ನನ್ನ ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-57

        ತೀರ್ಥಹಳ್ಳಿಯ ದೋಣಿಗಂಡಿಯಲ್ಲಿ ತುಂಗಾನದಿಯ ನೆರೆಯ ರಭಸಕ್ಕೆ ಸಿಕ್ಕಿ ಹುಲಿಯ ಕೊಚ್ಚಿಹೋದಂತೆ, ಮೇಗರವಳ್ಳಿ ಸೀಮೆಯ ಜನಮನದ ಹರಿಹೊನಲಿನಲ್ಲಿ ಕಂತಿ, ಗುತ್ತಿ ತಿಮ್ಮಿಯರ ನೆನಪೂ ಕೊಚ್ಚಿಹೋಯಿತು. ಯಾವುದು ನಡೆದಾಗ ತತ್ಸಮಯದಲ್ಲಿ ಬಹುಮುಖ್ಯವಾಗಿ ತೋರುತ್ತದೆಯೋ ಅದು ಸ್ವಲ್ಪಕಾಲ ಕಳೆಯುವುದರೊಳಗೆ ಅಮುಖ್ಯವಾಗಿ ತೋರತೊಡಗಿ ಕಡೆಗೆ ಮನದಿಂದಲೆ ಮಾಸಿಹೋಗುತ್ತದೆ. ಹಳೆಯ ನೀರು ಕೊಚ್ಚಿಹೋಗುವಂತೆ ಹೊಸ ನೀರು ನುಗ್ಗುತ್ತದೆ. ಇತರ ಘಟನೆಗಳು, ತತ್ಕಾಲದಲ್ಲಿ ಬಹಳ ಮುಖ್ಯವಾಗಿ ತೋರುವ ಸಂಗತಿಗಳು, ಹಳೆಯ ನೆನಪುಗಳನ್ನು ತಳ್ಳಿ ಅವು ಬಿಟ್ಟ ಜಾಗವನ್ನು ಆಕ್ರಮಿಸುತ್ತವೆ. ಹಾಗೆಯೆ ಗುತ್ತಿ ತಿಮ್ಮಿಯರ ಪರಾರಿಯ ಸಂಗತಿಯನ್ನು ತಳ್ಳಿ, ಹೂವಳ್ಳಿಯ ಮದುವೆಯಲ್ಲಿ ಹೆಣ್ಣು ಕಾಣೆಯಾದದ್ದು, ಮತ್ತು ಸಿಂಬಾವಿ ಭರಮೈಹೆಗ್ಗಡೆಯವರು ತಮ್ಮ ಬಾವ ಹಳೆಮನೆಯ ಹೆಂಚಿನಮನೆಯ ಶಂಕರ ಹೆಗ್ಗಡೆಯವರ ಮನೆಗೆ ಆ ರಾತ್ರಿಯೆ ಮದುಮಗನ ವೇಷದಲ್ಲಿಯೇ ಹೆಂಡತಿ ಜಟ್ಟಮ್ಮನೊಡನೆ ಹೋಗಿದ್ದು, ಮತ್ತು ಮರುದಿನವೆ ಹಾಸಗೆ ಹಿಡಿದಿದ್ದ ಮುದುಕ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರೊಡನೆ ಪ್ರಸ್ತಾಪಿಸಿ, ತಿಮ್ಮಪ್ಪಹೆಗಗ್ಗಡೆಗೆ ತಮ್ಮ ತಂಗಿ ಲಕ್ಕಮ್ಮನನ್ನು ಕೊಡುವಂತೆಯೂ, ತಾವು ಅವನ ತಂಗಿ ಮಂಜಮ್ಮನನ್ನು ತಂದುಕೊಳ್ಳುವಂತೆಯೂ ನಿಶ್ಚಯ ಮಾಡಿದ್ದು, ಮೊದಲಾದ ಸಂಗತಿಗಳು ಜನಮನವನ್ನು ಕೆಲವು ಕಾಲ ಆಕ್ರಮಿಸಿದ್ದುವು. ಪಿಜಿಣನ ಆತ್ಮಹತ್ಯೆಯಂತಹ ಯಃಕಶ್ಚಿತ ವಿಷಯ ಸಣ್ಣ ಪುಟ್ಟ ಜನಗಳ ಮನಃಪ್ರಪಂಚದಲ್ಲಿ ಸ್ವಲ್ಪ ಕಲ್ಲೋಲಗಳನ್ನೆಬ್ಬಿಸಿದ್ದರೂ ದೊಡ್ಡವರಾರೂ ಅದನ್ನು ಅಷ್ಟಾಗಿ ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲ. ಕೋಣೂರು ರಂಗಪ್ಪಗೌಡರಿಗೆ ಮಾತ್ರವೆ ಪಿಜಿಣನ ಸಾವು ಸ್ವಲ್ಪ ಆತಂಕಕರವಾಗಿತ್ತು. ಆದರೆ ಅವರು ಅವನ ಹೆಂಡತಿ ಅಕ್ಕಣಿಯನ್ನು ಮನೆಗೆ ಕರೆಯಿಸಿ, ಪಿಜಿಣನ ಸಾಲದ ಲೆಖ್ಖವನ್ನು ಹೇಳಿ, ಅದನ್ನು ದುಡಿದು ತೀರಿಸುವಂತೆ ತಾಕೀತು ಮಾಡಿ, ದೀನ ದುಃಖಿನಿಯಾಗಿದ್ದ ಅವಳಿಂದ ಧರ‍್ಮಸ್ಥಳದ ದೇವರ ಮೇಲೆ ಆಣೆ ಹಾಕಿಸಿಕೊಂಡು, ತಮ್ಮ ಹಣ ಮುಳುಗಿ ಹೋಗುವ ಭಯದಿಂದ ತಕ್ಕಮಟ್ಟಿಗೆ ಪಾರಾಗಿದ್ದರು.

ಮಳೆಗಾಲ ಹಿಡಿದಿದ್ದುದರಿಂದ ಬೇಸಾಯಗಾರರ ಗಮನವೆಲ್ಲ ಅಗೋಡಿಯ ಮೇಲೆಯೂ, ಉಳುವುದು ಬಿತ್ತುವುದು ಅಂಚು ಕಡಿಯುವುದು ಗೊಬ್ಬರ ಹರಗುವುದು ಬೇಲಿ ಕಟ್ಟುವುದು ಒಡ್ಡು ಹಾಕುವುದು ಇತ್ಯಾದಿ ರೈತ ಕರ್ತವ್ಯಗಳ ಮೇಲೆಯೂ, ಕೂಣಿ ತಯಾರಿಸುವುದು, ಕೂಣಿ ಹಾಕುವುದು, ಹಳ್ಳಕ್ಕೆ ಯಾಪೆ ಕಟ್ಟುವುದು, ಹತ್ತು ಮೀನು ಕಡಿಯುವುದು ಮೊದಲಾದ ಮೀನು ಬೇಟೆಯ ಮೃಗಯಾವ್ಯಸನದಲ್ಲಿಯೂ ಆಸಕ್ತವಾಗಿತ್ತು. ಮೈಬೆವರಿ ದುಡಿವ ಗೆಯ್ಮೆಯ ನಡುನಡುವೆ ತುಸು ವಿರಾಮ ದೊರೆತಾಗ ಮಾತ್ರ, ಊಟಕ್ಕೆ ಉಪ್ಪಿನಕಾಯಿ ಬಾಳೆಲೆಯ ಮೂಲೆಯಲ್ಲಿ ಇರುವ ಹಾಗೆ, ಪರಚರ್ಚೆ ಪರನಿಂದೆಗಳು ಇರುತ್ತಿದ್ದುವಷ್ಟೆ! ಕಿತಾಪತಿಯ ವ್ಯಾಪ್ತಿಗೆ ಜಿಹ್ವಾಚಪಲತೆಯ ವಲಯವನ್ನು ದಾಟಿ ಕರ್ಮರಂಗಕ್ಕಿಳಿಯುವಷ್ಟು ಪುರಸತ್ತೂ ಇರುತ್ತಿರಲಿಲ್ಲ!
ಹೂವಳ್ಳಿ ವೆಂಕಟಣ್ಣ ಮದುವೆಯಂತಹ ಮಂಗಳ ಕಾರ್ಯದ ಸಮಯದಲ್ಲಿ ಆಕಸ್ಮಿಕವೆಂಬಂತೆ ತೀರಿಕೊಂಡದ್ದು ವ್ಯಸನದ ವಿಷಯವಾಗಿದ್ದರೂ ಅವನ ಸಾವೆ ಅನೇಕ ಸಮಸ್ಯೆಗಳನ್ನು ಪರಿಹರಿಸಿತ್ತು; ಅಥವಾ ಅವನು ಬದುಕಿದ್ದರೆ ಉದ್ಭವಿಸುತ್ತಿದ್ದ ಅನೇಕ ಕಠಿನ ಸಮಸ್ಯೆಗಳ ಕಠೋರ ತೀಕ್ಷ್ಣತೆಯನ್ನು ಸೌಮ್ಯಗೊಳಿಸಿತ್ತು. ಅವನು ಸಾಯದಿದ್ದರೆ ಅವನೇ ಕಾರಣವಾಗಿ ಅವನಿಂದಲೆ ಹೊಮ್ಮುತ್ತಿದ್ದ ತೊಂದರೆಗಳು ಪರಿಹಾರವಾದದ್ದು ಸುವಿದಿತವಷ್ಟ! ಅವನು ಬದುಕಿದ್ದರೆ ಅವನಿಗೆ ಸಾಲ ಕೊಟ್ಟವರು, ಅವನಿಂದ ಜಮೀನು ಬರೆಸಿಕೊಂಡವರು, ಅವನು ಜಾಮೀನು ನಿಂತವರು, ಅವನಿಗೆ ಜಾಮೀನಾದವರು, ಆಚಾರ ಜಾತಿ ಕುಲ ಮತ ಮೊದಲಾದ ನಂಬಿಕೆಗಳ ಕಾರಣವಾಗಿ ಹುಟ್ಟಿಕೊಳ್ಳುತ್ತಿದ್ದ ಪೀಡನೆಗಳು- ಇವೆಲ್ಲ ಅವನ ಸುತ್ತ ಹೆಡರಯೆತ್ತಿ, ಅವನ ಮತ್ತು ಅವನ ಅಧೀನದಲ್ಲಿದ್ದು ಅವನನ್ನೆ ನಂಬಿದವರ ಬದುಕನ್ನು ಹಿಂಡದೆ ಬಿಡುತ್ತಿರಲಿಲ್ಲ. ಈಗ ಮ್‌ಋತ್ಯು ಅದಕ್ಕೆಲ್ಲ ಒಂದು ರೀತಿಯಲ್ಲಿ ತಡೆ ಕಟ್ಟಿತ್ತು.
ಸಿಂಬಾವಿ ಭರಮೈಹೆಗ್ಗಡೆಯವರ ಹೆಂಡತಿ, ಜಟ್ಟಮ್ಮ, ಈ ಮದುವೆ ಹೇಗಾದರೂ ನಿಂತು, ತನು ಮುಂಡೆಯಾಗುವುದು ತಪ್ಪಿದರೆ ಸಾಕಲ್ಲಾ ಎಂದು ಹಾರೈಸುತ್ತಿದ್ದಳು; ಮತ್ತು, ತಿಮ್ಮಪ್ಪ ಹೆಗ್ಗಡೆಯೊಡನೆ, ಹೆಣ್ಣು ತಪ್ಪುವಂತೆ ಮಾಡುವ ಒಳಸಂಚಿಗೂ ಮೌನದ ಸಮ್ಮತಿ ನೀಡಿದ್ದಳು. ಆದ್ದರಿಂದಲೇ ಅವಳು ಮದುಮಗನಾಗಿದ್ದ ತನ್ನ ಗಂಡನಿಗೆ, ಮದುಮಗಳಾಗುವವಳು ಕಣ್ಮರೆಯಾಗಿದ್ದಾಳೆ ಎಂಬ ಸುದ್ದಿ ತಿಳಿಯುವುದಕ್ಕೆ ಮೊದಲೇ ಹೆಣ್ಣಿನ ತಂದೆಗೆ ವಿಪರೀತ ಕಾಯಿಲೆಯಾಗಿರುವುದರಿಂದ ಆವೊತ್ತಿನ ಮದುವೆ ನಿಲ್ಲಬೇಕಾಗುತ್ತದೆ ಎಂಬ ಶಾಸ್ತ್ರದ ನಿಷೇಧವನ್ನು ಒತ್ತಿ ಹೇಳಿದ್ದಳು. ಅಷ್ಟರಲ್ಲಿ ವೆಂಕಟಣ್ಣ ತೀರಿಕೊಂಡನೆಂಬ ವಾರ‍್ತೆ ಬಂದೊಡನೆ ಸೂತಕದ ಮನೆಯಲ್ಲಿ ಮದುವಣಿಗ ನಿಲ್ಲಬಾರದೆಂಬ ಅಡ್ಡಿಯೊಡ್ಡಿ, ತನ್ನ ಗಂಡನನ್ನು ಹಳೆಮನೆಗೆ ತನ್ನ ಅಣ್ಣನಲ್ಲಿಗೆ ಸಾಗಿಸಿಕೊಂಡು ಹೋಗಿದ್ದಳು. ಅಲ್ಲಿ ತನು ಪೂರ್ವಭಾವಿಯಾಗಿ ಯೋಜಿಸಿದಂತೆ, ಹಿಂದಿನ ಕಹಿಯನ್ನೆಲ್ಲ ನುಂಗಿಕೊಂಡು, ಮಂಜಮ್ಮನನ್ನು ತನ್ನ ಗಂಡನಿಗೆ ತಂದುಕೊಂಡು ಲಕ್ಕಮ್ಮನನ್ನು ತಿಮ್ಮಪ್ಪಹೆಗ್ಗಡೆಗೆ ಕೊಡುವ ಏರ್ಪಾಡಿಗೆ ಎಲ್ಲರೂ ಒಪ್ಪುವಂತೆ ಮಾಡಿದ್ದಳು.
ಹಳೆಮನೆ ಮಂಜಮ್ಮನನ್ನು ತನಗೆ ಸವತಿಯಾಗಿ ತಂದುಕೊಳ್ಳಲು ಒಪ್ಪದೆ ಹೂವಳ್ಳಿ ವೆಂಕಪ್ಪನಾಯಕರ ಮಗಳು ಚಿನ್ನಮ್ಮನನ್ನು ಗೊತ್ತು ಮಾಡಿ ಒಪ್ಪಿಸಿ, ಮದುವೆಗೆ ಏರ್ಪಾಟು ಮಾಡಿದ ತನ್ನ ಹೆಂಡತಿಯೆ ತುದಿಯಲ್ಲಿ ಆ ಸಂಬಂಧ ಬೇಡ ಎಂದು ಹಟ ಹಿಡಿದುದರ ಅರ್ಥ ಭರಮೈಹೆಗ್ಗಡೆಯವರಿಗೆ ಮೊದ ಮೊದಲು ಬಗೆಹರಿಯಲಿಲ್ಲ. ಕೊನೆಗೆ ಗೊತ್ತಾಯಿತು, (ತಿಮ್ಮಪ್ಪ ಹೆಗ್ಗಡೆ ಜಟ್ಟಮ್ಮ ಹೆಗಡಿತಿಯವರ ಕಿವಿಯಲ್ಲಿ ಊದಿದ್ದ ಅಮಂಗಳ!) ಹೆಣ್ಣಿನ ಜಾತಕದಲ್ಲಿ ಅವಳು ಮದುವೆಯಾದ ಸ್ವಲ್ಪ ಕಾಲದಲ್ಲಿಯೆ ವೈಧವ್ಯ ಪ್ರಾಪ್ತಿ ಇದೆಯಂತೆ ಎಂದು. ಭರಮೈಹೆಗ್ಗಡೆಗೆ ಜೋತಿಷ್ಯ ಜಾತಕಾದಿಗಳಲ್ಲಿ ಜಟ್ಟಮ್ಮ ಹೆಗ್ಗಡಿತಿಗೆ ಇದ್ದಷ್ಟೆ ನಂಬಿಕೆ ಹೆದರಿಕೆ ಎಲ್ಲ ಇತ್ತು. ಕೆಟ್ಟ ಸುದ್ದಿ ಕಿವಿಗೆ ಬಿದ್ದಾಗ ತುಂಬ ಭಯವೂ ಅಯ್ತು. ಅದರಲ್ಲಿಯೂ ಮೂರು ಹೊತ್ತೂ ಅದೂ ಇದೂ ಕಾಯಿಲೆ ಕಸಾಲೆಯಿಂದ ನರಳುತ್ತಿದ್ದ ಅವರನ್ನು ಕೊಂಡೊಯ್ಯಲು ಮೃತ್ಯು ಗ್ರಹಗತಿಯನ್ನೇ ನಿರೀಕ್ಷಿಸಬೇಕಾಗಿಯೂ ಇರಲಿಲ್ಲ; ಪ್ರಕೃತಿ ವ್ಯಾಪಾರದ ವಿಧಾನವೆ ಯಥೇಚ್ಛವಾಗಿ ಸಾಗಿತ್ತು! ಆದರೆ ಏನು ಮಾಡುವುದು? ಕಲ್ಲೂರ ಸಾಹುಕಾರ ಮಂಜ ಭಟ್ಟರಲ್ಲಿದ್ದ ವೆಂಕಟಣ್ಣನ ಅಪಾರ ಸಾಲಕ್ಕೆ ತಾನು ಜಾಮೀನಾಗಿ ನಿಂತಾಗಿದೆ. ಮದುವೆ ಬೇಡ ಎಂದು ತಾನೆ ಹೇಳಿದರೆ ಹಣ್ಣು ತಪ್ಪುತ್ತದೆ, ಗಂಟೂ ಮುಳುಗುತ್ತದೆ ಆದ್ದರಿಂದ ವಿಶೇಷ ದಕ್ಷಿಣೆಯ ಪ್ರಭಾವದಿಂದ ಜೋಯಿಸರ ಆಶೀರ್ವಾದ ಪಡೆದು, ಜಾತಕದಲ್ಲಿರಬಹುದಾದ ಕಂಟಕಕ್ಕೆ ಶಾಂತಿ ಮಾಡಿಸಿ, ಚೆನ್ನಮ್ಮನನ್ನು ಕೈಹಿಡಿಯಲು ಮುಂದುವರಿದಿದ್ದರು.
ಚಿನ್ನಮ್ಮ ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದರೂ, ವೆಂಕಟಣ್ಣ ಬದುಕಿದ್ದರೆ, ಸಿಂಬಾವಿ ಹೆಗ್ಗಡೆಯವರು ಕಾನೂನು ಪ್ರಕಾರ ತಮ್ಮ ಹಣಕ್ಕೆ ಲೋಪ ಬರದಂತೆ ನೋಡಿಕೊಲ್ಳುತ್ತಿದ್ದರು. ಚಿನ್ನಮ್ಮ ತಮ್ಮನ್ನು ತಿರಸ್ಕರಿಸಿ, ಇನ್ನೊಬ್ಬನಿಗಾಗಿ ಓಡಿ ಹೋಗಿದ್ದರಿಂದಲೆ ಮದುವೆ ತಪ್ಪಿ, ವೆಂಕಟಣ್ಣ ಬದುಕಿದ್ದರಂತೂ ಹೇಳಲೆ ಬೇಕಾಗಿಲ್ಲ, ಹೆಗ್ಗಡೆ ತನ್ನ ಪ್ರತೀಕಾರದ ಪೀಡನಾ ಸಾಮರ್ಥ್ಯವನ್ನೆಲ್ಲ ನಾನಾ ಮುಖಗಳಿಂದ ಪ್ರಯೋಗಿಸದೆ ಬಿಡುತ್ತಿರಲಿಲ್ಲ. ಆದರೆ ಈಗ ಹೆಗ್ಗಡೆಗೆ ತಿಳಿದಿದ್ದಂತೆ, ಮದುವೆ ನಿಲ್ಲುವುದಕ್ಕೆ ಮುಖ್ಯ ಕಾರಣವಾದದ್ದು ವೆಂಕಟಣ್ಣನ ಮರಣದ ಅಶುಭವೆ! ಹೆಣ್ಣು ಓಡಿ ಹೋಗಿತ್ತು ಎಂಬ ಗುಸು ಗುಸು ಸುದ್ದಿಯೂ ಅವರ ಕಿವಿಗೆ ತರುವಾಯ ಮುಟ್ಟಿತ್ತು. ಆದರೆ ಅದೇ ಕಾರಣವಾಗಿ ಮದುವೆ ನಿಂತಿತು ಎಂದರೆ, ತಮ್ಮ ಗೌರವಕ್ಕೂ ಪ್ರತಿಷ್ಠೆಗೂ ಅತ್ಯಂತ ಹಾನಿ ಮತ್ತು ಅವಮಾನ ಒದಗಿದಂತಾಗಿ ತೇಜೋವಧೆಯಾಗುತ್ತದೆ ಎಂಬ ಅಂತಃಕಾರಣದಿಂದ ಆ ಸುದ್ದಿಗೆ ಅವರು ಬಹಿರಂಗಮಾನ್ಯತೆ ಕೊಡಲಿಲ್ಲ. ಅದನ್ನು ಗಮನಿಸದಂತೆಯೆ ಇರುವವರಂತೆ ನಟಿಸಿ, ಅದಕ್ಕೆ ತಿರಸ್ಕಾರದ ಸೋಗು ಹಾಕಿದ್ದರು. ಅಶುಭ ಘಟನೆ ಪ್ರಾಪ್ತವಾದುದರಿಂದ ತಾವೇ ಲಗ್ನವನ್ನು ಮುಂದುವರಿಸಲು ಒಪ್ಪದೆ, ಮುರಿದು, ಬೇರೆ ಸಂಬಂಧದ ಕಡೆ ತಿರುಗಿದ್ದೇವೆ ಎನ್ನುವಂತೆ ವರ್ತಿಸಿದ್ದರು. ಆದ್ದರಿಂದಲೆ ಚಿನ್ನಮ್ಮ ಓಡಿಹೋಗಿದ್ದ ಸಂಗತಿಯನ್ನಾಗಲಿ ಮುಕುಂದಯ್ಯನೆ ಆ ಎಲ್ಲ ವ್ಯೂಹದ ಹಿಂದಿದ್ದ ಸಂಚಾಲಕ ಶಕ್ತಿ ಎಂಬ ವಿಚಾರವನ್ನಾಗಲಿ ಅವರು ಪ್ರಸ್ತಾಪಿಸುವ ಗೋಜಿಗೆ ಹೋಗಿರಲಿಲ್ಲ; ಮಾತಿನಲ್ಲಿ ಮಾತ್ರವಲ್ಲದೆ ಮನಸ್ಸಿನಲ್ಲಿಯೂ ಅವರು ಆ ವಾರ್ತೆಗೆ ಮುಟ್ಟುಗೋಲು ಹಾಕಿಕೊಂಡಿದ್ದರು.
ಇನ್ನು ಅವರನ್ನು ಬಹುವಾಗಿ ಪೀಡಿಸುತ್ತಿದ್ದ ವಿಷಯವೆಂದರೆ, ವೆಂಕಟಣ್ಣನಿಂದ ತಮಗೆ ಬರಬೇಕಾಗಿದ್ದ ಸಾಲದ ಹಣ. ಹೆಣ್ಣು ಹೆಂಗಸರೆ ವಾರಸುದಾರರಾಗಿ ಉಳಿದುಕೊಂಡಿರುವ ಹೂವಳ್ಳಿಯ ಗದ್ದೆ ತೋಟ ಮನೆಗಳನ್ನೆಲ್ಲ ತಮಗೆ ಬರಬೇಕಾಗಿದ್ದ ಸಾಲಕ್ಕಾಗಿ ವಶಪಡಿಸಿಕೊಳ್ಳುವುದು ಸಾಧ್ಯವಿದ್ದರೂ ಹಾಗೆ ಮಾಡಲು ಹೊರಟರೆ ತಾವು ಮೂರು ಹೊತ್ತೂ ಹೊಕ್ಕು ಬಳಸಬೇಕಾಗಿದ್ದ ಹತ್ತಿರದ ನೆಂಟರಿಷ್ಟರ ವಿರೋಧ-ದ್ವೇಷ-ತಿರಸ್ಕಾರಗಳಿಗೆ ಒಳಗಾಗಬೇಕಾಗುತ್ತದೆ. ಆ ಮುಸುಗಿನ ಮುಜಗರ ಬಾಳನ್ನೆಲ್ಲ ಕಹಿಗೊಳಿಸದೆ ಬಿಡುವುದಿಲ್ಲ. ಇದನ್ನೆಲ್ಲ ದೀರ್ಘವಾಗಿ ಆಲೋಚಿಸಿದ ಭರಮೈಹೆಗ್ಗಡೆಗೆ ಹೊಳೆದಿದ್ದುದೆಂದರೆ-ಒಂದೇ ಉಪಾಯ: ಹೇಗಾದರೂ ಮಾಡಿ ತಮ್ಮ ಜಾಮೀನಿನಿಂದ ಬಿಡಿಸಿಕೊಂಡು, ಪುನಃ ಮಂಜಭಟ್ಟರೇ ಆ ಭಾರ ಹೊರುವಂತೆ ಮಾಡುವುದು! ಬ್ರಾಹ್ಮಣರಾದ ಅವರಿಗೆ ಒಕ್ಕಲಿಗರ ನೆಂಟರಿಷ್ಟರ ಹಂಗು ಇರುವುದಿಲ್ಲವಾದ್ದರಿಂದ ಅವರು ಹೂವಳ್ಳಿಯವರಿಂದ ಸಾಲ ವಸೂಲು ಲಮಾಡಲು ಯಾವ ಕ್ರಮವನ್ನು ಬೇಕಾದರೂ ತೆಗೆದುಕೊಳ್ಳಬಹುದಲ್ಲವೆ? ಬೇರೆ ಜಾತಿಯವರಾದ ಅವರಿಗೆ ಇವರ ಸಮಾಜದ ಹೊಣೆಗಾರಿಕೆ ಯಾವುದೂ ಇರುವುದಿಲ್ಲವಷ್ಟೆ! ಅಲ್ಲದೆ ಸಿರಿವಂತ ಹಾರುವರು ಮಾಡಿದ್ದನ್ನು ತಪ್ಪು ಎನ್ನುವ ಕೆಚ್ಚು ಉಳಿದವರಿಗೆಲ್ಲಿ?
ಆದರೆ ಭರಮೈಹೆಗ್ಗಡೆಗೆ ಗೊತ್ತಿರದೆ ಇದ್ದು, ಹೂವಳ್ಳಿ ವೆಂಕಟಪ್ಪನಾಯಕರು ಒಳಗೊಳಗೆ ಹಾಕಿಟ್ಟಿದ್ದ ಗಂಟಲು ಗಾಳವೊಂದು ಕಲ್ಲೂರು ಮಂಜಭಟ್ಟರಿಗೆ ಗೊತ್ತಾಗಿದ್ದುದರಿಂದೆಲೆ ಅವರು ಅಷ್ಟು ಸುಲಭವಾಗಿ, ತಮ್ಮ ಸಾಲಕ್ಕಿಂತಲೂ ಕಡಿಮೆ ಮೊತ್ತಕ್ಕೇ ಭರಮೈಹೆಗ್ಗಡೆಯವರ ಕೈಲಿ ಜಾಮೀನು ಪತ್ರ ಬರೆಯಿಸಿಕೊಂಡು, ತಮ್ಮ ಕೈ ತೊಳೆದುಕೊಂಡಿದ್ದರು ಎಂಬುದಿನ್ನೂ ಇವರಿಗೆ ತಿಳಿದಿರಲಿಲ್ಲ!
* * *
ಅಂದು ಅಪರಾಹ್ನದ ಹೊತ್ತಿಗೆ ವೆಂಕಟಣ್ಣನ ಕಳೇಬರದ ಅಗ್ನಿಸಂಸ್ಕಾರವನ್ನೆಲ್ಲ ಮುಗಿಸಿ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೊರಟು ಹೋಗಿದ್ದರು. ಹೂವಳ್ಳಿ ಮನೆ ‘ಗಾಳ್’ ಎಂದು ಸುಡುಗಾಡಿನಂತೆ ಸದ್ದಿಲಿಯಾಗಿತ್ತು. ಸೋನೆಮಳೆ ಹಿಡಿದು ಹೊಡೆಯುತ್ತಿತ್ತು. ಬೆಟ್ಟಳ್ಳಿ ದೇವಯ್ಯಗೌಡರು ಮಾತ್ರ ತಿಮ್ಮಪ್ಪಹೆಗ್ಗಡೆಯ ಕೈಲಿ ಮುಕುಂದಯ್ಯ ಹೇಳಿಕಳುಹಿಸಿದ್ದರಿಂದ ದಾರಿ ಕಾಯುತ್ತಾ ಉಳಿದುಕೊಂಡಿದ್ದರು. ತಿಮ್ಮಪ್ಪಹೆಗ್ಗಡೆ ತಾನು ಬೈಗಿನ ಹೊತ್ತಿಗೆ, ಮುಕುಂದಯ್ಯ ಚಿನ್ನಮ್ಮನನ್ನು ಕರೆದುಕೊಂಡು ಬರುವಷ್ಟರಲ್ಲಿ, ಬಂದುಬಿಡುತ್ತೇನೆ ಎಂದು ಹೇಳಿ ಹಳೆಮನೆಗೆ ಹೋಗಿದ್ದನು, ತನ್ನ ಮತ್ತು ಜಟ್ಟಕ್ಕನ ಸಂಚು ಫಲಕಾರಿಯಾಗುವಂತೆ ಪಾತ್ರ ವಹಿಸಲಿಕ್ಕೆ.
ಬೈಗು ಚೆನ್ನಾಗಿಯೆ ಕಪ್ಪಾಗಿತ್ತು. ಇದುವರೆಗೂ ವೆಂಕಟಣ್ಣ ಕುಳಿತುಕೊಳ್ಳುತ್ತಿದ್ದೆಡೆ ಹೂವಳ್ಳಿಯ ಜಗಲಿಯಲ್ಲಿ ಕುಳಿತು ಮತ್ತೆ ಮತ್ತೆ ನಶ್ಯ ಹಾಕಿಕೊಳ್ಳುತ್ತಿದ್ದ ದೇವಯ್ಯನಿಗೆ ಕಾಣಿಸಿತು, ಕಂಬಳಿಕೊಪ್ಪೆ ಹಾಕಿಕೊಂಡಿದ್ದ ಇಬ್ಬರು ಬಸಿರಿಮರದ ಪಕ್ಕದ ದನ ಓಣಿಯ ಕೆಸರು ಹಾದಿಯಲ್ಲಿ ಮನೆಯ ಕಡೆ ಗುಡ್ಡದಿಂದ ಇಳಿದುಬರುತ್ತಿದ್ದುದು, ಅವನಿಗೆ ಗೊತ್ತಾಯಿತು ಮುಕುಂದಯ್ಯ ಚಿನ್ನಮ್ಮನನ್ನು ಕರೆತರುತ್ತಿರುವುದು. ಬೇಗನೆ ಕುಳಿತಲ್ಲಿಂದ ಎದ್ದು ಒಳಗೆ ಹೋದನು, ಚಿನ್ನಮ್ಮನ ಅಜ್ಜಿ ಮಲಗಿದ್ದ ಕೋಣೆಗೆ.
ಚಿನ್ನಮ್ಮ ಮುಕುಂದಯ್ಯನ ಹಿಂದೆ ಅಂಗಳವನ್ನು ದಾಟಿ, ಜಗಲಿಗೆ ಹತ್ತಲುಹಾಕಿದ್ದ ಕಲ್ಲು ಮೆಟ್ಟಿಲ ಮೇಲೆ ಅವನ ಹಿಂದೆಯೆ ನಿಂತಳು.ಮುಕುಂದಯ್ಯ ಕೆಸರು ಹಲಗೆಯ ಮೇಲೆ ತಮ್ರದ ಹಂಡೆಯಲ್ಲಿದ್ದ ನೀರನ್ನು ಹಿತ್ತಾಳೆಯ ತಂಬಿಗೆಯಲ್ಲಿ ಮೊಗೆದು ಮೊಗೆದು ಕಾಲು ತೊಳೆದುಕೊಳ್ಳುತ್ತಿರಲು, ಚಿನ್ನಮ್ಮ ತನಗೆ ಪರಿಚಿತವಾಗಿದ್ದ ಮನೆಯ ನಾಲ್ಕೂ ದಿಕ್ಕಿಗೆ ಆಗಂತುಕಳಂತೆ  ಕಣ್ಣುಹಾಯಿಸಿದಳು, ಅಪರಿಚಿತವೊ ಎಂಬಂತೆ:
ಮನೆ ನಿಃಶಬ್ದವಾಗಿತ್ತು. ಏನೋ ಹೆದರಿಕೆ ಹುಟ್ಟಿಸುವಂತೆ ನಿಃಶಬ್ದವಾಗಿತ್ತು. ಇನ್ನೂ ಜಗಲಿಗೆ ದೀಪ ಹಚ್ಚಿರಲಿಲ್ಲವಾದ್ದರಿಂದ ಮನೆಯನ್ನೆಲ್ಲ ದಟ್ಟಮಬ್ಬು ಕವಿದಿತ್ತು. ಮದುವೆಗೆಂದು ಕಟ್ಟಿದ್ದ ಚಪ್ಪರ, ಧಾರೆಯ ಮಂಟಪ ಮೊದಲಾದುವೆಲ್ಲ ಬಿಕೋ ಎನ್ನುತ್ತಿದ್ದುವು, ಅಲಂಕೃತವಾಗಿದ್ದ ಶವದಂತೆ. ನಿನ್ನೆ ತಾನೆ ನೂರಾರು ಜನದ ಸಂದಣಿಯಿಂದ ಗಿಜಿಬಿಜಿ ಎನ್ನುತ್ತಿದ್ದ ಮನೆ ಇಂದುಕ ಹಾಳು ಬಿದ್ದ ದೇಗುಲದಂತೆ ಭೀಷಣಭ್ರುಕುಟಿಯಾಗಿತ್ತು. ಅಂಗಳದ ನಡುವೆಯಿದ್ದ ತುಳಸಿಕಟ್ಟೆಯ ದೇವರೂ, ಚಿನ್ನಮ್ಮ ಮನೆಯನ್ನು ಪ್ರವೇಶಿಸುವಾಗ ಅಭ್ಯಾಸ ಬಲದಿಂದೆಂಬಂತೆ ಅದಕ್ಕೆ ಕೈ ಮುಗಿದಿದ್ದರೂ, ಕರುಣಪಾತ್ರವಾಗಿ ತೋರಿ ಚಿನ್ನಮನಿಗೆ ದುಃಖವುಕ್ಕಿಬಂದು, ಅದುವರೆಗೂ ತಡೆಹಿಡಿದಿದ್ದ ಕಣ್ಣೀರು ಧಾರಾಕಾರವಾಗಿ ಹರಿಯತೊಡಗಿತ್ತು.
ಮುಕುಂದಯ್ಯ ಕಾಲು ತೊಳೆದುಕೊಂಡು ಜಗಲಿಗೆ ಹೋಗಿ, ಕಂಬಳಿಕೊಪ್ಪೆಯನ್ನು ಕೊಡವಿ ಬದಿಗಿಟ್ಟು, ಕೆಸರುಹಲಗೆಯ ಮೇಲೆ ಹಾಕಿದ್ದ ಜಮಖಾನದ ಮೇಲೆ ಕುಳಿತನು. ಚಿನ್ನಮ್ಮನೂ ಕೆಸರು ಹೋಗುವಂತೆ ಚೆನ್ನಾಗಿ ಕೈಕಾಲು ಮುಖ ತೊಳೆದುಕೊಂಡು, ಮೈ ಭಾರವಾದಂತೆ ಮೆಲ್ಲನೆ ನಡೆದು ಒಳಗೆ ಹೋದಳು, ಕಂಬಳಿಕೊಪ್ಪೆಯನ್ನು ಅಂಗಳಕ್ಕೆ ಮಳೆ ನೀರಿಳಿಯುವಂತೆ ಕೊಡಹಿ, ಕೈಯಲ್ಲಿಯೆ ಹಿಡಿದುಕೊಂಡು. ಅವಳಿಗೆ ಕಾಲು ಸಣ್ಣಗೆ ನಡುಗ ತೊಡಗಿತ್ತು. ಕಲು ತೊಳೆದುಕೊಳ್ಳುತ್ತಿದ್ದಾಗ ಮದುಮಗಳಾಗಿ ಹಾಕಿಕೊಂಡಿದ್ದ ಸುತ್ತುಕಾಲುಂಗುರಗಳನ್ನು ಕಂಡು ಅವಳ ಹೃದಯಕ್ಕೆ ದುಃಖಸ್ಮೃತಿಯ ಮಿಂಚು ಮುಟ್ಟಿದಂತಾಗಿತ್ತು.
ಚಿನ್ನಮ್ಮ ಮನೆಯನ್ನು ಸಮೀಪಿಸುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ತಂದೆಯ ಭಯದಿಂದ ನಡೆ ಕುಗ್ಗಿತ್ತು. ತನ್ನ ತಂದೆ ತೀರಿಕೊಂಡ ಸುದ್ದಿಯನ್ನು ಕೇಳಿದ್ದರೂ ಏಕೋ ಅವಳಿಗೆ ಫಕ್ಕನೆ ಆ ಸುದ್ದಿಯಲ್ಲಿ ನಂಬಿಕೆ ತಪ್ಪಿತ್ತು. ತಾನು ಪ್ರವೇಶಿಸುತ್ತಿದ್ದಂತೆ ಭಯಂಕರಾಕಾರದ ರೌದ್ರರೋಷದ ‘ಅಪ್ಪಯ್ಯ’ ತನ್ನನ್ನೂ ಮುಕುಂದ ಭಾವನನ್ನೂ ಒದ್ದು ಗುದ್ದಿ, ಉಗುಳಿ, ದೊಣ್ಣೆಯಿಂದ ಅಪ್ಪಳಿಸುವ ಚಿತ್ರವನ್ನು ಮುನ್ನೆನೆದು, ಸಣ್ಣಗೆ ಚೀರಿದ್ದಳು! ಅವಳ ಮುಂದೆ ನಡೆಯುತ್ತಿದ್ದ ಮುಕುಂದಯ್ಯ ನಿಂತು, ತಿರುಗಿ ನೋಡಿ, “ಏನಾಯ್‌ಎ? ‘ಎಡವಿದೇನೆ? ಮುಳ್ಳು ಹೆಟ್ತೇನೆ?” ಎಂದು ಕೇಳಿದ್ದಕ್ಕೆ ಚಿನ್ನಮ್ಮ ಮುಖದ ಸುತ್ತ ಬಿಗಿದು ಹಿಡಿದಿದ್ದ ಕಂಬಳಿಕೊಪ್ಪೆಯೊಳಗಿಂದಲೆ ಸೋತದನಿಯಲ್ಲಿ “ಏನೂ ಇಲ್ಲ” ಎಂದಿದ್ದಳಷ್ಟೆ.
ಮನೆಯನ್ನು ಪ್ರವೇಶಿಸಿದೊಡನೆ ಆ ನಿಃಶಬ್ದತೆ, ಆ ನಿರ್ಜನತೆ, ಆ ನಿಶ್ಚಲತೆಯನ್ನು ಕಂಡು ‘ಅಪ್ಪಯ್ಯ’ ತೀರಿಕೊಂಡಿದ್ದ ವಿಷಯದಲ್ಲಿ ಅವಳಿಗೆ ಏನೂ ಸಂಶಯ ಉಳಿಯಲಿಲ್ಲ. ತಂದೆಯ ಸಾವಿಗಾಗಿ ನಿಜವಾಗಿಯೂ ದುಃಖ ಉಕ್ಕಿ ಬಂತು. ಅಪ್ಪಯ್ಯನ ಒರಟುತನ, ನಿಷ್ಟುರತೆ, ಕ್ರೌರ್ಯ, ಹಠಮಾರಿತನ, ದುಡುಕು, ದುಂದುಗಾರಿಕೆ, ಅದೂರದೃಷ್ಟಿ, ಅನೀತಿ ಜೀವನ ಮೊದಲಾದುವೆಲ್ಲ, ಬಹುಶಃ ಇನ್ನೆಂದೂ ಅವುಗಳಿಂದ ತನಗೆ ತೊಂದರೆ ಒದಗದೆಂಬ ಅಂತರ್ಮನಸ್ಸಿನ ಧೈರ್ಯದಿಂದಿರಬಹುದು, ಮರೆತುಹೋದಂತಾಗಿ ಅವನ ಪ್ರೀತಿ, ದಯೆ, ಮುದ್ದು ಇತ್ಯಾದಿ ಪಿತೃವಾತ್ಸಲ್ಯ ಜೀವಿತದ ಶುಕ್ಲಪಕ್ಷವೆ ಅವಳ ಮನಸ್ಸಿಗೆ ಬಂದು, ತನ್ನ ತಾಯಿ ಹೋದಾಗ ಅಂದು ಅನುಭವಿಸಲಾರದಿದ್ದ ಸಂಕಟವನ್ನು ಚಿನ್ನಮ್ಮ ಇಂದು ಅನುಭವಿಸಿದ್ದಳು.
ಒಳಗೆ ಹೋಗಿದ್ದ ದೇವಯ್ಯ ಅರೆಗತ್ತಲೆ ಕವಿದಿದ್ದು ಚಿನ್ನಮ್ಮನ ಅಜ್ಜಿ ಮಲಗಿದ್ದ ಕೋಣೆಯ ಬಾಗಿಲೆಡೆ, ಒಳಹೊಕ್ಕು ನಿಂತು “ಅಜ್ಜೀ!ಅಜ್ಜೀ!” ಎಂದು ಹಲವು ಸಾರಿ ಕರೆದ ಮೇಲೆಯೆ ಅಜ್ಜಿ, ಎಚ್ಚರಗೊಂಡಂತೆ, ನರಳುತ್ತಿದ್ದ ದನಿಯಲ್ಲಿ ಕೇಳಿದಳು “ಯಾರೋ? ದೇವಯ್ಯನೇನೋ? ಮಗು ಬಂತೇನೋ?”
“ಬಂತು, ಅಜ್ಜೀ….” ಅಜ್ಜಿ ಏಳಲು ಪ್ರಯತ್ನಿಸುತ್ತಿದ್ದುದನ್ನು ಸದ್ದಿನಿಂದಲೆ ಊಹಿಸಿ ಮತ್ತೆ ಹೇಳಿದನು: “ನೀನು ಏಳಬೇಡ, ಇಲ್ಲಿಗೇ ಬರಾಕೆ ಹೇಳ್ತೀನಿ.”
ಕಳೆದ ರಾತ್ರಿಯಿಂದಲೂ ಅಜ್ಜಿ ಅನುಭವಿಸುತ್ತಿದ್ದ ದುಃಖ, ದೈನ್ಯ, ಶೋಕ, ಸಮಖಟ, ಶಂಕೆ, ಭೀತಿ, ಹತಾಶೆ ಮತ್ತು ಪ್ರತ್ಯಾಶೆಗಳ ಉರಿಯ ಶರಶಯ್ಯೆಯ ಶಿಕ್ಷೆಯನ್ನು ಪ್ರತ್ಯಕ್ಷ ನೋಡಿದ್ದ ದೇವಯ್ಯನಿಗೆ ಅಜ್ಜಿಯ ಉದ್ವಿಗ್ನ ಆತುರವು ಹೃದಯಸ್ಯಂದಿಯಾಗಿ ಅರ್ಥವಾಗಿತ್ತು. ಅಜ್ಜಿಯ ಜೀವ ಮೊಮ್ಮಗಳ ಆಗಮನದಿಂದ ಅಮೃತಮಯವಾಗುವುದನ್ನು ತಾನೇ ಅನುಭವಿಸುತ್ತಿದ್ದ ಆನಂದಕ್ಕೆ ಅಶ್ರುಲೋಚನನಾಗಿದ್ದನು.
ಕೋಣೆಯ ಅರೆಗತ್ತಲೆಯಿಂದ ಮಾಣಿಗೆಯ ಕಗ್ಗತ್ತಲೆಗೆ ಹಿಂದಾಟಿದ ದೇವಯ್ಯಗೆ ಬಳೆಯ ಸದ್ದು ಕೇಳಿಸಿತು. ಚಿನ್ನಮ್ಮ ಅಡುಗೆಮನೆಯ ಕಡೆಗೆ ಹೋಗುತ್ತಿದ್ದುದನ್ನು ಅರಿತು “ಇತ್ತ ಬಾ, ತಂಗಿ; ಅಜ್ಜಿ ಕೋಣೇಲಿ ಮಲಗ್ಯದೆ” ಎಂದು ಹೇಳಿ, ಆರ್ದ್ರ ನಯನಗಳನ್ನು ಒರಸಿಕೊಳ್ಳುತ್ತಾ ಜಗಲಿಗೆ ಹೋದನು, ಮುಕುಂದಯ್ಯನಿದ್ದಲ್ಲಿಗೆ.
ಮನೆಯ ಹೊರಗೆ ಬಿಕೋ ಇನ್ನುತ್ತಿದ್ದಂತೆಯೆ ಮನೆಯ ಒಳಗೂ ಗಾಳ್ ಎಂದು ಹಾಳು ಸುರಿಯುತ್ತಿದ್ದುದನ್ನು ಅನುಭವಿಸಿದ ಚಿನ್ನಮ್ಮಗೆ ಸೋಜಿಗವಾಯಿತು: ನಿನ್ನೆ ತನ್ನ ಮದುವೆಯ ಸಲುವಾಗಿ ನೆರೆದಿದ್ದ ಅಷ್ಟೊಂದು ಜನ ನಂಟರು ಗರತಿಯರಲ್ಲಿ ಒಬ್ಬಿಬ್ಬರಾದರೂ ಅಜ್ಜಿಯ ಸಂತೈಕೆಗಾಗಿ ಉಳಿಯದೆ ಹೊರಟುಹೋಗಿದ್ದಾರಲ್ಲಾ! ನಾಗಕ್ಕ ಇದ್ದಿದ್ದರೆ ತನ್ನನ್ನು ಅಂಗಳದಲ್ಲಿಯೆ ಎದುರುಗೊಂಡು ಉಪಚರಿಸದೆ ಇರುತ್ತಿದ್ದಳೆ? ಕಡೆಗೆ ಅವಳನ್ನೂ ಓಡಿಸಿಬಿಟ್ಟರೊ? ‘ಅಯ್ಯೋ ನನ್ನ ದೆಸೆಯಿಂದ ಮೆನೆಯೆ ಮಸಣವಾಗಿದೆಯಲ್ಲಾ ದೇವರೇ!’ ಅಷ್ಟರಲ್ಲಿ ದೇವಯ್ಯನ ದನಿ ಕೇಳಿಸಿತ್ತು. ಚಿನ್ನಮ್ಮ ನೇರವಾಗಿ ಧಾವಿಸಿದ್ದಳು, ಅಜ್ಜಿ ಮಲಗಿದ್ದ ಹಾಸಗೆಗೆ.
ಹಿಂದಿನ ರಾತ್ರಿ ಮೊಮ್ಮಗಳು ಕಣ್ಮರೆಯಾದ ಸುದ್ದಿ ಕಿವಿಗೆ ಬಿದ್ದಾಗ ಅಜ್ಜಿ ತತ್ತರಿಸಿ ಹೋಗಿದ್ದಳು. ಮಾತನಾಡುವ ಶಕ್ತಿಯೆ ಉಡುಗಿದಂತಾಗಿತ್ತು. ಏದ ತೊಡಗಿದ್ದಳು. ತಟಕ್ಕನೆ ತಲೆ ಕೆಟ್ಟಂತೆ ಹೊಂದಾಣಿಕೆಯಿಲ್ಲದ ಮಾತಿಗೆ ಶುರು ಮಾಡಿದ್ದಳು. ನಾಗಕ್ಕ ಅವಳನ್ನು ಕೈಹಿಡಿದೆತ್ತಿ ಕೋಣೆಗೆ ಕರೆದೊಯ್ದು ಹಾಸಗೆಯಲ್ಲಿ ಮಲಗುವಂತೆ ಮಾಡಿ, ಚಿನ್ನಮ್ಮ ಅವರು ಭಾವಿಸಿದಂತೆ ಆತ್ಮಹತ್ಯೆ ಮಾಡಿಕೊಂಡಿಲ್ಲವೆಂದೂ, ಮುಕುಂದಣ್ಣನ ಸಂಗಡ ಅಡಗಲು ಹೋಗಿದ್ದಾಳೆಂದೂ, ಇನ್ನೆರಡು ಮೂರು ದಿನಗಳಲ್ಲಿ ಗಲಾಟೆ ನಿಂತ ಮೇಲೆ ಬರುತ್ತಾಳೆಂದೂ, ಅದುವರೆಗೂ ಗುಟ್ಟಾಗಿರಬೇಕೆಂದೂ ಸಮಾಧಾನ ಹೇಳಿದ್ದಳು. ಅಜ್ಜಿ ಮತ್ತೆ ಹಾಸಿಗೆ ಬಿಟ್ಟು ಎದ್ದಿರಲಿಲ್ಲ. ವೆಂಕಟಣ್ಣನ ಶವಸಂಸ್ಕಾರಾನಂತರ ಹಿಂದಿರುಗಿದ್ದ ದೇವಯ್ಯನೂ ಅಜ್ಜಿಯ ಬಳಿಗೆ ಹೋಗಿ ಧೈರ್ಯ ಹೇಳಿದ್ದನು. ಅವನು ತಿಳಿಸಿದ್ದು ಒಟ್ಟಿನಲ್ಲಿ ನಾಗಕ್ಕನ ಹೇಳಿಕೆಯಂತೆ ಇದ್ದಿತಾದರೂ ಒಂದು ಮುಖ್ಯ ವಿಚಾರದಲ್ಲಿ ಅರ್ಥಪೂರ್ಣವಾದ ವ್ಯತ್ಯಾಸವಿತ್ತು. ಅವನ ವರದಿಯ ಪ್ರಕಾರ ಅಜ್ಜಿಗೆ ತಿಳಿದಿದ್ದುದೆಂದರೆ: ಚಿನ್ನಮ್ಮಗೆ ಆ ಸಂಬಂಧ ಒಪ್ಪಿಗೆಯಾಗದೆ ಕೆರೆಗೆ ಹಾರಲು ಹೋಗಿದ್ದಳೆಂದೂ ಆ ದುರಂತದಿಂದ ಮುಕುಂದಯ್ಯ ಅವಳನ್ನು ಪಾರುಮಾಡಿ ರಕಷಿಸಿ, ಒಂದು ರಹಸ್ಯ ಸ್ಥಾನದಲ್ಲಿ ಸುರಕ್ಷಿತವಾಗಿ ಇಟ್ಟಿದ್ದಾನೆಂದೂ ಆಗಿತ್ತು. ಅದರಿಂದಾಗಿ ಅಜ್ಜಿಯ ಕೃತಜ್ಞತೆ ಮುಕುಂದಯ್ಯನ ಪಾದಾರವಿಂದವನ್ನೆ ಹಿಡಿದುಕೊಂಡಿತ್ತು. ಅಜ್ಜಿಯ ಪ್ರಜ್ಞೆಗೆ ಚಿನ್ನಮ್ಮನ ಮದುವೆ ನಿಂತುದರಿಂದ ಬರಬಹುದಾದ ಜನಾಪವಾದವಾಗಲಿ, ಅಳಿಯ ವೆಂಕಟಣ್ಣ ತೀರಿಕೊಂಡ ದುರಂತವಾಗಲಿ ಅಷ್ಟಾಗಿ ತಟ್ಟಿದಂತೆ ತೋರುತ್ತಿರಲಿಲ್ಲ. ಅವಳ ಸಮಸ್ತ ಚೈತನ್ಯವನ್ನೂ ಮರವಡುವಂತೆ ಅಪ್ಪಳಿಸಿಬಿಟ್ಟಿದ್ದುದೆಂದರೆ ಮೊಮ್ಮಗಳು ಕಾಣೆಯಾದದ್ದು! ಅಪವಾದ, ನಿಂದೆ, ಬಹಿಷ್ಕಾರ, ಸಾಮಾಜಿಕ ಪೀಡನೆ, ಅವಮಾನ ಯಾವುದೂ ಅವಳಿಗೆ ಲೆಕ್ಕಕ್ಕಿರಲಿಲ್ಲ. ಜಗತ್ತಿನಲ್ಲಿ ಆಗಿದ್ದ ಒಂದೇ ಒಂದು ಅಮಂಗಳ ಎಂದರೆ, ಅವಳ ಮೊಮ್ಮಗಳು ಕಾಣೆಯಾದದ್ದು: ಆ ಮೊಮ್ಮಗಳು ಮತ್ತೆ ತನಗೆ ಲಭಿಸಿದರೆ ಜಗತ್ತಿಗೆ ಸರ್ವಮಂಗಳವೂ ಹಿಂದಿರುಗುತ್ತದೆ!
ಆ ಮೊಮ್ಮಗಳು ಈಗ ತನ್ನಡೆಯೆ, ಹಾಸಗೆಯ ಮೇಲೆ, ತನ್ನ ಮೈಗೆ ಮೈ ಒತ್ತಿ ತನ್ನ ಕೈ ಆತು ಕುಳಿತಿದ್ದಾಳೆ! ಇನ್ನು ಈ ಜಗತ್ತಿನಲ್ಲಿ ಚಿಂತೆಗೆ ಏನೂ ಕಾರಣವಿಲ್ಲ!
ಆ ಕೋಣೆಯಲ್ಲಿ ಕವಿದಿದ್ದ ಕಪ್ಪಿನಲ್ಲಿ ಅಜ್ಜಿಗೆ ಚಿನ್ನಮ್ಮನ ಮುಖವಾಗಲಿ ಚಿನ್ನಮ್ಮಗೆ ಅಜ್ಜಿಯ ಮುಖವಾಗಲಿ ಕಾಣುತ್ತಿರಲಿಲ್ಲ. ಆದರೂ ಅವರಿಬ್ಬರೂ ವರ್ತಿಸುತ್ತಿದ್ದರು, ಒಬ್ಬರನ್ನೊಬ್ಬರು ಸ್ಪಷ್ಟವಾಗಿ ನೋಡುತ್ತಿರುವಂತೆ! ಶೋಕಾಶ್ರುಗಳೊ? ಆನಂದಬಾಷ್ಪಗಳೊ? ಇಬ್ಬರೂ ಮೌನವಾಗಿಯೆ ಅತ್ತರು. ಬಹಳ ಹೊತ್ತು ಅಜ್ಜಿಯ ಕೈ ಮೊಮ್ಮಗಳ ಗಲ್ಲ ಕೆನೆನೆಗಳನ್ನು ಮತ್ತೆ ತಮತ್ತೆ ತಡವುತ್ತಿತ್ತು!
ಬಹಳ ಹೊತ್ತಾದಮೇಲೆ, ದುಃಖ ಸ್ವಲ್ಪ ಸಮನವಾದ ಅನಂತರ, ಚಿನ್ನಮ್ಮ ತೊದಲಿ ತೊದಲಿ ಕೇಳಿದಳು: “ನಾಗಕ್ಕ ಎಲ್ಲಿ, ಅಜ್ಜೀ?”
“ನಿನ್ನಪ್ಪಯ್ಯ ಒದ್ದುದಕ್ಕೆ ಅದು ಬಿದ್ದು, ಸೊಂಟನೋವಾಗಿ, ಅಲ್ಲೆಲ್ಲೋ ಮಲಗ್ಯದೆ ಅಂತಾ ಕಾಣ್ತದೆ…. ಅಯ್ಯೋ, ಚಿನ್ನೂ, ಏನೇನಾಗಿಹೋಯ್ತೆ ನಮ್ಮ ಗಿರಾಚಾರಕ್ಕೇ?” ಅಜ್ಜಿ ನಿಡುನರಳಿ ಸುಯ್ದಳು.
ಅಷ್ಟರಲ್ಲಿ ಹಣತೆಯ ದೀಪ ಹೊತ್ತಿಸಿಕೊಂಡು ಯಾರೊ ಕೋಣೆಯೊಳಗೆ ಪ್ರವೇಶಿಸುತ್ತಿದ್ದದ್ದು ಕಾಣಿಸಿತು. ಆ ದೀಪದ ಮಂದಪ್ರಕಾಶದ ವಲಯದಲ್ಲಿ ನಾಗಕ್ಕನ ಮುಖಮಂಡಲವನ್ನು ಗುರುತಿಸಿದಳು ಚಿನ್ನಮ್ಮ!
* * *
ಜಗಲಿಗೆ ಹಿಂದಿರುಗಿದ ದೇವಯ್ಯ, ಮುಕುಂದಯ್ಯ ಕುಳಿತಿದ್ದಲ್ಲಿಗೆ ಬಂದು, ಅವನಿಗೆ ತುಂಬ ಸಮೀಪವಾಗಿ ಮುಂಡಿಗೆಗೆ ಒರಗಿ ಕುಳಿತನು. ಇಬ್ಬರೂ ಗುಸುಗುಸು ಮಾತನಾಡಿದರು, ಬಹಳ ಹೊತ್ತು. ಒಬ್ಬರ ಮುಖ ಮತ್ತೊಬ್ಬರಿಗೆ ಸ್ವಲ್ಪವೂ ಕಾಣಲಾಗದಷ್ಟು ಕತ್ತಲೆಯಾದ ಮೇಲೆ, ದೇವಯ್ಯನೆ ಎದ್ದು ಮದುವೆ ಮನೆಗಾಗಿ ಬೆಟ್ಟಳ್ಳಿಯಿಂದಲೆ ತಂದಿದ್ದ ಒಂದು ತೂಗುಲ್ಯಾಂಪನ್ನು ಹಚ್ಚಿದನು.
ರಾತ್ರಿ ಇನ್ನೂ ಸ್ವಲ್ಪ ಮುಂದುವರಿದಿತ್ತು. ಮಾತು ಕೊಟ್ಟಿದ್ದಂತೆ ತಿಮ್ಮಪ್ಪಹೆಗ್ಗಡೆ ಹಳೆಮನೆಯಿಂದ ಬಂದನು.
ಬಂದವನು ಕೈಕಾಲು ತೊಳೆದುಕೊಂಡು, ಜಗಲಿಯಲ್ಲಿ ಕೂರದೆ ನೇರವಾಗಿ ಒಳಗೆ ಹೋಗಿ ಅಜ್ಜಿಯನ್ನೂ ಚಿನ್ನಮ್ಮನನ್ನೂ ಮಾತಾಡಿಸಿಕೊಂಡು ಜಗಲಿಗೆ ಹಿಂತಿರುಗಿ, ದೇವಯ್ಯ ಮುಕುಂದಯ್ಯರು ಕುಳಿತಿದ್ದ ಜಮಖಾನದ ಒಂದು ತುದಿ ಸೆರಗಿನಲ್ಲಿ ಸ್ವಲ್ಪ ಸಂಕೋಚದಿಂದಲೆ ಕುಳಿತುಕೊಂಡನು. ಅವನಿಗೆ ಚಿಕ್ಕಂದಿನಿಂದಲೂ ತನಗಿಂತಲೂ ಹಿರಿಯನಾಗಿದ್ದ ದೇವಯ್ಯನನ್ನು ಕಂಡರೆ ಭಯಮಿಶ್ರಿತ ಗೌರವ. ತಮ್ಮಪ್ಪನ ಕೊಳಕಲು ನಡೆನುಡಿ ವೇ಼ಭೂಷಣ ಆಚಾರಗಳನ್ನು ಕಂಡಾಗಲೆಲ್ಲ ದೇವಯ್ಯ ಖಂಡಿಸುತ್ತಿದ್ದನು. ಆದರೆ ಇತ್ತೀಚೆಗೆ ತಿಮ್ಮಪ್ಪ ಹೆಗ್ಗಡೆ ಆ ಅನೇಕ ವಿಚಾರಗಳಲ್ಲಿ ಸುಧಾರಿಸಿದ್ದನು. ಈಗ ಅವನು ದೇವಯ್ಯನ ಖೀಂಡನೆಗೆ ಗುರಿಯಾಗುವ ಸಂಭವವಿಲ್ಲದಿದ್ದರೂ ಅವನನ್ನು ಕಂಡಾಗಲೆಲ್ಲ ಹಿಂದಿನ ಪ್ರತಿಕ್ರಿಯೆಯಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದಲು ಇವನಿಂದ ಸಾಧ್ಯವಾಗಿರಲಿಲ್ಲ.
“ಏನೋ, ತಿಮ್ಮೂ, ನಿಮ್ಮ ಸಿಂಬಾವಿ ಬಾವ ಇನ್ನೂ ಅಲ್ಲೇ ಇದಾರೇನೋ?….” ದೇವಯ್ಯ ಮುಕುಂದಯ್ಯನೊಡನೆ ಮಾಡುತ್ತಿದ್ದ ಸಂವಾದವನ್ನು ತುಂಡುಗಡಿದು ಕೇಳಿದ್ದನು, ತಿಮ್ಮಪ್ಪನ ಕಡೆ ತಿರುಗಿ.
“ಹ್ಞೂ ಅದಾರೆ…”
“ಸುಮ್ಮನೆ ಇದಾನೆಯೇ? ಏನಾದರೂ ಕಿತಾಪತಿಗೆ ಸುರುವಾಗಿದೆಯೋ?…” ತಿಮ್ಮಪ್ಪ ಏನೂ ಉತ್ತರಕೊಡದೆ ಬರಿದೆ ಹುಸಿನಗೆ ನಗುತ್ತಿದ್ದುದನ್ನು ನೋಡಿ ದೇವಯ್ಯ ಏಕವಚನದಲ್ಲಿಯೆ ಮುಂದುವರಿಸಿದನು: “ಅವನೆಲ್ಲಿ ಸುಮ್ಮನೆ ಇರ್ತಾನೆ? ನಿನ್ನೆ ಇಲ್ಲಿಂದ ಹೊರಡುವಾಗಲೆ ಏನೇನೋ ಹೇಳ್ತಿದ್ದನಂತೆ: ತನಗೆ ಆದ ನಷ್ಟಾನೆಲ್ಲ ತುಂಬಿಕೊಡಬೇಕಂತೆ!…. ಸಾಲಕ್ಕೆ ಹೂವಳ್ಳಿ ಗದ್ದೆ ತೋಟ ಮನೆ ಎಲ್ಲ ಸ್ವಾಧೀನಕ್ಕೆ ತಗೊಳ್ತಾನಂತೆ!…. ಇದರಲ್ಲಿ ಸೇರ‍್ದೋರಿಗೆಲ್ಲ ಬಹಿಷ್ಕಾರ ಹಾಕಿಸ್ತಾನಂತೆ!….
‘ಹುಡುಗೀನೆಲ್ಲೋ ಮುಚ್ಚಿಟ್ಟು, ಕೆರೆ ಹಾರಿದಳು ಅಂತಾ ಕತೆ ಹುಟ್ಟಿಸಿ, ನ್ನ್ನ ಕಣ್ಣಗೇ ಮಣ್ಣೆರಚ್ತಾರೆ’ ಅಂತಿದ್ದನಂತೆ!…. ಅವನಿಗೆ ಹೇಳೂ, ‘ಹೂವಳ್ಳಿ ಗದ್ದೆ ತೋಟ ಮನೆ ಎಲ್ಲಾ ಆ ಹಾರುವನ ಹೆಸರಿಗೆ ಬರಿಯೋಕೆ ಮೊದಲೆ ಬೆಟ್ಟಳ್ಳಿ ಗೌಡ್ರಿಗೆ ಬರೆದು ಕೊಟ್ಟಿದ್ದನಂತೆ ವೆಂಕಟಣ್ಣ’ ಅಂತಾ…. ಗೊತ್ತಾಯ್ತೇನು?
“ನಮಗೂ ಬರಕೊಟ್ಟಾನಂತೆ, ಅಪ್ಪಯ್ಯ ಹೇಳ್ತಿದ್ರು!” ತಿಮ್ಮಪ್ಪ ತಾನು ಕೇಳಿದ್ದ ಸಂಗತಿಯನ್ನು, ಯಾವ ಉದ್ದೇಶವೂ ಇಲ್ಲದೆ, ಸುಮ್ಮನೆ ಹಾಗೆ ಹೇಳಿದ್ದನು.
ಆದರೆ ದೇವಯ್ಯನಿಗೆ ಅದರಲ್ಲಿ ಏನೋ ಬೇರೆಯ ಧ್ವನಿ ದ್ಯೋತಕವಾದಂತಾಗಿ ತುಸು ರೇಗಿದ ದನಿಯಲ್ಲಿ ಕೇಳಿದನು: “ಓಹೋ ಹಾಂಗಾದ್ರೆ ನೀನೂ ನಿನ್ನ ಬಾವನ ಜೊತೆ ಸೇರಿ ದಾವಾ ಹಾಕ್ತಿಯೇನು?”
“ಅಯ್ಯೋ ಮಾರಾಯ, ನಾನೆಲ್ಲಿ ಹಾಂಗೆ ಹೇಳಿದೆ?….” ಅಂಜಿದ ದನಿಯಲ್ಲಿಯೆ ‘ತಪ್ಪಾಯ್ತು’ ಎಂಬಂತೆ ಕೇಳಿದ್ದನು ತಿಮ್ಮಪ್ಪ.
ಆದರೆ ತಿಮ್ಮಪ್ಪ ತನ್ನ ತಂಗಿ ಮಂಜಮ್ಮನನ್ನು ಭರಮೈಹೆಗ್ಗಡೆಗೆ ಕೊಟ್ಟು, ತನಗೆ ಭರಮೈಹೆಗಗ್ಗಡೆಯ ತಂಗಿ ಲಕ್ಕಮ್ಮನನ್ನು ತರುವ ವಿಚಾರವಾಗಿ ‘ಜಟ್ಟಕ್ಕನೆ ಅಪ್ಪಯ್ಯನ ಸಂಗಡ ಮಾತಾಡ್ತಿತ್ತು’ ಎಂದು ತಿಳಿಸಿದಾಗ ದೇವಯ್ಯ ಮುಕುಂದಯ್ಯರಿಗೆ ತಮ್ಮ ತಲೆಯ ಮೇಲಿದ್ದ ದೊಡ್ಡ ಚಪ್ಪಡಿಯೆ ಇಳಿದಂತಾಗಿ ಒಬ್ಬರ ಕಣ್ಣನ್ನೊಬ್ಬರು ಇಂಗಿತವಾಗಿ ನಿಟ್ಟಿಸಿದ್ದರು.
“ಯಾವಾಗ ಇಡ್ತಾರಂತೋ ಮದುವೇನ? ದೊಡ್ಡಪ್ಪಯ್ಯನಿಗೆ ಹೇಳಿ ಆದಷ್ಟು ಬೇಗ ಪೂರೈಸಿಬಿಟ್ಟರೆ ಒಳ್ಳೇದಲ್ಲೇನೋ?” ದೇವಯ್ಯ ಸ್ವಲ್ಪ ಸರಸ ವಿನೋದ ಭಂಗಿಯಿಂದಲೆ ಮುಂಬರಿದು ಕೇಳಿದನು! “ಅಂದ್ರೇ…. ನಿನಗಿಷ್ಟ. ಇದೆಯೋ ಇಲ್ಲವೊ? ಯಾರಿಗೆ ಗೊತ್ತು?…. ಏನೋ, ತಿಮ್ಮೂ, ನಿನ್ನ ಮನಸ್ಸು ಹ್ಯಾಂಗದ್ಯೋ?”
ತಿಮ್ಮಪ್ಪಹೆಗ್ಗಡೆಯೂ ಸೇರಿ ಮೂವರೂ ಅರ್ಥಗರ್ಭಿತವಾಗಿ ನಕ್ಕರು.
“ನಮ್ಮ ಅಪ್ಪಯ್ಯನದೆ ತರಾತುರಿ ಆಗ್ಯದೆ. ‘ನಾನು ಈ ಮಳೆಗಾಲ ಕಳೀತೀನೋ ಇಲ್ಲೋ? ಅಷ್ಟರೊಳಗೇ ಮಂಗಳಕಾರ್ಯ ಆಗಿ ಬಿಡಲಿ!’ ಅಂತಿದಾನಂತೆ.” ಸ್ವಲ್ಪ ಹೊತ್ತು ಆಲೋಚಿಸುವಂತಿದ್ದು ಹೇಳಿದ್ದನು ತಿಮ್ಮಪ್ಪ.
“ಸರಿಹೋಯ್ತು ಬಿಡು: ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಕೊಟ್ಟಿದ್ದೂ ಹಾಲು ಅನ್ನ. ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ್ಹಾಂಗಾಯ್ತು ನಿಂಗೆ?” ಮುಕುಂದಯ್ಯ ಪರಿಹಾಸ್ಯ ಮಾಡಿದನು ತಿಮ್ಮಪ್ಪಗೆ.
“ನಂಗೊಬ್ಬನಿಗೆ ಅಲ್ಲಾ, ನಿಂಗೂ!” ಸ್ವಲ್ಪ ರಾಗವಾಗಿ ಎಳೆದು ಹೇಳಿದ್ದ ತಿಮ್ಮಪ್ಪನ ಆ ಸಣ್ಣ ಉಕ್ತಿಯಲ್ಲಿ ಬಹು ದೊಡ್ಡ ಅರ್ಥ ಧ್ವನಿತವಾಗಿತ್ತು: ಇನ್ನು ಮುಕುಂದಯ್ಯ ಚಿನ್ನಮ್ಮನನ್ನು ಯಾವ ಅಡಚಣೆಯಾಗಲಿ ತೊಂದರೆಯಾಗಲಿ ಇಲ್ಲದೆ ಮದುವೆಯಾಗಬಹುದಲ್ಲಾ!
ತಿಮ್ಮಪ್ಪನ ಮನಸ್ಸಿನಲ್ಲಿ ಯಾವ ಕೊಂಕೂ ಇಲ್ಲದಿದ್ದರೂ ಅವನ ಮಾತಿನ ಹಿಂದೆ ಕೊಂಕನ್ನು ಊಹಿಸುವವರು ಊಹಿಸಬಹುದಾಗಿತ್ತು: ಅಡಚಣೆಗಳನ್ನು ತಂದೊಡ್ಡುತ್ತಿದ್ದ ವ್ಯಕ್ತಿಗಳಲ್ಲಿ ಪ್ರಧಾನವಾಗಿದ್ದ ಮಾವನನ್ನೆ ಮುಗಿಸಿಬಿಟ್ಟಿದ್ದರಿಂದ ಇನ್ನು ಮುಂದೆ ಮುಕುಂದಯ್ಯನಿಗೆ ಚಿನ್ನಮನ್ನು ಪಡೆದಯುವ ದಾರಿ ಸುಸೂತ್ರವಾಯಿತೆಂದೂ, ಹೂವಳ್ಳಿ ಮನೆಗೆ ಬೇರೆ ಯಾವ ಗಂಡೂ ದಿಕ್ಕಿಲ್ಲವಾದ್ದರಿಂದ ಮುಕುಂದಯ್ಯನೆ ಮನೆಯಳಿಯನಾಗಿ ಯಾಜಮಾನ್ಯ ವಹಿಸಬಹುದೆಂದೂ ವ್ಯಂಗ್ಯವಾಗಿ ವ್ಯಾಖ್ಯಾನ ಮಾಡಬಹುದಾಗಿತ್ತು! ಹಾಗೆ ಮಾಡಿದ ವ್ಯಾಖ್ಯಾನ ನಿಜಕ್ಕೆ ದೂರವಾಗುತ್ತಲೂ ಇರುವ ಸಂಭವವಿರಲಿಲ್ಲ.
ಅಂತಹ ಕುಹಕ ನಿಂದೆಗೆ ತನು ಪಕ್ಕಾಗಬಹುದೆಂಬ ಚಿಂತನೆ ತಟ್ಟನೆ ಮನಸ್ಸಿಗೆ ಹೊಳೆದುದರಿಂದಲೆ ಮುಕುಂದಯ್ಯ ಇದ್ದಕ್ಕಿದ್ದ ಹಾಗೆ ಚಿಂತಕುಲನಾದಂತೆ ತಲೆ ತಗ್ಗಿಸಿ ಮೌನವಾಗಿದ್ದುಬಿಟ್ಟನು. ಅವನ ಆ ಭಾವ ಉಳಿದಿಬ್ಬರ ಮೆಲೆ ಪ್ರಭಾವ ಬೀರಿದಂತಾಗಿ ಅವರೂ ಅವಾಕ್ಕಾಗಿ, ಅಂಗಳದಲ್ಲಿ ಕವಿದಿದ್ದ ಕಗ್ಗತ್ತಲೆಯ ಕಡೆಗೆ ನೋಡುತ್ತಾ, ಭೋರೆಂದು ಬೀಳುತ್ತಿದ್ದ ಮಳೆಯನ್ನು ಆಲೈಸುತ್ತಾ ಕುಳಿತುಬಿಟ್ಟರು.
ಮಳೆ ಬೀಳುತ್ತಿದ್ದ ಸದ್ದನ್ನು ಆಗಾಗ ಭಂಗಿಸುತ್ತಿದ್ದ ಸದ್ದು ಎಂದರೆ ಆ ಮೂವರೂ ತಮ್ಮನ್ನು ಕಚ್ಚುತ್ತಿದ್ದ ನುಸಿಗಳನ್ನು ರಪ್ಪನೆ ಹೊಡೆದುಕೊಳ್ಳುತ್ತಿದ್ದ ಸದ್ದು. ಹಾಗೆ ಹಡೆದುಕೊಳ್ಳುತ್ತಿದ್ದಾಗ ಒಂದು ಸಾರಿ ದೇವಯ್ಯ ಎಂದಿಗಿಂತಲೂ ರಭಸವಾಗಿ ಹೊಡೆದುಕೊಂಡುದರ ಪರಿಣಾಮವಾಗಿ, ದೊಡ್ಡಗೆ ಚಪ್ಪಾಳೆ ಹೊಡೆದಂತಾಗಿ, ಮೂವರೂ ತಮ್ಮ ತಮ್ಮ ಭಾವಪ್ರಪಂಚಗಳಿಂದ ಎಚ್ಚತ್ತು ಹೊರಗೆ ಬಂದು ಒಟ್ಟಿಗೆ ಗಟ್ಟಿಯಾಗಿ ನಗತೊಡಗಿದರು.
ದೇವಯ್ಯ ಹೇಳಿದನು: “ತಿಮ್ಮೂ, ಈ ಹಾಳು ನುಸಿಕಾಟ ಸಹಿಸಕ್ಕೆ ಆಗಾದಿಲ್ಲ. ಒಂದು ಅಗ್ಗಿಷ್ಟಿಕೆನಾರೂ ಹಚ್ತಿಯೇನೊ?”
ತಿಮ್ಮಪ್ಪಹೆಗ್ಗಡೆ ಅಗ್ಗಿಷ್ಟಿಕೆ ಹಚ್ಚಿಕೊಂಡು ಬರಲು ಒಳಗಡೆ ಹೋದನು. ಉಂಗುರಾನ ಯಾರೀಗಾದ್ರೂ ಕೊಟ್ಟಳೊ? ಇಲ್ಲಾ ಕಳದೇಹೋಯ್ತೊ? ‘ಅಲ್ಲೆಲ್ಲೊ ಇಟ್ಟೀನಿ, ಇನ್ನೊಂದು ಸಾರಿ ಬರುವಷ್ಟರಲ್ಲಿ ಹುಡುಕಿಡುತ್ತೀನಿ.’ ಅಂದಳಲ್ಲಾ ಕಾವೇರಿ? ಈ ಸೆಟ್ಟರ ಹುಡುಗೇರ ಹಣೇಬರಾನೆ ಹೀಂಗೆ. ಒಬ್ಬನ್ನ ನಂಬಿಕೊಂಡು ಇರೋ ಜಾತಿಯಲ್ಲ!…. ಅದರ ಅವ್ವನೂ ಹುಡುಗಿಯಾಗಿದ್ದಾಗ ಏನೇನೋ ಪುಕಾರಾಗಿತ್ತಂತೆ, ಹೀಂಗೇ!…”
ಮುಕುಂದಯ್ಯನೂ ತನ್ನ ಹಗಲುಗನಸನ್ನು ಮುಂದುವರಿಸಿದ್ದನು: “….ಪಾಲು ತಗೊಂಡು ಹೋಗು ಅಂದರೆ ‘ಹ್ಞೂ ಆಗಲಿ!’ ಅಂದೇ ಬಿಡೋದಪ್ಪಾ! ಈ ಮನೆ ಗದ್ದೆ ತೋಟ ನೋಡಿಕೊಳ್ಳೊ ಹಾಂಗೇನೆ ಅದನ್ನೂ ನೋಡಿಕೊಂಡರಾಯ್ತು…. ನನ್ನವ್ವ ಏನು ಹೇಳ್ತದೆಯೊ ಏನೊ ಗೊತ್ತಿಲ್ಲಲ್ಲಾ….?”
*****



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ