ನನ್ನ ಪುಟಗಳು

23 ಮೇ 2018

ಶ್ರೀರಾಮಾಯಣ ದ‍ರ್ಶನಂ, ಸಂಪುಟ-1 ಅಯೋಧ್ಯಾ ಸಂಪುಟಂ: ಸಂಚಿಕೆ 6- ಅಗ್ನಿಯಾತ್ರೆ

ಸಂಚಿಕೆ 6 – ಅಗ್ನಿಯಾತ್ರೆ
ಶ್ರೀನದಿಯ ಸಲಿಲದಲಿ ಮಿಂದು, ಹೊಸ ಹಾಲ್ಮಡಿಯ
ನಾರುಡೆಯನುಟ್ಟು, ಮುನ್ನೇಸರೆಳಬಿಸಿಲಲ್ಲಿ
ಹಕ್ಕಿಯಿಂಚರದಡವಿ ವಟ್ಟೆಯೊಳ್ ದಿನದಿನಂ
ಬಂದೆನಗೆ ದರ್ಶನವನೀವ, ಓ ಕವಿಋಷಿಯೆ,
ಮುಡಿಮಣಿದು ಮೊಳಕಾಲೂರಿ ಬೊಗಸೆಗೈಯಿಂದೆ
ಕುಸುಮಾಂಜಲಿಗಳಂ ನಿವೇದಿಸುವೆನಡಿಗುಡಿಗೆ :
ರಸಮಂತ್ರ ತೀರ್ಥಮಂ ತಳಿ ಕಮಂಡಲುವಿಂದೆ
ಕವಿಕುಮಾರನ ಮತಿಗೆ ಕೃಪೆದೋರಿ, ಕವಿಗುರುವೆ,
ಕೃತಿವೇಳ್ವ ಚಿತ್ತಕ್ಕೆ ಚಮತ್ಕಾರಮಂ ನೀಡಿ.
ಕೇಳ್ದು ಭರತಂ ಬಂದುದಂ, ಮಂಥರೆಯ ಮನಂ          ೧೦
ಕೇಗಿ ಕುಣಿದುದು, ಹೀಲಿಗರಿಗೆದರಿ. ಪೆರ್ಮೆಯಿಂ,
ತಾಂ ನೆಗಳ್ದುಪಾಯದಿಂ ತನ್ನವಗೆ ದೊರೆತನಂ
ದೊರೆವುದೆಂಬುತ್ಸವಕೆ ನಗೆನಿರಿಯ ವಿಕೃತಿಯಿಂ
ಮೊಗಗೂಬೆ ವಿಕಟಮಾಗಿರೆ, ಸಂಭ್ರಮಾತುರದಿ
ಬರುತಿರ್ದಳಾ ಕೇಳ್ದು ತನ್ನೊಡತಿಯರಮನೆಗೆ.
ಕಥೆಯೆಲ್ಲಮಂ ಕೇಳ್ದು ಕೋಪಾಗ್ನಿರೂಪಾಗಿ
ಪರಿದಿರ್ದ ಶತ್ರುಘ್ನನಂ ಬಟ್ಟೆಯೊಳ್ ಕಂಡು
ಬೆಸಗೊಂಡಳಡವಿಗಿಚ್ಚಂ ದೂರದಿಂ ಬಳಿಗೆ
ತೊಡೆಯೇರಲಾಹ್ವಾನಿಸುವ ತರಗು ಲತೆಯಂತೆ :
“ಭರತನೆಲ್ಲಿದನಯ್ಯ ?” “ರಾಮನೆಲ್ಲಿದನೆಲ್ಲಿ     ೨೦
ಲಕ್ಷ್ಮಣಂ ? ಮತ್ತೆ ಪೇಳೆಲ್ಲಿಗಟ್ಟಿದೆ ದೇವಿ
ಸೀತೆಯಂ? ನೀಚೆ, ಪೇಳೇಕಯ್ಯನಂ ಕೊನ್ದೆ ?
ಪೇಳ್ ಪೇಳ್, ಏಕೆ ರವಿಕುಲದ ಸುಖಮಂ ತಿನ್ದೆ,
ಮೃತ್ಯುಸ್ವರೂಪಿ, ಓ ಶುನಕಿ ? ಭೂಕಂಪಮೆನೆ
ಮನುನಗರಿಯಂ ಮಣ್ಣುಗೂಡಿಸಿದೆ, ಪಾತಕಿಯೆ !
ನಿನಗುಮಾ ಗತಿಯಪ್ಪುದೆನ್ನಿಂದಿದೆಕೊ ಕಾಣ್ !”
ಎನ್ನುತ್ತೆನುತೆ ಕಾಳಹಸ್ತದಿನವಳ ಕುಟಿಲತೆಯ
ಕೇಶಹಸ್ತವನಿಳ್ದು ಕಲ್ನೆಲಕೆ ಕುಕ್ಕಿದನ್,
ಮೆಯ್ ಪನಿಯಲಿಕ್ಕಿದನ್, ಗೂನ್ ಬಿರಿಯಲೊಕ್ಕಿದನ್,
ಮಂಥರೆಯ ಕರ್ಕಶದ ಚೀತ್ಕೃತಿಕ್ರಕಚದಿಂ      ೩೦
ಭರತ ಜನನಿಯ ಮೌನಶಿಲೆ ಘರ್ಘರಿಸುವಂತೆ.
ಅಳಿವಗೆಯನುಳಿದೊಳ್ಪನೇಗೊಂಡಳಂ ಪೆತ್ತಳಂ
ಸಂತವಿಟ್ಟಲ್ಲಿಂದೆ ಪಿರಿಯಬ್ಬೆಯಂ ಕಾಣ್ಬ
ಕಾತರದಿ ಬರುತೆ, ಭರತಂ ಕೇಳ್ದನೆರ್ದೆಮರುಗಿದನ್,
ತನ್ನ ಪೆಸರಂ ಕೂಗಿ ಕರೆದೊರಲಿ ಚೀರಿಡುವ
ಮಂಥರೆಯ ನೀಳ್ದ ಗೋಳ್ದನಿಗೆ. ಕೇಳ್ದುದೆ ತಡಂ
ಕರುಳುರಿದುದೆರ್ದೆ ಕೊರೆದುದಯ್ ಕರುಣೆ ಭರತಂಗೆ :
ಪೆತ್ತ ತಾಯ್ಗಿರ್ಮಡಿಯೊಲುಮೆವೆತ್ತು, ಕೂಸಿಂದೆ
ಕೌಮಾರದನ್ನೆಗಂ, ಕಟ್ಟಿ ತನ್ನಳ್ಕರೆಯ
ತೊಟ್ಟಿಲನದರೊಳಿಟ್ಟು ಜೋಗುಳದುಲಿಗೆ ತೂಗಿ,         ೪೦
ನಿಚ್ಚಮುಂ ಸಾಕಿ ಬೆಚ್ಚಗೆ ಸಲಹಿದಾಕೆಯಾ
ಮಂಥರೆಯ ನೀಳ್ದ ಗೋಳ್ದನಿಯ ಕೇಳ್ದುದೆ ತಡಂ
ಕರುಳುರಿದುದೆರ್ದೆ ಕೊರೆದುದಯ್ ಕರುಣೆ ಭರತಂಗೆ !
ಬೇಂಟೆನಾಯ್ ಪಿಡಿಯೆ, ಮರಿಯೊರಲೆ, ತಾಯೆಕ್ಕಲಂ
ರೌದ್ರವೇಗದಿ ಗಜರಿ ನುರ್ಗುವೋಲೈತಂದು
ಕಂಡನಾ ಗೂನಿಯಂ ಬಡಿವ ಶತ್ರುಘ್ನನಂ.
ಕಂಡೊಡನೆ, ನೆನಹು ಮರುಕೊಳಿಸಿ, ಗುರಿ ಬೇರಾಯ್ತು
ಕನಲಿಕೆಗೆ, ಕರುಣೆ ಸೆಡೆತುದು ಕಹಿಯನೆಡೆಗೊಂಡ
ನಾಲಗೆಯವೋಲ್. “ಅಯ್ಯೊ ದಮ್ಮಯ್ಯ, ಬಾರಣ್ಣಯ್ಯ,
ರಕ್ಷಿಸೋ!” ಎನುತೆ, ತನ್ನಂ ಮರೆವುಗಲ್ಕೋಡಿ            ೫೦
ಕೈನೀಡಿ ಬರುತಿರ್ದಳಂ ಆ ಪ್ರೇಮರಾಹುವಂ
ತೊಲಗಿಸುತ್ತಶ್ರುಗದ್ಗದದಿಂದೆ ಭರತಸೂರ್ಯಂ :
“ತೊಲಗೆಲೆ ಕುರೂಪಿ, ಓ ತೊಲಗು ಕಣ್ಬೊಲದಿಂದೆ
ತೊಲಗಾಚೆ, ಪಾಪಿ ! ಬಳಿಸಾರದಿರ್; ನಿಲ್ಲದಿರ್ !
ಅಯ್ಯೊ ನಂಬುವೆನೆಂತುಟೀಯೊಲ್ಮೆವುತ್ತಿನೊಳೆ
ಹಗೆಯ ನಂಜಿನ ಹಾವು ಹೆಡೆಯೆತ್ತಿ ಹೊರಹೊಮ್ಮಿ.
ಕಚ್ಚಿತೆಂಬುದನಯ್ಯೊ? ನಿನ್ನೊಳಿಂದಿನವರೆಗೆ
ವಿಕೃತಿಯಂ ಕಂಡೆನಿಲ್ಲಿಂದೇಕೆ ಪಲ್ಗಿರಿದು
ನಿಂದವೋಲಿದೆ ಕುರೂಪತೆಯ ಪೈಶಾಚಿಕತೆ
ಕರ್ಕಶಮೆನಲ್ ? ದಿಟಂ, ಮನಸಿಗಲ್ಲದೆ ವಿಕೃತಿ            ೬೦
ಬಾಹ್ಯಪ್ರಕೃತಿಗುಂಟೆ ? ಪೆತ್ತವಳನಳುಪುವೊಲ್
ಕಾಣಿಸುತ್ತಳಿಗೆಯ್ತಕದ್ದಿದ ತನ್ನ ಕಣ್ಗಳನೆ
ಕಿಳ್ತೆಸೆವನಂತೆ ನಾಂ, ಮಂಥರೆ, ಬಿಸುಟ್ಟೆನಿದೊ
ನಿನ್ನನೆಂದೆಂದಿಗುಂ. ಜಲಮಂ ತಿರಸ್ಕರಿಸಿ
ಪೊರಮಟ್ಟ ತಾವರೆಯೆರ್ದೆಗೆ ರವಿಯೆ ಗುರುವೈರಿ
ತಾನೆಂತುಟಂತೆ, ಕೇಳ್, ರಾಮನಂ ಬಿಸುಟೆರ್ದೆಗೆ
ಭರತನಹಿತಂ. – ನಿಲ್, ಪೊಯ್ಯದಿರ್, ಸೋದರನೆ.
ಪೆಣ್ಗೊಲೆಗೆ ಪೇಸುವಂ ಪಿರಿಯಣ್ಣನದರಿಂದೆಯುಂ
ಬಿಡು ಕೋಪಮಂ. ನಾಯ್ಗೆ ಬಡಿದರದು ಕಚ್ಚಿದಾ
ಗಾಯ ಗುಣಮಪ್ಪುದೇಂ ? ದೊಡ್ಡಮ್ಮನೆಡೆಗೆ ಬಾ !”      ೭೦
ಎನುತೆ ತಮ್ಮಂಬೆರಸು ಪಿಂದಿರುಗಿ ನೋಡದೆಯೆ
ನಡೆದನಲ್ಲಿಂದೆ. ಮಂಥರೆ ಗುಂಡು ಬಡಿದಂತೆ
ಕೆಡೆದಳವನಿಯಲಿ : ರವಿಯಾಕರ್ಷಣೆಯನುಳಿಯೆ,
ನಿಚ್ಚನೇಮಂಗೆಟ್ಟು, ಬಟ್ಟೆ ನಿಟ್ಟೆಗೆ ತಪ್ಪಿ,
ತತ್ತರಿಸಿ, ನೀಲ ಶೂನ್ಯಕ್ಕುರುಳುರುಳುವಿಳೆಯಂತೆ,
ಭರತನಳ್ಕರೆಯೊಂದೆ ಪಿರಿಯ ನೆಮ್ಮಾಗಿರ್ದ
ಕುಬ್ಜೆಯಾತ್ಮಂ ತಳಂಗೆಟ್ಟುರುಳ್ದುದು; ಮತ್ತೆ
ಪುಡಿವುಡಿಯಾಯ್ತು, ಬೂದಿಯಾಯ್ತುಳ್ಕೆಯೋಲುರಿದುರಿದು,
ಭರತನಾಗ್ರಹ ಗ್ರಹದ ಘಾತಕ್ಕೆ !
ಓ ಪತಿತೆ,
ಓ ಕುಬ್ಜೆ, ಓ ಮಂಥರೆಯೆ, ಮರುಗುವೆನ್ ನಿನಗೆ
ಕವಿ ಸಹಜ ಕರುಣೆಯಿಂ. ಲೋಕಕ್ರೋಧ ಮದಹಸ್ತಿ
ಪದದಲನ ರೋಷದಾವಾಗ್ನಿಗಾಹುತಿಯಾಗಿ
ಬಿಳ್ದ ನಿನ್ನಾ ಭಸ್ಮರಾಶಿಯಂ ತೊಳೆವುದಿದೊ
ಕಣ್ಗಂಗೆ, ಕಾವ್ಯಮಹಿಮಾ ಸಿಂಧುತೀರ್ಥಕ್ಕೆ !
ಕಂಸನರಮನೆಗಾಗಿ ಪರಿಮಳದ್ರವ್ಯಮಂ
ಪೊತ್ತು ಪೊರಮಟ್ಟಿರ್ದ ಕುಬ್ಜಿಕೆಗೆ ದೇವಕಿಯ
ಮಗನ ಸೋಂಕಿಂದೆ ಸಿರಿಚೆಲ್ವು ದೊರೆಕೊಂಡಂತೆ.
ಕಾವ್ಯಕರುಣಾರಸದ ಲಹರಿಯ ಹರಿಯ ಸಿರಿಯ
ಕರಪದ್ಮ ಚುಂಬನಕೆ ನಿನ್ನ ಕೀಳ್ವರಿಜಳಿದು
ಮತ್ತೆ ಹೃದಯದ ಲಸದ್ರೂಪಂ ಮೆರೆಯದಿಹುದೆ?          ೯೦
ತನ್ನಾವ ಪುರುಷಾರ್ಥಕಿನ್ನಾವ ಸಂಪದಕೆ
ಮೇಣ್ ಸುಖಕೆ ಆ ಗೂನಿ ಪೇಳ್ದಳುಪದೇಶಮಂ
ಕೈಕೆಗೆ? ಜನಿಸಿದಂದಿನಿಂ ಪೆರರ ಚೆಲ್ವಿನೊಳೆ
ತನ್ನ ಚೆಲ್ವಂ ಕಂಡೊಲಿದು, ಪೆರರ ಸೊಗದೊಳೆಯೆ
ತನ್ನ ಸೊಬಗಂ ಕಂಡುಮುಂಡುಮಿರ್ದಾ ದಾಸಿ
ನಚ್ಚಿನೊಡತಿಗೆ ಮತ್ತೆ ಮೆಚ್ಚಿನಾಕೆಯ ಶಿಶುಗೆ
ತೊಳ್ತುಗೆಯ್ಮೆಯ ಪೆರ್ಮೆಗೊಳ್ಪನೆಸಗುವೆನೆಂದು
ಕಜ್ಜಮಂ ಕೈಕೊಂಡೊಡೇಂ ಸ್ವಾರ್ಥದೋಷಮಂ
ಕಾಣ್ಬರಾರಾಕೆಯ ಪರಾರ್ಥತೆಯ ಶುದ್ಧಿಯಲಿ?
ಮಾಂಡವಿಯ ಮನದನ್ನನಾ ಶ್ರುತಕೀತ್ರಿಯೋಪನಂ     ೧೦೦
ಕೂಡಿಕೊಂಡವನಿಜಾತೆಯ ಪತಿಯ ಮಾತೆಯಂ,
ಮಾಗಿಯ ಕುಳಿರ್ಪಗಿಯಲೆಲೆಯುದುರಿ, ಬರಿದಾಗಿ,
ಕುಡಿಮುರುಟಿ, ಸೊರಗುವಾ ಲತೆಯವೋಲ್ ಮ್ಲಾನೆಯಂ,
ಪತಿಪುತ್ರಹೀನೆಯಂ, ದುಃಖಾತಿ ದೀನೆಯಂ
ಕೌಸಲ್ಯೆಯಂ ಕಂಡನಂತಃಪುರದ ನೆಲದ
ನಗ್ನದಲಿ. ಕೈಕೆಯ ಕುಮಾರನಂ ಕಾಣುತಂ
ಮರುಕೊಳಿಸಿದಳಲ ಹೊಡೆತವನಾನಲಾರದೆಯೆ
ಮೈಮರೆತೊರಗಲಾಕೆ, ಪಿಡಿದೆತ್ತಿ ಕುಳ್ಳಿರಿಸಿ
ತಣ್ಪೂಳಿಗವನೆಸಗಿ, ಕಾಲ್ಗಳೆರಡಂ ತಬ್ಬಿ
ಮುಡಿಯೊತ್ತಿ, ಕರ್ಚಿದನ್ ಕಣ್ಬನಿಪೊನಲ್ಗಳಿಂ   ೧೧೦
ಭರತನಾ ರಘುರಾಮನಂಬಿಕೆಯ ಪುಣ್ಯಮಯ
ಪದ್ಮಪಾದಂಗಳಂ. ಭರತನ ಲಲಾಟದಾ
ಸಾತ್ವಿಕಸ್ಪರ್ಶನಕೆ ಮನಮಿಂಪನಾಳ್ದತ್ತು
ಕೌಸಲೆಗೆ, ರಾಮನೆ ಮರಳ್ದು ಬಂದಂತೆವೋಲ್.
ನಿರ್ನಿಮಿತ್ತಂ ತೋರ್ದುದೆರ್ದೆಗೆ ಧೈರ್ಯಜ್ಯೋತಿ,
ಭೀಷಣ ನಿರಾಶಾ ತಮದ ಮಧ್ಯೆ. ನಿಡುಸುಯ್ದು
ನೆಗಹಿದಳ್ ಪದತಲಕೆ ಪಣೆಚಾಚಿ ಕೆಡೆದಿರ್ದನಂ.
ನುಡಿಸಿದಳ್ ಬಿಕ್ಕಿಬಿಕ್ಕಳುತೆ : “ಬಾ, ಕಂದ; ಬಾ,
ಹೇ ಸಾಧು ಸುಕುಮಾರ ! ಮುತ್ತಿದೀ ಕತ್ತಲೊಳ್
ದೀಪದೋಲೈತಂದೆ. ಕಣ್ಗೆಟ್ಟ ಕುರುಡಿಂಗೆ        ೧೨೦
ಬಟ್ಟೆದೋರ್ಪೂರೆಗೋಲಾಗಿ ನೀಂ ಬಂದೆ. ಬಾ,
ತಂದೆ, ಬಾ! ನಾರುಡೆಯನುಟ್ಟಡವಿಗೈದಿದಾ
ಕಂದನಂ ನಿನ್ನೊಳೆಯೆ ಕಂಡು, ತವಿಸುವೆನೆರ್ದೆಯ
ತಾಪಮಂ. ಮರುಗದಿರ್. ತಪ್ಪು ತಾಯಿಯದಲ್ತು,
ನಾಚದಿರ್. ಮೂದಲಿಸಲೆಳಸಿದರೆ ದುರುಳ ವಿಧಿ
ಹಡೆದ ಕರುಳೇನ ಮಾಡುವುದಣ್ಣ ? ಮಂಥರೆಯ
ಕೈತವಕೆ ತುತ್ತಾದರೆಲ್ಲರುಂ, ಕೇಳ್, ಮಗುವೆ,
ನೀನಿಲ್ಲದಾ ದುರ್ಮುಹೂರ್ತದಲಿ!” ಎನುತ್ತೆ ಆ
ತಾಯ್ತನದ ಗಂಭೀರ ಮೂರ್ತಿ ಭರತನನಪ್ಪಿದಳ್;
ಸಂತವಿಟ್ಟಳ್ ಕಂಬನಿಯನೊರಸಿ ಕದಪನೆಳವಿ.          ೧೩೦
“ಆಶೀರ್ವದಿಸು, ದೇವಿ, ಬನಕೆ ನಡೆದಣ್ಣನಂ
ಪಿಂತೆ ತರ್ಪುಜ್ಜುಗದೊಳಾಂ ಸಫಲನಪ್ಪಂತೆ.
ವಿಧಿವಂಚನೆಯ ಕೂಣೆಗಿಳಿಮೀನಿನೋಲಂತೆ
ಮಂಥರೆಯ ಮಾತಿನಗ್ನಿಯ ಮೋಹಕೊಳಗಾಗಿ
ದುಃಸ್ಥಿತಿ ನಿಮಿತ್ತಳಾದೆನ್ನ ತಾಯಂ ಕ್ಷಮಿಸಿ,
ಪೊರೆ ತಂಗೆಯಂ ರಾಮನಿಲ್ಲದೀ ನೆಲಮೆನಗೆ
ಪಾಳ್ಮಣ್ಣದಲ್ತೆ? ತಂದೆಯಂ ಕೊಂದುಮಣ್ಣನಂ
ಕಾನನಾಂತರಕಟ್ಟಿಯುಂ, ಪೊತ್ತು ಪೆತ್ತಬ್ಬೆಯಂ
ಚಿರಪತಿತೆಯಂ ಮಾಡಿಯುಂ ಧರೆಯನಾಳ್ವನಿತು ನಾಂ
ಪತಿತನಲ್ತಂಬೆ. ಗುರುಕರುಣೆಯಿಂ, ನಿಮ್ಮಡಿಯ           ೧೪೦
ಕೃಪೆಯಿಂ ಶುಭಾಕಾಂಕ್ಷಿಯೆಂ; ಸರ್ವ ಮಂಗಲ ಕಾಮಿ;
ಮೇಣ್ ಸತ್ಯ ಸುಂದರ ಶಿವಪ್ರೇಮಿ!” ಎನುತ್ತೆನುತೆ
ತಂದೆಯಂ ನೆನೆನೆನೆದು ಮೈಮರೆತು ಬೀಳ್ವನಂ,
ರಾಮರಾಮೆಂದೂಳ್ವನಂ, ಮನ್ನಿಸಂಬೆಯಂ
ಮನ್ನಿಸೆಂದಡಿಗಡಿಗಳುತೆ ಬೇಡಿಕೊಳ್ವನಂ,
ಮೇಣಾರ ಸಂತೈಕೆಗುಂ ಮಳ್ಗಲಾರದತಿ
ಸಂತಾಪದಿಂದೆ ಬೆಂಡೇಳ್ವನಂ, ಭರತನಂ
ಬಂದೆಳ್ಚರಿಸಿದತ್ತು ಗುರು ವಸಿಷ್ಠನ ವಾಣಿ.
ಕಾಣುತೆ ತಪೋಮೂರ್ತಿಯಂ ಮನೋರಣದಿಂದೆ
ಹಿಂಜರಿದುದು ಅಶಾಂತಿ, ಕೇಸರಿಯ ಕಣ್ಗಳ್ಕಿ   ೧೫೦
ಸೆಡೆತಡಂಗುವ ಬಗ್ಗನಂದದಿ ಹಣುಗಿ ಜುಣುಗಿ :
“ಧೀರಮತಿ ಪಾರ್ಥಿವ ಕುಮಾರ, ತಡೆ ಶೋಕಮಂ;
ಪ್ರೇತಕಾರ್ಯವನೆಸಗಿ ಪಿತೃಗೆ, ಕಳುಹಾತನಂ
ಲೋಕದುತ್ತಮ ಗತಿಗೆ. ದುರ್ದಮ ನಿಯಂತೃ ವಿಧಿ ತಾಂ
ತಂದೊಡ್ಡಿದೀ ಮಹತ್ ಕ್ಲೇಶಮಂ ಬುದ್ಧಿಯಿಂ
ಪರಿಹರಿಸೆ ಯತ್ನಗೈ. ರೋದಿಸಿದರೇಂ ಫಲಂ
ಭಾವದಾವೇಶದಿಂ ? ಪಳಯಿಸಿದ ಮಾತ್ರದಿಂ
ದೊರೆಕೊಂಡಪುದೆ ಮಂಗಳದ ಸಿದ್ಧಿ?” ಮಂತ್ರಿಸಲ್
ಶ್ರೇಷ್ಠವಾಗೃಷಿ ಗುರು ವಸಿಷ್ಠನೀ ಮಾಳ್ಕೆಯಿಂ,
ಭರತನಾತನ ಹಿಂದೆ ನಡೆದನಯ್ಯನ ಮೆಯ್ಗೆ   ೧೬೦
ಲೌಕಿಕವನೆಸಗೆ.
ಹಾ ಜೀವನ ದುರಂತತೆಯೆ,
ತಂದೆ ತಾಯಂದಿರಂ ನಲ್ಲರಂ ಮಕ್ಕಳಂ
ಪೂಜ್ಯರಂ ಮೇಣೆರ್ದೆಯೊಲಿದರಂ ಕಳೇಬರಂ
ಮಾಡಿ ತೋರುವ ನಿನ್ನ ನಿಷ್ಠುರತೆಯಂ ಸುಡಲಿ !
ಪ್ರೀತಿಯನೆ ಭೀತಿಯಿಂ ಗೈವ ಯಮಮುದ್ರೆಯಿಂ
ಗುರ್ಬಿದಯ್ಯನ ಮೆಯ್ಯನೆಳ್‌ನೆಯ್ಯ ದೋಣಿಯಿಂ
ತೆಗೆಯ ಕಂಡಳ್ಕಾಡಿದತ್ತು ಭರತನ ಮನಂ,
ಭಯದ ಮೂರ್ಛೆಯ ಮಿಂಚು ಮುಟ್ಟಿ ಬಿಟ್ಟಂತೆ ಮೆಯ್
ತರಹರಿಸೆ. ಕಾಣಲೊಡಮಯ್ಯನೊಡಲಂ ತಬ್ಬಿ
ಬಿಗಿದಪ್ಪಿ ಬಾಳ್ಗೆ ಜೇನಂ ಸೂಸುವೊಡಲಿಚಂ,   ೧೭೦
ಬೆಳ್ಪುಗಣ್ ಪೆಳ್ಪಳಿಸೆ, ಬೆರ್ಚಿ ನಿಂದನ್ ಬರ್ದುಂಕೆ
ಬೆಬ್ಬಳಿಸಿ. ಶೈಲಕಾನನ ಮನೋಹರತೆಯಂ
ಸವಿಯುತಲೆವ ವಿಪಿನ ವಿಹಾರಿ, ತೆಕ್ಕನೆ ಕಾಣೆ
ತನ್ನ ಕಾಲ್ದೆಸೆಯೆ, ನೆಟ್ಟನೆ ಮುಂದೆ, ಶೂನ್ಯತೆಯ
ಪಾತಾಳದಾಕಳಿಕೆ ಬಾಯಿ ತೆರೆದಂತಿರ್ದ
ಕಿಬ್ಬಿದರಿ, ವಿಸ್ಮಯದಶನಿ ಪೊಯ್ದುದೆಂಬಂತೆ
ಕಣ್ಣು ಕಾಲ್ಗೆಟ್ಟು ಮೇಣೊಳಸೋರಿ ಮರವಟ್ಟು
ನಿಲುವಂತೆ ನಿಂದನಾ ಭರತನಯ್ಯನ ಮೆಯ್ಗೆ
ಬದಲಾಗಿ ಜೀವಶೂನ್ಯಂ ಶವವನೀಕ್ಷಿಸುತೆ!
ಸಾವು, ಬಾಳಿನಮೇಲೆ, ತೆರೆಯೆಳೆದವೋಲಂತೆ           ೧೮೦
ಮುಚ್ಚಿರ್ದುವಾ ಕಣ್. ದೇವರಿಲ್ಲದ ಗುಡಿಯ
ಪಾಳ್ಗೆ ಬಾಗಿಲನಿಕ್ಕಿದಂತೆ ಬಿಗಿದುದು ಬಾಯಿ
ವಿಕಟಮೌನದ ವಜ್ರಮುದ್ರೆಯಲಿ. ಮೇಣ್ ಜಡಂ,
ಜೀವವನಣಕಿಪಂತೆ, ನಿಷ್ಪಂದಮಿರ್ದತ್ತು
ಸಾರ್ವಭೌಮಿಕ ಮಹೌದಾಸೀನ್ಯಮಂ ಮೆರೆದು
ಕ್ರೂರದರ್ಪದಲಿ. ಹಾ, ಕಂದನೆಳಗಣ್ಗಳಿಗೆ
ಹಿಂದಾವ ಮುದಿಯ ಮೆಯ್ಯಳ್ಕರೆದು ತೊಟ್ಟಿಲೋಲ್
ಸಂತೋಷನಂದನದ ಕಲ್ಪತರುವಿಂ ಜೋಲ್ವ
ವಾತ್ಸಲ್ಯಭಾವದಾ ಹೆಜ್ಜೇನುಹುಟ್ಟಿಯೋಲ್
ಸುಖದಮಾಗಿರ್ದತ್ತೊ ತಾನದೆ ಇಂದು ಸೂಡಿನೊಲ್,   ೧೯೦
ಕೆಟ್ಟಾಸೆ ಬೀಡಿನೊಲ್, ಬಾಳ್‌ಗನಸುಗಳಿಗೆಲ್ಲ
ಕೊನೆಯ ಸುಡುಗಾಡಿನೊಲ್ ಕಾಣುತಿರೆ, ಬಾಲಋಷಿ
ಭರತನಾ ಶವದೊಳರಸುವನೆ ಪಿತೃದೇವನಂ?
ಭೂಪತಿತ ನಾಕ ಚಕ್ರಾಧಿಪತ್ಯಮೆನಲ್ಕೆ,
ತನ್ನ ತಾಯಿಯ ಲೋಭವೆಂತಂತಳಿದುರುಳ್ದ
ಭೂಪತಿಯ ದೇಹಮಂ ಕಂಡು, ಕೈಕೆಯಣುಗನ
ಮನದಿ, ತಲೆಸೆಡೆತುದಳಲಾಮೆ; ಸಾವಿನ ನೋವು
ಹುದುಗಿದುದು ದೃಢಮನೋನಿಶ್ಚಯದ ಖರ್ಪರದ
ಕೋಂಟೆಯ ಶಿಲಾರಹಸ್ಯದಲಿ. ಕಣ್ಣಳಲಿಗಿಂ
ಕಿವಿಯಳಲೆ ಪಿರಿದೊ? ಮೇಣೀ ನೋವನಾ ಗೋಳೆ       ೨೦೦
ತಿಂದು ತವಿಸಿದುದೊ? ಮೇಣಾತ್ಮಯಾತ್ರೆಯ ಮಹಾ
ಜ್ಯೋತಿರ್ಮಹದ್ದರ್ಶನಂ ಲಭಿಸಿದಾತಂಗದೇಂ
ಗುರುತರಾನಂದಕರ ಗುಹ್ಯಮಾಗುವುದೇನೊ
ದೇಹಯಾತ್ರೆಯ ದುರಂತಂ? ಭರತವಾಕ್ಯಮೀ
ಐಹಿಕದ ನಾಟಕಕೆ ತಾನಾದೊಡಂ ಮೃತ್ಯು ತಾಂ
ನಾಂದಿಯೈಸಲೆ ಪೇಳ್ ಅಲೌಕಿಕಕೆ ?
ಯಾಜಕರ್
ತಂದರಗ್ನಿಯನಗ್ನಿಶಾಲೆಯಿಂ. ತೈಲದೊಳ್
ನೆರೆ ನಾನ್ದುದಕೆ ಮೊಗಂ ಪಳದಿಗೊಂಡರಸನಾ
ಕಾಯಮಂ, ಕನಕ ಶಿಬಿಕೆಗೆ ನೆಗಹಿ, ಸುಡುನೆಲಕೆ
ಪೊತ್ತುಯ್ದರಾಕ್ರಂದಿಸುತೆ ಜನಂ. ಬಟ್ಟೆಯೊಳ್ ೨೧೦
ಪಟ್ಟಣಿಗರುರಿಸಿದರ್ ಚಂದನಾಗರು ಸರಳ
ಪದ್ಮಕದ ಚೂರ್ಣದಿಂದಲ್ಲಲ್ಲಿ ಧೂಪಮಂ
ರಾಜಭಕ್ತಿಗೆ, ಗೌರವಕೆ, ಮತ್ತೆ ಶೋಕಕ್ಕೆ.
ಚೆಲ್ಲಿದರ್ ಚಿನ್ನಮಂ, ರತ್ನವಸ್ತ್ರಂಗಳಂ,
ಮಣ್ಗೆ ಪೊನ್ನುಡೆ ಸಮನಿಪಂತೆ. ಸತ್ತಾನೆಯುಂ
ಪನೆಯೆಲ್ಬುಗಳ ಸಿರಿಯನೀವುದೆನೆ, ಮಡಿದೊಡಂ ತಾಂ
ನೆಲೆಯಲ್ತೆ ಬೆಲೆಗೆ ಪಿರಿದೇಗಳುಂ ?
ಮುಂಗಾರ್ಗೆ
ಮುನ್ನಮಾ ಮಲೆಯನಾಡಿನ ಪೆರ್ಗಡೆಯ ಮನೆಯ
ಕೋಂಟೆಯೊಳ್ ಕಾಡಂ ಕಡಿಯುತೊಟ್ಟಿ ಸೌದೆಯಂ
ತಂದು ಕೊಟ್ಟಿಗೆಗಡಕಿದಾ ಕಟ್ಟಿಗೆಯ ಕಟ್ಟಣಂ  ೨೨೦
ತೋರ್ಪಂತೆ, ಕಣ್ಗೆಸೆದುದಾ ಮುಂದೆ ಗಂಧಚಿತೆ
ರೌದ್ರಮಾ ರುದ್ರಭೂಮಿಯಲಿ. ಋತ್ವಿಜರೆತ್ತಿ
ಸೂಡಿಗಿಟ್ಟರ್ ದೊರೆಯ ದೇಹಮಂ. ಪ್ರಾಜ್ಞಮತಿ
ಭರತನುರಿಯಿಕ್ಕಿದನ್, ಕಣ್ಣರಿತು ಗುರುಸಂಜ್ಞೆಯಿಂ.
ರಾಣಿಯರ ರೋದನಕೆ ಮೇಣ್ ಸಾಮಗಾನದ ಲಯಕೆ
ಪರ್ವಿ ನೀಳ್ಪುದು ಗಾಳಿವಟ್ಟಿಗೆ ಹುತಾಶನಂ,
ಸಗ್ಗಕೇರುವ ಬೆಂಕಿದೇರಂತೆ. ದಶರಥನ
ಕೀರ್ತಿಯೋಲುಳಿದುದಯ್ ಭಸ್ಮಧವಳಿಮ ರಾಶಿ,
ಕಣ್ಗೆ ಶಾಂತಿಯ ತಣ್ಪನೊತ್ತಿ. ಚಯನಂ ಮುಗಿಯೆ
ಬಲವಂದುಮೆಡವಂದುಮಾ ಚಿತೆಯನಲ್ಲಿಂದೆ  ೨೩೦
ದೀನಂ ಪ್ರಲಾಪಿಸುತೆ ಪರಿತಂದರನಿಬರುಂ
ಸರಯೂ ನದಿಯ ತಟಿಗೆ. ಜಲತರ್ಪಣಂ ಗೈದು
ದುಃಖದಿಂ ಬಿಕ್ಕಿಬಿಕ್ಕಳುತೆ ಪೊಕ್ಕುದು ಜನಂ
ಶಶಿಹೀನ ರಜನಿಗೆಣೆಯಾ ರಾಜಧಾನಿಯಂ,
ಶೂನ್ಯಮಂ ಪುಗುವ ಖಿನ್ನತೆಯ ಛಾಯೆಗಳವೋಲ್.
ಓ ಕುಬ್ದೆ, ಮಂಥರೆಯೆ, ಓ ಪ್ರೇಮಭೈರವಿಯೆ,
ಶತ್ರುಘ್ನನಿಕ್ಕಿ ನೆಲಕಪ್ಪಳಿಸುವಾಗಳಾ
ಬಂದ ಭರತಂ ತಿರಸ್ಕರಿಸಿ ಬಯ್ದಲ್ಲಿಂದೆ
ತೊರೆದು ತೆರಳಲ್ಕೆ ನೀನಿಳೆಗುರುಳಿ ಮೈಮರೆಯೆ,
ಮಂದಿ ನೆರೆದಣಕದೀಂಟಿಯಿನಿರಿದರಲ್ತೆ ? ಪೇಳ್,         ೨೪೦
ನಿರ್ಭಾಗ್ಯೆ, ಮೇಲೆ ನೀನೇನಾದೆ ? ಅಲ್ಲಿಂದೆ
ನೀನೆತ್ತವೋದೆ? ತಿರೆ ನುಂಗಿದುದೊ? ಕರಗಿದೆಯೊ
ನೋವಿನುರಿವೊಯ್ಲಿಂದೆ? ತಿಂದುದೊ ನಿರಾಶೆ? ಮೇಣ್
ಮಾಯವಾದೆಯೊ, ಮಾಯೆ, ಪೇಳ್ ?
ಮೈತಿಳಿದು ಕಣ್ದೆರೆಯೆ,
ಮಂಥರೆಯ ಬಗೆಗೊರಳಿಗುರುಳಾಯ್ತು ನಿರ್ಜನದ
ನೀರವದ ಶೂನ್ಯತಾ ರಜ್ಜುಸರ್ಪಂ. ಕಣ್ಣಿಡಲ್
ಜನದ ಸುಳಿವಿಲ್ಲಾಲಿಸಲ್ ಸೊಲ್ಲು ಸದ್ದಿನಿತಿಲ್ಲ :
ಸದ್ದಿಲ್ಲದರಮನೆಯೆ ನಿಶ್ಶಬ್ದತೆಯ ಶವಕೆ
ಹೆಗ್ಗೋರಿಯಾಗಿ ನಿಂದತ್ತು, ದುಶ್ಶಕುನದೋಲ್,
ಹಾಸ್ಯ ಮೂಕಾಸ್ಯದಾ ಕಟು ವಿಕಟ ಭಂಗಿಯಿಂ!           ೨೫೦
ನಿಶ್ಶಬ್ದತಾ ಶವದವೋಲೆದ್ದಳಾ ಗೂನಿ :
ಮುಯ್ಗೆ ಮುಯ್ಯಾಗಿ ಕೊಲೆಯಾದವನ ಮೆಯ್ಯಿಂದೆ
ಪಸಿಯ ಗಾಯಂಗಳಿಂ ಬಿಸಿಯಾರ್ದ ನೆತ್ತರಂ
ಸೋರಿ ಭೀಕರವಾಗಿ ಹೂಳಿನಿಂದೇಳುವಾ
ಪ್ರೇತಪ್ರತೀಕಾರ ಭೀಷಣಾಕೃತಿಯಂತೆ
ಸುಯ್ದೆದ್ದಳಾ ಗೂನಿ, ದೃಢಮನದ ಹೆಡೆಯೆತ್ತಿ
ತನ್ನ ನಂಜಂ ತಾನೆ ಹೀರಲೆಳಸುವ ಕಾಳ
ಸರ್ಪಿಣಿಯ ತೆರದಿ. ‘ಹಾ, ತನ್ನ ಕೈಕೆಯ ಮಗುಗೆ,
ತನ್ನ ಜೀವಾನಂದ ಸಾಗರ ಸುಧಾಂಶುವಿಗೆ,
ಭರತದೇವಗೆ ನೆಲದ ಸಿರಿಯಕ್ಕೆ, ಸೊಗಮಕ್ಕೆ, ೨೬೦
ಮುಡಿಗೆ ನೇಸರ ಬಳಿಯ ಮಕುಟಮಕ್ಕೆಂದಲ್ತೆ
ರಾಮನನಡವಿಗಟ್ಟಿದೆನ್ ? ಮತ್ತೆ ರಾಮನಂ
ಮನೆಗೆ ಕರೆತಂದೆನಾದೊಡೆ, ಕಂದ ಭರತಂಗೆ
ಮುದವಪ್ಪುದಪ್ಪುದಂತೆಯೆ ಕೈಕೆಗುತ್ಸವಂ.
ಮತ್ತೆ ಮರಳುವುದೆನಗೆ ಮೊದಲಿನಂದದೊಳವರ
ಹಿಂದಣೊಲ್ಮೆಯ ಬಂಡಿನೌತಣಂ!’ – ನೆನೆಯುತಿಂತಾ
ಪುಣ್ಯದನ್ವೇಷಣೆಗೆ ಪೋಪ ಪಾಪದ ತೆರದಿ
ಪೊರಮಟ್ಟಳರಮನೆಯಿನಾ ಮುದುಕಿ, ಮಸಣದೊಳ್
ದಹನದುಃಖದೊಳಿರ್ದರಾರುಂ ತಿಳಿಯದಂತೆ.
ಪ್ರೇತವನಕಾಗಿ ಸಂಭ್ರಮದಿಂದೆ ಪರಿದಿದ್ದ       ೨೭೦
ಮಂದಿ ಸಂದಣಿಸಿ ಸಾಲ್ಗೊಂಡಿರ್ದ ಬೀದಿಗಳ
ಗಡಿಬಿಡಿಯಲೈದುತಿರೆ, ಕಲ್‌ಮಣ್ಗಳಿಂದಿಕ್ಕಿದರ್
ಕೆಲರುಗುಳಿದರ್ ಮೊಗಕೆ. ಪರಿದರುವೆಯೇರ್ಗಳಿಂ
ಸುರಿವ ನೆತ್ತರ್ವೆರಸಿ ಆ ಗೂನಿ, ಆ ತೊನ್ನಿ,
ಆ ಕೋಸಲ ನಿರಸ್ತೆ, ಜರಠಾಸ್ತಿ ಚರ್ಮದಾ
ನರೆನವಿರಿನಾ ಸ್ಥವಿರೆ ತಾಂ ಮಂದಿಯನ್ಯಾಯಮಂ
ಕ್ರೌರ್ಯಮಂ ಲೆಕ್ಕಿಸದೆ ತೊಲಗಿದಳಯೋಧ್ಯೆಯಿಂ
ಸಂಧ್ಯೆಯೊಡಗೂಡಿ. ಹಾ, ಜೀವನದೊಳನಿತೆನಿತು
ದ್ವೇಷ ನಿಷ್ಠುರ ವೈರ ಕಷ್ಟಗಳಿಗೆಲ್ಲಮಾ
ಪ್ರೇಮವೆ ಪಿತಾಮಹನ್? ಅದೆಂತೆನೆ, ಸುಧಾಸುಖಕೆ    ೨೮೦
ಕಡಲ ಕಡೆದಾ ದೇವ ದೈತ್ಯರಿಂದಾಯ್ತಲ್ತೆ
ಹಾಲಾಹಲದ ಸೃಷ್ಟಿಯುಂ !
ಮುಂಬರಿಯುತಿರೆ ಕುಬ್ಜೆ
ಹೃದಯಾಬ್ಜದಲ್ಲಿ ರಘುರಾಮಚಂದ್ರನನಿರಿಸಿ,
ಬಾನ್ನೆತ್ತಿಯಿಂ ಧಾತ್ರಿಗವತರಿಸಿದುದು ರಾತ್ರಿ,
ಮಂಥರೆಯ ಚಿತ್ತಕೆ ಮರುಳ್ತನಮಮರ್ವವೋಲ್
ಕಣ್ಗೆ ಕುರುಡಂ ಮೆತ್ತಿ : ಬೆಳಗಿನಿಂದುಣಿಸಿಲ್ಲ;
ನೀರ್ಪನಿಯನೀಂಟಿಲ್ಲ; ಪೆಟ್ಟನಲ್ಲದೆ ಬೇರೆ
ತಿಂದಿಲ್ಲ; ಕಣ್ಣೀರನೊಂದಲ್ಲದಿನ್ನೇನುಮಂ
ಕುಡಿದಿಲ್ಲ. ಬೆನ್ನಿಗಂಟಿದ ಹೊಟ್ಟೆಹಸಿವಿಂದೆ
ಗಂಟಲೊಣಗಿದ ನೀರಡಿಕೆಯಿಂದೆ, ರಕ್ತಮಂ    ೨೯೦
ಬಸಿವ ಗಾಯದ ಪಸಿಯ ನೋವಿಂದೆ, ತನಗಾದ
ದುಃಸ್ಥಿತಿಯ ದುಃಖವೊದಗಿಸಿದೊಳಗಿನಾಸರಿಂ
ಮೇರೆ ಮೀರ್ದುಸಿರ ಸೇದೆಗೆ ಜೋಂಪಿಸಲ್ ಪ್ರಜ್ಞೆ,
ದೂಟಿಂದೆ ದೂಟಿಂಗೆ ಮರವಟ್ಟುಮಾ ಮುದುಕಿ
ತೊಟ್ಟ ನೋಂಪಿಯ ಬಲ್ಮೆಯೂರೆಗೋಲಂ ನೆಮ್ಮಿ
ಸಂಚಲಿಸಿದಳೊ ರಾಮನಂ ಕರೆದೊರಲಿ. ಕರೆದು
ಕೂಗಿ. ಕೆಡಲಿಲ್ಲ ಸದ್ದಿಲಿಯಿರುಳಿನಾ ನಿದ್ದೆಯುಂ :
ದನಿಯಿಹುದೆ ದಣಿವಿನುಸಿರಿಗೆ ? ಕೇಳಿದತ್ತಡವಿ
ಕಿವುಡಾಗಿ : “ಓ ನನ್ನ ಭರತನಣ್ಣಯ್ಯ ! ಓ
ರಾಮಯ್ಯ! ಹೇಳೆಲ್ಲಿರುವೆಯಯ್ಯ ? ದಮ್ಮಯ್ಯ !-        ೩೦೦
ಓ ನನ್ನ ಭರತನಣ್ಣಯ್ಯ ! ಓ ರಾಮಯ್ಯ !
ಹೇಳೆಲ್ಲಿರುವೆಯಯ್ಯ ? ದಮ್ಮಯ್ಯ ! – ಓ ನನ್ನ
ಭರತನಣ್ಣಯ್ಯ ! ಓ ರಾಮಯ್ಯ ! ದಮ್ಮಯ್ಯ !
ಹೇಳೆಲ್ಲಿರುವೆಯಯ್ಯ ?” ಎಂಬ ಕರುಣಧ್ವನಿಯ
ಛಂದಸ್ಸಿಗೆಂಬಂತೆ ಚಲಿಸುತಿರ್ದಳ್ ವಿಕೃತೆ,
ತಾರಾ ಸಹಸ್ರಾಕ್ಷಿಯಾ ವ್ಯೋಮದೇವಿಯ ಮನಕೆ
ರೋಮೋದ್ಗಮಂ ಪಲ್ಲವಿಸುವಂತೆ : ತಿಳಿಯದಿರಲೇನ್
ತಿರೆಗೆ, ಬಾನರಿಯದೇನೆರ್ದೆಯ ಪರಿವರ್ತನೆಯ
ಪುಣ್ಯ ಸಂಕ್ರಾಂತಿಯಂ? ಬಾಹ್ಯ ಸಂಜ್ಞಾಶಕ್ತಿ
ಶೂನ್ಯತೆಯ ನೇಮಿಯುಯ್ಯಾಲೆಯಂ ತೂಗುತಿರೆ,       ೩೧೦
ಕಾಣಿಸಿತು ಕುಣ್ಟುದಿಟ್ಟಿಯ ಗೂನುಗಣ್ಣಿಗದೊ
ಗೆಣ್ಟರೊಳ್ ಜ್ಯೋತಿ. ಮಂಥರೆಯಂತರಾತ್ಮಕ್ಕೆ
ರಾಮನೆಸೆದಂತಾಗೆ “ಓ ಭರತನಣ್ಣಯ್ಯ,
ಓ ನನ್ನ ರಾಮಯ್ಯ, ಬಾರಯ್ಯ, ದಮ್ಮಯ್ಯ !”
ಎಂದೆರ್ದೆನವಿಲ್ ಕೇಗಿ ಗರಿಗೆದರಿ ಕುಣಿಯುತಿರೆ,
ಹಾರಿ ಮುಂದಕೆ ನುಗ್ಗಿ ನಡೆದೋಡಿದಳ್, ಅಹಾ,
ದಾವಾಗ್ನಿಯಂ ಗೆತ್ತು ರಾಮಂಗೆ !
ಆ ದಾವಾಗ್ನಿ
ಘನ ನಿಬಿಡ ಘೋರಾಂಧಕಾರ ತೀರದ ಮಧ್ಯೆ
ಪ್ರವಹಿಪಾ ವಿದ್ಯುತ್ಪ್ರವಾಹ ದೈತ್ಯಾಕೃತಿಯವೋಲ್
ಕೆದರಿದುದು ದಿಕ್ಕುದಿಕ್ಕಿಗೆ ತನ್ನ ಕೇಸುರಿಯ     ೩೨೦
ಕೇಶಪಾಶದ ರಾಶಿರಾಶಿ ವಿನ್ಯಾಸಮಂ.
ಬೆಂಕೆಗಣ್ಗಳೆನೆ ಸಿಡಿದೇಳ್ವ ಕೆಂಗಿಡಿಗಳಿಂ
ಸೂಸಿದುದು ತೋರ ತಾರೆಯ ಕೆಂಡ ಧಾರೆಯಂ.
ಶಿಖಬಕಾಸುರ ಬಾಹುಭೀಮರಿಂದೆಂಬಂತೆ
ತಿರುಪ್ಪಿದುದು ದೈತ್ಯ ದೇಹದ ತರುಹಿಡಿಂಬರಂ
ನಿರಿನಿರಿ ನಿಟ್ಟಿಲ್ಲೆಂದು ಮುರಿದರೆದು, ಬೂದಿಯಂ
ಬುತ್ತಿಗೂಳ್ ಮಾಡಿ ಮುಕ್ಕಿದುದು. ಕಾಡೆಲ್ಲಮಂ
ನುಂಗಿ ನೊಣೆಯುತ್ತೆ, ನಾಡೆಲ್ಲಮಂ ನೆಕ್ಕುತ್ತೆ,
ನಗಜಗದ ಖಗಮೃಗದ ಬನಸೊಗದ ಜೀವಮಂ
ಪಾರಿಸುತೆ, ಚೀರಿಸುತೆ, ಕೊಲ್ಲುತ್ತೆ, ಮೆಲ್ಲುತ್ತೆ,  ೩೩೦
ಪ್ರಳಯ ಫಣಿಯಗ್ನಿತನು ತಾಂ ಲಯಭೋಜನಕೆ ನೀಳ್ದ
ಶತಕೋಟಿಯೋಜನದ ಮಿಂಚಿನ ಮಹಾಜಿಹ್ವೆ
ನುಗ್ಗಿ ಮುಂಬರಿವಂತೆ, ಮೇಲ್ವಾಯ್ದು ಬೀಳ್ವಂತೆ,
ಬಂದಪ್ಪಳಿಸಿದಗ್ನಿಗಾ ಮಂಥರೆಯ ಮೂರ್ತಿ ಹಾ
ಸುಟ್ಟು ಸೀದುದೊ ಚಿಟ್ಟೆ ಸೀವಂತೆ ! – ರೂಕ್ಷತಾ
ವಿಕೃತಿಯಿಂ ಗುಜ್ಜುಮೆಯ್ಯಿಂ ಕುರೂಪಂಬೆತ್ತ
ಶ್ರೀಗಂಧ ಕಾಷ್ಠ ವಕ್ರತೆಗಗ್ನಿಲಗ್ನದಿಂ, ಕೇಳ್,
ರೂಪಶೂನ್ಯತೆಯೊದಗಲೇಂ ? ವಿಶ್ವದೇಶಮಂ
ಪರಿಮಳದ ಪುಣ್ಯಪವನಂ ಪಸರಿಪೋಲಂತೆ,
ತುಂಬದೇನಿರ್ದಪಳೆ, ಪೇಳ್ ಲೋಕಲೋಕಂಗಳೊಳ್  ೩೪೦
ದೇವಿ ಮಂಥರೆಯಂತರಾತ್ಮದ ದಯಾಲಕ್ಷ್ಮಿ ತಾಂ
ತನ್ನ ಕೀರ್ತಿಯ ಸಯ್ಪಿನಮೃತಮಯ ಸೌಂದರ್ಯಮಂ ?


***************


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ