸು = ಚಿತ್ರ ಹಿಂಸೆ ಕೊಡು, ದೆವ್ವ ಬಿಡಿಸು
ವಾಮಾಚಾರದವರು ದೆವ್ವ ಬಿಡಿಸುತ್ತೇವೆಂದು, ದೆವ್ವ ಹಿಡಿದು ಸೆಟೆದು ಕೊಂಡವರಿಗೆ ಮೆಣಸಿನಕಾಯಿ ಘಾಟು ಹಾಕುವುದು, ಹುಣಿಸೇ ಬರಚಲನ್ನು ತೆಗೆದುಕೊಂಡು ದನ ಚಚ್ಚಿದಂತೆ ಚಚ್ಚುವುದು, ಜುಟ್ಟನ್ನು ಹಿಡಿದು ತಲೆಯನ್ನು ನೀರಲ್ಲಿ ಅದ್ದಿ ಅದ್ದಿ ತೆಗೆಯುವುದು – ಮುಂತಾದ ಶಿಕ್ಷೆಗಳ ಮೂಲಕ ಚಿತ್ರಹಿಂಸೆ ಕೊಡುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಅವನು ಸಾಯೋವರೆಗೂ ಮರೀಬಾರ್ದು, ಹಂಗೆ ಇವತ್ತು ಗಾಳಿ ಬಿಡಿಸಿ ಬಂದಿದ್ದೀನಿ, ಆ ಹಲಾಲ್‌ಕೋರನಿಗೆ
೯೩೧. ಗಾಳಿ ಬೀಸು = ಪ್ರಭಾವಕ್ಕೊಳಗಾಗು
ಪ್ರ : ಅವನ ಗಾಳಿ ಇವನಿಗೂ ಬೀಸಿರಬೇಕು, ತಲೆ ಕೆಟ್ಟವನಂತೆ ಆಡ್ತಾನೆ.
೯೩೨. ಗಾಳಿ ಮೆಟ್ಟಿ ಗೊಟಕ್ಕನ್ನು = ದೆವ್ವ ಹಿಡಿದು ಸಾಯಿ
(ಮೆಟ್ಟಿ = ತುಳಿದು, ಎರಗಿ ; ಗೊಟ್ಟಕ್ಕನ್ನು = ಮರಣ ಹೊಂದು)
ಪ್ರ : ನನ್ನ ಹೊಟ್ಟೆ ಉರಿಸಿದ ಆ ಗಯ್ಯಾಳಿ ಗಾಳಿ ಮೆಟ್ಟಿ ಗೊಟಕ್ ಅಂದ್ಲು
೯೩೩. ಗಾಳಿ ಹಿಡಕೊಂಡು ಬರು = ವಾಸನೆ ಹಿಡಿದು ಬರು.
ವಾಸನೆ ಹಿಡಿಯುವುದರಲ್ಲಿ ಮನುಷ್ಯರಿಗಿಂತ ಪ್ರಾಣಪಕ್ಷಿಗಳು ಎತ್ತಿದಕೈ ಉದಾಹರಣೆಗೆ ರಣ ಹದ್ದು ಎಷ್ಟೇ ಎತ್ತರದಲ್ಲಿ ದೂರದಲ್ಲಿ ಇದ್ದರೂ ವಾಸನೆ ಹಿಡಿದು ಸತ್ತ ಪ್ರಾಣಿ ಇರುವೆಡೆಗೆ ಬಂದು ಬಿಡುತ್ತದೆ. ನಾಯಿ ವಾಸನೆ ಹಿಡಿದು ದರೋಡೆಕೋರರನ್ನು ಕೊಲೆಗಡುಕನನ್ನು ಪತ್ತೆ ಹಚ್ಚಲು ನೆರವಾಗುತ್ತದೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಇವತ್ತು ಬಾಡು ಹಿಟ್ಟಿನ ದಿನ ಅಂತ. ಯಾರು ಹೇಳದಿದ್ದರೂ ಗಾಳಿ ಹಿಡಕೊಂಡು ಬಂದು ಬಿಟ್ಟವನೆ ನೋಡು, ಹೊಲಸಿನ ರೆಕ್ಕೆಯೋನು
೯೩೪. ಗ್ಯಾನ ನೆಟ್ಟಗಿರು = ಬುದ್ಧಿ ನೆಟ್ಟಗಿರು, ಅರಿವು ಸರಿಯಾಗಿರು
(ಗ್ಯಾನ < ಜ್ಞಾನ = ಅರಿವು)
ಪ್ರ : ಗ್ಯಾನ ನೆಟ್ಟಗಿದ್ದೋರು ಆಡೋ ಮಾತಲ್ಲ, ಮಾಡೋ ಕೆಲಸ ಅಲ್ಲ ಇದು
೯೩೫. ಗ್ಯಾಪಕ ಇರು = ನೆನಪಿರು
(ಗ್ಯಾಪಕ < ಜ್ಞಾಪಕ = ನೆನಪು, ಸ್ಮರಣೆ)
ಪ್ರ : ನಿಮ್ಮ ಮೇಲೆ ವ್ಯಾಪಕವಾದ ಆರೋಪ ಹಬ್ಬಿದಾಗ, ನೀವು ನನಗೆ ಹೇಳಿದ ಮಾತು ಗ್ಯಾಪಕ ಇದೆಯಾ?
೯೩೬. ಗ್ರಾಸ್ತೆಯಂತಿರು = ಗರತಿಯಂತಿರು, ಸಭ್ಯಳಂತಿರು
(ಗ್ರಾಸ್ತೆ < ಗೃಹಸ್ಥೆ = ಗರತಿ)
ಪ್ರ : ಗ್ರಾಸ್ತೆಯಂತೆ ಇದ್ದೋಳು ಈಗ ನಿತ್ಯ ರ್ವಾತೆ ತೆಗೆಯೋದೇ ಕೆಲಸ
೯೩೭. ಗ್ವಾಕೆ ಮುರಿಯೋವರೆಗೂ ಸಾಕು = ಪ್ರಾಯಕ್ಕೆ ಬರುವವರೆಗೂ ಸಲಹು.
(ಗ್ವಾಕೆ < ಗೊಂಕೆ = ಕೊರಳ ಧ್ವನಿ ಪೆಟ್ಟಿಗೆ)
ಪ್ರ : ಅವನು ಸಾಕಿ ಗ್ವಾಕೆ ಮುರಿದಿದ್ದು ಸಾಕು, ಇನ್ನು ನನ್ನ ಹಣೆಪಾಡು, ಯಾರ ಹಂಗಲ್ಲೂ ಇರಲ್ಲ.
೯೩೮. ಗ್ವಾಮಾಳೆ ಹಿಸಕು = ಗಂಟಲನ್ನು ಹಿಸುಕು, ಸಾಯಿಸು
(ಗ್ವಾಮಾಳೆ < ಗೋಮಾಳೆ < ಗೋನಾಳಿ = ಗಂಟಲು ಬಳೆ)
ಪ್ರ : ಗಾಣ್ಚಲಿ ಮಾಡಿದರೆ ಗ್ವಾಮಾಳೆ ಹಿಸುಕಿಬಿಡ್ತೀನಿ, ಜೋಕೆ!
೯೩೯. ಗಿಜಗುಟ್ಟು = ಪಿದಿಪಿದಿಗುಟ್ಟು, ಜನ ಸಂದಣಿ ಜಾಸ್ತಿಯಾಗಿರು
(ಗಿಜ < ಕಿಜ < ಕಿಚ್ = ಕಿಚ ಕಿಚ ಎಂಬ ಪಕ್ಷಿಗಳ ಧ್ವನಿ)
ಪ್ರ : ಮನೆ ತುಂಬ ಜನ ಗಿಜಗುಟ್ತಾ ಇದ್ದಾರೆ.
೯೪೦. ಗಿಟಕರಿ = ಕಿಕ್ಕಿರಿ, ಸಮೃದ್ಧವಾಗಿರು
(ಗಿಟಕರಿ < ಗಿಟಗರಿ = ಕಿಕ್ಕಿರಿ, ಪದಾರ್ಥಗಳು ಗಿಟಗಿಟ ಸದ್ದು ಮಾಡು)
ಪ್ರ : ಅವರ ಮನೇಲಿ ಕಣ್ಣಿಗೆ ಬೇಕಾದ್ದು ಗಿಟಕರೀತಾ ಬಿದ್ದಿದ್ರೂ ಮನೆಯವರಿಗೆ ಎಳ್ಳಷ್ಟು ಅಹಂಕಾರವಿಲ್ಲ
೯೪೧. ಗಿಟ್ಟದಿರು = ನಫೆ ಸಿಕ್ಕದಿರು, ದೊರಕದಿರು
(ಗಿಟ್ಟು = ದೊರಕು, ಸಿಕ್ಕು)
ಪ್ರ : ನೀವು ಕೇಳೋ ಬೆಲೆಗೆ ಕೊಟ್ರೆ ನಮಗೇನೂ ಗಿಟ್ಟಲ್ಲ
೯೪೨. ಗಿಟ್ಟಿಸಿಕೊಳ್ಳು = ಸಂಪಾದಿಸು
ಪ್ರ : ಹೋದ ಕಡೆ ಅಷ್ಟೋ ಇಷ್ಟೋ ಗಿಟ್ಟಿಸಿಕೊಳ್ಳದೆ ಬರಲ್ಲ, ಈ ಗಿರಾಕಿ
೯೪೩. ಗಿಡ ಬೀಳು = ತಲೆ ಮರೆಸಿಕೊಳ್ಳು, ಕಾಡು ಸೇರು
(ಗಿಡ = ಕಾಡು) ಕೆಲವು ಆದಿವಾಸಿ ಜನಾಂಗಗಳಲ್ಲಿ ವಯಸ್ಸಿಗೆ ಬಂದ ಹೆಣ್ಣು ಗಂಡುಗಳು ತಾವು ಪರಸ್ಪರ ಪ್ರೀತಿಸಿ ಮದುವೆಯಾಗುವ ಮನಸ್ಸಿದ್ದರೆ, ಇಬ್ಬರೂ ಕೂಡಿ ಕಾಡಿಗೆ ಹೋಗಿ ನಾಲ್ಕೈದು ದಿನವಿದ್ದು ಮರಳಿ ತಮ್ಮ ಹಾಡಿಗೆ (ಊರಿಗೆ) ಬರುವ ಪದ್ಧತಿ ಉಂಟು. ಹಾಗೆ ಹಿಂದಿರುಗಿದ ಹೆಣ್ಣುಗಂಡುಗಳಿಗೆ ಪರಸ್ಪರ ಮದುವೆಯಾಗುವ ಮನಸ್ಸಿದೆ ಎಂದು ತಿಳಿದ ತಂದೆ ತಾಯಿಗಳು, ಕುಲದ ಹಿರಿಯರು ತೀರ್ಮಾನಿಸಿ, ಯಾವುದೇ ತಕರಾರು ತೆಗೆಯದೆ ಮುಕ್ತ ಮನಸ್ಸಿನಿಂದ ಮದುವೆ ಮಾಡುವ ವಾಡಿಕೆ ಇದೆ. ಪರಸ್ಪರ ಪ್ರೀತಿಸಿ ಮದುವೆಯಾಗಲಿಚ್ಛಿಸುವ ಹೆಣ್ಣುಗಂಡುಗಳಿಗೆ ಅಡ್ಡಿಯುಂಟು ಮಾಡುವ, ಬೆದರಿಕೆ ಹಾಕುವ ಶಿಷ್ಟ ನಾಗರಿಕರ ಸಂಕುಚಿತ ಮನಸ್ಸಿಗಿಂತ ಆದಿವಾಸಿಗಳ ಮುಕ್ತ ಮನಸ್ಸು ಹೆಚ್ಚು ಸ್ವಸ್ಥಾವಾದದ್ದು ಎನ್ನಿಸದಿರದು. ಆದಿವಾಸಿ ಸಂಸ್ಕೃತಿಯ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಗಾದೆ – ಹುಡುಗು ಬುದ್ಧಿಯೋ, ಗಿಡ ಬಿದ್ದಿಯೋ?
೯೪೪. ಗಿರಗಟ್ಟೆ ಆಡಿಸು = ನಿರಂತರ ತಿರುಗಿಸಿ ಸುಸ್ತು ಮಾಡು
(ಗಿರಗಟ್ಟೆ > ಗಿರಗಟ್ಲೆ = ಗಿರ್ ಎಂದು ಸದ್ದು ಮಾಡುತ್ತಾ ತಿರುಗುವ ಮಕ್ಕಳ ಆಟದ ಚಕ್ರ ಅಥವಾ ಬಾವಿಯಿಂದ ನೀರೆತ್ತಲು ಬಳಸುವ ತಿರುಗುಚಕ್ರ, ರಾಟವಾಳ)
ಪ್ರ : ಇವತ್ತು ಅವನು ಹಲ್ ಹಲ್ ಗಿರಗೋ ಹಂಗೆ ಗಿರಗಟ್ಟೆ ಆಡಿಸಿ ಕಳಿಸಿದ್ದೀನಿ
೯೪೫. ಗಿಲ್ಲಿ ಬಿಟ್ಟು ಹಲ್ಲು ಬಿಡು = ಪರಚಿಬಿಟ್ಟು ನಗು, ಹಲ್ಲೆ ಮಾಡಿ ಹಲ್ಲುಗಿಂಜು
(ಗಿಲ್ಲು = ಪರಚು; ಹಲ್ಲುಬಿಡು = ನಗು, ತಮಾಷೆ ಎಂಬಂತೆ ಹಲ್ಲುಗಿಂಜು)
ಪ್ರ : ಗಿಲ್ಲೋದು ಗಿಲ್ಲಿ ಬಿಟ್ಟು ಆ ಮೇಲೆ ನೀನು ಹಲ್ಲುಬಿಟ್ರೆ, ಹಲ್ಲನ್ನೆಲ್ಲ ಉದುರಿಸಿಬಿಡ್ಲ ಅನ್ನೋ ಸಿಟ್ಟು ನನಗೆ ಬರಲ್ವ?
೯೪೬. ಗಿಲೀಟು ಮಾಡು = ಮರುಳು ಮಾಡು ಫಳಫಳ ಹೊಳೆಯುವಂತೆ ಮಾಡಿ ಆಕರ್ಷಿಸು
(ಗಿಲೀಟು < Gilt = ಚಿನ್ನದ ಮುಲಾಮು, ಲೇಪ)
ಪ್ರ : ಅಂತೂ ಏನೇನೋ ಗಿಲೀಟು ಮಾಡಿ, ಐದು ಗಿರಾಕೀನೆ ತಂದಿದ್ದೀಯ
೯೪೭. ಗಿಲುಬಿಕೊಂಡು ಹೋಗು = ಕಿತ್ತುಕೊಂಡು ಹೋಗು, ಸೆಳೆದುಕೊಂಡು ಹೋಗು
(ಗಿಲುಬು = ಕೀಳು, ಸಂಪಾದಿಸು)
ಪ್ರ : ಬಂದಾಗ ಏನಾದರೂ ಗಿಲುಬಿಕೊಂಡು ಹೋಗೋದ್ರಲ್ಲಿ ನಿನ್ನ ಬಿಟ್ರೆ ಇನ್ನಿಲ್ಲ
೯೪೮. ಗಿಳಿಪಾಠವಾಗು = ಹೇಳಿ ಕೊಟ್ಟಷ್ಟನ್ನು ಯಾಂತ್ರಿಕವಾಗಿ ಒಪ್ಪಿಸು
ಪ್ರ : ಗಿಳಿಪಾಠದಿಂದ ಬೆಳವಣಿಗೆ ಸಾಧ್ಯವಿಲ್ಲ, ಸ್ವಂತಿಕೆ ಮೂಡುವುದಿಲ್ಲ.
೯೪೯. ಗೀಜಗನ ಗೂಡಾಗಿರು = ಜನ ಕಿಕ್ಕಿರಿದರು, ಪಿದಿ ಪಿದಿಗುಟ್ಟು
ಪ್ರ : ಮದುವೆ ಮನೇಲಿ ಜನ, ಗೀಜಗನ ಗೂಡಿನಂತೆ, ಪಿದಿಪಿದಿಗುಟ್ಟತಾ ಇದ್ರು.
೯೫೦. ಗೀತವಾಗು = ಭಜಿಸುವ ಹಾಡಾಗು, ಮತ್ತೆ ಮತ್ತೆ ಪಠಿಸುವ ವಿಷಯವಾಗು
(ಗೀತ = ಹಾಡು, ಕೀರ್ತನೆ)
ಪ್ರ : ಎದ್ದರೆ ಬಿದ್ದರೆ ನಿಮಗೆ ಅದೇ ಒಂದು ಗೀತವಾಗಿಬಿಡ್ತು, ಮತ್ತೆ ಆ ವಿಷಯ ಮನೇಲಿ ಎತ್ತಿ ನೋಡಿ, ಏನಾಗ್ತದೆ ಅಂತ.
೯೫೧. ಗೀಳಿ ಹಾಕು = ಸೀಳಿ ಹಾಕು, ಚಿಂದಿ ಮಾಡು
(ಗೀಳು = ಸೀಳು)
ಪ್ರ : ಬಾಳೆ ಎಲೇನ ಗೀಳಿ ಹಾಕಿದ್ಹಂಗ ಬಟ್ಟೇನೆಲ್ಲ ಗೀಳಿ ಹಾಕ್ಯವನೆ ಚೋಟುದ್ದದ ಪೋರ
೯೫೨. ಗೀಳು ಹಿಡಿ = ತೀವ್ರತರದ ಬಯಕೆಯಾಗು, ಧ್ಯಾನಸ್ಥ ವಿಷಯವಾಗು
(ಗೀಳು = ಅದಮ್ಯ ಆಸೆ)
ಪ್ರ : ಆ ಹುಡುಗಿ ಗೀಳು ಹಿಡಿದು ದಿನೇ ದಿನೇ, ನೂಲೆಳೆಯಂತೆ, ನವೆದು ಹೋದ
೯೫೩. ಗುಕ್ಕು ಕಿತ್ಕೊಳ್ಳು = ಅನ್ನ ಕಿತ್ತುಕೊಳ್ಳು
(ಗುಕ್ಕು < ಗುಟುಕು = ತುತ್ತು, ಒಂದು ಸಾರಿ ನುಂಗುವಷ್ಟು ಆಹಾರ)
ಪ್ರ : ಇವರ ಮಕ್ಳುಮರಿ ಸಾಯ, ನನ್ನ ಮಕ್ಕಳ ಗುಕ್ಕು ಕಿತ್ಕೊಂಡ್ರಲ್ಲ
೯೫೪. ಗುಜುಗುಜು ಎನ್ನು = ಗುಸುಗುಸು ಪಿಸಪಿಸ ಎನ್ನು
(ಗುಜುಗುಜು < ಕುಚು ಕುಚು = ಹಕ್ಕಿಪಕ್ಷಿಗಳ ಶಬ್ದ ಕೋಲಾಹಲ)
ಪ್ರ : ಎಲ್ಲ ಸೇರ್ಕೊಂಡು ಏನೋ ಗುಜುಗುಜು ಅಂತಿದ್ದರು, ಇಣಿಕಿ ನೋಡಿ ಹಂಗೇ ಬಂದುಬಿಟ್ಟೆ.
೯೫೫. ಗುಜುಗುಂಪಲು ಬೀಳು = ತಳಮಳಿಸು, ಎತ್ತಿ ಕಟ್ಟುವ ಸಂಚಿನಲ್ಲಿ ತೊಡಗು
ಪ್ರ : ಅವರು ಗುಜು ಗುಂಪಲು ಬಿದ್ದದ್ದು ಇಷ್ಟೇ ಅಂತ ಹೇಳೋಕಾಗಲ್ಲ – ಗುಜುಗುಜು ಗುಂಪಲು ಎಲ್ಲ ಸೊಂಪಲು ಎನ್ನಬಹುದೇನೋ.
೯೫೬. ಗುಜ್ಜು ಕೊಡು = ಆಧಾರ ಸ್ತಂಭ ನಿಲ್ಲಿಸು
(ಗುಜ್ಜು = ಮಾಳಿಗೆಯ ತೊಲೆ ಕೆಳಗೆ ಬೀಳದಂತೆ ಆಧಾರವಾಗಿ ನಿಲ್ಲಿಸುವ ಮರದ ಅಥವಾ ಬಿದಿರಿನ ಬೊಂಬು)
ಪ್ರ : ಗಾದೆ : ಹಳೇ ಮನೆಗೆ ಮಾರಿಗೊಂದು ಕೂಚ, ಮೊಳಕೊಂದು ಗುಜ್ಜು
೯೫೭. ಗುಟುಕು ಜೀವವಾಗಿರು = ಈಗಲೋ ಆಗಲೋ ಸಾಯುವ ಸ್ಥಿತಿಯಲ್ಲಿರು, ದೊಡ್ಡ ಜೀವ ಹೋಗಿರು.
ಪ್ರ : ಗುಟುಕು ಜೀವವಾಗಿರೋನಿಗೆ ನಟಿಕೆ ಮುರೀತಾ ಇದ್ದೆಯಲ್ಲೇ ಮಾಮಾರಿ.
೯೫೮. ಗುಟುಕು ನೀರು ಕುಡಿಸು = ಸತಾಯಿಸು, ಸಾಕು ಸಾಕು ಅನ್ನಿಸು, ಹೊಡೆದು ಸುಸ್ತು ಮಾಡು
ಪ್ರ : ನೋಡೋಕೆ ಈಟ್ಟುದ್ದ ಅವನೆ, ಘಟಾನುಘಟಿಗಳಿಗೆ ಗುಟುಕು ನೀರು ಕುಡಿಸಿಬಿಟ್ಟ.
೯೫೯. ಗುಟುರು ಹಾಕು = ಅಬ್ಬರಿಸು, ರಂಗಳಿಸು, ಕಾಲು ಕೆರೆದು ನಿಲ್ಲು
(ಕುಟುರು < ಗುಟುರು = ಗೂಳಿಯ ಡುರುಕು ಶಬ್ದ)
ಪ್ರ : ಬಾರಿಗೆ ಬಂದ ಕಡಸು ಕಂಡು ಬೀಜದ ಹೋರಿ ಗುಟುರು ಹಾಕಿತು
೯೬೦. ಗುಡರಿಸಿಕೊಂಡು ನಿಲ್ಲು = ಕುಗ್ಗಿ ನಿಲ್ಲು, ಮಾರುದ್ಧ ದೇಹವನ್ನು ಗೇಣುದ್ಧ ಮಾಡಿ ನಿಲ್ಲು
ಪ್ರ : ಭಯಕ್ಕೋ, ಚಳೀಗೋ ಧಣಿ ಮುಂದೆ ಆಳು ಗುಡರಿಸಿಕೊಂಡು ನಿಂತಿದ್ದ.
೯೬೧. ಗುಡುಗಾಡು = ಅಬ್ಬರಿಸು, ಹಾರಾಡು
ಪ್ರ : ಬಂದು ಬಂದೋನೇ ಬಡಿವಾರ ತೋರಿಸಿಕೊಳ್ಳೋಕೆ ಇಡೀ ಮದುವೆ ಮನೆಯೊಳಗೆಲ್ಲ ಗುಡುಗಾಡಿಬಿಟ್ಟ.
೯೬೨. ಗುಡ್ಡಕ್ಕೆ ಕಲ್ಲು ಹೊರು = ದಡ್ಡ ಕೆಲಸ ಮಾಡು
ಪ್ರ : ಗುಡ್ಡಕ್ಕೆ ಕಲ್ಲು ಹೊರೋದು, ಹೊಳೆಗೆ ನೀರು ಹೊರೋದು – ಎರಡೂ ಒಂದು
೯೬೩. ಗುಡ್ಡವನ್ನು ಬೆಟ್ಟ ಮಾಡು = ಸಣ್ಣದನ್ನು ದೊಡ್ಡದು ಮಾಡು, ರಂಪ ಎಬ್ಬಿಸು
ಪ್ರ : ಬಾರಾಬಂಗಾಳಿ ಜನ ತಮ್ಮ ಬೇಳೆ ಬೇಯಿಸಿಕೊಳ್ಳೋಕೆ ಕಡ್ಡೀನ ಗುಡ್ಡ ಮಾಡ್ತಾರೆ, ಗುಡ್ಡಾನ ಬೆಟ್ಟ ಮಾಡ್ತಾರೆ.
೯೬೪. ಗುಡಾರ ಹಾಕು = ನೆಲೆಯೂರು, ಬೀಡು ಬಿಡು
(ಗುಡಾರ < ಗೂಡಾರ < ಗೂಡಾಗಾರ = ಡೇರೆ, ಗುಡಿಸಲು)
ಪ್ರ : ಕೂಲಿ ನಾಲಿ ಮಾಡ್ಕೊಂಡು ಈ ಗುಡಾರದಲ್ಲಿ ಕಾಲ ಕಳೀತಾ ಇದ್ದೀವಿ
೯೬೫. ಗುಡಿ ಗುಂಡಾರ ಹಾಳಾಗು = ಮನೆಮಟ ನಾಶವಾಗು
ಪ್ರ : ಇಂಥವರಿಂದ ಗುಂಡಿಗುಂಡಾರ ಹಾಳಾಗ್ತವೇ ವಿನಾ ಉದ್ಧಾರ ಆಗಲ್ಲ
೯೬೬. ಗುಡಿಸಿ ಗುಂಡಾಂತರ ಮಾಡು = ಚೊಕ್ಕಟ ಮಾಡು, ಸರ್ವನಾಶ ಮಾಡು, ಗುಡಿಸಿ ಗುಂಡಿಗೆ ಹಾಕು
ಪ್ರ : ಅಪ್ಪ ಸತ್ತು ಆರು ತಿಂಗಳೊಳಗಾಗಿ ಮನೇನ ಗುಡಿಸಿ ಗುಂಡಾಂತರ ಮಾಡಿಬಿಟ್ಟ, ಮಗರಾಮ
೯೬೭. ಗುಡ್ಡಿಗೆ ಬರು = ತೆಳ್ಳಗಾಗು, ನಿರ್ಗತಿಕರಾಗು
(ಗುಡ್ಡಿಗೆ = ಕಿರಿದಿಗೆ)
ಪ್ರ : ಗಾದೆ – ಗುಡ್ಡೆ ಬಾಡು ತಿಂದು ಗುಡ್ಡಿಗೆ ಬಂದ್ರು
೯೬೮. ಗುಡ್ಲು ಹಾಕು = ಋತುಮತಿಯಾಗು, ದೊಡ್ಡವಳಾಗು
ಹೆಣ್ಣು ನೆರೆದರೆ (ದೊಡ್ಡವಳಾದರೆ) ಅತ್ತಿಮರದ ಕೊಂಬೆಯನ್ನು ಕಡಿದುಕೊಂಡು ಬಂದು ಗುಡ್ಲು (< ಗುಡಿಸಲು) ಹಾಕಿ ಅದರೊಳಗೆ ಹೆಣ್ಣನ್ನು ಕೂಡಿಸಿ ಚಿಗಳಿ ಉಂಡೆ (ಎಳ್ಳುಂಡೆ) ಕೊಬರಿ ಇತ್ಯಾದಿಗಳನ್ನು ತಿನ್ನಿಸಿ ಮುತ್ತೈದೆಯರೆಲ್ಲ ಹಾಡನ್ನು ಹಾಡುತ್ತಾ ನೀರುಯ್ದು (ಸ್ನಾನ ಮಾಡಿಸಿ) ಶಾಸ್ತ್ರಗಳನ್ನು ಮಾಡುತ್ತಾ ರಾತ್ರಿಯೆಲ್ಲ ಹೆಣ್ಣನ್ನು ಮಲಗಿಸದೆ ಎಬ್ಬಿಸಿಕೊಂಡಿರುತ್ತಾರೆ. ಆಕೆಯ ಶರೀರದಲ್ಲಿ ಜರುಗುವ ರಾಸಾಯನಿಕ ಕ್ರಿಯೆಯಿಂದಾಗಿ ಸೂತಕವೆಂದು ಭಾವಿಸುತ್ತಾರೆ.
ಪ್ರ : ಗಾದೆ – ಗುಡ್ಲು ಹಾಕೋ ಕಾಲ ಬಂದ ಮೇಲೆ
ಮಡ್ಲು ತುಂಬೋ ಕಾಲವೂ ಬತ್ತದೆ
೯೬೯. ಗುಣವಾಗು = ವಾಸಿಯಾಗು, ಮೇಲಾಗು
ಪ್ರ : ನಾಟಿ ಮದ್ದು ಕೊಟ್ಟ ಮೇಲೇನೇ ಕಾಯಿಲೆ ಗುಣವಾದದ್ದು.
೯೭೦. ಗುಣಾಕಾರ ಭಾಗಾಕಾರ ಮಾಡು = ಯೋಚನೆ ಮಾಡು, ಲೆಕ್ಕಹಾಕಿ ನೋಡು
ಪ್ರ : ಅವನು ಯಾವುದನ್ನೂ ಗುಣಾಕಾರ ಭಾಗಾಕಾರ ಮಾಡಿ, ಸರಿ ಅನ್ನಿಸಿದರೆ ಊಂ ಅಂತಾನೆ ಅಷ್ಟೆ.
೯೭೧. ಗುಣಿ ತೋಡು = ಗುಂಡಿ ತೋಡು, ಹೆಣ ಮಣ್ಣು ಮಾಡಲು ಸಮಾಧಿ ಸಿದ್ಧಪಡಿಸು
(ಗುಣಿ < ಕುಣಿ < ಕುಳಿ = ಗುಂಡಿ, ಸಮಾಧಿ)
ಪ್ರ : ಆ ಪರಚಾಂಡಾಳನಿಗೆ ಮೊದಲೇ ಗುಣಿ ತೋಡಿ, ಅಣಿ ಮಾಡಿ, ಕಾಯ್ತಾ ಇದ್ದೀನಿ
೯೭೨. ಗುತ್ತನಾಗಿರು = ಬಿಗಿಯಾಗಿರು, ಮೈಗೆ ಅಂಟಿಕೊಂಡಂತಿರು
ಪ್ರ : ಗಾದೆ – ಕೈಗೆ ಗುತ್ತನಾಗಿ ಕೂತ ಬಳೆ ಚಂದ
ಮೈಗೆ ಗುತ್ತನಾಗಿ ಕೂತ ಕುಬಸ ಚೆಂದ
೯೭೩. ಗುತ್ತಿಗೆ ತೆಗೆದುಕೊಳ್ಳು = ಸ್ವಾಮ್ಯ ತೆಗೆದುಕೊಳ್ಳು, ಅನ್ಯರಿಗೆ ಅವಕಾಶವಾಗದಿರು
(ಗುತ್ತಿಗೆ < ಕುತ್ತಿಗೈ(ತ) = ಕಂತ್ರಾಟು)
ಪ್ರ :ವಿದ್ಯೆಯನ್ನು ಯಾವುದೊಂದು ಪಂಗಡವೂ ಗುತ್ತಿಗೆ ತೆಗೆದುಕೊಳ್ಳಲು ಆಗುವುದಿಲ್ಲ, ಎಲ್ಲರಿಗೂ ಹಕ್ಕಿದೆ.
೯೭೪. ಗುದಗಲು ಕೊಡು = ಏಟು ಕೊಡು, ಒದೆ ಕೊಡು
(ಗುದಗಲು < ಗುದಗು = ಅಗಣಿಗೂಟಕ್ಕೆ ಬದಲಾಗಿ ಕದ ತೆಗೆಯಲಾಗದಂತೆ ಹಿಂದುಗಡೆ ಅಡ್ಡಲಾಗಿ ಹಾಕುವ ಮರ)
ಪ್ರ : ಗುನಿ ಹಾರಿ ಹೋಗೋ ಹಂಗೆ ಗುದುಗಲು ಕೊಟ್ರೆ ತಣ್ಣಗಾಗ್ತಾಳೆ.
೯೭೫. ಗುದ್ದರಿಸಿ ಬರು = ಸಂಭೋಗಿಸಿ ಬರು
(ಗುದ್ದರಿಸು = ಗುದ್ದು, ಜಡಿ)
ಪ್ರ : ನೀನು ಸಿಕ್ಕಿಸಿಕ್ಕಿದ ಹುಡುಗೀರ್ಗೆ ಗುದ್ದರಿಸಿ ಬಂದ್ರೆ ಅವರ ಗತಿಯೇನು, ಯೋಚಿಸಿದ್ದೀಯ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ