ನನ್ನ ಪುಟಗಳು

24 ಜೂನ್ 2018

ಮಲೆಗಳಲ್ಲಿ ಮದುಮಗಳು-8

           ಹಸುಳೆಬಿಸಿಲಿನ ಬಾಲ್ಯದ ಬೆಚ್ಚನೆಯ ಸೋಂಕಿಗೆಳಸಿ ಸುಬ್ಬಣ್ಣ ಹೆಗ್ಗಡೆಯವರು ಮುಪ್ಪಿನ ಮೆಯ್ಗೆ ಸುತ್ತಿದ್ದ ಕರಿಕಂಬಳಿಯನ್ನು ಬಿಚ್ಚಿ ಹಂದಿಯೊಡ್ಡಿಯ ಮೇಲಿಟ್ಟರು. ಸುಕ್ಕಿನ ಕಿರುದೆರೆ ನಿರಿನಿರಿಯಾಗಿದ್ದ ಅವರ ಎಣ್ಣೆಗಪ್ಪಿನ ಒಡಲಿಗೆ ಬೆಚ್ಚನೆಯ ಬಿಸಿಲು ಮುತ್ತಿಟ್ಟೊಡನೆ ಸುಪ್ತಚಿತ್ತದ ಆಳದಲ್ಲಿ ಗುಪ್ತವಾಗಿದ್ದ ನೂರಾರು ಹೋದಕಾಲದ ಮುದ್ದಾಟಗಳ ನೆನಹಿನ ಸೊಗಸು ಜಾಗ್ರಚ್ಚಿತ್ತದ ಸರೋವರದಲ್ಲಿ ಪುಲಕಿಸಿತು. ಏಕೊ ಏನೊ ಅವರಿಗೆ ಗೊತ್ತಾಗಲಿಲ್ಲ; ಅಂತೂ ಮೈಗೆ ಬಹಳ ಹಿತವಾಯಿತು; ಮನಸ್ಸಿಗೂ ಸಂತೋಷವಾಯಿತು. ತಿಮ್ಮಪ್ಪ ಹೆಗ್ಗಡೆಯಿಂದ ಉಂಟಾಗಿದ್ದ ನಿರಾಶೆಯ ಕತ್ತಲೆ ಮಂಜಮ್ಮನ ಆಗಮನದ ಉಷಃಕಾಂತಿಯಿಂದ ಹರಿದು ಹೋಗಿತ್ತು. ಈಗ ಆ ಮುಂಬೆಳಗೆ ಹೊಂಬೆಳಗಾಗಿ ಮನಸ್ಸು ಪ್ರಸನ್ನವಾಯಿತು.

ಮನುಷ್ಯನು ತಿಳಿದುಕೊಂಡಿರುವುದಕ್ಕಿಂತಲೂ ಹೆಚ್ಚಾಗಿಯೆ ಅವನ ಅತಃಪ್ರಕೃತಿ ಸೃಷ್ಟಿಯ ಬಹಿಃಪ್ರಕೃತಿಗೆ ಅನುಯಾಯಿಯಾಗಿರುತ್ತದೆ. ಆತನ ಆತ್ಮಕೋಶವು ಬಹು ಜನ್ಮಗಳ ಸಂಸ್ಕರಗಳಿಂದ ತುಂಬಿರುವಂತೆ ಆತನ ಅನ್ನಮಯಕೋಶವೂ ಪೃಥ್ವಿಯಲ್ಲಿ ಪ್ರಾಣೋತ್ಪತ್ತಿಯಾದಂದಿನಿಂದ ಮೊದಲುಗೊಂಡು ಇಂದಿನವರೆಗೆ ಜೀವವು ಕೈಕೊಂಡ ನಾನಾರೂಪದ ನಾನಾ ಪ್ರಯೋಗದ ನಾನಾ ಕಷ್ಟ ಸಂಕಟಗಳ ನಾನಾ ಸುಖ ಸಂತೋಷಗಳ ಮಹಾ ಸಾಹಸಯಾತ್ರಯ ಸಮಗ್ರ ಪರಿಣಾಮ ಮುದ್ರೆಯನ್ನೂ ‘ಅಸ್ಮೃತಿ’ ರೂಪದಲ್ಲಿ ಪಡೆದಿರುತ್ತದೆ. ಆ ಅಪಾರ್ಥಿವ ಮತ್ತು ಪಾರ್ಥಿವ ಸಂಸ್ಕಾರಕೋಶಗಳೆರಡೂ ನಮ್ಮ ಬಾಳ್ವೆಯ ಹೃದಯದ ಇಕ್ಕೆಲಗಳಲ್ಲಿ ಶ್ವಾಸಕೋಶಗಳಂತಿವೆ. ಅಪ್ರಜ್ಞಾಸೀಮೆಯಲ್ಲಿರುವ ಆ ಸಂಸ್ಕಾರಗಳಲ್ಲಿ ಯಾವುದನ್ನಾದರೂ ಮುಟ್ಟಿ ಎಚ್ಚರಿಸುವಂತಹ ಸನ್ನಿವೇಶ ಒದಗಿದರೆ ನಮಗೆ ಅಹೇತುಕ ಆನಂದವೊ ಅಕಾರಣ ಸಂಕಟವೊ ಸಂಭವಿಸಿದಂತಾಗುತ್ತದೆ. ಅಲ್ಪ ಕಾರಣದಿಂದ ಮಹತ್ತಾದ ಅನುಭವ ಉಂಟಾದಂತೆ ಭಾಸವಾಗಿ ಆಶ್ಚರ್ಯವಾಗುತ್ತದೆ. ಎಳೆಬಿಸಿಲಿನಲ್ಲಿ ಹಸುರು ಗರಿಕೆಯ ಕುಡಿಯಲ್ಲಿ ಮಿರುಗುವ ದುಂಡು ಮುತ್ತಿನ ತೆರೆದ ಇಬ್ಬನಿ, ಪ್ರಾಣದ ಪ್ರಪ್ರಾಚೀನಾನುಭವದ ಮಹಾ ಸಾಗರದ ‘ಅಸ್ಮೃತಿ’ಯನ್ನು ಕೆರಳಿಸಿ, ಸಮುದ್ರ ದರ್ಶನದ ಭೂಮಾನುಭೂತಿಯನ್ನುಂಟುಮಾಡಬಹುದು. ಕಾಡಿನಂಚಿನಲ್ಲಿ, ಬೈಗುಗಪ್ಪಿನ ಮಬ್ಬಿನಲ್ಲಿ, ಹೆಮ್ಮರದ ದಿಂಡಿನಲ್ಲಿರುವ ಮರಕುಟಿಗನ ಗೂಡಿನ ಪೊಟ್ಟರೆ, ಅತ್ಯಂತ ಪೂರ್ವಕಾಲದ ಬಾಳಿನ ಯಾವುದೊ ಒಂದು ಕಗ್ಗವಿಯನ್ನೊ ಪೆಡಂಭೂತದ ಕಣ್ಣನ್ನೊ ‘ಅಸ್ಮೃತಿ’ಗೆ ತಂದು, ಅನಿರ್ವಚನೀಯವಾದ ಭೀತಿಯನ್ನುಂಟು ಮಾಡಬಹುದು. ಪರ್ವತಾರಣ್ಯಗಳ ಭಯಂಕರ ಪ್ರಕೃತಿಯ ಮಧ್ಯೆ ವಾಸಮಾಡುವವರಿಗೆ ಅರ್ಥವಾಗದ, ಆದ್ದರಿಂದ ಅರ್ಥವಿಲ್ಲದ, ಆ ಅನುಭವಗಳು ಪಿಶಾಚಿಗಳಂತೆಯೊ ದೆಯ್ಯ ದ್ಯಾವರುಗಳಂತೆಯೊ ತೋರುತ್ತವೆ. ಕತ್ತಲೆಯಲ್ಲಿ ಆಕಾಶಕ್ಕೆದುರಾಗಿ ಚಾಚಿರುವ ಭೀಮಾಕಾರದ ಕೋಡುಗಲ್ಲಿನಲ್ಲಿ ಪ್ರಾಚೀನಾನುಭವ ಸಮಷ್ಟಿರೂಪದ ‘ಅಸ್ಕೃತಿ’ ಆವಿರ್ಭಾವ ವಾಯಿತೆಂದರೆ ಬ್ರಹ್ಮರಾಕ್ಷಸ ದರ್ಶನವಾಗುವುದರಲ್ಲಿ ಆಶ್ಚರ್ಯವೇನಿದೆ? ಕಬ್ಬಿಣದ ಪೆಟ್ಟಿಗೆಯ ಖಜಾನೆಯನ್ನು ತೆರೆಯುವುದಕ್ಕೆ ಸಣ್ಣ ಬೀಗದ ಕೈ ಸಾಕಾಗುವಂತೆ ‘ಅಸ್ಮೃತಿ’ಯ ಮಹದೈಶ್ವರ್ಯವನ್ನು ಕೆರಳಿಸಲು ಅತ್ಯಲ್ಪ ಕಾರಣಗಳೂ ಸಾಕಾಗುತ್ತವೆ.
ಮಳೆ ತೊಯ್ದ ಮಲೆನಾಡಿನ ಮೇಲೆ ಮೂಡಿದೆಳಬಿಸಿಲಿಗೆ ಮೈಯ್ಯೊಡ್ಡಿದ ಸುಬ್ಬಣ್ಣ ಹೆಗ್ಗಡೆಯವರಿಗೆ ಸಂಭವಿಸಿದ ಸಂತೋಷಕ್ಕೆ ಬಹುಮಟ್ಟಿಗೆ ಕಾರಣವಾಗಿತ್ತು ಆ ‘ಅಸ್ಮೃತಿ’. ಯಾವ ಯಾವ ಕಾಲದಲ್ಲಿ, ಯಾವ ಯಾವ ದೇಶದಲ್ಲಿ, ಯಾವ ಯಾವ ರೂಪದಲ್ಲಿ, ಯಾವ ಯಾವ ಸನ್ನಿವೇಶದಲ್ಲಿ, ಯಾವ ಸಾಗರತೀರದಲ್ಲಿ, ಯಾವ ಪರ್ವತ ಶಿಖರದಲ್ಲಿ, ಯಾವ ಅರಣ್ಯಕುಂಜಸೀಮೆಯಲ್ಲಿ ಅಂತಹ ಸೂರ್ಯೋದಯದ ಸೊಂಪನ್ನು ಹಿಂದೆ ಎನಿತು ಸಾರಿ ಅನುಭವಿಸಿದ್ದರೋ ಏನೋ? ಆ ಸಂಸ್ಕಾರ ಕೋಶದ ಖಜಾನೆಗೆ ಬೀಗದ ಕೈ ಮಾತ್ರವಾಗಿತ್ತು, ಆವೊತ್ತಿನ ಸೂರ್ಯೋದಯ! ಹಳೆಮನೆಯಾದರೇನಂತೆ? ಹಂದಿಯೊಡ್ಡಿಯ ಬಳಿಯಾದರೇನಂತೆ? ಅಕ್ಷರಹೀನ ಅಸಂಸ್ಕೃತ ಒಕ್ಕಲಿಗನಾದರೇನಂತೆ? ಮುಪ್ಪಡಸಿದ್ದರೇನಂತೆ? ಸುಬ್ಬಣ್ಣ ಹೆಗ್ಗಡೆಯೂ ವಿಶ್ವಪ್ರಜೆ!.
ಬೆನ್ನಿಗೆ ಬಿದ್ದ ಬಿಸಿಲು ನಾಲಗೆಗೆ ಬೀಳುವ ಜೇನಾಗಿತ್ತು. ಹೆಗ್ಗಡೆಯವರು ‘ಸ ಸ್‌ ಸ್ ಆಯ್’ ಎನ್ನುತ್ತಾ ಮುಂಡಾಡುವ ರೀತಿಯಲ್ಲಿ ಬೆನ್ನು ನೀವಿಕೊಂಡರು. ಲೋಕವೆಲ್ಲಾ ಅಶೋಕವಾಗಿ ಸುಖಮಯವಾಯಿತು. ಮನದಲ್ಲಿ ವಿಶ್ವಮೈತ್ರಿ ಮೂಡಿತು. ಹಂದಿ, ಕೋಳಿ, ಕುರಿ, ಮರ, ಕಾಡು, ಆಕಾಶ, ಹಾಡುತ್ತಿದ್ದ ಕಾಡು ಹಕ್ಕಿಗಳ ಹಿಂಡು, ನೆರೆ ಹೊರೆ-ಎಲ್ಲದರ ಮೇಲೆಯೂ ಅಕ್ಕರೆವುಕ್ಕಿತು. ಹೆಗ್ಗಡೆಯವರ ಜೀವಮಾನ ಕಟ್ಟಡದಲ್ಲಿ ಆ ಒಂದು ಕ್ಷಣದ ಬಾಳು ಗೋಪುರದ ತುದಿಯ ಕಳಶದ ಚಿನ್ನದ ಡೆಂಕಣಿಯಾಗಿ ಸ್ವಗರಗದೊಡನೆ ಸರಸವಾಡಿತು.
ಸರಸರನೆ ಮುಂಬರಿದು ಕೋಳಿಯ ಒಡ್ಡಿಯ ಬಾಗಿಲು ತೆರೆದರು. ಹುಂಜಗಳು ಹೇಟೆಗಳು ಮರಿಗಳು ಸಳಗಗಳು, ಕೆಂಪು, ಬಿಳುಪು, ಕಪ್ಪು, ಹಂಡಹಂಡ, ಕಡ್ಲೆಕಡ್ಲೆ, ಚ್ಞಿಯ್ಞೊ, ಪ್ಞಿಯ್ಞೊ, ಕೊಕ್ ಕೊಕ್, ಕೊಕ್ಕೋ! ಕೋಳಿಗಳೆಲ್ಲಾ ಒಂದರಮೇಲೊಂದು ನುಗ್ಗಿ ಹೊರಬಿದ್ದುವು. ರೆಕ್ಕೆಯ ಗಾಳಿ ಬೀಸಿದ ಪೊಲ್ಗಂಪು ಹೆಗ್ಗಡೆಯವರಿಗೆ ಸ್ವಾಭಾವಿಕವಾಗಿಯೆ ಇತ್ತು. ಅವಸರ ಅವಸರವಾಗಿ ಹೊರನುಗ್ಗಿ, ಕೆಲವು ಕೆಸರು ಕೆದರಿದುವು; ಕೆಲವು ಕಸದ ರಾಶಿಯಲ್ಲಿ ಕೊಕ್ಕಾಡಿದುವು; ಕೆಲವು ಗೊಬ್ಬರದ ಗುಂಡಿಯ ಕಡೆಗೆ ಓಡಿದುವು, ಎಲ್ಲವನ್ನೂ ಯಜಮಾನ್ಯದ ಪ್ರಶಂಸನೀಯ ದೃಷ್ಟಿಯಿಂದ ನೋಡುತ್ತಾ ನಿಂತಿದ್ದ ಸುಬ್ಬಣ್ಣ ಹೆಗ್ಗಡೆಯವರು ನಗೆಮೊಗದಿಂದ “ಗೊಬ್ರಾ ಕಿದ್ರಾಕೆ ಹೋಗಾಕೆ ಇಷ್ಟೊಂದು ಅವಸರ ಇವಕ್ಕೆ!” ಎಂದು ಹಂದಿಯ ಒಡ್ಡಿಯ ಮೇಲಿಟ್ಟಿದ್ದ ಕಂಬಳಿಯನ್ನು ತೆಗೆದು, ಇದ್ದುದರಲ್ಲಿ ಸ್ವಲ್ಪ ಅಚ್ಚುಕಟ್ಟಾಗಿ ಸ್ಥಳದಲ್ಲಿ ಹಾಕಿ, ಅದರ ಮೇಲೆ ಮೂಡಲಿಗೆ ಬೆನ್ನಾಗಿ ಕುಳಿತು, ಕುಂಟಿ ಕುಂಟಿ ಬಳಿ ಸಾರುತ್ತಾ ದಿಬ್ಬವೇರಿ ಬರುತ್ತಿದ್ದ ಹೂವಳ್ಳಿ ವೆಂಕಟಣ್ಣನನ್ನು ನೋಡುತ್ತಿದ್ದರು.
ಅವನಿನ್ನೂ ಹತ್ತಿರ ಬಂದಿರಲಿಲ್ಲ. ಬಹಳ ಹೊತ್ತಿನಿಂದ ತಡೆದುಕೊಂಡಿದ್ದ ಮಾತು ಹೆಗ್ಗಡೆಯವರ ಗಂಟಲಿನಿಂದ ತುಟಿ ಮೀರಿ ಹೊರಟಿತು.
“ನೀ ಒಳ್ಳೆ ಗಿರಾಸ್ತ ಕಣ್ರೋ! ಅಲ್ಲಾ…. ನಿನ್ನೆ ಬತ್ತೀನಿ ಅಂದಾಂವ….!”
ಹೇಳಬೇಕೆಂದಿದ್ದ ಉತ್ತರವನ್ನು ಹಾದಿಯಲ್ಲಿಯೆ ಕಡೆದು ಅಣಿ ಮಾಡಿಕೊಂಡು ಬಂದಿದ್ದ ವೆಂಕಟಣ್ಣನೂ ಹೆಗ್ಗಡೆಯವರ ಮಾತು ಮುಗಿಯುವುದರೊಳಗಾಗಿ ಹೇಳಿಯೆ ಬಿಟ್ಟನು:
“ನಾ ಏನ್ ಮಾಡಾದ್ರಾ? ಹಾಂಗ್ಯಾರೆ, ಆ ಸನಿ ಮುಂಡೇ ಮಕ್ಳು ಬತ್ತೀನಿ ಅಂದೋರು ಬರ್ಲೆ ಇಲ್ಲ. ಕಾದೆ, ಕಾದೆ…. ಹೊತ್ತಾಗಿಹೋತು. ನಿನ್ನೇನ್ ಮಾಡಾದು…. ನಾಳೆ ಬೆಳಗ್ಗೆ ಹೋಗಾನ ಅಂತ ಹೇಳಿ ನಿಂತುಬಿಟ್ಟೆ.”
“ಯಾರಿಗೆ ಹೇಳಿದ್ಯೋ?”
“ನಿಮ್ಮ ಹೊಲೇರಿಗೆ ಹೇಳಿದ್ದೆ.”
“ನೀ ಒಳ್ಳೆ ಗಿರಾಸ್ತ. ಅವರು ತ್ವಾಟದ ಬೇಲಿ ಮಾಡಾದ್ ಬಿಟ್ಕುಂಡು ನಿನ್ನ ಹಂದಿ ಹೊರಾಕೆ ಬತ್ತಾರೆ? ನೀ ಬೇಕಾರೆ ಒಳ್ಳೆ ಗಿರಾಸ್ತ!”
“ಹಾಂಗ್ಯಾರೆ ಏನ್ ಮಾಡ್ಲಿ ಹೇಳಿ? ನಿನ್ ನಾನೆ ಹೊತ್ಕುಂಡು ಹೋ’ಬೇಕು…. ಅದಕೂ ಸೈ ಅಂತಿದ್ದೆ. ಕಾಲುಂದ್ ಹೀಂಗಾತಲ್ಲ ಹೇಳಿ….” ಎಂದು ಬಟ್ಟೆ ಸುತ್ತಿದ ಮೊಳಕಾಲನ್ನು ತೋರಿಸುವಂತೆ ಅದರ ಕಡೆ ನೋಡಿದನು.
ಹೆಗ್ಗಡೆಯವರೂ ಸಹಾನುಭೂತಿಯಿಂದ ಅದನ್ನು ನೋಡುತ್ತಾ “ಏನಾತೋ?” ಎಂದು ಹೇಳಿದರು.
ವೆಂಕಟಣ್ಣನು ಊರಿಕೊಂಡಿದ್ದ ದೊಣ್ಣೆಯನ್ನು ಮೆಲ್ಲಗೆ ಕೆಳಗಿಟ್ಟು, ನಿಧಾನವಾಗಿ ಕೂತು, ಕಾಲಿಗೆ ಸುತ್ತಿದ್ದ ಕಂಬಳಿಯ ಕರೆಯನ್ನೂ ಹಾಕಿಕೊಂಡಿದ್ದ ಸರಿಗೆ ಬಳೆಯನ್ನೂ ಸಾವಧಾನವಾಗಿ ಜಾರಿಸುತ್ತಾ “ಹಾಂಗ್ಯಾರೆ, ಅವತ್ತು ಮರಸಿಗೆ ಕೂತಿದ್ದೆ; ಹೋದ ತಿಂಗಳು ಬೆಳಕಿನಾಗೆ. ಒಂದು ಮಲ ಬಂತು. ಹೊಡೆದೆ. ಇಳಿದು ಹೆರಕಿಕೊಳ್ಳಾಕೆ ಹೋಗಾಕೂ ತೆವಳಿಕೂತ ತೆವಳಿಕೂತ ಹೋಗಾಕೆ ಸುರುಮಾಡ್ತು. ಓಟು ಓಡ್ಸಾಡಿದ್ರೂ ಸಿಕ್ಕ್ಒಲ್ಲ್‌ದು. ಬಯ್‌ಲು ತುಂಬಾ ಓಡ್ಸ್ಯಾಡಿ ಸಾಕಾಗಿ ಹೋತು ಅಂತೀನಿ. ಹ್ಯಾಂಗ್ಯಾರೆ, ಹಾಳು ಮುಂದೇದಕ್ಕೆ ದೊಣ್ಣೇನೆ ಸೈ ಅಂತಾ, ಒಂದು ಬಡಿಕೆ  ತಗೊಂಡು ಜಪ್ಪ್‌ದೆ. ಅದರ ಕೊಡರ್ಲು ಹೊಡ್ದುಬಿಡ್ತು ನೋಡಿ. ಹಾಂಗ್ಯಂತ, ಹೆಚ್ಚಿನ ನೆತ್ರೂ ಬರ್ಲೂ ಇಲ್ಲ… ಅದೇ ಗಾಯ ದೊಡ್ಡಾಯ್ತು, ದೊಡ್ಡಾಯ್ತು, ಕಡೀಗೆ ಕುಂಟನ ಹುಣ್ಣಿಗೆ ತಿರಿಗ್ತು…. ಆ ಮೇಗ್ರೊಳ್ಳಿ ಕಣ್ಣಾ ಪಂಡಿತರು ಏನೋ ಔಸ್ತಿ ಮಾಡಿಕೊಟ್ಟಾರ… ಹಾಕಿ ಕಟ್ಟೀನಿ…. ನೋಡ್ಬೇಕು, ಹಾಂಗ್ಯಾರೆ, ಏನಾಗ್ತದೆ ಅಂತಾ….”
“ಹಂದಿ ತಗೊಂಡು ಹೋಗ್ತಿಯೋ ಬಿಡ್ತೀಯೋ, ಬಿಸಿಲು ಏರಿಹೋತು. ಅವನ್ಯಾಕೆ ಸುಮ್ಮನೆ ಒಡ್ಡಿ ಒಳಗೆ ಕೂಡಿ ಹಾಕ್‌ಬೇಕು? ಬಿಟ್ಟಾರು ಬಿಡ್ತೀನಿ,” ಎಂದು ಹೆಗ್ಗಡೆಯವರು ತಟಕ್ಕನೆ ಯೋಗಕ್ಷೇಮದ ಮಾತಿನಿಂದ ವ್ಯಾಪಾರಧ್ವನಿಗೆ ದುಮುಕಿ ಬಿಟ್ಟರು.
ವೆಂಕಟಣ್ಣ ಅದನ್ನು ಗಮನಿಸುವ ಗೋಜಿಗೆ ಹೋಗಲಿಲ್ಲ. ತಟಕ್ಕನೆ ತಲೆಯೆತ್ತಿ “ಅದ್ಯಾಕೆ ಹಾಂಗಂತೀರಿ, ಮಾರಾಯ್ರ. ನಿಮ್ಮ ಹೊಲೇರ ಕೈಲೇ ಹೊರ್ಸಿ ಕಳ್ಸಿ. ನಾ ಹ್ಯಾಂಗೆ ಹೊತ್ಕುಂಡು ಹೋಗ್ಲಿ?” ಎಂದು ಮೆಲ್ಲನೆ ಎದ್ದು ಹಂದಿಯೊಡ್ಡಿಯ ಕಡೆಗೆ ಮೆಲ್ಲಗೆ ಸರಿದನು.
ಹೆಗ್ಗಡೆಯವರೂ ಎದ್ದು ಅತ್ತ ಕಡೆ ಸರಿಯುತ್ತಾ “ನೀ ಒಳ್ಳೆ ಗಿರಾಸ್ತ. ಮಳೇ ಬಂದ್ ಹದಾ ಆಗ್ಯಾದೆ. ಇವತ್ತು ಆರು ಕಟ್ಟಾಕೆ ಹೇಳಿ ಕಳ್ಸೀನಿ. ಇವತ್ತೆಲ್ಲಿ ಸಿಗ್ತಾರೆ ನಮ್ಮ ಹೊಲೇರು?”
“ಅಯ್ಯಯ್ಯೊ, ಅಷ್ಟುಂದು ಉಪಕಾರ ಮಾಡಿ. ನಿಮ್ಮ ದಮ್ಮಯ್ಯ ಅಂತೀನಿ.”
“ಸಿಗಾದಾದ್ರೂ ಮಜ್ಜಾನದ ಮ್ಯಾಲೆ ಸೈ.”
“ಹಾಂಗಾದ್ರೆ ಹಂಗೇನೆ”.
ಹೆಗ್ಗಡೆಯವರು ಸ್ವಲ್ಪ ಉದಾಸೀನದ ಧ್ವನಿಯಿಂದ: “ಮಾರಾಯ, ನಮ್ಮ ಮನೆ ಕಷ್ಟ ಹೇಳಿದ್ರೆ ತೀರದು. ಹುಡುಗಿ ಒಂದೇ ನೀರು ಹೊತ್ತು ಅಡಿಗೆ ಮಾಡಬೇಕಾಗ್ಯದೆ.”
“ಯಾಕೆ? ಮಂಜಮ್ಮನ ಅತ್ತಿಗೆ ಇಲ್ಲೇನು?”
“ಅದೆ. ಹೊರಗೆ ಕೂತದೆ.”
“ಸಣ್ಣಮನೆ ಶಂಕರಪ್ಪ ಹೇಳಿ ಕಳ್ಸಿದ್ದ, ಹೋಗಿ ಬರ್ತೀನಿ” ಎಂದು ವೆಂಕಟಣ್ಣ ಅತ್ತ ಕಡೆ ನೋಡಿದಾಗ, ಮಿಂದು ಬಂದ ಶಂಕರಪ್ಪ ಹೆಗ್ಗಡೆ ಅಂಗಳದಲ್ಲಿದ್ದ ತುಳಸಿಗೆ ನೀರು ಹಾಕಿ ಪ್ರದಕ್ಷಿಣೆ ಮಾಡುತ್ತಿದ್ದುದು ಕಣ್ಣಿಗೆ ಬಿತ್ತು.
ಅದನ್ನು ನೋಡಿದ ದೊಡ್ಡ ಹೆಗ್ಗಡೆಯವರು ವ್ಯಂಗ್ಯಹಾಸ್ಯದಿಂದಲೆಂಬಂತೆ “ಓಹೋ ನಮ್ಮ ಬಿರಾಂಬರ ಮಡಿಪೂಜೆ ಆಗ್ತಾ ಇದೆ!” ಎಂದರು.
“ಹಾಂಗ್ಯಾರೆ ಮಜ್ಜಾನ ಕಳ್ಸಿಕೊಡ್ತೀರಷ್ಟೆ?”
“ಹೋಗ್ಲಿ. ಈಗ್ಲೆ ತಗೊಂಡು ಹೋಗಿಬಿಡಪ್ಪಾ.”
“ಹಾಂಗಾದ್ರೆ ಹಂಗೆ. ನಂಗೇನಂತೆ.”
“ದುಡ್ಡು ತಂದೀಯೇನು?”
“ಈಗ ಕೈಲಿಲ್ಲ. ಲೆಕ್ಕಕ್ಕೆ ಬರ್ಕೊಂಡುಬಿಡಿ.”
“ಅದು ಮಾತ್ರ ಆಗಾದಿಲ್ಲ…. ನೀನು ಕೊಡಾದೇ ಇನ್ನೂ ಕೊಟ್ಟಿಲ್ಲ. ಸುಮಾರು ಹಣ ಬಾಕಿ ಇದೆ… ಮತ್ತೂ ಲೆಕ್ಕಕ್ಕೆ ಬರ್ಕೊಳ್ಳಿ ಅಂದ್ರೆ?” ಸುಬ್ಬಣ್ಣ ಹೆಗ್ಗಡೆಯವರ  ಮಾತು ಬಿರುಸಾಗತೊಡಗಿತು.
“ಈಗ ಎಲ್ಲಿಂದ ತರ್‌ಲಿ, ನೀವೇ ಹೇಳಿ.”
“ಎಲ್ಲಿಂದ? ಶಂಕರಪ್ಪನ್ನೇ ಕೇಳು.”
“ಅವನಿಗೇ ಬೆಟ್ಟಳ್ಳಿ ಗೌಡ್ರ ಹತ್ರ ಸಾಲ ಆಗ್ಯಾದೆ. ನನಗೆಲ್ಲಿಂದ ಕೊಟ್ಟಾನು?”
“ಮನೆಗೆ ಹೆಂಚು ಹಾಕಿಸ್ತಾ ಕೂತ್ರೆ ಸಾಲ ಆಗ್ದೆ ಬಿಡ್ತದೇನು?…. ಹೊಗ್ಲಿ ನಂಗ್ಯಾಕೆ ಆ ಇಚಾರ….”
“ನೀವೇನು ಕೆಟ್ಟದ್ದಕ್ಕೆ ಹೇಳ್ತೀರೇನು? ಎಷ್ಟಂದರೂ ಅವನಿಗೆ ಚಿಕ್ಕಪ್ಪ. ನೀವಲ್ಲದೆ ಇನ್ಯಾರು ಹೇಳ್ಬೇಕು?”
“ಹೇಳ್ತೀನಿ ನೋಡೂ, ಎಂಕ್ಟಣ್ಣ; ನೀನೂ ಹಳಬ ನಾನೂ ಹಳಬ….”
“ಸೈ ಸೈ ನಾನೆಂಥ ಹಳಬ?…. ನಿಮ್ಮ ವಯಸ್ಸಿನವರು ಈ ಪರಾಂತದಾಗೆ ಯಾರೂ ಇಲ್ಲ…. ನಮ್ಮ ಕಲ್ಲೂರು ದೋಯಿಸಲು ಒಬ್ಬರನ್ನ ಬಿಟ್ರೆ ನಿಮ್ಮಷ್ಟು ಹಳಬರು ಮತ್ಯಾರೂ ಇಲ್ಲ.”
“ಹೂವೀ! ಏ ಹೂವೀ!”
“ಹೆಗ್ಗಡೆಯವರು ಇದ್ದಕ್ಕಿದ್ದಹಾಗೆ ಕೂಗಿ ಕರೆಯತೊಡಗಿದರು. ಕೊಟ್ಟಿಗೆ ಕೆಲಸದಲ್ಲಿದ್ದ  ಹೂವಿ ಕೈಕಾಲ್ ಸೆಗಣಿಯಾಗಿ ಬೇಗ ಬೇಗ ಬಂದಳು.”
“ನಿನ್ನ ಗಂಟಲು ಕಟ್ಟಿ ಹೋಗಾ! ಓಕೊಳ್ಳಬಾರದೇನೆ?” ಎಂದು ಭರ್ತ್ಸನೆಮಾಡಿ, ಹೆಗ್ಗಡೆಯವರು “ಅಲ್ಲಿ ಓಡಿ ಹೋಗು; ನಮ್ಮ ತಿಮ್ಮೂಗೆ ಹೇಳು ಯಾರಾದ್ರೂ ಇಬ್ರು ಹೊಲೇರನ್ನ ಕಳ್ಸಬೇಕಂತೆ ಅಂತಾ.”
“ಹಾಂಗಾರೆ, ನಾನೀಗ ಬಂದು ಬಿಡ್ತೀನಿ” ಎಂದು ಹೇಳಿ ಹೂವಳ್ಳಿ ವೆಂಕಟಣ್ಣ ತೇಪೆ ಹಾಕಿದ ತನ್ನ ದಗಲೆಯನ್ನು ಸರಿಮಾಡಿಕೊಂಡು, ದೊಣ್ಣೆಯೂರಿ, ಕುಂಟುತ್ತಾ ಆಚೆ ಮನೆಗೆ ಹೋದನು.
ಕಣ್ಣಾಪಂಡಿತರ ಕಷಾಯ ಕುಡಿಯುವುದಕ್ಕಾಗಿ ಸುಬ್ಬಣ್ಣ ಹೆಗ್ಗಡೆಯವರು ‘ಬುಚ್ಚಿ’ಯಿದ್ದ ಅಡಿಗೆಮನೆಗೆ ಹೋದರು. ಕಾಲಿಗೆ ಹಿಡಿದಿದ್ದ ಕೆಸರು ಒಣಗಿ ಹೋಗಿತ್ತಾದ್ದರಿಂದ ಮುದುಕನಿಗೆ ಅದನ್ನು ತೊಳೆದುಕೊಳ್ಳುವುದಕ್ಕೆ ನೆನಪೂ ಆಗಲಿಲ್ಲ.
*******

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ