ನನ್ನ ಪುಟಗಳು

23 ಮೇ 2018

ಶ್ರೀರಾಮಾಯಣ ದ‍ರ್ಶನಂ, ಅಯೋಧ್ಯಾ ಸಂಪುಟಂ: ಸಂಚಿಕೆ 4- ಊರ್ಮಿಳಾ

ಸಂಚಿಕೆ 4 – ಊರ್ಮಿಳಾ
ಪರ್ವಿದುದೊ ದುರ್ವಾರ್ತೆ, ವಿಲಯವೇಳಾ ವನಧಿ
ವೇಲೆ ಮೀರುತ್ತುರ್ವರೆಯನವ್ವಳಿಸುವಂತೆ,
ಬಡಿದು ಸಿಡಿಲಂ ಸಕಲ ಸಾಕೇತ ಸಂಭ್ರಮದ
ಸಿರಿಗೆ ಸಂದಣಿಸಿತಯ್ ನಗರದ ವಿಪುಲ ಜನಂ
ದೊರೆಯರಮನೆಯ ಮುಂದೆ, ಮಸಗಿದಂಬುಧಿಯಂತೆ
ಶಬ್ದಮಯಮಾಗಿ. ತೊಪ್ಪನೆ ತೊಯ್ದುದರಮನೆಯ
ಮಂದಿ ಕಣ್ಣೀರ ಸರಿಯಲ್ಲಿ. ಕ್ಷಣಪೂರ್ವದೊಳ್
ಹರ್ಷದಾಗರಮಾಗಿ ನಲಿಯುತಿರ್ದಾ ಅಯೋಧ್ಯೆ ತಾಂ
ಶೋಕಸಾಗರಮಾಯ್ತೆನಲ್, ಕಾಣ್ಬುದಸದಳಮಲಾ
ಮನುಜ ಮನದುತ್ತರಮುಖಿಗೆ ಬಿದಿಯ ಚಿರತಾರೆ !       ೧೦
ತನ್ನರಮನೆಯೊಳಿರ್ದೆ ಕೇಳಿದಳ್ ಕೌಸಲ್ಯೆ
ಕರುಳಿರಿಯುವಂತೆ ಬಾಂಬಟ್ಟೆಯಂ ತುಂಬೇರ್ದ
ತುಮುಲ ಕಳಕಳ ರುದಿತರಾವಂಗಳಂ. ನಡುಗಿದಳ್
ಪವನಪ್ರವಾಹಕರಳಿಯ ತಳಿರದಿರ್‌ವವೋಲ್
ತರತರನೆ. ಕೂಡೆ ಬಳಿಯಟ್ಟಿದಳ್ ದೂದಿಯಂ
ಕಾರಣವರಿಯೆ ಗೋಳ್ಗೆ. ತತ್ತಳಿಕೆಯಂ ಮತ್ತೆ
ತಾಳಲಾರದೆ ತಾನೆ ಚಾವಡಿಗಿರದೆ ಪರಿಯಲಾ
ಕಾಣಿಸಿತು ಕುಪಿತ ಲಕ್ಷ್ಮಣನೊಡನೆ ಬರುತಿರ್ದ
ಶ್ರೀರಾಮನಕ್ಷುಬ್ಧ ಶರಧಿಸಮ ವಿಗ್ರಹಂ,
ತಾಯ ದಿಟ್ಟಿಗೆ ಪಾಲನೀಂಟಿಸುತೆ. ಬಳಿಸಾರೆ, ೨೦
ತನ್ನೆರಡು ತೋಳ್ಗಳಿಂದಪ್ಪಿ, ಮುಡಿಯಂ ಮೂಸಿ
ಮುಂಡಾಡಿ ನುಡಿಸೆ, ರಾಮಂ ಕೆಮ್ಮನಿರ್ದುದಂ
ಕಂಡುಮ್ಮಳಂಗೊಂಡು ಊರ್ಮಿಳೆಯ ಗಂಡನಂ
ಬೆಸಗೊಂಡೊಡಾತನುಂ ಕಲ್ಗುಂಡಿನಂದದಲಿ
ಮೂಗುವಟ್ಟಿರಲಿಕಾ ಪುತ್ರವತ್ಸಲೆ ಬೆದರಿ
ತೊಡಗಿದಳ್ ರೋದನಕೆ. ರಾಜೀವಲೋಚನಂ
ತಾಯ ಬಿಸುಗಂಬನಿಯನೊರಸಿ ಕೈದಾವರೆಯ
ಕೋಮಳತೆಯಿಂದೆ, ಮೆಲ್ಲನೆ, ನಡೆದುದೆಲ್ಲಮಂ
ನುಡಿದನಾದ್ಯಂತಮಂ. ಬಿಳ್ದಳೈ ಹಮ್ಮೈಸಿ
ಕೌಸಲ್ಯೆ, ತವಿಯೆ ಪುಣ್ಯಂ ಸ್ವರ್ಗಧಾಮದಿಂ    ೩೦
ಮರ್ತ್ಯಸೀಮೆಗೆ ಬೀಳುವಪ್ಸರೆಯವೋಲ್. ಕೆಡೆದ
ಪಡೆದಮ್ಮನಂ ನೆಗಹಿ, ಕುಳ್ಳಿರಿಸಿ, ಸತ್ಕರಿಸೆ
ಮೈತಿಳಿಯುತಾಕೆ ರಯ್ಯನೆ ರಾಮಚಂದ್ರಂಗೆ :
“ಮಗನೆ, ಕೈಕೆಯ ಕುವರನಿಗೆ ರಾಜ್ಯಸಂಪದವೆ ?
ಹಳುವವೆ ಗತಿಯೆ ನಿನಗೆ ? ಕೆಟ್ಟೆನೈ ನಾನೆನ್ನಂ
ಕೈಬಿಟ್ಟರೆಲ್ಲರುಂ, ಓ ಕಂದ ಲಕ್ಷ್ಮಣಾ !
ಬಾ ತಂದೆ, ನೀನಾದೊಡಂ ಬಾಳ್ಗಡರ್ಪಾಗಿ
ಕಾಪಿಡೆನ್ನಂ ! ಕೇಡದೇನನಾಂ ಕೋರಿದೆನೊ
ಪೋದ ಜನ್ಮದೊಳಾರ್ಗೆ ? ಸತ್ಪುರುಷನಾವಂಗೆ
ಬಗೆನೋಯುವಂತೆ ನುಡಿದೆನೊ, ದೇವ? ಓ ವಿಧಿಯೆ,   ೪೦
ನಿನ್ನ ಗರಗಸಕಿನಿತು ಕರುಳಿಲ್ಲ ? ಕಂದನಂ
ಪೆತ್ತು ಪಡುವಳಲಿಗಿಂ ಬಂಜೆತನಮಿನಿದಲ್ತೆ !
ವತ್ಸ ! ವತ್ಸಾ !” ಮುಂದೆ ನುಡಿ ಹೊಮ್ಮಲಾರದಿರೆ
ಕಾಕುತ್ಸ್ಥನೆರ್ದೆಗೆ ಪಣೆಯಂ ತಗುಳ್ದಳಾ ತಾಯಿ.
ಮತ್ತಿನಿತನಂತರಂ ಚೇತರಿಸಿ ತೋಡಿದಳ್
ತನ್ನಾತ್ಮಮಂ :
“ತನ್ನುಸಿರನಡವಿಗಟ್ಟುತೆ ಒಡಲ್
ಮನೆಯೊಳೆಂತಿರ್ಪುದಯ್ ? ತೊಡೆಯ ತೊಟ್ಟಿಲೊಳಿಟ್ಟು
ಪಾಲೆರೆದು ಕರುವಿಟ್ಟು, ತೂಗಿ ಜೋಗುಳವಾಡಿ
ಲಾಲಿಸಿದ ಪಾಲಿಸಿದ ನಿನ್ನ ಮೆಯ್ಯಿದನೆಂತು
ಪೇಳ್ ಕಾಂತಾರ ರಾಕ್ಷಸಿಗೆ ತುತ್ತುಗೂಳ್ ಕೊಡಲಿ?      ೫೦
ಕರುಣೆಯಂ ದೂರೆಗೆಯ್ದೀ ನಿನ್ನ ಪರದೇಶಿಯಂ
ತಾಯಿಯಂ ತಳ್ಳದಿರೊ ಚಿಂತಾ ನರಕ ಚಿತೆಯ
ಪುತ್ರ ವಿರಹದ ಚಿತ್ರಭಾನುವಿಗೆ ! ದಾಶರಥಿ,
ಹೆತ್ತ ತಾಯನೆ ತೊತ್ತುಗೈದೀ ಧರ್ಮಬುತ್ತಿಯಂ
ಕಟ್ಟಿ ಕಾಡಿಗೆ ಹೊತ್ತುಣುವ ಬುದ್ಧಿಯಂ ಮಾಣ್ದು,
ಕಿರುವೆಂಡಿತಿಗೆ ಮಾರುವೋದ ನಿನ್ನಯ್ಯನಂ
ತಿದ್ದಿ, ಕಾಪಿಡು ಕುಲದ ಬಾಳ್ವೆಯಂ, ಕೀರ್ತಿಯಂ !
ನೀನಡವಿಗೆಯ್ದುವೊಡೆ ನಾನುಮೆಯ್ದುವೆನೊಡನೆ,
ಕರುಗೂಡಿ ನಡೆವ ಗೋವಂತೆ!”
ಬಳಿ ನಿಂದಿರ್ದ
ಊರ್ಮಿಳೇಶಂ ತನ್ನ ದೊಡ್ಡಮ್ಮನೆಂದುದಂ    ೬೦
ಸಮ್ಮತಿಸುವೋಲ್, ಬೆಂಕೆಯಾದನೆನೆ ತಾನನ್ನೆಗಂ
ತಡೆದ ಕೋಪದ ತೀಕ್ಷ್ಣತೆಗೆ, ನುಡಿದನಿಂತೆಂದು;
“ತಾಯಿ, ಕಾಮಾಂಧವಶನಾಗಿ ಲಂಪಟನೊರ್ವ
ಮತಿಗೆಟ್ಟ ಮುಪ್ಪುದೊರೆ ಹೆಂಗುಸೊರ್ವಳ ಪದಕೆ
ದಾಸನಾಗುರುಳಿದರೆ, ಪೂಜ್ಯನೀ ರಾಮಚಂದ್ರಂ
ರಾಜ್ಯಮಂ ತ್ಯಜಿಸಿ ವಿಪಿನಾಂತರದ ವಾಸಮಂ
ಕೈಕೊಳ್ವುದೇಕೆ ? ತೆಗೆ ತೆಗೆ ! ಧರ್ಮಮಿಲ್ಲದಾ
ನೀಚ ನೃಪನಂ ಪ್ರಜಾಶಕ್ತಿ ಸಂಹರಿಪಂತೆ
ಕೊಲೆಗರ್ಹನಲ್ತೆ ನಾಣಿಲಿ ತಂದೆ? ಪಿತನಾದೊಡೇಂ ?
ಚಪಲ ಮತಿ ಗೌರವಾರ್ಹನೆ ? ಶಾಸನಾರ್ಹಂ ! -        ೭೦
ಕೇಳಗ್ರಜಾತ, ನೆರವಾದಪೆನ್ ನಿನಗೆ ನಾಂ.
ನಿನ್ನೊಡನೆ ನಾಂ ಬಿಲ್ವಿಡಿದು ನಿಲಲ್, ನೋಳ್ಪೆನಾಂ
ಸಾಕೇತ ಸಿಂಹಾಸನಕೆ ಸೆಣಸಿ ನಿಲ್ವರಾರ್ ?
ಸಾತ್ವಿಕಕೆ ಸಮಯಮಲ್ತಿದು, ತಾಯಿ, ರೋದನವನಿನ್
ಮಾಣ್ ! ರಾಮವನವಾಸಮೆಂಬುದದು ಸಿಡಿದೊಡೆದ
ದಶರಥನ ತಲೆಯ ದುಃಸ್ವಪ್ನಮಾತ್ರಂ !”
“ಹೆತ್ತುದಾ
ಹೆಂಗರುಳ್ ನೋವಿಂದೆ ಮುಂಗಾಣದಿರೆ, ನಿನಗೆ
ಮತಿಗೇಡಿದೇನ್, ಸೌಮಿತ್ರಿ ?” ರಾಮನೆಂದನ್ ತಡೆದು
ತಮ್ಮನಂ, “ನೀನತಿ ಮಹಾ ಪರಾಕ್ರಮಿಯೆಂಬುದಂ
ಬಲ್ಲೆನಾಂ. ನನಗೆ ಕೊರೆಯೆಂದರಿತೆಯೇಂ ವಿಕ್ರಮಂ ?
ಗುರು ಕರುಣೆಯಿಂ ಕಲಿತ ಬಿಲ್‌ಬಿಜ್ಜೆಯಿಂದೆನಗೆ
ದುಸ್ಸಾಧ್ಯಮಿಹುದೆ ಪೇಳ್ ನರಸುರಾಸುರ ಲೋಕ
ಮೇಖಲಾ ಮಧ್ಯದೊಳದೇನಾದೊಡಂ ? ನನಗೆ
ಧರ್ಮಮಂ ಬಿಟ್ಟನ್ಯ ಸಿರಿಯಿಲ್ಲ. ಧರ್ಮ ಸಹಿತಂ
ವಿಪಿನಮರಮನೆ; ಧರ್ಮ ರಹಿತಮೀ ರತ್ನಮಯ
ರಾಜಸೌಧಂ ಶ್ಮಶಾನಕೆ ಮಿಗಿಲ್ ಭೀಕರಂ. -
ಮತ್ತೊಂದನೊರೆವೆನಾಂ : ಮುನಿಯದಿರ್, ಸೌಮಿತ್ರಿ.
ಬರಿದೆ ಬಯ್ವುದೆ ತಂದೆಯಂ, ತಿಳಿಯದಾಂತರ್ಯಮಂ ?
ಕೋಸಲದ ನೆಲದ ದೊರೆತನವೆನಗೆ ದೊರೆಯದಿರೆ
ಕೇಡೆಂದು ಬಗೆಯದಿರ್ : ಲೇಸನೆಸಗುವ ವಿಧಿಗೆ           ೯೦
ಬಹುಪಥಗಳುಂಟು ನಡೆಯಲ್. ಇಂದಿನಿಷ್ಟಮೆಯೆ
ಮುಂದನಿಷ್ಟಕೆ ಹೇತುವಪ್ಪಂದದಿಂ, ಇಂದಿನ
ಅನಿಷ್ಟಮೆಯೆ ತೊಟ್ಟಿಲಾಗದೆ ಮುಂದಣಭ್ಯುದಯ
ಶಿಶುಗೆ? ಕೀರ್ತಿ ಲಭಿಪುದು ಮುಂದೆ, ನಾನೀ ಪೊಳ್ತು
ತೊರೆವ ರಾಜ್ಯಕೆ ನೂರುಮಡಿ ಶಾಶ್ವತದ ಸಿರಿಯ
ಸಾಮ್ರಾಜ್ಯಮಹುದೆನಗೆ. ನಿತ್ಯಮೆನ್ನಂ ಕರೆವ
ಕನಸೊಂದನೊರೆವೆನಾಲಿಪುದು. ಏನೆಂದರಿಯೆನಾಂ.
ಗೋಚರಿಸುತಿವೆ ಕಡಲ್ ಕಾಡುಗಳ್, ತರತರದ
ಪ್ರಾಣಿಗಳ್, ಪರ್ವತಶ್ರೇಣಿಗಳ್. ದಿನದಿನಂ
ಗಿರಿಸದೃಶ ಭವ್ಯನೊರ್ವಂ ಮಹಾವಾನರಂ    ೧೦೦
ಬೆಳೆಬೆಳೆಯುತಾಕಾಶ ಚುಂಬಿ ಶೈಲಾಗ್ರದೊಳ್
ವಿಸ್ತೃತವ್ಯೋಮ ಪಟಕೆದುರಾಗಿ ನಿಂದೆನಗೆ
ಕೈವೀಸಿ ಕರೆಯುತಿರ್ಪನ್ ದಕ್ಷಿಣಾಪಥಕೆ.
ಮನಮರಿಯದದರರ್ಥಮಂ; ತುಡಿವುದಾತ್ಮವಾ
ದೆಸೆಗೆ. ಆ ಕರೆಯ ಕೂರ್ಮೆಯೆ ಇಲ್ಲಿ ನಮ್ಮ ಬಾಳಂ
ಕಡೆದು ತೆರೆತೆರೆಯೆಬ್ಬಿಸಿರ್ಪುದೆನೆ, ದೈವಮಂ
ಮೀರ್ವರಾರ್ ?”
ಅಣ್ಣನಂ ನುಡಿಯಲೀಯದೆ ಮುಂದೆ,
ಮದ್ದಾನೆ ಸೊಂಡಿಲಂ ತೂಗಿ ಬೀಸುವ ತೆರದಿ
ತೊನೆದು ತೋಳಂ ಲಕ್ಷ್ಮಣಂ :
“ಸಾಲ್ಗುಮೀ ಭ್ರಾಂತಿ,
ಕನಸಿನ ಮತ್ತೆ ದೈವದಾ ! ವೀರ ರಘುಕುಲಜ ನೀಂ,      ೧೧೦
ಬಿದಿಪಣೆಯ ಬರೆಪವನೊರಸಿ ಮರಳಿ ಬರೆಯಲ್ಕೆ
ಕಲಿಯಾಗಿಯುಂ ನುಡಿದೊಡಿಂತು ನಗೆಗೀಡಲ್ತೆ?
ಹೇಡಿಗಳಿಗುಚಿತಮಾ ಸೊಲ್; ತಗದು ಧೀರರ್ಗೆ.
ಪುರುಷಕಾರಮೆ ಬಿದಿಗೆ ಬಾಳುಸಿರ್. ಶೌರ್ಯಮಿರೆ
ಕೃಪಣವಿಧಿ ಮುಕ್ತಹಸ್ತಂ. ಧರ್ಮಮೇನಿಲ್ಲಿ,
ಕೈಕೆ ದಶರಥರಿರ್ವರೊಳಸಂಚು ತೋಡಿದೀ
ನರಕದಲಿ? ಮುಳ್ಗೆ ಮುಳ್ಳೆಯೆ ಮರ್ದ್ದು; ಬೇರಿರದು
ಭೇಷಜಂ. ದುರ್ವಿಧಿಯನಡ್ಡಗಟ್ಟುವೆನಿಂದು,
ನೀಡಾಜ್ಞೆಯಂ! ತಿವಿಯುತಂಕುಶದ ಮೊನೆಯಿಂದೆ
ಮಾವುತಂ ಮದಕರಿಯನೆಂತು ತನ್ನಿಚ್ಛೆಯಾ   ೧೨೦
ಮಾರ್ಗಕೆ ಮರಳ್ಚುವನೊ ತಾನಂತೆವೊಲ್ ದೈವವಂ
ಜುಟ್ಟುವಿಡಿದೆಳೆತರ್ಪೆನೊಳ್ವಟ್ಟೆಗಿಂದು ! ನೀಂ
ನೋಡುತಿರ್.”
ಲಕ್ಷ್ಮಣನ ಬಳಿಗೆಯ್ದಿ, ಮುಡುಹಿನೊಳ್
ಕೈಯಿಟ್ಟು, ಸೋದರನ ವಾದವನೊರಸುವಂತೆ
ತಾನವನ ಕಣ್ಬನಿಯನೋವುತೊಯ್ಯನೆ ನೀವಿ,
ರಾಮನೆಂದನು ಕಿರುನಗೆಯ ತುಟಿಯ ಕೊಂಕಿಂದೆ :
“ದೈವಮಂ ಮುಂದಲೆವಿಡಿದು ತರುಬುವದಟಿರ್ಕೆ,
ಅವರಜನೆ. ಮೇರೆಯಿದೆ ಮರ್ತ್ಯದ ಪರಾಕ್ರಮಕೆ.
ಮರ್ತ್ಯದಾಳ್ ಬಿದಿಯೊಡನೆ ತಾಂ ನಡೆಯುವನ್ನೆಗಂ
ಕಲಿ; ಬಿಂಕದಿಂ ಬಿದಿಗಿದರ್ ಮಲೆಯೆ ಬಲಿ, ಕೂಡೆ         ೧೩೦
ತಾನದರ ಚಕ್ರಶೈಲತೆಗೆ. ಪಾಯದಿರು ತಲೆ
ಬಲ್ಲಿತೆಂದರೆಬಂಡೆಯಂ. ದುಡುಕದಿರು, ತಮ್ಮ.
ಪಿತನ ದೌರ್ಬಲ್ಯದೊಳೆ ಕಾಣ್ ವಿಧಿಯ ವಿನ್ಯಾಸಮಂ.
ನಿನ್ನ ಮಾತನೆ ಕೇಳ್ದು, ಬಂದೆಡರನೆಲ್ಲಮಂ
ಗೆಲ್ದು, ಸಿಂಹಾಸನವನಡರೆ ನಾಂ, ನೆಮ್ಮದಿಯೆ ಪೇಳ್
ಕೋಸಲಕೆ? ನಮ್ಮ ನಮ್ಮಂತಃಕಲಹದಗ್ನಿ ತಾಂ
ಸುಟ್ಟುರುಹದಿಹುದೆ ನಾಡನಿತುಮಂ? ಕಾಡಿಂಗೆ
ನಾನೊರ್ವನಾಗುವುದು ಲೇಸೊ? ಯುಗಯುಗಗಳಿಂ
ರವಿಕುಲದರಸುಗಳ್ಗೆ ನಚ್ಚುನೆಲೆವೀಡಾದ
ನಾಡಿದೆಲ್ಲಂ ತವಿದು ಕಾಡಾಗುವುದು ಲೇಸೊ?            ೧೪೦
ನಾಡ ಹಿರಿಯೊಳ್ಪಿಗೋಸುಗಮೆ ಬಲಿಗೊಡುವೆನಯ್
ನಾನೆನ್ನ ಕಿರಿಯೊಳ್ಪನಾನಂದದಿಂ. ನೀನದಕೆ
ನೆರವೀಯವೇಳ್ಕೆನಗೆ, ಸೋದರನೆ. ತೊರೆ ರಭಸಮಂ.”
ನಾಗಸ್ವರಂಗೇಳ್ದ ನಾಗರನ ತೆರನಾಗಿ
ಹೆಡೆಮುಚ್ಚಿತೊಯ್ಯನೊಯ್ಯನೆ ಮೊಗಕೆ ಹದಗೆಂಪು
ಕಾಯ್ಪಿತ್ತ ಮುನಿಸು ಲಕ್ಷ್ಮಣಗೆ. ಜಾನಕಿಯ ಪತಿ
ಕುರಿತು ಕೌಸಲ್ಯೆಯಂ : “ನೀನಳಲದಿರು, ತಾಯೆ;
ಕಿರಿದು ಬೇಗನೆ ಮುಗಿಸಿ ಬರ್ಪೆನೆಂಟಾರಲಾ
ವನವಾಸಮಂ. ಸತಿಗೆ ತನ್ನ ಪತಿಯಂ ತ್ಯಜಿಸಿ
ಬಾಳ್ವುದರಮಲ್ತು, ಮುಪ್ಪಡಸಿದೆನ್ನಯ್ಯಂಗೆ     ೧೫೦
ಶುಶ್ರೂಷೆವೇಳ್ಕುಂ. ನನ್ನೊಲ್ಮೆಗೇಂ ಕಡಿಮೆ,
ಹೇಳವ್ವ, ನಿನಗೆ ಬಾಲರ್ಷಿ ಭರತನ ಕೂರ್ಮೆ ?
ನಾನಿಲ್ಲದಂದು ನೂರ್ಮಡಿಯಾಗಿ ನಳನಳಿಸಿ
ತಳಿರುತದು ಮುತ್ತಿ ಮುದ್ದಿಸದಿಹುದೆ ? ನಿನ್ನಂ?-
ಹೋಗಿಬರುವೆನು ಹರಕೆಗೈ, ತಾಯೆ; ದುಃಖಿಸದೆ
ಹರಕೆಗೈ. ಕೋಸಲಕ್ಷೇಮಕ್ಕೆ ಹರಕೆಗೈ.
ರವಿಕುಲದ ಜಸಕಾಗಿ ಹರಕೆಗೈ. ಸತ್ಯಕ್ಕೆ,
ಧರ್ಮಕ್ಕೆ, ಪಿತೃವಾಕ್ಯಪರಿಪಾಲನಕ್ಕೆ ಮೇಣ್
ನಿನ್ನೀ ಕುಮಾರನಾತ್ಮೋದ್ಧಾರಕೋಸುಗಮೆ
ಹರಕೆಗೈ; ಹರಕೆಗೈ ! ಹೋಗಿಬರುವೆನು, ತಾಯೆ,         ೧೬೦
ಹರಕೆಗೈ! ಬೇಡುವೆನು ಕೈಮುಗಿದು, ಕಾಲ್ಮುಟ್ಟಿ,
ನಿನ್ನಡಿಯ ತಾವರೆಗೆ ಮುಡಿಚಾಚಿ; ಹರಕೆಗೈ!”
ಮುದ್ದು ಮಗನಂ ತೋಳ್ಗಳಿಂ ಬಾಚಿದಳ್ ತಬ್ಬಿ.
ಕಣ್ಣೀರ ಧಾರೆಯನೆರೆದು ತಳಿದಳಾ ತಾಯಿ
ಮಂಗಳಾಶೀರ್ವಾದ ಶೇಷೆಯಂ, ಆಲಿಸಿದ
ವಿಶ್ವದ ಚರಾಚರಂ ರೋಮಾಂಚಕಂಚುಕಿತ
ಗಾತ್ರಮಪ್ಪಂತೆ :
“ಜೈಸುಗೆ ವಿಧಿಯ ವಜ್ರೇಚ್ಛೆ !
ಗೆಲ್ಗೆ ನಿರುತಂ ಋತಂ ! ಜಗದೀಶ ಕೃಪೆಯೆನಗೆ
ದಯೆಗೆಯ್ಗೆ ! ಗೆಲಮಕ್ಕೆ ದೇವರ್ಕಳೆಲ್ಲರ್ಗೆ !
ಜಯಮಕ್ಕೆ ಮಾತೃವೊಲ್ಮೆಯ ಮಹತ್ ಪ್ರಾರ್ಥನೆಗೆ !   ೧೭೦
ಓ ಧರ್ಮದೇವತೆಯೆ, ಮಗನೀತನೆನ್ನವಂ;
ನಿನ್ನಂಕಪರ್ಯಂಕದೊಳಗಿಟ್ಟು ಕಳಿಪೆನಾ
ಹೇರಡವಿ ಪೊಡವಿಯ ಹುಲಿಯ ಹೊಡೆಗೆ. ಪಾಲಿಸೌ
ಪರದೇಶಿಯಂ ! ನೀನೆ ತಾಯಮ್ಮ ತಬ್ಬಲಿಗೆ,
ನನ್ನ ಕಂದಗೆ, ರಾಮಚಂದ್ರಂಗೆ !- ನಡೆ, ಮಗನೆ,
ತಡೆಯಲಾರ್ಪೆನೆ ನಿನ್ನನಾಂ ? ನದಿಯನಚಲಾದ್ರಿ
ಪಡೆದು ತಡೆದೊಡೆ ನಿಲ್ವುದೇಂ ಶರಧಿಯಾತ್ರೆಯಂ ತಾಂ
ಕುದಿದು ಕೈಕೊಳದೆ? ತಾಯೊಲ್ಮೆಯಿದು ಕಿರಿದಲ್ತೆ
ನಿನ್ನ ಹಿರಿಬಾಳ್ಗೆ ! ಸಿರಿವೊಳೆವೆತ್ತ ಗಿರಿಶಿಖರಿ
ಕರುಬಲೇವುದು ವಾರ್ಧಿಯಂ? ಜಗಜ್ಜೀವನಂ  ೧೮೦
ಕರೆಯುತಿರೆ ಕೈವೀಸಿ, ತಡೆಯಲಾರ್ಪಳೆ ತಾಯಿ
ತಾನಬಲೆ ನಿನ್ನಂ ? ಹೆತ್ತಾವೊತ್ತೆ ಶಂಕಿಸಿದೆ
ನಾನಿದಂ ! ಪಕ್ಷಿಶಿಶು ಮೊಟ್ಟೆಯನೊಡೆಯುತೆಂತು
ಗರಿಗೆದರುತಾಗಸದ ಸಾಹಸಕೆಳಪುದಂತೆ
ಮನೆಯೊಲ್ಮೆ ತಾಯೊಲ್ಮೆ ನಾಡೊಲ್ಮೆಗಳನೊಡೆದು
ಕಾಡಿಗೈದುವ ನೆವವನೊಡ್ಡಿ ಹಾರುವೆಯಿಂದು,
ಬಿಂದು ಸಿಂಧುವ ಸೇರುವೋಲಂತೆ ! ತೆರಳಯ್ಯ,
ತೆರಳೊ ! ಪದಿನಾಲ್ಕರವಧಿಯ ಮುಗಿಸಿ ಮರಳಯ್ಯ,
ಮರಳೊ ! ಬೇಗನೆ ಮರಳೊ ! ಸೊಗಮಕ್ಕೆ, ಗೆಲಮಕ್ಕೆ,
ನಿನಗೆನ್ನ ಕಂದಯ್ಯ ! ನೀನಾವ ಧರ್ಮಮಂ    ೧೯೦
ಗುರಿಗೆಯ್ದು ಹೊರಟಿಹೆಯೊ ಆ ಧರ್ಮದೇವತೆಯೆ
ರಕ್ಷೆಯಾಗಲಿ ನಿನಗೆ ! ನೀಂ ಪೂಜೆಗೈದಿರ್ಪ
ದೇವಾನುದೇವತೆಗಳೆಲ್ಲರೂ ನಿನಗಕ್ಕೆ
ರಕ್ಷೆ ! ಮಾತಾಪ್ರೀತಿ, ಪಿತೃಭಕ್ತಿ, ಜನರೊಲ್ಮೆಗಳ್
ಚಿರಂಜೀವವಮಂ ನಿನಗೆ ದಯೆಗೆಯ್ಗೆ ! ಗಿರಿವನಂ
ಪಕ್ಷಿ ಪನ್ನಗರೆಲ್ಲರುಂ ರಕ್ಷೆಯಕ್ಕಯ್ ನಿನಗೆ !
ರಕ್ಷಿಸಲಿ, ಹಗಲಿರುಳು ಬೈಗುಬೆಳಗುಗಳಿನಂ
ಶಶಿ ತಾರೆ ಸಪ್ತರ್ಷಿಮಂಡಲಂ ಶ್ರುತಿಚಯಂ
ದಿಕ್ಪಾಲ ದೇವದಾನವರೆಲ್ಲರುಂ ರಕ್ಷಿಸಲಿ !
ಕ್ರಿಮಿ ಕೀಟ ಕಪಿ ಚೇಳುಗಳ್ ಹುಲಿ ಸಿಂಹನೆಕ್ಕಲಂ        ೨೦೦
ಕಾಳ್ಕೋಣ ಮೊದಲಪ್ಪ ವಿಷಜಂತು ಕೋಳ್ಮಿಗಂಗಳ್
ಕಾಪಾಡಲೀ ನನ್ನ ಮೊಲೆವಾಲ ಮೂರ್ತಿಯಂ,
ರವಿಕುಲ ಲಲಾಮನೀ ರಾಮಾಭಿರಾಮನಂ !
ಮಗುವು ಮಜ್ಜನಕಿಳಿಯುವಂದು, ಜಲದೇವಿಯರೆ,
ಮಕರ ನಕ್ರಗಳಿಂದೆ ರಕ್ಷಿಸಿಂ ! ರಕ್ಷಿಸಿಂ
ಕಾಂತಾರದಧಿದೇವಿಯರೆ, ಕಂದನಡವಿಯೊಳ್
ಪುತ್ತಿನೆಡೆ ಪವಡಿಸಿರೆ; ಮತ್ತೆ ಮರಗಳ ಕೆಳಗೆ
ತಂಪುನೆಳಲೊಳ್ ಮಲಗಿರಲಕ್ಕೆ ! ತಾಯೊಲವಾಣೆ
ನಿಮಗೆ, ಓ ಸಿಡಿಲ್ಮಿಂಚು ಬಿರುಗಾಳಿಗಳೆ, ಕೇಳಿಮ್:
ಹೆತ್ತು ಹೊರೆದೀ ಹೃದಯದಭಿಶಾಪ ನಿಮಗಕ್ಕೆ ೨೧೦
ಹಸುಳೆ ರಾಮಗೆ ನಿಮ್ಮ ಕತದಿಂದೆ ಭವಿಸಿದಡೆ
ಕೇಡು ! ಓ ವಿಧಿಯೆ, ಹೇ ಸರ್ವಲೋಕಪ್ರಭೂ,
ಕೊಳ್ಳಿದೊ ನಿವೇದಿಸುವೆನೆನ್ನಾತ್ಮದೊಲುಮೆಯಂ
ರಾಮ ಮಂಗಲ ಕಾರಣಂ ತವಚರಣ ತಲಕೆ!”
ಪರಸಿ ಮಗನಂ ಪ್ರದಕ್ಷಿಣೆವಂದು, ಪ್ರೇಮದಿಂ
ಬಿಗಿದಪ್ಪಿ, ಮುದ್ದಿಸಿ ಪುನಪ್ಪುನಂ, ಮೈಮರೆವ
ಮಾತೆಯ ಪದದ್ವಯಂಗಳಿಗೆ ಪಣೆಯಿಟ್ಟೊತ್ತಿ
ಪೊಡಮಟ್ಟು, ತುಳ್ಕಿಬಂದಳ್ಕರೆಯ ದುಕ್ಕಮಂ
ಕಾಣಿಸದ ಸಂಯಮದ ಶೀಘ್ರತೆಯಿನಲ್ಲಿಂದೆ
ಬೀಳ್ಕೊಂಡನೈದಿದನ್ ಕಾಂತೆಯಂತಃಪುರಕೆ !
ಪ್ರಿಯನ ಪಟ್ಟಾಭಿಷೇಕೋತ್ಸವದ ಸಂಭ್ರಮಕೆ,  ೨೨೦
ಸುರಚಾಪಲತೆಗಳಂ ತಿರಿತಂದು ವೃಂದಮಂ
ರಚಿಸಿದೊಲೆಸೆವ ವಿವಿಧ ವರ್ಣಗಂಧಂಗಳಿಂ
ಶೋಭಿಪ ಕುಸುಮರಾಶಿಗಳ್ ಬಳಸೆ, ತಾನೊಂದು
ಗುರುತಿಸಲ್ಕಸದಳಂ ಸುಮರಾಶಿಯೆಂಬಂತೆ
ಮೆರೆದಿರ್ದು, ಸೀತಾಳಿದಂಡೆವೂ ಮಾಲೆಯಂ
ಕಟ್ಟುತಿರ್ದಾಕೆ, ಚರರಿಲ್ಲದೊರ್ವನೆ ಬಂದ
ಪ್ರಾಣೇಶನಂ ಕಂಡು, ಬಿಲ್ಲುಂ ಬೆರಗುಮಾಗಿ,
ರಿಕ್ತಾಗಮನ ಖಿನ್ನತೆಗೆ ಕಾರಣಂ ಕೇಳೆ,
ಪೇಳ್ದನಿನಕುಲ ಸೂನು ಜಾನಕಿಗೆ : “ಪ್ರಿಯೆ, ನನಗೆ       ೨೩೦
ಸಂಪ್ರಾಪ್ತಮಾಗಿದೆ ವನವ್ರತಂ. ಬೆದರದಿರ್
ಧೀರ ರಾಜರ್ಷಿಸುತೆ. ಸದ್ವಂತ ಸಂಜಾತೆ,
ಸೀತೆ, ನೀನಾಕ್ರೋಶಗೊಳ್ಳದಿರ್. ಶಾಂತಿಯಂ
ತಳೆದು ಧೈರ್ಯಂಗೆಡದೆ ಪತಿಗೆ ನೆರವಾಗಿ, ಸತಿ,
ಪೊರೆ ಧರ್ಮಮಂ. ನೀನೆ ಸಹಧರ್ಮಿಣಿಯೆನಲ್ಕೆ
ಹೃದಯಧರ್ಮಕೆ ಹೃದಯಮಲ್ತೆ?” ಎನುತೊಯ್ಯನೆಯೆ
ಮುಂಗುರುಳನೆಳವಿ ಕದಪಂ ಸವರಿ ಸಂತೈಸಿ,
ನಡೆದುದೆಲ್ಲವನೊರೆದನಾದ್ಯಂತಮಂ. ಕೇಳ್ದು,
ಮೆಲ್ಲೆಲರಿಗೊಲೆವ ತಳಿರಂತಿನಿತು ತುಟಿನಡುಗೆ
ನುಡಿದಳಾ ಕ್ಷಮೆಯ ಸುತೆ, ನಲ್ಲನಿನಿಗಂಗಳಿಗೆ ೨೪೦
ಜೇನಿಳಿವ ಕಂಗಳಿಂದಾಲಿಂಗನಂ ಗೆಯ್ದು :
“ನಿನ್ನನಲ್ಲದೆ, ನಲ್ಲ, ಕೋಸಲ ನೆಲವನಲ್ಲ
ನಾನೊಲ್ದುದಂದು. ಮೇಣಿಂದಿಗುಂ ಮನೆಯೆನಗೆ
ರಮಣನೆರ್ದೆಯಲ್ಲದೆಯೆ ಮಾವನರಮನೆಯಲ್ತು.
ನೀನಿರಲ್ಕೆನ್ನೊಡನೆ ನಾಡಾದರೆಂತಂತೆ
ಕಾಡಾದೊಡಂ ಸುಖಿಯೆ ನಾಂ. ದುಃಖಿ ನಿನಗಾಗಿ.
ನಿನ್ನ ನೋವಿಂಗಳಲ್‌ಕೆಯೆ ಹೊರತೆನಗೆ ಬೇರೆ
ಸಂಕಟದ ಸೋಂಕೆಲ್ಲಿ ?”
“ನಿಲ್ ನಿಲ್, ಮಂಗಳಾಂಗಿ,
ರಾಮಂಗೆ ವನವಾಸಮಿನ್ನುಳಿದವರ್ಗಲ್ತು.”
“ರಾಮನರ್ಧಾಂಗಿ ಸೀತೆಗೆ ಬೇರೆತನವಿಲ್ಲ.     ೨೫೦
ಪತಿಯ ಸುಖದುಃಖದರ್ಧಂ ಸತಿಗೆ.”
“ಕೇಳ್, ಜಾನಕಿ,
ನೀನತ್ತೆ ಮಾವಂದಿರಂ ಸೇವಿಸುತ್ತೀಯೆಡೆಯೆ
ಧರ್ಮಮಾಚರಿಸುತಿರ್ಪುದೆ ಪರಮ ಕರ್ತವ್ಯಂ.”
“ಪತಿಸೇವೆಗಿಂ ಮಿಗಿಲ್ ಸೇವೆಯಿಲ್ಲಂಗನೆಗೆ.
ರಾಜರ್ಷಿ ತಂದೆಯುಂ, ಗುರುಗಳುಂ, ಧರ್ಮಮಂ
ಬೋಧಿಸಿಹರೆನಗೆ.”
“ಮೈಥಿಲಿ, ನೀನಡವಿಗೆನ್ನೊಡನೆ
ಹಿಂಬಾಲಿಪೊಡೆ ಕಠಿನವಹುದೆನ್ನ ಜೀವನಂ
ನಿನ್ನ ರಕ್ಷೆಯ ಭಾರದುದ್ವೇಗದಿಂ. ಸುಕುಮಾರಿ,
ನೀನರಿಯೆ ವಿಪಿನವಾಸದ ಭಯಂಕರತೆಯಂ,
ಘೋರಮಂ, ಕ್ಲಿಷ್ಟಕಷ್ಟಂಗಳಂ ಮೇಣ್ ನಷ್ಟಮಂ.”        ೨೬೦
“ಸ್ತ್ರೀಮಾತ್ರಳಂ ಭೀರುವಂ ಕೂಡಿ ಕಾಡಿನೊಳ್
ಬಾಳ್ವುದೆಂತೆಂದು ಶಂಕಿಸದಿರೈ. ಹೇಡಿಗಳ್
ಹಿಂಜರಿವರಾದಡೆಲೆ ವೀರಪುರುಷೋತ್ತಮನೆ,
ಶಸ್ತ್ರಾಸ್ತ್ರಮಂತ್ರವಿದ್ಯಾಪ್ರವೀಣಂ ನಿನಗೆ, ಕೇಳ್,
ಪೆಣ್ಣೊರ್ವಳೊಲಿದಳಂ ರಕ್ಷಿಪ್ಪುದೇಂ ಕರಿಗೆ
ತೃಣಕಣದ ಭಾರಕೆಣೆಯಲ್ತೆ? ಕೇಳ್ ಪೂಣ್ಕೆಯಂ :
ನಿನ್ನ ನೆಳಲೆಂತು ನಿನ್ನಡಿಗೆ ತೊಡಕಾಗದೆಯೆ
ನಿನ್ನನೊಡವರ್ಪುದೇಗಳುಮಂತುಟೆಯೆ ವಲಂ
ಬಂದಪೆನ್, ಪಾದಪೂಜೆಯ ಸೇವೆಗೋತನುದಿನಂ
ಕೈಂಕರ್ಯವೆಸಗಿ. ಪೇಸಿದಪೆನಮರರ ಸುಖಕೆ            ೨೭೦
ನಿನ್ನನುಳಿದಾಂ, ಪ್ರಿಯನೆ; ಮಾವನರಮನೆ ಸೊಗದ
ಮಾತಿರಲಿ!…. ಹೆದರದಿರು ಹೆಣ್ಣೆಂದು : ನಿನ್ನ ಕಣ್,
ಬಗೆಗೆ ನಾಲಗೆಯಾಗಿ, ಸೂಚಿಸುತ್ತಿಹುದೆನಗೆ
ನಿನ್ನೆದೆಯ ಶಂಕೆಯಂ. ಪತಿವ್ರತಾಧರ್ಮಮಂ
ಕೈಕೊಂಡು, ನಿಯಮ ವಜ್ರದೊಳಿಂದ್ರಿಯಂಗಳಂ
ಬಿಗಿದು ದೃಢಮನದಿ, ಸೇವಿಪೆ ನಿನ್ನನ್, ಅವಚತ್ತು
ರಾಜೋಪಭೋಗ ಸರ್ವಸ್ವಮಂ! ಬದುಕುವೆನ್
ಹಣ್ಣುಹಂಪಲು ಕಂದಮೂಲಂಗಳನೆ ತಿಂದು;
ಮತ್ತಾವ ತೆರದೊಳುಂ ನಿನಗಡಚಣೆಯನೀಯೆನ್.
ನಿನ್ನೊಡನೆ ಬಾಳ್ವ, ನಿನ್ನೊಡನಲೆವ, ಮೇಣಂತೆ           ೨೮೦
ನಿನ್ನಯ ಸರಂಗೇಳ್ವ ಸೌಭಾಗ್ಯವೊಂದದುವೆ
ಸಾಲ್ಗೆನಗೆ !”
“ಕೋಮಳೆ, ಲತಾಂಗಿ, ತಳಿರಡಿಯ ನೀಂ
ಬಿಸರುಹ ಶರೀರೆ ! ಕಲ್ಮುಳ್ಳಿಡಿದ ಕಾನನಂ
ಕಣ್ಗೆ ದೂರಕೆ ನುಣ್ಪುದೋರ್ದಡಂ, ಬಾಳ್ಕೆಗತಿ
ದಾರುಣಂ. ಕವಿಯ ವರ್ಣನೆಯಲ್ತು ಕಾನನಂ!
ನಿನ್ನಂ ಪೊರೆಯಲಾರೆನೆಂದಲ್ತು; ಪೇಳ್ದಪೆಂ
ನಿನ್ನ ಹಿತಮಂ : ವ್ಯಾಘ್ರ ಭಲ್ಲೂಕ ಹರ್ಯಕ್ಷ
ವಿಷಧರೋರಗ ಭೀಷಣಂ ಕೇಳ್ ಮಹಾಟವಿ !
ಮೇಘಚುಂಬಿತ ಗಿರಿಯ ಚೂಡದಿಂದಾರ್ಭಟಿಸಿ
ದುಮ್ಮಿಕ್ಕುವರ್ಬಿಯಾಘಾತದಿಂ ಭೀಷ್ಮವಹ     ೨೯೦
ಜಲಪಾತ ವ್ರಾತಂಗಳಿಂ ಭೀಕರಮರಣ್ಯಂ !
ಪಗಲೊಳಂ ನಾದಮತಿ ಕರ್ಕಶ ಭಯಂಕರಂ;
ಅಂತೆ ಮೇಣ್ ಇರುಳೊಳು ಘೋರಾಂಧಮದ್ಯಮಂ
ಪೀರ್ದು ಮೂರ್ಛೆಗೆ ಸಂದ ಮೌನಮತಿ ನಿಷ್ಠುರಂ,
ಕಠಿನಂ, ಭಯಾನಕಂ, ಹೃದಯಭಾರಂ, ಮಹಾ
ಕ್ರೂರಂ ! ಅಂಗನೆ, ಬೇಸಗೆಯೊ ದವಾನಳನಿಂದೆ,
ಮಳೆಗಾಲವೆಡೆಬಿಡದೆ ಹಿಡಿದು ಹೊಡೆಯುವ ಜಡಿಯ
ಕರೆಕರೆಯ ಕಾಟದಿಂದಪಸಹ್ಯಮಲ್ತೆ ? ಆ
ಕೆಸರಿನಲಿ ಮುಳ್ಳಿನಲಿ ಹಳ್ಳಕೊಳ್ಳಂಗಳಲಿ
ಪಗಲೆಲ್ಲಮಂ ಬಟ್ಟೆಯರಿಯದ ಪಳುವದಲಿ ಸುತ್ತಿ          ೩೦೦
ಬಳಲಿ ಬರೆ, ಮಲಗುದಾಣಂ ತೊಯ್ದೆರೆಯ ಸಜ್ಜೆ !
ಬೆಂದ ಷಡುರಸದುಣಿಸೆ ? ಕೇಳ್, ಕರುಳ್ ಕೊರೆವವೊಲ್
ಕುಳಿರಿಡಿದ ಪಣ್‌ಪಳಂ ಗೆಡ್ಡೆಗೆಣಸೆಯೆ ತಿನಲ್
ಗತಿ ! ಲಲಿತೆ, ಹಾಸಲರುವೆಗಳೆಲ್ಲಿ? ಚಳಿವೊಳ್ತು
ತಾನಡಿಯಿಡಲ್ ಹೊದೆವುಡೆಗಳೆಲ್ಲಿ? ಸುಖಲೇಶಮುಂ
ಸುಳಿಯದತಿಕಠಿನಕ್ಕೆ, ರಾಜಪುತ್ರಿ, ಲತಾಂಗಿ,
ನಿನ್ನನೆಂತೊಯ್ದಪೆನ್ ಪೇಳ್ ?”
ವರ್ಣನಂಗೇಳ್ದಾ
ಪತಿವ್ರತೆ ನಸುನಗುತ್ತೆ ಮಾರ್ನುಡಿಯನಿತ್ತಳೈ,
ವಾದಂ ನಿರಾಯುಧಂ ತಾನಾಗಿ, ಸೋಲೊಪ್ಪುವೋಲ್
ದಾಶರಥಿ: “ನೆತ್ತರೀಂಟುವ ಜಿಗಣೆ, ಮೇಣ್ ಕರ್ಕಶಂ     ೩೧೦
ಕೂಗಿಡುವ ಜೀರುಂಡೆಗಳನೇತಕುಳಿದೆ ಪೇಳ್?
ಕರುಣಾಳಲಾ ! ಕೊರ್ವಿದಾ ಪೆರ್ವಾತುಗಳ್ಗಾಂ
ಬೆದರ್ವಂತುಟಣುಗಿಯೇಂ? ಕೇಳ್, ಹೃತ್ಕಮಲ ಕರುಣರವಿ,
ನಿನ್ನ ಬಣ್ಣನೆಗೇಳ್ದು ಕಾತರಿಸುತಿದೆ ಮನಂ
ಕಾಂತಾರ ರಸಕ್ಕೆಳಸಿ ! ಮನದನ್ನ, ನನ್ನುಸಿರ್
ನಿನ್ನುಸಿರೊಳೊಂದಾದುದೆಂದು ನಿನ್ನಂಗಮಂ
ಕಂಡೆನಾ ಮೊದಲ್‌ಗೊಂಡು, ಬೆಚ್ಚೆರಡು ಬಾಳ್ಗಳಂ
ಬೆಸುಗೆಗೆಡಿಸೇಕೆ ಬೇಳುವೆಯೆನ್ನ ಬರ್ದುಕಿದನ್?
ತಂದೆತಾಯ್ಗಳನಗಲುತೆಲ್ಲವೂ ನೀನೆಂದು
ಕೈವಿಡಿದು ನಂಬಿದೀ ದೀನಾರ್ತೆಯಂ, ಕರುಣೆ,            ೩೨೦
ತೊರೆಯದಿರ್.”
ಬಾಷ್ಪನೈವೇದ್ಯದಿಂ ಪ್ರಾರ್ಥಿಸಿದ
ಭೂಜಾತೆಯಂ ಸೀತೆಯಂ ಸಂತಯ್ಸುತಿಂತು
ನುಡಿದನ್ ದಿನೇಶಕುಲಸಂಭವಂ : “ದುಗುಡಮಂ
ಬಿಡು, ನಲ್ಲೆ, ನೀನೆನ್ನುಸಿರ್‌ಗುಸಿರ್ ! ಬರ್ದುಕುವೆನೆ ಪೇಳ್
ಬಿಟ್ಟೊಡುಸಿರಂ? ಜೀವಮೆನ್ನದು, ಜನಕಜಾತೆ,
ನಿನ್ನ ರೂಪದ ತಾವರೆಯ ನಿತ್ಯಲೋಕದಲಿ
ವಿಹರಿಸುತ್ತಿದೆ ಮಧುಕರ ಪತಂಗದೋಲಂತೆ.
ಮಧು ಮಧುರ ಸೌಂದರ್ಯಮಕರಂದ ಸುಧೆಯೀಂಟಿ
ಸವಿಯುತಮೃತತ್ವಮಂ, ನಿನ್ನನುಳಿದೆನಗಾವ
ಸಗ್ಗಮುಂ ರುಚಿಸದೆಲೆ ತನ್ವಂಗಿ. ದಿವಮಲ್ತೆ,    ೩೩೦
ನೀನಿರಲ್ಕೆನ್ನ ಬಳಿ ವನವಾಸ ನರಕಮುಂ ?
ಲೋಕಮೋಹಕ ನೇತ್ರೆ, ಬಿಸುಗಂಬನಿಯ ಸೂಸಿ
ಬೇಯಿಸದಿರೆನ್ನಾತ್ಮಮಂ : ಸಲ್ಗೆ ನಿನ್ನಿಚ್ಛೆ !
ಬನಕೈದಲನುವಾಗು, ಹೇಮಸುಂದರ ಗಾತ್ರೆ,
ದಾನಗೈದೆಮ್ಮಿರ್ವರೊಡವೆ ಹಾಸಗೆಯುಡುಗೆ
ಸರ್ವಮಂ ದೀನರಿಗೆ, ದೆಸೆಗೆಟ್ಟರಿಗೆ, ಮತ್ತೆ
ಪೂಜ್ಯರಿಗೆ.” ಮೋಹದಿಂ ಮುದ್ದಿಸಿ ಕಳುಹಲಾಕೆ
ಪೆರ್ಚುತೆ ಸೊಗಂಬರಿದು ತಮ್ಮಿರ್ವರನಿತುಮಂ
ಕರೆ ಕರೆದು ಪಸುಗೆ ತೊಡಗಿದಳಮಿತ ಸಂಭ್ರಮದಿ !
ಕೇಳ್ದದಂ ಸೌಮಿತ್ರಿ ಪಿರಿಯಣ್ಣನಡಿಗೈದಿ,         ೩೪೦
ಮರನ ಬುಡದಲಿ ನೆಳಲ್ ಬೀಳ್ವಂತೆ ಕಾಲ್ಗೆರಗಿ,
ಮೇಲೇಳ್ದನಿಲ್ಲ, ತನ್ನಂ ಜೊತೆಗೆ ಬನಕುಯ್ಯೆ
ರಾಮನೇಗೊಳುವನ್ನೆಗಂ, ಪರ್ವಿತರಮನೆಗೆ,
ಪುರಕೆ, ನಾಡಿಗೆ, ವಾರ್ತೆ : ರಾಮನೊಡನೆಯೆ ಸೀತೆ
ಲಕ್ಷ್ಮಣರುಮಡವಿ ಸೇರ್ದುಪರೆನುತೆ ! ಪರಿದುದಯ್
ರೋದನದಿ ನದಿಯೆ ಮುಪ್ಪುರಿಗೊಂಡು ನೆರೆಯೇರ್ದವೋಲ್.
ಮಡದಿಯಂ ತಮ್ಮನಂ ತನ್ನೊಡನೆ ಬನಕುಯ್ಯಲಾ
ರಾಜಾಜ್ಞೆಯಂ ಪಡೆಯಲೋಸುಗಂ ರಾಮಚಂದ್ರಂ
ಸೀತೆಲಕ್ಷ್ಮಣರೊಡನೆ ತಂದೆಯೆಡೆಗೈದಿದನ್
ದಶರಥಪ್ರಿಯತನೂಜಂ. ಕಂಡೊಡನೆ ಕುವರನಂ        ೩೫೦
ಸಂತಾಪಕಲುಷೇಂದ್ರಿಯಂ, ಭೀತಿವಿಕ್ಲಬಂ,
ನಿಸ್ತೋಯಕಾಸಾರದೊಲ್ ರಿಕ್ತಮಾನಸಂ,
ಸಾಂದ್ರ ಭಸ್ಮಾಚ್ಛನ್ನ ಶಿಖಿಯೊಲಳಿತೇಜಸಂ
ಕೋಸಲ ಧರಾವಲ್ಲಭಂ ಮಗನನಪ್ಪಲ್ಕೆಳಸಿ
ಮೇಲೆಳ್ದುಮಿರದೆ ಕುಸಿದನು ಧರೆಗೆ ಮೂರ್ಛೆಯಿಂ
ತೊನೆದು. ಸೀತಾರಾಮಲಕ್ಷ್ಮಣರ್ ವೃದ್ಧನಂ
ಪರ್ಯಂಕಕೆತ್ತಿ ಸಂತೈಸುತಿರೆ, ವರ್ಧಿಸಿತೊ
ನೂಪುರ ರವಂವೆರಸಿ ಸ್ತ್ರೀಜನಾಕ್ರಂದನಂ,
ಪುಷ್ಯಪ್ರಭಾತದೊಳ್ ಕ್ರೌಂಚಪಕ್ಷಿಯ ಪಂಕ್ತಿ
ನೆರೆದು ಮುಗಿಲೆತ್ತರದಿ ದನಿಸಂತೆಗೈವಂತೆವೋಲ್ !    ೩೬೦
ಮತ್ತೆ, ದೊರೆ ಮುಚ್ಚೆತಿಳಿದೆಚ್ಚತ್ತು, ತನುಜನಾ
ಕೇಳ್ಕೆಗತಿ ಕಷ್ಟದಿಂ ಕರ್ಬುನಂ ಭಾರಕ್ಕೆ
ಬಾಗುವೋಲೊಪ್ಪಿ, ಮಂತ್ರಿ ಸುಮಂತ್ರನಂ ಕರೆದು :
“ಚತುರಂಗ ಸೈನ್ಯಮಂ, ಪರಿವಾರಮಂ, ಧನಿಕ
ವರ್ತಕವ್ರಾತಮಂ, ಕಾಡ ಪರಿಚಯವುಳ್ಳ
ಬೇಡವಡೆಯಂ, ಚತುರ್ದಶ ವತ್ಸರಂಗಳ್ಗೆ
ಬೇಳ್ಪನಿತುಮಾಹಾರ ಭೋಗ ಸಾಮಗ್ರಿಯಂ
ಕಂದನೊಡನೆಯ ಕಳುಹಿಸಾತಂಗೆ ಕಾನನಂ
ಕೋಸಲಕ್ಕಿಂ ಸುಖದಮಪ್ಪಂತೆ.” ಕೇಳ್ದದಂ
ಕುಬ್ಜೆ ಕೈಕೆಯ ಮೊಗವನಿಂಗಿತದಿ ನೋಡುತಿರೆ,           ೩೭೦
ತಿಳಿದದಂ, ರಾಮನೆಂದನು ಮಂದಹಾಸದಿಂ
ಬೆಳಗಿ ಹೃದಯಂಗಳಂ :
“ತಪದ ಸಂಪದಕಾಗಿ
ವಿಪಿನಕೈದುತಿರೆ, ಸೇನೆಯ ಸೇವೆ ತಾನೇಕೆ ?
ಧನಿಕ ವರ್ತಕರೇಕೆ? ಮೇಣ್ ಬೇಡಪಡೆಯೇಕೆ ?
ನೀಡನಿತುಮಂ ಭರತ ಸೋದರಗೆ. ಮೇಣೆಮಗೆ
ನಾರುಮಡಿಯಂ ಬಿಟ್ಟು ಬೇಡಮಿನ್ನಾವುದುಂ.
ನೀಡುವೊಡೆ, ಕಾಡಿನೊಳ್ ಕಂದಮೂಲವನಗೆಯೆ
ಕುದ್ದಾಲವೊಂದಿರಲಿ. ಕೊಡಿಮೊಂದು ಬುಟ್ಟಿಯಂ
ಪಣ್‌ಫಲಂಗಳನಾಯ್ದು ತುಂಬಲ್ಕೆ.” ಕೇಳ್ದದಂ,
ಕೈಂಕರ್ಯಮಂ ಸಲ್ಲಿಪೋಲ್, ಕುಬ್ಜೆ ಸಂಭ್ರಮದಿ          ೩೮೦
ತಂದು ನೀಡಿದಳೊಡನೆ ನಾರುಡೆಯನೆಲ್ಲರುಂ
ಶಪಿಸುತ್ತಿರಲ್ಕೆ. ತಾನುಟ್ಟಮಲ ವಸ್ತ್ರಮಂ
ಕಳಚಿಟ್ಟು ರಾಮನಾ ವಲ್ಕಲವನುಡಲಂತೆ
ಗೈದನ್ ಸುಮಿತ್ರಾತ್ಮಜಂ ಪುಟ್ಟಿದಂದಿನಿಂ
ಪಟ್ಟೆಯ ದುಕೂಲಮಂ ಬಿಟ್ಟುಳಿದ ಬಟ್ಟೆಯಂ
ತೊಟ್ಟಳಲ್ಲದ ಬಾಲೆ, ಮಿಥಿಳೇಂದ್ರ ಸಂಭವೆ,
ತಪಸ್ತೇಜದಿಂ ಮುಂದೆ ನಿಂದಿನಿಯನಂ ನೋಡಿ,
ಕೆಚ್ಚನೆರ್ದೆಗೊತ್ತಿ, ನಾರುಡೆಗಳಂ ತೆಗೆದೆತ್ತಿ
ತೊಡಲರಿಯದೆಯೆ ಕೆಮ್ಮನಿರೆ, ಇತ್ತ ತಾರೆಂದ
ಪತಿಗೆ ನೀಡಿದಳದಂ, ತಾನರಿಯದುದರಿಂದೆ   ೩೯೦
ತುಡಿಸಿ ಮನ್ನಿಪುದೆಂದು ಕಣ್ಣಿಂಗಿತದಿ ಬೇಡಿ.
ತುಡಿಸುತಿರೆ ರಘುಕುಲೇಶಂ ಸತಿಗೆ ನಾರುಡೆಗಳಂ,
ಕಂಡ ಕೌಸಲೆಗುಕ್ಕಿ ದುಕ್ಕಮಳ್ತಳ್ ಮೊಗಂ
ಪುದುಗಲಂಜಲಿಗೆ. ಮಂಥರೆ ಗೆಂಟರೊಳ್ ನಿಂದು
ಸಂಕಟವನೀಕ್ಷಿಸಿರ್ದಳ್ ವಿಕಟ ಕಂಟಕಿತೆ !
ರಾಜಧಾನಿಯ ಮೇಲೆ ಹೇಮಸುಂದರಿ ಸಂಧ್ಯೆ ತಾಂ
ಮಿರುಪ ಕುಂಕುಮದೋಕುಳಿಯನೆಂದಿನಂದದೊಳೆ
ಪೊನ್ನ ಜೀರ್ಕೋವಿಯಿಂ ಸಿಂಚನಂಗೈದಳೆನೆ
ರಂಜಿಸಿತು, ಹೊಮ್ಮಂಜು ಹಬ್ಬಿದಂದಿ ಹಬ್ಬುತಾ
ಕೊಟ್ಟಿಗೆಗೆ ಬಹ ತುರು ಸಮೂಹದ ಖುರಂಗಳಿಂ           ೪೦೦
ಕಣ್ಗೊಳಿಸುತೇರ್ದ ಗೋಧೂಳಿ. ಆ ಧೂಳಿಯಂ
ಮೀರ್ದದಕ್ಕೆದುರಾಗಿ ಪರಿದುಬಂದಾ ಬೇರೆ
ಕೆಂಧೂಳಿವೊನಲನೊಂದಂ ಕಂಡಾ ಕೃಷೀವಲಂ,
ಬೇಸಾಯದಾಯಾಸದಿಂ ಬಳಲಿ ಗುಡಿಸಲ್ಗೆ
ತನ್ನಾರಿನೆತ್ತುಗಳೊಡನೆ ಪಿಂತಿರುಗುತಿರ್ದ
ಪೊಲದೊಕ್ಕಲಿಗನೊರ್ವನಚ್ಚರಿವಡುತೆ, ತನ್ನ
ತಲೆಯ ಹುಲ್ಲಿನ ಹೊರೆಯನಿಳುಹಿ ಹೆದ್ದಾರಿಯೆಡೆ,
ನಿಂದನಾಲಿಸುತೆ ತೇರ್ಗಾಲಿಗಳ ಪೇರುಲಿಗೆ
ಮತ್ತೆ ಗೋಳಿಡುವಾಳ್ಗಳುಲಿಗೆ. ನೋಡುತ್ತಿರಲ್
ಕಣ್ಗೆವಿಳ್ದತ್ತು ಭೋಂಕನೆಯೆ, ನಡೆಗೊಂಡುದೋ            ೪೧೦
ಸಾಕೇತ ಪತ್ತನಮೆನಲ್ಕೆ, ಪೆರ್ವಟ್ಟೆಯಂ
ತುಂಬಿ ತುಳ್ಕುತೆ ಬರ್ಪ ಸೋಜಿಗದ ಮೆರವಣಿಗೆ.
ರಥಮೊಂದೆ ಪರಿದೋಡುತಿರ್ದತ್ತದಂ ಬೆಂಬಿಡಿದು
ವಿವಿಧ ವರ್ಗದ ಮಂದಿ ಸಂದಣಿಸಿ ಪರಿದುದಯ್,
ಪುರ್ಚ್ಚಮರ್ದಂತೆ. ಕೆಲರೆದೆಬಡಿದು ಕೂಗಿದರ್.
ಕಿಳ್ತು ನವಿರಂ ಮುಡಿಗೆದರಿ ಗೋಳಾಡಿದರ್ ಕೆಲರ್.
ತೊಟ್ಟುಡುಗೆಯಂ ಪರಿದು ತತ್ತರಿಸಿದರ್ ಕೆಲರ್.
ಹೊಡೆಮೋದಿದರ್ ಕೆಲರ್. ವಿಸ್ಮಿತ ಕೃಷೀವಲಂ
ವಿಸ್ಮಯಸಮಾಧಿಯಿಂದೇಳ್ವನಿತರೊಳ್ ಮರೆಯಾಯ್ತು
ಚಿತ್ರಮಯದುನ್ಮಾದದುತ್ಸವಂ, ಪೊಳಲತ್ತಣಿಂ            ೪೨೦
ಪೊರಗಣ್ಗೆ ಪರಿದು.
ಮಂತ್ರಿ ಸುಮಂತ್ರನೆಸಗಲ್ಕೆ
ರಥಮಂ, ರಘೂದ್ವಹಂ ಸೀತೆಲಕ್ಷ್ಮಣರೊಡನೆ
ತೇರೇರಿ ಕಾಡಿಗೈದುತಿರೆ, ದಶರಥನೃಪಂ
ಪುರಜನಂ ಮತ್ತಮಂತಃಪುರ ಸ್ತ್ರೀಜನಂ,
ಕಣ್ಣ ಕಾರ್ಗಾಲದಿಂ ರೋದನ ಧ್ವಾನದಿಂ
ರಥ ಚಕ್ರ ಮೇಣಶ್ವಖುರಪುಟೋದ್ಧೂತಮಂ
ಧೂಳಿಯಂ ಮೇಣ್ ಚಕ್ರಚೀತ್ಕೃತಿಯುಮಂ ತವಿಸಿ,
ಪಿಂದೋಡಿದರ್, ಬೇಡಿ ಕೈ ನೀಡಿ. ಮುದಿಯರಸು
ವಾಯುವೇಗದಿ ಪರಿಯುತಿರ್ದಾ ರಥಜವಕೆ
ಜವಂಗುಂದಿ, ನಿಡುಸರದಿ ರಾಮನಂ ಕರೆದೊರಲಿ,       ೪೩೦
ರಥಜ ರಜಪಥವನೆವೆಯಿಕ್ಕದೀಕ್ಷಿಸುತೆ, ಕೇಳ್,
ನಿಂದನಲ್ಲಿಯೆ ಕಂಡರಿಸಿದಂತೆ. ನಿಟ್ಟಿಸಿರೆ
ನಟ್ಟಾಲಿ ಬೀಳ್ವಿನಂ, ದೂಳ್ಪಟ್ಟೆಯುಂ ಹಾ ಕಣ್ಗೆ
ಮರೆಯಾಯ್ತು : ಮರವಟ್ಟು ಬೀಳ್ದನಾ ಕೋಸಲೇಶಂ
ನಟ್ಟ ನಡುವೀದಿವಟ್ಟೆಯಲಿ ! ಕೌಸಲೆ ಕೂಡೆ
ಕಂಡೋಡಿ ಪಿಡಿದೆತ್ತಲಾ ಕೈಕೆಯಂ ಕಂಡು,
ಚೀರಿದನುರಿವ ಕೋಪಿ :
“ಬಳಿಸಾರದಿರ್, ಪಾಪಿ !
ಕಣ್ಪೊಲದೊಳಿರದೆ ಸಾಯ್ ! ತೊಲಗು ! ನೀನಿನ್ನೆನಗೆ
ಸತಿಯಲ್ಲ. ನಿನಗಾಂ ಪತಿಯುಮಲ್ಲ. ತರ್ಪಣಂ
ಕೊಟ್ಟೆನಿದೊ ನೀರೆಳ್ಳು ಕೊಳ್ !” ಎನುತೆ ಮುಷ್ಟಿಯಿಂ   ೪೪೦
ನೆಲದ ಧೂಳಿಯನೆತ್ತಿ ಬೀಸಿದನ್.
ದೊರೆಯಿಂತು
ಚಿತ್ತವೈಕಲ್ಯದಿಂ, ದುಃಖಡಾಕಿನಿಯಿಂದೆ
ಪೊಯ್ವಡೆದನೋಲ್, ಕಿಳ್ತು ನವಿರಂ ಶರೀರಮಂ
ವಸನಂಗಳಂ, ಚರಿಸೆ ಬಟ್ಟೆಬೆಂತರನಂತೆ,
ಕೌಸಲ್ಯೆ, ಲಕ್ಷ್ಮಣನ ತಾಯ್ವೆರಸಿ, ಸಾಸದಿಂ
ತಂದಳವನಂ ರಾಜಮಂದಿರಕೆ. ಶೂನ್ಯಮಂ
ಕಂಡು ಪಳಯಿಸುತಿರ್ದನಂ ಸಜ್ಜೆಗುಯ್ಯಲ್ಕೆ
ಹೊರಳಿದನು ಮರುಳಮರಿದವನಂದದಿ ನರಳ್ದು
ಸುಯ್ದು. ಕರೆದನು ರಾಮನಂ. ಕಂಡವರನೆಲ್ಲರಂ
ಜನಕಜಾವಲ್ಲಭಂ ಗೆತ್ತು, ತಬ್ಬುಗೆಗೆಳಸಿ,         ೪೫೦
ಮುನ್ ನುಗ್ಗಿ ಮಂಚದಿಂದುರುಳಿದನ್ ! ಕೈಕೆಯಂ
ಪಳಿದು, ಬಯಲಂ ನಿಟ್ಟಿಸಾಕೆಗಂಡವನಂತೆ
ಥೂಯೆಂಜಲುಗುಳುತ್ತೆ, ವಿಕಲಮತಿ ದಶರಥಂ
ಕಡುಭಯಂಕರನಾದನತಿಸನ್ನಿಯೇರ್ದನೋಲ್ :
ದವದ ದಳ್ಳುರಿ ದಹಿಸೆ ಬಿರುವೇಸಗೆಯ ಮಲೆಯ
ನೀರಸಾರಣ್ಯಮಂ, ಬೆಂಕಿಯ ಬೇಲಿ ಬಳಸಿ
ಬರೆ, ಕಿಚ್ಚುಗೋಂಟೆಯ ನಡುವೆ ಸಿಲ್ಕಿದೊಂದಾನೆ
ಮುಪ್ಪಿನಿಂದೋಡಲಾರದೆ ಹಿಂಡುದಪ್ಪುತ್ತೆ
ಘೀಂಕರಿಪುದೊರಲಿ. ದಾವಾಗ್ನಿ ಸುತ್ತಿಂದೊತ್ತಿ
ಮುತ್ತುವುದು, ತುತ್ತುಗೊಳ್ವಾತುರದಿ ಧಾವಿಸುವ          ೪೬೦
ಮಿತ್ತು ನೆತ್ತರ್‌ನಾಲಗೆಯ ಸೇನೆಯಂತೆ. ಆ
ಗಂಭೀರ ದಿಗ್ದಂತಿ, ತೊರೆದು ಗಾಂಭೀರ್ಯಮಂ,
ತರಳ ಚಂಚಲ ಚಿತ್ತದಿಂ ಬೀದಿವರಿವುದಯ್
ದೆಸೆದೆಸೆಗೆ. ಬಟ್ಟೆದೋರದಿರೆ, ಕವಿದಪುದು ಪೊಗೆ
ಕೆಟ್ಟಾಸೆಗತ್ತಲೋಲ್. ಮತ್ತೊಂದು ಮತ್ತೇಭದೊಳ್
ಭೀಮ ಧೂಮಸ್ತೋಮಮರೆಬಂಡೆಪಾಂಗುರುಳಿ
ಮೇಲ್ವಾಯೆ, ಮಲೆದೊಂದು ಮದಕರಿಗೆ ಕಾಳೆಗಂ
ಗೊಟ್ಟು ಮಾರ್‌ಮಲೆವಂತೆವೋಲ್ ಸೆಣಸಿ ಸೋಲ್ತುಸಿರಾರಿ
ಬೀಳುತಿರೆ, ಹೊಗೆಯಾನೆಯಿಂದುಗುವ ಮಿಂಚಿಂದೆ
ಸಮೆದ ಮೊನೆಯೀಟಿ ದಂತಗಳಂತೆ ಕೇಸುರಿಯ         ೪೭೦
ಜ್ವಾಲಾ ಕಠಾರಿಗಳ್ ತಿವಿಯೆ ಮೈಚರ್ಮಮಂ,
ಮರಸೊಂದುವುದು ವಾರಣಂ. – ಮೈಮರೆದನಂತೆವೋಲ್
ಸುತವಿರಹ ಸಂತಾಪದಗ್ಧ ವಸುಧಾಧಿಪಂ !
ಬೈಗುಗಪ್ಪಿಳಿಯುತಿರಲತ್ತ ರಾಮಂ ತನ್ನ
ರಥದ ಬೆಂಬಳಿವಿಡಿದು ಬರುತಿರ್ದ ಪೌರರಂ
ಪಿಂತಿರುಗಿಮೆಂದು ಬೇಡಿದೊಡಮದನೆರ್ದೆಗೊಳದೆ
ತೇರೊಡನೆ ಪರಿಯುತಿರಲವರಾಸೆಯೆಂಬಂತೆ
ಹಾದಿಗಡ್ಡಂ ಬಂದುದಾ ತಮಸೆ. ಮಸುಳ್ದುದು
ನಿಶಾಕೃತಿಯ ಮಸಿ ಸೂಸಿ ತೀರದ ವನಶ್ರೇಣಿ.
ಮಾರ್ಪೊಳೆಯೆ ಪೊಳೆಯೆದೆಯ ಕನ್ನಡಿಯೊಳಾಗಸದಿ   ೪೮೦
ಕಿಕ್ಕಿರಿದರಿಲ್‌ಚುಕ್ಕಿಗಳ್ ಖದ್ಯೋತಸಂಕುಲಂ
ವೆರಸಿ, ನಿಶ್ಶಬ್ದತೆಯ ಸಾಮ್ರಾಜ್ಯದಾಳ್ವಿಕೆಗೆ
ಶರಣಾಗೆ ಪೃಥಿವಿ, ಬೀಡಂ ಬಿಟ್ಟನಾ ನದಿಯ
ತಟದಲ್ಲಿ. ಮೂಡುಬಾನಿನ ಕರೆಯೊಳುಷೆವೆಣ್ಣು
ನಸುಗಣ್ದೆರೆವವೊಳ್ತು, ಮರಗಳಡಿ ಮಲಗಿಯುಂ
ನಿದ್ದೆಯಾಳದೊಳದ್ದಿ ಬಿದ್ದಿರೆ ದಣಿದ ಮಂದಿ,
ಸದ್ದಿಲ್ಲದೆಯೆ ತೇರನೇರಿ ನದಿಯಂ ಪಾಯ್ದು
ದಾಂಟಿ, ನಡೆದನು ರಾಮನಾ ಸ್ಯಂದನಂ ನಡಸೆ
ಮಂತ್ರಿ, ವಂಚಿತರಪ್ಪವೋಲಯೋಧ್ಯಾ ಜನಂ.
ಬನಮಲರ್ ತಂಬೆಲರ್ ಪೂವಿಸಿಲ್ ಪಕ್ಕಿಯುಲಿಗಳ್    ೪೯೦
ರಮಣೀಯ ತಮಸೆಯಂ ಕಮನೀಯಮಪ್ಪಂತೆ
ಗೆಯ್ಯೆ, ನಿದ್ದೆಯಿನೆದ್ದ ಮಂದಿ ರಾಮನನರಸಿ
ಕಾಣದಿರೆ, ಹಂಬಲಿಸಿ ಹುಡುಕಿ, ರೋದಿಸುತಿರದೆ
ಪಿಂತಿರುಗಿದರ್, ನೀರರತ ಕಡಲಂತೆವೋಲಿರ್ದ
ಸಾಕೇತಪುರಿಗೆ.
ನಾನಾ ವರ್ಣ ರಮಣೀಯ
ದಿನದೇವಿ ತಾಂ ಬಾಲಾರ್ಕ ಕಲಶದೀಪಂ ಬಿಡಿದು
ಹೊತ್ತರೆಯ ಹೊಸ್ತಿಲಂ ದಾಂಟುತಿರೆ, ಸೇರ್ದುದಾ
ತೇರಯೋದ್ಯೆಯ ನಾಡಿನೆಲ್ಲೆಯಂ. ಜನಕಜೆಗೆ
ಕಣ್ಗೆಡ್ಡಮಾಗೆ ಮರೆತುದು ಮನಂ ಕ್ಲೇಶಮಂ
ವನವಾಸದಾ :
ಕಣ್ಣು ಹೋದತ್ತಕಡೆ, ದಿಟ್ಟಿ   ೫೦೦
ಹೋಹನ್ನೆಗಂ ಹಬ್ಬಿ ಹತ್ತಿದ ಹಸುರು ಗದ್ದೆ,
ಬಿತ್ತರದ ತೋಂಟಸಿರಿ, ಬಗೆಯನೀಳ್ಕುಳಿಗೊಂಡು
ಚೆಲ್ಪಾಯ್ತು. ಜುಳಜುಳನೆ ಪರಿವ ಪರಿಕಾಲ್ಗಳೆಡೆ,
ಬೆಳೆವುಲ್ಲ ನಡುವೆ, ಮೊಳಕಾಲ್ ಮುಚ್ಚುವನ್ನೆಗಂ
ನಿಂದಿರ್ದ ಬೇಸಾಯಗಾರರಚ್ಚರಿವಡುತೆ
ದಿಟ್ಟಿಸಿರುತಿರೆ ಸಿರವನೆತ್ತಿ, ಪರಿದುದು ರಥಂ
ಹೇಮಲಿಪ್ತಂ ರತ್ನಖಚಿತಂ, ಪ್ರಭಾತದಾ
ನೇಸರ್ಗೆ ಪಡಿನೇಸರೊಲ್ ಪೊಂಗದಿರ್ಗಳಂ
ಕಾರಿ, ಮಿಂಚುತೆ ನೋಳ್ಪ ಕಣ್ಗಳಿಗೆ. ತೇಜಿಗಳ್
ಕಟವಾಯಿಯಿಂದೆ ಬೆಳ್ನೊರೆ ಸೂಸಿ, ಮೈ ಬೆಮರಿ,        ೫೧೦
ತಮ್ಮ ನೆಳಲಂ ತಾಮೆ ತುಳಿದು ಮುಂದೋಡುತಿರೆ
ಮಂಗಳಂಬೆತ್ತ ವೇದಶ್ರುತಿಯನುತ್ತರಿಸಿ;
ತೆಂಕಣದೆಸೆಗೆ ತಿರುಗಿ ಗೋ ಸಮೂಹದ ತಟದ
ಗೋಮತಿಯ ದಾಂಟಿ; ಬರ್ಹಿಗಳ ಕೇಕಾಧ್ವನಿಯ
ಕೊಂಚೆಯಂಚೆಗಳುಲಿಯ ಸುಂದರ ಸ್ಯಂದಿಕೆಯ
ಹಿಂದಿಕ್ಕಿ; ಮೈದೋರಿದುದು ಮುಂದೆ ಶೈವಲಂ
ಲವಲೇಶಮಿರದ ನಿರ್ಮಲ ಸಲಿಲ ಸುರಧುನೀ
ತ್ರೇತಾಯುಗದ ಗಂಗೆ : ವಿಷ್ಣುಪಾದಚ್ಯುತೆಯ,
ಶಂಕರ ಜಟಾಜೂಟ ವಿಗಳಿತೆಯ, ನೀರುಲಿಯ
ನೊರೆನಗೆಯ ಜಡೆವೊನಲ ತೆರೆನಡೆಯ, ಓರೊರ್ಮೆ     ೫೨೦
ಗಂಭೀರ ಘೋಷದೋರೊರ್ಮೆ ಭೈರವ ರವದ
ಗದ್ಗದ ನದದ್ಗಮ ಸಮುದ್ರನೃಪ ಮಹಿಷಿಯಂ,
ತೀರರುಹ ಫಲಪುಷ್ಪ ನವ್ಯ ಕಿಸಲಯ ರಮ್ಯ
ಗುಲ್ಮ ತರುಪಂಕ್ತಿ ಮಾಲಾ ಜಹ್ನುಜಾತೆಯಂ
ದರ್ಶಿಸಿದೊಡನೆ, ತೇರಿಳಿದು ಮಣಿದರೈ, ಪಣೆಗೆ
ತಿಲಕಮಿಡೆ ಮಣ್! ದಣಿದಶ್ವಗಳ್ಗೆ ನೀರಂ ತೋರ್ದು,
ಮೆಯ್‌ತಿಕ್ಕಿ ಮೀಯಿಸುತೆ, ಮರದಡಿ ನೆಳಲ್‌ತಣ್ಪಲೊಳ್
ಕಟ್ಟಿ, ಪಸಿವುಲ್ಗಳಂ ಕುಯ್ದಡಕಿದನ್ ಮಂತ್ರಿ.
ರಾಮನಿಂಗಳ ತರುವ ತಣ್ಣೆಳಲ್ ಮಡಿಲೊಳಗೆ
ಪವಡಿಸಿದನಾ ಸೀತೆಯೆಡೆಯೆ ಪಚ್ಚನೆ ನೆಲದ  ೫೩೦
ಮೇಲೆ. ಕೇಳ್ದಾ ವಾರ್ತೆಯಂ ಶೃಂಗಿಬೇರಪುರ
ನಾಮಧೇಯದ ಬೇಡರೂರಿಂಗರಸು ಗುಹಂ
ಬಂದನಲ್ಲಿಗೆ ಮನೋಮುದದಿ ಪಿರಿಯತಿಥಿಯಂ
ಸತ್ಕರಿಸೆ. ಮುಡಿಯಿಕ್ಕಿ ರಾಘವನ ಚರಣದೆಡೆ
ಕಾಣಿಕೆಯ ನೀಡಿದನು ತರತರದ ಪಣ್ಗಳಂ,
ಪೂಗಳಂ, ಮಾಂಸಾನ್ನಮಂ. ಭುಜಿಸಿ ಸರ್ವರುಂ
ತಣಿಯುತಂ, ತೊರೆಯ ತೀರದ ತಿರೆಯ ತೊಡೆಮೇಲೆ
ಮಗ್ಗುಲಿಕ್ಕುತೆ, ಕಳೆದರಾ ರಾತ್ರಿಯಂ ಸುಖದ
ನಿದ್ರೆಯಲಿ. ಮರುದಿನಂ ಕೋಕಿಲ ಭರದ್ವಾಜ
ಬರ್ಹಿ ಕೇಕಾ ಧ್ವನಿಗಳೊಡನೆ ಮೊಗಂದೋರುತಿರೆ,       ೫೪೦
ರಘುನಂದನೇಚ್ಛೆಯಂದದಿ, ಜಾಹ್ನವಿಯ ದಾಂಟೆ,
ಬಿಯದರೊಡೆಯಂ ಗುಹಂ ತರಿಸಿದನು ನಾವೆಯಂ,
ಪುಲಿ ಚಿರತೆ ಜಿಂಕೆಯ ತೊವಲ್ ಪೊಲಿದುದಂ. ಸೀತೆ ಮೇಣ್
ಲಕ್ಷ್ಮಣರನೇರಲ್ಕೆ ಬೆಸಸಿ, ತಾನೊಯ್ಯನೆಯೆ
ಪ್ರಿಯಮಂತ್ರಿಯೆಡೆಗೈದಿ, ಮೈದಡವಿ, ಸಂತೈಸಿ,
ಬೇಡಿದನು ಸಾಕೇತಪುರಿಗೆ, ದಶರಥನೆಡೆಗೆ,
ಕೌಸಲೆ ಸುಮಿತ್ರೆಯರ್ ಕೈಕೆ ಪುರಜನರೆಡೆಗೆ,
ತಮ್ಮೊಲ್ಮೆಯಂ ಪೊತ್ತು ನಡೆವಂತೆ. ರಥವಾಜಿ
ರಾಮನಂ ನೋಡುತಿರೆ ಪುಲ್ಮೇವನೇವಯಿಸಿ,
ನಡೆದನವರೆಡೆಗೆ. ಮೈ ಚಪ್ಪರಿಸಿ ಮುಂಡಾಡಿ  ೫೫೦
ನುಡಿಸಲಾ ಮೂಕಜಂತುಗಳುಮರಿತಂತೆವೋಲ್
ಕುಣಿದುವಯ್ ಕೆನೆದು, ಸಿರದ ಕೇಸರ ಚಮರಿಯಂ
ಬೀಸಿ. ತಾನಾ ಗುಹನೆ ಪುಟ್ಟೆಸಗುತಿರೆ, ದೋಣಿ
ಸೀತೆ ಲಕ್ಷ್ಮಣ ರಾಮರಂ ಪೊತ್ತ ಪುಣ್ಯಕ್ಕ
ಸಂಪದಕೆ ಪೆರ್ಮಗೆಂಬಂತೆ ತೆರೆಗಳ ಮೇಲೆ
ಕುಣಿಕುಣಿದು ತೇಲಿ ಸಾಗಿತು. ಪಟಂ ಸಂತಸಕೆ
ಡೊಳ್ಳೇರಿತೆನೆ ವಾಯುಹತಿಗುರ್ಬಿ. ನೋಡುತಿರೆ
ಮಂತ್ರಿ ದಡದಲಿ ನಿಂತು, ಬರಬರುತೆ ಕಿರಿದಾಗಿ,
ಕಡೆಗೆ ಕಣ್ಮರೆಯಾದುದಾ ದ್ರೋಣಿ, ಸೂಸಿರ್ದ
ಕಣ್ಬನಿಯ ಮರ್ಬಿನಲಿ. ಬಿಕ್ಕಿ ಬಿಕ್ಕಳುತಳುತೆ   ೫೬೦
ತೇರೇರಿ ಬಂದನು ಅಯೋಧ್ಯೆಗಾ ಸಚಿವೋತ್ತಮಂ,
ಮಸಣದಿಂ ಮಸಣಕೆ ಚರಿಪ್ಪೊಂದು ಬೆಂತರದವೋಲ್.
ನೀರವ ಧ್ಯಾನವಧೂ ಹೇ ಊರ್ಮಿಳಾ ದೇವಿ,
ಸೌಮಿತ್ರಿಯರ್ಧಾಂಗಿ, ಹೇಳು ನೀನೆಲ್ಲಿರ್ದೆ
ಕಡೆದ ಕಡಲೋಲಯೋಧ್ಯಾನಗರಿ ಮಸಗಿದಾ
ಕ್ರಾಂತಿ ದಿನದಂದು ? ನಿನ್ನೆರ್ದೆವೂವಿನಾ ವೇಧೆ
ಜಗುಳ್ದುದಿಲ್ಲವೆ ತುಳ್ಕಿ ನೇತ್ರಶತಪತ್ರದಿಂ ?
ಪೆಣ್ತನಂ ತಾನೆ ನೀನಲ್ಲದೂರ್ಮಿಳೆಯಲ್ತು :
ಪೆಣ್ಣೆಂಬ ತಪಕೆ ನೀಂ ನಿರುಪಮಪ್ರತಿಮೆಯೌ !
ಕಾಂತನೊಡನಿರ್ದು ಕಾಂತಾರವೈವಿಧ್ಯಮಂ  ೫೭೦
ಸವಿವ, ಲಂಕೆಯೊಳಿರ್ದು ಹದಿಬದೆಯ ಸಾಹಸದ
ರಸಕೆ ಬಾಳಂ ಬೇಳ್ವ, ದೇವ ಮಾನವ ಸಕಲ
ಲೋಕ ಸಂಸ್ತುತಿಯ ಬೆಂಬಲದ ಸೀತೆಯ ತಪಕೆ
ಮಿಗಿಲ್ ನಿನ್ನ ಅಖ್ಯಾತಮಾ ದೀರ್ಘ ಮೌನವ್ರತಂ,
ಮೂಕಸತಿ ಹೇ ಗೋಚರಾತೀತೆ ! ಕಲ್ಲಾಗಿ
ಬಿಳ್ದಹಲ್ಯೆಯ ಶಿಕ್ಷೆಗಿರ್ದತ್ತಚೇತನದ
ರಕ್ಷೆ : ನೀನುಸಿರೆಳೆದುಮರೆಬಂಡೆಯೋಲಂತೆ
ಪದಿನಾಲ್ಕು ಬರಿಸಮಾಶಂಕೆಯ ನಿರೀಕ್ಷಣೆಯ
ಭೀತಿ ಖಿನ್ನತೆ ಹತಾಶತೆಗಳೈವುರಿ ನಡುವೆ
ತಪವಿರ್ದುಮೊಡೆಯದಿರ್ದುದ ನೆನೆಯಲದೆ ಮಹಾ      ೫೮೦
ವ್ರತಮಪ್ಪುದಿತರ ಜೀವರಿಗೆ. – ಸೌಮಿತ್ರಿ ತಾಂ
ನಿನ್ನನುಮತಿಯನಣ್ಣನೊಡನಡವಿಗೈದಲ್ಕೆ ಪೇಳ್
ಬೇಡಿದನೆ? ಭ್ರಾತೃಭಕ್ತಿಯ ಸಂಭ್ರಮಾಧಿಕ್ಯದೊಳ್
ಪ್ರೀತಿಯಿಂ ಬೀಳ್ಕೊಳ್ವುದಂ ತಾಂ ಮರೆಯನಲ್ತೆ?
ಮರೆಯನೆಂದುಂ ಸುಮಿತ್ರಾತ್ಮಜಂ ! ಪೇಳ್ದನೇನಂ,
ಪೇಳ್, ಬನಕೆ ನಡೆವಂದು ? ಪೇಳ್ವಳೆಂತಯ್ ಮಂತ್ರಮಂ,
ತನ್ನ ಪತಿ ಗುರುತಪಕೆ ದೀಕ್ಷೆಯಿತ್ತುದನವಳ್,
ಸತಿ ಶಿರೋಮಣಿ, ಊರ್ಮಿಳಾದೇವಿ ? ಪ್ರಾಣೇಶ
ಲಕ್ಷ್ಮಣಂ ರಾಮ ಸೀತೆಯರೊಡನಯೋಧ್ಯೆಯಂ
ಬಿಟ್ಟಂದುತೊಟ್ಟು, ಸರಯೂನದಿಯ ತೀರದೊಳ್         ೫೯೦
ಪರ್ಣಕುಟಿಯಂ ರಚಿಸಿ, ಚಿರ ತಪಸ್ವಿನಿಯಾಗಿ
ಕಟ್ಟಿದಳ್ ಚಿತ್ತಪೋಮಂಗಳದ ರಕ್ಷೆಯಂ
ಮೈಥಿಲಿಗೆ ರಾಮಂಗೆ ಮೇಣ್ ತನ್ನಿನಿಯ ದೇವನಿಗೆ !

ಅಯೋಧ್ಯಾ ಸಂಪುಟಂ: ಸಂಚಿಕೆ 5- ಭರತಮಾತೆ >>>


*******

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ