ನನ್ನ ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-49

         ಪಾದ್ರಿ ತನ್ನ ಕಿವಿಯಲ್ಲಿ ಏನನ್ನೊ ಹೇಳಲು ಅವನಿಗೆ ತನ್ನ ಬೈಸಿಕಲ್ಲನ್ನು ಕೊಟ್ಟು, ಹಳೆಮನೆ ಸುಬ್ಬಣ್ಣಹೆಗ್ಗಡೆಯವರನ್ನು ಕೂರಿಸಿಕೊಂಡು ಬೆಟ್ಟಳ್ಳಿಗೆ ಹೊರಟ್ಟಿದ್ದ  ತಮ್ಮ ಕಮಾನುಗಾಡಿಯನ್ನು ಹಿಂಭಾಗದಿಂದಲೆ ಹತ್ತಿ ಕುಳಿತ ದೇವಯ್ಯನು ಕಾಡಿನ ನಡುವಣ ರಸ್ತೆಯ ತಿರುಗಣೆಯಲ್ಲಿ ಕಣ್ಮರೆ ಯಾಗಲು, ಉಣುಗೋಲನ್ನು ದಾಟಿ ರಸ್ತೆಯ ಅಂಚಿನಲ್ಲಿ, ತಾಯಿ ಅಂತಕ್ಕನ ಪಕ್ಕದಲ್ಲಿ, ನಿಂತು ಎವೆಯಿಕ್ಕದೆ ನೋಡುತ್ತಿದ್ದ ಕಾವೇರಿ ಮೌನವಾಗಿಯೆ ನಿಟ್ಟುಸಿರೆಳೆದು, ತನ್ನಂತೆಯೆ ನಿಡುಸುಯ್ದು ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಿದ್ದ ತಾಯಿಯೊಡನೆ ಮನೆಯೊಳಕ್ಕೆ ನಡೆದಳು.

ಅಂಗಳದ ಒಳಗಡೆಯೆ ಒಡ್ಡಿನ ಬದಿ ನಿಂತಿದ್ದ ಚೀಂಕ್ರ ಸೇರೆಗಾರನು ತಾಯಿಯನ್ನೂ ಮಗಳನ್ನೂ ಮುಗುಳುನಗೆವೆರಸಿ ನೋಡುತ್ತಿದ್ದು “ನಾನೆ ಹಾಕ್ತೆ; ನೀವು ಹೋಯಿನಿ” ಎಂದು, ತಾನೆ ಉಣುಗೋಲಿನ ಗಳುಗಳನ್ನು ಕಂಬದ ತೂತುಗಳಿಗೆ ನೂಕಿ ಹಾಕಿ ಭದ್ರ ಮಾಡಿದನು. “ಹಾಂಗಾರೆ ನಾನು ಹೋತೆ; ಬೈಗಾಯಿತ್ತು” ಎಂದು ಹೇಳಿ ಬೀಳುಕೊಂಡು, ತಡಬೆಯನ್ನು ಹತ್ತಿ ದಾಟುತ್ತಿದ್ದನು.
“ಕೋಣೂರ ಬಿಡಾರಕ್ಕೆ ಹೋಗುತ್ತೀಯಾ? ಕಪ್ಪಾಯ್ತಲ್ಲೋ? ಹುಲಿಕಲ್ಲು ಗುಡ್ಡಹತ್ತಿ ಇಳೀಬೇಕಲ್ಲಾ?”
ಅಂತಕ್ಕನ ಔಪಚಾರಿಕ ಪ್ರಶ್ನೆಗೆ ಚೀಂಕ್ರ “ಮತ್ತೇನು ಮಾಡು ಲಕ್ಕು? ಬಿಡಾರದಲ್ಲಿ ಮಕ್ಕಳಿವೆಯಲ್ಲಾ? ಏನೋ ಆ ಅಕ್ಕಣಿ, ಮಕ್ಕಳಿಗೆ ತಾಯಿಯಾಗಿ ನೋಡಿಕೊಳ್ಳುತ್ತಿದ್ದಾಳೆ. ಇಲ್ಲದಿದ್ದರೆ ಅವು ಕೂಳಿಲ್ಲದೆ ಸಾಯ ಬೇಕಾಗಿತ್ತು….”ಎನ್ನುತ್ತಲೆ ತಡಬೆ ಹೆದ್ದಾರಿಗಿಳಿದನು.
“ಯಾರೋ ಅದು? ಪುಣ್ಯಾತಗಿತ್ತಿ! ನಿನಗೆ ಏನಾಗಬೇಕೊ?”
“ಏನು ಆಗಬೇಕಿಲ್ಲ. ನನ್ನ ಬಿಡಾರದ ಬದಿಯಲ್ಲೆ ಬಿಡಾರ ಮಾಡಿಕೊಂಡಿದಾನಲ್ಲಾ ಆ ಪಿಜಿಣ? ಅವನ ಬುಡದಿ….”
ಮುಂದೆ ಮಾತಿಗೆ ಅವಕಾಶ ಕೊಡದಷ್ಟು ಅವಸರದಲ್ಲಿ ಹೊರಟು ಹೋಗಿದ್ದನು ಸೇರೆಗಾರ ಚೀಂಕ್ರ.
ತಾಯಿ ಚೀಂಕ್ರನೊಡನೆ ಮಾತಾಡುತ್ತಿದ್ದಾಗಲೆ ಅದರಲ್ಲಿ ಸಂಪೂರ್ಣ ಅನಾಸಕ್ತಳಾಗಿ ಕಾವೇರಿ ತನ್ನ ಕೋಣೆಗೆ ಧಾವಿಸಿದ್ದಳು.
ಬಾಗಿಲು ಹಾಕಿಕೊಂಡವಳೆ ಕೈ ನೋಡಿಕೊಂಡಳು. ಹೌಹಾರಿ ದಿಗಿಲುಬಿದ್ದಳು. ಮತ್ತೆ ಬಾಗಿಲು ತೆರೆದು ಮುಂಚೆಕಡೆಗೆ ಬಂದು ಅಲ್ಲಿ ಇಲ್ಲಿ ನೆಲದ ಕಡೆ ನೋಡಿ ಹುಡುಕಿದಳು. ಅಂಗಳಕ್ಕೂ ಇಳಿದು ಕಸಬಿದ್ದಿದ್ದ ನೆಲವನ್ನೆಲ್ಲ ಬಗ್ಗಿ ಹುಡುಕಿದಳು. ಉಣುಗೋಲು ಬಳಿಯೂ ಹೋಗಿ ಬಾಗಿ ನೋಡಿದಳು. ಮತ್ತೆ ಹಿಂದಕ್ಕೆ ಬಂದು, ಬಾಗಿಲು ಸಂಧಿಯಲ್ಲಿ ಕತ್ತಲೆಯಾಗಿದ್ದುದರಿಂದ ಕೈಯಿಂದಲೆ ನೆಲ ತಡವಿ ಹುಡುಕಾಡಿದಳು. ಮತ್ತೆ ಅಡುಗೆ ಮನೆಗೆ ಓಡಿ, ಚಿಮಿಣಿ ಹೊತ್ತಿಸಿ, ಅದನ್ನು ಹಿಡಿದು, ಅದರ ಬೆಳಕಿನಲ್ಲಿ ಜಗಲಿ ಅಂಗಳಗಳನ್ನೆಲ್ಲ ಸೋವಿದಳು. ಎಲ್ಲಿಯೂ ಕಾಣಿಸಲಿಲ್ಲ, ಆ ದಿನ ಪೂರ್ವಾಹ್ನದಲ್ಲಿ ಕೋಣೆಯೊಳಗೆ ತನ್ನನ್ನು ಮುದ್ದುಮಾಡುತ್ತಾ ದೇವಯ್ಯಗೌಡರು ತನ್ನ ಕೈಬೆರಳಿಗೆ ತೊಡಿಸಿದ್ದ ಹರಳಿನ ಹೊನ್ನುಂಗುರ! ಕಡೆಗೆ ಕೋಣೆಯ ಬಾಗಿಲು ಹಾಕಿಕೊಂಡು ಕುಳಿತು ಬಿಕ್ಕಿಬಿಕ್ಕಿ ಅಳತೊಡಗಿದಳು.
ದೇವಯ್ಯಗೌಡರ ಉಂಗುರ ಅವಳ ಬೆರಳಿಗೆ ಸಡಿಲವಾಗಿದ್ದುದೇನೊ ನಿಜ. ಒಂದೆರಡು ಸಾರಿ ಕಳಚಿಬಿದ್ದಾಗಲೂ ಅದನ್ನೆತ್ತಿ ಮತ್ತೆ ಹಾಕಿಕೊಂಡಿದ್ದಳು ಕಾವೇರಿ. ಅವಳ ತಾಯಿ ಎಚ್ಚರಿಕೆ ಹೇಳಿದ್ದರೂ ಲಕ್ಷಿಸದೆ ತನ್ನ ಮೋಹದ ಆ ಸುಂದರ ಅನರ್ಘ್ಯವಸ್ತುವನ್ನು ಬೆರಳಿನಿಂದ ಕಳಚಿ ಇಡಲು ಇಷ್ಟಪಟ್ಟಿರಲಿಲ್ಲ. ಆ ಬೆರಳನ್ನು ತುಸು ಕೊಂಕಿಸುವುದರ ಮೂಲಕ ಉಂಗುರ ಜಾರಿಬೀಳದಂತೆ ಜಾಗರೂಕತೆಯಿಂದ ಇದ್ದಳು. ಆದರೆ ತುದಿಯಲ್ಲಿ, ಸುಬ್ಬಣ್ಣಹೆಗ್ಗಡೆಯವರನ್ನು ಗಾಡಿಗೆ ಸಾಗಿಸುವ ಸಮಯದ ಅಡಾವುಡಿಯಲ್ಲಿ, ಅದು ಎಲ್ಲಿ ಕಳಚಿ ಬಿತ್ತೆಂಬುದು ಅವಳ ಪ್ರಜ್ಞೆಗೆ ಬಂದಿರಲಿಲ್ಲ.
ಬಿದ್ದದ್ದಾದರೂ ಎಲ್ಲಿಗೆ ಹೋಗಬೇಕು? ಅಲ್ಲೆ ಎಲ್ಲಿಯೊ ಬಿದ್ದಿರಬೇಕು, ಇಲ್ಲವೆ ಯಾರಾದರೂ ಎತ್ತಿಕೊಂಡಿರಬೇಕು. ಎಲ್ಲೆಲ್ಲಿಯೊ ದೀಪ ಹಚ್ಚಿಕೊಂಡು ಹುಡುಕಿಯಾಯ್ತು. ಹಾಗಾದರೆ ಯಾರಾದರೂ ಎತ್ತಿಕೊಂಡಿರಬೇಕು. ಯಾರು? ಆಗ ಅಲ್ಲಿದ್ದವರೆಂದರೆ ಪಾದ್ರಿ, ಸುಬ್ಬಣ್ಣಹೆಗ್ಗಡೆ, ದೇವಯ್ಯ, ಗಾಡಿ ಹೊಡೆಯುವ ಬಚ್ಚ, ಸೇರೆಗಾರ ಚೀಂಕ್ರ, ಐಗಳು ಅನಂತಯ್ಯ, ಕೆಲಸದ ಹುಡುಗ ಕೊರಗ. ಉಳಿದವರೆಲ್ಲ ಒಡ್ಡಿನ ಆಚೆಯ ರಸ್ತೆಯಲ್ಲಿದ್ದರು. ಸೇರೆಗಾರ ಚೀಂಕ್ರ ಅವರೆದುರೆ, ಅವರಿಗೆ ಹೇಳಿಯೇ ಹೋಗಿದ್ದಾನೆ. ಕೆಲಸದ ಹುಡುಗ ಕೊರಗನನ್ನು ಹೆದರಿಸಿ “ಒಳ್ಳೆ ಮಾತಿನಲ್ಲಿ ಉಂಗುರ ಕೊಡುತ್ತೀಯೊ ಇಲ್ಲವೊ?” ಎಂದು ಕೇಳಿದರು: ಅವನು ದಮ್ಮಯ್ಯಗುಡ್ಡೆ ಹಾಕುತ್ತಲೇ ತಾನು ಅದನ್ನು ದೇವರಾಣೆಗೂ ಕಾಣಲಿಲ್ಲ ಎಂದನು. ದೇವರಿಗೆ ಸುಳಿಸಿದ ತೆಂಗಿನ ಕಾಯನ್ನೂ ಮುಟ್ಟಿಸಿ ಪ್ರಮಾಣ ಮಾಡುವಂತೆ ಹೇಳಿದರು. ಅವನು ಅದನ್ನೂ ಧೈರ್ಯವಾಗಿಯೆ ಮಾಡಿಬಿಟ್ಟು ತನ್ನ ಪ್ರಮಾಣಿಕತನವನ್ನು ಸ್ಥಾಪಿಸಿಕೊಂಡನು. ಕೊನೆಗೆ ಇನ್ನೇನೂ ತೋರದೆ, ಧರ್ಮಸ್ಥಳದ ಅಣ್ಣಪ್ಪ ಭೂತರಾಯಗೆ “ನೋಡೋಣ, ಅಣ್ಣಪ್ಪ ದೇವರಿಗೆ ಶಕ್ತಿ ಇದ್ದಲ್ಲಿ ಉಂಗುರ ಎಲ್ಲಿಗೆ ಹೋಗುತ್ತದೆ?” ಎಂದು ಹೇಳಿಕೊಂಡು, ಮುಡಿಪು ಕಟ್ಟಿದರು.
ಉಂಗುರದ ಅನ್ವೇಷಣೆಯಾಗಲಿ ವಿಚಾರಣೆಯಾಗಲಿ ಹೆಚ್ಚಿನ ಗುಲ್ಲಿಗೂ ಹೋಗುವಂತಿರಲಿಲ್ಲ; ಏಕೆಂದರೆ ಅದು ಅಕ್ರಮಾತಿಕ್ರಮದ ಪ್ರಣಯ ಪ್ರಪಂಚದ ಗೋಪ್ಯ ವಲಯಕ್ಕೆ ಸೇರಿದುದಾಗಿತ್ತು. ಬೆಟ್ಟಳ್ಳಿ ದೇವಯ್ಯಗೌಡರು ಅಂತಕ್ಕನ ಮಗಳು ಕಾವೇರಿಯ ಬೆರಳಿಗೆ ತೊಡಿಸಿದ್ದ  ಹರಳಿನ ಹೊನ್ನುಂಗುರ ಕಳುವಾಯಿತಂತೆ ಎಂಬ ಸುದ್ದಿ ಹಬ್ಬಿದರೆ, ಯಾರ ಯಾರ ಎಲ್ಲೆಲ್ಲಿಯ ಸಂಬಂಧ ಬಾಂಧವ್ಯಗಳಲ್ಲಿ ಎಂತೆಂತಹ ದುರಂತವಾಗಲಿಕ್ಕಿಲ್ಲ?
ಕಾವೇರಿ ಹುಡುಕಿ ಸೋತು ಕೋಣೆಯಲ್ಲಿ ಬಿಕ್ಕಿಬಿಕ್ಕಿ ಅಳುತ್ತಿದ್ದಾಗ ಅವಳ ಹರಳುಂಗುರ ಚೀಂಕ್ರನ್ ಸೊಂಟದಲ್ಲಿ ಸುರಕ್ಷಿತವಾಗಿ ಪ್ರಯಾಣ ಮಾಡುತ್ತಿತ್ತು, ಕರ್ಮೀನು ಸಾಬರ ಅಂಗಡಿಗೆ. ಅಂಗಳದಲ್ಲಿ ಕಳಚಿಬಿದ್ದು ಕಸದಲ್ಲಿ ಮರೆಯಾಗಿ ಬಿದ್ದಿದ್ದ ಅದನ್ನು ಅವನು ಎತ್ತಿಕೊಂಡು ಸೊಂಟದ ಪಂಚೆಯ ಮಡಿಕೆಯಲ್ಲಿ ಸಿಕ್ಕಿಸಿಕೊಂಡಿದ್ದನು: ಯಾರಾದರೂ ನೋಡಿದ್ದರೆ ಅಥವಾ ವಿಚಾರಿಸಿದ್ದರೆ ಕೊಡುವ ಮನಸ್ಸಿನಿಂದಲೆ ಎತ್ತಿಕೊಂಡಿದ್ದನು. ಆದರೆ ಯಾರೂ ನೋಡಲಿಲ್ಲ ಎಂದು ಗೊತ್ತಾದೊಡನೆ ಕಳುವ ಕಸುಬಿನಲ್ಲಿ ಪಳಗಿದ್ದ ಅವನ ಮನಸ್ಸು ಬದಲಾಯಿಸಿತ್ತು. ಅವನು ಅಂಗಳದಿಂದ ಹೊರಡುವ ಮುನ್ನವೆ ಕಾವೇರಿಗೆ ತನ್ನ ಉಂಗುರ ಬಿದ್ದುಹೋದುದು ಗೊತ್ತಾಗಿ ಹುಡುಕಿದ್ದರಾಗಲಿ ವಿಚಾರಿಸಿದ್ದರಾಗಲಿ ಮನಸ್ಸು ಕರಗಿ ಕೊಡುತ್ತಿದ್ದನೇನೊ ಏನೋ? ಏಕೆಂದರೆ ಹಸಲರವನಾಗಿ ಅಸ್ಪೃಶ್ಯಸದೃಶ್ಯನಾಗಿ ಹೊರಗೇ ನಿಲ್ಲುವ ಕೂಲಿಯಾಳಾಗಿದ್ದರೂ ಸೆಟ್ಟರ ಹುಡುಗಿಯ ರೂಪಕ್ಕೆ ಹುಟ್ಟು ಕಾಮುಕನಾಗಿದ್ದ ಅವನು ಗುಟ್ಟಾಗಿ ಸೋತಿದ್ದನು. ಉಂಗುರವನ್ನು ಹುಡುಕಿ ಕೊಡುವ ನೆವದಿಂದಾದರೂ ಅವಳ ಮನಸ್ಸಿನಲ್ಲಿ ತುಸು ತಾವನ್ನು ಸಂಪಾದಿಸಲು ಪ್ರಯತ್ನಿಸುತ್ತಿದ್ದನೆಂದು ತೋರುತ್ತದೆ. ಆದರೆ ತಾನು ಬಿಡಾರಕ್ಕೆ ಹೋಗುತ್ತೇನೆಂದು ಅಂತಕ್ಕನಿಗೆ ಹೇಳಿ, ತನ್ನ ಮೇಲಿನ ಗುಮಾನಿಗೆ ಅವಕಾಶವಿಲ್ಲದಂತೆ ಮಾಡಿ, ತಡಬೆ ದಾಟಿ ಹೊರಟ ಅವನಿಗೆ ಆದಷ್ಟು ಜಾಗ್ರತೆ, ಕಳವು ಮಾಲನ್ನು ಅಡವಿಟ್ಟುಕೊಳ್ಳುವ ಕಸುಬಿನಿಂದಲೆ ವಿಶೇಷವಾಗಿ ಐಶ್ವರ್ಯ ಸಂಪಾದಿಸುತ್ತಿದ್ದ, ಕರೀಂಸಾಬರಿಗೆ ಕೊಟ್ಟು ಪ್ರತಿಫಲ ಪಡೆದು ಕೈತೊಳೆದುಕೊಳ್ಳಲು ಹವಣಿಸಿ ಅವರ ಮಳಿಗೆಗೆ ಹೋದನು.
ಆದರೆ ಅವರು ಸಿಂಬಾವಿಯಲ್ಲಿ ಗಾಯಗೊಂಡು ಅಸ್ತಾವಸ್ತೆಯಲ್ಲಿದ್ದ ಇಜಾರದ ಸಾಬಿಗೆ ಇಲಾಜು ಮಾಡಿಸುವ ಮತ್ತು ಅವನನ್ನು ಆದಷ್ಟು ಬೇಗನೆ ತೀರ್ಥಹಳ್ಳಿಯ ಆಸ್ಪತ್ರೆಗೆ ಸಾಗಿಸುವ ಗಡಿಬಿಡಿಯಲ್ಲಿದ್ದರು. ಕಣ್ಣಾಪಂಡಿತರು ತಮಗೆ ತಿಳಿದಂತೆ ಔಷಧಿ ಮಾಡುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿಯೆ, ಸಿಂಬಾವಿಯಲ್ಲಿ ಇಜಾರದ ಸಾಬಿಗೆ ಒದಗಿದ್ದ ದುರ್ಘಟನೆಯ ವಿಷಯವನ್ನು ಕೇಳಿ, ದೇವಯ್ಯಗೌಡರ ಕಿವಿಗೆ ಅದನ್ನು ಉಸುರಿ, ಅವರ ಬೈಸಿಕಲ್ಲನ್ನು ಈಸಿಕೊಂಡಿದ್ದ ಜೀವರತ್ನಯ್ಯನವರೂ ಅಲ್ಲಿಗೆ ಧಾವಿಸಿದ್ದರು.
ಮೊದಮೊದಲು, ಏನೊ ಮಾತನಾಡುವುದಿದೆ ಎಂಬುದನ್ನು ದೂರದಿಂದಲೆ ಕಣ್ಣಿನಿಂದಲೆ ಸೂಚಿಸಿ ಚೀಂಕ್ರನು ಎಷ್ಟು ಪ್ರಯತ್ನಪಟ್ಟರೂ ಕರೀಂಸಾಬರು ಅದನ್ನು ಗಮನಿಸಿಯೂ, ಮನಸ್ಸಿಗೆ ಹಾಕಿಕೊಳ್ಳಲಿಲ್ಲ. ಒಂದೆರಡು ಸಾರಿ ’ತನಗೆ ಕೆಲಸವಿದೆ ಈಗ ಆಗುವುದಿಲ್ಲ’ ಎಂದು ಗದರಿಸಿಯೂ ಬಿಟ್ಟರು. ಆದರೆ ಅವನು ತನ್ನ ಸೊಂಟಕ್ಕೆ ಕೈಹಾಕಿ ಹಾಕಿ ತೆಗೆಯುವುದರ ಮುಖಾಂತರವೂ ಪುಡಿಸಾಬರೊಡನೆ ಹೇಳಿಕಳಿಸುವುದರ ಮುಖಾಂತರವೂ ಕಾರ್ಯದ ಶ್ರೀಮಂತಗುರುತ್ವವನ್ನು ಅವರ ಮನಸ್ಸಿಗೆ ಮಂದಟ್ಟು ಮಾಡಿದ ಮೇಲೆ ಹತ್ತಿರ ಬಂದು ವಿಚಾರಿಸಿದರು. ಮನೆಯ ಹಿಂದಣ ಗುಟ್ಟಿನ ಕೋಣೆಗೆ ಕರೆದೊಯ್ದು ಹರಳುಂಗುರವನ್ನು ಕೈಗೆ ತೆಗೆದುಕೊಂಡರು. ಒಡನೆಯೆ ಬೆಚ್ಚಿದರು. ಮತ್ತೆ ಬೆಳಕಿಗೆ ಹಿಡಿದು ಚೆನ್ನಾಗಿ ಪರೀಕ್ಷಿಸಿದರು: ’ಅರೆ! ಅದೇ ಉಂಗುರ! ತೊಲಗಿಸಲು ಎಷ್ಟು ಪ್ರಯತ್ನಪಟ್ಟರೂ ಮತ್ತೆ ಮತ್ತೆ ತನ್ನ ಬಳಿಗೆ ಬರುತ್ತಿದೆಯಲ್ಲಾ!…ಅನೇಕೆ ವರ್ಷಗಳ ಹಿಂದೆ…. ತಾನಿನ್ನೂ ಯೌವನದಲ್ಲಿದ್ದಾಗ…. ಇವರ ದರೋಡೆಯ ಗುಂಪು ಆಗುಂಬೆಯ ಘಾಟಿಯಲ್ಲಿ ನಡೆಸಿದ್ದ ಒಂದು ಕೊಲೆಯಲ್ಲಿ ದೊರಕಿದ್ದಲ್ಲವೆ? ಹೊಸದಾಗಿ ಮದುವೆಯಾಗಿದ್ದ ದಂಪತಿಗಳು-ಸೊನಗಾರರಂತೆ!-ಗಟ್ಟದ ಮೇಲಣ ದುಡಿಮೆಯನ್ನು ಗಟ್ಟದ ಕೆಳಗಿದ್ದ ತಮ್ಮ ಊರಿಗೆ ಕೊಂಡೊಯ್ಯುತ್ತಿದ್ದರು…. ತಾನು ತಡೆದರೂ ಕೇಳದೆ ಗಂಡನಿಗೆ ಚೂರಿಹಾಕಿ ಬಿಟ್ಟರು! ಪಾಪಿಗಳು! ಆ ಹೆಂಗಸು, ಅಲ್ಲ ಹುಡುಗಿ, ಗೊಳೋ ಎಂದು ಕೂಗುತ್ತಾ ಅಬ್ಬರಿಗೇ ಹಾರಿಬಿಟ್ಟಳು!…. ಅವಳ ಒಡಲೂ ಮುರಿದೂ ಮುದ್ದೆಯಾಗಿತ್ತು! ಅವಳ ಮೈಮೇಲಿದ್ದ ಚೂರುಪಾರು ನಗವನ್ನೂ ಸುಲಿದಿದ್ದರು!…. ಹಾಳು ನೆನಪು!-ಈಗ ನೆನೆದರೇ ಮೈ ನಡುಗುತ್ತದೆ!…. ಗಂಡನ ಬೆರಳಿನಲ್ಲಿದ್ದ ಈ ಉಂಗುರವನ್ನು ಕಲ್ಲೂರು ಸಾಹುಕಾರರಿಗೆ ದಾಟಿಸಿದ್ದೆ!….ಆ ಮಂಜಭಟ್ಟನೂ ಇಂತಹ ಕೆಟ್ಟ ಕಳ್ಳ ಕೊಲೆಯ ಮಾಲನ್ನೇ ಸಂಗ್ರಹಿಸಿ ಇಷ್ಟು ದೊಡ್ಡ ಸಾಹುಕಾರನಾಗಿದ್ದಲ್ಲವೆ? ಇದು ಹೇಗೆ ಈ ಚೀಂಕ್ರನ ಕೈಗೆ ಬಂತು? ಕದ್ದನೊ? ಕೊಲೆಗಿಲೆ ಮಾಡಿದನೊ?’-ಕೇಳಬೇಕೆನ್ನಿಸಿತು ಕರೀಂಸಾಬರಿಗೆ: ಒಂದು ಅರ್ಧ ಕ್ಷಣಕ್ಕೂ ಕಡಮೆಯ ಕಾಲದಲ್ಲಿ ಆ ಉಂಗುರದ ಪೂರ್ವಕಥೆ ಮಿಂಚಿತ್ತು ಮನಸ್ಸಿನಲ್ಲಿ!
ಆದರೆ ಅವರ ಬಾಯಿಂದ ಹೊರಬಿದ್ದದ್ದೇ ಬೇರೆ: “ಅಲ್ಲವೋ, ಚೀಂಕ್ರ ನಿನಗೆ ಎಲ್ಲಿ ಸಿಕ್ಕುತ್ತವೆಯೋ ಇಂಥ ಪಡಪೋಸಿ ಮಾಲು, ಬರೀ ಗಿಲೀಟು. ಮೂರು ಕಾಸು ಬಾಳುವುದಿಲ್ಲ…ಮೊನ್ನೆ ನೀನು ತಂದು ಕೊಟ್ಟ ಅಡಕೆಯೂ ಪಡಪೋಸಿಯದ್ದೆ! ಹಸಿ ಅಡಕೆಯನ್ನೆ ತಟ್ಟೆಯಿಂದ ಹೊತ್ತು ತಂದಿದ್ದೆಯೋ ಏನೋ?…. ಸರಿ. ಇರಲಿ ಬಿಡು. ಆಮೇಲೆ ಮಾತಾಡುವಾ. ಈಗ ನನಗೆ ಸಮಯ ಇಲ್ಲ. ನಿನಗೆ ಏನು ಸಾಮಾನು ಬೇಕೋ ಅಂಗಡಿಯಿಂದ ತೆಗೆದುಕೊಂಡು ಹೋಗಿರು. ಆಮೇಲೆ ಲೆಕ್ಕ ಮಾಡಿದರಾಯಿತು…” ಎಂದು ಮರುಮಾತಿಗೆಡೆಯಿಲ್ಲದಂತೆ ಒಳಗೆ ನಡೆದರು.
’ಈ ಕರ್ಮೀನ ಸಾಬಿ ಪಕ್ಕಾ ತಾಯಿಗ್ಗಂಡ! ಉಂಗುರ ಗಿಲೀಟಿನದಂತೆ? ಅಡಕೆ ಹಸಿಯದಂತೆ! ಗೌಡರ ಮನೆಯಲ್ಲಿ ಒಣಗಿಸಿ ಆರಿಸಿ ಇಟ್ಟಿದ್ದ ಹಸವನ್ನೆ ನಾನು ತಂದದ್ದು. ನನಗೆ ಗೊತ್ತಿಲ್ಲವೆ ಅದರ ಬೆಲೆ? ಅದು ಪಡಪೋಸಿ ಮಾಲಂತೆ! ಇವನು ಹೇಳಿಬಿಟ್ಟರಾಯಿತೆ?’ ಎಂದು ಮನಸ್ಸಿನಲ್ಲಿಯೆ ಶಪಿಸುತ್ತಾ, ಚೀಂಕ್ರ ತನಗೆ ಬೇಕಾದ ಸಾಮಾನುಗಳನ್ನು ಮಳಿಗೆಯಿಂದ ಈಸಿಕೊಂಡು ಬಿಡಾರಕ್ಕೆ ಹೋಗಿದ್ದನು, ತುಂಬು ಕತ್ತಲೆಯಾದಮೇಲೆಯೆ. ಕಳುವಿನ ವ್ಯಾಪಾರದಲ್ಲಿ ಚೌಕಾಸಿಗೆ ಅವಕಾಶವೆಲ್ಲಿ?
ಚೀಂಕ್ರನ ಬಿಡಾರದಲ್ಲಿ ಐತ ಒಂದು ಇರುಳು ಕಂಡಿದ್ದ ಔತಣದ ಸಂಭ್ರಮವೂ ಚೀಂಕ್ರನ ಈ ತೆರನ ಸಂಪಾದನೆಯಿಂದಲೆ ಸಂಭವಿಸಿತ್ತು! ಅವನು ಮಾತ್ರ ಹೇಳುತ್ತಿದ್ದನು, ಮೇಗರವಳ್ಳಿಯಲ್ಲಿ ಕಂತ್ರಾಟು ಕೆಲಸ ಮಾಡಿ ದುಡ್ಡು ಮೊಗೆಯುತ್ತಿದ್ದೇನೆ ಎಂದು: ಅವನ ಮಕ್ಕಳಿಗೆ ತಿಂಡಿ, ಬಟ್ಟೆ; ಅಕ್ಕಣಿಗೆ ಬಳೆ, ಸೀರೆ; ಅಕ್ಕಣಿಯ ರೋಗಿಷ್ಠ ಗಂಡ ಪಿಜಿಣನಿಗೂ ಕಷ್ಟಕಾಲದಲ್ಲಿ ದುಡ್ಡು, ಕಾಸು, ಸಾರಾಯಿ-ಇತ್ಯಾದಿ ಎಲ್ಲ ವೆಚ್ಚಗಳಿಗೂ ಯಥೇಚ್ಚವಾಗಿತ್ತು ಚೀಂಕ್ರ ಸೇರೆಗಾರನ ಸಂಪಾದನೆ!
ಚೀಂಕ್ರ ಸಭ್ಯನಂತೆ ಸೋಗು ಹಾಕಿಕೊಂಡು, ಸಮಯ ಸಾಧಿಸಿ, ತನ್ನನ್ನು ನಂಬಿದವರು ಇತರರು ಎಂಬ ಭೇದವಿಲ್ಲದೆ ಕದಿಯುತ್ತಿದ್ದುದು ಮಾತ್ರವಲ್ಲದೆ, ಇತ್ತೀಚೆಗೆ ಹೊನ್ನಾಳಿ ಸಾಬರ ಗುಂಪಿನ ಸೆಳೆತಕ್ಕೂ ಸಿಕ್ಕಿ, ಹಾದಿಹೋಕರ ದರೋಡೆಗೂ ನೆರವಾಗಿ ಹೊಸ ತರಹದ ಸಂಪಾದನೆಗೂ ಶುರು ಮಾಡಿದ್ದನು. ತಾನೇ ಹೊಡೆಯುವ, ಬಡಿಯುವ, ತಲೆಯೊಡೆಯುವ ಮತ್ತು ಚೂರಿಹಾಕುವ ಕೆಲಸಗಳಿಗೆ ನೇರವಾಗಿ ಕೈ ಹಾಕುತ್ತಿರಲಿಲ್ಲ, ನಿಜ. ಕೂಲಿ ಮಾಡಿ ದುಡಿದು ಆಳಾಗಿ, ಆಳುಗಳಿಗೆ ಸೇರೆಗಾರನಾಗಿ ಇದುವರೆಗೆ ಜೀವನ ಯಾಪನೆ ಮಾಡುತ್ತಿದ್ದ ಆ ಹಸಲರವನಿಗೆ ಪುಂಡಾಟವೆ ಬದುಕಾಗಿದ್ದ ಸಾಬರ ಧೈರ್ಯ, ಧೂರ್ತತೆ, ಕ್ರೌರ್ಯ, ನೈಷ್ಠುರ್ಯ, ನಿರ್ದಾಕ್ಷಿಣ್ಯಗಳು ಸುಲಭಸಾಧ್ಯವಾಗಿರಲಿಲ್ಲ. ಆದರೆ ರಾತ್ರಿಹೊತ್ತು ಕಾಡುಬೆಟ್ಟಗಳ ಇಕ್ಕಟ್ಟಿನಲ್ಲಿ, ನಿರ್ಜನ ಸ್ಥಳಗಳಲ್ಲಿ, ತಾನೂ ಒಬ್ಬ ಗಟ್ಟದ ತಗ್ಗಿಗೆ ಹೋಗುವ ಪ್ರಯಾಣಿಕನೆಂಬಂತೆ ತಲೆಮೇಲೆ ಕೊಳಕು ಜಾಯಿಕಾಯಿ ಪೆಟ್ಟಿಗೆ ಹೊತ್ತುಕೊಂಡೋ ಕೈಯಲ್ಲಿ ಪಾತ್ರೆ ಪರಟೆ ಹಿಡಿದುಕೊಂಡೋ ಹೋಗುತ್ತಿದ್ದು ಸಹಪ್ರಯಾಣಿಕರ ಐಶ್ವರ್ಯದ ಗುಟ್ಟನ್ನು ಅರಿತು, ಅದನ್ನು ಸಂಕೇತಗಳಿಂದ, ಯಾವುದಾದರೂ ಪದ ಹೇಳಿಯೋ ಕೆಮ್ಮಿಯೋ ಅಥವಾ ದಾರಿತಪ್ಪಿಹೋದ ತನ್ನ ಜೊತೆಯ ಪಯಣಿಗನಿಗೆ ಗಟ್ಟಿಯಾಗಿ ಛದ್ಮವಾಕ್ಯಗಳನ್ನು ಕೂಗಿ ಹೇಳುವಂತೆ ನಟಿಸಿಯೋ, ತಿಳಿಸಿ ಸುಲಿಗೆಗೆ ನೆರವಾಗುತ್ತಿದ್ದನು: ಅಂತಹ ಪಾಪಕಾರ್ಯಗಳಲ್ಲಿಯೂ ಒಮ್ಮೆ ಅವನಿಗೆ ಪುಣ್ಯ ಸಂಪಾದನೆ ಮಾಡುವ ಅವಕಾಶವೂ ಒದಗಿತ್ತು: ತನ್ನ ಗುರುತು ಅವರಿಗೆ ಸಿಕ್ಕದಿದ್ದರೂ ತನಗೆ ಪರಿಚಯವಿದ್ದ ಒಬ್ಬ ಉಡುಪಿಯ ಗೃಹಸ್ಥರ ಪ್ರಾಣವನ್ನು ಉಪಾಯದಿಂದ ಉಳಿಸಿದ್ದನು, ಸಾಬರಿಗೆ ಗೊತ್ತಾಗದಂತೆ! ಮಾತುಕತೆಗಳಿಂದ ಆ ಗೃಹಸ್ಥರು ತಾನು ಸಣ್ಣವನಾಗಿದ್ದಾಗ ತನ್ನ ತಂದೆ ತಾಯಿಗಳಿಗೆ ಅನ್ನ ಹಾಕಿ, ಬಟ್ಟೆ ಕೊಟ್ಟು ತನ್ನನ್ನೂ ಕಾಪಾಡಿದ್ದಾರೆಂಬುದು ಗೊತ್ತಾಗಿ, ಅವರನ್ನು ಹೇಗಾದರೂ ರಕ್ಷಿಸಬೇಕೆಂಬ ಕೃತಜ್ಞತೆಯ ಧರ್ಮಬುದ್ಧಿ ಜಾಗ್ರತವಾಗಿ, ಸಾಬರಿಗೆ ತಪ್ಪು ಮಾರ್ಗದರ್ಶನ ಮಾಡಿ, ಆ ಗೃಹಸ್ಥರನ್ನು ಸುರಕ್ಷಿತ ಸ್ಥಾನಕ್ಕೆ ಒಯ್ದುಬಿಟ್ಟು, ಸೂಕ್ಷ್ಮವಾಗಿ ಎಚ್ಚರಿಕೆ ಹೇಳಿ ಕಣ್ಮರೆಯಾಗಿದ್ದನಂತೆ! ಆ ಕತೆಯನ್ನು ಅವನು ಇನ್ನಾರದ್ದೋ ಎಂಬಂತೆ ಹೇಳಿ, ಜನರೆ ಮೆಚ್ಚುಗೆಯನ್ನು ಸವಿಯುತ್ತಿದ್ದನು.!
ಕೋಣೂರಿನ ಗಟ್ಟದ ತಗ್ಗಿನವರ ಬಿಡಾರಗಳಲ್ಲಂತೂ ’ಚೀಂಕ್ರ ಸೇರೆಗಾರ’ರ ವಿಚಾರವಾದ ಗೌರವ, ಶ್ಲಾಘನೆ ಹೆಚ್ಚುತ್ತಿತ್ತು. ಅವನ ದುಶ್ಚಾಳಿಗಳನ್ನು ಅರಿತಿದ್ದವರು ಅವನ ಹೆಂಡತಿ ದೇಯಿ ಸತ್ತುದಕ್ಕೆ ಅವನೇ ಕಾರಣವೆಂದು ಮೊದಮೊದಲು ಅವನನ್ನು ನಿಂದಿಸಿ ತಿರಸ್ಕರಿಸಿದ್ದರೂ ಅವನು ಇದ್ದಕ್ಕಿದ್ದ ಹಾಗೆ ಧನ ಸಂಪಾದನೆ ಮಾಡಿ ತನ್ನ ಮಕ್ಕಳನ್ನೂ ಚೆನ್ನಾಗಿ ನೋಡಿಕೊಳ್ಳುವಂತೆ ಅಕ್ಕಣಿಗೆ ನೆರವಾಗಿ, ಅಕ್ಕಣಿಗೆ ಮಾತ್ರವಲ್ಲದೆ ಅವಳ ಕಾಯಿಲೆ ಗಂಡ ಪಿಜಿಣನಿಗೂ ತನ್ನ ಔದಾರ್ಯವನ್ನು ವಿಸ್ತರಿಸಿದುದನ್ನು ನೋಡಿ, ಅವನ್ ಪರೋಪಕಾರ ಬುದ್ಧಿಯನ್ನು ಬಾಯಿ ತುಂಬ ಹೊಗಳಿದ್ದರು. ಚೀಂಕ್ರ ಹೇಗೆ ಸಂಪಾದಿಸುತ್ತಿದ್ದಾನೆ ಎಂಬುದರ ಕಡೆಗೆ  ಅವರು ನೋಡಲೂ ಇಲ್ಲ, ನೋಡಬೇಕಾಗಿಯೂ ಇರಲಿಲ್ಲ. ಆಗೊಮ್ಮೆ ಈಗೊಮ್ಮೆ ಅಲ್ಲಿ ಇಲ್ಲಿ ಒಬ್ಬೊಬ್ಬರು ಅವನ ಸಂಪಾದನೆಯ ವಿಧಾನದ ನಿಜಸ್ವರೂಪದ ವಿಚಾರವಾಗಿ ಆಡಿಕೊಳ್ಳುತ್ತಿದ್ದರೇನೋ ಹೌದು. ಹಾಗೆ ಆಡಿಕೊಳ್ಳುತ್ತಿದ್ದಾರೆ ಎಂಬುದನ್ನು ಐತ ಒಮ್ಮೆ ಅವನ ಗಮನಕ್ಕೆ ತರಲು ಪ್ರಯತ್ನಿಸಿದಾಗ ಚೀಂಕ್ರ ಆ ವಿಷಯವನ್ನೆ ಹಿಂದಿರುಗಿಸಿ ಐತನ ಸಂಸಾರದ ಸುಖದ ಬಾಳಿಗೇ ವಿಷಪ್ರಯೋಗ ಮಾಡಿದ್ದನಷ್ಟೆ!
ಅಕ್ಕಣಿಯ ಮೂಲಕವಾಗಿ ತನಗೊದಗಿದ ಸಹಾಯಕ್ಕೆ ಪಿಜಿಣ ತುಂಬ ಕೃತಜ್ಞನಾಗಿ ಚೀಂಕ್ರನ ಮಕ್ಕಳನ್ನು ತನ್ನ ಹೆಂಡತಿ ಸಾಕಿ ಸಲಹುತ್ತಿದ್ದುದಕ್ಕೆ ಸಂತೋಷಪಟ್ಟಿದ್ದನು. ಅಲ್ಲದೆ ತನಗೆ ಮಕ್ಕಳಿಲ್ಲದುದರಿಂದ ದೇಯಿಯ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಬದುಕಿನ ಹಿಗ್ಗನ್ನು ಅನುಭವಿಸುತ್ತಿದ್ದ ಅಕ್ಕಣಿಯ ಮುಖದಲ್ಲಿ ಹೊಮ್ಮುತ್ತಿದ್ದ  ಹರ್ಷಕ್ಕೆ ಪಿಜಿಣನ ಮನಸ್ಸೂ ಹರ್ಷಿಸಿತ್ತು. ಎಷ್ಟೋ ರಾತ್ರಿಗಳಲ್ಲಿ ಚೀಂಕ್ರ ತನ್ನ ಕರಾಳ ನಿಶಾಚರ ಸಂಪಾದನೆಯ  ಕಾರ್ಯಗಳಲ್ಲಿ ತೊಡಗಿ ಬಿಡಾರಕ್ಕೆ ಬರುತ್ತಲೆ ಇರಲಿಲ್ಲ. ಆಗ ಅವಳು ಅವನ ಮಕ್ಕಳೊಂದಿಗೆ ಚೀಂಕ್ರನ ಬಿಡಾರದಲ್ಲಿಯೆ ಮಲಗುತ್ತಿದ್ದಳು, ತನ್ನ ಗಂಡನ ಅನುಮತಿಯ ಮೇರೆಗೇ. ಎಂದಾದರೂ ಮಧ್ಯರಾತ್ರಿಯ ಮೇಲೆಯೋ ಅಥವಾ ಬೆಳಗಿನ ಕಡೆಯ ಯಾಮದಲ್ಲಿಯೋ ಚೀಂಕ್ರ ಬಿಡಾರಕ್ಕೆ ಬಂದಾಗ ಅವಳು ತನ್ನ ಬಿಡಾರಕ್ಕೇ ಬಂದು ಗಂಡನೊಡನೆ ಮಲಗುತ್ತಿದ್ದಳು.
ಪ್ರಾರಂಭದಲ್ಲಿ ಪಿಜಿಣನಿಗೆ ಅದೆಲ್ಲ ತುಂಬ ಸಾಜವಾಗಿಯೇ ಕಂಡಿತ್ತು. ಸಂತೋಷಪ್ರದವಾಗಿಯೂ ಇತ್ತು. ತನ್ನ ಹೆಂಡತಿ ತನಗೆ ಮಾಡುತ್ತಿದ್ದ ಆರೈಕೆ ಶುಶ್ರೂಷೆಗಳಿಗೆ  ಅವಳ ಮೇಲಣ ಅವನ ಮಮತೆ ಇಮ್ಮಡಿಸಿತ್ತು. ಅಲ್ಲದೆ ಅಕ್ಕಣಿ ತಲೆಬಾಚಿ, ಹೂ ಮುಡಿದು, ಹೊಸಸೀರೆಯುಟ್ಟು ಗೆಲುವಾಗಿದ್ದುದು ಅವನಿಗೆ ಮಾದಕವಾಗಿಯೂ ಇತ್ತು. ಮೊದಲಿನಂತಲ್ಲದ ವಿಶೇಷ ರೀತಿಯಿಂದ ಅವಳು ತನಗೆ ಸುಖಕೊಡುತ್ತಿದ್ದುದನ್ನು ಕಂಡು ಅವಳಿಗೆ ಮಕ್ಕಳಾದರೂ ಆಗಬಹುದೇನೋ ಎಂಬ ಆಶೆ ಭರವಸೆಯ ರೂಪಕ್ಕೆ ತಿರುಗಿತ್ತು.
ಒಂದು ದಿನ ಬೆಳಗಿನ ಜಾವ ನೆರೆಯ ಬಿಡಾರದ ಪೀಂಚಲು ಇನ್ನೂ ಚೆನ್ನಾಗಿ ಕತ್ತಲೆಯಾಗಿದ್ದಾಗಲೆ ಪಿಜಿಣನ ಬಿಡಾರಕ್ಕೆ ಬೆಂಕಿ ಕೇಳಲು ಬಂದಳು. ಪಿಜಿಣ, ಬಿಡಾರದ ಬಾಗಿಲು ಮುಚ್ಚಿದ್ದಂತೆಯೆ, ಒಳಗಣಿಂದ “ಚೀಂಕ್ರ ಬಂದಿಲ್ಲ ಕಾಣ್ತೆ; ಅವಳು ಅವನ ಬಿಡಾರದಲ್ಲಿ ಮಕ್ಕಳ ಕೂಡೆ ಮಲಗಿರಲಕ್ಕು” ಎಂದನು.
“ರಾತ್ರಿಯೆ ಬಂದಿದ್ದನಲ್ಲಾ ಚೀಂಕ್ರ! ನಮ್ಮವರ ಹತ್ರ ಮಾತಾಡಿ ಕೊಂಡು ಹೋದ!” ಎಂದು ತನಗೆ ತಾನೆಯೆ ಹೇಳಿಕೊಳ್ಳುವಂತೆ ಹೇಳಿ, ಅಕ್ಕಣಿಯನ್ನು ಕೇಳಿ ಚೀಂಕ್ರನ ಬಿಡಾರದಲ್ಲಿರಬಹುದಾದ ಬೆಂಕಿಯನ್ನು ತರುವ ಉದ್ದೇಶದಿಂದ ಅಲ್ಲಿಗೆ ಹೋದಳು.
ಪೀಂಚಲು ಕರೆದಾಗ ಅಕ್ಕಣಿಗೆ ಬದಲಾಗಿ ಚೀಂಕ್ರನೆ ತನ್ನ ಬಿಡಾರದ ಬಾಗಿಲು ತೆರೆದನು. “ಬೆಂಕಿ ಕೇಳುವ ಎಂದು ಬಂದೆ. ಅಕ್ಕಣಿ ಇದ್ದಾಳಾ?” ಎಂದು ಕೇಳಿದ ಪೀಂಚಲುವಿಗೆ ಚೀಂಕ್ರ, ಆ ಕತ್ತಲೆಯಲ್ಲಿ ಕಾಣಿಸದಿದ್ದರೂ, ತಾಂಬೂಲರಾಗದ ದಂತ ಪಂಕ್ತಿಯನ್ನು ಪ್ರದರ್ಶಿಸಿ ನಗುತ್ತಾ “ಅವಳು ಇಲ್ಲಿ ಎಲ್ಲಿದ್ದಾಳೆ? ನಾನು ಬಂದಾಗಲೆ ರಾತ್ರಿ ತನ್ನ ಬಿಡಾರಕ್ಕೆ ಹೋದಳಲ್ಲಾ!….ನೋಡ್ತೆ, ಬೆಂಕಿ ಇದೆಯೆ ಒಲೆಯಲ್ಲಿ?” ಎಂದು ಪೀಂಚಲುವನ್ನು ಬಾಗಿಲ ಹೊರಗೇ ನಿಲ್ಲಿಸಿ, ಒಳಗೆ ಹೋಗಿ, ಒಂದು ಮಡಕೆಯ ಓಡಿನಲ್ಲಿ ಬೆಂಕಿ ಕೆಂಡಗಳನ್ನು ತಂದುಕೊಟ್ಟು, ಬಾಗಿಲು ಹಾಕಿಕೊಂಡನು. ಪೀಂಚಲುಗೆ ಆಶ್ಚರ್ಯವಾಯಿತು; ಚೀಂಕ್ರ ಹಿಂದೆಂದೂ ಅಷ್ಟು ದಾಕ್ಷಿಣ್ಯಪರವಾಗಿ ವರ್ತಿಸಿ ತನಗೆ ಅಂತಹ ಸೇವೆಯ ಕೆಲಸ ಮಾಡಿಕೊಟ್ಟಿರಲಿಲ್ಲ.
ಆದರೆ ಆ ಆಶ್ಚರ್ಯ ಬಹಳಕಾಲ ಇರಲಿಲ್ಲ. ಅವಳು ತನ್ನ ಬಿಡಾರಕ್ಕೆ ಹೋಗುವಷ್ಟರಲ್ಲಿಯೆ ಅದು ವಿಷಾದಕ್ಕೆ ಎಡೆಕೊಟ್ಟಿತ್ತು: ಅಕ್ಕಣಿ ಎಂದಿನಂತೆ ತನ್ನ ಬಿಡಾರಕ್ಕೆ ಹಿಂದಿರುಗಿರಲಿಲ್ಲ! ಚೀಂಕ್ರನು ಬಂದಮೇಲೆಯೂ ಅವಳು ರಾತ್ರಿಯನ್ನೆಲ್ಲಾ ಅವನ ಬಿಡಾರದಲ್ಲಿಯೆ ಕಳೆದಿದ್ದಳು!
ತನಗೆ ತಾನೆಂಬಂತೆ ಪೀಂಚಲು ಹೇಳಿಕೊಂಡಿದ್ದನ್ನು ಪಿಜಿಣಿ ಕೇಳಿ ಶಂಕೆಗೊಳಗಾಗಿದ್ದನು. ನಿಜವೋ ಸುಳ್ಳೋ ಅವನಿಗೆ ಬಗೆಹರಿದಿರಲಿಲ್ಲ. ಬೆಳಗಾದ ಮೇಲೆ ಅಕ್ಕಣಿ ಬಿಡಾರಕ್ಕೆ ಬಂದಾಗ ಅವನು ಯಾವುದನ್ನೂ ವಿಚಾರಿಸುವ ಗೋಜಿಗೆ ಹೋಗದೆ ಅವಳನ್ನೆ ಮತ್ತೆ ಮತ್ತೆ ನೋಡಿದ್ದನು, ಏನನ್ನೋ ಗ್ರಹಿಸುವವನಂತೆ, ಕಂಡುಹಿಡಿಯಲೆಂಬಂತೆ.
ಅಕ್ಕಣಿಗೂ ಶಂಕೆ ಹುಟ್ಟಿತ್ತು: ಪೀಂಚಲು ಚೀಂಕ್ರನ ಬಿಡಾರಕ್ಕೆ ಬೆಂಕಿ ಕೇಳಲು ಬರುವ ಮುನ್ನ ತಮ್ಮ ಬಿಡಾರದಲ್ಲಿ ವಿಚಾರಿಸಿಯೆ ಇರಬೇಕು ಎಂದು. ಅಕ್ಕಣಿ ಮೊದಮೊದಲು ದಾಕ್ಷಿಣ್ಯಕ್ಕೆ ಒಳಗಾಗಿ, ಬರಬುತ್ತಾ ಕೃತಜ್ಞತೆಗೆ ಪ್ರತಿರೂಪವಾಗಿ ಕ್ರಮೇಣ ರುಚಿವಶಳೂ ಆಗಿ ಚೀಂಕ್ರನ ಸಹವಾಸದ ಕೂಣಿಗೆ ಬಿದ್ದಿದ್ದಳು. ಆದರೆ ತನ್ನ ಗಂಡನ ವಿಚಾರದಲ್ಲಿ ಯಾವ ಉದಾಸೀನವನ್ನೂ ತೋರಗೊಡದೆ ಸೇವೆ ಸಲ್ಲಿಸುತ್ತಿದ್ದಳು. ಆ ಸೇವೆಯ ಹಿಂದೆ ದಯೆ ಕರುಣೆಗಳೆ ಪ್ರಧಾನವಾಗಿದ್ದು, ದಾಂಪತ್ಯಪ್ರೇಮ ಇಳಿಮುಖ ವಾಗುತ್ತಿದ್ದುದನ್ನು ಗ್ರಹಿಸುವಷ್ಟು ಪ್ರಜ್ಞಾಸೂಕ್ಷ್ಮತೆ ಅವಳಿಗಿರಲಿಲ್ಲ. ಮೊದಲಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಕಾಯಿಲೆ ಬೀಳುತ್ತಿದ್ದು ಕೃಶನೂ ಅಶಕ್ತನೂ ಆಗಿದ್ದ ಪಿಜಿಣನಿಂದ ಅವಳಿಗೆ ಆರೋಗ್ಯದೃಢ ಕಾಯಳಾದ ತರುಣಿಗೆ ದೊರೆಯಬೇಕಾದ ಲೈಂಗಿಕ ತೃಪ್ತಿ ದೊರೆಯುತ್ತಿರಲಿಲ್ಲ. ಆದರೆ ಸಂಪ್ರದಾಯದಿಂದ ನೀತಿವಂತೆಯಾಗಿದ್ದ ಅವಳಿಗೆ ಹಾಗೆ ಲೈಂಗಿಕ ತೃಪ್ತಿ ದೊರೆಯುತ್ತಿಲ್ಲ ಎಂಬುದೂ ತಿಳಿದಿರಲಿಲ್ಲ. ಒಮ್ಮೆ ಪ್ರಮಾದವಶದಿಂದಲೋ ಎಂಬಂತೆ ಆ ಅಜ್ಞಾನ ಜಾರ ಪ್ರವೀಣನಾಗಿದ್ದ ಚೀಂಕ್ರನಿಂದ ಪರಿಹಾರವಾಯಿತು. ಆದರೆ ಅದನ್ನೊಂದು ಮಹಾ ಅಕಾರ್ಯವೆಂದು ಅವಳು ಭಾವಿಸಿರಲಿಲ್ಲ. ಚೀಂಕ್ರನಿಂದ ತನಗೂ, ಹೆಚ್ಚಾಗಿ ಕೆಲಸಕ್ಕೆ ಹೋಗಲಾರದೆ ಸಂಪಾದನೆಯಿಲ್ಲದೆ ರೋಗಿಯಾಗಿ ನರಳುತ್ತಿದ್ದ ತನ್ನ ಗಂಡನಿಗೂ, ಆಗುತ್ತಿದ್ದ ಉಪಕಾರಕ್ಕೆ ಒಂದು ರೀತಿಯಲ್ಲಿ ಋಣ ತೀರಿಸುವ ಕೃತಜ್ಞತಾ ರೂಪದ ಪ್ರತ್ಯುಪಕಾರವಾಯಿತೆಂದೇ ಅವಳು ಭಾವಿಸಿದ್ದಳು. ಅದರಲ್ಲಿಯೂ ತನ್ನ ಹೆಂಡತಿ ದೇಯಿ ತೀರಿಹೋದ ಮೇಲೆ ಅಕ್ಕಣಿಯ ಪರವಾದ ಚೀಂಕ್ರನ ವರ್ತನೆ ಯಾಚನಾಪೂರ್ವಕವಾಗಿ ಆಪ್ಯಾಯಮಾನವಾಗಿತ್ತು. ಅದಕ್ಕೆ ವಶಳಾಗದೆ ಇರಲು ಅವಳಿಗೂ ಸಾಧ್ಯವಾಗಲಿಲ್ಲ. ಅಲ್ಲದೆ ತಾನು ಚೀಂಕ್ರನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದುದರಲ್ಲಿಯೂ, ಚೀಂಕ್ರನಿಗೆ ಅನ್ನ ಗಂಜಿ ಮಾಡಿ ಹಾಕುತ್ತಿದ್ದುದರಲ್ಲಿಯೂ, ಅವನು ಬಿಡಾರಕ್ಕೆ ಬರದಿದ್ದ ರಾತ್ರಿಗಳಲ್ಲಿ ಅವನ ಬಿಡಾರದಲ್ಲಿಯೆ ಅವನ ಮಕ್ಕಳೊಡನೆ ಮಲಗಲು ಅನುಮತಿ ಕೊಡುತ್ತಿದ್ದುದರಲ್ಲಿಯೂ ತನ್ನ ಗಂಡನಿಗೂ ಕೂಡ ತನ್ನ ಈ ವಿಚಾರವಾದ ವರ್ತನೆ ಅಷ್ಟೇನೂ ಅನಮ್ಮತವಾಗಿರದಿರಬಹುದು ಎಂದೂ ಅವಳ ಹೃದಯ ಒಳಗೊಳಗೆ ಅನುಮಾನಿಸಿತ್ತು.
ಆದರೆ ಒಮ್ಮೆ ಪಿಜಿಣ ಅವಳ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿ ತಾನೆಂತಿದ್ದರೂ ಇನ್ನು ಹೆಚ್ಚು ಕಾಲ ಬದುಕುವುದಿಲ್ಲವಾದ್ದರಿಂದ ಅಲ್ಲಿಯವರೆಗಾದರೂ ನಾಲ್ಕು ಜನ ಆಡಿಕೊಳ್ಳದಂತೆ ಬಾಳು ಎಂದು ಕಣ್ಣೀರುಗರೆದು, ಹಾಸಗೆಯ ಮೇಲೆ ಎದ್ದು ಕೂತಿದ್ದ ತನ್ನ ಒಣಕಲು ಒಡಲನ್ನು ದೊಪ್ಪನೆ ಕೆಡೆಯುವಂತೆ ಮಾಡಿ ಬಿದ್ದು ಮಲಗಿದಾಗ, ಅಕ್ಕಣಿ ಒಂದು ದಿನವೆಲ್ಲ ಉಣ್ಣದೆ ಅಳುತ್ತಲೆ ತನ್ನ ಕೆಲಸವೆಲ್ಲವನ್ನೂ ಮಾಡಿ, ಚೀಂಕ್ರನು ಬಿಡಾರಕ್ಕೆ ಬರದಿದ್ದರೂ ಆ ರಾತ್ರಿ ಅವನ ಮಕ್ಕಳನ್ನು ಅವನ ಬಿಡಾರದಲ್ಲಿಯೆ ಮಲಗಿಸಿ, ಅವಕ್ಕೆ ನಿದ್ದೆ ಬಂದ ಮೇಲೆ ತಟ್ಟಿಬಾಗಿಲು ಮುಚ್ಚಿ, ಹೊರಗಣಿಂದಲೆ ಬಿಗಿದು ಕಟ್ಟಿ, ತನ್ನ ಬಿಡಾರಕ್ಕೇ ಬಂದು ಪಿಜಿಣನೊಡನೆ ಮಲಗಿದ್ದಳು. ಆದರೆ ನಡುರಾತ್ರಿ ಆ ಮಕ್ಕಳು ಅಳುತ್ತಾ ’ಅಕ್ಕಣ್ಣಬ್ಬೇ ಅಕ್ಕಣ್ಣಬ್ಬೇ’ ಎಂದು ಕರೆದು ಗೋಳಿಟ್ಟಾಗ ಪಿಜಿಣನೆ ತನ್ನ ಹೆಂಡತಿಗೆ ಸಮಾಧಾನ ಹೇಳಿ ಚೀಂಕ್ರನ ಬಿಡಾರಕ್ಕೆ ಹೋಗಿ ಅವನ ಮಕ್ಕಳೊಡನೆ ಮಲಗುವಂತೆ ಮಾಡಿದ್ದನು.
ಅಕ್ಕಣಿ ತನಗೆ ಮನಸೋಲುತ್ತಿದ್ದಾಳೆಂದು ಗೊತ್ತಾದ ಕೂಡಲೆ ಚೀಂಕ್ರ ಅವಳನ್ನು ಪಿಜಿಣನಿಂದ ಬಿಡಿಸಿ, ಬೇರೆಯೂರಿಗೆ ಹಾರಿಸಿಕೊಂಡು ಹೋಗುವ ಉಪಾಯವನ್ನೂ ಯೋಚಿಸಿದ್ದನು. ಆದರೆ ಅಕ್ಕಣಿಗೆ ತನ್ನ ಗಂಡನಲ್ಲಿ ದೈಹಿಕರೂಪದ ಸಂಬಂಧವಾಗಿ ವಿರಕ್ತಿ-ಮೂಡಿದ್ದರೂ ಅವನು ತನ್ನವನು ಎಂಬ ಅಭಿಮಾನ ತಪ್ಪಿರಲಿಲ್ಲ. ಅವನ ಕೈ ಮೀರು ಅವನಿಗೆ ಒದಗಿದ್ದ ಅಸ್ವಸ್ಥತೆಯೊಂದೇ ಪಿಜಿಣನಲ್ಲಿದ್ದ ದೋಷವಾಗಿತ್ತು. ಉಳಿದೆಲ್ಲದರಲ್ಲಿಯೂ ಅವನು ಚೀಂಕ್ರನಿಗಿಂತ ಸಾವಿರಪಾಲು ಉತ್ತಮ ವ್ಯಕ್ತಿಯಾಗಿದ್ದನು. ಹೆಂಡತಿ ಇರಲಿ, ಯಾರೂ ಅವನನ್ನು ವಿಶ್ವಾಸಗೌರವಗಳಿಂದಲೆ ಕಾಣಬೇಕು-ಅಂತಹ ಹೃದಯವಿತ್ತು ಅವನಿಗೆ. ಚೀಂಕ್ರನಲ್ಲಿದ್ದ ಸ್ವಾರ್ಥತೆ, ನಿರ್ದಯೆ, ನಿರ್ದಾಕ್ಷಿಣ್ಯ, ನೈಷ್ಠುರ್ಯಗಳೂ ಅವನಲ್ಲಿರಲಿಲ್ಲ. ಅವನು ಒಮ್ಮೆಯಾದರೂ ಹೊಡೆದದ್ದು ಅಕ್ಕಣಿಗೆ ಜ್ಞಾಪಕವಿರಲಿಲ್ಲ. ಅವನ ಷಂಡತನವೇ ಅವನ ಸಾತ್ವಿಕತೆಗೆ ಕಾರಣವೆಂದು ಅವನಿಗೆ ಆಗದವರು ಹೇಳಿಕೊಂಡು ಪರಿಹಾಸ್ಯಮಾಡುತ್ತಿದ್ದರು. ಆದರೆ ಅವನ ಷಂಡತನವೂ ಪೌರುಷದ ಮಿತಿರೂಪವಾಗಿದ್ದತೆ ಹೊರತು ಅದರ ಅಭಾವ ವಾಗಿರಲಿಲ್ಲ ಎಂಬುದನ್ನು ಅನುಭವದಿಂದ ಅರಿತಿದ್ದ ಅಕ್ಕಣಿ ಅಸುಖಿಯಾಗಿರಲಿಲ್ಲ. ಆದ್ದರಿಂದಲೆ ತನ್ನ ಗಂಡನ ಗೌರವವನ್ನು ಬಿಟ್ಟುಕೊಡಲು ಅವಳು ಸಿದ್ಧಳಿರಲಿಲ್ಲ. ಆದ್ದರಿಂದಲೆ ಅವನು ಹೆಚ್ಚು ಹೆಚ್ಚು ಅಸ್ವಸ್ಥನಾದಂತೆಲ್ಲ ಅವನನ್ನು ಹೆಚ್ಚು ಹೆಚ್ಚು ಅಕ್ಕರೆಯಿಂದ ಕಾಣತೊಡಗಿದ್ದಳು.
ಅಕ್ಕಣಿ ತನಗೆ ಮೈಯನ್ನು ಸೋತುಬಿಟ್ಟಮೇಲೆ ಚೀಂಕ್ರನಿಗ್ ಧೈರ್ಯಬಂದು ಅವಳೊಡನೆ ಓಡಿಹೋಗುವ ಪ್ರಸ್ತಾಪವೆತ್ತಿದ್ದನು. ಆಗ ಅವಳ ರೌದ್ರ ಮುಖಭಂಗಿ ನೋಡಿಯೆ ಚೀಂಕ್ರನಿಗೆ ಹೆದರಿಕೆಯಾಗಿತ್ತು. ’ಈ ರಾಕ್ಷಸಿಯ ಹತ್ತಿರ ನಾನೇಕೆ ಹಾಗೆ ಹೇಳಿದೆನಪ್ಪಾ?’ ಎಂದುಕೊಳ್ಳುವಂತಾಗಿತ್ತು ಅವನಿಗೆ. ಆ ಕ್ಷಣದಿಂದಲೆ ಅಕ್ಕಣಿ ಅವನೊಡನೆ ಮಾತು ಬಿಟ್ಟಿದ್ದಳು. ಅವನ ಮಕ್ಕಳನ್ನು ಮೊದಲಿನಂತೆಯೆ ನೋಡಿಕೊಂಡು, ಅವನಿಗೂ ಗಂಜಿಗಿಂಜಿ ಬೇಯಿಸಿ ಹಾಕುತ್ತಿದ್ದಳೆಷ್ಟೊ ಅಷ್ಟೆ! ಅವನನ್ನು ಒಂದು ನಾಯಿ ಕಂಡಂತೆ ಕಂಡು, ನಾಯಿಗೆ ಅನ್ನ ಹಾಕುವಂತೆಯೇ ಹಾಕುತ್ತಿದ್ದಳು, ಕರ್ತವ್ಯಕ್ಕಾಗಿ ಎಂಬಂತೆ. ಚೀಂಕ್ರನಿಗೆ ಸಾವಿರ ಬೈಗುಳಕ್ಕಿಂತಲೂ ಭಯಂಕರವಾಗಿತ್ತು ಅವಳ ಮೌನ. ಅದನ್ನು ಸಹಿಸಲಾರದೆ ಅವನು ಪಿಜಿಣನ ಬಳಿಗೆ ಬಂದು ದೂರು ಹೇಳಿಕೊಂಡಿದ್ದನು, ಕಣ್ಣು ತೇವವಾಗಿ: ’ಏನೋ ಕೆಟ್ಟಗಳಿಗೆಯಲ್ಲಿ ಬಾಯಿತಪ್ಪಿ ಏನನ್ನೊ ಮಾತಾಡಿಬಿಟ್ಟೆ ಎಂದು ನಿನ್ನ ಹೆಂಡತಿ ನನ್ನ ಮೇಲೆ ಪೂರಾ ಸಿಟ್ಟುಮಾಡಿ ಮಾತುಬಿಟ್ಟಿದ್ದಾಳೆ! ನೀನಾದರೂ ಹೇಳು, ಮಾರಾಯ! ತಪ್ಪಾಯಿತು! ನನ್ನ ಮಕ್ಕಳ ಮುಖನೋಡಿ ನನ್ನ ತಪ್ಪು ಮರೆತುಬಿಡಲಿ!” ಬೆಣ್ಣೆನುಡಿ ನಿಪುಣನಾದ ಸೇರೆಗಾರ ಚೀಂಕ್ರನನ್ನು ನಂಬಿ ಪಿಜಿಣ ಮನಕರಗಿಹೋಗಿದ್ದನು.
ಆದರೆ ಚೀಂಕ್ರ ತಾನು ಹಿಡಿದ ಸಾಧನೆಯನ್ನು ಕೈಬಿಡಲಿಲ್ಲ. ’ಇವಳೆಂಥ ವಿಚಿತ್ರ ಪತಿವ್ರತೆ’ ಎಂದು ತನಗೆ ಅರ್ಥವಾಗದ ಅವಳನ್ನು ಟೀಕಿಸುತ್ತಿತ್ತು ಅವನ ದುರ್ಮನಸ್ಸು. ಅವನು ತಿಳಿದಿದ್ದ  ಯಾವ ಹೆಣ್ಣಿನ ನಡತೆಯಾಗಲಿ ಯಾವ ಹೆಣ್ಣುಗಳಾಗಲಿ ಅಕ್ಕಣಿಯ ವರ್ತನೆಗೆ  ಕೀಲಿಕೈ ಒದಗಿಸಲು ಸಮರ್ಥವಾಗಿರಲಿಲ್ಲ.
ಪಿಜಿಣನ ಕಾಯಿಲೆ ಗುಣಮುಖವಾಗದೆ ಅದು ಉಗ್ರ ಆಮಶಂಕೆಗೂ  ತಿರುಗಿದಾಗ ಅಕ್ಕಣಿ ಆಗಾಗ ಕಣ್ಣೊರೆಸಿಕೊಳ್ಳುತ್ತಿದ್ದುದನ್ನು ಕಂಡು ಚೀಂಕ್ರ ಕಣ್ಣಾಪಂಡಿತರಿಂದ ಔಷಧಿಕೊಡಿಸಿದ್ದನು. ತಾನು ಮೇಗರವಳ್ಳಿಯಿಂದ ಬರುವಾಗಲೆಲ್ಲ ಪಿಜಿಣನ ಔಷಧಿಗೂ ಪಥ್ಯಕ್ಕೂ ಬೇಕಾದ ಸಾಮಗ್ರಿಯನ್ನು ತಂದುಕೊಡುತ್ತಿದ್ದನು. ತನ್ನ ಗಂಡನ ಯೋಗಕ್ಷೇಮದಲ್ಲಿ ಕಾತರನಾಗಿ ಅಷ್ಟೊಂದು ಆಸಕ್ತನಾದ ಚೀಂಕ್ರನ ವಿಚಾರದಲ್ಲಿ ಅಕ್ಕಣಿಗೆ ಕೃತಜ್ಞತೆ ಉಕ್ಕಿತಾದರೂ, ಅವನು ಆಶಿಸಿದಂತೆ ಚೀಂಕ್ರನ ಪರವಾಗಿ ಪ್ರೇಮನಾಮಕವಾದ ಕಾಮಭಾವನೆ ಅವಳಲ್ಲಿ ಉದ್ದೀಪಿತವಾದಂತೆ ತೋರಲಿಲ್ಲ. ಪಿಜಿಣ ಸತ್ತಲ್ಲದೆ ಅಕ್ಕಣಿಯ ಮನಸ್ಸು ತನ್ನ ಕಡೆಗೆ ಒಲೆಯುವುದಿಲ್ಲ ಎಂಬುದು ನಿಶ್ಚಯವಾದ ಮೇಲೆ ಚೀಂಕ್ರ ತನಗೂ ಅಕ್ಕಣಿಗೂ ನಡುವೆ ಇದ್ದ ಆ ಅಡಚಣೆಯನ್ನೇಕೆ ಪರಿಹರಿಸಬಾರದು ಎಂದೂ ಯೋಚಿಸಿದ್ದನು. ಅದೇನು ಅಂತಹ ಕಷ್ಟದ ವಿಷಯವಾಗಿಯೂ ತೋರಿರಲಿಲ್ಲ. ಕಣ್ಣಾಪಂಡಿತರು ಪಿಜಿಣನ ಆಮಶಂಕೆಗೆ ಔಷಧಿ ಕೊಡುವಾಗ ಒಂದು ತರಹದ ಗುಳಿಗೆಗಳನ್ನು ಕೊಡುತ್ತಿದ್ದರು. ಅದರಲ್ಲಿ ಅಫೀಮು ಇರುವುದರಿಂದ ಅದನ್ನು ಅತ್ಯಂತ ಅಲ್ಪ ಪ್ರಮಾಣದಲ್ಲಿಯೆ ಪ್ರಯೋಗಿಸಬೇಕೆಂದು ಎಚ್ಚರಿಕೆ ಕೊಟ್ಟಿದ್ದರು. ಅಲ್ಲದೆ ಪಥ್ಯ ಹೇಳುವಾಗ ಸಾರಾಯಿಯಂತಹ ಉಷ್ಣದ ಪದಾರ್ಥಗಳನ್ನು ಸೇವನೆಮಾಡದಂತೆ ನೋಡಿಕೊಳ್ಳಬೇಕೆಂದು ಹೇಳಿದ್ದರು. ಆ ಗುಣಕಾರಕ ಸಲಹೆಗಳನ್ನೆ ತನ್ನ ಕಾರ್ಯಸಾಧನೆಗೆ ಉಪಯೋಗಿಸಿಕೊಂಡರೆ ಬಹುಬೇಗನೆ ಫಲಸಿದ್ಧಿಯಾಗುತ್ತದೆ ಎಂದು ತೋರಿತ್ತು ಚೀಂಕ್ರನಿಗೆ. ಅಫೀಮಿನ ಪ್ರಮಾಣವನ್ನು ಹೆಚ್ಚಿಸಿಬಿಟ್ಟರಾಯಿತು, ಏನೂ ಯಾತನೆಯಿಲ್ಲದೆ, ನಿದ್ದೆ ಮಾಡುತ್ತಲೆ ಪರಲೋಕಗತನಾಗುತ್ತಾನೆ. ಆದರೆ ಆ ದಾರಿ ಏಕೋ ಸರಿಬೀಳಲಿಲ್ಲ ಚೀಂಕ್ರನಿಗೆ. ಅವನ ಚೇತನ ತನ್ನನ್ನು ನಂಬಿ ತನಗೆ ಉಪಕಾರ ಮಾಡುತ್ತಿದ್ದ ಅಕ್ಕಣಿಯ ಒಲವಿನ ವಸ್ತುವಿಗೆ ವಿಷವೂಡಿಸಿ ಕೊಲ್ಲುವಷ್ಟು ಅಧೋಗತಿಗೆ ಹೋಗಿರಲಿಲ್ಲವಾದ್ದರಿಂದ ಆ ಕೆಲಸ ಮಾಡಲು ಅಂಜಿಕೆಯಾಯಿತು.
ಆದರೆ ಪಿಜಿಣನನ್ನು ನೋಡಿದಾಗಲೆಲ್ಲ, ಅವನು ಸಾವಿನ ಕಡೆಗೆ ಇಳಿಜಾರಿನಲ್ಲಿ ಜಾರುತ್ತಿದ್ದಾನೆಂಬುದು ಚೆನ್ನಾಗಿ ಕಾಣುತ್ತಿತ್ತು. ಇಂದೊ ನಾಳೆಯೊ ಅಕ್ಕಣಿಗೆ ಅವನ ತೊಂದರೆ ತಪ್ಪಿ, ಅವನಿಂದ ಬಿಡುಗಡೆ ಆಗುತ್ತದೆ. ನಾಲ್ಕುದಿನ ಮೊದಲೇ ಅದು ಆದರೆ, ಅವನಿಗೂ ನರಳುವ ತೊಂದರೆ ತಪ್ಪೀತು; ತನಗೂ ಅದರಿಂದ ಉಪಕಾರವಾದೀತು. ಔಷಧಿಯಿಂದ ತನ್ನ ಸ್ವಾರ್ಥವನ್ನು ಸಾಧಿಸಿಕೊಳ್ಳಲು ಹಿಂಜರಿದ ಅವನ ಮನಸ್ಸು ಪಥ್ಯದಿಂದ ಅದನ್ನು ಪಡೆಯುವುದರಲ್ಲಿ ಪಾಪಭಾವನೆಯನ್ನು ಅನುಭವಿಸಲಿಲ್ಲ. ಏಕೆಂದರೆ ಅದು ಪಿಜಿಣನಿಗೇ ಬಹಳ ಇಷ್ಟವಾದುದಾಗಿತ್ತು. ಕಳ್ಳು, ಸಾರಾಯಿ, ಸ್ವಾರ್ಲು ಮೀನು, ಖಾರ ಇತ್ಯಾದಿ ಪದಾರ್ಥಗಳು ಪಿಜಿಣನ ಕಾಯಿಲೆನಾಲಗೆಗೆ ಬಹಳ ಬೇಕಾದದ್ದು, ಅವನ್ನು ಒದಗಿಸದಿದ್ದರೆ ಅಕ್ಕಣಿಯಮೇಲೆ ರೇಗಿರೇಗಿ ಬೀಳುತ್ತಾ ಹಟಮಾರಿ ಮಕ್ಕಳಂತೆ ವರ್ತಿಸುತ್ತಿದ್ದನು. ಚೀಂಕ್ರನು ಅಕೃಪಣ ಹಸ್ತದಿಂದ ತುಂಬ ಉದಾರಿಯಾಗಿ ಆ ಆಮಿಷ ಪದಾರ್ಥಗಳನ್ನು ಒದಗಿಸುವುದರಲ್ಲಿ ತನ್ನ ಇಷ್ಟಾರ್ಥ ನೆರವೇರಿಕೆಗೆ ಸಮೀಪಿಸುತ್ತಿದ್ದನು, ಅದರ ಜವಾಬ್ದಾರಿಯಿಂದ ದೂರನಾಗಿ, ಅಥವಾ ದೂರವಾಗಿದ್ದೇನೆ ಎಂದು ಭ್ರಮಿಸಿ. ಏಕೆಂದರೆ ಅವನೇ ಪಿಜಿಣನಿಗೆ ಅಕ್ಕಣಿಯ ಇದಿರಿನಲ್ಲಿಯೇ ಪದೇ ಪದೇ ಹೇಳುತ್ತಿರಲಿಲ್ಲವೆ, ಆ ಉಷ್ಣ ಪದಾರ್ಥಗಳೆಲ್ಲ ಈ ರೋಗಕ್ಕೆ ಬಹಳ ಕಟ್ಟವಂತೆ, ತಿನ್ನಬಾರದಂತೆ ಎಂದು? ಆದರೂ ಪಿಜಿಣ ಬಾಯಿರುಚಿಗೆ ಹಟಮಾಡಿ ಪೀಡಿಸಿ ಅವು ಬೇಕೇಬೇಕು ಎಂದು ತನ್ನ ಹೆಂಡತಿಯನ್ನು ಕಾಡಿಬೇಡಿ ತಿಂದರೆ ತನ್ನದೇನು ಬಂತು ಹೊಣೆ ಅದರಲ್ಲಿ?
ಹೂವಳ್ಳಿ ಮದುವೆಗೆ ಹಿಂದಿನ ದಿವಸ ಚೀಂಕ್ರ ತನ್ನ ಬಿಡಾರಕ್ಕೆ ಹೊತ್ತಿನಂತೆಯೆ ಬಂದ. ಕೆಸರು ಮೆತ್ತಿದ್ದ ಕಾಲನ್ನು ಗುಡಿಸಲಿನ ಬಾಗಿಲ ಮುಂದೆಯೆ ಕಿರುಕಾಲುವೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ತೊಳೆದುಕೊಂಡು ಒಳಗೆ ಬಂದು, ಕಂಬಳಿಕೊಪ್ಪೆಯನ್ನು ಕೊಡವಿ ಮೂಲೆಯ ಗೂಟಕ್ಕೆ ಸಿಕ್ಕಹಾಕಿ, ಕೊಪ್ಪೆಯ ಒಳಗೆ ಮುಚ್ಚಿಕೊಂಡು ತಂದಿದ್ದ ಕೆಲವು ಶೀಸೆಗಳನ್ನು ಮೆಲ್ಲಗೆ ಎಚ್ಚರಿಕೆಯಿಂದ ಬಾಗಿಲ ಸಂಧಿಯಲ್ಲಿಟ್ಟನು, ಅವಿತಿಡುವಂತೆ. ಸ್ವಲ್ಪಹೊತ್ತು ಬೆಂಕಿಯ ಮುಂದೆ ಕುಳಿತು ಮಳೆಯಿಂದ ಒದ್ದೆಯಾಗಿದ್ದ ಮೈಯನ್ನು ಬೆಚ್ಚಗೆ ಮಾಡಿಕೊಂಡು, ಮೇಲೆದ್ದು, ಸನ್ನೆಯಿಂದ ಅಕ್ಕಣಿಗೆ ಕೆಲವು ಶೀಸೆಗಳನ್ನು ಎತ್ತಿಕೊಳ್ಳುವಂತೆ ಹೇಳಿ, ತಾನೂ ಕೆಲವನ್ನು ಎತ್ತಿಕೊಂಡು ಪಿಜಿಣನ ಬಿಡಾರಕ್ಕೆ ಹೋದನು.
ಅಪೂರ್ವಕ್ಕೆ ಹೊತ್ತಿಗೆ ಬಹಳ ಮುಂಚೆಯೆ ಬಂದಿದ್ದ ಚೀಂಕ್ರನನ್ನು ನೋಡಿ ಮಲಗಿದ್ದಲ್ಲಿಂದಲೆ ಪಿಜಿಣ ಕೇಳಿದನು “ಏನು ಇವತ್ತು ಸೇರಿಗಾರ್ರ ಸವಾರಿ ಬಹಳ ಬೇಗನೆ ಬಂದಿತ್ತಲ್ಲಾ?”
ಪಿಜಿಣನ ಧ್ವನಿ ಉಡುಗಿಹೋಗಿತ್ತು. ತುಂಬ ನಿಃಶಕ್ತನಾಗಿದ್ದಂತೆ ತೋರಿತು! “ಏನು ಬಹಳ ಸೋತುಹೋದ ಹಾಂಗಿದೆಯಲ್ಲಾ ನೀನು? ಹ್ಯಾಂಗಿದೆ ಹೊರಗೆ ಹೋಗುವುದು?” ಚೀಂಕ್ರನೆಂದನು ಔಪಚಾರಿಕವಾಗಿ.
ಅದಕ್ಕೆ ಉತ್ತರವಾಗಿಯೊ ಎಂಬಂತೆ ಪಿಜಿಣ, ಹೊದೆದಿದ್ದ ಕಂಬಳಿಯನ್ನು ಕಾಲತ್ತ ನೂಕಿ, ಏಳಲಾರದೆ ಎದ್ದು ಕುಳಿತನು. ಸೂಚನೆಯನ್ನು ತಿಳಿದು ಅಕ್ಕಣಿ ಬಳಿಗೆ ನಡೆದು, ಅವನಿಗೆ ಏಳಲು ಸಹಾಯ ಮಾಡಿದಳು. ಅಲ್ಲಿಯೆ ಮರೆ ಕಟ್ಟಿದ್ದ ಒಂದು ಮೂಲೆಗೆ ಎಲುಬು ಚಕ್ಕಳವಾಗಿದ್ದ ಪಿಜಿಣನನ್ನು ನಡೆಸಿಕೊಂಡು ಹೋಗಿ ಕೂರಿಸಿದಳು. ಆ ಬಿಡಾರವನ್ನು ತುಂಬಿದ್ದ ದುರ್ವಾಸನೆಗೆ ಕಾರಣ ಚೀಂಕ್ರನಿಗೆ ಗೊತ್ತಾದದ್ದು ಆಗಲೆ! ’ಇನ್ನೇನು ಹೆಚ್ಚು ದಿನಾ ಇಲ್ಲ ಇವನಿಗೆ!’ ಎಂದುಕೊಂಡನು ಚೀಂಕ್ರ ಮನಸ್ಸಿನಲ್ಲಿಯೆ.
ಅಕ್ಕಣಿ ಕೌಪೀನ ಮಾತ್ರ ಧಾರಿಯಾಗಿದ್ದ ಗಂಡನ ರಟ್ಟೆ ಹಿಡಿದು ತಂದು ಚಾಪೆಯ ಮೇಲೆ ಮೆಲ್ಲಗೆ ಮಲಗಿಸಿ ಕಂಬಳಿ ಹೊದಿಸಿದಳು, ತಾಯಿ ಮಗುವನ್ನೆಂತೊ ಅಂತೆ.
“ಮಲಗಿ ಮಲಗಿ ಚರ್ಮ ಎಲ್ಲ ಸುಲಿದೆ ಹೋಯಿತ್ತು! ಉಸ್ ಸ್ ಸ್ ಸ್!” ಎಂದುಕೊಂಡನು ಪಿಜಿಣ, “ಏನಾದರೂ ಸೊಲ್ಪ ಸಕ್ತಿ ಬರ್ಹಾಂಗೆ ಕೊಟ್ಟಿದ್ರೆ? ಉಸ್ ಸ್ ಸ್ ಸ್…. ಇನ್ನೊಂದು ಸಾರಿ ತಿರುಗಾಡುವಂತಾದ್ರೆ ಮತ್ತೆ ನಾನು ಕಾಯಿಲೆಗೆ ಹೆದರುವುದಿಲ್ಲ….ಉಸ್ ಸ್ ಸ್ ಸ್!…. ಅವು ಎಂಥ ಶೀಸೆಗಳೋ?”
ಚೀಂಕ್ರ ಅಕ್ಕಣಿಗೆ ಹೇಳುವಂತೆ ಗುಟ್ಟಿನ ದನಿಯಲ್ಲಿ ಆ ಶೀಸೆಗಳೆಲ್ಲ ಸಾರಾಯಿ ಶೇಸೆಗಳೆಂದೂ, ಅದೆಲ್ಲ ಮನೆಯ ಬಟ್ಟಿಯಲ್ಲಿಯೆ ತಯಾರಾದ ಬಹಳ ಘಾಟು ಇರುವ ವಸ್ತುವೆಂದೂ, ಅದನ್ನು ತನ್ನ ಬಿಡಾರದಲ್ಲಿ ಬಚ್ಚಿಟ್ಟರೆ ಅನುಮಾನಕ್ಕೆ ಕಾರಣವಾಗಿ ಸಿಕ್ಕಿಹಾಕಿಕೊಳ್ಳುವ ಸಂಭವವಿದೆಯೆಂದೂ, ಪಿಜಿಣನ ಬಿಡಾರದಲ್ಲಿ ಅವಿಸಿಟ್ಟರೆ ಯಾರೂ ಗುಮಾನಿಸರೆಂದೂ, ತಾನೂ ಅವುಗಳನ್ನು ಸುರಕ್ಷಿತ ಸ್ಥಾನಕ್ಕೆ ಸಾಗಿಸುವವರೆಗೆ ಅವು ಅಲ್ಲಿಯೆ ಇರಲಿ ಎಂದೂ ವಿವರಣೆ ಕೊಟ್ಟು, ಉರಿಹೊತ್ತಿಸಿ ಬೆಂಕಿಮಾಡಲು ಒಂದು ಮೂಲೆಯಲ್ಲಿ ಜಿಗ್ಗಿನೊಡನೆ ರಾಶಿಹಾಕಿದ್ದ ಕೊನೆಮಟ್ಟೆಗಳಡಿ ಅವನ್ನೆಲ್ಲ ಮುಚ್ಚಿಟ್ಟನು….
ಐತ ಪೀಂಚಲು ಅವರ ಬಿಡಾರದಲ್ಲಿ ಇದ್ದಾರೆಯೆ ಎಂದು ವಿಚಾರಿಸಿದಾಗ ಅಕ್ಕಣಿ ತಿಳಿಸಿದಳು, ಅವರು ಎರಡು ಮೂರು ದಿನಗಳ ಹಿಂದೆಯೆ ಮದುವೆಯ ಕೆಲಸ ಮಾಡಿಕೊಡಲು ಹೂವಳ್ಳಿ ಮನೆಗೆ ಹೋದರು ಎಂದು.
ಚೀಂಕ್ರ-ತನಗೂ ನಾಯಕರು ಹೇಳಿದ್ದರು, ಎರಡು ದಿನಕ್ಕೆ ಮೊದಲೆ ಬಂದು ಮದುವೆ ಮನೆಯ ಚಪ್ಪರ ಗಿಪ್ಪರ ಹಾಕಿಕೊಡು ಎಂದು, ಆದರೆ ಬೇರೆ ಏನೋ ಕೆಲಸ ಗಂಟು ಬಿದ್ದಿದ್ದರಿಂದ ಹೋಗಲಾಗಲಿಲ್ಲ; ಇವತ್ತೆ ರಾತ್ರೆ ಹೋಗ್ತೆ; ನಾಳೆಯಷ್ಟೆ ಮದುವೆಯ ದಿಬ್ಬಣ ಬರುವುದು?-ಎಂದು ಹೇಳಿ ತನ್ನ ಬಿಡಾರಕ್ಕೆ ಹೋಗಿ ರಾತ್ರಿಯೂಟ ಮುಗಿಸಿಕೊಂಡು ಹೂವಳ್ಳಿಗೆ ಹೋದನು.
ಚೀಂಕ್ರನಿಗೆ ಯಾವ ಮದುವೆಯ ಮನೆಗೂ ಕರೆ ಬೇಕಾಗಿರಲಿಲ್ಲ. ಅವನು ಹೋಗಿಯೆ ಹೋಗುತ್ತಿದ್ದನು, ತುಂಡು ಕಡಬು ಪರಮಾನ್ನಕ್ಕಾಗಿ! ಮತ್ತು, ಹುಡುಗರು ಮಕ್ಕಳ ಕೈಯಿಂದಲೊ ಮದುವೆಗೆ ಬಂದ ಗರತಿ ನೆಂಡತಿ ಯರ ಮೈಯಿಂದಲೊ ಗ್ರಾಸ್ತರ ಜೇಬಿನಿಂದಲೊ ಉಂಗುರವೋ ಅಡ್ಡಿಕೆಯೋ ಮುಯ್ಯಿಡಲು ತಂದಿದ್ದ ಹಣವೋ….ಯಾವುದು ಸಿಕ್ಕರೆ ಅದನ್ನು ಲಪಟಾಯಿಸಿ, ಬಿರುಸು ಬಾಣ ಗರ್ನಾಲು ಹಾರಿಸುವುದಕ್ಕಾಗಿ ಎಲ್ಲ ಮದುವೆ ಮನೆ ಗಳಲ್ಲಿಯೂ ಹಾಜರಿರುತ್ತಿದ್ದ ಸಾಬರ ಮುಖಾಂತರ ಅದನ್ನು ಸಾಗಿಸುವ ಸಂಪಾದನೆಗಾಗಿ! ಮತ್ತು, ಸಂನಿವೇಶವೊದಗಿ, ಸಾಧ್ಯವಾದರೆ, ಮತ್ತೊಂದು ಕೆಟ್ಟಕೆಲಸಕ್ಕಾಗಿಯೂ!
ಚೀಂಕ್ರ ಹೂವಳ್ಳಿಮನೆಗೆ ತಲುಪಿದಾಗ ಮದುವೆಯ ಕೆಲಸಕ್ಕೆ ಬಂದಿದ್ದ ಆಳುಗಳಿಗೆ ಇನ್ನೂ ರಾತ್ರಿಯೂಟವಾಗಿರಲಿಲ್ಲ. ಮಳೆಗಾಲದ ಮದುವೆಯಾದ್ದರಿಂದ ಬೇಸಗೆಯಲ್ಲಿ ನೆರೆಯುತ್ತಿದ್ದಂತೆ ನೆಂಟರೂ ಸೇರಿದ್ದಿರಲಿಲ್ಲ. ಹೂವಳ್ಳಿ ಮನೆ ಹಿಂದಿನ ಕಾಲದ ಚೌಕಿ ಮನೆಯಾಗಿದ್ದರಿಂದ ಆ ಮಳೆಗಾಲದ ಮದುವೆಗೆ ನೆರೆಯಬಹುದಾದ ಅಲ್ಪಸ್ವಲ್ಪ ಜನಕ್ಕೆ ಚೌಕಿಯ ಜಾಗವೆ ಯಥೇಚ್ಛವಾಗಿತ್ತು. ಮಳೆ ಬಿಡದೆ ಹೊಡೆಯುತ್ತಲೆ ಇದ್ದುದರಿಂದ ಧಾರೆಯ ಮಂಟಪವನ್ನೂ ಪದ್ಧತಿಯಂತೆ ಅಂಗಳದಲ್ಲಿ ನಿರ್ಮಿಸದೆ ಚೌಕಿಯ ಒಂದು ಮೂಲೆಯಲ್ಲಿಯೆ ರಚಿಸಿದ್ದರು. ಅಲ್ಲಿಯೆ ಪಕ್ಕದಲ್ಲಿ ಹಸೆಗೋಡೆಯನ್ನೂ ಬರೆಯಿಸಿದ್ದರು. ಹಸೆಗೋಡೆಯನ್ನು ಬರೆಯುತ್ತಿದ್ದವನು ಇನ್ನೂ ಅದನ್ನು ಮುಗಿಸಿರಲಿಲ್ಲ; ದೀಪದ ಬೆಳಕಿನಲ್ಲಿ ಎಲೆಗಳಿಗೆ ಹಸರು ಬಣ್ಣ ತುಂಬುತ್ತಿದ್ದನು. ನಾಲ್ಕಾರು ಕೆಲಸದ ಜನರು, ತಮ್ಮ ಗ್ರಾಮೀಣತಾರುಚಿಗೆ ಅದ್ಭುತವಾಗಿ ತೋರುತ್ತಿದ್ದ ಆ ವರ್ಣಕಲೆಯನ್ನು ನೋಡುತ್ತಾ ಬಿಟ್ಟ ಬಾಯಾಗಿ ಪ್ರಶಂಸಿಸುತ್ತಾ ಸುತ್ತ ನಿಂತಿದ್ದರು! ಚೀಂಕ್ರನೂ ಹೋಗಿ ಅವರ ನಡುವೆ ನಿಂತು ನೋಡತೊಡಗಿ ಅವರ ಮಾತುಕತೆಗಳಲ್ಲಿ ಭಾಗಿಯಾದನು.
ಹಿತ್ತಲುಕಡೆಯ ಬಾಗಿಲಲ್ಲಿ ಹೋಗೀ ಬಂದೂ ಮಾಡುತ್ತಿದ್ದು, ಗಟ್ಟದ ಮೇಲಿನವರಂತೆ ಗೊಬ್ಬೆಸೆರಗುಕಟ್ಟಿ ಹೊಸ ಸೀರೆಯುಟ್ಟು ಮನೋಹರವಾಗಿ ಮೆರೆಯುತ್ತಿದ್ದ ಪೀಂಚಲು ಚೀಂಕ್ರನ ಹಸಿದ ಕಣ್ಣಿಗೆ ಬಿದ್ದಳಾದರೂ ಐತನ ಸುಳಿವು ಮಾತ್ರ ಅಲ್ಲೆಲ್ಲಿಯೂ ಇರಲಿಲ್ಲ. ವಿಚಾರಿಸಿದಾಗ ಕೆಲಸ ಮಾಡುತ್ತಿದ್ದವರು ಹೇಳಿದರು, ಅವನು ಇತ್ತ ಕಡೆ ಬಂದೇ ಇಲ್ಲ ಎಂದು. ಪೀಂಚಲು ಇದ್ದಲ್ಲಿ ಐತ ಇಲ್ಲದೆ ಇದ್ದುದಕ್ಕೆ ಸೋಜಿಗ ಪಡುತ್ತಾ ಹೇಳಿಕೊಂಡನು ಚೀಂಕ್ರ ತನ್ನಲ್ಲಿಯೆ: ’ಹಾಂಗಾದ್ರೆ ನಾನು ಕೇಳಿದ ಸುದ್ದಿಯಲ್ಲಿ ಏನೋ ಇರಬೇಕು!’
*****



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ